ಶ್ರೀಕೃಷ್ಣ ರಾಯಭಾರ - ೨

ಹಸ್ತಿನಾಪುರಕ್ಕೆ ಶ್ರೀಕೃಷ್ಣನ ಪ್ರಯಾಣ

ರಾತ್ರಿಯು ಕಳೆದು ವಿಮಲ ಸೂರ್ಯನು ಉದಯಿಸಲು, ದಿವಾಕರನು ಮೃದುವಾಗಿ ಬೆಳಗುತ್ತಿದ್ದ ಮೈತ್ರ ಮುಹೂರ್ತವು ಸಂಪ್ರಾಪ್ತವಾಗಲು, ಕೌಮುದ ಮಾಸದಲ್ಲಿ, ರೇವತೀ ನಕ್ಷತ್ರದಲ್ಲಿ, ಶರದೃತುವು ಮುಗಿದು ಹೇಮಂತ ಋತುವು ಪ್ರಾರಂಭವಾಗುವಾಗ, ಸಸ್ಯಗಳು ಬೆಳೆಯನ್ನು ಹೊತ್ತು ಸುಖವಾಗಿರುವ ಕಾಲದಲ್ಲಿ ಸತ್ವವತರಲ್ಲಿ ಶ್ರೇಷ್ಠನು ಸಿದ್ಧನಾದನು. ವಾಸವನು ಋಷಿಗಳಿಂದ ಕೇಳುವಂತೆ ಹೊರಡುವಾಗ ಅವನು ಬ್ರಾಹ್ಮಣರ ಮಂಗಳ ಘೋಷಗಳನ್ನೂ, ಪುಣ್ಯಾಹ-ವಾಚನಗಳನ್ನೂ, ಸತ್ಯಗಳನ್ನೂ ಕೇಳಿದನು. ಜನಾರ್ದನನು ಬೆಳಗಿನ ಆಹ್ನೀಕವನ್ನು ಪೂರೈಸಿ, ಸ್ನಾನಮಾಡಿ, ಶುದ್ಧಿಯಾಗಿ, ಅಲಂಕೃತನಾಗಿ, ಸೂರ್ಯ ಮತ್ತು ಅಗ್ನಿಯ ಉಪಾಸನೆಯನ್ನು ಮಾಡಿದನು. ಹೋರಿಯ ಬೆನ್ನನ್ನು ಸವರಿ, ಬ್ರಾಹ್ಮಣರನ್ನು ವಂದಿಸಿ, ಅಗ್ನಿಯ ಪ್ರದಕ್ಷಿಣೆಯನ್ನು ಮಾಡಿ, ಮುಂದಿರುವ ಕಲ್ಯಾಣ ವಸ್ತುಗಳನ್ನು ನೋಡಿದನು. ಪಾಂಡವರ ಮಾತನ್ನು ಮನ್ನಿಸಿ ಜನಾರ್ದನನು ಕುಳಿತಿದ್ದ ಶಿನಿ ಸಾತ್ಯಕಿಗೆ ಹೇಳಿದನು: “ಶಂಖ-ಚಕ್ರಗಳನ್ನೂ ಜೊತೆಗೆ ಗದೆಯನ್ನೂ, ಈಟಿ ಶಕ್ತಿಗಳನ್ನೂ, ಸರ್ವ ಪ್ರಹರಗಳನ್ನೂ ರಥಕ್ಕೆ ಏರಿಸು! ಏಕೆಂದರೆ ದುರ್ಯೋಧನ, ಕರ್ಣ ಮತ್ತು ಸೌಬಲರು ದುಷ್ಟಾತ್ಮರು. ಬಲಶಾಲಿಯಾದವನು ಶತ್ರುವು ಎಷ್ಟೇ ಕೀಳಾಗಿದ್ದರೂ ಅವರನ್ನು ಪರಿಗಣಿಸದೇ ಇರಬಾರದು.”

ಆಗ ಕೇಶವನ ಆಜ್ಞೆಯನ್ನು ತಿಳಿದು ಸೇವಕರು ಸಡಗರದಿಂದ ಓಡಾಡುತ್ತಾ ಚಕ್ರ, ಗದೆಗಳಿಂದೊಡಗೂಡಿದ ರಥವನ್ನು ಕಟ್ಟಿದರು. ಆ ರಥವು ಕಲಾಗ್ನಿಯಂತೆ ಬೆಳಗುತ್ತಿತ್ತು ಮತ್ತು ಪಕ್ಷಿಯಂತೆ ಆಕಾಶದಲ್ಲಿ ಹಾರಿಹೋಗುವಂತಿತ್ತು. ಸಮಲಂಕೃತವಾದ ಅದರ ಎರಡು ಚಕ್ರಗಳು ಚಂದ್ರ ಮತ್ತು ಸೂರ್ಯರಂತೆ ಪ್ರಕಾಶಿಸುತ್ತಿದ್ದವು. ಅದರಲ್ಲಿ ಅರ್ಧಚಂದ್ರ, ಪೂರ್ಣಚಂದ್ರಗಳು, ಮೀನುಗಳು, ಮೃಗಪಕ್ಷಿಗಳು, ಹೂವುಗಳು, ವಿವಿಧ ಚಿತ್ರಗಳು, ಮತ್ತು ಮಣಿರತ್ನಗಳಿಂದ ಎಲ್ಲೆಡೆಯೂ ತುಂಬಿದ, ಬೃಹತ್ತಾದ, ನೋಡಲು ಸುಂದರವಾದ, ಮಣಿ-ಹೇಮ-ಚಿತ್ರಗಳನ್ನೊಡಗೂಡಿದ, ಉದಯಿಸುವ ಸೂರ್ಯನಂತಿರುವ, ಉತ್ತಮ ಧ್ವಜವೂ ಉತ್ತಮ ಪತಾಕೆಯೂ ಇದ್ದವು. ಶತ್ರುಗಳ ಯಶವನ್ನು ತೆಗೆದುಹಾಕುವ ಮತ್ತು ಯದುಗಳ ಆನಂದವನ್ನು ಹೆಚ್ಚಿಸುವ ಆ ಧ್ವಜವು ಸಂಸ್ಕರಿಸಿದ ಚಿನ್ನದಿಂದ ಮಾಡಲ್ಪಟ್ಟಿದ್ದು, ಹುಲಿಯ ಚರ್ಮದಿಂದ ಸುತ್ತಲ್ಪಟ್ಟಿತ್ತು. ಅದಕ್ಕೆ ಅವನ ಕುದುರೆಗಳು - ಸೈನ್ಯ, ಸುಗ್ರೀವ, ಮೇಘಪುಷ್ಪ, ಬಲಾಹಕಗಳನ್ನು ಸ್ನಾನಮಾಡಿಸಿ, ಚೆನ್ನಾಗಿ ಸಿದ್ಧಪಡಿಸಿ ಕಟ್ಟಿದರು. ಆ ಸುಘೋಷ ರಥಕ್ಕೆ ಗರುಡನಿರುವ ಧ್ವಜವನ್ನು ಏರಿಸಿ ಕೃಷ್ಣನ ಮಹಿಮೆಯನ್ನು ಇನ್ನೂ ಹೆಚ್ಚಿಸಿದರು. ಮೇರುಶಿಖರದಂತಿದ್ದ, ಮೇಘದುಂದುಭಿಗಳಂತೆ ಮೊಳಗುತ್ತಿದ್ದ ಆ ರಥವನ್ನು, ಪುಣ್ಯಾತ್ಮನು ವಿಮಾನವನ್ನು ಏರುವಂತೆ, ಶೌರಿಯು ಏರಿದನು. ಆಗ ಸಾತ್ಯಕಿಯನ್ನು ಹತ್ತಿಸಿಕೊಂಡು ಪುರುಷೋತ್ತಮನು ಭೂಮಿ ಅಂತರಿಕ್ಷಗಳನ್ನು ರಥಘೋಷದಿಂದ ಮೊಳಗಿಸುತ್ತಾ ಹೊರಟನು.

ಆ ಕ್ಷಣದಲ್ಲಿಯೇ ಹವಾಮಾನವು ಸ್ವಚ್ಛವಾಯಿತು, ಆಕಾಶವು ಮೋಡರಹಿತವಾಯಿತು. ಮಂಗಳ ಗಾಳಿಯು ಬೀಸಿತು ಮತ್ತು ಮೇಲೆದ್ದ ಧೂಳು ಪ್ರಶಾಂತವಾಯಿತು. ಮಂಗಲ ಮೃಗಪಕ್ಷಿಗಳು ವಾಸುದೇವನನ್ನು ಅವನ ಪ್ರಯಾಣದಲ್ಲಿ ಅನುಸರಿಸಿ ಬಲಗಡೆಯಿಂದ ಪ್ರದಕ್ಷಿಣೆ ಮಾಡಿ ಹೋದವು. ಮಂಗಲವನ್ನು ಸೂಚಿಸುವಂತೆ ಕೂಗುತ್ತಾ ಸಾರಸಗಳು, ಹಂಸಗಳು ಮತ್ತು ಮರಕುಟುಕ ಪಕ್ಷಿಗಳು ಮಧುಸೂದನನನ್ನು ಎಲ್ಲಕಡೆಯಿಂದ ಸುತ್ತುವರೆದವು. ಮಹಾಹೋಮಗಳಲ್ಲಿ ಮಂತ್ರಾಹುತಿಯನ್ನು ಹಾಕಿ, ಉರಿಯುತ್ತಿದ್ದ ಪಾವಕನು ಹೊಗೆಯಿಲ್ಲದೇ ಪ್ರದಕ್ಷಿಣವಾಗಿ ಉರಿಯತೊಡಗಿದನು. ವಸಿಷ್ಠ, ವಾಮದೇವ, ಭೂರಿದ್ಯುಮ್ನ, ಗಯ, ಕ್ರಥ, ಶುಕ್ರ, ನಾರದ, ವಾಲ್ಮೀಕಾ, ಮರುತ, ಕುಶಿಕ, ಭೃಗು ಮೊದಲಾದ ಬ್ರಹ್ಮರ್ಷಿ-ದೇವರ್ಷಿಗಳು ಯದುಸುಖಾವಹ, ವಾಸವಾನುಜ ಕೃಷ್ಣನನ್ನು ಪ್ರದಕ್ಷಿಣೆಮಾಡಿದರು.

ಈ ರೀತಿ ಮಹಾಭಾಗ ಮಹರ್ಷಿ-ಸಾಧುಗಣಗಳಿಂದ ಪೂಜಿತನಾಗಿ ಕೃಷ್ಣನು ಕುರುಗಳ ಸದನದೆಡೆಗೆ ಪ್ರಯಾಣಿಸಿದನು. ಮುಂದೆ ಹೋಗುತ್ತಿದ್ದ ಅವನನ್ನು ಕುಂತೀಪುತ್ರ ಯುಧಿಷ್ಠಿರ, ಭೀಮಸೇನ-ಅರ್ಜುನರು, ಪಾಂಡವ ಮಾದ್ರೀಪುತ್ರರಿಬ್ಬರು, ವಿಕ್ರಾಂತ ಚೇಕಿತಾನ, ಚೇದಿಪ ಧೃಷ್ಟಕೇತು, ದ್ರುಪದ, ಕಾಶಿರಾಜ, ಮಹಾರಥಿ ಶಿಖಂಡೀ, ದೃಷ್ಟದ್ಯುಮ್ನ, ಪುತ್ರರೊಂದಿಗೆ ವಿರಾಟ, ಕೇಕಯ ಎಲ್ಲರೂ ಜೊತೆಗೂಡಿ ಹಿಂಬಾಲಿಸಿದರು. ಕ್ಷತ್ರಿಯರು ಕ್ಷತ್ರಿಯರ್ಷಭನ ಯಶಸ್ಸಿಗೆ ಸಹಾಯಮಾಡಲು ಹೊರಟರು. ಗೋವಿಂದನನ್ನು ಸ್ವಲ್ಪ ದೂರ ಹಿಂಬಾಲಿಸಿದ ಧರ್ಮರಾಜ ಕೌಂತೇಯ ಯುಧಿಷ್ಠಿರನು ರಾಜರ ಸಮಕ್ಷಮದಲ್ಲಿ ದ್ಯುತಿಮಾನ, ಕಾಮ, ಭಯ, ಲೋಭ ಮತ್ತು ಅರ್ಥದ ಕಾರಣದಿಂದ ಅನ್ಯಾಯವಾಗಿ ನಡೆದುಕೊಳ್ಳದೇ ಇದ್ದ, ಸ್ಥಿರಬುದ್ಧಿಯನ್ನು ಹೊಂದಿದ, ಎಂದೂ ಲೋಲುಪನಾಗಿರದ, ಧರ್ಮಜ್ಞ, ಧೃತಿವಂತ, ಸರ್ವಭೂತಗಳಲ್ಲಿ ಪ್ರಾಜ್ಞನಾದ, ಸರ್ವಭೂತಗಳ ಈಶ್ವರ, ದೇವದೇವ, ಪ್ರತಾಪವಾನ್, ಸರ್ವಗುಣಸಂಪನ್ನ, ಶ್ರೀವತ್ಸಕೃತಲಕ್ಷಣ, ಕೇಶವನನ್ನು ಆಲಂಗಿಸಿ ಈ ಮಾತುಗಳನ್ನಾಡಿದನು:

“ಮಾಧವ! ಜನಾರ್ದನ! ಬಾಲ್ಯದಿಂದಲೂ ಅಬಲೆಯಾಗಿದ್ದುಕೊಂಡು ನಮ್ಮನ್ನು ಬೆಳೆಸಿದ, ಉಪವಾಸ ತಪಸ್ಸು ಮತ್ತು ಇತರ ವ್ರತಗಳಲ್ಲಿ ಯಾವಾಗಲೂ ನಿರತಳಾಗಿರುವ, ದೇವ-ಅತಿಥಿ ಪೂಜೆಗಳಲ್ಲಿ ಮತ್ತು ಹಿರಿಯರ ಶುಶ್ರೂಷಣೆಯಲ್ಲಿ ನಿರತಳಾಗಿರುವ, ಮಕ್ಕಳನ್ನು ಪ್ರೀತಿ-ವಾತ್ಸಲ್ಯದಿಂದ ಕಾಣುವ, ನಮ್ಮ ಪ್ರಿಯೆಯಾದ, ಸುಯೋಧನನ ಭಯದಿಂದ ನಮ್ಮನ್ನು ರಕ್ಷಿಸಿದ, ಮಹಾ ಮೃತ್ಯುಭಯದಿಂದ ಮುಳುಗುವವರನ್ನು ಹಡಗು ರಕ್ಷಿಸುವಂತೆ ರಕ್ಷಿಸಿದ, ದುಃಖಕ್ಕೆ ಅನರ್ಹಳಾಗಿದ್ದರೂ ನಮಗೋಸ್ಕರ ಸತತವೂ ದುಃಖವನ್ನೇ ಅನುಭವಿಸಿದ ಅವಳ ಆರೋಗ್ಯವನ್ನು ವಿಚಾರಿಸು. ಪುತ್ರರ ಕುರಿತು ಶೋಕಸಂತಪ್ತಳಾದ ಅವಳನ್ನು ಚೆನ್ನಾಗಿ ಸಂತವಿಸು. ಪಾಂಡವರು ಚೆನ್ನಾಗಿದ್ದಾರೆಂದು ಹೇಳುತ್ತಾ ಅವಳನ್ನು ಆಲಂಗಿಸು. ಮದುವೆಯಾದಾಗಿನಿಂದ ಅವಳು ಮಾವನ ಮನೆಯವರಿಂದ ದುಃಖ-ಮೋಸಗಳನ್ನಲ್ಲದೇ ಬೇರೆ ಏನನ್ನೂ ಕಾಣದೇ ದುಃಖಿಸಿದ್ದಾಳೆ. ಅವಳ ದುಃಖವನ್ನು ಕಳೆಯುವ ಹಾಗೆ ನಾನು ಮಾಡುವ, ತಾಯಿಯ ಕಷ್ಟಗಳ ಬದಲಾಗಿ ಸುಖವನ್ನು ನೀಡುವ ಕಾಲವು ಎಂದಾದರೂ ಬರುವುದಿದೆಯೇ? ನಾವು ಹೊರಡುವಾಗ ಅವಳು ದೀನಳಾಗಿ, ಪುತ್ರರ ಮೇಲಿನ ಆಸೆಯಿಂದ ನಮ್ಮ ಹಿಂದೆ ಓಡಿ ಬಂದಳು. ಆದರೂ ನಾವು ರೋದಿಸುತ್ತಿರುವ ಅವಳನ್ನು ಅಲ್ಲಿಯೇ ಬಿಟ್ಟು ವನಕ್ಕೆ ಬಂದೆವು. ಪುತ್ರರಿಗಾಗಿ ದುಃಖಿತಳಾಗಿ, ಇತರರಿಂದ ನೋಡಿಕೊಳ್ಳಲ್ಪಟ್ಟ ತಾಯಿಯಿರುವಾಗ ದುಃಖದಿಂದ ಜೀವ ತ್ಯಜಿಸುವುದೂ ಕಷ್ಟವಾಗುತ್ತದೆ! ನನ್ನ ವಚನದಂತೆ ಅವಳನ್ನು ಅಭಿವಂದಿಸು. ಹಾಗೆಯೇ ವೃದ್ಧರಾಜ ಕೌರವ್ಯ ಧೃತರಾಷ್ಟ್ರ, ಭೀಷ್ಮ, ದ್ರೋಣ, ಕೃಪ, ಮಹಾರಾಜಾ ಬಾಹ್ಲೀಕ, ದ್ರೌಣಿ, ಸೋಮದತ್ತ, ಮತ್ತೆ ಎಲ್ಲ ಭಾರತರು, ಮಹಾಪ್ರಾಜ್ಞ, ಕುರುಗಳ ಮಂತ್ರಧಾರಿಣಿ, ಅಗಾಧಬುದ್ಧಿ, ದರ್ಮಜ್ಞ ವಿದುರನನ್ನು ಕೂಡ ಅಭಿವಂದಿಸು.”

ಹೀಗೆ ಅಲ್ಲಿ ರಾಜರ ಮಧ್ಯದಲ್ಲಿ ಕೇಶವನಿಗೆ ಹೇಳಿ, ಕೃಷ್ಣನಿಗೆ ಪ್ರದಕ್ಷಿಣೆಮಾಡಿ ಆಜ್ಞೆಯನ್ನು ಪಡೆದು ಯುಧಿಷ್ಠಿರನು ಹಿಂದಿರುಗಿದನು. ಆದರೆ ಬೀಭತ್ಸುವು ಸಖನೊಂದಿಗೆ ಮುಂದುವರೆದು ಪುರುಷರ್ಷಭ, ಪರವೀರಘ್ನ, ಅಪರಾಜಿತ ದಾಶಾರ್ಹನಿಗೆ ಹೇಳಿದನು: “ವಿಭೋ! ಗೋವಿಂದ! ಹಿಂದೆ ನಾವು ಮಂತ್ರಾಲೋಚನೆ ಮಾಡಿ ನಿಶ್ಚಯಿಸಿದ ಅರ್ಧರಾಜ್ಯದ ವಿಷಯವು ರಾಜರೆಲ್ಲರಿಗೂ ತಿಳಿದಿದೆ. ಒಂದು ವೇಳೆ ಅವರು ಅದನ್ನು ಗೌರವಿಸಿ, ತಿರಸ್ಕರಿಸದೇ ಕೊಡುತ್ತಾರೆಂದಾದರೆ ಅದು ನನಗೆ ಮೆಚ್ಚುಗೆಯಾಗುತ್ತದೆ ಮತ್ತು ಅವರನ್ನು ಮಹಾಭಯದಿಂದ ಬಿಡುಗಡೆಗೊಳಿಸುತ್ತದೆ. ಆದರೆ ಧಾರ್ತರಾಷ್ಟ್ರನು ಉಪಾಯವನ್ನು ತಿಳಿಯದೇ ಬೇರೆಯದನ್ನು ಮಾಡಿದರೆ, ನಾನು ಕ್ಷತ್ರಿಯರು ಇಲ್ಲದಂತೆ ಮಾಡುತ್ತೇನೆ.”

ಪಾಂಡವನು ಹೀಗೆ ಹೇಳಲು ವೃಕೋದರನು ಪರಮ ಹರ್ಷಿತನಾದನು. ಕ್ರೋಧಾವೇಶಗೊಂಡು ಪುನಃ ಪುನಃ ಆ ಪಾಂಡವನು ನಡುಗುತ್ತಿದ್ದನು. ಧನಂಜಯನ ಮಾತನ್ನು ಕೇಳಿ ಹರ್ಷೋತ್ಸಾಹಿಯಾದ ಕೌಂತೇಯನು ನಡುಗುತ್ತಾ ಜೋರಾಗಿ ಗರ್ಜಿಸಿದನು. ಅವನ ಆ ಕೂಗನ್ನು ಕೇಳಿ ಧನ್ವಿಗಳು ನಡುಗಿದರು, ಮತ್ತು ಎಲ್ಲ ವಾಹನಗಳೂ ಮಲ ಮೂತ್ರಗಳನ್ನು ವಿಸರ್ಜಿಸಿದವು. ಕೇಶವನಿಗೆ ಈ ರೀತಿ ತನ್ನ ನಿಶ್ಚಯವನ್ನು ಹೇಳಿ ಪಾರ್ಥನು ಜನಾರ್ದನನನ್ನು ಆಲಂಗಿಸಿ, ಅಪ್ಪಣೆಪಡೆದು, ಹಿಂದಿರುಗಿದನು.

