ಚ್ಯವನ
ಚ್ಯವನ-ಸುಕನ್ಯೆಯರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದ ತೀರ್ಥಯಾತ್ರಾ ಪರ್ವ (ಅಧ್ಯಾಯ ೧೨೨-೧೨೫) ದಲ್ಲಿ ಬರುತ್ತದೆ. ಯುಧಿಷ್ಠಿರನ ತೀರ್ಥಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು.
ಭೃಗು ಮಹರ್ಷಿಗೆ ಚ್ಯವನ ಭಾರ್ಗವನೆಂಬ ಹೆಸರಿನ ಮಗನಿದ್ದನು ಮತ್ತು ಆ ಮಹಾದ್ಯುತಿಯು ನರ್ಮದಾ ತೀರದಲ್ಲಿ ತಪಸ್ಸನ್ನಾಚರಿಸುತ್ತಿದ್ದನು. ಆ ಮಹಾತೇಜಸ್ವಿಯು ವೀರಾಸನದಲ್ಲಿ ಅಚಲವಾಗಿದ್ದು ಒಂದೇ ಸ್ಥಳದಲ್ಲಿ ಬಹಳಷ್ಟು ಕಾಲ ನಿಂತು ತಪಸ್ಸನ್ನಾಚರಿಸುತ್ತಿದ್ದನು. ಬಹು ಸಮಯದ ನಂತರ ಅವನ ಮೇಲೆ ಬಳ್ಳಿಗಳು ಬೆಳೆದು, ಇರುವೆಗಳ ತಂಡವು ವಾಸಮಾಡುವ ಹುತ್ತವಾದನು. ಹೀಗೆ ಆ ಧೀಮಂತನು ಎಲ್ಲೆಡೆಯಿಂದಲೂ ಹುತ್ತದಿಂದ ಮುಚ್ಚಿಕೊಂಡು ಮಣ್ಣಿನ ರಾಶಿಯಂತೆ ಆದನು. ಹುತ್ತದಿಂದ ಅವರಿಸಲ್ಪಟ್ಟ ಅವನು ತಪಸ್ಸನ್ನು ತಪಿಸುತ್ತಲೇ ಇದ್ದನು. ದೀರ್ಘಕಾಲದವರೆಗೆ ಹೀಗಿರಲು, ಶರ್ಯಾತಿ ಎಂಬ ಹೆಸರಿನ ರಾಜನು ಈ ಉತ್ತಮ ರಮ್ಯ ಸರೋವರಕ್ಕೆ ವಿಹರಿಸಲು ಬಂದನು. ಅವನೊಂದಿಗೆ ನಾಲ್ಕು ಸಾವಿರ ಸ್ತ್ರೀಯರಿದ್ದರು. ಅವರಲ್ಲಿ ಒಬ್ಬಳು ಸುಕನ್ಯಾ ಎಂಬ ಹೆಸರಿನ ಅವನ ಶುಭ್ರೆ ಮಗಳು. ಸಖಿಯರಿಂದ ಸುತ್ತುವರೆದು ಸರ್ವಾಭರಣ ಭೂಷಿತಳಾಗಿ ಅಲ್ಲಿಯೇ ತಿರುಗಾಡುತ್ತಿದ್ದ ಅವಳು ಅಲ್ಲಿಯೇಇದ್ದ ಭಾರ್ಗವನ ಹುತ್ತವನ್ನು ನೋಡಿದಳು. ಅಲ್ಲಿ ಆ ಸುಂದರ ಹಲ್ಲಿನವಳು ಮನೋರಮ ಗಿಡಮರಗಳನ್ನು ಗಮನವಿಟ್ಟು ನೋಡುತ್ತಾ ತನ್ನ ಸಖಿಗಳೊಂದಗೂಡಿ ತಿರುಗಾಡಿದಳು. ರೂಪದಲ್ಲಿ ಮತ್ತು ವಯಸ್ಸಿನಲ್ಲಿ ಮದನನ ಮತ್ತೇರಿದ ಅವಳು ತುಂಬಾ ಹೂಬಿಟ್ಟು ಭಾರವಾಗಿ ಬಗ್ಗಿದ್ದ ಕಾಡು ಮರಗಳ ರೆಂಬೆಗಳನ್ನು ಮುರಿಯ ತೊಡಗಿದಳು. ಒಂದೇ ವಸ್ತ್ರವನ್ನುಟ್ಟು ಅಲಂಕೃತಳಾಗಿ ಮಿಂಚಿನಂತೆ ಓಡಾಡುತ್ತಿರುವ, ಸಖಿಯರಿಲ್ಲದೇ ಒಬ್ಬಳೇ ಇರುವ ಅವಳನ್ನು ಧೀಮಂತ ಭಾರ್ಗವನು ನೋಡಿದನು. ಆ ನಿರ್ಜನಪ್ರದೇಶದಲ್ಲಿ ಅವಳನ್ನು ಕಂಡ ಪರಮದ್ಯುತಿ, ಬಾಯೊಣಗಿದ, ಬ್ರಹ್ಮರ್ಷಿ ತಪೋಬಲಸಮನ್ವಿತ ಚ್ಯವನನು ನೋಡಿ ಸಂತೋಷಗೊಂಡನು. ಆಕಲ್ಯಾಣಿಯನ್ನು ಉದ್ದೇಶಿಸಿ ಮಾತನಾಡಿಸಿದರೆ ಅವಳಿಗೆ ಅದು ಕೇಳದಾಯಿತು. ಆಗ ಸುಕನ್ಯೆಯು ಹುತ್ತದಲ್ಲಿ ಭಾರ್ಗವನ ಕಣ್ಣುಗಳನ್ನು ಕಂಡು ಕುತೂಹಲದಿಂದ ಮೋಹವು ಬುದ್ಧಿಯನ್ನು ಆವರಿಸಲು ಇದು ಏನಿರಬಹುದು ಎಂದು ಹೇಳುತ್ತಾ ಮುಳ್ಳಿನಿಂದ ಆ ಕಣ್ಣುಗಳನ್ನುಚುಚ್ಚಿದಳು. ಅವಳು ಕಣ್ಣುಗಳನ್ನು ಹೀಗೆ ಚುಚ್ಚಲು ಮೊದಲೇ ಕೋಪಿಷ್ಟನಾಗಿದ್ದ ಅವನು ಅತ್ಯಂತ ಕುಪಿತನಾಗಿ ಶರ್ಯಾತಿಯ ಸೈನಿಕರ ಮಲಮೂತ್ರಗಳನ್ನು ನಿಲ್ಲಿಸಿದನು.
