ಮಹಾಭಾರತ ಯುದ್ಧಾರಂಭ

ವ್ಯಾಸದರ್ಶನ

ಪೂರ್ವ-ಪಶ್ಚಿಮ ಮುಖಗಳಾಗಿ ಸೇರಿದ್ದ ಕೌರವ-ಪಾಂಡವರನ್ನು ನೋಡಿ ಭಗವಾನ್ ಋಷಿ, ಸರ್ವವೇದವಿದರಲ್ಲಿ ಶ್ರೇಷ್ಠ ವ್ಯಾಸ ಸತ್ಯವತೀ ಸುತ, ಭರತರ ಪಿತಾಮಹ, ಭೂತ-ಭವ್ಯ-ಭವಿಷ್ಯಗಳನ್ನು ತಿಳಿದಿರುವ, ಭಗವಾನನು ತನ್ನ ಪುತ್ರರ ಅನ್ಯಾಯದ ಕುರಿತು ಯೋಚಿಸಿ ಶೋಕಿಸಿ ಆರ್ತನಾಗಿರುವ ರಾಜ ವೈಚಿತ್ರವೀರ್ಯನಿಗೆ ರಹಸ್ಯದಲ್ಲಿ ಇದನ್ನು ಹೇಳಿದನು: “ರಾಜನ್! ನಿನ್ನ ಪುತ್ರರು ಮತ್ತು ಅನ್ಯ ಭೂಮಿಪರ ಕಾಲವು ಬಂದಾಗಿದೆ. ಅವರು ಸಂಗ್ರಾಮದಲ್ಲಿ ಪರಸ್ಪರರರನ್ನು ಕೊಲ್ಲುತ್ತಾರೆ. ಕಾಲದ ಬದಲಾವಣೆಗಳಿಂದ ಆಗುವ ಈ ವಿನಾಶವನ್ನು ಕಾಲಪರ್ಯಾಯವೆಂದು ತಿಳಿದು ಮನಸ್ಸಿನಲ್ಲಿ ಶೋಕಪಡಬೇಡ. ಈ ಸಂಗ್ರಾಮವನ್ನು ನೋಡಲು ಬಯಸುವೆಯಾದರೆ ನಿನಗೆ ಕಣ್ಣುಗಳನ್ನು ಕೊಡುತ್ತೇನೆ. ಅದನ್ನು ನೋಡು!”

ಧೃತರಾಷ್ಟ್ರನು ಹೇಳಿದನು: “ಬ್ರಹ್ಮರ್ಷಿಸತ್ತಮ! ಜ್ಞಾತಿವಧೆಯನ್ನು ನೋಡಲು ನನಗೆ ಇಷ್ಟವಿಲ್ಲ. ಆದರೆ ನಿನ್ನ ತೇಜಸ್ಸಿನಿಂದ ಈ ಯುದ್ಧದ ಕುರಿತು ಯಾವುದನ್ನೂ ಬಿಟ್ಟುಹೋಗದ ಹಾಗೆ ಕೇಳುತ್ತೇನೆ.” ಅವನು ಸಂಗ್ರಾಮವನ್ನು ನೋಡಲು ಇಚ್ಛಿಸುವುದಿಲ್ಲ. ಕೇಳಲು ಬಯಸುತ್ತಾನೆ ಎಂದು ತಿಳಿದ ಈಶ್ವರ ವ್ಯಾಸನು ಸಂಜಯನಿಗೆ ವರವನ್ನಿತ್ತನು.

ವ್ಯಾಸನು ಹೇಳಿದನು: “ರಾಜನ್! ಈ ಸಂಜಯನು ನಿನಗೆ ಯುದ್ಧದಲ್ಲಿ ನಡೆಯುವ ಸಕಲ ಸಮಾಚಾರಗಳನ್ನೂ ಹೇಳುತ್ತಾನೆ. ಸಂಗ್ರಾಮದಲ್ಲಿ ಎಲ್ಲವೂ ಇವನಿಗೆ ಕಾಣುವಂತಾಗುತ್ತದೆ. ದಿವ್ಯದೃಷ್ಟಿಯಿಂದ ಸಮನ್ವಿತನಾದ ಈ ಸಂಜಯನು ಸರ್ವಜ್ಞನಾಗುತ್ತಾನೆ ಮತ್ತು ನಿನಗೆ ಯುದ್ಧದ ಎಲ್ಲವನ್ನೂ ಹೇಳುತ್ತಾನೆ. ಬಹಿರಂಗವಾಗಿರಲಿ ಅಥವಾ ರಹಸ್ಯವಾಗಿರಲಿ, ರಾತ್ರಿಯಾಗಿರಲಿ ಅಥವಾ ದಿನವಾಗಿರಲಿ, ಮನಸ್ಸಿನಲ್ಲಿ ಯೋಚಿಸಿದ್ದು ಕೂಡ ಏಲ್ಲವೂ ಸಂಜಯನಿಗೆ ತಿಳಿಯುತ್ತದೆ. ಇವನನ್ನು ಶಸ್ತ್ರಗಳು ಭೇದಿಸುವುದಿಲ್ಲ. ಇವನನ್ನು ಶ್ರಮವು ಬಾಧಿಸುವುದಿಲ್ಲ. ಈ ಗಾವಲ್ಗಣಿಯು ಜೀವಂತನಾಗಿಯೇ ಯುದ್ಧದಿಂದ ಆಚೆ ಬರುತ್ತಾನೆ. ನಾನಾದರೋ ಈ ಕುರುಗಳ ಮತ್ತು ಪಾಂಡವರ ಎಲ್ಲರ ಕೀರ್ತಿಯನ್ನು ಪಸರಿಸುತ್ತೇನೆ. ಶೋಕಿಸಬೇಡ. ಇದು ಮೊದಲೇ ದೈವನಿಶ್ಚಯವಾದುದು. ಇದರ ಕುರಿತು ಶೋಕಿಸಬಾರದು. ಅದನ್ನು ತಡೆಯಲು ಶಕ್ಯವಿಲ್ಲ. ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.”

ನಿಮಿತ್ತಗಳು

ಹೀಗೆ ಹೇಳಿ ಕುರುಗಳ ಪ್ರಪಿತಾಮಹ ಭಗವಾನನು ಪುನಃ ಧೃತರಾಷ್ಟ್ರನಿಗೆ ಹೇಳಿದನು: “ಮಹಾರಾಜ! ಭಯವನ್ನು ಸೂಚಿಸುವ ಈ ನಿಮಿತ್ತಗಳ ಪ್ರಕಾರ ಈ ಯುದ್ಧದಲ್ಲಿ ಮಹಾ ಕ್ಷಯವುಂಟಾಗುತ್ತದೆ. ಗಿಡುಗ, ಹದ್ದು, ಕಾಗೆ, ಮತ್ತು ಕಂಕಗಳು ಗುಂಪುಗುಂಪಾಗಿ ಮರಗಳ ಮೇಲೆ ಬಂದಿಳಿಯುತ್ತಿವೆ ಮತ್ತು ಕೆಳಗೆ ನೋಡುತ್ತಾ ಕಾಯುತ್ತಿವೆ. ಉಗ್ರವಾದವುಗಳು ಯುದ್ಧದಲ್ಲಿ ಕುದುರೆ ಆನೆಗಳ ಮಾಂಸವನ್ನು ಭಕ್ಷಿಸಲು ಕಾಯುತ್ತ ಕುಳಿತಿವೆ. ಖಟಾ ಖಟಾ ಎಂದು ಭೈರವ ಭಯವೇದನೆಯನ್ನುಂಟುಮಾಡುವ ಕೂಗನ್ನು ಕೂಗುತ್ತಾ ಕಾಗೆಗಳು ಮಧ್ಯದಿಂದ ದಕ್ಷಿಣಾಭಿಮುಖವಾಗಿ ಹಾರಿಹೋಗುತ್ತಿವೆ. ಬೆಳಿಗ್ಗೆ ಮತ್ತು ಸಂಧ್ಯಾಕಾಲಗಳೆರಡೂ ಹೊತ್ತು ನಿತ್ಯವೂ ನಾನು ಉದಯ-ಅಸ್ತಮಾನಗಳ ವೇಳೆಗಳಲ್ಲಿ ಸೂರ್ಯನನ್ನು ಕಬಂಧ (ತಲೆಯಿಲ್ಲದ ದೇಹ) ಗಳಿಂದ ಸುತ್ತುವರೆದಿದ್ದುದನ್ನು ನೋಡುತ್ತಿದ್ದೇನೆ. ಮೂರು ಬಣ್ಣದ - ಬಿಳಿ ಮತ್ತು ಕೆಂಪು ರೆಕ್ಕೆಗಳ ಹಾಗೂ ಕಪ್ಪು ಕೊರಳಿನ – ಪಕ್ಷಿಗಳು ಸಂಧ್ಯಾಸಮಯದಲ್ಲಿ ಸೂರ್ಯನನ್ನು ಗುಂಪಾಗಿ ಮುತ್ತುತ್ತಿವೆ. ಪ್ರಜ್ವಲಿಸುವ ಸೂರ್ಯ, ಚಂದ್ರ, ನಕ್ಷತ್ರಗಳನ್ನು ವಿಶೇಷದಿನಗಳಲ್ಲದಿದ್ದರೂ ನಾನು ಆಹೋ ರಾತ್ರಿ ನೋಡುತ್ತಿದ್ದೇನೆ. ಇದರಿಂದ ಕ್ಷಯವಾಗುತ್ತದೆ. ಕಾರ್ತೀಕ ಪೂರ್ಣಿಮೆಯಂದೂ ಪ್ರಭೆಯನ್ನು ಕಳೆದುಕೊಂಡ ಚಂದ್ರನು ಕಾಣದಂತಾಗಿದ್ದೇನೆ. ಅವನು ನಭಸ್ತಲದಲ್ಲಿ ಅಗ್ನಿವರ್ಣದ ಮಂಡಲದಲ್ಲಿ ಕಾಣುತ್ತಾನೆ. ಪರಿಘದಂಥಹ ಬಾಹುಗಳಿಂದ ವೀರ ಪಾರ್ಥಿವರು, ರಾಜಪುತ್ರರು, ಶೂರರು ಭೂಮಿಯಲ್ಲಿ ಹತರಾಗಿ ಮಲಗುತ್ತಾರೆ. ನಿತ್ಯವೂ ರಾತ್ರಿಯ ಅಂತರಿಕ್ಷದಲ್ಲಿ ವರಾಹ ವೃಷದಂಶಗಳೀರ್ವರ ರೌದ್ರ ರೋದನೆಯು ಕ್ಷಯವನ್ನು ಸೂಚಿಸುತ್ತಿದೆ. ದೇವತೆಗಳ ಪ್ರತಿಮೆಗಳೂ ಕೂಡ ಅಲುಗಾಡುತ್ತಿವೆ ಮತ್ತು ನಗುತ್ತಿವೆ. ಕೆಲವೊಮ್ಮೆ ರಕ್ತವನ್ನು ಕಾರುತ್ತಿವೆ, ಮುಕ್ಕರಿಸಿ ಬೀಳುತ್ತಿವೆ. ಬಾರಿಸದೆಯೇ ನಗಾರಿಗಳು ಶಬ್ಧಮಾಡುತ್ತಿವೆ. ಕ್ಷತ್ರಿಯರ ಮಹಾರಥಗಳು ಕುದುರೆಗಳನ್ನು ಕಟ್ಟದೆಯೇ ನಡೆಯುತ್ತಿವೆ. ಕೋಕಿಲಗಳು, ಮರಕುಟುಕಗಳು, ನೀರು ಕಾರುಂಡೆಗಳು, ಗಿಳಿಗಳು, ಸಾರಸಗಳು, ನವಿಲುಗಳು ದಾರುಣವಾಗಿ ಕೂಗುತ್ತಿವೆ. ಶಸ್ತ್ರಾಭರಣಗಳನ್ನು ಹಿಡಿದ ಕವಚಧಾರಿಗಳು ಕುದುರೆಗಳ ಮೇಲೆ ಏರುತ್ತಿದ್ದಾರೆ. ಅರುಣೋದಯದಲ್ಲಿ ನೂರಾರು ಚಿಟ್ಟೆಗಳು ಕಾಣುತ್ತಿವೆ. ಎರಡೂ ಸಂಧ್ಯೆಗಳಲ್ಲಿ ಹೊಳೆಯುತ್ತಿರುವ ದಿಕ್ಕುಗಳು ಬಾಯಾರಿಕೆಗೊಂಡಿವೆಯೋ ಎನ್ನುವಂತೆ ರಕ್ತ ಮತ್ತು ಎಲುಬುಗಳ ಮಳೆಯಾಗುತ್ತಿವೆ. ತ್ರೈಲೋಕ್ಯಗಳಲ್ಲಿ ಸಾಧುಸಮ್ಮತಳಾದ ಅರುಂಧತಿಯು ವಸಿಷ್ಠನನ್ನು ಹಿಂದೆ ಹಾಕಿದಳೆಂದು ತೋರುತ್ತಿದೆ. ರೋಹಿಣಿಯನ್ನು ಪೀಡಿಸುತ್ತಿರುವಂತೆ ಶನೈಶ್ಚರನು ನಿಂತಿದ್ದಾನೆ. ಚಂದ್ರನ ಲಕ್ಷಣವಾಗಿರುವ ಜಿಂಕೆಯು ತನ್ನ ಸ್ಥಾನವನ್ನು ತಪ್ಪಿ ಮಹಾಭಯವುಂಟಾಗಲಿದೆ. ಮೋಡಗಳಿಲ್ಲದಿದ್ದರೂ ಆಕಾಶದಲ್ಲಿ ಮಹಾಘೋರ ಶಬ್ಧವು ಕೇಳಿಬರುತ್ತಿದೆ. ವಾಹನ ಪ್ರಾಣಿಗಳೆಲ್ಲವೂ ಅಳುತ್ತಾ ಕಣ್ಣೀರನ್ನು ಬೀಳಿಸುತ್ತಿವೆ.

“ಕತ್ತೆಗಳು ಗೋವುಗಳನ್ನು ಹುಟ್ಟಿಸುತ್ತಿವೆ. ಗಂಡು ಮಕ್ಕಳು ತಾಯಿಯರೊಂದಿಗೆ ರಮಿಸುತ್ತಿದ್ದಾರೆ. ವನದಲ್ಲಿ ಮರಗಳು ಅಕಾಲದಲ್ಲಿ ಹೂವು-ಹಣ್ಣುಗಳನ್ನು ಬಿಡುತ್ತಿವೆ. ಗರ್ಭಿಣಿ ರಾಜಪುತ್ರಿಯರು ವಿಭೀಷಣರಾದವರನ್ನು ಹುಟ್ಟಿಸುತ್ತಿದ್ದಾರೆ. ಮಾಂಸಭಕ್ಷಕ ಪ್ರಾಣಿಗಳು ಪಕ್ಷಿಗಳೊಂದಿಗೆ ಸೇರಿ ಮೃಗಗಳನ್ನು ಭಕ್ಷಿಸುತ್ತಿವೆ. ಮೂರು ಕೋಡುಗಳ, ನಾಲ್ಕು ಕಣ್ಣುಗಳ, ಐದು ಕಾಲುಗಳ, ಎರಡು ಲಿಂಗಗಳಿರುವ, ಎರಡು ತಲೆಗಳಿರುವ, ಎರಡು ಬಾಲಗಳಿರುವ, ಮತ್ತು ಹಲ್ಲುಗಳಿರುವ, ಮೂರು ಪಾದ-ಕೋಡುಗಳಿರುವ, ನಾಲ್ಕು ಹಲ್ಲುಗಳಿರುವ ಕುದುರೆಗಳೂ ಅಶಿವ ಪಶುಗಳೂ ಹುಟ್ಟಿ, ಅಗಲವಾಗಿ ಬಾಯಿಗಳನ್ನು ಕಳೆದು ಅಶಿವ ಸ್ವರಗಳಲ್ಲಿ ಕೂಗುತ್ತಿವೆ. ನಿನ್ನ ಪುರದಲ್ಲಿ ಬ್ರಹ್ಮವಾದಿಗಳ ಸ್ತ್ರೀಯರು ಮತ್ತು ಇತರರು ಗರುಡ-ಮಯೂರಗಳಿಗೆ ಜನ್ಮ ನೀಡುತ್ತಿದ್ದಾರೆ. ಕುದುರೆಗಳು ಹಸುವಿನ ಕರುಗಳಿಗೆ ಮತ್ತು ನಾಯಿಯು ನರಿ-ಕೋಳಿಗಳಿಗೆ ಜನ್ಮ ನೀಡುತ್ತಿವೆ. ಜಿಂಕೆಗಳೂ ಗಿಳಿಗಳೂ ಅಶುಭವಾಗಿ ಕೂಗುತ್ತಿವೆ. ಕೆಲವು ಸ್ತ್ರೀಯರು ನಾಲ್ಕು-ಐದು ಕನ್ಯೆಯರಿಗೆ ಜನ್ಮನೀಡುತ್ತಿದ್ದಾರೆ. ಹುಟ್ಟಿದಕೂಡಲೇ ಅವರು ನರ್ತಿಸುತ್ತಿದ್ದಾರೆ, ಹಾಡುತ್ತಿದ್ದಾರೆ ಮತ್ತು ನಗುತ್ತಿದ್ದಾರೆ. ಅತಿ ಕೀಳುಸ್ತರದ ಜನರು ನಗುತ್ತಿದ್ದಾರೆ, ಕುಣಿಯುತ್ತಿದ್ದಾರೆ ಮತ್ತು ಹಾಡುತ್ತಿದ್ದಾರೆ. ಇದು ಮಹಾ ಭಯವನ್ನು ಸೂಚಿಸುತ್ತದೆ. ಕಾಲಚೋದಿತರಾಗಿ ಶಿಶುಗಳು ಸಶಸ್ತ್ರರ ಚಿತ್ರಗಳನ್ನು ಬರೆಯುತ್ತಿವೆ, ದಂಡಗಳನ್ನು ಹಿಡಿದು ಅನ್ಯೋನ್ಯರನ್ನು ಓಡಿಸುತ್ತಿದ್ದಾರೆ. ಯುದ್ಧದ ಉತ್ಸುಕರಾಗಿ ನಗರವನ್ನೇ ಪುಡಿಮಾತೊಡಗಿದ್ದಾರೆ. ಕಮಲಗಳು ಮತ್ತು ಕುಮುದಗಳು ಮರಗಳಲ್ಲಿ ಬೆಳೆಯುತ್ತಿವೆ. ಉಗ್ರವಾದ ಭಿರುಗಾಳಿಯು ಬೀಸುತ್ತಿದೆ. ಧೂಳು ಕಡಿಮೆಯಾಗುತ್ತಿಲ್ಲ. ಭೂಮಿಯು ಕಂಪಿಸುತ್ತಿದೆ.

“ರಾಹುವು ಸೂರ್ಯಗ್ರಸ್ತ ಮಾಡುತ್ತಿದ್ದಾನೆ. ಶ್ವೇತ (ಕೇತು) ಗ್ರಹವು ಚಿತ್ರಾನಕ್ಷತ್ರವನ್ನು ದಾಟಿ ನಿಂತಿದೆ. ಇವು ವಿಶೇಷವಾಗಿ ಕುರುಗಳ ಅಭಾವವನ್ನು ಸೂಚಿಸುತ್ತವೆ. ಮಹಾಘೋರ ಧೂಮಕೇತುವು ಪುಷ್ಯವನ್ನು ದಾಟಿ ನಿಂತಿದೆ. ಈ ಮಹಾಗ್ರಹವು ಎರಡೂ ಸೇನೆಗಳಿಗೆ ಘೋರ ಅಮಂಗಳವನ್ನುಂಟುಮಾಡುತ್ತದೆ. ಅಂಗಾರಕ (ಮಂಗಳ) ನು ಮಘದಲ್ಲಿ ಮತ್ತು ಶ್ರವಣದಲ್ಲಿ ಬೃಹಸ್ಪತಿ (ಗುರು) ಯು ವಕ್ರವಾಗಿದ್ದಾರೆ. ಸೂರ್ಯಪುತ್ರ (ಶನಿ) ನು ಭಗಾ (ಉತ್ತರಾ) ನಕ್ಷತ್ರವನ್ನು ದಾಟಿ ಪೀಡಿಸುತ್ತಿದ್ದಾನೆ. ಶುಕ್ರಗ್ರಹವು ಪೂರ್ವಭಾದ್ರಪದವನ್ನು ಹಿಂದೆ ಹಾಕಿ ಉತ್ತರ ಭಾದ್ರಪದವನ್ನು ನೋಡುತ್ತಿದೆ. ಬೆಂಕಿ ಹೊಗೆಗಳಿಂದ ಪ್ರಜ್ವಲಿಸುತ್ತಿರುವ ಕಪ್ಪು ಗ್ರಹ (ರಾಹು)ವು ಜ್ಯೇಷ್ಠಾ ನಕ್ಷತ್ರವನ್ನು ದಾಟಿ ನಿಂತಿದ್ದಾನೆ. ಘೋರವಾಗಿ ಪ್ರಜ್ವಸಿಸುತ್ತಿರುವ ಧೃವ ನಕ್ಷತ್ರವು ಬಲಗಡೆ ಉರುಳುತ್ತಿದೆ. ಕ್ರೂರ ಗ್ರಹ (ರಾಹು)ವು ಚಿತ್ರಾ ಮತ್ತು ಸ್ವಾತಿ ನಕ್ಷತ್ರಗಳ ನಡುವೆ ನಿಂತಿದ್ದಾನೆ. ಪಾವಕಪ್ರಭ ಲೋಹಿತಾಂಗ (ಮಂಗಳ)ನು ವಕ್ರ ವಕ್ರವಾಗಿ ಮಾಡಿಕೊಂಡು ಬ್ರಹ್ಮರಾಶಿ (ಗುರು) ಯೊಂದಿಗೆ ಶ್ರವಣಾ ಲಕ್ಷತ್ರದಲ್ಲಿ ವ್ಯವಸ್ಥಿತನಾಗಿದ್ದಾನೆ.

“ಫಲಮಾಲಿನೀ ಪೃಥ್ವಿಯು ಸರ್ವ ಸಸ್ಯಗಳನ್ನು ಹೊತ್ತಿದ್ದಾಳೆ. ಗೋಧಿಯ ಸಸ್ಯಗಳಿಗೆ ಐದು ತಲೆಗಳಿವೆ ಮತ್ತು ಭತ್ತಕ್ಕೆ ಹತ್ತು ತಲೆಗಳಿವೆ. ಈ ಜಗತ್ತಿನಲ್ಲಿಯೇ ಸರ್ವಲೋಕಗಳಲ್ಲಿಯೂ ಪ್ರಧಾನವೆನಿಸಿಕೊಂಡ ಗೋವುಗಳು ಕರುಗಳನ್ನು ಹೆತ್ತ ನಂತರ ರಕ್ತವನ್ನೇ ಹಾಲನಾಗಿ ನೀಡುತ್ತಿವೆ. ಧನುಸ್ಸುಗಳಿಂದ ಹೊಳೆಯುವ ಕಿರಣಗಳು ಹೊರಸೂಸುತ್ತಿವೆ. ಖಡ್ಗಗಳು ಚೆನ್ನಾಗಿ ಹೊಳೆಯುತ್ತಿವೆ. ಸಂಗ್ರಾಮವು ಬಂದಾಗಿದೆ ಎನ್ನುವುದನ್ನು ಶಸ್ತ್ರಗಳು ವ್ಯಕ್ತಪಡಿಸುತ್ತಿವೆ. ಶಸ್ತ್ರಗಳ, ನೀರಿನ, ಕವಚಗಳ ಮತ್ತು ಧ್ವಜಗಳ ಬಣ್ಣವು ಅಗ್ನಿವರ್ಣದಂತೆ ತೋರುತ್ತಿದೆ. ಮಹಾ ಕ್ಷಯವಾಗುವುದಿದೆ. ಮೃಗಪಕ್ಷಿಗಳು ಉರಿಯುತ್ತಿರುವ ಮುಖಗಳಿಂದ ಘೋರ ಕೂಗುಗಳನ್ನು ಕೂಗುತ್ತಾ ಓಡಾಡುತ್ತಿವೆ. ಮಹಾಭಯವನ್ನು ಸೂಚಿಸುತ್ತಿವೆ. ಒಂದೇ ರೆಕ್ಕೆಯುಳ್ಳ, ಒಂದೇ ಕಣ್ಣುಳ್ಳ, ಒಂದೇ ಕಾಲಿರುವ ಘೋರ ಪಕ್ಷಿಯೊಂದು ರಾತ್ರಿ ಆಕಾಶದಲ್ಲಿ, ಕೇಳುವವರು ರಕ್ತಕಾರುವ ಹಾಗೆ, ರೌದ್ರವಾಗಿ ಕೂಗಿ ಭಯಪಡಿಸುತ್ತಿದೆ. ಕೆಂಪು ಮತ್ತು ಬಿಳಿಯ ಶಿಖೆಗಳ ಎರಡು ಗ್ರಹಗಳು ಪ್ರಜ್ವಲಿಸುತ್ತಾ ನಿಂತಿವೆ. ಉದಾರ ಸಪ್ತರ್ಷಿಗಳ ನಕ್ಷತ್ರಮಂಡಲಗಳ ಪ್ರಭೆಯನ್ನು ಮುಚ್ಚಿವೆ. ಪ್ರಜ್ವಲಿಸುತ್ತಿರುವ ಎರಡು ಗ್ರಹಗಳು ಬೃಹಸ್ಪತಿ-ಶನೈಶ್ಚರರು ವಿಶಾಖಾ ನಕ್ಷತ್ರದ ಸಮೀಪದಲ್ಲಿ ಒಂದು ವರ್ಷ ನೆಲೆಸಿದ್ದಾರೆ. ಕೃತ್ತಿಕಾ ನಕ್ಷತ್ರದ ಪ್ರಥಮದಲ್ಲಿ ತೀವ್ರ ಗ್ರಹವು ಪ್ರಜ್ವಲಿಸುತ್ತಾ, ಧೂಮಕೇತುವಿನಂತೆ ಹೊಳೆಯುತ್ತಾ ಅದರ ಮುಖವನ್ನು ಮುಚ್ಚುತ್ತಿದೆ. ಪೂರ್ವದಲ್ಲಿರುವ ಎಲ್ಲ ಮೂರು ನಕ್ಷತ್ರಗಳ ಮೇಲೆ ಬುಧನು ಅಭೀಕ್ಷ್ಣ ದೃಷ್ಠಿಯನ್ನು ಬೀರಿ ಮಹಾ ಭಯವನ್ನು ಹುಟ್ಟಿಸುತ್ತಿದ್ದಾನೆ. ಹಿಂದೆ ಹದಿನಾಲ್ಕನೆಯ, ಹದಿನೈದನೆಯ ಅಥವಾ ಹದಿನಾರನೆಯ ದಿನ ಅಮವಾಸ್ಯೆಯಾಗುತ್ತಿತ್ತು. ಈಗಿನ ಹಾಗೆ ತ್ರಯೋದಶಿಯಂದು ಅಮವಾಸ್ಯೆಯಾದದ್ದನ್ನು ನಾನು ಅರಿಯೆ! ಒಂದೇ ತಿಂಗಳಿನಲ್ಲಿ ಚಂದ್ರ ಮತ್ತು ಸೂರ್ಯಗ್ರಹಣಗಳೆರಡೂ ತ್ರಯೋದಶಿಯಂದು ನಡೆದಿದೆ. ಅಕಾಲದಲ್ಲಾದ ಈ ಗ್ರಹಣಗಳು ಪ್ರಜೆಗಳ ನಾಶವನ್ನು ಸೂಚಿಸುತ್ತವೆ. ದಿಕ್ಕುಗಳಲ್ಲೆಲ್ಲಾ ಧೂಳುತುಂಬಿ ಎಲ್ಲಕಡೆಗಳಿಂದಲೂ ಆನೆಕಲ್ಲಿನ ಮಳೆಯಾಗುತ್ತಿದೆ. ಉತ್ಪಾತವನ್ನು ಸೂಚಿಸುವ ಮೇಘಗಳು ರಾತ್ರಿಯಲ್ಲಿ ರೌದ್ರ ರಕ್ತದ ಮಳೆಯನ್ನು ಸುರಿಸುತ್ತಿವೆ. ಕೃಷ್ಣಪಕ್ಷದ ಚತುರ್ದಶಿಯಂದು ಪುನಃ ತೀವ್ರ ಮಾಂಸದ ಮಳೆಯು ಆಯಿತು. ಅರ್ಧರಾತ್ರಿಯಲ್ಲಿ ಮಹಾಘೋರ ರಾಕ್ಷಸರು ಅತೃಪ್ತರಾಗಿದ್ದರು. ನದಿಗಳು ವಿರುದ್ಧ ದಿಕ್ಕುಗಳಲ್ಲಿ ಹರಿಯುತ್ತವೆ. ನದಿಗಳ ನೀರು ರಕ್ತವಾಗಿವೆ. ನೊರೆತುಂಬಿ ಬಾವಿಗಳು ಹೋರಿಗಳಂತೆ ಭುಸುಗುಟ್ಟುತ್ತಿವೆ. ಒಣಗಿದ ವಜ್ರದಂತೆ ಉಲ್ಕೆಗಳು ಭುಸುಗುಟ್ಟುತ್ತಾ ಕೆಳಗೆ ಬೀಳುತ್ತಿವೆ. ಇಂದಿನ ಈ ರಾತ್ರಿಯು ಕಳೆದು ಉದಯದಲ್ಲಿ ಭಾನು ಮೇಲೆದ್ದಾಗ ನಾಲ್ಕೂ ಕಡೆಗಳಲ್ಲಿ ಎಲ್ಲದಿಕ್ಕುಗಳಲ್ಲಿ ಉರಿಯುತ್ತಿರುವ ಮಹಾ ಉಲ್ಕೆಯು ಕಾಣಿಸಿಕೊಳ್ಳುತ್ತದೆ. ಆದಿತ್ಯವು ಮೇಲೆದ್ದಾಗ ಭೂಮಿಯು ಸಹಸ್ರಾರು ಭೂಮಿಪಾಲರ ರಕ್ತವನ್ನು ಕುಡಿಯುತ್ತದೆ ಎಂದು ಮಹರ್ಷಿಗಳು ಹೇಳುತ್ತಾರೆ.

