ಹದಿನಾಲ್ಕನೆಯ ದಿನದ ರಾತ್ರಿಯುದ್ಧ – ೨
ಸಾತ್ಯಕಿಯಿಂದ ಸೋಮದತ್ತನ ವಧೆ
ಮಹಾಧನುಸ್ಸನ್ನು ಟೇಂಕರಿಸುತ್ತಿದ್ದ ಸೋಮದತ್ತನನ್ನು ನೋಡಿ ಸಾತ್ಯಕಿಯು “ನನ್ನನ್ನು ಸೋಮದತ್ತನಿದ್ದಲ್ಲಿಗೆ ಒಯ್ಯಿ!” ಎಂದು ಸಾರಥಿಗೆ ಹೇಳಿದನು. “ಸೂತ! ಕೌರವಾಧಮ ಶತ್ರು ಬಾಹ್ಲೀಕನನ್ನು ರಣದಲ್ಲಿ ಕೊಲ್ಲದೇ ರಣದಿಂದ ನಾನು ಹಿಂದಿರುಗುವುದಿಲ್ಲ. ನನ್ನ ಈ ಮಾತು ಸತ್ಯ.” ಆಗ ಸಾರಥಿಯು ಸೈಂಧವದೇಶದ, ಮಹಾವೇಗಶಾಲೀ, ಶಂಖವರ್ಣದ, ಸರ್ವ ಶಬ್ಧಗಳನ್ನೂ ಅತಿಕ್ರಮಿಸಬಲ್ಲ ಆ ಕುದುರೆಗಳನ್ನು ರಣದಲ್ಲಿ ಮುಂದೆ ಹೋಗುವಂತೆ ಚಪ್ಪರಿಸಿದನು. ಹಿಂದೆ ದೈತ್ಯರವಧೆಗೆ ಸಿದ್ಧನಾದ ಇಂದ್ರನನ್ನು ಹೇಗೆ ಕುದುರೆಗಳು ಕೊಂಡೊಯ್ದವೋ ಹಾಗೆ ಯುಯುಧಾನನನ್ನು ಮನಸ್ಸು ಮತ್ತು ಮಾರುತರ ವೇಗವುಳ್ಳ ಅವನ ಕುದುರೆಗಳು ಕೊಂಡೊಯ್ದವು. ರಭಸದಿಂದ ರಣದಲ್ಲಿ ಬರುತ್ತಿದ್ದ ಸಾತ್ವತನನ್ನು ನೋಡಿ ಮಹಾಬಾಹು ಸೋಮದತ್ತನು ಗಾಬರಿಗೊಳ್ಳದೇ ಅವನೆದುರು ಧಾವಿಸಿದನು. ಮೋಡಗಳು ಭಾಸ್ಕರನನ್ನು ಮುಚ್ಚಿಬಿಡುವಂತೆ ಅವನು ಮಳೆಗರೆಯುವ ಮೋಡಗಳಂತೆ ಶರವರ್ಷಗಳನ್ನು ಸುರಿಸಿ ಶೈನೇಯನನ್ನು ಮುಚ್ಚಿದನು.
ಸಮರದಲ್ಲಿ ಗಾಬರಿಗೊಳ್ಳದೇ ಸಾತ್ಯಕಿಯು ಕುರುಪುಂಗವನನ್ನು ಬಾಣಗಳ ಗುಂಪುಗಳಿಂದ ಎಲ್ಲಕಡೆಗಳಿಂದ ಮುಚ್ಚಿದನು. ಸೋಮದತ್ತನು ಆ ಮಾಧವನ ಎದೆಗೆ ಗುರಿಯಿಟ್ಟು ಅರವತ್ತು ಬಾಣಗಳನ್ನು ಹೊಡೆದನು. ಸಾತ್ಯಕಿಯೂ ಕೂಡ ಅವನನ್ನು ನಿಶಿತ ಸಾಯಕಗಳಿಂದ ಹೊಡೆದನು. ಅನ್ಯೋನ್ಯರನ್ನು ಶರಗಳಿಂದ ಕತ್ತರಿಸಿದ ಆ ನರರ್ಷಭರಿಬ್ಬರೂ ಪುಷ್ಪಸಮಯದಲ್ಲಿ ಚೆನ್ನಾಗಿ ಹೂಬಿಟ್ಟ ಕಿಂಶುಕ ಮರಗಳಂತೆ ವಿರಾಜಿಸಿದರು. ಸರ್ವಾಂಗಗಳಿಂದಲೂ ರಕ್ತವು ಸೋರುತ್ತಿರಲು ಆ ಕುರು-ವೃಷ್ಣಿ ಯಶಸ್ಕರು ಕಣ್ಣುಗಳಿಂದಲೇ ಪರಸ್ಪರರನ್ನು ಸುಟ್ಟುಬಿಡುವರೋ ಎನ್ನುವಂತೆ ನೋಡುತ್ತಿದ್ದರು. ರಥಮಂಡಲ ಮಾರ್ಗಗಳಲ್ಲಿ ಸಂಚರಿಸುತ್ತಾ ಆ ಅರಿಮರ್ದನರು ಮಳೆಸುರಿಸುತ್ತಿರುವ ಘೋರರೂಪೀ ಮೋಡಗಳಂತೆ ತೋರುತ್ತಿದ್ದರು. ಶರೀರದ ಪೂರ್ತಿ ಬಾಣಗಳು ಚ್ಚುಚ್ಚಿಕೊಂಡಿರಲು ಬಾಣಗಳಿಂದ ಕ್ಷತವಿಕ್ಷತರಾಗಿದ್ದ ಅವರಿಬ್ಬರೂ ಗಾಯಗೊಂಡ ಮುಳ್ಳುಹಂದಿಗಳಂತೆ ತೋರುತ್ತಿದ್ದರು. ಸುವರ್ಣಪುಂಖಗಳುಳ್ಳ ಬಾಣಗಳಿಂದ ಚುಚ್ಚಲ್ಪಟ್ಟ ಅವರಿಬ್ಬರೂ ವರ್ಷಾಕಾಲದಲ್ಲಿ ಮಿಣುಕುಹುಳುಗಳಿಂದ ಆವೃತ ಎರಡು ವೃಕ್ಷಗಳಂತೆ ಕಾಣುತ್ತಿದ್ದರು. ಸಾಯಕಗಳಿಂದ ಸರ್ವಾಂಗಗಳು ಉರಿಯುತ್ತಿರಲು ಆ ಮಹಾರಥರು ರಣದಲ್ಲಿ ಉಲ್ಕೆಗಳಂತೆ ಮತ್ತು ಎರಡು ಕ್ರುದ್ಧ ಆನೆಗಳಂತೆ ಕಾಣುತ್ತಿದ್ದರು.
ಆಗ ಮಹಾರಥ ಸೋಮದತ್ತನು ಅರ್ಧಚಂದ್ರಾಕಾರದ ಬಾಣದಿಂದ ಮಾಧವನ ಮಹಾಧನುಸ್ಸನ್ನು ತುಂಡರಿಸಿದನು. ಆಗ ಅವನ ಮೇಲೆ ಇಪ್ಪತ್ತೈದು ಸಾಯಕಗಳನ್ನು ಪ್ರಯೋಗಿಸಿದನು ಮತ್ತು ತ್ವರೆಮಾಡಬೇಕಾದ ಸಮಯದಲ್ಲಿ ತ್ವರೆಮಾಡುತ್ತಾ ಪುನಃ ಹತ್ತು ಶರಗಳಿಂದ ಹೊಡೆದನು. ಆಗ ಸಾತ್ಯಕಿಯು ಇನ್ನೊಂದು ವೇಗವತ್ತರ ಧನುಸ್ಸನ್ನು ಹಿಡಿದು ತಕ್ಷಣವೇ ಐದು ಸಾಯಕಗಳಿಂದ ಸೋಮದತ್ತನನ್ನು ಹೊಡೆದನು. ಆಗ ಸಾತ್ಯಕಿಯು ರಣದಲ್ಲಿ ನಗುತ್ತಾ ಇನ್ನೊಂದು ಭಲ್ಲದಿಂದ ಬಾಹ್ಲೀಕನ ಕಾಂಚನ ಧ್ವಜವನ್ನು ಕತ್ತರಿಸಿದನು. ಧ್ವಜವು ಕೆಳಗೆ ಬಿದ್ದುದನ್ನು ನೋಡಿ ಗಾಬರಿಗೊಳ್ಳದೇ ಸೋಮದತ್ತನು ಶೈನೇಯನನ್ನು ಇಪ್ಪತ್ತೈದು ಸಾಯಕಗಳಿಂದ ಹೊಡೆದನು. ಕ್ರುದ್ಧ ಧನ್ವಿ ಸಾತ್ವತನೂ ಕೂಡ ಹರಿತ ಕ್ಷುರಪ್ರದಿಂದ ಸೋಮದತ್ತನ ಧನುಸ್ಸನ್ನು ತುಂಡರಿಸಿದನು. ದಂತವನ್ನು ತುಂಡುಮಾಡಿ ಆನೆಯನ್ನು ಪುನಃ ಪುನಃ ಹೊಡೆಯುವಂತೆ ಅವನನ್ನು ರುಕ್ಮಪುಂಖಗಳ ನೂರಾರು ನತಪರ್ವಗಳಿಂದ ಬಹಳಷ್ಟು ಹೊಡೆದನು. ಆಗ ಮಹಾರಥ ಸೋಮದತ್ತನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಸಾತ್ಯಕಿಯನ್ನು ಶರವೃಷ್ಟಿಯಿಂದ ಮುಚ್ಚಿದನು. ಸಾತ್ಯಕಿಯು ಸಂಕ್ರುದ್ಧನಾಗಿ ಸೋಮದತ್ತನನ್ನು ಹೊಡೆದನು. ಸೋಮದತ್ತನೂ ಕೂಡ ಸಾತ್ಯಕಿಯನ್ನು ಬಾಣಗಳ ಜಾಲದಿಂದ ಪೀಡಿಸಿದನು.
ಸಾತ್ವತನ ಸಹಾಯಮಾಡುತ್ತಿದ್ದ ಭೀಮನು ಆಗ ಬಾಹ್ಲೀಕಾತ್ಮಜನನ್ನು ಹತ್ತು ಬಾಣಗಳಿಂದ ಹೊಡೆದನು. ಆದರೆ ಸೋಮದತ್ತನು ಗಾಬರಿಗೊಳ್ಳದೇ ಶೈನೇಯನನ್ನು ಶರಗಳಿಂದ ಹೊಡೆದನು. ಆಗ ಸಾತ್ವತನಿಗೋಸ್ಕರವಾಗಿ ಭೈಮಸೇನಿಯು ಹೊಸದಾದ ದೃಡ ಘೋರ ಪರಿಘವನ್ನು ಸೋಮದತ್ತನ ಎದೆಯಮೇಲೆ ಪ್ರಯೋಗಿಸಿದನು. ವೇಗದಿಂದ ಬೀಳುತ್ತಿದ್ದ ಘೋರವಾಗಿ ಕಾಣುತ್ತಿದ್ದ ಆ ಪರಿಘವನ್ನು ಕೌರವನು ನಸುನಗುತ್ತಾ ತುಂಡರಿಸಿದನು. ಕಬ್ಬಿಣದ ಆ ಮಹಾ ಪರಿಘವು ಎರಡಾಗಿ ವಜ್ರದಿಂದ ಸೀಳಲ್ಪಟ್ಟ ಮಹಾ ಶಿಖರದಂತೆ ಭೂಮಿಯ ಮೇಲೆ ಬಿದ್ದಿತು. ಆಗ ಸಾತ್ಯಕಿಯು ಭಲ್ಲದಿಂದ ಸೋಮದತ್ತನ ಧನುಸ್ಸನ್ನು ಕತ್ತರಿಸಿದನು ಮತ್ತು ಐದು ಬಾಣಗಳಿಂದ ಅವನ ಕೈಚೀಲವನ್ನು ಕತ್ತರಿಸಿದನು. ತಕ್ಷಣವೇ ನಾಲ್ಕು ಬಾಣಗಳಿಂದ ಅವನ ನಾಲ್ಕು ಉತ್ತಮ ಕುದುರೆಗಳನ್ನೂ ಪ್ರೇತರಾಜನ ಸಮೀಪಕ್ಕೆ ಕಳುಹಿಸಿದನು. ರಥಶಾರ್ದೂಲ ಶಿನಿಪುಂಗವನು ನಸುನಗುತ್ತಾ ನತಪರ್ವಣ ಭಲ್ಲದಿಂದ ಸಾರಥಿಯ ಶಿರವನ್ನು ಅಪಹರಿಸಿದನು. ಆಗ ಸಾತ್ವತನು ಪಾವಕನಂತೆ ಉರಿಯುತ್ತಿರುವ ಮಹಾಘೋರ ಶಿಲಾಶಿತ ಸ್ವರ್ಣಪುಂಖವನ್ನು ಪ್ರಯೋಗಿಸಿದನು. ಶೈನೇಯನಿಂದ ಬಲವತ್ತರವಾಗಿ ಪ್ರಯೋಗಿಸಲ್ಪಟ್ಟ ಆ ಉತ್ತಮ ಘೋರ ಶರವು ಸೋಮದತ್ತನ ಎದೆಯಮೇಲೆ ಬಿದ್ದು ನಾಟಿತು. ಈ ರೀತಿ ಸಾತ್ವತನಿಂದ ಬಲವತ್ತರವಾಗಿ ಹೊಡೆಯಲ್ಪಟ್ಟ ಮಹಾರಥ ಮಹಾಬಾಹು ಸೋಮದತ್ತನು ಕೆಳಗಿ ಬಿದ್ದು ಅಸುನೀಗಿದನು.
ಯುಧಿಷ್ಠಿರ-ದ್ರೋಣರ ಯುದ್ಧ
ಸೋಮದತ್ತನು ಅಲ್ಲಿ ಹತನಾದುದನ್ನು ನೋಡಿ ಮಹಾರಥರು ಮಹಾ ಶರವರ್ಷಗಳಿಂದ ಯುಯುಧಾನನನ್ನು ಆಕ್ರಮಣಿಸಿದರು. ಶರಗಳಿಂದ ಮುಚ್ಚಲ್ಪಟ್ಟ ಯುಯುಧಾನನನ್ನು ನೋಡಿ ಯುಧಿಷ್ಠಿರನು ಮಹಾ ಸೇನೆಯೊಂದಿಗೆ ದ್ರೋಣನ ಸೇನೆಯನ್ನು ಆಕ್ರಮಣಿಸಿದನು. ಆಗ ಕ್ರುದ್ಧ ಯುಧಿಷ್ಠಿರನು, ಭಾರದ್ವಾಜನು ನೋಡುತ್ತಿದ್ದಂತೆಯೇ, ಕೌರವ ಮಹಾಬಲವನ್ನು ಶರಗಳಿಂದ ಹೊಡೆದು ಪಲಾಯನಗೊಳಿಸಿದನು. ಸೇನೆಗಳನ್ನು ಪಲಾಯನಗೊಳಿಸುತ್ತಿದ್ದ ಯುಧಿಷ್ಠಿರನನ್ನು ನೋಡಿ ದ್ರೋಣನು ಕ್ರೋಧದಿಂದ ಕೆಂಗಣ್ಣುಗಳುಳ್ಳವನಾಗಿ ವೇಗದಿಂದ ಅವನನ್ನು ಆಕ್ರಮಣಿಸಿದನು. ಆಗ ಅವನು ಪಾರ್ಥನನ್ನು ಏಳು ನಿಶಿತ ಬಾಣಗಳಿಂದ ಹೊಡೆದನು. ಹಾಗೆ ಗಾಢವಾಗಿ ಹೊಡೆದು ಕಟವಾಯಿಯನ್ನು ಸವರುತ್ತಾ ಅವನು ಯುಧಿಷ್ಠಿರನ ಧ್ವಜವನ್ನೂ ಧನುಸ್ಸನ್ನೂ ತುಂಡರಿಸಿದನು. ತ್ವರೆಮಾಡಬೇಕಾದ ಸಮಯದಲ್ಲಿ ತ್ವರೆಮಾಡುತ್ತಾ ಆ ನೃಪೋತ್ತಮನು ವೇಗದಿಂದ ಸಮರದಲ್ಲಿ ಇನ್ನೊಂದು ದೃಢ ಧನುಸ್ಸನ್ನು ತೆಗೆದುಕೊಂಡನು. ಆಗ ಪಾರ್ಥಿವನು ನೂರಾರು ಸಹಸ್ರಾರು ಬಾಣಗಳಿಂದ ದ್ರೋಣನನ್ನು ಹೊಡೆದನು ಮತ್ತು ಅವನ ಕುದುರೆ-ಸೂತ-ಧ್ವಜ-ರಥಗಳನ್ನು ಹೊಡೆದನು. ಅದೊಂದು ಅದ್ಭುತವಾಗಿತ್ತು. ಆಗ ಶರಘಾತದಿಂದ ಪೀಡಿತ ದ್ರೋಣನು ಮುಹೂರ್ತಕಾಲ ರಥದಲ್ಲಿಯೇ ಕುಸಿದು ಕುಳಿತುಕೊಂಡನು. ಮುಹೂರ್ತದಲ್ಲಿಯೇ ಸಂಜ್ಞೆಯನ್ನು ಪಡೆದು ದ್ವಿಜಸತ್ತಮನು ಕ್ರೋಧದಿಂದ ಮಹಾವಿಷ್ಟನಾಗಿ ವಾಯವ್ಯಾಸ್ತ್ರವನ್ನು ಪ್ರಯೋಗಿಸಿದನು. ಆಗ ವೀರ್ಯವಾನ್ ಪಾರ್ಥನು ಗಾಬರಿಗೊಳ್ಳದೇ ಧನುಸ್ಸನ್ನು ಸೆಳೆದು ರಣದಲ್ಲಿ ಆ ಅಸ್ತ್ರವನ್ನು ಅಸ್ತ್ರದಿಂದಲೇ ಸ್ತಂಭಗೊಳಿಸಿದನು. ಆಗ ವಾಸುದೇವನು ಕುಂತೀಪುತ್ರ ಯುಧಿಷ್ಠಿರನಿಗೆ ಹೇಳಿದನು: “ಮಹಾಬಾಹೋ! ಯುಧಿಷ್ಠಿರ! ನಾನು ಹೇಳುವುದನ್ನು ಪ್ರಯತ್ನಿಸಿ ಕೇಳು! ದ್ರೋಣನೊಡನೆ ಮಾಡುವ ಈ ಯುದ್ಧವನ್ನು ಕೊನೆಗೊಳಿಸು. ಯುದ್ಧದಲ್ಲಿ ದ್ರೋಣನು ನಿನ್ನನ್ನು ಹಿಡಿಯುವುದಕ್ಕಾಗಿಯೇ ಸದಾ ಪ್ರಯತ್ನಿಸುತ್ತಿದ್ದಾನೆ. ಆದುದರಿಂದ ನೀನು ಅವನೊಡನೆ ಯುದ್ಧಮಾಡುವುದು ನಿನಗೆ ಉಚಿತವೆಂದು ತೋರುವುದಿಲ್ಲ. ಇವನ ವಿನಾಶಕ್ಕಾಗಿ ಯಾರು ಸೃಸ್ಟಿಸಲ್ಪಟ್ಟಿರುವನೋ ಅವನು ಇವನನ್ನು ನಾಳೆ ಕೊಲ್ಲುವವನಿದ್ದಾನೆ. ಗುರುವನ್ನು ತೊರೆದು ಎಲ್ಲಿ ರಾಜಾ ಸುಯೋಧನನು ಕೌರವರೊಡಗೂಡಿ ರಥಶಾರ್ದೂಲ ಭೀಮನೊಡನೆ ಯುದ್ಧಮಾಡುತ್ತಿರುವನೋ ಅಲ್ಲಿಗೆ ಹೋಗು.”
ವಾಸುದೇವನ ಮಾತನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಮುಹೂರ್ತಕಾಲ ಆ ದಾರುಣ ಯುದ್ಧದ ಕುರಿತು ಯೋಚಿಸಿದನು. ಅನಂತರ ಬಾಯ್ದೆರೆದ ಅಂತಕನಂತೆ ಕೌರವ ಯೋಧರನ್ನು ಸಂಹರಿಸುತ್ತಾ ಆ ಅಮಿತ್ರಘ್ನನು ಭೀಮನು ಎಲ್ಲಿದ್ದನೋ ಅಲ್ಲಿಗೆ ಧಾವಿಸಿದನು. ಮಹಾರಥಘೋಷದಿಂದ ವಸುಧಾತಲವನ್ನು ಮೊಳಗಿಸುತ್ತಾ, ಬೇಸಗೆಯ ಕೊಲೆಯಲ್ಲಿನ ಮೋಡಗಳಂತೆ ದಿಕ್ಕು ದಿಕ್ಕುಗಳನ್ನು ಮೊಳಗುತ್ತಾ ಪಾಂಡವನು ಶತ್ರುಗಳನ್ನು ಸಂಹರಿಸುತ್ತಿದ್ದ ಭೀಮನ ಪಾರ್ಷ್ಣಿಯನ್ನು ಹಿಡಿದನು. ದ್ರೋಣನೂ ಕೂಡ ಆ ರಾತ್ರಿಯಲ್ಲಿ ಪಾಂಡು-ಪಾಂಚಾಲರನ್ನು ವಧಿಸತೊಡಗಿದನು.
