ಮಹಾಭಾರತ ಯುದ್ಧ ಸಿದ್ಧತೆ

ಪಾಂಡವ ಸೇನೆಯು ಕುರುಕ್ಷೇತ್ರಕ್ಕೆ ಹೋಗಿ ಬೀಡುಬಿಟ್ಟುದುದು

ಜನಾರ್ದನನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಕೇಶವನ ಸಮಕ್ಷಮದಲ್ಲಿಯೇ ಧರ್ಮಾತ್ಮಾ ಸಹೋದರರಿಗೆ ಹೇಳಿದನು: “ನೀವು ಕುರುಸಂಸದಿಯ ಸಭೆಯಲ್ಲಿ ಏನಾಯಿತೆಂದು ಕೇಳಿದಿರಿ. ಕೇಶವನೂ ಕೂಡ ಅವನ ಮಾತಿನಲ್ಲಿ ಅವೆಲ್ಲವನ್ನೂ ವರದಿಮಾಡಿದ್ದಾನೆ. ಆದುದರಿಂದ ನಮ್ಮ ವಿಜಯಕ್ಕಾಗಿ ಸೇರಿರುವ ಏಳು ಅಕ್ಷೌಹಿಣೀ ಸೇನೆಗಳ ವಿಭಾಗಗಳನ್ನು ಮಾಡಿ. ಅವುಗಳ ಏಳು ವಿಖ್ಯಾತ ನಾಯಕರನ್ನು ತಿಳಿದುಕೊಳ್ಳಿ – ದ್ರುಪದ, ವಿರಾಟ, ಧೃಷ್ಟದ್ಯುಮ್ನ, ಶಿಖಂಡಿ, ಸಾತ್ಯಕಿ, ಚೇಕಿತಾನ ಮತ್ತು ವೀರ್ಯವಾನ್ ಭೀಮಸೇನ. ಇವರೆಲ್ಲ ಸೇನಾಪ್ರಣೇತಾರರು ವೀರರು, ದೇಹವನ್ನು ತ್ಯಜಿಸಿದವರು, ಎಲ್ಲರೂ ವೇದವಿದರು, ಶೂರರು, ಎಲ್ಲರೂ ಸುಚರಿತವ್ರತರು, ವಿನಯಿಗಳು, ನೀತಿವಂತರು, ಎಲ್ಲರೂ ಯುದ್ಧ ವಿಶಾರದರು, ಇಷ್ಟ ಅಸ್ತ್ರಗಳಲ್ಲಿ ಕುಶಲರು, ಹಾಗೂ ಸರ್ವಾಸ್ತ್ರಯೋಧರು. ಕುರುನಂದನ ಸಹದೇವ! ಸೇನಗಳ ಪ್ರವಿಭಾಗಗಳನ್ನು ತಿಳಿದಿರುವ, ಪಾವಕನಂತಿರುವ ಬಾಣಗಳನ್ನುಳ್ಳ ಬೀಷ್ಮನೊಡನೆ ರಣದಲ್ಲಿ ಹೋರಾಡಬಲ್ಲ, ಈ ಏಳೂ ಸೇನೆಗಳ ನೇತಾರನಾಗಬಲ್ಲ, ನಮ್ಮ ಸಮರ್ಥ ಸೇನಾಪತಿಯು ಯಾರಾಗಬಲ್ಲನೆಂಬ ನಿನ್ನ ಅಭಿಪ್ರಾಯವನ್ನು ಹೇಳು.”

ಸಹದೇವನು ಹೇಳಿದನು: “ನಮ್ಮ ದುಃಖದಲ್ಲಿ ಒಂದಾಗಿ ಸೇರಿಕೊಂಡ, ನಮಗೆ ಹತ್ತಿರದ ನೆಂಟನಾದ, ವೀರ್ಯವಾನ ಮಹೀಪತಿ, ಯಾರನ್ನು ಆಶ್ರಯಿಸಿ ನಮ್ಮ ಅಂಶವನ್ನು ಮರಳಿ ಪಡೆಯಬಹುದೋ ಆ ಧರ್ಮಜ್ಞ ಬಲವಾನ್, ಕೃತಾಸ್ತ್ರ, ಯುದ್ಧ ದುರ್ಮದ, ಮತ್ಸ್ಯ ವಿರಾಟನು ಸಂಗ್ರಾಮದಲ್ಲಿ ಭೀಷ್ಮ ಮತ್ತು ಆ ಮಹಾರಥಿಗಳನ್ನು ಸದೆಬಡಿಯಬಲ್ಲನು.”

ವಾಕ್ಯವಿಶಾರದ ಸಹದೇವನು ಈ ವಾಕ್ಯಗಳಲ್ಲಿ ಹೇಳಲು, ನಕುಲನು ಈ ಮಾತುಗಳನ್ನು ಆಡಿದನು: “ವಯಸ್ಸಿನಲ್ಲಿ, ಶಾಸ್ತ್ರದಲ್ಲಿ, ಧೈರ್ಯದಲ್ಲಿ, ಕುಲದಲ್ಲಿ, ಅಭಿಜನರಲ್ಲಿ ಹಿರಿಯವನಾದ; ಕುಲಾನ್ವಿತ, ಸರ್ವಶಾಸ್ತ್ರವಿಶಾರದ, ಭರಧ್ವಾಜನಿಂದ ಅಸ್ತ್ರಗಳನ್ನು ಕಲಿತ, ದುರ್ಧರ್ಷ, ಸತ್ಯಸಂಗರ; ಯಾರು ನಿತ್ಯವೂ ಮಹಾಬಲಿ ದ್ರೋಣ-ಭೀಷ್ಮರೊಡನೆ ಸ್ಪರ್ಧಿಸುತ್ತಾನೋ; ಶ್ಲಾಘನೀಯ, ಪಾರ್ಥಿವ ಸಂಘದ ಪ್ರಮುಖ, ವಾಹಿನೀಪತಿ; ನೂರು ಶಾಖೆಗಳಿರುವ ವೃಕ್ಷದಂತೆ ಪುತ್ರಪೌತ್ರರಿಂದ ಪರಿವೃತನಾದ; ರೋಷದಿಂದ ದ್ರೋಣವಿನಾಶಕ್ಕಾಗಿ ಪತ್ನಿಯೊಡನೆ ಘೋರ ತಪಸ್ಸನ್ನು ತಪಿಸಿದ ಮಹೀಪತಿ; ಸಮಿತಿಗಳಿಗೆ ಶೋಭೆಯನ್ನು ತರುವ; ಸದಾ ನಮ್ಮ ತಂದೆಯ ಸಮನಾಗಿರುವ ಪಾರ್ಥಿವರ್ಷಭ, ನಮ್ಮೆಲ್ಲರ ಮಾವ ದ್ರುಪದನು ನಮ್ಮ ಸೇನೆಯ ಅಗ್ರಸ್ಥಾನದಲ್ಲಿ ಪ್ರಕಾಶಿಸುತ್ತಾನೆ. ಅವನು ಕೊನೆಯವರೆಗೂ ದ್ರೋಣ-ಭೀಷ್ಮರನ್ನು ಸಹಿಸುತ್ತಾನೆ ಎಂದು ನನ್ನ ಅಭಿಪ್ರಾಯ. ಏಕೆಂದರೆ ಆ ನೃಪನು ದಿವ್ಯಾಸ್ತ್ರಗಳನ್ನು ತಿಳಿದಿದ್ದಾನೆ. ಮತ್ತು ಆಂಗಿರಸನ ಸಖನಾಗಿದ್ದಾನೆ.”

ಮಾದ್ರೀಸುತರೀರ್ವರು ಹೀಗೆ ಹೇಳಲು ಕುರುನಂದನ ವಾಸವ ಸಮ ವಾಸವಿ ಸವ್ಯಸಾಚಿಯು ತನ್ನ ಅಭಿಪ್ರಾಯವನ್ನು ಹೇಳಿದನು: “ತಪಃಪ್ರಭಾವದಿಂದ, ಋಷಿಗಳ ಸಂತೋಷದಿಂದ ಹುಟ್ಟಿದ ದಿವ್ಯಪುರುಷ - ಜ್ವಾಲವರ್ಣಿ, ಮಹಾಬಲ; ಧನ್ನುಸ್ಸನ್ನು ಹಿಡಿದು, ಕವಚವನ್ನು ಧರಿಸಿ, ದಿವ್ಯ ಶ್ರೇಷ್ಠ ಕುದುರೆಗಳನ್ನು ಕಟ್ಟಿದ ರಥವನ್ನೇರಿ, ಮಹಾಮೇಘದಂತೆ ಘರ್ಜಿಸುತ್ತಾ, ರಥಘೋಷಗಳೊಂದಿಗೆ ಅಗ್ನಿಕುಂಡದಿಂದ ಮೇಲೆದ್ದು ಬಂದ; ವೀರ್ಯವಾನ, ವೀರ, ಸಿಂಹಸಂಹನನ, ಸಿಂಹವಿಕ್ರಾಂತ, ವಿಕ್ರಮಿ, ಸಂಹೋರಸ್ಕ, ಮಹಾಬಾಹು, ಸಿಂಹವಕ್ಷ, ಮಹಾಬಲ, ಸಿಂಹಪ್ರಗರ್ಜನ, ವೀರ, ಸಿಂಹಸ್ಕಂಧ, ಮಹಾದ್ಯುತಿ, ಸುಂದರ ಹುಬ್ಬುಳ್ಳವನು, ಸುಂದರ ಹಲ್ಲುಳ್ಳವನು, ಸುಹನು, ಸುಬಾಹು, ಸುಮುಖ, ಅಕೃಶ, ಸುಜತ್ರು, ಸುವಿಶಾಲಾಕ್ಷ, ಸುಪಾದ, ಸುಪ್ರತಿಷ್ಠಿತ, ಅಭೇದ್ಯ, ಸರ್ವಶಸ್ತ್ರಗಳನ್ನು ಕತ್ತರಿಸಿ ತಡೆಯ ಬಲ್ಲ; ದ್ರೋಣನ ವಿನಾಶಕ್ಕೆ ಜನಿಸಿದ, ಜಿತೇಂದ್ರಿಯ ಧೃಷ್ಟದ್ಯುಮ್ನನು ಭೀಷ್ಮನ ವಜ್ರ ಪ್ರಭಾವೀ, ಬೆಂಕಿಯನ್ನು ಉಗುಳುವ ಸರ್ಪಗಳಂತಿರುವ, ವೇಗದಲ್ಲಿ ಯಮದೂತರ ಸಮನಾಗಿರುವ, ಬೆಂಕಿಯಂತೆ ಬೀಳುವ, ಒಮ್ಮೆ ರಾಮನೇ ಎದುರಿಸಿದ, ಸಿಡಿಲುಬಡಿಯುವಂತೆ ದಾರುಣವಾದ ಬಾಣಗಳನ್ನು ಸಹಿಸಬಲ್ಲ ಎಂದು ನನಗನ್ನಿಸುತ್ತದೆ. ರಾಜನ್! ಧೃಷ್ಟದ್ಯುಮ್ನನನ್ನು ಬಿಟ್ಟು ಆ ಮಹಾವ್ರತ ಪುರುಷನನ್ನು ಸಹಿಸುವ ಬೇರೆ ಯಾರನ್ನೂ ನಾನು ಕಾಣುವುದಿಲ್ಲ. ಇದು ನನ್ನ ಬುದ್ಧಿಗೆ ಬಂದಿರುವ ಅಭಿಪ್ರಾಯ. ಹಿಂಡನ್ನು ನಡೆಸಿಕೊಂಡು ಹೋಗುವ ಮಾತಂಗದಂತೆ ಆ ಕ್ಷಿಪ್ರಹಸ್ತ, ಚಿತ್ರಯೋಧೀ, ಅಭೇದ್ಯಕವಚನು ಸೇನಾಪತಿಯಾಗಬಹುದೆಂದು ನನ್ನ ಮತ.”

ಭೀಮನು ಹೇಳಿದನು: “ರಾಜೇಂದ್ರ! ಸೇರಿರುವ ಸಿದ್ಧರು ಋಷಿಗಳು ಶಿಖಂಡಿಯು ಭೀಷ್ಮನ ವಧೆಗಾಗಿಯೇ ಉತ್ಪನ್ನನಾದನೆಂದು ಹೇಳುತ್ತಾರೆ. ಶಿಖಂಡಿಯು ಸಂಗ್ರಾಮಮಧ್ಯದಲ್ಲಿ ದಿವ್ಯ ಅಸ್ತ್ರವನ್ನು ಪ್ರಯೋಗಿಸುವಾಗ ಅವನಲ್ಲಿ ಪುರುಷರು ಮಹಾತ್ಮ ರಾಮನ ರೂಪವನ್ನೇ ಕಾಣುತ್ತಾರೆ. ಯುದ್ಧದಲ್ಲಿ ಆಯುಧಪಾಣಿಯಾಗಿ ನಿಂತ ಶಿಖಂಡಿಯನ್ನು ಶಸ್ತ್ರಗಳಿಂದ ಭೇದಿಸುವ ಯಾರನ್ನೂ ನಾನು ಕಂಡಿಲ್ಲ. ಮಹಾವ್ರತ ಬೀಷ್ಮನನ್ನು ವೀರ ಶಿಖಂಡಿಯ ಹೊರತಾಗಿ ಬೇರೆ ಯಾರೂ ಎದುರಿಸಲಾರರು. ಅವನೇ ನಮ್ಮ ಸೇನಾಪತಿಯೆಂದು ನನಗನ್ನಿಸುತ್ತದೆ.”

ಯುಧಿಷ್ಠಿರನು ಹೇಳಿದನು: “ಮಕ್ಕಳೇ! ಜಗತ್ತಿನ ಎಲ್ಲದರ - ಈಗಿನ ಮತ್ತು ಹಿಂದೆ ಆಗಿಹೋದವುಗಳ – ಸಾರಾಸಾರಗಳು ಮತ್ತು ಬಲಾಬಲಗಳು ಎಲ್ಲವೂ ಧರ್ಮಾತ್ಮ ಕೇಶವನಿಗೆ ತಿಳಿದಿದೆ. ಕೃಷ್ಣ ದಾಶಾರ್ಹನು ಯಾರೆಂದು ಹೇಳುತ್ತಾನೋ ಅವನು ಕೃತಾಸ್ತ್ರನಾಗಿರಲಿ ಅಥವಾ ಅಕೃತಾಸ್ತ್ರನಾಗಿರಲಿ, ವೃದ್ಧನಾಗಿರಲಿ ಅಥವಾ ಯುವಕನಾಗಿರಲಿ ಅವನೇ ನಮ್ಮ ವಾಹಿನೀಪತಿಯಾಗಲಿ. ಇವನೇ ನಮ್ಮ ವಿಜಯ-ವಿಪರ್ಯಯಗಳ ಮೂಲ. ಅವನಲ್ಲಿಯೇ ನಮ್ಮ ಪ್ರಾಣಗಳು, ರಾಜ್ಯ, ಇರುವುದು-ಇಲ್ಲದಿರುವುದು, ಮತ್ತು ಸುಖ-ಅಸುಖಗಳು ನೆಲೆಸಿವೆ. ಇವನೇ ಧಾತಾ, ವಿಧಾತಾ. ಇವನಲ್ಲಿ ಸಿದ್ಧಿಯು ಪ್ರತಿಷ್ಠಿತವಾಗಿದೆ. ಕೃಷ್ಣ ದಾಶಾರ್ಹನು ಯಾರನ್ನು ಸಮರ್ಥನೆಂದು ಹೇಳುತ್ತಾನೋ ಅವನೇ ನಮಗೆ ಸೇನಾಪತಿಯಾಗುತ್ತಾನೆ. ಮಾತನಾಡುವವರಲ್ಲಿ ಶ್ರೇಷ್ಠನು ಹೇಳಲಿ. ರಾತ್ರಿಯು ಮುಗಿಯಲು ಬಂದಿದೆ. ಕೃಷ್ಣನ ವಶವರ್ತಿಯಾಗಿರುವವನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು, ಉಳಿದಿರುವ ರಾತ್ರಿಯನ್ನು ಕಳೆದು, ಮಂಗಲ ಕಾರ್ಯಗಳನ್ನು ಮುಗಿಸಿ, ಸುಹಾಸಿತ ಶಸ್ತ್ರಾಸ್ತ್ರಗಳೊಂದಿಗೆ ರಣರಂಗದ ಕಡೆ ಸಾಗೋಣ.”

ಧೀಮತ ಧರ್ಮರಾಜನ ಆ ಮಾತನ್ನು ಕೇಳಿ ಪುಂಡರೀಕಾಕ್ಷನು ಧನಂಜಯನನ್ನು ನೋಡಿ ಹೇಳಿದನು: “ಮಹಾರಾಜ! ನೀವು ಸೂಚಿಸಿರುವ ಸೇನೆಗಳ ನೇತಾರರೆಲ್ಲರೂ ಶೂರರು, ವಿಕ್ರಾಂತ ಯೋದ್ಧರು ಮತ್ತು ನಿನ್ನ ಶತ್ರುಗಳನ್ನು ಪುಡಿಮಾಡಲು ಸಮರ್ಥರು ಎಂದು ನನಗೂ ಅನ್ನಿಸುತ್ತದೆ. ಅವರು ಮಹಾಹವದಲ್ಲಿ ಇಂದ್ರನಲ್ಲಿಯೂ ಕೂಡ ಭಯವನ್ನು ಹುಟ್ಟಿಸುವರು. ಇನ್ನು ಲುಬ್ಧರಾದ ಪಾಪಚೇತಸರಾದ ಧಾರ್ತರಾಷ್ಟ್ರರೇನು? ನಾನೂ ಕೂಡ ನಿನ್ನ ಸಂತೋಷಕ್ಕಾಗಿ ಶಾಂತಿಯಿರಲಿ ಎಂದು ಮಹಾ ಪ್ರಯತ್ನವನ್ನು ಮಾಡಿದೆ. ನಾವು ಧರ್ಮದ ಋಣವನ್ನು ತೀರಿಸಿದಂತಾಗಿದೆ. ಮಾತನಾಡ ಬಯಸುವವರು ನಮ್ಮನ್ನು ನಿಂದಿಸಬಾರದು. ಆ ಬಾಲಬುದ್ಧಿಯ ಧಾರ್ತರಾಷ್ಟ್ರನು ತಾನು ಕೃತಾರ್ಥನೆಂದುಕೊಂಡಿದ್ದಾನೆ. ರೋಗಿಯು ತಿಳಿದುಕೊಳ್ಳುವಂತೆ ತಾನು ಬಲಶಾಲಿಯೆಂದು ತಿಳಿದುಕೊಂಡಿದ್ದಾನೆ. ಆಗಲಿ! ಸೇನೆಯನ್ನು ಹೂಡು. ವಧಿಸಿಯೇ ಅವರನ್ನು ದಾರಿಗೆ ತರಬಹುದೆಂದು ನನಗನ್ನಿಸುತ್ತದೆ. ಧಾರ್ತರಾಷ್ಟ್ರರು ಧನಂಜಯನನ್ನು, ಸಂಕೃದ್ಧ ಭೀಮಸೇನನನ್ನು ಮತ್ತು ಯಮನಂತಿರುವ ಯಮಳರನ್ನು, ಅದ್ವಿತೀಯ ಯುಯುಧಾನನನ್ನು, ಅಮರ್ಷಣ ಧೃಷ್ಟದ್ಯುಮ್ನನನ್ನು, ಅಭಿಮನ್ಯುವವನ್ನು, ದ್ರೌಪದೇಯರನ್ನು, ವಿರಾಟ ದ್ರುಪದರನ್ನೂ, ಅಕ್ಷೌಹಿಣೀ ಪತಿಗಳನ್ನೂ, ದೃಢವಿಕ್ರಮರಾದ ಅನ್ಯ ನರೇಂದ್ರರನ್ನೂ ನೋಡಿ ಎದುರಿಸಲು ಅಶಕ್ತರಾಗುತ್ತಾರೆ. ಸಾರವತ್ತಾದ, ದುಷ್ಪ್ರಧರ್ಷವಾದ, ದುರಾಸದವಾದ ನಮ್ಮ ಬಲವು ಯುದ್ಧದಲ್ಲಿ ಧಾರ್ತರಾಷ್ಟ್ರನ ಬಲವನ್ನು ವಧಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”

ಕೃಷ್ಣನು ಹೀಗೆ ಹೇಳಲು ನರೋತ್ತಮರು ಸಂಪ್ರಹೃಷ್ಟರಾದರು. ಆ ಪ್ರಹೃಷ್ಟಮನಸ್ಕರಲ್ಲಿ ಮಹಾ ನಾದವುಂಟಾಯಿತು. “ಯೋಗ” ಎಂದು ಕೂಗಲು ಸೇನೆಗಳು ತ್ವರೆಮಾಡಿ ಓಡತೊಡಗಿದವು. ಎಲ್ಲೆಡೆಯೂ ಆನೆ ಕುದುರೆಗಳ ಮತ್ತು ರಥಚಕ್ರಗಳ ಘೋಷವುಂಟಾಯಿತು. ಎಲ್ಲಕಡೆಯೂ ಶಂಖ-ದುಂದುಭಿ-ನಿರ್ಘೋಶಗಳ ತುಮುಲವಾಯಿತು. ಪಾಂಡವರನ್ನು ಸುತ್ತುವರೆದು ಹೊರಟ ಸೇನೆಗಳು ತುಂಬಿ ಹರಿಯುತ್ತಿರುವ ಗಂಗಾ ಪ್ರವಾಹದಂತೆ ದುರ್ಧರ್ಷವಾಗಿ ಕಂಡಿತು. ಸೇನೆಯ ಮುಂದೆ ಭೀಮಸೇನ ಮತ್ತು ಕವಚಧಾರಿ ಮಾದ್ರೀಪುತ್ರರೀರ್ವರು ನಡೆದರು. ಭೀಮಸೇನನ ಹಿಂದೆ ಸೌಭದ್ರಿ, ದ್ರೌಪದೇಯರು, ಪಾರ್ಷತ ಧೃಷ್ಟದ್ಯುಮ್ನ, ಪಾಂಚಾಲರು ಮತ್ತು ಪ್ರಭದ್ರಕರು ನಡೆದರು. ಆಗ ಹುಣ್ಣಿಮೆಯಂದು ಸಮುದ್ರವು ಭೋರ್ಗರೆಯುವಂತೆ ಹರ್ಷದಿಂದ ಪ್ರಯಾಣಿಸುತ್ತಿರುವವರ ಘೋಷವು ದಿವವನ್ನು ಮುಟ್ಟುವಷ್ಟಾಯಿತು. ಹರ್ಷಿತರಾದ, ಸಂಪೂರ್ಣ ರಕ್ಷಿತರಾದ, ಶತ್ರುಸೇನೆಯನ್ನು ತುಂಡರಿಸಬಲ್ಲ ಆ ಯೋಧರ ಮಧ್ಯೆ ರಾಜಾ ಕುಂತೀಪುತ್ರ ಯುಧಿಷ್ಠಿರನು ನಡೆದನು. ಬಂಡಿಗಳು, ವ್ಯಾಪಾರದ ಬಂಡಿಗಳು, ವೇಶ್ಯಾವಾಟಿಕೆಗಳು, ಬಂಡಿಗಳ ಸರಣಿ, ಕೋಶಯಂತ್ರಗಳು, ಆಯುಧಗಳು, ವೈದ್ಯರು, ಚಿಕಿತ್ಸಕರು, ಸೇನೆಯನ್ನು ಹಿಂಬಾಲಿಸಿ ಬಂದಿರುವ ಕೃಷ-ದುರ್ಬಲರನ್ನೂ ಪರಿಚಾರಕರನ್ನೂ ಒಟ್ಟುಗೂಡಿಸಿಕೊಂಡು ರಾಜನು ಹೊರಟನು. ಪಾಂಚಾಲೀ ಸತ್ಯವಾದಿನೀ ದ್ರೌಪದಿಯು ಉಪಪ್ಲವ್ಯದಲ್ಲಿ ಇತರ ಸ್ತ್ರೀಯರೊಂದಿಗೆ ದಾಸೀದಾಸರೊಂದಿಗೆ ಉಳಿದುಕೊಂಡಳು.

ಅಲ್ಲಿ ಚಲಿಸುವ ಮತ್ತು ಸ್ಥಿರವಾಗಿರುವ ಸೇನೆಗಳಿಂದ ಮೂಲಭೂತ ರಕ್ಷಣೆಯನ್ನು ನೀಡಿ ಪಾಂಡುನಂದನರು ಪ್ರಯಾಣಿಸಿದರು. ಮಣಿವಿಭೂಷಿತ ರಥಗಳಲ್ಲಿ ಅವರು ಗೋವು ಹಿರಣ್ಯಗಳನ್ನು ಸತ್ತುವರೆದು ಸ್ತುತಿಸುತ್ತಿದ್ದ ಬ್ರಾಹ್ಮಣರಿಗೆ ನೀಡುತ್ತಾ ಪ್ರಯಾಣಿಸಿದರು. ಕೇಕಯರು, ಧೃಷ್ಟಕೇತು, ಕಾಶಿಯ ರಾಜನ ಮಗ, ಶ್ರೇಣಿಮಾನ್, ವಸುದಾನ, ಅಪರಾಜಿತ ಶಿಖಂಡೀ ಇವರು ಹೃಷ್ಟರೂ ತುಷ್ಟರೂ ಆಗಿ, ಕವಚಗಳನ್ನು ಧರಿಸಿ, ಸಶಸ್ತ್ರರಾಗಿ, ಸಮಲಂಕೃತರಾಗಿ ಎಲ್ಲರೂ ರಾಜ ಯುಧಿಷ್ಠಿರನನ್ನು ಸುತ್ತುವರೆದು ಹಿಂಬಾಲಿಸಿದರು. ಹಿಂದೆ ವಿರಾಟ, ಯಜ್ಞಸೇನ, ಸೋಮಕಿ, ಸುಧರ್ಮ, ಕುಂತಿಭೋಜ, ಮತ್ತು ಧೃಷ್ಟದ್ಯುಮ್ನನ ಮಕ್ಕಳು - ನಲವತ್ತು ಸಾವಿರ ರಥಗಳು, ಅದರ ಐದುಪಟ್ಟು ಸಂಖ್ಯೆಯ ಕುದುರೆಗಳು, ಅದರ ಹತ್ತು ಪಟ್ಟು ಕಾಲಾಳುಗಳು, ಮತ್ತು ಅರವತ್ತು ಸಾವಿರ ಸವಾರಿ ಸೈನಿಕರಿದ್ದರು. ಅನಾಧೃಷ್ಟಿ, ಚೇಕಿತಾನ, ಚೇದಿರಾಜ ಮತ್ತು ಸಾತ್ಯಕಿ ಎಲ್ಲರೂ ವಾಸುದೇವ-ಧನಂಜಯರನ್ನು ಸುತ್ತುವರೆದು ನಡೆದರು. ಸೇನೆಗಳನ್ನು ರಚಿಸಿ ಕುರುಕ್ಷೇತ್ರವನ್ನು ಸೇರಿ ಪಾಂಡವರು ಘೀಳಿಡುವ ಹೋರಿಗಳಂತೆ ಕಂಡುಬಂದರು. ಆ ಅರಿಂದಮರು ಕುರುಕ್ಷೇತ್ರದಲ್ಲಿ ಇಳಿದು ಶಂಖಗಳನ್ನು ಊದಿದರು. ಹಾಗೆಯೇ ವಾಸುದೇವ-ಧನಂಜಯರೂ ಶಂಖಗಳನ್ನು ಊದಿದರು. ಸಿಡಿಲು ಬಡಿದಂತೆ ಕೇಳಿಬಂದ ಪಾಂಚಜನ್ಯದ ನಿರ್ಘೋಷವನ್ನು ಕೇಳಿ ಸರ್ವ ಸೇನೆಯಲ್ಲಿ ಎಲ್ಲಕಡೆಯೂ ಹರ್ಷೋದ್ಗಾರವಾಯಿತು. ತರಸ್ವಿಗಳ ಸಿಂಹನಾದಗಳೊಂದಿಗೆ ಶಂಖದುಂಧುಭಿಗಳು ಸೇರಿ ನಾದವು ಭೂಮಿ, ಅಂತರಿಕ್ಷ ಮತ್ತು ಸಾಗರಗಳನ್ನು ಸೇರಿತು.

ಆಗ ರಾಜಾ ಯುಧಿಷ್ಠಿರನು ಸಮಪ್ರದೇಶದಲ್ಲಿ, ಸುಂದರವಾದ, ಸಾಕಷ್ಟು ನೀರು ಮೇವುಗಳಿರುವಲ್ಲಿ, ಶ್ಮಶಾನ, ದೇವಾಲಯ, ಮಹರ್ಷಿಗಳ ಆಶ್ರಮ, ತೀರ್ಥಸ್ಥಾನಗಳನ್ನು ಬಿಟ್ಟು, ತನ್ನ ಸೇನೆಯನ್ನು ಬೀಡುಬಿಡಿಸಿದನು. ಮಹೀಪತಿ ಕುಂತೀಪುತ್ರ ಯುಧಿಷ್ಠಿರನು ಮಂಗಳ, ಪುಣ್ಯ, ಉಪ್ಪಿಲ್ಲದ ಪ್ರದೇಶದಲ್ಲಿ ತನ್ನ ಬಿಡಾರವನ್ನು ಮಾಡಿಸಿಕೊಂಡನು. ವಾಹನಗಳು ವಿಶ್ರಾಂತಿಪಡೆದು ಸುಖಿಗಳಾದ ನಂತರ, ಪುನಃ ಅಲ್ಲಿಂದ ಹೊರಟು ನೂರಾರು ಸಹಸ್ರಾರು ಪೃಥಿವೀಪಾಲರಿಂದ ಆವೃತನಾಗಿ ಪುನಃ ಪ್ರಯಾಣಿಸಿದನು. ಪಾರ್ಥನೊಂದಿಗೆ ಕೇಶವನು ಸುತ್ತು ಹಾಕಿ ಧಾರ್ತರಾಷ್ಟ್ರನ ನೂರಾರು ಗುಪ್ತಚಾರಿ ಸೈನಿಕ ತುಕಡಿಗಳನ್ನು ಓಡಿಸಿದನು. ಪಾರ್ಷತ ಧೃಷ್ಟದ್ಯುಮ್ನನು ರಥೋದಾರ ಪ್ರತಾಪವಾನ್ ಯುಯುಧಾನ ಸಾತ್ಯಕಿಯೊಡನೆ ಶಿಬಿರವನ್ನು ಕುರುಕ್ಷೇತ್ರದಲ್ಲಿ ಸೂಪತೀರ್ಥ, ಶುದ್ಧ ನೀರಿನ, ಕಲ್ಲು-ಕೆಸರುಗಳಿಂದ ವರ್ಜಿತವಾದ ಪುಣ್ಯ ಹಿರಣ್ವತೀ ನದಿಯವರೆಗೆ ಅಳೆದರು. ಅಲ್ಲಿ ಕೇಶವನು ಒಂದು ಕೋಡಿಯನ್ನು ತೋಡಿಸಿ, ಗುಪ್ತ ಉದ್ದೇಶಗಳನ್ನು ತಿಳಿಸಿ ಹೇಳಿ ಬಲವೊಂದನ್ನು ಇರಿಸಿದನು. ಮಹಾತ್ಮ ಪಾಂಡವರ ಶಿಬಿರಗಳಿದ್ದ ಹಾಗೆ ಇತರ ನರೇಂದ್ರರಿಗೂ ಕೂಡ ಕೇಶವನು ಹೇರಳವಾಗಿ ನೀರು-ಕಟ್ಟಿಗೆಗಳನ್ನೂ, ಕಡುರಕ್ಷಣೆಗಳನ್ನೂ, ಭಕ್ಷ್ಯ-ಭೋಜ್ಯಾದಿಗಳನ್ನು ಒದಗಿಸಿ ನೂರಾರು ಸಹಸ್ರಾರು ಶಿಬಿರಗಳನ್ನು ಮಾಡಿಸಿದನು. ಅಲ್ಲಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ನಿರ್ಮಿಸಲ್ಪಟ್ಟಿದ್ದ ಆ ವೈಭವೋಪೇತ ಶಿಬಿರಗಳು ಮಹೀತಲಕ್ಕೆ ಬಂದಿಳಿದ ವಿಮಾನಗಳಂತೆ ಶೋಭಿಸುತ್ತಿದ್ದವು. ಅಲ್ಲಿ ನೂರಾರು, ವೇತನಗಳನ್ನು ಪಡೆದ, ಪ್ರಾಜ್ಞ ಶಿಲ್ಪಿಗಳಿದ್ದರು. ಸವಿಶಾರದ, ಸರ್ವೋಪಕರಣಯುಕ್ತ ವೈದ್ಯರಿದ್ದರು. ಶಿಬಿರ ಶಿಬಿರಗಳಿಗೂ ರಾಜ ಯುಧಿಷ್ಠಿರನು ಬೇಕಾದಷ್ಟು ಧನುಸ್ಸು-ಬಾಣಗಳನ್ನು, ಕವಚ-ಅಸ್ತ್ರಗಳನ್ನು, ಜೇನು-ತುಪ್ಪಗಳನ್ನು, ಪರ್ವತಗಳಂತೆ ತೋರುವ ರಾಶಿಗಟ್ಟಲೆ ಆಹಾರ ಪದಾರ್ಥಗಳನ್ನು, ಸಾಕಷ್ಟು ನೀರು, ಉತ್ತಮ ಹುಲ್ಲು, ಇದ್ದಿಲು-ಕಟ್ಟಿಗೆಗಳನ್ನು, ಮಹಾಯಂತ್ರಗಳನ್ನು, ಕಬ್ಬಿಣದ ಬಾಣ-ತೋಮರ-ಈಟಿ-ಕೊಡಲಿಗಳನ್ನು, ಧನುಸ್ಸು-ಕವಚಾದಿಗಳನ್ನು, ಮನುಷ್ಯರ ಎದೆಗಳನ್ನು ಸಿಂಗರಿಸುವ ಕವಚಗಳನ್ನು ಕೊಡಿಸಿದನು. ಮೊಳೆಗಳಿಂದ ಕೂಡಿದ ಲೋಹದ ಹೊದಿಕೆಗಳನ್ನು ಹೊದಿಸಿದ, ಪರ್ವತಗಳಂತೆ ತೋರುತ್ತಿದ್ದ, ನೂರಾರು ಸಹಸ್ರಾರು ಯೋಧರೊಂದಿಗೆ ಹೋರಾಡಬಲ್ಲ ಆನೆಗಳು ಅಲ್ಲಿ ಕಂಡುಬಂದವು. ಪಾಂಡವರು ಅಲ್ಲಿ ಬೀಡುಬಿಟ್ಟಿದ್ದಾರೆ ಎಂದು ತಿಳಿದು ಅವರ ಮಿತ್ರರು ಸೇನೆಗಳೊಂದಿಗೆ, ವಾಹನಗಳೊಂದಿಗೆ ಆ ಪ್ರದೇಶದಲ್ಲಿ ಬಂದು ಸೇರಿದರು. ಬ್ರಹ್ಮಚರ್ಯವನ್ನು ಆಚರಿಸಿದ, ಸೋಮವನ್ನು ಕುಡಿದ, ಭೂರಿದಕ್ಷಿಣೆಗಳನ್ನಿತ್ತ, ಮಹೀಕ್ಷಿತರು ಪಾಂಡುಪುತ್ರರ ಜಯಕ್ಕಾಗಿ ಬಂದು ಸೇರಿಕೊಂಡರು.

