ಮೊದಲನೆಯ ರಾಯಭಾರ
ದ್ರುಪದನು ದೂತನನ್ನು ಕಳುಹಿಸಿದುದು
ಯುಧಿಷ್ಠಿರನ ಮತದಂತೆ ಪಾಂಚಲನು ಪ್ರಜ್ಞಾವಂತನೂ ವಯೋವೃದ್ಧನೂ ಆದ ತನ್ನ ಪುರೋಹಿತನನ್ನು ಕುರುಗಳಲ್ಲಿಗೆ ಕಳುಹಿಸಿದನು. ದ್ರುಪದನು ಹೇಳಿದನು: “ಇರುವವುಗಳಲ್ಲಿ ಪ್ರಾಣಿಗಳು ಶ್ರೇಷ್ಠರು; ಪ್ರಾಣಿಗಳಲ್ಲಿ ಬುದ್ಧಿಜೀವಿಗಳು ಶ್ರೇಷ್ಠರು; ಬುದ್ಧಿಯಿರುವವರಲ್ಲಿ ನರರು ಶ್ರೇಷ್ಠರು ಮತ್ತು ನರರಲ್ಲಿ ದ್ವಿಜರು ಶ್ರೇಷ್ಠರು. ದ್ವಿಜರಲ್ಲಿ ವೇದವನ್ನು ತಿಳಿದವರು ಶ್ರೇಯಸ್ಕರು, ವೇದಗಳನ್ನು ತಿಳಿದವರಲ್ಲಿ ಆ ತಿಳುವಳಿಕೆಯನ್ನು ಕಾರ್ಯದಲ್ಲಿ ಅಳವಡಿಸಿಕೊಂಡವರು ಶ್ರೇಯಸ್ಕರು. ಹೀಗೆ ತಿಳುವಳಿಕೆಯನ್ನು ಅಳವಡಿಸಿಕೊಂಡವರಲ್ಲಿ ನೀನು ಪ್ರಧಾನನೆಂದು ನನಗನ್ನಿಸುತ್ತದೆ. ನೀನು ಕುಲದಲ್ಲಿ, ವಯಸ್ಸಿನಲ್ಲಿ ಮತ್ತು ತಿಳುವಳಿಕೆಯಲ್ಲಿ ವಿಶಿಷ್ಟನಾಗಿದ್ದೀಯೆ. ಪ್ರಜ್ಞೆಯಲ್ಲಿ ಶುಕ್ರ ಅಥವಾ ಆಂಗೀರಸ ಬೃಹಸ್ಪತಿಯನ್ನು ಹೋಲುವೆ. ಕೌರವನು ಎಂಥವನು ಮತ್ತು ಪಾಂಡವ ಕುಂತೀಪುತ್ರ ಯುಧಿಷ್ಠಿರನು ಎಂಥವನು ಎಂದು ಎಲ್ಲವೂ ನಿನಗೆ ತಿಳಿದಿದೆ. ಧೃತರಾಷ್ಟ್ರನಿಗೆ ತಿಳಿದೇ ಪಾಂಡವರು ಪರರಿಂದ ವಂಚಿತರಾದರು. ವಿದುರನು ಹೇಳಿದರೂ ಅವನು ಪುತ್ರನನ್ನೇ ಅನುಸರಿಸುತ್ತಾನೆ. ಮೊದಲೇ ಯೋಚಿಸಿ ಅಕ್ಷದಲ್ಲಿ ಪಳಗಿದ್ದ ಶಕುನಿಯು ಅಕ್ಷವನ್ನು ತಿಳಿಯದೇ ಇದ್ದ ಆದರೆ ಕ್ಷತ್ರಿಯರ ನಡತೆಯನ್ನನುಸರಿಸಿದ್ದ ಶುಚಿ ಕುಂತೀಪುತ್ರನನ್ನು ಜೂಜಿಗೆ ಆಹ್ವಾನಿಸಿದನು. ಹೀಗೆ ಧರ್ಮಪುತ್ರ ಯುಧಿಷ್ಠಿರನನ್ನು ವಂಚಿಸಿದ ಅವರು ಯಾವುದೇ ಕಾರಣಕ್ಕಾಗಿ ತಾವಾಗಿಯೇ ರಾಜ್ಯವನ್ನು ಹಿಂದಿರುಗಿಸುವುದಿಲ್ಲ. ಧೃತರಾಷ್ಟ್ರನಲ್ಲಿ ಧರ್ಮಸಂಯುಕ್ತ ಮಾತುಗಳನ್ನಾಡಿ ನೀನು ಆ ಯೋಧರ ಮನಸ್ಸನ್ನು ಖಂಡಿತವಾಗಿ ಹಿಂದಿರುಗಿಸಬಲ್ಲೆ. ನಿನ್ನ ಆ ಮಾತುಗಳನ್ನು ವಿದುರನೂ ಬಳಸಿಕೊಳ್ಳುತ್ತಾನೆ ಮತ್ತು ಭೀಷ್ಮ-ದ್ರೋಣ-ಕೃಪರಲ್ಲಿ ಭೇದವನ್ನು ಹುಟ್ಟಿಸುತ್ತಾನೆ. ಅಮಾತ್ಯರಲ್ಲಿ ಭಿನ್ನಾಭಿಪ್ರಾಯವಾದರೆ, ಯೋಧರು ಹಿಂದೆ ಸರಿದರೆ ಪುನಃ ಒಂದುಗೂಡಿಸುವುದೇ ಅವರ ಕೆಲಸವಾಗುತ್ತದೆ. ಈ ಮಧ್ಯದಲ್ಲಿ ಪಾರ್ಥರು ಸುಖವಾಗಿ ಏಕಾಗ್ರಚಿತ್ತರಾಗಿ ಸೇನೆಯ ತಯಾರಿ ಮತ್ತು ದ್ರವ್ಯಗಳ ಸಂಗ್ರಹವನ್ನು ಮಾಡಿಕೊಳ್ಳುತ್ತಾರೆ. ತಮ್ಮಲ್ಲಿಯೇ ಒಡಕು ಬಂದಾಗ, ನೀನೂ ಕೂಡ ಅಲ್ಲಿ ಬಹಳ ಸಮಯವನ್ನು ಕಳೆಯುವುದರಿಂದ, ಅವರಿಗೆ ಸೇನೆಯ ಕೆಲಸಗಳನ್ನು ಮಾಡಲಿಕ್ಕಾಗುವುದಿಲ್ಲ ಎನ್ನುವದರಲ್ಲಿ ಸಂಶಯವಿಲ್ಲ. ಇದರಲ್ಲಿ ಪ್ರಯೋಜನವಿದೆ. ಫಲಿತಾಂಶವು ದೊರೆಯುತ್ತದೆ. ಧೃತರಾಷ್ಟ್ರನನ್ನು ಭೇಟಿಯಾದ ನಂತರ ನಿನ್ನ ಮಾತಿನಂತೆಯೇ ಅವನು ಮಾಡಬಹುದು. ಧರ್ಮಯುಕ್ತನಾದ ನೀನು ಅವರೊಡನೆಯೂ ಧರ್ಮಯುಕ್ತನಾಗಿ ನಡೆದುಕೊಳ್ಳಬೇಕು. ಕೃಪಾಳುಗಳಲ್ಲಿ ಪಾಂಡವರ ಪರಿಕ್ಲೇಶಗಳನ್ನು ಹೇಳಿಕೊಳ್ಳಬೇಕು. ಪೂರ್ವಜರು ಅನುಷ್ಠಾನಮಾಡಿಕೊಂಡು ಬಂದಿರುವ ಕುಲಧರ್ಮವನ್ನು ವೃದ್ಧರಲ್ಲಿ ಹೇಳಿಕೊಂಡು ಅವರ ಮನಸ್ಸುಗಳನ್ನು ಒಡೆಯಬೇಕು ಎನ್ನುವುದರಲ್ಲಿ ನನಗೆ ಸಂಶಯವೇ ಇಲ್ಲ. ಬ್ರಾಹ್ಮಣ! ನೀನು ವೇದವಿದು. ಅವರಿಂದ ನಿನಗೆ ಏನೂ ಭಯವಿರಕೂಡದು. ವಿಶೇಷವಾಗಿ ಹಿರಿಯವನಿಗೆ ದೂತ ಕರ್ಮವು ಸರಿಹೊಂದುತ್ತದೆ. ಕೌಂತೇಯನ ಅರ್ಥಸಿದ್ಧಿಗಾಗಿ ನೀನು ಪುಷ್ಯಯೋಗದ ಜಯ ಮುಹೂರ್ತದಲ್ಲಿ ಕೌರವನೆಡೆಗೆ ಪ್ರಯಾಣಿಸು.”