ದೀಪೋದ್ಯೋತನ
ಘೋರರೂಪೀ ಭಯಾವಹ ಆ ಯುದ್ಧವು ಹಾಗೆ ನಡೆಯುತ್ತಿರಲು ಲೋಕವು ಕತ್ತಲೆ ಮತ್ತು ಧೂಳಿನಿಂದ ಮುಚ್ಚಿಹೋಯಿತು. ರಣದಲ್ಲಿ ಎದುರಿಸಿದ್ದ ಯೋಧರಿಗೆ ಪರಸ್ಪರರನ್ನು ಗುರುತಿಸಲಾಗುತ್ತಿರಲಿಲ್ಲ. ಅನುಮಾನದಿಂದ ಮತ್ತು ಸಂಕೇತಗಳಿಂದ ಆ ಮನುಷ್ಯ-ಆನೆ-ಕುದುರೆಗಳ ಸಂಹಾರಕಾರ್ಯ, ರೋಮರಾಶಿಗಳು ನಿಮಿರಿ ನಿಲ್ಲುವಷ್ಟು ರೋಮಾಂಚಕಾರಿ ಮಹಾ ಯುದ್ಧವು ನಡೆಯಿತು. ವೀರರಾದ ದ್ರೋಣ-ಕರ್ಣ-ಕೃಪರು ಮತ್ತು ಭೀಮ-ಪಾರ್ಷತ-ಸಾತ್ಯಕಿಯರು ಅನ್ಯೋನ್ಯರ ಸೇನೆಗಳನ್ನು ಅಲ್ಲೋಲಕಲ್ಲೋಲಗೊಳಿಸುತ್ತಿದ್ದರು. ಮಹಾರಥರಿಂದ ವಧಿಸಲ್ಪಟ್ಟು ಸೇನೆಗಳು ಎಲ್ಲಕಡೆ ಓಡಿಹೋಗುತ್ತಿದ್ದವು. ಹಾಗೆಯೇ ಕತ್ತಲೆ ಮತ್ತು ಧೂಳಿನಿಂದ ದಿಕ್ಕುಕಾಣದೆ ಸೇನೆಗಳು ಓಡಿ ಹೋಗುತ್ತಿದ್ದವು. ಬಳಲಿ ನಿದ್ದೆಗೆಟ್ಟಿದ್ದ ಯೋಧರು ಎಲ್ಲಕಡೆ ಓಡಿಹೋಗುತ್ತಿದ್ದವರನ್ನೂ ಯುದ್ಧದಲ್ಲಿ ಸಂಹರಿಸಿದರು. ದುರ್ಯೋಧನನ ಯೋಜನೆಯಂತೆ ಆ ರಾತ್ರಿಯ ಅಂಧಕಾರದಲ್ಲಿ ಸಹಸ್ರಾರು ಮೂಢ ಮಹಾರಥರು ರಣರಂಗದಲ್ಲಿ ಅನ್ಯೋನ್ಯರನ್ನು ಸಂಹರಿಸಿದರು. ಆಗ ರಣಾಂಗಣವು ಗಾಢಾಂಧಕಾರದಿಂದ ಆವೃತವಾಗಿರಲು ಎಲ್ಲ ಸೇನೆಗಳೂ, ಸೇನಾಧಿಪತಿಗಳೂ ಮೋಹಗೊಂಡರು.
ಅನಂತರ ದುರ್ಯೋಧನನು ಅಳಿಯದೇ ಉಳಿದಿರುವ ಎಲ್ಲ ಸೇನೆಗಳನ್ನೂ ಸೇನಾನಾಯಕರನ್ನೂ ಒಟ್ಟುಗೂಡಿಸಿ ಪುನಃ ಒಂದು ನೂತನ ವ್ಯೂಹವನ್ನೇ ಕಲ್ಪಿಸಿದನು. ಆ ವ್ಯೂಹದ ಮುಂಬಾಗದಲ್ಲಿ ದ್ರೋಣ, ಹಿಂಬಾಗದಲ್ಲಿ ಶಲ್ಯ, ಪಕ್ಕಗಳಲ್ಲಿ ದ್ರೌಣಿ-ಸೌಬಲರಿದ್ದರು. ಸ್ವಯಂ ರಾಜಾ ದುರ್ಯೋಧನನು ಆ ರಾತ್ರಿಯಲ್ಲಿ ಸರ್ವಸೇನೆಗಳನ್ನು ರಕ್ಷಿಸುತ್ತಾ ಮುಂದೆ ಹೋಗುತ್ತಿದ್ದನು. ರಾಜಾ ದುರ್ಯೋಧನನು ಸಾಂತ್ವನಪೂರ್ವಕವಾಗಿ ಎಲ್ಲ ಪದಾತಿಪಡೆಗಳಿಗೆ ಈ ರೀತಿ ಹೇಳಿದನು: “ನೀವೆಲ್ಲರೂ ಪರಮ ಆಯುಧಗಳನ್ನು ಕೆಳಗಿಟ್ಟು ಪ್ರಜ್ವಲಿಸುತ್ತಿರುವ ಪಂಜುಗಳನ್ನು ಹಿಡಿದುಕೊಳ್ಳಿರಿ!”
ಪಾರ್ಥಿವಸತ್ತಮನಿಂದ ಹೀಗೆ ಪ್ರಚೋದನೆಗೊಂಡ ಯೋಧರು ಸಂತೋಷಗೊಂಡು ಉರಿಯುತ್ತಿರುವ ಪಂಜುಗಳನ್ನು ಹಿಡಿದುಕೊಂಡರು. ಆ ಅಗ್ನಿಪ್ರಭೆಯಿಂದ ರಾತ್ರಿಯಾಗಿದ್ದರೂ ಎರಡು ಕಡೆಯ ದಳಗಳು ಪ್ರತ್ಯೇಕವಾಗಿ ಕಾಣತೊಡಗಿದವು. ಅಮೂಲ್ಯ ದಿವ್ಯ ಆಭರಣಗಳ ಮತ್ತು ಹೊಳೆಯುತ್ತಿದ್ದ ಶಸ್ತ್ರಗಳ ಮೇಲೆ ಬೆಳಕು ಬಿದ್ದು ಎರಡೂ ಪಕ್ಷಗಳ ಸೇನೆಗಳು ಪ್ರಕಾಶಮಾನವಾಗಿ ಕಾಣುತ್ತಿದ್ದವು. ಎಣ್ಣೆಯನ್ನೂ ಪಂಜುಗಳನ್ನೂ ಹಿಡಿದಿದ್ದ ಪದಾತಿಗಳು ಬೆಳಕನ್ನು ತೋರಿಸುತ್ತಿರಲು ಎಲ್ಲ ಸೇನೆಗಳೂ ರಾತ್ರಿಯ ಆಕಾಶದಲ್ಲಿ ಮಿಂಚುಗಳಿಂದ ಬೆಳಗಿಸಲ್ಪಡುತ್ತಿದ್ದ ಕಪ್ಪು ಮೋಡಗಳಂತೆ ತೋರುತ್ತಿದ್ದವು. ಹಾಗೆ ಪ್ರಕಾಶಿತಗೊಂಡ ಸೇನೆಗಳ ಮಧ್ಯೆ ಸುವರ್ಣಕವಚವನ್ನು ಧರಿಸಿದ್ದ ದ್ರೋಣನು ಮಧ್ಯಾಹ್ನದ ಸೂರ್ಯನಂತೆ ಅಗ್ನಿಸದೃಶನಾಗಿ ಬೆಳಗುತ್ತಿದ್ದನು. ಸುವರ್ಣಮಯ ಆಭರಣಗಳಲ್ಲಿಯೂ, ಎದೆಗೆ ಹಾಕುವ ಶುದ್ಧ ನಿಷ್ಕಗಳಲ್ಲಿಯೂ, ಧನುಸ್ಸುಗಳಲ್ಲಿಯೂ, ಪೀತಲ ಶಸ್ತ್ರಗಳಲ್ಲಿಯೂ ಪಂಜುಗಳ ಬೆಳಕು ಪ್ರತಿಬಿಂಬಿಸುತ್ತಿದ್ದವು. ಝಳಪಿಸುತ್ತಿದ್ದ ಗದೆಗಳೂ, ಶಕ್ತ್ಯಾಯುಧಗಳೂ, ಪರಿಘಗಳೂ, ರಥಶಕ್ತಿಗಳೂ ಪಂಜುಗಳನ್ನು ಪ್ರತಿಬಿಂಬಿಸುತ್ತಾ ಪುನಃ ಪುನಃ ಇನ್ನೂ ಅನೇಕ ದೀಪಗಳಿವೆಯೋ ಎನ್ನುವಂತೆ ತೋರುತ್ತಿತ್ತು. ಛತ್ರಗಳೂ, ಚಾಮರಗಳೂ, ಖಡ್ಗಗಳೂ, ಅಲ್ಲಾಡುತ್ತಿದ್ದ ಸುವರ್ಣಮಾಲೆಗಳೂ ಆಗ ದೀಪಗಳ ಬೆಳಕಿನಿಂದ ಶೋಭಾಯಮಾನವಾಗಿ ಕಾಣುತ್ತಿದ್ದವು. ಶಸ್ತ್ರಗಳ ಪ್ರಭೆಗಳಿಂದ ಮತ್ತು ದೀವಟಿಗೆಗಳ ಪ್ರಭೆಯಿಂದ ವಿರಾಜಮಾನವಾಗಿ ಕಾಣುತ್ತಿದ್ದ ಕೌರವ ಸೇನೆಯು ಆಗ ಆಭರಣ ಪ್ರಭೆಯಿಂದ ಇನ್ನೂ ಹೆಚ್ಚಿನ ಪ್ರಕಾಶದಿಂದ ಬೆಳಗುತ್ತಿತ್ತು. ಬಂಗಾರದ ಬಣ್ಣದ ಶಸ್ತ್ರಗಳೂ ಮತ್ತು ಅಲ್ಲಾಡುತಿದ್ದ ವೀರರ ಕವಚಗಳೂ ದೀವಟಿಗೆಗಳ ಪ್ರಭೆಯನ್ನು ಆಗಾಗ ಪ್ರತಿಬಿಂಬಿಸುತ್ತಿರಲು ಅಂತರಿಕ್ಷದಲ್ಲಿರುವ ಮಿಂಚುಗಳಂತೆ ಹೊಳೆಯುತ್ತಿದ್ದವು. ಹೊಡೆತಗಳ ವೇಗದಿಂದ ಪ್ರಕಂಪಿಸುತ್ತಿದ್ದ, ಪ್ರಹರಿಸಲು ವೇಗವಾಗಿ ಮುಂದೆ ಬರುತ್ತಿದ್ದ ಮನುಷ್ಯರ ಮುಖಗಳು ಗಾಳಿಯಿಂದ ವಿಚಲಿತವಾದ ದೊಡ್ಡ ದೊಡ್ಡ ಕಮಲಗಳಂತೆ ಕಾಣುತ್ತಿದ್ದವು. ಮಹಾವನದಲ್ಲಿ ಉರಿಯುತ್ತಿರುವ ಕಾಡ್ಗಿಚ್ಚು ಹೇಗೆ ಭಾಸ್ಕರನ ಪ್ರಭೆಯನ್ನೂ ಕುಂಠಿತಗೊಳಿಸುತ್ತದೆಯೋ ಹಾಗೆ ಆ ಮಹಾಭಯಂಕರ ಭೀಮರೂಪದ ಕೌರವ ಸೇನೆಯು ಬೆಳಗಿ ಪ್ರಕಾಶಿಸುತ್ತಿತ್ತು.
ಕೌರವರ ಸೇನೆಯು ಹಾಗೆ ಬೆಳಗುತ್ತಿರುವುದನ್ನು ನೋಡಿ ಪಾರ್ಥರೂ ಕೂಡ ಕೂಡಲೇ ತಮ್ಮ ಎಲ್ಲ ಸೇನೆಗಳ ಪದಾತಿಪಡೆಗಳಿಗೆ ದೀವಟಿಗೆಗಳನ್ನು ಹಿಡಿದು ಬೆಳಕುತೋರುವಂತೆ ಪ್ರಚೋದಿಸಿದರು. ಪ್ರತಿಯೊಂದು ಆನೆಯ ಮೇಲೂ ಏಳೇಳು ದೀಪಗಳನ್ನಿಟ್ಟಿದ್ದರು. ಪ್ರತಿಯೊಂದು ರಥದಲ್ಲಿ ಹತ್ತು ಹತ್ತು ದೀಪಗಳನ್ನಿಟ್ಟಿದ್ದರು. ಪ್ರತಿಯೊಂದು ಕುದುರೆಯ ಮೇಲೂ, ಪಾರ್ಶ್ವಗಳಲ್ಲಿಯೂ, ಧ್ವಜಗಳಲ್ಲಿಯೂ ಮತ್ತು ಜಘನಗಳಲ್ಲಿಯೂ ಎರಡೆರಡು ದೀಪಗಳನ್ನು ಇಟ್ಟಿದ್ದರು. ಎಲ್ಲ ಸೇನೆಗಳ ಪಾರ್ಶ್ವಗಳಲ್ಲಿಯೂ, ಹಿಂದೆ-ಮುಂದೆ ಮತ್ತು ಸುತ್ತಲೂ, ಮಧ್ಯದಲ್ಲಿಯೂ ಉರಿಯುತ್ತಿರುವ ದೀವಟಿಗೆಗಳನ್ನು ಹಿಡಿದ ನರರು ಎರಡೂ ಸೇನೆಗಳ ಮಧ್ಯೆ ಸಂಚರಿಸುತ್ತಿದ್ದರು. ಎಲ್ಲ ಸೇನೆಗಳಲ್ಲಿಯೂ ಪದಾತಿಪಡೆಗಳು ಆನೆ-ರಥ-ಕುದುರೆಗಳ ಗುಂಪುಗಳೊಡನೆ ಮಧ್ಯ ಮಧ್ಯದಲ್ಲಿ ಮಿಶ್ರಿತವಾಗಿ ಪಾಂಡುಸುತನ ಸೇನೆಯನ್ನು ಬೆಳಗಿಸಿದರು. ಕಿರಣಗಳನ್ನು ಹೊರಸೂಸುವ ಮತ್ತು ಕಿರಣಗಳನ್ನು ಹೊಂದಿರುವ ದಿವಾಕರ ಸೂರ್ಯಗ್ರಹನಿಂದ ರಕ್ಷಿತ ಅಗ್ನಿಯು ರಾತ್ರಿಯಲ್ಲಿ ಹೆಚ್ಚು ಪ್ರಕಾಶಮಾನನಾಗಿ ಉರಿಯುವಂತೆ ಯುಧಿಷ್ಠಿರನ ಸೇನೆಗಳ ದೀಪಗಳಿಂದ ಕೌರವ ಸೇನೆಗಳ ಪ್ರಕಾಶವೂ ಹೆಚ್ಚಾಗಿ ತೋರಿತು. ಆ ಪ್ರಭೆಗಳು ಪೃಥ್ವಿ, ಅಂತರಿಕ್ಷ ಮತ್ತು ಎಲ್ಲ ದಿಕ್ಕುಗಳನ್ನೂ ಅತಿಕ್ರಮಿಸಿ ಬೆಳೆಯಲು ಅವುಗಳ ಪ್ರಕಾಶದಿಂದ ಕೌರವರ ಮತ್ತು ಪಾಂಡವರ ಸೇನೆಗಳು ಇನ್ನೂ ಪ್ರಕಾಶಮಾನವಾಗಿ ಕಾಣುತ್ತಿದ್ದವು.
ಆ ಬೆಳಕಿನಿಂದ ಆಹ್ವಾನಿತರಾಗಿ ದಿವಂಗಮದಲ್ಲಿ ದೇವಗಣಗಳೂ, ಗಂಧರ್ವ-ಯಕ್ಷ-ಅಸುರ-ಸಿದ್ಧ ಸಂಘಗಳು ಮತ್ತು ಎಲ್ಲ ಅಪ್ಸರೆಯರೂ ಬಂದು ಸೇರಿದರು. ಆ ದೇವ-ಗಂಧರ್ವ ಸಮಾಕುಲಗಳಿಂದ, ಯಕ್ಷ-ಅಸುರ-ಇಂದ್ರ ಅಪ್ಸರ ಗಣಗಳಿಂದ ಮತ್ತು ಹತರಾಗಿ ದಿವವನ್ನು ಏರಿದ್ದ ವೀರರಿಂದ ಕೂಡಿದ್ದ ಆ ಆಕಾಶವು ಸ್ವರ್ಗಲೋಕದಂತೆಯೇ ಕಂಡಿತು. ಬೆಳಗುತ್ತಿರುವ ರಥ-ಅಶ್ವ-ಗಜ ಸಮೂಹಗಳಿಂದ, ಹತರಾಗುತ್ತಿದ್ದ ಮತ್ತು ಓಡಿಹೋಗುತ್ತಿದ್ದ ಯೋಧರಿಂದ ಕೂಡಿದ್ದ ಆ ರಥಾಶ್ವಗಜ ಸೇನೆಗಳ ಮಹಾಬಲವು ಸುರಾಸುರರ ವ್ಯೂಹಗಳ ಸಮನಾಗಿದ್ದವು. ಆ ರಾತ್ರಿಯ ಯುದ್ಧದಲ್ಲಿ ಶಕ್ತ್ಯಾಯುಧಗಳ ಪ್ರಯೋಗವೇ ಚಂಡಮಾರುತವಾಗಿತ್ತು. ಮಹಾರಥಗಳೇ ಮೋಡಗಳಾಗಿದ್ದವು. ರಥ-ಕುದುರೆಗಳ ಘೋಷವೇ ಗುಡುಗುಗಳಾಗಿದ್ದವು. ಶಸ್ತ್ರಗಳ ಪ್ರಯೋಗವೇ ಸುರಿಮಳೆಯಂತಿತ್ತು. ರಕ್ತವೇ ಮಳೆಯ ನೀರಾಗಿತ್ತು. ಮಳೆಗಾಲವು ಮುಗಿಯುತ್ತಲೇ ಹೇಗೆ ಸೂರ್ಯನು ಆಕಾಶದ ಮಧ್ಯದಲ್ಲಿಯೇ ಇರುತ್ತಾನೋ ಹಾಗೆ ಆ ಸೇನೆಯಲ್ಲಿ ಮಹಾಅಗ್ನಿಪ್ರತಿಮನಾಗಿದ್ದ ಮಹಾತ್ಮ ದ್ರೋಣನು ಪಾಂಡವ ಪ್ರಮುಖರನ್ನು ಸಂತಾಪಗೊಳಿಸಿದನು.
ದುರ್ಯೋಧನನು ದ್ರೋಣನನ್ನು ರಕ್ಷಿಸಲು ಆದೇಶವನ್ನಿತ್ತಿದುದು
ಕತ್ತಲೆಯು ತುಂಬಿದ್ದ ಆ ರಾತ್ರಿಯಲ್ಲಿ ಲೋಕವು ಹಾಗೆ ಪ್ರಕಾಶಿತಗೊಂಡಿರಲು ಪರಸ್ಪರರನ್ನು ವಧಿಸಲು ಬಯಸಿದ ವೀರರಥರು ಸೇರಿದರು. ಪರಸ್ಪರರನ್ನು ಅಪರಾಧಿಗಳೆಂದು ತಿಳಿದು ಶಸ್ತ್ರ-ಪ್ರಾಸಗಳನ್ನು ಹಿಡಿದ ಅವರು ರಣದಲ್ಲಿ ಒಟ್ಟಾಗಿ ಪರಸ್ಪರರನ್ನು ವೀಕ್ಷಿಸುತ್ತಿದ್ದರು. ಎಲ್ಲ ಕಡೆಗಳಲ್ಲಿ ಸಹಸ್ರಾರು ದೀಪಗಳಿಂದ ಬೆಳಗುತ್ತಿದ್ದ ಆ ರಣಭೂಮಿಯು ಗ್ರಹಗಳಿಂದ ತುಂಬಿದ ಆಕಾಶದಂತೆ ವಿರಾಜಿಸುತ್ತಿತ್ತು. ನೂರಾರು ದೀವಟಿಗೆಗಳಿಂದ ಪ್ರಜ್ವಲಿತಗೊಂಡ ಆ ರಣಭೂಮಿಯು ಪ್ರಳಯಕಾಲದಲ್ಲಿ ದಹಿಸುತ್ತಿರುವ ವಸುಂಧರೆಯಂತೆ ವಿರಾಜಿಸುತ್ತಿತ್ತು. ಸುತ್ತಲೂ ಇದ್ದ ಆ ದೀವಟಿಗೆಗಳಿಂದ ಎಲ್ಲ ದಿಕ್ಕುಗಳೂ ಬೆಳಗಿ, ವರ್ಷಾಕಾಲದ ಪ್ರದೋಷಕಾಲದಲ್ಲಿ ಮಿಂಚುಹುಳುಗಳಿಂದ ತುಂಬಿದ ವೃಕ್ಷಗಳಂತೆ ತೋರುತ್ತಿದ್ದವು. ಅಲ್ಲಿ ವೀರರು ವೀರರೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಯುದ್ಧದಲ್ಲಿ ತೊಡಗಿದರು. ಆನೆಗಳು ಆನೆಗಳೊಡನೆಯೂ ಅಶ್ವಾರೋಹಿಗಳು ಅಶ್ವಾರೋಹಿಗಳೊಡನೆಯೂ ಯುದ್ಧದಲ್ಲಿ ತೊಡಗಿದರು. ಆ ಘೋರ ರಾತ್ರಿಯ ಪ್ರಾರಂಭದಲ್ಲಿ ದುರ್ಯೋಧನನ ಶಾಸನದಂತೆ ರಥಾರೂಢರು ಮುದಾನ್ವಿತರಾಗಿ ರಥಾರೂಢರೊಂದಿಗೇ ಯುದ್ಧದಲ್ಲಿ ತೊಡಗಿದರು. ಆಗ ಅರ್ಜುನನು ತ್ವರೆಮಾಡಿ ಎಲ್ಲ ಪಾರ್ಥಿವರನ್ನೂ ಸಂಹರಿಸುತ್ತಾ ಕೌರವರ ಸೇನೆಯನ್ನು ಧ್ವಂಸಗೊಳಿಸಲು ಉಪಕ್ರಮಿಸಿದನು.
