ಹದಿನಾಲ್ಕನೆಯ ರಾತ್ರಿಯುದ್ಧ: ಘಟೋತ್ಕಚ ವಧೆ

ಕೃಷ್ಣನು ಘಟೋತ್ಕಚನನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದುದು

ಆಗ ಪರವೀರಹ ಕರ್ಣನು ಪಾರ್ಷತನನ್ನು ನೋಡಿ ಅವನ ಎದೆಗೆ ಹತ್ತು ಮರ್ಮಭೇದಿಗಳಿಂದ ಹೊಡೆದನು. ಕೂಡಲೆ ಧೃಷ್ಟದ್ಯುಮ್ನನು ಕೂಡ ಅವನನ್ನು ಐದು ಸಾಯಕಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಕೂಗಿದನು. ಅವರಿಬ್ಬರು ಮಹಾರಥರೂ ಅನ್ಯೋನ್ಯರನ್ನು ರಣದಲ್ಲಿ ಶರಗಳಿಂದ ಮುಚ್ಚಿ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಪುನಃ ಪರಸ್ಪರರನ್ನು ಗಾಯಗೊಳಿಸಿದರು. ಆಗ ಕರ್ಣನು ಧೃಷ್ಟದ್ಯುಮ್ನನ ಸಾರಥಿಯನ್ನೂ ನಾಲ್ಕು ಕುದುರೆಗಳನ್ನೂ ಸಾಯಕಗಳಿಂದ ಹೊಡೆದನು. ಅವನ ಕಾರ್ಮುಕಪ್ರವರವನ್ನು ನಿಶಿತ ಶರಗಳಿಂದ ತುಂಡರಿಸಿದನು ಮತ್ತು ಭಲ್ಲದಿಂದ ಅವನ ಸಾರಥಿಯನ್ನು ಆಸನದಿಂದ ಬೀಳಿಸಿದನು. ಧೃಷ್ಟದ್ಯುಮ್ನನಾದರೋ ಕುದುರೆಗಳು ಹತವಾಗಿ ಸಾರಥಿಯು ಹತನಾಗಿ ವಿರಥನಾದನು ಮತ್ತು ಘೋರ ಪರಿಘವನ್ನು ಹಿಡಿದು ಕರ್ಣನ ಕುದುರೆಗಳನ್ನು ಅರೆದನು. ಕರ್ಣನ ಸರ್ಪಗಳ ವಿಷದಂತಿದ್ದ ಬಾಣಗಳಿಂದ ಬಹಳ ಪೀಡಿತನಾದ ಧೃಷ್ಟದ್ಯುಮ್ನನು ಕಾಲ್ನಡುಗೆಯಲ್ಲಿಯೇ ಯುಧಿಷ್ಠಿರನ ಸೇನೆಯನ್ನು ಸೇರಿಕೊಂಡನು. ಅಲ್ಲಿ ಅವನು ಸಹದೇವನ ರಥವನ್ನೇರಿದನು. ಕರ್ಣನ ರಥಕ್ಕೆ ಕೂಡ ಅವನ ಸೂತನು ಅನ್ಯ ಕುದುರೆಗಳನ್ನು – ಶಂಖವರ್ಣದ ಮಹಾವೇಗದ ಸುಶಿಕ್ಷಿತ ಸೈಂಧವ ಕುದುರೆಗಳನ್ನು ಕಟ್ಟಿದನು. ರಾಧೇಯನು ಮಹಾರಥ ಪಾಂಚಾಲರನ್ನು ಪಡೆದು ಅವರನ್ನು ಮೇಘಗಳು ಪರ್ವತವನ್ನು ಹೇಗೋ ಹಾಗೆ ಶರಗಳನ್ನು ಸುರಿದು ಪೀಡಿಸಿದನು. ಕರ್ಣನಿಂದ ಹಾಗಿ ಪೀಡಿಸಲ್ಪಟ್ಟ ಪಾಂಚಾಲರ ಆ ಮಹಾಸೇನೆಯು ಸಿಂಹದಿಂದ ಕಾಡಲ್ಪಟ್ಟ ಜಿಂಕೆಯಂತೆ ಭಯದಿಂದ ತತ್ತರಿಸಿ ಓಡತೊಡಗಿತು. ಕ್ಷಣದಲ್ಲಿಯೇ ರಣಭೂಮಿಯಲ್ಲಿ ಅಲ್ಲಲ್ಲಿ ಬಿದ್ದಿದ್ದ ಕುದುರೆಗಳೂ, ಆನೆಗಳೂ, ರಥಗಳೂ, ಮನುಷ್ಯರೂ ಕಂಡುಬಂದರು. ಆ ಮಹಾಯುದ್ಧದಲ್ಲಿ ಕರ್ಣನು ಓಡಿಹೋಗುತ್ತಿದ್ದ ಯೋಧರ ಬಾಹುಗಳನ್ನೂ ಕುಂಡಲಗಳೊಂದಿಗಿನ ಶಿರಗಳನ್ನೂ ಕತ್ತರಿಸಿದನು. ಅನ್ಯ ಗಜಾರೂಢರ ಅಶ್ವಾರೂಢರ ಮತ್ತು ಪದಾತಿಗಳ ತೊಡೆಗಳನ್ನು ಕತ್ತರಿಸಿದನು. ಓಡಿಹೋಗುತ್ತಿರುವ ಬಹಳಷ್ಟು ಮಹಾರಾಥರಿಗೆ ತಮ್ಮ ಶರೀರದ ಅಂಗಾಂಗಗಳು ಕತ್ತರಿಸಿಹೋದದ್ದು ಅಥವಾ ಕುದುರೆಗಳು ನಾಶಹೊಂದಿದ್ದುದು ತಿಳಿಯುತ್ತಲೇ ಇರಲಿಲ್ಲ. ಆ ಸಮರದಲ್ಲಿ ವಧಿಸಲ್ಪಡುತ್ತಿದ್ದ ಸೃಂಜಯರೊಂದಿಗಿನ ಪಾಂಚಾಲರು ಹುಲ್ಲುಕಡ್ಡಿಯು ಹಂದಾಡಿದರೂ ಸೂತಪುತ್ರನೇ ಬಂದನೆಂದು ತಿಳಿದು ಭಯಪಡುತ್ತಿದ್ದರು. ಸಮರದಲ್ಲಿ ತಮ್ಮ ಕಡೆಯ ಯೋಧರು ಓಡಿಬಂದರೂ ಬುದ್ಧಿಗೆಟ್ಟು ಭೀತರಾಗಿ ಕರ್ಣನೇ ಓಡಿಬರುತ್ತಿದ್ದಾನೆಂದು ಭಾವಿಸಿ ಓಡಿಹೋಗುತ್ತಿದ್ದರು. ಆ ಸೇನೆಗಳು ಭಗ್ನವಾಗಿ ಓಡಿಹೋಗುತ್ತಿರಲು ಕರ್ಣನು ಅವರ ಹಿಂದೆಯೇ ಓಡಿ ಹೋಗಿ ಶರಗಳನ್ನು ಸುರಿಯುತ್ತಾ ಹೊಡೆಯುತ್ತಿದ್ದನು. ಆ ಮಹಾತ್ಮನಿಂದ ನಾಶಗೊಳ್ಳುತ್ತಿದ್ದ ಅವರು ಸಮ್ಮೂಢರಾಗಿ ಚೇತನವನ್ನೇ ಕಳೆದುಕೊಂಡು ಅನ್ಯೋನ್ಯರನ್ನು ನೋಡುತ್ತಿದ್ದರು. ಅವನ ಎದುರು ನಿಲ್ಲಲು ಅಶಕ್ಯರಾದರು. ಕರ್ಣನ ಮತ್ತು ದ್ರೋಣನ ಪರಮ ಬಾಣಗಳಿಂದ ಹತರಾಗುತ್ತಿದ್ದ ಪಾಂಚಾಲರು ಎಲ್ಲ ದಿಕ್ಕುಗಳನ್ನೂ ನೋಡುತ್ತಾ ಪಲಾಯನಗೈದರು.

ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಯು ಓಡಿಹೋಗುತ್ತಿರುವುದನ್ನು ನೋಡಿ ತಾನೂ ಪಲಾಯನಮಾಡಬೇಕೆಂದು ಯೋಚಿಸಿ ಫಲ್ಗುನನಿಗೆ ಈ ಮಾತನ್ನಾಡಿದನು: “ಈ ದಾರುಣ ರಾತ್ರಿವೇಳೆಯಲ್ಲಿ ಭಾಸ್ಕರನಂತೆ ಸುಡುತ್ತಿರುವ ಧನುಷ್ಪಾಣಿ ಮಹೇಷ್ವಾಸ ಕರ್ಣನನ್ನು ನೋಡು! ಕರ್ಣನ ಸಾಯಕಗಳಿಂದ ಗಾಯಗೊಂಡ ನಿನ್ನ ಬಂಧುಗಳು ಅನಾಥರಂತೆ ಗೋಳಾಡುವುದು ಒಂದೇಸಮನೆ ಹತ್ತಿರದಿಂದಲೇ ಕೇಳಿಬರುತ್ತಿದೆ. ಅವನು ಬಾಣಗಳನ್ನು ಸಂಧಾನಮಾಡುವುದನ್ನು ಮತ್ತು ಬಿಡುವುದನ್ನು ನೋಡಿದರೆ ಇವನು ನಮ್ಮನ್ನು ನಾಶಗೊಳಿಸಿ ಜಯವನ್ನು ಗಳಿಸುತ್ತಾನೆ ಎನ್ನುವುದು ನಿಶ್ಚಯವೆನಿಸುತ್ತಿದೆ. ಇದರ ಮಧ್ಯೆ ಕಾಲಕ್ಕೆ ತಕ್ಕಂತೆ ಏನು ಮಾಡಬೇಕೆಂದು ನಿನಗೆ ತೋರುತ್ತದೆಯೋ ಕರ್ಣನ ವಧೆಗೆ ಯುಕ್ತವಾದ ಕಾರ್ಯವನ್ನು ಮಾಡು!”

ಇದನ್ನು ಕೇಳಿದ ಮಹಾಬಾಹು ಪಾರ್ಥನು ಕೃಷ್ಣನಿಗೆ ಹೇಳಿದನು: “ರಾಧೇಯನ ಅತಿವಿಕ್ರಮವನ್ನು ನೋಡಿ ರಾಜಾ ಕುಂತೀಸುತನು ಭೀತನಾಗಿದ್ದಾನೆ. ಈಗ  ಬಂದಿರುವ ಸಮಯಕ್ಕೆ ಸರಿಯಾದುದೇನೆಂದು ಕ್ಷಿಪ್ರವಾಗಿ ನೀನೇ ಹೇಳಬೇಕು. ಕರ್ಣನಿಂದ ಪುನಃ ಪುನಃ ನಮ್ಮ ಸೇನೆಯು ಓಡಿಹೋಗುತ್ತಿದೆ. ದ್ರೋಣನ ಸಾಯಕಗಳಿಂದ ಗಾಯಗೊಳ್ಳುತ್ತಿರುವ ಮತ್ತು ಕರ್ಣನಿಂದ ಭಯಗೊಂಡಿರುವ ನಮ್ಮವರಿಗೆ ನಿಲ್ಲುವ ಸ್ಥಾನವೇ ತಿಳಿಯದಂತಾಗಿದೆ. ಏನೂ ಭಯವಿಲ್ಲದೇ ಕರ್ಣನು ರಣಾಂಗಣದಲ್ಲಿ ನಿಶಿತ ವಿಶಿಖಗಳನ್ನು ಸುರಿಸುತ್ತಾ ರಥೋದಾರರನ್ನು ಬೆನ್ನಟ್ಟಿ ಓಡಾಡುತ್ತಿರುವುದನ್ನು ನೋಡುತ್ತಿದ್ದೇನೆ. ಉತ್ಸಾಹದಿಂದ ರಣಮೂರ್ಧನಿಯಲ್ಲಿ ಸಂಚರಿಸುತ್ತಿರುವ ಕರ್ಣನನ್ನು ಪ್ರತ್ಯಕ್ಷ ನೋಡಿ ಕಾಲಿನಿಂದ ತುಳಿಯಲ್ಪಟ್ಟ ಸರ್ಪದಂತೆ ನನ್ನ ಸಹನೆಯು ಮೀರಿಹೋಗುತ್ತಿದೆ. ಮಹಾರಥ ಕರ್ಣನಿರುವಲ್ಲಿಗೆ ಹೋಗು! ಅವನನ್ನು ನಾನಾಗಲೀ ಅಥವ ನನ್ನನ್ನು ಅವನಾಗಲೀ ಸಂಹರಿಸುತ್ತೇವೆ!”

ವಾಸುದೇವನು ಹೇಳಿದನು: “ಕೌಂತೇಯ! ದೇವರಾಜನಂತೆ ಈ ರಣಾಂಗಣದಲ್ಲಿ ಸಂಚರಿಸುತ್ತಿರುವ ನರವ್ಯಾಘ್ರ ಅತಿಮಾನುಷ ವಿಕ್ರಮಿ ಕರ್ಣನನ್ನು ನೋಡುತ್ತಿದ್ದೇನೆ. ನಿನ್ನನ್ನು ಮತ್ತು ರಾಕ್ಷಸ ಘಟೋತ್ಕಚನನ್ನು ಹೊರತಾಗಿ ಇವನನ್ನು ಸಮರದಲ್ಲಿ ಎದುರಿಸುವವರು ಬೇರೆ ಯಾರೂ ಇಲ್ಲ. ಆದರೆ ನೀನು ಸೂತಪುತ್ರನನ್ನು ಎದುರಿಸುವ ಕಾಲವು ಬಂದೊದಗಿದೆಯೆಂದು ನನಗನ್ನಿಸುವುದಿಲ್ಲ. ನಿನಗೋಸ್ಕರವಾಗಿ ಇಟ್ಟುಕೊಂಡಿರುವ ಮಹಾ ಉಲ್ಕೆಯಂತೆ ಬೆಳಗುತ್ತಿರುವ ಇಂದ್ರನು ಕೊಟ್ಟ ರೌದ್ರರೂಪದ ಶಕ್ತಿಯು ಅವನಲ್ಲಿದೆ. ಬಲಿಷ್ಟನಾದ ಭೀಮನಿಗೆ ಹುಟ್ಟಿದ ಸುರಪರಾಕ್ರಮಿ ಮಹಾಬಲ ಘಟೋತ್ಕಚನು ರಾಧೇಯನನ್ನು ಎದುರಿಸಬಲ್ಲನು. ಅವನಲ್ಲಿ ದೇವ, ರಾಕ್ಷಸ, ಅಸುರರ ಅಸ್ತ್ರಗಳಿವೆ. ಘಟೋತ್ಕಚನು ಸತತವೂ ನಿಮ್ಮ ಹಿತೈಷಿಯಾಗಿದ್ದು ಅನುರಕ್ತನಾಗಿದ್ದಾನೆ. ರಣದಲ್ಲಿ ಅವನು ಕರ್ಣನನ್ನು ಜಯಿಸುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.”

ಪಾರ್ಥನಿಗೆ ಹೀಗೆ ಹೇಳಿ ಪುಷ್ಕರಲೋಚನನು ರಾಕ್ಷಸನಿಗೆ ಹೇಳಿ ಕಳುಹಿಸಿದನು. ಅವನು ಅವರ ಮುಂದೆ ಬಂದು ನಿಂತುಕೊಂಡನು. ಕವಚ, ಬಾಣ, ಖಡ್ಗ ಮತ್ತು ಧನುಸ್ಸನ್ನು ಧರಿಸಿದ್ದ ಅವನು ಕೃಷ್ಣನನ್ನೂ ಪಾಂಡವ ಧನಂಜಯನನ್ನೂ ನಮಸ್ಕರಿಸಿ ಹೃಷ್ಟಮನಸ್ಕನಾಗಿ “ನನಗೆ ಆಜ್ಞಾಪಿಸಿ!” ಎಂದು ಹೇಳಿದನು. ಆಗ ನಸುನಗುತ್ತಾ ದಾಶಾರ್ಹನು ಆ ಮೇಘಸಂಕಾಶ, ಉರಿಯುತ್ತಿರುವ ಮುಖವುಳ್ಳ, ಉರಿಯುತ್ತಿರುವ ಕುಂಡಲಗಳುಳ್ಳ ಹೈಡಿಂಬನಿಗೆ ಹೇಳಿದನು: “ಘಟೋತ್ಕಚ! ಮಗನೇ! ನಾನು ಹೇಳುವುದನ್ನು ಅರ್ಥಮಾಡಿಕೋ! ನಿನ್ನ ವಿಕ್ರಮವನ್ನು ತೋರಿಸುವ ಕಾಲವು ಬಂದೊದಗಿದೆ. ಈ ಅವಕಾಶವು ಬೇರೆ ಯಾರಿಗೂ ಇನ್ನೂ ಬಂದಿಲ್ಲ! ಮುಳುಗುತ್ತಿರುವ ಬಂಧುಗಳಿಗೆ ನೀನು ತೆಪ್ಪದಂತಾಗು! ನಿನ್ನಲ್ಲಿ ವಿವಿಧ ಅಸ್ತ್ರಗಳಿವೆ. ರಾಕ್ಷಸೀ ಮಾಯೆಯೂ ಇದೆ. ಹೈಡಿಂಬ! ಗೋಪಾಲಕನು ಗೋವುಗಳನ್ನು ಒಟ್ಟುಹಾಕಿ ಹೊಡೆಯುವಂತೆ ರಣಮೂರ್ಧನಿಯಲ್ಲಿ ಕರ್ಣನು ಪಾಂಡವರ ಸೇನೆಯನ್ನು ಸದೆಬಡಿಯುತ್ತಿರುವುದನ್ನು ನೋಡು! ಈ ಮಹೇಷ್ವಾಸ ಮತಿವಂತ ದೃಢವಿಕ್ರಮಿ ಕರ್ಣನು ಪಾಂಡವರ ಸೇನೆಯಲ್ಲಿರುವ ಕ್ಷತ್ರಿಯರ್ಷಭರನ್ನು ಸಂಹರಿಸುತ್ತಿದ್ದಾನೆ. ನಮ್ಮಲ್ಲಿರುವ ದೃಡಧನ್ವಿಗಳಲ್ಲಿ ಯಾರೂ ಕೂಡ ಮಹಾ ಶರವರ್ಷಗಳನ್ನು ಸುರಿಸಿ ಪೀಡಿಸುತ್ತಿರುವ ಅವನನ್ನು ಎದುರಿಸಿ ನಿಲ್ಲಲು ಶಕ್ಯರಾಗಿಲ್ಲ. ಸೂತಪುತ್ರನ ಶರವರ್ಷಗಳಿಂದ ಪೀಡಿತರಾದ ಪಾಂಚಾಲರು ಈ ರಾತ್ರಿ ಸಿಂಹದ ಭಯದಿಂದ ಜಿಂಕೆಗಳು ಓಡುವಂತೆ ಓಡಿಹೋಗುತ್ತಿದ್ದಾರೆ. ಈ ರೀತಿ ರಣದಲ್ಲಿ ವೃದ್ಧಿಸುತ್ತಿರುವ ಸೂತಪುತ್ರನನ್ನು ಎದುರಿಸುವವನು ಭೀಮವಿಕ್ರಮನಾದ ನೀನಲ್ಲದೇ ಬೇರೆ ಯಾರೂ ಇಲ್ಲ. ಆದುದರಿಂದ ನಿನಗೂ, ನಿನ್ನ ತಾಯಿಯ ಕುಲದವರಿಗೂ, ತಂದೆಯ ಕುಲದವರಿಗೂ, ನಿನ್ನ ತೇಜಸ್ಸಿಗೂ, ಅಸ್ತ್ರಬಲಕ್ಕೂ ಯುಕ್ತವಾದುದನ್ನು ಮಾಡು! ಇದಕ್ಕಾಗಿಯೇ ಮಾನವರು ಮಕ್ಕಳನ್ನು ಬಯಸುತ್ತಾರೆ. ತಮ್ಮನ್ನು ದುಃಖದಿಂದ ಹೇಗೆ ಅವರು ಪಾರುಮಾಡುತ್ತಾರೆಂದು ಯೋಚಿಸುತ್ತಿರುತ್ತಾರೆ. ನೀನು ನಿನ್ನ ಬಾಂಧವರನ್ನು ಪಾರುಮಾಡು! ಸಂಗ್ರಾಮದಲ್ಲಿ ಯುದ್ಧಮಾಡುವಾಗ ನಿನ್ನ ಅಸ್ತ್ರಬಲವೂ ನಿನ್ನ ದುಸ್ತರ ಮಾಯೆಯೂ ಸತತವಾಗಿ ವೃದ್ಧಿಯಾಗುತ್ತಲೇ ಇರುತ್ತದೆ. ಕರ್ಣನ ನಿಶಿತ ಸಾಯಕಗಳಿಂದ ಮತ್ತು ಧಾರ್ತರಾಷ್ಟ್ರರಿಂದ ಮುಳಿಗಿಗೋಗುತ್ತಿರುವ ಪಾಂಡವರಿಗೆ ತೀರದಂತಾಗು! ರಾತ್ರಿಯ ವೇಳೆಯಲ್ಲಿ ರಾಕ್ಷಸರು ಹೆಚ್ಚಿನ ಪರಾಕ್ರಮವುಳ್ಳವರೂ, ಬಲವಂತರೂ, ಹೆಚ್ಚಿನ ದುರ್ಧರ್ಷರೂ, ಶೂರರೂ, ವಿಕ್ರಾಂತಚಾರಿಗಳೂ ಆಗುತ್ತಾರೆ. ಈ ರಾತ್ರಿಯ ರಣದಲ್ಲಿ ಮಾಯೆಯಿಂದ ಮಹೇಷ್ವಾಸ ಕರ್ಣನನ್ನು ವಧಿಸು. ಧೃಷ್ಟದ್ಯುಮ್ನನನ್ನು ಮುಂದಿಟ್ಟುಕೊಂಡು ಪಾರ್ಥರು ದ್ರೋಣನನ್ನು ವಧಿಸುತ್ತಾರೆ.”

ಕೇಶವನ ಮಾತನ್ನು ಕೇಳಿ ಬೀಭತ್ಸುವೂ ಕೂಡ ಅರಿಂದಮ ರಾಕ್ಷಸ ಘಟೋತ್ಕಚನಿಗೆ ಹೇಳಿದನು: “ಘಟೋತ್ಕಚ! ನೀನು, ಸಾತ್ಯಕಿ ಮತ್ತು ಭೀಮಸೇನರು ಸರ್ವಸೈನ್ಯಗಳಲ್ಲಿ ವೀರಶ್ರೇಷ್ಠರೆಂದು ನನ್ನ ಅಭಿಪ್ರಾಯ. ಈ ರಾತ್ರಿ ನೀನು ಹೋಗಿ ಕರ್ಣನೊಂದಿಗೆ ದ್ವೈರಥದಲ್ಲಿ ಯುದ್ಧಮಾಡು. ಸಾತ್ಯಕಿಯು ನಿನ್ನ ಹಿಂದೆಯೇ ಇರುತ್ತಾನೆ. ಹಿಂದೆ ಇಂದ್ರನು ಸ್ಕಂದನ ಸಹಾಯದಿಂದ ತಾರಕನನ್ನು ಸಂಹರಿಸಿದಂತೆ ಸಾತ್ವತನ ಸಹಾಯವನ್ನು ಪಡೆದವನಾಗಿ ರಣದಲ್ಲಿ ಶೂರ ಕರ್ಣನನ್ನು ಸಂಹರಿಸು! “

ಘಟೋತ್ಕಚನು ಹೇಳಿದನು: “ಸತ್ತಮ! ಕರ್ಣನಿಗೆ, ದ್ರೋಣನಿಗೆ ಮತ್ತು ಅನ್ಯ ಕೃತಾಸ್ತ್ರ ಮಹಾತ್ಮ ಕ್ಷತ್ರಿಯರಿಗೆ ನಾನೊಬ್ಬನೇ ಸಾಕು! ಭೂಮಿಯಿರುವವರೆಗೆ ಜನರು ಇದರ ಕುರಿತು ಮಾತನಾಡಿಕೊಳ್ಳುತ್ತಿರುವಂತೆ ಇಂದಿನ ರಾತ್ರಿ ನಾನು ಸೂತಪುತ್ರನಿಗೆ ಸಂಗ್ರಾಮದ ಆತಿಥ್ಯವನ್ನು ಬಡಿಸುತ್ತೇನೆ. ರಾಕ್ಷಸಧರ್ಮವನ್ನು ಅನುಸರಿಸಿ ಅಲ್ಲಿ ಯಾವಶೂರರನ್ನೂ – ಭೀತರಾಗಿ ಕೈಮುಗಿಯುವವರನ್ನೂ – ಬಿಡದೇ ಎಲ್ಲರನ್ನೂ ವಧಿಸುತ್ತೇನೆ.”

ಹೀಗೆ ಹೇಳಿ ಮಹಾಬಾಹು ಪರವೀರಹ ಹೈಡಿಂಬನು ಕೌರವ ಸೇನೆಯನ್ನು ಭೀತಗೊಳಿಸುತ್ತಾ ಯುದ್ಧದಲ್ಲಿ ಕರ್ಣನನ್ನು ಎದುರಿಸಿದನು. ಸಂಕ್ರುದ್ಧ ಪನ್ನಗದಂತೆ ಉರಿಯುತ್ತಿರುವ ಮುಖವುಳ್ಳವನಾಗಿ ಮೇಲೆ ಬೀಳುತ್ತಿದ್ದ ಅವನನ್ನು ಸೂತಜನು ಸ್ವೀಕರಿಸಿದನು. ಆಗ ಗರ್ಜಿಸುತ್ತಿರುವ ಕರ್ಣ-ರಾಕ್ಷಸರ ನಡುವೆ ಆ ರಾತ್ರಿ ಶಕ್ರ-ಪ್ರಹ್ರಾದರ ನಡುವೆ ನಡೆದ ಯುದ್ಧದಂತೆ ಯುದ್ಧವು ಪ್ರಾರಂಭವಾಯಿತು.

ಅಲಂಬಲವಧೆ

ಯುದ್ಧದಲ್ಲಿ ಕರ್ಣನನ್ನು ಸಂಹರಿಸುವ ಇಚ್ಛೆಯಿಂದ ತ್ವರೆಮಾಡಿ ಕರ್ಣನ ರಥದ ಸಮೀಪಕ್ಕೆ ಬರುತ್ತಿದ್ದ ಘಟೋತ್ಕಚನನ್ನು ನೋಡಿ ದುರ್ಯೋಧನನು ದುಃಶಾಸನನಿಗೆ ಈ ಮಾತನ್ನಾಡಿದನು: “ರಣದಲ್ಲಿ ಕರ್ಣನ ವಿಕ್ರಮವನ್ನು ನೋಡಿ ಕರ್ಣನನ್ನು ಸಂಹರಿಸಲು ಈ ರಾಕ್ಷಸನು ಅವಸರದಲ್ಲಿ ಬರುತ್ತಿದ್ದಾನೆ. ಈ ಮಹಾರಥನನ್ನು ತಡೆ! ಮಹಾಬಲ ಕರ್ಣನು ರಾಕ್ಷಸನೊಡನೆ ಯುದ್ಧಮಾಡುವಲ್ಲಿಗೆ ಮಹಾಸೇನೆಯೊಂದಿಗೆ ಹೋಗು. ಸೇನೆಗಳಿಂದ ಪರಿವೃತನಾಗಿ ಪ್ರಯತ್ನಪಟ್ಟು ರಣದಲ್ಲಿ ಕರ್ಣನನ್ನು ರಕ್ಷಿಸು!”

ಅಷ್ಟರಲ್ಲಿಯೇ ಜಟಾಸುರನ ಬಲಶಾಲೀ ಮಗನು ದುರ್ಯೋಧನನ ಬಳಿಬಂದು ಹೇಳಿದನು: “ದುರ್ಯೋಧನ! ನಿನ್ನಿಂದ ಅಪ್ಪಣೆಯನ್ನು ಪಡೆದು ನನ್ನ ಅನುಯಾಯಿಗಳೊಂದಿಗೆ ನಿನ್ನ ಶತ್ರುಗಳಾದ ಆ ಪ್ರಖ್ಯಾತ ಯುದ್ಧದುರ್ಮದ ಪಾಂಡವರನ್ನು ಸಂಹರಿಸಲು ಬಯಸುತ್ತೇನೆ. ರಾಕ್ಷಸರ ಅಗ್ರಣಿ ಜಟಾಸುರನೇ ನನ್ನ ತಂದೆ. ಹಿಂದೆ ಅವನು ರಾಕ್ಷಸರನ್ನು ಸಂಹರಿಸುವ ಕಾರ್ಯಮಾಡುತ್ತಿದ್ದ ಈ ಕ್ಷುದ್ರ ಪಾರ್ಥರಿಂದ ವಧಿಸಲ್ಪಟ್ಟನು. ಅದರ ಪ್ರತೀಕಾರವನ್ನು ಬಯಸುತ್ತೇನೆ. ನನಗೆ ಅನುಜ್ಞೆಯನ್ನು ದಯಪಾಲಿಸು!”

ಪುನಃ ಪುನಃ ಪ್ರೀತಿತೋರಿಸುವ ರಾಜನು ಅವನಿಗೆ ಹೇಳಿದನು: “ಶತ್ರುಗಳ ವಧೆಗೆ ದ್ರೋಣಕರ್ಣಾದಿಗಳೊಡನೆ ನಾನು ಸಾಕು. ನೀನಾದರೋ ಹೋಗಿ ಯುದ್ಧದಲ್ಲಿ ಘಟೋತ್ಕಚನನ್ನು ಸಂಹರಿಸು!”

