ಶ್ರೀಕೃಷ್ಣ ರಾಯಭಾರ - ೧

ಯುಧಿಷ್ಠಿರನು ರಾಯಭಾರಕ್ಕೆ ಕೃಷ್ಣನನ್ನು ಕೇಳಿದ್ದುದು

ಸಂಜಯನು ಮರಳಿದ ನಂತರ ಧರ್ಮರಾಜ ಯುಧಿಷ್ಠಿರನು ಸರ್ವ ಸಾತ್ವತರ ವೃಷಭ ದಾಶಾರ್ಹನಿಗೆ ಹೇಳಿದನು: “ಜನಾರ್ದನ! ನನ್ನ ಮಿತ್ರರ ಕಾಲವು ಇಗೋ ಬಂದೊದಗಿದೆ. ಈ ಆಪತ್ತಿನಿಂದ ಉದ್ಧರಿಸುವ ಬೇರೆ ಯಾರನ್ನೂ ನಾನು ಕಾಣಲಾರೆ. ಮಾಧವ! ನಿನ್ನನ್ನೇ ಆಶ್ರಯಿಸಿ ನಾವು ಅಮಾತ್ಯರೊಂದಿಗಿರುವ ಮೋಹದರ್ಪಿತ ಧಾರ್ತರಾಷ್ಟ್ರನಿಂದ ನಮ್ಮ ಭಾಗವನ್ನು ನಿರ್ಭಯದಿಂದ ಕೇಳಬಲ್ಲೆವು. ವೃಷ್ಣಿಯರನ್ನು ಸರ್ವ ಆಪತ್ತುಗಳಿಂದ ಹೇಗೆ ರಕ್ಷಿಸುತ್ತೀಯೋ ಹಾಗೆ ನೀನು ಪಾಂಡವರಾದ ನಮ್ಮನ್ನೂ ಕೂಡ ಈ ಮಹಾ ಭಯದಿಂದ ರಕ್ಷಿಸಬೇಕು.”

ಭಗವಂತನು ಹೇಳಿದನು: “ಮಹಾಬಾಹೋ! ನಾನು ಇಲ್ಲಿಯೇ ಇದ್ದೇನೆ. ಏನು ಹೇಳಬೇಕೆಂದು ಬಯಸುತ್ತೀಯೋ ಅದನ್ನು ಹೇಳು. ನೀನು ಏನು ಹೇಳುತ್ತೀಯೋ ಅವೆಲ್ಲವನ್ನೂ ಮಾಡುತ್ತೇನೆ.”

ಯುಧಿಷ್ಠಿರನು ಹೇಳಿದನು: “ಧೃತರಾಷ್ಟ್ರ ಮತ್ತು ಅವನ ಮಗನ ಮನಸ್ಸಿನಲ್ಲಿರುವುದನ್ನು ನೀನು ಕೇಳಿದ್ದೀಯೆ. ಕೃಷ್ಣ! ಸಂಜಯನು ನನಗೆ ಏನನ್ನು ಹೇಳಿದನೋ ಅವೆಲ್ಲವೂ ಧೃತರಾಷ್ಟ್ರನ ಮನಸ್ಸಿನಲ್ಲಿರುವವು. ಇವನಲ್ಲಿ ಅವನ ಆತ್ಮವು ವಿಸೃತಗೊಂಡಿದೆ. ಹೇಳಿಕಳುಹಿಸಿದ್ದುದನ್ನು ಮಾತ್ರ ದೂತನು ಆಡಬೇಕು. ಬೇರೆ ಏನನ್ನಾದರೂ ಹೇಳಿದರೆ ಅವನು ವಧಾರ್ಹ. ಲುಬ್ಧನಾಗಿ, ಪಾಪಮನಸ್ಸಿನಿಂದ ಇತರರನ್ನು ಕೀಳಾಗಿ ಕಾಣುತ್ತಾ ಅವನು ರಾಜ್ಯವನ್ನು ಕೊಡದೇ ನಮ್ಮೊಂದಿಗೆ ಶಾಂತಿಯನ್ನು ಹುಡುಕುತ್ತಿದ್ದಾನೆ. ಧೃತರಾಷ್ಟ್ರನ ಆದೇಶದಂತೆ ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಿದುದು ಮತ್ತು ಇನ್ನೊಂದು ವರ್ಷ ವೇಷಮರೆಸಿಕೊಂಡಿದ್ದುದು, ಧೃತರಾಷ್ಟ್ರನೂ ಕೂಡ ಆ ಒಪ್ಪಂದದಂತೆ ನಡೆದುಕೊಳ್ಳುತ್ತಾನೆ ಎಂದಲ್ಲವೇ? ನಾವು ಈ ಒಪ್ಪಂದವನ್ನು ಮುರಿದಿಲ್ಲ ಎನ್ನುವುದನ್ನು ಬ್ರಾಹ್ಮಣರು ಚೆನ್ನಾಗಿ ಬಲ್ಲರು. ವೃದ್ಧರಾಜ ಧೃತರಾಷ್ಟ್ರನು ಸ್ವಧರ್ಮವನ್ನು ಕಾಣುತ್ತಿಲ್ಲ. ಅಥವಾ ಅದನ್ನು ಕಂಡರೂ ಪುತ್ರನ ಮೇಲಿನ ಮೋಹದಿಂದ ಆ ಮಂದಬುದ್ಧಿಯ ಆಳ್ವಿಕೆಯಲ್ಲಿದ್ದಾನೆ. ಸುಯೋಧನನ ಅನುಮತಿಯಂತೆ ನಿಂತು, ತನ್ನದೇ ಲಾಭವನ್ನು ಬಯಸಿ ಲುಬ್ಧನಾಗಿ ನಮ್ಮೊಂದಿಗೆ ಸುಳ್ಳಾಗಿ ನಡೆದುಕೊಳ್ಳುತ್ತಿದ್ದಾನೆ. ನಾನು ತಾಯಿ ಮತ್ತು ಮಿತ್ರರನ್ನು ನೋಡಿಕೊಳ್ಳಲು ಶಕ್ಯನಾಗಿಲ್ಲ ಎನ್ನುವುದಕ್ಕಿಂತ ದುಃಖತರವಾದುದು ಏನಿದೆ? ಕಾಶಿ, ಚೇದಿ, ಪಾಂಚಾಲ, ಮತ್ಸ್ಯರು ಮತ್ತು ಗೋವಿಂದ ಮಧುಸೂದನ ನೀನು ನನ್ನ ಪಕ್ಷದಲ್ಲಿರುವಾಗ ನಾನು ಕೇವಲ ಐದು ಗ್ರಾಮಗಳನ್ನು ಕೇಳುತ್ತಿದ್ದೇನೆ - ಕುಶಸ್ಥಲ, ವೃಕಸ್ಥಲ, ಮಾಸಂದೀ, ವಾರಣಾವತ ಮತ್ತು ಐದನೆಯ ಕೊನೆಯದಾಗಿ ಬೇರೆ ಯಾವುದಾದರೂ ಗ್ರಾಮ. ‘ತಂದೇ! ಐದು ಗ್ರಾಮಗಳನ್ನಾಗಲೀ ನಗರಗಳನ್ನಾಗಲೀ ಕೊಡು. ಅಲ್ಲಿ ನಾವು ಒಟ್ಟಾಗಿ ವಾಸಿಸುತ್ತೇವೆ. ಭರತರು ನಮ್ಮನ್ನು ಅಲ್ಲಿ ಬಿಟ್ಟುಬಿಡಲಿ.’ ಅದಕ್ಕೂ ಕೂಡ ದುಷ್ಟಾತ್ಮ ಧಾರ್ತರಾಷ್ಟ್ರನು ಒಪ್ಪಿಕೊಳ್ಳುವುದಿಲ್ಲ. ಎಲ್ಲವೂ ತನ್ನದೆಂದು ತಿಳಿದುಕೊಂಡಿದ್ದಾನೆ. ಇದಕ್ಕಿಂತಲೂ ದುಃಖತರವಾದುದು ಏನಿದೆ?

“ಉತ್ತಮ ಕುಲದಲ್ಲಿ ಜನಿಸಿದ ವೃದ್ಧನು ಪರರ ಸಂಪತ್ತಿಗೆ ಆಸೆಪಟ್ಟರೆ ಆ ಲೋಭವು ಅವನ ಪ್ರಜ್ಞೆಯನ್ನು ಕಳೆಯುತ್ತದೆ ಮತ್ತು ನಾಶವಾದ ಪ್ರಜ್ಞೆಯು ನಾಚಿಕೆಯನ್ನು ಕಳೆಯುತ್ತದೆ. ನಾಚಿಕೆಯನ್ನು ಕಳೆದು ಕೊಂಡಾಗ ಧರ್ಮವು ಕೆಡುತ್ತದೆ. ಧರ್ಮವು ನಾಶಗೊಳ್ಳಲು ಸಂಪತ್ತು ನಾಶವಾಗುತ್ತದೆ. ಸಂಪತ್ತು ನಾಶವಾಗಲು ಪುರುಷನು ನಾಶಹೊಂದುತ್ತಾನೆ. ಹೂ-ಹಣ್ಣುಗಳನ್ನು ಬಿಡದ ಮರದಿಂದ ಹಕ್ಕಿಗಳು ಹೇಗೋ ಹಾಗೆ ಬಡವನಿಂದ ದಾಯಾದಿಗಳು, ಸ್ನೇಹಿತರು ಮತ್ತು ಋತ್ವಿಜರು ದೂರವಾಗುತ್ತಾರೆ. ಬಂಧುಗಳು ದೂರವಾದರೆ, ಉಸಿರು ಹೊರಟುಹೋದ ನಂತರ ಕೆಳಗುರುಳುವಂತೆ ಅದೇ ಮರಣ. ಇಂದು ಮತ್ತು ನಾಳೆಗೆ ಊಟವನ್ನು ಕಾಣದೇ ಇರುವಷ್ಟು ಪಾಪದ ಅವಸ್ಥೆಯು ಬೇರೊಂದಿಲ್ಲ ಎಂದು ಶಂಬರನು ಹೇಳಿದ್ದಾನೆ. ಧನವು ಪರಮ ಧರ್ಮವೆಂದು ಹೇಳುತ್ತಾರೆ. ಎಲ್ಲವೂ ಧನವನ್ನು ಅವಲಂಬಿಸಿವೆ. ಲೋಕದಲ್ಲಿ ಧನಿಕರು ಜೀವಿಸುತ್ತಾರೆ. ಧನವಿಲ್ಲದ ನರರು ಸಾಯುತ್ತಾರೆ. ತನ್ನದೇ ಬಲವನ್ನುಪಯೋಗಿಸಿ ಯಾವ ನರನು ಇತರರ ಧನವನ್ನು ಕಸಿದುಕೊಳ್ಳುತ್ತಾನೋ ಅವನು ಆ ನರನ ಧರ್ಮವನ್ನೂ, ಅರ್ಥವನ್ನೂ, ಕಾಮವನ್ನೂ ಮತ್ತು ಅವನನ್ನೂ ಕೊಲ್ಲುತ್ತಾನೆ. ಈ ಅವಸ್ಥೆಯನ್ನು ಪಡೆದ ಜನರು ಮರಣವನ್ನು ಹೊಂದುತ್ತಾರೆ, ಮತ್ತು ಕೆಲವರು ಗ್ರಾಮದ, ಕೆಲವರು ಕಾಡಿನ ಮತ್ತು ಕೆಲವರು ನಾಶದ ದಾರಿಯನ್ನು ಹಿಡಿಯುವವರು. ಧನಕ್ಕಾಗಿ ಕೆಲವರು ಹುಚ್ಚರಾಗುತ್ತಾರೆ, ಇತರರು ಶತ್ರುಗಳ ವಶರಾಗುತ್ತಾರೆ. ಕೆಲವರು ಇತರರ ದಾಸರಾಗುತ್ತಾರೆ. ಸಂಪತ್ತನ್ನು ಕಳೆದುಕೊಳ್ಳುವುದು ಪುರುಷನಿಗೆ ಮರಣಕ್ಕಿಂತಲೂ ದೊಡ್ಡದು. ಸಂಪತ್ತೇ ಧರ್ಮ ಮತ್ತು ಕಾಮಗಳ ಕಾರಣ. ಆದರೆ ಸ್ವಾಭಾವಿಕವಾಗಿ ಸಾಯುವುದು ಲೋಕದಲ್ಲಿರುವವುಗಳಿಗೆ ಶಾಶ್ವತವಾಗಿರುವ ಧರ್ಮ. ಇದು ಯಾರಿಗೂ ತಪ್ಪಿದ್ದಲ್ಲ.

“ಉತ್ತಮ ಸಂಪತ್ತನ್ನು ಒಂದುಗೂಡಿಸಿದವರು ಭೋಗಿಸುವಾಗಲೇ ಅದನ್ನು ಕಳೆದುಕೊಂಡಷ್ಟು ನಿರ್ಧನಿಕರಾದ ಜನರಿಗೆ ಬಾಧಕವೆನಿಸುವುದಿಲ್ಲ. ತನ್ನದೇ ಅಪರಾಧದಿಂದ ಮಹಾ ವ್ಯಸನವನ್ನು ಹೊಂದಿದವನು ಇಂದ್ರಾದಿ ದೇವತೆಗಳನ್ನು ನಿಂದಿಸುತ್ತಾನೆಯೇ ಹೊರತು ತನ್ನನ್ನು ಎಂದೂ ನಿಂದಿಸಿಕೊಳ್ಳುವುದಿಲ್ಲ. ಎಲ್ಲ ಶಾಸ್ತ್ರಗಳೂ ಕೂಡ ಅವನಲ್ಲಿರುವ ನಾಚಿಕೆಯನ್ನು ಅಳಿಸಲಾರವು. ತನ್ನ ಸೇವಕರ ಮೇಲೆ ಸಿಟ್ಟಾಗುತ್ತಾನೆ ಮತ್ತು ಸ್ನೇಹಿತರ ಮೇಲೆ ಅಸೂಯೆ ಪಡುತ್ತಾನೆ. ಆಗ ಕೋಪವು ಅವನನ್ನು ಏರಿ ಮೂರ್ಛೆಗೊಳಿಸುತ್ತದೆ. ಮೋಹದ ವಶಕ್ಕೆ ಬಂದು ಕ್ರೂರ ಕರ್ಮಗಳೆಡೆಗೆ ಒಯ್ಯಲ್ಪಡುತ್ತಾನೆ. ಇನ್ನೂ ಪಾಪಕರ್ಮಗಳನ್ನು ಮಾಡಿ ಅವನಿಂದ ಸಂಕರವುಂಟಾಗುವುದು. ಸಂಕರದಿಂದ ಪಾಪಕರ್ಮಗಳ ಕೊನೆಯ ತಾಣ ನರಕಕ್ಕೆ ಹೋಗುತ್ತಾನೆ. ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಅವನು ನರಕಕ್ಕೇ ಹೋಗುತ್ತಾನೆ. ಪ್ರಜ್ಞೆಯೇ ಅವನನ್ನು ಎಚ್ಚರಿಸುತ್ತದೆ. ಪ್ರಜ್ಞೆಯ ಕಣ್ಣಿಲ್ಲದಿದ್ದರೆ ಅವನು ಅಧೋಗತಿಗಿಳಿಯುತ್ತಾನೆ. ಪ್ರಜ್ಞೆಯನ್ನು ಪಡೆದ ಪುರುಷನು ಶಾಸ್ತ್ರಗಳನ್ನು ನೋಡುತ್ತಾನೆ. ನಿತ್ಯವೂ ಶಾಸ್ತ್ರಗಳನ್ನು ಓದಿ ಪುನಃ ಧರ್ಮ, ನಂತರ ಮಾನವು ಅವನ ಉತ್ತಮ ಅಂಗವಾಗುತ್ತದೆ. ಮಾನವಂತನು ಪಾಪವನ್ನು ದ್ವೇಷಿಸುತ್ತಾನೆ ಮತ್ತು ಅವನ ಅದೃಷ್ಟವು ಅಭಿವೃದ್ಧಿಯಾಗುತ್ತದೆ. ಅವನು ಎಷ್ಟು ಶ್ರೀಮಂತನೋ ಅಷ್ಟು ಪುರುಷನಾಗಿರುತ್ತಾನೆ. ಧರ್ಮನಿತ್ಯನಾಗಿದ್ದುಕೊಂಡು, ಪ್ರಶಾಂತಾತ್ಮನಾಗಿ, ಕಾರ್ಯಯೋಗದಲ್ಲಿ ಸದಾ ತೊಡಗಿರುವ ಅವನು ಅಧರ್ಮವನ್ನು ಮಾಡುವ ಬುದ್ಧಿಯನ್ನು ಮಾಡುವುದಿಲ್ಲ, ಪಾಪದಲ್ಲಿ ನಡೆದುಕೊಳ್ಳುವುದಿಲ್ಲ.

“ನಾಚಿಕೆಯಿಲ್ಲದ ವಿಮೂಢನು ಸ್ತ್ರೀಯೂ ಅಲ್ಲ ಪುರುಷನೂ ಅಲ್ಲ. ಶೂದ್ರನಿಗೆ ಹೇಗೋ ಹಾಗೆ ಅವನಿಗೆ ಧರ್ಮದಲ್ಲಿ ಅಧಿಕಾರವಿರುವುದಿಲ್ಲ. ಮಾನವಂತನು ದೇವತೆಗಳನ್ನೂ, ಪಿತ್ರುಗಳನ್ನೂ ಮತ್ತು ತನ್ನನ್ನೂ ಪ್ರೀತಿಗೊಳಿಸಿ ಅದರಿಂದ ಪುಣ್ಯಕರ್ಮಗಳ ಅಂತಿಮ ತಾಣ ಅಮೃತತ್ವವನ್ನು ಪಡೆಯುತ್ತಾನೆ. ಮಧುಸೂದನ! ಇವೆಲ್ಲವನ್ನು – ರಾಜ್ಯವನ್ನು ಕಳೆದುಕೊಂಡು ಹೇಗೆ ನಾನು ಈ ರಾತ್ರಿಗಳನ್ನು ಕಳೆದೆ ಎನ್ನುವುದನ್ನು - ನೀನು ನನ್ನಲ್ಲಿ ಪ್ರತ್ಯಕ್ಷವಾಗಿ ನೋಡಿದ್ದೀಯೆ. ಯಾವುದೇ ನ್ಯಾಯದಿಂದಲೂ ನಾವು ನಮ್ಮ ಸಂಪತ್ತನ್ನು ಬಿಟ್ಟುಬಿಡುವವರಲ್ಲ. ಪ್ರಯತ್ನಮಾಡುವಾಗ ಸತ್ತರೆ ಅದೂ ಕೂಡ ಸರಿಯೇ! ನಾವು-ಅವರು ಶಾಂತಿಯಿಂದ ಸಮಭೂತರಾಗಿ ಭೂಮಿಯನ್ನು ಆಳುವುದು ಈಗಿರುವ ಮೊದಲನೆಯ ಮಾರ್ಗವಲ್ಲವೇ? ಅದರ ನಂತರದ ಮಾರ್ಗವು ಕೌರವರನ್ನು ಕೊಂದು ಅವರಿಂದ ರಾಜ್ಯವನ್ನು ಪಡೆಯುವ ರೌದ್ರ ಕರ್ಮವು ಕ್ಷಯವನ್ನು ಆರಂಭಿಸುತ್ತದೆ. ಶತ್ರುಗಳು ಸಂಬಂಧಿಕರಾಗಿಲ್ಲದಿದ್ದರೂ ಎಷ್ಟೇ ಅನಾರ್ಯರಾಗಿದ್ದರೂ ಅವರನ್ನು ವಧಿಸಬಾರದು. ಹೀಗಿರುವಾಗ ಇವರಂಥವರಿಗೆ ಹೇಗೆ ಅದನ್ನೇ ಮಾಡಬಹುದು? ಇವರು ನಮ್ಮ ದಾಯವಾದಿಗಳು, ಹೆಚ್ಚಾಗಿ ಸ್ನೇಹಿತರು ಮತ್ತು ಗುರುಗಳಲ್ಲವೇ? ಅವರನ್ನು ವಧಿಸುವುದು ಅತಿ ಪಾಪ.  ಯುದ್ಧದಲ್ಲಿ ಏನು ಚಂದವಿದೆ?