ಆ ಎಲ್ಲ ರಾಜರೂ ಹಿಂದಿರುಗಿ ಹೋದ ನಂತರ ಜನಾರ್ದನನು ಸೈನ್ಯ-ಸುಗ್ರೀವ ವಾಹನನಾಗಿ ರೆಕ್ಕೆಗಳಿಂದ ಹಾರಿಹೋಗುತ್ತಿರುವವನಂತೆ ಕಂಡನು. ದಾರುಕನಿಂದ ಪ್ರಚೋದಿತವಾದ ವಾಸುದೇವನ ಆ ಕುದುರೆಗಳು ದಾರಿಯನ್ನು ಬಿಟ್ಟು ಆಕಾಶಕ್ಕೆ ಏರಿ ಹೋಗುತ್ತಿವೆಯೋ ಎಂಬಂತೆ ಸಾಗುತ್ತಿದ್ದವು. ಆಗ ಆ ಮಹಾಬಾಹು ಕೇಶವನು ದಾರಿಯ ಎರಡೂ ಕಡೆಗಳಲ್ಲಿ ನಿಂತಿದ್ದ ಬ್ರಹ್ಮಶ್ರೀಯಿಂದ ಬೆಳಗುತ್ತಿದ್ದ ಋಷಿಗಳನ್ನು ನೋಡಿದನು. ತಕ್ಷಣವೇ ಜನಾರ್ದನನು ರಥದಿಂದಿಳಿದು ನಮಸ್ಕರಿಸಿ, ಯಥಾವತ್ತಾಗಿ ಋಷಿಗಳನ್ನು ಪೂಜಿಸಿ ಮಾತನಾಡಿದನು: “ಲೋಕಗಳಲ್ಲಿ ಕುಶಲವೇ? ಧರ್ಮವು ನೆಲೆಗೊಂಡಿದೆಯೇ? ಮೂರೂ ವರ್ಣದವರೂ ಬ್ರಾಹ್ಮಣರ ಶಾಸನದಡಿಯಲ್ಲಿದ್ದಾರೆಯೇ?” ಅವರನ್ನು ಪೂಜಿಸಿ ಮಧುಸೂದನು ಮುಂದುವರೆಸಿದನು: “ಭಗವಂತರೇ! ನಿಮ್ಮ ಸಿದ್ಧಿಯು ಎಲ್ಲಿಯವರೆಗೆ ಬಂದಿದೆ? ಯಾವ ಮಾರ್ಗವು ನಿಮ್ಮನ್ನು ಇಲ್ಲಿಯವರೆಗೆ ಕರೆತಂದಿತು? ನೀವುಗಳು ಏನಾದರೂ ಆಗಬೇಕೆಂದು ಬಯಸಿದ್ದೀರೇ? ನಾನು ನಿಮಗೋಸ್ಕರ ಏನು ಮಾಡಲಿ? ಭಗವಂತರಾದ ನೀವು ಯಾವ ಉದ್ದೇಶದಿಂದ ಈ ಭೂಮಿಗೆ ಬಂದಿದ್ದೀರಿ?”

ಜಾಮದಗ್ನಿಯು ಮಧುಸೂದನನ ಬಳಿಸಾರಿ, ಹಿಂದೆ ಉತ್ತಮ ಕಾರ್ಯಗಳಲ್ಲಿ ಸಖನಾಗಿದ್ದ ಗೋವಿಂದನನ್ನು ಆಲಂಗಿಸಿ ಹೇಳಿದನು: “ದಾಶಾರ್ಹ! ಪುಣ್ಯಕೃತ ದೇವರ್ಷಿಗಳೂ, ಬಹುಶ್ರುತ ಬ್ರಾಹ್ಮಣರೂ, ರಾಜರ್ಷಿಗಳೂ, ಮಾನಯಂತ ತಪಸ್ವಿಗಳೂ ಹಿಂದೆ ನಡೆದಿದ್ದ ದೇವಾಸುರರ ಯುದ್ಧವನ್ನು ನೋಡಿದ್ದರು. ಈಗ ಅವರು ಇಲ್ಲಿ ಎಲ್ಲೆಡೆಯಿಂದ ಬಂದು ಸೇರಿರುವ ಕ್ಷತ್ರಿಯ ಪಾರ್ಥಿವರನ್ನು, ರಾಜರ ಸಭಾಸದರನ್ನೂ ಜನಾರ್ದನ ನಿನ್ನ ಸತ್ಯವನ್ನೂ ನೋಡಲು ಬಯಸಿದ್ದಾರೆ. ಈ ಮಹಾದೃಶ್ಯವನ್ನು ನೋಡಲು ನಾವು ಹೋಗುತ್ತಿದ್ದೇವೆ! ಕುರುರಾಜರ ಮಧ್ಯದಲ್ಲಿ ನೀನು ಹೇಳುವ ಧರ್ಮಾರ್ಥಸಹಿತ ಮಾತುಗಳನ್ನು ಕೇಳಲು ಬಯಸುತ್ತೇವೆ. ಭೀಷ್ಮ, ದ್ರೋಣಾದಿಗಳು, ಮಹಾಮತಿ ವಿದುರ ಮತ್ತು ಯಾದವಶಾರ್ದೂಲ ನೀನೂ ಕೂಡ ಸಭೆಯಲ್ಲಿ ಸೇರುವಿರಿ! ಅಲ್ಲಿ ನಿನ್ನ ಮತ್ತು ಅವರ ಸತ್ಯ-ಶುಭ ವಾಕ್ಯಗಳನ್ನು ಕೇಳಲು ಬಯಸುತ್ತೇವೆ. ಮುಂದೆಸಾಗು! ನಾವು ಪುನಃ ನಿನ್ನನ್ನು ಕಾಣುತ್ತೇವೆ. ಅವಿಘ್ನನಾಗಿ ಪ್ರಯಾಣಿಸು. ಸಭೆಗೆ ಬಂದು ನಿನ್ನನ್ನು ಕಾಣುತ್ತೇವೆ.”

ಪ್ರಯಾಣಿಸುತ್ತಿದ್ದ ದೇವಕೀಪುತ್ರನನ್ನು ಹತ್ತು ಪರವೀರಹ ಮಹಾರಥಿ ಮಹಾಬಾಹುಗಳು ಶಸ್ತ್ರಗಳನ್ನು ಹಿಡಿದು, ಸಹಸ್ರ ಪದಾತಿಗಳು ಮತ್ತು ವಾಹಕರು, ಇನ್ನೂ ನೂರಾರು ಸೇವಕರು ವಿಪುಲ ಭೋಜ್ಯವಸ್ತುಗಳನ್ನು ತೆಗೆದುಕೊಂಡು ಅನುಸರಿಸಿದರು. ಆ ಮಹಾತ್ಮನು ಪ್ರಯಾಣಿಸುವಾಗ ಅನೇಕ ಅದ್ಭುತ, ದಿವ್ಯ, ದೈವವನ್ನು ಸೂಚಿಸುವ ಉತ್ಪಾತಗಳು ಕಾಣಿಸಿದವು. ಮೋಡವಿಲ್ಲದ ಆಕಾಶದಲ್ಲಿ ಗುಡುಗು ಸಿಡಿಲುಗಳು ಹುಟ್ಟಿದವು. ಮೋಡವಿಲ್ಲದೇ ಪರ್ಜನ್ಯನು ಅವನ ಹಿಂದೆ ಭಾರೀ ಮಳೆಯನ್ನು ಸುರಿಸಿದನು. ಪೂರ್ವಾಭಿಮುಖವಾಗಿ ಹರಿಯುತ್ತಿದ್ದ ಮಹಾನದಿಗಳು, ಸಿಂಧು ಸತ್ತಮಗಳು ತಮ್ಮ ದಿಕ್ಕನ್ನು ಬದಲಾಯಿಸಿ ಹರಿಯತೊಡಗಿದವು. ಎಲ್ಲ ದಿಕ್ಕುಗಳೂ ವಿಪರೀತವಾಗಿ, ಯಾವಕಡೆ ಯಾವ ದಿಕ್ಕು ಎನ್ನುವುದೇ ತಿಳಿಯದಂತಾಯಿತು. ಅಗ್ನಿಯು ಉರಿದನು, ಭೂಮಿಯು ಕಂಪಿಸಿತು, ನೂರಾರು ಬಾವಿ ಕೊಡಗಳಿಂದ ನೀರು ಉಕ್ಕಿ ಹರಿಯಿತು. ಆಗ ಈ ಜಗತ್ತನ್ನೆಲ್ಲವನ್ನೂ ಕತ್ತಲೆಯು ಆವರಿಸಿತು. ಧೂಳಿನಿಂದಾಗಿ ದಿಕ್ಕುಗಳ್ಯಾವುದು ಎಂದು ತಿಳಿಯದಂತಾಯಿತು. ಆಕಾಶದಲ್ಲಿ ಮಹಾ ಶಬ್ಧವು ಕೇಳಿಬಂದಿತು, ಆದರೆ ಶರೀರವು ಎಲ್ಲಿಯೂ ಕಾಣಿಸಲಿಲ್ಲ. ಎಲ್ಲ ದೇಶಗಳಲ್ಲಿ ಆ ಅದ್ಭುತವು ನಡೆಯಿತು. ಜೋರಾಗಿ ಭಯಂಕರ ಶಬ್ಧಮಾಡುತ್ತಿದ್ದ ಭಿರುಗಾಳಿಯು ದಕ್ಷಿಣ ಪಶ್ಚಿಮದ ಕಡೆಯಿಂದ ಹಸ್ತಿನಾಪುರದ ಮೇಲೆ, ಹಲವಾರು ವೃಕ್ಷವನ್ನು ಕೆಡವುತ್ತಾ, ಬೀಸಿತು.

ಎಲ್ಲೆಲ್ಲಿ ವಾರ್ಷ್ಣೇಯನು ಹೋದನೋ ಅಲ್ಲಲ್ಲಿ ಸುಖವಾದ ಗಾಳಿಯು ಬೀಸಿತು, ಎಲ್ಲವೂ ಸರಿಯಾಗಿದ್ದಿತು. ಪುಷ್ಪವೃಷ್ಟಿಯಾಯಿತು. ಬಹಳಷ್ಟು ಕಮಲಗಳಿದ್ದವು. ದಾರಿಯು ತಾನಾಗಿಯೇ ಕಲ್ಲು ಮುಳ್ಳುಗಳಿಲ್ಲದೇ ಏರುತಗ್ಗುಗಳಿಲ್ಲದೇ ಸಮನಾಗುತ್ತಿತ್ತು. ಆ ಮಹಾಭುಜನು ಹೋದಲ್ಲೆಲ್ಲ ಬ್ರಾಹ್ಮಣರು ಅವನನ್ನು ಸುಮನಸ್ಸಿನಿಂದ ಮಧುಪರ್ಕವನ್ನಿತ್ತು ಅರ್ಚಿಸಿದರು ಮತ್ತು ಅವನು ಅವರಿಗೆ ಸಂಪತ್ತನ್ನು ಕರುಣಿಸಿದನು. ಆ ಸರ್ವಭೂತಹಿತ ರತ ಮಹಾತ್ಮನ ಮೇಲೆ ದಾರಿಯಲ್ಲಿ ಸ್ತ್ರೀಯರು ಗುಂಪುಗೂಡಿ ಸುಗಂಧಿತ ವನ ಪುಷ್ಪಗಳನ್ನು ಸುರಿಸಿದರು. ಅವನು ರಮ್ಯವಾದ, ಸರ್ವಸಸ್ಯಗಳಿಂದ ತುಂಬಿದ ಸುಖದಿಂದಿರುವ, ಪರಮ ಧರ್ಮಿಷ್ಠವಾದ ಶಾಲಿಭವನಕ್ಕೆ ಬಂದನು. ಬಹಳಷ್ಟು ಪ್ರಾಣಿಗಳನ್ನೂ, ಗ್ರಾಮಗಳನ್ನೂ, ರಮ್ಯವಾದ ಹೃದಯವನ್ನು ಸಂತೋಷಗೊಳಿಸುವ ಪುರಗಳನ್ನು ವಿವಿಧರಾಷ್ಟ್ರಗಳನ್ನು ದಾಟಿದನು. ನಿತ್ಯವೂ ಸಂತೋಷದಲ್ಲಿದ್ದ, ಸುಮನಸ್ಕರಾಗಿದ್ದ, ಭಾರತರಿಂದ ರಕ್ಷಿತರಾಗಿದ್ದ, ಶತ್ರುಗಳ ಭಯದಿಂದ ಉದ್ವಿಗ್ನರಾಗಿರದ, ಅನಾಮಯರಾದ, ಸುಶಿಕ್ಷಿತರಾದ, ಪುರನಿವಾಸಿ ಜನರು ಉಪಪ್ಲವದಿಂದ ಬರುತ್ತಿದ್ದ ವಿಶ್ವಕ್ಸೇನನನ್ನು ನೋಡಲು ದಾರಿಯಲ್ಲಿ ಗುಂಪಾಗಿ ಸೇರಿ ನಿಂತಿದ್ದರು. ಅವರೆಲ್ಲರೂ ತಮ್ಮ ದೇಶಕ್ಕೆ ಅತಿಥಿಯಾಗಿ ಬಂದಿದ್ದ, ಪೂಜೆಗೆ ಅರ್ಹನಾದ ಅಗ್ನಿಯಂತೆ ಬೆಳಗುತ್ತಿದ್ದ ಪ್ರಭುವನ್ನು ಅರ್ಚಿಸಿದರು.

ಸ್ವಚ್ಛವಾದ ಸೂರ್ಯನು ಕೆಂಪು ಕಿರಣಗಳನ್ನು ಪಸರಿಸುವ ಸಮಯಕ್ಕೆ ಪರವೀರಹ ಕೇಶವನು ವೃಕಸ್ಥಲವನ್ನು ಸೇರಿದನು. ರಥದಿಂದ ಇಳಿದು, ಯಥಾವಿಧಿಯಾಗಿ ಶೌಚವನ್ನು ಮಾಡಿ, ರಥವನ್ನು ಕಳಚಲು ಆದೇಶವನ್ನಿತ್ತು ಸಂಧ್ಯಾವಂದನೆಯಲ್ಲಿ ತೊಡಗಿದನು. ದಾರುಕನಾದರೋ ಕುದುರೆಗಳನ್ನು ಬಿಚ್ಚಿ ಶಾಸ್ತ್ರೋಕ್ತವಾಗಿ ಪರಿಚರ್ಯವನ್ನು ಮಾಡಿ, ಅವರ ಕವಚಗಳೆಲ್ಲವನ್ನೂ ತೆಗೆದು ವಿಶ್ರಾಂತಿಗೆಂದು ಬಿಟ್ಟನು. ಅವೆಲ್ಲವನ್ನು ಮುಗಿಸಿದ ನಂತರ ಅವನಿಗೆ ಮಧುಸೂದನನು ಹೇಳಿದನು: “ಯುಧಿಷ್ಠಿರನ ಕಾರ್ಯಕ್ಕೆ ಹೊರಟಿರುವ ನಾವು ಈ ರಾತ್ರಿಯನ್ನು ಇಲ್ಲಿಯೇ ಕಳೆಯೋಣ!”

ಅವನ ಅಭಿಪ್ರಾಯವನ್ನು ತಿಳಿದ ಜನರು ಬೇಗನೆ ಚೆನ್ನಾದ ಅನ್ನ ಪಾನೀಯಗಳನ್ನು ಸಿದ್ಧಪಡೆಸಿದರು. ಆ ಗ್ರಾಮದಲ್ಲಿದ್ದ ಆರ್ಯ, ಕುಲೀನ, ವಿನಯಶೀಲ, ಬ್ರಾಹ್ಮಣವೃತ್ತಿಯನ್ನು ಅನುಸರಿಸುತ್ತಿದ್ದ ಪ್ರಧಾನ ಬ್ರಾಹ್ಮಣರು ಬಂದು ಮಹಾತ್ಮ, ಅರಿಂದಮ, ಕೇಶವನನ್ನು ಯಥಾನ್ಯಾಯವಾಗಿ ಪೂಜಿಸಿ ಅಶೀರ್ವಚನ, ಮಂಗಳಗಳನ್ನು ನೀಡಿದರು. ಸರ್ವಲೋಕದಲ್ಲಿ ಪೂಜಿತನಾದ ದಾಶಾರ್ಹನನ್ನು ಪೂಜಿಸಿ ಆ ಮಹಾತ್ಮನಿಗೆ ತಮ್ಮ ರತ್ನವಂತೀ ಮನೆಗಳನ್ನು ಉಳಿಯಲು ಒಪ್ಪಿಸಿದರು. ಆಯಿತೆಂದು ಅವರಿಗೆ ಹೇಳಿ ಪ್ರಭುವು ಅವರನ್ನು ಯಥಾರ್ಹವಾಗಿ ಸತ್ಕರಿಸಿ ಅವರ ಮನೆಗಳಿಗೆ ಹೋಗಿ ಅವರೊಂದಿಗೆ ಹಿಂದಿರುಗಿದನು. ಅಲ್ಲಿ ಬ್ರಾಹ್ಮಣರಿಗೆ ಸಮೃಷ್ಟ ಭೋಜನವನ್ನಿತ್ತು, ಅವರೊಂದಿಗೆ ತಾನೂ ಉಂಡು, ರಾತ್ರಿಯನ್ನು ಸುಖವಾಗಿ ಕಳೆದನು.

ಹಸ್ತಿನಾಪುರದಲ್ಲಿ ಶ್ರೀಕೃಷ್ಣನ ಆಗಮನಕ್ಕೆ ಸಿದ್ಧತೆ

ಮಧುಸೂದನನು ಬರುತ್ತಿದ್ದಾನೆ ಎನ್ನುವುದನ್ನು ದೂತರಿಂದ ತಿಳಿದ ಧೃತರಾಷ್ಟ್ರನು ಮಹಾಭುಜ ಭೀಷ್ಮನನ್ನು ಪೂಜಿಸಿ, ದ್ರೋಣ, ಸಂಜಯ, ಮಹಾಮತಿ ವಿದುರ, ಮತ್ತು ಅಮಾತ್ಯರೊಂದಿಗೆ ರೋಮ ಹರ್ಷಿತನಾಗಿ ದುರ್ಯೋಧನನಿಗೆ ಹೇಳಿದನು: “ಕುರುನಂದನ! ಅದ್ಭುತವೂ ಮಹದಾಶ್ಚರ್ಯವೂ ಆದುದು ಕೇಳಿಬರುತ್ತಿದೆ! ಮನೆಮನೆಗಳಲ್ಲಿ ಸ್ತ್ರೀಯರು, ಬಾಲಕರು, ವೃದ್ಧರು ಹೇಳುತ್ತಿದ್ದಾರೆ. ಕೆಲವರು ಭಕ್ತಿಯಿಂದ ಹೇಳುತ್ತಿದ್ದಾರೆ, ಇತರರು ಗುಂಪುಗಳಲ್ಲಿ ಹೇಳುತ್ತಿದ್ದಾರೆ, ಚೌಕಗಳಲ್ಲಿ ಸಭೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ವಾರ್ತೆಯು ಕೇಳಿಬರುತ್ತಿದೆ. ಪಾಂಡವರಿಗಾಗಿ ಪರಾಕ್ರಮಿ ದಾಶಾರ್ಹನು ಬರುತ್ತಿದ್ದಾನೆ. ಆ ಮಧುಸೂದನನನ್ನು ಸರ್ವಥಾ ಗೌರವಿಸಬೇಕು, ಪೂಜಿಸಬೇಕು. ಅವನಲ್ಲಿಯೇ ಲೋಕದ ಯಾತ್ರೆಯು ನಡೆಯುತ್ತದೆ. ಅವನೇ ಭೂತಗಳ ಈಶ್ವರ! ಆ ಮಾಧವನಲ್ಲಿ ಧೃತಿ, ವೀರ್ಯ, ಪ್ರಜ್ಞೆ ಮತ್ತು ಓಜಸ್ಸುಗಳು ನೆಲೆಸಿವೆ. ಆ ನರಶ್ರೇಷ್ಠನನ್ನು ಮನ್ನಿಸಬೇಕು. ಅವನೇ ಸನಾತನ ಧರ್ಮ. ಪೂಜಿಸಿದರೆ ಸುಖವನ್ನು, ಪೂಜಿಸದಿದ್ದರೆ ಅಸುಖವನ್ನು ತರುತ್ತಾನೆ. ನಮ್ಮ ಉಪಚಾರಗಳಿಂದ ಅರಿಂದಮ ದಾಶಾರ್ಹನು ತೃಪ್ತನಾದರೆ, ನಮ್ಮೆಲ್ಲ ರಾಜರ ಸರ್ವ ಕಾಮನೆಗಳನ್ನೂ ಪಡೆಯುತ್ತೇವೆ. ಇಂದೇ ಅವನ ಪೂಜೆಗೆ ಸಿದ್ಧಗೊಳಿಸು. ದಾರಿಯಲ್ಲಿ ಸರ್ವಕಾಮಗಳನ್ನು ಪೂರೈಸಬಲ್ಲ ಸಭೆಗಳು ನಿರ್ಮಾಣಗೊಳ್ಳಲಿ. ಗಾಂಧಾರೇ! ಅವನಿಗೆ ನಿನ್ನ ಮೇಲೆ ಪ್ರೀತಿಯುಂಟಾಗುವಂತೆ ಮಾಡು! ಅಥವಾ ಭೀಷ್ಮ! ನಿನಗೇನನ್ನಿಸುತ್ತದೆ?”