ಆ ರಾತ್ರಿಯಲ್ಲಿ ದ್ರೋಣನು ಯುದ್ಧಮಾಡಲು ಬಯಸುತ್ತಿದ್ದಾನೆಂದು ತಿಳಿದ ದುರ್ಯೋಧನನು ತನ್ನ ವಶವರ್ತಿಗಳಾಗಿದ್ದ ಅನುಜರಿಗೆ – ವಿಕರ್ಣ, ಚಿತ್ರಸೇನ, ದುರ್ಧರ್ಷ, ದೀರ್ಘಬಾಹು ಮತ್ತು ಅವರ ಅನುಯಾಯಿಗಳಿಗೆ ಹೇಳಿದನು: “ಪರಾಕ್ರಾಂತರಾದ ನೀವೆಲ್ಲರೂ ಪ್ರಯತ್ನಪಟ್ಟು ದ್ರೋಣನನ್ನು ಹಿಂದಿನಿಂದ ರಕ್ಷಿಸಿ. ಹಾಗೆಯೇ ಕೃತವರ್ಮನು ಅವನ ಬಲಚಕ್ರವನ್ನೂ ಶಲ್ಯನು ಎಡ ಚಕ್ರವನ್ನೂ ರಕ್ಷಿಸಲಿ!”
ತ್ರಿಗರ್ತರಲ್ಲಿ ಅಳಿದುಳಿದಿದ್ದ ಮಹಾರಥರೆಲ್ಲರನ್ನು ಕೂಡ ದುರ್ಯೋಧನನು ದ್ರೋಣನ ರಥದ ಮುಂಬಾಗದಲ್ಲಿ ಹೋಗುವಂತೆ ಪ್ರಚೋದಿಸಿದನು. “ಆಚಾರ್ಯನು ಚೆನ್ನಾಗಿ ಪ್ರಯತ್ನಿಸುತ್ತಿರುವನು. ಪಾಂಡವರೂ ಕೂಡ ಚೆನ್ನಾಗಿ ಪ್ರಯತ್ನಿಸುತ್ತಿದ್ದಾರೆ. ರಣದಲ್ಲಿ ಶತ್ರುಗಳನ್ನು ಸಂಹರಿಸುವ ದ್ರೋಣನನ್ನು ನೀವು ಅತಿ ಪ್ರಯತ್ನದಿಂದ ರಕ್ಷಿಸಿರಿ. ಏಕೆಂದರೆ ದ್ರೋಣನೇ ಬಲವಾನನು. ಯುದ್ಧದಲ್ಲಿ ವೇಗದ ಕೈಚಳಕವುಳ್ಳವನು. ಪರಾಕ್ರಮಿಯು. ಯುದ್ಧದಲ್ಲಿ ತ್ರಿದಶರನ್ನೂ ಜಯಿಸಬಲ್ಲನು. ಇನ್ನು ಸೋಮಕರೊಂದಿಗೆ ಪಾರ್ಥರು ಯಾವ ಲೆಖ್ಕಕ್ಕೆ? ನೀವೆಲ್ಲ ಮಹಾರಥರೂ ಒಟ್ಟಾಗಿ ಬಹಳ ಪ್ರಯತ್ನದಿಂದ ದ್ರೋಣನನ್ನು ಮಹಾರಥ ಪಾಂಚಾಲ್ಯ ಧ್ರುಷ್ಟದ್ಯುಮ್ನನಿಂದ ರಕ್ಷಿಸಿರಿ! ಧೃಷ್ಟದ್ಯುಮ್ನನನ್ನು ಬಿಟ್ಟು ಪಾಂಡವರ ಸೇನೆಯಲ್ಲಿ ರಣದಲ್ಲಿ ದ್ರೋಣನನ್ನು ಜಯಿಸಬಲ್ಲ ಬೇರೆ ಯೋಧರು ಯಾರನ್ನೂ ನಾನು ಕಾಣೆ! ಭಾರದ್ವಾಜನ ರಕ್ಷಣೆಯು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸಿರಿ. ಹಾಗೆ ನಮ್ಮಿಂದ ರಕ್ಷಿಸಲ್ಪಟ್ಟರೆ ಅವನು ರಾಜರೊಂದಿಗೆ ಸೃಂಜಯರನ್ನು ಸಂಹರಿಸಬಲ್ಲನು. ಹಾಗೆ ಸೃಂಜಯರು ಎಲ್ಲರೂ ಹತರಾದನಂತರ ರಣಭೂಮಿಯಲ್ಲಿ ಧೃಷ್ಟದ್ಯುಮ್ನನನ್ನು ದ್ರೌಣಿ ಅಶ್ವತ್ಥಾಮನು ಸಂಹರಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ರಣದಲ್ಲಿ ಮಹಾರಥ ಕರ್ಣನು ಅರ್ಜುನನನ್ನು ಜಯಿಸುತ್ತಾನೆ. ಕವಚಧಾರಿಯಾಗಿ ನಾನು ಯುದ್ಧದಲ್ಲಿ ಭೀಮಸೇನನನ್ನು ಜಯಿಸುತ್ತೇನೆ. ಹೀಗೆ ನನ್ನ ವಿಜಯವು ದೀರ್ಘಕಾಲದವರೆಗೂ ಇರುತ್ತದೆ ಎಂದು ವ್ಯಕ್ತವಾಗುತ್ತಿದೆ. ಆದುದರಿಂದ ಮಹಾರಥರೇ! ಸಂಗ್ರಾಮದಲ್ಲಿ ದ್ರೋಣನನ್ನೇ ರಕ್ಷಿಸಿರಿ!”
ಹೀಗೆ ಹೇಳಿ ದುರ್ಯೋಧನನು ಆ ದಾರುಣ ರಾತ್ರಿಯಲ್ಲಿ ಸೈನ್ಯಕ್ಕೆ ಆದೇಶಗಳನ್ನಿತ್ತನು. ಆಗ ಆ ರಾತ್ರಿಯಲ್ಲಿ ವಿಜಯದ ಗುರಿಯನ್ನೇ ಬಯಸಿದ ಎರಡೂ ಸೇನೆಗಳ ಮಧ್ಯೆ ಘೋರ ಯುದ್ಧವು ನಡೆಯಿತು. ಅರ್ಜುನನು ಕೌರವ ಸೇನೆಯನ್ನೂ, ಕೌರವರು ಅರ್ಜುನನನ್ನೂ ಅನ್ಯೋನ್ಯರನ್ನು ನಾನಾ ಶಸ್ತ್ರಗಳನ್ನು ಬಳಸಿ ಪೀಡಿಸಿದರು. ಯುದ್ಧದಲ್ಲಿ ದ್ರೌಣಿಯು ಪಾಂಚಾಲರಾಜರನ್ನೂ ಭಾರದ್ವಾಜನು ಸೃಂಜಯರನ್ನೂ ಸನ್ನತಪರ್ವ ಶರಗಳಿಂದ ಮುಸುಕತೊಡಗಿದರು. ಪರಸ್ಪರರನ್ನು ಸಂಹರಿಸುತ್ತಿದ್ದ ಪಾಂಡು-ಪಾಂಚಾಲ ಸೇನೆ ಮತ್ತು ಕುರು ಸೇನೆಗಳಲ್ಲಿ ಘೋರ ಆರ್ತನಾದಗಳುಂಟಾದವು. ಈಗಿನವರಾಗಲೀ ಪೂರ್ವಜರಾಗಲೀ ಅಂತಹ ಯುದ್ಧವನ್ನು ಕಂಡಿರಲಿಲ್ಲ ಕೇಳಿರಲಿಲ್ಲ. ಅಂತಹ ಮಹಾಭಯಂಕರ ಯುದ್ಧವು ಆ ರಾತ್ರಿ ನಡೆಯಿತು.
ಆ ರೌದ್ರ ಸರ್ವಭೂತಕ್ಷಯಕರ ರಾತ್ರಿಯುದ್ಧವು ನಡೆಯುತ್ತಿರಲು ಯುಧಿಷ್ಠಿರನು ಪಾಂಡವ-ಪಾಂಚಾಲ-ಸೋಮಕರನ್ನುದ್ದೇಶಿಸಿ “ದ್ರೋಣನನ್ನೇ ಸಂಹರಿಸುವ ಉದ್ದೇಶದಿಂದ ಹೋಗಿ ಆಕ್ರಮಣ ಮಾಡಿ!” ಎಂದು ಹೇಳಿದನು. ರಾಜನ ಆ ಮಾತುಗಳಂತೆ ಪಾಂಚಾಲ-ಸೋಮಕರು ಭೈರವ ಗರ್ಜನೆಯನ್ನು ಗರ್ಜಿಸುತ್ತಾ ದ್ರೋಣನನ್ನೇ ಆಕ್ರಮಣಿಸಿದರು. ಪ್ರತಿಯಾಗಿ ಗರ್ಜಿಸುತ್ತಾ ಕೋಪದಿಂದ ಕೌರವರು ಅವರನ್ನು ಎದುರಿಸಿ ಯಥಾಶಕ್ತಿಯಾಗಿ, ಯಥೋತ್ಸಾಹದಿಂದ ಮತ್ತು ಯಥಾಸತ್ತ್ವದೊಂದಿಗೆ ರಣದಲ್ಲಿ ಯುದ್ಧಮಾಡಿದರು.
ಸಂಹರಿಸಲು ದ್ರೋಣನ ಕಡೆ ಬರುತ್ತಿದ್ದ ಯುಧಿಷ್ಠಿರನನ್ನು ಮದಿಸಿದ ಆನೆಯೊಂದನ್ನು ಇನ್ನೊಂದು ಮದಿಸಿದ ಆನೆಯು ತಡೆಯುವಂತೆ ಹಾರ್ದಿಕ್ಯ ಕೃತವರ್ಮನು ತಡೆದು ಆಕ್ರಮಣಿಸಿದನು. ಸುತ್ತಲೂ ಶರಗಳ ಮಳೆಯನ್ನು ಸುರಿಸುತ್ತಿದ್ದ ಶೈನೇಯ ಸಾತ್ಯಕಿಯನ್ನು ಸಂಗ್ರಾಮದ ನಡುವಿನಲ್ಲಿ ಕೌರವ ಭೂರಿಯು ಎದುರಿಸಿದನು. ದ್ರೋಣನ ಬಳಿಹೋಗಲು ಬರುತ್ತಿದ್ದ ಸಹದೇವನನ್ನು ಕರ್ಣನು ತಡೆದನು. ಬಾಯಿಕಳೆದ ಅಂತಕನಂತೆ ಬರುತ್ತಿದ್ದ ಮತ್ತು ಮೃತ್ಯುವಂತೆ ಬೆಳಗುತ್ತಿದ್ದ ಭೀಮಸೇನನನ್ನು ಸ್ವಯಂ ದುರ್ಯೋಧನನೇ ಯುದ್ಧದಲ್ಲಿ ಎದುರಿಸಿದನು. ಸರ್ವಯುದ್ಧವಿಶಾರದ ನಕುಲನನ್ನು ತ್ವರೆಮಾಡಿ ಶಕುನಿಯು ತಡೆದನು. ರಥದಲ್ಲಿ ಮುಂದುವರೆದು ಬರುತ್ತಿದ್ದ ಶಿಖಂಡಿಯನ್ನು ಕೃಪನು ತಡೆದನು. ನವಿಲಿನ ಬಣ್ಣದ ಕುದುರೆಗಳನ್ನು ಕಟ್ಟಿದ ರಥದಲ್ಲಿ ಬರುತ್ತಿದ್ದ ಪ್ರತಿವಿಂದ್ಯನನ್ನು ದುಃಶಾಸನನು ತಡೆದನು. ಬರುತ್ತಿದ್ದ ಘಟೋತ್ಕಚನನ್ನು ತಂದೆಯ ಮಾನವನ್ನು ಕಾಯುತ್ತಾ ಅಶ್ವತ್ಥಾಮನು ಎದುರಿಸಿ ಯುದ್ಧಮಾಡಿದನು. ದ್ರೋಣನನ್ನು ತಲುಪಲು ಪ್ರಯತ್ನಿಸುತ್ತಿದ್ದ ಮಹಾರಥ ದ್ರುಪದನನ್ನು, ಅವನ ಸೇನೆ ಅನುಯಾಯಿಗಳೊಂದಿಗೆ ವೃಷಸೇನನು ತಡೆದನು. ದ್ರೋಣನ ಸಾವನ್ನು ಬಯಸಿ ಬರುತ್ತಿದ್ದ ವಿರಾಟನನ್ನು ಶಲ್ಯನು ತಡೆದನು. ಶರಗಳಿಂದ ದ್ರೋಣನನ್ನು ವಧಿಸಲು ಬಯಸಿ ರಭಸದಿಂದ ರಣದಲ್ಲಿ ಬರುತ್ತಿರುವ ನಕುಲನ ಮಗ ಶತಾನೀಕನನ್ನು ಚಿತ್ರಸೇನನು ತಡೆಹಿಡಿದನು. ಧಾವಿಸಿಬರುತ್ತಿದ್ದ ಅರ್ಜುನನನ್ನು ರಾಕ್ಷಸೇಂದ್ರ ಅಲಂಬುಸನು ತಡೆದನು. ಹಾಗೆಯೇ ರಣದಲ್ಲಿ ಶತ್ರುಗಳನ್ನು ಸಂಹರಿಸುತ್ತಿದ್ದ ದ್ರೋಣನನ್ನು ಧೃಷ್ಟದ್ಯುಮ್ನನು ತಡೆದನು. ಹಾಗೆ ಒಟ್ಟಾಗಿ ಬರುತ್ತಿದ್ದ ಪಾಂಡುಪುತ್ರ ಮಹಾರಥರನ್ನು ಕೌರವ ರಥಿಗಳು ಬಹಳ ತೇಜಸ್ಸಿನಿಂದ ತಡೆದರು.
ಆ ಮಹಾಯುದ್ಧದಲ್ಲಿ ತಕ್ಷಣವೇ ನೂರಾರು ಸಹಸ್ರಾರು ಗಜಾರೋಹಿಗಳು ಅನೇಕ ಗಜಾರೋಹಿಗಳನ್ನು ಎದುರಿಸಿ ಯುದ್ಧಮಾಡುತ್ತಿರುವುದು ಕಂಡುಬಂದಿತು. ಆ ರಾತ್ರಿಯಲ್ಲಿ ಪರಸ್ಪರರನ್ನು ಆಕ್ರಮಣಿಸುತ್ತಿದ್ದ ಕುದುರೆಗಳು ರೆಕ್ಕೆಗಳುಳ್ಳ ಪರ್ವತಗಳು ವೇಗದಿಂದ ಚಲಿಸುತ್ತಿರುವಂತೆ ತೋರುತ್ತಿದ್ದವು. ಅಶ್ವಾರೋಹಿಗಳು ಅಶ್ವಾರೋಹಿಗಳೊಡನೆ ಪ್ರಾಸ-ಶಕ್ತಿ-ಋಷ್ಟಿಗಳನ್ನು ಹಿಡಿದು ಗರ್ಜಿಸುತ್ತಾ ಪ್ರತ್ಯೇಕ ಪ್ರತ್ಯೇಕವಾಗಿ ಎದುರಿಸಿ ಯುದ್ಧಮಾಡಿದರು. ಅಲ್ಲಿ ಅನೇಕ ಪದಾತಿಗಳು ಗದೆ-ಮುಸಲ ಮತ್ತು ನಾನಾ ಶಸ್ತ್ರಗಳಿಂದ ಗುಂಪು ಗುಂಪಾಗಿ ಪರಸ್ಪರರನ್ನು ಎದುರಿಸಿ ಯುದ್ಧಮಾಡತೊಡಗಿದರು.
ಯುಧಿಷ್ಠಿರ-ಕೃತವರ್ಮರ ಯುದ್ಧ
ಕೃತವರ್ಮನಾದರೋ ಉಕ್ಕಿಬರುತ್ತಿರುವ ಸಾಗರವನ್ನು ದಡವು ತಡೆಯುವಂತೆ ಸಂಕ್ರುದ್ಧನಾಗಿ ಧರ್ಮಪುತ್ರ ಯುಧಿಷ್ಠಿರನನ್ನು ತಡೆದನು. ಯುಧಿಷ್ಠಿರನಾದರೋ ಹಾರ್ದಿಕ್ಯನನ್ನು ಐದು ಆಶುಗಗಳಿಂದ ಮತ್ತು ಪುನಃ ಇಪ್ಪತ್ತು ಬಾಣಗಳಿಂದ ಹೊಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು. ಕೃತವರ್ಮನಾದರೋ ಸಂಕ್ರುದ್ಧನಾಗಿ ಧರ್ಮಪುತ್ರನ ಧನುಸ್ಸನ್ನು ಭಲ್ಲದಿಂದ ತುಂಡರಿಸಿ ಅವನನ್ನು ಏಳು ಭಲ್ಲಗಳಿಂದ ಹೊಡೆದನು. ಆಗ ಯುಧಿಷ್ಠಿರನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಹತ್ತು ಬಾಣಗಳಿಂದ ಹಾರ್ದಿಕ್ಯನ ಎದೆಗೆ ಹೊಡೆದನು. ಧರ್ಮಪುತ್ರನಿಂದ ಹೊಡೆಯಲ್ಪಟ್ಟ ಕೃತವರ್ಮನಾದರೋ ರಣದಲ್ಲಿ ನಡುಗಿದನು ಮತ್ತು ರೋಷದಿಂದ ಅವನನ್ನು ಏಳು ಶರಗಳಿಂದ ಹೊಡೆದನು. ಯುಧಿಷ್ಠಿರನು ಅವನ ಧನುಸ್ಸನ್ನು ಕತ್ತರಿಸಿ, ಹಸ್ತಾವಾಪವನ್ನು ಕಳಚುವಂತೆ ಮಾಡಿ, ಅವನ ಮೇಲೆ ಐದು ಶಿಲಾಶಿತ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಆ ಉಗ್ರ ಬಾಣಗಳು ಕೃತವರ್ಮನ ಬಂಗಾರದ ಕವಚವನ್ನು ಸೀಳಿ ಸರ್ಪವು ಬಿಲವನ್ನು ಪ್ರವೇಶಿಸುವಂತೆ ಧರಣಿಯನ್ನು ಕೊರೆದು ಪ್ರವೇಶಿಸಿತು. ರೆಪ್ಪೆ ಹೊಡೆಯುವುದರೊಳಗೆ ಕೃತವರ್ಮನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪಾಂಡವ ಯುಧಿಷ್ಠಿರನನ್ನು ಅರವತ್ತು ಬಾಣಗಳಿಂದಲೂ ಅವನ ಸಾರಥಿಯನ್ನು ಒಂಬತ್ತು ಬಾಣಗಳಿಂದಲೂ ಹೊಡೆದನು. ಆಗ ಪಾಂಡವನು ತನ್ನ ಧನುಸ್ಸನ್ನು ರಥದಲ್ಲಿರಿಸಿ ಸರ್ಪದಂತಿದ್ದ ಶಕ್ತ್ಯಾಯುಧವನ್ನು ಕೃತವರ್ಮನ ಮೇಲೆ ಎಸೆದನು. ಪಾಂಡವನಿಂದ ಪ್ರಯೋಗಿಸಲ್ಪಟ್ಟ ಬಂಗಾರದ ಚಿತ್ರಗಳಿದ್ದ ಆ ಮಹಾ ಶಕ್ತಿಯು ಕೃತವರ್ಮನ ಬಲತೋಳನ್ನು ಭೇದಿಸಿ ಭೂಮಿಯನ್ನು ಪ್ರವೇಶಿಸಿತು. ಅಷ್ಟೇ ಸಮಯದಲ್ಲಿ ಪಾರ್ಥನು ಪುನಃ ಧನುಸ್ಸನ್ನು ಹಿಡಿದು ಸನ್ನತಪರ್ವ ಶರಗಳಿಂದ ಹಾರ್ದಿಕ್ಯನನ್ನು ಮುಚ್ಚಿದನು. ಆಗ ಸಮರ ಶೂರ ಕೃತವರ್ಮನು ನಿಮಿಷಾರ್ಧದಲ್ಲಿ ಯುಧಿಷ್ಠಿರನನ್ನು ಅಶ್ವ-ಸೂತರಹಿತನನ್ನಾಗಿ ಮಾಡಿದನು. ಆಗ ಜ್ಯೇಷ್ಠ ಪಾಂಡವನು ಖಡ್ಗ ಗುರಾಣಿಗಳನ್ನು ತೆಗೆದುಕೊಳ್ಳಲು ಅವುಗಳನ್ನು ಕೂಡ ರಣದಲ್ಲಿ ಮಾಧವನು ನಿಶಿತಬಾಣಗಳಿಂದ ಕತ್ತರಿಸಿದನು. ಆಗ ತಕ್ಷಣವೇ ಯುಧಿಷ್ಠಿರನು ಸಮರದಲ್ಲಿ ಸ್ವರ್ಣದಂಡದ ದುರಾಸದ ತೋಮರವನ್ನು ಹಿಡಿದು ಅದನ್ನು ಹಾರ್ದಿಕ್ಯನ ಮೇಲೆ ಎಸೆದನು. ಧರ್ಮರಾಜನಿಂದ ಹೊರಟು ತನ್ನ ಮೇಲೆ ಒಮ್ಮೆಲೇ ಬೀಳುತ್ತಿದ್ದ ಅದನ್ನು ಹಾರ್ದಿಕ್ಯನು ಮುಗುಳ್ನಗುತ್ತಾ ಎರಡಾಗಿ ಕತ್ತರಿಸಿದನು. ಅನಂತರ ನೂರಾರು ಶರಗಳಿಂದ ಧರ್ಮಪುತ್ರನನ್ನು ಮುಚ್ಚಿ, ಸಂಕ್ರುದ್ಧನಾಗಿ ತೀಕ್ಷ್ಣ ಶರಗಳಿಂದ ಅವನ ಕವಚವನ್ನೂ ಸೀಳಿದನು. ಹಾರ್ದಿಕ್ಯನ ಶರಗಳಿಂದ ತುಂಡಾದ ಆ ಮಹಾತ್ಮನ ಕವಚವು ತುಂಡು ತುಂಡಾಗಿ ಆಕಾಶದಿಂದ ನಕ್ಷತ್ರಗಳು ಉದುರುವಂತೆ ರಣದಲ್ಲಿ ಉದುರಿ ಬಿದ್ದಿತು. ಹಾಗೆ ಧನುಸ್ಸನ್ನು ಕತ್ತರಿಸಿಕೊಂಡು, ವಿರಥನಾಗಿ, ಕವಚವನ್ನು ತುಂಡರಿಸಿಕೊಂಡು, ಶರಗಳಿಂದ ಗಾಯಗೊಂಡು ಯುಧಿಷ್ಠಿರನು ತಕ್ಷಣವೇ ರಣಭೂಮಿಯಿಂದ ಪಲಾಯನಮಾಡಿದನು. ಹೀಗೆ ಧರ್ಮಪುತ್ರ ಯುಧಿಷ್ಠಿರನನ್ನು ಪರಾಜಯಗೊಳಿಸಿ ಕೃತವರ್ಮನು ದ್ರೋಣನ ರಥಚಕ್ರದ ರಕ್ಷಣೆಯಲ್ಲಿ ನಿರತನಾದನು.