ಹಾಗೆಯೇ ಆಗಲೆಂದು ಹೇಳಿ ಮಹಾಕಾಯ ಜಟಾಸುರಿಯು ಘಟೋತ್ಕಚನನ್ನು ಕೂಗಿ ಕರೆದು ನಾನಾಶಸ್ತ್ರಗಳಿಂದ ಮುಸುಕಿದನು. ಹೈಡಿಂಬನು ಒಬ್ಬನೇ ಕರ್ಣನನ್ನೂ, ದುಸ್ತರ ಕುರುಸೈನ್ಯವನ್ನೂ, ಅಲಂಬಲನನ್ನೂ ಭಿರುಗಾಳಿಯು ಮೋಡವನ್ನು ಹೇಗೋ ಹಾಗೆ ಚದುರಿಸಿಬಿಟ್ಟನು. ಆಗ ಮಾಯಾಮಯ ಘಟೋತ್ಕಚನನ್ನು ನೋಡಿ ಅಲಂಬಲನು ಅವನನ್ನು ಶರವ್ರಾತಗಳಿಂದ ಕಾಣದಂತೆ ಮುಚ್ಚಿಬಿಟ್ಟನು. ಬಹಳ ಬಾಣಗಳಿಂದ ಭೈಮಸೇನಿಯನ್ನು ಗಾಯಗೊಳಿಸಿ ಅಲಂಬಲನು ಶರವ್ರಾತಗಳಿಂದ ಪಾಂಡವರ ಸೇನೆಯನ್ನು ಮುತ್ತಿದನು. ಆ ರಾತ್ರಿವೇಳೆಯಲ್ಲಿ ಓಡಿ ಹೋಗುತ್ತಿದ್ದ ಪಾಂಡು ಸೇನೆಗಳು ಭಿರುಗಾಳಿಗೆ ಸಿಲುಕಿ ಚದುರಿ ಹೋಗುತ್ತಿರುವ ಮೋಡಗಳಂತೆ ಕಾಣುತ್ತಿದ್ದವು. ಅದೇ ರೀತಿ ಘಟೋತ್ಕಚನ ಶರಗಳಿಗೆ ಸಿಲುಕಿದ ಕುರುವಾಹಿನಿಯೂ ಕೂಡ ಆ ದಟ್ಟ ರಾತ್ರಿಯಲ್ಲಿ ಸಹಸ್ರಾರು ದೀವಟಿಗೆಗಳನ್ನು ಬಿಸುಟು ಓಡಿಹೋಗುತ್ತಿತ್ತು.

ಕ್ರುದ್ಧ ಅಲಂಬಲನಾದರೋ ಆ ಮಹಾಯುದ್ಧದಲ್ಲಿ ಭೈಮಸೇನಿಯನ್ನು ಮಾವುತನು ಆನೆಯನ್ನು ತಿವಿಯುವಂತೆ ನಿಶಿತ ಬಾಣಗಳಿಂದ ಹೊಡೆದನು. ಆಗ ಕ್ಷಣದಲ್ಲಿಯೇ ಘಟೋತ್ಕಚನು ತನ್ನ ಶತ್ರುವಿನ ರಥವನ್ನೂ, ಸೂತನನ್ನೂ, ಸರ್ವ ಆಯುಧಗಳನ್ನೂ ಪುಡಿಪುಡಿಮಾಡಿ, ಅತಿದಾರುಣವಾಗಿ ಗಹಗಹಿಸಿ ನಕ್ಕನು. ಅನಂತರ ಅವನು ಕರ್ಣನನ್ನೂ, ಅನ್ಯ ಕುರುಗಳನ್ನೂ ಮತ್ತು ಅಲಂಬಲನನ್ನೂ ಸಹಸ್ರಾರು ಶರವ್ರಾತಗಳಿಂದ ಮೇಘಗಳು ಮೇರುಪರ್ವತವನ್ನು ಹೇಗೋ ಹಾಗೆ ವರ್ಷಿಸಿದನು. ರಾಕ್ಷಸನಿಂದ ಆರ್ದಿತಗೊಂಡ ಕುರುಗಳ ಸೇನೆಯಲ್ಲಿ ಅಲ್ಲೋಲಕಲ್ಲೋಲವಾಯಿತು. ಮೇಲಿಂದಮೇಲೆ ಚತುರಂಗಬಲವು ಅನ್ಯೋನ್ಯರನ್ನು ಸಂಹರಿಸತೊಡಗಿತು. ವಿರಥನಾದ ಸಾರಥಿಯನ್ನೂ ಕಳೆದುಕೊಂಡ ಜಟಾಸುರಿಯು ರಣದಲ್ಲಿ ಕ್ರುದ್ಧನಾಗಿ ಘಟೋತ್ಕಚನನ್ನು ದೃಡ ಮುಷ್ಟಿಯಿಂದ ಹೊಡೆಯತೊಡಗಿದನು.

ಅವನ ಮುಷ್ಟಿಯಿಂದ ಹೊಡೆಯಲ್ಪಟ್ಟ ಘಟೋತ್ಕಚನು ಭೂಕಂಪವಾದಾಗ ವೃಕ್ಷಗಣಗುಲ್ಮಲಗಳೊಡನೆ ಶೈಲವು ಅಲುಗಾಡುವಂತೆ ತತ್ತರಿಸಿದನು. ಆಗ ಭೈಮಸೇನಿಯು ಪರಿಘದಂತಿದ್ದ ತನ್ನ ಬಾಹುಗಳನ್ನು ಮೇಲೆತ್ತಿ ಮುಷ್ಟಿಯಿಂದ ಜಟಾಸುರಿಯನ್ನು ಜೋರಾಗಿ ಗುದ್ದಿದನು. ಕ್ರುದ್ಧ ಹೈಡಿಂಬನು ತಕ್ಷಣವೇ ಅವನನ್ನು ಕೆಳಕ್ಕೆ ಕೆಡವಿ ತನ್ನ ಎರಡೂ ಬಾಹುಗಳಿಂದ ಅವನನ್ನು ನೆಲಕ್ಕೆ ಅದುಮಿದನು. ಅಲಂಬಲನಾದರೋ ಆ ರಾಕ್ಷಸನ ಹಿಡಿತದಿಂದ ಬಿಡಿಸಿಕೊಂಡು ರಣದಲ್ಲಿ ರೋಷಾನ್ವಿತನಾಗಿ ಘಟೋತ್ಕಚನನ್ನು ನೆಲಕ್ಕೆ ಕೆಡವಿದನು. ಆಗ ಅತಿಕಾಯರಾದ ಘಟೋತ್ಕಚ-ಅಲಂಬಲರಿಬ್ಬರ ನಡುವೆ ರೋಮಾಂಚಕಾರೀ ತುಮುಲ ಯುದ್ಧವು ಪ್ರಾರಂಬವಾಯಿತು.

ಅನ್ಯೋನ್ಯರನ್ನು ಮೀರಿಸುತ್ತಾ ಆ ಮಯಾವಿ ಮತ್ತು ಅತಿಮಾಯಿ ಮಹಾವೀರರಿಬ್ಬರೂ ಇಂದ್ರ –ವೈರೋಚನರಂತೆ ಯುದ್ಧಮಾಡಿದರು. ಅಗ್ನಿ ಮತ್ತು ನೀರಾಗಿ, ಪುನಃ ಗರುಡ-ತಕ್ಷಕರಾಗಿ, ಪುನಃ ಮೋಡ-ಭಿರುಗಾಳಿಗಳಾಗಿ, ಪುನಃ ವಜ್ರ-ಮಹಾಚಲಗಳಾಗಿ, ಪುನಃ ಆನೆ-ಸಿಂಹಗಳಾಗಿ, ಪುನಃ ರಾಹು-ಭಾಸ್ಕರರಾಗಿ  - ಈ ರೀತಿ ನೂರಾರು ಮಾಯೆಗಳನ್ನು ಸೃಷ್ಟಿಸುತ್ತಾ ಅನ್ಯೋನ್ಯರನ್ನು ವಧಿಸಲು ಬಯಸಿ ಅಲಂಬಲ ಘಟೋತ್ಕಚರು ಅತ್ಯಂತ ವಿಚಿತ್ರವಾದ ಯುದ್ಧವನ್ನು ಹೋರಾಡಿದರು. ಪರಿಘ, ಗದೆ, ಪ್ರಾಸ, ಮುದ್ಗರ, ಪಟ್ಟಿಶ, ಮುಸಲ, ಪರ್ವತಾಗ್ರಗಳಿಂದ ಅವರು ಅನ್ಯೋನ್ಯರನ್ನು ಹೊಡೆದರು. ಮಹಾಮಾಯಾವಿ ಆ ರಾಕ್ಷಸಪ್ರವರರು ಯುದ್ಧದಲ್ಲಿ ಕುದುರೆಗಳ ಮೇಲೆ, ಆನೆಗಳ ಮೇಲೆ, ಪದಾತಿಗಳಾಗಿ ಮತ್ತೆ ಪುನಃ ರಥಗಳ ಮೇಳೆ ಯುದ್ಧಮಾಡಿದರು.

ಆಗ ಘಟೋತ್ಕಚನು ಅಲಂಬಲನನ್ನು ವಧಿಸಲು ಬಯಸಿ ಬಹಳ ಕ್ರುದ್ಧನಾಗಿ ಗಿಡುಗನಂತೆ ಮೇಲೆ ಹಾರಿ ಕೆಳಗೆ ಧುಮುಕಿ, ಆ ಮಹಾಕಾಯ ರಾಕ್ಷಸ ಅಲಂಬಲನನ್ನು ವಿಷ್ಣುವು ಮಯನನ್ನು ಹೇಗೋ ಹಾಗೆ ಹಿಡಿದು ಮೇಲೆ ಹಾರಿ ಕೆಳಗೆ ನೆಲದ ಮೇಲೆ ಚಚ್ಚಿದನು. ಆಗ ಘಟೋತ್ಕಚನು ಅದ್ಭುತವಾಗಿ ಕಾಣುತ್ತಿದ್ದ ಖಡ್ಗವನ್ನು ಮೇಲೆತ್ತಿ ವಿಕೃತವಾಗಿ ಕಾಣುತ್ತಿದ್ದ ಅಲಂಬಲನ ಶಿರವನ್ನು ಕಾಯದಿಂದ ಕತ್ತರಿಸಿದನು. ರಕ್ತವನ್ನು ಸುರಿಸುತ್ತಿದ್ದ ಆ ಶಿರವನ್ನು ಕೂದಲಿನಲ್ಲಿ ಹಿಡಿದು ರಾಕ್ಷಸ ಘಟೋತ್ಕಚನು ದುರ್ಯೋಧನನ ರಥದ ಕಡೆ ನಡೆದನು. ಅವನ ಬಳಿ ಹೋಗಿ ನಗುತ್ತಾ ರಾಕ್ಷಸನು ವಿಕಾರ ಕೂದಲುಗಳುಳ್ಳ ಆ ಶಿರವನ್ನು ಅವನ ರಥದ ಮೇಲೆ ಎಸೆದು ಮಳೆಗಾಲದ ಮೋಡದಂತೆ ಭೈರವವಾಗಿ ಗರ್ಜಿಸಿದನು. ಆಗ ಅವನು ದುರ್ಯೋಧನನಿಗೆ ಈ ಮಾತನ್ನಾಡಿದನು: “ಇಗೋ! ನಿನ್ನ ವಿಕ್ರಮಿ ಬಂಧುವು ಹತನಾಗಿರುವುದನ್ನು ನೋಡು! ಇವನಂತೆಯೇ ನಿನಗೆ ನಿಷ್ಠನಾಗಿರುವ ಕರ್ಣನನ್ನೂ ಕೂಡ ಪುನಃ ನೋಡಲಿದ್ದೀಯೆ!”

ಹೀಗೆ ಹೇಳಿ ಅವನು ಕರ್ಣನ ಮೇಲೆ ನೂರಾರು ತೀಕ್ಷ್ಣ ಶರಗಳನ್ನು ಎರಚುತ್ತಾ ಅವನ ಕಡೆಗೇ ಹೋದನು. ಅನಂತರ ಆ ನರ-ರಾಕ್ಷಸರ ಮಧ್ಯೆ ರಣದಲ್ಲಿ ಘೋರರೂಪದ, ಭಯಾನಕ, ವಿಸ್ಮಯದಾಯಕ ಯುದ್ಧವು ನಡೆಯಿತು.

ಕರ್ಣ-ಘಟೋತ್ಕಚರ ಯುದ್ಧ

ಮಹಾಕಾಯ, ಲೋಹಿತಾಕ್ಷ, ತಾಮ್ರವರ್ಣದ ಮುಖವುಳ್ಳ, ಆಳವಾದ ಹೊಟ್ಟೆಯನ್ನು ಹೊಂದಿರುವ, ರೋಮಗಳು ನಿಮಿರಿ ನಿಂತಿರುವ, ಹಸಿರುಬಣ್ಣದ ಗಡ್ಡ-ಮೀಸೆಗಳುಳ್ಳ, ಗೂಟದಂತಹ ಕಿವಿಗಳುಳ್ಳ, ದೊಡ್ಡ ದೊಡ್ಡ ದವಡೆಗಳುಳ್ಳ ಘಟೋತ್ಕಚನ ಬಾಯಿಯು ಕಿವಿಗಳ ಪರ್ಯಂತವಾಗಿತ್ತು. ತೀಕ್ಷ್ಣ ಕೋರೆದಾಡೆಗಳುಳ್ಳ ಅವನು ಭಯಂಕರರೂಪನಾಗಿದ್ದನು. ಅವನ ಕೆಂಪು ನಾಲಿಗೆ-ತುಟಿಗಳು ನೀಳವಾಗಿದ್ದವು. ಹುಬ್ಬುಗಳು ಜೋಲಾಡುತ್ತಿದ್ದವು. ಮೂಗು ದಪ್ಪವಾಗಿತ್ತು. ಶರೀರವು ನೀಲಿ ಬಣ್ಣದ್ದಾಗಿತ್ತು. ಕುತ್ತಿಗೆಯು ಕೆಂಪಾಗಿತ್ತು. ಅವನ ಶರೀರವು ಪರ್ವತಾಕಾರವಾಗಿದ್ದು ನೋಡಲು ಭಯಂಕರನಾಗಿದ್ದನು. ಆ ಮಹಾಕಾಯ, ಮಹಾಬಾಹು, ಮಹಾಶೀರ್ಷ, ಮಹಾಬಲ, ವಿಕಾರಸ್ವರೂಪನ ಸ್ಪರ್ಷವು ಗಡುಸಾಗಿತ್ತು. ಅವನ ಕಣಕಾಲಿನ ಹಿಂಭಾಗವು ವಿಕಾರವಾಗಿಯೂ ಮಾಂಸಲವಾಗಿಯೂ ಇದ್ದಿತು. ಅವನ ನಿತಂಬವು ದಪ್ಪವಾಗಿದ್ದಿತು. ಹೊಕ್ಕಳು ಪ್ರದೇಶವು ಚಿಕ್ಕುದಾಗಿದ್ದು ಆಳವಾಗಿದ್ದಿತು. ಅವನ ಶರೀರವು ದೊಡ್ಡದಾಗಿ ಬೆಳೆದಿದ್ದಿತು. ಮಹಾಮಾಯಾವಿಯಾಗಿದ್ದ ಅವನು ಕೈಗಳಲ್ಲಿ ಆಭರಣಗಳನ್ನು ತೊಟ್ಟುಕೊಂಡಿದ್ದ ಅವನು ಭುಜಗಳಲ್ಲಿ ಅಂಗದ ಕೇಯೂರಗಳನ್ನು ಧರಿಸಿದ್ದನು. ಪರ್ವತವು ಅಗ್ನಿಯನ್ನೇ ಮಾಲೆಯನ್ನಾಗಿ ಧರಿಸುವಂತೆ ಘಟೋತ್ಕಚನು ವಕ್ಷಸ್ಠಳದಲ್ಲಿ ಸ್ವರ್ಣಮಾಲೆಯನ್ನು ಧರಿಸಿದ್ದನು. ಹೇಮಮಯ ಚಿತ್ರಿತ ತೋರಣಸದೃಶ ಬಹುರೂಪದ ಶುಭ್ರ ಕಿರೀಟವು ಅವನ ತಲೆಯ ಮೇಲೆ ಬೆಳಗುತ್ತಿತ್ತು. ಬಾಲಸೂರ್ಯನಂತೆ ಹೊಳೆಯುತ್ತಿದ್ದ ಕುಂಡಲಗಳನ್ನೂ, ಸುವರ್ಣಮಯ ಶುಭ ಮಾಲೆಯನ್ನೂ, ಮಹಾಪ್ರಭೆಯುಳ್ಳ ಕಂಚಿನ ವಿಶಾಲ ಕವಚವನ್ನೂ ಧರಿಸಿದ್ದನು. ಅವನ ಮಹಾರಥವು ಶಬ್ದಾಯಮಾನ ನೂರಾರು ಗಂಟೆಗಳಿಂದ ಅಲಂಕೃತವಾಗಿತ್ತು. ಕೆಂಪು ಧ್ವಜ-ಪತಾಕೆಗಳಿದ್ದವು. ಕರಡಿಯ ಚರ್ಮವನ್ನು ಹೊದೆಸಿದ್ದ ಆ ರಥವು ನಾಲ್ಕುನೂರು ಮೊಳಗಳಷ್ಟು ವಿಸ್ತಾರವಾಗಿತ್ತು. ಸರ್ವಾಯುಧಗಳಿಂದ ಸಮೃದ್ಧವಾಗಿದ್ದ ಆ ರಥದ ಧ್ವನಿಯು ಮೇಘಗಳ ಗಂಭೀರಧ್ವನಿಗೆ ಸಮನಾಗಿದ್ದಿತು. ದೊಡ್ಡ ಧ್ವಜವಿದ್ದ ಆ ರಥಕ್ಕೆ ಎಂಟು ಗಾಲಿಗಳಿದ್ದವು. ಅದಕ್ಕೆ ಮದಿಸಿದ ಆನೆಗಳಿಗೆ ಸಮಾನ ಕೆಂಪು ಕಣ್ಣುಗಳುಳ್ಳ ವಿಭೀಷಣವಾಗಿ ತೋರುತ್ತಿದ್ದ, ಇಚ್ಛಾನುಸಾರವಾಗಿ ರೂಪಗಳನ್ನು ಬದಲಾಯಿಸಬಲ್ಲ, ಮಹಾಬಲಿಷ್ಠ ಕುದುರೆಗಳನ್ನು ಕಟ್ಟಲಾಗಿತ್ತು. ಬೆಳಗುತ್ತಿದ್ದ ಮುಖ ಮತ್ತು ಕುಂಡಲಗಳನ್ನು ಹೊಂದಿದ್ದ ವಿರೂಪಾಕ್ಷನೆಂಬ ರಾಕ್ಷಸನು ಅವನ ಸಾರಥಿಯಾಗಿದ್ದನು. ಸೂರ್ಯನ ರಶ್ಮಿಗೆ ಸಮಾನ ಕಡಿವಾಣಗಳಿಂದ ಕುದುರೆಗಳನ್ನು ಹಿಡಿದಿದ್ದ ಅವನೊಡನೆ ಅರುಣನೊಂದಿಗೆ ರವಿಯು ಹೇಗೋ ಹಾಗೆ ರಣಸನ್ನದ್ಧನಾಗಿದ್ದನು. ಕೆಂಪು ತಲೆಯ ಪರಮಭೀಷಣ ಮಾಂಸಾಹಾರಿ ರಣಹದ್ದಿರುವ ಮಹಾ ಧ್ವಜವು ಮೋಡಗಳಿಂದ ಕೂಡಿದ ಪರ್ವತವು ಆಕಾಶವನ್ನು ಚುಂಬಿಸುವಂತೆ ರಥದ ಮೇಲೆ ಹಾರಾಡುತಿತ್ತು. ಇಂದ್ರನ ವಜ್ರಾಯುಧದ ಘೋಷಕ್ಕೆ ಸಮಾನ ಟೇಂಕಾರಶಬ್ಧದಿಂದಲೂ, ಧೃಢ ಮೌರ್ವಿಯುಳ್ಳ, ಒಂದು ಕಿಷ್ಕುವಿನಷ್ಟು ಅಗಲವಾಗಿದ್ದ, ಹನ್ನೆರಡು ಆರತ್ನಿಗಳಷ್ಟು ಉದ್ದವಾಗಿದ್ದ ಕಾರ್ಮುಕವನ್ನು ಕರ್ಣಪರ್ಯಂತವಾಗಿ ಸೆಳೆಯುತ್ತಾ ರಥದ ಅಚ್ಚುಗಳ ಗಾತ್ರದ ಬಾಣಗಳಿಂದ ದಿಕ್ಕುಗಳನ್ನು ಮುಚ್ಚುತ್ತಾ ವೀರರ ಪ್ರಾಣಾಪಹಾರಕ ಆ ಘೋರರಾತ್ರಿಯಲ್ಲಿ ಘಟೋತ್ಕಚನು ಕರ್ಣನ ಬಳಿ ಧಾವಿಸಿದನು.

ರಥದಲ್ಲಿ ಸ್ಥಿರನಾಗಿ ಕುಳಿತಿದ್ದ ಅವನು ಧನುಸ್ಸನ್ನು ಸೆಳೆದು ಬಿಡುತ್ತಿದ್ದಾಗ ಅದರ ಟೇಂಕಾರಶಬ್ಧವು ಸಿಡಿಲಿನ ಶಬ್ಧದಂತೆ ಕೇಳಿಬರುತ್ತಿತ್ತು. ಧನುಸ್ಸಿನ ಆ ಘೋರಶಬ್ಧದಿಂದ ಭಯಗೊಂಡ ಕೌರವ ಸೈನ್ಯಗಳು ಸಮುದ್ರದ ದೊಡ್ಡ ಅಲೆಗಳಂತೆ ಕಂಪಿಸಿದವು. ಆ ವಿಭೀಷಣ ವಿರೂಪಾಕ್ಷನು ತನ್ನ ಮೇಲೆ ಎರಗುತ್ತಿರುವುದನ್ನು ಕಂಡು ಉತ್ಸಾಹಿತ ರಾಧೇಯನು ತ್ವರೆಮಾಡಿ ರಣದಲ್ಲಿ ಅವನನ್ನು ತಡೆದನು. ಮದಿಸಿದ ಸಲಗವನ್ನು ಮತ್ತೊಂದು ಸಲಗವು ಹೇಗೋ ಹಾಗೆ ಮತ್ತು ಹೋರಿಯೊಂದು ಇನ್ನೊಂದು ಹೋರಿಯನ್ನು ಹೇಗೋ ಹಾಗೆ ಕರ್ಣನು ಅವನನ್ನು ಹತ್ತಿರದಿಂದಲೇ ಆಕ್ರಮಣಿಸಿದನು. ಕರ್ಣ-ರಾಕ್ಷಸರ ಆ ತುಮುಲ ಯುದ್ಧವು ಇಂದ್ರ-ಶಂಬರರ ಯುದ್ಧದಂತಿದ್ದಿತು. ಅವರಿಬ್ಬರೂ ಭಯಂಕರ ಶಬ್ಧಮಾಡುವ ಧನುಸ್ಸುಗಳನ್ನು ಹಿಡಿದು ಮಹಾ ಬಾಣಗಳಿಂದ ಗಾಯಗೊಳಿಸುತ್ತಾ ಮಹಾವೇಗದಲ್ಲಿ ಅನ್ಯೋನ್ಯರನ್ನು ಮುಚ್ಚಿಬಿಟ್ಟರು. ಆಗ ಆಕರ್ಣವಾಗಿ ಸೆಳೆದುಬಿಡುತ್ತಿದ್ದ ಸನ್ನತಪರ್ವ ಶರಗಳಿಂದ ಕಂಚಿನ ಕವಚಗಳನ್ನು ಭೇದಿಸಿ ಅನ್ಯೋನ್ಯರನ್ನು ತಡೆದು ನಿಲ್ಲಿಸಿದರು. ಎರಡು ಸಿಂಹಗಳು ಪಂಜಗಳಿಂದ, ಮಹಾ ಗಜಗಳು ದಂತಗಳಿಂದ ಸೆಣಸಾಡುವಂತೆ ಅವರಿಬ್ಬರು ರಥಶಕ್ತಿಗಳಿಂದ ಮತ್ತು ವಿಶಿಖಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು. ಸಾಯಕಗಳನ್ನು ಹೂಡುತ್ತಾ ಶರೀರಗಳನ್ನು ಚಿಂದಿಮಾಡುತ್ತಿದ್ದರು. ಶರವ್ರಾತಗಳಿಂದ ಅನ್ಯೋನ್ಯರನ್ನು ಸುಡುತ್ತಾ ಪ್ರೇಕ್ಷಕರಿಗೆ ದುರ್ಧರ್ಷರಾಗಿ ಕಾಣುತ್ತಿದ್ದರು. ಸರ್ವಾಂಗಗಳೂ ಗಾಯಗೊಂಡು ಅವುಗಳಿಂದ ರಕ್ತವು ಧಾರಾಕಾರವಾಗಿ ಸುರಿಯುತ್ತಿರಲು ಅವರಿಬ್ಬರೂ ಧಾತುಗಳ ಕೆಂಪು ನದಿಗಳು ಹರಿಯುತ್ತಿರುವ ಪರ್ವತಗಳಂತೆ ಬೆಳಗುತ್ತಿದ್ದರು. ಅವರಿಬ್ಬರು ಮಹಾದ್ಯುತಿಗಳು ಪರಸ್ಪರರರನ್ನು ಶರಾಗ್ರಗಳಿಂದ ಗಾಯಗೊಳಿಸುತ್ತಾ ಪ್ರಯತ್ನಿಸುತ್ತಿದ್ದರೂ ಅನ್ಯೋನ್ಯರನ್ನು ಅಲುಗಾಡಿಸಲಾಗಲಿಲ್ಲ. ಪ್ರಾಣಗಳನ್ನೇ ಪಣವನ್ನಾಗಿಟ್ಟು ಯುದ್ಧಮಾಡುತ್ತಿದ್ದ ಕರ್ಣ-ರಾಕ್ಷಸರ ಆ ರಾತ್ರಿಯುದ್ಧವು ಬಹಳ ಸಮಯದವರೆಗೆ ಸಮ-ಸಮವಾಗಿಯೇ ನಡೆಯುತ್ತಿತ್ತು.

ತೀಕ್ಷ್ಣಬಾಣಗಳನ್ನು ಅನುಸಂಧಾನಮಾಡುತ್ತಾ, ಒಂದಕ್ಕೊಂದು ಅಂಟಿಕೊಂಡಿರುವಂತೆ ಸತತವಾಗಿ ಬಿಡುತ್ತಿದ್ದ ಘಟೋತ್ಕಚನ ಧನುಸ್ಸಿನ ಟೇಂಕಾರ ಶಬ್ಧವನ್ನು ಕೇಳಿ ಕೌರವ ಮತ್ತು ಶತ್ರುಗಳ ಕಡೆಯ ಯೋಧರು ಭಯಗೊಂಡು ತತ್ತರಿಸಿದರು. ಆಗ ಅಸ್ತ್ರವಿದರಲ್ಲಿ ಶ್ರೇಷ್ಠ ಕರ್ಣನು ಅವನನ್ನು ಮೀರಿಸಲು ದಿವ್ಯಾಸ್ತ್ರವನ್ನು ಪ್ರಯೋಗಿಸತೊಡಗಿದನು. ಕರ್ಣನು ದಿವ್ಯಾಸ್ತ್ರವನ್ನು ಬಳಸುವುದನ್ನು ನೋಡಿ ರಾಕ್ಷಸ ಘಟೋತ್ಕಚನು ಮಹಾಮಾಯೆಯನ್ನು ಬಳಸತೊಡಗಿದನು. ಶೂಲಮುದ್ಗರಗಳನ್ನು ಪರ್ವತವೃಕ್ಷಗಳನ್ನು ಕೈಗಳಲ್ಲಿ ಹಿಡಿದ್ದಿದ್ದ ಘೋರರೂಪೀ ರಾಕ್ಷಸರ ಮಹಾ ಸೇನೆಯಿಂದ ಆವೃತನಾದ, ಉಗ್ರ ಕಾಲದಂಡವನ್ನು ಧರಿಸಿದ್ದ ಸಮಸ್ತ ಪ್ರಾಣಿಗಳ ಅಂತಕ ಯಮನಂತೆ ಮಹಾಚಾಪವನ್ನು ಎತ್ತಿ ಹಿಡಿದಿದ್ದ ಅವನನ್ನು ನೋಡಿ ಕೌರವ ರಾಜರು ವ್ಯಥಿತರಾದರು. ಘಟೋತ್ಕಚನು ಮಾಡಿದ ಸಿಂಹನಾದದಿಂಡ ಭಯಗೊಂಡ ಆನೆಗಳು ಮೂತ್ರವಿಸರ್ಜನೆಮಾಡಿದವು. ಮನುಷ್ಯರು ಬಹಳವಾಗಿ ವ್ಯಥಿತರಾದರು. ಆ ಅರ್ಧರಾತ್ರಿಯಲ್ಲಿ ಅಧಿಕಬಲವುಳ್ಳ ರಾಕ್ಷಸ ಸೈನಿಕರು ಅತಿ ಉಗ್ರ ಕಲ್ಲುಗಳ ಮಳೆಯನ್ನು ಎಲ್ಲೆಡೆ ಸುರಿಸಿದರು. ಕಬ್ಬಿಣದ ಚಕ್ರಗಳೂ, ಭುಶುಂಡಿಗಳೂ, ಶಕ್ತಿ-ತೋಮರಗಳೂ, ಶೂಲ-ಶತಘ್ನೀ-ಪಟ್ಟಿಶಗಳೂ ಅವಿರತವಾಗಿ ಬೀಳುತ್ತಿದ್ದವು. ಆ ಅತಿಉಗ್ರ ರೌದ್ರ ಯುದ್ಧವನ್ನು ನೋಡಿ ನರಾಧಿಪರೂ, ಕೌರವ ಪುತ್ರರೂ, ಯೋಧರೂ ವ್ಯಥಿತರಾಗಿ ಪಲಾಯನಮಾಡಿದರು. ಆದರೆ ಅಲ್ಲಿ ಅಸ್ತ್ರಬಲಶ್ಲಾಘಿ ಮಾನಿನಿ ಕರ್ಣನು ಮಾತ್ರ ವ್ಯಥೆಗೊಳ್ಳಲಿಲ್ಲ. ಶರಗಳಿಂದ ಘಟೋತ್ಕಚನು ನಿರ್ಮಿಸಿದ ಮಾಯೆಯನ್ನು ಧ್ವಂಸಮಾಡಿದನು.

