ಶ್ರೀಕೃಷ್ಣ ರಾಯಭಾರ - ೪

ಕೃಷ್ಣನ ಮೂಲಕ ಕುಂತಿಯು ಪಾಂಡವರಿಗೆ ಕಳುಹಿದ ಸಂದೇಶ

ಅವಳ ಮನೆಯನ್ನು ಪ್ರವೇಶಿಸಿ ಚರಣಗಳಿಗೆ ವಂದಿಸಿ ಕುರುಸಂಸದಿಯಲ್ಲಿ ನಡೆದುದನ್ನು ಸಂಕ್ಷಿಪ್ತವಾಗಿ ವರದಿಮಾಡಿದನು: “ಸ್ವೀಕರಿಸಬೇಕಾಗಿದ್ದಂತಹ ಬಹುವಿಧದ ಮಾತುಗಳನ್ನು ಕಾರಣಗಳನ್ನು ಕೊಟ್ಟು ಋಷಿಗಳು ಮತ್ತು ನಾನು ಹೇಳಿದೆವು. ಆದರೆ ಅವುಗಳನ್ನು ಸ್ವೀಕರಿಸಲಿಲ್ಲ. ದುರ್ಯೋಧನನ ವಶಕ್ಕೆ ಬಂದಿರುವ ಮತ್ತು ಅವನನ್ನು ಅನುಸರಿಸುವ ಎಲ್ಲರ ಕಾಲವು ಪಕ್ವವಾಗಿದೆ. ನನಗೆ ಪಾಂಡವರ ಕಡೆ ಶೀಘ್ರವಾಗಿ ಹೋಗಬೇಕಾಗಿದೆ. ಆದುದರಿಂದ ನಿನ್ನಲ್ಲಿ ಕೇಳುತ್ತಿದ್ದೇನೆ. ಪಾಂಡವರಿಗೆ ಹೇಳಲು ನಿನ್ನ ಸಂದೇಶವೇನೆಂದು ನನಗೆ ಹೇಳು. ನಿನ್ನ ಮಾತನ್ನು ಕೇಳುತ್ತೇನೆ.”

ಕುಂತಿಯು ಹೇಳಿದಳು: “ಕೇಶವ! ಧರ್ಮಾತ್ಮ ರಾಜಾ ಯುಧಿಷ್ಠಿರನಿಗೆ ಹೇಳು - ‘ನಿನ್ನ ಧರ್ಮವು ಕ್ಷೀಣಿಸುತ್ತಿದೆ. ಮಗನೇ! ವೃಥಾ ಕೆಲಸಮಾಡಬೇಡ! ಕೇವಲ ಕೇಳಿ ಕಲಿತವರಂತೆ ನಿನ್ನ ತಿಳುವಳಿಕೆಯು ಕಡಿಮೆ. ಬರಿಯ ಮಾತುಗಳನ್ನು ಅನುಸರಿಸುವ ಬುದ್ಧಿಯು ಒಂದೇ ಧರ್ಮವನ್ನು ನೋಡುತ್ತಿದೆ. ಸ್ವಯಂಭುವು ಸೃಷ್ಟಿಸಿದ ನಿನ್ನದೇ ಜಾತಿಯ ಧರ್ಮವನ್ನು ನೋಡು. ಅವನ ಬಾಹುಗಳಿಂದ ಹೊರಬಂದ ಕ್ಷತ್ರಿಯನು ಬಾಹವೀರ್ಯದಿಂದ ಜೀವಿಸಬೇಕು. ನಿತ್ಯವೂ ಕ್ರೂರಕರ್ಮಗಳಿಂದ ಪ್ರಜೆಗಳನ್ನು ಪರಿಪಾಲಿಸಬೇಕು. ಇದರ ಕುರಿತು ನಾನು ವೃದ್ಧರಿಂದ ಕೇಳಿದ್ದ ಉಪಮೆಯೊಂದು ಇದೆ. ಕೇಳು. ಹಿಂದೆ ರಾಜರ್ಷಿ ಮುಚುಕುಂದನಿಗೆ ಈ ಭೂಮಿಯನ್ನು ವೈಶ್ರವಣನು ಅವನ ಮೇಲಿನ ಪ್ರೀತಿಯಿಂದ ಕೊಟ್ಟಿದ್ದನು. ಆದರೆ ಅವನು ಹೀಗೆ ಹೇಳಿ ಅದನ್ನು ಸ್ವೀಕರಿಸಲಿಲ್ಲ: ‘ಬಾಹುವೀರ್ಯದಿಂದ ಗಳಿಸಿದ ರಾಜ್ಯವನ್ನು ಆಳಲು ಬಯಸುತ್ತೇನೆ!’ ಆಗ ವೈಶ್ರವಣನು ವಿಸ್ಮಿತನಾಗಿ ಪ್ರೀತನಾದನು. ರಾಜ ಮುಚುಕುಂದನು ಕ್ಷತ್ರಿಯಧರ್ಮವನ್ನು ಅನುಸರಿಸಿ ಬಾಹುವೀರ್ಯದಿಂದ ಇಡೀ ಭೂಮಿಯನ್ನು ಗೆದ್ದು ಚೆನ್ನಾಗಿ ಆಳಿದನು.

“ಧರ್ಮದಿಂದ ನಡೆದುಕೊಳ್ಳುವ ಪ್ರಜೆಗಳನ್ನು ರಾಜನು ಸುರಕ್ಷಿಸಿದರೆ ಅವರ ಧರ್ಮದ ನಾಲ್ಕನೆಯ ಒಂದು ಭಾಗವು ರಾಜನಿಗೆ ತಗಲುತ್ತದೆ. ರಾಜನೇ ಆಚರಿಸುವ ಧರ್ಮವು ಅವನಿಗೆ ದೇವತ್ವವನ್ನು ಕಲ್ಪಿಸುತ್ತದೆ. ಅವನು ಅಧರ್ಮವನ್ನು ಆಚರಿಸಿದರೆ ನರಕಕ್ಕೇ ಹೋಗುತ್ತಾನೆ. ದಂಡನೀತಿಯು ಚಾತುರ್ವಣ್ಯಗಳು ಸ್ವಧರ್ಮಗಳಲ್ಲಿರುವಂತೆ ನಿಯಂತ್ರಿಸುತ್ತದೆ. ರಾಜನು ಅದನ್ನು ಸರಿಯಾಗಿ ಬಳಸುವುದರಿಂದ ಉತ್ತಮ ಧರ್ಮವನ್ನೂ ಪಡೆಯುತ್ತಾನೆ. ಯಾವಾಗ ರಾಜನು ದಂಡನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರುತ್ತಾನೋ ಆಗ ಕೃತಯುಗವೆಂಬ ಹೆಸರಿನ ಶ್ರೇಷ್ಠಕಾಲವು ಬರುತ್ತದೆ. ಕಾಲವು ರಾಜನ ಕಾರಣವೋ ರಾಜನು ಕಾಲದ ಕಾರಣವೋ ಎನ್ನುವ ಸಂಶಯ ಬೇಡ. ರಾಜನೇ ಕಾಲದ ಕಾರಣವಾಗುತ್ತಾನೆ. ರಾಜನೇ ಕೃತ, ತ್ರೇತ, ದ್ವಾಪರ ಯುಗಗಳನ್ನು ಸೃಷ್ಟಿಸುತ್ತಾನೆ. ನಾಲ್ಕನೆಯ ಯುಗಕ್ಕೂ ರಾಜನೇ ಕಾರಣನಾಗುತ್ತಾನೆ. ಕೃತದ ಕಾರಣದಿಂದ ರಾಜನು ಅತ್ಯಂತ ಸ್ವರ್ಗವನ್ನು ಅನುಭವಿಸುತ್ತಾನೆ. ತ್ರೇತದ ಕಾರಣದಿಂದ ರಾಜನು ಅತ್ಯಂತ ಸ್ವರ್ಗವನ್ನು ಅನುಭವಿಸುವುದಿಲ್ಲ. ದ್ವಾಪರ ಯುಗವನ್ನು ತಂದರೆ ರಾಜನು ಅವನಿಗೆ ಸಿಗಬೇಕಾಗಿದ್ದ ಭಾಗವನ್ನು ಮಾತ್ರ ಅನುಭವಿಸುತ್ತಾನೆ. ದುಷ್ಕರ್ಮಗಳನ್ನು ಮಾಡಿದ ರಾಜನು ಶಾಶ್ವತ ವರ್ಷಗಳ ವರೆಗೆ ನರಕದಲ್ಲಿ ವಾಸಿಸುತ್ತಾನೆ. ಏಕೆಂದರೆ ರಾಜನ ದೋಷಗಳು ಜಗತ್ತಿಗೆ ಮತ್ತು ಜಗತ್ತಿನ ದೋಷಗಳು ಅವನಿಗೆ ತಗಲುತ್ತವೆ.

“ನಿನ್ನ ಪಿತೃಪಿತಾಮಹರಿಗೆ ಉಚಿತವಾದ ರಾಜಧರ್ಮವನ್ನು ಅನುಸರಿಸು. ನೀನು ಯಾವ ರಾಜರ್ಷಿ ಪದವಿಯನ್ನು ಬಯಸುತ್ತೀಯೋ ಅದು ಇದಲ್ಲ. ಏಕೆಂದರೆ ದುರ್ಬಲ ಹೃದಯಿಯಾಗಿ, ಕರುಣಾಜನಕನಾಗಿ ಪ್ರಜಾಪಾಲನೆಯನ್ನು ಮಾಡುವ ನೃಪನಿಗೆ ಏನೂ ಫಲವು ದೊರಕುವುದಿಲ್ಲ. ಯಾವ ವಿಚಾರದಿಂದ ನೀನು ನಡೆದುಕೊಳ್ಳುತ್ತಿರುವೆಯೋ ಅದನ್ನು ಹಿಂದೆ ನಾವು ಯಾರೂ - ಪಾಂಡು, ನಾನು, ನಿನ್ನ ಪಿತಾಮಹರು ಆಶಿಸಿರಲಿಲ್ಲ. ನಾನು ಯಾವಾಗಲೂ ಯಜ್ಞ, ದಾನ, ತಪಸ್ಸು, ಶೌರ್ಯ, ಪ್ರಜಾಸಂತಾನ, ಮಹಾತ್ಮೆ, ಬಲ ಮತ್ತು ಓಜಸ್ಸುಗಳನ್ನು ಆಶಿಸಿದ್ದೆ. ಸರಿಯಾಗಿ ಆರಾಧಿಸಲ್ಪಟ್ಟ ಶುಭ ಮಾನುಷ ದೇವತೆಗಳಾದ ಬ್ರಾಹ್ಮಣರು ನಿತ್ಯ ಸ್ವಾಹಾ ಮತ್ತು ನಿತ್ಯ ಸ್ವಧಾಗಳಿಂದ ದೀರ್ಘ ಆಯುಸ್ಸನ್ನೂ, ಧನವನ್ನೂ ಪುತ್ರರನ್ನೂ ನೀಡುವರು. ಪಿತೃಗಳು ಮತ್ತು ದೇವತೆಗಳು ಪುತ್ರರಿಂದ ನಿತ್ಯವೂ ದಾನ, ಅಧ್ಯಯನ, ಯಜ್ಞ ಮತ್ತು ಪ್ರಜೆಗಳ ಪರಿಪಾಲನೆಯನ್ನು ಆಶಿಸುತ್ತಾರೆ.

“ಇದು ಧರ್ಮ ಅಥವಾ ಅಧರ್ಮವೆನ್ನುವುದು ಜನ್ಮದಿಂದಲೇ ಹುಟ್ಟಿಕೊಳ್ಳುತ್ತದೆ. ಮಗೂ! ಒಳ್ಳೆಯ ಕುಲದಲ್ಲಿ ಹುಟ್ಟಿ ವಿದ್ಯಾವಂತನಾಗಿ ವೃತ್ತಿಯಿಲ್ಲದೇ ಪೀಡಿತರಾಗಿ ಭೂಮಿಯನ್ನು ತಿರುಗಿ ಬಳಲಿದವರು ದಾನಪತಿ ಶೂರನನ್ನು ಸೇರಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಂಡರೆ ಅದಕ್ಕಿಂತ ಶ್ರೇಷ್ಠವಾದ ಧರ್ಮವು ಯಾವುದಿದೆ? ಧಾರ್ಮಿಕನಾದವನು ದಾನದಿಂದಾಗಲೀ, ಬಲದಿಂದಾಗಲೀ ಹಾಗೆಯೇ ಸಾಮ್ಯದಿಂದಾಗಲೀ ಎಲ್ಲಕಡೆಗಳಿಂದ ರಾಜ್ಯಗಳನ್ನು ಪಡೆಯುತ್ತಾನೆ. ಬ್ರಾಹ್ಮಣನು ಸಂಚರಿಸಿ ಭಿಕ್ಷಬೇಡಬೇಕು. ಕ್ಷತ್ರಿಯನು ಪ್ರಜಾಪಾಲನೆ ಮಾಡಬೇಕು. ವೈಶ್ಯನು ಧನಾರ್ಜನೆ ಮಾಡಬೇಕು. ಮತ್ತು ಶೂದ್ರನು ಅವರೆಲ್ಲರ ಪರಿಚಾರಕನಾಗಿರಬೇಕು. ನಿನಗೆ ಭಿಕ್ಷಾಟನೆಯು ನಿಷಿದ್ಧ. ನೀನು ಕೃಷಿ-ವಾಣಿಜ್ಯಗಳಿಂದಲೂ ಜೀವಿಸುವಂತಿಲ್ಲ. ಕ್ಷತ್ರಿಯನಾಗಿರುವೆ. ಬಾಹುವೀರ್ಯುದಿಂದ ಪೀಡಿತರಾದವರನ್ನು ಕಾಪಾಡಿ ಉಪಜೀವಿಸು. ವಶಪಡೆಸಿಕೊಂಡಿರುವ ಪಿತ್ರಾರ್ಜಿತವನ್ನು ಪುನಃ ಸಾಮ, ದಾನ, ಭೇದ, ದಂಡ ಅಥವಾ ನಯದಿಂದ ಪಡೆದುಕೋ.

“ನಾನು ಬಾಂಧವರಿಲ್ಲದವಳಾಗಿದ್ದೇನೆ ಎನ್ನುವುದಕ್ಕಿಂತ ದುಃಖತರವಾದುದು ಇನ್ನೇನಿದೆ? ನಿನ್ನನ್ನು ಹೆತ್ತು ನಾನು ಪರರ ಕೂಳಿನ ನಿರೀಕ್ಷೆಯಲ್ಲಿದ್ದೇನೆ. ರಾಜಧರ್ಮದಿಂದ ಯುದ್ಧಮಾಡು! ಪಿತಾಮಹರನ್ನು ಮುಳುಗಿಸಬೇಡ! ಅನುಜರೊಂದಿಗೆ ಪಾಪಿಗಳ ದಾರಿಯಲ್ಲಿ ಹೋಗಬೇಡ. ಪುಣ್ಯವನ್ನು ಕಳೆದುಕೊಳ್ಳಬೇಡ!

“ಇದರ ಕುರಿತಾಗಿ ವಿದುರೆಯು ತನ್ನ ಪುತ್ರನೊಡನೆ ನಡೆಸಿದ ಪುರಾತನ ಐತಿಹಾಸಿಕ ಸಂವಾದವನ್ನು ಉದಾಹರಿಸುತ್ತಾರೆ. ಇದರಲ್ಲಿ ಬಹಳಷ್ಟು ಶ್ರೇಯಸ್ಕರ ವಿಷಯಗಳಿವೆ. ಇದನ್ನು ಯಥಾವತ್ತಾಗಿ ಅವನಿಗೆ ಹೇಳಬೇಕು.

“ಕೇಶವ! ಅರ್ಜುನನಿಗೆ ಹೇಳು - ‘ನೀನು ಹುಟ್ಟಿದಾಗ ನಾನು ನಾರಿಯರಿಂದ ಸುತ್ತುವರೆಯಲ್ಪಟ್ಟು ಆಶ್ರಮದಲ್ಲಿ ಕುಳಿತುಕೊಂಡಿದ್ದೆ. ಆಗ ಅಂತರಿಕ್ಷದಲ್ಲಿ ದಿವ್ಯರೂಪದ ಮನೋರಮ ಮಾತಾಯಿತು. ‘ಕುಂತೀ! ನಿನ್ನ ಮಗನು ಸಹಸ್ರಾಕ್ಷಸಮನಾಗುತ್ತಾನೆ. ಇವನು ಸಂಗ್ರಾಮದಲ್ಲಿ ಸೇರುವ ಕುರುಗಳೆಲ್ಲರನ್ನೂ ಭೀಮಸೇನನ ಸಹಾಯದಿಂದ ಜಯಿಸಿ ಲೋಕವನ್ನು ಉದ್ಧರಿಸುತ್ತಾನೆ. ನಿನ್ನ ಮಗನು ವಾಸುದೇವನ ಸಹಾಯಕನಾಗಿ ರಣದಲ್ಲಿ ಕುರುಗಳನ್ನು ಕೊಂದು ಪೃಥ್ವಿಯನ್ನು ಗೆದ್ದು ಅವನ ಯಶಸ್ಸು ದಿವವನ್ನೂ ಮುಟ್ಟುತ್ತದೆ. ಕಳೆದುಹೋದ ಪಿತ್ರ್ಯಂಶವನ್ನು ಪುನಃ ಪಡೆದು ಬೆಳೆಸುತ್ತಾನೆ. ಸಹೋದರರೊಂದಿಗೆ ಈ ಶ್ರೀಮಾನನು ಮೂರು ಯಾಗಗಳನ್ನು ನೆರವೇರಿಸುತ್ತಾನೆ.’

“ಅಚ್ಯುತ! ಆ ಸತ್ಯಸಂಧ, ಬೀಭತ್ಸು, ಸವ್ಯಸಾಚಿಯು ನಾನು ತಿಳಿದಂತೆ ಬಲವಂತನೂ ದುರಾಸದನೂ ಆಗಿದ್ದರೆ ಆ ಮಾತು ಹೇಳಿದಂತೆಯೇ ಆಗುತ್ತದೆ. ಧರ್ಮವಿದೆಯಂತಾದರೆ ಇದು ಸತ್ಯವಾಗುತ್ತದೆ. ನೀನೂ ಕೂಡ ಹಾಗೆಯೇ ಎಲ್ಲವೂ ಆಗುವಂತೆ ಒದಗಿಸಿಕೊಡುತ್ತೀಯೆ. ಆ ಮಾತು ಆಡಿದುದನ್ನು ನಾನೂ ಕೂಡ ಪ್ರಶ್ನಿಸುವುದಿಲ್ಲ. ಮಹಾ ಧರ್ಮಕ್ಕೆ ನಮಸ್ಕರಿಸುತ್ತೇನೆ. ಧರ್ಮವು ಪ್ರಜೆಗಳನ್ನು ಪಾಲಿಸುತ್ತದೆ. ಇದನ್ನು ಧನಂಜಯನಿಗೆ ಹೇಳು. ಇದನ್ನು ನಿತ್ಯವೂ ಉದ್ಯುಕ್ತನಾಗಿರುವ ವೃಕೋದರನಿಗೆ ಹೇಳು: ‘ಕ್ಷಾತ್ರಣಿಯು ಯಾವ ಕಾರಣಕ್ಕಾಗಿ ಹಡೆಯುತ್ತಾಳೆಯೋ ಅದರ ಕಾಲವು ಬಂದೊದಗಿದೆ. ಪುರುಷರ್ಷಭರು ವೈರವು ಎದುರಾದಾಗ ಹೇಡಿಗಳಾಗುವುದಿಲ್ಲ.’ ನಿನಗೆ ತಿಳಿದೇ ಇದೆ. ಶತ್ರುಗಳನ್ನು ಅಂತ್ಯಗೊಳಿಸುವವರೆಗೆ ಆ ಶತ್ರುಕರ್ಶನ ಭೀಮನ ಬುದ್ಧಿಯು ಶಾಂತವಾಗುವುದಿಲ್ಲ. ಸರ್ವಧರ್ಮಗಳ ವಿಶೇಷತೆಯನ್ನು ತಿಳಿದುಕೊಂಡಿರುವ, ಮಹಾತ್ಮ ಪಾಂಡುವಿನ ಸೊಸೆ, ಕಲ್ಯಾಣೀ, ಯಶಸ್ವಿನೀ ಕೃಷ್ಣೆಗೆ ಇದನ್ನು ಹೇಳು: ‘ಮಹಾಭಾಗೇ! ಉತ್ತಮ ಕುಲದಲ್ಲಿ ಹುಟ್ಟಿದವಳಿಗೆ ತಕ್ಕಂತೆ ನೀನು ನನ್ನ ಮಕ್ಕಳೆಲ್ಲರೊಡನೆ ವರ್ತಿಸಿದ್ದೀಯೆ.’ ಕ್ಷತ್ರಧರ್ಮರತರಾದ ಆ ಮಾದ್ರೀಪುತ್ರರಿಬ್ಬರಿಗೂ ಹೇಳು: ‘ಜೀವಕ್ಕಿಂತ ವಿಕ್ರಮದಿಂದ ಗಳಿಸಿದ ಭೋಗವನ್ನು ಆರಿಸಬೇಕು. ವಿಕ್ರಮದಿಂದ ಗಳಿಸಿದ ಸಂಪತ್ತು ಕ್ಷತ್ರಧರ್ಮದಿಂದ ಜೀವಿಸುವ ಮನುಷ್ಯನ ಮನಸ್ಸನ್ನು ಸದಾ ಸಂತೋಷಗೊಳಿಸುತ್ತದೆ. ನೀವು ನೋಡುತ್ತಿರುವಾಗಲೇ ಸರ್ವಧರ್ಮಗಳನ್ನೂ ಗಳಿಸಿರುವ ಪಾಂಚಾಲಿಗೆ ಗಡುಸಾಗಿ ಮಾತನಾಡಿದ ಯಾರು ತಾನೇ ಕ್ಷಮೆಗೆ ಅರ್ಹರು? ರಾಜ್ಯವನ್ನು ಕಳೆದುಕೊಂಡಿದ್ದುದಾಗಲೀ, ದ್ಯೂತದಲ್ಲಿ ಸೋತಿದ್ದುದೂ, ಮಕ್ಕಳ ದೂರಹೋದುದು ಇವು ಯಾವುವೂ ನನ್ನ ಈ ದುಃಖಕ್ಕೆ ಕಾರಣವಲ್ಲ. ಆಗ ಆ ಬೃಹತೀ ಶ್ಯಾಮೆಯು ಸಭೆಯಲ್ಲಿ ಅಳುತ್ತಾ ಆ ಮಾನಭಂಗದ ಮಾತುಗಳನ್ನು ಕೇಳಬೇಕಾಯಿತಲ್ಲ ಎನ್ನುವುದು ನನ್ನ ಈ ದುಃಖವನ್ನು ಹೆಚ್ಚಿಸಿದೆ. ರಜಸ್ವಲೆಯಾಗಿದ್ದ, ಸದಾ ಕ್ಷತ್ರಧರ್ಮನಿರತಳಾಗಿರುವ ಆ ವರಾರೋಹೆ ಸತೀ ಕೃಷ್ಣೆಯು ನಾಥವತಿಯಾಗಿದ್ದರೂ ಅಲ್ಲಿ ಅನಾಥಳಾಗಿದ್ದಳು.’

“ಮಹಾಬಾಹೋ! ಆ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಪುರುಷವ್ಯಾಘ್ರ ಅರ್ಜುನನಿಗೆ ‘ದ್ರೌಪದಿಯ ದಾರಿಯಲ್ಲಿ ನಡೆ!’ ಎಂದು ಹೇಳು. ಅತ್ಯಂತ ಕೃದ್ಧರಾದ ಭೀಮಾರ್ಜುನರಿಬ್ಬರೂ ಯಮ ಅಂತಕನಂತೆ ದೇವತೆಗಳನ್ನೂ ಪರಾಗತಿಗೆ ಕಳುಹಿಸಬಲ್ಲರು ಎಂದು ನಿನಗೆ ತಿಳಿದೇ ಇದೆ. ದುಃಶಾಸನನು ಕೃಷ್ಣೆಯನ್ನು ಸಭೆಗೆ ಎಳೆದು ತಂದದ್ದು ಮತ್ತು ಭೀಮನಿಗೆ ಕಟುಕಾಗಿ ಮಾತನಾಡಿದುದು ಇವೆರಡರಿಂದಲೂ ಅವರು ಅಪಮಾನಿತರಾಗಿದ್ದರು. ಅವರಿಬ್ಬರಿಗೆ ಇದನ್ನು ಪುನಃ ನೆನಪಿಸಿಕೊಡು. ಪುತ್ರರೊಂದಿಗೆ ಮತ್ತು ಕೃಷ್ಣೆಯೊಂದಿಗೆ ಪಾಂಡವರ ಕುಶಲವನ್ನು ಕೇಳು. ಜನಾರ್ದನ! ತಿರುಗಿ ನಾನು ಕುಶಲದಿಂದಿದ್ದೇನೆಂದು ಅವರಿಗೆ ಹೇಳು. ಹೋಗು! ನಿನ್ನ ಪ್ರಯಾಣವು ಸುಖಕರವಾಗಲಿ. ನನ್ನ ಮುಕ್ಕಳನ್ನು ಪರಿಪಾಲಿಸು!”

ಅವಳನ್ನು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಮಹಾಬಾಹು ಕೃಷ್ಣನು ಸಿಂಹದ ನಡೆಯನ್ನು ನಡೆಯುತ್ತಾ ಹೊರಟನು. ಆಗ ಅವನು ಭೀಷ್ಮಾದಿ ಕುರುಪುಂಗವರನ್ನು ಕಳುಹಿಸಿದನು. ರಥದಲ್ಲಿ ಕರ್ಣನನ್ನು ಏರಿಸಿಕೊಂಡು ಸಾತ್ಯಕಿಯೊಂದಿಗೆ ಪ್ರಯಾಣಿಸಿದನು.

