ಶ್ರೀಕೃಷ್ಣ ರಾಯಭಾರ - ೩
ಕುರುಸಭೆಗೆ ಶ್ರೀಕೃಷ್ಣನ ಆಗಮನ
ಹೀಗೆ ಆ ಬುದ್ಧಿಮತರಿಬ್ಬರ ನಡುವೆ ಮಾತುಕಥೆಯು ನಡೆಯಲು ಮಂಗಳ ನಕ್ಷತ್ರಸಂಪನ್ನ ರಾತ್ರಿಯು ಕಳೆಯಿತು. ಧರ್ಮಾರ್ಥಕಾಮಯುಕ್ತವಾದ, ವಿಚಿತ್ರಾರ್ಥಪದಾಕ್ಷರಗಳಿಂದ ಕೂಡಿದ ವಿವಿಧ ಮಾತುಗಳನ್ನು ಕೇಳುತ್ತಿದ್ದ ಮಹಾತ್ಮ ವಿದುರನಿಗೆ ಮತ್ತು ಅದಕ್ಕೆ ಸಮನಾದ ಮಾತುಗಳನ್ನು ಕೇಳುತ್ತಿದ್ದ ಅಮಿತ ತೇಜಸ್ವಿ ಕೃಷ್ಣನಿಗೆ ಇಷ್ಟವಾಗದೇ ಇದ್ದರೂ ಆ ರಾತ್ರಿಯು ಕಳೆದು ಹೋಯಿತು. ಆಗ ಸ್ವರಸಂಪನ್ನರಾದ ಬಹುಮಂದಿ ಸೂತಮಾಗಧರು ಶಂಖದುಂದುಭಿಗಳ ನಿರ್ಘೋಷಗಳಿಂದ ಕೇಶವನನ್ನು ಎಚ್ಚರಿಸಿದರು. ದಾಶಾರ್ಹ, ಸರ್ವಸಾತ್ವತರ ಋಷಭ, ಜನಾರ್ದನನು ಎದ್ದು ಪ್ರಾತಃಕಾರ್ಯದಲ್ಲಿ ಅವಶ್ಯಕವಾದುದೆಲ್ಲವನ್ನೂ ಮಾಡಿ ಮುಗಿಸಿದನು. ಅವನು ಸಮಲಂಕೃತನಾಗಿ ಉದಕಕಾರ್ಯಗಳನ್ನು ಪೂರೈಸಿ, ಜಪಿಸಿ, ಅಗ್ನಿಯಲ್ಲಿ ಆಹುತಿಯನ್ನಿತ್ತು ಆದಿತ್ಯನನ್ನು ಉಪಾಸಿಸಿದನು. ಅಪರಾಜಿತ ದಾಶಾರ್ಹ ಕೃಷ್ಣನು ಸಂಧ್ಯಾವಂದನೆಯಲ್ಲಿ ನಿರತನಾಗಿರಲು ದುರ್ಯೋಧನ ಮತ್ತು ಸೌಬಲ ಶಕುನಿಯರು ಬಂದು ಭೇಟಿಮಾಡಿದರು. ಅವರು ಧೃತರಾಷ್ಟ್ರ, ಭೀಷ್ಮಪ್ರಮುಖ ಕುರುಗಳು ಮತ್ತು ಎಲ್ಲ ಪಾರ್ಥಿವ ರಾಜರೂ ಸಭೆಗೆ ಬಂದಿರುವುದನ್ನು ಕೃಷ್ಣನಿಗೆ ವರದಿಮಾಡಿದರು. “ಗೋವಿಂದ! ದಿವಿಯಲ್ಲಿ ಅಮರರು ಶಕ್ರನನ್ನು ಹೇಗೋ ಹಾಗೆ ನಿನ್ನ ಬರವನ್ನು ಕಾಯುತ್ತಿದ್ದಾರೆ” ಎನ್ನಲು ಗೋವಿಂದನು ಅವರನ್ನು ಸಾಮದಿಂದ ಪರಮ ಪ್ರೀತಿಯಿಂದ ಅಭಿನಂದಿಸಿದನು.
ಆದಿತ್ಯನು ಸ್ವಲ್ಪ ಮೇಲೆ ಬರಲು ಪರಂತಪ ಜನಾರ್ದನನು ಬ್ರಾಹ್ಮಣರಿಗೆ ಹಿರಣ್ಯ, ವಸ್ತ್ರಗಳು, ಮತ್ತು ಗೋವುಗಳನ್ನು ದಾನವನ್ನಾಗಿತ್ತನು. ರತ್ನಗಳನ್ನು ಹಂಚಿದ ನಂತರ ಅಪರಾಜಿತ ದಾಶಾರ್ಹನು ನಿಂತುಕೊಳ್ಳಲು ಸಾರಥಿಯು ಬಳಿಬಂದು ವಂದಿಸಿದನು. ಆ ಮಹಾಮನಸ್ವಿಯು ಮಹಾಮೋಡದಂತೆ ಘೋಷಿಸುವ, ಸರ್ವರತ್ನವಿಭೂಷಿತವಾದ ದಿವ್ಯ ರಥವನ್ನು ತರಲು ಆಜ್ಞಾಪಿಸಿದನು. ಅಗ್ನಿ ಮತ್ತು ಬ್ರಾಹ್ಮಣರಿಗೆ ಪ್ರದಕ್ಷಿಣೆ ಮಾಡಿ, ಪರಮ ಶ್ರೀಯಿಂದ ಬೆಳಗುತ್ತಿದ್ದ ಕೌಸ್ತುಭ ಮಣಿಯನ್ನು ಧರಿಸಿ, ಕುರುಗಳಿಂದ ಸಂವೃತನಾಗಿ, ವೃಷ್ಣಿಗಳಿಂದ ರಕ್ಷಿತನಾಗಿ ಜನಾರ್ದನ, ಕೃಷ್ಣ, ಶೌರಿ, ಸರ್ವಯಾದವನಂದನನು ರಥವನ್ನೇರಿದನು. ಸರ್ವಧರ್ಮವಿದು ವಿದುರನು ರಥವನ್ನೇರಿ ಸರ್ವಪ್ರಾಣಭೃತರಲ್ಲಿ ಶ್ರೇಷ್ಠನಾದ, ಸರ್ವಧರ್ಮಭೃತರಲ್ಲಿ ಶ್ರೇಷ್ಠನಾದ ದಾಶಾರ್ಹನನ್ನು ಹಿಂಬಾಲಿಸಿದನು. ದುರ್ಯೋಧನ ಮತ್ತು ಸೌಬಲ ಶಕುನಿಯರೂ ಕೂಡ ಎರಡನೆಯ ರಥದಲ್ಲಿ ಪರಂತಪನನ್ನು ಹಿಂಬಾಲಿಸಿದರು. ವೃಷ್ಣಿಗಳ ಮಹಾರಥರಾದ ಸಾತ್ಯಕಿ- ಕೃತವರ್ಮರು ರಥ, ಕುದುರೆ ಆನೆಗಳೊಂದಿಗೆ ಕೃಷ್ಣನ ಹಿಂದೆ ಹಿಂಬಾಲಿಸಿ ಹೋದರು.
ಉತ್ತಮ ಕುದುರೆಗಳನ್ನು ಕಟ್ಟಿದ, ಬಂಗಾರದಿಂದ ಮಾಡಲ್ಪಟ್ಟ ಅವರ ರಥಗಳು ಹೋಗುತ್ತಿರುವಾಗ ಅವುಗಳಿಗೆ ಕಟ್ಟಿದ್ದ ಬಣ್ಣದ ಸುಂದರ ಗಂಟೆಗಳು ಬಡಿದು ಘೋಷಿಸಿದವು. ಸ್ವಲ್ಪವೇ ಸಮಯದಲ್ಲಿ ಧೀಮಾನ್ ಕೃಷ್ಣನು ಶ್ರೀಯಿಂದ ಬೆಳಗುತ್ತಾ, ಗುಡಿಸಿ, ನೀರುಸಿಂಪಡಿಸಿ ಸಿದ್ಧಪಡಿಸಿದ, ರಾಜರ್ಷಿಗಳು ನಡೆದ ಮಹಾಪಥದ ಮೇಲೆ ಬಂದನು. ದಾಶಾರ್ಹನು ಮುಂದುವರೆಯುತ್ತಿರಲು ಶಂಖಗಳನ್ನು ಊದಿದರು, ಭೇರಿಗಳನ್ನು ಬಾರಿಸಿದರು ಮತ್ತು ಅನ್ಯ ವಾದ್ಯಗಳನ್ನು ನುಡಿಸಿದರು. ಹೋಗುತ್ತಿರುವ ಶೌರಿಯ ರಥವನ್ನು ಸರ್ವಲೋಕ ಪ್ರವೀರ, ಸಿಂಹವಿಕ್ರಮಿ, ಪರಂತಪ ಯುವಕರು ಸುತ್ತುವರೆದಿದ್ದರು. ವಿಚಿತ್ರ ಮತ್ತು ಅದ್ಭುತವಸ್ತ್ರಗಳನ್ನು ಧರಿಸಿದ, ಖಡ್ಗ-ಪ್ರಾಸ ಮೊದಲಾದ ಆಯುಧಗಳನ್ನು ಹಿಡಿದ ಬಹುಸಹಸ್ರ ಸಂಖ್ಯೆಯಲ್ಲಿ ಇನ್ನೂ ಇತರರು ಕೃಷ್ಣನ ಮುಂದೆ ನಡೆದಿದ್ದರು. ಮುಂದುವರೆಯುತ್ತಿದ್ದ ಆ ಅಪರಾಜಿತ ವೀರ ದಾಶಾರ್ಹನನ್ನು ನೂರಕ್ಕೂ ಅಧಿಕ ಆನೆಗಳು, ಸಹಸ್ರಾರು ಶ್ರೇಷ್ಠ ಕುದುರೆಗಳು ಹಿಂಬಾಲಿಸಿದವು. ಜನಾರ್ದನನನ್ನು ನೋಡಲು, ವೃದ್ಧ-ಬಾಲಕ-ಸ್ತ್ರೀಯರೊಂದಿಗೆ ಕುರುಗಳ ಪುರವಿಡೀ ದಾರಿಯಲ್ಲಿ ಬಂದು ನೆರೆದಿತ್ತು. ಮನೆಯ ಮಹಡಿಗಳು ಅನೇಕ ಸಂಖ್ಯೆಯ ಜನರಿಗೆ ಆಶ್ರಯವನ್ನಿತ್ತು, ಅವರ ಭಾರದಿಂದ ತೂಗುತ್ತಿದೆಯೋ ಎಂದು ತೋರುತ್ತಿದ್ದವು. ಕುರುಗಳು ಗೌರವಿಸುತ್ತಿರಲು, ವಿವಿಧ ಮಾತುಗಳನ್ನು ಕೇಳುತ್ತಾ, ಯಥಾರ್ಹವಾಗಿ ಪ್ರತಿಗೌರವಿಸುತ್ತಾ, ಎಲ್ಲೆಡೆ ನೋಡುತ್ತಾ, ಅವನು ಮೆಲ್ಲಗೆ ಪ್ರಯಾಣಿಸಿದನು.
ಸಭೆಯನ್ನು ಸಮೀಪಿಸಲು ಕೇಶವನ ಅನುಯಾಯಿಗಳು ಶಂಖ-ವೇಣುಗಳ ನಿರ್ಘೋಷದಿಂದ ಎಲ್ಲ ದಿಕ್ಕುಗಳನ್ನೂ ಮೊಳಗಿಸಿದರು. ಕೃಷ್ಣನ ಆಗಮನವನ್ನು ಕಾಯುತ್ತಿದ್ದ ಆ ಎಲ್ಲ ಅಮಿತತೇಜಸ್ವಿ ರಾಜರ ಸಭೆಯು ಹರ್ಷದಿಂದ ನಡುಗಿತು. ಮೋಡದಂತೆ ಮೊಳಗುತ್ತಿದ್ದ ಅವನ ರಥನಿರ್ಘೋಷವನ್ನು ಕೇಳಿ, ಕೃಷ್ಣನು ಬಂದನೆಂದು, ನರಾಧಿಪರು ಪರಮ ಹರ್ಷಿತರಾದರು. ಸರ್ವಸಾತ್ವತರ ವೃಷಭ ಶೌರಿಯು ಕೈಲಾಸಶಿಖರೋಪಮ ರಥದಿಂದಿಳಿದು ಸಭಾದ್ವಾರವನ್ನು ತಲುಪಿದನು. ಆಗ ಅವನು ಪರ್ವತದಂತೆ ಅಥವಾ ಬೃಹತ್ ಮೋಡದಂತೆ ತೋರುತ್ತಿದ್ದ, ತೇಜಸ್ಸಿನಿಂದ ಉರಿಯುತ್ತಿದೆಯೋ ಎಂದು ತೋರುತ್ತಿದ್ದ, ಇಂದ್ರನ ಸದನದಂತಿದ್ದ ಆ ಸಭೆಯನ್ನು ಪ್ರವೇಶಿಸಿದನು.
ಮಹಾಯಶ ವಿದುರ-ಸಾತ್ಯಕಿಯರ ಕೈಹಿಡಿದು ಅವನು ಸೂರ್ಯನು ನಕ್ಷತ್ರಗಳನ್ನು ಮೀರಿ ಮಿರುಗಿ ಅವರ ತೇಜಸ್ಸನ್ನು ಮುಸುಕುವಂತೆ ತನ್ನ ಶ್ರೀಯಿಂದ ಕುರುಗಳನ್ನು ಮುಸುಕಿದನು. ವಾಸುದೇವನ ಮುಂದೆ ಕರ್ಣ-ದುರ್ಯೋಧನರಿಬ್ಬರೂ, ಕೃಷ್ಣನ ಹಿಂದೆ ಕೃತವರ್ಮ ವೃಷ್ಣಿಗಳೂ ಇದ್ದರು. ಧೃತರಾಷ್ಟ್ರನೇ ಮೊದಲಾಗಿ ಭೀಷ್ಮ-ದ್ರೋಣಾದಿಗಳು ಎಲ್ಲರೂ ಆಸನಗಳಿಂದ ಮೇಲೆದ್ದು ಜನಾರ್ದನನನ್ನು ಗೌರವಿಸಿದರು. ದಾಶಾರ್ಹನು ಆಗಮಿಸುತ್ತಲೇ ಪ್ರಜ್ಞಾಚಕ್ಷುವು ಮಹಾಮನಸ್ಕ, ಮಹಾಯಶ ಭೀಷ್ಮ-ದ್ರೋಣಾದಿಗಳೊಡನೆ ಥಟ್ಟನೇ ಮೇಲೆದ್ದು ನಿಂತನು. ಮಹಾರಾಜ ಜನೇಶ್ವರ ಧೃತರಾಷ್ಟ್ರನು ಎದ್ದು ನಿಲ್ಲಲು ಅಲ್ಲಿ ಸೇರಿದ್ದ ಸಹಸ್ರಾರು ರಾಜರುಗಳೂ ಮೇಲೆದ್ದು ನಿಂತರು. ಧೃತರಾಷ್ಟ್ರನ ಶಾಸನದಂತೆ ಕೃಷ್ಣನಿಗಾಗಿ ಅಲ್ಲಿ ಸರ್ವತೋಭದ್ರವಾದ, ಬಂಗಾರದಿಂದ ಪರಿಷ್ಕರಿಸಲ್ಪಟ್ಟ ಆಸನವನ್ನು ಕಲ್ಪಿಸಲಾಗಿತ್ತು. ಆಗ ಧರ್ಮಾತ್ಮ ಮಾಧವನು ಮುಗುಳ್ನಕ್ಕು ರಾಜನನ್ನು, ಭೀಷ್ಮ-ದ್ರೋಣರನ್ನು, ಇತರ ರಾಜರನ್ನೂ ವಯಸ್ಸಿಗೆ ತಕ್ಕಂತೆ ಮಾತನಾಡಿಸಿದನು. ಸಭೆಗೆ ಬಂದಿದ್ದ ಕೇಶವ ಜನಾರ್ದನನನ್ನು ಎಲ್ಲ ಕುರುಗಳೂ, ರಾಜ ಪಾರ್ಥಿವರೂ ಅರ್ಚಿಸಿದರು.
ಅಲ್ಲಿ ರಾಜರ ಮಧ್ಯೆ ನಿಂತು ಪರಪುರಂಜಯ ಪರಂತಪ ದಾಶಾರ್ಹನು ಅಂತರಿಕ್ಷದಲ್ಲಿ ನಿಂತಿದ್ದ ಋಷಿಗಳನ್ನು ನೋಡಿದನು. ನಾರದಪ್ರಮುಖ ಆ ಋಷಿಗಳನ್ನು ನೋಡಿ ದಾಶಾರ್ಹನು ಶಾಂತನವ ಭೀಷ್ಮನಿಗೆ ಮೆಲ್ಲನೇ ಹೇಳಿದನು: “ನೃಪ! ಈ ಪಾರ್ಥಿವರ ಸಭೆಯನ್ನು ನೋಡಲು ಋಷಿಗಳು ಆಗಮಿಸಿದ್ದಾರೆ. ಅವರನ್ನು ಸ್ವಾಗತಿಸಿ ಆಸನಗಳನಿತ್ತು ಸತ್ಕರಿಸಬೇಕು. ಅವರು ಕುಳಿತುಕೊಳ್ಳದೇ ಇಲ್ಲಿರುವ ಯಾರೂ ಕುಳಿತುಕೊಳ್ಳಲಾರರು. ಆದುದರಿಂದ ಈ ಭಾವಿತಾತ್ಮ ಮುನಿಗಳ ಪೂಜೆಯು ಶೀಘ್ರವಾಗಿ ನಡೆಯಲಿ.”
ಸಭಾದ್ವಾರದಲ್ಲಿ ನಿಂತಿದ್ದ ಋಷಿಗಳನ್ನು ನೋಡಿ ಶಾಂತನವನು ಅವರಿಗೆ ಬೇಗ ಆಸನಗಳನ್ನು ತರುವಂತೆ ಸೇವಕರಿಗೆ ಆಜ್ಞಾಪಿಸಿದನು. ಕೂಡಲೆ ಮಣಿಕಾಂಚನಗಳಿಂದ ಅಲಂಕರಿಸಲ್ಪಟ್ಟ, ಹೇರಳವಾದ ದೊಡ್ಡ ದೊಡ್ಡ ಆಸನಗಳನ್ನು ತರಲಾಯಿತು. ಅವರು ಅಲ್ಲಿ ಕುಳಿತುಕೊಂಡು ಅರ್ಘ್ಯಗಳನ್ನು ಸ್ವೀಕರಿಸಿದ ನಂತರ ಕೃಷ್ಣ ಮತ್ತು ರಾಜರು ಆಸನಗಳನ್ನು ಗ್ರಹಿಸಿದರು. ದುಃಶಾಸನನು ಸಾತ್ಯಕಿಗೆ ಉತ್ತಮ ಆಸನವನ್ನು ನೀಡಿದನು. ವಿವಿಂಶತಿಯು ಕೃತವರ್ಮನಿಗೆ ಕಾಂಚನ ಪೀಠವನ್ನಿತ್ತನು. ಕೃಷ್ಣನ ಪಕ್ಕದಲ್ಲಿಯೇ ಒಂದೇ ಪೀಠದಲ್ಲಿ ಮಹಾತ್ಮ, ದುಷ್ಟ ಕರ್ಣ-ದುರ್ಯೋಧನರಿಬ್ಬರು ಒಟ್ಟಿಗೇ ಕುಳಿತುಕೊಂಡರು. ಗಾಂಧಾರರಾಜ ಶಕುನಿಯು ಗಾಂಧಾರರಿಂದ ರಕ್ಷಿತನಾಗಿ ಪುತ್ರನೊಂದಿಗೆ ಅಲ್ಲಿ ಆಸನದಲ್ಲಿ ಕುಳಿತಿದ್ದನು. ಮಹಾಮತಿ ವಿದುರನು ಬಿಳಿಯ ಜಿನವಸ್ತ್ರವನ್ನು ಹೊದಿಸಿದ್ದ, ಶೌರಿಯ ಪೀಠಕ್ಕೆ ತಾಗಿಕೊಂಡಿದ್ದ ಮಣಿಪೀಠದಲ್ಲಿ ಕುಳಿತುಕೊಂಡನು. ಅಲ್ಲಿದ್ದ ಸರ್ವ ರಾಜ ಪಾರ್ಥಿವರು ತುಂಬಾ ಹೊತ್ತು ದಾಶಾರ್ಹನನ್ನು ನೋಡುತ್ತಿದ್ದರೂ ಅಮೃತವನ್ನು ಎಷ್ಟು ಕುಡಿದರೂ ತೃಪ್ತರಾಗದವರಂತೆ ಜನಾರ್ದನನ್ನು ನೋಡಿ ತೃಪ್ತರಾಗಲಿಲ್ಲ. ಅತಸೀಪುಷ್ಪಸಂಕಾಶ, ಪೀತಾಂಬರವನ್ನುಟ್ಟಿದ್ದ ಜನಾರ್ದನನು ಬಂಗಾರದಲ್ಲಿ ಹುದುಗಿದ್ದ ಮಣಿಯಂತೆ ಆ ಸಭಾಮಧ್ಯದಲ್ಲಿ ಹೊಳೆಯುತ್ತಿದ್ದನು. ಗೋವಿಂದನು ಕುಳಿತುಕೊಂಡ ನಂತರ ಎಲ್ಲರೂ ಸುಮ್ಮನಾದರು. ಅಲ್ಲಿದ್ದ ಯಾವ ಪುರುಷನೂ ಏನನ್ನೂ ಹೇಳಲಿಲ್ಲ.
ಕೃಷ್ಣ ವಾಕ್ಯ
ಆ ಸರ್ವ ರಾಜರೂ ಆಸೀನರಾಗಿ ಸುಮ್ಮನಾದ ನಂತರ, ಸುದಂಷ್ಟ್ರ ಕೃಷ್ಣನು ಗುಡುಗಿನ ಸ್ವರದಲ್ಲಿ ಮಾತನ್ನು ಪ್ರಾರಂಭಿಸಿದನು. ಮೋಡವು ಮೊಳಗುವಂತೆ, ಮಾಧವನು ಸಭೆಯಲ್ಲಿ ಎಲ್ಲರಿಗೂ ಕೇಳಿಸುವಂತೆ, ಧೃತರಾಷ್ಟ್ರನನ್ನು ಉದ್ದೇಶಿಸಿ ಈ ಉತ್ತಮ ಮಾತುಗಳನ್ನು ಹೇಳಿದನು. “ಭಾರತ! ವೀರರ ನಾಶವಾಗದೇ ಕುರುಗಳಲ್ಲಿ ಮತ್ತು ಪಾಂಡವರಲ್ಲಿ ಶಾಂತಿಯನ್ನುಂಟುಮಾಡುವ ಪ್ರಯತ್ನದಿಂದ ನಾನು ಇಲ್ಲಿಗೆ ಬಂದಿದ್ದೇನೆ. ರಾಜನ್! ಇದರ ಹೊರತಾಗಿರುವ ಬೇರೆ ಯಾವ ಶ್ರೇಯಸ್ಕರ ಮಾತನ್ನೂ ನಾನು ಹೇಳುವುದಿಲ್ಲ. ಏಕೆಂದರೆ ತಿಳಿಯಬೇಕಾಗಿರುವ ಎಲ್ಲವೂ ನಿನಗೆ ತಿಳಿದೇ ಇದೆ. ಈ ಕುಲವು ಇಂದು ಅಧ್ಯಯನ, ನಡತೆಗಳಿಂದ ಕೂಡಿದ್ದು ಸರ್ವ ಗುಣಗಳಿಂದ ತುಂಬಿದ್ದು ಎಲ್ಲ ರಾಜರಲ್ಲಿ ಶ್ರೇಷ್ಠವೆನಿಸಿಕೊಂಡಿದೆ. ವಿಶೇಷವಾಗಿ ಕೃಪೆ, ಅನುಕಂಪ, ಕಾರುಣ್ಯ, ಅಹಿಂಸೆ, ಆರ್ಜವ, ಕ್ಷಮೆ, ಹಾಗೆ ಸತ್ಯ ಇವು ಕುರುಗಳಲ್ಲಿವೆ. ಈ ವಿಧಗಳಲ್ಲಿ ಎತ್ತರವಾಗಿ ನಿಂತಿರುವ ಈ ಕುಲದಲ್ಲಿ ಸರಿಯಾಗಿರದಿದ್ದುದು ಯಾವುದೂ, ವಿಶೇಷವಾಗಿ ನಿನ್ನಿಂದ, ನಡೆಯಬಾರದು. ಕುರುಗಳಲ್ಲಿ ಯಾರಾದರೂ ಒಳಗಿನವರಲ್ಲಿ ಅಥವಾ ಹೊರಗಿನವರಲ್ಲಿ ಸುಳ್ಳಾಗಿ ನಡೆದುಕೊಳ್ಳುವುದನ್ನು ನೀನೇ ನಿಲ್ಲಿಸಬಹುದು. ನಿನ್ನ ಪುತ್ರರು, ದುರ್ಯೋಧನನ ನಾಯಕತ್ವದಲ್ಲಿ, ಧರ್ಮ-ಅರ್ಥಗಳನ್ನು ಹಿಂದೊತ್ತಿ, ಅಶಿಷ್ಟರಾಗಿ, ಮರ್ಯಾದೆಯನ್ನು ಕಳೆದುಕೊಂಡು, ಲೋಭದಿಂದ ಬುದ್ಧಿ ಕಳೆದುಕೊಂಡು ನಿನ್ನ ಬಂಧುಮುಖ್ಯರಲ್ಲಿ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ನಿನಗೆ ತಿಳಿದೇ ಇದೆ. ಈ ಮಹಾಘೋರ ಸನ್ನಿವೇಶವು ಕುರುಗಳಿಂದಲೇ ಉತ್ಪನ್ನವಾಗಿದೆ. ಇದನ್ನು ನಿರ್ಲಕ್ಷಿಸಿದರೆ ಇಡೀ ಪೃಥ್ವಿಯನ್ನೇ ಅದು ಘಾತಿಗೊಳಿಸುತ್ತದೆ. ನೀನು ಇಚ್ಛಿಸಿದರೆ ಇದನ್ನು ಶಾಂತಗೊಳಿಸಲು ಶಕ್ಯವಿದೆ. ಏಕೆಂದರೆ ಇಲ್ಲಿ ಶಾಂತಿಯನ್ನು ತರುವುದು ದುಷ್ಕರವೇನಲ್ಲ ಎಂದು ನನ್ನ ಅನಿಸಿಕೆ. ಶಾಂತಿಯು ನಿನ್ನ ಮತ್ತು ನನ್ನ ಅಧೀನದಲ್ಲಿದೆ. ನೀನು ಪುತ್ರರನ್ನು ತಡೆ! ನಾನು ಇತರರನ್ನು ತಡೆಯುತ್ತೇನೆ. ತಮ್ಮ ಅನುಯಾಯಿಗಳೊಂದಿಗೆ ಪುತ್ರರು ನಿನ್ನ ಆಜ್ಞೆಯಂತೆ ಮಾಡಬೇಕು. ಇವರನ್ನು ನಿನ್ನ ಶಾಸನದಡಿಯಲ್ಲಿ ಬಲವತ್ತಾಗಿ ಹಿಡಿದಿಟ್ಟುಕೊಳ್ಳುವುದೇ ಹಿತಕರವಾದುದು. ನಿನಗೆ ಹಿತವಾದುದು ನಿನ್ನ ಶಾಸನದಲ್ಲಿರಲು ಬಯಸುವ ಪಾಂಡವರಿಗೆ ಕೂಡ, ಮತ್ತು ಶಾಂತಿಯನ್ನು ಪ್ರಯತ್ನಿಸುತ್ತಿರುವ ನನಗೂ ಹಿತವಾದುದು. ಸ್ವಯಂ ನೀನೇ ಇದನ್ನು ವಿಚಾರಿಸಿ ನಿರ್ಧರಿಸು.