“ಕೈಲಾಸ-ಮಂದರಗಳೆರಡರಲ್ಲಿ ಮತ್ತು ಹಾಗೆಯೇ ಹಿಮವತ್ ಗಿರಿಯಲ್ಲಿ ಸಹಸ್ರಾರು ಶಿಖರಗಳು ಮಹಾಶಬ್ಧದೊಂದಿಗೆ ಬೀಳುತ್ತಿವೆ. ಭೂಮಿಯ ಮಹಾ ಕಂಪನದಿಂದ ನಾಲ್ಕು ಸಾಗರಗಳು ಪುನಃ ಪುನಃ ಕ್ಷೋಭಗೊಂಡು ದಡಗಳನ್ನು ನುಂಗುವವೋ ಎನ್ನುವಹಾಗೆ ಮೇಲೆ ಏರುತ್ತಿವೆ. ಉಗ್ರ ಗಾಳಿಗಳು ವೃಕ್ಷಗಳನ್ನು ಕಿತ್ತು ಬೀಳಿಸುತ್ತಿವೆ. ಗ್ರಾಮ ಮತ್ತು ನಗರಗಳಲ್ಲಿ ಚೈತ್ಯ ವೃಕ್ಷಗಳು ಬೀಳುತ್ತಿವೆ. ದ್ವಿಜರು ಆಹುತಿಯನ್ನು ಹಾಕಿದಾಗ ಅಗ್ನಿಯು ಹಳದಿ, ಕೆಂಪು ಮತ್ತು ನೀಲಿ ಬಣ್ಣಗಳನ್ನು ತಾಳುತ್ತಿದೆ. ಅದರ ಜ್ವಾಲೆಯು ಎಡಕ್ಕೆ ಬಾಗಿ ಧೂಮಯುಕ್ತ ದುರ್ಗಂಧವನ್ನು ನೀಡುತ್ತಿದೆ, ಪಟಪಟ ಶಬ್ಧಮಾಡುತ್ತಿದೆ. ಸ್ಪರ್ಷ, ಗಂಧ, ರಸಗಳು ವಿಪರೀತವಾಗಿವೆ. ರಾಜರ ಧ್ವಜಗಳು ಮತ್ತೆ ಮತ್ತೆ ಕಂಪಿಸುತ್ತಾ ಹೊಗೆಯಾಡುತ್ತಿವೆ, ಕಿಡಿಗಳ ಮಳೆಯನ್ನು ಸುರಿಸುತ್ತಿವೆ. ಭೇರಿಗಳು ಬೂದಿಯನ್ನು ಚೆಲ್ಲುತ್ತಿವೆ. ಪ್ರಾಸಾದ ಶಿಖರಗಳ ತುದಿಯಲ್ಲಿ ಮತ್ತು ಪುರದ್ವಾರಗಳಲ್ಲಿ ಹದ್ದುಗಳು ಎಡಗಡೆಯಿಂದ ಮಂಡಲಾಕಾರದಲ್ಲಿ ಕುಳಿತು ಉಗ್ರವಾಗಿ ಪರಿತಪಿಸುತ್ತಿವೆ. ಪೃಥಿವೀಕ್ಷಿತರ ಸಾವನ್ನು ಸೂಚಿಸುತ್ತಾ ಧ್ವಜಾಗ್ರದಲ್ಲಿ ನಿಂತು ಎಲ್ಲ ಪಕ್ಷಿಗಳೂ ಪಕ್ವಾ ಪಕ್ವಾ ಎಂದು ಜೋರಾಗಿ ಕೂಗುತ್ತಿವೆ. ಯಾವುದೋ ಯೋಚನೆಯಲ್ಲಿದ್ದುಕೊಂಡು ನಡುಗುತ್ತಿರುವ ಆನೆಗಳು ಮಲ ಮೂತ್ರಗಳನ್ನು ಮಾಡುತ್ತಾ ಅಲ್ಲಲ್ಲಿ ಹೋಗುತ್ತಿವೆ. ಸಹಸ್ರಾರು ಆನೆ ಕುದುರೆಗಳು ದೀನರಾಗಿ ರೋದಿಸುತ್ತಿವೆ. ಇದನ್ನು ಕೇಳಿ ನೀನು ಕಾಲಕ್ಕೆ ತಕ್ಕುದಾಗಿದುದನ್ನು – ಈ ಲೋಕವು ಪ್ರಜೆಗಳಿಲ್ಲದಂತೆ ತಡೆಗಟ್ಟಲು ಏನು ಬೇಕೋ ಅದನ್ನು ಏರ್ಪಡಿಸು.”

ತಂದೆಯ ಮಾತನ್ನು ಕೇಳಿ ಧೃತರಾಷ್ಟ್ರನು ಈ ಮಾತನ್ನಾಡಿದನು: “ಮೊದಲೇ ವಿಧಿಯು ಇಷ್ಟಪಟ್ಟಂತೆ ನಡೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕ್ಷತ್ರಿಯರು ಕ್ಷತ್ರಧರ್ಮದಂತೆ ಯುದ್ಧದಲ್ಲಿ ವಧಿಸಲ್ಪಟ್ಟರೆ ಅವರು ಕೇವಲ ವೀರಲೋಕವನ್ನು ಪಡೆದು ಸುಖವನ್ನು ಹೊಂದುತ್ತಾರೆ. ಈ ಪುರುಷವ್ಯಾಘ್ರರು ಮಹಾಹವದಲ್ಲಿ ಪ್ರಾಣಗಳನ್ನು ತ್ಯಜಿಸಿ ಈ ಲೋಕದಲ್ಲಿ ಕೀರ್ತಿಯನ್ನೂ ಪರಲೋಕದಲ್ಲಿ ದೀರ್ಘಕಾಲದ ಮಹಾ ಸುಖವನ್ನೂ ಪಡೆಯುತ್ತಾರೆ.”

ಪುತ್ರ ಧೃತರಾಷ್ಟ್ರನು ಹೀಗೆ ಹೇಳಲು ಆ ಕವೀಂದ್ರ ಮುನಿಯು ಪರಮ ಧ್ಯಾನನಿರತನಾದನು. ಆ ಕಾಲವಾದೀ ಮಹಾತಪಸ್ವಿಯು ಪುನಃ ಈ ಮಾತುಗಳನ್ನಾಡಿದನು: “ಪಾರ್ಥಿವೇಂದ್ರ! ಕಾಲವು ಜಗತ್ತನ್ನು ಸಂಕ್ಷಿಪ್ತಗೊಳಿಸುತ್ತದೆ ಎನ್ನುವುದು ನಿಸ್ಸಂಶಯ. ಅದೇ ಪುನಃ ಲೋಕಗಳನ್ನು ಸೃಷ್ಟಿಸುತ್ತದೆ. ಇಲ್ಲಿ ಯಾವುದೂ ಶಾಶ್ವತವಲ್ಲವೆಂದು ತಿಳಿ. ಆದುದರಿಂದ ನಿನ್ನ ದಾಯಾದಿಗಳಿಗೆ, ಕುರುಗಳಿಗೆ, ಸಂಬಂಧಿಗಳಿಗೆ ಮತ್ತು ಸ್ನೇಹಿತರಿಗೆ ಧರ್ಮದ ದಾರಿಯನ್ನು ತೋರಿಸಿ ಇದನ್ನು ತಡೆಯಲು ನೀನು ಸಮರ್ಥನಿದ್ದೀಯೆ. ಜ್ಞಾತಿವಧೆಯು ಪಾಪವೆಂದು ಹೇಳುತ್ತಾರೆ. ನನಗೆ ಅಪ್ರಿಯವಾಗುವ ಹಾಗೆ ಮಾಡಬೇಡ. ಕಾಲನೇ ನಿನ್ನ ಈ ಪುತ್ರರೂಪದಲ್ಲಿ ಜನಿಸಿದ್ದಾನೆ. ವೇದಗಳಲ್ಲಿ ವಧೆಯ ಪೂಜನೆಯಿಲ್ಲ. ಇದು ಎಂದೂ ಹಿತವಾದುದಲ್ಲ. ಕುಲಧರ್ಮವನ್ನು ಕೊಲ್ಲುವವನು ತನ್ನ ದೇಹವನ್ನೇ ಕೊಂದುಕೊಂಡಂತೆ. ಒಳ್ಳೆಯ ದಾರಿಯಲ್ಲಿ ಹೋಗಲು ಶಕ್ಯನಾದರೂ ಕಾಲವು ನಡೆಸಿದಂತೆ ನಡೆಯುತ್ತಿರುವೆ. ಈ ಕುಲದ ಮತ್ತು ಹಾಗೆಯೇ ಮಹೀಕ್ಷಿತರ ವಿನಾಶಕ್ಕೆ ರಾಜ್ಯದ ರೂಪದಲ್ಲಿ ಅನರ್ಥವು ಆಗಮಿಸಿದೆ. ಅಸುಖವನ್ನುಂಟುಮಾಡುವುದನ್ನು ತ್ಯಜಿಸಬೇಕು. ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವೆ. ನಿನ್ನ ಸುತರಿಗೆ ಪರಮ ಧರ್ಮವನ್ನು ತೋರಿಸಿಕೊಡು. ಯಾವುದರಿಂದ ಪಾಪವನ್ನು ಪಡೆಯುವೆಯೋ ಆ ರಾಜ್ಯದಿಂದ ನಿನಗೇನು? ಧರ್ಮ ಮತ್ತು ಕೀರ್ತಿಗಳನ್ನು ಪಾಲಿಸಿ ಯಶಸ್ಸು ಸ್ವರ್ಗಗಳನ್ನು ಪಡೆಯುತ್ತೀಯೆ. ಪಾಂಡವರಿಗೆ ರಾಜ್ಯವು ದೊರೆಯಲಿ. ಕೌರವರು ಶಾಂತಿಯಲ್ಲಿ ನಡೆದುಕೊಳ್ಳಲಿ.”

ವಿಪ್ರೇಂದ್ರನು ಹೀಗೆ ಹೇಳುತ್ತಿರಲು ಅಂಬಿಕಾಸುತ ವಾಕ್ಯಜ್ಞ ಧೃತರಾಷ್ಟ್ರನು ಮಧ್ಯದಲ್ಲಿಯೇ ಬಾಯಿಹಾಕಿ ದುಃಖದಿಂದ ವಾಕ್ಪತಿಗೆ ಪುನಃ ಹೇಳಿದನು: “ಭಾವಾಭಾವಗಳೆರಡೂ ನಿನಗೆಷ್ಟು ತಿಳಿದಿದೆಯೋ ಅಷ್ಟು ನನಗೂ ಯಥಾವತ್ತಾಗಿ ತಿಳಿದಿದೆ. ಅಪ್ಪಾ! ಲೋಕದಲ್ಲಿ ಸ್ವಾರ್ಥವು ಸಮ್ಮೋಹನಗೊಳಿಸುತ್ತದೆ. ನಾನೂ ಕೂಡ ಲೋಕಾತ್ಮಕನಂತೆ ಎಂದು ತಿಳಿ. ನಿನ್ನ ಅತುಲಪ್ರಭಾವವನ್ನು ಪ್ರಸಾದಿಸು. ನೀನೇ ನನಗೆ ಗತಿಯನ್ನು ತೋರಿಸುವ ಧೀರ. ಮಹರ್ಷೇ! ಅವರು ನನ್ನ ವಶದಲ್ಲಿಯೂ ಇಲ್ಲ. ಕೆಟ್ಟದ್ದನ್ನು ಮಾಡಲು ನನಗೆ ಮನಸ್ಸಿಲ್ಲ. ನೀನೇ ಧರ್ಮ, ಪವಿತ್ರ, ಕೀರ್ತಿ ಮತ್ತು ಧೃತಿ-ಸ್ಮೃತಿ. ನೀನು ಕುರುಗಳ ಮತ್ತು ಪಾಂಡವರ ಪಿತಾಮಹನೂ ಕೂಡ.”

ವಿಜಯಿಗಳಾಗುವವರ ಲಕ್ಷಣ

ವ್ಯಾಸನು ಹೇಳಿದನು: “ನೃಪತೇ! ನಿನ್ನ ಮನಸ್ಸಿನಲ್ಲಿ ಏನು ನಡೆಯುತ್ತಿದೆಯೋ ಅದನ್ನು ಇಷ್ಟವಿದ್ದಷ್ಟು ಹೇಳು. ನಿನ್ನ ಸಂಶಯವನ್ನು ಹೋಗಲಾಡಿಸುತ್ತೇನೆ.”

ಧೃತರಾಷ್ಟ್ರನು ಹೇಳಿದನು: “ಭಗವನ್! ಸಂಗ್ರಾಮದಲ್ಲಿ ವಿಜಯಿಗಳಾಗುವವರಲ್ಲಿರುವ ಲಕ್ಷಣಗಳೆಲ್ಲವನ್ನೂ ತತ್ವತಃ ತಿಳಿಯ ಬಯಸುತ್ತೇನೆ.”

ವ್ಯಾಸನು ಹೇಳಿದನು: “ಅವರ ಅಗ್ನಿಯು ಪ್ರಸನ್ನ ಪ್ರಭೆಯನ್ನು ಹೊಂದಿರುವನು. ಜ್ವಾಲೆಗಳು ಊರ್ಧ್ವಮುಖವಾಗಿರುತ್ತವೆ. ಜ್ವಾಲೆಗಳು ಬಲಬದಿಗೆ ವಾಲಿರುತ್ತವೆ. ಧೂಮವಿರುವುದಿಲ್ಲ. ಅದರಲ್ಲಿ ಹಾಕಿದ ಆಹುತಿಗಳು ಪುಣ್ಯ ಗಂಧವನ್ನು ಸೂಸುತ್ತವೆ. ಇವುಗಳು ಮುಂದಾಗುವ ಜಯವನ್ನು ಸೂಚಿಸುತ್ತವೆ ಎಂದು ಹೇಳುತ್ತಾರೆ. ಅಲ್ಲಿ ಶಂಖ ಮೃದಂಗಗಳು ಗಂಭೀರ ಘೋಷಗಳನ್ನೂ ಮಹಾಸ್ವನಗಳನ್ನು ನುಡಿಸುತ್ತವೆ. ಸೂರ್ಯ-ಚಂದ್ರರು ಅತೀ ಶುದ್ಧ ಬೆಳಕನ್ನು ನೀಡುತ್ತವೆ. ಇವುಗಳು ಮುಂದಾಗುವ ಜಯವನ್ನು ಸೂಚಿಸುತ್ತವೆ ಎಂದು ಹೇಳುತ್ತಾರೆ. ಹೊರಟಿರುವಾಗ ಎದುರಿನಿಂದ ಕಾಗೆಗಳ ವಿಕಾರವಲ್ಲದ ಧ್ವನಿಯು ಕೇಳಿಸಿದರೆ ಅದು ಕಾರ್ಯಸಿದ್ಧಿಯನ್ನು ಸೂಚಿಸುತ್ತದೆ. ಅವು ಹಿಂದಿನಿಂದ ಧ್ವನಿಮಾಡಿದರೆ “ಬೇಗ ಹೋಗು! ಕೆಲಸವಾಗುತ್ತದೆ!” ಎಂದೂ ಮುಂದೆ ಬಂದು ಕೂಗಿದರೆ “ನೀನಿಂದು ಹೊರಟ ಕಾರ್ಯವು ಆಗುವುದಿಲ್ಲ! ಹಿಂದಿರುಗುವುದು ಒಳ್ಳೆಯದು!” ಎಂದೂ ಸೂಚಿಸುತ್ತದೆ. ಎಲ್ಲಿ ಪಕ್ಷಿಗಳು, ರಾಜಹಂಸಗಳು, ಗಿಳಿಗಳು, ಕ್ರೌಂಚಗಳು, ಮತ್ತು ಮರಕುಟುಗಗಳು ಕಲ್ಯಾಣಧ್ವನಿಯಲ್ಲಿ ಕೂಗುತ್ತವೆಯೋ, ಗುಂಪುಗುಂಪಾಗಿ ಪ್ರದಕ್ಷಿಣಾಕಾರದಲ್ಲಿ ಹಾರುತ್ತವೆಯೋ ಅಲ್ಲಿ ಜಯವು ನಿಶ್ಚಿತವೆಂದು ವಿಪ್ರರು ಹೇಳುತ್ತಾರೆ. ಯಾರ ಅಲಂಕಾರಗಳು, ಕವಚಗಳು ಮತ್ತು ಗುರಾಣಿಗಳು, ಸೈನಿಕರ ಮುಖಗಳು ಪ್ರಶಾಂತವಾಗಿ ಬಂಗಾರದ ಬಣ್ಣದಲ್ಲಿ ಹೊಳೆದು ಕಣ್ಣುಕುಕ್ಕಿ ಅವುಗಳನ್ನು ನೋಡಲೂ ಕಷ್ಟವಾಗಿರುತ್ತದೆಯೋ ಅವರ ಸೇನೆಯು ಶತ್ರುಗಳನ್ನು ಜಯಿಸುತ್ತದೆ. ಎಲ್ಲಿ ಯೋಧರ ಸಂತೋಷದ ಕೂಗು, ಸತ್ವ ಮತ್ತು ಮಾಲೆಗಳು ಮಾಸುವುದಿಲ್ಲವೋ ಅವರು ರಣದಲ್ಲಿ ರಿಪುಗಳನ್ನು ಗೆಲ್ಲುತ್ತಾರೆ. ಯುದ್ಧರಂಗವನ್ನು ಪ್ರವೇಶಿಸುವವನಿಗೆ ಇಷ್ಟವಾದ ಗಾಳಿಬೀಸಿದರೆ, ಯುದ್ಧಕ್ಕೆ ಹೊರಡುವವನಿಗೆ ಹಣವನ್ನಿತ್ತರೆ, ಮೊದಲೇ ಯುದ್ಧವನ್ನು ಪ್ರತಿಷೇದಿಸಿದರೆ ಅಂಥವರು ಯುದ್ಧದ ಪ್ರಯೋಜನವನ್ನು ಮೊದಲೇ ಕಂಡುಕೊಳ್ಳುತ್ತಾರೆ. ಶಬ್ಧ, ರೂಪ, ರಸ, ಸ್ಪರ್ಶ ಮತ್ತು ಗಂಧಗಳು ಎಲ್ಲಿ ಬದಲಾಗದೇ ಶುಭವಾಗಿರುವವೋ, ಎಲ್ಲಿ ಯೋಧರು ಸದಾ ಹೃಷ್ಟರಾಗಿರುವರೋ ಅವರ ಜಯವು ನಿಶ್ಚಯಿಸಿದ್ದು. ಗಾಳಿ, ಮೋಡ, ಪಕ್ಷಿಗಳು ಅವರ ಹಿಂದಿನಿಂದ ಬರುತ್ತವೆ. ಮೋಡದಲ್ಲಿ ಕಾಮನ ಬಿಲ್ಲುಗಳು ಅವರನ್ನು ಅನುಸರಿಸುತ್ತವೆ. ಇವು ಜಯಹೊಂದುವವರ ಲಕ್ಷಣಗಳು.

“ಆದರೆ ಬೇಗನೆ ಸಾಯುವವರಲ್ಲಿ ಈ ಚಿಹ್ನೆಗಳು ವಿರುದ್ಧವಾಗಿರುತ್ತವೆ. ಸೇನೆಯು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಯೋಧಗಣಗಳ ಹರ್ಷವೊಂದೇ ಜಯದ ಲಕ್ಷಣವೆನಿಸಿಕೊಳ್ಳುತ್ತದೆ. ಓರ್ವನೇ ಸೈನಿಕನು ಭಯಪಟ್ಟು ಓಡಿಹೋಗುವಾಗ ಅತಿ ದೊಡ್ಡ ಸೇನೆಯನ್ನೂ ಒಡೆಯಬಲ್ಲ. ಭಯಗೊಂಡ ಅವನು ಶೂರಯೋಧರನ್ನೂ ಕೂಡ ಹೆದರಿಸಬಲ್ಲನು. ಒಡೆದು ಚದುರಿಹೋದ ಮಹಾ ಸೇನೆಯನ್ನು, ಓಡಿ ಹೋದ ಮೃಗಗಣಗಳಂತೆ ಅಥವಾ ಮಹಾವೇಗದಿಂದ ಹರಿಯುವ ನೀರಿನಂತೆ, ಪುನಃ ಒಟ್ಟುಗೂಡಿಸುವುದು ಬಹಳ ಕಷ್ಟ. ಎಲ್ಲಕಡೆಯಿಂದಲೂ ಬಿದ್ದ ಮಹಾಸೇನೆಯನ್ನು ಸಮಾಧಾನಪಡಿಸುವುದು ಸಾಧ್ಯವಿಲ್ಲ. ಭಯಪಟ್ಟುಕೊಂಡವರು ಶೂರ ಯೋಧರನ್ನು ಕೂಡ ಹೆದರಿಸುತ್ತಾರೆ. ಭೀತರಾದವರನ್ನು, ಭಗ್ನರಾದವರನ್ನು ನೋಡಿ ಭಯವು ಇನ್ನೂ ಹೆಚ್ಚಾಗುತ್ತದೆ. ಶತ್ರುಗಳಿಂದ ಒಡೆಯಲ್ಪಟ್ಟು ದಿಕ್ಕುಗಳಿಗೆ ಚದುರಿಹೋದ ಮಹಾಸೇನೆಯನ್ನು ಮಹಾಸೇನೆಯ ಚತುರಂಗ ಬಲಗಳ ಮಹೀಪತಿಯು ಶೂರನಾಗಿದ್ದರೂ ಪುನಃ ಸ್ಥಾಪಿಸಲು ಶಕ್ಯವಿರುವುದಿಲ್ಲ. ಮೊದಲೇ ಸತತ ಪ್ರಯತ್ನಮಾಡಿ, ಪರಸ್ಪರರ ಒಪ್ಪಂದ ಮಾಡಿಕೊಂಡು ಗಳಿಸಿದ ವಿಜಯವನ್ನು ಶ್ರೇಷ್ಠವಾದದೆಂದೂ, ಮತ್ತು ಶತ್ರುಗಳಲ್ಲಿ ಭೇದದ ಉಪಾಯದಿಂದ ಗಳಿಸಿದ ವಿಜಯವು ಮಧ್ಯಮವಾದುದೆಂದೂ ಹೇಳುತ್ತಾರೆ. ಯುದ್ಧದಲ್ಲಿ ಕೊಂದು ಗಳಿಸಿದ ವಿಜಯವನ್ನು, ಹೊಡಿದುರಿಳಿಸಿದ ಮಹಾದೋಷವಿರುವುದರಿಂದ ವ್ಯಂಗ್ಯವಾದುದೆಂದು ಹೇಳುತ್ತಾರೆ. ಪರಸ್ಪರರನ್ನು ಚೆನ್ನಾಗಿ ತಿಳಿದುಕೊಂಡಿರುವ, ಪರಸ್ಪರರೊಂದಿಗೆ ಸಂತೋಷದಿಂದಿರುವ, ಅವಧೂತರಾಗಿರುವ, ಸುನಿಶ್ಚಿತರಾಗಿರುವ ಐವತ್ತು ಶೂರರಾದರೂ ಮಹಾ ಸೇನೆಯನ್ನು ಮಥಿಸಬಲ್ಲರು. ಐವರು ಅಥವಾ ಆರು ಅಥವಾ ಏಳು ಮಂದಿಯಾದರೂ ವಿಜಯವನ್ನು ಹಿಂದಿರುಗಿಸಬಲ್ಲರು. ವೈನತೇಯ ಗರುಡನು ಪಕ್ಷಿಗಳ ಮಹಾಗುಂಪೇ ಬಂದರೂ ಇನ್ನೊಬ್ಬರ ಸಹಾಯವನ್ನು ಕೇಳುವುದಿಲ್ಲ. ಸೇನೆಯು ದೊಡ್ಡದಾಗಿದೆಯೆಂದು ಜಯವಾಗುವುದಿಲ್ಲ. ದೈವದ ಮೇಲೆ ಅವಲಂಬಿಸಿರುವ ಜಯವು ನಿಶ್ಚಯವಾದುದಲ್ಲ. ಸಂಗ್ರಾಮದಲ್ಲಿ ಜಯವಾದವರಿಗೂ ಅತ್ಯಂತ ಕ್ಷಯವಾಗುತ್ತದೆ.”