“ಈ ಕ್ಷತ್ರಿಯ ಧರ್ಮವೇ ಪಾಪವು. ನಾವಾದರೋ ಕ್ಷತ್ರಿಯರಾಗಿ ಹುಟ್ಟಿದ್ದೇವೆ. ಇದು ನಮ್ಮ ಧರ್ಮವಾಗಲೀ ಅಥವಾ ಅಧರ್ಮವಾಗಲೀ ನಮಗೆ ಬೇರೆ ಯಾವ ವೃತ್ತಿಯೂ ನಿಶೇದವಾಗಿದೆ. ಶೂದ್ರರು ಸೇವೆಯನ್ನು ಮಾಡುತ್ತಾರೆ. ವೈಶ್ಯರು ವ್ಯಾಪಾರಮಾಡಿ ಜೀವಿಸುತ್ತಾರೆ. ನಾವು ವಧಿಸಿ ಜೀವಿಸುತ್ತೇವೆ. ಬ್ರಾಹ್ಮಣರು ಭಿಕ್ಷಾಪಾತ್ರೆಯನ್ನು ಬಳಸುತ್ತಾರೆ. ಕ್ಷತ್ರಿಯನು ಕ್ಷತ್ರಿಯನನ್ನು ಕೊಲ್ಲುತ್ತಾನೆ. ಮೀನು ಮೀನಿನಿಂದ ಜೀವಿಸುತ್ತದೆ. ನಾಯಿಯು ನಾಯಿಯನ್ನು ಕೊಲ್ಲುತ್ತದೆ. ನಡೆದುಕೊಂಡು ಬಂದಿರುವ ಧರ್ಮವನ್ನು ನೋಡು! ಯುದ್ಧದಲ್ಲಿ ನಿತ್ಯವೂ ಕಲಿಯಿರುತ್ತಾನೆ. ಹೋರಾಟದಲ್ಲಿ ಪ್ರಾಣಗಳು ಹೋಗುತ್ತವೆ. ಬಲವು ನೀತಿ ಮಾತ್ರ. ಜಯ-ಅಪಜಯಗಳು ಅದೃಷ್ಟ. ಜೀವನ-ಮರಣಗಳು ಭೂತಗಳ ಸ್ವ ಇಚ್ಛೆಯಂತೆ ನಡೆಯುವುದಿಲ್ಲ. ಸುಖ ದುಃಖಗಳೆರಡೂ ಕಾಲ ಬಂದೊದಗದೇ ಬರಲಾರವು. ಒಬ್ಬನೇ ಹಲವರನ್ನು ಕೊಲ್ಲಬಹುದು ಅಥವಾ ಹಲವರು ಸೇರಿ ಒಬ್ಬನನ್ನೇ ಕೊಲ್ಲಬಹುದು. ಶೂರನು ಕಾಪುರುಷನನ್ನೂ ಅಯಶಸ್ವಿಯು ಯಶಸ್ವಿಯನ್ನು ಕೊಲ್ಲಬಹುದು. ಇಬ್ಬರಲ್ಲಿ ಯಾರಿಗೂ ಜಯವಾಗಬಹುದು. ಇಬ್ಬರಲ್ಲಿ ಯಾರಿಗೂ ಸೋಲಾಗಬಹುದು. ಅವನತಿಯೂ ಹಾಗೆಯೇ. ಅದರಿಂದ ಓಡಿ ಹೋದರೆ ನಾಶ ಮತ್ತು ಮರಣ ಎರಡೂ. ಹೇಗೆ ನೋಡಿದರೂ ಯುದ್ಧವು ಕೆಟ್ಟದ್ದು. ಯಾವ ಕೊಲೆಗಾರನನ್ನು ತಿರುಗಿ ಕೊಲ್ಲುವುದಿಲ್ಲ?

“ಸತ್ತವರಿಗೆ ಸೋಲು-ಗೆಲವುಗಳೆರಡೂ ಒಂದೇ! ಪರಾಜಯವು ಮರಣಕ್ಕಿಂತ ಬೇರೆಯೆಂದು ನನಗನ್ನಿಸುವುದಿಲ್ಲ. ಯಾರದ್ದು ಗೆಲುವೋ ಅವರದ್ದೂ ಅಪಚಯವು ನಿಶ್ಚಿತವಾದುದು. ಕೊನೆಯಲ್ಲಿ ಬೇರೆ ಯಾರೋ ಅವನಿಗೆ ಪ್ರಿಯರಾದವರನ್ನು ಕೊಲ್ಲುತ್ತಾರೆ. ಅವನ ಅಂಗಾಂಗಗಳು ಬಲಹೀನವಾದಾಗ, ಪುತ್ರ ಭ್ರಾತರನ್ನು ಕಾಣದೇ ಎಲ್ಲಕಡೆಯಿಂದಲೂ ಜೀವನದಲ್ಲಿ ಜಿಗುಪ್ಸೆಯು ಬೆಳೆಯುತ್ತದೆ. ಯಾರು ವೀರರಾಗಿರುವರೋ, ಮಾನವಂತರೋ, ಆರ್ಯರೋ, ಕರುಣವೇದಿನಿಗಳೋ ಅವರೇ ಯುದ್ಧದಲ್ಲಿ ಸಾಯುತ್ತಾರೆ. ಕೀಳು ಜನರು ತಪ್ಪಿಸಿಕೊಂಡು ಬಿಡುತ್ತಾರೆ. ಇತರರನ್ನು ಕೊಂದನಂತರವೂ ನಿತ್ಯ ಪಶ್ಚಾತ್ತಾಪವು ಇದ್ದೇ ಇರುತ್ತದೆ. ಇದರ ಫಲಿತಾಂಶವು ಪಾಪವೇ. ಯಾಕೆಂದರೆ ಉಳಿದವರು ಉಳಿದುಕೊಳ್ಳುತ್ತಾರಲ್ಲವೇ? ಉಳಿದವರು ಕೂಡ ಬಲವನ್ನು ಮರಳಿ ಪಡೆದು ಉಳಿದವರನ್ನು ಸಂಪೂರ್ಣವಾಗಿ ಕೊಲ್ಲಲು, ವೈರಕ್ಕೆ ಅಂತಿಮ ವಿಧಿಯನ್ನು ನೀಡಲು ಪ್ರಯತ್ನಿಸುತ್ತಾರೆ. ಜಯವು ವೈರಕ್ಕೆ ಕಾರಣವಾಗುತ್ತದೆ ಯಾಕೆಂದರೆ ಸೋತವರು ದುಃಖಿತರಾಗಿಯೇ ಇರುತ್ತಾರೆ.

“ಆದರೆ ಜಯಾಪಜಯಗಳನ್ನು ತೊರೆದು ಶಾಂತಿಯನ್ನು ಹುಡುಕಿದವನೇ ಸುಖವಾಗಿ ನಿದ್ರಿಸಬಲ್ಲನು. ವೈರವನ್ನು ಹುಟ್ಟಿಸಿದ ಪುರುಷನು, ಮನೆಯಲ್ಲಿ ಸರ್ಪಗಳು ತುಂಬಿಯೆವೋ ಎಂಬಂತೆ ಮನಸ್ಸಿನಲ್ಲಿ ಚಿಂತಿಸುತ್ತಾ ನಿತ್ಯವೂ ದುಃಖದಲ್ಲಿ ಮಲಗುತ್ತಾನೆ. ಎಲ್ಲರನ್ನೂ ನಾಶಪಡಿಸಿದರೆ ಯಶಸ್ಸು ಅವನನ್ನು ತೊರೆಯುತ್ತದೆ. ಸರ್ವಭೂತಗಳಲ್ಲಿ ಶಾಶ್ವತವಾದ ಅಕೀರ್ತಿಯನ್ನು ತಂದುಕೊಳ್ಳುತ್ತಾನೆ. ತುಂಬಾ ಕಾಲದಿಂದ ಇದ್ದರೂ ವೈರವು ಶಾಂತಗೊಳ್ಳುವುದಿಲ್ಲ. ಕುಟುಂಬದಲ್ಲಿ ಹೊಸ ಪುರುಷನು ಹುಟ್ಟುವವರೆಗೆ ಅದನ್ನೇ ಹೇಳಿಕೊಂಡು ಬರುತ್ತಾರೆ. ವೈರವು ವೈರದಿಂದ ಉಪಶಮನವಾಗುವುದಿಲ್ಲ. ಹವಿಸ್ಸಿನಿಂದ ಅಗ್ನಿಯು ಇನ್ನೂ ಚೆನ್ನಾಗಿ ಉರಿಯುವಂತೆ ಬೆಳೆಯುತ್ತ ಹೋಗುತ್ತದೆ. ಇದನ್ನು ಶಾಂತಗೊಳಿಸಲು ಬೇರೆ ಯಾವ ದಾರಿಯೂ ಇಲ್ಲ. ಕೊನೆಯವರೆಗೂ ಈ ಅಂತರವು ಉಳಿದುಕೊಳ್ಳುತ್ತದೆ. ಇದೇ ಭೇದವನ್ನುಂಟುಮಾಡುವವರ ನಿರಂತರ ದೋಷ.

“ಪೌರುಷವೇ ಹೃದವನ್ನು ಬಾಧಿಸುವ ಮಹಾ ರೋಗ. ಅದನ್ನು ತ್ಯಜಿಸುವುದರಿಂದ ಅಥವಾ ಮನಸ್ಸನ್ನು ಹಿಂದೆ ತೆಗೆದುಕೊಳ್ಳುವುದರ ಮೂಲಕ ಮಾತ್ರ ಶಾಂತಿಯನ್ನು ಪಡೆಯಬಹುದು. ಅಥವಾ ವೈರಿಗಳನ್ನು ಬುಡಸಹಿತ ನಾಶಗೊಳಿಸುವುದರಿಂದ ಇದೇ ಫಲವನ್ನು ಪಡೆಯಬಹುದಾದರೂ ಅದು ತುಂಬಾ ಕ್ರೂರವೆನಿಸುತ್ತದೆ. ತ್ಯಾಗದಿಂದ ಕೂಡ ಶಾಂತಿಯು ಬರುವುದಾದರೂ ಅದು ವಧೆಯಂತೆಯೇ. ಯಾಕೆಂದರೆ ತನಗೂ ಮತ್ತು ವೈರಿಗಳಿಗೂ ಸಾವಿನ ಸಂಶಯವು ಇದ್ದೇ ಇರುತ್ತದೆ. ನಾವು ನಮ್ಮ ರಾಜ್ಯವನ್ನು ತ್ಯಜಿಸಲೂ ಇಚ್ಛಿಸುವುದಿಲ್ಲ. ಕುಲಕ್ಷಯವನ್ನೂ ಬಯಸುವುದಿಲ್ಲ. ಶರಣು ಹೋಗುವುದರಿಂದ ದೊರೆಯುವ ಶಾಂತಿಯೇ ದೊಡ್ಡದು. ಎಲ್ಲರೀತಿಯಲ್ಲಿ ಪ್ರಯತ್ನಿಸುವವರು ಯುದ್ಧವನ್ನು ಬಯಸುವುದಿಲ್ಲ. ಆದರೆ ಅವರ ಶಾಂತಿಯ ಕೈಯನ್ನು ತಿರಸ್ಕರಿದರೆ ಯುದ್ಧವು ವಿನಿಶ್ಚಿತ. ಮಾತುಕತೆಗಳು ಯಶಸ್ವಿಯಾಗದೇ ಇದ್ದಾಗ ಪರಿಣಾಮವು ದಾರುಣವಾದುದು. ಅದು ತೋಳಗಳ ಜಗಳದಂತೆ ಎಂದು ಪಂಡಿತರು ಕಂಡುಕೊಂಡಿದ್ದಾರೆ. ಬಾಲಗಳನ್ನು ಅಲ್ಲಾಡಿಸುವುದರಿಂದ ಪ್ರಾರಂಭವಾಗುತ್ತದೆ, ನಂತರ ಬೊಗಳುವುದು, ಅದಕ್ಕುತ್ತರವಾಗಿ ಮತ್ತೊಮ್ಮೆ ಬೊಗಳಿಕೆ, ಹಿಂದೆ ಸರಿಯುವುದು, ಹಲ್ಲುಗಳನ್ನು ಕಡಿಯುವುದು, ಜೋರಾದ ಬೊಗಳಿಕೆ ಮತ್ತು ನಂತರ ಕಚ್ಚಾಟ. ಅವುಗಳಲ್ಲಿ ಬಲಶಾಲಿಯಾದುದು ಗೆದ್ದು ಮಾಂಸದ ತುಂಡನ್ನು ತಿನ್ನುತ್ತದೆ. ಮನುಷ್ಯರಲ್ಲಿಯೂ ಹೀಗೆಯೇ ನಡೆಯುತ್ತದೆ. ಅದರಲ್ಲಿ ವಿಶೇಷವಾದುದು ಏನೂ ಇಲ್ಲ. ಯಾವಾಗಲೂ ಬಲಶಾಲಿಗಳು ದುರ್ಬಲರೊಂದಿಗೆ ಹೀಗೆಯೇ ನಡೆದುಕೊಳ್ಳುತ್ತಾರೆ - ಅನಾದರಣೆ ಮತ್ತು ವಿರೋಧ. ದುರ್ಬಲನೇ ಶರಣುಹೋಗುತ್ತಾನೆ.

“ತಂದೆ, ರಾಜ ಮತ್ತು ವೃದ್ಧರು ಸರ್ವತಾ ಗೌರವಕ್ಕೆ ಅರ್ಹರು. ಆದುದರಿಂದಲೇ ಧೃತರಾಷ್ಟ್ರನನ್ನು ನಾವು ಗೌರವಿಸುತ್ತೇವೆ ಮತ್ತು ಪೂಜಿಸುತ್ತೇವೆ. ಆದರೆ ಧೃತರಾಷ್ಟ್ರನ ಪುತ್ರಸ್ನೇಹವಾದರೋ ಬಲವಾದದ್ದು. ಅವನು ಪುತ್ರನ ವಶದಲ್ಲಿ ನಮ್ಮ ಶರಣಾಗತಿಯನ್ನು ಪರಿಹಾಸಿಸುತ್ತಾನೆ. ಬಂದೊದಗಿದ ಈ ಸಮಯದಲ್ಲಿ ನಿನಗೇನಿಸುತ್ತದೆ? ಮಾಧವ! ನಾವು ಹೇಗೆ ಅರ್ಥ ಮತ್ತು ಧರ್ಮಗಳು ಕಡಿಮೆಯಾಗದಂತೆ ನಡೆದುಕೊಳ್ಳಬಹುದು? ಈ ರೀತಿಯ ಕಷ್ಟ ಬಂದೊಗಿರುವಾಗ ನಿನ್ನನ್ನು ಬಿಟ್ಟು ಬೇರೆ ಯಾರಲ್ಲಿ ನಾನು ವಿಚಾರಮಾಡಬಹುದು? ಎಲ್ಲವನ್ನೂ ನಿರ್ಧರಿಸಬಲ್ಲ ನೀನಲ್ಲದೇ ನಮಗೆ ಎಲ್ಲ ಕೆಲಸಗಳಲ್ಲಿ ದಾರಿಯನ್ನು ತಿಳಿದಿರುವ, ಒಳ್ಳೆಯದನ್ನೇ ಬಯಸುವ ಪ್ರಿಯನು ಬೇರೆ ಯಾರಿದ್ದಾರೆ?”

ಹೀಗೆ ಹೇಳಿದ ಧರ್ಮರಾಜನಿಗೆ ಜನಾರ್ದನನು ಉತ್ತರಿಸಿದನು: “ನಿಮ್ಮಿಬ್ಬರ ಒಳಿತಿಗಾಗಿ ಕುರುಸಂಸದಕ್ಕೆ ಹೋಗುತ್ತೇನೆ. ನಿನ್ನ ಲಾಭವನ್ನು ಅಪಹರಿಸದೇ ಶಾಂತಿಯು ದೊರೆಯಿತೆಂದರೆ ಅದು ನನ್ನ ಮಹಾ ಪುಣ್ಯವಾಗುತ್ತದೆ. ಹಾಗೆ ನಡೆದರೆ ಫಲವು ಮಹತ್ತರವಾಗಿರುತ್ತದೆ. ಹೋರಾಡಲು ಸಿದ್ಧರಾಗಿರುವ ಕುರು-ಸೃಂಜಯರು, ಪಾಂಡವರು, ಧಾರ್ತರಾಷ್ಟ್ರರು ಮತ್ತು ಇಡೀ ಭೂಮಿಯನ್ನೇ ಮೃತ್ಯುಪಾಶದಿಂದ ಬಿಡುಗಡೆಗೊಳಿಸುತ್ತೇನೆ.”

ಯುಧಿಷ್ಠಿರನು ಹೇಳಿದನು: “ಕೃಷ್ಣ! ನೀನು ಕುರುಗಳಲ್ಲಿಗೆ ಹೋಗುವುದಕ್ಕೆ ನಾನು ಒಪ್ಪುವುದಿಲ್ಲ. ಎಷ್ಟೇ ಸೂಕ್ತವಾಗಿದ್ದರೂ ನಿನ್ನ ಮಾತನ್ನು ಸುಯೋಧನನು ನಡೆಸುವುದಿಲ್ಲ. ಎಲ್ಲ ಪಾರ್ಥಿವರೂ ಕ್ಷತ್ರಿಯರೂ ಸುಯೋಧನನ ವಶದಲ್ಲಿ ಬಂದಿದ್ದಾರೆ. ಅವರ ಮಧ್ಯೆ ನೀನು ಹೋಗುವುದು ನನಗಿಷ್ಟವಿಲ್ಲ. ಮಾಧವ! ನಿನಗೇನಾದರೂ ಆದರೆ ಪ್ರಪಂಚದ ಯಾವುದೂ - ಸಂಪತ್ತು, ದೇವತ್ವ, ಅಮರರ ಎಲ್ಲ ಐಶ್ವರ್ಯ – ನಮಗೆ ಸುಖವನ್ನು ತರಲಾರವು.”

