ಮೊದಲನೆಯ ದಿನದ ಯುದ್ಧ

ಸಹೋದರರೊಂದಿಗೆ ದುರ್ಯೋಧನನು ಭೀಷ್ಮನನ್ನು ಪ್ರಮುಖನನ್ನು ಮಾಡಿ ಸೇನೆಯನ್ನು ಕೂಡಿಕೊಂಡು ಹೊರಟನು. ಹಾಗೆಯೇ ಪಾಂಡವರೆಲ್ಲರೂ ಭೀಮಸೇನನನ್ನು ಮುಂದಿಟ್ಟುಕೊಂಡು ಭೀಷ್ಮನೊಂದಿಗೆ ಯುದ್ಧವನ್ನು ಬಯಸಿ ಹೃಷ್ಟಮಾನಸರಾಗಿ ಹೊರಟರು. ಕ್ರಕಚಗಳ ಕಿಲಕಿಲ ಶಬ್ಧ, ಗೋವಿನ ಕೊಂಬಿನ ವಾದ್ಯ, ಭೇರೀ ಮೃದಂಗ ಮತ್ತು ಹಯಕುಂಜರಗಳ ನಿಃಸ್ವನಗಳು ಕಿವುಡು ಮಾಡುವಂತಿತ್ತು. ಎರಡೂ ಸೇನೆಗಳು – ಪಾಂಡವರು ಕೌರವರನ್ನು ಮತ್ತು ಕೌರವರು ಪಾಂಡವರನ್ನು ಜೋರಾಗಿ ಕೂಗುತ್ತಾ ಆಕ್ರಮಣ ಮಾಡಲಾಯಿತು. ಆಗ ಅಲ್ಲಿ ಮಹಾ ತುಮುಲವುಂಟಾಯಿತು. ಪರಸ್ಪರರನ್ನು ಕೊನೆಗೊಳಿಸಲು ಸೇರಿದ್ದ ಆ ಪಾಂಡವ ಧಾರ್ತರಾಷ್ಟ್ರರ ಮಹಾ ಸೇನೆಗಳು ಶಂಖಮೃದಂಗ ನಿಸ್ವನಗಳಿಂದ ಗಾಳಿಗೆ ವನಗಳು ತೂರಾಡುತ್ತಿರುವಂತೆ ತೂರಾಡುತ್ತಿದ್ದವು. ನರೇಂದ್ರ-ನಾಗ-ಅಶ್ವ-ರಥಸಂಕುಲಗಳು ಆ ಅಶಿವ ಮುಹೂರ್ತದಲ್ಲಿ ಪರಸ್ಪರರನ್ನು ಧಾಳಿಮಾಡುವಾಗ ಭಿರುಗಾಳಿಯಿಂದ ಮೇಲೆಬ್ಬಿಸಿದ ಸಾಗರಗಳಂತೆ ಸೇನೆಗಳ ತುಮುಲ ಘೋಷವಾಯಿತು. ಆ ಲೋಮಹರ್ಷಣ ಶಬ್ಧ ತುಮುಲವು ಮೇಲೇರಲು ಮಹಾಬಾಹು ಭೀಮಸೇನನು ಗೂಳಿ ಹೋರಿಯಂತೆ ಕೂಗಿದನು. ಶಂಖದುಂದುಭಿ ನಿರ್ಘೋಷ, ಆನೆಗಳ ಘೀಳು, ಸೇನೆಗಳ ಸಿಂಹನಾದಕ್ಕಿಂತಲೂ ಭೀಮಸೇನನ ರವವು ಜೋರಾಗಿತ್ತು. ಸೇನೆಗಳಲ್ಲಿದ್ದ ಸಹಸ್ರಾರು ಕುದುರೆಗಳೆಲ್ಲವುಗಳ ಹೇಷಾರವಕ್ಕಿಂತ ಭೀಮಸೇನನ ಕೂಗು ಜೋರಾಗಿದ್ದಿತು. ಶಕ್ರನ ಸಿಡಿಲುಬಡಿದ ಮೋಡಗಳು ಗರ್ಜಿಸುವಂತಿದ್ದ ಆ ನಿನದವನ್ನು ಕೇಳಿ ಕೌರವ ಸೇನೆಯು ತತ್ತರಿಸಿತು. ಸಿಂಹದ ಕೂಗನ್ನು ಕೇಳಿ ಇತರ ಮೃಗಗಳು ಹೇಗೋ ಹಾಗೆ ಅವನ ಶಬ್ಧವನ್ನು ಕೇಳಿ ಎಲ್ಲ ಪ್ರಾಣಿಗಳೂ ಮಲಮೂತ್ರಗಳನ್ನು ವಿಸರ್ಜಿಸಿದವು. ಮಹಾಮೋಡದಂತೆ ಗರ್ಜಿಸುತ್ತಾ ಘೋರರೂಪವನ್ನು ತಾಳಿದ ಅವನು ಧಾರ್ತರಾಷ್ಟ್ರರನ್ನು ಭಯಪಡಿಸುತ್ತಾ ಸೇನೆಗಳ ಮೇಲೆ ಎರಗಿದನು. ತಮ್ಮ ಕಡೆ ಮುನ್ನುಗ್ಗಿ ಬರುತ್ತಿರುವ ಅವನನ್ನು ಸೋದರರು ಸುತ್ತುವರೆದು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಶರವ್ರಾತಗಳಿಂದ ಮುಚ್ಚಿದರು.

ದುರ್ಯೋಧನ, ದುರ್ಮುಖ, ದುಃಸಹ, ಶಲ, ದುಃಶಾಸನ, ಅತಿರಥ, ದುರ್ಮರ್ಷಣ, ವಿವಿಂಶತಿ, ಚಿತ್ರಸೇನ, ವಿಕರ್ಣ, ಪುರುಮಿತ್ರ, ಜಯ, ಭೋಜ, ವೀರ್ಯವಾನ್ ಸೌಮದತ್ತಿ – ಇವರು ವಿದ್ಯುತ್ತಿನಿಂದ ಕೂಡಿದ ಮೇಘಗಳಂತೆ ಗುಡುಗುತ್ತಿರುವ ಮಹಾ ಚಾಪಗಳಿಗೆ  ವಿಷೋಪಮವಾದ ಹರಿತ ನಾರಾಚಗಳನ್ನು ಹೂಡಿ ಅವನ ಮೇಲೆ ಬಿಟ್ಟರು. ಆಗ ಆ ಧಾರ್ತರಾಷ್ಟ್ರರನ್ನು ದ್ರೌಪದೀಪುತ್ರರು, ಸೌಭದ್ರಿ, ನಕುಲ-ಸಹದೇವರು, ಮತ್ತು ಧೃಷ್ಟದ್ಯುಮ್ನರು ಮಹಾವೇಗದಿಂದ ಆಕ್ರಮಣಮಾಡಿ ಗಿರಿಶಿಖರಗಳನ್ನು ವಜ್ರಗಳಿಂದ ಹೊಡೆಯುವಂತೆ ನಿಶಿತ ಶರಗಳಿಂದ ಹೊಡೆದರು. ಧನುಸ್ಸಿನ ಠೇಂಕಾರದ ಭಯಂಕರ ಶಬ್ಧಗಳಿಂದೊಡಗೂಡಿದ ಆ ಪ್ರಥಮ ಹೋರಾಟದಲ್ಲಿ ಕೌರವರಾಗಲೀ ಪಾಂಡವರಾಗಲೀ ಯಾರೂ ಹಿಮ್ಮೆಟ್ಟಲಿಲ್ಲ. ದ್ರೋಣಶಿಷ್ಯರ ಲಾಘವವು ಕಂಡುಬಂದಿತು. ಅನೇಕ ಬಾಣಗಳನ್ನು ಬಿಡುತ್ತಿದ್ದ ಅವರು ತಮ್ಮ ಗುರಿಯನ್ನು ತಪ್ಪುತ್ತಿರಲಿಲ್ಲ. ಆಗ ಧನುಸ್ಸುಗಳ ಠೇಂಕಾರದ ನಿರ್ಘೋಷವು ಒಂದು ಕ್ಷಣವೂ ನಿಲ್ಲಲಿಲ್ಲ. ನಭಸ್ತಲದಿಂದ ಉಲ್ಕೆಗಳು ಬೀಳುವಂತೆ ಉರಿಯುವ ಬಾಣಗಳು ಹಾರಿ ಬೀಳುತ್ತಿದ್ದವು. ಅನ್ಯ ಎಲ್ಲ ಮಹೀಪಾಲರೂ ದರ್ಶನೀಯವಾಗಿದ್ದ ಆ ಭಯಂಕರ ದಾಯಾದಿಗಳ ಹೋರಾಟವನ್ನು ಪ್ರೇಕಕರಾಗಿ ನೋಡುತ್ತಿದ್ದರು. ಆಗ ಆ ಮಹಾರಥರು ಪರಸ್ಪರರ ಕೃತ್ಯಗಳನ್ನು ಸ್ಮರಿಸಿಕೊಂಡು ಸಿಟ್ಟಿಗೆದ್ದು ಅನ್ಯೋನ್ಯರನ್ನು ಸ್ಪರ್ಧಿಸಿ ಹೋರಾಡಿದರು.

ಕುರುಪಾಂಡವರ ಆನೆ-ಕುದುರೆ-ರಥಸಂಕುಲಗಳು ರಣದಲ್ಲಿ ಚಿತ್ರಪಟದಲ್ಲಿರುವವುಗಳಂತೆ ಅತಿಸುಂದರವಾಗಿ ಕಂಡಿತು. ಪಾರ್ಥಿವರೆಲ್ಲರೂ ಧನುರ್ಬಾಣಗಳನ್ನು ಹಿಡಿದು ದುರ್ಯೋಧನನ ಶಾಸನದಂತೆ ಸೇನೆಗಳೊಂದಿಗೆ ಆಕ್ರಮಿಸಿದರು. ಸಾವಿರಾರು ಪಾರ್ಥಿವರು ಯುಧಿಷ್ಠಿರನ ಆದೇಶದಂತೆ ಸಂತೋಷದಿಂದ ದುರ್ಯೋಧನನ ಸೇನೆಯ ಮೇಲೆ ಬಿದ್ದರು. ಎರಡೂ ಸೇನೆಗಳ ತೀವ್ರ ಹೋರಾಟದಲ್ಲಿ ಸೇನೆಗಳಿಂದ ಮೇಲೆದ್ದ ಧೂಳು ಆದಿತ್ಯನನ್ನು ಅಂತರ್ಧಾನಗೊಳಿಸಿತು. ಅಲ್ಲಿ ತಮ್ಮವರ, ಶತ್ರುಗಳ, ಯುದ್ಧಮಾಡುತ್ತಿರುವವರ, ಗಾಯಗೊಂಡು ಹಿಂದೆ ಸರಿಯುವವರ ಮಧ್ಯೆ ಅಂತರವೇ ತಿಳಿಯುತ್ತಿರಲಿಲ್ಲ. ನಡೆಯುತ್ತಿರುವ ಆ ಮಹಾಭಯಂಕರ ತುಮುಲ ಯುದ್ಧದಲ್ಲಿ ಎಲ್ಲ ಸೇನೆಗಳಲ್ಲಿಯೂ ಭೀಷ್ಮನು ಮಿಂಚಿದನು.

