ನಾಲ್ಕನೆಯ ದಿನದ ಯುದ್ಧ

ರಾತ್ರಿಯು ಕಳೆಯಲು ಭಾರತರ ಸೇನೆಗಳ ಪ್ರಮುಖ ಮಹಾತ್ಮ ಭೀಷ್ಮನು ಕೋಪೋದ್ರಿಕ್ತನಾಗಿ ಸಮಗ್ರ ಸೇನೆಗಳಿಂದ ಆವೃತನಾಗಿ ದಾಯಾದಿಗಳೊಡನೆ ಯುದ್ಧಮಾಡಲು ಹೊರಟನು. ಅವನನ್ನು ದ್ರೋಣ, ದುರ್ಯೋಧನ, ಬಾಹ್ಲೀಕ, ಹಾಗೆಯೇ ದುರ್ಮರ್ಷಣ, ಚಿತ್ರಸೇನ, ಜಯದ್ರಥರು ಇತರ ರಾಜರ ಬಲಗಳೊಂದಿಗೆ ಸುತ್ತುವರೆದು ಮುಂದುವರೆದರು. ಆ ಮಹಾತ್ಮ, ಮಹಾರಥ, ತೇಜಸ್ವಿ, ವೀರ್ಯವಂತ ರಾಜಮುಖ್ಯರಿಂದ ಆವೃತನಾದ ಅವನು ದೇವತೆಗಳಿಂದ ಸುತ್ತುವರೆಯಲ್ಪಟ್ಟ ವಜ್ರಪಾಣಿಯಂತೆ ರಾರಾಜಿಸಿದನು. ಆ ಸೇನೆಯ ಮುಂದೆ ಸಾಗುತ್ತಿದ್ದ ಮಹಾಗಜಗಳ ಭುಜಗಳ ಮೇಲೆ ಕೆಂಪುಬಣ್ಣದ, ಹಳದೀ ಬಣ್ಣದ, ಕಪ್ಪು ಬಣ್ಣದ ಮತ್ತು ಬಿಳೀ ಬಣ್ಣದ ಮಹಾ ಪತಾಕೆಗಳು ಹಾರಾಡುತ್ತಿದ್ದವು. ಮಹಾರಥಗಳಿಂದ, ವಾರಣ-ವಾಜಿಗಳಿಂದ ಕೂಡಿದ್ದ ರಾಜ ಶಾಂತನುವಿನ ಆ ಸೇನೆಯು ಮಿಂಚಿನಿಂದ ಕೂಡಿದ ಮೇಘಗಳಂತೆ ಮತ್ತು ಮಳೆಬರುವ ಮುನ್ನ ದಿವಿಯಲ್ಲಿ ಮೋಡಗಳು ತುಂಬಿಕೊಂಡಿರುವಂತೆ ಕಂಡಿತು. ಶಾಂತನವನಿಂದ ರಕ್ಷಿತವಾದ ರಣಾಭಿಮುಖವಾಗಿದ್ದ ಕುರುಗಳ ಉಗ್ರ ಮಹಾಸೇನೆಯು ಸಮುದ್ರವನ್ನು ಸೇರುವ ಗಂಗೆಯಂತೆ ಭಯಂಕರ ವೇಗದಲ್ಲಿ ಅರ್ಜುನನ ಮೇಲೆ ಎರಗಿತು. ನಾನಾ ವಿಧದ ಗೂಢಸಾರಗಳನ್ನು ಹೊಂದಿದ್ದ, ಗಜ-ಅಶ್ವ-ಪದಾತಿ-ರಥಪಕ್ಷಗಳಿಂದ ಕೂಡಿದ್ದ ಮಹಾ ಮೇಘ ಸಮನಾಗಿದ್ದ ಆ ವ್ಯೂಹವನ್ನು ದೂರದಿಂದ ಕಪಿರಾಜಕೇತುವು ನೋಡಿದನು. ಆ ಕೇತುಮತ ನರರ್ಷಭ ಶ್ವೇತಹಯ ವೀರ ಮಹಾತ್ಮನು ಸೈನ್ಯಮುಖದಲ್ಲಿದ್ದುಕೊಂಡು ತನ್ನವರೆಲ್ಲರಿಂದ ಆವೃತನಾಗಿ ಸೇನೆಗಳ ವಧೆಗೆಂದು ಹೊರಟನು. ಧಾರ್ತರಾಷ್ಟ್ರರೊಂದಿಗೆ ಕೌರವೇಯರು ಉತ್ತಮ ಸೂಪಸ್ಕರಗಳಿಂದ ಕೂಡಿದ ಯದುಗಳ ಋಷಭನೊಂದಿಗಿರುವ ಕಪಿಧ್ವಜನನ್ನು ರಣದಲ್ಲಿ ನೋಡಿ ವಿಷಾದಿತರಾದರು.

ಆಯುಧಗಳನ್ನು ಎತ್ತಿಹಿಡಿದಿದ್ದ ಲೋಕಮಹಾರಥ ಕಿರೀಟಿಯಿಂದ ರಕ್ಷಿತವಾಗಿ ಮುಂದುವರೆಯುತ್ತಿದ್ದ ಆ ವ್ಯೂಹವು ನಾಲ್ಕೂ ಕಡೆಗಳಲ್ಲಿ ನಾಲ್ಕು ಸಾವಿರ ಆನೆಗಳನ್ನು ಹೊಂದಿತ್ತು. ಹಿಂದಿನ ದಿನ ಧರ್ಮರಾಜನು ಹೇಗೆ ವ್ಯೂಹವನ್ನು ರಚಿಸಿದ್ದನೋ ಅದರಂತೆಯೇ ಆಯಾ ಸ್ಥಳಗಳಲ್ಲಿ ಚೇದಿಮುಖ್ಯರೊಂದಿಗೆ ಪಾಂಚಾಲಮುಖ್ಯರು ನಿಂತಿದ್ದರು. ಆಗ ಮಹಾವೇಗದಿಂದ ಕೂಡಿ ಸಹಸ್ರಾರು ಭೇರಿಗಳು ಮೊಳಗಿದವು. ಎಲ್ಲ ಸೇನೆಗಳಲ್ಲಿ ಸಿಂಹನಾದಗಳೊಂದಿಗೆ ಶಂಖಸ್ವನ, ದುಂದುಭಿ ನಿಸ್ವನಗಳು ಕೇಳಿಬಂದವು. ಆಗ ವೀರರ ಬಾಣಗಳ ಮಹಾಸ್ವನಗಳು ಅವರ ಧನುಸ್ಸಿನ ಟೇಂಕಾರಗಳು ಸೇರಿ, ಕ್ಷಣದಲ್ಲಿಯೇ ಭೇರಿ-ಪಣವ-ಪ್ರಣಾದಗಳ ಮತ್ತು ಶಂಖಗಳ ಮಹಾಸ್ವನಗಳು ಕೇಳಿಬಂದವು. ಶಂಖಧ್ವನಿಯು ಅಂತರಿಕ್ಷದಲ್ಲಿ ಆವೃತವಾದುದನ್ನು, ಭೂಮಿಯಿಂದ ಮೇಲೆದ್ದ ಧೂಳಿನ ಜಾಲವು ಉಂಟಾದುದನ್ನು ಬೆಳಕನ್ನು ಮಹಾ ಕತ್ತಲೆಯು ಆವರಿಸಿದುದನ್ನು ನೋಡಿ ವೀರರು ತಕ್ಷಣವೇ ಮೇಲೆರಗಿದರು. ರಥಿಕನಿಂದ ಹೊಡೆಯಲ್ಪಟ್ಟ ರಥಿಕನು ಸೂತ, ಕುದುರೆ, ಧ್ವಜಗಳೊಂದಿಗೆ ಕೆಳಗುರುಳಿದನು. ಆನೆಗಳು ಆನೆಗಳಿಂದ ಹೊಡೆಯಲ್ಪಟ್ಟು ಮತ್ತು ಪದಾತಿಗಳು ಪದಾತಿಗಳಿಂದ ಹೊಡೆಯಲ್ಪಟ್ಟು ಬಿದ್ದರು. ಅಶ್ವವೃಂದಗಳು ಅಶ್ವವೃಂದಗಳಿಂದ ಆವರ್ತನ-ಪ್ರತ್ಯಾವರ್ತನಗಳಿಂದ ನಡೆದು ಬಾಣಗಳಿಂದ ಸಾಯುತ್ತಿದ್ದ, ಪ್ರಾಸ-ಖಡ್ಗಗಳಿಂದ ಸಂಹರಿಸಲ್ಪಡುತ್ತಿದ್ದ ದೃಶ್ಯವು ಅದ್ಭುತವಾಗಿತ್ತು. ವೀರರ ಸುವರ್ಣ ತಾರಾಗಣಗಳಿಂದ ವಿಭೂಷಿತವಾದ ಕತ್ತಿ ಮತ್ತು ಗುರಾಣಿಗಳು, ಪರಶುಗಳು, ಪ್ರಾಸಗಳು, ಖಡ್ಗಗಳು ತುಂಡಾಗಿ ಭೂಮಿಯ ಮೇಲೆ ಬಿದ್ದಿದ್ದವು. ಮದಿಸಿದ ಆನೆಗಳ ಕೋರೆದಾಡೆಗಳ ಮತ್ತು ಸೊಂಡಿಲುಗಳ ಪ್ರಹಾರದಿಂದಾಗಿ ರಥಿಗಳು ಸೂತರೊಂದಿಗೆ ಬಿದ್ದರು. ಗಜರ್ಷಭರೂ ಕೂಡ ರಥರ್ಷಭರ ಬಾಣಗಳಿಂದ ಹತರಾಗಿ ಭೂಮಿಯ ಮೇಲೆ ಬಿದ್ದರು. ಆನೆಗಳ ಸಮೂಹಗಳು ವೇಗದಿಂದ ಬಂದು ಕುದುರೆಸವಾರರನ್ನು ಕೆಡವಿ ನೆಲದ ಮೇಲೆ ಬಿದ್ದ ಮನುಷ್ಯರ ಆಕ್ರಂದನ ಮತ್ತು ದೇಹದ ಕೆಳಗೆ ಕೋರೆದಾಡೆಗಳಿಂದ ಆಘಾತಗೊಂಡ ಕುದುರೆಸವಾರರು ಮತ್ತು ಪದಾತಿಗಳ ಆರ್ತಸ್ವರವು ಕೇಳಿಬರುತ್ತಿತ್ತು. ಕುದುರೆ ಸವಾರರು ಮತ್ತು ಪದಾತಿಗಳ ಆ ಮಹಾಭಯದಿಂದ ನಾಗಾಶ್ವರಥಿಗರು ಸಂಭ್ರಾಂತರಾದರು.

ಆಗ ಭೀಷ್ಮನು ಮಹಾರಥರಿಂದ ಪರಿವಾರಿತನಾದ ಕಪಿರಾಜಕೇತುವನ್ನು ನೋಡಿದನು. ಐದು ತಾಳೇಮರಗಳಷ್ಟು ಎತ್ತರದ ತಾಲವೃಕ್ಷ ಚಿಹ್ನೆಯ ಧ್ವಜದ, ವೇಗಿಗಳಾದ ವೀರ ಕುದುರೆಗಳನ್ನು ಕಟ್ಟಿದ್ದ ರಥವುಳ್ಳ ಶಾಂತನವನು ಮಹಾ ಅಸ್ತ್ರಗಳನ್ನು ಹೊಂದಿದ್ದ, ಪ್ರದೀಪ್ತನಾಗಿದ್ದ ಕಿರೀಟಿಯನ್ನು ಎದುರಿಸಿದನು. ಹಾಗೆಯೇ ಶಕ್ರಪ್ರತಿಮಾನಕಲ್ಪನಾದ ಇಂದ್ರಾತ್ಮಜನನ್ನು ದ್ರೋಣಪ್ರಮುಖರಾದ ಕೃಪ, ಶಲ್ಯ, ವಿವಂಶತಿ, ದುರ್ಯೋಧನ ಮತ್ತು ಸೌಮದತ್ತಿಯರು ಎದುರಿಸಿದರು. ಆಗ ರಥಾನೀಕದ ಎದುರಿನಿಂದ ಸರ್ವಾಸ್ತ್ರವಿದು, ಕಾಂಚನ-ಬಣ್ಣದ ಕವಚಗಳನ್ನು ತೊಟ್ಟಿದ್ದ ಶೂರ ಅರ್ಜುನನ ಸುತ ಅಭಿಮನ್ಯುವು ವೇಗದಿಂದ ಅಲ್ಲಿಗೆ ಬಂದೊದಗಿದನು. ಆ ಮಹಾರಥರ ಮಹಾಸ್ತ್ರಗಳನ್ನು ನಿರಸನಗೊಳಿಸಿ ಕಾರ್ಷ್ಣಿಯು ಸಹಿಸಲಸಾಧ್ಯ ಕರ್ಮವನ್ನು ಮಾಡಿ ತೋರಿಸಿ, ಮಹಾಮತ್ರದಿಂದ ಅರ್ಪಿಸಿದ ಆಹುತಿಯನ್ನು ತೆಗೆದುಕೊಂಡ ಭಗವಾನ್ ಅಗ್ನಿಯಂತೆ ಪ್ರಜ್ವಲಿಸಿದನು.