ಆಗ ಭೀಷ್ಮಾದಿಗಳೆಲ್ಲರೂ ಜನಾಧಿಪ ಧೃತರಾಷ್ಟ್ರನಿಗೆ “ಬಹು ಉತ್ತಮ!” ಎಂದು ಹೇಳಿ ಅವನ ಮಾತನ್ನು ಗೌರವಿಸಿದರು. ಅವರ ಅನುಮತವನ್ನು ತಿಳಿದ ರಾಜಾ ದುರ್ಯೋಧನನು ರಮ್ಯ ಸಭಾಭವನಗಳನ್ನು ಕಟ್ಟಿಸಲು ಪ್ರಾರಂಭಿಸಿದನು. ಆಗ ದೇಶದೇಶಗಳಲ್ಲಿ ರಮಣೀಯ ಭಾಗಗಳಲ್ಲಿ ಅನೇಕ ಸಂಖ್ಯೆಗಳಲ್ಲಿ ಸಭೆಗಳನ್ನು ನಿರ್ಮಿಸಲಾಯಿತು - ಎಲ್ಲವೂ ರತ್ನಗಳನ್ನು ಒಳಗೊಂಡಿದ್ದವು, ಬಣ್ಣಬಣ್ಣದ ವಿವಿಧ ಗುಣಗಳ ಆಸನಗಳನ್ನು ಒಳಗೊಂಡಿದ್ದವು, ಉತ್ತಮ ವಸ್ತ್ರಗಳನ್ನು ಧರಿಸಿದ ಸ್ತ್ರೀಯರು ಗಂಧ ಅಲಂಕಾರಗಳನ್ನು ಹಿಡಿದಿದ್ದರು; ಉತ್ತಮ ಗುಣದ ಅನ್ನ ಪಾನೀಯಗಳು ವಿವಿಧ ಭೋಜನಗಳು, ಮಾಲೆಗಳು, ಸುಂಗಂಧಗಳು ಎಲ್ಲವನ್ನೂ ರಾಜನು ಕೊಟ್ಟಿದ್ದನು. ವಿಶೇಷವಾಗಿ ವೃಕಸ್ಥಲ ಗ್ರಾಮದಲ್ಲಿ ಉಳಿಯುವುದಕ್ಕೆಂದು ರಾಜಾ ಕೌರವನು ಬಹುರತ್ನಗಳಿಂದ ಮನೋರಮ ಸಭೆಯನ್ನು ನಿರ್ಮಿಸಿದ್ದನು. ಈ ರೀತಿ ಎಲ್ಲ ಅತಿಮಾನುಷವಾದ, ದೇವತೆಗಳಿಗೆ ತಕ್ಕುದಾದ ವ್ಯವಸ್ಥೆಗಳನ್ನು ಮಾಡಿಸಿ, ದುರ್ಯೋಧನನು ರಾಜಾ ಧೃತರಾಷ್ಟ್ರನಿಗೆ ವರದಿ ಮಾಡಿದನು. ಅದರೆ ವಿವಿಧ ರತ್ನಗಳಿಂದ ಕೂಡಿದ ಆ ಸಭೆಗಳೆಲ್ಲವನ್ನೂ ನಿರ್ಲಕ್ಷಿಸಿ ಕೇಶವ ದಾಶಾರ್ಹನು ಕುರುಗಳ ಸದನಕ್ಕೆ ನಡೆದನು.

ಧೃತರಾಷ್ಟ್ರನು ಹೇಳಿದನು: “ಕ್ಷತ್ತ! ಉಪಪ್ಲವದಿಂದ ಇಲ್ಲಿಗೆ ಜನಾರ್ದನನು ಬರುತ್ತಿದ್ದಾನೆ. ವೃಕಸ್ಥಲದಲ್ಲಿ ರಾತ್ರಿಯನ್ನು ಕಳೆಯುತ್ತಿದ್ದಾನೆ ಮತ್ತು ಅವನು ನಾಳೆ ಬೆಳಿಗ್ಗೆ ಇಲ್ಲಿಗೆ ಬರುತ್ತಾನೆ. ಆಹುಕರ ಅಧಿಪತಿ, ಸರ್ವಸಾತ್ವತರ ನಾಯಕ, ಮಹಾಮನಸ್ವಿ, ಮಹಾವೀರ, ಮಹಾಮಾತ್ರ ಜನಾರ್ದನ ಮಾಧವನು ವೃಷ್ಣೀ ವಂಶದ ಒಡೆಯ ಮತ್ತು ರಕ್ಷಕ. ಅವನು ಮೂರೂ ಲೋಕಗಳ ಭಗವಾನ್ ಪಿತಾಮಹ. ಹೇಗೆ ಆದಿತ್ಯರು, ವಸುಗಳು ಮತ್ತು ರುದ್ರರು ಬೃಹಸ್ಪತಿಯ ಬುದ್ಧಿಯನ್ನು ಹೇಗೋ ಹಾಗೆ ವೃಷ್ಣಿ ಅಂಧಕರು ಈ ಸುಮನಸನ ಬುದ್ಧಿಯನ್ನು ಗೌರವಿಸುತ್ತಾರೆ. ಆ ಮಹಾತ್ಮ ದಾಶಾರ್ಹನಿಗೆ ಪೂಜೆಯನ್ನು ಸಲ್ಲಿಸುತ್ತೇನೆ. ಹೇಗೆ ಎಂದು ನಾನು ಹೇಳುತ್ತೇನೆ. ಧರ್ಮಜ್ಞನಾದ ನೀನು ಪ್ರತ್ಯಕ್ಷವಾಗಿ ಕೇಳು.

“ನಾನು ಅವನಿಗೆ ಪ್ರತಿಯೊಂದೂ ನಾಲ್ಕು ಬಾಹ್ಲಿಯಕದ ಹುಟ್ಟಿದ, ಕಪ್ಪುಬಣ್ಣದ ಒಂದೇ ತರಹದ ಉತ್ತಮ ಕುದುರೆಗಳನ್ನು ಕಟ್ಟಲ್ಪಟ್ಟ ಹದಿನಾರು ರಥಗಳನ್ನು ಕೊಡುತ್ತೇನೆ. ಈಟಿಯಂಥ ಕೋರೆದಾಡೆಗಳುಳ್ಳ, ನಿತ್ಯವೂ ಮದದಿಂದ ಪ್ರಹಾರಮಾಡುವ, ಒಂದೊಂದಕ್ಕೂ ಎಂಟು ಅನುಚರರಿರುವ ಎಂಟು ಆನೆಗಳನ್ನು ನಾನು ಕೇಶವನಿಗೆ ಕೊಡುತ್ತೇನೆ. ನಾನು ಅವನಿಗೆ ಇನ್ನೂ ಮಕ್ಕಳನ್ನು ಹಡೆಯದೇ ಇದ್ದ, ಬಂಗಾರದ ಬಣ್ಣದ ನೂರು ಸುಂದರ ದಾಸಿಯರನ್ನೂ ಅಷ್ಟೇ ಸಂಖ್ಯೆಯ ದಾಸರನ್ನೂ ಕೊಡುತ್ತೇನೆ. ಕೇಶವನಿಗೆ ಅರ್ಹವಾದ, ಪರ್ವತದ ಜನರು ನನಗೆ ತಂದು ಕೊಟ್ಟಿರುವ ಹದಿನೆಂಟು ಸಾವಿರ ಮೃದು ಕಂಬಳಿಗಳನ್ನು ಮತ್ತು ಚೀನದೇಶದಿಂದ ಬಂದ ಸಹಸ್ರಾರು ಜಿನ ಚರ್ಮಗಳನ್ನು ಸಲ್ಲಿಸುತ್ತೇನೆ. ಈ ವಿಮಲ ಮಣಿಯು ಹಗಲು ಮತ್ತು ರಾತ್ರಿ ತೇಜಸ್ಸಿನಿಂದ ಹೊಳೆಯುತ್ತದೆ. ಇದೂ ಕೂಡ ಕೇಶವನಿಗೆ ಅರ್ಹವಾದುದು. ಅವನಿಗೆ ಇದನ್ನೂ ಸಮರ್ಪಿಸುತ್ತೇನೆ. ಒಂದೇ ದಿನದಲ್ಲಿ ಹದಿನಾಲ್ಕು ಯೋಜನ ದೂರ ಹೋಗಬಲ್ಲ ಅಶ್ವತರಿಯಿಂದೊಡಗೂಡಿದ ವಾಹನವನ್ನು ಕೂಡ ಅವನಿಗೆ ಕೊಡುತ್ತೇನೆ. ಪ್ರತಿದಿನವೂ ಅವನೊಂದಿಗೆ ಬಂದಿರುವ ವಾಹನ ಪುರುಷರಿಗೆ ಬೇಕಾದುದಕ್ಕಿಂತ ಎಂಟು ಪಟ್ಟು ಹೆಚ್ಚಿನ ಭೋಜನವನ್ನು ಅವನಿಗೆ ನೀಡುತ್ತೇನೆ. ದುರ್ಯೋಧನನನ್ನು ಬಿಟ್ಟು ನನ್ನ ಎಲ್ಲ ಮಕ್ಕಳೂ ಮೊಮ್ಮಕ್ಕಳೂ ಚೆನ್ನಾಗಿ ಅಲಂಕೃತಗೊಂಡ ರಥಗಳಲ್ಲಿ ದಾಶಾರ್ಹನನ್ನು ಬರಮಾಡಿಕೊಳ್ಳಲು ಹೋಗುತ್ತಾರೆ. ಅಲಂಕೃತರಾದ ಸುಂದರ ಪದಾತಿಗಳೂ ಆಸ್ಥಾನಿಕರೂ ಸಹಸ್ರಾರು ಸಂಖ್ಯೆಗಳಲ್ಲಿ ಆ ಮಹಾಭಾಗ ಕೇಶವನನ್ನು ಸ್ವಾಗತಿಸಲು ಹೋಗುತ್ತಾರೆ. ಜನಾರ್ದನನನ್ನು ನೋಡಲು ನಗರದಿಂದ ಯಾರೆಲ್ಲ ಕಲ್ಯಾಣ ಕನ್ಯೆಯರು ಹೋಗುತ್ತಾರೋ ಅವರು ಅನಾವೃತರಾಗಿ ಹೋಗುತ್ತಾರೆ. ಸ್ತ್ರೀ ಪುರುಷ ಬಾಲಕರೊಂದಿಗೆ ಇಡೀ ನಗರದ ಪ್ರಜೆಗಳು ಮಹಾತ್ಮ ಮಧುಸೂದನನನ್ನು ಸೂರ್ಯನನ್ನು ಹೇಗೋ ಹಾಗೆ ನೋಡಲಿದ್ದಾರೆ. ಅವನು ಬರುವ ದಾರಿಯಲ್ಲಿ ಎಲ್ಲ ಕಡೆಗಳಲ್ಲಿ ಮಹಾಧ್ವಜ ಪತಾಕೆಗಳನ್ನು ಏರಿಸಲಿ. ನೀರನ್ನು ಸಿಂಪಡಿಸಿ ಧೂಳಾಗದಂತೆ ಮಾಡಲಿ. ಅವನಿಗಾಗಿ ದುರ್ಯೋಧನನ ಮನೆಗಿಂಥ ಚೆನ್ನಾಗಿರುವ ದುಃಶಾಸನನ ಮನೆಯನ್ನು ಬೇಗನೆ ಚೆನ್ನಾಗಿ ಅಲಂಕರಿಸಿ ಸಿದ್ಧಗೊಳಿಸಲ್ಪಡಲಿ. ಅದು ಸುಂದರ ಪ್ರಾಕಾರಗಳಿಂದ ಕೂಡಿದೆ, ರಮಣೀಯವಾಗಿದೆ, ಮಂಗಳಕರವಾಗಿದೆ, ಎಲ್ಲ ಋತುಗಳಲ್ಲಿಯೂ ಮಹಾಧನದಿಂದ ಕೂಡಿರುತ್ತದೆ. ಆ ಮನೆಯಲ್ಲಿ ವಾರ್ಷ್ಣೇಯನಿಗೆ ತಕ್ಕುದಾದ ನನ್ನ ಮತ್ತು ದುರ್ಯೋಧನನ ರತ್ನಗಳಿವೆ. ಅದರಲ್ಲಿ ಸಂಶಯವೇ ಇಲ್ಲ.”

ವಿದುರನು ಹೇಳಿದನು: “ರಾಜನ್! ನೀನು ಸತ್ತಮನೆಂದು ಮೂರು ಲೋಕಗಳಲ್ಲಿಯೂ ಬಹುಮತವಿದೆ. ಲೋಕದಲ್ಲಿ ನೀನು ಸಂಭಾವಿತನೆಂದೂ ಸಮ್ಮತಿಯಿದೆ. ಶಾಸ್ತ್ರವನ್ನು ಆಧರಿಸಿ ಅಥವಾ ಉತ್ತಮ ತರ್ಕವನ್ನು ಆಧರಿಸಿ ನೀನು ಏನೇ ಹೇಳಿದರೂ, ಕೊನೆಯ ವಯಸ್ಸಿನಲ್ಲಿರುವ ನೀನು ವೃದ್ಧನಾಗಿರುವುದರಿಂದ ಅದು ಸುಸ್ಥಿರವೆನಿಸಿಕೊಳ್ಳುತ್ತದೆ. ಕಲ್ಲುಗಳ ಮೇಲೆ ಗೆರೆಗಳಿರುವಂತೆ, ಸೂರ್ಯನಲ್ಲಿ ಬೆಳಕಿರುವಂತೆ ಮತ್ತು ಸಾಗರದಲ್ಲಿ ಅಲೆಗಳಿರುವಂತೆ ನಿನ್ನಲ್ಲಿ ಮಹಾ ಧರ್ಮವಿದೆ ಎಂದು ಪ್ರಜೆಗಳು ತಿಳಿದುಕೊಂಡಿದ್ದಾರೆ. ನಿನ್ನಲ್ಲಿರುವ ಉತ್ತಮ ಗುಣಗಳಿಂದ ಲೋಕವು ಸದಾ ನಿನ್ನನ್ನು ಗೌರವಿಸುತ್ತದೆ. ಬಾಂಧವರೊಂದಿಗೆ ಆ ಗುಣಗಳನ್ನು ಕಾಪಾಡಿಕೊಳ್ಳಲು ನಿತ್ಯವೂ ಪ್ರಯತ್ನಿಸು. ಬಾಲ್ಯತನದಿಂದ ಬಹುರೀತಿಯಲ್ಲಿ ನಿನ್ನ ರಾಜ್ಯ, ಮಕ್ಕಳು, ಮೊಮ್ಮೊಕ್ಕಳೂ, ಸುಹೃದಯರು ಮತ್ತು ಪ್ರಿಯರು ನಾಶವಾಗದಂತೆ ಆರ್ಜವವನ್ನು ನಿನ್ನದಾಗಿಸಿಕೋ! ಕೃಷ್ಣನಿಗೆ ನೀನು ಆತಿಥ್ಯದಿಂದ ಏನೆಲ್ಲ ಕೊಡಲು ಬಯಸುವೆಯೋ ಅದಕ್ಕಿಂತಲೂ ಹೆಚ್ಚಿನದಕ್ಕೆ, ಇಡೀ ಭೂಮಿಗೇ, ಆ ದಾಶಾರ್ಹನು ಅರ್ಹ! ಆದರೆ ನೀನು ಅವೆಲ್ಲವನ್ನು ಧರ್ಮದ ಉದ್ದೇಶದಿಂದ ಅಥವ ಕೃಷ್ಣನ ಮೇಲೆ ನಿನಗಿರುವ ಪ್ರೀತಿಯ ಕಾರಣದಿಂದ ಕೊಡಲು ಬಯಸುತ್ತಿಲ್ಲ. ನನ್ನ ಆತ್ಮದ ಸಾಕ್ಷಿಯಾಗಿ ಇದು ಸತ್ಯವೆಂದು ಹೇಳುತ್ತೇನೆ. ಇದೊಂದು ಮೋಸ, ಸುಳ್ಳು, ಮೇಲ್ನೋಟ! ರಾಜನ್! ನೀನು ಹೊರಗಡೆಯವರ ತೋರಿಕೆಗೆ ಮಾಡುವ ಈ ಕೆಲಸದ ಹಿಂದೆ ಅಡಗಿರುವ ಯೋಚನೆಯನ್ನು ನಾನು ತಿಳಿದಿದ್ದೇನೆ. ಪಾಂಡವರು ಐದೇ ಐದು ಗ್ರಾಮಗಳನ್ನು ಕೇಳುತ್ತಿದ್ದಾರೆ. ಅದನ್ನೂ ಕೊಡಲು ನೀನು ಬಯಸುತ್ತಿಲ್ಲ. ಹೀಗಿರುವಾಗ ಯಾರುತಾನೇ ಶಾಂತಿಯನ್ನುಂಟುಮಾಡುತ್ತಾರೆ? ಸಂಪತ್ತಿನಿಂದ ಮಹಾಬಾಹು ವಾರ್ಷ್ಣೇಯನನ್ನು ನೀನು ಗೆಲ್ಲಲು ಬಯಸುತ್ತಿದ್ದೀಯೆ.ಈ ಉಪಾಯಗಳಿಂದ ಅವನನ್ನು ಪಾಂಡವರಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದೀಯೆ. ನಾನು ನಿನಗೆ ಹೇಳುತ್ತಿದ್ದೇನೆ. ವಿತ್ತದಿಂದಾಗಲೀ, ಪ್ರಯತ್ನದಿಂದಾಗಲೀ, ಬೈಯುವುದರಿಂದಾಗಲೀ ಅಥವಾ ಬೇರೆ ಯಾವುದರಿಂದಾಗಲೀ ಅವನನ್ನು ಧನಂಜಯನಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಕೃಷ್ಣನ ಮಹಾತ್ಮೆಯನ್ನು ತಿಳಿದಿದ್ದೇನೆ. ಅವನ ದೃಢಭಕ್ತಿಯನ್ನು ತಿಳಿದಿದ್ದೇನೆ. ತನ್ನ ಪ್ರಾಣಕ್ಕೆ ಸಮನಾದ ಧನಂಜಯನನ್ನು ಅವನು ತ್ಯಜಿಸುವುದಿಲ್ಲ ಎನ್ನುವುದನ್ನೂ ತಿಳಿದಿದ್ದೇನೆ. ಪಾದಗಳನ್ನು ತೊಳೆಯಲು ಸಾಕಾಗುವಷ್ಟು ಒಂದು ಬಿಂದಿಗೆ ನೀರು ಮತ್ತು ಕುಶಲ ಪ್ರಶ್ನೆ ಇವುಗಳನ್ನು ಮಾತ್ರ ನಿನ್ನಿಂದ ಜನಾರ್ದನನು ಬಯಸುತ್ತಾನೆ. ಆದುದರಿಂದ ಮಾನಾರ್ಹನಾದ ಆ ಮಹಾತ್ಮನಿಗೆ ಪ್ರೀತಿಯ ಆತಿಥ್ಯವನ್ನು ನೀಡಲು ಪ್ರಯತ್ನಿಸು. ಅದನ್ನೇ ಮಾಡು ರಾಜನ್! ಏಕೆಂದರೆ ಜನಾರ್ದನನು ಮಾನಾರ್ಹ. ಕೇಶವನು ಒಂದೇ ಒಂದು ಒಳ್ಳೆಯದನ್ನು ಬಯಸಿ ಕುರುಗಳಲ್ಲಿಗೆ ಬರುತ್ತಿದ್ದಾನೆ. ಅವನು ಏನನ್ನು ಬಯಸಿ ಬರುತ್ತಿದ್ದಾನೋ ಅದನ್ನೇ ಅವನಿಗೆ ಕೊಡು. ದಾಶಾರ್ಹನು ನಿನ್ನ ದುರ್ಯೋಧನ ಮತ್ತು ಪಾಂಡವರಲ್ಲಿ ಶಾಂತಿಯನ್ನು ಇಚ್ಛಿಸುತ್ತಾನೆ. ಅವನ ಮಾತಿನಂತೆ ಮಾಡು. ನೀನು ಅವರ ತಂದೆ, ಅವರು ನಿನ್ನ ಮಕ್ಕಳು. ನೀನು ವೃದ್ಧ. ಇತರರು ಸಣ್ಣವರು. ಅವರೊಡನೆ ತಂದೆಯಂತೆ ನಡೆದುಕೋ. ಏಕೆಂದರೆ ಅವರು ನಿನ್ನೊಡನೆ ಮಕ್ಕಳಂತೆ ನಡೆದುಕೊಳ್ಳುತ್ತಿದ್ದಾರೆ.”

