ಎರಡನೆಯ ರಾಯಭಾರ: ಸಂಜಯನು ಪಾಂಡವರಲ್ಲಿಗೆ ಬಂದುದು
ಸಂಜಯನನ್ನು ಪಾಂಡವರಲ್ಲಿಗೆ ಕಳುಹಿಸಿದುದು
ಕೌರವ್ಯನು ದ್ರುಪದನ ಪುರೋಹಿತನನ್ನು ಸತ್ಕರಿಸಿ ಪಾಂಡವರಲ್ಲಿಗೆ ಕಳುಹಿಸಿದನು. ಸಭಾಮಧ್ಯದಲ್ಲಿ ಸಂಜಯನನ್ನು ಕರೆಯಿಸಿ ಈ ಮಾತುಗಳನ್ನಾಡಿದನು: “ಸಂಜಯ! ಪಾಂಡುಪುತ್ರರು ಉಪಪ್ಲವ್ಯಕ್ಕೆ ಬಂದಿದ್ದಾರೆಂದು ಹೇಳುತ್ತಾರೆ. ಹೋಗಿ ತಿಳಿದುಕೊಂಡು ಬಾ. ಅಜಾತಶತ್ರುವನ್ನು ಈ ರೀತಿ ಸಂಭೋಧಿಸು: “ಅನಘ! ನೀನು ಗ್ರಾಮಕ್ಕೆ ಬಂದಿರುವುದು ಒಳ್ಳೆಯದೇ ಆಯಿತು.” ಎಲ್ಲರಿಗೂ ಹೇಳಬೇಕು: “ಅನರ್ಹರಾಗಿದ್ದರೂ ವನವಾಸದ ಕಷ್ಟಗಳನ್ನು ಮುಗಿಸಿದ ನೀವು ಚೆನ್ನಾಗಿದ್ದೀರಾ?” ಮೋಸಗೊಂಡಿದ್ದರೂ ಶೀಘ್ರದಲ್ಲಿಯೇ ಅವರು ನಮ್ಮ ಮೇಲೆ ಶಾಂತಿಯನ್ನು ತಾಳುತ್ತಾರೆ. ಏಕೆಂದರೆ ಅವರು ಉಪಕಾರಿಗಳು ಮತ್ತು ಒಳ್ಳೆಯವರು. ನಾನು ಎಂದೂ ಪಾಂಡವರಲ್ಲಿ ಮಿಥ್ಯಾವೃತ್ತಿಯನ್ನು ಕಂಡವನಲ್ಲ. ಅವರು ಎಲ್ಲಾ ಸಂಪತ್ತನ್ನೂ ತಮ್ಮದೇ ವೀರ್ಯದಿಂದ ಗಳಿಸಿದ್ದರೂ ಪಾಂಡವರು ನನ್ನ ಪರಿಚಾರಕರಂತಿದ್ದರು. ನಿತ್ಯ ಪರೀಕ್ಷಿಸಿದರೂ ಪಾರ್ಥರಲ್ಲಿ ದೂಷಿಸುವಂಥಹ ಸ್ವಲ್ಪವೂ ದೋಷವನ್ನು ನಾನು ಕಾಣಲಿಲ್ಲ. ನಿತ್ಯವೂ ಅವರು ಧರ್ಮ ಮತ್ತು ಅರ್ಥಗಳಿಗಾಗಿ ಕಾರ್ಯಗಳನ್ನು ಮಾಡುತ್ತಾರೆ. ಸುಖಪ್ರಿಯರಾಗಿ ಕಾಮದಿಂದ ಮಾಡುವುದಿಲ್ಲ. ಉಷ್ಣ, ಶೀತ, ಹಸಿವು ಮತ್ತು ಬಾಯಾರಿಕೆ, ನಿದ್ರೆ, ಮೈಥುನ, ಕ್ರೋಧ, ಹರ್ಷ, ಪ್ರಮಾದಗಳನ್ನು ಸಹಿಸಿಕೊಂಡು ಪ್ರಜ್ಞೆಯಲ್ಲಿದ್ದುಕೊಂಡು ಪಾರ್ಥರು ಧರ್ಮಾರ್ಥಯೋಗಗಳಲ್ಲಿ ನಡೆಯುತ್ತಾರೆ. ಕಾಲಕ್ಕೆ ಸರಿಯಾಗಿ ಅವರು ಮಿತ್ರರಲ್ಲಿ ಧನವನ್ನು ಬಿಡುತ್ತಾರೆ. ಇವರೊಂದಿಗಿನ ಮೈತ್ರವು ಸಮಯ ಹೆಚ್ಚಾದಂತೆ ಜೀರ್ಣವಾಗುವುದಿಲ್ಲ. ಏಕೆಂದರೆ ಪಾರ್ಥರು ಯಥಾರ್ಹವಾಗಿ ಗೌರವ ಸಂಪತ್ತುಗಳನ್ನು ನೀಡುತ್ತಾರೆ.
“ಅಜಮೀಢನ ಪಕ್ಷದಲ್ಲಿ ಅವರನ್ನು ದ್ವೇಷಿಸುವವರು ಯಾರೂ ಇಲ್ಲ. ಈ ಪಾಪಿ, ವಿಷಮಾನ್, ಮಂದಬುದ್ಧಿ ದುರ್ಯೋಧನ ಮತ್ತು ಕ್ಷುದ್ರತರ ಕರ್ಣರಹೊರತಾಗಿ! ಇವರಿಬ್ಬರೂ ಸುಖ ಮತ್ತು ಸ್ನೇಹಿತರನ್ನು ಕಳೆದುಕೊಂಡ ಆ ಮಹಾತ್ಮರ ತೇಜಸ್ಸನ್ನು ಹೆಚ್ಚಿಸುತ್ತಾರೆ. ಹೆಚ್ಚಿನ ವೀರ್ಯವುಳ್ಳ ಮತ್ತು ಸುಖವನ್ನೇ ಅನುಭವಿಸಿದ ದುರ್ಯೋಧನನು ಉತ್ತಮ ಕಾರ್ಯಗಳನ್ನೇ ಗೌರವಿಸುತ್ತಾನೆ. ಆದರೂ ಅವರು ಜೀವಂತವಿರುವಾಗಲೇ ಪಾಂಡವರ ಪಾಲನ್ನು ಕಸಿದುಕೊಳ್ಳಬಹುದು ಎನ್ನುವುದು ಬಾಲತನ.
“ಯಾರ ಹೆಜ್ಜೆಗಳನ್ನು ಅರ್ಜುನ-ಕೇಶವರು, ವೃಕೋದರ-ಸಾತ್ಯಕಿಯರು, ಮಾದ್ರೀ ಪುತ್ರರು ಮತ್ತು ಸೃಂಜಯರೆಲ್ಲರೂ ಅನುಸರಿಸುತ್ತಾರೋ ಆ ಅಜಾತಶತ್ರುವಿಗೆ ಯುದ್ಧಕ್ಕೆ ಮೊದಲೇ ಕೊಡುವುದು ಒಳ್ಳೆಯದು. ರಥದಲ್ಲಿ ಕುಳಿತ ಸವ್ಯಸಾಚೀ ಗಾಂಡೀವಧನ್ವಿಯೊಬ್ಬನೇ ಪೃಥ್ವಿಯನ್ನು ಸದೆಬಡಿಯಲು ಸಾಕು. ಹಾಗೆಯೇ ಜಯಿಸಲಸಾಧ್ಯ ವಿಷ್ಣು, ಕೇಶವ, ಲೋಕತ್ರಯಗಳ ಅಧಿಪತಿ ಮಹಾತ್ಮನೂ ಅದನ್ನೇ ಮಾಡುವವನು. ಸರ್ವದೇವರಲ್ಲಿ ಶ್ರೇಷ್ಠನಾದ, ಇಷ್ಟಪಾತ್ರನಾದ, ಮೋಡಗಳಂತೆ ಘೋಷಿಸುವ, ಶೀಘ್ರವಾಗಿ ಸಂಚರಿಸಬಲ್ಲ ಚಿಟ್ಟೆಗಳ ಹಿಂಡುಗಳಂಥ ಬಾಣಗಳನ್ನು ಪ್ರಯೋಗಿಸುವವನ ಎದಿರು ಯಾವ ಮಾನವನು ತಾನೇ ನಿಂತಾನು? ಸವ್ಯಸಾಚಿಯು ಗಾಂಡೀವವನ್ನು ಹಿಡಿದು, ರಥದಲ್ಲಿ ಕುಳಿತು ಒಬ್ಬನೇ ಉತ್ತರದಿಕ್ಕನ್ನು ಮತ್ತು ಉತ್ತರದ ಕುರುಗಳನ್ನು ಗೆದ್ದು ಅವರ ಧನವನ್ನು ತಂದನು ಮತ್ತು ಅವರ ಸೇನೆಗಳನ್ನು ತನ್ನ ಬಲದ ಭಾಗವನ್ನಾಗಿ ಮಾಡಿದನು. ಗಾಂಡೀವಧನ್ವಿ ಸವ್ಯಸಾಚಿ ಫಲ್ಗುನನು ಖಾಂಡವದಲ್ಲಿ ಇಂದ್ರನನ್ನೂ ಸೇರಿ ಎಲ್ಲ ದೇವತೆಗಳನ್ನೂ ಸೋಲಿಸಿ ಜಾತವೇದಸನಿಗೆ ಉಣಿಸಿ, ಪಾಂಡವರ ಯಶಸ್ಸನ್ನೂ ಮಾನವನ್ನೂ ಹೆಚ್ಚಿಸಿದನು. ಗದೆಯನ್ನು ಹಿಡಿಯುವವರಲ್ಲಿ ಭೀಮನ ಸಮನಾದವರು ಇಂದು ಯಾರೂ ಇಲ್ಲ. ಆನೆಯನ್ನು ಏರುವವರಲ್ಲಿ ಅವನ ಸಮನಾದವರಿಲ್ಲ. ರಥದಲ್ಲಿ ಅವನು ಅರ್ಜುನನಿಗೂ ಮಣಿಯುವುದಿಲ್ಲ ಎಂದು ಹೇಳುತ್ತಾರೆ. ಬಾಹುಬಲದಲ್ಲಿ ಅವನು ಹತ್ತು ಸಾವಿರ ಆನೆಗಳಿಗೆ ಸಮ. ಸುಶಿಕ್ಷಿತನಾದ, ವೈರತ್ವವನ್ನು ಬೆಳೆಸಿಕೊಂಡ, ಆ ತರಸ್ವಿಯು ಕೃದ್ಧನಾದರೆ ಕ್ಷಣಮಾತ್ರದಲ್ಲಿ ಧಾರ್ತರಾಷ್ಟ್ರರನ್ನು ಸುಟ್ಟುಬಿಡುತ್ತಾನೆ. ಸದಾ ಕೋಪದಲ್ಲಿರುವ ಆ ಬಲವಾನನನ್ನು ಸಾಕ್ಷಾತ್ ವಾಸವನೂ ಕೂಡ ಯುದ್ಧದಲ್ಲಿ ಜಯಿಸಲು ಶಕ್ಯನಿಲ್ಲ. ಸುಚೇತಸರಾದ, ಬಲಶಾಲಿಗಳಾದ, ಶೀಘ್ರಕೈಚಳಕವುಳ್ಳ, ಅಣ್ಣ ಫಲ್ಗುನನಿಂದ ತರಬೇತಿಪಡೆದ, ಪಕ್ಷಿಗಳ ಹಿಂಡಿನ ಮೇಲೆ ಹಾರಾಡುವ ಗಿಡುಗಗಳಂತಿರುವ ಮಾದ್ರೀಪುತ್ರರೀರ್ವರು ಕುರುಗಳ ಮೇಲೆ ಹಾರಾಡುತ್ತಿರುತ್ತಾರೆ. ಅವರ ಮಧ್ಯೆ ಓಡಾಡುವ ತರಸ್ವೀ ಧೃಷ್ಟದ್ಯುಮ್ನನು ಪಾಂಡವರಲ್ಲೇ ಒಬ್ಬನೆಂದು ಹೇಳುತ್ತಾರೆ. ಅವನು ಪಾಂಡವರ ಜಯಕ್ಕಾಗಿ ಅಮಾತ್ಯರೊಂದಿಗೆ ಸೋಮಕರ ಮತ್ತು ತನ್ನ ಆತ್ಮವನ್ನೂ ತ್ಯಜಿಸಲು ಸಿದ್ಧನಿದ್ದಾನೆಂದು ಕೇಳಿದ್ದೇನೆ. ಯಾರಬಳಿಯಲ್ಲಿ ಸ್ವಲ್ಪ ಸಮಯ ಉಳಿದುಕೊಂಡಿದ್ದರೋ ಆ ವಯಸ್ಥ, ಶಾಲ್ವೇಯಾನರ ಅಧಿಪ ವಿರಾಟನು ಪುತ್ರರೊಂದಿಗೆ ಪಾಂಡವರಿಗಾಗಿ ಇದ್ದಾನೆ ಮತ್ತು ಅವನು ಯುಧಿಷ್ಠಿರನ ಭಕ್ತ ಎಂದು ನಾನು ಕೇಳಿದ್ದೇನೆ. ಕೇಕಯ ರಾಜ್ಯದಿಂದ ಭ್ರಷ್ಟ ಬಲಶಾಲಿ ಐವರು ಮಹೇಷ್ವಾಸ ಸಹೋದರರಿದ್ದಾರೆ. ರಾಜ್ಯಾಕಾಂಕ್ಷಿಗಳಾದ ಅವರು ಯುದ್ಧಾರ್ಥಿಗಳಾಗಿ ಪಾರ್ಥರನ್ನು ಅವಲಂಬಿಸಿದ್ದಾರೆ. ಪೃಥ್ವೀಪತಿಗಳಲ್ಲಿ ವೀರರೆಲ್ಲರೂ ಪಾಂಡವರ ವಿಷಯದಲ್ಲಿ ನಿಷ್ಠರಾಗಿ ಸೇರಿದ್ದಾರೆ. ಆ ಶೂರರು ಭಕ್ತಿಮತರಾಗಿ ಪ್ರೀತಿಯಿಂದ ಧರ್ಮರಾಜನನ್ನು ಸೇರಿದ್ದಾರೆ ಎಂದು ನಾನು ಕೇಳಿದ್ದೇನೆ. ಗಿರಿ ದುರ್ಗಗಳಲ್ಲಿ ವಾಸಿಸುವವರು ಮತ್ತು ಪೃಥ್ವಿಯಲ್ಲಿ ವಿಶುದ್ಧ ಕುಲದಲ್ಲಿ ಹುಟ್ಟಿದ ಯೋಧರು, ನಾನಾ ಆಯುಧವೀರ್ಯವಂತ ಮ್ಲೇಚ್ಛರು ಪಾಂಡವರಿಗಾಗಿ ನಿಷ್ಠೆಯಿಂದ ಸೇರಿದ್ದಾರೆ. ಇಂದ್ರಸಮನಾದ ರಾಜ ಪಾಂಡ್ಯನೂ ಯುದ್ಧದಲ್ಲಿ ಬಹು ಪ್ರವೀರರರೊಂದಿಗೆ ಲೋಕಪ್ರವೀರ, ಅಪ್ರತಿಮ ವೀರ್ಯ ತೇಜಸ್ವಿಗಳಾದ ಮಹಾತ್ಮ ಪಾಂಡವರಿಗಾಗಿ ಸೇರಿದ್ದಾರೆ. ದ್ರೋಣ, ಅರ್ಜುನ, ವಾಸುದೇವ, ಕೃಪ ಮತ್ತು ಭೀಷ್ಮರಿಂದ ಕಲಿತ ಕೃಷ್ಣನ ಮಗನಿಗೆ ಸರಿಸಮನಾದ ಸಾತ್ಯಕಿಯು ಪಾಂಡವರಿಗಾಗಿ ನಿಷ್ಠಾವಂತನಾಗಿದ್ದಾನೆಂದು ಹೇಳುತ್ತಾರೆ. ಚೇದಿ ಮತ್ತು ಕರೂಷಗಳ ಭೂಮಿಪಾಲರು ಎಲ್ಲರೂ ಉತ್ಸಾಹದಿಂದ ಸೇರಿದ್ದಾರೆ.
“ಅವರ ಮಧ್ಯೆ ಸೂರ್ಯನಂತೆ ಸುಡುತ್ತಿರುವ ಶ್ರೀಯಿಂದ ಪ್ರಜ್ವಲಿಸುವ ಚೇದಿಪತಿಯನ್ನು ಸಂಹರಿಸಿದ, ಯುದ್ಧದಲ್ಲಿ ಅಜೇಯನಾದ, ಗೌರವಾನ್ವಿತ, ಬಿಲ್ಲನ್ನು ಎಳೆಯುವವರಲ್ಲೆಲ್ಲಾ ಶ್ರೇಷ್ಠನಾದ, ಕ್ಷತ್ರಿಯರ ಸರ್ವೋತ್ಸಾಹವನ್ನು ಕಸಿದುಕೊಂಡು ನಗುತ್ತಿರುವ ತರಸ್ವಿ ಕೃಷ್ಣನಿದ್ದಾನೆ. ಅವನು ಹಿಂದೆ ಶಿಶುಪಾಲನನ್ನು ಸಂಹರಿಸಿ ಯಾದವರ ಯಶಸ್ಸು ಮಾನಗಳನ್ನು ವರ್ಧಿಸಿದನು. ಅದೇ ಕರೂಷರಾಜ ಪ್ರಮುಖನನ್ನು ನರೇಂದ್ರರೆಲ್ಲರೂ ಗೌರವಿಸಿ ವರ್ಧಿಸುತ್ತಿದ್ದರು. ಅಲ್ಲಿ ಸುಗ್ರೀವ ಮತ್ತು ಇತರ ಕುದುರೆಗಳನ್ನು ಕಟ್ಟಿದ ರಥದಲ್ಲಿದ್ದ ಕೃಷ್ಣ ಕೇಶವನು ಅಸಹ್ಯನೆಂದು ತಿಳಿದು, ಚೇದಿಪತಿಯನ್ನು ಬಿಟ್ಟು, ಸಿಂಹವನ್ನು ನೋಡಿದ ಕ್ಷುದ್ರಮೃಗಗಳಂತೆ ಇತರರು ಓಡಿಹೋದರು. ಸೊಕ್ಕಿನಿಂದ ತರಸ್ತನಾಗಿ ವಾಸುದೇವನನ್ನು ದ್ವಂದ್ವಯುದ್ಧದಲ್ಲಿ ಎದುರಿಸಲು ಅವನು ಕೃಷ್ಣನಿಂದ ಭಿರುಗಾಳಿಯ ಹೊಡೆತಕ್ಕೆ ಸಿಲುಕಿ ಉರುಳಿದ ಕರ್ಣಿಕಾರ ವೃಕ್ಷದಂತೆ ಹೊಡೆತತಿಂದು ಜೀವವನ್ನು ಕಳೆದುಕೊಂಡು ಬಿದ್ದನು. ಅವರಿಗಾಗಿ ಕೇಶವನು ಏನೆಲ್ಲ ಮಾಡಿದ ಎಂದು ಹೇಳುವುದನ್ನು ಕೇಳಿದರೆ ಮತ್ತು ಆ ವಿಷ್ಣುವಿನ ಕರ್ಮಗಳನ್ನು ಸ್ಮರಿಸಿಕೊಂಡರೆ ನನಗೆ ಶಾಂತಿಯೆನ್ನುವುದೇ ಇಲ್ಲವಾಗಿದೆ. ಆ ವೃಷ್ಣಿಸಿಂಹನ ನಾಯಕತ್ವದಲ್ಲಿರುವ ಅವರನ್ನು ಯಾವ ಶತ್ರುವೂ ಎದುರಿಸಲು ಸಾಧ್ಯವಿಲ್ಲ. ಇಬ್ಬರು ಕೃಷ್ಣರೂ ಒಂದೇ ರಥದಲ್ಲಿ ಸೇರಿದ್ದಾರೆ ಎಂದು ಕೇಳಿ ನನ್ನ ಹೃದಯವು ಭಯದಿಂದ ಕಂಪಿಸುತ್ತಿದೆ. ನನ್ನ ಮಂದಬುದ್ಧಿ ಮಗನು ಅವರೊಂದಿಗೆ ಸಂಗರವನ್ನು ಮಾಡಲು ಉತ್ಸುಕನಾಗಿದ್ದರೆ ಅವನು ಅದನ್ನು ಮಾಡಿಯಾನು. ಇಲ್ಲದಿದ್ದರೆ ಇಂದ್ರ ಮತ್ತು ವಿಷ್ಣು ಇಬ್ಬರೂ ದೈತ್ಯಸೇನೆಯನ್ನು ಹೇಗೋ ಹಾಗೆ ಶಕ್ರಸಮನಾದ ಧನಂಜಯ ಮತ್ತು ಸನಾತನ ವಿಷ್ಣು ವೃಷ್ಣಿವೀರರು ಅವನನ್ನು ಸಂಹರಿಸುತ್ತಾರೆ ಎಂದು ನನಗನ್ನಿಸುತ್ತದೆ. ಕುಂತೀಪುತ್ರ ಪಾಂಡವ ಅಜಾತಶತ್ರುವು ಧಾರ್ಮಿಕ. ಮರ್ಯಾದೆಯನ್ನು ಕಳೆದುಕೊಳ್ಳುವ ಕೆಲಸಗಳನ್ನು ಮಾಡದೇ ಇರುವವನು. ಮತ್ತು ತರಸ್ವೀ. ಆ ಮನಸ್ವಿಯು ದುರ್ಯೋಧನನಿಂದ ಮೋಸಗೊಂಡಿದ್ದಾನೆ. ಕೃದ್ಧನಾಗಿ ಅವನು ಧಾರ್ತರಾಷ್ಟ್ರರನ್ನು ಸುಟ್ಟುಬಿಡುವುದಿಲ್ಲವೇ? ಕ್ರೋಧದೀಪ್ತನಾದ ರಾಜನ ಸಿಟ್ಟಿಗೆ ಸದೈವ ಹೆದರುವಷ್ಟು ನಾನು ಅರ್ಜುನ, ವಾಸುದೇವ, ಭೀಮ ಅಥವಾ ಯಮಳರಿಗೆ ಹೆದರುವುದಿಲ್ಲ. ತಪಸ್ಸು ಮತ್ತು ಬ್ರಹ್ಮಚರ್ಯದಿಂದ ಯುಕ್ತನಾದ ಅವನು ಮನಸ್ಸಿನಲ್ಲಿ ಸಂಕಲ್ಪಿಸಿದುದು ಸಿದ್ಧಿಯಾಗುತ್ತದೆ. ಅವನ ಕ್ರೋಧವನ್ನು ಮತ್ತು ಅದು ಎಷ್ಟು ನ್ಯಾಯವಾದುದು ಎಂದು ತಿಳಿದಾಗ ನನ್ನನ್ನು ಭೀತಿಯು ಆವರಿಸುತ್ತದೆ. ನನ್ನಿಂದ ಕಳುಹಿಸಲ್ಪಟ್ಟ ರಥದಲ್ಲಿ ಶೀಘ್ರವಾಗಿ ಪಾಂಚಾಲರಾಜನ ಸೇನೆಯು ತಂಗಿರುವಲ್ಲಿಗೆ ಹೋಗು. ಅಜಾತಶತ್ರುವಿನ ಕುಶಲವನ್ನು ಕೇಳು. ಪುನಃ ಪುನಃ ಅವನನ್ನು ಪ್ರೀತಿಯಿಂದ ಮಾತನಾಡಿಸು. ನೀನು ಮಹಾಮಾತ್ರನೂ, ವೀರ್ಯವತನೂ, ಉದಾರನೂ, ಅನಾಮಯನೂ ಆದ ಜನಾರ್ದನನನ್ನು ಭೇಟಿಯಾಗುವೆ. ನನ್ನ ಮಾತಿನಂತೆ ಕುಶಲವನ್ನು ಕೇಳುವೆ ಮತ್ತು ಧೃತರಾಷ್ಟ್ರನು ಪಾಂಡವರೊಂದಿಗೆ ಶಾಂತಿಯನ್ನು ಬಯಸುತ್ತಾನೆ ಎಂದು ಹೇಳುವೆ. ಕುಂತೀಪುತ್ರನು ವಾಸುದೇವನ ಮಾತಿಲ್ಲದೇ ಏನನ್ನೂ ಮಾಡಲಾರ. ಕೃಷ್ಣನು ಅವರಿಗೆ ಆತ್ಮದಷ್ಟೇ ಪ್ರಿಯನಾದವನು. ವಿಧ್ವಾಂಸನಾದ ಅವನು ನಿತ್ಯವೂ ಅವರ ಏಳ್ಗೆಯ ಕೆಲಸವನ್ನೇ ಮಾಡುತ್ತಾನೆ.
“ಪಾಂಡವರನ್ನು, ಸೃಂಜಯರನ್ನು, ಜನಾರ್ದನನನ್ನು, ಯುಯುಧಾನನನ್ನು, ವಿರಾಟನನ್ನು, ಮತ್ತು ಐವರು ದ್ರೌಪದೇಯರನ್ನೂ ಭೇಟಿಮಾಡಿ ನನ್ನ ಮಾತಿನಂತೆ ಕುಶಲವನ್ನು ಕೇಳು. ಅಲ್ಲಿ ಇನ್ನೂ ಇತರ ಕಾಲಕ್ಕೆ ತಕ್ಕಂತಹ, ಭಾರತರ ಹಿತವೆಂದೆನಿಸಿದ, ಅಸ್ವೀಕೃತಗೊಳ್ಳದ, ಯುದ್ಧವನ್ನು ಸೂಚಿಸದ ಎಲ್ಲವನ್ನೂ ರಾಜಮಧ್ಯದಲ್ಲಿ ಹೇಳು.”
ಉಪಪ್ಲವ್ಯಕ್ಕೆ ಸಂಜಯನ ಆಗಮನ
ರಾಜಾ ಧೃತರಾಷ್ಟ್ರನ ಮಾತನ್ನು ಕೇಳಿ ಸಂಜಯನು ಅಮಿತೌಜಸ ಪಾಂಡವರನ್ನು ಕಾಣಲು ಉಪಪ್ಲವ್ಯಕ್ಕೆ ಬಂದನು. ರಾಜಾ ಧರ್ಮಾತ್ಮ ಯುಧಿಷ್ಠಿರನ ಬಳಿಬಂದು ಮೊದಲಿಗೆ ನಮಸ್ಕರಿಸಿ ಸೂತಪುತ್ರನು ಮಾತನಾಡಿದನು. ಗಾವಲ್ಗಣಿ ಸೂತಸೂನು ಸಂಜಯನು ಅಜಾತಶತ್ರುವಿಗೆ ಸಂತೋಷದಿಂದ ಹೇಳಿದನು: “ರಾಜನ್! ಒಳ್ಳೆಯದಾಯಿತು ಮಹೇಂದ್ರ ಸಮನಾದವರ ಸಹಾಯವನ್ನು ಪಡೆದಿರುವ, ಆರೋಗ್ಯದಿಂದಿರುವ ನಿನ್ನನ್ನು ನೋಡುತ್ತಿದ್ದೇನೆ. ಅಂಬಿಕೇಯ, ವೃದ್ಧ ರಾಜಾ ಮನೀಷೀ ಧೃತರಾಷ್ಟ್ರನು ಪಾಂಡವಾಗ್ರಜನ, ಭೀಮನ, ಧನಂಜಯನ ಮತ್ತು ಮಾದ್ರೀಸುತರ ಕುಶಲವನ್ನು ಕೇಳುತ್ತಾನೆ. ಯಾರ ಕಾಮ-ಇಷ್ಟಗಳನ್ನು ನೀನು ಪೂರೈಸುತ್ತೀಯೋ ಆ ಕೃಷ್ಣೆ, ದ್ರೌಪದೀ, ಮನಸ್ವಿನೀ, ಸತ್ಯವ್ರತೆ, ವೀರಪತ್ನಿಯು ಕೂಡ ಪುತ್ರರೊಂದಿಗೆ ಚೆನ್ನಾಗಿದ್ದಾಳೆ ತಾನೇ?”