ಹೀಗೆ ಧೀಮತ ಧೃತರಾಷ್ಟ್ರನಿಗೆ ಹೇಳಿ ವ್ಯಾಸನು ಹೋದನು. ವ್ಯಾಸನಾಡಿದುದನ್ನು ಕೇಳಿ ಧೃತರಾಷ್ಟ್ರನಾದರೋ ಯೋಚನೆಯಲ್ಲಿ ಬಿದ್ದನು. ಒಂದು ಕ್ಷಣ ಆಲೋಚಿಸಿ, ಮತ್ತೆ ಮತ್ತೆ ನಿಟ್ಟಿಸಿರು ಬಿಡುತ್ತಾ ಸಂಜಯನನ್ನು ಕೇಳಿದನು: “ಸಂಜಯ! ಯುದ್ಧದಲ್ಲಿ ಸಂತೋಷಪಡುವ ಈ ಶೂರ ಮಹೀಪಾಲರು ಅನ್ಯೋನ್ಯರನ್ನು ಶಸ್ತ್ರಗಳಿಂದ ಹೊಡೆಯುವವರಿದ್ದಾರೆ. ಭೂಮಿಗಾಗಿ ಈ ಪಾರ್ಥಿವರು ತಮ್ಮ ಜೀವವನ್ನು ತೊರೆದವರಾಗಿ ಪರಸ್ಪರರನ್ನು ಕೊಂದು ಯಮಕ್ಷಯವನ್ನು ವೃದ್ಧಿಸದೇ ಶಾಂತರಾಗುವವರಲ್ಲ. ಭೂಮಿಯ ಐಶ್ವರ್ಯವನ್ನು ಇಚ್ಛಿಸುವ ಅವರು ಪರಸ್ಪರರನ್ನು ಸಹಿಸುತ್ತಿಲ್ಲ. ಹಾಗಿದ್ದರೆ ಭೂಮಿಗೆ ಬಹಳ ಗುಣಗಳಿರಬಹುದೆಂದು ನನಗನ್ನಿಸುತ್ತದೆ. ಅವುಗಳನ್ನು ನನಗೆ ಹೇಳು! ಬಹಳಷ್ಟು ಸಹಸ್ರ, ಲಕ್ಷ, ಕೋಟಿ, ಅರ್ಬುದ ಸಂಖ್ಯೆಗಳಲ್ಲಿ ಲೋಕವೀರರು ಕುರಜಾಂಗಲದಲ್ಲಿ ಬಂದು ಸೇರಿದ್ದಾರೆ. ಹೀಗೆ ಬಂದಿರುವವರ ದೇಶ ನಗರಗಳ ಲಕ್ಷಣಗಳ ಕುರಿತು ಸರಿಯಾಗಿ ಕೇಳಲು ಬಯಸುತ್ತೇನೆ. ಆ ಅಮಿತ ತೇಜಸ್ವಿ ವಿಪ್ರರ್ಷಿ ವ್ಯಾಸದ ಕರುಣೆಯಿಂದ ನೀನು ದಿವ್ಯ ಬುದ್ಧಿಯ ದೀಪದ ಬೆಳಕಿನಿಂದ ಜ್ಞಾನದ ದೃಷ್ಟಿಯನ್ನು ಪಡೆದುಕೊಂಡಿರುವೆ.”

ಆಗ ಸಂಜಯನು ಧೃತರಾಷ್ಟ್ರನಿಗೆ ಭೂಮಿಯ ಗುಣಗಳ ಕುರಿತೂ ಭಾರತವರ್ಷದ ನದೀ-ದೇಶಗಳ ಕುರಿತೂ, ವ್ಯಾಸನು ತನಗೆ ಕರುಣಿಸಿದ ದಿವ್ಯದೃಷ್ಠಿಯಿಂದ ನೋಡಿ, ವರ್ಣಿಸಿದನು.

ಸೈನ್ಯಶಿಕ್ಷಣ

ಸೋಮಕರೊಂದಿಗೆ ಕುರುಕ್ಷೇತ್ರಕ್ಕೆ ಬಂದಿಳಿದ ಮಹಾಬಲಿ ಪಾಂಡವರು ಗೆಲ್ಲುವ ಆಸೆಯನ್ನಿಟ್ಟುಕೊಂಡು ಕೌರವರನ್ನು ಎದುರಿಸಿದರು. ವೇದಾಧ್ಯಯನ ಸಂಪನ್ನರಾದ ಅವರೆಲ್ಲರೂ ಯುದ್ಧವನ್ನು ಆನಂದಿಸುವವರಾಗಿದ್ದರು. ಯುದ್ಧದಲ್ಲಿ ಜಯವನ್ನು ಆಶಿಸುತ್ತಾ ರಣದಲ್ಲಿ ವಧೆಯನ್ನು ಎದುರಿಸಿದರು. ಆ ದುರ್ಧರ್ಷರು ಧಾರ್ತರಾಷ್ಟ್ರನ ವಾಹಿನಿಯನ್ನು ಎದುರಿಸಿ ಪೂರ್ವಾಭಿಮುಖರಾಗಿ ಪಶ್ಚಿಮಭಾಗದಲ್ಲಿ ಸೈನಿಕರೊಂದಿಗೆ ಬೀಡುಬಿಟ್ಟರು. ಯುಧಿಷ್ಠಿರನು ವಿಧಿವತ್ತಾಗಿ ಸಮಂತಪಂಚಕದ ಹೊರಗೆ ಸಹಸ್ರಾರು ಶಿಬಿರಗಳನ್ನು ಮಾಡಿಸಿದನು. ಕೇವಲ ಬಾಲಕ ವೃದ್ಧರು ಉಳಿದಿದ್ದ ಇಡೀ ಭೂಮಿಯು ಕುದುರೆ-ಪುರುಷ-ರಥ-ಕುಂಜರಗಳಿಲ್ಲದೇ ಶೂನ್ಯವಾಗಿ ತೋರಿತು. ಸೂರ್ಯನು ಸುಡುವ ಜಂಬೂದ್ವೀಪದ ಎಲ್ಲ ಕಡೆಗಳಿಂದ ಸೇನೆಗಳನ್ನು ಒಟ್ಟುಗೂಡಿಸಲಾಗಿತ್ತು. ದೇಶ, ನದಿ, ಶೈಲ, ವನಗಳನ್ನು ದಾಟಿ ಬಂದ  ಸರ್ವವರ್ಣದವರೂ ಬಹುಯೋಜನ ಮಂಡಲಗಳಲ್ಲಿ ಒಟ್ಟಾಗಿದ್ದರು. ರಾಜ ಯುದಿಷ್ಠಿರನು ಅವರ ವಾಹನಗಳೊಂದಿಗೆ ಎಲ್ಲರಿಗೂ ಅನುತ್ತಮ ಭಕ್ಷಭೋಜ್ಯಗಳನ್ನು ನಿಯೋಜಿಸಿದನು. ಅವರಿಗೆ ವಿವಿಧ ಸಂಜ್ಞೆಗಳನ್ನು ಕೊಟ್ಟನು. ಇವುಗಳನ್ನು ಹೇಳುವುದರಿಂದ ಅವರು ಪಾಂಡವರ ಕಡೆಯವರೆಂದು ಹೇಳಬಹುದಾಗಿತ್ತು. ಹಾಗೆಯೇ ಆ ಕೌರವ್ಯನು ಯುದ್ಧಕಾಲದಲ್ಲಿ ಗುರುತಿಸಲಿಕ್ಕಾಗಿ ಎಲ್ಲರಿಗೂ ಸಂಜ್ಞೆಗಳನ್ನೂ ಆಭರಣಗಳನ್ನೂ ಆಯೋಜಿಸಿದನು.

ಪಾರ್ಥರ ಧ್ವಜಾಗ್ರವನ್ನು ನೋಡಿದ ಮಹಾಮನಸ್ವಿ ಧಾರ್ತರಾಷ್ಟ್ರನು ನೆತ್ತಿಯ ಮೇಲೆ ಹಿಡಿದಿದ್ದ ಬಿಳಿಯ ಕೊಡೆಯ ನೆರಳಿನಲ್ಲಿ, ಸಹಸ್ರಾರು ಆನೆಗಳ ಮಧ್ಯೆ, ತಮ್ಮಂದಿರಿಂದ ಪರಿವಾರಿತನಾಗಿ ಸರ್ವ ಮಹೀಪಾಲರೊಂದಿಗೆ ಪಾಂಡವರ ವಿರುದ್ಧ ವ್ಯೂಹವನ್ನು ರಚಿಸಿದನು. ದುರ್ಯೋಧನನನ್ನು ನೋಡಿ ಸಂತೋಷದಿಂದ ಸರ್ವ ಪಾಂಡವಸೈನಿಕರೂ ಸಹಸ್ರಾರು ಮಹಾಶಂಖಗಳನ್ನು ಊದಿದರು ಮತ್ತು ಭೇರಿಗಳನ್ನು ಬಾರಿಸಿದರು. ಪ್ರಹೃಷ್ಟರಾಗಿದ್ದ ತಮ್ಮ ಸೇನೆಯನ್ನು ನೋಡಿ ಪಾಂಡವರೂ ವಾಸುದೇವನೂ ಹೃಷ್ಟಮನಸ್ಕರಾದರು. ಯೋಧರನ್ನು ಹರ್ಷಗೊಳಿಸುತ್ತಾ ವಾಸುದೇವ-ಧನಂಜಯರಿಬ್ಬರು ಪುರುಷವ್ಯಾಘ್ರರೂ ರಥದಲ್ಲಿ ನಿಂತು ದಿವ್ಯ ಶಂಖಗಳನ್ನು ಊದಿದರು. ಪಾಂಚಜನ್ಯ ಮತ್ತು ದೇವದತ್ತ ಇವೆರಡರ ನಿರ್ಘೋಷವನ್ನು ಕೇಳಿ ಪ್ರಾಣಿಗಳೊಂದಿಗೆ ಯೋಧರೂ ಮಲಮೂತ್ರಗಳನ್ನು ವಿಸರ್ಜಿಸಿದರು. ಗರ್ಜಿಸುವ ಸಿಂಹದ ಕೂಗನ್ನು ಕೇಳಿ ಇತರ ಮೃಗಗಳು ಭಯಪಡುವಂತೆ ಧಾರ್ತರಾಷ್ಟ್ರನ ಸೇನೆಯು ಶಂಖನಾದವನ್ನು ಕೇಳಿ ತಲ್ಲಣಿಸಿತು. ಮೇಲೆದ್ದ ಧೂಳಿನಿಂದ ಭೂಮಿಯಲ್ಲಿ ಏನೂ ಕಾಣದಂತಾಯಿತು. ಆದಿತ್ಯನು ಮುಳುಗಿದನೋ ಎನ್ನುವಂತೆ ಸೈನ್ಯಗಳನ್ನು ಧೂಳು ಆವರಿಸಿತು. ಅಲ್ಲಿ ಕಪ್ಪು ಮೋಡಗಳು ಸೇನೆಗಳನ್ನು ಸುತ್ತುವರೆದು ರಕ್ತ-ಮಾಂಸಗಳಿಂದ ಕೂಡಿದ ಮಳೆಯನ್ನು ಸುರಿಸಿದ ಅದ್ಭುತವು ನಡೆಯಿತು. ಆಗ ಕಲ್ಲು-ಮಣ್ಣುಗಳಿಂದ ಕೂಡಿದ ಜೋರಾದ ಭಿರುಗಾಳಿಯು ಕೆಳಗಿನಿಂದ ಬೀಸಿ ಆ ಧೂಳಿನಿಂದ ಸೇನೆಗಳನ್ನು ಬಡಿದು ಹೊಡೆಯಿತು. ಯುದ್ಧಕ್ಕೆ ಸಂತೋಷದಿಂದ ಕುರುಕ್ಷೇತ್ರದಲ್ಲಿ ನಿಂತಿರುವ ಆ ಎರಡೂ ಸೇನೆಗಳೂ ಅಲ್ಲೋಲಕಲ್ಲೋಲಗೊಳ್ಳುತ್ತಿರುವ ಸಾಗರಗಳಂತೆ ತೋರಿದವು. ಅವರ ಆ ಸೇನೆಗಳ ಸಮಾಗಮವು ಯುಗಾಂತದಲ್ಲಿ ಎರಡು ಸಾಗರಗಳು ಸೇರುವಂತೆ ಅದ್ಭುತವಾಗಿತ್ತು. ಕೌರವರು ಒಟ್ಟುಸೇರಿಸಿದ ಸೇನಾಸಮೂಹಗಳಿಂದ ಬಾಲಕ ವೃದ್ಧರನ್ನು ಬಿಟ್ಟು ಭೂಮಿಯಲ್ಲಾ ಬರಿದಾಗಿತ್ತು. ಆಗ ಕುರು-ಪಾಂಡವ-ಸೋಮಕರು ಒಪ್ಪಂದವನ್ನು ಮಾಡಿಕೊಂಡು ಯುದ್ಧಗಳಲ್ಲಿ ನಿಯಮ-ಧರ್ಮಗಳನ್ನು ಸ್ಥಾಪಿಸಿದರು.

“ಈ ಯುದ್ಧವು ಮುಗಿದನಂತರ ನಾವು ಪರಸ್ಪರರೊಡನೆ ಪ್ರೀತಿಯಿಂದಲೇ ಇರಬೇಕು. ಮೊದಲಿನಂತೆಯೇ ಪರಸ್ಪರರಲ್ಲಿ ನಡೆದು ಕೊಳ್ಳಬೇಕು. ವಾಕ್ಯುದ್ಧದಲ್ಲಿ ಪ್ರವೃತ್ತರಾದವರನ್ನು ವಾಕ್ಯುದ್ಧದಿಂದಲೇ ಎದುರಿಸಬೇಕು. ಸೇನೆಯನ್ನು ಬಿಟ್ಟು ಹೋಗುವವರನ್ನು ಎಂದೂ ಕೊಲ್ಲಬಾರದು. ರಥದಲ್ಲಿರುವವನೊಡನೆ ರಥದಲ್ಲಿರುವವನೇ, ಆನೆಯ ಸವಾರನೊಡನೆ ಆನೆಯ ಸವಾರಿಯೇ, ಕುದುರೆಯ ಸವಾರನೊಡನೆ ಕುದುರೆಯ ಸವಾರನೇ, ಮತ್ತು ಪದಾತಿಯೊಡನೆ ಪದಾತಿಯೇ ಯುದ್ಧಮಾಡಬೇಕು. ಯೋಗ, ವೀರ್ಯ, ಉತ್ಸಾಹ ಮತ್ತು ವಯಸ್ಸಿಗೆ ತಕ್ಕಂತೆ, ಎಚ್ಚರಿಕೆಯನ್ನಿತ್ತು ಹೊಡೆಯಬೇಕು. ಸಿದ್ಧನಾಗಿರದೇ ಇರುವವನನ್ನು ಅಥವಾ ಭಯಭೀತನಾದವನ್ನು ಹೊಡೆಯಬಾರದು. ಇನ್ನೊಬ್ಬರೊಡನೆ ಹೋರಾಡುತ್ತಿರುವವನನ್ನು, ಬುದ್ಧಿ ಕಳೆದುಕೊಂಡಿರುವವನನ್ನು, ಹಿಂದೆ ಓಡಿಹೋಗುತ್ತಿರುವನನ್ನು, ಶಸ್ತ್ರವನ್ನು ಕಳೆದುಕೊಂಡವನನ್ನು, ಕವಚವಿಲ್ಲದವನನ್ನು ಎಂದೂ ಹೊಡೆಯಬಾರದು. ಸೂತರನ್ನು, ಕಟ್ಟಿದ ಪ್ರಾಣಿಗಳನ್ನು, ಶಸ್ತ್ರಗಳ ಸರಬರಾಜುಮಾಡುವವರನ್ನು, ಭೇರಿ-ಶಂಖಗಳನ್ನು ನುಡಿಸುವವರನ್ನು ಎಂದೂ ಹೊಡೆಯಬಾರದು.”

ಈ ರೀತಿ ಒಪ್ಪಂದವನ್ನು ಮಾಡಿಕೊಂಡು ಕುರು-ಪಾಂಡವ-ಸೋಮಕರು ಪರಸ್ಪರರನ್ನು ವೀಕ್ಷಿಸಿ ಪರಮ ವಿಸ್ಮಿತರಾದರು. ಅಲ್ಲಿ ತಂಗಿದ ಆ ಮಹಾತ್ಮ ಪುರುಷರ್ಷಭರು ಸೈನಿಕರೊಂದಿಗೆ ಹೃಷ್ಟರೂಪರೂ ಸುಮನಸ್ಕರೂ ಆದರು.

ಸೇನೆಗಳನ್ನು ವಿಧಾನತಃ ವ್ಯೂಹಗಳಲ್ಲಿ ರಚಿಸುವಾಗ ದುಯೋಧನನು ದುಃಶಾಸನನಿಗೆ ಹೀಗೆ ಹೇಳಿದನು: “ದುಃಶಾಸನ! ಈ ರಥಗಳನ್ನು ತಕ್ಷಣವೇ ಭೀಷ್ಮನ ರಕ್ಷಣೆಗೆ ಬಳಸು. ಎಲ್ಲ ಸೇನೆಗಳನ್ನೂ ಶೀಘ್ರವಾಗಿ ಪ್ರಚೋದಿಸು. ಬಹಳ ವರ್ಷಗಳಿಂದ ಬಯಸುತ್ತಿರುವ, ಸೇನೆಗಳೊಂದಿಗೆ ಪಾಂಡವರ ಮತ್ತು  ಕೌರವರ ಸಮಾಗಮದ ಅವಕಾಶವು ಈಗ ಬಂದೊದಗಿದೆ. ಭೀಷ್ಮನ ರಕ್ಷಣೆಯನ್ನು ಬೇರೆ ಯಾವ ಕೆಲಸವೂ ಮುಖ್ಯವಾದುದಲ್ಲವೆಂದು ತಿಳಿದಿದ್ದೇನೆ. ಏಕೆಂದರೆ ಉಳಿಸಿಕೊಂಡರೆ ಇವನು ಸೋಮಕ-ಸೃಂಜಯರೊಂದಿಗೆ ಪಾರ್ಥರನ್ನು ಸಂಹರಿಸುತ್ತಾನೆ. “ನಾನು ಶಿಖಂಡಿಯನ್ನು ಸಂಹರಿಸುವುದಿಲ್ಲ. ಅವನು ಹಿಂದೆ ಸ್ತ್ರೀಯಾಗಿದ್ದನೆಂದು ಹೇಳುತ್ತಾರೆ. ಆದುದರಿಂದ ರಣದಲ್ಲಿ ನಾನು ಅವನನ್ನು ವರ್ಜಿಸುತ್ತೇನೆ” ಎಂದು ಆ ವಿಶುದ್ಧಾತ್ಮನು ಹೇಳಿದ್ದನು. ಆದುದರಿಂದ ವಿಶೇಷವಾಗಿ ಭೀಷ್ಮನನ್ನು ರಕ್ಷಿಸಬೇಕೆಂದು ನನ್ನ ವಿಚಾರ. ನನ್ನವರೆಲ್ಲರೂ ಶಿಖಂಡಿಯ ವಧೆಗೆ ನಿಲ್ಲಲಿ. ಹಾಗೆಯೇ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಗಳಿಂದ ಬಂದ ಸರ್ವ ಶಸ್ತ್ರಾಸ್ತ್ರಕುಶಲರೂ ಪಿತಾಮಹನನ್ನು ರಕ್ಷಿಸಲಿ. ಸಿಂಹವು ಮಹಾಬಲಶಾಲಿಯಾಗಿದ್ದರೂ ರಕ್ಷಣೆಯಿಲ್ಲದಿದ್ದರೆ ತೋಳವು ಕೊಂದುಹಾಕುತ್ತದೆ. ನರಿಯಂತಿರುವ ಶಿಖಂಡಿಯಿಂದ ಕೊಲ್ಲಲ್ಪಡದಂತೆ ಈ ಸಿಂಹವನ್ನು ರಕ್ಷಿಸೋಣ. ದುಃಶಾಸನ! ಪಾರ್ಥನಿಂದ ಸಂರಕ್ಷಿಸಲ್ಪಟ್ಟ ಮತ್ತು ಭೀಷ್ಮನಿಂದ ವಿವರ್ಜಿತನಾದ ಶಿಖಂಡಿಯು ಗಾಂಗೇಯನನ್ನು ಕೊಲ್ಲದಹಾಗೆ ಮಾಡು.”

ಆಗ ರಾತ್ರಿಯು ಕಳೆಯಲು “ಹೊರಡಿ! ಹೊರಡಿ!” ಎಂಬ ಭೂಮಿಪಾಲರ ಕೂಗಿನ ಮಹಾ ಶಬ್ಧವುಂಟಾಯಿತು. ಎಲ್ಲ ಕಡೆಗಳಿಂದಲೂ ಶಂಖ-ದುಂದುಭಿಗಳ ನಿರ್ಘೋಷ, ಸಿಂಹನಾದ, ಕುದುರೆಗಳ ಹೀಂಕಾರದ ಶಬ್ಧ, ರಥಚಕ್ರಗಳ ಶಬ್ಧ, ಆನೆಗಳ ಘೀಳು, ಯೋಧರ ಗರ್ಜನೆ, ಚಪಾಳೆ, ತೋಳುಗಳನ್ನು ಚಪ್ಪರಿಸುವ ಶಬ್ಧ ಹೀಗೆ ತುಮುಲವುಂಟಾಯಿತು. ಸೂರ್ಯನು ಉದಯಿಸಿದಾಗ ಕುರುಪಾಂಡವ ಸೇನೆಗಳ, ಧಾರ್ತರಾಷ್ಟ್ರರ ಮತ್ತು ಪಾಂಡವರ ಆ ಮಹಾಸೇನೆಯು ಎಲ್ಲವೂ ಏನೂ ಬಿಡದೇ ಕಂಡಿತು. ಅಲ್ಲಿ ಬಂಗಾರದಿಂದ ಅಲಂಕರಿಸಿಸಲ್ಪಟ್ಟ ಆನೆಗಳು ಮತ್ತು ರಥಗಳು ವಿದ್ಯುತ್ತಿನಿಂದೊಡಗೂಡಿದ ಮೋಡಗಳಂತೆ ಹೊಳೆದು ಕಾಣುತ್ತಿದ್ದವು. ಬಹುಸಂಖ್ಯೆಯಲ್ಲಿದ್ದ ಆ ರಥಗಳ ಸೇನೆಗಳು ನಗರಗಳಂತೆ ತೋರುತ್ತಿದ್ದವು. ಅಲ್ಲಿ ಭೀಷ್ಮನು ಪೂರ್ಣಚಂದ್ರನಂತೆ ಅತೀವವಾಗಿ ಶೋಭಿಸುತ್ತಿದ್ದನು. ಯೋಧರೂ ಕೂಡ ಧನುಸ್ಸು, ಖಡ್ಗ, ಗದೆ, ಶಕ್ತಿ, ತೋಮರ ಮೊದಲಾದ ಶುಭ್ರ ಪ್ರಹರಣಗಳನ್ನು ಹಿಡಿದು ತಮ್ಮ ತಮ್ಮ ಸೇನೆಗಳಲ್ಲಿ ನಿಂತಿದ್ದರು. ಆನೆಗಳು, ರಥಗಳು, ಪದಾತಿಗಳು ಮತ್ತು ತುರಗಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ರಚಿಸಲ್ಪಟ್ಟಿದ್ದರು. ಕೌರವರಲ್ಲಿ ಮತ್ತು ಪಾಂಡವರಲ್ಲಿ ಸಹಸ್ರಾರು ಹೊಳೆಯುತ್ತಿರುವ ಬಹುವಿಧದ ಆಕಾರಗಳ ಧ್ವಜಗಳು ಹಾರಾಡುತ್ತಿರುವುದು ಕಂಡುಬಂದವು. ಕಾಂಚನದ, ಮಣಿಗಳಿಂದ ಅಲಂಕರಿಸಲ್ಪಟ್ಟ, ಅಗ್ನಿಯಂತೆ ಬೆಳಗುತ್ತಿರುವ ಆ ಕವಚಧಾರಿ ರಾಜರ ಸಹಸ್ರಾರು ಧ್ವಜಗಳು ಮಿಂಚುತ್ತಿದ್ದವು. ಮಹೇಂದ್ರನ ಸದನಕ್ಕೆ ಕಟ್ಟಿದ ಶುಭ್ರವಾದ ಮಹೇಂದ್ರ ಧ್ವಜಗಳಂತೆ ಯುದ್ಧಕಾಂಕ್ಷಿಣರಾದ, ಸನ್ನದ್ಧರಾದ ಆ ವೀರರು ಕಾಣುತ್ತಿದ್ದರು. ಚರ್ಮದ ಕೈಬಂದಿಗಳನ್ನು ಧರಿಸಿ ಆಯುಧಗಳನ್ನು ಮೇಲೆತ್ತಿ ಹಿಡಿದು, ಮುಖಗಳನ್ನು ಮೇಲೆಮಾಡಿಕೊಂಡು ಆ ಋಷಭಾಕ್ಷ ಮನುಷ್ಯೇಂದ್ರರು ಸೇನೆಗಳ ಮುಂದೆ ನಿಂತಿದ್ದರು. ಸೌಬಲ ಶಕುನಿ, ಶಲ್ಯ, ಸೈಂಧವ ಜಯದ್ರಥ, ಅವಂತಿಯ ವಿಂದ-ಅನುವಿಂದರು, ಕಾಂಬೋಜದ ಸುದಕ್ಷಿಣ, ಶ್ರುತಾಯುಧ, ಕಲಿಂಗದ ರಾಜ ಜಯತ್ಸೇನ, ಕೌಶಲ್ಯ, ಬೃಹದ್ಬಲ, ಕೃತವರ್ಮ – ಈ ಹತ್ತು ಪುರುಷವ್ಯಾಘ್ರರು ಶೂರರು, ಪರಿಘದಂತಹ ಬಾಹುಗಳುಳ್ಳವರು, ಭೂರಿದಕ್ಷಿಣೆಗಳನ್ನಿತ್ತು ಯಜ್ಞಗಳನ್ನು ಮಾಡಿದವರು ಅಕ್ಷೌಹಿಣಿಗಳ ನಾಯಕರು. ಇವರು ಇನ್ನೂ ಇತರ ಬಹಳಷ್ಟು ದುರ್ಯೋಧನನ ವಶಾನುಗ ನೀತಿಮಂತ ಮತ್ತು ಮಹಾಬಲ ರಾಜರು ಮತ್ತು ರಾಜಪುತ್ರರು ಎಲ್ಲರೂ ಕೃಷ್ಣಾಜಿನಗಳನ್ನು ಕಟ್ಟಿ, ಧ್ವಜ, ಮಾಲೆಗಳನ್ನು ಕಟ್ಟಿಕೊಂಡು ತಮ್ಮ ತಮ್ಮ ಸೇನೆಗಳಲ್ಲಿ ಯುದ್ಧ ಸನ್ನದ್ಧರಾಗಿರುವುದು ಕಂಡಿತು. ಈ ಹತ್ತು ಸಮೃದ್ಧ ವಾಹಿನಿಗಳಲ್ಲಿದ್ದ ಅವರು ಸಂತೋಷದಿಂದ ದುರ್ಯೋಧನನಿಗಾಗಿ ಬ್ರಹ್ಮಲೋಕಕ್ಕೆ ಹೋಗಲು ದೀಕ್ಷಿತರಾಗಿದ್ದರು.