ಪ್ರಯಾಣಕ್ಕೆ ಕೌರವ ಸೇನೆಯ ಸಿದ್ಧತೆ

ದಾಶಾರ್ಹನು ಹೊರಟು ಹೋದ ನಂತರ ರಾಜಾ ದುರ್ಯೋಧನನು ಕರ್ಣ, ದುಃಶಾಸನ ಮತ್ತು ಶಕುನಿಯರಿಗೆ ಹೇಳಿದನು: “ಅಧೋಕ್ಷಜನು ಕಾರ್ಯವು ನಡೆಯಲಿಲ್ಲವೆಂದು ಪಾರ್ಥರಲ್ಲಿಗೆ ಹೋಗಿ ಸಿಟ್ಟಿನಿಂದ ಖಂಡಿತವಾಗಿಯೂ ಮಾತನಾಡಿರುತ್ತಾನೆ. ಇದರಲ್ಲಿ ಸಂಶಯವಿಲ್ಲ. ಏಕೆಂದರೆ ವಾಸುದೇವನು ಪಾಂಡವರು ಮತ್ತು ನನ್ನ ನಡುವೆ ಯುದ್ಧವಾಗಲೆಂದೇ ಇಷ್ಟಪಡುತ್ತಾನೆ. ಭೀಮಾರ್ಜುನರೂ ಕೂಡ ದಾಶಾರ್ಹನ ಅಭಿಮತವನ್ನು ಒಪ್ಪಿಕೊಳ್ಳುತ್ತಾರೆ. ಅಜಾತಶತ್ರುವು ಇಂದು ಭೀಮಾರ್ಜುನರ ವಶದಲ್ಲಿ ಬಂದು ಅವರನ್ನು ಅನುಸರಿಸುತ್ತಾನೆ. ನಾನು ಹಿಂದೆ ಆ ಎಲ್ಲ ಸಹೋದರರೊಂದಿಗೆ ಕೆಟ್ಟದ್ದಾಗಿ ವ್ಯವಹರಿಸಿದ್ದೇನೆ. ವಿರಾಟ-ದ್ರುಪದರಿಗೂ ಕೂಡ ನನ್ನ ಮೇಲೆ ವೈರವಿತ್ತು. ಆ ಇಬ್ಬರು ಸೇನಾಪ್ರಣೇತಾರರೂ ವಾಸುದೇವನ ವಶಾನುಗರು. ತುಮುಲವೂ ಲೋಮಹರ್ಷಣವೂ ಆದ ಯುದ್ಧವಾಗಲಿದೆ. ಆದುದರಿಂದ ತೆರವಿಲ್ಲದ ಎಲ್ಲ ಸಿದ್ಧತೆಗಳೂ ನಡೆಯಲಿ. ಶತ್ರುಗಳು ಸುಲಭವಾಗಿ ಆಕ್ರಮಣಿಸಲು ಅವಕಾಶವಿಲ್ಲದಂತೆ ವಸುಧಾಧಿಪರು ಕುರುಕ್ಷೇತ್ರದಲ್ಲಿ ಶಿಬಿರಗಳನ್ನು ನಿರ್ಮಿಸಿಕೊಳ್ಳಲಿ. ನೂರಾರು ಸಹಸ್ರಾರು ನೀರು-ಕಟ್ಟಿಗೆಗಳ ಸೌಕರ್ಯವಾಗಲಿ. ರತ್ನಗಳು, ಸಂಪತ್ತು, ವಿವಿಧ ಆಯುಧಗಳು, ಪತಾಕ-ಧ್ವಜಗಳನ್ನು ತಲುಪಿಸುವ ಅವಿಚ್ಛಿನ್ನ ಮಾರ್ಗವು ತಯಾರಿಸಲ್ಪಡಲಿ. ನಗರದಿಂದ ಹೊರಗೆ ಹೋಗುವ ದಾರಿಗಳನ್ನು ಸಮಮಾಡಲಿ. ನಾಳೆಯೇ ಪ್ರಯಾಣವೆಂದು ಘೋಷಿಸಿರಿ.”

“ಹಾಗೆಯೇ ಮಾಡುತ್ತೇವೆ!” ಎಂದು ಭರವಸೆಯನ್ನು ನೀಡಿ ಅವರು ಕಾರ್ಯನಿರತರಾದರು. ಮರುದಿನ ಹೃಷ್ಟರೂಪರಾಗಿ ಆ ಮಹಾತ್ಮರು ಮಹೀಕ್ಷಿತರ ವಿನಾಶಕ್ಕೆ ಹೊರಟರು. ಆ ರಾಜಶಾಸನವನ್ನು ಕೇಳಿ ಪಾರ್ಥಿವರೆಲ್ಲರೂ ಉತ್ಸಾಹದಿಂದ ಬೆಲೆಬಾಳುವ ಆಸನಗಳಿಂದ ಮೇಲೆದ್ದು, ನಿಧಾನವಾಗಿ ಪರಿಘಗಳಂತಿದ್ದ ಕಾಂಚನ ಅಂಗದಗಳನ್ನು ಧರಿಸಿದ್ದ, ಚಂದನ ಅಗರುಗಳಿಂದ ಭೂಷಿತವಾದ ತಮ್ಮ ಬಾಹುಗಳನ್ನು ಮುಟ್ಟಿಕೊಂಡರು. ಪುಂಡರೀಕಗಳಂತಿದ್ದ ತಮ್ಮ ಕೈಗಳಿಂದ ಮುಂಡಾಸುಗಳನ್ನು ಕಟ್ಟಿಕೊಂಡು, ಅಂತರೀಯ-ಉತ್ತರೀಯಗಳನ್ನೂ ಎಲ್ಲ ಭೂಷಣಗಳನ್ನೂ ತೊಟ್ಟುಕೊಂಡರು. ಅವರ ಸಾರಥಿ ಶ್ರೇಷ್ಠರು ರಥಗಳನ್ನೂ, ಹಯಕೋವಿದರು ಕುದುರೆಗಳನ್ನೂ, ನಿಷ್ಠೆಯುಳ್ಳ ಮಾವುತರು ಆನೆಗಳನ್ನೂ ಸಜ್ಜುಗೊಳಿಸಿದರು. ಅನಂತರ ಬಹಳಷ್ಟು ಬಣ್ಣ ಬಣ್ಣದ ಕಾಂಚನಕವಚಗಳನ್ನು ಮತ್ತು ಎಲ್ಲ ವಿವಿಧ ಶಸ್ತ್ರಗಳನ್ನೂ ಸಜ್ಜುಗೊಳಿಸಿದರು. ಪದಾತಿ ಪುರುಷರು ವಿವಿಧ ಶಸ್ತ್ರಗಳನ್ನೂ ಬಂಗಾರದ ಚಿತ್ರಗಳನ್ನುಳ್ಳ ಕವಚಗಳನ್ನೂ ಧರಿಸಿದರು. ಧಾರ್ತರಾಷ್ಟ್ರನ ಆ ನಗರವು ಉತ್ಸವದ ತಯಾರಿಯಲ್ಲಿರುವ ಸಂಪ್ರಹೃಷ್ಟ ಜನಸಂದಣಿಯಿಂದ ತುಂಬಿಹೋಗಿತ್ತು. ಜನಸಂದಣಿಯೆಂಬ ನೀರಿನಿಂದ, ರಥ-ಆನೆಗಳೆಂಬ ಮೀನುಗಳಿಂದ, ಶಂಖದುಂದುಭಿಗಳ ನಿರ್ಘೋಷದಿಂದ, ಕೋಶಸಂಚಯ ರತ್ನಗಳಿಂದ, ಚಿತ್ರಾಭರಣಗಳೆಂಬ ಅಲೆಗಳಿಂದ, ಶುಭ್ರ ಶಸ್ತ್ರಗಳೆಂಬ ನೊರೆಯಿಂದ, ಕರಾವಳಿಯ ಪರ್ವತಗಳಂತಿರುವ ಕಟ್ಟಡಗಳ ಸರಮಾಲೆಯಿಂದ ಆವೃತವಾಗಿ, ರಸ್ತೆ-ಮಾರುಕಟ್ಟೆಗಳ ಮಹಾಹ್ರದಗಳಿಂದ, ಉದಯಿಸುತ್ತಿರುವ ಚಂದ್ರನಂತಿರುವ ಯೋಧರಿಂದ ಅದು ಚಂದ್ರೋದಯದ ಸಮಯದಲ್ಲಿನ ಮಹಾಸಾಗರದಂತೆ ಕಂಡುಬಂದಿತು.

ದುರ್ಯೋಧನನ ಸೈನ್ಯವಿಭಾಗ

ರಾತ್ರಿಯು ಕಳೆಯಲು ರಾಜಾ ದುರ್ಯೋಧನನು ತನ್ನ ಹನ್ನೊಂದು ಸೇನೆಗಳನ್ನು ವಿಂಗಡಿಸಿದನು. ಆ ಮಹೀಪತಿಯು ತನ್ನ ಪುರುಷರನ್ನು, ಆನೆಗಳನ್ನು, ಕುದುರೆಗಳನ್ನು ಅವರವರ ಗುಣಗಳ ಆಧಾರದ ಮೇಲೆ ಸಾರವುಳ್ಳವರು, ಮಧ್ಯಮರು ಮತ್ತು ಕೀಳಾದವರೆಂದು ಬೇರೆ ಬೇರೆ ಸೇನೆಗಳಲ್ಲಿ ವಿಭಜಿಸಿದನು. ಮರದ ಕಾಂಡಗಳಿಂದ, ತೂಣೀರಗಳಿಂದ, ಕಲ್ಲುಬಂಡೆಗಳಿಂದ, ತೋಮರಗಳಿಂದ, ಈಟಿಗಳಿಂದ, ಕಲ್ಲುಗಳಿಂದ, ಧ್ವಜಗಳಿಂದ, ಪತಾಕೆಗಳಿಂದ, ಶರಾಸನ ತೋಮರಗಳಿಂದ, ವಿಚಿತ್ರರೀತಿಯ ಹಗ್ಗಗಳಿಂದ, ನೇಣುಗಳಿಂದ, ಕಂಬಳಿಗಳಿಂದ, ಕೂದಲನ್ನು ಎಳೆಯುವ ಆಯುಧಗಳಿಂದ, ಎಣ್ಣೆ, ಬೆಲ್ಲ, ಮರಳುಗಳಿಂದ, ವಿಷಸರ್ಪಗಳು ತುಂಬಿದ ಮಡಿಕೆಗಳಿಂದ, ಮರದ ಮೇಣಗಳಿಂದ, ಧೂಳುಗಳಿಂದ, ಗಂಟೆಗಳುಳ್ಳ ಫಲಕಗಳಿಂದ, ಕೊಡಲಿ ಖಡ್ಗಗಳಿಂದ, ವ್ಯಾಘ್ರ ಚರ್ಮ, ಚಿರತೆಯ ಚರ್ಮ, ವಸ್ತಿಗಳಿಂದ, ಶೃಂಗಗಳಿಂದ, ಪ್ರಾಸವೇ ಮೊದಲಾದ ವಿವಿಧ ಆಯುಧಗಳಿಂದ, ಕುಠಾರ, ಕುದ್ದಾಲ, ಎಳ್ಳೆಣ್ಣೆ-ಹರಳೆಣ್ಣೆಗಳಿಂದ ಸುಸಜ್ಜಿತರಾಗಿ, ಬಣ್ಣಬಣ್ಣದ ಉಡುಪುಗಳನ್ನು ಧರಿಸಿದ ಆ ಸೇನೆಯು ಪಾವಕನಂತೆ ಪ್ರಜ್ವಲಿಸುತ್ತಿತ್ತು. ಕವಚಿಗಳು, ಶೂರರು, ಶಸ್ತ್ರಗಳಲ್ಲಿ ಕೃತನಿಶ್ರಮರು, ಕುಲೀನರು, ಹಯವಿಜ್ಞಾನವನ್ನು ತಿಳಿದವರು ಸಾರಥಿಗಳಾಗಿ ನಿವೇಶಿತರದರು. ಅರಿಷ್ಟಗಳನ್ನು ಕಟ್ಟಿದ, ಕಕ್ಷ್ಯಗಳನ್ನು ಕಟ್ಟಿದ, ದ್ವಜಪತಾಕೆಗಳನ್ನು ಕಟ್ಟಿದ, ನಾಲ್ಕು ಕುದುರೆಗಳನ್ನು ಕಟ್ಟಿದ್ದ ರಥಗಳೆಲ್ಲವುಗಳೂ ಎಲ್ಲ ಶಸ್ತ್ರಗಳಿಂದ ತುಂಬಿದ್ದವು. ಎಲ್ಲವೂ ಸಂಹೃಷ್ಟ ವಾಹನಗಳಾಗಿದ್ದವು. ಎಲ್ಲವುಗಳಲ್ಲಿ ನೂರಾರು ಶರಾಸನಗಳಿದ್ದವು.

ಎರಡು ಕುದುರೆಗಳಿಗೆ ಒಬ್ಬ ಉಸ್ತುವಾರಿಯಿದ್ದನು. ಪಕ್ಕದಲ್ಲಿ ಇನ್ನೊಬ್ಬ ಸಾರಥಿಯಿದ್ದನು. ಇಬ್ಬರೂ ರಥಿಗಳಲ್ಲಿ ಶ್ರೇಷ್ಠರಾಗಿದ್ದರು. ಇಬ್ಬರು ರಥಿಕರೂ ಹಯವಿತ್ತರಾಗಿದ್ದರು. ಅಲ್ಲಿ ಎಲ್ಲೆಲ್ಲೂ ಗುಪ್ತ ನಗರಗಳಂತೆ ಶತ್ರುಗಳಿಗೆ ಜಯಿಸಲಸಾಧ್ಯವಾದ ಹಲವು ಸಾವಿರ ಹೇಮಮಾಲಿ ರಥಗಳಿದ್ದವು. ರಥಗಳಂತೆ ಆನೆಗಳಿಗೆ ಕೂಡ ಕಕ್ಷ್ಯಗಳನ್ನು ಕಟ್ಟಿದ್ದರು. ಅಲಂಕಾರಗೊಂಡು ರತ್ನವಂತ ಗಿರಿಗಳಂತೆ ಕಾಣುತ್ತಿದ್ದವು. ಪ್ರತಿಯೊಂದಕ್ಕೂ ಏಳು ಜನರಿದ್ದರು. ಅವರಲ್ಲಿ ಇಬ್ಬರು ಅಂಕುಶಧರರಾಗಿದ್ದರು, ಇಬ್ಬರು ಉತ್ತಮ ಧನುರ್ಧರರಾಗಿದ್ದರು, ಇಬ್ಬರು ಶ್ರೇಷ್ಠ ಖಡ್ಗಧರರಾಗಿದ್ದರು ಮತ್ತು ಒಬ್ಬನು ಶಕ್ತಿ ಮತ್ತು ಪತಾಕೆಗಳನ್ನು ಹಿಡಿದವನಾಗಿದ್ದನು. ಕೌರವನ ಬಲದಲ್ಲಿ ಸರ್ವಾಯುಧಕೋಷಕಗಳಿಂದ ತುಂಬಿದ ಸಹಸ್ರಾರು ಮತ್ತ ಗಜಗಳು ಇದ್ದವು. ಅಲ್ಲಿ ಸವಾರಿಯಲ್ಲಿರುವ ಹತ್ತು ಸಾವಿರ ವಿಚಿತ್ರಕವಚಗಳನ್ನು ಧರಿಸಿದ, ಪತಾಕೆಗಳನ್ನುಳ್ಳ, ಅಲಂಕೃತಗೊಂಡಿರುವ ಕುದುರೆಗಳಿದ್ದವು. ಪ್ರತಿಯೊಂದನ್ನು ಚೆನ್ನಾಗಿ ಹಿಡಿದಿದ್ದರು, ಸಂತೋಷದಲ್ಲಿಟ್ಟಿದ್ದರು, ಬಂಗಾರದ ಪಟ್ಟಿಗಳನ್ನು ಹೊದೆಸಿದ್ದರು, ಅನೇಕ ನೂರು ಸಾವಿರ ಕುದುರೆಗಳಿದ್ದರೂ ಎಲ್ಲವನ್ನೂ ನಿಯಂತ್ರಣದಲ್ಲಿರಿಸಲಾಗಿತ್ತು. ಅಲ್ಲಿ ಹೇಮಮಾಲಿಗಳಾದ, ನಾನಾರೂಪವಿಕಾರಗಳ, ನಾನಾ ಕವಚ ಶಸ್ತ್ರಗಳನ್ನು ಧರಿಸಿದ ಪದಾತಿ ನರರಿದ್ದರು. ಒಂದು ರಥಕ್ಕೆ ಹತ್ತು ಆನೆಗಳಿದ್ದವು, ಒಂದು ಆನೆಗೆ ಹತ್ತು ಕದುರೆಸವಾರಿಗಳಿದ್ದವು. ಒಂದು ಕುದುರೆಗೆ ನಾಲ್ಕೂ ಕಾಲುಗಳಲ್ಲಿ ಹತ್ತು ಪಾದರಕ್ಷರಿದ್ದರು. ಒಡಕನ್ನು ಮುಚ್ಚಲು ಒಂದು ರಥಕ್ಕೆ ಐವತ್ತು ಆನೆಗಳನ್ನೂ, ನೂರು ಕುದುರೆಗಳನ್ನೂ, ಪ್ರತಿ ಕುದುರೆಗೆ ಏಳು ಪುರುಷರನ್ನೂ ಇಡಲಾಗಿತ್ತು.

ಒಂದು ಸೇನೆಯಲ್ಲಿ ಐನೂರು ಆನೆಗಳೂ ಮತ್ತು ಅಷ್ಟೇ ಸಂಖ್ಯೆಯ ರಥಗಳೂ ಇರುತ್ತವೆ. ಅಂತಹ ಹತ್ತು ಸೇನೆಗಳು ಒಂದು ಪೃತನವೆನಿಸಿಕೊಳ್ಳುತ್ತದೆ. ಹತ್ತು ಪೃತನಗಳು ಒಂದು ವಾಹಿನಿ. ಆದರೆ ವಾಹಿನೀ, ಪೃತನಾ, ಸೇನಾ, ಧ್ವಜಿನಿ, ಸಾದಿನೀ, ಅಕ್ಷೌಹಿಣೀ, ವರೂಥಿನೀ ಎಂದು ಪರ್ಯಾಯಶಬ್ಧಗಳನ್ನೂ ಬಳಸುತ್ತಾರೆ. ಹೀಗೆ ಧೀಮತ ಕೌರವನ ಸೇನೆಯು ರಚಿಸಲ್ಪಟ್ಟಿತ್ತು. ಹನ್ನೊಂದು ಮತ್ತು ಏಳು ಸೇರಿ ಒಟ್ಟು ಹದಿನೆಂಟು ಅಕ್ಷೌಹಿಣಿಗಳಿದ್ದವು: ಪಾಂಡವರ ಬಲದಲ್ಲಿ ಏಳೇ ಅಕ್ಷೌಹಿಣಿಗಳಿದ್ದವು. ಕೌರವರ ಬಲವು ಹನ್ನೊಂದು ಅಕ್ಷೌಹಿಣಿಯದಾಗಿತ್ತು.

ಐದು ಇಪ್ಪತ್ತೈದು ಸೈನಿಕರನ್ನು ಒಂದು ಪತ್ತಿ ಎನ್ನುತ್ತಾರೆ. ಅಂಥಹ ಮೂರು ಸೇನಾಮುಖ ಅಥವಾ ಗುಲ್ಮವೆನಿಸಿಕೊಳ್ಳುತ್ತವೆ. ಹತ್ತು ಗುಲ್ಮಗಳು ಒಂದು ಗಣವಾಗುತ್ತದೆ. ದುರ್ಯೋಧನನ ಸೇನೆಯಲ್ಲಿ ಅಂಥಹ ಯುದ್ಧೋತ್ಸುಕರಾದ, ಪ್ರಹಾರಿಗಳಾದ ಹತ್ತು ಸಾವಿರ ಗಣಗಳಿದ್ದವು. ಅಲ್ಲಿ ಮಹಾಬಾಹು ರಾಜಾ ದುರ್ಯೋಧನನು ಶೂರರೂ ಬುದ್ಧಿವಂತರೂ ಆದವರನ್ನು ನೋಡಿ ಸೇನಾಪತಿಗಳನ್ನಾಗಿ ನಿಯೋಜಿಸಿದನು. ಪ್ರತ್ಯೇಕವಾಗಿ ಅಕ್ಷೌಹಿಣಿಗಳಿಗೆ ಪ್ರಣೇತ ನರಸತ್ತಮ ಪಾರ್ಥಿವರನ್ನು ಕರೆಯಿಸಿ ವಿಧಿಪೂರ್ವಕವಾಗಿ ಅಭಿಷೇಕಿಸಿದನು: ಕೃಪ, ದ್ರೋಣ, ಶಲ್ಯ, ಮಹಾರಥಿ ಸೈಂಧವ, ಕಾಂಬೋಜ ಸುದಕ್ಷಿಣ, ಕೃತವರ್ಮ, ದ್ರೋಣ ಪುತ್ರ, ಕರ್ಣ, ಭೂರಿಶ್ರವ, ಸೌಬಲ ಶಕುನಿ ಮತ್ತು ಮಹಾರಥಿ ಬಾಹ್ಲೀಕ. ದಿವಸ ದಿವಸವೂ, ಪ್ರತಿವೇಳೆಯೂ ಅವರಿಗೆ ಪ್ರತ್ಯಕ್ಷವಾಗಿ ವಿವಿಧ ಸೂಚನೆಗಳನ್ನು ಪುನಃ ಪುನಃ ಕೊಡುತ್ತಿದ್ದನು. ಹೀಗೆ ವಿನಯಿತರಾದ ಅವರೆಲ್ಲರೂ ಅವನ ಆಜ್ಞೆಯನ್ನು ಅನುಸರಿಸುವ ಸೈನಿಕರಾಗಿ ರಾಜನಿಗೆ ಪ್ರಿಯವಾದುದನ್ನು ಮಾಡಲು ಉತ್ಸುಕರಾಗಿದ್ದರು.

ಭೀಷ್ಮಸೇನಾಪತ್ಯ

ಆಗ ಧೃತರಾಷ್ಟ್ರಜನು ಸರ್ವ ಮಹೀಪಾಲರೊಂದಿಗೆ ಅಂಜಲೀಬದ್ಧನಾಗಿ ಶಾಂತನವ ಭೀಷ್ಮನಿಗೆ ಹೇಳಿದನು: “ಸೇನಾಪ್ರಣೇತಾರನಿಲ್ಲದೇ ಯುದ್ಧವನ್ನು ಎದುರಿಸುವ ಅತಿದೊಡ್ಡ ಸೇನೆಯೂ ಕೂಡಾ ಇರುವೆಗಳ ಗುಂಪಿನಂತೆ ನಾಶಗೊಳ್ಳುತ್ತದೆ. ಬುದ್ಧಿವಂತರಾದ ಇಬ್ಬರ ಬುದ್ಧಿಗಳು ಎಂದೂ ಒಪ್ಪಂದದಲ್ಲಿರುವುದಿಲ್ಲ. ತಮ್ಮ ತಮ್ಮ ಶೌರ್ಯಕ್ಕಾಗಿ ಪರಸ್ಪರರೊಂದಿಗೆ ಸ್ಪರ್ಧಿಸುತ್ತಿರುತ್ತಾರೆ. ಕುಶಗಳ ಗುಚ್ಛಗಳನ್ನೇ ಧ್ವಜಗಳನ್ನಾಗಿಸಿಕೊಂಡು ಬ್ರಾಹ್ಮಣರು ಅಮಿತೋಜಸ ಹೈಹಯರನ್ನು ಎದುರಿಸಿದ್ದರೆಂದು ಕೇಳಿದ್ದೇವೆ. ಆಗ ಅವರನ್ನು ವೈಶ್ಯರು ಮತ್ತು ಶೂದ್ರರೂ ಕೂಡ ಅನುಸರಿಸಿದ್ದರು. ಮೂರು ವರ್ಣದವರೂ ಒಂದಾಗಿರಲು ಕ್ಷತ್ರಿಯರ್ಷಭರು ಒಬ್ಬರೇ ಒಂದು ಕಡೆ ಇದ್ದರು. ಯುದ್ಧಮಾಡುವಾಗ ಆ ಮೂರು ವರ್ಣದವರಲ್ಲಿ ಪುನಃ ಪುನಃ ಒಡಕುಂಟಾಗುತ್ತಿತ್ತು. ಆದರೆ ಕ್ಷತ್ರಿಯರು ಒಬ್ಬರೇ ಆಗಿದ್ದರೂ ಆ ಮಹಾ ಬಲವನ್ನು ಜಯಿಸಿದರು. ಆಗ ದ್ವಿಜಸತ್ತಮರು ಕ್ಷತ್ರಿಯರನ್ನು ಕೇಳಿದರು. ಅವರಲ್ಲಿಯೇ ಧರ್ಮಜ್ಞರಾಗಿದ್ದವರು ಸತ್ಯವನ್ನು ಹೇಳಿದರು: “ರಣದಲ್ಲಿ ನಾವು ಒಬ್ಬನೇ ಮಹಾಬುದ್ಧಿಮತನನ್ನು ಕೇಳುತ್ತೇವೆ. ಆದರೆ ನೀವು ಪ್ರತಿಯೊಬ್ಬರೂ ತಮ್ಮದೇ ಬುದ್ಧಿಯಂತೆ ನಡೆದುಕೊಳ್ಳುತ್ತೀರಿ.” ಆಗ ಬ್ರಾಹ್ಮಣರು ಶೂರನಾದ ನ್ಯಾಯಗಳಲ್ಲಿ ಕುಶಲನಾದ ಒಬ್ಬ ದ್ವಿಜನನ್ನು ಸೇನಾಪತಿಯನ್ನಾಗಿ ಮಾಡಿದರು. ಆಗ ಅವರು ಕ್ಷತ್ರಿಯರನ್ನು ಗೆದ್ದರು. ಹೀಗೆ ಕುಶಲನೂ, ಶೂರನೂ, ಹಿತಸ್ಥಿತನೂ, ಅಕಲ್ಮಷನೂ ಆದವನನ್ನು ಸೇನಾಪತಿಯನ್ನಾಗಿ ಮಾಡಿ ರಣದಲ್ಲಿ ರಿಪುಗಳನ್ನು ಗೆಲ್ಲುತ್ತಾರೆ. ಉಶನಸನ ಸಮನಾಗಿರುವ, ಸದಾ ನನ್ನ ಹಿತೈಷಿಯಾಗಿರುವ, ಸಂಹಾರಗೊಳಿಸಲಾಗದ, ಧರ್ಮದಲ್ಲಿ ನೆಲೆಸಿರುವ ನೀನು ನಮ್ಮ ಸೇನಾಪತಿಯಾಗು. ಆದಿತ್ಯರಿಗೆ ಸೂರ್ಯನಂತೆ, ಔಷಧಗಳಿಗೆ ಚಂದ್ರನಂತೆ, ಯಕ್ಷರಿಗೆ ಕುಬೇರನಂತೆ, ಮರುತರಿಗೆ ವಾಸವನಂತೆ, ಪರ್ವತಗಳಿಗೆ ಮೇರುವಂತೆ, ಪಕ್ಷಿಗಳಿಗೆ ಗರುಡನಂತೆ, ಭೂತಗಳಿಗೆ ಕುಮಾರನಂತೆ, ವಸುಗಳಿಗೆ ಅಗ್ನಿಯಂತೆ ನೀನು ನಮಗೆ. ಶಕ್ರನಿಂದ ರಕ್ಷಿಸಲ್ಪಟ್ಟ ದಿವೌಕಸರಂತೆ ನಾವೂ ಕೂಡ ನಿನ್ನ ರಕ್ಷಣೆಯಲ್ಲಿ ತ್ರಿದಶರಿಗೆ ಕೂಡ ಖಂಡಿತವಾಗಿ ಅನಾಧೃಷರಾಗುತ್ತೇವೆ. ಪಾವಕಿಯು ದೇವತೆಗಳನ್ನು ಹೇಗೋ ಹಾಗೆ ನೀನು ನಮ್ಮನ್ನು ಮುಂದಿದ್ದುಕೊಂಡು ನಡೆಸು. ವೃಷಭನನ್ನು ಕರುಗಳು ಹೇಗೋ ಹಾಗೆ ನಿನ್ನನ್ನು ನಾವು ಹಿಂಬಾಲಿಸುತ್ತೇವೆ.”

ಭೀಷ್ಮನು ಹೇಳಿದನು: “ಮಹಾಬಾಹೋ! ನೀನು ಹೇಳಿದಂತೆಯೇ ಆಗಲಿ. ಆದರೆ ನನಗೆ ನೀನು ಹೇಗೋ ಹಾಗೆ ಪಾಂಡವರೂ ಕೂಡ. ನಾನು ಅವರ ಶ್ರೇಯಸ್ಸನ್ನೂ ಬಯಸುತ್ತೇನೆ. ಆದರೆ ನಿನಗೋಸ್ಕರ ಹೋರಾಡುತ್ತೇನೆಂದು ಮಾತುಕೊಡುತ್ತೇನೆ. ಒಪ್ಪಂದದಂತೆ ಮಾಡುತ್ತೇನೆ. ಆ ನರವ್ಯಾಘ್ರ ಕುಂತೀಪುತ್ರ ಧನಂಜಯನನ್ನು ಬಿಟ್ಟು ಈ ಭುವಿಯಲ್ಲಿ ನನ್ನ ಸಮಾನನಾದ ಬೇರೆ ಯಾವ ಯೋದ್ಧಾರನನ್ನೂ ನಾನು ಕಂಡಿಲ್ಲ. ಆ ಮಹಾಬಾಹುವಿಗೆ ಎಲ್ಲ ದಿವ್ಯಾಸ್ತ್ರಗಳೂ ತಿಳಿದಿವೆ. ಆದರೆ ಆ ಪಾಂಡವನು ನನ್ನೊಡನೆ ಮುಕ್ತವಾಗಿ ಯುದ್ಧಮಾಡಲು ಹಿಂಜರಿಯುತ್ತಾನೆ. ನನ್ನ ಶಸ್ತ್ರಬಲದಿಂದಲೇ ಈ ಸುರಾಸುರರಾಕ್ಷಸರೊಂದಿಗೆ ಈ ಜಗತ್ತನ್ನು ಒಂದೇ ಕ್ಷಣದಲ್ಲಿ ನಿರ್ಮನುಷ್ಯರನ್ನಾಗಿಸಬಲ್ಲೆ. ಆದರೆ ಪಾಂಡುವಿನ ಪುತ್ರರನ್ನು ನಾಶಗೊಳಿಸಲು ನನಗೆ ಉತ್ಸಾಹವಿಲ್ಲ. ಆದುದರಿಂದ ಪ್ರತಿದಿನವೂ ನಾನು ಹತ್ತುಸಾವಿರ ಯೋಧರನ್ನು ಸಂಹರಿಸುತ್ತೇನೆ. ಅವರು ನನ್ನನ್ನು ಮೊದಲು ಕೊಲ್ಲದೇ ಇದ್ದರೆ ನಾನು ಅವರ ಸೇನೆಯನ್ನು ಹೀಗೆ ಸಂಹರಿಸುವುದನ್ನು ಮುಂದುವರೆಸಿಕೊಂಡೇ ಇರುತ್ತೇನೆ. ನಾನು ಸ್ವಯಂ ನಿನ್ನ ಸೇನಾಪತಿಯಾಗಬೇಕಾದರೆ ನಾನು ಬಯಸುವ ಇನ್ನೊಂದು ಒಪ್ಪಂದದ ವಿಷಯವಿದೆ. ಅದನ್ನೂ ನೀನು ಕೇಳಬೇಕು. ಕರ್ಣನು ಮೊದಲು ಯುದ್ಧಮಾಡುತ್ತಾನೆ ಅಥವಾ ನಾನು. ಸೂತಪುತ್ರನು ಸದಾ ರಣದಲ್ಲಿ ನನ್ನೊಂದಿಗೆ ಸ್ಪರ್ಧಿಸುತ್ತಿರುತ್ತಾನೆ.”

ಕರ್ಣನು ಹೇಳಿದನು: “ರಾಜನ್! ಗಾಂಗೇಯನು ಜೀವಿಸಿರುವವರೆಗೆ ನಾನು ಯುದ್ಧಮಾಡುವುದಿಲ್ಲ. ಭೀಷ್ಮನು ಹತನಾದ ನಂತರವೇ ಗಾಂಡೀವಧನ್ವಿಯೊಂದಿಗೆ ಯುದ್ಧಮಾಡುತ್ತೇನೆ.”

ಆಗ ಧೃತರಾಷ್ಟ್ರಾತ್ಮಜನು ಭೂರಿದಕ್ಷಿಣ ಭೀಷ್ಮನನ್ನು ಸೇನಾಪತಿಯನ್ನಾಗಿ ಮಾಡಿದನು. ಅಭಿಷೇಕಿಸಿಸಲ್ಪಟ್ಟ ಭೀಷ್ಮನು ಮಿಂಚಿದನು. ಆಗ ರಾಜಶಾಸನದಂತೆ ನೂರಾರು ಭೇರೀ-ಶಂಖಗಳು ನಿನಾದಿತಗೊಂಡವು, ವಾದ್ಯಗಾರರು ಸಂತೋಷದಿಂದ ವಾದ್ಯಗಳನ್ನು ನುಡಿಸಿದರು. ಸಿಂಹನಾದಗಳು ಮತ್ತು ವಿವಿಧ ವಾಹನಗಳ ನಿಸ್ವನಗಳೂ ಕೇಳಿಬಂದವು. ಆಕಾಶವು ತಿಳಿಯಾಗಿದ್ದರೂ ರಕ್ತದ ಮಳೆಸುರಿದು ಕೆಸರುಮಾಡಿತು. ಸುಂಟರಗಾಳಿಗಳು, ಭೂಕಂಪ ಮತ್ತು ಆನೆಗಳ ಘೀಂಕಾರಗಳು ಎಲ್ಲ ಯೋಧರ ಮನಸ್ಸುಗಳನ್ನು ಬೀಳಿಸಿದವು. ಆಕಾಶದಿಂದ ಅಶರೀರವಾಣಿಗಳು ಕೇಳಿಸಿದವು. ದಿವದಲ್ಲಿ ಉಲ್ಕೆಗಳು ಬೆಳಗಿದವು. ನರಿಗಳು ಭಯದಿಂದ ಕೂಗಿ ಬರಲಿರುವ ಘೋರ ಘಟನೆಗಳನ್ನು ಸೂಚಿಸಿದವು. ರಾಜನು ಗಾಂಗೇಯನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದಾಗ ಇವು ಮತ್ತು ಇನ್ನೂ ಇತರ ನೂರಾರು ಉಗ್ರರೂಪಿ ಶಕುನಗಳುಂಟಾದವು. ಅವನು ಪರಬಲಾರ್ದನ ಭೀಷ್ಮನನ್ನು ಸೇನಾಪತಿಯನ್ನಾಗಿ ಮಾಡಿ, ಗೋವು, ನಾಣ್ಯ ಮೊದಲಾದ ದಕ್ಷಿಣೆಗಳನ್ನಿತ್ತು ದ್ವಿಜಶ್ರೇಷ್ಠರಿಂದ ಆಶೀರ್ವಚನಗಳನ್ನು ಹೇಳಿಸಿ, ಜಯದ ಕಳೆಯನ್ನು ಹೆಚ್ಚಿಸಿಕೊಳ್ಳುತ್ತಾ, ಸೈನಿಕರಿಂದ ಸುತ್ತುವರೆಯಲ್ಪಟ್ಟು, ನದಿಯ ಮಗನನ್ನು ಮುಂದಿರಿಸಿಕೊಂಡು, ಸಹೋದರರೊಂದಿಗೆ ಮಹಾ ಕುರುಕ್ಷೇತ್ರಕ್ಕೆ ಹೊರಟನು.