ಹೀಗೆ ಮಹಾತ್ಮ ದ್ರುಪದನಿಂದ ಅನುಶಿಷ್ಟನಾಗಿ ವೃತ್ತಸಂಪನ್ನ ಪುರೋಹಿತನು ನಾಗಸಾಹ್ವಯಕ್ಕೆ ಹೊರಟನು.
ದ್ರುಪದ ಪುರೋಹಿತನ ರಾಯಭಾರ
ದ್ರುಪದನ ಪುರೋಹಿತನು ಕೌರವ್ಯನ ಬಳಿಸಾರಿ ಧೃತರಾಷ್ಟ್ರ, ಭೀಷ್ಮ ಮತ್ತು ವಿದುರನಿಂದ ಸತ್ಕೃತನಾದನು. ಎಲ್ಲರ ಕೌಶಲ್ಯದ ಕುರಿತೂ ಹೇಳಿ, ಅವರ ಕೌಶಲ್ಯದ ಕುರಿತೂ ಕೇಳಿ ಅವನು ಸರ್ವಸೇನಾಪ್ರಣೀತರ ಮಧ್ಯೆ ಈ ಮಾತುಗಳನ್ನಾಡಿದನು: “ನೀವೆಲ್ಲರೂ ಸನಾತನ ರಾಜಧರ್ಮವನ್ನು ತಿಳಿದಿದ್ದೀರಿ. ತಿಳಿದಿದ್ದರೂ ನನ್ನ ಮಾತಿನ ಪೀಠಿಕೆಯಾಗಿ ಹೇಳುತ್ತೇನೆ. ಧೃತರಾಷ್ಟ್ರ ಮತ್ತು ಪಾಂಡು ಇಬ್ಬರೂ ಒಬ್ಬನೇ ತಂದೆಯ ಮಕ್ಕಳೆಂದು ವಿಶ್ರುತರು. ಪಿತೃ ಸಂಪತ್ತಿಗೆ ಅವರಿಬ್ಬರೂ ಸಮಾನರು ಎನ್ನುವುದರಲ್ಲಿ ಸಂಶಯವಿಲ್ಲ. ಧೃತರಾಷ್ಟ್ರನ ಪುತ್ರರು ಪಿತೃಸಂಪತ್ತನ್ನು ಪಡೆದಿದ್ದಾರೆ. ಪಾಂಡುಪುತ್ರರು ಹೇಗೆ ಈ ಪಿತೃ ಸಂಪತ್ತನ್ನು ಪಡೆಯಲೇ ಇಲ್ಲ? ಧಾರ್ತರಾಷ್ಟ್ರರು ತಮ್ಮದನ್ನಾಗಿಸಿಕೊಂಡ ಪಿತೃಸಂಪತ್ತನ್ನು ಹಿಂದೆ ಹೇಗೆ ಪಾಂಡವೇಯರು ಪಡೆಯಲಿಲ್ಲ ಎನ್ನುವುದು ನಿಮಗೆ ತಿಳಿದೇ ಇದೆ. ಅನೇಕ ಉಪಾಯಗಳಿಂದ ಅವರ ಪ್ರಾಣಗಳನ್ನು ಕೊನೆಗೊಳಿಸಲು ಪ್ರಯತ್ನಿಸಿದರೂ ಶೇಷವಂತರಾದ ಅವರನ್ನು ಯಮಸಾದನಕ್ಕೆ ಕಳುಹಿಸಲು ಸಾಧ್ಯವಾಗಲಿಲ್ಲ. ಆ ಮಹಾತ್ಮರು ಸ್ವಬಲದಿಂದ ಅಭಿವೃದ್ಧಿಗೊಳಿಸಿದ ರಾಜ್ಯವನ್ನು ಕ್ಷುದ್ರ ಧಾರ್ತರಾಷ್ಟ್ರರು ಸೌಬಲನೊಂದಿಗೆ ಪುನಃ ಮೋಸದಿಂದ ಅಪಹರಿಸಿದರು. ಯಾವಾಗಿನಂತೆ ಆ ಕೆಲಸಕ್ಕೆ ಕೂಡ ಅನುಮತಿಯು ದೊರೆಯಿತು. ಹದಿಮೂರು ವರ್ಷಗಳು ಮಹಾರಣ್ಯದಲ್ಲಿ ವಾಸಿಸಲು ಕಳುಹಿಸಲಾಯಿತು. ಭಾರ್ಯೆಯೊಂದಿಗೆ ಆ ವೀರರು ಸಭೆಯಲ್ಲಿ ತುಂಬಾ ಕ್ಲೇಶಗಳನ್ನು ಅನುಭವಿಸಿದುದಲ್ಲದೇ ಅರಣ್ಯದಲ್ಲಿಯೂ ವಿವಿಧ ಸುದಾರುಣ ಕ್ಲೇಶಗಳನ್ನು ಹೊಂದಿದರು. ಪಾಪಿಗಳು ಕೀಳು ಯೋನಿಗಳನ್ನು ಸೇರಿ ಪಡೆಯುವಂತೆ ಆ ಮಹಾತ್ಮರು ವಿರಾಟನಗರದಲ್ಲಿ ಪರಮ ಸಂಕ್ಲೇಶಗಳನ್ನು ಹೊಂದಿದರು. ಹಿಂದಾದ ಈ ಎಲ್ಲ ಕಿಲ್ಬಿಷಗಳನ್ನೂ ಹಿಂದೆ ಸರಿಸಿ ಆ ಕುರುಪುಂಗವರು ಕುರುಗಳೊಂದಿಗೆ ಸಾಮದಿಂದ ಜೊತೆಯಿರಲು ಇಚ್ಛಿಸುತ್ತಾರೆ. ಅವರ ನಡತೆಯನ್ನೂ ದುರ್ಯೋಧನನ ನಡತೆಯನ್ನೂ ತಿಳಿದುಕೊಂಡು ಧೃತರಾಷ್ಟ್ರನ ಸುಹೃಜ್ಜನರು ಶಾಂತಿಯನ್ನು ತರಬೇಕು. ಆ ವೀರರು ಕುರುಗಳೊಂದಿಗೆ ಯುದ್ಧವನ್ನು ಮಾಡುವುದಿಲ್ಲ. ಸ್ವಯಂ ಪಾಂಡವರು ಲೋಕದ ಅವಿನಾಶವನ್ನು ಬಯಸುವುದಿಲ್ಲ. ಧಾರ್ತರಾಷ್ಟ್ರರು ಯುದ್ಧದ ಪರವಾಗಿ ಏನಾದರೂ ಕಾರಣವನ್ನಿತ್ತರೂ ಅದು ಸರಿಯಾದ ಕಾರಣವೆನಿಸಿಕೊಳ್ಳುವುದಿಲ್ಲ. ಅವರು ಬಲಶಾಲಿಗಳಾಗಿದ್ದಾರಲ್ಲವೇ? ಕುರುಗಳೊಂದಿಗೆ ಹೋರಾಡಲು ಉತ್ಸಾಹಿತರಾಗಿ ಅವನ ಶಾಸನವನ್ನು ಪ್ರತೀಕ್ಷಿಸುತ್ತಾ ಏಳು ಅಕ್ಷೌಹಿಣಿಗಳು ಧರ್ಮಪುತ್ರನನ್ನು ಸೇರಿಯಾಗಿವೆ. ಸಹಸ್ರ ಅಕ್ಷೌಹಿಣಿಗೆ ಸಮನಾದ ಇತರ ಪುರುಷವ್ಯಾಘ್ರರಿದ್ದಾರೆ: ಸಾತ್ಯಕಿ, ಭೀಮಸೇನ ಮತ್ತು ಸುಮಹಾಬಲ ಯಮಳರೀರ್ವರು. ಹನ್ನೊಂದು