ಹನ್ನೊಂದನೆಯದು ಎಲ್ಲ ಸೇನೆಗಳ ಮುಂದೆ ಇದ್ದ, ಶಾಂತನವನು ಅಗ್ರಣಿಯಾಗಿದ್ದ ಧಾರ್ತರಾಷ್ಟ್ರೀ ಕೌರವರ ಮಹಾಸೇನೆ. ಬಿಳಿಯ ಮುಂಡಾಸು, ಬಿಳಿಯ ಕುದುರೆ, ಬಿಳಿಯ ಕವಚಗಳಿಂದ ಆ ಅಚ್ಯುತ ಭೀಷ್ಮನು ಉದಯಿಸುತ್ತಿರುವ ಚಂದ್ರಮನಂತೆ ತೋರಿದನು. ಬಂಗಾರದ ತಾಲಧ್ವಜವಿರುವ ಬೆಳ್ಳಿಯ ರಥದ ಮೇಲೆ ನಿಂತಿದ್ದ ಭೀಷ್ಮನು ಕುರುಪಾಂಡವರಿಗೆ ಬಿಳಿಯ ಮೋಡಗಳ ಮಧ್ಯೆ ಇರುವ ಸೂರ್ಯನಂತೆ ಕಂಡನು. ಸೇನೆಗಳ ಮುಂದೆ ಇರುವ ಭೀಷ್ಮನನ್ನು ನೋಡಿ ಮಹೇಷ್ವಾಸ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಪಾಂಡವರು ಮತ್ತು ಸೃಂಜಯರು ನಡುಗಿದರು. ಬಾಯಿಕಳೆದಿದ್ದ ಮಹಾಸಿಂಹವನ್ನು ನೋಡಿ ಕ್ಷುದ್ರಮೃಗಗಳು ಹೇಗೋ ಹಾಗೆ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಎಲ್ಲರೂ ಭೀತರಾಗಿ ಪುನಃ ಪುನಃ ನಡುಗಿದರು. ಇವು ಶ್ರೀಜುಷ್ಟವಾಗಿದ್ದ ಕೌರವನ ಹನ್ನೆರಡು ವಾಹಿನಿಗಳು.

ಹಾಗೆಯೇ ಮಹಾಪುರುಷರಿಂದ ಪಾಲಿತವಾದ ಏಳು ಅಕ್ಷೋಹಿಣಿಗಳೂ ರಣರಂಗದಲ್ಲಿದ್ದವು. ಪರಸ್ಪರರನ್ನು ಎದುರಿಸಿ ಸೇರಿದ್ದ ಆ ಎರಡೂ ಸೇನೆಗಳೂ ಮಹಾ ಉನ್ಮತ್ತ ಮೊಸಳೆಗಳಿಂದ ಕೂಡಿದ ಯುಗಾಂತದ ಸಾಗರಗಳಂತೆ ಕಂಡವು. ಈ ತರಹ ಸೇನೆಗಳು ಯುದ್ಧಕ್ಕಾಗಿ ಈ ವಿಧದಲ್ಲಿ ಸೇರಿರುವುದನ್ನು ಇದಕ್ಕೂ ಮೊದಲು ನೋಡಿರಲಿಲ್ಲ ಕೇಳಿರಲಿಲ್ಲ.

ಆ ದಿನ ಸೋಮನು ಮಘಾನಕ್ಷತ್ರದಲ್ಲಿದ್ದನು. ಆಕಾಶದಲ್ಲಿ ಏಳು ಮಹಾಗ್ರಹಗಳು ಬೆಳಗುತ್ತಿರುವುದು ಕಂಡುಬರುತ್ತಿತ್ತು. ಉದಯಕಾಲದಲ್ಲಿ ಸೂರ್ಯನು ಎರಡಾಗಿದ್ದನೋ ಎನ್ನುವಂತೆ ತೋರುತ್ತಿತ್ತು. ಅಲ್ಲದೇ ಆ ಭಾನುವು ಆಕಾಶದಲ್ಲಿ ಕಾಣಿಸಿಕೊಂಡಾಗ ಜ್ಞಾಲೆಗಳೊಂದಿಗೆ ಉರಿಯುತ್ತಿರುವಂತೆ ತೋರುತ್ತಿದ್ದನು. ಉರಿದು ಬೆಳಗುತ್ತಿರುವಂತಿದ್ದ ದಿಕ್ಕುಗಳಿಂದ ಮೃತದೇಹಗಳನ್ನು ಭಕ್ಷಿಸುವ ನರಿ-ಕಾಗೆಗಳು ಕೆಳಗುರುಳುವ ಶರೀರಗಳ ಮಾಂಸ-ರಕ್ತಗಳ ಭೋಜನಗಳಿಗಾಗಿ ಕಾದು ಕೂಗುತ್ತಿರುವುದು ಕೇಳಿ ಬರುತ್ತಿತ್ತು. ಅರಿಂದಮ ವೃದ್ಧ ಕುರುಪಿತಾಮಹ ಮತ್ತು ಭರದ್ವಾಜಾತ್ಮಜರು, ಮಾಡಿಕೊಂಡ ಒಪ್ಪಂದದಂತೆ ಧೃತರಾಷ್ಟ್ರನಿಗಾಗಿ ಪಾರ್ಥರನ್ನು ಎದುರಿಸಿ ಯುದ್ಧಮಾಡುವವರಾಗಿದ್ದರೂ, ಪ್ರತಿದಿನವೂ ಬೆಳಿಗ್ಗೆ ಎದ್ದು ಮನಸ್ಸನ್ನು ಸಂಯಮದಲ್ಲಿರಿಸಿಕೊಂಡು “ಪಾಂಡುಪುತ್ರರಿಗೆ ಜಯವಾಗಲಿ!” ಎಂದು ಹೇಳುತ್ತಿದ್ದರು. ಸರ್ಮಧರ್ಮವಿಶೇಷಜ್ಞ ದೇವವ್ರತನು ಮಹೀಪಾಲರನ್ನು ಕರೆದು ಈ ಮಾತನ್ನಾಡಿದನು: “ಕ್ಷತ್ರಿಯರೇ! ಸ್ವರ್ಗದ ಈ ಮಹಾದ್ವಾರವು ತೆರೆದುಕೊಂಡಿದೆ. ಇದರ ಮೂಲಕ ಶಕ್ರ ಮತ್ತು ಬ್ರಹ್ಮನ ಲೋಕಗಳನ್ನು ಸೇರಿ. ಹಿಂದೆ ಹೋಗಿರುವ ಹಿಂದಿನವರು ಇದೇ ದಾರಿಯಲ್ಲಿ ಹೋಗಿದ್ದರು. ಯುದ್ಧದಲ್ಲಿ ಅವ್ಯಗ್ರಮನಸ್ಕರಾಗಿ ಇರುವಂತೆ ನಿಮ್ಮನ್ನು ನೀವು ನೋಡಿಕೊಳ್ಳಿ. ಏಕೆಂದರೆ ನಾಭಾಗ, ಯಯಾತಿ, ಮಾಂಧಾತ, ನಹುಷ, ನೃಗ ಮೊದಲಾದವರು ಇಂತಹದೇ ಕರ್ಮಗಳಿಂದ ಸಂಸಿದ್ಧರಾಗಿ ಪರಮ ಗತಿಯನ್ನು ಪಡೆದರು. ಮನೆಯಲ್ಲಿ ವ್ಯಾಧಿಯಿಂದ ಮರಣಹೊಂದುವುದು ಕ್ಷತ್ರಿಯರಿಗೆ ಅಧರ್ಮ. ಯುದ್ಧದಲ್ಲಿ ನಿಧನವನ್ನು ಹೊಂದುವುದೇ ಇವರ ಸನಾತಮ ಧರ್ಮ.”

ಕೌರವ ಸೇನಾವ್ಯೂಹ

ಭೀಷ್ಮನು ಹೀಗೆ ಹೇಳಲು ಮಹೀಪಾಲರು ಉತ್ತಮ ರಥಗಳಿಂದ ಶೋಭಿಸುತ್ತಿದ್ದ ತಮ್ಮ ತಮ್ಮ ಸೇನೆಗಳಿಗೆ ತೆರಳಿದರು. ಆದರೆ ವೈಕರ್ತನ ಕರ್ಣನು ಮಾತ್ರ ತನ್ನ ಅಮಾತ್ಯ- ಬಂಧುಗಳೊಂದಿಗೆ ಭೀಷ್ಮನ ಸಮರದಲ್ಲಿ ಶಸ್ತ್ರವನ್ನು ಕೆಳಗಿಟ್ಟನು. ಆಗ ಕರ್ಣನಿಲ್ಲದೇ ತವಕಗೊಂಡ ಧಾರ್ತರಾಷ್ಟ್ರರು ಮತ್ತು ರಾಜರು ಹತ್ತೂ ದಿಕ್ಕುಗಳನ್ನು ಸಿಂಹನಾದದಿಂದ ಮೊಳಗಿಸುತ್ತಾ ಹೊರಟರು. ಶ್ವೇತ ಛತ್ರಗಳಿಂದ, ಪತಾಕೆಗಳಿಂದ, ಧ್ವಜ, ಆನೆ, ಕುದುರೆಗಳಿಂದ, ರಥಗಳಿಂದ, ಪಾದಾತಿಗಳಿಂದ ಆ ಸೇನೆಗಳು ಶೋಭಿಸಿದವು. ಭೇರಿ-ಪಣವಗಳ ಶಬ್ಧಗಳಿಂದ, ಪಟಹಗಳ ನಿಸ್ವನಗಳಿಂದ, ರಥಗಾಲಿಗಳ ನಿನಾದಗಳಿಂದ ಮಹಿಯು ವ್ಯಾಕುಲಿತವಾಯಿತು. ಕಾಂಚನದ ಅಂಗದ-ಕೇಯೂರಗಳು ಮತ್ತು ಧನುಸ್ಸುಗಳಿಂದ ಆ ಮಹಾರಥರು ಉರಿಯುತ್ತಿರುವ ಜಂಗಮ ಪರ್ವತಗಳಂತೆ ತೋರುತ್ತಿದ್ದರು. ಮಹಾ ತಾಲವೃಕ್ಷ ಮತ್ತು ಐದು ನಕ್ಷತ್ರಗಳ ಧ್ವಜದ ಕುರುಚಮೂಪತಿ ಭೀಷ್ಮನು ವಿಮಲ ಆಕಾಶದಲ್ಲಿರುವ ಆದಿತ್ಯನಂತೆ ನಿಂತಿದ್ದನು. ಕೌರವನ ಆ ಎಲ್ಲ ಮಹೇಷ್ವಾಸ ರಾಜರೂ ಶಾಂತನವನ ಆದೇಶದಂತೆ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತುಕೊಂಡರು.

ಶೈಬ್ಯನು ಎಲ್ಲ ರಾಜರೊಂದಿಗೆ ರಾಜಾರ್ಹವಾದ, ಪತಾಕೆಗಳುಳ್ಳ ಮಾತಂಗರಾಜನ ಮೇಲೆ ನಡೆದನು. ಧ್ವಜದಲ್ಲಿ ಸಿಂಹದ ಬಾಲವಿದ್ದ ಪದ್ಮವರ್ಣಿ ಅಶ್ವತ್ಥಾಮನು ಸರ್ವ ಸೇನೆಗಳ ಮುಂದೆ ಹೋಗಿ ನಿಂತುಕೊಂಡನು. ಶ್ರುತಾಯು, ಚಿತ್ರಸೇನ, ಪುರುಮಿತ್ರ, ವಿವಿಂಶತಿ, ಶಲ್ಯ, ಭೂರಿಶ್ರವ, ವಿಕರ್ಣ – ಈ ಏಳು ಮಹೇಷ್ವಾಸರು, ವರವರ್ಣದ ಕವಚಗಳನ್ನು ಧರಿಸಿ ರಥಗಳಲ್ಲಿ ನಿಂತು ದ್ರೋಣಪುತ್ರನನ್ನು ಮುಂದಿಟ್ಟುಕೊಂಡು, ಭೀಷ್ಮನ ಮುಂದೆ ಸಾಗಿದರು. ಅವರ ಉತ್ತಮ ರಥಗಳಿಗೆ ಕಟ್ಟಿದ್ದ ಎತ್ತರವಾದ ಬಂಗಾರದ ಧ್ವಜಗಳು ಹೊಳೆಯುತ್ತಿದ್ದವು. ಆಚಾರ್ಯ ಮುಖ್ಯ ದ್ರೋಣನ ಬಂಗಾರದ ಧ್ವಜದಲ್ಲಿ ಕಮಂಡಲು ವಿಭೂಷಿತ ವೇದಿಯ ಜೊತೆ ಧನುಸ್ಸು ಇತ್ತು. ಅನೇಕ ಶತಸಹಸ್ರ ಸೇನೆಗಳು ಹಿಂಬಾಲಿಸುತ್ತಿರುವ ದುರ್ಯೋಧನನ ಮಹಾ ಧ್ವಜವು ಮಣಿಮಯ ಆನೆಯ ಚಿಹ್ನೆಯನ್ನು ಹೊಂದಿತ್ತು. ಅವನ ರಥದಲ್ಲಿ ಪ್ರಮುಖ ರಥಿಗಳಾದ ಪೌರವ-ಕಲಿಂಗರು, ಕಾಂಬೋಜದ ಸುದಕ್ಷಿಣ, ಕ್ಷೇಮಧನ್ವಿ ಸುಮಿತ್ರರು ನಿಂತಿದ್ದರು. ವೃಷಭದ ಚಿಹ್ನೆಯ ಧ್ವಜವಿರುವ ಮಹಾರ್ಹ ರಥದಲ್ಲಿ, ತನ್ನ ಸೇನೆಯನ್ನು ಎಳೆದುಕೊಂಡು ಹೋಗುತ್ತಿರುವಂತೆ ಮಾಗಧ ನೃಪನು ನಡೆದನು. ಶುಭ್ರ ಮೋಡಗಳಂತೆ ತೋರುತ್ತಿದ್ದ ಆ ಪೂರ್ವದವರ ಮಹಾಸೇನೆಯನ್ನು ಅಂಗಪತಿ ಮತ್ತು ಮಹಾತ್ಮ ಕೃಪರು ರಕ್ಷಿಸುತ್ತಿದ್ದರು. ವರಾಹದ ಮುಖ್ಯ ಧ್ವಜವನ್ನು ಹೊಂದಿದ ರಜತ ರಥದಲ್ಲಿ ತನ್ನ ಸೇನೆಯ ಪ್ರಮುಖನಾಗಿ ಜಯದ್ರಥನು ವಿರಾಜಿಸುತ್ತಿದ್ದನು. ಒಂದು ಲಕ್ಷ ರಥಗಳು, ಎಂಟು ಸಾವಿರ ಆನೆಗಳು ಮತ್ತು ಆರು ಸಾವಿರ ಅಶ್ವಾರೂಢರು ಅವನ ವಶದಲ್ಲಿದ್ದರು. ಆ ಧ್ವಜಿನೀ ಪ್ರಮುಖ ಸಿಂಧುಪತಿಯಿಂದ ಪಾಲಿತಗೊಂಡ ಅನಂತ ರಥ-ಆನೆ-ಕುದುರೆಗಳಿಂದ ಕೂಡಿದ ಮಹಾಬಲವು ಶೋಭಿಸಿತು. ಅರವತ್ತು ಸಾವಿರ ರಥಗಳು ಮತ್ತು ಒಂದು ಲಕ್ಷ ಆನೆಗಳ ಸೇನೆಯ ಪತಿ ಕಲಿಂಗನು ಕೇತುಮತನೊಂದಿಗೆ ಹೊರಟನು. ಅವನ ಪರ್ವತಸಂಕಾಶ ಮಹಾಗಜಗಳು ಯಂತ್ರ-ತೋಮರ-ತೂಣೀರಗಳಿಂದ ಮತ್ತು ಶೋಭಿಸುವ ಪತಾಕೆಗಳಿಂದ ವಿರಾಜಿಸಿದವು. ಕಲಿಂಗರಾಜನಾದರೋ ಎತ್ತರ ಪಾದಪದ ಧ್ವಜ, ಶ್ವೇತ ಛತ್ರ, ನಿಷ್ಕ-ಚಾಮರಗಳಿಂದ ಶೋಭಿಸಿದನು. ಕೇತುಮಾನನೂ ಕೂಡ ವಿಚಿತ್ರ ಪರಮ ಅಂಕುಶದ ಆನೆಯನ್ನು ಏರಿ ಸಮರದಲ್ಲಿ ಮೇಘವನ್ನೇರಿದ ಭಾನುವಂತೆ ಕಂಡನು. ವಜ್ರಧರನಂತೆ ತೇಜಸ್ಸಿನಿಂದ ಬೆಳಗುತ್ತಿದ್ದ ರಾಜಾ ಭಗದತ್ತನು ಉತ್ತಮ ಆನೆಯ ಮೇಲೆ ಕುಳಿತು ಹೊರಟನು. ಆನೆಯ ಹೆಗಲಮೇಲೇರಿ ಹೋಗುತ್ತಿರುವ ಭಗದತ್ತನೊಂದಿಗೆ, ಕೇತುಮಂತನನ್ನು ಅನುಸರಿಸಿ ಅವಂತಿಯ ವಿಂದಾನುವಿಂದರು ಹೊರಟರು. ದ್ರೋಣ, ರಾಜ ಶಾಂತನವ, ಆಚಾರ್ಯಪುತ್ರ, ಬಾಹ್ಲೀಕ, ಕೃಪರಿಂತ ರಚಿತಗೊಂಡ ಆ ವ್ಯೂಹವು ಅನೇಕ ರಥಗಳಿಂದ ಕೂಡಿದ್ದು, ಆನೆಗಳು ಅದರ ಉತ್ತಮಾಂಗಗಳು, ರಾಜರು ತಲೆಗಳು, ಕುದುರೆಗಳು ಅದರ ರೆಕ್ಕೆಗಳಾಗಿದ್ದು, ಎಲ್ಲಕಡೆಯಿಂದಲೂ ಮೇಲೆ ನೋಡುತ್ತಾ ಉಗ್ರವಾಗಿ ತೋರುತ್ತಿತ್ತು.

ಆಗ ಮುಹೂರ್ತಕಾಲದಲ್ಲಿಯೇ ಉತ್ಸಾಹದಿಂದ ಬಂದಿರುವ ಯೋಧರ ಹೃದಯವನ್ನು ಕಂಪಿಸುವ ತುಮುಲ ಶಬ್ಧವು ಕೇಳಿಬಂದಿತು. ಶಂಖ-ದುಂದುಭಿಗಳ ನಿರ್ಘೋಷದಿಂದ, ಆನೆಗಳ ಘೀಳಿನಿಂದ, ರಥಚಕ್ರಗಳ ಘೋಷದಿಂದ ವಸುಂಧರೆಯು ಅತೀವ ನೋವಿಗೊಳಗಾದಳು. ಆಗ ಕ್ಷಣದಲ್ಲಿ ಆಕಾಶ ದಿಕ್ಕುಗಳು ಕುದುರೆಗಳ ಹೇಂಕಾರ ಮತ್ತು ಯೋಧರ ಗರ್ಜನೆಗಳ ಶಬ್ಧಗಳಿಂದ ತುಂಬಿತು. ಧಾರ್ತರಾಷ್ಟ್ರರ ಮತ್ತು ಪಾಂಡವರ ಸೇನೆಗಳು ಪರಸ್ಪರರನ್ನು ಸೇರಿ ತತ್ತರಿಸಿದವು. ಅಲ್ಲಿ ಬಂಗಾರದಿಂದ ವಿಭೂಷಿತ ಆನೆ-ರಥಗಳು ಮಿಂಚಿನಿಂದ ಕೂಡಿದ ಮೋಡಗಳಂತೆ ಹೊಳೆಯುತ್ತಿದ್ದವು. ಕೌರವ ಸೇನೆಯ ಬಹುವಿಧಾಕಾರದ ಧ್ವಜಗಳು ಮತ್ತು ಕಾಂಚನಾಂಗದರ ಸುರುಳಿಗಳು ಉರಿಯುತ್ತಿರುವ ಪಾವಕನಂತೆ ತೋರಿದವು. ಕೌರವರ ಮತ್ತು ಪಾಂಡವರ ಶುಭ ಮಹೇಂದ್ರ ಧ್ವಜಗಳು ಮಹೇಂದ್ರನ ಸದನದಂತೆ ತೋರಿದವು. ಸನ್ನದ್ಧರಾಗಿದ್ದ ಪ್ರಜ್ವಲಿಸುವ ಸೂರ್ಯನಂತೆ ಪ್ರಭೆಯುಳ್ಳ ಕಾಂಚನ ಕವಚಗಳನ್ನುಳ್ಳ ಆ ವೀರರು ಪ್ರಜ್ವಲಿಸುತ್ತಿರುವ ಗ್ರಹಗಳಂತೆ ಕಂಡುಬಂದರು. ಬಣ್ಣ ಬಣ್ಣದ ಕರಬಂಧಗಳನ್ನು ಧರಿಸಿದ್ದ, ಆಯುಧಗಳನ್ನು ಎತ್ತಿಹಿಡಿದ ಋಷಭಾಕ್ಷ ಮಹೇಷ್ವಾಸ ಪತಾಕಿಗಳು ಸೇನೆಗಳ ಮುಂದೆ ಇದ್ದರು.

ಭೀಷ್ಮನನ್ನು ಹಿಂದಿನಿಂದ ಧಾರ್ತರಾಷ್ಟ್ರರಾದ ದುಃಶಾಸನ, ದುರ್ವಿಷಹ, ದುರ್ಮುಖ, ವಿವಿಂಶತಿ, ಚಿತ್ರಸೇನ ಮತ್ತು ವಿಕರ್ಣರು ರಕ್ಷಿಸುತ್ತಿದ್ದರು. ಅವರನ್ನು ಅನುಸರಿಸಿ ಸತ್ಯವ್ರತ, ಪುರುಮಿತ್ರ, ಜಯ, ಭೂರಿಶ್ರವ, ಶಲ, ಹಾಗೂ ಇಪ್ಪತ್ತು ಸಾವಿರ ರಥಗಳು ಹೋದವು. ಅಭೀಷಾಹರು, ಶೂರಸೇನರು, ಶಿಬಿಗಳು, ವಸಾತಯರು, ಶಾಲ್ವರು, ಮತ್ಸ್ಯರು, ಅಂಬಷ್ಠರು, ತ್ರಿಗರ್ತರು, ಕೇಕಯರು, ಸೌವೀರರು, ಕಿತವರು, ಪ್ರಾಚ್ಯರು, ಪತೀಚ್ಯರು, ಉದೀಚ್ಯರು, ಮಾಲವರು – ಈ ಹನ್ನೆರಡು ಜನಪದಗಳು, ಎಲ್ಲರೂ ತನುವನ್ನು ತ್ಯಜಿಸಿದ ಶೂರರು, ಮಹಾ ರಥಗುಂಪುಗಳೊಂದಿಗೆ ಪಿತಾಮಹನನ್ನು ರಕ್ಷಿಸುತ್ತಿದ್ದರು. ಹತ್ತು ಸಾವಿರ ತರಸ್ವಿ ಆನೆಗಳ ಸೇನೆಯೊಂದಿಗೆ ನೃಪತಿ ಮಾಗಧನು ಆ ಸೇನೆಯನ್ನು ಅನುಸರಿಸಿದನು.

ಸೇನೆಗಳ ಮಧ್ಯೆ ರಥಗಳ ಚಕ್ರಗಳನ್ನು ಕಾಯುವವರು ಮತ್ತು ಆನೆಗಳ ಪಾದಗಳನ್ನು ರಕ್ಷಿಸುತ್ತಿದ್ದವರ ಸಂಖ್ಯೆಯೇ ೬೦ ಲಕ್ಷವಾಗಿತ್ತು. ದನುಸ್ಸು, ಖಡ್ಗ ತೋಮರಗಳನ್ನು ಹಿಡಿದು ಸೇನೆಗಳ ಮುಂದೆ ಹೋಗುತ್ತಿದ್ದ ಪದಾತಿಗಳ ಸಂಖ್ಯೆಯು ಅನೇಕ ಲಕ್ಷಗಳಾಗಿತ್ತು. ಅವರು ಉಗುರು-ಪ್ರಾಸಗಳನ್ನು ಬಳಸಿ ಹೋರಾಡುತ್ತಿದ್ದರು. ಹನ್ನೊಂದು ಅಕ್ಷೌಹಿಣಿಯ ದುರ್ಯೋಧನನ ಸೇನೆಯು ಗಂಗೆಯಿಂದ ಅಗಲಿದ ಯಮುನೆಯಂತೆ ತೋರಿತು.

ಪಾಂಡವ ಸೇನಾವ್ಯೂಹ

ಧಾರ್ತರಾಷ್ಟ್ರರ ಸೇನೆಗಳು ವ್ಯೂಹಗೊಂಡಿದನ್ನು ನೋಡಿದ ಪಾಂಡವ ಧರ್ಮಾತ್ಮ ಧರ್ಮರಾಜನು ಧನಂಜಯನಿಗೆ ಹೇಳಿದನು: “ಅಯ್ಯಾ! ಮಹರ್ಷಿ ಬೃಹಸ್ಪತಿಯ ಮಾತುಗಳಂತೆ ಕಡಿಮೆಯಿರುವ ಸೇನೆಯು ಒಂದಕ್ಕೊಂದು ತಾಗಿಕೊಂಡು ಸಂಹತವಾಗಿರಬೇಕು. ದೊಡ್ಡ ಸೇನೆಯು ಬೇಕಾದಷ್ಟು ವಿಸ್ತಾರವಾಗಿ ಹರಡಿಕೊಳ್ಳಬಹುದು. ದೊಡ್ಡ ಸೇನೆಯೊಂದಿಗೆ ಯುದ್ಧಮಾಡುವಾಗ ಸಣ್ಣಸೇನೆಯ ಮುಖವು ಸೂಚಿಯ ಮೊನೆಯಂತಿರಬೇಕು. ಹೇಗೆ ನೋಡಿದರೂ ನಮ್ಮ ಸೇನೆಯು ಶತ್ರುಸೈನ್ಯಕ್ಕಿಂತ ಸಣ್ಣದು. ಮಹರ್ಷಿಯ ಈ ಮಾತನ್ನು ತಿಳಿದುಕೊಂಡು ವ್ಯೂಹವನ್ನು ರಚಿಸು.”

ಧರ್ಮರಾಜನನ್ನು ಕೇಳಿ ಫಲ್ಗುಣನು ಉತ್ತರಿಸಿದನು. “ರಾಜನ್! ವಜ್ರವೆಂಬ ಹೆಸರಿನಿಂದ ಕರೆಯಲ್ಪಡುವ, ವಜ್ರಪಾಣಿಯೇ ಹೇಳಿಕೊಟ್ಟಿರುವ, ಪರಮ ದುರ್ಜಯವಾದ ವಜ್ರವೆಂಬ ವ್ಯೂಹವನ್ನು ನಿನಗೆ ರಚಿಸುತ್ತೇನೆ. ಒಡೆದುಹೋದ ಭಿರುಗಾಳಿಯಂತೆ ಮುನ್ನುಗ್ಗುವ, ಸಮರದಲ್ಲಿ ಶತ್ರುಗಳಿಗೆ ದುಃಸ್ಸಹನಾದ, ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ಇದರ ಮುಂದೆ ನಿಂತು ಹೋರಾಡುತ್ತಾನೆ. ಆ ಯುದ್ಧದ ಉಪಾಯಗಳನ್ನು ಕಂಡುಕೊಂಡಿರುವ ಆ ಪುರುಷಸತ್ತಮನು ತನ್ನ ತೇಜಸ್ಸಿನಿಂದಲೇ ರಿಪು ಸೇನೆಗಳನ್ನು ಸದೆಬಡಿಯುತ್ತಾ ಮುಂದೆ ನಮ್ಮ ಅಗ್ರಣಿಯಾಗಿ ಹೋರಾಡುತ್ತಾನೆ. ಅವನನ್ನು ನೋಡಿ ದುರ್ಯೋಧನನ ನಾಯಕತ್ವದಲ್ಲಿರುವ ಪಾರ್ಥಿವರೆಲ್ಲರೂ ಸಿಂಹನನ್ನು ಕಂಡ ಕ್ಷುದ್ರಮೃಗಗಳಂತೆ ಸಂಭ್ರಾಂತರಾಗಿ ಹಿಂದೆಸರಿಯುತ್ತಾರೆ. ನಾವೆಲ್ಲರೂ ಗೋಡೆಯಂತಿರುವ ಭೀಮನ ಹಿಂದೆ, ವಜ್ರಪಾಣಿಯ ಹಿಂದೆ ಅಮರರು ಹೇಗೋ ಹಾಗೆ ಅಭಯರಾಗಿ ಆಶ್ರಯ ಪಡೆಯೋಣ. ಆ ಉಗ್ರಕರ್ಮಿ ಸಂಕ್ರುದ್ಧ ವೃಕೋದರನನ್ನು ನೋಡಿ ಉಸಿರನ್ನು ಹಿಡಿದುಕೊಂಡಿರಬಹುದಾದ ಪುರುಷರು ಈ ಲೋಕದಲ್ಲಿ ಯಾರೂ ಇಲ್ಲ. ವಜ್ರಸಾರದಿಂದ ತುಂಬಿದ ದೃಢವಾದ ಗದೆಯನ್ನು ಬೀಸಿ ಭೀಮಸೇನನು ಮಹಾವೇಗದಿಂದ ನಡೆದು ಸಮುದ್ರವನ್ನು ಕೂಡ ಬತ್ತಿಸಬಲ್ಲನು. ಕೇಕಯ ಧೃಷ್ಟಕೇತು ಮತ್ತು ಚೇಕಿತಾನರು ಅಮಾತ್ಯರೊಂದಿಗೆ ನಿನ್ನನ್ನು ನೋಡಿಕೊಳ್ಳಲು ನಿಂತಿರುತ್ತಾರೆ.”