ಭಗವಂತನು ಹೇಳಿದನು: “ಮಹಾರಾಜ! ಧಾರ್ತರಾಷ್ಟ್ರನ ದುಷ್ಟತನವನ್ನು ಬಲ್ಲೆ. ಆದರೆ ಇದರಿಂದ ನಾವು ಸರ್ವ ಲೋಕಗಳಲ್ಲಿ ಮಹೀಕ್ಷಿತರ ಮಾತಿಗೆ ಬರುವುದಿಲ್ಲ. ಸಿಂಹದ ಎದಿರು ಇತರ ಮೃಗಗಳಂತೆ ಎಲ್ಲ ರಾಜರು ಒಟ್ಟಿಗೇ ಬಂದರೂ ಕ್ರುದ್ಧನಾದ ನನ್ನ ಎದಿರು ನಿಲ್ಲಲು ಸಾಕಾಗಲಿಕ್ಕಿಲ್ಲ. ಅವರು ನನ್ನೊಡನೆ ಏನಾದರೂ ಕೆಟ್ಟದ್ದಾಗಿ ನಡೆದುಕೊಂಡರೆ ಎಲ್ಲ ಕುರುಗಳನ್ನೂ ಸುಟ್ಟುಬಿಡುತ್ತೇನೆ ಎಂದು ನಿಶ್ಚಯಿಸಿದ್ದೇನೆ. ನಾನು ಅಲ್ಲಿಗೆ ಹೋಗುವುದು ನಿರರ್ಥಕವಾಗುವುದಿಲ್ಲ. ನಮಗೆ ಎಂದಾದರೂ ಏನಾದರೂ ಲಭ್ಯವಾಗಿಯೇ ಆಗುತ್ತದೆ. ನೀನು ಕೆಟ್ಟ ಮಾತಿಗೆ ಬರಬಾರದೆಂದಷ್ಟೇ!”

ಯುಧಿಷ್ಠಿರನು ಹೇಳಿದನು: “ಕೃಷ್ಣ! ನಿನಗೆ ಇಷ್ಟವಾಗುವುದಾದರೆ ಕೌರವರಲ್ಲಿಗೆ ಹೋಗು. ಮಂಗಳವಾಗಲಿ! ಯಶಸ್ವಿಯಾಗಿ, ಸುರಕ್ಷಿತನಾಗಿ ನಿನ್ನ ಮರಳುವಿಕೆಯನ್ನು ಕಾಯುತ್ತಿರುತ್ತೇನೆ. ಕುರುಗಳಲ್ಲಿಗೆ ಹೋಗಿ, ಎಲ್ಲರೂ ಸ್ನೇಹ ಮತ್ತು ಸಂತೋಷದಿಂದ ಒಟ್ಟಿಗೇ ಇರುವ ಹಾಗೆ ಭಾರತರನ್ನು ಶಾಂತಗೊಳಿಸು. ನನ್ನ ತಮ್ಮನಂತಿರುವೆ. ನನ್ನ ಮತ್ತು ಬೀಭತ್ಸುವಿನ ಪ್ರಿಯ ಸಖನಾಗಿರುವೆ. ನಿನ್ನ ಸ್ನೇಹದಲ್ಲಿ ಸ್ವಲ್ಪವೂ ಶಂಕೆಯಿಲ್ಲ. ನಮಗೆ ಒಳ್ಳೆಯದನ್ನು ತರುತ್ತೀಯೆ. ನಮ್ಮನ್ನು ತಿಳಿದಿದ್ದೀಯೆ. ಅವರನ್ನು ತಿಳಿದಿದ್ದೀಯೆ. ಒಳ್ಳೆಯದೇನೆಂದು ತಿಳಿದಿದ್ದೀಯೆ. ಮಾತನ್ನು ತಿಳಿದಿದ್ದೀಯೆ. ನಮ್ಮ ಹಿತದಲ್ಲಿರುವ ಏನನ್ನೂ ಸುಯೋಧನನಿಗೆ ಹೇಳು. ಶಾಂತಿಯಾಗಲೀ ಅಥವಾ ಯುದ್ಧವಾಗಲೀ, ಯಾವುದು ಧರ್ಮಕ್ಕೆ ಜೋಡಿಕೊಂಡಿದೆಯೋ ಅದೇ ಮಾತನ್ನು ಅವರಿಗೆ ಹೇಳು.”

ಕೃಷ್ಣನು ರಾಯಭಾರಕ್ಕೆ ಒಪ್ಪಿಕೊಂಡಿದುದು

ಭಗವಂತನು ಹೇಳಿದನು: “ಸಂಜಯನ ಮಾತನ್ನೂ ನಿನ್ನದನ್ನೂ ಕೇಳಿದ್ದೇನೆ. ಅವರ ಮತ್ತು ನಿನ್ನ ಎಲ್ಲ ಅಭಿಪ್ರಾಯಗಳನ್ನೂ ತಿಳಿದಿದ್ದೇನೆ. ನಿನ್ನ ಬುದ್ಧಿಯು ಧರ್ಮವನ್ನು ಆಶ್ರಯಿಸಿದ್ದರೆ ಅವರ ಮತಿಯು ವೈರವನ್ನು ಆಶ್ರಯಿಸಿದೆ. ಯುದ್ಧವಿಲ್ಲದೇ ಏನೆಲ್ಲ ದೊರೆಯುತ್ತದೆಯೋ ಅದು ನಿನ್ನ ಬಹುಮತವಾಗುತ್ತದೆ. ವಿಶಾಂಪತೇ! ಭಿಕ್ಷೆಬೇಡುವುದು ಕ್ಷತ್ರಿಯನ ಕೆಲಸವಲ್ಲ. ಆಶ್ರಮಗಳನ್ನು ತಿಳಿದವರು ಕ್ಷತ್ರಿಯರು ಏನನ್ನು ಬೇಡಬೇಕೆಂದು ಹೇಳಿದ್ದಾರೆ. ಸಂಗ್ರಾಮದಲ್ಲಿ ಜಯ ಅಥವಾ ಸಾವು. ಇದೇ ಸನಾತನವಾಗಿ ಧಾತ್ರನು ತೋರಿಸಿಕೊಟ್ಟ ಕ್ಷತ್ರಿಯರ ಸ್ವಧರ್ಮ. ಹೇಡಿತನವು ಹೇಳಿದ್ದುದಲ್ಲ. ಹೇಡಿತನವನ್ನು ಬಳಸಿ ಜೀವನ ಮಾಡುವುದು ಶಕ್ಯವಿಲ್ಲ. ವಿಕ್ರಮದಿಂದ ಶತ್ರುಗಳನ್ನು ಜಯಿಸು. ಅತಿ ಆಸೆಯಿಂದ ದೀರ್ಘಕಾಲ ಸ್ನೇಹವನ್ನ್ನು ಬಳಸಿ, ಸಂತೋಷಗೊಳಿಸಿ ಧಾರ್ತರಾಷ್ಟ್ರರು ಮಿತ್ರರನ್ನು ಮಾಡಿಕೊಂಡಿದ್ದಾರೆ. ಸೇನೆಗಳನ್ನು ಒಟ್ಟುಗೂಡಿಸಿದ್ದಾರೆ. ಅವರು ನಿನ್ನನ್ನು ಎಂದೂ ಸರಿಸಮನೆಂದು ಪರಿಗಣಿಸುವುದಿಲ್ಲ. ಭೀಷ್ಮ, ದ್ರೋಣ, ಕೃಪ, ಮೊದಲಾದವರ ಕಾರಣದಿಂದ ತಾವೇ ಬಲವಂತರೆಂದು ತಿಳಿದುಕೊಂಡಿದ್ದಾರೆ. ಎಲ್ಲಿಯವರೆಗೆ ನೀನು ಕರುಣೆಯಿಂದ ಅವರೊಡನೆ ನಡೆದುಕೊಳ್ಳುತ್ತೀಯೋ ಅಲ್ಲಿಯವರಗೆ ಅವರು ನಿನ್ನ ರಾಜ್ಯವನ್ನು ನಿನ್ನಿಂದ ದೂರವಿಟ್ಟುಕೊಳ್ಳುತ್ತಾರೆ. ಅನುಕ್ರೋಶವಾಗಲೀ, ಕಾರ್ಪಣ್ಯವಾಗಲೀ, ಧರ್ಮಾರ್ಥಕಾರಣವಾಗಲೀ ಧಾರ್ತರಾಷ್ಟ್ರನು ನಿನಗಿಷ್ಟಬಂದಂತೆ ನಡೆದುಕೊಳ್ಳುವಂತೆ ಮಾಡಲಾರವು. ಯಾವಾಗ ನಿನಗೆ ಕೌಪೀನವನ್ನು ತೊಡಿಸಿ ಬಿಟ್ಟರೋ ಆಗ ಅವರು ತಮ್ಮ ತಪ್ಪಿಗೆ ಪರಿತಪಿಸಲಿಲ್ಲ ಎನ್ನುವುದೇ ನಿನಗೆ ಇದರ ಕುರಿತಾದ ಸಾಕ್ಷಿ. ಪಿತಾಮಹ, ದ್ರೋಣ, ಧೀಮತ ವಿದುರ ಮತ್ತು ಎಲ್ಲ ಕುರುಮುಖ್ಯರೂ ನೋಡುತ್ತಿರುವಾಗಲೇ ದಾನಶೀಲನಾದ, ಮೃದುವಾದ, ನಿಯಂತ್ರಣದಲ್ಲಿರುವ, ಧರ್ಮವನ್ನು ಬಯಸುವ, ಮಾತಿನಂತೆ ನಡೆದುಕೊಳ್ಳುವ ನಿನ್ನನ್ನು ದ್ಯೂತದಲ್ಲಿ ಮೋಸಗೊಳಿಸಿ, ಆ ಕ್ರೂರ ಕರ್ಮದಿಂದ ನಾಚಿ ಮುದುಡಿಹೋಗದೇ ಇದ್ದ ಆ ಪಾಪಿ, ನಡತೆ ವಿಚಾರಗಳಿಲ್ಲದಿರುವವನೊಂದಿಗೆ ಸ್ವಲ್ಪವೂ ಪ್ರೀತಿಯನ್ನು ತೋರಿಸಬೇಡ! ಅವರು ಲೋಕದಲ್ಲಿ ಎಲ್ಲರಿಂದ ವಧಾರ್ಹರು. ಪುನಃ ನಿನ್ನಿಂದಾದರೇನು! ಅವನು ಸಹೋದರರೊಂದಿಗೆ ಜಂಬದಿಂದ ನಗುತ್ತಾ ಹೊಲಸು ಮಾತುಗಳಿಂದ ನಿನ್ನನ್ನು ಈ ರೀತಿ ಹೇಳಿ ನೋಯಿಸಲಿಲ್ಲವೇ? ‘ಈಗ ಪಾಂಡವರಲ್ಲಿ ತಮ್ಮದು ಎಂದು ಹೇಳಿಕೊಳ್ಳುವುದು ಏನೂ ಉಳಿದಿಲ್ಲ! ಅವರ ಹೆಸರೂ ಗೋತ್ರವೂ ಕೂಡ ಅವರದ್ದಾಗಿ ಉಳಿಯುವುದಿಲ್ಲ! ಬಹು ಕಾಲದ ನಂತರ ಅವರ ಪರಾಭವವಾಗುತ್ತದೆ. ತಮ್ಮ ಪ್ರಕೃತಿಯನ್ನು ಕಳೆದುಕೊಂಡು ಪ್ರಕೃತಿಯನ್ನೇ ಸೇರಿಕೊಳ್ಳುತ್ತಾರೆ!’

“ನೀನು ವನಕ್ಕೆ ಹೊರಟಿರುವಾಗ ಕುಲಬಾಂಧವರ ನಡುವೆ ಅವನು ಇದು ಮತ್ತು ಇನ್ನೂ ಇತರ ಪೌರುಷದ ಜಂಬದ ಮಾತನಾಡಿದನು. ತಪ್ಪಿಲ್ಲದ ನಿನ್ನನ್ನು ನೋಡಿ ಅಲ್ಲಿ ಸಭೆಯಲ್ಲಿ ಸೇರಿದ್ದ ಎಲ್ಲರೂ ಗಂಟಲಲ್ಲಿ ಕಣ್ಣೀರನ್ನು ತುಂಬಿಸಿಕೊಂಡು ಅಳುತ್ತಾ ಕುಳಿತಿದ್ದರು. ರಾಜರೂ ಬ್ರಾಹ್ಮಣರೂ ಅವನನ್ನು ಅಭಿನಂದಿಸಲಿಲ್ಲ. ಅಲ್ಲಿ ಎಲ್ಲ ಸಭಾಸದರೂ ದುರ್ಯೋಧನನನ್ನು ನಿಂದಿಸಿದರು. ಕುಲೀನನಿಗೆ ನಿಂದೆ ಮತ್ತು ಸಾವಿದೆ. ಆದರೆ ಕುಜೀವಿಕನ ನಿಂದೆಗಿಂತ ಸಾವೇ ಅವನಿಗೆ ಬೇಕಾದುದಾಗುತ್ತದೆ. ಎಂದು ಭೂಮಿಯ ಸರ್ವ ರಾಜರುಗಳು ಅವನ ನಾಚಿಕೆಗೇಡುತನವನ್ನು ನಿಂದಿಸಿದರೋ ಅಂದೇ ಅವನು ಸತ್ತುಹೋದ!  ಯಾರ ಚಾರಿತ್ರ್ಯವು ಈ ರೀತಿ ಇದೆಯೋ ಅವನನ್ನು ಕೊಲ್ಲುವುದು, ಬೇರುಗಳನ್ನು ಕಳೆದುಕೊಂಡು ಕೇವಲ ಬುಡದ ಮೇಲೆ ನಿಂತಿರುವ ಮರವನ್ನು ಕೆಡಹುವಂತೆ, ಅತೀ ಸುಲಭ. ಅನಾರ್ಯನಾದ, ಸರ್ವಲೋಕ್ಕೆ ದುರ್ಮತಿಯಾದ, ಇವನನ್ನು ಸರ್ಪದಂತೆ ಕೊಲ್ಲಬೇಕು. ಶಂಕಿಸಬೇಡ! ಅದೇನೇ ಇದ್ದರೂ, ತಂದೆ ಮತ್ತು ಭೀಷ್ಮರಿಗೆ ಶರಣುಹೋಗುವ ನಿನ್ನ ಈ ಕ್ಷಮಾಬುದ್ಧಿಯು ನನಗೆ ಹಿಡಿಸುತ್ತದೆ.

“ನಾನು ಹೋಗಿ ದುರ್ಯೋಧನನ ಕುರಿತು ಇನ್ನೂ ದ್ವಂದ್ವಭಾವವನ್ನು ಹೊಂದಿರುವ ಎಲ್ಲರ ಸಂಶಯವನ್ನು ಕೊನೆಗೊಳಿಸುತ್ತೇನೆ. ರಾಜರುಗಳ ಮಧ್ಯೆ ನಿನ್ನಲ್ಲಿರುವ ಪರುಷ ಗುಣಗಳ ಮತ್ತು ಅವನ ದುರ್ನಡತೆಯ ಸಂಕೀರ್ತನ ಮಾಡುತ್ತೇನೆ. ಅಲ್ಲಿ ನಾನು ಹೇಳುವ ಧರ್ಮಾರ್ಥಸಂಹಿತವಾದ ಹಿತವಾದ ಮಾತುಗಳನ್ನು ಕೇಳಿ ಸರ್ವ ಪಾರ್ಥಿವರೂ, ನಾನಾ ಜನಪದೇಶ್ವರೂ ನೀನು ಧರ್ಮಾತ್ಮ ಮತ್ತು ಸತ್ಯವನ್ನು ಹೇಳುವವನೆಂದೂ ಅವನು ಲೋಭದಿಂದ ನಡೆದುಕೊಳ್ಳುತ್ತಿದ್ದಾನೆಂದೂ ತಿಳಿಯುತ್ತಾರೆ. ಪೌರ ಜಾನಪದರಲ್ಲಿ, ವೃದ್ಧ ಬಾಲಕರಲ್ಲಿ, ನಾಲ್ಕು ವರ್ಣದವರು ಸೇರುವಲ್ಲಿ ಅವನೇ ತಪ್ಪಿತಸ್ಥನೆಂದು ಹೇಳುತ್ತೇನೆ. ಶಾಂತಿಯನ್ನು ಅರಸುವಾಗ ನೀನು ಅಲ್ಲಿ ಯಾವ ಅಧರ್ಮವನ್ನೂ ಎಸಗುವುದಿಲ್ಲ. ರಾಜರು ಕುರುಗಳನ್ನೂ ಧೃತರಾಷ್ಟ್ರನನ್ನೂ ನಿಂದಿಸುತ್ತಾರೆ. ಲೋಕವೇ ಅವರನ್ನು ಪರಿತ್ಯಜಿಸಿದಾಗ ಮಾಡುವುದೇನು ಉಳಿಯುತ್ತದೆ? ದುರ್ಯೋಧನನು ಹತನಾದ ನಂತರ ಮಾಡುವುದಾದರೂ ಏನಿದೆ? ಇದನ್ನು ಮನಸ್ಸಿನಲ್ಲಿಟ್ಟುಕೊಂಡು ನಾನು ಕುರುಗಳೆಲ್ಲರ ಬಳಿ ಹೋಗುತ್ತೇನೆ.