ಅಕ್ಷೌಹಿಣಿಗಳು ಒಂದು ಕಡೆ ಸಮಾಗತರಾಗಿದ್ದಾರೆನ್ನುವುದು ಸತ್ಯ. ಆದರೆ ಇನ್ನೊಂದುಕಡೆ ಬಹುರೂಪೀ ಮಹಾಬಾಹು ಧನಂಜಯನಿದ್ದಾನೆ. ಹೇಗೆ ಕಿರೀಟಿಯು ಈ ಎಲ್ಲ ಸೇನೆಗಳನ್ನೂ ಮೀರುತ್ತಾನೋ ಹಾಗೆಯೇ ಮಹಾದ್ಯುತಿ ಮಹಾಬಾಹು ವಾಸುದೇವನೂ ಇದ್ದಾನೆ. ಸೇನೆಗಳ ಬಹುಲತ್ವದ, ಕಿರೀಟಿಯ ವಿಕ್ರಮದ, ಮತ್ತು ಕೃಷ್ಣನ ಬುದ್ಧಿವಂತಿಕೆಯ ವಿರುದ್ಧ ಯಾವ ನರನು ಯುದ್ಧ ಮಾಡಿಯಾನು? ಆದುದರಿಂದ ಯಥಾಧರ್ಮವಾಗಿ, ಒಪ್ಪಂದದಂತೆ ಕೊಡಬೇಕಾದುದನ್ನು ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಈ ಅವಕಾಶವು ತಪ್ಪಿಹೋಗದಂತೆ ಮಾಡಿ.”
ಅವನ ಆ ಮಾತನ್ನು ಕೇಳಿ ಪ್ರಜ್ಞಾವೃದ್ಧ, ಮಹಾದ್ಯುತಿ ಭೀಷ್ಮನು ಅವನನ್ನು ಗೌರವಿಸಿ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದನು: “ಪಾಂಡವರೆಲ್ಲರೂ ಬಾಂಧವರೊಂದಿಗೆ ಕುಶಲರಾಗಿದ್ದಾರೆಂದರೆ ಒಳ್ಳೆಯದೇ ಆಯಿತು. ಒಳ್ಳೆಯದಾಯಿತು ಅವರಿಗೆ ಸಹಾಯವು ದೊರಕಿದೆ. ಮತ್ತು ಅವರು ಧರ್ಮನಿರತರಾಗಿದ್ದಾರೆ. ಒಳ್ಳೆಯದಾಯಿತು ಆ ಕುರುನಂದರು ತಮ್ಮ ಭ್ರಾತೃಗಳೊಂದಿಗೆ ಸಂಧಿಯನ್ನು ಬಯಸುತ್ತಿದ್ದಾರೆ. ಒಳ್ಳೆಯದಾಯಿತು ದಾಮೋದರನನ್ನೂ ಸೇರಿ ಅವರು ಯುದ್ಧದ ಮನಸ್ಸು ಮಾಡುತ್ತಿಲ್ಲ. ನೀನು ಹೇಳಿದುದೆಲ್ಲವೂ ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ನಿನ್ನ ಮಾತುಗಳು ಅತಿ ತೀಕ್ಷ್ಣವಾಗಿವೆ. ನೀನು