ಅನಂತರ ತನ್ನ ಸೇನೆಯು ಮಲಬದ್ಧತೆ ಮತ್ತು ಮೂತ್ರ ಬದ್ಧತೆಗಳಿಂದ ಬಳಲುತ್ತಿರುವುದನ್ನು ನೋಡಿ ರಾಜನು ಅದು ಏಕೆ ಹಾಗಾಯಿತೆಂದು ಪ್ರಶ್ನಿಸತೊಡಗಿದನು: “ತಪೋನಿರತನಾಗಿರುವ ವೃದ್ಧನಾದ ಮತ್ತು ವಿಶೇಷವಾಗಿ ಕೋಪಿಷ್ಟನಾದ ಮಹಾತ್ಮ ಭಾರ್ಗವನಿಗೆ ಇಂದು ಮಾಡಬಾರದ್ದನ್ನು ಮಾಡಿದವರು ಯಾರು? ತಿಳಿದು ಅಥವಾ ತಿಳಿಯದೇ ಮಾಡಿದುದೆಲ್ಲವನ್ನೂ ನನಗೆ ವರದಿಮಾಡಿ.” ಆಗ ಸೈನಿಕರೆಲ್ಲರೂ ಹೇಳಿದರು: “ನಾವು ಯಾರೂ ಅಪಕೃತಿಯನ್ನು ಮಾಡಿದ್ದುದು ಗೊತ್ತಿಲ್ಲ. ನಿಮಗಿಷ್ಟವಿದ್ದರೆ ನೀವೇ ಕಂಡುಕೊಳ್ಳಬೇಕು.” ಅನಂತರ ರಾಜನು ಸ್ವತಃ ಸಾಮ ಮತ್ತು ಉಗ್ರ ವಿಧಾನಗಳನ್ನು ಬಳಸಿ ತನ್ನ ಗುಂಪಿನಲ್ಲಿದ್ದ ಎಲ್ಲರನ್ನೂ, ಮಿತ್ರಗಣಗಳನ್ನೂ, ಪ್ರಶ್ನಿಸಿದನು. ಆ ಸೇನೆಯು ಮಲಬದ್ಧತೆಯಿಂದ ಪೀಡೆಗೊಳಪಟ್ಟು ದುಃಖಿಸುತ್ತಿರುವುದನ್ನು ಮತ್ತು ತನ್ನ ತಂದೆಯೂ ದುಃಖಿತನಾಗಿರುವುದನ್ನು ಗಮನಿಸಿ ಸುಕನ್ಯೆಯು ಹೀಗೆ ಹೇಳಿದಳು: “ನಾನು ತಿರುಗಾಡುತ್ತಿರುವಾಗ ಹುತ್ತದ ಒಳಗಿಂದ ಹೊರಸೂಸುವ ಬೆಂಕಿಯತೆ ಹೊಳೆಯುತ್ತಿರುವುದನ್ನು ನೋಡಿದೆನು. ಅದೊಂದು ಬೆಂಕಿಯ ಹುಳುವಾಗಿರಬಹುದು ಎಂದು ತಿಳಿದು ಅದನ್ನು ಚುಚ್ಚಿದೆನು.” ಇದನ್ನು ಕೇಳಿದ ಶರ್ಯಾತಿಯು ಕೂಡಲೇ ಹುತ್ತದೆಡೆಗೆ ಧಾವಿಸಿದನು ಮತ್ತು ಅಲ್ಲಿ ತಪೋವೃದ್ಧನೂ ವಯೋವೃದ್ಧನೂ ಆಗಿದ್ದ ಭಾರ್ಗವನನ್ನು ಕಂಡನು. ರಾಜನು ಕೈಮುಗಿದು “ಅಜ್ಞಾನದಿಂದ ಬಾಲಕಿಯು ಮಾಡಿದುದನ್ನು, ಸೇನೆಗೋಸ್ಕರವಾಗಿ ಕ್ಷಮಿಸಬೇಕು” ಎಂದು ಯಾಚಿಸಿದನು.