ಹಾಗೆ ಹೇಳಿದ ಪಾರ್ಥನನ್ನು ಸರ್ವಸೇನೆಗಳೂ ಅನುಕೂಲಕರ ಮಾತುಗಳಿಂದ ರಣರಂಗದಲ್ಲಿ ಗೌರವಿಸಿದರು. ಹೇಳಿದ ಹಾಗೆಯೇ ಧನಂಜಯನು ಮಾಡಿದನು. ಆ ಸೇನೆಗಳನ್ನು ವ್ಯೂಹದಲ್ಲಿ ರಚಿಸಿ ಫಲ್ಗುನನು ಮುಂದುವರೆದನು.

ಕುರುಗಳ ಸೇನೆಯನ್ನು ಗುರಿಯನಾಗಿಟ್ಟುಕೊಂಡು ಹೋಗುತ್ತಿದ್ದ ಪಾಂಡವರ ಮಹಾಸೇನೆಯು ನೆರೆಬಂದ ಗಂಗೆಯು ಹರಿದು ಬರುತ್ತಿರುವಂತೆ ಕಂಡಿತು. ಅವರ ಅಗ್ರಣಿಗಳಾಗಿ ಭೀಮಸೇನ, ಧೃಷ್ಟದ್ಯುಮ್ನ, ನಕುಲ, ಸಹದೇವರು ಮತ್ತು ಧೃಷ್ಟಕೇತು ಇದ್ದರು. ಅವರನ್ನು ಹಿಂದಿನಿಂದ ರಕ್ಷಿಸುತ್ತ, ಒಂದು ಅಕ್ಷೌಹಿಣೀ ಸೇನೆಯೊಂದಿಗೆ, ಸಹೋದರರು ಮತ್ತು ಮಕ್ಕಳನ್ನು ಕೂಡಿಕೊಂಡು ರಾಜ ವಿರಾಟನು ಹೊರಟನು. ಭೀಮನ ಚಕ್ರಗಳನ್ನು ಮಾದ್ರೀಪುತ್ರರು ರಕ್ಷಿಸುತ್ತಿದ್ದರು. ಸೌಭದ್ರಿಯೊಂದಿಗೆ ದ್ರೌಪದೇಯರು ಆ ತರಸ್ವಿನಿಯನ್ನು ಹಿಂದಿನಿಂದ ರಕ್ಷಿಸುತ್ತಿದ್ದರು. ಅವರನ್ನು ಧೃಷ್ಟದ್ಯುಮ್ನನು ಪ್ರಭದ್ರಕ ರಥಮುಖ್ಯರ, ಶೂರರ ಸೇನೆಯೊಂದಿಗೆ ರಕ್ಷಿಸಿದನು. ಅವರ ನಂತರ ಅರ್ಜುನನಿಂದ ರಕ್ಷಿತನಾಗಿ ಶಿಖಂಡಿಯು ಭೀಷ್ಮನ ವಿನಾಶಕ್ಕೆ ಮುಂದುವರೆದನು. ಅರ್ಜುನನ ಹಿಂದೆ ಮಹಾರಥಿ ಯುಯುಧಾನನಿದ್ದನು. ಅರ್ಜುನನ ರಥಚಕ್ರಗಳನ್ನು ಪಾಂಚಾಲರಾದ ಯುಧಮನ್ಯು-ಉತ್ತಮೌಜಸರು ರಕ್ಷಿಸುತ್ತಿದ್ದರು. ಸೇನೆಯ ಮಧ್ಯೆ ಕುಂತೀಪುತ್ರ ರಾಜಾ ಯುಧಿಷ್ಠಿರನು ಅಚಲವಾಗಿರುವ ಪರ್ವತಗಳು ಚಲಿಸುತ್ತಿರುವವೋ ಎಂಬಂತಿದ್ದ ಮದಿಸಿದ ಬಹಳಷ್ಟು ಆನೆಗೊಳಡನಿದ್ದನು. ಮಹಾಮನಸ್ವಿ ಪರಾಕ್ರಮೀ ಪಾಂಚಾಲ್ಯ ಯಜ್ಞಸೇನನು ಪಾಂಡವನಿಗಾಗಿ ಒಂದು ಅಕ್ಷೌಹಿಣೀ ಸೇನೆಯೊಂದಿಗೆ ವಿರಾಟನನ್ನು ಅನುಸರಿಸಿ ಹೋಗುತ್ತಿದ್ದನು. ಆ ರಾಜರ ರಥಗಳ ಮೇಲೆ ನಾನಾ ಚಿಹ್ನೆಗಳನ್ನು ಧರಿಸಿದ, ಉತ್ತಮ ಕನಕ ಭೂಷಣಗಳ ಮತ್ತು ಆದಿತ್ಯ-ಚಂದ್ರರ ಕಾಂತಿಯುಳ್ಳ ಮಹಾಧ್ವಜಗಳಿದ್ದವು.

ಅವರು ಮುಂದುವರೆದ ನಂತರ ಮಹಾರಥಿ ಧೃಷ್ಟದ್ಯುಮ್ನನು ಸಹೋದರರು ಮತ್ತು ಪುತ್ರರೊಡಗೂಡಿ ಯುಧಿಷ್ಠಿರನನ್ನು ಹಿಂದಿನಿಂದ ರಕ್ಷಿಸಿದನು. ಕೌರವರ ಮತ್ತು ಪಾಂಡವರ ರಥಗಳಲ್ಲಿರುವ ವಿವಿಧ ಧ್ವಜಗಳಲ್ಲಿ ಅರ್ಜುನನೊಬ್ಬನದೇ ಧ್ವಜದಲ್ಲಿದ್ದ ಮಹಾಕಪಿಯು ಎದ್ದು ಕಾಣಿಸುತ್ತಿದ್ದನು. ಭೀಮಸೇನನ ರಕ್ಷಣೆಗೆಂದು ಖಡ್ಗ-ಶಕ್ತಿ-ಮುಷ್ಟಿಪಾಣಿಗಳಾದ ಅನೇಕ ಶತಸಹಸ್ರ ಪದಾತಿಗಳು ಮುಂದೆ ಹೋಗುತ್ತಿದ್ದರು. ಮದದ ನೀರು ಸುರಿಯುತ್ತಿರುವ, ಶೂರ, ಹೇಮಮಯಜಾಲಗಳಿಂದ ಬೆಳಗುತ್ತಿರುವ ಪರ್ವತಗಳಂತಿದ್ದ, ಮಳೆಸುರಿಸುವ ಮೋಡಗಳಂತಿದ್ದ, ಕಮಲಗಳ ಸುಗಂಧವನ್ನು ಸೂಸುತ್ತಿದ್ದ, ಚಲಿಸುತ್ತಿರುವ ಪರ್ವತಗಳಂತಿದ್ದ ಹತ್ತು ಸಾವಿರ ಆನೆಗಳು ರಾಜನನ್ನು ಹಿಂಬಾಲಿಸಿದವು. ಪರಿಘದಂತಿದ್ದ ಉಗ್ರ ಗದೆಯನ್ನು ಬೀಸುತ್ತ ದುರಾದರ್ಷ ಮಹಾಮನಸ್ವಿ ಭೀಮಸೇನನು ಮಹಾ ಸೇನೆಯನ್ನು ಪುಡಿಮಾಡುವಂತಿದ್ದನು. ಕಿರಣಮಾಲಿನಿ ಸುಡುತ್ತಿರುವ ಸೂರ್ಯನನ್ನು ನೋಡುವುದು ಹೇಗೆ ಕಷ್ಟವೋ ಹಾಗೆ ಸರ್ವ ಯೋಧರೂ ಅವನನ್ನು ನೇರವಾಗಿ ನೋಡಲು ಅಶಕ್ಯರಾದರು. ಸರ್ವತೋಮುಖವಾದ, ಭೇದಿಸಲು ಕಷ್ಟವಾದ, ಚಾಪವಿದ್ಯುಧ್ವಜದ ವಜ್ರವೆಂಬ ಹೆಸರಿನ ಈ ವ್ಯೂಹವನ್ನು ಘೋರ ಗಾಂಡೀವಧನ್ವಿಯು ರಕ್ಷಿಸುತ್ತಿದ್ದನು. ಹೀಗೆ ಕೌರವ ಸೇನೆಗೆ ಪ್ರತಿವ್ಯೂಹವನ್ನು ರಚಿಸಿ ಪಾಂಡವರು ಕಾಯುತ್ತಿದ್ದರು. ಪಾಂಡವರಿಂದ ರಕ್ಷಿತವಾದ ಆ ಸೇನೆಯು ಮನುಷ್ಯ ಲೋಕದಲ್ಲಿ ಅಜೇಯವಾಗಿದ್ದಿತು.

ಸೇನೆಗಳು ಸಂಧ್ಯೆಯಲ್ಲಿ ಸೂರ್ಯೋದಯವನ್ನು ಕಾಯುತ್ತಿರಲು ಮೋಡಗಳಿಲ್ಲದ ಆಕಾಶದಿಂದ ತುಂತುರು ಹನಿಗಳು ಬಿದ್ದವು ಮುತ್ತು ಗುಡುಗಿನ ಶಬ್ಧವು ಕೇಳಿಬಂದಿತು. ಎಲ್ಲ ಕಡೆಯಿಂದಲೂ ಒಣ ಹವೆಯು ಬೀಸತೊಡಗಿತು. ಅದು ನೆಲದಿಂದ ಮೊನಚಾದ ಕಲ್ಲಿನ ಹರಳುಗಳನ್ನು ಮೇಲೆಬ್ಬಿಸಿ ಹರಡಿತು. ಮತ್ತು ದಟ್ಟವಾದ ಧೂಳು ಮೇಲೆದ್ದು ಕತ್ತಲೆ ಆವರಿಸಿತು. ಪೂರ್ವದಲ್ಲಿ ಮಹಾ ಉಲ್ಕೆಗಳು ಬಿದ್ದವು ಮತ್ತು ಉದಯಿಸುತ್ತಿರುವ ಸೂರ್ಯನನ್ನು ಹೊಡೆದು ಮಹಾ ಶಬ್ಧದೊಂದಿಗೆ ಒಡೆದು ಚೂರಾಗುತ್ತಿದ್ದವು. ಸೇನೆಗಳು ಈ ರೀತಿ ಸಜ್ಜಾಗಿರುವಾಗ ಕಾಂತಿಯನ್ನು ಕಳೆದುಕೊಂಡ ಸೂರ್ಯನು ಉದಯಿಸಿದನು. ಶಬ್ಧದೊಂದಿಗೆ ಭೂಮಿಯು ನಡುಗಿ ಬಿರಿಯಿತು. ಆಗ ಬಹಳಷ್ಟು ಗುಡುಗಿನ ಶಬ್ಧವು ಎಲ್ಲ ಕಡೆಗಳಿಂದ ಕೇಳಿ ಬಂದಿತು. ಧೂಳು ಎಷ್ಟು ದಟ್ಟವಾಗಿತ್ತೆಂದರೆ ಏನೂ ಕೂಡ ಕಾಣುತ್ತಿರಲಿಲ್ಲ. ಕಿಂಕಿಣೀಜಾಲಗಳಿಂದ ಕಟ್ಟಲ್ಪಟ್ಟ, ಕಾಂಚನ ಮಾಲೆಗಳಿಂದ ಅಲಂಕರಿಸಲ್ಪಟ್ಟ, ಆದಿತ್ಯ ಸಮ ತೇಜಸ್ಸುಳ್ಳ ಆ ಎತ್ತರ ಧ್ವಜಗಳು ಗಾಳಿಯ ವೇಗಕ್ಕೆ ಅಲುಗಾಡಿ ತಾಲವೃಕ್ಷದ ಅಡವಿಯಂತೆ ಎಲ್ಲವೂ ಝಣಝಣಿಸಿದವು. ಹೀಗೆ ಆ ಯುದ್ಧನಂದಿನ ಪುರುಷವ್ಯಾಘ್ರ ಪಾಂಡವರು ದುರ್ಯೋಧನನ ವಾಹಿನಿಗೆ ಪ್ರಹಿವ್ಯೂಹವನ್ನು ರಚಿಸಿ ವ್ಯವಸ್ಥಿತರಾದರು. ಗದಾಪಾಣಿಯಾಗಿ ಮುಂದೆ ನಿಂತಿದ್ದ ಭೀಮಸೇನನು ಯೋಧರ ಮಜ್ಜೆಗಳನ್ನೇ ಹೀರಿಕೊಳ್ಳುತ್ತಾನೋ ಎಂದು ತೋರುತ್ತಿದ್ದನು.

ಎರಡೂ ಸೇನೆಗಳ ವ್ಯೂಹಗಳೂ ಸಮನಾಗಿ ಹೃಷ್ಟರೂಪವಾಗಿದ್ದವು. ಎರಡೂ ಸೇನೆಗಳೂ ಸಮನಾಗಿ ವನರಾಜಿಯಂತೆ ಪ್ರಕಾಶಿತರಾಗಿ ಸುಂದರವಾಗಿದ್ದವು. ಅವೆರಡೂ ಆನೆ-ರಥ-ಅಶ್ವಗಳಿಂದ ಪೂರ್ಣಗೊಂಡಿದ್ದವು. ಎರಡೂ ಸೇನೆಗಳೂ ದೊಡ್ಡವಾಗಿದ್ದವು ಮತ್ತು ಭೀಮರೂಪಿಗಳಾಗಿದ್ದವು. ಎರಡೂ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲಾರದಂತಿದ್ದವು. ಎರಡೂ ಕಡೆಯವರು ಸ್ವರ್ಗವನ್ನೇ ಜಯಿಸಬಲ್ಲರೋ ಎಂದು ತೋರುತ್ತಿದ್ದವು. ಎರಡೂ ಕಡೆಯವರೂ ಸತ್ಪುರುಷರಿಂದ ರಕ್ಷಿಸಲ್ಪಟ್ಟಿತ್ತು. ಧಾರ್ತರಾಷ್ಟ್ರರ ಕೌರವ ಸೇನೆಯು ಪಶ್ಚಿಮಕ್ಕೆ ಮುಖಮಾಡಿತ್ತು. ಪಾಂಡವರು ಪೂರ್ವದಿಕ್ಕಿಗೆ ಮುಖಮಾಡಿ ಯುದ್ಧಮಾಡುವವರಿದ್ದರು. ಕೌರವರದ್ದು ದೈತ್ಯೇಂದ್ರನ ಸೇನೆಯಂತಿತ್ತು. ಪಾಂಡವರದ್ದು ದೇವೇಂದ್ರಸೇನೆಯಂತಿತ್ತು. ಪಾಂಡವರ ಹಿಂದಿನಿಂದ ಗಾಳಿಯು ಬೀಸಿತು, ಧಾರ್ತರಾಷ್ಟ್ರರಲ್ಲಿ ಶ್ವಾಪದಗಳು ಬೊಗಳಿದವು. ದುರ್ಯೋಧನನ ಆನೆಗಳು ಅವರ ಗಜೇಂದ್ರರ ತೀವ್ರ ಮದಗಂಧವನ್ನು ಸಹಿಸಲಾರದೇ ಹೋದವು.

ಕುರುಗಳ ಮಧ್ಯದಲ್ಲಿ ದುರ್ಯೋಧನನು ಮದವೊಡೆದ, ಬಲವಾದ ಜಾತಿಯ, ಪದ್ಮವರ್ಣದ ಆನೆಯ ಮೇಲೆ ಸುವರ್ಣದ ಕಕ್ಷೆಯಲ್ಲಿ ಕುಳಿತಿದ್ದನು. ಬಂದಿ-ಮಾಗಧರು ಅವನನ್ನು ಸಂಸ್ತುತಿಸುತ್ತಿದ್ದರು. ಬಂಗಾರದ ಸರಪಳಿಯಿದ್ದ ಚಂದ್ರಪ್ರಭೆಯ ಶ್ವೇತಛತ್ರವು ಅವನ ಶಿರದ ಮೇಲೆ ಹೊಳೆಯುತ್ತಿತ್ತು. ಅವನನ್ನು ಸತ್ತುವರೆದು ಗಾಂಧಾರರಾಜ ಶಕುನಿಯು ಪರ್ವತೇಯರು ಮತ್ತು ಗಾಂಧಾರರೊಂದಿಗೆ ರಕ್ಷಿಸುತ್ತಿದ್ದನು. ಸರ್ವಸೇನೆಗಳ ಅಗ್ರಸ್ಥಾನದಲ್ಲಿದ್ದ ವೃದ್ಧ ಭೀಷ್ಮನು ಶ್ವೇತ ಛತ್ರ, ಶ್ವೇತ ಧನುಸ್ಸು ಮತ್ತು ಶಂಖಗಳು, ಶ್ವೇತ ಕಿರೀಟ, ಶ್ವೇತ ಧ್ವಜ, ಮತ್ತು ಶ್ವೇತ ಅಶ್ವಗಳೊಂದಿಗೆ ಶ್ವೇತಶೈಲದಂತೆ ಪ್ರಕಾಶಿಸುತ್ತಿದ್ದನು. ಅವನ ಸೇನೆಯಲ್ಲಿ ಧೃತರಾಷ್ಟ್ರನ ಎಲ್ಲ ಮಕ್ಕಳೂ, ಬಾಹ್ಲೀಕ ದೇಶದ ನಾಯಕ ಶಲ, ಅಂಬಷ್ಠರೆಂಬ ಕ್ಷತ್ರಿಯರು, ಹಾಗೆಯೇ ಸಿಂಧು ಮತ್ತು ಪಂಚನದಿಗಳ ಶೂರ ಸೌವೀರರು ಇದ್ದರು. ಸರ್ವರಾಜರ ಗುರು ಮಹಾಬಾಹು ದೀನಸತ್ವ ಮಹಾತ್ಮ ದ್ರೋಣನು ಕೆಂಪು ಕುದುರೆಗಳನ್ನು ಕಟ್ಟಿದ್ದ ಬಂಗಾರದ ರಥದಲ್ಲಿ ಹಿಂದಿನಿಂದ ಇಂದ್ರನಂತೆ ರಕ್ಷಿಸುತ್ತಿದ್ದನು. ಎಲ್ಲ ಸೇನೆಗಳ ಮಧ್ಯೆ ವಾರ್ದ್ಧಕ್ಷತ್ರಿ, ಭೂರಿಶ್ರವ, ಪುರುಮಿತ್ರ, ಜಯ, ಶಾಲ್ವ, ಮತ್ಸ್ಯರು, ಕೇಕಯ ಸಹೋದರರು ಎಲ್ಲರೂ ತಮ್ಮ ಆನೆಗಳ ಸೇನೆಗಳೊಂದಿಗೆ ಹೋರಾಡುತ್ತಿದ್ದರು. ಮಹಾತ್ಮ ಶಾರದ್ವತ ಮಹೇಷ್ವಾಸ ಚಿತ್ರಯೋಧೀ ಗೌತಮನು ಶಕ-ಕಿರಾತ-ಯವನ-ಪಹ್ಲವರ ಸೇನೆಗಳೊಂದಿಗೆ ಉತ್ತರ ದಿಕ್ಕಿಗೆ ಹೋಗಿ ನೆಲೆಸಿದನು. ಮಹಾರಥರಾದ ಅಂಧಕ-ವೃಷ್ಣಿ-ಭೋಜ-ಸೌರಾಷ್ಟ್ರರಿಂದ ಉತ್ತಮ ಆಯುಧಗಳನ್ನು ಹೊಂದಿದ್ದ ಮಹಾಬಲವು ಕೃತವರ್ಮನಿಂದ ರಕ್ಷಿತಗೊಂಡು ಕೌರವ ಸೇನೆಯ ದಕ್ಷಿಣ ದಿಕ್ಕಿಗೆ ಹೋಗಿ ನಿಂತಿತು. ಮೃತ್ಯುವಾಗಲೀ ಜಯವಾಗಲೀ ಅರ್ಜುನನಿಂದಲೇ ಎಂದು ಸೃಷ್ಟಿಸಲ್ಪಟ್ಟಿರುವ ಸಂಶಪ್ತಕರೆಂಬ ಹತ್ತು ಸಾವಿರ ಕೃತಾಸ್ತ್ರ ರಥಿಕರು ಅರ್ಜುನನ್ನೇ ಎದುರಿಸಿಸಲು ಶೂರರಾದ ತ್ರಿಗರ್ತರೊಂದಿಗೆ ಹೊರಟರು.

ಕೌರವ ಸೇನೆಯಲ್ಲಿ ನೂರು ಸಾವಿರ ಆನೆಗಳಿದ್ದವು. ಪ್ರತಿ ಆನೆಗೆ ನೂರು ರಥಿಕರನ್ನೂ, ಒಂದು ರಥಕ್ಕೆ ನೂರು ಅಶ್ವಯೋಧರನ್ನೂ ಇಡಲಾಗಿತ್ತು. ಪ್ರತಿ ಅಶ್ವಯೋಧನಿಗೂ ಹತ್ತು ಧಾನುಷ್ಕರಿದ್ದರು. ಪ್ರತಿ ಧಾನುಷ್ಕಕ್ಕೂ ಹತ್ತು ಚರ್ಮಿಗಳಿದ್ದರು. ಹೀಗೆ ಕೌರವ ಸೇನೆಯನ್ನು ಬೀಷ್ಮನು ವ್ಯೂಹವನ್ನಾಗಿ ರಚಿಸಿದ್ದನು. ದಿವಸ ದಿವಸವೂ ಅಗ್ರಣೀ ಶಾಂತನವ ಭೀಷ್ಮನು ಮಾನುಷ, ದೇವ, ಗಾಂಧರ್ವ, ಅಸುರ ವ್ಯೂಹಗಳನ್ನು ರಚಿಸುತ್ತಿದ್ದನು. ವಿಪುಲವಾಗಿ ಮಹಾರಥರಿಂದ ಕೂಡಿದ, ಭೋರಗರೆಯುವ ಸಮುದ್ರದಂತಿರುವ ಧಾರ್ತರಾಷ್ಟ್ರರ ಸೇನೆಯು ಭೀಷ್ಮನಿಂದ ವ್ಯೂಹಗೊಂಡು ಪಶ್ಚಿಮ ಮಖವಾಗಿ ಯುದ್ಧಕ್ಕೆ ನಿಂತಿತು. ಆ ಸೇನೆಯು ಅನಂತವಾಗಿಯೂ ಭಯಂಕರವಾಗಿಯೂ ತೋರುತ್ತಿತ್ತು. ಆದರೆ ಕೇಶವ-ಅರ್ಜುನರು ನೇತಾರರಾಗಿದ್ದ ಪಾಂಡವರ ಸೇನೆಯು ಅತ್ಯಂತ ದೊಡ್ಡದಾಗಿ, ಗೆಲ್ಲಲಸಾಧ್ಯವಾಗಿ ತೋರುತ್ತಿತ್ತು.

ಯುಧಿಷ್ಠಿರ-ಅರ್ಜುನರ ಸಂವಾದ

ಯುದ್ಧಸನ್ನದ್ಧವಾಗಿದ್ದ ಧಾರ್ತರಾಷ್ಟ್ರರ ಅತಿ ದೊಡ್ಡ ಸೇನೆಯನ್ನು ನೋಡಿ ಕುಂತೀಪುತ್ರ ರಾಜಾ ಯುಧಿಷ್ಠಿರನಿಗೆ ವಿಷಾದವುಂಟಾಯಿತು. ಭೀಷ್ಮನು ರಚಿಸಿದ್ದ ಆ ಅಭೇದ್ಯ ವ್ಯೂಹವನ್ನು ನೋಡಿ ಪಾಂಡವನು ಅದು ಅಭೇದ್ಯವೆಂದು ಅರಿತು ವಿಷಣ್ಣನಾಗಿ ಅರ್ಜುನನಿಗೆ ಹೇಳಿದನು: “ಧನಂಜಯ! ಮಹಾಬಾಹೋ! ಯಾರ ಯೋದ್ಧನು ಪಿತಾಮಹನೋ ಆ ಧಾರ್ತರಾಷ್ಟ್ರರನ್ನು ಯುದ್ಧದಲ್ಲಿ ನಾವು ಹೇಗೆ ಎದುರಿಸಬಲ್ಲೆವು? ಆ ಅಮಿತ್ರಕರ್ಶಿ, ಭೂರಿತೇಜಸ ಭೀಷ್ಮನು ಶಾಸ್ತ್ರಗಳಲ್ಲಿರುವಂತೆ ವಿಧಿವತ್ತಾಗಿ ರಚಿಸಿರುವ ಈ ವ್ಯೂಹವು ಅಭೇದ್ಯವಾದುದು. ನಮ್ಮ ಈ ಸೇನೆಯಿಂದ ನನಗೆ ಸಂಶಯಬಂದೊದಗಿದೆ. ಹೇಗೆ ತಾನೇ ನಾವು ಈ ಮಹಾ ವ್ಯೂಹವನ್ನು ಎದುರಿಸಿ ವಿಜಯವನ್ನು ಪಡೆಯಬಹುದು?”

