ಕುರುಸಭೆಯಲ್ಲಿ ಸಂಜಯನು ತನ್ನ ರಾಯಭಾರವೃತ್ತಾಂತವನ್ನು ತಿಳಿಸಿದುದು

ಪಾಂಡವರಿಂದ ಹಿಂದಿರುಗಿದ ಸಂಜಯನು ಕೌರವ ಸಭೆಗೆ ಆಗಮಿಸಿದುದು

ಆ ರಾತ್ರಿಯು ಕಳೆಯಲು ಎಲ್ಲ ರಾಜರೂ ಸೂತನನ್ನು ಕೇಳಲು ಸಂತೋಷದಿಂದ ಸಭೆಯನ್ನು ಪ್ರವೇಶಿಸಿದರು. ಪಾರ್ಥರ ಧರ್ಮಾರ್ಥಸಂಹಿತ ಮಾತುಗಳನ್ನು ಕೇಳಲು ಬಯಸಿ ಎಲ್ಲರೂ ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಶುಭ ರಾಜಸಭೆಯನ್ನು ಪ್ರವೇಶಿಸಿದರು. ಆ ವಿಸ್ತೀರ್ಣ ಸಭೆಗೆ ಬಿಳಿಯ ಬಣ್ಣವನ್ನು ಬಳಿದಿದ್ದರು. ಕನಕರಾಜಿಗಳಿಂದ ಅಲಂಕರಿಸಿದ್ದರು. ಚಂದ್ರನ ಪ್ರಭೆಯಂತೆ ಸುಂದರವಾದ ಬೆಳಕುಗಳನ್ನಿಟ್ಟಿದ್ದರು. ಗಂಧದ ನೀರನ್ನು ಸಿಂಪಡಿಸಿದ್ದರು. ಬಂಗಾರದ ಮತ್ತು ಮರದ ಆಸನಗಳನ್ನಿರಿಸಿದ್ದರು. ದಂತ-ಅಶ್ಮಸಾರಗಳಿಂದ ಕೂಡಿದ ವಸ್ತ್ರಗಳನ್ನು ಹೊದೆಸಿದ್ದರು. ಭೀಷ್ಮ, ದ್ರೋಣ, ಕೃಪ, ಶಲ್ಯ, ಕೃತವರ್ಮ, ಜಯದ್ರಥ, ಅಶ್ವತ್ಥಾಮ, ವಿಕರ್ಣ, ಸೋಮದತ್ತ, ಬಾಹ್ಲೀಕ, ಮಹಾಪ್ರಾಜ್ಞ ವಿದುರ, ಯುಯುತ್ಸು ಮತ್ತು ಎಲ್ಲ ಶೂರ ಪಾರ್ಥಿವರೂ ಒಟ್ಟಿಗೆ ಧೃತರಾಷ್ಟ್ರನ ಹಿಂದೆ ಶುಭ ಸಭೆಯನ್ನು ಪ್ರವೇಶಿಸಿದರು. ದುಃಶಾಸನ, ಚಿತ್ರಸೇನ, ಶಕುನಿ, ದುರ್ಮುಖ, ದುಃಸ್ಸಹ, ಕರ್ಣ, ಉಲೂಕ, ವಿವಿಂಶತಿಯರು ಅಮರ್ಷಣ ಕುರುರಾಜ ದುರ್ಯೋಧನನನ್ನು ಮುಂದಿಟ್ಟುಕೊಂಡು ಸುರರು ಶಕ್ರಸಭೆಯನ್ನು ಹೇಗೋ ಹಾಗೆ ಸಭೆಯನ್ನು ಪ್ರವೇಶಿಸಿದರು. ಪರಿಘದಂತೆ ಬಾಹುಗಳನ್ನುಳ್ಳ ಆ ಶೂರರು ಪ್ರವೇಶಿಸಲು ಸಭೆಯು ಗಿರಿಗಳಲ್ಲಿ ಸಿಂಹಗಳಿರುವ ಗುಹೆಯಂತೆ ಶೋಭಿಸಿತು. ಒಟ್ಟಿಗೇ ಶೋಭಿಸುತ್ತಿದ್ದ ಆ ಮಹೇಷ್ವಾಸರು ಸಭೆಯನ್ನು ಪ್ರವೇಶಿಸಿ ಬೆಲೆಬಾಳುವ ಆಸನಗಳಲ್ಲಿ ಸೂರ್ಯವರ್ಚಸರಂತೆ ಬೆಳಗಿದರು. ಆ ಸರ್ವ ರಾಜರು ಆಸನಗಳಲ್ಲಿರಲು ಸೂತಪುತ್ರನು ಬಂದಿರುವುದನ್ನು ದ್ವಾರಪಾಲಕರು ನಿವೇದಿಸಿದನು. “ಸೈಂಧವನ ಉತ್ತಮ ಕುದುರೆಗಳನ್ನು ಕಟ್ಟಿದ ರಥದಲ್ಲಿ ಪಾಂಡವರ ಕಡೆ ಹೋಗಿದ್ದ ದೂತನು ಅವಸರದಿಂದ ಬಂದಿದ್ದಾನೆ.” ಕುಂಡಲಗಳನ್ನು ಧರಿಸಿದ ಅವನು ಬೇಗನೆ ರಥದಿಂದ ಇಳಿದು ಮಹಾತ್ಮ ಮಹೀಪಾಲರಿಂದ ತುಂಬಿದ್ದ ಸಭೆಯನ್ನು ಪ್ರವೇಶಿಸಿದನು.

ಸಂಜಯನು ಹೇಳಿದನು: “ಕೌರವರೇ! ನಾನು ಪಾಂಡವರ ಬಳಿ ಹೋಗಿ ಬಂದಿದ್ದೇನೆಂದು ತಿಳಿಯಿರಿ. ಅವರವರ ವಯಸ್ಸಿನ ಪ್ರಕಾರ ಕುರುಗಳೆಲ್ಲರಿಗೆ ಪಾಂಡವರು ಪ್ರತಿನಂದಿಸುತ್ತಾರೆ. ವೃದ್ಧರನ್ನೂ, ತಮ್ಮ ವಯಸ್ಸಿನವರನ್ನೂ ವಯಸ್ಸಿಗೆ ತಕ್ಕಂತೆ ಅಭಿವಂದಿಸುತ್ತಾರೆ. ಸಣ್ಣ ವಯಸ್ಸಿನವರನ್ನು ವಯಸ್ಸಿಗೆ ತಕ್ಕಂತೆ ಪಾರ್ಥರು ಪ್ರತಿಪೂಜಿಸಿ ಅಭಿವಾದಿಸುತ್ತಾರೆ. ಧೃತರಾಷ್ಟ್ರನ ಆಜ್ಞೆಯಂತೆ ಈ ಮೊದಲೇ ಇಲ್ಲಿಂದ ಹೋದ ನಾನು ಪಾಂಡುವರಲ್ಲಿಗೆ ಹೋಗಿ ಏನು ಹೇಳಲಿರುವೆನೋ ಅದನ್ನು ಕೇಳಿ.”

ಸಂಜಯನು ಕುರುಸಭೆಯಲ್ಲಿ ಅರ್ಜುನನ ಸಂದೇಶವನ್ನು ತಿಳಿಸಿದುದು

ಧೃತರಾಷ್ಟ್ರನು ಹೇಳಿದನು: “ಸಂಜಯ! ಈ ರಾಜರ ಮಧ್ಯದಲ್ಲಿ ನಿನ್ನನ್ನು ಕೇಳುತ್ತೇನೆ - ಸತ್ವಾಧೀನನಾದ, ಯೋದ್ಧರಲ್ಲಿ ಪ್ರಣೀತನಾದ, ದುರಾತ್ಮರ ಜೀವವನ್ನು ಕಸಿದುಕೊಳ್ಳುವ ಮಗ ಮಹಾತ್ಮ ಧನಂಜಯನು ಏನು ಹೇಳಿದನು?”

ಸಂಜಯನು ಹೇಳಿದನು: “ಯುಧಿಷ್ಠಿರನ ಅನುಮತಿಯಂತೆ ಮತ್ತು ಕೇಶವನು ಕೇಳುವಂತೆ ಯುದ್ಧಕ್ಕೆ ಉತ್ಸುಕನಾಗಿರುವ ಮಹಾತ್ಮ ಧನಂಜಯ ಅರ್ಜುನನು ಹೇಳಿದ ಈ ಮಾತುಗಳನ್ನು ದುರ್ಯೋಧನನು ಕೇಳಬೇಕು. ಸಂಪೂರ್ಣ ವಿಶ್ವಾಸದಿಂದ, ತನ್ನ ಬಾಹುವಿರ್ಯವನ್ನು ಅರ್ಥಮಾಡಿಕೊಂಡು, ವಾಸುದೇವನ ಸಮಕ್ಷಮದಲ್ಲಿ ಧೀರನಾಗಿ, ಯುದ್ಧಕ್ಕೆ ಸಿದ್ಧನಾಗಿದ್ದ ಕಿರೀಟಿಯು ನನಗೆ ಹೇಳಿದನು: “ಕುರುಗಳ ಮಧ್ಯದಲ್ಲಿ ಧಾರ್ತರಾಷ್ಟ್ರರಿಗೆ ಹೇಳು. ಪಾಂಡವರೊಂದಿಗೆ ಯುದ್ಧಮಾಡಲು ಯಾವ ಯಾವ ರಾಜರು ಬಂದು ಸೇರಿದ್ದಾರೋ ಅವರಿಗೂ ಕೇಳುವಂತೆ ಹೇಳು. ನಾನು ಹೇಳುವ ಮಾತುಗಳನ್ನು ಸಮಗ್ರವಾಗಿ ಅಮಾತ್ಯರೊಂದಿಗೆ ನೃಪನಿಗೆ ಕೇಳಿಸು.” ವಜ್ರಹಸ್ತ ದೇವರಾಜನು ಹೇಳಿದುದನ್ನು ಎಲ್ಲ ದೇವತೆಗಳೂ ಕೇಳುವಂತೆ ಸೃಂಜಯರೂ ಪಾಂಡವರೂ ಸಮರ್ಥ ಕಿರೀಟಿಯ ಮಾತುಗಳನ್ನು ಕೇಳಿದರು. ಯೋತ್ಸಮಾನ, ಗಾಂಡೀವಧನ್ವಿ, ಲೋಹಿತಪದ್ಮನೇತ್ರ ಅರ್ಜುನನು ಹೀಗೆ ಹೇಳಿದನು: “ರಾಜ ಅಜಮೀಢ ಯುಧಿಷ್ಠಿರನ ರಾಜ್ಯವನ್ನು ಧಾರ್ತರಾಷ್ಟ್ರನು ಬಿಟ್ಟುಕೊಡದೇ ಇದ್ದರೆ ನಿಜವಾಗಿಯೂ ಶಿಕ್ಷಾರ್ಹವಾದ ಪಾಪಕರ್ಮವನ್ನು ಧಾರ್ತರಾಷ್ಟ್ರರು ಎಸಗಿದಂತೆ. ಭೀಮಾರ್ಜುನರೊಂದಿಗೆ, ಅಶ್ವಿನೀಪುತ್ರರೊಂದಿಗೆ, ವಾಸುದೇವನೊಂದಿಗೆ, ಆಯುಧವನ್ನು ಎತ್ತಿಹಿಡಿದಿರುವ ಶೈನಿಯೊಂದಿಗೆ, ದೃಷ್ಟಧ್ಯುಮ್ನ ಮತ್ತು ಶಿಖಂಡಿಯೊಡನೆ, ಮತ್ತು ಒಂದೇ ಅಪಧ್ಯಾನದಿಂದ ಭೂಮಿ-ಆಕಾಶಗಳನ್ನು ಸುಟ್ಟುಬಿಡಬಲ್ಲ ಇಂದ್ರಸಮಾನ ಯುಧಿಷ್ಠಿರನೊಂದಿಗೆ ಯುದ್ಧಮಾಡಲು ಬಯಸುತ್ತಾರೆ ಎಂದಂತೆ. ಅವರೊಂದಿಗೆ ಧಾರ್ತರಾಷ್ಟ್ರನು ಯುದ್ಧಮಾಡಲು ಬಯಸಿದರೆ, ಪಾಂಡವರ ಸಕಲ ಉದ್ದೇಶಗಳೂ ಪೂರ್ಣಗೊಂಡಂತೆ! ಪಾಂಡವರಿಗಾಗಿ ಬೇರೆ ಏನನ್ನೂ ಮಾಡುವುದು ಬೇಡ. ಮನಸಿದ್ದರೆ ನೀನು ಬಂದು ಯುದ್ಧಮಾಡು. ಪ್ರವ್ರಾಜಿತ ಪಾಂಡವರು ಧರ್ಮವನ್ನಾಚರಿಸಿ ವನದಲ್ಲಿ ದುಃಖದ ಹಾಸಿಗೆಯ ಮೇಲೆ ಮಲಗಿದ್ದೇ ಆದರೆ, ಧಾರ್ತರಾಷ್ಟ್ರನು ಅದಕ್ಕಿಂತಲೂ ದುಃಖತರವಾದ, ಅವನ ಅಂತ್ಯದ ಹಾಸಿಗೆಯ ಮೇಲೆ ಮಲಗಿ ಸಾಯುತ್ತಾನೆ. ಧರ್ಮರಾಜನು ವಿನಯ, ಜ್ಞಾನ, ತಪಸ್ಸು, ದಮ, ಕ್ರೋಧ, ಅನಾಥರನ್ನು ಧರ್ಮ ಮತ್ತು ಧನಗಳಿಂದ ರಕ್ಷಿಸುತ್ತಿದ್ದರೆ, ದುರಾತ್ಮ ಧಾರ್ತರಾಷ್ಟ್ರನು ಕುರು-ಪಾಂಡವರೊಂದಿಗೆ ಅನ್ಯಾಯವಾಗಿ ನಡೆದುಕೊಂಡು ಆಳುತ್ತಿದ್ದಾನೆ. ಮೋಸಕ್ಕೊಳಗಾದರೂ ಗೌರವ ಮತ್ತು ಆರ್ಜವಗಳಿಂದ, ತಪಸ್ಸು-ದಮಗಳಿಂದ, ಧರ್ಮವನ್ನು ರಕ್ಷಿಸುವ ಬಲದಿಂದ, ಸುಳ್ಳನ್ನು ಹೇಳಲ್ಪಟ್ಟಿದ್ದರೂ ಸತ್ಯವನ್ನೇ ಹೇಳಿಕೊಂಡು, ಪ್ರೀತಿಯುಕ್ತನಾಗಿದ್ದುಕೊಂಡು ಯುಧಿಷ್ಠಿರನು ಮಿತಿಯಿಲ್ಲದ ಕಷ್ಟಗಳನ್ನು ಸಹಿಸಿದನು. ಯಾವಾಗ ಸಂಶಿತಾತ್ಮ ಜ್ಯೇಷ್ಠ ಪಾಂಡವನು ಹಲವಾರು ವರ್ಷಗಳು ಹಿಡಿದಿಟ್ಟುಕೊಂಡಿರುವ ಘೋರ ಕ್ರೋಧವನ್ನು ಕುರುಗಳ ಮೇಲೆ ಎಸೆಯುತ್ತಾನೋ ಆಗ ಧಾರ್ತರಾಷ್ಟ್ರರು ಆ ಯುದ್ಧದಲ್ಲಿ ಪರಿತಪಿಸುತ್ತಾರೆ. ಬೇಸಗೆಯಲ್ಲಿ ಹೊಗೆಬಿಟ್ಟು ಉರಿಯುವ ಬೆಂಕಿಯು ಒಣಗಿದ ಮರಗಳನ್ನು ಹೇಗೆ ಸುಟ್ಟುಹಾಕುವುದೋ ಹಾಗೆ ಯುಧಿಷ್ಠಿರನು ಕ್ರೋಧದಿಂದ ಉರಿಯುವ ದೃಷ್ಟಿಮಾತ್ರದಿಂದ ಧಾರ್ತರಾಷ್ಟ್ರರ ಸೇನೆಯನ್ನು ಸುಟ್ಟುಬಿಡುತ್ತಾನೆ. ಗದೆಯನ್ನು ಹಿಡಿದು, ಕ್ರೋಧದ ವಿಷವನ್ನು ಕಾರುತ್ತಾ ರಣಸ್ಥನಾಗಿರುವ ದುರ್ಮರ್ಷಣ, ಭೀಮವೇಗಿ, ಪಾಂಡವ ಭೀಮಸೇನನನ್ನು ನೋಡಿ ಧಾರ್ತರಾಷ್ಟ್ರರು ಯುದ್ಧಕ್ಕೆ ಪಶ್ಚಾತ್ತಾಪ ಪಡುತ್ತಾರೆ. ಮಹಾಸಿಂಹವು ಗೋವುಗಳ ಹಿಂಡನ್ನು ಪ್ರವೇಶಿಸುವಂತೆ ಆ ಭೀಮರೂಪ ಭೀಮನು ಗದಾಪಾಣಿಯಾಗಿ ಧಾರ್ತರಾಷ್ಟ್ರರ ಮೇಲೆರಗಿ ಕೊಲ್ಲುವಾಗ ಧಾರ್ತರಾಷ್ಟ್ರರು ಯುದ್ಧಕ್ಕೆ ಪಶ್ಚಾತ್ತಾಪ ಪಡುತ್ತಾರೆ. ಮಹಾಭಯದಲ್ಲಿಯೂ ಭಯವನ್ನು ಕಳೆದುಕೊಳ್ಳುವ ಆ ಅಸ್ತ್ರಪ್ರವೀಣನು ಶತ್ರುಬಲವನ್ನು ತಲುಪಿ ಕೋಪಗೊಂಡು ರಥದಿಂದ ಇತರ ರಥಸಮೂಹಗಳನ್ನು ಚೆನ್ನಾಗಿ ಅಪ್ಪಳಿಸಿ, ಪದಾತಿಪಡೆಗಳನ್ನು ಗದೆಯಿಂದ ಹೊಡೆದುರುಳಿಸಿ, ಅನೇಕ ಸೇನೆಗಳನ್ನು ಕ್ಷಣದಲ್ಲಿಯೇ ಮರ್ದಿಸಿ, ಧಾರ್ತರಾಷ್ಟ್ರರ ಸೇನೆಯನ್ನು ಕೊಡಲಿಯಿಂದ ವನವನ್ನು ಚಿಂದಿ ಚಿಂದಿಯಾಗಿ ಕತ್ತರಿಸುವಂತೆ ನಾಶಗೊಳಿಸುವಾಗ ಧಾರ್ತರಾಷ್ಟ್ರರು ಯುದ್ಧಕ್ಕೆ ಪಶ್ಚಾತ್ತಾಪ ಪಡುತ್ತಾರೆ. ಹುಲ್ಲಿನ ಮನೆಗಳಿಂದ ಕೂಡಿದ ಗ್ರಾಮವನ್ನು ಸುಟ್ಟು ಭಸ್ಮಮಾಡುವಂತೆ, ಬೆಳೆದ ಬೆಳೆಯು ಮಿಂಚುಹೊಡೆದಂತೆ ಸುಟ್ಟುಹೋಗುವ ಧಾರ್ತರಾಷ್ಟ್ರರನ್ನು ನೋಡಿ, ಭೀಮಸೇನನ ಶಸ್ತ್ರಗಳಿಂದ ಸುಟ್ಟುಹೋಗುತ್ತಿರುವ, ಪ್ರಮುಖ ಯೋಧರು ಹತರಾಗಿ, ಭಯಾರ್ತರಾಗಿ ವಿಮುಖರಾಗಿ, ಪರಾಙ್ಮುಖರಾಗಿ ಓಡಿಹೋಗುತ್ತಿರುವುದನ್ನು ನೋಡಿ, ಧಾರ್ತರಾಷ್ಟ್ರರು ಯುದ್ಧಕ್ಕೆ ಪಶ್ಚಾತ್ತಾಪ ಪಡುತ್ತಾರೆ. ಆ ಚಿತ್ರಯೋಧೀ ನಕುಲನು ತನ್ನ ಬಲಗೈಯಿಂದ ಭತ್ತಳಿಕೆಯಲ್ಲಿರುವ ಬಾಣಗಳನ್ನು ತೆಗೆದು ನೂರಾರು ಶತ್ರು ರಥಿಕರನ್ನು ರಥದಮೇಲಿದ್ದುಕೊಂಡು ಸದೆಬಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಸುಖೋಚಿತನಾಗಿದ್ದರೂ ವನಗಳಲ್ಲಿ ದೀರ್ಘಕಾಲ ದುಃಖದ ಹಾಸಿಗೆಯಲ್ಲಿ ಮಲಗಿದ ನಕುಲನು ಯಾವಾಗ ಸಿಟ್ಟಿನಿಂದ ಹಾವಿನಂತೆ ಭುಸುಗುಟ್ಟುತ್ತ ವಿಷವನ್ನು ಕಾರುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಧರ್ಮರಾಜನಿಂದ ಒಟ್ಟುಗೂಡಿಸಿದ, ಜೀವವನ್ನು ತ್ಯಜಿಸಲು ಸಿದ್ಧರಾಗಿರುವ ಪಾರ್ಥಿವ ಯೋಧರು ಶುಭ್ರ ರಥಗಳಲ್ಲಿ ಸೈನ್ಯವನ್ನು ಧ್ವಂಸಮಾಡುತ್ತಿರುವನ್ನು ನೋಡಿ ಧಾರ್ತರಾಷ್ಟ್ರನು ಪಶ್ಚಾತ್ತಾಪ ಪಡುತ್ತಾನೆ. ಐವರು ಶೂರ ಮಕ್ಕಳನ್ನು – ಮಕ್ಕಳಾಗಿದ್ದರೂ ಕೃತಾಸ್ತ್ರರಾಗಿ ಪ್ರಕಾಶಿಸುವ, ಪ್ರಾಣಗಳನ್ನೂ ತೊರೆಯಲು ಸಿದ್ಧರಾಗಿ, ಕೇಕೆ ಹಾಕಿ ಆಕ್ರಮಣ ಮಾಡುತ್ತಿದ್ದವರನ್ನು ಕೌರವನು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ವಿರೋಧವಿಲ್ಲದ, ಸುವರ್ಣ ತಾರೆಗಳ ಮತ್ತು ಸದ್ದಿಲ್ಲದೇ ಚಲಿಸುವ, ಪಳಗಿದ ಕುದುರೆಗಳನ್ನು ಕಟ್ಟಿದ ತನ್ನ ರಥವನ್ನೇರಿ ಸಹದೇವನು ಬಾಣಗಳಿಂದ ರಾಜರ ಶಿರವನ್ನು ಚೆಲ್ಲಾಡುವಾಗ, ರಥಸ್ಥನಾಗಿದ್ದು ಮಹಾಭಯವನ್ನುಂಟುಮಾಡಿ ಸಮರದಲ್ಲಿ, ಎಲ್ಲ ದಿಕ್ಕುಗಳಲ್ಲಿಯೂ ನೋಡಿ ಬಾಣಗಳನ್ನು ಸುರಿಸಿ ಹಿಂದೆ ಕಳುಹಿಸುತ್ತಿರುವ ಆ ಕೃತಾಸ್ತ್ರನನ್ನು ಯಾವಾಗ ನೋಡುತ್ತಾರೋ ಆಗ ಧಾರ್ತರಾಷ್ಟ್ರನು ಪಶ್ಚಾತ್ತಾಪ ಪಡುತ್ತಾನೆ. ವಿನಯದ ಹಿಡಿತದಲ್ಲಿರುವ, ನಿಪುಣ, ಸತ್ಯವಾದೀ, ಮಹಾಬಲಿ, ಸರ್ವ ಧರ್ಮೋಪಪನ್ನ, ತರಸ್ವೀ ಸಹದೇವನು ಗಾಂಧಾರಿ ಶಕುನಿಯ ಮಾರ್ಗದಲ್ಲಿ ಬರುವ ಎಲ್ಲರನ್ನೂ ಸದೆಬಡಿಯುತ್ತಾನೆ. ಯಾವಾಗ ಮಹಾಧನ್ವಿಗಳಾದ ಶೂರ, ಕೃತಾಸ್ತ್ರ, ರಥಯುದ್ಧ ಕೋವಿದ, ದ್ರೌಪದಿಯ ಮಕ್ಕಳು ಘೋರವಿಷವುಳ್ಳ ಸರ್ಪದಂತೆ ವಿಷಕಾರುತ್ತಾ ಮುಂದುವರೆಯುತ್ತಾರೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಪರವೀರಘಾತೀ, ಕೃಷ್ಣನಂತೆ ಕೃತಾಸ್ತ್ರನಾದ ಅಭಿಮನ್ಯುವು ಶತ್ರುಗಳ ಮೇಲೆ ಮೋಡವು ಮಳೆಸುರಿಸುವಂತೆ ಬಾಣಗಳನ್ನು ಸುರಿಸಿ ಹೋರಾಡುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಬಾಲಕನಾಗಿ ಕಂಡರೂ ಪ್ರೌಢನ ವೀರ್ಯವುಳ್ಳ ಇಂದ್ರನಿಗೆ ಸಮಾನನಾದ ಕೃತಾಸ್ತ್ರ ಸೌಭದ್ರನು ಮೃತ್ಯುವಿನಂತೆ ಅರಿಸೇನೆಯಮೇಲೆ ಬೀಳುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಶೀಘ್ರತರರಾದ, ವಿಶಾರದರಾದ, ಸಿಂಹಸಮಾನವೀರ್ಯರಾದ ಪ್ರಭದ್ರಕ ಯುವಕರು ಯಾವಾಗ ಸೇನೆಗಳೊಂದಿಗೆ ಧಾರ್ತರಾಷ್ಟ್ರರನ್ನು ಸದೆಬಡಿಯುತ್ತಾರೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಮಹಾರಥಿಗಳಾದ ವಿರಾಟ-ದ್ರುಪದ ವೃದ್ಧರೀರ್ವರು ಜೋರಾಗಿ ಸೇನೆಗಳನ್ನು ಸದೆಬಡಿಯುವುದನ್ನು ಸೇನೆಗಳೊಂದಿಗೆ ಧಾರ್ತರಾಷ್ಟ್ರರು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಯಾವಾಗ ಕೃತಾಸ್ತ್ರ ದ್ರುಪದನು ಸಮರದಲ್ಲಿ ರಥಸ್ಥನಾಗಿದ್ದುಕೊಂಡು ಕ್ರೋಧದಿಂದ ತನ್ನ ಬಿಲ್ಲಿನಿಂದ ಬಿಟ್ಟ ಶರಗಳಿಂದ ಯುವಕರ ಶಿರಗಳನ್ನು ಕತ್ತರಿಸುವನೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಯಾವಾಗ ಪರವೀರಘಾತೀ ವಿರಾಟನು, ಬಿರುಸಾಗಿ ತೋರುವ ಮತ್ಸ್ಯರ ಸೇನೆಯನ್ನು ಕರೆದುಕೊಂಡು ಮರ್ಮಾಂತರಗಳಲ್ಲಿ ಸೇನೆಯನ್ನು ಪ್ರವೇಶಿಸುತ್ತಾನೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಭಿರುಸಾಗಿ ಕಾಣುವ ಮತ್ಸ್ಯರ ಜ್ಯೇಷ್ಠ ವಿರಾಟಪುತ್ರ ರಥಿಕನು ಮುಂದುವರೆದು ಪಾಂಡವರಿಗಾಗಿ ಕವಚಗಳನ್ನು ಧರಿಸುವುದನ್ನು ನೋಡಿ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಕೌರವರ ಪ್ರವೀರ ಸತ್ತಮ ಶಂತನೂಜನು ಶಿಖಂಡಿಯಿಂದ ರಣದಲ್ಲಿ?ಹತನಾಗಲು, ನಿಸ್ಸಂಶಯುವಾಗಿ ಸತ್ಯವನ್ನು ಹೇಳುತ್ತಿದ್ದೇನೆ, ಶತ್ರುಗಳು ಜೀವವನ್ನು ತಳೆದಿರುವುದಿಲ್ಲ. ಯಾವಾಗ ಶಿಖಂಡಿಯು ರಥಿಗಳನ್ನು ಕತ್ತರಿಸಿ ರಥದ ಮೇಲಿದ್ದುಕೊಂಡು, ದಿವ್ಯ ಹಯಗಳು ಶತ್ರುಗಳ ರಥಗಳನ್ನು ತುಳಿಯುತ್ತಿರಲು, ವರೂಥೀ ಭೀಷ್ಮನ ಮೇಲೆ ಆಕ್ರಮಣ ಮಾಡುತ್ತಾನೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಯಾವಾಗ ಸೃಂಜಯರ ಸೇನೆಯಲ್ಲಿ ಪ್ರಮುಖನಾಗಿ ಮಿಂಚುತ್ತಿರುವ, ಯಾರಿಗೆ ದ್ರೋಣನು ಗುಹ್ಯವಾದ ಅಸ್ತ್ರವನ್ನು ನೀಡಿದನೋ ಆ ಧೃಷ್ಟದ್ಯುಮ್ನನನ್ನು ನೋಡುತ್ತಾನೋ ಆಗ ಧಾರ್ತರಾಷ್ಟ್ರನು ಪಶ್ಚಾತ್ತಾಪ ಪಡುತ್ತಾನೆ. ಯಾವಾಗ ಆ ಅಪ್ರಮೇಯ ಸೇನಾಪತಿಯು ಧಾರ್ತರಾಷ್ಟ್ರರನ್ನು ಪರಾಭವಗೊಳಿಸಿ ರಣದಲ್ಲಿ ಶತ್ರುಗಳೊಂದಿಗಿರುವ ದ್ರೋಣನ ಮೇಲೆ ಆಕ್ರಮಣ ಮಾಡುತ್ತಾನೋ ಆಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಆ ಸೋಮಕರ ನಾಯಕನು ಹ್ರೀಮಾನ, ಮನೀಷೀ, ಬಲಶಾಲೀ, ಮನಸ್ವೀ ಮತ್ತು ಲಕ್ಷೀವಂತ. ಆ ವೃಷ್ಣಿಸಿಂಹನು ಯಾರ ಬಲದ ನಾಯಕನಾಗಿರುವನೋ ಆ ಸೇನೆಯನ್ನು ಎದುರಿಸಿ ಶತ್ರುಗಳು ಜೀವಿತರಾಗಿರಲಾರರು. ‘ಇನ್ನು ಆರಿಸುವುದು ಬೇಡ!’ ಎಂದು ಜನರಿಗೆ ಹೇಳು. ಏಕೆಂದರೆ ಯುದ್ಧದಲ್ಲಿ ಅದ್ವಿತೀಯ, ರಥಸ್ಥ, ಶಿನಿಯ ಮೊಮ್ಮಗ, ಮಹಾಬಲಿ, ಭಯವಿಲ್ಲದ ಕೃತಾಸ್ತ್ರ ಸಾತ್ಯಕಿಯನ್ನು ಸಚಿವನನ್ನಾಗಿ ಆರಿಸಿಕೊಂಡಿದ್ದೇವೆ. ನಾನು ಹೇಳಿದಂತೆ ಶಿನಿಗಳ ಅಧಿಪನು ಮೇಘಗಳಂತೆ ಶತ್ರುಗಳ ಮೇಲೆ ಬಾಣಗಳ ಮಳೆಯನ್ನು ಸುರಿಸಿ ಶರಜಾಲಗಳಿಂದ ಯೋಧರನ್ನು ಮುಚ್ಚುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಯಾವಾಗ ಆ ದೀರ್ಘಬಾಹು, ದೃಢಧನ್ವಿ, ಮಹಾತ್ಮನು ಧೃತಿಯಿಂದ ಯುದ್ಧವನ್ನು ಮಾಡುತ್ತಾನೋ ಆಗ ಶತ್ರುಗಳು ಸಿಂಹದ ವಾಸನೆಯನ್ನು ಮೂಸಿದ ಗೋವುಗಳಂತೆ ಮತ್ತು ಬೆಂಕಿಗೆ ಸಿಲುಕಿದಂತೆ ಒಣಗಿ ಹೋಗುತ್ತಾರೆ. ಆ ದೀರ್ಘಬಾಹು, ದೃಢಧನ್ವಿ, ಮಹಾತ್ಮನು ಗಿರಿಗಳನ್ನು ಭೇದಿಸಬಲ್ಲ, ಸರ್ವಲೋಕಗಳನ್ನೂ ಸಂಹರಿಸಬಲ್ಲ. ಅಸ್ತ್ರಗಳನ್ನು ಬಳಸುವುದರಲ್ಲಿ ನಿಪುಣನಾದ, ಕ್ಷಿಪ್ರ ಕೈಚಳಕವಿರುವ ಅವನು ದಿವಿಯಲ್ಲಿ ಸೂರ್ಯನಂತೆ ಹೊಳೆಯುತ್ತಾನೆ. ಆ ಯಾದವ ವೃಷ್ಣಿಸಿಂಹನು ಅಸ್ತ್ರಗಳಲ್ಲಿ ಅತ್ಯಂತ ಪ್ರಶಸ್ತವಾದ ಯೋಗವೆಂದು ಯಾವುದಕ್ಕೆ ಹೇಳುತ್ತಾರೋ ಆ ವಿಚಿತ್ರ, ಸೂಕ್ಷ್ಮ ಯೋಗವನ್ನು ಸಿದ್ಧಿಗೊಳಿಸಿಕೊಂಡಿದ್ದಾನೆ. ಸಾತ್ಯಕಿಯು ಸರ್ವಗುಣಗಳಿಂದ ಕೂಡಿದ್ದಾನೆ. ಯುದ್ಧದಲ್ಲಿ ಮಾಧವ ಸಾತ್ಯಕಿಯ ನಾಲ್ಕು ಬಿಳಿಯ ಕುದುರೆಗಳನ್ನು ಕಟ್ಟಿದ ಹಿರಣ್ಮಯ ರಥವನ್ನು ನೋಡಿ ಆ ಮಂದ ಸುಯೋಧನನು ಪಶ್ಚಾತ್ತಾಪ ಪಡುತ್ತಾನೆ. ಯಾವಾಗ ಅವನು ಕೇಶವನೊಡನೆ ಹೇಮಮಣಿಪ್ರಕಾಶಿತ, ಶ್ವೇತಾಶ್ವಯುಕ್ತ, ಉಗ್ರ ವಾನರಕೇತುವನ್ನು ಹೊಂದಿದ ರಥವನ್ನು ನೋಡುತ್ತಾನೋ ಆಗ ಆ ಮಂದನು ಪಶ್ಚಾತ್ತಾಪ ಪಡುತ್ತಾನೆ. ಯಾವಾಗ ನನ್ನ ಗಾಂಡೀವದ ಮಿಡಿತದಿಂದ ಉಂಟಾದ ಸಿಡಿಲಿನಂತಹ ಮಹಾಶಬ್ಧವನ್ನು ಮಹಾರಣದಲ್ಲಿ ಕೇಳುತ್ತಾನೋ ಆಗ ಆ ಮಂದಬುದ್ಧಿಯು ಶೋಕಿಸುತ್ತಾನೆ. ನನ್ನ ಬಾಣಗಳ ಸುರಿಮಳೆಯಿಂದುಂಟಾದ ಅಂಧಕಾರದಿಂದ ಗೋವುಗಳ ಹಿಂಡುಗಳು ಚದುರಿ ಓಡುವಂತೆ ಅವನ ಸೇನೆಯು ರಣದಿಂದ ಎಲ್ಲ ಕಡೆ ಓಡಿಹೋಗುವುದನ್ನು ನೋಡಿ ಧೃತರಾಷ್ಟ್ರನ ದುರ್ಮತಿ ದುಃಸ್ಸಹ ಮೂಢ ಮಗನು ಯುದ್ಧಕ್ಕೆ ತಪಿಸುತ್ತಾನೆ. ಮೋಡಗಳಿಂದ ಹೊರಹೊಮ್ಮುವ ಮಿಂಚುಗಳಂತೆ ಹೊರಡುವ ಸಹಸ್ರಾರು ಶತ್ರುಗಳನ್ನು ಕೊಲ್ಲಬಲ್ಲ, ಎಲುಬುಗಳನ್ನೂ ಹೊಕ್ಕಿ, ಮರ್ಮಗಳನ್ನು ಭೇದಿಸಬಲ್ಲ ನನ್ನ ಬಾಣಗಳನ್ನು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ತೀಕ್ಷ್ಣಮೊನೆಗಳನ್ನುಳ್ಳ, ಬಂಗಾರದ ಮುಖವುಳ್ಳ, ರೆಕ್ಕೆಗಳನ್ನುಳ್ಳ ಬಾಣಸಂಘಗಳು ನನ್ನ ಗಾಂಡೀವದಿಂದ ಹೊರಬಂದು ಆನೆ, ಕುದುರೆಗಳ ವರ್ಮಗಳನ್ನು ಭೇದಿಸುವುದನ್ನು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಶತ್ರುಗಳು ಬಿಟ್ಟಬಾಣಗಳನ್ನು ನನ್ನ ಬಾಣಗಳು ಆರಿಸಿದಾಗ, ಅಥವಾ ಹಿಂದಿರುಗಿಸಿದಾಗ ಅಥವ ತುಂಡರಿಸಿದಾಗ ಆ ಮಂದಬುದ್ಧಿ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ನನ್ನ ಭುಜಗಳಿಂದ ಪ್ರಯೋಗಿಸಲ್ಪಟ್ಟ ವಿಪಾಠಗಳು ಪಕ್ಷಿಗಳು ಮರದ ಮೇಲಿರುವ ಹಣ್ಣುಗಳನ್ನು ಕೀಳುವಂತೆ ಅವರ ಯುವಕರ ಶಿರಗಳನ್ನು ಕೀಳುವಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ರಣದಲ್ಲಿ ನನ್ನ ಶರಗಳಿಂದ ಹೊಡೆತತಿಂದು ಅವನ ಯೋಧರು ರಥಗಳಿಂದ, ಮಹಾಗಜಗಳಿಂದ, ಕುದುರೆಗಳ ಮೇಲಿಂದ ಬೀಳುವುದನ್ನು ನೋಡಿದಾಗ ಧಾರ್ತರಾಷ್ಟ್ರನು ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಯಾವಾಗ ನಾನು ಬಾಯಿಕಳೆದ ಕಾಲನಂತೆ ಶತ್ರುವಿನ ಪದಾತಿಸಮೂಹಗಳನ್ನು, ರಥಸಮೂಹಗಳನ್ನು ಎಲ್ಲ ಕಡೆಯಿಂದ ಉರಿಯುತ್ತಿರುವ ಬಾಣವರ್ಷಗಳಿಂದ ಅಂತ್ಯಗೊಳಿಸುವೆನೋ ಆಗ ಆ ಮಂದಬುದ್ಧಿಯು ಪರಿತಪಿಸುತ್ತಾನೆ. ಗಾಂಡೀವದಿಂದ ಹೊಡೆದುರಿಳಿಸಲ್ಪಟ್ಟ ರಥಗಳಿಂದ ಎಲ್ಲ ದಿಕ್ಕುಗಳಲ್ಲಿಯೂ ಮೇಲೆಬ್ಬುವ ಧೂಳಿನಿಂದ ಮುಸುಕಲ್ಪಟ್ಟು ದಿಕ್ಕುತೋಚದಂತಾದ ಅವನ ಸೇನೆಯನ್ನು ನೋಡಿ ಆ ಮಂದಬುದ್ಧಿಯು ಪಶ್ಚಾತ್ತಾಪ ಪಡುತ್ತಾನೆ. ದುರ್ಯೋಧನನು ತನ್ನ ಎಲ್ಲ ಸೇನೆಯೂ ಸಣ್ಣದಾಗುವುದನ್ನು, ಸಂಜ್ಞೆಯನ್ನು ಕಳೆದುಕೊಳ್ಳುವುದನ್ನು, ಅಶ್ವ, ವೀರಾಗ್ರ, ನರೇಂದ್ರ, ಗಜಗಳನ್ನು ಕಳೆದುಕೊಂಡು ಬಾಯಾರಿ, ಭಯಾರ್ತರಾಗಿ, ಆಯಾಸಗೊಳ್ಳುವುದನ್ನು ನೋಡುತ್ತಾನೆ. ಹತರಾದ, ಹತರಾಗುತ್ತಿರುವವರ ಆರ್ತಸ್ವರ, ಪ್ರಜಾಪತಿಯ ಅರ್ಧ ಮುಗಿಸಿದ ಕೆಲಸವೋ ಎಂಬಂತೆ ಕೇಶ, ಎಲುಬು, ಮತ್ತು ಬುರುಡೆಗಳು ಚೆಲ್ಲಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಆ ಮಂದಬುದ್ಧಿಯು ಪರಿತಪಿಸುತ್ತಾನೆ. ಯಾವಾಗ ರಥದಲ್ಲಿ ಗಾಂಡೀವ, ವಾಸುದೇವ, ದಿವ್ಯ ಶಂಖ ಪಾಂಚಜನ್ಯ, ಕುದುರೆಗಳು, ಅಕ್ಷಯವಾದ ಎರಡು ಭತ್ತಳಿಕೆಗಳು ಮತ್ತು ನನ್ನ ದೇವದತ್ತವನ್ನೂ ಅವನು ನೋಡುತ್ತಾನೋ ಆಗ ಧಾರ್ತರಾಷ್ಟ್ರನು ಈ ಯುದ್ಧದ ಕುರಿತು ಪಶ್ಚಾತ್ತಾಪ ಪಡುತ್ತಾನೆ. ಯುಗವು ಕಳೆದು ಇನ್ನೊಂದು ಯುಗವು ಬರುವಾಗ ಸೇರಿರುವ ಎಲ್ಲ ದಸ್ಯುಸಂಘಗಳನ್ನು ಅಗ್ನಿಯು ಹೇಗೆ ಕಬಳಿಸುತ್ತಾನೋ ಹಾಗೆ ನಾನು ಕೌರವರನ್ನು ನಾಶಪಡೆಸುವಾಗ ಪುತ್ರರೊಂದಿಗೆ ಧೃತರಾಷ್ಟ್ರನು ಪರಿತಪಿಸುತ್ತಾನೆ. ಕ್ರೋಧವಶನಾದ ಅಲ್ಪಚೇತಸನಾದ ಮಂದ ಧಾರ್ತರಾಷ್ಟ್ರನು ಭ್ರಾತರೊಂದಿಗೆ ಪುತ್ರರೊಂದಿಗೆ ಮತ್ತು ಸೈನ್ಯದೊಂದಿಗೆ ಐಶ್ವರ್ಯವನ್ನು, ದರ್ಪವನ್ನು ಕಳೆದುಕೊಂಡು ನಡುಗುತ್ತಿರುವಾಗ ಪರಿತಪಿಸುತ್ತಾನೆ. ಒಂದು ಬೆಳಿಗ್ಗೆ ಜಪವನ್ನು ಮಾಡಿ ಮುಗಿಸಿರುವಾಗ ಏಕಾಂತದಲ್ಲಿ ಓರ್ವ ಮನೋಜ್ಞ ವಿಪ್ರನು ನನಗೆ ಹೇಳಿದ್ದನು: ‘ಸವ್ಯಸಾಚೀ! ಪಾರ್ಥ! ನಿನಗೆ ಒಂದು ದುಷ್ಕರವಾದ ಕೆಲಸವನ್ನು ಮಾಡಬೇಕಾಗಿದೆ. ಶತ್ರುಗಳೊಡನೆ ನೀನು ಹೋರಾಡುತ್ತೀಯೆ. ಹರಿವಾನ್ ವಜ್ರಹಸ್ತ ಇಂದ್ರನು ನಿನ್ನ ಮುಂದೆ ಹೋಗಿ ಸಮರದಲ್ಲಿ ಅರಿಗಳನ್ನು ಸಂಹರಿಸುತ್ತಾನೆ. ಅಥವಾ ಸುಗ್ರೀವವನ್ನು ಕಟ್ಟಿದ ನಿನ್ನ ರಥದಲ್ಲಿ ಹಿಂದಿನಿಂದ ವಾಸುದೇವನು ರಕ್ಷಿಸುತ್ತಾನೆ.’ ವಜ್ರಹಸ್ತ ಮಹೇಂದ್ರನನ್ನು ಮೀರಿ ಈ ಯುದ್ಧದಲ್ಲಿ ನಾನು ವಾಸುದೇವನ ಸಹಾಯವನ್ನು ಆರಿಸಿಕೊಂಡಿದ್ದೇನೆ. ದಸ್ಯುಗಳ ವಧೆಗಾಗಿಯೇ ನನಗೆ ಕೃಷ್ಣನು ದೊರಕಿದ್ದಾನೆ. ಇವೆಲ್ಲವುಗಳಲ್ಲಿ ದೈವದ ನಿಶ್ಚಯವಿದೆ ಎಂದು ನನಗೆ ತೋರುತ್ತಿದೆ. ಯುದ್ಧವನ್ನು ಮಾಡದೆಯೇ ಯಾವ ಪುರುಷನಿಗೆ ಜಯವಾಗಲೆಂದು ಕೃಷ್ಣನು ಮನಸ್ಸಿನಲ್ಲಿಯಾದರೂ ಆಲೋಚಿಸುತ್ತಾನೋ ಅವನಿಗೆ, ಶತ್ರುಗಳು ಇಂದ್ರನೊಡನೆ ದೇವತೆಗಳೇ ಆಗಿರಲಿ, ಎಲ್ಲ ರೀತಿಯಿಂದ ಯಶಸ್ಸುಂಟಾಗುವುದು ಸತ್ಯ. ಇನ್ನು ಮನುಷ್ಯರೆಂದರೆ ಅದರಲ್ಲಿ ಚಿಂತೆಯೇ ಇಲ್ಲ. ಯುದ್ಧದಲ್ಲಿ ಯಾರು ತೇಜಸ್ವಿ, ಅತ್ಯಂತ ಶೂರ, ಕೃಷ್ಣ ವಾಸುದೇವನನ್ನು ಗೆಲ್ಲಲು ಬಯಸುತ್ತಾರೋ ಅವರು ಅಳತೆಯಿಲ್ಲದ ಮಹಾಸಾಗರದ ನೀರಿನಲ್ಲಿ ಎರಡೂ ತೋಳುಗಳಿಂದ ಈಸಿ ಸಾಗರವನ್ನು ದಾಟಲು ಬಯಸಿದಂತೆ. ಅತಿ ದೊಡ್ಡದಾದ ಶಿಲೆಗಳಿಂದ ತುಂಬಿದ ಶ್ವೇತ ಗಿರಿಯನ್ನು ತನ್ನ ಅಂಗೈಯಿಂದ ಪುಡಿಮಾಡಲು ಬಯಸುವವನ ಕೈ-ಉಗುರುಗಳೇ ಪುಡಿಯಾಗುತ್ತವೆಯೋ ಹೊರತು ಆ ಗಿರಿಗೆ ಏನನ್ನೂ ಮಾಡಿದಂತಾಗುವುದಿಲ್ಲ. ಯುದ್ಧದಲ್ಲಿ ವಾಸುದೇವನನ್ನು ಗೆಲ್ಲಲು ಬಯಸುವವನು ಉರಿಯುತ್ತಿರುವ ಬೆಂಕಿಯನ್ನು ಕೈಗಳಿಂದಲೇ ಆರಿಸಬಹುದು, ಚಂದ್ರ-ಸೂರ್ಯರನ್ನು ನಿಲ್ಲಿಸಬಹುದು ಮತ್ತು ದೇವತೆಗಳಿಂದ ಸುಲಭವಾಗಿ ಅಮೃತವನ್ನು ಅಪಹರಿಸಿಕೊಂಡು ಬರಬಹುದು. ಅವನು ರಾಜರ ದೇಶಗಳನ್ನು ಸದೆಬಡಿದನು ಮತ್ತು ಒಂದೇ ರಥದಲ್ಲಿ ಏಕಾಂಗಿಯಾಗಿ ಭೋಜರ ಯಶಸ್ಸಿನಿಂದ ಬೆಳಗುತ್ತಿರುವ ರುಕ್ಮಿಣಿಯನ್ನು ಅಪಹರಿಸಿ ವಿವಾಹವಾದನು. ಅವಳಿಂದ ಮಹಾತ್ಮ ರೌಕ್ಮಿಣೇಯನು ಜನಿಸಿದನು. ಅವನು ತರಸದಿಂದ ಗಾಂಧಾರರನ್ನು ಸದೆಬಡಿದು, ನಗ್ನಜಿತನ ಎಲ್ಲ ಮಕ್ಕಳನ್ನು ಗೆದ್ದು, ಅವನ ಸೆರೆಯಿಂದ ದೇವತೆಗಳ ಲಲಾಮ ಸುದರ್ಶನೀಯನನ್ನು ಬಿಡಿಸಿದನು. ಅವನು ಕವಾಟದಲ್ಲಿ ಪಾಂಡ್ಯನನ್ನು ಕೊಂದು ಹಾಗೆಯೇ ದಂತಕೂರದಲ್ಲಿ ಕಲಿಂಗರನ್ನು ಮರ್ದಿಸಿದನು. ಅವನಿಂದ ಸುಡಲ್ಪಟ್ಟ ವಾರಾಣಸೀ ನಗರಿಯು ಬಹಳ ವರ್ಷಗಳವರೆಗೆ ರಾಜನಿಲ್ಲದೇ ಇದ್ದಿತ್ತು. ಯುದ್ಧದಲ್ಲಿ ಅಜೇಯನೆಂದು ಇತರರು ತಿಳಿದುಕೊಂಡಿದ್ದ ಏಕಲವ್ಯ ಎಂಬ ಹೆಸರಿನ ನಿಷಾದರಾಜ ಮತ್ತು ಸಿಟ್ಟಿನಿಂದ ಶೈಲವನ್ನು ಆಕ್ರಮಣಮಾಡಿದ ಜಂಭ ಇವರುಗಳು ಕೃಷ್ಣನಿಂದಲೇ ಹತರಾಗಿ ಅಸುವನ್ನು ನೀಗಿ ಮಲಗಿದರು. ಉಗ್ರಸೇನನ ಮಗ, ಅತಿ ದುಷ್ಟ ಅಂಧಕ-ವೃಷ್ಣಿಗಳ ಮಧ್ಯೆ ಸುಡುತ್ತಿದ್ದವನನ್ನು ಬಲದೇವನೊಡನೆ ಸೇರಿ ಸಂಹರಿಸಿ ರಾಜ್ಯವನ್ನು ಉಗ್ರಸೇನನಿಗಿತ್ತನು. ಆಕಾಶದಲ್ಲಿ ನಿಂತು ಸೌಭದಿಂದ ಯುದ್ಧಮಾಡುತ್ತಿರುವ ವಿಭೀಷಣ ಶಾಲ್ವರಾಜ ಶತಘ್ನಿಯನ್ನು ಮಾಯೆಯಿಂದ ಸೌಭದ ದ್ವಾರದಲ್ಲಿಯೇ ಹಿಡಿದು ಕೊಂದವನನ್ನು ಯಾವ ಮರ್ತ್ಯನು ಎದುರಿಸಿಯಾನು? ಪ್ರಾಗ್ಜ್ಯೋತಿಷ ಎಂಬ ಹೆಸರಿನ, ಭೇದಿಸಲಸಾಧ್ಯವಾದ, ಘೋರವಾದ, ಅಸಹ್ಯವಾದ ಅಸುರರ ಪುರವೊಂದಿತ್ತು. ಅಲ್ಲಿದ್ದ ಭೂಮಿಯ ಮಗ ಮಹಾಬಲಿ ನರಕನು ಅದಿತಿಯ ಶುಭ ಕುಂಡಲಗಳನ್ನು ಅಪಹರಿಸಿದನು. ಶಕ್ರನೊಂದಿಗೆ ದೇವತೆಗಳು ಒಟ್ಟಾಗಿ ಅವುಗಳನ್ನು ಹಿಂದೆತೆಗೆದುಕೊಳ್ಳಲು ಹೋದಾಗ ಅವನ ಬಲವನ್ನು ಸಹಿಸಲಾಗದೇ ಭೀತರಾದರು. ಆಗ ಕೇಶವನ ವಿಕ್ರಮ, ಬಲ ಮತ್ತು ಶ್ರೇಷ್ಠ ಅಸ್ತ್ರಗಳನ್ನು ನೋಡಿದರು. ಕೇಶವನ ಪ್ರಕೃತಿಯನ್ನು ತಿಳಿದುಕೊಂಡು ಅವರು ಕೃಷ್ಣನನ್ನು ದಸ್ಯುವಧೆಗೆ ನಿಯೋಜಿಸಿದರು. ಆ ದುಷ್ಕರವಾದ ಕೆಲಸವನ್ನು ಮಾಡಲು ಸಿದ್ಧಿಗಳಲ್ಲಿ ಐಶ್ವರ್ಯವಂತ ವಾಸುದೇವನು ಒಪ್ಪಿಕೊಂಡನು. ನಿರ್ಮೋಚನದಲ್ಲಿ ಮೊನಚಾದ ಪಾಶಗಳನ್ನು ಜೋರಾಗಿ ತುಂಡರಿಸಿ ಆರು ಸಾವಿರರನ್ನು ಕೊಂದು, ಮುರ ಮತ್ತು ಅವನ ರಾಕ್ಷಸ ಪಡೆಯನ್ನು ಸಂಹರಿಸಿ ಆ ವೀರನು ನಿರ್ಮೋಚನವನ್ನು ಪ್ರವೇಶಿಸಿದನು. ಅಲ್ಲಿಯೇ ಆ ಮಹಾಬಲ ಮತ್ತು ಅತಿಬಲ ವಿಷ್ಣುವಿನ ನಡುವೆ ಯುದ್ಧವು ನಡೆಯಿತು. ಗಾಳಿಯಿಂದ ಕೆಳಗುರುಳಿದ ಕರ್ಣಿಕಾರ ವೃಕ್ಷದಂತೆ ಕೃಷ್ಣನಿಂದ ಹತನಾಗಿ ಅವನು ಅಸುವನ್ನು ತೊರೆದು ಮಲಗಿದನು. ಹೀಗೆ ಆ ಮಣಿಕುಂಡಲಗಳನ್ನು ಹಿಂದೆಪಡೆದುಕೊಂಡು ಭೌಮ ನರಕನನ್ನೂ ಮುರನನ್ನೂ ಕೊಂದು, ಶ್ರೀ ಮತ್ತು ಯಶಸ್ಸಿನಿಂದ ಆವೃತನಾಗಿ ಆ ಧೀಮಂತ, ಅಪ್ರತಿಮ ಪ್ರಭಾವಿ ಕೃಷ್ಣನು ಹಿಂದುರಿಗಿದನು. ಅಲ್ಲಿ ರಣದಲ್ಲಿ ಅವನು ನಡೆಸಿದ ಭೀಮಕೃತ್ಯಗಳನ್ನು ಕಂಡು ದೇವತೆಗಳು ಅವನಿಗೆ ವರವನ್ನಿತ್ತರು: ‘ಯುದ್ಧಮಾಡುವಾಗ ನಿನಗೆ ಶ್ರಮವಾಗದಿರಲಿ! ಆಕಾಶದಲ್ಲಿ ಅಥವಾ ನೀರಿನಲ್ಲಿ ನಿನ್ನ ವಿಕ್ರಮವನ್ನು ಸಾಧಿಸು. ಯಾವುದೇ ಶಸ್ತ್ರಗಳು ನಿನ್ನ ದೇಹವನ್ನು ಪ್ರವೇಶಿಸಿದಿರಲಿ!’ ಈ ರೀತಿ ಕೃಷ್ಣನು ಆಗ ಕೃತಾರ್ಥನಾದನು. ಇದು ಅಪ್ರಮೇಯ, ಮಹಾಬಲ, ಸದೈವ ಗುಣಸಂಪತ್ತಿನ ವಾಸುದೇವನ ಸ್ವರೂಪ. ಅಂಥಹ ಅನಂತವೀರ್ಯ ಮೀರಲಸಾಧ್ಯನಾದ ವಿಷ್ಣುವನ್ನು ಬಲದಿಂದ ಸೋಲಿಸಲು ಧಾರ್ತರಾಷ್ಟ್ರನು ಯೋಚಿಸುತ್ತಿದ್ದಾನೆ! ಈ ರೀತಿ ದುರಾತ್ಮನು ತರ್ಕಿಸುತ್ತಿರಲು ಅವನು ನಮ್ಮ ಕಡೆ ಪ್ರೀತಿಯಿಂದ ನೋಡುತ್ತಾನೆ. ಕೃಷ್ಣ ಮತ್ತು ನನ್ನ ನಡುವೆ ಕಲಹವನ್ನು ಹುಟ್ಟಿಸಿ ಪಾಂಡವರ ಸಂಪತ್ತನ್ನು ಅಪಹರಿಸಲು ಅವನು ಯೋಜಿಸಿದರೆ, ಯುದ್ಧಕ್ಕೆ ಬಂದಾಗ ಅವನಿಗೆ ಗೊತ್ತಾಗುತ್ತದೆ. ರಾಜ ಶಾಂತನವನಿಗೆ, ದ್ರೋಣನಿಗೆ, ಅವನ ಪುತ್ರನಿಗೆ, ಮತ್ತು ಪ್ರತಿದ್ವಂದ್ವಿಯಿರದ ಶಾರದ್ವತನಿಗೆ ನಮಸ್ಕರಿಸಿ ನಮ್ಮ ರಾಜ್ಯವನ್ನು ಪಡೆಯಲೋಸುಗ ನಾನು ಯುದ್ಧವನ್ನು ಮಾಡುತ್ತೇನೆ. ಧರ್ಮಚಾರಿಗಳಾದ ಪಾಂಡವರೊಡನೆ ಯಾರು ಯುದ್ಧಮಾಡುತ್ತಾರೋ ಅವರಿಗೆ ಧರ್ಮವು ಅಸ್ತ್ರಗಳ ಗುರಿಯಿಡುತ್ತದೆ ಎಂದು ನನ್ನ ಅಭಿಪ್ರಾಯ. ಮೋಸಗಾರರಿಂದ ಸುಳ್ಳಿನ ಜೂಜಿನಲ್ಲಿ ಸೋತು ಪಾಂಡುಪುತ್ರರು ಹನ್ನೆರಡು ವರ್ಷಗಳು ಕಾದಿದ್ದಾರೆ. ಅರಣ್ಯದಲ್ಲಿ ಬಂದೊದಗಿದ ಕಷ್ಟಗಳನ್ನು ಸಹಿಸಿ, ದೀರ್ಘಕಾಲದ ಅಜ್ಞಾತವಾಸವನ್ನೂ ಪೂರೈಸಿ ಅಕಸ್ಮಾತ್ತಾಗಿ ಜೀವಿತರಾಗಿರುವ ಪಾಂಡವರನ್ನು ಪದಸ್ಥರಾಗಿರುವ ಧಾರ್ತರಾಷ್ಟ್ರರು ಸಹಿಸಿಕೊಳ್ಳಲಾರರು! ಈ ಯುದ್ಧದಲ್ಲಿ ನಮ್ಮನ್ನು ಅವರು, ಇಂದ್ರಪ್ರಮುಖನಾದ ದೇವತೆಗಳ ಸಹಾಯದಿಂದಲಾದರೂ ಗೆಲ್ಲುವುದಾದರೆ, ಧರ್ಮದಿಂದ ನಡೆದುಕೊಳ್ಳುವುದಕ್ಕಿಂತ ಅಧರ್ಮವನ್ನು ಆಚರಿಸುವುದೇ ಹೆಚ್ಚಿನದೆಂದೆನಿಸಿಕೊಳ್ಳುತ್ತದೆ. ಅಂದಿನಿಂದ ಯಾರೂ ಒಳ್ಳೆಯದನ್ನು ಮಾಡುವುದಿಲ್ಲ. ಪುರುಷನು ಮಾಡಿದ ಕರ್ಮಕ್ಕೆ ಬದ್ಧನಲ್ಲವೆಂದು ಅವನು ತಿಳಿದುಕೊಂಡಿದ್ದರೆ, ನಾವು ವಿಶಿಷ್ಟರಲ್ಲ ಎಂದು ತಿಳಿದುಕೊಂಡಿದ್ದರೆ ನಾನು ವಾಸುದೇವನ ಸಹಾಯದಿಂದ ಅವನ ಅನುಯಾಯಿಗಳೊಂದಿಗೆ ದುರ್ಯೋಧನನನ್ನು ಕೊಲ್ಲುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ನರರು ಕರ್ಮಗಳಿಗೆ ಬದ್ಧರಲ್ಲವೆಂದರೂ, ಪುರುಷನಿಗೆ ಸ್ವಕರ್ಮವೆನ್ನುವುದು ಇಲ್ಲವೆಂದು ತಿಳಿದುಕೊಂಡರೂ, ಮತ್ತು ಇವೆರಡನ್ನೂ ಸಮೀಕ್ಷಿಸಿದರೆ ಧಾರ್ತರಾಷ್ಟ್ರನ ಪರಾಜಯವು ಒಳ್ಳೆಯದೇ! ಕುರುಗಳೇ! ಸತ್ಯವನ್ನು ಹೇಳುತ್ತಿದ್ದೇನೆ. ಯುದ್ಧಮಾಡಿದರೆ ಧಾರ್ತರಾಷ್ಟ್ರರು ಇರುವುದಿಲ್ಲ. ಯುದ್ಧವನ್ನು ಮಾಡದೇ ಅವರು ತಮ್ಮ ಗುರಿಯನ್ನು ಸಾಧಿಸಲಿ. ಯುದ್ಧ ಮಾಡದಿರಲಿ. ಇದರಿಂದಲಾದರೂ ಅವರು ಉಳಿಯುತ್ತಾರೆ. ನಾನು ಕರ್ಣನೊಂದಿಗೆ ಧಾರ್ತರಾಷ್ಟ್ರರನ್ನು ಸಂಹರಿಸಿ ಕುರುಗಳ ಸಮಗ್ರ ರಾಜ್ಯವನ್ನು ಗೆಲ್ಲುತ್ತೇನೆ. ಆದುದರಿಂದ ಯಾವುದನ್ನು ಮಾಡಬೇಕೋ ಯಾವುದನ್ನು ಮಾಡಬಲ್ಲಿರೋ ಅದನ್ನು ಮಾಡಿ, ಪ್ರೀತಿಯ ಹೆಂಡತಿ ಮಕ್ಕಳೊಂದಿಗೆ ಉಪಭೋಗಿಸಿ. ನಮ್ಮಲ್ಲಿಯೂ ಕೂಡ ಬಹುಶ್ರುತರಾದ, ಶೀಲವಂತ, ಕುಲೀನ, ಸಂವತ್ಸರ-ಜ್ಯೋತಿಷ್ಯಗಳಲ್ಲಿ ತೊಡಸಿಕೊಂಡ, ನಕ್ಷತ್ರ-ಯೋಗ-ನಿಶ್ಚಯಗಳನ್ನು ತಿಳಿದಿರುವ ವೃದ್ಧ ಬ್ರಾಹ್ಮಣರಿದ್ದಾರೆ. ಮೇಲಿನ ಮತ್ತು ಕೆಳಗಿನ ದೈವಯುಕ್ತ ರಹಸ್ಯವನ್ನು, ದಿವ್ಯ ಪ್ರಶ್ನೆಗಳು, ಮೃಗಚಕ್ರಗಳು ಮತ್ತು ಮುಹೂರ್ತಗಳನ್ನು ಅರಿತ ಅವರು ಕುರು-ಸೃಂಜಯರ ಮಹಾ ಕ್ಷಯವನ್ನು ಮತ್ತು ಪಾಂಡವರ ಜಯವನ್ನು ಅರುಹಿದ್ದಾರೆ. ನಮ್ಮ ಅಜಾತಶತ್ರುವೂ ವೈರಿಗಳ ನಿಗ್ರಹದಲ್ಲಿ ಸಿದ್ಧಿಯನ್ನು ಕಾಣುತ್ತಾನೆ. ಅಪರೋಕ್ಷವಿದ್ಯೆಯನ್ನು ತಿಳಿದ ವೃಷ್ಣಿಸಿಂಹ ಜನಾರ್ದನನೂ ಕೂಡ ಇದರಲ್ಲಿ ಸಂಶಯಪಡುವುದಿಲ್ಲ. ನಾನೂ ಕೂಡ ಭವಿಷ್ಯದ ರೂಪವನ್ನು ಬಲ್ಲೆ. ಅಪ್ರಮತ್ತನಾಗಿ ಬುದ್ಧಿಯಿಂದ ನೋಡುತ್ತೇನೆ. ನನ್ನ ಪುರಾತನ ದೃಷ್ಟಿಯು ವ್ಯಥಿತವಾಗಿಲ್ಲ. ಯುದ್ಧಮಾಡುವ ಧಾರ್ತರಾಷ್ಟ್ರರು ಇಲ್ಲವಾಗುತ್ತಾರೆ. ಹಿಡಿಯದೆಯೇ ನನ್ನ ಗಾಂಡೀವವು ಜೃಂಭಿಸುತ್ತಿದೆ. ಮುಟ್ಟದೆಯೇ ನನ್ನ ಧನುಸ್ಸಿನ ದಾರವು ಕಂಪಿಸುತ್ತಿದೆ. ಬಾಣಗಳು ಕೂಡ ನನ್ನ ಭತ್ತಳಿಕೆಯ ಬಾಯಿಯಿಂದ ಹಾರುತ್ತಿವೆ. ಪುನಃ ಪುನಃ ಅವುಗಳು ಹಾರಿಹೋಗಲು ಬಯಸುತ್ತಿವೆ. ಹಾವು ಜೀರ್ಣವಾದ ತನ್ನ ಪೊರೆಯನ್ನು ಕಳಚಿಕೊಳ್ಳುವಂತೆ ನನ್ನ ಖಡ್ಗವು ಪ್ರಸನ್ನವಾಗಿ ಕೋಶದಿಂದ ಹೊರಬರುತ್ತದೆ. ನನ್ನ ಧ್ವಜದಲ್ಲಿರುವ ರೌದ್ರರೂಪಿಗಳು ‘ಕಿರೀಟೀ! ಎಂದು ನಿನ್ನ ರಥವನ್ನು ಕಟ್ಟುತ್ತೀಯೆ?’ ಎಂದು ಹೇಳುತ್ತವೆ. ರಾತ್ರಿಯಲ್ಲಿ ನರಿಗಳ ಪಡೆಗಳು ಕೂಗುತ್ತವೆ. ಆಕಾಶದಿಂದ ರಾಕ್ಷಸರು ಬೀಳುತ್ತಿದ್ದಾರೆ. ಮೃಗಗಳು, ನರಿಗಳು, ಶಿತಿಕಂಠಗಳು, ಕಾಗೆಗಳು, ಹದ್ದುಗಳು, ಗಿಡುಗಗಳು, ಮತ್ತು ಹಯೀನಗಳು ಹೊರಬಂದಿವೆ. ಬಿಳಿಯ ಕುದುರೆಗಳನ್ನು ಕಟ್ಟಿದ ನನ್ನ ರಥವನ್ನು ನೋಡಿ ಹಿಂದೆ ಹಿಂದೆ ಗರುಡಗಳು ಹಾರುತ್ತವೆ. ನಾನೊಬ್ಬನೇ ಬಾಣಗಳ ಮಳೆಯನ್ನು ಸುರಿಸಿ ಪಾರ್ಥಿವ ಯೋಧರನೆಲ್ಲ ಮೃತ್ಯುಲೋಕಕ್ಕೆ ಕಳುಹಿಸುತ್ತೇನೆ. ಬೇಸಗೆಯಲ್ಲಿ ಗಹನವಾದ ಕಾಡನ್ನು ಸುಡುವ ಅಗ್ನಿಯಂತೆ ನಾನು ನನ್ನ ಪ್ರತ್ಯೇಕ ಅಸ್ತ್ರ – ಸ್ಥೂಣಕರ್ಣ, ಘೋರ ಪಾಶುಪತ, ಬ್ರಹ್ಮಾಸ್ತ್ರ ಮತ್ತು ಶಕ್ರನು ತಿಳಿಸಿದ ಅಸ್ತ್ರ - ಮಾರ್ಗಗಳನ್ನು ಮಾಡಿಕೊಳ್ಳುತ್ತೇನೆ. ಕೊಲ್ಲುವುದನ್ನೇ ಗುರಿಯಾಗಿಟ್ಟುಕೊಂಡು, ವೇಗವಾಗಿ ಬಾಣಪ್ರಯೋಗಮಾಡಿ ನಾನು ಪ್ರಜೆಗಳು ಯಾರನ್ನೂ ಉಳಿಸುವುದಿಲ್ಲ. ಇದೇ ಭಾವದಲ್ಲಿ ನನಗೆ ಪರಮ ಶಾಂತಿಯು ದೊರೆಯುತ್ತದೆ. ನನ್ನ ಸ್ಥಿರತೆಯ ಕುರಿತು ಅವರಿಗೆ ಹೇಳು ಗಾವಲ್ಗಣೇ! ಯಾರ ಸಹಾಯದಿಂದ ತಮ್ಮ ವೈರಿಗಳನ್ನು – ಇಂದ್ರಪ್ರಮುಖರಾದ ದೇವತೆಗಳ ಸಹಾಯವೇ ಅವರಿಗಿದ್ದರೂ - ಗೆಲ್ಲಬಲ್ಲ ಸಚಿವರೊಂದಿಗೆ ಅವರು ಕಲಹವನ್ನು ಹೂಡುತ್ತಿದ್ದಾರೆ? ಧಾರ್ತರಾಷ್ಟ್ರನ ಈ ಮೂಢತನವನ್ನು ನೋಡು! ವೃದ್ಧ ಭೀಷ್ಮ ಶಾಂತನವ, ಕೃಪ, ದ್ರೋಣ, ಅವನ ಮಗ, ಧೀಮಂತ ವಿದುರ ಇವರೆಲ್ಲರೂ ಇದನ್ನೇ ಹೇಳಿರಬಹುದು. ಕುರುಗಳೆಲ್ಲರೂ ಆಯುಷ್ಮಂತರಾಗಿರಲಿ!””