ಕರ್ಣನೊಂದಿಗೆ ಕುರುಕ್ಷೇತ್ರಕ್ಕೆ ಸುತ್ತುಹಾಕಿ ನರಾಧಿಪ ಕೌರವನು ಸಮ ಪ್ರದೇಶದಲ್ಲಿ ಶಿಬಿರವನ್ನು ಅಳೆಯಿಸಿದನು. ಮಧುರವಾದ ವಿಪುಲ ಪ್ರದೇಶದಲ್ಲಿ ಶಿಬಿರಗಳನ್ನು ನಿರ್ಮಿಸಲಾಯಿತು. ಅದು ಹಸ್ತಿನಾಪುರದಷ್ಟೇ ಸುಂದರವಾಗಿ ತೋರುತ್ತಿತ್ತು.

ಬಲರಾಮನ ತೀರ್ಥಯಾತ್ರಾಗಮನ

ಆಪದ್ಧರ್ಮಾರ್ಥಕುಶಲನಾದ, ಮಾತನಾಡುವವರಲ್ಲಿ ಶ್ರೇಷ್ಠನಾದ ಮಹಾಬುದ್ಧಿ ಯುಧಿಷ್ಠಿರನು ಎಲ್ಲ ಸಹೋದರರನ್ನೂ, ಸಾತ್ವತ ವಾಸುದೇವನನೂ ಕೂಡಿಸಿ ಸಾಂತ್ವಪೂರ್ವಕ ಈ ಮಾತನ್ನಾಡಿದನು: “ಸೇನೆಗಳಲ್ಲಿ ಸುತ್ತಾಡಿ. ಯಾವಾಗಲೂ ಅವು ರಕ್ಷಣೆಯಲ್ಲಿರಲಿ. ಮೊದಲನೆಯ ಯುದ್ಧವು ಪಿತಾಮಹನೊಂದಿಗೆ ನಡೆಯಲಿದೆ. ಆದುದರಿಂದ ಏಳು ಸೇನೆಗಳ ಪ್ರಣೇತಾರರನ್ನು ನನಗೆ ತೋರಿಸಿ.”

ವಾಸುದೇವನು ಹೇಳಿದನು: “ಬಂದಿರುವ ಕಾಲಕ್ಕೆ ತಕ್ಕುದಾಗಿ ನೀನು ಹೇಳಿದ್ದೀಯೆ. ನೀನು ಹೇಳಿದುದು ಹಾಗೆಯೇ ಅರ್ಥವತ್ತಾಗಿದೆ. ಮಹಾಬಾಹೋ! ಅನಂತರ ನಿನ್ನ ಏಳು ಸೇನೆಗಳ ನಾಯಕರನ್ನು ನೀನು ಅಭಿಷೇಕಿಸಬೇಕೆಂದು ನನಗನ್ನಿಸುತ್ತದೆ.”

ಆಗ ದ್ರುಪದ, ವಿರಾಟ, ಸಾತ್ಯಕಿ, ಪಾಂಚಾಲ್ಯ ಧೃಷ್ಟದ್ಯುಮ್ನ, ಪಾರ್ಥಿವ ಧೃಷ್ಟಕೇತು, ಪಾಂಚಾಲ್ಯ ಶಿಖಂಡಿ, ಮಾಗಧ ಸಹದೇವ ಈ ಏಳು ಮಹೇಷ್ವಾಸ ವೀರರನ್ನು ಕರೆಯಿಸಿ ಯುಧಿಷ್ಠಿರನು ತನ್ನ ಸೇನಾಪ್ರಣೇತಾರರನ್ನಾಗಿ ವಿಧಿವತ್ತಾಗಿ ಅಭಿಷೇಕಿಸಿದನು. ದ್ರೋಣನನ್ನು ಕೊಲ್ಲಲು ಅಗ್ನಿಯಿಂದ ಉತ್ಪನ್ನನಾದ ಆ ಧೃಷ್ಟದ್ಯುಮ್ನನನ್ನು ಸರ್ವಸೇನಾಪತಿಯನ್ನಾಗಿ ನಿಯೋಜಿಸಿದನು. ಗುಡಾಕೇಶ ಧನಂಜಯನನ್ನು ಅವರೆಲ್ಲ ಸಮಸ್ತ ಮಹಾತ್ಮರಿಗೆ ಸೇನಾಪತಿಯನ್ನಾಗಿ ಮಾಡಿದನು. ಸಂಕರ್ಷಣನ ಅನುಜ, ಶ್ರೀಮಾನ್, ಮಹಾಬುದ್ಧಿ ಜನಾರ್ದನನನ್ನು ಅರ್ಜುನನಿಗೆ ನೇತಾರನಾಗಿ, ಕುದುರೆಗಳನ್ನು ನಿಯಂತ್ರಿಸುವವನನ್ನಾಗಿ ನಿಯೋಜಿಸಲಾಯಿತು.

ಆಗ ಮಹಾ ಕ್ಷಯವನ್ನು ತರುವ ಯುದ್ಧವು ಬರುತ್ತಿದೆ ಎನ್ನುವುದನ್ನು ಕಂಡ ಹಲಾಯುಧನು ಅಕ್ರೂರನೇ ಮೊದಲಾದ ಗದ, ಸಾಂಬ, ಉಲುಕಾದಿಗಳೊಡನೆ, ರುಕ್ಮಿಣಿಯ ಮಗ, ಆಹುಕಸುತ ಚಾರುದೇಷ್ಣರನ್ನು ಮುಂದಿಟ್ಟುಕೊಂಡು ರಾಜಾ ಪಾಂಡವನ ಭವನವನ್ನು ಪ್ರವೇಶಿಸಿದನು. ವ್ಯಾಘ್ರರಂತೆ ಬಲೋತ್ಕಟರಾಗಿರುವ ವೃಷ್ಣಿಮುಖ್ಯರಿಂದೊಡಗೂಡಿ ಮರುತ್ತುಗಳ ಮಧ್ಯೆ ವಾಸವನಂತೆ ಆ ಮಹಾಬಾಹು ನೀಲಕೌಶೇಯವಸನ, ಕೈಲಾಸಶಿಖರೋಪಮ, ಸಿಂಹದ ನಡುಗೆಯನ್ನುಳ್ಳ, ಮದಿರದಿಂದ ಕಣ್ಣುಗಳು ಕೆಂಪಾಗಿದ್ದ ಆ ಶ್ರೀಮಾನನು ಅಲ್ಲಿಗೆ ಆಗಮಿಸಿದನು. ಅವನನ್ನು ನೋಡಿ ಧರ್ಮರಾಜನೂ, ಮಹಾದ್ಯುತಿ ಕೇಶವನೂ, ಪಾರ್ಥ, ಭೀಮಕರ್ಮಿ ವೃಕೋದರನೂ ಎದ್ದು ನಿಂತರು. ಗಾಂಡೀವಧನ್ವಿಯೂ ಮತ್ತು ಅಲ್ಲಿದ್ದ ಇನ್ನೂ ಇತರ ರಾಜರು ಎಲ್ಲರೂ ಹಲಾಯುಧನನ್ನು ಪೂಜಿಸಿದರು. ಆಗ ರಾಜಾ ಪಾಂಡವನು ಅವನನ್ನು ಕೈಗಳಿಂದ ಮುಟ್ಟಲು ಅರಿಂದಮ ಹಲಾಯುಧನು ವಾಸುದೇವನ ನಾಯಕತ್ವದಲ್ಲಿದ್ದ ಎಲ್ಲರಿಗೂ ಅಭಿವಾದಿಸಿ, ವೃದ್ಧರಾದ ವಿರಾಟ-ದ್ರುಪದರನ್ನು ನಮಸ್ಕರಿಸಿ ಯುಧಿಷ್ಠಿರನೊಡನೆ ಕುಳಿತುಕೊಂಡನು. ಆಗ ಅಲ್ಲಿ ಸೇರಿದ್ದ ಪಾರ್ಥಿವರು ಕುಳಿತುಕೊಳ್ಳಲು ವಾಸುದೇವನನ್ನು ನೋಡಿ ರೌಹಿಣೇಯನು ಮಾತನಾಡಿದನು:

“ಮಹಾರೌದ್ರವಾದ ದಾರುಣ ಪುರುಷಕ್ಷಯವು ನಡೆಯುವುದಿದೆ. ಇದು ಖಂಡಿತವಾಗಿ ದೈವವು ನಿರ್ಧರಿಸಿದುದು. ಇದನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ನನಗನ್ನಿಸುತ್ತದೆ. ಈ ಯುದ್ಧದಲ್ಲಿ ನೀವು ಮತ್ತು ನಿಮ್ಮ ಸುಹೃಜ್ಜನರು ಅರೋಗದ, ಅಕ್ಷಯವಾದ ದೇಹಗಳಿಂದ ಉತ್ತೀರ್ಣರಾಗುವುದನ್ನು ಕಾಣುತ್ತೇನೆಂದು ನಾನು ಬಯಸುತ್ತೇನೆ. ಸೇರಿರುವ ಪಾರ್ಥಿವ ಕ್ಷತ್ರಿಯರೆಲ್ಲರ ಕಾಲವು ಪಕ್ವವಾದುದು ನಿಶ್ಚಯ. ಮಾಂಸ-ರಕ್ತಗಳ ಮಹಾ ಕೆಸರು ಆಗಲಿಕ್ಕಿದೆ. ನಾನು ವಾಸುದೇವನಿಗೆ “ಮಧುಸೂದನ! ಸಂಬಂಧಿಗಳಲ್ಲಿ ಸಮವೃತ್ತಿಯನ್ನಿಟ್ಟುಕೊಂಡು ವರ್ತಿಸು” ಎಂದು ಏಕಾಂತದಲ್ಲಿ ಪುನಃ ಪುನಃ ಹೇಳಿದ್ದೇನೆ. ಪಾಂಡವರು ನಮಗೆ ಹೇಗೋ ಹಾಗೆ ನೃಪ ದುರ್ಯೋಧನನೂ ಕೂಡ. ಅವನಿಗೂ ಬೇಕಾದುದನ್ನು ಮಾಡಬೇಕು. ಅವನು ಪುನಃ ಪುನಃ ಕೇಳುತ್ತಿರುತ್ತಾನೆ. ಆದರೆ ನಿನಗೋಸ್ಕರವಾಗಿ ಮಧುಸೂದನನು ನನ್ನ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಧನಂಜಯನನ್ನು ನೋಡಿ ಸರ್ವಭಾವದಿಂದ ನಿನಗೆ ನಿಷ್ಟನಾಗಿದ್ದಾನೆ. ನಾನು ಏನೇ ಯೋಚಿಸಿದರೂ ಪಾಂಡವರ ಜಯವೇ ಖಂಡಿತ ಎಂದು ನಿಶ್ಚಯಿಸಿಯಾಗಿದೆ. ಏಕೆಂದರೆ ಇದೂ ಕೂಡ ವಾಸುದೇವನು ಬಯಸುವುದೇ. ಕೃಷ್ಣನಿಲ್ಲದೇ ನನಗೆ ಲೋಕವನ್ನು ನೋಡುವ ಉತ್ಸಾಹವಿಲ್ಲ. ಆದುದರಿಂದ ಕೇಶವನು ಬಯಸಿದುದನ್ನು ಅನುಸರಿಸುತ್ತೇನೆ. ಭೀಮ ಮತ್ತು ನೃಪ ದುರ್ಯೋಧನರಿಬ್ಬರೂ ವೀರರು, ನನ್ನ ಶಿಷ್ಯರು, ಗದಾಯುದ್ಧ ವಿಶಾರದರು. ಅವರಿಬ್ಬರ ಮೇಲಿನ ಸ್ನೇಹವು ಸಮನಾದುದು. ಆದುದರಿಂದ ನಾನು ಸರಸ್ವತಿಯ ತೀರ್ಥಗಳಲ್ಲಿ ನೆಲೆಸುತ್ತೇನೆ. ಕೌರವರ ನಾಶವನ್ನು, ಒಳಗೊಳ್ಳದೇ, ನೋಡಲಾರೆ.”

ಹೀಗೆ ಹೇಳಿ ಮಹಾಬಾಹು ರಾಮನು ಪಾಂಡವರಿಂದ ಬೀಳ್ಕೊಂಡು, ಮಧುಸೂದನನಿಂದ ತಡೆಯಲ್ಪಟ್ಟು ತೀರ್ಥಯಾತ್ರೆಗೆ ಹೋದನು.

ರುಕ್ಮಿಯನ್ನು ಯಾರೂ ಯುದ್ಧಕ್ಕೆ ಸೇರಿಸಿಕೊಳ್ಳದೇ ಇದ್ದುದು

ಇದೇ ಸಮಯದಲ್ಲಿ ನೃಪತಿ ಹಿರಣ್ಯಲೋಮನೆಂಬ ಹೆಸರಿನಿಂದಲೂ ಕರೆಯಲ್ಪಡುವ, ಸಾಕ್ಷಾತ್ ಇಂದ್ರನ ಸಖನಾಗಿದ್ದ,  ಭೋಜರ ಯಶಸ್ವಿನೀ ಅಧಿಪತಿಯಾದ, ದಾಕ್ಷಿಣ್ಯಾತ್ಯಪತಿ ಮಹಾತ್ಮ ಭೀಷ್ಮಕನ ಪುತ್ರ, ದಿಕ್ಕುಗಳಲ್ಲಿ ರುಕ್ಮಿ ಎಂದು ವಿಶ್ರುತನಾಗಿದ್ದನು. ಆ ಮಹಾಬಾಹುವು ಗಂಧಮಾದನವಾಸಿ ಕಿಂಪುರುಷಸಿಂಹನ ಶಿಷ್ಯನಾಗಿ ಧನುರ್ವೇದದ ನಾಲ್ಕೂ ಪಾದಗಳನ್ನು ಸಂಪೂರ್ಣವಾಗಿ ಕಲಿತು ತೇಜಸ್ಸಿನಲ್ಲಿ ಗಾಂಡೀವಕ್ಕೆ ಮತ್ತು ಶಾಂರ್ಙಕ್ಕೆ ಸಮನಾದ ದಿವ್ಯವೂ ಅಕ್ಷಯವೂ ಆದ ಧನುವನ್ನು ಮಹೇಂದ್ರನಿಂದ ಪಡೆದಿದ್ದನು. ದಿವಿಚಾರಿಗಳ ಮೂರೇ ದಿವ್ಯ ಧನುಗಳಿವೆಯೆಂದು ಹೇಳುತ್ತಾರೆ - ವರುಣನ ಗಾಂಡೀವ, ಮಹೇಂದ್ರನ ವಿಜಯವೆಂಬ ಧನುಸ್ಸು, ಮತ್ತು ವಿಷ್ಣುವಿನ ತೇಜೋಮಯ ಶಾಂಙ್ರ ಧನುಸ್ಸು. ಆ ಪರಸೇನಾಭಯಾವಹ ಧನುಸ್ಸನ್ನು ಕೃಷ್ಣನು ಧರಿಸಿದ್ದನು. ಗಾಂಡೀವವನ್ನು ಅರ್ಜುನನು ಖಾಂಡವದಲ್ಲಿ ಅಗ್ನಿಯಿಂದ ಪಡೆದಿದ್ದನು. ಮಹಾತೇಜಸ್ವಿ ವಿಜಯವನ್ನು ರುಕ್ಮಿಯು ದ್ರುಮನಿಂದ ಪಡೆದಿದ್ದನು. ಮುರನ ಪಾಶಗಳನ್ನು ಕಡಿದು ಓಜಸ್ಸಿನಿಂದ ಮುರನನ್ನು ಕೊಂದು, ಭೂಮಿಯ ಮಗ ನರಕನನ್ನು ಗೆದ್ದು ಮಣಿಕುಂಡಲಗಳನ್ನು ದೊರಕಿಸಿಕೊಳ್ಳುವಾಗ, ಹದಿನಾರು ಸಾವಿರ ವಿವಿಧ ಸ್ತ್ರೀರತ್ನರನ್ನು ವಿಮೋಚನಗೊಳಿಸಿ ಹೃಷೀಕೇಶನು ಉತ್ತಮ ಶಾಂಙ್ರಧನುಸ್ಸನ್ನು ಪಡೆದಿದ್ದನು.

ಮೇಘದಂತೆ ಮೊಳಗುವ ವಿಜಯ ಧನುಸ್ಸನ್ನು ಪಡೆದು ರುಕ್ಮಿಯು ಜಗತ್ತಿಗೆಗೇ ಭಯವನ್ನುಂಟುಮಾಡುವಂತೆ ಪಾಂಡವರ ಬಳಿ ಬಂದನು. ಹಿಂದೆ ಸ್ವಬಾಹುಬಲದರ್ಪಿತನಾದ ಅವನು ತನ್ನ ತಂಗಿ ರುಕ್ಮಿಣಿಯನ್ನು ಧೀಮತ ವೀರ ವಾಸುದೇವನು ಅಪಹರಿಸಿದ್ದುದನ್ನು ಸಹಿಸಿರಲಿಲ್ಲ. ಕೇಶವನನ್ನು ಕೊಲ್ಲದೇ ಹಿಂದಿರುಗುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿ ಆ ಸರ್ವಶಸ್ತ್ರಭೃತರಲ್ಲಿ ಶೇಷ್ಠನು ಬಹುದೂರದವರೆಗೆ ವ್ಯಾಪ್ತಗೊಂಡ, ವಿಚಿತ್ರ ಆಯುಧ ಕವಚಗಳನ್ನು ಧರಿಸಿದ, ಗಂಗೆಯಂತೆ ಭೋರ್ಗರೆಯುತ್ತಿರುವ ಚತುರಂಗ ಸೇನೆಯೊಂದಿಗೆ ವಾರ್ಷ್ಣೇಯನನ್ನು ಬೆನ್ನುಹತ್ತಿದ್ದನು. ಯೋಗಗಳ ಈಶ್ವರ ಪ್ರಭು ವಾರ್ಷ್ಣೇಯನನ್ನು ಎದುರಿಸಿ ಸೋತು ನಾಚಿಕೊಂಡು ಅವನು ಕುಂಡಿನಕ್ಕೆ ಹಿಂದಿರುಗಲಿಲ್ಲ. ಪರವೀರಹ ಕೃಷ್ಣನಿಂದ ರಣದಲ್ಲಿ ಸೋಲನ್ನಪ್ಪಿದ ಸ್ಥಳದಲ್ಲಿಯೇ ಅವನು ಭೋಜಕಟ ಎಂಬ ಹೆಸರಿನ ಉತ್ತಮ ನಗರವನ್ನು ನಿರ್ಮಿಸಿದ್ದನು. ಅವನ ಆ ಮಹಾಸೇನೆ, ಆನೆ, ಕುದುರೆಗಳಿಂದ ತುಂಬಿದ ಆ ಪುರವು ಭುವಿಯಲ್ಲಿ ಭೋಜಕಟವೆಂಬ ಹೆಸರಿನಲ್ಲಿ ವಿಖ್ಯಾತವಾಗಿದೆ.

ಆ ಭೋಜರಾಜನು ಒಂದು ಅಕ್ಷೌಹಿಣೀ ಮಹಾಸೇನೆಯಿಂದ ಸುತ್ತುವರೆಯಲ್ಪಟ್ಟು, ಮಹಾವೀರ್ಯದಿಂದ, ಕವಚ, ಖಡ್ಗ, ಬಾಣ, ಬಿಲ್ಲು, ಧ್ವಜ ಮತ್ತು ರಥಗಳಿಂದ, ಆದಿತ್ಯವರ್ಣದಿಂದ ಬೆಳಗುತ್ತಾ ಪಾಂಡವರ ಬಳಿಬಂದು ಮಹಾಸೇನೆಯನ್ನು ಪ್ರವೇಶಿಸಿದನು. ವಾಸುದೇವನಿಗೆ ಪ್ರಿಯವಾದುದನ್ನು ಮಾಡಲು ಬಯಸುತ್ತಾನೆಂದು ಪಾಂಡವರಿಗೆ ತಿಳಿಸಿದನು. ಯುಧಿಷ್ಠಿರನಾದರೋ ಮುಂದುವರೆದು ಆ ರಾಜನನ್ನು ಪೂಜಿಸಿದನು. ಪಾಂಡುಸುತನಿಂದ ಯಥಾನ್ಯಾಯವಾಗಿ ಪೂಜಿತನಾಗಿ ಸುಸತ್ಕೃತನಾದ ನಂತರ, ರುಕ್ಮಿಯು ಅವರೆಲ್ಲರನ್ನೂ ಪ್ರತಿಪೂಜಿಸಿ ಸೈನಿಕರೊಂದಿಗೆ ವಿಶ್ರಮಿಸಿದನು. ವೀರರ ಮದ್ಯೆ ಕುಂತೀಪುತ್ರ ಧನಂಜಯನಿಗೆ ಹೇಳಿದನು: “ಪಾಂಡವ! ಯುದ್ಧದಲ್ಲಿ ಭಯವಾದರೆ ನಾನು ಸಹಾಯ ಮಾಡಲು ಇದ್ದೇನೆ. ನಾನು ಕೊಡುವ ಸಹಾಯವು ಶತ್ರುಗಳಿಗೂ ಸಹಿಸಲಾಗದಂತೆ ಮಾಡುತ್ತೇನೆ. ವಿಕ್ರಮದಲ್ಲಿ ನನ್ನನ್ನು ಹೋಲುವ ಪುರುಷನು ಯಾರೂ ಇಲ್ಲ. ಸಮರದಲ್ಲಿ ಶತ್ರುಗಳನ್ನು ಸಂಹರಿಸಿ ನಿನಗೆ ಕೊಡುತ್ತೇನೆ.”

ಇದನ್ನು ಧರ್ಮರಾಜ ಮತ್ತು ಕೇಶವನ ಸನ್ನಿಧಿಯಲ್ಲಿ,  ಪಾರ್ಥಿವೇಂದ್ರರು ಮತ್ತು ಇತರ ಎಲ್ಲರೂ ಕೇಳುವ ಹಾಗೆ ಹೇಳಿದನು. ವಾಸುದೇವನನ್ನೂ, ಪಾಂಡವ ಧರ್ಮರಾಜನನ್ನೂ ನೋಡಿ ಧೀಮಾನ್ ಕೌಂತೇಯನು ಸಖಪೂರ್ವಕವಾಗಿ ಸಸುನಗುತ್ತಾ ಹೇಳಿದನು: “ವೀರ! ಘೋಷಯಾತ್ರೆಯ ಸಮಯದಲ್ಲಿ ಸುಮಹಾಬಲರಾದ ಗಂಧರ್ವರೊಡನೆ ಯುದ್ಧಮಾಡುತ್ತಿರುವಾಗ ನನ್ನ ಸಹಾಯಕ್ಕೆಂದು ಯಾವ ಸಖನಿದ್ದನು? ದೇವದಾನವ ಸಂಕುಲವು ಖಾಂಡವದಲ್ಲಿ ಬೆಳಗಿ ಯುದ್ಧಮಾಡುತ್ತಿರುವಾಗ ನನಗೆ ಯಾರು ಸಹಾಯಕರಾಗಿದ್ದರು? ನಿವಾತಕವಚರು ಮತ್ತು ಕಾಲಕೇಯ ದಾನವರೊಂದಿಗೆ ಯುದ್ಧಮಾಡುವಾಗ ಅಲ್ಲಿ ನನಗೆ ಯಾರು ಸಹಾಯಕರಾಗಿದ್ದರು? ಹಾಗೆಯೇ ವಿರಾಟನಗರದ ಸಂಗರದಲ್ಲಿ ಬಹಳ ಕುರುಗಳೊಂದಿಗೆ ಯುದ್ಧಮಾಡುವಾಗ ಯಾರು ನನ್ನ ಸಹಾಯಕರಾಗಿದ್ದರು? ರಣದಲ್ಲಿ ರುದ್ರನಿಗೂ, ಶಕ್ರನಿಗೂ, ಕುಬೇರನಿಗೂ, ಯಮನಿಗೂ, ವರುಣನಿಗೂ, ಅಗ್ನಿಗೂ, ಕೃಪನಿಗೂ, ದ್ರೋಣನಿಗೂ ಮತ್ತು ಮಾಧವನಿಗೂ ನಮಸ್ಕರಿಸಿ, ದಿವ್ಯ ತೇಜೋಮಯ, ದೃಢ ಗಾಂಡೀವವನ್ನು ಧರಿಸಿ, ಅಕ್ಷಯ ಭತ್ತಳಿಕೆಗಳಿಂದ ಕೂಡಿದವನಾಗಿ, ದಿವ್ಯಾಸ್ತ್ರಗಳನ್ನು ಪಡೆದು, ಕೌರವರ ಕುಲದಲ್ಲಿ ಹುಟ್ಟಿ, ಪಾಂಡುವಿನ ವಿಶೇಷ ಪುತ್ರನಾಗಿ, ದ್ರೋಣನ ಶಿಷ್ಯನೆನಿಸಿಕೊಂಡಿರುವ, ವಾಸುದೇವನನ್ನು ಸಹಾಯಕನನ್ನಾಗಿ ಪಡೆದ ನಾನು ಅಯಶಸ್ಕರನಂತೆ ಭೀತನಾಗಿದ್ದೇನೆ ಎಂದು, ಸ್ವಯಂ ವಜ್ರಾಯುಧಕ್ಕಾದರೂ ಹೇಗೆ ತಾನೇ ಹೇಳಲಿ? ನನಗೆ ಹೆದರಿಕೆಯಿಲ್ಲ. ನನಗೆ ಸಹಾಯವೂ ಬೇಕಾಗಿಲ್ಲ. ನಿನಗಿಷ್ಟವಾದ ಹಾಗೆ, ನಿನಗೆ ಸರಿಯೆನಿಸುವ ಹಾಗಿ ಹೋಗು ಅಥವಾ ಅಲ್ಲಿ ನಿಲ್ಲು!”

ಆಗ ರುಕ್ಮಿಯು ಸಾಗರಸನ್ನಿಭ ಸೇನೆಯೊಂದಿಗೆ ಹಿಂದಿರುಗಿ ಹಾಗೆಯೇ ದುರ್ಯೋಧನನ ಬಳಿ ಹೋದನು. ಅಲ್ಲಿಗೆ ಹೋಗಿ ಆ ನರಾಧಿಪನು ಹಾಗೆಯೇ ಹೇಳಿದನು. ಅವನನ್ನು ಕೇಳಿದ ಆ ಶೂರಮಾನಿನಿಯೂ ಕೂಡ ಅವನನ್ನು ಹಾಗೆಯೇ ತಿರಸ್ಕರಿಸಿದನು. ಇಬ್ಬರೇ ಆ ಯುದ್ಧದಿಂದ ದೂರವಿದ್ದರು: ವಾರ್ಷ್ಣೇಯ ರೌಹಿಣೇಯ ಮತ್ತು ವಸುಧಾಧಿಪ ರುಕ್ಮಿ. ರಾಮನು ತೀರ್ಥಯಾತ್ರೆಗೆ ಮತ್ತು ಭೀಷ್ಮಕನ ಮಗನು ಹಾಗೆ ಹೋಗಲು ಪಾಂಡವೇಯರು ಪುನಃ ಮಂತ್ರಾಲೋಚನೆಗೆ ಕುಳಿತುಕೊಂಡರು. ಪಾರ್ಥಿವರ ಸಮಾಕುಲವಾಗಿದ್ದ ಧರ್ಮರಾಜನ ಆ ಸಮಿತಿಯು ಆಕಾಶದಲ್ಲಿ ತಾರೆಗಳ ಮಧ್ಯೆ ಇರುವ ಚಂದ್ರನಂತೆ ಶೋಭಿಸಿತು.

ಧೃತರಾಷ್ಟ್ರ-ಸಂಜಯರ ಸಂವಾದ

ಹೋರಾಡಲು ಸೇನೆಗಳು ಸೇರಿರಲು ಮಹಾರಾಜ ಧೃತರಾಷ್ಟ್ರನು ಸಂಜಯನಿಗೆ ಹೇಳಿದನು: “ಸಂಜಯ! ಬಾ! ಕುರುಪಾಂಡವ ಸೇನೆಗಳಲ್ಲಿ ಸೇನಾ ನಿವೇಶನಗಳಲ್ಲಿ ಏನೆಲ್ಲ ನಡೆಯಿತೋ ಅವೆಲ್ಲವನ್ನೂ ಏನನ್ನೂ ಬಿಡದೇ ನನಗೆ ಹೇಳು. ದೈವವೇ ಹೆಚ್ಚಿನದು ಮತ್ತು ಪುರುಷಪ್ರಯತ್ನಗಳು ಅನರ್ಥಕವೆಂದು ತಿಳಿದುಕೊಂಡಿದ್ದೇನೆ. ಕ್ಷಯವನ್ನು ಪ್ರಾರಂಭಿಸುವ ಯುದ್ಧದ ದೋಷಗಳನ್ನೂ ತಿಳಿದುಕೊಂಡಿದ್ದೇನೆ. ಆದರೂ ಕೆಟ್ಟ ಪ್ರಜ್ಞೆಯುಳ್ಳ, ಮೋಸದ ದ್ಯೂತವನ್ನಾಡುವ ಪುತ್ರನನ್ನು ನಿಯಂತ್ರಿಸಲು ಮತ್ತು ನನ್ನ ಹಿತದಲ್ಲಿರುವಂತೆ ಮಾಡಲೂ ಅಶಕ್ತನಾಗಿದ್ದೇನೆ. ದುರ್ಯೋಧನನ ಬಳಿಯಿರುವಾಗ ನನ್ನ ಬುದ್ಧಿಯು ದೋಷಗಳನ್ನು ಕಾಣುವುದಿಲ್ಲ. ಆದರೆ ಅವನಿಲ್ಲದಿರುವಾಗ ಪುನಃ ಅದು ಹಿಂದಿನ ಸ್ಥಿತಿಗೆ ಬರುತ್ತದೆ. ಆಗಬೇಕಾದುದು ಆಗಿಯೇ ಆಗುತ್ತದೆ. ಹಾಗಿರುವಾಗ ರಣದಲ್ಲಿ ದೇಹವನ್ನು ತ್ಯಾಗಿಸುವುದು ಪೂಜಿತವಾದ ಕ್ಷತ್ರಿಯಧರ್ಮವಲ್ಲವೇ?”

ಸಂಜಯನು ಹೇಳಿದನು: “ಮಹಾರಾಜ! ನೀನು ಕೇಳಿರುವ ಈ ಪ್ರಶ್ನೆಯು ಯುಕ್ತವಾದುದೇ. ನಿನಗೆ ತಕ್ಕುದೇ ಆಗಿದೆ. ಆದರೆ ದೋಷಗಳನ್ನೆಲ್ಲವನ್ನೂ ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ. ಇದರ ಕುರಿತು ನಾನು ಹೇಳುವ ಮಾತುಗಳನ್ನು ಸಂಪೂರ್ಣವಾಗಿ ಕೇಳು. ತನ್ನದೇ ಕೆಟ್ಟ ನಡತೆಯಿಂದ ಅಶುಭವನ್ನು ಪಡೆದ ನರನು ದೈವವನ್ನಾಗಲೀ ಕಾಲವನ್ನಾಗಲೀ ನಿಂದಿಸುವುದು ಸರಿಯಲ್ಲ. ಸರ್ವ ದುಷ್ಟಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುವ ಮನುಷ್ಯನನ್ನು ನಿಂದನೀಯವಾದುಗಳನ್ನು ಮುಂದುವರೆಸಿಕೊಂಡು ಹೋಗಿದ್ದುದಕ್ಕೆ ಸರ್ವಲೋಕದಲ್ಲಿಯೂ ವಧ್ಯನಾಗುತ್ತಾನೆ. ಮೋಸದಿಂದ ದ್ಯೂತದಲ್ಲಿ ಸೋಲಿಸಲ್ಪಟ್ಟ ಪಾಂಡವರು ಅಮಾತ್ಯರೊಂದಿಗೆ ನಿನ್ನ ಮುಖವನ್ನೇ ನೋಡಿಕೊಂಡು ಎಲ್ಲ ದುಃಖಗಳನ್ನೂ ಸಹಿಸಿಕೊಂಡರು. ಪುರುಷನು ಶುಭ ಅಥವಾ ಅಶುಭ ಯಾವ ಕರ್ಮಗಳ ಕರ್ತಾರನೂ ಅಲ್ಲ. ಅಸ್ವತಂತ್ರನಾಗಿರುವ ಪುರುಷನು ದಾರಕ್ಕೆ ಕಟ್ಟಿದ ಯಂತ್ರದಂತೆ ಕರ್ಮಗಳನ್ನು ಮಾಡುತ್ತಾನೆ. ಕೆಲವರು ಈಶ್ವರನು ನಿರ್ಧರಿಸುತ್ತಾನೆ ಎಂದೂ ಕೆಲವರು ನಡೆಯುವುದೆಲ್ಲವೂ ನಮ್ಮ ಸ್ವ-ಇಚ್ಛೆಯಿಂದ ಆಗುವುದೆಂದೂ ಮತ್ತು ಅನ್ಯರು ಪೂರ್ವಕರ್ಮಗಳಿಂದ ಎಲ್ಲವೂ ನಡೆಯುವವೆಂದು - ಹೀಗೆ ಮೂರು ರೀತಿಯ ಅಭಿಪ್ರಾಯಗಳಿವೆ.”