ಆಗ ಭಾರ್ಗವ ಚ್ಯವನನು ರಾಜನಿಗೆ ಹೇಳಿದನು: “ರಾಜನ್! ರೂಪ ಮತ್ತು ಔದಾರ್ಯಗಳಿಂದ ಕೂಡಿದ ಆದರೆ ಲೋಭ ಮೋಹಗಳಿಗೆ ಸಿಲುಕಿದ ನಿನ್ನ ಈ ಮಗಳನ್ನು ನೀನಾಗಿಯೇ ನನಗೆ ಕೊಟ್ಟರೆ ನಿನ್ನನ್ನು ಕ್ಷಮಿಸುತ್ತೇನೆ. ಸತ್ಯವನ್ನೇ ಹೇಳುತ್ತಿದ್ದೇನೆ.” ಋಷಿಯ ಮಾತನ್ನು ಆಜ್ಞೆಯೆಂದು ತಿಳಿದು ಶರ್ಯಾತಿಯು ಏನೂ ವಿಚಾರಮಾಡದೇ ಆ ಮಹಾತ್ಮ ಚ್ಯವನನಿಗೆ ತನ್ನ ಮಗಳನ್ನು ಕೊಟ್ಟನು. ಆ ಕನ್ಯೆಯನ್ನು ಸ್ವೀಕರಿಸಿ ಚ್ಯವನನು ಶಾಂತನಾದನು. ಕ್ಷಮೆಯನ್ನು ಪಡೆದ ರಾಜನು ಸೈನ್ಯದೊಂದಿಗೆ ಮರಳಿದನು. ಅನಿಂದಿತೆ ಸುಕನ್ಯೆಯೂ ಕೂಡ ತಪಸ್ವಿಯನ್ನು ಪತಿಯನ್ನಾಗಿ ಪಡೆದು ಪ್ರೀತಿ, ತಪಸ್ಸು, ನಿಯಮಗಳಿಂದ ನಿತ್ಯವೂ ಅವನ ಸೇವೆ ಮಾಡಿದಳು. ಬೇಗನೆ ಏನೂ ತಕರಾರಿಲ್ಲದೇ ಅಗ್ನಿ ಮತ್ತು ಅತಿಥಿಗಳ ಶುಶ್ರೂಷೆಯನ್ನು ಮಾಡುತ್ತಾ ಆ ಶುಭಾನನೆಯು ಚ್ಯವನನೊಂದಿಗೆ ಸಂತೋಷಪಟ್ಟಳು.
ಕೆಲವು ಕಾಲದ ನಂತರ ಸುರರ ಅಶ್ವಿನೀ ಕುಮಾರರು ಬೆತ್ತಲೆಯಾಗಿ ಸ್ನಾನಮಾಡುತ್ತಿದ್ದ ಸುಕನ್ಯೆಯನ್ನು ನೋಡಿದರು. ಇಂದ್ರನ ಮಗಳಂತಿರುವ ಆ ಸುಂದರಾಂಗಿಯನ್ನು ನೋಡಿ ನಾಸತ್ಯ ಅಶ್ವಿನೀ ಕುಮಾರರು ಅವಸರದಲ್ಲಿ ಅವಳ ಬಳಿ ಹೋಗಿ ಹೇಳಿದರು: “ಭದ್ರೇ! ನೀನು ಯಾರವಳು ಮತ್ತು ಈ ವನದಲ್ಲಿ ಏನು ಮಾಡುತಿದ್ದೀಯೆ? ನಿನ್ನ ಕುರಿತು ತಿಳಿಯಬಯಸಿದ್ದೇವೆ. ಹೇಳು.” ಆಗ ಸುಕನ್ಯೆಯು ಮೈಮುಚ್ಚಿಕೊಂಡು ಆ ಸುರೋತ್ತಮರಿಗೆ ಹೇಳಿದಳು: “ನಾನು ಶರ್ಯಾತಿಯ ಮಗಳು ಮತ್ತು ಚ್ಯವನನ ಪತ್ನಿಯೆಂದು ತಿಳಿಯಿರಿ.” ಅಶ್ವಿನೀ ಕುಮಾರರು ಜೋರಾಗಿ ನಕ್ಕು ಪುನಃ ಅವಳಿಗೆ ಹೇಳಿದರು: “ನಿನ್ನ ತಂದೆಯು ನಿನ್ನಂಥಹ ಕಲ್ಯಾಣಿಯನ್ನು ಮುದುಕನಿಗೆ ಹೇಗೆ ಕೊಟ್ಟ? ಕಾಡಿನ ಮಧ್ಯದಲ್ಲಿ ನೀನು ಮಿಂಚಿನ ಮಾಲೆಯಂತೆ ಬೆಳಗುತ್ತಿದ್ದೀಯೆ. ಭಾಮಿನಿ! ದೇವತೆಗಳಲ್ಲಿಯೂ ಕೂಡ ನಿನ್ನ ಸರಿಸಮಳಾದವಳನ್ನು ನಾವು ಕಂಡಿಲ್ಲ. ಸರ್ವಾಭರಣ ಭೂಷಿತೆಯಾಗಿ ಉತ್ತಮ ಉಡುಪುಗಳನ್ನು ಧರಿಸಿದರೆ ಅನವದ್ಯಾಂಗಿ ನೀನು ಶೋಭಿಸುತ್ತೀಯೆ. ಹೀಗೆ ಕೊಳಕು ತುಂಬಿ ಇದ್ದರೆ ಇಲ್ಲ. ಕಲ್ಯಾಣಿ! ಈ ರೀತಿ ಇರುವ ನೀನು ಯಾವ ಕಾರಣಕ್ಕಾಗಿ ಕಾಮಭೋಗಗಳಿಲ್ಲದೇ ಮುದಿತನದಿಂದ ಹಾಳುಬಿದ್ದ, ಪೋಷಣೆ ಮತ್ತು ರಕ್ಷಣೆಗಳಿಗೆ ಅಸಮರ್ಥನಾದ ಗಂಡನ ಸೇವೆಯನ್ನು ಮಾಡುತ್ತಿದ್ದೀಯೆ? ಚ್ಯವನನನ್ನು ಬಿಟ್ಟು ನಮ್ಮಲ್ಲಿ ಯಾರಾದರೊಬ್ಬನನ್ನು ನಿನ್ನ ಪತಿಯನ್ನಾಗಿ ಸ್ವೀಕರಿಸಿದರೆ ಒಳ್ಳೆಯದು. ವೃಥಾ ನಿನ್ನ ಯೌವನವನ್ನು ಕಳೆಯಬೇಡ!”