ಭೀಷ್ಮ-ದ್ರೋಣರ ಮಾತು

ಆ ರಾಜರುಗಳೆಲ್ಲರೂ ಸೇರಿರುವಾಗ ಶಾಂತನವ ಭೀಷ್ಮನು ದುರ್ಯೋಧನನಿಗೆ ಈ ಮಾತುಗಳನ್ನು ಹೇಳಿದನು: “ಒಮ್ಮೆ ಬೃಹಸ್ಪತಿ ಮತ್ತು ಇಂದ್ರರು ಬ್ರಹ್ಮನ ಉಪಸ್ಥಿತಿಯಲ್ಲಿ ಬಂದರು. ಇಂದ್ರನೊಡನೆ ಮರುತರು, ವಸುಗಳು, ಅಶ್ವಿನಿಯರು, ಆದಿತ್ಯರು, ಸಾಧ್ಯರು, ಸಪ್ತರ್ಷಿಗಳು, ದಿವದಲ್ಲಿರುವ ವಿಶ್ವಾವಸುಗಳು, ಗಂಧರ್ವರು, ಶುಭ ಅಪ್ಸರಗಣಗಳೂ ಇದ್ದರು. ಅಲ್ಲಿಗೆ ಹೋಗಿ ಲೋಕವೃದ್ಧ ಪಿತಾಮಹನಿಗೆ ನಮಸ್ಕರಿಸಿ ದಿವೌಕಸರು ವಿಶ್ವೇಶನನ್ನು ಸುತ್ತುವರೆದು ಕುಳಿತುಕೊಂಡರು. ಅದೇ ಸಮಯದಲ್ಲಿ ತಮ್ಮ ಮನಸ್ಸಿನಿಂದಲೇ ದಿವೌಕಸರ ತೇಜಸ್ಸನ್ನು ಸೆಳೆಯುತ್ತಾ ಪೂರ್ವದೇವರಾದ ನರ-ನಾರಾಯಣ ಋಷಿಗಳು ಅಲ್ಲಿಂದ ಹೊರಟರು. ಬೃಹಸ್ಪತಿಯು ಬ್ರಹ್ಮನನ್ನು ಇವರು ಯಾರೆಂದು ಪ್ರಶ್ನಿಸಿದನು. “ಅವರಿಬ್ಬರೂ ನಿನ್ನನ್ನು ಪೂಜಿಸದೇ ಹೋದರು. ಪಿತಾಮಹ! ಅವರ ಕುರಿತು ಹೇಳು!”

“ಬ್ರಹ್ಮನು ಹೇಳಿದನು: “ಪೃಥ್ವಿ-ಆಕಾಶಗಳನ್ನು ಬೆಳಗಿಸುವಂತೆ ಪ್ರಜ್ವಲಿಸುತ್ತಿರುವ, ಎಲ್ಲವನ್ನು ವ್ಯಾಪಿಸಿ, ಎಲ್ಲವಕ್ಕೂ ಆಧಾರರಾಗಿರುವ, ಮಹಬಲಶಾಲಿಗಳಾದ ಈ ಇಬ್ಬರು ತಪಸ್ವಿಗಳು ನರ-ನಾರಾಯಣರು. ಲೋಕಲೋಕಗಳಲ್ಲಿ ಇರುತ್ತಾರೆ. ಅವರ ತಪಸ್ಸಿನಿಂದ ಊರ್ಜಿತರಾಗಿದ್ದಾರೆ. ಮಹಾಸತ್ವಪರಾಕ್ರಮಿಗಳಾಗಿದ್ದಾರೆ. ಇಬ್ಬರೂ ತಮ್ಮ ಕರ್ಮಗಳಿಂದಲೇ ಲೋಕಗಳಿಗೆ ಆನಂದವನ್ನು ತರುತ್ತಾರೆ. ದೇವಗಂಧರ್ವ ಪೂಜಿತರಾದ ಅವರು ಅಸುರ ವಧೆಗಾಗಿಯೇ ಇದ್ದಾರೆ.”

“ಅದನ್ನು ಕೇಳಿ ಶಕ್ರನು ಅವರಿಬ್ಬರೂ ತಪಸ್ಸನ್ನು ತಪಿಸುತ್ತಿದ್ದಲ್ಲಿಗೆ, ಬೃಹಸ್ಪತಿಯುನ್ನು ಮುಂದಿಟ್ಟುಕೊಂಡು ದೇವಗಣಗಳೊಂದಿಗೆ ಹೋದನು. ಆಗ ದೇವತೆಗಳಿಗೆ ಅಸುರರಿಂದ ಹುಟ್ಟಿದ ಘೋರ ಭಯದಿಂದ ದಿವೌಕಸರು ಮಹಾತ್ಮ ನರನಾರಾಯಣರಲ್ಲಿ ವರವನ್ನು ಬೇಡಿದರು. ಅವರು ಕೇಳು ಎಂದು ಹೇಳಲು ಶಕ್ರನು ಸಹಾಯ ಮಾಡಬೇಕು ಎಂದು ಅವರಲ್ಲಿ ಕೇಳಿಕೊಂಡನು. ಆಗ ಅವರಿಬ್ಬರೂ ಶಕ್ರನಿಗೆ ನೀನು ಬಯಸಿದುದನ್ನು ಮಾಡುತ್ತೇವೆ ಎಂದರು. ಅವರಿಬ್ಬರ ಸಹಾಯದಿಂದ ಶಕ್ರನು ದೈತ್ಯದಾನವರನ್ನು ಜಯಿಸಿದನು. ಪರಂತಪ ನರನು ಸಂಗ್ರಾಮದಲ್ಲಿ ಇಂದ್ರನ ಶತ್ರುಗಳಾದ ಪೌಲೋಮರನ್ನೂ ಕಾಲಖಂಜರನ್ನೂ ನೂರಾರು ಸಾವಿರಾರು ಸಂಖ್ಯೆಗಳಲ್ಲಿ ಸಂಹರಿಸಿದನು. ಇದೇ ಅರ್ಜುನನು ರಣದಲ್ಲಿ ತಿರುಗುತ್ತಿರುವ ರಥದಲ್ಲಿ ನಿಂತು ನುಂಗಲು ಬರುತ್ತಿದ್ದ ಜಂಭನ ಶಿರವನ್ನು ಭಲ್ಲೆಯಿಂದ ಕತ್ತರಿಸಿದನು. ಇವನೇ ಸಮುದ್ರದ ಆಚೆಯಿರುವ ಹಿರಣ್ಯಪುರದಲ್ಲಿ ವಾಸಿಸುತ್ತಿರುವ ಅರವತ್ತು ಸಾವಿರ ನಿವಾತಕವಚರನ್ನು ರಣದಲ್ಲಿ ಸಂಹರಿಸಿದನು. ಈ ಪರಪುರಂಜಯ ಮಹಾಬಾಹು ಅರ್ಜುನನೇ ಇಂದ್ರನೊಡನೆ ದೇವತೆಗಳನ್ನು ಗೆದ್ದು ಜಾತವೇದಸನನ್ನು ತೃಪ್ತಿಗೊಳಿಸಿದನು. ನಾರಾಯಣನೂ ಕೂಡ ಅಲ್ಲಿ ಎನ್ನೂ ಹೆಚ್ಚಿನ ಅನ್ಯರನ್ನು ಸಂಹರಿಸಿದನು. ಆ ಈರ್ವರು ಮಹಾವೀರ್ಯರು ಒಂದಾಗಿದ್ದುದ್ದನ್ನು ನೋಡು. ಮಹಾರಥಿ ವೀರ ವಾಸುದೇವ ಅರ್ಜುನರು ಒಂದಾಗಿದ್ದಾರೆ. ಅವರೇ ಪೂರ್ವದೇವರಾದ ನರನಾರಾಯಣದೇವರೆಂದು ಕೇಳಿದ್ದೇವೆ. ಮಾನುಷಲೋಕದಲ್ಲಿ ಅವರು ಇಂದ್ರನೂ ಸೇರಿ ಸುರಾಸುರರಿಗೆ ಅಜೇಯರು. ಆ ನಾರಾಯಣನೇ ಕೃಷ್ಣ. ಫಲ್ಗುನನನು ನರನೆಂದು ಹೇಳುತ್ತಾರೆ. ನಾರಾಯಣ ಮತ್ತು ನರರ ಸತ್ವ ಒಂದೇ. ಆಕೃತಿ ಮಾತ್ರ ಎರಡು. ಅವರ ಕರ್ಮಗಳಿಂದ ಇಬ್ಬರೂ ಅಕ್ಷಯ ಲೋಕಗಳನ್ನು ಪಡೆದಿದ್ದಾರೆ. ಯುದ್ಧದ ಕಾಲವು ಬಂದಾಗಲೆಲ್ಲಾ ಪುನಃ ಪುನಃ ಜನ್ಮ ತಾಳುತ್ತಾರೆ. ಆದುದರಿಂದ ಅವರ ಕರ್ಮವೇ ಹೋರಾಡುವುದು. ಇದನ್ನು ವೇದವಿದು ನಾರದನು ವೃಷ್ಣಿಗಳೆಲ್ಲರಿಗೆ ಹೇಳಿ ತಿಳಿಸಿದ್ದಾನೆ. ಮಗೂ! ದುರ್ಯೋಧನ! ಎಂದು ನೀನು ಶಂಖಚಕ್ರಗದಾಪಾಣಿಯಾದ ಕೇಶವನನ್ನು, ಮತ್ತು ಅಸ್ತ್ರಗಳನ್ನು ಹಿಡಿದಿರುವ ಭೀಮಧನ್ವಿ ಅರ್ಜುನನನ್ನು, ಆ ಸನಾತನ ಮಹಾವೀರ ಕೃಷ್ಣರಿಬ್ಬರೂ ಒಂದೇ ರಥದಲ್ಲಿರುವುದನ್ನು ನೋಡುತ್ತೀಯೋ ಅಂದು ನೀನು ನನ್ನ ಮಾತನ್ನು ನೆನಪಿಸಿಕೊಳ್ಳುತ್ತೀಯೆ. ಬಹುಷಃ ಕುರುಗಳ ವಿನಾಶವು ಇನ್ನೂ ಬಂದಿಲ್ಲ; ಆದರೆ ನಿನ್ನ ಬುದ್ಧಿಯು ಧರ್ಮ-ಅರ್ಥಗಳಿಂದ ತಪ್ಪಿರಬಹುದೇ? ಈಗ ನನ್ನ ಮಾತುಗಳನ್ನು ನೀನು ತಿಳಿದುಕೊಳ್ಳದೇ ಇದ್ದರೆ ಇದನ್ನೇ ಬಹಳಷ್ಟು ಜನರು ಹತರಾದ ಮೇಲೆ ಕೇಳುತ್ತೀಯೆ. ಎಲ್ಲ ಕುರುಗಳೂ ನಿನ್ನ ಮಾತುಗಳನ್ನೇ ಮನ್ನಿಸುತ್ತಾರೆ. ಕೇವಲ ಮೂರು ಮಂದಿಗಳ ಅಭಿಪ್ರಾಯಗಳನ್ನು ನೀನು ಸ್ವೀಕರಿಸುತ್ತೀಯೆ - ರಾಮನಿಂದ ಶಪಿತನಾದ ಆ ದುರ್ಜಾತ ಸೂತಪುತ್ರ ಕರ್ಣನ, ಸೌಬಲ ಶಕುನಿಯ ಮತ್ತು ಆ ನಿನ್ನ ನೀಚ ಪಾಪಿ ತಮ್ಮ ದುಃಶಾಸನನ.”

ಕರ್ಣನು ಹೇಳಿದನು: “ಬಹುವರ್ಷ ಬಾಳಿದ ಪಿತಾಮಹ! ನನ್ನ ಕುರಿತು ಆ ರೀತಿ ಮಾತನಾಡಬೇಡ! ಸ್ವಧರ್ಮವನ್ನು ತ್ಯಜಿಸದೇ ಕ್ಷತ್ರಧರ್ಮವನ್ನು ನಾನು ಪಾಲಿಸುತ್ತಿದ್ದೇನೆ. ಎಲ್ಲಿ ನಾನು ಕೆಟ್ಟದಾಗಿ ನಡೆದುಕೊಂಡಿದ್ದೇನೆಂದು ನೀನು ನನ್ನನ್ನು ಈ ರೀತಿ ಹೀಯಾಳಿಸುತ್ತಿದ್ದೀಯೆ? ನಾನು ಎಂದಾದರೂ ತಪ್ಪು ಮಾಡಿದ್ದುದು ಧಾರ್ತರಾಷ್ಟ್ರನಿಗೆ ತಿಳಿದಿಲ್ಲವಲ್ಲ? ನನ್ನ ಎಲ್ಲ ಕಾರ್ಯಗಳೂ ರಾಜ ಧೃತರಾಷ್ಟ್ರನಿಗೆ ಮತ್ತು ಹಾಗೆಯೇ ದುರ್ಯೋಧನನಿಗೆ ಕೂಡ ಒಳ್ಳೆಯದಾಗಲೆಂದೇ. ಅವನೇ ರಾಜ್ಯವನ್ನು ನಡೆಸುತ್ತಿದ್ದಾನಲ್ಲ!”

ಕರ್ಣನ ಆ ಮಾತುಗಳನ್ನು ಕೇಳಿ ಶಾಂತನವ ಭೀಷ್ಮನು ಮಹಾರಾಜ ಧೃತರಾಷ್ಟ್ರನಿಗೆ ಪುನಃ ಈ ಮಾತುಗಳನ್ನಾಡಿದನು: “ಪಾಂಡವರನ್ನು ನಾನು ಕೊಲ್ಲುತ್ತೇನೆ ಎಂದು ನಿತ್ಯವೂ ಕೊಚ್ಚಿಕೊಳ್ಳುವ ಇವನು ಮಹಾತ್ಮ ಪಾಂಡವರ ಒಂದು ಕಾಲು ಭಾಗಕ್ಕೂ ಸಮನಲ್ಲ. ನಿನ್ನ ದುರಾತ್ಮ ಮಕ್ಕಳಿಗೆ ಬರಲಿರುವ ಗಂಡಾಂತರವು ಈ ದುರ್ಮತಿ ಸೂತಪುತ್ರನ ಕೆಲಸ ಎನ್ನುವುದನ್ನು ತಿಳಿದುಕೋ. ಇವನನ್ನು ಆಶ್ರಯಿಸಿ ನಿನ್ನ ಮಗ ಮಂದಬುದ್ಧಿ ಸುಯೋಧನನು ಆ ವೀರ ಅರಿಂದಮ ದೇವಪುತ್ರರನ್ನು ಅಪಮಾನಿಸುತ್ತಿದ್ದಾನೆ. ಒಬ್ಬೊಬ್ಬರಾಗಿ ಪಾಂಡವರೆಲ್ಲರೂ ಈ ಹಿಂದೆ ಮಾಡಿದಂತಹ ಯಾವ ದುಷ್ಕರ ಕರ್ಮವನ್ನು ಇವನು ಈ ಹಿಂದೆ ಮಾಡಿದ್ದಾನೆ? ವಿರಾಟನಗರದಲ್ಲಿ ತನ್ನ ಪ್ರಿಯ ತಮ್ಮನೇ ವಿಕ್ರಮಿ ಧನಂಜಯನಿಂದ ಹತನಾಗಲು ಇವನೇನು ಮಾಡಿದ? ಕುರುಗಳೆಲ್ಲರನ್ನೂ ಒಟ್ಟಿಗೇ ಧನಂಜಯನು ಆಕ್ರಮಣಿಸಿ, ಸೋಲಿಸಿ ಗೋವುಗಳನ್ನು ಕಸಿದುಕೊಂಡು ಹೋದನು. ಆಗ ಇವನು ಪ್ರವಾಸದಲ್ಲಿದ್ದನೇ? ಘೋಷಯಾತ್ರೆಯಲ್ಲಿ ನಿನ್ನ ಮಗನನ್ನು ಗಂಧರ್ವರು ಎತ್ತಿಕೊಂಡು ಹೋದಾಗ ಈಗ ಗೂಳಿಯಂತೆ ಸೊಕ್ಕಿ ಉರಿಯುತ್ತಿರುವ ಈ ಸೂತಪುತ್ರನು ಎಲ್ಲಿದ್ದ? ಅಲ್ಲಿ ಕೂಡ ಮಹಾತ್ಮ ಪಾರ್ಥ-ಭೀಮರು ಮತ್ತು ಯಮಳರೀರ್ವರು ಬಂದು ಗಂಧರ್ವರನ್ನು ಪರಾಜಿತಗೊಳಿಸಲಿಲ್ಲವೇ? ಈ ಧರ್ಮಾರ್ಥಲೋಪಿ ಆತ್ಮಶ್ಲಾಘಿಯು ಹೇಳುವ ಸುಳ್ಳುಗಳು ಬಹಳಷ್ಟಿವೆ. ನಿನಗೆ ಮಂಗಳವಾಗಲಿ!”