ದಾಶಾರ್ಹನು ಹೊರಟುಹೋಗಲು ಕುರುಗಳು ಸೇರಿಕೊಂಡು ಕೇಶವನೊಂದಿಗೆ ನಡೆದ ಪರಮಾದ್ಭುತ ಮಹದಾಶ್ಚರ್ಯದ ಕುರಿತು ಮಾತನಾಡಿಕೊಂಡರು. “ಪ್ರಮೂಢ ಭೂಮಿಯ ಎಲ್ಲರೂ ಮೃತ್ಯುಪಾಶಕ್ಕ್ಕೆ ಕಟ್ಟಲ್ಪಟ್ಟಿದ್ದಾರೆ. ದುರ್ಯೋಧನನ ಹುಡುಗಾಟದಿಂದ ಹೀಗಾಗಿದೆ!” ಎಂದು ಅವರು ಆಡಿಕೊಂಡರು. ಆಗ ನಗರದಿಂದ ಹೊರಟ ಪುರುಷೋತ್ತಮನು ಬಹಳ ಸಮಯ ಕರ್ಣನೊಂದಿಗೆ ಸಮಾಲೋಚನೆ ಮಾಡಿದನು. ಅನಂತರ ರಾಧೇಯನನ್ನು ಕಳುಹಿಸಿ ಸರ್ವಯಾದವನಂದನನು ತುಂಬಾ ವೇಗದಿಂದ ಹೋಗುವಂತೆ ಕುದುರೆಗಳನ್ನು ಪ್ರಚೋದಿಸಿದನು. ದಾರುಕನಿಂದ ಪ್ರಚೋದಿತಗೊಂಡ ಕುದುರೆಗಳು ಆಕಾಶವನ್ನೇ ಕುಡಿಯುವಂತೆ ಮನಸ್ಸು ಮಾರುತಗಳಂತೆ ಮಹಾ ವೇಗದಿಂದ ಹೋದವು. ಆ ದಾರಿಯನ್ನು ವೇಗವುಳ್ಳ ಗಿಡುಗಗಳಂತೆ ದಾಟಿ ಅವು ಆ ಶಾಂರ್ಙಧನ್ವಿಯನ್ನು ಸೂರ್ಯನು ನೆತ್ತಿಯ ಮೇಲಿರುವಾಗ ಉಪಪ್ಲವ್ಯಕ್ಕೆ ಕರೆದೊಯ್ದವು.

ದುರ್ಯೋಧನನಿಗೆ ಭೀಷ್ಮ-ದ್ರೋಣರ ಸಲಹೆ

ಕುಂತಿಯ ಮಾತುಗಳನ್ನು ಕೇಳಿ ಮಹಾರಥಿಗಳಾದ ಭೀಷ್ಮ-ದ್ರೋಣರಿಬ್ಬರೂ ನಿಯಂತ್ರಿಸಲು ಅಸಾದ್ಯನಾದ ದುರ್ಯೋಧನನಿಗೆ ಹೇಳಿದರು. “ಪುರುಷವ್ಯಾಘ್ರ! ಕೃಷ್ಣನ ಸನ್ನಿಧಿಯಲ್ಲಿ ಕುಂತಿಯು ಹೇಳಿದ ಅರ್ಥವತ್ತಾದ, ಧರ್ಮದಿಂದ ಕೂಡಿದ, ಉತ್ತಮವಾದ, ಅವ್ಯಗ್ರ ಮಾತುಗಳನ್ನು ಕೇಳಿದೆ. ವಾಸುದೇವನಿಗೆ ಸಮ್ಮತಿಯಿದ್ದಂತೆ ಕೌಂತೇಯರು ಮಾಡುತ್ತಾರೆ. ರಾಜ್ಯವನ್ನು ಪಡೆಯದೇ ಅವರು ಶಾಂತಿಮಾರ್ಗದಲ್ಲಿ ಹೋಗುವುದಿಲ್ಲ. ನೀನು ಪಾರ್ಥರಿಗೆ ಸಾಕಷ್ಟು ಕ್ಲೇಶಗಳನ್ನು ಕೊಟ್ಟಿದ್ದೀಯೆ. ಸಭೆಯಲ್ಲಿ ದ್ರೌಪದಿಯನ್ನೂ ಕಾಡಿಸಿದೆ. ಧರ್ಮಪಾಶಕ್ಕೆ ಬದ್ಧರಾಗಿದ್ದ ಅವರು ನಿನ್ನ ಅವೆಲ್ಲವನ್ನೂ ಸಹಿಸಿಕೊಂಡರು. ಅಸ್ತ್ರಗಳನ್ನು ಸಂಪಾದಿಸಿದ ಅರ್ಜುನನನ್ನು, ಧೃಢನಿಶ್ಚಯಿ ಭೀಮನನ್ನು, ಗಾಂಡೀವವನ್ನೂ, ಎರಡು ಅಕ್ಷಯ ಭತ್ತಳಿಕೆಗಳನ್ನು, ರಥವನ್ನೂ ಧ್ವಜವನ್ನೂ ಮತ್ತು ವಾಸುದೇವನ ಸಹಾಯವನ್ನು ಪಡೆದಿರುವ ಯುಧಿಷ್ಠಿರನು ಈಗ ನಿನ್ನನ್ನು ಕ್ಷಮಿಸಲಾರ. ಹಿಂದೆ ವಿರಾಟನಗರದ ಯುದ್ಧದಲ್ಲಿ ಧೀಮತ ಪಾರ್ಥನು ನಮ್ಮೆಲ್ಲರನ್ನೂ ಸೋಲಿಸಿದುದನ್ನು ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ಅವನು ಯುದ್ಧದಲ್ಲಿ ಘೋರಕರ್ಮಿ ದಾನವ ನಿವಾತಕವಚರನ್ನು ರೌದ್ರಾಸ್ತ್ರವನ್ನು ಬಳಸಿ ಆ ಅಸ್ತ್ರದ ಬೆಂಕಿಯಲ್ಲಿ ಅವರನ್ನು ಸುಟ್ಟನು. ಘೋಷಯಾತ್ರೆಯ ವೇಳೆಯಲ್ಲಿ ಕವಚಗಳನ್ನು ಧರಿಸಿ ರಥವನ್ನೇರಿದ್ದ ಅವನು ನಿನ್ನನ್ನು ಮತ್ತು ಕರ್ಣನೇ ಮೊದಲಾದವರನ್ನು ಬಿಡುಗಡೆ ಮಾಡಿದುದೂ ಅದರ ನಿದರ್ಶನವೇ. ಸಹೋದರ ಪಾಂಡವರೊಂದಿಗೆ ಶಾಂತನಾಗು. ಮೃತ್ಯುವಿನ ಹಲ್ಲಿಗೆ ಹೋಗುತ್ತಿರುವ ಈ ಪೃಥ್ವಿಯ ಎಲ್ಲರನ್ನೂ ರಕ್ಷಿಸು. ಈ ದೋಷವನ್ನು ಕಳೆದುಕೊಂಡು ಆ ಪುರುಷವ್ಯಾಘ್ರ, ಶುಚಿ, ಮೃದುವಾದಿ, ವತ್ಸಲ, ಧರ್ಮಶೀಲ ಹಿರಿಯಣ್ಣನ ಬಳಿ ಹೋಗು. ಧನುಸ್ಸನ್ನು ತೊರೆದು ಹುಬ್ಬು ಗಂಟಿಕ್ಕದೇ ಪ್ರಸನ್ನನಾಗಿರುವ ನಿನ್ನನ್ನು ಆ ಶ್ರೀಮಾನನು ನೋಡಿದರೂ ಅದು ಕುಲಕ್ಕೆ ಶಾಂತಿಯನ್ನು ತರುತ್ತದೆ. ಅಮಾತ್ಯರೊಂದಿಗೆ ಆ ರಾಜ ನೃಪಾತ್ಮಜನ ಬಳಿಹೋಗಿ ಭ್ರಾತೃತ್ವದಿಂದ ಅವನನ್ನು ಅಪ್ಪಿಕೋ. ಭೀಮನ ಅಣ್ಣ ಕುಂತೀಪುತ್ರ ಯುಧಿಷ್ಠಿರನು ಅಭಿವಾದಿಸುವ ನಿನ್ನನ್ನು ಸೌಹಾರ್ದತೆಯಿಂದ ತನ್ನೆರಡೂ ಕೈಗಳಿಂದ ಬರಮಾಡಿಕೊಳ್ಳುತ್ತಾನೆ. ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ತನ್ನ ಎರಡೂ ಕೈಗಳಿಂದ ಸಿಂಹದಂತಿರುವ ನಿನ್ನ ತೊಡೆ ಬಾಹುಗಳನ್ನು ಸುತ್ತುವರೆಸಿ ಬಳಸಿ ಆಲಂಗಿಸುತ್ತಾನೆ. ಸಿಂಹಗ್ರೀವ ಗುಡಾಕೇಶ ಪಾರ್ಥ ಕುಂತೀಪುತ್ರ ಧನಂಜಯನು ಪುಷ್ಕರೇಕ್ಷಣ ನಿನ್ನನ್ನು ನಮಸ್ಕರಿಸುತ್ತಾನೆ. ಭೂಮಿಯಲ್ಲಿಯೇ ರೂಪದಲ್ಲಿ ಅಪ್ರತಿಮರಾಗಿರುವ ಆ ಅಶ್ವಿನೀಪುತ್ರರು ನಿನ್ನನ್ನು ಗುರುವಂತೆ ಪ್ರೇಮದ ಪೂಜೆಯಿಂದ ನಿನ್ನನ್ನು ಗೌರವಿಸುತ್ತಾರೆ. ಅಭಿಮಾನವನ್ನು ತೊರೆದು ಭಾತೃಗಳ ಬಳಿಸಾರಿ ಅವರನ್ನು ಸೇರಿಕೋ. ಆಗ ದಾಶಾರ್ಹಪ್ರಮುಖ ನೃಪರು ಆನಂದದಿಂದ ಕಣ್ಣಿರು ಸುರಿಸುತ್ತಾರೆ. ಆಗ ನೀನು ಸಹೋದರರೊಂದಿಗೆ ಇಡೀ ಪೃಥ್ವಿಯನ್ನೇ ಆಳು. ಹರ್ಷದಿಂದ ಈ ನೃಪರು ಪರಸ್ಪರರನ್ನು ಆಲಂಗಿಸಿ ಹಿಂದಿರುಗಲಿ.

“ಈ ಯುದ್ಧವು ಬೇಡವೆನ್ನುವ ಸ್ನೇಹಿತರ ಕಾರಣವನ್ನು ಕೇಳು. ಈ ಯುದ್ಧದಿಂದ ಕ್ಷತ್ರಿಯರ ವಿನಾಶವು ಖಂಡಿತವೆಂದು ಕಾಣುತ್ತದೆ. ಕ್ಷತ್ರಿಯರ ನಾಶವನ್ನು ಸೂಚಿಸುವ ಜ್ಯೋತಿಷ್ಯ, ಮೃಗಪಕ್ಷಿಗಳ ದಾರುಣ ಸಂಕೇತಗಳು, ವಿವಿಧ ಉತ್ಪಾತಗಳು ಕಾಣುತ್ತಿವೆ. ಈ ವಿನಾಶದ ನಿಮಿತ್ತಗಳು ವಿಶೇಷತಃ ನಮ್ಮಲ್ಲಿ ಕಂಡುಬರುತ್ತಿವೆ. ಉರಿಯುತ್ತಿರುವ ಉಲ್ಕೆಗಳು ನಿನ್ನ ಪ್ರದೇಶದಲ್ಲಿ ಬಿದ್ದು ಕಾಡುತ್ತಿವೆ. ನಮ್ಮ ವಾಹನಗಳು ಹರ್ಷದಿಂದಿಲ್ಲ. ರೋದಿಸುತ್ತಿರುವಂತಿವೆ. ನಿನ್ನ ಸೇನೆಯ ಸುತ್ತಲೂ ಹದ್ದುಗಳು ಹಾರಾಡುತ್ತಿವೆ. ನಗರವಾಗಲೀ ಅರಮನೆಯಾಗಲೀ ಮೊದಲಿನಂತಿಲ್ಲ. ಕೆಂಪಾಗಿರುವ ನಾಲ್ಕೂ ಕಡೆಗಳಲ್ಲಿ ನರಿಗಳು ಅಮಂಗಳಕರವಾಗಿ ಕೂಗುತ್ತಾ ಓಡಾಡುತ್ತಿವೆ. ತಂದೆ ತಾಯಿಯರ ಮತ್ತು ಹಿತೈಷಿಗಳಾದ ನಮ್ಮ ಮಾತಿನಂತೆ ಮಾಡು. ಯುದ್ಧ ಮತ್ತು ಶಾಂತಿ ಎರಡೂ ನಿನ್ನ ಕೈಯಲ್ಲಿದೆ. ಒಂದುವೇಳೆ ಸುಹೃದಯರ ಮಾತಿನಂತೆ ಮಾಡದೇ ಇದ್ದರೆ ಪಾರ್ಥನ ಬಾಣಗಳಿಂದ ಪೀಡಿತವಾದ ಸೇನೆಯನ್ನು ನೋಡಿ ಪರಿತಪಿಸುತ್ತೀಯೆ. ರಣದಲ್ಲಿ ಭೀಮನ ಅಟ್ಟಹಾಸವನ್ನು, ಗಾಂಡೀವದ ನಿಸ್ವನವನ್ನೂ ಕೇಳಿ ನನ್ನ ಈ ಮಾತನ್ನು ನೆನಪಿಸಿಕೊಳ್ಳುತ್ತೀಯೆ. ಈಗ ನಿನಗೆ ನಾವು ಹೇಳುವುದು ಅಸ್ವೀಕೃತವಾದರೂ ಆಗ ನಾವು ಹೇಳಿದಂತೆಯೇ ಆಗುತ್ತದೆ.”

ಅವರು ಹೀಗೆ ಹೇಳಲು ಅವನು ವಿಮನಸ್ಕನಾಗಿ, ದೃಷ್ಟಿಯನ್ನು ಕೆಳಗೆಮಾಡಿ, ಹುಬ್ಬುಗಳ ನಡುವೆ ಗಂಟುಮಾಡಿಕೊಂಡು ಚಿಂತಾಮಗ್ನನಾದನು. ಏನನ್ನೂ ಮಾತನಾಡಲಿಲ್ಲ. ಅವನು ಬೇಸರಗೊಂಡಿದ್ದುದನ್ನು ಕಂಡು ಆ ಇಬ್ಬರು ನರರ್ಷಭರೂ ಪರಸ್ಪರರನ್ನು ನೋಡಿ ಪುನಃ ಅವನಿಗೆ ಉತ್ತರಿಸಿ ಹೇಳಿದರು.

ಭೀಷ್ಮನು ಹೇಳಿದನು: “ಶುಶ್ರೂಷೆ ಮಾಡುವ, ಅನಸೂಯ, ಬ್ರಹ್ಮಣ್ಯ, ಸತ್ಯಸಂಗರ ಪಾರ್ಥನೊಂದಿಗೆ ನಾವು ಹೋರಾಡಬೇಕು ಎಂದರೆ ಅದಕ್ಕಿಂತ ಹೆಚ್ಚಿನ ದುಃಖವು ಯಾವುದಿದೆ?”

ದ್ರೋಣನು ಹೇಳಿದನು: “ನನ್ನ ಮಗ ಅಶ್ವತ್ಥಾಮನ ಮೇಲಿರುವುದಕ್ಕಿಂತ ಹೆಚ್ಚು ಪ್ರೀತಿಯು ನನಗೆ ಧನಂಜಯನ ಮೇಲಿದೆ. ರಾಜನ್! ಕಪಿಧ್ವಜನ ಮೇಲೆ ನನಗೆ ಗೌರವವೂ ಇದೆ. ಕ್ಷತ್ರಧರ್ಮವನ್ನು ಅನುಸರಿಸಿರುವ ನಾನು ಮಗನಿಗಿಂತ ಪ್ರಿಯಕರನಾಗಿರುವ ಧನಂಜಯನನ್ನು ವಿರೋಧಿಸಿ ಹೋರಾಡಬೇಕಲ್ಲ! ಕ್ಷತ್ರಿಯನಾಗಿ ಜೀವಿಸುವುದಕ್ಕೆ ಧಿಕ್ಕಾರ! ಲೋಕದಲ್ಲಿ ಯಾರ ಸಮನಾದ ಅನ್ಯ ಧನುರ್ಧರನಿಲ್ಲವೋ ಆ ಬೀಭತ್ಸುವು ನನ್ನ ಕೃಪೆಯಿಂದ ಅನ್ಯ ಧನುರ್ಧರರಿಗಿಂತ ಯಶಸ್ವಿಯಾಗಿದ್ದಾನೆ. ಮಿತ್ರದ್ರೋಹಿ, ದುಷ್ಟಭಾವನೆಯುಳ್ಳವನು, ನಾಸ್ತಿಕ, ಪ್ರಾಮಾಣಿಕನಾಗಿಲ್ಲದಿರುವವನು ಮತ್ತು ಶಠನು ಯಜ್ಞಕ್ಕೆ ಬಂದಿರುವ ಮೂರ್ಖನಂತೆ ಸಂತರಲ್ಲಿ ಗೌರವವನ್ನು ಪಡೆಯುವುದಿಲ್ಲ. ತಡೆಯಲ್ಪಟ್ಟರೂ ಪಾಪಾತ್ಮ ಪಾಪಿಗಳು ಪಾಪವನ್ನು ಮಾಡಲು ಇಚ್ಛಿಸುತ್ತಾರೆ. ಪಾಪದಿಂದ ಪ್ರಚೋದಿಸಲ್ಪಟ್ಟರೂ ಶುಭಾತ್ಮರು ಶುಭವನ್ನೇ ಮಾಡಲು ಬಯಸುತ್ತಾರೆ. ಮೋಸಕ್ಕೊಳಗಾದರೂ ಅವರು ಪ್ರಿಯವಾಗಿ ನಡೆದುಕೊಳ್ಳುತ್ತಾರೆ. ಆದರೆ ನಿನ್ನ ಅಹಿತತ್ವವು ನಿನಗೇ ದೋಷವನ್ನು ತರುತ್ತವೆ. ಕುರುವೃದ್ಧರು, ನಾನು, ಮತ್ತು ವಿದುರರು. ಹಾಗೆಯೇ ವಾಸುದೇವನೂ ನಿನಗೆ ಹೇಳಿದ್ದೇವೆ. ಆದರೂ ನಿನಗೆ ಶ್ರೇಯಸ್ಸಾದುದು ಕಾಣುತ್ತಿಲ್ಲ. ನನ್ನಲ್ಲಿ ಬಲವಿದೆ ಎಂದು ಮೊಸಳೆ, ತಿಮಿಂಗಿಲಗಳಿಂದ ತುಂಬಿದ ಮಳೆಗಾಲದ ಗಂಗೆಯನ್ನು ಕೂಡಲೇ ದಾಟಿಬಿಡುತ್ತೇನೆ ಎನ್ನುವವನ ಹಾಗಿದ್ದೀಯೆ. ಇಂದು ನೀನು ಯುಧಿಷ್ಠಿರನ ಸಂಪತ್ತನ್ನು ಪಡೆದಿದ್ದೇನೆ ಎಂದು ತಿಳಿದುಕೊಂಡಿದ್ದೀಯೆ. ಆದರೆ ನೀನು ಲೋಭದಿಂದ ಕೇವಲ ಅವನು ಬಿಸುಡಿದ ಮಾಲೆಯನ್ನು ಹಿಡಿದು ಕೊಂಡು ಅವನ ಸಂಪತ್ತು ಎಂದು ಭ್ರಮಿಸಿಕೊಂಡಿದ್ದೀಯೆ. ಯುಧಿಷ್ಠಿರನ ಸಂಪತ್ತು ದುರ್ಯೋಧನನು ಕಸಿದುಕೊಂಡ ಕೇವಲ ಅವನ ರಾಜ್ಯವಲ್ಲ ಎಂದರ್ಥ. ರಾಜ್ಯವನ್ನು ಪಡೆದಿದ್ದರೂ ವನಸ್ಥನಾಗಿದ್ದ, ದ್ರೌಪದೀಸಹಿತನಾದ, ಆಯುಧ-ಭ್ರಾತೃಗಳಿಂದ ಆವೃತನಾಗಿರುವ ಪಾಂಡವನನ್ನು ಯಾರು ಅತಿಜೀವಿಸುತ್ತಾರೆ? ಯಾರ ನಿರ್ದೇಶನದಂತೆ ಎಲ್ಲ ರಾಜರೂ ಕಿಂಕರರಾಗಿ ನಿಲ್ಲುತ್ತಾರೋ ಆ ಐಲವಿಲನನ್ನು ಸೇರಿ ಧರ್ಮರಾಜನು ವಿರಾಜಿಸುತ್ತಿದ್ದಾನೆ. ಕುಬೇರಸದನವನ್ನು ಸೇರಿ ಅಲ್ಲಿಂದ ರತ್ನಗಳನ್ನು ಪಡೆದು ಪಾಂಡವರು ಸಮೃದ್ಧವಾಗಿರುವ ನಿನ್ನ ರಾಷ್ಟ್ರವನ್ನು ಆಕ್ರಮಣ ಮಾಡಿ ರಾಜ್ಯವಾಳಲು ಬಯಸುತ್ತಾರೆ. ನಾವು ದಾನಮಾಡಿದ್ದೇವೆ. ಆಹುತಿಗಳನ್ನು ನೀಡಿದ್ದೇವೆ. ಬ್ರಾಹ್ಮಣರನ್ನು ಧನದಿಂದ ತೃಪ್ತಿಗೊಳಿಸಿದ್ದೇವೆ. ನಮ್ಮ ಆಯುಸ್ಸನ್ನು ಬದುಕಿದ್ದೇವೆ. ಇಬ್ಬರೂ ಕೃತಕೃತ್ಯರಾಗಿದ್ದೇವೆಂದು ತಿಳಿ. ಆದರೆ ನೀನು ಸುಖ, ರಾಜ್ಯ, ಮಿತ್ರರು ಮತ್ತು ಐಶ್ವರ್ಯಗಳನ್ನು ಕಡೆಗಣಿಸಿ ಪಾಂಡವರೊಂದಿಗೆ ಕಲಹ ಮಾಡಿ ಮಹಾ ವ್ಯಸನವನ್ನು ಹೊಂದುತ್ತೀಯೆ. ಆ ಸತ್ಯವಾದಿನೀ ದೇವಿ ಘೋರತಪಸ್ಸು ಮತ್ತು ವ್ರತನಿರತಳಾದ ದ್ರೌಪದಿಯು ಯಾರ ವಿಜಯವನ್ನು ಆಶಿಸುವಳೋ ಆ ಪಾಂಡವರನ್ನು ನೀನು ಜಯಿಸಲಾರೆ. ಯಾರ ಮಂತ್ರಿಯು ಜನಾರ್ದನನೋ, ಯಾರ ತಮ್ಮನು ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಧನಂಜಯನೋ ಆ ಪಾಂಡವನನ್ನು ನೀನು ಹೇಗೆ ಜಯಿಸಬಲ್ಲೆ? ಧೃತಿಮಂತರಾದ, ಜಿತೇಂದ್ರಿಯರಾದ, ಉಗ್ರತಾಪಸಿ ಬ್ರಾಹ್ಮಣರು ಯಾರಿಗೆ ಸಹಾಯ ಮಾಡುತ್ತಿದ್ದಾರೋ ಅಂತಹ ವೀರ ಪಾಂಡವನನ್ನು ನೀನು ಹೇಗೆ ಜಯಿಸಬಲ್ಲೆ? ವ್ಯಸನವೆಂಬ ಮಹಾಸಾಗರದಲ್ಲಿ ಮುಳುಗಿಹೋಗುತ್ತಿರುವ ಸ್ನೇಹಿತನಿಗೆ ಸ್ನೇಹಿತನು ಉಳಿಸಲು ಬಯಸುವವನು ಮಾಡುವವನಂತೆ ಪುನಃ ಹೇಳುತ್ತಿದ್ದೇನೆ. ಈ ಯುದ್ಧಮಾಡುವುದನ್ನು ನಿಲ್ಲಿಸು. ಕುರುವೃದ್ಧಿಗಾಗಿ ಆ ವೀರರೊಂದಿಗೆ ಶಾಂತಿಯನ್ನು ಮಾಡಿಕೋ. ನಿನ್ನ ಮಕ್ಕಳು, ಅಮಾತ್ಯರು, ಮತ್ತು ಸೇನೆಯೊಂದಿಗೆ ಪರಾಭವದ ಕಡೆ ಮುಂದುವರೆಯಬೇಡ!”

ಕೃಷ್ಣನು ಹಸ್ತಿನಾಪುರದಲ್ಲಾದುದನ್ನು ಯುಧಿಷ್ಠಿರನಿಗೆ ವರದಿ ಮಾಡುವುದು

ಹಸ್ತಿನಾಪುರದಿಂದ ಉಪಪ್ಲವ್ಯಕ್ಕೆ ಬಂದು ಅರಿಂದಮ ಕೇಶವನು ಪಾಂಡವರಿಗೆ ಎಲ್ಲವನ್ನೂ ಹೇಳಿದನು. ಬಹಳ ಹೊತ್ತು ಮಾತುಕತೆಯಾಡಿ, ಪುನಃ ಪುನಃ ಮಂತ್ರಾಲೋಚನೆ ಮಾಡಿ ಶೌರಿಯು ವಿಶ್ರಾಮಾರ್ಥವಾಗಿ ತನ್ನ ಬಿಡಾರಕ್ಕೆ ಹೋದನು. ಸೂರ್ಯನು ಮುಳುಗಲು ವಿರಾಟನೇ ಮೊದಲಾದ ಸರ್ವ ಪ್ರಮುಖ ರಾಜರನ್ನು ಕಳುಹಿಸಿ ಐವರು ಪಾಂಡವ ಸಹೋದರರು ಸಂಧ್ಯಾವಂದನೆಯನ್ನು ಪೂರೈಸಿದರು. ಸಂಧ್ಯಾವಂದನೆಯನ್ನು ಮುಗಿಸಿ, ಅದರ ಕುರಿತೇ ಯೋಚಿಸಿ, ಮನಸ್ಸನ್ನು ಕಳೆದುಕೊಂಡ ಅವನು ಪುನಃ ಮಂತ್ರಾಲೋಚಿಸಲು ದಾಶಾರ್ಹ ಕೃಷ್ಣನಿಗೆ ಬರಲು ಕರೆ ಕಳುಹಿಸಿದನು.

ಯುಧಿಷ್ಠಿರನು ಹೇಳಿದನು: “ಪುಂಡರೀಕಾಕ್ಷ! ನಾಗಪುರದಲ್ಲಿ ಧೃತರಾಷ್ಟ್ರಜನ ಸಭೆಗೆ ಹೋಗಿ ಏನು ಹೇಳಿದೆ ಎನ್ನುವುದನ್ನು ವಿವರಿಸಬೇಕು.”