“ನಿನ್ನ ಲಾಭವನ್ನು ಕಡೆಗೆಣಿಸದೇ ಶಾಂತಿಯನ್ನು ತರಲು ಪ್ರಯತ್ನಿಸುತ್ತೇನೆ ಮತ್ತು ಅದಕ್ಕೆ ಅವರ ಪ್ರತಿಕ್ರಿಯೆಯನ್ನು ಗಮನಿಸುತ್ತೇನೆ. ಕೌರವರ ಯುದ್ಧದ ತಯಾರಿಯನ್ನು ನೋಡಿಕೊಂಡು, ನಿನಗೆ ಜಯವನ್ನು ತರಲು ಹಿಂದಿರುಗುತ್ತೇನೆ. ಏನೇ ಆದರೂ ಅವರೊಂದಿಗೆ ಯುದ್ಧವನ್ನೇ ನಾನು ಶಂಕಿಸುತ್ತಿದ್ದೇನೆ. ನಿಮಿತ್ತಗಳೆಲ್ಲವೂ ನನಗೆ ಅದನ್ನೇ ಸೂಚಿಸುತ್ತಿವೆ. ಮೃಗಪಕ್ಷಿಗಳು ಘೋರವಾಗಿ ಕೂಗುತ್ತಿವೆ. ರಾತ್ರಿಯಾಗುವಾಗ ಆನೆ ಕುದುರೆಗಳು ಘೋರ ರೂಪವನ್ನು ತಾಳುತ್ತಿವೆ. ಮತ್ತು ಬೆಂಕಿಯು ಬಹು ಬಣ್ಣಗಳನ್ನು ತಳೆದು ಘೋರರೋಪಗಳನ್ನು ಕರೆಯುತ್ತಿದೆ. ಮನುಷ್ಯ ಲೋಕವನ್ನು ಕೊನೆಗೊಳಿಸಲು ಘೋರ ಅಂತಕನು ಬರುತ್ತಿದ್ದಾನಲ್ಲದೇ ಈ ರೀತಿ ತೋರಿಸಿಕೊಳ್ಳುತ್ತಿರಲಿಲ್ಲ. ಶಸ್ತ್ರಗಳು, ಬಾಣಗಳು, ಕವಚಗಳು, ರಥಗಳು, ಆನೆಗಳು ಮತ್ತು ಧ್ವಜಗಳು ಸಿದ್ಧವಾಗಿರಲಿ. ನಿನ್ನ ಎಲ್ಲ ಯೋಧರೂ ತಮ್ಮ ತರಬೇತಿಗಳನ್ನು ಮುಗಿಸಿ, ಕುದುರೆ, ಆನೆ ಮತ್ತು ರಥಗಳಲ್ಲಿ ಸಿದ್ಧರಾಗಿರಲಿ. ಸಂಗ್ರಾಮಕ್ಕೆ ಬೇಕಾದುದೆಲ್ಲವೂ ಸಿದ್ಧವಾಗಿದೆಯೆಂದು ನೋಡಿಕೋ. ಹಿಂದೆ ನಿನ್ನದಾಗಿದ್ದ ಮತ್ತೆ ದ್ಯೂತದಲ್ಲಿ ಅಪಹರಿಸಲ್ಪಟ್ಟ ಸಮೃದ್ಧ ರಾಜ್ಯವನ್ನು ಜೀವವಿರುವವರೆಗೆ ದುರ್ಯೋಧನನು ನಿನಗೆ ಕೊಡಲು ಏನು ಮಾಡಿದರೂ ಸಿದ್ಧನಿರುವುದಿಲ್ಲ.”

ಕೃಷ್ಣ ರಾಯಭಾರಕ್ಕೆ ಭೀಮಸೇನನ ಸಂದೇಶ

ಭೀಮಸೇನನು ಹೇಳಿದನು: “ಮಧುಸೂದನ! ಕುರುಗಳಿಗೆ ಶಾಂತಿಯಾಗುವ ರೀತಿಯಲ್ಲಿಯೇ ಮಾತನಾಡು. ಯುದ್ಧದ ಭೀತಿಯನ್ನು ಅವರಲ್ಲಿ ಹುಟ್ಟಿಸಬೇಡ! ಅಮರ್ಷಿ, ನಿತ್ಯವೂ ಕೋಪದಲ್ಲಿರುವ, ಇನ್ನೊಬ್ಬರ ಶ್ರೇಯಸ್ಸನ್ನು ದ್ವೇಷಿಸುವ ದುರ್ಯೋಧನನೊಡನೆ ಕಟುವಾಗಿ ಮಾತನಾಡಬೇಡ. ಸೌಮ್ಯವಾಗಿಯೇ ವ್ಯವಹರಿಸು. ಸ್ವಭಾವದಲ್ಲಿಯೇ ಪಾಪಿಷ್ಟನಾಗಿರುವ, ಮನಸ್ಸಿನಲ್ಲಿ ದಸ್ಯುಗಳಿಗೆ ಸಮನಾದ, ಮುಂದಿನ ಆಲೋಚನೆಯೇ ಇಲ್ಲದ, ನಿಷ್ಠೂರೀ, ಮೋಸಗಾರ, ಕ್ರೂರ ಪರಾಕ್ರಮಿ, ತುಂಬಾ ಸಮಯದವರೆಗೆ ಕೋಪವನ್ನಿಟ್ಟುಕೊಳ್ಳುವ, ಪಾಪಾತ್ಮ, ತನ್ನ ಸಂಪತ್ತನ್ನು ಹಂಚಿಕೊಳ್ಳುವ ಮೊದಲು ಸಾಯುತ್ತೇನೆ ಎನ್ನುವ ದುರ್ಯೋಧನನು ತನಗೆ ಸೇರಿದ್ದು ಎಂದು ತಿಳಿದುದನ್ನು ನಮಗೆ ಕೊಡಲಾರ. ಅಂಥವನೊಡನೆ ಶಾಂತಿಯನ್ನು ಕೇಳುವುದು ಪರಮದುಷ್ಕರವೆಂದು ನನಗನ್ನಿಸುತ್ತದೆ. ಅವನು ತನ್ನ ಮಿತ್ರರನ್ನೂ ಕೀಳಾಗಿ ಕಾಣುತ್ತಾನೆ, ಧರ್ಮವನ್ನು ತೊರೆದಿದ್ದಾನೆ, ಸುಳ್ಳನ್ನು ಪ್ರೀತಿಸುತ್ತಾನೆ, ಮತ್ತು ಸುಹೃದಯರ ಮಾತುಗಳನ್ನೂ ಯೋಚನೆಗಳನ್ನೂ ಸ್ವೀಕರಿಸುವುದಿಲ್ಲ. ಅವನು ಸಿಟ್ಟಿನ ವಶಕ್ಕೆ ಸಿಲುಕಿ ದುಷ್ಟಸ್ವಭಾವವನ್ನು ತಳೆದಿದ್ದಾನೆ. ಹುಲ್ಲು ಕಡ್ಡಿಗಳ ಮೇಲೆ ತೆವಳುವ ಹಾವಿನಂತೆ ಸ್ವಭಾವತಃ ಪಾಪದಿಂದಲೇ ನಡೆಯುತ್ತಾನೆ. ದುರ್ಯೋಧನನ ಸೇನೆಯು ಎಂಥಹುದು, ಅವನ ಶೀಲವು ಎಂಥಹುದು, ಸ್ವಭಾವವು ಎಂಥಹುದು, ಬಲವು ಎಂಥಹುದು ಮತ್ತು ಪರಾಕ್ರಮವು ಎಂಥಹುದು ಎಂದು ಎಲ್ಲವೂ ನಿನಗೆ ತಿಳಿದೇ ಇದೆ. ಹಿಂದೆ ಕುರುಗಳು ಪುತ್ರರೊಂದಿಗೆ ಮತ್ತು ನಮ್ಮೊಂದಿಗೆ ಇಂದ್ರನ ಹಿರಿಯರಂತೆ ಬಂಧುಗಳೊಂದಿಗೆ ಮುದದಿಂದ ಇರುತ್ತಿದ್ದೆವು. ಈಗ ದುರ್ಯೋಧನನ ಕ್ರೋಧದಿಂದಾಗಿ ಛಳಿಗಾಲದ ಕೊನೆಯಲ್ಲಿ ಬೆಂಕಿ ಹತ್ತಿ ಉರಿಯುವ ಕಾಡಿನಂತೆ ಭಾರತರು ಆಗಿದ್ದಾರೆ.

“ತಮ್ಮ ಕುಲದವರನ್ನು, ಸುಹೃದಯರನ್ನು ಮತ್ತು ಬಾಂಧವರನ್ನು ನಾಶಗೊಳಿಸಿದ ಹದಿನೆಂಟು ರಾಜರು ಪ್ರಖ್ಯಾತರು. ಧರ್ಮದ ಪರ್ಯಾಯಕಾಲವು ಬಂದಾಗ ಸಮೃದ್ಧರಾಗಿದ್ದ ಅಸುರರಲ್ಲಿ ತೇಜನಲ್ಲಿ ಅಗ್ನಿಯಂತಿರುವ ಬಲಿಯು ಜನಿಸಿದನು. ಹೈಹಯರಲ್ಲಿ ಉದಾವರ್ತ, ನೀಪರಲ್ಲಿ ಜನಮೇಜಯ, ತಾಲಜಂಘರಲ್ಲಿ ಬಹುಲ, ಕೃಮಿಗಳಲ್ಲಿ ಉದ್ಧತ ವಸು, ಸುವೀರರಲ್ಲಿ ಅಜಬಿಂದು, ಸುರಾಷ್ಟ್ರರಲ್ಲಿ ಕುಶರ್ಧಿಕ, ಬಲೀಹರಲ್ಲಿ ಅರ್ಕಜ, ಚೀಣರಲ್ಲಿ ಧೌತಮೂಲಕ, ವಿದೇಹರಲ್ಲಿ ಹಯಗ್ರೀವ, ಮಹೌಜಸರಲ್ಲಿ ವರಪ್ರ, ಸುಂದರವೇಗರಲ್ಲಿ ಬಾಹು, ದೀಪ್ತಾಕ್ಷಣರಲ್ಲಿ ಪುರೂರವರು, ಚೇದಿ-ಮತ್ಸ್ಯರಲ್ಲಿ ಸಹಜ, ಪ್ರಚೇತರಲ್ಲಿ ಬೃಹದ್ಬಲ, ಇಂದ್ರವತ್ಸರಲ್ಲಿ ಧಾರಣ, ಮುಕುಟರಲ್ಲಿ ವಿಗಾಹನ, ನಂದಿವೇಗರಲ್ಲಿ ಶಮ ಈ ಕುಲಪಾಂಸಕರು ಯುಗಾಂತದಲ್ಲಿ ಕುಲಗಳಲ್ಲಿ ಪುರುಷಾಧಮರಾಗಿ ಜನಿಸಿದರು. ಈ ಯುಗಾಂತ್ಯದಲ್ಲಿ ಕಾಲಸಂಭೃತನಾಗಿ ಕುರುಗಳ ಕುಲದ ಕೆಂಡವಾಗಿ ಪಾಪಪೂರುಷ ದುರ್ಯೋಧನನು ಹುಟ್ಟಿಕೊಂಡಿದ್ದಾನೆ. ಆದುದರಿಂದ ಅವನೊಂದಿಗೆ ಮೃದುವಾಗಿ, ನಿಧಾನವಾಗಿ ಧರ್ಮಾರ್ಥಗಳನ್ನು ಸೇರಿಸಿ, ಅವನ ಇಚ್ಛೆಗೆ ಕೂಡಿಬರುವಂತೆ ಮಾತನಾಡು. ಉಗ್ರವಾಗಿ ಪರಾಕ್ರಮದಿಂದ ಬೇಡ. ಭರತರನ್ನು ನಾಶಗೊಳಿಸುವ ಬದಲಾಗಿ ನಾವು ಎಲ್ಲರೂ ದುರ್ಯೋಧನನಿಗೆ ಶಿರಬಾಗಿಸಿ ವಿನಯದಿಂದ ನಡೆದುಕೊಳ್ಳುತ್ತೇವೆ. ಕುರುಗಳೊಂದಿಗೆ ಅವನು ನಮ್ಮ ವಿಷಯದಲ್ಲಿ ಉದಾಸೀನನಾಗುವಂತೆ ಏನನ್ನಾದರೂ ಮಾಡು. ಕುರುಗಳನ್ನು ವಿನಾಶವು ಮುಟ್ಟದಿರಲಿ. ಭ್ರಾತೃಗಳಲ್ಲಿ ಉತ್ತಮ ಭ್ರಾತೃತ್ವವಿರುವಂತೆ ಧಾರ್ತರಾಷ್ಟ್ರರು ಪ್ರಶಾಂತರಾಗುವಂತೆ ವೃದ್ಧ ಪಿತಾಮಹನಲ್ಲಿ ಮತ್ತು ಸಭಾಸದರಲ್ಲಿ ಮಾತನಾಡು. ಇದು ನಾನು ಹೇಳುವಂಥಹುದು. ರಾಜನೂ ಇದಕ್ಕೆ ಒಪ್ಪಿಗೆಯನ್ನಿತ್ತಿದ್ದಾನೆ. ಅರ್ಜುನನಲ್ಲಿ ದಯೆಯಿದೆ. ಅರ್ಜುನನಂತೂ ಯುದ್ಧವನ್ನು ಬಯಸುವುದಿಲ್ಲ.”

ಕೃಷ್ಣನು ಭೀಮನನ್ನು ಉತ್ತೇಜಿಸಿದುದು

ಭೀಮನ ಈ ಅಭೂತಪೂರ್ವ, ಮೃದು ಮಾತುಗಳನ್ನು ಕೇಳಿ ಮಹಾಬಾಹು ಕೇಶವನು ಜೋರಾಗಿ ನಕ್ಕನು. ಪರ್ವತವೇ ಹಗುರಾಗಿದೆಯೋ, ಬೆಂಕಿಯು ತಣ್ಣಗಾಗಿದೆಯೋ ಎಂದು ಭಾವಿಸಿ ರಾಮನ ತಮ್ಮ, ಶೌರಿ, ಶಾಂಗ್ರಧನ್ವಿಯು ಬೆಂಕಿಯನ್ನು ಇನ್ನೂ ಉರಿಸುವ ಗಾಳಿಯಂತಿರುವ ಮಾತುಗಳಿಂದ, ಕೃಪಾಭರಿತನಾಗಿ ಕುಳಿತುಕೊಂಡಿದ್ದ ವೃಕೋದರ ಭೀಮನಿಗೆ ಹೇಳಿದನು: “ಭೀಮಸೇನ! ಬೇರೆ ಎಲ್ಲ ಸಮಯಗಳಲ್ಲಿ ನೀನು ಕೊಲ್ಲುವುದರಿಂದ ಆನಂದಪಡುವ ಕ್ರೂರ ಧಾರ್ತರಾಷ್ಟ್ರರನ್ನು ವಿಮರ್ದಿಸುವ ಯುದ್ಧವೇ ಬೇಕೆಂದು ಹೇಳುತ್ತಿದ್ದೆ. ನೀನು ನಿದ್ದೆಮಾಡುವುದಿಲ್ಲ, ತಲೆಕೆಳಗೆ ಮಾಡಿ ಮಲಗಿಕೊಂಡಿದ್ದರೂ ಎಚ್ಚೆತ್ತೇ ಇರುತ್ತೀಯೆ. ಯಾವಾಗಲೂ ಘೋರವಾದ, ನೋಯಿಸುವ, ಸಿಟ್ಟಿನ ಮಾತನ್ನೇ ಆಡುತ್ತಿರುತ್ತೀಯೆ. ನೀನು ಸಿಟ್ಟಿನಿಂದ ಶಾಂತಿಯಿಲ್ಲದೇ ಹೊಗೆತುಂಬಿದ ಬೆಂಕಿಯಂತೆ ಸಂತಪ್ತನಾಗಿ ಬೆಂಕಿಯ ನಿಟ್ಟಿಸುರನ್ನು ಬಿಡುತ್ತಿರುತ್ತೀಯೆ. ಭಾರವನ್ನು ಹೊರಲಾರದ ದುರ್ಬಲನಂತೆ ನರಳುತ್ತಾ ಏಕಾಂತದಲ್ಲಿ ಬೇರೆಯಾಗಿಯೇ ಮಲಗುತ್ತೀಯೆ. ನಿನ್ನನ್ನು ಚೆನ್ನಾಗಿ ತಿಳಿಯದ ಜನರು ನೀನು ಹುಚ್ಚನೋ ಎಂದೂ ಆಡಿಕೊಳ್ಳುತ್ತಾರೆ. ಮೇಯುವ ಆನೆಯಂತೆ ಮರಗಳನ್ನು ಕಿತ್ತು ನಿರ್ಮೂಲನ ಮಾಡುತ್ತೀಯೆ ಮತ್ತು ಜೋರಾಗಿ ಕಿರುಚಿ ಕಾಲಿನಿಂದ ಭೂಮಿಯನ್ನು ಮೆಟ್ಟಿ ತುಳಿದು ಓಡುತ್ತಿರುತ್ತೀಯೆ. ನೀನು ಈ ಜನರೊಂದಿಗೆ ರಮಿಸುತ್ತಿಲ್ಲ, ಅವರಿಂದ ದೂರವಿರಲು ಇಷ್ಟಪಡುತ್ತೀಯೆ. ರಾತ್ರಿಯಾಗಲೀ ಹಗಲಾಗಲೀ ನೀನು ಇನ್ನೊಬ್ಬರು ಬರುವುದನ್ನು ಇಷ್ಟಪಡುವುದಿಲ್ಲ. ಅಕಸ್ಮಾತ್ತಾಗಿ ನಗುತ್ತಾ ಅಥವಾ ಅಳುತ್ತಿರುವಂತೆ ಅಥವಾ ಬಹಳ ಹೊತ್ತು ಕಣ್ಣನ್ನು ಮುಚ್ಚಿಕೊಂಡು ನಿನ್ನ ಮೊಳಕಾಲಮೇಲೆ ತಲೆಯನ್ನಿರಿಸಿ ಕುಳಿತುಕೊಂಡಿರುತ್ತೀಯೆ. ಕೆಲವೊಮ್ಮೆ ಕಣ್ಣುಹುಬ್ಬುಗಳನ್ನು ಗಂಟುಹಾಕಿಕೊಂಡಿರುತ್ತೀಯೆ ಅಥವಾ ತುಟಿಯನ್ನು ನೆಕ್ಕುತ್ತಿರುತ್ತೀಯೆ. ಇವೆಲ್ಲವೂ ನೀನು ಸಿಟ್ಟಾಗಿರುವುದರಿಂದಲೇ ತೋರುತ್ತವೆ.