ದುರ್ಯೋಧನನು ಉಲೂಕನನ್ನು ಸಂದೇಶದೊಂದಿಗೆ ಪಾಂಡವರಲ್ಲಿಗೆ ಕಳುಹಿಸಿದುದು

ಹಿರಣ್ವತೀ ತೀರದಲ್ಲಿ ಮಹಾತ್ಮ ಪಾಂಡವರು ಬೀಡು ಬಿಟ್ಟಿರಲು ಮಹಾರಾಜ ದುರ್ಯೋಧನನು ಕರ್ಣನೊಂದಿಗೆ, ರಾಜೇಂದ್ರ ಸೌಬಲನೊಂದಿಗೆ ಮತ್ತು ದುಃಶಾಸನನೊಂದಿಗೆ ಇರುವಾಗ ಉಲೂಕನನ್ನು ಕರೆಯಿಸಿ ಹೀಗೆಂದನು: “ಉಲೂಕ! ಕೈತವ್ಯ! ಸೋಮಕರೊಂದಿಗಿರುವ ಪಾಂಡವರಲ್ಲಿಗೆ ಹೋಗು! ಹೋಗಿ ವಾಸುದೇವನು ಕೇಳುವಂತೆ ನನ್ನ ಮಾತುಗಳನ್ನು ಹೇಳು. “ಬಹಳ ವರ್ಷಗಳಿಂದ ಕಾದುಕೊಂಡಿರುವ ಲೋಕಭಯಂಕರವಾದ, ಪಾಂಡವರ ಮತ್ತು ಕುರುಗಳ ನಡುವಿನ ಯುದ್ಧವು ಬಂದೊದಗಿದೆ. ಕುರುಗಳ ಮಧ್ಯೆ ಸಂಜಯನು ಹೇಳಿದ ನೀವು ಜೋರಾಗಿ ಕೊಚ್ಚಿಕೊಂಡಿರುವವುಗಳನ್ನು ತೋರಿಸುವ ಕಾಲವು ಬಂದೊದಗಿದೆ. ನೀವು ಹೇಗೆ ಪ್ರತಿಜ್ಞೆ ಮಾಡಿದ್ದಿರೋ ಅವೆಲ್ಲವನ್ನೂ ಮಾಡಿತೋರಿಸಿ. ಪಾಂಡವ! ಕ್ರೂರವಾದ ರಾಜ್ಯಹರಣ, ವನವಾಸ, ಮತ್ತು ದ್ರೌಪದಿಯ ಪರಿಕ್ಲೇಶಗಳನ್ನು ಸ್ಮರಿಸಿಕೊಂಡು ಪುರುಷರಾಗಿರಿ. ಒಂದುವೇಳೆ ಕ್ಷತ್ರಿಯ ಗರ್ಭದಿಂದ ಹುಟ್ಟಿ ಬಂದಿರುವುದೇ ಆಗಿದ್ದರೆ ಬಲವನ್ನೂ, ಶೌರ್ಯವನ್ನೂ, ಉತ್ತಮ ಅಸ್ತ್ರಲಾಘವವನ್ನೂ, ಪೌರುಷವನ್ನೂ ಪ್ರದರ್ಶಿಸಿ ಕೋಪಕ್ಕೆ ಮುಕ್ತಾಯವನ್ನು ಮಾಡು. ಐಶ್ವರ್ಯದಿಂದ ಭ್ರಂಶಿತನಾಗಿ ದೀರ್ಘಕಾಲದವರೆಗೆ ದೀನನಾಗಿ, ಪರಿಕ್ಲಿಷ್ಟಗಳನ್ನು ಅನುಭವಿಸಿರುವ ಯಾರ ಹೃದಯವು ತಾನೇ ಒಡೆಯುವುದಿಲ್ಲ? ಉತ್ತಮ ಕುಲದಲ್ಲಿ ಜನಿಸಿ, ಪರರ ವಿತ್ತವನ್ನು ಬಯಸುವವನ ರಾಜ್ಯವನ್ನೇ ಚೂರುಮಾಡಿ ಆಕ್ರಮಿಸಿರುವಾಗ ಯಾರು ತಾನೇ ಕೋಪದಿಂದ ಉರಿಯುವುದಿಲ್ಲ? ನೀನು ಹೇಳುವ ಮಹಾವಾಕ್ಯವನ್ನು ಕರ್ಮದ ಮೂಲಕ ಮಾಡಿ ತೋರಿಸು! ಕೆಲಸಮಾಡದೇ ಜಂಬಕೊಚ್ಚಿಕೊಳ್ಳುವವನನ್ನು ಸಂತರು ಕುಪುರುಷನೆಂದು ತಿಳಿಯುತ್ತಾರೆ. ಯುದ್ದಮಾಡುವವರು ಈ ಎರಡಕ್ಕಾಗಿ ಯುದ್ಧಮಾಡುತ್ತಾರೆ - ಶತ್ರುಗಳಿಂದ ಸ್ಥಾನವನ್ನು ಪಶಪಡೆಸಿಕೊಳ್ಳಲು ಮತ್ತು ರಾಜ್ಯವನ್ನು ಪುನಃ ಪಡೆದುಕೊಳ್ಳಲು. ಆದುದರಂತೆ ಪುರುಷನಂತೆ ನಡೆದುಕೋ. ನಾವು ಅಥವಾ ನೀನು ಗೆದ್ದು ಈ ಪೃಥ್ವಿಯನ್ನು ಆಳೋಣ. ಅಥವಾ ನಮ್ಮಿಂದ ಕೊಲ್ಲಲ್ಪಟ್ಟು ವೀರಸ್ವರ್ಗಕ್ಕೆ ಹೋಗುತ್ತೀಯೆ. ರಾಷ್ಟ್ರದಿಂದ ಹೊರಗಟ್ಟಿದುದನ್ನು, ವನವಾಸದ ಕ್ಲೇಶವನ್ನು, ಕೃಷ್ಣೆಯ ಪರಿಕ್ಲೇಶವನ್ನು ನೆನಪಿಸಿಕೊಂಡು ಪುರುಷನಾಗು. ಪುನಃ ಪುನಃ ಬಂದು ಚುಚ್ಚುವ ಅಪ್ರಿಯರ ವಚನಗಳಿಗೆ ಸಿಟ್ಟನ್ನು ತೋರಿಸು. ಏಕೆಂದರೆ ಸಿಟ್ಟೇ ಪೌರುಷದ ಲಕ್ಷಣ. ಸಂಗ್ರಾಮದಲ್ಲಿ ನಿನ್ನ ಕ್ರೋಧ, ಬಲ, ವೀರ್ಯ, ಜ್ಞಾನಯೋಗ ಮತ್ತು ಅಸ್ತ್ರಲಾಘವವನ್ನು ತೋರಿಸು. ಪುರುಷನಾಗು.”

“ಉಲೂಕ! ಆ ಶಂಡ, ಮೂಢ, ತುಂಬಾ ತಿನ್ನುವ, ಅವಿದ್ಯಕ ಭೀಮಸೇನನಿಗೆ ನನ್ನ ಮಾತುಗಳನ್ನು ಮತ್ತೊಮ್ಮೆ ಹೇಳು. “ವೃಕೋದರ! ಅಶಕ್ತನಂತೆ ಸಭಾಮಧ್ಯದಲ್ಲಿ ಶಪಿಸಿರುವಂತೆ, ಒಂದುವೇಳೆ ಶಕ್ಯನಾದರೆ ದುಃಶಾಸನನ ರಕ್ತವನ್ನು ಕುಡಿ! ಆಯುಧಗಳಿಗೆ ಅರಕವಿಟ್ಟಾಗಿದೆ, ನಿನ್ನ ಸೈನಿಕರು ಮತ್ತು ಕುದುರೆಗಳು ದಷ್ಟಪುಷ್ಟವಾಗಿವೆ. ಕೇಶವನೊಂದಿಗೆ ಕುರುಕ್ಷೇತ್ರಕ್ಕೆ ಬಂದು ಯುದ್ಧಮಾಡು!””

ಪಾಂಡವರ ಸೇನಾನಿವೇಶನವನ್ನು ತಲುಪಿ ಕೈತವ್ಯನು ಪಾಂಡವ ಯುಧಿಷ್ಠಿರನನ್ನು ಭೇಟಿಮಾಡಿ ಹೀಗೆ ಹೇಳಿದನು: “ದೂತವಾಕ್ಯವನ್ನು ಹೇಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ದುರ್ಯೋಧನನ ಸಂದೇಶವನ್ನು ಹೇಳುತ್ತೇನೆ. ಕೇಳಿ ಕ್ರೋಧಿತನಾಗಬಾರದು.”

ಯುಧಿಷ್ಠಿರನು ಹೇಳಿದನು: “ಉಲೂಕ! ನಿನಗೆ ಭಯವಿಲ್ಲ. ಅ ಲುಬ್ಧನೂ ದೂರದೃಷ್ಟಿಯಿಲ್ಲದವನೂ ಆದ ಧಾರ್ತರಾಷ್ಟ್ರನ ಮತವೇನೆನ್ನುವುದನ್ನು ಭಯಪಟ್ಟುಕೊಳ್ಳದೇ ಹೇಳು.”

ಆಗ ಮಹಾತ್ಮ ಪಾಂಡವರ, ಸೃಂಜಯರ ಮತ್ತು ಯಶಸ್ವಿ ಕೃಷ್ಣ ಈ ಎಲ್ಲ ದ್ಯುತಿಮತರ ಮಧ್ಯೆ, ಪುತ್ರರೊಂದಿಗಿದ್ದ ದ್ರುಪದ ಮತ್ತು ವಿರಾಟರ ಸನ್ನಿಧಿಯಲ್ಲಿ, ಎಲ್ಲ ಭೂಮಿಪರ ಮಧ್ಯೆ ಅವನು ಈ ಮಾತನ್ನಾಡಿದನು: “ರಾಜ ಮಹಾಮನಸ್ವಿ ಧಾರ್ತರಾಷ್ಟ್ರನು ಕುರುವೀರರು ಕೇಳಿಸಿಕೊಳ್ಳುವಂತೆ ನಿನಗೆ ಇದನ್ನು ಹೇಳಿದ್ದಾನೆ. ನರಾಧಿಪ! ಕೇಳು! ದ್ಯೂತದಲ್ಲಿ ನೀನು ಸೋತೆ. ಸಭೆಗೆ ಕೃಷ್ಣೆಯನ್ನು ತರಲಾಯಿತು. ಇಷ್ಟೇ ಮನುಷ್ಯನು, ಪುರುಷ ಮಾನಿನಿಯು ಸಿಟ್ಟಾಗುವಂತೆ ಮಾಡಲು ಶಕ್ಯ. ಹನ್ನೆರಡು ವರ್ಷಗಳು ಹೊರಗಟ್ಟಲ್ಪಟ್ಟು ವನದಲ್ಲಿ ವಾಸಿಸಿದಿರಿ. ಒಂದು ವರ್ಷವನ್ನು ವಿರಾಟನ ದಾಸರಾಗಿದ್ದುಕೊಂಡು ಕಳೆದಿರಿ. ಕ್ರೂರವಾದ ರಾಜ್ಯಹರಣ, ವನವಾಸ, ಮತ್ತು ದ್ರೌಪದಿಯ ಪರಿಕ್ಲೇಶಗಳನ್ನು ಸ್ಮರಿಸಿಕೊಂಡು ಪುರುಷರಾಗಿರಿ. ಅಶಕ್ತತೆಯಿಂದ ಶಪಿಸಿದ ಪಾಂಡವ ಭೀಮಸೇನನು ಸಾಧ್ಯವಾದರೆ ದುಃಶಾಸನನ ರಕ್ತವನ್ನು ಕುಡಿಯಲಿ! ಆಯುಧಗಳು ಸಿದ್ಧವಾಗಿವೆ, ಕುರುಕ್ಷೇತ್ರವು ಅಕರ್ದಮವಾಗಿದೆ. ರಸ್ತೆಗಳು ಸಮನಾಗಿವೆ, ಯೋಧರೂ-ಕುದುರೆಗಳೂ ಸಿದ್ಧವಾಗಿವೆ. ಕೇಶವನನ್ನೊಡಗೂಡಿ ಯುದ್ಧಮಾಡು. ಯುದ್ಧದಲ್ಲಿ ಬೀಷ್ಮನನ್ನು ಇನ್ನೂ ಎದುರಾಗದೇ, ಗಂಧಮಾದನ ಪರ್ವತವನ್ನು ಏರಬಲ್ಲೆ ಎಂದು ಹೇಳಿಕೊಳ್ಳುವ ಮಂದನಂತೆ ಏಕೆ ಕೊಚ್ಚಿಕೊಳ್ಳುತ್ತಿದ್ದೀಯೆ? ಯುದ್ಧದಲ್ಲಿ ಶಚೀಪತಿಯ ಸಮನಾಗಿರುವ ಶ್ರೇಷ್ಠ ದ್ರೋಣನೊಂದಿಗೆ ಯುದ್ಧಮಾಡಿ ಸಂಯುಗದಲ್ಲಿ ಗೆಲ್ಲದೇ ಹೇಗೆ ತಾನೇ ರಾಜ್ಯವನ್ನು ಬಯಸುತ್ತೀಯೆ? ಬ್ರಹ್ಮ ಮತ್ತು ಧನುರ್ವಿದ್ಯೆ ಇವೆರಡರ ಕೊನೆಯನ್ನೂ ಆಚಾರ್ಯನು ತಲುಪಿದ್ದಾನೆ. ಯುದ್ಧದಲ್ಲಿ ಅವನು ಗೆಲ್ಲಲಸಾಧ್ಯನು, ಅಕ್ಷೋಭ್ಯನು, ಅನೀಕಧರನು ಮತ್ತು ಅಚ್ಯುತನು. ಅಂಥಹ ದ್ರೋಣನನ್ನು ಯುದ್ಧದಲ್ಲಿ ಗೆಲ್ಲುತ್ತೇನೆ ಎನ್ನುವ ಒಣ ಮೋಹವನ್ನು ಹೊಂದಿರುವೆಯಲ್ಲ ಅದಾಗುವುದು ಸುಳ್ಳು. ಗಾಳಿಯಿಂದ ಮೇರುಪರ್ವತವು ಪುಡಿಯಾಯಿತೆಂದು ನಾವು ಕೇಳಿಲ್ಲವಲ್ಲ! ಆದರೆ ನೀನು ಹೇಳುವುದು ಸತ್ಯವಾದರೆ ಗಾಳಿಯೂ ಮೇರುವನ್ನು ಹಾರಿಸೀತು, ಆಕಾಶವು ಭೂಮಿಯ ಮೇಲೆ ಬಿದ್ದೀತು, ಯುಗವು ಬದಲಾದೀತು. ಆ ಅಸ್ತ್ರಧಾರೀ ಅರಿಮರ್ದನನನ್ನು ಎದುರಿಸಿ ಜೀವಿತಾಕಾಂಕ್ಷಿಯಾದ ಯಾರುತಾನೆ, ಆನೆಯಿರಲಿ, ಕುದುರೆಯಾಗಿರಲಿ ಅಥವಾ ಮನುಷ್ಯನಾಗಿರಲೀ ಪುನಃ ಒಳ್ಳೆಯದಾಗಿದ್ದುಕೊಂಡು ಮನೆಗೆ ಹಿಂದಿರುಗುತ್ತಾನೆ? ಭೂಮಿಯ  ಮೇಲೆ ನಡೆಯುವ ಯಾರುತಾನೇ ಹೇಗೆ ಅವರಿಬ್ಬರನ್ನೂ ಎದುರಿಸಿ ದಾರುಣವಾದ ರಣದಿಂದ ಜೀವಂತನಾಗಿ ಬಿಡುಗಡೆ ಹೊಂದುತ್ತಾನೆ? ಬಾವಿಯಲ್ಲಿರುವ ಕಪ್ಪೆಯಂತೆ ಏಕೆ ನೀನು ಸೇರಿರುವ ರಾಜರ ಗುಂಪನ್ನು – ದುರಾಧರ್ಷರಾದ, ದೇವಸೇನೆಯಂತೆ ಪ್ರಕಾಶಿತರಾದ, ದಿವಿಯಲ್ಲಿ ರಕ್ಷಿಸಲ್ಪಟ್ಟಿರುವ ತ್ರಿದಶರಂತಿರುವ ನರೇಂದ್ರರನ್ನು ಅರ್ಥಮಾಡಿಕೊಳ್ಳುತ್ತಿಲ್ಲ? ಪೂರ್ವದಿಂದ, ಪಶ್ಚಿಮದಿಂದ, ದಕ್ಷಿಣದಿಂದ, ಉತ್ತರದಿಂದ ಬಂದಿರುವ ಕಾಂಬೋಜರು, ಶಕರು, ಖಶರು, ಶಾಲ್ವರು, ಕುರುಗಳು, ಮಧ್ಯದೇಶದವರು, ಮ್ಲೇಚ್ಛರು, ಪುಲಿಂದರು, ದ್ರವಿಡರು, ಆಂದ್ರರು ಮತ್ತು ಕಾಂಚಿಯವರು. ಯುದ್ಧದಲ್ಲಿ ಸೊಕ್ಕಿ ಬೆಳೆಯುವ ಈ ನಾನಾ ಜನೌಘವು ವೇಗವಾಗಿ ಹರಿಯುವ ಗಂಗೆಯಂತೆ ದಾಟಲಸಾಧ್ಯವಾದುದು. ಅಲ್ಪಬುದ್ಧೇ! ಮಂದ! ಆನೆಗಳ ಸೇನೆಗಳ ಮಧ್ಯ ನಿಂತಿರುವ ನನ್ನನ್ನು ಹೇಗೆ ಹೋರಾಡುತ್ತೀಯೆ?”

ರಾಜ ಧರ್ಮಪುತ್ರ ಯುಧಿಷ್ಠಿರನಿಗೆ ಹೀಗೆ ಹೇಳಿ ಉಲೂಕನು ಪುನಃ ಜಿಷ್ಣುವಿನ ಕಡೆ ತಿರುಗಿ ಹೇಳಿದನು: “ಅರ್ಜುನ! ಕೊಚ್ಚಿಕೊಳ್ಳದೆಯೇ ಯುದ್ಧಮಾಡು! ಅಷ್ಟೇಕೆ ಕೊಚ್ಚಿಕೊಳ್ಳುತ್ತಿದ್ದೀಯೆ? ಉಪಾಯದಿಂದ ಸಿದ್ಧಿ ದೊರೆಯುತ್ತದೆಯೇ ಹೊರತು ಕೊಚ್ಚಿಕೊಳ್ಳುವುದರಿಂದ ಸಿದ್ಧಿಯು ದೊರೆಯುವುದಿಲ್ಲ. ಜಂಬ ಕೊಚ್ಚಿಕೊಳ್ಳುವುದರಿಂದಲೇ ಲೋಕದಲ್ಲಿ ಕರ್ಮಗಳು ಫಲವನ್ನು ಕೊಡುತ್ತವೆಯಂತಾಗಿದ್ದರೆ ಎಲ್ಲರೂ ಬಹುವಾಗಿ ಕೊಚ್ಚಿಕೊಳ್ಳುವ ಕೆಟ್ಟ ದಾರಿಯಲ್ಲಿ ಹೋಗಿ ಯಶಸ್ವಿಗಳಾಗುತ್ತಿದ್ದರು. ನಿನಗೆ ವಾಸುದೇವನ ಸಹಾಯವಿದೆಯೆಂದು ಬಲ್ಲೆ. ನಿನ್ನ ಗಾಂಡೀವವು ಆರು ಅಡಿ ಉದ್ದವಿದೆಯೆಂದು ಬಲ್ಲೆ. ನಿನ್ನ ಸದೃಶನಾದ ಯೋದ್ಧನು ಇಲ್ಲ ಎನ್ನುವುದನ್ನೂ ಬಲ್ಲೆ. ಆದರೂ ನಿನ್ನ ರಾಜ್ಯವನ್ನು ನಿನಗೆ ಅರಿವಿದ್ದಂತೆಯೇ ಅಪಹರಿಸಿಕೊಂಡಿದ್ದೇನೆ! ಕೇವಲ ಪರ್ಯಾಯಧರ್ಮದಿಂದ ಜೀವಿಗಳು ಸಿದ್ಧಿಯನ್ನು ಪಡೆಯುವುದಿಲ್ಲ. ಧಾತಾರನೇ ಭೂತಗಳ ಮನಸ್ಸನ್ನು ದಾಸನನ್ನಾಗಿ ಅಥವಾ ಒಡೆಯನನ್ನಾಗಿ ಮಾಡುತ್ತಾನೆ. ಈ ಹದಿಮೂರು ವರ್ಷಗಳು ಅಳುತ್ತಿರುವಾಗ ನಾನು ರಾಜ್ಯವನ್ನು ಭೋಗಿಸಿದೆ. ಬಾಂಧವರೊಂದಿಗೆ ನಿನ್ನನ್ನು ಸಂಹರಿಸಿ ನಾನು ಮುಂದೆಯೂ ಕೂಡ ಪ್ರಶಾಸನ ಮಾಡುತ್ತೇನೆ. ಪಣದಲ್ಲಿ ಗೆದ್ದು ನಿನ್ನನ್ನು ದಾಸನನ್ನಾಗಿ ಮಾಡಿದಾಗ ನಿನ್ನ ಗಾಂಡೀವವು ಎಲ್ಲಿತ್ತು? ಆಗ ಭೀಮಸೇನನ ಬಲವಾದರೂ ಎಲ್ಲಿತ್ತು? ಆಗ ನಿಮಗೆ ಮೋಕ್ಷವು ಭೀಮಸೇನನ ಗದೆಯಿಂದಾಗಲೀ ಪಾರ್ಥನ ಗಾಂಡೀವದಿಂದಾಗಲೀ ದೊರೆಯಲಿಲ್ಲ. ಅನಿಂದಿತೆ ಕೃಷ್ಣೆಯಿಂದಾಯಿತು! ಆ ಭಾಮಿನಿಯು ದಾಸ್ಯಕರ್ಮಗಳಲ್ಲಿ ವ್ಯವಸ್ಥಿತರಾಗಿದ್ದ, ಅಮಾನುಷರಾಗಿದ್ದ ನಿಮ್ಮ ದಾಸತ್ವವನ್ನು ಕೊನೆಗೊಳಿಸಿ ಬಿಡಿಸಿದಳು. ಆಗ ನಾನು ನಿಮ್ಮನ್ನು ಷಂಡತಿಲಕ್ಕೆ ಹೋಲಿಸಿ ಮಾತನಾಡಿದ್ದೆ. ಅದರಂತೆಯೇ ಪಾರ್ಥನು ವಿರಾಟನಗರದಲ್ಲಿ ಜಡೆಯನ್ನು ಕಟ್ಟಲಿಲ್ಲವೇ? ವಿರಾಟನ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತ ಭೀಮಸೇನನು ಸೋತುಹೋಗಿದ್ದ. ಇದೂ ಕೂಡ ನಿನ್ನ ಪೌರುಷವನ್ನು ಎತ್ತಿ ತೋರಿಸುತ್ತದೆ! ಹೋರಾಟದಲ್ಲಿ ಜಡೆಯನ್ನು ಕಟ್ಟಿ, ಸೊಂಟಬಂದಿಯನ್ನು ಕಟ್ಟಿ, ಪಲಾಯನ ಮಾಡಿದ್ದೆಯಲ್ಲ! ಇದೇ ಕ್ಷತ್ರಿಯರು ಕ್ಷತ್ರಿಯರಿಗೆ ಸದಾ ನೀಡುವ ದಂಡ! ವಾಸುದೇವನ ಭಯದಿಂದಾಗಲೀ, ನಿನ್ನ ಭಯದಿಂದಾಗಲೀ ನಾನು ರಾಜ್ಯವನ್ನು ಹಿಂದಿರುಗಿಸುವುದಿಲ್ಲ. ಕೇಶವನೊಂದಿಗೆ ಯುದ್ಧ ಮಾಡು. ಮಾಯೆಯಾಗಲೀ, ಇಂದ್ರಜಾಲವಾಗಲೀ ಅಥವಾ ಕುಹಕವಾಗಲೀ ಶಸ್ತ್ರವನ್ನು ಹಿಡಿದು ಯುದ್ಧಮಾಡುವವನನ್ನು ಬೆದರಿಸಲಾರದು. ಅದು ಅವನ ಕೋಪವನ್ನು ಮಾತ್ರ ಹೆಚ್ಚಿಸಬಲ್ಲದು. ಸಹಸ್ರ ವಾಸುದೇವರಾಗಲೀ ನೂರು ಫಲ್ಗುನಿಗಳಾಗಲೀ ನನ್ನ ರಭಸಕ್ಕೆ ಸಿಲುಕಿ ದಿಕ್ಕು ದಿಕ್ಕುಗಳಲ್ಲಿ ಹಾರಿ ಹೋಗುತ್ತಾರೆ. ಯುದ್ದದಲ್ಲಿ ಭೀಷ್ಮನನ್ನು ಎದುರಿಸು. ತಲೆಕುಟ್ಟಿ ಗಿರಿಯನ್ನು ಒಡೆ. ಎರಡು ಬಾಹುಗಳಿಂದ ಮಹಾ ಆಳವಾದ ಪುರುಷರ ಸಾಗರವನ್ನು ದಾಟಲು ಪ್ರಯತ್ನಿಸು. ಶಾರದ್ವತನು ಅದರ ದೊಡ್ಡ ಮೀನು. ವಿವಿಂಶತಿಯು ಸಣ್ಣ ಮೀನುಗಳ ಸಂಕುಲ. ಬೃಹದ್ಬಲನು ಅಲೆಗಳು. ಮತ್ತು ಸೌಮದತ್ತಿಯು ತಿಮಿಂಗಿಲ. ದುಃಶಾಸನನು ಭಿರುಗಾಳಿ. ಶಲ್ಯನು ಮೀನು. ಚಿತ್ರಾಯುಧಗಳ ಸುಷೇಣನು ನಾಗ. ಜಯದ್ರಥನು ಗಿರಿ. ಪುರುಮಿತ್ರನು ಗಾಧ. ದುರ್ಮರ್ಷಣನು ನೀರು. ಶಕುನಿಯು ಪ್ರಪಾತ. ಅಕ್ಷಯ ಶಸ್ತ್ರಗಳ ಭಿರುಗಾಳಿಯಿಂದ ಮೇಲೇಳುವ ಈ ಸಮುದ್ರದಲ್ಲಿ ನೀನು ಬೀಳಲು ಆಯಾಸಗೊಂಡು ಚೇತನವನ್ನು ಕಳೆದುಕೊಳ್ಳುತ್ತೀಯೆ. ಸರ್ವ ಬಾಂಧವರನ್ನೂ ಕಳೆದುಕೊಂಡು ನೀನು ಆಗ ಪರಿತಾಪ ಪಡುತ್ತೀಯೆ. ಅಶುಚಿಯ ಮನಸ್ಸು ತ್ರಿದಿವದಿಂದ ಹೇಗೆ ಹಿಂದೆಸರಿಯುತ್ತದೆಯೋ ಹಾಗೆ ನಿನ್ನ ಮನಸ್ಸು ಭೂಮಿಯನ್ನು ಆಳಬೇಕೆನ್ನುವುದರಿಂದ ಹಿಂದೆ ಸರಿಯುತ್ತದೆ. ತಪಸ್ವಿಯಲ್ಲದವನಿಗೆ ಸ್ವರ್ಗವು ಹೇಗೋ ಹಾಗೆ ರಾಜ್ಯ ಪ್ರಶಾಸನೆಯು ನಿನಗೆ ದುರ್ಲಭವಾಗುತ್ತದೆ.”

ತನ್ನ ವಾಕ್ಯ ಶಲಾಕೆಯಿಂದ ವಿಷಸರ್ಪದಂತಿದ್ದ ಅರ್ಜುನನನ್ನು ಪುನಃ ಪುನಃ ತಿವಿಯುತ್ತಾ ಉಲೂಕನು ಹೇಳಿದುದನ್ನೇ ಇನ್ನೊಮ್ಮೆ ಹೇಳಿದನು. ಅವನು ಮೊದಲು ಹೇಳಿದುದನ್ನು ಕೇಳಿಯೇ ಪಾಂಡವರು ತುಂಬಾ ರೋಷಿತರಾಗಿದ್ದರು. ಪುನಃ ಅದನ್ನೇ ಹೇಳಿದ ಕೈತವ್ಯನಿಂದ ಇನ್ನೂ ತುಂಬಾ ಕುಪಿತರಾದರು. ಎಲ್ಲರೂ ಎದ್ದು ನಿಂತು ತಮ್ಮ ತೋಳುಗಳನ್ನು ಬೀಸಿದರು. ವಿಷಪೂರಿತ ಸರ್ಪಗಳಂತೆ ಕೃದ್ಧರಾಗಿ ಪರಸ್ಪರರನ್ನು ವೀಕ್ಷಿಸತೊಡಗಿದರು. ಭೀಮಸೇನನು ತಲೆಯನ್ನು ಕೆಳಗೆ ಮಾಡಿಕೊಂಡು ಕೆಂಪಾಗಿದ್ದ ಕಡೆಗಣ್ಣಿನ ಓರೆನೋಟದಿಂದ ಕೇಶವನ್ನು ನೋಡಿ ವಿಷಕಾರುವ ಸರ್ಪದಂತೆ ನಿಟ್ಟುಸಿರು ಬಿಟ್ಟನು. ಕ್ರೋಧದಿಂದ ಅತಿ ಹೊಡೆತಕ್ಕೆ ಸಿಕ್ಕಿ ಆರ್ತನಾದ ವಾತಾತ್ಮಜನನ್ನು ನೋಡಿ ಕೈತವ್ಯನ ಉತ್ಸಾಹವನ್ನು ಹೆಚ್ಚಿಸಲೋ ಎನ್ನುವಂತೆ ದಾಶಾರ್ಹನು ಅವನಿಗೆ ತಿರುಗಿ ಮಾತನಾಡಿದನು: “ಕೈತವ್ಯ! ಶೀಘ್ರವೇ ಇಲ್ಲಿಂದ ಹೊರಟು ಸುಯೋಧನನಿಗೆ ಇದೆಲ್ಲವನ್ನೂ ಹೇಳು! ನಿನ್ನ ಮಾತನ್ನು ಕೇಳಿದ್ದಾರೆ ಮತ್ತು ಸ್ವೀಕರಿಸಿದ್ದಾರೆ. ನಿನ್ನ ಮತವೇನಿದೆಯೋ ಹಾಗೆಯೇ ಆಗಲಿ! ನನ್ನ ಈ ಮಾತುಗಳನ್ನು ಕೂಡ ಪುನಃ ಪುನಃ ಸುಯೋಧನನಿಗೆ ಹೇಳು. ದುರ್ಮತೇ! ಪುರುಷನಾಗು! ಇವೆಲ್ಲವೂ ನಾಳೆ ನಿನಗೆ ಕಾಣಿಸಿಕೊಳ್ಳುತ್ತವೆ. ಮೂಢ! ಈ ಜನಾರ್ದನನು ಯುದ್ಧಮಾಡುವುದಿಲ್ಲವೆಂದು ನೀನು ಯೋಚಿಸುತ್ತಿರುವೆ. ಪಾರ್ಥರಿಗೆ ಕೇವಲ ಸಾರಥಿ ಎಂದು ನಿನಗೆ ಭಯವಿಲ್ಲ. ಆದರೆ ಅದು ಒಂದು ಕ್ಷಣವೂ ಹಾಗಿರುವುದಿಲ್ಲ. ಕ್ರೋಧದಿಂದ ಅಗ್ನಿಯು ಹುಲ್ಲಿನ ರಾಶಿಯನ್ನು ಸುಡುವ ಹಾಗೆ ನಾನು ಈ ಎಲ್ಲ ಪಾರ್ಥಿವರನ್ನೂ ಸುಟ್ಟು ಹಾಕಬಲ್ಲೆ. ಯುಧಿಷ್ಠಿರನ ನಿಯೋಗದಂತೆ ನಾನು ಯುದ್ಧಮಾಡುವಾಗ ತನ್ನನ್ನು ಚೆನ್ನಾಗಿ ತಿಳಿದುಕೊಂಡಿರುವ ಮಹಾತ್ಮ ಫಲ್ಗುನನ ಸಾರಥ್ಯವನ್ನು ಮಾಡುತ್ತೇನೆ. ನಾಳೆ ನೀನು ಮೂರು ಲೋಕಗಳಿಗೆ ಹಾರಿ ಹೋದರೂ ಭೂತಲವನ್ನು ಹೊಕ್ಕರೂ ಅಲ್ಲಿ ಎದುರಿಗೆ ಅರ್ಜುನನ ರಥವು ಕಂಡುಬರುತ್ತದೆ. ಭೀಮಸೇನನ ಗರ್ಜನೆಯು ವ್ಯರ್ಥವೆಂದು ನಿನಗನ್ನಿಸಿದರೆ ದುಃಶಾಸನನ ರಕ್ತವನ್ನು ಕುಡಿದಾಯಿತೆಂದು ತಿಳಿದುಕೋ! ರಾಜಾ ಯುಧಿಷ್ಠಿರನಾಗಲೀ, ಪಾರ್ಥನಾಗಲೀ, ಭೀಮಸೇನನಾಗಲೀ, ಯಮಳರಾಗಲೀ ನಿನ್ನ ಪ್ರತಿಕೂಲದ ಮಾತುಗಳಿಗೆ ಗಮನ ಕೊಡುವುದಿಲ್ಲ.”