ವಾಸುದೇವನು ಹೇಳಿದನು: “ನಾನು ನಾಗಪುರದಲ್ಲಿ ಧೃತರಾಷ್ಟ್ರಜನ ಸಭೆಗೆ ಹೋಗಿ ನಿಜವಾದುದನ್ನೂ, ಪಾಲಿಸಬೇಕಾದುದನ್ನೂ ಮತ್ತು ಹಿತವಾದುದನ್ನೂ ಹೇಳಿದೆನು. ಆದರೆ ಆ ದುರ್ಮತಿಯು ಅದನ್ನು ಸ್ವೀಕರಿಸಲಿಲ್ಲ.”

ಯುಧಿಷ್ಠಿರನು ಹೇಳಿದನು: “ಹೃಷೀಕೇಶ! ಕ್ರೂರಿ ದುರ್ಯೋಧನನು ಕೆಟ್ಟ ದಾರಿಯನ್ನು ಹಿಡಿದಾಗ ಕುರುವೃದ್ಧ ಪಿತಾಮಹನು ಏನು ಹೇಳಿದನು? ಮಹಾಬಾಹು ಆಚಾರ್ಯ ಭಾರದ್ವಾಜನು ಏನು ಹೇಳಿದನು? ನಮ್ಮ ಕಿರಿಯ ತಂದೆಯಾದ, ಧರ್ಮಭೃತರಲ್ಲಿ ಶ್ರೇಷ್ಠನಾದ, ಪುತ್ರಶೋಕದಿಂದ ಸಂತಪ್ತನಾದ ಕ್ಷತ್ತನು ಧೃತರಾಷ್ಟ್ರಜನಿಗೆ ಏನು ಹೇಳಿದನು? ಅಲ್ಲಿ ಸಭೆಯಲ್ಲಿ ಸೇರಿದ್ದ ಎಲ್ಲ ನೃಪತಿಯರು ಏನು ಹೇಳಿದರು? ಅವರು ಹೇಳಿದುದನ್ನು ಯಥಾತತ್ವವಾಗಿ ಹೇಳು. ನೀನು ಈಗಾಗಲೇ ಕುರುಮುಖ್ಯರು ಕಾಮಲೋಭಗಳಿಂದ ತುಂಬಿದ, ಮೂಢನಾಗಿದ್ದರೂ ಪ್ರಾಜ್ಞನೆಂದು ತಿಳಿದುಕೊಂಡಿರುವ ಅವನಿಗೆ ಹೇಳಿದುದೆಲ್ಲವನ್ನೂ ಹೇಳಿದ್ದೀಯೆ. ಆದರೆ ಅಪ್ರಿಯವಾದುದು ನನ್ನ ಹೃದಯದಲ್ಲಿ ನಿಲ್ಲುವುದಿಲ್ಲ. ಅವರ ಮಾತುಗಳನ್ನು ಕೇಳಲು ಬಯಸುತ್ತೇನೆ, ಈ ಅವಕಾಶವು ಕಳೆದುಹೋಗದಂತೆ ಮಾಡು. ನೀನೇ ನಮಗೆ ಗತಿ. ನೀನೇ ನಾಥ. ನೀನೇ ಗುರು.”

ವಾಸುದೇವನು ಹೇಳಿದನು: “ರಾಜನ್! ಕುರುಗಳ ಮಧ್ಯೆ ಸಭೆಯಲ್ಲಿ ರಾಜಾ ಸುಯೋಧನನಿಗೆ ಹೇಳಿದ ಮಾತುಗಳನ್ನು ಕೇಳು. ನನ್ನ ಮಾತನ್ನು ಕೇಳಿ ಧೃತರಾಷ್ಟ್ರಜನು ಜೋರಾಗಿ ನಕ್ಕನು. ಆಗ ಭೀಷ್ಮನು ಸಂಕೃದ್ಧನಾಗಿ ಈ ಮಾತುಗಳನ್ನಾಡಿದನು: “ದುರ್ಯೋಧನ! ಕುಲಾರ್ಥಕ್ಕಾಗಿ ನಾನು ಹೇಳುವುದನ್ನು ಅರ್ಥಮಾಡಿಕೋ! ಅದನ್ನು ಕೇಳಿ ನಿನ್ನ ಕುಲಕ್ಕೆ ಹಿತವಾದುದನ್ನು ಮಾಡು. ನನ್ನ ತಂದೆಯು ಲೋಕವಿಶ್ರುತ ಶಂತನು. ಆ ಪುತ್ರವಂತರಲ್ಲಿ ಶ್ರೇಷ್ಠನಿಗೆ ನಾನೊಬ್ಬನೇ ಮಗನಾಗಿದ್ದೆನು. ಎರಡನೆಯ ಮಗನನ್ನು ಪಡೆಯಬೇಕು ಎಂದು ಅವನ ಬುದ್ಧಿಯಲ್ಲಿ ಯೋಚನೆಯು ಬಂದಿತು. ಏಕೆಂದರೆ ತಿಳಿದವರು ಒಂದೇ ಮಗನೆಂದರೆ ಮಗನೇ ಇಲ್ಲದ ಹಾಗೆ ಎಂದು ಹೇಳುತ್ತಾರೆ. ಈ ಕುಲವು ನಾಶವಾಗಬಾರದು ಮತ್ತು ನನ್ನ ಯಶಸ್ಸು ಹೇಗೆ ಹರಡಬೇಕು ಎಂದು ಯೋಚಿಸಿದ ಅವನ ಬಯಕೆಯನ್ನು ತಿಳಿದುಕೊಂಡು ನಾನು ಕಾಲಿಯನ್ನು ತಾಯಿಯನ್ನಾಗಿ ಕರೆತಂದೆನು. ತಂದೆಗಾಗಿ ಮತ್ತು ಕುಲಕ್ಕಾಗಿ ನಾನು ರಾಜನಾಗಲಾರೆ ಮತ್ತು ಊರ್ಧ್ವರೇತನಾಗಿರುತ್ತೇನೆ ಎಂಬ ದುಷ್ಕರ ಪ್ರತಿಜ್ಞೆಯನ್ನು ಮಾಡಿದುದು ನಿನಗೆ ತಿಳಿದೇ ಇದೆ. ಆ ಪ್ರತಿಜ್ಞೆಯನ್ನು ಪಾಲಿಸುತ್ತಾ ನಾನು ಸಂತೋಷದಿಂದಿದ್ದೇನೆ. ನೋಡು! ಅವನಲ್ಲಿ ಮಹಾಬಾಹು, ಶ್ರೀಮಾನ್, ಕುರುಕುಲೋದ್ವಹ, ಧರ್ಮಾತ್ಮ, ನನ್ನ ಕಿರಿಯ ರಾಜ ವಿಚಿತ್ರವೀರ್ಯನು ಜನಿಸಿದನು. ತಂದೆಯ ಮರಣದ ನಂತರ ನನ್ನದಾಗಬೇಕಾಗಿದ್ದ ರಾಜ್ಯದಲ್ಲಿ ನಾನೇ ವಿಚಿತ್ರವೀರ್ಯನನ್ನು ರಾಜನನ್ನಾಗಿ ಸ್ಥಾಪಿಸಿದೆನು. ಮತ್ತು ಅವನ ಕೆಳಗೆ ಸೇವಕನಾಗಿ ನಡೆದುಕೊಂಡೆನು. ಅವನಿಗೆ ಸದೃಶರಾದ ಪತ್ನಿಯರನ್ನು ನಾನು ಪಾರ್ಥಿವ ಗುಂಪನ್ನು ಗೆದ್ದು ಕರೆದುಕೊಂಡು ಬಂದೆ. ಅದನ್ನು ನೀನು ಬಹಳ ಸಾರಿ ಕೇಳಿದ್ದೀಯೆ. ಆಗ ಸಮರದಲ್ಲಿ ನನಗೆ ರಾಮನೊಂದಿಗೆ ನನ್ನ ದ್ವಂದ್ವಯುದ್ಧಮಾಡುವ ಸಮಯ ಬಂದೊದಗಿತು. ರಾಮನ ಭಯದಿಂದ ಅವನು ನಾಗಸಾಹ್ವಯವನ್ನು ಬಿಟ್ಟು ಓಡಿ ಹೋಗಿದ್ದ. ಪತ್ನಿಯರಲ್ಲಿ ತುಂಬಾ ತೊಡಗಿದ್ದ ಅವನು ಯಮಸದನವನ್ನು ಸೇರಿದನು. ಅರಾಜಕತ್ವದಿಂದ ಸುರೇಶ್ವರನು ರಾಷ್ಟ್ರದಲ್ಲಿ ಮಳೆಯನ್ನು ಸುರಿಸಲಿಲ್ಲ. ಆಗ ಹಸಿವು-ಭಯ ಪೀಡಿತರಾದ ಪ್ರಜೆಗಳು ಅವಸರದಲ್ಲಿ ನನ್ನಲ್ಲಿಗೇ ಬಂದು ಹೇಳಿದರು: “ಪ್ರಜೆಗಳೆಲ್ಲರೂ ನಾಶಗೊಳ್ಳುತ್ತಿದ್ದಾರೆ. ನೀನೇ ರಾಜನಾಗು! ಶಂತನುವಿನ ಕುಲವರ್ಧನ! ಈ ಬರಗಾಲವನ್ನು ಇಲ್ಲವಾಗಿಸು. ನಿನಗೆ ಮಂಗಳವಾಗಲಿ! ನಿನ್ನ ಪ್ರಜೆಗಳೆಲ್ಲರೂ ಅತಿ ತೀಕ್ಷ್ಣ ಮತ್ತು ದಾರುಣ ವ್ಯಾಧಿಗಳಿಂದ ಪೀಡಿತರಾಗಿದ್ದಾರೆ. ಕೆಲವರೇ ಉಳಿದುಕೊಂಡಿದ್ದಾರೆ. ಗಾಂಗೇಯ! ಅವರನ್ನು ರಕ್ಷಿಸಬೇಕು. ಈ ವ್ಯಾಧಿಗಳನ್ನು ಹೋಗಲಾಡಿಸು. ಪ್ರಜೆಗಳನ್ನು ಧರ್ಮದಿಂದ ಪಾಲಿಸು. ನೀನು ಜೀವಂತವಿರುವಾಗಲೇ ರಾಷ್ಟ್ರವು ವಿನಾಶಹೊಂದಲು ಬಿಡಬೇಡ!”

“ಪ್ರಜೆಗಳ ಈ ಅತೀವ ಕ್ರೋಶವು ನನ್ನ ಮನಸ್ಸನ್ನು ಅಲುಗಾಡಿಸಲಿಲ್ಲ. ಪ್ರತಿಜ್ಞೆಯನ್ನು ನೆನಪಿಸಿಕೊಂಡು ಅದನ್ನು ರಕ್ಷಿಸಲು ನಡೆದುಕೊಂಡೆ. ಆಗ ತುಂಬಾ ಸಂತಪ್ತರಾದ ಪೌರರು, ತಾಯಿ ಶುಭೆ ಕಾಲೀ, ಸೇವಕರು, ಪುರೋಹಿತರು, ಆಚಾರ್ಯರು, ವಿದ್ವಾನ್ ಬ್ರಾಹ್ಮಣರು “ರಾಜನಾಗು!” ಎಂದು ಒತ್ತಾಯಿಸಿದರು. “ನಿನ್ನನ್ನು ಪಡೆದ ಈ ಪ್ರತೀಪರಕ್ಷಿತ ರಾಷ್ಟ್ರವು ನಾಶಗೊಳ್ಳುತ್ತಿದೆ. ಮಹಾಮತೇ! ನೀನು ನಮಗಾಗಿಯಾದರೂ ರಾಜನಾಗಿ, ಉದ್ಧರಿಸು!” ಅವರ ಮಾತನ್ನು ಕೇಳಿ, ಕೈಮುಗಿದು ದುಃಖಿತನಾಗಿ ತುಂಬಾ ಆತುರನಾಗಿ ಅವರಿಗೆ ಪಿತೃಗೌರವಕ್ಕಾಗಿ ಮಗನು ಮಾಡಿದ ಮತ್ತು ಕುಲಕ್ಕಾಗಿ ಮಾಡಿದ ಅರಾಜನಾಗಿರುವ ಮತ್ತು ಊರ್ಧ್ವರೇತನಾಗಿರುವ ಪ್ರತಿಜ್ಞೆಯ ಕುರಿತು ಪುನಃ ಪುನಃ ಹೇಳಿದೆ. ಆಗ ನಾನು ಕೈಮುಗಿದು ತಾಯಿಗೆ “ಅಂಬ! ಶಾಂತನುವಿನಲ್ಲಿ ಹುಟ್ಟಿ, ಕೌರವ ವಂಶವನ್ನು ಬೆಂಬಲಿಸುವ ನಾನು ಪ್ರತಿಜ್ಞೆಯನ್ನು ಸುಳ್ಳಾಗಿ ಮಾಡಲಾರೆ” ಎಂದು ಪುನಃ ಪುನಃ ಹೇಳಿ ಸಮಾಧಾನಗೊಳಿಸಿದೆನು. “ವಿಶೇಷವಾಗಿ ನಿನಗೋಸ್ಕರ ಈ ನೇಗಿಲನ್ನು ನನ್ನ ಮೇಲೆ ಹೊರಿಸಬೇಡ. ನಾನು ನಿನ್ನ ದಾಸ ಮತ್ತು ಗುಲಾಮ.” ಹೀಗೆ ನನ್ನ ತಾಯಿಯನ್ನೂ ಜನರನ್ನೂ ಸಮಾಧಾನಗೊಳಿಸಿ ನನ್ನ ತಮ್ಮನ ಪತ್ನಿಯರಿಗಾಗಿ ಮಹಾಮುನಿ ವ್ಯಾಸನನ್ನು ಬೇಡಿಕೊಂಡೆನು. ತಾಯಿಯೊಂದಿಗೆ ಆ ಋಷಿಯನ್ನು ಪೂಜಿಸಿ ಮಕ್ಕಳನ್ನು ಕೇಳಿದಾಗ ಆ ಕೃತವಂತನು ಪ್ರಸಾದವಾಗಿ ಮೂವರು ಪುತ್ರರನ್ನು ಜನಿಸಿದನು. ಅಂಧನೆಂದು ನಿನ್ನ ತಂದೆಯು ರಾಜನಾಗಲಿಲ್ಲ. ಲೋಕವಿಶ್ರುತ ಮಹಾತ್ಮಾ ಪಾಂಡುವು ರಾಜನಾದನು. ಅವನು ರಾಜನಾಗಿದ್ದನು. ಅವನ ಪುತ್ರರು ಅವರ ತಂದೆಗೆ ಆನುವಂಶೀಕರು. ಕಲಹವನ್ನು ಮಾಡಬೇಡ! ಅವರಿಗೆ ಅರ್ಧ ರಾಜ್ಯವನ್ನು ಕೊಟ್ಟುಬಿಡು. ನಾನು ಬದುಕಿರುವಾಗ ಯಾವ ಪುರುಷನು ರಾಜ್ಯವನ್ನಾಳುತ್ತಾನೆ? ನನ್ನ ಮಾತುಗಳನ್ನು ಕಡೆಗಣಿಸಬೇಡ. ನಿನ್ನ ಶಾಂತಿಯು ಸದಾ ನನ್ನ ಮನಸ್ಸಿನಲ್ಲಿದೆ. ನಾನು ನೀನು ಮತ್ತು ಅವರಲ್ಲಿ ಭೇದ ತೋರಿಸುವುದಿಲ್ಲ. ನಿನ್ನ ತಂದೆ, ಗಾಂಧಾರಿ ಮತ್ತು ವಿದುರರ ಮತವೂ ಇದೇ ಆಗಿದೆ. ವೃದ್ಧರನ್ನು ಕೇಳಬೇಕಾದರೆ ನನ್ನ ಮಾತುಗಳನ್ನು ಶಂಕಿಸಬೇಡ. ಇಲ್ಲವಾದರೆ ಸರ್ವವನ್ನೂ – ನಿನ್ನನ್ನೂ ಭೂಮಿಯನ್ನೂ – ನಾಶಪಡಿಸುತ್ತೀಯೆ.”

“ಭೀಷ್ಮನು ಹೀಗೆ ಹೇಳಲು ವಚನಕ್ಷಮನಾದ ದ್ರೋಣನು ನೃಪರ ಮಧ್ಯೆ ಆ ದುರ್ಯೋಧನನಿಗೆ, ನಿನಗೆ ಹಿತವಾಗುವ ಈ ಮಾತನ್ನಾಡಿದನು: “ಅಯ್ಯಾ! ಹೇಗೆ ಪ್ರಾತೀಪ ಶಂತನುವು ಕುಲಕ್ಕಾಗಿ ನಡೆದುಕೊಂಡನೋ ಹಾಗೆ ದೇವವ್ರತ ಭೀಷ್ಮನು ಕುಲಕ್ಕಾಗಿ ನಿಂತಿದ್ದಾನೆ. ನರಪತಿ, ಸತ್ಯಸಂಧ, ಜಿತೇಂದ್ರಿಯ, ಕುರುಗಳ ರಾಜ, ಧರ್ಮಾತ್ಮ, ಸಮಾಹಿತ ಪಾಂಡುವೂ ಹಾಗೆಯೇ ಇದ್ದನು. ಆ ಕುರುವಂಶ ವಿವರ್ಧನನು ರಾಜ್ಯವನ್ನು ಹಿರಿಯಣ್ಣ ಧೃತರಾಷ್ಟ್ರನಿಗೆ ಮತ್ತು ಕಿರಿಯ ತಮ್ಮ ಕ್ಷತ್ತನಿಗೆ ಒಪ್ಪಿಸಿದ್ದನು. ಅನಂತರ ಸಿಂಹಾಸನದಲ್ಲಿ ಈ ಅಚ್ಯುತನನ್ನು ಸ್ಥಾಪಿಸಿ ಆ ಅನಘ ಕೌರವ್ಯನು ಭಾರ್ಯೆಯರೊಡನೆ ವನಕ್ಕೆ ಹೋದನು. ಈ ಪುರುಷವ್ಯಾಘ್ರ ವಿದುರನಾದರೋ ವಿನೀತನಾಗಿ ತಾಳೆಯ ಮರದ ಗರಿಯನ್ನು ಬೀಸುತ್ತಾ ಕೆಳಗೆ ನಿಂತು ದಾಸನಂತೆ ಅವನ ಸೇವೆಗೈದನು. ಆಗ ಪ್ರಜೆಗಳೆಲ್ಲರೂ ನರಾಧಿಪ ಪಾಂಡುವನ್ನು ಹೇಗೋ ಹಾಗೆ ಜನೇಶ್ವರ ಧೃತರಾಷ್ಟ್ರನನ್ನು ಅನುಸರಿಸಿದರು. ಧೃತರಾಷ್ಟ್ರ ಮತ್ತು ವಿದುರರಿಗೆ ರಾಜ್ಯವನ್ನು ಬಿಟ್ಟು ಪರಪುರಂಜಯ ಪಾಂಡುವು ಭೂಮಿಯನ್ನೆಲ್ಲಾ ಸಂಚರಿಸಿದನು. ಸತ್ಯಸಂಗರ ವಿದುರನು ಕೋಶ, ದಾನ, ಸೇವಕರ ಮೇಲ್ವಿಚಾರಣೆ, ಮತ್ತು ಎಲ್ಲರಿಗೂ ಊಟಹಾಕಿಸುವುದು ಇವುಗಳನ್ನು ನೋಡಿಕೊಳ್ಳುತ್ತಿದ್ದನು. ಪರಪುರಂಜಯ ಮಹಾತೇಜಸ್ವಿ ಭೀಷ್ಮನು ರಾಜರೊಂದಿಗೆ ಸಂಧಿ-ಯುದ್ಧಗಳು, ಮತ್ತು ಕಪ್ಪ-ಕಾಣಿಕೆಗಳ ವಿಷಯಗಳನ್ನು ನೋಡಿಕೊಳ್ಳುತ್ತಿದ್ದನು. ಸಿಂಹಾಸನಸ್ಥನಾಗಿದ್ದ ನೃಪತಿ ಮಹಾಬಲಿ ಧೃತರಾಷ್ಟ್ರನು ಮಹಾತ್ಮ ವಿದುರನಿಂದ ಸತತವಾಗಿ ಸಲಹೆಗಳನ್ನು ಪಡೆಯುತ್ತಿದ್ದನು. ಅವನ ಕುಲದಲ್ಲಿ ಹುಟ್ಟಿ ಏಕೆ ಕುಲವನ್ನು ಒಡೆಯಲು ತೊಡಗಿದ್ದೀಯೆ? ಸಹೋದರರೊಂದಿಗೆ ಒಂದಾಗು. ಒಟ್ಟಿಗೇ ಭೋಗಗಳನ್ನು ಭುಂಜಿಸು. ನಾನು ಇದನ್ನು ಹೇಡಿತನದಿಂದ ಹೇಳುತ್ತಿಲ್ಲ. ಹಣದ ಕಾರಣಕ್ಕಂತೂ ಅಲ್ಲವೇ ಅಲ್ಲ. ಭೀಷ್ಮನು ಕೊಟ್ಟಿದ್ದುದನ್ನು ತಿನ್ನುತ್ತಿದ್ದೇನೆ. ನಿನ್ನಿಂದಲ್ಲ! ನಿನ್ನಿಂದ ವೃತ್ತಿ ವೇತನವನ್ನು ಪಡೆಯಲು ಬಯಸುತ್ತಿಲ್ಲ. ಭೀಷ್ಮನು ಎಲ್ಲಿದ್ದಾನೋ ಅಲ್ಲಿ ದ್ರೋಣನು ಇರಲೇಬೇಕು. ಭೀಷ್ಮನು ಹೇಳಿದಂತೆ ಮಾಡು. ಪಾಂಡುಪುತ್ರರಿಗೆ ಅರ್ಧರಾಜ್ಯವನ್ನು ಕೊಡು. ಅವರಿಗೆ ಹೇಗೆ ಆಚಾರ್ಯನೋ ಹಾಗೆ ನಾನು ನಿನಗೂ ಕೂಡ. ನನಗೆ ಅಶ್ವತ್ಥಾಮನು ಹೇಗೋ ಹಾಗೆ ಆ ಶ್ವೇತಹಯನೂ ನನ್ನವನೇ. ಬಹಳಷ್ಟು ಏಕೆ ಪ್ರಲಪಿಸಬೇಕು? ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.”

“ಅಮಿತತೇಜಸ್ವಿ ದ್ರೋಣನು ಹೀಗೆ ಹೇಳಲು ಸತ್ಯಸಂಗರ ಧರ್ಮವಿದು ವಿದುರನು ಚಿಕ್ಕಪ್ಪ ಭೀಷ್ಮನ ಕಡೆ ತಿರುಗಿ ಅವನ ಮುಖವನ್ನು ನೋಡುತ್ತಾ ಹೇಳಿದನು: “ದೇವವ್ರತ! ನಾನು ಹೇಳುವ ಮಾತನ್ನು ಕೇಳು. ಈ ಕುರುವಂಶವು ಪ್ರನಷ್ಟವಾಗುತ್ತಿದ್ದಾಗ ನೀನು ಪುನಃ ಚೇತರಿಸುವಂತೆ ಮಾಡಿದೆ. ಇದರಿಂದ ವಿಲಪಿಸುತ್ತಿರುವ ನನ್ನ ಮಾತನ್ನು ನೀನು ಕಡೆಗಾಣುತ್ತಿದ್ದೀಯೆ. ಈ ಕುಲದಲ್ಲಿ ಕುಲಪಾಂಸನನಾಗಿರುವ ದುರ್ಯೋಧನ ಎಂಬ ಹೆಸರಿನವನು ಯಾರು? ಲೋಭದಲ್ಲಿ ನೆಲೆಸಿದ, ಅನಾರ್ಯನಾದ, ಅಕೃತಜ್ಞನಾದ, ಲೋಭದಿಂದ ಚೇತನವನ್ನು ಕಳೆದುಕೊಂಡ, ತಂದೆಯ ಧರ್ಮಾರ್ಥದರ್ಶಿನಿ ಶಾಸ್ತ್ರಗಳನ್ನು ಅತಿಕ್ರಮಿಸುವ ಅವನ ಬುದ್ಧಿಯನ್ನು ಅನುಸರಿಸುತ್ತಿರುವೆಯಲ್ಲ! ದುರ್ಯೋಧನನು ಕುರುಗಳು ನಶಿಸುವಂತೆ ಮಾಡುತ್ತಾನೆ! ಅವನಿಂದ ನಾಶಹೊಂದದಂತೆ ಮಾಡು. ಹಿಂದೆ ನನ್ನನ್ನೂ ಧೃತರಾಷ್ಟ್ರನನ್ನೂ ಓರ್ವ ಚಿತ್ರಕಾರನು ಬರೆದಂತೆ ರೂಪಿಸಿದ್ದೆ. ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿ ಸಂಹರಿಸುವಂತೆ ನೀನು ನಮ್ಮನ್ನು ನಾಶಗೊಳಿಸಬೇಡ! ನಿನ್ನ ಕಣ್ಣೆದುರಿಗೇ ನಡೆಯುವ ಈ ಕುಲಕ್ಷಯವನ್ನು ಉಪೇಕ್ಷಿಸಬೇಡ! ಒದಗಿರುವ ವಿನಾಶದಿಂದ ಇಂದು ನಿನ್ನ ಬುದ್ಧಿಯು ನಷ್ಟವಾಗಿದೆಯೆಂದಾದರೆ ನನ್ನ ಮತ್ತು ಧೃತರಾಷ್ಟ್ರನೊಂದಿಗೆ ವನಕ್ಕೆ ಹೊರಡು! ಸುದುರ್ಮತಿ ಧಾರ್ತರಾಷ್ಟ್ರನನ್ನು ಬಂಧಿಸಿ ಅಥವಾ ಮೂರ್ಛೆಗೊಳಿಸಿ ಈ ರಾಜ್ಯವು ಪಾಂಡವರಿಂದ ಅಭಿರಕ್ಷಿತಗೊಳ್ಳುತ್ತದೆ. ಪ್ರಸೀದನಾಗು! ಅಮಿತ ತೇಜಸ್ವಿ ಪಾಂಡವರ, ಕುರುಗಳ ಮತ್ತು ರಾಜರ ಮಹಾ ವಿನಾಶವು ಕಾಣುತ್ತಿದೆ.”