ಭೀಷ್ಮನ ಆ ಮಾತುಗಳನ್ನು ಕೇಳಿ ಮಹಾಮನಸ್ವಿ ಭಾರದ್ವಾಜನು ರಾಜರ ಮಧ್ಯದಲ್ಲಿ ಧೃತರಾಷ್ಟ್ರನನ್ನು ಗೌರವಿಸಿ ಹೇಳಿದನು: “ಭರತಶ್ರೇಷ್ಠ! ನೃಪ! ಭೀಷ್ಮನು ಏನು ಹೇಳುತ್ತಿದ್ದಾನೋ ಅದನ್ನು ಮಾಡುವಂಥವನಾಗು. ತಮ್ಮದೇ ಬಯಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ಆಡುವವರ ಮಾತುಗಳನ್ನು ಕೇಳಬಾರದು. ಯುದ್ಧಕ್ಕಿಂತ ಮೊದಲು ಪಾಂಡವರೊಂದಿಗೆ ಕೂಡುವುದು ಸಾಧುವೆಂದು ನನಗನ್ನಿಸುತ್ತದೆ. ಸಂಜಯನು ಅರ್ಜುನನ ಯಾವ ಮಾತುಗಳನ್ನು ಬಂದು ತಿಳಿಸಿದನೋ ಅವೆಲ್ಲವನ್ನೂ ಆ ಪಾಂಡವನು ಮಾಡುತ್ತಾನೆಂದು ನಾನು ಬಲ್ಲೆ. ಈ ಮೂರು ಲೋಕಗಳಲ್ಲಿಯೂ ಅವನಂತಹ ಧನುರ್ಧರನಿಲ್ಲ.”

ಆದರೆ ದ್ರೋಣ-ಭೀಷ್ಮರ ಆ ಮಾತುಗಳನ್ನು ಅನಾದರಿಸಿ ರಾಜನು ಪಾಂಡವರ ಕುರಿತು ಸಂಜಯನನ್ನು ಪುನಃ ಪಶ್ನಿಸಿದನು. ಯಾವಾಗ ರಾಜನು ಭೀಷ್ಮ-ದ್ರೋಣರಿಗೆ ಉತ್ತರವಾಗಿ ಮಾತನಾಡಲಿಲ್ಲವೋ ಆಗಲೇ ಎಲ್ಲ ಕುರುಗಳೂ ಜೀವಿತದ ನಿರಾಶರಾದರು.

ಸಂಜಯನು ಪಾಂಡವ ಯೋಧರನ್ನು ವರ್ಣಿಸಿದುದು

ಧೃತರಾಷ್ಟ್ರನು ಹೇಳಿದನು: “ಪಾಂಡವ ರಾಜ ಧರ್ಮಪುತ್ರನು ತನ್ನನ್ನು ವಿರೋಧಿಸಿ ಬಹುದೊಡ್ಡ ಸೇನೆಯು ಸೇರಿದೆ ಎಂದು ಕೇಳಿ ಏನು ಹೇಳಿದನು? ಯುದ್ಧಕ್ಕೆ ತಯಾರಿ ನಡೆಸಿರುವ ಯುಧಿಷ್ಠಿರನು ಏನನ್ನು ಬಯಸುತ್ತಿದ್ದಾನೆ? ಅವನ ಸಹೋದರ-ಮಕ್ಕಳಲ್ಲಿ ಯಾರಮುಖವನ್ನು ಚಿಂತೆಯಿಂದ ನೋಡುತ್ತಾನೆ? ಅವನೊಡನಿರುವ ಯಾರು, ಈ ಮಂದಬುದ್ಧಿಗಳಿಂದ ಮೋಸಗೊಂಡು ಕುಪಿತನಾಗಿರುವ ಆ ಧರ್ಮಜ್ಞ ಧರ್ಮಚಾರಿಣಿಯನ್ನು ಯುದ್ಧ ಅಥವಾ ಶಾಂತಿಗೆ ತಡೆಯುತ್ತಾರೆ?”

ಸಂಜಯನು ಹೇಳಿದನು: “ಪಾಂಚಾಲರೂ ಪಾಂಡವರೂ ಒಟ್ಟಿಗೆ ರಾಜ ಯುಧಿಷ್ಠಿರನ ಮುಖವನ್ನು ನೋಡುತ್ತಾರೆ. ಅವನೇ ಎಲ್ಲರನ್ನೂ ಆಳುತ್ತಾನೆ. ನಿನಗೆ ಮಂಗಳವಾಗಲಿ! ಪಾಂಡವರ ಮತ್ತು ಪಾಂಚಾಲರ ರಥಸಮೂಹಗಳು ಬಂದು ಕುಂತೀಪುತ್ರ ಯುಧಿಷ್ಠಿರನನ್ನು ಅಭಿನಂದಿಸುತ್ತವೆ. ಕತ್ತಲೆಯಿಂದ ಸೂರ್ಯನು ಉದಯಿಸುವಂತೆ ತೇಜೋರಾಶಿಯಿಂದ ಬೆಳಗುವ, ದೀಪ್ತತೇಜಸ ಕೌಂತೇಯನನ್ನು ಪಾಂಚಾಲರು ಹರ್ಷಗೊಳಿಸುತ್ತಾರೆ. ಗೋಪಾಲಕರು ಮತ್ತು ಕುರಿಕಾಯುವವರು ಯುಧಿಷ್ಠಿರನನ್ನು ಹರ್ಷಗೊಳಿಸುತ್ತಾರೆ. ಪಾಂಚಾಲರು, ಕೇಕಯರು, ಮತ್ಸ್ಯರೂ ಕೂಡ ಪಾಂಡವನನ್ನು ಪ್ರತಿನಂದಿಸುತ್ತಾರೆ. ಬ್ರಾಹ್ಮಣ ಮತ್ತು ರಾಜಪುತ್ರಿಯರು, ವೈಶ್ಯರ ಹೆಣ್ಣುಮಕ್ಕಳೂ ಆಟವಾಡುತ್ತಾ ಸಂನ್ನದ್ಧನಾದ ಪಾರ್ಥನನ್ನು ಕಾಣಲು ಬರುತ್ತಾರೆ.”

ಧೃತರಾಷ್ಟ್ರನು ಹೇಳಿದನು: “ಸಂಜಯ! ಯಾವುದರಿಂದ ಪಾಂಡವರು ನಮ್ಮನ್ನು ಹೋರಾಡಲು ಸಿದ್ಧರಾಗಿದ್ದಾರೋ ಆ ಸೋಮಕ ದೃಷ್ಟಧ್ಯುಮ್ನನ ಸೇನೆ-ಬಲಗಳು ಎಷ್ಟು ಎನ್ನುವುದನ್ನು ನಮಗೆ ಹೇಳು.”

ಕುರುಗಳು ಸೇರಿದ್ದ ಆ ಸಭೆಯಲ್ಲಿ ಹೀಗೆ ಕೇಳಲ್ಪಟ್ಟ ಗಾವಲ್ಗಣಿ ಸೂತನು ತುಂಬ ದೀರ್ಘವಾದ ನಿಟ್ಟುಸಿರನ್ನು ಬಿಟ್ಟು, ಸ್ವಲ್ಪಹೊತ್ತು ಯೋಚನೆಯಲ್ಲಿ ಮುಳುಗಿದಂತಿದ್ದು, ಇದ್ದಕ್ಕಿದ್ದ ಹಾಗೆಯೇ ಏನೂ ಕಾರಣವಿಲ್ಲದೇ ಕೆಳಗೆ ಬಿದ್ದನು. ಆಗ ರಾಜಸಂಸದಿಯ ಸಭೆಯಲ್ಲಿ ವಿದುರನು ಜೋರಾಗಿ ಹೇಳಿದನು: “ಮಹಾರಾಜ! ಇದೋ ಸಂಜಯನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದಿದ್ದಾನೆ. ಅವನ ಪ್ರಜ್ಞೆ-ಚೇತನಗಳು ಕ್ಷೀಣವಾಗಿ ಅವನಿಗೆ ಮಾತನಾಡಲಾಗುತ್ತಿಲ್ಲ.”

ಧೃತರಾಷ್ಟ್ರನು ಹೇಳಿದನು: “ಮಹಾರಥಿ ಪುರುಷವ್ಯಾಘ್ರರ ಅಪಾರ ಸೇನೆಯನ್ನು ನೋಡಿ ಸಂಜಯನ ಮನಸ್ಸು ಉದ್ವೇಗಗೊಂಡಿರಬಹುದು.”

ಆರೈಕೆಗೊಂಡು ಚೇತರಿಸಿಕೊಂಡ ಸಂಜಯನು ಕುರುಸಂಸದಿಯ ಸಭೆಯಲ್ಲಿ ಮಹಾರಾಜ ಧೃತರಾಷ್ಟ್ರನಿಗೆ ಹೇಳಿದನು: “ರಾಜೇಂದ್ರ! ಮತ್ಸ್ಯರಾಜನ ಮನೆಯಲ್ಲಿ ವಾಸಿಸಿ ಕಷ್ಟಪಟ್ಟು ಸಣ್ಣವರಾಗಿರುವ ಆ ಮಹಾರಥಿ ಕುಂತಿಪುತ್ರರನ್ನು ನಾನು ನೋಡಿದ್ದೇನೆ. ಈಗ ಯಾರೊಂದಿಗೆ ಸೇರಿ ಪಾಂಡವರು ನಿನ್ನನ್ನು ಎದುರಿಸುವವರಿದ್ದಾರೆ ಎನ್ನುವುದನ್ನು ಕೇಳು. ಯಾರು ರೋಷವನ್ನಾಗಲೀ, ಭಯವನ್ನಾಗಲೀ, ಕಾಮವನ್ನಾಗಲೀ ಅಥವಾ ಅರ್ಥವನ್ನಾಗಲೀ ಕಾರಣವಾಗಿಟ್ಟುಕೊಂಡು ಧರ್ಮ ಮತ್ತು ಸತ್ಯಗಳನ್ನು ಎಂದೂ ಮೀರುವುದಿಲ್ಲವೋ, ಯಾರು ಧರ್ಮದ ಪ್ರಮಾಣವಾಗಿರುವನೋ, ಆ ಧರ್ಮಭೃತರಲ್ಲಿ ಶ್ರೇಷ್ಠ, ಅಜಾತ ಶತ್ರು ಪಾಂಡವನು ನಿನ್ನನ್ನು ಎದುರಿಸಿ ಹೋರಾಡುವನು. ಯಾರ ಬಾಹುಬಲಕ್ಕೆ ಸಮನಾದವರು ಭೂಮಿಯಲ್ಲಿ ಯಾರೂ ಇಲ್ಲವೋ, ಯಾವ ಧನುರ್ಧರನು ಎಲ್ಲ ಮಹೀಪಾಲರನ್ನು ವಶಮಾಡಿಕೊಂಡನೋ ಆ ಭೀಮಸೇನನೊಂದಿಗೆ ಪಾಂಡವನು ನಿನ್ನನ್ನು ಎದುರಿಸಿ ಹೋರಾಡುತ್ತಾನೆ. ಜತುಗೃಹದಿಂದ ಪಲಾಯನ ಮಾಡುವಾಗ ಪುರುಷಾದಕ ಹಿಡಿಂಬನಿಂದ ರಕ್ಷಿಸಿದ ಕುಂತೀಪುತ್ರ ವೃಕೋದರ, ಯಾಜ್ಞಸೇನಿಯನ್ನು ಅಪಹರಿಸಿದ ಸಿಂಧುರಾಜನನ್ನು ಹಿಡಿದು ಅವಳನ್ನು ರಕ್ಷಿಸಿದ ಕುಂತೀಪುತ್ರ ವೃಕೋದರ, ಎಲ್ಲ ಪಾಂಡವರೂ ವಾರಣಾವತದಲ್ಲಿ ವಾಸಿಸುವಾಗ ಅವರನ್ನು ಬೆಂಕಿಯಿಂದ ಉಳಿಸಿದ, ಕೃಷ್ಣೆಯ ಪ್ರೀತಿಗೋಸ್ಕರ ಕ್ರೋಧವಶರು ಯಾರಿಂದ ಹತರಾದರೋ, ಯಾರು ವಿಷಮವೂ ಘೋರವೂ ಆದ ಗಂಧಮಾದನ ಪರ್ವತವನ್ನು ಪ್ರವೇಶಿಸಿದನೋ, ಯಾರ ಭುಜಗಳು ಹತ್ತು ಆನೆಗಳ ಸಾರಗಳನ್ನು ಹೊಂದಿ ವೀರ್ಯಶಾಲಿಯಾಗಿರುವನೋ ಆ ಭೀಮಸೇನನೊಂದಿಗೆ ಪಾಂಡವನು ನಿನ್ನೊಡನೆ ಹೋರಾಡುತ್ತಾನೆ. ಜಾತವೇದಸನನ್ನು ತೃಪ್ತಿಗೊಳಿಸಲೋಸುಗ ಹಿಂದೆ ಪುರಂದರನೊಡನೆ ಯುದ್ಧಮಾಡಿ ವಿಜಯವನ್ನು ಸಾಧಿಸಿದ ವೀರ, ಎರಡನೆಯ ಕೃಷ್ಣ, ಯಾರು ಸಾಕ್ಷಾತ್ ಮಹಾದೇವ, ಗಿರೀಶ, ಶೂಲಪಾಣಿ, ದೇವದೇವ, ಉಮಾಪತಿಯನ್ನು ಯುದ್ಧದಲ್ಲಿ ಸಂತೋಷಪಡಿಸಿದನೋ, ಯಾವ ಧನುರ್ಧರನಿಂದ ಲೋಕಪಾಲಕರೆಲ್ಲರೂ ವಶರಾದರೋ ಆ ವಿಜಯನೊಡನೆ ಪಾಂಡವನು ನಿನ್ನನ್ನು ಎದುರಿಸಿ ಹೋರಾಡುತ್ತಾನೆ. ಪಶ್ಚಿಮ ದಿಕ್ಕಿನಲ್ಲಿರುವ ಮ್ಲೇಚ್ಛಗಣಗಳನ್ನು ವಶಪಡೆಸಿಕೊಂಡ ಚಿತ್ರಯೋಧೀ ನಕುಲನು ಯುದ್ಧಮಾಡಲು ಅಲ್ಲಿದ್ದಾನೆ. ಆ ದರ್ಶನೀಯ, ವೀರ, ಧನುರ್ಭೃತ, ಮಾದ್ರೀಪುತ್ರನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ. ಯಾರು ಕಾಶೀ, ಅಂಗ, ಮಾಗಧ, ಕಲಿಂಗರನ್ನು ಯುದ್ಧದಲ್ಲಿ ಜಯಿಸಿದನೋ ಆ ಸಹದೇವನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ. ಯಾರ ವೀರ್ಯಕ್ಕೆ ಸಮಾನರಾದ ನಾಲ್ವರೇ - ಅಶ್ವತ್ಥಾಮ, ಧೃಷ್ಟಕೇತು, ಪ್ರದ್ಯುಮ್ನ ಮತ್ತು ರುಕ್ಮಿ – ಮನುಷ್ಯರು ಈ ಭುವಿಯಲ್ಲಿದ್ದಾರೋ ಆ ಸಹದೇವ, ವಯಸ್ಸಿನಲ್ಲಿ ಯುವಕನಾಗಿರುವ, ಮಾಂದ್ರೀನಂದನನೊಡನೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

“ಸತ್ತನಂತರವೂ ಭೀಷ್ಮನ ವಧೆಯನ್ನು ಇಚ್ಛಿಸಿ ಘೋರ ತಪಸ್ಸನ್ನು ಆಚರಿಸಿದ ಆ ಪುರಾತನ ಸತೀ ಕಾಶಿಕನ್ಯೆಯು ದೈವದಿಂದ ಪಾಂಚಾಲನ ಮಗಳಾಗಿ ಹುಟ್ಟಿ ನಂತರ ಗಂಡಾದ, ಪುರುಷವ್ಯಾಘ್ರ, ಸ್ತ್ರೀ-ಪುರುಷರ ಗುಣಾಗುಣಗಳನ್ನು ತಿಳಿದಿರುವ, ಕಲಿಂಗರನ್ನು ಯುದ್ಧದಲ್ಲಿ ಎದುರಿಸಿದ ಯುದ್ಧದುರ್ಮದ, ಕೃತಾಸ್ತ್ರ ಪಾಂಚಾಲ ಶಿಖಂಡಿಯು ಕುರುಗಳೊಂದಿಗೆ ಹೋರಾಡುತ್ತಾನೆ. ಮಹೇಷ್ವಾಸ, ರಾಜಪುತ್ರ, ಅಭೇದ್ಯ ಕವಚಗಳನ್ನು ಧರಿಸಿದ ಶೂರ ಐವರು ಕೇಕಯ ಸಹೋದರರು ನಿನ್ನೊಡನೆ ಹೋರಾಡುತ್ತಾರೆ. ಆ ದೀರ್ಘಬಾಹು, ಕ್ಷಿಪ್ರಾಸ್ತ್ರ, ಧೃತಿಮಾನ್, ಸತ್ಯವಿಕ್ರಮಿ, ವೃಷ್ಣಿವೀರ ಯುಯುಧಾನನೊಂದಿಗೆ ನಿನಗೆ ಹೋರಾಡಬೇಕಾಗುತ್ತದೆ. ಮಹಾತ್ಮ ಪಾಂಡವರಿಗೆ ಸಮಯ ಬಂದಾಗ ಶರಣ್ಯನಾಗಿದ್ದ ಆ ವಿರಾಟನನ್ನು ಕೂಡಿ ಪಾಂಡವನು ನಿನ್ನೊಡನೆ ಯುದ್ಧ ಮಾಡುತ್ತಾನೆ. ವಾರಾಣಸೀ ರಾಜ ಕಾಶೀಪತಿ ಮಹಾರಥಿಯು ಅವರ ಪಂಗಡವನ್ನು ಸೇರಿದ್ದಾನೆ. ಅವನನ್ನು ಕೂಡಿ ನಿನ್ನೊಡನೆ ಯುದ್ಧಮಾಡುವನು. ಮಕ್ಕಳಾಗಿದ್ದರೂ ಯುದ್ಧದಲ್ಲಿ ದುರ್ಜಯರಾಗಿರುವ, ಮುಟ್ಟಿದರೆ ವಿಷಸರ್ಪಗಳ ಸಮನಾಗಿರುವ ಮಹಾತ್ಮ ದ್ರೌಪದೇಯರೊಡನೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ. ವೀರ್ಯದಲ್ಲಿ ಕೃಷ್ಣನ ಸಮನಾಗಿರುವ, ಆತ್ಮ ನಿಗ್ರಹದಲ್ಲಿ ಯುಧಿಷ್ಠಿರನ ಸಮನಾಗಿರುವ ಆ ಅಭಿಮನ್ಯುವಿನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ. ವೀರ್ಯದಲ್ಲಿ ಅಪ್ರತಿಮನಾಗಿರುವ, ಕ್ರುದ್ಧನಾದರೆ ಸಮರದಲ್ಲಿ ದುಃಸ್ಸಹನಾದ, ಮಹಾಯಶ, ಮಹಾರಥಿ, ಶಿಶುಪಾಲನ ಮಗ ಧೃಷ್ಟಕೇತುವು ಅವರ ವಶದಲ್ಲಿದ್ದಾನೆ. ಅವನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ.

“ದೇವತೆಗಳಿಗೆ ವಾಸವನಂತೆ ಪಾಂಡವರಿಗೆ ಸಂಶ್ರಯನಾಗಿರುವ ವಾಸುದೇವನೊಂದಿಗೆ ಪಾಂಡವನು ನಿನ್ನನ್ನು ಎದುರಿಸುತ್ತಾನೆ. ಹಾಗೆಯೇ ಚೇದಿಪತಿಯ ಅಣ್ಣ ಶರಭನು ಕರಕರ್ಷಣನೊಡನೆ ಅವರನ್ನು ಸೇರಿದ್ದಾನೆ. ಅವನೂ ಕೂಡ ನಿನ್ನೊಡನೆ ಹೋರಾಡುತ್ತಾನೆ. ಜರಾಸಂಧನ ಮಗ ಸಹದೇವ ಮತ್ತು ಜಯತ್ಸೇನ ಇಬ್ಬರೂ, ಮಹಾ ಸೇನೆಯೊಂದಿಗೆ ಆವೃತನಾದ ಮಹಾತೇಜ ದ್ರುಪದ ಇವರು ಪಾಂಡವರಿಗಾಗಿ ಜೀವವನ್ನು ತೊರೆದು ಯುದ್ಧಮಾಡಲು ಸಿದ್ಧರಾಗಿದ್ದಾರೆ. ಇವರು ಮತ್ತು ಇತರ ಬಹಳಷ್ಟು, ನೂರಾರು, ಪೂರ್ವ-ಪಶ್ಚಿಮಗಳ ಮಹೀಕ್ಷಿತರು, ರಥಗಳನ್ನೇರಿ ಧರ್ಮರಾಜನ ಜೊತೆಗೆ ಬೀಡುಬಿಟ್ಟಿದ್ದಾರೆ.”

ಭೀಮಸೇನನ ಕುರಿತು ತನಗಿರುವ ಭಯವನ್ನು ಧೃತರಾಷ್ಟ್ರನು ತೋಡಿಕೊಳ್ಳುವುದು

ಧೃತರಾಷ್ಟ್ರನು ಹೇಳಿದನು: “ನೀನು ಹೇಳಿದ ಈ ಎಲ್ಲರೂ ಮಹೋತ್ಸಾಹಿಗಳು. ಇವರೆಲ್ಲರೂ ಒಂದಾಗಿ ಸೇರಿ ಭೀಮನೊಬ್ಬನಿಗೇ ಸಮಾನರು. ಭೀಮಸೇನನ ಕುರಿತು ಯೋಚಿಸಿದಾಗಲೆಲ್ಲ ನನಗೆ ಮತ್ತೆ ಮತ್ತೆ ಮಹಾ ಭಯವು ಹುಟ್ಟುತ್ತದೆ. ಕೃದ್ಧನಾದ ಭೀಮನನ್ನು ನೋಡಿ ನನಗೆ ಹುಲಿಯನ್ನು ಕಂಡ ಮಹಾ ರುರುವಿನಂತೆ ಭಯವಾಗುತ್ತದೆ. ಎಲ್ಲ ರಾತ್ರಿಗಳೂ ನಾನು, ಅಬಲ ಪಶುವು ಸಿಂಹದಿಂದ ಹೇಗೋ ಹಾಗೆ ವೃಕೋದರನಿಂದ ಭೀತನಾಗಿ ದೀರ್ಘ ಬಿಸಿ ನಿಃಶ್ವಾಸಗಳನ್ನು ಬಿಡುತ್ತಾ ಎದ್ದಿರುತ್ತೇನೆ. ತೇಜಸ್ಸಿನಲ್ಲಿ ಶಕ್ರನಿಗೆ ಸರಿಸಮನಾದ ಆ ಮಾಹಾಬಾಹುವಿನ ಸರಿಸಮನಾದವ ಯಾರನ್ನೂ ನಾನು ಈ ಸೇನೆಯಲ್ಲಿ ಕಾಣುವುದಿಲ್ಲ. ಆ ಕೌಂತೇಯ ಪಾಂಡವನು ಅಮರ್ಷಣ, ಕಡು ವೈರವನ್ನಿಟ್ಟುಕೊಳ್ಳುವವನು, ಹಾಸ್ಯದಲ್ಲಿಯೂ ನಗುವವನಲ್ಲ, ಸಿಟ್ಟಿನಲ್ಲಿ ಹುಚ್ಚಾಗುತ್ತಾನೆ, ಕೀಳಾಗಿ ನೋಡುತ್ತಾನೆ ಮತ್ತು ಗುಡುಗಿನ ಧ್ವನಿಯಲ್ಲಿ ಮಾತನಾಡುತ್ತಾನೆ. ಆ ಮಹಾವೇಗಿ, ಮಹೋತ್ಸಾಹೀ, ಮಹಾಬಾಹು ಮಹಾಬಲನು ಯುದ್ಧದಲ್ಲಿ ನನ್ನ ಮಂದ ಮಕ್ಕಳನ್ನು ಅಂತ್ಯಗೊಳಿಸುತ್ತಾನೆ. ಅಂತಕ ಯಮನು ದಂಡವನ್ನು ಹಿಡಿದು ಹೇಗೋ ಹಾಗೆ ಗದೆಯನ್ನು ತಿರುಗಿಸುತ್ತಾ ಆ ಕುರುಗಳ ವೃಷಭ ವೃಕೋದರನು ಯುದ್ಧದಲ್ಲಿ ಹೋರಾಡುತ್ತಾನೆ. ಈಗಲೂ ಕೂಡ ಉಕ್ಕಿನಿಂದ ಮಾಡಲ್ಪಟ್ಟ, ಕಾಂಚನಭೂಷಿತ ಆ ಘೋರ ದಂಡವನ್ನು ನೆನೆಸಿಕೊಂಡಾಗಲೆಲ್ಲ ಅದನ್ನು ಎತ್ತಿ ಹಿಡಿದಿರುವ ಒಂದು ಬ್ರಹ್ಮದಂಡದಂತೆ ಕಾಣುತ್ತೇನೆ. ಬಲಶಾಲಿ ಸಿಂಹವು ರುರುಗಳ ಗುಂಪುಗಳ ಮಧ್ಯೆ ಹೇಗೆ ಸುಳಿದಾಡುವುದೋ ಹಾಗೆ ಭೀಮನು ನನ್ನ ಸೇನೆಗಳ ಮಧ್ಯೆ ಸಂಚರಿಸುತ್ತಾನೆ. ಅವನೊಬ್ಬನೇ ನನ್ನ ಮಕ್ಕಳಮೇಲೆ ಕ್ರೂರ ವಿಕ್ರಮವನ್ನು ತೋರಿಸಿದವನು.

“ಬಾಲಕನಾಗಿದ್ದಲೂ ಅವನು ಹೆಚ್ಚು ತಿಂದು ರಭಸದಿಂದ ಯಾವಾಗಲೂ ಅವರನ್ನು ಕಾಡುತ್ತಿದ್ದನು. ಬಾಲ್ಯದಲ್ಲಿ ದುರ್ಯೋಧನಾದಿಗಳು ಅವನೊಡನೆ ಯುದ್ಧಮಾಡುವಾಗ ಆನೆಯಿಂದಲೋ ಎಂಬಂತೆ ಪೀಡಿತರಾದಾಗ ನನ್ನ ಹೃದಯವು ಉದ್ವೇಗಗೊಳ್ಳುತ್ತಿತ್ತು. ನಿತ್ಯವೂ ನನ್ನ ಮಕ್ಕಳು ಅವನ ವೀರ್ಯದಿಂದ ಕಷ್ಟವನ್ನು ಅನುಭವಿಸಿದರು. ಆ ಭೀಮಪರಾಕ್ರಮಿ ಭೀಮನೇ ಈ ಒಡಕಿಗೆ ಕಾರಣ. ಯುದ್ಧದಲ್ಲಿ ಕ್ರೊಧಮೂರ್ಛಿತನಾದ ಭೀಮ, ನಮ್ಮ ಸೇನೆಯ ಸೈನಿಕರು, ಆನೆಗಳು ಮತ್ತು ಕುದುರೆಗಳನ್ನು ಹಿಡಿದು ಮುಂದುವರೆಯುವ ಭೀಮನನ್ನು ನಾನು ಕಾಣುತ್ತಿದ್ದೇನೆ. ಅಸ್ತ್ರಗಳಲ್ಲಿ ದ್ರೋಣಾರ್ಜುನರ ಸಮಾನನಾದ, ವೇಗದಲ್ಲಿ ವಾಯುವೇಗಕ್ಕೆ ಸಮನಾದ ಅಮರ್ಷಣ ಶೂರ ಭೀಮಸೇನನ ಕುರಿತು ನನಗೆ ಹೇಳು! ಆ ರಿಪುಘಾತಿ ಮನಸ್ವಿಯು ಅಂದೇ ನನ್ನ ಮಕ್ಕಳೆಲ್ಲರನ್ನೂ ಕೊಲ್ಲಲಿಲ್ಲ ಎನ್ನುವುದೇ ಅತಿಯಾದ ಲಾಭ ಎಂದು ತಿಳಿದುಕೊಳ್ಳುತ್ತೇನೆ. ಯಾರ ಭೀಮಬಲದಿಂದ ಯಕ್ಷ-ರಾಕ್ಷಸರು ಹತರಾದರೋ ಅವನ ವೇಗವನ್ನು ರಣದಲ್ಲಿ ಮನುಷ್ಯರು ಹೇಗೆ ಸಹಿಸಿಕೊಂಡಾರು? ಬಾಲಕನಾಗಿದ್ದಾಗಲೂ ಕೂಡ ಅವನು ಸಂಪೂರ್ಣ ನನ್ನ ವಶದಲ್ಲಿ ಬಂದಿರಲೇ ಇಲ್ಲ. ಈಗ ಪುನಃ ದುಷ್ಕೃತ್ಯಗಳಿಂದ ರೋಷಗೊಂಡ ಆ ಪಾಂಡವನು ಹೇಗೆ ತಾನೇ ನನ್ನ ಹಿಡಿತಕ್ಕೆ ಬರುತ್ತಾನೆ?

“ನಿಷ್ಠೂರಮಾಡದಿದ್ದರೂ ನಿಷ್ಠುರಗೊಳ್ಳುವ, ಭಜಿಸಿದರೂ ಸೌಮ್ಯಗೊಳ್ಳದ, ಹುಬ್ಬುಗಳನ್ನು ಗಂಟಿಕ್ಕಿ ಕೆಳನೋಡುವ ವೃಕೋದರನನ್ನು ಹೇಗೆ ಶಾಂತಗೊಳಿಸಬೇಕು? ಬಹುನಾಯಕತ್ವವನ್ನುಳ್ಳ, ಅಪ್ರತಿಮ ಬಲಶಾಲಿ ಮತ್ತು ಗೌರವರ್ಣದವನಾದ, ತಾಳವೃಕ್ಷದಂತೆ ಎತ್ತರನಾಗಿರುವ, ಭೀಮಸೇನನು ಪ್ರಮಾಣದಲ್ಲಿ ಅರ್ಜುನನಿಗಿಂತ ಒಂದು ಬೆರಳು ಹೆಚ್ಚಾಗಿದ್ದಾನೆ. ಆ ಬಲಶಾಲಿ ಮಧ್ಯಮ ಪಾಂಡವನು ವೇಗದಲ್ಲಿ ಕುದುರೆಗಳಂತೆ, ಬಲದಲ್ಲಿ ಆನೆಗಳಂತೆ ಇದ್ದಾನೆ. ಚೆನ್ನಾಗಿ ಮಾತನಾಡುತ್ತಾನೆ. ಅವನ ಕಣ್ಣುಗಳು ಜೇನಿನ ಬಣ್ಣದ್ದು. ರೂಪ ಮತ್ತು ವೀರ್ಯದಲ್ಲಿ ಆ ಪಾಂಡವನು ಬಾಲ್ಯದಲ್ಲಿಯೂ ಹಾಗೆಯೇ ಇದ್ದಿದ್ದನೆಂದು ನಾನು ಹಿಂದೆ ವ್ಯಾಸನ ಬಾಯಿಯಿಂದಲೇ ಕೇಳಿದ್ದೆ. ಪ್ರಹಾರಿಗಳಲ್ಲಿ ಶ್ರೇಷ್ಠನಾದ ಬೀಮನು ಕ್ರುದ್ಧನಾಗಿ ರಣದಲ್ಲಿ ಅವನ ಉಕ್ಕಿನ ಗದೆಯಿಂದ ರಥಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ನರರನ್ನೂ ಕೊಲ್ಲುತ್ತಾನೆ. ಅಯ್ಯಾ! ಆ ಅಮರ್ಷಿ, ನಿತ್ಯಸಂರಬ್ಧ, ರೌದ್ರ, ಕ್ರೂರಪರಾಕ್ರಮಿಯನ್ನು ನಾನು ಹಿಂದೆ ಅವನ ಇಚ್ಛೆಗೆ ವಿರುದ್ಧವಾಗಿ ಮಾಡಿ ಅವನನ್ನು ಅಪಮಾನಿಸಿದೆ.

“ಹೇಗೆ ತಾನೇ ನನ್ನ ಮಕ್ಕಳು ನೇರವಾಗಿರುವ, ಹರಿತವಾಗಿರುವ, ದಪ್ಪಗಿರುವ, ಸುಂದರ ಕೊನೆಗಳನ್ನುಳ್ಳ, ಬಂಗಾರದಿಂದ ಅಲಂಕೃತವಾಗಿರುವ, ನೂರುಜನರನ್ನು ಕೊಲ್ಲಬಲ್ಲ, ಮತ್ತು ಎಸೆದರೆ ಅಮೋಘ ಶಬ್ಧವನ್ನುಂಟುಮಾಡುವ ಆ ಗದೆಯನ್ನು ಸಹಿಸಿಕೊಳ್ಳುತ್ತಾರೆ? ಭೀಮಸೇನಮಯವಾದ ಅಪಾರವಾದ ಆಳವಾದ ನೀರುಳ್ಳ, ಶರಗಳ ವೇಗದಿಂದ ಅಲ್ಲೋಲಕಲ್ಲೋಲಗೊಂಡು ದಾಟಲು ಅಸಾಧ್ಯವಾದ ಸಮುದ್ರವನ್ನು ಈ ಮಂದಮತಿಗಳು ಹೇಗೆ ದಾಟುತ್ತಾರೆ? ಪಂಡಿತರೆಂದು ತಿಳಿದುಕೊಂಡಿರುವ, ಆದರೂ ಬಾಲಕರಂತಿರುವ, ಅವರು ನಾನೆಷ್ಟು ಕೂಗಿ ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ. ಕೇವಲ ಜೇನುತುಪ್ಪವನ್ನು ನೋಡಿದ ಅವರಿಗೆ ಎದುರಿಗಿರುವ ಆಳವಾದ ಪ್ರಪಾತವಿರುವುದು ಕಾಣಿಸುವುದಿಲ್ಲ. ನರರೂಪದಲ್ಲಿರುವ ಆ ವಾಯುವಿನೊಂದಿಗೆ ಯಾರು ಯುದ್ಧವನ್ನು ಮಾಡುತ್ತಾರೋ ಅವರು ಧಾತ್ರನಿಂದ ಚೋದಿತರಾಗಿ ಸಿಂಹದಿಂದ ಮಹಾಮೃಗವು ಕೊಲ್ಲಲ್ಪಡುವಂತೆ ನಾಶಹೊಂದುತ್ತಾರೆ. ಪೂರ್ಣ ನಾಲ್ಕು ಅಡಿ ಉದ್ದವಾಗಿರುವ, ಆರೂ ಕಡೆಯಲ್ಲಿ ಅಮಿತ ಬಲಶಾಲಿಯಾಗಿರುವ, ಮುಟ್ಟಿದರೆ ನೋವಾಗುವ ಆ ಗದೆಯನ್ನು ಎಸೆದರೆ ನನ್ನ ಮಕ್ಕಳು ಹೇಗೆ ತಾನೆ ಸಹಿಸಿಯಾರು? ಅವನು ಗದೆಯನ್ನು ತಿರುಗಿಸುತ್ತಾ ಆನೆಗಳ ತಲೆಗಳನ್ನು ಒಡೆಯುವಾಗ, ನಾಲಿಗೆಯಿಂದ ತನ್ನ ಬಾಯಿಯ ಅಂಚುಗಳನ್ನು ನೆಕ್ಕುತ್ತಿರುವಾಗ, ದೀರ್ಘ ನಿಟ್ಟುಸಿರುಬಿಡುತ್ತಿರುವಾಗ, ಬೀಳುತ್ತಿರುವ ಮೃಗಗಳ ಭೈರವ ಕೂಗಿಗೆ ಪ್ರತ್ಯುತ್ತರವಾಗಿ ಕೂಗುತ್ತಾ, ವಿರುದ್ಧವಾಗಿ ಬಂದು ಬೀಳುತ್ತಿರುವ ಮದಿಸಿ ಗರ್ಜಿಸುತ್ತಿರುವ ಆನೆಗಳನ್ನು ಎದುರಿಸುವಾಗ, ಮಾರ್ಗಗಳಲ್ಲಿ ರಥಗಳನ್ನೂ ರಥಿಕರನ್ನೂ ಗುರಿಯಿಟ್ಟು ಸಂಹರಿಸುವಾಗ, ಆ ಪ್ರಜ್ವಲಿತ ಅಗ್ನಿಯಿಂದ ಕೂಡ ನನ್ನ ಪ್ರಜೆಗಳು ಉಳಿಯುವುದಿಲ್ಲ. ನನ್ನ ಸೇನೆಯನ್ನು ಕತ್ತರಿಸಿ ದಾರಿಯನ್ನು ಮಾಡಿಕೊಂಡು ಓಡಿ ಮುಂದೆ ಬರುವ ಆ ಮಹಾಬಾಹು ಗದಾಪಾಣಿಯು ನರ್ತಿಸುತ್ತಿರುವ ಯುಗಾಂತನಂತೆ ಕಾಣಿಸುತ್ತಾನೆ. ಹೂವಿರುವ ಮರಗಳನ್ನು ಕೆಳಗುರುಳಿಸಿ ಬರುವ ಆನೆಗಳಂತೆ ವೃಕೋದರನು ರಣದಲ್ಲಿ ನನ್ನ ಪುತ್ರರ ಸೇನೆಯನ್ನು ಉರುಳಿಸಿ ಮುಂದುವರೆಯುತ್ತಾನೆ. ರಥಗಳನ್ನು ಜನರಿಲ್ಲದಂತೆ ಮಾಡಿ, ಧ್ವಜಗಳಿಲ್ಲದಂತೆ ಮಾಡಿ, ರಥಗಳನ್ನೇರಿ ಹೋರಾಡುವ ಪರುಷವ್ಯಾಘ್ರರನ್ನು ಭಗ್ನ ಮಾಡಿ ಗಂಗೆಯು ವೇಗದಿಂದ ಪ್ರವಾಹದಲ್ಲಿ ಮರಗಳನ್ನು ಕೊಚ್ಚಿಕೊಂಡು ಹೋಗುವಂತೆ ಅವನು ನನ್ನ ಪುತ್ರರ ಮಹಾಸೇನೆಯನ್ನು ಪ್ರವೇಶಿಸುತ್ತಾನೆ. ಭೀಮಸೇನನ ಬಲದಿಂದ ಪೀಡಿತರಾಗಿ ನನ್ನ ಪುತ್ರರೂ, ಅವರ ಸೇವಕರೂ ಮತ್ತು ರಾಜರು ಕೂಡ ಎಲ್ಲ ದಿಕ್ಕುಗಳಲ್ಲಿ ಚದುರಿ ಓಡಿಹೋಗುತ್ತಾರೆ.

“ಅವನು ವಾಸುದೇವನ ಸಹಾಯದಿಂದ ವಯಸ್ಸಾದ ಮಹಾವೀರ ರಾಜ ಜರಾಸಂಧನನ್ನು ಅವನ ಅಂತಃಪುರವನ್ನು ಪ್ರವೇಶಿಸಿ ಉರುಳಿಸಿದನು. ಆ ಧೀಮತ ಮಾಗಧೇಂದ್ರ ಜರಾಸಂಧನಾದರೋ ಈ ದೇವಿ ಪೃಥ್ವಿಯನ್ನಿಡೀ ತನ್ನ ಬಲದಿಂದ ವಶಪಡೆಸಿಕೊಂಡು ಮೆರೆಯುತ್ತಿದ್ದನು. ಭೀಷ್ಮನ ಪ್ರತಾಪದಿಂದ ಕುರುಗಳು ಮತ್ತು ನೀತಿಯಿಂದ ಅಂಧಕ-ವೃಷ್ಣಿಯರು ಅವನ ವಶದಲ್ಲಿ ಬರಲಿಲ್ಲ ಎನ್ನುವುದು ದೈವವೇ ಸರಿ. ಅವನಲ್ಲಿಗೆ ಹೋಗಿ ಆ ವೀರ ಪಾಂಡುಪುತ್ರನು ತನ್ನ ಬಾಹುಬಲದಿಂದ ಅವಸರದಲ್ಲಿ ಅನಾಯುಧನಾಗಿ ಅವನನ್ನು ಕೊಂದ ಎನ್ನುವುದಕ್ಕಿಂತ ಹೆಚ್ಚಿನದು ಏನಿದೆ? ಬಹಳ ಸಮಯದಿಂದ ವಿಷವನ್ನು ಶೇಖರಿಸಿಟ್ಟುಕೊಂಡಿರುವ ಹಾವಿನಂತೆ ಅವನು ರಣದಲ್ಲಿ ನನ್ನ ಮಕ್ಕಳ ಮೇಲೆ ತನ್ನ ತೀಕ್ಷ್ಣ ವಿಷವನ್ನು ಕಾರುವವನಿದ್ದಾನೆ. ದೇವಸತ್ತಮ ಮಹೇಂದ್ರನು ವಜ್ರದಿಂದ ದಾನವರನ್ನು ಹೇಗೋ ಹಾಗೆ ಗದಾಪಾಣಿ ಭೀಮಸೇನನು ನನ್ನ ಮಕ್ಕಳನ್ನು ಕೊಲ್ಲುತ್ತಾನೆ. ಎದುರಿಸಲಾಗದ, ತಪ್ಪಿಸಿಕೊಳ್ಳಲಾರದ ತೀವ್ರವೇಗ ಪರಾಕ್ರಮಿಯು ತಾಮ್ರದಂತೆ ಕೆಂಪುಕಣ್ಣುಗಳೊಂದಿಗೆ ಮೇಲೆ ಬೀಳುವ ವೃಕೋದರನನ್ನು ನಾನು ಕಾಣುತ್ತಿದ್ದೇನೆ. ಭೀಮನು ಗದೆಯನ್ನು ಹಿಡಿಯದೇ, ಧನುಸ್ಸೂ ಇಲ್ಲದೇ, ವಿರಥನಾಗಿ, ಕವಚಗಳಿಲ್ಲದೇ ಬಾಹುಗಳಿಂದ ಯುದ್ಧಮಾಡುತ್ತಿದ್ದರೂ ಅವನನ್ನು ಎದುರಿಸುವ ಪುರುಷನು ಯಾರಿದ್ದಾನೆ?

