ಎರಡನೆಯ ದಿನದ ಯುದ್ಧ
ಮೊದಲನೆಯ ದಿವಸ ಸೈನ್ಯವು ಹಿಂದೆಸರಿಯಲು, ಯುದ್ಧದಲ್ಲಿ ಭೀಷ್ಮನು ಉತ್ಸಾಹಿಯಾಗಿರಲು, ಹಾಗೆಯೇ ದುರ್ಯೋಧನನು ಸಂತೋಷದಿಂದಿರಲು ಧರ್ಮರಾಜನು ತಕ್ಷಣವೇ ಸಹೋದರರೊಂದಿಗೆ, ಎಲ್ಲ ಜನೇಶ್ವರರೊಡಗೂಡಿ ಒಟ್ಟಿಗೇ ಜನಾರ್ದನನ ಬಳಿಸಾರಿದನು. ಭೀಷ್ಮನ ವಿಕ್ರಮವನ್ನು ನೋಡಿ ಚಿಂತಾಕ್ರಾಂತನಾಗಿ ರಾಜನು ಪರಮ ಶುಚಿಯಿಂದ ವಾರ್ಷ್ಣೇಯನಿಗೆ ಹೇಳಿದನು. “ಕೃಷ್ಣ! ಗ್ರೀಷ್ಮದಲ್ಲಿ ಬೆಂಕಿಯು ಒಣಹುಲ್ಲನ್ನು ಸುಡುವಂತೆ ಶರಗಳಿಂದ ನನ್ನ ಸೈನ್ಯವನ್ನು ದಹಿಸುತ್ತಿರುವ ಈ ಭೀಮಪರಾಕ್ರಮಿ ಭೀಷ್ಮನನ್ನು ನೋಡು! ಅಗ್ನಿಯು ಹವಿಸ್ಸುಗಳನ್ನು ನೆಕ್ಕುವಂತೆ ನನ್ನ ಸೈನ್ಯವನ್ನು ನೆಕ್ಕುತ್ತಿರುವ ಈ ಮಹಾತ್ಮನನ್ನು ನಾವು ಹೇಗೆ ನೋಡಲೂ ಕೂಡ ಶಕ್ಯರಾಗುತ್ತಿಲ್ಲ? ಈ ಪುರುಷವ್ಯಾಘ್ರ ಧನುಷ್ಮಂತ ಮಹಾಬಲನ ಬಾಣಗಳಿಂದ ಪೀಡಿತವಾದ ನನ್ನ ಸೈನ್ಯವು ಓಡಿಹೋಗುತ್ತಿದೆ. ಸಂಯುಗದಲ್ಲಿ ನಾವು ಕ್ರುದ್ಧನಾದ ಯಮನನ್ನಾದರೂ, ವಜ್ರಪಾಣಿಯನ್ನಾದರೂ, ಪಾಶಪಾಣಿ ವರುಣನನ್ನಾದರೂ ಅಥವಾ ಗದಾಧರ ಕುಬೇರನನ್ನಾದರೂ ಜಯಿಸಬಲ್ಲೆವು. ಆದರೆ ಮಹಾತೇಜಸ್ವಿ ಮಹಾಬಲ ಭೀಷ್ಮನನ್ನು ಜಯಿಸಲು ಸಾಧ್ಯವಿಲ್ಲ. ಕೇಶವ! ನಾನು ಬುದ್ಧಿ ದೌರ್ಬಲ್ಯದಿಂದ ಭೀಷ್ಮನನ್ನು ಆಕ್ರಮಣ ಮಾಡಿ ಭೀಷ್ಮನೆಂಬ ಅಗಾಧ ಸಮುದ್ರವನ್ನು ದಾಟಲು ಯಾವ ನೌಕೆಯೂ ಇಲ್ಲದೇ ಮುಳುಗಿ ಹೋಗುವವನಿದ್ದೇನೆ. ಗೋವಿಂದ! ನಾನು ವನಕ್ಕೆ ಹೋಗುತ್ತೇನೆ. ಅಲ್ಲಿಯ ಜೀವನವೇ ನನಗೆ ಶ್ರೇಯಸ್ಕರವಾದುದು. ಈ ಪೃಥಿವೀಪಾಲರನ್ನು ಭೀಷ್ಮನೆಂಬ ಮೃತ್ಯುವಿಗೆ ಕೊಡಲಾರೆ. ಮಹಾಸ್ತ್ರವಿದು ಭೀಷ್ಮನು ನನ್ನ ಈ ಸೇನೆಯನ್ನು ಧ್ವಂಸಮಾಡಿಬಿಡುತ್ತಾನೆ. ಹೇಗೆ ಪತಂಗಗಳು ವಿನಾಶಕ್ಕಾಗಿಯೇ ಉರಿಯುತ್ತಿರುವ ಬೆಂಕಿಯಲ್ಲಿ ಧಾವಿಸಿ ಹೋಗುತ್ತವೆಯೋ ಹಾಗೆ ನನ್ನ ಸೈನಿಕರೂ ವಿನಾಶಹೊಂದುತ್ತಾರೆ. ರಾಜ್ಯಕ್ಕಾಗಿ ಪರಾಕ್ರಮವನ್ನು ತೋರಿಸಲು ಹೊರಟ ನಾನೂ ಕ್ಷಯವನ್ನು ಹೊಂದುತ್ತಿದ್ದೇನೆ. ನನ್ನ ವೀರ ಸಹೋದರರು ಕೂಡ ಶರಪೀಡಿತರಾಗಿ ಕೃಶರಾಗಿದ್ದಾರೆ. ನನ್ನಿಂದಾಗಿ ಭಾರ್ತೃಸೌಹಾರ್ದತೆಯಿಂದ ಇವರು ರಾಜ್ಯದಿಂದ ಮತ್ತು ಸುಖದಿಂದ ನನ್ನ ತಮ್ಮಂದಿರು ಭ್ರಷ್ಟರಾಗಿದ್ದಾರೆ. ಇಂದು ದುರ್ಲಭವಾದ ಜೀವಿತವನ್ನು ಬಹುವಾಗಿ ಮನ್ನಿಸುತ್ತೇನೆ. ಉಳಿದ ಜೀವನವನ್ನು ದುಶ್ಚರವಾದ ತಪಸ್ಸನ್ನು ತಪಿಸುತ್ತೆನೆ. ಈ ಮಿತ್ರರನ್ನು ರಣದಲ್ಲಿ ಕೊಲೆಗೀಡುಮಾಡುವುದಿಲ್ಲ. ನನ್ನ ಬಹಳ ಸಹಸ್ರಾರು ರಥಗಳನ್ನು ಮಹಾಬಲ, ಪ್ರಹರಿಗಳಲ್ಲಿ ಪ್ರವರನಾದ ಭೀಷ್ಮನು ದಿವ್ಯಾಸ್ತ್ರಗಳಿಂದ ಸತತವಾಗಿ ಸಂಹರಿಸುತ್ತಲೇ ಇದ್ದಾನೆ. ಯಾವ ಕಾರ್ಯವನ್ನು ನಾನು ಮಾಡಬೇಕೆನ್ನುವುದನ್ನು ಬೇಗ ಹೇಳು ಮಾಧವ! ಈ ಸಮರದಲ್ಲಿ ಸವ್ಯಸಾಚಿಯು ಮಧ್ಯಸ್ಥನಾಗಿರುವಂತೆ ನನಗೆ ಕಾಣುತ್ತಿದೆ. ಮಹಾಭುಜ ಭೀಮನೊಬ್ಬನೇ ಪರಮ ಶಕ್ತಿಯಿಂದ, ಕ್ಷತ್ರಧರ್ಮವನ್ನು ನೆನಪಿನಲ್ಲಿಟ್ಟುಕೊಂಡು ಕೇವಲ ಬಾಹುವೀರ್ಯದಿಂದ ಯುದ್ಧಮಾಡುತ್ತಿದ್ದಾನೆ. ವೀರರನ್ನು ಘಾತಿಗೊಳಿಸಬಲ್ಲ ಗದೆಯಿಂದ ಆ ಮಹಾಮನನು ಯಥೋತ್ಸಾಹದಿಂದ ಗಜ-ಅಶ್ವ-ಪದಾತಿಗಳೊಡನೆ ಕಷ್ಟಸಾದ್ಯವಾದ ಕೆಲಸವನ್ನು ಮಾಡುತ್ತಿದ್ದಾನೆ. ಆದರೆ ಇವನು ತನ್ನ ಬಲವನ್ನುಪಯೋಗಿಸಿ ಋಜುಮಾರ್ಗದಿಂದಲೇ ಯುದ್ಧಮಾಡುತ್ತಿದ್ದರೆ ಶತ್ರುಸೈನ್ಯವನ್ನು ಸಂಹರಿಸಲು ನೂರು ವರ್ಷಗಳೇ ಬೇಕಾಗಬಹುದು. ಈ ನಿನ್ನ ಸಖನೊಬ್ಬನೇ ನಮ್ಮ ಪಕ್ಷದಲ್ಲಿ ಮಹಾಸ್ತ್ರಗಳನ್ನು ತಿಳಿದವನಾಗಿದ್ದರೂ ಮಹಾತ್ಮ ಭೀಷ್ಮ-ದ್ರೋಣರು ಸುಡುತ್ತಿದ್ದರೂ ನಮ್ಮವರನ್ನು ಅವನು ಉಪೇಕ್ಷಿಸುತ್ತಿದ್ದಾನೆ. ಮಹಾತ್ಮ ಭೀಷ್ಮನ ಮತ್ತು ದ್ರೋಣನ ದಿವ್ಯಾಸ್ತ್ರಗಳು ಪುನಃ ಪುನಃ ಸರ್ವ ಕ್ಷತ್ರಿಯರನ್ನೂ ದಹಿಸುತ್ತಿವೆ. ಕೃಷ್ಣ! ಸುಸಂರಬ್ಧನಾಗಿರುವ ಭೀಷ್ಮನು ಸರ್ವ ಪಾರ್ಥಿವರೊಂದಿಗೆ ನಮ್ಮನ್ನು ಬೇಗನೇ ವಿನಾಶಗೊಳಿಸುತ್ತಾನೆ. ಇವನ ಪರಾಕ್ರಮವೇ ಅಂಥಹುದು. ಮಹಾರಥ, ಮಹೇಷ್ವಾಸ ಭೀಷ್ಮನೆಂಬುವ ದಾವಾಗ್ನಿಯನ್ನು ಆರಿಸಬಲ್ಲ ಮೋಡವು ರಣದಲ್ಲಿದ್ದರೆ ನೀನು ತೋರಿಸು. ಗೋವಿಂದ! ನಿನ್ನ ಪ್ರಸಾದದಿಂದ ಪಾಂಡವರು ದ್ವೇಷಿಗಳನ್ನು ಸಂಹರಿಸಿ ಸ್ವರಾಜ್ಯವನ್ನು ಹಿಂದೆ ಪಡೆದು ಬಾಂಧವರೊಂದಿಗೆ ಸಂತೋಷದಿಂದಿರಬಲ್ಲರು.”
ಹೀಗೆ ಹೇಳಿ ಮಹಾಮನಸ್ವಿ ಪಾರ್ಥನು ಶೋಕದಿಂದ ಹತಚೇತನನಾಗಿ, ಮನಸ್ಸನ್ನು ಒಳಸೆಳೆದುಕೊಂಡು ಬಹಳ ಹೊತ್ತಿನವರೆಗೆ ಧ್ಯಾನಮಗ್ನನಾದನು. ದುಃಖದಿಂದ ಹತಚೇತಸನಾದ ಶೋಕಾರ್ತ ಪಾಂಡವನನ್ನು ಅರ್ಥಮಾಡಿಕೊಂಡು ಗೋವಿಂದನು ಸರ್ವಪಾಂಡವರನ್ನೂ ಹರ್ಷಗೊಳಿಸುತ್ತಾ ಅಲ್ಲಿ ಹೇಳಿದನು: “ಭರತಶ್ರೇಷ್ಠ! ಶೋಕಿಸಬೇಡ! ಸರ್ವಲೋಕಗದ ಧನ್ವಿಗಳಾದ ಈ ಶೂರರನ್ನು ತಮ್ಮಂದಿರಾಗಿರುವ ನೀನು ಶೋಕಿಸಬಾರದು. ನಿನಗೆ ಪ್ರಿಯವಾದುದನ್ನು ಮಾಡಲೆಂದೇ ನಾನು, ಮಹಾರಥ ಸಾತ್ಯಕಿ, ವೃದ್ಧರಾದ ವಿರಾಟ-ದ್ರುಪದರಿಬ್ಬರು, ಪಾರ್ಷತ ಧೃಷ್ಟದ್ಯುಮ್ನ, ಹಾಗೆಯೇ ಸರ್ವ ರಾಜರೂ ಸೇನೆಗಳೊಂದಿಗೆ ನಿನ್ನ ಪ್ರಸನ್ನತೆಯನ್ನು ನಿರೀಕ್ಷಿಸುತ್ತಿದ್ದಾರೆ ಮತ್ತು ನಿನ್ನ ಭಕ್ತರಾಗಿದ್ದಾರೆ. ಈ ಪಾರ್ಷತ ಮಹಾಬಲ ಧೃಷ್ಟದ್ಯುಮ್ನನು ನಿತ್ಯವೂ ನಿನ್ನ ಹಿತವನ್ನು ಬಯಸಿ, ಪ್ರಿಯರತನಾಗಿ ಸೇನಾಪತ್ಯವನ್ನು ವಹಿಸಿಕೊಂಡಿದ್ದಾನೆ. ಮಹಾಬಾಹೋ! ಈ ಶಿಖಂಡಿಯೂ ಕೂಡ ಭೀಷ್ಮನ ಸಾವಿಗಾಗಿಯೇ ಅಲ್ಲವೇ?”
ಇದನ್ನು ಕೇಳಿ ರಾಜನು ವಾಸುದೇವನು ಕೇಳುವಂತೆ ಆ ಸಮಿತಿಯಲ್ಲಿ ಮಹಾರಥ ಧೃಷ್ಟದ್ಯುಮ್ನನಿಗೆ ಹೇಳಿದನು: “ಧೃಷ್ಟದ್ಯುಮ್ನ! ನಾನು ಹೇಳುವುದನ್ನು ಮನಸ್ಸಿಟ್ಟು ಕೇಳು. ಈಗ ನಾನು ಹೇಳಲಿರುವ ಮಾತನ್ನು ಅತಿಕ್ರಮಿಸಬಾರದು. ವಾಸುದೇವನ ಸಮ್ಮತಿಯಂತೆ ಹಿಂದೆ ದೇವತೆಗಳಿಗೆ ಕಾರ್ತ್ತಿಕೇಯನು ಹೇಗೆ ನಿತ್ಯ ಸೇನಾಪತಿಯಾಗಿದ್ದನೋ ಹಾಗೆ ನೀನೂ ಕೂಡ ನಾವು ಪಾಂಡವರ ಸೇನಾನಿಯಾಗಿದ್ದೀಯೆ. ವಿಕ್ರಮದಿಂದ ನೀನು ಕೌರವರನ್ನು ಜಯಿಸು. ನಾನು ಮತ್ತು ಹಾಗೆಯೇ ಭೀಮ, ಕೃಷ್ಣ, ಮಾದ್ರೀಪುತ್ರರಿಬ್ಬರು, ಜೊತೆಗೆ ಕವಚಗಳನ್ನು ಧರಿಸಿದ ದ್ರೌಪದೇಯರೂ, ಮತ್ತು ಅನ್ಯ ಪ್ರಥಾನ ಪೃಥಿವೀಪಾಲರೂ ನಿನ್ನನ್ನು ಅನುಸರಿಸುತ್ತೇವೆ.”
ಆಗ ಧೃಷ್ಟದ್ಯುಮ್ನನು ಎಲ್ಲರನ್ನೂ ಹರ್ಷಗೊಳಿಸುತ್ತಾ ಹೇಳಿದನು: “ಪಾರ್ಥ! ಹಿಂದೆ ಶಂಭುವು ವಿಹಿಸಿದ ದ್ರೋಣಾಂತಕನು ನಾನು. ರಣದಲ್ಲಿ ಭೀಷ್ಮನನ್ನೂ ಮತ್ತು ಹಾಗೆಯೇ ಕೊಬ್ಬಿರುವ ದ್ರೋಣ, ಕೃಪ, ಶಲ್ಯ, ಜಯದ್ರಥ ಎಲ್ಲರನ್ನೂ ಇಂದು ರಣದಲ್ಲಿ ಎದುರಿಸಿ ಯುದ್ಧಮಾಡುತ್ತೇನೆ.”
ಪಾಂಡವ ಸೇನಾ ವ್ಯೂಹ
ಆಗ ಶತ್ರುಸೂದನ ಪಾರ್ಥಿವೇಂದ್ರ ಪಾರ್ಷತನು ಯುದ್ಧೋದ್ಯುಕ್ತನಾಗಲು ಮಹೇಷ್ವಾಸ ಯುದ್ಧ ದುರ್ಮದ ಪಾಂಡವರು ಜೋರಾಗಿ ರಣಘೋಷಗೈದರು. ಆಗ ಪಾರ್ಥನು ಸೇನಾಪತಿ ಪಾರ್ಷತನಿಗೆ ಹೇಳಿದನು: “ಸರ್ವಶತ್ರುಗಳನ್ನು ನಾಶಗೊಳಿಸಬಲ್ಲ ಕ್ರೌಂಚಾರುಣವೆಂಬ ಹೆಸರಿನ ವ್ಯೂಹವನ್ನು ಆಗ ದೇವಾಸುರಯುದ್ಧದಲ್ಲಿ ಬೃಹಸ್ಪತಿಯು ಇಂದ್ರನಿಗೆ ಹೇಳಿದ್ದನು. ಪರ ಸೇನೆಯ ವಿನಾಶಕ್ಕಾಗಿ ಅದೇ ವ್ಯೂಹವನ್ನು ರಚಿಸು. ಹಿಂದೆ ಎಂದೂ ನೋಡಿರದ ಅದನ್ನು ಕುರುಗಳೊಂದಿಗೆ ರಾಜರು ನೋಡಲಿ.”