ದುರ್ಯೋಧನನ ಆ ವಾಕ್ಯವನ್ನು ಕೇಳಿ ಭರತರ್ಷಭನು ತನ್ನ ಕೆಂಪಾದ ಕಣ್ಣುಗಳಿಂದ ಕೈತವ್ಯನನ್ನು ನೋಡಿದನು. ಮಹಾಯಶ ಗುಡಾಕೇಶನು ಕೇಶವನನ್ನು ನೋಡಿ, ತನ್ನ ವಿಪುಲ ಭುಜವನ್ನು ಹಿಡಿದು ಕೈತವ್ಯನಿಗೆ ಹೇಳಿದನು: “ತನ್ನದೇ ವೀರ್ಯವನ್ನು ಸಮಾಶ್ರಯಿಸಿ ಶತ್ರುಗಳನ್ನು ಆಹ್ವಾನಿಸುವವನನ್ನು ಮತ್ತು ಭೀತನಾಗದೇ ತನ್ನ ಶಕ್ತಿಯನ್ನು ಸಂಪೂರ್ಣಗೊಳಿಸುವವನನ್ನೇ ಪುರುಷನೆಂದು ಹೇಳುತ್ತಾರೆ. ಇತರರ ವೀರ್ಯವನ್ನು ಸಮಾಶ್ರಯಿಸಿ ಶತ್ರುಗಳನ್ನು ಆಹ್ವಾನಿಸುವ, ಕ್ಷತ್ರಬಂಧುಗಳಿಗಿಂತ ಅಶಕ್ತನಾದವನೇ ಲೋಕದಲ್ಲಿ ಪುರುಷಾಧಮ. ಇತರರ ವೀರ್ಯದ ಆಧಾರದ ಮೇಲೆ ನೀನು ಸ್ವತಃ ವೀರನೆಂದು ತಿಳಿದುಕೊಂಡಿದ್ದೀಯೆ. ಸ್ವಯಂ ಕಾಪುರುಷನಾದ ಮೂಢನು ಪರರನ್ನು ಗೆಲ್ಲಲು ಬಯಸುತ್ತಾನೆ! ನೀನು ಎಲ್ಲ ರಾಜರಲ್ಲಿ ವೃದ್ಧನಾದ, ಹಿತಬುದ್ಧಿ, ಜಿತೇಂದ್ರಿಯ, ಮಹಾಬುದ್ಧಿಯನ್ನು ಮರಣಕ್ಕೆ ದೀಕ್ಷೆಕೊಟ್ಟು ಜಂಬ ಕೊಚ್ಚಿಕೊಳ್ಳುತ್ತಿದ್ದೀಯೆ! ದುರ್ಬುದ್ಧೇ! ಕುಲಪಾಂಸನ! ನಿನ್ನ ಭಾವವು ನಮಗೆ ತಿಳಿದಿದೆ! ನಿನಗನಿಸುತ್ತದೆ ಪಾಂಡವರು ಗಾಂಗೇಯನನ್ನು ಸಂಹರಿಸಲು ಹಿಂಜರಿಯುತ್ತಾರೆಂದು. ಆದರೆ ಯಾರ ವೀರ್ಯವನ್ನು ಸಮಾಶ್ರಯಿಸಿ ಕೊಚ್ಚಿಕೊಳ್ಳುತ್ತಿದ್ದೀಯೋ ಆ ಭೀಷ್ಮನನ್ನೇ ಮೊದಲು ಎಲ್ಲ ಧನ್ವಿಗಳೂ ಕಣ್ಣುಮುಚ್ಚಿ ತೆರೆಯುವುದರೊಳಗೆ ಕೊಲ್ಲುತ್ತೇನೆ. ಕೈತವ್ಯ! ಭರತರಲ್ಲಿಗೆ ಹೋಗಿ ಧಾರ್ತರಾಷ್ಟ್ರ ಸುಯೋಧನನಿಗೆ ಹೇಳು! ಸವ್ಯಸಾಚೀ ಅರ್ಜುನನು ಹೇಳಿದ - ರಾತ್ರಿ ಕಳೆಯಲು ವಿಧ್ವಂಸವು ನಡೆಯಲಿದೆ! ಅದೀನಸತ್ವನಾಗಿ ಅವನು ಸಂತೋಷದಿಂದ ಸತ್ಯಸಂಧನಾಗಿ ಕುರುಗಳ ಮಧ್ಯದಲ್ಲಿ ನಾನು ಪಾಂಡವರ ಮತ್ತು ಶಾಲ್ವೇಯರ ಸೇನೆಯನ್ನು ಸಂಹರಿಸುತ್ತೇನೆಂದು ಹೇಳಿದೆಯಲ್ಲ, ಅದರ ಭಾರವು ನನ್ನ ಮೇಲಿದೆ. ದ್ರೋಣನನ್ನು ಬಿಟ್ಟು ಲೋಕವನ್ನೇ ಸಂಹರಿಸುತ್ತೇನೆ. ಪಾಂಡವರ ಭಯವು ನಿನಗೆ ತಿಳಿಯದಿರಲಿ. ನಿನಗೆ ರಾಜ್ಯವು ದೊರೆತಂತೆಯೇ. ಏಕೆಂದರೆ ನೀನು ಪಾಂಡವರು ನಾಶಹೊಂದಿದ್ದಾರೆ ಎಂದು ತಿಳಿದುಕೊಂಡಿದ್ದೀಯೆ. ದರ್ಪದಿಂದ ತುಂಬಿಹೋಗಿರುವ ನೀನು ನಿನ್ನಲ್ಲಿಯೇ ನಡೆಯುತ್ತಿರುವ ಅನರ್ಥವನ್ನು ಕಾಣುತ್ತಿಲ್ಲ. ಆದುದರಿಂದ ನಿಮ್ಮೆಲ್ಲರ ಸಮಕ್ಷಮದಲ್ಲಿ ಮೊದಲು ಕುರುವೃದ್ಧನನ್ನೇ ಕೊಲ್ಲುತ್ತೇನೆ. ಸೂರ್ಯೋದಯದಲ್ಲಿ ಸೇನೆಯೊಂದಿಗೆ, ಧ್ವಜ, ರಥಗಳಿಂದ ಸತ್ಯಸಂಧನನ್ನು ರಕ್ಷಿಸು. ನಿನಗೆ ದ್ವೀಪದಂತಿರುವ ಭೀಷ್ಮನನ್ನು ರಥದಿಂದ ನಾನೇ ಬೀಳಿಸಿ ತೋರಿಸುತ್ತೇನೆ. ನಾಳೆ ನನ್ನ ಶರಜಾಲದಿಂದ ಪಿತಾಮಹನು ಗಾಯಗೊಂಡುದುದನ್ನು ನೋಡಿದಾಗ ಸುಯೋದನನು ಜಂಬಕೊಚ್ಚಿಕೊಳ್ಳುವುದೆಂದರೆ ಏನೆನ್ನುವುದನ್ನು ತಿಳಿಯುತ್ತಾನೆ. ಸುಯೋಧನ! ಕ್ರುದ್ಧನಾದ ಭೀಮಸೇನನು ನಿನ್ನ ಭ್ರಾತಾ ಆ ದೀರ್ಘದರ್ಶಿಯಲ್ಲದ, ಅಧರ್ಮಜ್ಞ, ನಿತ್ಯವೈರೀ, ಪಾಪಬುದ್ಧಿ, ಕ್ರೂರಕರ್ಮಿ, ದುಃಶಾಸನನಿಗೆ ಸಭಾಮಧ್ಯೆ ಹೇಳಿದ ಪ್ರತಿಜ್ಞೆಯನ್ನು ಸತ್ಯಗೊಳಿಸುವುದನ್ನು ಬೇಗನೇ ನೀನು ನೋಡುತ್ತೀಯೆ. ನಿನ್ನ ಅಭಿಮಾನದ, ದರ್ಪದ, ಕ್ರೋಧದ, ಪೌರುಷದ, ನಿಷ್ಟೂರದ, ಅವಲೇಪನದ, ಆತ್ಮ ಸಂಭಾವನೆಯ, ಕ್ರೂರತೆಯ, ಅಸ್ನೇಹಭಾವದ, ಧರ್ವವಿದ್ವೇಷಣೆಯ, ಅಧರ್ಮದ, ಅತಿವಾದದ, ವೃದ್ಧರನ್ನು ಅತಿಕ್ರಮಿಸಿದುದರ, ವಕ್ರದೃಷ್ಟಿಯ, ಮತ್ತು ಎಲ್ಲ ಅಪನಯಗಳ ತೀವ್ರ ಫಲವನ್ನು ಬೇಗನೇ ಪಡೆಯುತ್ತೀಯೆ. ಏಕೆಂದರೆ ವಾಸುದೇವನ ಸಹಾಯವಿರುವ, ಕ್ರುದ್ಧನಾದ ನನ್ನಿಂದ ಜೀವಿತವಾಗಿರುವ ಅಥವ ರಾಜ್ಯದ ಆಸೆಯನ್ನು ಯಾವ ಕಾರಣದಿಂದ ಇಟ್ಟುಕೊಂಡಿದ್ದೀಯೆ? ಭೀಷ್ಮ-ದ್ರೋಣರನ್ನು ಶಾಂತಗೊಳಿಸಿದಾಗ, ಸೂತಪುತ್ರನನ್ನು ಕೆಳಗುರುಳಿಸಿದಾಗ ನೀನು ಜೀವನದಲ್ಲಿ, ರಾಜ್ಯದಲ್ಲಿ ಮತ್ತು ಪುತ್ರರಲ್ಲಿ ನಿರಾಶನಾಗುತ್ತೀಯೆ. ಭೀಮಸೇನನಿಂದ ಹತರಾಗಿ ನಿಧನರಾದ ನಿನ್ನ ಸಹೋದರರನ್ನು ಮತ್ತು ಪುತ್ರರನ್ನು ನೋಡಿ ನೀನು ದುಷ್ಕೃತಗಳನ್ನು ನೆನಪಿಸಿಕೊಳ್ಳುತ್ತೀಯೆ. ಕೇಶವನು ಎರಡು ಬಾರಿ ಪ್ರತಿಜ್ಞೆಗಳನ್ನು ಮಾಡುವುದಿಲ್ಲ. ನಾನು ಸತ್ಯವನ್ನು ಹೇಳುತ್ತಿದ್ದೇನೆ. ಪ್ರತಿಜ್ಞೆಯೆಲ್ಲವೂ ಸತ್ಯವಾಗುತ್ತವೆ.”

ಈ ರೀತಿ ಹೇಳಲ್ಪಟ್ಟ ಕೈತವನು ಆ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಅನುಜ್ಞೆಯನ್ನು ಪಡೆದು ಬಂದಹಾಗೆಯೇ ಪುನಃ ಹಿಂದಿರುಗಿದನು. ಪಾಂಡವರಿಂದ ಹಿಂದಿರುಗಿ ಕೈತವ್ಯನು ಕುರುಸಂಸದಿಗೆ ಹೋಗಿ ಹೇಳಿದುದೆಲ್ಲವನ್ನೂ ಧೃತರಾಷ್ಟ್ರಜನಿಗೆ ಹೇಳಿದನು. ಕೇಶವಾರ್ಜುನರ ವಾಕ್ಯವನ್ನು ಕೇಳಿ ಭರತರ್ಷಭನು ದುಃಶಾಸನ, ಕರ್ಣ ಮತ್ತು ಶಕುನಿಯರೊಂದಿಗೆ ಮಾತನಾಡಿದನು. ರಾಜನ ಸೇನೆ ಮತ್ತು ಮಿತ್ರಸೇನೆಗಳು ಬೆಳಗಾಗುವುದರೊಳಗೆ ಸಿದ್ಧರಾಗಿ ನಿಲ್ಲಬೇಕೆಂದು ಆಜ್ಞಾಪಿಸಿದನು. ಆಗ ಕರ್ಣನ ಆಜ್ಞೆಯಂತೆ ದೂತರು ರಥದಲ್ಲಿ, ಒಂಟೆಗಳ ಮೇಲೆ, ಮತ್ತು ಮಹಾವೇಗದ ಕುದುರೆಗಳ ಮೇಲೆ ಕುಳಿತು ಬೇಗನೆ ಸಂಪೂರ್ಣ ಸೇನೆಯನ್ನು ಸುತ್ತುವರೆದು ರಾಜರಿಗೆ “ಬೆಳಗಾಗುವುದರೊಳಗೆ ಸೇನೆಗಳನ್ನು ಕೂಡಿಸಿ!” ಎಂದು ಕರ್ಣನ ಆಜ್ಞೆಗಳನ್ನಿತ್ತರು.

ಯುಧಿಷ್ಠಿರನು ಸೇನಾನಾಯಕತ್ವಗಳನ್ನು ನೀಡಿದುದು

ಉಲೂಕನ ಮಾತನ್ನು ಕೇಳಿ ಕುಂತೀಪುತ್ರ ಯುಧಿಷ್ಠಿರನು ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಸೇನೆಯನ್ನು ಹೊರಡಿಸಿದನು. ಪದಾತಿಗಳಿಂದ, ಆನೆಗಳಿಂದ, ರಥಗಳಿಂದ, ಅಶ್ವವೃಂದಗಳಿಂದ ಕೂಡಿದ ಚತುರ್ವಿಧ ಬಲವು ಪೃಥ್ವಿಯನ್ನೇ ನಡುಗಿಸುವಂತೆ ಭಯಂಕರವಾಗಿತ್ತು. ಭೀಮಸೇನನಿಂದ, ಅರ್ಜುನನಿಂದ ಮತ್ತು ಮಹಾರಥಿಗಳಿಂದ ರಕ್ಷಿತವಾದ ಧೃಷ್ಟದ್ಯುಮ್ನನ ವಶದಲ್ಲಿದ್ದ ಆ ಸೇನೆಯು ತಿಮಿಂಗಿಲಗಳಿಂದ ತುಂಬಿದ ಸಾಗರದಂತೆ ಅಸಾಧ್ಯವಾಗಿತ್ತು. ಅದರ ಮುಂದೆ ಮಹೇಷ್ವಾಸ, ಯುದ್ಧದುರ್ಮದ, ದ್ರೋಣನನ್ನು ಅರಸುತ್ತಿರುವ ಪಾಂಚಾಲ ಧೃಷ್ಟದ್ಯುಮ್ನನು ಸೇನೆಯನ್ನು ಕರೆದುಕೊಂಡು ಹೋಗುತ್ತಿದ್ದನು. ಯಥಾಬಲವಾಗಿ, ಉತ್ಸಾಹವಿದ್ದಂತೆ ರಥಿಗಳನ್ನು ಸೂಚಿಸಲಾಯಿತು: ಸೂತಪುತ್ರನಿಗೆ ಅರ್ಜುನ, ದುರ್ಯೋಧನನಿಗೆ ಭೀಮ, ಅಶ್ವತ್ಥಾಮನಿಗೆ ನಕುಲ, ಕೃತವರ್ಮನಿಗೆ ಶೈಬ್ಯ, ಸೈಂಧವನಿಗೆ ವಾರ್ಷ್ಣೇಯ ಯುಯುಧಾನನನ್ನು ಇಡಲಾಯಿತು. ಶಿಖಂಡಿಯನ್ನು ಪ್ರಮುಖವಾಗಿ ಭೀಷ್ಮನಿಗೆ, ಸಹದೇವನನ್ನು ಶಕುನಿಗೆ, ಚೇಕಿತಾನನನ್ನು ಶಲನಿಗೆ, ಧೃಷ್ಟಕೇತುವನ್ನು ಶಲ್ಯನಿಗೆ, ಗೌತಮನಿಗೆ ಉತ್ತಮೌಜಸನನ್ನು, ಮತ್ತು ಐವರು ದ್ರೌಪದೇಯರನ್ನು ತ್ರಿಗರ್ತರಿಗೆ ಇಡಲಾಯಿತು. ಸೌಭದ್ರನನ್ನು ವೃಷಸೇನನಿಗೆ ಮತ್ತು ಉಳಿದ ಮಹೀಕ್ಷಿತರಿಗೆ ಇರಿಸಲಾಯಿತು. ಏಕೆಂದರೆ ಅವನನ್ನು ಪಾರ್ಥನಿಗಿಂತಲೂ ಸಮರ್ಥನೆಂದು ತಿಳಿಯಲಾಗಿತ್ತು. ಈ ರೀತಿ ಯೋಧರನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ವಿಭಜಿಸಿ ಮಹೇಷ್ವಾಸ ಜ್ವಾಲವರ್ಣಿಯು ದ್ರೋಣನನ್ನು ತನ್ನ ಪಾಲಿಗೆ ಇರಿಸಿಕೊಂಡನು. ಆಗ ಮಹೇಷ್ವಾಸ ಸೇನಾಪತಿ ಮೇಧಾವೀ ಧೃಷ್ಟದ್ಯುಮ್ನನು ವಿಧಿವತ್ತಾಗಿ ವ್ಯೂಹವನ್ನು ರಚಿಸಿ ಯುದ್ಧಕ್ಕೆ ಧೃತಮನಸ್ಕನಾಗಿ ಯಥಾವತ್ತಾಗಿ ಪಾಂಡವರ ಸೇನೆಯನ್ನು ಆಯೋಜಿಸಿ ಪಾಂಡುಪುತ್ರರ ಜಯಕ್ಕಾಗಿ ರಣವನ್ನು ಸಿದ್ಧಗೊಳಿಸಿ ನಿಂತನು.

ಕೌರವ ಸೇನೆಯಲ್ಲಿರುವ ರಥಾತಿರಥಿಗಳ ವರ್ಣನೆ

ಸೇನಾಪತ್ಯವನ್ನು ಪಡೆದು ಶಾಂತನವ ಭೀಷ್ಮನು ಸಂತೋಷದಿಂದ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು: “ಸೇನಾನಿ ಶಕ್ತಿಪಾಣಿ ಕುಮಾರನನ್ನು ನಮಸ್ಕರಿಸಿ ನಾನು ಇಂದು ಸೇನಾಪತಿಯಾಗುತ್ತೇನೆನ್ನುವುದರಲ್ಲಿ ಸಂಶಯವಿಲ್ಲ. ಸೇನಾಕರ್ಮಗಳನ್ನೂ ವಿವಿಧ ವ್ಯೂಹಗಳನ್ನೂ, ಭೃತ್ಯರ ಮತ್ತು ಭೃತ್ಯರಲ್ಲದವರಿಂದ ಮಾಡಿಸಬೇಕಾದ ಕೆಲಸಗಳನ್ನೂ ಕೂಡ ನಾನು ತಿಳಿದುಕೊಂಡಿದ್ದೇನೆ. ಯಾತ್ರಾಯಾನಗಳಲ್ಲಿ, ಯುದ್ಧಗಳಲ್ಲಿ, ಲಬ್ಧಪ್ರಶಮನಗಳಲ್ಲಿ ಬೃಹಸ್ಪತಿಯು ತಿಳಿದಂತೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ದೇವಗಂಧರ್ವಮಾನುಷರ ಮಹಾರಂಭಗೊಳ್ಳುವ ವ್ಯೂಹಗಳನ್ನೂ ನಾನು ಭೇದಿಸಬಲ್ಲೆ. ಪಾಂಡವರ ಮೇಲಿರುವ ನಿನ್ನ ಉದ್ವೇಗವನ್ನು ನಾನು ಬಿಡಿಸುತ್ತೇನೆ. ಶಾಸ್ತ್ರಗಳಲ್ಲಿ ಹೇಳಿರುವಂತೆ ನಾನು ತತ್ವದಿಂದ ಹೋರಾಡುತ್ತೇನೆ. ನಿನ್ನ ವಾಹಿನಿಯನ್ನು ಪಾಲಿಸುತ್ತೇನೆ. ರಾಜನ್! ನಿನ್ನ ಮನಸ್ಸಿನ ಜ್ವರವನ್ನು ತೆಗೆದು ಹಾಕು.”

ದುರ್ಯೋಧನನು ಹೇಳಿದನು: “ಗಾಂಗೇಯ! ನನಗೆ ದೇವಾಸುರರೇ ಇರಲಿ ಸಮಸ್ತರಲ್ಲಿ ಭಯವೆನ್ನುವುದಿಲ್ಲ. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ದುರ್ಧರ್ಷನಾದ ನೀನು ಸೇನಾಪತ್ಯವನ್ನು ವಹಿಸಿರಲು ಮತ್ತು ಪುರುಷವ್ಯಾಘ್ರ ದ್ರೋಣನು ಇಷ್ಟಪಟ್ಟು ಯುದ್ಧಕ್ಕೆ ನಿಂತಿರಲು ಇನ್ನೇನು? ನೀವಿಬ್ಬರೂ ಪುರುಷಾಗ್ರರು ನಿಂತಿರುವಾಗ ನನಗೆ ವಿಜಯವು ದುರ್ಲಭವೇ ಅಲ್ಲ. ದೇವರಾಜ್ಯವೂ ಕೂಡ ನಿಶ್ಚಯಿಸಿದ್ದೇ. ಶತ್ರುಗಳಲ್ಲಿರುವ ಮತ್ತು ನಮ್ಮಲ್ಲಿ ಒಟ್ಟು ಎಷ್ಟು ಮಂದಿ ರಥರು ಮತ್ತು ಅತಿರಥರಿದ್ದಾರೆ ಎನ್ನುವುದನ್ನು ತಿಳಿಯಲು ಬಯಸುತ್ತೇನೆ. ಏಕೆಂದರ ಪಿತಾಮಹನು ಶತ್ರುಗಳ ಮತ್ತು ನಮ್ಮ ಕುರಿತು ಚೆನ್ನಾಗಿ ತಿಳಿದುಕೊಂಡಿದ್ದಾನೆ. ಈ ಎಲ್ಲ ವಸುಧಾಧಿಪರೊಂದಿಗೆ ಅದನ್ನು ಕೇಳಲು ಬಯಸುತ್ತೇನೆ.”

ಭೀಷ್ಮನು ಹೇಳಿದನು: “ಗಾಂಧಾರೇ! ನಿನ್ನ ಬಲದಲ್ಲಿರುವ ರಥರ ಸಂಖ್ಯೆಯನ್ನು, ಯಾರು ರಥರು ಮತ್ತು ಯಾರು ಅತಿರಥರು ಎನ್ನುವುದನ್ನು ಕೇಳು. ನಿನ್ನ ಸೇನೆಯಲ್ಲಿ ಸಹಸ್ರ, ಹತ್ತುಸಾವಿರ, ಹತ್ತು ಲಕ್ಷಗಟ್ಟಲೆ ರಥರಿದ್ದಾರೆ. ಅವರಲ್ಲಿ ಮುಖ್ಯರಾದವರನ್ನು ಕೇಳು. ನಿನ್ನ ಎಲ್ಲ ಸಹೋದರರೊಂದಿಗೆ ನೀನು ರಥೋದಾರರಲ್ಲಿ ಅಗ್ರನಾಗಿದ್ದೀಯೆ. ದುಃಶಾಸನನೇ ಮೊದಲಾಗಿ ಒಟ್ಟು ನೂರು ಸಹೋದರರು. ಎಲ್ಲರೂ ಪ್ರಹರಣದಲ್ಲಿ ಕುಶಲರು, ಭೇದಿಸುವುದರಲ್ಲಿ ವಿಶಾರದರು. ರಥದಲ್ಲಿ ನಿಂತು, ಆನೆಯ ಮೇಲೆ ನಿಂತು, ಗದಾಯುದ್ಧ ಅಥವಾ ಖಡ್ಗಯುದ್ಧವನ್ನು ಮಾಡಬಲ್ಲರು. ಸಮ್ಯಂತಾರರು, ಪ್ರಹರ್ತಾರರು, ಭಾರಸಾಧನಗಳಲ್ಲಿ ಕೃತಾಸ್ತ್ರರು. ಎಲ್ಲರೂ ಅಸ್ತ್ರಗಳಲ್ಲಿ ದ್ರೋಣನ ಮತ್ತು ಶರದ್ವತ ಕೃಪನ ಶಿಷ್ಯರು. ಪಾಂಡವರಿಂದ ತಪ್ಪಿತಸ್ಥರೆಂದು ಮಾಡಲ್ಪಟ್ಟ ಈ ಮನಸ್ವೀ ಧಾರ್ತರಾಷ್ಟ್ರರು ಯುದ್ಧದುರ್ಮದರಾದ ಪಾಂಚಾಲರನ್ನು ರಣದಲ್ಲಿ ಸಂಹರಿಸುತ್ತಾರೆ. ನಂತರ ನಿನ್ನ ಸೇನಾಪತಿಯಾದ ನಾನಿದ್ದೇನೆ. ನಾನು ಪಾಂಡವರನ್ನು ಪುಡಿಮಾಡಿ ಶತ್ರುಗಳನ್ನು ವಿಧ್ವಂಸ ಮಾಡುತ್ತೇನೆ. ನನ್ನದೇ ಗುಣಗಳನ್ನು ಹೊಗಳಿಕೊಳ್ಳುವುದು ಸರಿಯಲ್ಲ. ನಾನು ನಿನಗೆ ಗೊತ್ತು. ಪ್ರಹಾರ ಮಾಡುವವರಲ್ಲಿ ಶ್ರೇಷ್ಠನಾದ ಭೋಜ ಕೃತವರ್ಮನು ಅತಿರಥ. ರಣದಲ್ಲಿ ನಿನ್ನ ಉದ್ದೇಶವನ್ನು ಸಿದ್ಧಿಗೊಳಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಅಸ್ತ್ರವಿದರಿಂದ ಅನಾಧೃಷನಾದ, ಅತಿ ದೂರದವರೆಗೆ ಆಯುಧಗಳನ್ನು ಎಸೆಯಬಲ್ಲ, ದೃಢಾಯುಧನಾದ ಅವನು ಮಹೇಂದ್ರನು ದಾನವರನ್ನು ಹೇಗೋ ಹಾಗೆ ನಿನ್ನ ರಿಪುಗಳನ್ನು ಸಂಹರಿಸುತ್ತಾನೆ. ಮಹೇಷ್ವಾಸ ಮದ್ರರಾಜ ಶಲ್ಯನು ನನ್ನ ಅಭಿಪ್ರಾಯದಲ್ಲಿ ಅತಿರಥ. ಪ್ರತಿಯೊಂದು ರಣದಲ್ಲಿಯೂ ನಿತ್ಯವೂ ವಾಸುದೇವನೊಂದಿಗೆ ಸ್ಪರ್ಧಿಸುತ್ತಾನೆ. ತಂಗಿಯ ಮಕ್ಕಳನ್ನು ತೊರೆದು ರಥಸತ್ತಮ ಶಲ್ಯನು ನಿನ್ನವನಾಗಿದ್ದಾನೆ. ಇವನು ಸಂಗ್ರಾಮದಲ್ಲಿ ಚಕ್ರ-ಗದಾಧರ ಕೃಷ್ಣನನ್ನು ಎದುರಿಸುತ್ತಾನೆ. ಅವನು ಸಾಗರದ ಅಲೆಗಳಂತೆ ವೇಗವಾಗಿ ಬಾಣಗಳನ್ನು ಪ್ರಯೋಗಿಸಿ ಶತ್ರುಗಳನ್ನು ಹೂಳುತ್ತಾನೆ. ಕೃತಾಸ್ತ್ರರಾದ ಭೂರಿಶ್ರವರೂ ನಿನ್ನ ಹಿತದಲ್ಲಿರುವ ಸುಹೃದಯಿಗಳು. ಮಹೇಷ್ವಾಸ ಸೌಮದತ್ತಿಯು ರಥಯೂಥಪರಲ್ಲಿ ಯೂಥಪನು. ಅಮಿತ್ರರ ಮಹಾ ಬಲಕ್ಷಯವನ್ನು ಮಾಡುತ್ತಾನೆ. ನನ್ನ ಪ್ರಕಾರ ಸಿಂಧುರಾಜನು ದ್ವಿಗುಣ ರಥ. ಆ ರಥಸತ್ತಮನು ಸಮರದಲ್ಲಿ ವಿಕ್ರಾಂತನಾಗಿ ಹೋರಾಡುತ್ತಾನೆ. ಹಿಂದೆ ದ್ರೌಪದೀಹರಣದಲ್ಲಿ ಪಾಂಡವರಿಂದ ಕಷ್ಟಕ್ಕೊಳಗಾಗಿದ್ದನು. ಆ ಪರಿಕ್ಲೇಶವನ್ನು ನೆನಪಿಸಿಕೊಂಡು ಆ ಪರವೀರಹನು ಯುದ್ಧ ಮಾಡುತ್ತಾನೆ. ಆಗ ಇವನೇ ದಾರುಣ ತಪಸ್ಸನ್ನು ಆಚರಿಸಿ ಯುದ್ಧದಲ್ಲಿ ಪಾಂಡವರನ್ನು ಎದುರಿಸುವ ದುರ್ಲಭ ವರವನ್ನು ಪಡೆದಿದ್ದಾನೆ. ಈ ರಥಶಾರ್ದೂಲನು ಆ ವೈರವನ್ನು ನೆನಪಿಸಿಕೊಂಡು ತ್ಯಜಿಸಲು ಕಷ್ಟವಾದ ಪ್ರಾಣವನ್ನು ತೊರೆದು ರಣದಲ್ಲಿ ಪಾಂಡವರೊಂದಿಗೆ ಹೋರಾಡುತ್ತಾನೆ.

“ನನ್ನ ಅಭಿಪ್ರಾಯದಲ್ಲಿ ಕಾಂಬೋಜ ಸುದಕ್ಷಿಣನು ಒಬ್ಬ ರಥನಿಗೆ ಸಮ. ನಿನ್ನ ಉದ್ದೇಶ ಸಿದ್ಧಿಯನ್ನು ಬಯಸಿ ಅವನು ಸಮರದಲ್ಲಿ ಶತ್ರುಗಳೊಡನೆ ಹೋರಾಡುತ್ತಾನೆ. ಯುದ್ಧದಲ್ಲಿ ನಿನಗಾಗಿ ಹೋರಾಡುವ ಇಂದ್ರನಂತಿರುವ ಈ ರಥಸಿಂಹನ ಪರಾಕ್ರಮವನ್ನು ಕುರುಗಳು ನೋಡುತ್ತಾರೆ. ತಿಗ್ಮವೇಗಪ್ರಹಾರಿಗಳಾದ ಕಾಂಬೋಜರ ರಥಸೇನೆಯು ಕೀಟಗಳ ಗುಂಪಿನಂತೆ ಬಂದು ಮುತ್ತುತ್ತವೆ. ಮಾಹಿಷ್ಮತೀವಾಸಿ, ನೀಲಿ ಕವಚವನ್ನು ತೊಡುವ ನೀಲನು ನಿನ್ನ ರಥರಲ್ಲಿ ಒಬ್ಬ. ಅವನು ಸೇನೆಯೊಂದಿಗೆ ಶತ್ರುಗಳೊಂದಿಗೆ ಕಾದಾಡುತ್ತಾನೆ. ಹಿಂದೆ ಸಹದೇವನೊಂದಿಗೆ ವೈರವನ್ನು ಕಟ್ಟಿಕೊಂಡಿದ್ದ ಆ ಪಾರ್ಥಿವನು ನಿನಗಾಗಿ ಸತತವೂ ಹೋರಾಡುತ್ತಾನೆ. ಅವಂತಿಯ ವಿಂದಾನುವಿಂದರು ಇಬ್ಬರೂ ಕೂಡಿ ರಥಸತ್ತಮರು. ಸಮರದಲ್ಲಿ ಇಬ್ಬರೂ ಪಳಗಿದವರು ಮತ್ತು ದೃಢವೀರ್ಯಪರಾಕ್ರಮಿಗಳು. ಇವರಿಬ್ಬರು ಪುರುಷವ್ಯಾಘ್ರರೂ ನಿನ್ನ ರಿಪುಸೇನೆಯನ್ನು ಭುಜಗಳಿಂದ ಪ್ರಯೋಗಿಸುವ ಗದೆ, ಪ್ರಾಸ, ಖಡ್ಗ, ನಾರಾಚ, ತೋಮರಗಳಿಂದ ಸುಟ್ಟು ಬಿಡುತ್ತಾರೆ. ಹಿಂಡಿನಲ್ಲಿ ಆಡುವ ಆನೆಗಳಂತೆ ಯುದ್ಧೋತ್ಸುಕರಾಗಿ ಸೇನೆಯಮಧ್ಯದಲ್ಲಿ ಇವರಿಬ್ಬರೂ ಯಮನಂತೆ ಸಂಚರಿಸುತ್ತಿರುತ್ತಾರೆ. ನನ್ನ ಅಭಿಪ್ರಾಯದಲ್ಲಿ ರಥರೆಂದೆನಿಸಿಕೊಂಡ ಐವರು ತ್ರಿಗರ್ತ ಸಹೋದರರು ಅಂದು ವಿರಾಟನಗರದಲ್ಲಿ ಪಾರ್ಥನೊಂದಿಗೆ ವೈರ ಕಟ್ಟಿಕೊಂಡರು. ಗಂಗೆಯಲ್ಲಿ ಅಲೆಗಳನ್ನು ಅನುಸರಿಸಿ ಹೋಗುವ ಮೊಸಳೆಗಳಂತೆ ಅವರು ಯುದ್ಧದಲ್ಲಿ ಪಾರ್ಥರ ಸೇನೆಯನ್ನು ವಿಕ್ಷೋಭಗೊಳಿಸುತ್ತಾರೆ. ಸತ್ಯರಥನ ನಾಯಕತ್ವದಲ್ಲಿರುವ ಈ ಐವರು ರಥರು ಹಿಂದೆ ದಿಕ್ಕುಗಳನ್ನು ಗೆಲ್ಲುವ ಸಮಯದಲ್ಲಿ ಭೀಮಸೇನಾನುಜ ಶ್ವೇತವಾಹನ ಪಾಂಡವನು ಅವರಿಗೆ ಮಾಡಿದುದನ್ನು ಸ್ಮರಿಸಿಕೊಂಡು ಸಮರದಲ್ಲಿ ಯುದ್ಧಮಾಡುತ್ತಾರೆ. ಕ್ಷತ್ರಿಯರ ಧುರಂಧರರಾದ ಅವರು ಪಾರ್ಥರ ಮಹಾರಥಿಗಳನ್ನು ಎದುರಿಸಿ ಅವರಲ್ಲಿರುವ ಶೇಷ್ಠ ಶ್ರೇಷ್ಠರಾದ ಮಹೇಷ್ವಾಸರನ್ನು ಕೊಲ್ಲುತ್ತಾರೆ. ನಿನ್ನ ಮಗ ಲಕ್ಷ್ಮಣ ಮತ್ತು ದುಃಶಾಸನನ ಮಗ ಇಬ್ಬರು ಪುರುಷವ್ಯಾಘ್ರರೂ ಸಂಗ್ರಾಮದಿಂದ ಹಿಂದೆ ಸರಿಯುವವರಲ್ಲ. ಈ ಇಬ್ಬರು ತರುಣ, ಸುಕುಮಾರ, ತರಸ್ವೀ ರಾಜಪುತ್ರರೂ ಯುದ್ಧಗಳ ವಿಶೇಷಜ್ಞರು, ಎಲ್ಲದರಲ್ಲಿ ಪ್ರಣೇತಾರರು. ನನ್ನ ಅಭಿಪ್ರಾಯದಲ್ಲಿ ಅವರಿಬ್ಬರು ರಥಸತ್ತಮರು. ಕ್ಷತ್ರಧರ್ಮರತರಾದ ವೀರರಿಬ್ಬರೂ ಮಹಾ ಕರ್ಮಗಳನ್ನು ಮಾಡುತ್ತಾರೆ. ನರರ್ಷಭ ದಂಡಧಾರನು ಏಕ ರಥ. ತನ್ನ ಸೇನೆಯಿಂದ ಪಾಲಿತನಾದ ಅವನು ಸಮರವನ್ನು ಸೇರಿ ಯುದ್ಧವನ್ನು ಮಾಡುತ್ತಾನೆ. ಕೋಸಲ ರಾಜ ಬೃಹದ್ಬಲನು ರಥಸತ್ತಮ. ಆ ದೃಢವೇಗಪರಾಕ್ರಮಿಯು ರಥನೆಂದು ನನಗನಿಸುತ್ತದೆ. ಈ ಉಗ್ರಾಯುಧ, ಮಹೇಷ್ವಾಸ, ಧಾರ್ತರಾಷ್ಟ್ರಹಿತರತನು ತನ್ನ ಸೇನೆಯನ್ನು ಹರ್ಷಗೊಳಿಸುತ್ತಾ ಸಂಗ್ರಾಮದಲ್ಲಿ ಹೋರಾಡುತ್ತಾನೆ. ರಥಯೂಥಪಯೂಥಪನಾದ ಶಾರದ್ವತ ಕೃಪನು ಪ್ರಿಯ ಪ್ರಾಣವನ್ನು ಪರಿತ್ಯಜಿಸಿ ನಿನ್ನ ಶತ್ರುಗಳನ್ನು ಸುಟ್ಟುಬಿಡುತ್ತಾನೆ. ಆ ಮಹರ್ಷಿ ಆಚಾರ್ಯ ಅಜೇಯನು ಕಾರ್ತಿಕೇಯನಂತೆ ಶರಸ್ತಂಭದಲ್ಲಿ ಶರದ್ವತ ಗೌತಮನಲ್ಲಿ ಜನಿಸಿದನು. ಇವನು ಸಮರದಲ್ಲಿ ಅಗ್ನಿಯಂತೆ ಸಂಚರಿಸಿ ವಿವಿಧ ಆಯುಧಗಳಿಂದ ಕೂಡಿದ ಬಹುವಿಧದ ಸೇನೆಗಳನ್ನು ಧ್ವಂಸಗೊಳಿಸುತ್ತಾನೆ.