ದ್ವಂದ್ವಯುದ್ಧ

ಆ ರೌದ್ರ ದಿವಸದ ಪೂರ್ವಾಹ್ಣದಲ್ಲಿ ರಾಜರ ದೇಹವನ್ನು ತುಂಡರಿಸುವ ಮಹಾಘೋರ ಯುದ್ಧವು ಪ್ರಾರಂಭವಾಯಿತು. ಸಂಗ್ರಾಮದಲ್ಲಿ ಜಯವನ್ನು ಬಯಸಿದ ಸಿಂಹಗಳದ್ದಂತಿದ್ದ ಕುರು-ಪಾಂಡವರ ಕೋಪದ ಕೂಗು ಭೂಮಿ-ಆಕಾಶಗಳಲ್ಲಿ ಮೊಳಗಿತು. ಅಂಗೈಗಳ ಕಿಲ ಕಿಲ ಶಬ್ಧವು ಶಂಖದ ಶಬ್ಧದೊಂದಿಗೆ ಸೇರಿತು. ಪ್ರತಿಗರ್ಜಿಸುತ್ತಿರುವ ಶೂರರ ಸಿಂಹನಾದಗಳೂ ಉದ್ಭವಿಸಿದವು. ಚಪ್ಪಾಳೆಗಳ ಹೊಡೆತದ ಶಬ್ಧ, ಬಿಲ್ಲಿನ ಠೇಂಕಾರ, ಪದಾತಿಗಳ ಪಾದಶಬ್ಧ, ಕುದುರೆಗಳ ಹೀಂಕಾರ, ಅಂಕುಶಗಳು ಮತ್ತು ಆಯುಧಗಳು ಬೀಳುವ ಶಬ್ಧ, ಅನ್ಯೋನ್ಯರನ್ನು ಹೊಡೆಯುತ್ತಿರುವ ಆನೆಗಳ ಗಂಟೆಗಳ ಶಬ್ಧ, ಮತ್ತು ಗುಡುಗಿನಂತಿರುವ ರಥನಿರ್ಘೋಷ ಈ ಎಲ್ಲ ಲೋಮಹರ್ಷಣ ತುಮುಲ ಶಬ್ಧಗಳು ಕೇಳಿಬಂದವು. ಅವರು ಎಲ್ಲರೂ ಮನಸ್ಸನ್ನು ಕ್ರೂರಮಾಡಿಕೊಂಡು ಜೀವಿತವನ್ನು ತ್ಯಜಿಸಿ ಧ್ವಜಗಳನ್ನು ಮೇಲೆತ್ತಿ ಹಿಡಿದು ಪಾಂಡವರ ಮೇಲೆ ಆಕ್ರಮಣ ಮಾಡಿದರು. ಸ್ವಯಂ ಶಾಂತನವನು ಕಾಲದಂಡದಂತಿರುವ ಘೋರ ಕಾರ್ಮುಕವನ್ನು ಹಿಡಿದು ಧನಂಜಯನನ್ನು ಆಕ್ರಮಣಿಸಿದನು. ತೇಜಸ್ವಿ ಅರ್ಜುನನೂ ಕೂಡ ಲೋಕವಿಶ್ರುತ ಗಾಂಡೀವ ಧನುಸ್ಸನ್ನು ಹಿಡಿದು ರಣಮೂರ್ಧನಿಯಲ್ಲಿ ಗಾಂಗೇಯನ ಮೇಲೆ ಎರಗಿದನು. ಅವರಿಬ್ಬರು ಕುರುಶಾರ್ದೂಲರೂ ಪರಸ್ಪರರನ್ನು ವಧಿಸಲು ಬಯಸಿದ್ದರು. ಬಲೀ ಗಾಂಗೇಯನಾದರೋ ರಣದಲ್ಲಿ ಪಾರ್ಥನನ್ನು ಹೊಡೆದು ಅಲುಗಾಡಿಸಲೂ ಆಗಲಿಲ್ಲ. ಹಾಗೆಯೇ ಪಾಂಡವನೂ ಕೂಡ ಯುದ್ಧದಲ್ಲಿ ಭೀಷ್ಮನನ್ನು ಅಲುಗಾಡಿಸಲೂ ಇಲ್ಲ.

ಮಹೇಷ್ವಾಸ ಸಾತ್ಯಕಿಯು ಕೃತವರ್ಮನನ್ನು ಎದುರಿಸಿದನು. ಅವರ ಮಧ್ಯೆ ಲೋಮಹರ್ಷಣ ತುಮುಲ ಯುದ್ಧವು ನಡೆಯಿತು. ಸಾತ್ಯಕಿಯು ಕೃತವರ್ಮನನ್ನೂ ಕೃತವರ್ಮನು ಸಾತ್ಯಕಿಯನ್ನೂ ಘೋರ ಶರಗಳಿಂದ ಹೊಡೆದು ಚುಚ್ಚಿ ಪರಸ್ಪರರನ್ನು ದುರ್ಬಲಗೊಳಿಸಿದರು. ಸರ್ವಾಂಗಗಳಲ್ಲಿಯೂ ಬಾಣಗಳಿಂದ ಗಾಯಗೊಂಡ ಅವರಿಬ್ಬರು ಮಹಾಬಲರೂ ವಸಂತದಲ್ಲಿ ಹೂಬಿಟ್ಟಿರುವ ಕುಂಶುಕ ವೃಕ್ಷಗಳಂತೆ ಶೋಭಿಸಿದರು.

ಮಹೇಷ್ವಾಸ ಅಭಿಮನ್ಯುವು ಬೃಹದ್ಬಲನೊಂದಿಗೆ ಯುದ್ಧಮಾಡಿದನು. ಕೋಸಲಕ ರಾಜನು ಸೌಭದ್ರಿಯ ಧ್ವಜವನ್ನು ತುಂಡರಿಸಿದನು ಮತ್ತು ಸಾರಥಿಯನ್ನು ಬೀಳಿಸಿದನು. ಸೌಭದ್ರಿಯಾದರೋ ರಥಸಾರಥಿಗಳನ್ನು ಉರುಳಿಸಿದುದಕ್ಕೆ ಕ್ರುದ್ಧನಾಗಿ ಬೃಹದ್ಬಲನನ್ನು ಒಂಭತ್ತು ಶರಗಳಿಂದ ಹೊಡೆದನು. ಇತರ ಎರಡು ಭಲ್ಲಗಳಿಂದ ಅರಿಮರ್ದನನು ಅವನ ಧ್ವಜವನ್ನು ಕತ್ತರಿಸಿದನು, ಒಂದರಿಂದ ಚಕ್ರರಕ್ಷಕರನ್ನೂ ಮತ್ತು ಒಂದರಿಂದ ಸಾರಥಿಯನ್ನೂ ಹೊಡೆದನು. ಅವರಿಬ್ಬರೂ ಕ್ರುದ್ಧರಾಗಿ ಅನ್ಯೋನ್ಯರನ್ನು ತೀಕ್ಷ್ಣ ಶರಗಳಿಂದ ದುರ್ಬಲಗೊಳಿಸಿದರು.

ಭೀಮಸೇನನು ಆ ಮಾನಿನಿ, ದರ್ಪಿ, ವೈರವನ್ನು ಸಾಧಿಸಿದ, ಮಹಾರಥ ದುರ್ಯೋಧನನೊಂದಿಗೆ ಯುದ್ಧಮಾಡಿದನು. ಆ ಇಬ್ಬರು ನರಶಾರ್ದೂಲರೂ, ಕುರುಮುಖ್ಯರೂ, ಮಹಾಬಲರೂ ರಣದಲ್ಲಿ ಅನ್ಯೋನ್ಯರ ಮೇಲೆ ಶರವರ್ಷಗಳನ್ನು ಸುರಿಸಿ ಹೋರಾಡಿದರು. ಆ ಮಹಾತ್ಮ, ಕೃತಕೃತ್ಯ, ಚಿತ್ರಯೋಧಿಗಳಿಬ್ಬರನ್ನೂ ನೋಡಿ ಸರ್ವಭೂತಗಳಿಗೂ ವಿಸ್ಮಯವುಂಟಾಯಿತು.

ದುಃಶಾಸನನಾದರೋ ಮಹಾರಥ ನಕುಲನೊಂದಿಗೆ ಯುದ್ಧಮಾಡಿದನು ಮತ್ತು ಬಹಳಷ್ಟು ಮರ್ಮಭೇದಿ ನಿಶಿತ ಬಾಣಗಳಿಂದ ಹೊಡೆದನು. ಮಾದ್ರೀಸುತನು ನಸುನಗುತ್ತಾ ನಿಶಿತ ಬಾಣಗಳಿಂದ ಅವನ ಧ್ವಜವನ್ನೂ, ಶರಗಳನ್ನೂ, ಧ್ವಜವನ್ನೂ ತುಂಡರಿಸಿದನು. ಮತ್ತೆ ಇಪ್ಪತ್ತೈದು ಕ್ಷುದ್ರಕ (ತಲೆ ಚಿಕ್ಕದಾಗಿರುವ ಬಾಣ) ಗಳಿಂದ ಅವನನ್ನು ಗಾಯಗೊಳಿಸಿದನು. ದುಃಶಾಸನನಾದರೋ ಎರಡು ಬಾಣಗಳಿಂದ ನಕುಲನ ಧ್ವಜವನ್ನು ಉರುಳಿಸಿದನು.

ದುರ್ಮುಖನು ಮಹಾಬಲ ಸಹದೇವನನ್ನು ಎದುರಿಸಿ ಯುದ್ಧಮಾಡಿದನು. ಯುದ್ಧಮಾಡುತ್ತಾ ಶರವರ್ಷಗಳಿಂದ ಗಾಯಗೊಳಿಸಿದನು. ಆಗ ವೀರ ಸಹದೇವನು ತೀಕ್ಷ್ಣ ಶರದಿಂದ ದುರ್ಮುಖನ ಸಾರಥಿಯನ್ನು ಕೆಳಗುರುಳಿಸಿದನು. ಆ ಇಬ್ಬರು ಯುದ್ಧ ದುರ್ಮದರೂ ಅನ್ಯೋನ್ಯರನ್ನು ಎದುರಿಸಿ ಹೊಡೆಯಲು ಮತ್ತು ತಿರುಗಿ ಹೊಡೆಯಲು ಬಯಸಿ ಘೋರ ಶರಗಳಿಂದ ಪರಸ್ಪರರನ್ನು ಪೀಡಿಸಿದರು.

ಸ್ವಯಂ ರಾಜಾ ಯುಧಿಷ್ಠಿರನು ಮದ್ರರಾಜನನ್ನು ಎದುರಿಸಿದನು. ಮದ್ರಾಧಿಪನು ಅವನು ನೋಡುತ್ತಿದ್ದಂತೆಯೇ ಅವನ ಚಾಪವನ್ನು ಎರಡಾಗಿ ತುಂಡರಿಸಿದನು. ತುಂಡಾದ ಧನುಸ್ಸನ್ನು ಬಿಸುಟು ಯುಧಿಷ್ಠಿರನು ವೇಗದಿಂದ ಬಲವತ್ತವಾದ ಇನ್ನೊಂದು ಕಾರ್ಮುಕವನ್ನು ತೆಗೆದುಕೊಂಡನು. ಆಗ ರಾಜನು ಸನ್ನತಪರ್ವ ಶರಗಳಿಂದ ಮದ್ರೇಶ್ವರನನ್ನು ಹೊಡೆದು ಸಂಕ್ರುದ್ಧನಾಗಿ “ನಿಲ್ಲು! ನಿಲ್ಲು!” ಎಂದು ಹೇಳಿದನು.