ಆಗ ಬೇಗನೇ ರಕ್ತದ ನೀರು ಮತ್ತು ನೊರೆಗಳ ನದಿಯನ್ನು ರಚಿಸಿ ರಿಪುಗಳನ್ನು ಯಮನಲ್ಲಿಗೆ ಕಳುಹಿಸಿ ಅದೀನ ಸತ್ತ್ವ ಭೀಷ್ಮನು ಸೌಭದ್ರನನ್ನು ಅತಿಕ್ರಮಿಸಿ ಮಹಾರಥ ಪಾರ್ಥನಲ್ಲಿಗೆ ಹೋದನು. ಆಗ ಅವನ ಅದ್ಭುತ ದರ್ಶನದಿಂದ ನಗುತ್ತಾ ಕಿರೀಟಮಾಲಿಯು ಗಾಂಡೀವವನ್ನು ಮಹಾಸ್ವನದಿಂದ ಟೇಂಕರಿಸಿ ವಿಪಾಠಜಾಲವೆಂಬ ಮಹಾಸ್ತ್ರಜಾಲದಿಂದ ನಾಶಮಾಡತೊಡಗಿದನು. ಸರ್ವಧನುರ್ಧರರಲ್ಲಿ ಉತ್ತಮನಾದ ಮಹಾತ್ಮ ಭೀಷ್ಮನ ಮೇಲೆ ಕಪಿರಾಜಕೇತುವು ಬೇಗನೆ ವಿಮಲ ಭಲ್ಲಗಳ ಶರಜಾಲಗಳ ಮಳೆಯನ್ನು ಸುರಿಸಿದನು. ಈ ರೀತಿ ಸತ್ಪುರುಷೋತ್ತಮರಾದ ಭೀಷ್ಮ-ಧನಂಜಯರಿಬ್ಬರ ಧನುಸ್ಸುಗಳ ಭಯಂಕರ ನಿನಾದವನ್ನೂ, ದೈನ್ಯರಹಿತವಾದ ಆ ದ್ವೈರಥಯುದ್ಧವನ್ನು ಕುರುಸೃಂಜಯರೂ ಲೋಕವೂ ನೋಡಿತು.

ಅಭಿಮನ್ಯುವಿನಿಂದ ಸಾಮ್ಯಮನಿಪುತ್ರ ವಧೆ

ದ್ರೌಣಿ, ಭೂರಿಶ್ರವ, ಶಲ್ಯ, ಚಿತ್ರಸೇನ, ಮತ್ತು ಸಾಮ್ಯಮನಿಯ ಮಗ ಇವರು ಸೌಭದ್ರನನ್ನು ಎದುರಿಸಿ ಯುದ್ಧಮಾಡಿದರು. ಆನೆಗಳಂತಿರುವ ಆ ಐದು ಮನುಜವ್ಯಾಘ್ರರ ಮಧ್ಯದಲ್ಲಿ ಒಂಟಿ ಸಿಂಹದ ಮರಿಯಂತೆ ಅವನು ಅತಿತೇಜಸ್ಸಿನಿಂದಿರುವುದನ್ನು ಜನರು ನೋಡಿದರು. ಕಾರ್ಷ್ಣಿಯು ಶೌರ್ಯದಲ್ಲಿಯಾಗಲೀ ಪರಾಕ್ರಮದಲ್ಲಿಯಾಗಲೀ, ಅಸ್ತ್ರಗಳಲ್ಲಿಯೂ ಲಾಘವದಲ್ಲಿಯೂ ಯಾರೂ ಅಲಕ್ಷಿಸುವ ಹಾಗಿರಲಿಲ್ಲ. ಯುದ್ಧದಲ್ಲಿ ತನ್ನ ಮಗ ಅರಿಂದಮನ ವಿಕ್ರಮವನ್ನು ನೋಡಿ ಪಾರ್ಥನು ಸಿಂಹನಾದಗೈದನು. ಆ ಸೈನ್ಯವನ್ನು ಪೀಡಿಸುತ್ತಿದ್ದ ಅಭಿಮನ್ಯುವನ್ನು ನೋಡಿ ಕೌರವರು ಎಲ್ಲ ಕಡೆಗಳಿಂದ ಅವನನ್ನು ಸುತ್ತುವರೆದರು. ಆಗ ಸೌಭದ್ರನು ದೀನಶತ್ರುಗಳಾದ ಧ್ವಜವುಳ್ಳ ಧಾರ್ತರಾಷ್ಟ್ರರೊಡನೆ ದೀನನಾಗದೆ ತೇಜಸ್ಸು ಮತ್ತು ಬಲಗಳಿಂದ ಪ್ರತಿಯುದ್ಧಮಾಡಿದನು. ಸದಾ ಎಳೆದಿದ್ದಿರುವ ಅವನ ಆದಿತ್ಯ ಸಮ ಪ್ರಭೆಯುಳ್ಳ ಮಹಾ ಚಾಪವನ್ನು ಯುದ್ಧಮಾಡುತ್ತಿದ್ದ ಶತ್ರುಗಳು ನೋಡಿದರು. ಅವನು ದ್ರೌಣಿಯನ್ನು ಒಂದೇ ಇಷುಣದಿಂದ ಹೊಡೆದು ಶಲ್ಯನನ್ನು ಐದರಿಂದ ಮತ್ತು ಸಾಮ್ಯಮನಿಯ ಧ್ವಜವನ್ನು ಎಂಟು ಬಾಣಗಳಿಂದ ಹೊಡೆದನು. ಸೌಮದತ್ತಿಯು ಪ್ರಯೋಗಿಸಿದ್ದ ರುಕ್ಮದಂಡದ ಮಹಾಶಕ್ತಿಯನ್ನು ಸರ್ಪದಂತೆ ಹರಿತವಾಗಿದ್ದ ಪತ್ರಿಣದಿಂದ ತುಂಡರಿಸಿದನು. ಅರ್ಜುನದಾಯಾದನು ಶಲ್ಯನು ನೋಡುತ್ತಿದ್ದಂತೆಯೇ ನೂರಾರು ಶರಗಳನ್ನು ಪ್ರಯೋಗಿಸಿ ಸಮರದಲ್ಲಿ ಅವನ ಕುದುರೆಗಳನ್ನು ಸಂಹರಿಸಿದನು.

ಆಗ ಸಂರಬ್ಧರಾದ ಭೂರಿಶ್ರವ, ಶಲ್ಯ, ದ್ರೌಣಿ, ಸಾಮ್ಯಮನಿ ಮತ್ತು ಶಲರು ಕಾರ್ಷ್ಣಿಯ ಬಾಹುಬಲದಡಿಯಲ್ಲಿ ಯುದ್ಧಮಾಡಲಾರದವರಂತಾದರು. ಆಗ ದುರ್ಯೋಧನನಿಂದ ಪ್ರಚೋದಿತರಾದ ತ್ರಿಗರ್ತರು ಮತ್ತು ಮದ್ರರು ಕೇಕಯರೊಂದಿಗೆ, ಒಟ್ಟು ಇಪ್ಪತ್ತೈದು ಸಾವಿರ ಧನುವೇದವಿದು ಮುಖ್ಯರು ಯುದ್ಧದಲ್ಲಿ ಶತ್ರುಗಳಿಗೆ ಅಜೇಯರಾದವರು ಪುತ್ರನೊಂದಿಗೆ ಕಿರೀಟಿಯನ್ನು ಸಂಹರಿಸಲು ಸುತ್ತುವರೆದರು. ಅಲ್ಲಿ ತಂದೆ ಮತ್ತು ಮಗ ಇಬ್ಬರು ರಥರ್ಷಭರೂ ಸುತ್ತುವರೆಯಲ್ಪಟ್ಟಿರುವುದನ್ನು ಸೇನಾಪತಿ ಧೃಷ್ಠದ್ಯುಮ್ನನು ನೋಡಿದನು. ಆ ಪರಂತಪನು ಅನೇಕ ಸಹಸ್ರ ವಾರಣ-ರಥ ಸೇನೆಗಳಿಂದ ಆವೃತನಾಗಿ, ಸಹಸ್ರಾರು ಕುದುರೆಗಳ ಮತ್ತು ಪದಾತಿಸೇನೆಗಳಿಂದ ಆವೃತನಾಗಿ, ಸಂಕ್ರುದ್ಧನಾಗಿ ಧನುಸ್ಸನ್ನು ಟೇಂಕರಿಸುತ್ತಾ, ಸೇನೆಯನ್ನು ಹುರುದುಂಬಿಸುತ್ತಾ ಮದ್ರರು ಮತ್ತು ಕೇಕಯ ಸೇನೆಗಳಿರುವಲ್ಲಿಗೆ ಬಂದನು. ಆ ಕೀರ್ತಿಮತ ದೃಢಧನ್ವಿಯಿಂದ ರಕ್ಷಿತಗೊಂಡು ಯುದ್ಧ ಮಾಡುತ್ತಿದ್ದ ರಥನಾಗಾಶ್ವಗಳಿಂದ ಕೂಡಿದ್ದ ಸೇನೆಯು ಶೋಭಿಸಿತು. ಅರ್ಜುನನ ಹತ್ತಿರ ಬರುತ್ತಲೇ ಪಾಂಚಾಲ್ಯನು ಶಾರದ್ವತನ ಜತ್ರುಪ್ರದೇಶಕ್ಕೆ ಗುರಿಯಿಟ್ಟು ಮೂರು ಬಾಣಗಳನ್ನು ಹೊಡೆದನು. ಆಗ ಅವನು ಹತ್ತು ಬಾಣಗಳಿಂದ ಹತ್ತು ಮದ್ರಕರನ್ನು ಸಂಹರಿಸಿ ಹೃಷ್ಟನಾಗಿ ಒಂದೇ ಭಲ್ಲದಿಂದ ಕೃತವರ್ಮನ ಕುದುರೆಯನ್ನು ಹೊಡೆದನು. ಪರಂತಪ ಮಹಾತ್ಮನು ಪೌರವನ ಮಗ ದಮನನನ್ನೂ ವಿಪುಲಾಗ್ರವಾದ ನಾರಾಚದಿಂದ ಸಂಹರಿಸಿದನು.