ಆಗ ಅಮಿತ್ರಹ ಅರ್ಜುನನು ಕೌರವ ಸೇನೆಯನ್ನು ನೋಡಿಯೇ ದುಃಖಿತನಾದ ಯುಧಿಷ್ಠಿರನಿಗೆ ಹೇಳಿದನು: “ವಿಶಾಂಪತೇ! ಗುಣಯುಕ್ತರಾದ ಶೂರರನ್ನು ಅಧಿಕ ಸಂಖ್ಯೆಯಲ್ಲಿದ್ದರೂ ಕಡಿಮೆ ಸಂಖ್ಯೆಯಲ್ಲಿರುವವರು ಹೆಚ್ಚಿನ ಬುದ್ಧಿಯನ್ನುಪಯೋಗಿಸಿ ಹೇಗೆ ಜಯಿಸಬಹುದು ಎನ್ನುವುದನ್ನು ಕೇಳು. ನೀನು ಅನಸೂಯನಾಗಿದ್ದೀಯೆ ಎಂಬ ಕಾರಣದಿಂದ ನಿನಗೆ ನಾನು ಹೇಳುತ್ತೇನೆ. ಇದನ್ನು ಋಷಿ ನಾರದನೂ, ಭೀಷ್ಮ-ದ್ರೋಣರೂ ತಿಳಿದಿದ್ದಾರೆ. ಇದೇ ವಿಷಯದ ಕುರಿತು ದೇವಾಸುರರ ಯುದ್ಧದಲ್ಲಿ ಹಿಂದೆ ಪಿತಾಮಹನು ಮಹೇಂದ್ರಾದಿ ದಿವೌಕಸರಿಗೆ ಹೇಳಿರಲಿಲ್ಲವೇ? ವಿಜಯವನ್ನು ಬಯಸುವವರು ಸತ್ಯ, ಅಹಿಂಸೆ, ಧರ್ಮ ಮತ್ತು ಉದ್ಯಮದಿಂದ ಗೆಲ್ಲುವಷ್ಟು ಬಲ-ವೀರ್ಯಗಳಿಂದ ಗೆಲ್ಲುವುದಿಲ್ಲ. ಅಧರ್ಮ, ಲೋಭ, ಮೋಹಗಳನ್ನು ತೊರೆದು ಉದ್ಯಮದಲ್ಲಿ ನಿರತರಾಗಿ ಅಹಂಕಾರವಿಲ್ಲದೇ ಯುದ್ಧಮಾಡಬೇಕು. ಧರ್ಮವೆಲ್ಲಿದೆಯೋ ಅಲ್ಲಿ ಜಯ. ಈ ರಣದಲ್ಲಿ ಜಯವು ನಿಶ್ಚಯವಾಗಿಯೂ ನಮ್ಮದೇ ಎಂದು ತಿಳಿ. ನಾರದನು ನಮಗೆ ಹೇಳಿದಂತೆ ಕೃಷ್ಣನೆಲ್ಲಿರುವನೋ ಅಲ್ಲಿ ಜಯವಿರುವುದು. ಜಯವು ಕೃಷ್ಣನಲ್ಲಿರುವ ಗುಣ. ಅದು ಮಾಧವನ ಹಿಂದೆ ಅನುಸರಿಸಿ ಹೋಗುತ್ತದೆ. ವಿಜಯ ಮಾತ್ರವಲ್ಲದೇ ಸನ್ನತಿಯೂ ಇವನ ಇನ್ನೊಂದು ಗುಣ. ಅನಂತ ತೇಜಸ್ಸುಳ್ಳ ಗೋವಿಂದನು ಅಸಂಖ್ಯ ಶತ್ರುಗಳಿಂದಲೂ ವ್ಯಥೆಗೊಳ್ಳಲಾರನು. ಸನಾತನತಮ ಪುರುಷ ಕೃಷ್ಣನು ಎಲ್ಲಿರುವನೋ ಅಲ್ಲಿ ಜಯ. ಹಿಂದೆ ಇವನೇ ವಿಕುಂಠ ಹರಿಯಾಗಿ ಸಿಡಿಲಿನ ಶಬ್ಧದ ಧ್ವನಿಯಲ್ಲಿ ಸುರಾಸುರರಿಗೆ ಕೂಗಿ “ನಿಮ್ಮಲ್ಲಿ ಯಾರು ಗೆಲ್ಲುತ್ತೀರಿ?” ಎಂದು ಕೇಳಿದ್ದನು. “ಕೃಷ್ಣನು ನಮ್ಮೊಡನಿರುವುದರಿಂದ ನಮಗೇ ಜಯ” ಎಂದು ಹೇಳಿ ಶಕ್ರಾದಿ ಸುರರು ಅಲ್ಲಿಯೇ ಅವನ ಪ್ರಸಾದದಿಂದ ಅವರನ್ನು ಗೆದ್ದು ತ್ರೈಲೋಕ್ಯವನ್ನು ಪಡೆದರು. ಆದುದರಿಂದ ನಿನ್ನ ವ್ಯಥೆಗೆ ಯಾವುದೇ ಕಾರಣವು ನನಗೆ ಕಾಣುತ್ತಿಲ್ಲ. ಜಯವನ್ನು ಆಶಿಸುತ್ತಿರುವ ವಿಶ್ವಭುಕ್ ತ್ರಿದಶೇಶ್ವರನು ನಿನ್ನೊಡನೆ ಇದ್ದಾನೆ.”

ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಯನ್ನೂ ಭೀಷ್ಮನ ಸೇನೆಗಳಿಗೆ ಪ್ರತಿವ್ಯೂಹವಾಗಿ ರಚಿಸಿ ಪ್ರತಿಚೋದಿಸಿದನು: “ಪಾಂಡವರು ಶಾಸ್ತ್ರಗಳಲ್ಲಿ ಹೇಳಿರುವಂತೆ ಸೇನೆಗಳನ್ನು ಪ್ರತಿವ್ಯೂಹವಾಗಿ ರಚಿಸಿದ್ದಾರೆ. ಕುರೂದ್ವಹರೇ! ಒಳ್ಳೆಯ ಯುದ್ಧವನ್ನು ಮಾಡಿ ಸ್ವರ್ಗವನ್ನು ಪಡೆಯಿರಿ!”

ಮಧ್ಯದಲ್ಲಿ ಶಿಖಂಡಿಯ ಸೇನೆಯನ್ನು ಸವ್ಯಸಾಚಿಯು ರಕ್ಷಿಸುತ್ತಿದ್ದನು. ಧೃಷ್ಟದ್ಯುಮ್ನನ ಸೇನೆಯನ್ನು ಸ್ವಯಂ ಭೀಮನು ಪರಿಪಾಲಿಸುತ್ತಿದ್ದನು. ದಕ್ಷಿಣಭಾಗದ ಸೇನೆಯನ್ನು ಸುಂದರ, ಸಾತ್ವತಾಗ್ರ್ಯ, ಶಕ್ರನಂತಿರುವ ಧನುಷ್ಮತ ಯುಯುಧಾನನು ಪಾಲಿಸುತ್ತಿದ್ದನು. ಆನೆಗಳ ಹಿಂಡಿನ ಮಧ್ಯೆ ಯುಧಿಷ್ಠಿರನು ಮಹೇಂದ್ರನ ಯಾನದಂತಿದ್ದ ಉತ್ತಮ ಧ್ವಜಸ್ಥಂಭವಿರುವ, ಚಿನ್ನ-ರತ್ನಗಳಿಂದ ಅಲಂಕರಿಸಲ್ಪಟ್ಟಿದ್ದ, ಕಾಂಚನದಂತಿದ್ದ ಕುದುರೆಗಳನ್ನು ಕಟ್ಟಿದ ರಥದಲ್ಲಿ ಕುಳಿತಿದ್ದನು. ಮೇಲೆ ಎತ್ತಿ ಹಿಡಿದ ದಂತದ ಸ್ಥಂಭಕ್ಕೆ ಕಟ್ಟಿದ್ದ ಶ್ವೇತ ಛತ್ರವು ಅತೀವವಾಗಿ ಬೆಳಗುತ್ತಿರಲು, ಆ ನರೇಂದ್ರನನ್ನು ಸಂಸ್ತುತಿಸುತ್ತಾ ಮಹರ್ಷಿಗಳು ಪ್ರದಕ್ಷಿಣೆ ಹಾಕಿ ನಡೆಯುತ್ತಿದ್ದರು. ಪುರೋಹಿತರು, ಮಹರ್ಷಿ-ವೃದ್ಧರು, ಮತ್ತು ಸಿದ್ಧರೂ ಕೂಡ ಜಪ, ಮಂತ್ರ, ಔಷಧಿಗಳಿಂದ ಅವನನ್ನು ಸುತ್ತುವರೆದು ಶತ್ರುವಧೆಯನ್ನು ಹೇಳುತ್ತಾ ಸ್ವಸ್ತಿವಾಚನ ಮಾಡಿದರು. ಆಗ ಆ ಕುರೂತ್ತಮ ಮಹಾತ್ಮನು ಬ್ರಾಹ್ಮಣರಿಗೆ ವಸ್ತ್ರಗಳು, ಗೋವುಗಳು, ಫಲ-ಪುಷ್ಪಗಳು ಮತ್ತು ನಾಣ್ಯಗಳನ್ನಿತ್ತು ಅಮರರೊಂದಿಗೆ ಶಕ್ರನಂತೆ ಮುಂದುವರೆದನು.

ನೂರು ಗಂಟೆಗಳನ್ನು ಕಟ್ಟಿದ್ದ, ಉತ್ತಮ ಜಾಂಬೂನದ ಚಿನ್ನದ ಚಿತ್ರಗಳನ್ನು ಪಡೆದಿದ್ದ, ಶ್ವೇತ ಹಯ ಮತ್ತು ಚಕ್ರಗಳ ಅರ್ಜುನನ ರಥವು ಅಗ್ನಿಯ ತೇಜಸ್ಸನ್ನು ಪಡೆದು ಸಹಸ್ರ ಸೂರ್ಯರಂತೆ ವಿಭ್ರಾಜಿಸುತ್ತಿತ್ತು. ಕೇಶವನು ಹಿಡಿದಿದ್ದ ಆ ಕಪಿಧ್ವಜ ರಥದಲ್ಲಿ ಯಾರ ಸಮನಾದ ಧನುರ್ಧರನು ಈ ಪೃಥ್ವಿಯಲ್ಲಿಯೇ ಇಲ್ಲವೋ, ಇರಲಿಲ್ಲವೋ ಮತ್ತು ಮುಂದೆ ಎಂದೂ ಇರುವುದಿಲ್ಲವೋ ಅವನು ಗಾಂಡೀವ ಬಾಣಗಳನ್ನು ಕೈಯಲ್ಲಿ ಹಿಡಿದು ನಿಂತಿದ್ದನು. ದುರ್ಯೋಧನನ ಸೇನೆಯನ್ನು ಪುಡಿಮಾಡುವನೋ ಅಂತಿರುವ, ಅತೀವ ರೌದ್ರ, ಭಯವನ್ನುಂಟುಮಾಡುವ ರೂಪವುಳ್ಳ, ಅನಯುಧನಾಗಿಯೂ ತನ್ನ ಉತ್ತಮ ಭುಜಗಳಿಂದ ನರ, ಅಶ್ವ, ಆನೆಗಳನ್ನು ಭಸ್ಮಮಾಡಬಲ್ಲ ಭುಜದ್ವಯಗಳ ಆ ಭೀಮಸೇನನು ಯಮಳರಿಬ್ಬರೊಂದಿಗೆ ವೀರರಥರ ಸೇನೆಯನ್ನು ರಕ್ಷಿಸುತ್ತಿದ್ದನು. ಮತ್ತಿನಲ್ಲಿರುವ ಸಿಂಹದ ಆಟದ ನಡುಗೆಯುಳ್ಳ, ಲೋಕದಲ್ಲಿ ಮಹೇಂದ್ರನ ಹಾಗಿರುವ, ಸೇನೆಯ ಮುಂದೆ ಹೋಗುತ್ತಿರುವ ಆ ದುರಾಸದ, ವಾರಣರಾಜದರ್ಪ, ವೃಕೋದರನನ್ನು ನೋಡಿ ಕೌರವ ಯೋಧರು ಭಯವಿಗ್ನರಾಗಿ ಸತ್ವವನ್ನು ಕಳೆದುಕೊಂಡು ಕೆಸರಿನಲ್ಲಿ ಸಿಕ್ಕಿಕೊಂಡ ಆನೆಗಳಂತೆ ಭಯಭೀತರಾಗಿದ್ದರು.

ಅನೀಕಮಧ್ಯದಲ್ಲಿ ನಿಂತಿದ್ದ ರಾಜಪುತ್ರ, ದುರಾಸದ, ಭರತಶ್ರೇಷ್ಠ, ಗುಡಾಕೇಶನಿಗೆ ಜನಾರ್ದನನು ಹೇಳಿದನು: “ತನ್ನ ಸಿಟ್ಟಿನಿಂದ ನಮ್ಮ ಸೇನೆಯನ್ನು ಸುಡುತ್ತಿರುವ, ನಮ್ಮ ಸೇನೆಯನ್ನು ಸಿಂಹದಂತೆ ನೋಡುತ್ತಿರುವ ಅವನೇ ಮೂರುನೂರು ಅಶ್ವಮೇಧಗಳನ್ನು ಮಾಡಿದ ಕುರುವಂಶಧ್ವಜ ಭೀಷ್ಮ. ಈ ಸೇನೆಗಳು ಆ ಮಹಾನುಭಾವನನ್ನು ಉರಿಯುತ್ತಿರುವ ಸೂರ್ಯನನ್ನು ಮೋಡಗಳು ಹೇಗೋ ಹಾಗೆ ಸುತ್ತುವರೆದಿವೆ. ಇವರನ್ನು ಕೊಂದು ಭರತರ್ಷಭನಿಂದ ಯುದ್ಧವನ್ನು ಬಯಸು.”

ಅಲ್ಲಿ ಎರಡೂ ಸೇನೆಗಳಲ್ಲಿ ಯೋಧರು ಸಂತೋಷಗೊಂಡು ಹರ್ಷಿಸಿದರು. ಇಬ್ಬರಲ್ಲಿಯೂ ಹೂವಿನ ಮಾಲೆಗಳ ಮತ್ತು ಸುಗಂಧಗಳ ಸುವಾಸನೆಯು ಹೊರಬರುತ್ತಿತ್ತು. ಹೋರಾಡಲು ಸೇರಿದ್ದ ಸೇನೆಗಳ ವ್ಯೂಹಗಳು ಪರಸ್ಪರರನ್ನು ಎದುರಿಸಿ ಮರ್ದಿಸುವುದು ತುಂಬಾ ದೊಡ್ಡದಾಗಿತ್ತು. ವಾದ್ಯಗಳ ಶಬ್ಧ, ಶಂಖ-ಭೇರಿಗಳ ತುಮುಲಗಳು ಆನೆಗಳ ಮತ್ತು ಹರ್ಷಗೊಂಡಿದ್ದ ಸೈನಿಕರ ಕೂಗಿನೊಂದಿಗೆ ಸೇರಿತು.

ಪಾಂಡವ ಸೇನೆಯು ಯುದ್ಧವ್ಯೂಹದಲ್ಲಿ ರಚಿಸಿಕೊಂಡಿದ್ದುದನ್ನು ನೋಡಿದ ರಾಜಾ ದುರ್ಯೋಧನನು ಆಚಾರ್ಯನ ಬಳಿಬಂದು ಹೇಳಿದನು: “ಆಚಾರ್ಯ! ಪಾಂಡುಪುತ್ರರ ಈ ಮಹಾ ಸೇನೆಯನ್ನು ಬುದ್ಧಿವಂತಿಕೆಯಿಂದ ನಿನ್ನ ಶಿಷ್ಯ ದ್ರುಪದಪುತ್ರನು ವ್ಯೂಹದಲ್ಲಿ ರಚಿಸಿದುದನ್ನು ನೋಡು! ಅಲ್ಲಿ ಯುದ್ಧದಲ್ಲಿ ಶೂರರಾದ ಮಹೇಷ್ವಾಸ ಭೀಮಾರ್ಜುನರಿದ್ದಾರೆ, ಯುಯುಧಾನ, ವಿರಾಟ, ದ್ರುಪದ, ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ, ಕುಂತಿಭೋಜ, ಶೈಬ್ಯ, ಯುಧಾಮನ್ಯು, ಉತ್ತಮೌಜಸ್ಸು, ಸೌಭದ್ರ, ದ್ರೌಪದಿಯ ಮಕ್ಕಳು - ಎಲ್ಲರೂ ಮಹಾರಥಿಗಳೇ ಇದ್ದಾರೆ. ನಮ್ಮಲ್ಲಿರುವ ವಿಶಿಷ್ಟ ನಾಯಕರನ್ನೂ ತಿಳಿದುಕೋ! ನಿನ್ನ ಸೂಚನೆಗಾಗಿ ನಾನು ಹೇಳುತ್ತೇನೆ. ನೀನು, ಭೀಷ್ಮ, ಕರ್ಣ, ಯುದ್ಧದಲ್ಲಿ ಸದಾ ಜಯವನ್ನೇ ಹೊಂದುವ ಕೃಪ, ಅಶ್ವತ್ಥಾಮ, ವಿಕರ್ಣ, ಮತ್ತು ಸೌಮದತ್ತಿ. ಇನ್ನೂ ಇತರ ಬಹಳ ಮಂದಿ ಶೂರರು, ನಾನಾ ಶಸ್ತ್ರಗಳನ್ನು ಪ್ರಹರಮಾಡಬಲ್ಲರು, ಎಲ್ಲಾ ಯುದ್ಧ ವಿಶಾರದರು ನನಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಭೀಷ್ಮನಿಂದ ರಕ್ಷಿಸಲ್ಪಟ್ಟ ನಮ್ಮ ಸೇನೆಯು ಪರ್ಯಾಪ್ತವಾಗಿಲ್ಲ. ಆದರೆ ಭೀಮನ ರಕ್ಷಣೆಯಲ್ಲಿರುವ ಅವರ ಸೇನೆಯು ಪರ್ಯಾಪ್ತವಾಗಿದೆ. ಈಗ ನೀವೆಲ್ಲರೂ ನಿಮ್ಮ ನಿಮ್ಮ ಸ್ಥಾನಗಳಲ್ಲಿ ನಿಂತು ಎಲ್ಲ ಕಡೆಗಳಿಂದಲೂ ಭೀಷ್ಮನನ್ನು ರಕ್ಷಿಸಬೇಕು.”

ಅವನಿಗೆ ಹರ್ಷವನ್ನುಂಟುಮಾಡಲೋಸುಗ ಪ್ರತಾಪವಾನ್ ಕುರುವೃದ್ಧ ಪಿತಾಮಹನು ಸಿಂಹನಾದ ಮಾಡಿ ಜೋರಾಗಿ ಶಂಖವನ್ನು ಊದಿದನು. ಅದೇ ಸಮಯದಲ್ಲಿ ಒಂದೇ ಸಮನೆ ಶಂಖಗಳು, ಭೇರಿಗಳು, ಪಣವಾನಕಗಳು, ಮತ್ತು ಗೋಮುಖಗಳು ಮೊಳಗಿದವು. ಆ ಶಬ್ಧವು ಎಲ್ಲ ಕಡೆಯೂ ತುಂಬಿತು. ಆಗ ಬಿಳಿಯ ಕುದುರೆಗಳನ್ನು ಕಟ್ಟಿದ್ದ ಮಹಾರಥದಲ್ಲಿ ನಿಂತಿದ್ದ ಮಾಧವ ಪಾಂಡವರೂ ಕೂಡ ದಿವ್ಯ ಶಂಖಗಳನ್ನು ಊದಿದರು. ಹೃಷೀಕೇಶನು ಪಾಂಚಜನ್ಯವನ್ನೂ, ಧನಂಜಯನು ದೇವದತ್ತವನ್ನೂ, ಭೀಮಕರ್ಮಿ ವೃಕೋದರನು ಪೌಂಢ್ರವೆಂಬ ಮಹಾಶಂಖವನ್ನೂ, ಕುಂತೀಪುತ್ರ ರಾಜ ಯುಧಿಷ್ಠಿರನು ಅನಂತವಿಜಯವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಪಣಿಪುಷ್ಪಕವನ್ನೂ ಊದಿದರು. ಹಾಗೆಯೇ ಮಹಾ ಧನುಸ್ಸನ್ನು ಹಿಡಿದಿದ್ದ ಕಾಶೀರಾಜ, ಮಹಾರಥಿ ಶಿಖಂಡಿ, ಧೃಷ್ಟದ್ಯುಮ್ನ, ವಿರಾಟ, ಸೋಲರಿಯದ ಸಾತ್ಯಕಿ, ದ್ರುಪದ, ದ್ರೌಪದಿಯ ಮಕ್ಕಳು ಮತ್ತು ಸರ್ವ ಪೃಥ್ವೀಪತಿಗಳೂ, ಮಹಾಬಾಹು ಸೌಭದ್ರ ಅಭಿಮನ್ಯುವೂ ಬೇರೆ ಬೇರೆಯಾಗಿ ತಮ್ಮ ತಮ್ಮ ಶಂಖಗಳನ್ನು ಊದಿದರು. ಲೋಕವನ್ನೇ ತುಂಬಿದ ಆ ಶಂಖಘೋಷವು ಪೃಥಿವ್ಯಾಕಾಶಗಳಲ್ಲಿ ಮಾರ್ದನಿಗೊಂಡು ಕೌರವರ ಎದೆಗಳನ್ನು ನಡುಗಿಸಿತು.

ಅರ್ಜುನವಿಷಾದ

ಶಸ್ತ್ರಗಳನ್ನು ಹಿಡಿದು ಕದನ ಕುತೂಹಲಿಗಳಾಗಿ ತನ್ನ ಎದಿರು ನಿಂತ ಧಾರ್ತರಾಷ್ಟ್ರ ಕೌರವರನ್ನು ನೋಡಿ ಕಪಿಧ್ವಜ ಅರ್ಜುನನು ಬಿಲ್ಲನ್ನೆತ್ತಿ ಹಿಡಿದು ಸರ್ವೇಂದ್ರಿಯ ನಿಯಾಮಕನಾದ ಶ್ರೀಕೃಷ್ಣನನ್ನು ಕುರಿತು ಈ ಮಾತನ್ನು ಹೇಳಿದನು: “ಅಚ್ಯುತ! ಎರಡೂ ಸೇನೆಗಳ ನಡುವೆ ನನ್ನ ರಥವನ್ನು ಒಯ್ದು ನಿಲ್ಲಿಸು. ಈ ರಣರಂಗದಲ್ಲಿ ಕಾದಲು ಕಾದುಕುಳಿತವರನ್ನೂ, ಯಾರು ನನ್ನೆದುರು ಯುದ್ಧಮಾಡಲು ಉತ್ಸುಕರಾಗಿ ನಿಂತಿದ್ದಾರೆ ಎನ್ನುವುದನ್ನು ನಾನೊಮ್ಮೆ ನೋಡುತ್ತೇನೆ. ದುರ್ಬುದ್ಧಿ ದುರ್ಯೋಧನನಿಗೆ ಒಳ್ಳೆಯದನ್ನು ಮಾಡಲೆಂದು ಇಲ್ಲಿಗೈತಂದ ಯುದ್ಧಕುತೂಹಲಿಗಳು ಯಾರೆಂಬುದನ್ನು ಒಮ್ಮೆ ನೋಡುತ್ತೇನೆ.”

ಗುಡಾಕೇಶ ಅರ್ಜುನನು ಹೀಗೆ ಹೇಳಲು, ಹೃಷೀಕೇಶನು ರಥವನ್ನು ಎರಡೂ ಸೇನೆಗಳ ನಡುವೆ ಭೀಷ್ಮ-ದ್ರೋಣರೇ ಮೊದಲಾದ ಸರ್ವ ಮಹೀಕ್ಷಿತರ ಮುಂದೆ ತಂದು ನಿಲ್ಲಿಸಿ “ಪಾರ್ಥ! ಸೇರಿರುವ ಈ ಕುರುಗಳನ್ನು ನೋಡು!” ಎಂದನು. ಆ ಎರಡೂ ಸೇನೆಗಳಲ್ಲಿ ತಂದೆಗೆ ಸಮಾನರಾದವರು, ಅಜ್ಜಂದಿರು, ಗುರುಗಳು, ಸೋದರ ಮಾವಂದಿರು, ಒಡಹುಟ್ಟಿದವರು, ಮಕ್ಕಳು, ಮೊಮ್ಮಕ್ಕಳು, ಗೆಳೆಯರು, ಮಾವಂದಿರು, ಮತ್ತು ಸುಹೃದಯರು ನಿಂತಿರುವುದನ್ನು ಪಾರ್ಥನು ಕಂಡನು. ಅಲ್ಲಿ ಸೇರಿದ್ದ ಆ ಎಲ್ಲ ಬಂಧುಗಳನ್ನೂ ನೋಡಿದ ಕೌಂತೇಯನು ಕರುಣೆಯುಂಟಾಗಿ ನೊಂದುಕೊಂಡು ಈ ಮಾತುಗಳನ್ನಾಡಿದನು:

“ಕೃಷ್ಣ! ಇಲ್ಲಿ ಯುದ್ಧಕಾಗಿ ಕಲೆತ ಈ ಸ್ವಜನರನ್ನು ಕಂಡು ನನ್ನ ಅವಯವಗಳೆಲ್ಲ ಸಡಿಲಾಗುತ್ತಿವೆ. ಬಾಯಿ ಒಣಗುತ್ತಿದೆ. ಮೈ ನಡುಗುತ್ತಿದೆ. ನವಿರೇಳುತ್ತಿದೆ. ಗಾಂಡೀವ ಧನುಸ್ಸು ಕೈಯಿಂದ ಜಾರುತ್ತಿದೆ. ಚರ್ಮ ಸುಡುತ್ತಿದೆ. ನಿಲ್ಲುವುದಕ್ಕೂ ತ್ರಾಣವಿಲ್ಲ. ಮನಸ್ಸು ಗಾಬರಿಗೊಂಡಿದೆ. ಕೇಶವ! ಕೆಟ್ಟ ಶಕುನಗಳು ಕಾಣುತ್ತಿವೆ. ಈ ಯುದ್ಧದಲ್ಲಿ ಸ್ವಜನರನ್ನು ಕೊಂದರೆ ಏನು ಶ್ರೇಯಸ್ಸೋ ಕಾಣೆ. ಗೋವಿಂದ! ಕೃಷ್ಣ! ನನಗೆ ಇದರಿಂದ ದೊರೆಯುವ ವಿಜಯವೂ ಬೇಡ. ರಾಜ್ಯವೂ ಬೇಡ. ಸುಖವೂ ಬೇಡ. ಈ ರಾಜ್ಯದಿಂದಾಗಲೀ ಭೋಗಗಳಿಂದಾಗಲೀ, ಬದುಕಿನಿಂದಾಗಲೀ ನಮಗೆ ಆಗಬೇಕಾಗಿದ್ದೇನಿದೆ? ರಾಜ್ಯ, ಭೋಗ, ಸುಖಗಳನ್ನು ನಾವು ಯಾರಿಗಾಗಿ ಕೋರುತ್ತಿದ್ದೇವೋ ಆ ಗುರುಗಳು, ಪಿತೃಗಳು, ಮಕ್ಕಳು, ಪಿತಾಮಹರು, ಮಾತುಲರು, ಮಾವಂದಿರು, ಮೊಮ್ಮಕ್ಕಳು, ಮೈದುನರು ಮತ್ತು ಇತರ ಸಂಬಂಧಿಕರೆಲ್ಲರೂ ಇಲ್ಲಿ ಯುದ್ದೋದ್ಯಮಿಗಳಾಗಿ ಬಂದಿದ್ದಾರೆ. ಇವರು ನನ್ನನ್ನು ಕೊಲ್ಲುವಂತಿದ್ದರೂ ನಾನವರನ್ನು ಕೊಲ್ಲಲಾರೆ. ನನಗೆ ಮೂರುಲೋಕದ ಒಡೆತನ ಸಿಗುವಹಾಗಿದ್ದರೂ ಕೊಲ್ಲಲಾರದವನು ಈ ಭೂಮಿಯ ಒಡೆತನದ ಆಸೆಗಾಗಿ ಕೊಂದೇನೇ? ಈ ಕೌರವರನ್ನು ಕೊಲ್ಲುವುದರಿಂದ ನಮಗಾಗುವ ಸಂತೋಷವೇನು? ಪಾತಕಿಗಳಾಗಿದ್ದರೂ ಈ ಬಂಧುಗಳನ್ನು ಕೊಂದು ನಮಗೆ ಪಾಪವೇ ಗಂಟು ಬಿದ್ದೀತು! ಬಂಧುಗಳಾದ ಕೌರವರನ್ನು ಕೊಲ್ಲುವುದು ಸರಿಯಲ್ಲ. ನಮ್ಮವರನ್ನೇ ಕೊಂದು ನಾವು ಹೇಗೆ ಸುಖಿಗಳಾದೇವು? ಇವರಾದರೋ ದುರಾಸೆಯಿಂದ ಬುದ್ಧಿಗೆಟ್ಟು ಮಿತ್ರದ್ರೋಹದಿಂದಾಗುವ ಪಾಪವನ್ನೂ ಕುಲನಾಶದಿಂದಾಗುವ ದೋಷವನ್ನೂ ತಿಳಿಯದವರಾಗಿದ್ದಾರೆ. ಕುಲಕ್ಷಯದಿಂದಾಗುವ ಕೇಡನ್ನು ತಿಳಿಯಬಲ್ಲ ನಮಗಾದರೂ ಈ ಪಾಪದಿಂದ ನಿವೃತ್ತರಾಗಬೇಕೆಂದು ತಿಳಿಯಬಾರದೇಕೆ? ಕುಲವು ನಾಶವಾಗಲು ಸನಾತನ ಕುಲಧರ್ಮಗಳು ನಾಶವಾಗುವುವು. ಧರ್ಮವು ನಷ್ಟವಾಗಲು ಕುಲವನ್ನೆಲ್ಲ ಅಧರ್ಮವೇ ಆವರಿಸಿಬಿಡುವುದು. ಅಧರ್ಮವೇ ಬೆಳೆದಾಗ ಕುಲಸ್ತ್ರೀಯರು ಕೆಡುವರು. ಹೆಂಗಸರು ಶೀಲಭ್ರಷ್ಟೆಯರಾಗಿ ಕೆಟ್ಟಾಗ ಜಾತಿಗಳ ಬೆರಕೆಯಾಗುವುದು. ಈ ವರ್ಣಸಾಂಕರ್ಯವು ಕುಲಘಾತಕರನ್ನೂ ಕುಲವನ್ನೂ ಕೂಡಿಯೇ ನರಕಕ್ಕೆ ಬೀಳಿಸುವುದು. ಅಂಥವರ ಪಿತೃಗಳು ಪಿಂಡಪ್ರದಾನವಿಲ್ಲದವರೂ ಜಲತರ್ಪಣವಿಲ್ಲದವರೂ ಆಗಿ ನರಕಕ್ಕೆ ಬೀಳುವರು. ಜಾತಿಯ ಬೆರಕೆಗೆ ಕಾರಣರಾದ ಕುಲಘಾತಕರ ಈ ದೋಷಗಳಿಂದ ಬಹುಕಾಲದಿಂದ ಅನುಸರಿಸಿಕೊಂಡು ಬಂದ ಕಾಲಧರ್ಮಗಳೂ, ಜಾತಿಧರ್ಮಗಳು ಕೆಟ್ಟು ಹೋಗುವವು. ಕುಲಧರ್ಮವನ್ನು ಕೆಡಿಸಿಕೊಂಡ ಮನುಷ್ಯರಿಗೆ ನರಕವಾಸವು ತಪ್ಪಿದ್ದಲ್ಲವೆಂಬುದನ್ನು ಕೇಳಿದ್ದೇವೆ. ರಾಜ್ಯದ ಲಾಭದಿಂದ ದೊರೆಯಬಹುದಾದ ಸುಖದ ಲೋಭದಿಂದ ಸ್ವಜನರನ್ನು ಕೊಲ್ಲಲು ಮುಂದಾಗಿರುವ ನಾವು ದೊಡ್ಡದೊಂದು ಪಾಪಕಾರ್ಯವನ್ನು ಮಾಡಲು ಹೊರಟಿದ್ದೀವಲ್ಲ! ಅಯ್ಯೋ! ಪ್ರತೀಕಾರವನ್ನು ಮಾಡದ, ಶಸ್ತ್ರವನ್ನು ಹಿಡಿಯದ ನನ್ನನ್ನು ಆಯುಧಪಾಣಿಗಳಾದ ಕೌರವರೇ ಕೊಂದುಬಿಟ್ಟರೆ ಎಷ್ಟೋ ಕ್ಷೇಮವಾದೀತು!”

ಇದನ್ನು ಹೇಳಿ ದುಃಖದಿಂದ ಕದಡಿದ ಮನಸ್ಸುಳ್ಳ ಅರ್ಜುನನು ಬಿಲ್ಲು ಬಾಣಗಳನ್ನು ಬಿಸುಟು ರಥದಲ್ಲಿ ಕುಳಿತುಬಿಟ್ಟನು. ಹೀಗೆ ಕನಿಕರದಿಂದ ಕಂಬನಿದುಂಬಿ ದುಃಖಿಸುತ್ತಿರುವ ಅರ್ಜುನನನಿಗೆ ಮಧುಸೂದನನು ಹೇಳಿದನು: “ಒಳ್ಳೆಯವರಿಗೆ ಹೇಳಿಸಿದಲ್ಲದ, ಸ್ವರ್ಗವನ್ನು ದೊರಕಿಸದ, ಹಾಗೂ ಅಪಕೀರ್ತಿಕರವಾದ ಇಂಥ ಕೊಳಕು ಬುದ್ಧಿಯು ಈ ವಿಷಮಕಾಲದಲ್ಲಿ ನಿನಗೆಲ್ಲಿಂದ ಬಂದಿತು? ಪಾರ್ಥ! ನಪುಂಸಕನಂತೆ ನುಡಿಯದಿರು! ನಿನ್ನಂಥವರಿಗೆ ಇದು ಹೇಳಿಸಿದುದಲ್ಲ. ಹಗೆಗಳನ್ನು ಗೆಲ್ಲಬಲ್ಲ ನೀನು ಕೀಳಾದ ಈ ಎದೆಯಳುಕನ್ನು ತೊರೆದು ಎದ್ದು ನಿಲ್ಲು!”

ಅರ್ಜುನನು ಹೇಳಿದನು: “ಮಧುಸೂದನ! ಪೂಜಾರ್ಹರಾಗಿರುವ ಭೀಷ್ಮನನ್ನೂ, ದ್ರೋಣನನ್ನೂ ಯುದ್ಧದಲ್ಲಿ ಎದುರಿಸಿ ಬಾಣಗಳಿಂದ ಹೇಗೆ ಹೊಡೆದೇನು? ಮಹಾನುಭಾವ ಗುರುಗಳನ್ನು ಕೊಂದು ರಾಜ್ಯಸುಖವನ್ನು ಪಡೆಯುವುದಕ್ಕಿಂತ ಕೊಲ್ಲದೆಯೆ ತಿರಿದು ತಿನ್ನುವುದು ಲೇಸು. ಸುಖಾಪೇಕ್ಷಿ ಗುರುಗಳನ್ನು ಕೊಂದರೆ ಅವರ ನೆತ್ತರಿನಿಂದ ತೋಯುವ ಭೋಗವನ್ನಲ್ಲವೆ ನಾವು ಉಣ್ಣಬೇಕು? ನಾವು ಗೆಲ್ಲುವೆವೋ ಅವರೇ ಗೆಲ್ಲುವರೋ! ಇವುಗಳಲ್ಲಿ ಯಾವುದು ಮೇಲಾದುದು ಎಂದು ಏನೂ ತಿಳಿಯದಾಗಿದೆ. ಯಾರನ್ನು ಕೊಂದು ನಾವು ಬದುಕಲು ಬಯಸುವುದಿಲ್ಲವೋ ಆ ಕೌರವರೇ ಇದಿರು ಬಂದು ನಿಂತಿದ್ದಾರೆ. ವ್ಯಸನದಿಂದಲೂ ಪಾಪಭೀತಿಯಿಂದಲೂ ಎದೆಗಾರಿಕೆಯನ್ನು ಕಳೆದುಕೊಂಡಿದ್ದೇನೆ. ಧರ್ಮದ ವಿಚಾರದಲ್ಲಿಯೂ ಮನಸ್ಸು ಮಂಕಾಗಿದೆ. ನಾನು ನಿನ್ನ ಶಿಷ್ಯನಾಗಿ ಶರಣುಬಂದಿದ್ದೇನೆ. ಯಾವುದು ಶ್ರೇಯವೆಂದು ನೀನೇ ನಿರ್ಣಯಿಸಿ ದಾರಿ ತೋರು! ದೇವತೆಗಳ ಒಡೆತನದಿಂದಾಗಲೀ, ಬಂಧುಗಳಿಲ್ಲದ ಈ ಸಂಪದ್ಭರಿತ ಭೂಮಿಯ ಒಡೆತನದಿಂದಾಗಲೀ ನನ್ನ ಇಂದ್ರಿಯಗಳನ್ನು ಹಿಂಡಿಬಿಡುವ ಈ ನೋವು ಮಾಯವಾಗದು. ಇದಕ್ಕೆ ಉಪಾಯವನ್ನು ಕಾಣದಾಗಿದ್ದೇನೆ.”

ಪರಂತಪ ಗುಡಾಕೇಶ ಅರ್ಜುನನು ಹೃಷೀಕೇಶ ಕೃಷ್ಣನಿಗೆ ಹೀಗೆ ಹೇಳಿ “ಗೋವಿಂದ! ನಾನು ಯುದ್ಧಮಾಡಲಾರೆ!” ಎಂದು ಸುಮ್ಮನಾದನು. ಎರಡೂ ಸೇನೆಗಳ ನಡುವೆ ಶೋಕಿಸುತ್ತಾ ಕುಳಿತಿದ್ದ ಅರ್ಜುನನನ್ನು ನೋಡಿ ಹೃಷೀಕೇಶನು ಸಾಂಖ್ಯ, ಕರ್ಮ, ಜ್ಞಾನ, ಕರ್ಮಸಂನ್ಯಾಸ, ಭಕ್ತಿ ಮೊದಲಾದ ಯೋಗಗಳನ್ನು ವರ್ಣಿಸುತ್ತಾ ತನ್ನ ವಿಶ್ವರೂಪವನ್ನೂ ತೋರಿಸಿ, ಯುದ್ಧಕ್ಕೆ ಸಿದ್ಧನಾಗುವಂತೆ ಪ್ರಚೋದಿಸಿದನು.

ಯುಧಿಷ್ಠಿರನು ಭೀಷ್ಮಾದಿಗಳನ್ನು ಸಮ್ಮಾನಿಸಿದುದು

ಧನಂಜಯನು ಬಾಣ-ಗಾಂಡೀವಗಳನ್ನು ಧರಿಸಿದುದನ್ನು ನೋಡಿ ಮಹಾರಥಿಗಳು ಪುನಃ ಮಹಾನಾದಗೈದರು. ಆ ವೀರ ಪಾಂಡವರು, ಸೋಮಕರು ಮತ್ತು ಅವರ ಅನುಯಾಯಿಗಳು ಸಾಗರ ಸಂಭವ ಶಂಖಗಳನ್ನು ಹರ್ಷಿತರಾಗಿ ಊದಿದರು. ಆಗ ಭೇರಿಗಳು, ಪೇಶಿಗಳು, ಕ್ರಕಚಗಳು, ಗೋವಿಷಾಣಿಕಗಳು ಒಟ್ಟಿಗೇ ಮೊಳಗಿ ಮಹಾ ಶಬ್ಧವುಂಟಾಯಿತು. ಆಗ ದೇವತೆಗಳು, ಗಂಧರ್ವರು, ಪಿತೃಗಳು, ಮತ್ತು ಸಿದ್ಧಚಾರಣ ಸಂಘಗಳು ನೋಡಲು ಆಕಾಶದಲ್ಲಿ ಒಂದುಗೂಡಿದರು. ಮಹಾಭಾಗ ಋಷಿಗಳೂ ಕೂಡ ಶತಕ್ರತುವನ್ನು ಮುಂದಿಟ್ಟುಕೊಂಡು ಒಟ್ಟಿಗೇ ಆ ಮಹಾ ಯುದ್ಧವನ್ನು ನೋಡಲು ಒಂದುಗೂಡಿದರು. ಆಗ ಯುದ್ಧಕ್ಕೆ ಸುಸಮುದ್ಯತವಾಗಿ ಸಾಗರದಂತೆ ಮುಂದೆ ಚಲಿಸುತ್ತಿದ್ದ ಆ ಸೇನೆಗಳನ್ನು ನೋಡಿ ವೀರ ಯುಧಿಷ್ಠಿರನು ಕವಚವನ್ನು ಕಳಚಿ, ಶ್ರೇಷ್ಠ ಆಯುಧವನ್ನು ಕೆಳಗಿಟ್ಟು, ಬೇಗನೆ ರಥದಿಂದ ಕೆಳಗಿಳಿದು, ಕಾಲ್ನಡುಗೆಯಲ್ಲಿಯೇ, ಕೈಗಳನ್ನು ಮುಗಿದು ನಡೆದನು. ಧರ್ಮರಾಜ ಯುಧಿಷ್ಠಿರನು ರಿಪುವಾಹಿನಿಯಲ್ಲಿದ್ದ ಪಿತಾಮಹನನ್ನೇ ನೋಡಿ ಮಾತನಾಡಲು ಪೂರ್ವಾಭಿಮುಖವಾಗಿ ನಡೆದನು. ಅವನು ಹೋಗುತ್ತಿರುವುದನ್ನು ನೋಡಿ ಕುಂತೀಪುತ್ರ ಧನಂಜಯನು ಕೂಡಲೇ ತನ್ನ ರಥದಿಂದ ಕೆಳಗಿಳಿದು ಇತರ ಸಹೋದರರೊಂದಿಗೆ ಅವನನ್ನು ಅನುಸರಿಸಿ ನಡೆದನು. ಭಗವಾನ್ ವಾಸುದೇವನೂ ಹಿಂದೆ ನಡೆದನು. ಹಾಗೆಯೇ ಉತ್ಸುಕ ಮುಖ್ಯ ರಾಜರೂ ಹಿಂಬಾಲಿಸಿದರು.

ಅರ್ಜುನನು ಹೇಳಿದನು: ರಾಜನ್! ಇದೇನು ಮಾಡುತ್ತಿದ್ದೀಯೆ? ನಮ್ಮನ್ನು ತೊರೆದು ಕಾಲ್ನಡುಗೆಯಲ್ಲಿಯೇ ಪೂರ್ವಾಭಿಮುಖವಾಗಿ ಶತ್ರುಸೇನೆಗಳ ಕಡೆ ಹೋಗುತ್ತಿರುವೆಯಲ್ಲಾ?

ಭೀಮಸೇನನು ಹೇಳಿದನು: ರಾಜೇಂದ್ರ! ಕವಚಾಯುಧಗಳನ್ನು ಕೆಳಗಿಟ್ಟು, ಕವಚಗಳಿಂದ ಕೂಡಿದ ಅರಿಸೇನೆಗಳ ಕಡೆ ತಮ್ಮಂದಿರನ್ನು ತೊರೆದು ಎಲ್ಲಿಗೆ ಹೋಗುತ್ತಿದ್ದೀಯೆ?

ನಕುಲನು ಹೇಳಿದನು: ಭಾರತ! ನೀನು ನನ್ನ ಹಿರಿಯಣ್ಣ. ಈ ರೀತಿ ನೀನು ಹೋಗುತ್ತಿರುವುದರಿಂದ ಭೀತಿಯು ನನ್ನ ಹೃದಯವನ್ನು ನೋಯಿಸುತ್ತಿದೆ. ಹೇಳು! ನೀನು ಎಲ್ಲಿಗೆ ಹೋಗುತ್ತಿರುವೆ?

ಸಹದೇವನು ಹೇಳಿದನು: ಸದ್ಯದಲ್ಲಿಯೇ ಮಹಾಭಯಂಕರ ಯುದ್ಧಮಾಡಲಿಕ್ಕಿರುವ ಈ ರಣಸಮೂಹದಲ್ಲಿ ಶತ್ರುಗಳ ಕಡೆ ಎಲ್ಲಿಗೆ ಹೋಗುತ್ತೀಯೆ ನೃಪ!

ತಮ್ಮಂದಿರು ಈ ರೀತಿ ಕೇಳುತ್ತಿದ್ದರೂ ಯುಧಿಷ್ಠಿರನು ಏನನ್ನೂ ಮಾತನಾಡದೇ ಮುಂದುವರೆದನು. ಮಹಾಪ್ರಾಜ್ಞ ಮಹಾಮನಸ್ವಿ ವಾಸುದೇವನು ಅವರಿಗೆ ನಗುತ್ತಾ “ಇವನ ಅಭಿಪ್ರಾಯವು ನನಗೆ ತಿಳಿದಿದೆ” ಎಂದನು. ಈ ಪಾರ್ಥಿವನು ಭೀಷ್ಮ, ದ್ರೋಣ, ಗೌತಮ ಮತ್ತು ಶಲ್ಯರೇ ಮೊದಲಾದ ಗುರುಗಳನ್ನು ಗೌರವಿಸಿ ಎಲ್ಲ ಶತ್ರುಗಳೊಂದಿಗೆ ಹೋರಾಡುತ್ತಾನೆ. ಗುರುಗಳನ್ನು ಗೌರವಿಸಿ ನಮಸ್ಕರಿಸಿ ಯುದ್ಧಮಾಡುವವನು ಮಹತ್ತರ ಆಪತ್ತುಗಳನ್ನೂ ಜಯಿಸುತ್ತಾನೆಂದು ಹಿಂದಿನ ಕಲ್ಪಗಳಿಂದ ಕೇಳುತ್ತೇವೆ. ತನಗಿಂತಲೂ ಮಹತ್ತರರನ್ನು ಯಥಾಶಾಸ್ತ್ರವಾಗಿ ನಮಸ್ಕರಿಸಿ ಯುದ್ಧಮಾಡುವವನಿಗೆ ಯುದ್ಧದಲ್ಲಿ ಜಯವು ಖಂಡಿತವಾದುದು ಎಂದು ನನಗನ್ನಿಸುತ್ತದೆ.

ಕೃಷ್ಣನು ಹೀಗೆ ಹೇಳಲು ಧಾರ್ತರಾಷ್ಟ್ರನ ಸೇನೆಯಲ್ಲಿ ಮಹಾ ಹಾಹಾಕಾರವಾಯಿತು. ಇನ್ನೊಂದು ಕಡೆಯಲ್ಲಿ ನಿಃಶಬ್ಧವಾಯಿತು. ದೂರದಿಂದಲೇ ಯುಧಿಷ್ಠಿರನನ್ನು ನೋಡಿ ಧಾರ್ತರಾಷ್ಟ್ರನ ಸೈನಿಕರು ತಮ್ಮೊಂದಿಗೇ ಮಾತನಾಡಿಕೊಂಡರು: ಇವನು ಕುಲಪಾಂಸನ! ಈ ರಾಜನು ಹೆದರಿಕೊಂಡಿದ್ದಾನೆ ಎನ್ನುವುದು ವ್ಯಕ್ತವಾಗುತ್ತಿದೆ. ಯುಧಿಷ್ಠಿರನು ಸೋದರರೊಂದಿಗೆ ಶರಣಾಗಲು ಬೇಡಿಕೊಂಡು ಭೀಷ್ಮನಲ್ಲಿಗೆ ಬರುತ್ತಿದ್ದಾನೆ. ಧನಂಜಯ, ಪಾಂಡವ ವೃಕೋದರ, ನಕುಲ ಸಹದೇವರು ನಾಯಕರಾಗಿರುವಾಗ ಈ ಪಾಂಡವನು ಏಕೆ ಭೀತನಾಗಿದ್ದಾನೆ? ಭುವಿಯಲ್ಲಿ ಪ್ರಸಿದ್ಧನಾದರೂ, ಯುದ್ಧದ ಕುರಿತು ಹೃದಯದಲ್ಲಿ ಭೀತಿಪಡುತ್ತಿರುವ ಈ ಅಲ್ಪಸತ್ವನು ಕ್ಷತ್ರಿಯಕುಲದಲ್ಲಿಯೇ ಜನಿಸಿರಲಿಕ್ಕಿಲ್ಲ!

ಆಗ ಆ ಕ್ಷತ್ರಿಯರೆಲ್ಲರೂ ಕೌರವರನ್ನು ಪ್ರಶಂಸಿಸಿದರು. ಸಂತೋಷದಿಂದ ಸುಮನಸ್ಕರಾಗಿ ತಮ್ಮ ಅಂಗವಸ್ತ್ರಗಳನ್ನು ಪುನಃ ಪುನಃ ಮೇಲೆತ್ತಿ ಬೀಸಿದರು. ಆಗ ಅಲ್ಲಿರುವ ಯೋಧರೆಲ್ಲರೂ ಸೋದರರೊಂದಿಗೆ ಯುಧಿಷ್ಠಿರನನ್ನೂ ಜೊತೆಗೆ ಕೇಶವನನ್ನೂ ನಿಂದಿಸಿದರು. ಆಗ ಯುಧಿಷ್ಠಿರನನ್ನು ಧಿಕ್ಕರಿಸಿ ಕೌರವ ಸೈನ್ಯವು ಪುನಃ ನಿಃಶಬ್ಧವಾಯಿತು. ಯುಧಿಷ್ಠಿರನು ಹೀಗೆ ಮಾಡಲು ಎರಡೂ ಸೇನೆಗಳಲ್ಲಿ “ರಾಜನು ಏನು ಹೇಳುತ್ತಾನೆ? ಭೀಷ್ಮನು ಏನೆಂದು ಉತ್ತರಿಸುತ್ತಾನೆ? ಸಮರಶ್ಲಾಘೀ ಭೀಮ ಮತ್ತು ಕೃಷ್ಣಾರ್ಜುನರು ಏನು ಹೇಳುತ್ತಾರೆ?” ಎಂದು ಮಹಾ ಸಂಶಯವುಂಟಾಯಿತು. ಅವನು ಶರಶಕ್ತಿಗಳಿಂದ ಕೂಡಿದ್ದ ಶತ್ರುಗಳ ಸೇನೆಯನ್ನು ಪ್ರವೇಶಿಸಿ, ತಮ್ಮದಿಂರಿಂದ ಸುತ್ತುವರೆಯಲ್ಪಟ್ಟು ಭೀಷ್ಮನನ್ನು ಸಮೀಪಿಸಿದನು. ರಾಜಾ ಪಾಂಡವನು ಯುದ್ಧಕ್ಕೆ ಸಿದ್ಧನಾಗಿದ್ದ ಶಾಂತನವ ಭೀಷ್ಮನ ಪಾದಗಳನ್ನು ಕೈಗಳಿಂದ ಹಿಡಿದುಕೊಂಡು ಹೇಳಿದನು: ತಾತ! ದುರ್ಧರ್ಷ! ನಿನ್ನೊಡನೆ ಯುದ್ಧಮಾಡಲು ಕರೆಸಿಕೊಂಡಿರುವೆ! ಅನುಜ್ಞೆಯನ್ನು ನೀಡು. ಜಯವಾಗಲೆಂದು ಆಶೀರ್ವದಿಸು!

ಭೀಷ್ಮನು ಹೇಳಿದನು: ಭಾರತ! ಹೀಗೆ ನೀನು ನನ್ನ ಬಳಿ ಬರದೇ ಇದ್ದಿದ್ದರೆ ನಿನಗೆ ಪರಾಭವವಾಗಲೆಂದು ಶಪಿಸುತ್ತಿದ್ದೆ. ಪುತ್ರ! ಪ್ರೀತನಾಗಿದ್ದೇನೆ. ಯುದ್ಧಮಾಡು. ಜಯವನ್ನು ಹೊಂದು. ಯುದ್ಧದಲ್ಲಿ ನಿನಗೆ ಅನ್ಯ ಏನೆಲ್ಲ ಅಭಿಲಾಷೆಗಳಿವೆಯೋ ಅವುಗಳನ್ನೂ ಪಡೆಯುತ್ತೀಯೆ. ನನ್ನಿಂದ ಏನನ್ನು ಬಯಸುತ್ತೀಯೋ ಆ ವರವನ್ನು ಕೇಳು. ಇದೇ ರೀತಿ ನಡೆದರೆ ನಿನಗೆ ಪರಾಜಯವಿಲ್ಲ. ಮನುಷ್ಯನು ಹಣದ ದಾಸನೇ ಹೊರತು ಹಣವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಇದು ಸತ್ಯ. ಹಣದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ. ಆದುದರಿಂದ ಈ ಕ್ಲೀಬವಾಕ್ಯವನ್ನು ಹೇಳುತ್ತಿದ್ದೇನೆ. ಹಣದಿಂದ ನಾನು ಅಪಹೃತನಾಗಿದ್ದೇನೆ. ಯುದ್ಧದಿಂದ ಬೇರೆ ಏನನ್ನು ಇಚ್ಛಿಸುತ್ತೀಯೆ?

ಯುಧಿಷ್ಠಿರನು ಹೇಳಿದನು: ಮಹಾಪ್ರಾಜ್ಞ! ನಿತ್ಯವೂ ನನ್ನ ಹಿತೈಷಿಯಾಗಿ ಸಲಹೆ ನೀಡುತ್ತಿರು. ಸತತವೂ ಕೌರವನಿಗೋಸ್ಕರ ಯುದ್ಧಮಾಡು. ಇದೇ ನನ್ನ ವರ.

ಭೀಷ್ಮನು ಹೇಳಿದನು: ರಾಜನ್! ಇದರಲ್ಲಿ ನಿನಗೆ ಏನು ಸಹಾಯಮಾಡಲಿ? ನಿನ್ನ ಶತ್ರುಗಳಿಗಾಗಿ ಹೋರಾಡುತ್ತಿದ್ದೇನೆ. ನಿನ್ನ ಬಯಕೆಯೇನೆನ್ನುವುದನ್ನು ಹೇಳು!

ಯುಧಿಷ್ಠಿರನು ಹೇಳಿದನು: ಅಪರಾಜಿತನಾದ ನಿನ್ನನ್ನು ಸಂಗ್ರಾಮದಲ್ಲಿ ಹೇಗೆ ಜಯಿಸಬಹುದು? ನಿನಗೆ ಶ್ರೇಯಸ್ಕರವೆಂದು ಕಂಡರೆ ನನಗೆ ಹಿತವಾದ ಈ ಸಲಹೆಯನ್ನು ನೀಡು.

ಭೀಷ್ಮನು ಹೇಳಿದನು: ಕೌಂತೇಯ! ಆಹವದಲ್ಲಿ ನನ್ನೊಂದಿಗೆ ಯುದ್ಧಮಾಡಿ ಗೆಲ್ಲುವ ಯಾವ ಪುರುಷನನ್ನೂ, ಸಾಕ್ಷಾತ್ ಶತಕ್ರತುವೂ ಕೂಡ, ನಾನು ಕಾಣುವುದಿಲ್ಲ.

ಯುಧಿಷ್ಠಿರನು ಹೇಳಿದನು: ಪಿತಾಮಹ! ನಿನಗೆ ನಮಸ್ಕಾರಗಳು! ಅದನ್ನು ಪುನಃ ನಿನ್ನಲ್ಲಿ ಕೇಳುತ್ತಿದ್ದೇನೆ. ಸಮರದಲ್ಲಿ ಶತ್ರುಗಳು ನಿನ್ನನ್ನು ಗೆಲ್ಲುವ ಉಪಾಯವನ್ನು ಹೇಳು.