ಯುಧಿಷ್ಠಿರನು ಹೇಳಿದನು: “ಸಂಜಯ! ನಿನಗೆ ಸ್ವಾಗತ! ನಿನ್ನನ್ನು ನೋಡಿ ನಾವು ಸಂತೋಷಗೊಂಡಿದ್ದೇವೆ. ಹಿಂದಿರುಗಿ ನಿನ್ನ ಕುಶಲವನ್ನು ಕೇಳುತ್ತೇನೆ. ನಾನು ಅನುಜರೊಂದಿಗೆ ಕುಶಲನಾಗಿದ್ದೇನೆ ಎಂದು ತಿಳಿ. ಬಹಳ ಸಮಯದ ನಂತರ ಈಗ ಆ ಭಾರತ ಕುರುವೃದ್ಧ ರಾಜನ ಕುಶಲತೆಯ ಕುರಿತು ಕೇಳುತ್ತಿದ್ದೇನೆ. ನಿನ್ನನ್ನು ನೋಡಿ ಆ ನರೇಂದ್ರನನ್ನೇ ನೋಡಿದ್ದೇನೋ ಎನ್ನುವಷ್ಟು ಸಂತೋಷವಾಗುತ್ತಿದೆ. ಪಿತಾಮಹ, ಸ್ಥವಿರ, ಮನಸ್ವಿ, ಮಹಾಪ್ರಾಜ್ಞ, ಸರ್ವಧರ್ಮೋಪಪನ್ನ, ಕೌರವ್ಯ ಭೀಷ್ಮನು ಕುಶಲನಾಗಿದ್ದಾನೆ ತಾನೇ? ಮೊದಲಿನಂತೆಯೇ ಈಗಲೂ ವೃತ್ತಿಪರನಾಗಿದ್ದಾನೆಯೇ? ಮಹಾತ್ಮ ವೈಚಿತ್ರವೀರ್ಯ, ಮಹಾರಾಜ ಧೃತರಾಷ್ಟ್ರನು ಪುತ್ರರೊಂದಿಗೆ ಕುಶಲನಾಗಿದ್ದಾನೆಯೇ? ಮಹಾರಾಜ ಬಾಹ್ಲೀಕ, ಪ್ರತೀಪನ ಮಗ, ವಿದ್ವಾನನು ಕುಶಲನಾಗಿದ್ದಾನೆಯೇ? ಸೋಮದತ್ತನು ಕುಶಲನಾಗಿದ್ದಾನೆಯೇ? ಹಾಗೆಯೇ ಭೂರಿಶ್ರವ, ಸತ್ಯಸಂಧ, ಶಲ, ಮಹೇಷ್ವಾಸ ವಿಪ್ರರಾದ ದ್ರೋಣ, ಅವನ ಮಗ ಮತ್ತು ಕೃಪರು ಆರೋಗ್ಯದಿಂದಿದ್ದಾರೆ ತಾನೇ? ಮಹಾಪ್ರಾಜ್ಞರು, ಸರ್ವಶಾಸ್ತ್ರಾವದಾತರು, ಭೂಮಿಯಲ್ಲಿಯೇ ಧನುಭೃತರಲ್ಲಿ ಮುಖ್ಯತಮರು ಗೌರವವನ್ನು ಪಡೆಯುತ್ತಿದ್ದಾರೆಯೇ? ಈ ಧನುಭೃತರು ಆರೋಗ್ಯದಿಂದಾರಲ್ಲವೇ? ಇವರೆಲ್ಲರೂ ಕುರುಗಳಿಗೆ ಅಂಟಿಕೊಂಡಿದ್ದಾರೆ. ಪೃಥ್ವಿಯ ಧನುರ್ಧರ ಯುವಕರೆಲ್ಲಾ ಮತ್ತು ನೋಡಲು ಸುಂದರನಾದ ಮಹೇಷ್ವಾಸ ಶೀಲವಂತ ದ್ರೋಣಪುತ್ರನು ಅವರ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾರೆ. ವೈಶ್ಯಾಪುತ್ರ, ಮಹಾಪ್ರಾಜ್ಞ, ರಾಜಪುತ್ರ ಯುಯುತ್ಸುವು ಕುಶಲನಾಗಿದ್ದಾನೆಯೇ? ಮಂದ ಸುಯೋಧನ, ಮತ್ತು ಅವನಿಗೆ ವಿಧೇಯನಾಗಿರುವ ಅಮಾತ್ಯ ಕರ್ಣರು ಕುಶಲರಾಗಿದ್ದಾರೆಯೇ? ಭಾರತರ ವೃದ್ಧ ಸ್ತ್ರೀಯರು, ಜನನಿಯರು, ಅಡುಗೆಮನೆಯ ದಾಸಿಯರು, ಭಾರ್ಯೆಯರ ದಾಸಿಯರು, ಸೊಸೆಯಂದಿರು, ಮಕ್ಕಳು, ಸಹೋದರಿಯರು, ಸಹೋದರಿಯರ ಮಕ್ಕಳು, ಮತ್ತು ಮಗಳ ಮಕ್ಕಳು ಆರೋಗ್ಯದಿಂದ ಇದ್ದಾರೆಯೇ? ಹಿಂದಿನಂತೆ ರಾಜನು ಬ್ರಾಹ್ಮಣರ ವೃತ್ತಿಯನ್ನು ಯಥಾವತ್ತಾಗಿ ಮಾಡಲು ಬಿಡುತ್ತಾನೆಯೇ? ನನ್ನ ದಾಯಾದಿಗಳಾದ ಧಾರ್ತರಾಷ್ಟ್ರರು ದ್ವಿಜಾತಿಯವರಿಗೆ ನಾನು ನೀಡಿದ್ದ ದಾನಗಳನ್ನು ಕಸಿದುಕೊಂಡಿಲ್ಲ ತಾನೇ? ರಾಜ ಧೃತರಾಷ್ಟ್ರನು ಪುತ್ರರು ಬ್ರಾಹ್ಮಣರನ್ನು ಅತಿಕ್ರಮಿಸುವುದನ್ನು ಉಪೇಕ್ಷಿಸುತ್ತಾನೆ ತಾನೇ? ಅವರಲ್ಲಿ ಆ ನ್ಯೂನವೃತ್ತಿಯನ್ನು ಉಪೇಕ್ಷಿಸಬೇಕು. ಎಕೆಂದರೆ ಇದು ಸ್ವರ್ಗಕ್ಕಿರುವ ಒಂದೇ ಮಾರ್ಗ. ಇದೇ ಜೀವಲೋಕದಲ್ಲಿ ವಿಧಾತ್ರನು ಪ್ರಜೆಗಳಿಗೆ ವಿಹಿಸಿರುವ ಉತ್ತಮ ಶ್ವೇತವರ್ಣದ ಜ್ಯೋತಿ. ಆ ಮಂದರು ಅವರನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಕೌರವರ ಸರ್ವನಾಶವಾಗುತ್ತದೆ. ರಾಜಾ ಧೃತರಾಷ್ಟ್ರನು ಪುತ್ರರೊಡನೆ ಅಮಾತ್ಯವರ್ಗಕ್ಕೆ ವೃತ್ತಿವೇತನವನ್ನು ಕೊಡುತ್ತಿದ್ದಾನೆಯೇ? ಅಮಿತ್ರರು ಸುಹೃದಯರಂತೆ ವೇಷಧರಿಸಿ ಅವರಲ್ಲಿ ಭೇದವನ್ನು ತರುವ ಶತ್ರುಗಳ್ಯಾರೂ ಅವರಿಗಿಲ್ಲ ತಾನೇ? ಕೌರವರೆಲ್ಲರೂ ಪಾಂಡವರ ಪಾಪಗಳ ಕುರಿತು ಮಾತನಾಡಿಕೊಳ್ಳುವುದಿಲ್ಲ ತಾನೇ?
“ದಸ್ಯುಗಳ ದಂಡನ್ನು ನೋಡಿದಾಗ ಅವರು ಯುದ್ಧದಲ್ಲಿ ಪ್ರಣೀತನಾದ ಪಾರ್ಥನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ? ಭುಜದ ಮೇಲೇರಿಸಿ ಗಾಂಡೀವ ಧನುಸ್ಸಿನಿಂದ ಬಿಟ್ಟ, ಗಾಳಿಯಲ್ಲಿ ನೇರವಾಗಿ, ಗುಡುಗಿನಂತೆ ಮೊಳಗುತ್ತ ಸಾಗುವ ಬಾಣಗಳನ್ನು ಅವರು ಸ್ಮರಿಸಿಕೊಳ್ಳುತ್ತಾರೆ ತಾನೇ? ಒಂದೇ ಒಂದು ಹಸ್ತ ಚಳಕದಲ್ಲಿ ಅರವತ್ತೊಂದು ಖಡ್ಗಗಳಂತೆ ತೀಕ್ಷ್ಣ, ಗರಿಗಳುಳ್ಳ, ಹರಿತ ಬಾಣಗಳನ್ನು ಒಟ್ಟಿಗೇ ಬಿಡಬಲ್ಲ ಅರ್ಜುನನ್ನು ಹೋಲುವ ಅಥವಾ ಮೀರಿಸುವವರನ್ನು ಈ ಭೂಮಿಯಲ್ಲಿ ನಾನು ನೋಡಿಲ್ಲ ಅಥವಾ ಕೇಳಿಲ್ಲ. ವ್ಯೂಹಗಳಲ್ಲಿ ರಚಿತಗೊಂಡ ಶತ್ರುಸಂಘಗಳನ್ನು ಭಯದಿಂದ ಕಂಪಿಸುವಂತೆ ಮಾಡುವ, ಕಪಾಲಗಳು ಒಡೆದ ಆನೆಯಂತೆ ಸಂಚರಿಸುವ ಗದಾಪಾಣೀ, ತರಸ್ವೀ ಭೀಮಸೇನನನ್ನು ಅವರು ಸ್ಮರಿಸಿಕೊಳ್ಳುತ್ತಾರೆ ತಾನೇ? ಎಡ ಮತ್ತು ಬಲಗೈ ಎರಡರಿಂದಲೂ ಬಾಣಗಳನ್ನು ಪ್ರಯೋಗಿಸುತ್ತಾ ದಂತಕೂರದಲ್ಲಿ ಸೇರಿದ್ದ ಕಲಿಂಗರನ್ನು ಜಯಿಸಿದ ಮಾದ್ರೀಪುತ್ರ, ಮಹಾಬಲಿ, ಸಹದೇವನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ? ನೀನು ನೋಡುತ್ತಿದ್ದಂತೇ ಪೂರ್ವದಿಕ್ಕಿಗೆ ಕಳುಹಿಸಲ್ಪಟ್ಟ, ಮತ್ತು ನನಗಾಗಿ ಪೂರ್ವದಿಕ್ಕನ್ನು ವಶಪಡಿಸಿಕೊಂಡು ಬಂದ ಮಾದ್ರೀಸುತ ನಕುಲನನ್ನು ಸ್ಮರಿಸಿಕೊಳ್ಳುತ್ತಾರೆ ತಾನೇ? ಕೆಟ್ಟದಾಗಿ ಆಲೋಚಿಸಿ ಘೋಷಯಾತ್ರೆಗೆಂದು ದ್ವೈತವನಕ್ಕೆ ಬಂದಾಗ ಅಲ್ಲಿ ಆ ಮಂದಬುದ್ಧಿಯವರು ಶತ್ರುಗಳ ವಶವಾದಾಗ ಭೀಮಸೇನ ಮತ್ತು ಜಯರು ಅವರನ್ನು ಬಿಡುಗಡೆಗೊಳಿಸಿದ್ದುದನ್ನು, ನಾನು ಅರ್ಜುನನನ್ನು ಹಿಂಬಾಲಿಸಿ, ಮಾದ್ರೀಪುತ್ರರು ಭೀಮಸೇನನ ರಥಚಕ್ರವನ್ನು ರಕ್ಷಿಸಿದುದನ್ನು, ಗಾಂಡೀವಧರನು ಶತ್ರುಸಂಘಗಳನ್ನು ನಾಶಪಡಿಸಿ ಏನೂ ತೊಂದರೆಗೊಳಗಾಗದೇ ಹಿಂದಿರುಗಿ ಬಂದಿದ್ದುದನ್ನು ಅವರು ನೆನಪಿಸಿಕೊಳ್ಳುತ್ತಾರೆಯೇ? ನಮ್ಮೆಲ್ಲರ ಆತ್ಮಗಳಿಂದಲೂ ನಾವು ಧೃತರಾಷ್ಟ್ರ ಪುತ್ರನನ್ನು ಗೆಲ್ಲಲು ಶಕ್ಯರಾಗಿಲ್ಲದಿರುವಾಗ ಒಂದೇ ಒಂದು ಒಳ್ಳೆಯ ಕೆಲಸದಿಂದ ಇದನ್ನು ಮಾಡಲು ಸಾದ್ಯವಿಲ್ಲ.”
ಸಂಜಯನು ಧೃತರಾಷ್ಟ್ರನ ಸಂದೇಶವನ್ನು ಹೇಳಿದುದು
ಸಂಜಯನು ಹೇಳಿದನು: “ಪಾಂಡವ! ನೀನು ಹೇಳಿದಂತೆಯೇ ಇದೆ. ಕುರುಗಳ ಮತ್ತು ಕುರುಶ್ರೇಷ್ಠ ಜನರ ಕುಶಲವನ್ನು ಕೇಳುತ್ತಿದ್ದೀಯಲ್ಲ. ಯಾವ ಕುರುಶ್ರೇಷ್ಠರ ಕುರಿತು ನೀನು ಕೇಳುತ್ತಿದ್ದೀಯೋ ಅವರು ಅನಾಮಯರಾಗಿದ್ದಾರೆ. ಧಾರ್ತರಾಷ್ಟ್ರನ ಬಳಿ ಸಂತರೂ, ವೃದ್ಧರೂ ಮತ್ತು ಪಾಪಿಗಳೂ ಇದ್ದಾರೆಂದು ತಿಳಿ. ಧಾರ್ತರಾಷ್ಟ್ರನು ರಿಪುಗಳಿಗೂ ಕೊಡುತ್ತಾನೆ. ಹಾಗಿರುವಾಗ ಬ್ರಾಹ್ಮಣರಿಗೆ ಕೊಟ್ಟಿದ್ದುದನ್ನು ಹೇಗೆ ತಾನೇ ಕಸಿದುಕೊಳ್ಳುತ್ತಾನೆ?
“ನಿಮ್ಮ ಈ ನಡವಳಿಕೆಯು ಧರ್ಮಯುತವಾದುದಲ್ಲ. ನಿಮಗೆ ಕೆಟ್ಟದ್ದನ್ನು ಬಯಸದೇ ಇರುವವರ ಮೇಲೂ ಹಗೆತನವನ್ನು ಸಾಧಿಸುವುದು ಒಳ್ಳೆಯದಲ್ಲ. ಪುತ್ರರೊಂದಿಗೆ ಧೃತರಾಷ್ಟ್ರನು ಸಾಧುನಡತೆಯುಳ್ಳ ನಿಮ್ಮೊಂದಿಗೆ ದ್ವೇಷಿಗಳಂತೆ ನಡೆದುಕೊಳ್ಳುವುದು ಸಾಧುವಲ್ಲ. ಇದು ಮಿತ್ರರೊಡನೆ ಹಗೆಸಾಧಿಸಿದಂತೆ. ಅವನು ಈ ರೀತಿ ಕಾಡಿಸುವುದನ್ನು ಒಪ್ಪಿಕೊಳ್ಳುವುದಿಲ್ಲ. ಆಗಿದ್ದುದಕ್ಕೆ ಅತ್ಯಂತ ದುಃಖಿತನಾಗಿದ್ದಾನೆ. ಮಿತ್ರದ್ರೋಹವು ಎಲ್ಲ ಪಾಪಗಳಿಗಿಂತಲೂ ಹೆಚ್ಚಿನದು ಎಂದು ಬ್ರಾಹ್ಮಣರು ಸೇರಿ ಅವನಿಗೆ ಹೇಳಿದ್ದಾರೆ.
“ಯುದ್ಧಕ್ಕೆ ಸೇರಿದಾಗ ನಿನ್ನನ್ನು ಮತ್ತು ಯೋಧರ ನಾಯಕನಾದ ಜಿಷ್ಣುವನ್ನು ನೆನಪಿಸಿಕೊಳ್ಳುತ್ತಾರೆ. ಶಂಖ ಮತ್ತು ದುಂಧುಭಿಗಳ ಶಬ್ದವು ಕೇಳಿದಾಗಲೆಲ್ಲ ಗದಾಪಾಣಿ ಭೀಮಸೇನನನ್ನು ಸ್ಮರಿಸಿಕೊಳ್ಳುತ್ತಾರೆ. ರಣದ ಮಧ್ಯದಲ್ಲಿ ಎಲ್ಲ ದಿಕ್ಕುಗಳಲ್ಲಿಯೂ ಹೋಗಬಲ್ಲ, ಶತ್ರುಸೇನೆಯ ಮೇಲೆ ಒಂದೇಸಮನೆ ಶರಗಳ ಮಳೆಯನ್ನು ಸುರಿಸುವ, ಸಮರದಲ್ಲಿ ಇತರರನ್ನು ನಡುಗಿಸಬಲ್ಲ, ಮಹಾರಥಿ ಮಾದ್ರೀ ಸುತರಿಬ್ಬರನ್ನೂ ಎಲ್ಲರೂ ಸ್ಮರಿಸಿಕೊಳ್ಳುತ್ತಾರೆ.
“ಪುರುಷನಿಗೆ ಭವಿಷ್ಯದಲ್ಲಿ ಏನು ಬರುತ್ತದೆಯೋ ಎಂದು ತಿಳಿಯವುದು ಕಷ್ಟ. ಪಾಂಡವ! ಸರ್ವಧರ್ಮೋಪನ್ನನಾದ ನೀನೂ ಕೂಡ ಸಹಿಸಲಾಧ್ಯವಾದ ಕಷ್ಟಗಳನ್ನು ಪಡೆದೆ. ಪ್ರಜ್ಞೆಯಿಂದ ನೀನೇ ಆದ ಇವೆಲ್ಲವನ್ನೂ ಸರಿಪಡೆಸಿಕೊಳುತ್ತೀಯೆ ಎನ್ನುವುದು ಖಂಡಿತ. ಇಂದ್ರಸಮರಾದ ಪಾಂಡುವಿನ ಮಕ್ಕಳು ಕಾಮಕ್ಕಾಗಿ ಧರ್ಮವನ್ನು ಎಂದೂ ತ್ಯಜಿಸುವುದಿಲ್ಲ. ಪ್ರಜ್ಞೆಯಿಂದಲೇ ನೀನು ಧಾರ್ತರಾಷ್ಟ್ರರು, ಪಾಂಡವರು, ಸೃಂಜಯರು ಮತ್ತು ಇಲ್ಲಿ ಸೇರಿರುವ ಇತರ ರಾಜರೂ ಕೂಡ ಶಾಂತಿಯನ್ನು ಹೊಂದುವಂತೆ ಮಾಡುತ್ತೀಯೆ. ನಿನ್ನ ತಂದೆ ಧೃತರಾಷ್ಟ್ರನ ಮಾತನ್ನು ನಾನು ಹೇಳಿದ್ದೇನೆ. ಅವನು ಅಮಾತ್ಯರೊಡನೆ ಮತ್ತು ಮಕ್ಕಳೊಂದಿಗೆ ವಿಚಾರಿಸಿ ನನಗೆ ಈ ಮಾತುಗಳನ್ನು ತಿಳಿಸಿದ್ದಾನೆ.”
ಯುಧಿಷ್ಠಿರನು ಹೇಳಿದನು: “ಗಾವಲ್ಗಣೇ! ಪಾಂಡವರು, ಸೃಂಜಯರು, ಜನಾರ್ದನ, ಯುಯುಧಾನ, ವಿರಾಟರು ಇಲ್ಲಿ ಸೇರಿದ್ದಾರೆ. ಧೃತರಾಷ್ಟ್ರನು ನಿನಗೆ ಏನು ಹೇಳಿ ಕಳುಹಿಸಿದ್ದಾನೋ ಅದನ್ನು ಹೇಳು.”
ಸಂಜಯನು ಹೇಳಿದನು: “ಅಜಾತಶತ್ರು, ವೃಕೋದರ, ಧನಂಜಯ, ಮಾದ್ರೀ ಸುತರು, ಶೌರಿ ವಾಸುದೇವ, ಯುಯುಧಾನ, ಚೇಕಿತಾನ, ವಿರಾಟ, ಪಾಂಚಾಲರ ವೃದ್ಧ ಅಧಿಪತಿ, ಪಾರ್ಷತ ಧೃಷ್ಟದ್ಯುಮ್ನ, ಮತ್ತು ಯಾಜ್ಞಸೇನಿ ಎಲ್ಲರಿಗೂ, ಕುರುಗಳ ಒಳ್ಳೆಯದನ್ನೇ ಬಯಸಿ ಹೇಳುವ, ನನ್ನ ಈ ಮಾತುಗಳನ್ನು ಕೇಳಲು ಆಮಂತ್ರಿಸುತ್ತೇನೆ. ಶಾಂತಿಯನ್ನು ಸ್ವಾಗತಿಸುತ್ತಾ ರಾಜಾ ಧೃತರಾಷ್ಟ್ರನು ಅವಸರ ಮಾಡಿ ನನ್ನ ರಥವನ್ನು ಆಯೋಜಿಸಿದನು. ಭ್ರಾತೃಗಳೊಂದಿಗೆ, ಪುತ್ರರೊಂದಿಗೆ, ಮತ್ತು ಸ್ವಜನ ರಾಜರೊಂದಿಗೆ ಪಾಂಡವರಿಗೆ ಶಾಂತಿಯೇ ಬೇಕೆಂದೆನಿಸಲಿ. ಪಾರ್ಥರು ಸರ್ವಧರ್ಮಗಳಿಂದ ಸಮೋಪೇತರಾಗಿದ್ದಾರೆ. ನಡತೆಯಲ್ಲಿ ಮಾರ್ದವವಿದೆ. ಆರ್ಜವವಿದೆ. ಉತ್ತಮ ಕುಲದಲ್ಲಿ ಜನಿಸಿದ್ದಾರೆ. ಸುಳ್ಳನ್ನೇ ಆಡುವುದಿಲ್ಲ. ನಾಚಿಕೆಯನ್ನು ತರುವ ಕರ್ಮಗಳನ್ನು ನಿಶ್ಚಯವಾಗಿಯೂ ನಿಷೇಧಿಸುತ್ತಾರೆ. ನೀವು ಹೀನ ಕರ್ಮಗಳಲ್ಲಿ ತೊಡಗುವುದಿಲ್ಲ. ಸತ್ವಯುತರಾದ ನಿಮಗೆ ಭಯಂಕರ ಸೇನೆಗಳ ಬೆಂಬಲವಿದೆ. ನೀವು ಏನಾದರೂ ಪಾಪಕೃತ್ಯವನ್ನೆಸಗಿದರೆ ಅದು ಬಿಳೀ ಬಟ್ಟೆಯ ಮೇಲೆ ಬಿದ್ದ ಕಾಡಿಗೆಯಂತೆ ನಿಮ್ಮ ಶುದ್ಧ ಹೆಸರಿಗೆ ಕಳಂಕವನ್ನು ತರುತ್ತದೆ. ತಿಳಿದೂ ಯಾರುತಾನೇ ಸರ್ವವೂ ಕ್ಷಯವಾಗುವುದನ್ನು ನೋಡಲು ಪ್ರಜೆಗಳೆಲ್ಲರನ್ನೂ ನಾಶಪಡಿಸಬಲ್ಲ, ಪಾಪಕಾರ್ಯವನ್ನು ಮಾಡಲು ತೊಡಗುತ್ತಾನೆ?
“ಜ್ಞಾತಿಕಾರ್ಯವನ್ನು ಮಾಡುವವರೇ ಧನ್ಯರು. ತಮ್ಮ ಉಪಕೃಷ್ಟ ಜೀವಿತವನ್ನು ತ್ಯಜಿಸಲು ಸಿದ್ಧರಾಗಿರುವ ಅವರೇ ಕುರುಗಳಿಗೆ ನಿಯತರಾದ ನಿಜವಾದ ಪುತ್ರರು, ಸುಹೃದಯರು ಮತ್ತು ಬಾಂಧವರು. ಒಂದುವೇಳೆ ನೀವು ಪಾರ್ಥರು ನಿಮ್ಮ ದ್ವೇಷಿಗಳನ್ನು ಸೋಲಿಸಿ ಕೊಂದು ಕುರುಗಳನ್ನು ಆಳಿದರೆ ಅನಂತರದ ನಿಮ್ಮ ಜೀವನವು ಮೃತ್ಯುವಿನಂತೆಯೇ ಇರುವುದಿಲ್ಲವೇ? ಜ್ಞಾತಿವಧೆಯನ್ನು ಮಾಡಿ ನಂತರದ ಜೀವನವು ಸಾಧುವಾಗಿರುವುದಿಲ್ಲ. ಯಾರುತಾನೇ - ಅವನು ದೇವತೆಗಳನ್ನೆಲ್ಲ ಸಚಿವರನ್ನಾಗಿಸಿಕೊಂಡ ಇಂದ್ರನೇ ಆಗಿದ್ದರೂ - ಕೇಶವ, ಚೇಕಿತಾನ, ಸಾತ್ಯಕಿ, ಪಾರ್ಷತರ ಬಾಹುಗಳಿಂದ ರಕ್ಷಿಸಲ್ಪಟ್ಟ ನಿಮ್ಮನ್ನು ಸೋಲಿಸಲು ಶಕ್ಯರು? ಹಾಗೆಯೇ ದ್ರೋಣ, ಭೀಷ್ಮ, ಅಶ್ವತ್ಥಾಮ, ಶಲ್ಯ, ಕೃಪ, ಕರ್ಣ ಮತ್ತು ಇತರ ಭೂಮಿಪಾಲರಿಂದ ರಕ್ಷಿತರಾದ ಕುರುಗಳನ್ನು ಯಾರುತಾನೇ ಸೋಲಿಸಬಲ್ಲರು? ತನಗೆ ನಷ್ಟಮಾಡಿಕೊಳ್ಳದೇ ಯಾರುತಾನೇ ರಾಜಾ ಧಾರ್ತರಾಷ್ಟ್ರನ ಮಹಾ ಸೇನೆಯನ್ನು ಸಂಹರಿಸಲು ಶಕ್ತ? ಆದುದರಿಂದ ನಾನು ಜಯದಲ್ಲಿಯಾಗಲೀ ಪರಾಜಯದಲ್ಲಿಯಾಗಲೀ ಶ್ರೇಯಸ್ಸನ್ನು ಕಾಣುತ್ತಿಲ್ಲ. ದುಷ್ಕುಲದಲ್ಲಿ ಹುಟ್ಟಿದವರು ಮಾಡುವಂಥಹ ನೀಚ ಮತ್ತು ಅಧರ್ಮಯುಕ್ತ ಕೆಲಸವನ್ನು ಹೇಗೆ ತಾನೇ ಪಾರ್ಥರು ಮಾಡಬಲ್ಲರು? ಆದುದರಿಂದ ವಾಸುದೇವ ಮತ್ತು ಪಾಂಚಾಲರ ಅಧಿಪ ವೃದ್ಧರನ್ನು ಕರುಣೆಗಾಗಿ ನಮಸ್ಕರಿಸುತ್ತೇನೆ. ಕೈಮುಗಿದು ಶರಣು ಬಿದ್ದು ಕೇಳಿಕೊಳ್ಳುತ್ತಿದ್ದೇನೆ. ಕುರು ಮತ್ತು ಸೃಂಜಯರು ಹೇಗೆ ಚೆನ್ನಾಗಿರಬಹುದು? ನಿನ್ನ ಮಾತಿಗೆ ಅತಿರಿಕ್ತವಾಗಿ ವಾಸುದೇವನಾಗಲೀ ಧನಂಜಯನಾಗಲೀ ನಡೆದುಕೊಳ್ಳುವುದಿಲ್ಲ. ಕೇಳಿದರೆ ಅವರಿಬ್ಬರೂ ಪ್ರಾಣಗಳನ್ನೂ ಕೊಡುತ್ತಾರೆ. ಅನ್ಯಥಾ ಮಾಡುವುದಿಲ್ಲ. ಇದನ್ನು ತಿಳಿದೇ ಸಾಧನೆಗೊಳ್ಳಲೆಂದು ಹೇಳುತ್ತಿದ್ದೇನೆ. ಇದು ರಾಜ ಮತ್ತು ಭೀಷ್ಮನೇ ಮೊದಲಾದವರ ಉತ್ತಮ ಶಾಂತಿಯನ್ನು ತರುವ ಮತ.”