ಆಗ ಸಾಮ್ಯಮನಿಯ ಮಗನು ಯುದ್ಧ ದುರ್ಮದ ಪಾಂಚಾಲ್ಯನನ್ನು ಮೂವತ್ತು ಬಾಣಗಳಿಂದ ಮತ್ತು ಅವನ ಸಾರಥಿಯನ್ನು ಹತ್ತರಿಂದ ಹೊಡೆದನು. ಅತಿಯಾಗಿ ಗಾಯಗೊಂಡ ಮಹೇಷ್ವಾಸನು ಕಟಬಾಯಿಯನ್ನು ನೆಕ್ಕುತ್ತಾ ತಕ್ಷಣವೇ ತೀಕ್ಷ್ಣ ಭಲ್ಲದಿಂದ ಅವನ ಕಾರ್ಮುಕವನ್ನು ಕತ್ತರಿಸಿದನು. ಮರುಕ್ಷಣದಲ್ಲಿಯೇ ಇಪ್ಪತ್ತೈದು ಬಾಣಗಳಿಂದ ಅವನನ್ನು ಹೊಡೆದು ಅವನ ಕುದುರೆಗಳನ್ನೂ, ಪಕ್ಷರಕ್ಷಕರ ಸಾರಥಿಗಳಿಬ್ಬರನ್ನೂ ಸಂಹರಿಸಿದನು. ಕುದುರೆಗಳು ಹತರಾದ ರಥದ ಮೇಲೆಯೇ ನಿಂತುಕೊಂಡು ಮಹಾತ್ಮ ಸಾಮ್ಯಮನಿಯ ಮಗನು ಪಾಂಚಾಲ್ಯನ ಮಗನನ್ನು ನೋಡಿದನು. ತಕ್ಷಣವೇ ಮಹಾಘೋರ ಲೋಹಮಯ ಖಡ್ಗವನ್ನು ಕೈಯಲ್ಲಿ ಹಿಡಿದು ರಥದಿಂದ ಧುಮುಕಿ ಕಾಲ್ನಡುಗೆಯಲ್ಲಿಯೇ ದ್ರುಪದಾತ್ಮಜನ ಕಡೆ ಧಾವಿಸಿದನು. ವೇಗವಾಗಿ ಬರುತ್ತಿದ್ದ ದೊಡ್ಡ ಜಲಪ್ರವಾಹದಂತೆ ಮತ್ತು ಆಕಾಶದಿಂದ ಬೀಳುತ್ತಿದ್ದ ಸರ್ಪದಂತೆ ತೋರುತ್ತಿದ್ದ ಅವನು ಖಡ್ಗವನ್ನು ತಿರುಗಿಸುತ್ತ ಅಂತಕನಂತೆ ತೋರುತ್ತಿದ್ದನು. ಶಸ್ತ್ರದೊಂದಿಗೆ ಸೂರ್ಯನಂತೆ ಬೆಳಗುತ್ತಿರುವ ಆ ಮತ್ತವಾರಣವಿಕ್ರಮನನ್ನು ಅಲ್ಲಿ ಪಾಂಡವರೂ ಪಾರ್ಷತ ಧೃಷ್ಟದ್ಯುಮ್ನನೂ ನೋಡಿದರು. ಹರಿತ ಖಡ್ಗವನ್ನೂ, ಬಾಣವನ್ನು ತಡೆಯುವ ಗುರಾಣಿಯನ್ನೂ ಹಿಡಿದು ಉರಿಯುತ್ತಾ ಬಾಣವೇಗದಿಂದ ರಥದಕಡೆ ಓಡಿಬರುತ್ತಿದ್ದ ಅವನನ್ನು ರಥದ ಬಳಿ ಬಂದ ಕೂಡಲೇ ಸೇನಾಪತಿಯು ಕ್ರುದ್ಧನಾಗಿ ಗದೆಯಿಂದ ಅವನ ಶಿರವನ್ನು ಒಡೆದನು. ಹೊಡೆತಕ್ಕೆ ಸಿಕ್ಕ ಅವನ ಪ್ರಭೆಯುಳ್ಳ ಖಡ್ಗವೂ ಗುರಾಣಿಯೂ ವೇಗದಿಂದ ಅವನ ಕೈಯಿಂದ ಬೀಳಲು ಅವನೂ ಭೂಮಿಯ ಮೇಲೆ ಬಿದ್ದನು. ಗದಾಗ್ರದಿಂದ ಅವನನ್ನು ಕೊಂದು ಭೀಮವಿಕ್ರಮ ಮಹಾತ್ಮ ಪಾಂಚಾಲರಾಜಪುತ್ರನು ಪರಮ ಯಶಸ್ಸನ್ನು ಪಡೆದನು.

ಆ ಮಹೇಷ್ವಾಸ ಮಹಾರಥ ರಾಜಪುತ್ರನು ಹತನಾಗಲು ಕೌರವ ಸೈನ್ಯದಲ್ಲಿ ಮಹಾ ಹಾಹಾಕಾರವುಂಟಾಯಿತು. ಆಗ ಮಗನು ನಿಹತನಾದುದನ್ನು ನೋಡಿ ಕ್ರುದ್ಧನಾದ ಸಾಮ್ಯಮನಿಯು ವೇಗದಿಂದ ಯುದ್ಧದುರ್ಮದ ಪಾಂಚಾಲ್ಯನ್ನು ಆಕ್ರಮಿಸಿದನು. ಅಲ್ಲಿ ಸಮರದಲ್ಲಿ ಅವರಿಬ್ಬರು ರಥಶ್ರೇಷ್ಠ ವೀರರೂ ಒಟ್ಟಿಗೇ ಯುದ್ಧಮಾಡುವುದನ್ನು ಕುರುಗಳ ಮತ್ತು ಪಾಂಡವರ ಎಲ್ಲ ರಾಜರು ನೋಡಿದರು. ಆಗ ಕ್ರುದ್ಧನಾದ ಪರವೀರಹ ಸಾಮ್ಯಮನಿಯು ಮಹಾಗಜವನ್ನು ಅಂಕುಶದಿಂದ ತಿವಿಯುವಂತೆ ಪಾರ್ಷತನನ್ನು ಮೂರು ಬಾಣಗಳಿಂದ ಹೊಡೆದನು. ಆಗ ಸಮಿತಿಶೋಭನ ಶಲ್ಯನೂ ಕೂಡ ಶೂರ ಪಾರ್ಷತನನ್ನು ಕ್ರುದ್ಧನಾಗಿ ಎದೆಯಮೇಲೆ ಹೊಡೆದನು. ಆಗ ಯುದ್ಧವು ಮುಂದುವರೆಯಿತು.

ಭೀಮಯುದ್ಧ

ಶಲ್ಯನ ಒಂಭತ್ತು ಬಾಣಗಳಿಂದ ಪೀಡಿತನಾದ ಧೃಷ್ಟದ್ಯುಮ್ನನು ಸಂಕ್ರುದ್ಧನಾಗಿ ಮದ್ರಾಧಿಪತಿಯನ್ನು ಆಯಸಗಳಿಂದ ಪೀಡಿಸತೊಡಗಿದನು. ಅಲ್ಲಿ ಶಲ್ಯನ ವೇಗವನ್ನು ತಡೆದ ಪಾರ್ಷತನ ಅದ್ಭುತ ಪರಾಕ್ರಮವು ಕಂಡಿತು. ರಣದಲ್ಲಿ ಸಂರಬ್ಧರಾಗಿದ್ದ ಅವರಿಬ್ಬರ ನಡುವೆ ಯಾವುದೇ ವ್ಯತ್ಯಾಸವು ಕಾಣುತ್ತಿರಲಿಲ್ಲ. ಮುಹೂರ್ತಕಾಲ ಇಬ್ಬರೂ ಒಂದೇ ಸಮನಾಗಿ ಯುದ್ಧಮಾಡಿದರು. ಆಗ ಶಲ್ಯನು ಸಂಯುಗದಲ್ಲಿ ಧೃಷ್ಟದ್ಯುಮ್ನನ ಧನುಸ್ಸನ್ನು ಹಳದೀ ಬಣ್ಣದ ನಿಶಿತ ಭಲ್ಲದಿಂದ ಕತ್ತರಿಸಿದನು. ಮತ್ತು ಮಳೆಗಾಲದಲ್ಲಿ ಮೋಡಗಳು ಒಂದೇ ಸಮನೆ ಮಳೆಸುರಿಸಿ ಗಿರಿಯನ್ನು ಮಚ್ಚಿಬಿಡುವಂತೆ ಶರವರ್ಷದಿಂದ ಅವನನ್ನು ಮುಚ್ಚಿಬಿಟ್ಟನು. ಅಭಿಮನ್ಯುವಾದರೋ ಧೃಷ್ಟದ್ಯುಮ್ನನು ಪೀಡಿತನಾದುದನ್ನು ನೋಡಿ ಸಂಕ್ರುದ್ಧನಾಗಿ ವೇಗದಿಂದ ಮದ್ರರಾಜನ ರಥದ ಬಳಿ ಧಾವಿಸಿ ಬಂದನು. ಮದ್ರಾದಿಪನ ರಥದ ಸಮೀಪ ಬರುತ್ತಲೇ ಅತಿ ಕೋಪದಿಂದ ಕಾರ್ಷ್ಣಿಯು ಅಮೇಯಾತ್ಮ ಆರ್ತಯನಿಯನ್ನು ಮೂರು ವಿಶಿಖಗಳಿಂದ ಹೊಡೆದನು. ಆಗ ಆರ್ಜುನಿಯನ್ನು ರಣದಲ್ಲಿ ಎದುರಿಸಲು ಬಯಸಿ ಕೌರವರು ಕೂಡಲೇ ಮದ್ರರಾಜನ ರಥವನ್ನು ಸುತ್ತುವರೆದು ನಿಂತರು. ದುರ್ಯೋಧನ, ವಿಕರ್ಣ, ದುಃಶಾಸನ, ವಿವಿಂಶತಿ, ದುರ್ಮರ್ಷಣ, ದುಃಸ್ಸಹ, ಚಿತ್ರಸೇನ, ದುರ್ಮುಖ, ಸತ್ಯವ್ರತ, ಪುರುಮಿತ್ರ ಇವರು ಮದ್ರಾಧಿಪನ ರಥವನ್ನು ರಕ್ಷಿಸುತ್ತಾ ರಣದಲ್ಲಿ ನಿಂತರು.

ಅವರನ್ನು ಸಂಕ್ರುದ್ಧನಾದ ಭೀಮಸೇನ, ಧೃಷ್ಟದ್ಯುಮ್ನ, ದ್ರೌಪದೇಯರು, ಅಭಿಮನ್ಯು, ಮಾದ್ರೀಪುತ್ರ ಪಾಂಡವರಿಬ್ಬರು ನಾನಾ ರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಪರಸ್ಪರರನ್ನು ವಧಿಸಲು ಬಯಸಿ ಎದುರಿಸಿದರು. ಭಯವನ್ನುಂಟು ಮಾಡುತ್ತಿದ್ದ ಕೌರವರ ಮತ್ತು ಶತ್ರುಗಳ ಆ ಹತ್ತು ಹತ್ತು ರಥಿಕರ ನಡುವೆ ಯುದ್ಧವು ನಡೆಯುತ್ತಿರಲು ಇತರ ರಥಿಕರು ಪ್ರೇಕ್ಷಕರಾದರು. ಆ ಮಹಾರಥರು ಅನೇಕರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಅನ್ಯೋನ್ಯರನ್ನು ಹೊಡೆಯುತ್ತಾ ಪ್ರಹರಿಸ ತೊಡಗಿದರು. ಎಲ್ಲರೂ ಅನ್ಯೋನ್ಯರನ್ನು ಕೊಲ್ಲಲು ತವಕರಾಗಿದ್ದರು. ಮಹಾಸ್ತ್ರಗಳನ್ನು ಪ್ರಯೋಗಿಸುತ್ತಾ ಸಹನೆಯಿಲ್ಲದೇ ಅವರು ಅನ್ಯೋನ್ಯರ ಮೇಲೆ ಎರಗಿದರು. ಮಹಾರಣದಲ್ಲಿ ಸಂಕ್ರುದ್ಧರಾಗಿ ತುಂಬಾ ವೇಗದಿಂದ ಧೃಷ್ಟದ್ಯುಮ್ನನನ್ನು ದುರ್ಯೋಧನು ನಾಲ್ಕು ನಿಶಿತ ಬಾಣಗಳಿಂದಲೂ, ದುರ್ಮರ್ಷಣನು ಇಪ್ಪತ್ತು, ಚಿತ್ರಸೇನನು ಐದು, ದುರ್ಮುಖನು ಒಂಭತ್ತು, ದುಃಸ್ಸಹನು ಏಳರಿಂದ, ವಿವಿಂಶತಿಯು ಐದರಿಂದ ಮತ್ತು ದುಃಶಾಸನನು ಮೂರು ಬಾಣಗಳಿಂದ ಹೊಡೆದರು. ಅವರಲ್ಲಿ ಒಬ್ಬೊಬ್ಬರನ್ನೂ ಇಪ್ಪತ್ತೈದು ಬಾಣಗಳಿಂದ ಹೊಡೆದು ಶತ್ರುತಾಪನ ಪಾರ್ಷತನು ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು. ಸಮರದಲ್ಲಿ ಸತ್ಯವ್ರತ ಮತ್ತು ಪುರುಮಿತ್ರರನ್ನು ಹತ್ತು-ಹತ್ತು ಬಾಣಗಳಿಂದ ಹೊಡೆದನು. ಮಾತೃನಂದನರಾದ ಮಾದ್ರೀಪುತ್ರರಿಬ್ಬರೂ ಸಮರದಲ್ಲಿ ಮಾತುಲನನ್ನು ಶರವ್ರಾತಗಳಿಂದ ಪ್ರಹರಿಸಿದುದು ಒಂದು ಅದ್ಭುತವೆನಿಸಿತು. ಆಗ ಶಲ್ಯನು ತನ್ನ ತಂಗಿಯ ಮಕ್ಕಳಾದ ರಥಿಗಳಲ್ಲಿ ಶ್ರೇಷ್ಠರಾದ ಅವರಿಬ್ಬರನ್ನು ಅನೇಕ ಶರಗಳಿಂದ ಹೊಡೆದನು. ಪ್ರತಿಯಾಗಿ ಮಾಡಲು ಬಯಸಿದ ಮಾದ್ರೀಪುತ್ರರಿಬ್ಬರೂ ವಿಚಲಿತರಾಗಲಿಲ್ಲ.