ದುರ್ಯೋಧನನು ಹೇಳಿದನು: “ಕೃಷ್ಣನ ಕುರಿತು ವಿದುರನನು ಹೇಳಿದುದೆಲ್ಲವೂ ಸತ್ಯ. ಜನಾರ್ದನು ಪಾರ್ಥರಲ್ಲಿ ಬಿಡಿಸಲಸಾಧ್ಯವಾದಷ್ಟು ಅನುರಕ್ತನಾಗಿದ್ದಾನೆ. ರಾಜೇಂದ್ರ! ಜನಾರ್ದನನಿಗೆ ಸತ್ಕಾರವಾಗಿ ಏನು ಅನೇಕ ರೂಪದ ಸಂಪತ್ತನ್ನು ಕೊಡುವೆಯೆಂದು ನೀನು ಹೇಳಿದೆಯೋ ಅದನ್ನು ಸರ್ವಥಾ ಕೊಡಬಾರದು. ಇದು ಅದಕ್ಕೆ ತಕ್ಕುದಾದ ಸ್ಥಳವೂ ಅಲ್ಲ, ಸಮಯವೂ ಅಲ್ಲ. ಕೇಶವನು ಅವೆಲ್ಲವಕ್ಕೂ ಅರ್ಹನಿರಬಹುದು. ಆದರೆ ತನ್ನನ್ನು ಭಯಪಟ್ಟುಕೊಂಡು ಪೂಜಿಸುತ್ತಿದ್ದಾನೆ ಎಂದು ಅಧೋಕ್ಷಜನು ತಿಳಿದುಕೊಳ್ಳುತ್ತಾನೆ. ಬುದ್ಧಿವಂತ ಕ್ಷತ್ರಿಯನು ಅವಮಾನಹೊಂದುವ ಕಾರ್ಯವನ್ನು ಮಾಡಬಾರದು ಎಂದು ನನ್ನ ಅಭಿಪ್ರಾಯ. ಕಮಲಲೋಚನ ದೇವ ಕೃಷ್ಣನು ಮೂರು ಲೋಕಗಳಲ್ಲಿಯೂ ಸರ್ವಥಾ ಅತ್ಯಂತ ಪೂಜನೀಯ ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ. ಆದುದರಿಂದ ಅವನಿಗೆ ಈಗ ಏನನ್ನೂ ಕೊಡುವುದು ಸರಿಯಲ್ಲ. ಯುದ್ಧವನ್ನು ನಿಶ್ಚಯಿಸಿದ ನಂತರ ಆತಿಥ್ಯವನ್ನಿತ್ತು ಹೋರಾಟಕ್ಕೆ ಶಾಂತಿಯನ್ನು ತರಬಾರದು.”

ಅವನ ಆ ಮಾತನ್ನು ಕೇಳಿ ಕುರುಪಿತಾಮಹ ಭೀಷ್ಮನು ರಾಜ ವೈಚಿತ್ರವೀರ್ಯನಿಗೆ ಈ ಮಾತನ್ನು ಹೇಳಿದನು: “ಸತ್ಕಾರವನ್ನು ಮಾಡುವುದರಿಂದ ಅಥವಾ ಮಾಡದೇ ಇರುವುದರಿಂದ ಜನಾರ್ದನನು ಸಿಟ್ಟಾಗುವವನಲ್ಲ. ಯಾವುದೂ ಅವನನ್ನು ಕಡೆಗಣಿಸಲಾರದು. ಏಕೆಂದರೆ ಕೇಶವನು ಕಡೆಗಣಿಸಲಾಗುವವನಲ್ಲ. ಯಾವಕಾರ್ಯವನ್ನು ಮಾಡಬೇಕೆಂದು ಅವನು ಮನಸ್ಸುಮಾಡುತ್ತಾನೋ ಅದನ್ನು ಬೇರೆಯದಾಗಿ ಮಾಡುವುದಕ್ಕೆ ಎಲ್ಲ ಉಪಾಯಗಳನ್ನು ಬಳಸಿದರೂ ಯಾರಿಂದಲೂ ಸಾಧ್ಯವಿಲ್ಲ. ಏನನ್ನೂ ಶಂಕಿಸದೇ ಆ ಮಹಾಬಾಹುವು ಏನನ್ನು ಹೇಳುತ್ತಾನೋ ಅದನ್ನು ಮಾಡು. ವಾಸುದೇವನ ಮೂಲಕ ಪಾಂಡವರೊಂದಿಗೆ ಬೇಗ ಶಾಂತಿಯನ್ನು ತಾ. ಆ ಧರ್ಮಾತ್ಮ ಜನಾರ್ದನನು ನಿಶ್ಚಯವಾಗಿಯೂ ಧರ್ಮ ಮತ್ತು ಅರ್ಥಗಳ ಕುರಿತೇ ಹೇಳುತ್ತಾನೆ. ಅವನಿಗೆ ಪ್ರಿಯವಾಗುವ ಮಾತುಗಳನ್ನೇ ನೀನೂ ಕೂಡ ಬಾಂಧವರೊಂದಿಗೆ ಮಾತನಾಡಬೇಕು.”

ದುರ್ಯೋಧನನು ಹೇಳಿದನು: “ಪಿತಾಮಹ! ಕೇವಲ ನನ್ನದಾಗಿರುವ ಈ ಶ್ರೀ-ರಾಜ್ಯವನ್ನು ಅವರೊಂದಿಗೆ ಹಂಚಿಕೊಂಡು ಜೀವಿಸಲು ಸಾಧ್ಯವಿಲ್ಲ. ನಾನು ನಿಶ್ಚಯಿಸಿದಂತೆ ಮುಖ್ಯವಾಗಿ ಮಾಡಬೇಕಾದ ಕಾರ್ಯವೇನೆನ್ನುವುದನ್ನು ಕೇಳಿ: ಪಾಂಡವರ ಪರಾಯಣನಾದ ಜನಾರ್ದನನನ್ನು ಸೆರೆಹಿಡಿಯುತ್ತೇನೆ. ಅವನನ್ನು ಬಂಧಿಸಿದರೆ ವೃಷ್ಣಿಗಳು, ಇಡೀ ಭೂಮಿ ಮತ್ತು ಪಾಂಡವರು ಕೂಡ ನನ್ನ ವಿಧೇಯರಾಗುತ್ತಾರೆ. ನಾಳೆ ಬೆಳಿಗ್ಗೆ ಅವನು ಇಲ್ಲಿಗೆ ಬರುತ್ತಿದ್ದಾನೆ. ಯಾವ ರೀತಿಯಲ್ಲಿ ಈ ಉಪಾಯವು ಜನಾರ್ದನನಿಗೆ ತಿಳಿಯದಂತೆ ಮಾಡಬಹುದು ಎನ್ನುವುದನ್ನು ನೀವು ನನಗೆ ಹೇಳಿ.”

ಕೃಷ್ಣನಿಗೆ ಕೇಡನ್ನು ಬಯಸುವ ಅವನ ಆ ಘೋರ ಮಾತುಗಳನ್ನು ಕೇಳಿ ಅಮಾತ್ಯರೊಂದಿಗೆ ಧೃತರಾಷ್ಟ್ರನು ವ್ಯತಿಥನಾದನು, ವಿಮನಸ್ಕನಾದನು. ಆಗ ಧೃತರಾಷ್ಟ್ರನು ದುರ್ಯೋಧನನಿಗೆ ಹೇಳಿದನು: “ನೀನು ಪ್ರಜಾಪಾಲಕನಾಗಿದ್ದರೆ ಈ ರೀತಿ ಮಾತನಾಡಬೇಡ! ಇದು ಸನಾತನ ಧರ್ಮವಲ್ಲ! ಹೃಷೀಕೇಶನು ದೂತನೂ ನಮ್ಮ ಪ್ರಿಯ ಸಂಬಂಧಿಯೂ ಹೌದು. ಕೌರವರ ಕುರಿತು ಕೆಟ್ಟದ್ದನ್ನು ಬಯಸದ ಅವನು ಹೇಗೆ ಬಂಧಿಸಲು ಅರ್ಹನಾಗಬಹುದು?”

ಭೀಷ್ಮನು ಹೇಳಿದನು: “ಧೃತರಾಷ್ಟ್ರ! ನಿನ್ನ ಈ ಮೂಢ ಮಗನನ್ನು ಭೂತ ಅವರಿಸಿದೆ. ಸುಹೃದಯರು ಒಳ್ಳೆಯದನ್ನು ಹೇಳಿದರೂ ಅವನು ಅನರ್ಥವನ್ನೇ ಆರಿಸಿಕೊಳ್ಳುತ್ತಿದ್ದಾನೆ. ನೀನು ಕೂಡ ಪಾಪಿಷ್ಟರನ್ನು ಕಟ್ಟಿಕೊಂಡು ಪಾಪಿಗಳಂತೆ ವರ್ತಿಸುತ್ತಿರುವವನನ್ನು ಸುಹೃದಯರ ಮಾತುಗಳನ್ನು ತೊರೆದು ಅನುಸರಿಸುತ್ತಿದ್ದೀಯೆ. ನಿನ್ನ ಈ ಅತಿ ಕೆಟ್ಟ ಮಗನು ಅಮಾತ್ಯರೊಂದಿಗೆ ಅಕ್ಲಿಷ್ಟಕರ್ಮಿ ಕೃಷ್ಣನನ್ನು ಠಕ್ಕರಿಸಿ ಕ್ಷಣದಲ್ಲಿಯೇ ಇಲ್ಲದಂತಾಗುತ್ತಾನೆ. ಈ ಪಾಪಿಯ, ಸುಳ್ಳುಬುರುಕನ, ಧರ್ಮವನ್ನು ತ್ಯಜಿಸಿದ ದುರ್ಮತಿಯು ಹೇಳುತ್ತಿರುವ ಮಾತುಗಳನ್ನು ಕೇಳಲು ನನಗೆ ಎಂದೂ ಉತ್ಸಾಹವಿಲ್ಲ.”

ಹೀಗೆ ಹೇಳಿ ಭರತಶ್ರೇಷ್ಠ, ವೃದ್ಧ, ಸತ್ಯಪರಾಕ್ರಮಿ, ಭೀಷ್ಮನು ಪರಮ ಕುಪಿತನಾಗಿ ಎದ್ದು ಅಲ್ಲಿಂದ ಹೊರಟುಹೋದನು.

ಹಸ್ತಿನಾಪುರಕ್ಕೆ ಶ್ರೀಕೃಷ್ಣನ ಆಗಮನ-ಧೃತರಾಷ್ಟ್ರನೊಂದಿಗೆ ಭೇಟಿ

ಕೃಷ್ಣನಾದರೋ ಬೆಳಿಗ್ಗೆ ಎದ್ದು ಆಹ್ನೀಕವನ್ನೆಲ್ಲ ಪೂರೈಸಿ, ಬ್ರಾಹ್ಮಣರಿಂದ ಅನುಜ್ಞೆಯನ್ನು ಪಡೆದು ನಗರದ ಕಡೆ ಪ್ರಯಾಣಿಸಿದನು. ಹೊರಟ ಆ ಮಹಾಬಾಹುವುವನ್ನು ಬೀಳ್ಕೊಂಡು ವೃಕಸ್ಥಲ ನಿವಾಸಿಗಳೆಲ್ಲರೂ ಹಿಂದಿರುಗಿದರು. ದುರ್ಯೋಧನನನ್ನು ಬಿಟ್ಟು ಎಲ್ಲ ಧಾರ್ತರಾಷ್ಟ್ರರೂ, ಭೀಷ್ಮ, ದ್ರೋಣ, ಕೃಪ ಮೊದಲಾದವರೂ ಸ್ವಲಂಕೃತರಾಗಿ ಅವನನ್ನು ಭೇಟಿಮಾಡಲು ಹೊರಟರು. ಬಹಳ ಮಂದಿ ಪೌರರೂ ಕೂಡ ಬಹುವಿಧದ ಯಾನಗಳ ಮೇಲೆ ಮತ್ತು ಇತರರು ಕಾಲ್ನಡುಗೆಯಲ್ಲಿ, ಹೃಷೀಕೇಶನನ್ನು ನೋಡಲು ಹೊರಟರು. ದಾರಿಯಲ್ಲಿ ಅಕ್ಲಿಷ್ಟಕರ್ಮಿ ಭೀಷ್ಮ, ದ್ರೋಣ, ಮತ್ತು ಧಾರ್ತರಾಷ್ಟ್ರರನ್ನು ಭೇಟಿ ಮಾಡಿ ಅವರಿಂದ ಸುತ್ತುವರೆದು ನಗರಕ್ಕೆ ಬಂದನು. ಕೃಷ್ಣನ ಸಮ್ಮಾನಾರ್ಥವಾಗಿ ನಗರವು ಸುಂದರವಾಗಿ ಅಲಂಕರಿಸಲ್ಪಟ್ಟಿತ್ತು. ರಾಜಮಾರ್ಗಗಳನ್ನು ಬಹುವಿಧದ ರತ್ನಗಳಿಂದ ಅಲಂಕರಿಸಲಾಗಿತ್ತು. ಆಗ ವಾಸುದೇವನನ್ನು ನೋಡುವ ಇಚ್ಛೆಯಿಂದ ಯಾವ ಸ್ತ್ರೀಯೂ, ವೃದ್ಧನೂ, ಶಿಶುವೂ, ಯಾವುದೇ ಮನೆಯ ಒಳಗೆ ಇದ್ದಿರಲಿಲ್ಲ. ಹೃಷೀಕೇಶನು ಪ್ರವೇಶಿಸುವಾಗ ರಾಜ ಮಾರ್ಗಗಳಲ್ಲಿ ಬಹುಸಂಖ್ಯೆಗಳಲ್ಲಿ ನರರು ನಿಂತು ನೆಲವನ್ನು ನೋಡುತ್ತಾ ಅವನನ್ನು ಗೌರವಿಸಿದರು. ಎತ್ತರದ ಮನೆಗಳ ಗಚ್ಚುಗಳು ಬಹು ಸಂಖ್ಯೆಗಳ ವರಸ್ತ್ರೀಯರ ಭಾರದಿಂದ ಕುಸಿದು ಬೀಳುತ್ತವೆಯೋ ಎಂಬಂತೆ ತೋರುತ್ತಿತ್ತು. ವಾಸುದೇವನ ಕುದುರೆಗಳು ಅತಿ ವೇಗದಲ್ಲಿ ಚಲಿಸಬಹುದಾಗಿದ್ದರೂ, ಮನುಷ್ಯರಿಂದ ತುಂಬಿಹೋಗಿದ್ದ ರಾಜಮಾರ್ಗದಲ್ಲಿ ತಮ್ಮ ವೇಗವನ್ನು ಕಳೆದುಕೊಂಡವು.

ಪುಂಡರೀಕಾಕ್ಷ ಶತ್ರುಕರ್ಶನನು ಉಪ ಪ್ರಾಸಾದಗಳಿಂದ ಶೋಭಿಸುತ್ತಿದ್ದ ಧೃತರಾಷ್ಟ್ರನ ಬೂದುಬಣ್ಣದ ಅರಮನೆಯನ್ನು ಪ್ರವೇಶಿಸಿದನು. ಆ ರಾಜಗೃಹದ ಮೂರು ಕಕ್ಷೆಗಳನ್ನು ದಾಟಿ ಅರಿಂದಮ ಕೇಶವನು ರಾಜ ವೈಚಿತ್ರವೀರ್ಯನ ಬಳಿ ಬಂದನು. ದಾಶಾರ್ಹನು ಆಗಮಿಸುತ್ತಿದ್ದಂತೆ ಪ್ರಜ್ಞಾಚಕ್ಷು ನರೇಶ್ವರನು ಮಹಾಯಶರಾದ ದ್ರೋಣ-ಭೀಷ್ಮಾದಿಗಳೊಂದಿಗೆ ಮೇಲೆದ್ದು ನಿಂತನು. ಕೃಪ, ಸೋಮದತ್ತ, ಮತ್ತು ಮಹಾರಾಜ ಬಾಹ್ಲಿಕ ಎಲ್ಲರೂ ಜನಾರ್ದನನ್ನು ಗೌರವಿಸುತ್ತಾ ಆಸನಗಳಿಂದ ಮೇಲೆದ್ದು ನಿಂತರು. ಆಗ ವಾರ್ಷ್ಣೇಯನು ಯಶಸ್ವಿ ರಾಜ ಧೃತರಾಷ್ಟ್ರನನ್ನೂ ಭೀಷ್ಮನನ್ನೂ ಸಮೀಪಿಸಿ ಪೂಜಿಸಿದನು. ಮಧುಸೂದನ ಮಾಧವನು ಧರ್ಮಾನುಸಾರವಾಗಿ, ವಯಸ್ಸಿಗೆ ತಕ್ಕಂತೆ ಅಲ್ಲಿರುವ ರಾಜರನ್ನು ಭೇಟಿಮಾಡಿದನು. ಪುತ್ರನೊಂದಿಗೆ ದ್ರೋಣ, ಯಶಸ್ವಿ ಬಾಹ್ಲೀಕ, ಕೃಪ ಮತ್ತು ಸೋಮದತ್ತರನ್ನು ಭೇಟಿಮಾಡಿದನು. ಅಲ್ಲಿದ್ದ ದೊಡ್ಡದಾದ ಗಟ್ಟಿಯಾದ ಕಾಂಚನದಿಂದ ಮಾಡಲ್ಪಟ್ಟ ಆಸನದಲ್ಲಿ ಧೃತರಾಷ್ಟ್ರನ ಶಾಸನದಂತೆ ಅಚ್ಯುತನು ಕುಳಿತುಕೊಂಡನು. ಆಗ ಧೃತರಾಷ್ಟ್ರನ ಪುರೋಹಿತರು ಜನಾರ್ದನನಿಗೆ ಯಥಾನ್ಯಾಯವಾಗಿ ಗೋವು, ಮಧುಪರ್ಕ ಮತ್ತು ನೀರನ್ನು ನೀಡಿದರು. ಆತಿಥ್ಯವಾದ ನಂತರ ಗೋವಿಂದನು ಎಲ್ಲ ಕುರುಗಳಿಂದ ಸುತ್ತುವರೆಯಲ್ಪಟ್ಟು ನಗುತ್ತಾ ಎಲ್ಲರೊಡನೆ ವ್ಯವಹರಿಸಿದನು. ಧೃತರಾಷ್ಟ್ರನಿಂದ ಅರ್ಚಿತನಾಗಿ, ಮಹಾಯಶರಿಂದ ಪೂಜಿತನಾಗಿ ಆ ಅರಿಂದಮನು ರಾಜನ ಅನುಮತಿಯನ್ನು ಪಡೆದು ಬೀಳ್ಕೊಂಡನು.

ಯಥಾನ್ಯಾಯವಾಗಿ ಕುರುಸಂಸದಿಯಲ್ಲಿ ಕುರುಗಳೊಂದಿಗೆ ಕಲೆತು ಮಾಧವನು ವಿದುರನ ರಮ್ಯ ವಸತಿಯಕಡೆ ನಡೆದನು. ವಿದುರನು ಸರ್ವ ಕಲ್ಯಾಣಗಳಿಂದ ಜನಾರ್ದನನನ್ನು ಸ್ವಾಗತಿಸಿ ದಾಶಾರ್ಹನಿಗೆ ಬೇಕಾದುದೆಲ್ಲವನ್ನೂ ತಂದಿಟ್ಟು ಅರ್ಚಿಸಿದನು. ಗೋವಿಂದನಿಗೆ ಆತಿಥ್ಯವನ್ನು ಪೂರೈಸಿ ಸರ್ವಧರ್ಮವಿದು ವಿದುರನು ಮಧುಸೂದನನಿಗೆ ಪಾಂಡುಪುತ್ರರ ಕುಶಲದ ಕುರಿತು ಪ್ರಶ್ನಿಸಿದನು. ಆಗ ತನ್ನ ಪ್ರೀತಿಯ ಗೆಳೆಯ, ವಿದುಷ, ಬುದ್ಧಿಸತ್ತಮ, ಧರ್ಮನಿತ್ಯ, ದೋಷಗಳಿಲ್ಲದ ಧೀಮಂತ ಕ್ಷತ್ತನಿಗೆ ಎಲ್ಲವನ್ನು ಪ್ರತ್ಯಕ್ಷವಾಗಿ ಕಂಡಿರುವ ದಾಶಾರ್ಹನು ಪಾಂಡವರು ನಡೆಸಿದುದನ್ನು ಎಲ್ಲವನ್ನೂ ಸವಿಸ್ತಾರವಾಗಿ ಹೇಳಿದನು.