ಆ ನರದೇವನು ವಿಷ್ಣುವಿಗೆ ವಜ್ರಭೃತನು ಹೇಳಿದಂತೆ ಹೇಳಲು, ಪ್ರಭಾತದಲ್ಲಿ ಸರ್ವ ಸೈನ್ಯಗಳ ಅಗ್ರಸ್ಥಾನದಲ್ಲಿ ಧನಂಜಯನನ್ನು ನಿಲ್ಲಿಸಿದನು. ಸೂರ್ಯನ ಪಥದಲ್ಲಿ ಹೋಗುತ್ತಿರುವ ಅವನ ಧ್ವಜವು ಅದ್ಭುತವೂ ಮನೋರಮವೂ ಆಗಿತ್ತು. ಪುರುಹೂತನ ಶಾಸನದಂತೆ ವಿಶ್ವಕರ್ಮನು ಅದನ್ನು ನಿರ್ಮಿಸಿದ್ದನು. ಕಾಮನಬಿಲ್ಲಿನ ಬಣ್ಣಗಳಿಂದ ಕೂಡಿದ, ಪತಾಕೆಗಳಿಂದ ಅಲಂಕೃತವಾದ, ಆಕಾಶದಲ್ಲಿ ಹಾರಾಡುವ ಪಕ್ಷಿಯಂತಿರುವ, ಗಂಧರ್ವನಗರದಂತಿರುವ, ನೃತ್ಯಮಾಡುತ್ತಿರುವುದೋ ಎನ್ನುವಂತೆ ಚಲಿಸುತ್ತಿದ್ದ ಆ ರತ್ನವತ ರಥವು ಗಾಂಡೀವಧನ್ವಿ ಪಾರ್ಥನಿಂದ ಭಾನುವಿನಿಂದ ಸ್ವಯಂಭುವು ಹೇಗೋ ಹಾಗೆ ಪರಮೋಪೇತವಾಗಿತ್ತು. ಮಹಾ ಸೇನೆಯಿಂದ ಆವೃತನಾದ ರಾಜಾ ದ್ರುಪದನು ಅದರ ಶಿರವಾದನು. ಕುಂತಿಭೋಜ-ಚೈದ್ಯರು ಅದರ ಕಣ್ಣುಗಳಾದರು. ದಾಶಾರ್ಣಕರು, ಪ್ರಯಾಗರು, ದಾಶೇರಕಗಣಗಳೊಂದಿಗೆ ಅನುಸರಿಸಿ ಹೋಗುತ್ತಿದ್ದ ಕಿರಾತರೂ ಕುತ್ತಿಗೆಯ ಭಾಗದಲ್ಲಿದ್ದರು. ಪಟಚ್ಚರರು, ಹುಂಡರು, ಪೌರವಕರು, ಮತ್ತು ನಿಷಾದರ ಸಹಿತ ಯುಧಿಷ್ಠಿರನು ಅದರ ಪೃಷ್ಠಭಾಗದಲ್ಲಿದ್ದನು. ಭೀಮಸೇನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಅದರ ಎರಡು ರೆಕ್ಕೆಗಳಾಗಿದ್ದರು. ದ್ರೌಪದೇಯರು, ಅಭಿಮನ್ಯು, ಸಾತ್ಯಕಿ, ಪಿಶಾಚರು, ದರದರು, ಪುಂಡ್ರರು, ಕುಂಡೀವಿಷರೊಂದಿಗೆ ಮಡಕ, ಲಡಕ, ತಂಗಣ, ಪರತಂಗಣರು, ಬಾಹ್ಲಿಕರು, ತಿತ್ತಿರರು, ಚೋಲರು, ಪಾಂಡ್ಯರು ಈ ಜನಪದದವರು ವ್ಯೂಹದ ಬಲಭಾಗದಲ್ಲಿದ್ದರು. ಅಗ್ನಿವೇಷ್ಯ, ಜಗತ್ತುಂಡ, ಪಲದಾಶರು, ಶಬರರು, ತುಂಬುಪಾಶರು, ವತ್ಸರು, ನಾಕುಲರೊಂದಿಗೆ ನಕುಲ ಸಹದೇವರು ವ್ಯೂಹದ ಎಡಭಾಗದಲ್ಲಿದ್ದರು. ವ್ಯೂಹದ ಎರಡೂ ರೆಕ್ಕೆಗಳಲ್ಲಿ ಹತ್ತುಸಾವಿರ ರಥಗಳೂ, ಶಿರಸ್ಸಿನಲ್ಲಿ ಲಕ್ಷ ರಥಗಳೂ, ಪೃಷ್ಠಭಾಗದಲ್ಲಿ ಹತ್ತುಕೋಟಿ ಇಪ್ಪತ್ತು ಸಾವಿರ ರಥಗಳೂ, ಕತ್ತಿನಲ್ಲಿ ಒಂದು ಲಕ್ಷ ಎಪ್ಪತ್ತು ಸಾವಿರ ರಥಗಳೂ ಇದ್ದವು. ರೆಕ್ಕೆಗಳ ಅಗ್ರಭಾಗಗಳಲ್ಲಿ ಮತ್ತು ಚಿಕ್ಕ ಚಿಕ್ಕ ಪುಕ್ಕಗಳ ಪ್ರದೇಶದಲ್ಲಿ ಮತ್ತು ರೆಕ್ಕೆಗಳ ಅಂತ್ಯದಲ್ಲಿ ಆನೆಗಳು ಗುಂಪು-ಗುಂಪಾಗಿ ಪರ್ವತೋಪಾದಿಗಳಲ್ಲಿ ಚಲಿಸುತ್ತಿದ್ದವು. ಕೇಕಯ, ಕಾಶಿರಾಜ ಮತ್ತು ಶೈಬ್ಯರೊಂದಿಗೆ ವಿರಾಟನು ಮೂವತ್ತು ಸಾವಿರ ರಥಗಳೊಂದಿಗೆ ಆ ವ್ಯೂಹದ ಕಟಿಪ್ರದೇಶವನ್ನು ರಕ್ಷಿಸುತ್ತಿದ್ದರು. ಹೀಗೆ ಪಾಂಡವರು ಮಹಾವ್ಯೂಹವನ್ನು ರಚಿಸಿ ಕವಚಗಳನ್ನು ಧರಿಸಿ ಸೂರ್ಯೋದಯವನ್ನು ಬಯಸಿ ಯುದ್ಧಸನ್ನದ್ಧರಾಗಿ ನಿಂತಿದ್ದರು. ಅವರ ಆನೆಗಳು ಮತ್ತು ರಥಗಳ ಮೇಲೆ ಸೂರ್ಯನಂತೆ ಪ್ರಕಾಶಮಾನವಾಗಿ ಶುಭ್ರ ಮಹಾ ಶ್ವೇತ ಛತ್ರಗಳು ಶೋಭಿಸುತ್ತಿದ್ದವು.
ಕೌರವ ಸೇನಾ ವ್ಯೂಹ
ಅಮಿತತೇಜಸ ಪಾರ್ಥರ ಅಭೇದ್ಯವಾದ ಮಹಾಘೋರ ಕ್ರೌಂಚವ್ಯೂಹವನ್ನು ನೋಡಿ ದುರ್ಯೋಧನನು ಆಚಾರ್ಯ, ಕೃಪ, ಶಲ್ಯ, ಸೌಮದತ್ತಿ, ವಿಕರ್ಣ, ಅಶ್ವತ್ಥಾಮ, ದುಃಶಾಸನನೇ ಮೊದಲಾದ ಸಹೋದರರೆಲ್ಲರ ಹಾಗೂ ಯುದ್ಧಕ್ಕಾಗಿ ಸೇರಿರುವ ಬಹಳಷ್ಟು ಅನ್ಯ ಶೂರರ ಬಳಿಸಾರಿ ಅವರನ್ನು ಹರ್ಷಗೊಳಿಸುತ್ತಾ ಕಾಲಕ್ಕೆ ತಕ್ಕುದಾದ ಈ ಮಾತನ್ನು ಆಡಿದನು. “ನೀವೆಲ್ಲರೂ ನಾನಾ ಶಸ್ತ್ರಪ್ರಹರಣಮಾಡಬಲ್ಲರಿ ಮತ್ತು ಶಸ್ತ್ರಾಸ್ತ್ರಗಳನ್ನು ತಿಳಿದಿರುವಿರಿ. ನೀವೆಲ್ಲರಲ್ಲಿ ಒಬ್ಬೊಬ್ಬರೂ ಸೈನ್ಯದೊಂದಿಗಿರುವ ಪಾಂಡುಪುತ್ರರನ್ನು ರಣದಲ್ಲಿ ಕೊಲ್ಲಲು ಸಮರ್ಥರಾಗಿದ್ದೀರಿ. ನೀವೆಲ್ಲ ಒಟ್ಟಿಗೆ ಇರುವಾಗ ಇನ್ನೇನು? ಭೀಷ್ಮನಿಂದ ರಕ್ಷಿತವಾದ ನಮ್ಮ ಸೇನೆಯು ಅಪರ್ಯಾಪ್ತವಾದುದು. ಆದರೆ ಪಾರ್ಥಿವಸತ್ತಮ ಅವರ ಬಲವು ಪರ್ಯಾಪ್ತವಾದುದು. ಸಂಸ್ಥಾನಿಕರು, ಶೂರಸೇನರು, ವೇಣಿಕರು, ಕುಕುರರು, ಆರೇವಕರು, ತ್ರಿಗರ್ತರು, ಮದ್ರಕರು, ಯವನರು ಶತ್ರುಂಜಯನ ಸಹಿತ ಮತ್ತು ದುಃಶಾಸನ, ವೀರ ವಿಕರ್ಣ, ನಂದೋಪನಂದಕರು ಮತ್ತು ಚಿತ್ರಸೇನನ ಸಹಿತ, ಪಾಣಿಭದ್ರಕರ ಸಹಿತ ಸೈನ್ಯವನ್ನು ಮುಂದಿಟ್ಟುಕೊಂಡು ಭೀಷ್ಮನನ್ನು ರಕ್ಷಿಸಲಿ.”
ಆಗ ಪಾಂಡವರನ್ನು ಪ್ರತಿಬಾಧಿಸಲು ದ್ರೋಣ, ಭೀಷ್ಮ ಮತ್ತು ಧಾರ್ತರಾಷ್ಟ್ರರು ಮಹಾವ್ಯೂಹವನ್ನು ರಚಿಸಿದರು. ಮಹಾಸೇನೆಯಿಂದ ಎಲ್ಲ ಕಡೆಗಳಿಂದಲೂ ಸುತ್ತುವರೆಯಲ್ಪಟ್ಟು ಭೀಷ್ಮನು ಸುರರಾಜನಂತೆ ಮಹಾ ಸೇನೆಯನ್ನು ಎಳೆದುಕೊಂಡು ಹೋದನು. ಅವನನ್ನು ಹಿಂಬಾಲಿಸಿ ಪ್ರತಾಪವಾನ್ ಮಹೇಷ್ವಾಸ ಭಾರದ್ವಾಜನು ಕುಂತಲರು, ದಶಾರ್ಣರು, ಮಾಗಧರು, ವಿದರ್ಭರು, ಮೇಕಲರು, ಕರ್ಣಪ್ರಾವರರೂ ಸರ್ವಸೇನೆಗಳ ಸಹಿತ ಭೀಷ್ಮನ ಯುದ್ಧವನ್ನು ಶೋಭಿಸುತ್ತಾ ನಡೆದನು. ಗಾಂಧಾರರು, ಸಿಂಧು-ಸೌವೀರರು, ಶಿಬಿ, ವಸಾತಯರು ಮತ್ತು ಶಕುನಿಯರು ಸ್ವಸೇನೆಗಳೊಂದಿಗೆ ಭಾರದ್ವಾಜನನ್ನು ರಕ್ಷಿಸಿದರು. ರಾಜಾ ದುರ್ಯೋಧನನು ಸರ್ವಸೋದರರೊಂದಿಗೆ ಅಶ್ವಾತಕ-ವಿಕರ್ಣ-ಶರ್ಮಿಲ-ಕೋಸಲ-ದರದ-ಚೂಚುಪ-ಕ್ಷುದ್ರಕ-ಮಾಲವರನ್ನು ಕೂಡಿಕೊಂಡು ಸೌಬಲನ ವಾಹಿನಿಯನ್ನು ರಕ್ಷಿಸಿದನು. ಭೂರಿಶ್ರವ, ಶಲ, ಶಲ್ಯ, ಭಗದತ್ತ, ಅವಂತಿಯ ವಿಂದಾನುವಿಂದರು ಎಡಪಾರ್ಶ್ವವನ್ನು ರಕ್ಷಿಸುತ್ತಿದ್ದರು. ಸೌಮದತ್ತಿ, ಸುಶರ್ಮ, ಕಾಂಬೋಜ, ಸುದಕ್ಷಿಣ, ಶತಾಯು, ಶ್ರುತಾಯುಗಳು ಬಲಭಾಗದಲ್ಲಿದ್ದರು. ಅಶ್ವತ್ಥಾಮ, ಕೃಪ ಮತ್ತು ಕೃತವರ್ಮರು ಒಟ್ಟಿಗೇ ಮಹಾಸೇನೆಗಳೊಂದಿಗೆ ಸೇನೆಯ ಪೃಷ್ಠಭಾಗದಲ್ಲಿದ್ದರು. ಅವರನ್ನು ಹಿಂಬಾಲಿಸಿ ಹೋಗುತ್ತಿದ್ದ ನಾನಾ ದೇಶಗಳ ಜನೇಶ್ವರರು, ಕೇತುಮಾನ್, ವಸುದಾನ ಮತ್ತು ಕಾಶ್ಯನ ಮಗ ಅಭಿಭೂ ಇವರು ಹಿಂಬಾಗವನ್ನು ರಕ್ಷಿಸಿದರು. ಆಗ ಕೌರವರೆಲ್ಲರೂ ಯುದ್ಧಕ್ಕೆ ಹರ್ಷಿತರಾಗಿ ಶಂಖಗಳನ್ನು ಊದಿದರು ಮತ್ತು ಮುದಿತರಾಗಿ ಸಿಂಹನಾದಗೈದರು.
ಹೃಷ್ಟರಾಗಿದ್ದ ಅವರನ್ನು ಕೇಳಿ ಕುರುವೃದ್ಧ ಪಿತಾಮಹ ಪ್ರತಾಪವಾನನು ಸಿಂಹನಾದವನ್ನು ಮಾಡಿ ಜೋರಾಗಿ ಶಂಖವನ್ನು ಊದಿದನು. ಶಂಖ, ಭೇರಿ, ಪಣವ, ಢಕ್ಕೆ, ಮೃದಂಗ, ಅನಕ ಮೊದಲಾದವುಗಳು ಮೊಳಗಿದವು ಮತ್ತು ತುಮುಲಶಬ್ಧವುಂಟಾಯಿತು. ಶ್ವೇತಹಯಗಳನ್ನು ಕಟ್ಟಿದ್ದ ಮಹಾ ರಥದಲ್ಲಿ ಕುಳಿತಿದ್ದ ಕೃಷ್ಣ-ಧನಂಜಯರಿಬ್ಬರೂ ಹೇಮರತ್ನ ಪರಿಷ್ಕೃತ ಶ್ರೇಷ್ಠ ಶಂಖಗಳನ್ನು ಊದಿದರು. ಹೃಷೀಕೇಶನು ಪಾಂಚಜನ್ಯವನ್ನೂ, ಧನಂಜಯನು ದೇವದತ್ತವನ್ನೂ, ಭೀಮಕರ್ಮಿ ವೃಕೋದರನು ಮಹಾಶಂಖ ಪೌಂಡ್ರವನ್ನೂ, ರಾಜಾ ಕುಂತೀಪುತ್ರ ಯುಧಿಷ್ಠಿರನು ಅನಂತವಿಜಯವನ್ನೂ, ನಕುಲ-ಸಹದೇವನು ಸುಘೋಷ-ಮಣಿಪುಷ್ಪಕಗಳನ್ನೂ ಊದಿದರು. ಕಾಶಿರಾಜ, ಶೈಭ್ಯ, ಶಿಖಂಡೀ, ಧೃಷ್ಟದ್ಯುಮ್ನ, ವಿರಾಟ, ಸಾತ್ಯಕಿ, ಪಾಂಚಾಲ್ಯ, ಮತ್ತು ದ್ರೌಪದಿಯ ಐವರು ಮಕ್ಕಳು ಎಲ್ಲರೂ ಮಹಾಶಂಖಗಳನ್ನು ಊದಿದರು ಮತ್ತು ಸಿಂಹನಾದ ಗೈದರು. ಅಲ್ಲಿ ಸೇರಿದ್ದ ವೀರರ ಆ ಸುಮಹಾ ಘೋಷದ ತುಮುಲವು ಭೂಮಿ-ಆಕಾಶಗಳಲ್ಲಿ ಮೊಳಗಿತು. ಹೀಗೆ ಪ್ರಹೃಷ್ಟರಾದ ಕುರುಪಾಂಡವರು ಪರಸ್ಪರರನ್ನು ಸುಡುತ್ತಾ ಪುನಃ ಯುದ್ಧಕ್ಕೆ ತೊಡಗಿದರು.