ಯುಧಿಷ್ಠಿರ ವಾಕ್ಯ
ಯುಧಿಷ್ಠಿರನು ಹೇಳಿದನು: “ಸಂಜಯ! ನಾನಾಡಿದ ಯಾವ ಮಾತನ್ನು ಕೇಳಿ ನಾವು ಯುದ್ಧವನ್ನು ಬಯಸುತ್ತೇವೆ ಎಂದು ತಿಳಿದು ಯುದ್ಧದ ಭಯವಾಗಿದೆ? ಯುದ್ಧಕ್ಕಿಂತ ಅಯುದ್ಧವು ದೊಡ್ಡದು. ಬೇರೆ ದಾರಿಗಳಿರುವಾಗ ಯುದ್ಧವನ್ನು ಯಾರುತಾನೇ ಆರಿಸಿಕೊಳ್ಳುವರು? ಮನಸ್ಸಿನಲ್ಲಿ ಸಂಕಲ್ಪಿಸಿದುದು ಮತ್ತು ಬಯಸಿದುದೆಲ್ಲಾ ಏನನ್ನೂ ಮಾಡದೇ ಸಿದ್ಧಿಗಳಾಗುತ್ತವೆ ಎಂದಾದರೆ ಪುರುಷನು ಎಷ್ಟೇ ಲಘುವಾಗಿರಲಿ ಕರ್ಮಗಳನ್ನೇ ಮಾಡುವುದಿಲ್ಲ. ಇನ್ನು ಯುದ್ಧ ಮಾಡುವುದು ದೂರದ ಮಾತು ಎಂದು ನನಗೆ ತಿಳಿದಿದೆ. ಮನುಷ್ಯನು ಏಕೆ ತಾನೇ ಯುದ್ಧಕ್ಕೆ ಹೋಗುತ್ತಾನೆ? ದೇವತೆಗಳಿಂದ ಶಪಿಸಲ್ಪಟ್ಟವನು ಮಾತ್ರ ಯುದ್ಧಕ್ಕೆ ಹೋಗುತ್ತಾನೆಯೇ? ಸುಖವನ್ನು ಬಯಸಿ ಪಾರ್ಥರು, ಧರ್ಮಯುಕ್ತವಾದ, ಲೋಕಕ್ಕೆ ಒಳಿತಾಗುವ ಕರ್ಮಗಳನ್ನು ಮಾಡುತ್ತಾರೆ. ಪ್ರಶಂಸಮಾನ ಕರ್ಮಗಳಿಂದ ದೊರಕುವ ಸುಖವನ್ನು ಮಾತ್ರ ಬಯಸುತ್ತಾರೆ. ಸುಖವನ್ನಿರಸಿ ಮತ್ತು ದುಃಖವನ್ನು ದೂರವಿಡಲು ಇಂದ್ರಿಯಗಳ ಸುಖವನ್ನು ಹಿಂಬಾಲಿಸಿ ಹೋಗುವವನು ನಿಜವಾಗಿಯೂ ದುಃಖವಲ್ಲದೆ ಬೇರೆ ಏನನ್ನೂ ಕೊಡದ ಕರ್ಮದಲ್ಲಿ ತೊಡಗುತ್ತಾನೆ. ಕಾಮವನ್ನರಸಿ ಹೋಗುವವನು ಸ್ವಶರೀರವನ್ನು ದುಃಖಿಸುತ್ತಾನೆ. ಅದರಂತೆ ಮಾಡದವನು ದುಃಖವೇನೆಂಬುದನ್ನೇ ಅರಿಯನು. ಉರಿಯತ್ತಿರುವ ಬೆಂಕಿಯ ತೇಜಸ್ಸು ಸಮಿದ್ಧೆಗಳಿಂದ ಹೇಗೆ ಬಲಗೊಳ್ಳುತ್ತದೆಯೋ ಹಾಗೆ ಅರ್ಥಲಾಭದಿಂದ ಕಾಮವು ತುಪ್ಪವನ್ನು ಸುರಿದ ಬೆಂಕಿಯಂತೆ ಹೆಚ್ಚಾಗುತ್ತದೆಯೇ ಹೊರತು ತೃಪ್ತಿಗೊಳ್ಳುವುದಿಲ್ಲ.
“ರಾಜಾ ಧೃತರಾಷ್ಟ್ರನ ಮಹಾ ಭೋಗವಸ್ತು ಸಂಗ್ರಹಗಳನ್ನು ನಮ್ಮಲ್ಲಿರುವುದಕ್ಕೆ ಹೋಲಿಸಿ ನೋಡು! ಅಶ್ರೇಯಸನು ಯುದ್ಧಗಳನ್ನು ಗೆಲ್ಲುವುದಿಲ್ಲ. ಅಶ್ರೇಯಸನು ಗೀತಶಬ್ಧಗಳನ್ನು ಕೇಳುವುದಿಲ್ಲ. ಅಶ್ರೇಯಸನು ಮಾಲೆ ಗಂಧಗಳನ್ನು ಸೇವಿಸುವುದಿಲ್ಲ. ಅಶ್ರೇಯಸನು ಲೇಪನಾದಿಗಳನ್ನೂ ಬಳಸುವುದಿಲ್ಲ. ಅವನು ಉತ್ತಮವಲ್ಲದ ವಸ್ತ್ರಗಳನ್ನೂ ಉಡುವುದಿಲ್ಲ. ಹಾಗಿದ್ದರೆ ಅವನು ನಮ್ಮನ್ನು ಏಕೆ ಕುರುಗಳಿಂದ ಹೊರಗಟ್ಟಿದ? ನಮ್ಮನ್ನು ಆಗಾಗ ಕಷ್ಟಗಳಿಗೊಳಪಡೆಸಿದರೂ ಅವನ ಶರೀರದ ಹೃದಯವು ಕಾಮದಿಂದ ಸುಡುತ್ತಿದೆ. ಸ್ವಯಂ ವಿಷಮಸ್ಥನಾಗಿರುವ ರಾಜನು ಇತರರಿಂದ ಸಾಮಸ್ಥವನ್ನು ಇಚ್ಛಿಸುವುದು ಸಾಧುವಲ್ಲ. ಅವರೊಂದಿಗೆ ತಾನು ನಡೆದುಕೊಳ್ಳುವುದನ್ನು ಹೇಗೆ ನೋಡುತ್ತಾನೋ ಹಾಗೆಯೇ ಇತರರಿಂದಲೂ ಪಡೆಯುತ್ತಾನೆ. ಛಳಿಗಾಲದ ಕೊನೆಯಲ್ಲಿ, ಬೇಸಗೆಯ ಬಿಸಿಲಿನಲ್ಲಿ ಹತ್ತಿರದ ಒಣಗಿದ ಮರಗಳ ದಟ್ಟಾರಣ್ಯಕ್ಕೆ ಬೆಂಕಿಯನ್ನು ಹಚ್ಚಿಸಿ, ಗಾಳಿಯಲ್ಲಿ ಅದು ಜೋರಾಗಿ ಉರಿಯಲು ಅದರಿಂದ ತಪ್ಪಿಸಿಕೊಳ್ಳುವಾಗ ಖಂಡಿತವಾಗಿಯೂ ದುಃಖವನ್ನು ಅನುಭವಿಸುತ್ತಾನೆ. ಐಶ್ವರ್ಯವನ್ನು ಪಡೆದಿರುವ ರಾಜಾ ಧೃತರಾಷ್ಟ್ರನು ಇಂದು ವಿಲಪಿಸುತ್ತಿದ್ದಾನೆ - ಯಾವ ಕಾರಣಕ್ಕಾಗಿ? ಮೋಸದಲ್ಲಿ ನಿರತನಾಗಿರುವ ಆ ದುರ್ಬುದ್ಧಿ, ಮಂದ ಮಗನ ಮೂಢ ಸಲಹೆಯನ್ನು ತೆಗೆದುಕೊಂಡಿದ್ದುದಕ್ಕೆ ಅಲ್ಲವೇ? ಸುಯೋಧನನು ಆಪ್ತರಲ್ಲಿಯೇ ಅತ್ಯುತ್ತಮನಾದ ವಿದುರನ ಮಾತನ್ನು ಅನಾಪ್ತವೆಂದು ಸ್ವೀಕರಿಸಲಿಲ್ಲ. ಮಗನ ಪ್ರಿಯೈಷಿಯಾದ ರಾಜಾ ಧೃತರಾಷ್ಟ್ರನು, ತಿಳಿದೂ ಅಧರ್ಮದ ಜೊತೆಗೇ ಹೋದನು. ಪುತ್ರಕಾಮದಿಂದ ರಾಜಾ ಧೃತರಾಷ್ಟ್ರನು ಕುರುಗಳಲ್ಲಿಯೇ ಮೇಧಾವಿಯಾದ, ಕುರುಗಳ ಒಳಿತನ್ನೇ ಬಯಸುವ, ಬಹುಶ್ರುತ, ವಾಗ್ಮಿ ಶೀಲವಂತ ವಿದುರನ ಮಾತನ್ನು ನೆನಪಿಸಿಕೊಳ್ಳಲಿಲ್ಲ. ಮಾನಘ್ನ, ಆತ್ಮಕಾಮಿ, ಹೊಟ್ಟೆಕಿಚ್ಚಿನ, ದುಗುಡುಸ್ವಭಾವದ, ಅರ್ಥ-ಧರ್ಮಗಳನ್ನು ಮೀರಿ ನಡೆಯುವ, ದುರ್ಭಾಷಿಣೀ, ಸಿಟ್ಟಿಗೆ ವಶನಾಗುವ, ಕಾಮಾತ್ಮ, ಹೃದಯದಲ್ಲಿ ಕೆಟ್ಟ ಭಾವನೆಯನ್ನಿಟ್ಟುಕೊಳ್ಳುವ, ಅನೇಯ. ಅಶ್ರೇಯಸ, ದೀರ್ಘಕಾಲದವರೆಗೆ ಸಿಟ್ಟನ್ನು ಇಟ್ಟುಕೊಳ್ಳುವ, ಮಿತ್ರದ್ರೋಹಿ, ಪಾಪಬುದ್ಧಿ ಮಗನ ಪ್ರಿಯೈಷಿಯಾದ ರಾಜಾ ಧೃತರಾಷ್ಟ್ರನು ಕಾಣುತ್ತಿದ್ದರೂ ಧರ್ಮಕಾಮಗಳನ್ನು ಬಿಸಾಡಿದನು. ಜೂಜನ್ನು ಆಡುವಾಗಲೇ ನಾನು ಕುರುಗಳಿಗೆ ಬರಬಾರದ ಆಪತ್ತು ಬರದಿರಲಿ ಎಂದು ಬಯಸಿದ್ದೆ. ವಿದುರನು ಆ ಋಷಿಗಳ ಮಾತುಗಳನ್ನಾಡುವಾಗ ಧೃತರಾಷ್ಟ್ರನಿಂದ ಪ್ರಶಂಸೆಯನ್ನು ಪಡೆಯಲಿಲ್ಲ. ಯಾವಾಗ ಕ್ಷತ್ತನ ಬುದ್ಧಿಯನ್ನು ಅನುಸರಿಸಲಿಲ್ಲವೋ ಆಗ ಕಷ್ಟಗಳು ಕುರುಗಳನ್ನು ಮೀರಿಸಿದವು. ಯಾವಾಗ ಅವನ ಪ್ರಜ್ಞೆಯನ್ನು ಅನುಸರಿಸುತ್ತಿದ್ದರೋ ಆಗ ರಾಷ್ಟ್ರವು ಅಭಿವೃದ್ಧಿಯನ್ನು ಹೊಂದಿತ್ತು. ಆ ಅರ್ಥಲುಬ್ಧ ಧಾರ್ತರಾಷ್ಟ್ರನ ಮಂತ್ರಿಗಳ್ಯಾರೆಂದು ನನ್ನಿಂದ ಕೇಳು: ದುಃಶಾಸನ, ಶಕುನಿ, ಮತ್ತು ಸೂತಪುತ್ರ. ಈ ಸಮ್ಮೋಹವನ್ನು ನೋಡು!
“ಇನ್ನೊಬ್ಬರ ಐಶ್ವರ್ಯವನ್ನು ಧೃತರಾಷ್ಟ್ರನು ತನ್ನದಾಗಿಸಿಕೊಂಡಿರುವಾಗ ಮತ್ತು ದೀರ್ಘದೃಷ್ಟಿ ವಿದುರನನ್ನು ದೂರವಿಟ್ಟಿರುವಾಗ ಕುರು ಮತ್ತು ಸೃಂಜಯರಿಗೆ ಹೇಗೆ ಒಳ್ಳೆಯದಾಗುತ್ತದೆ ಎನ್ನುವುದು ಪರೀಕ್ಷಿಸಿದರೂ ನನಗೆ ಕಾಣುವುದಿಲ್ಲ. ಮಗನೊಂದಿಗೆ ಧೃತರಾಷ್ಟ್ರನು ಭೂಮಿಯಲ್ಲಿಯೇ ಎದುರಾಳಿಗಳಿಲ್ಲದ ಮಹಾರಾಜ್ಯವನ್ನು ಬಯಸುತ್ತಿದ್ದಾನೆ. ಆದುದರಿಂದ ಶಾಂತಿಯು ದೊರೆಯುವುದಿಲ್ಲ. ಅವನಲ್ಲಿರುವುದೆಲ್ಲವೂ ತನ್ನದೇ ಎಂದು ತಿಳಿದುಕೊಂಡಿದ್ದಾನೆ.
“ಅಯುಧಗಳನ್ನು ಹಿಡಿದ ಅರ್ಜುನನನ್ನು ಯುದ್ಧದಲ್ಲಿ ಮೀರಿಸಬಲ್ಲೆ ಎಂದು ಕರ್ಣನು ತಿಳಿದುಕೊಂಡಿದ್ದರೆ, ಇದಕ್ಕೂ ಮಹಾ ಯುದ್ಧಗಳಾದಾಗ ಅವರಿಗೆ ಕರ್ಣನು ಹೇಗೆ ಪ್ರಯೋಜನಕ್ಕೆ ಬರಲಿಲ್ಲ? ಅರ್ಜುನನ ಸರಿಸಾಟಿಯಾದ ಅನ್ಯ ಧನುರ್ಧರನು ಯಾರೂ ಇಲ್ಲ ಎಂದು ಕರ್ಣ ಮತ್ತು ಸುಯೋಧನರಿಗೆ ಗೊತ್ತು. ದ್ರೋಣ-ಪಿತಾಮಹರಿಗೆ ಗೊತ್ತು. ಮತ್ತು ಅಲ್ಲಿರುವ ಇತರ ಕುರುಗಳಿಗೂ ಗೊತ್ತು. ಅರಿಂದಮ ಅರ್ಜುನನು ಇಲ್ಲದಿದ್ದರೆ ಮಾತ್ರ ದುರ್ಯೋಧನನು ತನ್ನ ಅಪರಾಧಗಳನ್ನು ಮಾಡಬಲ್ಲ ಎಂದು ಕುರುಗಳೆಲ್ಲರಿಗೂ ಮತ್ತು ಸೇರಿರುವ ಅನ್ಯ ಭೂಮಿಪಾಲರಿಗೂ ತಿಳಿದಿದೆ. ನನ್ನಿಂದ ಪಾಂಡವರು ಕೂಡಿಟ್ಟ ಸಂಪತ್ತನ್ನು ಅಪಹರಿಸಲು ಶಕ್ಯನೆಂದು ಧಾರ್ತರಾಷ್ಟ್ರನ ಅಭಿಪ್ರಾಯ. ಅವನನ್ನು ತಿಳಿದ ಕಿರೀಟಿಯು ತನ್ನ ಒಂಭತ್ತು ಮೊಳದ ಬಿಲ್ಲನ್ನು ಹಿಡಿದು ಯುದ್ಧಕ್ಕೆ ಅಲ್ಲಿಗೆ ಬರುತ್ತಾನೆ! ಎಳೆದ ಗಾಂಡೀವದ ಧ್ವನಿಯನ್ನು ಕೇಳದ ಧಾರ್ತರಾಷ್ಟ್ರರು ಇನ್ನೂ ಉಳಿದುಕೊಂಡಿದ್ದಾರೆ. ಕ್ರುದ್ಧನಾದ ಭೀಮಸೇನನ ವೇಗವನ್ನು ಅರಿಯದ ಸುಯೋಧನನು ತನ್ನ ಕಾರ್ಯವು ಸಿದ್ಧಿಯಾಯಿತೆಂದು ಭಾವಿಸಿದ್ದಾನೆ. ಭೀಮಸೇನ, ಧನಂಜಯ, ನಕುಲ ಮತ್ತು ವೀರ ಸಹದೇವರು ನನ್ನಲ್ಲಿ ಜೀವಿಸಿರುವಾಗ ಇಂದ್ರನೂ ಕೂಡ ನನ್ನಿಂದ ಐಶ್ವರ್ಯವನ್ನು ಅಪಹರಿಸಲು ಸಾಧ್ಯವಿಲ್ಲ. ರಣದಲ್ಲಿ ಪಾಂಡವರ ಕೋಪದಿಂದ ಧಾರ್ತರಾಷ್ಟ್ರರು ಸುಟ್ಟು ನಾಶವಾಗುವುದಿಲ್ಲ ಎಂದು ಈಗಲೂ ಆ ವೃದ್ಧ ರಾಜನು ಪುತ್ರರೊಂದಿಗೆ ಯೋಚಿಸುತ್ತಾನೆ.
“ನಾವು ಅನುಭವಿಸಿದ ಕಷ್ಟಗಳು ನಿನಗೆ ತಿಳಿದೇ ಇವೆ. ನಿನ್ನನ್ನು ಗೌರವಿಸಿ ಅವರೆಲ್ಲರನ್ನೂ ಕ್ಷಮಿಸುತ್ತೇನೆ. ನಾವು ಹಿಂದೆ ಕೌರವರಿಂದ ಏನನ್ನು ಪಡೆದುಕೊಂಡೆವು ಮತ್ತು ನಂತರ ನಾವು ಧಾರ್ತರಾಷ್ಟ್ರರಲ್ಲಿ ಹೇಗೆ ನಡೆದುಕೊಂಡೆವು ಎನ್ನುವುದು ನಿನಗೆ ತಿಳಿದೇ ಇದೆ. ನೀನು ಕೇಳುತ್ತಿರುವಂತೆ ನಾನೂ ಶಾಂತಿಯನ್ನೇ ಕೇಳುತ್ತೇನೆ. ಇಂದೂ ಕೂಡ ನಾವು ಮೊದಲಿನಂತೆಯೇ ನಡೆದುಕೊಳ್ಳುತ್ತೇವೆ. ಆದರೆ ಇಂದ್ರಪ್ರಸ್ಥದಲ್ಲಿ ನನ್ನದೇ ರಾಜ್ಯವಿರಬೇಕು. ಭಾರತಾಗ್ರ್ಯ ಸುಯೋಧನನು ಅದನ್ನು ನೀಡಲಿ.”
ಯುಧಿಷ್ಠಿರನಿಗೆ ಸಂಜಯನ ಉಪದೇಶ
ಸಂಜಯನು ಹೇಳಿದನು: “ಪಾರ್ಥ! ನೀನು ನಿತ್ಯವೂ ಧರ್ಮದಲ್ಲಿಯೇ ನಿರತನಾಗಿದ್ದೀಯೆ ಎಂದು ಲೋಕವು ಹೇಳುತ್ತದೆ. ಕಾಣುತ್ತದೆ ಕೂಡ. ಮಹಾ ಪ್ರವಾಹದ ಈ ಜೀವಿತವು ಅನಿತ್ಯ. ಅದರ ನಾಶವನ್ನು ನೀನು ಕಾಣ ಬಯಸಬೇಡ! ಯುದ್ಧವಿಲ್ಲದೇ ಕುರುಗಳು ನಿನ್ನ ಭಾಗವನ್ನು ಕೊಡದೇ ಇದ್ದರೆ, ನೀನು ಯುದ್ಧದಿಂದ ರಾಜ್ಯವನ್ನು ಪಡೆಯುವುದಕ್ಕಿಂತ ಅಂಧಕ-ವೃಷ್ಣಿ ರಾಜ್ಯದಲ್ಲಿ ಭಿಕ್ಷಾಟನೆಯನ್ನು ಮಾಡಿ ಜೀವುಸುವುದು ಶ್ರೇಯವೆಂದು ನನಗನ್ನಿಸುತ್ತದೆ. ಈ ಮನುಷ್ಯ ಜೀವನವು ಅಲ್ಪಕಾಲದ ಮಹಾಪ್ರವಾಹವು. ನಿತ್ಯವೂ ದುಃಖವನ್ನು ತರುವಂಥಹುದು. ಚಂಚಲವಾದುದು. ಬದುಕಿನ ಆಸೆಯನ್ನು ನೀಗಿಸಲು ಅನುರೂಪವಲ್ಲದ್ದು. ಆದುದರಿಂದ ಪಾಪವನ್ನು ಪಸರಿಸಬೇಡ. ಕಾಮವು ಮನುಷ್ಯನನ್ನು ಅಂಟಿಕೊಂಡಿರುವುದೇ ಧರ್ಮದ ವಿಘ್ನಕ್ಕೆ ಮೂಲ. ಧೃತಿವಂತನಾಗಿ ಅವುಗಳನ್ನು ಮೊದಲೇ ನಾಶಪಡಿಸಿದ ನರನು ಲೋಕದಲ್ಲಿ ಕಳಂಕವಿಲ್ಲದ ಪ್ರಶಂಸೆಯನ್ನು ಪಡೆಯುತ್ತಾನೆ. ಧನದ ದಾಹವು ಬಂಧನವಿದ್ದಂತೆ. ಇವನ್ನು ಬಯಸುವವನ ಧರ್ಮವು ಕುಂದಾಗುತ್ತದೆ. ಧರ್ಮವನ್ನೇ ತನ್ನದಾಗಿಸಿಕೊಳ್ಳುವವನು ತಿಳಿದವನು. ಕಾಮವನ್ನು ಹೆಚ್ಚಿಸಿಕೊಂಡವನು ಅರ್ಥವನ್ನು ಆಸೆಪಟ್ಟು ನಾಶಹೊಂದುತ್ತಾನೆ. ಧರ್ಮಕರ್ಮಗಳನ್ನು ಮುಖ್ಯವನ್ನಾಗಿ ಮಾಡಿಕೊಂಡವನು ಮಹಾಪ್ರತಾಪಿ ಸೂರ್ಯನಂತೆ ಹೊಳೆಯುತ್ತಾನೆ. ಧರ್ಮದ ಕೊರತೆಯಿರುವ, ಪಾಪ ಬುದ್ಧಿ ನರನು ಈ ಭೂಮಿಯನ್ನೇ ಪಡೆದರೂ ನಾಶಹೊಂದುತ್ತಾನೆ.
“ನೀನು ವೇದವನ್ನು ಕಲಿತಿರುವೆ, ಬ್ರಹ್ಮಚರ್ಯವನ್ನು ಆಚರಿಸಿರುವೆ. ಯಜ್ಞ-ಇಷ್ಟಿಗಳಲ್ಲಿ ಬ್ರಾಹ್ಮಣರಿಗೆ ನೀಡಿದ್ದೀಯೆ. ಪರಮ ಸ್ಥಾನವನ್ನು ಮನ್ನಿಸಿ ನೀನು ಹಲವಾರು ವರ್ಷಗಳ ಸುಖವನ್ನು ನಿನಗೆ ನೀನೇ ಒದಗಿಸಿ ಕೊಂಡಿದ್ದೀಯೆ. ಸುಖ ಮತ್ತು ಬಯಕೆಗಳ ಸೇವೆಯಲ್ಲಿ ಅತಿಯಾಗಿ ತೊಡಗಿದವನು ಯೋಗಾಭ್ಯಾಸದ ಕೆಲಸವನ್ನು ಮಾಡುವುದಿಲ್ಲ. ಅವನ ವಿತ್ತವು ಕ್ಷಯವಾದಾಗ ಸುಖವೂ ಕಡಿಮೆಯಾಗಿ, ಅತ್ಯಂತ ದುಃಖವನ್ನು ಅನುಭವಿಸುತ್ತಾನೆ. ಹಾಗೆಯೇ ಅರ್ಥವನ್ನೇ ಕಾಣದ ಜೀವನವನ್ನು ನಡೆಸುವವನು ಧರ್ಮವನ್ನು ತೊರೆದು ಅಧರ್ಮದಲ್ಲಿ ನಿರತನಾಗಿರುತ್ತಾನೆ. ಆ ಮೂಢನು ಪರಲೋಕದಲ್ಲಿ ಶ್ರದ್ಧೆಯನ್ನಿಟ್ಟುಕೊಳ್ಳುವುದಿಲ್ಲ. ಆ ಮಂದಬುದ್ಧಿಯು ದೇಹವನ್ನು ತೊರೆದ ನಂತರವೂ ತಪಿಸುತ್ತಾನೆ. ಇದರ ನಂತರದ ಲೋಕದಲ್ಲಿ ಪುಣ್ಯಗಳಿರಲಿ ಅಥವಾ ಪಾಪಗಳಿರಲಿ ನಾಶವಾಗುವುದಿಲ್ಲ. ಕರ್ತುವಿನ ಮೊದಲೇ ಪುಣ್ಯಪಾಪಗಳು ಹೋಗುತ್ತವೆ. ಅವುಗಳ ನಂತರ ಕರ್ತನು ಹಿಂಬಾಲಿಸುತ್ತಾನೆ. ನಿನ್ನ ಕರ್ಮವು ನ್ಯಾಯೋಪೇತವಾಗಿ ಬ್ರಾಹ್ಮಣರಿಗೆ ಕೊಡುವ ಶ್ರದ್ಧಾಪೂರಿತ ಅನ್ನ, ಗಂಧ, ರಸ ಉಪಪನ್ನಗಳಂತೆ ಮತ್ತು ಉತ್ತಮ ದಕ್ಷಿಣೆಗಳನ್ನಿತ್ತು ನಡೆಸುವ ದೇವತಾಕಾರ್ಯಗಳಂತೆ ಎಂದು ಹೇಳಬಹುದು. ಈ ದೇಹವಿರುವವರೆಗೆ ಕಾರ್ಯಗಳನ್ನು ಮಾಡುತ್ತೇವೆ. ಮರಣದ ನಂತರ ಮಾಡಬೇಕಾದುದು ಏನೂ ಇಲ್ಲ. ನೀನು ಪರಲೋಕಕ್ಕೆ ಬೇಕಾಗುವ ಕಾರ್ಯಗಳನ್ನು ಮಾಡಿದ್ದೀಯೆ. ಮಹಾ ಪುಣ್ಯವನ್ನೂ ಜನರ ಪ್ರಶಸ್ತಿಯನ್ನೂ ಪಡೆದಿರುವೆ. ಪರಲೋಕದಲ್ಲಿ ಮೃತ್ಯುವಿನಿಂದ ಸ್ವತಂತ್ರವಿದೆ, ಮುಪ್ಪಿನ ಭಯವಿಲ್ಲ, ಮನಸ್ಸಿಗೆ ಅಪ್ರಿಯವಾದ ಹಸಿವು ಬಾಯಾರಿಕೆಗಳಿಲ್ಲ. ಇಂದ್ರಿಯಗಳನ್ನು ತೃಪ್ತಿಪಡಿಸುವ ಹೊರತಾಗಿ ಬೇರೆ ಏನೂ ಅಲ್ಲಿ ಇರುವುದಿಲ್ಲ. ಕರ್ಮಫಲವು ಈ ರೂಪದ್ದು. ಆದುದರಿಂದ ಹೃದಯಕ್ಕೆ ಪ್ರಿಯವಾಗುವಂತೆ ಮಾತ್ರ ನಡೆದುಕೊಳ್ಳಬೇಡ. ಈ ಲೋಕದಲ್ಲಿ ಕ್ರೋಧ ಮತ್ತು ಹರ್ಷ ಇವೆರಡನ್ನೂ ನೀಡುವಂಥಹುದನ್ನು ಮಾಡಬೇಡ. ಕರ್ಮಗಳ ಅಂತ್ಯದಲ್ಲಿ ಪ್ರಶಂಸೆಯಿದೆ - ಸತ್ಯ, ಆತ್ಮನಿಗ್ರಹ, ಪ್ರಾಮಾಣಿಕತೆ, ಮೃದುತ್ವ, ಅಶ್ವಮೇಧ, ರಾಜಸೂಗಳು, ಇಷ್ಟಿಗಳು ಇವೆ. ಆದರೆ ಪಾಪಕರ್ಮಗಳ ಕೊನೆಯನ್ನು ಅರಸಿ ಹೋಗಬೇಡ!