“ಹೀಗೆ ಹೇಳಿ ದೀನಮಾನಸ ವಿದುರನು ಸುಮ್ಮನಾದನು. ಚಿಂತೆಗೊಳಗಾಗಿ ಪುನಃ ಪುನಃ ಸಿಟ್ಟುಸಿರುಬಿಡುತ್ತಿದ್ದನು. ಆಗ ರಾಜ ಸುಬಲನ ಪುತ್ರಿಯು ಕುಲನಾಶನದ ಭೀತಿಯಿಂದ ರಾಜರ ಸಮಕ್ಷಮದಲ್ಲಿ ಕ್ರೂರಿ ಪಾಪಮತಿ ದುರ್ಯೋಧನನಿಗೆ ಕೋಪದಿಂದ ಧರ್ಮಾತ್ಮಯುಕ್ತವಾದ ಈ ಮಾತನ್ನು ಹೇಳಿದಳು: “ಈ ರಾಜಸಭೆಯನ್ನು ಪ್ರವೇಶಿಸಿದ ಪಾರ್ಥಿವರೇ! ಬ್ರಹ್ಮರ್ಷಿಗಳೇ! ಅನ್ಯ ಸಭಾಸದರೇ! ಕೇಳಿರಿ! ಅಮಾತ್ಯ, ಸೇವಕರೊಂದಿಗೆ ನೀವು ಮಾಡಿದ ಪಾಪ ಮತ್ತು ನಿಮ್ಮ ಅಪರಾಧವನ್ನು ಹೇಳುತ್ತೇನೆ! ಕುರುಗಳ ಈ ರಾಜ್ಯವು ವಂಶಪಾರಂಪರಿಕವಾಗಿ ಭೋಗಿಸಲ್ಪಟ್ಟು ಬಂದಿದೆ. ಇದೇ ಕ್ರಮಾಗತವಾಗಿ ಬಂದಿರುವ ಕುಲಧರ್ಮ. ಕ್ರೂರಕರ್ಮಿಗಳೇ! ನೀವು ಪಾಪಬುದ್ಧಿಯಿಂದ ಕುರುಗಳ ರಾಜ್ಯವನ್ನು ಧ್ವಂಸಿಸುತ್ತಿದ್ದೀರಿ. ರಾಜ್ಯದಲ್ಲಿ ನೆಲೆಸಿರುವ ಮನೀಷೀ ಧೃತರಾಷ್ಟ್ರ ಮತ್ತು ಅವನ ತಮ್ಮ ದೀರ್ಘದರ್ಶಿ ವಿದುರನನ್ನು ಅತಿಕ್ರಮಿಸಿ ದುರ್ಯೋಧನ! ನೀನು ಹೇಗೆ ಮೋಹದಿಂದ ಇಂದು ನೃಪತ್ವವನ್ನು ಕೇಳುತ್ತಿದ್ದೀಯೆ? ಭೀಷ್ಮನಿರುವಾಗ ರಾಜ ಮತ್ತು ಕ್ಷತ್ತರು ಇಬ್ಬರು ಮಹಾನುಭಾವರೂ ಅವನ ಅಧಿಕಾರದಲ್ಲಿದ್ದಾರೆ. ಆದರೆ ಧರ್ಮವನ್ನು ತಿಳಿದಿರುವ ಮಹಾತ್ಮ ನದೀಜನು ರಾಜ್ಯವನ್ನು ಬಯಸುವುದಿಲ್ಲ. ಈ ರಾಜ್ಯವು ಅಪ್ರಧೃಷ್ಯವಾಗಿ ಪಾಂಡುವಿನದಾಗಿತ್ತು. ಇಂದು ಅವನ ಪುತ್ರರದ್ದಲ್ಲದೇ ಇತರರಿಗಾಗುವುದಿಲ್ಲ. ಈ ಅಖಿಲ ರಾಜ್ಯವು ಪಾಂಡವರದ್ದು. ಅವರ ಪಿತಾಮಹನಿಂದ ಬಂದಿರುವುದು ಮತ್ತು ಮಕ್ಕಳು ಮೊಮ್ಮಕ್ಕಳಿಗೆ ಹೋಗುವಂಥಹುದು. ಕುರುಮುಖ್ಯ, ಮಹಾತ್ಮ, ಸತ್ಯಸಂಧ, ಮನೀಷೀ ದೇವವ್ರತನು ಏನು ಹೇಳುತ್ತಾನೋ ಅದನ್ನು ನಾವೆಲ್ಲರೂ ನಾಶಗೊಳ್ಳದ ಧರ್ಮವೆಂದು ಸ್ವೀಕರಿಸಿ, ಸ್ವಧರ್ಮವೆಂದು ಪರಿಪಾಲಿಸಬೇಕು. ಈ ಮಹಾವ್ರತನ ಅನುಜ್ಞೆಯಂತೆ ನೃಪ ಮತ್ತು ವಿದುರರು ಹೇಳಲಿ. ನಮ್ಮ ಸುಹೃದಯಿಗಳು ಧರ್ಮವನ್ನು ಮುಂದಿಟ್ಟುಕೊಂಡು ದೀರ್ಘಕಾಲದವರೆಗೆ ಅದರಂತೆಯೇ ಮಾಡಲಿ. ನ್ಯಾಯಗತವಾಗಿರುವ ಕುರುಗಳ ಈ ರಾಜ್ಯವನ್ನು ಧರ್ಮಪುತ್ರ ಯುಧಿಷ್ಠಿರನು, ರಾಜಾ ಧೃತರಾಷ್ಟ್ರನಿಂದ ಪ್ರಚೋದಿತನಾಗಿ, ಶಾಂತನವನನ್ನು ಮುಂದಿಟ್ಟುಕೊಂಡು ಆಳಲಿ.”

“ಗಾಂಧಾರಿಯು ಹೀಗೆ ಹೇಳಲು ಜನೇಶ್ವರ ಧೃತರಾಷ್ಟ್ರನು ನೃಪರ ಮಧ್ಯದಲ್ಲಿ ದುರ್ಯೋಧನನಿಗೆ ಹೀಗೆ ಹೇಳಿದನು: “ಪುತ್ರಕ! ದುರ್ಯೋಧನ! ಈಗ ನಾನು ನಿನಗೆ ಏನು ಹೇಳುತ್ತೇನೋ ಅದನ್ನು ಕೇಳಿ, ನಿನಗೆ ತಂದೆಯ ಮೇಲೆ ಗೌರವವಿದೆಯಂತಾದರೆ ಅದರಂತೆ ನಡೆದುಕೋ! ನಿನಗೆ ಮಂಗಳವಾಗಲಿ! ಹಿಂದೆ ಪ್ರಜಾಪತಿ ಸೋಮನು ಕುರುಗಳ ವಂಶವನ್ನು ಸ್ಥಾಪಿಸಿದನು. ಸೋಮನಿಂದ ಆರನೆಯವನು ನಹುಷಾತ್ಮಜ ಯಯಾತಿಯಾಗಿದ್ದನು. ಅವನಿಗೆ ಐವರು ರಾಜರ್ಷಿಸತ್ತಮ ಮಕ್ಕಳಿದ್ದರು. ಅವರಲ್ಲಿ ಮಹಾತೇಜಸ್ವಿ ಪ್ರಭು ಯದುವು ಜ್ಯೇಷ್ಠನಾಗಿದ್ದನು. ನಮ್ಮ ವಂಶವನ್ನು ಬೆಳೆಸಿದ, ಕಿರಿಯವ ಪುರುವು ವೃಷಪರ್ವಣನ ಮಗಳು ಶರ್ಮಿಷ್ಠೆಯಲ್ಲಿ ಜನಿಸಿದ್ದನು. ಯದುವಾದರೋ ಅಮಿತ ತೇಜಸ್ವಿ ಕಾವ್ಯ ಶುಕ್ರನ ಮಗಳು ದೇವಯಾನಿಯ ಮಗನಾಗಿದ್ದನು. ಯಾದವರ ಕುಲಕರ ಬಲವಾನ್ ವೀರ್ಯಸಮ್ಮತನು ದರ್ಪದಿಂದ ತುಂಬಿ, ಮಂದಬುದ್ಧಿಯುಳ್ಳವನಾಗಿ ಕ್ಷತ್ರಿಯತ್ವವನ್ನು ಕೀಳಾಗಿ ಕಂಡನು. ಬಲದರ್ಪವಿಮೋಹಿತನಾದ ಅವನು ತಂದೆಯ ಶಾಸನದಂತೆ ನಡೆದುಕೊಳ್ಳಲಿಲ್ಲ. ಈ ಅಪರಾಜಿತನು ತಂದೆಯನ್ನೂ ಸಹೋದರರನ್ನೂ ಅವಮಾನಿಸಿದನು. ಭೂಮಿಯ ನಾಲ್ಕೂ ಕಡೆಗಳಲ್ಲಿಯೂ ಯದುವು ಬಲಶಾಲಿಯಾಗಿದ್ದನು. ನೃಪತಿಗಳನ್ನು ವಶಪಡೆಸಿಕೊಂಡು ನಾಗಸಾಹ್ವಯದಲ್ಲಿ ವಾಸಿಸುತ್ತಿದ್ದನು. ಅವನ ತಂದೆ ನಹುಷಾತ್ಮಜ ಯಯಾತಿಯು ಅವನನ್ನು ಶಪಿಸಿ ರಾಜ್ಯದಿಂದ ಹೊರಹಾಕಿದನು. ಬಲದರ್ಪಿತನಾದ ಆ ಅಣ್ಣನನ್ನು ಅನುಸರಿಸಿದ ತನ್ನ ಇತರ ಮಕ್ಕಳನ್ನೂ ಕೂಡ ಕ್ರುದ್ಧನಾದ ಯಯಾತಿಯು ಶಪಿಸಿದನು. ಆ ನೃಪಸತ್ತಮನು ತನ್ನಂತೆ ನಡೆದುಕೊಂಡ ಕಿರಿಯ ಪುತ್ರ ವಿಧೇಯ ಪುರುವನ್ನು ರಾಜ್ಯದಲ್ಲಿರಿಸಿಕೊಂಡನು. ಹೀಗೆ ಜ್ಯೇಷ್ಠನಾದರೂ ಜಂಬಪಡುತ್ತಿದ್ದವನು ರಾಜ್ಯವನ್ನು ಪಡೆಯಲಿಲ್ಲ. ಆದರೆ ಕಿರಿಯವನಾಗಿದ್ದರೂ ವೃದ್ಧರ ಸೇವೆಯನ್ನು ಮಾಡುವವನು ರಾಜ್ಯವನ್ನು ಪಡೆದನು. ಹೀಗೆಯೇ ನನ್ನ ತಂದೆಯ ಅಜ್ಜ ಪ್ರತೀಪನು ಸರ್ವಧರ್ಮಜ್ಞನಾಗಿದ್ದು ಮೂರು ಲೋಕಗಳಲ್ಲಿಯೂ ವಿಶ್ರುತನಾದ ರಾಜನಾಗಿದ್ದನು. ರಾಜ್ಯವನ್ನು ಧರ್ಮದಿಂದ ಶಾಸನಮಾಡುತ್ತಿದ್ದ ಆ ಪಾರ್ಥಿವಸಿಂಹನಿಗೆ ಮೂವರು ದೇವಕಲ್ಪರಾದ ಯಶಸ್ವೀ ಪುತ್ರರು ಜನಿಸಿದರು. ದೇವಾಪಿಯು ಜ್ಯೇಷ್ಠನಾಗಿದ್ದನು. ಬಾಹ್ಲೀಕನು ಅವನ ನಂತರದವನು. ಮೂರನೆಯವನು ನನ್ನ ಅಜ್ಜ ಧೃತಿಮಾನ್ ಶಂತನುವು. ಮಹಾತೇಜಸ್ವಿ, ರಾಜಸತ್ತಮ, ಧಾರ್ಮಿಕ, ಸತ್ಯವಾದೀ, ಪಿತುಶುಶ್ರೂಷಣರತನಾಗಿದ್ದ ದೇವಾಪಿಯಾದರೋ ಚರ್ಮರೋಗಿಯಾಗಿದ್ದನು. ಅವನು ಪೌರ-ಜಾನಪದಗಳಿಗೆ ಸಮ್ಮತನಾಗಿದ್ದನು. ಸಾಧು ಸತ್ಕೃತನಾಗಿದ್ದನು. ಎಲ್ಲರ - ಬಾಲಕ-ವೃದ್ಧರ ಮತ್ತು ದೇವತೆಗಳ ಹೃದಯಂಗಮನಾಗಿದ್ದನು. ಪ್ರಾಜ್ಞನೂ, ಸತ್ಯಸಂಧನೂ, ಸರ್ವಭೂತಹಿತರತನೂ ಆಗಿದ್ದ ಅವನು ತಂದೆ, ಶಾಸ್ತ್ರ ಮತ್ತು ಬ್ರಾಹ್ಮಣರ ಪ್ರಕಾರ ನಡೆದುಕೊಳ್ಳುತ್ತಿದ್ದನು. ಬಾಹ್ಲೀಕನ ಮತ್ತು ಮಹಾತ್ಮ ಶಂತನುವಿನ ಪ್ರಿಯ ಅಣ್ಣನಾಗಿದ್ದನು. ಆ ಮಹಾತ್ಮರ ಒಟ್ಟಿಗಿದ್ದ ಸೌಭ್ರಾತೃತ್ವವು ಉದಾಹರಣೀಯವಾಗಿತ್ತು. ಆಗ ಕಾಲವು ಪ್ರಾಪ್ತವಾದಾಗ ವೃದ್ಧ ನೃಪತಿಸತ್ತಮ ವಿಭುವು ಅವನ ಅಭಿಷೇಕಕ್ಕಾಗಿ ಶಾಸ್ತ್ರೋಕ್ತ ಸಾಮಗ್ರಿಗಳನ್ನು ಸಂಗ್ರಹಿಸಿ ಎಲ್ಲ ಮಂಗಲ ಕಾರ್ಯಗಳನ್ನೂ ಮಾಡತೊಡಗಿದನು. ಆಗ ಬ್ರಾಹ್ಮಣರು, ಹಿರಿಯರು ನಗರ-ಗ್ರಾಮಗಳೊಂದಿಗೆ ಎಲ್ಲರೂ ದೇವಾಪಿಯ ಅಭಿಷೇಕವನ್ನು ನಿಲ್ಲಿಸಿದರು. ಅವರು ಅಭಿಷೇಕವನ್ನು ನಿಲ್ಲಿಸುತ್ತಿದ್ದಾರೆ ಎಂದು ಕೇಳಿದ ರಾಜಾ ನೃಪತಿಯ ಗಂಟಲಿನಲ್ಲಿ ಕಣ್ಣೀರು ತುಂಬಿಕೊಂಡಿತು ಮತ್ತು ತನ್ನ ಮಗನಿಗಾಗಿ ಬಹಳ ಶೋಕಿಸಿದನು. ಹೀಗೆ ದಾನಿ, ಧರ್ಮಜ್ಞ, ಸತ್ಯಸಂಧನು ಪ್ರಜೆಗಳಿಗೆ ಪ್ರಿಯನಾಗಿದ್ದರೂ ಚರ್ಮದ ದೋಷದಿಂದ ಪ್ರದೂಷಿತನಾದನು. ಹೀನಾಂಗನನ್ನು ರಾಜನನ್ನಾಗಿ ದೇವತೆಗಳು ಆನಂದಿಸುವುದಿಲ್ಲ. ಆದುದರಿಂದ ದ್ವಿಜರ್ಷಭರು ಆ ನೃಪಶ್ರೇಷ್ಠನನ್ನು ತಡೆದರು. ಆಗ ಅತ್ಯಂತ ವ್ಯಥಿತನಾದ ಪುತ್ರಶೋಕಸಮನ್ವಿತನಾದ ಅವನು ಮರಣಹೊಂದಲು, ಅದನ್ನು ನೋಡಿ ದೇವಾಪಿಯು ವನವನ್ನು ಸೇರಿದನು. ಬಾಹ್ಲೀಕನು ರಾಜ್ಯವನ್ನು ತ್ಯಜಿಸಿ ಅವನ ಸೋದರ ಮಾವನ ಕುಲದಲ್ಲಿ ನೆಲೆಸಿದನು. ತಂದೆ-ತಮ್ಮರನ್ನು ಪರಿತ್ಯಜಿಸಿ ಅಭಿವೃದ್ಧಿ ಹೊಂದಿದ ಪುರವನ್ನು ಪಡೆದನು. ತಂದೆಯ ಮರಣದ ನಂತರ ಬಾಹ್ಲೀಕನು ಹೊರಟುಹೋಗಲು ಲೋಕವಿಶ್ರುತ ಶಂತನುವು ರಾಜನಾಗಿ ರಾಜ್ಯವನ್ನಾಳಿದನು. ಹಾಗೆಯೇ ಜ್ಯೇಷ್ಠನಾದ ನಾನೂ ಕೂಡ ಹೀನಾಂಗನೆಂದು ಮತಿಮತನಾದ ಪಾಂಡುವಿನಿಂದ, ತುಂಬಾ ಆಲೋಚನೆಗಳ ನಂತರ, ರಾಜ್ಯದಿಂದ ಪರಿಭ್ರಂಷಿತನಾದೆ. ಕಿರಿಯವನಾಗಿದ್ದರೂ ಪಾಂಡುವು ರಾಜ್ಯವನ್ನು ಪಡೆದು ರಾಜನಾದನು. ಅವನ ಮರಣದ ನಂತರ ಈ ರಾಜ್ಯವು ಅವನ ಮಕ್ಕಳದ್ದಾಯಿತು. ಈ ರಾಜ್ಯಕ್ಕೆ ನಾನೇ ಭಾಗಿಯಾಗಿರದಿರುವಾಗ ನೀನು ಹೇಗೆ ಅದನ್ನು ಬಯಸುತ್ತೀಯೆ? ನ್ಯಾಯಗತವಾಗಿ ಈ ರಾಜ್ಯವು ರಾಜಪುತ್ರ, ಮಹಾತ್ಮ ಯುಧಿಷ್ಠಿರನದ್ದು. ಅವನು ಕೌರವ ಜನರ ಒಡೆಯ. ಆ ಮಹಾನುಭಾವನೇ ಇದನ್ನು ಆಳುವವನು. ಅವನು ಸತ್ಯಸಂಧ, ಸತತವೂ ಅಪ್ರಮತ್ತನಾಗಿ, ಶಾಸ್ತ್ರಗಳಲ್ಲಿ ನೆಲೆಸಿದ್ದಾನೆ. ಬಂಧುಜನರ ಸಾಧು. ಪ್ರಜೆಗಳ ಪ್ರಿಯ. ಸುಹೃದಯರ ಅನುಕಂಪಿ. ಜಿತೇಂದ್ರಿಯ ಮತ್ತು ಸಾಧುಜನರ ನಾಯಕ. ಕ್ಷಮೆ, ತಿತಿಕ್ಷಾ, ದಮ, ಆರ್ಜವ, ಸತ್ಯವ್ರತತ್ವ, ಶ್ರುತ, ಅಪ್ರಮಾದ, ಭೂತಾನುಕಂಪನೆ, ಅನುಶಾಸನ ಈ ಸಮಸ್ತ ರಾಜಗುಣಗಳೂ ಯುಧಿಷ್ಠಿರನಲ್ಲಿವೆ. ರಾಜನ ಮಗನಲ್ಲದ, ಅನಾರ್ಯನಂತೆ ನಡೆದುಕೊಳ್ಳುವ, ಲುಬ್ಧನಾದ, ಬಂಧುಗಳಲ್ಲಿ ಪಾಪಬುದ್ಧಿಯನ್ನು ತೋರಿಸುವ, ದುರ್ವಿನೀತನಾದ ನೀನು ಹೇಗೆ ತಾನೇ ಕ್ರಮಾಗತವಾಗಿ ಬೇರೆಯವರದ್ದಾಗಿರುವ ಈ ರಾಜ್ಯವನ್ನು ಅಪಹರಿಸಲು ಸಾಧ್ಯ? ಹುಚ್ಚನ್ನು ತೊರೆದು ವಾಹನ ಪರಿಚಾರಕರೊಂದಿಗೆ ಅರ್ಧರಾಜ್ಯವನ್ನು ಬಿಟ್ಟುಕೊಡು. ಹಾಗೆ ಮಾಡಿದರೆ ಮಾತ್ರ ನೀನು ಮತ್ತು ನಿನ್ನ ಅನುಜರು ಉಳಿದ ಆಯುಸ್ಸನ್ನು ಜೀವಿಸಬಲ್ಲಿರಿ!”

“ಭೀಷ್ಮ, ದ್ರೋಣ, ವಿದುರರು, ಗಾಂಧಾರಿ ಮತ್ತು ಧೃತರಾಷ್ಟ್ರರು ಹೀಗೆ ಹೇಳಿದರೂ ಆ ಮಂದನು ತನ್ನ ಬುದ್ಧಿಯನ್ನು ಬದಲಿಸಲಿಲ್ಲ. ಅವರನ್ನು ಕಡೆಗಣಿಸಿ, ರೋಷದಿಂದ ರಕ್ತಲೋಚನನಾಗಿ ಸಿಟ್ಟಿನಿಂದ ಮೇಲೆದ್ದನು. ಅವನ ಹಿಂದೆ ಜೀವಿತವನ್ನು ತೊರೆದ ಇತರ ರಾಜರು ಹಿಂಬಾಲಿಸಿದರು. ಆ ದುಷ್ಟಚೇತಸನು ಅಲ್ಲಿದ್ದ ರಾಜ ಪಾರ್ಥಿವರಿಗೆ “ಇಂದು ಪುಷ್ಯ. ಕುರುಕ್ಷೇತ್ರಕ್ಕೆ ಪ್ರಯಾಣಿಸಿ!” ಎಂದು ಪುನಃ ಪುನಃ ಅಜ್ಞಾಪಿಸಿದನು. ಆಗ ಕಾಲಚೋದಿತರರಾದ ಆ ಪೃಥಿವೀ ಪಾಲಕರು ಸೈನಿಕರೊಂದಿಗೆ ಭೀಷ್ಮನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಹೊರಟರು. ಹನ್ನೊಂದು ಅಕ್ಷೌಹಿಣೀ ಸೇನೆ ಮತ್ತು ಪಾರ್ಥಿವರು ಸಮಾಗತರಾಗಿದ್ದರು. ಅವರ ಪ್ರಮುಖನಾಗಿ ತಾಲಕೇತು ಭೀಷ್ಮನು ಮಿಂಚಿದನು. ಈಗ ಅಲ್ಲಿ ಹೋಗಿ ಯುಕ್ತವಾದುದು ಏನೆಂದು ತಿಳಿದಿದ್ದೀಯೋ ಅದನ್ನು ಮಾಡು. ನನ್ನ ಸಮಕ್ಷಮದಲ್ಲಿ ಭೀಷ್ಮ, ದ್ರೋಣ, ವಿದುರ, ಗಾಂಧಾರಿ ಮತ್ತು ಧೃತರಾಷ್ಟ್ರನು ಹೇಳಿದ ಮಾತನ್ನು ಮತ್ತು ಕುರುಸಂಸದಿಯಲ್ಲಿ ನಡೆದುದನ್ನು ನಿನಗೆ ಹೇಳಿದ್ದೇನೆ.

“ಮೊದಲು ನಾನು ಸೌಭ್ರಾತ್ರುತ್ವವನ್ನು ಇಚ್ಛಿಸಿ, ಕುರುವಂಶದಲ್ಲಿ ಒಡಕು ಬರಬಾರದೆಂದು, ಪ್ರಜೆಗಳ ಅಭಿವೃದ್ಧಿಗಾಗಿ ಸಾಮವನ್ನು ಬಳಸಿದೆನು. ಯಾವಾಗ ಸಾಮವು ಸೋತಿತೋ ಆಗ ಪುನಃ ಭೇದವನ್ನು ಬಳಸಿದೆನು. ನಿಮ್ಮ ದೇವ ಮಾನುಷ ಸಂಹಿತ ಕರ್ಮಗಳನ್ನು ವರ್ಣಿಸಿದೆನು. ಯಾವಾಗ ಸುಯೋಧನನು ನನ್ನ ಸಾಮಪೂರ್ವಕ ವಾಕ್ಯವನ್ನು ಕೇಳಲಿಲ್ಲವೋ ಆಗ ಸರ್ವಪಾರ್ಥಿವರಲ್ಲಿ ಭೇದವನ್ನು ಬಿತ್ತಲು ಪ್ರಯತ್ನಿಸಿದೆ. ನಾನು ಅದ್ಭುತ, ಘೋರ, ದಾರುಣ ಅಮಾನುಷ ಕರ್ಮಗಳನ್ನು ತೋರಿಸಿದೆನು. ರಾಜರನ್ನು ಹೆದರಿಸಿದೆನು; ಸುಯೋಧನನನ್ನು ತೃಣೀಕರಿಸಿದೆನು, ಮತ್ತು ರಾಧೇಯ-ಸೌಬಲರನ್ನು ಪುನಃ ಪುನಃ ಹಳಿದೆನು. ನಾನು ಪುನಃ ಪುನಃ ಧಾರ್ತರಾಷ್ಟ್ರರ ನ್ಯೂನತೆಗಳನ್ನು ತೋರಿಸಿ ನಿಂದಿಸಿದೆನು. ಸರ್ವ ನೃಪರನ್ನೂ ಮಾತು ಮತ್ತು ಸಲಹೆಗಳಿಂದ ಭೇದಿಸಲು ಪ್ರಯತ್ನಿಸಿದೆ. ಪುನಃ ಸಾಮವನ್ನು ಬಳಸಿ, ಕುರುವಂಶದಲ್ಲಿ ಭೇದವುಂಟಾಗಬಾರದೆಂದು, ಕಾರ್ಯಸಿದ್ಧಿಯಾಗಬೇಕೆಂದು ಈ ಲಾಭಗಳ ಕುರಿತು ಹೇಳಿದೆನು: “ಈ ಬಾಲಕ ಪಾಂಡವರು ಮಾನ, ಮದಗಳನ್ನು ತೊರೆದು ಧೃತರಾಷ್ಟ್ರ, ಭೀಷ್ಮ ಮತ್ತು ವಿದುರರಿಗೆ ಶರಣು ಬರುತ್ತಾರೆ. ಅವರು ರಾಜ್ಯವನ್ನು ನಿಮಗೆ ಒಪ್ಪಿಸಿ, ಅವರ ಈಶತ್ವವನ್ನು ತೊರೆಯುತ್ತಾರೆ. ರಾಜ, ಗಾಂಗೇಯ ಮತ್ತು ವಿದುರರು ಹೇಳಿದಂತಾಗಲಿ. ಎಲ್ಲವು ನಿನ್ನ ರಾಜ್ಯವಾಗಲಿ. ಐದು ಗ್ರಾಮಗಳನ್ನು ಬಿಟ್ಟುಕೊಡು. ನಿನ್ನ ತಂದೆಯು ಅವಶ್ಯವಾಗಿ ಅವರನ್ನು ಪೋಷಿಸಬಲ್ಲನು.”

“ಇಷ್ಟು ಹೇಳಿದರೂ ಆ ದುಷ್ಟಾತ್ಮನು ತನ್ನ ಭಾವವನ್ನು ಬದಲಾಯಿಸಲಿಲ್ಲ. ಈಗ ನನಗೆ ಅವರ ಪಾಪಗಳಿಗೆ ನಾಲ್ಕನೆಯದಾದ ದಂಡವಲ್ಲದೇ ಬೇರೆ ಏನೂ ಕಾಣುತ್ತಿಲ್ಲ. ಅವರದೇ ವಿನಾಶಕ್ಕೆ ನರಾಧಿಪರು ಕುರುಕ್ಷೇತ್ರಕ್ಕೆ ಹೊರಟಿದ್ದಾರೆ. ಕುರುಸಂಸದಿಯಲ್ಲಿ ನಡೆದುದೆಲ್ಲವನ್ನೂ ನಿನಗೆ ಹೇಳಿದ್ದೇನೆ. ಪಾಂಡವ! ಯುದ್ಧವಿಲ್ಲದೇ ಅವರು ನಿನಗೆ ರಾಜ್ಯವನ್ನು ಹಿಂದಿರುಗಿಸುವುದಿಲ್ಲ. ವಿನಾಶಕ್ಕೆ ಕಾರಣರಾಗುವ ಅವರು ಮೃತ್ಯುವನ್ನು ಎದುರಿಸಿದ್ದಾರೆ!”

ಯುಧಿಷ್ಠಿರನ ಅನುಮಾನ

ವಾಸುದೇವನ ಆ ಮಾತುಗಳನ್ನು ನೆನಪಿಸಿಕೊಂಡು ಯುಧಿಷ್ಠಿರನು ಪುನಃ ವಾರ್ಷ್ಣೇಯನನ್ನು ಪ್ರಶ್ನಿಸಿದನು: “ಆ ಮಂದನು ಹೇಗೆ ಮಾತನಾಡಿದನು? ಅಚ್ಯುತ! ಈಗ ಕಾಲವು ನಮ್ಮ ಬಳಿ ಬಂದಿರುವಾಗ ನಮಗೆ ಒಳ್ಳೆಯದಾದುದು ಏನು? ಸ್ವಧರ್ಮವನ್ನು ತೊರೆಯದೇ ನಾವು ಹೇಗೆ ನಡೆದುಕೊಳ್ಳಬಹುದು? ದುರ್ಯೋಧನ, ಕರ್ಣ, ಶಕುನಿ ಸೌಬಲ, ನನ್ನ ಮತ್ತು ನನ್ನ ಸಹೋದರರ ಮತವನ್ನು ನೀನು ತಿಳಿದಿದ್ದೀಯೆ. ವಿದುರ ಮತ್ತು ಭೀಷ್ಮ ಇಬ್ಬರ ಮಾತುಗಳನ್ನೂ ನೀನು ಕೇಳಿದ್ದೀಯೆ. ಕುಂತಿಯ ಪ್ರಾಜ್ಞ ಮಾತುಗಳನ್ನು ಸಂಪೂರ್ಣವಾಗಿ ನೀನು ಕೇಳಿದ್ದೀಯೆ. ಅವೆಲ್ಲವನ್ನೂ ಬದಿಗಿಟ್ಟು, ಪುನಃ ಪುನಃ ವಿಚಾರಿಸಿ, ಏನೂ ಯೋಚಿಸದೇ ನಮಗೆ ಕ್ಷಮವಾದುದನ್ನು ಹೇಳು.”

ಧರ್ಮರಾಜನ ಈ ಧರ್ಮಾರ್ಥಸಹಿತ ಮಾತನ್ನು ಕೇಳಿ ಕೃಷ್ಣನು ಮೇಘದುಂದುಭಿಯ ಧ್ವನಿಯಲ್ಲಿ ಈ ಮಾತನ್ನಾಡಿದನು: “ನಾನು ಯಾವ ಧರ್ಮಾರ್ಥಸಂಹಿತ ಹಿತಮಾತುಗಳನ್ನಾಡಿದೆನೋ ಅದು ನಿಕೃತಿಪ್ರಜ್ಞ ಕೌರವ್ಯನಿಗೆ ತಾಗಲಿಲ್ಲ. ಆ ದುರ್ಬುದ್ಧಿಯು ಭೀಷ್ಮನದಾಗಲೀ ವಿದುರನದ್ದಾಗಲೀ, ನಾನು ಹೇಳಿದುದನ್ನಾಗಲೀ ಕೇಳಲಿಲ್ಲ. ಎಲ್ಲವನ್ನೂ ನಿರ್ಲಕ್ಷಿಸಿದನು. ಅವನು ಧರ್ಮವನ್ನು ಬಯಸುತ್ತಿಲ್ಲ. ಯಶಸ್ಸನ್ನು ಬಯಸುತ್ತಿಲ್ಲ. ದುರಾತ್ಮ ಕರ್ಣನನ್ನು ಆಶ್ರಯಿಸಿ ಎಲ್ಲವನ್ನೂ ಗೆದ್ದಿದ್ದೇನೆ ಎಂದು ತಿಳಿದುಕೊಂಡಿದ್ದಾನೆ. ಸುಯೋಧನನು ನನ್ನನ್ನು ಬಂಧಿಸಲೂ ಕೂಡ ಆಜ್ಞಾಪಿಸಿದನು. ಆದರೆ ಆ ದುರಾತ್ಮ ಶಾಸನಾತಿಗನ ಬಯಕೆಯು ಪೂರ್ತಿಯಾಗಲಿಲ್ಲ. ಅಚ್ಯುತ ವಿದುರನನ್ನು ಬಿಟ್ಟು ಭೀಷ್ಮನಾಗಲೀ ದ್ರೋಣನಾಗಲೀ ಅಲ್ಲಿ ಯುಕ್ತವಾದುದನ್ನು ಮಾತನಾಡಲಿಲ್ಲ. ಅವರೆಲ್ಲರೂ ಅವನನ್ನು ಅನುಸರಿಸುತ್ತಾರೆ. ಶಕುನಿ ಸೌಬಲ, ಕರ್ಣ-ದುಃಶಾಸನರೂ ಕೂಡ ಮಾಢರಂತೆ ಮೂಢ ಕೋಪಿಷ್ಟನಿಗೆ ನಿನ್ನ ಕುರಿತು ಅಯುಕ್ತ ಮಾತುಗಳನ್ನಾಡಿದರು. ಕೌರವರು ಏನು ಹೇಳಿದರೆಂದು ನಾನು ಪುನಃ ಹೇಳುವುದು ಏಕೆ? ಸಂಕ್ಷೇಪದಲ್ಲಿ ಆ ದುರಾತ್ಮರು ನಿನ್ನೊಡನೆ ಸರಿಯಾಗಿ ವರ್ತಿಸುತ್ತಿಲ್ಲ. ಅವನಲ್ಲಿ ಇರುವಷ್ಟು ಪಾಪವು ನಿನ್ನ ಸೈನಿಕರಲ್ಲಿ ಪಾರ್ಥಿವರು ಎಲ್ಲರಲ್ಲಿಯೂ ಇಲ್ಲ. ಅವನಲ್ಲಿ ಅಷ್ಟೊಂದು ಕಲ್ಯಾಣಗುಣಗಳ ಕೊರತೆಯಿದೆ. ನಾವೂ ಕೂಡ ಎಂದೂ ಪರಿತ್ಯಾಗಮಾಡಿ ಕೌರವರೊಂದಿಗೆ ಶಾಂತಿಯನ್ನು ಬಯಸುತ್ತಿಲ್ಲ. ಯುದ್ಧವಲ್ಲದೇ ಬೇರೆ ಯಾವ ದಾರಿಯೂ ಇಲ್ಲ.”

ವಾಸುದೇವನಾಡಿದುದನ್ನು ಕೇಳಿ ಎಲ್ಲ ಪಾರ್ಥಿವರೂ ಏನನ್ನೂ ಹೇಳದೇ ರಾಜನ ಮುಖವನ್ನು ನೋಡಿದರು. ಮಹೀಕ್ಷಿತರ ಅಭಿಪ್ರಾಯವನ್ನು ಪಡೆದ ಯುಧಿಷ್ಠಿರನು ಭೀಮಾರ್ಜುನ ಮತ್ತು ಯಮಳರೊಂದಿಗೆ ಯೋಗವನ್ನು ಆಜ್ಞಾಪಿಸಿದನು. ಯೋಗವನ್ನು ಆಜ್ಞಾಪಿಸಿದಾಗ ಪಾಂಡವರ ಸೇನೆಯಲ್ಲಿ ಕಿಲಕಿಲಗಳುಂಟಾಯಿತು. ಸೈನಿಕರು ಬಹಳ ಹರ್ಷಿತರಾದರು. ಅವಧ್ಯರ ವಧೆಯನ್ನು ಕಂಡ ಧರ್ಮರಾಜ ಯುಧಿಷ್ಠಿರನು ಆಳವಾದ ನಿಟ್ಟಿಸುರು ಬಿಡುತ್ತಾ ಭೀಮಸೇನ ವಿಜಯರಿಗೆ ಇದನ್ನು ಹೇಳಿದನು: “ಯಾವ ಆಪತ್ತನ್ನು ತಡೆಯುವುದಕ್ಕಾಗಿ ನಾನು ವನವಾಸದ ದುಃಖವನ್ನು ಅನುಭವಿಸಿದೆನೋ ಅದು, ಪ್ರಯತ್ನವು ಪರಮ ಅನರ್ಥವೋ ಎನ್ನುವಂತೆ  ನಮ್ಮನ್ನು ಬಿಡುತ್ತಿಲ್ಲ. ನಾವು ಏನೆಲ್ಲ ಪ್ರಯತ್ನಗಳನ್ನು ಮಾಡಿದ್ದೇವೋ ಅವು ಹೀನ ಪ್ರಯತ್ನಗಳಾಗಿವೆ. ಪ್ರಯತ್ನದಿಂದ ನಾವು ಈ ಮಹಾ ಕಲಿಯನ್ನು ತಪ್ಪಿಸಲು ಅಸಮರ್ಥರಾಗಿದ್ದೇವೆ. ಏಕೆಂದರೆ ಸಂಗ್ರಾಮದಲ್ಲಿ ಅವಧ್ಯರನ್ನು ವಧಿಸುವ ಕಾರ್ಯವು ಹೇಗೆ ನಡೆಯುತ್ತದೆ? ಗುರುಗಳನ್ನೂ ವೃದ್ಧರನ್ನೂ ಕೊಂದು ಹೇಗೆ ನಮಗೆ ವಿಜಯವುಂಟಾಗುತ್ತದೆ?”

ಧರ್ಮರಾಜನ ಆ ಮಾತುಗಳನ್ನು ಕೇಳಿ ಪರಂತಪ ಸವ್ಯಸಾಚಿಯು ವಾಸುದೇವನು ಹೇಳಿದುದನ್ನೇ ಅವನಿಗೆ ಹೇಳಿದನು: “ರಾಜನ್! ದೇವಕೀಪುತ್ರನು ಹೇಳಿದ, ಕುಂತಿ ಮತ್ತು ವಿದುರರು ಹೇಳಿ ಕಳುಹಿಸಿದ ಮಾತುಗಳನ್ನು ನೀನು ಕೇಳಲಿಲ್ಲವೇ? ಅವರಿಬ್ಬರೂ ಎಂದೂ ಅಧರ್ಮವಾದುದನ್ನು ಹೇಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಯುದ್ಧವನ್ನು ಮಾಡದೇ ನಾವು ಹಿಂದಿರುಗುವುದು ಯುಕ್ತವಲ್ಲ.”

ಸವ್ಯಸಾಚಿಯನ್ನು ಕೇಳಿ ವಾಸುದೇವನೂ ಕೂಡ ಪಾರ್ಥನಿಗೆ “ಇದು ಸರಿ” ಎಂದು ಹೇಳಿದನು. ಅನಂತರ ಪಾಂಡವರು ಸೈನಿಕರೊಂದಿಗೆ ಯುದ್ಧಕ್ಕೆ ಧೃತಸಂಕಲ್ಪರಾಗಿ ಆ ರಾತ್ರಿಯನ್ನು ಸುಖವಾಗಿ ಕಳೆದರು.

ಕೃಷ್ಣನು ಕರ್ಣನಲ್ಲಿ ಭೇದವನ್ನುಂಟುಮಾಡಲು ಪ್ರಯತ್ನಿಸಿದುದು

ಕೃಷ್ಣನು ಕರ್ಣನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಹೋದುದನ್ನು ತಿಳಿದ ಧೃತರಾಷ್ಟ್ರನು ಸಂಜಯನಿಗೆ ಹೇಳಿದನು: “ಸಂಜಯ! ರಾಜಪುತ್ರರಿಂದ ಮತ್ತು ಅಮಾತ್ಯರಿಂದ ಪರಿವೃತನಾಗಿ ರಥದಲ್ಲಿ ಕರ್ಣನನ್ನು ಏರಿಸಿಕೊಂಡು ಹೊರಟ ಮಧುಸೂದನನು ರಥದಲ್ಲಿ ಕುಳಿತಿದ್ದ ಪರವೀರಹ ರಾಧೇಯನಿಗೆ ಏನು ಹೇಳಿದನು? ಗೋವಿಂದನು ಸೂತಪುತ್ರನಿಗೆ ಸಾಂತ್ವನದ ಯಾವ ಮಾತುಗಳನ್ನಾಡಿದನು? ದೊಡ್ಡ ಅಲೆಯಂತೆ ಅಥವಾ ಕಪ್ಪು ಮೋಡದಂತೆ ಧ್ವನಿಯುಳ್ಳ ಕೃಷ್ಣನು ಕರ್ಣನಿಗೆ, ಮೃದುವಾಗಿರಲಿ ಅಥವಾ ಕಠೋರವಾಗಿರಲಿ, ಏನು ಹೇಳಿದ ಎನ್ನುವುದನ್ನು ನನಗೆ ಹೇಳು.”

ಸಂಜಯನು ಹೇಳಿದನು: “ಭಾರತ! ಆ ಸಂಭಾಷಣೆಯಲ್ಲಿ ಅಮೇಯಾತ್ಮ ಮಧುಸೂದನನು ರಾಧೇಯನಿಗೆ ಹೇಳಿದ ನಯವಾದ, ದಯೆಯಿಂದ ಕೂಡಿದ, ಪ್ರಿಯವಾದ, ಧರ್ಮಯುಕ್ತವಾದ, ಸತ್ಯವೂ ಹಿತವೂ ಆದ, ಹೃದಯದಲ್ಲಿ ಹಿಡಿದಿಟ್ಟುಕೊಳ್ಳಬೇಕಾದಂತಹ ಮಾತುಗಳನ್ನು ನನ್ನಿಂದ ಕೇಳು. ವಾಸುದೇವನು ಹೇಳಿದನು: “ರಾಧೇಯ! ವೇದಪಾರಂಗತ ಬ್ರಾಹ್ಮಣರನ್ನು ನೀನು ಉಪಾಸಿಸಿದ್ದೀಯೆ. ವಿನಯದಿಂದ, ಅನಸೂಯನಾಗಿ ಅವುಗಳ ಅರ್ಥವನ್ನು ಕೇಳಿ ತಿಳಿದುಕೊಂಡಿರುವೆ. ಸನಾತನ ವೇದಗಳನ್ನೂ ನೀನು ಅರಿತಿದ್ದೀಯೆ. ನೀನು ಧರ್ಮಶಾಸ್ತ್ರಗಳ ಸೂಕ್ಷ್ಮತೆಗಳಲ್ಲಿಯೂ ಪಳಗಿದ್ದೀಯೆ. ಮದುವೆಯ ಮೊದಲು ಕನ್ಯೆಗೆ ಹುಟ್ಟಿದವನು ಮದುವೆಯಾದ ಅವಳ ಗಂಡನಿಗೆ ಹುಟ್ಟಿದ ಮಕ್ಕಳಿಗೆ ಸಮನೆಂದು ಶಾಸ್ತ್ರವನ್ನು ತಿಳಿದ ಜನರು ಹೇಳುತ್ತಾರೆ. ಹಾಗೆ ಹುಟ್ಟಿದ ನೀನೂ ಕೂಡ ಧರ್ಮತಃ ಪಾಂಡುವಿನ ಮಗನಾಗಿದ್ದೀಯೆ. ಧರ್ಮಶಾಸ್ತ್ರಗಳ ಕಟ್ಟುಪಾಡುಗಳಂತೆ ಬಾ! ರಾಜನಾಗುವೆಯಂತೆ! ತಂದೆಯ ಕಡೆಯಿಂದ ಪಾರ್ಥರು ಮತ್ತು ತಾಯಿಯ ಕಡೆಯಿಂದ ವೃಷ್ಣಿಗಳು. ಇವರಿಬ್ಬರೂ ನಿನ್ನವರೇ ಎನ್ನುವುದನ್ನು ತಿಳಿದುಕೋ! ನನ್ನ ಜೊತೆ ಇಂದು ಬಾ! ಯುಧಿಷ್ಠಿರನ ಹಿರಿಯ ಕೌಂತೇಯನೆಂದು ಪಾಂಡವರು ನಿನ್ನನ್ನು ಗುರುತಿಸಲಿ. ಐವರು ಪಾಂಡವ ಸಹೋದರರು, ಐವರು ದ್ರೌಪದಿಯ ಮಕ್ಕಳು ಮತ್ತು ಅಪರಾಜಿತ ಸೌಭದ್ರಿಯು ನಿನ್ನ ಪಾದಗಳನ್ನು ಹಿಡಿಯುತ್ತಾರೆ. ಪಾಂಡವರಿಗಾಗಿ ಸೇರಿರುವ ಎಲ್ಲ ಅಂಧಕ-ವೃಷ್ಣಿಯರು, ರಾಜರು, ರಾಜಪುತ್ರರು ನಿನ್ನ ಪಾದಗಳನ್ನು ಹಿಡಿಯುತ್ತಾರೆ. ಪಾರ್ಥಿವರು, ರಾಜರು, ರಾಜಕನ್ಯೆಯರು ಬಂಗಾರದ ಮತ್ತು ರಜತ ಕಲಶಗಳಲ್ಲಿ ಔಷಧಿ, ಸರ್ವಬೀಜಗಳು, ಸರ್ವರತ್ನಗಳನ್ನು, ಗಿಡಮೂಲಿಕೆಗಳನ್ನು ತಂದು ನಿನ್ನನ್ನು ಅಭಿಷೇಕಿಸುತ್ತಾರೆ. ಸಮಯ ಬಂದಾಗ ದ್ರೌಪದಿಯೂ ಕೂಡ ಆರನೆಯವನಾಗಿ ನಿನ್ನನ್ನು ಸೇರುತ್ತಾಳೆ. ಇಂದು ಚಾತುರ್ವೇದಗಳನ್ನು ತಿಳಿದಿರುವ ಬ್ರಾಹ್ಮಣವರ್ಗವು, ಪಾಂಡವರ ಪುರೋಹಿತನು ನಿನ್ನನ್ನು ವ್ಯಾಘ್ರಚರ್ಮದ ಮೇಲೆ ಕುಳ್ಳಿರಿಸಿ ಅಭಿಷೇಕಿಸುತ್ತಾನೆ. ಹಾಗೆಯೇ ಆ ಪುರುಷರ್ಷಭ ಸಹೋದರ ಪಂಚ ಪಾಂಡವರು, ಐವರು ದ್ರೌಪದೇಯರು, ಪಾಂಚಾಲ-ಚೇದಿಯರು ಮತ್ತು ನಾನೂ ಕೂಡ ನಿನ್ನನ್ನು ಪೃಥಿವೀಪತಿ ರಾಜನಾಗಿ ಅಭಿಷೇಕಿಸುತ್ತೇವೆ. ರಾಜನಾದ ನಿನಗೆ ಕುಂತೀಪುತ್ರ ಯುಧಿಷ್ಠಿರನು ಯುವರಾಜನಾಗುತ್ತಾನೆ. ಧರ್ಮಾತ್ಮ ಸಂಶಿತವ್ರತ ಕುಂತೀಪುತ್ರ ಯುಧಿಷ್ಠಿರನು ನಿನ್ನ ಮೇಲೆ ಶ್ವೇತವ್ಯಾಜಿನವನ್ನು ಹಿಡಿದು ನಿನ್ನ ರಥದಲ್ಲಿ ನಿಲ್ಲುತ್ತಾನೆ. ಅಭಿಷಿಕ್ತನಾದ ಕೌಂತೇಯ ನಿನಗೆ ಮಹಾಬಲಿ ಭೀಮಸೇನನು ದೊಡ್ಡ ಶ್ವೇತಚತ್ರವನ್ನು ಹಿಡಿಯುತ್ತಾನೆ. ನೂರಾರು ಗಂಟೆಗಳ ಧ್ವನಿಗಳಿಂದ ಕೂಡಿದ, ವೈಯಾಘ್ರಚರ್ಮವನ್ನು ಹೊದೆಸಿದ, ಬಿಳಿಯ ಕುದುರೆಗಳನ್ನು ಕಟ್ಟಿರುವ ರಥದಲ್ಲಿ ನಿನ್ನನ್ನು ಅರ್ಜುನನು ಕರೆದೊಯ್ಯುತ್ತಾನೆ. ಅಭಿಮನ್ಯು, ನಕುಲ, ಸಹದೇವ, ಐವರು ದ್ರೌಪದೇಯರು ನಿತ್ಯವೂ ನಿನ್ನ ಸೇವೆಮಾಡುತ್ತಾರೆ. ಪಾಂಚಾಲರು, ಮಹಾರಥಿ ಶಿಖಂಡಿ, ಮತ್ತು ನಾನೂ ಕೂಡ ನಿನ್ನನ್ನು ಅನುಸರಿಸುತ್ತೇವೆ. ಎಲ್ಲ ಅಂಧಕ ವೃಷ್ಣಿಯರು, ದಾಶಾರ್ಹರು, ದಾಶಾರ್ಣರು ನಿನ್ನನ್ನು ಸುತ್ತುವರೆದಿರುತ್ತಾರೆ. ಪಾಂಡವ ಸಹೋದರರೊಂದಿಗೆ, ಜಪ-ಹೋಮಗಳಿಂದ ಸಂಯುಕ್ತನಾಗಿ, ಮಂಗಲ ವಿಧಗಳಿಂದ ರಾಜ್ಯವನ್ನು ಭೋಗಿಸು. ದ್ರವಿಡರು, ಕುಂತಲರು, ಆಂಧ್ರರು, ತಾಲಚರರು, ಚೂಚುಪರು, ಮತ್ತು ವೇಣುಪರು ನಿನ್ನ ಪುರೋಗಮರಾಗುತ್ತಾರೆ. ಇಂದು ಬಹಳ ಸೂತಮಾಗಧರು ಸ್ತುತಿಗಳಿಂದ ನಿನ್ನನ್ನು ಸ್ತುತಿಸುತ್ತಾರೆ. ಪಾಂಡವರು ವಸುಷೇಣನ ವಿಜಯವನ್ನು ಘೋಷಿಸುತ್ತಾರೆ. ನಕ್ಷತ್ರಗಳಿಂದ ಚಂದ್ರಮನು ಹೇಗೋ ಹಾಗೆ ನೀನು ಪಾರ್ಥರಿಂದ ಪರಿವೃತನಾಗಿ ರಾಜ್ಯವನ್ನು ಆಳಿ ಕುಂತಿಗೂ ಆನಂದವನ್ನು ನೀಡುವೆ. ಸಹೋದರ ಪಾಂಡವರೊಂದಿಗಿರುವ ನಿನ್ನ ಸೌಭ್ರಾತೃತ್ವದಿಂದ ನಿನ್ನ ಮಿತ್ರರು ಹರ್ಷಪಡುತ್ತಾರೆ. ಶತ್ರುಗಳು ದುಃಖಿಸುತ್ತಾರೆ.”