ಭೀಷ್ಮಾರ್ಜುನರ ಯುದ್ಧ
ಸೇನೆಗಳ ವ್ಯೂಹಗಳನ್ನು ಸಮನಾಗಿ ರಚಿಸಿ ಸುಂದರ ಧ್ವಜಗಳಿಂದ ಸನ್ನದ್ಧವಾಗಿದ ಆ ಅಪಾರಸೇನೆಯು ಸಾಗರದಂತೆ ಬಲಶಾಲಿಯಾಗಿ ತೋರಿತು. ಅವರ ಮಧ್ಯೆ ನಿಂತಿದ್ದ ರಾಜಾ ದುರ್ಯೋಧನನು ತನ್ನವರೆಲ್ಲರಿಗೆ “ಕವಚಧಾರಿಗಳೇ! ಯುದ್ಧಮಾಡಿ!” ಎಂದು ಹೇಳಿದನು. ಮೇಲೆ ಧ್ವಜಗಳು ಹಾರಾಡುತ್ತಿರಲು ಅವರು ಎಲ್ಲರೂ ಮನಸ್ಸನ್ನು ಕ್ರೂರವನ್ನಾಗಿಸಿಕೊಂಡು, ಜೀವವನ್ನು ತೊರೆದು ಪಾಂಡವರ ಮೇಲೆ ಆಕ್ರಮಣ ಮಾಡಿದರು. ಆಗ ಕೌರವರ ಮತ್ತು ಪಾಂಡವರ ನಡುವೆ ರಥ-ಗಜ-ಅಶ್ವ-ಪದಾತಿಗಳ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು. ರಥಿಗಳು ಬಿಟ್ಟ ಸುತೇಜನ ಹರಿತ ರುಕ್ಮಪುಂಖ ಬಾಣಗಳು ಆನೆ-ಕುದುರೆಗಳ ಮೇಲೆ ಬೀಳುತ್ತಿದ್ದವು. ಹೀಗೆ ಸಂಗ್ರಾಮವು ಪ್ರಾರಂಭವಾಗಲು ಧನುಸ್ಸನ್ನು ಎತ್ತಿಕೊಂಡು, ಕವಚಗಳನ್ನು ಧರಿಸಿ ಮಹಾಬಾಹು ಭೀಮಪರಾಕ್ರಮಿ ಭೀಷ್ಮನು ಆಕ್ರಮಣ ಮಾಡಿದನು. ಕುರುಪಿತಾಮಹ ವೃದ್ಧನು ಸೌಭದ್ರ, ಭೀಮಸೇನ, ಶೈನ, ಕೇಕಯ, ವಿರಾಟ, ಧೃಷ್ಟದ್ಯುಮ್ನ ಈ ನರವೀರರು ಮತ್ತು ಚೇದಿ-ಮತ್ಸ್ಯರ ಮೇಲೆ ಶರವರ್ಷಗಳನ್ನು ಸುರಿಸಿ ಹೊಡೆದನು. ಆ ವೀರಸಮಾಗಮದಲ್ಲಿ ಮಹಾವ್ಯೂಹವು ಕಂಪಿಸಿತು. ಎಲ್ಲ ಸೇನೆಗಳಲ್ಲಿಯೂ ಮಹಾ ಅಸ್ತವ್ಯಸ್ತವಾಯಿತು. ಅಶ್ವಯೋಧರು, ಧ್ವಜವುಳ್ಳವರು, ಆನೆಗಳು ಮತ್ತು ರಥಿಕರು ಅಪಾರ ಸಂಖ್ಯೆಯಲ್ಲಿ ಮರಣವನ್ನಿಪ್ಪಿದರು. ಪಾಂಡವರ ರಥಸೈನ್ಯವು ದಿಕ್ಕುಪಾಲಾಗಿ ಓಡಿ ಹೋಯಿತು.
ನರವ್ಯಾಘ್ರ ಅರ್ಜುನನಾದರೋ ಮಹಾರಥ ಭೀಷ್ಮನನ್ನು ನೋಡಿ ಕ್ರುದ್ಧನಾಗಿ ವಾರ್ಷ್ಣೇಯನಿಗೆ ಹೇಳಿದನು: “ಪಿತಾಮಹನಿರುವಲ್ಲಿಗೆ ಕೊಂಡೊಯ್ಯಿ! ವಾರ್ಷ್ಣೇಯ! ದುರ್ಯೋಧನನ ಹಿತರತನಾಗಿ ಈ ಭೀಷ್ಮನು ಸಂಕ್ರುದ್ಧನಾಗಿ ನನ್ನ ಸೇನೆಯನ್ನು ನಾಶಗೊಳಿಸುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ದೃಢಧನ್ವಿಯಿಂದ ರಕ್ಷಿತರಾಗಿ ದ್ರೋಣ, ಕೃಪ, ಶಲ್ಯ ಮತ್ತು ವಿಕರ್ಣರು ದುರ್ಯೋಧನನ ನಾಯಕತ್ವದಲ್ಲಿ ಧಾರ್ತರಾಷ್ಟ್ರರ ಸಹಿತ ಪಾಂಚಾಲರನ್ನು ನಾಶಮಾಡಿಬಿಡುತ್ತಾರೆ. ನನ್ನ ಸೇನೆಯ ಕಾರಣದಿಂದ ನಾನು ಭೀಷ್ಮನನ್ನು ಕಳುಹಿಸುತ್ತೇನೆ.”
ಅವನಿಗೆ ವಾಸುದೇವನು ಹೇಳಿದನು: “ಧನಂಜಯ! ಪ್ರಯತ್ನಿಸುವವನಾಗು! ಪಿತಾಮಹನ ರಥದ ಬಳಿ ಇಗೋ ನಿನ್ನನ್ನು ತಲುಪಿಸುತ್ತೇನೆ.” ಹೀಗೆ ಹೇಳಿ ಶೌರಿಯು ಆ ಲೋಕವಿಶ್ರುತ ರಥವನ್ನು ಭೀಷ್ಮನ ರಥದ ಬಳಿ ಕೊಂಡೊಯ್ದನು. ಅನೇಕ ಪತಾಕೆಗಳು ಹಾರಾಡುತ್ತಿದ್ದ, ಬೆಳ್ಳಕ್ಕಿಯ ಚುಕ್ಕೆಗಳಂತೆ ಅಪ್ಪಟ ಬಿಳಿಯ ಕುದುರೆಗಳನ್ನು ಕಟ್ಟಿದ್ದ, ಮಹಾಭಯಂಕರವಾಗಿ ಘರ್ಜನೆ ಮಾಡುತ್ತಿದ್ದ ವಾನರನನ್ನು ಧ್ವಜದಲ್ಲಿರಿಸಿದ್ದ ಆ ಆದಿತ್ಯವರ್ಚಸ ರಥವು ಮಹಾ ಮೇಘನಾದದಿಂದ ಕೂಡಿತ್ತು. ಬರುವಾಗ ಕೌರವ ಶೂರಸೇನೆಯನ್ನು ಸಂಹರಿಸುತ್ತಾ, ಶೀಘ್ರ ಬಾಣಗಳನ್ನು ಬಿಡುತ್ತಾ, ಸುಹೃದಯರ ಶೋಕವನ್ನು ನಾಶಪಡಿಸುವ ಪಾಂಡವ ಅರ್ಜುನನು ಮದೋದಕವನ್ನು ಸುರಿಸುವ ಆನೆಯಂತೆ ಮಹಾ ವೇಗದಿಂದ ಮೇಲೆ ಬೀಳುತ್ತಾ ರಣದಲ್ಲಿ ಶೂರರನ್ನು ಸಾಯಕಗಳಿಂದ ಗಾಯಗೊಳಿಸಿ ಬೀಳಿಸುತ್ತಾ, ಸೈಂಧವಪ್ರಮುಖರಾದ ಪ್ರಾಚ್ಯ-ಸೌವೀರ-ಕೇಕಯರು ರಕ್ಷಿಸುತ್ತಿದ್ದ ಭೀಷ್ಮ ಶಾಂತನವನ ಮೇಲೆ ಜೋರಾಗಿ ಆಕ್ರಮಣ ಮಾಡಿದನು. ಆಗ ಕೌರವರ ಪಿತಾಮಹ ಭೀಷ್ಮನು ಅರ್ಜುನನನ್ನು ಎಪ್ಪತ್ತೇಳು ನಾರಾಚಗಳಿಂದ ಪ್ರಹರಿಸಿದನು. ದ್ರೋಣನು ಇಪ್ಪತ್ತೈದು ಬಾಣಗಳಿಂದಲೂ, ಕೃಪನು ಐವತ್ತು ಬಾಣಗಳಿಂದಲೂ, ದುರ್ಯೋಧನನು ಅರವತ್ನಾಲ್ಕು ಬಾಣಗಳಿಂದಲೂ, ಶಲ್ಯನು ಒಂಭತ್ತು ಬಾಣಗಳಿಂದಲೂ, ಸೈಂಧವನು ಒಂಭತ್ತರಿಂದಲೂ, ಶಕುನಿಯು ಐದರಿಂದಲೂ, ವಿಕರ್ಣನು ಹತ್ತು ಭಲ್ಲಗಳಿಂದಲೂ ಪಾಂಡವನನ್ನು ಹೊಡೆದರು. ಎಲ್ಲ ಕಡೆಗಳಿಂದ ಅವರ ನಿಶಿತ ಶರಗಳಿಂದ ಹೊಡೆಯಲ್ಪಟ್ಟರೂ ಬಾಣದ ಏಟಿಗೊಳಗಾದ ಪರ್ವತದಂತೆ ಆ ಮಹೇಷ್ವಾಸ ಮಹಾಬಾಹುವು ವ್ಯಥಿತನಾಗಲಿಲ್ಲ. ಆಗ ಆ ನರವ್ಯಾಘ್ರ ಕಿರೀಟೀ ಅಮೇಯಾತ್ಮನು ಭೀಷ್ಮನನ್ನು ಇಪ್ಪತ್ತೈದು ಬಾಣಗಳಿಂದಲೂ, ಕೃಪನನ್ನು ಒಂಭತ್ತು ಬಾಣಗಳಿಂದಲೂ, ದ್ರೋಣನನ್ನು ಆರರಿಂದಲೂ, ವಿಕರ್ಣನನ್ನು ಮೂರು ಬಾಣಗಳಿಂದಲೂ, ಶಲ್ಯನನ್ನು ಮೂರು ಬಾಣಗಳಿಂದಲೂ ರಾಜಾ ದುರ್ಯೋಧನನನ್ನು ಐದರಿಂದಲೂ ಮರಳಿ ಹೊಡೆದನು.
ಧನಂಜಯನನ್ನು ಸಾತ್ಯಕಿ, ವಿರಾಟ, ಧೃಷ್ಟದ್ಯುಮ್ನ, ದ್ರೌಪದೇಯರು ಮತ್ತು ಅಭಿಮನ್ಯುವು ಸುತ್ತುವರೆದರು. ಆಗ ಸೋಮಕರೊಂದಿಗೆ ಕೂಡಿ ಪಾಂಚಾಲ್ಯನು ಗಾಂಗೇಯನ ಪ್ರಿಯರತ, ಮಹೇಷ್ವಾಸ ದ್ರೋಣನನ್ನು ಆಕ್ರಮಣಿಸಿದನು. ರಥಿಗಳಲ್ಲಿ ಶ್ರೇಷ್ಠ ಭೀಷ್ಮನಾದರೋ ಪಾಂಡವನನ್ನು ಲೋಹದ, ನಿಶಿತ ಬಾಣಗಳಿಂದ ವೇಗವಾಗಿ ಹೊಡೆಯಲು ಕೌರವರು ಆಕ್ರೋಶಮಾಡಿದರು. ಪ್ರಹೃಷ್ಟರಾದ ಅವರ ಆ ಸಂತೋಷದ ಕೂಗನ್ನು ಕೇಳಿ ಪ್ರತಾಪವಾನ್ ರಥಸಿಂಹನು ಅವರ ಮಧ್ಯೆ ಪ್ರವೇಶಿಸಿದನು. ಆ ರಥಸಿಂಹರ ಮಧ್ಯೆ ಪ್ರವೇಶಿಸಿದ ಧನಂಜಯನು ಮಹಾರಥರನ್ನು ಗುರಿಯಾಗಿಟ್ಟುಕೊಂಡು ಧನುಸ್ಸಿನೊಂದಿಗೆ ಆಟವಾಡತೊಡಗಿದನು. ಆಗ ರಾಜಾ ದುರ್ಯೋಧನನು ಸಂಯುಗದಲ್ಲಿ ಪಾರ್ಥನು ತನ್ನ ಸೇನೆಯನ್ನು ಪೀಡಿಸುವುದನ್ನು ನೋಡಿ ಭೀಷ್ಮನಿಗೆ ಹೇಳಿದನು: “ಅಯ್ಯಾ! ಈ ಬಲೀ ಪಾಂಡುಸುತನು ಕೃಷ್ಣನ ಸಹಿತ ನೀನು ಮತ್ತು ದ್ರೋಣನು ಜೀವಂತವಿರುವಾಗಲೇ ಪ್ರಯತ್ನಿಸುತ್ತಿರುವ ಸರ್ವಸೇನೆಗಳನ್ನು ಬುಡಸಹಿತ ಕಿತ್ತೊಗೆಯುತ್ತಿದ್ದಾನಲ್ಲ! ನಿನ್ನಿಂದಾಗಿ ಮಹಾರಥ ಕರ್ಣನೂ ಕೂಡ ಶಸ್ತ್ರವನ್ನು ಕೆಳಗಿಟ್ಟಿದ್ದಾನೆ. ಆದುದರಿಂದಲೇ ಸದಾ ನನ್ನ ಹಿತವನ್ನೇ ಬಯಸುವ ಅವನು ರಣದಲ್ಲಿ ಪಾರ್ಥನೊಂದಿಗೆ ಯುದ್ಧಮಾಡುತ್ತಿಲ್ಲ! ಗಾಂಗೇಯ! ಫಲ್ಗುನನನ್ನು ಕೊಲ್ಲುವಂತಹುದನ್ನು ಮಾಡು!”
ಅವನು ಹೀಗೆ ಹೇಳಲು ದೇವವ್ರತನು “ಕ್ಷತ್ರಧರ್ಮಕ್ಕೆ ಧಿಕ್ಕಾರ!” ಎಂದು ಹೇಳಿ ಪಾರ್ಥನ ರಥದ ಬಳಿ ನಡೆದನು. ಇಬ್ಬರೂ ಶ್ವೇತಹಯರೂ ಸಂಘರ್ಷಣೆಗೆ ಸಿದ್ಧರಾಗಿರುವುದನ್ನು ನೋಡಿ ಪಾರ್ಥಿವರು ಜೋರಾಗಿ ಸಿಂಹನಾದಗೈದರು ಮತ್ತು ಶಂಖಗಳ ಶಬ್ಧಗಳನ್ನು ಮಾಡಿದರು. ದ್ರೌಣಿ, ದುರ್ಯೋಧನ ಮತ್ತು ವಿಕರ್ಣರು ರಣದಲ್ಲಿ ಭೀಷ್ಮನನ್ನು ಸುತ್ತುವರೆದು ಯುದ್ಧಕ್ಕೆ ನಿಂತರು. ಹಾಗೆಯೇ ಪಾಂಡವರೆಲ್ಲರೂ ಧನಂಜಯನನ್ನು ಸುತ್ತುವರೆದು ಯುದ್ಧಕ್ಕೆ ನಿಂತರು. ಆಗ ಮಹಾಯುದ್ಧವು ನಡೆಯಿತು. ರಣದಲ್ಲಿ ಗಾಂಗೇಯನಾದರೋ ಪಾರ್ಥನನ್ನು ಒಂಭತ್ತು ಶರಗಳಿಂದ ಹೊಡೆದನು. ಅವನನ್ನು ಅರ್ಜುನನು ಹತ್ತು ಮರ್ಮವೇಧಿಗಳಿಂದ ತಿರುಗಿ ಹೊಡೆದನು. ಸಮರಶ್ಲಾಘೀ ಪಾಂಡವ ಅರ್ಜುನನು ಚಿನ್ನಾಗಿ ಗುರಿಯಿಟ್ಟ ಸಹಸ್ರ ಬಾಣಗಳಿಂದ ಭೀಷ್ಮನನ್ನು ಎಲ್ಲ ಕಡೆಗಳಿಂದಲೂ ಮುಚ್ಚಿಬಿಟ್ಟನು. ಪಾರ್ಥನ ಆ ಶರಜಾಲವನ್ನು ಭೀಷ್ಮ ಶಾಂತನವನು ಶರಜಾದಿಂದ ತಡೆದನು. ಇಬ್ಬರೂ ಪರಮ ಸಂಹೃಷ್ಟರಾಗಿದ್ದರು. ಇಬ್ಬರೂ ಯುದ್ಧದಲ್ಲಿ ಪರಸ್ಪರರನ್ನು ಶ್ಲಾಘಿಸುತ್ತಿದ್ದರು. ಒಬ್ಬರು ಪ್ರಹರಿಸಿದರೆ ಇನ್ನೊಬ್ಬರು ಅದಕ್ಕೆ ಪ್ರತಿಯಾಗಿ ಪ್ರಹರಿಸುತ್ತಿದ್ದರು. ಅವರಿಬ್ಬರ ಯುದ್ಧದಲ್ಲಿ ವ್ಯತ್ಯಾಸವೇ ಕಾಣಲಿಲ್ಲ. ಭೀಷ್ಮನ ಚಾಪದಿಂದ ಪ್ರಯೋಗಿಸಲ್ಪಟ್ಟ ಗುಂಪು ಗುಂಪಾದ ಶರಜಾಲಗಳು ಅರ್ಜುನನ ಸಾಯಕಗಳಿಂದ ಚೂರು ಚೂರಾಗಿ ಕೆಳಗೆ ಬೀಳುವುದು ಕಾಣುತ್ತಿತ್ತು. ಹಾಗೆಯೇ ಅರ್ಜುನನು ಬಿಟ್ಟ ಶರಜಾಲಗಳು ಗಾಂಗೇಯನ ಶರಗಳಿಂದ ತುಂಡಾಗಿ ನೆಲದ ಮೇಲೆ ಬೀಳುತ್ತಿದ್ದವು. ಅರ್ಜುನನು ಇಪ್ಪತ್ತೈದು ನಿಶಿತ ಬಾಣಗಳಿಂದ ಭೀಷ್ಮನನ್ನು ಚುಚ್ಚಿದನು. ಭೀಷ್ಮನೂ ಕೂಡ ಪಾರ್ಥನನ್ನು ಮೂವತ್ತು ಬಾಣಗಳಿಂದ ಹೊಡೆದನು. ಆ ಇಬ್ಬರು ಸುಮಹಾಬಲ ಅರಿಂದಮರು ಅನ್ಯೋನ್ಯರ ಕುದುರೆಗಳನ್ನೂ ರಥಗಳ ಈಷದಂಡಗಳನ್ನೂ, ರಥಚಕ್ರಗಳನ್ನೂ ಹೊಡೆದು ಆಟವಾಡುತ್ತಿದ್ದರು.