“ಭೀಷ್ಮ, ದ್ರೋಣ, ಕೃಪ ಶಾರದ್ವತರು ನಾನು ತಿಳಿದಂತೆ ಆ ಧೀಮತನ ವೀರ್ಯವನ್ನು ತಿಳಿದಿದ್ದಾರೆ. ಇದನ್ನು ತಿಳಿದೂ ಆರ್ಯರಂತೆ ನಡೆದುಕೊಳ್ಳುವ ಮತ್ತು ಸಂಗರದಲ್ಲಿ ಜೀವತೊರೆಯಲು ಬಯಸುವ ಈ ನರರ್ಷಭರು ನನ್ನವರ ಸೇನಾಮುಖದಲ್ಲಿ ನಿಲ್ಲುತ್ತಾರೆ. ದೈವವು ಎಲ್ಲೆಲ್ಲಿಯೂ, ಅದರಲ್ಲಿಯು ವಿಶೇಷವಾಗಿ ಪುರುಷನ ವಿಷಯದಲ್ಲಿ, ಬಲಶಾಲಿ. ಅವರದೇ ಜಯವನ್ನು ಕಾಣುತ್ತೇನಾದರೂ ಯುದ್ಧಮಾಡುವವರನ್ನು ನಿಯಂತ್ರಿಸಲಾಗುತ್ತಿಲ್ಲ. ಆ ಮಹೇಷ್ವಾಸರು ಪುರಾತನವಾದ ಇಂದ್ರಮಾರ್ಗದಲ್ಲಿ ಹೋಗಲು ಸಿದ್ಧರಾಗಿದ್ದಾರೆ. ಅವರು ತುಮುಲದಲ್ಲಿ ಪಾರ್ಥಿವ ಯಶಸ್ಸನ್ನು ರಕ್ಷಿಸುತ್ತಾ ಪ್ರಾಣಗಳನ್ನು ತ್ಯಜಿಸುತ್ತಾರೆ. ನನ್ನ ಮಕ್ಕಳು ಹೇಗೋ ಹಾಗೆ ಪಾಂಡವರೂ ಕೂಡ ಭೀಷ್ಮನ ಮೊಮ್ಮಕ್ಕಳು ಮತ್ತು ದ್ರೋಣ-ಕೃಪರ ಶಿಷ್ಯರು. ಈ ಮೂವರು ಸ್ಥಾವಿರರಿಗೆ ನಾವು ಏನೋ ಸ್ವಲ್ಪ ಸಂತೋಷವನ್ನೂ ಆಶ್ರಯವನ್ನೂ ಕೊಟ್ಟಿದ್ದೇವೆ. ಅದಕ್ಕೆ ಬದಲಾಗಿ ನಮಗೆ ಈ ಆರ್ಯರು ಇದನ್ನು ಮಾಡುತ್ತಿದ್ದಾರೆ. ಶಸ್ತ್ರವನ್ನು ಹಿಡಿದು ಕ್ಷತ್ರಧರ್ಮವನ್ನು ಅನುಸರಿಸಿ ರಣದಲ್ಲಿ ನಿಧನಹೊಂದುವುದು ಈ ಇಬ್ಬರು ಬ್ರಾಹ್ಮಣರ ಉತ್ತಮ ವರವೆಂದೇ ಹೇಳುತ್ತಾರೆ. ಪಾಂಡವರೊಂದಿಗೆ ಯುದ್ಧಮಾಡುವ ಎಲ್ಲರ ಕುರಿತು ಶೋಕಿಸುತ್ತಿದ್ದೇನೆ. ವಿದುರನು ಮೊಡಲೇ ಕಂಡುಕೊಂಡಿದ್ದ ಆ ಭಯವು ಬಂದಂತಿದೆ. ಜ್ಞಾನವು ದುಃಖವನ್ನು ನಾಶಪಡಿಸುತ್ತದೆ ಎಂದು ಅನ್ನಿಸುವುದಿಲ್ಲ. ಆದರೆ ಅತಿದೊಡ್ಡ ದುಃಖವು ಜ್ಞಾನದ ನಾಶಕ್ಕೆ ಕಾರಣವಾಗಬಹುದು. ಲೋಕಸಂಗ್ರಹಗಳಿಂದ ನಿರ್ಮುಕ್ತರಾದ ಋಷಿಗಳು ಕೂಡ ಸುಖಿಗಳು ಸುಖದಲ್ಲಿರುವುದನ್ನು, ದುಃಖಿತರು ದುಃಖದಲ್ಲಿರುವುದನ್ನು ನೋಡುತ್ತಾರೆ. ಹಾಗಿರುವಾಗ ಇನ್ನು - ಸಹಸ್ರಾರು ವಿಷಯಗಳಲ್ಲಿ – ಪುತ್ರರು, ರಾಜ್ಯ, ಪತ್ನಿಯರು, ಮೊಮ್ಮಕ್ಕಳು ಮತ್ತು ಬಂಧುಗಳಲ್ಲಿ – ಆಸಕ್ತನಾಗಿರುವ ನಾನು ಯಾವ ಲೆಕ್ಕಕ್ಕೆ? ಇಂತಹ ಮಹಾ ಸಂಶಯವು ಬಂದೊದಗಿರುವಾಗ ನನಗೆ ಉತ್ತಮವಾದುದಾದರೂ ಏನು ಆಗಬಹುದು? ಎಷ್ಟೇ ಚಿಂತಿಸಿದರೂ ಕುರುಗಳ ವಿನಾಶವನ್ನೇ ಕಾಣುತ್ತೇನೆ. ಆ ದ್ಯೂತವೇ ಕುರುಗಳ ಈ ಮಹಾ ವ್ಯಸನಕ್ಕೆ ಮುಖ್ಯ ಕಾರಣವೆಂದು ತೋರುತ್ತಿದೆ. ಲೋಭದಿಂದ ಐಶ್ವರ್ಯವನ್ನು ಬಯಸಿ ಈ ಮಂದಬುದ್ಧಿಯು ಈ ಪಾಪದ ಕೆಲಸವನ್ನು ಮಾಡಿದನು.

“ಇದು ಅತ್ಯಂತವೇಗದಲ್ಲಿ ಚಲಿಸುತ್ತಿರುವ ಕಾಲದ ಪರ್ಯಾಯ ಧರ್ಮವೆಂದು ನನಗನ್ನಿಸುತ್ತದೆ. ಚಕ್ರದ ಪರಿಧಿಯಲ್ಲಿ ಸಿಲುಕಿಕೊಂಡಿರುವ ನನಗೆ ಬಿಟ್ಟು ಓಡಿಹೋಗಲು ಆಗುತ್ತಿಲ್ಲ. ಏನು ಮಾಡಲಿ? ಹೇಗೆ ಮಾಡಲಿ? ಎಲ್ಲಿ ಹೋಗಲಿ? ಕಾಲದ ವಶದಲ್ಲಿ ಬಂದಿರುವ ಈ ಮಂದ ಕುರುಗಳು ನಾಶವಾಗುತ್ತಾರೆ. ನೂರು ಮಕ್ಕಳು ಹತರಾಗಿ ಸ್ತ್ರೀಯರ ಕೂಗನ್ನು ಕೇಳುವುದರ ಮೊದಲೇ ನನಗೆ ಮರಣವು ಏಕೆ ಬರುವುದಿಲ್ಲ ಎಂದು ಶೋಕಿಸುತ್ತಿದ್ದೇನೆ. ಗಾಳಿಯಿಂದ ಪ್ರಚೋದನಗೊಂಡು ಉರಿಯುವ ಬೆಂಕಿಯು ಕಟ್ಟಿಗೆಯನ್ನು ಹೇಗೆ ಸುಡುವುದೋ ಹಾಗೆ ನನ್ನವರು ಗದಾಹಸ್ತನಾದ ಪಾಂಡವನಿಂದ, ಅರ್ಜುನನ ಸಹಾಯದಿಂದ, ಹತರಾಗುತ್ತಾರೆ.”

ಅರ್ಜುನನ ಕುರಿತು ಧೃತರಾಷ್ಟ್ರನು ಭಯವನ್ನು ವ್ಯಕ್ತಪಡಿಸುವುದು

ಧೃತರಾಷ್ಟ್ರನು ಹೇಳಿದನು: “ಯಾರ ತುಟಿಗಳಿಂದ ನಾವು ಒಂದಾದರೂ ಸುಳ್ಳು ಮಾತನ್ನು ಕೇಳಿರದ ಮತ್ತು ಯಾರ ಯೋಧನು ಧನಂಜಯನೋ ಅವನು ತ್ರಿಲೋಕಗಳನ್ನೂ ಆಳಬಹುದು. ಹಗಲೂ ರಾತ್ರಿ ನಾನು ಚಿಂತಿಸಿದರೂ ಯುದ್ಧದಲ್ಲಿ ಆ ಗಾಂಡೀವ ಧನ್ವಿಯನ್ನು ರಥದಲ್ಲಿ ಎದುರಿಸುವ ಯಾರನ್ನೂ ಕಾಣಲಾರೆ! ಯುದ್ಧದಲ್ಲಿ ಗಾಂಡೀವಧನ್ವಿಯು ಹೃದಯಗಳನ್ನು ಭೇದಿಸುವ ಕರ್ಣಿನಾಲೀಕಗಳನ್ನು ಮತ್ತು ಮಾರ್ಗಣಗಳನ್ನು ಪ್ರತಿದ್ವಂದಿಸುವ ಸರಿಸಮನು ಯಾರೂ ಇಲ್ಲ. ಒಂದುವೇಳೆ ವೀರ ನರರ್ಷಭರಾದ ದ್ರೋಣ-ಕರ್ಣರು ಅವನನ್ನು ಎದುರಿಸಿನಿಂತರೂ ಮಹಾತ್ಮರಾದ ಅವರಿಗೆ ಅಲ್ಪವೇ ಅವಕಾಶವಿರಬಹುದು. ನನಗೆ ವಿಜಯವು ಇಲ್ಲವೆಂಬುದರಲ್ಲಿ ಸಂಶಯವಿಲ್ಲ. ಕರ್ಣನು ಕನಿಕರವುಳ್ಳವನು ಮತ್ತು ಪ್ರಮಾದಕ್ಕೊಳಗಾಗುವನು. ಆಚಾರ್ಯನು ವೃದ್ಧ ಮತ್ತು ಗುರು. ಬಲವಾನ್ ಪಾರ್ಥನು ದೃಢಧನ್ವಿ ಮತ್ತು ಇಬ್ಬರನ್ನೂ ಗೆಲ್ಲಲು ಸಮರ್ಥ. ನಡೆಯುವ ತುಮಲ ಯುದ್ಧದಲ್ಲಿ ಎಲ್ಲರಿಗೂ ಪರಾಜಯವೇ ಆಗುತ್ತದೆ. ಎಲ್ಲರೂ ಅಸ್ತ್ರವಿದರು, ಶೂರರು ಮತ್ತು ಎಲ್ಲರೂ ಮಹಾ ಯಶಸ್ಸನ್ನು ಪಡೆದಿದ್ದಾರೆ. ಎಲ್ಲರೂ ಅಮರ ಐಶ್ವರ್ಯವನ್ನು ತ್ಯಜಿಸಿಯಾರು ಆದರೆ ಜಯವನ್ನಲ್ಲ. ಇವರಿಬ್ಬರ ಅಥವಾ ಅರ್ಜುನನ ವಧೆಯಾದರೆ ಮಾತ್ರ ಶಾಂತಿಯುಂಟಾಗುತ್ತದೆ. ಆದರೂ ಅರ್ಜುನನ್ನು ಗೆಲ್ಲುವವನಾಗಲೀ ಕೊಲ್ಲುವವನಾಗಲೀ ಇಲ್ಲಿರುವುದು ತಿಳಿದಿಲ್ಲ. ನನ್ನ ಮಂದಬುದ್ಧಿಯವರ ಪ್ರತಿ ಹೆಚ್ಚಾಗಿರುವ ಅವನ ಕೋಪವನ್ನು ಹೇಗೆ ತಣಿಸಬಹುದು?

“ಇತರರೂ ಕೂಡ ಅಸ್ತ್ರಗಳನ್ನು ತಿಳಿದಿದ್ದಾರೆ. ಅವರು ಗೆದ್ದಿದ್ದಾರೆ ಮತ್ತು ಸೋತಿದ್ದಾರೆ ಕೂಡ. ಆದರೆ ಫಲ್ಗುನನಿಗೆ ವಿಜಯವೊಂದನ್ನೇ ಕೇಳಿದ್ದೇವೆ. ಅವನು ಮೂವತ್ತ್ಮೂರು ದೇವತೆಗಳನ್ನು ಎದುರಿಸಿ ಖಾಂಡವದಲ್ಲಿ ಅಗ್ನಿಯನ್ನು ತೃಪ್ತಪಡೆಸಿದನು. ಅವನು ಸುರರೆಲ್ಲರನ್ನೂ ಗೆದ್ದನು. ಅವನಿಗೆ ಪರಾಜಯವಾದುದು ನನಗೆ ತಿಳಿದಿಲ್ಲ. ಯುದ್ಧದಲ್ಲಿ ಯಾರ ಸಾರಥಿಯು ಶೀಲ, ನಡತೆಗಳಲ್ಲಿ ಸರಿಸಮನಾಗಿರುವ ಹೃಷೀಕೇಶನೋ ಅವನ ಜಯವು, ಇಂದ್ರನಿಗೆ ಜಯವು ಹೇಗೋ ಹಾಗೆ ನಿಶ್ಚಯವಾದುದು. ಕೃಷ್ಣರಿಬ್ಬರು ಮತ್ತು ಗಾಂಡೀವ ಧನುಸ್ಸು ಈ ಮೂರೂ ತೇಜಸ್ಸುಗಳೂ ಒಂದೇ ರಥದಲ್ಲಿ ಸೇರಿಕೊಂಡಿವೆ ಎಂದು ಕೇಳಿದ್ದೇವೆ. ಅದರಂಥಹ ಧನುಸ್ಸಾಗಲೀ ಅವರಂಥಹ ಸಾರಥಿಯಾಗಲೀ ಯೋಧನಾಗಲೀ ನಮ್ಮಲ್ಲಿಲ್ಲ. ಇದು ಮಂದಬುದ್ಧಿ ದುರ್ಯೋಧನನಿಗೆ ಮತ್ತು ಅವನ ಅನುಯಾಯಿಗಳಿಗೆ ತಿಳಿದಿಲ್ಲ. ಮೇಲಿಂದ ಬಿದ್ದ ಸಿಡಿಲು ತಲೆಯ ಮೇಲೆ ಸ್ವಲ್ಪವನ್ನಾದರೂ ಉಳಿಸೀತು. ಆದರೆ ಕಿರೀಟಿಯು ಪ್ರಯೋಗಿಸಿದ ಬಾಣವು ಏನನ್ನೂ ಉಳಿಸುವುದಿಲ್ಲ. ಫಲ್ಗುನನು ಈಗಲೇ ಕೊಲ್ಲುತ್ತಿರುವಂತೆ, ತನ್ನ ಶರವೃಷ್ಟಿಯಿಂದ ಕಾಯಗಳಿಂದ ತಲೆಗಳನ್ನು ಕತ್ತರಿಸುತ್ತಿರುವುದು ಕಂಡುಬರುತ್ತದೆ. ಎಲ್ಲೆಡೆಯೂ ಸುಡುತ್ತಿರುವ ತೇಜಸ್ಸಿನಿಂದ ಉರಿಯುತ್ತಿರುವ ಅವನ ಗಾಂಡೀವದಿಂದ ಹೊರಬಂದ ಬಾಣಗುಂಪುಗಳು ನನ್ನ ಮಕ್ಕಳ ಸೇನೆಯನ್ನು ಸುಡದೆಯೇ ಇರುತ್ತದೆಯೇ? ಆ ಸವ್ಯಸಾಚಿಯ ರಥಘೋಷದಿಂದಲೇ ಭಯಾರ್ತರಾಗಿ ಭಾರತ ಸೇನೆಯು ಬಹುಸಂಖ್ಯೆಗಳಲ್ಲಿ ನಡುಗುತ್ತಿರುವಂತೆ ನನಗೆ ತೋರುತ್ತಿದೆ. ಒಣಗಿದ ಮರಗಳನ್ನು ಸುಟ್ಟು ಹೆಚ್ಚಾಗಿ ಎಲ್ಲಕಡೆ ಪಸರಿಸುವಂತೆ, ಗಾಳಿಯಿಂದ ಬೆಂಕಿಯು ಭುಗಿಲೆದ್ದು ಸುಡುವಂತೆ ಅವನು ನನ್ನವರನ್ನು ಸುಟ್ಟು ಹಾಕುತ್ತಾನೆ. ನಿಶಿತ ಬಾಣಸಂಘಗಳನ್ನು ಉಗುಳುತ್ತಾ ಸಮರಕ್ಕೆ ಸನ್ನದ್ಧನಾಗಿ ನಿಂತ ಕಿರೀಟಿಯು, ವಿಧಾತ್ರನು ಸೃಷ್ಟಿಸಿದ, ಸರ್ವವನ್ನೂ ಕಳೆಯುವ ಅಂತಕನಂತೆ ತಪ್ಪಿಸಿಕೊಳ್ಳಲಾರದಂತೆ ಇರುತ್ತಾನೆ. ಈಗ ಕುರುಗಳಿರುವಲ್ಲಿ, ಅವರು ಸೇರಿರುವಲ್ಲಿ, ರಣದ ಮೊದಲು ಬಹಳ ಪ್ರಕಾರದ ಕುರುಹಗಳ ಕುರಿತು ಕೇಳಿದಾಗ, ಭರತರ ಕ್ಷಯವು ಬಂದಿದೆ ಎಂದು ನನಗನ್ನಿಸುತ್ತದೆ.”

ಧೃತರಾಷ್ಟ್ರನು ಶಾಂತಿಯ ಕುರಿತು ಮಾತನಾಡುವುದು

ಧೃತರಾಷ್ಟ್ರನು ಹೇಳಿದನು: “ಹೇಗೆ ಪಾಂಡವರೆಲ್ಲರೂ ವಿಜಯದ ಭರವಸೆಯನ್ನಿಟ್ಟುಕೊಂಡಿದ್ದಾರೋ ಹಾಗೆಯೇ ಅವರಿಗಾಗಿ ಜೀವವನ್ನು ತೊರೆದಿರುವ ಅವರ ಜನರೂ ಕೂಡ ಜಯದಲ್ಲಿ ವಿಶ್ವಾಸವನ್ನಿಟ್ಟಿದ್ದಾರೆ. ನೀನೇ ನನಗೆ ಆ ಪರಾಕ್ರಮಿ ವೀರರ ಕುರಿತು - ಪಾಂಚಾಲರು, ಕೇಕಯರು, ಮತ್ಸ್ಯರು, ಮಾಗಧರು ಮತ್ತು ಚೇದಿರಾಜರು - ನನಗೆ ಹೇಳಿದ್ದೇಯೆ. ಇಂದ್ರನನ್ನೂ ಸೇರಿ ಈ ಲೋಕಗಳನ್ನು ವಶಪಡೆಸಿಕೊಳ್ಳಬಲ್ಲ ಬಲಶಾಲಿ, ಜಗತ್ತಿನಲ್ಲಿಯೇ ಶ್ರೇಷ್ಠನಾಗಿರುವ ಕೃಷ್ಣನೂ ಕೂಡ ಪಾಂಡವರ ಜಯದಲ್ಲಿ ವಿಶ್ವಾಸವನ್ನಿಟ್ಟಿದ್ದಾನೆ. ಅರ್ಜುನನಿಂದ ಸಮಸ್ತವಿದ್ಯೆಗಳನ್ನೂ ಬೇಗನೆ ಪಡೆದ ಸಾತ್ಯಕಿ ಶೈನಿಯು ಸಮರದಲ್ಲಿ ನೆಲೆಸಿ ಬೀಜಗಳಂತೆ ಬಾಣಗಳನ್ನು ಬಿತ್ತುತ್ತಾನೆ. ಕ್ರೂರಕರ್ಮಿ, ಮಹಾರಥಿ, ಪಾಂಚಾಲ್ಯ ಧೃಷ್ಟದ್ಯುಮ್ನನು ತನ್ನ ಪರಮಾಸ್ತ್ರ ವಿದ್ಯೆಯಿಂದ ನನ್ನವರೊಡನೆ ರಣದಲ್ಲಿ ಹೋರಾಡುತ್ತಾನೆ. ಯುಧಿಷ್ಠಿರನ ಕ್ರೋಧದಿಂದ, ಅರ್ಜುನ, ಯಮಳರು ಮತ್ತು ಭೀಮಸೇನನ ವಿಕ್ರಮದಿಂದ ನನಗೆ ಭಯವಾಗುತ್ತಿದೆ. ಆ ಮನುಷ್ಯೇಂದ್ರರು ನನ್ನ ಸೇನೆಯ ಮಧ್ಯೆ ಅಮಾನುಷ ಜಾಲವನ್ನು ಎಸೆದು ಸಂಹರಿಸುತ್ತಾರೆ. ಈಗಲೇ ಅದರ ಕುರಿತು ದುಃಖಿಸುತ್ತಿದ್ದೇನೆ.

“ಪಾಂಡುನಂದನನು ನೋಡಲು ಸುಂದರನಾಗಿದ್ದಾನೆ. ಮನಸ್ವಿ. ಲಕ್ಷ್ಮೀವಂತ ಮತ್ತು ಬ್ರಹ್ಮವರ್ಚಸ್ಸುಳ್ಳವನು. ಅವನು ಮೇಧಾವೀ, ಸುಕೃತಪ್ರಜ್ಞ ಮತ್ತು ಧರ್ಮಾತ್ಮ. ಅವನಿಗೆ ಹೇರಳ ಮಿತ್ರರಿದ್ದಾರೆ. ಅಮಾತ್ಯರಿದ್ದಾರೆ. ಕಟ್ಟಲು ಕುದುರೆಗಳು ಮತ್ತು ಕಟ್ಟುವವರೂ ಇದ್ದಾರೆ. ತಮ್ಮಂದಿರು, ಮಾವಂದಿರು, ಮತ್ತು ಮಹಾರಥಿ ಮಕ್ಕಳಿದ್ದಾರೆ. ಆ ಪುರುಷವ್ಯಾಘ್ರ ಪಾಂಡವನಲ್ಲಿ ಧೃತಿಯಿದೆ. ಗುಟ್ಟನ್ನು ಇಟ್ಟುಕೊಳ್ಳುತ್ತಾನೆ. ಅವನು ಮೃದು, ದಾನಿ, ಮತ್ತು ವಿನಯಿ. ಸತ್ಯಪರಾಕ್ರಮಿ. ಅವನು ವಿದ್ಯಾವಂತ. ಕೃತಾತ್ಮ. ವೃದ್ಧಸೇವೀ ಮತ್ತು ಜಿತೇಂದ್ರಿಯ. ಚೆನ್ನಾಗಿ ಉರಿಯಿಸಿದ ಅಗ್ನಿಯಂತೆ ಅವನು ಸರ್ವಗುಣಸಂಪನ್ನ. ಯಾವ ಮೂಢನು ತಾನೇ ಪತಂಗದಂತೆ ಬೆಂಕಿಯಂತೆ ಉರಿಯತ್ತಿರುವವನಲ್ಲಿ ಹೋಗಿ ಬೀಳುತ್ತಾನೆ? ಪಾಂಡವಾಗ್ನಿಯನ್ನು ತಪ್ಪಿಸಿಕೊಳ್ಳದ ಮೂಢನು ಸಾಯುವುದು ಖಂಡಿತ. ಆ ರಾಜನು ಶುದ್ಧ ಬಂಗಾರದ ಪ್ರಭೆಯಿಂದ ಎತ್ತರವಾಗಿ ಉರಿಯುತ್ತಿರುವ ಶಿಖಿಯಂತೆ. ಅವನು ಯುದ್ಧದಲ್ಲಿ ನನ್ನ ಮಂದ ಮಕ್ಕಳನ್ನು ಅಂತ್ಯಗೊಳಿಸುತ್ತಾನೆ.

“ಕುರುಗಳೇ! ನನ್ನನ್ನು ಕೇಳಿ! ಯುದ್ಧವನ್ನು ಮಾಡದೇ ಇರುವುದೇ ಒಳ್ಳೆಯದು! ಯುದ್ಧವಾದರೆ ಕುಲದ ಸರ್ವನಾಶವು ನಡೆಯುವುದು ಸತ್ಯ. ಇಂದು ಶಾಂತಿಗಾಗಿ ನಾನು ಮಾಡುವ ಅಂತಿಮ ಯತ್ನ. ಇದು ನನ್ನ ಮನಸ್ಸನ್ನು ಶಮನಗೊಳಿಸುತ್ತದೆ. ಒಂದುವೇಳೆ ನಿಮಗೆ ಯುದ್ಧವು ಬೇಡವೆಂದಾದರೆ ಶಾಂತಿಗೆ ಪ್ರಯತ್ನಿಸೋಣ. ಶಾಂತಿಗಾಗಿ ಪ್ರಯತ್ನಿಸಿದರೆ ಯುಧಿಷ್ಠಿರನು ಉಪೇಕ್ಷಿಸುವುದಿಲ್ಲ. ಏಕೆಂದರೆ ಯಾವುದಕ್ಕೆ ನಾನೇ ಕಾರಣನೆಂದು ಅವನು ತಿಳಿದುಕೊಂಡಿದ್ದಾನೋ ಆ ಅಧರ್ಮದ ಕುರಿತು ಅವನಿಗೆ ಜಿಗುಪ್ಸೆಯಿದೆ.”

ಸಂಜಯ ವಾಕ್ಯ

ಸಂಜಯನು ಹೇಳಿದನು: “ಮಹಾರಾಜ! ನೀನು ಹೇಳಿದಂತೆಯೇ ಆಗುವುದು. ಯುದ್ಧದಲ್ಲಿ ಗಾಂಡೀವದಿಂದ ಕ್ಷತ್ರಿಯರ ವಿನಾಶವು ಕಾಣುತ್ತಿದೆ. ಆದರೆ ನಿನ್ನ ಬುದ್ಧಿಯು ನನಗೆ ಅರ್ಥವಾಗುತ್ತಿಲ್ಲ. ಸವ್ಯಸಾಚಿಯ ಸತ್ವವನ್ನು ತಿಳಿದೂ ಕೂಡ ನೀನು ನಿತ್ಯವೂ ನಿನ್ನ ಮಗನ ವಶವಾಗುತ್ತಿದ್ದೀಯೆ. ಮೊದಲಿನಿಂದಲೂ ಪಾರ್ಥರಿಗೆ ನೀನು ಕೆಟ್ಟದ್ದನ್ನೇ ಮಾಡಿದ್ದೀಯೆ. ಈಗ ಅವುಗಳ ಕುರಿತು ಪಶ್ಚಾತ್ತಾಪ ಪಡುವ ಕಾಲವಲ್ಲ. ತಂದೆಯ ಸ್ಥಾನದಲ್ಲಿರುವವನು ಯಾವಾಗಲೂ ಸ್ನೇಹಿತನಾಗಿರಬೇಕು, ಮತ್ತು ಒಳ್ಳೆಯದನ್ನೇ ಬಯಸಬೇಕು. ಆದರೆ ಅವರ ಹಿತವನ್ನು ಬಯಸದವನನ್ನು ಹಿರಿಯರ ಸ್ಥಾನದಲ್ಲಿರಬಾರದೆಂದು ಹೇಳುತ್ತಾರೆ. ದ್ಯೂತದ ಸಮಯದಲ್ಲಿ ಅವರು ಸೋತುದನ್ನು ಕೇಳಿದಾಗ ನೀನು ಬಾಲಕನಂತೆ ನಗುತ್ತಾ ‘ಇದನ್ನು ಗೆದ್ದೆವು! ಇದು ದೊರಕಿತು!’ ಎಂದು ಹೇಳಿದ್ದೆ. ಇಡೀ ರಾಜ್ಯವನ್ನು ಗೆದ್ದರು ಎಂಬ ಸಂತೋಷದಲ್ಲಿ ಪಾರ್ಥರಿಗೆ ಕಠೋರವಾಗಿ ಮಾತನಾಡುತ್ತಿದ್ದಾಗ ನೀನು ಉಪೇಕ್ಷಿಸಲಿಲ್ಲ. ನಿನ್ನ ಮುಂದಿರುವ ಪ್ರಪಾತವು ನಿನಗೆ ಕಾಣಲಿಲ್ಲ. ಕುರುಜಂಗಲವು ಮಾತ್ರ ನಿನ್ನ ಪಿತ್ರಾರ್ಜಿತ ರಾಜ್ಯವಾಗಿತ್ತು. ಆ ವೀರರು ಗೆದ್ದನಂತರವೇ ನಿನಗೆ ಈ ಅಖಿಲ ಭೂಮಿಯೂ ದೊರಕಿತು. ಪಾಂಡವರು ತಮ್ಮ ಬಾಹುವೀರ್ಯದಿಂದ ಗೆದ್ದ ಭೂಮಿಯನ್ನು ನಿನಗೆ ಒಪ್ಪಿಸಿದ್ದಾರೆ. ಆದರೆ ನೀನು ಇವೆಲ್ಲವನ್ನೂ ನಾನೇ ಗೆದ್ದಿದ್ದೇನೆ ಎಂದು ತಿಳಿದುಕೊಂಡಿದ್ದೀಯೆ.

“ನಿನ್ನ ಪುತ್ರರು ಗಂಧರ್ವರಾಜನಿಂದ ಸೆರೆಹಿಡಿಯಲ್ಪಟ್ಟು ದೋಣಿಯಿಲ್ಲದೇ ಸಾಗರದಲ್ಲಿ ತೇಲುತ್ತಿರುವಂತಿರುವಾಗ ಪಾರ್ಥನೇ ಅವರನ್ನು ಹಿಂದಿರುಗಿ ಪಡೆದು ತಂದನು. ದ್ಯೂತದಲ್ಲಿ ಮೋಸಗೊಂಡು ಪಾಂಡವರು ವನಕ್ಕೆ ಹೊರಡುವಾಗ ಬಾಲಕನಂತೆ ನೀನು ಪುನಃ ಪುನಃ ನಗುತ್ತಿದ್ದೆ. ಅರ್ಜುನನು ಹರಿತ ಬಾಣಗಳ ಭಾರೀ ಮಳೆಯನ್ನು ಸುರಿಸುವಾಗ ಸಾಗರದ ನೀರೂ ಬತ್ತಿಹೋಗುತ್ತದೆ. ಇನ್ನು ಮಾಂಸಯೋನಿಯಲ್ಲಿ ಜನಿಸಿದ ಮನುಷ್ಯರು ಯಾವ ಲೆಖ್ಕಕ್ಕೆ? ಬಿಲ್ಗಾರರಲ್ಲಿ ಫಲ್ಗುನನು ಶ್ರೇಷ್ಠ. ಧನುಸ್ಸುಗಳಲ್ಲಿ ಗಾಂಡೀವವು ಶ್ರೇಷ್ಠ. ಸರ್ವಭೂತಗಳಲ್ಲಿ ಕೇಶವ ಮತ್ತು ಚಕ್ರಗಳಲ್ಲಿ ಸುದರ್ಶನವು ಶ್ರೇಷ್ಠ. ಧ್ವಜಗಳಲ್ಲಿ ವಾನರನು ಕಾಣುತ್ತಿರುವ ಧ್ವಜವು ಶ್ರೇಷ್ಠ. ಇವೆಲ್ಲವುಗಳನ್ನೂ ಹೊಂದಿರುವ ಶ್ವೇತಹಯಗಳು ಒಯ್ಯುವ ರಥದಿಂದ ರಣದಲ್ಲಿ ಅವನು ಕಾಲಚಕ್ರವು ಉರುಳುವಂತೆ ನಮ್ಮನ್ನು ನಾಶಗೊಳಿಸುತ್ತಾನೆ. ಯಾರೊಡನೆ ಭೀಮಾರ್ಜುನರು ಯೋಧರಾಗಿದ್ದಾರೋ ಅವನೇ ರಾಜ. ಅಖಿಲ ವಸುಧೆಯೂ ಅವನದ್ದೇ ಆಗುತ್ತದೆ. ನಿನ್ನ ಸೇನೆಯು ಭೀಮನಿಂದ ಪುಡಿಯಾಗಿ ಹತಪ್ರಾಯವಾಗುವುದನ್ನು ನೋಡುತ್ತಾ ದುರ್ಯೋಧನನ ನಾಯಕತ್ವದಲ್ಲಿರುವ ಕೌರವರು ನಾಶ ಹೋಗುತ್ತಾರೆ. ನಿನ್ನ ಪುತ್ರರು ಮತ್ತು ಅವರನ್ನು ಅನುಸರಿಸುವ ರಾಜರು ಭೀಮನ ಭಯದಿಂದ ಭೀತರಾಗಿ ವಿಜಯವನ್ನು ಹೊಂದಲಾರರು. ಈಗ ಮತ್ಸ್ಯರು, ಪಾಂಚಾಲರು ಮತ್ತು ಜೊತೆಗೆ ಕೇಕಯರು ನಿನ್ನನ್ನು ಗೌರವಿಸುವುದಿಲ್ಲ. ಶಾಲ್ವರು ಮತ್ತು ಶೂರಸೇನರು ಎಲ್ಲರೂ ನಿನ್ನನ್ನು ಕೀಳಾಗಿ ಕಾಣುತ್ತಾರೆ. ಏಕೆಂದರೆ ಅವರೆಲ್ಲರೂ ವೀರ್ಯಜ್ಞ ಧೀಮತ ಪಾರ್ಥನ ಕಡೆ ಹೋಗಿದ್ದಾರೆ.

“ಅನರ್ಹರಾದ ಆ ಧರ್ಮಯುಕ್ತರನ್ನು ವಧಿಸಲು ಮತ್ತು ಮೋಸಗೊಳಿಸಲು ಮುಂದುವರೆದಿರುವ ನಿನ್ನ ಪುತ್ರ ಪಾಪಪುರುಷನನ್ನು ಅವನ ಅನುಯಾಯಿಗಳೊಂದಿಗೆ ಸರ್ವೋಪಾಯಗಳನ್ನು ಬಳಸಿ ತಡೆಯಬೇಕಾಗಿದೆ. ಅದರಲ್ಲಿ ಶೋಕಿಸಬಾರದು. ದ್ಯೂತಕಾಲದಲ್ಲಿ ನಾನೂ, ಧೀಮತ ವಿದುರನೂ ಹೇಳಿದ್ದೆವು. ಇದಕ್ಕೆಲ್ಲ ನೀನು ಹೊಣೆಗಾರನಲ್ಲ ಎಂದು ಪಾಂಡವರಿಗೋಸ್ಕರ ಈ ರೀತಿ ವಿಲಪಿಸುವುದು ನಿರರ್ಥಕ.”

ದುರ್ಯೋಧನನು ಧೃತರಾಷ್ಟ್ರನಿಗೆ ವಿಜಯದ ಆಶ್ವಾಸನೆಯನ್ನು ನೀಡಿದುದು

ದುರ್ಯೋಧನನು ಹೇಳಿದನು: “ಮಹಾರಾಜ! ನಮಗಾಗಿ ನೀನು ಶೋಕಿಸಬೇಕಿಲ್ಲ. ಹೆದರಬೇಕಿಲ್ಲ. ನಾವು ಶತ್ರುಗಳನ್ನು ಸಮರದಲ್ಲಿ ಜಯಿಸಲು ಸಮರ್ಥರಾಗಿದ್ದೇವೆ. ಪಾರ್ಥರು ವನಕ್ಕೆ ತೆರಳಿದಾಗ ಮಧುಸೂದನನು ಪರರಾಷ್ಟ್ರಗಳನ್ನು ಮರ್ದಿಸಿದ ಕೇಕಯ, ಧೃಷ್ಟಕೇತು, ಪಾರ್ಷತ ಧೃಷ್ಟದ್ಯುಮ್ನ ಮತ್ತು ಪಾರ್ಥರನ್ನು ಅನುಯಾಯಿಸಿದ ಅನ್ಯ ರಾಜರ ಬೃಹತ್ತಾದ ಮಹಾ ಸೇನೆಯನ್ನು ಒಂದುಗೂಡಿಸಿ ಬಂದಿದ್ದನು. ಇಂದ್ರಪ್ರಸ್ಥದ ಅನತಿದೂರದಲ್ಲಿಯೇ ಆ ಮಹಾರಥರು ಬಂದು ಸೇರಿ ನಿನ್ನ ಮತ್ತು ಕುರುಗಳ ವಿರುದ್ಧ ವ್ಯವಹರಿಸಿದರು. ಪಕ್ಕದಲ್ಲಿ ವಾಸಿಸುವ ಅವರು ಕೃಷ್ಣನನ್ನು ಪ್ರಧಾನನನ್ನಾಗಿ ಇಟ್ಟುಕೊಂಡು ಜಿನಗಳ ಮೇಲೆ ಕುಳಿತಿದ್ದ ಯುಧಿಷ್ಠಿರನನ್ನು ಪೂಜಿಸಿದರು. ಆ ನರಾಧಿಪರು ರಾಜ್ಯವನ್ನು ಹಿಂದೆ ತೆಗೆದುಕೊಳ್ಳಲು ಹೇಳಿದರು. ಅವರು ನಿನ್ನನ್ನು, ನಿನ್ನ ಬಂಧುಗಳೊಂದಿಗೆ, ತೆಗೆದುಹಾಕಲು ಬಯಸಿದರು. ಇದನ್ನು ಕೇಳಿ ನಾನು ಬಾಂಧವರ ಕ್ಷಯದ ಭಯದಿಂದ ಭೀತನಾಗಿ ಭೀಷ್ಮ, ದ್ರೋಣ, ಕೃಪರಿಗೆ ಆಗ ಹೇಳಿದ್ದೆನು: ‘ವಾಸುದೇವನು ನಮ್ಮನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಬಯಸುತ್ತಾನೆ. ಆದುದರಿಂದ ಪಾಂಡವರು ಒಪ್ಪಂದದಂತೆ ನಡೆದುಕೊಳ್ಳುವುದಿಲ್ಲ ಎಂದು ನನಗನ್ನಿಸುತ್ತದೆ. ವಿದುರನನ್ನು ಬಿಟ್ಟು ನೀವೆಲ್ಲ ಮಹಾತ್ಮರೂ ವಧ್ಯರು. ಕುರುಸತ್ತಮ ಧರ್ಮಜ್ಞ ಧೃತರಾಷ್ಟ್ರನು ವಧ್ಯನಲ್ಲ. ನಮ್ಮನ್ನು ಸಂಪೂರ್ಣವಾಗಿ ಕಿತ್ತೊಗೆದು ಯುಧಿಷ್ಠಿರನಡಿಯಲ್ಲಿ ಕುರುಗಳ ಒಂದು ರಾಜ್ಯವನ್ನು ಮಾಡಲು ಜನಾರ್ದನನು ಬಯಸುತ್ತಾನೆ. ಈಗ ಸಮಯವು ಪ್ರಾಪ್ತವಾಗಿದೆ. ಯಾವುದಕ್ಕೆ? ಶರಣುಹೋಗಲು? ಪಲಾಯನ ಮಾಡಲು? ಅಥವಾ ಪ್ರಾಣಗಳನ್ನು ತೊರೆದು ಶತ್ರುಗಳ ವಿರುದ್ಧ ಯುದ್ಧ ಮಾಡಬೇಕೇ? ಎದುರಿಸಿ ಯುದ್ಧಮಾಡಿದರೆ ಅದರಲ್ಲಿ ನಮ್ಮ ಪರಾಜಯವು ನಿಶ್ಚಿತವಾದುದು. ಏಕೆಂದರೆ ಎಲ್ಲ ಪಾರ್ಥಿವರೂ ಯುಧಿಷ್ಠಿರನ ವಶದಲ್ಲಿದ್ದಾರೆ. ನಮ್ಮ ರಾಷ್ಟ್ರವು ವಿರಕ್ತವಾಗುತ್ತದೆ. ಮಿತ್ರರು ಕುಪಿತರಾಗುತ್ತಾರೆ. ಎಲ್ಲ ಪಾರ್ಥಿವರೂ, ಸ್ವಜನರೂ ಎಲ್ಲ ಕಡೆಗಳಿಂದ ನಮ್ಮನ್ನು ಧಿಕ್ಕರಿಸುತ್ತಾರೆ. ಶರಣು ಹೋದರೆ ಶಾಶ್ವತ ವರ್ಷಗಳ ವರೆಗೆ ಬಂಧುಗಳಲ್ಲಿ ದೋಷವುಳಿಯುತ್ತದೆ. ಪ್ರಜ್ಞಾನೇತ್ರ, ಜನೇಶ್ವರ, ತಂದೇ ನಿನ್ನ ಕುರಿತು ಶೋಕಿಸುತ್ತೇನೆ. ನನ್ನಿಂದಾಗಿ ಅವನು ಕೊನೆಯಿಲ್ಲದ ಕಷ್ಟಗಳನ್ನು ಪಡೆದಿದ್ದಾನೆ. ದುಃಖವನ್ನು ಹೊಂದಿದ್ದಾನೆ. ಏಕೆಂದರೆ ನನಗೆ ಪ್ರಿಯವಾದುದನ್ನು ಮಾಡಲೋಸುಗ ನಿನ್ನ ಪುತ್ರರೇ ಶತ್ರುಗಳು ಮುಂದುವರೆಯುವುದನ್ನು ತಡೆದಿದ್ದಾರೆ. ಇದು ನಿನಗೆ ಸಂಪೂರ್ಣವಾಗಿ ತಿಳಿದಿದೆ. ಮಹಾರಥಿ ಪಾಂಡವರು ಅಮಾತ್ಯರೊಂದಿಗೆ ರಾಜ ಧೃತರಾಷ್ಟ್ರನ ಕುಲವನ್ನು ಕಿತ್ತೊಗೆದು ವೈರಕ್ಕೆ ಪ್ರತೀಕಾರಗೊಳಿಸುತ್ತಾರೆ.’

“ಆಗ ದ್ರೋಣ, ಭೀಷ್ಮ, ಕೃಪ ಮತ್ತು ದ್ರೌಣಿಯರು, ನಾನು ಮಹಾ ಚಿಂತೆಯಲ್ಲಿದ್ದೇನೆಂದು ಮತ್ತು ನನ್ನ ಇಂದ್ರಿಯಗಳು ವ್ಯಥಿತವಾಗಿವೆಯೆಂದು ಆಲೋಚಿಸಿ ಹೇಳಿದ್ದರು: ‘ಪರಂತಪ! ಇತರರು ನಮಗೆ ಬೆದರಿಕೆ ಹಾಕಿದರೆ ನಾವು ಭಯಪಡಬೇಕಾಗಿಲ್ಲ. ಇತರರು ನಮ್ಮನ್ನು ಯುದ್ಧದಲ್ಲಿ ಜಯಿಸಲು ಅಸಮರ್ಥರು. ಒಬ್ಬೊಬ್ಬರಾಗಿ ನಾವು ಸರ್ವ ಪಾರ್ಥಿವರನ್ನು ಗೆಲ್ಲಲು ಸಮರ್ಥರು. ಬರಲಿ! ಅವರ ದರ್ಪವನ್ನು ಈ ಹರಿತ ಬಾಣಗಳಿಂದ ನಾಶಪಡಿಸುತ್ತೇವೆ. ಹಿಂದೆ ಅವನ ತಂದೆಯು ಮೃತನಾದ ನಂತರ ಭೀಷ್ಮನು ಕ್ರುದ್ಧನಾಗಿ ಸರ್ವ ಪಾರ್ಥಿವರನ್ನು ಒಂದೇ ರಥದಿಂದ ಗೆದ್ದಿದ್ದನು. ಕೋಪದಿಂದ ಕುರುಸತ್ತಮನು ಅವರಲ್ಲಿ ಬಹಳರನ್ನು ಸಂಹರಿಸಿದನು. ಆಗ ಅವರು ಭಯದಿಂದ ದೇವವ್ರತನ ಶರಣು ಹೋದರು. ನಮ್ಮೊಂದಿಗೆ ಈ ಭೀಷ್ಮನು ರಣದಲ್ಲಿ ಶತ್ರುಗಳನ್ನು ಗೆಲ್ಲಲು ಸುಸಮರ್ಥನು. ಆದುದರಿಂದ ನಿನ್ನ ಭೀತಿಯನ್ನು ಕಳೆದುಕೋ!’