“ನಿನ್ನ ಸೋದರಮಾವ ಶಕುನಿಯು ಏಕರಥ. ಅವನು ಪಾಂಡವರೊಂದಿಗಿನ ವೈರವನ್ನು ಮುಂದಿಟ್ಟುಕೊಂಡು ಯುದ್ಧಮಾಡುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಇವನ ಸೇನೆಗಳು ಗೆಲ್ಲಲಸಾಧ್ಯವಾದವುಗಳು. ಸಮರದಲ್ಲಿ ಹಿಂಜರಿಯದವುಗಳು. ವಿಕೃತಾಯುಧಗಳನ್ನು ಹೊಂದಿ ಅವು ವೇಗದಲ್ಲಿ ವಾಯುವೇಗಕ್ಕೆ ಸಮನಾದವುಗಳು. ದ್ರೋಣಪುತ್ರನು ಮಹೇಷ್ವಾಸ, ಸರ್ವ ಧನ್ವಿಗಳನ್ನು ಮೀರಿಸಿದವನು. ಸಮರದಲ್ಲಿ ಚಿತ್ರಯೋಧೀ. ದೃಢಾಸ್ತ್ರ ಮತ್ತು ಮಹಾರಥ. ಗಾಂಡೀವಧನುಸ್ಸನು ಹಿಡಿದವನಂತೆ ಇವನ ಧನುಸ್ಸಿನಿಂದ ಹೊರಟ ಬಾಣಗಳೂ ಕೂಡ ಒಂದಕ್ಕೊಂದು ತಾಗಿ ಒಂದೇ ಸಾಲಿನಲ್ಲಿ ಸಾಗುತ್ತವೆ. ಈ ಮಹಾಯಶನು ಇಚ್ಛಿಸಿದರೆ ಮೂರು ಲೋಕಗಳನ್ನೂ ಸುಡಬಲ್ಲವನಾದರೂ ಈ ವೀರನನ್ನು ರಥಸತ್ತಮರ ಲೆಖ್ಕಕ್ಕೆ ಸೇರಿಸಲು ಬರುವುದಿಲ್ಲ. ಆಶ್ರಮವಾಸಿಯಾಗಿದ್ದಾಗ ಇವನು ಸಾಕಷ್ಟು ಕ್ರೋಧ ಮತ್ತು ತೇಜಸ್ಸುಗಳನ್ನು ಬೆಳೆಸಿಕೊಂಡಿದ್ದಾನೆ. ದ್ರೋಣನಿಂದ ಅನುಗೃಹೀತನಾಗಿ ಈ ಉದಾರಧಿಯು ದಿವ್ಯಾಸ್ತ್ರಗಳನ್ನು ಪಡೆದಿದ್ದಾನೆ. ಇವನಲ್ಲಿ ಒಂದೇ ಒಂದು ಮಹಾ ದೋಷವಿರುವ ಕಾರಣದಿಂದ ಅವನು ರಥ ಅಥವಾ ಅತಿರಥನೆಂದು ನನಗನಿಸುವುದಿಲ್ಲ. ಜೀವವು ಅವನಿಗೆ ಅತ್ಯಂತ ಪ್ರಿಯವಾದುದು. ಆ ದ್ವಿಜನು ಸದಾ ಬದುಕಿರಲು ಬಯಸುತ್ತಾನೆ. ಎರಡೂ ಸೇನೆಗಳಲ್ಲಿ ಅವನ ಸದೃಶರಾದವರು ಯಾರೂ ಇಲ್ಲ. ಇವನೊಬ್ಬನೇ ರಥದಲ್ಲಿ ದೇವತೆಗಳ ಸೇನೆಯನ್ನೂ ಸದೆಬಡಿಯ ಬಲ್ಲನು. ಈ ಸುಂದರನು ಕೈ ಚಪ್ಪಾಳೆಯ ಘೋಷದಿಂದ ಪರ್ವತಗಳನ್ನೂ ಸ್ಪೋಟಿಸಬಲ್ಲನು. ಅಸಂಖ್ಯ ಗುಣಗಳುಳ್ಳ ಈ ದಾರುಣದ್ಯುತಿ, ಪ್ರಹರ್ತ ವೀರನು ದಂಡಪಾಣಿ ಕಾಲನಂತೆ ಸಹಿಸಲಸಾಧ್ಯನಾಗಿ ಸುತ್ತಾಡುತ್ತಾನೆ. ಕ್ರೋಧದಲ್ಲಿ ಯುಗಾಂತದ ಅಗ್ನಿಯ ಸಮನಾದ ಈ ಸಿಂಹಗ್ರೀವ ಮಹಾಮತಿಯು ಯುದ್ಧದ ಬೆನ್ನು ಮುರಿಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಇವನ ತಂದೆ, ವೃದ್ಧನಾದರೂ ಯುವಕರಿಗಿಂತ ಶ್ರೇಷ್ಠನಾಗಿರುವ ಮಹಾತೇಜಸ್ವಿಯು ರಣದಲ್ಲಿ ಮಹಾಕಾರ್ಯಗಳನ್ನು ಎಸಗುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಅಸ್ತ್ರವೇಗಗಳ ಗಾಳಿಯಿಂದ ಉರಿಸಲ್ಪಟ್ಟು, ಒಣ ಕಟ್ಟಿಗೆಯಂತಿರುವ ಸೇನೆಯಿಂದ ಮೇಲೆದ್ದ ಬೆಂಕಿಯಿಂದ ಜಯದಲ್ಲಿ ಧೃತನಾಗಿರುವ ಇವನು ಪಾಂಡುಪುತ್ರರ ಸೇನೆಯನ್ನು ಸುಟ್ಟುಹಾಕುತ್ತಾನೆ. ರಥಯೂಥಪಯೂಥರ ಯೂಥಪನಾಗಿರುವ ಆ ನರಷರ್ಷಭ ಭರದ್ವಾಜಾತ್ಮಜನು ನಿನ್ನ ಹಿತದಲ್ಲಿ ತೀವ್ರ ಕರ್ಮಗಳನ್ನು ಮಾಡುತ್ತಾನೆ. ಮೂರ್ಧಾಭಿಷಿಕ್ತರಾದ ಎಲ್ಲರ ಆಚಾರ್ಯ, ಈ ಸ್ಥವಿರ ಗುರುವು ಸೃಂಜಯರನ್ನು ಕೊನೆಗೊಳಿಸುತ್ತಾನೆ. ಆದರೆ ಧನಂಜಯನು ಇವನಿಗೆ ಪ್ರಿಯನಾದವನು. ತನ್ನ ಆಚಾರ್ಯತ್ವದ ಗುಣಗಳಿಂದ ಗೆದ್ದ ಈ ದೀಪವನ್ನು ನೆನಪಿನಲ್ಲಿಟ್ಟುಕೊಂಡು ಈ ಮಹೇಷ್ವಾಸನು ಅಕ್ಲಿಷ್ಟಕಾರಿ ಪಾರ್ಥನನ್ನು ಕೊಲ್ಲುವುದಿಲ್ಲ. ಭಾರದ್ವಾಜನು ಯಾವಾಗಲೂ ವೀರ ಪಾರ್ಥನ ಗುಣಗಳನ್ನು ವಿಸ್ತರಿಸಿ ಹೊಗಳುತ್ತಾನೆ. ತನ್ನ ಮಗನಿಗಿಂತಲೂ ಹೆಚ್ಚಾಗಿ ಇವನನ್ನು ಕಾಣುತ್ತಾನೆ. ಈ ಪ್ರತಾಪವಂತನು ಒಂದೇ ರಥದಲ್ಲಿ ದಿವ್ಯಾಸ್ತ್ರಗಳಿಂದ ರಣದಲ್ಲಿ ಒಂದಾಗಿ ಬಂದರೂ ದೇವ-ಗಂಧರ್ವ-ದಾನವರನ್ನು ಸಂಹರಿಸಬಲ್ಲನು. ರಾಜಶಾರ್ದೂಲ ನಿನ್ನ ಮಹಾರಥಿ ಪೌರವನು, ಪರವೀರರ ರಥಗಳನ್ನು ಸದೆಬಡಿಯಬಲ್ಲ ರಥನೆಂದು ನನ್ನ ಮತ. ತನ್ನ ಸೇನೆಯೊಂದಿಗೆ ಶತ್ರುವಾಹಿನಿಯನ್ನು ಸುಡುವ ಅವನು ಒಣಹುಲ್ಲನ್ನು ಬೆಂಕಿಯು ಹತ್ತಿ ಸುಡುವಂತೆ ಪಾಂಚಾಲರನ್ನು ಸುಟ್ಟುಹಾಕುತ್ತಾನೆ. ಆ ಸತ್ಯವ್ರತ, ರಥವರ, ರಾಜಪುತ್ರ, ಮಹಾರಥನು ನಿನ್ನ ಶತ್ರುಬಲದಲ್ಲಿ ಕಾಲನಂತೆ ಸಂಚರಿಸುತ್ತಾನೆ. ಈ ವಿಚಿತ್ರಕವಚಾಯುಧ ಯೋಧನು ಸಂಗ್ರಾಮದಲ್ಲಿ ನಿನ್ನ ಶತ್ರುಗಳನ್ನು ಸಂಹರಿಸುತ್ತಾ ತಿರುಗಾಡುತ್ತಾನೆ. ನಿನ್ನ ರಥದ ಮುಂದಿರುವ ಕರ್ಣಪುತ್ರ ಮಹಾರಥಿ ಬಲಶಾಲಿಗಳಲ್ಲಿ ಶ್ರೇಷ್ಠ ವೃಷಸೇನನು ನಿನ್ನ ರಿಪುಗಳ ಬಲವನ್ನು ಸುಟ್ಟುಹಾಕುತ್ತಾನೆ. ನಿನ್ನ ರಥವರ್ಯ ಮಹಾತೇಜಸ್ವಿ, ಪರವೀರಹ, ಮಾಗಧ ಜಲಸಂಧನು ಸಮರದಲ್ಲಿ ಪ್ರಾಣಗಳನ್ನು ತೆಗೆದುಕೊಳ್ಳುತ್ತಾನೆ. ಗಜಸ್ಕಂಧವಿಶಾರದನಾದ ಈ ಮಹಾಬಾಹುವು ಸಂಗ್ರಾಮದಲ್ಲಿ ರಥದ ಮೇಲೆ ಹೋರಾಡಿ ಶತ್ರುವಾಹಿನಿಯನ್ನು ಕಡಿಮೆಮಾಡುತ್ತಾನೆ. ಈ ನರರ್ಷಭನು ರಥನೆಂದು ನನ್ನ ಅಭಿಪ್ರಾಯ. ಇವನು ನಿನಗೋಸ್ಕರ ಮಹಾರಣದಲ್ಲಿ ಪ್ರಾಣಗಳನ್ನೂ ಸಹ ತೊರೆಯುತ್ತಾನೆ. ಸಂಗರದಲ್ಲಿ ಇವನು ವಿಕ್ರಾಂತಯೋಧೀ ಮತ್ತು ಚಿತ್ರಯೋಧೀ. ಇವನು ಭಯವನ್ನು ತೊರೆದು ನಿನ್ನ ಶತ್ರುಗಳೊಂದಿಗೆ ಹೋರಾಡುತ್ತಾನೆ. ಸಮರದಲ್ಲಿ ಹಿಂದೆ ಸರಿಯದ ಬಾಹ್ಲೀಕನೂ ಅತಿರಥನೇ. ನನ್ನ ಅಭಿಪ್ರಾಯದಲ್ಲಿ ಆ ಶೂರನು ಯುದ್ಧದಲ್ಲಿ ವೈವಸ್ವತನಂತೆ. ಇವನು ಸಮರವನ್ನು ಸೇರಿ, ಶತ್ರುಗಳನ್ನು ರಣದಲ್ಲಿ ಕೊಲ್ಲದೇ ಸತತವಾಗಿ ಎಂದೂ ಹಿಂದಿರುಗುವುದಿಲ್ಲ. ನಿನ್ನ ಸೇನಾಪತಿ ಸತ್ಯವಾನನು ಮಹಾರಥ. ರಣದಲ್ಲಿ ಅದ್ಭುತಕರ್ಮಗಳನ್ನು ಮಾಡುತ್ತಾನೆ. ಆ ರಥನು ಪರರ ರಥವನ್ನು ಪುಡಿಮಾಡುತ್ತಾನೆ. ಇವನು ಸಮರವನ್ನು ನೋಡಿ ಎಂದೂ ವ್ಯಥೆಪಡುವುದಿಲ್ಲ. ತನ್ನ ರಥದ ಮಾರ್ಗದಲ್ಲಿ ನಿಲ್ಲುವ ಶತ್ರುಗಳನ್ನು ಎದುರಿಸಿ ಅವರ ಮೇಲೆ ಬೀಳುತ್ತಾನೆ. ಸತ್ಪುರುಷರಿಗೆ ಉಚಿತವಾದ ವಿಕ್ರಾಂತ ಕರ್ಮಗಳನ್ನು ಮಾಡಿ ಈ ಪುರುಷೋತ್ತಮನು ನಿನಗಾಗಿ ಸುಮಹತ್ತರವದ ಯುದ್ಧವನ್ನು ಮಾಡುತ್ತಾನೆ. ರಾಕ್ಷಸೇಂದ್ರ, ಕ್ರೂರಕರ್ಮಿ, ಮಹಾಬಲಿ ಅಲಾಯುಧನು ಹಿಂದಿನ ವೈರವನ್ನು ನೆನಪಿಸಿಕೊಂಡು ಶತ್ರುಗಳನ್ನು ಸಂಹರಿಸುತ್ತಾನೆ. ಇವನು ರಾಕ್ಷಸ ಸೇನೆಯ ಎಲ್ಲರಲ್ಲಿ ರಥಸತ್ತಮನು. ಈ ಮಾಯಾವಿಯು ದೃಢವೈರಿಯು ಸಮರದಲ್ಲಿ ಸಂಚರಿಸುತ್ತಾನೆ. ಪ್ರಾಗ್ಜೋತಿಷಾಧಿಪ ವೀರ ಭಗದತ್ತನು ಪ್ರತಾಪವಂತನು. ಈ ಗಜಾಂಕುಶಧರಶ್ರೇಷ್ಠನು ರಥದಲ್ಲಿಯೂ ವಿಶಾರದನು. ಹಿಂದೆ ಇವನೊಂದಿಗೆ ಗಾಂಡೀವಧನ್ವಿಯು ಯುದ್ಧ ಮಾಡಿದ್ದನು. ವಿಜಯವನ್ನು ಬಯಸಿದ್ದ ಇಬ್ಬರ ನಡುವೆ ಬಹುದಿನಗಳ ಯುದ್ಧ ನಡೆದಿತ್ತು. ಆಗ ಪಾಕಶಾಸನನನ್ನು ಸಖನೆಂದು ಮನ್ನಿಸಿ ಮಹಾತ್ಮ ಪಾಂಡವನೊಂದಿಗೆ ಅವನು ಸಂಧಿ ಮಾಡಿಕೊಂಡನು. ಈ ಗಜಸ್ಕಂಧ ವಿಶಾರದನು ಐರಾವತವನ್ನೇರಿ ದೇವತೆಗಳ ರಾಜ ವಾಸವನಂತೆ ಸಂಗ್ರಾಮದಲ್ಲಿ ಯುದ್ಧ ಮಾಡುತ್ತಾನೆ.

“ಅಚಲ ಮತ್ತು ವೃಷಕ ಇಬ್ಬರು ಸಹೋದರರೂ ಒಟ್ಟಿಗೇ ರಥರು. ದುರಾಧರ್ಷರು. ನಿನ್ನ ಶತ್ರುಗಳನ್ನು ವಿಧ್ವಂಸಮಾಡುತ್ತಾರೆ. ಅವರಿಬ್ಬರು ಗಾಂಧಾರಮುಖ್ಯರೂ ಬಲವಂತರು, ನರವ್ಯಾಘ್ರರು, ದೃಢಕ್ರೋಧರು, ಪ್ರಹಾರಿಗಳು, ತರುಣರು, ದರ್ಶನೀಯರು ಮತ್ತು ಮಹಾಬಲಿಗಳು. ನಿನ್ನ ಆ ಪ್ರೀತಿಯ ಸಖ, ನಿತ್ಯವೂ ಯುದ್ಧದ ಕೂಗನ್ನು ಕೂಗುವ, ಪಾಂಡವರೊಂದಿಗೆ ಜಗಳವಾಡಲು ನಿನ್ನನ್ನು ಪ್ರೋತ್ಸಾಹಿಸುತ್ತಿರುವ, ಪೌರುಷದ ಮಾತುಗಳನ್ನು ಕೊಚ್ಚುವ, ನಿನ್ನ ಮಂತ್ರಿ, ನೇತಾ, ಬಂಧು, ಸೊಕ್ಕಿನವ, ಅತ್ಯಂತ ಉಚ್ಛ್ರಿತನಾಗಿರುವ ನೀಚ ವೈಕರ್ತನ ಕರ್ಣನು ಪೂರ್ಣ ರಥನೂ ಅಲ್ಲ, ಅತಿರಥನೂ ಅಲ್ಲ. ವಿಚೇತನನಾಗಿ ಇವನು ತನ್ನ ಸಹಜ ಕವಚವನ್ನು ಕಳೆದುಕೊಂಡ. ಸತತವೂ ಕರುಣಿಯಾಗಿರುವ ಇವನು ದಿವ್ಯ ಕುಂಡಲಗಳೆರಡನ್ನೂ ಕಳೆದುಕೊಂಡ. ರಾಮನ ಶಾಪದಿಂದ ಮತ್ತು ಬ್ರಾಹ್ಮಣನಾಡಿದಂತೆ, ಕರಣಗಳನ್ನು ಕಳೆದುಕೊಂಡಿದುದರಿಂದ ಇವನು ಅರ್ಧ ರಥನೆಂದು ನನ್ನ ಮತ. ಇವನು ಫಲ್ಗುನನನ್ನು ಎದುರಿಸಿ ಪುನಃ ಜೀವಿತನಾಗಿ ಬರಲಾರ!”

ಆಗ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ಮಹಾಬಾಹು ದ್ರೋಣನು ಹೇಳಿದನು: “ಇದು ಯಥಾವತ್ತಾಗಿದೆ. ಎಂದೂ ಸುಳ್ಳಾಗುವುದಿಲ್ಲ. ರಣ ರಣದಲ್ಲಿಯೂ ಈ ಅತಿಮಾನಿಯು ವಿಮುಖನಾಗಿದ್ದುದೇ ಕಂಡುಬಂದಿದೆ. ಕರುಣಿ, ಪ್ರಮಾದೀ ಕರ್ಣನು ಅರ್ಧರಥನೆಂದು ನನ್ನ ಮತವೂ ಹೌದು.”

ಇದನ್ನು ಕೇಳಿದ ರಾಧೇಯನು ಕ್ರೋಧದಿಂದ ಕಣ್ಣುಗಳನ್ನು ದೊಡ್ಡದಾಗಿ ಮಾಡಿಕೊಂಡು ಭೀಷ್ಮನಿಗೆ ಹರಿತ ಕೊಕ್ಕೆಗಳಂತಿರುವ ಈ ಮಾತುಗಳನ್ನಾಡಿದನು: “ಪಿತಾಮಹ! ಅನಾಗಸನಾಗಿದ್ದರೂ ನನ್ನನ್ನು ನೀನು ಪದೇ ಪದೇ ದ್ವೇಷದಿಂದಲೋ ಎನ್ನುವಂತೆ ನಿನಗಿಷ್ಟ ಬಂದಹಾಗೆ ಬಾಣಗಳಂತಿರುವ ಮಾತುಗಳಿಂದ ಚುಚ್ಚುತ್ತೀಯೆ. ಆದರೆ ದುರ್ಯೋಧನನ ಸಲುವಾಗಿ ನಾನು ಇವೆಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ನಾನೋರ್ವ ಕಾಪುರುಷನಂತೆ ಅಶಕ್ತನೋ ಎನ್ನುವ ರೀತಿಯಲ್ಲಿ ನೀನು ಅಭಿಪ್ರಾಯಪಡುತ್ತಿದ್ದೀಯೆ! ನೀನು ನನ್ನನ್ನು ಅರ್ಧರಥನೆಂದು ತಿಳಿದುಕೊಂಡಿದ್ದೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನೀನು ನಿತ್ಯವೂ ಸರ್ವ ಜಗತ್ತಿನ, ಅದರಲ್ಲೂ ಕುರುಗಳ, ಅಹಿತವನ್ನೇ ಬಯಸುತ್ತೀಯೆ ಎಂದು ಹೇಳಿದರೆ ಸುಳ್ಳಾಗಲಾರದು. ಆದರೆ ರಾಜನಿಗೆ ಇದು ತಿಳಿದಿಲ್ಲ. ಎಕೆಂದರೆ ಯಾರುತಾನೇ ಸಮನಾಗಿರುವ ಎಲ್ಲರೂ ರಾಜಕರ್ಮಗಳಲ್ಲಿ ತೊಡಗಿರುವಾಗ ಈ ರೀತಿಯ ತೇಜೋವಧೆಯನ್ನು ಮಾಡಿ ಯುದ್ಧದಲ್ಲಿ ಭೇದವನ್ನು ತರುತ್ತಾರೆ? ನಿನ್ನಂತೆಯೇ ಇರುವವರಲ್ಲಿ ಗುಣ ನಿರ್ದೇಶನವನ್ನು ಮಾಡಿ ಅಪರಾಧವೆಸಗುತ್ತಿದ್ದೀಯೆ. ವಯಸ್ಸಿನಿಂದಾಗಲೀ, ಮುಖದ ಮೇಲೆ ಮೂಡಿದ ನೆರೆಗಳಿಂದಾಳಾಗಲೀ, ವಿತ್ತದಿಂದಾಗಲೀ, ಬಂಧುಗಳಿಂದಾಗಲೀ ಕ್ಷತ್ರಿಯರ ಮಹಾರಥತ್ವವನ್ನು ಅಳೆಯಲು ಸಾಧ್ಯವಿಲ್ಲ. ಕ್ಷತ್ರಿಯನು ಬಲದಲ್ಲಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ದ್ವಿಜನು ಸಲಹೆಗಳಲ್ಲಿ ಶ್ರೇಷ್ಠನೆನಿಸಿಕೊಳ್ಳುತ್ತಾನೆ. ವೈಶ್ಯರು ಧನದಲ್ಲಿ ಮತ್ತು ಶೂದ್ರರು ಅಧಿಕ ವಯಸ್ಸಿನಿಂದ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಕಾಮದ್ವೇಷಗಳಿಗೊಳಗಾಗಿ ಮೋಹದಿಂದ ನೀನು ನಿನಗಿಷ್ಟವಾದ ಹಾಗೆ, ನಿನ್ನ ಗ್ರಹಿಕೆಗೆ ಬಂದ ಹಾಗೆ ರಥರು ಅತಿರಥರೆಂದು ಹೇಳುತ್ತಿದ್ದೀಯೆ. ದುರ್ಯೋಧನ! ಸರಿಯಾಗಿ ನೋಡು! ನಿನಗೆ ಕೆಟ್ಟದ್ದನ್ನೇ ಮಾಡುವ ಈ ದುಷ್ಟಭಾವನೆಯ ಭೀಷ್ಮನನ್ನು ತ್ಯಜಿಸು. ಭಿನ್ನವಾದ ಸೇನೆಯನ್ನು ಪುನಃ ಜೋಡಿಸುವುದು ಕಷ್ಟವಾಗುತ್ತದೆ. ಇನ್ನು ಬೇರೆ ಬೇರೆಕಡೆಗಳಿಂದ ಬಂದಿರುವ ಸೇನೆಗಳ ಗತಿಯೇನು? ಯುದ್ಧದಲ್ಲಿ ದ್ವಂದ್ವವು ಯೋಧರಲ್ಲಿ ಹುಟ್ಟಿಕೊಂಡು ಬಿಟ್ಟಿದೆ. ವಿಶೇಷವಾಗಿ ಇವನು ನಮ್ಮ ಎದುರಿಗೇ ತೇಜೋವಧೆಯನ್ನು ಮಾಡುತ್ತಿದ್ದಾನೆ. ರಥರ ವಿಜ್ಞಾನವೆಲ್ಲಿ, ಈ ಅಲ್ಪಚೇತಸ ಭೀಷ್ಮನೆಲ್ಲಿ? ಪಾಂಡವರ ಸೇನೆಗಳನ್ನು ನಾನೊಬ್ಬನೇ ತಡೆಯುತ್ತೇನೆ. ನನ್ನ ಅಮೋಘ ಬಾಣಗಳಿಗೆ ಸಿಲುಕಿ ಪಾಂಚಾಲರೊಂದಿಗೆ ಪಾಂಡವರು ಹುಲಿಯನ್ನು ಕಂಡ ಎತ್ತುಗಳಂತೆ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋಗುತ್ತಾರೆ. ಯುದ್ಧವಿಮರ್ದರೆಲ್ಲಿ? ಅಥವಾ ಸಲಹೆಗಳ ಉತ್ತಮ ಮಾತುಗಳೆಲ್ಲಿ? ಮತ್ತು ಆಯಸ್ಸು ಕಳೆದ ಮಂದಾತ್ಮನಾದ ಕಾಲಮೋಹಿತನಾದ ಭೀಷ್ಮನೆಲ್ಲಿ? ಇವನು ನಿತ್ಯವೂ ಸರ್ವ ಜಗತ್ತಿನೊಂದಿಗೆ ಸ್ಪರ್ಧಿಸುತ್ತಿರುತ್ತಾನೆ. ಕಣ್ಣು ಕಾಣಿಸದೇ ಇರುವ ಇವನು ಬೇರೆ ಯಾರನ್ನೂ ಪುರುಷನೆಂದು ಮನ್ನಿಸುವುದಿಲ್ಲ. ವೃದ್ಧರನ್ನು ಕೇಳಬೇಕು ಎಂದು ಶಾಸ್ತ್ರನಿದರ್ಶನವಿರುವುದು ಸತ್ಯ. ಆದರೆ ಅತಿವೃದ್ಧರಾದವರಿಗೆ ಇದು ಅನ್ವಯಿಸುವುದಿಲ್ಲ. ಏಕೆಂದರೆ ಅವರು ಪುನಃ ಬಾಲಕರಂತಾಗುತ್ತಾರೆ ಎಂದು ನನಗನ್ನಿಸುತ್ತದೆ. ನಾನೊಬ್ಬನೇ ಪಾಂಡವರನ್ನು ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಆ ಸುಯುದ್ಧದ ಯಶಸ್ಸು ಭೀಷ್ಮನಿಗೆ ಹೋಗುತ್ತದೆ. ಏಕೆಂದರೆ ಭೀಷ್ಮನನ್ನು ನೀನು ನಿನ್ನ ಸೇನಾಪತಿಯನ್ನಾಗಿ ನಿಯೋಜಿಸಿದ್ದೀಯೆ. ಹೊಗಳಿಕೆಗಳು ಸೇನಾಪತಿಗೆ ಹೋಗುತ್ತವೆಯೇ ಹೊರತು ಯೋಧರಿಗೆ ಎಂದೂ ಇಲ್ಲ. ಗಾಂಗೇಯನು ಜೀವಿತನಾಗಿರುವಾಗ ಎಂದೂ ನಾನು ಯುದ್ದಮಾಡುವುದಿಲ್ಲ! ಭೀಷ್ಮನು ಹತನಾದಾಗ ಸರ್ವ ಮಹಾರಥರೊಂದಿಗೆ ಯುದ್ಧ ಮಾಡುತ್ತೇನೆ.”

ಭೀಷ್ಮನು ಹೇಳಿದನು: “ಸಾಗರದಂತೆ ಬಹುಭಾರವಾಗಿರುವ ಧಾರ್ತರಾಷ್ಟ್ರನ ಈ ಸಂಗ್ರಾಮವು ನನ್ನ ಮೇಲೆ ಬಿದ್ದಿದೆ. ಇದರ ಚಿಂತೆ ಬಹಳ ವರ್ಷಗಳಿಂದ ನನಗಿತ್ತು. ರೋಮಾಂಚನಗೊಳಿಸುವ ಆ ಕಾಲವು ಪ್ರಾಪ್ತವಾಗಿರುವಾಗ ಈಗ ಭೇದವನ್ನುಂಟುಮಾಡುವ ಕಾರ್ಯವು ನನ್ನಿಂದಾಗಬಾರದು. ಸೂತಜ! ಈ ಕಾರಣದಿಂದ ನೀನು ಜೀವಿಸಿದ್ದೀಯೆ. ಇಲ್ಲದಿದ್ದರೆ ನಾನು ವೃದ್ಧನಾಗಿದ್ದರೂ ನೀನು ಶಿಶುವಂತಿದ್ದರೂ ರಣಯುದ್ಧದಲ್ಲಿ ನಿನಗಿರುವ ಶ್ರದ್ಧೆಯನ್ನು ಅಡಗಿಸಿ ಜೀವಿತವನ್ನು ಪುಡಿಮಾಡುತ್ತಿದ್ದೆ. ಜಾಮದಗ್ನಿ ರಾಮನು ಬಿಟ್ಟ ಮಹಾಸ್ತ್ರಗಳು ನನ್ನನ್ನು ಅಲುಗಾಡಿಸಲಿಲ್ಲ. ಇನ್ನು ನೀನೇನು ನನಗೆ ಮಾಡುತ್ತೀಯೆ? ಆತ್ಮಬಲವನ್ನು ಹೊಗಳಿಕೊಳ್ಳುವವರನ್ನು ಸಂತರು ಮೆಚ್ಚುವುದಿಲ್ಲ. ಕುಲಪಾಂಸನ! ಕುಪಿತನಾಗಿ ನನ್ನ ಬಗ್ಗೆ ಹೇಳಿಕೊಳ್ಳುತ್ತಿದ್ದೇನೆ. ಕಾಶಿರಾಜನ ಸ್ವಯಂವರದಲ್ಲಿ ಸೇರಿದ್ದ ಪಾರ್ಥಿವ ಕ್ಷತ್ರಿಯರನ್ನು ಒಟ್ಟಿಗೇ ಒಂದೇ ರಥದಲ್ಲಿ ಸೋಲಿಸಿ ಕನ್ಯೆಯರರನ್ನು ಅಪಹರಿಸಿದ್ದೆನು. ಹಾಗೆ ಸಹಸ್ರಾರು ವಿಶಿಷ್ಟರನ್ನು ಸೈನ್ಯಗಳೊಂದಿಗೆ ಆ ರಣದಲ್ಲಿ ಪುನಃ ನಾನು ಒಬ್ಬನೇ ಹೊಡೆದೋಡಿಸಿದೆನು. ಕುರುಗಳಲ್ಲಿ ವೈರಪುರುಷನಾದ ನಿನ್ನನ್ನು ಸೇರಿ ಇವರು ಮಹಾ ವಿನಾಶಕ್ಕೆ ಉಪಸ್ಥಿತರಾಗಿದ್ದಾರೆ. ಪ್ರಯತ್ನಿಸಿ ಪುರುಷನಾಗು. ದುರ್ಮತೇ! ಯಾರೊಂದಿಗೆ ಸ್ಪರ್ಧಿಸುತ್ತಿರುವೆಯೋ ಆ ಪಾಂಡವರೊಂದಿಗೆ ಸಮರದಲ್ಲಿ ಯುದ್ಧಮಾಡು. ನಮ್ಮ ಯುದ್ಧದಿಂದ ನೀನು ಓಡಿ ಹೋಗುವುದನ್ನೂ ನೋಡುತ್ತೇನೆ.”

ಪಾಂಡವ ಸೇನೆಯಲ್ಲಿರುವ ರಥಾತಿರಥಿಗಳ ವರ್ಣನೆ

ಆಗ ಮಹಾಮನಸ್ವಿ ರಾಜಾ ಧಾರ್ತರಾಷ್ಟ್ರನು ಹೇಳಿದನು: “ಗಾಂಗೇಯ! ನನ್ನನ್ನು ನೋಡು! ಏಕೆಂದರೆ ಮಹಾ ಕಾರ್ಯವನ್ನೆಸಗಬೇಕಾಗಿದೆ. ಎಲ್ಲಕ್ಕಿಂತ ಮೊದಲು ನನಗೆ ಪರಮ ಶ್ರೇಯಸ್ಕರವಾದುದನ್ನು ಯೋಚಿಸಿ. ನೀವಿಬ್ಬರೂ ನನಗೆ ಮಹಾ ಕಾರ್ಯಗಳನ್ನು ಮಾಡುತ್ತೀರಿ. ಇನ್ನು ನಾನು ಶತ್ರುಗಳ ರಥಸತ್ತಮರ, ಅವರ ಅತಿರಥರ ಮತ್ತು ರಥಯೂಥಪರ ಕುರಿತು ಕೇಳಬಯಸುತ್ತೇನೆ. ಶತ್ರುಗಳ ಬಲಾಬಲಗಳನ್ನು ಕೇಳಲು ಬಯಸುತ್ತೇನೆ. ರಾತ್ರಿ ಕಳೆದು ಬೆಳಗಾದರೆ ಯುದ್ಧ ನಡೆಯಲಿದೆ!”