ತನ್ನ ಮಾಯೆಯು ನಷ್ಟವಾದುದನ್ನು ನೋಡಿ ಸಹನೆಮೀರಿದ ಘಟೋತ್ಕಚನು ಘೋರಶರಗಳನ್ನು ಬಿಡಲು ಅವು ಸೂತಪುತ್ರನ ಶರೀರವನ್ನು ಪ್ರವೇಶಿಸಿದವು. ಆ ಶರಗಳು ಕರ್ಣನನ್ನು ಭೇದಿಸಿ ರಕ್ತವನ್ನು ಕುಡಿದು ಸಂಕ್ರುದ್ಧ ಪನ್ನಗಗಳಂತೆ ಭೂಮಿಯನ್ನು ಹೊಕ್ಕವು. ಸೂತಪುತ್ರನಾದರೋ ಸಂಕ್ರುದ್ಧನಾಗಿ ಘಟೋತ್ಕಚನನ್ನು ಅತಿಕ್ರಮಿಸಿ ಹತ್ತು ಶರಗಳಿಂದ ಗಾಯಗೊಳಿಸಿದನು. ಸೂತಪುತ್ರನಿಂದ ಮರ್ಮಗಳಲ್ಲಿ ಗಾಯಗೊಂಡು ತುಂಬಾ ವ್ಯಥಿತನಾದ ಘಟೋತ್ಕಚನು ಸಾವಿರ ಅರೆಗಳುಳ್ಳ ದಿವ್ಯ ಚಕ್ರವನ್ನು ಕೈಗೆತ್ತಿಕೊಂಡನು. ಕ್ರುದ್ಧ ಭೈಮಸೇನಿಯು ಅಧಿರಥಿಯನ್ನು ಕೊಲ್ಲಲೋಸುಗ ತೀಕ್ಷ್ಣ ಅಲಗುಗಳಿಂದ ಕೂಡಿದ್ದ ಬಾಲ ಸೂರ್ಯನಂತೆ ಪ್ರಕಾಶಮಾನ, ಮಣಿರತ್ನಗಳಿಂದ ವಿಭೂಷಿತ ಚಕ್ರವನ್ನು ಅವನ ರಥದ ಮೇಲೆ ಬೀಸಿ ಎಸೆದನು. ಅಭಾಗ್ಯನ ಸಂಕಲ್ಪಗಳು ವ್ಯರ್ಥವಾಗಿ ಹೋಗುವಂತೆ ಎಸೆಯಲ್ಪಟ್ಟ ಆ ಚಕ್ರವು ಕರ್ಣನ ಸಾಯಕಗಳಿಂದ ಬಹಳ ವೇಗವಾಗಿ ಪ್ರಹರಿಸಲ್ಪಟ್ಟು ಕೆಳಕ್ಕೆ ಬಿದ್ದುಹೋಯಿತು. ತನ್ನ ಚಕ್ರವು ಕೆಳಗುರುಳಿದುದನ್ನು ನೋಡಿ ಸಂಕ್ರುದ್ಧನಾದ ಘಟೋತ್ಕಚನಾದರೋ ರಾಹುವು ಭಾಸ್ಕರನನ್ನು ಹೇಗೋ ಹಾಗೆ ಕರ್ಣನನ್ನು ಬಾಣಗಳಿಂದ ಮುಚ್ಚಿಬಿಟ್ಟನು. ರುದ್ರ-ಉಪೇಂದ್ರರ ಸಮಾನ ವಿಕ್ರಮವುಳ್ಳ ಸೂತಪುತ್ರನಾದರೋ ಗಾಭರಿಗೊಳ್ಳದೇ ತಕ್ಷಣವೇ ಘಟೋತ್ಕಚನ ರಥವನ್ನು ಪತ್ರಿಗಳಿಂದ ಮುಚ್ಚಿಬಿಟ್ಟನು. ಆಗ ಕ್ರುದ್ಧ ಘಟೋತ್ಕಚನಿಂದ ಗರಗರನೆ ತಿರುಗಿಸಿ ಎಸೆಯಲ್ಪಟ್ಟ ಸುವರ್ಣಮಯ ಆಭರಣಗಳಿಂದ ಅಲಂಕೃತ ಗದೆಯೂ ಕೂಡ ಕರ್ಣನಿಂದ ಹೊಡೆಯಲ್ಪಟ್ಟು ಕೆಳಕ್ಕೆ ಬಿದ್ದಿತು.

ಆಗ ಮಹಾಕಾಯನು ಅಂತರಿಕ್ಷಕ್ಕೆ ಹಾರಿ ಕಾಲಮೇಘದಂತೆ ಗುಡುಗುತ್ತಾ ನಭಸ್ತಲದಿಂದ ವೃಕ್ಷಗಳ ಮಳೆಯನ್ನು ಸುರಿಸಿದನು. ಆಗ ದಿವಿಯಲ್ಲಿದ್ದ ಭೀಮಸೇನಸುತ ಮಾಯಾವಿಯನ್ನು ಕರ್ಣನು ಸೂರ್ಯನು ಮೋಡಗಳನ್ನು ತನ್ನ ಕಿರಣಗಳಿಂದ ಭೇದಿಸುವಂತೆ ಮಾರ್ಗಣಗಳಿಂದ ಗಾಯಗೊಳಿಸಿದನು. ಅವನ ಎಲ್ಲ ಕುದುರೆಗಳನ್ನೂ ಸಂಹರಿಸಿ, ರಥವನ್ನು ನೂರು ಚೂರುಗಳನ್ನಾಗಿಸಿ, ಕರ್ಣನು ಮೋಡಗಳು ಮಳೆಸುರಿಸುವಂತೆ ಬಾಣಗಳ ಮಳೆಯನ್ನು ಸುರಿಸಿದನು. ಘಟೋತ್ಕಚನ ಶರೀರದಲ್ಲಿ ಕರ್ಣನ ಬಾಣಗಳಿಂದ ಗಾಯಗೊಳ್ಳದೇ ಇದ್ದ ಎರಡು ಅಂಗುಲ ಜಾಗವೂ ಇರಲಿಲ್ಲ. ಒಂದೇ ಕ್ಷಣದಲ್ಲಿ ಅವನು ಮುಳ್ಳುಗಳಿಂದ ತುಂಬಿದ ಮುಳ್ಳುಹಂದಿಯಂತೆಯೇ ಕಂಡನು. ಬಾಣಗಳ ಸಮೂಹಗಳಿಂದ ಮುಚ್ಚಿಹೋಗಿದ್ದ ಘಟೋತ್ಕಚನಾಗಲೀ ಅವನ ಕುದುರೆಗಳಾಗಲೀ ರಥವಾಗಲೀ ಧ್ವಜವಾಗಲೀ ಕಾಣುತ್ತಿರಲಿಲ್ಲ. ಅವನಾದರೋ ಕರ್ಣನ ಆ ದಿವ್ಯಾಸ್ತ್ರವನ್ನು ಅಸ್ತ್ರದಿಂದಲೇ ಪ್ರಶಮನಗೊಳಿಸಿದನು. ಆ ಮಾಯಾವಿಯು ಸೂತಪುತ್ರನನ್ನು ಮಾಯಾಯುದ್ಧದಿಂದಲೇ ಎದುರಿಸಿದನು. ಅವನು ಚಳಕದಿಂದಲೂ ಮಾಯೆಯಿಂದಲೂ ಕರ್ಣನೊಡನೆ ಯುದ್ಧಮಾಡುತ್ತಿದ್ದನು. ಇದ್ದಕ್ಕಿದ್ದಂತೆಯೇ ಆಕಾಶದಿಂದ ಬಾಣಗಳ ಜಾಲಗಳು ಕರ್ಣನ ಮೇಲೆ ಬೀಳತೊಡಗಿದವು. ಮಹಾಮಾಯಾವಿ ಭೈಮಸೇನಿಯು ಮಾಯೆಯಿಂದ ಎಲ್ಲರನ್ನೂ ಮೋಹಗೊಳಿಸುವಂತೆ ಮಾಡಿದನು. ಅವನು ವಿರೂಪಮಾಡಿಕೊಂಡು ಅಶುಭ ಮುಖವನ್ನು ಮಾಡಿಕೊಂಡು ಮಾಯೆಯಿಂದ ಸೂತಪುತ್ರನ ದಿವ್ಯಾಸ್ತ್ರಗಳನ್ನು ನುಂಗಿಹಾಕಿದನು. ಪುನಃ ಆ ಮಹಾಕಾಯನು ರಣದಲ್ಲಿ ನೂರಾರು ಚೂರುಗಳಾಗಿ ಸತ್ವವನ್ನು ಕಳೆದುಕೊಂಡು ನಿರುತ್ಸಾಹನಾಗಿ ಆಕಾಶದಿಂದ ಕೆಳಗೆ ಬೀಳತ್ತಿರುವುದು ತೋರಿತು. ಅವನು ಹತನಾದನೆಂದೇ ತಿಳಿದು ಕುರುಪುಂಗವರು ಜಯಘೋಷಮಾಡಿದರು. ಆದರೆ ಮರುಕ್ಷಣದಲ್ಲಿಯೇ ಪುನಃ ಆ ಮಹಾಕಾಯನು ನೂರು ತಲೆಗಳೊಂದಿಗೆ ನೂರು ಹೊಟ್ಟೆಗಳೊಂದಿಗೆ ಹೊಸದೇಹಗಳಿಂದ ಎಲ್ಲ ದಿಕ್ಕುಗಳಲ್ಲಿ ಕಾಣಿಸಿಕೊಂಡನು.

ಆ ರಾಕ್ಷಸನು ಮೈನಾಕಪರ್ವತದಂತೆ ಮಹಾಕಾಯನಾಗಿಯೂ, ಪುನಃ ಅಂಗುಷ್ಠಮಾತ್ರನಾಗಿಯೂ ಕಾಣುತ್ತಿದ್ದನು. ಸಾಗರದ ಅಲೆಗಳೋಪಾದಿಯಲ್ಲಿ ಮೇಲೆ ಕೆಳಕ್ಕೆ ಹೋಗುತ್ತಾ, ಕೆಲವೊಮ್ಮೆ ವಕ್ರವಾಗಿ ಸಂಚರಿಸುತ್ತಿದ್ದನು. ಅವನು ಭೂಮಿಯನ್ನು ಸೀಳಿಕೊಂಡು ಹೋಗುತ್ತಿದ್ದನು. ಇನ್ನೊಮ್ಮೆ ನೀರಿನಲ್ಲಿ ಮುಳುಗುತ್ತಿದ್ದನು. ಒಮ್ಮಿಂದೊಮ್ಮೆಲೇ ಅದೃಶ್ಯನಾಗಿ ಪುನಃ ಕಾಣಿಸಿಕೊಳ್ಳುತ್ತಿದ್ದನು. ಅವನು ಕೆಳಗಿಳಿದು ಪುನಃ ಹೇಮಪರಿಷ್ಕೃತ ರಥದಲ್ಲಿ ಕುಳಿತುಕೊಳ್ಳುತ್ತಿದ್ದನು. ಕವಚಧಾರಿಯಾದ ಅವನು ತನ್ನ ಮಾಯೆಯಿಂದ ಭೂಮ್ಯಾಕಾಶಗಳನ್ನೂ ದಿಕ್ಕುಗಳನ್ನೂ ಆವರಿಸಿದ್ದನು. ಅನಂತರ ಕರ್ಣನ ರಥದ ಸಮೀಪಕ್ಕೆ ಹೋಗಿ ಆ ಕುಂಡಲಾನನನು ಅಸಂಭ್ರಾಂತನಾಗಿ ಸೂತಪುತ್ರನಿಗೆ ಹೇಳಿದನು: “ಸೂತಪುತ್ರ! ನಿಲ್ಲು! ನೀನು ಜೀವಸಹಿತವಾಗಿ ನನ್ನಿಂದ ತಪ್ಪಿಸಿಕೊಂಡು ಹೋಗಲಾರೆ! ಈ ರಣಾಂಗಣದಲ್ಲಿ ನಿನಗಿರುವ ಯುದ್ಧಶ್ರದ್ಧೆಯನ್ನು ನಾನು ಹೋಗಲಾಡಿಸುತ್ತೇನೆ!”

ಹೀಗೆ ಹೇಳಿ ರೋಷದಿಂದ ಕೆಂಗಣ್ಣನಾಗಿದ್ದ ಆ ಕ್ರೂರಪರಾಕ್ರಮಿ ರಾಕ್ಷಸನು ಅಂತರಿಕ್ಷಕ್ಕೆ ಹಾರಿ ಅಟ್ಟಹಾಸದಿಂದ ನಗುತ್ತಾ ಸಿಂಹವು ಗಜೇಂದ್ರನನ್ನು ಪ್ರಹರಿಸುವಂತೆ ಕರ್ಣನನ್ನು ಪ್ರಹರಿಸತೊಡಗಿದನು. ಮೇಘವು ಜಲಧಾರೆಯಿಂದ ಪರ್ವತವನ್ನು ಮುಚ್ಚುವಂತೆ ರಥದ ಅಚ್ಚುಮರದಷ್ಟು ಗಾತ್ರದ ಬಾಣಗಳ ಮಳೆಯನ್ನು ರಥಶ್ರೇಷ್ಠ ಕರ್ಣನ ಮೇಲೆ ಘಟೋತ್ಕಚನು ಸುರಿಸಿದನು. ಆ ಶರವೃಷ್ಟಿಯನ್ನು ಕರ್ಣನು ದೂರದಿಂದಲೇ ವಿನಾಶಗೊಳಿಸಿದನು. ಕರ್ಣನು ತನ್ನ ಮಾಯೆಯನ್ನು ನಾಶಗೊಳಿಸಿದುದನ್ನು ನೋಡಿ ಘಟೋತ್ಕಚನು ಪುನಃ ಅಂತರ್ಹಿತನಾಗಿ ಮಾಯೆಗಳನ್ನು ಸೃಷ್ಟಿಸಿದನು. ಅವನು ವೃಕ್ಷಗಳ ಸಾಲುಗಳಿಂದಲೂ ಉಚ್ಚ ಶಿಖರಗಳಿಂದಲೂ ಕೂಡಿದ ಗಿರಿಯಾದನು ಮತ್ತು ಅದರಿಂದ ಮಹಾ ಶೂಲ-ಪ್ರಾಸ-ಖಡ್ಗ-ಮುಸಲಗಳನ್ನು ನೀರಿನ ರೂಪದಲ್ಲಿ ಹರಿದುಬರುತ್ತಿದ್ದವು. ಆಯುಧಗಳ ಪ್ರವಾಹವನ್ನು ಹರಿಸುತ್ತಿದ್ದ ಆ ಕಾಡಿಗೆಯಂತೆ ಕಪ್ಪಾಗಿದ್ದ ಪರ್ವತರೂಪವನ್ನು ನೋಡಿ ಕರ್ಣನು ಸ್ವಲ್ಪವೂ ಭ್ರಾಂತನಾಗಲಿಲ್ಲ. ಕರ್ಣನು ನಗುನಗುತ್ತಲೇ ದಿವ್ಯಾಸ್ತ್ರವನ್ನು ಪ್ರಯೋಗಿಸಲು ಆ ಪರ್ವತವು ಅಸ್ತ್ರದಿಂದ ಬಹುದೂರ ಎಸೆಯಲ್ಪಟ್ಟು ನಾಶಗೊಂಡಿತು. ಅನಂತರ ಆ ಉಗ್ರ ಘಟೋತ್ಕಚನು ಆಕಾಶದಲ್ಲಿ ಕಾಮನಬಿಲ್ಲಿನಿಂದ ಕೂಡಿದ ನೀಲಿಬಣ್ಣದ ಮೇಘವಾಗಿ ಕಲ್ಲಿನ ಮಳೆಗಳಿಂದ ಸೂತಪುತ್ರನನ್ನು ಮುಚ್ಚಿದನು. ಆಗ ಕರ್ಣನು ರೋಷದಿಂದ ವಾಯವ್ಯಾಸ್ತ್ರವನ್ನು ಹೂಡಿ ಆ ಕಾಲಮೇಘವನ್ನು ನಾಶಗೊಳಿಸಿದನು.

ಕರ್ಣನು ಮಾರ್ಗಣಗಣಗಳಿಂದ ಸರ್ವ ದಿಕ್ಕುಗಳನ್ನೂ ತುಂಬಿ ಘಟೋತ್ಕಚನು ಪ್ರಯೋಗಿಸಿದ ಅಸ್ತ್ರವನ್ನು ಧ್ವಂಸಗೊಳಿಸಿದನು. ಆಗ ಸಮರದಲ್ಲಿ ಜೋರಾಗಿ ನಗುತ್ತಾ ಭೈಮಸೇನಿಯು ಕರ್ಣನ ಮೇಲೆ ಮಹಾಮಾಯೆಯನ್ನು ಬಳಸತೊಡಗಿದನು. ಪುನಃ ಸಿಂಹ-ಶಾರ್ದೂಲ ಸಮರಾಗಿದ್ದ, ಮದಿಸಿದ ಆನೆಗಳ ಬಲವುಳ್ಳ, ಆನೆ-ಕುದುರೆ-ರಥಾರೂಡರಾಗಿದ್ದ, ನಾನಾ ಶಸ್ತ್ರಗಳನ್ನು ಹಿಡಿದಿದ್ದ, ನಾನಾಕವಚಭೂಷಣಗಳಿಂದ ಉಗ್ರರಾಗಿ ಕಾಣುತ್ತಿದ್ದ ಅನೇಕ ರಾಕ್ಷಸರಿಂದ ಸುತ್ತುವರೆಯಲ್ಪಟ್ಟು, ಅಸಂಭ್ರಾಂತನಾಗಿ ರಥವನ್ನೇರಿ ಬರುತ್ತಿದ್ದ ಆ ರಥಿಗಳಲ್ಲಿ ಶ್ರೇಷ್ಠ ಘಟೋತ್ಕಚನನ್ನು ಕರ್ಣನು ನೋಡಿದನು. ವಾಸವನು ಮರುತ್ತುಗಳಿಂದ ಹೇಗೋ ಹಾಗೆ ಕ್ರೂರ ರಾಕ್ಷಸರಿಂದ ಸುತ್ತುವರೆಯಲ್ಪಟ್ಟಿದ್ದ ರಾಕ್ಷಸ ಘಟೋತ್ಕಚನನ್ನು ನೋಡಿ ಕರ್ಣನು ಅವನೊಂದಿಗೆ ಯುದ್ಧಮಾಡತೊಡಗಿದನು. ಘಟೋತ್ಕಚನು ಕರ್ಣನನ್ನು ಐದು ಆಶುಗಗಳಿಂದ ಹೊಡೆದು ಸರ್ವಪಾರ್ಥಿವರನ್ನು ಹೆದರಿಸುವಂತೆ ಭೈರವ ಗರ್ಜನೆ ಮಾಡಿದನು. ಪುನಃ ಅಂಜಲೀಕದಿಂದ ಮಹಾ ಮಾರ್ಗಣಗಣಗಳೊಂದಿಗೆ ಕರ್ಣನ ಕೈಯಲ್ಲಿದ್ದ ಚಾಪವನ್ನು ಘಟೋತ್ಕಚನು ಕತ್ತರಿಸಿದನು. ಕೂಡಲೇ ಕರ್ಣನು ಇನ್ನೊಂದು ದೃಢ, ಮಹಾ ಭಾರವನ್ನು ಸಹಿಸಬಲ್ಲ, ಇಂದ್ರಾಯುಧದಂತೆ ಉದ್ದವಾಗಿದ್ದ ಧನುಸ್ಸನ್ನು ತೆಗೆದುಕೊಂಡು ಬಲವನ್ನುಪಯೋಗಿಸಿ ಸೆಳೆದನು. ಆಗ ಕರ್ಣನು ಸುವರ್ಣಪುಂಖಗಳುಳ್ಳ ಶತ್ರುಗಳನ್ನು ನಾಶಗೊಳಿಸಬಲ್ಲ ಸಾಯಕಗಳನ್ನು ಆಕಾಶದಲ್ಲಿ ಸಂಚರಿಸುತ್ತಿದ್ದ ರಾಕ್ಷಸರ ಮೇಲೆ ಪ್ರಯೋಗಿಸಿದನು. ಆ ಬಾಣಗಳಿಂದ ಪೀಡಿತಗೊಂಡ ಉಬ್ಬಿದ ಎದೆಯುಳ್ಳ ಆ ರಾಕ್ಷಸಗಣಗಳು ಅರಣ್ಯದಲ್ಲಿ ಸಿಂಹದಿಂದ ಪೀಡಿಸಲ್ಪಟ್ಟ ಆನೆಗಳ ಹಿಂಡಿನಂತೆ ಬಹಳವಾಗಿ ವ್ಯಾಕುಲಗೊಂಡವು. ಭಗವಾನ್ ಅಗ್ನಿಯು ಯುಗಕ್ಷಯದಲ್ಲಿ ಪ್ರಾಣಿಗಳನ್ನು ದಹಿಸುವಂತೆ ಕರ್ಣನು ಬಾಣಗಳಿಂದ ಅಶ್ವ-ಸೂತ-ಗಜಗಳೊಡನೆ ರಾಕ್ಷಸರನ್ನು ಮರ್ದಿಸಿ ದಹಿಸಿದನು. ಹಿಂದೆ ದಿವಿಯಲ್ಲಿ ದೇವ ಮಹೇಶ್ವರನು ತ್ರಿಪುರವನ್ನು ಸುಟ್ಟು ಪ್ರಕಾಶಿಸಿದಂತೆ ಸೂತನಂದನನು ಆ ರಾಕ್ಷಸೀ ಸೇನೆಯನ್ನು ಸಂಹರಿಸಿ ಶೋಭಿಸಿದನು.

ರಾಕ್ಷಸೇಂದ್ರ, ಮಹಾಬಲಶಾಲೀ, ಭೀಮನ ವೀರ್ಯಬಲಗಳಿಂದ ಕೂಡಿದ್ದ, ಕ್ರುದ್ಧ ವೈವಸ್ವತನಂತಿದ್ದ ಘಟೋತ್ಕಚನನ್ನು ಬಿಟ್ಟು ಪಾಂಡವೇಯರ ಸಹಸ್ರ ರಾಜರಲ್ಲಿ ಯಾರೂ ಕರ್ಣನನ್ನು ದಿಟ್ಟಿಸಿ ನೋಡಲು ಶಕ್ಯರಾಗಿರಲಿಲ್ಲ. ದೊಡ್ಡ ಪಂಜುಗಳ ಬೆಂಕಿಯಿಂದ ಉರಿಯುತ್ತಿರುವ ಎಣ್ಣೆಯ ತೊಟ್ಟುಗಳು ಉದುರುತ್ತಿರುವಂತೆ ಕ್ರುದ್ಧ ಘಟೋತ್ಕಚನ ಎರಡೂ ಕಣ್ಣುಗಳಿಂದ ಬೆಂಕಿ ಕೂಡಿದ ಕಣ್ಣೀರು ಉದುರುತ್ತಿತ್ತು. ಆಗ ಕ್ರುದ್ಧ ಘಟೋತ್ಕಚನು ಕೈಯಿಂದ ಕೈಯನ್ನು ಮಸೆಯುತ್ತಾ ಹಲ್ಲುಗಳಿಂದ ಅವಡುಗಚ್ಚುತ್ತಾ ಮಾಯೆಯಿಂದ ನಿರ್ಮಿತ ಗಜಸದೃಶ ಪಿಶಾಚಿಯ ಮುಖದಿಂದ ಕೂಡಿದ ಹೇಸರಗತ್ತೆಗಳನ್ನು ಕಟ್ಟಿದ್ದ ರಥದಲ್ಲಿ ಕುಳಿತು “ಸೂತಪುತ್ರನಲ್ಲಿಗೆ ನನ್ನನ್ನು ಕೊಂಡೊಯ್ಯಿ!” ಎಂದು ಸಾರಥಿಗೆ ಹೇಳಿದನು. ಅವನು ಘೋರರೂಪದ ರಥದಲ್ಲಿ ಕುಳಿತು ಪುನಃ ಸೂತಪುತ್ರನೊಂದಿಗೆ ದ್ವೈರಥ ಯುದ್ಧದಲ್ಲಿ ತೊಡಗಿದನು. ಕ್ರುದ್ಧನಾಗಿದ್ದ ಆ ರಾಕ್ಷಸನು ಪುನಃ ಎಂಟು ಚಕ್ರಗಳುಳ್ಳ, ರುದ್ರನಿರ್ಮಿತ ಮಹಾಘೋರ ವಜ್ರಾಯುಧವನ್ನು ಸೂತಪುತ್ರನ ಮೇಲೆ ಎಸೆದನು. ಕರ್ಣನು ರಥದಲ್ಲಿ ಧನುಸ್ಸನ್ನು ಇಟ್ಟು ರಥದಿಂದ ಜಿಗಿದು ಹಾರಿ ಅದನ್ನು ಕೈಯಲ್ಲಿ ಹಿಡಿದು ರಥದಿಂದ ಕೆಳಗೆ ಧುಮುಕಿದ್ದ ಘಟೋತ್ಕಚನ ಮೇಲೆ ಅದನ್ನೇ ಎಸೆದನು. ಮಹಾಪ್ರಭೆಯುಳ್ಳ ಆ ವಜ್ರಾಯುಧವು ಅಶ್ವ-ಸೂತ-ಧ್ವಜಗಳೊಡನೆ ಘಟೋತ್ಕಚನ ರಥವನ್ನು ಭಸ್ಮಮಾಡಿ ವಸುಧೆಯನ್ನು ಸೀಳಿ ಪ್ರವೇಶಿಸಿತು. ಅದನ್ನು ನೋಡಿ ಸುರರೂ ವಿಸ್ಮಿತರಾದರು! ದೇವನಿಂದ ಸೃಷ್ಟಿಸಲ್ಪಟ್ಟಿದ್ದ ಆ ಮಹಾ ವಜ್ರವನ್ನು ಅನಾಯಾಸದಿಂದ ಹಾರಿ ಕೈಯಲ್ಲಿ ಹಿಡಿದುದನ್ನು ನೋಡಿ ಕರ್ಣನನ್ನು ಸರ್ವಭೂತಗಳೂ ಪ್ರಶಂಸಿಸಿದವು. ರಣದಲ್ಲಿ ಹೀಗೆ ಮಾಡಿ ಪರಂತಪ ಸೂತಪುತ್ರ ಕರ್ಣನು ಪುನಃ ರಥವನ್ನೇರಿ ನಾರಾಚಗಳನ್ನು ಪ್ರಯೋಗಿಸಿದನು. ಭಯಂಕರವಾಗಿ ತೋರುತ್ತಿದ್ದ ಆ ಸಂಗ್ರಾಮದಲ್ಲಿ ಕರ್ಣನು ಏನನ್ನು ಮಾಡಿದನೋ ಅದನ್ನು ಸರ್ವ ಭೂತಗಳಲ್ಲಿ ಬೇರೆ ಯಾರಿಗೂ ಮಾಡಲು ಅಶಕ್ಯವಾಗಿತ್ತು. ಪರ್ವತವು ಮಳೆಯ ಧಾರೆಗಳಿಂದ ಮುಚ್ಚಿಹೋಗುವಂತೆ ಕರ್ಣನ ನಾರಾಚಗಳಿಂದ ಮುಚ್ಚಲ್ಪಟ್ಟು ಪ್ರಹೃತನಾದ ಘಟೋತ್ಕಚನು ಗಂಧರ್ವ ನಗರಿಯಂತೆ ಪುನಃ ಅಂತರ್ಧಾನನಾದನು. ಹೀಗೆ ಆ ರಿಪುಸೂದನ ಮಯಾಮಾಯಿ ಘಟೋತ್ಕಚನು ಮಾಯೆಯಿಂದ ಮತ್ತು ಹಸ್ತ ಲಾಘವದಿಂದ ಕರ್ಣನ ಆ ದಿವ್ಯಾಸ್ತ್ರಗಳನ್ನು ನಾಶಗೊಳಿಸಿದನು. ಮಾಯೆಯನ್ನು ಆಶ್ರಯಿಸಿ ಆ ರಾಕ್ಷಸನು ತನ್ನ ಅಸ್ತ್ರಗಳನ್ನು ಧ್ವಂಸಮಾಡುತ್ತಿರಲು ಕರ್ಣನು ಸ್ವಲ್ಪವೂ ಭ್ರಾಂತನಾಗದೇ ಅವನೊಡನೇ ಯುದ್ಧಮಾಡುತ್ತಲೇ ಇದ್ದನು.

ಆಗ ಕ್ರುದ್ಧ ಭೈಮಸೇನಿಯು ನರಾಧಿಪರನ್ನು ಭಯಪಡಿಸುತ್ತಾ ತನ್ನನ್ನು ಅನೇಕ ರೂಪಗಳನ್ನಾಗಿ ಪರಿವರ್ತಿಸಿಕೊಂಡನು. ಆಗ ಕರ್ಣನ ಮೇಲೆ ಎಲ್ಲ ಕಡೆಗಳಿಂದ ಸಿಂಹ, ವ್ಯಾಘ್ರ, ಕಿರುಬ, ಅಗ್ನಿರೂಪದ ನಾಲಿಗೆಗಳುಳ್ಳ ಸರ್ಪಗಳೂ, ಲೋಹಮಯ ಕೊಕ್ಕುಗಳನ್ನು ಹೊಂದಿದ್ದ ಪಕ್ಷಿಗಳೂ ಏಕಕಾಲದಲ್ಲಿ ಬಿದ್ದವು. ಕರ್ಣನ ಚಾಪದಿಂದ ಹೊರಟ ನಿಶಿತ ಶರಗಳಿಂದ ಎರಚಲ್ಪಟ್ಟ ಅವನು ಸರ್ಪ-ಗಿರಿ-ವನಚರರೊಡನೆ ಅಲ್ಲಿಯೇ ಅಂತರ್ಧಾನನಾದನು. ಆಗ ರಾಕ್ಷಸರು, ಪಿಶಾಚಿಗಳು, ಯಾತುಧಾನರು, ನಾಯಿ-ತೋಳಗಳು ಕರ್ಣನನ್ನು ಭಕ್ಷಿಸುವವೋ ಎನ್ನುವಂತೆ ಎಲ್ಲ ಕಡೆಗಳಿಂದ ಓಡಿ ಬಂದವು. ಅವು ಭಯಂಕರ ಗರ್ಜನೆಯೊಡನೆ ಕರ್ಣನನ್ನು ಬೆದರಿಸಲು ಉಪಕ್ರಮಿಸಿದವು. ಆಗ ಕರ್ಣನು ಅನೇಕ ರಕ್ತಸಿಕ್ತ ಘೋರ ಆಯುಧಗಳಿಂದಲೂ ಮತ್ತು ಬಾಣಗಳಿಂದಲೂ ಬಹುಸಂಖ್ಯಾತ ರಾಕ್ಷಸರಲ್ಲಿ ಪ್ರತಿಯೊಬ್ಬನನ್ನೂ ಪ್ರಹರಿಸಿದನು. ಆ ರಾಕ್ಷಸೀ ಮಾಯೆಯನ್ನು ದಿವ್ಯಾಸ್ತ್ರಗಳಿಂದ ನಾಶಗೊಳಿಸಿ ಕರ್ಣನು ಸನ್ನತಪರ್ವ ಶರಗಳಿಂದ ಅವನ ಕುದುರೆಗಳನ್ನು ಸಂಹರಿಸಿದನು. ರಾಕ್ಷಸನು ನೋಡುತ್ತಿದ್ದಂತೆಯೇ ಆ ಕುದುರೆಗಳು ಭಗ್ನವಾಗಿ ಅಂಗಗಳು ಕ್ಷತವಿಕ್ಷತವಾಗಿ, ಪೃಷ್ಟಭಾಗಗಳು ಭಿನ್ನವಾಗಿ ಭೂಮಿಯ ಮೇಲೆ ಬಿದ್ದವು. ಹೀಗೆ ಭಗ್ನನಾದ ಹೈಡಿಂಬನು ವೈಕರ್ತನ ಕರ್ಣನಿಗೆ “ಈಗಲೇ ನಾನು ನಿನಗೆ ಮೃತ್ಯುವನ್ನೀಯುತ್ತೇನೆ!” ಎಂದು ಹೇಳಿ ಅಂತರ್ಧಾನನಾದನು.