ಕುಂತಿಯು ಕೃಷ್ಣನಲ್ಲಿ ದುಃಖವನ್ನು ಹೇಳಿಕೊಂಡಿದುದು

ಜನಾರ್ದನ ಗೋವಿಂದ ಅರಿಂದಮನು ವಿದುರನನ್ನು ಭೇಟಿ ಮಾಡಿದ ನಂತರ ತಂದೆಯ ತಂಗಿಯಿದ್ದಲ್ಲಿಗೆ ಹೋದನು. ಪ್ರಸನ್ನ ಆದಿತ್ಯ ವರ್ಚಸನಾಗಿ ಬಂದ ಕೃಷ್ಣನನ್ನು ಕಂಡು ಪೃಥಾಳು ಪಾರ್ಥರನ್ನು ನೆನಪಿಸಿಕೊಂಡು ಅವನ ಕುತ್ತಿಗೆಯನ್ನು ತನ್ನ ಕೈಗಳಿಂದ ಬಳಸಿ ರೋದಿಸಿದಳು. ಆ ಸತ್ಯವತರ ಮಧ್ಯೆ ಸಹಚಾರಿಯಾಗಿದ್ದ ಗೋವಿಂದನನ್ನು ಬಹುಕಾಲದ ನಂತರ ನೋಡಿ ಪೃಥೆಯು ಕಣ್ಣೀರು ಸುರಿಸಿದಳು. ಯೋಧರಲ್ಲಿ ಶ್ರೇಷ್ಠನಾದ ಕೃಷ್ಣನಿಗೆ ಆತಿಥ್ಯವನ್ನು ಮಾಡಿ ಕುಳ್ಳಿರಿಸಿ ಆ ಶೋಕಪೀಡಿತ ಮುಖದ ಅವಳು ಕಣ್ಣೀರಿನಿಂದ ಕಟ್ಟಿಹೋದ ಗಂಟಲಿನಲ್ಲಿ ಅವನಿಗೆ ಹೇಳಿದಳು: “ಕೇಶವ! ಮಗೂ! ಬಾಲ್ಯದಿಂದಲೂ ಗುರುಶುಶ್ರೂಷಣೆಯಲ್ಲಿ ನಿರತರಾಗಿರುವ, ಪರಸ್ಪರರೊಂದಿಗೆ ಸುಹೃದಯರಾಗಿದ್ದು ಒಂದೇ ಮತ-ಚೇತನರಾಗಿರುವ, ಮೋಸದಿಂದ ರಾಜ್ಯವನ್ನು ಕಳೆದುಕೊಂಡು ಜನಾರ್ಹರಾಗಿದ್ದರೂ ನಿರ್ಜನ ಪ್ರದೇಶಕ್ಕೆ ಹೋಗಿರುವ, ಕ್ರೋಧ-ಹರ್ಷಗಳನ್ನು ತೊರೆದು ಬ್ರಹ್ಮಣ್ಯರೂ ಸತ್ಯವಾದಿಗಳೂ ಆಗಿರುವ, ಪ್ರೀತಿಸುಖಗಳನ್ನು ತ್ಯಜಿಸಿ, ರೋದಿಸುತ್ತಿರುವ ನನ್ನನ್ನು ಹಿಂದೆಯೇ ಬಿಟ್ಟುಹೋದ, ನನ್ನ ಹೃದಯವನ್ನು ಸಮೂಲವಾಗಿ ಕಿತ್ತು ವನಕ್ಕೆ ತೆರಳಿದ, ಮಹಾತ್ಮ ಪಾಂಡವರು ಸಿಂಹ-ವ್ಯಾಘ್ರ-ಗಜಸಂಕುಲಗಳಿಂದ ಕೂಡಿರುವ ವನದಲ್ಲಿ ಹೇಗೆ ವಾಸಿಸಿದರು? ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಅವರನ್ನು ನಾನು ಸತತವೂ ಲಾಲಿಸಿ ಬೆಳೆಸಿದ್ದೆ. ಈಗ ತಂದೆ-ತಾಯಿಗಳಿಬ್ಬರನ್ನೂ ಕಾಣದೇ ಅವರು ಮಹಾವನದಲ್ಲಿ ಹೇಗೆ ವಾಸಿಸಿದರು? ಬಾಲ್ಯದಿಂದಲೂ ಪಾಂಡವರು ಶಂಖ-ದುಂಧುಭಿಗಳ ನಿರ್ಘೋಷಗಳಿಂದ, ಮೃದಂಗ-ವೇಣುನಾದಗಳಿಂದ ಎಬ್ಬಿಸಲ್ಪಡುತ್ತಿದ್ದರು. ಮನೆಯಲ್ಲಿರುವಾಗ ಆನೆಗಳ ಘೀಂಕಾರ, ಕುದುರೆಗಳ ಹೇಂಕಾರ, ರಥಗಾಲಿಗಳ ಶಬ್ಧ ಇವುಗಳಿಂದ ಎಚ್ಚರಗೊಳ್ಳುತ್ತಿದ್ದ, ಶಂಖ-ಭೇರಿ ನಿನಾದ, ವೇಣೂ-ವೀಣಾ ನಾದನಗಳಿಂದ, ಪುಣ್ಯಾಹ ಮಂತ್ರ-ಘೋಷಗಳಿಂದ ದ್ವಿಜರು ಪೂಜಿಸುತ್ತಿರಲು, ವಸ್ತ್ರ ರತ್ನ ಅಲಂಕಾರಗಳಿಂದ ದ್ವಿಜರನ್ನು ಪೂಜಿಸುತ್ತಿದ್ದ, ಅರ್ಚನಾರ್ಹರನ್ನು ಅರ್ಚಿಸಿ, ಸ್ತುತಿಗಳಿಂದ ಅಭಿನಂದಿತರಾಗಿ, ರಂಕದ ಚರ್ಮದಿಂದ ಮಾಡಿದ ಹಾಸಿಗೆಯಮೇಲೆ ಮಲಗಿ ಪ್ರಾಸಾದಗಳಲ್ಲಿ ಎಚ್ಚರಗೊಳ್ಳುತ್ತಿದ್ದ ಅವರು ಆ ಮಹಾವನದಲ್ಲಿ ಮೃಗಗಳ ನಿನಾದವನ್ನು ಕೇಳಿ ಏಳಬೇಕಾದ ನನ್ನ ಮಕ್ಕಳು ಹೇಗೆ ತಾನೇ ನಿದ್ದೆಮಾಡುತ್ತಿದ್ದರು? ಭೇರೀ-ಮೃದಂಗ ನಿನಾದಗಳಿಂದ, ಶಂಖ-ವೇಣುಗಳ ಸುಸ್ವರದಿಂದ, ಸ್ತ್ರೀಯರ ಮಧುರ ಗೀತ-ನಿನಾದಗಳಿಂದ, ಬಂದಿ-ಮಾಗದ-ಸೂತರ ಸ್ತುವಗಳನ್ನು ಕೇಳಿ ಏಳುವ ಅವರು ಮಹಾವನದಲ್ಲಿ ಹೇಗೆ ಮೃಗಗಳ ಕೂಗುಗಳನ್ನು ಕೇಳಿ ಏಳುತ್ತಿದ್ದರು?

“ನಾಚಿಕೆಸ್ವಭಾವದ, ಸತ್ಯಧೃತಿ, ದಾಂತ, ಇರುವವುಗಳ ಮೇಲೆ ಅನುಕಂಪಿತನಾಗಿರುವ, ಕಾಮದ್ವೇಷಗಳನ್ನು ವಶಮಾಡಿಕೊಂಡು ಸಂತರ ನಡತೆಯಂತೆ ನಡೆದುಕೊಳ್ಳುವ, ಅಂಬರೀಷ, ಮಾಂಧಾತ, ಯಯಾತಿ, ನಹುಷ, ಭರತ, ದಿಲೀಪ, ಶಿಬಿ, ಔಶೀನರ ಮೊದಲಾದ ಭಾರವನ್ನು ಹೊತ್ತ ಈ ಪುರಾಣ ರಾಜರ್ಷಿಗಳ ಭಾರವನ್ನು ಹೊರುವ, ಶೀಲವೃತ್ತ, ಉಪಸಂಪನ್ನ, ಧರ್ಮಜ್ಞ, ಸತ್ಯಸಂಗರ, ತ್ರೈಲೋಕಗಳಲ್ಲಿಯೇ ಯಾರು ಸರ್ವಗುಣೋಪೇತ ರಾಜನೆನಿಸಿಕೊಂಡಿದ್ದಾನೋ ಆ ಅಜಾತಶತ್ರು, ಧರ್ಮಾತ್ಮ, ಶುದ್ಧಜಾಂಬೂನದಪ್ರಭ, ಸರ್ವ ಕುರುಗಳಲ್ಲಿಯೇ ಶ್ರೇಷ್ಠ, ಧರ್ಮತ, ಶ್ರುತವೃತ್ತತ, ಪ್ರಿಯದರ್ಶನ, ದೀರ್ಘಭುಜ ಯುಧಿಷ್ಠಿರನು ಹೇಗಿದ್ದಾನೆ? ಸಾವಿರ ಆನೆಗಳ ಬಲವನ್ನುಳ್ಳ, ವಾಯುವಿನ ವೇಗವುಳ್ಳ, ವೃಕೋದರ, ಪಾಂಡವರಲ್ಲಿ ನಿತ್ಯವೂ ಕೋಪಿಷ್ಟನಾಗಿರುವ, ತನ್ನ ಸಹೋದರರಿಗೆ ಯಾವಾಗಲೂ ಒಳ್ಳೆಯದನ್ನೇ ಮಾಡುವ, ಅವರಿಗೆ ಪ್ರಿಯನಾದ, ಬಾಂಧವರೊಂದಿಗೆ ಕೀಚಕನನ್ನು ಮತ್ತು ಕ್ರೋಧವಶರಾದ ಹಿಡಿಂಬ ಮತ್ತು ಬಕರನ್ನು ಸಂಹರಿಸಿದ ಶೂರ, ಪರಾಕ್ರಮದಲ್ಲಿ ಶಕ್ರಸಮನಾದ, ವೇಗದಲ್ಲಿ ವಾಯುವೇಗದ ಸಮನಾದ, ಕ್ರೋಧದಲ್ಲಿ ಮಹೇಶ್ವರನ ಸಮನಾದ, ಪ್ರಹಾರಿಗಳಲ್ಲಿ ಶ್ರೇಷ್ಠ, ಕ್ರೋಧ, ಬಲ, ಸಿಟ್ಟನ್ನು ತಡೆದಿಟ್ಟುಕೊಂಡ ಪರಂತಪ, ಕೋಪದಲ್ಲಿದ್ದರೂ ಜಿತಾತ್ಮನಾಗಿ ಅಣ್ಣನ ಶಾಸನದಡಿಯಲ್ಲಿರುವ ಪಾಂಡವ, ತೇಜೋರಾಶಿ, ಮಹಾತ್ಮ, ಬಲೌಘ, ಅಮಿತ ತೇಜಸ್ವಿ, ನೋಡುವುದಕ್ಕೇ ಭಯಂಕರನಾಗಿರುವ ಭೀಮಸೇನ ವೃಕೋದರನ ಕುರಿತು ಹೇಳು. ಪರಿಘದಂತಹ ಬಾಹುಗಳನ್ನುಳ್ಳ ಆ ಮಧ್ಯಮ, ಸಹಸ್ರಬಾಹುಗಳ ಅರ್ಜುನನೊಂದಿಗೆ ನಿತ್ಯವೂ ಸ್ಪರ್ಧಿಸುವ ಎರಡು ಕೈಗಳ ಅರ್ಜುನ, ಒಂದೇ ಸಲ ವೇಗದಿಂದ ಐನೂರು ಬಾಣಗಳನ್ನು ಬಿಡಬಲ್ಲ, ಅಸ್ತ್ರಗಳಲ್ಲಿ ರಾಜ ಕಾರ್ತವೀರ್ಯನ ಸಮನಾಗಿರುವ ಪಾಂಡವ, ತೇಜಸ್ಸಿನಲ್ಲಿ ಆದಿತ್ಯಸದೃಶನಾಗಿರುವ, ದಮದಲ್ಲಿ ಮಹರ್ಷಿಗೆ ಸಮನಾಗಿರುವ, ಕ್ಷಮೆಯಲ್ಲಿ ಪೃಥ್ವಿಯ ಸಮನಾಗಿರುವ, ವಿಕ್ರಮದಲ್ಲಿ ಮಹೇಂದ್ರನ ಸಮನಾಗಿರುವ, ಈ ಮಹಾರಾಜ್ಯವನ್ನು ಗೆದ್ದಿರುವ ದೀಪ್ತ ತೇಜಸ್ವಿ, ಯಾರ ಘೋರ ಬಾಹುಬಲವನ್ನು ಕೌರವರು ಉಪಾಸಿಸುವರೋ, ದೇವತೆಗಳು ವಾಸವನನ್ನು ಹೇಗೋ ಹಾಗೆ ಯಾರನ್ನು ಪಾಂಡವರು ಆಶ್ರಯಿಸಿರುವರೋ ಆ ನಿನ್ನ ಭ್ರಾತಾ ಸಖ ಧನಂಜಯನು ಇಂದು ಹೇಗಿದ್ದಾನೆ?

“ಸರ್ವಭೂತಗಳಿಗೂ ದಯಾವಂತನಾದ, ವಿನಯದಿಂದ ಹಿಡಿಯಲ್ಪಟ್ಟ, ಮಹಾಸ್ತ್ರವಿದು, ಮೃದು, ಸುಕುಮಾರ, ಧಾರ್ಮಿಕ, ನನಗೆ ಪ್ರಿಯನಾದ ಸಹದೇವನು ಮಹೇಷ್ವಾಸ, ಶೂರ, ಸಮಿತಿಶೋಭನ, ಸಹೋದರರ ಶುಶ್ರೂಷೆಯನ್ನು ಮಾಡುವ, ಧರ್ಮಾರ್ಥಕುಶಲ, ಯುವಕ. ಮಹಾತ್ಮ ಸಹದೇವನನ್ನು ಸದಾ ಅವನ ಕಲ್ಯಾಣ ನಡತೆಯನ್ನು ಸಹೋದರರು ಪೂಜಿಸುತ್ತಾರೆ. ಅಣ್ಣಂದಿರಿಗೆ ವಿಧೇಯನಾಗಿರುವ, ನನ್ನನ್ನು ಶುಶ್ರೂಷೆಮಾಡುವ, ಯೋಧರ ನಾಯಕ ಮಾದ್ರೀಪುತ್ರ ವೀರ ಸಹದೇವನ ಕುರಿತು ನನಗೆ ಹೇಳು. ಆ ಸುಕುಮಾರ, ಯುವಕ, ಶೂರ, ದರ್ಶನೀಯ ಪಾಂಡವ, ಎಲ್ಲ ಸಹೋದರರಿಗೆ ತಮ್ಮ ಪ್ರಾಣಗಳಷ್ಟೇ ಪ್ರಿಯನಾಗಿರುವ, ಚಿತ್ರಯೋಧೀ, ಮಹೇಷ್ವಾಸ, ಮಹಾಬಲಶಾಲಿ, ನನ್ನ ಮಗ, ಸುಖದಲ್ಲಿಯೇ ಬೆಳೆದ ನಕುಲನು ಕುಶಲನಾಗಿದ್ದಾನೆಯೇ? ಸುಖೋಚಿತನಾದ, ದುಃಖಕ್ಕೆ ಅನರ್ಹನಾದ ಸುಕುಮಾರ ಮಹಾರಥಿ ಮಹಾಬಾಹು ನಕುಲನನ್ನು ನಾನು ಪುನಃ ನೋಡುತ್ತೇನೆಯೇ? ಒಂದು ಕ್ಷಣವೂ ನಕುಲನ ವಿನಃ ನನಗೆ ಶಾಂತಿಯಿರಲಿಲ್ಲ. ಈಗ ನೋಡು! ನಾನು ಇನ್ನೂ ಜೀವಿಸಿದ್ದೇನೆ!

“ಎಲ್ಲ ಪುತ್ರರಿಗಿಂತಲೂ ನನಗೆ ಪ್ರಿಯತಮೆಯಾದ ದ್ರೌಪದೀ, ಕುಲೀನೆ, ಶೀಲಸಂಪನ್ನೆ, ಸರ್ವ ಗುಣಗಳಿಂದ ಕೂಡಿರುವ, ಪುತ್ರರ ಲೋಕಕ್ಕಿಂತ ಪತಿಗಳ ಲೋಕವನ್ನು ಆರಿಸಿಕೊಂಡಿರುವ ಸತ್ಯವಾದಿನೀ, ಪ್ರಿಯ ಪುತ್ರರನ್ನು ಪರಿತ್ಯಜಿಸಿ ಪಾಂಡವರನ್ನು ಅನುಸರಿಸಿಹೋದ, ಮಹಾಭಿಜನಸಂಪನ್ನೆ, ಸರ್ವಕಾಮಗಳಿಂದ ಸುಪೂಜಿತೆ, ಈಶ್ವರೀ, ಸರ್ವಕಲ್ಯಾಣೀ ದ್ರೌಪದಿಯು ಹೇಗಿದ್ದಾಳೆ? ಶೂರರೂ ಅಗ್ನಿಸಮಾನರೂ, ಪ್ರಹಾರಿಗಳೂ, ಮಹೇಷ್ವಾಸರೂ ಆದ ಐವರು ಪತಿಯಂದಿರನ್ನು ಪಡೆದ ದ್ರಪದಿಗೂ ದುಃಖವೇ ಪಾಲಾಯಿತು. ತನ್ನ ಪುತ್ರರ ಕುರಿತೇ ಕೊರಗುತ್ತಿರುವ ಸತ್ಯವಾದಿನೀ ದ್ರೌಪದಿಯನ್ನು ಕಾಣದೇ ಇರುವುದು ಇದು ಹದಿನಾಲ್ಕನೆಯ ವರ್ಷ. ಉನ್ನತ ನಡತೆಯ ಆ ದ್ರೌಪದಿಗೇ ಅವ್ಯಯ ಸುಖವು ದೊರೆಯುತ್ತಿಲ್ಲ ಎಂದರೆ ಪುಣ್ಯಕರ್ಮಗಳಿಂದಲೂ ಪುರುಷನು ಸುಖವನ್ನು ಹೊಂದುವುದಿಲ್ಲ ಎಂದಾಯಿತು. ಸಭೆಯಲ್ಲಿ ನಡೆದುದನ್ನು ನೋಡಿದಾಗಲಿಂದ ನನಗೆ ಕೃಷ್ಣೆಗಿಂತ ಅಧಿಕ ಪ್ರಿಯನು ಬೀಭತ್ಸುವೂ ಅಲ್ಲ, ಯುಧಿಷ್ಠಿರನೂ ಅಲ್ಲ, ಭೀಮಸೇನನೂ ಅಲ್ಲ, ಯಮಳರೂ ಅಲ್ಲ. ಯಾವಾಗ ದ್ರೌಪದಿಯನ್ನು, ಬಯಲಿನಲ್ಲಿ ಒಬ್ಬಳೇ ನಿಂತಿರುವಂತೆ ಮಾವನ ಸಮೀಪದಲ್ಲಿ ನಿಂತಿರುವುದನ್ನು, ಕ್ರೋಧಲೋಭಾನುವರ್ತಿಗಳು ಅನಾರ್ಯರೀತಿಯಲ್ಲಿ ಏಕವಸ್ತ್ರಳಾದ ಅವಳನ್ನು ಸಭೆಗೆ ಎಳೆದು ತಂದುದನ್ನು ನೋಡಿದುದಕ್ಕಿಂತ ಅಧಿಕ ದುಃಖವನ್ನು ಅದರ ಹಿಂದೆ ಏನೂ ನನಗೆ ಕೊಟ್ಟಿರಲಿಲ್ಲ. ಅಲ್ಲಿಯೇ ಮಹಾರಾಜ ಧೃತರಾಷ್ಟ್ರನೂ, ಬಾಹ್ಲೀಕನೂ, ಕೃಪನೂ, ಸೋಮದತ್ತನೂ ಮತ್ತು ನಿರ್ವಿಣ್ಣರಾದ ಕುರುಗಳು ಇದ್ದಿದ್ದರೂ ಆ ಸಂಸದಿಯಲ್ಲಿದ್ದ ಎಲ್ಲರರಿಗಿಂತಲೂ ಕ್ಷತ್ತನನ್ನು ನಾನು ಗೌರವಿಸುತ್ತೇನೆ, ಏಕೆಂದರೆ ಅವನೊಬ್ಬನೇ ಆರ್ಯನಂತೆ, ಧನ ಮತ್ತು ವಿದ್ಯೆಯ ಆಧಾರದ ಮೇಲಲ್ಲ, ನಡೆದುಕೊಂಡ. ಆ ಮಹಾಬುದ್ಧಿ, ಗಂಭೀರ, ಮಹಾತ್ಮ ಕ್ಷತ್ತನು ಲೋಕಗಳೇ ಯಾವುದರ ಮೇಲೆ ನಿಂತಿವೆಯೋ ಅಂಥಹ ಶೀಲದಿಂದ ಅಲಂಕೃತನಾಗಿದ್ದಾನೆ.”