ಧೃಷ್ಟದ್ಯುಮ್ನನು ದ್ರೋಣನನ್ನು ಎದುರಿಸಿದನು. ಸಂಕ್ರುದ್ಧನಾದ ದ್ರೋಣನು ಯುದ್ಧಮಾಡುತ್ತಿರುವ ಅವನ ಶತ್ರುಗಳ ಅಸುವನ್ನು ನೀಗಿಸುವ ದೃಢ ಕಾರ್ಮುಕವನ್ನು ಮೂರು ಭಾಗಗಳಾಗಿ ತುಂಡುಮಾಡಿದನು. ಮತ್ತು ಕಾಲದಂಡದಂತಿರುವ ಇನ್ನೊಂದು ಮಹಾಘೋರ ಶರವನ್ನು ಕಳುಹಿಸಲು ಅದು ಅವನ ದೇಹಕ್ಕೆ ತಾಗಿತು. ಆಗ ಅನ್ಯ ಧನುಸ್ಸನ್ನು ತೆಗೆದುಕೊಂಡು ಹದಿನಾಲ್ಕು ಸಾಯಕಗಳಿಂದ ದ್ರುಪದಪುತ್ರನು ದ್ರೋಣನನ್ನು ಹಿಂದಿರುಗಿ ಹೊಡೆದನು. ಅವರಿಬ್ಬರೂ ಅನ್ಯೋನ್ಯರ ಮೇಲೆ ಕ್ರುದ್ಧರಾಗಿ ಘೋರವಾಗಿ ರಣದಲ್ಲಿ ಹೊಡೆದಾಡಿದರು.

ರಣದಲ್ಲಿ ರಭಸನಾಗಿದ್ದ ಶಂಖನು ರಭಸನಾಗಿದ್ದ ಸೌಮದತ್ತಿಯನ್ನು ಎದುರಿಸಿ “ನಿಲ್ಲು! ನಿಲ್ಲು!” ಎಂದು ಹೇಳಿದನು. ಆ ವೀರನು ರಣದಲ್ಲಿ ಅವನ ಬಲಭುಜವನ್ನು ಸೀಳಿದನು. ಆಗ ಸೌಮದತ್ತಿಯು ಶಂಖನನ್ನು ಹೆಗಲ ಮೇಲೆ ಹೊಡೆದನು. ಆ ಇಬ್ಬರು ದರ್ಪದವರ ನಡುವಿನ ಯುದ್ಧವು ಬೇಗನೇ ವೃತ್ರ-ವಾಸವರ ನಡುವಿನ ಸಮರದಂತೆ ಘೋರ ರೂಪವನ್ನು ತಾಳಿತು.

ಕ್ರುದ್ಧ ರೂಪಿ ಮಹಾರಥ ಧೃಷ್ಟಕೇತುವು ಕ್ರುದ್ಧ ಬಾಹ್ಲೀಕನನ್ನು ರಣದಲ್ಲಿ ಎದುರಿಸಿದನು. ಆಗ ಬಾಹ್ಲೀಕನು ಅಮರ್ಷಣ ಧೃಷ್ಟಕೇತುವನ್ನು ಬಹಳ ಶರಗಳಿಂದ ಗಾಯಗೊಳಿಸಿ ಸಿಂಹನಾದಗೈದನು. ಸಂಕ್ರುದ್ಧನಾದ ಚೇದಿರಾಜನಾದರೋ ಬಾಹ್ಲೀಕನನ್ನು ಒಂಭತ್ತು ಶರಗಳಿಂದ ಹೊಡೆದನು. ಮದಿಸಿದ ಆನೆಯು ಮದಿಸಿದ ಆನೆಯೊಂದಿಗೆ ಹೋರಾಡುವಂತೆ ಎಬ್ಬರೂ ಸಮರದಲ್ಲಿ ಹೋರಾಡಿದರು. ಅವರಿಬ್ಬರೂ ಕ್ರುದ್ಧರಾಗಿ ಮತ್ತೆ ಮತ್ತೆ ಗರ್ಜಿಸುತ್ತಿದ್ದರು. ಅಂಗಾರಕ ಬುಧರಂತೆ ಸಂಕ್ರುದ್ಧರಾಗಿ ಪರಸ್ಪರ ಹೋರಾಡಿದನು.

ಶಕ್ರನು ಬಲನನ್ನು ಹೇಗೋ ಹಾಗೆ ಕ್ರೂರಕರ್ಮಿ ಘಟೋತ್ಕಚನು ಕ್ರೂರಕರ್ಮಗಳ ರಾಕ್ಷಸ ಅಲಂಬುಸನನ್ನು ಎದುರಿಸಿದನು. ಸಂಕ್ರುದ್ಧನಾದ ಘಟೋತ್ಕಚನು ಆ ಮಹಾಬಲ ರಾಕ್ಷಸನನ್ನು ತೊಂಭತ್ತು ತೀಕ್ಷ್ಣ ಸಾಯಕಗಳಿಂದ ಚುಚ್ಚಿದನು. ಅಲಂಬುಸನಾದರೋ ಮಹಾಬಲ ಭೈಮಸೇನಿಯನ್ನು ಬಹಳ ಸನ್ನತಪರ್ವ ಶರಗಳಿಂದ ತಡೆದನು. ಶರಗಳಿಂದ ಚುಚ್ಚಲ್ಪಟ್ಟು ಯುದ್ಧಮಾಡುತ್ತಿರುವ ಅವರಿಬ್ಬರೂ ದೇವಾಸುರರ ಯುದ್ಧದಲ್ಲಿ ಮಹಾಬಲರಾದ ಬಲ-ಶಕ್ರರಂತೆ ಶೋಭಿಸಿದರು.

ಬಲಶಾಲಿ ಶಿಖಂಡಿಯು ದ್ರೌಣಿಯನ್ನು ಎದುರಿಸಿದನು. ಅಶ್ವತ್ಥಾಮನು ಶಿಖಂಡಿಯನ್ನು ಸುತೀಕ್ಷ್ಣ ನರಾಚದಿಂದ ಚೆನ್ನಾಗಿ ಹೊಡೆದು ಕಂಪಿಸುವಂತೆ ಮಾಡಿದನು. ಆಗ ಶಿಖಂಡಿಯೂ ಕೂಡ ದ್ರೋಣಪುತ್ರನನ್ನು ಸುಪೀತವಾದ, ತೀಕ್ಷ್ಣ ನಿಶಿತ ಸಾಯಕಗಳಿಂದ ಹೊಡೆದನು. ಆಗ ಅವರಿಬ್ಬರೂ ಹೋರಾಟದಲ್ಲಿ ಬಹುವಿಧದ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.

ಶೂರ ಭಗದತ್ತನನ್ನು ವಾಹಿನೀಪತಿ ವಿರಾಟನು ತ್ವರೆಮಾಡಿ ಎದುರಿಸಿ ಯುದ್ಧವನ್ನು ಪ್ರಾರಂಭಿಸಿದನು. ಭಗದತ್ತನ ಶರವರ್ಷಗಳಿಂದ ಪೀಡಿತನಾದ ವಿರಾಟನು ಸಂಕ್ರುದ್ಧನಾಗಿ ಪರ್ವತದ ಮೇಲೆ ಮೋಡವು ಮಳೆ ಸುರಿಸುವಂತೆ ಶರಗಳ ಮಳೆಯನ್ನು ಸುರಿಸಿದನು. ತಕ್ಷಣವೇ ಭಗದತ್ತನು ವಿರಾಟನನ್ನು ಉದಯಿಸುತ್ತಿರುವ ಸೂರ್ಯನನ್ನು ಮೋಡಗಳು ಹೇಗೋ ಹಾಗೆ ಮುಚ್ಚಿಬಿಟ್ಟನು.

ಶಾರದ್ವತ ಕೃಪನು ಕೈಕೇಯ ಬೃಹತ್ಕ್ಷತ್ರನನ್ನು ಎದರಿಸಿ ಬಂದನು. ಅವನನ್ನು ಕೃಪನು ಶರವರ್ಷದಿಂದ ಮುಸುಕು ಹಾಕಿದನು. ಕೃದ್ಧನಾದ ಕೇಕಯನು ಗೌತಮನನ್ನು ಶರವೃಷ್ಟಿಯಿಂದ ತುಂಬಿಸಿದನು. ಅವರು ಅನ್ಯೋನ್ಯರ ಕುದುರೆಗಳನ್ನು ಕೊಂದು ಧನುಸ್ಸುಗಳನ್ನು ಕತ್ತರಿಸಿದರು. ವಿರಥರಾದ ಆ ಇಬ್ಬರು ಅಮರ್ಷಣರು ಖಡ್ಗಯುದ್ಧದಲ್ಲಿ ತೊಡಗಿದರು. ಅವರ ಯುದ್ಧವು ಘೋರರೂಪವೂ ಸುದಾರುಣವೂ ಆಗಿದ್ದಿತು.

ರಾಜ ದ್ರುಪದನಾದರೋ ಹೃಷ್ಟರೂಪ ಸೈಂಧವ ಜಯದ್ರಥನನ್ನು ಎದುರಿಸಿದನು. ರಾಜ ಸೈಂಧವಕನು ದ್ರುಪದನನ್ನು ಮೂರು ವಿಶಿಖಿಗಳಿಂದ ಹೊಡೆದನು. ಅವನೂ ಕೂಡ ಅವನನ್ನು ಪ್ರತಿಘಾತಿಗೊಳಿಸಿದನು. ಶುಕ್ರ-ಅಂಗಾರಕರಂತಿರುವ ಅವರಿಬ್ಬರ ನಡುವೆ ಘೋರರೂಪದ ಸುದಾರುಣ, ಆದರೆ ನೋಡುವವರಿಗೆ ಸಂತೋಷವನ್ನುಂಟುಮಾಡುವ ಯುದ್ಧವು ನಡೆಯಿತು.

ಧಾರ್ತರಾಷ್ಟ್ರ ವಿಕರ್ಣನಾದರೋ ಮಹಾಬಲ ಸುತಸೋಮನನೊಂದಿಗೆ ವೇಗದ ಅಶ್ವಗಳಿಂದ ಯುದ್ಧವನ್ನು ಪ್ರಾರಂಭಿಸಿದನು. ಆದರೆ ಶರಗಳಿಂದ ಗಾಯಗೊಳಿಸಿದರೂ ವಿಕರ್ಣನು ಸುತಸೋಮನನ್ನು ಅಲುಗಾಡಿಸಲಾಗಲಿಲ್ಲ. ಸುತಸೋಮನೂ ವಿಕರ್ಣನನ್ನು ಹಾಗೆ ಮಾಡಲು ಆಗಲಿಲ್ಲ. ಅದೊಂದು ಅದ್ಭುತವಾಗಿತ್ತು.