ಅದೇ ಸಮಯದಲ್ಲಿ ಮಹಾಬಲ ಪಾಂಡವ ಭೀಮಸೇನನು ದುರ್ಯೋಧನನನ್ನು ನೋಡಿ ಯುದ್ಧವನ್ನೇ ಮುಗಿಸಲು ನಿಶ್ಚಯಿಸಿ ಗದೆಯನ್ನು ಕೈಗೆ ತೆಗೆದುಕೊಂಡನು. ಅದನ್ನು ಹಿಡಿದು ಶಿಖರದಿಂದ ಕೂಡಿದ ಕೈಲಾಸ ಪರ್ವತದಂತೆ ತೋರುತ್ತಿದ್ದ ಆ ಮಹಾಬಾಹು ಭೀಮಸೇನನನ್ನು ನೋಡಿ ನಿನ್ನ ಪುತ್ರರು ಭಯದಿಂದ ಪಲಾಯನಗೈದರು. ಸಂಕ್ರುದ್ಧನಾದ ದುರ್ಯೋಧನನಾದರೋ ವೇಗಶಾಲಿಗಳಾದ ಮಾಗಧರ ಹತ್ತು ಸಾವಿರ ಆನೆಗಳ ಸೇನೆಯನ್ನು ಪ್ರಚೋದಿಸಿ, ಮಾಗಧನನ್ನು ಮುಂದೆ ಮಾಡಿಕೊಂಡು ಭೀಮಸೇನನನ್ನು ಎದುರಿಸಿದನು. ತನ್ನ ಮೇಲೆ ಎರಗುತ್ತಿರುವ ಆ ಗಜಸೇನೆಯನ್ನು ನೋಡಿ ವೃಕೋದರನು ಗದೆಯನ್ನು ಹಿಡಿದು ರಥದಿಂದ ಧುಮುಕಿ ಸಿಂಹದಂತೆ ಗರ್ಜಿಸಿದನು. ಲೋಹಮಯ ಭಾರ ಮಹಾ ಗದೆಯನ್ನು ಹಿಡಿದು ಬಾಯಿ ಕಳೆದು ಬರುತ್ತಿರುವ ಅಂತಕನಂತೆ ಗಜಸೇನೆಯ ಮೇಲೆ ಎರಗಿದನು. ವಜ್ರವನ್ನು ಹಿಡಿದ ವಾಸವನಂತೆ ಮಹಾಬಾಹು ಬಲೀ ಭೀಮಸೇನನು ಗದೆಯಿಂದ ಆನೆಗಳನ್ನು ಸಂಹರಿಸುತ್ತಾ ಸಮರದಲ್ಲಿ ಸಂಚರಿಸಿದನು. ಮನೋಹೃದಯಗಳನ್ನು ಕಂಪಿಸುವಂತೆ ಕೂಗುತ್ತಿದ್ದ ಭೀಮನ ಮಹಾ ಗರ್ಜನೆಯಿಂದಲೇ ಆನೆಗಳು ಒಂದುಕಡೆ ಸೇರಿ ಪ್ರಾಣತೊರೆಯುತ್ತಿದ್ದವು. ಆಗ ದ್ರೌಪದೀಪುತ್ರರು, ಮಹಾರಥ ಸೌಭದ್ರ, ನಕುಲ, ಸಹದೇವರು ಮತ್ತು ಧೃಷ್ಟದ್ಯುಮ್ನರು ಗಿರಿಗಳ ಮೇಲೆ ಮೋಡಗಳು ಮಳೆಸುರಿಸುವಂತೆ ಆನೆಗಳ ಮೇಲೆ ಬಾಣಗಳ ಮಳೆಯನ್ನು ಸುರಿಸುತ್ತಾ ಭೀಮನನ್ನು ಹಿಂದಿನಿಂದ ರಕ್ಷಿಸುತ್ತಿದ್ದರು. ಕ್ಷುರ, ಕ್ಷುರಪ್ರ, ಭಲ್ಲ, ಪೀತ, ಅಂಜಲಿಕಗಳಿಂದ ಪಾಂಡವರು ಗಜಯೋಧಿಗಳ ಶಿರಗಳನ್ನು ಕತ್ತರಿಸುತ್ತಿದ್ದರು. ಕಲ್ಲಿನ ಮಳೆಯಂತೆ ತಲೆಗಳು, ವಿಭೂಷಿತ ಬಾಹುಗಳು, ಅಂಕುಶಗಳೊಂದಿರುವ ಕೈಗಳು ಬೀಳುತ್ತಿದ್ದವು. ಗಜಯೋಧಿಗಳ ತಲೆಯು ಕತ್ತರಿಸಿ ಬಿದ್ದು ಕೇವಲ ಮುಂಡಗಳು ಆನೆಗಳ ಮೇಲಿರಲು ಅವು ಪರ್ವತದ ಮೇಲಿರುವ ರೆಂಬೆಗಳು ತುಂಡಾದ ಬೋಳು ಮರಗಳಂತೆ ತೋರಿದವು. ಧೃಷ್ಟದ್ಯುಮ್ನನಿಂದ ಕೆಳಗುರುಳಿಸಲ್ಪಟ್ಟ, ಬೀಳಿಸಲ್ಪಡುತ್ತಿರುವ ಮಹಾ ಗಜಗಳು ಕಂಡುಬಂದವು.

ಆಗ ಮಹೀಪಾಲ ಮಾಗಧನು ಐರಾವತದಂದಿರುವ ಆನೆಯೊಂದನ್ನು ಸೌಭದ್ರನ ರಥದ ಕಡೆ ಕಳುಹಿಸಿದನು. ಮಾಗಧನ ಆ ಉತ್ತಮ ಗಜವು ಮೇಲೆ ಬೀಳುತ್ತಿರುವುದನ್ನು ಕಂಡು ಸೌಭದ್ರನು ಅದನ್ನು ಒಂದೇ ಬಾಣದಿಂದ ಸಂಹರಿಸಿದನು. ಕಾರ್ಷ್ಣಿಯು ತಕ್ಷಣವೇ ರಜತಪುಂಖ ಭಲ್ಲದಿಂದ ಆನೆಯನ್ನು ಕಳೆದುಕೊಂಡ ಆ ರಾಜನ ಶಿರವನ್ನು ತುಂಡರಿಸಿದನು. ಇಂದ್ರನು ಗಿರಿಗಳ ರೆಕ್ಕೆಗಳನ್ನು ಕತ್ತರಿಸಿದಂತೆ ಭೀಮಸೇನನೂ ಕೂಡ ಆ ಗಜಸೇನೆಯನ್ನು ಕತ್ತರಿಸುತ್ತಾ ಹೋದನು. ವಜ್ರದ ಹೊಡೆತಕ್ಕೆ ಸಿಕ್ಕ ಗಿರಿಗಳಂತೆ ಭೀಮಸೇನನ ಒಂದೊಂದು ಗದಾ ಪ್ರಹಾರಕ್ಕೆ ಒಂದೊಂದು ಆನೆಯು ಸತ್ತು ಬೀಳುತ್ತಿರುವುದು ಕಂಡಿತು. ಆ ಪರ್ವತೋಪಮ ಗಜಗಳು ದಂತಗಳು ಮುರಿದು, ಸೊಂಡಿಲುಗಳು ತುಂಡಾಗಿ, ತೊಡೆಗಳು ಒಡೆದು ಹೋಗಿ, ಹಿಂಬಾಗಗಳು ಭಗ್ನವಾಗಿ, ಕುಂಭಗಳು ಒಡೆದುಹೋಗಿ ಬಿದ್ದಿದ್ದವು. ಕೆಲವು ಕೂಗುತ್ತಿದ್ದವು, ಕೆಲವು ಸಂಕಟಪಡುತ್ತಿದ್ದವು, ಕೆಲವು ಆನೆಗಳು ಸಮರದಿಂದ ಓಡಿ ಹೋಗುತ್ತಿದ್ದವು, ಕೆಲವು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದವು. ಭೀಮಸೇನನ ಮಾರ್ಗದಲ್ಲಿ ಪರ್ವತೋಪಮ ಆನೆಗಳು ಸತ್ತು ಬಿದ್ದಿದ್ದವು. ಕೆಲವು ಮೂರ್ಛೆಹೋಗಿ ಬಾಯಲ್ಲಿ ನೊರೆಯನ್ನು ಸುರಿಸುತ್ತಿದ್ದವು. ಕೆಲವು ಮಹಾಗಜಗಳು ಕುಂಭವು ಒಡೆದು ರಕ್ತವನ್ನು ಕಾರುತ್ತಿದ್ದವು. ಕೆಲವು ಧರೆಗುರುಳಿದ ಪರ್ವತಗಳಂತೆ ಭೂಮಿಯಮೇಲೆ ಒದ್ದಾಡುತ್ತಿದ್ದವು. ರಕ್ತ-ಮೇಧಸ್ಸಿನಿಂದ ತೋಯ್ದುಹೋದ ಅಂಗಾಗಗಳಿಂದ, ಮಾಂಸಮಜ್ಜೆಗಳು ಮೆತ್ತಿಕೊಂಡಿದ್ದ ಭೀಮನು ದಂಡವನ್ನು ಹಿಡಿದ ಅಂತಕನಂತೆ ಸಂಚರಿಸುತ್ತಿದ್ದನು. ಆನೆಗಳ ರಕ್ತದಿಂದ ಲೇಪನಗೊಂಡ ಆ ಗದೆಯಿಂದ ವೃಕೋದರನು ಪಿನಾಕವನ್ನು ಹಿಡಿದ ಪಿನಾಕಿಯಂತೆ ಘೋರನೂ ಭಯಂಕರನೂ ಆಗಿ ತೋರುತ್ತಿದ್ದನು. ಕ್ರುದ್ಧನಾದ ಭೀಮಸೇನನನಿಂದ ತಪ್ಪಿಸಿಕೊಳ್ಳುತ್ತಿರುವ ಆ ಆನೆಗಳು ಅವಸರದಲ್ಲಿ ಓಡುತ್ತ ಕೌರವರ ಸೇನೆಯವರನ್ನೇ ತುಳಿಯುತ್ತಿದ್ದವು.