ಅಲಾಯುಧಯುದ್ಧ

ಹೀಗೆ ಅಲ್ಲಿ ಕರ್ಣ ಮತ್ತು ರಾಕ್ಷಸರ ಮಧ್ಯೆ ಯುದ್ಧವು ನಡೆಯುತ್ತಿರುವಾಗ ವೀರ್ಯವಾನ್ ರಾಕ್ಷಸೇಂದ್ರ ಅಲಾಯುಧನು ಆಗಮಿಸಿದನು. ಹಿಂದಿನ ವೈರವನ್ನು ಸ್ಮರಿಸಿಕೊಂಡು ಅವನು ಸಹಸ್ರಾರು ನಾನಾರೂಪಧರ, ವೀರ ವಿರೂಪ ರಾಕ್ಷಸರಿಂದ ಸುತ್ತುವರೆಯಲ್ಪಟ್ಟು ಸುಯೋಧನನ ಬಳಿಗೆ ಬಂದನು. ಬ್ರಾಹ್ಮಣಭಕ್ಷಕ ವಿಕ್ರಾಂತ ಬಕನು ಅಲಾಯುಧನ ಬಂಧುವಾಗಿದ್ದನು. ಹತರಾದ ಮಹಾತೇಜಸ್ವಿ ಕಿರ್ಮೀರ ಹಿಡಿಂಬರೂ ಕೂಡ ಅವನ ಸಖರಾಗಿದ್ದರು. ಬಹಳ ಹಿಂದಿನಿಂದಲೂ ಮನಸ್ಸಿನಲ್ಲಡಗಿದ್ದ ವೈರವನ್ನು ಸ್ಮರಣೆಗೆ ತಂದುಕೊಂಡು ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಅಲಾಯುಧನು ಅಲ್ಲಿಗೆ ಬಂದನು. ಮದಿಸಿದ ಸಲಗದಂತಿದ್ದ ಮತ್ತು ಸಂಕ್ರುದ್ಧ ಸರ್ಪದಂತಿದ್ದ ಆ ಯುದ್ಧಲಾಲಸನು ದುರ್ಯೋಧನನಿಗೆ ಈ ಮಾತನ್ನಾಡಿದನು: “ಮಹಾರಾಜ! ಹೇಗೆ ನನ್ನ ಬಾಂಧವ ಹಿಡಿಂಬ, ಬಕ ಮತ್ತು ಕಿರ್ಮೀರ ರಾಕ್ಷಸರು ಭೀಮನಿಂದ ಹತರಾದರೆನ್ನುವುದು ನಿನಗೆ ತಿಳಿದೇ ಇದೆ. ಅಷ್ಟುಮಾತ್ರವಲ್ಲದೇ ಹಿಂದೆ ಅನ್ಯ ನಮ್ಮಂಥಹ ರಾಕ್ಷಸರನ್ನು ಬಿಟ್ಟು ಕನ್ಯೆ ಹಿಡಿಂಬೆಯು ಭೀಮನನ್ನು ವರಿಸಿದಳು! ಅವನ್ನೆಲ್ಲ ಪರಾಮರ್ಶಿಸಿ ವಾಜಿ-ರಥ-ಕುಂಜರ ಗಣಗಳೊಂದಿಗೆ ಮತ್ತು ಅಮಾತ್ಯರೊಂದಿಗೆ ಹೈಡಿಂಬನನ್ನು ಸಂಹರಿಸಲು ಸ್ವಯಂ ನಾನೇ ಬಂದಿದ್ದೇನೆ. ಇಂದು ವಾಸುದೇವಪ್ರಮುಖರಾದ ಎಲ್ಲ ಕುಂತೀಸುತರನ್ನೂ ಅವರ ಅನುಚರರೊಂದಿಗೆ ಸಂಹರಿಸಿ ಭಕ್ಷಿಸುತ್ತೇನೆ. ಎಲ್ಲ ಸೇನೆಗಳನ್ನೂ ನಿಲ್ಲಿಸು. ನಾವು ಪಾಂಡವರೊಂದಿಗೆ ಹೋರಾಡುತ್ತೇವೆ!”

ಅವನ ಆ ಮಾತನ್ನು ಕೇಳಿ ಸಂತೋಷಗೊಂಡ ದುರ್ಯೋಧನನು ಸಹೋದರರಿಂದ ಸುತ್ತುವರೆಯಲ್ಪಟ್ಟು ಅವನನ್ನು ಅಭಿನಂದಿಸಿ ಈ ಮಾತನ್ನಾಡಿದನು: “ಸಸೈನ್ಯನಾದ ನಿನ್ನನ್ನು ಮುಂದೆಮಾಡಿಕೊಂಡು ನಾವೂ ಕೂಡ ಶತ್ರುಗಳೊಂದಿಗೆ ಯುದ್ಧಮಾಡುತ್ತೇವೆ. ಏಕೆಂದರೆ ವೈರವನ್ನು ಮುಗಿಸುವ ಸಲುವಾಗಿರುವ ನನ್ನ ಸೈನಿಕರು ಸುಮ್ಮನೆ ಕುಳಿತಿರಲಾರರು!”

ಹಾಗೆಯೇ ಆಗಲೆಂದು ರಾಜನಿಗೆ ಹೇಳಿ ರಾಕ್ಷಸಪುಂಗವನು ತ್ವರೆಮಾಡಿ ಭಯಂಕರ ನರಭಕ್ಷಕರೊಡನೆ ಧಾವಿಸಿದನು. ದೇದೀಪ್ಯಮಾನ ಶರೀರಕಾಂತಿಯಿಂದ ಕೂಡಿದ್ದ ಅಲಾಯುಧನು ಘಟೋತ್ಕಚನಂತೆಯೇ ಆದಿತ್ಯವರ್ಚಸ್ಸಿನ ರಥದಮೇಲೆ ಕುಳಿತಿದ್ದನು. ಅಲಾಯುಧನ ರಥವೂ ಬಹುತೋರಣಗಳಿಂದ ಅಲಂಕೃತವಾಗಿತ್ತು. ಕರಡಿಯ ಚರ್ಮವನ್ನು ಹೊದಿಸಲಾಗಿತ್ತು. ಅವನ ಮಹಾ ರಥದ ಸುತ್ತಳತೆಯೂ ನಾಲ್ಕು ನೂರು ಮೊಳದಷ್ಟಿದ್ದಿತು. ಅದಕ್ಕೆ ಕಟ್ಟಿದ್ದ ಕುದುರೆಗಳೂ ಕೂಡ ಆನೆಗಳಂತೆ ಮಹಾದೇಹವುಳ್ಳದ್ದಾಗಿದ್ದವು, ಶೀಘ್ರವಾಗಿದ್ದವು ಮತ್ತು ಕತ್ತೆಗಳಂತೆ ಕಿರುಚಿತ್ತಿದ್ದವು. ಕಟ್ಟಿದ್ದ ಅಂತಹ ನೂರು ಮಹಾಕಾಯ ಕುದುರೆಗಳಿಗೆ ರಕ್ತಮಾಂಸಗಳೇ ಭೋಜನವಾಗಿದ್ದವು. ಅವನ ರಥನಿರ್ಘೋಷವೂ ಮಹಾಮೇಘಗಳ ಗರ್ಜನೆಯಂತಿದ್ದಿತು. ಅವನ ಮಹಾಚಾಪವೂ ದೃಢಮೌರ್ವಿಯಿಂದ ಕೂಡಿದ್ದು ಬಲವತ್ತರವಾಗಿದ್ದಿತು. ಅವನ ಬಾಣಗಳು ಕೂಡ ರಥದ ಅಚ್ಚುಮರದಷ್ಟು ದಪ್ಪನಾಗಿದ್ದವು, ರುಕ್ಮಪುಂಖಗಳಾಗಿದ್ದವು. ಶಿಲಾಶಿತಗಳಾಗಿದ್ದವು. ಘಟೋತ್ಕಚನಂತೆ ಅವನೂ ಕೂಡ ಮಹಾಬಾಹು ವೀರನಾಗಿದ್ದನು. ಗುಳ್ಳೆನರಿಗಳ ಸಮೂಹಗಳಿಂದ ರಕ್ಷಿಸಲ್ಪಟ್ಟಿದ್ದ ಅವನ ಧ್ವಜವೂ ಕೂಡ ಜ್ವಲನದಲ್ಲಿ ಸೂರ್ಯನ ಸಮಾನವಾಗಿದ್ದಿತು. ಅವನ ರೂಪವೂ ಸಹ ಘಟೋತ್ಕಚನ ರೂಪದಂತೆ ಅತ್ಯಂತ ಕಾಂತಿಯುಕ್ತವಾಗಿತ್ತು. ಮುಖವು ವ್ಯಾಕುಲಗೊಂಡಿತ್ತು. ಥಳಥಳಿಸುವ ಅಂಗದಗಳನ್ನು ಧರಿಸಿದ್ದ, ಬೆಳಗುತ್ತಿರುವ ಕಿರೀಟ ಮಾಲೆಗಳನ್ನು ಧರಿಸಿದ್ದ, ತಲೆಯ ರುಮಾಲಿನಲ್ಲಿಯೇ ಕತ್ತಿಯನ್ನು ಕಟ್ಟಿಕೊಂಡಿದ್ದ ಅವನು ಗದೆ-ಭುಷಂಡಿ-ಮುಸಲ-ಹಲ-ಬತ್ತಳಿಕೆ ಮತ್ತು ಆನೆಗಳ ಗಾತ್ರದ ಕಲ್ಲುಬಂಡೆಗಳನ್ನು ಹೊಂದಿದ್ದನು. ಅಗ್ನಿಸಮಾನ ತೇಜಸ್ಸಿನಿಂದ ಬೆಳಗುತ್ತಿದ್ದ ರಥದಲ್ಲಿ ಕುಳಿತು ಅವನು ಪಾಂಡವ ಸೇನೆಯನ್ನು ಓಡಿಸುತ್ತಾ ರಣದಲ್ಲಿ ಸಂಚರಿಸುತ್ತಿರಲು ಅಂತರಿಕ್ಷದಲ್ಲಿ ಮಿಂಚಿನಿಂದ ಕೂಡಿದ ಮೇಘದಂತೆ ಪ್ರಕಾಶಿಸಿದನು. ಆ ಎಲ್ಲ ನರೇಂದ್ರಪ್ರಮುಖರೂ ಪಾಂಡವ ಯೋಧ ವೀರರೂ ಕೂಡ ಮಹಾಬಲದಿಂದ, ಕವಚ-ಗುರಾಣಿಗಳೊಡನೆ ಹರ್ಷಾನ್ವಿತರಾಗಿ ಅವನನ್ನು ಸುತ್ತುವರೆದು ಯುದ್ಧಮಾಡತೊಡಗಿದರು.

ಯುದ್ಧದಲ್ಲಿ ಭೀಮಕರ್ಮಿಯಾದ ಅವನು ಬಂದುದನ್ನು ನೋಡಿ ಕೌರವರಲ್ಲಿ ಮಹಾ ಹರ್ಷವುಂಟಾಯಿತು. ಸಾಗರವನ್ನು ದಾಟಲು ಬಯಸಿದ ದೋಣಿಯಿಲ್ಲದವರಿಗೆ ದೋಣಿಯು ಸಿಕ್ಕಿದರೆ ಹೇಗೋ ಹಾಗೆ ದುರ್ಯೋಧನನೇ ಮೊದಲಾದ ಕೌರವ ಮಕ್ಕಳಿಗೆ ಪರಮ ಸಂತಸವಾಯಿತು. ತಮಗೆ ಪುನರ್ಜನ್ಮವು ಬಂದಿತೆಂದು ತಿಳಿದು ಪಾರ್ಥಿವರು ರಾಕ್ಷಸೇಂದ್ರ ಅಲಾಯುಧನನ್ನು ಸ್ವಾಗತಿಸಿ ಗೌರವಿಸಿದರು. ಕರ್ಣ-ರಾಕ್ಷಸರ ನಡುವೆ ನಡೆಯುತ್ತಿದ್ದ ಆ ಅಮಾನುಷ, ಭಯಂಕರ, ನೋಡಲು ದಾರುಣವಾಗಿದ್ದ ಯುದ್ಧವನ್ನು ರಾಜರೊಂದಿಗೆ ಪಾಂಚಾಲರು ವಿಸ್ಮಯದಿಂದ ನೋಡುತ್ತಿದ್ದರು. ಹಾಗೆಯೇ ಕೌರವರೂ ಕೂಡ, ದ್ರೋಣ-ದ್ರೌಣಿ-ಕೃಪಾದಿಗಳು ಅಲ್ಲಲ್ಲಿಯೇ ಗಾಬರಿಯಿಂದ “ಅವನು ಇನ್ನಿಲ್ಲ!” ಎಂದು ಕೂಗಿಕೊಳ್ಳುತ್ತಿದ್ದರು. ರಣಾಂಗಣದಲ್ಲಿ ಹೈಡಿಂಬನ ಆ ಕರ್ಮವನ್ನು ನೋಡಿ ಸಂಭ್ರಾಂತರಾಧ ಅವರೆಲ್ಲರೂ ನಿರಾಶೆಯಿಂದ ಉದ್ವಿಗ್ನರಾಗಿದ್ದರು. ಕರ್ಣನು ಜೀವಿತವಾಗಿರುವನೋ ಇಲ್ಲವೋ ಎಂದು ಕೌರವ ಸೇನೆಯು ನಿರಾಶೆಗೊಳ್ಳಲು, ಕರ್ಣನು ಪರಮ ಆರ್ತಸ್ಥಿತಿಯಲ್ಲಿದ್ದುದನ್ನು ಕಂಡು  ದುರ್ಯೋಧನನು ರಾಕ್ಷಸೇಂದ್ರ ಅಲಾಯುಧನನ್ನು ಕರೆದು ಹೇಳಿದನು: “ಹೈಡಿಂಬಿಯೊಡನೆ ಯುದ್ಧಮಾಡುತ್ತಿರುವ ಈ ವೈಕರ್ತನ ಕರ್ಣನು ಯುದ್ಧದಲ್ಲಿ ಮಾಡಬೇಕಾಗಿರುವ ಎಲ್ಲ ಮಹಾಕಾರ್ಯಗಳನ್ನೂ ಮಾಡುತ್ತಿದ್ದಾನೆ. ಆದರೆ ಆನೆಯು ಮರಗಳನ್ನು ಕಿತ್ತು ಬಿಸಾಡುವಂತೆ ಭೈಮಸೇನಿಯ ನಾನಾಶಸ್ತ್ರಗಳಿಂದ ಹತರಾಗುತ್ತಿರುವ ಶೂರ ಪಾರ್ಥಿವರನ್ನು ನೋಡು! ಆದುದರಿಂದಲೇ ಈ ರಾಜರ ಮಧ್ಯದಲ್ಲಿ ಸಮರದಲ್ಲಿ ಅವನನ್ನು ನಿನ್ನ ಪಾಲಿಗೆ ನಾನು ಮಾಡಿದ್ದೇನೆ. ನನ್ನ ಅನುಮತಿಯಂತೆ ಈ ಪಾಪಿ ಘಟೋತ್ಕಚನು ಮಾಯಬಲವನ್ನು ಆಶ್ರಯಿಸಿ ವೈಕರ್ತನ ಕರ್ಣನನ್ನು ಸಂಹರಿಸುವ ಮೊದಲೇ, ವಿಕ್ರಮದಿಂದ ಅವನನ್ನು ಸಂಹರಿಸು!”

ರಾಜನು ಹೀಗೆ ಹೇಳಲು, ಹಾಗೆಯೇ ಆಗಲೆಂದು ಹೇಳಿ ಆ ತೀವ್ರವಿಕ್ರಮಿ ಮಹಾಬಾಹುವು ಘಟೋತ್ಕಚನ ಮೇಲೆರಗಿದನು. ಆಗ ಭೈಮಸೇನಿಯೂ ಕೂಡ ಕರ್ಣನನ್ನು ಬಿಟ್ಟು ಬರುತ್ತಿದ್ದ ಶತ್ರುವನ್ನು ಎದುರಿಸಿ ಮಾರ್ಗಣಗಳಿಂದ ಮರ್ದಿಸತೊಡಗಿದನು. ಆ ಇಬ್ಬರು ಕ್ರುದ್ಧ ರಾಕ್ಷಸೇಂದ್ರರ ನಡುವೆ ಕಾನನದಲ್ಲಿ ಹೆಣ್ಣಾನೆಯ ಸಲುವಾಗಿ ಮದಿಸಿದ ಸಲಗಗಳ ಮಧ್ಯೆ ನಡೆಯುವಂತೆ ಯುದ್ಧವು ನಡೆಯಿತು. ರಾಕ್ಷಸನಿಂದ ವಿಮುಕ್ತನಾದ ರಥಿಗಳಲ್ಲಿ ಶ್ರೇಷ್ಠ ಕರ್ಣನಾದರೋ ಆದಿತ್ಯವರ್ಚಸ ರಥದಿಂದ ಭೀಮಸೇನನನ್ನು ಆಕ್ರಮಣಿಸಿದನು. ಅವನು ಬರುತ್ತಿರುವುದನ್ನು ಅನಾದರಿಸಿ, ಹೋರಿಯನ್ನು ಸಿಂಹವು ಹೇಗೋ ಹಾಗೆ ಸಮರದಲ್ಲಿ ಘಟೋತ್ಕಚನು ಅಲಾಯುಧನಿಂದ ಮುತ್ತಿಗೆಹಾಕಲ್ಪಟ್ಟದುದನ್ನು ನೋಡಿ ಪ್ರಹರಿಗಳಲ್ಲಿ ಶ್ರೇಷ್ಠ ಭೀಮನು ಅಲಾಯುಧನ ರಥದ ಕಡೆಗೆ ಶರೌಘಗಳ ರಾಶಿಯನ್ನು ಸುರಿಸಿದನು. ಅವನು ತನ್ನ ಕಡೆ ಬರುತ್ತಿರುವುದನ್ನು ನೋಡಿ ಅಲಾಯುಧನು ಘಟೋತ್ಕಚನನ್ನು ಬಿಟ್ಟು ಭೀಮಸೇನನನ್ನು ಆಹ್ವಾನಿಸಿದನು. ಆ ರಾಕ್ಷಸಾಂತಕನು ಅವನ ಬಳಿಸಾರಿ ಗಣಗಳೊಂದಿಗೆ ಆ ರಾಕ್ಷಸೇಂದ್ರನನ್ನು ಶರವರ್ಷಗಳಿಂದ ಮುಚ್ಚಿದನು. ಹಾಗೆಯೇ ಅರಿಂದಮ ಅಲಾಯುಧನೂ ಕೂಡ ಶಿಲಾಧೌತ ಜಿಹ್ಮಗಗಳನ್ನು ಕೌಂತೇಯನ ಮೇಲೆ ಪುನಃ ಪುನಃ ಸುರಿಸಿದನು. ಹಾಗೆಯೇ ಜಯೈಷಿ ರಾಕ್ಷಸರೆಲ್ಲರೂ ಭೀಮಸೇನನನ್ನು ಆಕ್ರಮಣಿಸಿ ನಾನಾ ಪ್ರಹಾರಗಳಿಂದ ಭೀಮನನ್ನು ಎದುರಿಸಿ ಯುದ್ಧ ಮಾಡಿದರು.

ಪ್ರಹರಿಸಲ್ಪಡುತ್ತಿದ್ದ ಬಲಿ ಮಹಾಬಲಿ ಭೀಮಸೇನನು ಅವರೆಲ್ಲರನ್ನೂ ಐದೈದು ಶಿತ ಶರಗಳಿಂದ ಹೊಡೆದನು. ಭೀಮಸೇನನಿಂದ ವಧಿಸಲ್ಪಡುತ್ತಿದ್ದ ಆ ಖರಯೋನಿಯ ರಾಕ್ಷಸರು ತುಮುಲ ಕೂಗನ್ನು ಕೂಗುತ್ತಾ ಹತ್ತು ದಿಕ್ಕುಗಳಲ್ಲಿ ಓಡಿ ಹೋದರು. ಅವರನ್ನು ಪೀಡಿಸುತ್ತಿರುವ ಮಹಾಬಲ ಭೀಮನನ್ನು ನೋಡಿ ರಾಕ್ಷಸ ಅಲಾಯುಧನು ವೇಗದಿಂದ ಶರಗಳನ್ನು ಸುರಿಸುತ್ತಾ ಆಕ್ರಮಣಿಸಿದನು. ಭೀಮಸೇನನು ಅವನನ್ನು ತೀಕ್ಷ್ಣ ಅಗ್ರಭಾಗಗಳುಳ್ಳ ಬಾಣಗಳಿಂದ ಹೊಡೆದನು. ಅಲಾಯುಧನಾದರೋ ಭೀಮನ ಆ ವಿಶಿಖ ಬಾಣಗಳಲ್ಲಿ ಕೆಲವನ್ನು ತುಂಡರಿಸಿದನು. ಇನ್ನು ಕೆಲವನ್ನು ಶೀಘ್ರವಾಗಿ ಕೈಯಿಂದಲೇ ಹಿಡಿದನು. ಆ ರಾಕ್ಷಸೇಂದ್ರನನ್ನು ನೋಡಿ ಭೀಮಪರಾಕ್ರಮಿ ಭೀಮನು ವಜ್ರಪಾತದಂತೆ ವೇಗದಿಂದ ಗದೆಯನ್ನು ಅವನ ಮೇಲೆ ಎಸೆದನು. ಜ್ವಾಲೆಗಳಿಂದ ಸುತ್ತುವರೆದು ವೇಗದಿಂದ ಮೇಲೆ ಬೀಳುತ್ತಿರುವ ಗದೆಯನ್ನು ತನ್ನ ಗದೆಯಿಂದ ಹೊಡೆಯಲು ಅದು ಪುನಃ ಭೀಮನ ಕಡೆಯೇ ರಭಸದಿಂದ ಹೊರಟುಹೋಯಿತು. ಅನಂತರ ರಾಕ್ಷಸೇಂದ್ರನನ್ನು ಕೌಂತೇಯನು ಶರವರ್ಷಗಳಿಂದ ಮುಚ್ಚಿದನು. ಅವುಗಳನ್ನು ಕೂಡ ರಾಕ್ಷಸನು ನಿಶಿತ ಶರಗಳಿಂದ ನಿರರ್ಥಕಗೊಳಿಸಿದನು. ಭೀಮರೂಪಿ ಆ ರಾಕ್ಷಸ ಸೈನಿಕರೆಲ್ಲರು ಕೂಡ ರಾಕ್ಷಸೇಂದ್ರನ ಶಾಸನದಂತೆ ರಥಕುಂಜರಗಳನ್ನು ಸದೆಬಡಿದರು. ರಾಕ್ಷಸರಿಂದ ಪೀಡಿತ ಪಾಂಚಾರಲು, ಸೃಂಜಯರು, ಕುದುರೆಗಳು ಮತ್ತು ಮಹಾ ಆನೆಗಳಿಗೆ ಅಲ್ಲಿ ಶಾಂತಿಯೆನ್ನುವುದೇ ಇರಲಿಲ್ಲ.

ನಡೆಯುತ್ತಿರುವ ಆ ಮಹಾಘೋರ ಯುದ್ಧವನ್ನು ನೋಡಿ ಪುರುಷಶ್ರೇಷ್ಠ ಕೃಷ್ಣನು ಧನಂಜಯನಿಗೆ ಈ ಮಾತನ್ನಾಡಿದನು. “ಮಹಾಬಾಹೋ! ಭೀಮನು ರಾಕ್ಷಸೇಂದ್ರನ ವಶನಾಗಿರುವುದನ್ನು ನೋಡು. ಅವನಿರುವಲ್ಲಿಗೆ ನೀನು ಹೋಗು. ವಿಚಾರಮಾಡಬೇಡ! ಧೃಷ್ಟದ್ಯುಮ್ನ, ಶಿಖಂಡೀ, ಯುಧಾಮನ್ಯು, ಉತ್ತಮೌಜಸರು ಮಹಾರಥ ದ್ರೌಪದೇಯರೊಂದಿಗೆ ಕರ್ಣನನ್ನು ಎದುರಿಸಿ ಹೋಗಲಿ. ನಕುಲ, ಸಹದೇವ, ಮತ್ತು ವೀರ್ಯವಾನ್ ಯುಯುಧಾನರು ನಿನ್ನ ಶಾಸನದಂತೆ ಇತರ ರಾಕ್ಷಸರನ್ನು ಸಂಹರಿಸಲಿ! ಮಹಾ ಭಯವುಂಟಾಗಿರುವ ಈ ಸಮಯದಲ್ಲಿ ನೀನು ದ್ರೋಣನ ನಾಯಕತ್ವದಲ್ಲಿರುವ ಈ ಸೇನೆಯನ್ನು ತಡೆದು ನಿಲ್ಲಿಸು!”

ಕೃಷ್ಣನು ಹೀಗೆ ಹೇಳಲು ಅವನ ಆದೇಶದಂತೆ ಮಹಾರಥರು ರಣದಲ್ಲಿ ಕರ್ಣನ ಬಳಿ ಮತ್ತು ಇತರರು ರಾಕ್ಷಸರ ಕಡೆ ಹೋದರು. ಆಗ ಪ್ರತಾಪವಾನ್ ರಾಕ್ಷಸೇಂದ್ರನು ಪೂರ್ಣವಾಗಿ ಸೆಳೆದು ಬಿಟ್ಟ ಸರ್ಪಗಳ ವಿಷಕ್ಕೆ ಸಮಾನ ಶರಗಳಿಂದ ಭೀಮನ ಧನುಸ್ಸನ್ನು ಕತ್ತರಿಸಿದನು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿಯೇ ಆ ಮಹಾಬಲನು ಹರಿತ ಬಾಣಗಳಿಂದ ರಣದಲ್ಲಿ ಭೀಮಸೇನನ ಕುದುರೆಗಳನ್ನೂ, ಸಾರಥಿಯನ್ನೂ ಸಂಹರಿಸಿದನು. ಹತಾಶ್ವನೂ ಹತಸಾರಥಿಯೂ ಆದ ಭೀಮನು ರಥದಿಂದ ಇಳಿದು ಭಾರ ಘೋರ ಗದೆಯನ್ನು ಅವನ ಮೇಲೆ ಎಸೆದು ಗರ್ಜಿಸಿದನು. ನಿರ್ಘೋಷದೊಂದಿಗೆ ತನ್ನ ಮೇಲೆ ಬೀಳುತ್ತಿದ್ದ ಆ ಮಹಾಗದೆಯನ್ನು ರಾಕ್ಷಸನು ಘೋರ ಗದೆಯಿಂದ ಹೊಡೆದು ಗರ್ಜಿಸಿದನು. ಭಯವನ್ನುಂಟುಮಾಡುವ ರಾಕ್ಷಸೇಂದ್ರನ ಆ ಘೋರ ಕರ್ಮವನ್ನು ನೋಡಿ ಸಂತೋಷಗೊಂಡ ಭೀಮಸೇನನು ಹಿಂದಿರುಗಿದ ತನ್ನ ಗದೆಯನ್ನು ಗ್ರಹಣಮಾಡಿದನು. ಗದೆಗಳ ಪ್ರಹಾರ ಮತ್ತು ಪ್ರತಿಪ್ರಹಾರಗಳಿಂಧ ಭುವನವನ್ನೇ ಕಂಪಿಸುವಂತಿದ್ದ ಆ ನರ-ರಾಕ್ಷಸರ ತುಮುಲಯುದ್ಧವು ಜೋರಾಗಿ ನಡೆಯಿತು. ಅವರಿಬ್ಬರೂ ಗದೆಗಳನ್ನು ತೊರೆದು ಮತ್ತೆ ಅನ್ಯೋನ್ಯರನ್ನು ಸಂಹರಿಸುವ ಸಲುವಾಗಿ ಒಬ್ಬರು ಇನ್ನೊಬ್ಬರನ್ನು ಮುಷ್ಟಿಗಳಿಂದ ಗುದ್ದಿ ಯುದ್ಧಮಾಡತೊಡಗಿದರು. ಅನಂತರ ಆ ಅಮರ್ಷಣರು ರಥಚಕ್ರಗಳಿಂದಲೂ, ನೊಗಗಳಿಂದಲೂ, ಅಚ್ಚುಮರಗಳಿಂದಲೂ, ಪೀಠಗಳಿಂದಲೂ, ಯುದ್ಧೋಪಯೋಗೀ ಸಾಮಗ್ರಿಗಳಿಂದಲು ಮತ್ತು ಸಿಕ್ಕಿದ ವಸ್ತುಗಳಿಂದ ಪರಸ್ಪರರನ್ನು ಪ್ರಹರಿಸತೊಡಗಿದರು. ಅವರಿಬ್ಬರೂ ರಕ್ತವನ್ನು ಸುರಿಸುತ್ತಾ ಪರಸ್ಪರರನ್ನು ಪುನಃ ಪುನಃ ಸೆಳೆದಾಡುತ್ತಾ ಮದಿಸಿದ ಸಲಗಗಳಂತೆ ಹೋರಾಡಿದರು. ಅದನ್ನು ನೋಡಿದ ಪಾಂಡವರ ಹಿತನಿರತ ಹೃಷೀಕೇಶನು ಭೀಮಸೇನನನ್ನು ರಕ್ಷಿಸುವುದಕ್ಕಾಗಿ ಹೈಡಿಂಬನನ್ನು ಪ್ರಚೋದಿಸಿದನು.