ಮಹಾರಥ ಪರಾಕ್ರಮೀ ಚೇಕಿತಾನನು ಪಾಂಡವರಿಗೋಸ್ಕರ ಕೃದ್ಧನಾಗಿ ನರವ್ಯಾಘ್ರ ಸುಶರ್ಮನನ್ನು ಎದುರಿಸಿದನು. ಸುಶರ್ಮನಾದರೋ ಮಹಾರಥ ಚೇಕಿತಾನನನ್ನು ಮಹಾ ಶರವರ್ಷದಿಂದ ತಡೆದನು. ಚೀಕಿತಾನನಾದರೋ ಸಂರಬ್ಧನಾಗಿ ಸುಶರ್ಮನನ್ನು ಮಹಾಮೇಘವು ಪರ್ವತವನ್ನು ಮುಚ್ಚುವಂತೆ ಬಾಣಗಳಿಂದ ಮುಚ್ಚಿದನು.

ಪರಾಕ್ರಮೀ ಶಕುನಿಯು ಪರಾಕ್ರಾಂತ ಪ್ರತಿವಿಂಧ್ಯನನ್ನು ಮದಿಸಿದ ಆನೆಯು ಮದಿಸಿದ ಆನೆಯನ್ನು ಹೇಗೋ ಹಾಗೆ ಎದುರಿಸಿದನು. ಸಂಕ್ರುದ್ಧನಾದ ಯುಧಿಷ್ಠಿರನ ಮಗನಾದರೋ ಸಂಗ್ರಾಮದಲ್ಲಿ ನಿಶಿತಬಾಣಗಳಿಂದ ಮಘವತನು ದಾನವನನ್ನು ಹೊಡೆಯುವಂತೆ ಸೌಬಲನನ್ನು ಗಾಯಗೊಸಿದನು. ಆಹವದಲ್ಲಿ ಮಹಾಪ್ರಾಜ್ಞ ಶಕುನಿಯು ಪ್ರತಿವಿಂಧ್ಯನೊಡನೆ ಪ್ರತಿಯುದ್ಧವನ್ನು ಮಾಡಿ ಅವನನ್ನು ಸಂನತಪರ್ವ ಶರಗಳಿಂದ ಗಾಯಗೊಳಿಸಿದನು.

ಕಾಂಬೋಜರ ಮಹಾರಥ ಸುದಕ್ಷಿಣನನ್ನಾದರೋ ಪರಾಕ್ರಾಂತ ಶ್ರುತಕರ್ಮನು ಸಂಯುಗದಲ್ಲಿ ಎದುರಿಸಿದನು. ಸುದಕ್ಷಿಣನು ವೈನಾಕಪರ್ವತದಂತಿದ್ದ ಮಹಾರಥ ಸಹದೇವನ ಮಗನನ್ನು ಹೊಡೆದೂ ಅಲುಗಾಡಿಸಲಕ್ಕಾಗಲಿಲ್ಲ. ಆಗ ಶ್ರುತಕರ್ಮನು ಕ್ರುದ್ಧನಾಗಿ ಮಹಾರಥ ಕಾಂಬೋಜನನ್ನು ಬಹಳ ಶರಗಳಿಂದ ಚುಚ್ಚಿ ಎಲ್ಲಕಡೆ ಗಾಯಗೊಳಿಸಿದನು.

ಸಂಕ್ರುದ್ಧನಾದ ಇರವಾನನು ಪ್ರಯತ್ನಮಾಡಿ ಅಮರ್ಷಣ ಶ್ರುತಾಯುಷನೊಂದಿಗೆ ಪ್ರತಿಯುದ್ಧವನ್ನು ಮಾಡಿದನು. ಅರ್ಜುನನ ಮಹಾರಥ ಮಗನು ಸಮರದಲ್ಲಿ ಅವನ ಕುದುರೆಗಳನ್ನು ಕೊಂದು ಮಹಾ ಗರ್ಜನೆಯನ್ನು ಮಾಡಲು ಸೇನೆಯು ಅವನನ್ನು ಮೆಚ್ಚಿತು. ಆಗ ಅವನೂ ಸಂಕ್ರುದ್ಧನಾಗಿ ಸಮರದಲ್ಲಿ ಫಾಲ್ಗುನಿಯ ಕುದುರೆಗಳನ್ನು ಗದೆಯ ತುದಿಯಿಂದ ಹೊಡೆದುರುಳಿಸಿದನು. ಆಗ ಯುದ್ಧವು ಮುಂದುವರೆಯಿತು.

ಅವಂತಿಯ ವಿಂದಾನುವಿಂದರು ಸೇನೆ ಮತ್ತು ಮಕ್ಕಳೊಂದಿಗೆ ಮಹಾರಥ ವೀರ ಕುಂತಿಭೋಜನನ್ನು ಎದುರಿಸಿದರು. ಅಲ್ಲಿ ಮಹಾಸೇನೆಯೊಂದಿಗೆ ಸ್ಥಿರವಾಗಿದ್ದುಕೊಂಡು ಯುದ್ಧಮಾಡುತ್ತಿರುವ ಅವಂತಿಯವರ ಅದ್ಭುತ ಪರಾಕ್ರಮವು ಕಾಣಿಸಿತು. ಅನುವಿಂದನು ಗದೆಯಿಂದ ಕುಂತಿಭೋಜನನ್ನು ಹೊಡೆದನು. ಆಗ ತಕ್ಷಣವೇ ಕುಂತಿಭೋಜನು ಅವನನ್ನು ಶರವ್ರಾತಗಳಿಂದ ಮುಚ್ಚಿದನು. ಕುಂತಿಭೋಜನ ಮಗನೂ ಕೂಡ ವಿಂದನನ್ನು ಸಾಯಕಗಳಿಂದ ಹೊಡೆದನು. ಅಗ ಅವನು ಪ್ರತಿಯಾಗಿ ಹೊಡೆಯಲು ಅಲ್ಲಿ ಅದ್ಭುತವಾಯಿತು.

ಕೇಕಯ ಸಹೋದರರೈವರು ಗಾಂಧಾರರ ಐವರನ್ನು ಸಸೈನ್ಯದೊಂದಿಗೆ ಅವರ ಸೇನೆಯೊಂದಿಗೆ ಯುದ್ಧಮಾಡತೊಡಗಿದರು. ಧಾರ್ತರಾಷ್ಟ್ರ ವೀರಬಾಹುವು ರಥಸತ್ತಮ ವೈರಾಟಿ ಉತ್ತರನನೊಂದಿಗೆ ನಿಶಿತ ಶರಗಳಿಂದ ಯುದ್ಧಮಾಡಿದನು. ಉತ್ತರನೂ ಕೂಡ ಆ ಧೀರನನ್ನು ನಿಶಿತ ಬಾಣಗಳಿಂದ ಹೊಡೆದನು. ಸಮರದಲ್ಲಿ ಚೇದಿರಾಜನು ಉಲೂಕನನ್ನು ಎದುರಿಸಿದನು. ಉಲೂಕನೂ ಕೂಡ ಅವನು ನಿಶಿತ ಲೋಮವಾಹಿ ಬಾಣಗಳಿಂದ ಹೊಡೆದನು. ಸಂಕ್ರುದ್ಧರಾಗಿ ಅನ್ಯೋನ್ಯರನ್ನು ಗಾಯಗೊಳಿಸುತ್ತಿರುವ ಆ ಇಬ್ಬರು ಅಪರಾಜಿತರ ಯುದ್ಧವು ಘೋರರೂಪವನ್ನು ತಾಳಿತು.

ಹೀಗೆ ಕೌರವರ ಮತ್ತು ಪಾಂಡವರ ನಡುವೆ ಸಹಸ್ರಾರು ರಥ-ಆನೆ-ಕುದುರೆ-ಪದಾತಿಗಳ ದ್ವಂದ್ವಯುದ್ಧವೂ ಸಂಕುಲಯುದ್ಧವೂ ನಡೆಯಿತು. ಒಂದು ಕ್ಷಣ ಆ ಯುದ್ಧವು ನೋಡಲು ಮಧುರವಾಗಿತ್ತು. ಅನಂತರ ಉನ್ಮತ್ತವಾದಂತೆ ಏನೂ ತಿಳಿಯಲಿಲ್ಲ. ಸಮರದಲ್ಲಿ ಗಜಾರೂಡರು ಗಜಾರೂಡರೊಡನೆ, ರಥಿಗಳು ರಥಿಗಳೊಂದಿಗೆ, ಅಶ್ವಾರೋಹಿಗಳು ಅಶ್ವಾರೋಹಿಗಳೊಂದಿಗೆ, ಮತ್ತು ಪದಾತಿಗಳು ಪದಾತಿಗಳೊಂದಿಗೆ ಕಾದಾಡಿದರು. ಸಮರದಲ್ಲಿ ಶೂರರು ಪರಸ್ಪರರೊಂದಿಗೆ ಹೋರಾಡುತ್ತಿರಲು ಯುದ್ಧವು ತುಂಬಾ ದುರ್ಧರ್ಷವೂ ವ್ಯಾಕುಲವೂ ಆಯಿತು. ಅಲ್ಲಿ ಸೇರಿದ್ದ ದೇವ-ಋಷಿಗಳೂ, ಸಿದ್ಧ-ಚಾರಣರೂ ದೇವಾಸುರರ ರಣಕ್ಕೆ ಸಮನಾದ ಆ ಘೋರ ರಣಯುದ್ಧವನ್ನು ನೋಡಿದರು. ಆಗ ಸಹಸ್ರಾರು ಆನೆಗಳೂ, ರಥಗಳೂ, ಅಶ್ವಗಳೂ ಮತ್ತು ಮನುಷ್ಯರೂ ತಮ್ಮ ಸ್ವಭಾವಗಳಲ್ಲಿ ವಿಪರೀತರಾದಂತೆ ಕಂಡರು. ಅಲ್ಲಲ್ಲಿಯೇ ರಥ-ಆನೆ-ಪದಾತಿಗಳು ಪುನಃ ಪುನಃ ಅದೇ ಸ್ಥಳದಲ್ಲಿಯೇ ಯುದ್ಧಮಾಡುತ್ತಿರುವಂತೆ ತೋರುತ್ತಿತ್ತು.