ಸಾತ್ಯಕಿಯಿಂದ ಭೂರಿಯ ವಧೆ
ಮುಂದುವರೆದು ಬರುತ್ತಿರುವ ಸಾತ್ಯಕಿಯನ್ನು ಆನೆಯೊಂದನ್ನು ತಡೆಹಿಡಿಯುವಂತೆ ಸಮರದಲ್ಲಿ ಭೂರಿಯು ತಡೆದು ಯುದ್ಧಮಾಡಿದನು. ಆಗ ಕ್ರುದ್ಧ ಸಾತ್ಯಕಿಯು ಐದು ನಿಶಿತ ಶರಗಳಿಂದ ಭೂರಿಯ ಹೃದಯದಲ್ಲಿ ಪ್ರಯೋಗಿಸಲು, ಅಲ್ಲಿಂದ ರಕ್ತವು ಧಾರಾಕಾರವಾಗಿ ಸುರಿಯತೊಡಗಿತು. ಹಾಗೆಯೇ ಯುದ್ಧದಲ್ಲಿ ಕೌರವ ಭೂರಿಯೂ ಕೂಡ ಶೈನೇಯನ ಭುಜಾಂತರದಲ್ಲಿ ಹತ್ತು ತೀಕ್ಷ್ಣ ವಿಶಿಖಗಳಿಂದ ಹೊಡೆದನು. ಅವರಿಬ್ಬರೂ ಕ್ರೋಧದಿಂದ ಕೆಂಗಣ್ಣುಗಳುಳ್ಳವರಾಗಿ ಧನುಸ್ಸುಗಳನ್ನು ಟೇಂಕರಿಸುತ್ತಾ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು. ಯಮಾಂತಕರಂತೆ ಕ್ರುದ್ಧರಾಗಿದ್ದ ಅವರಿಬ್ಬರ ನಡುವಿನ ಸಾಯಕಗಳ ಶರವೃಷ್ಟಿಯು ಸುದಾರುಣವಾಗಿತ್ತು. ಅವರಿಬ್ಬರೂ ಅನ್ಯೋನ್ಯರನ್ನು ಸಮರದಲ್ಲಿ ಶರಗಳಿಂದ ಮುಚ್ಚಿ ನಿಂತರು. ಮುಹೂರ್ತಕಾಲ ಆ ಯುದ್ಧವು ಸಮರೂಪವಾಗಿದ್ದಿತು. ಆಗ ಸಮರದಲ್ಲಿ ಕ್ರುದ್ಧನಾದ ಶೈನೇಯನು ನಗುತ್ತಾ ಮಹಾತ್ಮ ಕೌರವನ ಧನುಸ್ಸನ್ನು ಕತ್ತರಿಸಿದನು. ಅವನ ಧನುಸ್ಸನ್ನು ತುಂಡರಿಸಿದ ನಂತರ ತಕ್ಷಣವೇ ಒಂಭತ್ತು ನಿಶಿತ ಶರಗಳಿಂದ ಅವನ ಹೃದಯಕ್ಕೆ ಹೊಡೆದು ನಿಲ್ಲುನಿಲ್ಲೆಂದು ಕೂಗಿದನು. ಹಾಗೆ ಶತ್ರುವಿನಿಂದ ಅತಿ ಬಲವಾಗಿ ಹೊಡೆಯಲ್ಪಟ್ಟ ಆ ಶತ್ರುತಾಪನ ಭೂರಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸಾತ್ವತನನ್ನು ಪ್ರತಿಯಾಗಿ ಹೊಡೆದನು. ಅವನು ಸಾತ್ವತನನ್ನು ಮೂರು ಬಾಣಗಳಿಂದ ಹೊಡೆದು ತೀಕ್ಷ್ಣ ಭಲ್ಲದಿಂದ ಅವನ ಧನುಸ್ಸನ್ನು ಕತ್ತರಿಸಿ ನಕ್ಕನು. ಧನುಸ್ಸು ತುಂಡಾಗಲು ಕ್ರೋಧಮೂರ್ಚಿತ ಸಾತ್ಯಕಿಯು ಅವನ ಎದೆಗೆ ಗುರಿಯಿಟ್ಟು ಮಹಾವೇಗವುಳ್ಳ ಶಕ್ತಿಯನ್ನು ಪ್ರಯೋಗಿಸಿದನು.
ಆ ಶಕ್ತಿಯಿಂದ ಭಿನ್ನಾಂಗನಾದ ಭೂರಿಯು ಉರಿಯುತ್ತಿರುವ ಕಿರಣಗಳ ಲೋಹಿತಾಂಗ ಅಂಗಾರಕನು ಆಕಾಶದಿಂದ ಬೀಳುವಂತೆ ರಥದಿಂದ ಕೆಳಗೆ ಬಿದ್ದನು. ರಣಾಂಗಣದಲ್ಲಿ ಶೂರ ಭೂರಿಯು ಹತನಾದುದನ್ನು ನೋಡಿ ಮಹಾರಥ ಅಶ್ವತ್ಥಾಮನು ವೇಗದಿಂದ ಶೈನೇಯನ ಕಡೆ ಧಾವಿಸಿ ಬಂದು ಮೋಡಗಳು ಮೇರುಪರ್ವತದ ಮೇಲೆ ಮಳೆಗರೆಯುವಂತೆ ಸಾತ್ಯಕಿಯ ಮೇಲೆ ಶರೌಘಗಳ ಮಳೆಗರೆದನು.
ಘಟೋತ್ಕಚ-ಅಶ್ವತ್ಥಾಮರ ಯುದ್ಧ
ಅಶ್ವತ್ಥಾಮನು ಶೈನೇಯನ ರಥದಕಡೆ ಅವಸರದಿಂದ ಹೋಗುತ್ತಿರುವುದನ್ನು ನೋಡಿ ಮಹಾರಥ ಘಟೋತ್ಕಚನು ಸಿಂಹನಾದಗೈಯುತ್ತಾ ಅಶ್ವತ್ಥಾಮನಿಗೆ ಹೇಳಿದನು: “ದ್ರೋಣಪುತ್ರ! ನಿಲ್ಲು ನಿಲ್ಲು! ನನ್ನಿಂದ ಜೀವಂತವಾಗಿ ಹೋಗಲಾರೆ! ಇಂದು ನಾನು ನಿನ್ನನ್ನು ಸ್ಕಂದನು ಮಹಿಷನನ್ನು ಸಂಹರಿಸಿದಂತೆ ಸಂಹರಿಸುತ್ತೇನೆ. ಇಂದು ರಣಾಂಗಣದಲ್ಲಿ ಯುದ್ದದಲ್ಲಿ ನಿನಗಿರುವ ಶ್ರದ್ಧೆಯನ್ನು ನಾಶಗೊಳಿಸುತ್ತೇನೆ!”
ರೋಷದಿಂದ ಕೆಂಗಣ್ಣನಾಗಿದ್ದ ಪರವೀರಹ ರಾಕ್ಷಸನು ಹೀಗೆ ಹೇಳಿ ಕ್ರುದ್ಧ ಕೇಸರಿಯು ಗಜೇಂದ್ರನನ್ನು ಹೇಗೋ ಹಾಗೆ ದ್ರೌಣಿಯನ್ನು ಆಕ್ರಮಣಿಸಿದನು. ಮೋಡಗಳ ಮಳೆಯಂತೆ ರಥದ ಅಚ್ಚುಗಳ ಗಾತ್ರದ ಬಾಣಗಳ ಮಳೆಯನ್ನು ಘಟೋತ್ಕಚನು ದ್ರೌಣಿಯ ಮೇಲೆ ಸುರಿಸಿದನು. ಮೇಲೆ ಬೀಳುತ್ತಿರುವ ಆ ಶರವೃಷ್ಟಿಯನ್ನು ದ್ರೌಣಿಯು ಅಲ್ಲಗಳೆಯುತ್ತಾ ಸಮರದಲ್ಲಿ ತಕ್ಷಣವೇ ಸರ್ಪಗಳ ವಿಷದಂತಿರುವ ಶರಗಳಿಂದ ನಾಶಗೊಳಿಸಿದನು. ಅನಂತರ ಆ ಅಶ್ವತ್ಥಾಮನು ನೂರು ಮರ್ಮಭೇದೀ ತೀಕ್ಷ್ಣ ಆಶುಗ ಶರಗಳಿಂದ ರಾಕ್ಷಸೇಂದ್ರ ಘಟೋತ್ಕಚನನ್ನು ಮುಚ್ಚಿದನು. ಹಾಗೆ ರಣಮೂರ್ಧನಿಯಲ್ಲಿ ಶರಗಳಿಂದ ಚುಚ್ಚಲ್ಪಟ್ಟ ರಾಕ್ಷಸನು ಮುಳ್ಳುಹಂದಿಯಂತೆಯೇ ಪ್ರಕಾಶಿಸಿದನು. ಆಗ ಕ್ರೋಧಸಮಾವಿಷ್ಟ ಭೈಮಸೇನಿಯು ವಜ್ರಾಯುಧದ ಮತ್ತು ಸಿಡಿಲಿನ ಪ್ರಭೆಗೆ ಸಮಾನ ಪ್ರಭೆಯುಳ್ಲ ಉಗ್ರ ಕ್ಷುರಪ್ರ, ಅರ್ಧಚಂದ್ರ, ನಾರಾಚ, ಶಿಲೀಮುಖ, ಮರಾಹಕರ್ಣ, ನಾಲೀಕ ಮತ್ತು ವಿಕರ್ಣ ಇವೇ ಮೊದಲಾದ ಬಾಣಗಳಿಂದ ದ್ರೌಣಿಯನ್ನು ಬಹಳವಾಗಿ ಗಾಯಗೊಳಿಸಿದನು. ಮಹಾತೇಜಸ್ವಿ ದ್ರೌಣಿಯು ಸ್ವಲ್ಪವೂ ವ್ಯಥಿತನಾಗದೇ ಕ್ರುದ್ಧನಾಗಿ ಸಿಡಿಲಿನಂತೆ ಘೋರಶಬ್ಧಮಾಡುತ್ತಾ ತನ್ನ ಮೇಲೆ ಬೀಳುತ್ತಿದ್ದ ಸಹಿಸಲಸಾಧ್ಯ ಆ ಅತುಲ ಶಸ್ತ್ರವೃಷ್ಟಿಯನ್ನು ಮಂತ್ರಿಸಿದ ದಿವ್ಯಾಸ್ತ್ರಗಳಿಂದ ಕೂಡಿದ ಘೋರ ಶರಗಳಿಂದ ಚಂಡಮಾರುತವು ಮೋಡಗಳನ್ನು ಹೇಗೋ ಹಾಗೆ ನಾಶಗೊಳಿಸಿದನು. ಆಗ ಅಂತರಿಕ್ಷದಲ್ಲಿ ಬಾಣಗಳ ಸಂಗ್ರಾಮವೇ ನಡೆಯುತ್ತಿದೆಯೋ ಎಂದು ಅನ್ನಿಸುತ್ತಿತ್ತು. ಆ ಘೋರದೃಶ್ಯವು ಯೋಧರ ಹರ್ಷವನ್ನು ಹೆಚ್ಚಿಸುತ್ತಿತ್ತು. ಅಸ್ತ್ರಗಳ ಪರಸ್ಪರ ಸಂಘರ್ಷಣೆಯಿಂದ ಹುಟ್ಟಿದ ಕಿಡಿಗಳಿಂದ ವ್ಯಾಪ್ತವಾದ ಆಕಾಶವು ಸಾಯಂಕಾಲ ಮಿಂಚುಹುಳುಗಳಿಂದ ವ್ಯಾಪ್ತವಾಗಿರುವಂತೆ ತೋರುತ್ತಿತ್ತು.
ದ್ರೌಣಿಯು ಮಾರ್ಗಣಗಳ ರಾಶಿಯಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ, ರಾಕ್ಷಸನನ್ನೂ ಮುಚ್ಚಿದನು. ಆಗ ಆ ಗಾಢ ರಾತ್ರಿಯಲ್ಲಿ ರಣದಲ್ಲಿ ದ್ರೌಣಿ-ರಾಕ್ಷಸರ ನಡುವೆ ಶಕ್ರ-ಪ್ರಹ್ರಾದರ ನಡುವೆ ನಡೆದಂತೆ ಯುದ್ಧವು ನಡೆಯಿತು. ಘಟೋತ್ಕಚನು ಸಂಕ್ರುದ್ಧನಾಗಿ ಕಾಲಜ್ವಲನ ಪ್ರಕಾಶವುಳ್ಳ ಹತ್ತು ಬಾಣಗಳಿಂದ ದ್ರೌಣಿಯ ಎದೆಗೆ ಹೊಡೆದನು. ರಾಕ್ಷಸನ ಆ ಉದ್ದ ಬಾಣಗಳಿಂದ ಗಾಯಗೊಂಡ ಮಹಾಬಲ ದ್ರೌಣಿಯು ಚಂಡಮಾರುತಕ್ಕೆ ಸಿಲುಕಿದ ವೃಕ್ಷದಂತೆ ಅಳ್ಳಾಡಿ ಹೋದನು. ಅವನು ಮೂರ್ಛೆಹೊಂದಿ ಧ್ವಜದಂಡವನ್ನು ಹಿಡಿದು ಕುಳಿತನು. ಆಗ ಕೌರವ ಸೈನ್ಯದಲ್ಲಿ ಎಲ್ಲರೂ ಹಾಹಾಕಾರಮಾಡಿದರು. ಅವರೆಲ್ಲರೂ ಅವನು ಹತನಾದನೆಂದೇ ಅಂದುಕೊಂಡರು. ಯುದ್ಧದಲ್ಲಿ ಅಶ್ವತ್ಥಾಮನ ಆ ಅವಸ್ಥೆಯನ್ನು ನೋಡಿ ಪಾಂಚಾಲರು ಮತ್ತು ಸೃಂಜಯರು ಸಿಂಹನಾದಗೈದರು.
ಸ್ವಲ್ಪಹೊತ್ತಿನಲ್ಲಿಯೇ ಎಚ್ಚೆತ್ತ ಮಹಾಬಲ ಅಶ್ವತ್ಥಾಮನು ಎಡಗೈಯಿಂದ ಧನುಸ್ಸನ್ನು ಮೀಟಿ ಧನುಸ್ಸನ್ನು ಆಕರ್ಣಾಂತವಾಗಿ ಸೆಳೆದು ಯಮದಂಡದಂತಿರುವ ಘೋರ ಉತ್ತಮ ಶರವನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿದನು. ಪುಂಖಗಳುಳ್ಳ ಆ ಉಗ್ರ ಉತ್ತಮ ಶರವು ರಾಕ್ಷಸನ ಹೃದಯವನ್ನು ಭೇದಿಸಿ ವಸುಧೆಯನ್ನು ಸೇರಿತು. ದ್ರೌಣಿಯಿಂದ ಅತಿಯಾಗಿ ಗಾಯಗೊಂಡ ರಾಕ್ಷಸೇಂದ್ರನು ರಥದಲ್ಲಿಯೇ ಕುಸಿದು ಕುಳಿತುಕೊಂಡನು. ಹೈಡಿಂಬನು ವಿಮೂಢನಾಗಿದ್ದುದನ್ನು ಕಂಡು ಅವನ ಸಾರಥಿಯು ತಕ್ಷಣವೇ ಗಾಬರಿಗೊಂಡು ಅವನನ್ನು ದ್ರೌಣಿಯ ಸಮೀಪದಿಂದ ದೂರಕ್ಕೆ ಕೊಂಡೊಯ್ದನು. ಹಾಗೆ ಸಮರದಲ್ಲಿ ರಾಕ್ಷಸೇಂದ್ರ ಘಟೋತ್ಕಚನನ್ನು ಗಾಯಗೊಳಿಸಿ ದ್ರೋಣಪುತ್ರನು ಜೋರಾಗಿ ಗರ್ಜಿಸಿದನು. ಕೌರವ ಸರ್ವಯೋಧರಿಂದ ಪ್ರಶಂಸಿಸಲ್ಪಟ್ಟ ಅಶ್ವತ್ಥಾಮನ ಮುಖವು ಮಧ್ಯಾಹ್ನದ ಭಾಸ್ಕರನಂತೆ ಬೆಳಗಿತು.
ಭೀಮ-ದುರ್ಯೋಧನರ ಯುದ್ಧ
ಭಾರದ್ವಾಜನ ರಥದ ಬಳಿ ಯುದ್ಧಮಾಡುತ್ತಿದ್ದ ಭೀಮಸೇನನನ್ನು ಸ್ವಯಂ ರಾಜಾ ದುರ್ಯೋಧನನು ನಿಶಿತ ಶರಗಳಿಂದ ಎದುರಿಸಿದನು. ಭೀಮಸೇನನು ಅವನನ್ನು ಒಂಭತ್ತು ಶರಗಳಿಂದ ಹೊಡೆಯಲು, ದುರ್ಯೋಧನನೂ ಕೂಡ ಇಪ್ಪತ್ತು ಬಾಣಗಳಿಂದ ಅವನನ್ನು ಪ್ರತಿಯಾಗಿ ಹೊಡೆದನು. ರಣಭೂಮಿಯಲ್ಲಿ ಸಾಯಕಗಳಿಂದ ಮುಚ್ಚಿಹೋಗಿದ್ದ ಅವರಿಬ್ಬರೂ ಆಕಾಶದಲ್ಲಿ ಮೇಘಗಳಿಂದ ಮುಚ್ಚಲ್ಪಟ್ಟ ಸೂರ್ಯ-ಚಂದ್ರರಂತೆ ಕಾಣುತ್ತಿದ್ದರು. ಆಗ ದುರ್ಯೋಧನನು ಭೀಮನನ್ನು ಐದು ಪತ್ರಿಗಳಿಂದ ಹೊಡೆದು ನಿಲ್ಲು ನಿಲ್ಲೆಂದು ಹೇಳಿದನು. ಭೀಮನು ಅವನ ಧನುಸ್ಸು ಧ್ವಜಗಳನ್ನು ಒಂಬತ್ತು ಬಾಣಗಳಿಂದ ತುಂಡರಿಸಿ ಆ ಕೌರವಶ್ರೇಷ್ಠನನ್ನು ತೊಂಭತ್ತು ನತಪರ್ವಣಗಳಿಂದ ಗಾಯಗೊಳಿಸಿದನು. ಆಗ ಕ್ರುದ್ಧ ದುರ್ಯೋಧನನು ಭೀಮಸೇನನ ಮೇಲೆ ಸರ್ವಧನ್ವಿಗಳೂ ನೋಡುತ್ತಿರುವಂತೆ ಬಾಣಗಳನ್ನು ಪ್ರಯೋಗಿಸಿದನು. ದುರ್ಯೋಧನನು ಬಿಟ್ಟ ಆ ಶರಗಳನ್ನು ನಾಶಗೊಳಿಸಿ ಭೀಮಸೇನನು ಕೌರವನ ಮೇಲೆ ಇಪ್ಪತ್ತೈದು ಕ್ಷುದ್ರಕಗಳನ್ನು ಪ್ರಯೋಗಿಸಿದನು. ದುರ್ಯೋಧನನಾದರೋ ಸಂಕ್ರುದ್ಧನಾಗಿ ಕ್ಷುರಪ್ರದಿಂದ ಭೀಮಸೇನನ ಧನುಸ್ಸನ್ನು ತುಂಡರಿಸಿ ಹತ್ತರಿಂದ ಅವನನ್ನು ಹೊಡೆದನು. ಆಗ ಮಹಾಬಲ ಭೀಮಸೇನನು ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ತಕ್ಷಣವೇ ಏಳು ನಿಶಿತ ಶರಗಳಿಂದ ನೃಪತಿಯನ್ನು ಹೊಡೆದನು. ಆಗ ಲಘುಹಸ್ತ ದುರ್ಯೋಧನನು ಅವನ ಆ ಧನುಸ್ಸನ್ನೂ ಬೇಗನೆ ಕತ್ತರಿಸಿದನು. ಹಾಗೆಯೇ ಮದೋತ್ಕಟ, ದುರ್ಯೋಧನನು ಭೀಮನ ಎರಡನೆಯ, ಮೂರನೆಯ, ನಾಲ್ಕನೆಯ ಮತ್ತು ಐದನೆಯ ಧನುಸ್ಸುಗಳನ್ನೂ ಕ್ಷಣಮಾತ್ರದಲ್ಲಿ ಕತ್ತರಿಸಿದನು.