ಈ ಮಾತುಗಳಿಗೆ ಸುಕನ್ಯೆಯು ಆ ಸುರರಿಗೆ ಹೇಳಿದಳು: “ನಾನು ಪತಿ ಚ್ಯವನನಲ್ಲಿ ಅನುರತಳಾಗಿದ್ದೇನೆ. ನನ್ನನುಶಂಕಿಸಬೇಡಿ! ” ಪುನಃ ಅವರು ಹೇಳಿದರು: “ನಾವು ದೇವತೆಗಳ ವೈದ್ಯರು. ನಿನ್ನ ಪತಿಯನ್ನು ಯುವಕನನ್ನಾಗಿಯೂ ರೂಪ ಸಂಪನ್ನನನ್ನಾಗಿಯೂ ಮಾಡುತ್ತೇವೆ. ಅನಂತರ ನಾವು ಮೂರರಲ್ಲಿ ಒಬ್ಬನನ್ನು ಪತಿಯನ್ನಾಗಿ ವರಿಸು. ವರಾನನೆ! ಈ ಒಪ್ಪಂದವನ್ನು ಅವನಿಗೆ ಹೇಳು.” ಅವರ ಮಾತಿನಂತೆ ಅವಳು ಭಾರ್ಗವನಬಳಿ ಹೋಗಿ ಅವರು ಹೇಳಿದ ಮಾತನ್ನು ಭೃಗುಸುತನಿಗೆ ಪುನಃ ಹೇಳಿದಳು. ಅದನ್ನು ಕೇಳಿದ ಚ್ಯವನನು ಪತ್ನಿಗೆ “ಹಾಗೆಯೇ ಮಾಡೋಣ” ಎಂದನು. ಗಂಡನ ಒಪ್ಪಿಗೆಯನ್ನು ಪಡೆದು ಅವಳು “ಹಾಗೆಯೇ ಮಾಡೋಣ” ಎಂದಳು. “ಹಾಗೆಯೇ ಮಾಡೋಣ” ಎಂದು ಅವಳ ಮಾತನ್ನು ಕೇಳಿ ಅಶ್ವಿನೀ ದೇವತೆಗಳು ರಾಜಕುಮಾರಿಗೆ “ನಿನ್ನ ಪತಿಯು ನೀರಿಗಿಳಿಯಬೇಕು” ಎಂದರು. ಆಗ ರೂಪವನ್ನು ಬಯಸಿದ ಚ್ಯವನನು ಬೇಗನೆ ಸರೋವರವನ್ನು ಪ್ರವೇಶಿಸಿದನು. ಅಶ್ವಿನೀ ಕುಮಾರರೂ ಅದೇ ಸರೋವರಕ್ಕೆ ಇಳಿದರು.
ಅನಂತರ ಕ್ಷಣದಲ್ಲಿಯೇ ಅವರೆಲ್ಲರೂ ಸರೋವರದಿಂದ ಮೇಲೆದ್ದರು. ಎಲ್ಲರೂ ದಿವ್ಯರೂಪಗಳನ್ನು ಧರಿಸಿದ್ದರು, ಯುವಕರಾಗಿದ್ದರು, ಹೊಳೆಯುವ ಕರ್ಣಕುಂಡಲಗಳನ್ನು ಧರಿಸಿದ್ದರು. ಒಂದೇಸಮನಾದ ರೂಪ ಧರಿಸಿದ್ದ ಅವರು ಅವಳ ಮನಸ್ಸಿನಲ್ಲಿ ಪ್ರೀತಿಯನ್ನು ಹೆಚ್ಚಿಸಿದರು. ಅವರೆಲ್ಲರೂ ಒಂದೇ ಧ್ವನಿಯಲ್ಲಿ ಅವಳಿಗೆ ಹೇಳಿದರು: “ಶುಭೇ! ನಮ್ಮಲ್ಲಿ ನಿನಗಿಷ್ಟವಾದ ಒಬ್ಬನನ್ನು ನಿನ್ನ ಪತಿಯನ್ನಾಗಿ ಆರಿಸಿಕೋ!” ಒಂದೇ ರೂಪಧರಿಸಿ ನಿಂತಿದ್ದ ಅವರೆಲ್ಲರನ್ನೂ ಮನಸ್ಸು ಮತ್ತು ಬುದ್ಧಿಗಳೆರಡರಿಂದಲೂ ವೀಕ್ಷಿಸಿ, ಆ ದೇವಿಯು ತನ್ನ ಗಂಡನನ್ನೇ ವರಿಸಿದಳು. ತಾನು ಬಯಸಿದ್ದ ವಯಸ್ಸನ್ನೂ ರೂಪವನ್ನೂ ಮತ್ತು ಪತ್ನಿಯನ್ನೂ ಪಡೆದು ಸಂತೋಷಗೊಂಡ ಚ್ಯವನನು ಆ ಮಹಾತೇಜಸ್ವಿ ನಾಸತ್ಯ ಅಶ್ವಿನೀ ದೇವತೆಗಳಿಗೆ ವಚನವನ್ನಿತ್ತನು: “ವೃದ್ಧನಾಗಿದ್ದ ನನ್ನನ್ನು ಈಗ ರೂಪಸಂಪನ್ನನನ್ನೂ ವಯಸ್ಸಿನಲ್ಲಿ ಸರಿಯಾದವನನ್ನೂ ನೀವು ಮಾಡಿ ನನಗೆ ಇವಳನ್ನು ಪತ್ನಿಯನ್ನಾಗಿ ಒದಗಿಸಿದ್ದೀರಿ. ಆದುದರಿಂದ ಸಂತೋಷಗೊಂಡ ನಾನು ದೇವರಾಜನ ಕಣ್ಣೆದುರಿಗೇ ನೀವು ಸೋಮವನ್ನು ಕುಡಿಯುವ ಹಾಗೆ ಮಾಡುತ್ತೇನೆ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.” ಅದನ್ನು ಕೇಳಿ ಸಂತೋಷಗೊಂಡ ಅಶ್ವಿನೀ ಕುಮಾರರೀರ್ವರು ದಿವಿಗೆ ತೆರಳಿದರು. ಚ್ಯವನ-ಸುಕನ್ಯೆಯರಾದರೋ ಸುರರಂತೆ ಒಂದಾಗಿ ವಿಹರಿಸಿದರು.
ಚ್ಯವನನು ಯೌವನಾವಸ್ಥೆಯನ್ನು ಪಡೆದಿದ್ದಾನೆ ಎಂದು ಕೇಳಿದ ಶರ್ಯಾತಿಯು ಸಂತೋಷಗೊಂಡು ಸೇನೆಯೊಂದಿಗೆ ಭಾರ್ಗವಾಶ್ರಮಕ್ಕೆ ಬಂದನು. ದೇವಸುತರಂತಿದ್ದ ಚ್ಯವನ-ಸುಕನ್ಯೆಯರನ್ನು ನೋಡಿ ಮಹೀಪ ಶರ್ಯಾತಿಯು ಇಡೀ ಭೂಮಿಯನ್ನೇ ಗೆದ್ದೆನೋ ಎನ್ನುವಷ್ಟು ಸಂತೋಷದಿಂದ ನಲಿದಾಡಿದನು. ಋಷಿಯು ಪತ್ನೀಸಮೇತ ರಾಜನನ್ನು ಸತ್ಕರಿಸಿ ಸ್ವಾಗತಿಸಿದನು. ಆ ಮಹಾತ್ಮರೆಲ್ಲರೂ ಕುಳಿತು ಶುಭ ಸಮಾಚಾರಗಳ ಕುರಿತು ಮಾತನಾಡಿದರು. ಆಗ ಭಾರ್ಗವನು ರಾಜನಿಗೆ ಪರಿಸಂತವಿಸುತ್ತಾ ಹೇಳಿದನು: “ರಾಜನ್! ನಿನ್ನಿಂದ ಒಂದು ಯಾಗವನ್ನು ಮಾಡಿಸುತ್ತೇನೆ. ಸಾಮಗ್ರಿಗಳ ವ್ಯವಸ್ಥೆ ಮಾಡು.” ಆಗ ಪರಮ ಹರ್ಷದಿಂದ ರಾಜ ಶರ್ಯಾತಿಯು ಚ್ಯವನನ ಆ ಮಾತನ್ನು ಗೌರವಿಸಿ, ಪ್ರಶಸ್ತ ದಿನದಲ್ಲಿ ಯಜ್ಞಭೂಮಿಯನ್ನು ರಚಿಸಿ ಸರ್ವಕಾಮಗಳನ್ನೂ ಪೂರೈಸುವ ಅನುತ್ತಮ ಯಜ್ಞವನ್ನು ನೆರವೇರಿಸಿದನು. ಚ್ಯವನ ಭಾರ್ಗವನು ಮಾಡಿಸಿಕೊಟ್ಟ ಅದೇ ಯಜ್ಞದಲ್ಲಿ ಅದ್ಭುತಗಳು ನಡೆದವು. ಆ ಯಜ್ಞದಲ್ಲಿಯೇ ಚ್ಯವನನು ಅಶ್ವಿನೀ ದೇವತೆಗಳಿಗೆ ಸೋಮವನ್ನು ನೀಡಿದನು. ಕೊಡುತ್ತಿದ್ದ ಬಟ್ಟಲನ್ನು ಇಂದ್ರನು ತಡೆದನು.
ಇಂದ್ರನು ಹೇಳಿದನು: “ಈ ಇಬ್ಬರೂ ನಾಸತ್ಯರು ಸೋಮಕ್ಕೆ ಅರ್ಹರಲ್ಲ ಎಂದು ನನ್ನ ಅಭಿಪ್ರಾಯ. ಅವರು ದೇವಪುತ್ರರ ವೈದ್ಯರಾದುದರಿಂದ, ವೃತ್ತಿಯಿಂದ ಅವರು ಇದಕ್ಕೆ ಅರ್ಹರಲ್ಲ!”