ಸಂಕುಲಯುದ್ಧ

ಮಕ್ಕಳು ತಂದೆಯನ್ನು, ತಂದೆಯರು ತಮ್ಮ ಔರಸ ಪುತ್ರರನ್ನು, ಸಹೋದರರು ಸಹೋದರರನ್ನು, ಅಳಿಯರು ಮಾವಂದಿರನ್ನು, ಮಾವಂದಿರು ಅಳಿಯರನ್ನು, ಸಖನು ಸಖನನ್ನು ಗುರುತಿಸಲಿಲ್ಲ. ಪಾಂಡವರು ಕುರುಗಳೊಂದಿಗೆ ಆವಿಷ್ಟರಾದವರಂತೆ ಯುದ್ಧಮಾಡಿದರು. ನೊಗಗಳು ನೊಗಗಳಿಗೆ ಹೊಡೆದು ಕೆಲವು ನರವ್ಯಾಘ್ರರು ರಥಗಳು ಮುರಿದು ಕೆಳಗೆ ಬಿದ್ದರು. ರಥದ ಚಕ್ರಗಳೊಂದಿಗೆ ರಥಚಕ್ರಗಳು ತಾಗಿದವು. ಇನ್ನು ಕೆಲವರು ಗುಂಪು ಗುಂಪಾಗಿ ಪರಸ್ಪರರನ್ನು ಕೊಲ್ಲಲು ಹೋರಾಡಿದರು. ಕೆಲವು ರಥಗಳು ಇತರ ರಥಗಳಿಂದ ತಡೆಗಟ್ಟಲ್ಪಟ್ಟು ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಮದವೊಡೆದ ಮಹಾಕಾಯ ಗಜಗಳು ಗಜಗಳನ್ನು ಎದುರಿಸಿ ಸಿಟ್ಟಿಗೆದ್ದು ಕ್ರುದ್ಧರಾಗಿ ತಮ್ಮ ದಂತಗಳಿಂದ ಪರಸ್ಪರರನ್ನು ಇರಿದವು. ತೋಮರ ಪತಾಕೆಗಳನ್ನುಳ್ಳ ಆನೆಗಳು ಶತ್ರುಗಳ ಆನೆಗಳನ್ನು ಎದುರಿಸಿ, ವೇಗದಿಂದ ಮಹಾಗಜಗಳ ದಂತಗಳಿಂದ ಸೀಳಲ್ಪಟ್ಟು ಪರಮ ನೋವಿನಿಂದ ಕೂಗಿದವು. ಅಂಕುಶಗಳಿಂದ ಉತ್ತಮ ಶಿಕ್ಷಣವನ್ನು ಪಡೆದ, ಚೆನ್ನಾಗಿ ನಡೆದುಕೊಳ್ಳುತ್ತಿದ್ದ, ಮದವೊಡೆಯದೇ ಇದ್ದ ಆನೆಗಳು ಮದವೊಡೆದ ಆನೆಗಳನ್ನು ಎದುರಾದವು. ಕೆಲವು ಮದವೊಡೆದ ಗಜಗಳೂ ಕೂಡ ಇತರ ಮಹಾಗಜಗಳನ್ನು ಎದುರಿಸಿ ಕ್ರೌಂಚಪಕ್ಷಿಗಳಂತೆ ರೋದಿಸುತ್ತಾ ಅಲ್ಲಲ್ಲಿ ಸ್ವತಂತ್ರರಾಗಿ ಓಡುತ್ತಿದ್ದವು. ಚೆನ್ನಾಗಿ ಪಳಗಿದ, ಕರಟವೊಡೆದು ಸುರಿಯುತ್ತಿದ್ದ ಮದಿಸಿದ ವರವಾರಣ ಆನೆಗಳು ಖಡ್ಗ, ತೋಮರ, ನಾರಾಚಗಳಿಂದ ಹೊಡೆಯಲ್ಪಟ್ಟು ತುಂಡು ತುಂಡಾಗಿ ಕೆಳಗೆ ಉರುಳಿ ಅಸುವನ್ನು ನೀಗಿದವು. ಕೆಲವು ಭೈರವ ಕೂಗನ್ನು ಕೂಗುತ್ತಾ ದಿಕ್ಕಾಪಾಲಾಗಿ ಓಡಿದವು. ವಿಶಾಲ ಎದೆಯ, ಪ್ರಹಾರಿ ಗಜಗಳ ಪಾದರಕ್ಷಕರಾದರೋ ಖಡ್ಗ, ಧನುಸ್ಸು, ಹೊಳೆಯುತ್ತಿರುವ ಪರಶು, ಗದೆ, ಮುಸಲ, ಭಿಂಡಿಪ, ತೋಮರ, ಆಯಸ, ಪರಿಘ, ಹರಿತವಾದ ಹೊಳೆಯುತ್ತಿರುವ ತ್ರಿಶೂಲಗಳನ್ನು ಹಿಡಿದು ಕ್ರುದ್ಧರಾಗಿ ಅಲ್ಲಿಂದಲ್ಲಿಗೆ ಓಡುತ್ತಾ ಪರಸ್ಪರರನ್ನು ಕೊಲ್ಲುತ್ತಿರುವುದು ಕಂಡುಬಂದಿತು.

ಆ ಶೂರರು ಅನ್ಯೋನ್ಯರನ್ನು ಹೊಡೆದು ಕೊಲ್ಲುತ್ತಿರುವಾಗ ನರರಕ್ತದಿಂದ ತೋಯ್ದ ಆ ಆಯುಧಗಳು ಪ್ರಕಾಶಮಾನವಾಗಿ ಹೊಳೆಯುತ್ತಿವೆಯೋ ಎನ್ನುವಂತೆ ಕಂಡಿವು. ವೀರಬಾಹುಗಳು ಖಡ್ಗಗಳನ್ನು ಬೀಸುವ ಮತ್ತು ಶತ್ರುಗಳ ಮರ್ಮಾಂಗಗಳ ಮೇಲೆ ಬೀಳಿಸುವ ಶಬ್ಧವು ಜೋರಾಗಿ ಕೇಳತೊಡಗಿತು. ಗದೆ-ಮುಸಲಗಳಿಂದ ಪುಡಿಯಾದ, ಉತ್ತಮ ಖಡ್ಗಗಳಿಂದ ತುಂಡಾದ, ಆನೆಗಳ ದಂತಗಳಿಂದ ಇರಿಯಲ್ಪಟ್ಟ, ಆನೆಗಳಿಂದ ತುಳಿಯಲ್ಪಟ್ಟ ನರರ ಆಕ್ರೋಶವು ಅಲ್ಲಲ್ಲಿ ಬೇರೆ ಬೇರೆಯಾಗಿ ಕೇಳಿಬಂದವು. ಆ ದಾರುಣ ಕೂಗು ಪ್ರೇತಗಳ ಕೂಗಿನಂತಿತ್ತು. ಚಾಮರ ಪೀಡಧಾರಿ ಹಯಾರೋಹಿ ಅಶ್ವಗಳೂ ಕೂಡ ಹಂಸಗಳಂತೆ ಮಹಾವೇಗದಿಂದ ಪರಸ್ಪರರನ್ನು ಆಕ್ರಮಿಸಿದವು. ಅವರು ಪ್ರಯೋಗಿಸಿದ ಬಂಗಾರದಿಂದ ವಿಭೂಷಿತ ಮಹಾಪ್ರಾಸಗಳು, ಶುಭ್ರವಾದ ತೀಕ್ಷ್ಣ ಬಾಣಗಳು ಹಾವುಗಳಂತೆ ಹಾರಾಡತೊಡಗಿದವು. ಕೆಲವು ಅಶ್ವಾರೋಹಿಗಳು ವೇಗವಾಗಿ ಹೋಗುತ್ತಿರುವಾಗ ಮಹಾ ರಥಗಳಲ್ಲಿರುವ ವೀರ ರಥಿಗಳ ಶಿರಗಳನ್ನು ಕತ್ತರಿಸಿದರು. ಬಾಣಗಳ ಗೋಚರದಲ್ಲಿ ಬಂದ ಬಹಳಷ್ಟು ಅಶ್ವಾರೋಹಿಗಳನ್ನೂ ಕೂಡ ರಥದಲ್ಲಿರುವವರು ಭಲ್ಲ-ಸಂನತಪರ್ವಗಳಿಂದ ಸಂಹರಿಸಿದರು. ಹೊಸದಾಗಿ ಉದಯಿಸುತ್ತಿದ್ದ ಮೇಘಗಳಂತಿದ್ದ ಕನಕಭೂಷಣ ಮದಿಸಿದ ಆನೆಗಳು ಕುದುರೆಗಳನ್ನು ತಮ್ಮ ಕಾಲುಗಳಿಂದಲೇ ತುಳಿದು ಸಾಯಿಸಿದವು. ಕುಂಭಗಳ ಮೇಲೆ ಮತ್ತು ಪಾರ್ಶ್ವಗಳಲ್ಲಿ ಪ್ರಾಸಗಳಿಂದ ಪೆಟ್ಟುತಿಂದ ಕೆಲವು ಆನೆಗಳು ಪರಮ ನೋವಿನಿಂದ ಕೂಗಿದವು. ಆ ಗೊಂದಲದಲ್ಲಿ ಕೆಲವು ವರವಾರಣಗಳು ಅಶ್ವಾರೋಹಿಗಳನ್ನೂ ಅಶ್ವಗಳನ್ನೂ ಮೇಲೆ ಹಾರಿಸಿ ತಕ್ಷಣವೇ ನೆಲಕ್ಕೆ ಹಾಕಿ ಭೈರವ ಕೂಗನ್ನು ಕೂಗುತ್ತಿದ್ದವು. ಅಶ್ವಾರೋಹಿಗಳೊಡನೆ ಅಶ್ವಗಳನ್ನೂ ದಂತಗಳಿಂದ ಮೇಲೆತ್ತಿ ಕೆಳಗೆ ಹಾಕಿ ಆನೆಗಳು ಧ್ವಜಗಳೊಂದಿಗೆ ರಥಗಳನ್ನೂ ಧ್ವಂಸಮಾಡಿ ನಡೆದವು. ಮದವು ಸೋರುತ್ತಿದ್ದ ಕೆಲವು ಮದಿಸಿದ ಮಹಾಗಜಗಳು ಅಶ್ವಾರೋಹಿಗಳೊಡನೆ ಕುದುರೆಗಳನ್ನೂ ತಮ್ಮ ಸೊಂಡಿಲು ಕಾಲುಗಳಿಂದ ಸಂಹರಿಸಿದವು. ಕೆಲವು ಆನೆಗಳು ತಮ್ಮ ಸೊಂಡಿಲುಗಳಿಂದ ಕುದುರೆಗಳೊಂದಿಗೆ ರಥಗಳನ್ನೂ ಎಳೆದುಕೊಂಡು ಎಲ್ಲ ದಿಕ್ಕುಗಳಿಗೆ ಕೂಗುತ್ತಾ ಓಡಿ ಹೋದವು. ಶುಭ್ರವಾದ ತೀಕ್ಷ್ಣ ಆಶುಗಗಳು ಹಾವುಗಳಂತೆ ಹಾರಾಡಿ ಮನುಷ್ಯರ ಮತ್ತು ಕುದುರೆಗಳ ಲೋಹದ ಕವಚಗಳನ್ನೂ ಭೇದಿಸಿ ದೇಹಗಳನ್ನು ಚುಚ್ಚಿದವು.