“ನೀನೇ ಭಾರತರನ್ನು ಒಂದಾಗಿಸಬಹುದು. ಪಾಂಡವರಿಂದ ರಕ್ಷಿತನಾಗಿ ಧರ್ಮಾರ್ಥಗಳಲ್ಲಿ ನೆಲೆಸು. ಪ್ರಯತ್ನಿಸಿದರೂ ಅವರನ್ನು ಇಲ್ಲವಾಗಿಸಲು ಸಾಧ್ಯವಾಗುವುದಿಲ್ಲ. ಮಹಾತ್ಮ ಪಾಂಡವರಿಂದ ರಕ್ಷಿತನಾದ ನಿನ್ನನ್ನು ದೇವತೆಗಳ ಸಹಿತ ಇಂದ್ರನೂ ಕೂಡ ಜಯಿಸಲು ಸಾಧ್ಯವಿಲ್ಲ. ಇತರ ನೃಪರು ಎಲ್ಲಿ? ಯಾರ ಕಡೆ ಭೀಷ್ಮ, ದ್ರೋಣ, ಕೃಪ, ಕರ್ಣ, ವಿವಿಂಶತಿ, ಅಶ್ವತ್ಥಾಮ, ವಿಕರ್ಣ, ಬಾಹ್ಲಿಕ ಸೋಮದತ್ತ, ಸೈಂಧವ, ಕಲಿಂಗ, ಕಾಂಭೋಜ, ಸುದಕ್ಷಿಣ, ಯುಧಿಷ್ಠಿರ, ಭೀಮಸೇನ, ಸವ್ಯಸಾಚೀ ಮತ್ತು ಯಮಳರು, ಮಹಾತೇಜ ಸಾತ್ಯಕಿ ಮತ್ತು ಮಹಾರಥಿ ಯುಯುತ್ಸುವು ಇದ್ದಾರೋ ಅವರೊಡನೆ ಯಾವ ಹುಚ್ಚನು ತಾನೇ ಯುದ್ಧಮಾಡಿಯಾನು? ಕುರುಪಾಂಡವರೊಡನೆ ನೀನು ಲೋಕೇಶ್ವರತ್ವವನ್ನು ಪಡೆಯುತ್ತೀಯೆ ಮತ್ತು ಶತ್ರುಗಳಿಗೆ ಅಜೇಯನಾಗುತ್ತೀಯೆ. ನಿನ್ನ ಸರಿಸಮರಾಗಿರುವ ಅಥವಾ ನಿನಗಿಂಥಲೂ ಉತ್ತಮರಾಗಿರುವ ರಾಜರು ನಿನ್ನೊಡನೆ ಸಂಧಿ ಮಾಡಿಕೊಳ್ಳುವರು. ಆಗ ನೀನು ಎಲ್ಲ ಕಡೆಯಿಂದ ಮಕ್ಕಳು-ಮೊಮ್ಮಕ್ಕಳು, ಸಹೋದರರು, ಪಿತೃಗಳು, ಸ್ನೇಹಿತರಿಂದ ರಕ್ಷಿಸಲ್ಪಟ್ಟು ಸುಖವಾದ ಜೀವನವನ್ನು ನಡೆಸಲು ಶಕ್ಯನಾಗುತ್ತೀಯೆ. ಅವರನ್ನು ಮುಂದೆ ಇರಿಸಿ ಹಿಂದಿನಂತೆಯೇ ಸತ್ಕರಿಸು. ಇದರಿಂದ ಇಡೀ ಪೃಥ್ವಿಯ ಎಲ್ಲವನ್ನೂ ಭೋಗಿಸಬಲ್ಲೆ. ಪಾಂಡವರು ಮತ್ತು ನಿನ್ನವರೆಲ್ಲರೂ ಒಟ್ಟಿಗೇ ಇತರ ಶತ್ರುಗಳೆಲ್ಲರನ್ನು ಗೆಲ್ಲಬಹುದು. ಇದು ಸಂಪೂರ್ಣವಾಗಿ ನಿನ್ನದೇ ಸ್ವಾರ್ಥದಲ್ಲಿದೆ.
“ಒಂದುವೇಳೆ ಪುತ್ರರೊಂದಿಗೆ ಅಮಾತ್ಯರೊಂದಿಗೆ ಒಂದಾದೆಯಾದರೆ, ಅವರು ನಿನಗೆ ಗಳಿಸಿಕೊಡುವ ಭೂಮಿಯನ್ನು ನೀನು ಭೋಗಿಸಬಹುದು. ಆದರೆ ಯುದ್ಧವೇ ಆಗಬೇಕೆಂದರೆ ಮಹಾನಾಶವು ಕಾಣುತ್ತಿದೆ. ಎರಡೂ ಕಡೆಯವರು ಕ್ಷಯವಾಗುವುದರಲ್ಲಿ ನೀನು ಯಾವ ಧರ್ಮವನ್ನು ಕಾಣುತ್ತೀಯೆ? ಯುದ್ಧದಲ್ಲಿ ಮಹಾಬಲ ಪಾಂಡವರು ಮತ್ತು ನಿನ್ನ ಪುತ್ರರೂ ಕೂಡ ಹತರಾಗುವುದರಲ್ಲಿ ಎಂಥಹ ಸುಖವಿದೆ ಹೇಳು. ಪಾಂಡವರು ಮತ್ತು ನಿನ್ನವರು ಎಲ್ಲರೂ ಶೂರರು. ಕೃತಾಸ್ತ್ರರಾಗಿದ್ದಾರೆ. ಯುದ್ಧಾಕಾಂಕ್ಷಿಗಳಾಗಿದ್ದಾರೆ. ಅವರನ್ನು ಈ ಮಹಾಭಯದಿಂದ ರಕ್ಷಿಸು. ಆ ಶೂರರು ರಥಿಗಳಿಂದ ರಥಗಳು ಪುಡಿಯಾಗಿ ಯುದ್ಧದಲ್ಲಿ ನಾಶವನ್ನು ಹೊಂದಿದರೆ ಕುರುಗಳನ್ನೂ ಪಾಂಡವರೆಲ್ಲರನ್ನೂ ನಾವು ನೋಡಲಾರೆವು. ಪೃಥ್ವಿಯ ರಾಜರು ಸಿಟ್ಟಿನ ವಶರಾಗಿ ಈ ಪ್ರಜೆಗಳನ್ನು ನಾಶಪಡಿಸುವ ಉದ್ದೇಶದಿಂದ ಸೇರಿದ್ದಾರೆ. ಈ ಲೋಕವನ್ನು ಉಳಿಸು. ನಿನ್ನ ಪ್ರಜೆಗಳು ನಾಶವಾಗಲು ಬಿಡಬೇಡ. ನಿನ್ನ ಸ್ವಭಾವವನ್ನು ಹೊಂದಿ ಎಲ್ಲವನ್ನೂ ಉಳಿಯುವಂತೆ ಮಾಡು. ಶುಚಿಯಾಗಿರುವ, ಉದಾರಿಗಳಾದ, ವಿನೀತರಾದ, ಆರ್ಯರಾದ, ಪುಣ್ಯಗಳಿಂದ ಹುಟ್ಟಿದ, ಅನ್ಯೋನ್ಯರೊಡನೆ ಒಂದಾಗಿರುವ ಇವರನ್ನು ಮಹಾ ಭಯದಿಂದ ರಕ್ಷಿಸು. ಈ ಭೂಮಿಪಾಲಕರು ಶಾಂತಿಯುತವಾಗಿ ಪರಸ್ಪರರನ್ನು ಸೇರಲಿ, ಒಟ್ಟಿಗೇ ತಿಂದು, ಕುಡಿದು, ಉತ್ತಮ ಉಡುಗೆಗಳನ್ನು ತೊಟ್ಟು, ಮಾಲೆಗಳನ್ನು ಧರಿಸಿ ಸತ್ಕೃತರಾಗಿ, ಸಿಟ್ಟು-ವೈರಗಳನ್ನು ತೊರೆದು, ತಮ್ಮ ತಮ್ಮ ಮನೆಗಳಿಗೆ ತೆರಳಲಿ. ಈಗ ನಿನ್ನ ಜೀವನದ ಹೆಚ್ಚುಕಾಲವು ಕಳೆದುಹೋಗಿರಲು, ನಿನಗೆ ಹಿಂದೆ ಪಾಂಡವರೊಡನಿದ್ದ ಸೌಹಾರ್ದತೆಯ ಇನ್ನೊಮ್ಮೆ ತೋರಿಬರಲಿ. ಬಾಲಕರಾಗಿರುವಾಗಲೇ ತಂದೆಯನ್ನು ಕಳೆದುಕೊಂಡ ಅವರು ನಿನ್ನಿಂದಲೇ ಬೆಳೆದರು. ಪುತ್ರರಂತೆ ಯಥಾನ್ಯಾಯವಾಗಿ ಅವರನ್ನು ಪಾಲಿಸಬೇಕು. ವಿಶೇಷವಾಗಿ ವ್ಯಸನದಲ್ಲಿರುವಾಗ ಅವರಿಗೆ ನಿನ್ನದೇ ರಕ್ಷಣೆಯು ಬೇಕು. ಇಲ್ಲದಿದ್ದರೆ ನಿನ್ನ ಧರ್ಮಾರ್ಥಗಳು ನಾಶವಾಗುತ್ತದೆ.
“ಪಾಂಡವನು ನಿನ್ನನ್ನು ಅಭಿವಂದಿಸಿ ಕರುಣೆಯನ್ನು ಬೇಡಿ ಕೇಳಿಕೊಳ್ಳುತ್ತಿದ್ದಾರೆ: ‘ನಿನ್ನ ಶಾಸನದಂತೆ ಅನುಗರೊಂದಿಗೆ ದುಃಖವನ್ನು ಸಹಿಸಿಕೊಂಡು ಈ ಹನ್ನೆರಡು ವರ್ಷಗಳು ವನದಲ್ಲಿ ಮತ್ತು ಹಾಗೆಯೇ ಹದಿಮೂರನೆಯ ವರ್ಷವನ್ನು ಜನರ ಮಧ್ಯೆ ಯಾರಿಗೂ ತಿಳಿಯದಂತೆ ಕಳೆದಿದ್ದೇವೆ. ತಂದೆಯು ಒಪ್ಪಂದದಂತೆ ನಡೆದುಕೊಳ್ಳುತ್ತಾನೆ ಎಂದು ಯೋಚಿಸಿ ನಾವು ನಡೆದುಕೊಂಡೆವು. ಅಪ್ಪಾ! ನಾವು ಒಪ್ಪಂದವನ್ನು ಮುರಿಯಲಿಲ್ಲ. ಇದನ್ನು ಬ್ರಾಹ್ಮಣರು ತಿಳಿದಿದ್ದಾರೆ. ಆದುದರಿಂದ ಒಪ್ಪಂದದಂತೆ ನಡೆದುಕೊಂಡು ಬಂದವರೊಡನೆ ಒಪ್ಪಂದದಂತೆ ನಡೆದುಕೋ! ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಈಗ ನಮಗೆ ನಮ್ಮ ರಾಜ್ಯಾಂಶವು ದೊರೆಯಬೇಕು. ಧರ್ಮ-ಅರ್ಥಗಳನ್ನು ಚೆನ್ನಾಗಿ ಜೋಡಿಸಿ ನಮ್ಮನ್ನು ನೀನು ರಕ್ಷಿಸಬೇಕು. ನಿನ್ನನ್ನು ಗುರುವೆಂದು ಸ್ವೀಕರಿಸಿ ನಾವು ಬಹಳ ಕ್ಲೇಶಗಳನ್ನು ಅನುಭವಿಸಿದ್ದೇವೆ. ನಮ್ಮನ್ನು ನೀನು ತಂದೆ-ತಾಯಿಯಂತೆ ಪಾಲಿಸಬೇಕು. ಗುರುವಿನ ಕಡೆ ಶಿಷ್ಯರು ನಡೆದುಕೊಳ್ಳುವ ರೀತಿಯು ಅತಿ ದೊಡ್ಡದು. ನಾವು ದಾರಿತಪ್ಪಿರುವವರಾದರೆ ತಂದೆಯಾಗಿ ನೀನೇ ನಮ್ಮನ್ನು ನಿಲ್ಲಿಸಬೇಕು. ನೀನು ನಮ್ಮನ್ನು ದಾರಿಯಲ್ಲಿ ಇರಿಸಿ ನೀನೂ ಕೂಡ ಸರಿಯಾದ ದಾರಿಯಲ್ಲಿ ನಿಂತಿರು.
“ನಿನ್ನ ಮಕ್ಕಳು ಈ ಪರಿಷತ್ತಿಗೆ ಇದನ್ನು ಹೇಳಿ ಕಳುಹಿಸಿದ್ದಾರೆ: ‘ಧರ್ಮವನ್ನು ತಿಳಿದಿರುವ ಈ ಸಭಾಸದರಲ್ಲಿ ಅಸಾಂಪ್ರತವು ಸರಿಯಲ್ಲ. ಎಲ್ಲಿ ಧರ್ಮವು ಅಧರ್ಮದಿಂದ ಮತ್ತು ಸತ್ಯವು ಸುಳ್ಳಿನಿಂದ ಸಾಯಿಸಲ್ಪಡುತ್ತದೆಯೋ ಅದನ್ನು ಅಲ್ಲಿದ್ದು ನೋಡುತ್ತಿರುವ ಸಭಾಸದರೂ ಹತರಾಗುತ್ತಾರೆ. ಅಧರ್ಮದಿಂದ ಚುಚ್ಚಲ್ಪಟ್ಟ ಧರ್ಮವು ಸಭೆಗೆ ಬಂದಾಗ ಮತ್ತು ಆ ಮುಳ್ಳನ್ನು ಅವರು ಕಿತ್ತು ತೆಗಿಯದೇ ಇದ್ದರೆ, ಅದು ಆ ಸಭಾಸದರನ್ನೇ ಚುಚ್ಚುತ್ತದೆ. ನದಿಯು ತನ್ನ ದಂಡೆಯಲ್ಲಿರುವ ಮರಗಳನ್ನು ಕೊಚ್ಚಿಕೊಂಡು ಹೋಗುವಂತೆ ಧರ್ಮವು ಅವರನ್ನೂ ಕೊಚ್ಚಿಕೊಂಡು ಹೋಗುತ್ತದೆ.’
“ಧರ್ಮವನ್ನು ನೋಡಿಕೊಂಡು, ಧ್ಯಾನಾಸಕ್ತರಾಗಿದ್ದುಕೊಂಡು ಅವರು ಸತ್ಯವನ್ನೇ ಹೇಳುತ್ತಿದ್ದಾರೆ. ಇಲ್ಲಿ ಧರ್ಮವೇ ನ್ಯಾಯವು. ಅವರಿಗೆ ಕೊಡುತ್ತೇನೆ ಎನ್ನುವುದಲ್ಲದೇ ಬೇರೆ ಏನನ್ನು ಹೇಳಲು ಸಾಧ್ಯ? ನಾನು ಧರ್ಮಾರ್ಥಗಳನ್ನು ಯೋಚಿಸಿ ಸತ್ಯವನ್ನು ಹೇಳುತ್ತಿದ್ದೇನೆ ಎಂದಾದರೆ ಈ ಸಭೆಯಲ್ಲಿ ಸೇರಿರುವ ಮಹೀಪಾಲರ್ಯಾರಾದರೂ ಹೇಳಲಿ. ಈ ಕ್ಷತ್ರಿಯರನ್ನು ಮೃತ್ಯುಪಾಶದಿಂದ ಬಿಡುಗಡೆ ಮಾಡು. ಶಾಂತನಾಗು! ಕೋಪವಶನಾಗಬೇಡ! ಪಾಂಡವರಿಗೆ ಯಥೋಚಿತವಾಗಿ ಅವರ ಪಿತೃಗಳ ಅಂಶವನ್ನು ಕೊಟ್ಟುಬಿಡು! ಅನಂತರ ಪುತ್ರರೊಂದಿಗೆ ಅರ್ಥಸಿದ್ಧಿಯನ್ನು ಹೊಂದಿ ಭೋಗಗಳನ್ನು ಭೋಗಿಸು. ಸದಾ ಸಂತರ ಧರ್ಮದಲ್ಲಿ ನಡೆಯುವ ಅಜಾತಶತ್ರುವನ್ನು ನೀನು ತಿಳಿದಿದ್ದೀಯೆ. ಹಾಗೆಯೇ ಅವನು ನಿನ್ನ ಮತ್ತು ನಿನ್ನ ಮಕ್ಕಳೊಡನೆಯೂ ಕೂಡ ನಡೆದುಕೊಳ್ಳುತ್ತಿದ್ದಾನೆ.
“ಸುಡುವ ಪ್ರಯತ್ನಕ್ಕೊಳಪಟ್ಟಿದ್ದ, ಹೊರಗಟ್ಟಲ್ಪಟ್ಟ, ಪುತ್ರರೊಂದಿಗೆ ನಿನ್ನಿಂದ ಇಂದ್ರಪ್ರಸ್ಥಕ್ಕೆ ಕಳುಹಿಸಲ್ಪಟ್ಟ ಅವನು ಪುನಃ ನಿನ್ನ ಆಶ್ರಿತನಾಗಿರಲು ಬಯಸುತ್ತಾನೆ. ಅಲ್ಲಿ ವಾಸಿಸಿರುವಾಗ ಅವನು ಸರ್ವ ಪಾರ್ಥಿವರನ್ನೂ ಗೆದ್ದರೂ ನಿನ್ನನ್ನು ಎಂದೂ ಮೀರಿಸಲಿಲ್ಲ. ಹೀಗೆ ಅವನು ನಡೆದುಕೊಳ್ಳುತ್ತಿರಲು ಸೌಬಲನು ಅವನ ರಾಷ್ಟ್ರಗಳನ್ನು, ಧನಧಾನ್ಯಗಳನ್ನು ಗೆಲ್ಲುವ ಆಸೆಯಿಂದ ಪರಮ ಉಪಾಯವನ್ನು ಬಳಸಿದನು. ಆ ಅವಸ್ಥೆಯನ್ನು ಪಡೆದು, ಕೃಷ್ಣೆಯನ್ನು ಸಭೆಗೆ ಎಳೆದುತಂದುದನ್ನು ನೋಡಿಯೂ ಆ ಅಮೇಯಾತ್ಮ ಯುಧಿಷ್ಠಿರನು ಕ್ಷತ್ರಧರ್ಮದಿಂದ ಅಲುಗಾಡಲಿಲ್ಲ. ಧರ್ಮ, ಅರ್ಥ ಮತ್ತು ಸುಖಗಳಲ್ಲಿ ನಾನು ನಿಮ್ಮ ಮತ್ತು ಅವರ ಶ್ರೇಯಸ್ಸನ್ನು ಬಯಸುತ್ತಿದ್ದೇನೆ. ರಾಜನ್! ಪ್ರಜೆಗಳನ್ನು ನಾಶಪಡಿಸಬೇಡ! ಅನರ್ಥವಾದುದನ್ನು ಲಾಭದಾಯಕವೆಂದೂ, ಲಾಭದಾಯಕವಾದುದನ್ನು ತಮಗೆ ಸರಿಯಲ್ಲ ಎಂದು ತಿಳಿದಿರುವ, ಲೋಭದಲ್ಲಿ ಬಹಳ ಮುಂದುವರೆದಿರುವ ನಿನ್ನ ಮಕ್ಕಳನ್ನು ಹಿಡಿದಿಡು! ಅರಿಂದಮ ಪಾರ್ಥರು ನಿನ್ನ ಸೇವೆಮಾಡಲು ಸಿದ್ಧರಾಗಿದ್ದಾರೆ, ಯುದ್ದಕ್ಕೂ ಸಿದ್ಧರಾಗಿದ್ದಾರೆ. ರಾಜನ್! ಪರಂತಪ! ನಿನಗೆ ಯಾವುದು ಉತ್ತಮವೆಸಿಸುತ್ತದೆಯೋ ಅದರಂತೆ ನಿರ್ಧರಿಸು.”
ಪಾರ್ಥಿವರೆಲ್ಲರೂ ಅವನ ಆ ಮಾತುಗಳನ್ನು ಹೃದಯದಲ್ಲಿಯೇ ಮೆಚ್ಚಿದರು. ಆದರೆ ಅಲ್ಲಿ ಯಾರೂ ಏನನ್ನು ಹೇಳಲೂ ಮುಂದೆ ಬರಲಿಲ್ಲ. ಮಹಾತ್ಮ ಕೇಶವನು ಹೀಗೆ ಹೇಳಲು ಸಭಾಸದರೆಲ್ಲರೂ, ರೋಮಗಳು ನಿಮಿರೆದ್ದು, ಗರಬಡಿದವರಂತೆ ಕುಳಿತಿದ್ದರು. “ಅದಕ್ಕೆ ಯಾವ ಪುರುಷನು ಉತ್ತರಿಸಬಲ್ಲ?” ಎಂದು ಎಲ್ಲ ಪಾರ್ಥಿವರೂ ಮನಸ್ಸಿನಲ್ಲಿಯೇ ಯೋಚಿಸಿದರು.