“‘ಹೇಗೆ ಪೂರ್ವದಲ್ಲಿ ಸೂರ್ಯನು ಬೆಳಕನ್ನು ಪಸರಿಸಿ ಕಾಣಿಸಿಕೊಳ್ಳುತ್ತಾನೆ, ಮತ್ತು ಹೇಗೆ ಧೃವ ನಕ್ಷತ್ರವನ್ನು ಸುತ್ತುವರಿದು ರಶ್ಮಿವಂತನು ಪಶ್ಚಿಮದಲ್ಲಿ ಮುಳುಗುತ್ತಾನೋ ಹಾಗೆ ನಾನು ಸತ್ಯವನ್ನು ಹೇಳುತ್ತಿದ್ದೇನೆ - ಅದನ್ನು ಅತಿಕ್ರಮಿಸುವುದಿಲ್ಲ – ಈ ಅಮರ್ಷಣ ದುರ್ಯೋಧನನನ್ನು ನಾನು ಗದೆಯಿಂದ ಹೊಡೆದು ಕೊಲ್ಲುತ್ತೇನೆ.’ ಎಂದು ನಿನ್ನ ಸಹೋದರರ ಮಧ್ಯೆ, ಹಿಡಿದ ಗದೆಯ ಆಣೆಯಿಟ್ಟು ನೀನು ಪ್ರತಿಜ್ಞೆ ಮಾಡಿದ್ದೆ. ಆ ನಿನ್ನ ಬುದ್ಧಿಯೇ ಇಂದು ಈ ಶಾಂತಿಯ ಮಾತುಗಳನ್ನಾಡುತ್ತಿದೆಯೇ? ಅಹೋ ಭೀಮ! ಯುದ್ಧದ ಸಮಯವು ಬಂದಿರುವಾಗ, ಯದ್ಧದ ಲಕ್ಷಣಗಳು ಹೌದೋ ಅಲ್ಲವೋ ಎಂದು ಕಾಣುತ್ತಿರುವಾಗ ನೀನು ಭೀತಿಗೊಳ್ಳಲಿಲ್ಲ ತಾನೇ? ಸ್ವಪ್ನದಲ್ಲಿಯಾಗಲೀ ಎಚ್ಚರವಿರುವಾಗಲಾಗಲೀ ನೀನು ಕೆಟ್ಟ ನಿಮಿತ್ತಗಳನ್ನು ನೋಡುತ್ತಿದ್ದೀಯಾ? ಅದಕ್ಕೇ ಶಾಂತಿಯನ್ನು ಬಯಸುತ್ತಿದ್ದೀಯಾ? ತನ್ನಲ್ಲಿ ಪುರುಷತ್ವವನ್ನು ಕಾಣದ ನಪುಂಸಕನೇನಾದರೂ ಆಗಿಬಿಟ್ಟಿದ್ದೀಯಾ? ಹೇಡಿತನವು ನಿನ್ನನ್ನು ಆವರಿಸಿದೆ. ಅದರಿಂದಲೇ ನಿನ್ನ ಮನಸ್ಸು ವಿಕೃತವಾಗಿದೆ. ನಿನ್ನ ಹೃದಯವು ಕಂಪಿಸುತ್ತಿದೆ. ಮನಸ್ಸು ನಿರಾಶೆಗೊಂಡಿದೆ. ನಿನ್ನ ತೊಡೆಗಳು ಮರಗಟ್ಟಿವೆ. ಆದುದರಿಂದಲೇ ನೀನು ಶಾಂತಿಯನ್ನು ಬಯಸುತ್ತಿದ್ದೀಯೆ! ಮನುಷ್ಯನ ಬದಲಾಗುವ ಚಿತ್ತವು ಭಿರುಗಾಳಿಯ ವೇಗದಿಂದ ಸುಯ್ದಾಡುವ ಶಾಲ್ಮಲೀ ಮರದ ಮೇಲಿನ ಗಡ್ಡೆಯಂತೆ! ಹಸುವಿಗೆ ಮಾತು ಹೇಗೋ ಹಾಗೆ ಈ ಅಭಿಪ್ರಾಯವು ನಿನಗೆ ಸ್ವಾಭಾವಿಕವಾದುದಲ್ಲ. ಇದು ಮುಳುಗುತ್ತಿರುವ ಹಡಗಿನಲ್ಲಿರುವ ಸಮುದ್ರಯಾನಿಗಳಂತಿರುವ ಪಾಂಡುಪುತ್ರರ ಮನಸ್ಸುಗಳನ್ನು ಕುಸಿಯುತ್ತದೆ. ನಿನಗೆ ತಕ್ಕುದಲ್ಲದ ಈ ಮಾತನ್ನಾಡುತ್ತಿದ್ದೀಯಾ ಎಂದರೆ ಪರ್ವತವೇ ಹರಿದು ಹೋಗಲು ಪ್ರಾರಂಭಿಸಿದೆಯೋ ಎನ್ನುವಷ್ಟು ಮಹದಾಶ್ಚರ್ಯವಾಗುತ್ತಿದೆ. ನಿನ್ನ ಉತ್ತಮ ಕುಲದಲ್ಲಿಯ ಜನ್ಮವನ್ನು ಮತ್ತು ನಿನ್ನ ಮಹತ್ಕಾರ್ಯಗಳನ್ನು ನೋಡಿಕೋ! ವೀರ! ಎದ್ದೇಳು! ವಿಷಾದಿಸಬೇಡ! ಸ್ಥಿರನಾಗಿರು! ಈ ರೀತಿಯ ಅಸಡ್ಡತನವು ನಿನಗೆ ಅನುರೂಪವಾದುದಲ್ಲ. ಕ್ಷತ್ರಿಯನು ಯಾವುದನ್ನು ತನ್ನ ವೀರ್ಯದಿಂದ ಪಡೆಯುವುದಿಲ್ಲವೋ ಅದನ್ನು ಉಣ್ಣುವುದಿಲ್ಲ.”

ವಾಸುದೇವನು ಹೀಗೆ ಹೇಳಿದ ನಂತರ ನಿತ್ಯವೂ ಕೋಪದಲ್ಲಿದ್ದ, ಅಮರ್ಷಣನಾದ ಭೀಮಸೇನನು ಕುದುರೆಯಂತೆ ಓಡಾಡುತ್ತಾ ಹೇಳಿದನು: “ಅಚ್ಯುತ! ನಾನು ಏನು ಮಾಡಬೇಕೆಂದಿದ್ದೇನೆ ಎನ್ನುವುದನ್ನು ನೀನು ಸಂಪೂರ್ಣವಾಗಿ ತಪ್ಪು ತಿಳಿದುಕೊಂಡಿದ್ದೀಯೆ. ನಾನು ಯುದ್ಧದಲ್ಲಿಯೂ ಅತ್ಯಂತ ಸತ್ಯಪರಾಕ್ರಮಿ ಮತ್ತು ಕುಶಲ. ನನ್ನ ಸತ್ವವನ್ನು ಅರ್ಥಮಾಡಿಕೊಳ್ಳುವಷ್ಟು ದೀರ್ಘ ಕಾಲ ನೀನು ನನ್ನೊಡನೆ ವಾಸಿಸಿದ್ದೀಯೆ! ಅಥವಾ ಸರೋವರದಲ್ಲಿ ತೇಲುವವನಂತೆ ನೀನು ನನ್ನನ್ನು ಅರಿತೇ ಇಲ್ಲ. ಆದುದರಿಂದ ನೀನು ಗುರಿಗೆ ಬಹುದೂರವಾಗಿರುವ ಮಾತುಗಳಿಂದ ನನ್ನನ್ನು ಆಕ್ರಮಣ ಮಾಡುತ್ತಿದ್ದೀಯೆ! ಹೇಗೆ ತಾನೇ ಭೀಮಸೇನ ನನ್ನನ್ನು ತಿಳಿದ ಯಾರೂ ನೀನು ಸಂತೋಷದಿಂದ ಹೇಳಿದಂತ ಆ ದೊಡ್ಡ ಮಾತುಗಳನ್ನು ಆಡಬಲ್ಲರು? ಆದುದರಿಂದ ನನ್ನ ಪೌರುಷದ ಕುರಿತು ಮತ್ತು ಬೇರೆ ಯಾರಲ್ಲಿಯೂ ಸಮನಾಗಿರದ ಬಲದ ಕುರಿತು ಇದನ್ನು ಹೇಳುತ್ತೇನೆ. ತನ್ನನ್ನು ತಾನೇ ಹೊಗಳಿಕೊಳ್ಳುವುದು ಅರ್ಯರ ನಡತೆಯಲ್ಲ. ಆದರೂ ನೀನು ಅವಹೇಳನ ಮಾಡಿದುದರಿಂದ ನನ್ನ ಬಲದ ಕುರಿತು ಹೇಳುತ್ತೇನೆ. ಕೃಷ್ಣ! ಒಂದು ವೇಳೆ ಜೀವಿಗಳೆಲ್ಲವೂ ಇರುವ, ಅಚಲವಾಗಿರುವ, ಅನಂತವಾಗಿರುವ, ಎಲ್ಲವುಗಳ ತಾಯಂದಿರೆನಿಸಿಕೊಂಡಿರುವ ಇಲ್ಲಿ ಕಾಣುವ ಆಕಾಶ ಮತ್ತು ಭೂಮಿಗಳೆರಡೂ ಒಮ್ಮಿಂದೊಮ್ಮೆಗೇ ಕೋಪಗೊಂಡು ಶಿಲಾಬಂಡೆಗಳಂತೆ ಒಂದಕ್ಕೊಂದು ಅಪ್ಪಳಿಸಿದರೆ ಕೂಡ ನನ್ನ ಈ ಇರಡು ಬಾಹುಗಳಿಂದ ಸಚರಾಚರಗಳೊಂದಿಗೆ ಅವೆರಡನ್ನೂ ಬೇರೆಬೇರೆ ಮಾಡಿ ಹಿಡಿಯಬಲ್ಲೆ! ಮಹಾ ಪರಿಘಗಳಿಂತಿರುವ ಈ ಎರಡು ಬಾಹುಗಳ ಮಧ್ಯೆ ನೋಡು. ಇವುಗಳ ಮಧ್ಯೆ ಸಿಲುಕಿ ಬಿಡುಗಡೆಯಾಗಬಲ್ಲ ಯಾವ ಪುರುಷನನ್ನೂ ನಾನು ನೋಡೆ! ಹಿಮವಂತ, ಸಮುದ್ರ ಮತ್ತು ವಜ್ರಿಗಳು ಮೂವರೂ ಒಟ್ಟಿಗೇ ತಮ್ಮ ಬಲದಿಂದ ನಾನು ಬಲವನ್ನುಪಯೋಗಿಸಿ ಹಿಡಿಯುವವನನ್ನು ಬಿಡಿಸಲಾರರು. ಪಾಂಡವರ ಆತತಾಯಿ ಕ್ಷತ್ರಿಯರೆಲ್ಲರನ್ನೂ ಯುದ್ಧದಲ್ಲಿ ಪಾದದ ಅಡಿಯಲ್ಲಿ ತುಳಿದು ಭೂಮಿಯ ಒಳಗೆ ಕಳುಹಿಸಿಯೇನು! ಇಲ್ಲ. ನೀನು ನನ್ನ ವಿಕ್ರಮವನ್ನು – ಹೇಗೆ ನಾನು ರಾಜರನ್ನು ಸದೆಬಡಿದು ವಶಮಾಡಿಕೊಂಡೆ ಎನ್ನುವುದನ್ನು - ತಿಳಿದಿಲ್ಲ!  ಅಥವಾ ಉದಯಿಸುತ್ತಿರುವ ಸೂರ್ಯನ ಪ್ರಭೆಯಂತೆ ನನ್ನನ್ನು ನೀನು ತಿಳಿಯದೇ ಇದ್ದರೆ ನಾನು ಯುದ್ಧದ ಕುಣಿಯಲ್ಲಿ ಧುಮುಕಿದಾಗ ನೀನು ನನ್ನನ್ನು ತಿಳಿಯುತ್ತೀಯೆ. ಗಾಯವನ್ನು ಸುಚ್ಚುವಂತೆ ಕಟುಮಾತುಗಳಿಂದ ಏಕೆ ನನ್ನನ್ನು ಅಪಮಾನಗೊಳಿಸುತ್ತಿರುವೆ? ನನಗೆ ತಿಳಿದುದನ್ನು ನಾನು ನಿನಗೆ ಹೇಳಿದ್ದೇನೆ. ನಾನು ಅದಕ್ಕಿಂತಲೂ ಅಧಿಕ. ಯುದ್ಧವು ಮುಂದುವರೆಯುವಾಗ, ರಕ್ತವು ಪ್ರವಹಿಸುವ ದಿನದಂದು, ನೀನು ನನ್ನಿಂದ ಪ್ರಾಣವನ್ನು ಕಳೆದುಕೊಳ್ಳುವ ಆನೆಗಳನ್ನೂ ರಥದ ಸಾರಥಿಗಳನ್ನೂ ನೋಡುವಿಯಂತೆ! ಕೃದ್ಧನಾದ ನಾನು ನರ ಶ್ರೇಷ್ಠರಲ್ಲಿಯೇ ಶ್ರೇಷ್ಠರಾದ ಕ್ಷತ್ರಿಯರ್ಷಭರನ್ನು ಎಳೆದೆಳೆದು ಕೊಲ್ಲುವುದನ್ನು ನೀನು ಮತ್ತು ಲೋಕವು ನೋಡುವಿರಂತೆ! ಇಲ್ಲ! ನನ್ನ ಮಜ್ಜೆಗಳು ಕುಸಿದಿಲ್ಲ! ಮನಸ್ಸು ಕಂಪಿಸುತ್ತಿಲ್ಲ! ಸರ್ವ ಲೋಕಗಳೇ ಸಿಟ್ಟಾದರೂ ಭಯವೆನ್ನುವುದು ನನಗೆ ತಿಳಿದಿಲ್ಲ! ಕೇವಲ ಸೌಹಾರ್ದತೆಯಿಂದ ಮಾತ್ರ ಭರತರು ನಾಶವಾಗಬಾರದೆಂದು ನಾನು ಎಲ್ಲ ಸಂಕ್ಲೇಶಗಳನ್ನು ಸಹಿಸಿಕೊಂಡಿದ್ದೇನೆ.”

ಭಗವಂತನು ಹೇಳಿದನು: “ನಿನ್ನ ಭಾವವನ್ನು ತಿಳಿದುಕೊಳ್ಳಲು ಪ್ರಣಯದಿಂದ ನಾನು ಹೇಳಿದೆ. ನಿನ್ನನ್ನು ಆಕ್ಷೇಪಿಸುವುದಕ್ಕಾಗಲೀ, ನನ್ನ ಪಾಂಡಿತ್ಯವನ್ನು ತೋರಿಸಿಕೊಳ್ಳುವುದಕ್ಕಾಗಲೀ, ಸಿಟ್ಟಿನಿಂದಾಗಲೀ ಅಥವಾ ಅನುಮಾನದಿಂದಾಗಲೀ ಅಲ್ಲ. ನಿನ್ನ ಮಹಾತ್ಮೆಯನ್ನು ನಾನು ತಿಳಿದಿದ್ದೇನೆ. ನಿನ್ನ ಬಲವೇನೆನ್ನುವುದನ್ನೂ ತಿಳಿದಿದ್ದೇನೆ. ನೀನು ಮಾಡಿದ ಮಹತ್ಕಾರ್ಯಗಳನ್ನು ಬಲ್ಲೆ. ನಾನು ನಿನ್ನನ್ನು ಸೋಲಿಸಲು ಪ್ರಯತ್ನಿಸುತ್ತಿಲ್ಲ. ಪಾಂಡವ! ನಿನ್ನಲ್ಲಿ ನೀನು ಏನೆಲ್ಲ ಉತ್ತಮ ಗುಣಗಳನ್ನು ಕಂಡುಕೊಂಡಿದ್ದೀಯೋ ಅದಕ್ಕಿಂತಲೂ ಸಹಸ್ರ ಪ್ರಮಾಣದ ಗುಣಗಳನ್ನು ನಾನು ನಿನ್ನಲ್ಲಿರುವುದನ್ನು ಕಾಣುತ್ತೇನೆ. ಸರ್ವರಾಜರಿಂದ ಪೂಜಿತ ಕುಲದಲ್ಲಿ ಯಾರು ಹುಟ್ಟುತ್ತಾರೋ ಮತ್ತು ಬಂಧು-ಸುಹೃದಯರಿಂದ ಯಾರು ಸುತ್ತುವರೆದಿರುತ್ತಾರೋ ಅವರಂತೆಯೇ ಇದ್ದೀಯೆ! ದೈವ ಮತ್ತು ಮನುಷ್ಯ ಪ್ರಯತ್ನಗಳ ನಡುವಿನ ಧರ್ಮ ಸಂದಿಗ್ಧತೆಯನ್ನು ಜಿಜ್ಞಾಸೆಮಾಡುವವರು ಇಂಥಹುದೇ ಎನ್ನುವ ನಿರ್ಧಾರಕ್ಕೆ ಬಂದವರಿಲ್ಲ. ಪುರುಷನ ಕರ್ಮವು ಸಂದಿಗ್ಧದಲ್ಲಿದೆ. ಪುರುಷನ ಅರ್ಥಸಿದ್ಧಿಗೆ ಏನು ಕಾರಣವೋ ಅದೇ ವಿನಾಶಕ್ಕೂ ಕಾರಣವಾಗಬಲ್ಲದು. ದೋಷಗಳನ್ನು ಕಾಣಬಹುದಾದ ಕವಿಗಳು ಒಂದು ರೀತಿಯಿಂದ ವಿಷಯವನ್ನು ನೋಡಿದರೆ ಅದು ಸುಳಿದಾಡುವ ಗಾಳಿಯಂತೆ ತನ್ನ ದಿಕ್ಕನ್ನೇ ಬದಲಾಯಿಸಬಹುದು. ಮನುಷ್ಯನು ಮಾಡಿದ ಕೆಲಸವನ್ನು, ಅದು ಎಷ್ಟೇ ಆಲೋಚನೆ ಮಾಡಿ ಮಾಡಿದ್ದಾಗಿರಲಿ, ಉತ್ತಮ ನೀತಿಯುತವಾಗಿರಲಿ ಅಥವಾ ನ್ಯಾಯದಿಂದ ನಡೆಸಲ್ಪಟ್ಟಿರಲಿ, ಅದನ್ನು ಕೂಡ ದೈವವು ವಿರೋಧಿಸುತ್ತದೆ. ಪುರುಷ ಕರ್ಮವು ದೈವವು ಮಾಡದೇ ಇರುವ ಛಳಿ, ಬಿಸಿಲು, ಮಳೆ, ಮತ್ತು ಹಸಿವೆ-ಬಾಯಾರಿಕೆಗಳಿಂದಲೂ ನಾಶಗೊಳ್ಳುತ್ತವೆ. ಹಾಗೆಯೇ ಪುರುಷನ ಇಷ್ಟಭಾವದಿಂದ ಸ್ವಯಂಕೃತ ಬೇರೆ ಕರ್ಮಗಳಿಗೆ ವಿರೋಧವಿಲ್ಲದೇ ಇರಬಹುದು.