“ಇದು ಆ ಸಮಯದಲ್ಲಿ ಈ ಅಮಿತೌಜಸರ ನಿಶ್ಚಯವಾಗಿತ್ತು. ಹಿಂದೆ ಇಡೀ ಭೂಮಿಯು ಶತ್ರುಗಳ ವಶದಲ್ಲಿತ್ತು. ಈಗ ಅವರು ಯುದ್ಧದಲ್ಲಿ ನಮ್ಮನ್ನು ಗೆಲ್ಲಲು ಸಮರ್ಥರಿಲ್ಲ. ಏಕೆಂದರೆ ಶತ್ರು ಪಕ್ಷವು ಒಡೆದಿದೆ. ಪಾಂಡವರು ಇಂದು ತಮ್ಮ ವೀರ್ಯವನ್ನು ಕಳೆದುಕೊಂಡಿದ್ದಾರೆ. ಈಗ ಪೃಥ್ವಿಯ ಆಗುಹೋಗುಗಳು ನಮ್ಮ ಮೇಲೆ ನಿಂತಿವೆ. ನಾನು ಕರೆದು ತಂದಿರುವ ರಾಜರು ಸುಖ ದುಃಖಗಳಲ್ಲಿ ಒಂದೇ ಉದ್ದೇಶವನ್ನಿಟ್ಟುಕೊಂಡಿದ್ದಾರೆ. ನನಗಾಗಿ ಈ ರಾಜರು ಎಲ್ಲರೂ ಅಗ್ನಿಯನ್ನಾದರೂ ಅಥವಾ ಸಮುದ್ರವನ್ನಾದರೂ ಹೊಗಬಲ್ಲರು. ಅದನ್ನು ತಿಳಿದುಕೋ! ನೀನು ದುಃಖಿಸುತ್ತಿರುವುದನ್ನು ನೋಡಿ ನಿನಗೆ ಹುಚ್ಚೇನಾದರೂ ಹಿಡಿದಿದೆಯೋ ಎಂದು ಅವರು ನಗುತ್ತಿದ್ದಾರೆ. ಭೀತನಾಗಿ ಬಹುವಿಧದಲ್ಲಿ ವಿಲಪಿಸುತ್ತಿರುವ ನೀನು ಶತ್ರುಗಳನ್ನು ಹೊಗಳುತ್ತಿದ್ದೀಯೆ. ಇಲ್ಲಿರುವ ಒಬ್ಬೊಬ್ಬ ರಾಜನೂ ಪಾಂಡವರನ್ನು ಎದುರಿಸಲು ಸಮರ್ಥನು. ಎಲ್ಲರೂ ಆತ್ಮಪೂರ್ವಕವಾಗಿ ಅದನ್ನು ತಿಳಿದಿದ್ದಾರೆ. ನಿನಗೆ ಬಂದಿರುವ ಭಯವನ್ನು ತೆಗೆದುಹಾಕು. ನಮ್ಮ ಈ ಸಮಗ್ರ ಸೇನೆಯೆಲ್ಲವನ್ನೂ ನಾಶಗೊಳಿಸಲು ವಾಸವನಿಗೂ, ಅಕ್ಷಯರೂಪೀ, ಸ್ವಯಂಭು ಬ್ರಹ್ಮನಿಗೂ ಸಾಧ್ಯವಿಲ್ಲ.

“ನನ್ನ ಪ್ರಭಾವ ಮತ್ತು ಸೇನೆಗೆ ಹೆದರಿ ಯುಧಿಷ್ಠಿರನು ಪುರವನ್ನು ಬಿಟ್ಟು ಐದು ಗ್ರಾಮಗಳನ್ನು ಬೇಡುತ್ತಿದ್ದಾನೆ! ಕುಂತೀಪುತ್ರ ವೃಕೋದರನು ಸಮರ್ಥ ಎಂದು ನೀನು ಏನು ಅಭಿಪ್ರಾಯ ಪಡುತ್ತೀಯೋ ಅದು ಸುಳ್ಳು. ನಿನಗೆ ನನ್ನ ಸಂಪೂರ್ಣ ಪ್ರಭಾವವು ತಿಳಿದಿಲ್ಲ. ಗದಾಯುದ್ಧದಲ್ಲಿ ನನಗೆ ಸಮನಾದವನು ಭೂಮಿಯಲ್ಲಿಯೇ ಯಾರೂ ಇಲ್ಲ. ಯಾರೂ ನನ್ನನ್ನು ಮೀರಿಸಿಲ್ಲ. ಯಾರೂ ಮೀರಿಸುವುದೂ ಇಲ್ಲ. ಉದ್ದೇಶವನ್ನಿಟ್ಟುಕೊಂಡೇ ಕಷ್ಟಪಟ್ಟು ನಾನು ಈ ವಿದ್ಯೆಯಲ್ಲಿ ಪಾರಂಗತನಾಗಿದ್ದೇನೆ. ಆದುದರಿಂದ ನನಗೆ ಭೀಮನ ಸ್ವಲ್ಪವೇ ಭಯವೆನ್ನುವುದನ್ನೂ ತಿಳಿದಿಲ್ಲ. ಸಂಕರ್ಷಣನಲ್ಲಿ ನಾನು ಕಲಿಯುತ್ತಿದ್ದಾಗ ಗದಾಯುದ್ಧದಲ್ಲಿ ದುರ್ಯೋಧನನ ಸಮನಿಲ್ಲ ಎಂದು ನಿಶ್ಚಯವಾಗಿತ್ತು. ನಿನಗೆ ಮಂಗಳವಾಗಲಿ! ಯುದ್ಧದಲ್ಲಿ ನಾನು ಸಂಕರ್ಷಣನ ಸಮ. ಬಲದಲ್ಲಿ ಭುವಿಯಲ್ಲಿ ಅವನಿಗಿಂತಲೂ ಅಧಿಕ. ಯುದ್ಧದಲ್ಲಿ ಭೀಮನು ನನ್ನ ಗದಾಪ್ರಹಾರವನ್ನು ಸಹಿಸಿಕೊಳ್ಳುವುದನ್ನು ತಿಳಿದಿಲ್ಲ. ರೋಷದಿಂದ ಒಂದೇ ಒಂದು ಹೊಡೆತವನ್ನು ಭೀಮನಿಗೆ ಕೊಟ್ಟರೆ ಅವನನ್ನು ಬೇಗನೆ ವೈವಸ್ವತಕ್ಷಯಕ್ಕೆ ಕೊಂಡೊಯ್ಯಲು ಸಾಕು.

“ವೃಕೋದರನು ಕೈಯಲ್ಲಿ ಗದೆಯನ್ನು ಹಿಡಿದಿರುವುದನ್ನು ನೋಡಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಬಹುಕಾಲದಿಂದ ಪ್ರಾರ್ಥಿಸುತ್ತಿದ್ದೆ. ಅದೇ ನನ್ನ ನಿತ್ಯ ಮನೋರಥವಾಗಿತ್ತು. ನನ್ನ ಗದೆಯಿಂದ ಹೊಡೆಯಲ್ಪಟ್ಟು ಪಾರ್ಥ ವೃಕೋದರನು ತನ್ನ ದೇಹವು ಜಜ್ಜಿಹೋಗಿ ಭೂಮಿಯ ಮೇಲೆ ಅಸುನೀಗಿ ಬೀಳುತ್ತಾನೆ. ನನ್ನ ಗದೆಯ ಪ್ರಹಾರಕ್ಕೆ ಸಿಲುಕಿದ ಹಿಮಾಲಯ ಪರ್ವತವೂ ಸಹ ನೂರಾರು ಸಹಸ್ರಾರು ಪುಡಿಯಾಗಿ ಕೆಳಗುರುಳುತ್ತದೆ. ಇದು ಅವನಿಗೆ ಮತ್ತು ಹಾಗೆಯೇ ವಾಸುದೇವ-ಅರ್ಜುನರಿಬ್ಬರಿಗೂ ತಿಳಿದಿದೆ. ಗದಾಯುದ್ಧದಲ್ಲಿ ದುರ್ಯೋಧನನ ಸಮನಾದವನು ಇಲ್ಲ ಎನ್ನುವುದು ನಿಶ್ಚಯವಾಗಿಹೋಗಿದೆ. ಆದುದರಿಂದ ಮಹಾಹವದಲ್ಲಿ ವೃಕೋದರನ ಕುರಿತು ಭಯವನ್ನು ತೆಗೆದುಹಾಕು. ನಾನು ಅವನನ್ನು ಕಳುಹಿಸುತ್ತೇನೆ. ಚಿಂತೆಯಿಲ್ಲದವನಾಗು. ಅವನು ನನ್ನಿಂದ ಹತನಾದ ತಕ್ಷಣ ಸರಿಸಾಟಿಯರಾದ ಮತ್ತು ಅವನಿಗಿಂತಲೂ ಮೀರಿದ ರಥಿಗಳು ಅರ್ಜುನನನ್ನು ಸೋಲಿಸುತ್ತಾರೆ.

“ಭೀಷ್ಮ, ದ್ರೋಣ, ಕೃಪ, ದ್ರೌಣಿ, ಕರ್ಣ, ಭೂರಿಶ್ರವ, ಪ್ರಾಗ್ಜ್ಯೋತಿಷಾಧಿಪ, ಶಲ್ಯ, ಸಿಂಧುರಾಜ ಜಯದ್ರಥ ಇವರು ಒಬ್ಬೊಬ್ಬರೇ ಪಾಂಡವರನ್ನು ಸಂಹರಿಸಲು ಶಕ್ತರು. ಒಟ್ಟಾಗಿ ಇವರು ಕ್ಷಣದಲ್ಲಿ ಅವರನ್ನು ಯಮಸಾದನಕ್ಕೆ ಕಳುಹಿಸುತ್ತಾರೆ. ಸಮಗ್ರ ಪಾರ್ಥಿವರ ಸೇನೆಯು ಪಾರ್ಥ ಧನಂಜಯನನ್ನು ಒಬ್ಬನನ್ನೇ ಸೋಲಿಸಲು ಅಶಕ್ತರಾಗಿರುವುದು ಹೇಗೆ? ಕಾರಣವು ತಿಳಿಯುತ್ತಿಲ್ಲ. ಭೀಷ್ಮನಿಂದ, ದ್ರೋಣ, ದ್ರೌಣಿ, ಕೃಪರಿಂದ ಪ್ರಯೋಗಿಸಲ್ಪಟ್ಟ ನೂರಾರು ಸಹಸ್ರಾರು ಬಾಣಗಳು ಪಾರ್ಥನನ್ನು ಯಮಕ್ಷಯಕ್ಕೆ ಕಳುಹಿಸುವವು. ಪಿತಾಮಹ ಗಾಂಗೇಯನಾದರೋ ಬ್ರಹ್ಮರ್ಷಿಸದೃಷನಾದ, ದೇವತೆಗಳಿಗೂ ಗೆಲ್ಲಲು ಅಸಾಧ್ಯನಾದ ಶಂತನುವಿಗೆ ಜನಿಸಿದನು. ‘ನೀನು ಬಯಸದೇ ಸಾಯುವುದಿಲ್ಲ!’ ಎಂದು ಪ್ರಸನ್ನನಾದ ಅವನ ತಂದೆಯು ಹೇಳಿದ್ದನು. ದ್ರೋಣನು ದ್ರೋಣಿಯಲ್ಲಿ ಬ್ರಹ್ಮರ್ಷಿ ಭರದ್ವಾಜನಿಗೆ ಜನಿಸಿದನು. ದ್ರೋಣನಲ್ಲಿ ಪರಮಾಸ್ತ್ರವನ್ನು ತಿಳಿದಿರುವ ದ್ರೌಣಿಯು ಜನಿಸಿದನು. ಆಚಾರ್ಯ ಮುಖ್ಯನಾಗಿರುವ ಈ ಕೃಪನು ಮಹರ್ಷಿ ಗೌತಮನಿಗೆ ಶರಸ್ತಂಭದಲ್ಲಿ ಜನಿಸಿದನು. ಈ ಶ್ರೀಮಾನನು ಅವಧ್ಯನೆಂದು ನನಗನ್ನಿಸುತ್ತದೆ. ಈ ಮೂವರು ಅಯೋನಿಜರನ್ನು ತಂದೆ, ತಾಯಿ ಮತ್ತು ಸೋದರ ಮಾವನನ್ನಾಗಿ ಪಡೆದ ಅಶ್ವತ್ಥಾಮನು ನನಗೆ ಶೂರನಾಗಿಯೇ ಇದ್ದಾನೆ. ಇವರೆಲ್ಲರೂ ದೇವಸಮಾನ ಮಹಾರಥಿಗಳು. ಇವರು ಯುದ್ಧದಲ್ಲಿ ಶಕ್ರನನ್ನೂ ವ್ಯಥೆಗೊಳಿಸಬಲ್ಲರು.

“ಭೀಷ್ಮ-ದ್ರೋಣ-ಕೃಪರನ್ನು ಕರ್ಣನು ಹೋಲುತ್ತಾನೆಂದು ನನಗನ್ನಿಸುತ್ತದೆ. ‘ನನ್ನ ಸಮನಾಗಿದ್ದೀಯೆ!’ ಎಂದು ರಾಮನಿಂದ ಅವನು ಹೇಳಿಸಿಕೊಂಡಿದ್ದಾನೆ. ಹುಟ್ಟುವಾಗಲೇ ಕರ್ಣನು ಹೊಳೆಯುವ ಸುಂದರ ಕುಂಡಲಗಳನ್ನು ಪಡೆದಿದ್ದನು. ಅದನ್ನು ಶಚಿಗೋಸ್ಕರವಾಗಿ ಮಹೇಂದ್ರನು ಪರಂತಪನಿಂದ ಕೇಳಿ ಪಡೆದನು. ಬದಲಾಗಿ ಪರಮ ಭಯಂಕರ ಶಕ್ತಿಯನ್ನಿತ್ತನು. ಆ ಶಕ್ತಿಯಿಂದ ರಕ್ಷಿತನಾದ ಅವನನ್ನು ಧನಂಜಯನು ಹೇಗೆ ಗೆಲ್ಲುತ್ತಾನೆ? ಕೈಯಲ್ಲಿ ಹಿಡಿದ ಫಲದಂತೆ ವಿಜಯವು ನನಗೆ ನಿಶ್ಚಯವಾದುದು. ಶತ್ರುಗಳ ಸಂಪೂರ್ಣ ಪರಾಜಯವು ಭೂಮಿಯಲ್ಲಿ ಅಭಿವ್ಯಕ್ತವಾಗಿವೆ.

“ಈ ಭೀಷ್ಮನು ಒಂದೇ ದಿನದಲ್ಲಿ ಹತ್ತುಸಾವಿರ ಯೋಧರನ್ನು ಸಂಹರಿಸುತ್ತಾನೆ. ದ್ರೋಣ, ದ್ರೌಣಿ, ಕೃಪರೂ ಕೂಡ ಅವನಿಗೆ ಸರಿಸಮನಾಗಿರುವವರೇ. ಕ್ಷತ್ರಿಯ ಸಂಶಪ್ತಕರ ಗುಂಪು ‘ನಾವು ಅರ್ಜುನನನ್ನು ಅಥವಾ ಅರ್ಜುನನು ನಮ್ಮನ್ನು ಕೊಲ್ಲಬೇಕು!’ ಎಂದು ಪ್ರತಿಜ್ಞೆಯನ್ನು ಮಾಡಿರುವರು. ಹಾಗೆಯೇ ಇನ್ನೂ ಅನೇಕ ರಾಜರು ಸವ್ಯಸಾಚಿಯನ್ನು ವಧಿಸುತ್ತೇವೆ ಎಂದು ತಿಳಿದಿದ್ದಾರೆ. ಏಕೆ ನೀನು ವ್ಯಥೆಗೊಳ್ಳುತ್ತಿರುವೆ? ಭೀಮಸೇನನು ಹತನಾದ ನಂತರ ಯುದ್ಧಮಾಡಲು ಬೇರೆ ಯಾರಿದ್ದಾರೆ? ಶತ್ರುಗಳ ಕುರಿತು ನೀನು ತಿಳಿದುಕೊಂಡಿದ್ದೇ ಆದರೆ ಇದನ್ನು ನನಗೆ ಹೇಳು. ಅವರು ಎಲ್ಲ ಐವರು ಸಹೋದರರು, ಧೃಷ್ಟದ್ಯುಮ್ನ ಮತ್ತು ಸಾತ್ಯಕಿ ಈ ಏಳು ಮಂದಿ ಮಾತ್ರ ಶತ್ರುಗಳ ಪರಮ ಬಲಶಾಲಿ ಯೋದ್ಧರು. ಆದರೆ ನಮ್ಮಲ್ಲಿ ಇವರು ವಿಶಿಷ್ಟರಾಗಿದ್ದಾರೆ: ಭೀಷ್ಮ, ದ್ರೋಣ, ಕೃಪ, ದ್ರೌಣಿ, ವೈಕರ್ತನ ಕರ್ಣ, ಸೋಮದತ್ತ ಬಾಹ್ಲೀಕ, ಪ್ರಾಗ್ಜ್ಯೋತಿಷಾಧಿಪ, ಶಲ್ಯ, ಅವಂತಿಯವರಿಬ್ಬರು (ವಿಂದ ಮತ್ತು ಅನುವಿಂದ), ಜಯದ್ರಥ, ದುಃಶಾಸನ, ದುರ್ಮುಖ, ದುಃಸ್ಸಹ, ಶ್ರುತಾಯು, ಚಿತ್ರಸೇನ, ಪುರುಮಿತ್ರ, ವಿವಿಂಶತಿ, ಶಲ, ಭೂರಿಶ್ರವ ಮತ್ತು ನಿನ್ನ ಮಗ ವಿಕರ್ಣ.

“ನಾನು ಹನ್ನೊಂದು ಅಕ್ಷೌಹಿಣಿಗಳನ್ನು ಒಟ್ಟುಹಾಕಿದ್ದೇನೆ. ಶತ್ರುಗಳದ್ದು ಏಳೇ ಇರುವಾಗ ನಾನು ಹೇಗೆ ಪರಾಜಯ ಹೊಂದುತ್ತೇನೆ? ಮೂರನೇ ಒಂದು ಭಾಗ ಕಡಿಮೆಯಿರುವ ಸೇನೆಯೊಂದಿಗೆ ಯುದ್ಧಮಾಡಬೇಕೆಂದು ಬೃಹಸ್ಪತಿಯು ಹೇಳಿದ್ದಾನೆ. ನನ್ನ ಸೇನೆಯು ಶತ್ರುಗಳ ಸೇನೆಗಿಂತ ಮೂರನೇ ಒಂದು ಭಾಗ ಹೆಚ್ಚಿದೆ. ಶತ್ರುಗಳಲ್ಲಿ ನಾನು ಬಹಳಷ್ಟು ಗುಣಹೀನತೆಯನ್ನು ಮತ್ತು ನಮ್ಮಲ್ಲಿ ಬಹುಮಟ್ಟಿನ ಗುಣೋದಯವನ್ನು ಕಾಣುತ್ತೇನೆ. ಈ ಎಲ್ಲ ನನ್ನ ಬಲದ ಹೆಚ್ಚಿನದನ್ನು ಮತ್ತು ಪಾಂಡವರ ನ್ಯೂನತೆಗಳನ್ನು ಅರ್ಥಮಾಡಿಕೊಂಡು ನೀನು ದುಃಖಿಸಬಾರದು.”

ಹೀಗೆ ಹೇಳಿ ಆ ಸಮಯದಲ್ಲಿ ಏನನ್ನು ತಿಳಿದುಕೊಳ್ಳಬೇಕು ಎಂದು ಅರಿತಿರುವ ಆ ಪರಪುರಂಜಯನು ಸಂಜಯನನ್ನು ಪುನಃ ಕೇಳಿದನು.

ಪಾಂಡವರ ರಥಗಳ ವರ್ಣನೆ

ದುರ್ಯೋಧನನು ಹೇಳಿದನು: “ಸಂಜಯ! ಏಳು ಅಕ್ಷೌಹಿಣಿಗಳನ್ನು ಪಡೆದು ಕೌಂತೇಯ ಯುಧಿಷ್ಠಿರನು ರಾಜರೊಂದಿಗೆ ಯುದ್ಧಕ್ಕಾಗಿ ಏನು ಮಾಡುತ್ತಿದ್ದಾನೆ?”

ಸಂಜಯನು ಹೇಳಿದನು: “ರಾಜನ್! ಯುದ್ಧದ ಕುರಿತು ಯುಧಿಷ್ಠಿರನು ಅತೀವ ಹರ್ಷಿತನಾಗಿದ್ದಾನೆ. ಭೀಮಸೇನ-ಅರ್ಜುನರೂ, ಇಬ್ಬರು ಯಮಳರೂ ಕೂಡ ಭಯಪಡುತ್ತಿಲ್ಲ. ಮಂತ್ರಗಳನ್ನು ಪರೀಕ್ಷಿಸಲು ಕೌಂತೇಯ ಬೀಭತ್ಸುವು ಎಲ್ಲ ದಿಕ್ಕುಗಳನ್ನೂ ಬೆಳಗಿಸುವ ದಿವ್ಯ ರಥವನ್ನು ಸಿದ್ಧಪಡಿಸಿದ್ದಾನೆ. ಕವಚಗಳನ್ನು ಧರಿಸಿದ ಅವನು ಮಿಂಚಿನಿಂದ ಕೂಡಿದ ಕಪ್ಪು ಮೋಡದಂತೆ ಕಾಣಿಸುತ್ತಾನೆ. ಸ್ವಲ್ಪ ಯೋಚಿಸಿ ಅವನು ಹರ್ಷದಿಂದ ನನಗೆ ಈ ಮಾತುಗಳನ್ನಾಡಿದನು: “ಸಂಜಯ! ಮೊದಲ ಈ ರೂಪವನ್ನು ನೋಡು. ನಾವು ಗೆಲ್ಲುತ್ತೇವೆ!” ಬೀಭತ್ಸುವು ನನಗೆ ಹೇಳಿದುದು ಸತ್ಯವಾಗಿ ತೋರಿತು.”

ದುರ್ಯೋಧನನು ಹೇಳಿದನು: “ಅಕ್ಷದಲ್ಲಿ ಸೋತ ಆ ಪಾರ್ಥರನ್ನು ಪ್ರಶಂಸಿಸುವುದರಲ್ಲಿ ನೀನು ಖುಷಿಪಡುವಂತಿದೆ! ಹೇಳು! ಅರ್ಜುನನ ರಥವು ಹೇಗಿದೆ? ಅಶ್ವಗಳು, ಧ್ವಜವು ಹೇಗಿವೆ?”

ಸಂಜಯನು ಹೇಳಿದನು: “ವಿಭೋ! ಶಕ್ರನೊಂದಿಗೆ ಭೌವನನು ಧಾತ್ರಾ ತ್ವಷ್ಟನ ಸಹಾಯದಿಂದ ಅರ್ಜುನನ ರಥದಲ್ಲಿರುವ ಬಹುಚಿತ್ರ ರೂಪಗಳನ್ನು ಕಲ್ಪಿಸಿದನು. ಅವನ ಧ್ವಜದಲ್ಲಿ ದೇವಮಾಯೆಯನ್ನು ತೋರಿಸುವ, ದೊಡ್ಡ ಮತ್ತು ಸಣ್ಣ ದಿವ್ಯ ಆಕಾರಗಳನ್ನು ನೀಡಿದ್ದಾರೆ. ಭೌವನನು ಮಾಯೆಯಿಂದ ಧ್ವಜವು ಎಲ್ಲ ದಿಕ್ಕುಗಳಲ್ಲಿಯೂ, ಮೇಲೆ ಮತ್ತು ಕೆಳಗೆ ಒಂದು ಯೋಜನ ದೂರದವರೆಗೆ ಪಸರಿಸುವಂತೆ ಮಾಡಿದ್ದಾನೆ. ಗಿಡಮರಗಳೂ ಅದರ ದಾರಿಯನ್ನು ತಡೆಯಲಾರವು. ಆಕಾಶದಲ್ಲಿ ಕಾಮನಬಿಲ್ಲು ಪ್ರಕಾಶಿಸುವಂತೆ ಒಂದೇ ಬಣ್ಣವನ್ನು ತೋರಿಸುವುದಿಲ್ಲ. ಅದು ಯಾವುದರಿಂದ ಮಾಡಲ್ಪಟ್ಟಿದೆಯೆಂದು ಯಾರಿಗೂ ತಿಳಿಯದು. ಹಾಗೆ ಭೌವನನು ಅದನ್ನು ನಿರ್ಮಿಸಿದ್ದಾನೆ. ಅದರ ಆಕಾರ-ರೂಪಗಳು ಬಹಳ. ಬೆಂಕಿ-ಹೊಗೆಗಳು ಒಂದಾಗಿ ಮೇಲೇರುವಂತೆ ಅದರ ಶರೀರದಿಂದ ತೇಜಸ್ಸಿನ ಬಣ್ಣಗಳು ಹೊರಸೂಸುತ್ತವೆ. ಆ ರೀತಿಯಲ್ಲಿ ಭೌವನನು ಧ್ವಜವನ್ನು ನಿರ್ಮಿಸಿದ್ದಾನೆ. ಅದಕ್ಕೆ ಭಾರವೇ ಇಲ್ಲ. ಅದನ್ನು ತಡೆಯುವುದೂ ಅಸಾಧ್ಯ. ಅದಕ್ಕೆ ಚಿತ್ರರಥನು ಕೊಟ್ಟ ವಾಯುವೇಗವುಳ್ಳ ದಿವ್ಯವಾದ ಬಿಳಿಯ ನೂರು ಕುದುರೆಗಳನ್ನು ಕಟ್ಟಲಾಗಿವೆ. ಕೊಲ್ಲಲ್ಪಟ್ಟ ಹಾಗೆ ಅವುಗಳ ಸಂಖ್ಯೆಯು ಯಾವಾಗಲೂ ಪೂರ್ಣವಾಗಿರುವವೆಂದು ಹಿಂದೆ ವರವಿತ್ತು.

“ಹಾಗೆಯೇ ರಾಜ ಯುಧಿಷ್ಠಿರನ ರಥಕ್ಕೆ ದಂತವರ್ಣದ ಗಾತ್ರದಲ್ಲಿ ದೊಡ್ಡ, ವೀರ್ಯದಲ್ಲಿ ಸಮನಾದ ಹೊಳೆಯುತ್ತಿರುವ ಕುದುರೆಗಳನ್ನು ಕಟ್ಟಲಾಗಿದೆ. ಹಾಗೆಯೇ ರಣದಲ್ಲಿ ಭೀಮಸೇನನ ವಾಹನಕ್ಕೆ ಸಪ್ತರ್ಷಿಗಳಂತೆ ತೋರುವ ವಾಯುವೇಗವಿರುವ ಕುದುರೆಗಳಿವೆ. ಸಹದೇವನು ದೇಹದ ಮೇಲೆ ಚುಕ್ಕೆಗಳಿರುವ, ಬೆನ್ನಿನ ಮೇಲೆ ಗಿಳಿಯ ಬಣ್ಣವನ್ನು ತಳೆದಿರುವ, ಅಣ್ಣ ಫಲ್ಗುನನು ಪ್ರೀತಿಯಿಂದ ಕೊಟ್ಟಿರುವ, ವೀರ ಸಹೋದರನ ಕುದುರೆಗಳಿಗಿಂತಲೂ ವಿಶಿಷ್ಟವಾದ ಕುದುರೆಗಳನ್ನು ಓಡಿಸುತ್ತಾನೆ. ಮಾದ್ರಿಯ ಮಗ ಅಜಮೀಡ ನಕುಲನನ್ನು ಮಹೇಂದ್ರನು ನೀಡಿದ ಉತ್ತಮ ಕುದುರೆಗಳು ಕೊಂಡೊಯ್ಯುತ್ತವೆ. ವೇಗದಲ್ಲಿ ಅವು ವಾಯುವಿಗೆ ಸಮನಾದವು. ಆ ತರಸ್ವಿಗಳು ವೃತ್ರಶತ್ರು ಇಂದ್ರನನ್ನು ಹೇಗೋ ಹಾಗೆ ಆ ವೀರನನ್ನು ಹೊರುತ್ತವೆ. ವಯಸ್ಸಿನಲ್ಲಿ ಮತ್ತು ವಿಕ್ರಮದಲ್ಲಿ ಇವುಗಳನ್ನು ಹೋಲುವ, ವೇಗದಲ್ಲಿ ಸರಿಸಾಟಿಯಿರದ, ದೇವತೆಗಳು ಕೊಟ್ಟಿರುವ ಉತ್ತಮ ದೊಡ್ಡ ಕುದುರೆಗಳು ಸೌಬದ್ರಿಯೇ ಮೊದಲಾದ ದ್ರೌಪದೇಯ ಕುಮಾರರನ್ನು ಹೊರುತ್ತವೆ.”

ಧೃತರಾಷ್ಟ್ರನು ಹೇಳಿದನು: “ಸಂಜಯ! ಅಲ್ಲಿ. ಬೇರೆ ಬೇರೆ ಕಾರಣಗಳಿಂದ ಪಾಂಡವರಿಗಾಗಿ ನನ್ನ ಸೇನೆಯೊಡನೆ ಯುದ್ಧಮಾಡಲು ಸೇರಿರುವ ಯಾರ್ಯಾರನ್ನು ನೀನು ನೋಡಿದೆ?”

ಸಂಜಯನು ಹೇಳಿದನು: “ಅಂಧಕ-ವೃಷ್ಣಿಯರ ಮುಖ್ಯ ಕೃಷ್ಣನು ಬಂದಿರುವುದನ್ನು ನೋಡಿದೆ. ಚೇಕಿತಾನ, ಯುಯುಧಾನ ಸಾತ್ಯಕಿಯರೂ ಅಲ್ಲಿದ್ದರು. ಪುರುಷಮಾನಿಗಳಾದ ಅವರಿಬ್ಬರು ಮಹಾರಥಿಗಳೂ ಒಂದೊಂದು ಅಕ್ಷೌಹಿಣಿಗಳೊಂದಿಗೆ ಪಾಂಡವನನ್ನು ಸೇರಿರುವರು. ಪಾಂಚಾಲ್ಯ ದ್ರುಪದನು ಅವರ ಮಾನವನ್ನು ಹೆಚ್ಚಿಸಲು ತನ್ನ ಹತ್ತು ಮಕ್ಕಳಿಂದ ಆವೃತವಾಗಿರುವ, ಸತ್ಯಜಿತನೇ ಮೊದಲಾದ ಪ್ರಮುಖ ವೀರರಿಂದ ಕೂಡಿದ, ವೀರ ಧೃಷ್ಟದ್ಯುಮ್ನನ ನಾಯಕತ್ವದಲ್ಲಿರುವ, ಶಿಖಂಡಿಯಿಂದ ರಕ್ಷಿತವಾಗಿರುವ, ಅಕ್ಷೌಹಿಣಿಯನ್ನು ತಂದಿದ್ದಾನೆ. ಅವನ ಸೇನೆಯೆಲ್ಲವಕ್ಕೂ ಉಡುಪಿನ ವ್ಯವಸ್ಥೆಯಿದೆ. ಪೃಥಿವೀಪಾಲ ವಿರಾಟನು ಶಂಖ ಮತ್ತು ಉತ್ತರ ಈ ಇಬ್ಬರು ಪುತ್ರರೊಂದಿಗೆ, ಸೂರ್ಯದತ್ತನೇ ಮೊದಲಾದ ವೀರರೊಂದಿಗೆ, ಮದಿರಾಶ್ವನ ನಾಯಕತ್ವದಲ್ಲಿ, ಸಹೋದರರು ಮಕ್ಕಳೊಂದಿಗೆ ಅಕ್ಷೌಹಿಣೀ ಸೇನೆಯೊಂದಿಗೆ ಪಾರ್ಥನನ್ನು ಸೇರಿದ್ದಾನೆ. ಮಾಗಧಿ ಜರಾಸಂಧನ ಮಗ ಮತ್ತು ಚೇದಿರಾಜ ಧೃಷ್ಟಕೇತು ಇಬ್ಬರೂ ಒಂದೊಂದು ಅಕ್ಷೌಹಿಣೀ ಸೇನೆಗಳೊಂದಿಗೆ ಬಂದಿದ್ದಾರೆ. ಐವರು ಕೇಕಯ ಸಹೋದರರೆಲ್ಲರೂ ಅವರ ಕೆಂಪುಧ್ವಜಗಳನ್ನು ಹಾರಿಸಿ, ಒಂದು ಅಕ್ಷೌಹಿಣಿಯಿಂದ ಪರಿವೃತರಾಗಿ ಪಾಂಡವರನ್ನು ಸೇರಿದ್ದಾರೆ. ಇವರೆಲ್ಲ ಅಲ್ಲಿ ಪಾಂಡವರಿಗಾಗಿ ಧಾರ್ತರಾಷ್ಟ್ರನ ಸೇನೆಯನ್ನು ಎದುರಿಸಲು ಬಂದು ಸೇರಿರುವುದನ್ನು ನಾನು ನೋಡಿದ್ದೇನೆ.

“ಮಾನುಷ, ದೇವ, ಗಂಧರ್ವ, ಅಸುರ ವ್ಯೂಹಗಳನ್ನು ತಿಳಿದಿರುವ ಮಹಾಮನಸ್ವಿ ಧೃಷ್ಟದ್ಯುಮ್ನನು ಅವನ ಆ ಸೇನೆಯ ಪ್ರಮುಖನು. ಭೀಷ್ಮ ಶಾಂತನವನನ್ನು ಶಿಖಂಡಿಯ ಪಾಲಿಗೆ ಬಿಟ್ಟುಕೊಟ್ಟಿದ್ದಾರೆ. ಸೈನಿಕ ಅಮಾತ್ಯರೊಂದಿಗೆ ಮತ್ಸ್ಯ ವಿರಾಟನು ಅವನಿಗೆ ಸಹಾಯ ಮಾಡುತ್ತಾನೆ. ಬಲಶಾಲೀ ಮದ್ರಾಧಿಪನು ಹಿರಿಯ ಪಾಂಡುಪುತ್ರನ ಪಾಲಿಗೆ ಹೋಗಿದ್ದಾನೆ. ಅಲ್ಲಿದ್ದ ಕೆಲವರು ಅವರಿಬ್ಬರೂ ವಿಷಮರು ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಮಗನೊಂದಿಗೆ ದುರ್ಯೋಧನ ಮತ್ತು ಜೊತೆಯಲ್ಲಿ ಅವನ ನೂರು ತಮ್ಮಂದಿರು, ಹಾಗೆಯೇ ಪೂರ್ವ ಮತ್ತು ದಕ್ಷಿಣದ ರಾಜರು ಭೀಮಸೇನನ ಪಾಲಿಗೆ ಹೋಗಿದ್ದಾರೆ. ಅರ್ಜುನನ ಪಾಲಿಗೆ ಕರ್ಣ ವೈಕರ್ತನ, ಅಶ್ವತ್ಥಾಮ, ವಿಕರ್ಣ ಮತ್ತು ಸೈಂಧವ ಜಯದ್ರಥರು ಬರುತ್ತಾರೆ. ಭೂಮಿಯಲ್ಲಿಯೇ ಶೂರರೆಂದು ತಿಳಿದಿರುವ ಇತರ ಗೆಲ್ಲಲಸಾಧ್ಯರೆಲ್ಲರೂ ಪಾರ್ಥ ಅರ್ಜುನನ ಪಾಲಿಗೆಂದೂ ಯೋಚಿಸಲಾಗಿದೆ. ಐವರು ಮಹೇಷ್ವಾಸ ರಾಜಪುತ್ರ ಕೇಕಯ ಸಹೋದರರು ಯುದ್ಧದಲ್ಲಿ ಕೇಕಯರನ್ನು ತಮ್ಮ ಪಾಲಿಗಿರಿಸಿಕೊಂಡು ಯುದ್ಧಮಾಡುವರು. ಅವರು ತಮ್ಮ ಪಾಲಿಗೆ ಮಾಲವರು, ಶಾಲ್ವರು, ಕೇಕಯರು, ಮತ್ತು ತ್ರಿಗರ್ಥರ ಇಬ್ಬರು ಪ್ರಮುಖರಾದ ಸಂಶಪ್ತಕರನ್ನು ಮಾಡಿಕೊಂಡಿದ್ದಾರೆ. ದುರ್ಯೋಧನ ಮತ್ತು ದುಃಶಾಸನನ ಮಕ್ಕಳು ಹಾಗೂ ರಾಜಾ ಬೃಹದ್ಬಲನನ್ನು ಸೌಭದ್ರಿಯು ತನ್ನ ಪಾಲಿಗೆ ಮಾಡಿಕೊಂಡಿದ್ದಾನೆ. ಸುವರ್ಣದಿಂದ ಮಾಡಲ್ಪಟ್ಟ ಧ್ವಜಗಳನ್ನು ಹೊಂದಿದ ಮಹೇಷ್ವಾಸ ದ್ರೌಪದೇಯರು ಧೃಷ್ಟದ್ಯುಮ್ನನ ನೇತೃತ್ವದಲ್ಲಿ ದ್ರೋಣನನ್ನು ಎದುರಿಸುತ್ತಾರೆ. ಚೇಕಿತಾನನು ಸೋಮದತ್ತನೊಡನೆ ದ್ವಂದ್ವರಥ ಯುದ್ಧಮಾಡಲು ಬಯಸುತ್ತಾನೆ. ಯುಯುಧಾನನು ಭೋಜ ಕೃತವರ್ಮನೊಡನೆ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ ಆಕ್ರಂದನಗೈಯುವ ಶೂರ ಮಾದ್ರೇಯ ಸಹದೇವನು ನಿನ್ನ ಬಾವ ಸುಬಲಾತ್ಮಜನು ತನಗೆಂದು ಯೋಚಿಸಿದ್ದಾನೆ. ಉಲೂಕ ಕೈತವ್ಯ ಮತ್ತು ಸಾರಸ್ವತ ಗಣಗಳು ಮಾದ್ರವತೀಸುತ ನಕುಲನ ಪಾಲಿಗೆಂದು ಯೋಚಿಸಿದ್ದಾರೆ. ಇತರ ಪಾರ್ಥಿವರನ್ನು ಪಾಂಡುಪುತ್ರರು ಯುದ್ಧದಲ್ಲಿ ಯಾರು ಯಾರನ್ನು ಎದುರಿಸುವರೋ ಅದರಂತೆ ಪಾಲುಹಂಚುತ್ತಾರೆ. ಈ ರೀತಿಯಲ್ಲಿ ಸೇನೆಗಳು ಭಾಗ ಭಾಗಗಳಾಗಿ ಹಂಚಲ್ಪಟ್ಟಿವೆ. ಈಗ ನೀನು ಮತ್ತು ನಿನ್ನ ಮಗನು ಕಾರ್ಯವೆಸಗುವುದರಲ್ಲಿ ವಿಳಂಬ ಮಾಡಬಾರದು.”

ಧೃತರಾಷ್ಟ್ರನು ಹೇಳಿದನು: “ಕೆಟ್ಟ ದ್ಯೂತವನ್ನಾಡಿದ ಜೂಜುಗಾರ ಮೂಢ ನನ್ನ ಮಕ್ಕಳು ಜೋರಾಗಿ ನಡೆಯುವ ರಣದಲ್ಲಿ ಬಲವಂತ ಭೀಮನೊಡನೆ ಯುದ್ಧಮಾಡಿ ಇಲ್ಲವಾಗುತ್ತಾರೆ. ಕಾಲಧರ್ಮದಿಂದ ಪ್ರೋಕ್ಷಿತರಾದ ಪಾರ್ಥಿವ ರಾಜರೆಲ್ಲರೂ ಬೆಂಕಿಗೆ ಬೀಳುವ ಪತಂಗಗಳಂತೆ ಗಾಂಡೀವಾಗ್ನಿಯನ್ನು ಪ್ರವೇಶಿಸುತ್ತಾರೆ. ಆ ಮಹಾತ್ಮರ ವೈರಸಾಧನೆಯಿಂದ ನನ್ನ ಸೇನೆಯು ನಾಶವಾದುದನ್ನು ಈಗಲೇ ಕಾಣುತ್ತಿದ್ದೇನೆ. ರಣದಲ್ಲಿ ಪಾಂಡವರೊಂದಿಗೆ ಯುದ್ಧಮಾಡಿ ಪುಡಿಯಾಗಿರುವ ಸೇನೆಯನ್ನು ಯಾರುತಾನೇ ಅನುಸರಿಸುತ್ತಾರೆ? ಯುಧಿಷ್ಠಿರನ ನೇತೃತ್ವದಲ್ಲಿರುವ ಮತ್ತು ಮಧುಸೂದನನ ರಕ್ಷಣೆಯಲ್ಲಿರುವ ಇವರೆಲ್ಲರೂ - ಇಬ್ಬರು ಪಾಂಡವ ವೀರ ಯೋಧರಾದ ಸವ್ಯಸಾಚಿ-ವೃಕೋದರರು. ನಕುಲ-ಸಹದೇವರು, ಪಾರ್ಷತ ಧೃಷ್ಟದ್ಯುಮ್ನ, ಸಾತ್ಯಕಿ, ದ್ರುಪದ, ಧೃಷ್ಟದ್ಯುಮ್ನನ ಮಗ, ಉತ್ತಮೌಜ ಪಾಂಚಾಲ್ಯ, ಯುಧಾಮನ್ಯು ದುರ್ಜಯ, ಶಿಖಂಡಿ, ಕ್ಷತ್ರದೇವ, ವೈರಾಟೀ ಉತ್ತರ, ಕಾಶಿರಾಜ, ಚೇದಿರಾಜ, ಮತ್ಸ್ಯರು, ಸರ್ವ ಸೃಂಜಯರು, ವಿರಾಟಪುತ್ರ ಬಭ್ರು, ಪಾಂಚಾಲ ಪ್ರಭದ್ರಕ - ಎಲ್ಲರೂ ಅತಿರಥರು, ಶೂರರು, ಕೀರ್ತಿಮಂತರು, ಪ್ರತಾಪಿಗಳು, ತೇಜಸ್ಸಿನಲ್ಲಿ ಸೂರ್ಯ-ಪಾವಕರ ಸಮಾನರು ಮತ್ತು ಯುದ್ಧಗಳಲ್ಲಿ ಜಯಗಳಿಸಿದವರು. ಇವರು ಬಯಸದಿದ್ದರೆ ಇಂದ್ರನೂ ಕೂಡ ಇವರಿಂದ ಈ ಭೂಮಿಯನ್ನು ಕಸಿದುಕೊಳ್ಳಲಾರ. ಈ ವೀರರು, ರಣಧೀರರು ಪರ್ವತವನ್ನೂ ಪುಡಿಮಾಡಿಯಾರು! ಆ ಎಲ್ಲ ಗುಣಸಂಪನ್ನರನ್ನೂ, ಅಮನುಷ್ಯರನ್ನೂ, ಪ್ರತಾಪಿಗಳನ್ನೂ, ನಾನು ಕೂಗಿ ಅಳುತ್ತಿದ್ದರೂ, ನನ್ನ ದುಷ್ಪುತ್ರರು ಯುದ್ಧಮಾಡಬಯಸುತ್ತಾರೆ ಸಂಜಯ!”