ಘಟೋತ್ಕಚನಿಂದ ಅಲಾಯುಧನ ವಧೆ

ಹತ್ತಿರದಲ್ಲಿಯೇ ರಾಕ್ಷಸನ ಹಿಡಿತಕ್ಕೆ ಸಿಲುಕಿದ್ದ ಭೀಮನನ್ನು ತೋರಿಸುತ್ತಾ ವಾಸುದೇವನು ಘಟೋತ್ಕಚನಿಗೆ ಈ ಮಾತನ್ನಾಡಿದನು: “ಮಹಾಬಾಹೋ! ನೀನೂ ಮತ್ತು ಸರ್ವ ಸೈನ್ಯಗಳೂ ನೋಡುತ್ತಿರುವಂತೆ ಹತ್ತಿರದಲ್ಲಿಯೇ ರಾಕ್ಷಸನ ಹಿಡಿತಕ್ಕೆ ಸಿಲುಕಿರುವ ಭೀಮನನ್ನು ನೋಡು! ನೀನು ಕರ್ಣನನ್ನು ಬಿಟ್ಟು ರಾಕ್ಷಸೇಂದ್ರ ಅಲಾಯುಧನನ್ನು ಬೇಗನೇ ಕೊಲ್ಲು! ಅನಂತರ ಕರ್ಣನನ್ನು ವಧಿಸಬಲ್ಲೆ!”

ವೀರ್ಯವಾನ ಘಟೋತ್ಕಚನು ವಾರ್ಷ್ಣೇಯನ ಮಾತನ್ನು ಕೇಳಿ ಕರ್ಣನನ್ನು ಬಿಟ್ಟು ಬಕನ ಸಹೋದರ ರಾಕ್ಷಸೇಂದ್ರನೊಡನೆ ಯುದ್ಧಮಾಡತೊಡಗಿದನು. ಆ ರಾತ್ರಿ ಆ ಇಬ್ಬರು ರಾಕ್ಷಸರ ನಡುವೆ ತುಮುಲ ಯುದ್ಧವು ನಡೆಯಿತು. ಭಯಂಕರರಾಗಿ ಕಾಣುತ್ತಿದ್ದ, ಧನುಸ್ಸುಗಳನ್ನು ಕೈಯಲ್ಲಿ ಹಿಡಿದು ವೇಗದಿಂದ ಆಕ್ರಮಣಿಸುತ್ತಿದ್ದ  ಅಲಾಯುಧನ ರಾಕ್ಷಸ ಶೂರ ಯೋಧರನ್ನು ಕ್ರುದ್ಧನಾಗಿ ಆಯುಧವನ್ನು ಎತ್ತಿ ಹಿಡಿದಿದ್ದ ಮಹಾರಥ ಯುಯುಧಾನ ಮತ್ತು ನಕುಲ ಸಹದೇವರು ನಿಶಿತ ಶರಗಳಿಂದ ತುಂಡರಿಸಿದರು. ಕಿರೀಟಿ ಬೀಭತ್ಸುವು ಎಲ್ಲ ಕಡೆ ಶರಗಳನ್ನು ಎರಚುತ್ತಾ ಎಲ್ಲ ಕ್ಷತ್ರಿಯರ್ಷಭರನ್ನೂ ಪಲಾಯನಗೊಳಿಸಿದನು. ಕರ್ಣನೂ ಕೂಡ ಧೃಷ್ಟದ್ಯುಮ್ನ, ಶಿಖಂಡಿಗಳೇ ಮೊದಲಾದ ಪಾಂಚಾಲ ಮಹಾರಥರನ್ನೂ ಪಾರ್ಥಿವರನ್ನೂ ಪಲಾಯನಗೊಳಿಸಿದನು. ಅವರು ಹಾಗೆ ವಧಿಸಲ್ಪಡುತ್ತಿರುವುದನ್ನು ನೋಡಿದ ಭೀಮನು ತ್ವರೆಮಾಡಿ ಬಂದು ರಣದಲ್ಲಿ ಕರ್ಣನನ್ನು ವಿಶಿಖಗಳಿಂದ ಮುಚ್ಚಿದನು. ಆಗ ರಾಕ್ಷಸರನ್ನು ಸಂಹರಿಸಿ ನಕುಲ-ಸಹದೇವರೂ, ಸಾತ್ಯಕಿಯೂ ಸೂತಜನಿದ್ದಲ್ಲಿಗೆ ಬಂದರು. ಅವರು ಕರ್ಣನೊಡನೆಯೂ, ಪಾಂಚಾಲರು ದ್ರೋಣನೊಡನೆಯೂ ಯುದ್ಧಮಾಡತೊಡಗಿದರು.

ಸಂಕ್ರುದ್ಧ ಅಲಾಯುಧನಾದರೋ ಅತಿದೊಡ್ಡ ಪರಿಘದಿಂದ ಅರಿಂದಮ ಘಟೋತ್ಕಚನ ನೆತ್ತಿಯ ಮೇಲೆ ಹೊಡೆಯತೊಡಗಿದನು. ಅವನ ಆ ಪ್ರಹಾರದಿಂದ ಭೈಮಸೇನಿಯು ಕ್ಷಣಕಾಲ ಮೂರ್ಚಿತನಾದರೂ ಆ ವೀರ್ಯವಾನನು ಸ್ವಲ್ಪಹೊತ್ತಿನಲ್ಲಿಯೇ ಚೇತರಿಸಿಕೊಂಡನು. ಆಗ ಪ್ರಜ್ವಲಿಸುತ್ತಿರುವ ಅಗ್ನಿಗೆ ಸಮಾನ ನೂರುಘಂಟೆಗಳಿಂದ ಅಲಂಕೃತ ಕಾಂಚನ ಭೂಷಣ ಗದೆಯನ್ನು ಸಮರದಲ್ಲಿ ಅವನ ಮೇಲೆ ಎಸೆದನು. ಭೀಮಕರ್ಮಿಯಿಂದ ವೇಗವಾಗಿ ಎಸೆಯಲ್ಪಟ್ಟ ಆ ಗದೆಯು ಮಹಾಧ್ವನಿಯೊಂದಿಗೆ ಕುದುರೆಗಳನ್ನೂ, ಸಾರಥಿಯನ್ನೂ ಮತ್ತು ರಥವನ್ನೂ ಪುಡಿಪುಡಿಮಾಡಿತು. ಕುದುರೆ, ರಥಚಕ್ರ, ರಥದ ಅಚ್ಚುಗಳು ಮುರಿದುಹೋಗಲು, ಧ್ವಜ ಮತ್ತು ಮೂಕಿಗಳು ಚೂರು ಚೂರಾಗಿ ಬೀಳಲು ಅಲಾಯುಧನು ರಾಕ್ಷಸೀ ಮಾಯೆಯನ್ನು ಬಳಸಿ ತಕ್ಷಣವೇ ರಥದಿಂದ ಮೇಲೇರಿದನು. ಅವನು ಮಾಯೆಯನ್ನು ಬಳಸಿ ಬಹಳ ರಕ್ತವನ್ನು ಸುರಿಸಿದನು. ಆ ರಾತ್ರಿಯ ಆಕಾಶವು ಮಿಂಚಿನಿಂದ ಬೆಳಗುತ್ತಿತ್ತು. ಆಗ ಗುಡುಗು ಮಿಂಚುಗಳೂ, ಸಿಡಿಲುಗಳೂ ಬಿದ್ದವು. ಆ ಮಹಾಯುದ್ಧದಲ್ಲಿ ಜೋರಾಗಿ ಚಟ ಚಟಾ ಶಬ್ಧವು ಕೇಳಿಬರುತ್ತಿತ್ತು. ರಾಕ್ಷಸನಿಂದ ನಿರ್ಮಿಸಲ್ಪಟ್ಟಿದ್ದ ಆ ರಾಕ್ಷಸೀ ಮಾಯೆಯನ್ನು ನೋಡಿ ಹೈಡಿಂಬನು ಮೇಲೆ ಹಾರಿ ತನ್ನದೇ ಮಾಯೆಯಿಂದ ಆ ಮಾಯೆಯನ್ನು ನಾಶಗೊಳಿಸಿದನು.

ತನ್ನ ಮಾಯೆಯನ್ನು ಮಾಯೆಯಿಂದಲೇ ನಾಶಗೊಳಿಸಿದುದನ್ನು ನೋಡಿ ಮಾಯಾವೀ ಅಲಾಯುಧನು ಘಟೋತ್ಕಚನ ಮೇಲೆ ಕಲ್ಲಿನ ತುಮುಲ ಮಳೆಯನ್ನು ಸುರಿಸಿದನು. ವೀರ್ಯವಾನ್ ಘಟೋತ್ಕಚನು ಆ ಘೋರ ಕಲ್ಲಿನ ಮಳೆಯನ್ನು ದಿಕ್ಕುಗಳಲ್ಲಿ ಶರವರ್ಷವನ್ನು ಸುರಿಸಿ ವಿಧ್ವಂಸಗೊಳಿಸಿದನು. ಅದೊಂದು ಅದ್ಭುತವಾಗಿತ್ತು. ಆಗ ಅವರಿಬ್ಬರು ಅನ್ಯೋನ್ಯರ ಮೇಲೆ ನಾನಾ ಪ್ರಹರಣಗಳನ್ನು - ಕಬ್ಬಿಣದ ಹಾರೆ, ಪರಿಘ, ಶೂಲ, ಗದೆ, ಮುಸಲ, ಮುದ್ಗರ, ಪಿನಾಕ, ಕರವಾಲ, ತೋಮರ, ಪ್ರಾಸಕಂಪನ, ನಾರಚ, ಹರಿತ ಭಲ್ಲ, ಬಾಣ, ಚಕ್ರ, ಪರಶು, ಅಯೋಗುಡ, ಭಿಂಡಿಪಾಲ, ಗೋಶೀಷ, ಉಲೂಖ, ಉತ್ಪಾಟ ಸುರಿಸುತ್ತಾ, ಮತ್ತು ಮಹಾಶಾಖಗಳಿಂದ ಕೂಡಿದ್ದ ಶಮೀ, ಪೀಲು, ಕದಂಬ, ಸಂಪಿಗೆ, ಇಂಗುದ, ಬದರೀ, ಸುಪುಷ್ಪಿತ ಪಲಾಶ, ಅರಿಮೇದ, ಹಲಸು, ನ್ಯಗ್ರೋದ, ಪಿಪ್ಪಲ ಮೊದಲಾದ ವೃಕ್ಷಗಳಿಂದ ಅನ್ಯೋನ್ಯರನ್ನು ಹೊಡೆದು ಸೆಣೆಸಾಡಿದರು. ನಾನಾವಿಧ ಗರಿಕಾದಿ ಧಾತುಗಳಿಂದ ಸಮಾಕುಲ ಪರ್ವತ ಶಿಖರಗಳನ್ನೇ ಕಿತ್ತು ಪರಸ್ಪರರೊಡನೆ ಯುದ್ಧಮಾಡಿದರು. ಅವುಗಳ ಶಬ್ಧವು ವಜ್ರಗಳನ್ನು ಒಡೆಯುತ್ತಿರುವರೋ ಎನ್ನುವಂತೆ ಮಹತ್ತರವಾಗಿತ್ತು. ಅವರಿಬ್ಬರ ನಡುವಿನ ಯುದ್ಧವು ಹಿಂದೆ ಕಪೀಂದ್ರ ಸುಗ್ರೀವ-ವಾಲಿಗಳ ನಡುವೆ ನಡೆದಂತೆ ಘೋರವಾಗಿದ್ದಿತು.

ವಿವಿಧ ಘೋರ ಆಯುಧಗಳಿಂದ ಮತ್ತು ವಿಶಿಖಗಳಿಂದ ಯುದ್ಧಮಾಡುತ್ತಿದ್ದ ಅವರಿಬ್ಬರು ಹರಿತ ಖಡ್ಗಗಳನ್ನು ಹಿಡಿದು ಅನ್ಯೋನ್ಯರನ್ನು ಹೊಡೆಯತೊಡಗಿದರು. ಅವರಿಬ್ಬರು ಮಹಬಲರೂ ಅನ್ಯೋನ್ಯರ ತಲೆಗೂದಲನ್ನು ಹಿಡಿದು ಎಳೆಯುತ್ತಿದ್ದರು, ಅವರಿಬ್ಬರು ಮಹಾಕಾಯ ಮಹಾಬಲರೂ ಭುಜಗಳನ್ನು ಹಿಡಿದು ಸೆಣೆಸಾಡಿದರು. ಜೋರಾಗಿ ಮಳೆಸುರಿಸುವ ಮಹಾ ಮೋಡಗಳಂತೆ ಅ ಇಬ್ಬರು ಮಹಾಕಾಯಗಳಿಂದ ಬೆವರು ಮತ್ತು ರಕ್ತವು ಸುರಿಯುತ್ತಿತ್ತು. ಆಗ ಹೈಡಿಂಬನು ವೇಗದಿಂದ ಆ ರಾಕ್ಷಸನನ್ನು ಜೋರಾಗಿ ತಿರುಗಿಸಿ ಬಲವನ್ನುಪಯೋಗಿಸಿ ಹೊಡೆದು ಅವನ ಮಹಾ ಶಿರವನ್ನು ಕತ್ತರಿಸಿದನು. ಕುಂಡಲಗಳಿಂದ ವಿಭೂಷಿತ ಅವನ ಆ ಶಿರವನ್ನು ತುಂಡರಿಸಿ ಮಹಾಬಲ ಘಟೋತ್ಕಚನು ತುಮುಲ ಕೂಗನ್ನು ಕೂಗಿದನು. ಆ ಮಹಾಕಾಯ, ಬಕನ ದಾಯಾದಿ, ಅರಿಂದಮ ಅಲಾಯುಧನು ಹತನಾದುದನ್ನು ನೋಡಿ ಪಾಂಚಾಲರು ಮತ್ತು ಪಾಂಡವರು ಸಿಂಹನಾದಗೈದು ವಿನೋದಿಸಿದರು. ಆ ರಾಕ್ಷಸನು ಬೀಳಲು ಪಾಂಡವೇಯರು ಸಹಸ್ರಾರು ಭೇರಿಗಳನ್ನೂ, ಶಂಖಗಳನ್ನೂ ಮೊಳಗಿಸಿದರು. ಎಲ್ಲ ಕಡೆಗಳಲ್ಲಿ ದೀಪಗಳ ಸಾಲಿನಿಂದ ಬೆಳಗುತ್ತಿದ್ದ ಆ ರಾತ್ರಿಯು ಪಾಂಡವರ ವಿಜಯದಿಂದ ಇನ್ನೂ ವಿಶೇಷವಾಗಿ ಪ್ರಕಾಶವಾಗಿದ್ದಿತು. ಗತಚೇತನ ಅಲಾಯುಧನ ಆ ಶಿರವನ್ನಾದರೋ ಮಹಾಬಲ ಭೈಮಸೇನಿಯು ದುರ್ಯೋಧನನ ಎದುರು ಎಸೆದನು.

ಅಲಾಯುಧನು ಹತನಾದುದನ್ನು ನೋಡಿ ರಾಜಾ ದುರ್ಯೋಧನನು ಸೈನ್ಯಗಳೊಂದಿಗೆ ಬಹಳ ಉದ್ವಿಗ್ನನಾದನು. ಹಿಂದಿನ ಕಡುವೈರವನ್ನು ಸ್ಮರಿಸಿಕೊಂಡು ಯುದ್ಧದಲ್ಲಿ ನಾನೇ ಭೀಮಸೇನನನ್ನು ಕೊಲ್ಲುತ್ತೇನೆ ಎಂದು ಅಲಾಯುಧನು ಸ್ವಯಂ ತಾನೇ ಬಂದು ಪ್ರತಿಜ್ಞೆ ಮಾಡಿದ್ದನು. ದುರ್ಯೋಧನನು ಭೀಮಸೇನನು ಅಲಾಯುಧನಿಂದ ನಿಶ್ಚಯವಾಗಿಯೂ ಹತನಾಗುತ್ತಾನೆಂದೂ ತಾನು ಮತ್ತು ತನ್ನ ಸಹೋದರರು ಚಿರಕಾಲ ಜೀವಿಸರಬಹುದೆಂದೂ ತಿಳಿದುಕೊಂಡಿದ್ದನು. ಆದರೆ ಭೀಮಸೇನನ ಮಗನಿಂದ ಅಲಾಯುಧನು ಹತನಾದುದನ್ನು ನೋಡಿ ಅವನು ಭೀಮಸೇನನ ಪ್ರತಿಜ್ಞೆಯು ಪೂರ್ಣಗೊಳ್ಳುವುದು ಎಂದು ಅಂದುಕೊಂಡನು.

ಘಟೋತ್ಕಚವಧೆ

ಅಲಾಯುಧನನ್ನು ಸಂಹರಿಸಿ ಪ್ರಹೃಷ್ಟನಾದ ರಾಕ್ಷಸ ಘಟೋತ್ಕಚನು ವಾಹಿನಿಗಳ ಎದುರು ನಿಂತು ವಿವಿಧ ರೀತಿಗಳಲ್ಲಿ ಗರ್ಜಿಸಿದನು. ಆನೆಗಳನ್ನೂ ನಡುಗಿಸುವ ಅವನ ಆ ತುಮುಲ ಶಬ್ಧವನ್ನು ಕೇಳಿದ ಕೌರವರನ್ನು ಸುದಾರಣ ಭಯವು ಆವರಿಸಿತು. ಮಹಾಬಲ ಭೈಮಸೇನಿಯೊಂದಿಗೆ ಅಲಾಯುಧನು ಹೋರಾಡುತ್ತಿರುವುದನ್ನು ನೋಡಿ ಮಹಾಬಾಹು ಕರ್ಣನು ಪಾಂಚಾಲರನ್ನು ಆಕ್ರಮಣಿಸಿದ್ದನು. ಸಂಪೂರ್ಣವಾಗಿ ಸೆಳೆದ ಹತ್ತು ಹತ್ತು ದೃಢ ನತಪರ್ವ ಬಾಣಗಳಿಂದ ಅವನು ಧೃಷ್ಟದ್ಯುಮ್ನ-ಶಿಖಂಡಿಗಳನ್ನು ಹೊಡೆದನು. ಅನಂತರ ಪರಮ ನಾರಾಚಗಳಿಂದ ಯುಧಾಮನ್ಯು ಉತ್ತಮೌಜಸರನ್ನೂ ಹೊಡೆದು ಮಾರ್ಗಣಗಳಿಂದ ರಥೋದಾರ ಸಾತ್ಯಕಿಯನ್ನು ನಡುಗಿಸಿದನು. ಅವರುಗಳು ಕೂಡ ಅಲ್ಲಿ ಅವನ ಮೇಲೆ ಎಡ-ಬಲಗಳಲ್ಲಿ ಎಲ್ಲಕಡೆಗಳಿಂದ ಬಿಲ್ಲುಗಳನ್ನು ಮಂಡಲಾಕಾರವಾಗಿ ಸೆಳೆದು ಹೊಡೆಯುತ್ತಿರುವುದು ಕಂಡು ಬರುತ್ತಿತ್ತು. ಅವರ ಟೇಂಕಾರ ನಿರ್ಘೋಷವು ಮತ್ತು ರಥನೇಮಿಗಳ ಶಬ್ಧಗಳು ಆ ರಾತ್ರಿ ಬೇಸಗೆಯ ಕೊನೆಯಲ್ಲಿ ಮೋಡಗಳ ಶಬ್ಧದಂತೆ ಕೇಳಿಬರುತ್ತಿದ್ದವು.

ಟೇಂಕಾರ-ರಥಶಬ್ಧಗಳು ಮೇಘದ ಘರ್ಜನೆಯಂತಿದ್ದವು; ಮಂಡಲಾಕಾರವಾಗಿ ಎಳೆಯಲ್ಪಟ್ಟ ಧನುಸ್ಸುಗಳು ಕಾಮನಬಿಲ್ಲುಗಳಂತಿದ್ದವು; ಬಾಣಗಳ ಸಮೂಹಗಳು ಮಳೆಯಂತೆ ಸುರಿಯುತ್ತಿದ್ದವು; ಆ ಸಂಗ್ರಾಮವು ಹೀಗೆ ಮೇಘದಂತಾಯಿತು. ಪರ್ವತದಂತೆ ಅಚಲನಾಗಿದ್ದ, ಶೈಲದಂತೆ ಶಕ್ತಿವಂತನಾಗಿದ್ದ ಆ ವೈಕರ್ತನನು ರಣದಲ್ಲಿ ಧ್ವಂಸಮಾಡತೊಡಗಿದನು. ಆಗ ವಜ್ರಗಳಂತೆ ಬೀಳುತ್ತಿದ್ದ, ಬಂಗಾರದ ಬಣ್ಣದ ಪುಂಖಗಳುಳ್ಳ ಹರಿತ ಶರಗಳಿಂದ ಸಮರದಲ್ಲಿ ಶತ್ರುಗಳನ್ನು ನಿನ್ನ ಮಗನ ಹಿತದಲ್ಲಿಯೇ ನಿರತನಾಗಿದ್ದ ವೈಕರ್ತನನು ನಾಶಗೊಳಿಸಿದನು. ವೈಕರ್ತನನ ಕೃತ್ಯದಿಂದಾಗಿ ಕೆಲವರ ಬಾವುಟಗಳು ಹರಿದುಹೋದವು, ಧ್ವಜಗಳು ತುಂಡಾದವು. ಕೆಲವರ ಶರೀರಗಳು ತುಂಡಾಗಿ ನೋವಿನಿಂದ ತೊಳಲಾಡುತ್ತಿದ್ದರು. ಕೆಲವರ ಸಾರಥಿಗಳು ಸತ್ತಿದ್ದರು; ಕೆಲವರ ಕುದುರೆಗಳು ಸತ್ತಿದ್ದವು. ಕಾಡಲ್ಪಡುತ್ತಿದ್ದ ಆ ಪಾಂಚಾಲರ ಸೇನೆಯು ಯುಧಿಷ್ಠಿರನ ಸೇನೆಯನ್ನು ಸೇರಿಕೊಂಡಿತು.

ಅದೂ ಕೂಡ ಭಗ್ನವಾಗಿ ಓಡಿ ಹೋಗುತ್ತಿರುವುದನ್ನು ಕಂಡ ಘಟೋತ್ಕಚನು ಅತೀವ ರೋಷಗೊಂಡನು. ಕಾಂಚನರತ್ನಚಿತ್ರಿತ ಉತ್ತಮ ರಥದಲ್ಲಿ ಕುಳಿತು ಸಿಂಹದಂತೆ ಗರ್ಜಿಸಿದನು ಮತ್ತು ವೈಕರ್ತನ ಕರ್ಣನ ಬಳಿಸಾರಿ ಅವನನ್ನು ವಜ್ರದಂತಿರುವ ಪೃಷತಗಳಿಂದ ಹೊಡೆದನು. ಅವರಿಬ್ಬರೂ ಧಾರಾಕಾರವಾಗಿ ಸುರಿಸುತ್ತಿದ್ದ ಕರ್ಣಿ, ನಾರಾಚ, ಶಿಲೀಮುಖ, ನಾಲೀಕ, ದಂಡ, ವತ್ಸದಂತ, ವರಾಹಕರ್ಣ, ವಿಷಾಣಶೃಂಗ, ಕ್ಷುರಗಳು ಆಕಾಶದಲ್ಲಿ ಪ್ರತಿಧ್ವನಿಗೈಯುತ್ತಿದ್ದವು. ಧಾರಾಕಾರವಾಗಿ ಸುರಿಯುತ್ತಿದ್ದ ಆ ಬಾಣಗಳಿಂದ ಅಂತರಿಕ್ಷವು ತುಂಬಿಹೋಯಿತು. ಆಕಾಶದಲ್ಲಿ ಒಂದಕ್ಕೊಂದು ತಾಗಿ ಉರಿದು ಹಿಂದೆ ಸರಿಯುತ್ತಿದ್ದವು. ಸುವರ್ಣಪುಂಖಗಳು ಪ್ರಭೆಯಿಂದ ಪ್ರಜ್ವಲಿಸಲು ಅವು ಬಣ್ಣ ಬಣ್ಣದ ಹೂವುಗಳ ಮಾಲೆಗಳಂತೆ ತೋರುತ್ತಿದ್ದವು. ಅಪ್ರತಿಮ ಪ್ರಭಾವಗಳಲ್ಲಿ ಸರಿಸಮನಾಗಿದ್ದ ಅವರು ಉತ್ತಮ ಅಸ್ತ್ರಗಳಿಂದ ಅನ್ಯೋನ್ಯರನ್ನು ಸಂಹರಿಸಲು ಪ್ರಯತ್ನಿಸುತ್ತಿದ್ದರು. ಆ ಸಮರದಲ್ಲಿ ಉತ್ತಮ ವೀರರಾಗಿದ್ದ ಅವರಿಬ್ಬರಲ್ಲಿ ಯಾರೂ ವಿಶೇಷವೆಂದು ತೋರಿಬರಲಿಲ್ಲ. ರವಿ ಮತ್ತು ಭೀಮಸೇನರ ಮಕ್ಕಳೊಂದಿಗೆ ನಡೆಯುತ್ತಿದ್ದ ಆ ಯುದ್ಧವು ಅತೀವ ವಿಚಿತ್ರವಾಗಿದ್ದಿತು, ಅತೀವ ರೂಪವುಳ್ಳದ್ದಾಗಿತ್ತು. ಆಕಾಶದಲ್ಲಿ ಬೀಳುತ್ತಿದ್ದ ಘೋರ ಶಸ್ತ್ರಗಳ ಸಮಾಕುಲಗಳು ಆಕಾಶದಲ್ಲಿ ರಾಹು-ಆದಿತ್ಯರ ಯುದ್ಧದಂತೆ ಬೆಳಗುತ್ತಿದ್ದವು.

ಘಟೋತ್ಕಚನನ್ನು ಅತಿಶಯಿಸಲು ಸಾದ್ಯವಾಗದಾಗ ಕರ್ಣನು ಉಗ್ರ ಅಸ್ತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದನು. ಕರ್ಣನ ಆ ಅಸ್ತ್ರದಿಂದ ಕುದುರೆ ಸಾರಥಿಗಳು ಹತರಾಗಲು ರಾಕ್ಷಸ ಹೈಡಿಂಬನು ಕ್ಷಿಪ್ರವಾಗಿ ಅಂತರ್ಧಾನನಾದನು. ರಾಕ್ಷಸನು ಅಂತರ್ಧಾನನಾದುದನ್ನು ತಿಳಿದು ಕುರುಗಳೆಲ್ಲರೂ “ಕೂಟಯೋಧಿ ಈ ರಾಕ್ಷಸನು ಅದೃಶ್ಯನಾಗಿ ಸಮರದಲ್ಲಿ ಕರ್ಣನನ್ನು ಸಂಹರಿಸದೇ ಇರುವನೇ?” ಎಂದು ಜೋರಾಗಿ ಕೂಗಿಕೊಂಡರು. ಆಗ ಲಘು ಚಿತ್ರಾಸ್ತ್ರಯೋಧಿ ಕರ್ಣನು ಬಾಣಜಾಲಗಳಿಂದ ಎಲ್ಲ ದಿಕ್ಕುಗಳನ್ನೂ ತುಂಬಿಸಿದನು. ಸಾಯಕಗಳಿಂದ ಕತ್ತಲೆ ತುಂಬಿದ ಅಂತರಿಕ್ಷದಲ್ಲಿ ಯಾವ ಭೂತಗಳೂ ಸಂಚರಿಸಲಾಗುತ್ತಿರಲಿಲ್ಲ. ಹಸ್ತಲಾಘವದಿಂದ ಸೂತಪುತ್ರನು ಅಂತರಿಕ್ಷವೆಲ್ಲವನ್ನೂ ಬಾಣಗಳಿಂದ ತುಂಬುತ್ತಿರಲು ಅವನು ಬಾಣಗಳನ್ನು ತೆಗೆಯುವುದಾಗಲೀ, ಅನುಸಂಧಾನ ಮಾಡುವುದಾಗಲೀ, ಕೈಯ ಅಗ್ರಭಾಗದಿಂದ ಶಿಂಜಿನಿಯನ್ನು ಎಳೆಯುವುದಾಗಲೀ ಕಾಣುತ್ತಲೇ ಇರಲಿಲ್ಲ. ಆಗ ನಾವು ಅಂತರಿಕ್ಷದಲ್ಲಿ ರಾಕ್ಷಸನು ನಿರ್ಮಿಸಿದ ಘೋರ, ಭಯಂಕರ, ದಾರುಣ ಮಾಯೆಯನ್ನು – ಅಗ್ನಿಶಿಖೆಯಂತೆ ಉಗ್ರವಾಗಿ ದೇದೀಪ್ಯಮಾನ ಕೆಂಪುಮೋಡಗಳ ಪ್ರಕಾಶವನ್ನು ನೋಡಿದೆವು. ಅನಂತರ ಅದರಿಂದ ಮಿಂಚುಗಳು, ಮತ್ತು ಉರಿಯುತ್ತಿರುವ ಉಲ್ಕೆಗಳು ಹುಟ್ಟಿಕೊಂಡವು. ಅಲ್ಲಿಂದ ಸಹಸ್ರಾರು ದುಂದುಭಿಗಳು ಮೊಳಗುತ್ತಿರುವವೋ ಎನ್ನುವಷ್ಟು ಘೋರ ಅನ್ಯ ಘೋಷಗಳು ಹೊರಸೂಸಿದವು. ಮತ್ತೆ ಅಲ್ಲಿಂದ ರುಕ್ಮಪುಂಖಗಳ ಶಕ್ತಿಗಳು, ಪ್ರಾಸಗಳು, ಮುಸಲಗಳು, ಅನ್ಯ ಆಯುಧಗಳು, ಪರಶು, ತೈಲಧೌತಗಳು, ಖಡ್ಗಗಳು, ಮತ್ತು ಉರಿಯುತ್ತಿರುವ ಪಟ್ಟಿಶ-ತೋಮರಗಳು ಸುರಿದು ಬಿದ್ದವು. ಕಿರಣಗಳನ್ನು ಸೂಸುತ್ತಿದ್ದ ಪರಿಘಗಳು, ಲೋಹದಿಂದ ಬದ್ಧವಾದ ಬಣ್ಣ ಬಣ್ಣದ ಗದೆಗಳು, ಹರಿತವಾಗಿದ್ದ ಶೂಲಗಳು, ಬಂಗಾರದ ಪಟ್ಟಿಗಳನ್ನು ಹೊಂದಿದ್ದ ಭಾರ ಗದೆಗಳು, ಮತ್ತು ಶತಘ್ನಗಳು ಎಲ್ಲೆಡೆಯಿಂದ ಬೀಳತೊಡಗಿದವು. ಅಲ್ಲಲ್ಲಿ ಮಹಾಶಿಲೆಗಳು ಬಿದ್ದವು. ಸಹಸ್ರ ಮಿಂಚು-ಸಿಡುಲುಗಳಂತೆ ಅನೇಕ ನೂರು ಮೊನಗುಗಳುಳ್ಳ ಚಕ್ರಗಳು ಅವುಗಳಿಂದ ಹೊರಬಿದ್ದ ಜ್ವಲನ ಪ್ರಭೆಗಳು ಉದ್ಭವಿಸಿದವು. ಪ್ರಜ್ವಲಿಸುತ್ತಾ ಬೀಳುತ್ತಿದ್ದ ಶಕ್ತಿ, ಪಾಷಾಣ, ಪರಶು, ಪ್ರಸ, ಖಡ್ಗ, ವಜ್ರಾಶನಿ ಮತ್ತು ಮುದ್ಗರಗಳ ವಿಶಾಲ ವೃಷ್ಟಿಯನ್ನು ನಾಶಗೊಳಿಸಲು ಕರ್ಣನ ಶರೌಘಗಳು ಅಶಕ್ತವಾದವು.