ಜಾಮದಗ್ನಿಯ ವಚನ
ಕುರುಸಂಸದಿಯಲ್ಲಿ ಎಲ್ಲ ರಾಜರೂ ಸುಮ್ಮನಾಗಿರಲು ಜಾಮದಗ್ನ್ಯ ಪರಶುರಾಮನು ಈ ಮಾತುಗಳನ್ನಾಡಿದನು: “ರಾಜನ್! ದಂಭೋದ್ಭವನ ಈ ಉಪಮೆಯನ್ನು ಕೇಳು. ಇದು ಸತ್ಯವಾದುದು. ಅನುಮಾನಪಡುವಂಥದ್ದಲ್ಲ. ಅದನ್ನು ಕೇಳಿ, ನಿನಗಿಷ್ಟವಾದರೆ, ನಿನಗೆ ಶ್ರೇಯಸ್ಸು ಎನಿಸಿದುದನ್ನು ನಿನ್ನದಾಗಿಸಿಕೋ. ಹಿಂದೆ ದಂಭೋದ್ಭವನೊಂದಿಗೆ ನರನು ಎಸಗಿದ ಆ ಕರ್ಮವು ಮಹತ್ತರವಾದುದು. ನಾರಾಯಣನು ಅದಕ್ಕಿಂತಲೂ ಅಧಿಕ ಗುಣಗಳಿಂದ ಶ್ರೇಷ್ಠನಾಗಿದ್ದನು. ಆದುದರಿಂದ ಆ ಧನುಶ್ರೇಷ್ಠ ಗಾಂಡೀವಕ್ಕೆ ಅಸ್ತ್ರವನ್ನು ಹೂಡುವುದರ ಮೊದಲೇ, ನೀನು ನಿನ್ನ ಅಭಿಮಾನವನ್ನು ತೊರೆದು ಧನಂಜಯನಲ್ಲಿ ಹೋಗು! ಅವನಲ್ಲಿ ಕಾಕುದೀಕ, ಶುಕ, ನಾಕ, ಅಕ್ಷಿಸಂತರ್ಜನ, ಸಂತಾನ, ನರ್ತನ, ಘೋರ ಮತ್ತು ಎಂಟನೆಯದಾಗಿ ಉದಕಗಳಿವೆ. ಇವುಗಳಿಂದ ಹೊಡೆಯಲ್ಪಟ್ಟ ಎಲ್ಲ ಮಾನವರೂ ಮರಣ ಹೊಂದುತ್ತಾರೆ - ಉನ್ಮತ್ತರಾಗಿ ನಡೆದುಕೊಳ್ಳುತ್ತಾರೆ, ಸಂಜ್ಞೆಗಳನ್ನು ಕಳೆದುಕೊಂಡು ಮೂರ್ಛೆಗೊಳ್ಳುತ್ತಾರೆ, ನಿದ್ದೆ ಹೋಗುತ್ತಾರೆ, ಕುಪ್ಪಳಿಸುತ್ತಾರೆ, ವಾಂತಿಮಾಡುತ್ತಾರೆ, ಮೂತ್ರಮಾಡುತ್ತಾರೆ, ಸತತವಾಗಿ ಅಳುತ್ತಾರೆ ಮತ್ತು ನಗುತ್ತಾರೆ. ಪಾರ್ಥನ ಗುಣಗಳು ಅಸಂಖ್ಯವಾದವುಗಳು. ಜನಾರ್ದನನು ಅವನಿಗಿಂಥ ವಿಶಿಷ್ಟನಾದವನು. ನೀನೇ ಅವನನ್ನು ಕುಂತೀಪುತ್ರ ಧನಂಜಯನೆಂದು ಚೆನ್ನಾಗಿ ತಿಳಿದುಕೊಂಡಿರುವೆ. ಈ ಪ್ರವೀರ, ಪುರುಷರ್ಷಭ ಅರ್ಜುನ-ಕೇಶವರೇ ಆ ನರ-ನಾರಾಯಣರೆಂದು ತಿಳಿದುಕೋ. ಇದನ್ನು ನೀನು ತಿಳಿದುಕೊಂಡಿದ್ದರೆ, ನನ್ನನ್ನು ಶಂಕಿಸದೇ ಇದ್ದರೆ, ಉತ್ತಮ ಮನಸ್ಸು ಮಾಡಿ ಪಾಂಡವರೊಂದಿಗೆ ಶಾಂತಿಯನ್ನು ಪಾಲಿಸು. ಭೇದವಿಲ್ಲದಿರುವುದೇ ಶ್ರೇಯಸ್ಸೆಂದು ನೀನು ಯೋಚಿಸಿ, ಶಾಂತನಾಗು! ಯುದ್ಧದ ಕುರಿತು ಮನಸ್ಸು ಮಾಡಬೇಡ! ನಿನ್ನ ಕುಲವು ಭೂಮಿಯಲ್ಲಿಯೇ ಬಹುಮತವುಳ್ಳದ್ದು. ಅದು ಹಾಗೆಯೇ ಉಳಿದುಕೊಳ್ಳಬೇಕು. ನಿನಗೆ ಆಶೀರ್ವಾದವಿದೆ. ನಿನಗೆ ಒಳ್ಳೆಯದಾಗುವಂತೆ ಅಲೋಚಿಸು!”
ಕಣ್ವನ ವಚನ
ಜಾಮದಗ್ನಿಯ ವಚನವನ್ನು ಕೇಳಿ ಭಗವಾನ್ ಋಷಿ ಕಣ್ವನೂ ಕೂಡ ಕುರುಸಂಸದಿಯಲ್ಲಿ ದುರ್ಯೋಧನನಿಗೆ ಈ ಮಾತನ್ನಾಡಿದನು: “ಲೋಕಪಿತಾಮಹ ಬ್ರಹ್ಮನು ಅಕ್ಷಯ ಮತ್ತು ಅವ್ಯಯ. ಹಾಗೆಯೇ ಭಗವಂತರಾದ ಆ ನರ-ನಾರಯಣ ಋಷಿಗಳೂ ಕೂಡ. ಆದಿತ್ಯರೆಲ್ಲರಲ್ಲಿ ವಿಷ್ಣುವೊಬ್ಬನೇ ಸನಾತನನು, ಅಜೇಯನು, ಅವ್ಯಯನು, ಶಾಶ್ವತನು ಮತ್ತು ಪ್ರಭು ಈಶ್ವರನು. ಇತರರು - ಚಂದ್ರ-ಸೂರ್ಯರು, ಭೂಮಿ, ನೀರು, ವಾಯು, ಅಗ್ನಿ, ಆಕಾಶ, ಗ್ರಹ, ತಾರಗಣಗಳು ನಿಮಿತ್ತವಾದವುಗಳು ಮತ್ತು ನಾಶಹೊಂದುವವು. ಅವು ಜಗತ್ತಿನ ಕ್ಷಯವಾಗುವಾಗ ಲೋಕತ್ರಯಗಳನ್ನು ತೊರೆಯುತ್ತವೆ. ಅವೆಲ್ಲವೂ ಕ್ಷಯವಾಗಿ ಹೋಗುತ್ತವೆ ಮತ್ತು ಪುನಃ ಪುನಃ ಸೃಷ್ಟಿಯಾಗುತ್ತವೆ. ಅನ್ಯ ಮನುಷ್ಯರು, ಮೃಗ-ಪಕ್ಷಿಗಳು, ತಿರ್ಯಗ್ಯೋನಿಗಳಲ್ಲಿ ಜನಿಸಿದ ಇತರ ಜೀವಲೋಕಚರಗಳು ಅಲ್ಪವೇ ಸಮಯದಲ್ಲಿ ಮರಣ ಹೊಂದುತ್ತವೆ. ಹಾಗೆಯೇ ರಾಜರು ಸಂಪತ್ತನ್ನು ಭೋಗಿಸಿ ಆಯುಷ್ಯವು ಕ್ಷಯವಾಗಲು ಮರಣ ಹೊಂದುತ್ತಾರೆ ಮತ್ತು ಸುಕೃತ-ದುಷ್ಕೃತಗಳನ್ನು ಭೋಗಿಸಲು ಪುನಃ ಜೀವತಳೆಯುತ್ತಾರೆ. ನೀನು ಆ ಧರ್ಮಪುತ್ರನೊಂದಿಗೆ ಶಾಂತಿ ಮಾಡಿಕೊಳ್ಳಬೇಕು. ಪಾಂಡವರು ಮತ್ತು ಕೌರವರು ಭೂಮಿಯನ್ನು ಪಾಲಿಸಲಿ. ಸುಯೋಧನ! ‘ನಾನೇ ಬಲಶಾಲಿ!’ ಎಂದು ತಿಳಿದುಕೊಳ್ಳಬೇಡ. ಮಾತಲಿಯ ವರಾನ್ವೇಷಣೆಯ ಸಮಯದಲ್ಲಿ ವಿಷ್ಣುವು ಗರುಡನನ್ನು ಬಲದಲ್ಲಿ ಸೋಲಿಸಿದನು. ಬಲಶಾಲಿಗಳಿಗಿಂತ ಬಲಶಾಲಿಗಳು ಕಂಡುಬರುತ್ತಾರೆ. ಬಲಶಾಲಿಗಳಲ್ಲಿ ಕೇವಲ ದೇಹಬಲವೇ ಬಲವೆನಿಸಿಕೊಳ್ಳುವುದಿಲ್ಲ. ದೇವತೆಗಳ ವಿಕ್ರಮವನ್ನು ಪಡೆದಿರುವ ಪಾಂಡವರೆಲ್ಲರೂ ನಿನಗಿಂತ ಬಲವಂತರು. ಇದರ ಕುರಿತಾಗಿ, ಉದಾಹರಣೆಯಾಗಿ, ಮಾತಲಿಯು ಮಗಳನ್ನು ಕೊಡಲು ವರನನ್ನು ಹುಡುಕಿದ ಪುರಾತನ ಇತಿಹಾಸವೊಂದಿದೆ. ಗಾಂಧಾರೇ! ಎಲ್ಲಿಯವರೆಗೆ ನೀನು ಆ ವೀರ ಪಾಂಡುಸುತರನ್ನು ರಣದಲ್ಲಿ ಎದುರಿಸುವುದಿಲ್ಲವೋ ಅಲ್ಲಿಯವರೆಗೆ ಜೀವಿಸಿರುತ್ತೀಯೆ. ಪ್ರಹರಿಗಳಲ್ಲಿ ಶ್ರೇಷ್ಠ ವಾಯುಪುತ್ರ ಮಹಾಬಲಿ ಭೀಮ ಮತ್ತು ಇಂದ್ರಸುತ ಧನಂಜಯರು ರಣದಲ್ಲಿ ಯಾರನ್ನು ತಾನೇ ಸಂಹರಿಸಲಾರರು? ದೇವತೆಗಳಾದ ವಿಷ್ಣು, ವಾಯು, ಶಕ್ರ, ಧರ್ಮ, ಅಶ್ವಿಯರನ್ನು ನೀನು ಯಾವ ಕಾರಣದಿಂದ ಗೆಲ್ಲಲು ಬಯಸುತ್ತೀಯೆ? ಆದುದರಿಂದ ವಿರೋಧಿಸುವುದನ್ನು ಬಿಟ್ಟು ಶಾಂತಿಯತ್ತ ನಡೆ. ವಾಸುದೇವನ ತೀರ್ಥದಿಂದ ಕುಲವನ್ನು ರಕ್ಷಿಸಿಕೋ! ಈ ಮಹಾತಪಸ್ವಿ ನಾರದನು ಚಕ್ರಗದಾಧರ ಈ ವಿಷ್ಣುವಿನ ಮಹಾತ್ಮೆಗಳೆಲ್ಲವನ್ನೂ ಪ್ರತ್ಯಕ್ಷವಾಗಿ ನೋಡಿದ್ದಾನೆ.”
ಅದನ್ನು ಕೇಳಿ ದುರ್ಯೋಧನನು ನಿಟ್ಟುಸಿರು ಬಿಡುತ್ತ, ಮುಖ ಗಂಟುಮಾಡಿಕೊಂಡು, ರಾಧೇಯನನ್ನು ನೋಡಿ ಜೋರಾಗಿ ನಕ್ಕನು. ಋಷಿ ಕಣ್ವನ ಆ ಮಾತುಗಳನ್ನು ಅಲ್ಲಗಳೆದು ದುರ್ಮತಿಯು ಆನೆಯ ಸೊಂಡಿಲಿನಂತಿದ್ದ ತನ್ನ ತೊಡೆಯನ್ನು ಚಪ್ಪರಿಸಿ ಹೇಳಿದನು: “ಮಹರ್ಷೇ! ಈಶ್ವರನಿಂದ ಹೇಗೆ ಸೃಷ್ಟಿಸಲ್ಪಟ್ಟಿದ್ದೇನೋ, ನನ್ನ ಭವಿಷ್ಯ ಮತ್ತು ದಾರಿಯು ಹೇಗೆ ನಡೆಸುತ್ತದೆಯೋ ಹಾಗೆಯೇ ನಾನು ಮಾಡುತ್ತೇನೆ. ಈ ಪ್ರಲಾಪವು ಏಕೆ?”
ನಾರದನ ವಚನ
ಆಗ ನಾರದನು ಹೇಳಿದನು: “ಸುಹೃದಯರನ್ನು ಕೇಳುವವರು ದುರ್ಲಭ. ಸುಹೃದರೇ ದುರ್ಲಭ. ಎಲ್ಲಿ ಬಂಧುಗಳು ಸಿಗುವುದಿಲ್ಲವೋ ಅಲ್ಲಿ ಸುಹೃದಯರು ದೊರಕುತ್ತಾರೆ. ಕುರುನಂದನ! ಸುಹೃದಯರ ಮಾತನ್ನು ಕೇಳಬೇಕೆಂದು ನನಗನ್ನಿಸುತ್ತದೆ. ನಿರ್ಬಂಧಗಳು (ಹಠ) ಮಾಡುವಂಥವುಗಳಲ್ಲ. ನಿರ್ಬಂಧಗಳು ದಾರುಣವಾದವುಗಳು. ಇದನ್ನು ಉದಾಹರಿಸಿ ಒಂದು ಪುರಾತನ ಇತಿಹಾಸವಿದೆ. ಅದರಲ್ಲಿ ಹಠ ಹಿಡಿದ ಗಾಲವನು ಪರಾಜಯವನ್ನು ಹೊಂದಿದನು. ಅಭಿಮಾನದಿಂದ ಹಿಂದೆ ಯಯಾತಿ ಮತ್ತು ಗಾಲವರು ಅತಿಯಾಗಿ ಹಠಮಾಡಿ ದೋಷಗಳನ್ನು ಹೊಂದಿದರು. ತಮ್ಮ ಏಳಿಗೆಯನ್ನು ಬಯಸುವವರು ಸುಹೃದಯರ ಹಿತಕಾಮನೆಗಳನ್ನು ಕೇಳಬೇಕು. ಹಠವನ್ನು ಮಾಡಬಾರದು. ಏಕೆಂದರೆ ಹಠವು ಕ್ಷಯವನ್ನು ತರುತ್ತದೆ. ಆದುದರಿಂದ ಗಾಂಧಾರೇ! ನೀನೂ ಕೂಡ ಮಾನಕ್ರೋಧಗಳನ್ನು ತೊರೆದು ವೀರ ಪಾಂಡವರೊಂದಿಗೆ ಸಂಧಿ ಮಾಡಿಕೋ! ಈ ರಂಪಾಟವನ್ನು ತ್ಯಜಿಸು. ಏನನ್ನು ಕೊಡುತ್ತೀವೋ, ಏನನ್ನು ಮಾಡುತ್ತೇವೋ, ಏನು ತಪಸ್ಸನ್ನು ತಪಿಸುತ್ತೇವೋ, ಏನು ಯಜ್ಞಗಳನ್ನು ಮಾಡುತ್ತೇವೋ ಅವುಗಳು ನಾಶವಾಗುವುದಿಲ್ಲ. ಬೇರೆ ಯಾರೂ ತೆಗೆದುಕೊಳ್ಳುವುದಿಲ್ಲ. ಮಾಡುವವನಲ್ಲದೇ ಬೇರೆ ಯಾರಿಗೂ ಅವು ತಲುಪುವುದಿಲ್ಲ.”
ಧೃತರಾಷ್ಟ್ರನು ಹೇಳಿದನು: “ಭಗವನ್! ನಾರದ! ನೀನು ಹೇಳಿದುದು ಸರಿ. ನಾನೂ ಕೂಡ ಅದನ್ನೇ ಬಯಸುತ್ತೇನೆ. ಆದರೆ ನನಗೆ ಅಧಿಕಾರವಿಲ್ಲ!” ಹೀಗೆ ಹೇಳಿ ಅವನು ಕೃಷ್ಣನನ್ನುದ್ದೇಶಿಸಿ ಹೇಳಿದನು: “ಕೇಶವ! ನೀನು ಹೇಳಿದುದು ಸ್ವರ್ಗವನ್ನು ನೀಡುವಂತಹುದು, ಲೋಕಕ್ಕೆ ಹಿತವಾದುದು, ಧರ್ಮ ಮತ್ತು ನ್ಯಾಯಗಳಿಗೆ ಸಮ್ಮತವಾಗಿದೆ. ಆದರೆ ನಾನು ಸ್ವವಶನಾಗಿಲ್ಲ. ನನಗೆ ಇಷ್ಟವಾದುದನ್ನು ಮಾಡುವುದಿಲ್ಲ. ನನ್ನ ಆಜ್ಞೆಗಳನ್ನು ಅನುಸರಿಸದೇ ಇರುವ ಈ ಮಂದ ದುರ್ಯೋಧನನನ್ನು ಗೆಲ್ಲಲು ನೀನೇ ಪ್ರಯತ್ನಿಸು. ಇದರಿಂದ ನಿನ್ನ ಸ್ನೇಹಿತರಿಗೆ ಒಂದು ಮಹತ್ಕಾರ್ಯವನ್ನು ಮಾಡುವೆ!”
ಕೃಷ್ಣನ ಮಾತು
ಆಗ ವಾರ್ಷ್ಣೇಯನು ಅಮರ್ಷಣ ದುರ್ಯೋಧನನ ಕಡೆ ತಿರುಗಿ ಈ ಸರ್ವ ಧರ್ಮಾರ್ಥ ತತ್ವಗಳುಳ್ಳ ಮಧುರ ಮಾತನ್ನು ಹೇಳಿದನು: “ದುರ್ಯೋಧನ! ನಿನ್ನ ಮತ್ತು ನಿನ್ನ ಅನುಯಾಯಿಗಳ ಆಸಕ್ತಿಯನ್ನಿಟ್ಟುಕೊಂಡು ನಾನು ಹೇಳುವ ಮಾತುಗಳನ್ನು ಕೇಳು. ಮಹಾಪ್ರಾಜ್ಞನಾದ ನೀನು ಉಚ್ಚ ಕುಲದಲ್ಲಿ ಜನಿಸಿದ್ದೀಯೆ. ಆದುದರಿಂದ ನೀನು ಒಳ್ಳೆಯವನಂತೆ ನಡೆದುಕೊಳ್ಳಬೇಕು. ನೀನು ವಿದ್ಯಾವಂತ, ಉತ್ತಮ ನಡತೆಯುಳ್ಳವನು ಮತ್ತು ಎಲ್ಲ ಗುಣಗಳಿಂದಲೂ ಕೂಡಿದ್ದೀಯೆ. ನೀನು ಯೋಚಿಸಿರುವಂತಹ ಕೆಲಸವನ್ನು ದುಷ್ಕುಲದಲ್ಲಿ ಹುಟ್ಟಿದವರು, ದುರಾತ್ಮರು, ಕ್ರೂರಿಗಳು ಮತ್ತು ನಾಚಿಕೆಯಿಲ್ಲದವರು ಮಾಡುತ್ತಾರೆ. ಈ ಲೋಕದಲ್ಲಿ ಸಂತರ ಪ್ರವೃತ್ತಿಯನ್ನು ಧರ್ಮಾರ್ಥಯುಕ್ತವೆಂದು ಕಾಣುತ್ತಾರೆ. ಸಂತರದಲ್ಲದ ಪ್ರವೃತ್ತಿಯನ್ನು ವಿಪರೀತವೆಂದು ಕಾಣುತ್ತಾರೆ. ಈ ವಿಷಯದಲ್ಲಿ ನೀನು ನಡೆದುಕೊಳ್ಳುತ್ತಿರುವ ರೀತಿಯು ವಿಪರೀತವೆಂದು ತೋರುತ್ತಿದೆ - ನಿನ್ನ ಈ ಅಧರ್ಮ ಹಠವು ಘೋರ, ಮತ್ತು ಮಹಾ ಪ್ರಾಣಹರಣ ಮಾಡುವಂತಹುದು. ಈಗಾಗಲೇ ನೀನು ಅನೇಕ ಅಯಶಸ್ಕರವಾದವುಗಳನ್ನು ಮಾಡಿರುವೆ. ಆದರೆ ಈಗ ಆ ಅನರ್ಥವನ್ನು ಬಿಟ್ಟರೆ ನಿನಗೇ ಶ್ರೇಯಸ್ಕರವಾದುದನ್ನು ಮಾಡಿದಂತಾಗುತ್ತದೆ. ನೀನು ನಿನ್ನ ಭ್ರಾತೃಗಳನ್ನೂ, ಭೃತ್ಯರನ್ನೂ ಅಧರ್ಮ ಮತ್ತು ಅಯಶಸ್ಕರ ಕರ್ಮಗಳಿಂದ ಬಿಡುಗಡೆ ಮಾಡಬಲ್ಲೆ. ಪ್ರಾಜ್ಞರೂ, ಶೂರರೂ, ಮಹೋತ್ಸಾಹರೂ, ಆತ್ಮವಂತರೂ, ಬಹುಶ್ರುತರೂ ಆದ ಪಾಂಡವರೊಂದಿಗೆ ಸಂಧಿ ಮಾಡಿಕೋ. ಇದು ಹಿತವಾದುದು. ಇದು ಧೀಮತ ಧೃತರಾಷ್ಟ್ರನಿಗೂ, ಪಿತಾಮಹನಿಗೂ, ದ್ರೋಣನಿಗೂ, ಮಹಾಮತಿ ವಿದುರನಿಗೂ, ಕೃಪನಿಗೂ, ಸೋಮದತ್ತನಿಗೂ, ಧೀಮತ ಬಾಹ್ಲೀಕನಿಗೂ, ಅಶ್ವತ್ಥಾಮ-ವಿಕರ್ಣರಿಗೂ, ಸಂಜಯನಿಗೂ, ಬಾಂಧವರಿಗೂ, ಮಿತ್ರರಿಗೂ ಇಷ್ಟವಾದುದು ಮತ್ತು ಒಳ್ಳೆಯದಾದುದು. ಶಾಂತಿಯಲ್ಲಿ ಸರ್ವ ಜಗತ್ತೂ ಆಸರೆಯನ್ನು ಪಡೆಯುತ್ತದೆ. ನಿನ್ನಲ್ಲಿ ಮಾನವಿದೆ. ಉಚ್ಚ ಕುಲದಲ್ಲಿ ಜನಿಸಿದ್ದೀಯೆ. ವಿದ್ಯಾವಂತನಾಗಿದ್ದೀಯೆ. ಕ್ರೂರನಾಗಿಲ್ಲ. ನಿನ್ನ ತಂದೆ ತಾಯಿಯರ ಶಾಸನದಂತೆ ನಡೆದುಕೋ! ತಂದೆಯ ನಿಬಂಧನೆಗಳನ್ನು ಪಾಲಿಸುವುದು ಶ್ರೇಯವಾದುದು. ಏಕೆಂದರೆ ಆಪತ್ತಿನಲ್ಲಿ ಎಲ್ಲರೂ ತಂದೆಯು ಹೇಳಿದುದನ್ನು ಉತ್ತಮವಾದುದೆಂದು ಸ್ಮರಿಸಿಕೊಳ್ಳುತ್ತಾರೆ. ಪಾಂಡವರೊಂದಿಗೆ ನೀನು ಒಂದಾಗು ಎಂದೇ ನಿನ್ನ ತಂದೆಯು ಬಯಸುತ್ತಾನೆ. ಅಮಾತ್ಯರೊಂದಿಗೆ ನೀನೂ ಕೂಡ ಅದನ್ನೇ ಬಯಸಬೇಕು. ಸುಹೃದಯರ ಮಾತನ್ನು ಕೇಳಿ ಅದರಂತೆ ನಡೆದುಕೊಳ್ಳದೇ ಇದ್ದರೆ ಅವನನ್ನು ಅದು ನಂತರ ಕಿಂಪಾಕವನ್ನು ತಿಂದಿದ್ದಾನೋ ಎನ್ನುವಂತೆ ಸುಡುತ್ತದೆ. ಶ್ರೇಯಸ್ಕರ ಮಾತನ್ನು ಮೋಹದಿಂದ ಅನುಸರಿಸದೇ ಇರುವ ದೀರ್ಘಸೂತ್ರನು ಅವನ ಉದ್ದೇಶವನ್ನು ಕಳೆದುಕೊಂಡು ಪಶ್ಚಾತ್ತಾಪದಿಂದ ಬಳಲುತ್ತಾನೆ. ಆದರೆ ಯಾರು ತನ್ನ ಅಭಿಪ್ರಾಯಗಳನ್ನು ಬದಿಗೊತ್ತಿ ಶ್ರೇಯಸ್ಕರವಾದುದನ್ನು ಕೇಳಿ ಅದರಂತೆ ನಡೆದುಕೊಳ್ಳುತ್ತಾನೋ ಅವನು ಲೋಕದಲ್ಲಿ ಸುಖವನ್ನು ಪಡೆಯುತ್ತಾನೆ. ಯಾರು ಅವನಿಗೆ ಉತ್ತಮವನ್ನು ಬಯಸುವವರ ಮಾತನ್ನು ತನಗೆ ಪ್ರತಿಕೂಲವೆಂದು ಸ್ವೀಕರಿಸುವುದಿಲ್ಲವೋ ಮತ್ತು ಅವನಿಗೆ ಪ್ರತಿಕೂಲರಾದವನ್ನು ಕೇಳುತ್ತಾನೋ ಅವನು ಶತ್ರುಗಳ ವಶವಾಗುತ್ತಾನೆ. ಒಳ್ಳೆಯವರ ಮತವನ್ನು ಉಲ್ಲಂಘಿಸಿ ಒಳ್ಳೆಯವರಲ್ಲದವರ ಮತದಂತೆ ನಡೆದುಕೊಳ್ಳುವವನ ಸುಹೃದಯಿಗಳು ಸ್ವಲ್ಪವೇ ಸಮಯದಲ್ಲಿ ಅವನ ಕುರಿತು ಚಿಂತಿಸಿ ಶೋಕಿಸುತ್ತಾರೆ. ಯಾರು ಮುಖ್ಯ ಅಮಾತ್ಯರನ್ನು ದೂರವಿಟ್ಟು ಕೀಳುಜನರನ್ನು ಕೇಳುತ್ತಾನೋ ಅವನು ಘೋರ ಆಪತ್ತನ್ನು ಹೊಂದಿ ಏಳಿಗೆಯ ಭರವಸೆಯನ್ನೇ ಕಳೆದುಕೊಳ್ಳುತ್ತಾನೆ. ಯಾರು ದುಷ್ಟರನ್ನು ಕೇಳುತ್ತಾರೋ, ಸುಹೃದರನ್ನು ಸದಾ ಕೇಳುವುದಿಲ್ಲವೋ, ತನ್ನವರನ್ನು ದ್ವೇಷಿಸಿ ಪರರನ್ನು ಆರಿಸಿಕೊಳ್ಳುತ್ತಾರೋ ಅವರನ್ನು ಭೂಮಿಯು ಶಪಿಸುತ್ತಾಳೆ. ನೀನು ಆ ವೀರರನ್ನು ವಿರೋಧಿಸಿ ಅನ್ಯರ - ಅಶಿಷ್ಟ, ಅಸಭ್ಯ ಮತ್ತು ಮೂಢರ - ಸಹಾಯವನ್ನು ಪಡೆಯಲು ಬಯಸುತ್ತಿದ್ದೀಯೆ!