“ಇಷ್ಟೊಂದು ಸಮಯದ ನಂತರ ಪಾಂಡವರು ಪದ್ಧತಿಯನ್ನು ಅನುಸರಿಸಿ ಪಾಪ ಕರ್ಮವನ್ನೇ ಮಾಡಬೇಕಾದರೆ ಧರ್ಮಹೇತುಗಳಾದ ಪಾಂಡವರು ಬಹು ವರ್ಷಗಳು ವನದಲ್ಲಿ ಏಕೆ ದುಃಖದ ವಾಸವನ್ನು ವಾಸಿಸಿದರು? ಹೊರಹಾಕಲ್ಪಡದೇ ನೀವು ಮೊದಲೇ ನಿಮ್ಮದಾಗಿದ್ದ ಸೇನೆಯನ್ನು ಕೂಡಿಸಬಹುದಾಗಿತ್ತು –ಪಾಂಚಾಲರು, ಜನಾರ್ದನ ಮತ್ತು ವೀರ ಯುಯುಧಾನರು ನಿತ್ಯವೂ ನಿಮ್ಮ ಸಚಿವರಾಗಿದ್ದವರು. ಪುತ್ರನೊಡನೆ ರಾಜಾ ಮತ್ಸ್ಯನು ಬಂಗಾರದ ರಥದಲ್ಲಿ, ಪ್ರಹಾರಿ ಪುತ್ರರೊಂದಿಗೆ ವಿರಾಟ, ಮತ್ತು ಹಿಂದೆ ನೀವು ಸೋಲಿಸಿದ್ದ ರಾಜರು ಎಲ್ಲರೂ ನಿಮ್ಮಕಡೆಯೇ ಸೇರುತ್ತಿದ್ದರು. ಎಲ್ಲರನ್ನೂ ಸುಡುವ ಮಹಾಸೇನೆಯ ಬಲವನ್ನು ಪಡೆದು ವಾಸುದೇವ-ಅರ್ಜುನರನ್ನು ಮುಂದಿಟ್ಟುಕೊಂಡು, ರಣಮಧ್ಯದಲ್ಲಿ ಶ್ರೇಷ್ಠ ದ್ವೇಷಿಗಳನ್ನು ಸಂಹರಿಸಿ ಧಾರ್ತರಾಷ್ಟ್ರರ ದರ್ಪವನ್ನು ಕೆಳಗಿಳಿಸಬಹುದಾಗಿತ್ತು! ಕಾಲವನ್ನು ಮೀರಿ ಯುದ್ಧಮಾಡಲಿಚ್ಛಿಸುವ ನೀನು ಏಕೆ ನಿನ್ನ ವೈರಿಗಳ ಬಲವನ್ನು ಹೆಚ್ಚುಗೊಳಿಸಲು ಅವಕಾಶ ನೀಡಿದೆ? ಏಕೆ ನಿನ್ನ ಬಲವನ್ನು ಕಡಿಮೆಮಾಡಿಕೊಂಡೆ? ಏಕೆ ಬಹುವರ್ಷಗಳು ವನಗಳಲ್ಲಿ ಕಳೆದೆ?
“ತಿಳುವಳಿಕೆಯಿಲ್ಲದವನು ಯುದ್ಧಮಾಡುತ್ತಾನೆ. ಅಥವಾ ಧರ್ಮವನ್ನು ತಿಳಿಯದೇ ಇರುವವನು ಒಳಿತಿನ ದಾರಿಯನ್ನು ಬಿಡುವನು. ಅಥವಾ ಪ್ರಜ್ಞಾವಂತನಾಗಿದ್ದರೂ, ಬುದ್ಧಿವಂತನಾಗಿದ್ದರೂ ಕೂಡ ಕೋಪದಿಂದ ಧರ್ಮದ ದಾರಿಯನ್ನು ಬಿಡಬಹುದು. ಆದರೆ ನಿನ್ನ ಬುದ್ಧಿಯು ಅಧರ್ಮವನ್ನು ಯೋಚಿಸುವುದಿಲ್ಲ. ನೀನು ಕೋಪಗೊಂಡು ಪಾಪ ಕರ್ಮವನ್ನು ಮಾಡುವವನಲ್ಲ. ಹಾಗಿದ್ದಾಗ ಯಾವ ಕಾರಣಕ್ಕಾಗಿ ಯಾವುದನ್ನು ಬಯಸಿ ಪ್ರಜ್ಞಾವಿರುದ್ಧವಾದ ಕರ್ಮವನ್ನು ಮಾಡಲು ಹೊರಟಿರುವೆ? ಸಂತರು ಕುಡಿದುಬಿಡುವ, ಅಸಂತರು ಕುಡಿಯದೇ ಇರುವ, ವ್ಯಾಧಿಯಿಂದ ಹುಟ್ಟದ, ಕಹಿಯಾದ ತಲೆನೋವನ್ನು ಕೊಡುವ, ಯಶಸ್ಸನ್ನು ಕ್ಷೀಣಗೊಳಿಸುವ, ಪಾಪಫಲವನ್ನು ನೀಡುವ ಸಿಟ್ಟನ್ನು ಕುಡಿದು ಶಾಂತಗೊಳಿಸು.
“ಎಲ್ಲಿ ಶಾಂತನವ ಭೀಷ್ಮನು ಹತನಾಗಬಲ್ಲನೋ, ಎಲ್ಲಿ ಪುತ್ರನೊಂದಿಗೆ ದ್ರೋಣನು ಹತನಾಗುವನೋ, ಕೃಪ, ಶಲ್ಯ, ಸೌಮದತ್ತಿ, ವಿಕರ್ಣ, ವಿವಿಂಶತಿ ಮತ್ತು ಕರ್ಣ-ದುರ್ಯೋಧನರು ಹತರಾಗುವರೋ ಆ ಪಾಪವನ್ನು ತಂದು ಕಟ್ಟಿಸುವುದನ್ನು ಯಾರುತಾನೇ ಬಯಸುತ್ತಾರೆ? ಭೋಗಗಳ ಹಿಂದೆ ಹೋಗುವುದಕ್ಕಿಂತ ನಿನಗೆ ಕ್ಷಮೆಯೇ ಒಳ್ಳೆಯದು. ಇವರನ್ನೆಲ್ಲಾ ಕೊಂದು ಅದರಲ್ಲಿ ನಿನಗೆ ಯಾವ ಸುಖವು ಸಿಗುತ್ತದೆ ಎನ್ನುವುದನ್ನು ಹೇಳು. ಸಾಗರಗಳೇ ಅಂಚಾಗಿರುವ ಈ ಭೂಮಿಯನ್ನು ಪಡೆದರೂ ನೀನು ಮುಪ್ಪು-ಮೃತ್ಯುಗಳಿಂದ, ಪ್ರಿಯ-ಅಪ್ರಿಯಗಳಿಂದ, ಮತ್ತು ಸುಖ-ದುಃಖಗಳಿಂದ ತಪ್ಪಿಸಿಕೊಳ್ಳಲಾರೆ. ಇವನ್ನು ತಿಳಿದೂ ಯುದ್ಧಮಾಡಬೇಡ! ಒಂದುವೇಳೆ ನಿನ್ನ ಅಮಾತ್ಯರ ಬಯಕೆಯನ್ನು ಪೂರೈಸಲು ನೀನು ಈ ತಪ್ಪನ್ನು ಮಾಡಲು ಹೊರಟಿರುವೆಯಾದರೆ ನಿನ್ನಲ್ಲಿರುವ ಎಲ್ಲವನ್ನೂ ಅವರಿಗೆ ಕೊಟ್ಟು ಓಡಿ ಹೋಗು! ದೇವಯಾನದ ನಿನ್ನ ದಾರಿಯನ್ನು ತಪ್ಪಿ ನಡೆಯಬೇಡ!”
ಯುಧಿಷ್ಠಿರ ವಾಕ್ಯ
ಯುಧಿಷ್ಠಿರನು ಹೇಳಿದನು: “ಸಂಜಯ! ನೀನು ಹೇಳಿದಂತೆ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠವಾದ ಕರ್ಮ. ಅದರಲ್ಲಿ ಸಂಶಯವೇ ಇಲ್ಲ. ಆದರೆ ನಾನು ನಡೆಯುತ್ತಿರುವುದು ಧರ್ಮದಲ್ಲಿಯೋ ಅಥವಾ ಅಧರ್ಮದಲ್ಲಿಯೋ ಎಂದು ತಿಳಿಯದೇ ನೀನು ನನ್ನನ್ನು ದೂರಬಾರದು. ಅಧರ್ಮವು ಧರ್ಮರೂಪಗಳಲ್ಲಿ ಕಾಣುವಾಗ ಅಥವಾ ಧರ್ಮವು ಅಧರ್ಮರೂಪದಲ್ಲಿ ಕಾಣುವಾಗ ಧರ್ಮವು ಧರ್ಮದ ರೂಪವನ್ನೇ ಧರಿಸಿದೆಯೋ ಇಲ್ಲವೋ ಎನ್ನುವುದನ್ನು ವಿದ್ವಾಂಸರು ಬುದ್ಧಿಯಿಂದ ಕಂಡುಕೊಳ್ಳುತ್ತಾರೆ. ಆಪತ್ತಿನಲ್ಲಿ ನಿತ್ಯವೃತ್ತಿಗೆ ಸಂಬಂಧಿಸಿದಂತೆ ಧರ್ಮ-ಅಧರ್ಮಗಳೆರಡೂ ಒಂದೇ ಲಕ್ಷಣಗಳನ್ನು ಹೊಂದುತ್ತವೆ. ಹೀಗಿರುವಾಗ ಮೊದಲು ಅವನ ಜಾತಿಗೆ ತಕ್ಕಂತಹುದನ್ನು ಆರಿಸಿಕೊಳ್ಳಬೇಕು. ಇದೇ ಆಪದ್ಧರ್ಮವೆನ್ನುವುದನ್ನು ತಿಳಿದುಕೋ. ಜೀವನದ ಮಾರ್ಗಗಳನ್ನು ಸಂಪೂರ್ಣವಾಗಿ ಕಳೆದುಕೊಂಡವನು ತನ್ನದೇ ಜಾತಿಯು ವಿಹಿಸುವ ಬೇರೆ ಯಾವುದಾದರೂ ಮಾರ್ಗವನ್ನು ಹುಡುಕಿಕೊಳ್ಳಬೇಕು. ವರ್ತಮಾನದಲ್ಲಿ ಆಪತ್ತಿನಲ್ಲಿ ಇಲ್ಲದಿರುವವನು ಮತ್ತು ಆಪತ್ತಿನಲ್ಲಿ ಇರುವವನು ಇಬ್ಬರನ್ನೂ ದೂರಲಾಗುತ್ತಿದೆ! ಆಪತ್ತಿನಲ್ಲಿ ತಮ್ಮ ನಾಶವನ್ನು ಬಯಸದೇ ತಮ್ಮ ಜಾತಿಗೆ ತಕ್ಕುದಾದುದಕಿಂತ ಬೇರೆಯ ಕರ್ಮವನ್ನು ಮಾಡುವ ಬ್ರಾಹ್ಮಣರಿಗೂ ವಿಧಾತನು ಪ್ರಾಯಶ್ಚಿತ್ತವನ್ನು ನೀಡಿದ್ದಾನೆ. ಇದರಲ್ಲಿ ದೂರುವುದು ಏನಿದೆ? ಅಬ್ರಾಹ್ಮಣರಿಗೆ ಮತ್ತು ಅವೈದೀಕರಿಗೆ ಸದೈವವಾದ ವೃತ್ತಿಯನ್ನು ಮನೀಷಿಗಳು ತತ್ತ್ವವಿಚ್ಛೇದನೆ ಮಾಡಿ ವಿಧಿಸಿದ್ದಾರೆ. ಅವುಗಳನ್ನೇ ಸರ್ವೋಚ್ಛವೆಂದು ಮನ್ನಿಸುವುದು ಒಳ್ಳೆಯದು. ಇದೇ ಮಾರ್ಗದಲ್ಲಿ ನನ್ನ ತಂದೆಯಂದಿರು ಅವರ ಪೂರ್ವಜರು, ಪಿತಾಮಹರು ಮತ್ತು ಅವರ ಮೊದಲಿನವರು ಕೂಡ ಇದನ್ನೇ ಅರ್ಥೈಸಿದ್ದರು. ಪ್ರಜ್ಞೈಷಿಗಳಾಗಿ ಕರ್ಮಗಳನ್ನು ಮಾಡುವವರೂ ಕೊಡ ಕೊನೆಯಲ್ಲಿ ಇದು ಅಧರ್ಮವಲ್ಲ ಎಂದು ತಿಳಿಯುತ್ತಾರೆ. ಈ ಭೂಮಿಯ ಮೇಲೆ ಎಷ್ಟೇ ಸಂಪತ್ತಿದ್ದರೂ, ಅಥವಾ ತ್ರಿದಿವದಲ್ಲಿರುವ ದೇವ ತ್ರಿದಶರರಲ್ಲಿ, ಪ್ರಜಾಪತಿ ಬ್ರಹ್ಮಲೋಕದಲ್ಲಿ ಎಷ್ಟೇ ಸಂಪತ್ತಿರಲಿ ಅವನ್ನು ನಾನು ಅಧರ್ಮದಿಂದ ಮಾತ್ರ ಬಯಸುವವನಲ್ಲ.
“ಧರ್ಮೇಶ್ವರ, ಕುಶಲ, ನೀತಿವಂತ, ಬ್ರಾಹ್ಮಣರನ್ನು ಉಪಾಸಿಸುವ, ಮನೀಷೀ ಕೃಷ್ಣನು ನಾನಾವಿಧದ ಮಹಾಬಲಶಾಲಿಗಳಾದ ರಾಜರಿಗೂ ಭೋಜರಿಗೂ ಸಲಹೆಗಾರನಾಗಿದ್ದಾನೆ. ನಾನು ಯುದ್ಧವನ್ನು ಬಿಟ್ಟರೆ ತಪ್ಪಿತಸ್ತನಾಗುವುದಿಲ್ಲ ಅಥವಾ ಯುದ್ಧವನ್ನು ಮಾಡಿದರೆ ಸ್ವಧರ್ಮವನ್ನು ತೊರೆದಂತಾಗುವುದಿಲ್ಲ ಎನ್ನುವುದನ್ನು ಮಹಾಯಶಸ್ವಿ ಕೃಷ್ಣನೇ ಹೇಳಲಿ. ವಾಸುದೇವನು ಇಬ್ಬರ ಏಳಿಗೆಯನ್ನೂ ಬಯಸುತ್ತಾನೆ. ಶೈನ್ಯರು, ಚೈತ್ರರು, ಅಂಧಕರು, ವಾರ್ಷ್ಣೇಯರು, ಭೋಜರು, ಕೌಕುರರು ಮತ್ತು ಸೃಂಜಯರು ವಾಸುದೇವನ ಬುದ್ಧಿಯನ್ನು ಬಳಸಿ ಶತ್ರುಗಳನ್ನು ನಿಗ್ರಹಿಸಿ ಸುಹೃದಯರನ್ನು ಆನಂದಿಸುತ್ತಿದ್ದಾರೆ. ಇಂದ್ರಕಲ್ಪರಾದ ವೃಷ್ಣಿ, ಅಂಧಕ, ಉಗ್ರಸೇನಾದಿಗಳು ಎಲ್ಲರೂ ಕೃಷ್ಣನ ಮಾರ್ಗದರ್ಶನದಂತೆ ನಡೆಯುತ್ತಾರೆ. ಮಹಾಬಲಿ ಯಾದವರು ಮನಸ್ವಿಗಳು, ಸತ್ಯಪರಾಕ್ರಮಿಗಳು ಮತ್ತು ಭೋಗವಂತರು. ಕೃಷ್ಣನನ್ನು ಭ್ರಾತನನ್ನಾಗಿ ಮಾರ್ಗದರ್ಶಕನನ್ನಾಗಿ ಪಡೆದ ಕಾಶಿರಾಜ ಬಭ್ರುವು ಉತ್ತಮ ಶ್ರೀಯನ್ನು ಪಡೆದಿದ್ದಾನೆ. ಬೇಸಗೆಯ ಕೊನೆಯಲ್ಲಿ ಮೋಡಗಳು ಪ್ರಜೆಗಳ ಮೇಲೆ ಮಳೆಸುರಿಸುವಂತೆ ವಾಸುದೇವನು ಅವನ ಆಸೆಗಳನ್ನು ಪೂರೈಸಿದ್ದಾನೆ. ಕೇಶವನು ಇಂಥವನು! ಅವನಿಗೆ ಕರ್ಮಗಳನ್ನು ನಿಶ್ಚಯಿಸಲು ಗೊತ್ತು ಎನ್ನುವುದು ನಮಗೆ ತಿಳಿದಿದೆ. ಅತ್ಯಂತ ಸಾಧುವಾದ ಕೃಷ್ಣನು ನಮ್ಮೆಲ್ಲರ ಪ್ರಿಯ. ಕೇಶವನ ಮಾತನ್ನು ಮೀರುವುದಿಲ್ಲ.”
ಕೃಷ್ಣ ವಾಕ್ಯ
ವಾಸುದೇವನು ಹೇಳಿದನು: “ಸಂಜಯ! ನಾನು ಪಾಂಡವರ ಅವಿನಾಶವನ್ನು, ಅವರಿಗೆ ಪ್ರಿಯವಾದುದನ್ನು, ಮತ್ತು ಅವರ ಏಳಿಗೆಯನ್ನು ಬಯಸುತ್ತೇನೆ. ಹಾಗೆಯೇ ರಾಜ ಧೃತರಾಷ್ಟ್ರನ ಮತ್ತು ಅವನ ಬಹುಮಂದಿ ಮಕ್ಕಳ ವೃದ್ಧಿಯನ್ನು ಸದಾ ಬಯಸುತ್ತೇನೆ. ನಿತ್ಯವೂ ನನ್ನ ಬಯಕೆಯು - ಅವರಿಗೆ ನಾನು ಬೇರೆ ಏನನ್ನೂ ಹೇಳಲಿಲ್ಲ- ಶಾಂತಿ ಎನ್ನುವುದು. ರಾಜನಿಗೂ ಕೂಡ ಅದು ಬೇಕಾಗಿದ್ದುದೆಂದು ಕೇಳುತ್ತಿದ್ದೇನೆ. ಅದು ಪಾಂಡವರಿಗೂ ಒಳ್ಳೆಯದು ಎಂದು ತಿಳಿದಿದ್ದೇನೆ. ಪುತ್ರರೊಂದಿಗೆ ಧೃತರಾಷ್ಟ್ರನು ಆಸೆಬುರುಕನಾಗಿರುವಾಗ ಪಾಂಡವರಾದರೋ ತುಂಬಾ ದುಷ್ಕರವಾದ ಶಾಂತತೆಯನ್ನೇ ಪ್ರದರ್ಶಿಸಿದ್ದಾರೆ. ಹೇಗೆತಾನೇ ಇವರಿಬ್ಬರ ನಡುವೆ ಕಲಹವುಂಟಾಗುವುದಿಲ್ಲ? ಧರ್ಮದ ತತ್ವವನ್ನು ನಿರ್ಧರಿಸುವಾಗ ಇಲ್ಲಿ ನೀನು ನನ್ನಿಂದ ಮತ್ತು ಯುಧಿಷ್ಠಿರನಿಂದ ತಿಳಿದುಕೋ! ಹೀಗಿರುವಾಗ ನೀನು ತನ್ನ ಕರ್ತವ್ಯವನ್ನು ಪೂರೈಸಲು ಹೊರಟಿರುವ, ತನ್ನ ಕುಟುಂಬವನ್ನು ಸರಿಯಾಗಿ ಮಾರ್ಗದರ್ಶನದೊಂದಿಗೆ ನಡೆಸಿಕೊಂಡು ಹೋಗುತ್ತಿರುವ, ಮೊದಲಿಂದಲೂ ಸರಿಯಾಗಿಯೇ ನಡೆದುಕೊಂಡು ಬಂದಿರುವ ಈ ಪಾಂಡವನನ್ನು ಏಕೆ ಅಲ್ಲಗಳೆಯುತ್ತಿರುವೆ?
“ವರ್ತಮಾನದ ವಿಷಯದ ಕುರಿತು ಸರಿಯಾದ ಮಾತನ್ನು ವಿವಿಧರೀತಿಗಳಲ್ಲಿ ಬ್ರಾಹ್ಮಣರು ಹೇಳಿದ್ದಾರೆ. ಕರ್ಮಗಳು ಪರತ್ರದಲ್ಲಿ ಸಿದ್ಧಿಯನ್ನು ನೀಡುತ್ತವೆ ಎಂದು ಕೆಲವರು ಹೇಳುತ್ತಾರೆ. ಇತರರು ಕರ್ಮವನ್ನು ತೊರೆದು ವಿದ್ಯೆಯೊಂದೇ ಸಿದ್ಧಿಯನ್ನು ನೀಡುತ್ತದೆ ಎನ್ನುತ್ತಾರೆ. ಭಕ್ಷ್ಯ-ಭೋಜ್ಯಗಳನ್ನು ತಿಳಿದಿದ್ದರೂ ಅದನ್ನು ತಿನ್ನದೇ ಇರುವವನು ಹಸಿವಿನಿಂದ ತೃಪ್ತನಾಗುವುದಿಲ್ಲ ಎಂದೂ ಬ್ರಾಹ್ಮಣರಿಗೆ ತಿಳಿದಿದೆ. ಕರ್ಮಗಳನ್ನು ಸಾಧಿಸುವಂತಹ ವಿದ್ಯೆ ಮಾತ್ರ ಫಲವನ್ನು ನೀಡುತ್ತದೆ. ಇತರ ವಿದ್ಯೆಗಳಲ್ಲ! ಕರ್ಮವೇ ಕಾಣಲಿಕ್ಕಾಗುವ ಫಲವನ್ನು ನೀಡುತ್ತದೆ. ಬಾಯಾರಿಕೆಯು ನೀರನ್ನು ಕುಡಿಯುವುದರಿಂದ ಶಾಂತವಾಗುತ್ತದೆ. ಈ ಕರ್ಮವೇ ವಿಧಿವಿಹಿತವಾದುದು. ಅಲ್ಲಿ ಕರ್ಮವೇ ನಡೆಯುವುದು. ಕರ್ಮಕ್ಕಿಂತಲೂ ಉತ್ತಮವಾದುದು ಏನೋ ಇದೆ ಎಂದು ತಿಳಿದುಕೊಳ್ಳುವುದು ದುರ್ಬಲ ಮತ್ತು ಪ್ರಯೋಜನವಿಲ್ಲದ್ದು ಎಂದು ನನ್ನ ಮತ. ಕರ್ಮಗಳಿಂದಲೇ ಅಲ್ಲಿ ದೇವತೆಗಳು ಹೊಳೆಯುತ್ತಾರೆ. ಕರ್ಮದಿಂದಲೇ ವಾಯುವು ಇಲ್ಲಿ ಬೀಸುತ್ತಾನೆ. ಕರ್ಮದಿಂದಲೇ ಹಗಲು ರಾತ್ರಿಗಳನ್ನು ನಿರ್ಧರಿಸುತ್ತಾ ಸೂರ್ಯನು ನಿತ್ಯವೂ ಆಯಾಸಗೊಳ್ಳದೇ ಉದಯಿಸುತ್ತಾನೆ. ಹಾಗೆಯೇ ಆಯಾಸಗೊಳ್ಳದೇ ಚಂದ್ರಮನು ಮಾಸ-ಪಕ್ಷಗಳಲ್ಲಿ ನಡೆದು ನಕ್ಷತ್ರ ರಾಶಿಗಳಲ್ಲಿ ಸಂಚರಿಸುತ್ತಾನೆ. ಜಾತವೇದಗಳು ಕೂಡ ತಮ್ಮ ಕರ್ಮಗಳನ್ನು ಮಾಡುತ್ತ ಪ್ರಜೆಗಳ ಒಳಿತಿಗಾಗಿ ಆಯಾಸಗೊಳ್ಳದೇ ನಿರಂತರವಾಗಿ ಉರಿಯುತ್ತವೆ. ವಿಶ್ರಾಂತಿಯಿಲ್ಲದೇ ಈ ಮಹಾಭಾರವನ್ನು ಬಲವನ್ನುಪಯೋಗಿಸಿ ದೇವೀ ಪೃಥ್ವಿಯು ಹೊರುತ್ತಾಳೆ. ನಿದ್ದೆಯಿಲ್ಲದೇ ನದಿಗಳು ನೀರನ್ನು ಹೊತ್ತು ಶೀಘ್ರವಾಗಿ ಹರಿದು ಸರ್ವಭೂತಗಳನ್ನು ಸಂತೃಪ್ತಗೊಳಿಸುತ್ತವೆ. ಆಯಾಸಗೊಳ್ಳದೇ ಭೂರಿತೇಜಸ್ವಿಯು ಅಂತರಿಕ್ಷ-ಸ್ವರ್ಗಗಳಲ್ಲಿ ಗರ್ಜಿಸಿ ಮಳೆಯನ್ನು ಸುರಿಸುತ್ತಾನೆ. ಅವನು ಆಯಾಸಗೊಳ್ಳದೇ ಬ್ರಹ್ಮಚರ್ಯವನ್ನು ಪಾಲಿಸಿ ದೇವತೆಗಳ ಶ್ರೇಷ್ಠತ್ವವನ್ನು ಬಲವನ್ನೂ ಪಡೆಯುತ್ತಾನೆ. ಸುಖವನ್ನೂ ಮನಸ್ಸಿನ ಆಸೆಗಳನ್ನೂ ತೊರೆದು ಶಕ್ರನು ಕರ್ಮಗಳಿಂದ ಶ್ರೇಷ್ಠತ್ವವನ್ನು ಪಡೆದನು. ಅಪ್ರಮತ್ತನಾಗಿದ್ದುಕೊಂಡು ಸತ್ಯ ಧರ್ಮಗಳನ್ನು ಪಾಲಿಸುತ್ತಾ, ದಮ, ತಾಳ್ಮೆ, ಸಮತೆ ಮತ್ತು ಪ್ರೀತಿ ಈ ಏಲ್ಲ ಗುಣಗಳನ್ನೂ ಅನುಸರಿಸಿ ಮಘವಾನನು ದೇವರಾಜ್ಯದ ಮುಖಂಡತ್ವವನ್ನು ಪಡೆದನು. ಬೃಹಸ್ಪತಿಯು ಸಮಾಹಿತನಾಗಿ, ಸಂಶಿತಾತ್ಮನಾಗಿ ಯಥಾವತ್ತಾಗಿ ಬ್ರಹ್ಮಚರ್ಯದಲ್ಲಿ ನಡೆಯುತ್ತಾನೆ. ಸುಖವನ್ನು ತೊರೆದು, ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಅವನು ದೇವತೆಗಳ ಗುರುಪದವಿಯನ್ನು ಪಡೆದನು. ತಮ್ಮ ಕರ್ಮಗಳಿಂದಲೇ ನಕ್ಷತ್ರಗಳು ಹೊಳೆಯುತ್ತವೆ; ಹಾಗೆಯೇ ರುದ್ರ, ಆದಿತ್ಯ, ವಸುಗಳು ಮತ್ತು ವಿಶ್ವೇದೇವರು, ಯಮರಾಜ, ವೈಶ್ರವಣ ಕುಬೇರ, ಗಂಧರ್ವ-ಯಕ್ಷರು ಮತ್ತು ಶುಭ್ರ ಅಪ್ಸರೆಯರು. ಬ್ರಹ್ಮಚರ್ಯೆ, ವೇದವಿದ್ಯೆ ಮತ್ತು ಕ್ರಿಯೆಗಳಿಂದಲೇ ಮುನಿಗಳು ಆ ಲೋಕದಲ್ಲಿ ಹೊಳೆಯುತ್ತಾರೆ. ಇದೇ ಸರ್ವಲೋಕದ - ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ - ಧರ್ಮವೆಂದು ತಿಳಿದೂ, ತಿಳಿದವರ ತಿಳುವಳಿಕೆಯನ್ನು ತಿಳಿದೂ ನೀನು ಏಕೆ ಕೌರವನನ್ನು ಅರ್ಥಮಾಡಿಕೊಳ್ಳಲು ಶ್ರಮಿಸುತ್ತಿರುವೆ?