ವೀರಬಾಹುಗಳಿಂದ ಪ್ರಯೋಗಿಸಲ್ಪಟ್ಟ ಶುಭ್ರ ಶಕ್ತ್ಯಾಯುಧಗಳು ಅಲ್ಲಲ್ಲಿ ಮಹಾ ಉಲ್ಕೆಗಳಂತೆ ಘೋರವಾಗಿ ಬೀಳುತ್ತಿದ್ದವು. ಚಿರತೆ ಮತ್ತು ಹುಲಿಯ ಚರ್ಮಗಳಿಂದ ಮಾಡಿದ ಚೀಲಗಳಲ್ಲಿ ಇರಿಸಿದ್ದ ವಿಮಲ ಖಡ್ಗಗಳಿಂದ ಶತ್ರುಗಳನ್ನು ರಣದಲ್ಲಿ ಸಂಹರಿಸಿದರು. ಒಂದು ಭಾಗ ಕತ್ತರಿಸಲ್ಪಟ್ಟವರೂ ಕೂಡ ಕ್ರುದ್ಧರಾಗಿ ಖಡ್ಗ-ಚರ್ಮ-ಪರಶುಗಳಿಂದ ಶತ್ರುಗಳನ್ನು ಹೊಡೆಯುತ್ತಿರುವುದು ಕಂಡುಬಂದಿತು. ಕೆಲವರು ಶಕ್ತಿಯಿಂದ ಸೀಳಲ್ಪಟ್ಟರೆ ಕೆಲವರು ಪರಶುವಿನಿಂದ ತುಂಡಾದರು. ಕೆಲವರು ಆನೆಗಳ ತುಳಿತಕ್ಕೆ ಸಿಲುಕಿದರೆ ಇನ್ನು ಕೆಲವರು ಕುದುರೆಗಳಿಂದ ಒದೆಯಲ್ಪಟ್ಟು ಬಿದ್ದಿದ್ದರು. ಕೆಲವರು ರಥಚಕ್ರಕ್ಕೆ ಸಿಲುಕಿ ತುಂಡಾದರೆ ಕೆಲವರು ನಿಶಿತ ಬಾಣಗಳಿಂದ ತುಂಡಾಗಿದ್ದರು. ಅಲ್ಲಲ್ಲಿ ನರರು ಬಾಂಧವರನ್ನು ಕೂಗಿ ಕರೆಯುತ್ತಿದ್ದರು. ಅಂಗಗಳನ್ನು ಕಳೆದುಕೊಂಡ, ದೇಹಗಳು ತುಂಡಾದ, ಬಾಹುಗಳೂ ಭುಜಗಳೂ ತುಂಡಾಗಿದ್ದ, ಪಕ್ಕೆಗಳು ಸೀಳಿಹೋದ ಅವರು ಕೆಲವರು ಜೀವವನ್ನು ಉಳಿಸಿಕೊಳ್ಳಲು ಬಯಸಿ ತಂದೆಯರನ್ನು, ಕೆಲವರು ಮಕ್ಕಳನ್ನು, ಕೆಲವರು ಬಾಂಧವರೊಂದಿಗೆ ಸಹೋದರರನ್ನು, ಮಾವಂದಿರನ್ನು, ಅಳಿಯರನ್ನು, ಇತರರನ್ನೂ ಕೂಗಿ ಕರೆಯುವ ಆಕ್ರಂದನವು ಎಲ್ಲೆಡೆಯೂ ಕಾಣಿಸಿತು. ಕೆಲವರು ಬಾಯಾರಿಕೆಯಿಂದ ಬಳಲಿ, ಕ್ಷೀಣಶಕ್ತಿಯುಳ್ಳವರಾಗಿ, ಯುದ್ಧದಲ್ಲಿ ಭೂಮಿಯ ಮೇಲೆ ಬಿದ್ದು ನೀರನ್ನೇ ಯಾಚಿಸುತ್ತಿದ್ದರು. ರಕ್ತದ ಪ್ರವಾಹದಿಂದ ತೋಯ್ದು ಹೋಗಿದ್ದ ಮತ್ತು ನೋವಿನಿಂದ ಬಹಳ ಸಂಕಟಪಡುತ್ತಿದ್ದವರು ತಮ್ಮನ್ನು ತಾವೇ ಮತ್ತು ಅಲ್ಲಿದ್ದ ಧಾರ್ತರಾಷ್ಟ್ರರನ್ನೂ ಬಹುವಾಗಿ ನಿಂದಿಸಿದರು. ಇತರ ಶೂರ ಕ್ಷತ್ರಿಯರು ಪರಸ್ಪರರ ಮೇಲೆ ವೈರವನ್ನೇ ಸಾಧಿಸುತ್ತಾ ಶಸ್ತ್ರಗಳನ್ನು ಬಿಡುತ್ತಿರಲಿಲ್ಲ. ನೋವಿನಿಂದ ಅಳುತ್ತಲೂ ಇರಲಿಲ್ಲ. ಕೆಲವರು ಯುದ್ಧಮಾಡುವುದರಲ್ಲಿಯೇ ಸಂತುಷ್ಟರಾಗಿ ಪರಸ್ಪರರನ್ನು ಪೀಡಿಸುತ್ತಿದ್ದರು. ಹಲ್ಲು ಕಟ-ಕಟಾಯಿಸಿ ಪ್ರದರ್ಶಿಸುತ್ತಿದ್ದರು. ಕೋಪದಿಂದ ಅವುಡುಕಚ್ಚುತ್ತಿದ್ದರು. ಗಂಟಿಕ್ಕಿದ ಹುಬ್ಬುಗಳ ಕ್ರೂರದೃಷ್ಟಿಯಿಂದ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಇನ್ನು ಕೆಲವು ದೃಢಸತ್ತ್ವರು ಮಹಾಬಲಶಾಲಿಗಳು ಶರಪೀಡಿತರಾಗಿ ಗಾಯಗಳಿಂದ ಆರ್ತರಾಗಿ ಕಷ್ಟದಲ್ಲಿದ್ದರೂ ಕೂಡ ಮೌನಿಗಳಾಗಿ ಅದನ್ನು ಸಹಿಸಿಕೊಂಡಿದ್ದರು.

ಅನ್ಯ ಶೂರರು ವಿರಥರಾಗಿ ಇನ್ನೊಂದು ರಥವನ್ನೇರಲು ಪ್ರಾರ್ಥಿಸಿಕೊಳ್ಳುವಾಗಲೇ, ಸಂಯುಗದಲ್ಲಿ ಓಡಿಬರುತ್ತಿದ್ದ ವರವಾರಣಗಳಿಂದ ಬೀಳಿಸಲ್ಪಟ್ಟು ಕಾಲಿಗೆ ಸಿಕ್ಕಿ ಮುದ್ದೆಯಾಗುತ್ತಿದ್ದರು. ಆಗ ಅವರು ಹೂಗಳಿಂದ ಕೂಡಿದ ಕಿಂಶುಕವೃಕ್ಷಗಳಂತೆ ಶೋಭಿಸುತ್ತಿದ್ದರು. ಆ ವೀರವರಕ್ಷಯಕಾರಕ ಮಹಾಭಯಂಕರ ಯುದ್ಧವು ನಡೆಯುತ್ತಿರಲು ಎರಡೂ ಸೇನೆಗಳಿಂದ ಬಹಳ ಭೈರವ ಕೂಗುಗಳು ಕೇಳಿಬರುತ್ತಿದ್ದವು. ರಣದಲ್ಲಿ ತಂದೆಯು ಪುತ್ರನನ್ನು, ಪುತ್ರನು ತಂದೆಯನ್ನು, ಅಳಿಯನು ಮಾವನನ್ನು, ಮಾವನು ಅಳಿಯನನ್ನು, ಸಖನನ್ನು ಸಖನು, ಸಂಬಂಧಿಯು ಬಾಂಧವನನ್ನು ಕೊಂದರು. ಹೀಗೆ ಅಲ್ಲಿ ಕುರುಗಳು ಪಾಂಡವರೊಂದಿಗೆ ಯುದ್ಧ ಮಾಡಿದರು. ಆ ಮರ್ಯಾದೆಗಳಿಲ್ಲದ ಮಹಾಹವದಲ್ಲಿ ಭೀಷ್ಮನ ಬಳಿಬಂದ ಪಾರ್ಥರ ಸೇನೆಯು ಭಯದಿಂದ ಕಂಪಿಸಿತು. ಆಗ ಐದು ನಕ್ಷತ್ರಗಳ ಮತ್ತು ತಾಲವೃಕ್ಷ ಚಿಹ್ನೆಯ  ಧ್ವಜಪಟವು ಬೆಳ್ಳಿಯ ಧ್ವಜಕಂಪದಲ್ಲಿ ಹಾರಾಡುತ್ತಿರಲು ಮಹಾಬಾಹು ಭೀಷ್ಮನು ಆ ಮಹಾರಥದಲ್ಲಿ ಮೇರುಪರ್ವತದಲ್ಲಿ ಚಂದ್ರಮನಂತೆ ಪ್ರಕಾಶಿಸಿದನು.

ಅಭಿಮನ್ಯು ಪರಾಕ್ರಮ

ಆ ದಿನದ ದಾರುಣ ಪೂರ್ವಾಹ್ಣವು ಕಳೆಯಲು ಆ ಮಹಾರೌದ್ರ ಮಹಾವೀರಕ್ಷಯ ಯುದ್ಧದಲ್ಲಿ ದುರ್ಯೋಧನನಿಂದ ಪ್ರಚೋದಿತರಾಗಿ ದುರ್ಮುಖ, ಕೃತವರ್ಮ, ಕೃಪ, ಶಲ್ಯ, ಮತ್ತು ವಿವಿಂಶತಿಯರು ಭೀಷ್ಮನ ರಕ್ಷಣೆಗಾಗಿ ನಿಂತರು. ಈ ಐವರು ಅತಿರಥರಿಂದ ರಕ್ಷಿತನಾದ ಆ ಮಹಾರಥನು ಪಾಂಡವರ ಸೇನೆಗಳೊಳಗೆ ನುಗ್ಗಿದನು. ಚೇದಿ, ಕಾಶಿ, ಕರೂಷ ಮತ್ತು ಪಾಂಚಾಲರ ಮಧ್ಯೆ ಭೀಷ್ಮನ ತಾಲಚಿಹ್ನೆಯಿಂದ ಭೂಷಿತವಾದ ಧ್ವಜದಿಂದ ಅನೇಕರಥಗಳಲ್ಲಿ ಕುಳಿತು ಯುದ್ಧಮಾಡುತ್ತಿರುವನೋ ಎನ್ನುವಂತೆ ತೋರುತ್ತಿದ್ದನು. ಭೀಷ್ಮನು ಆಯುಧಗಳೊಡನೆ ಶಿರಗಳನ್ನೂ ಬಾಹುಗಳನ್ನೂ ಮಹಾವೇಗದ ಭಲ್ಲಗಳಿಂದಲೂ ಸಂನತಪರ್ವಗಳಿಂದಲೂ ಕತ್ತರಿಸಿದನು. ನೃತ್ಯಮಾಡುತ್ತಿರುವನೋ ಎನ್ನುವಂತಿದ್ದ ಭೀಷ್ಮನ ರಥಮಾರ್ಗದಲ್ಲಿ ಆನೆಗಳಿಂದ ಮರ್ಮಗಳಲ್ಲಿ ಪೆಟ್ಟುತಿಂದು ಕೆಲವರು ಆರ್ತಸ್ವರಗಳಿಂದ ಕೂಗಿದರು. ಅಭಿಮನ್ಯುವು ಸಂಕ್ರುದ್ಧನಾಗಿ ಕಂದು ಬಣ್ಣದ ಉತ್ತಮ ಕುದುರೆಗಳನ್ನು ಕಟ್ಟಿದ ರಥದಲ್ಲಿ ನಿಂತು ಭೀಷ್ಮರಥದ ಕಡೆ ಬಂದನು. ಬಂಗಾರದ, ಬಣ್ಣಬಣ್ಣದ, ಕರ್ಣಿಕಾರ ಧ್ವಜದ ಆ ರಥಸತ್ತಮನು ಭೀಷ್ಮನ ಮೇಲೆ ಶರವರ್ಷವನ್ನು ಸುರಿಸಿದನು. ಆ ವೀರನು ತಾಲಕೇತು ಭೀಷ್ಮನ ಧ್ವಜವನ್ನು ತೀಕ್ಷ್ಣ ಪತ್ರಿಗಳಿಂದ ಹೊಡೆದು ಅವನ ಅನುಚರರೊಂದಿಗೆ ಯುದ್ಧಮಾಡಿದನು. ಕೃತವರ್ಮನನ್ನು ಒಂದು ಮತ್ತು ಶಲ್ಯನನ್ನು ಐದು ಆಯಸಗಳಿಂದ ಮತ್ತು ಪ್ರಪಿತಾಮಹನನ್ನು ಒಂಭತ್ತು ಮೊನಚಾದ ಆನರ್ಚಗಳಿಂದ ಹೊಡೆದನು. ಆಕರ್ಣಾಂತವಾಗಿ ಧನುಸ್ಸನ್ನು ಸೆಳೆದು ಸರಿಯಾಗಿ ಗುರಿಯಿಟ್ಟು ಹೊಡೆದ ಒಂದೇ ಬಾಣದಿಂದ ಬಂಗಾರದಿಂದ ವಿಭೂಷಿತವಾದ ಭೀಷ್ಮನ ಧ್ವಜವನ್ನು ತುಂಡರಿಸಿದನು. ಎಲ್ಲ ಆವರಣಗಳನ್ನೂ ಭೇದಿಸುವ ಸಂನತಪರ್ವಣ ಭಲ್ಲದಿಂದ ದುರ್ಮುಖನ ಸಾರಥಿಯ ಶಿರವನ್ನು ದೇಹದಿಂದ ಕತ್ತರಿಸಿದನು. ಕಾರ್ತಸ್ವರ ವಿಭೂಷಿತವಾದ ಕೃಪನ ಧನುಸ್ಸನ್ನು ನಿಶಿತಾಗ್ರ ಭಲ್ಲದಿಂದ ಕತ್ತರಿಸಿ, ಅವನನ್ನೂ ತೀಕ್ಷ್ಣಮುಖ ಶರಗಳಿಂದ ಹೊಡೆದನು.