“ನಿನ್ನನ್ನು ಬಿಟ್ಟು ಬೇರೆ ಯಾವ ಮಾನವನು ತಾನೇ ಈ ಭೂಮಿಯಲ್ಲಿ ಶಕ್ರಸಮರಾದ ಮಹಾರಥಿ ದಯಾದಿಗಳನ್ನು ಅತಿಕ್ರಮಿಸಿ ಅನ್ಯರ ಸಹಾಯ ಮತ್ತು ನೆರಳನ್ನು ಬಯಸುತ್ತಾನೆ? ಹುಟ್ಟಿದಾಗಿನಿಂದ ನಿತ್ಯವೂ ನೀನು ಕೌಂತೇಯರನ್ನು ಕಾಡಿಸುತ್ತಿದ್ದೀಯೆ. ಧರ್ಮಾತ್ಮರಾಗಿರುವುದರಿಂದ ಪಾಂಡವರು ನಿನ್ನ ಮೇಲೆ ಕೋಪಗೊಂಡಿಲ್ಲ. ಹುಟ್ಟಿದಾಗಿನಿಂದ ಪಾಂಡವರೊಂದಿಗೆ ನೀನು ಮೋಸದಿಂದ ನಡೆದುಕೊಂಡಿದ್ದರೂ ಆ ಯಶಸ್ವಿಗಳು ನಿನ್ನೊಡನೆ ಸಂಯಮದಿಂದ ನಡೆದುಕೊಂಡಿದ್ದಾರೆ. ನೀನೂ ಕೂಡ ಆ ನಿನ್ನ ಮುಖ್ಯ ಬಂಧುಗಳೊಡನೆ ಹಾಗೆಯೇ ವ್ಯವಹರಿಸಬೇಕು. ಸಿಟ್ಟಿನ ವಶದಲ್ಲಿ ಬರಬೇಡ! ಪ್ರಾಜ್ಞರ ಕೆಲಸಗಳು ತ್ರಿವರ್ಗಯುಕ್ತವಾಗಿರುತ್ತವೆ - ಧರ್ಮ, ಅರ್ಥ ಮತ್ತು ಕಾಮ. ಈ ಮೂರೂ ಅಸಂಭವವಾಗಿದ್ದರೆ ನರರು ಧರ್ಮ-ಅರ್ಥಗಳನ್ನಾದರೂ ಅನುಸರಿಸುತ್ತಾರೆ. ಈ ಮೂರನ್ನೂ ಬೇರೆ ಬೇರೆಯಾಗಿ ಸಾಧಿಸುವವರನ್ನು ನೋಡಿದರೆ ಧೀರರು ಧರ್ಮವನ್ನು ಅನುಸರಿಸುತ್ತಾರೆ, ಮಧ್ಯಮರು ಅರ್ಥವನ್ನು, ಮತ್ತು ಕೀಳು ಜನರು ಬಾಲಕರಂತೆ ಕಾಮವನ್ನೇ ಅನುಸರಿಸುತ್ತಾರೆ. ಲೋಭದಿಂದ ಧರ್ಮವನ್ನು ತೊರೆದು ಕಾಮ-ಅರ್ಥಗಳ ಹಿಂದೆ ಮಾತ್ರ ಹೋಗುವವನನ್ನು ಇಂದ್ರಿಯಗಳು ನಾಶಪಡಿಸುತ್ತವೆ. ಕಾಮಾರ್ಥಗಳ ಬಗ್ಗೆ ಮಾತನಾಡುವವನೂ ಧರ್ಮವನ್ನೇ ಆಚರಿಸಬೇಕು. ಏಕೆಂದರೆ ಅರ್ಥವಾಗಲೀ ಕಾಮವಾಗಲೀ ಎಂದೂ ಧರ್ಮದಿಂದ ಬೇರೆಯಾಗಿರುವುದಿಲ್ಲ. ಧರ್ಮವೇ ತ್ರಿವರ್ಗದ ಉಪಾಯವೆಂದು ಹೇಳುತ್ತಾರೆ. ಏಕೆಂದರೆ ಅದಕ್ಕೆ ತಗಲಿದವನು ಒಣ ಹುಲ್ಲಿಗೆ ತಗಲಿದ ಬೆಂಕಿಯಂತೆ ವೃದ್ಧಿಯಾಗುತ್ತದೆ. ಸರ್ವರಾಜರಲ್ಲಿ ಪ್ರಥಿತವಾಗಿರುವ, ಹೆಚ್ಚಾಗಿ ಬೆಳಗುತ್ತಿರುವ ಈ ಅಧಿರಾಜ್ಯವನ್ನು ಅನುಪಾಯದಿಂದ ಆಸೆ ಪಡುತ್ತಿರುವೆ. ಯಾರು ಉತ್ತಮವಾಗಿ ನಡೆದುಕೊಳ್ಳುವವರೊಡನೆ ಮೋಸದಿಂದ ವ್ಯವಹರಿಸುತ್ತಾರೋ ಅವರು ವನವನ್ನು ಕೊಡಲಿಯಿಂದ ವನವನ್ನು ಹೇಗೋ ಹಾಗೆ ತಮ್ಮನ್ನು ತಾವೇ ಕಡಿದುಕೊಳ್ಳುತ್ತಾರೆ. ಸೋಲನ್ನು ಬಯಸದಿರುವವನು ಅವನ ಬುದ್ಧಿಯಲ್ಲಿ ಒಡಕನ್ನು ತಂದುಕೊಳ್ಳಬಾರದು. ಏಕೆಂದರೆ ಅವಿಚ್ಛಿನ್ನ ಬುದ್ಧಿಯುಳ್ಳವನಿಗೆ ಕಲ್ಯಾಣವಾಗುತ್ತದೆ ಎಂದು ತಿಳಿದವರ ಅಭಿಪ್ರಾಯ. ತಮ್ಮ ಆತ್ಮವನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವವರು ಮೂರು ಲೋಕಗಳಲ್ಲಿ ಯಾವುದನ್ನೂ – ಅತಿ ಕೀಳೆನಿಸಿದುದನ್ನೂ – ತಿರಸ್ಕರಿಸುವುದಿಲ್ಲ. ಇನ್ನು ಆ ಭರತರ್ಷಭರನ್ನೇನು? ಕೋಪಕ್ಕೆ ವಶನಾಗುವವನು ಸರಿಯಾವುದು ಕೆಟ್ಟದ್ದ್ಯಾವುದು ಎನ್ನುವ ಬುದ್ಧಿಯನ್ನು ಕಳೆದುಕೊಳ್ಳುತ್ತಾನೆ. ಇವೆಲ್ಲವನ್ನೂ ಕಿತ್ತು ಹಾಕಬೇಕು. ಇದಕ್ಕೆ ಪ್ರಮಾಣವನ್ನು ನೋಡು.
“ಈಗ ದುರ್ಜನರೊಂದಿಗಿಂತ ಪಾಂಡವರೊಡನೆ ಸೇರಿಕೊಳ್ಳುವುದು ನಿನ್ನ ಶ್ರೇಯಸ್ಸಿನಲ್ಲಿದೆ. ಅವರೊಂದಿಗೆ ಪ್ರೀತಿಯಿಂದಿದ್ದರೆ ನಿನ್ನ ಎಲ್ಲ ಕಾಮನೆಗಳನ್ನೂ ಪೂರೈಸಿಕೊಳ್ಳುವೆ. ಪಾಂಡವರು ಗೆದ್ದಿರುವ ಈ ಭೂಮಿಯನ್ನು ಭೋಗಿಸುವಾಗ ನೀನು ಪಾಂಡವರನ್ನು ಹಿಂದೆ ಹಾಕಿ ಅನ್ಯರ ಬೆಂಬಲವನ್ನು ಕೇಳುತ್ತಿರುವೆಯಲ್ಲ! ದುಃಶಾಸನ, ದುರ್ವಿಷಹ, ಕರ್ಣ ಸೌಬಲರಿಗೆ ಈ ಐಶ್ವರ್ಯವನ್ನು ಕೊಟ್ಟು ಇನ್ನೂ ಬೆಳೆಯಲು ಇಚ್ಛಿಸುತ್ತಿರುವೆ! ನಿನಗೂ ಪರ್ಯಾಪ್ತರಾಗಿಲ್ಲದೇ ಇರುವ ಇವರು ಜ್ಞಾನದಲ್ಲಿ, ಧರ್ಮ-ಅರ್ಥಗಳಲ್ಲಿ, ವಿಕ್ರಮದಲ್ಲಿ ಪಾಂಡವರಿಗಿಂತಲೂ ಅಪರ್ಯಾಪ್ತರು. ನಿನ್ನನ್ನೂ ಸೇರಿ ಈ ಎಲ್ಲ ರಾಜರೂ ಯುದ್ಧದಲ್ಲಿ ಕ್ರುದ್ಧನಾಗಿರುವ ಭೀಮಸೇನನ ಮುಖವನ್ನು ನೋಡಲೂ ಸಮರ್ಥರಿಲ್ಲ. ಈ ಸಮಗ್ರ ಪಾರ್ಥಿವ ಬಲವೂ ನಿನ್ನಲ್ಲಿದೆ. ಇಲ್ಲಿ ಭೀಷ್ಮನಿದ್ದಾನೆ. ದ್ರೋಣನಿದ್ದಾನೆ. ಹಾಗೆಯೇ ಕರ್ಣನೂ ಇದ್ದಾನೆ. ಭೂರಿಶ್ರವ, ಸೌಮದತ್ತಿ, ಅಶ್ವತ್ಥಾಮಾ ಮತ್ತು ಜಯದ್ರಥರಿದ್ದಾರೆ. ಆದರೆ ಇವರೆಲ್ಲರೂ ಧನಂಜಯನ ವಿರುದ್ಧ ಹೋರಾಡಲು ಅಶಕ್ತರು. ಏಕೆಂದರೆ ಕೃದ್ಧನಾದ ಅರ್ಜುನನು ಎಲ್ಲರಿಗೂ ಅಜೇಯ. ಸುರಾಸುರರಿಗೂ, ಮನುಷ್ಯರಿಗೂ, ಗಂಧರ್ವರಿಗೂ ಅವನನ್ನು ಮೀರಿಸಲು ಸಾಧ್ಯವಿಲ್ಲ. ಯುದ್ಧದಲ್ಲಿರುವ ಮನಸ್ಸನ್ನು ತೆಗೆದುಹಾಕು. ಸಮರದಲ್ಲಿ ಅರ್ಜುನನನ್ನು ಎದುರಿಸಿ ಒಳ್ಳೆಯದಾಗಿ ಮನೆಗೆ ಹಿಂದಿರುಗಿರುವ ಯಾರಾದರೂ ಬಲಶಾಲೀ ಪುರುಷ ಪಾರ್ಥಿವನನ್ನು ನೋಡಿದ್ದೇವೆಯೇ? ಜನಕ್ಷಯದಲ್ಲಿ ಪ್ರಯೋಜನವೇನಿದೆ? ಅವನನ್ನು ಗೆದ್ದು ನಿನಗೆ ಗೆಲುವನ್ನು ತರುವ ಯಾರಾದರೂ ಒಬ್ಬ ಪುರುಷನು ನಿನಗೆ ತೋರಿದರೆ ಹೇಳು. ಖಾಂಡವಪ್ರಸ್ಥದಲ್ಲಿ ಗಂಧರ್ವರೊಂದಿಗೆ, ಯಕ್ಷ-ಅಸುರ-ಪನ್ನಗರೊಂದಿಗೆ ಬಂದಿದ್ದ ದೇವತೆಗಳನ್ನು ಸೋಲಿಸಿದ ಅವನೊಡನೆ ಯಾವ ಮಾನವನು ತಾನೇ ಯುದ್ಧಮಾಡುತ್ತಾನೆ? ವಿರಾಟನಗರದಲ್ಲಿ ನಡೆದ ಮಹದದ್ಭುತವನ್ನು ಕೇಳಿದ್ದೇವಲ್ಲ! ಒಬ್ಬನೇ ಬಹುಸೇನೆಗೆ ಪರ್ಯಾಪ್ತನಾದನು. ಅದೇ ನಿದರ್ಶನ. ನೀನು ಅಜೇಯನೂ, ಅನಾಧೃಷ್ಯನೂ ಆದ ಜಿಷ್ಣು ಅಚ್ಯುತ ವೀರ ಅರ್ಜುನನನ್ನು ಸಮರದಲ್ಲಿ ಗೆಲ್ಲುವ ಭರವಸೆಯನ್ನಿಟ್ಟುಕೊಂಡಿರುವೆಯಲ್ಲ! ಪುನಃ ನನ್ನ ಸಹಾಯದಿಂದ ಬರುವ ಪಾರ್ಥನನ್ನು ಯಾರು ಎದುರಿಸಲು ಅರ್ಹರಾಗಿದ್ದಾರೆ? ಸಾಕ್ಷಾತ್ ಪುರಂದರನು ಯುದ್ಧದಲ್ಲಿ ಎದುರಿಸಬಲ್ಲನೇ? ಅರ್ಜುನನನ್ನು ಸಮರದಲ್ಲಿ ಜಯಿಸುವವನು ತನ್ನ ಬಾಹುಗಳಿಂದ ಭೂಮಿಯನ್ನು ಎತ್ತಿ ಹಿಡಿಯಬಲ್ಲನು, ಕ್ರೋಧದಿಂದ ಈ ಪ್ರಜೆಗಳನ್ನು ಸುಟ್ಟುಹಾಕಬಲ್ಲನು ಮತ್ತು ದಿವದಿಂದ ದೇವತೆಗಳನ್ನು ಬೀಳಿಸಬಲ್ಲನು.
“ನಿನ್ನಿಂದಾಗಿ ನಿನ್ನ ಈ ಪುತ್ರರು, ಸಹೋದರರು, ಕುಲಬಾಂಧವರು, ಸಂಬಂಧಿಗಳೂ ವಿನಾಶಹೊಂದದಂತೆ ನೋಡಿಕೋ! ಕೌರವರ ಈ ಕುಲವು ನಿರ್ವಿಶೇಷವಾಗದಿರಲಿ ಅಥವಾ ಕ್ಷೀಣಿಸದಿರಲಿ! ನಿನ್ನನ್ನು ಕುಲಘ್ನ ಮತ್ತು ಕೀರ್ತಿನಾಶಕನೆಂದು ಕರೆಯದಿರಲಿ. ಆ ಮಹಾರಥಿಗಳು ನಿನ್ನನ್ನೇ ಯುವರಾಜನನ್ನಾಗಿ ಸ್ಥಾಪಿಸುತ್ತಾರೆ. ಮತ್ತು ನಿನ್ನ ತಂದೆ ಧೃತರಾಷ್ಟ್ರನು ಈ ಮಹಾರಾಜ್ಯದ ಜನೇಶ್ವರನಾಗಿರುತ್ತಾನೆ. ನಿನಗಾಗಿ ಕಾದುಕೊಂಡಿರುವ, ಖಂಡಿತವಾಗಿಯೂ ಬರಲಿರುವ ಶ್ರೀಯನ್ನು ಅವಮಾನಿಸಬೇಡ! ಪಾರ್ಥರಿಗೆ ಅರ್ಧವನ್ನು ಕೊಟ್ಟು ಮಹಾ ಶ್ರೀಯನ್ನು ಪಡೆಯುತ್ತೀಯೆ. ಪಾಂಡವರೊಂದಿಗೆ ಶಾಂತಿಯನ್ನು ಮಾಡಿಕೊಂಡು ಸುಹೃದಯರ ಮಾತಿನಂತೆ ಮಾಡಿ, ಮಿತ್ರರಿಗೂ ಸಂತೋಷ ತರುತ್ತೀಯೆ ಮತ್ತು ಚಿರವಾದ ರಕ್ಷಣೆಯನ್ನು ಪಡೆಯುತ್ತೀಯೆ.”
ಭೀಷ್ಮ-ದ್ರೋಣ-ವಿದುರಾದಿಗಳ ವಚನ
ಕೇಶವನ ಮಾತನ್ನು ಕೇಳಿ ಶಾಂತನವ ಭೀಷ್ಮನು ಅಮರ್ಷಣ ದುರ್ಯೋಧನನಿಗೆ ಹೀಗೆ ಹೇಳಿದನು: “ಸುಹೃದಯರಲ್ಲಿ ಶಾಂತಿಯನ್ನು ಬಯಸಿ ಕೃಷ್ಣನು ನಿನಗೆ ಹೇಳಿದ್ದಾನೆ. ಅದನ್ನು ಅನುಸರಿಸು. ಸಿಟ್ಟಿನ ವಶದಲ್ಲಿ ಬರಬೇಡ, ಸಾಧಿಸಬೇಡ. ಮಹಾತ್ಮ ಕೇಶವನ ಮಾತಿನಂತೆ ಮಾಡದೇ ಇದ್ದರೆ ನಿನಗೆ ಶ್ರೇಯಸ್ಸಾಗಲೀ, ಸಂಪತ್ತಾಗಲೀ, ಸುಖವಾಗಲೀ, ಕಲ್ಯಾಣವಾಗಲೀ ದೊರಕುವುದಿಲ್ಲ. ಮಗೂ! ಮಹಾಬಾಹು ಕೇಶವನು ಧರ್ಮವೂ ಅರ್ಥವೂ ಉಳ್ಳ ಮಾತುಗಳನ್ನು ನಿನಗೆ ಹೇಳಿದ್ದಾನೆ. ಅದರಂತೆ ನಡೆದುಕೋ. ಪ್ರಜೆಗಳನ್ನು ನಾಶಗೊಳಿಸಬೇಡ! ಧೃತರಾಷ್ಟ್ರನು ಜೀವಂತವಾಗಿರಿಸಿರುವ, ಎಲ್ಲ ರಾಜರಲ್ಲಿ ಶ್ರೀಯಿಂದ ಪ್ರಜ್ವಲಿಸುತ್ತಿರುವ ಈ ಭಾರತವನ್ನು ನಿನ್ನ ದೌರಾತ್ಮದಿಂದ ಭ್ರಂಶಗೊಳಿಸುತ್ತಿರುವೆ. ಅಮಾತ್ಯರೊಂದಿಗೆ, ಪುತ್ರ-ಪಶು-ಬಾಂಧವರೊಂದಿಗೆ, ಮಿತ್ರರೊಂದಿಗೆ ನಿನ್ನ ಜೀವನವನ್ನೂ ಅಸದ್ಬುದ್ಧಿಯಿಂದ ಭ್ರಂಶಗೊಳಿಸುತ್ತಿರುವೆ! ತಥ್ಯವಾದ, ಅರ್ಥವತ್ತಾದ ಕೇಶವನ, ನಿನ್ನ ತಂದೆಯ, ಧೀಮತ ವಿದುರನ ಮಾತನ್ನು ಅತಿಕ್ರಮಿಸಿ ಕುಲಘ್ನ-ಅಂತಕನೆನಿಸಿಕೊಳ್ಳಬೇಡ. ದುರ್ಮತಿಯಾಗಬೇಡ! ಕೆಟ್ಟ ದಾರಿಯಲ್ಲಿ ಹೋಗಬೇಡ! ವೃದ್ಧ ತಂದೆ-ತಾಯಂದಿರಿಗೆ ಶೋಕವನ್ನು ಕೊಡಬೇಡ!”
ಆಗ ಅಲ್ಲಿ ಕೋಪಾವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಿರುವ ದುರ್ಯೋಧನನಿಗೆ ದ್ರೋಣನು ಹೇಳಿದನು: “ಮಗೂ! ಕೇಶವನೂ ಹಾಗೆ ಶಾಂತನವ ಭೀಷ್ಮನೂ ನಿನಗೆ ಧರ್ಮಾರ್ಥಯುಕ್ತವಾದ ಮಾತುಗಳನ್ನೇ ಹೇಳಿದ್ದಾರೆ. ಇವುಗಳನ್ನು ಸ್ವೀಕರಿಸು. ಇವರಿಬ್ಬರೂ ಪ್ರಾಜ್ಞರು, ಮೇಧಾವಿಗಳು, ಅರ್ಥ-ಕಾಮಗಳಲ್ಲಿ ದಾಂತರು, ಬಹಳ ವಿದ್ಯಾವಂತರು. ನಿನಗೆ ಹಿತವಾದುದನ್ನೇ ಆಡಿದ್ದಾರೆ. ಅದನ್ನು ಸ್ವೀಕರಿಸು! ಮಹಾಪ್ರಾಜ್ಞರಾದ ಕೃಷ್ಣ-ಭೀಷ್ಮರು ಹೇಳಿದುದನ್ನು ಅನುಸರಿಸಿ ನಡೆ. ಲಘು ಬುದ್ಧಿಯಿಂದ ಈ ಮಾತುಗಳನ್ನು ನೀನು ಅಲ್ಲಗಳೆಯಬೇಡ. ನಿನ್ನನ್ನು ಯಾರು ಪ್ರೋತ್ಸಾಹಿಸುತ್ತಿರುವರೋ ಅವರು ಏನನ್ನೂ ಮಾಡಲಾರರು. ಯುದ್ಧದಲ್ಲಿ ಇವರು ವೈರವನ್ನು ಇನ್ನೊಬ್ಬರ ಕೊರಳಿಗೆ ಕಟ್ಟುತ್ತಾರೆ. ಎಲ್ಲ ಮಕ್ಕಳ ಮತ್ತು ಸಹೋದರರ ಕೊಲೆ ಮಾಡಬೇಡ. ಎಲ್ಲಿ ವಾಸುದೇವ-ಅರ್ಜುನರು ಇರುವರೋ ಅಲ್ಲಿ ಸೇನೆಯು ಅಜೇಯವೆಂದು ತಿಳಿದುಕೋ! ಸುಹೃದಯರಾದ ಈ ಕೃಷ್ಣ-ಭೀಷ್ಮರ ಸತ್ಯ ಮತವನ್ನು ನೀನು ಆದರಿಸದೇ ಇದ್ದರೆ ಪಶ್ಚಾತ್ತಾಪ ಪಡುತ್ತೀಯೆ. ಅರ್ಜುನನು ಜಾಮದಗ್ನಿಯು ಹೇಳಿದುದಕ್ಕಿಂತಲೂ ಹೆಚ್ಚಿನವನು. ದೇವಕೀ ಪುತ್ರ ಕೃಷ್ಣನು ದೇವತೆಗಳಿಗೂ ದುರುತ್ಸಹನು. ನಿನಗೆ ಸುಖವೂ ಪ್ರಿಯವೂ ಆದುದನ್ನು ಹೇಳುವುದರಲ್ಲಿ ಇನ್ನೇನಿದೆ? ಇವರು ಎಲ್ಲವನ್ನೂ ಹೇಳಿದ್ಡಾರೆ. ನಿನಗೆ ಇಷ್ಟವಾದ ಹಾಗೆ ಮಾಡು! ಇದಕ್ಕಿಂತಲೂ ಹೆಚ್ಚಿಗೆ ನಿನಗೆ ಹೇಳಲು ಉತ್ಸಾಹವಿಲ್ಲ.”