ಸೌಭದ್ರ ಪ್ರಮುಖರಾದ ಮಹೇಷ್ವಾಸ ಮಹಾರಥರು ಯುದ್ಧಮಾಡುತ್ತಿರುವ ಆ ವೀರನನ್ನು ದೇವತೆಗಳು ವಜ್ರಾಯುಧವನ್ನು ರಕ್ಷಿಸುವಂತೆ ರಕ್ಷಿಸುತ್ತಿದ್ದರು. ಆನೆಗಳ ರಕ್ತದಿಂದ ನೆನೆದು ರಕ್ತದಿಂದ ಬಳಿಯಲ್ಪಟ್ಟ ಗದೆಯನ್ನು ತಿರುಗಿಸುತ್ತಿದ್ದ ಭೀಮಸೇನನು ಕೃತಾಂತನಂತೆ ರೌದ್ರಾತ್ಮನಾಗಿ ಕಂಡನು. ಗದೆಯನ್ನು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಯಾಮ ಮಾಡುತ್ತಿದ್ದಾನೋ ಎನ್ನುವಂತೆ ತಿರುಗಿಸುತ್ತಿದ್ದ ಅವನು ಪ್ರಳಯಕಾಲದಲ್ಲಿ ಶಂಕರನು ನರ್ತಿಸುವಂತೆ ನರ್ತಿಸುತ್ತಿರುವುದು ಕಂಡುಬಂದಿತು. ಯಮನ ದಂಡದಂತಿರುವ ಭಾರವಾದ ಇಂದ್ರನ ವಜ್ರಾಯುಧ ಸಮಾನ ಧ್ವನಿಯಿಂದ ಕೂಡಿದ್ದ ಗದೆಯು ರೌದ್ರವಾಗಿ ಕಾಣುತ್ತಿತ್ತು. ಕೂದಲು, ಮಜ್ಜೆಗಳಿಂದ ಮಿಶ್ರಿತ ಲೇಪನಗೊಂಡು, ರಕ್ತದಿಂದ ತೋಯ್ದು ಅದು ಪಶುಗಳನ್ನು ಸಂಹರಿಸುವ ಕ್ರುದ್ಧ ರುದ್ರನ ಪಿನಾಕದಂತಿತ್ತು. ಪ್ರಲಯಕಾಲದಲ್ಲಿ ಪಶುಗಳನ್ನು ಹೊಡೆದು ಕೊಲ್ಲುವಂತೆ, ಗೋಪಾಲಕನು ಹೊಡೆದೋಡಿಸುವಂತೆ ಭೀಮನು ಗಜಸೇನೆಯನ್ನು ಬೆನ್ನಟ್ಟಿ ಹೊಡೆಯುತ್ತಿದ್ದನು. ಮಾರ್ಗದಲ್ಲಿ ಎಲ್ಲ ಕಡೆಗಳಿಂದಲೂ ಗದೆಯ ಪ್ರಹಾರಕ್ಕೆ ಸಿಲುಕಿದ ಆನೆಗಳು ಕೌರವ ಸೇನೆಗಳನ್ನೇ ತುಳಿದು ಪಲಾಯನ ಮಾಡುತ್ತಿದ್ದವು. ಭಿರುಗಾಳಿಯು ಮೋಡಗಳನ್ನು ಚಿಂದಿಮಾಡಿ ಚದುರಿಸುವಂತೆ ಭೀಮನು ಆನೆಗಳನ್ನು ತುಂಡುಮಾಡಿ ಶ್ಮಶಾನದಲ್ಲಿ ಶೂಲಪಾಣಿಯಂತೆ ಯುದ್ಧದಲ್ಲಿ ನಿಂತಿದ್ದನು.

ಆ ಗಜಸೇನೆಯು ಹತವಾಗಲು ದುರ್ಯೋಧನನು ಭೀಮಸೇನನೆನ್ನು ಕೊಲ್ಲಬೇಕೆಂದು ಸರ್ವ ಸೇನೆಗಳನ್ನು ಪ್ರಚೋದಿಸಿದನು. ಆಗ ಅವನ ಶಾಸನದಂತೆ ಸರ್ವ ಸೇನೆಗಳೂ ಭೈರವ ಕೂಗನ್ನು ಕೂಗುತ್ತಾ ಭೀಮಸೇನನ ಮೇಲೆ ಎರಗಿದರು. ಭರತ ಬಂದಾಗ ಮೇಲುಕ್ಕುವ ಸಾಗರದಂತೆ ಬೀಳುತ್ತಿದ್ದ ಆ ದುಷ್ಟಾರ ಸೇನೆಯು ದೇವತೆಗಳಿಗೂ ದುರುತ್ಸಹವಾಗಿ ಅಪಾರವಾಗಿತ್ತು. ರಥ-ಗಜ-ಅಶ್ವಗಳಿಂದ ತುಂಬಿತ್ತು. ಶಂಖ ದುಂದುಭಿಗಳ ನಾದದಿಂದ ಕೂಡಿತ್ತು. ಅಮಿತ ಸರೋವರದಂತೆ ಅನಂತವೂ ಅಪಾರವೂ ಆಗಿತ್ತು. ಮಹಾಸಾಗರವನ್ನು ದಡವು ಹೇಗೋ ಹಾಗೆ ಸಮರದಲ್ಲಿ ಕ್ಷೋಭೆಗೊಂಡು ಮೇಲೇಳುತ್ತಿದ್ದ ಆ ಸೇನಾಸಾಗರವನ್ನು ಭೀಮಸೇನನು ಬಲದಿಂದ ತಡೆದನು. ನಂಬಲಿಕ್ಕಾಗದ ಭೀಮಸೇನನ ಆ ಅಮಾನುಷ ಅದ್ಭುತ ಆಶ್ಚರ್ಯ ಕೃತ್ಯಗಳು ಆ ಸಮರದಲ್ಲಿ ಕಂಡುಬಂದಿತು. ಭೂಮಿಯನ್ನು ನಡುಗಿಸುತ್ತಾ ಬರುತ್ತಿದ್ದ ಆ ಎಲ್ಲರನ್ನೂ ಕುದುರೆ, ರಥ, ಕುಂಜರಗಳೊಂದಿಗೆ, ಸ್ವಲ್ಪವೂ ಭಯಪಡದೇ ಭೀಮಸೇನನು ಗದೆಯಿಂದ ಹೊಡೆದನು. ರಥಿಗಳಲ್ಲಿ ಶ್ರೇಷ್ಠ ಭೀಮನು ಗದೆಯಿಂದ ಆ ಬಲಗಳನ್ನು ತಡೆದು ತುಮುಲದಲ್ಲಿ ಮೇರುಗಿರಿಯಂತೆ ಅಚಲನಾಗಿ ನಿಂತನು. ಆ ಘೋರವಾದ ಪರಮದಾರುಣ ತುಮುಲದ ಸಮಯದಲ್ಲಿ ಅವನ ಸಹೋದರರು, ಪುತ್ರರು, ಧೃಷ್ಟದ್ಯುಮ್ನ, ದ್ರೌಪದೇಯರು, ಅಭಿಮನ್ಯು ಮತ್ತು ಮಹಾರಥ ಶಿಖಂಡಿಯರು ಮಹಾಬಲ ಭೀಮಸೇನನನ್ನು ಭಯಗೊಂಡು ಬಿಟ್ಟು ಹೋಗಲಿಲ್ಲ. ಆಗ ಅಂತಕ ದಂಡಪಾಣಿಯಂತೆ ಉಕ್ಕಿನಿಂದ ಮಾಡಿದ ಭಾರವಾದ ಮಹಾ ಗದೆಯನ್ನು ಹಿಡಿದು ಅವನು ಕೌರವ ಯೋಧರ ಮೇಲೆ ಬಿದ್ದು ರಥವೃಂದಗಳನ್ನೂ ವಾಜಿವೃಂದಗಳನ್ನೂ ಸದೆಬಡಿದನು. ಯುಗಾಂತದಲ್ಲಿ ಅಗ್ನಿಯಂತೆ ಭೀಮನು ಸಮರದಲ್ಲಿ ಸಂಚರಿಸುತ್ತಾ ಯುಗಾಂತದಲ್ಲಿ ಕಾಲನಂತೆ ಸರ್ವರನ್ನೂ ಸಂಹರಿಸತೊಡಗಿದನು. ಪಾಂಡವನು ತನ್ನ ತೊಡೆಗಳ ವೇಗದಿಂದಲೇ ರಥಜಾಲಗಳನ್ನು ಸೆಳೆದು ಆನೆಗಳು ಜೊಂಡುಹುಲ್ಲನ್ನು ಮುರಿದು ಧ್ವಂಸಮಾಡುವಂತೆ ಮರ್ದಿಸುತ್ತಿದ್ದನು. ರಥಗಳಿಂದ ರಥಿಕರನ್ನೂ, ಆನೆಗಳಿಂದ ಗಜಯೋಧರನ್ನೂ, ಕುದುರೆಗಳಿಂದ ಸವಾರರನ್ನೂ ಕೆಳಕ್ಕೆ ಸೆಳೆದು, ಭೂಮಿಯಲ್ಲಿರುವ ಪದಾತಿಗಳನ್ನೂ ಕೆಡವಿ ಕೊಲ್ಲುತ್ತಿದ್ದನು.

ಅಲ್ಲಲ್ಲಿ ಸತ್ತು ಬಿದ್ದಿದ್ದ ಮನುಷ್ಯ-ಗಜ-ವಾಜಿಗಳಿಂದ ಆ ರಣಾಂಗಣವು ಮೃತ್ಯುವಿನಿಂದ ಆಘಾತಗೊಂಡಿದೆಯೋ ಎಂಬಂತೆ ಆಯಿತು. ಪಶುಗಳನ್ನು ಸಂಹರಿಸುವ ಕ್ರುದ್ಧ ರುದ್ರನ ಪಿನಾಕದಂತೆ ಮತ್ತು ಯಮದಂಡದಂತೆ ಉಗ್ರವಾದ, ಇಂದ್ರನ ವಜ್ರದಂತೆ ರೌದ್ರವಾಗಿ ಶಬ್ಧಮಾಡುತ್ತಿದ್ದ ಭೀಮನ ಗದೆಯನ್ನು ನೋಡಿದರು. ಗದೆಯನ್ನು ತಿರುಗಿಸುತ್ತಿದ್ದ ಆ ಮಹಾತ್ಮ ಕೌಂತೇಯನ ರೂಪವು ಯುಗಕ್ಷಯದಲ್ಲಿ ಕಾಲನಂತೆ ಮಹಾಘೋರವಾಗಿತ್ತು. ಆ ಮಹಾಸೇನೆಯು ಪುನಃ ಪುನಃ ಪಲಾಯನಗೊಳ್ಳುತ್ತಿರಲು, ಮೃತ್ಯುವಿನಂತೆ ಬರುತ್ತಿದ್ದ ಅವನನ್ನು ನೋಡಿ ಸರ್ವರೂ ಬೇಸತ್ತರು. ಎಲ್ಲೆಲ್ಲಿ ಪಾಂಡವನು ಗದೆಯನ್ನೆತ್ತಿ ಬರುತ್ತಿರುವುದನ್ನು ನೋಡುತ್ತಿದ್ದರೋ ಅಲ್ಲಲ್ಲಿ ಸರ್ವ ಸೈನ್ಯಗಳು ಹಿಮ್ಮೆಟ್ಟುತ್ತಿದ್ದರು. ಸೈನ್ಯಗಳನ್ನು ಸೀಳುತ್ತಿದ್ದ, ಅಂತಕನು ಬಾಯಿ ತೆರೆದು ಜೀವಕೋಟಿಯನ್ನು ನುಂಗುವಂತೆ ಕಾಣುತ್ತಿದ್ದ, ಮಹಾಗದೆಯನ್ನು ಹಿಡಿದಿದ್ದ, ಬಲೌಘ, ಅಪರಾಜಿತ, ಭೀಮಕರ್ಮಿ, ವೃಕೋದರನನ್ನು ನೋಡಿ ಭೀಷ್ಮನು ತಕ್ಷಣವೇ ಅಲ್ಲಿಗೆ ಧಾವಿಸಿ ಬಂದನು. ಮಹಾಮೇಘಘೋಷದ ರಥದಲ್ಲಿ ಆದಿತ್ಯವರ್ಚನನಾಗಿ ಮಳೆಸುರಿಸುವ ಮೇಘಗಳಂತೆ ಶರವರ್ಷಗಳಿಂದ ಮುಸುಕು ಹಾಕಿದ್ದ, ಅಂತಕನಂತೆ ಬಾಯಿತೆರೆದು ಬರುತ್ತಿದ್ದ ಭೀಷ್ಮನನ್ನು ನೋಡಿ ಮಹಾಬಾಹು ಭೀಮನು ಪರಮ ಕುಪಿತನಾಗಿ ಅವನನ್ನು ಎದುರಿಸಿದನು.