ಆಗ ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಕ್ರುದ್ಧನಾಗಿ ವಾಸುದೇವನ ಎದೆಗೆ ಮೂರು ಬಾಣಗಳಿಂದ ಹೊಡೆದನು. ಭೀಷ್ಮನ ಚಾಪದಿಂದ ಹೊರಟ ಬಾಣಗಳು ತಾಗಿದ ಮಧುಸೂದನನು ರಣದಲ್ಲಿ ಹೂಬಿಟ್ಟ ಕಿಂಶುಕದಂತೆ ರಾರಾಜಿಸಿದನು. ಪೆಟ್ಟುತಿಂದ ಮಾಧವನನ್ನು ನೋಡಿ ಕ್ರುದ್ಧನಾದ ಅರ್ಜುನನು ತುಂಬಾ ಕ್ರುದ್ಧನಾಗಿ ಯುದ್ಧದಲ್ಲಿ ಗಾಂಗೇಯನ ಸಾರಥಿಯನ್ನು ಮೂರು ಶರಗಳಿಂದ ಹೊಡೆದನು. ಆ ವೀರರಿಬ್ಬರೂ ಅನ್ಯೋನ್ಯರನ್ನು ವಧಿಸಲು ಪ್ರಯುತ್ನ ಮಾಡುತ್ತಿದ್ದರೂ ಯುದ್ಧದಲ್ಲಿ ಅನ್ಯೋನ್ಯರನ್ನು ಮೀರಲು ಶಕ್ಯರಾಗಲಿಲ್ಲ. ಮಂಡಲಾಕಾರವಾಗಿ, ವಿಚಿತ್ರವಾಗಿ, ಮುಂದೆ ಮತ್ತು ಹಿಂದೆ ಚಲಿಸುವುದು ಮೊದಲಾದ ಸಾಮರ್ಥ್ಯ ಲಾಘವಗಳನ್ನು ಸಾರಥಿಗಳು ತೋರಿಸಿಕೊಡುತ್ತಿದ್ದರು. ಪ್ರಹಾರಗಳ ಮಧ್ಯದಲ್ಲಿ ಇಬ್ಬರು ಮಹಾರಥರೂ ತರ್ಕಿಸುತ್ತಿದ್ದರು. ಪುನಃ ಪುನಃ ಮಧ್ಯಮಾರ್ಗವನ್ನು ಹಿಡಿದು ಯುದ್ಧಮಾಡುತ್ತಿದ್ದರು. ಇಬ್ಬರೂ ಸಿಂಹನಾದ ಮಿಶ್ರಿತ ಶಂಖಧ್ವನಿಯನ್ನು ಮಾಡುತ್ತಿದ್ದರು. ಹಾಗೆಯೇ ಇಬ್ಬರು ಮಹಾರಥರೂ ಧನುಷ್ಟೇಂಕಾರವನ್ನೂ ಮಾಡುತ್ತಿದ್ದರು. ಅವರ ಶಂಖಪ್ರಣಾದದಿಂದ ಮತ್ತು ರಥಚಕ್ರಗಳ ಶಬ್ಧದಿಂದ ಭೂಮಿಯು ಸೀಳಿ, ನಡುಗಿ ಮಹಾಶಬ್ಧವುಂಟಾಯಿತು. ಅವರಿಬ್ಬರಲ್ಲಿ ಯಾವುದೇ ಅಂತರವು ಕಾಣಲಿಲ್ಲ. ಸಮರದಲ್ಲಿ ಆ ಬಲಿ ಶೂರರಿಬ್ಬರೂ ಅನ್ಯೋನ್ಯರಂತೆಯೇ ಇದ್ದರು. ಕೌರವರು ಧ್ವಜಚಿಹ್ನೆಯಿಂದ ಮಾತ್ರ ಭೀಷ್ಮನನ್ನು ಗುರುತಿಸುತ್ತಿದ್ದರು. ಹಾಗೆಯೇ ಪಾಂಡುಸುತರು ಪಾರ್ಥನನ್ನು ಕೇವಲ ಧ್ಚಜಚಿಹ್ನೆಯಿಂದ ಗುರುತಿಸುತ್ತಿದ್ದರು. ನರಶ್ರೇಷ್ಠರ ಅಂಥಹ ಪರಾಕ್ರಮವನ್ನು ನೋಡಿ ಸರ್ವಭೂತಗಳೂ ವಿಸ್ಮಯಗೊಂಡವು. ಹೇಗೆ ಧರ್ಮದಲ್ಲಿ ಸ್ಥಿತನಾಗಿರುವವನಲ್ಲಿ ಯಾವುದೇ ರೀತಿಯ ನ್ಯೂನತೆಗಳು ಕಂಡುಬರುವುದಿಲ್ಲವೋ ಹಾಗೆ ಅವರಿಬ್ಬರಲ್ಲಿ ಯಾವುದೇ ರೀತಿಯ ಕುಂದುಗಳು ಕಾಣುತ್ತಿರಲಿಲ್ಲ.
ಇಬ್ಬರೂ ಬಾಣಗಳ ಬಲೆಗಳಿಂದ ಮುಚ್ಚಿಹೋಗಿರುವುದು ಕಾಣುತ್ತಿತ್ತು. ಪುನಃ ತಕ್ಷಣವೇ ಇಬ್ಬರೂ ರಣದಲ್ಲಿ ಪ್ರಕಾಮಾನರಾಗಿರುತ್ತಿದ್ದರು. ಅಲ್ಲಿ ಅವರ ಪರಾಕ್ರಮವನ್ನು ಕಂಡು ದೇವತೆಗಳು, ಗಂಧರ್ವ-ಚಾರಣ-ಋಷಿಗಳೊಂದಿಗೆ ಅನ್ಯೋನ್ಯರಲ್ಲಿ ಮಾತನಾಡಿಕೊಳ್ಳುತ್ತಿದ್ದರು: “ಯುದ್ಧದಲ್ಲಿ ಮಗ್ನರಾಗಿರುವ ಈ ಇಬ್ಬರು ಮಹಾರಥರನ್ನು ಗೆಲ್ಲಲು ಲೋಕದ ದೇವಾಸುರಗಂಧರ್ವರಿಂದಲೂ ಎಂದೂ ಸಾಧ್ಯವಿಲ್ಲ. ಮಹಾದ್ಭುತವಾದ ಈ ಯುದ್ಧವು ಲೋಕಗಳಲ್ಲಿ ಆಶ್ಚರ್ಯವನ್ನುಂಟುಮಾಡುತ್ತಿದೆ. ಹೀಗೆ ಕಾಣುವ ಯುದ್ಧವು ಮುಂದೆ ಎಂದೂ ನಡೆಯಲಿಕ್ಕಿಲ್ಲ. ಧನುಸ್ಸು ರಥಗಳೊಂದಿಗೆ ರಣದಲ್ಲಿ ಸಾಯಕಗಳನ್ನು ಬಿತ್ತುತ್ತಿರುವ ಭೀಷ್ಮನನ್ನು ಧೀಮತ ಪಾರ್ಥನು ಗೆಲ್ಲಲಾರ. ಹಾಗೆಯೇ ಯುದ್ಧದಲ್ಲಿ ಧನುರ್ಧರನಾದ ದೇವತೆಗಳಿಗೂ ದುರಾಸದನಾದ ಪಾಂಡವನನ್ನು ರಣದಲ್ಲಿ ಗೆಲ್ಲಲು ಭೀಷ್ಮನಿಗೂ ಸಾಧ್ಯವಿಲ್ಲ.”
ಗಾಂಗೇಯ-ಅರ್ಜುನರ ಯುದ್ಧವನ್ನು ಪ್ರಶಂಸಿಸುವ ಈ ಮಾತುಗಳು ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿತ್ತು. ಆಗ ಕೌರವ ಮತ್ತು ಪಾಂಡವೇಯರ ಯೋಧರು ಅಲ್ಲಿ ಪರಾಕ್ರಮದಿಂದ ಅನ್ಯೋನ್ಯರನ್ನು ಸಂಹರಿಸಿದರು. ಹರಿತ ಅಲಗಿನ ಖಡ್ಗಗಳಿಂದ, ಫಳ-ಫಳಿಸುವ ಪರಶುಗಳಿಂದ, ಶರಗಳಿಂದ, ನಾನಾವಿಧದ ಅನೇಕ ಶಸ್ತ್ರಗಳಿಂದ ಎರಡೂ ಸೇನೆಗಳ ವೀರರು ಪರಸ್ಪರರನ್ನು ಯುದ್ಧದಲ್ಲಿ ಕಡಿದುರುಳಿಸುತ್ತಿದ್ದರು. ಹೀಗೆ ಸುದಾರುಣವಾದ ಘೋರ ಯುದ್ಧವು ನಡೆಯುತ್ತಿರಲು ದ್ರೋಣ ಮತ್ತು ಪಾಂಚಾಲ್ಯನ ನಡುವೆ ಮಹಾ ದ್ವಂದ್ವಯುದ್ಧವು ನಡೆಯಿತು.
ಧೃಷ್ಟದ್ಯುಮ್ನ-ದ್ರೋಣರ ಯುದ್ಧ
ದ್ರೋಣನಾದರೋ ನಿಶಿತ ಬಾಣಗಳಿಂದ ಧೃಷ್ಟದ್ಯುಮ್ನನನ್ನು ಗಾಯಗೊಳಿಸಿದನು. ಅವನ ಸಾರಥಿಯನ್ನು ಕೂಡ ಭಲ್ಲದಿಂದ ಹೊಡೆದು ರಥದಿಂದ ಬೀಳಿಸಿದನು. ಸಂಕ್ರುದ್ಧನಾಗಿ ಧೃಷ್ಟದ್ಯುಮ್ನನ ನಾಲ್ಕು ಕುದುರೆಗಳನ್ನು ಉತ್ತಮ ಸಾಯಕಗಳಿಂದ ಪೀಡಿಸಿದನು. ಆಗ ಧೃಷ್ಟದ್ಯುಮ್ನನು ನಗುತ್ತಾ ದ್ರೋಣನನ್ನು ತೊಂಭತ್ತು ನಿಶಿತ ಬಾಣಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು. ಪುನಃ ಅಮೇಯಾತ್ಮ ಪ್ರತಾಪವಾನ್ ಭಾರದ್ವಾಜನು ಅಮರ್ಷಣ ಧೃಷ್ಟದ್ಯುಮ್ನನನ್ನು ಶರಗಳಿಂದ ಮುಚ್ಚಿಬಿಟ್ಟನು. ಪಾರ್ಷತನ ವಧೆಗೆಂದು ಮುಟ್ಟಲು ವಜ್ರದಂತೆ ಕಠೋರವಾಗಿದ್ದ, ಮೃತ್ಯುದಂಡದಂತಿರುವ ಘೋರ ಶರವನ್ನು ಎತ್ತಿಕೊಂಡನು. ಭಾರದ್ವಾಜನು ಆ ಬಾಣವನ್ನು ಹೂಡಿದ್ದುದನ್ನು ನೋಡಿ ಸರ್ವ ಸೈನ್ಯಗಳಲ್ಲಿ ಮಹಾ ಹಾಹಾಕಾರವುಂಟಾಯಿತು. ಅವನೊಬ್ಬನೇ ವೀರನು ಸಮರದಲ್ಲಿ ಗಿರಿಯಂತೆ ಅಚಲನಾಗಿ ನಿಂತಿದ್ದನು. ತನ್ನ ಮೃತ್ಯುವಾಗಿಯೇ ಭಾರದ್ವಾಜನು ಬಿಟ್ಟ ಆ ಘೋರವಾಗಿ ಉರಿಯುತ್ತಾ ಬರುತ್ತಿರುವ ಬಾಣವನ್ನು ಅವನು ಶರವೃಷ್ಟಿಯಿಂದ ಕತ್ತರಿಸಿದನು. ಸುದುಷ್ಕರವಾದ ಆ ಕೆಲಸವನ್ನು ಮಾಡಿದ ಧೃಷ್ಟದ್ಯುಮ್ನನನ್ನು ನೋಡಿ ಪಾಂಚಾಲ ಪಾಂಡವರೆಲ್ಲರೂ ಒಟ್ಟಿಗೇ ಹರ್ಷೋದ್ಗಾರ ಮಾಡಿದರು.