“ಕರ್ಮವಲ್ಲದೇ ಬೇರೆ ಯಾವುದರ ಮೇಲೂ ಲೋಕವು ನಡೆಯುವುದಿಲ್ಲ. ಇದನ್ನು ತಿಳಿದವನು ತನ್ನ ಪ್ರಯತ್ನ ಮತ್ತು ದೈವ ಇವೆರಡರ ಫಲವು ಏನೇ ಆಗಿದ್ದರೂ ಕರ್ಮದಲ್ಲಿಯೇ ಮುಂದುವರೆಯುತ್ತಾನೆ. ಇದನ್ನು ಬುದ್ಧಿಯಲ್ಲಿ ಅಳವಳಡಿಸಿಕೊಂಡವನು ಕರ್ಮದಲ್ಲಿಯೇ ನಿರತನಾಗಿರುತ್ತಾನೆ. ಸಿದ್ಧಿಯಾಗದಿದ್ದರೆ ವ್ಯಥಿತನಾಗುವುದಿಲ್ಲ. ಸಿದ್ಧಿಯಾದರೆ ಅವನಿಗೆ ಹರ್ಷವೂ ಆಗುವದಿಲ್ಲ. ಭೀಮಸೇನ! ಇದನ್ನು ಮಾತ್ರ ನಾನು ಹೇಳಲು ಬಯಸಿದೆ.  ಕುರುಗಳೊಂದಿಗೆ ಆಗುವ ಯುದ್ಧದಲ್ಲಿ ನಾವು ಸಂಪೂರ್ಣ ಜಯವೊಂದೇ ಸಿಗುತ್ತದೆ ಎಂದು ಎಣಿಸಿರಬಾರದು. ಅದೃಷ್ಟವು ಪಲ್ಲಟವಾದರೆ ಮಂಚೂಣಿಯನ್ನು ಬಿಡಬಾರದು, ಮತ್ತು ವಿಷಾದ ಅಥವಾ ಆಯಾಸಗೊಳ್ಳಬಾರದು. ಅದನ್ನೇ ನಾನು ಹೇಳುತ್ತಿದ್ದೇನೆ. ನಾಳೆ ನಾನು ಧೃತರಾಷ್ಟ್ರನ ಬಳಿ ಹೋಗಿ ನಿಮ್ಮ ಒಳಿತನ್ನು ಬಿಟ್ಟುಕೊಡದೇ ಶಾಂತಿಯನ್ನುಂಟುಮಾಡಲು ಪ್ರಯತ್ನಿಸುತ್ತೇನೆ. ಅವರು ಶಾಂತಿಯನ್ನು ಮಾಡಿಕೊಂಡರೆ ಅನಂತವಾದ ಯಶಸ್ಸು ನನ್ನ ಪಾಲಿಗಾಗುತ್ತದೆ, ನಿಮ್ಮ ಆಸೆಯೂ ಪೂರೈಸಿದಂತಾಗುತ್ತದೆ ಮತ್ತು ಅವರಿಗೂ ಉತ್ತಮ ಶ್ರೇಯಸ್ಸುಂಟಾಗುತ್ತದೆ. ಕುರುಗಳು ತಮ್ಮದೇ ಹಠ ಹಿಡಿದು ನನ್ನ ಮಾತಿಗೆ ಒಪ್ಪಿಕೊಳ್ಳದೇ ಇದ್ದರೆ ಆಗ ರೌದ್ರ ಕರ್ಮವಾದ ಯುದ್ಧವೇ ನಡೆಯುತ್ತದೆ.

“ಆ ಯುದ್ಧದಲ್ಲಿ ಭಾರವು ನಿನ್ನ ಮೇಲಿರುತ್ತದೆ, ಮಂಚೂಣಿಯು ಅರ್ಜುನನ ಕೈಯಲ್ಲಿರುತ್ತದೆ, ಮತ್ತು ಇತರರನ್ನು ನಿಮ್ಮ ಜೊತೆಗೇ ಎಳೆದುಕೊಂಡು ಹೋಗುತ್ತೀರಿ. ಆಗುವ ಯುದ್ಧದಲ್ಲಿ ನಾನೇ ಬೀಭತ್ಸುವಿನ ಸಾರಥಿಯಾಗುವೆ. ಇದು ಧನಂಜಯನ ಇಚ್ಛೆ. ಯಾಕೆಂದರೆ ನಾನು ಯುದ್ಧಮಾಡಲು ಬಯಸುವುದಿಲ್ಲ. ನಿನ್ನ ಅಭಿಪ್ರಾಯದ ಮೇಲಿನ ಶಂಕೆಯಿಂದಲೇ ನಾನು ನಿನಗೆ ‘ಶಂಡನಂತೆ ವರ್ತಿಸಬೇಡ!’ ಎಂದು ಮೂದಲಿಸಿ ನಿನ್ನ ತೇಜಸ್ಸನ್ನು ಬೆಳಗಿಸಿದೆ.”

ಕೃಷ್ಣರಾಯಭಾರಕ್ಕೆ ಅರ್ಜುನನ ಸಂದೇಶ

ಅರ್ಜುನನು ಹೇಳಿದನು: “ಜನಾರ್ದನ! ಹೇಳಬೇಕಾದುದೆಲ್ಲವನ್ನೂ ಯುಧಿಷ್ಠಿರನು ಹೇಳಿದ್ದಾನೆ. ನಿನ್ನ ಮಾತನ್ನು ಕೇಳಿ ನನಗನ್ನಿಸುತ್ತದೆ - ಪ್ರಭೋ - ಸುಲಭದಲ್ಲಿ ಶಾಂತಿಯನ್ನು ತರಬಹುದು ನಿನಗನ್ನಿಸುವುದಿಲ್ಲ – ಧೃತರಾಷ್ಟ್ರನ ಲೋಭದಿಂದಾಗಲೀ ಅಥವಾ ನಮ್ಮಲ್ಲಿ ಸಾಕಷ್ಟು ಬಲವಿಲ್ಲದೇ ಇರುವುದರಿಂದ. ಹಾಗೆಯೇ ಪುರುಷನ ಪರಾಕ್ರಮವು ಫಲವನ್ನು ನೀಡದೇ ಇರುವುದಿಲ್ಲ ಮತ್ತು ಪುರುಷ ಪ್ರಯತ್ನವಿಲ್ಲದೇ ಯಾವುದೂ ಫಲಿಸುವುದಿಲ್ಲ ಎಂದೂ ಅಭಿಪ್ರಾಯಪಡುತ್ತಿದ್ದೀಯೆ. ನೀನು ಹೇಳಿದ ಮಾತಿನಂತೆಯೇ ಆಗಬಹುದು ಆಗದೆಯೂ ಇರಬಹುದು. ಆದರೆ ಯಾವುದನ್ನೂ ಅಸಾಧ್ಯವೆಂದು ಕಾಣಬಾರದು. ಮತ್ತು ನಮ್ಮ ಈ ಕಷ್ಟಗಳೆಲ್ಲವಕ್ಕೂ ಕಾರಣ ಅವರು ಮಾಡಿದ ಪಾಪ ಎಂದು ತಿಳಿದುಕೊಂಡಿದ್ದೀಯಲ್ಲವೇ? ಆದರೆ ಅವರಿಗೆ ಇದೂವರೆಗೆ ಯಾವ ಫಲವೂ ದೊರೆತಂತಿಲ್ಲ! ಚೆನ್ನಾಗಿ ನಡೆಸಿದ ಕಾರ್ಯಕ್ಕೆ ಫಲವೊಂದಿರುತ್ತದೆಯಲ್ಲವೇ?

“ಇತರರೊಂದಿಗೆ ಶಾಂತಿಯುಂಟಾಗುವಂತೆ ವರ್ತಿಸು. ನೀನು ಸುರಾಸುರರಿಗೆ ಪ್ರಜಾಪತಿಯು ಹೇಗೋ ಹಾಗೆ ಪಾಂಡವ-ಕುರುಗಳಿಗೆ ನೀನು ಪರಮ ಮಿತ್ರ. ಕುರುಗಳಿಗೆ ಮತ್ತು ಪಾಂಡವರಿಗೆ ಒಳ್ಳೆಯದಾಗುವ ಹಾಗೆ ಮಾಡು. ಇದನ್ನು ನಡೆಸಿಕೊಡುವುದು ನಿನಗೆ ದುಷ್ಕರವಲ್ಲ ಎಂದು ತಿಳಿದಿದ್ದೇವೆ. ಈ ಕಾರ್ಯವನ್ನು ನೀನು ಅಲ್ಲಿ ಹೋಗುವುದರ ಮೂಲಕದಿಂದಲೇ ಮಾಡಿ ಮುಗಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಆ ದುರಾತ್ಮನೊಂದಿಗೆ ಯಾವ ರೀತಿಯಾದರೂ ನೀನು ಬಯಸಿದಂತೆ ನಡೆದುಕೋ. ಆಗುವುದೆಲ್ಲವೂ ನೀನು ಬಯಸಿದಂತೆಯೇ ಆಗುತ್ತದೆ. ಅವರೊಂದಿಗೆ ಶಾಂತಿ ನೆಲೆಸುತ್ತದೆಯೋ ಅಥವಾ ಇಲ್ಲವೋ ಅದು ನೀನು ಬಯಸಿದಂತೆ. ನಿನ್ನ ಇಚ್ಛೆ ಮತ್ತು ವಿಚಾರಗಳು ನಮಗೆ ದೊಡ್ಡವು. ಧರ್ಮಸುತನಲ್ಲಿರುವ ಶ್ರೀಯನ್ನು ಕಂಡು ಅಸೂಯೆಗೊಂಡ ಆ ದುಷ್ಟಾತ್ಮನು ಮಕ್ಕಳು ಬಾಂಧವರೊಂದಿಗೆ ವಧೆಗೆ ಅರ್ಹನಲ್ಲವೇ? ಧರ್ಮಿಷ್ಠವಾದ ಉಪಾಯವನ್ನು ಕಾಣದೇ ಅವನು ಅದನ್ನು ಕೆಟ್ಟ ದ್ಯೂತದಲ್ಲಿ ಪಣವಾಗಿ, ಮೋಸದ ಉಪಾಯದಿಂದ, ಅಪಹರಿಸಿದನು. ಪ್ರಾಣತ್ಯಾಗವನ್ನು ಮಾಡಬೇಕಾಗಿ ಬಂದರೂ ಕ್ಷತ್ರಿಯರಲ್ಲಿ ಹುಟ್ಟಿದ ಧನುರ್ಧರ ಪುರುಷನು ಹೇಗೆ ತಾನೇ ಯುದ್ಧಕ್ಕೆ ಹಿಂಜರಿಯಬಲ್ಲ? ನಮ್ಮನ್ನು ಅಧರ್ಮದಿಂದ ಗೆದ್ದುದನ್ನು ಮತ್ತು ವನದಲ್ಲಿ ಕಳುಹಿಸುದುದನ್ನು ನೋಡಿದಾಗಲೇ ಸುಯೋಧನನು ನನಗೆ ವಧಾರ್ಹನಾದ. ಮಿತ್ರರಿಗಾಗಿ ನೀನು ಏನು ಮಾಡಲಿಕ್ಕೆ ಹೊರಟಿರುವಿಯೋ ಅದು ಅದ್ಭುತವೇನೂ ಅಲ್ಲ. ಆದರೆ ಮುಖ್ಯ ಕಾರ್ಯವು ಹೇಗೆ ಆಗುತ್ತದೆ - ಮೃದುತ್ವದಿಂದ ಅಥವಾ ಕಲಹದಿಂದ? ಅಥವಾ ಅವರನ್ನು ಕೂಡಲೇ ವಧಿಸುವುದು ಒಳ್ಳೆಯದು ಎಂದು ನಿನಗನ್ನಿಸಿದರೆ ಅದನ್ನೇ ಮಾಡೋಣ. ಅದರಲ್ಲಿ ನೀನು ವಿಚಾರಮಾಡಬೇಡ!

“ಆ ಪಾಪಬುದ್ಧಿಯು ಹೇಗೆ ದ್ರೌಪದಿಯನ್ನು ಸಭಾಮಧ್ಯದಲ್ಲಿ ಕಾಡಿಸಿದ ಮತ್ತು ಹೇಗೆ ಇತರರು ಅದನ್ನು ಆಗಲು ಬಿಟ್ಟರು ಎನ್ನುವುದನ್ನು ನೀನು ತಿಳಿದಿದ್ದೀಯೆ. ಅಂಥಹ ಮನುಷ್ಯನು ಪಾಂಡವರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಾನೆ ಎಂದು ನನಗೆ ನಂಬಿಕೆಯಿಲ್ಲ. ಅದು ಉಪ್ಪು ನೆಲದಲ್ಲಿ ಬೀಜವನ್ನು ಬಿತ್ತಿದಂತೆ. ಆದುದರಿಂದ ಪಾಂಡವರಿಗೆ ಯಾವುದು ಒಳ್ಳೆಯದೆಂದು ತಿಳಿದಿದ್ದೀಯೋ ಅದನ್ನು ಬೇಗನೇ ಮಾಡಿ, ಮುಂದೆ ಮಾಡಬೇಕಾಗಿರುವುದನ್ನು ನಮಗೆ ಬಿಡು!”

ಭಗವಂತನು ಹೇಳಿದನು: “ಮಹಾಬಾಹೋ! ಇದು ನೀನು ಹೇಳಿದಂತೆಯೇ! ಆದರೂ ಇವೆಲ್ಲವೂ ಎರಡು ರೀತಿಯ ಕರ್ಮಗಳ ಮೇಲೆ ಅವಲಂಬಿಸಿವೆ. ರಸವತ್ತಾದ ಶುದ್ಧ ಭೂಮಿಯನ್ನು ಕೃಷಿಕನು ಸಿದ್ಧಗೊಳಿಸಬಹುದು. ಆದರೆ ಅಲ್ಲಿ ಮಳೆಯೇ ಬೀಳದಿದ್ದರೆ ಬೆಳೆಯನ್ನು ತೆಗೆಯಲು ಸೋಲುತ್ತಾನೆ. ಅಲ್ಲಿ ಪುರುಷನ ಪ್ರಯತ್ನದಿಂದ ಏರ್ಪಡಿಸಿದ ನೀರಾವರಿಯ ವ್ಯವಸ್ಥೆಯು ಬೆಳೆಯನ್ನು ತೆಗೆಯಲು ಸಾಧ್ಯಮಾಡುತ್ತದೆ ಎಂದು ಹೇಳುತ್ತಾರೆ. ಆದರೆ ಅಲ್ಲಿಯೂ ಕೂಡ ದೈವವು ಮಾಡಿಟ್ಟಂತೆ ಒಣಗಿ ಹೋಗುವುದನ್ನು ಖಂಡಿತವಾಗಿ ಕಾಣಬಹುದು. ನಮ್ಮ ಮಹಾತ್ಮ ಪೂರ್ವಜರು ತಮ್ಮ ಬುದ್ಧಿಯಿಂದ ಇದರ ಕುರಿತು ನಿಶ್ಚಯವನ್ನು ಕೊಟ್ಟಿದ್ದಾರೆ: ಲೋಕದ ಆಗುಹೋಗುಗಳು ದೈವ ಮತ್ತು ಮಾನುಷ ಕಾರಣಗಳೆರಡರ ಮೇಲೂ ನಿಂತಿದೆ. ನಾನಾದರೋ ಪುರುಷನು ಕೊನೆಯದಾಗಿ ಏನನ್ನು ಮಾಡಬಲ್ಲನೋ ಅದನ್ನು ಮಾತ್ರ ಮಾಡುತ್ತೇನೆ. ಆದರೆ ದೈವದ ಕೆಲಸವನ್ನು ಮಾಡಲು ನಾನು ಎಂದೂ ಶಕ್ಯನಿಲ್ಲ. ಆ ದುರ್ಮತಿಯಾದರೋ ಸತ್ಯ ಧರ್ಮಗಳನ್ನು ಬಿಸುಟು ನಡೆದುಕೊಳ್ಳುತ್ತಿದ್ದಾನೆ. ಆ ರೀತಿಯ ಕರ್ಮವು ಅವನನ್ನು ಸುಡುತ್ತಲೂ ಇಲ್ಲ. ಅವನ ಪಾಪಿಷ್ಠ ಬುದ್ಧಿಯನ್ನು ಅವನ ಮಂತ್ರಿಗಳಾದ ಶಕುನಿ, ಸೂತಪುತ್ರ, ಮತ್ತು ಸಹೋದರ ದುಃಶಾಸನರು ಬೆಳೆಸುತ್ತಿದ್ದಾರೆ. ಅವನು ರಾಜ್ಯವನ್ನು ಕೊಡುವುದರ ಮೂಲಕ ಶಾಂತಿಯನ್ನು ಬಯಸುವುದಿಲ್ಲ. ಅದಕ್ಕೆ ಮೊದಲು ಅನುಯಾಯಿಗಳೊಂದಿಗೆ ಸುಯೋಧನನನ್ನು ವಧಿಸಬೇಕಾಗುತ್ತದೆ. ಶರಣು ಹೋಗುವುದರ ಮೂಲಕವೂ ಧರ್ಮರಾಜನು ರಾಜ್ಯವನ್ನು ತ್ಯಜಿಸಲು ಬಯಸುವುದಿಲ್ಲ. ಆ ದುರ್ಮತಿಯು ಕೇಳುವುದರಿಂದ ರಾಜ್ಯವನ್ನು ಕೊಡುವುದಿಲ್ಲ. ಅಲ್ಲಿ ಧರ್ಮರಾಜನು ಹೇಳಿದ ಯುಧಿಷ್ಠಿರನ ಶಾಸನವನ್ನು ಹೇಳುವುದರಿಂದ ಏನಾದರೂ ಪ್ರಯೋಜನವಿದೆಯೆಂದು ನನಗನ್ನಿಸುವುದಿಲ್ಲ. ಆ ಪಾಪಿ ಕೌರವನು ಹೇಳಿದಂತೆ ಏನನ್ನೂ ಮಾಡುವವನಲ್ಲ.