ಚ್ಯವನನು ಹೇಳಿದನು: “ರೂಪ ಮತ್ತು ಆರ್ಥಿಕ ಸಂಪತ್ತುಗಳನ್ನು ಹೊಂದಿದ ಈ ಮಹಾತ್ಮರನ್ನು ಅಪಮಾನಗೊಳಿಸಬೇಡ! ಮಘವನ್! ಅವರು ನನ್ನನ್ನು ವೃದ್ಧಾಪ್ಯವೇ ಇಲ್ಲದ ದೇವತೆಗಳಂತೆ ಮಾಡಿದ್ದಾರೆ. ಏಕೆ ಅವರು ನಿನ್ನ ಮತ್ತು ಇತರ ದೇವತೆಗಳ ಸಾಲಿನಲ್ಲಿ ಅರ್ಹರಲ್ಲ? ಅಶ್ವಿನಿಯರೂ ಕೂಡ ದೇವತೆಗಳೆನ್ನುವುದನ್ನು ತಿಳಿ!”
ಇಂದ್ರನು ಹೇಳಿದನು: “ಅವರು ಚಿಕಿತ್ಸಕರು. ಕರ್ಮವನ್ನೆಸಗುವವರು. ಕಾಮರೂಪದಿಂದಿರುವವರು. ಮತ್ತು ಮರ್ತ್ಯರ ಲೋಕಗಳಿಗೆ ತಿರುಗುತ್ತಿರುತ್ತಾರೆ. ಅವರು ಹೇಗೆ ಸೋಮಕ್ಕೆ ಅರ್ಹರಾಗುತ್ತಾರೆ?”
ವಾಸವನು ಅದನ್ನೇ ಪುನಃ ಪುನಃ ಹೇಳುತ್ತಿದ್ದರೂ, ಶಕ್ರನನ್ನು ಅನಾದರಿಸಿ ಭಾರ್ಗವನು ಸೋಮದ ಪಾತ್ರೆಯನ್ನು ನೀಡಿದನು. ಆದರೆ ಅವನು ಪಾತ್ರೆಯಲ್ಲಿ ಸೋಮವನ್ನು ಸುರುಗಲು ಹೊರಡುತ್ತಿದ್ದುದನ್ನು ನೋಡಿದ ಬಲದೇವ ಇಂದ್ರನು ಈ ಮಾತನ್ನಾಡಿದನು: “ಸ್ವಯಂ ನೀನಾಗಿಯೇ ಅವರಿಗೆ ಸೋಮವನ್ನು ಸುರಿಯುತ್ತಿದ್ದೀಯೆ ಎಂದಾದರೆ ನನ್ನ ಈ ಘೋರರೂಪೀ, ಅನುತ್ತಮ ವಜ್ರವನ್ನು ನಿನ್ನ ಮೇಲೆ ಪ್ರಹರಿಸುತ್ತೇನೆ.” ಹೀಗೆ ಹೇಳಲು ಭಾರ್ಗವನು ಮುಗುಳ್ನಕ್ಕು ಇಂದ್ರನನ್ನೇ ನೋಡುತ್ತಾ ಉತ್ತಮ ಸೋಮವನ್ನು ಅಶ್ವಿನೀ ದೇವತೆಗಳ ಪಾತ್ರೆಗೆ ವಿಧಿವತ್ತಾಗಿ ಸುರಿದನು. ಅಷ್ಟರಲ್ಲಿಯೇ ಶಚೀಪತಿ ಇಂದ್ರನು ಘೋರರೂಪೀ ವಜ್ರವನ್ನು ಅವನೆಡೆಗೆ ಎಸೆದನು ಮತ್ತು ಅವನು ಪ್ರಹರಿಸುವಾಗ ಭಾರ್ಗವನು ಅವನನ್ನು ಹಾಗೆಯೇ ನಿಲ್ಲಿಸಿಬಿಟ್ಟನು. ಅವನನ್ನು ಸ್ತಂಭನನ್ನಾಗಿ ಮಾಡಿ ಆ ಸುಮಹಾತೇಜಸ್ವಿ ಚ್ಯವನನು ಮಂತ್ರಪೂರ್ವಕ ಆಹುತಿಯನ್ನು ಅಗ್ನಿಯಲ್ಲಿ ಹಾಕಿ ದೇವ ಇಂದ್ರನನ್ನು ಹಿಂಸಿಸಲು ಎದುರಾದನು.