ದುರ್ಯೋಧನನು ಹೇಳಿದನು: “ನಾವಿಬ್ಬರೂ ಒಂದೇ ಜಾತಿಯವರು. ಹಾಗೆಯೇ ಇಬ್ಬರೂ ಭೂಮಿಯ ಮೇಲೇ ನಡೆಯುವವರು. ಹಾಗಿರುವಾಗ ಪಾಂಡವರಿಗೆ ಮಾತ್ರ ಜಯವೆಂದು ನೀನು ಹೇಗೆ ಹೇಳುತ್ತೀಯೆ? ಪಿತಾಮಹ, ದ್ರೋಣ, ಕೃಪ, ದುರ್ಜಯ ಕರ್ಣ, ಜಯದ್ರಥ, ಸೋಮದತ್ತ, ಅಶ್ವತ್ಥಾಮ ಇವರೂ ಕೂಡ ಸುಚೇತಸರು, ಮಹೇಷ್ವಾಸರು, ಮತ್ತು ಸಮರದಲ್ಲಿ ಅವರನ್ನು ದೇವತೆಗಳ ಸಹಿತ ಇಂದ್ರನೂ ಗೆಲ್ಲಲು ಅಶಕ್ತನಾಗಿರುವಾಗ ಇನ್ನು ಪಾಂಡವರು ಯಾವ ಲೆಖ್ಕಕ್ಕೆ? ಅಪ್ಪಾ! ಈ ಭೂಮಿಯೆಲ್ಲವೂ ನನಗಾಗಿಯೇ ಸೃಷ್ಟಿಯಾಗಿದೆ - ಆರ್ಯರಾದ, ಧೃತಿಮತರಾದ, ಅಗ್ನಿಯಂತೆ ಶೂರರಾದ ಪಾಂಡವರನ್ನು ಕಾಡಿಸಲು. ನನ್ನವರನ್ನು ನಿನ್ನ ಪಾಂಡವರು ತಿರುಗಿ ನೋಡಲೂ ಅಸಮರ್ಥರು. ಪಾರಾಕ್ರಾಂತರಾದ ಇವರು ಪಾಂಡವರನ್ನು ಅವರ ಮಕ್ಕಳೊಂದಿಗೆ ಯುದ್ಧದಲ್ಲಿ ಹೋರಾಡುತ್ತಾರೆ. ನನ್ನ ಈ ಪ್ರಿಯ ಪಾರ್ಥಿವರೆಲ್ಲರೂ ಬಲೆಯನ್ನು ಬೀಸಿ ಜಿಂಕೆಗಳನ್ನು ತಡೆಯುವಂತೆ ಅವರನ್ನು ತಡೆಯಲು ಬಯಸುತ್ತಾರೆ. ನನ್ನವರ ಮಹಾ ರಥಸಮೂಹಗಳಿಂದ ಮತ್ತು ಶರಜಾಲಗಳಿಂದ ಪಾಂಚಾಲರೊಂದಿಗೆ ಪಾಂಡವರು ಇಲ್ಲವಾಗುತ್ತಾರೆ.”

ಧೃತರಾಷ್ಟ್ರನು ಹೇಳಿದನು: “ಸಂಜಯ! ಹುಚ್ಚುಹಿಡಿದವನಂತೆ ನನ್ನ ಮಗನು ವಿಲಪಿಸುತ್ತಿದ್ದಾನೆ. ಧರ್ಮರಾಜ ಯುಧಿಷ್ಠಿರನನ್ನು ಯುದ್ಧದಲ್ಲಿ ಗೆಲ್ಲುವುದಕ್ಕೆ ಅವನು ಶಕ್ತನಿಲ್ಲ. ಸುಪುತ್ರರಾದ, ಬಲವತ್ತರಾಗಿರುವ, ಧರ್ಮಜ್ಞರಾದ, ಮಹಾತ್ಮ, ಯಶಸ್ವಿ ಪಾಂಡವರ ಕುರಿತು ಭೀಷ್ಮನಿಗೆ ಸದಾ ತಿಳಿದಿದೆ. ಅವನು ಆ ಮಹಾತ್ಮರೊಡನೆ ಯುದ್ಧಮಾಡಲು ಇಷ್ಟಪಡುವುದಿಲ್ಲ. ನನಗೆ ಇನ್ನೂ ಪುನಃ ಅವರು ಏನುಮಾಡುತ್ತಿದ್ದಾರೆ ಎನ್ನುವುದನ್ನು ಹೇಳು. ಯಾವ ತರಸ್ವಿಯು ಮಹೇಷ್ವಾಸ ಪಾಂಡವರನ್ನು ಪುನಃ ಪುನಃ, ಯಾಜ್ಞಿಕರು ತುಪ್ಪದ ಆಹುತಿಯನ್ನು ಅಗ್ನಿಯಲ್ಲಿ ಹಾಗಿ ಉರಿಸುವಂತೆ ಉರಿಸುತ್ತಿದ್ದಾನೆ?”

ಸಂಜಯನು ಹೇಳಿದನು: “ಭಾರತ! ‘ಯುದ್ಧಮಾಡಿ! ಯುದ್ಧಕ್ಕೆ ಹೆದರಬೇಡಿ!’ ಎಂದು ಧೃಷ್ಟದ್ಯುಮ್ನನು ಸದಾ ಆ ಭರತಸತ್ತಮರನ್ನು ಉರಿಸುತ್ತಿದ್ದಾನೆ. ‘ಧಾರ್ತರಾಷ್ಟ್ರನನ್ನು ಸುತ್ತುವರೆದಿರುವ ಆ ಕೆಲವು ಪಾರ್ಥಿವರು ಯುದ್ಧದ ಹೋರಾಟದಲ್ಲಿ ಆಯುಧಗಳ ಹೊಡೆತವನ್ನು ಎದುರಿಸುವವರಿದ್ದಾರೆ. ತಿಮಿಂಗಿಲವು ನೀರಿನಲ್ಲಿರುವ ಮೀನುಗಳನ್ನು ಹೇಗೋ ಹಾಗೆ ನಾನೊಬ್ಬನೇ ಕೃದ್ಧನಾಗಿ ಬಂಧುಗಳೊಂದಿಗೆ ಸೇರಿರುವ ಎಲ್ಲರನ್ನೂ ಯುದ್ಧದಲ್ಲಿ ನಾಶಗೊಳಿಸುತ್ತೇನೆ. ಭೀಷ್ಮ, ದ್ರೋಣ, ಕೃಪ, ಕರ್ಣ, ದ್ರೌಣಿ, ಶಲ್ಯ, ಸುಯೋಧನ ಇವರನ್ನೂ ಕೂಡ ಸಮುದ್ರದ ದಡವು ಅಲೆಗಳನ್ನು ತಡೆಯುವಂತೆ ತಡೆಯುತ್ತೇನೆ.’ ಹಾಗೆ ಹೇಳುತ್ತಿದ್ದ ಅವನಿಗೆ ಧರ್ಮಾತ್ಮ ರಾಜಾ ಯುಧಿಷ್ಠಿರನು ಹೇಳಿದನು: ‘ಪಾಂಚಾಲರೊಂದಿಗೆ ಪಾಂಡವರು ಎಲ್ಲರೂ ನಿನ್ನ ಧೈರ್ಯ, ವೀರ್ಯಗಳನ್ನು ಅವಲಂಬಿಸಿದ್ದಾರೆ. ಈ ಸಂಗ್ರಾಮದಿಂದ ನಮ್ಮನ್ನು ರಕ್ಷಿಸಿ ಉದ್ಧರಿಸು. ನೀನು ಕ್ಷತ್ರಧರ್ಮದಲ್ಲಿ ವ್ಯವಸ್ಥಿತನಾಗಿದ್ದೀಯೆ ಎಂದು ತಿಳಿದಿದ್ದೇನೆ. ಕೌರವರೊಂದಿಗೆ ಯುದ್ಧಮಾಡಲು ನೀನೊಬ್ಬನೇ ಸಮರ್ಥನಾಗಿದ್ದೀಯೆ. ಸಂಗ್ರಾಮಕ್ಕೆ ಸಿದ್ಧರಾಗಿ ಅವರು ನಮ್ಮ ಎದಿರು ಬಂದಾಗ ನೀನು ರಚಿಸುವ ವ್ಯೂಹವು ನಮಗೆ ಶ್ರೇಯಸ್ಕರವಾಗಿರುತ್ತದೆ. ಪೌರುಷವನ್ನು ತೋರಿಸಿದ ಶೂರನು ಸೈನಿಕರನ್ನು ಮುಂದೆ ನಿಲ್ಲಿಸಿಕೊಂಡು ಹೋರಾಡುವವನನ್ನು ಸಹಸ್ರವನ್ನು ಕೊಟ್ಟಾದರೂ ಪಡೆಯಬೇಕೆಂದು ನೀತಿಯನ್ನು ತಿಳಿದವರು ಹೇಳುತ್ತಾರೆ. ನೀನು ಶೂರ, ವೀರ ಮತ್ತು ವಿಕ್ರಾಂತ. ಯುದ್ಧದಲ್ಲಿ ಭಯಾರ್ತರ ಪರಿತ್ರಾತಾ ಎನ್ನುವುದರಲ್ಲಿ ಸಂಶಯವಿಲ್ಲ.

’ ಧರ್ಮಾತ್ಮ ಕೌಂತೇಯ ಯುಧಿಷ್ಠಿರನು ಈ ರೀತಿ ಹೇಳಲು ಧೃಷ್ಟದ್ಯುಮ್ನನು, ಭಯವಿಲ್ಲದೇ, ನನಗೆ ಈ ಮಾತುಗಳನ್ನು ಹೇಳಿದನು: ‘ಸೂತ! ದುರ್ಯೋಧನನಲ್ಲಿರುವ ಎಲ್ಲ ಜನಪದ ಯೋಧರಿಗೆ, ಬಾಹ್ಲೀಕನೇ ಮೊದಲಾದ ಪ್ರಾತಿಪೇಯ ಕುರುಗಳಿಗೆ, ಶಾರದ್ವತ, ಸೂತಪುತ್ರ, ದ್ರೋಣ, ಅವನ ಮಗ, ಜಯದ್ರಥ, ದುಃಶಾಸನ, ವಿಕರ್ಣ ಮತ್ತು ನೃಪ ದುರ್ಯೋಧನನಿಗೆ ಹೇಳು. ಭೀಷ್ಮನಿಗೆ ಕೂಡ ಹೋಗಿ ಹೇಳು. ‘ಯುಧಿಷ್ಠಿರನೊಂದಿಗೆ ಒಳ್ಳೆಯದಾಗಿ ನಡೆದುಕೊಳ್ಳಿ. ದೇವತೆಗಳಿಂದ ರಕ್ಷಿಸಲ್ಪಟ್ಟಿರುವ ಅರ್ಜುನನಿಂದ ವಧೆಗೊಳ್ಳಬೇಡಿ. ಬೇಗನೇ ಲೋಕವೀರ ಪಾಂಡವನನ್ನು ಬೇಡಿಕೊಳ್ಳಿ. ಶಸ್ತ್ರವಿತ್ತಮ ಪಾಂಡವ ಸವ್ಯಸಾಚಿಯಿರುವ ಹಾಗೆ ಬೇರೆ ಯಾವ ಯೋಧನೂ ಈ ಭೂಮಿಯ ಮೇಲೆ ಇಲ್ಲ. ಗಾಂಡೀವಧನ್ವಿಯ ದಿವ್ಯ ರಥವು ದೇವತೆಗಳಿಂದಲೇ ರಕ್ಷಿತವಾಗಿದೆ. ಮನುಷ್ಯರಿಂದ ಅವನನ್ನು ಗೆಲ್ಲಲಿಕ್ಕಾಗುವುದಿಲ್ಲ. ಆದುದರರಿಂದ ಯುದ್ಧಕ್ಕೆ ಮನಸ್ಸು ಮಾಡಬೇಡಿ!’”

ಧೃತರಾಷ್ಟ್ರನು ಹೇಳಿದನು: “ಪಾಂಡವನು ಕೌಮಾರ್ಯದಿಂದಲೇ ಕ್ಷತ್ರತೇಜಸ್ಸನ್ನು ಹೊಂದಿದ್ದಾನೆ, ಬ್ರಹ್ಮಚಾರಿಯಾಗಿದ್ದಾನೆ. ಅವರೊಂದಿಗೆ ಈ ಮಂದರು, ನಾನು ವಿಲಪಿಸುತ್ತಿದ್ದೇನೆಂದು ಹೇಳಿ, ಯುದ್ಧಮಾಡಲು ಬಯಸುತ್ತಾರೆ. ಯುದ್ಧದಿಂದ ವಿಮುಖನಾಗು. ಸರ್ವಾವಸ್ಥೆಗಳಲ್ಲಿ ಯುದ್ಧವನ್ನು ಪ್ರಶಂಸಿಸುವುದಿಲ್ಲ. ಅಮಾತ್ಯರೊಂದಿಗೆ ಜೀವಿಸಲು ನಿನಗೆ ಅರ್ಧಭೂಮಿಯು ಸಾಕು! ಪಾಂಡುಪುತ್ರರಿಗೆ ಯಥೋಚಿತವಾದುದನ್ನು ಕೊಟ್ಟುಬಿಡು. ಮಹಾತ್ಮ ಪಾಂಡುಪುತ್ರರೊಂದಿಗೆ ಶಾಂತಿಯಿಂದಿರಲು ಪ್ರಯತ್ನಿಸುವುದೇ ಧರ್ಮಸಂಹಿತವೆಂದು ಎಲ್ಲ ಕುರುಗಳೂ ಅಭಿಪ್ರಾಯಪಡುತ್ತಾರೆ. ಮಗನೇ! ಆಲೋಚಿಸು! ನಿನ್ನ ಈ ಸೇನೆಯು ನಿನ್ನದೇ ನಾಶಕ್ಕೆ ಕಾರಣವಾಗುವುದು. ಮೋಹದಿಂದಾಗಿ ಇದು ನಿನಗೆ ಅರ್ಥವಾಗುತ್ತಿಲ್ಲ. ಏಕೆಂದರೆ ನಾನು ಯುದ್ಧವನ್ನು ಬಯಸುವುದಿಲ್ಲ. ಬಾಹ್ಲೀಕನೂ ಇದನ್ನು ಬಯಸುವುದಿಲ್ಲ. ಭೀಷ್ಮನೂ, ದ್ರೋಣನೂ, ಅಶ್ವತ್ಥಾಮನೂ, ಸಂಜಯನೂ, ಸೋಮದತ್ತನೂ, ಶಲ್ಯನೂ, ಕೃಪನೂ, ಸತ್ಯವ್ರತ ಪುರುಮಿತ್ರ, ಜಯಶಾಲಿ ಭೂರಿಶ್ರವನೂ ಯುದ್ಧವನ್ನು ಇಚ್ಛಿಸುವುದಿಲ್ಲ. ಶತ್ರುಗಳಿಂದ ಪೀಡಿತರಾದಾಗ ಯಾರ ಮೇಲೆ ಕುರುಗಳು ಅವಲಂಬಿಸುತ್ತಾರೋ ಅವರೇ ಯುದ್ಧವನ್ನು ಇಷ್ಟಪಡುವುದಿಲ್ಲ. ಮಗೂ! ನಿನಗೂ ಅದು ಇಷ್ಟವಾಗಲಿ. ನೀನು ನಿನಗೆ ಬೇಕೆಂದು ಮಾಡುತ್ತಿಲ್ಲ. ಕರ್ಣ, ಪಾಪಾತ್ಮ ದುಃಶಾಸನ ಮತ್ತು ಶಕುನಿ ಸೌಬಲರು ಇದನ್ನು ನಿನ್ನಿಂದ ಮಾಡಿಸುತ್ತಿದ್ದಾರೆ.”

ದುರ್ಯೋಧನನು ಹೇಳಿದನು: “ನಾನು ನಿನ್ನ ಮೇಲಾಗಲೀ ಅಥವಾ ಅನ್ಯರ ಮೇಲಾಗಲೀ ಭಾರವನ್ನು ಹೊರಿಸಿ ಈ ಯುದ್ಧವನ್ನು ಮಾಡುತ್ತಿಲ್ಲ. ನನಗೆ ನೀನೂ ಬೇಡ, ದ್ರೋಣನೂ ಬೇಡ, ಅಶ್ವತ್ಥಾಮನೂ ಬೇಡ, ಸಂಜಯನೂ ಬೇಡ, ವಿಕರ್ಣನೂ ಬೇಡ, ಕಾಂಬೋಜನೂ ಬೇಡ, ಕೃಪನೂ ಬೇಡ, ಬಾಹ್ಲೀಕನೂ ಬೇಡ, ಸತ್ಯವ್ರತ ಪುರುಮಿತ್ರರೂ ಬೇಡ ಮತ್ತು ಪುನಃ ಭೂರಿಶ್ರವನೂ ಬೇಡ. ಅಪ್ಪಾ! ನಾನು ಮತ್ತು ಕರ್ಣ ಇಬ್ಬರೇ ದೀಕ್ಷೆ ಕೈಗೊಂಡು, ಯುಧಿಷ್ಠಿರನನ್ನು ಬಲಿಯನ್ನಾಗಿ ಮಾಡಿ, ರಥವನ್ನು ವೇದಿಯನ್ನಾಗಿಸಿ, ಆಹುತಿಯನ್ನು ನೀಡಲು ಖಡ್ಗವನ್ನು ಸಣ್ಣ ಹುಟ್ಟನ್ನಾಗಿಸಿ, ಗದೆಯನ್ನು ದೊಡ್ಡ ಹುಟ್ಟನ್ನಾಗಿಸಿ, ಕವಚವನ್ನು ಸದಸ್ಯನನ್ನಾಗಿಸಿ, ನಾಲ್ಕು ಕುದುರೆಗಳನ್ನು ಧುರ್ಯರನ್ನಾಗಿಸಿ, ನನ್ನ ಬಾಣಗಳನ್ನು ದರ್ಬೆಗಳನ್ನಾಗಿಸಿ, ಯಶಸ್ಸನ್ನು ಹವಿಸ್ಸನ್ನಾಗಿಸಿ ರಣಯಜ್ಞವನ್ನು ಮಾಡಬೇಕೆಂದಿದ್ದೇವೆ. ರಣದಲ್ಲಿ ವೈವಸ್ವತನಿಗೆ ಈ ರೀತಿಯ ಆತ್ಮಯಜ್ಞವನ್ನು ಮಾಡಿ, ಅಮಿತ್ರರನ್ನು ಸಂಹರಿಸಿ, ಶ್ರೀಯಿಂದ ಆವೃತರಾಗಿ ವಿಜಯ ಸಾಧಿಸಿ ಹಿಂದಿರುಗುತ್ತೇವೆ. ನಾನು, ಕರ್ಣ ಮತ್ತು ನನ್ನ ತಮ್ಮ ದುಃಶಾಸನ ಈ ನಾವು ಮೂವರೇ ಸಮರದಲ್ಲಿ ಪಾಂಡವರನ್ನು ಇಲ್ಲವಾಗಿಸುತ್ತೇವೆ. ನಾನೇ ಪಾಂಡವರನ್ನು ಕೊಂದು ಈ ಪೃಥ್ವಿಯನ್ನು ಆಳುತ್ತೇನೆ. ಅಥವಾ ಪಾಂಡುಪುತ್ರರು ನನ್ನನ್ನು ಕೊಂದು ಈ ಪೃಥ್ವಿಯನ್ನು ಭೋಗಿಸುತ್ತಾರೆ. ನನ್ನ ಜೀವವನ್ನು, ಧನವನ್ನು ಮತ್ತು ರಾಜ್ಯವನ್ನು ತ್ಯಜಿಸಿಯೇನು. ಆದರೆ ಪಾಂಡವರೊಂದಿಗೆ ನಾನು ಹಂಚಿಕೊಂಡು ಜೀವಿಸುವುದಿಲ್ಲ. ತೀಕ್ಷ್ಣವಾದ ಸೂಜಿಯ ಮೊನೆಯು ಊರುವಷ್ಟು ಭೂಮಿಯನ್ನೂ ನಾನು ಪಾಂಡವರಿಗೆ ಬಿಟ್ಟು ಕೊಡುವುದಿಲ್ಲ.”

ಧೃತರಾಷ್ಟ್ರನು ಹೇಳಿದನು: “ಅಯ್ಯಾ! ಈಗ ನಾನು ದುರ್ಯೋಧನನನ್ನು ತ್ಯಜಿಸುತ್ತೇನೆ. ಈ ಮೂಢನನ್ನು ಅನುಸರಿಸುವವರೆಲ್ಲರೂ ವೈವಸ್ವತಕ್ಷಯಕ್ಕೆ ಹೋಗುತ್ತಾರೆ. ರುರುಗಳ ಗುಂಪುಗಳ ಮಧ್ಯೆ ಹೋರಾಡುವ ಶ್ರೇಷ್ಠ ವ್ಯಾಘ್ರದಂತೆ ಯುದ್ಧದಲ್ಲಿ ಸೇರಿರುವ ಶ್ರೇಷ್ಠ ಶ್ರೇಷ್ಠರನ್ನೂ ಪಾಂಡವರು ಸಂಹರಿಸುತ್ತಾರೆ. ಬೆದರಿದ ಸೀಮಂತಿನಿಯಂತಿರುವ ಭಾರತಿಯನ್ನು ಯುಯುಧಾನನು ತನ್ನ ದೀರ್ಘ ಬಾಹುಗಳಿಂದ ಹಿಡಿದು, ಮುದ್ದೆಗಟ್ಟಿ ದೂರ ಎಸೆಯುತ್ತಾನೆ. ಆಗಲೇ ಸಂಪೂರ್ಣವಾಗಿರುವ ಪಾರ್ಥನ ಬಲವನ್ನೂ ಇನ್ನೂ ಸಂಪೂರ್ಣಗೊಳಿಸುವ ಮಾಧವ ಶೈನಿಯು ಹೊಲದಲ್ಲಿ ಬೀಜವನ್ನು ಬಿತ್ತಿದ ಹಾಗೆ ಸಮರದಲ್ಲಿ ಬಾಣಗಳನ್ನು ಸುರಿಸುತ್ತಾನೆ. ಭೀಮಸೇನನು ಸೇನೆಯ ಮುಖದಲ್ಲಿ ಹೋರಾಡುತ್ತಾನೆ. ಅವನ ಸೈನಿಕರೆಲ್ಲರೂ ಪ್ರಾಕಾರದ ಹಿಂದೆ ನಿಲ್ಲುವಂತೆ ಅವನ ಹಿಂದೆ ನಿಂತು ಯುದ್ಧಮಾಡುತ್ತಾರೆ. ಭೀಮನು ದಂತಗಳನ್ನು ಮುರಿದು, ಕಪಾಲಗಳನ್ನು ಜಜ್ಜಿ, ರಕ್ತಸುರಿಸಿ ಆನೆಗಳನ್ನು ಕೆಳಗುರುಳಿಸಿದುದನ್ನು ನೋಡುತ್ತೀಯೆ. ಪರ್ವತಗಳಂತಿದ್ದ ಅವು ಪುಡಿಪುಡಿಯಾಗಿ ಸಂಗ್ರಾಮದಲ್ಲಿ ಬಿದ್ದುದನ್ನು ನೋಡಿ, ಭೀಮನ ಸ್ಪರ್ಷವನ್ನೇ ಹೆದರುವಾಗ ನೀನು ನನ್ನ ಮಾತನ್ನು ನೆನಪಿಸಿಕೊಳ್ಳುತ್ತೀಯೆ. ರಥ, ಕುದುರೆ ಮತ್ತು ಆನೆಗಳು ಭೀಮಸೇನನಿಂದ, ಅಗ್ನಿಯ ಮಾರ್ಗದಂತೆ ಸುಡಲ್ಪಟ್ಟಿದ್ದುದನ್ನು ನೋಡಿ ನೀನು ನನ್ನ ವಚನವನ್ನು ಸ್ಮರಿಸಿಕೊಳ್ಳುತ್ತೀಯೆ. ಪಾಂಡವರೊಂದಿಗೆ ಸಂಧಿಯನ್ನು ಮಾಡಿಕೊಳ್ಳದೇ ಇದ್ದರೆ ಮಹಾ ಭಯವು ನಿನಗಾಗುತ್ತದೆ. ಭೀಮಸೇನನ ಗದೆಯಿಂದ ಹತನಾಗಿ ಶಾಂತಿಯನ್ನು ಹೊಂದುತ್ತೀಯೆ. ಕುರುಗಳ ಸೇನೆಯು ಸಂಗ್ರಾಮದಲ್ಲಿ ಮಹಾವನದಂತೆ ಕತ್ತರಿಸಲ್ಪಟ್ಟು ಬೀಳುವುದನ್ನು ನೋಡಿದಾಗ ನನ್ನ ಮಾತನ್ನು ಸ್ಮರಿಸಿಕೊಳ್ಳುತ್ತೀಯೆ.”

ಎಲ್ಲ ಪೃಥಿವೀಪತಿಗಳನ್ನು ಉದ್ದೇಶಿಸಿ ಹೀಗೆ ಹೇಳಿದ ಮಹಾರಾಜನು ಪುನಃ ಸಂಜಯನನ್ನು ಮಾತನಾಡಿಸಿ ಕೇಳಿದನು.

ವಾಸುದೇವ ಕೃಷ್ಣನ ಸಂದೇಶ

ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ! ಮಹಾತ್ಮರಾದ ವಾಸುದೇವ-ಧನಂಜಯರು ಏನು ಹೇಳಿದರೆಂಬುದನ್ನು ನನಗೆ ಹೇಳು. ಅದನ್ನು ಕೇಳಲು ತವಕವಿದೆ.”

ಸಂಜಯನು ಹೇಳಿದನು: “ರಾಜನ್! ನಾನು ಕೃಷ್ಣ-ಧನಂಜಯರನ್ನು ಹೇಗಿದ್ದಾಗ ನೋಡಿದೆನೆನ್ನುವುದನ್ನೂ, ಆ ವೀರರಿಬ್ಬರೂ ನನಗೆ ಏನು ಹೇಳಿ ಕಳುಹಿಸಿದ್ದಾರೆನ್ನುವುದನ್ನೂ ನಿನಗೆ ಹೇಳುತ್ತೇನೆ. ಕಾಲಿನ ಬೆರಳುಗಳನ್ನು ನೋಡುತ್ತಾ, ತಲೆಬಾಗಿ, ಕೈಮುಗಿದು ಶುದ್ಧನಾಗಿ ಅವರಿಗೆ ಹೇಳಲು ನಾನು ಆ ನರದೇವರ ಅಂತಃಪುರವನ್ನು ಪ್ರವೇಶಿಸಿದೆ. ಕೃಷ್ಣರಿಬ್ಬರೂ, ಕೃಷ್ಣೆ ಮತ್ತು ಭಾಮಿನೀ ಸತ್ಯಭಾಮೆಯರಿರುವ ಆ ಪ್ರದೇಶವನ್ನು ಅಭಿಮನ್ಯುವಾಗಲೀ ಯಮಳರಾಗಲೀ ಹೋಗಲಾರರು. ಇಬ್ಬರೂ ಹಾರಗಳನ್ನು ಹಾಕಿಕೊಂಡು, ವರವಸ್ತ್ರಗಳನ್ನು ಧರಿಸಿ, ದಿವ್ಯಾಭರಣ ಭೂಷಿತರಾಗಿ, ಚಂದನಲೇಪಿತರಾಗಿ, ಮಧುವನ್ನು ಸೇವಿಸುತ್ತಾ ಕುಳಿತಿದ್ದರು. ಅನೇಕ ವಿಚಿತ್ರ ರತ್ನಗಳಿಂದ ಕೂಡಿದ ಕಾಂಚನದ ಮಹದಾಸನದ ಮೇಲೆ, ವಿವಿಧ ನೆಲಗಂಬಳಿಗಳನ್ನು ಹಾಸಿದ್ದಲ್ಲಿ ಆ ಅರಿಂದಮರಿಬ್ಬರೂ ಕುಳಿತುಕೊಂಡಿದ್ದರು. ಕೇಶವನ ಪಾದಗಳು ಅರ್ಜುನನ ತೊಡೆಯಮೇಲಿದ್ದುದನ್ನು, ಮತ್ತು ಮಹಾತ್ಮ ಅರ್ಜುನನ ಪಾದಗಳು ಕೃಷ್ಣೆ ಮತ್ತು ಸತ್ಯಭಾಮೆಯರ ತೊಡೆಯಮೇಲಿರುವುದನ್ನು ನೋಡಿದೆನು. ಪಾರ್ಥನು ನನಗೆ ಕಾಂಚನದ ಪಾದಪೀಠವೊಂದನ್ನು ತೋರಿಸಿದನು. ಅದನ್ನು ನಾನು ಕೈಯಲ್ಲಿ ಮುಟ್ಟಿ ನೆಲದ ಮೇಲೆ ಕುಳಿತುಕೊಂಡೆನು. ಪಾದಪೀಠದಿಂದ ಕಾಲನ್ನು ಹಿಂದೆ ತೆಗೆದುಕೊಳ್ಳುವಾಗ ನಾನು ಪಾರ್ಥನ ಆ ಪಾದಗಳಲ್ಲಿರುವ ಶುಭಲಕ್ಷಣ ಊರ್ಧ್ವರೇಖೆಗಳಿರುವ ತಲವನ್ನು ನೋಡಿದೆನು. ಶ್ಯಾಮವರ್ಣದ, ದೊಡ್ಡದೇಹದ, ತರುಣರಾದ, ಶಾಲಸ್ಕಂಧದಂತೆ ಎತ್ತರವಾಗಿರುವ ಅವರಿಬ್ಬರೂ ಒಂದೇ ಆಸನದಲ್ಲಿ ಕುಳಿತಿರುವುದನ್ನು ನೋಡಿ ನನಗೆ ಮಹಾ ಭಯವು ಆವರಿಸಿತು. ಇಂದ್ರ-ವಿಷ್ಣು ಇಬ್ಬರೂ ಸೇರಿರುವುದು ದ್ರೋಣ, ಭೀಷ್ಮ ಮತ್ತು ತನ್ನನ್ನು ತಾನು ಹೊಗಳಿಕೊಳ್ಳುವ ಕರ್ಣನನ್ನು ಸಂಶ್ರಯಿಸಿರುವ ಮಂದಾತ್ಮನಿಗೆ ತಿಳಿದಿಲ್ಲ. ಆ ಕ್ಷಣದಲ್ಲಿ ನನಗೆ ನಿಶ್ಚಯವಾಯಿತು - ಯಾರ ನಿರ್ದೇಶನದಂತೆ ಅವರಿಬ್ಬರು ನಡೆದುಕೊಳ್ಳುತ್ತಾರೋ ಯಾರ ಮನಸ್ಸನ್ನು ಅವರು ಸೇವಿಸುತ್ತಾರೋ ಆ ಧರ್ಮರಾಜನ ಸಂಕಲ್ಪದಂತೆಯೇ ಆಗುತ್ತದೆ. ಅನ್ನ ಪಾನಗಳಿಂದ ಸತ್ಕೃತನಾಗಿ ಮತ್ತು ಇತರ ಸತ್ಕ್ರಿಯೆಗಳಿಂದ ಸಮ್ಮಾನಿತನಾಗಿ ತಲೆಯ ಮೇಲೆ ಕೈಗಳನ್ನು ಮುಗಿದು ನಿನ್ನ ಸಂದೇಶವನ್ನು ಅವರಿಗೆ ಹೇಳಿದೆ. ಆಗ ಪಾರ್ಥನು ಧನುರ್ಬಾಣಗಳನ್ನು ಹಿಡಿಯುವ ಕೈಯಿಂದ ಕೇಶವನ ಶುಭಲಕ್ಷಣಯುತ ಕಾಲನ್ನು ಸರಿಸಿ, ಅವನಿಗೆ ಮಾತನಾಡಲು ಒತ್ತಾಯಿಸಿದನು. ಸರ್ವಾಭರಣಭೂಷಿತ ಇಂದ್ರವೀರ್ಯೋಪಮ ಕೃಷ್ಣನು ಇಂದ್ರಧ್ವಜದಂತೆ ಮೇಲೆದ್ದು ನನ್ನನ್ನು ಉದ್ದೇಶಿಸಿ ಹೇಳಿದನು. ಆ ಮಾತುನಾಡುವವರಲ್ಲಿ ಶ್ರೇಷ್ಠನ ಮಾತುಗಳು ದಾರುಣವಾಗಿದ್ದು ಧಾರ್ತರಾಷ್ಟ್ರರನ್ನು ಕಾಡುವಂತಿದ್ದರೂ, ಆನಂದದಾಯಕವಾಗಿದ್ದವು, ಮನಸೆಳೆಯುವಂತಿದ್ದವು ಮತ್ತು ಮೃದುಪೂರ್ವಕವಾಗಿದ್ದವು. ಆ ಮಾತುಗಳನ್ನಾಡಲು ಅವನೋರ್ವನೇ ಅರ್ಹನಾಗಿದ್ದನು. ಅವು ಶಿಕ್ಷಾಕ್ಷರ ಸಮನ್ವಿತವಾಗಿತ್ತು. ಅರ್ಥಗರ್ಭಿತವಾಗಿತ್ತು. ಆದರೂ ಕೊನೆಯಲ್ಲಿ ಅದು ಹೃದಯವನ್ನು ಶೋಷಿಸುವಂತಿತ್ತು.

“ವಾಸುದೇವನು ಹೇಳಿದನು: ‘ಸಂಜಯ! ಮನೀಷಿ ಧೃತರಾಷ್ಟ್ರನಿಗೆ ಈ ಮಾತುಗಳನ್ನು ಹೇಳು. ಕುರುಮುಖ್ಯರಿಗೂ ಕೇಳಿಸು ಮತ್ತು ದ್ರೋಣನಿಗೂ ಕೇಳಿಸು. ವಿಪ್ರರಿಗೆ ವಿಪುಲ ದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಯಾಜಿಸಿರಿ. ಹೆಂಡತಿ ಮಕ್ಕಳೊಂದಿಗೆ ಆನಂದಿಸಿಕೊಳ್ಳಿ. ಮಹಾಭಯವು ಬಂದೊದಗಿದೆ. ಸಂಪತ್ತನ್ನು ಪಾತ್ರರಲ್ಲಿ ಹಂಚಿ. ಬೇಕಾದ ಸುತರನ್ನು ಪಡೆಯಿರಿ. ಪ್ರಿಯರೊಡನೆ ಪ್ರೀತಿಯಿಂದ ನಡೆದುಕೊಳ್ಳಿ. ಏಕೆಂದರೆ ರಾಜಾ ಯುಧಿಷ್ಠಿರನು ಜಯಕ್ಕೆ ಕಾತರನಾಗಿದ್ದಾನೆ. ನಾನು ದೂರದಲ್ಲಿರುವಾಗ ಕೃಷ್ಣೆಯು ‘ಗೋವಿಂದ!’ ಎಂದು ಶೋಕದಿಂದ ಕೂಗಿ ಕರೆದಿದ್ದುದರ, ಯಾರ ಕಾರ್ಮುಕವು ತೇಜೋಮಯ, ದುರಾಧರ್ಷ ಗಾಂಡೀವವೋ ಆ ಸವ್ಯಸಾಚಿ – ನನ್ನ ಎರಡನೆಯವನೊಡನೆ ನೀವೇನು ವೈರ ಸಾಧಿಸಿದ್ದೀರೋ ಅವುಗಳ ಋಣವು ಬೆಳೆದು ನನ್ನ ಹೃದಯವನ್ನು ಆವರಿಸಿದೆ. ನನಗೆ ಎರಡನೆಯವನಾದ ಪಾರ್ಥನನ್ನು ಯಾರುತಾನೇ - ಅವನು ಸಾಕ್ಷಾತ್ ಪುರಂದರನೇ ಆಗಿದ್ದರೂ - ಅವನ ಕಾಲವು ಮುಗಿದಿಲ್ಲವಾಗಿದ್ದರೆ ಎದುರಿಸಲು ಬಯಸುತ್ತಾನೆ? ಅರ್ಜುನನನ್ನು ಸಮರದಲ್ಲಿ ಯಾರು ಗೆಲ್ಲುತ್ತಾನೋ ಅವನು ಎರಡೂ ಬಾಹುಗಳಿಂದ ಭೂಮಿಯನ್ನು ಎತ್ತಿ ಹಿಡಿಯಬಹುದು, ಕೃದ್ಧನಾಗಿ ಈ ಪ್ರಜೆಗಳನ್ನು ಸುಟ್ಟುಬಿಡಬಲ್ಲನು, ಮತ್ತು ದೇವತೆಗಳೊಂದಿಗೆ ದಿವಿಯನ್ನು ಕೆಳಗೆ ಬೀಳಿಸಿಯಾನು. ರಣದಲ್ಲಿ ಪಾಂಡವನೊಂದಿಗೆ ಯುದ್ಧಮಾಡಿ ಎದುರಿಸುವವನನ್ನು ದೇವಾಸುರಮನುಷ್ಯರಲ್ಲಿ, ಯಕ್ಷ-ಗಂಧರ್ವ-ನಾಗರಲ್ಲಿ ನಾನು ಕಾಣಲಾರೆ. ವಿರಾಟನಗರದಲ್ಲಿ ನಡೆದ ಮಹಾ ಅದ್ಭುತಕ ಕುರಿತು ಏನು ಕೇಳಿದ್ದೇವೋ - ಓರ್ವನೇ ಬಹುಯೋಧರನ್ನು ಎದುರಿಸಿದುದು - ಅದೇ ಇದಕ್ಕೆ ನಿದರ್ಶನವು. ವಿರಾಟನಗರದಲ್ಲಿ ಪಾಂಡುಪುತ್ರನೊಬ್ಬನಿಂದಲೇ ಎದುರಿಸಲ್ಪಟ್ಟಾಗ, ಭಗ್ನರಾಗಿ ದಿಕ್ಕುಗಳಲ್ಲಿ ಪಲಾಯನ ಮಾಡಿದುದೇ ಅದಕ್ಕೆ ನಿದರ್ಶನವು. ಪಾರ್ಥನಲ್ಲಿರುವ ಬಲ, ವೀರ್ಯ, ತೇಜಸ್ಸು, ಶೀಘ್ರತೆ, ಕೈಚಳಕ, ಆಯಾಸಗೊಳ್ಳದಿರುವಿಕೆ, ಮತ್ತು ಧೈರ್ಯವು ಬೇರೆ ಯಾರಲ್ಲಿಯೂ ಇದ್ದುದು ಗೊತ್ತಿಲ್ಲ.’

“ಹೀಗೆ ಗಗನದಲ್ಲಿ ಪಾಕಶಾಸನನು ಮಳೆಸುರಿಸುವಾಗ ಕೇಳಿಬರುವ ಗುಡುಗಿನ ಧ್ವನಿಯಲ್ಲಿ ಪಾರ್ಥನನ್ನು ಉತ್ತೇಜಿಸುವ ಈ ಮಾತುಗಳನ್ನಾಡಿದನು. ಕೇಶವನ ಮಾತುಗಳನ್ನು ಕೇಳಿ ಶ್ವೇತವಾಹನ ಕಿರೀಟಿ ಅರ್ಜುನನು ಆ ಲೋಮಹರ್ಷಣ ಮಹಾಮಾತನ್ನು ಆಡಿದನು.”