“ಕರ್ಣನು ಹೇಳಿದನು: “ಕೇಶವ! ನನ್ನ ಮೇಲಿನ ಸ್ನೇಹದಿಂದ, ಪ್ರೀತಿಯಿಂದ, ಸಖ್ಯದಿಂದ ಮತ್ತು ನನಗೆ ಶ್ರೇಯಸ್ಸಾಗಬೇಕೆಂದು ಇದನ್ನು ಹೇಳುತ್ತಿದ್ದೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ನೀನು ಅಭಿಪ್ರಾಯಪಡುವಂತೆ ಧರ್ಮಶಾಸ್ತ್ರಗಳ ಕಟ್ಟುಪಾಡುಗಳಂತೆ ಧರ್ಮತಃ ನಾನು ಪಾಂಡುವಿನ ಮಗನೆಂದು ಎಲ್ಲವನ್ನೂ ತಿಳಿದಿದ್ದೇನೆ. ಕನ್ಯೆಯಾಗಿದ್ದಾಗಲೇ ಭಾಸ್ಕರನಿಂದ ಗರ್ಭವನ್ನು ಪಡೆದು ಆದಿತ್ಯನ ಮಾತಿನಂತೆ ಹುಟ್ಟಿದಾಗಲೇ ಅವಳು ನನ್ನನ್ನು ವಿಸರ್ಜಿಸಿದ್ದಳು. ಹೌದು ಕೃಷ್ಣ! ಧರ್ಮತಃ ನಾನು ಪಾಂಡುವಿನ ಪುತ್ರನಾಗಿ ಹುಟ್ಟಿದೆನು. ಆದರೆ ಕುಂತಿಯು ಸತ್ತು ಹುಟ್ಟಿದವನಂತೆ ನನ್ನನ್ನು ಬಿಸಾಡಿದಳು. ಸೂತ ಅಧಿರಥನು ನನ್ನನ್ನು ಕಂಡಕೂಡಲೇ ಮನೆಗೆ ಕರೆತಂದು ಪ್ರೀತಿಯಿಂದ ರಾಧೆಗೆ ಕೊಟ್ಟನು. ನನ್ನ ಮೇಲಿನ ಪ್ರೀತಿಯಿಂದ ಕೂಡಲೇ ಅವಳ ಎದೆಯ ಹಾಲು ಸುರಿಯಿತು. ಅವಳೂ ಕೂಡ ನನ್ನ ಮಲ ಮೂತ್ರಗಳನ್ನು ಸಹಿಸಿಕೊಂಡಳು. ನನ್ನಂಥವನು - ಧರ್ಮವನ್ನು ತಿಳಿದವನು ಮತ್ತು ಸತತವೂ ಧರ್ಮಶಾಸ್ತ್ರಗಳನ್ನು ಕೇಳುವುದರಲ್ಲಿ ನಿರತನಾದವನು - ಹೇಗೆ ತಾನೇ ಅವಳಿಗೆ ಪಿಂಡವನ್ನು ನಿರಾಕರಿಸಬಲ್ಲ? ಸೂತ ಅಧಿರಥನು ನನ್ನನ್ನು ಮಗನೆಂದು ತಿಳಿದುಕೊಂಡಿದ್ದಾನೆ. ನಾನೂ ಕೂಡ ಪ್ರೀತಿಯಿಂದ ಅವನನ್ನು ತಂದೆಯೆಂದೇ ತಿಳಿದುಕೊಂಡಿದ್ದೇನೆ. ಅವನೇ ನನಗೆ ಪುತ್ರಪ್ರೀತಿಯಿಂದ ಶಾಸ್ತ್ರದೃಷ್ಟ ವಿಧಿಗಳಿಂದ ಜಾತಕರ್ಮಾದಿಗಳನ್ನು ಮಾಡಿಸಿದನು. ದ್ವಿಜರಿಂದ ನನಗೆ ವಸುಷೇಣನೆಂಬ ಹೆಸರನ್ನಿತ್ತನು. ನನಗೆ ಯೌವನ ಪ್ರಾಪ್ತಿಯಾದಾಗ ಅವನೇ ನನಗೆ ಭಾರ್ಯೆಯರನ್ನು ತಂದು ಮದುವೆಮಾಡಿಸಿದನು. ಅವರಲ್ಲಿ ನನಗೆ ಮಕ್ಕಳು ಮೊಮ್ಮಕ್ಕಳು ಹುಟ್ಟಿದ್ದಾರೆ. ಅವರ ಮೇಲೆ ನನ್ನ ಹೃದಯದಲ್ಲಿ ಕಾಮಬಂಧನವು ಬೆಳೆದುಕೊಂಡಿದೆ! ಸಕಲ ಭೂಮಿಯಾಗಲೀ, ಸುವರ್ಣದ ರಾಶಿಗಳಾಗಲೀ, ಹರ್ಷಗಳಾಗಲೀ, ಭಯಗಳಾಗಲೀ ನನ್ನ ಮಾತಿಗೆ ಸುಳ್ಳಾಗಿ ನಡೆದುಕೊಳ್ಳುವಂತೆ ಮಾಡಲಾರವು!

“ಧೃತರಾಷ್ಟ್ರ ಕುಲದಲ್ಲಿ, ದುರ್ಯೋಧನನ ಆಶ್ರಯದಲ್ಲಿ, ಹದಿಮೂರು ವರ್ಷಗಳು ಈ ರಾಜ್ಯವನ್ನು ಅಡೆತಡೆಯಿಲ್ಲದೇ ಭೋಗಿಸಿದ್ದೇನೆ. ಸೂತರೊಂದಿಗೆ ಬಹಳಷ್ಟು ಇಷ್ಟಿ-ಯಜ್ಞಗಳನ್ನು ನಾನು ಮಾಡಿದ್ದೇನೆ. ಕುಟುಂಬದ ಆವಾಹ-ವಿವಾಹಗಳನ್ನೂ ಕೂಡ ನಾನು ಸೂತರೊಂದಿಗೇ ಮಾಡಿದ್ದೇನೆ. ನನ್ನನ್ನೇ ಅವಲಂಬಿಸಿ ಶಸ್ತ್ರಗಳನ್ನು ಮೇಲೆತ್ತಿ ದುರ್ಯೋಧನನು ಪಾಂಡವರೊಂದೆಗೆ ಹೋರಾಟ ಮಾಡುತ್ತಿದ್ದಾನೆ. ಆದುದರಿಂದಲೇ ರಣದಲ್ಲಿ ರಥಗಳ ದ್ವಂದ್ವಯುದ್ದದಲ್ಲಿ ಸವ್ಯಸಾಚಿಯ ವಿರುದ್ಧವಾಗಿ ನನ್ನನ್ನು ವಿಶ್ವಾಸದಿಂದ ಆರಿಸಿಕೊಂಡು, ಪರಮ ಹರ್ಷಿತನಾಗಿದ್ದಾನೆ. ಸಾವಾಗಲೀ, ಸೆರೆಯಾಗಲೀ, ಭಯವಾಗಲೀ, ಲೋಭವಾಗಲೀ ಧೀಮತ ಧಾರ್ತರಾಷ್ಟ್ರನಿಗೆ ನಾನು ಕೊಟ್ಟ ಮಾತನ್ನು ಮುರಿಯುವಂತೆ ಮಾಡಲಾರವು. ಇಂದು ನಾವು ರಥಗಳ ದ್ವಂದ್ವಯುದ್ಧವನ್ನು ಮಾಡದೇ ಇದ್ದರೆ ನನಗೆ ಮತ್ತು ಪಾರ್ಥ ಇಬ್ಬರಿಗೂ ಅಕೀರ್ತಿಯು ಲಭಿಸುತ್ತದೆ. ನೀನು ಒಳ್ಳೆಯದಕ್ಕಾಗಿಯೇ ಹೇಳುತ್ತಿದ್ದೀಯೆ ಮತ್ತು ನಿನ್ನ ಮಾರ್ಗದರ್ಶನದಿಂದ ಪಾಂಡವರು ಎಲ್ಲವನ್ನೂ ಸಾಧಿಸುವರು ಎನ್ನುವುದರಲ್ಲಿ ಸಂಶಯವೇ ಇಲ್ಲ.

“ನಾವು ಇಲ್ಲಿ ಮಾತನಾಡಿದುದನ್ನು ಇಲ್ಲಿಯೇ ಇರಿಸಬೇಕು. ಅದರಲ್ಲಿಯೇ ಹಿತವಿದೆ ಎಂದು ನನಗನ್ನಿಸುತ್ತದೆ. ನಾನು ಕುಂತಿಯ ಮೊದಲು ಹುಟ್ಟಿದ ಮಗನೆಂದು ಆ ರಾಜಾ ಧರ್ಮಾತ್ಮ ಸಂಶಿತವ್ರತನಿಗೆ ಗೊತ್ತಾದರೆ ಅವನು ರಾಜ್ಯವನ್ನು ಸ್ವೀಕರಿಸುವುದಿಲ್ಲ. ಒಂದುವೇಳೆ ನನಗೆ ಈ ಸಂಪದ್ಭರಿತ ಮಹಾರಾಜ್ಯವನ್ನು ಒಪ್ಪಿಸಿದರೆ ಅದನ್ನು ನಾನು ದುರ್ಯೋಧನನಿಗೇ ಕೊಟ್ಟುಬಿಡುತ್ತೇನೆ. ಹೃಷೀಕೇಶನನ್ನು ಮಾರ್ಗದರ್ಶಕನನ್ನಾಗಿ ಮತ್ತು ಧನಂಜಯನನ್ನು ಸೇನಾಪತಿಯಾಗಿ ಪಡೆದಿರುವ ಧರ್ಮಾತ್ಮ ಯುಧಿಷ್ಠಿರನೇ ಶಾಶ್ವತವಾಗಿ ರಾಜನಾಗಲಿ. ಯಾರೊಡನೆ ಮಹಾರಥಿ ಭೀಮ, ನಕುಲ ಸಹದೇವರು, ದ್ರೌಪದೇಯರು, ಉತ್ತಮೌಜ, ಯುಧಾಮನ್ಯು, ಸತ್ಯಧರ್ಮ ಸೋಮಕಿ, ಚೈದ್ಯ, ಚೇಕಿತಾನ, ಅಪರಾಜಿತ ಶಿಖಂಡೀ, ಇಂದ್ರಗೋಪಕ, ವರ್ಣ, ಕೇಕಯ ಸಹೋದರರು, ಇಂದ್ರಾಯುಧ, ಸವರ್ಣ, ಮಹಾರಥಿ ಕುಂತಿಭೋಜ, ಭೀಮಸೇನನ ಮಾವ ಮಹಾರಥಿ ಸೇನಜಿತ್, ವಿರಾಟನ ಪುತ್ರ ಶಂಖ ಮತ್ತು ನಿಧಿಗಾಗಿ ಜನಾರ್ದನ ನೀನಿರುವೆಯೋ ಅವನದ್ದೇ ರಾಷ್ಟ್ರವು ಈ ಭೂಮಿಯಾಗುವುದು. ಇಲ್ಲಿ ಸೇರಿರುವ ಮಹಾಸಂಖ್ಯೆಯ ಕ್ಷತ್ರಿಯರು ಒಂದು ಸಾಧನೆಯೇ! ಎಲ್ಲ ರಾಜರಲ್ಲಿಯೇ ಪ್ರಥಿತವಾಗಿರುವ ಬೆಳಗುತ್ತಿರುವ ಈ ರಾಜ್ಯವು ದೊರಕಿದಂತೆಯೇ!

“ಧಾರ್ತರಾಷ್ಟ್ರನು ನಡೆಸುವ ಒಂದು ಶಸ್ತ್ರಯಜ್ಞವು ನಡೆಯಲಿಕ್ಕಿದೆ. ಈ ಯಜ್ಞದ ವೇತ್ತನು ನೀನಾಗುವೆ. ಈ ಕ್ರತುವಿನ ಅಧ್ವರ್ಯನೂ ನೀನಾಗುವೆ. ಅದರ ಹೋತನು ಸನ್ನದ್ಧನಾಗಿರುವ ಕಪಿಧ್ವಜ ಬೀಭತ್ಸುವು. ಗಾಂಡೀವವು ಸ್ರುಕ್ ಮತ್ತು ಪುರುಷರ ವೀರ್ಯವು ಆಜ್ಯವಾಗುತ್ತದೆ. ಸವ್ಯಸಾಚಿಯು ಪ್ರಯೋಗಿಸುವ ಐಂದ್ರ, ಪಾಶುಪತ, ಬ್ರಹ್ಮ, ಮತ್ತು ಸ್ಥೂಣಾಕರ್ಣ ಅಸ್ತ್ರಗಳು ಅದರಲ್ಲಿ ಮಂತ್ರಗಳಾಗುತ್ತವೆ. ಪರಾಕ್ರಮದಲ್ಲಿ ತಂದೆಯನ್ನು ಹೋಲುವ ಅಥವಾ ಅವನಿಗಿಂತಲೂ ಅಧಿಕನಾಗಿರುವ ಸೌಭದ್ರನು ಅದರಲ್ಲಿ ಗ್ರಾವಸ್ತೋತ್ರಿಯ ಕೆಲಸವನ್ನು ಮಾಡುತ್ತಾನೆ. ರಣದಲ್ಲಿ ಗರ್ಜಿಸಿ ಆನೆಗಳ ಸೇನೆಯನ್ನು ಕೊನೆಗೊಳಿಸುವ ನರವ್ಯಾಘ್ರ ಸುಮಹಾಬಲ ಭೀಮನು ಅದರಲ್ಲಿ ಉದ್ಗಾತನೂ ಪ್ರಸ್ತೋತನೂ ಆಗುತ್ತಾನೆ. ಆ ಶಾಶ್ವತ ರಾಜ, ಧರ್ಮಾತ್ಮಾ, ಜಪ-ಹೋಮಗಳಲ್ಲಿ ಪಳಗಿರುವ ಯುಧಿಷ್ಠಿರನು ಅದರಲ್ಲಿ ಬ್ರಹ್ಮತ್ವವನ್ನು ಕೈಗೊಳ್ಳುತ್ತಾನೆ. ಶಂಖಗಳ ಶಬ್ಧ, ನಗಾರಿ ಭೇರಿಗಳ ಶಬ್ಧಗಳು, ಮತ್ತು ಕಿವಿ ಕಿವುಡು ಮಾಡುವ ಸಿಂಹನಾದಗಳು ಸುಬ್ರಹ್ಮಣ್ಯವಾಗುತ್ತವೆ. ಮಹಾವೀರರಾದ ಯಶಸ್ವಿಗಳಾದ ಮಾದ್ರೀಪುತ್ರ ನಕುಲ-ಸಹದೇವರಿಬ್ಬರೂ ಅದರಲ್ಲಿ ಶಾಮಿತ್ರರ ಕೆಲಸವನ್ನು ಮಾಡುತ್ತಾರೆ. ಈ ಯಜ್ಞದಲ್ಲಿ ರಥಗಳಿಗೆ ಕಟ್ಟಿದ ಶುಭ್ರವಾದ ಪತಾಕೆಗಳ ದಂಡಗಳು ಯೂಪಗಳಂತೆ ಇರುತ್ತವೆ. ಕರ್ಣಿನಾಲೀಕ, ನಾರಾಚ, ವತ್ಸದಂತ ಮತ್ತು ತೋಮರ ಬಾಣಗಳು ಸೋಮ ಕಲಶಗಳಾಗುತ್ತವೆ ಹಾಗೂ ಧನುಸ್ಸುಗಳು ಪವಿತ್ರಗಳಾಗುತ್ತವೆ. ಈ ಯಜ್ಞದಲ್ಲಿ ಕಪಾಲ-ಶಿರಗಳು ಪುರೋಡಾಷಗಳೂ, ರಕ್ತವು ಹವಿಸ್ಸಾಗಿಯೂ ಆಗುತ್ತವೆ. ಶುಭ್ರವಾದ ಶಕ್ತ್ಯಾಯುಧ ಮತ್ತು ಗದೆಗಳು ಅಗ್ನಿಯನ್ನು ಹೊತ್ತಿಸುವ ಮತ್ತು ಉರಿಸುವ ಕಟ್ಟಿಗೆಗಳಾದರೆ ದ್ರೋಣ ಮತ್ತು ಶರದ್ವತ ಕೃಪನ ಶಿಷ್ಯರು ಸದಸ್ಯರಾಗುತ್ತಾರೆ. ಅಲ್ಲಿ ಗಾಂಡೀವಧನ್ವಿಯು ಸುತ್ತುವರೆದು ಬಿಡುವ ಮತ್ತು ದ್ರೋಣ-ದ್ರೌಣಿಯರು ಪ್ರಯೋಗಿಸುವ ಬಾಣಗಳು ತಲೆದಿಂಬುಗಳಾಗುತ್ತವೆ. ಸಾತ್ಯಕಿಯು ಪ್ರಾತಿಪ್ರಸ್ಥಾನಿಕನ ಕೆಲಸವನ್ನು ಮಾಡುತ್ತಾನೆ. ಧಾರ್ತರಾಷ್ಟ್ರನು ಅದರಲ್ಲಿ ದೀಕ್ಷಿತನಾಗುತ್ತಾನೆ ಮತ್ತು ಮಹಾಸೇನೆಯು ಅವನ ಪತ್ನಿ. ಯಜ್ಞಕರ್ಮಗಳು ರಾತ್ರಿಯೂ ಮುಂದುವರಿದರೆ ಆಗ ಅದರಲ್ಲಿ ಮಹಾಬಲ ಮಹಾಬಾಹು ಘಟೋತ್ಕಚನು ಶಾಮಿತ್ರನ ಕೆಲಸವನ್ನು ಮಾಡುತ್ತಾನೆ. ಅಗ್ನಿಯಿಂದ ಹುಟ್ಟಿದ ಪ್ರತಾಪವಾನ್ ಧೃಷ್ಟದ್ಯುಮ್ನನು ಈ ಯಜ್ಞದ ವೈತಾನ ಕರ್ಮಗಳಲ್ಲಿ ದಕ್ಷಿಣೆಯಾಗುತ್ತಾನೆ. ಅಂದು ಧಾರ್ತರಾಷ್ಟ್ರನನ್ನು ಸಂತೋಷಪಡಿಸಲು, ಇಂದು ಆ ಕೆಲಸಕ್ಕೆ ನಾನು ಪಶ್ಚಾತ್ತಾಪ ಪಡುತ್ತಿರುವ, ಪಾಂಡವರಿಗಾಡಿದ ಕಟುಕಾದ ಮಾತುಗಳಿಗೆ ಸವ್ಯಸಾಚಿಯು ನನ್ನನ್ನು ತುಂಡರಿಸುವುದನ್ನು ನೀನು ನೋಡಿದಾಗ ಅದು ಈ ಯಜ್ಞದ ಪುನಶ್ಚಿತಿಯಾಗುತ್ತದೆ. ಪಾಂಡವನು ಜೋರಾಗಿ ಘರ್ಜಿಸಿ ದುಃಶಾಸನನ ರುಧಿರವನ್ನು ಕುಡಿಯುವಾಗ ಅದು ಇದರ ಸುತ್ಯವಾಗುತ್ತದೆ. ಪಾಂಚಾಲರಿಬ್ಬರೂ ದ್ರೋಣ-ಭೀಷ್ಮರನ್ನು ಕೆಳಗುರುಳಿಸಿದಾಗ ಅದು ಯಜ್ಞದ ಅವಸಾನವಾಗುತ್ತದೆ. ಮಹಾಬಲ ಭೀಮಸೇನನು ದುರ್ಯೋಧನನನ್ನು ಕೊಂದಾಗ ಧಾರ್ತರಾಷ್ಟ್ರನ ಈ ಯಜ್ಞವು ಸಮಾಪ್ತವಾಗುತ್ತದೆ. ಸೊಸೆಯಂದಿರು ಮತ್ತು ಮಕ್ಕಳ ಸೊಸೆಯಂದಿರು ಧೃತರಾಷ್ಟ್ರನನ್ನು ಸೇರಿ ಹತೇಶ್ವರರಾಗಿ, ಹತಸುತರಾಗಿ, ಹತನಾಥರಾಗಿ, ಗಾಂಧಾರಿಯೊಂದಿಗೆ ರೋದಿಸುತ್ತಾ ನಾಯಿ-ಹದ್ದು-ನರಿಗಳಿಂದ ಕೂಡಿದ ಯಜ್ಞಸ್ಥಳದಲ್ಲಿ ಸೇರಿದಾಗ ಅದು ಅವಭೃತವಾಗುತ್ತದೆ.

“ವಿದ್ಯಾವೃದ್ಧರಾದ, ವಯೋವೃದ್ಧರಾದ ಈ ಕ್ಷತ್ರಿಯರು ನಿನ್ನಿಂದಾಗಿ ಕುರ್ವೀರರಾಗಿ ವೃಥಾ ಮೃತ್ಯುವನ್ನು ಹೊಂದದಂತಾಗಲಿ. ಮೂರುಲೋಕಗಳಲ್ಲಿಯೂ ಪುಣ್ಯತಮವಾಗಿರುವ ಕುರುಕ್ಷೇತ್ರದಲ್ಲಿ ಸಮೃದ್ಧ ಕ್ಷತ್ರಮಂಡಲವು ಶಸ್ತ್ರಗಳ ಮೂಲಕ ನಿಧನ ಹೊಂದಲಿ. ಸಂಪೂರ್ಣವಾಗಿ ಕ್ಷತ್ರಿಯರು ಸ್ವರ್ಗವನ್ನು ಪಡೆಯುವಂತೆ ಬಯಸಿ ಅದರಂತೆ ಮಾಡು! ಎಲ್ಲಿಯವರೆಗೆ ಗಿರಿಗಳು ನಿಂತಿರುತ್ತವೆಯೋ, ನದಿಗಳು ಹರಿಯುತ್ತಿರುತ್ತವೆಯೋ ಅಲ್ಲಿಯವರೆಗೆ ಈ ಯುದ್ಧದ ಶಬ್ಧದ ಕೀರ್ತಿಯು ಕೇಳಿಬರುತ್ತದೆ ಶಾಶ್ವತವಾಗಿರುತ್ತದೆ. ಕ್ಷತ್ರಿಯರ ಯಶಸ್ಸನ್ನು ಹೆಚ್ಚಿಸುವ ಈ ಮಹಾಭಾರತ ಯುದ್ಧವನ್ನು ಬ್ರಾಹ್ಮಣರು ಸಮಾಗಮಗಳಲ್ಲಿ ಹೇಳುತ್ತಿರುತ್ತಾರೆ. ಕೌಂತೇಯನನ್ನು ಯುದ್ಧಕ್ಕೆ ಕರೆದುಕೊಂಡು ಬಾ. ಈ ಮಾತುಕತೆಯನ್ನು ಗೋಪನೀಯವಾಗಿರಿಸು.”

ಕರ್ಣನ ಮಾತನ್ನು ಕೇಳಿ ಪರವೀರಹ ಕೇಶವನು ಮೊದಲು ಮುಗುಳ್ನಕ್ಕು, ನಂತರ ಜೋರಾಗಿ ನಕ್ಕು ಹೀಗೆ ಹೇಳಿದನು: “ಕರ್ಣ! ರಾಜ್ಯಲಾಭವು ಕೂಡ ನಿನ್ನನ್ನು ಬದಲಾಯಿಸುವುದಿಲ್ಲವೇ? ನಾನು ಕೊಡುತ್ತಿರುವ ಈ ಪೃಥ್ವಿಯನ್ನು ಆಳಲು ಬಯಸುವುದಿಲ್ಲವೇ? ಪಾಂಡವರಿಗೇ ಜಯವೆನ್ನುವುದು ನಿಶ್ಚಿತ. ಅದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಉಗ್ರ ವಾನರರಾಜನಿಂದ ಕೂಡಿದ ಧ್ವಜವುಳ್ಳ ಪಾಂಡವನಿಗೆ ಜಯವೇ ಕಾಣುತ್ತಿದೆ. ಭೌವನನು ಆ ದಿವ್ಯ ಇಂದ್ರಕೇತುವಿನಂತೆ ಪ್ರಕಾಶಿಸುವ ಧ್ವಜದಲ್ಲಿ ಮಾಯೆಯನ್ನು ಅಳವಡಿಸಿದ್ದಾನೆ. ಅದರಲ್ಲಿ ಭಯವನ್ನು ನೀಡುವ ಭೂತಗಳೂ ಭಯಾನಕ ದೃಶ್ಯಗಳೂ ಇವೆ. ಉದ್ದದಲ್ಲಿ ಮತ್ತು ಎಲ್ಲಕಡೆ ಒಂದು ಯೋಜನೆ ಅಳತೆಯಿರುವ ಆ ಧ್ವಜವನ್ನು ಬಿಡಿಸಿದಾಗ ಗಿರಿ-ಮರಗಳು ಅಡ್ಡವಾಗಿ ಬರಲಾರವು. ಧನಂಜಯನ ಶ್ರೀಮಾನ್ ಧ್ವಜವು ರೂಪದಲ್ಲಿ ಗಾಳಿಯಂತೆ ರಚಿಸಲ್ಪಟ್ಟಿದೆ. ಕೃಷ್ಣನು ಸಾರಥಿಯಾಗಿರುವ ಶ್ವೇತಾಶ್ವನನ್ನು ಸಂಗ್ರಾಮದಲ್ಲಿ ನೋಡುವಾಗ, ಐಂದ್ರ, ಅಗ್ನಿ ಮತ್ತು ಮರುತಾಸ್ತ್ರಗಳನ್ನು ಪ್ರಯೋಗಿಸುವುದನ್ನು, ಗಾಂಡೀವವನ್ನು ಎಳೆದಾಗ ನಿರ್ಘೋಷವನ್ನು ಕೇಳಿದಾಗ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ. ಸಂಗ್ರಾಮದಲ್ಲಿ ಜಪಹೋಮಸಮಾಯುಕ್ತನಾಗಿ ಮಹಾಸೇನೆಯನ್ನು ರಕ್ಷಿಸುತ್ತಿರುವ, ದುರ್ಧರ್ಷ ಆದಿತ್ಯನಂತೆ ಶತ್ರುಸೇನೆಯನ್ನು ಸುಡುತ್ತಿರುವ ಕುಂತೀಪುತ್ರ ಯುಧಿಷ್ಠಿರನನ್ನು ಯಾವಾಗ ನೋಡುತ್ತೀಯೋ ಆಗ ಅಲ್ಲಿ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ. ಸಂಗ್ರಾಮದಲ್ಲಿ ಮಹಾಬಲ ಭೀಮಸೇನನು ಪ್ರತಿದ್ವಂದಿ ಆನೆಯನ್ನು ಕೊಂದು ಸೊಕ್ಕಿದ ದುಃಶಾಸನನ ರುಧಿರವನ್ನು ಕುಡಿದು ರಣದಲ್ಲಿ ನೃತ್ಯವಾಡುವುದನ್ನು ನೀನು ಯಾವಾಗ ನೋಡುತ್ತೀಯೋ, ಆಗ ಅಲ್ಲಿ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ. ಸಂಗ್ರಾಮದಲ್ಲಿ ಯಾವಾಗ ಮಹಾರಥಿ ಮಾದ್ರೀಪುತ್ರರು ಆನೆಗಳಂತೆ ಧಾರ್ತರಾಷ್ಟ್ರನ ಸೇನೆಯನ್ನು ಕ್ಷೋಭೆಗೊಳಿಸುತ್ತಿರುವುದನ್ನು, ಶಸ್ತ್ರಗಳ ಗುಂಪುಗಳನ್ನು ಸೀಳಿ ಶತ್ರುಗಳ ರಥಗಳನ್ನು ಧ್ವಂಸಿಸುತ್ತಿರುವುದನ್ನು ನೋಡುತ್ತೀಯೋ ಆಗ ಅಲ್ಲಿ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ. ಸಂಗ್ರಾಮದಲ್ಲಿ ಸವ್ಯಸಾಚಿಯು ದ್ರೋಣ, ಶಾಂತನವ, ಕೃಪ, ಸುಯೋಧನ, ಸೈಂಧವ ರಾಜ ಜಯದ್ರಥನನ್ನು ಯುದ್ಧದಲ್ಲಿ ಮುನ್ನುಗ್ಗಿಬರುವಾಗ ತಡೆಯುವುದನ್ನು ಯಾವಾಗ ನೋಡುತ್ತೀಯೋ ಆಗ ಅಲ್ಲಿ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ.