“ವೇದಗಳಲ್ಲಿ ಅವನಿಗೆ ನಿತ್ಯವೂ ಮನಸ್ಸಿರುವುದನ್ನು ತಿಳಿದುಕೋ! ಹಾಗೆಯೇ ಅವನಿಗೆ ಅಶ್ವಮೇಧ-ರಾಜಸೂಯಗಳಲ್ಲಿ ಆಸಕ್ತಿಯಿದೆ. ಧನುಸ್ಸು ಕವಚಗಳಲ್ಲಿಯೂ, ಹಸ್ತತ್ರಾಣ, ರಥಗಳು ಮತ್ತು ಅಸ್ತ್ರಗಳಲ್ಲಿಯೂ ಆಸಕ್ತಿಯನ್ನಿಟ್ಟಿದ್ದಾನೆ. ಕೌರವರನ್ನು ನಾಶಗೊಳಿಸದೇ ತಮ್ಮ ಕರ್ಮದ ದಾರಿಯನ್ನು ಪಾರ್ಥರು ಕಂಡರೆ ಅವರು ಧರ್ಮವನ್ನು ಉಳಿಸುವ ಆ ಪುಣ್ಯಕಾರ್ಯವನ್ನು ಮಾಡುತ್ತಾರೆ. ಆಗ ಭೀಮಸೇನನನ್ನು ಪಳಗಿಸಿ ಆರ್ಯನಂತೆ ನಡೆಯುವ ಹಾಗೆ ಮಾಡುತ್ತಿದ್ದರು. ಆದರೆ ಅವರ ಪಿತೃಗಳಂತೆ ಮಾಡಿ ನಡೆದುಕೊಂಡು ವಿಧಿವಶದಿಂದ ಮೃತ್ಯುವನ್ನು ಪಡೆದರೂ, ತಮ್ಮ ಕರ್ಮವನ್ನು ಅವರು ಯಥಾವತ್ತಾಗಿ ಪೂರೈಸಲು ತೊಡಗಿದುದರಿಂದ ಅದರಲ್ಲಿ ಅವರ ನಿಧನವಾದರೂ ಅದು ಪ್ರಶಸ್ತವೆನಿಸುತ್ತದೆ. ನಿನಗೆ ಎಲ್ಲವೂ ತಿಳಿದಿದೆಯೆಂದು ಅಭಿಪ್ರಾಯ ಪಡುತ್ತಿರುವೆಯಾದುದರಿಂದ ಈ ಪ್ರಶ್ನೆಗೆ ಉತ್ತರವಾಗಿ ನಿನ್ನ ಮಾತನ್ನು ನಾನು ಕೇಳುತ್ತೇನೆ.
“ಹೇಳು! ಧರ್ಮವು ರಾಜನಿಗೆ ಯುದ್ಧಮಾಡಲು ಹೇಳುತ್ತದೆಯೋ ಅಥವಾ ಧರ್ಮವು ರಾಜನಿಗೆ ಯುದ್ಧಮಾಡಬಾರದು ಎಂದು ಹೇಳುತ್ತದೆಯೋ? ಸಂಜಯ! ಮೊದಲು ನೀನು ನಾಲ್ಕು ವರ್ಣಗಳ ವಿಭಾಗವನ್ನೂ ಪ್ರತಿಯೊಂದಕ್ಕಿರುವ ಕರ್ಮಗಳನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು. ನಂತರ ಪಾಂಡವರ ಸ್ವಕರ್ಮವೇನೆಂದು ಕೇಳಿ ನಿನಗಿಷ್ಟ ಬಂದಂತೆ ಅವರನ್ನು ಪ್ರಶಂಸಿಸಬಹುದು ಅಥವಾ ನಿಂದಿಸಬಹುದು. ಬ್ರಾಹ್ಮಣನು ಅಧ್ಯಯನ ಮಾಡಬೇಕು, ಯಾಜಿಸಬೇಕು, ದಾನಮಾಡಬೇಕು, ಮುಖ್ಯ ತೀರ್ಥಗಳಿಗೆ ಹೋಗಬೇಕು, ಅರ್ಹರಾದವರಿಗೆ ಕಲಿಸಬೇಕು, ಪುರೋಹಿತನಾಗಿರಬೇಕು, ಮತ್ತು ತನಗೆ ತಿಳಿದಿರುವ ದಾನಗಳನ್ನು ಸ್ವೀಕರಿಸಬೇಕು. ಹಾಗೆಯೇ ರಾಜರು ಧರ್ಮದಿಂದ ಪ್ರಜೆಗಳ ರಕ್ಷಣೆಯನ್ನು ಮಾಡಬೇಕು, ದಾನಮಾಡಿ ಯಜ್ಞ-ಇಷ್ಟಿಗಳನ್ನು ಕೈಗೊಳ್ಳಬೇಕು, ಸರ್ವ ವೇದಗಳನ್ನು ತಿಳಿದಿರಬೇಕು, ಮದುವೆಯಾಗಿ ಪುಣ್ಯಕರ ಗೃಹಸ್ಥನಾಗಿರಬೇಕು. ವೈಶ್ಯನು ಅಧ್ಯಯನದಲ್ಲಿ ತೊಡಗಬೇಕು; ಅಪ್ರಮತ್ತನಾಗಿ ಕೃಷಿ-ಗೋರಕ್ಷಣೆಗಳ ಮೂಲಕ ವಿತ್ತವನ್ನು ಸಂಪಾದಿಸಬೇಕು. ಬ್ರಾಹ್ಮಣರು ಮತ್ತು ಕ್ಷತ್ರಿಯರಿಗೆ ಪ್ರಿಯವಾದುದನ್ನು ಮಾಡಿಕೊಂಡು, ಧರ್ಮಶೀಲನಾಗಿ, ಗೃಹಸ್ಥನಾಗಿ ಪುಣ್ಯಕರ್ಮಗಳನ್ನು ಮಾಡುತ್ತಿರಬೇಕು. ಪುರಾಣಗಳಲ್ಲಿ ಹೇಳಿರುವ ಶೂದ್ರಧರ್ಮವು ಇವು: ಬ್ರಾಹ್ಮಣರನ್ನು ವಂದಿಸಿ ಅವರ ಪರಿಚರ್ಯ ಮಾಡುವುದು. ಇವರಿಗೆ ಯಜ್ಞಗಳು ಅಧ್ಯಯನ ಎರಡೂ ನಿಶಿದ್ಧ. ಆಯಾಸಗೊಳ್ಳದೇ ನಿತ್ಯವೂ ತನ್ನ ಏಳಿಗೆಯಲ್ಲಿ ತೊಡಗಿರಬೇಕು.
“ಇವರೆಲ್ಲರನ್ನೂ ರಾಜನು ಅಪ್ರಮತ್ತನಾಗಿ, ಎಲ್ಲ ವರ್ಣದವರನ್ನೂ ತಮ್ಮ ತಮ್ಮ ಧರ್ಮಗಳಲ್ಲಿ ತೊಡಗಿಸಿಕೊಂಡು ಪಾಲಿಸಬೇಕು. ಕಾಮಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬಾರದು. ಪ್ರಜೆಗಳನ್ನು ಸಮದೃಷ್ಟಿಯಿಂದ ನೋಡಿಕೊಳ್ಳಬೇಕು. ಅಧಾರ್ಮಿಕ ಆಸೆಗಳ ಹಿಂದೆ ಹೋಗಬಾರದು. ತನಗಿಂತಲೂ ಪ್ರಶಂಸನೀಯನಾದ, ಪ್ರಸಿದ್ಧನಾದ, ಸರ್ವಧರ್ಮೋಪಪನ್ನನಾದ ಪುರುಷನು ಯಾರಾದರೂ ಇದ್ದರೆ, ಅದನ್ನು ತಿಳಿದು ದುಷ್ಟರನ್ನು ಅವನು ಶಿಕ್ಷಿಸಬೇಕು. ಆದರೆ ಅವನ ರಾಜ್ಯವನ್ನು ಕಸಿದುಕೊಳ್ಳಲು ಪ್ರಯತ್ನಿಸಬಾರದು. ಅದು ಸರಿಯಲ್ಲ. ಇನ್ನೊಬ್ಬರ ಭೂಮಿಯನ್ನು ಕ್ರೂರವಾಗಿ ಕಸಿದುಕೊಂಡು, ವಿಧಿಯನ್ನು ಪ್ರಕೋಪಗೊಳಿಸಿ ಬಲವನ್ನು ಕಸಿದುಕೊಂಡರೆ, ಇದು ರಾಜರ ಮಧ್ಯೆ ನಡೆಯುವ ಯುದ್ಧಕ್ಕೆ ಕಾರಣವಾಗುತ್ತದೆ. ಯಾಕೆಂದರೆ, ದಸ್ಯುಗಳ ವಧೆಗಾಗಿಯೇ ಇಂದ್ರನು ಈ ಕವಚ-ಶಸ್ತ್ರ-ಧನುಸ್ಸುಗಳನ್ನು ಸೃಷ್ಟಿಸಿದನು. ಯಾರಿಗೂ ಕಾಣದೇ ಪರರ ಧನವನ್ನು ಕದಿಯುವವನು ಮತ್ತು ಎಲ್ಲರಿಗೂ ಕಾಣುವಂತೆ ಕಸಿದುಕೊಳ್ಳುವವನು ಇಬ್ಬರೂ ನಿಂದನೀಯರು.
“ಧೃತರಾಷ್ಟ್ರನ ಪುತ್ರರು ಇವರಿಗಿಂತ ಹೇಗೆ ಭಿನ್ನರಾಗಿದ್ದಾರೆ? ಇವರು ಲೋಭವೇ ಧರ್ಮವೆಂದು ತಿಳಿದಿದ್ದಾರೆ. ಕೋಪದ ವಶಕ್ಕೆ ಬಂದು ಅದನ್ನೇ ಮಾಡಲು ಬಯಸುತ್ತಾರೆ. ಪಾಂಡವರ ಪಿತ್ರಾರ್ಜಿತ ಭಾಗವು ನಿರ್ದಿಷ್ಠವಾದುದು. ಇತರರು ಅದನ್ನು ಏಕೆ ನಮ್ಮಿಂದ ಕಸಿದುಕೊಳ್ಳಬೇಕು? ಈ ವಿಷಯದಲ್ಲಿ ನಾವು ಹೋರಾಡಿ ಸತ್ತರೂ ಶ್ಲಾಘನೀಯ. ಏಕೆಂದರೆ ಪರರ ರಾಜ್ಯಕ್ಕಿಂತ ಪಿತೃರಾಜ್ಯವು ವಿಶಿಷ್ಟವಾದುದು. ಈ ಪುರಾಣ ಧರ್ಮಗಳನ್ನು ರಾಜರ ಮಧ್ಯದಲ್ಲಿ ಕೌರವರಿಗೆ ತೋರಿಸಿಕೊಡು! ಮೂಢ ಧಾರ್ತರಾಷ್ಟ್ರನ ಜೊತೆ ಸೇರಿರುವವರು ಮೂಢಾತ್ಮರು ಮತ್ತು ಮೃತ್ಯುವಿನ ವಶಕ್ಕೆ ಸಿಲುಕಿದ್ದಾರೆ. ಮತ್ತೊಮ್ಮೆ ಸಭಾಮಧ್ಯದಲ್ಲಿ ಕುರುಗಳ ಪಾಪ ಕರ್ಮವನ್ನೂ ನಡತೆಯನ್ನೂ ನೋಡು. ಪಾಂಡವರ ಪ್ರಿಯ ಭಾರ್ಯೆ ಯಶಸ್ವಿನೀ ಶೀಲನಡತೆಯಿಂದ ಲಕ್ಷಿತಳಾದ, ರೋದಿಸುತ್ತಿರುವ ದ್ರೌಪದಿಯನ್ನು ಆ ಕಾಮಾನುಗನು ಎಳೆದು ತರುವಾಗ ಭೀಷ್ಮ ಮತ್ತು ಇತರ ಕುರು ಮುಖ್ಯರು ಯಾರೂ ವಿರೋಧಿಸಲಿಲ್ಲ. ಅಲ್ಲಿ ಸೇರಿದ್ದ ಕುಮಾರ ವೃದ್ಧ ಕುರುಗಳೆಲ್ಲರೂ ಅವನನ್ನು ತಡೆದಿದ್ದರೆ ಧೃತರಾಷ್ಟ್ರನು ನನಗೆ ಪ್ರಿಯವಾದುದನ್ನು ಮಾಡಿದಂತೆ, ತನ್ನ ಪುತ್ರರಿಗೂ ಒಳ್ಳೆಯದನ್ನು ಮಾಡಿದಂತೆ ಆಗುತ್ತಿತ್ತು. ಎಲ್ಲ ಧರ್ಮಗಳನ್ನೂ ತುಳಿದು ದುಃಶಾಸನನು ಕೃಷ್ಣೆಯನ್ನು ಅವಳ ಮಾವಂದಿರಿರುವ ಸಭಾಮಧ್ಯಕ್ಕೆ ಎಳೆದು ತಂದನು. ಅಲ್ಲಿಗೆ ಎಳೆದು ತರಲ್ಪಟ್ಟಾಗ ಅವಳು ಕರುಣೆಯಿಂದ ಮಾತನಾಡಲು ಕ್ಷತ್ತ ವಿದುರನ ಹೊರತಾಗಿ ಬೇರೆ ಯಾವ ರಕ್ಷಕನನ್ನೂ ಅವಳು ಕಾಣಲಿಲ್ಲ. ಸಭೆಯಲ್ಲಿದ್ದ ರಾಜರೆಲ್ಲರೂ ಕಾರ್ಪಣ್ಯದಿಂದ ಕೂಡಿದವರಾಗಿ ಉತ್ತರಿಸಲು ಅಶಕ್ಯರಾಗಿದ್ದರು. ಧರ್ಮಗಳ ಅರ್ಥವನ್ನು ಹೇಳಬಲ್ಲ ಕ್ಷತ್ತನೊಬ್ಬನೇ ಆ ಅಲ್ಪಬುದ್ಧಿಗೆ ಧರ್ಮವನ್ನು ತಿಳಿಸಿ ಹೇಳಿದನು. ನೀನೂ ಕೂಡ ಆ ಸಭೆಯಲ್ಲಿ ಧರ್ಮವೇನೆಂದು ಹೇಳಲಿಲ್ಲ. ಈಗ ಪಾಂಡವರಿಗೆ ಉಪದೇಶಿಸಲು ಬಯಸುತ್ತಿದ್ದೀಯಾ?
“ಆದರೆ ಕೃಷ್ಣೆಯೇ ಆ ಸಭೆಯಲ್ಲಿ ಸರಿಯಾಗಿದ್ದುಕೊಂಡು ಶುದ್ಧ ಕರ್ಮವನ್ನು ಮಾಡಿದಳು. ಸಾಗರದಲ್ಲಿ ಸಿಲುಕಿಕೊಂಡ ದೋಣಿಯಂತಿದ್ದ ಪಾಂಡವರನ್ನೂ ತನ್ನನ್ನೂ ಕಷ್ಟದಿಂದ ಪಾರುಮಾಡಿದಳು. ಆಗ ಆ ಸಭೆಯಲ್ಲಿ ಕೃಷ್ಣೆಯು ತನ್ನ ಮಾವಂದಿರ ಸಮೀಪ ನಿಂತಿರುವಾಗ ಸೂತಪುತ್ರನು ಹೇಳಿದನು: “ಯಾಜ್ಞಸೇನೀ! ನಿನಗೆ ಬೇರೆ ಯಾವ ಗತಿಯೂ ಇಲ್ಲವಾಗಿದೆ. ಧಾರ್ತರಾಷ್ಟ್ರನ ಮನೆಯನ್ನು ಸೇರು. ಪರಾಜಿತರಾದ ನಿನ್ನ ಪತಿಯಂದಿರು ಇನ್ನಿಲ್ಲ. ಭಾಮಿನೀ! ಬೇರೆ ಯಾರನ್ನಾದರೂ ನಿನ್ನ ಪತಿಯನ್ನಾಗಿ ಆರಿಸಿಕೋ!” ಈ ಭಯಂಕರವಾದ, ಹೃದಯವನ್ನು ಖಡ್ಗದಂತೆ ಕೊರೆಯುವ, ಮರ್ಮವನ್ನು ಘಾತಿಗೊಳಿಸುವ, ಸುಡುವ, ಸುಘೋರವಾದ ಕರ್ಣನ ಮಾತುಗಳು ಅತಿ ತೇಜಸ್ಸುಳ್ಳ ಬಾಣಗಳಂತೆ ಫಲ್ಗುನನ ಹೃದಯದಲ್ಲಿ ನಾಟಿ ನಿಂತಿವೆ. ಅವರು ಕೃಷ್ಣಾಜಿನಗಳನ್ನು ತೊಡುತ್ತಿರುವಾಗ ದುಃಶಾಸನನು ಕಟುಕಾದ ಈ ಮಾತುಗಳನ್ನಾಡಿದನು: “ಇವರೆಲ್ಲರೂ ಪೊಳ್ಳು ಎಳ್ಳಿನಂತೆ ವಿನಷ್ಟರಾಗಿದ್ದಾರೆ ಮತ್ತು ಕ್ಷಯರಾಗಿ ದೀರ್ಘಕಾಲದ ನರಕಕ್ಕೆ ಹೋಗಿದ್ದಾರೆ.” ದ್ಯೂತಕಾಲದಲ್ಲಿ ಗಾಂಧಾರರಾಜ ಶಕುನಿಯು ಮೋಸದಿಂದ ಪಾರ್ಥರಿಗೆ ಹೇಳಿದ್ದನು: “ನಕುಲನನ್ನು ಸೋತೆ! ನಿನ್ನಲ್ಲಿ ಇನ್ನೇನಿದೆ? ಈಗ ಕೃಷ್ಣೆ ಯಾಜ್ಞಸೇನಿಯನ್ನು ಪಣವಾಗಿಡು!” ಸಂಜಯ! ದ್ಯೂತದಲ್ಲಿ ಹೇಳಬಾರದಂತ ಮಾತುಗಳನ್ನಾಡಿದುದೆಲ್ಲವೂ ಆಡಿದಂತೆ ನಿನಗೆ ತಿಳಿದೇ ಇದೆ.
“ಸ್ವಯಂ ನಾನೇ ಅಲ್ಲಿಗೆ ಹೋಗಿ ಈ ಕಷ್ಟದ ವಿಷಯವನ್ನು, ಕೈತಪ್ಪಿ ಹೋಗುವುದರೊಳಗೆ ಸಮಾಧಾನ ಪಡಿಸಲು ಹೋಗುವವನಿದ್ದೇನೆ. ಪಾಂಡವರ ಆಸಕ್ತಿಗೆ ಬಾಧಕವಾಗದಂತೆ ಕುರುಗಳಲ್ಲಿ ಶಾಂತಿಯನ್ನು ತರುವುದರಲ್ಲಿ ಯಶಸ್ವಿಯಾದರೆ ಅದು ಅತ್ಯಂತ ವಿಶೇಷವೂ ಪುಣ್ಯತರವೂ ಆಗುತ್ತದೆ ಮತ್ತು ಕುರುಗಳನ್ನು ಮೃತ್ಯುಪಾಶದಿಂದ ಬಿಡಿಸಿದಂತಾಗುತ್ತದೆ. ಆ ವಿವೇಕಯುಕ್ತವಾದ, ಧರ್ಮಯುಕ್ತವಾದ, ಅರ್ಥವತ್ತಾದ, ಅಹಿಂಸೆಯ ಮಾತುಗಳನ್ನು ಧಾರ್ತರಾಷ್ಟ್ರರ ಎದುರು ಮಾತನಾಡುವಾಗ ಕುರುಗಳು ಸ್ವೀಕರಿಸುತ್ತಾರೆ ಮತ್ತು ನನ್ನನ್ನು ನೋಡಿ ಗೌರವಿಸುತ್ತಾರೆ ಎಂದು ಆಶಿಸುತ್ತೇನೆ. ಇಲ್ಲದಿದ್ದರೆ ರಥದಲ್ಲಿ ಕುಳಿತ ಫಲ್ಗುನ ಮತ್ತು ಭೀಮರು, ಈ ಮೊದಲೇ ತಮ್ಮದೇ ಕರ್ಮಗಳಿಂದ ದಹಿಸಿ ಹೋಗಲ್ಪಡುವ ಮಂದಬುದ್ಧಿಯ ಧಾರ್ತರಾಷ್ಟ್ರರನ್ನು, ಸುಟ್ಟುಹಾಕುತ್ತಾರೆ. ಪಾಂಡವೇಯರು ಸೋತಾಗ ಧಾರ್ತರಾಷ್ಟ್ರನು ರೌದ್ರರೂಪದ ಮಾತುಗಳನ್ನಾಡಿದ್ದನು. ಗದೆಯನ್ನು ಹಿಡಿದ ಭೀಮಸೇನನು ಅಪ್ರಮತ್ತನಾಗಿ ಸಮಯ ಬಂದಾಗ ದುರ್ಯೋಧನನಿಗೆ ಅದನ್ನು ನೆನಪಿಸಿ ಕೊಡುತ್ತಾನೆ.
“ಮನ್ಯುಮಯ ದುರ್ಯೋಧನನು ಮಹಾವೃಕ್ಷ, ಕರ್ಣನು ಅದರ ಕಾಂಡ, ಶಕುನಿಯು ಅದರ ಶಾಖೆಗಳು, ದುಃಶಾಸನನು ಸಮೃದ್ಧವಾದ ಪುಷ್ಪಫಲಗಳು, ರಾಜಾ ಮನೀಷೀ ಧೃತರಾಷ್ಟ್ರನು ಅದರ ಬೇರುಗಳು. ಧರ್ಮಮಯ ಯುಧಿಷ್ಠಿರನು ಮಹಾವೃಕ್ಷ, ಅರ್ಜುನನು ಅದರ ಕಾಂಡ, ಭೀಮಸೇನನು ಅದರ ಶಾಖೆಗಳು, ಮಾದ್ರೀಪುತ್ರರು ಸಮೃದ್ಧವಾದ ಪುಷ್ಪಫಲಗಳು, ನಾನು, ಬ್ರಹ್ಮ, ಮತ್ತು ಬ್ರಾಹ್ಮಣರು ಅದರ ಬೇರುಗಳು. ಸಂಜಯ! ಪುತ್ರರೊಂದಿಗೆ ರಾಜಾ ಧೃತರಾಷ್ಟ್ರನು ವನ, ಪಾಂಡವೇಯರು ವನದಲ್ಲಿರುವ ಹುಲಿಗಳು. ವ್ಯಾಘ್ರಗಳೊಂದಿಗೆ ವನವನ್ನು ಕಡಿದುರಿಳಿಸಬೇಡ! ವ್ಯಾಘ್ರಗಳನ್ನೂ ವನದಿಂದ ಓಡಿಸಬೇಡ! ಕಾಡಿಲ್ಲದೇ ವ್ಯಾಘ್ರಗಳು ವಧೆಗೊಳ್ಳುತ್ತವೆ. ವ್ಯಾಘ್ರಗಳಿಲ್ಲದೇ ವನವು ಕಡಿಯಲ್ಪಡುತ್ತದೆ. ಆದುದರಿಂದ ವ್ಯಾಘ್ರಗಳು ವನವನ್ನು ರಕ್ಷಿಸಬೇಕು. ವನವು ವ್ಯಾಘ್ರಗಳನ್ನು ಪಾಲಿಸಬೇಕು. ಧಾರ್ತರಾಷ್ಟ್ರರು ಲತೆಗಳಂತಿದ್ದರೆ ಪಾಂಡವರು ಶಾಲವೃಕ್ಷಗಳಂತೆ. ಮಹಾವೃಕ್ಷವನ್ನು ಆಶ್ರಯಿಸದೇ ಲತೆಗಳು ಬೆಳೆಯಲಾರವು. ಪಾರ್ಥರು ಸೇವೆಮಾಡಲೂ ನಿಂತಿದ್ದಾರೆ, ಮತ್ತು ಈ ಅರಿಂದಮರು ಯುದ್ಧಮಾಡಲೂ ನಿಂತಿದ್ದಾರೆ. ನರಾಧಿಪ ಧೃತರಾಷ್ಟ್ರನು ಏನು ಮಾಡಬೇಕೋ ಅದನ್ನು ಮಾಡಲಿ. ಧರ್ಮಚಾರಿಗಳಾದ ಮಹಾತ್ಮ ಪಾಂಡವರು ಶಾಂತಿಗೆ ಕಾಯುತ್ತಿದ್ದಾರೆ. ಅವರು ಸಮೃದ್ಧ ಯೋಧರೂ ಕೂಡ. ಇದನ್ನು ಯಥಾವತ್ತಾಗಿ ಅವರಿಗೆ ಹೇಳು.”