ಆ ಮಾತು ಮುಗಿದ ನಂತರ ಕ್ಷತ್ತ ವಿದುರನೂ ಕೂಡ ಕೋಪಾವಿಷ್ಟನಾಗಿದ್ದ ಧಾರ್ತರಾಷ್ಟ್ರ ದುರ್ಯೋಧನನನ್ನು ನೋಡಿ ಹೇಳಿದನು: “ದುರ್ಯೋಧನ! ನಿನ್ನ ಕುರಿತು ನಾನು ಶೋಕಿಸುತ್ತಿಲ್ಲ! ವೃದ್ಧರಾಗಿರುವ ಈ ಗಾಂಧಾರೀ ಮತ್ತು ನಿನ್ನ ತಂದೆಯ ಕುರಿತು ಶೋಕಿಸುತ್ತಿದ್ದೇನೆ. ದುಷ್ಟನಾದ ನಿನ್ನನ್ನು ನಾಥನನ್ನಾಗಿ ಪಡೆದಿರುವ ಇವರು ಮಿತ್ರರನ್ನು ಕಳೆದುಕೊಂಡು, ಅಮಾತ್ಯರನ್ನು ಕಳೆದುಕೊಂಡು, ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಗಳಂತೆ ಅನಾಥರಾಗಿ ತಿರುಗ ಬೇಕಾಗುತ್ತದೆ. ನಿನ್ನಂತಹ ಕುಲಘ್ನ, ಪಾಪಿ, ಕೆಟ್ಟಪುರುಷನಿಗೆ ಜನ್ಮವಿತ್ತು ಭಿಕ್ಷುಕರಂತೆ ಶೋಕಿಸುತ್ತಾ ಈ ಭೂಮಿಯಲ್ಲಿ ಅಲೆಯಬೇಕಾಗುತ್ತದೆ.”
ಆಗ ಸಹೋದರರೊಂದಿಗೆ, ರಾಜರಿಂದ ಸುತ್ತುವರೆಯಲ್ಪಟ್ಟು ಕುಳಿತಿದ್ದ ದುರ್ಯೋಧನನಿಗೆ ರಾಜಾ ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ಮಹಾತ್ಮ ಶೌರಿಯು ಹೇಳಿದುದನ್ನು ಕೇಳು. ಅವನ ಆ ಅತ್ಯಂತ ಮಂಗಳಕರ, ಅವ್ಯಯ ಯೋಗಕ್ಷೇಮಗಳನ್ನು ನೀಡುವ ಮಾತನ್ನು ಸ್ವೀಕರಿಸು. ಏಕೆಂದರೆ ಈ ಅಕ್ಲಿಷ್ಟಕರ್ಮಿ ಕೃಷ್ಣನ ಸಹಾಯದಿಂದಲೇ ನಾವು ಎಲ್ಲ ರಾಜರೂ ತಮ್ಮ ಇಷ್ಟ ಅಭಿಪ್ರಾಯಗಳನ್ನು ಸಾಧಿಸಬಲ್ಲೆವು. ಮಗೂ! ಕೇಶವನೊಂದಿಗೆ ಹೋಗಿ ಯುಧಿಷ್ಠಿರನನ್ನು ಸೇರು. ಭಾರತರ ಈ ಅನಾಮಯ ಸಂಪೂರ್ಣ ಮಂಗಳ ಕಾರ್ಯವನ್ನು ಮಾಡಿ ಅದರಂತೆ ನಡೆದುಕೋ. ವಾಸುದೇವನ ಮೂಲಕ ಸಂಗಮವನ್ನು ಹೊಂದು. ಕಾಲವು ಪ್ರಾಪ್ತವಾಗಿದೆ ಎಂದೆನಿಸುತ್ತಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡ! ಆದರೆ ನಿನ್ನ ಒಳ್ಳೆಯದಕ್ಕಾಗಿಯೇ ಪುನಃ ಪುನಃ ಹೇಳುತ್ತಿರುವ ಕೇಶವನನ್ನು ನೀನು ಅನಾದರಿಸಿ ಶಾಂತಿಯನ್ನು ಮಾಡಿಕೊಳ್ಳದೇ ಇದ್ದರೆ ಪರಾಭವವು ನಿನ್ನದಾಗುತ್ತದೆ.”
ಧೃತರಾಷ್ಟ್ರನ ಮಾತನ್ನು ಕೇಳಿ ಸಮರ್ಥರಾದ ಭೀಷ್ಮ-ದ್ರೋಣರು ಅವಿಧೇಯ ದುರ್ಯೋಧನನಿಗೆ ಈ ಮಾತನ್ನು ಆಡಿದರು: “ಇನ್ನೂ ಕೃಷ್ಣರಿಬ್ಬರು ಸನ್ನದ್ಧರಾಗಿಲ್ಲ. ಇನ್ನೂ ಗಾಂಡೀವವನ್ನು ಎತ್ತಿ ಹಿಡಿದಿಲ್ಲ. ಶತ್ರುಗಳ ಬಲನಾಶನಕ್ಕೆ ಧೌಮ್ಯನು ಇನ್ನೂ ಅಗ್ನಿಯಲ್ಲಿ ಆಹುತಿಗಳನ್ನು ಹಾಕಿಲ್ಲ. ವಿನಯತೆಯನ್ನು ಆಭರಣವನ್ನಗಿಸಿಕೊಂಡಿರುವ ಮಹೇಷ್ವಾಸ ಯುಧಿಷ್ಠಿರನು ಇನ್ನೂ ಕೃದ್ಧನಾಗಿ ನಿನ್ನ ಸೇನೆಯನ್ನು ನೋಡುತ್ತಿಲ್ಲ. ಆದುದರಿಂದ ವೈಶಮ್ಯವು ಈಗಲೇ ಮುಗಿಯಲಿ. ಇದೂವರೆಗೆ ಪಾರ್ಥ, ಮಹೇಷ್ವಾಸ, ಭೀಮಸೇನನು ತನ್ನ ಸೇನೆಯ ಕೇಂದ್ರಸ್ಥಾನದಲ್ಲಿ ನಿಂತಿಲ್ಲ. ಆದುದರಿಂದ ವೈಶಮ್ಯವು ಈಗಲೇ ಮುಗಿಯಲಿ. ಇನ್ನೂ ಅವನು ಮಾರ್ಗದಲ್ಲಿ ಸಂಚರಿಸುತ್ತಾ, ತನ್ನ ಸೇನೆಯನ್ನು ಹರ್ಷಗೊಳಿಸುತ್ತಿಲ್ಲ. ಇನ್ನೂ ಅವನು ಆನೆಯ ಮೇಲೆ ಕುಳಿತ ಯೋದ್ಧರ ತಲೆಯನ್ನು ವೀರಘಾತಿ ಗದೆಯಿಂದ ಪರಿಪಕ್ವವಾದ ವನಸ್ಪತಿಯ ಫಲಗಳನ್ನು ಕಾಲಬಂದಾಗ ಕತ್ತರಿಸುವಂತೆ ಮಾಡುತ್ತಿಲ್ಲ. ಆದುದರಿಂದ ಈಗಲೇ ಈ ವೈಷಮ್ಯವು ಮುಗಿಯಲಿ. ನಕುಲ ಸಹದೇವರು, ಪಾರ್ಷತ ಧೃಷ್ಟದ್ಯುಮ್ನ, ವಿರಾಟ, ಶಿಖಂಡಿ, ಕೋಪಗೊಂಡಿರುವ ಶಿಶುಪಾಲನ ಮಗ ಮೊದಲಾದ ಕೃತಾಸ್ತ್ರರು, ಕ್ಷಿಪ್ರವಾಗಿ ಬಾಣಪ್ರಯೋಗಿಸುವವರು, ಮೊಸಳೆಗಳು ಸಾಗರದ ಮೇಲೆ ಹೇಗೋ ಹಾಗೆ ಆಕ್ರಮಣವನ್ನು ಮಾಡುವುದರ ಮೊದಲೇ ಈ ವೈಶಮ್ಯವು ಕೊನೆಗೊಳ್ಳಲಿ. ಹದ್ದಿನ ಗರಿಯ ಬಾಣಗಳು ಮಹೀಕ್ಷಿತರ ಸುಕುಮಾರರ ಶರೀರಗಳಿಗೆ ಹೊಗುವ ಮೊದಲು ಈ ವೈರವು ಕೊನೆಗೊಳ್ಳಲಿ. ಚಂದನ ಅಗರುಗಳನ್ನು ಬಳಿದುಕೊಂಡ, ಹಾರ ಮತ್ತು ಚಿನ್ನದ ಕವಚಗಳನ್ನು ಧರಿಸಿರುವ ನಮ್ಮ ಯೋದ್ಧರ ಎದೆಗಳನ್ನು ಮಹೇಷ್ವಾಸ, ಕೃತಾಸ್ತ್ರರಾದವರು ಕ್ಷಿಪ್ರವಾಗಿ ಬಹುದೂರದಿಂದ ಪ್ರಯೋಗಿಸಿದ ಉಕ್ಕಿನ ಬಾಣಗಳು ತಾಗಿ ಬೀಳುವುದಕ್ಕಿಂತ ಮೊದಲೇ ಈ ವೈಶಮ್ಯವು ಮುಗಿಯಲಿ. ಶಿರದಿಂದ ಅಭಿವಾದಿಸುವ ನಿನ್ನನ್ನು ಆ ರಾಜಕುಂಜರ ಧರ್ಮರಾಜ ಯುಧಿಷ್ಠಿರನು ತನ್ನ ಎರಡೂ ಕೈಗಳಿಂದ ಮೇಲೆತ್ತಿ ಸ್ವೀಕರಿಸಲಿ. ಶಾಂತಿಯ ಗುರುತಾಗಿ ಅವನು ತನ್ನ ಸುದಕ್ಷಿಣ, ಧ್ವಜ-ಅಂಕುಶ-ಪತಾಕೆಗಳ ಗುರುತಿರುವ ಬಲಗೈಯನ್ನು ನಿನ್ನ ಬಾಹುಗಳ ಮೇಲಿರಿಸಲಿ. ನೀನು ಕುಳಿತಿರುವಾಗ ಅವನು ರತ್ನೌಷಧಿಗಳಿಂದ ಕೂಡಿದ ರತ್ನಾಂಗುಲಿತ ಕೈಗಳಿಂದ ನಿನ್ನ ಬೆನ್ನನ್ನು ತಟ್ಟಲಿ. ಆ ಶಾಲಸ್ಕಂಧ, ಮಹಾಬಾಹು ವೃಕೋದರನು ಶಾಂತಿಯಿಂದ ನಿನ್ನನ್ನು ಅಪ್ಪಿಕೊಂಡು ಸಾಮದಿಂದ ಅಭಿನಂದಿಸಲಿ. ಅರ್ಜುನ ಮತ್ತು ಯಮಳರು ಈ ಮೂವರೂ ನಿನಗೆ ವಂದಿಸಲು ನೀನು ಅವರ ನೆತ್ತಿಯನ್ನು ಆಘ್ರಾಣಿಸಿ ಪ್ರೇಮದಿಂದ ಅಭಿನಂದಿಸು. ನೀನು ವೀರ ಸಹೋದರ ಪಾಂಡವರೊಂದಿಗೆ ಸೇರಿಕೊಂಡಿದ್ದುದನ್ನು ನೋಡಿ ನರಾಧಿಪರು ಆನಂದ ಬಾಷ್ಪಗಳನ್ನು ಸುರಿಸಲಿ. ರಾಜಧಾನಿಗಳಲ್ಲಿ ಘೋಷಿಸಲ್ಪಡಲಿ. ಮಹೀಕ್ಷಿತರು ಸರ್ವಸಂಪನ್ನರಾಗಿ ಆನಂದಿಸಲಿ. ಭ್ರಾತೃಭಾವದಿಂದ ಪೃಥ್ವಿಯನ್ನು ಭೋಗಿಸಲಿ. ವಿಜ್ವರನಾಗು.”
ಕುರುಸಂಸದಿಯಲ್ಲಿ ಈ ಅಪ್ರಿಯ ಮಾತುಗಳನ್ನು ಕೇಳಿ ದುರ್ಯೋಧನನು ಮಹಾಬಾಹು ಯಶಸ್ವಿ ವಾಸುದೇವನಿಗೆ ಉತ್ತರಿಸಿದನು. “ಕೇಶವ! ಇದನ್ನು ಹೇಳುವುದಕ್ಕೆ ಮೊದಲು ನೀನು ಯೋಚಿಸಬೇಕು. ಸರಿಯಾಗಿ ವಿವರಿಸದೇ ಕೇವಲ ನನ್ನನ್ನೇ ನೀನು ವಿಶೇಷವಾಗಿ ನಿಂದಿಸುತ್ತಿದ್ದೀಯೆ. ಏಕೆಂದರೆ ಪಾರ್ಥರಲ್ಲಿ ನಿನಗೆ ಭಕ್ತಿಯಿದೆ. ಆದರೆ ನೀನು ನಮ್ಮ ಬಲಾಬಲಗಳನ್ನು ಪರಿಶೀಲಿಸಿ ನಮ್ಮನ್ನು ದೂಷಿಸುತ್ತಿರುವೆಯೋ ಹೇಗೆ? ನೀನು, ಕ್ಷತ್ತ, ರಾಜ, ಆಚಾರ್ಯ ಅಥವಾ ಪಿತಾಮಹರು ನನ್ನನ್ನೇ ದೂಷಿಸುತ್ತೀರಿ. ಎಂದೂ ಅನ್ಯ ಪಾರ್ಥಿವರನ್ನಲ್ಲ! ನಾನು ನನ್ನಲ್ಲಿ ಯಾವುದೇ ವ್ಯಭಿಚಾರವನ್ನು ಕಾಣುವುದಿಲ್ಲ. ಆದರೂ ರಾಜರೊಂದಿಗೆ ನೀವೆಲ್ಲರೂ ನನ್ನನ್ನೇ ದ್ವೇಷಿಸುತ್ತೀರಿ. ಆಲೋಚಿಸಿದರೆ ನಾನು ಯಾವ ಮಹಾ ಅಪರಾಧವನ್ನೂ, ಸೂಕ್ಷ್ಮವಾದುದನ್ನೂ ಮಾಡಿಲ್ಲ. ಪಾಂಡವರು ಸಂತೋಷದಿಂದ ದ್ಯೂತಕ್ಕೆ ಒಪ್ಪಿಕೊಂಡರು. ಶಕುನಿಯು ರಾಜ್ಯವನ್ನು ಗೆದ್ದನು. ಅದರಲ್ಲಿ ನನ್ನ ದುಷ್ಕೃತವಾದರೂ ಎನಿದೆ? ಪಾಂಡವರಿಂದ ಏನೆಲ್ಲ ಗೆದ್ದಿದ್ದೆವೋ ಅವನ್ನು ಹಿಂತೆಗೆದು ಕೊಂಡು ಹೋಗಲು ಅಲ್ಲಿಯೇ ಅವರಿಗೆ ಅನುಮತಿಯನ್ನಿತ್ತೆ. ಜಯಿಸುವವರಲ್ಲಿ ಶ್ರೇಷ್ಠ ಪಾರ್ಥರು ಜೂಜಿನಲ್ಲಿ ಸೋತು ವನಕ್ಕೆ ತೆರಳಿದುದರಲ್ಲಿ ನನ್ನ ಅಪರಾಧವೇನೂ ಇಲ್ಲವಲ್ಲ! ಅದೂ ಅಲ್ಲದೇ ಈಗ ಯಾವ ಅಪವಾದಕ್ಕೆಂದು ಅಶಕ್ತ ಪಾಂಡವರು ಸಂತೋಷದಿಂದ ನಾವು ಅರಿಗಳೋ ಎನ್ನುವಂತೆ ಜಗಳವಾಡುತ್ತಿದ್ದಾರೆ? ನಾವು ಅವರಿಗೆ ಏನು ಮಾಡಿದ್ದೇವೆ? ಯಾವ ಅಪರಾಧದ ಸೇಡನ್ನು ತೀರಿಸರು ಪಾಂಡವರು ಸೃಂಜಯರನ್ನು ಸೇರಿಕೊಂಡು ಧಾರ್ತರಾಷ್ಟ್ರರನ್ನು ಕೊಲ್ಲಲು ಬರುತ್ತಿದ್ದಾರೆ?
“ಯಾವುದೇ ಉಗ್ರ ಕರ್ಮದಿಂದಾಗಲೀ ಅಥವಾ ಮಾತಿನಿಂದಾಗಲೀ ನಮ್ಮನ್ನು ನಡುಗಿಸಲಿಕ್ಕಾಗುವುದಿಲ್ಲ. ಅದು ಶತಕ್ರತುವಿನಿಂದ ಬಂದ ಭಯವಾದರೂ ಸರಿ! ಕ್ಷತ್ರಧರ್ಮವನ್ನು ಅನುಸರಿಸಿ ನಮ್ಮನ್ನು ಯುದ್ಧದಲ್ಲಿ ಜಯಿಸಬಲ್ಲ ಯಾರೂ ನನಗೆ ಕಾಣುವುದಿಲ್ಲ. ಏಕೆಂದರೆ ಗಣಗಳೊಂದಿರುವ ಭೀಷ್ಮ, ದ್ರೋಣ, ಕೃಪರನ್ನು ಯುದ್ಧದಲ್ಲಿ ದೇವತೆಗಳೂ ಜಯಿಸಲು ಶಕ್ಯರಿಲ್ಲ. ಪಾಂಡವರು ಎಲ್ಲಿಂದ? ಸ್ವಧರ್ಮವನ್ನು ಅನುಸರಿಸಿ ಒಂದುವೇಳೆ ಕಾಲವು ಬಂದು ಯುದ್ಧದಲ್ಲಿ ಶಸ್ತ್ರದಿಂದ ನಿಧನರಾದರೂ ನಾವು ಸ್ವರ್ಗವನ್ನೇ ಸೇರುತ್ತೇವೆ. ಸಂಗ್ರಾಮದಲ್ಲಿ ನಾವು ಶರತಲ್ಪದಲ್ಲಿ ಮಲಗುವುದನ್ನು ಇಚ್ಛಿಸುವುದೇ ನಮ್ಮಂತಹ ಕ್ಷತ್ರಿಯರ ಮುಖ್ಯ ಧರ್ಮ! ಶತ್ರುಗಳಿಗೆ ತಲೆಬಾಗದೇ ಒಂದುವೇಳೆ ನಾವು ರಣದಲ್ಲಿ ವೀರಶಯನವನ್ನು ಹೊಂದಬೇಕಾಗಿ ಬಂದರೆ ಅದು ನಮಗೆ ಅತೃಪ್ತಿಯನ್ನು ನೀಡುವುದಿಲ್ಲ. ಉತ್ತಮ ಕುಲದಲ್ಲಿ ಹುಟ್ಟಿ, ಕ್ಷತ್ರಧರ್ಮದಲ್ಲಿ ನಡೆದುಕೊಂಡು ಬಂದ ಯಾರು ತಾನೇ ಭಯದಿಂದ ತನ್ನ ಪ್ರಾಣದ ಕುರಿತು ಚಿಂತಿಸಿ ಯಾರಿಗಾದರೂ ತಲೆಬಾಗಿದ್ದಿದೆ? ತನ್ನನ್ನು ತಾನು ಮೇಲಿತ್ತಿಕೊಳ್ಳಬೇಕು. ಕೆಳಗೆ ತಳ್ಳಿಕೊಳ್ಳಬಾರದು. ಉದ್ಯಮವೇ ಪೌರುಷ. ಮುರಿಯಬೇಕೇ ಹೊರತು ಬಾಗಬಾರದು! ಈ ಮಾತಂಗನ ವಚನವು ಏಳಿಗೆಯನ್ನು ಬಯಸಿದವರಿಗಿರುವುದು. ನನ್ನಂಥವನು ಕೇವಲ ಧರ್ಮಕ್ಕೆ ಮತ್ತು ಬ್ರಾಹ್ಮಣರಿಗೆ ಮಣಿಯುತ್ತಾನೆ. ಬೇರೆ ಯಾರ ಕುರಿತೂ ಚಿಂತಿಸದೇ ಹೇಗೆ ಬೇಕೋ ಹಾಗೆ ನಡೆದುಕೊಳ್ಳಬೇಕು. ಇದು ಕ್ಷತ್ರಿಯರ ಧರ್ಮ. ಇದೇ ಸದಾ ನನ್ನ ಮತವು. ನಾನು ಜೀವಂತವಾಗಿರುವಾಗ ಹಿಂದೆ ನನ್ನ ತಂದೆಯು ಕೊಟ್ಟಿದ್ದ ರಾಜ್ಯಾಂಶವು ಅವರಿಗೆ ಪುನಃ ದೊರೆಯುವುದಿಲ್ಲ. ರಾಜ ಧೃತರಾಷ್ಟ್ರನು ಜೀವಿಸಿರುವವರೆಗೆ ನಾವಾಗಲೀ ಅವರಾಗಲೀ ಶಸ್ತ್ರಗಳನ್ನು ಎತ್ತದೇ ಉಪಜೀವನವನ್ನು ಮಾಡಬೇಕು. ಹಿಂದೆ ಈ ರಾಜ್ಯವನ್ನು ನಾನು ಬಾಲಕನಾಗಿರುವಾಗ ಅಜ್ಞಾನದಿಂದ ಅಥವಾ ಭಯದಿಂದ ಅವರಿಗೆ ಕೊಟ್ಟಿರಬಹುದು. ಆದರೆ ಇಂದು ನಾನು ಜೀವಂತವಾಗಿರುವಾಗ ಅದು ಪಾಂಡವರಿಗೆ ಪುನಃ ದೊರೆಯುವುದಿಲ್ಲ. ಸೂಜಿಯ ಮೊನೆಯು ಊರುವಷ್ಟು ಭೂಮಿಯನ್ನೂ ನಾನು ಪಾಂಡವರಿಗೆ ಬಿಟ್ಟುಕೊಡುವುದಿಲ್ಲ!”
ಆಗ ದಾಶಾರ್ಹನು ಜೋರಾಗಿ ನಕ್ಕು, ಸಿಟ್ಟಿನಿಂದ ಕಣ್ಣುಗಳನ್ನು ತಿರುಗಿಸುತ್ತಾ, ಕುರುಸಂಸದಿಯಲ್ಲಿ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು: “ವೀರ ಶಯನವನ್ನು ಬಯಸುತ್ತೀಯಾ? ಅದು ನಿನಗೆ ದೊರೆಯುತ್ತದೆ! ಅಮಾತ್ಯರೊಂದಿಗೆ ಸ್ಥಿರನಾಗು. ಮಹಾ ನಾಶವು ನಡೆಯಲಿದೆ! ಮೂಢ! ಪಾಂಡವರ ಕುರಿತು ಕೆಟ್ಟದ್ದನ್ನು ಏನನ್ನೂ ಮಾಡಲಿಲ್ಲ ಎಂದು ನೀನು ತಿಳಿದುಕೊಂಡಿರುವೆಯಲ್ಲ! ಅವೆಲ್ಲವೂ ನರಾಧಿಪರಿಗೆ ತಿಳಿದೇ ಇದೆ. ಮಹಾತ್ಮ ಪಾಂಡವರ ಐಶ್ವರ್ಯವನ್ನು ನೋಡಿ ಹೊಟ್ಟೆಕಿಚ್ಚಿನಿಂದ ಬೆಂದು ನೀನು ಮತ್ತು ಸೌಬಲನು ದ್ಯೂತದ ಕೆಟ್ಟ ಉಪಾಯವನ್ನು ಮಾಡಿದಿರಿ! ಹೇಗೆ ತಾನೇ ಶ್ರೇಯಸ್ಕರರಾದ, ಸಾಧುಗಳಾದ ನಿನ್ನ ಬಾಂಧವರು ಅದಕ್ಕೆ ಸಮ್ಮತಿಯನ್ನು ಕೊಟ್ಟರು? ಅಕ್ಷದ್ಯೂತವು ಸಂತರ ಜ್ಞಾನವನ್ನೂ ಅಪಹರಿಸುತ್ತದೆ. ಅಸಂತರು ಅಲ್ಲಿ ಭೇದ ವ್ಯಸನಗಳನ್ನು ಹುಟ್ಟಿಸುತ್ತಾರೆ. ನಿನ್ನ ಪಾಪಿ ಅನುಯಾಯಿಗಳೊಂದಿಗೆ ಸೇರಿಕೊಂಡು, ಸದಾಚಾರಗಳನ್ನು ಕಡೆಗಣಿಸಿ, ಈ ಘೋರ ವ್ಯಸನವನ್ನು ತರುವ ದ್ಯೂತದ ಮುಖವಾಡವನ್ನು ನೀನೇ ಮಾಡಿರುವುದು. ಬೇರೆ ಯಾರುತಾನೇ ಅಣ್ಣನ ಭಾರ್ಯೆಯನ್ನು ನೀನು ಮಾಡಿದಂತೆ ಸಭೆಗೆ ಎಳೆದು ತಂದು ದ್ರೌಪದಿಗೆ ಮಾತನಾಡಿದಂತೆ ಮಾತನಾಡಿಯಾರು? ಕುಲೀನೆ, ಶೀಲಸಂಪನ್ನೆ, ಪಾಂಡುಪುತ್ರರ ಮಹಿಷಿ, ಅವರ ಪ್ರಾಣಕ್ಕಿಂತಲೂ ಹೆಚ್ಚಿನವಳಾದ ಅವಳನ್ನು ನೀನು ಉಲ್ಲಂಘಿಸಿ ನಡೆದುಕೊಂಡೆ. ಆ ಪರಂತಪ ಕೌಂತೇಯರು ಹೊರಡುವಾಗ ದುಃಶಾಸನನು ಕುರುಸಂಸದಿಯಲ್ಲಿ ಹೇಳಿದುದು ಕುರುಗಳೆಲ್ಲರಿಗೂ ಗೊತ್ತು. ನೀನಲ್ಲದೇ ಬೇರೆ ಯಾರುತಾನೆ ಸತತವೂ ಧರ್ಮಚಾರಿಗಳಾಗಿರುವ, ಕಷ್ಟದಲ್ಲಿಯೂ ಸಾಧುಗಳಂತೆ ನಡೆದುಕೊಂಡಿರುವ ತನ್ನದೇ ಬಂಧುಗಳಿಗೆ ಈ ರೀತಿ ಬಹಳ ಕಷ್ಟಗಳನ್ನು ಕೊಡುತ್ತಾನೆ? ಕ್ರೂರಿಗಳ, ಅನಾರ್ಯರ, ದುಷ್ಟ ಬಹಳಷ್ಟು ಮಾತುಗಳನ್ನು ಕರ್ಣ-ದುಃಶಾಸನರು ಮತ್ತು ನೀನೂ ಆಡಿದಿರಿ. ತಾಯಿಯೊಂದಿಗೆ ಆ ಬಾಲಕರನ್ನು ವಾರಣಾವತದಲ್ಲಿ ಸುಟ್ಟುಹಾಕಲು ಪರಮ ಪ್ರಯತ್ನವನ್ನು ನೀನು ಮಾಡಿದೆ. ಆದರೆ ಅದು ಯಶಸ್ವಿಯಾಗಲಿಲ್ಲ. ಆಗ ಬಹುಕಾಲ ಪಾಂಡವರು ಮರೆಸಿಕೊಂಡು ತಾಯಿಯೊಂದಿಗೆ ಏಕಚಕ್ರದಲ್ಲಿ ಬ್ರಾಹ್ಮಣನ ಮನೆಯಲ್ಲಿ ವಾಸಿಸಬೇಕಾಯಿತು. ವಿಷಭರಿತ ಸರ್ಪಗಳಿಂದ ಕಟ್ಟಿಹಾಕುವ ಸರ್ವ ಉಪಾಯಗಳಿಂದ ಪಾಂಡವರನ್ನು ವಿನಾಶಗೊಳಿಸಲು ಪ್ರಯತ್ನಿಸಿದೆ. ಯಾವುದೂ ಯಶಸ್ವಿಯಾಗಲಿಲ್ಲ. ಇದೇ ಬುದ್ಧಿಯಿಂದ ನೀನು ಸದಾ ಪಾಂಡವರೊಂದಿಗೆ ಮೋಸಗಾರನಂತೆ ನಡೆದುಕೊಂಡಿರುವೆ! ಆ ಮಹಾತ್ಮ ಪಾಂಡವರ ವಿರುದ್ಧ ಅಪರಾಧಿಯಲ್ಲ ಎಂದು ನೀನು ಹೇಗೆ ಹೇಳುತ್ತೀಯೆ? ಕ್ರೂರಿಯಾಗಿ ಬಹಳ ಮಾಡಬಾರದವುಗಳನ್ನು ಮಾಡಿ, ಅನಾರ್ಯನಂತೆ ಮೋಸದಿಂದ ನಡೆದುಕೊಂಡು ಈಗ ಬೇರೆಯೇ ವೇಷವನ್ನು ತೋರಿಸುತ್ತಿದ್ದೀಯೆ!