ಆಗ ಆ ಪರಾಕ್ರಮಿಯು ದ್ರೋಣನ ಸಾವನ್ನು ಬಯಸಿ ಸ್ವರ್ಣವೈಡೂರ್ಯಭೂಷಿತವಾದ ಮಹಾವೀಗದ ಶಕ್ತಿಯನ್ನು ಎಸೆದನು. ವೇಗದಿಂದ ಬೀಳುತ್ತಿರುವ ಆ ಕನಕಭೂಷಣ ಶಕ್ತಿಯನ್ನು ಭಾರದ್ವಾಜನು ನಗುತ್ತಾ ಮೂರು ಭಾಗಗಳಾಗಿ ತುಂಡರಿಸಿದನು. ಶಕ್ತಿಯು ನಾಶವಾದುದನ್ನು ನೋಡಿ ಪ್ರತಾಪವಾನ್ ಧೃಷ್ಟದ್ಯುಮ್ನನು ದ್ರೋಣನ ಮೇಲೆ ಬಾಣಗಳ ಮಳೆಯನ್ನು ಸುರಿಸಿದನು. ಆ ಶರವರ್ಷವನ್ನು ನಿಲ್ಲಿಸಿ ಮಹಾಯಶ ದ್ರೋಣನು ದ್ರುಪದಪುತ್ರನ ಧನುಸ್ಸನ್ನು ಮಧ್ಯದಲ್ಲಿ ತುಂಡರಿಸಿದನು. ಧನುಸ್ಸು ತುಂಡಾಗಲು ಆ ಬಲೀ ಮಹಾಯಶಸ್ವಿಯು ಲೋಹನಿರ್ಮಿತವಾಗಿದ್ದ ಭಾರವಾದ ಗದೆಯನ್ನು ತಿರುತಿರುಗಿಸಿ ದ್ರೋಣನ ಮೇಲೆ ಎಸೆದನು. ವೇಗವಾಗಿ ಎಸೆಯಲ್ಪಟ್ಟ ದ್ರೊಣನ ಜೀವವನ್ನು ಕಳೆಯಬಲ್ಲ ಆ ಗದೆಯು ಬರುತ್ತಿರಲು ಅಲ್ಲಿ ಭಾರದ್ವಾಜನ ಅದ್ಭುತ ವಿಕ್ರಮವು ಕಂಡಿತು. ಹೇಮವಿಭೂಷಿತವಾದ ಗದೆಯನ್ನು ಲಾಘವದಿಂದ ವ್ಯರ್ಥಗೊಳಿಸಿದನು. ಆ ಗದೆಯನ್ನು ವ್ಯರ್ಥಗೊಳಿಸಿ ಪಾರ್ಷತನ ಮೇಲೆ ಹರಿತವಾದ, ಶಿಲಾಶಿತವಾದ ಸ್ವರ್ಣಪುಂಖ ಭಲ್ಲೆಗಳನ್ನು ಪ್ರಯೋಗಿಸಿದನು. ಅದು ಅವನ ಕವಚವನ್ನು ಭೇದಿಸಿ ಅವನ ರಕ್ತವನ್ನು ಕುಡಿದವು. ಮಹಾಮನಸ್ವಿ ಧೃಷ್ಟದ್ಯುಮ್ನನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪರಾಕ್ರಮದಿಂದ ಐದು ಶರಗಳಿಂದ ಹೊಡೆದನು. ಆಗ ರಕ್ತದಿಂದ ತೋಯ್ದುಹೋಗಿದ್ದ ಅವರಿಬ್ಬರು ನರರ್ಷಭರೂ ವಸಂತಸಮಯದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ಶೋಭಿಸಿದರು. ಆಗ ಕೋಪಗೊಂಡ ದ್ರೋಣನು ಪರಾಕ್ರಮದಿಂದ ದ್ರುಪದನ ಧನುಸ್ಸನ್ನು ಪುನಃ ತುಂಡರಿಸಿದನು. ಆಗ ಆ ದನುಸ್ಸು ಮುರಿದವನನ್ನು ಅಮೇಯಾತ್ಮನು ಸನ್ನತಪರ್ವ ಬಾಣಗಳಿಂದ ಮೋಡವು ಮಳೆಯಿಂದ ಗಿರಿಯನ್ನು ಮುಚ್ಚುವಂತೆ ಮುಚ್ಚಿದನು. ಭಲ್ಲದಿಂದ ಅವನ ಸಾರಥಿಯನ್ನು ರಥದಿಂದ ಬೀಳಿಸಿದನು. ಅವನು ನಾಲ್ಕು ಕುದುರೆಗಳನ್ನೂ ನಾಲ್ಕು ನಿಶಿತ ಶರಗಳಿಂದ ವಧಿಸಿದನು. ಸಮರದಲ್ಲಿ ಆಗ ಇನ್ನೊಂದು ಭಲ್ಲದಿಂದ ಅವನ ಕೈಯಲ್ಲಿದ್ದ ಧನುಸ್ಸನ್ನು ತುಂಡರಿಸಿ ಸಿಂಹನಾದಗೈದನು. ಧನುಸ್ಸು ತುಂಡಾಗಲು, ರಥವನ್ನು ಕಳೆದುಕೊಂಡ, ಅಶ್ವಗಳನ್ನು ಕಳೆದುಕೊಂಡ, ಸಾರಥಿಯನ್ನು ಕಳೆದುಕೊಂಡ ಅವನು ಮಹಾ ಪೌರುಷವನ್ನು ತೋರಿಸುತ್ತಾ ಗದೆಯನ್ನು ಹಿಡಿದು ಇಳಿದುಬಂದನು. ರಥದಿಂದ ಕೆಳಗಿಳಿಯುತ್ತಿದ್ದಾಗಲೇ ವೇಗವಾಗಿ ಅವನ ಗದೆಯನ್ನೂ ಪುಡಿಮಾಡಿ ಬೀಳಿಸಿದನು. ಅದೊಂದು ಅದ್ಭುತವಾಗಿತ್ತು. ಆಗ ಆ ಸುಭುಜ ಬಲಿಯು ವಿಶಾಲವಾಗಿದ್ದ, ನೂರು ಚಂದ್ರರಂತೆ ಪ್ರಕಾಶಮಾನವಾಗಿದ್ದ ಗುರಾಣಿಯನ್ನೂ ವಿಪುಲ ದಿವ್ಯ ಖಡ್ಗವನ್ನೂ ಹಿಡಿದು ವೇಗದಿಂದ ದ್ರೋಣನನ್ನು ವಧಿಸಲು ಇಚ್ಛಿಸಿ, ವನದಲ್ಲಿ ಸಿಂಹವು ಮದಿಸಿದ ಆನೆಯ ಮೇಲೆ ಬೀಳುವಂತೆ ಓಡಿ ಬಂದನು. ಆಗ ಅಲ್ಲಿ ಎಲ್ಲರೂ ಭಾರದ್ವಾಜನ ಪೌರುಷವನ್ನೂ, ಲಾಘವವನ್ನೂ, ಅಸ್ತ್ರಯೋಗವನ್ನೂ, ಬಾಹುಗಳ ಬಲವನ್ನೂ ಕಂಡರು. ಪಾರ್ಷತನನ್ನು ಶರವರ್ಷಗಳಿಂದ ತಡೆದನು. ಬಲಶಾಲಿಯಾಗಿದ್ದರೂ ಅವನು ಮುಂದುವರೆಯಲು ಶಕ್ತನಾಗಲಿಲ್ಲ.
ಅಲ್ಲಿ ಮಹಾರಥ ಧೃಷ್ಟದ್ಯುಮ್ನನು ಖಡ್ಗ ಗುರಾಣಿಗಳನ್ನು ಹಿಡಿದು ಶರಗಳಿಂದ ತಡೆಯಲ್ಪಟ್ಟು ನಿಂತಿರುವುದನ್ನು ಭೀಮಸೇನನು ನೋಡಿದನು. ಆಗ ಮಹಾಬಾಹು ಬಲೀ ಭೀಮನು ಸಮರದಲ್ಲಿ ಪಾರ್ಷತನಿಗೆ ಸಹಾಯ ಮಾಡಲು ಬೇಗನೇ ಅಲ್ಲಿಗೆ ಧಾವಿಸಿದನು. ಅವನು ದ್ರೋಣನನ್ನು ಏಳು ಬಾಣಗಳಿಂದ ಹೊಡೆದನು ಮತ್ತು ಬೇಗನೆ ಪಾರ್ಷತನನ್ನು ತನ್ನ ರಥದ ಮೇಲೇರಿಸಿಕೊಂಡನು. ಆಗ ರಾಜಾ ದುರ್ಯೋಧನನು ಭಾರದ್ವಾಜನ ರಕ್ಷಣೆಗೆ ಮಹಾ ಸೇನೆಯಿಂದ ಕೂಡಿದ ಕಲಿಂಗನನ್ನು ಪ್ರಚೋದಿಸಿದನು. ತಕ್ಷಣವೇ ದುರ್ಯೋಧನನ ಶಾಸನದಂತೆ ಕಲಿಂಗರ ಮಹಾಸೇನೆಯು ಭೀಮನನ್ನು ಎದುರಿಸಿತು. ರಥಿಗಳಲ್ಲಿ ಶ್ರೇಷ್ಠನಾದ ದ್ರೋಣನೂ ಕೂಡ ಪಾಂಚಾಲ್ಯನನ್ನು ಬಿಟ್ಟು ವೃದ್ಧರಾದ ವಿರಾಟ-ದ್ರುಪದರ ಒಟ್ಟಿಗೆ ಯುದ್ಧಮಾಡಿದನು. ಧೃಷ್ಟದ್ಯುಮ್ನನೂ ಕೂಡ ಸಮರದಲ್ಲಿ ಧರ್ಮರಾಜನನ್ನು ಸೇರಿದನು. ಆಗ ಸಮರದಲ್ಲಿ ಕಲಿಂಗರು ಮತ್ತು ಮಹಾತ್ಮ ಭೀಮನ ನಡುವೆ ಜಗತ್ತನ್ನೇ ನಾಶಗೊಳಿಸುವಂತಹ ಘೋರರೂಪವಾದ ಭಯಾನಕ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು.
ಕಲಿಂಗ-ನಿಷಾದರೊಡನೆ ಭೀಮನ ಯುದ್ಧ
ದುರ್ಯೋಧನನಿಂದ ಹಾಗೆ ಆದೇಶಗೊಂಡ ಮಹಾಬಲ ಕಲಿಂಗನು ಮಹಾಸೇನೆಯಿಂದ ರಕ್ಷಿತನಾಗಿ ಭೀಮನ ರಥದ ಬಳಿ ಬಂದನು. ಮಹಾಯುಧಗಳನ್ನು ಹಿಡಿದು ರಥ-ಆನೆ-ಕುದುರೆಗಳಿಂದ ಕೂಡಿದ ಕಲಿಂಗ ಮಹಾಸೇನೆಯು ರಭಸದಿಂದ ತನ್ನ ಮೇಲೆ ಬೀಳಲು ಭೀಮಸೇನನು ಕಲಿಂಗರನ್ನು, ಮತ್ತು ಚೇದಿಗಳೊಂಡನೆ ಬಂದಿದ್ದ ನೈಷಾದೀ ಕೇತುಮಂತನನ್ನೂ ಪೀಡಿಸಿದನು. ಸಂಕ್ರುದ್ಧನಾದ ಶ್ರುತಾಯುವು ರಾಜಾ ಕೇತುಮತ ಮತ್ತು ಚೇದಿಸೇನೆಗಳೊಂದಿಗೆ ರಣದಲ್ಲಿ ಭೀಮನನ್ನು ಎದುರಿಸಿದನು. ಕಲಿಂಗರ ಜನಾಧಿಪನು ಅನೇಕ ಸಹಸ್ರ ರಥಗಳೊಂದಿಗೆ, ಹತ್ತು ಸಾವಿರ ಆನೆಗಳೊಂದಿಗೆ, ಕೇತುಮಾನ ನಿಷಾದರೊಂದಿಗೆ ರಣದಲ್ಲಿ ಭೀಮಸೇನನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಭೀಮಸೇನನನ್ನು ಮುಂದಿಟ್ಟುಕೊಂಡು ಚೇದಿ-ಮತ್ಸ್ಯ-ಕರೂಷರು ತಕ್ಷಣವೇ ಬಂದು ರಾಜರೊಂದಿಗೆ ನಿಷಾದರನ್ನು ಎದುರಿಸಿದರು. ಆಗ ಘೋರರೂಪವಾದ ಭಯಾನಕ ಯುದ್ಧವು ನಡೆಯಿತು. ಪರಸ್ಪರರನ್ನು ಕೊಲ್ಲಲು ಬಯಸುತ್ತಿದ್ದ ಸೈನಿಕರು ಅವರು ತಮ್ಮವರೋ ಅಥವಾ ಶತ್ರುಗಳೋ ಎಂದೂ ಯೋಚಿಸುತ್ತಿರಲಿಲ್ಲ. ಶತ್ರುಗಳೊಂದಿಗೆ ಭೀಮನು ಮಾಡಿದ ಯುದ್ಧವು ಇಂದ್ರನು ಮಹಾ ದೈತ್ಯಸೇನೆಯೊಡನೆ ಮಾಡಿದಂತೆ ಘೋರವಾಗಿತ್ತು. ಅವನು ಸೈನ್ಯದೊಂದಿಗೆ ಯುದ್ಧಮಾಡುವಾಗ ಸಾಗರವೇ ಗರ್ಜಿಸುತ್ತಿದೆಯೋ ಎನ್ನುವಂತೆ ಮಹಾ ಶಬ್ಧವುಂಟಾಯಿತು. ಅನ್ಯೋನ್ಯರನ್ನು ಕತ್ತರಿಸುತ್ತಾ ಯೋಧರು ಭೂಮಿಯನ್ನೇ ಮೊಲದ ರಕ್ತದಿಂದ ತೋಯ್ದಂತೆ ಚಿತೆಯನ್ನಾಗಿ ಮಾಡಿದರು. ಯೋಧರು ತಮ್ಮವರು ಅಥವ ಪರರು ಯಾರು ಎಂದು ತಿಳಿದುಕೊಳ್ಳದೆಯೇ ಸಂಹರಿಸುತ್ತಿದ್ದರು. ಆ ಸಮರ ದುರ್ಜಯ ಶೂರರು ಕೈಗೆ ಸಿಕ್ಕಿದವರನ್ನು, ತಮ್ಮವರೇ ಆಗಿದ್ದರೂ, ಕೊಲ್ಲುತ್ತಿದ್ದರು.
ಹೀಗೆ ಅತಿ ದೊಡ್ಡದಾದ ಕಲಿಂಗ ಮತ್ತು ನಿಷಾದ ಸೇನೆಗಳಿಗೂ ಚಿಕ್ಕದಾದ ಚೇದಿಸೇನೆಗಳಿಗೂ ಮಹಾ ಯುದ್ಧವು ನಡೆಯಿತು. ಯಥಾಶಕ್ತಿ ಪೌರುಷವನ್ನು ತೋರಿಸಿ ಮಹಾಬಲ ಚೇದಯರು ಭೀಮಸೇನನನ್ನು ಬಿಟ್ಟು ಪಲಾಯನ ಮಾಡಿದರು. ಚೇದಿಯೋಧರು ಹಿಮ್ಮೆಟ್ಟಲು ಪಾಂಡವನು ಸ್ವಬಾಹುಬಲವನ್ನು ಆಶ್ರಯಿಸಿ ಸರ್ವ ಕಲಿಂಗರನ್ನೂ ತಡೆದನು. ರಥದಲ್ಲಿದ್ದ ಮಹಾಬಲ ಭೀಮಸೇನನು ಕಲಿಂಗರ ಸೇನೆಯು ಹರಿತ ಬಾಣಗಳ ಮಳೆಸುರಿಸುತ್ತಿದ್ದರೂ ವಿಚಲಿತನಾಗಲ್ಲ. ಶಕ್ರದೇವನೆಂದು ಖ್ಯಾತನಾದ ಕಲಿಂಗನ ಮಗ ಮಹಾರಥ ಮಹೇಷ್ವಾಸನು ಪಾಂಡವನನ್ನು ಶರಗಳಿಂದ ಹೊಡೆದನು. ಆಗ ಮಹಾಬಾಹು ಭೀಮನು ಸುಂದರವಾದ ಧನುಸ್ಸನ್ನು ಠೇಂಕರಿಸಿ ಸ್ವಬಾಹುಬಲವನ್ನು ಆಶ್ರಯಿಸಿ ಕಲಿಂಗರೊಂದಿಗೆ ಯುದ್ಧಮಾಡಿದನು. ಶಕ್ರದೇವನು ಅನೇಕ ಸಾಯಕಗಳನ್ನು ಬಿಟ್ಟು ಭೀಮಸೇನನ ಕುದುರೆಗಳನ್ನು ಕೊಂದನು ಮತ್ತು ಬೇಸಗೆಯ ಕೊನೆಯಲ್ಲಿ ಮೋಡಗಳು ಹೇಗೋ ಹಾಗೆ ಸಾಯಕಗಳ ಶರವರ್ಷಗಳನ್ನು ಸುರಿಸಿದನು. ಕುದುರೆಗಳು ಸತ್ತರೂ ರಥದ ಮೇಲೆ ನಿಂತು ಮಹಾಬಲ ಭೀಮಸೇನನು ಲೋಹಮಯ ಗದೆಯನ್ನು ಶಕ್ತಿಯನ್ನೆಲ್ಲ ಉಪಯೋಗಿಸಿ ಶಕ್ರದೇವನ ಮೇಲೆ ಎಸೆದನು. ಕಲಿಂಗನ ಮಗನು ಅವನಿಂದ ಹತನಾಗಿ ಧ್ವಜ-ಸೂತರೊಂದಿಗೆ ರಥದಿಂದ ಧರಣೀತಲಕ್ಕೆ ಬಿದ್ದನು.
ತನ್ನ ಮಗನು ತೀರಿಕೊಂಡಿದುದನ್ನು ಕಂಡು ಕಲಿಂಗರ ಜನಾಧಿಪನು ಅನೇಕ ಸಹಸ್ರ ರಥಗಳೊಂದಿಗೆ ಭೀಮಸೇನನನ್ನು ಎಲ್ಲ ಕಡೆಗಳಿಂದ ಸುತ್ತುವರೆದನು. ಆಗ ಮಹಾಬಾಹು ಭೀಮನು ಭಾರವಾದ ಮಹಾಗದೆಯನ್ನು ಬಿಟ್ಟು ದಾರುಣ ಕರ್ಮವನ್ನು ಮಾಡಲೆಸಗಿ ಖಡ್ಗವನ್ನೂ ಅಪ್ರತಿಮವಾಗಿದ್ದ ನಕ್ಷತ್ರ-ಅರ್ಧಚಂದ್ರಗಳ ಮತ್ತು ನೂರುಕುಂಭಗಳ ಚಿತ್ರವಿರುವ ಗುರಾಣಿಯನ್ನು ಹಿಡಿದು ಕೆಳಗಿಳಿದನು. ಕಲಿಂಗ ಜನೇಶ್ವರನು ಕ್ರುದ್ಧನಾಗಿ ಧನುಸ್ಸನ್ನು ಟೇಂಕರಿಸಿ ಘೋರವಾದ ಸರ್ಪವಿಷೋಪಮವಾದ ಬಾಣವೊಂದನ್ನು ಹಿಡಿದು ಭೀಮಸೇನನ ವಧಾಕಾಂಕ್ಷಿಯಾಗಿ ಪ್ರಯೋಗಿಸಿದನು. ವೇಗದಿಂದ ಬಂದು ಬೀಳುತ್ತಿದ್ದ ಆ ನಿಶಿತ ಶರದಿಂದ ಪ್ರೇರಿತನಾಗಿ ಭೀಮಸೇನನು ಅದನ್ನು ವಿಪುಲ ಖಡ್ಗದಿಂದ ಎರಡಾಗಿ ತುಂಡರಿಸಿದನು. ಸಂಹೃಷ್ಟನಾಗಿ ಜೋರಾಗಿ ಸಿಂಹನಾದಗೈದು ಸೇನೆಗಳನ್ನು ತತ್ತರಿಸುವಂತೆ ಮಾಡಿದನು. ಆಗ ಕ್ರುದ್ಧನಾದ ಕಲಿಂಗನು ಭೀಮಸೇನನ ಮೇಲೆ ಹದಿನಾಲ್ಕು ಶೀಘ್ರವಾದ, ಶಿಲಾಶಿತ ತೋಮರಗಳನ್ನು ಪ್ರಯೋಗಿಸಿದನು. ಅವುಗಳು ತಲುಪುವುದರೊಳಗೆ ಆಕಾಶಮರ್ಗದಲ್ಲಿರುವಾಗಲೇ ಪಾಂಡವನು ಸಂಭ್ರಾಂತನಾಗಿ ಶ್ರೇಷ್ಠ ಖಡ್ಗದಿಂದ ತಕ್ಷಣವೇ ತುಂಡುಮಾಡಿದನು. ಆ ಹದಿನಾಲ್ಕು ತೋಮರಗಳನ್ನು ಕತ್ತರಿಸಿ ಪುರುರ್ಷಭ ಭೀಮನು ಭಾನುಮಂತನನ್ನು ನೋಡಿ ಧಾವಿಸಿ ಬಂದನು. ಆಗ ಭಾನುಮಂತನು ಭೀಮನನ್ನು ಶರವರ್ಷಗಳಿಂದ ಹೊಡೆದು ನಭಸ್ಥಲವನ್ನೂ ಮೊಳಗಿಸುವ ಬಲವತ್ತಾದ ಸಿಂಹನಾದವನ್ನು ಕೂಗಿದನು.