ಗೋವಿಂದನು ಬಂದುದನ್ನು ನೋಡಿ ಸಂತೋಷ ಮತ್ತು ದುಃಖಗಳಿಂದ ಶೋಕಾರ್ತಳಾದ ಅವಳು ನಾನಾವಿಧದ ಎಲ್ಲ ದುಃಖಗಳನ್ನೂ ತೋಡಿಕೊಂಡಳು. “ಅರಿಂದಮ! ಹಿಂದೆ ರಾಜರು ಆಚರಿಸುತ್ತಿದ್ದ ಅಕ್ಷದ್ಯೂತ, ಮೃಗವಧೆ ಮೊದಲಾದವುಗಳು ಅವರಿಗೆ ನಿಜವಾಗಿಯೂ ಸುಖವನ್ನು ನೀಡುತ್ತಿದ್ದವೇ? ಅಂದು ಕುರುಸನ್ನಿಧಿಯ ಸಭೆಯಲ್ಲಿ ಕೃಷ್ಣೆಯನ್ನು ಧಾರ್ತರಾಷ್ಟ್ರರು ಕಷ್ಟಕ್ಕೊಳಪಡಿಸಿದರು ಎನ್ನುವುದು ಒಳ್ಳೆಯದಲ್ಲ! ಅವರು ನಗರದಿಂದ ಹೊರಹಾಕಲ್ಪಟ್ಟಿದ್ದು, ನಂತರದ ವನವಾಸ, ಅವರು ಅಜ್ಞಾತವಾಸವನ್ನು ನಡೆಸಿದುದು, ಬಾಲಕರಿಂದ ದೂರವಿದ್ದುದು ಹೀಗೆ ನಾನಾವಿಧದ ದುಃಖಗಳನ್ನು ಪಡೆದಿದ್ದೇನೆ. ಅದಕ್ಕಿಂತಲೂ ಹೆಚ್ಚಿನ ಕ್ಲೇಶವೇನೆಂದರೆ ನಾನು ಪುತ್ರರೊಂದಿಗೆ ಈ ಹದಿನಾಲ್ಕನೆಯ ವರ್ಷವೂ ದುರ್ಯೋಧನನಿಂದ ಮೋಸಹೋಗುತ್ತಿದ್ದೇನೆ. ದುಃಖವು ಸುಖಕ್ಕೆ ಎಡೆಮಾಡಿಕೊಡುವುದಿಲ್ಲ ಎಂದರೆ ಪುಣ್ಯದ ಫಲವು ಕ್ಷಯವಾಗಿಹೋಗುತ್ತದೆ. ನಾನು ಯಾವಾಗಲೂ ಪಾಂಡವರು ಮತ್ತು ಧಾರ್ತರಾಷ್ಟ್ರರಲ್ಲಿ ಬೇಧವನ್ನು ಕಾಣಲಿಲ್ಲ. ಇದೇ ಸತ್ಯದ ಮೂಲಕ ನೀನು ಅಮಿತ್ರರನ್ನು ಸಂಹರಿಸಿ ಶ್ರೀಯಿಂದ ಆವೃತನಾಗಿ ಪಾಂಡವರೊಂದಿಗೆ ನಮ್ಮನ್ನು ಈ ಸಂಗ್ರಾಮದಿಂದ ಉಳಿಸುತ್ತೀಯೆ ಎಂದು ಕಾಣುತ್ತಿದ್ದೇನೆ. ಅವರ ಸತ್ವದಂತೆ ಹೋದರೆ ಅವರನ್ನು ಸೋಲಿಸುವುದು ಶಕ್ಯವಿಲ್ಲ. ನಾನು ನನ್ನನ್ನು ಅಥವಾ ಸುಯೋಧನನನ್ನಲ್ಲ. ನನ್ನ ತಂದೆಯನ್ನು ದೂರುತ್ತೇನೆ. ಅವನು ಧನವನ್ನು ಧೂರ್ತರಿಗೆ ಅರ್ಪಿಸುವಂತೆ ನನ್ನನ್ನು ಕುಂತಿಭೋಜನಿಗೆ ಕೊಟ್ಟನು. ನಾನು ಬಾಲಕಿಯಾಗಿದ್ದೆ. ಚಂಡಿನೊಂದಿಗೆ ಆಡುತ್ತಿರುವಾಗ ನಿನ್ನ ಅಜ್ಜನು ನನ್ನನ್ನು ಸಖ್ಯದಲ್ಲಿ ಮಹಾತ್ಮ ಕುಂತಿಭೋಜನಿಗಿತ್ತನು. ನಾನು ಪಿತನಿಂದ ಮತ್ತು ಮಾವನಿಂದಲೂ ಮೋಸಗೊಂಡು ಅತ್ಯಂತ ದುಃಖಿತಳಾಗಿದ್ದೇನೆ. ನಾನು ಜೀವಿಸಿ ಫಲವೇನು?

“ನಾನು ಸವ್ಯಸಾಚಿಗೆ ಜನ್ಮವಿತ್ತಾಗ ರಾತ್ರಿಯಲ್ಲಿ ಧ್ವನಿಯೊಂದು ಹೇಳಿತ್ತು: ‘ನಿನ್ನ ಪುತ್ರನು ಪೃಥ್ವಿಯನ್ನು ಗೆದ್ದು ಅವನ ಯಶಸ್ಸು ದೇವಲೋಕವನ್ನೂ ಮುಟ್ಟುತ್ತದೆ! ಜನರು ಸೇರಿರುವ ಯುದ್ಧದಲ್ಲಿ ಕುರುಗಳನ್ನು ಸಂಹರಿಸಿ ರಾಜ್ಯವನ್ನು ಪಡೆದು ಧನಂಜಯ ಕೌಂತೇಯನು ಸಹೋದರರೊಡನೆ ಮೂರು ಯಾಗಗಳನ್ನು ಮಾಡುವನು!’ ಅದನ್ನು ನಾನು ಎಂದೂ ಅನುಮಾನಪಡಲಿಲ್ಲ. ಧರ್ಮ ವೇಧಸನಿಗೆ ನಮಸ್ಕಾರ. ಇದೇ ಪ್ರಜೆಗಳನ್ನು ನಿತ್ಯವೂ ಹೊರುವುದು ಮಹಾ ಧರ್ಮ! ಧರ್ಮವಿದ್ದರೆ ಸತ್ಯವು ಆಗುತ್ತದೆ. ಆಗ ನೀನೂ ಕೂಡ ಎಲ್ಲವನ್ನು ಸಂಪಾದಿಸಲು ಸಾಧ್ಯ. ನಾನೋರ್ವ ವಿಧವೆ. ಸಂಪತ್ತನ್ನು ಕಳೆದುಕೊಂಡಿದ್ದೇನೆ. ವೈರಿಗಳನ್ನಲ್ಲ! ಅದಕ್ಕಿಂತಲೂ ಹೆಚ್ಚಾಗಿ ಪುತ್ರರಿಲ್ಲವಲ್ಲ ಎಂದು ಶೋಕಪಡುತ್ತಿದ್ದೇನೆ. ಗಾಂಡೀವ ಧನ್ವಿಯನ್ನು, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಧನಂಜಯನನ್ನು ನೋಡದೇ ನನ್ನ ಹೃದಯಕ್ಕೆ ಯಾವ ರೀತಿಯ ಶಾಂತಿಯಿರಬಲ್ಲದು? ಯುಧಿಷ್ಠಿರನನ್ನು, ಧನಂಜಯನನ್ನು, ಯಮಳರನ್ನು ಮತ್ತು ವೃಕೋದರನನ್ನು ನಾನು ನೋಡದೇ ಇರುವುದು ಇದು ಹದಿನಾಲ್ಕನೆಯ ವರ್ಷ. ಮಾನವರು ಕಾಣದೇ ಹೋದವರಿಗೆ ತೀರಿಕೊಂಡಿದ್ದಿರಬಹುದೆಂದು ಶ್ರಾದ್ಧವನ್ನು ಮಾಡುತ್ತಾರೆ. ಒಂದು ರೀತಿಯಲ್ಲಿ ನನಗೆ ಅವರು ಮತ್ತು ನಾನು ಅವರಿಗೆ ಮೃತರಾದಂತೆ! ರಾಜ ಧರ್ಮಾತ್ಮ ಯುಧಿಷ್ಠಿರನಿಗೆ ಹೇಳು: ‘ಪುತ್ರಕ! ನಿನ್ನ ಧರ್ಮವು ಹೀನವಾಗುತ್ತದೆ. ಸುಮ್ಮನೇ ನಾಟಕವಾಡಬೇಡ!’

“ಇಲ್ಲಿ ನಾನು ಪರಾಶ್ರಯದಲ್ಲಿ ಬದುಕುತ್ತಿದ್ದೇನೆ. ನನಗೆ ಧಿಕ್ಕಾರ! ಭಿಕ್ಷೆಬೇಡಿ ಜೀವಿಸುವುದಕ್ಕಿಂತ ಬೇರೆಯವರ ಆಶ್ರಯದಲ್ಲಿರುವುದು ಉತ್ತಮ. ಈಗ ನಿತ್ಯವೂ ಉದ್ಯುಕ್ತರಾಗಿರುವ ಧನಂಜಯ-ವೃಕೋದರರಿಗೆ ಹೇಳು: ‘ಕ್ಷತ್ರಿಯಳಾದ ನಾನು ನಿಮ್ಮನ್ನು ಯಾವ ಉದ್ದೇಶಕ್ಕೆ ಹಡೆದಿದ್ದೆನೋ ಅದರ ಕಾಲವು ಬಂದಿದೆ. ಈಗ ಬಂದಿರುವ ಕಾಲವು ಹೊರಟುಹೋದರೆ ನೀವು ಎಷ್ಟೇ ಲೋಕಸಂಭಾವಿತರು ಸಂತರೆಂದು ಎನಿಸಿಕೊಂಡಿದ್ದರೂ ನೀವು ಹಿಂಸೆಯನ್ನು ಮಾಡಿದಂತೆ! ನೀವು ಈ ಕ್ರೂರ ಕೃತ್ಯವನ್ನು ಮಾಡಿದಿರೆಂದರೆ ನಾನು ನಿಮ್ಮನ್ನು ಕೊನೆಯವರೆಗೆ ತ್ಯಜಿಸುತ್ತೇನೆ. ಸಮಯವು ಕೂಡಿ ಬಂದಾಗ ಜೀವವನ್ನೂ ಹಿಂದೆ ಪಡೆಯಬಹುದು.’ ಸದಾ ಕ್ಷತ್ರಧರ್ಮದಲ್ಲಿ ನಿರತರಾಗಿರುವ ಮಾದ್ರೀಪುತ್ರರೀರ್ವರಿಗೆ ಹೇಳು: ‘ಜೀವ ಹೋದರೂ ವಿಕ್ರಮದಿಂದ ಗಳಿಸಿದ ಭೋಗಗಳನ್ನು ಆರಿಸಿಕೊಳ್ಳಬೇಕು. ಏಕೆಂದರೆ ವಿಕ್ರಮದಿಂದ ಗಳಿಸಿದ ಸಂಪತ್ತು ಕ್ಷತ್ರಧರ್ಮದಿಂದ ಜೀವಿಸುವ ಮನುಷ್ಯನ ಮನಸ್ಸನ್ನು ಸದಾ ಸಂತೋಷಗೊಳಿಸುತ್ತದೆ.’ ಮಹಾಬಾಹೋ! ‘ದ್ರೌಪದಿಯ ಹೆಜ್ಜೆಗಳಲ್ಲಿ ನಡೆ!’ ಎಂದು ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ, ವೀರ, ಅರ್ಜುನ ಪಾಂಡವನಿಗೆ ಹೇಳು. ನಿನಗೆ ತಿಳಿದೇ ಇದೆ. ಕೃದ್ಧರಾದ ಭೀಮಾರ್ಜುನರು ಅಂತಕರಂತೆ; ಅವರು ದೇವತೆಗಳನ್ನು ಕೂಡ ಪರಮ ಗತಿಗೆ ಎಳೆದೊಯ್ಯುತ್ತಾರೆ. ಕೃಷ್ಣೆಯನ್ನು ಸಭೆಗೆ ಎಳೆದು ತರಲಾಯಿತು ಮತ್ತು ದುಃಶಾಸನ-ಕರ್ಣರು ಕ್ರೂರವಾಗಿ ಮಾತನಾಡಿದರು ಎನ್ನುವುದು ಅವರಿಗಾದ ಅಪಮಾನ. ಮನಸ್ವಿಯಾದ ಭೀಮಸೇನನನ್ನು ದುರ್ಯೋಧನನು ಕುರುಮುಖ್ಯರು ನೋಡುತ್ತಿರುವಾಗಲೇ ಎದುರಿಸಿದನು. ಅದರ ಫಲವನ್ನು ಅವನು ಕಾಣುತ್ತಾನೆ. ವೈರವನ್ನು ಕಟ್ಟಿಕೊಂಡ ವೃಕೋದರನಿಗೆ ಶಾಂತಿಯಾಗುವುದಿಲ್ಲ. ಎಷ್ಟೇ ಹಳತಾದರೂ ಆ ಶತ್ರುಕರ್ಶನನು ಶತ್ರುವಿಗೆ ಅಂತ್ಯವನ್ನು ತೋರಿಸುವವರೆಗೆ ಭೀಮನ ವೈರವು ಶಾಂತಗೊಳ್ಳುವುದಿಲ್ಲ.

“ರಾಜ್ಯಹರಣ, ದ್ಯೂತದಲ್ಲಿ ಪರಾಜಯ, ಮಕ್ಕಳ ವನವಾಸ ಇವೆಲ್ಲವೂ ನನ್ನ ದುಃಖಕ್ಕೆ ಕಾರಣವಲ್ಲ. ಆದರೆ ಆ ಕಪ್ಪುವರ್ಣದ ದೊಡ್ಡದೇಹದವಳನ್ನು ಏಕವಸ್ತ್ರದಲ್ಲಿ ಸಭೆಗೆ ಎಳೆದುಕೊಂಡು ಹೋಗಿ ಕ್ರೂರವಾದ ಮಾತುಗಳನ್ನು ಕೇಳಿಸಿದರಲ್ಲ ಅದಕ್ಕಿಂತ ಹೆಚ್ಚಿನ ದುಃಖವೇನಿದೆ? ಸದಾ ಕ್ಷತ್ರಧರ್ಮವನ್ನು ಪಾಲಿಸುವ, ಋತುವಿನಲ್ಲಿದ್ದ ಆ ವರಾರೋಹೆ ಸತೀ ಕೃಷ್ಣೆಯು ತನ್ನ ನಾಥರು ಅಲ್ಲಿದ್ದರೂ ಅನಾಥಳಾಗಿದ್ದಳು. ಪುತ್ರರೊಂದಿಗೆ ನನ್ನ ನಾಥನು ನೀನು ಮಧುಸೂದನ! ಮತ್ತು ಬಲಿಗಳಲ್ಲಿ ಶ್ರೇಷ್ಠ ರಾಮ ಮತ್ತು ಮಹಾರಥಿ ಪ್ರದ್ಯುಮ್ನ. ಪುರುಷೋತ್ತಮ! ದುರ್ಧರ್ಷನಾದ ಭೀಮ ಮತ್ತು ಯುದ್ಧದಲ್ಲಿ ಹಿಂದೆಸರಿಯದ ವಿಜಯನು ಜೀವಿತರಿರುವವರೆಗೂ ನಾನು ಈ ದುಃಖವನ್ನು ಸಹಿಸಿಕೊಂಡಿರಬಲ್ಲೆ.”

ಆಗ ಪಾರ್ಥಸಖ ಶೌರಿಯು ಪುತ್ರರ ಕಷ್ಟಗಳ ಕುರಿತು ಶೋಕಿಸುತ್ತಿದ್ದ ತನ್ನ ತಂದೆಯ ತಂಗಿಗೆ ಆಶ್ವಾಸನೆಯನ್ನಿತ್ತನು. “ಅತ್ತೇ! ನಿನ್ನಂತಹ ಸೀಮಂತಿನಿಯು ಲೋಕದಲ್ಲಿ ಯಾರಾದರೂ ಇದ್ದಾರೆಯೇ? ರಾಜ ಶೂರನ ಮಗಳು, ಅಜಮೀಢನ ಕುಲಕ್ಕೆ ಹೋದವಳು, ಮಹಾಕುಲೀನಳು, ಕೊಳದಿಂದ ಕೊಳಕ್ಕೆ ಹೋದ ಕಮಲದಂತವಳು, ಈಶ್ವರೀ, ಸರ್ವ ಕಲ್ಯಾಣೀ, ಪತಿಯಿಂದ ಪರಮಪೂಜಿತಳಾದ, ವೀರರ ತಾಯಿ ಮತ್ತು ವೀರನ ಪತ್ನಿ, ಸರ್ವ ಗುಣಗಳಿಂದ ಸುಮದಿತಳಾಗಿರುವ ನಿನ್ನಂಥಹ ಮಹಾಪ್ರಾಜ್ಞಳು ಮಾತ್ರ ಈ ರೀತಿಯ ಸುಖ-ದುಃಖಗಳನ್ನು ಸಹಿಸಿಕೊಳ್ಳಬಲ್ಲಳು. ನಿದ್ರೆ, ಆಲಸ್ಯ, ಕ್ರೋಧ, ಹರ್ಷ, ಹಸಿವು, ಬಾಯಾರಿಕೆ, ಛಳಿ, ಬಿಸಿಲು ಇವೆಲ್ಲವನ್ನೂ ಜಯಿಸಿ ವೀರ ಪಾರ್ಥರು ನಿತ್ಯಸುಖವನ್ನು ಬಯಸುತ್ತಿದ್ದಾರೆ. ಪಾರ್ಥರು ಗ್ರಾಮಸುಖವನ್ನು ತೊರೆದಿದ್ದಾರೆ. ಅವರು ಈಗ ವೀರರ, ಮಹೋತ್ಸಾಹರ ಮಹಾಬಲರ ಸುಖವನ್ನು ಬಯಸುತ್ತಿದ್ದಾರೆ. ಸ್ವಲ್ಪದರಲ್ಲಿಯೇ ಅವರು ತೃಪ್ತರಾಗುತ್ತಿಲ್ಲ. ಧೀರರು ಅತ್ಯುನ್ನತವಾದುದನ್ನು ಬಯಸುತ್ತಾರೆ; ಗ್ರಾಮದವರು ಮಧ್ಯಮ ಸುಖವನ್ನು ಬಯಸುತ್ತಾರೆ. ಉತ್ತಮರು ಮಾನುಷ ಭೋಗಗಳಿಗಿಂದ ಅತೀವವಾದವುಗಳಿಗೆ ಕಷ್ಟಪಡುತ್ತಾರೆ. ಧೀರರು ಕೊನೆಯದನ್ನು ಬಯಸುತ್ತಾರೆ, ಮಧ್ಯದಲ್ಲಿರುವುದನ್ನಲ್ಲ. ಕೊನೆಯದನ್ನು ಪಡೆಯುವುದು ಸುಖ ಮತ್ತು ಎರಡು ಕೊನೆಗಳ ಮಧ್ಯದಲ್ಲಿರುವುದನ್ನು ಪಡೆಯುವುದು ದುಃಖ ಎಂದು ಹೇಳುತ್ತಾರೆ. ಕೃಷ್ಣೆಯೂ ಕೂಡಿ ಪಾಂಡವರು ನಿನಗೆ ಅಭಿವಾದಿಸುತ್ತಾರೆ. ಅವರು ಕುಶಲರಾಗಿದ್ದಾರೆಂದು ತಿಳಿಸಿ ನಿನ್ನ ಆರೋಗ್ಯದ ಕುರಿತು ಕೇಳುತ್ತಾರೆ. ಅಮಿತ್ರರನ್ನು ನಾಶಪಡಿಸಿ, ಶ್ರೀಯಿಂದ ಆವೃತರಾಗಿ, ಸರ್ವಲೋಕದ ಒಡೆಯರಾದ ಪಾಂಡವರನ್ನು ಆರೋಗ್ಯದಿಂದಿದ್ದು ಸರ್ವವನ್ನೂ ಸಾಧಿಸಿದವರಾಗಿರುವುದನ್ನು ಶೀಘ್ರದಲ್ಲಿಯೇ ನೋಡುತ್ತೀಯೆ.”

ಈ ರೀತಿ ಆಶ್ವಾಸನೆಯನ್ನು ಪಡೆದ ಕುಂತಿಯು, ಪುತ್ರರಿಗಾಗಿ ಇನ್ನೂ ದುಃಖಿಸುತ್ತಾ, ಬುದ್ಧಿಯಲ್ಲಿ ಹುಟ್ಟಿದ ಕತ್ತಲೆಯನ್ನು ನಿಯಂತ್ರಿಸಿಕೊಂಡು ಜನಾರ್ದನನಿಗೆ ತಿರುಗಿ ಹೇಳಿದಳು: “ಮಧುಸೂದನ! ಕೃಷ್ಣ! ಅವರಿಗೆ ಏನು ಒಳ್ಳೆಯದೆಂದು ನೀನು ತಿಳಿಯುತ್ತೀಯೋ ಅದನ್ನು ನಿನಗಿಷ್ಟವಾದ ಹಾಗೆ – ಆದರೆ ಧರ್ಮಕ್ಕೆ ಲೋಪಬಾರದ ಹಾಗೆ ಮತ್ತು ಮೋಸವನ್ನು ಬಳಸದೇ - ಮಾಡು. ಕೃಷ್ಣ! ನಿನ್ನ ಉನ್ನತ ಜನ್ಮವನ್ನೂ, ಸತ್ಯತೆಯನ್ನೂ, ನಿನ್ನ ಮಿತ್ರರಿಗೆ ಬುದ್ಧಿ ವಿಕ್ರಮಗಳನ್ನು ಉಪಯೋಗಿಸಿ ವ್ಯವಸ್ಥೆಮಾಡುವುದನ್ನೂ ನಾನು ತಿಳಿದುಕೊಂಡಿದ್ದೇನೆ. ನಿನ್ನ ಕುಲದಲ್ಲಿ ನೀನೇ ಧರ್ಮ, ನೀನೇ ಸತ್ಯ, ನೀನೇ ಮಹಾತಪಸ್ಸು. ನೀನೇ ತ್ರಾತಾ, ನೀನೇ ಮಹಾಬ್ರಹ್ಮ, ಮತ್ತು ನಿನ್ನಲ್ಲಿಯೇ ಎಲ್ಲವೂ ನೆಲೆಸಿವೆ. ನೀನು ಹೇಳಿದಂತೆಯೇ ಆಗುತ್ತದೆ; ನಿನ್ನಲ್ಲಿಯೇ ಸತ್ಯವಿರುತ್ತದೆ.”