“ತಂದೆ-ತಾಯಿಗಳು, ಭೀಷ್ಮ, ದ್ರೋಣ ಮತ್ತು ವಿದುರರು ಸಂಧಿ ಮಾಡಿಕೋ ಎಂದು ಪುನಃ ಪುನಃ ಹೇಳಿದರೂ ನೀನು ಸಂಧಿ ಮಾಡಿಕೊಳ್ಳುತ್ತಿಲ್ಲ. ನಿನಗೆ ಮತ್ತು ಪಾರ್ಥ ಇಬ್ಬರಿಗೂ ಬಹಳ ಒಳ್ಳೆಯದಾದುದು ಶಾಂತಿ-ಸಂಧಿ. ಆದರೆ ಇದು ನಿನಗೆ ಇಷ್ಟವಾಗುತ್ತಿಲ್ಲವೆಂದರೆ ಇದಕ್ಕೆ ಕಾರಣ ಬುದ್ಧಿಯ ಕೊರತೆಯಿಲ್ಲದೇ ಬೇರೆ ಏನಿರಬಹುದು? ಸುಹೃದರ ಮಾತುಗಳನ್ನು ಅತಿಕ್ರಮಿಸಿ ನಿನಗೆ ನೆಲೆಯು ದೊರಕುವುದಿಲ್ಲ. ನೀನು ಮಾಡಲು ಹೊರಟಿರುವುದು ಅಧರ್ಮ ಮತ್ತು ಅಯಶಸ್ಕರವಾದುದು.”
ದಾಶಾರ್ಹನು ಹೀಗೆ ಹೇಳುತ್ತಿರಲು ದುಃಶಾಸನನು ಕುರುಸಂಸದಿಯಲ್ಲಿ ಕೋಪಿಷ್ಟ ದುರ್ಯೋಧನನಿಗೆ ಈ ಮಾತುಗಳನ್ನಾಡಿದನು: “ರಾಜನ್! ಸ್ವ-ಇಚ್ಛೆಯಿಂದ ನೀನು ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳದೇ ಇದ್ದರೆ ಕೌರವರು ನಿನ್ನನ್ನು ಬಂಧಿಸಿ ಕುಂತೀಪುತ್ರನಿಗೆ ಕೊಡುತ್ತಾರೆ. ಭೀಷ್ಮ, ದ್ರೋಣ ಮತ್ತು ನಿನ್ನ ತಂದೆಯು ವೈಕರ್ತನನನ್ನು, ನಿನ್ನನ್ನು ಮತ್ತು ನನ್ನನು - ಈ ಮೂವರನ್ನು ಪಾಂಡವರಿಗೆ ಕೊಡಲಿದ್ದಾರೆ.”
ತಮ್ಮನ ಈ ಮಾತನ್ನು ಕೇಳಿ ಧಾರ್ತರಾಷ್ಟ್ರ ಸುಯೋಧನನು ಕ್ರುದ್ಧನಾಗಿ ಮಹಾನಾಗನಂತೆ ಭುಸುಗುಟ್ಟುತ್ತಾ ತನ್ನ ಆಸನದಿಂದ ಮೇಲೆದ್ದನು. ಆ ಅಶಿಷ್ಟವಾಗಿ ಮಾತನಾಡುವ, ಮರ್ಯಾದೆಯನ್ನು ಕೊಡದ, ದುರಭಿಮಾನಿ ದುರ್ಮತಿಯು ಮಾನ್ಯರನ್ನು ಅವಮಾನಿಸಿ ವಿದುರ, ಮಹಾರಾಜ ಧೃತರಾಷ್ಟ್ರ, ಬಾಹ್ಲೀಕ, ಕೃಪ, ಸೋಮದತ್ತ, ಭೀಷ್ಮ, ದ್ರೋಣ, ಜನಾರ್ದನ ಎಲ್ಲರನ್ನೂ ಅನಾದರಿಸಿ ಹೊರ ಹೋದನು. ಅವನು ಹೊರಹೋಗುವುದನ್ನು ನೋಡಿ ಸಹೋದರರು ಅಮಾತ್ಯರು ಮತ್ತು ಸರ್ವ ರಾಜರೊಂದಿಗೆ ಆ ಮನುಜರ್ಷಭನನ್ನು ಹಿಂಬಾಲಿಸಿ ಹೋದರು.
ಕ್ರುದ್ಧನಾಗಿ ಸಭೆಯಿಂದ ಎದ್ದು ಭ್ರಾತೃಗಳೊಂದಿಗೆ ಹೊರಟು ಹೋದ ದುರ್ಯೋಧನನನ್ನು ನೋಡಿ ಭೀಷ್ಮ ಶಾಂತನವನು ಹೇಳಿದನು: “ಧರ್ಮಾರ್ಥಗಳನ್ನು ತ್ಯಜಿಸಿ ತನ್ನ ಮನೋವಿಕಾರಗಳನ್ನು ಅನುಸರಿಸುವವನು ಸ್ವಲ್ಪವೇ ಸಮಯದಲ್ಲಿ ಅವನ ದುಹೃದಯರ ನಗೆಗೀಡಾಗುತ್ತಾನೆ. ಈ ರಾಜಪುತ್ರ ಧಾರ್ತರಾಷ್ಟ್ರನು ದುರಾತ್ಮನು. ಸರಿಯಾದುದನ್ನು ತಿಳಿಯದವನು. ಮಿಥ್ಯಾಭಿಮಾನೀ. ಮತ್ತು ರಾಜ್ಯಕ್ಕಾಗಿ ಕ್ರೋಧಲೋಭಗಳಿಗೆ ವಶನಾಗಿ ನಡೆದುಕೊಳ್ಳುವವನು. ಜನಾರ್ದನ! ಸರ್ವ ಕ್ಷತ್ರಿಯರ ಕಾಲವೂ ಪಕ್ವವಾಗಿದೆ ಎನ್ನಿಸುತ್ತಿದೆ. ಏಕೆಂದರೆ ಎಲ್ಲ ಪಾರ್ಥಿವರೂ ಮಂತ್ರಿಗಳೂ ಮೋಹದಿಂದ ಅವನನ್ನೇ ಅನುಸರಿಸುತ್ತಿದ್ದಾರೆ.”
ಭೀಷ್ಮನ ಆ ಮಾತುಗಳನ್ನು ಕೇಳಿ ಪುಷ್ಕರೇಕ್ಷಣ ವೀರ್ಯವಾನ್ ದಾಶಾರ್ಹನು ಭೀಷ್ಮ-ದ್ರೋಣ ಪ್ರಮುಖರೆಲ್ಲರನ್ನೂ ಉದ್ದೇಶಿಸಿ ಹೇಳಿದನು: “ಐಶ್ವರ್ಯದಿಂದ ಮಂದನಾಗಿರುವ ಈ ನೃಪನನ್ನು ಬಲವನ್ನುಪಯೋಗಿಸಿ ನಿಯಂತ್ರಿಸದೇ ಇರುವುದು ಎಲ್ಲ ಕುರುವೃದ್ಧರ ಮಹಾ ಅನ್ಯಾಯ ಮತ್ತು ಅಪರಾಧ. ಅರಿಂದಮರೇ! ಆ ಕಾರ್ಯಕ್ಕೆ ಈಗ ಕಾಲವೊದಗಿದೆ ಎಂದು ನನಗನ್ನಿಸುತ್ತದೆ. ಹೀಗೆ ಮಾಡುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ. ನಿಮಗೆ ಪ್ರತ್ಯಕ್ಷವಾಗಿ ನಾನು ಹಿತವಾದ ಏನನ್ನು ಹೇಳುತ್ತೇನೋ ಅದನ್ನು ನಿಮಗೆ ಅನುಕೂಲವಾದರೆ ಇಷ್ಟವಾದರೆ ಕೇಳಿ. ವೃದ್ಧ ಭೋಜರಾಜನ ದುರಾಚಾರಿ ಅನಾತ್ಮವಂತ ಮಗನು ಕೋಪಾವಿಷ್ಟನಾಗಿ ತಂದೆಯು ಜೀವಂತವಿರುವಾಗಲೇ ಐಶ್ವರ್ಯವನ್ನು ಅಪಹರಿಸಿದನು. ಬಾಂಧವರಿಂದ ಪರಿತ್ಯಕ್ತನಾದ ಈ ಉಗ್ರಸೇನ ಸುತ ಕಂಸನನ್ನು ಬಾಂಧವರ ಹಿತವನ್ನು ಬಯಸಿ, ನಾನು ಮಹಾಯುದ್ಧದಲ್ಲಿ ಶಿಕ್ಷಿಸಿದೆನು. ಅನಂತರ ಇತರ ಬಾಂಧವರೊಂದಿಗೆ ನಾನು ಆಹುಕ ಉಗ್ರಸೇನನನ್ನು ಸತ್ಕರಿಸಿ ಪುನಃ ರಾಜನನ್ನಾಗಿ ಮಾಡಿದೆವು. ಅವನಿಂದ ಭೋಜರಾಜ್ಯವು ವರ್ಧಿಸಿತು. ಕುಲಕ್ಕಾಗಿ ಕಂಸನೊಬ್ಬನನ್ನು ಪರಿತ್ಯಜಿಸಿ ಎಲ್ಲ ಯಾದವರೂ ಅಂಧಕ-ವೃಷ್ಣಿಯರೂ ಅಭಿವೃದ್ಧಿ ಹೊಂದಿ ಸುಖದಿಂದಿದ್ದಾರೆ.
“ದೇವಾಸುರರು ತಮ್ಮ ತಮ್ಮ ಆಯುಧಗಳನ್ನು ಎತ್ತಿ ಹಿಡಿದು ಯುದ್ಧಕ್ಕೆ ತೊಡಗಿದಾಗ ಪರಮೇಷ್ಠೀ ಪ್ರಜಾಪತಿಯೂ ಹೇಳಿದ್ದನು. ಲೋಕದಲ್ಲಿರುವವೆಲ್ಲವೂ ಎರಡಾಗಿ ವಿನಾಶದ ಮಾರ್ಗದಲ್ಲಿರುವಾಗ ಭಗವಾನ್, ಲೋಕಭಾವನ, ದೇವ ಸೃಷ್ಟಿಕರ್ತನು ಹೇಳಿದನು: “ಅಸುರರು ದೈತ್ಯ ದಾನವರೊಂದಿಗೆ ಪರಾಭವ ಹೊಂದುತ್ತಾರೆ. ಆದಿತ್ಯ, ವಸುಗಳು ಮತ್ತು ರುದ್ರರು ದಿವೌಕಸರಾಗುತ್ತಾರೆ. ಈ ಯುದ್ಧದಲ್ಲಿ ದೇವ, ಅಸುರ, ಮನುಷ್ಯ, ಗಂಧರ್ವ, ಉರಗ, ರಾಕ್ಷಸರು ಅತಿಕೋಪದಿಂದ ಪರಸ್ಪರರನ್ನು ಸಂಹರಿಸುತ್ತಾರೆ.” ಹೀಗೆ ತನ್ನ ಮತವನ್ನು ಹೇಳಿ ಪರಮೇಷ್ಠೀ ಪ್ರಜಾಪತಿಯು ಧರ್ಮನಿಗೆ ಹೇಳಿದನು: “ದೈತ್ಯ-ದಾನವರನ್ನು ಬಂಧಿಸಿ ವರುಣನಿಗೆ ಒಪ್ಪಿಸು!” ಪರಮೇಷ್ಠಿಯು ಹೀಗೆ ನಿಯೋಗವನ್ನು ನೀಡಲು ಧರ್ಮನು ಎಲ್ಲ ದೈತ್ಯ ದಾನವರನ್ನೂ ಬಂದಿಸಿ ವರುಣನಿಗೆ ಕೊಟ್ಟನು. ಅನಂತರ ಜಲೇಶ್ವರ ವರುಣನು ಆ ದಾನವರನ್ನು ಧರ್ಮಪಾಶಗಳಿಂದ ಮತ್ತು ಅವನದೇ ಪಾಶಗಳಿಂದ ಬಂಧಿಸಿ ಸಾಗರದಲ್ಲಿರಿಸಿ ನಿತ್ಯವೂ ರಕ್ಷಿಸುತ್ತಾನೆ.
“ಹಾಗೆ ದುರ್ಯೋಧನ, ಕರ್ಣ, ಶಕುನಿ ಸೌಬಲನನ್ನು ಮತ್ತು ದುಃಶಾಸನನನ್ನು ಬಂಧಿಸಿ ಪಾಂಡವರಿಗೆ ಸಲ್ಲಿಸಿ. ಕುಲಕ್ಕಾಗಿ ಪುರುಷನನ್ನು ತ್ಯಜಿಸಬೇಕು. ಗ್ರಾಮಕ್ಕಾಗಿ ಕುಲವನ್ನು ತ್ಯಜಿಸಬೇಕು. ಜನಪದಕ್ಕಾಗಿ ಗ್ರಾಮವನ್ನು, ಮತ್ತು ಆತ್ಮಕ್ಕಾಗಿ ಪೃಥ್ವಿಯನ್ನು ತ್ಯಜಿಸಬೇಕು. ದುರ್ಯೋಧನನನ್ನು ಬಂಧಿಸಿ ಪಾಂಡವರೊಂದಿಗೆ ಸಂಧಿಮಾಡಿಕೊಂಡರೆ ನಿನ್ನಿಂದಾಗಿ ಕ್ಷತ್ರಿಯರು ವಿನಾಶ ಹೊಂದುವುದಿಲ್ಲ.”
ಗಾಂಧಾರಿಯ ಹಿತವಚನ
ಕೃಷ್ಣನ ಮಾತನ್ನು ಕೇಳಿ ಜನೇಶ್ವರ ಧೃತರಾಷ್ಟ್ರನು ಸರ್ವಧರ್ಮಜ್ಞ ವಿದುರನಿಗೆ ಅವಸರದಲ್ಲಿ ಹೇಳಿದನು: “ಅಯ್ಯಾ! ಹೋಗು! ಮಹಾಪ್ರಾಜ್ಞೆ, ದೀರ್ಘದರ್ಶಿನೀ ಗಾಂಧಾರಿಯನ್ನು ಕರೆದುಕೊಂಡು ಬಾ! ಅವಳ ಸಹಾಯದಿಂದ ನಾನು ಈ ದುರ್ಮತಿಯನ್ನು ಸರಿದಾರಿಗೆ ತರುತ್ತೇನೆ. ಅವಳು ಆ ದುರಾತ್ಮ ದುಷ್ಟಚೇತಸನನ್ನು ಶಾಂತಿಗೊಳಿಸಿದರೆ ಈ ಸುಹೃದಯಿ ಕೃಷ್ಣನ ವಚನದಂತೆ ನಾವು ನಡೆದುಕೊಳ್ಳಬಹುದು. ಅವಳು ಸರಿಯಾದ ಮಾತುಗಳನ್ನಾಡಿ ಲೋಭದಿಂದ ತುಂಬಿದ, ದುರ್ಬುದ್ಧಿ, ದುಷ್ಟ ಸಹಾಯಕರನ್ನು ಹೊಂದಿದ ಇವನಿಗೆ ಸರಿಯಾದ ದಾರಿಯನ್ನು ತೋರಿಸಲು ಸಮರ್ಥಳಾದಾಳು. ಅವಳು ದುರ್ಯೋಧನನು ಮಾಡಿ ತರುವ ಈ ಮಹಾ ಘೋರ ವ್ಯಸನವನ್ನು ನಿಲ್ಲಿಸಿ ನಮಗೆ ಅವ್ಯಯವಾದ ಚಿರರಾತ್ರಿಯ ಯೋಗಕ್ಷೇಮಗಳನ್ನು ತರಬಹುದು.”
ರಾಜನ ಮಾತನ್ನು ಕೇಳಿ ವಿದುರನು ಧೃತರಾಷ್ಟ್ರನ ಶಾಸನದಂತೆ ದೀರ್ಘದರ್ಶಿನೀ ಗಾಂಧಾರಿಯನ್ನು ಕರೆತಂದನು. ಧೃತರಾಷ್ಟ್ರನು ಹೇಳಿದನು: “ಗಾಂಧಾರಿ! ಇಗೋ ನಿನ್ನ ಈ ದುರಾತ್ಮ ಮಗನು ನನ್ನ ಶಾಸನವನ್ನು ಮೀರಿ ನಡೆಯುತ್ತಿದ್ದಾನೆ. ಐಶ್ವರ್ಯಲೋಭದಿಂದ ಇದ್ದ ಐಶ್ವರ್ಯವನ್ನೂ ಜೀವವನ್ನೂ ನಗೆಗೀಡು ಮಾಡುತ್ತಿದ್ದಾನೆ. ಶಿಷ್ಟಾಚಾರವಿಲ್ಲದ ಮರ್ಯಾದೆಯಿಲ್ಲದ ಆ ಮೂಢನು ಸುಹೃದಯರ ಮಾತನ್ನು ನಿರಾದರಿಸಿ ಪಾಪಿ ದುರಾತ್ಮರೊಡನೆ ಸಭೆಯಿಂದ ಹೊರ ಹೋಗಿದ್ದಾನೆ.”
ಪತಿಯ ಮಾತನ್ನು ಕೇಳಿ ಯಶಸ್ವಿನೀ, ರಾಜಪುತ್ರೀ, ಗಾಂಧಾರಿಯು ಮಹಾಶ್ರೇಯಸ್ಕರವಾದುದನ್ನು ಬಯಸಿ ಈ ಮಾತನ್ನಾಡಿದಳು: “ರಾಜ್ಯವನ್ನಾಳಲು ಬಯಸುವ ಮಗನನ್ನು ಕೂಡಲೇ ಬರಹೇಳಿ! ಏಕೆಂದರೆ ಧರ್ಮಾರ್ಥಗಳನ್ನು ಕಳೆದುಕೊಂಡವನು ರಾಜ್ಯವನ್ನು ಆಳಲು ಶಕ್ಯನಲ್ಲ. ಧೃತರಾಷ್ಟ್ರ! ಈ ವಿಷಯದಲ್ಲಿ ನೀನೇ ಹೆಚ್ಚು ನಿಂದನೆಗೊಳಬೇಕಾದವನು. ಮಗನ ಮೇಲಿನ ಪ್ರೀತಿಯಿಂದ ಅವನು ಪಾಪಿಯೆಂದು ತಿಳಿದೂ ಅವನ ಮನಸ್ಸನ್ನು ಅನುಸರಿಸುತ್ತಾ ಬಂದಿರುವೆ. ಇಂದು ಕಾಮ-ಕ್ರೋಧಗಳಿಂದ ಪ್ರಲಬ್ಧನಾಗಿ ಹುಚ್ಚುಹಿಡಿದಿರುವ ಅವನನ್ನು ಬಲಾತ್ಕಾರವಾಗಿ ನೀನು ಹಿಂದೆ ತರಲು ಅಶಕ್ಯನಾಗಿದ್ದೀಯೆ. ಧೃತರಾಷ್ಟ್ರನು ಈ ರಾಜ್ಯವನ್ನು ಮೂಢ, ಹುಡುಗುಬುದ್ಧಿಯ, ದುರಾತ್ಮ, ದುಷ್ಟರ ಸಹಾಯಪಡೆದಿರುವ, ಲುಬ್ಧನಿಗೆ ಕೊಡುವಂಥಹ ಫಲವನ್ನು ಬೆಳೆಯಿಸಿದ್ದಾನೆ. ಏಕೆಂದರೆ ಯಾವ ಮಹಾಮತಿಯು ತನ್ನವರಲ್ಲಿಯೇ ಉಂಟಾದ ಭೇದವನ್ನು ಕಡೆಗಣಿಸಿಯಾನು? ನೀನೇ ಸ್ವಜನರಲ್ಲಿ ಒಡಕನ್ನು ತಂದರೆ ಶತ್ರುಗಳು ಸಂತೋಷಪಡುವುಲ್ಲವೇ? ಸಾಮ-ದಾನಗಳಿಂದ ಆಪತ್ತನ್ನು ನಿಲ್ಲಿಸಬಹುದಾದಾಗ ಯಾರು ತಾನೇ ತನ್ನವರನ್ನು ದಂಡದಿಂದ ಹೊಡೆಯುತ್ತಾನೆ?”