ಶರಗಳಿಂದ ಹತರಾಗಿ ಬೀಳುತ್ತಿರುವ ಕುದುರೆಗಳ, ವಜ್ರಗಳಿಂದ ಹತವಾಗಿ ಬೀಳುತ್ತಿರುವ ಆನೆಗಳ, ಶಿಲೆಗಳಿಂದ ಹತರಾಗಿ ಬೀಳುತ್ತಿರುವ ಮಹಾರಥಗಳ ಮಹಾ ನಿನಾದವುಂಟಾಯಿತು. ಅತ್ಯಂತ ಭಯಂಕರವಾದ ನಾನಾವಿಧದ ಶಸ್ತ್ರಗಳನ್ನು ಬೀಳಿಸಿ ಘಟೋತ್ಕಚನಿಂದ ಹತವಾದ ದುರ್ಯೋಧನನ ಆ ಸೇನೆಯು ಆರ್ತರೂಪದಿಂದ ಓಡುತ್ತಾ ತಿರುಗುತ್ತಿರುವುದು ಕಂಡುಬಂದಿತು. ಹಾಹಾಕಾರಮಾಡುತ್ತಾ ಅಲ್ಲಲ್ಲಿಯೇ ಸುತ್ತುವರಿಯುತ್ತಾ ವಿಷಣ್ಣರೂಪರಾಗಿ ಸಂಲೀಯರಾದ ಆ ಪುರುಷಪ್ರವೀರರು ಆರ್ಯಭಾವದಿಂದ ಪರಾಙ್ಮುಖರಾಗಲಿಲ್ಲ. ರಾಕ್ಷಸನ ಆ ಘೋರತರ ಭಯಂಕರ ಮಹಾಸ್ತ್ರಗಳಿಂದ ತುಂಬಿ ಸುರಿಯುತ್ತಿದ್ದ ವೃಷ್ಟಿಯನ್ನು ನೋಡಿ, ಪತನಗೊಳ್ಳುತ್ತಿದ್ದ ಸೇನೆಗಳನ್ನು ನೋಡಿ ಕೌರವ ಪುತ್ರರನ್ನು ಮಹಾಭಯವು ಆವರಿಸಿತು. ಬೆಂಕಿಯಂತೆ ಉರಿಯುತ್ತಿರುವ ನಾಲಿಗೆಯನ್ನು ಹೊರಚಾಚಿ ಭಯಂಕರವಾಗಿ ಕಿರುಚಿಕೊಳ್ಳುತ್ತಿರುವ ನೂರಾರು ನರಿಗಳನ್ನು ಮತ್ತು ಗರ್ಜಿಸುತ್ತಿದ್ದ ರಾಕ್ಷಸಗಣಗಳನ್ನು ನೋಡಿ ನರೇಂದ್ರಯೋಧರು ವ್ಯಥಿತರಾದರು. ಬೆಂಕಿಯಂತೆ ಉರಿಯುತ್ತಿರುವ ನಾಲಿಗೆಗಳುಳ್ಳ ಮುಖಗಳ, ತೀಕ್ಷ್ಣ ಹಲ್ಲುಗಳ, ವಿಭೀಷಣವಾಗಿ ತೋರುತ್ತಿರುವ, ಪರ್ವತಗಳಂತಹ ದೇಹವುಳ್ಳ, ಆಕಾಶವನ್ನೇರಿದ, ಶಕ್ತಿ-ವಿಷಕ್ತಗಳನ್ನು ಹಿಡಿದಿದ್ದ ರಾಕ್ಷಸರು ಮೇಘಗಳಂತೆ ಆಯುಧಗಳ ಮಳೆಯನ್ನು ಸುರಿಸುತ್ತಿದ್ದರು. ಅವರು ಅವ್ಯಾಹತವಾಗಿ ಸುರಿಸುತ್ತಿದ್ದ ಬಾಣ, ಶಕ್ತಿ, ಶೂಲ, ಗದೆ, ಪ್ರಜ್ವಲಿಸುತ್ತಿದ್ದ ಉಗ್ರ ಪರಿಘಗಳು, ವಜ್ರ, ಪಿನಾಕ, ವಿದ್ಯುತ್, ಪ್ರಹಾರ, ಚಕ್ರಗಳು, ಶತಘ್ನಗಳು, ಗುದ್ದಲಿ, ಭುಶುಂಡ, ಅಶ್ಮಗುಡ, ಶತಘ್ನ, ಸ್ಥೂಣ, ಕಾರ್ಷ್ಣ, ಉಕ್ಕಿನ ಪಟ್ಟಿಗಳಿಂದ ನಿನ್ನ ಮಗನ ಸೇನೆಯು ಚದುರಿ ಅವರನ್ನು ರೌದ್ರ ಸಂಕಟವು ಆವರಿಸಿತು. ಕೆಳಗೆ ಉದುರುತ್ತಿದ್ದ ಕಲ್ಲುಬಂಡೆಗಳಿಂದಾಗಿ ಅನೇಕ ಶೂರರ ತಲೆಗಳು ಒಡೆದು ಹೋಗಿ, ಅಂಗಾಂಗಗಳು ಮುರಿದು, ಕರುಳುಗಳು ಹೊರಬಂದು ಅಲ್ಲಿ ಉರುಳಿದರು. ಕುದುರೆಗಳು ಆನೆಗಳು ಮುರಿದು ಬಿದ್ದವು. ರಥಗಳು ಪುಡಿಪುಡಿಯಾದವು.

ಹೀಗೆ ಘಟೋತ್ಕಚನ ಮಾಯೆಯಿಂದ ಸೃಷ್ಟಿಸಲ್ಪಟ್ಟ ಮಹಾ ಶಸ್ತ್ರವೃಷ್ಟಿಯನ್ನು ಸುರಿಸುತ್ತಿದ್ದ ಆ ಘೋರರೂಪೀ ಯಾತುಧಾನರು ಭೂಮಿಯ ಮೇಲೆ ಭೀತರಾಗಿ ಯಾಚಿಸುತ್ತಿದ್ದವರನ್ನೂ ಬಿಡಲಿಲ್ಲ. ಕಾಲನಿಂದಲೇ ನಿಯೋಜಿತಗೊಂಡ ಆ ಕುರುವೀರವಿನಾಶಕ ಕ್ಷತ್ರಿಯಾಂತಕ ಘೋರ ಯುದ್ಧದಲ್ಲಿ ಭಗ್ನರಾದ ಎಲ್ಲ ಕೌರವರೂ ಚೀತ್ಕಾರಮಾಡುತ್ತಾ ಓಡಿಹೋದರು. “ಪಲಾಯನಮಾಡಿರಿ! ಕೌರವರು ಉಳಿಯುವುದಿಲ್ಲ! ಪಾಂಡವರಿಗೋಸ್ಕರವಾಗಿ ಇಂದ್ರನೂಸೇರಿ ದೇವತೆಗಳು ಸಂಹರಿಸುತ್ತಿದ್ದಾರೆ!” ಹೀಗೆ ಧ್ವಂಸಗೊಳಿಸಲ್ಪಡುತ್ತಿದ್ದ ಭಾರತರಿಗೆ ಅಲ್ಲಿ ಯಾವುದೇ ಆಸರೆಯೂ ಇರಲಿಲ್ಲ. ನಡೆಯುತ್ತಿರುವ ಆ ಆಕ್ರಂದನದ ತುಮುಲದಲ್ಲಿ ಕುರುಗಳ ಸೈನ್ಯವು ಮುಳುಗಿಹೋಗಿರಲು, ಕತ್ತಲೆಯಲ್ಲಿ ಸೇನೆಗಳ ಭಾಗಗಳಲ್ಲಿ ಏನಾಗುತ್ತಿದ್ದೆಂದು ಕೌರವರಿಗೂ ಅಥವಾ ಇತರರಿಗೂ ಅರ್ಥವೇ ಆಗುತ್ತಿರಲಿಲ್ಲ.

ಕೊನೆಯಿಲ್ಲದಂತಿದ್ದ ಆ ಘೋರರೂಪ ಯುದ್ಧದಲ್ಲಿ ಎಲ್ಲ ದಿಕ್ಕುಗಳಲ್ಲಿ ಶೂನ್ಯದೃಷ್ಟಿಯನ್ನಿಟ್ಟು ಸೇನೆಗಳು ಓಡಿಹೋಗುತ್ತಿರಲು ಅಲ್ಲಿ ಆ ಶಸ್ತ್ರವೃಷ್ಟಿಯನ್ನು ಎದೆಯಿಟ್ಟು ತಡೆಯುತ್ತಿದ್ದ ಕರ್ಣನೊಬ್ಬನೇ ಕಾಣುತ್ತಿದ್ದನು. ಸೂತಪುತ್ರನು ಆಗ ಬಾಣಗಳಿಂದ ಅಂತರಿಕ್ಷವನ್ನು ಮುಚ್ಚಿ, ರಾಕ್ಷಸನ ದಿವ್ಯ ಮಾಯೆಯೊಡನೆ ಯುದ್ಧಮಾಡಿದನು. ದುಷ್ಕರ ಆರ್ಯಕರ್ಮವನ್ನು ಮಾಡುತ್ತಿದ್ದ ಲಜ್ಜಾಶೀಲ ಸೂತಪುತ್ರನು ರಣದಲ್ಲಿ ಮೋಹಕ್ಕೊಳಗಾಗಲಿಲ್ಲ. ರಾಕ್ಷಸನ ವಿಜಯವನ್ನು ನೋಡಿ ಭಯಗೊಂಡಿದ್ದರೂ ಸೈಂಧವ-ಬಾಹ್ಲೀಕರೆಲ್ಲರೂ ಅಭೀತನಾಗಿದ್ದ ಕರ್ಣನನ್ನು ನೋಡಿ ಅವನನ್ನು ಪ್ರಶಂಸಿಸಿದರು. ಆಗ ಘಟೋತ್ಕಚನು ಬಿಟ್ಟ ಚಕ್ರಯುಕ್ತ ಶತಘ್ನಿಯು ಒಂದೇ ಬಾರಿ ಕರ್ಣನ ನಾಲ್ಕೂ ಕುದುರೆಗಳನ್ನೂ ಸಂಹರಿಸಿತು. ಅವುಗಳು ಅಸುನೀಗಿ ನಾಲಿಗೆ-ಕಣ್ಣು ಮತ್ತು ಹಲ್ಲುಗಳಯನ್ನು ಹೊರಚಾಚಿ ಕೆಳಗೆ ಬಿದ್ದವು. ಕುದುರೆಗಳು ಹತಗೊಳ್ಳಲು ರಥದಿಂದ ಕೆಳಗಿಳಿದು ಕುರುಗಳು ಓಡಿಹೋಗುತ್ತಿರುವುದನ್ನೂ ತನ್ನ ದಿವ್ಯ ಅಸ್ತ್ರಗಳು ಮಾಯೆಯಿಂದ ನಾಶವಾಗುತ್ತಿರುವುದನ್ನೂ ನೋಡಿ ಈಗ ತಾನು ಏನು ಮಾಡಬೇಕೆಂದು ಮನಸ್ಸಿನಲ್ಲಿಯೇ ಕರ್ಣನು ಚಿಂತಿಸಿದನು. ಘೋರರೂಪದ ಆ ಮಾಯೆಯನ್ನೂ ಕರ್ಣನನ್ನೂ ನೋಡಿ ಕುರುಗಳೆಲ್ಲರೂ ಒಕ್ಕೊರಳಿನಿಂದ ಹೇಳಿದರು: “ಕರ್ಣ! ಬೇಗನೇ ಇಂದು ಶಕ್ತಿಯಿಂದ ರಾಕ್ಷಸನನ್ನು ಸಂಹರಿಸು! ಇವನು ಧಾರ್ತರಾಷ್ಟ್ರರನ್ನು ಉಳಿಸುವುದಿಲ್ಲ! ಭೀಮ-ಪಾರ್ಥರು ಇದಕ್ಕಿಂತಲೂ ಹೆಚ್ಚಿನದನ್ನೇನೂ ಮಾಡಲಾರರು! ಈ ರಾತ್ರಿಯಲ್ಲಿ ಸುಡುತ್ತಿರುವ ರಾಕ್ಷಸನನ್ನು ವಧಿಸು! ಈ ಘೋರರೂಪೀ ಸಂಗ್ರಾಮದಿಂದ ನಮಗೆ ಮುಕ್ತಿಯನ್ನು ನೀಡುವವನೇ ಮುಂದೆ ಸಮರದಲ್ಲಿ ಪಾರ್ಥನೊಂದಿಗೆ ಹೋರಾಡುತ್ತಾನೆ. ಆದುದರಿಂದ ಇಂದ್ರದತ್ತ ಶಕ್ತ್ಯಾಯುಧದಿಂದ ಘೋರರೂಪೀ ರಾಕ್ಶಸನನ್ನು ಕೂಡಲೇ ಸಂಹರಿಸು! ಕರ್ಣ! ಇಂದ್ರಸದೃಶ ಕೌರವರೆಲ್ಲರೂ ತಮ್ಮ ಯೋಧರೊಂದಿಗೆ ಈ ರಾತ್ರಿಯೇ ನಾಶಹೊಂದದಿರಲಿ!”

ಆ ರಾತ್ರಿಯಲ್ಲಿ ವಧಿಸುತ್ತಿರುವ ರಾಕ್ಷಸನನ್ನೂ, ನಾಶಗೊಳ್ಳುತ್ತಿರುವ ಸೇನೆಯನ್ನೂ ನೋಡಿ, ಕೌರವರ ಮಹಾ ನಿನಾದವನ್ನೂ ಕೇಳಿ ಕರ್ಣನು ಶಕ್ತಿಯನ್ನು ಪ್ರಯೋಗಿಸುವ ಮನಸ್ಸು ಮಾಡಿದನು. ರಣದಲ್ಲಿ ಮಾಡುತ್ತಿದ್ದ ಪ್ರತಿಘಾತವನ್ನು ಸಹಿಸಿಕೊಳ್ಳಲಾರದೇ ಸಿಂಹದಂತೆ ಕ್ರುದ್ಧನಾದ ಆ ಅಮರ್ಷಿಯು ಅವನನ್ನು ವಧಿಸಲು ಬಯಸಿ ಶ್ರೇಷ್ಠ ಸಹಿಸಲಸಾದ್ಯ ವೈಜಯಂತೀ ಶಕ್ತಿಯನ್ನು ತೆಗೆದುಕೊಂಡನು. ವರ್ಷಗಟ್ಟಲೆ ಪೂಜಿಸಿ ಇಟ್ಟುಕೊಂಡಿದ್ದ, ಫಲ್ಗುನನ ವಧೆಗೆಂದು ಮೀಸಲಾಗಿಟ್ಟಿದ್ದ, ಶ್ರೇಷ್ಠ ಕುಂಡಲಗಳ ವಿನಿಮಯದಲ್ಲಿ ಶಕ್ರನು ಸೂತಪುತ್ರನಿಗೆ ಪ್ರದಾನಿಸಿದ್ದ ಆ ಶಕ್ತಿಯನ್ನು ತೆಗೆದುಕೊಂಡನು. ಉರಿಯುತ್ತಿರುವ ನಾಲಿಗೆಗಳುಳ್ಳ, ಅಂತಕನ ಪಾಶದಂತಿದ್ದ, ಕಪ್ಪಾಗಿದ್ದ, ಮೃತ್ಯುವಿನ ತಂಗಿಯಂತಿದ್ದ, ಉಲ್ಕೆಯಂತೆ ಪ್ರಜ್ವಲಿಸುತ್ತಿದ್ದ ಆ ಶಕ್ತಿಯನ್ನು ವೈಕರ್ತನ ಕರ್ಣನು ರಾಕ್ಷಸನಿಗಾಗಿ ಹಿಡಿದನು. ಶತ್ರುಗಳ ಶರೀರಗಳನ್ನು ನಾಶಗೊಳಿಸಬಲ್ಲ ಆ ಉತ್ತಮ ಶಕ್ತಿಯು ಸೌತಿಯ ಬಾಹುವಿನಲ್ಲಿ ಪ್ರಜ್ವಲಿಸುತ್ತಿರುವುದನ್ನು ನೋಡಿ ಭೀತ ರಾಕ್ಷಸನು ತನ್ನನ್ನು ವಿಂಧ್ಯಪರ್ವತದಷ್ಟು ದೊಡ್ಡದನ್ನಾಗಿಸಿಕೊಂಡು ಓಡ ತೊಡಗಿದನು. ಕರ್ಣನ ಬಾಹುಗಳ ಮಧ್ಯೆ ಇದ್ದ ಆ ಶಕ್ತಿಯನ್ನು ನೋಡಿ ಅಂತರಿಕ್ಷದಲ್ಲಿ ತುಮುಲ ಶಬ್ಧವು ಕೇಳಿಬಂದಿತು. ಭಿರುಗಾಳಿ ಬೀಸತೊಡಗಿತು. ಆರ್ಭಟದಿಂದ ಸಿಡಿಲು ಭೂಮಿಗೆ ಬಡಿಯಿತು. ಆ ಶಕ್ತಿಯು ಮಾಯೆಯನ್ನು ಸುಟ್ಟು ಭಸ್ಮಮಾಡಿ ಪ್ರಜ್ವಲಿಸುತ್ತಾ ರಾಕ್ಷಸನ ಹೃದಯವನ್ನು ಗಾಢವಾಗಿ ಸೀಳಿ ಬೆಳಗುತ್ತಿರುವ ರಾತ್ರಿಯಲ್ಲಿ ಮೇಲಕ್ಕೆ ಹಾರಿ ನಕ್ಷತ್ರಗಳ ಮಧ್ಯೆ ಅಂತರ್ಧಾನವಾಯಿತು. ವಿಚಿತ್ರವಾಗಿ ವಿವಿಧ – ದಿವ್ಯ, ಮಾನುಷ, ಮತ್ತು ರಾಕ್ಷಸ – ಶಸ್ತ್ರಸಮೂಹಗಳೊಂದಿಗೆ ಯುದ್ಧಮಾಡಿ ಆ ವೀರ ಘಟೋತ್ಕಚನು ಶಕ್ರನ ಶಕ್ತಿಗೆ ಸೋತು ವಿವಿಧ ಭೈರವ ನಾದಗೈಯುತ್ತಾ ಪ್ರಾಣವನ್ನು ತೊರೆದನು.

ಸಾಯುವ ಈ ಕ್ಷಣದಲ್ಲಿ ಕೂಡ ಘಟೋತ್ಕಚನು ಶತ್ರುಗಳನ್ನು ಧ್ವಂಸಮಾಡಲೋಸುಗ ಇನ್ನೊಂದು ವಿಚಿತ್ರವೂ ಆಶ್ಚರ್ಯಕರವೂ ಆದ ಕರ್ಮವನ್ನು ಮಾಡಿದನು. ಶಕ್ತಿಯು ಶರೀರವನ್ನು ಭೇದಿಸುವ ಸಮಯದಲ್ಲಿ ಅವನು ಮೇಘ ಪರ್ವತದಂತೆ ದೊಡ್ಡದಾಗಿ ಬೆಳೆದನು. ಆ ಮಹಾರೂಪವನ್ನು ತಳೆದ ರಾಕ್ಷಸೇಂದ್ರ ಘಟೋತ್ಕಚನು ದೇಹವು ತುಂಡಾಗಿ, ತಲೆಕೆಳಗಾಗಿ, ನಾಲಗೆ ಚಾಚಿ  ಅಂತರಿಕ್ಷದಿಂದ ಭೂಮಿಯ ಮೇಲೆ ಬಿದ್ದನು. ಆ ಭೀಮಕರ್ಮಿ ಭೈಮಸೇನಿಯು ತನ್ನ ರೂಪವನ್ನು ಇನ್ನೂ ಭಯಂಕರವಾಗಿ ಮಾಡಿಕೊಂಡು ಕೌರವ ಸೇನೆಯ ಒಂದು ಭಾಗವನ್ನೇ ನಾಶಗೊಳಿಸಿ ಕೌರವರನ್ನು ಭಯಪಡಿಸುತ್ತಾ ಕೆಳಕ್ಕೆ ಬಿದ್ದನು. ಆಗ ಸಿಂಹನಾದಗಳೊಂದಿಗೆ ಭೇರಿ, ಶಂಕ, ಮುರಜ ಮತ್ತು ಅನಕಗಳು ಮೊಳಗಿದವು. ಮಾಯೆಯು ಸುಟ್ಟು ರಾಕ್ಷಸನು ಹತನಾದುದನ್ನು ನೋಡಿ ಕೌರವೇಯರು ಹರ್ಷದಿಂದ ನಿನಾದಗೈದರು. ಅನಂತರ ಕರ್ಣನು ವೃತ್ರವಧೆಯನಂತರ ಶಕ್ರನು ಮರುದ್ಗಣಗಳಿಂದ ಹೇಗೋ ಹಾಗೆ ಕುರುಗಳಿಂದ ಪ್ರಶಂಸಿಸಲ್ಪಟ್ಟು ನಿನ್ನ ಪುತ್ರನ ರಥವನ್ನೇರಿ ಸಂತೋಷದಿಂದ ತನ್ನ ಸೈನ್ಯವನ್ನು ಸೇರಿದನು.

ಘಟೋತ್ಕಚನ ವಧೆಯಿಂದ ಕೃಷ್ಣನ ಹರ್ಷ

ಕುಸಿದುಬಿದ್ದಿರುವ ಪರ್ವತದಂತೆ ಹತನಾಗಿ ಬಿದ್ದಿರುವ ಹೈಡಿಂಬನನ್ನು ನೋಡಿ ಪಾಂಡವರೆಲ್ಲರೂ ಕಣ್ಣೀರುತುಂಬಿದವರಾಗಿ ದೀನಮನಸ್ಕರಾದರು. ವಾಸುದೇವನಾದರೋ ಮಹಾ ಹರ್ಷದಿಂದ ಕುಣಿದಾಡಿದನು. ಗೆದ್ದನೋ ಎನ್ನುವಂತೆ ಸಿಂಹನಾದವನ್ನು ಮಾಡಿದನು. ಫಲ್ಗುನನನ್ನು ಬಿಗಿದಪ್ಪಿ ಗಟ್ಟಿಯಾಗಿ ಕೂಗಿದನು. ಇದಲ್ಲದೇ ಅವನು ಕುದುರೆಗಳ ಕಡಿವಾಣಗಳನ್ನೆಳೆದು ನಿಲ್ಲಿಸಿ ಜೋರಾಗಿ ಗರ್ಜಿಸುತ್ತಾ ಚಂಡಮಾರುತದಿಂದ ಬುಡಮೇಲಾದ ವೃಕ್ಷವು ಗಾಳಿಯಲ್ಲಿ ತೂರಿಕೊಂಡು ಓಲಾಡುವಂತೆ ಹರ್ಷೋದ್ವೇಗದಿಂದ ತೂರಾಡಿದನು. ಆಗ ಪುನಃ ಪಾರ್ಥನನ್ನು ಬಿಗಿದಪ್ಪಿ ಜೋರಾಗಿ ಅವನ ಬೆನ್ನು ತಟ್ಟಿದನು. ಅಚ್ಯುತನು ಪುನಃ ರಥವನ್ನೇರಿ ಜೋರಾಗಿ ಗರ್ಜಿಸಿದನು. ಮಹಾಬಲ ವಾಸುದೇವನು ಅತ್ಯಂತ ಸಂತೋಷಗೊಂಡಿದ್ದಾನೆ ಎಂದು ತಿಳಿದ ಅರ್ಜುನನು ಅಸಮಾಧಾನ ಮನಸ್ಕನಾಗಿ ಹೇಳಿದನು:

“ಮಧುಸೂದನ! ಇಂದು ಹೈಡಿಂಬಿಯ ವಧೆಯಿಂದಾಗಿ ಅತೀವ ಶೋಕಸ್ಥಾನದಲ್ಲಿರಬೇಕಾಗಿದ್ದ ನೀನು ಈ ರೀತಿ ಅತೀವ ಹರ್ಷಿತನಾಗಿರುವುದು ಸಮಯೋಚಿತವಾಗಿಲ್ಲ. ಘಟೋತ್ಕಚನು ಹತನಾದುದನ್ನು ಕಂಡು ನಮ್ಮ ಸೇನೆಗಳು ಪಲಾಯನಮಾಡುತ್ತಿದ್ದಾರೆ. ಹೈಡಿಂಬಿಯ ಪತನದಿಂದಾಗಿ ನಾವೂ ಕೂಡ ಅತ್ಯಂತ ದುಃಖಿತರಾಗಿದ್ದೇವೆ. ಆದರೆ ಜನಾರ್ದನ! ನೀನು ಹೀಗೆ ಸಂತೋಷಪಡುತ್ತಿರುವುದಕ್ಕೆ ಅತ್ಯಲ್ಪ ಕಾರಣವು ಇದ್ದಿರಲಾರದು. ಕೇಳುತ್ತಿರುವ ನನಗೆ ಸತ್ಯವನ್ನು ವಿವರಿಸು. ಇದು ಅತಿ ರಹಸ್ಯವಲ್ಲದಿದ್ದರೆ ನನಗೆ ಹೇಳು. ಇಂದು ನಿನ್ನ ಧೈರ್ಯದ ವಿಕಾರ ರೂಪಕ್ಕೆ ಕಾರಣವೇನೆಂದು ಹೇಳು! ಸಮುದ್ರವು ಬತ್ತಿಹೋದರೆ ಅಥವಾ ಮೇರು ಪರ್ವತವು ಸರಿದರೆ ಎಷ್ಟು ಆಶ್ಚರ್ಯವಾಗುವುದೋ ಅಷ್ಟೇ ಆಶ್ಚರ್ಯವು ನಿನ್ನ ಈ ಕೃತ್ಯವನ್ನು ಕಂಡು ನನಗಾಗುತ್ತಿದೆ!”

ವಾಸುದೇವನು ಹೇಳಿದನು: “ಧನಂಜಯ! ನನಗೆ ಅತ್ಯಂತ ಹರ್ಷವುಂಟಾಗಿರುವುದು ಏಕೆನ್ನೆವುದನ್ನು ನೀನು ಕೇಳು. ಸದ್ಯ ನನ್ನ ಮನಸ್ಸಿಗೆ ಉತ್ತಮ ಅತೀವ ಸಮಾಧಾನವುಂಟಾಗಿದೆ. ಘಟೋತ್ಕಚನ ಮೇಲೆ ಈ ಶಕ್ತಿಯನ್ನು ಪ್ರಯೋಗಿಸಿದ ಕರ್ಣನು ಹತನಾದನೆಂದೇ ಸದ್ಯ ನೀನು ಭಾವಿಸಬಹುದು. ಕಾರ್ತಿಕೇಯನಿಗೆ ಸಮಾನನಾಗಿ ಶಕ್ತಿಯನ್ನು ಕೈಯಲ್ಲಿ ಹಿಡಿದು ಯುದ್ಧಕ್ಕೆ ಬರುವ ಕರ್ಣನನ್ನು ಎದುರಿಸಿ ನಿಲ್ಲುವ ಪುರುಷನು ಈ ಲೋಕದಲ್ಲಿ ಯಾವನಿದ್ದಾನೆ? ಒಳ್ಳೆಯದಾಯಿತು ಅವನು ಕವಚವನ್ನು ಕಳೆದುಕೊಂಡನು. ಒಳ್ಳೆಯದಾಯಿತು ಅವನು ಕುಂಡಲಗಳನ್ನು ಕಳೆದುಕೊಂಡನು. ಒಳ್ಳೆಯದಾಯಿತು ಅವನು ಘಟೋತ್ಕಚನ ಮೇಲೆ ಪ್ರಯೋಗಿಸಿ ತನ್ನ ಶಕ್ತಿಯನ್ನೂ ವಿರಸನಗೊಳಿಸಿಕೊಂಡನು. ಒಂದು ವೇಳೆ ಅವನು ಕವಚ ಮತ್ತು ಕುಂಡಲಗಳ ಸಹಿತನಾಗಿಯೇ ಇದ್ದಿದ್ದರೆ ದೇವತೆಗಳೊಂದಿಗೆ ಮೂರು ಲೋಕಗಳನ್ನೂ ಬಲಶಾಲಿ ಕರ್ಣನು ಜಯಿಸುತ್ತಿದ್ದನು. ವಾಸವನಾಗಲೀ, ಕುಬೇರನಾಗಲೀ, ಜಲೇಶ್ವರ ವರುಣನಾಗಲೀ, ಯಮನಾಗಲೀ ಅಂತಹ ಕರ್ಣನನ್ನು ರಣದಲ್ಲಿ ಎದುರಿಸಲು ಶಕ್ತರಾಗುತ್ತಿರಲಿಲ್ಲ. ಅವುಗಳಿಂದ ಯುಕ್ತನಾಗಿದ್ದ ಆ ನರರ್ಷಭನನ್ನು ಗಾಂಡಿವವನ್ನು ಧರಿಸಿದ ನೀನಾದರೋ ಅಥವಾ ಸುದರ್ಶನ ಚಕ್ರವನ್ನು ಹಿಡಿದ ನಾನಾದರೋ ರಣದಲ್ಲಿ ಜಯಿಸಲು ಶಕ್ತರಾಗಿದ್ದಿರಲಿಲ್ಲ. ನಿನ್ನ ಹಿತಕ್ಕಾಗಿಯೇ ಪರಪುರಂಜಯ ಶಕ್ರನು ಮಾಯೆಯಿಂದ ಅವನ ಕವಚಗಳನ್ನು ಅಪಹರಿಸಿದನು. ಕರ್ಣನು ಕವಚವನ್ನೂ ಶುಭ್ರ ಕುಂಡಲಗಳನ್ನೂ ಕತ್ತರಿಸಿ ತೆಗೆದು ಇಂದ್ರನಿಗೆ ಕೊಟ್ಟಿದುದರಿಂದಲೇ ವೈಕರ್ತನನೆನಿಸಿಕೊಂಡನು. ಕೋಪಗೊಂಡ ವಿಷಸರ್ಪವು ಮಂತ್ರತೇಜಸ್ಸಿನಿಂದ ಸ್ತಭ್ದವಾಗುವಂತೆ, ಜ್ವಾಲೆಗಳು ಆರಿಹೋದ ಅಗ್ನಿಯಂತೆ ಇಂದು ಕರ್ಣನು ನಿಸ್ತೇಜನಾಗಿ ಕಾಣುತ್ತಿದ್ದಾನೆ.