ಅದನ್ನು ಸಹಿಸದ ಭೀಮನು ಸಿಂಹನಾದಗೈದನು. ಆಗ ಅವನ ಆ ಮಹಾಸ್ವರದಿಂದ ಮಹಾಸ್ವನವು ಮೊಳಗಿತು. ಅವನ ಶಬ್ಧದಿಂದ ವಿತ್ರಸ್ತರಾದ ಕಲಿಂಗರ ಸೇನೆಯು ಸಮರದಲ್ಲಿ ಭೀಮನು ಮನುಷ್ಯನಲ್ಲವೆಂದು ಅಭಿಪ್ರಾಯಪಟ್ಟಿತು. ಆಗ ಭೀಮನು ವಿಪುಲ ಸ್ವನದಲ್ಲಿ ಕೂಗಿ, ವೇಗವಾಗಿ ಉತ್ತಮ ಆನೆಯ ಎರಡೂ ದಂತಗಳನ್ನು ಬಲವಾಗಿ ಹಿಡಿದು ಛಂಗನೆ ಗಜರಾಜನ ಮೇಲೆ ಹಾರಿ ಹೋಗಿ ಮಹಾ ಖಡ್ಗದಿಂದ ಭಾನುಮಂತನನ್ನು ಮಧ್ಯದಲ್ಲಿಯೇ ಕತ್ತರಿಸಿದನು. ಆ ಯೋಧ ರಾಜಪುತ್ರನನ್ನು ಸಂಹರಿಸಿದ ಅರಿಂದಮನು ಅತಿಭಾರವಾದ ಖಡ್ಗವನ್ನು ಆನೆಯ ಮೇಲೆ ಪ್ರಯೋಗಿಸಿ ಅದನ್ನೂ ಬೀಳಿಸಿದನು. ಭುಜಗಳು ತುಂಡಾಗಲು ಆ ಗಜಯೂಥಪವು ಸಿಂಧುವೇಗದಿಂದ ಕೊರೆಯಲ್ಪಟ್ಟು ಬೀಳುವ ಪರ್ವತದಂತೆ ಕೂಗಿ ಬಿದ್ದಿತು. ಅದು ಕೆಳಗೆ ಬೀಳುವುದರೊಳಗೆ ಭಾರತನು ಆನೆಯಿಂದ ಕೆಳಗೆ ಹಾರಿ ಖಡ್ಗವನ್ನು ಹಿಡಿದುಕೊಂಡೇ ಅದೀನಾತ್ಮನಾಗಿ ಕವಚಗಳನ್ನು ಧರಿಸಿ ನೆಲದ ಮೇಲೆ ನಿಂತನು. ಅನೇಕ ಮಾರ್ಗಗಳಲ್ಲಿ ಭಯವಿಲ್ಲದೇ ಚಲಿಸುತ್ತಾ ಅನೇಕ ಆನೆಗಳನ್ನು ಬೀಳಿಸಿದನು. ಅವನು ಅಗ್ನಿಚಕ್ರದಂತೆ ಎಲ್ಲಕಡೆ ಕಡೆಯುತ್ತಿರುವುದು ಕಂಡುಬಂದಿತು. ಅಶ್ವವೃಂದಗಳನ್ನೂ, ಆನೆಗಳನ್ನೂ, ರಥಾನೀಕಗಳನ್ನು, ಪದಾತಿಗಳ ಸಂಕುಲಗಳನ್ನೂ ಸಂಹರಿಸಿ ರಕ್ತದಿಂದ ತೋಯ್ದು ಹೋದನು. ರಿಪುಬಲೋತ್ಕಟ ಮಹಾವೇಗೀ ಭೀಮನು ರಣದಲ್ಲಿ ಗಿಡುಗದಂತೆ ಸಂಚರಿಸಿ ಅವರ ಶರೀರ-ಶಿರಗಳನ್ನು ಕತ್ತರಿಸಿದನು. ಸಂಯುಗದಲ್ಲಿ ಹರಿತವಾದ ಖಡ್ಗದಿಂದ ಒಬ್ಬನೇ ಕಾಲ್ನಡುಗೆಯಲ್ಲಿಯೇ ಗಜಯೋಧಿಗಳನ್ನು ಕೊಲ್ಲುತ್ತಾ ಶತ್ರುಗಳ ಭಯವರ್ಧಕನು ಕಾಲಾಂತಕನಂತೆ ಅವರನ್ನು ಭಯದಿಂದ ಮೋಹಗೊಳಿಸಿದನು.
ಆ ಮೂಢರು ಜೋರಾಗಿ ಕೂಗಿಕೊಳ್ಳುತ್ತಾ ಅವನ ಮೇಲೆ ಎರಗುತ್ತಿದ್ದರು. ಅವನು ಉತ್ತಮ ವೇಗದಿಂದ ಮಹಾರಣದಲ್ಲಿ ಸಂಚರಿಸುತ್ತಿದ್ದನು. ರಥಿಗಳನ್ನೂ ರಥಸಂಕುಲಗಳನ್ನು ಆ ಬಲವಾನ ಅರಿಮರ್ದಮನು ಕತ್ತರಿಸಿ ಸಂಹರಿಸಿದನು. ಭೀಮಸೇನನು ಅನೇಕ ಮಾರ್ಗಗಳಲ್ಲಿ ಸಂಚರಿಸುತ್ತಿರುವಂತೆ ಕಾಣುತ್ತಿತ್ತು. ಅವನು ಭ್ರಾಂತ, ಉದ್ಭ್ರಾಂತ, ಅವಿದ್ಧ, ಆಪ್ಲುತ, ಪ್ರಸೃತ, ಸೃತ, ಸಂಪಾತ, ಸಮುದೀರ್ಣ ಮುಂತಾದ ವರಸೆಗಳನ್ನು ಪ್ರದರ್ಶಿಸಿದನು. ಕೆಲವರನ್ನು ಮಹಾತ್ಮ ಪಾಂಡವನು ಖಡ್ಗದಿಂದ ಕತ್ತರಿಸಿದರೆ ಇನ್ನು ಕೆಲವರನ್ನು ಮರ್ಮಗಳನ್ನು ಭೇದಿಸಿ ಕೆಳಗೆ ಬೀಳಿಸಿ ಅಸುನೀಗಿಸುತ್ತಿದ್ದನು. ಆನೆಗಳ ದಂತ ಸೊಂಡಿಲುಗಳು ತುಂಡಾದವು. ಇತರ ಆನೆಗಳ ಕುಂಭಸ್ಥಲಗಳು ಒಡೆದವು. ಇಂತಹ ಆನೆಗಳು ನೋವನ್ನು ತಡೆಯಲಾರದೇ ತಮ್ಮದೇ ಸೇನೆಗಳ ಮೇಲೆ ಎರಗಿ ಮಹಾರವವನ್ನು ಕೂಗಿ ಸೈನಿಕರನ್ನು ಸಂಹರಿಸುತ್ತಿದ್ದವು. ಕತ್ತರಿಸಿ ಬಿದ್ದಿದ್ದ ತೋಮರಗಳು, ಧನುಸ್ಸುಗಳು, ಮಹಾಗಾತ್ರದ ಶಿರಗಳು, ಚಿತ್ರವಿಚಿತ್ರವಾಗಿದ್ದ ಬಂಗಾರದದಾರಗಳಿಂದ ಉಜ್ವಲವಾಗಿದ್ದ ಆನೆಗಳ ನಡುವಿಗೆ ಕಟ್ಟುವ ಹಗ್ಗಗಳು, ಕಂಠಾಭರಣಗಳು, ಶಕ್ತಿ, ಪತಾಕೆ, ಕಣಪಗಳು, ತೂಣೀರಗಳು, ವಿಚಿತ್ರ ಯಂತ್ರಗಳು, ಧನುಸ್ಸುಗಳು, ಶುಭ್ರ ಅಗ್ನಿಕುಂಡಗಳು, ಚಾವಟಿಗಳು, ಅಂಕುಶಗಳು, ವಿವಿಧ ಗಂಟೆಗಳು, ಸುವರ್ಣಖಚಿತ ಖಡ್ಗಮುಷ್ಟಿಗಳು, ಬಿದ್ದ ಮತ್ತು ಬೀಳುತ್ತಿರುವ ಮಾವುತರು ಎಲ್ಲವೂ ಒಟ್ಟಿಗೇ ಕಾಣತೊಡಗಿತು. ದೇಹ ಮತ್ತು ಶ್ರೇಷ್ಠ ಸೊಂಡಿಲುಗಳು ಕತ್ತರಿಸಲ್ಪಟ್ಟು ಸತ್ತು ಬಿದ್ದಿದ್ದ ಆನೆಗಳ ರಾಶಿಗಳಿಂದ ಕೆಳಕ್ಕೆ ಕುಸಿದು ಹರಡಿಕೊಂಡಿರುವಂತೆ ರಣಭೂಮಿಯು ವ್ಯಾಪ್ತವಾಗಿ ಕಾಣುತ್ತಿತ್ತು. ಹೀಗೆ ಮಹಾಗಜಗಳನ್ನು ಮರ್ದಿಸಿ ನರರ್ಷಭನು ಅಶ್ವಗಳನ್ನೂ ಅಶ್ವಾರೋಹಿಗಳನ್ನೂ ಬೀಳಿಸತೊಡಗಿದನು. ಆಗ ಅವನ ಮತ್ತು ಅವರ ಮಧ್ಯೆ ಘೋರ ಯುದ್ಧವು ನಡೆಯಿತು.
ಆಗ ಕುದುರೆಗಳ ಲಗಾಮು, ಕಟ್ಟುವ ಹಗ್ಗ, ಜೀನು, ಪ್ರಾಸ, ಅಮೂಲ್ಯವಾದ ಋಷ್ಟಗಳು, ಕವಚಗಳು, ಗುರಾಣಿಗಳು, ಬಣ್ಣಬಣ್ಣದ ಕಂಬಳಿಗಳು ಅಲ್ಲಲ್ಲಿ ಮಹಾಹವದಲ್ಲಿ ಚದುರಿ ಬಿದ್ದಿರುವುದು ಕಂಡುಬಂದಿತು. ವಿಚಿತ್ರ ಯಂತ್ರಗಳಿಂದಲೂ, ವಿಮಲ ಖಡ್ಗಗಳಿಂದಲೂ ಹರಡಿಹೋದ ವಸುಧೆಯನ್ನು ಅವನು ಶಬಲ ಕುಸುಮಗಳು ಹರಡಿರುವಂತೆ ಮಾಡಿದನು. ಕೆಲವೊಮ್ಮೆ ಆ ಮಹಾಬಲ ಪಾಂಡವನು ರಥದ ಮೇಲೆ ಹಾರಿ ಖಡ್ಗದಿಂದ ಅಲ್ಲಿರುವವರನ್ನು ಕೊಂದು ಕೆಳಗೆ ಹಾರುತ್ತಿದ್ದನು. ಕ್ಷಣದಲ್ಲಿಯೇ ಹಾರುತ್ತಿದ್ದನು. ಯಶಸ್ವಿಯು ದಿಕ್ಕುಗಳಲ್ಲಿ ಓಡುತ್ತಿದ್ದನು. ಚಿತ್ರವಿಚಿತ್ರವಾದ ಮಾರ್ಗಗಳಲ್ಲಿ ಸಂಚರಿಸುತ್ತಿರುವುದನ್ನು ನೋಡಿ ರಣದಲ್ಲಿ ವಿಸ್ಮಿತರಾದರು. ಕೆಲವರನ್ನು ಕಾಲಿನಿಂದ ತುಳಿದು ಕೊಂದನು. ಅನ್ಯರನ್ನು ನೆಲಕ್ಕೆ ಬಡಿದು ಕೊಲ್ಲುತ್ತಿದ್ದನು. ಅನ್ಯರನ್ನು ಖಡ್ಗದಿಂದ ಕತ್ತರಿಸಿ ಮತ್ತೆ ಕೇಲವರನ್ನು ಕೂಗಿ ಹೆದರಿಸಿ ಕೊಲ್ಲುತ್ತಿದ್ದನು. ಕೆಲವರು ಅವನ ನಡುಗೆಯ ತೊಡೆಗಳ ವೇಗದಿಂದಲೇ ಭೂತಲದಲ್ಲಿ ಬಿದ್ದರು. ಇನ್ನು ಕೆಲವರು ಅವನನ್ನು ನೋಡಿಯೇ ಭೀತರಾಗಿ ಪಂಚತ್ವವನ್ನು ಸೇರಿದರು. ಈ ರೀತಿ ಭೀಮಸೇನನ ಉಪದ್ರವಕ್ಕೆ ಒಳಗಾದರೂ ತರಸ್ವಿ ಕಲಿಂಗರ ಮಹಾ ಸೇನೆಯು ರಣದಲ್ಲಿ ಭೀಷ್ಮನನ್ನು ಸುತ್ತುವರೆದಿದ್ದರು. ಆಗ ಕಲಿಂಗ ಸೈನ್ಯಗಳ ಪ್ರಮುಖ ಶ್ರುತಾಯುಷನು ಭೀಮಸೇನನನ್ನು ನೋಡಿ ಧಾವಿಸಿದನು.
ಅವನು ಬರುತ್ತಿರುವುದನ್ನು ನೋಡಿ ಅಮೇಯಾತ್ಮ ಕಲಿಂಗನು ಒಂಭತ್ತು ಶರಗಳಿಂದ ಭೀಮಸೇನನ ಎದೆಗೆ ಹೊಡೆದನು. ಅಂಕುಶದಿಂದ ಚುಚ್ಚಲ್ಪಟ್ಟ ಆನೆಯಂತೆ ಕಲಿಂಗಬಾಣದಿಂದ ಹೊಡೆಯಲ್ಪಟ್ಟ ಭೀಮಸೇನನು ಇಂಧನಗಳಿಂದ ಪ್ರಜ್ಚಲಿಸುವ ಅಗ್ನಿಯಂತೆ ಕ್ರೋಧದಿಂದ ಉರಿದೆದ್ದನು. ಅದೇ ಸಮಯದಲ್ಲಿ ರಥಸಾರಥಿ ಅಶೋಕನು ಹೇಮಪರಿಷೃತ ರಥವನ್ನು ತಂದು ಭೀಮನಿಗೆ ರಥವನ್ನಿತ್ತನು. ಶತ್ರುಸೂದನ ಕೌಂತೇಯನು ತಕ್ಷಣವೇ ಆ ರಥವನ್ನು ಏರಿ “ನಿಲ್ಲು! ನಿಲ್ಲು!” ಎಂದು ಹೇಳುತ್ತಾ ಕಲಿಂಗನನ್ನು ಎದುರಿಸಿದನು. ಆಗ ಬಲವಾನ್ ಶ್ರುತಾಯುವು ಕೈಚಳಕವನ್ನು ಪ್ರದರ್ಶಿಸುತ್ತಾ ಸಂಕ್ರುದ್ಧನಾಗಿ ಭೀಮನ ಮೇಲೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಮಹಾಯಶ ಕಲಿಂಗನು ಆ ಶ್ರೇಷ್ಠ ಧನುಸ್ಸಿನಿಂದ ಒಂಭತ್ತು ನಿಶಿತ ಬಾಣಗಳನ್ನು ಪ್ರಯೋಗಿಸಿ ಹೊಡೆಯಲು ದಂಡದಿಂದ ಹೊಡೆಯಲ್ಪಟ್ಟ ಹಾವಿನಂತೆ ಭೀಮನು ತುಂಬಾ ಸಿಟ್ಟಿಗೆದ್ದನು. ಕ್ರುದ್ಧನಾಗಿ ಬಲವಾದ ಚಾಪವನ್ನು ತೆಗೆದುಕೊಂಡು ಬಲಿಗಳಲ್ಲಿ ಶ್ರೇಷ್ಠ ಪಾರ್ಥ ಭೀಮನು ಕಲಿಂಗನನ್ನು ಏಳು ಆಯಸಗಳಿಂದ ಹೊಡೆದನು. ಎರಡು ಕ್ಷುರಗಳಿಂದ ಕಲಿಂಗನ ಚಕ್ರರಕ್ಷಕರಾದ ಮಹಾಬಲಿ ಸತ್ಯದೇವ ಮತ್ತು ಸತ್ಯರನ್ನು ಯಮಸಾದನಕ್ಕೆ ಕಳುಹಿಸಿದನು. ಆಗ ಪುನಃ ಅಮೇಯಾತ್ಮ ಭೀಮನು ಮೂರು ನಿಶಿತ ನಾರಾಚಗಳಿಂದ ರಣದಲ್ಲಿ ಕೇತುಮಂತನನ್ನು ಯಮಸಾದನಕ್ಕೆ ಕಳುಹಿಸಿದನು. ಆಗ ಸಂಕ್ರುದ್ಧರಾದ ಕಲಿಂಗರು ಅಮರ್ಷಣ ಭೀಮಸೇನನನ್ನು ಅನೇಕ ಸಾವಿರ ಕ್ಷತ್ರಿಯ ಸೈನ್ಯಗಳಿಂದ ಸುತ್ತುವರೆದರು. ಆಗ ಕಲಿಂಗರು ಭೀಮಸೇನನನ್ನು ಶಕ್ತಿ-ಗದೆ-ಖಡ್ಗ-ತೋಮರ-ಋರ್ಷ್ಟಿ-ಪರಶಾಯುಧಗಳಿಂದ ಮುತ್ತಿಗೆ ಹಾಕಿದರು. ಆ ಘೋರ ಶರವೃಷ್ಟಿಯನ್ನು ತಡೆದು ತಕ್ಷಣವೇ ಗದೆಯನ್ನು ಹಿಡಿದು ಮಹಾಬಲ ಭೀಮನು ಕೆಳಗೆ ಧುಮುಕಿ ಎಪ್ಪತ್ತು ವೀರರನ್ನು ಯಮಸಾದನಕ್ಕೆ ಕಳುಹಿಸಿದನು.