ಆ ಮಹಾರಥನು ಪರಮ ಕ್ರುದ್ಧನಾಗಿ ನರ್ತಿಸುತ್ತಿರುವನೋ ಎನ್ನುವಂತೆ ಅವರನ್ನು ಪ್ರಹರಿಸಿದನು. ಅವನ ಕೈಚಳಕವನ್ನು ಕಂಡು ದೇವತೆಗಳು ಕೂಡ ಸಂತೋಷಪಟ್ಟರು. ಕಾರ್ಷ್ಣಿಯ ಲಕ್ಷ್ಯವೇದಿತ್ವವನ್ನು ಕಂಡು ಭೀಷ್ಮನೇ ಮೊದಲಾದ ರಥರು ಇವನು ಸಾಕ್ಷಾತ್ ಧನಂಜಯನಂತೆ ಸತ್ತ್ವವಂತನೆಂದು ಅಭಿಪ್ರಾಯಪಟ್ಟರು. ಅವನ ಕೈಚಳಕವನ್ನು ಪ್ರದರ್ಶಿಸುವ ಧನುಸ್ಸು ಗಾಂಡೀವದಂತೆಯೇ ದಿಕ್ಕುಗಳಲ್ಲಿ ಮೊಳಗುವಂತೆ ಧ್ವನಿಸುತ್ತಿತ್ತು. ಮಹಾವೇಗದಿಂದ ಅವನನ್ನು ತಲುಪಿ ಪರವೀರಹ ಭೀಷ್ಮನು ಸಮರದಲ್ಲಿ ಒಂಭತ್ತು ಆಶುಗಗಳಿಂದ ಆರ್ಜುನಿಯನ್ನು ಚೆನ್ನಾಗಿ ಪ್ರಹರಿಸಿದನು. ಆ ಪರಮೌಜಸ ಯತವ್ರತನು ಅವನ ಧ್ವಜವನ್ನು ಮೂರು ಭಲ್ಲೆಗಳಿಂದ ತುಂಡರಿಸಿದನು ಮತ್ತು ಸಾರಥಿಯನ್ನು ಮೂರು ಬಾಣಗಳಿಂದ ಹೊಡೆದನು. ಹಾಗೆಯೇ ಕೃತವರ್ಮ, ಕೃಪ ಮತ್ತು ಶಲ್ಯರು ಅವನನ್ನು ಒಟ್ಟಿಗೇ ಹೊಡೆದರೂ ಕಾರ್ಷ್ಣಿಯು ಮೈನಾಕ ಪರ್ವತದಂತೆ ವಿಚಲಿತನಾಗಲಿಲ್ಲ. ಧಾರ್ತರಾಷ್ಟ್ರರ ಮಹಾರಥಿಗಳಿಂದ ಸುತ್ತುವರೆಯಲ್ಪಟ್ಟ ಆ ಶೂರ ಕಾರ್ಷ್ಣನು ಆ ಐವರು ಪಂಚರಥಿಗಳ ಮೇಲೆ ಶರವರ್ಷಗಳನ್ನು ಸುರಿಸಿದನು. ಆಗ ಅವರ ಮಹಾಸ್ತ್ರಗಳನ್ನೂ ಶರವೃಷ್ಟಿಯಿಂದ ನಿವಾರಿಸಿ, ಬಲವಾನ್ ಕಾರ್ಷ್ಣಿಯು ಭೀಷ್ಮನ ಮೇಲೆ ಬಾಣಗಳನ್ನು ಬಿಟ್ಟು ಸಿಂಹನಾದಮಾಡಿದನು.

ಅಲ್ಲಿ ಭೀಷ್ಮನನ್ನು ಶರಗಳಿಂದ ಪೀಡಿಸಿ ವಿಜಯಕ್ಕೆ ಪ್ರಯತ್ನಿಸುತ್ತಿದ್ದ ಅವನ ಬಾಹುಗಳ ಮಹಾ ಬಲವು ಗೋಚರಿಸಿತು. ಆ ಪರಾಕ್ರಾಂತನ ಮೇಲೆ ಭೀಷ್ಮನೂ ಕೂಡ ಶರಗಳನ್ನು ಪ್ರಯೋಗಿಸಿದನು. ಆದರೆ ಅವನು ಸಮರದಲ್ಲಿ ಭೀಷ್ಮಚಾಪದಿಂದ ಬಿಡಲ್ಪಟ್ಟ ಶರಗಳನ್ನು ತುಂಡರಿಸಿದನು. ಆ ವೀರನು ಒಂಭತ್ತು ಅಮೋಘ ಶರಗಳಿಂದ ಭೀಷ್ಮನ ಧ್ವಜವನ್ನು ತುಂಡರಿಸಿದನು. ಆಗ ಆ ಮಹಾಸ್ಕಂಧದಮೇಲೆ ಹೊಳೆಯುತ್ತಿದ್ದ ಹೇಮವಿಭೂಷಿತ ತಾಲಧ್ವಜವು ಸೌಭದ್ರಿಯ ವಿಶಿಖಗಳಿಂದ ತುಂಡಾಗಿ ಭುವಿಯ ಮೇಲೆ ಬಿದ್ದಿತು. ಸೌಭದ್ರಿಯ ಬಾಣಗಳಿಂದ ಬಿದ್ದ ಧ್ವಜವನ್ನು ನೋಡಿ ಭೀಮನು ಕೂಗಿ ಸೌಭದ್ರಿಯನ್ನು ಹರ್ಷಗೊಳಿಸಿದನು.

ಆ ಕ್ಷಣದಲ್ಲಿ ಮಹಾಬಲ ಮಹಾರೌದ್ರ ಭೀಷ್ಮನು ಬಹಳ ದಿವ್ಯ ಮಹಾಸ್ತ್ರಗಳನ್ನು ಪ್ರಯೋಗಿಸಲು ತೊಡಗಿದನು. ಆಗ ಪ್ರಪಿತಾಮಹನು ಅಮೇಯಾತ್ಮ ಸೌಭದ್ರನನ್ನು ಹತ್ತು ಸಾವಿರ ನತಪರ್ವ ಶರಗಳಿಂದ ಮುಚ್ಚಿದನು. ಆಗ ಪಾಂಡವರ ಹತ್ತು ಮಹಾರಥರು ತ್ವರೆಮಾಡಿ ರಥಗಳಲ್ಲಿ ಸೌಭದ್ರನನ್ನು ರಕ್ಷಿಸಲು ಧಾವಿಸಿದರು: ಪುತ್ರನೊಂದಿಗೆ ವಿರಾಟ, ಧೃಷ್ಟದ್ಯುಮ್ನ, ಭೀಮ, ಐವರು ಕೇಕಯರು ಮತ್ತು ಸಾತ್ಯಕಿ. ರಣದಲ್ಲಿ ವೇಗದಿಂದ ಮೇಲೆಬೀಳುತ್ತಿದ್ದ ಅವರನ್ನು ಶಾಂತನವ ಭೀಷ್ಮನು ಪಾಂಚಾಲ್ಯ-ಸಾತ್ಯಕಿಯರನ್ನು ಮೂರು ಬಾಣಗಳಿಂದ ಹೊಡೆದನು. ಆಕಾರ್ಣಾಂತವಾಗಿ ಧನುಸ್ಸನ್ನು ಎಳೆದು ನಿಶಿತ ಪತ್ರಿ ಕ್ಷುರ ಒಂದರಿಂದ ಭೀಮಸೇನನ ಧ್ವಜವನ್ನು ತುಂಡರಿಸಿದನು. ಸುವರ್ಣಮಯವಾದ ಕೇಸರಿಯ ಚಿಹ್ನೆಯುಳ್ಳ ಭೀಮಸೇನನ ಧ್ವಜವು ಭೀಷ್ಮನಿಂದ ಕತ್ತರಿಸಲ್ಪಟ್ಟು ರಥದಿಂದ ಬಿದ್ದಿತು. ಭೀಮಸೇನನು ರಣದಲ್ಲಿ ಶಾಂತನವ ಭೀಷ್ಮನನ್ನು ಮೂರು ಬಾಣಗಳಿಂದ ಹೊಡೆದು ಕೃಪನನ್ನು ಒಂದರಿಂದಲೂ, ಕೃತವರ್ಮನನ್ನು ಎಂಟರಿಂದಲೂ ಹೊಡೆದನು.