ಸಾತ್ಯಕಿ-ಭೂರಿಶ್ರವರ ಯುದ್ಧ

ಅದೇ ಕ್ಷಣದಲ್ಲಿ ಶಿನಿಪ್ರವೀರ ಸಾತ್ಯಕಿಯು ದೃಢವಾದ ಧನುಸ್ಸಿನಿಂದ ಶತ್ರುಗಳನ್ನು ಸಂಹರಿಸಿ ದುರ್ಯೋಧನನ ಸೇನೆಯನ್ನು ನಡುಗಿಸುತ್ತಾ ಪಿತಾಮಹನ ಮೇಲೆ ಎರಗಿದನು. ರಜತಪ್ರಕಾಶದಿಂದ ಹೊಳೆಯುತ್ತಿರುವ ಕುದುರೆಗಳಿಂದ ಬರುತ್ತಿರುವ, ದೃಢ ಧನುಸ್ಸಿನಿಂದ ಶರಗಳನ್ನು ಸುರಿಸುತ್ತಿದ್ದ ಅವನನ್ನು ಕೌರವ ಗಣಗಳಲ್ಲಿ ಯಾರೂ ತಡೆಯಲು ಶಕ್ಯರಾಗಿರಲಿಲ್ಲ. ಆಗ ಅಲಂಬುಸನೆಂಬ ರಾಕ್ಷಸ ರಾಜನು ನಿಶಿತ ಶರಾಗ್ರಗಳಿಂದ ಅವನನ್ನು ಹೊಡೆಯಲು ಶಿನಿಪ್ರವೀರನು ಅವನನ್ನು ನಾಲ್ಕು ಬಾಣಗಳಿಂದ ಗಾಯಗೊಳಿಸಿ ಆಕ್ರಮಣ ಮಾಡಿದನು. ವೃಷ್ಣಿವರನು ಶತ್ರುಗಳ ಮಧ್ಯದಲ್ಲಿ ಬಾಣಗಳನ್ನು ಸುರಿಸುತ್ತಾ ತನ್ನ ಮೇಲೆ ಬೀಳಲು ಬರುತ್ತಿದ್ದ ಕುರುಪುಂಗವರನ್ನು ಬಾರಿ ಬಾರಿ ಹೊಡೆದಟ್ಟುತ್ತಿದ್ದನು. ಮಧ್ಯಾಹ್ನದಲ್ಲಿ ಸುಡುತ್ತಿರುವ ಸೂರ್ಯನಂತಿದ್ದ ಆ ವರಿಷ್ಠನನ್ನು ತಡೆಯಲು ಸೋಮದತ್ತನ ಮಗನ ಹೊರತಾಗಿ ಅಲ್ಲಿ ಬೇರೆ ಯಾರೂ ಇರಲಿಲ್ಲ. ತನ್ನ ರಥರು ಪಲಾಯನಮಾಡುತ್ತಿರುವುದನ್ನು ನೋಡಿ ಸಾತ್ಯಕಿಯೊಡನೆ ಪ್ರತಿಯುದ್ಧ ಮಾಡಲು ಇಚ್ಛಿಸಿ ಸೌಮದತ್ತಿ ಭೂರಿಶ್ರವನು ಉಗ್ರವೇಗದ ಧನುಸ್ಸನ್ನು ಹಿಡಿದು ಮುಂದೆ ಬಂದನು.

ಆಗ ಭೂರಿಶ್ರವನು ಸಂಕ್ರುದ್ಧನಾಗಿ ಸಲಗವನ್ನು ಅಂಕುಶದಿಂದ ಬಾಧೆಗೊಳಿಸುವಂತೆ ಒಂಭತ್ತು ಬಾಣಗಳಿಂದ ಸಾತ್ಯಕಿಯನ್ನು ಹೊಡೆದನು. ಅಮೇಯಾತ್ಮ ಸಾತ್ಯಕಿಯೂ ಕೂಡ ಸರ್ವಲೋಕವೂ ನೋಡುತ್ತಿರಲು ಕೌರವನನ್ನು ಸನ್ನತಪರ್ವ ಶರಗಳಿಂದ ಹೊಡೆದನು. ಆಗ ರಾಜಾ ದುರ್ಯೋಧನನು ಸೋದರರಿಂದ ಪರಿವಾರಿತನಾಗಿ ರಣದಲ್ಲಿ ಸೋಮದತ್ತಿಯನ್ನು ಎಲ್ಲ ಕಡೆಗಳಿಂದ ಸುತ್ತುವರೆದನು. ಹಾಗೆಯೇ ಪಾಂಡವರೆಲ್ಲರೂ ರಭಸದಿಂದ ರಣದಲ್ಲಿ ಸಾತ್ಯಕಿಯನ್ನು ಎಲ್ಲಕಡೆಗಳಿಂದ ಸುತ್ತುವರೆದು ಯುದ್ಧಕ್ಕೆ ನಿಂತರು.

ಭೀಮಸೇನ-ಧಾರ್ತರಾಷ್ಟ್ರರ ಯುದ್ಧ

ಭೀಮಸೇನನಾದರೋ ಸಂಕ್ರುದ್ಧನಾಗಿ ಗದೆಯನ್ನು ಎತ್ತಿ ಹಿಡಿದು ದುರ್ಯೋಧನನ ನಾಯಕತ್ವದಲ್ಲಿದ್ದ ಧೃತರಾಷ್ಟ್ರನ ಪುತ್ರರೆಲ್ಲರನ್ನೂ ತಡೆದನು. ಅನೇಕ ಸಹಸ್ರ ರಥಗಳೊಂದಿಗಿದ್ದ, ಕ್ರೋಧಾಮರ್ಷಸಮನ್ವಿತನಾದ ಧೃತರಾಷ್ಟ್ರನ ಮಗ ನಂದಕನಾದರೋ ಮಹಾಬಲ ಭೀಮಸೇನನನ್ನು ಆರು ಶಿಲಾಶಿತ ನಿಶಿತ ಕಂಕಪತ್ರಗಳಿಂದ ಹೊಡೆದನು. ಕ್ರುದ್ಧನಾದ ದುರ್ಯೋಧನನಾದರೋ ಮಹಾಬಲ ಭೀಮಸೇನನನ್ನು ಉಕ್ಕಿನ ಮೂರು ನಿಶಿತ ಮಾರ್ಗಣಗಳಿಂದ ಹೊಡೆದನು. ಆಗ ಮಹಾಬಾಹು ಭೀಮನು ತನ್ನ ರಥಶ್ರೇಷ್ಠ ರಥವನ್ನೇರಿ ವಿಶೋಕನಿಗೆ ಇದನ್ನು ಹೇಳಿದನು:ಈ ಮಹಾರಥ ಮಹಾಬಲಿ ಶೂರ ಧಾರ್ತರಾಷ್ಟ್ರರು ಯುದ್ಧದಲ್ಲಿ ನನ್ನನ್ನೇ ಕೊಲ್ಲಲು ಉದ್ಯುಕ್ತರಾಗಿದ್ದಾರೆ. ಸಾರಥೇ! ಇಂದು ಇವರನ್ನು ನೀನು ನೋಡುತ್ತಿರುವ ಹಾಗೆಯೇ ಸಂಹರಿಸುತ್ತೇನೆ. ಅದರಲ್ಲಿ ಸಂಶಯವಿಲ್ಲ. ಆದುದರಿಂದ ನನ್ನ ಕುದುರೆಗಳನ್ನು ವ್ಯವಸ್ಥಿತವಾಗಿ ನಡೆಸಲು ಪ್ರಯತ್ನಿಸು.

ಹೀಗೆ ಹೇಳಿ ಪಾರ್ಥನು ದುರ್ಯೋಧನನನ್ನು ಹತ್ತು ಕನಕಭೂಷಣ ತೀಕ್ಷ್ಣ ಶರಗಳಿಂದ ಹೊಡೆದನು. ಮತ್ತು ಮೂರು ಬಾಣಗಳಿಂದ ನಂದಕನ ಎದೆಗೆ ಹೊಡೆದನು. ದುರ್ಯೋಧನನು ಮಹಾಬಲ ಭೀಮನನ್ನು ಅರವತ್ತು ಮತ್ತು ಅನ್ಯ ಮೂರು ನಿಶಿತ ಶರಗಳಿಂದ ವಿಶೋಕನನ್ನು ಹೊಡೆದನು. ನಗುತ್ತಾ ಆ ರಾಜನು ಹೊಳೆಯುತ್ತಿದ್ದ ಭೀಮನ ಧನುಸ್ಸನ್ನು ಮುಷ್ಟಿದೇಶದಲ್ಲಿ ತೀಕ್ಷ್ಣವಾದ ಮೂರು ಶರಗಳಿಂದ ತುಂಡರಿಸಿದನು. ಧನ್ವಿ ದುರ್ಯೋಧನನ ತೀಕ್ಷ್ಣ ವಿಶಿಖಗಳಿಂದ ಪೀಡಿತನಾದ ಸಾರಥಿ ವಿಶೋಕನನ್ನು ನೋಡಿ ಅಸಹನೆಯಿಂದ ಕ್ರುದ್ಧನಾದ ಭೀಮನು ದುರ್ಯೋಧನನ ವಧಾರ್ಥವಾಗಿ ಬೇಗನೇ ಇನ್ನೊಂದು ದಿವ್ಯ ಧನುಸ್ಸನ್ನು ಎತ್ತಿಕೊಂಡನು. ಮತ್ತು ಲೋಮವಾಹಿನಿ ಕ್ಷುರಪ್ರವನ್ನು ತೆಗೆದುಕೊಂಡು ಭೀಮನು ನೃಪತಿಯ ಉತ್ತಮ ಕಾರ್ಮುಕವನ್ನು ತುಂಡರಿಸಿದನು. ಕತ್ತರಿಸಲ್ಪಟ್ಟ ತನ್ನ ಧನುಸ್ಸನ್ನು ಬಿಸುಟು ಕ್ರೊಧದಿಂದ ಭುಗಿಲೆದ್ದು ಇನ್ನೂ ದೊಡ್ಡದಾದ ಮತ್ತು ವೇಗವತ್ತರವಾದ ಬೇರೆ ಕಾರ್ಮುಕವನ್ನು ತೆಗೆದುಕೊಂಡು ಕಾಲಮೃತ್ಯು ಸಮಪ್ರಭೆಯ ಘೋರವನ್ನು ವಿಶಿಖವನ್ನು ಹೂಡಿ ಅದರಿಂದ ಸಂಕ್ರುದ್ಧನಾಗಿ ಭೀಮಸೇನನ ಎದೆಗೆ ಹೊಡೆದನು. ಅತ್ಯಂತ ಗಾಢವಾಗಿ ಹೊಡೆತತಿಂದ ಅವನು ನೋವಿನಿಂದ ವ್ಯಥಿತನಾಗಿ ತಾನು ಕುಳಿತಿದ್ದಲ್ಲಿಯೇ ಸರಿದು ಕುಳಿತುಕೊಂಡನು. ನಿಷಣ್ಣನಾಗಿ ರಥದಲ್ಲಿ ಕುಳಿತಂತೆಯೇ ಒಂದು ಕ್ಷಣ ಮೂರ್ಛಿತನಾದನು.  ವ್ಯಥಿತನಾದ ಭೀಮನನ್ನು ಕಂಡು ಅಭಿಮನ್ಯುವೇ ಮೊದಲಾದ ಪಾಂಡವರ ಮಹಾರಥ ಮಹೇಷ್ವಾಸರು ಸಹಿಸಲಾರದೇ ಅವ್ಯಗ್ರರಾಗಿ ದುರ್ಯೋಧನನ ತಲೆಯ ಮೇಲೆ ತಿಗ್ಮತೇಸ್ಸಿನ ಶಸ್ತ್ರಗಳ ತುಮುಲ ವೃಷ್ಠಿಯನ್ನೇ ಸುರಿಸಿದರು.