ಸಂಜಯನು ಯುಧಿಷ್ಠಿರನಿಂದ ಬೀಳ್ಕೊಂಡಿದುದು
ಸಂಜಯನು ಹೇಳಿದನು: “ನರದೇವದೇವ! ಪಾಂಡವ! ನಿನ್ನಿಂದ ಬೀಳ್ಕೊಳ್ಳುತ್ತೇನೆ. ನಾನು ಹೋಗುತ್ತೇನೆ. ನಿನಗೆ ಮಂಗಳವಾಗಲಿ! ನನ್ನ ಈ ಪಕ್ಷಪಾತೀ ಹೃದಯವು ನಿನ್ನನ್ನು ನೋಯಿಸುವ ಹಾಗೆ ಏನನ್ನೂ ನನ್ನಿಂದ ಮಾತನಾಡಿಸಲಿಲ್ಲ ಎಂದು ಅಂದುಕೊಳ್ಳುತ್ತೇನೆ. ಜನಾರ್ದನನನ್ನೂ, ಭೀಮಸೇನ-ಅರ್ಜುನರನ್ನೂ, ಮಾದ್ರೀಸುತರನ್ನೂ, ಸಾತ್ಯಕಿಯನ್ನೂ, ಚೇಕಿತಾನನನ್ನೂ ಬೀಳ್ಕೊಂಡು ಹೋಗುತ್ತೇನೆ. ಮಂಗಳವೂ ಸುಖವೂ ನಿಮ್ಮದಾಗಲಿ. ಎಲ್ಲ ನೃಪರೂ ನನ್ನನ್ನು ಸೌಮ್ಯ ದೃಷ್ಟಿಯಿಂದ ಕಾಣಲಿ.”
ಯುಧಿಷ್ಠಿರನು ಹೇಳಿದನು: “ಸಂಜಯ! ಅಪ್ಪಣೆಯಿದೆ. ಹೊರಡು. ನಿನಗೆ ಮಂಗಳವಾಗಲಿ. ನೀನು ಎಂದೂ ನಮ್ಮ ಕುರಿತು ಕೆಟ್ಟದ್ದನ್ನು ಯೋಚಿಸಿದವನಲ್ಲ. ಸಭಾಸದರಲ್ಲಿ ನೀನೇ ಶುದ್ಧಾತ್ಮನೆಂದು ಅವರಿಗೆ ಮತ್ತು ನಮಗೆಲ್ಲರಿಗೂ ಗೊತ್ತು, ಆಪ್ತ ದೂತನೂ, ಸುಪ್ರಿಯನೂ, ಕಲ್ಯಾಣಮಾತುಳ್ಳವನೂ, ಶೀಲವಂತನೂ, ದೃಷ್ಟಿವಂತನೂ ಆಗಿದ್ದೀಯೆ. ನೀನು ಮೋಹಿತನಾಗಿಲ್ಲ. ವಿಷಯವನ್ನು ಇದ್ದಹಾಗೆ ಹೇಳಿದರೂ ನೀನು ಸಿಟ್ಟಾಗುವುದಿಲ್ಲ. ಸೂತ ನೀನು ಕಠೋರವಾದ ಮಾತುಗಳನ್ನಾಡಿ ಹೃದಯವನ್ನು ಚುಚ್ಚುವುದಿಲ್ಲ. ಕಟುಕವಾಗಿ ಅಥವಾ ಹುಳಿಯಾಗಿ ಸಂಬೋಧಿಸುವುದಿಲ್ಲ. ನಿನ್ನ ಮಾತು ಧರ್ಮಯುಕ್ತವೂ, ಅರ್ಥವತ್ತಾಗಿಯೂ, ಅಹಿಂಸಾಯುಕ್ತವೂ ಆಗಿದೆ ಎಂದು ನನಗೆ ತಿಳಿದಿದೆ. ನಮಗೆ ನೀನು ಪ್ರಿಯತಮನಾದ ದೂತ. ನಿನ್ನನ್ನು ಬಿಟ್ಟರೆ ಇಲ್ಲಿಗೆ ವಿದುರನು ಬರಬೇಕಿತ್ತು. ನಿನ್ನನ್ನು ನಾವು ಈ ಹಿಂದೆಯೂ ನೋಡಲಿಲ್ಲವೇ? ನೀನು ಧನಂಜಯನ ಸಮನಾಗಿರುವೆ ಮತ್ತು ಸಖನಾಗಿರುವೆ.
“ಇಲ್ಲಿಂದ ಕ್ಷಿಪ್ರವಾಗಿ ಹೋಗಿ ವಿಶುದ್ಧ ವೀರ್ಯರೂ, ಶರಣೋಪಪನ್ನರೂ, ಉತ್ತಮ ಕುಲದಲ್ಲಿ ಜನಿಸಿದವರೂ, ಸರ್ವಧರ್ಮೋಪಪನ್ನರೂ ಆದ ಅರ್ಹ ಬ್ರಾಹ್ಮಣರನ್ನು ನಮಸ್ಕರಿಸು. ಸ್ವಾಧ್ಯಾಯಿಗಳನ್ನೂ, ಬ್ರಾಹ್ಮಣರನ್ನೂ, ಭಿಕ್ಷುಗಳನ್ನೂ, ನಿತ್ಯವೂ ವನದಲ್ಲಿರುವ ತಪಸ್ವಿಗಳನ್ನೂ ಅಭಿವಂದಿಸಿ ನನ್ನ ಮಾತಿನಂತೆ ವೃದ್ಧರ ಮತ್ತು ಇತರರ ಕುಶಲವನ್ನು ಕೇಳು. ನೀನು ರಾಜಾ ಧೃತರಾಷ್ಟ್ರನ ಪುರೋಹಿತನನ್ನು, ಅವನ ಆಚಾರ್ಯನನ್ನೂ ಋತ್ವಿಜನನ್ನೂ, ಅವರ ಜೊತೆಗಿರುವವರನ್ನೂ ಯಥಾರ್ಹವಾಗಿ ಭೇಟಿಮಾಡಿ ಅವರ ಕುಶಲವನ್ನೂ ಕೇಳಬೇಕು. ಅನಂತರ ನಮ್ಮ ಪ್ರಿಯ ಆಚಾರ್ಯ, ವಿಧೇಯ, ಅನಪಗ, ವೇದವನ್ನು ಬಯಸಿ ಬ್ರಹ್ಮಚರ್ಯವನ್ನು ನಡೆಸಿರುವ, ಅಸ್ತ್ರಗಳನ್ನು ಅವುಗಳ ನಾಲ್ಕೂ ಕಾಲುಗಳನ್ನೂ ಪುನಃ ಪ್ರತಿಷ್ಠಾಪಿಸಿದ ಪ್ರಸನ್ನ ದ್ರೋಣನಿಗೆ ಯಥಾರ್ಹವಾಗಿ ಅಭಿವಾದಿಸು. ಅನಂತರ ನೀನು ಅಧ್ಯಯನದಲ್ಲಿ ನಿರತನಾಗಿರುವ, ಶರಣೋಪಪನ್ನನಾದ, ಅಸ್ತ್ರವನ್ನು ಪುನಃ ಪ್ರತಿಷ್ಠಾಪಿಸಿದ, ಗಂಧರ್ವಪುತ್ರನಂತಿರುವ, ತರಸ್ವಿ, ಅಶ್ವತ್ಥಾಮನ ಕುಶಲವನ್ನು ಕೇಳು. ಶಾರದ್ವತನ ಮನೆಗೆ ಹೋಗಿ, ನನ್ನ ಹೆಸರನ್ನು ಪುನಃ ಪುನಃ ಹೇಳುತ್ತಾ ಆ ಮಹಾರಥಿಯ, ಅಸ್ತ್ರವಿದರಲ್ಲಿ ಶ್ರೇಷ್ಠ ಕೃಪನ ಪಾದಗಳನ್ನು ಕೈಗಳಿಂದ ಮುಟ್ಟಿ ನಮಸ್ಕರಿಸು. ಯಾರಲ್ಲಿ ಶೌರ್ಯ, ಅಕ್ರೂರತೆ, ತಪಸ್ಸು, ಪ್ರಜ್ಞಾಶೀಲತೆ, ಶ್ರುತಿಸತ್ವ, ಧೃತಿಗಳಿವೆಯೋ ಆ ಕುರುಸತ್ತಮ ಭೀಷ್ಮನ ಪಾದಗಳನ್ನು ಹಿಡಿದು ನನ್ನ ನಿವೇದನೆಯನ್ನು ಹೇಳಬೇಕು. ಪ್ರಜ್ಞಾಚಕ್ಷು, ಕುರುಗಳ ಪ್ರಣೀತ, ಬಹುಶ್ರುತ, ವೃದ್ಧಸೇವೀ, ಮನೀಷೀ ಆ ರಾಜನಿಗೆ ವಂದಿಸಿ ನನ್ನ ಆರೋಗ್ಯದ ಕುರಿತು ಹೇಳು. ಧೃತರಾಷ್ಟ್ರನ ಜ್ಯೇಷ್ಠ ಪುತ್ರ ಮಂದಬುದ್ಧಿ, ಮೂರ್ಖ, ಹಠವಾದಿ, ಪಾಪಶೀಲ, ಈ ಎಲ್ಲ ಪೃಥ್ವಿಯನ್ನೂ ಆಳುತ್ತಿರುವ ಸುಯೋಧನನ ಕುಶಲವನ್ನು ಕೇಳು. ಅವನ ಕಿರಿಯ ತಮ್ಮ ಮಂದಬುದ್ಧಿಯ, ಯಾವಾಗಲೂ ಅವನಂತೆಯೇ ನಡೆದುಕೊಳ್ಳುವ, ಮಹೇಷ್ವಾಸ, ಕುರುಗಳಲ್ಲಿಯೇ ಅತ್ಯಂತ ಶೂರನಾದ ದುಃಶಾಸನನ ಕುಶಲವನ್ನು ಕೇಳು. ಶ್ರೇಷ್ಠ ಕವಿ, ಎಲ್ಲ ವಿಷಯಗಳಲ್ಲಿಯೂ ವಿವೇಕಿಯಾದ, ಮಹಾಪ್ರಾಜ್ಞ, ಸರ್ವಧರ್ಮೋಪಪನ್ನ, ಯಾರೊಂದಿಗೂ ಎಂದೂ ಯುದ್ಧವನ್ನು ಬಯಸದ ವೈಶ್ಯಾಪುತ್ರ ವಿದುರನ ಕುಶಲವನ್ನು ಕೇಳು. ಕತ್ತರಿಸುವುದರಲ್ಲಿ ಮತ್ತು ಜೂಜಿನಲ್ಲಿ ಅದ್ವಿತೀಯನಾದ, ಕುಶಲ ಮೋಸಗಾರ, ದಾಳ ಮತ್ತು ಪಗಡೆಯಾಟಗಳಲ್ಲಿ ಪಳಗಿದ, ಜೂಜಿನ ಸ್ಪರ್ಧೆಯಲ್ಲಿ ಗೆಲ್ಲಲಸಾಧ್ಯನಾದ ಆ ಚಿತ್ರಸೇನನ ಕುಶಲವನ್ನು ಕೇಳು.
“ನಿತ್ಯವೂ ಭಾರತರ ನಡುವೆ ಶಾಂತಿಯ ಹೊರತು ಬೇರೆ ಏನನ್ನೂ ಬಯಸದ, ಬಾಹ್ಲೀಕರ ಹಿರಿಯ ವೃಷಭ, ಮನಸ್ವಿಗೆ ಮೊದಲಿನಂತೆ ಪ್ರಸನ್ನನ್ನಾಗಿ ನನ್ನ ನಮಸ್ಕಾರಗಳು. ನನ್ನ ಮತದಂತೆ ಅನೇಕ ಉತ್ತಮ ಗಣಗಳಿಂದ ಯುಕ್ತನಾಗಿರುವ, ತಿಳಿದವನಾದರೂ ನಿಷ್ಠುರವಾಗಿರದ, ಸ್ನೇಹಭಾವದಿಂದ ಸಿಟ್ಟನ್ನು ಸದಾ ಸಹಿಸಿಕೊಳ್ಳುತ್ತಿರುವ ಆ ಸೋಮದತ್ತನೂ ಪೂಜನೀಯ. ಕುರುಗಳಲ್ಲಿ ಸೌಮದತ್ತಿಯು ಅತ್ಯಂತ ಅರ್ಹನು. ಅವನು ನನ್ನ ಭ್ರಾತಾ ಮತ್ತು ಸಖನೂ ಕೂಡ. ಮಹೇಷ್ವಾಸ, ರಥಿಗಳಲ್ಲಿ ಉತ್ತಮನಾದ ಅವನ, ಮಂತ್ರಿಗಳೊಡನೆ, ಕುಶಲವನ್ನು ಕೇಳು. ಅಲ್ಲಿ ಇನ್ನೂ ಇತರ ಕುರುಮುಖ್ಯ ಯುವಕರು, ನನ್ನ ಮಕ್ಕಳು, ಮೊಮ್ಮಕ್ಕಳು ಮತ್ತು ಸಹೋದರರು ಇದ್ದಾರೆ. ಯಾವುದೇ ರೀತಿಯಲ್ಲಿ ಅವರನ್ನು ಭೇಟಿಯಾದರೆ ನನ್ನ ಕಡೆಯಿಂದ ಅವರ ಆರೋಗ್ಯವನ್ನು ಕೇಳುತ್ತೀಯಾ? ಪಾಂಡವರ ವಿರುದ್ಧ ಹೋರಾಡಲು ಧೃತರಾಷ್ಟ್ರನು ಒಟ್ಟುಗೂಡಿಸಿರುವ ರಾಜರ - ವಸಾತಿಗಳು, ಶಾಲ್ವಕರು, ಕೇಕಯರು, ಅಂಬಷ್ಠರು, ತ್ರಿಗರ್ತ ಮುಖ್ಯರು, ಪೂರ್ವ-ಉತ್ತರಗಳ ಪ್ರಮುಖರು, ದಕ್ಷಿಣದ ಶೂರರು, ಮತ್ತು ಹಾಗೆಯೇ ಪಶ್ಚಿಮದ ಪಾರ್ವತೇಯರು, ಎಲ್ಲರೂ ಕೇಡನ್ನು ಬಯಸದವರು, ಶೀಲ-ನಡತೆಯುಳ್ಳವರು, ಅವರೆಲ್ಲರ ಕುಶಲವನ್ನು ಕೇಳು. ಮಾವುತರಿಗೆ, ಅಶ್ವಾರೋಹಿಗಳಿಗೆ, ರಥಿಗಳಿಗೆ, ಸಾದಿನರಿಗೆ, ಪದಾಳುಗಳಿಗೆ, ಅಲ್ಲಿಸೇರಿದ ಆರ್ಯರ ಮಹಾಗುಂಪಿನ ಅವರಿಗೆ ನಾನು ಕುಶಲನಾಗಿದ್ದೇನೆಂದು ಹೇಳು. ಅವರೆಲ್ಲರ ಕುಶಲವನ್ನೂ ಕೇಳು. ಹಾಗೆಯೇ ರಾಜನಿಂದ ನಿಯುಕ್ತರಾಗಿರುವ ಅಮಾತ್ಯರು, ಕಂದಾಯದ ಅಧಿಕಾರಿಗಳು, ಸೇನೆಗಳನ್ನು ನಡೆಸುವವರು, ಖರ್ಚು-ವೆಚ್ಚಗಳನ್ನು ಲೆಖ್ಕಮಾಡುವವರು, ಮತ್ತು ಅವನ ಕಾರ್ಯಗಳ ಕುರಿತು ವಿಶೇಷವಾಗಿ ಚಿಂತಿಸುವವರು. ಗಾಂಧಾರರಾಜ, ಶಕುನಿ, ಪಾರ್ವತೇಯ, ಕಡಿಯುವುದರಲ್ಲಿ ಮತ್ತು ಜೂಜಾಟದಲ್ಲಿ ಅದ್ವಿತೀಯನಾದ ಧಾರ್ತರಾಷ್ಟ್ರನ ಮಾನವನ್ನು ಹೆಚ್ಚಿಸುವ ಆ ಅಪ್ರಮಾಣಿಕನ ಕುಶಲವನ್ನೂ ಕೇಳಬೇಕು. ಸೋಲಿಸಲಸಾಧ್ಯರಾದ ಪಾಂಡವರನ್ನು ಒಂದೇ ರಥದಿಂದ ಗೆಲ್ಲಲು ಉತ್ಸುಕನಾಗಿರುವ, ಮೋಹಿತರನ್ನು ಮೋಹಗೊಳಿಸುವರಲ್ಲಿ ಅದ್ವಿತೀಯನಾದ ಆ ವೈಕರ್ತನನ ಕುಶಲವನ್ನು ಕೇಳಬೇಕು. ನಮ್ಮ ಭಕ್ತನಾಗಿರುವ, ಗುರುವೂ, ಭೃತ್ಯನೂ, ತಂದೆ-ತಾಯಂದಿರೂ, ಸ್ನೇಹಿತನೂ ಆಗಿರುವ ಅಗಾಧಬುದ್ಧಿಯ, ದೀರ್ಘದರ್ಶೀ ಮಂತ್ರಿ ವಿದುರನ ಕುಶಲವನ್ನೂ ಕೇಳಬೇಕು.
“ನಮಗೆ ತಾಯಂದಿರೆಂದು ತಿಳಿಯಲ್ಪಟ್ಟಿರುವ, ಗುಣೋಪಪನ್ನ ವೃದ್ಧಸ್ತ್ರೀಯರು; ಅವರೆಲ್ಲರನ್ನೂ ಒಟ್ಟಿಗೇ ಭೇಟಿಮಾಡಿ ಆ ವೃದ್ಧಸ್ತ್ರೀಯರಿಗೆ ಅಭಿವಂದನೆಗಳನ್ನು ಈ ರೀತಿ ಹೇಳು: “ಯಾರ ಮಕ್ಕಳು ಜೀವತರಾಗಿದ್ದಾರೋ ಅವರು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಯೇ?” ಇದರ ನಂತರ ಅಜಾತಶತ್ರುವು ಪುತ್ರರೊಂದಿಗೆ ಕುಶಲನಾಗಿದ್ದಾನೆ ಎಂದು ಹೇಳಬೇಕು. ನಮ್ಮ ಭಾರ್ಯೆಯರಂತಿರುವವರನ್ನು ತಿಳಿದು ಅವರೆಲ್ಲರ ಕುಶಲವನ್ನೂ ಕೇಳಬೇಕು - “ನೀವೆಲ್ಲರೂ ಚೆನ್ನಾಗಿ ರಕ್ಷಿಸಲ್ಪಟ್ಟಿರುವಿರೇ? ನಿಮ್ಮ ಗೌರವಕ್ಕೆ ಏನೂ ಗಾಯಗಳಾಗಲಿಲ್ಲ ತಾನೇ? ತಮ್ಮ ತಮ್ಮ ಮನೆಗಳಲ್ಲಿ ಅಪ್ರಮತ್ತರಾಗಿ ವಾಸಿಸುತ್ತಿದ್ದಾರೆಯೇ? ನಿಮ್ಮ ಅತ್ತೆಮಾವಂದಿರೊಡನೆ ಚೆನ್ನಾಗಿ, ನೋವಾಗದಂತೆ, ನಡೆದುಕೊಳ್ಳುತ್ತಿರುವಿರಾ? ಪತಿಯಂದಿರಿಗೆ ಅನುಕೂಲವಾಗುವಂತಹ ನಡತೆಯನ್ನು ನಿಮ್ಮಲ್ಲಿ ನೆಲೆಮಾಡಿಸಿಕೊಂಡಿದ್ದೀರಾ?” ಅಲ್ಲಿ ನಮ್ಮ ಸೊಸೆಯಂದಿರಂತಿರುವ ಗುಣೋಪಪನ್ನ, ಕುಲೀನ ಮಕ್ಕಳ ತಾಯಂದಿರಾದ ಯುವತಿಯರನ್ನು ಭೇಟಿಯಾದಾಗ ಯುಧಿಷ್ಠಿರನು ಅವರಿಗೆ ಪ್ರಸನ್ನ ಸಂದೇಶಗಳನ್ನು ಕಳುಹಿಸಿದ್ದಾನೆಂದು ಹೇಳು. ನಮ್ಮ ಮನೆಯ ಹೆಣ್ಣುಮಕ್ಕಳನ್ನು ಆಲಂಗಿಸಿ ನನ್ನ ವತಿಯಿಂದ ಅವರ ಆರೋಗ್ಯದ ಕುರಿತು ಕೇಳಬೇಕು. ಅವರಿಗೆ ನೀನು ಹೇಳಬೇಕು - “ನಿಮ್ಮ ಪತಿಯಂದಿರು ನಿಮ್ಮೊಡನೆ ಚೆನ್ನಾಗಿರಲಿ. ನೀವು ಕೂಡ ನಿಮ್ಮ ಪತಿಯಂದಿರಿಗೆ ಅನುಕೂಲರಾಗಿರಿ. ಅಲಂಕೃತರಾಗಿ, ಉತ್ತಮ ವಸ್ತ್ರಗಳನ್ನುಟ್ಟು, ಸುಗಂಧಗಳನ್ನು ತೊಟ್ಟು, ಶುಚಿಯಾಗಿದ್ದುಕೊಂಡು ಸುಖವನ್ನು ಭೋಗಿಸಿ. ನಿಮ್ಮ ನೋಟವು ಚೆನ್ನಾಗಿರಲಿ ಮಾತು ಸುಖಕರವಾಗಿರಲಿ.” ನೀನು ಮನೆಯ ಸ್ತ್ರೀಯರ ಕುಶಲವನ್ನು ಕೇಳಬೇಕು.
“ಕುರುಗಳ ಆಶ್ರಯದಲ್ಲಿರುವ ದಾಸೀಪುತ್ರರಿಗೂ, ದಾಸರಿಗೂ, ಕುಬ್ಜರಿಗೂ, ಕುಳ್ಳರಿಗೂ ನಾನು ಕುಶಲನಾಗಿದ್ದೇನೆಂದು ಹೇಳು. ಅನಂತರ ಅವರ ಆರೋಗ್ಯದ ಕುರಿತೂ ಕೇಳಬೇಕು. ಅವರು ಹಿಂದೆ ಮಾಡುತ್ತಿದ್ದ ವೃತ್ತಿಗಳಲ್ಲಿಯೇ ತೊಡಗಿದ್ದಾರೆಯೇ ಮತ್ತು ಧಾರ್ತರಾಷ್ಟ್ರರು ಅವರಿಗೆ ಮೊದಲಿನಂತೆಯೇ ಕೊಡುತ್ತಿದ್ದಾರೆಯೇ? ಧೃತರಾಷ್ಟ್ರನು ಪೊರೆಯುವ ಅಂಗಹೀನರಿಗೂ ಕೃಪಣರಿಗೂ, ಗಿಡ್ಡರಿಗೂ, ವೃದ್ಧರಿಗೂ, ಕುರುಡರಿಗೂ, ಮತ್ತು ಕಾಲುಗಳನ್ನು ಕಳೆದುಕೊಂಡು ಕೇವಲ ಕೈಗಳಿಂದ ಕೆಲಸಮಾಡಬಲ್ಲ ಎಲ್ಲರಿಗೂ ನನ್ನ ಕುಶಲತೆಯ ಕುರಿತು ಹೇಳಿ ನಂತರ ಅವರ ಆರೋಗ್ಯದ ಕುರಿತು ಕೇಳಬೇಕು. “ನಿಮ್ಮ ಕೆಟ್ಟ ಜೀವನ ದುಃಖದಿಂದ ಭಯಪಡಬೇಡಿ. ಪರಲೋಕಗಳಲ್ಲಿ ಪಾಪಗಳನ್ನು ಮಾಡಿರಬಹುದು. ಶತ್ರುಗಳನ್ನು ನಿಗ್ರಹಿಸಿ ಸುಹೃದರನ್ನು ಅನುಗ್ರಹಿಸಿ ನಾನು ನಿಮಗೆ ಊಟ ವಸ್ತ್ರಗಳನ್ನಿತ್ತು ತೃಪ್ತಿಗೊಳಿಸುತ್ತೇನೆ. ಬ್ರಾಹ್ಮಣರಿಂದ ನನಗೆ ಇನ್ನೂ ಉತ್ತಮ ಫಲಗಳು ಬರುವುದಿದೆ. ಭವಿಷ್ಯದಲ್ಲಿ ನನಗೆ ಅವು ದೊರೆಯುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ನೀವೆಲ್ಲರೂ ಪುನಃ ಯುಕ್ತರೂಪರಾಗುತ್ತೀರಿ. ಅದು ಸಿದ್ಧಿಯಾದಾಗ ನೃಪನಿಗೆ ತಿಳಿಸಿ.” ಅನಾಥರಾಗಿರುವ, ದುರ್ಬಲರಾಗಿರುವ, ಸರ್ವಕಾಲದಲ್ಲಿಯೂ ತಮ್ಮ ಕುರಿತೇ ಚಿಂತಿಸುತ್ತಿರುವ, ಮೂಢ ಕೃಪಣರೆಲ್ಲರನ್ನು ಕೂಡ ನಮ್ಮ ಪರವಾಗಿ ಕುಶಲವನ್ನು ಕೇಳು. ನಾನಾ ದಿಕ್ಕುಗಳಿಂದ ಬಂದು ಧಾರ್ತರಾಷ್ಟ್ರರೊಡನೆ ಸೇರಿದ ಇತರರಿಗೂ, ನೀನು ನೋಡಲು ಸಾಧ್ಯವಾದ ಎಲ್ಲರಿಗೂ ಕುಶಲ ಮತ್ತು ಆರೋಗ್ಯದ ಕುರಿತು ಕೇಳು. ಹೀಗೆ ಎಲ್ಲ ದಿಕ್ಕುಗಳಿಂದಲೂ ಬಂದವರ, ಇನ್ನೂ ಬರುತ್ತಿರುವ ರಾಜರಿಗೂ ದೂತರಿಗೂ ಎಲ್ಲರಿಗೂ ಅವರ ಕುಶಲವನ್ನು ಕೇಳಿ ನಂತರ ಅವರಿಗೆ ನಾನು ಕುಶಲನಾಗಿದ್ದೇನೆ ಎಂದು ಹೇಳು.
“ಧಾರ್ತರಾಷ್ಟ್ರರಿಗೆ ದೊರಕಿರುವ ಯೋಧಕರಂಥವರು ಬೇರೆ ಯಾರೂ ಭೂಮಿಯಲ್ಲಿಲ್ಲ. ಆದರೆ ಧರ್ಮವು ನಿತ್ಯ ಮತ್ತು ಧರ್ಮವೇ ಶತ್ರುಗಳನ್ನು ನಾಶಪಡಿಸಲು ನನ್ನಲ್ಲಿರುವ ಮಹಾಬಲ. ನನ್ನ ಈ ಮಾತನ್ನು ಧಾರ್ತರಾಷ್ಟ್ರ ಸುಯೋಧನನಿಗೆ ಪುನಃ ಪುನಃ ಕೇಳಿಸಬೇಕು: “ಕುರುಗಳನ್ನು ಸಂಪೂರ್ಣವಾಗಿ ನಾನೇ ಆಳುತ್ತೇನೆ ಎಂದು ನಿನ್ನ ಶರೀರದಲ್ಲಿ ಹೃದಯವನ್ನು ಸುಡುತ್ತಿರುವ ಈ ಆಸೆಗೆ ಯಾವುದೇ ಅರ್ಥವೂ ವಿವೇಕವೂ ಇಲ್ಲ. ನಿನಗೆ ಅಪ್ರಿಯವಾದುದನ್ನು ಮಾಡುವಂಥವರು ನಾವಲ್ಲ. ಶಕ್ರಪುರವನ್ನು ನಮಗೆ ಹಿಂದಿರುಗಿಸು ಅಥವಾ ಯುದ್ಧಮಾಡು.”