ಹಾಗೆ ತನ್ನ ಧನ್ನುಸ್ಸನ್ನು ಪುನಃ ಪುನಃ ತುಂಡರಿಸುತ್ತಿರಲು ಭೀಮಸೇನನು ಸಂಪೂರ್ಣವಾಗಿ ಉಕ್ಕಿನಿಂದ ಮಾಡಲ್ಪಟ್ಟಿದ್ದ ಶುಭ ಶಕ್ತಿಯನ್ನು ದುರ್ಯೋಧನನ ಮೇಲೆ ಎಸೆದನು. ಆ ಶಕ್ತಿಯು ಬಂದು ತಲುಪುವುದರೊಳಗೇ ಭೀಮ ಮತ್ತು ಸರ್ವಲೋಕಗಳೂ ನೋಡುತ್ತಿರುವಂತೆಯೇ ಮಹಾತ್ಮ ಕೌರವನು ಅದನ್ನು ಮೂರು ಭಾಗಗಳಾಗಿ ತುಂಡರಿಸಿದನು. ಆಗ ಭೀಮನು ಮಹಾಪ್ರಭೆಯುಳ್ಳ ಭಾರ ಗದೆಯನ್ನು ವೇಗದಿಂದ ದುರ್ಯೋಧನನ ರಥದ ಮೇಲೆ ಎಸೆದನು. ಆಗ ಆ ಭಾರ ಗದೆಯು ಒಮ್ಮೆಲೇ ದುರ್ಯೋಧನನ ವಾಹನ ಮತ್ತು ಸಾರಥಿಯನ್ನು ಧ್ವಂಸಮಾಡಿತು. ದುರ್ಯೋಧನನಾದರೋ ಆ ರಥದಿಂದ ಕೆಳಕ್ಕೆ ಹಾರಿ ಒಮ್ಮೆಲೇ ನಂದಕನ ರಥಕ್ಕೆ ಹಾರಿದನು. ಆಗ ಮಹಾರಥ ದುರ್ಯೋಧನನು ಹತನಾದನೆಂದು ತಿಳಿದು ಭೀಮನು ಕೌರವರನ್ನು ಬೆದರಿಸುತ್ತಾ ಮಹಾ ಸಿಂಹನಾದವನ್ನು ಮಾಡಿದನು. ಕೌರವ ಸೈನಿಕರು ಕೂಡ ನೃಪನು ಹತನಾದನೆಂದೇ ಅಂದುಕೊಂಡರು. ಎಲ್ಲ ಕಡೆ ಎಲ್ಲರೂ ಹಾ ಹಾ ಕಾರಮಾಡಿದರು.
ಆ ಎಲ್ಲ ನಡುಗುತ್ತಿದ್ದ ಸರ್ವಯೋಧರ ನಿನಾದವನ್ನು ಕೇಳಿ, ಮಹಾತ್ಮ ಭೀಮಸೇನನ ನಾದವನ್ನೂ ಕೇಳಿ ರಾಜಾ ಯುಧಿಷ್ಠಿರನೂ ಕೂಡ ಸುಯೋಧನನು ಹತನಾದನೆಂದೇ ತಿಳಿದು ವೇಗವಾಗಿ ಪಾರ್ಥ ವೃಕೋದರನಿದ್ದಲ್ಲಿಗೆ ಧಾವಿಸಿದನು. ದ್ರೋಣನೊಡನೆಯೇ ಯುದ್ಧಮಾಡಬೇಕೆಂದು ಪಾಂಚಾಲರು, ಕೇಕಯರು, ಮತ್ಸ್ಯರು ಮತ್ತು ಸೃಂಜಯರು ಸರ್ವ ಪ್ರಯತ್ನಗಳನ್ನೂ ಮಾಡುತ್ತಿದ್ದರು. ಆ ಘೋರ ಕತ್ತಲೆಯಲ್ಲಿ ಪರಸ್ಪರರನ್ನು ಸಂಹರಿಸುವುದರಲ್ಲಿ ಮಗ್ನರಾಗಿದ್ದ ದ್ರೋಣ ಮತ್ತು ಶತ್ರುಗಳ ನಡುವೆ ಮಹಾ ಯುದ್ಧವು ನಡೆಯಿತು.
ಕರ್ಣ-ಸಹದೇವರ ಯುದ್ಧ
ದ್ರೋಣನ ಬಳಿ ಬರುತ್ತಿದ್ದ ಸಹದೇವನನ್ನು ಕರ್ಣನು ಯುದ್ಧದಲ್ಲಿ ತಡೆದನು. ಸಹದೇವನಾದರೋ ರಾಧೇಯನನ್ನು ಒಂಭತ್ತು ಆಶುಗಗಳಿಂದ ಹೊಡೆದು ಪುನಃ ಹತ್ತು ನಿಶಿತ ನತಪರ್ವಗಳಿಂದ ಹೊಡೆದನು. ಅವನನ್ನು ಕರ್ಣನು ಪ್ರತಿಯಾಗಿ ನೂರು ನತಪರ್ವಗಳಿಂದ ಹೊಡೆದನು. ಮತ್ತು ಶೀಘ್ರವಾಗಿ ಕೈಚಳಕದಿಂದ ಮೌರ್ವಿಯೊಡನೆ ಅವನ ಧನುಸ್ಸನ್ನು ಕತ್ತರಿಸಿದನು. ಆಗ ಮಾದ್ರೀಪುತ್ರನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಕರ್ಣನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು. ಅದೊಂದು ಅದ್ಭುತವಾಗಿತ್ತು. ಕರ್ಣನು ಅವನ ಕುದುರೆಗಳನ್ನು ಸನ್ನತಪರ್ವ ಶರಗಳಿಂದ ಕೊಂದು ತಕ್ಷಣವೇ ಸಾರಥಿಯನ್ನು ಕೂಡ ಭಲ್ಲದಿಂದ ಹೊಡೆದು ಯಮಕ್ಷಯಕ್ಕೆ ಕಳುಹಿಸಿದನು. ರಥವನ್ನು ಕಳೆದುಕೊಂಡ ಸಹದೇವನು ಖಡ್ಗ ಮತ್ತು ಗುರಾಣಿಗಳನ್ನು ಕೈಗೆತ್ತಿಕೊಂಡನು. ಅವುಗಳನ್ನೂ ಸಹ ಕರ್ಣನು ನಸುನಗುತ್ತಾ ಶರಗಳಿಂದ ನಾಶಗೊಳಿಸಿದನು. ಆಗ ಸಹದೇವನು ಬಂಗಾರದ ಚಿತ್ರಗಳುಳ್ಳ ಮಹಾಘೋರ ಮಹಾಗದೆಯನ್ನು ಸಮರದಲ್ಲಿ ವೈಕರ್ತನನ ರಥದ ಮೇಲೆ ಪ್ರಯೋಗಿಸಿದನು. ಸಹದೇವನು ಪ್ರಯೋಗಿಸಿದ ಆ ಗದೆಯನ್ನು ತನ್ನ ಮೇಲೆ ಒಮ್ಮೆಲೇ ಬೀಳುವವರೊಳಗೆ ಕರ್ಣನು ಬಾಣಗಳಿಂದ ಸ್ತಂಭನಗೊಳಿಸಿ, ಭೂಮಿಯ ಮೇಲೆ ಬೀಳುವಂತೆ ಮಾಡಿದನು. ಆ ಗದೆಯೂ ನಿರರ್ಥಕವಾದುದನ್ನು ಕಂಡು ಸಹದೇವನು ತ್ವರೆಮಾಡಿ ಕರ್ಣನ ಮೇಲೆ ಶಕ್ತಿಯನ್ನು ಎಸೆದನು. ಅದನ್ನೂ ಕೂಡ ಕರ್ಣನು ಶರಗಳಿಂದ ಕತ್ತರಿಸಿದನು. ಆಗ ಸಹದೇವನು ಸಂಭ್ರಮದಿಂದ ತನ್ನ ಶ್ರೇಷ್ಠ ರಥದಿಂದ ಧುಮುಕಿ ಕರ್ಣನು ವ್ಯವಸ್ಥಿತನಾಗಿ ನಿಂತಿರುವುದನ್ನು ನೋಡಿ ರಥದ ಚಕ್ರವನ್ನು ಹಿಡಿದು ಆಧಿರಥಿಯೆಡೆಗೆ ರಭಸದಿಂದ ಎಸೆದನು. ಒಮ್ಮೆಲೇ ತನ್ನ ಮೇಲೆ ಬೀಳುತ್ತಿದ್ದ ಕಾಲಚಕ್ರದಂತಿಂತ ಆ ಚಕ್ರವನ್ನು ಸೂತನಂದನನು ಶರಗಳಿಂದ ಅನೇಕ ಸಹಸ್ರ ಚೂರುಗಳನ್ನಾಗಿ ತುಂಡರಿಸಿದನು.
ಆ ಮಹಾತ್ಮನಿಂದ ತನ್ನ ರಥಚಕ್ರವೂ ಧ್ವಂಸಗೊಳ್ಳಲು ವಿಶಿಖಗಳಿಂದ ತಡೆಯಲ್ಪಟ್ಟು ಸಹದೇವನು ರಣರಂಗವನ್ನು ಬಿಟ್ಟು ಹೊರಟು ಹೋದನು. ಸ್ವಲ್ಪ ಸಮಯ ಅವನನ್ನು ಅಟ್ಟಿಕೊಂಡು ಹೋಗುತ್ತಾ ರಾಧೇಯನು ನಗುತ್ತಾ ಸಹದೇವನಿಗೆ ಈ ಮಾತುಗಳನ್ನಾಡಿದನು: “ವೀರ! ರಣದಲ್ಲಿ ನಿನಗಿಂತಲೂ ವಿಶಿಷ್ಟ ರಥಿಗಳೊಂದಿಗೆ ಯುದ್ಧಮಾಡಬೇಡ! ನಿನಗೆ ಸಮಾನರಾದವರೊಡನೆ ಮಾತ್ರ ಯುದ್ಧಮಾಡು. ಈ ನನ್ನ ಮಾತನ್ನು ಶಂಕಿಸಬೇಡ!”
ಅನಂತರ ಕರ್ಣನು ತನ್ನ ಧನುಸ್ಸಿನ ಅಗ್ರಭಾಗದಿಂದ ಸಹದೇವನನ್ನು ತಿವಿಯುತ್ತಾ ಪುನಃ ಹೇಳಿದನು: “ಮಾದ್ರೇಯ! ಎಲ್ಲಿ ಅರ್ಜುನನು ರಣದಲ್ಲಿ ಕುರುಗಳೊಂದಿಗೆ ಯುದ್ಧಮಾಡುತ್ತಿರುವನೋ ಅಲ್ಲಿಗೆ ಹೋಗು. ಅಥವಾ ನಿನಗೆ ಇಷ್ತವಾದರೆ ಮನೆಗೆ ಹೊರಟು ಹೋಗು!” ಹೀಗೆ ಹೇಳಿ ರಥಿಗಳಲ್ಲಿ ಶ್ರೇಷ್ಠ ಕರ್ಣನು ನಗುತ್ತಾ ರಥದಲ್ಲಿ ಕುಳಿತು ಪಾಂಚಾಲ-ಪಾಂಡುಪುತ್ರರ ಸೇನೆಗಳಿರುವಲ್ಲಿಗೆ ನಡೆದನು. ಕುಂತಿಗೆ ಕೊಟ್ಟಿದ್ದ ವಚನವನ್ನು ಸ್ಮರಿಸಿಕೊಂಡು ಸತ್ಯಸಂಧ, ಮಹಾರಥ ಆ ಅರಿಹನು ಸಮರದಲ್ಲಿ ವಧೆಗೆ ಸಿಕ್ಕಿದ್ದರೂ ಮಾದ್ರೇಯನನ್ನು ವಧಿಸಲಿಲ್ಲ. ಸಹದೇವನಾದರೋ ವಿಮನಸ್ಕನಾಗಿ, ಶರಪೀಡಿತನಾಗಿ, ಕರ್ಣನ ಮಾತಿನ ಬಾಣಗಳಿಂದ ಪರಿತಪಿಸಿ, ಜೀವನದಲ್ಲಿಯೇ ವಿರಕ್ತಿಯನ್ನು ಹೊಂದಿದನು. ಸಮರದಲ್ಲಿ ಆ ಮಹಾತ್ಮ ಮಹಾರಥನು ಪಾಂಚಾಲ್ಯ ಜನಮೇಜಯನ ರಥವನ್ನು ಅವಸರದಲ್ಲಿ ಏರಿದನು.
ಶಲ್ಯ-ವಿರಾಟರ ಯುದ್ಧ
ದ್ರೋಣನಿಗಾಗಿ ಧಾವಿಸಿ ಸೇನೆಯೊಂದಿಗೆ ಬರುತ್ತಿದ್ದ ಧನ್ವಿ ವಿರಾಟನನ್ನು ಮದ್ರರಾಜನು ಶರೌಘಗಳಿಂದ ಮುಚ್ಚಿದನು. ಹಿಂದೆ ಜಂಭಾಸುರ-ವಾಸವರೊಡನೆ ಹೇಗೆ ನಡೆಯಿತೋ ಹಾಗೆ ಸಮರದಲ್ಲಿ ಆ ಇಬ್ಬರು ದೃಢಧನ್ವಿಗಳ ನಡುವೆ ಯುದ್ಧವು ನಡೆಯಿತು. ವಾಹಿನೀಪತಿ ವಿರಾಟನನ್ನು ಮದ್ರರಾಜನು ತ್ವರೆಮಾಡಿ ನೂರು ತೀಕ್ಷ್ಣ ನತಪರ್ವಗಳಿಂದ ಹೊಡೆದನು. ಪ್ರತಿಯಾಗಿ ರಾಜಾ ವಿರಾಟನು ಶಲ್ಯನನ್ನು ಒಂಭತ್ತು ನಿಶಿತ ಶರಗಳಿಂದ ಹೊಡೆದು, ಪುನಃ ಮೂವತ್ತರಿಂದ ಮತ್ತು ಇನ್ನೂ ನೂರರಿಂದ ಹೊಡೆದನು. ಮದ್ರಾಧಿಪನು ಅವನ ನಾಲ್ಕು ರಥಕುದುರೆಗಳನ್ನು ಸಂಹರಿಸಿ, ಸಮರದಲ್ಲಿ ಸಾರಥಿ ಮತ್ತು ಧ್ವಜವನ್ನು ರಥದಿಂದ ಕೆಳಕ್ಕೆ ಬೀಳಿಸಿದನು. ಕುದುರೆಗಳು ಹತವಾಗಲು, ತಕ್ಷಣವೇ ರಥದಿಂದ ಕೆಳಗೆ ಹಾರಿ ಮಹಾರಥ ವಿರಾಟನು ಧನುಸ್ಸನ್ನು ಟೇಂಕರಿಸಿ ನಿಶಿತ ಶರಗಳನ್ನು ಪ್ರಯೋಗಿಸತೊಡಗಿದನು. ಹತವಾಹನನಾದ ಭ್ರಾತರನನ್ನು ನೋಡಿದ ಶತಾನೀಕನು ಸರ್ವಲೋಕಗಳೂ ನೋಡುತ್ತಿದ್ದಂತೆಯೇ ಬೇಗನೇ ರಥದಿಂದ ಅಲ್ಲಿಗೆ ಧಾವಿಸಿದನು.
ಮಹಾಯುದ್ಧದಲ್ಲಿ ಹಾಗೆ ಮುಂದುವರೆದು ಬರುತ್ತಿದ್ದ ಶತಾನೀಕನನ್ನು ಮದ್ರರಾಜನು ಅನೇಕ ವಿಶಿಖಗಳಿಂದ ಗಾಯಗೊಳಿಸಿ ಯಮಕ್ಷಯಕ್ಕೆ ಕಳುಹಿಸಿದನು. ಆ ವೀರನು ಹತನಾಗಲು ರಥಸತ್ತಮ ವಿರಾಟನು ಬೇಗನೆ ಅದೇ ಧ್ವಜ-ಮಾಲೆಗಳಿಂದ ಅಲಂಕೃತ ರಥವನ್ನು ಏರಿದನು. ಆಗ ಕ್ರೋಧದಿಂದ ಕಣ್ಣುಗಳನ್ನು ಅರಳಿಸಿ ಆ ದ್ವಿಗುಣವಿಕ್ರಮನು ಕೂಡಲೇ ಮದ್ರರಾಜನ ರಥವನ್ನು ಪತ್ರಿಗಳಿಂದ ಮುಚ್ಚಿಬಿಟ್ಟನು. ಆಗ ಕ್ರುದ್ಧ ಮದ್ರಾಧಿಪನು ನೂರು ನತಪರ್ವಗಳಿಂದ ವಾಹಿನೀಪತಿ ವಿರಾಟನ ಎದೆಗೆ ಹೊಡೆದನು. ಹಾಗೆ ಅತಿಯಾಗಿ ಗಾಯಗೊಂಡ ವಿರಾಟನು ಅತಿ ತೀವ್ರವಾಗಿ ಬಳಲಿ ರಥದಲ್ಲಿಯೇ ಕುಸಿದನು. ಬಾಣಗಳಿಂದ ಗಾಯಗೊಂಡಿದ್ದ ಅವನನ್ನು ಅವನ ಸಾರಥಿಯು ಸಮರದಿಂದ ದೂರಕ್ಕೆ ಕೊಂಡೊಯ್ದನು. ಯುದ್ಧಶೋಭೀ ಶಲ್ಯನ ನೂರಾರು ಬಾಣಗಳಿಂದ ವಧಿಸಲ್ಪಡುತ್ತಿದ್ದ ಆ ಮಹಾಸೇನೆಯು ಆ ರಾತ್ರಿ ಪಲಾಯನಮಾಡತೊಡಗಿತು. ಸೇನೆಯು ಹಾಗೆ ಓಡಿಹೋಗುತ್ತಿರುವುದನ್ನು ನೋಡಿ ವಾಸುದೇವ-ಧನಂಜಯರು ಎಲ್ಲಿ ಶಲ್ಯನಿದ್ದನೋ ಅಲ್ಲಿಗೆ ಬಂದರು.
ಅರ್ಜುನ ಮತ್ತು ರಾಕ್ಷಸ ಅಲಂಬುಸರ ಯುದ್ಧ
ಕೃಷ್ಣಾರ್ಜುನರೊಡನೆ ಎಂಟು ಚಕ್ರಗಳುಳ್ಳ ಶ್ರೇಷ್ಠ ರಥದಲ್ಲಿ ಕುಳಿತಿದ್ದ ರಾಕ್ಷಸೇಂದ್ರ ಅಲಂಬುಸನು ಪ್ರತಿಯಾಗಿ ಯುದ್ಧಮಾಡತೊಡಗಿದನು. ಘೋರರಾಗಿ ಕಾಣುತ್ತಿದ್ದ ಕುದುರೆಗಳ ಮುಖಗಳನ್ನೇ ಹೊಂದಿದ್ದ ಪಿಶಾಚಿಗಳಿಂದ ಎಳೆಯಲ್ಪಡುತ್ತಿದ್ದ ಆ ರಥವು ರಕ್ತದಲ್ಲಿ ತೋಯ್ದ ಪತಾಕೆಯನ್ನು ಹೊಂದಿತ್ತು ಮತ್ತು ಕೆಂಪು ಮಾಲೆಗಳಿಂದ ವಿಭೂಷಿತವಾಗಿತ್ತು. ಸಂಪೂರ್ಣವಾಗಿ ಕಬ್ಬಿಣದಿಂದ ನಿರ್ಮಿತವಾಗಿತ್ತು. ಘೋರವಾದ ಆ ಮಹಾರಥವು ಕರಡಿಯ ಚರ್ಮದಿಂದ ಹೊದಿಸಲ್ಪಟ್ಟಿತ್ತು. ಆ ರಥ ಧ್ವಜದ ತುದಿಯಲ್ಲಿ ರೌದ್ರರೂಪದ, ಬಣ್ಣದ ರೆಕ್ಕೆಗಳುಳ್ಳ, ಕಣ್ಣುಗಳನ್ನು ಅಗಲ ತೆರೆದುಕೊಂಡಿರುವ ಹದ್ದಿನ ರಾಜನ ಚಿತ್ರವಿತ್ತು. ಆ ರಾಕ್ಷಸನು ಕಲ್ಲಿದ್ದಿನ ರಾಶಿಯಂತೆಯೇ ಕಾಣುತ್ತಿದ್ದನು. ಚಂಡಮಾರುತವನ್ನು ಪರ್ವತವು ಹೇಗೋ ಹಾಗೆ ಮುಂದೆಬರುತ್ತಿದ್ದ ಅರ್ಜುನನನ್ನು ಅಲಂಬುಸನು ನೂರಾರು ಬಾಣಗಣಗಳನ್ನು ಅವನ ತಲೆಯ ಮೇಲೆ ಎರಚಿ ತಡೆದನು. ಆಗ ರಣಾಂಗಣದಲ್ಲಿ ಆ ನರ-ರಾಕ್ಷಸರ ನಡುವೆ ನೋಡುವವರೆಲ್ಲರಿಗೆ ಸಂತೋಷವನ್ನು ನೀಡುವ ಅತಿ ತೀವ್ರ ಯುದ್ಧವು ನಡೆಯಿತು.