ಸ್ಮೃತಿಯನ್ನು ಪಡೆದುಕೊಂಡ ಮಹಾಬಲ ಭೀಮಸೇನನು ಆಗ ಮೂರು ಮತ್ತು ಪುನಃ ಐದು ಬಾಣಗಳಿಂದ ಹೊಡೆದನು. ಆ ಮಹೇಷ್ವಾಸ ಪಾಂಡವನು ಶಲ್ಯನನ್ನು ಇಪ್ಪತ್ತೈದು ರುಕ್ಮಪುಂಖ ಶರಗಳಿದ ಹೊಡೆದನು. ಅವನು ನೋವಿನಿಂದ ಪೀಡಿತನಾಗಿ ಪಲಾಯನ ಮಾಡಿದನು. ಆಗ ಧೃತರಾಷ್ಟ್ರನ ಹದಿನಾಲ್ಕು ಮಕ್ಕಳು - ಸೇನಾಪತಿ, ಸುಷೇಣ, ಜಲಸಂಧ, ಸುಲೋಚನ, ಉಗ್ರ, ಭೀಮರಥ, ಭೀಮ, ಭೀಮಬಾಹು, ಅಲೋಲುಪ, ದುಮುಖ, ದುಷ್ಪ್ರಧರ್ಷ, ವಿವಿತ್ಸು, ವಿಕಟ ಮತ್ತು ಸಮ - ಭೀಮನನ್ನು ಆಕ್ರಮಿಸಿದರು. ಕ್ರೋಧಸಂರಕ್ತಲೋಚನರಾದ ಅವರು ಒಂದಾಗಿ ಅನೇಕ ಬಾಣಗಳನ್ನು ಪ್ರಯೋಗಿಸುತ್ತಾ ಭೀಮಸೇನನನ್ನು ಬಹಳವಾಗಿ ಬಾಧೆಪಡೆಸಿದರು. ಮಹಾಬಲ ವೀರ ಪಾಂಡವ ಭೀಮಸೇನನು ಅವರನ್ನು ನೋಡಿ ಕುರಿಗಳ ಮಧ್ಯೆಯಿರುವ ತೋಳದಂತೆ ಕಟವಾಯಿಯನ್ನು ನೆಕ್ಕುತ್ತಾ ಸೇನಾಪತಿಯ ಶಿರವನ್ನು ಕ್ಷುರಪ್ರದಿಂದ ಕತ್ತರಿಸಿದನು. ಜಲಸಂಧನನ್ನು ಹೊಡೆದು ಅವನನ್ನು ಯಮಸಾದನಕ್ಕೆ ಕಳುಹಿಸಿದನು. ಹಾಗೆಯೇ ಸುಷೇಣನನ್ನೂ ಸಂಹರಿಸಿ ಮೃತ್ಯುವಲ್ಲಿಗೆ ಕಳುಹಿಸಿದನು. ಕುಂಡಲಗಳಿಂದ ವಿಭೂಷಿತವಾಗಿದ್ದ, ಕಿರೀಟವನ್ನು ಧರಿಸಿದ್ದ, ಚಂದ್ರನಂತಿದ್ದ ಉಗ್ರನ ಶಿರವನ್ನು ಭಲ್ಲದಿಂದ ಭೂಮಿಗೆ ಉರುಳಿಸಿದನು. ಭೀಮನು ಸಮರದಲ್ಲಿ ಎಪ್ಪತ್ತು ಬಾಣಗಳಿಂದ ಭೀಮಬಾಹುವನ್ನು ಅವನ ಕುದುರೆ, ಧ್ವಜ ಮತ್ತು ಸಾರಥಿಯೊಂದಿಗೆ ಪರಲೋಕಕ್ಕೆ ಕಳುಹಿಸಿದನು. ಭೀಮಸೇನನು ನಗುತ್ತಾ ರಭಸದಿಂದ ಬರುತ್ತಿದ್ದ ಭೀಮ ಮತ್ತು ಭೀಮರಥ ಸಹೋದರರನ್ನು ಯಮಸಾದನಕ್ಕೆ ಕಳುಹಿಸಿದನು. ಆಗ ಮಹಾಮೃಧದಲ್ಲಿ ಭೀಮನು ಕ್ಷುರಪ್ರದಿಂದ ಸುಲೋಚನನನ್ನು ಸರ್ವಸೈನ್ಯಗಳು ನೋಡುತ್ತಿದ್ದಂತೆ ಯಮಸಾದನಕ್ಕೆ ಕಳುಹಿಸಿದನು. ಭೀಮಸೇನನ ಆ ಪರಾಕ್ರಮವನ್ನು ನೋಡಿ ಮಹಾತ್ಮನಿಂದ ವಧಿಸಲ್ಪಡುತ್ತಿದ್ದ ಅಲ್ಲಿ ಉಳಿದಿದ್ದ ಧೃತರಾಷ್ಟ್ರನ ಪುತ್ರರಾದರೋ ಭೀಮನ ಭಯದಿಂದ ಪೀಡಿತರಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋದರು.

ಆಗ ಶಾಂತನವನು ಎಲ್ಲ ಮಹಾರಥರಿಗೆ ಹೇಳಿದನು: ಪಾರ್ಥಿವರೇ! ಈ ಭೀಮನು ರಣದಲ್ಲಿ ಕ್ರುದ್ಧನಾಗಿ ಮಹಾರಥರಾದ, ಶ್ರೇಷ್ಠ, ಜ್ಯೇಷ್ಠ, ಶೂರ ಧಾರ್ತರಾಷ್ಟ್ರರನ್ನು ಸಂಹರಿಸುತ್ತಿದ್ದಾನೆ. ನೀವೆಲ್ಲರೂ ಒಟ್ಟಾಗಿ ಆ ಉಗ್ರಧನ್ವಿಯನ್ನು ಬಂಧಿಸಿರಿ! ಹೀಗೆ ಹೇಳಲು ಧಾರ್ತರಾಷ್ಟ್ರನ ಸೈನಿಕರೆಲ್ಲರೂ ಸಂಕ್ರುದ್ಧರಾಗಿ ಮಹಾಬಲ ಭೀಮಸೇನನ ಮೇಲೆ ಎರಗಿದರು. ಮದೋದಕವನ್ನು ಸುರಿಸುತ್ತಿದ್ದ ಆನೆಯ ಮೇಲಿದ್ದ ಭಗದತ್ತನು ಒಡನೆಯೇ ಎಲ್ಲಿ ಭೀಮನಿದ್ದನೋ ಅಲ್ಲಿಗೆ ಧಾವಿಸಿ ಬಂದನು. ರಣದಲ್ಲಿ ಬರುತ್ತಲೇ ಅವನು ಭೀಮಸೇನನನ್ನು ಶಿಲಾಶಿತಗಳಿಂದ ಮೋಡಗಳು ಭಾಸ್ಕರನನ್ನು ಮುಚ್ಚಿಬಿಡುವಂತೆ ಅದೃಷ್ಯನನ್ನಾಗಿ ಮಾಡಿಬಿಟ್ಟನು. ಯುದ್ಧದಲ್ಲಿ ಸ್ವಬಾಹುಬಲಗಳನ್ನು ಆಶ್ರಯಿಸಿದ್ದ ಅಭಿಮನ್ಯುವೇ ಮೊದಲಾದ ಮಹಾರಥರು ಭೀಮನನ್ನು ಹಾಗೆ ಮುಚ್ಚಿದುದನ್ನು ಸಹಿಸಲಾರದೇ ಆ ಅನೆಯನ್ನು ಎಲ್ಲಕಡೆಗಳಿಂದಲೂ ಸುತ್ತುವರೆದು ಅದನ್ನು ಎಲ್ಲ ಕಡೆಗಳಿಂದಲೂ ಬಾಣಗಳಿಂದ ಹೊಡೆದರು. ನಾನಾ ಚಿಹ್ನೆಗಳಿಂದ ಸುತೇಜಸರಾದ ಅವರ ಶಸ್ತ್ರವೃಷ್ಟಿಯಿಂದ ಗಾಯಗೊಂಡ ಆ ಪ್ರಾಗ್ಜೋತಿಷದ ಆನೆಯು ಶರೀರಾದ್ಯಂತ ರಕ್ತ ಸುರಿಸುತ್ತಾ ರಣದಲ್ಲಿ ಒಂದು ಪ್ರೇಕ್ಷಣೀಯವಾಯಿತು. ಬಾಲಸೂರ್ಯನ ನಸುಗೆಂಪಾದ ಕಿರಣಗಳಿಂದ ತೊಳೆಯಲ್ಪಟ್ಟ ದೊಡ್ಡದೊಂದು ಕಾರ್ಮುಗಿಲಿನಂತೆ ಕಾಣುತ್ತಿತ್ತು. ಆ ಮದಸ್ರಾವೀ ಆನೆಯು ಭಗದತ್ತನಿಂದ ಪ್ರಚೋದಿಸಲ್ಪಟ್ಟು ಕಾಲನು ಬಿಟ್ಟ ಅಂತಕನಂತೆ ತನ್ನ ಪದಾಘಾತದಿಂದ ಭೂಮಿಯನ್ನೇ ಕಂಪಿಸುತ್ತಾ ವೇಗವನ್ನು ದ್ವಿಗುಣವಾಗಿಸಿಕೊಂಡು ಅವರೆಲ್ಲರ ಮೇಲೆ ಎರಗಿತು. ಅದರ ಅಸಹ್ಯವಾದ ಆ ಮಹಾರೂಪವನ್ನು ನೋಡಿ ಮಹಾರಥರೆಲ್ಲರೂ ಅದನ್ನು ಸಹಿಸಿಕೊಳ್ಳಲಾರದೇ ಹತೋತ್ಸಾಹರಾದರು.