ಗೋವಿಂದನು ಅವಳಿಗೆ ಪ್ರದಕ್ಷಿಣೆ ಮಾಡಿ ಬೀಳ್ಕೊಂಡನು. ಅನಂತರ ಮಹಾಬಾಹುವು ದುರ್ಯೋಧನನ ಮನೆಯ ಕಡೆ ನಡೆದನು.

ಶ್ರೀಕೃಷ್ಣನು ದುರ್ಯೋಧನನ ಮನೆಗೆ ಹೋದುದು-ಭೋಜನವನ್ನು ತಿರಸ್ಕರಿಸಿದ್ದುದು

ಪ್ರದಕ್ಷಿಣೆ ಮಾಡಿ ಪೃಥೆಯನ್ನು ಬೀಳ್ಕೊಂಡು ಗೋವಿಂದ, ಶೌರಿ, ಅರಿಂದಮನು ದುರ್ಯೋಧನನ ಮನೆಗೆ ಹೋದನು. ಪುರಂದರನ ಮನೆಯಂತೆ ಪರಮಸಂಪತ್ತಿನಿಂದ ಕೂಡಿದ್ದ, ಆಕಾಶದಲ್ಲಿ ಮೋಡದಂತಿರುವ ಮನೆಯ ಮೂರು ಕಕ್ಷೆಗಳನ್ನು ದ್ವಾರಪಾಲಕರಿಂದ ತಡೆಯಲ್ಪಡದೇ ಆ ಗಿರಿಕೂಟದಂತೆ ಎತ್ತರವಾಗಿರುವ, ಐಶ್ವರ್ಯದಿಂದ ಬೆಳಗುತ್ತಿರುವ, ಮಹಾಯಶಸ್ವಿ ಪ್ರಾಸಾದಗಳನ್ನು ಏರಿ ಹೋದನು. ಅಲ್ಲಿ ಸಹಸ್ರಾರು ರಾಜರುಗಳಿಂದ ಮತ್ತು ಕುರುಗಳಿಂದ ಪರಿವೃತನಾಗಿ ಆಸನದಲ್ಲಿ ಕುಳಿತಿದ್ದ ಮಹಾಬಾಹು ಧಾರ್ತರಾಷ್ಟ್ರನನ್ನು ಕಂಡನು. ದುರ್ಯೋಧನನ ಸಮೀಪದಲ್ಲಿ ತಮ್ಮ ತಮ್ಮ ಆಸನಗಳಲ್ಲಿದ್ದ ದುಃಶಾಸನ, ಕರ್ಣ, ಸೌಬಲ ಶಕುನಿಯರನ್ನೂ ಅವನು ನೋಡಿದನು. ದಾಶಾರ್ಹನು ಹತ್ತಿರ ಬರಲು ಮಹಾಯಶಸ್ವಿ ಧಾರ್ತರಾಷ್ಟ್ರನು ಅಮಾತ್ಯರೊಂದಿಗೆ ಎದ್ದು ಮಧುಸೂದನನನ್ನು ಪೂಜಿಸಿದನು. ವಾರ್ಷ್ಣೇಯ ಕೇಶವನು ಅಮಾತ್ಯರೊಂದಿಗೆ ಧಾರ್ತರಾಷ್ಟ್ರರನ್ನೂ ಭೇಟಿಮಾಡಿ ಅಲ್ಲಿದ್ದ ರಾಜರನ್ನೂ ಕೂಡ ವಯಸ್ಸಿಗೆ ತಕ್ಕುದಾಗಿ ಭೇಟಿ ಮಾಡಿದನು. ಅಲ್ಲಿ ಅಚ್ಯುತನು ವಿವಿಧ ರತ್ನಗಳಿಂದ ಅಲಂಕರಿಸಲ್ಪಟ್ಟ ಬಂಗಾರದ ಪರ್ಯಂಕದ ಮೇಲೆ ಕುಳಿತುಕೊಂಡನು. ಆಗ ಕೌರವನು ಜನಾರ್ದನನಿಗೆ ಗೋವು ಮಧುಪರ್ಕಗಳನ್ನಿತ್ತು ಮನೆಗಳನ್ನೂ ರಾಜ್ಯವನ್ನೂ ಅವನಿಗೆ ನಿವೇದಿಸಿದನು. ಅಲ್ಲಿ ಕುಳಿತಿದ್ದ ಪ್ರಸನ್ನಾದಿತ್ಯವರ್ಚಸ ಗೋವಿಂದನನ್ನು ಕುರುಗಳು ರಾಜರೊಂದಿಗೆ ಉಪಾಸಿಸಿದರು. ಆಗ ರಾಜಾ ದುರ್ಯೋಧನನು ಜಯಂತರಲ್ಲಿ ಶ್ರೇಷ್ಠನಾದ ವಾರ್ಷ್ಣೇಯನನ್ನು ಭೋಜನಕ್ಕೆ ಆಮಂತ್ರಿಸಿದನು. ಆದರೆ ಕೇಶವನು ಆಮಂತ್ರಣವನ್ನು ಸ್ವೀಕರಿಸಲಿಲ್ಲ. ರಾಜಸಂಸದಿಯಲ್ಲಿ ದುರ್ಯೊಧನನು ಮೃದುವಾದ ಆದರೆ ವ್ಯಂಗ್ಯದ ದಾಟಿಯಲ್ಲಿ, ಕರ್ಣನನ್ನು ನೋಡುತ್ತಾ, ಕೃಷ್ಣನಿಗೆ ಹೇಳಿದನು:

“ಜನಾರ್ದನ! ಏಕೆ ನೀನು ನಿನಗಾಗಿ ತಯಾರಿಸಿದ ಅನ್ನ-ಪಾನೀಯಗಳನ್ನು, ವಸ್ತ್ರ-ಹಾಸಿಗೆಗಳನ್ನು ಸ್ವೀಕರಿಸುತ್ತಿಲ್ಲ? ಎರಡೂ ಪಕ್ಷದವರಿಗೆ ನೀನು ಸಹಾಯಮಾಡುತ್ತಿದ್ದೀಯೆ. ಇಬ್ಬರ ಹಿತದಲ್ಲಿಯೂ ಇರುವೆ. ಧೃತರಾಷ್ಟ್ರನ ಸಂಬಂಧಿಯೂ ಪ್ರೀತಿಪಾತ್ರನೂ ಆಗಿದ್ದೀಯೆ. ನೀನು ಧರ್ಮ-ಅರ್ಥಗಳೆರಡನ್ನೂ ಎಲ್ಲ ತತ್ವಗಳನ್ನೂ ತಿಳಿದಿದ್ದೀಯೆ. ಇದರ ಕಾರಣವನ್ನು ಕೇಳಲು ಬಯಸುತ್ತೇನೆ.”

ಆಗ ಗೋವಿಂದ, ಮಹಾಮನಸ್ವಿ, ರಾಜೀವನೇತ್ರನು ತನ್ನ ವಿಪುಲ ಭುಜವನ್ನು ಹಿಡಿದು ಗುಡುಗಿನಂಥಹ ಸ್ವರದಲ್ಲಿ, ಸ್ಪಷ್ಟವಾದ, ಉತ್ತಮವಾಗಿ ರಚಿಸಲ್ಪಟ್ಟ, ಮುಚ್ಚುಮರೆಯಿಲ್ಲದ, ನೀರಸವಲ್ಲದ, ಯಾವ ಶಬ್ಧವನ್ನೂ ನುಂಗದೇ ರಾಜನಿಗೆ ಕಾರಣದ ಕುರಿತು ಉತ್ತರಿಸಿದನು: “ಭಾರತ! ದೂತರು ಬಂದ ಕೆಲಸವು ಯಶಸ್ವಿಯಾದರೆ ಊಟಮಾಡುತ್ತಾರೆ ಮತ್ತು ಸತ್ಕಾರವನ್ನು ಸ್ವೀಕರಿಸುತ್ತಾರೆ. ನಾನು ಯಶಸ್ವಿಯಾದರೆ ನೀನು ಅಮಾತ್ಯರೊಂದಿಗೆ ನನ್ನನ್ನು ಸತ್ಕರಿಸಬಲ್ಲೆ!”

ಹೀಗೆ ಹೇಳಲು ಧಾರ್ತರಾಷ್ಟ್ರನು ಜನಾರ್ದನನಿಗೆ ಹೇಳಿದನು: “ನಮ್ಮೊಡನೆ ಈ ರೀತಿ ವ್ಯವಹರಿಸುವುದು ಸರಿಯಲ್ಲ. ನೀನು ನಿನ್ನ ಕಾರ್ಯದಲ್ಲಿ ಯಶಸ್ವಿಯಾಗುತ್ತೀಯೋ ಅಥವಾ ಇಲ್ಲವೋ, ನಿನಗೆ ನಮ್ಮೊಂದಿಗಿರುವ ಸಂಬಂಧದ ಕಾರಣ ನಾವು ನಿನಗೆ ಪೂಜೆ ಸಲ್ಲಿಸಬಲ್ಲೆವು. ಆದರೂ ಪ್ರೀತಿಯಿಂದ ಮಾಡಿದ ಪೂಜೆಯನ್ನು ನೀನು ಸ್ವೀಕರಿಸದೇ ಇದ್ದುದರ ಕಾರಣವು ನಮಗೆ ತಿಳಿಯಲಿಲ್ಲ. ನಿನ್ನೊಂದಿಗೆ ನಮ್ಮ ವೈರವೂ ಇಲ್ಲ, ಕದನವೂ ಇಲ್ಲ. ಆದುದರಿಂದ ಯೋಚಿಸಿದರೆ ನಿನ್ನ ಈ ಮಾತುಗಳು ನಿನಗೆ ತಕ್ಕುದಲ್ಲ.”

ಹೀಗೆ ಹೇಳಲು ಜನಾರ್ದನ ದಾಶಾರ್ಹನು ಅಮಾತ್ಯರೊಂದಿಗಿದ್ದ ಧಾರ್ತರಾಷ್ಟ್ರನನ್ನು ನೋಡಿ ನಗುತ್ತಾ ಉತ್ತರಿಸಿದನು: “ನಾನು ಕಾಮಕ್ಕಾಗಲೀ, ಅನುಮಾನದಿಂದಾಗಲೀ, ದ್ವೇಷದಿಂದಾಗಲೀ, ಸಂಪತ್ತಿಗಾಗಲೀ, ಲೋಭದ ಕಾರಣದಿಂದಾಗಲೀ ಎಂದೂ ಧರ್ಮವನ್ನು ಬಿಡುವವನಲ್ಲ. ಪ್ರೀತಿಯಿಂದ ಅಥವಾ ಆಪತ್ತಿನಲ್ಲಿರುವಾಗ ಇನ್ನೊಬ್ಬರಲ್ಲಿ ಊಟಮಾಡುತ್ತಾರೆ. ನೀನು ನನಗೆ ಪ್ರೀತಿಪಾತ್ರನಲ್ಲ ಮತ್ತು ನಾವು ಆಪತ್ತಿನಲ್ಲಿಲ್ಲ. ಸರ್ವ ಗುಣಗಳಿಂದ ಸಮುದಿತರಾಗಿರುವ, ನಿನ್ನೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ನಿನ್ನ ಸಹೋದರ ಪಾಂಡವರನ್ನು ನೀನು ಅವರು ಹುಟ್ಟಿದಾಗಲಿಂದಲೂ, ವಿನಾಕಾರಣ, ದ್ವೇಷಿಸಿಕೊಂಡು ಬಂದಿದ್ದೀಯೆ. ಪಾರ್ಥರ ಮೇಲಿರುವ ಈ ಕಾರಣವಿಲ್ಲದ ದ್ವೇಷವು ನಿನಗೆ ಸರಿಯಲ್ಲ. ಧರ್ಮದಲ್ಲಿ ಸ್ಥಿತರಾಗಿರುವ ಪಾಂಡವರಿಗೆ ಯಾರು ತಾನೇ ಕೇಡನ್ನು ಬಯಸಿಯಾರು? ಯಾರು ಅವರನ್ನು ದ್ವೇಷಿಸುತ್ತಾರೋ ಅವರು ನನ್ನನ್ನೂ ದ್ವೇಷಿಸುತ್ತಾರೆ. ಅವರನ್ನು ಪ್ರೀತಿಸುವವರು ನನ್ನನ್ನೂ ಪ್ರೀತಿಸುತ್ತಾರೆ. ಧರ್ಮಚಾರಿಗಳಾದ ಪಾಂಡವರ ಮತ್ತು ನನ್ನ ಆತ್ಮಗಳು ಒಂದೇ ಎನ್ನುವುದನ್ನು ತಿಳಿ. ಯಾರು ಕಾಮ-ಕ್ರೋಧಗಳನ್ನು ಅನುಸರಿಸಿ ಮೋಹದಿಂದ ಗುಣವಂತರಾದವರನ್ನು ದ್ವೇಷಿಸುತ್ತಾನೋ ಅವನನ್ನು ಪುರುಷಾಧಮನೆಂದು ಹೇಳುತ್ತಾರೆ. ತನ್ನನ್ನು ತಾನು ನಿಯಂತ್ರಣದಲ್ಲಿಟ್ಟುಕೊಳ್ಳದೇ, ಕ್ರೋಧವನ್ನು ಜಯಿಸದೇ ಕಲ್ಯಾಣಗುಣಗಳನ್ನು ಹೊಂದಿದ ಬಾಂಧವರನ್ನು ಮೋಹ-ಲೋಭಗಳಿಂದ ನೋಡುವವನು ತುಂಬಾ ಸಮಯ ಸಂಪತ್ತನ್ನು ಹೊಂದಿರುವುದಿಲ್ಲ. ಆದರೆ ಹೃದಯದಲ್ಲಿ ಅಪ್ರಿಯತೆಯನ್ನಿಟ್ಟುಕೊಂಡಿದ್ದರೂ ಗುಣಸಂಪನ್ನರಿಗೆ ಪ್ರಿಯವಾದುದನ್ನು ಮಾಡಿ ಅವರನ್ನು ವಶಪಡೆಸಿಕೊಳ್ಳುವವನು ದೀರ್ಘಕಾಲದ ಯಶಸ್ಸನ್ನು ಪಡೆಯುತ್ತಾನೆ. ದುಷ್ಟತನದಿಂದ ಕಲುಷಿತವಾಗಿರುವ ಈ ಎಲ್ಲ ಅನ್ನವೂ ನನಗೆ ಅಭೋಜ್ಯವಾಗಿದೆ. ಕ್ಷತ್ತನು ನೀಡಿದುದು ಮಾತ್ರ ನನಗೆ ಭೋಕ್ತವ್ಯ ಎಂದು ನನ್ನ ಮತಿಗೆ ತಿಳಿದಿದೆ.”

ಹೀಗೆ ಹೇಳಿ ಆ ಮಹಾಬಾಹುವು ದುರ್ಯೋಧನ, ಅಮರ್ಷಣ, ಧಾರ್ತರಾಷ್ಟ್ರನ ಶುಭ್ರನಿವೇಶನದಿಂದ ಹೊರಬಂದನು.

ವಿದುರ-ಕೃಷ್ಣರ ಸಂವಾದ

ಹೊರಟುಬಂದು ಮಹಾಬಾಹು ವಾಸುದೇವ ಮಹಾಮನಸ್ವಿಯು ಮಹಾತ್ಮ ವಿದುರನ ಮನೆಗೆ ಬಂದನು. ಆ ಮಹಾಬಾಹುವು ವಿದುರನ ಮನೆಯಲ್ಲಿದ್ದಾಗ ಅಲ್ಲಿಗೆ ದ್ರೋಣ, ಕೃಪ, ಭೀಷ್ಮ, ಬಾಹ್ಲಿಕ ಮತ್ತು ಇತರ ಕುರುಗಳು ಬಂದರು. ಅಲ್ಲಿಗೆ ಬಂದ ಕುರುಗಳು ಮಧುಸೂದನನಿಗೆ “ವಾರ್ಷ್ಣೇಯ! ರತ್ನಗಳನ್ನುಳ್ಳ ನಮ್ಮ ಮನೆಗಳನ್ನು ನಿನಗೆ ಕೊಡುತ್ತೇವೆ” ಎಂದು ಹೇಳಿದರು. ಆ ಮಹಾತೇಜಸ್ವಿ ಕೌರವರಿಗೆ ಮಧುಸೂದನನು “ನೀವೆಲ್ಲರೂ ಹೋಗಿ. ನಿಮ್ಮೆಲ್ಲರಿಂದ ನಾನು ಸತ್ಕೃತನಾಗಿದ್ದೇನೆ” ಎಂದನು.

ಕುರುಗಳು ಹೊರಟು ಹೋಗಲು ಕ್ಷತ್ತನು ದಾಶಾರ್ಹ, ಅಪರಾಜಿತನನ್ನು ಸರ್ಮ ಕಾಮಗಳಿಂದ ಪ್ರಯತ್ನಪಟ್ಟು ಅರ್ಚಿಸಿದನು. ಆಗ ಕ್ಷತ್ತನು ಮಹಾತ್ಮ ಕೇಶವನಿಗೆ ಶುಚಿಯಾದ, ಉತ್ತಮ ಗುಣದ ಅನ್ನ ಪಾನೀಯಗಳನ್ನೂ ಅನೇಕ ಉಪಾಹರಗಳನ್ನು ನೀಡಿದನು. ಪ್ರಥಮವಾಗಿ ಬ್ರಾಹ್ಮಣರನ್ನು ತೃಪ್ತಿಪಡಿಸಿ, ಆ ವೇದವಿದರಿಗೆ ಪರಮ ದ್ರವ್ಯಗಳನ್ನೂ ದಾನವಾಗಿತ್ತನು. ಅನಂತರ ತನ್ನ ಅನುಯಾಯಿಗಳೊಂದಿಗೆ, ಮರುತರೊಂದಿಗೆ ವಾಸವನು ಹೇಗೋ ಹಾಗೆ, ವಿದುರನ ಶುಚಿಯಾದ ಮತ್ತು ಗುಣವಂತ ಆಹಾರವನ್ನು ಭುಂಜಿಸಿದನು.

ಅವನು ಊಟಮಾಡಿ ಚೇತರಿಸಿಕೊಂಡ ನಂತರ ರಾತ್ರಿಯಲ್ಲಿ ವಿದುರನು ಹೇಳಿದನು: “ಕೇಶವ! ನಿನ್ನ ಈ ಆಗಮನವು ಸರಿಯಾಗಿ ವಿಚಾರಮಾಡಿದ್ದುದಲ್ಲ. ಯಾಕೆಂದರೆ ಇವನು ಅರ್ಥಧರ್ಮಗಳನ್ನು ತಿಳಿಯದವನು ಮತ್ತು ದುಡುಕು ಸ್ವಭಾವದವನು. ಇನ್ನೊಬ್ಬರನ್ನು ಹೀಯಾಳಿಸುತ್ತಾನೆ ಆದರೆ ತಾನು ಮಾತ್ರ ಗೌರವವನ್ನು ಬಯಸುತ್ತಾನೆ. ವೃದ್ಧರ ಮಾತನ್ನು ಮೀರಿ ನಡೆಯುತ್ತಾನೆ. ಧಾರ್ತರಾಷ್ಟ್ರನು ಧರ್ಮಶಾಸ್ತ್ರಗಳನ್ನು ತಿಳಿಯದವನು. ದುರಾತ್ಮ. ವಿಧಿಯ ಗತಿಗೆ ಸಿಲುಕಿದವನು. ಅಳತೆಗೆ ದೊರಕದವನು. ಶ್ರೇಯಸ್ಸನ್ನು ಬಯಸುವವರಿಗೆ ಕೆಟ್ಟದ್ದನ್ನು ಮಾಡುವವನು. ಅವನು ಕಾಮಾತ್ಮ. ತುಂಬಾ ತಿಳಿದುಕೊಂಡಿದ್ದೇನೆಂದು ಅಭಿಮಾನಪಡುತ್ತಾನೆ. ನಿಜವಾದ ಮಿತ್ರರ ಶತ್ರು. ಎಲ್ಲರನ್ನೂ ಶಂಕಿಸುತ್ತಾನೆ. ಏನನ್ನೂ ಮಾಡುವುದಿಲ್ಲ. ಮಾಡಿದವರಿಗೆ ಅಕೃತಜ್ಞ. ಧರ್ಮವನ್ನು ತ್ಯಜಿಸಿದವನು. ಸುಳ್ಳನ್ನು ಪ್ರೀತಿಸುತ್ತಾನೆ. ಇವು ಮತ್ತು ಇನ್ನೂ ಇತರ ಬಹಳಷ್ಟು ದೋಷಗಳಿಂದ ಅವನು ಕೂಡಿದ್ದಾನೆ. ನೀನು ಹೇಳುವುದು ಅವನಿಗೆ ಶ್ರೇಯಸ್ಕರವಾದುದಾದರೂ ಅವನು ದುಡುಕಿನಿಂದ ಸ್ವೀಕರಿಸುವುದಿಲ್ಲ.