ಪುನಃ ಆ ಅರಿಮರ್ದನನು ಎರಡು ಸಾವಿರ ಕಲಿಂಗರನ್ನು ಮೃತ್ಯುಲೋಕಕ್ಕೆ ಕಳುಹಿಸಿ ಅದ್ಭುತವಾಯಿತು. ಹೀಗೆ ಮಹಾವ್ರತ ಭೀಷ್ಮನನ್ನು ರಕ್ಷಿಸುತ್ತಿದ್ದ ಕಲಿಂಗರ ಸೇನೆಗಳನ್ನು ಪುನಃ ಪುನಃ ಆ ವೀರನು ಸಮರದಲ್ಲಿ ಮರ್ದಿಸಿದನು. ಮಹಾತ್ಮ ಪಾಂಡವನಿಂದ ಆರೋಹಿಗಳು ಹತರಾಗಲು ಆನೆಗಳು ಅವನ ಬಾಣಗಳನ್ನು ತಡೆದುಕೊಳ್ಳಲಾಗದೇ ಜೋರಾಗಿ ಕೂಗುತ್ತಾ ತಮ್ಮ ಸೇನೆಯನ್ನೇ ತುಳಿದು ಹಾಕುತ್ತಾ ಗಾಳಿಯಿಂದ ಚದುರಿದ ಮೋಡಗಳಂತೆ ಓಡಿ ಹೋಗುತ್ತಿದ್ದವು. ಆಗ ಮಹಾಬಾಹು ಬಲೀ ಭೀಮನು ಶಂಖವನ್ನು ಊದಿ ಸರ್ವಕಲಿಂಗ ಸೇನೆಗಳ ಮನಸ್ಸುಗಳನ್ನು ಕಂಪಿಸಿದನು. ಕಲಿಂಗರನ್ನು ಮೋಹವು ಆವೇಶಗೊಂಡಿತು. ಎಲ್ಲೆಡೆಯೂ ಸೈನ್ಯಗಳು ವಾಹನಗಳು ಕಂಪಿಸತೊಡಗಿದವು. ಭೀಮನು ಸಮರದಲ್ಲಿ ಗಜೇಂದ್ರನಂತೆ ಎಲ್ಲಕಡೆ ಅನೇಕ ಮಾರ್ಗಗಳಿಂದ ಚಲಿಸಿ ಅತ್ತಿತ್ತ ಓಡಿ, ಮತ್ತೆ ಮತ್ತೆ ಹಾರುತ್ತಾ ಸಮ್ಮೋಹವನ್ನುಂಟುಮಾಡಿದನು. ಮಹಾಸರೋವರದಲ್ಲಿ ಮೊಸಳೆಯೊಂದು ತಡೆಯಿಲ್ಲದೇ ಅಲ್ಲೋಲಕಲ್ಲೋಲ ಮಾಡುವಂತೆ ಭೀಮಸೇನನ ಭಯದಿಂದ ತ್ರಸ್ತವಾದ ಸೈನ್ಯವು ಕಂಪಿಸಿತು. ಅದ್ಭುತಕರ್ಮಿ ಭೀಮನಿಂದ ತ್ರಾಸಿತರಾದ ವೀರರು ಗುಂಪುಗುಂಪಾಗಿ ಓಡಿ ಹೋಗುತ್ತಿದ್ದರು. ಪುನಃ ಹಿಂದಿರುಗಿ ಅವನೊಂದಿಗೆ ಯುದ್ಧಮಾಡುತ್ತಿದ್ದರು.
ಆಗ ಪಾಂಡವರ ಧ್ವಜಿನೀಪತಿ ಪಾರ್ಷತನು ತನ್ನ ಸೇನೆಗೆ “ಸರ್ವ ಕಲಿಂಗ ಯೋಧರೊಡನೆ ಯುದ್ಧಮಾಡಿ!” ಎಂದು ಆಜ್ಞಾಪಿಸಿದನು. ಸೇನಾಪತಿಯ ಮಾತನ್ನು ಕೇಳಿ ಶಿಖಂಡಿಪ್ರಮುಖ ಗಣಗಳು ರಥಸೇನೆ ಪ್ರಹಾರಿಗಳೊಂದಿಗೆ ಭೀಮನಿದ್ದಲ್ಲಿಗೆ ಧಾವಿಸಿ ಬಂದಿತು. ಪಾಂಡವ ಧರ್ಮರಾಜನೂ ಮೇಘವರ್ಣದ ಮಹಾ ಗಜಸೇನೆಯೊಂದಿಗೆ ಅವರನ್ನುs ಹಿಂಬಾಲಿಸಿ ಬಂದನು. ಹೀಗೆ ಪಾರ್ಷತನು ತನ್ನ ಎಲ್ಲ ಸೇನೆಗಳನ್ನೂ ಒಟ್ಟುಗೂಡಿಸಿಕೊಂಡು ಸತ್ಪುರುಷರಿಗೆ ಉಚಿತವಾದಂತೆ ಭೀಮಸೇನನ ಪೃಷ್ಠಭಾಗವನ್ನು ರಕ್ಷಿಸಿದನು. ಏಕೆಂದರೆ ಪಾಂಚಾಲರಾಜನಿಗೆ ಲೋಕದಲ್ಲಿ ಭೀಮ-ಸಾತ್ಯಕಿಯರನ್ನು ಬಿಟ್ಟು ಬೇರೆ ಯಾರೂ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯರಾದವರು ಇರಲಿಲ್ಲ. ಪರವೀರಹ ಪಾರ್ಷತನು ಕಲಿಂಗರ ಮಧ್ಯೆ ಸಂಚರಿಸುತ್ತಿದ್ದ ಮಹಾಬಾಹು ಅರಿಂದಮ ಭೀಮಸೇನನನ್ನು ನೋಡಿದನು. ಆಗ ಪರಂತಪನಿಗೆ ಅತೀವ ಹರ್ಷವಾಗಿ ಅವನು ಕೂಗಿದನು, ಶಂಖವನ್ನು ಊದಿದನು ಮತ್ತು ಸಿಂಹನಾದಗೈದನು. ಭೀಮಸೇನನೂ ಕೂಡ ಹತ್ತಿರದಲ್ಲಿಯೇ, ಪಾರಿವಾಳಗಳ ಬಣ್ಣದ ಕುದುರೆಗಳನ್ನು ಕಟ್ಟಿದ ಹೇಮಪರಿಷ್ಕೃತ ರಥದಲ್ಲಿ ಕೋವಿದಾರ ಧ್ವಜನನ್ನು ನೋಡಿ ಆಶ್ವಾಸಿತನಾದನು. ಕಲಿಂಗರಿಂದ ಸುತ್ತುವರೆಯಲ್ಪಟ್ಟ ಅಮೇಯಾತ್ಮ ಭೀಮಸೇನನನ್ನು ನೋಡಿ ಅವನಿಗೆ ಸಹಾಯಮಾಡಲು ಧೃಷ್ಟದ್ಯುಮ್ನನು ಇನ್ನೂ ಹತ್ತಿರಕ್ಕೆ ಬಂದನು. ದೂರದಿಂದ ಸಾತ್ಯಕಿಯು ಸಮರದಲ್ಲಿ ಕಲಿಂಗರೊಡನೆ ಯುದ್ಧಮಾಡುತ್ತಿದ್ದ ಆ ಇಬ್ಬರು ಮನಸ್ವಿ, ವೀರ ಧೃಷ್ಟದ್ಯುಮ್ನ-ವೃಕೋದರರನ್ನು ನೋಡಿದನು. ವಿಜಯಿಗಳಲ್ಲಿ ಶ್ರೇಷ್ಠ ಪುರುಷರ್ಷಭ ಶೈನಿಯು ವೇಗದಿಂದ ಅಲ್ಲಿಗೆ ಬಂದು ಪಾರ್ಥ-ಪಾರ್ಷತರ ಹಿಂಬಾಗದ ರಕ್ಷಣೆಯನ್ನು ವಹಿಸಿಕೊಂಡನು. ಅಲ್ಲಿ ಅವನು ಧನುಸ್ಸನ್ನು ಹಿಡಿದು ತನ್ನನ್ನೇ ರೌದ್ರನನ್ನಾಗಿಸಿಕೊಂಡು ಸಮರದಲ್ಲಿ ಶತ್ರುಗಳೊಂದಿಗೆ ಕಾದು ಕೊಂದನು.
ಅಲ್ಲಿ ಭೀಮನು ಕಲಿಂಗರ ಮಾಂಸ-ಶೋಣಿತ-ಕರ್ದಮಗಳ ರಕ್ತಪ್ರವಾಹದ ನದಿಯನ್ನೇ ಸೃಷ್ಟಿಸಿದ್ದನು. ಕಲಿಂಗರ ಮತ್ತು ಪಾಂಡವರ ಸೇನೆಗಳ ಮಧ್ಯೆ ಭೀಮಸೇನನು ಸುದುಸ್ತಾರ ನದಿಯನ್ನು ಹರಿಸಿದ್ದನು. ಹಾಗಿರುವ ಭೀಮಸೇನನನ್ನು ನೋಡಿ ನಿನ್ನವರು “ಕಲಿಂಗರೊಡನೆ ಯುದ್ಧಮಾಡುತ್ತಿರುವ ಇವನು ಭೀಮರೂಪದ ಕಾಲ!” ಎಂದು ಕೂಗಿಕೊಳ್ಳುತ್ತಿದ್ದರು. ಆಗ ರಣದಲ್ಲಿ ಆ ಕೂಗನ್ನು ಕೇಳಿ ಶಾಂತನವ ಭೀಷ್ಮನು ತ್ವರೆಮಾಡಿ ಬಂದು ಸೇನೆಯೊಂದಿಗೆ ಭೀಮನನ್ನು ಎಲ್ಲಕಡೆಗಳಿಂದ ಸುತ್ತುವರೆದನು. ಆಗ ಭೀಷ್ಮನ ಹೇಮಪರಿಷ್ಕೃತ ರಥವನ್ನು ಸಾತ್ಯಕಿ, ಭೀಮಸೇನ ಮತ್ತು ಪಾರ್ಷತ ಧೃಷ್ಟದ್ಯುಮ್ನರು ಮುತ್ತಿಗೆ ಹಾಕಿದರು. ಅವರೆಲ್ಲರೂ ಗಾಂಗೇಯನನ್ನು ಸುತ್ತುವರೆದು ಪ್ರತಿಯೊಬ್ಬರೂ ಮೂರು ಮೂರು ಘೋರ ಬಾಣಗಳಿಂದ ಭೀಷ್ಮನನ್ನು ಚುಚ್ಚಿದರು. ಅವೆಲ್ಲವನ್ನು ತಡೆದು ದೇವವ್ರತನು ಪ್ರಯತ್ನಿಸಿ ಆ ಮಹೇಷ್ವಾಸರನ್ನು ಮೂರು ಮೂರು ಜಿಹ್ಮಗಗಳಿಂದ ಹೊಡೆದನು. ಸಾವಿರ ಶರಗಳಿಂದ ಆ ಮಹಾರಥರನ್ನು ತಡೆಹಿಡಿದು, ಭೀಮನ ಕಾಂಚನಸನ್ನಹ ಕುದುರೆಗಳನ್ನು ಶರಗಳಿಂದ ಕೊಂದನು. ಕುದುರೆಗಳು ಹತವಾದರೂ ರಥದಲ್ಲಿಯೇ ನಿಂತು ಪ್ರತಾಪವಾನ್ ಭೀಮಸೇನನು ಬೇಗನೇ ಗಾಂಗೇಯನ ರಥದ ಮೇಲೆ ಶಕ್ತಿಯನ್ನು ಎಸೆದನು. ಅದು ತಲುಪುವುದರೊಳಗೇ ದೇವವ್ರತನು ಅದನ್ನು ಮೂರು ಭಾಗಗಳನ್ನಾಗಿ ತುಂಡರಿಸಿ ಭೂಮಿಯ ಮೇಲೆ ಬೀಳಿಸಿದನು. ಆಗ ಉಕ್ಕಿನ ಭಾರವಾದ ಬಲವತ್ತಾದ ಗದೆಯನ್ನು ಹಿಡಿದು ಭೀಮಸೇನನು ವೇಗದಿಂದ ರಥದ ಕೆಳಗೆ ಧುಮುಕಿದನು.
ಆಗ ಭೀಮನ ಪ್ರಿಯಕಾಮಿ ಸಾತ್ಯಕಿಯೂ ಕೂಡ ಕುರುವೃದ್ಧನ ಸಾರಥಿಯನ್ನು ಸಾಯಕಗಳಿಂದ ಉರುಳಿಸಿದನು. ರಥಿಗಳಲ್ಲಿ ಶ್ರೇಷ್ಠನಾದ ಭೀಷ್ಮನ ಸಾರಥಿಯು ಹತನಾಗಲು ಕುದುರೆಗಳು ವಾಯುವೇಗದಿಂದ ಅವನನ್ನು ರಣರಂಗದಿಂದ ಆಚೆಗೆ ಕೊಂಡೊಯ್ದವು. ಮಹಾವ್ರತನು ಹಿಂದೆಸರಿಯಲು ಭೀಮಸೇನನು ಒಣಹುಲ್ಲನ್ನು ಸುಡುತ್ತಿರುವ ಬೆಂಕಿಯಂತೆ ಜ್ವಾಜಲ್ಯಮಾನನಾಗಿ ಸುಡುತ್ತಿದ್ದನು. ಅವನು ಸರ್ವಕಲಿಂಗರನ್ನೂ ಸಂಹರಿಸಿ ಸೇನಾಮಧ್ಯದಲ್ಲಿ ನಿಂತುಕೊಂಡನು. ಕೌರವರು ಯಾರೂ ಅವನೊಂದಿಗೆ ಯುದ್ಧಮಾಡಲು ಉತ್ಸುಕರಾಗಿರಲಿಲ್ಲ. ರಥಿಗಳಲ್ಲಿ ಶ್ರೇಷ್ಠ ಧೃಷ್ಟದ್ಯುಮ್ನನು ಆ ಯಶಸ್ವಿಯನ್ನು ತನ್ನ ರಥದಲ್ಲಿ ಏರಿಸಿಕೊಂಡು ಎಲ್ಲ ಸೈನ್ಯಗಳೂ ನೋಡುತ್ತಿದ್ದಂತೆ ಕರೆದುಕೊಂಡು ಹೋದನು. ಪಾಂಚಾಲರಿಂದ ಮತ್ತು ಮತ್ಸ್ಯರಿಂದ ಗೌರವಿಸಿಕೊಂಡ ಅವನು ಧೃಷ್ಟದ್ಯುಮ್ನನನ್ನು ಆಲಂಗಿಸಿ ಸಾತ್ಯಕಿಯಿರುವಲ್ಲಿಗೆ ಹೋದನು. ಆಗ ಸತ್ಯವಿಕ್ರಮ ಯದುವ್ಯಾಘ್ರನು ಭೀಮಸೇನನನ್ನು ಸಂತೋಷಗೊಳಿಸುತ್ತಾ ಧೃಷ್ಟದ್ಯುಮ್ನನು ನೋಡುತ್ತಿದ್ದಂತೆ ಹೇಳಿದನು: “ಒಳ್ಳೆಯದಾಯಿತು! ನಿನ್ನಿಂದ ಕಲಿಂಗರಾಜ, ರಾಜಪುತ್ರ ಕೇತುಮಾನ, ಕಾಲಿಂಗ ಶಕ್ರದೇವ ಮತ್ತು ಕಲಿಂಗರು ಹತರಾದರು. ನಿನ್ನ ಬಲವೀರ್ಯದಿಂದ ಕಲಿಂಗ ಸೇನೆಗಳ ಗಜಾಶ್ವರಥಸಂಕುಲಗಳ ಮಹಾವ್ಯೂಹಗಳು ನಾಶವಾದವು.” ಹೀಗೆ ಹೇಳಿ ಆಪ್ತನಾದ ದೀರ್ಘಬಾಹು ಅರಿಂದಮ ಶೈನಿಯು ರಥದಿಂದಿಳಿದು ಪಾಂಡವನನ್ನು ಬಿಗಿದಪ್ಪಿದನು. ಆಗ ಪುನಃ ತನ್ನ ರಥವನ್ನೇರಿ ಮಹಾರಥನು ಭೀಮನ ಬಲವನ್ನು ವೃದ್ಧಿಸಿ ಕ್ರುದ್ಧನಾಗಿ ಕೌರವರನ್ನು ವಧಿಸಲು ಉಪಕ್ರಮಿಸಿದನು.