“ಹಾಗೆ ಮಾಡದೇ ಇದ್ದಲ್ಲಿ ಅವನು ಲೋಕದಲ್ಲಿ ಯಾರಿಂದಲೂ ವಧಿಸಲ್ಪಡಲು ಅರ್ಹ. ಕುಮಾರರಾಗಿರುವಾಗಲೇ ನಿಮ್ಮೆಲ್ಲರನ್ನೂ ಮೋಸದಿಂದ ಕಾಡಿದ ಅವನನ್ನು ನಾನೂ, ಜಗತ್ತೂ, ಕೊಲ್ಲಬಹುದು. ಯುಧಿಷ್ಠಿರನಲ್ಲಿದ್ದ ಐಶ್ವರ್ಯವನ್ನು ನೋಡಿದ ನಂತರ ಶಾಂತಿಯನ್ನು ಕಾಣದ ಆ ದುರಾತ್ಮ ಪಾಪಿಯು ನಿಮ್ಮಿಂದ ರಾಜ್ಯವನ್ನು ಮೋಸದಿಂದ ಅಪಹರಿಸಿದನು. ನನ್ನ ಮತ್ತು ನಿಮ್ಮ ನಡುವೆ ಭೇದವನ್ನು ತರಲು ಅವನು ಬಹುಬಾರಿ ಪ್ರಯತ್ನಿಸಿದ್ದಾನೆ. ಆದರೆ ನಾನು ಅವನ ಪಾಪ ಬುದ್ಧಿಯನ್ನು ಸ್ವೀಕರಿಸಲಿಲ್ಲ. ಅವನ ಪರಮ ಮತವೇನೆಂದು ಮತ್ತು ನಾನು ಧರ್ಮರಾಜನಿಗೆ ಪ್ರಿಯವಾದುದನ್ನು ಮಾಡಲು ಹೊರಟಿರುವೆನೆಂದು ನಿನಗೆ ತಿಳಿದಿದೆ. ಅವನ ಮತ್ತು ನನ್ನ ಪರಮ ಮತವನ್ನೂ ತಿಳಿದಿದ್ದೀಯೆ. ಆದರೂ ಏನನ್ನೂ ತಿಳಿದಿಲ್ಲದವನಂತೆ ನಮ್ಮನ್ನು ಶಂಕಿಸುತ್ತಿದ್ದೀಯೆ. ಪರಮ ದೈವವು ಏನನ್ನು ನಿರ್ಧರಿಸಿದೆಯೋ ಅದೂ ನಿನಗೆ ತಿಳಿದಿದೆ. ಹೀಗಿರುವಾಗ ಅವರೊಂದಿಗೆ ಶಾಂತಿಯು ಹೇಗಾಗುತ್ತದೆ? ಮಾತು ಮತ್ತು ಕರ್ಮಗಳಿಂದ ಏನೆಲ್ಲ ಮಾಡಲಿಕ್ಕೆ ಸಾಧ್ಯವಿದೆಯೋ ಅವೆಲ್ಲವನ್ನೂ ಮಾಡುತ್ತೇನೆ. ಆದರೆ ಅವರೊಂದಿಗೆ ಶಾಂತಿಯಾಗುತ್ತದೆ ಎಂದು ನನಗನ್ನಿಸುವುದಿಲ್ಲ. ಕಳೆದ ವರ್ಷ ಗೋಹರಣದ ಸಮಯದಲ್ಲಿ ಭೀಷ್ಮನು ಕೇಳಿಕೊಂಡರೂ ಅವನು ಶಾಂತಿಯನ್ನು ನೀಡಿದನೇ? ಅದೇ ದಿವಸ ನೀನು ಸಂಕಲ್ಪಿಸಿದಂತೆ ಅವರನ್ನು ಪರಾಜಯಗೊಳಿಸಿದೆ. ಸುಯೋಧನನು ಸ್ವಲ್ಪವನ್ನೂ ಸ್ವಲ್ಪಸಮಯಕ್ಕಾಗಿಯೂ ಕೊಡಲು ಬಯಸುವುದಿಲ್ಲ. ಹೇಗಿದ್ದರೂ ನಾನು ಧರ್ಮರಾಜನ ಶಾಸನವನ್ನು ಕಾರ್ಯಗತಗೊಳಿಸಬೇಕು. ಆ ದುರಾತ್ಮನ ಪಾಪ ಕರ್ಮಗಳನ್ನು ಇನ್ನೊಮ್ಮೆ ಮನಸ್ಸಿಗೆ ತೆಗೆದುಕೊಳ್ಳಬಾರದು!”

ಕೃಷ್ಣ ರಾಯಭಾರಕ್ಕೆ ನಕುಲನ ಸಂದೇಶ

ನಕುಲನು ಹೇಳಿದನು: “ಮಾಧವ! ಧರ್ಮರಾಜನು ಬಹುವಿಧದಲ್ಲಿ ಮಾತುಗಳನ್ನಾಡಿದ್ದಾನೆ. ಧರ್ಮಜ್ಞನ ಈ ಮಾತುಗಳು ಧರ್ಮಯುಕ್ತವಾಗಿಯೂ ತತ್ತ್ವಯುಕ್ತವಾಗಿಯೂ ಇವೆ. ರಾಜನ ಮತವನ್ನು ತಿಳಿದ ಭೀಮಸೇನನು ಶಮ ಮತ್ತು ಬಾಹುವೀರ್ಯ ಎರಡರ ಕುರಿತೂ ಮಾತನಾಡಿದ್ದಾನೆ. ಹಾಗೆಯೇ ಫಲ್ಗುನನು ಏನು ಹೇಳಬೇಕೆಂದಿದ್ದನೋ ಅದನ್ನೂ ಕೂಡ ನೀನು ಕೇಳಿದ್ದೀಯೆ. ನಿನ್ನ ಸ್ವಂತ ಮತವನ್ನು ಕೂಡ ನೀನು ಪುನಃ ಪುನಃ ಹೇಳಿದ್ದೀಯೆ. ಈಗ ನೀನು ಕೇಳಿದ ಎಲ್ಲವನ್ನೂ ಬದಿಗೊತ್ತಿ, ಬಂದೊದಗಿರುವ ಈ ಸಮಯದಲ್ಲಿ ಏನನ್ನು ಮಾಡಬೇಕೆಂದು ನಿನಗನ್ನಿಸುತ್ತದೆಯೋ ಅದನ್ನು ಮಾಡು. ಪ್ರತಿಯೊಂದಕ್ಕೂ ಅಭಿಪ್ರಾಯಗಳು ಇರುತ್ತವೆ. ಆದರೆ ಬಂದಿರುವ ಕಾಲವನ್ನು ನೋಡಿ ಮನುಷ್ಯನು ಸ್ವತಃ ಕಾರ್ಯವನ್ನು ನಿರ್ಧರಿಸಬೇಕು. ವಿಷಯವನ್ನು ಒಂದು ರೀತಿಯಲ್ಲಿ ಯೋಚಿಸಿದರೆ ಅದು ಬೇರೆಯೇ ರೀತಿಯಲ್ಲಿ ನಡೆಯಬಹುದು. ಈ ಲೋಕದಲ್ಲಿ ಜನರ ಅಭಿಪ್ರಾಯಗಳು ಬದಲಾಗುತ್ತಿರುತ್ತವೆ. ನಾವು ವನವಾಸದಲ್ಲಿರುವಾಗ ನಮ್ಮಲ್ಲಿ ಒಂದು ರೀತಿಯ ಯೋಚನೆಯಿತ್ತು, ಅಜ್ಞಾತವಾಸದಲ್ಲಿರುವಾಗ ಬೇರೆ ಯೋಚನೆಯಿತ್ತು, ಮತ್ತು ಈಗ ಪುನಃ ಎಲ್ಲರಿಗೂ ಕಾಣಿಸುವಂತಿರುವಾಗ ಬೇರೆಯೇ ಯೋಚನೆಯಿದೆ. ಅಂದು ವನದಲ್ಲಿ ಅಲೆಯುತ್ತಿರುವಾಗ ನಮಗೆ ರಾಜ್ಯದ ಕುರಿತು, ಈಗ ಇರುವಷ್ಟು ಆಸೆಯಿರಲಿಲ್ಲ. ವನವಾಸದಿಂದ ಹಿಂದಿರುಗಿದ್ದಾರೆ ಎಂದು ಕೇಳಿದ ನಿನ್ನ ಪ್ರಸಾದದಿಂದಲೇ ಈ ಏಳು ಅಕ್ಷೌಹಿಣಿಗಳು ಬಂದು ಸೇರಿವೆ. ಯೋಚಿಸಲೂ ಅಸಾಧ್ಯವಾದ ಬಲಪೌರುಷಗಳುಳ್ಳ, ಶಸ್ತ್ರಗಳನ್ನು ಹಿಡಿಯುವ ಈ ಪುರುಷವ್ಯಾಘ್ರರನ್ನು ಕಂಡು ರಣದಲ್ಲಿ ಯಾವ ಪುರುಷನು ವ್ಯಥೆಗೊಳ್ಳುವುದಿಲ್ಲ? ಕುರುಮಧ್ಯದಲ್ಲಿ ನೀನು ಮಂದಬುದ್ಧಿ ಸುಯೋಧನನು ವ್ಯಥಿತನಾಗದಂತೆ ಸಾಂತ್ವಪೂರ್ವಕನಾಗಿ ಭಯಾನ್ವಿತನಾಗಿ ಮಾತನಾಡಬೇಕು. ರಕ್ತಮಾಂಸಗಳಿಂದ ಕೂಡಿದ ಯಾವ ಮನುಷ್ಯನು ತಾನೇ ಯುದ್ಧದಲ್ಲಿ ಇವರ ಯದುರಾಳಿಯಾಗಿ ಹೋರಾಡುತ್ತಾನೆ? - ಯುಧಿಷ್ಠಿರ, ಭೀಮಸೇನ, ಅಪರಾಜಿತ ಬೀಭತ್ಸು, ಸಹದೇವ, ನಾನು, ನೀನು, ರಾಮ, ಸಾತ್ಯಕಿ, ಮಕ್ಕಳೊಂದಿಗೆ ಮಹಾವೀರ್ಯ ವಿರಾಟ, ಅಮಾತ್ಯ-ದೃಷ್ಟದ್ಯುಮ್ನನೊಂದಿಗೆ ಪಾರ್ಷತ ದ್ರುಪದ, ವಿಕ್ರಾಂತ ಕಾಶಿರಾಜ ಮತ್ತು ಚೇದಿಪತಿ ಧೃಷ್ಟಕೇತು.

“ಕೇವಲ ಹೋಗುವುದರಿಂದಲೇ ನೀನು ಧರ್ಮರಾಜನ ಇಷ್ಟವನ್ನು ಒಳಿತನ್ನು ಸಾಧಿಸುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ನೀನು ಹೇಳಹೊರಟಿರುವುದು ಶ್ರೇಯಸ್ಕರವಾದುದು ಎನ್ನುವುದನ್ನು ವಿದುರ, ಭೀಷ್ಮ, ದ್ರೋಣ ಮತ್ತು ಬಾಹ್ಲೀಕರು ಅರ್ಥಮಾಡಿಕೊಳ್ಳಲು ಸಮರ್ಥರು. ಅವರೇ ಜನಾಧಿಪ ಧೃತರಾಷ್ಟ್ರನನ್ನು, ಅಮಾತ್ಯರೂ ಕೂಡಿ ಪಾಪಿ ಸುಯೋಧನನನ್ನು ದಾರಿಗೆ ತರುತ್ತಾರೆ. ಉರುಳಿಕೊಂಡು ಬರುತ್ತಿರುವ ಏನನ್ನು ತಾನೇ ಅರ್ಥವತ್ತಾಗಿ ಹೇಳುವ ನೀನು ಮತ್ತು ಕೇಳಿ ಅರ್ಥೈಸಿಕೊಳ್ಳುವ ವಿದುರ ಇಬ್ಬರಿಗೂ ತಡೆದು ನಿಲ್ಲಿಸಲಿಕ್ಕಾಗುವುದಿಲ್ಲ?”

ಕೃಷ್ಣನ ರಾಯಭಾರಕ್ಕೆ ಸಹದೇವ-ಸಾತ್ಯಕಿಯರ ಸಂದೇಶ

ಸಹದೇವನು ಹೇಳಿದನು: “ಅರಿಂದಮ! ರಾಜನು ಏನು ಹೇಳಿದನೋ ಅದು ಸನಾತನ ಧರ್ಮ. ಹಾಗಿದ್ದರೂ ಯುದ್ಧವೇ ನಡೆಯುವ ಹಾಗೆ ಮಾಡು! ಒಂದು ವೇಳೆ ಕುರುಗಳು ಪಾಂಡವರೊಂದಿಗೆ ಶಾಂತಿಯನ್ನು ಇಚ್ಛಿಸಿದರೂ ಕೂಡ ನೀನು ಅವರೊಂದಿಗೆ ಯುದ್ಧವೇ ನಡೆಯುವಂತೆ ಮಾಡಬೇಕು. ಸುಯೋಧನನ ವಧೆಯಾಗದೇ ಪಾಂಚಾಲಿಯನ್ನು ಸಭೆಗೆ ಎಳೆತಂದು ಕಾಡಿಸಿದುದನ್ನು ನೋಡಿದ ನನ್ನ ಈ ಸಿಟ್ಟು ಹೇಗೆ ಶಾಂತಗೊಳ್ಳುತ್ತದೆ? ಒಂದು ವೇಳೆ ಭೀಮಾರ್ಜುನರಿಬ್ಬರೂ ಮತ್ತು ಧರ್ಮರಾಜನೂ ಧಾರ್ಮಿಕರಾಗಿದ್ದರೆ, ನಾನು ಧರ್ಮವನ್ನು ತೊರೆದು ಯುದ್ಧದಲ್ಲಿ ಅವರೊಂದಿಗೆ ಹೋರಾಡಲು ಬಯಸುತ್ತೇನೆ.”

ಸಾತ್ಯಕಿಯು ಹೇಳಿದನು: “ಮಹಾಬಾಹೋ! ಮಹಾಮತಿ ಸಹದೇವನು ಸತ್ಯವನ್ನೇ ನುಡಿದಿದ್ದಾನೆ. ದುರ್ಯೋದನನ ವಧೆಯಿಂದ ಮಾತ್ರ ಅವನ ಮೇಲೆ ನನಗಿರುವ ಕೋಪವು ಶಾಂತವಾಗುವುದು. ವನದಲ್ಲಿ ಚೀರಜಿನಗಳನ್ನು ಧರಿಸಿ ದುಃಖಿತರಾಗಿದ್ದ ಪಾಂಡವರನ್ನು ನೋಡಿ ನಿನಗೂ ಕೂಡ ಕೋಪವುಂಟಾಗಿತ್ತು ಎಂದು ನನಗೆ ತಿಳಿದಿದೆ. ಆದುದರಿಂದ ಈ ಶೂರ ಪುರುಷರ್ಷಭ ಮಾದ್ರೀಸುತನು ಯಾವ ಮಾತನ್ನು ಹೇಳಿದನೋ ಅದೇ ಸರ್ವಯೋಧರ ಮತ!”

ಮಹಾಮತಿ ಯುಯುಧಾನನು ಹೀಗೆ ಮಾತನ್ನಾಡಲು ಅಲ್ಲಿ ಎಲ್ಲ ಯೋಧರಿಂದ ಭಯಂಕರ ಸಿಂಹನಾದವು ಮೊಳಗಿತು. ಎಲ್ಲಾ ಕಡೆಯಿಂದ ಎಲ್ಲರೂ ಆ ವೀರನ ಮಾತನ್ನು ಗೌರವಿಸಿ “ಸಾಧು! ಸಾಧು!” ಎಂದು ಕೂಗುತ್ತಾ ಶೈನಿಯನ್ನು ಹರ್ಷಗೊಳಿಸಿದರು.

ಕೃಷ್ಣ ರಾಯಭಾರಕ್ಕೆ ದ್ರೌಪದಿಯ ಸಂದೇಶ

ಧರ್ಮಾರ್ಥಸಹಿತವೂ ಹಿತವೂ ಆದ ರಾಜನ ಮಾತುಗಳನ್ನು ಕೇಳಿ ಶೋಕಕರ್ಶಿತಳಾಗಿ ಕುಳಿತುಕೊಂಡಿದ್ದ ಕೃಷ್ಣೆಯು ದಾಶಾರ್ಹನಿಗೆ ಹೇಳಿದಳು. ಕಪ್ಪು ನೀಳ ಕೂದಲಿನ ಆ ದೃಪದರಾಜನ ಮಗಳು ಮನಸ್ವಿನಿಯು ಮಹಾರಥಿ ಸಹದೇವ ಮತ್ತು ಸಾತ್ಯಕಿಯರನ್ನು ಹೊಗಳುತ್ತಾ, ಭೀಮಸೇನನೂ ಕೂಡ ಶಾಂತಿಯ ಪರವಾಗಿದ್ದುದನ್ನು ನೋಡಿ ಪರಮ ದುಃಖಿತಳಾಗಿ ಕಣ್ಣಿನಲ್ಲಿ ಕಣ್ಣೀರನ್ನು ತುಂಬಿಸಿ ಈ ಮಾತುಗಳನ್ನಾಡಿದಳು: “ಮಹಾಬಾಹೋ! ಜನಾರ್ದನ! ಹೇಗೆ ಧೃತರಾಷ್ಟ್ರನ ಮಕ್ಕಳು ಅವರ ಅಮಾತ್ಯರಿಂದೊಡಗೂಡಿ ಮೋಸದಿಂದ ಪಾಂಡವರನ್ನು ಸುಖದಿಂದ ಪಲ್ಲಟಗೊಳಿಸಿದರೆಂದು ನಿನಗೆ ತಿಳಿದಿದೆ. ಮತ್ತು ರಾಜನು ಸಂಜಯನಿಗೆ ರಹಸ್ಯದಲ್ಲಿ ಏನನ್ನು ಹೇಳಿ ಕಳುಹಿಸಿದನೆನ್ನುವುದನ್ನೂ ನೀನು ಕೇಳಿದ್ದೀಯೆ. ಯುಧಿಷ್ಠಿರನು ಸಂಜಯನಿಗೆ ಏನನ್ನು ಹೇಳಿದನೆನ್ನುವುದೆಲ್ಲವನ್ನೂ ನೀನು ಕೇಳಿದ್ದೀಯೆ, ತಿಳಿದಿದ್ದೀಯೆ. ‘ತಂದೇ! ಐದು ಗ್ರಾಮಗಳನ್ನಾದರೂ ನಮಗೆ ಕೊಡಬೇಕು - ಕುಶಸ್ಥಲ, ವೃಕಸ್ಥಲ, ಆಸಂದೀ, ವಾರಣಾವತ, ಮತ್ತು ಐದನೆಯ ಮತ್ತು ಕೊನೆಯದಾಗಿ ಯಾವುದಾದರೂ ನಿನಗಿಷ್ಟವಾದುದು’ ಎಂದು ದುರ್ಯೋಧನನಿಗೂ ಅವನ ಸ್ನೇಹಿತರಿಗೂ ಹೇಳಿದ್ದನು, ಮಾನವಂತ ಯುಧಿಷ್ಠಿರನು ಸಂಧಿಯನ್ನು ಬಯಸಿದರೂ ಸುಯೋಧನನು ಆ ಮಾತನ್ನು ಕೇಳಿಯೂ ಏನನ್ನೂ ಮಾಡಲಿಲ್ಲ. ಒಂದು ವೇಳೆ ಸುಯೋಧನನು ರಾಜ್ಯವನ್ನು ಕೊಡದೇ ಸಂಧಿಯನ್ನು ಬಯಸಿದರೆ ಅಲ್ಲಿಗೆ ಹೋಗುವ ಕೆಲಸವು ಎಂದೂ ಪ್ರಯೋಜನಕಾರಿಯಾಗುವುದಿಲ್ಲ. ಸೃಂಜಯರೊಂದಿಗೆ ಪಾಂಡವರು ಧಾರ್ತರಾಷ್ಟ್ರನ ಘೋರ ಕೃದ್ಧ ಸೇನೆಯನ್ನು ಎದುರಿಸಲು ಶಕ್ಯರಿದ್ದಾರೆ. ಅವರೊಂದಿಗೆ ಸಾಮ ಮತ್ತು ದಾನಗಳ ಮೂಲಕ ಏನನ್ನು ಸಾಧಿಸಲೂ ಸಾಧ್ಯವಿಲ್ಲದಾಗ, ಅಂಥವರಿಗೆ ನಿನ್ನ ಕೃಪೆಯನ್ನು ತೋರಿಸುವ ಕರ್ತವ್ಯವನ್ನು ಮಾಡಬಾರದು. ಜೀವವನ್ನು ರಕ್ಷಿಸಿಕೊಳ್ಳಬೇಕಾದರೆ ಸಾಮ ಅಥವಾ ದಾನಗಳಿಂದ ಶಾಂತಗೊಳ್ಳದ ಶತ್ರುಗಳಿಗೆ ದಂಡವನ್ನು ತೋರಿಸಬೇಕು. ಆದುದರಿಂದ ಅವರ ಮೇಲೆ ಬೇಗನೇ ಸೃಂಜಯ ಪಾಂಡವರೊಡನೆ ನೀನು ಮಹಾದಂಡವನ್ನು ಎಸೆ!