ಧೃತರಾಷ್ಟ್ರ-ದುರ್ಯೋಧನರಿಗೆ ಯುಧಿಷ್ಠಿರನ ಸಂದೇಶ
ಯುಧಿಷ್ಠಿರನು ಹೇಳಿದನು: “ಸಂಜಯ! ಸಂತರೂ ಅಸಂತರೂ, ಬಾಲರೂ ವೃದ್ಧರೂ, ಅಬಲರೂ ಬಲಶಾಲಿಗಳೂ ಎಲ್ಲರನ್ನೂ ಧಾತನು ವಶದಲ್ಲಿಟ್ಟುಕೊಂಡಿರುತ್ತಾನೆ. ಆ ಸರ್ವಗಳ ಒಡೆಯನೇ, ತನಗಿಷ್ಟವಾದ ಹಾಗೆ, ಬಾಲರಲ್ಲಿ ಪಾಂಡಿತ್ಯವನ್ನೂ ಪಂಡಿತರಲ್ಲಿ ಬಾಲಕತ್ವವನ್ನೂ ನೀಡುತ್ತಾನೆ. ಅವನು ಮೊದಲೇ ಬೀಜವನ್ನು ಬಿತ್ತುವಾಗಲೇ ಎಲ್ಲವನ್ನೂ ಕೊಟ್ಟುಬಿಟ್ಟಿರುತ್ತಾನೆ. ಉಪದೇಶವನ್ನು ಸಾಕುಮಾಡೋಣ. ಇದ್ದದ್ದನ್ನು ಇದ್ದಹಾಗೆ ನೀನು ಹೇಳುತ್ತೀಯೆ. ಈಗ ನಾವು ಅನ್ಯೋನ್ಯರಲ್ಲಿ ವಿಷಯವನ್ನು ಚರ್ಚಿಸಿ ತೃಪ್ತರಾಗಿದ್ದೇವೆ. ಕುರುಗಳ ಮಹಾಬಲ ಧೃತರಾಷ್ಟ್ರನಲ್ಲಿಗೆ ಹೋಗಿ, ಪಾದಗಳಿಗೆ ನಮಸ್ಕರಿಸಿ ನಂತರ ಅವನ ಆರೋಗ್ಯವನ್ನು ವಿಚಾರಿಸು. ಅವನು ಕುರುಗಳ ಮಧ್ಯದಲ್ಲಿ ಕುಳಿತಿರುವಾಗ ಅವನಿಗೆ ಹೇಳು: “ರಾಜನ್! ಪಾಂಡವರು ವೀರ್ಯದಿಂದ ಸುಖವಾಗಿ ಜೀವಿಸಿದ್ದಾರೆ. ನಿನ್ನ ಪ್ರಸಾದಿಂದ ಅವರು ಬಾಲಕರಿದ್ದಾಗಲೇ ರಾಜ್ಯವನ್ನು ಪಡೆದರು. ಮೊದಲು ಅವರನ್ನು ರಾಜ್ಯದಲ್ಲಿ ಸ್ಥಾಪಿಸಿ ಈಗ ಅವರನ್ನು ನಿರ್ಲಕ್ಷಿಸಿ ನಾಶಗೊಳಿಸಬೇಡ. ಇದ್ದುದೆಲ್ಲವನ್ನೂ ತನಗೊಬ್ಬನಿಗಾಗಿ ಮಾತ್ರ ಇಟ್ಟುಕೊಳ್ಳಲು ಯಾರೂ ಅರ್ಹನಿಲ್ಲ. ಅಪ್ಪಾ! ನಾವು ಒಟ್ಟಾಗಿ ಜೀವಿಸೋಣ. ದ್ವೇಷಿಗಳ ವಶದಲ್ಲಿ ಹೋಗಬೇಡ!”
“ಅನಂತರ ಭಾರತರ ಪಿತಾಮಹ ಶಾಂತನವ ಭೀಷ್ಮನಿಗೆ ನನ್ನ ಹೆಸರನ್ನು ಹೇಳಿ ತಲೆಬಾಗಿ ನಮಸ್ಕರಿಸಬೇಕು. ನಮ್ಮ ಪಿತಾಮಹನಿಗೆ ನಮಸ್ಕರಿಸಿ ಹೇಳಬೇಕು: “ಹಿಂದೆ ನೀನು ಶಂತನುವಿನ ವಂಶವು ಮುಳುಗುತ್ತಿರುವಾಗ ಅದನ್ನು ಪುನಃ ಉದ್ಧರಿಸಿದೆ. ಪಿತಾಮಹ! ಈಗ ನಿನ್ನದೇ ವಿಚಾರದಂತೆ ನಿನ್ನ ಮೊಮ್ಮಕ್ಕಳು ಪರಸ್ಪರ ಪ್ರೀತಿಯಿಂದ ಬದುಕಿರುವಂತೆ ಮಾಡು.” ಅನಂತರ ಕುರುಗಳ ಮಂತ್ರಧಾರಿಣಿ ವಿದುರನಿಗೆ ಹೇಳಬೇಕು: “ಸೌಮ್ಯ! ಯುಧಿಷ್ಠಿರನ ಹಿತವನ್ನು ಬಯಸಿ ಅಯುದ್ಧದ ಮಾತನಾಡು!” ಅನಂತರ ಕುರುಗಳ ಮಧ್ಯೆ ಕುಳಿತಿರುವ ರಾಜಪುತ್ರ, ಅಮರ್ಷಣ, ಸುಯೋಧನನನ್ನು ಪುನಃ ಪುನಃ ಪುಸಲಾಯಿಸುತ್ತಾ ಹೇಳಬೇಕು: “ಕುರುಗಳನ್ನು ವಧಿಸಬಾರದು ಎಂದು ಏಕಾಂಗಿಯಾಗಿ ಸಭಾಗತಳಾಗಿದ್ದ ಕೃಷ್ಣೆಯನ್ನು ನಾನು ಉಪೇಕ್ಷಿಸಿ ನೋಡುತ್ತಿದ್ದ ಆ ದುಃಖವನ್ನೂ ನಾನು ಸಹಿಸಿಕೊಳ್ಳುತ್ತೇನೆ. ಈ ರೀತಿಯಲ್ಲಿ ಅದರ ಮೊದಲು ಮತ್ತು ನಂತರ ತಂದೊಡ್ಡಿದ ಕ್ಲೇಶಗಳನ್ನೂ ಪಾಂಡವರು, ಬಲಶಾಲಿಗಳಾಗಿದ್ದರೂ, ಸಹಿಸಿಕೊಂಡಿದ್ದಾರೆ ಎನ್ನುವುದೆಲ್ಲವನ್ನೂ ಕುರುಗಳು ತಿಳಿದಿದ್ದಾರೆ. ಸೌಮ್ಯ! ನೀನು ನಮ್ಮನ್ನು ಜಿಂಕೆಯ ಚರ್ಮಗಳನ್ನು ತೊಡಿಸಿ ಹೊರಗಟ್ಟಿದೆ. ಆ ದುಃಖವನ್ನು ಕೂಡ ಕುರುಗಳನ್ನು ಕೊಲ್ಲಬಾರದೆಂದು ಸಹಿಸಿಕೊಳ್ಳುತ್ತೇವೆ. ನಿನ್ನ ಅನುಮತಿಯಂತೆ ದುಃಶಾಸನನು ಸಭೆಯನ್ನು ಅತಿಕ್ರಮಿಸಿ ಕೃಷ್ಣೆಯ ಕೂದಲನ್ನು ಹಿಡಿದು ಎಳೆದುತಂದ. ಅದನ್ನೂ ನಾವು ಕ್ಷಮಿಸುತ್ತೇವೆ. ಆದರೆ ಯಥೋಚಿತವಾದ ನಮ್ಮ ಭಾಗವು ನಮಗೆ ದೊರೆಯಬೇಕು. ಪರರ ಸ್ವತ್ತಿನ ಮೇಲಿರುವ ನಿನ್ನ ಆಸೆಬುರುಕ ಬುದ್ಧಿಯನ್ನು ಹಿಂದೆ ತೆಗೆದುಕೋ! ಹಾಗಿದ್ದರೆ ಮಾತ್ರ ಶಾಂತಿಯಾಗಿರುತ್ತದೆ ಮತ್ತು ಪರಸ್ಪರರಲ್ಲಿ ಪ್ರೀತಿಯಿರುತ್ತದೆ. ಶಾಂತಿಯನ್ನು ಬಯಸುವ ನಮಗೆ ರಾಜ್ಯದ ಒಂದು ಮೂಲೆಯನ್ನಾದರೂ ಕೊಡು. ಕುಶಸ್ಥಲ, ವೃಕಸ್ಥಲ, ಆಸಂದೀ, ವಾರಣಾವತ ಮತ್ತು ಐದನೆಯದಾಗಿ ನೀನು ಬಯಸಿದ ಯಾವುದಾದರೂ ಒಂದು ತುಂಡನ್ನು ಕೊಡು. ಸುಯೋಧನ! ಹೀಗೆ ಐದು ಸಹೋದರರಿಗೆ ಐದು ಗ್ರಾಮಗಳನ್ನು ಕೊಡು. ಇದರಿಂದ ನಮ್ಮ ಮತ್ತು ನಮ್ಮ ದಾಯಾದಿಗಳ ನಡುವೆ ಶಾಂತಿಯು ನೆಲೆಸುತ್ತದೆ. ಸಹೋದರರು ಸಹೋದರರನ್ನು ಸೇರಲಿ, ತಂದೆಯಂದಿರು ಮಕ್ಕಳನ್ನು ಕೂಡಲಿ. ಪಾಂಚಾಲರು ಕುರುಗಳೊಂದಿಗೆ ಸೇರಿ ನಲಿದಾಡಲಿ. ಕುರುಪಾಂಚಾಲರು ನಾಶವಾಗದೇ ಇರುವುದನ್ನು ನೋಡಬೇಕು ಎನ್ನುವುದೇ ನನ್ನ ಆಸೆ. ಎಲ್ಲರೂ ಸುಮನಸ್ಕರಾಗಿ ಶಾಂತಿಯಿಂದ ಇರೋಣ!”
“ಸಂಜಯ! ನಾನು ಶಾಂತಿಗೆ ಹೇಗೋ ಹಾಗೆ ಯುದ್ಧಕ್ಕೂ ತಯಾರಿದ್ದೇನೆ. ಧರ್ಮ-ಅರ್ಥಗಳೆರಡನ್ನೂ ಬಯಸುತ್ತೇನೆ. ನಾನು ಮೃದುವಾಗಿರಬಲ್ಲೆ, ದಾರುಣವಾಗಬಲ್ಲೆ ಕೂಡ.”
ಸಂಜಯನು ಹಸ್ತಿನಾಪುರಕ್ಕೆ ಹಿಂದಿರುಗಿದ ರಾತ್ರಿಯೇ ಧೃತರಾಷ್ಟ್ರನನ್ನು ಭೇಟಿಮಾಡಿದುದು
ಆಗ ಮಹಾತ್ಮ ಧೃತರಾಷ್ಟ್ರನು ವಿಧಿಸಿದ ಎಲ್ಲ ಕೆಲಸಗಳನ್ನೂ ಪೂರೈಸಿ, ಸಂಜಯನು ಪಾಂಡವರಿಂದ ಅನುಜ್ಞೆಯನ್ನು ಪಡೆದು ಹೊರಟನು. ಹಾಸ್ತಿನಪುರವು ಹತ್ತಿರವಾದ ಕೂಡಲೇ ಶೀಘ್ರವಾಗಿ ಪ್ರವೇಶಿಸಿ, ಅಂತಃಪುರವನ್ನು ತಲುಪಿ, ದ್ವಾರದಲ್ಲಿ ನಿಂತಿರುವವನಿಗೆ ಹೇಳಿದನು: “ಧ್ವಾರಪಾಲಕನೇ! ನಾನು ಪಾಂಡವರ ಬಳಿಯಿಂದ ಬಂದಿದ್ದೇನೆ ಎಂದು ಧೃತರಾಷ್ಟ್ರನಿಗೆ ಹೇಳು. ರಾಜನು ಎಚ್ಚರವಾಗಿದ್ದರೆ ಮಾತ್ರ, ನಾನು ಒಳಬರಲು ಬಯಸುತ್ತೇನೆ ಎಂದು ಹೇಳಬೇಕು.”
ದ್ವಾರಪಾಲಕನು ಹೇಳಿದನು: “ಭೂಮಿಪತಿಗೆ ನಮಸ್ಕಾರ! ನಿನ್ನನ್ನು ಕಾಣಲು ಸಂಜಯನು ದ್ವಾರದಲ್ಲಿ ನಿಂತಿದ್ದಾನೆ. ಪಾಂಡವರ ಕಡೆಯಿಂದ ಸಂದೇಶವನ್ನು ತೆಗೆದುಕೊಂಡು ಬಂದಿದ್ದಾನೆ. ನಾನೇನು ಮಾಡಬೇಕೆಂದು ಆಜ್ಞಾಪಿಸು.”
ಧೃತರಾಷ್ಟ್ರನು ಹೇಳಿದನು: “ಅವನಿಗೆ ಹೇಳು - ನಾನು ಸುಖಿಯಾಗಿದ್ದೇನೆ ಮತ್ತು ಈಗ ಸಮಯವಿದೆ. ಅವನು ಪ್ರವೇಶಿಸಲಿ. ಸಂಜಯನಿಗೆ ಸ್ವಾಗತ. ನಿನ್ನನ್ನು ಯಾವ ಸಮಯದಲ್ಲಿಯೂ ಕಾಣಬಯಸುತ್ತೇನೆ. ಪ್ರವೇಶವು ಎಂದೂ ನಿಷೇದವಾಗಿರದ ಅವನು ಏಕೆ ಹೊರಗೆ ನಿಂತಿದ್ದಾನೆ?”
ಆಗ ನೃಪನ ಅನುಮತಿಯಂತೆ ಸೂತಪುತ್ರನು ವಿಶಾಲ ಅರಮನೆಯನ್ನು ಪ್ರವೇಶಿಸಿ, ಪ್ರಾಜ್ಞರೂ, ಶೂರರೂ ಮತ್ತು ಆರ್ಯರಿಂದ ರಕ್ಷಿಸಲ್ಪಟ್ಟ ಸಿಂಹಾಸನಸ್ಥ ವೈಚಿತ್ರವೀರ್ಯ ಪಾರ್ಥಿವನ ಬಳಿಸಾರಿ ಕೈಮುಗಿದು ಹೇಳಿದನು: “ಭೂಮಿಪತೇ ನಮಸ್ಕಾರ! ನಾನು ಸಂಜಯ! ಪಾಂಡವರಲ್ಲಿಗೆ ಹೋಗಿ ಬಂದಿದ್ದೇನೆ. ನಿನಗೆ ಅಭಿವಂದಿಸಿ ಮನಸ್ವೀ ಪಾಂಡುಪುತ್ರ ಯುಧಿಷ್ಠಿರನು ಕುಶಲವನ್ನೂ ಕೇಳಿದ್ದಾನೆ. ಅವನು ಪ್ರೀತಿಯಿಂದ ನಿನ್ನ ಮಕ್ಕಳನ್ನು ಕೇಳಿದ್ದಾನೆ. ಮತ್ತು ನೀನು ನಿನ್ನ ಮಕ್ಕಳು, ಮೊಮ್ಮಕ್ಕಳು, ಆಪ್ತರು, ಸ್ನೇಹಿತರು, ಸಚಿವರು ಮತ್ತು ನಿನ್ನನ್ನು ಅವಲಂಬಿಸಿರುವ ಎಲ್ಲರೊಡನೆ ಸಂತೋಷದಿಂದಿರುವೆಯಾ ಎಂದೂ ಕೇಳಿದ್ದಾನೆ.”
ಧೃತರಾಷ್ಟ್ರನು ಹೇಳಿದನು: “ಮಗೂ ಸಂಜಯ! ನಾನು ನಿನ್ನಲ್ಲಿ ಕೇಳುತ್ತಿದ್ದೇನೆ - ಅಜಾತಶತ್ರು ಪಾರ್ಥನು ಸುಖದಿಂದ ಇದ್ದಾನೆಯೇ? ರಾಜನು ಪುತ್ರರೊಂದಿಗೆ, ಅಮಾತ್ಯರೊಂದಿಗೆ, ಕೌರವರ ಅನುಜರೊಂದಿಗೆ ಕುಶಲನಾಗಿದ್ದಾನೆ ತಾನೇ?”
ಸಂಜಯನು ಹೇಳಿದನು: “ಅಮಾತ್ಯರೊಂದಿಗೆ ಪಾಂಡುಪುತ್ರನು ಕುಶಲನಾಗಿದ್ದಾನೆ. ಹಿಂದೆ ತನ್ನದಾಗಿಸಿಕೊಂಡಿದ್ದುದನ್ನು ಪಡೆಯಲು ಬಯಸುತ್ತಾನೆ. ಕೆಟ್ಟದ್ದನ್ನು ಏನನ್ನೂ ಮಾಡದೆಯೇ ಅವನು ಧರ್ಮ ಮತ್ತು ಅರ್ಥಗಳನ್ನು ಅರಸುತ್ತಾನೆ. ಅವನು ಮನಸ್ವೀ, ಬಹುಶ್ರುತ, ದೃಷ್ಟಿವಂತ ಮತ್ತು ಶೀಲವಂತ. ಆ ಪಾಂಡವನಿಗೆ ಅಹಿಂಸೆಯು ಪರಮ ಧರ್ಮ. ವಿತ್ತವನ್ನು ಒಟ್ಟುಮಾಡುವುದಕ್ಕಿಂತಲೂ ಅದು ಪರಮ ಧರ್ಮವೆಂದು ಅವನ ಮತ. ಪಾರ್ಥನು ಸುಖಪ್ರಿಯನಲ್ಲ, ಧರ್ಮಹೀನನಲ್ಲ. ಅವನ ಬುದ್ಧಿಯು ಏಳಿಗೆಯ ಮುಖವಾಗಿದೆ. ದಾರಕ್ಕೆ ಕಟ್ಟಲ್ಪಟ್ಟ ಮರದ ಗೊಂಬೆಯಂತೆ ಪುರುಷನು ಇನ್ನೊಂದರ ಕೈಯಲ್ಲಿರುತ್ತಾನೆ. ಪಾಂಡವನ ಈ ಕಷ್ಟಗಳನ್ನು ನೋಡಿ ಕರ್ಮವು ಮನುಷ್ಯನಿಗಿಂತಲೂ ದೊಡ್ಡದಾದ ದೈವ ಎಂದೆನಿಸುತ್ತದೆ.
“ನಿನ್ನ ಈ ಅತಿ ಪಾಪವನ್ನು ತರುವ, ಹೇಳಲಸಾಧ್ಯ ಘೋರರೂಪಿನ ಕರ್ಮದೋಷವನ್ನು ನೋಡಿದರೆ ಎಲ್ಲಿಯವರೆಗೆ ಮನುಷ್ಯನು ತೋರುವಿಕೆಗೆ ಇರುವುದನ್ನು ಬಯಸುತ್ತಾನೋ ಅಲ್ಲಿಯ ವರೆಗೆ ಅವನಿಗೆ ಪ್ರಶಂಸೆಯು ದೊರೆಯುತ್ತದೆ. ಅಜೀರ್ಣವಾದ ಅಸಮರ್ಥವಾದ ಚರ್ಮವನ್ನು ಸರ್ಪವು ತೊರೆಯುವಂತೆ ಆ ಧೀರ ಅಜಾತಶತ್ರುವಾದರೋ ಪಾಪವನ್ನು ತೊರೆದು ಹೊಳೆಯುತ್ತಿದ್ದಾನೆ. ಯುಧಿಷ್ಠಿರನು ಪಾಪವನ್ನು ನಿನಗೆ ಬಿಟ್ಟಿದ್ದಾನೆ. ಧರ್ಮಾರ್ಥಯುಕ್ತವಲ್ಲದ, ಆರ್ಯರ ನಡತೆಗೆ ವಿರೋಧವಾಗಿರುವ ನಿನ್ನ ಕೆಲಸವನ್ನು ನೀನೇ ತಿಳಿದುಕೋ. ಕೇವಲ ಕೆಟ್ಟ ಹೆಸರನ್ನು ನೀನು ಗಳಿಸಿದ್ದೀಯೆ. ಇದನ್ನು ನೀನು ಅಳಿಸಲಾರೆ. ಇದು ನಿನ್ನೊಡನೆಯೇ ಬರುತ್ತದೆ. ಇಂದು ನೀನು ಪುತ್ರರ ವಶಕ್ಕೆ ಬಂದು ಅವರ ವಿನಾ ಈ ಸಂಶಯಯುಕ್ತವಾದ ಸಂಪತ್ತನ್ನು ಭೋಗಿಸಲು ಆಶಿಸುತ್ತಿರುವೆ. ನಿನ್ನ ಈ ಅಧರ್ಮದ ವಿಷಯವು ಮಹಾ ಪೃಥ್ವಿಯೆಲ್ಲೆಲ್ಲಾ ಹರಡಿದೆ. ಇದು ನಿನಗೆ ಸಮನಾದುದಲ್ಲ.
“ತಿಳುವಳಿಕೆ ಇಲ್ಲದಿರುವವನಿಗೆ, ಕೆಟ್ಟ ಕುಲದಲ್ಲಿ ಹುಟ್ಟಿದವನಿಗೆ, ಕ್ರೂರನಾದವನಿಗೆ, ಬಹುಕಾಲ ವೈರವನ್ನು ಪ್ರತಿಪಾದಿಸುವವನಿಗೆ, ಕ್ಷತ್ರಿಯ ವಿದ್ಯೆಗಳಲ್ಲಿ ಅಧೀರನಾದವನಿಗೆ, ಈ ಗುರುತುಗಳಿರುವವನಿಗೆ ಮತ್ತು ಬುದ್ಧಿಯಿಲ್ಲದಿರುವ ಅವೀರ್ಯ ಅಶಿಕ್ಷಿತನಿಗೆ ಕಷ್ಟಗಳನ್ನು ಎದುರಿಸಲು ಸಾಧ್ಯವಾಗಲಾರದು. ಉತ್ತಮ ಕುಲದಲ್ಲಿ ಹುಟ್ಟುವುದು, ಧರ್ಮವಂತನಾಗಿರುವುದು, ಯಶಸ್ವಿಯಾಗುವುದು, ಪ್ರಸಿದ್ಧನಾಗುವುದು, ಸುಖಜೀವಿಯಾಗಿರುವುದು, ಯತಾತ್ಮನಾಗಿರುವುದು, ಧರ್ಮ-ಅರ್ಥಗಳಲ್ಲಿ ಸಿಲುಕಿಕೊಂಡಿರುವುವವನ್ನು ಬಿಡಿಸಿಕೊಳ್ಳುವುದು ಇವೆಲ್ಲವುಗಳಲ್ಲಿ ಅದೃಷ್ಟವಲ್ಲದೆ ಬೇರೆ ಯಾವುದರ ಕೈವಾಡವಿದೆ? ಬುದ್ಧಿವಂತರಾದ ಹಿರಿಯರಿಂದ ಸಲಹೆಗಳನ್ನು ಪಡೆದ, ಧರ್ಮ-ಅರ್ಥಗಳಲ್ಲಿ ಪ್ರಣೀತನಾದ, ಸರ್ವಮಂತ್ರಗಳಿಂದಲೂ ರಹಿತನಾಗಿರದ, ಅಮೂಢನು ಹೇಗೆ ತಾನೇ ಕ್ರೂರ ಕೃತ್ಯವನ್ನು ಮಾಡಬಹುದು? ಇಲ್ಲಿ ಸೇರಿರುವ ಮಂತ್ರವಿದರು ನಿನ್ನನ್ನೇ ಬೆಂಬಲಿಸುತ್ತಿದ್ದಾರೆ ಮತ್ತು ನಿನ್ನ ಕೆಲಸದಲ್ಲಿಯೇ ನಿತ್ಯವೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಈ ಬಲವಾದ ನಿಶ್ಚಯದಿಂದ ಕುರುಕ್ಷಯವು ನಡೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅಜಾತಶತ್ರುವು ಪಾಪದಿಂದ ಪಾಪವನ್ನು ಗೆಲ್ಲಲು ಅಕಾಲಿಕವಾಗಿ ಕುರುಗಳನ್ನು ನಾಶಪಡಿಸಬೇಕಾಗುವುದು. ನಿನಗೆ ಪಾಪವನ್ನೆಲ್ಲ ಬಿಟ್ಟುಕೊಟ್ಟು ಲೋಕದಲ್ಲಿ ನಿನ್ನ ನಿಂದೆಯೇ ನಡೆಯುವಂತೆ ಆಗುತ್ತದೆ. ದೇವತೆಗಳು ಪಾರ್ಥನನ್ನು ಪರಲೋಕಕ್ಕೆ ಕರೆಯಿಸಿಕೊಂಡು ತೋರಿಸಿ ಸನ್ಮಾನಿಸಿದರು ಎನ್ನುವುದಕ್ಕೆ ಬೇರೆ ಏನಾದರೂ ಅರ್ಥವಿದೆಯೇ? ಅದು ಮನುಷ್ಯನು ಮಾಡಿದುದಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. ಕರ್ಮ ಮತ್ತು ಕೃತನ ಈ ಗುಣಗಳನ್ನು, ಭಾವಾಭಾವಗಳನ್ನು, ವರ್ತಮಾನ ಮತ್ತು ಹಿಂದೆ ನಡೆದುದವುಗಳನ್ನು ನೋಡಿಯೇ ರಾಜಾ ಬಲಿಯು ಆದಿ ಅಂತ್ಯಗಳನ್ನು ತಿಳಿಯಲಾರದೇ ಇವಕ್ಕೆ ಕಾಲವಲ್ಲದೇ ಬೇರೆ ಏನೂ ಅಲ್ಲ ಎಂದು ಅಭಿಪ್ರಾಯಪಟ್ಟನು. ಕಣ್ಣು, ಕಿವಿ, ಮೂಗು, ಚರ್ಮ ಮತ್ತು ನಾಲಿಗೆಗಳು ಜಂತುವಿನ ಜ್ಞಾನದ ಬಾಗಿಲುಗಳು. ಆಸೆಗಳು ಕ್ಷಯವಾಗಲು ಇವು ತಮ್ಮಷ್ಟಕ್ಕೆ ತಾವೇ ಸುಖದಿಂದ ಇರುತ್ತವೆ. ಆದುದರಿಂದ ಇವುಗಳನ್ನು ವ್ಯಥೆಯಿಲ್ಲದೇ ದುಃಖಪಡೆಯದೇ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಪುರುಷನು ಕರ್ಮಗಳನ್ನು ಸರಿಯಾಗಿ ಮಾಡಿದರೆ ಬೇಕಾದ ಫಲಿತಾಂಶವನ್ನು ಪಡೆಯಬಹುದು ಎಂದು ಹೇಳುತ್ತಾರೆ. ತಂದೆ-ತಾಯಿಗಳ ಕರ್ಮದಿಂದ ಹುಟ್ಟಿದವನು ವಿಧಿವತ್ತಾದ ಆಹಾರಸೇವನೆಯಿಂದ ಬೆಳೆಯುತ್ತಾನೆ. ಪ್ರಿಯವಾದುದು, ಅಪ್ರಿಯವಾದುದು, ಸುಖ, ದುಃಖ, ನಿಂದನೆ ಮತ್ತು ಪ್ರಶಂಸೆಗಳು ಇವನನ್ನು ಹಿಂಬಾಲಿಸುತ್ತವೆ. ಅಪರಾಧಮಾಡಿದಾಗ ಇತರರು ಇವನನ್ನು ಝರಿಯುತ್ತಾರೆ. ಒಳ್ಳೆಯದಾಗಿ ನಡೆದುಕೊಂಡರೆ ಅವನನ್ನೇ ಜನರು ಪ್ರಶಂಸಿಸುತ್ತಾರೆ. ಭಾರತರಲ್ಲಿನ ಮನಸ್ತಾಪಕ್ಕೆ ನಾನು ನಿನ್ನನ್ನೇ ಬೈಯ್ಯುತ್ತೇನೆ. ಇದು ನಿಜವಾಗಿಯೂ ನಿನ್ನ ಮಕ್ಕಳ ಅಂತ್ಯವೆನಿಸಿಕೊಳ್ಳುತ್ತದೆ. ನಿನ್ನ ಕರ್ಮಾಪರಾಧದಿಂದ ಒಣಹುಲ್ಲಿನಂತೆ ಕುರುಗಳು ಸುಟ್ಟುಹೋಗದೇ ಇರಲಿ. ಈ ಸರ್ವಲೋಕದಲ್ಲಿ ನೀನೊಬ್ಬನೇ ಹುಟ್ಟಿದ ಮಕ್ಕಳ ವಶನಾಗಿ ಹೋಗಿದ್ದೀಯೆ. ದ್ಯೂತಕಾಲದಲ್ಲಿ ನೀನು ಕಾಮಾತ್ಮನನ್ನು ಪ್ರಶಂಸಿಸಿದೆ. ಶಾಂತಿಯ ಹೊರತಾಗಿ ಬೇರೆ ಏನೂ ಇದರಿಂದ ಬಿಡುಗಡೆಯು ಕಾಣುವುದಿಲ್ಲ. ಅನಾಪ್ತರನ್ನು ಸ್ವೀಕರಿಸಿ ಮತ್ತು ಹಾಗೆಯೇ ಆಪ್ತರನ್ನು ದೂರವಿಡಿಸಿ ದುರ್ಬಲನಾಗಿ ನೀನು ಈ ಅಪಾರ ಸಮೃದ್ಧ ಭೂಮಿಯನ್ನು ರಕ್ಷಿಸಲು ಅಸಮರ್ಥನಾಗಿದ್ದೀಯೆ.