ಅರ್ಜುನನು ಅವನನ್ನು ನೂರು ಪತ್ರಿಗಳಿಂದ ಹೊಡೆದನು. ಮತ್ತು ಎತ್ತರ ಹಾರಾಡುತ್ತಿದ್ದ ಅವನ ಧ್ವಜವನ್ನು ಒಂಭತ್ತು ನಿಶಿತ ಬಾಣಗಳಿಂದ ತುಂಡರಿಸಿದನು. ಅವನ ಸಾರಥಿಯನ್ನು ಮೂರು ಬಾಣಗಳಿಂದಲೂ, ಇನ್ನೂ ಮೂರು ಬಾಣಗಳಿಂದ ರಥದ ಮೂಕಿಯನ್ನೂ, ಒಂದರಿಂದ ಧನುಸ್ಸನ್ನು ತುಂಡರಿಸಿ ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನು ಸಂಹರಿಸಿದನು. ಮತ್ತು ವಿರಥನಾಗಿ ಮೇಲೆತ್ತಿದ್ದ ಅವನ ಖಡ್ಗವನ್ನು ಶರದಿಂದ ಎರಡಾಗಿ ತುಂಡರಿಸಿದನು. ಆಗ ಪಾರ್ಥನ ನಾಲ್ಕು ನಿಶಿತ ಬಾಣಗಳಿಂದ ಅತಿಯಾಗಿ ಗಾಯಗೊಂಡ ರಾಕ್ಷಸೇಂದ್ರನು ಭಯಗೊಂಡು ರಣಾಂಗಣವನ್ನೇ ಬಿಟ್ಟು ಓಡಿಹೋದನು.
ಅಲಂಬುಸನನ್ನು ಸೋಲಿಸಿ ಬೇಗನೆ ಅರ್ಜುನನು ನರ-ವಾರಣ-ವಾಜಿಗಳನ್ನು ಶರಗಣಗಳಿಂದ ಮುಚ್ಚುತ್ತಾ ದ್ರೋಣನ ಬಳಿ ಆಗಮಿಸಿದನು. ಯಶಸ್ವಿ ಪಾಂಡವನಿಂದ ವಧಿಸಲ್ಪಡುತ್ತಿದ್ದ ಸೈನಿಕರು ಚಂಡಮಾರುತಕ್ಕೆ ಸಿಲುಕಿದ ವೃಕ್ಷಗಳಂತೆ ಭೂಮಿಯಮೇಲೆ ಉರುಳಿ ಬಿದ್ದರು. ಹೀಗೆ ಮಹಾತ್ಮ ಫಲ್ಗುನನಿಂದ ಧ್ವಂಸಗೊಳ್ಳುತ್ತಿದ್ದ ಕೌರವ ಸೇನೆಯಲ್ಲಿ ಅಳಿದುಳಿದವರು ಪಲಾಯನಮಾಡಿದರು.
ಶತಾನೀಕ-ಚಿತ್ರಸೇನರ ಯುದ್ಧ
ಬೇಗನೇ ಶರಗಳಿಂದ ಕೌರವ ಸೇನೆಯನ್ನು ಸುಡುತ್ತಿರುವ ಶತಾನೀಕನನ್ನು ಧೃತರಾಷ್ಟ್ರನ ಮಗ ಚಿತ್ರಸೇನನು ತಡೆದನು. ನಕುಲನ ಮಗನು ಚಿತ್ರಸೇನನನ್ನು ನಾರಾಚಗಳಿಂದ ಬಹಳವಾಗಿ ಗಾಯಗೊಳಿಸಿದನು. ಚಿತ್ರಸೇನನೂ ಕೂಡ ಅವನನ್ನು ಹತ್ತು ನಿಶಿತ ಶರಗಳಿಂದ ತಿರುಗಿ ಹೊಡೆದನು. ಚಿತ್ರಸೇನನು ಯುದ್ಧದಲ್ಲಿ ಪುನಃ ಶತಾನೀಕನ ಎದೆಗೆ ಒಂಭತ್ತು ನಿಶಿತ ಬಾಣಗಳನ್ನು ಪ್ರಹರಿಸಿದನು. ನಾಕುಲಿಯು ವಿಶಿಖ ಸನ್ನತಪರ್ವಗಳಿಂದ ಅವನ ಕವಚವನ್ನು ದೇಹದಿಂದ ಬೇರ್ಪಡಿಸಿದನು. ಅದೊಂದು ಅದ್ಭುತವಾಗಿತ್ತು. ಕವಚವನ್ನು ಕಳೆದುಕೊಂಡು ಚಿತ್ರಸೇನನು ಪೊರೆಯನ್ನು ಕಳೆದುಕೊಂಡ ಸರ್ಪದಂತೆ ವಿರಾಜಿಸಿದನು. ಆಗ ನಾಕುಲಿಯು ನಿಶಿತ ಬಾಣಗಳಿಂದ ಯುದ್ಧದಲ್ಲಿ ಪ್ರತ್ಯತ್ನಪಡುತ್ತಿದ್ದ ಅವನ ಧ್ವಜವನ್ನೂ ಧನುಸ್ಸನ್ನೂ ತುಂಡರಿಸಿದನು. ಸಮರದಲ್ಲಿ ಧನುಸ್ಸನ್ನೂ ಕವಚವನ್ನೂ ಕಳೆದುಕೊಂಡ ಆ ಮಹಾರಥನು ಶತ್ರುಗಳನ್ನು ಸೀಳಬಲ್ಲ ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು. ತಕ್ಷಣವೇ ಚಿತ್ರಸೇನನು ಕ್ರುದ್ಧನಾಗಿ ಸಮರದಲ್ಲಿ ಒಂಭತ್ತು ಶರಗಳಿಂದ ನಾಕುಲಿಯನ್ನು ಹೊಡೆದನು. ಆಗ ಸಂಕ್ರುದ್ಧ ಶತಾನೀಕನು ಚಿತ್ರಸೇನನ ನಾಲ್ಕು ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿದನು. ಚಿತ್ರಸೇನನು ಆ ರಥದಿಂದ ಹಾರಿ ಇಪ್ಪತ್ತೈದು ಶರಗಳಿಂದ ನಾಕುಲಿಯನ್ನು ಹೊಡೆದನು. ನಕುಲನ ಸುತನು ರಣದಲ್ಲಿ ಆ ಕೆಲಸವನ್ನು ಮಾಡಿದ ಚಿತ್ರಸೇನನ ರತ್ನವಿಭೂಷಿತ ಚಾಪವನ್ನು ಅರ್ಧಚಂದ್ರ ಶರದಿಂದ ತುಂಡರಿಸಿದನು. ಧನುಸ್ಸು ತುಂಡಾದ, ವಿರಥನಾದ, ಅಶ್ವ-ಸಾರಥಿಗಳನ್ನು ಕಳೆದುಕೊಂಡ ಚಿತ್ರಸೇನನು ಬೇಗನೇ ಕೃತವರ್ಮನ ರಥವನ್ನೇರಿದನು.
ದ್ರುಪದ-ವೃಷಸೇನರ ಯುದ್ಧ
ದ್ರೋಣನ ಹತ್ತಿರ ಸೇನೆಯೊಂದಿಗೆ ಹೋಗುತ್ತಿದ್ದ ಮಹಾರಥ ದ್ರುಪದನನ್ನು ವೃಷಸೇನನು ಬೇಗನೇ ನೂರಾರು ಶರಗಳಿಂದ ಮುಚ್ಚಿಬಿಟ್ಟನು. ಯಜ್ಞಸೇನನಾದರೋ ಸಮರದಲ್ಲಿ ಮಹಾರಥ ಕರ್ಣಪುತ್ರನನ್ನು ಅರವತ್ತು ಶರಗಳಿಂದ ಬಾಹುಗಳಿಗೆ ಮತ್ತು ಎದೆಗೆ ಹೊಡೆದನು. ಸಂಕ್ರುದ್ಧ ವೃಷಸೇನನೂ ಕೂಡ ರಥದಲ್ಲಿ ನಿಂತಿದ್ದ ಯಜ್ಞಸೇನನನ್ನು ಅನೇಕ ತೀಕ್ಷ್ಣಸಾಯಕಗಳಿಂದ ಎದೆಯ ಮಧ್ಯದಲ್ಲಿ ಹೊಡೆದನು. ಶರೀರವೆಲ್ಲಾ ಶರಗಳಿಂದ ಚುಚ್ಚಲ್ಪಟ್ಟಿದ್ದ ಅವರಿಬ್ಬರೂ ರಣದಲ್ಲಿ ಮುಳ್ಳುಗಳಿಂದ ಕೂಡಿದ್ದ ಮುಳ್ಳುಹಂದಿಗಳಂತೆ ಪ್ರಕಾಶಿಸುತ್ತಿದ್ದರು. ರುಕ್ಮಪುಂಖಗಳ ಜಿಹ್ಮಾಗ್ರ ಶರಗಳಿಂದ ಕವಚಗಳು ಸೀಳಿಹೋಗಿ ರಕ್ತವು ಸುರಿಯುತ್ತಿದ್ದ ಅವರಿಬ್ಬರೂ ಮಹಾರಣದಲ್ಲಿ ಬಹಳವಾಗಿ ಪ್ರಕಾಶಿಸಿದರು. ಸುವರ್ಣಮಯ ಚಿತ್ರಿತ ಕವಚಗಳುಳ್ಳ ಅವರಿಬ್ಬರೂ ರಣರಂಗದಲ್ಲಿ ಅದ್ಭುತ ಕಲ್ಪವೃಕ್ಷಗಳಂತೆ ಮತ್ತು ಹೂಬಿಟ್ಟ ಮುತ್ತುಗದ ಮರಗಳಂತೆ ಪ್ರಕಾಶಿಸಿದರು. ಆಗ ವೃಷಸೇನನು ದ್ರುಪದನನ್ನು ಒಂಬತ್ತು ಬಾಣಗಳಿಂದ ಪ್ರಹರಿಸಿ, ಎಪ್ಪತ್ತರಿಂದ ಗಾಯಗೊಳಿಸಿ ಪುನಃ ಮೂರು ಮೂರು ಶರಗಳಿಂದ ಹೊಡೆದನು. ಆಗ ಕರ್ಣಪುತ್ರನು ಸಹಸ್ರಾರು ಬಾಣಗಳನ್ನು ಪ್ರಯೋಗಿಸಿ ಮೋಡದಂತೆ ಶರಗಳ ಮಳೆಯನ್ನು ಸುರಿಸಿದನು. ಅವನ ಶರಗಳಿಂದ ಕವಚಗಳನ್ನು ಕಳೆದುಕೊಂಡ ದ್ರುಪದನ ಸೇನೆಯು ಆ ಭೈರವ ರಾತ್ರಿಯಲ್ಲಿ ರಣದಿಂದ ಓಡಿ ಹೋಯಿತು. ಅವರು ಎಲ್ಲಕಡೆ ಬಿಟ್ಟುಹೋಗಿದ್ದ ಉರಿಯುತ್ತಿರುವ ಪಂಜುಗಳಿಂದ ರಣಭೂಮಿಯು ಗ್ರಹ-ನಕ್ಷತ್ರಗಳಿಂದ ಕೂಡಿದ ಮೋಡಗಳಿಲ್ಲದ ಆಗಸದಂತೆ ವಿರಾಜಿಸುತ್ತಿತ್ತು. ವರ್ಷಾಕಾಲದಲ್ಲಿ ಮಿಂಚಿನಿಂದ ಕೂಡಿದ ಮೋಡದಂತೆ ವಸುಂಧರೆಯು ಬಿದ್ದಿದ್ದ ಅಂಗದಾಭರಣಗಳಿಂದ ಪ್ರಕಾಶಿಸುತ್ತಿತ್ತು. ಆ ತಾರಕಾಮಯ ಯುದ್ಧದಲ್ಲಿ ಇಂದ್ರನ ಭಯದಿಂದ ತತ್ತರಿಸಿದ ದಾನವರಂತೆ ಕರ್ಣಸುತನಿಂದ ಭಯಗೊಂಡ ಸೋಮಕರು ಪಲಾಯನಮಾಡಿದರು. ಸಮರದಲ್ಲಿ ಅವನಿಂದ ಪೀಡಿತರಾಗಿ ಪಂಜುಗಳನ್ನು ಹಿಡಿದು ಒಡಿಹೋಗುತ್ತಿರುವ ಸೋಮಕರು ಶೋಭಾಯಮಾನರಾಗಿ ಕಾಣುತ್ತಿದ್ದರು. ಸಮರದಲ್ಲಿ ಅವರನ್ನು ಗೆದ್ದ ಕರ್ಣಪುತ್ರನು ಮಧ್ಯಾಹ್ನ ನಡುನೆತ್ತಿಯ ಮೇಲಿದ್ದ ಸೂರ್ಯನಂತೆ ಪ್ರಕಾಶಿಸಿದನು. ಕೌರವರ ಮತ್ತು ಶತ್ರುಗಳ ಆ ಸಹಸ್ರಾರು ರಾಜರುಗಳ ಮಧ್ಯೆ ಪ್ರತಾಪವಾನ್ ವೃಷಸೇನನು ಒಬ್ಬನೇ ಪ್ರಜ್ವಲಿಸುತ್ತಾ ನಿಂತಿದ್ದನು. ರಣದಲ್ಲಿ ಮಹಾರಥ ಶೂರ ಸೋಮಕರನ್ನು ಗೆದ್ದು ಅವನು ತ್ವರೆಮಾಡಿ ರಾಜಾ ಯುಧಿಷ್ಠಿರನಿದ್ದಲ್ಲಿಗೆ ಹೋದನು.
ಪ್ರತಿವಿಂಧ್ಯ-ದುಃಶಾಸನರ ಯುದ್ಧ
ಕ್ರುದ್ಧನಾಗಿ ರಣದಲ್ಲಿ ರಿಪುಗಳನ್ನು ದಹಿಸುತ್ತಿದ್ದ ಪ್ರತಿವಿಂಧ್ಯನನ್ನು ಮಹಾರಥ ದುಃಶಾಸನನು ಹೋಗಿ ಎದುರಿಸಿದನು. ಅವರ ಸಮಾಗಮವು ಮೋಡವಿಲ್ಲದ ಆಕಾಶದಲ್ಲಿ ಬುಧ-ಸೂರ್ಯರ ಸಮಾಗಮದಂತೆ ಚಿತ್ರರೂಪವಾಗಿದ್ದಿತು. ಸಮರದಲ್ಲಿ ದುಷ್ಕರ ಕರ್ಮವನ್ನು ಮಾಡುತ್ತಿದ್ದ ಪ್ರತಿವಿಂಧ್ಯನನ್ನು ದುಃಶಾಸನನು ಬಾಣಗಳಿಂದ ಹಣೆಗೆ ಹೊಡೆದನು. ಬಲವಂತ ಧನ್ವಿ ದುಃಶಾಸನನಿಂದ ಅತಿಯಾಗಿ ಗಾಯಗೊಂಡ ಆ ಮಹಾಬಾಹುವು ಶೃಂಗವಿರುವ ಪರ್ವತದಂತೆ ವಿರಾಜಿಸಿದನು. ಮಹಾರಥ ಪ್ರತಿವಿಂಧ್ಯನಾದರೋ ದುಃಶಾಸನನನ್ನು ಒಂಬತ್ತು ಸಾಯಕಗಳಿಂದ ಹೊಡೆದು ಪುನಃ ಏಳರಿಂದ ಪ್ರಹರಿಸಿದನು. ಅಲ್ಲಿ ದುಷ್ಕರ ಕರ್ಮವನ್ನು ಮಾಡುವ ದುಃಶಾಸನನು ಉಗ್ರ ಶರಗಳಿಂದ ಪ್ರತಿವಿಂಧ್ಯನ ಕುದುರೆಗಳನ್ನು ಕೆಳಗುರುಳಿಸಿದನು.
ಆ ಧನ್ವಿಯು ಇನ್ನೊಂದು ಭಲ್ಲದಿಂದ ಅವನ ಸಾರಥಿಯನ್ನು ಮತ್ತು ಧ್ವಜವನ್ನು ಕೆಳಗುರುಳಿಸಿದನು. ಮತ್ತು ನೂರಾರು ಬಾಣಗಳಿಂದ ಅವನ ರಥವನ್ನು ಕೂಡ ಪ್ರಹರಿಸಿದನು. ಕ್ರುದ್ಧನಾದ ಅವನು ಸನ್ನತಪರ್ವ ಶರಗಳಿಂದ ಪ್ರತಿವಿಂಧ್ಯನ ಪತಾಕೆಗಳನ್ನೂ, ತೂಣೀರಗಳನ್ನೂ, ಕಡಿವಾಣಗಳನ್ನೂ, ನೊಗಪಟ್ಟಿಗಳನ್ನೂ ನುಚ್ಚುನೂರು ಮಾಡಿದನು. ವಿರಥನಾದ ಪ್ರತಿವಿಂಧ್ಯನಾದರೋ ಧನುಷ್ಪಾಣಿಯಾಗಿ ಅನೇಕ ನೂರು ಬಾಣಗಳಿಂದ ದುಃಶಾನನನನ್ನು ಮುಚ್ಚಿ ಯುದ್ಧವನ್ನು ಮುಂದುವರೆಸಿದನು. ಆಗ ದುಃಶಾಸನನು ಕೈಚಳಕದಿಂದ ಕ್ಷುರಪ್ರವನ್ನು ಪ್ರಯೋಗಿಸಿ ಅವನ ಧನುಸ್ಸನ್ನು ಕತ್ತರಿಸಿದನು. ಧನುಸ್ಸು ತುಂಡಾದ ಅವನನ್ನು ಹತ್ತು ಭಲ್ಲಗಳಿಂದ ಹೊಡೆದನು. ವಿರಥನಾಗಿದ್ದ ಪ್ರತಿವಿಂಧ್ಯನನ್ನು ನೋಡಿ ಅವನ ಮಹಾರಥ ಸಹೋದರರು ಮಹಾ ಸೇನೆಯೊಂದಿಗೆ ವೇಗದಿಂದ ಆಗಮಿಸಿದರು. ಆಗ ಅವನು ಸುತಸೋಮನ ಹೊಳೆಯುತ್ತಿರುವ ರಥದ ಮೇಲೆ ಹಾರಿ, ಧನುಸ್ಸನ್ನೆತ್ತಿಕೊಂಡು ದುಃಶಾಸನನನ್ನು ಪ್ರಹರಿಸಿದನು. ಆಗ ಕೌರವರೆಲ್ಲರೂ ದುಃಶಾಸನನನ್ನು ಮಹಾ ಸೇನೆಯೊಂದಿಗೆ ಕೂಡಿ ಸುತ್ತುವರೆದು ಸಂಗ್ರಾಮದಲ್ಲಿ ಎರಗಿದರು. ಆಗ ಆ ದಾರುಣ ರಾತ್ರಿವೇಳೆಯಲ್ಲಿ ಕೌರವರ ಮತ್ತು ಪಾಂಡವರ ನಡುವೆ ಯಮರಾಷ್ಟ್ರವನ್ನು ವರ್ಧಿಸುವ ಯುದ್ಧವು ನಡೆಯಿತು.
ನಕುಲ-ಶಕುನಿಯರ ಯುದ್ಧ
ರಭಸದಿಂದ ಕೌರವ ಸೇನೆಯನ್ನು ಸಂಹರಿಸುತ್ತಿದ್ದ ನಕುಲನನ್ನು ಕ್ರುದ್ಧ ಸೌಬಲನು ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು. ಬದ್ಧವೈರಿಗಳಾಗಿದ್ದ ಆ ವೀರರಿಬ್ಬರೂ ಅನ್ಯೋನ್ಯರನ್ನು ವಧಿಸಲು ಬಯಸಿ ಪೂರ್ಣವಾಗಿ ಸೆಳೆದು ಬಿಟ್ಟ ಬಾಣಗಳಿಂದ ಅನ್ಯೋನ್ಯರನ್ನು ಪ್ರಹರಿಸಿದರು. ಸೌಬಲನು ಹೇಗೆ ಕ್ಷಿಪ್ರವಾಗಿ ಶರವರ್ಷಗಳನ್ನು ಸುರಿಸುತ್ತಿದ್ದನೋ ಹಾಗೆ ನಕುಲನು ತನ್ನ ಯುದ್ಧನೈಪುಣ್ಯವನ್ನು ಪ್ರದರ್ಶಿಸುತ್ತಿದ್ದನು. ಶರಗಳಿಂದ ಚುಚ್ಚಲ್ಪಟ್ಟಿದ್ದ ಆ ಇಬ್ಬರು ಶೂರರು ಮುಳ್ಳುಗಳಿದ್ದ ಮುಳ್ಳುಹಂದಿಗಳಂತೆಯೇ ವಿರಾಜಿಸಿದರು. ಅವರಿಬ್ಬರೂ ಕಣ್ಣುಗಳನ್ನು ತೆರೆದು ಕ್ರೋಧದಿಂದ ಕೆಂಪಾದ ಕಣ್ಣುಗಳಿಂದ ಪರಸ್ಪರರನ್ನು ಸುಟ್ಟುಬಿಡುವರೋ ಎನ್ನುವಂತೆ ನೋಡುತ್ತಿದ್ದರು. ಸಂಕ್ರುದ್ಧನಾದ ಶಕುನಿಯಾದರೋ ನಸುನಗುತ್ತಾ ನಿಶಿತ ಕರ್ಣಿಕದಿಂದ ಮಾದ್ರೀಪುತ್ರನ ಹೃದಯಕ್ಕೆ ಹೊಡೆದನು. ಶಕುನಿಯಿಂದ ಅತಿಯಾಗಿ ಗಾಯಗೊಂಡ ನಕುಲನಾದರೋ ಪೀಠದಿಂದ ಪಕ್ಕಕ್ಕೆ ಸರಿದು ಮೂರ್ಛಿತನಾದನು. ಅತ್ಯಂತ ವೈರಿ ಶತ್ರುವಿನ ಆ ಸ್ಥಿತಿಯನ್ನು ಕಂಡು ಶಕುನಿಯು ಬೇಸಗೆಯ ಅಂತ್ಯದಲ್ಲಿ ಮೋಡವು ಗುಡುಗುವಂತೆ ಜೋರಾಗಿ ಗರ್ಜಿಸಿದನು. ಆಗ ಪಾಂಡುನಂದನ ನಕುಲನು ಸಂಜ್ಞೆಯನ್ನು ಪಡೆದು ಬಾಯಿಕಳೆದ ಅಂತಕನಂತೆ ಸೌಬಲನನ್ನು ಇನ್ನೊಮ್ಮೆ ಆಕ್ರಮಣಿಸಿದನು. ಆ ಸಂಕ್ರುದ್ಧ ಭರತರ್ಷಭನು ಶಕುನಿಯನ್ನು ಅರವತ್ತು ನಾರಾಚಗಳಿಂದ ಹೊಡೆದು ಪುನಃ ನೂರರಿಂದ ಅವನ ಎದೆಯನ್ನು ಪ್ರಹರಿಸಿದನು. ಅನಂತರ ಶಕುನಿಯ ಶರ ಮತ್ತು ಚಾಪವನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿ, ತ್ವರೆಮಾಡಿ ಧ್ವಜವನ್ನು ಮತ್ತು ಅವನನ್ನು ಕೂಡ ರಥದಿಂದ ಭೂಮಿಯ ಮೇಲೆ ಕೆಡವಿದನು. ಅತಿಯಾಗಿ ಗಾಯಗೊಂಡು ಮೂರ್ಛಿತನಾಗಿ ಬಿದ್ದ ಶಕುನಿಯನ್ನು ನೋಡಿ ಅವನ ಸಾರಥಿಯು ಅವನನ್ನು ರಥದ ಮೇಲೆ ಕುಳ್ಳಿರಿಸಿ ರಥವನ್ನು ದೂರ ಕೊಂಡೊಯ್ದನು.