“ಎಂದಿನಿಂದ ದಿವ್ಯ ಕುಂಡಲ ಮತ್ತು ಕವಚಗಳ ವಿನಿಮಯವಾಗಿ ಘಟೋತ್ಕಚನ ಮೇಲೆ ಪ್ರಯೋಗಿಸಿದ ಈ ಶಕ್ತಿಯನ್ನು ಮಹಾತ್ಮ ವಾಸವನಿಂದ ಪಡೆದನೋ ಅಂದಿನಿಂದ ಸತತವಾಗಿ ನೀನು ರಣದಲ್ಲಿ ಹತನಾದಂತೆಯೇ ಎಂದು ಕರ್ಣನು ಯೋಚಿಸುತ್ತಿದ್ದನು. ಹೀಗೆ ಆ ಶಕ್ತಿಯನ್ನು ಕಳೆದುಕೊಂಡರೂ ನಿನ್ನನ್ನು ಬಿಟ್ಟು ಬೇರೆ ಯಾರೂ ಅವನನ್ನು ಸಂಹರಿಸಲು ಶಕ್ಯರಲ್ಲ. ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ಬ್ರಹ್ಮಣ್ಯನೂ, ಸತ್ಯವಾದಿಯೂ, ತಪಸ್ವಿಯೂ, ನಿಯತವ್ರತನೂ, ಶತ್ರುಗಳ ಮೇಲೂ ದಯಾವಂತನಾದ ಕರ್ಣನು ವೃಷ (ಧರ್ಮಾತ್ಮ) ಎಂದೂ ಪ್ರಸಿದ್ಧನಾಗಿದ್ದಾನೆ. ಅವನು ಯುದ್ಧಕುಶಲನು. ನಿತ್ಯವೂ ಧನುಸ್ಸನ್ನು ಮೇಲಿತ್ತಿಕೊಂಡೇ ಇರತಕ್ಕವನು. ವನದಲ್ಲಿರುವ ಸಿಂಹದಂತೆ ಗರ್ಜಿಸುತ್ತಾನೆ. ಮದಿಸಿದ ಸಲಗವು ತನ್ನ ಹಿಂಡನ್ನು ಮದರಹಿತವನ್ನಾಗಿಸುವಂತೆ ಕರ್ಣನು ರಣದಲ್ಲಿ ರಥಶಾರ್ದೂಲರನ್ನು ಮದರಹಿತರನ್ನಾಗಿಸುತ್ತಾನೆ. ನಡುನೆತ್ತಿಯ ಸೂರ್ಯನನ್ನು ನಿರೀಕ್ಷಿಸಲು ಹೇಗೆ ಶಕ್ಯವಾಗುವುದಿಲ್ಲವೋ ಹಾಗೆ ಶರತ್ಕಾಲದ ಅಂತ್ಯದಲ್ಲಿ ದಿವಾಕರನ ಸಹಸ್ರ ಕಿರಣಗಳಂತೆ ರಣದಲ್ಲಿ ಶರಜಾಲಗಳನ್ನು ಪ್ರಯೋಗಿಸುವ ಕರ್ಣನನ್ನು ನಿನ್ನ ಕಡೆಯ ಮಹಾತ್ಮ ಯೋಧಮುಖ್ಯರು ನಿರೀಕ್ಷಿಸಲು ಶಕ್ಯರಾಗಿಲ್ಲ. ಬೇಸಗೆಯ ಕೊನೆಯಲ್ಲಿ ಮೋಡಗಳು ಮಳೆಗರೆಯುವಂತೆ ಬಾಣಗಳ ಮಳೆಯನ್ನು ಮತ್ತೆ ಮತ್ತೆ ಸುರಿಸುವ, ಮೋಡಗಳಂತೆ ದಿವ್ಯ ಅಸ್ತ್ರಗಳ ಮಳೆಯನ್ನು ಸುರಿಸುವ ಮೋಡರೂಪೀ ಕರ್ಣನು ಇಂದು ಶಕ್ರನಿಂದ ಪಡೆದ ಶಕ್ತಿಯನ್ನು ಕಳೆದುಕೊಂಡು ಕೇವಲ ಮನುಷ್ಯತ್ವವನ್ನು ಉಳಿಸಿಕೊಂಡಿದ್ದಾನೆ.

“ಇವನನ್ನು ವಧಿಸಲು ಒಂದೇ ಒಂದು ಅವಕಾಶವಿದೆ. ಇವನು ಅಪ್ರಮತ್ತನಾಗಿರುವ ಅವಕಾಶವನ್ನು ಬಳಸಿ ಪ್ರಮತ್ತನಾಗಿದ್ದುಕೊಂಡು ಈ ಕೆಲಸವನ್ನು ಮಾಡಬೇಕು. ರಥಚಕ್ರವು ಹುಗಿದುಹೋಗಿ ಕಷ್ಟದಲ್ಲಿರುವಾಗ, ಮೊದಲೇ ನಾನು ನೀಡುವ ಸೂಚನೆಯನ್ನು ಗಮನಿಸಿ, ನೀನು ಇವನನ್ನು ಸಂಹರಿಸಬೇಕು. ಜರಾಸಂಧ, ಚೇದಿರಾಜ, ಏಕಲವ್ಯ ಒಬ್ಬೊಬ್ಬರಾಗಿ ಈ ಎಲ್ಲರನ್ನೂ ಒಂದೊಂದು ಸಮಯದಲ್ಲಿ ಒಂದೊಂದು ಉಪಾಯವನ್ನು ಪ್ರಯೋಗಿಸಿ, ನಿನಗೋಸ್ಕರವಾಗಿ ನಾನೇ ಸಂಹರಿಸಿದ್ದೇನೆ. ಇನ್ನು ಹಿಡಿಂಬ, ಕಿರ್ಮೀರ, ಬಕರೇ ಮೊದಲಾದ ರಾಕ್ಷಸೇಂದ್ರರು ಅಲಾಯುಧ, ಮತ್ತು ಘಟೋತ್ಕಚರೂ ಕೂಡ ಬೇರೆ ಬೇರೆ ಉಪಾಯಗಳಿಂದ ಪ್ರತ್ಯೇಕ ಸಮಯಗಳಲ್ಲಿ ಹತರಾಗಿದ್ದಾರೆ.”

ಅರ್ಜುನನು ಹೇಳಿದನು: “ಜನಾರ್ದನ! ನಮಗಾಗಿ ನೀನು ಜರಾಸಂಧನೇ ಮೊದಲಾದ ಪೃಥಿವೀಪಾಲರನ್ನು ಯಾವ ಯಾವ ಉಪಾಯಗಳಿಂದ ಸಂಹರಿಸಿದೆ?”

ವಾಸುದೇವನು ಹೇಳಿದನು: “ಒಂದುವೇಳೆ ಈ ಮೊದಲೇ ಜರಾಸಂಧ, ಚೇದಿರಾಜ ಮತ್ತು ನೈಷಾದರು ಹತರಾಗಿರದಿದ್ದರೆ ಈಗ ಅವರು ನಮಗೆ ಅತಿ ಭಯಂಕರರಾಗಿರುತ್ತಿದ್ದರು. ಅವಶ್ಯವಾಗಿ ಸುಯೋಧನನು ಆ ರಥಸತ್ತಮರನ್ನು ತನ್ನ ಕಡೆಯವರನ್ನಾಗಿಯೇ ಆರಿಸಿಕೊಳ್ಳುತ್ತಿದ್ದನು. ನಮಗೆ ನಿತ್ಯವೈರಿಗಳಾಗಿದ್ದ ಅವರೂ ಕೂಡ ಕೌರವರನ್ನೇ ಸೇರಿಕೊಳ್ಳುತ್ತಿದ್ದರು. ಆ ಕೃತಾಸ್ತ್ರ, ಧೃಢಯೋಧಿ ಮಹಾತ್ಮರು ಅಮರರಂತೆ ಧಾರ್ತರಾಷ್ಟ್ರರ ಈ ಸೇನೆಯೆಲ್ಲವನ್ನೂ ರಕ್ಷಿಸುತ್ತಿದ್ದರು. ಸೂತಪುತ್ರ, ಜರಾಸಂಧ, ಚೇದಿರಾಜ ಮತ್ತು ನಿಷಾದಜರು ಸುಯೋಧನನನ್ನು ಸಮಾಶ್ರಯಿಸಿ ಈ ಪೃಥ್ವಿಯೆಲ್ಲವನ್ನೂ ಕಾಡುತ್ತಿದ್ದರು. ಉಪಾಯಗಳಿಂದಲ್ಲದೇ ದೇವತೆಗಳಿಂದಲೂ ರಣದಲ್ಲಿ ಜಯಿಸಲ್ಪಡತಕ್ಕವರಾಗಿರದ ಅವರು ನನ್ನ ಯಾವ ಯಾವ ಉಪಾಯಗಳಿಂದ ಹತರಾದರೆನ್ನುವುದನ್ನು ಕೇಳು. ಅವರಲ್ಲಿ ಒಬ್ಬೊಬ್ಬರೂ ಪ್ರತ್ಯೇಕವಾಗಿ ಸಮರದಲ್ಲಿ ಲೋಕಪಾಲರಿಂದ ರಕ್ಷಿತ ಸಮಸ್ತ ಸುರವಾಹಿನಿಯೊಂದಿಗೂ ಯುದ್ಧಮಾಡಬಲ್ಲತಕ್ಕವರಾಗಿದ್ದರು.

“ಹಿಂದೊಮ್ಮೆ ರೌಹಿಣೇಯ ಬಲರಾಮನು ಆಕ್ರಮಣಿಸಿದ್ದಾಗ ಕ್ರೋಧದಿಂದ ಜರಾಸಂಧನು ನಮ್ಮನ್ನು ವಧಿಸಲೋಸುಗ ಉಕ್ಕಿನ ತುದಿಯುಳ್ಳ ಗದೆಯನ್ನು ನಮ್ಮ ಮೇಲೆ ಎಸೆದನು. ಶಕ್ರನು ಬಿಟ್ಟ ವಜ್ರದೋಪಾದಿಯಲ್ಲಿ ಅಗ್ನಿಯಪ್ರಭೆಯುಳ್ಳ ಆ ಶಕ್ತ್ಯಾಯುಧವು ಬೈತಲೆಯಂತೆ ಆಕಾಶವನ್ನು ಸೀಳುತ್ತಾ ನಮ್ಮ ಮೇಲೆ ಬೀಳುತ್ತಿರುವುದನ್ನು ಕಂಡೆವು. ಅದು ಬೀಳುತ್ತಿರುವುದನ್ನು ನೋಡಿ ರೋಹಿಣೀನಂದನನು ಅದನ್ನು ತುಂಡರಿಸಲು ಸ್ಥೂಣಾಕರ್ಣವೆಂಬ ಅಸ್ತ್ರವನ್ನು ಪ್ರಯೋಗಿಸಿದನು. ಅಸ್ತ್ರವೇಗದಿಂದ ಪ್ರತಿಹತ ಆ ಗದೆಯು ಪರ್ವತಗಳನ್ನೇ ಕಂಪಿಸುವಂತೆ ಭೂಮಿಯನ್ನು ಸೀಳಿ ಹೊಕ್ಕಿತು. ಅಲ್ಲಿಯೇ ವಜ್ರದ ವಿಕ್ರಮವುಳ್ಳ ಘೋರ ಜರಾ ಎಂಬ ಹೆಸರಿನ ರಾಕ್ಷಸಿಯಿದ್ದಳು. ಅವಳೇ ಜರಾಸಂಧನು ಹುಟ್ಟಿದಾಗ ಅವನನ್ನು ಒಂದುಗೂಡಿಸಿದ್ದಳು. ಪ್ರತ್ಯೇಕ ಪ್ರತ್ಯೇಕ ಎರಡು ಅರ್ಧದೇಹಗಳಿಂದ ಇಬ್ಬರು ತಾಯಂದಿರಲ್ಲಿ ಹುಟ್ಟಿದ ಅವನು ಜರಾ ಎಂಬ ರಾಕ್ಷಸಿಯಿಂದ ಸೇರಿಸಲ್ಪಟ್ಟನಾಗಿರುವುದರೀಮ್ದ ಅವನು ಜರಾಸಂಧನೆನಿಸಿಕೊಂಡನು. ಅಲ್ಲಿ ಭೂಮಿಯ ಕೆಳಗೆ ವಾಸಿಸುತ್ತಿದ್ದ ಆ ರಾಕ್ಷಸಿಯು ಸುತ-ಬಾಂಧವರೊಡನೆ ಆ ಗದೆ ಮತ್ತು ಸ್ಥೂಣಕರ್ಣದ ಹೊಡೆತದಿಂದಾಗಿ ಹತಳಾದಳು. ಆ ಗದೆಯನ್ನು ಕಳೆದುಕೊಂಡ ಜರಾಸಂಧನು ಮಹಾ ಮಲ್ಲಯುದ್ಧದಲ್ಲಿ ಭೀಮಸೇನನಿಂದ ಹತನಾದುದನ್ನು ನೀನೇ ನೋಡಿದ್ದೀಯೆ. ಒಂದುವೇಳೆ ಪ್ರತಾಪವಾನ್ ಜರಾಸಂಧನು ಆ ಗದೆಯನ್ನು ಹೊಂದಿದ್ದರೆ ರಣದಲ್ಲಿ ಅವನನ್ನು ಸಂಹರಿಸಲು ಇಂದ್ರಸಮೇತ ದೇವತೆಗಳೂ ಶಕ್ತರಾಗುತ್ತಿರಲಿಲ್ಲ.

“ನಿನ್ನ ಹಿತಕ್ಕಾಗಿಯೇ ಸತ್ಯವಿಕ್ರಮ ದ್ರೋಣನು ಆಚಾರ್ಯನ ವೇಷದಲ್ಲಿ ನೈಷಾದಿ ಏಕಲವ್ಯನ ಅಂಗುಷ್ಠವನ್ನು ಅಪಹರಿಸಿದನು. ದೃಢವಿಕ್ರಮಿ ನೈಷಾದಿಯು ಅಂಗುಲಿತ್ರಾಣಗಳನ್ನು ಕಟ್ಟಿಕೊಂಡು ಇನ್ನೊಬ್ಬ ರಾಮನಂತೆಯೇ ವನಗಳಲ್ಲಿ ಸಂಚರಿಸುತ್ತಿದ್ದನು. ಅಂಗುಷ್ಠವನ್ನು ಹೊಂದಿದ್ದ ಏಕಲವ್ಯನನ್ನು ದೇವ ಮಾನವ ರಾಕ್ಷಸ ಉರಗರು ಸೇರಿಯೂ ಯುದ್ಧದಲ್ಲಿ ಜಯಿಸಲು ಎಂದೂ ಶಕ್ತರಾಗುತ್ತಿರಲಿಲ್ಲ. ಇನ್ನು ಮನುಷ್ಯ ಮಾತ್ರರು ಏನು! ಅವನನ್ನು ನೋಡಲು ಕೂಡ ಶಕ್ಯರಾಗುತ್ತಿರಲಿಲ್ಲ. ದೃಢಮುಷ್ಟಿಯಾಗಿದ್ದ ಅವನು ಹಗಲೂ ರಾತ್ರಿ ನಿತ್ಯವೂ ಶ್ರಮಿಸುತ್ತಿದ್ದನು.

“ನಿನ್ನ ಹಿತಕ್ಕಾಗಿಯೇ ಸಂಗ್ರಾಮಕ್ಕೆ ಮೊದಲೇ ನಾನು ಚೇದಿರಾಜ ಶಿಶುಪಾಲನನ್ನು ನಿನ್ನ ಪ್ರತ್ಯಕ್ಷದಲ್ಲಿಯೇ ಸಂಹರಿಸಿದೆನು. ಸಂಗ್ರಾಮದಲ್ಲಿ ಅವನನ್ನು ಕೂಡ ಗೆಲ್ಲಲು ಸುರಾಸುರರೆಲ್ಲರೂ ಅಶಕ್ಯರೇ! ಅವನ ಮತ್ತು ಅನ್ಯ ಸುರಶತ್ರುಗಳ ವಧೆಗಾಗಿಯೇ ನಾನು ಹುಟ್ಟಿದ್ದೇನೆ. ನಿನ್ನ ಸಹಾಯಕ್ಕೆಂದು ಮತ್ತು ಲೋಕಗಳ ಹಿತವನ್ನು ಬಯಸಿ ಭೀಮಸೇನನು ರಾವಣನ ಸಮಪ್ರಾಣರಾದ ಬ್ರಹ್ಮ ಯಜ್ಞವಿನಾಶಕರಾದ ಹಿಡಿಂಬ ಕಿರ್ಮೀರರನ್ನು ಉರುಳಿಸಿದನು.

“ಅದೇ ರೀತಿ ಮಯಾವಿ ಅಲಾಯುಧನೂ ಹೈಡಿಂಬಿ ಘಟೋತ್ಕಚನಿಂದ ಹತನಾದನು. ಹೈಡಿಂಬಿಯೂ ಕೂಡ ಉಪಾಯದಿಂದ ಕರ್ಣನ ಶಕ್ತಿಗೆ ಸಿಲುಕಿ ಹತನಾದನು. ಒಂದುವೇಳೆ ಕರ್ಣನು ಶಕ್ತ್ಯಾಯುಧದಿಂದ ಇವನನ್ನು ಸಂಹರಿಸದೇ ಇದ್ದಿದ್ದರೆ ಘಟೋತ್ಕಚನ ವಧೆಯು ನನ್ನಿಂದಲೇ ಆಗುತ್ತಿತ್ತು! ನಿಮಗೆ ಪ್ರಿಯವಾದುದನ್ನು ಮಾಡಲೋಸುಗ ನಾನು ಅವನನ್ನು ಈ ಹಿಂದೆಯೇ ಸಂಹರಿಸಲಿಲ್ಲ. ಈ ರಾಕ್ಷಸನು ಬ್ರಾಹ್ಮಣದ್ವೇಷೀ. ಯಜ್ಞದ್ವೇಷೀ. ಧರ್ಮವನ್ನು ಕಳೆದುಕೊಂಡವನು, ಪಾಪಾತ್ಮ. ಆದುದರಿಂದಲೇ ಅವನು ಸತ್ತನು. ಉಪಾಯದಿಂದ ಶಕ್ರನು ನೀಡಿದ ಶಕ್ತಿಯು ಕೈಬಿಡುವಂತೆ ಮಾಡಿದೆ.

“ಧರ್ಮವನ್ನು ಲೋಪಮಾಡುವವರು ನನ್ನಿಂದ ವಧಿಸಲ್ಪಡುತ್ತಾರೆಧರ್ಮಸಂಸ್ಥಾಪನೆಗಾಗಿಯೇ ನಾನು ಈ ಅಚಲ ಪ್ರತಿಜ್ಞೆಯನ್ನು ಕೈಗೊಂಡಿರುವೆನು. ಎಲ್ಲಿ ಬ್ರಹ್ಮ, ಸತ್ಯ, ದಮ, ಶೌಚ, ಧರ್ಮ, ಲಜ್ಜೆ, ಸಾತ್ವಿಕ ಸಂಪತ್ತು, ಧೃತಿ ಮತ್ತು ಕ್ಷಮೆಗಳಿರುವವೋ ಅಲ್ಲಿ ನಿತ್ಯವೂ ನಾನು ರಮಿಸುತ್ತೇನೆ. ಸತ್ಯದ ಮೇಲೆ ಆಣೆಯಿಟ್ಟು ನಿನಗೆ ಹೇಳುತ್ತಿದ್ದೇನೆ. ವೈಕರ್ತನನ ಕುರಿತು ನೀನು ದುಃಖಿಸಬೇಕಾದುದಿಲ್ಲ. ನಂತರದಲ್ಲಿ ನಾನು ನಿನಗೆ ಅವನ ವಧೋಪಾಯವನ್ನು ಉಪದೇಶಿಸುತ್ತೇನೆ. ಸುಯೋಧನನನ್ನು ಕೂಡ ರಣದಲ್ಲಿ ವೃಕೋದರನು ಸಂಹರಿಸುತ್ತಾನೆ. ಅವನ ವಧೋಪಾಯವನ್ನು ಕೂಡ ನಾನು ನಿನಗೆ ಹೇಳುತ್ತೇನೆ. ಶತ್ರುಗಳ ಸೇನೆಗಳ ಮಧ್ಯೆ ತುಮುಲ ಶಬ್ಧವು ಹೆಚ್ಚಾಗುತ್ತಲೇ ಇದೆ. ನಿನ್ನ ಸೇನೆಗಳು ಕೂಡ ದಶದಿಶಗಳಲ್ಲಿ ಓಡುತ್ತಿವೆ. ಲಕ್ಷ್ಯಭೇದನದಲ್ಲಿ ಪರಿಣಿತರಾದ ಕೌರವರು ನಿನ್ನ ಸೇನೆಯನ್ನು ಧ್ವಂಸಮಾಡುತ್ತಿದ್ದಾರೆ. ಪ್ರಹರಿಗಳಲ್ಲಿ ಶ್ರೇಷ್ಠ ದ್ರೋಣನೂ ಕೂಡ ನಮ್ಮ ಸೇನೆಯನ್ನು ಸುಡುತ್ತಿದ್ದಾನೆ!”

ಇದನ್ನು ತಿಳಿದೇ, ಆ ಅಮೋಘ ಶಕ್ತಿಯನ್ನು ಹಾಗೆ ನಿರಸನಗೊಳಿಸಬೇಕೆಂದೇ ಮಹಾಬುದ್ಧಿ ಜನಾರ್ದನನು ಮಹಾವೀರ್ಯ ರಾಕ್ಷಸೇಶ್ವರ ಘಟೋತ್ಕಚ ಮತ್ತು ಕರ್ಣರ ನಡುವೆ ದ್ವೈರಥವನ್ನು ನಿಯೋಜಿಸಿದನು. ಮಹಾರಥ ಕರ್ಣನಿಂದ ಕೃಷ್ಣನು ಪಾರ್ಥನನ್ನು ರಕ್ಷಿಸದೇ ಇದ್ದಿದ್ದರೆ ಆಗಲೇ ಕುರುಗಳು ಯಶಸ್ವಿಗಳಾಗಿಬಿಡುತ್ತಿದ್ದರು! ಯೋಗಗಳ ಈಶ್ವರ ಪ್ರಭು ಜನಾರ್ದನನಿಲ್ಲದಿದ್ದರೆ ಪಾರ್ಥನು ಈಗಾಗಲೇ ಅಶ್ವ-ಧ್ವಜ-ರಥ ಸಮೇತ ರಣಭೂಮಿಯಲ್ಲಿ ಹತನಾಗಿ ಬಿದ್ದುಹೋಗುತ್ತಿದ್ದನು! ಕೃಷ್ಟನ ಅನೇಕ ಉಪಾಯಗಳಿಂದಲೇ ಅರ್ಜುನನು ರಕ್ಷಿಸಲ್ಪಡುತ್ತಿದ್ದನು. ಕೃಷ್ಣನಿಂದ ಪಾಲಿತ ಪಾರ್ಥನು ಶತ್ರುಗಳನ್ನು ಎದುರಿಸಿ ಜಯಿಸುತ್ತಿದ್ದನು. ವಿಶೇಷ ಪ್ರಯತ್ನದಿಂದಲೇ ಕೃಷ್ಣನು ಆ ಅಮೋಘ ಶಕ್ತಿಯಿಂದ ಪಾಂಡವನನ್ನು ರಕ್ಷಿಸಿದನು. ಇಲ್ಲದಿದ್ದರೆ ಆ ಶಕ್ತಿಯು ಸಿಡಿಲು ಮರವನ್ನು ಧ್ವಂಸಮಾಡುವಂತೆ ಕೌಂತೇಯನನ್ನು ಸಂಹರಿಸುತ್ತಿತ್ತು.

ರಾತ್ರಿ ರಾತ್ರಿಯೂ ನಿತ್ಯವೂ ಕರ್ಣನು ಅರ್ಜುನನನ್ನು ಎದುರಿಸಬೇಕೆನ್ನುವುದನ್ನೇ ಸಮರ್ಥಿಸುವುದು ದುರ್ಯೋಧನ, ಶಕುನಿ, ದುಃಶಾಸನ ಮತ್ತು ಸಂಜಯರ ಕೆಲಸವಾಗಿತ್ತು. “ಕರ್ಣ! ನಾಳೆ ಎಲ್ಲ ಸೈನಿಕರನ್ನೂ ಬಿಟ್ಟು ಧನಂಜಯನನ್ನು ಸಂಹರಿಸು! ಅನಂತರ ನಾವು ಪಾಂಡು-ಪಾಂಚಾಲರನ್ನು ಸೇವಕರಂತೆ ಉಪಭೋಗಿಸುತ್ತೇವೆ! ಅಥವಾ ಪಾರ್ಥನು ಹತನಾದರೂ ಕೃಷ್ಣ ವಾರ್ಷ್ಣೇಯನು ಪಾಂಡವರಲ್ಲಿ ಮತ್ತೊಬ್ಬನನ್ನು ಇಟ್ಟುಕೊಂಡು ಯುದ್ಧವನ್ನು ಮುಂದುವರಿಸುತ್ತಾನೆಂದಾದರೆ ಕೃಷ್ಣನನ್ನೇ ಸಂಹರಿಸು! ಕೃಷ್ಣನೇ ಪಾಂಡವರ ಮೂಲ. ಪಾರ್ಥನು ಕಾಂಡ. ಇತರ ಪಾರ್ಥರು ರೆಂಬೆಗಳು. ಪಾಂಚಾಲರು ಎಲೆಗಳ ರೂಪದಲ್ಲಿದ್ದಾರೆ. ಪಾಂಡವರು ಕೃಷ್ಣನ ಆಶ್ರಯದಲ್ಲಿದ್ದಾರೆ. ಕೃಷ್ಣನನ್ನೇ ಬಲವನ್ನಾಗಿ ಪಡೆದಿದ್ದಾರೆ. ಕೃಷ್ಣನನ್ನು ಸ್ವಾಮಿಯೆಂದೇ ದೃಢವಾಗಿ ನಂಬಿದ್ದಾರೆ. ನಕ್ಷತ್ರಗಳಿಗೆ ಚಂದ್ರಮನು ಹೇಗೋ ಹಾಗೆ ಪಾಂಡವರಿಗೆ ಶ್ರೀಕೃಷ್ಣ. ಆದುದರಿಂದ ಸೂತಜ! ಎಲೆಗಳು, ರೆಂಬೆಗಳು ಮತ್ತು ಕಾಂಡವನ್ನು ಬಿಟ್ಟು ಇವೆಲ್ಲವಕ್ಕೂ ಬೇರಿನಂತಿರುವ ಕೃಷ್ಣನನ್ನೇ ಕತ್ತರಿಸಿಹಾಕಿಬಿಡು!”

ಒಂದುವೇಳೆ ಕರ್ಣನು ದಾಶಾರ್ಹ ಯಾದವನಂದನನನ್ನು ಸಂಹರಿಸಿದ್ದರೆ ಈ ಇಡೀ ವಸುಮತಿಯು ಧೃತರಾಷ್ಟ್ರನ ವಶವಾಗುತ್ತಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಯದುಕುಲಪಾಂಡವನಂದನ ಮಹಾತ್ಮ ಕೃಷ್ಣನು ಹತನಾಗಿ ಭೂಮಿಯ ಮೇಲೆ ಮಲಗಿದ್ದರೆ ಗಿರಿ-ಸಮುದ್ರ-ವನ ಸಮೇತ ವಸುಧೆಯು ಇಡೀ ಧೃತರಾಷ್ಟ್ರನ ವಶವಾಗುತ್ತಿತ್ತಲ್ಲವೇ?

ಕರ್ಣನೂ ಕೂಡ ಹಾಗೆ ಮಾಡುತ್ತೇನೆಂದು ಯೋಚಿಸಿದ್ದರೂ ಬೆಳಗಾಗುತ್ತಲೇ ಯುದ್ಧಕಾಲದಲ್ಲಿ ತ್ರಿದಶೇಶ್ವರ ಅಪ್ರಮೇಯ ಹೃಷೀಕೇಶನು ಅವನನ್ನು ಮೋಹಗೊಳಿಸುತ್ತಿದನು. ಕೇಶವನಾದರೋ ಕೌಂತೇಯ ಅರ್ಜುನನನ್ನು ಸದಾ ರಕ್ಷಿಸುತ್ತಿದ್ದನು. ಆದುದರಿಂದಲೇ ಅವನು ರಣದಲ್ಲಿ ಅರ್ಜುನನನ್ನು ಸೌತಿಯ ಎದುರು ನಿಲ್ಲಿಸುತ್ತಿರಲಿಲ್ಲ. ಪ್ರಭು ಅಚ್ಯುತನು ಆ ಅಮೋದ ಶಕ್ತಿಯನ್ನು ನಿರಸನಗೊಳಿಸಬೇಕೆಂದು ಬೇರೆ ಯಾರಾದರೂ ರಥೋದಾರರನ್ನು ಅವನ ಎದಿರು ನಿಲ್ಲಿಸುತ್ತಿದ್ದನು.