ಅನಂತರ ಅವನ ತಪೋಬಲದಿಂದ ಹುಟ್ಟಿದ ಕಲ್ಪನೆಯೋ ಎಂಬಂತೆ ಮದ ಎಂಬ ಹೆಸರಿನ ಮಹಾವೀರ, ಮಹಾಕಾಯ, ಮಹಾಸುರನು ಹುಟ್ಟಿದನು. ಅವನ ಶರೀರವನ್ನು ನಿಯಂತ್ರಿಸಲು ಸುರರೂ ಅಸುರರೂ ಅಶಕ್ತರಾಗಿದ್ದರು. ಅವನ ಬಾಯಿಯು ಘೋರವಾಗಿತ್ತು. ತೀಕ್ಷ್ಣವಾಗಿ ಉಗ್ರವಾಗಿ ಕಾಣುತ್ತಿರುವ ಎರಡು ಕೋರೆದಾಡೆಗಳಿದ್ದವು - ಒಂದು ಭೂಮಿಯ ಮೇಲಿದ್ದರೆ ಎನ್ನೊಂದು ಆಕಾಶವನ್ನು ಮುಟ್ಟುತ್ತಿತ್ತು. ಅವನ ನಾಲ್ಕು ನಾಲಿಗೆಗಳು ನೂರು ನೂರು ಯೋಜನೆಗಳಿದ್ದವು, ಅವನ ಇತರ ಹಲ್ಲುಗಳು ಹತ್ತು ಯೋಜನೆಗಳಿದ್ದು ಕೋಟೆಯ ಗೋಪುರಗಳಂತೆ ಮತ್ತು ಈಟಿಯ ಮೊನಚಾದ ತುದಿಯಂತೆ ಕಾಣುತ್ತಿದ್ದವು. ಅವನ ಬಾಹುಗಳು ಪರ್ವತಸಮಾನವಾಗಿದ್ದವು, ಒಂದೊಂದೂ ಅನಂತ ಯೋಜನೆಗಳಷ್ಟು ಉದ್ದವಾಗಿದ್ದವು. ಅವನ ಕಣ್ಣುಗಳು ಸೂರ್ಯ-ಚಂದ್ರಗಳಂತೆ ಮತ್ತು ಮುಖವು ಸಾವಿನ ಹಾಗೆ ತೋರುತ್ತಿದ್ದವು. ಮಿಂಚಿನಂತೆ ಹರಿದಾಡುತ್ತಿರುವ ನಾಲಿಗೆಗಳಿಂದ ಮುಖವನ್ನು ಸವರುತ್ತಾ, ಬಲಾತ್ಕಾರವಾಗಿ ಇಡೀ ಜಗತ್ತನ್ನೇ ನುಂಗಿಬಿಡುತ್ತಾನೋ ಎಂದು ದೊಡ್ಡಕ್ಕೆ ಬಾಯಿ ಕಳೆದು, ತನ್ನ ಘೋರರೂಪದ ಮಹಾ ಗರ್ಜನೆಯು ಲೋಕಗಳಲ್ಲಿ ಮೊಳಗುತ್ತಿರಲು, ಕೋಪದಿಂದ ಶತಕ್ರತು ಇಂದ್ರನನ್ನು ತಿನ್ನಲು ಓಡಿ ಬಂದನು.
ಮಿಂಚಿನಂತೆ ಹರಿದಾಡುತ್ತಿರುವ ನಾಲಿಗೆಗಳಿಂದ ಮುಖವನ್ನು ಸವರುತ್ತಾ, ಬಲಾತ್ಕಾರವಾಗಿ ಇಡೀ ಜಗತ್ತನ್ನೇ ನುಂಗಿಬಿಡುತ್ತಾನೋ ಎಂದು ದೊಡ್ಡಕ್ಕೆ ಬಾಯಿ ಕಳೆದು, ತನ್ನ ಘೋರರೂಪದ ಮಹಾ ಗರ್ಜನೆಯು ಲೋಕಗಳಲ್ಲಿ ಮೊಳಗುತ್ತಿರಲು, ಅವನು ಕೋಪದಿಂದ ಶತಕ್ರತು ಇಂದ್ರನನ್ನು ತಿನ್ನಲು ಓಡಿ ಬಂದನು. “ಭಾರ್ಗವ! ಇಂದಿನಿಂದ ಅಶ್ವಿನಿಯರು ಸೋಮಕ್ಕೆ ಅರ್ಹರು. ನಾನು ಮುಂದಾಗುವ ಸತ್ಯವನ್ನೇ ಹೇಳುತ್ತಿದ್ದೇನೆ. ನಿನ್ನ ಈ ಸಮಾರಂಭವು ಪರಮ ವಿಧಿವತ್ತಾಗಿ ಮಾಡಿರುವಂಥದ್ದು ಮಿಥ್ಯವಾಗಿಲ್ಲ! ನೀನು ಯಾವ ಕೆಲಸವನ್ನೂ ಸುಳ್ಳಾಗಿಸದ ಹಾಗೆ ಮಾಡುತ್ತೀಯೆ ಎಂದು ತಿಳಿದಿದ್ದೇನೆ. ಇಂದು ನೀನು ಹೇಗೆ ಅಶ್ವಿನಿಯರನ್ನು ಸೋಮಕ್ಕೆ ಅರ್ಹರನ್ನಾಗಿ ಮಾಡಿಸಿದೆಯೋ ಹಾಗೆಯೆ ಆಗಬೇಕಿತ್ತು ಎಂದು ನಾನು ನಿರ್ಧರಿಸಿದ್ದೆ. ಇದರಿಂದ ನಿನ್ನ ವೀರ್ಯದ ಪ್ರದರ್ಶನವಾಯಿತು ಮತ್ತು ಸುಕನ್ಯೆಯ ತಂದೆ ಶರ್ಯಾತಿಯ ಕೀರ್ತಿಯು ಲೋಕಗಳಲ್ಲಿ ಹರಡಿದಂತಾಯಿತು. ಆದುದರಿಂದ ನನ್ನ ಮೇಲೆ ಪ್ರಸನ್ನನಾಗು. ನೀನು ಬಯಸಿದ ಹಾಗೆಯೇ ಆಗಲಿ.”