ರಣದಲ್ಲಿ ಶತ್ರುವನ್ನು ಸೋಲಿಸಿದ ಶತ್ರುತಾಪನ ಪಾರ್ಥ ನಕುಲ ಮತ್ತು ಅವನ ಅನುಯಾಯಿಗಳು ಜೋರಾಗಿ ಗರ್ಜಿಸಿದರು. ಕ್ರುದ್ಧನಾದ ಅವನು ದ್ರೋಣಸೇನೆಯ ಕಡೆ ತನ್ನನ್ನು ಕರೆದುಕೊಂಡು ಹೋಗುವಂತೆ ಸಾರಥಿಗೆ ಹೇಳಿದನು. ಮಾದ್ರೀಪುತ್ರನ ಆ ಮಾತನ್ನು ಕೇಳಿ ಧೀಮತ ಸಾರಥಿಯು ದ್ರೋಣನು ಯುದ್ಧಮಾಡುತ್ತಿರುವಲ್ಲಿಗೆ ಅವನನ್ನು ಕೊಂಡೊಯ್ದನು.
ಶಿಖಂಡಿ-ಕೃಪರ ಯುದ್ಧ
ದ್ರೋಣನ ಬಳಿ ಹೋಗುತ್ತಿದ್ದ ಶಿಖಂಡಿಯನ್ನು ಪ್ರಯತ್ನಪಟ್ಟು ಕೃಪ ಶಾರದ್ವತನು ವೇಗದಿಂದ ಎದುರಿಸಿ ತಡೆದನು. ದ್ರೋಣನ ಸಮೀಪದಿಂದ ವೇಗದಿಂದ ತನ್ನ ಕಡೆಬರುತ್ತಿದ್ದ ಗೌತಮನನ್ನು ಶಿಖಂಡಿಯು ನಗುತ್ತಾ ಒಂಬತ್ತು ಭಲ್ಲಗಳಿಂದ ಪ್ರಹರಿಸಿದನು. ಆಚಾರ್ಯನು ಅವನನ್ನು ಐದು ಆಶುಗಗಳಿಂದ ಹೊಡೆದು ಪುನಃ ಇಪ್ಪತ್ತರಿಂದ ಪ್ರಹರಿಸಿದನು. ದೇವಾಸುರರ ಯುದ್ಧದಲ್ಲಿ ಶಂಬರ ಮತ್ತು ಅಮರರಾಜರ ನಡುವೆ ನಡೆದಂತೆ ಅವರಿಬ್ಬರ ನಡುವೆ ಘೋರರೂಪದ ಮಹಾಯುದ್ಧವು ನಡೆಯಿತು.
ಆ ಇಬ್ಬರು ಮಹಾರಥರೂ ಆಕಾಶವನ್ನು ಶರಜಾಲಗಳಿಂದ ಮುಚ್ಚಿಬಿಟ್ಟರು. ಘೋರರೂಪವನ್ನು ತಾಳಿದ್ದ ಪ್ರಕೃತಿಯು ಅದರಿಂದಾಗಿ ಇನ್ನೂ ಘೋರವಾಗಿ ಕಾಣುತ್ತಿತ್ತು. ಯುದ್ಧಾಸಕ್ತರಾಗಿದ್ದ ಯೋಧರಿಗೂ ಆ ಕಾಲರಾತ್ರಿಯು ಘೋರರೂಪವನ್ನು ತಾಳಿ ಭಯವನ್ನುಂಟುಮಾಡುತ್ತಿತ್ತು. ಶಿಖಂಡಿಯಾದರೋ ಅರ್ಧಚಂದ್ರಾಕಾರದ ವಿಶಿಖವನ್ನು ಹೂಡಿ ಗೌತಮನ ಮಹಾಧನುಸ್ಸನ್ನು ತುಂಡರಿಸಿದನು. ಕ್ರುದ್ಧ ಕೃಪನು ಅವನ ಮೇಲೆ ಕಮ್ಮಾರನಿಂದ ಮಾಡಲ್ಪಟ್ಟ ಸ್ವರ್ಣದ ಹಿಡಿ ಮತ್ತು ಮುಳ್ಳಿನ ತುದಿಯುಳ್ಳ ದಾರುಣ ಶಕ್ತಿಯನ್ನು ಎಸೆದನು. ಬೀಳುತ್ತಿದ್ದ ಅದನ್ನು ಶಿಖಂಡಿಯು ಅನೇಕ ಶರಗಳಿಂದ ತುಂಡರಿಸಿದನು. ಮಹಾಪ್ರಭೆಯ ಆ ಶಕ್ತಿಯು ಬೆಂಕಿಯಿಂದ ಬೆಳಗುತ್ತಾ ಭೂಮಿಯ ಮೇಲೆ ಬಿದ್ದಿತು. ತಕ್ಷಣವೇ ರಥಿಗಳಲ್ಲಿ ಶ್ರೇಷ್ಠ ಗೌತಮನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ನಿಶಿತ ಬಾಣಗಳಿಂದ ಶಿಖಂಡಿಯನ್ನು ಮುಚ್ಚಿಬಿಟ್ಟನು. ಗೌತಮನಿಂದ ಗಾಯಗೊಂಡ ಶಿಖಂಡಿಯು ರಥದಲ್ಲಿ ಸರಿದು ಕುಳಿತುಕೊಂಡನು. ಯುದ್ಧದಲ್ಲಿ ಅವನು ಕುಸಿದುದನ್ನು ನೋಡಿ ಕೃಪ ಶಾರದ್ವತನು ಕೊಲ್ಲುವನೋ ಎನ್ನುವಂತೆ ಅವನನ್ನು ಅನೇಕ ಬಾಣಗಳಿಂದ ಹೊಡೆದನು. ರಣದಲ್ಲಿ ಯಾಜ್ಞಸೇನಿಯು ವಿಮುಖನಾದುದನ್ನು ನೋಡಿ ಪಾಂಚಾಲ-ಸೋಮಕರು ಎಲ್ಲಕಡೆಗಳಿಂದ ಸುತ್ತುವರೆದರು. ಹಾಗೆಯೇ ಕೌರವ ಪುತ್ರರೂ ಕೂಡ ದ್ವಿಜೋತ್ತಮನನ್ನು ಸುತ್ತುವರೆದರು. ಆಗ ಮಹಾಸೇನೆಗಳೊಡನೆ ಪುನಃ ಯುದ್ಧವು ನಡೆಯಿತು.
ರಣದಲ್ಲಿ ಅನ್ಯೋನ್ಯರನ್ನು ಆಕ್ರಮಣಿಸುತ್ತಿದ್ದ ಆ ರಥಿಗಳ ತುಮುಲಶಬ್ಧವು ಮೋಡಗಳ ಗುಡುಗುಗಳಂತೆ ಕೇಳಿಬರುತ್ತಿತ್ತು. ಓಡಿಬಂದು ಪರಸ್ಪರರನ್ನು ಆಕ್ರಮಣಿಸುತ್ತಿದ್ದ ಕುದುರೆಸವಾರರ ಮತ್ತು ಆನೆಗಳ ಯುದ್ಧವು ಕ್ರೂರವಾಗಿ ಪರಿಣಮಿಸಿತು. ಓಡುತ್ತಿದ್ದ ಪದಾತಿಗಳ ಕಾಲುಶಬ್ಧಗಳಿಂದ ಮೇದಿನಿಯು ಭಯದಿಂದ ನಡುಗುತ್ತಿದ್ದ ಅಂಗನೆಯಂತೆ ಕಂಪಿಸಿತು. ವೇಗದಿಂದ ಓಡುತ್ತಿದ್ದ ರಥಿಗಳು ರಥಿಗಳನ್ನು ತಲುಪಿ ಕಾಗೆಗಳು ಮಿಡತೆಹುಳಗಳನ್ನು ಹೇಗೋ ಹಾಗೆ ಅನೇಕರನ್ನು ಹಿಡಿದು ಸಂಹರಿಸುತ್ತಿದ್ದರು. ಹಾಗೆಯೇ ಮದೋದಕವನ್ನು ಸುರಿಸುತ್ತಿದ್ದ ಆನೆಗಳು ಮದೋದಕವನ್ನು ಸುರಿಸುತ್ತಿದ್ದ ಇತರ ಮಹಾಗಜಗಳನ್ನು ದಾರಿಯಲ್ಲಿಯೇ ಪ್ರಯತ್ನಪಟ್ಟು ಧ್ವಂಸಗೊಳಿಸುತ್ತಿದ್ದವು. ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ಮತ್ತು ಕಾಲಾಳುಗಳು ಕಾಲಾಳುಗಳನ್ನು ರಣದಲ್ಲಿ ಎದುರಿಸಿ ಸಂರಬ್ಧರಾಗಿ ಯಾರಿಗೂ ಮುಂದೆಹೋಗಲು ಬಿಡದೇ ಯುದ್ಧಮಾಡುತ್ತಿದ್ದರು. ಚೆಲ್ಲಾಪಿಲ್ಲಿಯಾಗಿ ಓಡಿಹೋಗುತ್ತಿದ್ದ ಮತ್ತು ಪುನಃ ಯುದ್ಧಕ್ಕೆ ಹಿಂದಿರುಗುತ್ತಿದ್ದ ಸೇನೆಗಳ ಆ ತುಮುಲಶಬ್ಧವು ರಾತ್ರಿಯಲ್ಲಿ ಕೇಳಿಬರುತ್ತಿತ್ತು. ರಥ, ಆನೆ, ಕುದುರೆಗಳ ಮೇಲೆ ಉರಿಯುತ್ತಿದ್ದ ಪಂಜುಗಳು ಆಕಾಶದಿಂದ ಕೆಳಕ್ಕೆ ಬಿದ್ದ ಮಹಾ ಉಲ್ಕೆಗಳಂತೆ ತೋರುತ್ತಿದ್ದವು. ರಣರಂಗದಲ್ಲಿ ಹತ್ತಿ ಉರಿಯುತ್ತಿದ್ದ ಪಂಜುಗಳಿಂದ ಪ್ರಕಾಶಿತಗೊಂಡ ಆ ರಾತ್ರಿಯು ಹಗಲಿನಂತೆಯೇ ಕಾಣುತ್ತಿತ್ತು. ಆದಿತ್ಯನಿಂದ ಲೋಕದಲ್ಲಿ ಕತ್ತಲೆಯು ಹೇಗೆ ನಾಶವಾಗುತ್ತದೆಯೋ ಹಾಗೆ ಉರಿಯುತ್ತಿರುವ ದೀಪಗಳಿಂದ ಅಲಂಕೃತಗೊಂಡು ಆ ಘೋರ ಕತ್ತಲೆಯು ನಾಶವಾಗಿತ್ತು. ಮಹಾತ್ಮರ ಶಸ್ತ್ರಗಳು, ಕವಚಗಳು ಮತ್ತು ಮಣಿಗಳ ಮೇಲೆ ಬಿದ್ದು ಅವುಗಳು ಒಳಗಿನಿಂದಲೇ ಪ್ರಕಾಶಗೊಳ್ಳುತ್ತಿವೆಯೋ ಎಂದು ಅನ್ನಿಸುತ್ತಿತ್ತು. ರಾತ್ರಿವೇಳೆಯಲ್ಲಿ ನಡೆಯುತ್ತಿದ್ದ ಆ ಕೋಲಾಹಲ ಯುದ್ಧದಲ್ಲಿ ತಿಳಿಯದೇ ತಂದೆಯರು ಮಕ್ಕಳನ್ನು, ಮಕ್ಕಳು ತಂದೆಯರನ್ನು, ಸಖರು ಸಖರನ್ನು, ಸಂಬಂಧಿಗಳು ಸಂಬಂಧಿಗಳನ್ನು ಮತ್ತು ಅಳಿಯರು ಮಾವರನ್ನು ವಧಿಸಿದರು. ಕೌರವರು ತಮ್ಮವರನ್ನೇ ಮತ್ತು ಶತ್ರುಗಳು ಶತ್ರುಗಳನ್ನೇ ಪರಸ್ಪರ ಕೊಲ್ಲುತ್ತಿದ್ದರು. ಮರ್ಯಾದೆಗಳಿಲ್ಲದ ಆ ರಾತ್ರಿಯುದ್ಧವು ಘೋರವೂ ಭಯಂಕರವೂ ಆಗಿತ್ತು.
ಧೃಷ್ಟದ್ಯುಮ್ನ-ದ್ರೋಣರ ಯುದ್ಧ
ಭಯವನ್ನುಂಟುಮಾಡುವ ಆ ತುಮುಲ ಯುದ್ಧವು ನಡೆಯುತ್ತಿರಲು ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದನು. ಶಿಂಜಿನಿಯನ್ನು ಪುನಃ ಪುನಃ ಎಳೆಯುತ್ತ ಶ್ರೇಷ್ಠ ಧನುಸ್ಸನ್ನು ಟೇಂಕರಿಸುತ್ತಾ ಅವನು ಬಂಗಾರದಿಂದ ವಿಭೂಷಿತ ದ್ರೋಣನ ರಥವನ್ನು ಆಕ್ರಮಣಿಸಿದನು. ದ್ರೋಣನನ್ನು ಕೊನೆಗಾಣಿಸಲು ಬಯಸಿ ಮುಂದೆ ಬರುತ್ತಿದ್ದ ಧೃಷ್ಟದ್ಯುಮ್ನನನ್ನು ಪಾಂಡವರೊಂದಿಗೆ ಪಾಂಚಾಲರು ಸುತ್ತುವರೆದಿದ್ದರು. ಆಚಾರ್ಯಸತ್ತಮ ದ್ರೋಣನು ಹಾಗೆ ಮುತ್ತಿಗೆಹಾಕಲ್ಪಟ್ಟಿದ್ದುದನ್ನು ನೋಡಿ ಕೌರವ ಮಕ್ಕಳು ಯುದ್ಧದಲ್ಲಿ ದ್ರೋಣನನ್ನು ರಕ್ಷಿಸಲು ಎಲ್ಲ ಕಡೆಗಳಿಂದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರು. ನಿಶಾಮುಖದಲ್ಲಿ ಎದುರಾಗುತ್ತಿದ್ದ ಆ ಎರಡು ಸೇನೆಗಳು ಚಂಡಮಾರುತಕ್ಕೆ ಸಿಲುಕಿ ಅಲ್ಲೋಲಕಲ್ಲೋಲಗೊಳ್ಳುವ ಭೈರವ ಸಾಗರಗಳಂತೆ ತೋರುತ್ತಿದ್ದವು. ಆಗ ಪಾಂಚಾಲ್ಯನು ಐದು ಶರಗಳನ್ನು ದ್ರೋಣನ ಎದೆಗೆ ಗುರಿಯಿಟ್ಟು ಹೊಡೆದು ತಕ್ಷಣವೇ ಸಿಂಹನಾದಗೈದನು. ಸಂಯುಗದಲ್ಲಿ ದ್ರೋಣನು ಅವನನ್ನು ಇಪ್ಪತ್ತೈದು ಬಾಣಗಳಿಂದ ಹೊಡೆದು ಇನ್ನೊಂದು ಭಲ್ಲದಿಂದ ಅವನ ಮಹಾಪ್ರಭೆಯ ಧನುಸ್ಸನ್ನು ತುಂಡರಿಸಿದನು. ದ್ರೋಣನಿಂದ ಗಾಯಗೊಂಡ ಧೃಷ್ಟದ್ಯುಮ್ನನಾದರೋ ಹಲ್ಲುಕಚ್ಚುತ್ತಾ ಬೇಗನೇ ಆ ಧನುಸ್ಸನ್ನು ಬಿಸಾಡಿದನು. ಆಗ ಧೃಷ್ಟದ್ಯುಮ್ನನು ದ್ರೋಣನನ್ನು ಮುಗಿಸಿಬಿಡಲು ಬಯಸಿ ಇನ್ನೊಂದು ಶ್ರೇಷ್ಠ ಧನುಸ್ಸನ್ನು ಎತ್ತಿಕೊಂಡನು. ಪರವೀರಹನು ಆ ಚಿತ್ರಧನುಸ್ಸನ್ನು ಆಕರ್ಣವಾಗಿ ಸೆಳೆದು ದ್ರೋಣನನ್ನು ಅಂತ್ಯಗೊಳಿಸಬಲ್ಲ ಘೋರ ಸಾಯಕವನ್ನು ಪ್ರಯೋಗಿಸಿದನು. ಅವನು ಪ್ರಯೋಗಿಸಿದ ಬಲವುಳ್ಳ ಆ ಘೋರ ಶರವು ಉದಯಿಸುತ್ತಿರುವ ದಿವಾಕರನಂತೆ ಸೇನೆಯನ್ನು ಬೆಳಗಿಸಿತು. ಆ ಘೋರ ಶರವನ್ನು ನೋಡಿ ದೇವ-ಗಂಧರ್ವ-ಮಾನವರು ದ್ರೋಣನಿಗೆ ಮಂಗಳವಾಗಲೆಂದು ಹೇಳಿಕೊಂಡರು.