ಭೀಷ್ಮನು ಹೇಳಿದನು: “ನೃಪ! ನಾನು ಇಲ್ಲಿರುವ ರಥರನ್ನು, ಅತಿರಥರನ್ನು ಮತ್ತು ಅರ್ಧರಥರನ್ನೂ ಎಣಿಸಿದ್ದೇನೆ. ಈಗ ನಿನಗೆ ಕುತೂಹಲವಿದ್ದರೆ ಪಾಂಡವರಲ್ಲಿದ್ದವರ ಕುರಿತು, ಪಾಂಡವರ ಬಲದಲ್ಲಿರುವ ರಥರ ಎಣಿಕೆಯನ್ನು ವಸುಧಾಧಿಪರೊಂದಿಗೆ ಕೇಳು. ಸ್ವಯಂ ರಾಜಾ ಪಾಂಡವ ಕುಂತಿನಂದನನು ರಥೋದಾರನು. ಅವನು ಸಮರದಲ್ಲಿ ಅಗ್ನಿಯಂತೆ ಸಂಚರಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಭೀಮಸೇನನು ಎಂಟು ರಥರ ಗುಣಸಮ್ಮಿತನಾಗಿದ್ದಾನೆ. ಸಾವಿರ ಆನೆಗಳ ಬಲವನ್ನುಳ್ಳ ಆ ಮಾನೀ ತೇಜಸ್ವಿಯು ಮನುಷ್ಯನಲ್ಲ. ಇಬ್ಬರು ಮಾದ್ರೀಪುತ್ರರೂ ರಥರು. ಈ ಪುರುಷರ್ಷಭರಿಬ್ಬರೂ ಅಶ್ವಿನಿಯರಂತೆ ರೂಪ ಮತ್ತು ತೇಜಸ್ಸುಗಳಿಂದ ಸಮನ್ವಿತರಾಗಿದ್ದಾರೆ. ತಮ್ಮ ಕ್ಲೇಶಗಳನ್ನು ಸ್ಮರಿಸಿಕೊಳ್ಳುತ್ತಾ ಇವರು ಸೇನೆಗಳ ಮುಂಬಾಗದಲ್ಲಿ ರುದ್ರರಂತೆ ಸಂಚರಿಸುತ್ತಿರುತ್ತಾರೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಈ ಎಲ್ಲ ಮಹಾತ್ಮರೂ ಶಾಲಸ್ಕಂಧಗಳಂತೆ ಎತ್ತರವಾಗಿದ್ದಾರೆ. ಪ್ರಮಾಣದಲ್ಲಿ ಅವರು ಉಳಿದ ಪುರುಷರಿಗಿಂತ ಒಂದು ಅಳತೆ ಹೆಚ್ಚಿನವರು. ಎಲ್ಲಾ ಪಾಂಡುಪುತ್ರರೂ ಮಹಾಬಲರು, ಸಿಂಹಸಂಹನನರು. ಎಲ್ಲರೂ ಬ್ರಹ್ಮಚರ್ಯವನ್ನು ಪಾಲಿಸುವವರು, ತಪಸ್ವಿಗಳು ಕೂಡ. ವಿನೀತರಾಗಿದ್ದರೂ ಈ ಪುರುಷವ್ಯಾಘ್ರರು ವ್ಯಾಘ್ರದಂತೆ ಬಲೋತ್ಕಟರು. ಎಲ್ಲರೂ ವೇಗದಲ್ಲಿ, ಎಸೆಯುವುದರಲ್ಲಿ ಮತ್ತು ಹೋರಾಡುವುದರಲ್ಲಿ ಅತಿಮಾನುಷರು. ದಿಗ್ವಿಜಯದ ಸಮಯದಲ್ಲಿ ಎಲ್ಲರೂ ಮಹೀಪಾಲರನ್ನು ಗೆದ್ದವರು. ಯಾವ ಪುರುಷನೂ ಅವರ ಆಯುಧಗಳನ್ನು, ಗದೆಗಳನ್ನು ಮತ್ತು ಶರಗಳನ್ನು ಬಳಸಲಾರ. ಅವರ ಧನುಸ್ಸನ್ನೂ ಕಟ್ಟಲಾರರು. ಅವರ ಗದೆಯನ್ನು ಎತ್ತಲಾರರು. ಬಾಣಗಳನ್ನು ತಡೆಹಿಡಿಯಲಾರರು. ಬಾಲಕರಾಗಿದ್ದಾಗ ಕೂಡ ವೇಗದಲ್ಲಿ, ಗುರಿಯಿಡುವುದರಲ್ಲಿ, ಅಪಹರಿಸಿಕೊಂಡು ಹೋಗುವುದರಲ್ಲಿ, ತಿನ್ನುವುದರಲ್ಲಿ, ಮತ್ತು ಸೆಣಸಾಡುವುದರಲ್ಲಿ ಎಲ್ಲರೂ ನಿಮಗಿಂತ ವಿಶಿಷ್ಟರಾಗಿದ್ದರು. ವ್ಯಾಘ್ರರಂತೆ ಬಲೋತ್ಕಟರಾದ ಅವರು ರಣದಲ್ಲಿ ನಿನ್ನ ಸೈನ್ಯವನ್ನು ಎದುರಿಸಿ ವಿಧ್ವಂಸಗೊಳಿಸುತ್ತಾರೆ. ಅವರನ್ನು ಎದುರಿಸುವ ಸಾಹಸ ಮಾಡಬೇಡ! ಒಬ್ಬೊಬ್ಬರನ್ನಾಗಿ ಅವರು ಸಂಗ್ರಾಮದಲ್ಲಿ ಎಲ್ಲ ಮಹೀಕ್ಷಿತರನ್ನು ಕೊಲ್ಲಬಲ್ಲರು. ರಾಜಸೂಯದಲ್ಲಿ ಏನಾಯಿತೆನ್ನುವುದನ್ನು ಪ್ರತ್ಯಕ್ಷವಾಗಿ ನೀನು ನೋಡಿದ್ದೀಯೆ. ದ್ಯೂತದಲ್ಲಿ ದ್ರೌಪದಿಗಾದ ಪರಿಕ್ಲೇಶವನ್ನು ಮತ್ತು ಚಾಳಿಸುವ ಮಾತುಗಳನ್ನು ಸ್ವರಿಸಿಕೊಂಡು ಅವರು ಸಂಗ್ರಾಮದಲ್ಲಿ ಕಾಲರಂತೆ ಸಂಚರಿಸುತ್ತಾರೆ. ನಾರಾಯಣನ ಸಹಾಯವನ್ನು ಪಡೆದಿರುವ ಲೋಹಿತಾಕ್ಷ ಗುಡಾಕೇಶನ ಸದೃಶನಾಗಿರುವ ರಥನು ಎರಡೂ ಸೇನೆಗಳಲ್ಲಿ ಕಂಡುಬರುವುದಿಲ್ಲ. ಹಿಂದೆ ದೇವತೆಗಳಲ್ಲಿಯಾಗಲೀ, ದಾನವರಲ್ಲಿಯಾಗಲೀ, ಉರಗರಲ್ಲಿಯಾಗಲೀ, ರಾಕ್ಷಸರಲ್ಲಿಯಾಗಲೀ, ಯಕ್ಷರಲ್ಲಿಯಾಗಲೀ, ಇನ್ನು ನರರಲ್ಲೇನು ಧೀಮಂತ ಪಾರ್ಥನಂತೆ ಸಮಾಯುಕ್ತನಾಗಿರುವ ರಥನನ್ನು ಭೂತದಲ್ಲಿಯಾಗಲೀ ಅಥವಾ ಭವಿಷ್ಯದಲ್ಲಿಯಾಗಲೀ ಇರುವರೆಂದು ನಾನು ಕೇಳಿಲ್ಲ. ವಾಸುದೇವನು ಸಾರಥಿ. ಧನಂಜಯನು ಯೋದ್ಧ. ಗಾಂಡೀವವು ದಿವ್ಯ ಧನುಸ್ಸು. ಕುದುರೆಗಳು ಗಾಳಿಯಂತೆ ಹೋಗಬಲ್ಲವುಗಳು. ಅವನ ದಿವ್ಯ ಕವಚವು ಅಭೇದ್ಯವಾದುದು. ಎರಡು ಮಹಾ ಭತ್ತಳಿಕೆಗಳು ಅಕ್ಷಯವಾದವುಗಳು. ಅವನ ಅಸ್ತ್ರಗುಚ್ಛಗಳು ಮಹೇಂದ್ರನದು, ರುದ್ರನದು, ಕುಬೇರನದು, ಯಮನದು, ವರುಣನದು. ಅವನ ಗದೆಯು ನೋಡಲು ಉಗ್ರವಾದುದು. ಅವನಲ್ಲಿ ಮುಖ್ಯವಾಗಿ ವಜ್ರಾದಿ ನಾನಾ ಪ್ರಹರಣಗಳಿವೆ. ಒಂದೇ ರಥದಲ್ಲಿ ಸಹಸ್ರಾರು ಹಿರಣ್ಯಪುರವಾಸಿನಿ ದಾನವರನ್ನು ಸಂಹರಿಸಿದನು. ಇವನ ಸದೃಶರಾದ ರಥರು ಯಾರಿದ್ದಾರೆ? ಈ ಸಂರಂಭೀ, ಬಲವಾನ್, ಸತ್ಯವಿಕ್ರಮಿ ಮಹಾಬಾಹುವು ತನ್ನ ಸೇನೆಯನ್ನು ರಕ್ಷಿಸಿಕೊಂಡು ನಿನ್ನ ಸೇನೆಯನ್ನು ಹೊಡೆದುರುಳಿಸಬಲ್ಲನು. ಧನಂಜಯನನ್ನು ನಾನು ಅಥವಾ ಆಚಾರ್ಯನು ಎದುರಿಸಬಲ್ಲೆವು. ಎರಡೂ ಸೇನೆಗಳಲ್ಲಿ ಮೂರನೆಯವರು ಯಾರೂ ಇಲ್ಲ. ಆ ರಥಿಯು ಬಾಣಗಳ ಮಳೆಯನ್ನು ಸುರಿಸಿ ಬೇಸಿಗೆಯ ಕೊನೆಯಲ್ಲಿ ಮಹಾ ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಮೋಡಗಳಂತೆ ಮೇಲೇರುತ್ತಾನೆ. ಆದರೆ ವಾಸುದೇವನ ಸಹಾಯವನ್ನು ಪಡೆದ ಕೌಂತೇಯನು ತರುಣ ಮತ್ತು ಕೌಶಲಿ. ನಾವಿಬ್ಬರೂ ವಯಸ್ಸಾದವರು, ಜೀರ್ಣರಾದವರು.”

ಭೀಷ್ಮನ ಈ ಮಾತುಗಳನ್ನು ಕೇಳಿ, ಪಾಂಡವೇಯರ ಪುರಾತನ ಸಾಮರ್ಥ್ಯವನ್ನು ತಮ್ಮ ಕಣ್ಮುಂದೆಯೇ ನಡೆಯಿತೋ ಎನ್ನುವಂತೆ ನೆನಪಿಸಿಕೊಂಡು, ಆವೇಗ ಚಿಂತೆಗಳಿಂದ ಕೂಡಿ ರಾಜರ ಕಾಂಚನಾಂಗದಿ, ಚಂದನ ರೂಷಿತ, ತುಂಬಿದ ಬಾಹುಗಳು ಸಡಿಲವಾಗಿ ಜೋತುಬಿದ್ದವು.

ಭೀಷ್ಮನು ಹೇಳಿದನು: “ಮಹಾರಾಜ! ದ್ರೌಪದೇಯರೆಲ್ಲರೂ ಐವರು ಮಹಾರಥರು. ವೈರಾಟೀ ಉತ್ತರನೂ ಕೂಡ ಮಹಾರಥನೆಂದು ನನ್ನ ಮತ. ಅಭಿಮನ್ಯುವು ರಥಯೂಥಪಯೂಥಪನು. ಸಮರದಲ್ಲಿ ಅವನು ಪಾರ್ಥನ ಅಥವಾ ವಾಸುದೇವನ ಸಮನಾಗುತ್ತಾನೆ. ಅಸ್ತ್ರಗಳಲ್ಲಿ ಲಘುತ್ವವನ್ನು ಹೊಂದಿದ, ಚಿತ್ರಯೋಧೀ, ಆ ಮನಸ್ವೀ ದೃಢವಿಕ್ರಮಿಯು ತನ್ನ ತಂದೆಗುಂಟಾದ ಪರಿಕ್ಲೇಶಗಳನ್ನು ಸಂಸ್ಮರಿಸಿಕೊಂಡು ವಿಕ್ರಮವನ್ನು ತೋರಿಸುತ್ತಾನೆ. ಮಾಧವ ಶೂರ ಸಾತ್ಯಕಿಯು ರಥಯೂಥಪಯೂಥಪನು. ಈ ವೃಷ್ಣಿಪ್ರವೀರನು ಭಯವಿಲ್ಲದವನು, ಜಯಿಸಲಸಾಧ್ಯನು. ಉತ್ತಮೌಜಸನು ಮಹಾರಥನೆಂದು ನನ್ನ ಮತ. ನರರ್ಷಭ ವಿಕ್ರಾಂತ ಯುಧಾಮನ್ಯುವು ರಥೋದಾರ. ಅವರಲ್ಲಿ ಬಹುಸಹಸ್ರ ರಥಗಳಿವೆ, ಆನೆಗಳಿವೆ ಮತ್ತು ಕುದುರೆಗಳಿವೆ. ಅವರು ತನುವನ್ನು ತ್ಯಜಿಸಿ ಕುಂತೀಪುತ್ರನನ್ನು ಸಂತೋಷಗೊಳಿಸಲೋಸುಗ ಪಾಂಡವರೊಂದಿಗೆ ನಿನ್ನ ಸೇನೆಯು ವಿರುದ್ಧ ಅಗ್ನಿ-ಮಾರುತಗಳಂತೆ ಪರಸ್ಪರರನ್ನು ಕರೆಯುತ್ತಾ ಯುದ್ಧಮಾಡುವರು. ವೃದ್ಧರಾದ ವಿರಾಟ-ದ್ರುಪದರಿಬ್ಬರೂ ಸಮರದಲ್ಲಿ ಅಜೇಯರು. ಇಬ್ಬರು ಮಹಾವೀರ್ಯರೂ ಪುರುಷರ್ಷಭರೂ ನನ್ನ ಪ್ರಕಾರ ಮಹಾರಥರು. ವಯೋವೃದ್ಧರಾಗಿದ್ದರೂ ಇವರಿಬ್ಬರು ಕ್ಷತ್ರಧರ್ಮಪರಾಯಣರು ತಮ್ಮ ಪರಮ ಶಕ್ತಿಯನ್ನುಪಯೋಗಿಸಿ ವೀರರು ಹೋದ ಪಥದಲ್ಲಿ ನಿಲ್ಲುತ್ತಾರೆ. ಸಂಬಂಧದಿಂದ ಮತ್ತು ವೀರ್ಯಬಲಾನ್ವಯದಿಂದ ಈ ಇಬ್ಬರು ಆರ್ಯರು, ಮಹೇಷ್ವಾಸರು ಸ್ನೇಹಪಾಶದಿಂದ ಬಂಧಿತರಾಗಿದ್ದಾರೆ. ಕಾರಣಗಳನ್ನು ಪಡೆದು ನರರೆಲ್ಲರೂ ಶೂರರು ಅಥವಾ ಹೇಡಿಗಳಾಗುತ್ತಾರೆ. ಒಂದೇ ಮಾರ್ಗದಲ್ಲಿರುವ, ಪಾರ್ಥನಲ್ಲಿ ದೃಢಭಕ್ತಿಯನ್ನಿಟ್ಟಿರುವ ಇವರಿಬ್ಬರೂ ಪ್ರಾಣಗಳನ್ನು ತೊರೆದು ಶಕ್ತಿಯಿಂದ ಶತ್ರುಗಳೊಂದಿಗೆ ಹೋರಾಡುತ್ತಾರೆ. ಒಂದೊಂದು ಅಕ್ಷೌಹಿಣಿಯನ್ನು ಹೊಂದಿರುವ, ಯುದ್ಧದಲ್ಲಿ ದಾರುಣರಾದ ಇವರಿಬ್ಬರು ಸಂಬಂಧಿಭಾವವನ್ನು ರಕ್ಷಿಸಿಕೊಳ್ಳುತ್ತಾ ಮಹಾಕಾರ್ಯಗಳನ್ನೆಸಗುತ್ತಾರೆ. ಈ ಇಬ್ಬರು ಲೋಕವೀರರು, ಮಹೇಷ್ವಾಸರು ಆತ್ಮಗಳನ್ನು ತ್ಯಜಿಸಿ ತಮ್ಮ ಪ್ರತ್ಯಯಗಳನ್ನು ರಕ್ಷಿಸಿಕೊಳ್ಳುತ್ತಾ ಮಹಾಕಾರ್ಯಗಳನ್ನೆಸಗುತ್ತಾರೆ.

“ಪಾಂಚಾಲರಾಜನ ಮಗ, ಪರಪುರಂಜಯ ಶಿಖಂಡಿಯು ಪಾರ್ಥನ ರಥಮುಖ್ಯನೆಂದು ನನ್ನ ಮತ. ಇವನು ಹಿಂದಿನ ಸಂಸ್ಥಿತಿಯನ್ನು ನಾಶಪಡಿಸಿ, ನಿನ್ನ ಸೇನೆಗಳಲ್ಲಿ ತನ್ನ ಪರಮ ಯಶಸ್ಸನ್ನು ಪಸರಿಸುತ್ತಾ ಸಂಗ್ರಾಮದಲ್ಲಿ ಹೋರಾಡುತ್ತಾನೆ. ಅವನಲ್ಲಿ ಪಾಂಚಾಲರು ಮತ್ತು ಪ್ರಭದ್ರಕರ ಬಹಳ ಸೇನೆಗಳಿವೆ. ಅವನ ರಥಗುಂಪುಗಳೊಡನೆ ಅವನು ಮಹತ್ಕಾರ್ಯಗಳನ್ನು ಮಾಡುತ್ತಾನೆ. ಸರ್ವ ಸೇನೆಗಳ ಸೇನಾನೀ ದ್ರೋಣಶಿಷ್ಯ ಮಹಾರಥ ಧೃಷ್ಟದ್ಯುಮ್ನನು ಅತಿರಥನೆಂದು ನನ್ನ ಮತ. ಅವನು ಈ ಸಂಗ್ರಾಮದಲ್ಲಿ ರಣದಲ್ಲಿ ಶತ್ರುಗಳನ್ನು ತುಂಡರಿಸಿ ಸಂಕ್ರುದ್ಧ ಪಿನಾಕೀ ಭಗವಾನನು ಯುಗಕ್ಷಯದಲ್ಲಿ ಹೇಗೋ ಹಾಗೆ ಹೋರಾಡುತ್ತಾನೆ. ಅವನ ರಥಗಳ ಸೇನೆಯು ಸಂಯುಗದಲ್ಲಿ ಅತಿ ದೊಡ್ಡ ಸಾಗರದಂತೆ ಮತ್ತು ದೇವತೆಗಳದ್ದಂತೆ ಇದೆ ಎಂದು ರಣಪ್ರಿಯರು ಹೇಳುತ್ತಾರೆ. ಧೃಷ್ಟದ್ಯುಮ್ನನ ತನಯ ಕ್ಷತ್ರಧರ್ಮನು ಬಾಲಕನಾಗಿದ್ದರೂ ಅತ್ಯಂತ ಶ್ರಮ ಪಟ್ಟಿದುದಕ್ಕೆ ಅರ್ಧರಥನೆಂದು ನನ್ನ ಮತ. ಶಿಶುಪಾಲನ ಮಗ ವೀರ ಚೇದಿರಾಜ ಮಹೇಷ್ವಾಸ ಧೃಷ್ಟಕೇತುವು ಪಾಂಡವರ ಸಂಬಂಧಿ ಮತ್ತು ಮಹಾರಥ. ಈ ಚೇದಿಪತಿ ಶೂರನು ಮಗನೊಂದಿಗೆ ಮಹಾರಥಿಗಳಿಗೂ ಮಾಡಲಸಾಧ್ಯ ಮಹಾ ಕರ್ಮಗಳನ್ನು ಮಾಡುತ್ತಾನೆ. ಕ್ಷತ್ರಧರ್ಮರತನಾದ, ಪರಪುರಂಜಯ ಕ್ಷತ್ರದೇವನಾದರೋ ಪಾಂಡವರ ರಥೋತ್ತಮನೆಂದು ನನ್ನ ಮತ. ಜಯಂತ, ಅಮಿತೌಜಸ, ಮಹಾರಥಿ ಸತ್ಯಜಿತ್ ಇವರೆಲ್ಲ ಮಹಾತ್ಮ ಪಾಂಚಾಲಸತ್ತಮರೂ ಮಹಾರಥರೇ. ಅವರು ಆವೇಶಗೊಂಡ ಆನೆಗಳಂತೆ ಸಮರದಲ್ಲಿ ಹೋರಾಡುತ್ತಾರೆ. ವಿಕ್ರಾಂತರಾದ ಅಜ ಮತ್ತು ಭೋಜರು ಪಾಂಡವರ ಮಹಾರಥರು. ಪಾಂಡವರ ಸಹಾಯಕ್ಕಾಗಿ ಪರಮ ಶಕ್ತಿಯನ್ನುಪಯೋಗಿಸುವರು. ಅವರಿಬ್ಬರೂ ಶೀಘ್ರಾಸ್ತ್ರರು, ಚಿತ್ರಯೋಧಿಗಳು, ಕುಶಲರು ಮತ್ತು ದೃಢವಿಕ್ರಮಿಗಳು. ಯುದ್ಧ ದುರ್ಮದರಾದ ಐವರು ಕೇಕಯ ಸಹೋದರರೆಲ್ಲರೂ ರಥೋದಾರರು. ಎಲ್ಲರು ಕೆಂಪು ಧ್ವಜವುಳ್ಳವರು. ಕಾಶಿಕ, ಸುಕುಮಾರ, ನೀಲ, ರಾಜ ಸೂರ್ಯದತ್ತ, ಶಂಖ ಮತ್ತು ಮದಿರಾಶ್ವ ಇವರೆಲ್ಲರೂ ರಥೋದಾರರು. ಎಲ್ಲರೂ ಯುದ್ಧ ಲಕ್ಷಣವುಳ್ಳವರು. ಎಲ್ಲರೂ ಅಸ್ತ್ರ ವಿದುಷರು. ಎಲ್ಲರೂ ಮಹಾತ್ಮರೆಂದು ನನ್ನ ಮತ. ವಾರ್ಧಕ್ಷೇಮಿಯು ನನ್ನ ಮತದಲ್ಲಿ ಮಹಾನ್ ರಥ. ಚಿತ್ರಯುಧನೂ ಕೂಡ ನನ್ನ ಪ್ರಕಾರ ರಥಸತ್ತಮ. ಇವನು ಸಂಗ್ರಾಮದಲ್ಲಿ ಶೋಭಿಸುವವನು. ಕಿರೀಟಿಯ ಭಕ್ತನೂ ಹೌದು. ಚೇಕಿತಾನ ಮತ್ತು ಸತ್ಯಧೃತಿ ಇಬ್ಬರೂ ಪಾಂಡವರ ಮಹಾರಥರು. ಇವರಿಬ್ಬರು ಪುರುಷವ್ಯಾಘ್ರರೂ ರಥೋದಾರರೆಂದು ನನ್ನ ಮತ. ವ್ಯಾಘ್ರದತ್ತ ಮತ್ತು ಚಂದ್ರಸೇನ. ಇವರಿಬ್ಬರೂ ಪಾಂಡವರ ರಥೋದರರು ಎನ್ನುವುದು ನನ್ನ ಮತ. ಅದರಲ್ಲಿ ಸಶಯವಿಲ್ಲ. ಕ್ರೋಧಹಂತನೆಂಬ ಹೆಸರನ್ನುಳ್ಳ ಸೇನಾಬಿಂದುವು ವಾಸುದೇವ ಮತ್ತು ಭೀಮಸೇನನ ಸಮವೆಂದು ಕರೆಯುತ್ತಾರೆ. ಅವನು ವಿಕ್ರಮದಿಂದ ನಿನ್ನ ಸೈನಿಕರೊಂದಿಗೆ ಹೋರಾಡುತ್ತಾನೆ. ನನ್ನನ್ನು, ದ್ರೋಣನನ್ನು ಮತ್ತು ಕೃಪನನ್ನು ಹೇಗೆ ಸನ್ಮಾನಿಸುವೆಯೋ ಹಾಗೆ ಆ ಸಮರಶ್ಲಾಘೀ ರಥಸತ್ತಮನನ್ನೂ ನೀನು ಮನ್ನಿಸಬೇಕು. ಪರಮ ಶೀಘ್ರಾಸ್ತ್ರನಾಗಿರುವ ಶ್ಲಾಘನೀಯ ಕಾಶ್ಯನು ರಥೋತ್ತಮ. ಆ ಪರಪುರಂಜಯನು ಏಕರಥನೆಂದು ನನ್ನ ಮತ. ದ್ರುಪದನ ಮಗ ಯುವಕ ಅಮರಶ್ಲಾಘೀ ಸತ್ಯಜಿತುವು ಯುದ್ಧದಲ್ಲಿ ವಿಕ್ರಾಂತ ಮತ್ತು ನನ್ನ ಪ್ರಕಾರ ಎಂಟು ರಥರಿಗೆ ಸಮ. ಧೃಷ್ಟದ್ಯುಮ್ನನ ಸರಿಸಾಟಿಯಾದ ಅವನು ಅತಿರಥತ್ವವನ್ನು ಪಡೆಯುತ್ತಾನೆ. ಪಾಂಡವರ ಯಶಸ್ಸನ್ನು ಬಯಸಿ ಪರಮ ಕರ್ಮಗಳನ್ನು ಮಾಡುತ್ತಾನೆ. ಪಾಂಡವರಲ್ಲಿ ಅನುರಕ್ತನಾಗಿರುವ ರಥರಲ್ಲಿಯೂ ಅಪರನಾಗಿರುವ ಮಾಹಾನ್ ಪಾಂಡ್ಯರಾಜನು ಮಹಾವೀರ ಮತ್ತು ಶೂರ ಧುರಂಧರ. ಮಹೇಷ್ವಾಸ ದೃಢಧನ್ವಿಯು ಪಾಂಡವರ ರಥೋತ್ತಮ. ಶ್ರೇಣಿಮಾನ ಮತ್ತು ಪಾರ್ಥಿವ ವಸುದಾನರಿಬ್ಬರೂ ಅತಿರಥರೆಂದು ನನ್ನ ಮತ.

“ಪಾಂಡವರ ಮಹಾರಥಿ ರೋಚಮಾನನು ರಣದಲ್ಲಿ ಶತ್ರುಸೇನೆಯೊಂದಿಗೆ ಅಮರನಂತೆ ಹೋರಾಡುತ್ತಾನೆ. ಮಹೇಷ್ವಾಸ, ಮಹಾಬಲಿ, ಭೀಮಸೇನನ ಸೋದರಮಾವ, ಪುರುಜಿತ್ ಕುಂತಿಭೋಜನು ಅತಿರಥನೆಂದು ನನ್ನ ಅಭಿಪ್ರಾಯ. ಈ ಮಹೇಷ್ವಾಸನು ವೀರ, ಅನುಭವಿ ಮತ್ತು ನಿಪುಣ, ಚಿತ್ರಯೋಧಿ, ಶಕ್ತ ಮತ್ತು ರಥಪುಂಗವನೆಂದು ನನ್ನ ಅಭಿಪ್ರಾಯ. ಮಘವತನು ದಾನವರೊಂದಿಗೆ ಹೇಗೋ ಹಾಗೆ ಅವನು ವಿಕ್ರಮದಿಂದ ಯುದ್ಧಮಾಡುತ್ತಾನೆ. ಅವನ ಯೋಧರೆಲ್ಲರೂ ವಿಖ್ಯಾತರು ಮತ್ತು ಯುದ್ಧ ವಿಶಾರದರು. ತನ್ನ ತಂಗಿಗೆ ಒಳಿತನ್ನು ಮಾಡಲು, ಪಾಂಡವರ ಪ್ರಿಯಹಿತನಿರತನಾಗಿರುವ ಆ ವೀರ ನೃಪನು ಸಂಗರದಲ್ಲಿ ಮಹಾಕಾರ್ಯಗಳನ್ನೆಸಗುತ್ತಾನೆ. ಭೀಮಸೇನನ ಮಗ ಹೈಡಿಂಬಿ ರಾಕ್ಷಸೇಶ್ವರ ಬಹುಮಾಯಾವಿಯೂ ಕೂಡ. ರಥಸಮೂಹಗಳ ನಾಯಕನು. ಆ ಸಮರಪ್ರಿಯನು ಸಮರದಲ್ಲಿ ಮಾಯೆಯಿಂದ ಯುದ್ಧಮಾಡುತ್ತಾನೆ. ಅವನ ವಶವರ್ತಿ ಸಚಿವ ರಾಕ್ಷಸರೂ ಕೂಡ ಶೂರರು. ಇವರು ಮತ್ತು ಇತರ ನಾನಾ ಜನಪದೇಶ್ವರರು ಬಹುಸಂಖ್ಯೆಗಳಲ್ಲಿ ವಾಸುದೇವನ ನಾಯಕತ್ವದಲ್ಲಿ ಪಾಂಡವರಿಗಾಗಿ ಸೇರಿದ್ದಾರೆ. ಇವರು ಮಹಾತ್ಮ ಪಾಂಡವರ ಪ್ರಧಾನ ರಥಿಗಳು, ಅತಿರಥಿಗಳು, ಅರ್ಧರಧಿಗಳು ಎಂದು ಎನಿಸಿಕೊಂಡವರು. ಇವರು ಮಹೇಂದ್ರನಂತಿರುವ ವೀರ ಕಿರೀಟಿಯಿಂದ ಪಾಲಿಸಲ್ಪಟ್ಟ ಯುಧಿಷ್ಠಿರನ ಭಯಂಕರ ಸೇನೆಯನ್ನು ನಡೆಸುವರು. ನಿನ್ನ ವಿರುದ್ಧ ಜಯವನ್ನು ಬಯಸಿ ಸಮರಕ್ಕೆ ಬಂದಿರುವ ಇವರೊಂದಿಗೆ ನಾನು ನಿನಗಾಗಿ ರಣದಲ್ಲಿ ಜಯವನ್ನು ಅಥವಾ ಮರಣವನ್ನು ಬಯಸಿ ಹೋರಾಡುತ್ತೇನೆ. ಚಕ್ರ-ಗಾಂಡೀವಧಾರಿಗಳಾದ ಪುರುಷೋತ್ತಮರಾದ ಪಾರ್ಥ-ವಾಸುದೇವರನ್ನು ಸಂಧ್ಯಾಸಮಯದಲ್ಲಿ ಸೂರ್ಯ-ಚಂದ್ರರನ್ನು ಎದುರಾಗುವಂತೆ ಎದುರಿಸುತ್ತೇನೆ.

“ಸೇನೆಯೊಂದಿಗೆ ನಿನ್ನ ರಣದ ಮೂರ್ಧನಿಯಲ್ಲಿದ್ದುಕೊಂಡು ರಥೋದಾರ ಪಾಂಡುಪುತ್ರರ ಸೈನಿಕರನ್ನು ಎದುರಿಸುತ್ತೇನೆ. ಕೌರವೇಂದ್ರ! ಪ್ರಧಾನರಾದ ಈ ರಥ-ಅತಿರಥರ ಕುರಿತು ನಾನು ನಿನಗೆ ಹೇಳಿದ್ದೇನೆ. ಅರ್ಧರಥರೆನಿಸಿಕೊಂಡಿರುವ ಕೆಲವರ ಕುರಿತೂ ಕೂಡ ನಿನಗೆ ಹೇಳಿದ್ದೇನೆ. ಅರ್ಜುನ, ವಾಸುದೇವ ಮತ್ತು ಅಲ್ಲಿರುವ ಅನ್ಯ ಪಾರ್ಥಿವರೆಲ್ಲರನ್ನೂ ತಡೆದು ನಿನ್ನ ಸೇನೆಯನ್ನು ರಕ್ಷಿಸುತ್ತೇನೆ. ಆದರೆ ಬಾಣಗಳನ್ನು ಹಿಡಿದು ನನ್ನನ್ನು ಎದುರಿಸಿ ಬರುವ ಪಾಂಚಾಲ್ಯ ಶಿಖಂಡಿಯನ್ನು ನೋಡಿ ನಾನು ಅವನನ್ನು ಕೊಲ್ಲುವುದಿಲ್ಲ. ತಂದೆಗೆ ಪ್ರಿಯವಾದುದನ್ನು ಮಾಡಲೋಸುಗ ಹೇಗೆ ನಾನು ರಾಜ್ಯಪ್ರಾಪ್ತಿಯನ್ನು ಪರಿತ್ಯಜಿಸಿ ಬ್ರಹ್ಮಚರ್ಯದಲ್ಲಿ ಧೃತವ್ರತನಾದೆ ಎಂದು ಲೋಕಕ್ಕೇ ತಿಳಿದಿದೆ. ಚಿತ್ರಾಂಗದನನ್ನು ಕೌರವರ ರಾಜ್ಯಕ್ಕೆ ಅಭಿಷೇಕಿಸಿ, ಬಾಲಕ ವಿಚಿತ್ರವೀರ್ಯನನ್ನು ಯುವರಾಜನಾಗಿ ಅಭಿಷೇಕಿಸಿದೆನು. ಪೃಥ್ವಿಯಲ್ಲಿ ಎಲ್ಲ ರಾಜರುಗಳಲ್ಲಿ ನನ್ನ ದೇವವ್ರತತ್ವವನ್ನು ಪಸರಿಸಿ ನಾನು ಸ್ತ್ರೀಯನ್ನು ಅಥವಾ ಹಿಂದೆ ಸ್ತ್ರೀಯಾಗಿದ್ದನೆಂದು ತಿಳಿದಿರುವವನನ್ನು ಎಂದೂ ಕೊಲ್ಲುವುದಿಲ್ಲ. ಶಿಖಂಡಿಯು ಮೊದಲು ಹೆಣ್ಣಾಗಿದ್ದ ಎಂದು ನೀನು ಕೇಳಿರಬಹುದು. ಹೆಣ್ಣಾಗಿ ಹುಟ್ಟಿ ನಂತರ ಗಂಡಾದ ಅವನೊಡನೆ ನಾನು ಯುದ್ಧಮಾಡುವುದಿಲ್ಲ. ಕುಂತೀಸುತರನ್ನು ಬಿಟ್ಟು ಸಮರದಲ್ಲಿ ಎದುರಾಗುವ ಅನ್ಯ ಎಲ್ಲ ಪಾರ್ಥಿವರನ್ನೂ ಸಂಹರಿಸುತ್ತೇನೆ.”

ದುರ್ಯೋಧನನು ಹೇಳಿದನು: ಭರತಶ್ರೇಷ್ಠ! ಸಮರದಲ್ಲಿ ಬಾಣಗಳನ್ನು ಗುರಿಯಿಟ್ಟು ನಿನ್ನನ್ನು ಕೊಲ್ಲಲು ಬರುವ ಶಿಖಂಡಿಯನ್ನು ನೋಡಿಯೂ ಅವನನ್ನು ನೀನು ಕೊಲ್ಲದೇ ಇರಲು ಕಾರಣವೇನು? ಮೊದಲು ನೀನು ಹೇಳಿದ್ದೆ – ಸೋಮಕರೊಂದಿಗೆ ಪಾಂಡವರನ್ನು ವಧಿಸುತ್ತೇನೆಂದು. ಅದನ್ನು ನನಗೆ ಹೇಳು.”

ಭೀಷ್ಮನು ಹೇಳಿದನು: ದುರ್ಯೋಧನ! ವಸುಧಾಧಿಪರೊಂದಿಗೆ ಕೇಳು. ಏಕೆ ನಾನು ಯುದ್ಧದಲ್ಲಿ ಎದುರಾದ ಶಿಖಂಡಿಯನ್ನು ಕೊಲ್ಲುವುದಿಲ್ಲವೆಂದು.” ಆಗ ಭೀಷ್ಮನು ದುರ್ಯೋಧನನಿಗೆ ಅಂಬೋಪಾಽಖ್ಯಾನವನ್ನು ವರ್ಣಿಸಿ, ಹೇಳಿದನು: “ಯುದ್ಧದಲ್ಲಿ ಪಾಂಚಾಲ ಶಿಖಂಡಿಯು ಧನುಸ್ಸನ್ನು ಹಿಡಿದು ನನ್ನೊಡನೆ ಯುದ್ಧಮಾಡಲು ಬಂದರೆ ನಾನು ಅವನನ್ನು ಒಂದು ಕ್ಷಣವೂ ನೋಡುವುದಿಲ್ಲ, ಅವನನ್ನು ಹೊಡೆಯುವುದೂ ಇಲ್ಲ. ಸ್ತ್ರೀಯರ, ಹಿಂದೆ ಸ್ತ್ರೀಯಾಗಿದ್ದವರ, ಸ್ತ್ರೀಯರ ಹೆಸರಿದ್ದವರ, ಸ್ತ್ರೀಯರ ರೂಪದಲ್ಲಿದ್ದವರ ಮೇಲೆ ನಾನು ಬಾಣಪ್ರಯೋಗ ಮಾಡುವುದಿಲ್ಲ ಎನ್ನುವ, ಸದಾ ನಡೆಸಿಕೊಂಡು ಬರುತ್ತಿರುವ ನನ್ನ ಈ ವ್ರತವು ಭೂಮಿಯಲ್ಲಿಯೇ ವಿಶ್ರುತವಾಗಿದೆ. ಈ ಕಾರಣದಿಂದಲೇ ನಾನು ಶಿಖಂಡಿಯನ್ನು ಹೊಡೆಯುವುದಿಲ್ಲ. ಮಗೂ! ಶಿಖಂಡಿಯ ಮಹಾ ಜನ್ಮವೇನೆಂದು ನಿನಗೆ ತಿಳಿಸಿದ್ದೇನೆ. ಸಮರದಲ್ಲಿ ಆ ಆತತಾಯಿಯನ್ನು ನಾನು ಸಂಹರಿಸುವುದಿಲ್ಲ. ಸ್ತ್ರೀಯನ್ನು ಕೊಲ್ಲುವುದರ ಮೊದಲು ಭೀಷ್ಮನು ತನ್ನನ್ನು ಕೊಂದುಕೊಳ್ಳುತ್ತಾನೆ. ಆದುದರಿಂದ ಅವನು ಸಮರದಲ್ಲಿ ನಿಂತಿರುವುದನ್ನು ನೋಡಿಯೂ ನಾನು ಅವನನ್ನು ಕೊಲ್ಲುವುದಿಲ್ಲ.”