“ಇಲ್ಲಿಂದ ಹಿಂದಿರುಗಿ ದ್ರೋಣ, ಶಾಂತನವ ಮತ್ತು ಕೃಪರಿಗೆ ಹೇಳು. ಈ ತಿಂಗಳು ಬೆಳೆ ಮತ್ತು ಇಂಧನಗಳಿಂದ ಸಮೃದ್ಧವಾಗಿದ್ದು ಉತ್ತಮ ಸಮಯವಾಗಿದೆ. ಔಷಧಿಗಳು ಪಕ್ವವಾಗಿವೆ, ವನವು ಪುಷ್ಪ-ಫಲ ಭರಿತವಾಗಿದೆ, ಅತೀ ಕಡಿಮೆ ಸೊಳ್ಳೆಗಳಿವೆ. ದಾರಿಯು ಸುಲಭವಾಗಿದೆ. ನೀರು ರಸಭರಿತವಾಗಿದೆ. ಅತಿ ಸೆಖೆಯೂ ಛಳಿಯೂ ಇಲ್ಲದೇ ಸುಖಕರವಾಗಿದೆ. ಇಂದಿನಿಂದ ಏಳನೆಯ ದಿವಸ ಅಮವಾಸ್ಯೆಯಿದೆ. ಅಂದು ಸಂಗ್ರಾಮವನ್ನು ಪ್ರಾರಂಭಿಸಬೇಕು. ಏಕೆಂದರೆ ಅದರ ದೇವತೆಯು ಶಕ್ರನೆಂದು ಹೇಳುತ್ತಾರೆ. ಹಾಗೆಯೇ ಯುದ್ಧಕ್ಕಾಗಿ ಅಲ್ಲಿ ಬಂದು ಸೇರಿರುವ ಎಲ್ಲ ರಾಜರಿಗೂ ಹೇಳು: ಅವರು ಬಯಸಿದುದೆಲ್ಲವನ್ನು ನಾನು ನೆರವೇರಿಸಿಕೊಡುತ್ತೇನೆ. ದುರ್ಯೋಧನನ ವಶದಲ್ಲಿದ್ದು ಅವನನ್ನು ಅನುಸರಿಸುವ ರಾಜರು ರಾಜಪುತ್ರರು ಶಸ್ತ್ರಗಳಿಂದ ಸಾವನ್ನು ಪಡೆದು ಉತ್ತಮ ಗತಿಯನ್ನು ಹೊಂದುತ್ತಾರೆ.”

ಕೇಶವನ ಹಿತವೂ ಶುಭವೂ ಆದ ಆ ಮಾತನ್ನು ಕೇಳಿ ಕರ್ಣನು ಕೃಷ್ಣ ಮಧುನಿಷೂದನನಿಗೆ ನಮಸ್ಕರಿಸಿ ಹೇಳಿದನು: “ಮಹಾಬಾಹೋ! ಗೊತ್ತಿದ್ದರೂ ನನ್ನನ್ನು ಏಕೆ ಮೋಹಗೊಳಿಸಲು ಬಯಸುವೆ? ಸಂಪೂರ್ಣ ಈ ಪೃಥ್ವಿಯ ವಿನಾಶವು ಬಂದಿದೆ. ಶಕುನಿ, ನಾನು, ದುಃಶಾಸನ, ಧೃತರಾಷ್ಟ್ರಸುತ ನೃಪತಿ ದುರ್ಯೋಧನರು ಇದರಲ್ಲಿ ನಿಮಿತ್ತಮಾತ್ರ. ಪಾಂಡವರ ಮತ್ತು ಕುರುಗಳ ರಕ್ತವನ್ನು ಚೆಲ್ಲುವ ಘೋರ ಮಹಾಯುದ್ಧವು ಬಂದೊದಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ದುರ್ಯೋಧನನ ವಶರಾಗಿ ಅನುಸರಿಸುವ ರಾಜರು ರಾಜಪುತ್ರರು ರಣದಲ್ಲಿ ಶಸ್ತ್ರಾಗ್ನಿಯಲ್ಲಿ ಸುಟ್ಟು ಯುಮಸಾದನವನ್ನು ಸೇರುತ್ತಾರೆ. ಧಾರ್ತರಾಷ್ಟ್ರನ ಪರಾಭವವನ್ನು ಮತ್ತು ಯುಧಿಷ್ಠಿರನ ವಿಜಯವನ್ನು ಘೋಷಿಸುವ ವಿವಿಧ, ಮೈ ನವಿರೇಳಿಸುವ, ಬಹಳ ಘೋರ ಸ್ವಪ್ನಗಳು, ಘೋರ ನಿಮಿತ್ತಗಳು ಮತ್ತು ದಾರುಣ ಉತ್ಪಾತಗಳು ಕಾಣಿಸಿಕೊಳ್ಳುತ್ತಿವೆ.

“ಪ್ರಾಣಿಗಳನ್ನು ಅಧಿಕವಾಗಿ ಪೀಡಿಸುವ ತೀಕ್ಷ್ಣ ಮಹಾದ್ಯುತಿ ಶನೈಶ್ಚರ ಗ್ರಹವು ರೋಹಿಣೀ ನಕ್ಷತ್ರವನ್ನು ಪೀಡಿಸುತ್ತಿದೆ. ಮಿತ್ರರ ನಾಶವನ್ನು ಸೂಚಿಸಿ ಅಂಗಾರಕನು ವಕ್ರಿಯಾಗಿ ಜ್ಯೇಷ್ಠಾ ಮತ್ತು ಅನುರಾಧಾ ನಕ್ಷತ್ರಗಳ ಬಳಿ ಸಾಗುತ್ತಿದ್ದಾನೆ. ಈ ಗ್ರಹವು ಚಿತ್ರಾ ನಕ್ಷತ್ರವನ್ನು ಪೀಡಿಸುತ್ತಿರುವುದರಿಂದ ವಿಶೇಷವಾಗಿ ಕುರುಗಳಿಗೆ ಮಹಾ ಭಯವು ಬಂದೊದಗಿದೆ. ಚಂದ್ರನ ಮೇಲಿರುವ ಕಲೆಯು ತಲೆಕೆಳಗಾಗಿದೆ. ರಾಹುವು ಸೂರ್ಯನನ್ನು ಸಮೀಪಿಸುತ್ತಿದ್ದಾನೆ. ಆಕಾಶದಿಂದ ಜೋರಾಗಿ ಶಬ್ಧಮಾಡುತ್ತಾ, ಕಂಪಿಸುತ್ತಾ ಉಲ್ಕೆಗಳು ಬೀಳುತ್ತಿವೆ. ಆನೆಗಳು ಇದ್ದಕ್ಕಿದ್ದಂತೆಯೇ ಘೀಳಿಡುತ್ತಿವೆ. ಕುದುರೆಗಳು ಕಣ್ಣೀರು ಸುರಿಸುತ್ತಿವೆ. ಅವು ಆಹಾರ-ನೀರುಗಳನ್ನು ಕೂಡ ಇಷ್ಟಪಡುತ್ತಿಲ್ಲ. ಈ ಸೂಚನೆಗಳು ಕಂಡುಬಂದಾಗ ಮಹಾ ಭಯವು ಬರಲಿಕ್ಕಿದೆ ಎಂದು ಹೇಳುತ್ತಾರೆ. ಇವು ದಾರುಣ ಪ್ರಾಣಿನಾಶನವನ್ನು ಸೂಚಿಸುತ್ತವೆ. ಆನೆಗಳು, ಕುದುರೆಗಳು ಮತ್ತು ಮನುಷ್ಯರು ಕಡಿಮೆ ತಿನ್ನುವಂತೆ ಆದರೆ ಅಧಿಕವಾಗಿ ಮಲವಿಸರ್ಜನೆ ಮಾಡುವಂತೆ ತೋರುತ್ತಿದೆ. ಪರಾಭವದ ಸೂಚನೆಗಳೇನೆಂದು ತಿಳಿದವರು ಹೇಳುತ್ತಾರೋ ಅವೆಲ್ಲವೂ ಧಾರ್ತರಾಷ್ಟ್ರನ ಸೇನೆಯಲ್ಲಿವೆ. ಪಾಂಡವರ ವಾಹನಗಳು ಸಂತೋಷದಿಂದಿರುವಂತೆ ಕಾಣುತ್ತಿವೆ. ಮೃಗಗಳು ಪ್ರದಕ್ಷಿಣೆಯಾಗಿ ಚಲಿಸುತ್ತಿವೆ. ಇದು ಅವರ ಜಯದ ಲಕ್ಷಣ. ಧಾರ್ತರಾಷ್ಟ್ರನ ಮೃಗಗಳೆಲ್ಲವೂ ಅಪ್ರದಕ್ಷಿಣೆಯಾಗಿ ತಿರುಗುತ್ತಿವೆ. ಅಶರೀರವಾಣಿಗಳು ಕೇಳಿಬರುತ್ತಿವೆ. ಇದು ಅವರ ಸೋಲಿನ ಲಕ್ಷಣ. ಉತ್ತಮ ಪಕ್ಷಿಗಳಾದ ನವಿಲುಗಳು, ಹಂಸಗಳು, ಸಾರಸಗಳು, ಜಾತಕಗಳು, ಜೀವ ಮತ್ತು ಜೀವಕಗಳ ಗುಂಪುಗಳು ಪಾಂಡವರನ್ನು ಅನುಸರಿಸಿ ಹೋಗುತ್ತಿವೆ. ಆದರೆ ಹದ್ದು, ಕಾಗೆ, ಗಿಡುಗ, ತೋಳಗಳು, ರಾಕ್ಷಸರು ಮತ್ತು ಜೇನುಹುಳುಗಳು ಗುಂಪುಗಳಲ್ಲಿ ಕೌರವರನ್ನು ಹಿಂಬಾಲಿಸುತ್ತಿವೆ. ಧಾರ್ತರಾಷ್ಟ್ರನ ಸೇನೆಯಲ್ಲಿ ಭೇರಿಗಳು ಶಬ್ಧಮಾಡುತ್ತಿಲ್ಲ. ಆದರೆ ಪಾಂಡವರಲ್ಲಿ ಅವು ಹೊಡೆಯದೆಯೇ ಶಬ್ಧಮಾಡುತ್ತಿವೆಯಲ್ಲ! ಧಾರ್ತರಾಷ್ಟ್ರನ ಸೇನೆಯಲ್ಲಿ ಬಾವಿಗಳು ಹೋರಿಯಂತೆ ಶಬ್ಧಮಾಡುತ್ತಿವೆ. ಅದು ಅವರ ಪರಾಭವದ ಲಕ್ಷಣ. ದೇವತೆಗಳು ಮಾಂಸ ಮತ್ತು ರಕ್ತಗಳ ಮಳೆಯನ್ನು ಸುರಿಸುತ್ತಿದ್ದಾರೆ. ಆಗಸದಲ್ಲಿ ಪ್ರಾಕಾರ, ಪರಿಖ ಮತ್ತು ವಪ್ರ ಚಾರುತೋರಣಗಳಿಂದ ಸಜ್ಜಿತವಾದ ಗಂಧರ್ವನಗರಿಯು ಕಾಣುತ್ತಿದೆ. ಸೂರ್ಯನನ್ನು ಕಪ್ಪುಬಣ್ಣದ ಕೊಪ್ಪರಿಗೆಯು ಆವರಿಸಿದಂತಿದೆ. ಉದಯ ಮತ್ತು ಅಸ್ತ ಸಂಧ್ಯೆಗಳು ಮಹಾಭಯವನ್ನು ತಿಳಿಸುತ್ತಿವೆ. ನರಿಗಳು ಘೋರವಾಗಿ ಗೋಳಿಡುತ್ತಿವೆ. ಇವು ಪರಾಭವದ ಲಕ್ಷಣಗಳು. ಸಾಯಂಕಾಲ ಕಪ್ಪು ಕೊರಳಿನ ಕೆಂಪುಕಾಲಿನ ಭಯಾನಕ ಪಕ್ಷಿಗಳು ಸೇನೆಯ ಎದುರುಮುಖವಾಗಿ ಹಾರುತ್ತಿವೆ. ಇದು ಪರಾಭವದ ಲಕ್ಷಣ. ಮೊದಲು ಬ್ರಾಹ್ಮಣರನ್ನು, ಗುರುಗಳನ್ನು, ನಂತರ ಭಕ್ತಿಯುಳ್ಳ ಸೇವಕರನ್ನು ದ್ವೇಷಿಸುತ್ತಿದ್ದಾರೆ. ಇದು ಪರಾಭವದ ಲಕ್ಷಣ. ಪೂರ್ವ ದಿಕ್ಕು ಕೆಂಪಾಗಿದೆ. ದಕ್ಷಿಣವು ಶಸ್ತ್ರವರ್ಣದ್ದಾಗಿದೆ. ಪಶ್ಚಿಮವು ಮಣ್ಣಿನ ಬಣ್ಣವನ್ನು ತಳೆದಿದೆ. ಧಾರ್ತರಾಷ್ಟ್ರನ ಎಲ್ಲ ದಿಕ್ಕುಗಳು ಹತ್ತಿ ಉರಿಯುವಂತಿವೆ. ಈ ಉತ್ಪಾತ ಲಕ್ಷಣಗಳು ಮಹಾಭಯವನ್ನು ಸೂಚಿಸುತ್ತವೆ.

“ಸ್ವಪ್ನದ ಕೊನೆಯಲ್ಲಿ ಸಹೋದರರೊಂದಿಗೆ ಯುಧಿಷ್ಠಿರನು ಸಾವಿರ ಮೆಟ್ಟಿಲುಗಳಿರುವ ಅರಮನೆಯನ್ನು ಏರುತ್ತಿರುವುದನ್ನು ನಾನು ಕಂಡಿದ್ದೇನೆ. ಅವರೆಲ್ಲರೂ ಬಿಳೀಬಣ್ಣದ ಮುಂಡಾಸು, ಬಿಳೀ ವಸ್ತ್ರವನ್ನು ಧರಿಸಿದ್ದರು ಮತ್ತು ಎಲ್ಲರೂ ಶುಭ್ರ ಆಸನಗಳಲ್ಲಿ ಕುಳಿತುಕೊಳ್ಳುವುದನ್ನು ನೋಡಿದೆನು. ಅದೇ ಸ್ವಪ್ನದ ಕೊನೆಯಲ್ಲಿ ನೀನು ರಕ್ತದಿಂದ ತೋಯ್ದ ಆಯುಧಗಳನ್ನು ನೆಲದಲ್ಲಿ ಮುಚ್ಚಿಡುತ್ತಿದ್ದುದನ್ನು ನೋಡಿದೆನು. ಅಮಿತೌಜಸ ಯುಧಿಷ್ಠಿರನು ಅಸ್ಥಿಗಳ ಗುಡ್ಡೆಯನ್ನೇರಿ ಸಂತೋಷದಿಂದ ಸುವರ್ಣಪಾತ್ರೆಯಲ್ಲಿ ಘೃತಪಾಯಸವನ್ನು ತಿನ್ನುತ್ತಿದ್ದನು. ನೀನು ನೀಡಿದ ವಸುಂಧರೆಯನ್ನು ಯುಧಿಷ್ಠಿರನು ನುಂಗುತ್ತಿರುವುದನ್ನು ನೋಡಿದೆನು. ಇದರಿಂದ ಅವನು ವಸುಂಧರೆಯನ್ನು ಭೋಗಿಸುತ್ತಾನೆ ಎನ್ನುವುದು ವ್ಯಕ್ತವಾಗುತ್ತದೆ. ಎತ್ತರ ಪರ್ವತವನ್ನು ಏರಿ ಭೀಮಕರ್ಮಿ, ಗದಾಪಾಣಿ, ನರವ್ಯಾಘ್ರ, ವೃಕೋದರನು ಈ ಭೂಮಿಯನ್ನು ವೀಕ್ಷಿಸುತ್ತಿರುವಂತಿದ್ದನು. ಅವನು ಮಹಾರಣದಲ್ಲಿ ನಮ್ಮೆಲ್ಲರನ್ನೂ ಸಂಹರಿಸುತ್ತಾನೆ ಎನ್ನುವುದು ಚೆನ್ನಾಗಿ ವ್ಯಕ್ತವಾಗಿದೆ. ಧರ್ಮವು ಎಲ್ಲಿರುವುದೋ ಅಲ್ಲಿ ಜಯವೆಂದು ನನಗೆ ತಿಳಿದಿದೆ. ಬಿಳಿಯ ಗಜವನ್ನೇರಿದ ಆ ಗಾಂಡೀವಿ ಧನಂಜಯನು ನಿನ್ನ ಜೊತೆಗೂಡಿ, ಪರಮಶ್ರೀಯಿಂದ ಬೆಳಗುತ್ತಾ, ನಮ್ಮೆಲ್ಲರನ್ನೂ – ಸಮರದಲ್ಲಿ ದುರ್ಯೋಧನನನ್ನು ಬೆಂಬಲಿಸಿ ಬರುವ ಪಾರ್ಥಿವರನ್ನು- ವಧಿಸುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ನಕುಲ ಸಹದೇವರು, ಮತ್ತು ಮಹಾರಥಿ ಸಾತ್ಯಕಿ, ಶುದ್ಧ ಕೇಯೂರ, ಹಾರ, ಮತ್ತು ಶುಕ್ಲ ಮಾಲ್ಯಾಂಬರಗಳನ್ನು ಧರಿಸಿದ್ದರು. ಆ ನರವ್ಯಾಘ್ರರು ಉತ್ತಮ ನರವಾಹನಗಳನ್ನೇರಿದ್ದರು. ಆ ಮೂವರೂ ಮಹಾಮಾತ್ರರ ಮೇಲೆ ಬಿಳಿಗೊಡೆಗಳನ್ನು ಹಿಡಿಯಲಾಗಿತ್ತು. ಧಾರ್ತರಾಷ್ಟ್ರನ ಸೇನೆಯಲ್ಲಿ ಈ ಮೂವರು ಮಾತ್ರ ಬಿಳಿಯ ಮುಂಡಾಸನ್ನು ಧರಿಸಿರುವುದು ಕಂಡಿತು. ಅವರು ಯಾರೆಂದು ತಿಳಿದುಕೋ. ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮ! ಇತರ ಎಲ್ಲ ಪಾರ್ಥಿವರೂ ಕೆಂಪು ಮುಂಡಾಸಗಳನ್ನು ಧರಿಸಿ ಕಂಡುಬಂದರು. ಭೀಷ್ಮ-ದ್ರೋಣರು, ನಾನು ಮತ್ತು ಧಾರ್ತರಾಷ್ಟ್ರನೊಂದಿಗೆ ಒಂಟೆಗಳನ್ನು ಕಟ್ಟಿದ ವಾಹನಗಳನ್ನೇರಿ ಅಗಸ್ತ್ಯನ ದಿಕ್ಕಿನೆಡೆಗೆ ಹೋಗುತ್ತಿದ್ದೆವು. ಸ್ವಲ್ಪವೇ ಸಮಯದಲ್ಲಿ ನಾವು ಯಮಸಾದನವನ್ನು ಸೇರುವವರಿದ್ದೇವೆ. ನಾನು ಮತ್ತು ಆ ಕ್ಷತ್ರಮಂಡಲದಲ್ಲಿರುವ ಅನ್ಯ ರಾಜರು ಗಾಂಡೀವಾಗ್ನಿಯನ್ನು ಪ್ರವೇಶಿಸುತ್ತೇವೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.”

ಕೃಷ್ಣನು ಹೇಳಿದನು: “ಕರ್ಣ! ನನ್ನ ಮಾತುಗಳು ನಿನ್ನ ಹೃದಯವನ್ನು ಮುಟ್ಟುವುದಿಲ್ಲವಾದರೆ ಇಂದು ಈ ವಸುಂಧರೆಯ ವಿನಾಶವು ಬಂದೊದಗಿದೆ ಎಂದರ್ಥ. ಸರ್ವಭೂತಗಳ ವಿನಾಶವು ಉಪಸ್ಥಿತವಾಗಿರುವಾಗ ಅನ್ಯಾಯವು ನ್ಯಾಯವಾಗಿ ಕಾಣುವುದು ಹೃದಯವನ್ನು ಬಿಟ್ಟು ಹೋಗುವುದಿಲ್ಲ!”

ಕರ್ಣನು ಹೇಳಿದನು: “ಮಹಾಬಾಹೋ! ಈ ವೀರಕ್ಷಯವಿನಾಶದಿಂದ ಉತ್ತೀರ್ಣರಾಗಿ ಮಹಾರಣದಿಂದ ಜೀವಂತರಾಗಿ ಉಳಿದು ಬಂದರೆ ಪುನಃ ನಾವು ಭೇಟಿಯಾಗೋಣ! ಅಥವಾ ಕೃಷ್ಣ! ಖಂಡಿತವಾಗಿಯೂ ಸ್ವರ್ಗದಲ್ಲಿ ನಮ್ಮ ಮಿಲನವಾಗುತ್ತದೆ. ಅಲ್ಲಿಯೇ ನಮ್ಮಿಬ್ಬರ ಪುನರ್ಮಿಲನವಾಗುವುದು ಎಂದು ನನಗನ್ನಿಸುತ್ತಿದೆ.”

ಹೀಗೆ ಹೇಳಿ ಕರ್ಣನು ಮಾಧವನನ್ನು ಬಿಗಿಯಾಗಿ ಅಪ್ಪಿಕೊಂಡನು. ಕೇಶವನಿಂದ ಬೀಳ್ಕೊಂಡು ರಥದಿಂದ ಕೆಳಕ್ಕಿಳಿದನು. ಬಂಗಾರದಿಂದ ವಿಭೂಷಿತವಾದ ತನ್ನ ರಥದಲ್ಲಿ ಕುಳಿತು ದೀನಮಾನಸನಾಗಿ ರಾಧೇಯನು ನಮ್ಮೊಂದಿಗೆ ಹಿಂದಿರುಗಿದನು. ಅನಂತರ ಸಾತ್ಯಕಿಯೊಂದಿಗೆ ಕೇಶವನು “ಹೋಗು! ಹೋಗು!” ಎಂದು ಪುನಃ ಪುನಃ ಸಾರಥಿಗೆ ಹೇಳುತ್ತಾ ಶೀಘ್ರವಾಗಿ ಪ್ರಯಾಣಿಸಿದನು.”

ಕುಂತಿಯು ಕರ್ಣನನ್ನು ಭೇಟಿಮಾಡಿದುದು

ಸಂಧಾನ ಪ್ರಯತ್ನವು ಯಶಸ್ವಿಯಾಗದೇ ಕೃಷ್ಣನು ಕುರುಗಳಿಂದ ಪಾಂಡವರ ಕಡೆ ಹೊರಟುಹೋದನಂತರ ಕ್ಷತ್ತನು ಪೃಥೆಯ ಬಳಿ ಹೋಗಿ ಶೋಕದಿಂದ ಮೆಲ್ಲನೇ ಹೀಗೆ ಹೇಳಿದನು: “ಜೀವಪುತ್ರೇ! ನನ್ನ ಭಾವವು ನಿತ್ಯವೂ ಅನುಗ್ರಹವಾದುದು ಎಂದು ನಿನಗೆ ತಿಳಿದಿದೆ. ನಾನೂ ಕೂಗಿಕೊಂಡರೂ ಕೂಡ ಸುಯೋಧನನು ನನ್ನ ಮಾತನ್ನು ಸ್ವೀಕರಿಸುವುದಿಲ್ಲ. ಅಲ್ಲಿ ಚೇದಿ, ಪಾಂಚಾಲ, ಕೇಕಯ, ಭೀಮಾರ್ಜುನರು, ಕೃಷ್ಣ, ಯುಯುಧಾನರೊಡನೆ ಉಪಪ್ಲವದಲ್ಲಿ ನೆಲೆಸಿರುವ ರಾಜಾ ಯುಧಿಷ್ಠಿರನು ಜ್ಞಾತಿಸೌಹಾರ್ದತೆಯಿಂದ ಬಲವಂತನಾಗಿದ್ದರೂ ದುರ್ಬಲನಂತೆ ಧರ್ಮವನ್ನೇ ಬಯಸುತ್ತಿದ್ದಾನೆ. ಇಲ್ಲಿ ರಾಜಾ ಧೃತರಾಷ್ಟ್ರನು ವಯೋವೃದ್ಧನಾದರೂ ಶಾಂತಿಯನ್ನು ತರುತ್ತಿಲ್ಲ. ಪುತ್ರಮದದಿಂದ ಮತ್ತನಾಗಿ ವಿಧರ್ಮದ ಮಾರ್ಗದಲ್ಲಿ ನಡೆಯುತ್ತಿದ್ದಾನೆ. ಜಯದ್ರಥ, ಕರ್ಣ, ದುಃಶಾಸನ ಮತ್ತು ಸೌಬಲನ ದುರ್ಬುದ್ಧಿಯಿಂದ ಮಿಥೋಭೇದವು ಮುಂದುವರೆಯುತ್ತಿದೆ. ಆದರೆ ಅಧರ್ಮದಿಂದ ಆ ಧರ್ಮಿಷ್ಠನ ರಾಜ್ಯವನ್ನು ಈ ರೀತಿ ಅಪಹರಿಸಿದವರನ್ನು ಧರ್ಮವು ಹಿಂದೆ ಹಾಕುತ್ತದೆ. ಕುರುಗಳು ಬಲಾತ್ಕಾರವಾಗಿ ಧರ್ಮವನ್ನು ಅಪಹರಿಸಿದಾಗ ಯಾರು ತಾನೆ ಕೋಪಗೊಳ್ಳುವುದಿಲ್ಲ? ಕೇಶವನನ್ನು ಸೇರಿಕೊಂಡು ಪಾಂಡವರು ಬಂದು ಸದೆಬಡಿಯುತ್ತಾರೆ. ಆಗ ಈ ಕುರುಗಳ ವೀರನಾಶನವಾಗುತ್ತದೆ. ಇದನ್ನು ಚಿಂತಿಸಿ ನನಗೆ ಹಗಲಾಗಲೀ ರಾತ್ರಿಯಾಗಲೀ ನಿದ್ದೆಯೇ ಬರುವುದಿಲ್ಲ.”