ಉತ್ತರನ ವಧೆ

ಸೊಂಡಿಲನ್ನು ಮೇಲೆತ್ತಿ ಹಿಡಿದ ಆನೆಯ ಮೇಲೆ ವೈರಾಟಿ ಉತ್ತರನು ರಾಜ ಮದ್ರಾಧಿಪತಿಯ ಕಡೆ ಧಾವಿಸಿದನು. ವೇಗದಿಂದ ಮೇಲೆ ಬೀಳುತ್ತಿದ್ದ ಆ ವಾರಣರಾಜನ ಅಪ್ರತಿಮ ವೇಗವನ್ನು ರಣದಲ್ಲಿ ರಥೀ ಶಲ್ಯನು ತಡೆದನು. ಬಹು ಕ್ರುದ್ಧವಾದ ಆ ಗಜೇಂದ್ರವು ಒಂದು ಕಾಲನ್ನು ಅವನ ರಥದ ನೊಗದ ಮೇಲಿಟ್ಟು ರಥವನ್ನು ಎಳೆಯುತ್ತಿದ್ದ ನಾಲ್ಕೂ ಕುದುರೆಗಳನ್ನು ಏಕಕಾಲದಲ್ಲಿ ಸಂಹರಿಸಿತು. ಕುದುರೆಗಳು ಹತವಾಗಿದ್ದ ಅದೇ ರಥದಲ್ಲಿ ನಿಂತು ಮದ್ರಾಧಿಪನು ಉತ್ತರನ ಮೃತ್ಯುರೂಪವಾಗಿದ್ದ ಭುಜಗೋಪಮ ಲೋಹದ ಶಕ್ತಿಯನ್ನು ಎಸೆದನು. ಅದು ಅವನ ತನು-ತ್ರಾಣಗಳನ್ನು ಭೇದಿಸಲು ಅವನು ವಿಪುಲ ತಮವನ್ನು ಪ್ರವೇಶಿಸಿ, ಅಂಕುಶ ತೋಮರಗಳು ಕಳಚಿ ಬೀಳಲು ಆನೆಯ ಮೇಲಿಂದ ಕೆಳಗೆ ಬಿದ್ದನು. ಅನಂತರ ಶಲ್ಯನು ಖಡ್ಗವೊಂದನ್ನು ಹಿಡಿದು ಆ ಉತ್ತಮ ರಥದಿಂದ ಕೆಳಗೆ ಹಾರಿ ಆ ವಾರಣೇಂದ್ರದ ಮಹಾ ಸೊಂಡಿಲನ್ನು ವಿಕ್ರಮದಿಂದ ಕತ್ತರಿಸಿದನು. ಶರವ್ರಾತದಿಂದ ಮರ್ಮಗಳಲ್ಲಿ ಪೆಟ್ಟುತಿಂದು, ಸೊಂಡಿಲು ತುಂಡಾಗಿದ್ದ ಆ ಆನೆಯು ಭಯಂಕರ ಆರ್ತಸ್ವರವನ್ನು ಕೂಗಿ ಬಿದ್ದು ಅಸುನೀಗಿತು. ಇದನ್ನು ಮಾಡಿ ಮಹಾರಥ ಮದ್ರರಾಜನು ತಕ್ಷಣವೇ ಹೊಳೆಯುತ್ತಿರುವ ಕೃತವರ್ಮನ ರಥವನ್ನು ಏರಿದನು.

ಉತ್ತರನು ಹತನಾದುದನ್ನು ಮುತ್ತು ಶಲ್ಯನು ಕೃತವರ್ಮನೊಡನೆ ಇರುವುದನ್ನು ನೋಡಿ ವೈರಾಟಿಯ ಶುಭ ಸಹೋದರ ಶಂಖನು ಕ್ರೋಧದಿಂದ ಹವಿಸ್ಸಿನಿಂದ ಪ್ರಜ್ವಲಿಸುವ ಅಗ್ನಿಯಂತೆ ಉರಿದೆದ್ದನು. ಕಾರ್ತಸ್ವರವಿಭೂಷಿತವಾದ ಮಹಾಚಾಪವನ್ನು ಸೆಳೆದು ಆ ಬಲಿಯು ಮದ್ರಾಧಿಪ ಶಲ್ಯನನ್ನು ಸಂಹರಿಸಲು ಧಾವಿಸಿ ಬಂದನು. ಮಹಾ ರಥ ಸಮೂಹಗಳಿಂದ ಸುತ್ತಲೂ ಸುತ್ತುವರೆಯಲ್ಪಟ್ಟು, ಬಾಣಮಯ ಮಳೆಯನ್ನು ಸುರಿಸುತ್ತಾ ಶಲ್ಯನ ರಥದ ಕಡೆ ಧಾವಿಸಿದನು. ಮದಿಸಿದ ಆನೆಯ ವಿಕ್ರಮವುಳ್ಳ ಅವನು ಮೇಲೆ ಬೀಳಲು ಕೌರವರ ಏಳು ರಥಿಕರು ಮೃತ್ಯುವಿನ ದಾಡೆಗಳ ಮಧ್ಯೆ ಹೋಗುತ್ತಿರುವ ಮದ್ರರಾಜನನ್ನು ರಕ್ಷಿಸುವ ಸಲುವಾಗಿ ಅವನನ್ನು ಎಲ್ಲ ಕಡೆಗಳಿಂದ ಸುತ್ತುವರೆದರು. ಆಗ ಮಹಾಬಾಹು ಭೀಷ್ಮನು ಮೋಡದಂತೆ ಗರ್ಜಿಸುತ್ತಾ ನಾಲ್ಕು ಮೊಳ ಉದ್ದದ ಧನುಸ್ಸನ್ನು ಹಿಡಿದು ಶಂಖನ ಕಡೆಗೆ ಧಾವಿಸಿದನು. ಅವನನ್ನು ಆಕ್ರಮಣಿಸಿ ಬರುತ್ತಿದ್ದ ಆ ಮಹೇಷ್ವಾಸ ಮಹಾಬಲನನ್ನು ನೋಡಿ ಪಾಂಡವ ಸೇನೆಯು ಭಿರುಗಾಳಿಗೆ ಸಿಲುಕಿದ ನಾವೆಯಂತೆ ಸಂತ್ರಸ್ತಗೊಂಡಿತು.

ಭೀಷ್ಮನಿಂದ ಅವನನ್ನು ರಕ್ಷಿಸಲೋಸುಗ ಅರ್ಜುನನು ತ್ವರೆಮಾಡಿ ಶಂಖನ ಮುಂದೆ ಬಂದು ನಿಲ್ಲಲು ಯುದ್ಧವು ನಡೆಯಿತು. ಯುದ್ಧದಲ್ಲಿ ಯುದ್ಧಮಾಡುತ್ತಿರುವ ಯೋಧರಲ್ಲಿ ಮಹಾ ಹಾಹಾಕಾರವುಂಟಾಯಿತು. ತೇಜಸ್ಸು ತೇಜಸ್ಸನ್ನು ಸೇರಿದಂತೆ ಎಂದು ವಿಸ್ಮಿತರಾದರು. ಆಗ ಗದಾಪಾಣಿ ಶಲ್ಯನು ಮಹಾರಥದಿಂದ ಕೆಳಗಿಳಿದು ಶಂಖನ ನಾಲ್ಕೂ ಕುದುರೆಗಳನ್ನು ವಧಿಸಿದನು. ಒಡನೆಯೇ ಶಂಖನು ಖಡ್ಗವನ್ನು ಹಿಡಿದು ಅಶ್ವಗಳು ಹತವಾಗಿದ್ದ ರಥದಿಂದ ಹಾರಿ ಬೀಭತ್ಸುವಿನ ರಥವನ್ನು ಏರಿ ಶಾಂತನಾದನು. ಆಗ ಭೀಷ್ಮನ ರಥದಿಂದ ವೇಗವಾಗಿ ಬರುತ್ತಿದ್ದ ಪತತ್ರಿಗಳು ಅಂತರಿಕ್ಷ-ಭೂಮಿಗಳನ್ನು ಎಲ್ಲಕಡೆಗಳಿಂದಲೂ ಮುಸುಕಿಬಿಟ್ಟವು. ಪ್ರಹರಿಗಳಲ್ಲಿ ಶ್ರೇಷ್ಠ ಭೀಷ್ಮನು ಮಾರ್ಗಣಗಳಿಂದ ಪಾಂಚಾಲ, ಮತ್ಸ್ಯ, ಕೇಕಯ ಮತ್ತು ಪ್ರಭದ್ರಕರನ್ನು ಉರುಳಿಸಿದನು. ಅನಂತರ ಅವನು ಪಾಂಡವ ಸವ್ಯಸಾಚಿಯನ್ನು ಬಿಟ್ಟು ಪಾಂಚಾಲ್ಯ ದ್ರುಪದನ ಸೇನೆಗೆ ಮುತ್ತಿಗೆ ಹಾಕಿ, ಆ ಪ್ರಿಯ ಸಂಬಂಧಿಯನ್ನು ಬಹಳ ಶರಗಳಿಂದ ಮುಚ್ಚಿದನು. ಛಳಿಗಾಲದ ಅಂತ್ಯದಲ್ಲಿ ಕಾಡ್ಗಿಚ್ಚು ವನಗಳನ್ನು ಸುಟ್ಟುಹಾಕುವಂತೆ ಅವನ ಶರಗಳು ದ್ರುಪದನ ಸೇನೆಯನ್ನು ಸುಟ್ಟುಬಿಟ್ಟಂತೆ ತೋರಿತು. ರಣದಲ್ಲಿ ಭೀಷ್ಮನು ಹೊಗೆಯಿಲ್ಲದ ಬೆಂಕಿಯಂತೆ ನಿಂತಿದ್ದನು.

ಪಾಂಡವರ ಯೋಧರಿಗೆ ಮಧ್ಯಾಹ್ನದಲ್ಲಿ ತೇಜಸ್ಸಿನಿಂದ ಉರಿಯುತ್ತಿರುವ ಸೂರ್ಯನನ್ನು ಹೇಗೋ ಹಾಗೆ ಭೀಷ್ಮನನ್ನು ನೋಡಲು ಶಕ್ಯವಾಗಲಿಲ್ಲ. ಛಳಿಯಿಂದ ಆರ್ದಿತರಾದ ಹಸುಗಳು ತ್ರಾತಾರನನ್ನು ಪಡೆಯದೇ ಹುಡುಕಾಡುವಂತೆ ಭಯಪೀಡಿತರಾದ ಪಾಂಡವರು ಎಲ್ಲಕಡೆ ನೋಡತೊಡಗಿದರು. ಪಾಂಡುಸೈನ್ಯಗಳಲ್ಲಿ ಹತರಾಗದೇ ಉಳಿದ ಸೇನೆಯಲ್ಲಿ ನಿರುತ್ಸಾಹವುಂಟಾಗಿ ಮಹಾ ಹಾಹಾಕಾರವುಂಟಾಯಿತು. ಆಗ ಶಾಂತನವ ಭೀಷ್ಮನು ನಿಲ್ಲಿಸದೇ ಧನುಸ್ಸನ್ನು ಮಂಡಲಾಕಾರವಾಗಿ ಸೆಳೆದು ಉರಿಯುತ್ತಿದ್ದ ತೀಕ್ಷ್ಣಮೊನೆಗಳಿಂದ ಕೂಡಿದ ಸರ್ಪಗಳಂತಿರುವ ಬಾಣಗಳನ್ನು ಬಿಡುತ್ತಲೇ ಇದ್ದನು. ಆ ಯತವ್ರತನು ಎಲ್ಲ ದಿಕ್ಕುಗಳನ್ನೂ ಒಂದೇ ಮಾರ್ಗವಾಗಿ ಮಾಡುತ್ತಾ ಪಾಂಡವರಥಿಕರನ್ನು ಕರೆ ಕರೆದು ಹೊಡೆದನು. ಅವನಿಂದ ಸದೆಬಡಿಯಲ್ಪಟ್ಟ ಆ ಸೇನೆಯು ಭಗ್ನವಾಗಲು ದಿನಕರನು ಅಸ್ತನಾದನು. ಎಲ್ಲಕಡೆ ಏನೂ ಕಾಣುತ್ತಿರಲಿಲ್ಲ. ಭೀಷ್ಮನು ನಿಲ್ಲಿಸದೇ ಇದ್ದುದನ್ನು ನೋಡಿ ಪಾಂಡವರು ತಮ್ಮ ಸೇನೆಗಳನ್ನು ಮಹಾಹವದಿಂದ ಹಿಂದೆ ತೆಗೆದುಕೊಂಡರು.

Leave a Reply

Your email address will not be published. Required fields are marked *