ಧೃತರಾಷ್ಟ್ರನ ಶಾಸನದಂತೆ ಮತ್ತು ತಾಯಿಯ ವಚನದಂತೆ ಕ್ಷತ್ತನು ಪುನಃ ಅಮರ್ಷಣ ದುರ್ಯೋಧನನನ್ನು ಪ್ರವೇಶಿಸಿದನು. ತಾಯಿಯು ಏನು ಹೇಳುವಳೆಂದು ನಿರೀಕ್ಷಿಸಿದ್ದ ಅವನು ಕೆಂಪು ಕಣ್ಣುಗಳುಳ್ಳವನಾಗಿ, ಕೋಪದಲ್ಲಿದ್ದ ಹಾವಿನಂತೆ ಭುಸುಗುಟ್ಟುತ್ತಾ ಪುನಃ ಸಭೆಯನ್ನು ಪ್ರವೇಶಿಸಿದನು. ಹಾರಾಡುತ್ತಿದ್ದ ತನ್ನ ಮಗನು ಪ್ರವೇಶಿಸಿದುದನ್ನು ಕಂಡು ಗಾಂಧಾರಿಯು ಬೈಯುತ್ತಾ ಈ ಸಮರ್ಥ ಮಾತುಗಳನ್ನಾಡಿದಳು: “ಮಗನೇ! ದುರ್ಯೋಧನ! ನಿನ್ನ ಮತ್ತು ನಿನ್ನ ಜೊತೆಯಿರುವವರ ಹಿತಕ್ಕಾಗಿ ಮತ್ತು ಮುಂದೆ ಸುಖವಾಗಲೆಂದು ಹೇಳುವ ನನ್ನ ಈ ಮಾತುಗಳನ್ನು ಅರ್ಥಮಾಡಿಕೋ! ನೀನು ಶಾಂತಿಯನ್ನುಂಟುಮಾಡುವುದರ ಮೂಲಕ ಭೀಷ್ಮನ, ತಂದೆಯ, ನನ್ನ ಮತ್ತು ದ್ರೋಣನೇ ಮೊದಲಾದ ಸುಹೃದಯರಿಗೆ ಗೌರವವನ್ನು ನೀಡುತ್ತೀಯೆ. ಕೇವಲ ಸ್ವ-ಇಚ್ಛೆಯಂತೆ ರಾಜ್ಯವನ್ನು ಪಡೆಯುವುದಕ್ಕಾಗಲೀ, ರಕ್ಷಿಸುವುದಕ್ಕಾಗಲೀ ಅಥವಾ ಭೋಗಿಸುವುದಕ್ಕಾಗಲೀ ಸಾಧ್ಯವಿಲ್ಲ. ಏಕೆಂದರೆ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿರದವನು ತನ್ನ ರಾಜ್ಯವನ್ನು ಬಹುಕಾಲ ಇಟ್ಟುಕೊಳ್ಳುವುದಿಲ್ಲ. ವಿಜಿತಾತ್ಮ, ಮೇಧಾವಿಯೇ ರಾಜ್ಯವನ್ನು ಚೆನ್ನಾಗಿ ಪಾಲಿಸುತ್ತಾನೆ. ಕಾಮ-ಕ್ರೋಧಗಳು ಪುರುಷನನ್ನು ಅರ್ಥ-ಧರ್ಮಗಳಿಂದ ದೂರ ಎಳೆದೊಯ್ಯುತ್ತವೆ. ಈ ಇಬ್ಬರು ಶತ್ರುಗಳನ್ನು ಸೋಲಿಸಿ ರಾಜನು ಮಹಿಯನ್ನು ಗೆಲ್ಲುತ್ತಾನೆ. ಲೋಕೇಶ್ವರತ್ವವೂ ಪ್ರಭುತ್ವವೂ ಮಹತ್ತರವಾದವುಗಳು. ದುರಾತ್ಮರು ರಾಜ್ಯವನ್ನು ಪಡೆದರೂ ಆ ಸ್ಥಾನವನ್ನು ಬಹುಕಾಲ ರಕ್ಷಿಸಿಕೊಳ್ಳಲು ಶಕ್ಯರಿರುವುದಿಲ್ಲ. ಮಹತ್ತರವಾದುದನ್ನು ಬಯಸುವವನು ಇಂದ್ರಿಯಗಳನ್ನು ಅರ್ಥ-ಧರ್ಮಗಳ ನಿಯಂತ್ರಣದಲ್ಲಿರಿಸಿಕೊಂಡಿರಬೇಕು. ಇಂಧನಗಳನ್ನು ಸುಡುವುದರಿಂದ ಬೆಂಕಿಯು ಹೆಚ್ಚು ಉರಿಯುವಂತೆ ಇಂದ್ರಿಯಗಳನ್ನು ನಿಯಂತ್ರಿಸುವುದರಿಂದ ಬುದ್ಧಿಯು ಬೆಳೆಯುತ್ತದೆ. ಇವುಗಳನ್ನು ಕಟುವಾಗಿ ನಿಯಂತ್ರಿಸದೇ ಇದ್ದರೆ ಇವು ವಿಧೇಯವಲ್ಲದ ಪಳಗಿಸಲ್ಪಡದೇ ಇರುವ ಕುದುರೆಗಳು ದುರ್ಬಲ ಸಾರಥಿಯಿರುವ ರಥವನ್ನು ಹೇಗೋ ಹಾಗೆ ವಿನಾಶದ ದಾರಿಗೆ ಎಳೆದೊಯ್ಯುತ್ತವೆ. ತನ್ನನ್ನು ತಾನು ಗೆಲ್ಲದೇ ಅಮಾತ್ಯರನ್ನು ಗೆಲ್ಲಲು ಬಯಸುವವನು ತನ್ನನ್ನೂ ಅಮಾತ್ಯರನ್ನೂ ಗೆಲ್ಲದೇ ಅವಶನಾಗಿ ನಾಶಹೊಂದುತ್ತಾನೆ. ಆದರೆ ಯಾರು ದೇಶರೂಪದಲ್ಲಿರುವ ಆತ್ಮವನ್ನೇ ಮೊದಲು ಗೆಲ್ಲುತ್ತಾರೋ ಅವರು ಅಮಾತ್ಯರು ಮತ್ತು ಮಿತ್ರರನ್ನು ಪಡೆಯುವುದರಲ್ಲಿ ಸೋಲುವುದಿಲ್ಲ. ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡಿರುವವನನ್ನು, ಅಮಾತ್ಯರನ್ನು ಗೆದ್ದಿರುವುವವನನ್ನು, ಉಲ್ಲಂಘಿಸುವವರನ್ನು ಧೃಢವಾಗಿ ಶಿಕ್ಷಿಸುವವರನ್ನು, ಪರಿಶೀಲಿಸಿ ಕೆಲಸಮಾಡುವವರನ್ನು, ಮತ್ತು ಧೀರರನ್ನು ಶ್ರೀಯು ಅತ್ಯಂತವಾಗಿ ಸೇವಿಸುತ್ತಾಳೆ. ರಂಧ್ರಗಳು ಮುಚ್ಚಲ್ಪಟ್ಟ ಜಾಲದಲ್ಲಿ ಸಿಲುಕಿದ ಎರಡು ಮೀನುಗಳಂತೆ ಪ್ರಜ್ಞಾನಿಯ ಶರೀರದಲ್ಲಿರುವ ಕಾಮ ಕ್ರೋಧಗಳು ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಕಾಮ, ಕ್ರೋಧ, ಲೋಭ, ದಂಭ ಮತ್ತು ದರ್ಪಗಳನ್ನು ಗೆಲ್ಲಲು ಚೆನ್ನಾಗಿ ತಿಳಿದಿರುವ ಭೂಮಿಪನು ಇಡೀ ಮಹಿಯನ್ನು ಆಳುತ್ತಾನೆ. ಇಂದ್ರಿಯ ನಿಗ್ರಹದಲ್ಲಿ ಸತತವೂ ನಿರತನಾಗಿರುವ ನೃಪನು ಅರ್ಥ-ಧರ್ಮಗಳನ್ನು ಪಡೆದು ಶತ್ರುಗಳನ್ನು ಸೋಲಿಸುತ್ತಾನೆ. ಕಾಮ ಕ್ರೋಧಗಳಿಂದ ತುಂಬಿ ಯಾರು ತನ್ನವರೊಡನೆ ಅಥವಾ ಇತರರೊಡನೆ ಸುಳ್ಳಾಗಿ ನಡೆದುಕೊಳ್ಳುತ್ತಾನೋ ಅವನಿಗೆ ಸಹಾಯಕರೇ ಇರುವುದಿಲ್ಲ.
“ಮಗನೇ! ಒಂದಾಗಿರುವ, ಮಹಾಪ್ರಾಜ್ಞ, ಶೂರ, ಅರಿಗಳನ್ನು ಸದೆಬಡಿಯುವ ಪಾಂಡವರೊಡನೆ ನೀನು ಭೂಮಿಯನ್ನು ಸುಖವಾಗಿ ಭೋಗಿಸಬಲ್ಲೆ. ಭೀಷ್ಮ ಶಾಂತನವ ಮತ್ತು ಮಹಾರಥಿ ದ್ರೋಣನೂ ಕೂಡ ಹೇಳಿದಂತೆ ಕೃಷ್ಣ-ಪಾಂಡವರು ಅಜೇಯರು. ಈ ಅಕ್ಲಿಷ್ಟಕಾರಿಣಿ, ಮಹಾಬಾಹು ಕೃಷ್ಣನ ಶರಣು ಹೋಗು. ಕೇಶವನು ಪ್ರಸನ್ನನಾದರೆ ಎರಡೂ ಪಕ್ಷಗಳಿಗೂ ಸುಖವಾಗುತ್ತದೆ. ಅರ್ಥವನ್ನು ಬಯಸುವ ಯಾವ ನರನು ಸುಹೃದಯಿಗಳ, ಪ್ರಾಜ್ಞರ ಮತ್ತು ವಿದ್ಯಾವಂತರ ಮಾತಿನಂತೆ ನಡೆಯುವುದಿಲ್ಲವೋ ಅವನು ಶತ್ರುಗಳಿಗೆ ಆನಂದವನ್ನು ನೀಡುತ್ತಾನೆ. ಯುದ್ಧದಲ್ಲಿ ಕಲ್ಯಾಣವಿಲ್ಲ, ಧರ್ಮಾರ್ಥಗಳಿಲ್ಲ. ಸುಖವು ಎಲ್ಲಿಂದ? ಯಾವಾಗಲೂ ವಿಜಯವೂ ನಿಶ್ಚಿತವಾದುದಲ್ಲ. ಆದುದರಿಂದ ಯುದ್ಧದ ಕುರಿತು ಯೋಚಿಸಬೇಡ. ಒಡಕಿನ ಭಯದಿಂದ ಬೀಷ್ಮ, ಮಹಾಪ್ರಾಜ್ಞನಾದ ನಿನ್ನ ತಂದೆ ಮತ್ತು ಬಾಹ್ಲೀಕರು ಪಾಂಡುಪುತ್ರರಿಗೆ ಕೊಟ್ಟಿದ್ದರು. ಈಗ ನಿನ್ನಲ್ಲಿರುವುದು, ನೀನು ನೋಡಿರುವುದು ಆ ಶಾಂತಿಯ ಫಲ. ಆ ಶೂರರು ಕಂಟಕರನ್ನೆಲ್ಲ ನಾಶಗೊಳಿಸಿರುವ ಈ ಭೂಮಿಯನ್ನು ನೀನು ಭೋಗಿಸುತ್ತಿದ್ದೀಯೆ. ಯಥೋಚಿತವಾಗಿರುವುದನ್ನು ಪಾಂಡುಪುತ್ರರಿಗೆ ಕೊಟ್ಟುಬಿಡು. ಇಷ್ಟಪಟ್ಟರೆ ಅಮಾತ್ಯರೊಂದಿಗೆ ಅರ್ಧ ಭೂಮಿಯನ್ನು ಭೋಗಿಸು. ನಿನ್ನ ಅಮಾತ್ಯರೊಂದಿಗೆ ಜೀವನ ಮಾಡಲು ಅರ್ಧ ಭೂಮಿಯು ಸಾಕು. ಸುಹೃದರ ಮಾತಿನಂತೆ ನಡೆದುಕೊಂಡರೆ ಯಶಸ್ಸನ್ನು ಪಡೆಯುತ್ತೀಯೆ. ಶ್ರೀಮಂತರಾಗಿರುವ, ಆತ್ಮವನ್ನು ನಿಯಂತ್ರಿಸಿಕೊಂಡಿರುವ, ಬುದ್ಧಿವಂತರಾದ, ಜಿತೇಂದ್ರಿಯರಾದ ಪಾಂಡವರೊಂದಿಗೆ ಜಗಳವಾಡಿ ನೀನು ಮಹಾ ಸುಖದಿಂದ ವಂಚಿತನಾಗುತ್ತೀಯೆ. ಸುಹೃದಯರ ಕೋಪವನ್ನು ತಡೆದು ಯಥೋಚಿತವಾಗಿ ಪಾಂಡುಪುತ್ರರಿಗೆ ಅವರ ಭಾಗವನ್ನು ಕೊಟ್ಟು ರಾಜ್ಯವನ್ನು ಆಳು. ಅವರನ್ನು ಈ ಹದಿಮೂರು ವರ್ಷಗಳು ಕಾಡಿದ್ದುದು ಸಾಕು! ಕಾಮಕ್ರೋಧಗಳಿಂದ ಉರಿಯುವುದನ್ನು ಶಮನಗೊಳಿಸು. ಯಾರ ಸಂಪತ್ತನ್ನು ನಿನ್ನದಾಗಿರಿಸಿಕೊಂಡಿರುವೆಯೋ ಆ ಪಾರ್ಥರನ್ನು ಎದುರಿಸಲು ನೀನಾಗಲೀ, ಕ್ರುದ್ಧನಾದ ಸೂತಪುತ್ರನಾಗಲೀ, ನಿನ್ನ ತಮ್ಮ ದುಃಶಾಸನನಾಗಲೀ ಶಕ್ತರಿಲ್ಲ. ಭೀಷ್ಮ, ದ್ರೋಣ, ಕೃಪ, ಕರ್ಣ, ಭೀಮಸೇನ, ಧನಂಜಯ ಮತ್ತು ಧೃಷ್ಟದ್ಯುಮ್ನರು ಕುಪಿತರಾದರೆ ಎಲ್ಲ ಪ್ರಜೆಗಳೂ ಇಲ್ಲವಾಗುವುದು ಖಂಡಿತ. ಕ್ರೋಧದ ವಶದಲ್ಲಿ ಬಂದು ಕುರುಗಳನ್ನು ಕೊಲ್ಲಿಸಬೇಡ. ನಿನ್ನಿಂದಾಗಿ ಪಾಂಡವರು ಭೂಮಿಯಲ್ಲಿರುವ ಎಲ್ಲರನ್ನೂ ವಧಿಸದಿರಲಿ.
“ಮೂಢ! ಭೀಷ್ಮ, ದ್ರೋಣ, ಕೃಪ ಮೊದಲಾದವರು ಸರ್ವ ಶಕ್ತಿಯನ್ನೂ ಉಪಯೋಗಿಸಿ ನಿನ್ನ ಪರವಾಗಿ ಹೋರಾಡುತ್ತಾರೆ ಎಂದು ನೀನು ತಿಳಿದುಕೊಂಡಿದ್ದೀಯೆ. ಆದರೆ ಅದು ಹಾಗೆ ಆಗುವುದಿಲ್ಲ. ಏಕೆಂದರೆ ವಿಜಿತಾತ್ಮರಾದ ಇವರಿಗೆ ನಿನ್ನ ಮೇಲೆ ಮತ್ತು ಪಾಂಡವರ ಮೇಲೆ ಇರುವ ಪ್ರೀತಿಯು ಸಮನಾದುದು. ಒಂದುವೇಳೆ ಇವರು ರಾಜಪಿಂಡದ ಭಯದಿಂದ ಜೀವನವನ್ನು ಮುಡುಪಾಗಿಟ್ಟರೂ ಅವರು ರಾಜ ಯುಧಿಷ್ಠಿರನ ಮುಖವನ್ನು ನೇರವಾಗಿ ನೋಡಲಾರರು. ಲೋಭದಿಂದ ಸಂಪತ್ತನ್ನು ಗಳಿಸುವ ನರರು ಇಲ್ಲಿ ಕಂಡುಬರುವುದಿಲ್ಲ. ಆದುದರಿಂದ ಲೋಭವನ್ನು ತಡೆದು ಶಾಂತನಾಗು.””
ದುರ್ಯೋಧನನು ಶ್ರೀಕೃಷ್ಣನನ್ನು ಬಂಧಿಸಲು ಪ್ರಯತ್ನಿಸಿದುದು
ತಾಯಿಯು ಹೇಳಿದ ಅರ್ಥವತ್ತಾದ ಮಾತುಗಳನ್ನು ಅನಾದರಿಸಿ ಪುನಃ ಸಿಟ್ಟಿನಿಂದ ಅವನು ಹೊರಟು ಅಕೃತಾತ್ಮರ ಬಳಿ ಹೋದನು. ಆಗ ಸಭೆಯಿಂದ ನಿರ್ಗಮಿಸಿ ಕೌರವನು ಜೂಜುಕೋರ ರಾಜ ಸೌಬಲ ಶಕುನಿಯೊಡನೆ ಮಂತ್ರಾಲೋಚನೆ ಮಾಡಿದನು. ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ದುಃಶಾಸನ ಈ ನಾಲ್ವರ ನಡುವೆ ಈ ಚರ್ಚೆಯಾಯಿತು: “ಕ್ಷಿಪ್ರಕಾರೀ ಜನಾರ್ದನನು ರಾಜ ಧೃತರಾಷ್ಟ್ರ ಮತ್ತು ಶಾಂತನವನ ಸಹಾಯದಿಂದ ನಮ್ಮನ್ನು ಸೆರೆಹಿಡಿಯುವ ಮೊದಲು ನಾವೇ ಇಂದ್ರನು ವೈರೋಚಿನಿಯನ್ನು ಹೇಗೋ ಹಾಗೆ ಬಲವನ್ನುಪಯೋಗಿಸಿ ಸೋಲಿಸಿ ಹೃಷೀಕೇಶನನ್ನು ಬಂಧಿಸೋಣ! ವಾರ್ಷ್ಣೇಯನು ಬಂಧಿಯಾದುದನ್ನು ಕೇಳಿ ಹತಚೇತಸರಾದ ಪಾಂಡವರು ಹಲ್ಲು ಮುರಿದ ಹಾವಿನಂತೆ ನಿರುತ್ಸಾಹಿಗಳಾಗುತ್ತಾರೆ. ಏಕೆಂದರೆ ಈ ಮಹಾಬಾಹುವು ಅವರೆಲ್ಲರಿಗೆ ನೆರಳು ಮತ್ತು ರಕ್ಷೆ. ಸರ್ವಸಾತ್ವತರ ವರದ ಈ ಋಷಭನನ್ನು ಸೆರೆಹಿಡಿದರೆ ಸೋಮಕರೊಂದಿಗೆ ಪಾಂಡವರು ನಿರುದ್ಯಮರಾಗುತ್ತಾರೆ. ಆದುದರಿಂದ ಈ ಕ್ಷಿಪ್ರಕಾರಿಣೀ ಕೇಶವನನ್ನು ನಾವೇ, ಧೃತರಾಷ್ಟ್ರನು ಕೂಗಾಡಿದರೂ, ಬಂಧಿಸಿಟ್ಟು, ಶತ್ರುಗಳ ಮೇಲೆ ಆಕ್ರಮಣ ಮಾಡೋಣ!”
ಆ ಪಾಪಿ ದುಷ್ಟಚೇತಸರ ಅಭಿಪ್ರಾಯವನ್ನು, ಸನ್ನೆಗಳನ್ನು ಅರ್ಥಮಾಡಿಕೊಳ್ಳುವ ಕವಿ ಸಾತ್ಯಕಿಯು ಕೂಡಲೇ ತಿಳಿದುಕೊಂಡನು. ಅದಕ್ಕಾಗಿ ಹೊರಬಂದು ಹತ್ತಿರದಲ್ಲಿ ನಿಂತಿದ್ದ ಹಾರ್ದಿಕ್ಯ ಕೃತವರ್ಮನಿಗೆ ಹೇಳಿದನು: “ಬೇಗನೇ ಸೇನೆಯನ್ನು ಸಿದ್ಧಗೊಳಿಸು! ನಾನು ಅಕ್ಲಿಷ್ಟಕರ್ಮಿಗೆ ಹೇಳುವುದರೊಳಗೆ ನೀನು ಸನ್ನದ್ಧ ಸೇನೆಯನ್ನು ಸಭಾದ್ವಾರದಲ್ಲಿ ತಂದು ನಿಲ್ಲಿಸು.”
ಸಿಂಹವು ಗಿರಿಗುಹೆಯನ್ನು ಪ್ರವೇಶಿಸುವಂತೆ ಆ ವೀರನು ಸಭೆಯನ್ನು ಪ್ರವೇಶಿಸಿ ಅವರ ಅಭಿಪ್ರಾಯವನ್ನು ಮಹಾತ್ಮ ಕೇಶವನಿಗೆ ಹೇಳಿದನು. ಧೃತರಾಷ್ಟ್ರ ವಿದುರರಿಗೂ ಇದನ್ನು ಹೇಳಿದನು. ಅವರ ಉಪಾಯದ ಕುರಿತು ಹೇಳಿ ನಸುನಗುತ್ತಾ ಹೇಳಿದನು: “ಈ ಮೂಢರು ಇಲ್ಲಿ ಸಾಧುಗಳು ನಿಷೇಧಿಸುವ, ಧರ್ಮ-ಅರ್ಥ-ಕಾಮಗಳಿಗೆ ಸಲ್ಲದ ಕೆಲಸವನ್ನು ಮಾಡಲು ಬಯಸುತ್ತಿದ್ದಾರೆ. ಆದರೆ ಅವರು ಅದನ್ನು ಎಂದೂ ಸಾಧಿಸರಾರರು. ಈ ಮೂಢ ಪಾಪಾತ್ಮರು ಒಂದಾಗಿ ಕ್ರೋಧಲೋಭವಶಾನುಗರಾಗಿ, ಕಾಮ ಮತ್ತು ಸಿಟ್ಟಿನಿಂದ ಧರ್ಷಿತರಾಗಿ ಮಾಡಬಾರದುದನ್ನು ಮಾಡಲು ಹೊರಟಿದ್ದಾರೆ. ಈ ಅಲ್ಪಚೇತಸರು ಉತ್ತರೀಯದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಬಾಲಕರಂತೆ ಈ ಪುಂಡರೀಕಾಕ್ಷನನ್ನು ಸೆರೆಹಿಡಿಯಲು ಹೊರಟಿದ್ದಾರೆ.”
ಸಾತ್ಯಕಿಯ ಆ ಮಾತನ್ನು ಕೇಳಿ ದೀರ್ಘದರ್ಶಿ ವಿದುರನು ಕುರುಸಂಸದಿಯಲ್ಲಿ ಮಹಾಬಾಹು ಧೃತರಾಷ್ಟ್ರನಿಗೆ ಹೇಳಿದನು. “ರಾಜನ್! ನಿನ್ನ ಮಕ್ಕಳೆಲ್ಲರಿಗೂ ಕೊನೆಯ ಗಳಿಗೆಯು ಬಂದುಬಿಟ್ಟಿದೆ! ಅಶಕ್ಯರಾಗಿದ್ದರೂ ಅಯಶಸ್ಸನ್ನು ತರುವ ಕೆಲಸವನ್ನು ಮಾಡಲು ಉದ್ಯುಕ್ತರಾಗಿದ್ದಾರೆ. ಎಲ್ಲರೂ ಒಂದಾಗಿ ಈ ವಾಸವನ ಅನುಜ ಪುಂಡರೀಕಾಕ್ಷನ ಮೇಲೆ ಅಕ್ರಮಣ ಮಾಡಿ ಸೆರೆಹಿಡಿಯಲು ಬಯಸುತ್ತಿದ್ದಾರಲ್ಲ! ಬೆಂಕಿಯ ಬಳಿ ಹೋಗಲು ಪತಂಗಗಳಿಗೆ ಹೇಗೆ ಅಸಾಧ್ಯವೋ ಹಾಗೆ ಈ ಪುರುಷ ಶಾರ್ದೂಲ, ಅಪ್ರಧೃಷ್ಯ, ದುರಾಸದನ ಬಳಿಹೋಗಲೂ ಅವರಿಗೆ ಸಾದ್ಯವಿಲ್ಲ. ಜನಾರ್ದನನು ಬಯಸಿದರೆ ಪ್ರಯತ್ನಿಸುತ್ತಿರುವ ಇವರೆಲ್ಲರನ್ನೂ ಕೃದ್ಧ ಸಿಂಹವು ಮೃಗಗಳನ್ನು ಹೇಗೋ ಹಾಗೆ ಯಮಸಾದನಕ್ಕೆ ಕಳುಹಿಸುತ್ತಾನೆ. ಆದರೆ ಕೃಷ್ಣನು ಈ ನಿಂದನೀಯ ಕೆಸಲವನ್ನು ಎಂದೂ ಮಾಡುವುದಿಲ್ಲ. ಈ ಅಚ್ಯುತ ಪುರುಷೋತ್ತಮನು ಧರ್ಮವನ್ನು ದಾಟುವವನಲ್ಲ.”
ವಿದುರನು ಹೀಗೆ ಹೇಳಲು ಕೇಶವನು ಧೃತರಾಷ್ಟ್ರನನ್ನು ನೋಡಿ, ಸುಹೃದಯರು ಕೇಳುವಂತೆ ಈ ಮಾತುಗಳನ್ನಾಡಿದನು: “ರಾಜನ್! ಇವರು ತಮ್ಮ ಬಲವನ್ನುಪಯೋಗಿಸಿ ನನ್ನ ಸೆರೆಹಿಡಿಯ ಬಯಸಿದರೆ ಅವರಿಗೆ ಅದನ್ನು ಮಾಡುವುದಕ್ಕೆ ಬಿಡು. ಅವರನ್ನು ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ. ಇವರೆಲ್ಲರೂ ಸಿಟ್ಟಾಗಿ ಮಹಾ ಉತ್ಸಾಹದಿಂದ ಆಕ್ರಮಣ ಮಾಡಲು ಬಂದರೂ ನಾನು ನಿಂದನೀಯವಾದ ಪಾಪ ಕರ್ಮವನ್ನು ಎಂದೂ ಮಾಡುವುದಿಲ್ಲ. ಪಾಂಡವರದ್ದನ್ನು ಹಿಡಿದಿಟ್ಟುಕೊಂಡು ನಿನ್ನ ಮಕ್ಕಳು ತಮ್ಮದ್ದನ್ನೂ ಕಳೆದುಕೊಳ್ಳುತ್ತಾರೆ. ಆದರೆ ಇದನ್ನೇ ಮಾಡಲು ಅವರು ಇಚ್ಛಿಸಿದರೆ, ಯುಧಿಷ್ಠಿರನ ಕೆಲಸವು ಮುಗಿದಂತೆ. ಏಕೆಂದರೆ ಇಂದೇ ನಾನು ಇವರನ್ನು ಮತ್ತು ಇವರನ್ನು ಅನುಸರಿಸಿ ಬರುವವರನ್ನು ಹಿಡಿದು ಪಾರ್ಥರಿಗೆ ಕೊಡಬಹುದು. ನನಗೆ ಯಾವುದು ಅಸಾಧ್ಯವಾದುದು? ಆದರೆ ನಿನ್ನ ಸನ್ನಿಧಿಯಲ್ಲಿ ಕೋಪ ಮುತ್ತು ಪಾಪಬುದ್ಧಿಯಲ್ಲಿ ಹುಟ್ಟುವ ಈ ನಿಂದನೀಯ ಕೆಲಸವನ್ನು ಮಾಡುವುದಿಲ್ಲ. ಈ ದುರ್ಯೋಧನನನಿಗೆ ಮತ್ತು ಇತರ ಎಲ್ಲರಿಗೂ ಏನು ಮಾಡಬೇಕೆಂದು ಬಯಸಿರುವರೋ ಅದನ್ನು ಮಾಡಲು ಒಪ್ಪಿಗೆಯನ್ನು ಕೊಡುತ್ತೇನೆ.”