ಒಳ್ಳೆಯದನ್ನೇ ಬಯಸಿ ಅವನಾಡಿದ ಮಾತನ್ನು ಕೇಳಿದ ಕುಂತಿಯು ಏನನ್ನೋ ಕಳೆದುಕೊಳ್ಳುವಳಂತೆ ದುಃಖಾರ್ತಳಾಗಿ ಮನಸ್ಸಿನಲ್ಲಿಯೇ ವಿಮರ್ಶಿಸಿದಳು: “ಯಾವುದಕ್ಕಾಗಿ ಈ ಮಹಾ ಕ್ಷಯಕಾರಕ ಜ್ಞಾತಿವಧೆಯು ನಡೆಯುತ್ತದೆಯೋ ಆ ಸಂಪತ್ತಿಗೆ ಧಿಕ್ಕಾರ! ಈ ಯುದ್ಧದಲ್ಲಿ ಸುಹೃದಯರ ವಧೆಯಾಗುತ್ತದೆ ಮತ್ತು ಪರಾಭವವೇ ದೊರೆಯುತ್ತದೆ. ಪಾಂಡವರು ಚೇದಿ, ಪಾಂಚಾಲ ಮತ್ತು ಯಾದವರೊಂದಿಗೆ ಸೇರಿಕೊಂಡು ಭಾರತರೊಂದಿಗೆ ಹೋರಾಡುತ್ತಾರೆ ಎಂದರೆ ಇದಕ್ಕಿಂತಲೂ ಹೆಚ್ಚಿನ ದುಃಖವು ಯಾವುದಿದೆ? ಯುದ್ಧದಲ್ಲಿ ಪರಾಭವದಂತೆ ಯುದ್ಧದಲ್ಲಿಯೇ ದೋಷವನ್ನು ಕಾಣುತ್ತಿದ್ದೇನೆ. ಜ್ಞಾತಿಕ್ಷಯದಲ್ಲಿ ಜಯವನ್ನು ಪಡೆಯುವುದಕ್ಕಿಂತ ಧನವಿಲ್ಲದೇ ಸಾಯುವುದೇ ಶ್ರೇಯಸ್ಕರವು. ಧಾರ್ತರಾಷ್ಟ್ರರ ಕಡೆಯಿರುವ ಪಿತಾಮಹ ಶಾಂತನವ, ಯೋಧರ ನಾಯಕ ಆಚಾರ್ಯ, ಮತ್ತು ಕರ್ಣ ನನ್ನ ಭಯವನ್ನು ಹೆಚ್ಚಿಸುತ್ತಿದ್ದಾರೆ. ಆಚಾರ್ಯ ದ್ರೋಣನು ಶಿಷ್ಯರ ಮೇಲಿನ ಪ್ರೀತಿಯಿಂದ ಯುದ್ಧವನ್ನು ಮಾಡದೇ ಇರಬಹುದು. ಪಿತಾಮಹನೂ ಕೂಡ ಪಾಂಡವರೊಂದಿಗೆ ಯುದ್ಧಮಾಡಲು ಹೇಗೆ ಮನಸ್ಸು ಮಾಡುತ್ತಾನೆ? ತಿಳಿಯದೇ ದುರ್ಮತಿ ಧಾರ್ತರಾಷ್ಟ್ರನನ್ನು ಅನುಸರಿಸಿ ಪಾಂಡವರನ್ನು ಸತತವಾಗಿ ಪಾಪದಿಂದ ದ್ವೇಷಿಸುವವನು ಕರ್ಣನು ಒಬ್ಬನೇ! ಪಾಂಡವರಿಗೆ ಸದಾ ಮಹಾ ಕೆಡುಕನ್ನು ಮಾಡಲು ಬದ್ಧನಾಗಿರುವ ವಿಶೇಷವಾಗಿ ಬಲವಂತನಾಗಿರುವ ಕರ್ಣನು ನನ್ನನ್ನು ಸುಡುತ್ತಿದ್ದಾನೆ. ಇಂದು ಅವನ ಕರುಣೆಯನ್ನು ಬೇಡಿ ಬಳಿಹೋಗಿ ನಡೆದುದನ್ನು ತೋರಿಸಿಕೊಟ್ಟು, ಕರ್ಣನ ಮನಸ್ಸನ್ನು ಪಾಂಡವರ ಕಡೆ ಸೆಳೆಯುತ್ತೇನೆ. ಒಂದು ವಸಂತದಲ್ಲಿ ತಂದೆಯ ಮನೆಯಲ್ಲಿರುವಾಗ ಭಗವಾನ್ ದುರ್ವಾಸನು ಸಂತೃಪ್ತನಾಗಿ ದೇವತೆಗಳನ್ನು ಆಹ್ವಾನಿಸಬಲ್ಲ ವರವನ್ನು ನನಗೆ ನೀಡಿದ್ದನು. ಆಗ ರಾಜಾ ಕುಂತಿಭೋಜನಿಂದ ಪುರಸ್ಕೃತಳಾದ ನಾನು ಅಂತಃಪುರದಲ್ಲಿ ಹೃದಯದ ನೋವಿನಿಂದ ಬಹುವಿಧವಾಗಿ ಚಿಂತಿಸುತ್ತಿದ್ದೆ. ಮಂತ್ರಗಳ ಬಲಾಬಲವನ್ನೂ ಬ್ರಾಹ್ಮಣನ ವಾಗ್ಬಲವನ್ನೂ ಸ್ತ್ರೀಭಾವದಿಂದ ಮತ್ತು ಬಾಲಭಾವದಿಂದ ಪುನಃ ಪುನಃ ಚಿಂತಿಸತೊಡಗಿದೆನು. ಆಗ ನಂಬಿಕೆಯಿರುವ ಧಾತ್ರಿಕೆ ವತ್ತು ಗುಪ್ತ ಸಖೀಜನರೊಂದಿಗೆ ಆವೃತಳಾದ ನಾನು, ದೂಷಿತಳಾಗಬಾರದೆಂದು, ತಂದೆಯ ಚಾರಿತ್ರವನ್ನು ರಕ್ಷಿಸಬೇಕೆಂದು, ನನಗೆ ಒಳ್ಳೆಯದಾಗುವ ಹಾಗೆ ಹೇಗೆ ನಡೆದುಕೊಳ್ಳಲಿ, ನನ್ನಿಂದ ಹೇಗೆ ಅಪರಾಧವಾಗದೇ ಇರಲಿ ಎಂದು ಯೋಚಿಸುತ್ತಾ, ಆ ಬ್ರಾಹ್ಮಣನನ್ನು ನಮಸ್ಕರಿಸಿ, ಬಾಲಿಕೆಯ ಕುತೂಹಲದಿಂದ ಕನ್ಯೆ ಸತೀ ನಾನು ದೇವ ಅರ್ಕನನ್ನು ಹತ್ತಿರ ಕರೆದೆನು. ಕನ್ಯೆಯಾಗಿದ್ದಾಗ ನನ್ನ ಗರ್ಭದಲ್ಲಿದ್ದ, ಪುತ್ರನಂತೆ ಪರಿವರ್ತಿತನಾದ ಅವನು ಈಗ ಏಕೆ ನನ್ನ ಮಾತಿನಂತೆ ಭ್ರಾತೃಹಿತನಾಗಿ ಬೇಕಾದದನ್ನು ಮಾಡುವುದಿಲ್ಲ?”

ಕುಂತಿಯು ಈ ರೀತಿ ಯೋಚಿಸಿ ಆ ಉತ್ತಮ ಕಾರ್ಯವನ್ನು ಮಾಡಲು ನಿಶ್ಚಯಿಸಿದಳು. ಕಾರ್ಯಾರ್ಥಕ್ಕಾಗಿ ಯಾರಿಗೂ ತಿಳಿಯದಂತೆ ಭಾಗೀರಥಿಯ ಕಡೆ ನಡೆದಳು. ಗಂಗಾತೀರದಲ್ಲಿ ಪೃಥೆಯು ದಯಾಳು, ಸತ್ಯಸಂಗಿ ಮಗನು ಪಠಿಸುತ್ತಿರುವ ಮಂತ್ರಗಳ ಸದ್ದನ್ನು ಕೇಳಿದಳು. ಅವನು ಬಾಹುಗಳನ್ನು ಮೇಲೆತ್ತಿ ಪೂರ್ವಾಭಿಮುಖವಾಗಿ ನಿಂತಿರಲು ಆ ತಪಸ್ವಿನಿಯು ಅವನ ಹಿಂದೆ ಹೋಗಿ ಅವನ ಜಪವು ಮುಗಿಯುವುದಕ್ಕೆ ಮತ್ತು ತನ್ನ ಕಾರ್ಯವು ಸಿದ್ಧಿಯಾಗಲು ಕಾದು ನಿಂತಳು. ಕರ್ಣನ ಉತ್ತರೀಯದ ನೆರಳಲ್ಲಿ ನಿಂತಿದ್ದ ಆ ಕೌರವಪತ್ನಿ ವಾರ್ಷ್ಣೇಯಿಯು ಸೂರ್ಯನ ತಾಪದಿಂದ ಬಳಲಿ ಒಣಗಿದ್ದ ಪದ್ಮಮಾಲೆಯಂತೆ ತೋರಿದಳು. ಸೂರ್ಯನ ಕಿರಣಗಳು ಬೆನ್ನನ್ನು ಸುಡುವವರೆಗೆ ಆ ಯತವ್ರತನು ಜಪಿಸುತಿದ್ದನು. ಹಿಂದೆ ನಿಂತಿದ್ದ ಕುಂತಿಯನ್ನು ನೋಡಿ ಯಥಾನ್ಯಾಯವಾಗಿ ಆ ಮಹಾತೇಜಸ್ವಿ ಮಾನಿನೀ ಧರ್ಮಭೃತರಲ್ಲಿ ಶ್ರೇಷ್ಠನು ಕೈಮುಗಿದು ನಮಸ್ಕರಿಸಿದನು.

ಕರ್ಣನು ಹೇಳಿದನು: “ರಾಧೇಯ, ಆದಿರಥಿ, ನಾನು ಕರ್ಣನು ನಿನಗೆ ನಮಸ್ಕರಿಸುತ್ತೇನೆ. ಇಲ್ಲಿಗೆ ನೀನು ಏಕೆ ಬಂದಿದ್ದೀಯೆ ಮತ್ತು ನಾನು ಏನು ಮಾಡಲಿ?”

ಕುಂತಿಯು ಹೇಳಿದಳು: “ನೀನು ಕೌಂತೇಯ! ರಾಧೇಯನಲ್ಲ. ಅಧಿರಥನು ನಿನ್ನ ಪಿತನಲ್ಲ. ಕರ್ಣ! ನೀನು ಸೂತಕುಲದಲ್ಲಿ ಜನಿಸಿದವನಲ್ಲ. ನನ್ನ ಮಾತನ್ನು ತಿಳಿದುಕೋ. ಕನ್ಯೆಯಾಗಿದ್ದಾಗ ನನಗೆ ನೀನು ಜ್ಯೇಷ್ಠನಾಗಿ ಹುಟ್ಟಿದೆ. ಕುಂತೀಭೋಜನ ಭವನದಲ್ಲಿ ಹೊಟ್ಟೆಯಲ್ಲಿ ನಿನ್ನನ್ನು ಹೊತ್ತಿದ್ದೆ. ನೀನು ಪಾರ್ಥನಾಗಿದ್ದೀಯೆ. ದೇವ ವಿರೋಚನ, ಎಲ್ಲವನ್ನೂ ಪ್ರಕಾಶಗೊಳಿಸುವ ಶಸ್ತ್ರಭೃತರಲ್ಲಿ ಶೇಷ್ಠ ತಪನನುನನ್ನಲ್ಲಿ ನಿನ್ನನ್ನು ಹುಟ್ಟಿಸಿದನು. ಕುಂಡಲ ಕವಚಗಳಿಂದೊಡಗೂಡಿ, ದುರ್ಧರ್ಷ ದೇವಗರ್ಭನಾದ ನೀನು ಶ್ರೀಯಿಂದ ಆವೃತನಾಗಿ ತಂದೆಯ ಮನೆಯಲ್ಲಿ ನನ್ನ ಮಗನಾಗಿ ಹುಟ್ಟಿದ್ದೆ. ನಿನ್ನ ಸಹೋದರರನ್ನು ತಿಳಿಯದೇ ಅಜ್ಞಾನದಿಂದ ಈ ರೀತಿ ಧಾರ್ತರಾಷ್ಟ್ರನ ಸೇವೆ ಮಾಡುವುದು ಪುತ್ರ ನಿನಗೆ ಸರಿಯಲ್ಲ. ಪುತ್ರ! ತಂದೆ-ತಾಯಿಯರ ಉದ್ದೇಶಗಳನ್ನು ಪೂರೈಸುವುದು ನರರ ಧರ್ಮಫಲವೆಂದು ಧರ್ಮನಿಶ್ಚಯವಾಗಿದೆ. ಹಿಂದೆ ಅರ್ಜುನನು ಸಂಪಾದಿಸಿದ, ನಂತರ ಕೆಟ್ಟ ಧಾರ್ತರಾಷ್ಟ್ರರಿಂದ ಮೋಸದಿಂದ ಅಪಹರಿಸಲ್ಪಟ್ಟ ಯುಧಿಷ್ಠಿರನ ಸಂಪತ್ತನ್ನು ಭೋಗಿಸು. ಇಂದು ಕುರುಗಳು ಕರ್ಣಾರ್ಜುನರು ಒಂದಾಗುವುದನ್ನು ನೋಡಲಿ. ನಿಮ್ಮಿಬ್ಬರ ಸೌಭ್ರಾತೃತ್ವವನ್ನು ನೋಡಿ ಕೆಟ್ಟ ಜನರು ತಲೆಬಾಗಲಿ. ರಾಮ-ಜನಾರ್ದನರಂತೆ ನೀವಿಬ್ಬರೂ ಕರ್ಣಾರ್ಜುನರಾಗಿರಿ. ನೀವಿಬ್ಬರೂ ಒಂದಾದರೆ ನಿಮಗೆ ಈ ಲೋಕದಲ್ಲಿ ಯಾವುದು ತಾನೇ ಅಸಾಧ್ಯ? ವೇದ ಮತ್ತು ವೇದಾಂಗ ಈ ಐದರಿಂದ ಪರಿವೃತನಾದ ಬ್ರಹ್ಮನಂತೆ ನೀನು ಐವರು ಸಹೋದರರಿಂದ ಪರಿವೃತನಾಗಿ ಕಂಗೊಳಿಸುವೆ. ಶ್ರೇಷ್ಠ ಗುಣಗಳಿಂದ ಕೂಡಿದ ನೀನು ನನ್ನ ಜ್ಯೇಷ್ಠ. ಬಂಧುಗಳಲ್ಲಿ ಶ್ರೇಷ್ಠ! ಸೂತಪುತ್ರ ಎನ್ನುವ ಶಬ್ಧವು ನಿನಗೆ ಬೇಡ. ಪಾರ್ಥನೆಂದೆನಿಸಿಕೋ!”

ಆಗ ಕರ್ಣನು ಸೂರ್ಯಮಂಡಲದಿಂದ ವಾತ್ಸಲ್ಯಪೂರ್ವಕ ಮಾತನ್ನು ಕೇಳಿದನು. ದೂರದಿಂದ ಬಂದ ಆ ವಾತ್ಸಲ್ಯದ ಮಾತು ತಂದೆ ಭಾಸ್ಕರನದಾಗಿತ್ತು. “ಕರ್ಣ! ಪೃಥೆಯು ಸತ್ಯವನ್ನೇ ಹೇಳಿದ್ದಾಳೆ. ತಾಯಿಯ ಮಾತಿನಂತೆ ಮಾಡು. ಅದರಂತೆ ನಡೆದುಕೊಂಡರೆ ನಿನಗೆ ಎಲ್ಲ ಶ್ರೇಯಸ್ಸಾಗುತ್ತದೆ.”

ಹೀಗೆ ತಾಯಿ ಮತ್ತು ತಂದೆ ಸ್ವಯಂಭಾನುವು ಹೇಳಲು ಸತ್ಯಧೃತಿ ಕರ್ಣನ ಮನಸ್ಸು ಚಂಚಲವಾಗಲಿಲ್ಲ. ಕರ್ಣನು ಹೇಳಿದನು: “ಕ್ಷತ್ರಿಯೇ! ನಿನ್ನ ನಿಯೋಗದಂತೆ ನಡೆದುಕೊಳ್ಳುವುದೇ ನನ್ನ ಧರ್ಮದ ದ್ವಾರ ಎಂದು ನೀನು ಹೇಳಿದುದರಲ್ಲಿ ನನಗೆ ಶ್ರದ್ಧೆಯಿಲ್ಲವೆಂದಲ್ಲ. ಆದರೆ ನನ್ನನ್ನು ಬಿಸುಟು ನೀನು ಸರಿಪಡಿಸಲಿಕ್ಕಾಗದಂತಹ ಪಾಪವನ್ನು ಮಾಡಿ, ನನಗೆ ದೊರಕಬೇಕಾಗಿದ್ದ ಯಶಸ್ಸು ಕೀರ್ತಿಗಳನ್ನು ನಾಶಪಡಿಸಿದ್ದೀಯೆ. ಕ್ಷತ್ರಿಯನಾಗಿ ಹುಟ್ಟಿಯೂ ಕ್ಷತ್ರಿಯರಿಗೆ ಸಲ್ಲಬೇಕಾದ ಗೌರವವನ್ನು ಪಡೆಯಲಿಲ್ಲ. ನೀನು ನನಗೆ ಮಾಡಿದ ಈ ಅಹಿತ ಕಾರ್ಯವನ್ನು ಯಾವ ಶತ್ರುವು ತಾನೇ ಮಾಡಿಯಾನು? ಮಾಡಬೇಕಾದ ಸಮಯದಲ್ಲಿ ನನಗೆ ನೀನು ಈಗ ತೋರಿಸುವ ಅನುಕಂಪವನ್ನು ತೋರಿಸಲಿಲ್ಲ. ಸಂಸ್ಕಾರಗಳಿಂದ ವಂಚಿಸಿದ ನಿನ್ನ ಈ ಮಗನಿಗೆ ಈಗ ಹೀಗೆ ಮಾಡೆಂದು ಹೇಳುತ್ತಿದ್ದೀಯೆ. ತಾಯಿಯಂತೆ ನೀನು ಎಂದೂ ನನಗೆ ಹಿತವಾಗಿ ನಡೆದುಕೊಳ್ಳಲಿಲ್ಲ. ಈಗ ನೀನು ಕೇವಲ ನಿನ್ನ ಹಿತವನ್ನು ಬಯಸಿ ನನಗೆ ತಿಳಿಸಿ ಹೇಳುತ್ತಿದ್ದೀಯೆ! ಕೃಷ್ಣನ ಸಹಾಯಪಡೆದಿರುವ ಧನಂಜಯನ ಎದಿರು ಯಾರು ತಾನೇ ನಡುಗುವುದಿಲ್ಲ? ಈಗ ನಾನು ಪಾರ್ಥರನ್ನು ಸೇರಿದರೆ ಭಯದಿಂದ ಹಾಗೆ ಮಾಡಿದೆ ಎಂದು ಯಾರು ತಾನೇ ತಿಳಿದುಕೊಳ್ಳುವುದಿಲ್ಲ? ಇದೂವರೆಗೆ ಅವರ ಅಣ್ಣನೆಂದು ವಿದಿತನಾಗಿರದ ನನಗೆ ಈಗ ಯುದ್ಧದ ಸಮಯದಲ್ಲಿ ಗೊತ್ತಾಗಿದೆ. ಈಗ ಪಾಂಡವರ ಕಡೆ ಹೋದರೆ ಕ್ಷತ್ರಿಯರು ನನ್ನ ಕುರಿತು ಏನು ಹೇಳುತ್ತಾರೆ? ಧಾರ್ತರಾಷ್ಟ್ರರು ಸರ್ವಕಾಮಗಳಿಂದ ಸಂವಿಭಕ್ತರಾಗಿ ಸದಾ ನನ್ನನ್ನು ತುಂಬಾ ಪೂಜಿಸಿದ್ದಾರೆ. ಈಗ ನಾನು ಅದನ್ನು ಹೇಗೆ ನಿಷ್ಫಲವನ್ನಾಗಿ ಮಾಡಲಿ? ಈಗ ಶತ್ರುಗಳೊಂದಿಗೆ ವೈರವನ್ನು ಕಟ್ಟಿಕೊಂಡು ಅವರು ನಿತ್ಯವೂ ನನ್ನನ್ನು ವಸುಗಳು ವಾಸವನನ್ನು ಹೇಗೋ ಹಾಗೆ ಪೂಜಿಸುತ್ತಾರೆ, ನಮಸ್ಕರಿಸುತ್ತಾರೆ. ನನ್ನ ಶಕ್ತಿಯಿಂದ ಶತ್ರುಗಳ ಶಕ್ತಿಯನ್ನು ಎದುರಿಸಬಲ್ಲರು ಎಂದು ತಿಳಿದುಕೊಂಡಿರುವ ಅವರ ಮನೋರಥವನ್ನು ಇಂದು ನಾನು ಹೇಗೆ ಒಡೆದು ಹಾಕಲಿ? ಸಾಧಿಸಲಸಾಧ್ಯವಾದ ಈ ಸಂಗ್ರಾಮವೆಂಬ ಸಾಗರವನ್ನು ದಾಟಿಸಲು ಸಾಧ್ಯಮಾಡಬಲ್ಲ ದೋಣಿಯಂತೆ ನನ್ನನ್ನು ನೋಡುತ್ತಿರುವ ಅವರನ್ನು ನಾನು ಹೇಗೆ ತೊರೆಯಬಲ್ಲೆನು? ಧಾರ್ತರಾಷ್ಟ್ರನನ್ನು ಅವಲಂಬಿಸಿ ಜೀವಿಸುವವರಿಗೆ ಇದೇ ಕಾಲವು ಬಂದಿದೆ. ನನ್ನ ಪ್ರಾಣವನ್ನು ರಕ್ಷಿಸಿಕೊಳ್ಳದೇ ನನ್ನ ಕರ್ತವ್ಯವನ್ನು ಮಾಡಬೇಕು. ಚೆನ್ನಾಗಿ ಪೋಷಿತರಾಗಿ ಕೃತಾರ್ಥರಾಗಿರುವವರು ಅವರಿಗೆ ಮಾಡಿದುದನ್ನು ಕಡೆಗಣಿಸಿ, ಸಮಯ ಬಂದಾಗ ಹಿಂದೆ ಪಡೆದ ಎಲ್ಲ ಲಾಭಗಳನ್ನೂ ಅಲ್ಲಗಳೆಯುವವರು ಪಾಪಿಷ್ಟರು. ರಾಜರನ್ನು ದುರ್ಬಲಗೊಳಿಸುವ ಆ ಭರ್ತೃಪಿಂಡಾಪಹಾರಿ ಪಾಪಕರ್ಮಿಗಳಿಗೆ ಈ ಲೋಕದಲ್ಲಿಯಾಗಲೀ ಪರಲೋಕದಲ್ಲಿಯಾಗಲೀ ಒಳ್ಳೆಯದಾಗುವುದಿಲ್ಲ. ಧೃತರಾಷ್ಟ್ರನ ಮಕ್ಕಳಿಗಾಗಿ ನಾನು ನನ್ನ ಬಲ ಶಕ್ತಿಗಳನ್ನು ಬಳಸಿ ನಿನ್ನ ಮಕ್ಕಳೊಂದಿಗೆ ಹೋರಾಡುತ್ತೇನೆ. ನಿನಗೆ ಸುಳ್ಳನ್ನು ಹೇಳುತ್ತಿಲ್ಲ. ಸತ್ಪುರುಷರಿಗೆ ಉಚಿತವಾದ ಮಾನವೀಯ ನಡತೆಯನ್ನು ರಕ್ಷಿಸಿ, ನನಗೆ ಒಳ್ಳೆಯದಾಗದಿದ್ದರೂ ಇಂದು ನಿನ್ನ ಮಾತಿನಂತೆ ಮಾಡುವುದಿಲ್ಲ.

“ಆದರೂ ನನ್ನೊಡನೆ ನೀನು ನಡೆಸಿದ ಈ ಪ್ರಯತ್ನವು ನಿಷ್ಫಲವಾಗುವುದಿಲ್ಲ. ಅವರನ್ನು ಎದುರಿಸಿ ಕೊಲ್ಲಬಲ್ಲೆನಾದರೂ ನಾನು ಯುದ್ಧದಲ್ಲಿ ನಿನ್ನ ಮಕ್ಕಳನ್ನು – ಅರ್ಜುನನನ್ನು ಬಿಟ್ಟು, ಯುಧಿಷ್ಠಿರ, ಭೀಮ, ಮತ್ತು ಯಮಳರನ್ನು – ಕೊಲ್ಲುವುದಿಲ್ಲ. ಯುಧಿಷ್ಠಿರನ ಬಲದಲ್ಲಿರುವ ಅರ್ಜುನನೊಂದಿಗೆ ನನ್ನ ಯುದ್ಧವು ನಡೆಯುತ್ತದೆ. ಅರ್ಜುನನನ್ನು ಕೊಂದು ನನಗೆ ನನ್ನ ಫಲವು ದೊರೆಯುತ್ತದೆ. ಅಥವಾ ಸವ್ಯಸಾಚಿಯಿಂದ ಹತನಾದರೆ ಯಶಸ್ಸನ್ನು ಪಡೆಯುತ್ತೇನೆ. ನಿನಗೆ ಐವರಿಗಿಂತ ಕಡಿಮೆ ಮಕ್ಕಳಿರುವುದಿಲ್ಲ. ಅರ್ಜುನನನು ಇಲ್ಲವಾದರೆ ಕರ್ಣನಿರುತ್ತಾನೆ ಅಥವಾ ನಾನು ಹತನಾದರೆ ಅರ್ಜುನನಿರುತ್ತಾನೆ.”

ಕರ್ಣನ ಈ ಮಾತುಗಳನ್ನು ಕೇಳಿ ಕುಂತಿಯು ದುಃಖದಿಂದ ನಡುಗಿದಳು. ಓಲಾಡದೇ ಧೈರ್ಯದಿಂದಿದ್ದ ಪುತ್ರ ಕರ್ಣನನ್ನು ಬಿಗಿದಪ್ಪಿ ಹೇಳಿದಳು: “ಕರ್ಣ! ಹೀಗೆಯೇ ಆಗಲಿ! ನೀನು ಹೇಳಿದಂತೆ ಕೌರವರು ಕ್ಷಯ ಹೊಂದುತ್ತಾರೆ. ದೈವವು ಬಲವತ್ತರವಾದುದು. ನಿನ್ನ ನಾಲ್ವರು ತಮ್ಮಂದಿರಿಗೆ ನೀನು ನೀಡಿರುವ ಅಭಯವನ್ನು ನೆನಪಿನಲ್ಲಿಟ್ಟುಕೊಂಡು ಸಂಗರದಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೋ. ಆರೋಗ್ಯವಾಗಿರು! ಮಂಗಳವಾಗಲಿ!” ಪ್ರೀತಿಯಿಂದ ಕರ್ಣನು ಅವಳಿಗೆ ವಂದಿಸಿದನು. ಇಬ್ಬರೂ ಬೇರೆ ಬೇರೆ ದಾರಿಗಳಲ್ಲಿ ಹೋದರು.

Leave a Reply

Your email address will not be published. Required fields are marked *