ಶಕ್ರನ ಈ ಮಾತಿಗೆ ಮಹಾತ್ಮ ಚ್ಯವನನ ಸಿಟ್ಟು ಹೊರಟುಹೋಗಿ, ಶೀಘ್ರದಲ್ಲಿಯೇ ಪುರಂದರ ಇಂದ್ರನನ್ನು ಬಿಡುಗಡೆ ಮಾಡಿದನು. ಮದನನ್ನು ವಿಂಗಡಿಸಿ ಒಂದೊಂದರಂತೆ ಮೊದಲೇ ಸೃಷ್ಟಿಯಾಗಿದ್ದ ಮಾದಕ ಪದಾರ್ಥಗಳಲ್ಲಿ, ಸ್ತ್ರೀಯರಲ್ಲಿ, ಜೂಜಿನಲ್ಲಿ ಮತ್ತು ಬೇಟೆಯಲ್ಲಿ ಹಂಚಿದನು. ಈ ರೀತಿ ಮದನನ್ನು ನಿಯಂತ್ರಿಸಿ ಒಂದು ಬಿಂದುವಿನಿಂದ ಶಕ್ರನನ್ನು, ಅಶ್ವಿನಿಯರನ್ನೂ ಸೇರಿ ದೇವತೆಗಳನ್ನು ತೃಪ್ತಿಪಡೆಸಿ, ರಾಜನ ಯಜ್ಞವನ್ನು ಸಂಪೂರ್ಣಗೊಳಿಸಿ, ತನ್ನ ವೀರ್ಯವನ್ನು ಸರ್ವಲೋಕಗಳಿಗೆ ತಿಳಿಸಿ ಆ ಮಾತುಗಾರರಲ್ಲಿ ಶ್ರೇಷ್ಠ ಚ್ಯವನನು ಸುಕನ್ಯೆಯೊಡನೆ ಅನುರಕ್ತನಾಗಿ ಒಟ್ಟಿಗೇ ಅರಣ್ಯದಲ್ಲಿ ವಿಹರಿಸಿದನು.
The other stories:
- ಆರುಣಿ ಉದ್ದಾಲಕ
- ಉಪಮನ್ಯು
- ಸಮುದ್ರಮಥನ
- ಗರುಡೋತ್ಪತ್ತಿ; ಅಮೃತಹರಣ
- ಶೇಷ
- ಶಕುಂತಲೋಪಾಽಖ್ಯಾನ
- ಯಯಾತಿ
- ಸಂವರಣ-ತಪತಿ
- ವಸಿಷ್ಠೋಪಾಽಖ್ಯಾನ
- ಔರ್ವೋಪಾಽಖ್ಯಾನ
- ಸುಂದೋಪಸುಂದೋಪಾಽಖ್ಯಾನ
- ಸಾರಂಗಗಳು
- ಸೌಭವಧೋಪಾಽಖ್ಯಾನ
- ನಲೋಪಾಽಖ್ಯಾನ
- ಅಗಸ್ತ್ಯೋಪಾಽಖ್ಯಾನ
- ಭಗೀರಥ
- ಋಷ್ಯಶೃಂಗ
- ಪರಶುರಾಮ
- ಚ್ಯವನ
- ಮಾಂಧಾತ
- ಸೋಮಕ-ಜಂತು
- ಗಿಡುಗ-ಪಾರಿವಾಳ
- ಅಷ್ಟಾವಕ್ರ
- ರೈಭ್ಯ-ಯವಕ್ರೀತ
- ತಾರ್ಕ್ಷ್ಯ ಅರಿಷ್ಠನೇಮಿ
- ಅತ್ರಿ
- ವೈವಸ್ವತ ಮನು
- ಮಂಡೂಕ-ವಾಮದೇವ
- ಧುಂಧುಮಾರ
- ಮಧು-ಕೈಟಭ ವಧೆ
- ಕಾರ್ತಿಕೇಯನ ಜನ್ಮ
- ಮುದ್ಗಲ
- ರಾಮೋಪಾಽಖ್ಯಾನ: ರಾಮಕಥೆ
- ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
- ಇಂದ್ರವಿಜಯೋಪಾಽಖ್ಯಾನ
- ದಂಬೋದ್ಭವ
- ಮಾತಲಿವರಾನ್ವೇಷಣೆ
- ಗಾಲವ ಚರಿತೆ
- ವಿದುಲೋಪಾಽಖ್ಯಾನ
- ತ್ರಿಪುರವಧೋಪಾಽಖ್ಯಾನ
- ಪರಶುರಾಮನು ಅಸ್ತ್ರಗಳನ್ನು ಪಡೆದುದು
- ಪ್ರಭಾಸಕ್ಷೇತ್ರ ಮಹಾತ್ಮೆ
- ತ್ರಿತಾಖ್ಯಾನ
- ಸಾರಸ್ವತೋಪಾಽಖ್ಯಾನ
- ವಿಶ್ವಾಮಿತ್ರ
- ವಸಿಷ್ಠಾಪವಾಹ ಚರಿತ್ರೆ
- ಬಕ ದಾಲ್ಭ್ಯನ ಚರಿತ್ರೆ
- ಕಪಾಲಮೋಚನತೀರ್ಥ ಮಹಾತ್ಮೆ
- ಮಂಕಣಕ
- ವೃದ್ಧಕನ್ಯೆ
- ಬದರಿಪಾಚನ ತೀರ್ಥ
- ಕುಮಾರನ ಪ್ರಭಾವ-ಅಭಿಷೇಕ
- ಅಸಿತದೇವಲ-ಜೇಗೀಷವ್ಯರ ಕಥೆ
- ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
- ಕುರುಕ್ಷೇತ್ರ ಮಹಾತ್ಮೆ
- ಶಂಖಲಿಖಿತೋಪಾಽಖ್ಯಾನ
- ಜಾಮದಗ್ನೇಯೋಪಾಽಖ್ಯಾನ
- ಷೋಡಶರಾಜಕೀಯೋಪಾಽಖ್ಯಾನ