ಸಂಜಯನ ಮಾತನ್ನು ಕೇಳಿ ಪ್ರಜ್ಞಾಚಕ್ಷು ನರೇಶ್ವರನು ಅವನ ಮಾತುಗಳ ಗುಣದೋಷಗಳನ್ನು ವಿಮರ್ಷಿಸಲು ಪ್ರಾರಂಭಿಸಿದನು. ಸೂಕ್ಷ್ಮವಾಗಿ ವಿಶ್ಲೇಷಣೆಯನ್ನು ಮಾಡಿ, ಗುಣದೋಷಗಳನ್ನು ಪರೀಕ್ಷಿಸಿ, ತನ್ನ ಮಕ್ಕಳ ಜಯವನ್ನು ಬಯಸಿ ಅದರಂತೆ ಅಭಿಪ್ರಾಯಪಟ್ಟನು. ಎರಡೂ ಪಕ್ಷಗಳ ಬಲಾಬಲಗಳನ್ನು ಯಥಾತಥ್ಯವಾಗಿ ನಿಶ್ಚಯಿಸಿ ಆ ಬುದ್ಧಿಮಾನ್ ಮನುಜಾಧಿಪನು ಪರಸ್ಪರರ ಶಕ್ತಿಯನ್ನು ವಿಶ್ಲೇಷಿಸ ತೊಡಗಿದನು. ದೇವ-ಮನುಷ್ಯರ ಸಹಾಯಶಕ್ತಿ ಮತ್ತು ತೇಜಸ್ಸಿನಲ್ಲಿ ಪಾಂಡವರಿಗಿಂತ ಕುರುಗಳ ಶಕ್ತಿಯು ಕಡಿಮೆಯಾದುದು ಎಂದು ಯೋಚಿಸಿ ದುರ್ಯೋಧನನಿಗೆ ಹೇಳಿದನು:

“ದುರ್ಯೋಧನ! ನನ್ನ ಈ ಚಿಂತೆಯು ಶಾಶ್ವತವಾಗಿ ಇಲ್ಲವಾಗುತ್ತಿಲ್ಲ. ಇದು ಸತ್ಯವಾದುದು ಎಂದು ತಿಳಿಯುತ್ತೇನೆ. ಇದು ಪ್ರತ್ಯಕ್ಷವಾದುದು. ಅನುಮಾನಿತವಾದುದಲ್ಲ. ಇರುವ ಎಲ್ಲವೂ ತಮ್ಮಲ್ಲಿ ಹುಟ್ಟಿದವುಗಳಲ್ಲಿ ಪರಮ ಸ್ನೇಹವನ್ನು ಮಾಡಿಕೊಳ್ಳುತ್ತವೆ. ಅವುಗಳಿಗೆ ಪ್ರಿಯವಾದುದನ್ನು, ಯಥಾಶಕ್ತಿ ಹಿತವಾದುವನ್ನು ಮಾಡುತ್ತವೆ. ಇದನ್ನೂ ಕೂಡ ಸಾಧಾರಣವಾಗಿ ನಾವು ಕಾಣುತ್ತೇವೆ - ಯಾರಿಂದ ಉಪಕೃತ್ಯರಾಗಿದ್ದೇವೋ ಅವರಿಗೆ ಮಹಾ ಪ್ರಿಯವಾದುದನ್ನು ಮಾಡಿ ಪ್ರತೀಕಾರ ಮಾಡಬೇಕೆಂದು ಸಂತರು ಬಯಸುತ್ತಾರೆ. ಖಾಂಡವದಲ್ಲಿ ಅರ್ಜುನನು ಮಾಡಿದ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಂಡು ಕುರುಪಾಂಡವರ ಈ ಯುದ್ಧದಲ್ಲಿ ಅಗ್ನಿಯು ಅವನಿಗೆ ಸಹಾಯ ಮಾಡುತ್ತಾನೆ. ಮಕ್ಕಳ ಮೇಲಿನ ಪ್ರೀತಿಯಿಂದ ಕೂಡ ಧರ್ಮಾದಿ ಅನೇಕ ದಿವೌಕಸರು ಪಾಂಡವರ ಪಕ್ಷವನ್ನು ಸೇರುತ್ತಾರೆ. ಭೀಷ್ಮ-ದ್ರೋಣ-ಕೃಪಾದಿಗಳ ಭಯದಿಂದ ಅವರನ್ನು ರಕ್ಷಿಸಲು ಮಿಂಚಿನಂತೆ ಬರುತ್ತಾರೆಂದು ನನಗನ್ನಿಸುತ್ತದೆ. ದೇವಸಹಿತರಾದ ಆ ವೀರ್ಯವಂತ ಅಸ್ತ್ರಪಾರಗ ನರವ್ಯಾಘ್ರ ಪಾರ್ಥರನ್ನು ಮನುಷ್ಯರು ಎದುರಿಸಲು ಶಕ್ಯವಿರುವುದಿಲ್ಲ. ಯಾರ ಧನುಸ್ಸು ದಿವ್ಯ ಉತ್ತಮ ದುರಾಸದ ಗಾಂಡೀವವೋ, ಯಾರು ವರುಣನು ಕೊಟ್ಟ ಎರಡು ಅಕ್ಷಯ, ದಿವ್ಯ, ಶರಪೂರ್ಣ ಭತ್ತಳಿಕೆಗಳನ್ನು ಹೊಂದಿರುವನೋ. ಯಾರಲ್ಲಿ ನಿಃಸಂಗವಾಗಿ ಹೊಗೆಯಂತೆ ಹಾರಡುವ ದಿವ್ಯ ವಾನರಧ್ವಜವಿದೆಯೋ, ಯಾರ ರಥವು ಚತುರಾಯಾಂತದಲ್ಲಿ ಅಂಥಹ ಕಾಂತಿಯನ್ನು ಹೊಂದಿಲ್ಲವೋ ಮತ್ತು ಮಳೆಗಾಳದ ಮೋಡಗಳಂತೆ ಗುಡುಗಿ ಶತ್ರುಗಳಲ್ಲಿ ಭಯವನ್ನುಂಟುಮಾಡುತ್ತದೆಯೋ, ಯಾರ ವೀರ್ಯವನ್ನು ಇಡೀ ಲೋಕವೇ ಅಮಾನುಷವಾದುದೆಂದು ತಿಳಿದಿದೆಯೋ, ಯಾರನ್ನು ಪಾರ್ಥಿವರು ದೇವತೆಗಳಿಗೂ ಅಜೇಯನೆಂದು ತಿಳಿದುಕೊಂಡಿದ್ದಾರೋ, ಕಣ್ಣುಮುಚ್ಚಿ ತೆರೆಯುವುದರೊಳಗೆ ಯಾರು ಐದುನೂರು ಬಾಣಗಳನ್ನು ಬಿಡುವುದನ್ನು, ದೂರದಲ್ಲಿ ಹೋಗಿ ಬೀಳುವುದನ್ನು ಎಲ್ಲರೂ ನೋಡಿದ್ದಾರೋ, ಯಾವ ಪಾರ್ಥನನ್ನು ಭೀಷ್ಮ, ದ್ರೋಣ, ಕೃಪ, ದ್ರೌಣಿ, ಮದ್ರರಾಜ ಶಲ್ಯ ಮತ್ತು ಮಧ್ಯಸ್ಥರಾಗಿರುವ ಮಾನವರು ಯುದ್ಧದಲ್ಲಿ ಅತಿಮಾನುಷನೆಂದೂ, ಪರಾಜಯಗೊಳಿಸಲು ಅಶಕ್ಯನಾದ ರಥಶಾರ್ದೂಲನೆಂದೂ ಅರಿಂದಮನೆಂದೂ ಹೇಳುತ್ತಾರೋ, ಒಂದೇ ಎಸೆತದಲ್ಲಿ ಒಂದೇ ವೇಗದ ಐನೂರು ಬಾಣಗಳನ್ನು ಬಿಡುವ, ಬಾಹುವೀರ್ಯದಲ್ಲಿ ಕಾರ್ತವೀರ್ಯನಂತಿರುವ ಪಾಂಡವ, ಆ ಅರ್ಜುನ, ಮಹೇಷ್ವಾಸ, ಮಹೇಂದ್ರ-ಉಪೇಂದ್ರರಿಂದ ರಕ್ಷಿತನಾದವನು ಮಹಾಯುದ್ಧದಲ್ಲಿ ನಮ್ಮನ್ನು ಸಂಹರಿಸುತ್ತಿರುವುದನ್ನು, ಸದೆಬಡಿಯುತ್ತಿರುವುದನ್ನು ಕಾಣುತ್ತೇನೆ.

“ಹೀಗೆ ಇಡೀ ಹಗಲು ರಾತ್ರಿಗಳಲ್ಲಿ ಚಿಂತಿಸುತ್ತೇನೆ. ಕುರುಗಳ ಶಾಂತಿಯ ಕುರಿತು ಚಿಂತಿಸುತ್ತ ನಿದ್ರೆಯಿಲ್ಲದವನಾಗಿದ್ದೇನೆ. ನಿಃಸುಖಿಯಾಗಿದ್ದೇನೆ. ಕುರುಗಳ ಮಹಾ ನಾಶವು ಪ್ರಾರಂಭವಾದಂತಿದೆ. ಸಂಧಿಯಲ್ಲದೇ ಈ ಕಲಹಕ್ಕೆ ಬೇರೆ ಯಾವ ಅಂತ್ಯವನ್ನೂ ತಿಳಿಯಲಿಕ್ಕಾಗುತ್ತಿಲ್ಲ. ಪಾರ್ಥರೊಂದಿಗೆ ಸಂಧಿಯು ನನಗೆ ಯಾವಾಗಲೂ ಇಷ್ಟವಾಗುತ್ತದೆ. ಜಗಳವಲ್ಲ. ಕುರುಗಳಿಗಿಂತ ಪಾಂಡವರೇ ಹೆಚ್ಚು ಶಕ್ತಿವಂತರೆಂದು ಸದಾ ಅಭಿಪ್ರಾಯಪಡುತ್ತೇನೆ.”

ದುರ್ಯೋಧನನು ತನ್ನ ಮಂತ್ರಸಿದ್ಧಿಗಳ ಕುರಿತು ಹೇಳಿಕೊಂಡಿದುದು

ತಂದೆಯ ಮಾತುಗಳನ್ನು ಕೇಳಿ ಅತಿ ಅಮರ್ಷಣ ಧಾರ್ತರಾಷ್ಟ್ರನು ತುಂಬಾ ಕೋಪಗೊಂಡು ಪುನಃ ಇದನ್ನು ಹೇಳಿದನು: “ರಾಜಸತ್ತಮ! ದೇವತೆಗಳ ಸಹಾಯವಿರುವ ಪಾರ್ಥರನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎಂದು ನಿನಗನಿಸಿದರೆ ಆ ಭಯವನ್ನು ನೀನು ಕಿತ್ತೊಗೆಯಬೇಕು. ಕಾಮ-ದ್ವೇಷ-ಸಂಯೋಗ-ದ್ರೋಹ-ಲೋಭಗಳಿಲ್ಲವೆಂತಲೇ ದೇವತೆಗಳು ದೇವತ್ವ ಭಾವವನ್ನು ಪಡೆದರು. ಇದನ್ನು ನಮಗೆ ದ್ವೈಪಾಯನ ವ್ಯಾಸ, ಮಹಾತಪಸ್ವಿ ನಾರದ, ರಾಮ ಜಾಮದಗ್ನಿ ಇವರು ಹಿಂದೆ ಹೇಳಿದ್ದರು. ದೇವತೆಗಳು ಎಂದೂ ಕಾಮ, ಲೋಭ, ಅನುಕ್ರೋಶ, ದ್ವೇಷಗಳನ್ನು ಹೊಂದಿದ ಮನುಷ್ಯರಂತೆ ನಡೆದುಕೊಳ್ಳುವುದಿಲ್ಲ. ಒಂದುವೇಳೆ ಅಗ್ನಿ, ವಾಯು, ಧರ್ಮ, ಇಂದ್ರ ಮತ್ತು ಅಶ್ವಿನಿಯರು ಕಾಮ ಹೊಂದಿದವರಂತೆ ನಡೆದುಕೊಂಡರೂ ಪಾರ್ಥರು ದುಃಖವನ್ನು ಪಡೆಯಬಾರದಾಗಿತ್ತು. ಆದುದರಿಂದ ನೀನು ಎಂದೂ ಅದರ ಕುರಿತು ಚಿಂತಿಸುವುದನ್ನು ಮಾಡಬಾರದು. ಏಕೆಂದರೆ ದೇವತೆಗಳು ತಮಗೆ ತಕ್ಕುದಾದ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಒಂದು ವೇಳೆ ದೇವತೆಗಳಲ್ಲಿ ಕಾಮ, ಸಂಯೋಗ, ದ್ವೇಷ, ಲೋಭಗಳಿರುವಂತೆ ಕಂಡರೂ, ದೇವ ಪ್ರಮಾಣದಿಂದ ಅವು ಹರಡುವುದಿಲ್ಲ.

“ನಾನು ಅಭಿಮಂತ್ರಿಸಿದರೆ ಜಾತವೇದಸನು, ಸಕಲ ಲೋಕಗಳನ್ನು ಎಲ್ಲಕಡೆಯಿಂದ ಸುಡುತ್ತಿರುವಂತೆ ಕಂಡುಬಂದರೂ ನಂದಿಹೋಗುತ್ತಾನೆ. ದಿವೌಕಸರು ಪರಮ ತೇಜಸ್ಸಿನಿಂದ ಕೂಡಿದವರು ಎಂದು ತಿಳಿದಿದೆ. ಆದರೆ ನನ್ನ ತೇಜಸ್ಸು ದೇವತೆಗಳಿಗಿದ್ದಕಿಂತಲೂ ಇನ್ನೂ ಹೆಚ್ಚಿನದು ಎಂದು ತಿಳಿದುಕೋ. ವಸುಧೆಯು ಸೀಳಿಹೋದರೂ, ಗಿರಿ-ಶಿಖರಗಳು ತುಂಡಾದರೂ ನಾನು ಅವುಗಳನ್ನು ಅಭಿಮಂತ್ರಿಸಿ ಎಲ್ಲರೂ ನೋಡುತ್ತಿದ್ದಂತೆ ಜೋಡಿಸಬಲ್ಲೆ. ಚೇತನವಿರುವ, ಚೇತನವಿಲ್ಲದಿರುವ, ಜಂಗಮ ಸ್ಥಾವರಗಳ ವಿನಾಶಕ್ಕಾಗಿ ಮೇಲೆದ್ದ ಮಹಾಘೋರ ಮಹಸ್ವನ, ಕಲ್ಲುಗಳನ್ನು ಸುರಿಸುವ ಚಂಡಮಾರುತವನ್ನು ಕೂಡ ನಾನು ಇರುವವುಗಳಿಗೆ ಅನುಕಂಪವನ್ನು ತೋರಿ ಜಗತ್ತು ಗಾಭರಿಯಾಗಿ ನೋಡುತ್ತಿದ್ದಂತೆ ನಿಲ್ಲಿಸಬಲ್ಲೆ. ನಾನು ನೀರನ್ನು ಹೆಪ್ಪುಗಟ್ಟಿಸಿದಾಗ ರಥ-ಪದಾತಿಗಳು ಅದರ ಮೇಲೆ ಹೋಗಬಲ್ಲವು. ದೇವಾಸುರರ ಭಾವಗಳನ್ನು ನಾನೊಬ್ಬನೇ ಪರಿವರ್ತಿಸಬಲ್ಲೆ. ಯಾವುದೇ ದೇಶಗಳಿಗೆ ನನ್ನ ಅಕ್ಷೌಹಿಣಿಯು ಯಾವುದೇ ಕಾರ್ಯಕ್ಕೆಂದು ಹೋದರೂ, ಎಲ್ಲಿ ಹೋದರೂ ನೀರು ನನ್ನ ಪ್ರಕಾರ ನಡೆದುಕೊಳ್ಳುತ್ತದೆ ಮತ್ತು ಬೇಕಾದಲ್ಲಿ ಹೋಗುತ್ತವೆ. ನಾನಿರುವ ಪ್ರದೇಶದಲ್ಲಿ ಹಾವು ಮೊದಲಾದವುಗಳ ಭಯವು ನನಗಿರುವುದಿಲ್ಲ. ಅಲ್ಲಿರುವ ಭೂತಗಳು ಮತ್ತರಾಗಿ ಮಲಗುತ್ತಾರೆ ಮತ್ತು ಭಯಂಕರ ಭೂತಗಳು ಹಿಂಸಿಸುವುದಿಲ್ಲ. ನನ್ನ ರಾಜ್ಯದಲ್ಲಿ ವಾಸಿಸುವವರ ಇಷ್ಟದಂತೆ ಮೋಡಗಳು ಮಳೆಸುರಿಸುತ್ತವೆ. ನನ್ನ ಪ್ರಜೆಗಳೆಲ್ಲರೂ ಧರ್ಮಿಷ್ಠರು ಮತ್ತು ಅವರು ದುರಂತಗಳನ್ನು ಅನುಭವಿಸುವುದಿಲ್ಲ.

“ಅಶ್ವಿನಿಯರು, ವಾಯು, ಅಗ್ನಿ, ಮರುತ್ತುಗಳ ಸಹಿತ ವೃತ್ರಹ ಮತ್ತು ಧರ್ಮನೂ ಕೂಡ ನನ್ನ ಶತ್ರುಗಳನ್ನು ರಕ್ಷಿಸಲು ಮುಂದುವರೆಯುವುದಿಲ್ಲ. ಒಂದುವೇಳೆ ಅವರು ತಮ್ಮ ಓಜಸ್ಸಿನಿಂದ ನನ್ನ ವೈರಿಗಳನ್ನು ರಕ್ಷಿಸಲು ಸಮರ್ಥರಾಗಿದ್ದರೆ ಪಾರ್ಥರು ಹದಿಮೂರು ವರ್ಷಗಳು ದುಃಖವನ್ನು ಅನುಭವಿಸುತ್ತಿರಲಿಲ್ಲ. ನಾನು ದ್ವೇಷಿಸುವವರನ್ನು ದೇವತೆಗಳ, ಗಂಧರ್ವರ, ಅಸುರರ, ಮತ್ತು ರಾಕ್ಷಸರ ಶಕ್ತಿಗಳು ರಕ್ಷಿಸಲು ಅಸಮರ್ಥರು. ನಿನಗೆ ಸತ್ಯವನ್ನು ಹೇಳುತ್ತಿದ್ದೇನೆ. ನನ್ನ ಮಿತ್ರರು ಮತ್ತು ವೈರಿಗಳಲ್ಲಿ ಯಾರಿಗೆ ಶಿಕ್ಷೆ ಕೊಡಬೇಕು ಯಾರಿಗೆ ಪ್ರೋತ್ಸಾಹಿಸಬೇಕು ಎನ್ನುವುದರ ಕುರಿತು ಇದೂವರೆಗೆ ನನಗೆ ದ್ವಂದ್ವಗಳಿಲ್ಲ. ಇದೂವರೆಗೆ ಮುಂದೆ ಇದು ಆಗುತ್ತದೆ ಎಂದು ನಾನು ಹೇಳಿದುದು ಬೇರೆಯಾಗಿಲ್ಲ. ಸತ್ಯವಾಗುವುದನ್ನೇ ಹೇಳುವವನು ಎಂದು ನನ್ನನ್ನು ತಿಳಿ. ನನ್ನ ಈ ಮಹಾತ್ಮೆಯನ್ನು ಜನರು ಸಾಕ್ಷಾತ್ ನೋಡಿದ್ದಾರೆ ಮತ್ತು ದಿಕ್ಕುಗಳಲ್ಲಿ ಕೇಳಿಬಂದಿದೆ. ಇದನ್ನು ನಿನಗೆ ಅಶ್ವಾಸನೆಯನ್ನು ನೀಡಲು ಹೇಳುತ್ತಿದ್ದೇನೆಯೇ ಹೊರತು ಹೊಗಳಿಕೊಳ್ಳಲು ಅಲ್ಲ. ಈ ಹಿಂದೆ ನಾನು ಎಂದೂ ಆತ್ಮಶ್ಲಾಘನೆಯನ್ನು ಮಾಡಲಿಲ್ಲ. ತನ್ನನ್ನು ತಾನೇ ಪ್ರಶಂಸಿಸಿಕೊಳ್ಳುವುದು ಸದಾಚಾರವಲ್ಲ.

“ಪಾಂಡವರು, ಮತ್ಸ್ಯರು, ಪಾಂಚಾಲರು, ಕೇಕಯರು, ಸಾತ್ಯಕಿ ಮತ್ತು ವಾಸುದೇವನು ಕೂಡ ನನ್ನಿಂದ ಗೆಲ್ಲಲ್ಪಟ್ಟಿದ್ದುದನ್ನು ನೀನು ಕೇಳುವೆಯಂತೆ. ನದಿಗಳು ಸಾಗರವನ್ನು ಸೇರಿ ಹೇಗೆ ಸಂಪೂರ್ಣವಾಗಿ ನಾಶವಾಗುತ್ತಾರೋ ಹಾಗೆ ಅನುಯಾಯಿಗಳೊಂದಿಗೆ ಅವರು ನನ್ನ ಬಳಿಸಾರಿ ವಿನಾಶಗೊಳ್ಳುತ್ತಾರೆ. ನನ್ನ ಬುದ್ಧಿಯು ಹೆಚ್ಚಿನದು, ತೇಜಸ್ಸು ಹೆಚ್ಚಿನದು ಮತ್ತು ನನ್ನ ವೀರ್ಯವೂ ಹೆಚ್ಚಿನದು. ವಿದ್ಯೆಯು ಹೆಚ್ಚಿನದು, ಯೋಗವು ಹೆಚ್ಚಿನದು. ಇವೆರಡೂ ಅವರಿಗಿಂತ ನನ್ನಲ್ಲಿ ವಿಶೇಷವಾಗಿವೆ. ಪಿತಾಮಹ, ದ್ರೋಣ, ಕೃಪ, ಶಲ್ಯ, ಮತ್ತು ಶಲ ಇವರುಗಳು ಅಸ್ತ್ರಗಳ ಕುರಿತು ಏನನ್ನು ತಿಳಿದಿದ್ದಾರೋ ಅವು ನನ್ನಲ್ಲಿಯೂ ಇವೆ.”

ಇದನ್ನು ಕೇಳಿ ಧೃತರಾಷ್ಟ್ರನು ಯುದ್ಧಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತು ಇನ್ನೂ ತಿಳಿದುಕೊಳ್ಳಲು ಸಂಜಯನನ್ನು ಪುನಃ ಪ್ರಶ್ನಿಸಿದನು.

ಕರ್ಣನ ಶಸ್ತ್ರನ್ಯಾಸ

ಪಾರ್ಥನ ಕುರಿತು ಇನ್ನೂ ಕೇಳತೊಡಗಿರುವ ವೈಚಿತ್ರವೀರ್ಯನನ್ನು ಕಡೆಗಣಿಸಿ ಕೌರವರ ಸಂಸದಿಯಲ್ಲಿ ಧೃತರಾಷ್ಟ್ರಪುತ್ರನನ್ನು ಹರ್ಷಗೊಳಿಸುತ್ತಾ ಕರ್ಣನು ಹೇಳಿದನು: “ನಾನು ಸುಳ್ಳುಹೇಳಿ ಆ ಪುರಾತನ ಬ್ರಹ್ಮಪುರ ಅಸ್ತ್ರವನ್ನು ರಾಮನಿಂದ ಪಡೆದೆನೆಂದು ತಿಳಿದ ರಾಮನು ‘ನಿನ್ನ ಅಂತಕಾಲದಲ್ಲಿ ನಿನಗೆ ಇದನ್ನು ಪ್ರಯೋಗಿಸುವ ವಿಧಾನವು ಮರೆತುಹೋಗುತ್ತದೆ!’ ಎಂದಿದ್ದನು. ಅಷ್ಟೊಂದು ಮಹಾ ಅಪರಾಧವನ್ನೆಸಗಿದ್ದರೂ ನನ್ನ ಗುರು ಮಹರ್ಷಿಯಿಂದ ಲಘುವಾಗಿಯೇ ಶಪಿಸಲ್ಪಟ್ಟಿದ್ದೇನೆ. ಆ ತಿಗ್ಮತೇಜ ಮಹರ್ಷಿಯು ಸಾಗರಗಳಿಂದೊಡಗೂಡಿದ ಈ ಅವನಿಯನ್ನೂ ಭಸ್ಮಮಾಡಲು ಶಕ್ತ. ಮನಸ್ಥೈರ್ಯದಿಂದ ಮತ್ತು ಪೌರುಷದಿಂದ ನಾನು ಅವನ ಶುಶ್ರೂಷೆ ಮಾಡಿ ಮೆಚ್ಚಿಸಿದೆ. ಆ ಅಸ್ತ್ರವು ಇನ್ನೂ ನನ್ನಲ್ಲಿದೆ. ಮತ್ತು ನನ್ನ ಆಯಸ್ಸು ಇನ್ನೂ ಮುಗಿದಿಲ್ಲ! ಆದುದರಿಂದ ಸಮರ್ಥನಾಗಿದ್ದೇನೆ. ಆ ಭಾರವು ನನಗಿರಲಿ. ಆ ಋಷಿಯ ಪ್ರಸಾದದಿಂದ, ಕಣ್ಣುಮುಚ್ಚಿತೆರೆಯುವುದರೊಳಗೆ ನಾನು ಶಸ್ತ್ರದಿಂದ ಪಾಂಚಾಲ, ಕರೂಷ, ಮತ್ಸ್ಯರನ್ನು, ಪಾರ್ಥರನ್ನು ಅವರು ಮಕ್ಕಳು ಮೊಮ್ಮಕ್ಕಳೊಂದಿಗೆ ಲೋಕಗಳನ್ನು ಜಯಿಸಿ ಒಪ್ಪಿಸುತ್ತೇನೆ. ಪಿತಾಮಹ, ದ್ರೋಣ ಮತ್ತು ನರೇಂದ್ರಮುಖ್ಯರೆಲ್ಲರೂ ನಿನ್ನ ಸಮೀಪದಲ್ಲಿಯೇ ಇರಲಿ. ಪ್ರಧಾನ ಸೇನೆಯನ್ನು ತೆಗೆದುಕೊಂಡು ಹೋಗಿ ಪಾಂಡವರನ್ನು ಸಂಹರಿಸುತ್ತೇನೆ. ಆ ಭಾರವು ನನಗಿರಲಿ.”

ಹೀಗೆ ಹೇಳುತ್ತಿದ್ದ ಅವನಿಗೆ ಭೀಷ್ಮನು ಹೇಳಿದನು: “ಏನು ಹೇಳುತ್ತಿರುವೆ? ನಿನ್ನ ಅಂತ್ಯವು ಬಂದು ಬುದ್ಧಿ ಕೆಟ್ಟಿದೆ. ಪ್ರಧಾನನು ಹತನಾದರೆ ಎಲ್ಲ ಧೃತರಾಷ್ಟ್ರಪುತ್ರರೂ ಹತರಾಗುತ್ತಾರೆ ಎಂದು ನಿನಗೆ ತಿಳಿದಿಲ್ಲವೇ? ಖಾಂಡವವನ್ನು ಸುಡುವಾಗ ಕೃಷ್ಣನೊಬ್ಬನ ಸಹಾಯದಿಂದಲೇ ಧನಂಜಯನು ಮಾಡಿದುದನ್ನು ಕೇಳಿಯೂ ಕೂಡ, ಬಾಂಧವರೊಂದಿಗೆ ನಿನ್ನನ್ನು ನೀನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು. ಯಾವ ಶಕ್ತಿಯನ್ನು ನಿನಗೆ ತ್ರಿದಶಾಧಿಪ ಮಹಾತ್ಮ ಭಗವಾನ್ ಮಹೇಂದ್ರನು ಕೊಟ್ಟಿದ್ದನೋ ಅದನ್ನೂ ಕೂಡ ಕೇಶವನು ಚಕ್ರದಿಂದ ಹೊಡೆದು ಚೂರಾಗಿ ಭಸ್ಮೀಕೃತವಾಗಿ ಕೆಳಗೆ ಬೀಳುವುದನ್ನು ನೋಡುವಿಯಂತೆ! ಕರ್ಣ! ಯಾವ ಶರವು ಸರ್ಪಮುಖದಲ್ಲಿ ಹೊಳೆಯುತ್ತಿರುವುದೋ, ಪ್ರಯತ್ನ ಪಟ್ಟು ನೀನು ಯಾವುದನ್ನು ಮಾಲೆಗಳನ್ನು ಹಾಕಿ ಪೂಜಿಸುತ್ತಿರುವೆಯೋ ಅದನ್ನು ಕೂಡ ಪಾಂಡುಪುತ್ರನು ಹರಿತ ಶರಗಳಿಂದ ಹೊಡೆದು ನಿನ್ನೊಂದಿಗೆ ಅದೂ ನಾಶವಾಗುತ್ತದೆ. ಬಾಣ ಮತ್ತು ಭೌಮ (ನರಕ) ರ ಹಂತಕ ವಾಸುದೇವನು ಕಿರೀಟಿಯನ್ನು ರಕ್ಷಿಸುತ್ತಾನೆ. ಪ್ರಗಾಢ ತುಮುಲದಲ್ಲಿ ಅವನು ನಿನ್ನಂಥಹ ಮತ್ತು ನಿನಗಿಂಥಲೂ ಹೆಚ್ಚಿನ ಶತ್ರುಗಳನ್ನು ಹತಗೊಳಿಸುತ್ತಾನೆ.”

ಕರ್ಣನು ಹೇಳಿದನು: “ವೃಷ್ಣಿಪತಿಯು ಹೇಳಿದಂತೆಯೇ ಇದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಆ ಮಹಾತ್ಮನು ಅದಕ್ಕಿಂತಲೂ ಹೆಚ್ಚಿನವನು. ಆದರೆ ಪಿತಾಮಹನಾಡಿದ ಈ ಕಠೋರ ಮಾತುಗಳ ಪರಿಣಾಮವನ್ನು ಕೇಳಿ. ಶಸ್ತ್ರಗಳನ್ನು ಕೆಳಗಿಡುತ್ತೇನೆ. ಯುದ್ಧಕ್ಕೆ ಹೋಗುವುದಿಲ್ಲ. ಪಿತಾಮಹನು ನನ್ನನ್ನು ಸಭೆಗಳಲ್ಲಿ ಮಾತ್ರ ನೋಡುತ್ತಾನೆ. ನೀನು ಸುಮ್ಮನಾದಾಗ ಭೂಮಿಯಲ್ಲಿರುವ ಭೂಮಿಪಾಲರು ಎಲ್ಲರೂ ನನ್ನ ಪ್ರಭಾವವನ್ನು ನೋಡುತ್ತಾರೆ.”

ಹೀಗೆ ಹೇಳಿ ಆ ಮಹಾಧನುಷ್ಮಂತನು ಸಭೆಯನ್ನು ತೊರೆದು ಸ್ವ-ಭವನಕ್ಕೆ ತೆರಳಿದನು. ಭೀಷ್ಮನಾದರೋ ಕುರುಗಳ ಮಧ್ಯದಲ್ಲಿ ಜೋರಾಗಿ ನಕ್ಕು ದುರ್ಯೋಧನನಿಗೆ ಹೇಳಿದನು: “ಸೂತಪುತ್ರನು ತನ್ನ ಪ್ರತಿಜ್ಞೆಯನ್ನು ಸತ್ಯವಾಗಿಸುತ್ತಾನಲ್ಲವೇ? ಭೀಮಸೇನನು ನೋಡುತ್ತಿದ್ದಂತೆ ವ್ಯೂಹ-ಪ್ರತಿವ್ಯೂಹಗಳ ಶಿರಗಳನ್ನು ಕತ್ತರಿಸಿ ಲೋಕಕ್ಷಯವನ್ನುಂಟುಮಾಡುತ್ತೇನೆ ಮತ್ತು ಅವಂತಿ, ಕಲಿಂಗ, ಜಯದ್ರಥರ ಧ್ವಜಗಳ ಮಧ್ಯದಲ್ಲಿ ಬಾಹ್ಲೀಕನನ್ನು ನಿಲ್ಲಿಸಿ ನಾನು ಸದಾ ಶತ್ರುಗಳ ಹತ್ತುಸಾವಿರ ಯೋಧರನ್ನು ಸಂಹರಿಸುತ್ತೇನೆ ಎಂದು ಹೇಳಿದ ಅವನು ತನ್ನ ಆ ಜವಾಬ್ಧಾರಿಯನ್ನು ಹೇಗೆ ನಿರ್ವಹಿಸುತ್ತಾನೆ? ಅನಿಂದ್ಯ, ಭಗವಂತ ರಾಮನನಿಗೆ ಬ್ರಾಹ್ಮಣನೆಂದು ಹೇಳಿ ಆ ಅಸ್ತ್ರವನ್ನು ಪಡೆದಾಗಲೇ ಆ ಅಧಮ ಪುರುಷ ವೈಕರ್ತನನ ಧರ್ಮ ತಪಸ್ಸುಗಳ ನಷ್ಟವಾಗಿ ಹೋಗಿತ್ತು.”

ಶಸ್ತ್ರಗಳನ್ನು ಬಿಸುಟು ಹೊರಟುಹೋದ ಕರ್ಣನ ಕುರಿತು ಭೀಷ್ಮನು ನೃಪತಿಗಳಿಗೆ ಹೇಳಲು. ಬುದ್ಧಿಯಿಲ್ಲದ, ವೈಚಿತ್ರವೀರ್ಯನ ಮಗ ದುರ್ಯೋಧನನು ಶಾಂತನವನಿಗೆ ಹೇಳಿದನು.

ದುರ್ಯೋಧನನು ಹೇಳಿದನು: “ಮನುಷ್ಯರ ಸದೃಶರಾಗಿರುವ, ಜನ್ಮದಲ್ಲಿ ಎಲ್ಲರ ಸಮನಾಗಿರುವ ಪಾಂಡವರು ಮಾತ್ರ ಜಯವನ್ನು ಪಡೆಯುತ್ತಾರೆ ಎಂದು ಏಕೆ ನಂಬುತ್ತೀಯೆ? ಎಲ್ಲರೂ ಸಮಜಾತೀಯರಾಗಿದ್ದೇವೆ. ಎಲ್ಲರೂ ಮನುಷ್ಯ ಯೋನಿಯಲ್ಲಿಯೇ ಹುಟ್ಟಿದ್ದೇವೆ. ಹೀಗಿರುವಾಗ ಪಿತಾಮಹನು ಪಾರ್ಥರಿಗೇ ವಿಜಯವೆಂದು ಹೇಗೆ ಹೇಳುತ್ತಾನೆ? ನನ್ನ ಪರಾಕ್ರಮವು ನಿನ್ನ, ದ್ರೋಣನ, ಕೃಪ, ಬಾಹ್ಲೀಕ, ಮತ್ತು ಇತರ ನರೇಂದ್ರರ ಪರಾಕ್ರಮವನ್ನು ಆಧಾರಿಸಿಲ್ಲ. ನಾನು, ವೈಕರ್ತನ ಕರ್ಣ, ಮತ್ತು ನನ್ನ ತಮ್ಮ ದುಃಶಾಸನರು ಸಮರದಲ್ಲಿ ಪಂಚ ಪಾಂಡವರನ್ನು ಹರಿತ ಬಾಣಗಳಿಂದ ಸಂಹರಿಸುತ್ತೇವೆ. ಆಗ ಮಹಾ ಯಜ್ಞಗಳಿಂದ, ವಿವಿಧ ಭೂರಿದಕ್ಷಿಣೆಗಳಿಂದ, ಗೋ-ಐಶ್ವರ್ಯ ಧನಗಳಿಂದ ಬ್ರಾಹ್ಮಣರನ್ನು ಸಂತುಷ್ಟಗೊಳಿಸುತ್ತೇನೆ.”

ವಿದುರನ ಸಲಹೆ

ವಿದುರನು ಹೇಳಿದನು: “ಹಿಂದೆ ಓರ್ವ ಹಕ್ಕಿಹಿಡಿಯುವವನು ಹಕ್ಕಿಗಳನ್ನು ಹಿಡಿಯಲು ನೆಲದ ಮೇಲೆ ಬಲೆಯನ್ನು ಬೀಸಿದ ಎಂದು ಕೇಳಿದ್ದೇವೆ. ಅವುಗಳಲ್ಲಿ ಬುದ್ಧಿವಂತರಾಗಿದ್ದ, ರೆಕ್ಕೆಗಳ ಬಲದಲ್ಲಿ ಮತ್ತು ಪೌರುಷದಲ್ಲಿ ಸಮನಾಗಿದ್ದ ಎರಡು ಪಕ್ಷಿಗಳು ಒಂದು ಉಪಾಯವನ್ನು ಮಾಡಿ ಆ ಬಲೆಯನ್ನೇ ಎತ್ತಿಕೊಂಡು ಆಕಾಶವನ್ನೇರಿದವು. ಆ ಪಕ್ಷಿಗಳು ಹಾರಿಹೋದುದನ್ನು ನೋಡಿ ಹಕ್ಕಿಹಿಡಿಯುವವನು ಅನಿರ್ವಿಣ್ಣನಾಗದೇ ಅವು ಹೋದೆಡೆಯಲ್ಲಿಯೇ ಹಿಂಬಾಲಿಸಿದನು. ಪಕ್ಷಿಯ ಬೇಟೆಯಾಡುವವನು ಹಾಗೆ ಓಡಿ ಹೋಗುತ್ತಿದ್ದುದನ್ನು ಅಲ್ಲಿಯೇ ಆಶ್ರಮದಲ್ಲಿದ್ದ, ಆಹ್ನೀಕವನ್ನು ಮಾಡುತ್ತಿದ್ದ ಮುನಿಯೋರ್ವನು ನೋಡಿದನು. ಅಂತರಿಕ್ಷದಲ್ಲಿ ಹಾರಿಹೋಗುತ್ತಿದ್ದ ಅವರನ್ನು ಶೀಘ್ರವಾಗಿ ಭೂಮಿಯುಮೇಲೆ ಓಡಿ ಹೋಗಿ ಅನುಸರಿಸುತ್ತಿದ್ದ ಅವನನ್ನು ಆ ಮುನಿಯು ಪ್ರಶ್ನಿಸಿದನು. ‘ಮೃಗಹನ್! ಇದು ಆಶ್ಚರ್ಯವಾಗಿ ತೋರುತ್ತಿದೆ. ಪಕ್ಷಿಗಳು ಹಾರಿಕೊಂಡು ಹೋಗತ್ತಿವೆ. ನೀನು ಕಾಲ್ನಡುಗೆಯಲ್ಲಿ ಅನುಸರಿಸುತ್ತಿದ್ದೀಯೆ!’ ಆಗ ಅದಕ್ಕೆ ಹಕ್ಕಿ ಹಿಡಿಯುವವನು ಹೇಳಿದನು: ‘ಇವರಿಬ್ಬರೂ ಒಟ್ಟಾಗಿ ನನ್ನ ಬಲೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಅವರಲ್ಲಿ ಬಿಡುಕು ಬಂದಾಗ ಅವು ನನ್ನ ವಶವಾಗುತ್ತವೆ.’ ಮೃತ್ಯುವನ್ನು ಸಮೀಪಿಸಿದ್ದ ಆ ಎರಡು ಪಕ್ಷಿಗಳು ವಿವಾದಕ್ಕೆ ತೊಡಗಿದವು. ತುಂಬಾ ದುರ್ಬುದ್ಧಿಯಾಗಿದ್ದ ಅವು ಹೊಡೆದಾಡಿ ಭೂಮಿಯ ಮೇಲೆ ಬಿದ್ದವು. ಹೊಡೆದಾಟದಲ್ಲಿ ಮಗ್ನರಾಗಿದ್ದ ಆ ಮೃತ್ಯುಪಾಶಗಳಿಗೆ ಸಿಲುಕಿದ ಅವರಿಗೆ ತಿಳಿಯದಂತೆ ಬೇಟೆಗಾರನು ಬಂದು ಅವುಗಳನ್ನು ಹಿಡಿದನು.

“ಹೀಗೆ ಸಂಪತ್ತಿಗೆ ಹೊಡೆದಾಡುವ ದಾಯಾದಿಗಳು ಅವರ ಜಗಳದಿಂದ ಈ ಪಕ್ಷಿಗಳಂತೆ ಅವರ ಶತ್ರುಗಳ ವಶರಾಗುತ್ತಾರೆ. ಒಟ್ಟಿಗೇ ಊಟಮಾಡುವುದು, ಒಟ್ಟಿಗೇ ಮಾತುಕಥೆಗಳನ್ನಾಡುವುದು, ಒಟ್ಟಿಗೇ ಕೂಡಿಕೊಂಡಿರುವುದು ದಾಯಾದಿಗಳು ಮಾಡಬೇಕಾದ ಕೆಲಸಗಳು. ಎಂದಿಗೂ ವಿರೋಧವುಂಟಾಗಬಾರದು. ಎಲ್ಲಿಯವರೆಗೆ ಅವರು ಎಲ್ಲರೂ ಸುಮನಸ್ಕರಾಗಿ ವೃದ್ಧರನ್ನು ಪೂಜಿಸುತ್ತಾರೋ ಅಲ್ಲಿಯವರೆಗೆ ಅವರು ಸಿಂಹದಿಂದ ರಕ್ಷಿತವಾದ ಕಾಡಿನಂತೆ ಅಗಮ್ಯರಾಗಿರುತ್ತಾರೆ. ಯಾರು ಉತ್ತಮ ಐಶ್ವರ್ಯವನ್ನು ಪಡೆದೂ ದೀನರಂತೆ ವರ್ತಿಸುತ್ತಾರೋ ಅವರು ಯಾವಾಗಲೂ ತಮ್ಮ ವೈರಿಗಳ ಐಶ್ವರ್ಯವನ್ನು ಹೆಚ್ಚಿಸುತ್ತಾರೆ. ದಾಯಾದಿಗಳು ಕೆಂಡಗಳಿದ್ದಂತೆ. ಒಟ್ಟಿಗೇ ಇದ್ದರೆ ಉರಿಯುತ್ತವೆ. ಬೇರೆ ಬೇರೆಯಾದರೆ ಕೇವಲ ಹೊಗೆಯನ್ನು ಕೊಡುತ್ತವೆ. ಇದನ್ನು ಕೇಳಿಕೊಂಡು ಹೇಗೆ ಶ್ರೇಯಸ್ಸಾಗುತ್ತದೆಯೋ ಹಾಗೆ ಮಾಡು.”

ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ನಾನು ಹೇಳುವುದನ್ನು ಅರ್ಥಮಾಡಿಕೋ! ದಾರಿಯನ್ನು ತಿಳಿಯದವನಂತೆ ನೀನು ತಪ್ಪು ದಾರಿಯನ್ನು ಸರಿಯಾದ ದಾರಿಯೆಂದು ಮನ್ನಿಸುತ್ತಿದ್ದೀಯೆ. ಪಂಚ ಭೂತಗಳಂತೆ ಮಹತ್ತರರಾದ ಸುಮಹಾತ್ಮ ಪಂಚ ಪಾಂಡುಪುತ್ರರ ತೇಜಸ್ಸನ್ನು ಕುಂದಿಸಲು ಬಯಸುತ್ತಿರುವೆ. ನಿನ್ನ ಜೀವನದಲ್ಲಿ ಸ್ವಲ್ಪವನ್ನೂ ತ್ಯಜಿಸದೇ ಧಾರ್ಮಿಕರಲ್ಲಿ ಶ್ರೇಷ್ಠ ಕೌಂತೇಯ ಯುಧಿಷ್ಠಿರನನ್ನು ಗೆಲ್ಲಲಾರೆ. ಮಹಾ ಭಿರುಗಾಳಿಯನ್ನು ಎದುರಿಸುವ ಮರದಂತೆ ಬಲದಲ್ಲಿ ಸರಿಸಾಟಿಯಿಲ್ಲದ, ರಣಾಂತಕನಾದ ಕೌಂತೇಯ ಭೀಮಸೇನನನ್ನು ಎದುರಿಸಲು ತರ್ಕಿಸುತ್ತಿರುವೆ. ಶಿಖರಗಳಲ್ಲಿ ಮೇರುವಿನಂತಿರುವ, ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠನಾಗಿರುವ ಗಾಂಡೀವಧನ್ವಿಯನ್ನು ಯುದ್ಧದಲ್ಲಿ ಯಾವ ಬುದ್ಧಿವಂತನು ತಾನೇ ಹೋರಾಡಿಯಾನು? ವಜ್ರಾಯುಧವನ್ನು ಪ್ರಯೋಗಿಸುವ ದೇವರಾಜನಂತೆ ಶತ್ರುಗಳ ಮಧ್ಯೆ ಶರಗಳನ್ನು ಪ್ರಯೋಗಿಸುವ ಪಾಂಚಾಲ್ಯ ಧೃಷ್ಟದ್ಯುಮ್ನನು ಯಾರನ್ನು ನಾಶಗೊಳಿಸಲಾರ? ಪಾಂಡವೇಯರ ಹಿತದಲ್ಲಿಯೇ ನಿರತನಾಗಿರುವ, ಅಂಧಕ-ವೃಷ್ಣಿಯರಿಗೆ ಸಮ್ಮತನಾದ ದುರ್ಧರ್ಷ ಸಾತ್ಯಕಿಯೂ ಕೂಡ ನಿನ್ನ ಸೇನೆಯನ್ನು ಧ್ವಂಸಗೊಳಿಸುತ್ತಾನೆ. ಅಳತೆಯಲ್ಲಿ ಮೂರು ಲೋಕಗಳನ್ನೂ ಮೀರುವ ಕೃಷ್ಣ ಪುಂಡರೀಕಾಕ್ಷನೊಡನೆ ಯಾವ ಬುದ್ಧಿವಂತನು ತಾನೇ ಯುದ್ಧಮಾಡಿಯಾನು? ಒಂದು ಕಡೆ ಅವನ ಮಡದಿಯರು, ದಾಯಾದಿಗಳು, ಬಾಂಧವರು, ತಾನು ಮತ್ತು ಭೂಮಿಯೇ ಇದ್ದರೆ ಇನ್ನೊಂದು ಕಡೆ ಧನಂಜಯನಿದ್ದಾನೆ. ಯಾರ ಮೇಲೆ ಪಾಂಡವನು ಅವಲಂಬಿಸಿರುವನೋ ಆ ವಾಸುದೇವನು ದುರ್ಧರ್ಷನು. ಕೇಶವನೆಲ್ಲಿರುವನೋ ಆ ಸೇನೆಯು ಭೂಮಿಯಲ್ಲಿಯೇ ಜಯಿಸಲಸಾಧ್ಯವಾಗಿರುತ್ತದೆ. ಆದುದರಿಂದ ಮಗೂ! ನಿನ್ನ ಒಳ್ಳೆಯದಕ್ಕಾಗಿಯೇ ಹೇಳುವ ಸುಹೃದಯರ, ಸತ್ಯವಂತರ ಮಾತಿನಂತೆ ನಡೆದುಕೋ. ವೃದ್ಧ ಪಿತಾಮಹ ಶಾಂತನವ ಭೀಷ್ಮನನ್ನು ಮಾರ್ಗದರ್ಶಕನನ್ನಾಗಿ ಸ್ವೀಕರಿಸು. ನಾನು ಹೇಳುವುದನ್ನು ಕೇಳು. ಕುರುಗಳ ಒಳ್ಳೆಯದಕ್ಕಾಗಿಯೇ ಹೇಳುವ ದ್ರೋಣ, ಕೃಪ, ವಿಕರ್ಣ ಮತ್ತು ಮಹಾರಾಜ ಬಾಹ್ಲೀಕನನ್ನು ಕೇಳು. ಇವರೆಲ್ಲರೂ ನನ್ನಂತೆಯೇ. ನೀನು ನನ್ನನ್ನು ಹೇಗೋ ಹಾಗೆ ಇವರನ್ನೂ ಮನ್ನಿಸಬೇಕು. ಇವರೆಲ್ಲರೂ ಧರ್ಮವನ್ನು ತಿಳಿದುಕೊಂಡಿರುವವರು ಮತ್ತು ನನ್ನಷ್ಟೇ ಸ್ನೇಹವುಳ್ಳವರು.