“ತನ್ನ ಸೇನಾಸಮುದಾಯವನ್ನು ನೋಡಿ ಆ ಬಾಲಕ ಪಾರ್ಥಿವನು ತಾನು ಕೃತಾರ್ಥನಾದೆನೆಂದು ತಿಳಿದುಕೊಂಡಿದ್ದಾನೆ. ಕರ್ಣನೊಬ್ಬನೇ ಶತ್ರುಗಳನ್ನು ಗೆಲ್ಲಲು ಸಮರ್ಥ ಎಂದು ನಿಶ್ಚಯಿಸಿದ ದುರ್ಬುದ್ಧಿ ಧಾರ್ತರಾಷ್ಟ್ರನು ಶಾಂತಿಯನ್ನು ಬಯಸುವುದಿಲ್ಲ. ಭೀಷ್ಮ, ದ್ರೋಣ, ಕೃಪ, ಕರ್ಣ, ದ್ರೋಣಪುತ್ರ ಮತ್ತು ಜಯದ್ರಥರ ಮೇಲೆ ತುಂಬಾ ನಂಬಿಕೆಯನ್ನು ಇಟ್ಟಿದ್ದಾನೆ. ಆದುದರಿಂದ ಅವನು ಶಾಂತಿಗೆ ಮನಸ್ಸುಮಾಡುವುದಿಲ್ಲ. ಪಾರ್ಥರು ಭೀಷ್ಮ-ದ್ರೋಣ-ಕೃಪರನ್ನು ನೋಡಲೂ ಕೂಡ ಶಕ್ತರಲ್ಲ ಎಂದು ಕರ್ಣನೊಂದಿಗೆ ಧಾರ್ತರಾಷ್ಟ್ರರು ನಿಶ್ಚಯಿಸಿದ್ದಾರೆ. ಪಾಂಡವರಿಗೆ ಯಥೋಚಿತವಾದುದನ್ನು ನಾವು ಕೊಡುವುದಿಲ್ಲ ಎಂದು ನಿರ್ಧರಿಸಿದ ಧಾರ್ತರಾಷ್ಟ್ರರಿಗೆ ನಿನ್ನ ಮಾತು ನಿರರ್ಥಕವಾಗುತ್ತದೆ. ಎಲ್ಲಿ ಒಳ್ಳೆಯ ಮಾತು ಮತ್ತು ಕೆಟ್ಟ ಮಾತು ಸಮವೆಂದು ಪರಿಗಣಿಸಲ್ಪಡುತ್ತದೆಯೋ ಅಲ್ಲಿ ಪ್ರಾಜ್ಞನು ಕಿವುಡನಿಗೆ ಗಾಯನ ಮಾಡಿದಂತೆ ಎಂದು ಮಾತನಾಡುವುದೇ ಇಲ್ಲ. ಚಾಂಡಾಲರ ಮುಂದೆ ದ್ವಿಜನ ಮಾತು ಹೇಗೋ ಹಾಗೆ ಯುಕ್ತವಾದ ನಿನ್ನ ಮಾತುಗಳು ತಿಳುವಳಿಕೆಯಿಲ್ಲದಿರುವವರ, ಮೂಢರ ಮತ್ತು ಮರ್ಯಾದೆಯನ್ನು ನೀಡದವರ ಮುಂದೆ. ಬಲಶಾಲಿಯಾಗಿರುವ ಈ ಮೂಢನು ನಿನ್ನ ಮಾತನ್ನು ನಡೆಸುವುದಿಲ್ಲ. ನೀನು ಅವನಿಗೆ ಏನೆಲ್ಲ ಮಾತುಗಳನ್ನಾಡುತ್ತೀಯೋ ಅವು ನಿರರ್ಥಕ.

“ಆ ಎಲ್ಲ ಪಾಪಚೇತನರು ಸೇರಿರುವವರ ಮಧ್ಯ ನೀನು ಹೋಗುವುದು ನನಗೆ ಸರಿಯೆನಿಸುತ್ತಿಲ್ಲ ಕೃಷ್ಣ! ಬಹುಸಂಖ್ಯೆಯಲ್ಲಿರುವ ಆ ದುರ್ಬುದ್ಧಿಗಳ, ಅಶಿಷ್ಟರ ಮತ್ತು ಪಾಪಚೇತಸರ ವಿರುದ್ಧ ಅವರ ಮಧ್ಯೆಯೇ ನೀನು ಮಾತನಾಡುವುದು ನನಗೆ ಸರಿಯೆನ್ನಿಸುವುದಿಲ್ಲ, ವೃದ್ಧರ ಸೇವೆಯನ್ನು ಮಾಡದೇ ಇರುವ, ಸಂಪತ್ತು ಮೋಹಗಳಿಂದ ದರ್ಪಿತರಾದ, ವಯಸ್ಸಿನಿಂದ ದರ್ಪಿತರಾದ, ಕ್ರೂರರಾದ ಅವರು ನಿನ್ನ ಶ್ರೇಯಸ್ಕರ ಮಾತುಗಳನ್ನು ಸ್ವೀಕರಿಸುವುದಿಲ್ಲ. ಅವನು ಬಲವಾದ ಸೇನೆಯನ್ನು ಒಟ್ಟುಗೂಡಿಸಿದ್ದಾನೆ. ಅವನಿಗೆ ನಿನ್ನಮೇಲೆ ಮಹಾ ಶಂಕೆಯಿದೆ. ಆದುದರಿಂದ ಅವನು ನಿನ್ನ ಮಾತಿನಂತೆ ಮಾಡುವುದಿಲ್ಲ. ಇಂದು ಯುದ್ಧದಲ್ಲಿ ಅಮರರನ್ನೊಡಗೂಡಿದ ಇಂದ್ರನಿಗೂ ಕೂಡ ತಮ್ಮೊಂದಿಗೆ ಹೋರಾಡಲು ಸಾಧ್ಯವಿಲ್ಲ ಎಂದು ಧಾರ್ತರಾಷ್ಟ್ರರೆಲ್ಲರೂ ನಂಬಿದ್ದಾರೆ. ಅಂಥಹ ಗಾಢನಂಬಿಕೆಯನ್ನಿಟ್ಟಿರುವವನ ಮತ್ತು ಕಾಮಕ್ರೋಧಗಳಂತೆ ನಡೆದುಕೊಳ್ಳುವವನ ಎದಿರು ನಿನ್ನ ಮಾತುಗಳು ಸಮರ್ಥವಾಗಿದ್ದರೂ ಅಸಮರ್ಥವಾಗುತ್ತವೆ. ಆನೆಗಳ, ರಥಗಳ, ಅಶ್ವಗಳ ಮತ್ತು ಸೇನೆಯ ಮಧ್ಯೆ ನಿಂತು ಆ ಮೂಢ ಮಂದ ದುರ್ಯೋಧನನು ಭಯವನ್ನು ಕಳೆದುಕೊಂಡು ಈಗಾಗಲೇ ತಾನು ಇಡೀ ಭೂಮಿಯನ್ನೇ ಗೆದ್ದುಬಿಟ್ಟಿದ್ದೇನೆ ಎಂದು ತಿಳಿದುಕೊಂಡಿದ್ದಾನೆ. ಧೃತರಾಷ್ಟ್ರನ ಪುತ್ರನು ಪ್ರತಿಸ್ಪರ್ಧಿಗಳಿಲ್ಲದೇ ಭೂಮಿಯ ಮಹಾರಾಜ್ಯವನ್ನು ಆಳುತ್ತಿದ್ದಾನೆ. ಅವನಿಂದ ಶಾಂತಿಯು ದೊರೆಯುವುದು ಅಸಂಭವ. ತನ್ನಲ್ಲಿರುವುದೆಲ್ಲ ಕೇವಲ ತನಗೇ ಸೇರಿದ್ದುದು ಎಂದು ತಿಳಿದುಕೊಂಡಿದ್ದಾನೆ. ಕಾಲದಿಂದ ಪಕ್ವವಾದ ಪೃಥ್ವಿಯ ನಾಶವು ಸಮೀಪಿಸುತ್ತಿರುವಂತಿದೆ. ದುರ್ಯೋಧನನಿಗಾಗಿ ಪಾಂಡವರೊಂದಿಗೆ ಯುದ್ಧಮಾಡಲು ಭೂಮಿಯ ಸರ್ವ ಯೋಧರೂ ರಾಜರೂ ಕ್ಷಿತಿಪಾಲರೂ ಬಂದು ಸೇರಿದ್ದಾರೆ. ಇವರೆಲ್ಲರೂ ನಿನ್ನ ಮೇಲೆ ಹಿಂದಿನಿಂದಲೂ ವೈರವನ್ನು ಸಾಧಿಸಿಕೊಂಡು ಬಂದಿದ್ದಾರೆ. ಈ ರಾಜರ ಸಾರವನ್ನೂ ನೀನು ಅಪಹರಿಸಿದ್ದೀಯೆ. ನಿನ್ನ ಕುರಿತಾದ ಉದ್ವೇಗದಿಂದ ಆ ವೀರರು ಕರ್ಣನ ಜೊತೆ ಸೇರಿಕೊಂಡು ಧಾರ್ತರಾಷ್ಟ್ರರ ಪಕ್ಷದಲ್ಲಿದ್ದಾರೆ. ತಮ್ಮನ್ನು ತಾವೇ ತೊರೆದು ಈ ಎಲ್ಲ ಯೋಧರೂ ದುರ್ಯೋಧನನ ಜೊತೆಗೂಡಿ ಪಾಂಡವರೊಂದಿಗೆ ಯುದ್ಧಮಾಡಲು ದೊರಕಿದೆಯೆಂದು ಸಂತೋಷದಿಂದಿದ್ದಾರೆ. ನೀನು ಅವರ ಮಧ್ಯೆ ಪ್ರವೇಶಿಸುತ್ತೀಯೆ ಎಂದರೆ ನನಗೇನೋ ಹಿಡಿಸುವುದಿಲ್ಲ. ಬಹುಸಂಖ್ಯೆಯಲ್ಲಿ ಸೇರಿರುವ ಆ ದುಷ್ಟಚೇತಸ ಶತ್ರುಗಳ ಮಧ್ಯೆ ನೀನು ಹೇಗೆ ಹೋಗುತ್ತೀಯೆ?

“ನೀನು ಸರ್ವಥಾ ದೇವತೆಗಳಿಗೂ ಗೆಲ್ಲಲಸಾಧ್ಯನು. ನಿನ್ನ ಪ್ರಭಾವ, ಪೌರುಷ ಮತ್ತು ಬುದ್ಧಿಯನ್ನು ತಿಳಿದುಕೊಂಡಿದ್ದೇನೆ. ಆದರೂ ನಿನ್ನಲ್ಲಿ ಮತ್ತು ಪಾಂಡವರಲ್ಲಿ ನನಗೆ ಪ್ರೀತಿಯಿರುವುದರಿಂದ, ಪ್ರೇಮದಿಂದ, ಸೌಹಾರ್ದತೆಯಿಂದ ಬಹಳ ಗೌರವದಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ.”

ಭಗವಂತನು ಹೇಳಿದನು: “ಮಹಾಪ್ರಾಜ್ಞನು ಹೇಳುವಂತಿದೆ. ದೂರದೃಷ್ಟಿಯಿರುವವನು ಹೇಳಿದಂತಿದೆ. ನಿನ್ನಂಥಹ ಸುಹೃದಯನು ನನ್ನಂಥಹ ಸುಹೃದಯನಿಗೆ ಹೇಳಬೇಕಾದುದೇ ಇದು. ಧರ್ಮಾರ್ಥಯುಕ್ತವಾಗಿದೆ. ನಿನಗೆ ತಕ್ಕುದಾಗಿದೆ. ತಂದೆ-ತಾಯಿಗಳು ಆಡುವಂತ ಮಾತುಗಳನ್ನು ಆಡಿದ್ದೀಯೆ. ನೀನು ನನಗೆ ಹೇಳಿದ್ದುದು ಸತ್ಯವಾದುದು. ಈಗ ನಡೆಯುತ್ತಿರುವುದು. ಯುಕ್ತವಾದುದು ಮತ್ತು ನನ್ನ ಒಳಿತಿಗಾಗಿಯೇ ಇರುವುದು. ಆದರೂ ನಾನು ಇಲ್ಲಿಗೆ ಬಂದಿರುವುದರ ಕಾರಣವನ್ನು ಗಮನವಿಟ್ಟು ಕೇಳು.  ಕ್ಷತ್ತ! ಧಾರ್ತರಾಷ್ಟ್ರನ ದೌರಾತ್ಮ, ಕ್ಷತ್ರಿಯರ ವೈರತ್ವ ಇವೆಲ್ಲವನ್ನೂ ತಿಳಿದೇ ನಾನು ಇಂದು ಕೌರವರಲ್ಲಿಗೆ ಬಂದಿದ್ದೇನೆ. ಯಾರು ವಿನಾಶವಾಗುವ ಈ ಪೃಥ್ವಿಯನ್ನು, ಕುದುರೆ, ರಥ, ಆನೆಗಳು ಮತ್ತು ಇವರೆಲ್ಲರೊಂದಿಗೆ ಮೃತ್ಯುಪಾಶದಿಂದ ಬಿಡುಗಡೆ ಮಾಡುತ್ತಾನೋ ಅವನು ಉತ್ತಮ ಧರ್ಮವನ್ನು ಹೊಂದುತ್ತಾನೆ. ಧರ್ಮಕಾರ್ಯದ ಯಥಾ ಶಕ್ತಿ ಪ್ರಯತ್ಮಮಾಡುವ ಮಾನವನಿಗೆ, ಕೊನೆಯಲ್ಲಿ ಅದು ಸಾಧ್ಯವಾಗದೇ ಹೋದರೂ ಅದರ ಪುಣ್ಯವು ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮನಸ್ಸಿನಲ್ಲಿ ಪಾಪಕರ್ಮಗಳನ್ನು ಯೋಚಿಸಿ ಅವುಗಳನ್ನು ಮಾಡದೇ ಇದ್ದರೆ ಅದರ ಫಲವು ಅವನಿಗೆ ತಗಲುವುದಿಲ್ಲ ಎಂದು ಧರ್ಮವಿದರು ತಿಳಿದಿದ್ದಾರೆ. ಸಂಗ್ರಾಮದಲ್ಲಿ ವಿನಾಶಹೊಂದುವ ಕುರು ಮತ್ತು ಸೃಂಜಯರ ನಡುವೆ ಶಾಂತಿಯನ್ನು ತರಲು ಪ್ರಯತ್ನಿಸುತ್ತಿದ್ದೇನೆ.

“ಬಂದೊದಗಿರುವ ಈ ಮಹಾಘೋರ ಆಪತ್ತು ಕುರುಗಳಿಂದಲೇ ಹುಟ್ಟಿದೆ. ಇದು ಕರ್ಣ-ದುರ್ಯೋಧನರು ಮಾಡಿದ್ದುದು. ಉಳಿದವರೆಲ್ಲರೂ ಅವರನ್ನು ಅನುಸರಿಸುತ್ತಿದ್ದಾರೆ ಅಷ್ಟೆ. ವ್ಯಸನಗಳಿಗೆ ಸಿಲುಕಿದ ಮಿತ್ರನನ್ನು ಉಳಿಸಲು ಪ್ರಯತ್ನಿಸದ ಮಿತ್ರನನ್ನು ತಿಳಿದವರು ಕಟುಕನೆಂದು ಕರೆಯುತ್ತಾರೆ. ಕೆಟ್ಟ ಕಾರ್ಯವನ್ನು ಮಾಡಲು ಹೊರಟಿರುವ ಮಿತ್ರನನ್ನು ಬಲವನ್ನುಪಯೋಗಿಸಿ, ಬೈಯುವುದರಿಂದಾಗಲೀ, ತಲೆಕೂದಲನ್ನು ಹಿಡಿದು ಎಳೆದಾಗಲೀ, ಏನಾದರೂ ಮಾಡಿ ತಡೆಯಬೇಕು. ಸಮರ್ಥವಾದ, ಧರ್ಮಾರ್ಥಸಹಿತವಾದ, ಹಿತವಾದ ಶುಭ ಮಾತುಗಳು ಅಮಾತ್ಯರೊಂದಿಗೆ ಧಾರ್ತರಾಷ್ಟ್ರನು ಸ್ವೀಕರಿಸಲು ಅರ್ಹವಾದವುಗಳು. ಧಾರ್ತರಾಷ್ಟ್ರರ, ಪಾಂಡವರ ಹಾಗೂ ಭೂಮಿಯ ಕ್ಷತ್ರಿಯರ ಹಿತಕ್ಕಾಗಿ ಪ್ರಯತ್ನಿಸಲೇ ನಾನು ಇಲ್ಲಿಗೆ ಬಂದಿದ್ದೇನೆ. ಹಿತಕ್ಕಾಗಿ ಪ್ರಯತ್ನಿಸುತ್ತಿರುವ ನನ್ನನ್ನು ದುರ್ಯೋಧನನು ಶಂಕಿಸಿದರೆ, ನಾನು ಅನೃಣನಾಗಿದ್ದೇನೆ ಎಂಬ ಸಂತೋಷವು ನನ್ನ ಹೃದಯಕ್ಕಾಗುತ್ತದೆ.

“ಬಾಂಧವರಲ್ಲಿ ಮಿಥ್ಯ ಭೇದಗಳುಂಟಾದಾಗ ಯಾವ ಮಿತ್ರನು ಅದನ್ನು ಹೆಚ್ಚಿಸದೇ ಸರ್ವಯತ್ನದಿಂದ ಮಧ್ಯಸ್ತಿಕೆ ಮಾಡುತ್ತಾನೋ ಅವನೇ ನಿಜವಾದ ಮಿತ್ರ ಎಂದು ತಿಳಿದವರು ಹೇಳುತ್ತಾರೆ. ಶಕ್ತನಾಗಿದ್ದರೂ ಕೃಷ್ಣನು ದುಡುಕುತ್ತಿರುವ ಕುರು-ಪಾಂಡವರನ್ನು ತಡೆಯಲಿಲ್ಲವಲ್ಲ ಎಂದು ಅಧರ್ಮಜ್ಞರು, ಮೂಢರು, ಅಸುಹೃದಯರು ಮುಂದೆ ಹೇಳಬಾರದಲ್ಲ! ಇದರಿಂದಲೇ ಇಬ್ಬರ ನಡುವೆ ಅರ್ಥವನ್ನು ಸಾಧಿಸಲೋಸುಗ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಪ್ರಯತ್ನವನ್ನು ಮಾಡಿ ಹೋಗುತ್ತೇನೆ. ಇನ್ನೊಬ್ಬರು ಕೆಟ್ಟದಾಗಿ ಮಾತನಾಡಿಕೊಳ್ಳಬಾರದಲ್ಲ! ಧರ್ಮಾರ್ಥಯುಕ್ತವಾದ, ಅನಾಮಯವಾದ ನನ್ನ ಮಾತುಗಳನ್ನು ಕೇಳಿ ಆ ಬಾಲಕನು ನಡೆದುಕೊಳ್ಳದೇ ಇದ್ದರೆ ಅವನು ದೈವದ ವಶವಾಗುತ್ತಾನೆ. ಪಾಂಡವರ ಒಳಿತಿಗೆ ಕಡಿಮೆಮಾಡದೇ ಕುರುಗಳಲ್ಲಿ ಶಾಂತಿಯನ್ನು ತಂದೆನೆಂದಾದರೆ ಕುರುಗಳನ್ನು ಮೃತ್ಯುಪಾಶದಿಂದ ಬಿಡುಗಡೆಮಾಡಿದ ಮಹಾ ಅರ್ಥವೂ, ಸಚ್ಚಾರಿತ್ರ್ಯವೂ, ಪುಣ್ಯವೂ ನನ್ನದಾಗುತ್ತದೆ. ನಾನು ಹೇಳುವ ಕಾವ್ಯ, ಧರ್ಮ, ಅರ್ಥವತ್ತಾದ, ಅಹಿಂಸೆಯ ಮಾತುಗಳನ್ನು ಧಾರ್ತರಾಷ್ಟ್ರರು ಕೇಳಿ ಆಲೋಚಿಸಲು ಸಮರ್ಥರಾದರೆ, ಕುರುಗಳೂ ಕೂಡ ನನ್ನನ್ನು ಪೂಜಿಸುತ್ತಾರೆ. ಬದಲಾಗಿ ಅವರು ನನ್ನ ಮೇಲೆ ಆಕ್ರಮಣ ಮಾಡಿದರೆ ಅಲ್ಲಿ ಸೇರಿದ ಪಾರ್ಥಿವರೆಲ್ಲರೂ ಕುಪಿತನಾದ ಸಿಂಹದ ಎದಿರು ನಿಲ್ಲಲಾರದ ಮೃಗಗಳಂತೆ!”

ವೃಷ್ಣಿಗಳ ವೃಷಭನು ಹೀಗೆ ಹೇಳಿ ಹಾಸಿಗೆಯ ಸುಖಸಂಸ್ಪರ್ಷದಲ್ಲಿ ಸುಖವಾದ ನಿದ್ದೆಯನ್ನು ಮಾಡಿದನು.

Leave a Reply

Your email address will not be published. Required fields are marked *