ಇದನ್ನು ಕೇಳಿದ ಕೌರವ್ಯ ರಾಜಾ ದುರ್ಯೋಧನನು ಒಂದು ಕ್ಷಣ ಯೋಚಿಸಿ ಅದು ಭೀಷ್ಮನಿಗೆ ಯುಕ್ತವಾದುದು ಎಂದು ತೀರ್ಮಾನಿಸಿದನು.

ಭೀಷ್ಮಾದಿಗಳ ಶಕ್ತಿಯ ಕುರಿತ ಚರ್ಚೆ

ರಾತ್ರಿಯು ಕಳೆದು ಬೆಳಗಾಗಲು ದುರ್ಯೋಧನನು ಪುನಃ ಸರ್ವ ಸೇನೆಯ ಮಧ್ಯೆ ಪಿತಾಮಹನನ್ನು ಕೇಳಿದನು: “ಗಾಂಗೇಯ! ಪಾಂಡವನ ಈ ಉತ್ತಮ ಸೈನ್ಯವನ್ನು, ನರ-ನಾಗ-ಅಶ್ವ ಮತ್ತು ಮಹಾರಥಗಳ ಸಂಕುಲದಿಂದ ಕೂಡಿದ, ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಲೋಕಪಾಲಕರಂತಿರುವ ಭೀಮಾರ್ಜುನರೇ ಮೊದಲಾದವರ ರಕ್ಷಣೆಯಲ್ಲಿರುವ, ಗೆಲ್ಲಲಸಾಧ್ಯವಾದ, ತಡೆಯಲಸಾಧ್ಯವಾದ ಸಾಗರದಂತೆ ಉಕ್ಕಿ ಬರುತ್ತಿರುವ, ದೇವತೆಗಳಿಂದಲೂ ಅಲುಗಾಡಿಸಲಸಾಧ್ಯವಾದ ಈ ಸೇನಾ ಸಾಗರವನ್ನು ನೀನಾಗಲೀ, ಅಥವಾ ಮಹೇಷ್ವಾಸ ಆಚಾರ್ಯನಾಗಲೀ, ಅಥವಾ ಮಹಾಬಲಿ ಕೃಪನಾಗಲೀ, ಅಥವಾ ಸಮರಶ್ಲಾಘೀ ಕರ್ಣನಾಗಲೀ ಅಥವಾ ದ್ವಿಜಸತ್ತಮ ದ್ರೌಣಿಯಾಗಲೀ ಎಷ್ಟುಸಮಯದಲ್ಲಿ ಮುಗಿಸಬಲ್ಲರು? ಏಕೆಂದರೆ ನನ್ನ ಬಲದಲ್ಲಿರುವ ನೀವೆಲ್ಲರೂ ದಿವ್ಯಾಸ್ತ್ರವಿದುಷರು. ಇದನ್ನು ತಿಳಿಯಲು ನಾನು ಇಚ್ಛಿಸುತ್ತೇನೆ. ನಿತ್ಯವೂ ಇದರ ಕುರಿತು ನನ್ನ ಹೃದಯದಲ್ಲಿ ಪರಮ ಕುತೂಹಲವಿದೆ. ಅದನ್ನು ನನಗೆ ಹೇಳಬೇಕು.”

ಭೀಷ್ಮನು ಹೇಳಿದನು: “ಪೃಥಿವೀಪತೇ! ಅಮಿತ್ರರ ಮತ್ತು ನಮ್ಮವರ ಬಲಾಬಲಗಳ ಕುರಿತು ನೀನು ಕೇಳಿರುವ ಇದು ನಿನಗೆ ಅನುರೂಪವಾದುದು. ರಣದಲ್ಲಿ ನನ್ನ ಶಕ್ತಿಯ ಗಡಿಯೇನೆನ್ನುವುದನ್ನು, ರಣದಲ್ಲಿ ನನ್ನ ಭುಜಗಳ ಅಸ್ತ್ರವೀರ್ಯವನ್ನು ಕೇಳು. ಸಾಮಾನ್ಯ ಜನರು ಯುದ್ಧಮಾಡುವಾಗ ಆರ್ಜವದಿಂದಲೇ ಯುದ್ಧ ಮಾಡಬೇಕು. ಮಾಯಾವಿಯೊಂದಿಗೆ ಮಾಯಾಯುದ್ಧವನ್ನು ಮಾಡಬೇಕು. ಇದು ಧರ್ಮನಿಶ್ಚಯ. ಪಾಂಡವರ ಸೇನೆಯನ್ನು ದಿನ ದಿನವೂ ಮಧ್ಯಾಹ್ನದ ಮೊದಲ ಭಾಗವನ್ನಾಗಿಸಿ ನಾನು ಕೊಲ್ಲಬಲ್ಲೆ. ಹತ್ತುಸಾವಿರ ಯೋಧರನ್ನು ಒಂದು ಭಾಗವನ್ನಾಗಿ ಮಾಡಿಕೊಂಡು ಒಂದು ಸಾವಿರ ರಥಿಕರು ಒಂದು ಭಾಗವಾಗುತ್ತಾರೆ ಎಂದು ನನ್ನ ಮತ. ಈ ರೀತಿಯ ವಿಧಾನದಿಂದ ಸದಾ ಸನ್ನದ್ಧನಾಗಿ ಮೇಲೆ ನಿಂತಿದ್ದರೆ ನಾನು ಈ ಸೇನೆಯನ್ನು ಸಮಯದಲ್ಲಿ ಕೊನೆಗಾಣಿಸಬಹುದು. ಒಂದುವೇಳೆ ನೂರುಸಾವಿರರನ್ನು ಸಂಹರಿಸುವ ಮಹಾ ಅಸ್ತ್ರಗಳನ್ನು ಪ್ರಯೋಗಿಸಿದರೆ ಸಮರದಲ್ಲಿ ನಿಂತು ಒಂದು ತಿಂಗಳಲ್ಲಿ ಕೊಲ್ಲಬಹುದು.”

ಭೀಷ್ಮನ ಆ ಮಾತುಗಳನ್ನು ಕೇಳಿ ರಾಜಾ ದುರ್ಯೋಧನನು ಅಂಗಿರಸರಲ್ಲಿ ಶ್ರೇಷ್ಠನಾದ ದ್ರೋಣನನ್ನು ಪ್ರಶ್ನಿಸಿದನು. “ಆಚಾರ್ಯ! ಪಾಂಡುಪುತ್ರರ ಸೈನಿಕರನ್ನು ಎಷ್ಟು ಸಮಯದಲ್ಲಿ ಕೊಲ್ಲಬಲ್ಲಿರಿ?” ಇದಕ್ಕೆ ನಗುತ್ತಾ ದ್ರೋಣನು ಉತ್ತರಿಸಿದನು. “ಕುರುಶ್ರೇಷ್ಠ! ಮುದುಕನಾಗಿದ್ದೇನೆ. ಪ್ರಾಣವು ಮಂದವಾಗಿ ನಡೆದುಕೊಳ್ಳುತ್ತಿದೆ. ಶಾಂತನವ ಭೀಷ್ಮನಂತೆ ನಾನೂ ಕೂಡ ಅಸ್ತ್ರಾಗ್ನಿಯಿಂದ ಪಾಂಡವರ ಸೇನೆಯನ್ನು ಒಂದು ತಿಂಗಳಲ್ಲಿ ಸುಡಬಲ್ಲೆನೆಂದೆನಿಸುತ್ತದೆ. ಇದು ನನ್ನ ಶಕ್ತಿಯ ಮಿತಿ. ಮತ್ತು ಇದು ನನ್ನ ಬಲದ ಮಿತಿ.”

ಎರಡೇ ತಿಂಗಳುಗಳು ಸಾಕೆಂದು ಶಾರದ್ವತ ಕೃಪನು ಹೇಳಿದನು. ದ್ರೌಣಿಯಾದರೋ ಹತ್ತು ರಾತ್ರಿಗಳಲ್ಲಿ ಬಲಕ್ಷಯಮಾಡುತ್ತೇನೆಂದು ಪ್ರತಿಜ್ಞೆಮಾಡಿದನು. ಮಹಾಸ್ತ್ರಗಳನ್ನು ತಿಳಿದಿದ್ದ ಕರ್ಣನು ಐದು ರಾತ್ರಿಗಳಲ್ಲೆಂದು ಪ್ರತಿಜ್ಞೆ ಮಾಡಿದನು. ಸೂತಪುತ್ರನ ಆ ಮಾತುಗಳನ್ನು ಕೇಳಿ ಸಾಗರಗೆಯ ಸುತನು ಜೋರಾಗಿ ನಕ್ಕು ಹಾಸ್ಯದ ಈ ಮಾತುಗಳನ್ನಾಡಿದನು: “ರಾಧೇಯ! ರಣದಲ್ಲಿ ನೀನು ಎಲ್ಲಿಯವರೆಗೆ ಬಾಣಖಡ್ಗಧನುರ್ಧರನಾದ ಪಾರ್ಥನನ್ನು, ಜೊತೆಯಲ್ಲಿ ರಥವನ್ನೋಡಿಸುವ ಅಚ್ಯುತ ವಾಸುದೇವನನ್ನು ಎದುರಿಸುವುದಿಲ್ಲವೋ ಅಲ್ಲಿಯ ವರೆಗೆ ನಿನಗಿಷ್ಟ ಬಂದುದನ್ನು ಹೇಳಬಹುದು. ನಂತರವೂ ನಿನಗಿಷ್ಟವಾದಂತೆ ಹೇಳಿಕೊಳ್ಳಬಹುದು!”

ಅರ್ಜುನವಾಕ್ಯ

ಇದನ್ನು ಕೇಳಿದ ಕೌಂತೇಯನು ಎಲ್ಲ ತಮ್ಮಂದಿರನ್ನೂ ಕರೆಯಿಸಿ ಏಕಾಂತದಲ್ಲಿ ಈ ಮಾತನ್ನಾಡಿದನು: “ಧಾರ್ತರಾಷ್ಟ್ರನ ಸೇನೆಯಲ್ಲಿರುವ ನನ್ನ ಚಾರಕರು ಅವರ ಪ್ರವೃತ್ತಿಗಳನ್ನು ಬೆಳಿಗ್ಗೆ ಬಂದು ಹೇಳಿದರು. ದುರ್ಯೋಧನನು ಆಪಗೇಯ ಮಹಾವ್ರತನಿಗೆ ಕೇಳಿದನಂತೆ - “ಪ್ರಭೋ! ಪಾಂಡವರ ಸೇನೆಯನ್ನು ನಾಶಪಡಿಸಲು ಎಷ್ಟು ಸಮಯವು ಬೇಕಾಗುತ್ತದೆ?” ಸುದುರ್ಮತಿ ಧಾರ್ತರಾಷ್ಟ್ರನಿಗೆ ಅವನು ಒಂದು ತಿಂಗಳು ಎಂದು ಹೇಳಿದನಂತೆ. ದ್ರೋಣನೂ ಕೂಡ ಅಷ್ಟೇ ಸಮಯ ಸಾಕೆಂದು ಹೇಳಿದನೆಂದು ತಿಳಿದಿದ್ದೇವೆ. ಗೌತಮನು ಅದಕ್ಕೂ ಎರಡು ಪಟ್ಟು ಸಮಯ ಬೇಕೆಂದನಂತೆ. ಮಹಾಸ್ತ್ರವಿದು ದ್ರೌಣಿಯು ಹತ್ತು ರಾತ್ರಿಗಳಲ್ಲಿ ಎಂದು ಪ್ರತಿಜ್ಞೆ ಮಾಡಿದನೆಂದು ಕೇಳಿದ್ದೇವೆ. ಹಾಗೆಯೇ ದಿವ್ಯಾಸ್ತ್ರವಿದು ಕರ್ಣನು ಕುರುಸಂಸದಿಯಲ್ಲಿ ಐದೇ ದಿವಸಗಳಲ್ಲಿ ಸೈನ್ಯವನ್ನು ಸಂಹರಿಸುವುದಾಗಿ ಪ್ರತಿಜ್ಞೆಮಾಡಿದ್ದಾನೆ. ಆದುದರಿಂದ ನಾನೂ ಕೂಡ ಅರ್ಜುನ! ನಿನ್ನ ಮಾತನ್ನು ಕೇಳ ಬಯಸುತ್ತೇನೆ. ಎಷ್ಟು ಸಮಯದಲ್ಲಿ ನೀನು ಯುದ್ಧದಲ್ಲಿ ಶತ್ರುಗಳನ್ನು ಇಲ್ಲವಾಗಿಸುವೆ?”

ಪಾರ್ಥಿವನಿಂದ ಇದನ್ನು ಕೇಳಿದ ಗುಡಾಕೇಶ ಧನಂಜಯನು ವಾಸುದೇವನನ್ನು ನೋಡಿ ಈ ಮಾತುಗಳಲ್ಲಿ ಉತ್ತರಿಸಿದನು: “ಇವರೆಲ್ಲರೂ ಮಹಾತ್ಮರು, ಕೃತಾಸ್ತ್ರರು ಮತ್ತು ಚಿತ್ರಯೋಧಿಗಳು. ಮಹಾರಾಜ! ಇವರು ನಿನ್ನ ಸೇನೆಯನ್ನು ಸಂಹರಿಸುವರು ಎನ್ನುವುದರಲ್ಲಿ ಸಂಶಯವಿಲ್ಲ. ನಿನ್ನ ಮನಸ್ಸಿನಲ್ಲಿ ಜ್ವರವಿಲ್ಲದಿರಲಿ. ಸತ್ಯವನ್ನೇ ಹೇಳುತ್ತಿದ್ದೇನೆ. ವಾಸುದೇವನ ಸಹಾಯದಿಂದ ನಾನು ಒಂದೇ ರಥದಲ್ಲಿ ನಿಮಿಷದಲ್ಲಿಯೇ ಅಮರರನ್ನೂ ಸೇರಿಸಿ ಮೂರು ಲೋಕಗಳನ್ನು, ಅದರಲ್ಲಿರುವ ಸ್ಥಾವರ ಜಂಗಮಗಳೊಂದಿಗೆ, ಹಿಂದೆ ಇದ್ದ, ಈಗ ಇರುವ ಮತ್ತು ಮುಂದೆ ಇರಬಹುದಾದವುಗಳನ್ನೂ ಸಂಹರಿಸಬಲ್ಲೆ ಎಂದು ನನಗನ್ನಿಸುತ್ತದೆ. ಕೈರಾತನೊಂದಿಗೆ ದ್ವಂದ್ವಯುದ್ಧದಲ್ಲಿ ಪಶುಪತಿಯು ನನಗೆ ಕರುಣಿಸಿದ್ದ ಆ ಘೋರ ಅಸ್ತ್ರವು ನನ್ನಲ್ಲಿದೆ. ಯಾವುದನ್ನು ಪ್ರಯೋಗಿಸಿ ಯುಗಾಂತ್ಯದಲ್ಲಿ ಪಶುಪತಿಯು ಸರ್ವಭೂತಗಳನ್ನು ಸಂಹರಿಸುವನೋ ಅದು ನನ್ನಲ್ಲಿದೆ. ಅದು ಗಾಂಗೇಯನಿಗೆ ತಿಳಿದಿಲ್ಲ, ದ್ರೋಣನಿಗೂ ಇಲ್ಲ, ಗೌತಮನಿಗೂ ಇಲ್ಲ, ದ್ರೋಣಸುತನಿಗೂ ಇಲ್ಲ. ಇನ್ನು ಸೂತಜನಿಗೇನು? ಆದರೆ ರಣದಲ್ಲಿ ದಿವ್ಯಾಸ್ತ್ರಗಳನ್ನು ಬಳಸಿ ಸಾಮಾನ್ಯಜನರನ್ನು ಸಂಹರಿಸುವುದು ಸರಿಯಲ್ಲ. ನಾವು ಶತ್ರುಗಳೊಂದಿಗೆ ಆರ್ಜವದಿಂದಲೇ ಯುದ್ಧಮಾಡಿ ವಿಜಯಿಗಳಾಗುತ್ತೇವೆ. ಈ ಎಲ್ಲ ಪುರುಷವ್ಯಾಘ್ರರೂ ನಿನ್ನ ಸಹಾಯಕರು ಎಲ್ಲರೂ ದಿವ್ಯಾಸ್ತ್ರವಿದುಷರು. ಎಲ್ಲರೂ ಯುದ್ಧವನ್ನು ಇಷ್ಟಪಡುವವರು. ಇವರೆಲ್ಲರೂ ವೇದಾಂತ ಅವಭೃತಸ್ನಾನಗಳನ್ನು ಮಾಡಿದವರು, ಅಪರಾಜಿತರು. ಪಾಂಡವ! ಸಮರದಲ್ಲಿ ದೇವತೆಗಳ ಸೇನೆಯನ್ನೂ ಸಂಹರಿಸಬಲ್ಲರು. ಶಿಖಂಡೀ, ಯುಯುಧಾನ, ಪಾರ್ಷತ ಧೃಷ್ಟದ್ಯುಮ್ನ, ಭೀಮಸೇನ, ಯಮಳರು, ಯುಧಾಮನ್ಯು, ಉತ್ತಮೌಜ, ಯುದ್ಧದಲ್ಲಿ ಭೀಷ್ಮ-ದ್ರೋಣರ ಸಮನಾದ ವಿರಾಟ-ದ್ರುಪದರು, ನೀನೂ ಕೂಡ, ತ್ರೈಲೋಕ್ಯಗಳನ್ನು ಕಿತ್ತೊಗೆಯಲು ಸಮರ್ಥನಾಗಿದ್ದೀಯೆ. ನೀನು ಯಾವ ಪುರುಷನನ್ನು ಕ್ರೋಧದಿಂದ ನೋಡುತ್ತೀಯೋ ಅವನ ನಾಶವು ಕ್ಷಿಪ್ರವಾಗಿ ಆಗುತ್ತದೆ ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ.”

ಕೌರವಸೇನಾನಿರ್ಯಾಣ

ಆಗ ವಿಮಲ ಪ್ರಭಾತದಲ್ಲಿ ಧಾರ್ತರಾಷ್ಟ್ರ ದುರ್ಯೋಧನನಿಂದ ಪ್ರಚೋದಿತರಾಗಿ ರಾಜರು ಪಾಂಡವರ ಕಡೆ ಪ್ರಯಾಣಿಸಿದರು. ಎಲ್ಲರೂ ಸ್ನಾನಮಾಡಿ ಶುಚರಾಗಿದ್ದರು. ಎಲ್ಲರೂ ಮಾಲೆಗಳನ್ನು ಧರಿಸಿದ್ದರು, ಬಿಳಿಯ ವಸ್ತ್ರಗಳನ್ನುಟ್ಟಿದ್ದರು, ಶಸ್ತ್ರಗಳನ್ನು ಹಿಡಿದಿದ್ದರು, ಧ್ವಜಗಳನ್ನು ಹೊಂದಿದ್ದರು, ಸ್ವಸ್ತಿ ವಾಚನಗಳನ್ನು ಕೇಳಿದ್ದರು ಮತ್ತು ಅಗ್ನಿಗಳಲ್ಲಿ ಆಹುತಿಗಳನ್ನಿತ್ತಿದ್ದರು. ಎಲ್ಲರೂ ವೇದವಿದರಾಗಿದ್ದರು, ಎಲ್ಲರೂ ಶೂರರೂ, ಸುಚರಿತವ್ರತರೂ ಆಗಿದ್ದರು. ಎಲ್ಲರೂ ಕರ್ಮಗಳನ್ನು ಮಾಡಿಮುಗಿಸಿದ್ದರು. ಎಲ್ಲರೂ ಯುದ್ಧಕ್ಕೆ ಲಕ್ಷಣರಾಗಿದ್ದರು. ಯುದ್ಧದಲ್ಲಿ ಪರಮ ಲೋಕಗಳನ್ನು ಗೆಲ್ಲುವ ಉದ್ದೇಶವನ್ನಿಟ್ಟುಕೊಂಡಿದ್ದ ಆ ಮಹಾಬಲರು ಎಲ್ಲರೂ ಏಕಾಗ್ರಮನಸ್ಕರಾಗಿದ್ದರು ಮತ್ತು ಪರಸ್ಪರರಲ್ಲಿ ಶ್ರದ್ಧೆಯನ್ನಿಟ್ಟಿದ್ದರು. ಮೊದಲು ಅವಂತಿಯ ವಿಂದಾನುವಿಂದರಿಬ್ಬರೂ ಕೇಕಯ ಮತ್ತು ಬಾಹ್ಲೀಕರೊಂದಿಗೆ ಎಲ್ಲರೂ ಭಾರದ್ವಾಜನನ್ನು ಮುಂದಿಟ್ಟುಕೊಂಡು ಹೊರಟರು. ಅನಂತರ ಅಶ್ವತ್ಥಾಮ, ಶಾಂತನವ, ಸೈಂಧವ ಜಯದ್ರಥ, ದಕ್ಷಿಣದವರು, ಪಶ್ಚಿಮದವರು, ಪರ್ವತವಾಸಿ ರಥರು, ಗಾಂಧಾರರಾಜ ಶಕುನಿ, ಪೂರ್ವದೇಶದವರೆಲ್ಲರೂ, ಶಕರು, ಕಿರಾತರು, ಯವನರು, ಶಿಬಿಗಳು, ವಸಾತರು ತಮ್ಮ ತಮ್ಮ ಸೇನೆಗಳಿಂದ ಸುತ್ತುವರೆಯಲ್ಪಟ್ಟು ಒಟ್ಟಿಗೇ ಹೊರಟರು. ಈ ಮಹಾರಥಿಗಳು ಎಲ್ಲರೂ ಎರಡನೆಯ ಸೇನೆಯಾಗಿ ಹೊರಟರು. ಅನಂತರ ಸೇನೆಯೊಂದಿಗೆ ಕೃತವರ್ಮ, ಮಹಾಬಲಿಗಳಾದ ತ್ರಿಗರ್ತರು, ಭ್ರಾತೃಗಳಿಂದ ಪರಿವೃತನಾದ ನೃಪತಿ ದುರ್ಯೋಧನ, ಶಲ, ಭೂರಿಶ್ರವ, ಶಲ್ಯ, ಕೌಸಲ್ಯ ಬೃಹದ್ಬಲ ಇವರು ಧಾರ್ತರಾಷ್ಟ್ರನನ್ನು ಮುಂದಿಟ್ಟುಕೊಂಡು ಹಿಂದಿನಿಂದ ಹೊರಟರು. ಯುದ್ಧಮಾಡಲಿರುವ ಈ ಕವಚಧಾರೀ ಮಹಾರಥಿಗಳು ಸಮನಾದ ಪಥದಲ್ಲಿ ಪ್ರಯಾಣಿಸಿ ಕುರುಕ್ಷೇತ್ರದ ಇನ್ನೊಂದು ಅರ್ಧದಲ್ಲಿ ವಸತಿಮಾಡಿಕೊಂಡರು. ದುರ್ಯೋಧನನಾದರೋ ಎಂಥಹ ಶಿಬಿರಗಳನ್ನು ಮಾಡಿಸಿದನೆಂದರೆ ಅವು ಎರಡನೆಯ ಹಸ್ತಿನಾಪುರವೋ ಎಂಬಂತೆ ಸಮಲಂಕೃತವಾಗಿದ್ದವು. ನಗರವಾಸಿ ಕುಶಲ ಜನರಿಗೂ ಕೂಡ ತಮ್ಮ ನಗರ ಮತ್ತು ಶಿಬಿರದ ವ್ಯತ್ಯಾಸವನ್ನು ತಿಳಿಯಲಿಕ್ಕಾಗಲಿಲ್ಲ. ಮಹೀಪತಿ ಕೌರವ್ಯನು ತನಗಿದ್ದ ಹಾಗಿನ ನೂರಾರು ಸಹಸ್ರಾರು ದುರ್ಗಗಳನ್ನು ಇತರ ರಾಜರಿಗೂ ಮಾಡಿಸಿದನು. ಆ ರಣಾಂಗಣದಲ್ಲಿ ಐದು ಯೋಜನ ವಿಸ್ತೀರ್ಣದಲ್ಲಿ ನೂರಾರು ಗುಂಪು ಸೇನಾನಿವೇಶಗಳನ್ನು ಕಟ್ಟಲಾಗಿತ್ತು. ಅಲ್ಲಿ ಆ ಪೃಥಿವೀಪಾಲರು ಅವರವರ ಉತ್ಸಾಹ ಮತ್ತು ಬಲಕ್ಕೆ ತಕ್ಕಂತೆ ದ್ರವ್ಯಗಳಿಂದ ತುಂಬಿದ ಸಹಸ್ರಾರು ಶಿಬಿರಗಳನ್ನು ಪ್ರವೇಶಿಸಿದರು. ರಾಜ ದುರ್ಯೋಧನನು ಸೈನ್ಯದೊಂದಿಗಿರುವ ಆ ಮಹಾತ್ಮರಿಗೆ ಅನುತ್ತಮ ಭಕ್ಷ್ಯ ಭೋಜ್ಯಗಳ ವ್ಯವಸ್ಥೆಯನ್ನೂ ಮಾಡಿಸಿದ್ದನು. ಜೊತೆಗಿರುವ ಆನೆಗಳು, ಕುದುರೆಗಳು, ಮನುಷ್ಯರು, ಶಿಲ್ಪಿಗಳು, ಉಪಜೀವಿಗಳು, ಹಿಂಬಾಲಿಸಿ ಬಂದಿರುವ ಸೂತ, ಮಾಗಧ, ಬಂದಿನರು, ವರ್ತಕರು, ಲೆಕ್ಕ ಮಾಡುವವರು, ವೇಶ್ಯೆಯರು, ಮತ್ತು ಪ್ರೇಕ್ಷಕ ಜನರು ಎಲ್ಲರನ್ನೂ ರಾಜ ಕೌರವನು ವಿಧಿವತ್ತಾಗಿ ನೋಡಿಕೊಂಡನು.

ಪಾಂಡವಸೇನಾನಿರ್ಯಾಣ

ಹಾಗೆಯೇ ರಾಜ ಕೌಂತೇಯ ಧರ್ಮಪುತ್ರ ಯುಧಿಷ್ಠಿರನೂ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ವೀರರನ್ನು ಪ್ರಚೋದಿಸಿದನು. ಚೇದಿ, ಕಾಶಿ ಮತ್ತು ಕರೂಷಣರ ನೇತಾರ ದೃಢವಿಕ್ರಮಿ ಸೇನಾಪತಿ ಅಮಿತ್ರಘ್ನ ಧೃಷ್ಟಕೇತು, ವಿರಾಟ, ದ್ರುಪದ, ಯುಯುಧಾನ, ಶಿಖಂಡಿ, ಮತ್ತು ಮಹೇಷ್ವಾಸರಾದ ಪಾಂಚಾಲರಿಬ್ಬರು ಯುಧಾಮನ್ಯು-ಉತ್ತಮೌಜಸರು ಹೊರಟರು. ವಿಚಿತ್ರ ಕವಚಗಳನ್ನು ಧರಿಸಿದ್ದ, ಬೆಳಗುತ್ತಿರುವ ಕುಂಡಲಗಳನ್ನು ಧರಿಸಿದ, ಅರಳಿನಿಂದ ಅವಸಿಕ್ತರಾಗಿದ್ದ ಆ ಶೂರ ಮಹೇಷ್ವಾಸರು ತುಪ್ಪವನ್ನು ಸುರಿಸಿ ಭುಗಿಲೆದ್ದ ಅಗ್ನಿಗಳಂತೆ ಮತ್ತು ಪ್ರಜ್ವಲಿಸುತ್ತಿರುವ ಗ್ರಹಗಳಂತೆ ಶೋಭಿಸಿದರು. ಮಹೀಪತಿ ನರರ್ಷಭನು ಸೈನ್ಯವನ್ನು ಯಥಾಯೋಗವಾಗಿ ಪೂಜಿಸಿ ಆ ಸೇನೆಗಳಿಗೆ ಪ್ರಯಾಣಿಸಲು ಆಜ್ಞೆಯನ್ನಿತ್ತನು. ಮೊದಲು ಪಾಂಡುನಂದನನು ಅಭಿಮನ್ಯು, ಬೃಹಂತ ಮತ್ತು ದ್ರೌಪದೇಯರೆಲ್ಲರನ್ನೂ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಕಳುಹಿಸಿದನು. ಎರಡನೆಯ ಸೇನೆಯಾಗಿ ಯುಧಿಷ್ಠಿರನು ಭೀಮ, ಯುಯುಧಾನ, ಪಾಂಡವ ಧನಂಜಯರನ್ನು ಕಳುಹಿಸಿದನು. ಸಂತೋಷದಿಂದ ಧ್ವಜಗಳನ್ನು ಏರಿಸುವ, ಅಲ್ಲಲ್ಲಿ ಓಡಾಡತ್ತಿರುವ ಯೋಧರ ಶಬ್ಧವು ಆಕಾಶವನ್ನು ಮುಟ್ಟಿತು. ಸ್ವಯಂ ಮಹೀಪತಿಯು ವಿರಾಟ ದ್ರುಪದರೇ ಮೊದಲಾದ ಪೃಥಿವೀಪಾಲರೊಂದಿಗೆ ಹಿಂದೆ ನಡೆದನು. ಧೃಷ್ಟದ್ಯುಮ್ನನು ನಡೆಸುತ್ತಿದ್ದ ಆ ಭೀಮಧನ್ವಿಗಳ ಸೇನೆಯು ಪ್ರವಾಹವಾಗಿ ಮತ್ತು ಸ್ತಿಮಿತಗೊಂಡು ಹರಿಯುತ್ತಿರುವ ಗಂಗೆಯಂತೆ ತೋರಿತು. ಆಗ ಬುದ್ಧಿವಂತನು ಧೃತರಾಷ್ಟ್ರನ ಪುತ್ರರನ್ನು ಮೋಹಗೊಳಿಸಲು ಬುದ್ಧಿಯನ್ನುಪಯೋಗಿಸಿ ತನ್ನ ಸೇನೆಗಳನ್ನು ವಿಂಗಡಿಸಿದನು. ಮೊದಲನೆಯದರಲ್ಲಿ ಮಹೇಷ್ವಾಸರಾದ ದ್ರೌಪದೇಯರು, ಅಭಿಮನ್ಯು, ಪಾಂಡವ ನಕುಲ ಸಹದೇವರು ಮತ್ತು ಸರ್ವ ಪ್ರಭದ್ರಕರೂ ಇದ್ದರು. ಅವರಲ್ಲಿ ಹತ್ತು ಸಾವಿರ ಕುದುರೆಗಳು, ಎರಡು ಸಾವಿರ ಆನೆಗಳು, ಒಂದು ಲಕ್ಷ ಪದಾತಿಗಳು ಮತ್ತು ಐನೂರು ರಥಗಳಿದ್ದವು. ದುರ್ಧರ್ಷ ಭೀಮಸೇನನು ಈ ಮೊದಲನೆಯ ಸೇನೆಯನ್ನು ನೋಡಿಕೊಂಡನು. ಮಧ್ಯಮ ಸೇನೆಯಲ್ಲಿ ವಿರಾಟ, ಮಾಗಧ ಜಯತ್ಸೇನ, ಮಹಾರಥಿ, ವೀರ್ಯವಂತ, ಮಹಾತ್ಮ, ಗದೆ-ಧನುಸ್ಸುಗಳನ್ನು ಹಿಡಿದ ಪಾಂಚಲರಿಬ್ಬರು - ಯುಧಾಮನ್ಯು, ಉತ್ತಮೌಜಸರು, ಮತ್ತು ಅವರ ಮಧ್ಯೆ ವಾಸುದೇವ-ಧನಂಜಯರಿಬ್ಬರಿದ್ದರು. ಆ ಸೇನೆಯಲ್ಲಿ ಅತಿ ಉತ್ಸಾಹಿಗಳಾದ ಪ್ರಹರಗಳಲ್ಲಿ ಕುಶಲರಾದ ಇಪ್ಪತ್ತುಸಾವಿರ ಧ್ವಜಗಳನ್ನು ಹಿಡಿದ ಶೂರ ಕವಚಧಾರೀ ನರರಿದ್ದರು. ಐದು ಸಾವಿರ ಆನೆಗಳಿದ್ದವು. ಎಲ್ಲೆಡೆಯಲ್ಲಿಯೂ ರಥಗಳಿದ್ದವು. ಧನುಸ್ಸು, ಖಡ್ಗ ಮತ್ತು ಗದೆಗಳನ್ನು ಧರಿಸಿದ ಶೂರ ಪದಾತಿಗಳಿದ್ದರು. ಮುಂದೆ ಹೋಗುತ್ತಿರುವ ಸಹಸ್ರಗಳನ್ನು ಸಹಸ್ರಗಳು ಹಿಂಬಾಲಿಸಿದವು. ಸ್ವಯಂ ಯುಧಿಷ್ಟಿರನಿದ್ದ ಸೇನೆಯಲ್ಲಿ ಸೇನಾಸಾಗರದಲ್ಲಿ ಇನ್ನುಳಿದ ಪೃಥಿವೀಪಾಲಕರು ಸೇರಿಕೊಂಡಿದ್ದರು. ಅದರಲ್ಲಿ ಸಹಸ್ರಾರು ಆನೆಗಳು, ಲಕ್ಷಗಟ್ಟಲೆ ಕುದುರೆಗಳು. ಸಹಸ್ರಾರು ರಥಗಳು, ಹಾಗೆಯೇ ಪದಾತಿಗಳಿದ್ದರು. ಅವರನ್ನು ಆಶ್ರಯಿಸಿ ಅವನು ಧಾರ್ತರಾಷ್ಟ್ರ ಸುಯೋಧನನೊಡನೆ ಯುದ್ಧಮಾಡಲು ಹೊರಟನು. ಅದರ ಹಿಂದಿನಿಂದ ನೂರಾರು ಸಹಸ್ರಾರು ಲಕ್ಷಲಕ್ಷ ಜನರು ಸಾವಿರಾರು ಸೇನೆಗಳಲ್ಲಿ ಜೋರಾಗಿ ಕೂಗುತ್ತಾ ಪ್ರಯಾಣಿಸಿದರು. ಅಲ್ಲಿ ಸಂತೋಷಗೊಂಡ ಸಹಸ್ರಾರು ಲಕ್ಷ ಜನರು ಸಹಸ್ರಾರು ಭೇರಿಗಳನ್ನು ಲಕ್ಷಗಟ್ಟಲೆ ಶಂಖಗಳನ್ನು ಮೊಳಗಿಸಿದರು.

Leave a Reply

Your email address will not be published. Required fields are marked *