“ರಥವೇಗದಿಂದ ತುಂಬಾ ಬಳಲಿದ್ದೇನೆ. ಮಲಗಿಕೊಳ್ಳಲು ನಿನ್ನ ಅನುಮತಿಯನ್ನು ಕೇಳುತ್ತಿದ್ದೇನೆ. ಬೆಳಿಗ್ಗೆ ಸಭೆಯಲ್ಲಿ ಕುರುಗಳು ಒಟ್ಟಿಗೇ ಅಜಾತಶತ್ರುವಿನ ಮಾತನ್ನು ಕೇಳುವರು.”
ವಿದುರ ನೀತಿ
ಮಹಾಪ್ರಾಜ್ಞ, ಮಹೀಪತಿ, ಧೃತರಾಷ್ಟ್ರನು ದ್ವಾರದಲ್ಲಿ ನಿಂತಿದ್ದವನಿಗೆ ಹೇಳಿದನು: “ವಿದುರನನ್ನು ಕಾಣಲು ಬಯಸುತ್ತೇನೆ. ಅವನನ್ನು ಬೇಗನೆ ಇಲ್ಲಿಗೆ ಕರೆದು ತಾ!”
ಧೃತರಾಷ್ಟ್ರನಿಂದ ಕಳುಹಿಸಲ್ಪಟ್ಟ ದೂತನು ಕ್ಷತ್ತನಿಗೆ ಹೇಳಿದನು: “ಮಹಾಪ್ರಾಜ್ಞ ಮಹಾರಾಜ ಒಡೆಯನು ನಿನ್ನನ್ನು ನೋಡಲು ಬಯಸುತ್ತಾನೆ.”
ಇದನ್ನು ಕೇಳಿದ ವಿದುರನು ರಾಜನಿವೇಶನವನ್ನು ತಲುಪಿ ದ್ವಾರಪಾಲಕನಿಗೆ ಹೇಳಿದನು: “ಧೃತರಾಷ್ಟ್ರನಿಗೆ ನಾನು ಬಂದಿರುವುದನ್ನು ತಿಳಿಸು!”
ದ್ವಾರಪಾಲಕನು ಹೇಳಿದನು: “ರಾಜೇಂದ್ರ! ನಿನ್ನ ಆಜ್ಞೆಯಂತೆ ವಿದುರನು ನಿಮ್ಮ ಪಾದಗಳನ್ನು ಕಾಣಲು ಬಂದಿದ್ದಾನೆ. ಏನು ಮಾಡಬೇಕೆಂದು ಆಜ್ಞಾಪಿಸಿ!”
ಧೃತರಾಷ್ಟ್ರನು ಹೇಳಿದನು: “ಮಹಾಪ್ರಾಜ್ಞ ದೀರ್ಘದರ್ಶಿ ವಿದುರನು ಒಳಬರಲಿ. ವಿದುರನನ್ನು ಕಾಣಲು ನನಗೆ ಅಕಾಲವೆನ್ನುವುದೇ ಇಲ್ಲ.”
ದ್ವಾರಪಾಲಕನು ಹೇಳಿದನು: “ಕ್ಷತ್ತ! ಧೀಮತ ಮಹಾರಾಜನ ಅಂತಃಪುರವನ್ನು ಪ್ರವೇಶಿಸು! ನಿನ್ನನ್ನು ನೋಡಲು ಅವನಿಗೆ ಅಕಾಲವೆನ್ನುವುದೇ ಇಲ್ಲ ಎಂದು ರಾಜನು ನನಗೆ ಹೇಳಿದ್ದಾನೆ.”
ಆಗ ವಿದುರನು ಧೃತರಾಷ್ಟ್ರನ ನಿವೇಶನವನ್ನು ಪ್ರವೇಶಿಸಿ ಚಿಂತೆಯಲ್ಲಿದ್ದ ನರಾಧಿಪನಿಗೆ ಕೈಮುಗಿದು ಈ ಮಾತನ್ನು ಹೇಳಿದನು: “ಮಹಾಪ್ರಾಜ್ಞ! ನಾನು ವಿದುರ! ನಿನ್ನ ಆಜ್ಞೆಯಂತೆ ಬಂದಿದ್ದೇನೆ. ಯಾವುದೇ ಕಾರ್ಯವನ್ನು ನಡೆಸಬೇಕಾದರೆ ನಾನಿಲ್ಲಿ ಇದ್ದೇನೆ. ಅಪ್ಪಣೆ ಕೊಡು!”
ಧೃತರಾಷ್ಟ್ರನು ಹೇಳಿದನು: “ವಿದುರ! ಸಂಜಯನು ಬಂದು ನನಗೆ ಬೈದು ಹೋಗಿದ್ದಾನೆ. ನಾಳೆ ಅವನು ಸಭಾಮಧ್ಯದಲ್ಲಿ ಅಜಾತಶತ್ರುವಿನ ಸಂದೇಶವನ್ನು ಹೇಳುವವನಿದ್ದಾನೆ. ಕುರುವೀರನ ಸಂದೇಶವೇನೆಂದು ಇಂದು ನನಗೆ ತಿಳಿಯಲಿಕ್ಕಾಗಲಿಲ್ಲ. ಆದುದರಿಂದ ನನ್ನ ದೇಹವು ಸುಡುತ್ತಿದೆ. ನಿದ್ದೆಬರುತ್ತಿಲ್ಲ. ಸುಡುತ್ತಿರುವ ಮತ್ತು ನಿದ್ದೆಮಾಡಲಿಕ್ಕಾಗದೇ ಇರುವವನಿಗೆ ಒಳ್ಳೆಯದು ಏನಾದರೂ ಇದೆಯೇ ಹೇಳು. ಅಯ್ಯಾ! ನೀನು ಧರ್ಮ ಮತ್ತು ಅರ್ಥಗಳಲ್ಲಿ ಕುಶಲನಾಗಿದ್ದೀಯೆ. ಸಂಜಯನು ಪಾಂಡವರ ಕಡೆಯಿಂದ ಮರಳಿ ಬಂದಾಗಿನಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲದಂತಾಗಿದೆ. ಅವನು ಏನು ಹೇಳುತ್ತಾನೋ ಎಂಬ ಚಿಂತೆಯಲ್ಲಿ ಇಂದು ನನ್ನ ಸರ್ವೇಂದ್ರಿಯಗಳೂ ಕೆಟ್ಟು ಹೋಗಿವೆ.”
ವಿದುರನು ಹೇಳಿದನು: “ಪ್ರಜಾಗರವು (ನಿದ್ದೆಬಾರದಿರುವುದು) ದುರ್ಬಲನನ್ನು, ಬಡವನನ್ನು, ಕಳೆದುಕೊಂಡವನನ್ನು, ಕಾಮಿಯನ್ನು, ಮತ್ತು ಕಳ್ಳನನ್ನು ಆವರಿಸುತ್ತದೆ. ನರಾಧಿಪ! ಇವುಗಳಲ್ಲಿ ಯಾವ ಮಹಾ ದೋಷವೂ ನಿನ್ನನ್ನು ಮುಟ್ಟಿಲ್ಲ ತಾನೇ? ಪರವಿತ್ತವನ್ನು ಕಸಿದುಕೊಂಡು ಪರಿತಪಿಸುತ್ತಿಲ್ಲ ತಾನೇ?”
ಧೃತರಾಷ್ಟ್ರನು ಹೇಳಿದನು: “ನಿನ್ನಿಂದ ಧರ್ಮವತ್ತಾದ ಪರಮ ಶ್ರೇಯಸ್ಕರ ಮಾತನ್ನು ಕೇಳಬಯಸುತ್ತೇನೆ. ಈ ರಾಜವಂಶದಲ್ಲಿ ಪ್ರಾಜ್ಞರಿಂದ ಸಮ್ಮತಿಯನ್ನು ಪಡೆದವನು ನೀನೊಬ್ಬನೇ.”
ವಿದುರನು ಹೇಳಿದನು: “ವನದಲ್ಲಿ ಶಾಪದಗ್ಧನಾದ ರಾಜ ಪಾಂಡುವಿಗೆ ಹುಟ್ಟಿದ ಐವರು ಇಂದ್ರರಂತಿರುವ ಪುತ್ರರನ್ನು ನೀನೇ ಬೆಳೆಸಿದೆ, ಶಿಕ್ಷಣ ನೀಡಿದೆ. ಅಂಬಿಕೇಯ! ಈಗ ಅವರು ನಿನ್ನ ಆದೇಶವನ್ನು ಪಾಲಿಸಲು ಕಾಯುತ್ತಿದ್ದಾರೆ. ಅವರಿಗೆ ಉಚಿತವಾದ ರಾಜ್ಯವನ್ನು ಕೊಟ್ಟು ಪುತ್ರರೊಂದಿಗೆ ಮುದದಿಂದ ಸುಖಿಯಾಗಿದ್ದರೆ ನಿನ್ನ ಕುರಿತು ದೇವತೆಗಳಲ್ಲಿಯಾಗಲೀ ಮನುಷ್ಯರಲ್ಲಿಯಾಗಲೀ ಯಾರೂ ಅನುಮಾನಪಡುವುದಿಲ್ಲ.”
ಧೃತರಾಷ್ಟ್ರನು ಹೇಳಿದನು: “ನಿದ್ದೆ ಬಾರದಿರುವನು ಮತ್ತು ಬೇಗೆಯುಳ್ಳವನು ಏನು ಮಾಡಬೇಕು? ಅದನ್ನು ಹೇಳು! ಅಯ್ಯಾ! ನೀನೇ ಧರ್ಮಾರ್ಥಕುಶಲನೂ ಶುಚಿಯೂ ಅಲ್ಲವೇ? ಆಜಾತಶತ್ರುವಿಗೆ ಎಲ್ಲರಿಗೂ ಸರಿಯಾಗಿರುವುದು ಏನು ಮತ್ತು ಕುರುಗಳಿಗೆ ಶ್ರೇಯಸ್ಕರವಾದುದು ಏನು ಎಂದು ನಿನಗನ್ನಿಸುತ್ತದೆಯೋ ಅದನ್ನು ಯಥಾವತ್ತಾಗಿ ಹೇಳು. ಮುಂದೆ ಕೆಡುಕಾಗಬಹುದೆಂದು ಶಂಕಿಸಿ ನಾನು ಹಿಂದೆ ಮಾಡಿದ ಪಾಪಗಳನ್ನೇ ಕಾಣುತ್ತಿದ್ದೇನೆ. ವ್ಯಾಕುಲಾತ್ಮನಾಗಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಅಜಾತಶತ್ರುವಿನ ಯೋಚನೆಯಲ್ಲಿರಬಹುದಾದುದೆಲ್ಲವನ್ನೂ ನನಗೆ ಯಥಾವತ್ತಾಗಿ ಹೇಳು.”
ವಿದುರನು ಹೇಳಿದನು: “ಯಾರ ಸೋಲನ್ನು ಬಯಸುವುದಿಲ್ಲವೋ ಅವನಿಗೆ, ಕೇಳದೇ ಇದ್ದರೂ, ಅದು ಅವನಿಗೆ ಶುಭವೆಂದೆನಿಸಲಿ ಅಥವಾ ಪಾಪವೆಂದೆನಿಸಲಿ, ದ್ವೇಷ ಅಥವಾ ಪ್ರಿಯವಾದುದೆಂದೆನಿಸಲಿ, ಸತ್ಯವನ್ನೇ ನುಡಿಯಬೇಕು. ಆದುದರಿಂದ ಕುರುಗಳಿಗೆ ಒಳ್ಳೆಯದನ್ನೇ ಬಯಸಿ ನಿನಗೆ ಶ್ರೇಯಸ್ಕರವಾದ, ಧರ್ಮಯುಕ್ತ ಮಾತುಗಳನ್ನು ಹೇಳುತ್ತಿದ್ದೇನೆ. ಅರ್ಥಮಾಡಿಕೋ! ಮೋಸ ಮತ್ತು ಕೆಟ್ಟ ವಿಧಾನಗಳನ್ನು ಬಳಸಿ ಯಶಸ್ವಿಯಾಗುವ ಕರ್ಮಗಳಲ್ಲಿ ನಿನ್ನ ಮನಸ್ಸನ್ನು ತೊಡಗಿಸಬೇಡ. ಪಾಂಡವರ ವಿರೋಧದಿಂದ ನಿನ್ನ ಪುತ್ರರ ಬುದ್ಧಿಯು ಮಸುಕಾಗಿದೆ ಎನ್ನುವುದು ನಿನಗೆ ತಿಳಿಯುತ್ತಿಲ್ಲ. ಮೂರೂ ಲೋಕಗಳ ರಾಜನು ಆಗಬಲ್ಲ ಲಕ್ಷಣ ಸಂಪನ್ನನಾದ ಯುಧಿಷ್ಠಿರನು ನಿನ್ನ ಶಿಷ್ಯ. ಅವನಿಗೆ ಆಳಲು ಬಿಡು. ನಿನ್ನ ಪುತ್ರರೆಲ್ಲರಲ್ಲಿ ಅವನು ತುಂಬಾ ಗೌರವಾನ್ವಿತ ಭಾಗಧೇಯನು. ತೇಜಸ್ಸು ಮತ್ತು ಪ್ರಜ್ಞೆಯಿಂದ ಕೂಡಿದ, ಧರ್ಮಾರ್ಥಗಳ ತತ್ತ್ವವನ್ನು ತಿಳಿದ, ಅನೃಶಂಸನೂ ಅಕ್ರೋಶಾದ್ಯನೂ ಆದ ಈ ಧರ್ಮಭೃತರಲ್ಲಿ ಶ್ರೇಷ್ಠನು ನಿನ್ನ ಗೌರವಕ್ಕಾಗಿ ಬಹಳಷ್ಟು ಕ್ಲೇಶಗಳನ್ನು ಸಹಿಸಿದ್ದಾನೆ.”
ಇದನ್ನು ಹೇಳಿ ವಿದುರನು ಅನೇಕ ನೀತಿಯುಕ್ತ ಮಾತುಗಳನ್ನಾಡಿದನು.
ವಿದುರನು ಹೇಳಿದನು: “ರಾಜೇಂದ್ರ! ಭೂಮಿಗಾಗಿ ಸುಳ್ಳನ್ನು ಹೇಳಬಾರದು. ಮಗನ ಮೇಲಿನ ಪ್ರೀತಿಯಿಂದಾಗಿ ಸುಳ್ಳನ್ನು ಹೇಳಿ ಮಕ್ಕಳು ಮಂತ್ರಿಗಳೊಂದಿಗೆ ನಾಶವಾಗಬೇಡ. ದುರ್ಯೋಧನ, ಶಕುನಿ, ಮೂಢ ದುಃಶಾಸನ ಮತ್ತು ಕರ್ಣರ ಮೇಲೆ ಐಶ್ವರ್ಯವನ್ನು ಇರಿಸಿ ಹೇಗೆ ತಾನೆ ನೀನು ಶಾಂತಿಯನ್ನು ಬಯಸುತ್ತೀಯೆ? ಸರ್ವಗುಣಗಳಿಂದ ಕೂಡಿದ ಪಾಂಡವರು ನಿನ್ನಲ್ಲಿ ತಂದೆಯಂತೆ ವರ್ತಿಸುತ್ತಾರೆ. ನೀನೂ ಕೂಡ ಅವರೊಡನೆ ಪುತ್ರರಂತೆ ವರ್ತಿಸು. ನಿನ್ನ ನೂರು ಮಕ್ಕಳು, ಕರ್ಣ ಮತ್ತು ಐವರು ಪಾಂಡವರು ಸಾಗರವೇ ಉಡುಪಾಗಿರುವ ಈ ಅಖಿಲ ಪೃಥ್ವಿಯನ್ನು ಆಳಬಲ್ಲರು. ಧಾರ್ತರಾಷ್ಟ್ರರು ವನವಿದ್ದಂತೆ ಮತ್ತು ಪಾಂಡುಸುತರು ವ್ಯಾಘ್ರಗಳು. ವ್ರ್ಯಾಘ್ರಗಳಿರುವ ಕಾಡನ್ನು ಕಡಿಯಬೇಡ; ಹುಲಿಗಳನ್ನು ಕಾಡಿನಿಂದ ಓಡಿಸಬೇಡ. ಹುಲಿಗಳಿಲ್ಲದೇ ಕಾಡು ಉಳಿಯುವುದಿಲ್ಲ; ಕಾಡಿಲ್ಲದೇ ಹುಲಿಗಳು ಉಳಿಯುವುದಿಲ್ಲ. ಕಾಡೇ ಹುಲಿಗಳನ್ನು ರಕ್ಷಿಸುತ್ತದೆ ಮತ್ತು ಹುಲಿಗಳು ಕಾಡನ್ನು ರಕ್ಷಿಸುತ್ತವೆ. ಆ ಪರಮೇಷ್ವಾಸ, ಅಮಿತೌಜಸ ಪಾಂಡವರನ್ನು ತೊರೆದು ಭಾರತರ ಐಶ್ವರ್ಯವನ್ನು ದುರ್ಯೋಧನನಿಗಿತ್ತು ನೀನು ಮಹಾ ಅಹಿತವನ್ನು ಮಾಡುತ್ತಿದ್ದೀಯೆ. ಐಶ್ವರ್ಯಮದಸಮ್ಮೂಢ ಬಲಿಯು ಮೂರೂಲೋಕಗಳಿಂದ ಪರಿಭ್ರಷ್ಟನಾದಂತೆ ಇವನೂ ಕೂಡ ಬೇಗನೇ ಪರಿಭ್ರಷ್ಟನಾಗುವುದನ್ನು ನೀನು ನೋಡುತ್ತೀಯೆ. ಸಾಧುವಾದ ಕುಲವೃದ್ಧಿಯನ್ನು ನಡೆಸು. ನಿನ್ನ ಬಂಧುಗಳಿಗೆ ಒಳ್ಳೆಯದನ್ನು ಮಾಡಿದರೆ ಶ್ರೇಯಸ್ಸನ್ನು ಪಾಡೆಯುತ್ತೀಯೆ. ಸದ್ಗುಣಿಗಳಲ್ಲದಿದ್ದರೂ ಬಂದುಗಳನ್ನು ಸಂರಕ್ಷಿಸಬೇಕು. ಹೀಗಿರುವಾಗ ಇನ್ನು ನಿನ್ನ ಕರುಣೆಯ ಆಕಾಂಕ್ಷಿಗಳಾದ ಗುಣವಂತರದ್ದೇನು? ದೀನ ಪಾಂಡವರ ಮೇಲೆ ಕರುಣೆಯನ್ನು ತೋರು. ಅವರ ಹೊಟ್ಟೆಪಾಡಿಗೆಂದು ಕೆಲವು ಗ್ರಾಮಗಳನ್ನಾದರೂ ಕೊಡು. ಈ ರೀತಿ ನೀನು ಲೋಕದಲ್ಲಿ ಯಶಸ್ಸನ್ನು ಗಳಿಸುತ್ತೀಯೆ. ನೀನು ವೃದ್ಧ. ಆದುದರಿಂದ ಪುತ್ರರನ್ನು ರಕ್ಷಿಸುವುದು ನಿನ್ನ ಕಾರ್ಯ. ಹಿತವಾಕ್ಯಗಳನ್ನು ನುಡಿಯುವ ನನ್ನನ್ನು ಕೂಡ ನಿನ್ನ ಹಿತೈಷಿಯೆಂದು ತಿಳಿದುಕೋ. ಇನ್ನೊಮ್ಮೆ ಹೇಳುತ್ತಿದ್ದೇನೆ. ನಿನ್ನ ಮತ್ತು ಪಾಂಡುವಿನ ಮಕ್ಕಳಲ್ಲಿ ಸಮತೆಯಿಂದ ನೀನು ನಡೆದುಕೊಂಡರೆ ನಿನ್ನ ಮಕ್ಕಳೊಂದಿಗೆ ಚೆನ್ನಾಗಿರಬಲ್ಲೆ."
ಸನತ್ಸುಜಾತೀಯ
ವಿದುರನು ಹೇಳಿದನು: “ಧೃತರಾಷ್ಟ್ರ! ಪುರಾಣನೂ ಸನಾತನನೂ ಆದ ಕುಮಾರ ಸನತ್ಸುಜಾತನು ಮೃತ್ಯುವಿಲ್ಲವೆಂದು ಹೇಳಿದನು. ಸರ್ವಬುದ್ಧಿಮತರಲ್ಲಿ ಶ್ರೇಷ್ಠನಾದ ಅವನು ನಿನಗೆ ಗುಹ್ಯವಾಗಿರುವ ಎಲ್ಲದರ ಮೇಲೆ ಬೆಳಕನ್ನು ಬೀರಿ ನಿನ್ನ ಹೃದಯದಲ್ಲಿ ನೆಲೆಸುವಂತೆ ಹೇಳುತ್ತಾನೆ.”
ಧೃತರಾಷ್ಟ್ರನು ಹೇಳಿದನು: “ಆ ಸನಾತನ ಋಷಿಯು ನನಗೆ ಏನನ್ನು ಹೇಳಲಿದ್ದಾನೆಯೋ ಅದು ನಿನಗೆ ತಿಳಿದಿಲ್ಲವೇ? ವಿದುರ! ಅದನ್ನು ನೀನೇ ಹೇಳು. ಅಷ್ಟಕ್ಕೆ ನಿನ್ನಲ್ಲಿ ಪ್ರಜ್ಞೆಯಿದೆ.”
ವಿದುರನು ಹೇಳಿದನು: “ನಾನು ಶೂದ್ರಯೋನಿಯಲ್ಲಿ ಹುಟ್ಟಿದ್ದುದರಿಂದ ನಾನು ಇಷ್ಟರವರಗೆ ಹೇಳಿದುದಕ್ಕಿಂತ ಹೆಚ್ಚು ಹೇಳುವುದಿಲ್ಲ. ಆ ಕುಮಾರನಲ್ಲಿರುವ ವೇದಗಳ ಕುರಿತಾದ ಜ್ಞಾನವು ಶಾಶ್ವತವೆಂದು ನನಗನ್ನಿಸುತ್ತದೆ. ಬ್ರಾಹ್ಮಣ ಯೋನಿಯಲ್ಲಿ ಜನಿಸಿದ ಅವನು ತುಂಬಾ ಗುಹ್ಯವಾದುದನ್ನೂ ತಿಳಿದಿದ್ದಾನೆ. ದೇವತೆಗಳು ಅವನನ್ನು ನಿಂದಿಸುವುದಿಲ್ಲ. ಆದುದರಿಂದ ಇದನ್ನು ನಿನಗೆ ಹೇಳುತ್ತಿದ್ದೇನೆ.”
ಧೃತರಾಷ್ಟ್ರನು ಹೇಳಿದನು: “ವಿದುರ! ಈ ದೇಹದಲ್ಲಿದ್ದುಕೊಂಡು ನಾನು ಹೇಗೆ ಆ ಪುರಾಣ ಸನಾತನನನ್ನು ಸಂದರ್ಶಿಸಬಲ್ಲೆ ಹೇಳು!”
ಆಗ ವಿದುರನು ಆ ಸಂಶಿತವ್ರತ ಋಷಿಯ ಕುರಿತು ಚಿಂತಿಸಿದನು. ಅವನು ಚಿಂತಿಸುತ್ತಿರುವುದನ್ನು ತಿಳಿದು ಋಷಿಯು ಅಲ್ಲಿ ಕಾಣಿಸಿಕೊಂಡನು. ಆಗ ಅವನನ್ನು ವಿಧಿವತ್ತಾಗಿ ಬರಮಾಡಿಕೊಂಡು, ಸುಖವಾಗಿ ಕುಳಿತುಕೊಂಡು, ಸ್ವಲ್ಪ ವಿಶ್ರಾಂತಿಯನ್ನು ಪಡೆಯಲು ವಿದುರನು ಹೇಳಿದನು: “ಭಗವನ್! ಧೃತರಾಷ್ಟ್ರನ ಮನಸ್ಸಿನಲ್ಲಿ ಕೆಲವು ಸಂಶಯಗಳಿವೆ. ನನಗೆ ಶಕ್ಯವಾದಷ್ಟನ್ನು ನಾನು ಹೇಳಿದ್ದೇನೆ. ಯಾವುದನ್ನು ಕೇಳಿ ಈ ಮನುಷ್ಯೇಂದ್ರನು ಸುಖ-ದುಃಖಗಳನ್ನೂ, ಲಾಭಾ-ಲಾಭಗಳನ್ನೂ, ಪ್ರೀತಿ-ದ್ವೇಷಗಳನ್ನೂ, ಮುಪ್ಪು-ಮೃತ್ಯುಗಳನ್ನೂ, ಭಯ-ಮಾತ್ಸರ್ಯಗಳನ್ನೂ, ಹಸಿವು-ಬಾಯಾರಿಕೆಗಳನ್ನೂ, ಮದ ಮತ್ತು ವೈಭವ, ಅರತಿ, ಆಲಸ್ಯ, ಕಾಮ-ಕ್ರೋಧ ಮತ್ತು ಕ್ಷಯ-ಉದಯಗಳನ್ನು ದಾಟಬಹುದೋ ಅದನ್ನು ನೀನೂ ಅವನಿಗೆ ಹೇಳಬೇಕು.”
ಆಗ ಮನೀಷೀ ರಾಜಾ ಧೃತರಾಷ್ಟ್ರನು ವಿದುರನ ಮಾತನ್ನು ಗೌರವಿಸಿ, ಪರಮ ಬುದ್ಧಿಯನ್ನು ಪಡೆಯಲೋಸುಗ, ಮಹಾತ್ಮ ಸನತ್ಸುಜಾತನಿಗೆ ರಹಸ್ಯದಲ್ಲಿ ಅನೇಕ ಪ್ರಶ್ನಿಗಳನ್ನು ಕೇಳಿದನು. ಸನತ್ಸುಜಾತನು ಅವನಿಗೆ ಬ್ರಹ್ಮವಸ್ತುವನ್ನು ನಿರೂಪಿಸಿ ಅವನ ಸಂಶಯಗಳನ್ನು ಹೋಗಲಾಡಿಸಿದನು.
ಹೀಗೆ ಸನತ್ಸುಜಾತ ಮತ್ತು ಧೀಮತ ವಿದುರನೊಂದಿಗೆ ರಾಜನು ಮಾತುಕಥೆಯನ್ನಾಡುತ್ತಿರಲು, ರಾತ್ರಿಯು ಕಳೆಯಿತು.