“ವಿರಾಟನಗರದಲ್ಲಿ ಸಹೋದರರೊಡನೆ ನಿನ್ನ ಸೇನೆಯು ಗೋವುಗಳನ್ನು ಬಿಟ್ಟು ತುಂಬಾ ಸಂತ್ರಸ್ತರಾಗಿ ಹಿಂದೆಸರಿಯಿತು. ಆ ನಗರದಲ್ಲಿ ನಡೆದ ಏನು ಮಹದದ್ಭುತವನ್ನು – ಒಬ್ಬನೇ ಬಹುಮಂದಿಗಳಿಗೆ ಪೂರೈಸಿದನು - ನಾವು ಕೇಳಿದ್ದೇವೋ ಅದೇ ನಿದರ್ಶನವೇ ಸಾಕು. ಅರ್ಜುನನು ಒಬ್ಬನೇ ಅವೆಲ್ಲವನ್ನೂ ಸಾಧಿಸಿರುವಾಗ ಇನ್ನು ಅವರೆಲ್ಲರೂ ಒಂದಾದಾಗ ಏನಾದೀತು? ನಿನ್ನ ಸಹೋದರರ ಕೈಹಿಡಿದು ಅವರೊಂದಿಗೆ ಭೂಮಿಯನ್ನು ಹಂಚಿಕೊಂಡು ಸ್ನೇಹಭಾವದಿಂದಿರು.”

ಸುಯೋಧನನಿಗೆ ಹೀಗೆ ಹೇಳಿ ಮಹಾಪ್ರಾಜ್ಞ, ಮಹಾಭಾಗ ಧೃತರಾಷ್ಟ್ರನು ಸಂಜಯನನ್ನು ಪುನಃ ಪ್ರಶ್ನಿಸಿದನು. “ಸಂಜಯ! ವಾಸುದೇವನ ನಂತರ ಅರ್ಜುನನು ಹೇಳಿದುದರಲ್ಲಿ ನಮಗೆ ಹೇಳದೇ ಬಿಟ್ಟಿದ್ದುದನ್ನು ಹೇಳು. ಏಕೆಂದರೆ ಅದರಲ್ಲಿ ನನಗೆ ಅತ್ಯಂತ ಕುತೂಹಲವಿದೆ.”

ಸಂಜಯನು ಹೇಳಿದನು: “ವಾಸುದೇವನ ಮಾತನ್ನು ಕೇಳಿ ಕುಂತೀಪುತ್ರ ಧನಂಜಯನು ದುರ್ಧರ್ಷ ವಾಸುದೇವನು ಕೇಳುವಂತೆ ಕಾಲೋಚಿತ ಮಾತನ್ನಾಡಿದನು: ‘ಸೂತ! ಕೌರವರ ಪ್ರೀತಿಗಾಗಿ ಯುದ್ಧಮಾಡಲು ಅಲ್ಲಿ ಸೇರಿರುವ ಪಿತಾಮಹ ಶಾಂತನವ, ಧೃತರಾಷ್ಟ್ರ, ದ್ರೋಣ, ಕೃಪ, ಕರ್ಣ, ಮಹಾರಾಜ ಬಾಹ್ಲೀಕ, ದ್ರೌಣಿ, ಸೋಮದತ್ತ, ಶಕುನಿ ಸೌಬಲ, ದುಃಶಾಸನ, ಶಲ, ಪುರುಮಿತ್ರ, ವಿವಿಂಶತಿ, ವಿಕರ್ಣ, ಚಿತ್ರಸೇನ, ಪಾರ್ಥಿವ ಜಯತ್ಸೇನ, ಅವಂತಿಯ ವಿಂದ-ಅನುವಿಂದರು, ಕೌರವ ದುರ್ಮುಖ, ಸೈಂಧವ, ದುಃಸಹ, ಭೂರಿಶ್ರವ, ರಾಜ ಭಗದತ್ತ, ಪಾರ್ಥಿವ ಜಲಸಂಧ - ಇವರು ಮತ್ತು ಇತರ ಪಾರ್ಥಿವರನ್ನು ಧಾರ್ತರಾಷ್ಟ್ರನು ಪಾಂಡವರ ಅಗ್ನಿಯಲ್ಲಿ ಆಹುತಿಯನ್ನಾಗಿಸಲು ಸೇರಿಸಿದ್ದಾನೆ. ಯಥಾನ್ಯಾಯವಾಗಿ ನನ್ನ ಮಾತಿನಲ್ಲಿಯೇ ಅಲ್ಲಿ ಸೇರಿರುವರಿಗೆ ಕುಶಲವನ್ನು ಕೇಳು ಮತ್ತು ವಂದನೆಗಳನ್ನು ಹೇಳಬೇಕು. ಪಾಪಕೃತರಲ್ಲಿ ಪ್ರಧಾನನಾಗಿರುವ ಸುಯೋಧನನಿಗೆ ರಾಜರ ಮಧ್ಯದಲ್ಲಿ ಇದನ್ನು ಹೇಳು. ನನ್ನ ಈ ಮಾತನ್ನು ಎಲ್ಲವನ್ನೂ ಸಮಗ್ರವಾಗಿ ಅಮಾತ್ಯರೊಂದಿಗೆ ಆ ಅಮರ್ಷಣ, ದುರ್ಮತಿ, ಲುಬ್ಧ, ರಾಜಪುತ್ರ ಧಾರ್ತರಾಷ್ಟ್ರನಿಗೆ ಕೇಳಿಸಬೇಕು.’

“ಹೀಗೆ ಪೀಠಿಕೆಯನ್ನು ಹಾಕಿ ಕೆಂಪು ಕೊನೆಗಳ ದೊಡ್ಡ ಕಣ್ಣುಗಳ ಧೀಮಾನ್ ಧನಂಜಯ ಪಾರ್ಥನು ವಾಸುದೇವನನ್ನು ನೋಡುತ್ತಾ ಅರ್ಥ-ಧರ್ಮಗಳನ್ನೊಡಗೂಡಿದ ಈ ಮಾತನ್ನು ನನಗೆ ಹೇಳಿದನು: ‘ನೀನು ಈಗಾಗಲೇ ಮಹಾತ್ಮ ಮಧುಪ್ರವೀರನು ಹೇಳಿದ ಸಮಾಹಿತ ಮಾತನ್ನು ಕೇಳಿದ್ದೀಯೆ. ಅದೇ ನನ್ನ ಮಾತುಗಳೂ ಕೂಡ ಎಂದು ಅಲ್ಲಿ ಸೇರಿರುವ ಎಲ್ಲ ಕ್ಷಿತಿಪರಿಗೆ ಹೇಳು. ನೀವೆಲ್ಲರೂ ಸೇರಿ ಶರಗಳೆಬ್ಬಿಸುವ ಅಗ್ನಿಧೂಮಗಳ, ರಥಗಾಲಿಗಳ ನಿನಾದದಿಂದ ಕೂಡಿದ, ಬಲಪ್ರಹಾರಿ ಧನುಸ್ಸುಗಳೆಂಬ ಹುಟ್ಟಿನಿಂದ ಮಹಾ ಯಜ್ಞದಲ್ಲಿ ಆಹುತಿಯಾಗದಂತೆ ಏನಾದರೂ ಪ್ರಯತ್ನ ಮಾಡಿ. ಅಮಿತ್ರಘಾತಿ ಯುಧಿಷ್ಠಿರನು ಕೇಳುವ ತನ್ನ ಪಾಲನ್ನು ನೀವು ಕೊಡದೇ ಇದ್ದರೆ ನಾವು ಹರಿತ ಬಾಣಗಳಿಂದ ನಿಮ್ಮನ್ನು ಅಶ್ವ-ಪದಾತಿ-ಕುಂಜರಗಳ ಸಹಿತ ಪಿತೃಗಳ ಅಮಂಗಳ ದಿಕ್ಕಿಗೆ ಕಳುಹಿಸುತ್ತೇವೆ.’

“ಆಗ ನಾನು ಚತುರ್ಭುಜ ಹರಿ ಮತ್ತು ಧನಂಜಯರಿಗೆ ನಮಸ್ಕರಿಸಿ ಬೀಳ್ಕೊಂಡು ವೇಗದಿಂದ ಆ ಮಹಾ ಮಾತನ್ನು ತಲುಪಿಸಲು ನಿನ್ನಲ್ಲಿಗೆ ಬಂದೆ.”

ಧಾರ್ತರಾಷ್ಟ್ರ ದುರ್ಯೋಧನನು ಆ ಮಾತನ್ನು ಸ್ವೀಕರಿಸದೇ ಇರಲು ಎಲ್ಲರೂ ಸುಮ್ಮನಾದರು. ನರೇಶ್ವರರು ಎದ್ದರು. ಭೂಮಿಯ ಸರ್ವ ರಾಜರೂ ಏಳಲು ರಾಜನು, ತಾನು ಯಾರ ವಶದಲ್ಲಿದ್ದನೋ ಆ ತನ್ನ ಮಕ್ಕಳ ವಿಜಯವನ್ನು ಬಯಸಿ, ತನ್ನ, ಇತರರ ಮತ್ತು ಪಾಂಡವರ ಕುರಿತು ನಿಶ್ಚಯಮಾಡಲು, ಏಕಾಂತದಲ್ಲಿ ಸಂಜಯನನ್ನು ಕೇಳತೊಡಗಿದನು: “ಗಾವಲ್ಗಣೇ! ನಮ್ಮ ಸೇನೆಯಲ್ಲಿರುವಂಥಹ ಬಲ-ನಿರ್ಬಲಗಳ ಕುರಿತು ಹೇಳು. ನೀನು ಪಾಂಡವರ ನಿಪುಣತೆಯೆಲ್ಲವನ್ನೂ ತಿಳಿದಿದ್ದೀಯೆ. ಅವರು ಯಾವುದರಲ್ಲಿ ಮುಂದಿದ್ದಾರೆ? ಯಾವುದರಲ್ಲಿ ಹಿಂದಿದ್ದಾರೆ? ನೀನು ಇಬ್ಬರ ಸಾರಗಳನ್ನೂ ಅರಿತಿದ್ದೀಯೆ. ಧರ್ಮಾರ್ಥಗಳ ನಿಪುಣ ನಿಶ್ಚಯವನ್ನೂ ತಿಳಿದಿದ್ದೀಯೆ. ನಿನ್ನನ್ನು ನಾನು ಕೇಳುತ್ತಿದ್ದೇನೆ. ಸಂಜಯ! ಎಲ್ಲವನ್ನೂ ಹೇಳು. ಇಬ್ಬರಲ್ಲಿ ಯಾರು ಯುದ್ಧದಲ್ಲಿ ನಾಶಹೊಂದುತ್ತಾರೆ?”

ಸಂಜಯನು ಹೇಳಿದನು: “ಅಜಮೀಢ! ಏಕಾಂತದಲ್ಲಿ ನಾನು ನಿನಗೆ ಏನನ್ನೂ ಹೇಳುವುದಿಲ್ಲ. ಅಸೂಯೆಯಿಂದ ನೀನು ನನ್ನನ್ನು ಸಹಿಸುವುದಿಲ್ಲ. ಸಂಶಿತವ್ರತನಾದ ನಿನ್ನ ತಂದೆಯನ್ನೂ, ಗಾಂಧಾರಿಯನ್ನೂ ಕರೆಯಿಸು. ಅವರಿಬ್ಬರೂ ಅಸೂಯೆಯಿಲ್ಲದವರು, ವಿನಯರು. ಧರ್ಮಜ್ಞರು. ನಿಶ್ಚಯಿಸುವುದರಲ್ಲಿ ನಿಪುಣರು. ಅವರಿಬ್ಬರ ಸನ್ನಿಧಿಯಲ್ಲಿ ನಾನು ನಿನಗೆ ವಾಸುದೇವ-ಅರ್ಜುನರ ಮತವೆಲ್ಲವನ್ನೂ ಹೇಳುತ್ತೇನೆ.”

ಆಗ ಸಂಜಯ ಮತ್ತು ತನ್ನ ಮಗನ ಇಂಗಿತವನ್ನು ತಿಳಿದ ಮಹಾಪ್ರಾಜ್ಞ ಕೃಷ್ಣ ದ್ವೈಪಾಯನನು ಅಲ್ಲಿ ಕಾಣಿಸಿಕೊಂಡು ಹೇಳಿದನು: “ಸಂಜಯ! ಧೃತರಾಷ್ಟ್ರನು ಕೇಳಿದ್ದುದನ್ನು ಎಲ್ಲವನ್ನೂ ಹೇಳು. ವಾಸುದೇವ-ಅರ್ಜುನರ ಕುರಿತು ನಿನಗೆ ತಿಳಿದುದೆಲ್ಲವನ್ನೂ ಯಥಾವತ್ತಾಗಿ, ಯಥಾತಥ್ಯವಾಗಿ ಹೇಳು.”

ಸಂಜಯನು ಹೇಳಿದನು: “ಪರಮಾರ್ಚಿತ ಧನ್ವಿಗಳಾದ ಅರ್ಜುನ-ವಾಸುದೇವರಿಬ್ಬರೂ ಇಷ್ಟಪಟ್ಟು ಇನ್ನೊಂದು ಜನ್ಮವನ್ನು ತಾಳಿ ಎಲ್ಲವನ್ನೂ ಇಲ್ಲವಾಗಿಸಲು ಒಂದಾಗಿದ್ದಾರೆ. ಆಕಾಶದಲ್ಲಿದ್ದುಕೊಂಡು, ಬೇಕಾದ ಹಾಗೆ ವಾಸುದೇವನ ಆ ಮನಸ್ವೀ ಚಕ್ರವು ಮಾಯೆಯಿಂದ ನಡೆಯುತ್ತದೆ. ಅದು ಪಾಂಡವರಿಗೆ ಕಾಣಿಸದೇ ಇದ್ದರೂ ಪಾಂಡವರು ಅದನ್ನು ಪೂಜಿಸುತ್ತಾರೆ. ಅವರ ಸಾರಾಸಾರ ಬಲಗಳನ್ನು ಕೇಳಿ ತಿಳಿದುಕೋ. ಆಟದಂತೆ ಮಾಧವ ಜನಾರ್ದನನು ಘೋರಸಂಕಾಶರಾದ ನರಕ, ಶಂಬರ, ಕಂಸ ಮತ್ತು ಚೈದ್ಯರನ್ನು ಗೆದ್ದಿದ್ದಾನೆ. ಈ ವಿಶಿಷ್ಟಾತ್ಮ ಪುರುಷೋತ್ತಮನು ತನ್ನ ಮನಸ್ಸಿನಿಂದಲೇ ಭೂಮಿ-ಅಂತರಿಕ್ಷ-ದೇವಲೋಕಗಳನ್ನು ತನ್ನ ಆತ್ಮವಶ ಮಾಡಿಕೊಂಡಿದ್ದಾನೆ. ಮೇಲಿಂದ ಮೇಲೆ ನೀನು ಪಾಂಡವರ ಸಾರಾಸಾರಬಲಗಳ ಕುರಿತು ತಿಳಿದುಕೊಳ್ಳಲು ಕೇಳಿದ್ದೀಯೆ. ಈಗ ಹೇಳುವುದನ್ನು ಕೇಳು.

“ಒಂದು ಕಡೆ ಇಡೀ ಈ ಜಗತ್ತು ಮತ್ತು ಇನ್ನೊಂದೆಡೆ ಜನಾರ್ದನನೊಬ್ಬನೇ ಇದ್ದರೂ ಸಾರದಲ್ಲಿ ಜಗತ್ತಿಗಿಂತ ಜನಾರ್ದನನೇ ಹೆಚ್ಚಿನವನು. ಮನಸ್ಸಿನಿಂದಲೇ ಜನಾರ್ದನನು ಈ ಜಗತ್ತನ್ನು ಭಸ್ಮಮಾಡಬಲ್ಲ. ಆದರೆ ಇಡೀ ಜಗತ್ತೇ ಸೇರಿದರೂ ಜನಾರ್ದನನನ್ನು ಭಸ್ಮಮಾಡಲಿಕ್ಕಾಗುವುದಿಲ್ಲ. ಎಲ್ಲಿ ಸತ್ಯವಿದೆಯೋ, ಎಲ್ಲಿ ಧರ್ಮವಿದೆಯೋ, ಎಲ್ಲಿ ವಿನಯ, ಪ್ರಾಮಾಣಿಕತೆಗಳಿವೆಯೋ ಅಲ್ಲಿ ಗೋವಿಂದನಿರುತ್ತಾನೆ. ಎಲ್ಲಿ ಕೃಷ್ಣನಿರುತ್ತಾನೋ ಅಲ್ಲಿ ಜಯವಿರುತ್ತದೆ. ಪುರುಷೋತ್ತಮ, ಭೂತಾತ್ಮ ಜನಾರ್ದನನು ಭೂಮಿ-ಅಂತರಿಕ್ಷ-ದೇವಲೋಕಗಳನ್ನು ಆಟದಂತೆ ನಡೆಸುತ್ತಾನೆ. ಅವನು ಪಾಂಡವರನ್ನು ನೆಪವನ್ನಾಗಿಸಿಕೊಂಡು ಲೋಕವನ್ನು ಸಮ್ಮೋಹಿಸುತ್ತಾ ನಿನ್ನ ಅಧರ್ಮನಿರತ ಮೂಢ ಮಕ್ಕಳನ್ನು ಸುಡಲು ಬಯಸುತ್ತಾನೆ. ಆತ್ಮಯೋಗದಿಂದ ಭಗವಾನ್ ಕೇಶವನು ಕಾಲಚಕ್ರವನ್ನು, ಜಗಚ್ಚಕ್ರವನ್ನು ಮತ್ತು ಯುಗಚಕ್ರವನ್ನು ನಿಲ್ಲಿಸದೆಯೇ ತಿರುಗಿಸುತ್ತಿರುತ್ತಾನೆ.  ಆ ಭಗವಾನನು ಒಬ್ಬನೇ ಕಾಲ, ಮೃತ್ಯು, ಜಂಗಮ-ಸ್ಥಾವರಗಳನ್ನು ಆಳುತ್ತಾನೆ. ನಾನು ನಿನಗೆ ಈ ಸತ್ಯವನ್ನು ಹೇಳುತ್ತಿದ್ದೇನೆ.

“ಮಹಾಯೋಗಿ ಹರಿಯು ಸರ್ವ ಜಗತ್ತುಗಳ ಈಶನಾದರೂ ದುರ್ಬಲ ರೈತನಂತೆ ಕರ್ಮಗಳಲ್ಲಿ ತೊಡಗಿರುತ್ತಾನೆ. ಹೀಗೆ ಕೇಶವನು ತನ್ನ ಮಾಯಾಯೋಗದಿಂದ ಲೋಕಗಳನ್ನು ವಂಚಿಸುತ್ತಾನೆ. ಆದರೆ ಅವನನ್ನೇ ಶರಣು ಹೋಗುವ ಮಾನವರು ಮೋಸಹೋಗುವುದಿಲ್ಲ.”

ವ್ಯಾಸ-ಗಾಂಧಾರಿಯರು ಸಂಧಿಗೆ ಪ್ರೋತ್ಸಾಹಿಸಿದುದು

ಧೃತರಾಷ್ಟ್ರನು ಹೇಳಿದನು: “ಸಂಜಯ! ನೀನು ಹೇಗೆ ಸರ್ವಲೋಕಮಹೇಶ್ವರ ಮಾಧವನನ್ನು ತಿಳಿದಿರುವೆ? ನಾನು ಹೇಗೆ ಅವನನ್ನು ತಿಳಿದಿಲ್ಲ ಎನ್ನುವುದನ್ನು ನನಗೆ ಹೇಳು.”

ಸಂಜಯನು ಹೇಳಿದನು: “ರಾಜನ್! ನಿನಗೆ ವಿದ್ಯೆ-ತಿಳುವಳಿಕೆಯಿಲ್ಲ. ನನ್ನ ವಿದ್ಯೆ-ತಿಳುವಳಿಕೆಯಲ್ಲಿ ಕಡಿಮೆಯಿಲ್ಲ. ವಿದ್ಯಾಹೀನನಾಗಿ, ಕತ್ತಲೆಯಿಂದ ಆವರಿಸಿದವನಾಗಿ ನಿನಗೆ ಕೇಶವನು ಅರ್ಥವಾಗುತ್ತಿಲ್ಲ. ವಿದ್ಯೆಯಿಂದಲೇ ನಾನು ಮೂರೂ ಯುಗಗಳ ಮಧುಸೂದನನನ್ನು, ಸ್ವತಃ ಪಾಡಲ್ಪಟ್ಟಿಲ್ಲದಿದ್ದರೂ ಬೇರೆ ಎಲ್ಲವನ್ನೂ ಮಾಡುವ, ಇರುವ ಎಲ್ಲವಕ್ಕೂ ಒಡೆಯನಾದ, ಪ್ರಭು ಅಪ್ಯಯನನ್ನು ತಿಳಿದಿದ್ದೇನೆ.”

ಧೃತರಾಷ್ಟ್ರನು ಹೇಳಿದನು: “ಗಾವಲ್ಗಣೇ! ಜನಾರ್ದನನಲ್ಲಿ ನಿತ್ಯವೂ ನೀನು ತೋರಿಸುವ ಈ ಭಕ್ತಿ - ಯಾವುದರಿಂದ ನೀನು ತ್ರಿಯುಗಗಳ ಮಧುಸೂದನನನ್ನು ತಿಳಿದಿದ್ದೀಯೋ - ಆ ಭಕ್ತಿಯೇನು?”

ಸಂಜಯನು ಹೇಳಿದನು: “ನಿನಗೆ ಮಂಗಳವಾಗಲಿ! ಮಾಯೆಯನ್ನು ನಾನು ಸೇವಿಸುವುದಿಲ್ಲ. ನಾನು ಸ್ವಲ್ಪವೂ ಅಧರ್ಮವನ್ನು ಆಚರಿಸುವುದಿಲ್ಲ. ಶುದ್ಧ ಭಕ್ತಿ ಭಾವದಿಂದ ನಡೆಯುತ್ತೇನೆ. ಶಾಸ್ತ್ರಗಳಿಂದ ಜನಾರ್ದನನನ್ನು ತಿಳಿದಿದ್ದೇನೆ.”

ಧೃತರಾಷ್ಟ್ರನು ಹೇಳಿದನು: “ದುರ್ಯೋಧನ! ಹೃಷೀಕೇಶ ಜನಾರ್ದನನನ್ನು ಮೆಚ್ಚಿಸು. ಮಗೂ! ಸಂಜಯನಷ್ಟು ಆಪ್ತರಿಲ್ಲ. ಕೇಶವನನ್ನು ಶರಣು ಹೋಗು!”

ದುರ್ಯೋಧನನು ಹೇಳಿದನು: “ಅರ್ಜುನನ ಸಖನೆಂದು ಹೇಳಿಕೊಂಡು ಆ ಭಗವಾನ್ ದೇವಕಿಪುತ್ರನು ಲೋಕವನ್ನು ನಾಶಪಡಿಸುವವನಾದರೆ, ನಾನು ಕೇಶವನ ಮೊರೆಹೋಗುವುದಿಲ್ಲ!”

ಧೃತರಾಷ್ಟ್ರನು ಹೇಳಿದನು: “ಇಗೋ ಗಾಂಧಾರೀ! ನಿನ್ನ ಈ ಸುದುರ್ಮತಿ ದುರಾತ್ಮ ಮಗನು ತನ್ನ ಈರ್ಷ್ಯೆ, ಅಭಿಮಾನಗಳಿಂದಾಗಿ ಶ್ರೇಯಸ್ಕರ ಮಾತುಗಳಂತೆ ನಡೆದುಕೊಳ್ಳದೇ ಅಧೋಗತಿಗಿಳಿಯುತ್ತಿದ್ದಾನೆ!”

ಗಾಂಧಾರಿಯು ಹೇಳಿದಳು: “ಐಶ್ವರ್ಯಕಾಮೀ! ದುಷ್ಟಾತ್ಮ! ವೃದ್ಧರ ಶಾಸನವನ್ನು ಅಲ್ಲಗಳೆಯುವವನೇ! ಮೂಢ! ಐಶ್ವರ್ಯ-ಜೀವಗಳನ್ನು, ತಂದೆ ತಾಯಿಯರನ್ನು ತೊರೆದವನೇ! ಶತ್ರುಗಳ ಸಂತೋಷವನ್ನು ಹೆಚ್ಚಿಸುವವನೇ! ನನ್ನ ಶೋಕವನ್ನು ಹೆಚ್ಚಿಸುವವನೇ! ಭೀಮಸೇನನ ಪೆಟ್ಟು ತಿಂದಾಗ ನಿನ್ನ ತಂದೆಯ ಮಾತನ್ನು ನೆನಪಿಸಿಕೊಳ್ಳುವೆ!”

ವ್ಯಾಸನು ಹೇಳಿದನು: “ರಾಜನ್! ನೀನು ಕೃಷ್ಣನಿಗೆ ಬೇಕಾದವನು. ಧೃತರಾಷ್ಟ್ರ! ನನ್ನನ್ನು ಕೇಳು. ನಿನ್ನ ದೂತನಾಗಿರುವ ಸಂಜಯನು ನಿನ್ನನ್ನು ಶ್ರೇಯಸ್ಸಿನೆಡೆಗೆ ಕೊಂಡೊಯ್ಯುತ್ತಿದ್ದಾನೆ. ಅವನು ಈ ಹೃಷೀಕೇಶನನ್ನು – ಅವನ ಪುರಾತನ ಮತ್ತು ಹೊಸ ರೂಪಗಳಲ್ಲಿ – ತಿಳಿದುಕೊಂಡಿದ್ದಾನೆ. ಅವನನ್ನು ಏಕಾಗ್ರನಾಗಿ ಕೇಳುವುದರಿಂದ ಮಹಾ ಭಯದಿಂದ ಮುಕ್ತನಾಗುತ್ತೀಯೆ. ಕ್ರೋಧ-ಹರ್ಷಗಳ ಕತ್ತಲೆಯಿಂದ ಆವೃತರಾಗಿ, ಬಹುವಿಧದ ಪಾಶಗಳ ಬಂಧನಕ್ಕೊಳಗಾಗಿ, ತಮ್ಮಲ್ಲಿರುವ ಧನಗಳಿಂದ ಸಂತುಷ್ಟರಾಗಿರುವುದಿಲ್ಲ. ಕಾಮಮೂಢರು ಕುರುಡನು ಕುರುಡನಿಂದ ಕರೆದೊಯ್ಯಲ್ಪಡುವಂತೆ ತಾವೇ ಮಾಡಿದ ಕರ್ಮಗಳಿಂದ ಪುನಃ ಪುನಃ ಯಮನ ವಶದಲ್ಲಿ ಬರುತ್ತಾರೆ. ಮನೀಷಿಗಳು ಹೋಗುವ ಒಂದೇ ಒಂದು ಮಾರ್ಗವಿದೆ. ಅದನ್ನು ನೋಡಿ ಮೃತ್ಯುವನ್ನು ಜಯಿಸುತ್ತಾರೆ. ಮಹಾತ್ಮರು ಅಲ್ಲಿ ಅಂಟಿಕೊಳ್ಳುವುದಿಲ್ಲ!”

ಧೃತರಾಷ್ಟ್ರನು ಹೇಳಿದನು: “ಸಂಜಯ! ಭಯವನ್ನು ಹೋಗಲಾಡಿಸುವ, ಯಾವುದರ ಮೂಲಕ ಹೃಷೀಕೇಶನನ್ನು ತಲುಪಿ ಉತ್ತಮ ಶಾಂತಿಯನ್ನು  ಪಡೆಯಬಲ್ಲೆನೋ ಆ ಮಾರ್ಗದ ಕುರಿತು ಹೇಳು ಬಾ!”

ಸಂಜಯನು ಹೇಳಿದನು: “ಅಕೃತಾತ್ಮನು ಕೃತಾತ್ಮನಾದ ಜನಾರ್ದನನನ್ನು ತಿಳಿಯಲಿಕ್ಕಾಗುವುದಿಲ್ಲ. ಇಂದ್ರಿಯನಿಗ್ರಹವಿಲ್ಲದೇ ತನ್ನ ಕ್ರಿಯೆಗಳನ್ನು ಮಾಡುವುದು ಉಪಾಯವಲ್ಲ. ಉತ್ತೇಜನಗೊಂಡ ಇಂದ್ರಿಯಗಳು ಬಯಸುವ ವಸ್ತುಗಳನ್ನು ಅಪ್ರಮಾದನಾಗಿದ್ದುಕೊಂಡು ತ್ಯಜಿಸುವುದು, ಅಪ್ರಮಾದನಾಗಿರುವುದು, ಮತ್ತು ಅಹಿಂಸೆ ಇವು ಜ್ಞಾನವನ್ನು ಹುಟ್ಟಿಸುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಯಾವಾಗಲೂ ಆಯಾಸಗೊಳ್ಳದೇ ಇಂದ್ರಿಯಗಳನ್ನು ನಿಯಂತ್ರಿಸು. ನಿನ್ನ ಬುದ್ಧಿಯು ದಾರಿತಪ್ಪದಿರಲಿ. ಪ್ರತಿಸಾರಿಯೂ ನಿರ್ದಿಷ್ಟಪಡಿಸಿಕೋ. ಈ ಇಂದ್ರಿಯ ಧಾರಣೆಯನ್ನು ವಿಪ್ರರು ನಿಶ್ಚಿತವಾಗಿಯೂ ಜ್ಞಾನವನ್ನು ನೀಡುತ್ತದೆಯೆಂದು ತಿಳಿದಿದ್ದಾರೆ. ಇದೇ ಮನೀಷಿಗಳು ಹೋಗುವ ಜ್ಞಾನದ ಮಾರ್ಗ. ಇಂದ್ರಿಯಗಳನ್ನು ಗೆಲ್ಲದೇ ಕೇಶವನನ್ನು ಮನುಷ್ಯರು ತಲುಪುವುದಿಲ್ಲ. ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡು, ಆಗಮಗಳನ್ನು ತಿಳಿದುಕೊಂಡಿರುವವನು ಯೋಗದ ಮೂಲಕ ತತ್ವದಲ್ಲಿ ಶಾಂತನಾಗುತ್ತಾನೆ.”

ಕೃಷ್ಣನ ನಾಮಾರ್ಥಗಳನ್ನು ಸಂಜಯನು ಧೃತರಾಷ್ಟ್ರನಿಗೆ ವಿವರಿಸಿದುದು

ಧೃತರಾಷ್ಟ್ರನು ಹೇಳಿದನು: “ಸಂಜಯ! ಪುಂಡರೀಕಾಕ್ಷನ ಕುರಿತು ನಾನು ಕೇಳಿದುದಕ್ಕೆ ಇನ್ನೂ ಹೆಚ್ಚು ಹೇಳು. ಅವನ ಹೆಸರು ಮತ್ತು ಕಾರ್ಯಗಳ ಅರ್ಥವನ್ನು ಮಾಡಿಕೊಂಡರೆ ಆ ಪುರುಷೋತ್ತಮನನ್ನು ತಲುಪಬಹುದು.”

ಸಂಜಯನು ಹೇಳಿದನು: “ನಾನು ಆ ದೇವನ ಶುಭನಾಮಗಳ ವಿವರಣೆಗಳನ್ನು ಕೇಳಿದ್ದೇನೆ. ನನಗೆ ತಿಳಿದಂತೆ ಕೇಶವನು ಅಪ್ರಮೇಯನು. ಸರ್ವಭೂತಗಳಿಗೆ ವಸನವನ್ನೀಯುವುದರಿಂದ, ವಸುವಾಗಿರುವುದರಿಂದ, ಮತ್ತು ದೇವಯೋನಿಯಾಗಿರುವುದರಿಂದ ಅವನನ್ನು ವಾಸುದೇವನೆಂದು ತಿಳಿಯುತ್ತಾರೆ. ವೃಷತ್ವದಿಂದಾಗಿ ವಿಷ್ಣುವೆಂದು ಕರೆಯುತ್ತಾರೆ. ಮುನಿಯಾಗಿದ್ದುದರಿಂದ, ಯೋಗಿಯಾಗಿರುವುದರಿಂದ ಅವನನ್ನು ಮಾಧವನೆಂದು ತಿಳಿ. ಸರ್ವತತ್ವಗಳನ್ನೂ ಲಯಗೊಳಿಸುವುದರಿಂದ ಮತ್ತು ಮಧುವಿನ ಸಂಹಾರಕನಾಗಿದುದರಿಂದ ಅವನು ಮಧುಸೂದನ. ‘ಕೃಷಿ’ ಶಬ್ಧವು ಭೂಮಿಯನ್ನು ಸೂಚಿಸುತ್ತದೆ ಮತ್ತು ‘ಣ’ ವು ನಿವೃತ್ತಿಯನ್ನು ಸೂಚಿಸುತ್ತದೆ. ಕೃಷ್ಣನಲ್ಲಿ ಇವೆರಡೂ ಸೇರಿರುವುದರಿಂದ ಕೃಷ್ಣನು ಶಾಶ್ವತನೆಂದಾಗುತ್ತಾನೆ. ಪುಂಡರೀಕವು ನಿತ್ಯವೂ, ಅಕ್ಷಯವೂ, ಅಕ್ಷರವೂ ಆದ ಪರಮ ಧಾಮ. ಆದುದರಿಂದ ಅವನು ಪುಂಡರೀಕಾಕ್ಷ. ದಸ್ಯುಗಳನ್ನು ಕಾಡುವುದರಿಂದ ಅವನು ಜನಾರ್ದನ. ಯಾರಲ್ಲಿ ಸತ್ವವು ತೋರಿಸಿಕೊಳ್ಳುತ್ತದೆಯೋ, ಯಾರಲ್ಲಿ ಸತ್ವವು ಕಡಿಮೆಯಾಗುವುದಿಲ್ಲವೋ, ಅಂಥಹ ಸತ್ವಕ್ಕಾಗಿ ಅವನು ಸಾತ್ವತ. ವೃಷಭನಂತಿರುವುದರಿಂದ ಅವನು ವೃಷಭೇಕ್ಷಣ. ಜನನಿಯಲ್ಲಿ ಜನಿಸದೇ ಇರುವುದರಿಂದ, ಜಯಿಸಲಸಾಧ್ಯನಾಗಿರುವುದರಿಂದ ಅವನು ಅಜ (ಜನ್ಮವಿಲ್ಲದವನು). ದೇವತೆಗಳ ಸ್ವಪ್ರಕಾಶವಿರುವುದರಿಂದ ಅವನನ್ನು ದಾಮೋದರನೆಂದು ತಿಳಿಯುತ್ತಾರೆ. ಹರ್ಷ, ಸುಖ ಮತ್ತು ಐಶ್ವರ್ಯಗಳಿಂದ ಅವನು ಹೃಷೀಕೇಶನಾಗಿದ್ದಾನೆ. ಭೂಮಿ-ಆಕಾಶಗಳನ್ನು ಎರಡು ಬಾಹುಗಳಲ್ಲಿ ಹೊತ್ತಿರುವುದರಿಂದ ಅವನು ಮಹಾಬಾಹುವೆಂದು ವಿಶ್ರುತನಾಗಿದ್ದಾನೆ. ಕೆಳಮುಖವಾಗಿ ಕ್ಷೀಣವಾಗದೇ ಇರುವುದರಿಂದ ಅವನು ಅಧೋಕ್ಷಜ. ನರರ ಪ್ರಯಾಣನಾಗಿದ್ದುದರಿಂದ ಅವನು ನಾರಾಯಣನೆಂದೂ ಕರೆಯಲ್ಪಡುತ್ತಾನೆ. ಪೂರ್ಣಗೊಳಿಸುವವನು ಮತ್ತು ಕಡಿಮೆಮಾಡುವವನಾಗಿರುವುದರಿಂದ ಅವನು ಪುರುಷೋತ್ತಮ. ಇರುವ ಮತ್ತು ಇಲ್ಲದಿರುವ ಎಲ್ಲವುಗಳ ಪ್ರಭುವಾದುದರಿಂದ ಮತ್ತು ಜ್ಞಾನದ ಮೂಲಕ ಎಲ್ಲವನ್ನೂ ಕಾಣುವುದರಿಂದ ಅವನು ಸರ್ವ. ಕೃಷ್ಣನು ಸತ್ಯದಲ್ಲಿ ನೆಲೆಸಿದ್ದಾನೆ ಮತ್ತು ಸತ್ಯವು ಅವನಲ್ಲಿ ನೆಲೆಸಿದೆ. ಗೋವಿಂದನು ಸತ್ಯ ಅಸತ್ಯಗಳೆರಡೂ. ಆದುದರಿಂದ ಅವನಿಗೆ ಸತ್ಯ ಎಂಬ ಹೆಸರೂ ಇದೆ. ವಿಕ್ರಮದಿಂದಾಗಿ ಅವನು ವಿಷ್ಣು. ಜಯದಿಂದಾಗಿ ಜಿಷ್ಣು ಎನ್ನುತ್ತಾರೆ. ಶಾಶ್ವತನಾಗಿರುವುದರಿಂದ ಅನಂತನೆಂದೂ ಗೋವುಗಳನ್ನು ತಿಳಿದುಕೊಂಡಿದುದಕ್ಕೆ ಗೋವಿಂದನೆಂದೂ ಕರೆಯುತ್ತಾರೆ. ತತ್ತ್ವವಲ್ಲವುಗಳನ್ನು ತತ್ತ್ವವುಳ್ಳವುಗಳನ್ನಾಗಿ ಮಾಡಿ ಪ್ರಜೆಗಳನ್ನು ಮೋಹಗೊಳಿಸುತ್ತಾನೆ. ಈ ರೀತಿ ಧರ್ಮನಿತ್ಯನಾದ ಭಗವಾನ್ ಮಹಾಬಾಹು ಅಚ್ಯುತನು ಹಿಂಸೆಯನ್ನು ತಡೆಯಲು ಮುನಿಗಳೊಂದಿಗೆ ಇಲ್ಲಿಗೆ ಬರುತ್ತಾನೆ.”

ಧೃತರಾಷ್ಟ್ರನು ಮಹಾವಿಷ್ಣುವನ್ನು ಪ್ರಾರ್ಥಿಸುವುದು

ಧೃತರಾಷ್ಟ್ರನು ಹೇಳಿದನು: “ಸಂಜಯ! ದಿಕ್ಕುಗಳನ್ನು ದಿಕ್ಸೂಚಿಯಂತೆ ಪ್ರಕಾಶಗೊಳಿಸುವ ಪರಮ ಶರೀರದಿಂದ ಬೆಳಗುವ ವಾಸುದೇವನನ್ನು ಹತ್ತಿರದಿಂದ ನೋಡಬಲ್ಲ ಕಣ್ಣುಳ್ಳವರ ಮೇಲೆ ಅಸೂಯೆಪಡುತ್ತೇನೆ. ಅವನು ಭಾರತರು ಗೌರವದಿಂದ ಕೇಳುವಹಾಗೆ, ಸೃಂಜಯರಿಗೆ ಮಂಗಳವನ್ನು ಮಾಡುವ, ಅಭಿವೃದ್ಧಿಯನ್ನು ಬಯಸುವವರು ಕೇಳಬೇಕಾದ, ಯಾವರೀತಿಯಲ್ಲಿಯೂ ನಿಂದನೀಯವಲ್ಲದ, ಸಾಯಲು ಬಯಸುವವರು ಕೇಳದ ಮಾತುಗಳನ್ನು ಆಡುತ್ತಾನೆ. ಸಾತ್ವತರ ಏಕವೀರನು ನಮ್ಮಲ್ಲಿಗೆ ಬರುತ್ತಾನೆ. ಯಾದವರ ಪ್ರಣೇತಾರ ಆ ವೃಷಭ, ಶತ್ರುಗಳ ಕ್ಷೋಭಣ ಮತ್ತು ಹಂತಾರ, ಮತ್ತು ದ್ವೇಷಿಸುವವರ ಯಶಸ್ಸನ್ನು ಎಳೆದುಕೊಳ್ಳುವವನು. ಕುರುಗಳು ಒಟ್ಟಿಗೇ ಆ ಮಹಾತ್ಮ, ಶತ್ರುಹರಣ, ವರೇಣ್ಯ, ಅಹಿಂಸೆಯ ಕುರಿತಾಗಿ ಮಾತನಾಡಿ ನಮ್ಮವರನ್ನು ಮೋಹಿಸುವಂತಹ ಆ ವೃಷ್ಣಿಶ್ರೇಷ್ಠನನ್ನು ನೋಡುತ್ತಾರೆ. ಆ ಋಷಿ, ಅತ್ಯಂತ ಸನಾತನ, ಮಾತುಗಳ ಸಮುದ್ರ, ಯತಿಗಳ ಕಲಶ, ಅರಿಷ್ಟನೇಮಿ, ಗರುಡ, ಸುಪರ್ಣ, ಪ್ರಜೆಗಳ ಪತಿ, ಭುವನದ ಧಾಮ, ಸಹಸ್ರಶೀರ್ಷ, ಪುರುಷ, ಪುರಾಣ, ಆದಿ-ಮಧ್ಯ-ಅಂತ್ಯಗಳಿಲ್ಲದಿರುವ, ಅನಂತ ಕೀರ್ತಿ, ಶುಕ್ರದ ಧಾತಾರ, ಹುಟ್ಟಿರದ ಜನಿತ್ರ, ಪರಮ ಪರೇಭ್ಯನಿಗೆ ಶರಣು ಹೋಗುತ್ತೇನೆ. ಮೂರೂಲೋಕಗಳನ್ನು ನಿರ್ಮಾಣಿಸಿದ, ದೇವಾಸುರರನ್ನೂ ನಾಗರಾಕ್ಷಸರನ್ನೂ, ಪ್ರಧಾನ ನರಾಧಿಪರನ್ನೂ, ವಿದುಷರನ್ನೂ ಹುಟ್ಟಿಸಿದ, ಇಂದ್ರನ ಅನುಜನಿಗೆ ಶರಣು ಹೋಗುತ್ತೇನೆ.”

Leave a Reply

Your email address will not be published. Required fields are marked *