ಅಭಿಮನ್ಯು-ಅರ್ಜುನರ ಪರಾಕ್ರಮ
ಆ ದಿನದ ಅಪರಾಹ್ಣವು ಕಳೆಯಲು ರಥನಾಗಾಶ್ವಪದಾತಿಗಳ ಮಹಾಕ್ಷಯವು ಮುಂದುವರೆದಿರಲು ಪಾಂಚಾಲ್ಯನು ಈ ಮೂವರು ಮಹಾರಥ ಮಹಾತ್ಮರೊಂದಿಗೆ - ದ್ರೋಣಪುತ್ರ, ಶಲ್ಯ ಮತ್ತು ಕೃಪ - ಯುದ್ಧದಲ್ಲಿ ತೊಡಗಿದ್ದನು. ಆ ಮಹಾಬಲ ಪಾಂಚಾಲದಾಯಾದನು ಹತ್ತು ಹರಿತ ಆಶುಗಗಳಿಂದ ದ್ರೌಣಿಯ ಲೋಕವಿಶ್ರುತ ಕುದುರೆಗಳನ್ನು ಸಂಹರಿಸಿದನು. ಆಗ ಹತವಾಹನನಾದ ದ್ರೌಣಿಯು ತಕ್ಷಣವೇ ಶಲ್ಯನ ರಥವನ್ನು ಏರಿ ಪಾಂಚಾಲದಾಯದನ ಮೇಲೆ ಬಾಣಗಳಿಂದ ಆಕ್ರಮಣ ಮಾಡಿದನು. ಧೃಷ್ಟದ್ಯುಮ್ನನು ದ್ರೌಣಿಯೊಂದಿಗೆ ಯುದ್ಧದಲ್ಲಿ ನಿರತನಾಗಿದ್ದುದನ್ನು ನೋಡಿ ಸೌಭದ್ರನು ವೇಗದಿಂದ ನಿಶಿತ ಶರಗಳನ್ನು ಎರಚುತ್ತಾ ಎದುರಿಸಿದನು. ಅವನು ಶಲ್ಯನನ್ನು ಇಪ್ಪತ್ತೈದು ಶರಗಳಿಂದ, ಕೃಪನನ್ನು ಒಂಭತ್ತರಿಂದ ಮತ್ತು ಅಶ್ವತ್ಥಾಮನನ್ನು ಎಂಟು ಬಾಣಗಳಿಂದ ಹೊಡೆದನು. ಆಗ ತಕ್ಷಣವೇ ಆರ್ಜುನಿಯನ್ನು ದ್ರೌಣಿಯು ಪತ್ರಿಗಳಿಂದ, ಶಲ್ಯನು ಹನ್ನೆರಡು ಮತ್ತು ಕೃಪನು ಮೂರು ನಿಶಿತಬಾಣಗಳಿಂದ ಹೊಡೆದರು. ಧೃತರಾಷ್ಟ್ರನ ಮೊಮ್ಮಗ ಲಕ್ಷ್ಮಣನು ಸೌಭದ್ರಿಯನ್ನು ಎದುರಿಸಲು, ಆಗ ಸಂಹೃಷ್ಟರಾದ ಅವರಿಬ್ಬರ ನಡುವೆ ಯುದ್ಧವು ನಡೆಯಿತು. ದೌರ್ಯೋಧನಿಯಾದರೋ ಸಂಕ್ರುದ್ಧನಾಗಿ ಸೌಭದ್ರನನ್ನು ಒಂಭತ್ತು ಶರಗಳಿಂದ ಹೊಡೆದನು. ಆಗ ಈ ಅದ್ಭುತವಾಯಿತು. ಸಂಕ್ರುದ್ಧನಾದ ಅಭಿಮನ್ಯುವಾದರೋ ತಮ್ಮನನ್ನು ಐವತ್ತು ಶರಗಳಿಂದ ತನ್ನ ಹಸ್ತಲಾಘವದಿಂದ ಹೊಡೆದನು. ಆಗ ಲಕ್ಷ್ಮಣನೂ ಕೂಡ ಪತ್ರಿಗಳಿಂದ ಅವನ ಮುಷ್ಟಿಪ್ರದೇಶಕ್ಕೆ ಹೊಡೆದು ದನುಸ್ಸನ್ನು ತುಂಡರಿಸಿದನು. ಆಗ ಜನರು ಕೂಗಾಡಿದರು. ತುಂಡಾಗಿದ್ದ ಧನುಸ್ಸನ್ನು ಬಿಸಾಡಿ ಪರವೀರಹ ಸೌಭದ್ರನು ಇನ್ನುಂದು ಚಿತ್ರವಾದ, ವೇಗವತ್ತರವಾದ ಕಾರ್ಮುಕವನ್ನು ಎತ್ತಿಕೊಂಡನು. ಆ ಇಬ್ಬರು ಪುರುಷರ್ಷಭರೂ ಸಮರದಲ್ಲಿ ಹರ್ಷಿತರಾಗಿ, ಪ್ರತಿಗೆ ಪ್ರತಿಮಾಡುವುದರಲ್ಲಿ ಇಚ್ಛೆಯುಳ್ಳವರಾಗಿದ್ದು ಅನ್ಯೋನ್ಯರನ್ನು ತೀಕ್ಷ್ಣ ವಿಶಿಖಗಳಿಂದ ಹೊಡೆಯುತ್ತಿದ್ದರು. ಆಗ ರಾಜಾ ಜನೇಶ್ವರ ದುರ್ಯೋಧನನು ಅಭಿಮನ್ಯುವಿನಿಂದ ತನ್ನ ಮಗ ಮಹಾರಥನು ಪೀಡಿತನಾಗುತ್ತಿರುವುದನ್ನು ಕಂಡು ಅಲ್ಲಿಗೆ ಬಂದನು. ದುರ್ಯೋಧನನು ಅಲ್ಲಿಗೆ ಬರಲು ಎಲ್ಲ ಜನಾಧಿಪರೂ ಕೂಡ ರಥಸಂಕುಲಗಳಿಂದ ಆರ್ಜುನಿಯನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಯುದ್ಧದಲ್ಲಿ ಆ ಸುದುರ್ಜಯ ಶೂರರಿಂದ ಪರಿವೃತನಾಗಿದ್ದರೂ ಆ ಕೃಷ್ಣತುಲ್ಯ ಪರಾಕ್ರಮಿಯು ಸ್ವಲ್ಪವೂ ವ್ಯಥಿತನಾಗಲಿಲ್ಲ.
ಸಂಸಕ್ತನಾಗಿದ್ದ ಸೌಭದ್ರನನ್ನು ನೋಡಿ ಧನಂಜಯನು ತನ್ನ ಮಗನನ್ನು ರಕ್ಷಿಸಲು ಬಯಸಿ ಸಂಕ್ರುದ್ಧನಾಗಿ ಅಲ್ಲಿಗೆ ಧಾವಿಸಿದನು. ಆಗ ರಥ-ಆನೆ-ಅಶ್ವಗಳೊಡನೆ ಭೀಷ್ಮ-ದ್ರೋಣರನ್ನು ಮುಂದಿರಿಸಿಕೊಂಡು ರಾಜರು ಒಟ್ಟಿಗೇ ಸವ್ಯಸಾಚಿಯನ್ನು ಎದುರಿಸಿದರು. ಒಮ್ಮಿಂದೊಮ್ಮೆಲೇ ಆನೆ-ರಥ-ಕುದುರೆಗಳ ಚಲನವಲನದಿಂದ ಭೂಮಿಯಲ್ಲಿ ತೀವ್ರವಾದ ಧೂಳೆದ್ದು ಅದು ಸೂರ್ಯನ ಮಾರ್ಗದ ವರೆಗೂ ತಲುಪಿದುದು ಕಂಡುಬಂದಿತು. ಅವನ ಬಾಣಪಥಕ್ಕೆ ಸಿಲುಕಿ ಸಹಸ್ರಾರು ಆನೆಗಳು ಮತ್ತು ನೂರಾರು ಭುಮಿಪಾಲರು ಎಲ್ಲಕಡೆ ಓಡಿ ಹೋಗತೊಡಗಿದರು. ಎಲ್ಲ ಭೂತಗಳು ನೋವಿನಿಂದ ಕೂಗಿದವು. ದಿಕ್ಕುಗಳು ಕತ್ತಲೆಯಿಂದ ತುಂಬಿದವು. ಕುರುಗಳ ಅನಯತೇಯ ತೀವ್ರ ದಾರುಣ ಫಲಿತಾಂಶವು ಕಂಡುಬರುತ್ತಿತ್ತು. ಕಿರೀಟಿಯ ಶರಸಂಘಗಳಿಂದ ತುಂಬಿ ಅಂತರಿಕ್ಷವಾಗಲೀ, ದಿಕ್ಕುಗಳಾಗಲೀ, ಭೂಮಿಯಾಗಲೀ, ಭಾಸ್ಕರನಾಗಲೀ ಕಾಣಲಿಲ್ಲ. ಅನೇಕ ಧ್ವಜಗಳು ನಾಶವಾದವು, ಕುದುರೆ-ಆನೆ-ರಥಿಕರು ಹತರಾದರು. ಕೆಲವು ರಥಯೂಥಪರೂ ಓಡಿಹೋಗುತ್ತಿರುವುದು ಕಂಡುಬಂದಿತು. ಅನ್ಯ ವಿರಥರಾದ ರಥಿಗಳು ಎಲ್ಲಕಡೆ ಅಲ್ಲಲ್ಲಿ ಆಯುಧಗಳನ್ನು ಹಿಡಿದು, ಅಂಗದ-ಭುಜಾಭರಣಗಳೊಂದಿಗೆ ಓಡಿಹೋಗುತ್ತಿರುವುದು ಕಂಡುಬಂದಿತು. ಅರ್ಜುನನ ಭಯದಿಂದ ಹಯಾರೂಢರು ಕುದುರೆಗಳನ್ನು ಮತ್ತು ಗಜಾರೂಢರು ಆನೆಗಳನ್ನು ಬಿಟ್ಟು ಎಲ್ಲ ಕಡೆ ಓಡಿ ಹೋಗುತ್ತಿದ್ದರು.
ಅರ್ಜುನನಿಂದ ಹೊಡೆಯಲ್ಪಟ್ಟು ರಥಗಳು, ಆನೆಗಳು, ಕುದುರೆಗಳು ಮತ್ತು ನರಾಧಿಪರು ಬಿದ್ದುದು ಮತ್ತು ಬೀಳುತ್ತಿರುವುದು ಕಂಡುಬಂದಿತು. ಗದೆಯನ್ನಿತ್ತಿಹಿಡಿದ ಮತ್ತು ಖಡ್ಗಗಳನ್ನೂ ಹಿಡಿದ ಕೈಗಳನ್ನೂ, ಪ್ರಾಸ-ತೂಣೀರ-ಶರ-ಧನುಸ್ಸು-ಅಂಕುಶ-ಪತಾಕೆಗಳನ್ನು ಹಿಡಿದ ಕೈಗಳನ್ನು ಮತ್ತು ನರರನ್ನು ಅವುಗಳೊಂದಿಯೇ ಅರ್ಜುನನು ಉಗ್ರವಾದ ಬಾಣಗಳಿಂದ ಕತ್ತರಿಸುತ್ತಿದ್ದನು. ಆಗ ಅವನ ಮುಖವು ರೌದ್ರಾಕಾರವನ್ನು ತಾಳಿತ್ತು. ರಣಭೂಮಿಯಲ್ಲಿ ಹರಡಿ ಬಿದ್ದಿರುವ ಪರಿಘ-ಮುದ್ಗರ-ಪ್ರಾಸ-ಭಿಂಡಿಪಾಲ-ಕತ್ತಿ-ತೀಕ್ಷ್ಣ ಗಂಡುಗೊಡಲಿ-ತೋಮರ--ಕವಚ-ತುಂಡಾದ ಬಿಲ್ಲುಗಳು-ಧ್ವಜ-ಗುರಾಣಿ-ವ್ಯಜನಗಳು-ಛತ್ರಗಳು-ಹೇಮದಂಡಗಳು-ಚಾಮರಗಳು-ಚಾವಟಿಗಳು-ನೊಗಪಟ್ಟಿಗಳು-ಮತ್ತು ಅಂಕುಶಗಳು ರಾಶಿರಾಶಿಯಾಗಿ ಕಂಡವು. ಆಗ ಅರ್ಜುನನೊಂದಿಗೆ ಸಮರದಲ್ಲಿ ಪ್ರತಿಯುದ್ಧ ಮಾಡಬಲ್ಲ ಯಾವ ಪುರುಷನೂ ಕೌರವ ಸೇನೆಯಲ್ಲಿ ಇರಲಿಲ್ಲ. ಯಾರು ಯಾರು ಪಾರ್ಥನನ್ನು ಎದುರಿಸಿ ಯುದ್ಧಮಾಡಿದರೋ ಅವರೆಲ್ಲರೂ ತೀಕ್ಷ್ಣ ವಿಶಿಖಗಳಿಂದ ಪರಲೋಕಕ್ಕೆ ಕೊಂಡೊಯ್ಯಲ್ಪಟ್ಟರು. ಕೌರವ ಯೋಧರು ಹಾಗೆ ದಿಕ್ಕಾಪಾಲಾಗಿ ಓಡಿಹೋಗುತ್ತಿರಲು ಅರ್ಜುನ-ವಾಸುದೇವರು ಅವರ ಉತ್ತಮ ಶಂಖಗಳನ್ನು ಊದಿದರು.
ಆ ಬಲವು ಪ್ರಭಗ್ನವಾಗುತ್ತಿರುವುದನ್ನು ನೋಡಿ ದೇವವ್ರತನು ಶೂರ ಭಾರದ್ವಾಜನಿಗೆ ಮುಗುಳ್ನಕ್ಕು ಹೇಳಿದನು: “ಈ ವೀರ ಬಲೀ ಪಾಂಡುಸುತನು ಕೃಷ್ಣನೊಂದಿಗೆ ಸೈನ್ಯಗಳನ್ನು ನಾಶಪಡಿಸುತ್ತಿದ್ದಾನೆ. ಕಾಲಾಂತಕ ಯಮನೋಪಾದಿಯಲ್ಲಿ ಕಾಣುವ ರೂಪವುಳ್ಳ ಇವನನ್ನು ಇಂದು ಸಮರದಲ್ಲಿ ಗೆಲ್ಲಲು ಖಂಡಿತ ಸಾಧ್ಯವಿಲ್ಲ. ಅನ್ಯೋನ್ಯರನ್ನು ನೋಡಿ ಓಡಿಹೋಗುತ್ತಿರುವ ಈ ಮಹಾಸೇನೆಯನ್ನು ವರೂಥಿನಿಯನ್ನು ಹಿಂದೆ ಕರೆತರಲೂ ಕೂಡ ಶಕ್ಯವಿಲ್ಲ. ಸರ್ವಲೋಕಗಳ ದೃಷ್ಟಿಗಳನ್ನು ಸರ್ವಥಾ ಸಂಹರಿಸಲಿದ್ದಾನೆಯೋ ಎನ್ನುವಂತೆ ಭಾನುಮತನು ಗಿರಿಶ್ರೇಷ್ಠನಲ್ಲಿ ಅಸ್ತನಾಗುತ್ತಿದ್ದಾನೆ. ಹಿಂದೆಸರಿಯುವ ಕಾಲವು ಬಂದೊದಗಿದೆಯೆಂದು ನನಗನ್ನಿಸುತ್ತದೆ. ಆಯಾಸಗೊಂಡ, ಭೀತರಾದ ಯೋಧರು ಎಂದೂ ಯುದ್ಧಮಾಡಲಾರರು.”
ಹೀಗೆ ಆಚಾರ್ಯಸತ್ತಮ ದ್ರೋಣನಿಗೆ ಹೇಳಿ ಮಹಾರಥ ಭೀಷ್ಮನು ಕೌರವರನ್ನು ಹಿಂದಕ್ಕೆ ಕರೆಸಿಕೊಂಡನು. ಸೂರ್ಯನು ಅಸ್ತವಾಗಲು, ಸಂದ್ಯಾಕಾಲವುಂಟಾಗಲು, ಪಾಂಡವರು ಮತ್ತು ಕೌರವರು ಸೇನೆಗಳನ್ನು ಹಿಂದೆತೆಗೆದುಕೊಂಡರು.