ಇದನ್ನು ಕೇಳಿ ಧೃತರಾಷ್ಟ್ರನು ವಿದುರನಿಗೆ ಹೇಳಿದನು: “ಆ ಪಾಪಿ, ರಾಜ್ಯಲುಬ್ಧ ಸುಯೋಧನನನ್ನು ಅವನ ಮಿತ್ರರು, ಅಮಾತ್ಯರು, ಸೋದರರು ಮತ್ತು ಅನುಯಾಯಿಗಳೊಂದಿಗೆ ಬೇಗನೆ ಕರೆದುಕೊಂಡು ಬಾ! ಅವರನ್ನು ದಾರಿಗೆ ತರಲು ಮತ್ತೊಮ್ಮೆ ಪ್ರಯತ್ನಿಸೋಣ.”
ಆಗ ಕ್ಷತ್ತನು ಬೇಡವಂತಿದ್ದ, ರಾಜರಿಂದ ಸುತ್ತುವರೆಯಲ್ಪಟ್ಟಿದ್ದ ದುರ್ಯೋಧನನನ್ನು ಅವನ ಸಹೋದರರೊಂದಿಗೆ ಸಭೆಗೆ ಪ್ರವೇಶಗೊಳಿಸಿದನು. ಆಗ ರಾಜಾ ಧೃತರಾಷ್ಟ್ರನು ಕರ್ಣ-ದುಃಶಾಸನರೊಡನಿದ್ದ, ರಾಜರಿಂದ ಸುತ್ತುವರೆಯಲ್ಪಟ್ಟಿದ್ದ ದುರ್ಯೋಧನನಿಗೆ ಹೇಳಿದನು: “ಕ್ರೂರಿ! ಪಾಪಭೂಯಿಷ್ಠ! ಕ್ಷುದ್ರಕರ್ಮಿಗಳ ಸಹಾಯದಿಂದ, ಪಾಪಿಗಳೊಂದಿಗೆ ಪಾಪ ಕರ್ಮವನ್ನೆಸಗಲು ಬಯಸುತ್ತಿದ್ದೀಯೆ! ಕುಲಪಾಂಸನ! ಅಶಕ್ಯವಾದರೂ ಅಯಶಸ್ಸನ್ನು ತರುವ, ಸಾಧುಗಳು ನಿಂದಿಸುವ, ಮೂಢನಾದ ನೀನೊಬ್ಬನೇ ಮಾಡಬಹುದಾದ ಕೆಲಸವನ್ನು ಮಾಡಲು ಹೊರಟಿರುವೆ. ಅಪ್ರಧೃಷ್ಠನಾದ, ದುರಾಸದನಾದ ಈ ಪುಂಡರೀಕಾಕ್ಷನನ್ನು ನೀನು ಪಾಪಿಗಳ ಸಹಾಯದಿಂದ ನಿರ್ಬಲನನ್ನಾಗಿಸಿ ಸೆರೆಹಿಡಿಯಲು ಬಯಸುತ್ತೀಯಲ್ಲಾ! ಮಂದ! ಬಾಲಕನು ಚಂದ್ರನನ್ನು ಬಯಸುವಂತೆ ವಾಸವನೊಂದಿಗೆ ದೇವತೆಗಳೂ ಬಲಾತ್ಕರಿಸಲು ಶಕ್ಯನಲ್ಲದ ಇವನನ್ನು ಹಿಡಿಯಲು ನೀನು ಬಯಸುತ್ತಿದ್ದೀಯೆ. ಕೇಶವನನ್ನು ಸಮರದಲ್ಲಿ ದೇವ-ಮನುಷ್ಯ-ಗಂಧರ್ವ-ಸುರ-ಉರುಗರೂ ಕೂಡ ಸೋಲಿಸಲಾರರು ಎಂದು ನಿನಗೆ ತಿಳಿದಿಲ್ಲವೇ? ಕೈಯಲ್ಲಿ ಹಿಡಿದಿಟ್ಟುಕೊಳ್ಳಲಾರದ ಗಾಳಿಯಂತೆ, ಕೈಯಿಂದ ಮುಟ್ಟಲಾಗದ ಶಶಿಯಂತೆ, ತಲೆಯಲ್ಲಿ ಹೊರಲಿಕ್ಕಾಗದ ಭೂಮಿಯಂತೆ ಕೇಶವನನ್ನು ಬಲವನ್ನುಪಯೋಗಿಸಿ ಹಿಡಿಯಲಿಕ್ಕಾಗುವುದಿಲ್ಲ!”
ಧೃತರಾಷ್ಟ್ರನು ಹೀಗೆ ಹೇಳಲು ಕ್ಷತ್ತ ವಿದುರನೂ ಕೂಡ ಅಮರ್ಷಣ ಧಾರ್ತರಾಷ್ಟ್ರ ದುರ್ಯೋಧನನನ್ನು ನೋಡಿ ಹೇಳಿದನು: “ಸೌಭದ್ವಾರದಲ್ಲಿ ದ್ವಿವಿದ ಎಂಬ ಹೆಸರಿನ ವಾನರೇಂದ್ರನು ಅತಿ ದೊಡ್ಡ ಶಿಲಾವರ್ಷದಿಂದ ಕೇಶವನನ್ನು ಮುಚ್ಚಿದನು. ಮಾಧವನನ್ನು ಹಿಡಿಯಲು ಬಯಸಿ ವಿಕ್ರಮದಿಂದ ಸರ್ವಯತ್ನಗಳನ್ನು ಮಾಡಿದರೂ ಹಿಡಿಯಲು ಆಗಲಿಲ್ಲ. ಅಂಥವನನ್ನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ. ನಿರ್ಮೋಚನದಲ್ಲಿ ಮಹಾಸುರರು ಆರುಸಾವಿರ ಪಾಶಗಳಿಂದಲೂ ಹಿಡಿಯಲು ಅಸಮರ್ಥರಾದ ಇವನನ್ನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ. ಪ್ರಾಗ್ಜ್ಯೋತಿಷಕ್ಕೆ ಹೋಗಿದ್ದ ಶೌರಿಯನ್ನು ದಾನವರ ಸಹಿತ ನರಕನು ಹಿಡಿಯಲು ಅಸಮರ್ಥನಾದ. ಇವನನ್ನು ನೀನು ಬಲವನ್ನುಪಯೋಗಿಸಿ ಹಿಡಿಯಲು ಬಯಸುತ್ತಿರುವೆ. ಇವನು ಬಾಲ್ಯದಲ್ಲಿಯೇ ಶಿಶುವಾಗಿದ್ದಾಗ ಪೂತನಿಯನ್ನು ಕೊಂದನು ಮತ್ತು ಗೋವುಗಳನ್ನು ರಕ್ಷಿಸಲು ಗೋವರ್ಧನವನ್ನು ಎತ್ತಿ ಹಿಡಿದನು. ಇವನು ಅರಿಷ್ಟ, ಧೇನುಕ, ಮಹಾಬಲ ಚಾಣೂರ, ಅಶ್ವರಾಜ ಮತ್ತು ದುರಾಚಾರಿ ಕಂಸನನ್ನು ಕೊಂದಿರುವನು. ಇವನು ಜರಾಸಂಧ, ವಕ್ರ, ವೀರ್ಯವಾನ್ ಶಿಶುಪಾಲ ಮತ್ತು ಬಾಣರನ್ನು ಸಂಹರಿಸಿದ್ದಾನೆ. ಸಮರದಲ್ಲಿ ರಾಜರನ್ನು ಸದೆಬಡಿದಿದ್ದಾನೆ. ಇವನು ರಾಜಾ ವರುಣ ಮತ್ತು ಅಮಿತೌಜಸ ಪಾವಕನನ್ನು ಸೋಲಿಸಿದ್ದಾನೆ. ಸಾಕ್ಷಾತ್ ಶಚೀಪತಿಯನ್ನು ಗೆದ್ದು ಪಾರಿಜಾತವನ್ನು ಅಪಹರಿಸಿದನು. ಏಕಾರ್ಣವದಲ್ಲಿ ಮಲಗಿರುವಾಗ ಇವನು ಮಧು-ಕೈಟಭರನ್ನು ಸಂಹರಿಸಿದನು. ಇನ್ನೊಂದು ಜನ್ಮದಲ್ಲಿ ಹಯಗ್ರೀವನನ್ನು ಕೊಂದನು. ಇವನು ಕರ್ತ. ಇವನನ್ನು ಯಾರೂ ಮಾಡಿಲ್ಲ. ಇವನು ಪೌರುಷಗಳ ಕಾರಣ. ಯಾವುದನ್ನು ಬಯಸುತ್ತಾನೋ ಅದನ್ನು ಶೌರಿಯು ನಿರಾಯಾಸವಾಗಿ ಮಾಡುತ್ತಾನೆ. ಇಲ್ಲ! ನಿನಗೆ ಈ ಗೋವಿಂದ, ಘೋರವಿಕ್ರಮಿ, ಅಚ್ಯುತ, ಕೃದ್ಧನಾದರೆ ಘೋರವಿಷದಂತಿರುವ, ತೇಜೋರಾಶಿ, ಅನಿರ್ಜಿತನು ಗೊತ್ತಿಲ್ಲ! ಅಗ್ನಿಯ ಬಳಿಸಾರುವ ಪತಂಗಗಳಂತೆ ಈ ಅಕ್ಲಿಷ್ಟಕರ್ಮಿ, ಮಹಾಬಾಹು ಕೃಷ್ಣನ ಮೇಲೆರಗಿ ನೀನು ಮತ್ತು ಅಮಾತ್ಯರು ಇಲ್ಲವಾಗುತ್ತೀರಿ!”
ಕುರುಸಭೆಯಲ್ಲಿ ಶ್ರೀಕೃಷ್ಣನ ವಿಶ್ವರೂಪ ದರ್ಶನ
ವಿದುರನು ಹೀಗೆ ಹೇಳಲು ಶತ್ರುಪೂಗಹ ವೀರ್ಯವಾನ್ ಕೇಶವನು ಧಾರ್ತರಾಷ್ಟ್ರ ದುರ್ಯೋಧನನಿಗೆ ಹೇಳಿದನು. “ಸುಯೋಧನ! ಮೋಹದಿಂದ ನೀನು ನಾನು ಒಬ್ಬನೇ ಎಂದು ತಿಳಿದುಕೊಂಡಿದ್ದೀಯೆ. ಆದುದರಿಂದ ದುರ್ಬುದ್ಧೇ! ನನ್ನನ್ನು ಬಲವನ್ನುಪಯೋಗಿಸಿ ಸೆರೆಹಿಡಿಯಲು ಬಯಸುತ್ತಿರುವೆ. ಇಲ್ಲಿಯೇ ಪಾಂಡವರೂ, ಹಾಗೆಯೇ ಎಲ್ಲ ಅಂಧಕ-ವೃಷ್ಣಿಯರೂ ಇದ್ದಾರೆ. ಇಲ್ಲಿಯೇ ಆದಿತ್ಯರೂ, ರುದ್ರರು, ವಸುಗಳೂ, ಮಹರ್ಷಿಗಳೂ ಇದ್ದಾರೆ!”
ಹೀಗೆ ಹೇಳಿ ಪರವೀರಹ ಕೇಶವನು ಜೋರಾಗಿ ನಕ್ಕನು. ಆ ಮಹಾತ್ಮ ಶೌರಿಯು ನಗುತ್ತಿದ್ದಂತೆ ಅವನಿಂದ ಬೆಂಕಿಯಂತೆ ಪ್ರಕಾಶಮಾನರಾದ ಅಂಗುಷ್ಠ ಮಾತ್ರದ ತ್ರಿದಶರು ಹೊರಹೊಮ್ಮಿದರು. ಅವನ ಹಣೆಯಲ್ಲಿ ಬ್ರಹ್ಮನಿದ್ದನು. ಎದೆಯಲ್ಲಿ ರುದ್ರನು ಕಾಣಿಸಿಕೊಂಡನು. ಭುಜದಿಂದ ಲೋಕಪಾಲಕರು ಮತ್ತು ಮುಖದಿಂದ ಅಗ್ನಿಯು ಹೊರಬಂದರು. ಆದಿತ್ಯರು, ಸಾಧ್ಯರು, ವಸವರು, ಅಶ್ವಿನಿಯರು, ಮರುತರು, ಇಂದ್ರನೊಂದಿಗೆ ವಿಶ್ವೇದೇವರು, ಮತ್ತು ಯಕ್ಷ ಗಂಧರ್ವ ರಾಕ್ಷಸರ ರೂಪಗಳು ಕಂಡುಬಂದವು. ಅವನ ಎರಡು ತೋಳುಗಳಿಂದ ಸಂಕರ್ಷಣ-ಧನಂಜಯರು ಹೊರಬಂದರು. ಧನ್ವೀ ಅರ್ಜುನನು ಎಡಗಡೆಯಿಂದ ಮತ್ತ್ತು ಹಲಾಯುಧವನ್ನು ಹಿಡಿದ ರಾಮನು ಬಲಗಡೆಯಿಂದ. ಭೀಮ, ಯುಧಿಷ್ಠಿರ, ಮತ್ತು ಮಾದ್ರೀಪುತ್ರರಿಬ್ಬರು ಅವನ ಬೆನ್ನಿನಿಂದ ಮತ್ತು ಪ್ರದ್ಯುಮ್ನನೇ ಮೊದಲಾದ ಅಂಧಕ ವೃಷ್ಣಿಯರು ಮುಖದಿಂದ ಹೊರಬಂದು ಮಹಾಯುಧಗಳನ್ನು ಹಿಡಿದು ಕೃಷ್ಣನ ಎದಿರು ಬಂದರು. ಶಂಖ, ಚಕ್ರ, ಗದೆ, ಶಕ್ತಿ, ಶಾಂಙೃ, ಲಾಂಗಲ ಮತ್ತು ನಂದಕಗಳು ತೋರಿಸಿಕೊಂಡವು. ಇನ್ನೂ ಇತರ ಸರ್ವ ಆಯುಧಗಳು ಕೃಷ್ಣನ ಎಲ್ಲ ನಾನಾ ಬಾಹುಗಳಲ್ಲಿ ಬೆಳಗುತ್ತಿದ್ದವು. ಅವನ ಎರಡೂ ಕಣ್ಣುಗಳಿಂದ, ಮೂಗಿನಿಂದ ಮತ್ತು ಎರಡು ಕಿವಿಗಳಿಂದ ಸುತ್ತಲೂ ಮಹಾರೌದ್ರವಾದ ಹೊಗೆಯಿಂದ ಕೂಡಿದ ಬೆಂಕಿಯು ಪ್ರಕಾಶಿಸಿ ಹೊರಬಂದಿತು. ಅವನ ರೂಮಕೂಪಗಳಿಂದ ಸೂರ್ಯನಂತೆ ಮರೀಚಿಗಳು ಹೊರಸೂಸಿದವು. ದ್ರೋಣ, ಭೀಷ್ಮ, ಮಹಾಮತಿ ವಿದುರ, ಮಹಾಭಾಗ ಸಂಜಯ ಮತ್ತು ತಪೋಧನ ಋಷಿಗಳನ್ನು ಬಿಟ್ಟು ಅಲ್ಲಿದ್ದ ರಾಜರು ಆ ಮಹಾತ್ಮ ಕೇಶವನ ಘೋರರೂಪವನ್ನು ನೋಡಿ ಚೇತನಗಳು ನಡುಗಿ ಕಣ್ಣುಗಳನ್ನು ಮುಚ್ಚಿದರು. ಭಗವಾನ್ ಜನಾರ್ದನನು ಅವರಿಗೆ ದಿವ್ಯ ದೃಷ್ಟಿಯನ್ನು ನೀಡಿದ್ದನು. ಸಭಾತಲದಲ್ಲಿ ಮಾಧವನ ಆ ಮಹದಾಶ್ಚರ್ಯವನ್ನು ನೋಡಿ ದೇವದುಂದುಭಿಗಳು ಮೊಳಗಿದವು ಮತ್ತು ಪುಷ್ಪವೃಷ್ಠಿಯು ಸುರಿಯಿತು. ಇಡೀ ಭೂಮಿಯು ನಡುಗಿತು ಮತ್ತು ಸಾಗರವೂ ಕ್ಷೋಭೆಗೊಂಡಿತು. ಪಾರ್ಥಿವರೆಲ್ಲರೂ ಪರಮ ವಿಸ್ಮಿತರಾದರು. ಆಗ ಆ ಪುರುಷವ್ಯಾಘ್ರ ಅರಿಂದಮನು ತನ್ನದೇ ಸ್ವರೂಪವಾದ ಆ ದಿವ್ಯ, ಅದ್ಭುತ, ವಿಚಿತ್ರ ವೈಭವಯುಕ್ತ ರೂಪವನ್ನು ಹಿಂದೆ ತೆಗೆದುಕೊಂಡನು.
ಆಗ ಸಾತ್ಯಕಿ ಮತ್ತು ಹಾರ್ದಿಕ್ಯರಿಬ್ಬರ ಕೈಗಳನ್ನು ಹಿಡಿದು ಮಧುಸೂದನನು ಋಷಿಗಳಿಂದ ಅಪ್ಪಣೆಪಡೆದು ಹೊರಟನು. ನಾರದಾದಿ ಋಷಿಗಳು ಅಲ್ಲಿಯೇ ಅಂತರ್ಹಿತರಾದರು. ಆ ಕೋಲಾಹಲದಲ್ಲಿ ಅದೊಂದು ಅದ್ಭುತವಾಗಿಯೇ ನಡೆಯಿತು. ಅವನು ಹೋಗುತ್ತಿರುವುದನ್ನು ನೋಡಿ ರಾಜರೊಂದಿಗೆ ಕೌರವರು ಶತಕ್ರತುವನ್ನು ದೇವತೆಗಳು ಹೇಗೋ ಹಾಗೆ ಆ ನರವ್ಯಾಘ್ರನನ್ನು ಹಿಂಬಾಲಿಸಿದರು. ಆ ಸರ್ವ ರಾಜಮಂಡಲವನ್ನೂ ನಿರ್ಲಕ್ಷಿಸಿ ಅಮೇಯಾತ್ಮ ಶೌರಿಯು ಹೊಗೆಯಿಂದ ಹಿಂಬಾಲಿಸಲ್ಪಡುವ ಬೆಂಕಿಯಂತೆ ಹೊರ ಬಂದನು. ಆಗ ಶುಭ್ರವಾದ, ಗಂಟೆಗಳ ನಾದಮಾಡುತ್ತಿದ್ದ, ಹೇಮಜಾಲವಿಚಿತ್ರವಾದ, ಮಳೆಗಾಲದ ಮೋಡದಂತೆ ಜೋರಾಗಿ ಗುಡುಗುತ್ತ ಬಂದ, ವೈಯಾಘ್ರ ಚರ್ಮಗಳನ್ನು ಹೊದೆಸಿದ ಸೂಪಗಳಿರುವ, ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ಮಹಾ ರಥದಲ್ಲಿ ದಾರುಕನು ಕಾಣಿಸಿಕೊಂಡನು. ಹಾಗೆಯೇ ವೃಷ್ಣಿಗಳ ನಾಯಕ, ವೀರ ಹಾರ್ದಿಕ್ಯ ಮಹಾರಥಿ ಕೃತವರ್ಮನು ರಥದಲ್ಲಿ ಕುಳಿತು ಕಾಣಿಸಿಕೊಂಡನು. ರಥದಲ್ಲಿ ಕುಳಿತು ಹೊರಡುತ್ತಿದ್ದ ಅರಿಂದಮ ಶೌರಿಗೆ ಮಹಾರಾಜ ಧೃತರಾಷ್ಟ್ರನು ಪುನಃ ಹೇಳಿದನು: “ಜನಾರ್ದನ! ಪುತ್ರರ ಮೇಲೆ ನನಗೆ ಎಷ್ಟು ಬಲವಿದೆ ಎನ್ನುವುದನ್ನು ನೀನು ನೋಡಿದ್ದೀಯೆ. ಎಲ್ಲವೂ ನಿನ್ನ ಪ್ರತ್ಯಕ್ಷದಲ್ಲಿಯೇ ಇದೆ. ಪರೋಕ್ಷವಾಗಿ ಏನೂ ನಡೆಯುತ್ತಿಲ್ಲ. ಕುರುಗಳಲ್ಲಿ ಶಾಂತಿಯನ್ನು ಇಚ್ಛಿಸುವ, ಅದಕ್ಕಾಗಿ ಪ್ರಯತ್ನಿಸುತ್ತಿರುವ ನನ್ನ ಅವಸ್ಥೆಯು ನಿನಗೆ ತಿಳಿದೇ ಇದೆ. ನನ್ನ ಮೇಲೆ ಶಂಕಿಸಬಾರದು. ಪಾಂಡವರ ಕುರಿತು ನನಗೆ ಪಾಪತ್ವದ ಅಭಿಪ್ರಾಯವಿಲ್ಲ. ಏಕೆಂದರೆ ನಾನು ಸುಯೋಧನನಿಗೆ ಏನು ಹೇಳಿದೆನೆನ್ನುವುದು ನಿನಗೆ ತಿಳಿದೇ ಇದೆ. ನಾನು ಸರ್ವಯತ್ನಗಳಿಂದ ಶಾಂತಿಗೆ ಪ್ರಯತ್ನಪಟ್ಟಿದ್ದೇನೆ ಎನ್ನುವುದು ಎಲ್ಲ ಕುರುಗಳಿಗೂ ಪಾರ್ಥಿವ ರಾಜರಿಗೂ ತಿಳಿದಿದೆ.”
ಆಗ ಆ ಮಹಾಬಾಹುವು ಜನೇಶ್ವರ ಧೃತರಾಷ್ಟ್ರ, ದ್ರೋಣ, ಪಿತಾಮಹ ಭೀಷ್ಮ, ಕ್ಷತ್ತ, ಬಾಹ್ಲೀಕ ಮತ್ತು ಕೃಪರನ್ನು ಉದ್ದೇಶಿಸಿ ಹೇಳಿದನು: “ಕುರುಸಂಸದಿಯಲ್ಲಿ ಏನು ನಡೆಯಿತೋ ಅದು ನಿಮ್ಮ ಪ್ರತ್ಯಕ್ಷದಲ್ಲಿಯೇ ನಡೆಯಿತು. ಹೇಗೆ ಆ ಶಿಷ್ಟಾಚಾರಗಳಿಲ್ಲದ ಮೂಢನು ಸಿಟ್ಟಿನಿಂದ ಹಾರಿ ಮೇಲೇಳುತ್ತಿದ್ದನು! ಮಹೀಪತಿ ಧೃತರಾಷ್ಟ್ರನು ತನ್ನನ್ನು ಅನೀಶನೆಂದು ಕರೆದುಕೊಳ್ಳುವುದು ಸರಿಯಾದುದೇ! ನಿಮ್ಮೆಲ್ಲರನ್ನೂ ಬೀಳ್ಕೊಳ್ಳುತ್ತಿದ್ದೇನೆ. ಯುಧಿಷ್ಠಿರನ ಬಳಿ ಹೋಗುತ್ತೇನೆ.”
ಕೈಮುಗಿದು ರಥದಲ್ಲಿ ಕುಳಿತು ಹೊರಟ ಪುರುಷರ್ಷಭ ಶೌರಿಯನ್ನು ಭರತರ್ಷಭ ಪ್ರವೀರರಾದ, ಮಹೇಷ್ವಾಸರಾದ ಭೀಷ್ಮ, ದ್ರೋಣ, ಕ್ಷತ್ತ, ಧೃತರಾಷ್ಟ್ರ, ಬಾಹ್ಲೀಕ, ಅಶ್ವತ್ಥಾಮ, ವಿಕರ್ಣ ಮತ್ತು ಮಹಾರಥಿ ಯುಯುತ್ಸುವು ಹಿಂಬಾಲಿಸಿ ಹೋದರು. ಆಗ ಶುಭ್ರವಾದ, ಗಂಟೆಗಳ ನಾದಗೈಯುತ್ತಿದ್ದ ದೊಡ್ಡ ರಥದಲ್ಲಿ, ಕುರುಗಳು ನೋಡುತ್ತಿದ್ದಂತೆಯೇ ತನ್ನ ಸೋದರತ್ತೆಯನ್ನು ಕಾಣಲು ಹೊರಟನು.