ಘಟೋತ್ಕಚನ ಮಯಾಯುದ್ಧ; ನಾಲ್ಕನೆಯ ದಿವಸದ ಯುದ್ಧ ಸಮಾಪ್ತಿ

ಆಗ ನೃಪತಿಯು ಕ್ರುದ್ಧನಾಗಿ ಭೀಮಸೇನನ ಎದೆಗೆ ನತಪರ್ವ ಶರದಿಂದ ಹೊಡೆದನು. ಆ ಮಹೇಷ್ವಾಸ ರಾಜನಿಂದ ಹೊಡೆಯಲ್ಪಟ್ಟ ಮಹಾರಥನು ಅಂಗಾಂಗಗಳ ನೋವಿನಿಂದ ಬಳಲಿ ಮೂರ್ಛಿತನಾಗಿ ಧ್ವಜದ ದಂಡವನ್ನು ಹಿಡಿದು ಕುಳಿತುಕೊಂಡನು. ಅವರು ಭೀತರಾದುದನ್ನೂ, ಭೀಮಸೇನನು ಮೂರ್ಛಿತನಾದುದನ್ನೂ ಕಂಡು ಪ್ರತಾಪವಾನ್ ಭಗದತ್ತನು ಗಟ್ಟಿಯಾಗಿ ಸಿಂಹನಾದಗೈದನು. ಆಗ ಭೀಮನು ಹಾಗಾದುದನ್ನು ನೋಡಿ ಸಂಕ್ರುದ್ಧನಾದ ಘೋರ ರಾಕ್ಷಸ ಘಟೋತ್ಕಚನು ಅಲ್ಲಿಯೇ ಅಂತರ್ಧಾನನಾದನು. ಅವನು ಭೀರುಗಳ ಭಯವರ್ಧಿಸುವ ದಾರುಣ ಮಾಯೆಯನ್ನು ಮಾಡಿ ಅದೃಶ್ಯನಾಗಿ ನಿಮಿಷಗಳಲ್ಲಿ ಘೋರರೂಪವನ್ನು ತಾಳಿದನು. ತನ್ನದೇ ಮಾಯೆಯಿಂದ ಮಾಡಲ್ಪಟ್ಟ ಐರಾವತವನ್ನೇರಿ ಬಂದನು. ಇತರ ದಿಗ್ಗಜಗಳೂ ಅನುಸರಿಸಿ ಬಂದವು. ಅಂಜನ, ವಾಮನ, ಸುಪ್ರಭೆಯ ಮಹಾಪದ್ಮ ಇವು ಮೂರು ಮಹಾನಾಗಗಳೂ ರಾಕ್ಷಸರನ್ನು ಏರಿಸಿಕೊಂಡು ಬಂದವು. ಆ ಮೂರು ಮಹಾಬಲ ಪರಾಕ್ರಮಿಗಳಾದ ತೇಜೋವೀರ್ಯಬಲೋಪೇತಗಳಾದ ಮಹಾಕಾಯಗಳು ಬಹಳಷ್ಟು ಮದೋದಕವನ್ನು ಸುರಿಸುತ್ತಿದ್ದವು. ಆಗ ಪರಂತಪ ಘಟೋತ್ಕಚನು ಆನೆಯೊಂದಿಗೆ ಭಗದತ್ತನನ್ನು ಕೊಲ್ಲಲು ಬಯಸಿ ತನ್ನ ಆನೆಯನ್ನು ಪ್ರಚೋದಿಸಿದನು. ಮಹಾಬಲ ರಾಕ್ಷಸರಿಂದ ಪ್ರಚೋದಿತರಾದ ಅನ್ಯ ಗಜಗಳೂ ಕೂಡ ಸಂರಬ್ಧರಾಗಿ ಕೋರೆದಾಡೆಗಳೊಡನೆ ನಾಲ್ಕೂಕಡೆಗಳಿಂದ ಭಗದತ್ತನ ಆ ಅನೆಯ ಮೇಲೆ ಬಿದ್ದು ಬಹುವಾಗಿ ಪೀಡಿಸಿದವು. ಆ ಆನೆಗಳಿಂದ ಪೀಡಿತಗೊಂಡು ಅದು ಶರಗಳ ವೇದನೆಯಿಂದ ಆರ್ತವಾಗಿ ಮೋಡಗಳ ಗುಡುಗಿಗೆ ಸಮನಾದ ಮಹಾನಾದದಿಂದ ಕೂಗಿತು. ಕೂಗುತ್ತಿದ್ದ ಆ ಭೀಮನಿಸ್ವನ ಘೋರ ನಾದವನ್ನು ಕೇಳಿದ ಭೀಷ್ಮನು ರಾಜಾ ಸುಯೋಧನ ಮತ್ತು ದ್ರೋಣನಿಗೆ ಹೇಳಿದನು:ಈ ಮಹೇಷ್ವಾಸ ಭಗದತ್ತನು ಸಂಗ್ರಾಮದಲ್ಲಿ ದುರಾತ್ಮ ಹೈಡಿಂಬಿಯೊಂದಿಗೆ ಯುದ್ಧಮಾಡಿ ಕಷ್ಟಕ್ಕೊಳಗಾಗಿದ್ದಾನೆ. ರಾಕ್ಷಸನು ಮಹಾಮಾಯನಾಗಿದ್ದಾನೆ. ರಾಜನು ಅತ್ಯಂತ ಕುಪಿತನಾಗಿದ್ದಾನೆ. ಅವರಿಬ್ಬರು ಮಹಾವೀರ್ಯವಂತರೂ ಕಾಲಮೃತ್ಯುವಂತೆ ಒಟ್ಟಾಗಿದ್ದಾರೆ. ಹರ್ಷಿತರಾದ ಪಾಂಡವರ ಮಹಾಸ್ವನವೂ ಭೀತಿಗೊಂಡ ಆನೆಯ ಚೀರುವ ಮಹಾಧ್ವನಿಯೂ ಕೇಳಿಬರುತ್ತಿದೆ. ನಿಮಗೆ ಮಂಗಳವಾಗಲಿ! ರಾಜನನ್ನು ಪರಿರಕ್ಷಿಸಲು ಅಲ್ಲಿಗೆ ಹೋಗೋಣ. ರಕ್ಷಣೆಯಿಲ್ಲದವರು ಸಮರದಲ್ಲಿ ಬೇಗನೇ ಪ್ರಾಣಗಳನ್ನು ಕಳೆದುಕೊಳ್ಳುತ್ತಾರೆ. ತ್ವರೆಮಾಡಿ! ತಡಮಾಡುವುದರಿಂದ ಏನು ಪ್ರಯೋಜನ? ರೌದ್ರವೂ ಲೋಮಹರ್ಷಣವೂ ಆದ ಮಹಾಯುದ್ಧವು ನಡೆಯುತ್ತಿದೆ. ಭಕ್ತನೂ, ಕುಲಪುತ್ರನೂ, ಶೂರನೂ, ಪೃತನಾಪತಿಯೂ ಆದ ಅವನಿಗೆ ನಾವು ರಕ್ಷಣೆಯನ್ನು ಮಾಡುವುದು ಯುಕ್ತವಾಗಿದೆ.

ಭೀಷ್ಮನ ಆ ಮಾತನ್ನು ಕೇಳಿ ಭಾರದ್ವಾಜನನ್ನು ಮುಂದಿರಿಸಿಕೊಂಡ ಎಲ್ಲ ರಾಜರೂ ಒಟ್ಟಿಗೇ ಭಗದತ್ತನನ್ನು ರಕ್ಷಿಸಲು ಬಯಸಿ ಶೀಘ್ರದಲ್ಲಿಯೇ ಅವನು ಎಲ್ಲಿದ್ದನೋ ಅಲ್ಲಿಗೆ ಬಂದರು, ಅವರು ಹೋಗುತ್ತಿರುವುದನ್ನು ನೋಡಿ ಯುಧಿಷ್ಠಿರನನ್ನು ಮುಂದಿರಿಸಿಕೊಂಡ ಪಾಂಚಾಲರು ಪಾಂಡವರೊಡನೆ ಶತ್ರುಗಳನ್ನು ಹಿಂಬಾಲಿಸಿ ಹೋದರು. ಆ ಸೇನೆಗಳನ್ನು ನೋಡಿದ ಪ್ರತಾಪವಾನ್ ರಾಕ್ಷಸೇಂದ್ರನು ಕಲ್ಲುಬಂಡೆಯು ಸ್ಫೋಟಗೊಂಡ ಹಾಗೆ ಗಟ್ಟಿಯಾಗಿ ಕೂಗಿದನು. ಅವನ ಆ ಕೂಗನ್ನು ಕೇಳಿ ಮತ್ತು ಯುದ್ಧಮಾಡುತ್ತಿದ್ದ ಆನೆಯನ್ನೂ ನೋಡಿ ಶಾಂತನವ ಭೀಷ್ಮನು ಪುನಃ ಭಾರದ್ವಾಜನಿಗೆ ಹೇಳಿದನು:ದುರಾತ್ಮ ಹೈಡಿಂಬಿಯೊಂದಿಗೆ ಯುದ್ಧಮಾಡಲು ನನಗೆ ಇಷ್ಟವಾಗುತ್ತಿಲ್ಲ. ಈಗ ಅವನು ಬಲ-ವೀರ್ಯಗಳಿಂದ ಸಂಪನ್ನನಾಗಿದ್ದಾನೆ ಮತ್ತು ಸಹಾಯಕರನ್ನೂ ಪಡೆದಿದ್ದಾನೆ. ಯುದ್ಧದಲ್ಲಿ ಇವನನ್ನು ಜಯಿಸಲು ಸ್ವಯಂ ವಜ್ರಭೃತನಿಗೂ ಶಕ್ಯವಿಲ್ಲ. ಅವನು ಲಕ್ಷ್ಯಭೇದನದಲ್ಲಿ ಸಿದ್ಧಹಸ್ತನಾಗಿದ್ದಾನೆ. ನಾವೂ ಕೂಡ ಬಳಲಿದ್ದೇವೆ. ಪಾಂಚಾಲರು ಮತ್ತು ಪಾಂಡವರಿಂದ ನಾವು ದಿವಸವಿಡೀ ಗಾಯಗೊಂಡಿದ್ದೇವೆ. ಆದುದರಿಂದ ವಿಜಯೋತ್ಸಾಹದಿಂದ ಉಬ್ಬಿರುವ ಪಾಂಡವರೊಂದಿಗೆ ಯುದ್ಧಮಾಡಲು ನನಗೆ ಮನಸ್ಸಾಗುತ್ತಿಲ್ಲ. ಇಂದು ಯುದ್ಧಕ್ಕೆ ವಿರಾಮವನ್ನು ಘೋಷಿಸಿ ನಾಳೆ ನಾವು ಒಟ್ಟಿಗೇ ಶತ್ರುಗಳೊಂದಿಗೆ ಹೋರಾಡೋಣ.

ಘಟೋತ್ಕಚನ ಭಯದಿಂದ ಪೀಡಿತರಾಗಿ ಅದೇ ಉಪಾಯವನ್ನು ಹುಡುಕುತ್ತಿದ್ದ ಕೌರವರೂ ಕೂಡ ಪಿತಾಮಹನ ಮಾತನ್ನು ಕೇಳಿ ಅದರಂತೆಯೇ ಮಾಡಿದರು. ಕೌರವರು ನಿವೃತ್ತರಾಗಲು ಗೆಲುವಿಂದ ಉಬ್ಬಿದ ಪಾಂಡವರು ಶಂಖ-ವೇಣು ನಿಸ್ವನಗಳೊಂದಿಗೆ ಸಿಂಹನಾದವನ್ನು ಮಾಡಿದರು. ಘಟೋತ್ಕಚನನ್ನು ಮುಂದಿರಿಸಿಕೊಂಡು ಪಾಂಡವ ಕೌರವರ ಆ ದಿನದ ಯುದ್ಧವು ಈ ರೀತಿ ನಡೆಯಿತು. ಆ ನಿಶಾಕಾಲದಲ್ಲಿ ಪಾಂಡವರಿಂದ ಪರಾಜಿತರಾದ ಕೌರವರು ನಾಚಿಕೆಗೊಂಡವರಾಗಿ ತಮ್ಮ ತಮ್ಮ ಶಿಬಿರಗಳಿಗೆ ನಡೆದರು. ಬಾಣಗಳ ಹೊಡೆತಕ್ಕೆ ಗಾಯಗೊಂಡಿದ್ದ ಮಹಾರಥ ಪಾಂಡುಪುತ್ರರೂ ಕೂಡ ಯುದ್ಧದಿಂದ ಸಂತೋಷಗೊಂಡು ಶಿಬಿರಗಳಿಗೆ ತೆರಳಿದರು. ಭೀಮಸೇನ-ಘಟೋತ್ಕಚರನ್ನು ಮುಂದಿಟ್ಟು ಪರಮ ಸಂತೋಷಯುಕ್ತರಾಗಿ ಅನ್ಯೋನ್ಯರನ್ನು ಗೌರವಿಸಿದರು. ವಿವಿಧ ನಾದಗಳು ತೂರ್ಯಸ್ವನಗಳೊಡನೆ, ಸಿಂಹನಾದಮಾಡುವವರೊಂಡನೆ, ಶಂಖನಾದಗಳೊಂಡನೆ ಮಿಶ್ರಿತವಾಗಿ ಜೋರಾಗಿತ್ತು. ಭೂಮಿಯನ್ನು ನಡುಗಿಸುತ್ತಾ ಸಂತೋಷದಲ್ಲಿ ಕುಣಿಯುತ್ತಾ ನಿನ್ನ ಮಗನ ಮರ್ಮಗಳನ್ನು ಚುಚ್ಚುತ್ತಾ ಆ ವುಹಾತ್ಮ ಪರಂತಪರು ನಿಶಾಕಾಲದಲ್ಲಿ ಶಿಬಿರಗಳಿಗೆ ತೆರಳಿದರು. ನೃಪತಿ ದುರ್ಯೋಧನನಾದರೋ ಭ್ರಾತೃವಧೆಯಿಂದ ಭಾಷ್ಪಶೋಕಸಮಾಕುಲನಾಗಿ ಒಂದು ಕ್ಷಣ ಚಿಂತೆಗೊಳಗಾದನು. ಆಗ ಶಿಬಿರಗಳ ವಿಧಿಯನ್ನು ಯಥಾವಿಧಿಯಾಗಿ ಮಾಡಿ, ಭ್ರಾತೃವ್ಯಸನದಿಂದ ಎಳೆಯಲ್ಪಟ್ಟು ಶೋಕಸಂತಪ್ತನಾದನು.

Leave a Reply

Your email address will not be published. Required fields are marked *