“ಹೀಗೆ ಮಾಡುವುದರಿಂದ ಪಾರ್ಥರನ್ನು ಸಮರ್ಥಿಸಿದಂತಾಗುತ್ತದೆ, ನಿನಗೆ ಯಶಸ್ಸುಂಟಾಗುತ್ತದೆ, ಮತ್ತು ಕ್ಷತ್ರಿಯರಿಗೆ ಸುಖವಾಗುತ್ತದೆ. ಸ್ವಧರ್ಮವನ್ನು ಪಾಲಿಸುವ ಕ್ಷತ್ರಿಯನು ಲೋಭಿಯಾಗಿರುವ ಇನ್ನೊಬ್ಬ ಕ್ಷತ್ರಿಯನನ್ನು ಅಥವಾ ಎಲ್ಲ ಪಾಪಗಳಲ್ಲಿಯೂ ನಿರತನಾಗಿರುವ ಬ್ರಾಹ್ಮಣನನ್ನು ಬಿಟ್ಟು ಕ್ಷತ್ರಿಯರಲ್ಲದ ಇತರರನ್ನೂ ಕೊಲ್ಲಬೇಕು. ಬ್ರಾಹ್ಮಣನು ಸರ್ವವರ್ಣದವರಲ್ಲಿ ಹಿರಿಯ ಮತ್ತು ಉತ್ತಮ ಫಲವನ್ನು ಅನುಭವಿಸುವವನು. ಅವಧ್ಯನಾಗಿರುವವನನ್ನು ಕೊಲ್ಲುವುದು ಹೇಗೆ ದೋಷವೆನಿಸುತ್ತದೆಯೋ ಹಾಗೆಯೇ ವಧೆಗೆ ಅರ್ಹರಾದವರನ್ನು ವಧಿಸದೇ ಇರುವುದೂ ದೋಷವೆಂದು ಧರ್ಮವಿದರು ತಿಳಿದುಕೊಂಡಿದ್ದಾರೆ. ಈ ದೋಷವು ಸೈನಿಕರೊಂದಿಗೆ ಪಾಂಡವ- ಸೃಂಜಯರಿಗೆ ತಾಗದಂತೆ ಮಾಡು.

“ಆದಷ್ಟು ಬಾರಿ ಇದನ್ನು ಹೇಳಿದ್ದಾಗಿದೆ! ಆದರೂ ವಿಶ್ವಾಸವಿಟ್ಟು ಕೇಳುತ್ತಿದ್ದೇನೆ - ಕೇಶವ! ನನ್ನಂಥಹ ಸ್ತ್ರೀಯು ಭೂಮಿಯಲ್ಲಿದ್ದಾಳೆಯೇ? ದ್ರುಪದರಾಜನ ಮಗಳು, ವೇದಿಮಧ್ಯದಿಂದ ಎದ್ದುಬಂದವಳು, ಧೃಷ್ಟದ್ಯುಮ್ನನ ತಂಗಿ, ಕೃಷ್ಣ! ನಿನ್ನ ಪ್ರಿಯ ಸಖೀ, ಅಜಮೀಢಕುಲಕ್ಕೆ ಬಂದ ಮಹಾತ್ಮ ಪಾಂಡುವಿನ ಸೊಸೆ, ಇಂದ್ರಸಮಾನ ವರ್ಚಸರಾದ ಐವರು ಪಾಂಡುಪುತ್ರರ ರಾಣಿ, ಈ ಐವರು ವೀರರಿಂದ ಹುಟ್ಟಿದ ಐವರು ಮಹಾರಥಿಗಳು ನನ್ನ ಮಕ್ಕಳು, ಧರ್ಮದಂತೆ ನಿನಗೆ ಅಭಿಮನ್ಯುವಿನಂತಿರುವವರು. ಅಂಥಹ ನನ್ನನ್ನು, ಪಾಂಡುಪುತ್ರರು ನೋಡುತ್ತಿದ್ದಂತೆ ಮತ್ತು ನೀನು ಜೀವಿತವಾಗಿರುವಾಗಲೇ, ಕೂದಲನ್ನು ಹಿಡಿದೆಳೆದು ಸಭೆಗೆ ತಂದು ಅಪಮಾನಿಸಲಾಯಿತು. ಕೌರವರು, ಪಾಂಚಾಲರು ಮತ್ತು ವೃಷ್ಣಿಯರು ಜೀವಿತರಾಗಿರುವಾಗಲೇ ನನ್ನನ್ನು ಸಭಾಮಧ್ಯದಲ್ಲಿ ನಿಲ್ಲಿಸಿ ಪಾಪಿಗಳ ದಾಸಿಯನ್ನಾಗಿ ಮಾಡಿದರು. ಪಾಂಡವರು ಏನನ್ನೂ ಮಾಡದೇ, ಸಿಟ್ಟನ್ನೂ ಪ್ರಕಟಗೊಳಿಸದೇ ಸುಮ್ಮನೇ ಅದನ್ನು ನೋಡಿದರು. ಕಾಪಾಡು ಗೋವಿಂದ! ಎಂದು ನಾನು ನಿನ್ನನ್ನೇ ಮನಸ್ಸಿನಲ್ಲಿ ಬೇಡಿಕೊಂಡೆ. ಭಗವಾನ್ ರಾಜಾ ಮಾವನು ಯಾವಾಗ ನನಗೆ ‘ಪಾಂಚಾಲೀ! ವರವನ್ನು ಕೇಳಿಕೋ! ನೀನು ವರಕ್ಕೆ ಅರ್ಹಳಾಗಿರುವೆ ಎಂದು ನನಗನ್ನಿಸುತ್ತಿದೆ’ ಎಂಬ ಮಾತನ್ನು ಹೇಳಿದನೋ ಆಗ ಪಾಂಡವರು ಅದಾಸರಾಗಲಿ ಮತ್ತು ರಥ-ಆಯುಧಗಳನ್ನು ಹೊಂದಲಿ ಎಂದು ನಾನು ಕೇಳಿಕೊಂಡಾಗ ಅವರು ನಿರ್ಮುಕ್ತರಾದರು ವನವಾಸಕ್ಕೆ. ಈ ವಿಧದ ದುಃಖಗಳನ್ನು ನೀನು ತಿಳಿದಿದ್ದೀಯೆ. ಗಂಡಂದಿರು ಮತ್ತು ಜ್ಞಾತಿಬಾಂಧವರೊಂದಿಗೆ ನನ್ನನ್ನು ಕಾಪಾಡು! ಕೃಷ್ಣ! ಧರ್ಮದಂತೆ ನಾನು ಭೀಷ್ಮ ಮತ್ತು ಧೃತರಾಷ್ಟ್ರ ಇಬ್ಬರ ಸೊಸೆಯೂ ಅಲ್ಲವೇ? ಆದರೂ ನನ್ನನ್ನು ದಾಸಿಯನ್ನಾಗಿ ಮಾಡಿದರು.

“ಇನ್ನು ಒಂದು ಕ್ಷಣವೂ ದುರ್ಯೋಧನನು ಜೀವಂತವಿದ್ದಾನೆ ಎಂದಾದರೆ ಭೀಮಸೇನನ ಬಲಕ್ಕೆ ಧಿಕ್ಕಾರ! ಪಾರ್ಥನ ಬಿಲ್ಗಾರಿಕೆಗೆ ಧಿಕ್ಕಾರ! ಕೃಷ್ಣ! ನಿನಗೆ ನನ್ನ ಮೇಲೆ ಅನುಗ್ರಹವಿದೆಯೆಂದಾದರೆ, ನನ್ನ ಮೇಲೆ ಕೃಪೆಯಿದೆ ಎಂದಾದರೆ ನಿನ್ನ ಎಲ್ಲ ಕೋಪವನ್ನೂ ಧಾರ್ತರಾಷ್ಟ್ರರ ಮೇಲೆ ತಿರುಗಿಸು!”

ಹೀಗೆ ಹೇಳಿ ಆ ಕಪ್ಪು ಕಣ್ಣಿನ, ಪದ್ಮಾಕ್ಷೀ ವರಾರೋಹೆಯು, ತನ್ನ ಎಡಗೈಯಿಂದ ಮೃದುವಾದ, ತುದಿಯಲ್ಲಿ ಗುಂಗುರಾಗಿದ್ದ, ನೋಡಲು ಸುಂದರವಾಗಿದ್ದ, ಕಪ್ಪಾಗಿದ್ದ, ಪುಣ್ಯಗಂಧವನ್ನು ಸೂಸುತ್ತಿದ್ದ, ಸರ್ವಲಕ್ಷಣ ಸಂಪನ್ನವಾದ, ಮಹಾಸರ್ಪದಂತೆ ತೋರುತ್ತಿದ್ದ ತಲೆಗೂದಲನ್ನು ಎತ್ತಿಕೊಂಡು ಪುಂಡರೀಕಾಕ್ಷನಲ್ಲಿಗೆ ಆನೆಯಂತೆ ನಡೆದುಬಂದು, ಕಣ್ಣುಗಳಲ್ಲಿ ಕಣ್ಣೀರನ್ನು ತುಂಬಿಸಿಕೊಂಡು, ಕೃಷ್ಣೆಯು ಕೃಷ್ಣನಿಗೆ ಹೇಳಿದಳು. “ಪುಂಡರೀಕಾಕ್ಷ! ಇದನ್ನೇ ಆ ದುಃಶಾಸನನು ಕೈಯಿಕ್ಕಿ ಎಳೆದುದು! ಅವರೊಂದಿಗೆ ಸಂಧಿಯನ್ನು ಬಯಸುವಾಗ ಸರ್ವಕಾಲಗಳಲ್ಲಿ ಇದನ್ನು ನೆನಪಿಸಿಕೊಳ್ಳುತ್ತಿರು! ಒಂದು ವೇಳೆ ಭೀಮಾರ್ಜುನರು ಕೃಪಣರಾಗಿ ಸಂಧಿಯನ್ನು ಬಯಸಿದರೆ, ನನ್ನ ಈ ವೃದ್ಧ ತಂದೆಯು ಮಹಾರಥಿ ಮಕ್ಕಳನ್ನೊಡಗೂಡಿ ಹೋರಾಡುತ್ತಾನೆ! ಅಭಿಮನ್ಯುವನ್ನು ಮುಂದಿಟ್ಟುಕೊಂಡು ನನ್ನ ಐವರು ಮಹಾವೀರ ಪುತ್ರರು ಕುರುಗಳೊಂದಿಗೆ ಯುದ್ಧ ಮಾಡುತ್ತಾರೆ. ಯಾವಾಗ ದುಃಶಾಸನನ ಆ ಕಪ್ಪು ಭುಜಗಳನ್ನು ಕತ್ತರಿಸಿ ಧೂಳು ಮುಕ್ಕುವುದನ್ನು ನೋಡುತ್ತೇನೋ ಅಲ್ಲಿಯವರೆಗೆ ನನ್ನ ಹೃದಯಕ್ಕೆ ಶಾಂತಿಯೆಲ್ಲಿದೆ? ಉರಿಯುತ್ತಿರುವ ಬೆಂಕಿಯಂತಿದ್ದ ಈ ಕೋಪವನ್ನು ಹೃದಯಲ್ಲಿಟ್ಟುಕೊಂಡು ಕಾಯುತ್ತಾ ಹದಿಮೂರು ವರ್ಷಗಳು ಕಳೆದುಹೋದವು. ಇಂದು ಧರ್ಮವನ್ನು ಮಾತ್ರ ಕಾಣುವ ಆ ಮಹಾಬಾಹು ಭೀಮನ ವಾಕ್ಯದ ಮುಳ್ಳಿನಿಂದ ಪೀಡಿತನಾದ ನನ್ನ ಹೃದಯವು ಒಡೆಯುತ್ತಿದೆ.”

ಆ ಆಯತಲೋಚನೆ ಕೃಷ್ಣೆಯು ಕಣ್ಣೀರಿನಿಂದ ಕಟ್ಟಿದ ಕಂಠದಲ್ಲಿ ಹೀಗೆ ಹೇಳಿ ನಡುಗುತ್ತಾ ಗದ್ಗದ ಕಂಠದಲ್ಲಿ ಜೋರಾಗಿ ಅತ್ತಳು. ಅವಳ ಮೇಲುಬ್ಬಿದ ಮೊಲೆಗಳು ಕಣ್ಣೀರಿನಿಂದ ಒದ್ದೆಯಾದವು. ಆ ಶ್ರೋಣಿಯು ನೀರಾದ ಬೆಂಕಿಯಂತಿರುವ ಕಣ್ಣೀರನ್ನು ಒಂದೇ ಸಮನೆ ಸುರಿಸಿದಳು. ಮಹಾಬಾಹು ಕೇಶವನು ಅವಳನ್ನು ಸಂತವಿಸುತ್ತಾ ಹೇಳಿದನು: “ಕೃಷ್ಣೇ! ಬೇಗನೇ ನೀನು ಭರತಸ್ತ್ರೀಯರು ರೋದಿಸುವುದನ್ನು ನೋಡುವಿಯಂತೆ. ಅವರೂ ಕೂಡ ಹೀಗೆಯೇ ಜ್ಞಾತಿಬಾಂಧವರನ್ನು ಕಳೆದುಕೊಂಡು ರೋದಿಸುವರು. ಯಾರಮೇಲೆ ನೀನು ಸಿಟ್ಟಾಗಿದ್ದೀಯೋ ಅವರ ಮಿತ್ರರು ಮತ್ತು ಸೇನೆಯು ಈಗಾಗಲೇ ಹತರಾಗಿಬಿಟ್ಟಿದ್ದಾರೆ. ನಾನು, ಭೀಮಾರ್ಜುನರು ಮತ್ತು ಯಮಳರು ಯುಧಿಷ್ಠಿರನ ಮಾತಿನಂತೆ ಮಾಡುತ್ತೇವೆ. ದೈವವು ವಿಧಿನಿರ್ಮಿತ ಕೆಲಸವನ್ನು ಮಾಡುತ್ತದೆ. ಕಾಲದಲ್ಲಿ ಬೆಂದುಹೋಗಿರುವ ಧಾರ್ತರಾಷ್ಟ್ರರು ನನ್ನ ಮಾತುಗಳನ್ನು ಕೇಳದೇ ಇದ್ದರೆ ಅವರು ಹತರಾಗಿ ಭೂಮಿಯ ಮೇಲೆ ನಾಯಿ-ನರಿಗಳಿಗೆ ಆಹಾರವಾಗಿ ಬೀಳುತ್ತಾರೆ. ಹಿಮವತ್ ಪರ್ವತವು ಚಲಿಸಬಹುದು, ಭೂಮಿಯು ಚೂರಾಗಬಹುದು, ನಕ್ಷತ್ರಗಳೊಂದಿಗೆ ಆಕಾಶವು ಬೀಳಬಹುದು, ಆದರೆ ನನ್ನ ಮಾತು ಹುಸಿಯಾಗುವುದಿಲ್ಲ! ಕೃಷ್ಣೇ! ನಿನಗೆ ಸತ್ಯವನ್ನು ತಿಳಿಸುತ್ತಿದ್ದೇನೆ. ಕಣ್ಣೀರು ಸುರಿಸುವುದನ್ನು ನಿಲ್ಲಿಸು! ಬೇಗನೇ ನಿನ್ನ ಪತಿಯಂದಿರು ಶತ್ರುಗಳನ್ನು ಸಂಹರಿಸಿ ಶ್ರೀಯನ್ನು ಹೊಂದುತ್ತಾರೆ.”

ಅರ್ಜುನನು ಹೇಳಿದನು: “ಇಂದು ಕುರುಗಳೆಲ್ಲರ ಅನುತ್ತಮ ಗೆಳೆಯನು ನೀನೇ. ನೀನು ಯಾವಾಗಲೂ ಎರಡೂ ಪಕ್ಷಗಳ ಪ್ರೀತಿಯ ಸಂಬಂಧಿಯಾಗಿದ್ದೀಯೆ. ಪಾಂಡವರು ಮತ್ತು ಧಾರ್ತರಾಷ್ಟ್ರರ ಕುಶಲವನ್ನು ಪ್ರತಿಪಾದಿಸಬೇಕು. ಕೇಶವ! ಇಬ್ಬರನ್ನೂ ಪ್ರಶಾಂತಗೊಳಿಸಲು ನೀನೇ ಸಮರ್ಥನಾಗಿದ್ದೀಯೆ. ಈಗ ನೀನು ಅಮರ್ಷಣ ಸುಯೋಧನನಲ್ಲಿಗೆ ಶಾಂತಿಗಾಗಿ ಹೋಗಿ ಭಾರತರಿಗೆ ಏನು ಹೇಳಬೇಕೋ ಅದನ್ನು ಹೇಳು. ಮಂಗಳವೂ, ಅನಾಮಯವೂ, ಧರ್ಮಾರ್ಥಯುಕ್ತವೂ ಆದ ನಿನ್ನ ಹಿತವನ್ನು ಅವನು ಸ್ವೀಕರಿಸದೇ ಇದ್ದರೆ ದೈವದ ವಶವಾಗುತ್ತಾನೆ.”

ಭಗವಂತನು ಹೇಳಿದನು: “ಸರಿ! ಧರ್ಮಸಮ್ಮತವಾಗಿ ದೊರೆಯಬೇಕಾದ, ನಮಗೆ ಲಾಭದಾಯಕವಾದ ಮತ್ತು ಕುರುಗಳಿಗೆ ಅನಾಮಯವಾದುದನ್ನು ಪಡೆಯುವ ಆಸೆಯನ್ನಿಟ್ಟುಕೊಂಡು ನಾನು ರಾಜ ಧೃತರಾಷ್ಟ್ರನಲ್ಲಿಗೆ ಹೋಗುತ್ತೇನೆ.”

Kannada Yakshagana Talamaddale titled Shri Krishna Sandhana and Yakshagana Bhishma Parva

 

Leave a Reply

Your email address will not be published. Required fields are marked *