ಭೀಷ್ಮನು ಹೇಳಿದನು: ಮಗೂ! ಸಮರದಲ್ಲಿ ನನ್ನನ್ನು ಜಯಿಸಬಲ್ಲ ಶತ್ರುವನ್ನು ನಾನು ಕಾಣುವುದಿಲ್ಲ. ನನ್ನ ಮೃತ್ಯುಕಾಲವು ಇನ್ನೂ ಬಂದಿಲ್ಲ. ಪುನಃ ಬರುವುದನ್ನು ಮಾಡು!

ಭೀಷ್ಮನ ವಾಕ್ಯವನ್ನು ಶಿರಸಾ ಸ್ವೀಕರಿಸಿ ಯುಧಿಷ್ಠಿರನು ಪುನಃ ಅವನನ್ನು ವಂದಿಸಿದನು. ಅನಂತರ ಆ ಮಹಾಬಾಹುವು ಸರ್ವಸೈನ್ಯಗಳಿಗೂ ಕಾಣಿಸುವಂತೆ ಮಧ್ಯದಲ್ಲಿ ತಮ್ಮಂದಿರನ್ನೊಡಗೂಡಿ ಆಚಾರ್ಯನ ರಥದ ಕಡೆ ನಡೆದನು. ಅವನು ಆ ದುರ್ಧರ್ಷ ದ್ರೋಣನನ್ನು ಪ್ರದಕ್ಷಿಣೆಮಾಡಿ ನಮಸ್ಕರಿಸಿ ತನಗೆ ಶ್ರೇಯಸ್ಸನ್ನು ನೀಡುವಂತಹ ಮಾತುಗಳನ್ನಾಡಿದನು.ಭಗವನ್! ವಿಗತಕಲ್ಮಶನಾದ ನಿನ್ನೊಡನೆ ಯುದ್ಧಮಾಡಲು ಆಮಂತ್ರಿತನಾಗಿದ್ದೇನೆ. ನಿನ್ನಿಂದ ಅನುಜ್ಞಾತನಾಗಿ ಸರ್ವ ಶತ್ರುಗಳನ್ನೂ ಗೆಲ್ಲಬಲ್ಲೆನು.

ದ್ರೋಣನು ಹೇಳಿದನು: ಮಹಾರಾಜ! ಯುದ್ಧದ ನಿಶ್ಚಯವನ್ನು ಮಾಡಿ ಒಂದುವೇಳೆ ನೀನು ನನ್ನಲ್ಲಿಗೆ ಬಾರದೇ ಇದ್ದಿದ್ದರೆ ನಾನು ನಿನಗೆ ಎಲ್ಲೆಡೆಯಿಂದ ಪರಾಭವವಾಗಲೆಂದು ಶಪಿಸುತ್ತಿದ್ದೆ. ಯುಧಿಷ್ಠಿರ! ನಿನ್ನಿಂದ ಪೂಜಿತನಾಗಿ ತುಷ್ಟನಾಗಿದ್ದೇನೆ. ಅನುಮತಿಯನ್ನಿತ್ತಿದ್ದೇನೆ. ಯುದ್ಧ ಮಾಡು! ವಿಜಯವನ್ನು ಹೊಂದುವೆ! ಈಗ ನಿನಗಿಷ್ಟವಾದುದನ್ನು ಮಾಡಲು ಬಿಡು. ನೀನು ಏನನ್ನು ಬಯಸುತ್ತೀಯೆ ಹೇಳು. ಹೀಗಿರುವಾಗ ಯುದ್ಧದಲ್ಲಿ ಸಹಾಯವನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ? ಮನುಷ್ಯನು ಹಣದ ದಾಸನೇ ಹೊರತು ಹಣವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಇದು ಸತ್ಯ. ಹಣದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ. ಆದುದರಿಂದ ನಾನು ಒಬ್ಬ ಶಂಡನಂತೆ ಹೇಳುತ್ತಿದ್ದೇನೆ - ಯುದ್ಧದಲ್ಲಿ ಸಹಾಯವಲ್ಲದೇ ಬೇರೆ ಏನನ್ನು ಬಯಸುತ್ತೀಯೆಂದು. ನಾನು ಕೌರವನಿಗಾಗಿ ಹೋರಾಡುತ್ತೇನೆ. ಆದರೆ ನನ್ನ ಆಸೆಯು ನಿನ್ನ ಜಯದ ಕುರಿತಾಗಿದೆ.

ಯುಧಿಷ್ಠಿರನು ಹೇಳಿದನು: ಬ್ರಹ್ಮನ್! ನನ್ನ ಜಯವನ್ನು ಬಯಸು. ನನ್ನ ಹಿತದಲ್ಲಿ ಸಲಹೆ ನೀಡು. ಕೌರವನ ಕಡೆಯಿಂದ ಯುದ್ಧಮಾಡು. ಇದು ನಾನು ಆರಿಸಿಕೊಳ್ಳುವ ವರ.

ದ್ರೋಣನು ಹೇಳಿದನು: ರಾಜನ್! ಹರಿಯೇ ಮಂತ್ರಿಯಾಗಿರುವ ನಿನಗೆ ವಿಜಯವು ನಿಶ್ಚಯಿಸಿದ್ದು. ಇದು ನನಗೂ ಕೂಡ ತಿಳಿದಿದೆ. ರಣದಲ್ಲಿ ಶತ್ರುಗಳನ್ನು ಜಯಿಸುತ್ತೀಯೆ. ಧರ್ಮವು ಎಲ್ಲಿದೆಯೋ ಅಲ್ಲಿ ಕೃಷ್ಣ. ಕೃಷ್ಣನೆಲ್ಲಿರುವನೋ ಅಲ್ಲಿ ಜಯ. ಕೌಂತೇಯ! ಹೋಗು. ಯುದ್ಧಮಾಡು. ಕೇಳು. ಇನ್ನೇನು ಹೇಳಲಿ?

ಯುಧಿಷ್ಠಿರನು ಹೇಳಿದನು: ದ್ವಿಜಶ್ರೇಷ್ಠ! ನಾನು ನಿನ್ನಲ್ಲಿ ಕೇಳುತ್ತಿದ್ದೇನೆ. ಹೇಳುವುದನ್ನು ಕೇಳು. ಸಂಗ್ರಾಮದಲ್ಲಿ ನಾವು ಹೇಗೆ ನಿನ್ನನ್ನು ಸೋಲಿಸಿ ಜಯವನ್ನು ಪಡೆಯಬಹುದು?

ದ್ರೋಣನು ಹೇಳಿದನು: ರಾಜನ್! ರಣದಲ್ಲಿ ನಾನು ಯುದ್ಧ ಮಾಡುತ್ತಿರುವ ವರೆಗೆ ನಿನಗೆ ವಿಜಯವಿಲ್ಲ. ಸೋದರರೊಂದಿಗೆ ಬೇಗನೆ ನನ್ನ ಸಾವಿಗೆ ಪ್ರಯತ್ನಿಸು.

ಯುಧಿಷ್ಠಿರನು ಹೇಳಿದನು: ಮಹಾಬಾಹೋ! ಹಾಗಿದ್ದರೆ ನಿನ್ನ ವಧೆಯ ಉಪಾಯವನ್ನು ಹೇಳು. ನಿನಗೆ ನಮಸ್ಕಾರಗಳು. ಇದನ್ನು ತಿಳಿಸಿಕೊಡು. ಕೇಳಿಕೊಳ್ಳುತ್ತಿದ್ದೇನೆ.

ದ್ರೋಣನು ಹೇಳಿದನು: ಮಗೂ! ರಣದಲ್ಲಿ ನಿಂತಿರುವ, ಸುಸಂರಬ್ಧನಾಗಿ ಶರವರ್ಷಗಳನ್ನು ಸುರಿಸುತ್ತಾ ಯುದ್ಧಮಾಡುತ್ತಿರುವ ನನ್ನನ್ನು ಕೊಲ್ಲುವ ಯಾವ ಶತ್ರುವನ್ನೂ ನಾನು ಕಾಣೆ! ಶಸ್ತ್ರಗಳನ್ನು ಕೆಳಗಿಟ್ಟು, ಅಚೇತನನಾಗಿ ಪ್ರಾಯಗತನಾದ ನನ್ನನ್ನು ಮಾತ್ರ ಯುದ್ಧದಲ್ಲಿ ಯೋಧರು ಕೊಲ್ಲಬಹುದು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನನಗೆ ಶ್ರದ್ಧೆಯಿರುವವನ ಕ್ರೂರವಾದ ಸುಮಹಾ ಅಪ್ರಿಯ ವಾಕ್ಯಗಳನ್ನು ಕೇಳಿ ನಾನು ರಣದಲ್ಲಿ ಶಸ್ತ್ರಗಳನ್ನು ತ್ಯಜಿಸಿಯೇನು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.

ಭಾರದ್ವಾಜನ ಈ ಮಾತನ್ನು ಕೇಳಿ ಧೀಮತನು ಆ ಆಚಾರ್ಯನ ಅನುಮತಿಯನ್ನು ಪಡೆದು ಶಾರದ್ವತನ ಕಡೆ ನಡೆದನು. ಆ ವಾಕ್ಯವಿಶಾರದ ರಾಜನು ಕೃಪನನ್ನೂ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಆ ದುರ್ಧರ್ಷತಮನಿಗೆ ಈ ಮಾತನ್ನಾಡಿದನು:ಗುರೋ! ಕಲ್ಮಷಗಳನ್ನು ಕಳೆದುಕೊಂಡು ನಿನ್ನೊಂದಿಗೆ ಯುದ್ಧಮಾಡುತ್ತೇನೆ. ಅಪ್ಪಣೆ ಕೊಡಬೇಕು. ಈ ರಿಪುಗಳೆಲ್ಲರನ್ನೂ ಜಯಿಸುತ್ತೇನೆ. ಅನುಜ್ಞೆ ನೀಡಬೇಕು!

ಕೃಪನು ಹೇಳಿದನು: ಯುದ್ಧವನ್ನು ನಿಶ್ಚಯಿಸಿ ನೀನು ನನ್ನ ಬಳಿ ಬರದೇ ಇದ್ದಿದ್ದರೆ ನಾನು ನಿನ್ನ ಸರ್ವಶಃ ಸೋಲಾಗಲೆಂದು ಶಪಿಸುತ್ತಿದ್ದೆ. ಮನುಷ್ಯನು ಹಣದ ದಾಸನೇ ಹೊರತು ಹಣವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಇದು ಸತ್ಯ. ಹಣದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ. ಅವರ ಉದ್ದೇಶಕ್ಕೆ ಹೋರಾಡಬೇಕೆಂದು ನನ್ನ ಅಭಿಪ್ರಾಯವಿದೆ. ಆದುದರಿಂದ ಶಂಡನಂತೆ ಹೇಳುತ್ತಿದ್ದೇನೆ. ನಿನ್ನ ಪರವಾಗಿ ಯುದ್ಧಮಾಡುವುದನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ?

ಯುಧಿಷ್ಠಿರನು ಹೇಳಿದನು: ಆಚಾರ್ಯ! ಅದು ಹಾಗಿದೆಯೆಂದೇ ನಿನ್ನನ್ನು ಕೇಳಿಕೊಳ್ಳುತ್ತೇನೆ. ನನ್ನ ಮಾತನ್ನು ಕೇಳು.

ಇದನ್ನು ಹೇಳಿ ವ್ಯಥಿತನಾದ ರಾಜನು ಚೇತನವನ್ನು ಕಳೆದುಕೊಂಡು ಏನನ್ನೂ ಹೇಳದೇ ಸುಮ್ಮನಾದನು. ಆದರೆ ಅವನು ಹೇಳಬಯಸಿದುದನ್ನು ತಿಳಿದುಕೊಂಡ ಗೌತಮನು ಉತ್ತರಿಸಿದನು: ಮಹೀಪಾಲ! ನಾನು ಅವಧ್ಯ! ಯುದ್ಧಮಾಡು! ಜಯವನ್ನು ಹೊಂದು! ನೀನು ಬಂದಿದುದರಿಂದ ಪ್ರೀತನಾಗಿದ್ದೇನೆ. ಪ್ರತಿದಿನ ಬೆಳಿಗ್ಗೆ ಎದ್ದು ನಿನ್ನ ಜಯಕ್ಕಾಗಿ ಆಶಿಸುತ್ತೇನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.

ಗೌತಮನಾಡಿದ ಈ ಮಾತುಗಳನ್ನು ಕೇಳಿ ರಾಜನು ಕೃಪನಿಂದ ಅನುಮತಿಯನ್ನು ಪಡೆದು ಮದ್ರರಾಜನಿರುವಲ್ಲಿಗೆ ಹೋದನು. ಆಗ ಅವನು ಆ ದುರ್ಧರ್ಷ ಶಲ್ಯನಿಗೂ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ತನಗೆ ಶ್ರೇಯಸ್ಸನ್ನು ಕೊಡುವ ಈ ಮಾತುಗಳನ್ನು ಹೇಳಿದನು: ಗುರೋ! ವಿಗತಕಲ್ಮಶನಾಗಿ ನಿನ್ನೊಡನೆ ಯುದ್ಧ ಮಾಡುತ್ತೇನೆ. ಮಹಾರಾಜ! ರಿಪುಗಳನ್ನು ಜಯಿಸಲು ನಿನ್ನ ಅನುಜ್ಞೆಯನ್ನು ನೀಡು!

ಶಲ್ಯನು ಹೇಳಿದನು: ಯುದ್ಧ ಮಾಡಲು ನಿಶ್ಚಯ ಮಾಡಿ ನೀನು ನನ್ನಲ್ಲಿಗೆ ಬರದಿದ್ದರೆ ರಣದಲ್ಲಿ ನಿನ್ನ ಪರಾಭವವಾಗಲೆಂದು ಶಪಿಸುತ್ತಿದ್ದೆ. ನಿನ್ನಿಂದ ತೃಪ್ತನಾಗಿದ್ದೇನೆ. ಗೌರವಿಸಲ್ಪಟ್ಟಿದ್ದೇನೆ. ಏನನ್ನು ಬಯಸುತ್ತೀಯೋ ಅದು ನಿನ್ನದಾಗಲಿ! ನಿನಗೆ ಅಪ್ಪಣೆಯನ್ನೂ ಕೊಡುತ್ತಿದ್ದೇನೆ. ಯುದ್ಧಮಾಡು. ಜಯವನ್ನು ಪಡೆ. ವೀರ! ಬೇರೆ ಏನಾದರೂ ಕೇಳುವುದಿದ್ದರೆ ಹೇಳು. ನಿನಗೆ ಏನನ್ನು ಕೊಡಲಿ? ಹೀಗಿರುವಾಗ ಯುದ್ಧದಲ್ಲಿ ಸಹಾಯವೊಂದನ್ನು ಬಿಟ್ಟು ಬೇರೆ ಏನನ್ನು ಬಯಸುತ್ತೀಯೆ? ಮನುಷ್ಯನು ಹಣದ ದಾಸನೇ ಹೊರತು ಹಣವು ಎಂದೂ ಯಾರ ದಾಸನೂ ಆಗಿರುವುದಿಲ್ಲ. ಇದು ಸತ್ಯ. ಹಣದಿಂದಲೇ ನಾನು ಕೌರವರಿಗೆ ಬದ್ಧನಾಗಿದ್ದೇನೆ. ತಂಗಿಯ ಮಗನೇ! ನೀನು ಏನನ್ನು ಬಯಸುತ್ತೀಯೋ ಅದನ್ನು ಮಾಡುತ್ತೇನೆ. ಶಂಡನಂತೆ ಹೇಳುತ್ತಿದ್ದೇನೆ. ಯುದ್ಧದಲ್ಲಿ ಸಹಾಯದ ಹೊರತು ಏನನ್ನು ಬಯಸುತ್ತೀಯೆ?

ಯುಧಿಷ್ಠಿರನು ಹೇಳಿದನು: ಮಹಾರಾಜ! ನಿತ್ಯವೂ ನನ್ನ ಹಿತದಲ್ಲಿ ಉತ್ತಮ ಸಲಹೆಗಳನ್ನು ನೀಡು. ಬೇಕಾದರೆ ಶತ್ರುಗಳಿಗಾಗಿ ಯುದ್ಧಮಾಡು. ಇದೇ ನಾನು ಆರಿಸಿಕೊಳ್ಳುವ ವರ.

ಶಲ್ಯನು ಹೇಳಿದನು: ನೃಪಸತ್ತಮ! ಹೇಳು! ಇದರಲ್ಲಿ ನಿನಗೆ ನಾನು ಏನು ಸಹಾಯವನ್ನು ಮಾಡಬೇಕು? ಕೌರವರು ಧನವನ್ನಿತ್ತು ನನ್ನನ್ನು ಆರಿಸಿಕೊಂಡಿರುವುದರಿಂದ ಅವರಿಗಾಗಿ ನಾನು ಯುದ್ಧಮಾಡಲು ಬಯಸುತ್ತೇನೆ.

ಯುಧಿಷ್ಠಿರನು ಹೇಳಿದನು: ಉದ್ಯೋಗದ ಸಮಯದಲ್ಲಿ ನೀನು ನನಗೆ ಏನು ವರವನ್ನು ನೀಡಿದ್ದೆಯೋ ಅದನ್ನೇ ಸತ್ಯವಾಗಿಸು. ಸಂಗ್ರಾಮದಲ್ಲಿ ಸೂತಪುತ್ರನ ತೇಜೋವಧೆಯನ್ನು ಮಾಡು!

ಶಲ್ಯನು ಹೇಳಿದನು: ಕುಂತೀಪುತ್ರ! ನೀನು ಬಯಸಿದ ಹಾಗೆ ಇದು ನಡೆಯುತ್ತದೆ. ಹೋಗು! ವಿಸ್ರಬ್ಧನಾಗಿ ಯುದ್ಧಮಾಡು. ನಿನಗೆ ಜಯದ ಭರವಸೆಯನ್ನು ನೀಡುತ್ತೇನೆ!

ಆಗ ಮಾತುಲ ಮಾದ್ರಕೇಶ್ವರನಿಂದ ಅನುಮತಿಯನ್ನು ಪಡೆದು ಕೌಂತೇಯನು ಸಹೋದರರಿಂದ ಪರಿವಾರಿತನಾಗಿ ಆ ಮಹಾಸೇನೆಯಿಂದ ನಿರ್ಗಮಿಸಿದನು. ಅಷ್ಟರಲ್ಲಿ ವಾಸುದೇವನು ರಾಧೇಯನನ್ನು ರಣರಂಗದಲ್ಲಿ ಭೇಟಿಯಾಗಿ, ಪಾಂಡವರ ಪರವಾಗಿ ಇದನ್ನು ಹೇಳಿದನು:ಕರ್ಣ! ಭೀಷ್ಮನ ದ್ವೇಷದಿಂದಾಗಿ ನೀನು ಯುದ್ಧಮಾಡುತ್ತಿಲ್ಲವೆಂದು ನಾನು ಕೇಳಿದ್ದೇನೆ. ಭೀಷ್ಮನು ಸಾಯುವವರೆಗೆ ನಮ್ಮನ್ನು ವರಿಸು! ರಾಧೇಯ! ಭೀಷ್ಮನ ಮೃತ್ಯುವಾದ ಬಳಿಕ ಯುದ್ಧದಲ್ಲಿ ನಿನಗೆ ಸರಿಯೆಂದು ಹೇಗನಿಸುತ್ತದೆಯೋ ಹಾಗೆ ಧಾರ್ತರಾಷ್ಟ್ರನ ಸಹಾಯವನ್ನು ಮಾಡುವಿಯಂತೆ!

ಕರ್ಣನು ಹೇಳಿದನು: ಕೇಶವ! ಧಾರ್ತರಾಷ್ಟ್ರನಿಗೆ ವಿಪ್ರಿಯವಾಗಿ ಮಾಡಲಾರೆ. ದುರ್ಯೋಧನನ ಹಿತೈಷಿಣಿಯಾಗಿ ಪ್ರಾಣವನ್ನೇ ತ್ಯಜಿಸುತ್ತೇನೆ. ನಿನಗಿದು ತಿಳಿದೇ ಇದೆ.

ಅವನ ಆ ಮಾತನ್ನು ಕೇಳಿ ಕೃಷ್ಣನು ಯುಧಿಷ್ಠಿರನನ್ನು ಮುಂದಿರಿಸಿಕೊಂಡು ಹಿಂದಿರುಗುತ್ತಿದ್ದ ಪಾಂಡವರೊಂದಿಗೆ ಕೂಡಿಕೊಂಡನು. ಆಗ ಸೈನ್ಯದ ಮಧ್ಯೆ ಪಾಂಡವಾಗ್ರಜನು ಕೂಗಿ ಹೇಳಿದನು: ಯಾರಾದರೂ ನಮ್ಮ ಪಕ್ಷವನ್ನು ಸೇರಬೇಕೆಂದಿದ್ದರೆ ನಾನು ಅವನನ್ನು ನನ್ನ ಸಹಾಯಕನೆಂದು ಸ್ವೀಕರಿಸುತ್ತೇನೆ!

ಆಗ ಯುಯುತ್ಸುವು ಅವರನ್ನು ನೋಡಿ, ಪ್ರೀತಾತ್ಮಾ ಧರ್ಮರಾಜ ಕುಂತೀಪುತ್ರ ಯುಧಿಷ್ಠಿರನಿಗೆ ಇದನ್ನು ಹೇಳಿದನು:ಮಹಾರಾಜ! ನೀನು ನನ್ನನ್ನು ಸ್ವೀಕರಿಸಿದರೆ ನಾನು ಬಹಿರಂಗವಾಗಿ ಧಾರ್ತರಾಷ್ಟ್ರರ ವಿರುದ್ಧವಾಗಿ ನಿನ್ನ ಪರವಾಗಿ ರಣದಲ್ಲಿ ಹೋರಾಡುತ್ತೇನೆ.

ಯುಧಿಷ್ಠಿರನು ಹೇಳಿದನು: ಬಾ! ಬಾ ಯುಯುತ್ಸೋ! ನಾವೆಲ್ಲರೂ ನಿನ್ನ ಈ ಅಪಂಡಿತ ಸಹೋದರರನ್ನು ಎದುರಿಸಿ ಯುದ್ಧಮಾಡೋಣ! ವಾಸುದೇವನೊಂದಿಗೆ ನಾವೆಲ್ಲರೂ ಹೇಳುತ್ತಿದ್ದೇವೆ. ನಿನ್ನನ್ನು ಸ್ವೀಕರಿಸಿದ್ದೇನೆ. ನನ್ನ ಕಾರಣಕ್ಕಾಗಿ ಯುದ್ಧಮಾಡು. ನೀನೇ ಧೃತರಾಷ್ಟ್ರನ ವಂಶದ ತಂತುವೂ ಅವನಿಗೆ ಪಿಂಡವನ್ನು ನೀಡುವವನೂ ಎಂದು ತೋರುತ್ತಿದ್ದೀಯೆ. ನಾವು ನಿನ್ನನ್ನು ಸ್ವೀಕರಿಸುವಂತೆ ನೀನೂ ನಮ್ಮನ್ನು ಸ್ವೀಕರಿಸು. ಅತ್ಯಮರ್ಷಣ ದುರ್ಬುದ್ಧಿ ಧಾರ್ತರಾಷ್ಟ್ರನು ಇಲ್ಲವಾಗುತ್ತಾನೆ!

ಆಗ ಕೌರವ್ಯ ಯುಯುತ್ಸುವು, ದುಂದುಭಿಗಳು ಕೇಳುತ್ತಿರಲು, ದುರ್ಯೋಧನನನ್ನು ತ್ಯಜಿಸಿ ಪಾಂಡುಪುತ್ರರ ಸೇನೆಗೆ ಹೋದನು. ಯುಧಿಷ್ಠಿರನು ಸಂಪ್ರಹೃಷ್ಟನಾಗಿ ಅನುಜರೊಂದಿಗೆ ಪುನಃ ಬೆಳಗುತ್ತಿದ್ದ ಕನಕೋಜ್ಜ್ಚಲ ಕವಚವನ್ನು ಧರಿಸಿದನು. ಆ ಎಲ್ಲ ಪುರುಷರ್ಷಭರೂ ತಮ್ಮ ತಮ್ಮ ರಥಗಳನ್ನೇರಿ ಮೊದಲಿನಂತೆಯೇ ಪುನಃ ವ್ಯೂಹಗಳನ್ನು ರಚಿಸಿಕೊಂಡರು. ಆ ಪುರುಷರ್ಷಭರು ನೂರಾರು ದುಂದುಭಿಗಳನ್ನೂ ನೂರಾರು ಪುಷ್ಕರಗಳನ್ನೂ ಮೊಳಗಿಸಿದರು. ವಿವಿಧ ಸಿಂಹನಾದಗಳನ್ನೂ ಗೈದರು. ರಥದ ಮೇಲೇರಿದ್ದ ಆ ಪುರುಷವ್ಯಾಘ್ರ ಪಾಂಡವರನ್ನು ಪುನಃ ಕಂಡು ಧೃಷ್ಟದ್ಯುಮ್ನನೇ ಮೊದಲಾದ ಪಾರ್ಥಿವರೆಲ್ಲರೂ ಸಂತೋಷಭರಿತರಾದರು. ಗೌರವಿಸಬೇಕಾದವರನ್ನು ಗೌರವಿಸಿದ ಪಾಂಡುಪುತ್ರರ ಗೌರವವನ್ನು ನೋಡಿ ಅಲ್ಲಿದ್ದ ಮಹೀಕ್ಷಿತರು ಅವರನ್ನು ತುಂಬಾ ಗೌರವಿಸಿದರು. ಆ ಮಹಾತ್ಮರ ಕಾಲಕ್ಕೆ ತಕ್ಕುದಾದ ಸೌಹಾರ್ದತೆ, ಕೃಪೆ, ಮತ್ತು ಕುಲದವರ ಮೇಲಿದ್ದ ಅವರ ದಯೆಯ ಕುರಿತು ಇತರ ನೃಪರು ಮಾತನಾಡಿಕೊಂಡರು. ಎಲ್ಲಾ ಕಡೆಗಳಿಂದಲೂ “ಸಾಧು! ಸಾಧು!” ಎಂದು ಮನಸ್ಸು ಮತ್ತು ಹೃದಯಗಳಿಗೆ ಹರ್ಷವನ್ನು ಕೊಡುವ ಆ ಕೀರ್ತಿಮತರ ಪುಣ್ಯ ಹೊಗಳಿಕೆಯ ಮಾತುಗಳೇ ಕೇಳಿಬಂದವು. ಮ್ಲೇಚ್ಛರಾಗಿರಲಿ ಅಥವಾ ಆರ್ಯರಾಗಿರಲಿ ಯಾರೆಲ್ಲ ಅಲ್ಲಿ ಪಾಂಡುಪುತ್ರರ ಆ ನಡತೆಯನ್ನು ನೋಡಿದರೋ ಅಥವಾ ಕೇಳಿದರೋ ಅವರು ಗದ್ಗದರಾಗಿ ಕಣ್ಣೀರಿಟ್ಟರು. ಆಗ ಆ ಮನಸ್ವಿಗಳು ಹರ್ಷಿತರಾಗಿ ನೂರಾರು ಮಹಾ ಭೇರಿಗಳನ್ನೂ ನೂರಾರು ಪುಷ್ಕರಗಳನ್ನೂ ಬಾರಿಸಿದರು ಮತ್ತು ಆಕಳ ಹಾಲಿನ ಬಣ್ಣದ ಶಂಖಗಳನ್ನೂ ಊದಿದರು.

Leave a Reply

Your email address will not be published. Required fields are marked *