ಆ ರಾತ್ರಿ ಸಾತ್ಯಕಿಯು ಕರ್ಣನ ವಿಷಯದಲ್ಲಿ ಕೃಷ್ಣನಲ್ಲಿ ಪ್ರಶ್ನಿಸಿದನು: “ಈ ಶಕ್ತ್ಯಾಯುಧವು ಇತ್ತಾದರೂ ಅಮಿತಮಿಕ್ರಮಿ ಕರ್ಣ ಸೂತಪುತ್ರನು ಏಕೆ ಅದನ್ನು ಫಲ್ಗುನನ ಮೇಲೆ ಪ್ರಯೋಗಿಸಲಿಲ್ಲ?”

ಆಗ ವಾಸುದೇವನು ಹೇಳಿದನು: “ದುರ್ಯೋಧನನೇ ಮೊದಲಾಗಿ ದುಃಶಾಸನ, ಕರ್ಣ, ಶಕುನಿ, ಮತ್ತು ಸೈಂಧವರು ಸತತವೂ ಮಂತ್ರಾಲೋಚನೆಯನ್ನೇ ಮಾಡುತ್ತಿದ್ದರು: “ಕರ್ಣ! ಕರ್ಣ! ರಣದಲ್ಲಿ ಅಮಿತ ಪರಾಕ್ರಮವುಳ್ಳವನೇ! ವಿಜಯಿಗಳಲ್ಲಿ ಶ್ರೇಷ್ಠನೇ! ಕುಂತೀಪುತ್ರ ಧನಂಜಯ ಮಹಾರಥ ಪಾರ್ಥನ ಹೊರತಾಗಿ ಬೇರೆ ಯಾರಮೇಲೂ ಈ ಶಕ್ತಿಯನ್ನು ಪ್ರಯೋಗಿಸಬೇಡ! ವಾಸವನು ದೇವತೆಗಳಲ್ಲಿ ಹೇಗೋ ಹಾಗೆ ಅವನು ಪಾಂಡವರಲ್ಲಿ ಅತಿ ಯಶೋವಂತನು. ಅವನು ಹತನಾದರೆ ಅಗ್ನಿಯಿಲ್ಲದೇ ಸುರರು ಹೇಗೋ ಹಾಗೆ ಪಾಂಡವರೆಲ್ಲರೂ ಸೃಂಜಯರೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ!”

“ಹಾಗೇಯೇ ಆಗಬೇಕೆಂದು ಒಪ್ಪಿಕೊಂಡ ಕರ್ಣನ ಹೃದಯದಲ್ಲಿ ನಿತ್ಯವೂ ಗಾಂಡಿವಧನ್ನ್ವಿಯನ್ನು ವಧಿಸುವ ಸಂಕಲ್ಪವಿರುತ್ತಿತ್ತು. ಆ ಶಕ್ತಿಯನ್ನು ಪಾಂಡವ ಶ್ವೇತವಾಹನನ ಮೇಲೆ ಪ್ರಯೋಗಿಸಬಾರದೆಂದು ನಾನೇ ರಾಧೇಯನನ್ನು ಮೋಹಗೊಳಿಸುತ್ತಿದ್ದೆ. ಆ ಶಕ್ತಿಯೇ ಫಲ್ಗುನನ ಮೃತ್ಯು ಎಂದು ತಿಳಿದಿದ್ದ ನನಗೆ ನಿದ್ರೆಯಿರಲಿಲ್ಲ. ಮನಸ್ಸಿಗೆ ಹರ್ಷವಿರಲಿಲ್ಲ! ಆ ಶಕ್ತಿಯನ್ನು ಘಟೋತ್ಕಚನ ಮೇಲೆ ವ್ಯರ್ಥವಾದುದನ್ನು ನೋಡಿ ಧನಂಜಯನು ಮೃತ್ಯುವಿನ ತೆರೆದ ಬಾಯಿಂದ ಮುಕ್ತನಾದುದನ್ನು ಕಾಣುತ್ತಿದ್ದೇನೆ. ಯುದ್ಧದಲ್ಲಿ ಬೀಭತ್ಸುವನ್ನು ರಕ್ಷಿಸುವುದನ್ನು ಹೋಲಿಸಿದರೆ ನನಗೆ ನನ್ನ ತಂದೆಯಾಗಲೀ ತಾಯಿಯಾಗಲೀ ನೀನಾಗಲೀ ಸಹೋದರರಾಗಲೀ ನನ್ನ ಪ್ರಾಣವಾಗಲೀ ಹೆಚ್ಚೆನಿಸುವುದಿಲ್ಲ. ತ್ರೈಲೋಕ್ಯದ ಆಡಳಿತ ಅಥವಾ ಅದಕ್ಕಿಂತಲೂ ದುರ್ಲಭ ಇನ್ನೇನಾದರೂ ನನಗೆ ದೊರಕಿದರೆ ಕೂಡ ಪಾರ್ಥ ಧನಂಜಯನಿಲ್ಲದೇ ನಾನು ಅದನ್ನು ಬಯಸುವುದಿಲ್ಲ. ಆದುದರಿಂದ ಪಾರ್ಥ ಧನಂಜಯನು ಮೃತ್ಯುವಿನಿಂದ ಹೊರಬಂದುದನ್ನು ನೋಡಿ ಇಂದು ನನಗೆ ಅತ್ಯಂತ ಹರ್ಷವಾಗುತ್ತಿದೆ. ಈ ಕಾರಣದಿಂದಲೇ ನಾನು ಕರ್ಣನೊಡನೆ ಯುದ್ಧಮಾಡಲು ರಾಕ್ಷಸನನ್ನು ಕಳುಹಿಸಿದ್ದೆ. ಈ ರಾತ್ರಿಯಲ್ಲಿ ಕರ್ಣನೊಡನೆ ಯುದ್ಧಮಾಡಲು ಬೇರೆ ಯಾರಿಗೂ ಕಷ್ಟವಾಗುತ್ತಿತ್ತು!”

ಹೀಗೆ ಸತತವೂ ಧನಂಜಯನ ಹಿತದಲ್ಲಿ ಮತ್ತು ಅವನಿಗೆ ಪ್ರಿಯವಾದುದನ್ನು ಮಾಡಲು ನಿರತನಾಗಿದ್ದ ದೇವಕಿನಂದನನು ಸಾತ್ಯಕಿಗೆ ಹೇಳಿದನು.

ಪ್ರತಿರಾತ್ರಿ ಸಂಗ್ರಾಮದಿಂದ ಹಿಂದಿರುಗುತ್ತಲೇ ನಿತ್ಯವೂ ಕೌರವರೆಲ್ಲರೂ ಕರ್ಣನಿಗೆ ಅವನಿಗೆ ಇದೇ ಸಲಹೆಯನ್ನು ನೀಡುತ್ತಿದ್ದರು: “ಕರ್ಣ! ಕರ್ಣ! ನಾಳೆ ಬೆಳಗಾಗುತ್ತಲೇ ಕೇಶವನ ಮೇಲಾಗಲೀ ಅರ್ಜುನನ ಮೇಲಾಗಲೀ ಈ ಶಕ್ತಿಯನ್ನು ಪ್ರಯೋಗಿಸು!” ಎಂದು. ಆದರೆ ಪ್ರಭಾತಸಮಯದಲ್ಲಿ ದೈವಚಿತ್ತವೋ ಎಂಬಂತೆ ಕರ್ಣನ ಮತ್ತು ಅನ್ಯ ಯೋಧರ ಬುದ್ಧಿಯು ಪುನಃ ನಾಶವಾಗಿಹೋಗುತ್ತಿತ್ತು! ರಣದಲ್ಲಿ ಕರ್ಣನು ತನ್ನ ಕೈಯಿಂದ ಪಾರ್ಥನನ್ನಾಗಲೀ ದೇವಕೀಸುತ ಕೃಷ್ಣನನ್ನಾಗಲೀ ಕೊಲ್ಲದೇ ಇರುವುದಕ್ಕೆ ದೈವವೇ ಪರಮ ಕಾರಣವೆಂದು ಅನ್ನಿಸುತ್ತದೆ. ಅವನ ಕೈಯಲ್ಲಿ ಆ ಶಕ್ತಿಯು ಕಾಲರಾತ್ರಿಯಂತೆ ಸರ್ವತಾ ಜಾಗ್ರತವಾಗಿಯೇ ಇದ್ದಿತು. ಆದರೆ ದೈವದಿಂದ ಬುದ್ಧಿಯನ್ನು ಕಳೆದುಕೊಂಡ ಕರ್ಣನು ಅದನ್ನು ಪ್ರಯೋಗಿಸಲಿಲ್ಲ. ದೇವಮಾಯೆಯಿಂದ ಮೋಹಿತನಾದ ಅವನು ಶಕ್ರನು ನೀಡಿದ ಆ ವಾಸವೀ ಶಕ್ತಿಯನ್ನು ದೇವಕೀಪುತ್ರ ಕೃಷ್ಣನ ಅಥವಾ ಪಾರ್ಥನ ವಧೆಗಾಗಿ ಬಳಸಲಿಲ್ಲ!

ಯುಧಿಷ್ಠಿರ ಕೋಪ-ಶೋಕ; ವ್ಯಾಸವಾಕ್ಯ

ರಾತ್ರಿಯಲ್ಲಿ ಕರ್ಣನಿಂದ ರಾಕ್ಷಸ ಘಟೋತ್ಕಚನು ಹತನಾಗಲು, ಪ್ರಹೃಷ್ಟರಾದ ಕೌರವರು ಯುದ್ಧೋತ್ಸಾಹದಿಂದ ಯುದ್ಧಮಾಡುತ್ತಾ ವೇಗದಿಂದ ಸೇನೆಯನ್ನು ವಧಿಸುತ್ತಿರಲು, ಆ ದಟ್ಟ ರಾತ್ರಿಯಲ್ಲಿ ಯುಧಿಷ್ಠಿರನು ಪರಮ ದುಃಖಿತನಾದನು. ಆ ಪರಂತಪನು ಭೀಮಸೇನನಿಗೆ ಹೇಳಿದನು: “ಮಹಾಬಾಹೋ! ಧಾರ್ತರಾಷ್ಟ್ರನ ಸೇನೆಯನ್ನು ತಡೆ! ಹೈಡಿಂಬನ ವಿಘಾತದಿಂದಾಗಿ ಮಹಾ ಮೋಹವು ನನ್ನನ್ನು ಆವೇಶಗೊಂಡಿದೆ!”

ಭೀಮನಿಗೆ ಹೀಗೆ ಆದೇಶಿಸಿ ಯುಧಿಷ್ಠಿರನು ತನ್ನ ರಥದಲ್ಲಿಯೇ ಕುಳಿತುಕೊಂಡನು. ಮುಖವು ಕಣ್ಣೀರಿನಿಂದ ತುಂಬಿಹೋಗಲು ರಾಜನು ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದನು. ಕರ್ಣನ ವಿಕ್ರಮವನ್ನು ನೋಡಿ ಘೋರ ಚಿಂತೆಯು ಅವನನ್ನು ಆವರಿಸಿತು. ಅವನು ಹಾಗೆ ವ್ಯಥಿತನಾಗಿರುವುದನ್ನು ನೋಡಿ ಕೃಷ್ಣನು ಈ ಮಾತನ್ನಾಡಿದನು: “ಕೌಂತೇಯ! ದುಃಖಿಸದಿರು! ಸಾಮಾನ್ಯ ಮನುಷ್ಯನಂತೆ ಈ ರೀತಿ ದುಃಖಿಸುವುದು ನಿನಗೆ ಇದು ಸರಿಯೆನಿಸುವುದಿಲ್ಲ. ರಾಜನ್! ಎದ್ದೇಳು! ಯುದ್ಧಮಾಡು! ಈ ಭಾರವನ್ನು ಹೊರು! ನೀನು ಗಾಬರಿಗೊಂಡರೆ ವಿಜಯದಲ್ಲಿ ಸಂಶಯವುಂಟಾಗುತ್ತದೆ.”

ಕೃಷ್ಣನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಕೈಗಳಿಂದ ಕಣ್ಣೀರನ್ನು ಒರೆಸಿಕೊಂಡು ಕೃಷ್ಣನಿಗೆ ಈ ಮಾತುಗಳನ್ನಾಡಿದನು: “ಕೃಷ್ಣ! ಧರ್ಮಗಳ ಪರಮ ದಾರಿಯು ನಿನಗೆ ತಿಳಿದೇ ಇದೆ. ಪಡೆದುಕೊಂಡ ಉಪಕಾರವನ್ನು ಸ್ಮರಿಸಿಕೊಳ್ಳದಿರುವವನಿಗೆ ಬ್ರಹ್ಮಹತ್ಯೆಯ ಫಲವು ದೊರಕುತ್ತದೆ! ನಾವು ವನದಲ್ಲಿದ್ದಾಗ ಬಾಲಕನಾಗಿದ್ದರೂ ಮಹಾತ್ಮ ಹೈಡಿಂಬಿಯು ನಿಜವಾಗಿಯೂ ನಮಗೆ ಬಹಳ ಸಹಾಯ ಮಾಡಿದ್ದನು. ಶ್ವೇತವಾಹನ ಪಾಂಡವನು ಅಸ್ತ್ರಗಳಿಗಾಗಿ ಹೋಗಿರುವನೆಂದು ತಿಳಿದು ಈ ಮಹೇಷ್ವಾಸನು ಕಾಮ್ಯಕದಲ್ಲಿ ನಮ್ಮೊಡನೆಯೇ ಇದ್ದನು. ಧನಂಜಯನು ಬರುವವರೆಗೆ ಅವನು ನಮ್ಮೊಡನೆಯೇ ಇದ್ದನು. ಗಂಧಮಾದನ ಯಾತ್ರೆಯಲ್ಲಿ ಪಾಂಚಾಲಿಯು ಬಳಲಿದ್ದಾಗ ಈ ಮಹಾತ್ಮನೇ ಅವಳನ್ನು ತನ್ನ ಭುಜಗಳಮೇಲೆ ಹೊತ್ತು ದುರ್ಗಮ ಪ್ರದೇಶಗಳನ್ನು ದಾಟಿಸಿದನು. ಈ ಯುದ್ಧಗಳ ಆರಂಭದಲ್ಲಿ ಕೂಡ ಆ ಮಹಾತ್ಮನು ನನಗೋಸ್ಕರವಾಗಿ ದುಷ್ಕರ ಕರ್ಮಗಳನ್ನು ಮಾಡಿದನು. ಸ್ವಭಾವತಃ ನನಗೆ ಸಹದೇವನಲ್ಲಿ ಎಷ್ಟು ಪ್ರೀತಿಯಿದೆಯೋ ಅದಕ್ಕಿಂತ ಎರಡು ಪಟ್ಟು ಪ್ರೀತಿಯು ಈ ರಾಕ್ಷಸೇಂದ್ರ ಘಟೋತ್ಕಚನ ಮೇಲೆ ಇದೆ. ಆ ಮಹಾಬಾಹುವು ನನ್ನ ಭಕ್ತನಾಗಿದ್ದನು. ಅವನಿಗೆ ನಾನು ಎಷ್ಟು ಪ್ರಿಯನಾಗಿದ್ದೆನೋ ಅಷ್ಟೇ ನನಗೂ ಅವನು ಪ್ರಿಯನಾಗಿದ್ದನು. ಅವನ ಅಗಲಿಕೆಯಿಂದ ಶೋಕಸಂತಪ್ತನಾಗಿದ್ದೇನೆ. ಬುದ್ಧಿಗೆಟ್ಟವನಾಗಿದ್ದೇನೆ.

“ವಾರ್ಷ್ಣೇಯ! ಕೌರವರಿಂದ ಓಡಿಸಲ್ಪಡುತ್ತಿರುವ ಸೈನ್ಯಗಳನ್ನು ನೋಡು! ಮಹಾರಥ ದ್ರೋಣ-ಕರ್ಣರು ಪ್ರಯತ್ನಪೂರ್ವಕವಾಗಿ ಯುದ್ಧಮಾಡುತ್ತಿರುವುದನ್ನು ನೋಡು! ಮದಿಸಿದ ಎರಡು ಆನೆಗಳಿಂದ ಜೊಂಡುಹುಲ್ಲಿನ ವನವು ಧ್ವಂಸಗೊಳಿಸಲ್ಪಡುವಂತೆ ಈ ರಾತ್ರಿ ಪಾಂಡವ ಸೇನೆಯು ಧ್ವಂಸವಾಗುತ್ತಿರುವುದನ್ನು ನೋಡು! ಭೀಮಸೇನನ ಬಾಹುಬಲವನ್ನೂ ಪಾರ್ಥನ ವಿಚಿತ್ರ ಅಸ್ತ್ರಬಲವನ್ನೂ ಅನಾದರಿಸಿ ಕೌರವರು ವಿಕ್ರಮದಿಂದ ನಮ್ಮ ಸೇನೆಯೊಡನೆ ಯುದ್ಧಮಾಡುತ್ತಿದ್ದಾರೆ! ಯುದ್ಧದಲ್ಲಿ ರಾಕ್ಷಸನನ್ನು ಸಂಹರಿಸಿ ದ್ರೋಣ, ಕರ್ಣ ಮತ್ತು ರಾಜಾ ಸುಯೋಧನರು ರಣರಂಗದಲ್ಲಿ ಹೃಷ್ಟರಾಗಿ ಗರ್ಜಿಸುತ್ತಿದ್ದಾರೆ. ನಾವು ಮತ್ತು ನೀನೂ ಕೂಡ ಜೀವಿಸಿರುವಾಗ ಸೂತಪುತ್ರನನ್ನು ಎದುರಿಸಿ ಹೈಡಿಂಬನು ಹೇಗೆ ಮೃತ್ಯುವನ್ನಪ್ಪಿದನು? ನಮ್ಮೆಲ್ಲರನ್ನೂ ತೃಣೀಕರಿಸಿ, ಸವ್ಯಸಾಚಿಯು ನೋಡುತ್ತಿರುವಂತೆಯೇ, ಭೈಮಸೇನಿ ಮಹಾಬಲ ರಾಕ್ಷಸನು ಸಂಹರಿಸಲ್ಪಟ್ಟನು!

“ದುರಾತ್ಮ ಧಾರ್ತರಾಷ್ಟ್ರರು ಅಭಿಮನ್ಯುವನ್ನು ಕೊಂದಾಗ ಮಹಾರಥ ಸವ್ಯಸಾಚಿಯು ಅಲ್ಲಿ ರಣದಲ್ಲಿರಲಿಲ್ಲ. ದುರಾತ್ಮ ಸೈಂಧವನು ನಮ್ಮೆಲ್ಲರನ್ನು ತಡೆದಿದ್ದರೂ ಆ ಕೃತ್ಯಕ್ಕೆ ತನ್ನ ಮಗನೊಡನೆ ದ್ರೋಣನು ಕಾರಣನಾಗಿದ್ದನು. ಸ್ವಯಂ ಗುರುವೇ ಕರ್ಣನಿಗೆ ಅಭಿಮನ್ಯುವಿನ ವಧೋಪಾಯವನ್ನು ಉಪದೇಶಿಸಿದನು. ಅಭಿಮನ್ಯುವು ಖಡ್ಗದಿಂದ ಹೋರಾಡುತ್ತಿರುವಾಗ ಅವನ ಖಡ್ಗವನ್ನು ಅವನೇ ಎರಡಾಗಿ ತುಂಡರಿಸಿದನು ಕೂಡ! ಅಭಿಮನ್ಯುವು ಕಷ್ಟದಲ್ಲಿರುವಾಗ ಸುಳ್ಳುಗಾರನಂತೆ ಕೃತವರ್ಮನು ಅವನ ಕುದುರೆಗಳನ್ನೂ ಪಾರ್ಷ್ಣಿಸಾರಥಿಯನ್ನೂ ಸಂಹರಿಸಿದನು. ಅನಂತರ ಮಹೇಷ್ವಾಸರು ಸೌಭದ್ರನನ್ನು ಕೆಳಗುರುಳಿಸಿದರು. ಅಲ್ಪ ಕಾರಣಕ್ಕಾಗಿ ಗಾಂಡಿವಧನ್ವಿಯು ಸೈಂಧವನನ್ನು ಸಂಹರಿಸಿದನು. ಅದು ನನಗೆ ಪ್ರಿಯವಾಗಿರಲಿಲ್ಲ! ಒಂದುವೇಳೆ ಶತ್ರುವಧೆಯಲ್ಲಿ ನ್ಯಾಯವಾಗಬೇಕೆಂದರೆ ರಣದಲ್ಲಿ ಮೊದಲು ಪಾಂಡವರು ದ್ರೋಣ-ಕರ್ಣರನ್ನು ಸಂಹರಿಸಬೇಕೆಂದು ನನಗನ್ನಿಸುತ್ತದೆ. ಇವರಿಬ್ಬರೂ ನಮ್ಮ ದುಃಖಕ್ಕೆ ಮೂಲ ಕಾರಣರು. ರಣದಲ್ಲಿ ಇವರಿಬ್ಬರನ್ನೂ ಪಡೆದು ಸುಯೋಧನನು ಸಮಾಧಾನದಿಂದಿದ್ದಾನೆ. ಎಲ್ಲಿ ದ್ರೋಣ ಮತ್ತು ಅನುಯಾಯಿಗಳೊಂದಿಗೆ ಸೂತಪುತ್ರನ ವಧೆಯಾಗಬೇಕಿತ್ತೋ ಅಲ್ಲಿ ಮಹಾಬಾಹು ಅರ್ಜುನನು ಅಭಿಮನ್ಯುವಿನಿಂದ ಅತಿ ದೂರದಲ್ಲಿದ್ದ ಸೈಂಧವನನ್ನು ಸಂಹರಿಸಿದನು! ಸೂತಪುತ್ರನನ್ನು ನಿಗ್ರಹಿಸುವುದು ನನ್ನ ಅವಶ್ಯ ಕಾರ್ಯವಾಗಿದೆ. ಸ್ವಯಂ ನಾನೇ ವೀರ ಕರ್ಣನನ್ನು ಸಂಹರಿಸಲು ಬಯಸಿ ಹೋಗುತ್ತೇನೆ. ಮಹಾಬಾಹು ಭೀಮಸೇನನು ದ್ರೋಣನ ಸೇನೆಯನ್ನು ಎದುರಿಸಲಿ!”

ಹೀಗೆ ಹೇಳಿ ಅವಸರದಲ್ಲಿ ಮಹಾಧನುಸ್ಸನ್ನು ಟೇಂಕರಿಸುತ್ತಾ ಭೈರವ ಶಂಖವನ್ನು ಊದುತ್ತಾ ಹೊರಟು ಹೋದನು. ಆಗ ತ್ವರೆಮಾಡಿ ರಾಜನ ಹಿಂದೆಯೇ ಶಿಖಂಡಿಯು ಸಹಸ್ರ ರಥಗಳಿಂದ, ಮುನ್ನೂರು ಆನೆಗಳಿಂದ, ಐದು ಸಾವಿರ ಕುದುರೆಗಳಿಂದ ಮತ್ತು ಮೂರು ಸಾವಿರ ಪ್ರಭದ್ರಕರಿಂದ ಅವೃತನಾಗಿ ಹೋದನು. ಯುಧಿಷ್ಠಿರನ ನೇತೃತ್ವದಲ್ಲಿ ಕವಚಧಾರೀ ಪಾಂಚಾಲರು ಮತ್ತು ಪಾಂಡವರು ಭೇರಿಗಳನ್ನು ಬಾರಿಸಿದರು ಮತ್ತು ಶಂಖಗಳನ್ನೂದಿದರು. ಆಗ ಮಹಾಬಾಹು ವಾಸುದೇವನು ಧನಂಜಯನಿಗೆ ಹೇಳಿದನು: “ಇಗೋ! ಕ್ರೋಧಾವಿಷ್ಟ ಯುಧಿಷ್ಠಿರನು ತ್ವರೆಮಾಡಿ ಸೂತಪುತ್ರನನ್ನು ಸಂಹರಿಸಲು ಬಯಸಿ ಹೋಗುತ್ತಿದ್ದಾನೆ! ಇದನ್ನು ಉಪೇಕ್ಷಿಸುವುದು ಸರಿಯಲ್ಲ!”

ಹೀಗೆ ಹೇಳಿ ಹೃಷೀಕೇಶನು ಶೀಘ್ರವಾಗಿ ಕುದುರೆಗಳನ್ನು ಓಡಿಸಿದನು. ಜನಾರ್ದನನು ದೂರದಲ್ಲಿ ಹೋಗುತ್ತಿದ್ದ ರಾಜಾ ಯುಧಿಷ್ಠಿರನನ್ನೇ ಅನುಸರಿಸಿದನು. ಸೂತಪುತ್ರನನ್ನು ಕೊಲ್ಲಲೋಸುಗ ಅವಸರದಲ್ಲಿ ಹೋಗುತ್ತಿದ್ದ ಶೋಕದಿಂದ ಸಂಕಲ್ಪವನ್ನೇ ಕಳೆದುಕೊಂಡಿದ್ದ, ಅಗ್ನಿಯಂತೆ ದಹಿಸುತ್ತಿದ್ದ ಧರ್ಮಪುತ್ರ ಯುಧಿಷ್ಠಿರನನ್ನು ನೋಡಿ ವ್ಯಾಸನು ಬಂದು ಹೇಳಿದನು: “ಅದೃಷ್ಟವಶಾತ್ ಸಂಗ್ರಾಮದಲ್ಲಿ ಕರ್ಣನನ್ನು ಎದುರಿಸಿಯೂ ಫಲ್ಗುನನು ಜೀವದಿಂದಿದ್ದಾನೆ! ಏಕೆಂದರೆ ಕರ್ಣನು ಸವ್ಯಸಾಚಿಯನ್ನು ಕೊಲ್ಲಲು ಬಯಸಿ ಆ ಶಕ್ತಿಯನ್ನು ರಕ್ಷಿಸಿಕೊಂಡಿದ್ದನು. ಭರತರ್ಷಭ! ಸೌಭಾಗ್ಯವಶಾತ್ ಜಿಷ್ಣುವು ಕರ್ಣನೊಡನೆ ದ್ವಂದ್ವರಥಯುದ್ಧದಲ್ಲಿ ತೊಡಗಲಿಲ್ಲ. ಹಾಗಾಗಿದ್ದರೆ ಪರಸ್ಪರರೊಡನೆ ಸ್ಪರ್ಧಿಸಿ ಇಬ್ಬರೂ ದಿವ್ಯಾಸ್ತ್ರಗಳನ್ನೂ ಅನ್ಯ ಅಸ್ತ್ರಗಳನ್ನೂ ಎಲ್ಲೆಡೆ ಪ್ರಯೋಗಿಸುತ್ತಿದ್ದರು. ಅವನ ಅಸ್ತ್ರಗಳೆಲ್ಲವೂ ನಾಶವಾಗುತ್ತಿರುವುದನ್ನು ನೋಡಿ ಪೀಡಿತ ಸೂತನಂದನು ನಿಜವಾಗಿಯೂ ಸಮರದಲ್ಲಿ ವಾಸವನಿತ್ತಿದ್ದ ಶಕ್ತಿಯನ್ನು ಪ್ರಯೋಗಿಸುತ್ತಿದ್ದನು! ಹಾಗೇನಾದರೂ ಆಗಿದ್ದರೆ ಈಗಿನದಕ್ಕಿಂತಲೂ ಘೋರ ವ್ಯಸನವನ್ನು ನೀನು ಹೊಂದುತ್ತಿದ್ದೆಯಲ್ಲವೇ? ಒಳ್ಳೆಯದಾಯಿತು ಯುದ್ಧದಲ್ಲಿ ಸೂತಪುತ್ರನಿಂದ ರಾಕ್ಷಸನು ಹತನಾದನು! ವಾಸವನಿತ್ತ ಶಕ್ತಿಯನ್ನು ಕಾರಣವನ್ನಾಗಿಟ್ಟುಕೊಂಡು ಕಾಲನೇ ಅವನನ್ನು ಅಪಹರಿಸಿದ್ದಾನೆ. ನಿನಗೋಸ್ಕರವೇ ಈ ರಾಕ್ಷಸನು ಯುದ್ಧದಲ್ಲಿ ಹತನಾದನು. ಆದುದರಿಂದ ಕೋಪಗೊಳ್ಳಬೇಡ! ಮನಸ್ಸನ್ನು ಶೋಕದಲ್ಲಿ ತೊಡಗಿಸಬೇಡ! ಇಲ್ಲಿರುವ ಪ್ರಾಣಿಗಳೆಲ್ಲವೂ ಕೊನೆಯಲ್ಲಿ ಇದೇ ಅವಸ್ಥೆಯನ್ನು ಅನುಭವಿಸುತ್ತವೆ! ಸಹೋದರರೊಂದಿಗೆ ಮತ್ತು ಎಲ್ಲ ಮಹಾತ್ಮ ಪಾರ್ಥಿವರೊಂದಿಗೆ ಸೇರಿ ಸಮರದಲ್ಲಿ ಕೌರವರೊಡನೆ ಯುದ್ಧಮಾಡು. ಇಂದಿನಿಂದ ಐದನೆಯ ದಿವಸದಲ್ಲಿ ಈ ಭೂಮಿಯು ನಿನ್ನದಾಗುತ್ತದೆ! ನಿತ್ಯವೂ ಧರ್ಮ, ದಯೆ, ತಪಸ್ಸು, ದಾನ, ಕ್ಷಮೆ ಮತ್ತು ಸತ್ಯಗಳ ಕುರಿತೇ ಚಿಂತಿಸು. ಪರಮಪ್ರೀತನಾಗಿ ಇವುಗಳ ಸೇವೆಯಲ್ಲಿರು. ಧರ್ಮವೆಲ್ಲಿದೆಯೋ ಅಲ್ಲಿ ಜಯವಿದೆ.”

ಪಾಂಡವನಿಗೆ ಹೀಗೆ ಹೇಳಿ ವ್ಯಾಸನು ಅಲ್ಲಿಯೇ ಅಂತರ್ಧಾನನಾದನು.

Leave a Reply

Your email address will not be published. Required fields are marked *