ಬ್ರಾಹ್ಮಣನಾಗಿರುವುದೇ ಇದಕ್ಕೆ ಕಾರಣವಾಗಿರಬಹುದೆಂದು ನನಗನ್ನಿಸುತ್ತದೆ. ಪಾಂಡವರು ಇಲ್ಲಿ ಮತ್ತು ವನದಲ್ಲಿ ಕಷ್ಟಗಳನ್ನನುಭವಿಸಿದರು ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮತಃ ಅವರು ಸರ್ವ ಪಿತುರ್ಧನವನ್ನೂ ಪಡೆಯಬೇಕು ಎನ್ನುವುದರಲ್ಲೂ ಸಂಶಯವಿಲ್ಲ. ಕಿರೀಟೀ ಪಾರ್ಥನು ಮಹಾಬಲಶಾಲಿ, ಬಲವಂತ ಮತ್ತು ಕೃತಾಸ್ತ್ರ. ಯಾರುತಾನೇ ಪಾಂಡುಸುತ ಧನಂಜಯನನ್ನು ಯುದ್ಧದಲ್ಲಿ ಎದುರಿಸಿಯಾರು? ಸಾಕ್ಷಾತ್ ವಜ್ರಧರನಿಗೇ ಸಾಧ್ಯವಿಲ್ಲದಿರುವಾಗ ಇನ್ನು ಇತರ ಧನುಷ್ಪಾಣಿಗಳೇನು? ಮೂರು ಲೋಕಗಳಲ್ಲಿಯೂ ಸಮರ್ಥರಿಲ್ಲ ಎಂದು ನನ್ನ ಅಭಿಪ್ರಾಯ.”
ಭೀಷ್ಮನು ಹೀಗೆ ಮಾತನ್ನಾಡುತ್ತಿರುವಾಗಲೇ ಸಿಟ್ಟಿಗೆದ್ದ ಕರ್ಣನು ದುರ್ಯೋಧನನನ್ನು ನೋಡುತ್ತಾ ಮಧ್ಯ ಮಾತನಾಡಿದನು: “ಬ್ರಹ್ಮನ್! ಈ ಲೋಕದಲ್ಲಿ ಇದನ್ನು ತಿಳಿಯದೇ ಇರುವವರು ಯಾರೂ ಇಲ್ಲ. ಪುನಃ ಪುನಃ ನೀನು ಅದನ್ನೇ ಏಕೆ ಹೇಳುತ್ತಿರುವೆ? ಹಿಂದೆ ದುರ್ಯೋಧನನಿಗಾಗಿ ಶಕುನಿಯು ದ್ಯೂತದಲ್ಲಿ ಗೆದ್ದನು. ಒಪ್ಪಂದದಂತೆ ಪಾಂಡುಪುತ್ರ ಯುಧಿಷ್ಠಿರನು ಅರಣ್ಯಕ್ಕೆ ಹೋದನು. ಆ ಪಾರ್ಥಿವನು ಈಗ ಆ ಒಪ್ಪಂದವನ್ನು ಆದರಿಸದೇ, ಮತ್ಸ್ಯ ಮತ್ತು ಪಾಂಚಾಲರ ಬಲವನ್ನು ಆಶ್ರಯಿಸಿ ಪಿತ್ರಾರ್ಜಿತ ರಾಜ್ಯವನ್ನು ಇಚ್ಛಿಸುತ್ತಾನೆ. ದುರ್ಯೋಧನನು ಬೆದರಿಕೆಗೊಳಗಾಗಿ ಒಂದಡಿ ಭೂಮಿಯನ್ನೂ ಕೊಡುವುದಿಲ್ಲ. ಆದರೆ ಧರ್ಮದಂತಾದರೆ ಅವನು ಶತ್ರುವಿಗೆ ಕೂಡ ಇಡೀ ಮಹಿಯನ್ನು ಕೊಟ್ಟಾನು. ಒಂದುವೇಳೆ ಅವರು ಪಿತೃಪಿತಾಮಹರ ರಾಜ್ಯವನ್ನು ಬಯಸುವರಾದರೆ, ಪ್ರತಿಜ್ಞೆಮಾಡಿದಷ್ಟು ಸಮಯ ಪುನಃ ವನವಾಸವನ್ನು ನಡೆಸಲಿ. ಆಗ ದುರ್ಯೋಧನನ ಆಳ್ವಿಕೆಯಲ್ಲಿ ನಿರ್ಭಯರಾಗಿ ವಾಸಿಸಲಿ. ಕೇವಲ ಮೂರ್ಖತನದಿಂದ ಅಧರ್ಮಕಾರ್ಯವನ್ನೆಸಗುತ್ತಿದ್ದಾರೆ. ಈಗ ಆ ಪಾಂಡವರು ಧರ್ಮವನ್ನು ತೊರೆದು ಯುದ್ಧವನ್ನು ಬಯಸುತ್ತಿದ್ದಾರೆ. ಈ ಕುರುಶ್ರೇಷ್ಠರನ್ನು ಎದುರಿಸುವಾಗ ನನ್ನ ಈ ಮಾತನ್ನು ಸ್ಮರಿಸಿಕೊಳ್ಳುತ್ತಾರೆ.”
ಭೀಷ್ಮನು ಹೇಳಿದನು: “ರಾಧೇಯ! ನಿನ್ನ ಮಾತಿನ ಪ್ರಯೋಜನವೇನು? ಯುದ್ಧದಲ್ಲಿ ಪಾರ್ಥನು ಒಬ್ಬನೇ ನಮ್ಮ ಷಡ್ರಥರನ್ನು ಗೆದ್ದುದನ್ನು ನೀನು ಸ್ಮರಿಸಿಕೊಳ್ಳಬೇಕು. ಈ ಬ್ರಾಹ್ಮಣನು ಹೇಳಿದಂತೆ ನಾವು ಮಾಡದೇ ಇದ್ದರೆ ಯುದ್ಧದಲ್ಲಿ ಅವನಿಂದ ಹತರಾಗುತ್ತೇವೆ ಎನ್ನುವುದು ನಿಶ್ಚಿತ.”
ಆಗ ಧೃತರಾಷ್ಟ್ರನು ಭೀಷ್ಮನನ್ನು ಮೆಚ್ಚಿಸಿ ರಾಧೇಯನನ್ನು ಹಳಿದು ಸಂಧಿಯ ಈ ಮಾತನ್ನಾಡಿದನು: “ಶಾಂತನವ ಭೀಷ್ಮನು ಹೇಳಿದ ಮಾತು ನಮಗೆ ಮತ್ತು ಪಾಂಡವರಿಗೆ ನಮಸ್ಕೃತ್ಯವಾದುದು. ಸರ್ವ ಜಗತ್ತಿಗೂ ಕೂಡ ಇದು ಹಿತವಾದುದು. ಆದರೆ ಆಲೋಚಿಸಿ ನಾನು ಸಂಜಯನನ್ನು ಪಾಂಡವರ ಬಳಿ ಕಳುಹಿಸುತ್ತೇನೆ. ನೀನು ಇಂದೇ ತಡಮಾಡದೇ ಪಾಂಡವರಲ್ಲಿಗೆ ಹಿಂದಿರುಗು.”
ಕೌರವ್ಯನು ಅವನನ್ನು ಸತ್ಕರಿಸಿ ಪಾಂಡವರಲ್ಲಿಗೆ ಕಳುಹಿಸಿದನು.