ಆ ಸಾಯಕವು ಆಚಾರ್ಯನ ರಥವನ್ನು ತಲುಪುವುದರೊಳಗೇ ಕರ್ಣನು ಕೈಚಳಕದಿಂದ ಅದನ್ನು ಹನ್ನೆರಡು ಭಾಗಗಳನ್ನಾಗಿ ತುಂಡರಿಸಿದನು. ಕರ್ಣನ ಸಾಯಕದಿಂದ ತುಂಡರಿಸಲ್ಪಟ್ಟ ಆ ಶರವು ತಕ್ಷಣವೇ ಅನೇಕ ಚೂರುಗಳಾಗಿ ಬಿದ್ದಿತು. ಸನ್ನತಪರ್ವ ಶರಗಳಿಂದ ಆ ಬಾಣವನ್ನು ಕತ್ತರಿಸಿ ಕರ್ಣನು ಧೃಷ್ಟದ್ಯುಮ್ನನನ್ನು ಹತ್ತು ಶರಗಳಿಂದ ಹೊಡೆದನು. ಆಗ ತ್ವರೆಮಾಡಿ ಎಲ್ಲ ಮಹಾರಥರೂ ಪಾಂಚಾಲ್ಯನನ್ನು ಪ್ರಹರಿಸಿದರು: ದ್ರೋಣಪುತ್ರನು ಐದರಿಂದ, ದ್ರೋಣನು ಏಳರಿಂದ, ಶಲ್ಯನು ಒಂಭತ್ತು ಬಾಣಗಳಿಂದ, ದುಃಶಾಸನನು ಮೂರರಿಂದ, ದುರ್ಯೋಧನನನು ಇಪ್ಪತ್ತರಿಂದ, ಮತ್ತು ಶಕುನಿಯು ಐದರಿಂದ ಹೊಡೆದರು. ಯುದ್ಧದಲ್ಲಿ ದ್ರೋಣನ ಪ್ರಾಣವನ್ನು ರಕ್ಷಿಸುತ್ತಿದ್ದ ಆ ಏಳು ವೀರರಿಂದ ಪ್ರಹರಿಸಲ್ಪಟ್ಟ ಧೃಷ್ಟದ್ಯುಮ್ನನು ಸ್ವಲ್ಪವೂ ಗಾಬರಿಗೊಳ್ಳದೇ ಅವರೆಲ್ಲರನ್ನೂ ಮೂರು ಮೂರು ಬಾಣಗಳಿಂದ ಪ್ರತಿಯಾಗಿ ಪ್ರಹರಿಸಿದನು. ಅವನು ದ್ರೋಣನನ್ನು, ದ್ರೌಣಿಯನ್ನು, ಕರ್ಣನನ್ನು ಮತ್ತು ದುರ್ಯೋಧನನನ್ನೂ ಹೊಡೆದನು. ಧನ್ವಿ ಧೃಷ್ಟದ್ಯುಮ್ನನಿಂದ ಪ್ರಹರಿಸಲ್ಪಟ್ಟ ಆ ಒಬ್ಬೊಬ್ಬ ರಥಶ್ರೇಷ್ಠರೂ ಪುನಃ ಬೇಗನೆ ಧೃಷ್ಟದ್ಯುಮ್ನನನ್ನು ಐದು ಬಾಣಗಳಿಂದ ಹೊಡೆದರು. ದ್ರುಮಸೇನನಾದರೋ ಸಂಕ್ರುದ್ಧನಾಗಿ ಧೃಷ್ಟದ್ಯುಮ್ನನನ್ನು ಪತ್ರಿಗಳಿಂದ ಹೊಡೆದನು. ತಕ್ಷಣವೇ ಇತರ ಅನ್ಯ ಶರಗಳಿಂದ ಹೊಡೆದು ನಿಲ್ಲು ನಿಲ್ಲೆಂದು ಹೇಳಿದನು. ಧೃಷ್ಟದ್ಯುಮ್ನನಾದರೋ ಅವನನ್ನು ಯುದ್ಧದಲ್ಲಿ ಪ್ರಾಣಗಳನ್ನು ಅಂತ್ಯಗೊಳಿಸಬಲ್ಲ ಸ್ವರ್ಣಪುಂಖಗಳ ಶಿಲೆಗೆ ಹಚ್ಚಿ ಮೊನಚುಮಾಡಲ್ಪಟ್ಟ ಮೂರು ತೀಕ್ಷ್ಣ ಜಿಹ್ಮಗಗಳಿಂದ ತಿರುಗಿ ಹೊಡೆದನು. ಪುನಃ ಅನ್ಯ ಭಲ್ಲದಿಂದ ದ್ರುಮಸೇನನ ಸುವರ್ಣದಂತೆ ಬೆಳಗುತ್ತಿದ್ದ ಕುಂಡಲಗಳನ್ನು ಧರಿಸಿದ್ದ ಶಿರವನ್ನು ಕಾಯದಿಂದ ಕತ್ತರಿಸಿದನು. ಭಿರುಗಾಳಿಗೆ ಸಿಲುಕಿದ್ದ ಪಕ್ವ ತಾಳೆಯ ಫಲವು ಹೇಗೋ ಹಾಗೆ ಅವುಡುಗಚ್ಚಿದ್ದ ಆ ನೃಪತಿಯ ಶಿರವು ರಣಭೂಮಿಯ ಮೇಲೆ ಬಿದ್ದಿತು.
ವೀರ ಧೃಷ್ಟದ್ಯುಮ್ನನು ಆ ವೀರರನ್ನು ಪುನಃ ನಿಶಿತ ಶರಗಳಿಂದ ಹೊಡೆದು ಭಲ್ಲಗಳಿಂದ ಚಿತ್ರಯೋಧಿ ರಾಧೇಯನ ಕಾರ್ಮುಕವನ್ನು ಕತ್ತರಿಸಿದನು. ಸಿಂಹವು ತನ್ನ ಬಾಲವು ಕತ್ತರಿಸಿದುದನ್ನು ಸಹಿಸಿಕೊಳ್ಳದಂತೆ ಕರ್ಣನು ತನ್ನ ಧನುಸ್ಸು ತುಂಡಾಗಿದ್ದುದನ್ನು ಸಹಿಸಿಕೊಳ್ಳಲಿಲ್ಲ. ಅವನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ದೀರ್ಘ ಉಸಿರುಬಿಡುತ್ತಾ ಮಹಾಬಲ ಧೃಷ್ಟದ್ಯುಮ್ನನ ಮೇಲೆ ಶರಗಳ ಮಳೆಯನ್ನೇ ಸುರಿಸಿದನು. ಕರ್ಣನು ಕುಪಿತನಾಗಿರುವುದನ್ನು ಕಂಡು ಆ ಆರು ವೀರ ರಥರ್ಷಭರು (ದ್ರೋಣ, ಅಶ್ವತ್ಥಾಮ, ದುರ್ಯೋಧನ, ಶಲ್ಯ, ದುಃಶಾಸನ ಮತ್ತು ಶಕುನಿ) ತ್ವರೆಮಾಡಿ ಸಂಹರಿಸಲು ಬಯಸಿ ಪಾಂಚಾಲ್ಯಪುತ್ರನನ್ನು ಸುತ್ತುವರೆದರು. ಕೌರವರ ಕಡೆಯ ಆ ಆರು ಯೋಧಪ್ರವೀಣರಿಂದ ಎದುರಿಸಲ್ಪಟ್ಟಿದ್ದ ಧೃಷ್ಟದ್ಯುಮ್ನನು ಮೃತ್ಯುವಿನ ಬಾಗಿಲನ್ನೇ ತಲುಪಿದ್ದಾನೆಂದು ತೋರುತ್ತಿತ್ತು.
ಕರ್ಣ-ಸಾತ್ಯಕಿಯರ ಯುದ್ಧ
ಇದೇ ಸಮಯದಲ್ಲಿ ಶರಗಳನ್ನು ಚೆಲ್ಲುತ್ತಾ ಸಾತ್ಯಕಿಯು ಧೃಷ್ಟದ್ಯುಮ್ನನನ್ನು ಸಮೀಪಿಸಿದನು. ಮುಂದುವರೆಯುತ್ತಿದ್ದ ಸಾತ್ಯಕಿಯನ್ನು ರಾಧೇಯನು ಹತ್ತು ಜಿಹ್ಮಗ ಬಾಣಗಳಿಂದ ಹೊಡೆದನು. ಅವನನ್ನು ಸಾತ್ಯಕಿಯು ಹತ್ತು ಶರಗಳಿಂದ ಹೊಡೆದು ಸರ್ವ ವೀರರೂ ನೋಡುತ್ತಿದ್ದಂತೆಯೇ “ಹೋಗಬೇಡ! ನಿಲ್ಲು!” ಎಂದು ಹೇಳಿದನು. ಸಾತ್ಯಕಿ ಮತ್ತು ಕರ್ಣರ ಆ ಸಮಾಗಮವು ಬಲಿ-ವಾಸವರ ಸಮಾಗಮದಂತೆ ಘೋರವಾಗಿತ್ತು. ಚಪ್ಪಾಳೆ ಘೋಷದಿಂದ ಕ್ಷತ್ರಿಯರನ್ನು ಬೆದರಿಸುತ್ತಾ ಸಾತ್ಯಕಿಯು ಕರ್ಣನನ್ನು ತಿರುಗಿ ಹೊಡೆದನು. ಧನುರ್ಘೋಷದಿಂದ ವಸುಧೆಯನ್ನು ನಡುಗಿಸುವಂತೆ ಬಲಶಾಲೀ ಸೂತಪುತ್ರನು ಸಾತ್ಯಕಿಯನ್ನು ತಿರುಗಿ ಹೊಡೆದನು. ವಿಪಾಠ, ಕರ್ಣಿ, ನಾರಾಚ, ವತ್ಸದಂತ ಮತ್ತು ಕ್ಷುರಗಳೆಂಬ ನೂರಾರು ಶರಗಳಿಂದ ಕರ್ಣನು ಶೈನೇಯನನ್ನು ಪ್ರಹರಿಸಿದನು. ಹಾಗೆಯೇ ಮಹಾರಥ ಯುಯುಧಾನನು ಕೂಡ ಶರಗಳನ್ನು ಸುರಿಸಿ ಕರ್ಣನನ್ನು ಮುಚ್ಚಿಬಿಟ್ಟನು. ಆ ಯುದ್ಧವು ಸರಿಸಮನಾಗಿತ್ತು. ತಕ್ಷಣ ಕೌರವರೂ ಕವಚಧಾರೀ ಕರ್ಣಪುತ್ರನೂ ಎಲ್ಲಕಡೆಗಳಿಂದ ಸಾತ್ಯಕಿಯನ್ನು ನಿಶಿತ ಶರಗಳಿಂದ ಹೊಡೆದರು. ಸಾತ್ಯಕಿಯು ಕರ್ಣನ ಮತ್ತು ಅವರ ಅಸ್ತ್ರಗಳನ್ನು ಅಸ್ತ್ರಗಳಿಂದಲೇ ನಾಶಗೊಳಿಸಿ ಕ್ರುದ್ಧನಾಗಿ ವೃಷಸೇನನ ವಕ್ಷಸ್ಥಳಕ್ಕೆ ಹೊಡೆದನು. ಅವನ ಬಾಣದಿಂದ ಗಾಯಗೊಂಡ ವೀರ್ಯವಾನ್ ವೃಷಸೇನನು ಮೂರ್ಛಿತನಾಗಿ ಧನುಸ್ಸನ್ನು ಬಿಸುಟು ರಥದಮೇಲೆ ಕುಸಿದುಬಿದ್ದನು. ಆಗ ವೃಷಸೇನನು ಹತನಾದನೆಂದೇ ತಿಳಿದು ಪುತ್ರಶೋಕದಿಂದ ಸಂತಪ್ತನಾದ ಕರ್ಣನು ಸಾತ್ಯಕಿಯನ್ನು ತಿರುಗಿ ಪೀಡಿಸಿದನು. ಕರ್ಣನಿಂದ ಪೀಡಿಸಲ್ಪಟ್ಟ ಯುಯುಧಾನನು ತ್ವರೆಮಾಡಿ ಕರ್ಣನನ್ನು ಅನೇಕ ಬಾರಿ ಪುನಃ ಪುನಃ ಪ್ರಹರಿಸಿದನು. ಸಾತ್ವತನು ಕರ್ಣನನ್ನು ಹತ್ತರಿಂದ ಮತ್ತು ವೃಷಸೇನನನ್ನು ಏಳರಿಂದ ಹೊಡೆದು ಅವರ ಕೈಚೀಲಗಳನ್ನೂ ಧನುಸ್ಸುಗಳನ್ನೂ ಕತ್ತರಿಸಿದನು. ಅವರು ಶತ್ರುಭಯಂಕರ ಅನ್ಯ ಧನುಸ್ಸುಗಳನ್ನು ಸಜ್ಜುಗೊಳಿಸಿ ಎಲ್ಲಕಡೆಗಳಿಂದ ನಿಶಿತ ಶರಗಳಿಂದ ಯುಯುಧಾನನನ್ನು ಪ್ರಹರಿಸಿದರು. ಆ ವೀರವರಕ್ಷಯ ಸಂಗ್ರಾಮವು ನಡೆಯುತ್ತಿರಲು ಗಾಂಡೀವದ ಅತೀವ ಮಹಾಧ್ವನಿಯು ಕೇಳಿಬಂದಿತು.
ರಥನಿರ್ಘೋಷವನ್ನೂ ಗಾಂಡೀವ ನಿಸ್ವನವನ್ನೂ ಕೇಳಿದ ಸೂತಪುತ್ರನು ದುರ್ಯೋಧನನಿಗೆ ಹೇಳಿದನು: “ಇಗೋ! ಸರ್ವ ಶಿಬಿಗಳನ್ನೂ, ನರರ್ಷಭ ಮುಖ್ಯರನ್ನೂ, ಪೌರವರನ್ನೂ ಸಂಹರಿಸಿ ಅರ್ಜುನನು ಗರ್ಜಿಸುತ್ತಿರುವುದು, ಗಾಂಡೀವವನ್ನು ಟೇಂಕರಿಸುವುದು ಮತ್ತು ಅವನ ರಥಘೋಷವು ಕೇಳಿಬರುತ್ತಿದೆ. ಪಾಂಡವನು ತನಗೆ ಅನುರೂಪ ಕರ್ಮವನ್ನು ಮಾಡಿದ್ದಾನೆಂದು ವ್ಯಕ್ತವಾಗುತ್ತಿದೆ. ಇವನು ಭಾರತೀ ಸೇನೆಯನ್ನು ಅನೇಕ ಭಾಗಗಳಾಗಿ ಸೀಳುತ್ತಿದ್ದಾನೆ. ಚದುರಿಹೋದ ಸೇನೆಗಳು ಎಂದೂ ಯುದ್ಧದಲ್ಲಿ ನಿಲ್ಲುವುದಿಲ್ಲ. ಸವ್ಯಸಾಚಿಯ ಧಾಳಿಯಿಂದ ಚಂಡಮಾರುತಕ್ಕೆ ಸಿಲುಕಿದ ಸಾಗರದಂತೆ ಅಲ್ಲೋಲಕಲ್ಲೋಲಗೊಂಡ ಸೇನೆಯು ಸಾಗರದಲ್ಲಿ ತುಂಡಾದ ನೌಕೆಯಂತೆ ಕಾಣುತ್ತಿದೆ. ಗಾಂಡೀವದಿಂದ ಹೊರಬಂದ ಶರಗಳಿಂದ ಹೊಡೆಯಲ್ಪಟ್ಟ ಯೋಧಮುಖ್ಯರು ಓಡಿ ಹೋಗುತ್ತಿರುವ ಮಹಾ ನಿನಾದವು ಕೇಳಿಬರುತ್ತಿದೆ. ಈ ರಾತ್ರಿಯಲ್ಲಿ ಆಕಾಶದಲ್ಲುಂಟಾಗುವ ಮೇಘಗಳ ಗುಡುಗಿನಂತೆ ಅರ್ಜುನನ ರಥದ ಬಳಿ ಕೇಳಿಬರುತ್ತಿರುವ ಹಾಹಾಕಾರ ಕೂಗುಗಳು ಮತ್ತು ಪುಷ್ಕಲ ಸಿಂಹನಾದಗಳನ್ನು ಕೇಳು. ನಮ್ಮ ಮಧ್ಯೆ ಈ ಸಾತ್ವತಾಧಮ ಸಾತ್ಯಕಿಯು ನಿಂತಿದ್ದಾನೆ. ಇವನು ನಮ್ಮ ಲಕ್ಷ್ಯಕ್ಕೆ ಸಿಗುತ್ತಾನಾದರೆ ಶತ್ರುಗಳೆಲ್ಲರನ್ನೂ ನಾವು ಜಯಿಸಬಲ್ಲೆವು. ಈ ಪಾಂಚಾಲರಾಜನ ಪುತ್ರನು ಸುತ್ತಲೂ ಪುರುಷಸತ್ತಮ ಯೋಧರಿಂದ ಸುತ್ತುವರೆಯಲ್ಪಟ್ಟ ದ್ರೋಣನೊಂದಿಗೆ ಯುದ್ಧಮಾಡುತ್ತಿದ್ದಾನೆ. ಒಂದುವೇಳೆ ಸಾತ್ಯಕಿಯನ್ನು ಮತ್ತು ಧೃಷ್ಟದ್ಯುಮ್ನನನ್ನು ನಾವು ಸಂಹರಿಸಿದರೆ ನಮ್ಮ ವಿಜಯವು ನಿಶ್ಚಯ. ಅದರಲ್ಲಿ ಸಂಶಯವೇ ಇಲ್ಲ. ಸೌಭದ್ರನನ್ನು ಹೇಗೋ ಹಾಗೆ ಈ ಇಬ್ಬರು ವೃಷ್ಣಿ-ಪಾರ್ಷತ ಮಹಾರಥರನ್ನೂ ಸುತ್ತುವರೆದು ಕೊಲ್ಲಲು ಪ್ರಯತ್ನಿಸೋಣ. ಸಾತ್ಯಕಿಯು ಅನೇಕ ಕುರುಪುಂಗವರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ತಿಳಿದ ಕೂಡಲೇ ಸವ್ಯಸಾಚಿಯು ದ್ರೋಣನ ಸೇನೆಯ ಬಳಿ ಮುಂದುವರೆದು ಬರುತ್ತಾನೆ. ಸಾತ್ಯಕಿಯು ಅನೇಕರಿಂದ ಸುತ್ತುವರೆಯಲ್ಪಟ್ಟಿದ್ದಾನೆ ಎಂದು ಪಾರ್ಥನಿಗೆ ತಿಳಿಯದಂತೆ ಅನೇಕ ರಥಸತ್ತಮ ಪ್ರವರರು ಅಲ್ಲಿಗೆ ಹೋಗಲಿ. ಶೂರರು ಬಹಳ ತ್ವರೆಮಾಡಿ ಶರಗಳನ್ನು ಪ್ರಯೋಗಿಸುವಂತೆ ಬೇಗನೆ ಈ ಮಾಧವನನ್ನು ಪರಲೋಕಕ್ಕೆ ಕಳುಹಿಸಿ ಬಿಡೋಣ!”
ಕರ್ಣನ ಅಭಿಪ್ರಾಯವನ್ನು ತಿಳಿದು ದುರ್ಯೋಧನನು ಇಂದ್ರನು ಯಶಸ್ವಿ ವಿಷ್ಣುವಿಗೆ ಹೇಗೋ ಹಾಗೆ ಸೌಬಲನಿಗೆ ಹೇಳಿದನು: “ಹತ್ತು ಸಾವಿರ ಆನೆಗಳಿಂದಲೂ, ಹಿಂದಿರುಗದೇ ಇದ್ದ ಹತ್ತು ಸಾವಿರ ರಥಗಳಿಂದಲೂ ಆವೃತನಾಗಿ ಧನಂಜಯನಿದ್ದಲ್ಲಿಗೆ ಹೋಗು. ಅನೇಕ ಪದಾತಿಗಳನ್ನು ಕರೆದುಕೊಂಡು ದುಃಶಾಸನ, ದುರ್ವಿಷಹ, ಸುಬಾಹು ಮತ್ತು ದುಷ್ಪ್ರಧರ್ಷಣರು ನಿನ್ನನ್ನು ಹಿಂಬಾಲಿಸಿ ಬರುತ್ತಾರೆ. ಮಾವ! ಇಬ್ಬರು ಕೃಷ್ಣರನ್ನೂ, ಧರ್ಮರಾಜ, ನಕುಲ, ಸಹದೇವ ಮತ್ತು ಭೀಮಸೇನರನ್ನೂ ಸಂಹರಿಸು! ದೇವತೆಗಳೆಲ್ಲರೂ ದೇವೇಂದ್ರನ ಮೇಲೆ ಜಯದ ಭರವಸೆಯನ್ನಿಡುವಂತೆ ನಾನು ನಿನ್ನಮೇಲೆ ಭರವಸೆಯನ್ನಿಟ್ಟಿದ್ದೇನೆ. ಪಾವಕಿಯು ಅಸುರರನ್ನು ಹೇಗೋ ಹಾಗೆ ಕೌಂತೇಯರನ್ನು ಸಂಹರಿಸು!” ದುರ್ಯೋಧನನು ಹೀಗೆ ಹೇಳಲು ಸೌಬಲನು ಮಹಾ ಸೇನೆಯೊಡನೆ ಪಾರ್ಥರಿದ್ದಲ್ಲಿಗೆ ತೆರಳಿದನು. ಆಗ ಕೌರವರ ಮತ್ತು ಶತ್ರುಗಳ ನಡುವೆ ಯುದ್ಧವು ನಡೆಯಿತು.
ಸೌಬಲನು ಪಾಂಡವರ ಸೇನೆಯ ಕಡೆ ಹೊರಟುಹೋಗಲು ಯುದ್ಧದಲ್ಲಿ ಸೂತಪುತ್ರನು ತ್ವರೆಮಾಡಿ ಮಹಾ ಬಲದೊಂದಿಗೆ ಸಾತ್ವತನನ್ನು ಆಕ್ರಮಣಿಸಿ ಅನೇಕ ನೂರು ಬಾಣಗಳನ್ನು ಎರಚಿದನು. ಹಾಗೆಯೇ ಪಾಂಡವರೆಲ್ಲರೂ ಸಾತ್ಯಕಿಯನ್ನು ಸುತ್ತುವರೆದರು. ದ್ರೋಣನಿಗಾಗಿ ಆ ರಾತ್ರಿ ಮಹಾತ್ಮ ಶೂರ ಪಾಂಚಾಲ ಧೃಷ್ಟದ್ಯುಮ್ನನ ಮಹಾಯುದ್ಧವು ನಡೆಯಿತು.
ಆಗ ಕೌರವ ಯುದ್ಧದುರ್ಮದರೆಲ್ಲರೂ ರೋಷಗೊಂಡು ಸಂರಬ್ಧರಾಗಿ ಯುಯುಧಾನನ ರಥದ ಬಳಿಗೆ ಧಾವಿಸಿದರು. ಚಿನ್ನ-ಬೆಳ್ಳಿಗಳಿಂದ ಅಲಂಕರಿಸಲ್ಪಟ್ಟ ರಥಗಳ ಮೇಲೆ, ಕುದುರೆ-ಆನೆಗಳ ಮೇಲೆ ಕುಳಿತು ಅವರು ಸಾತ್ವತನನ್ನು ಸುತ್ತುವರೆದರು. ಆ ಮಹಾರಥರೆಲ್ಲರೂ ಕೋಟೆಯಾಕಾರವನ್ನು ಮಾಡಿಕೊಂಡು ಸಿಂಹನಾದಗೈಯುತ್ತಾ ಸಾತ್ಯಕಿಯನ್ನು ಹೆದರಿಸುತ್ತಿದ್ದರು. ಮಾಧವನ ವಧೆಯನ್ನು ಬಯಸಿದ ಅವರು ಮಹಾವೀರ್ಯದಿಂದ ತೀಕ್ಷ್ಣ ಶರಗಳನ್ನು ಸಾತ್ಯಕಿಯ ಮೇಲೆ ಸುರಿಸಿದರು. ಅವರು ಮೇಲೆ ಬೀಳುತ್ತಿದ್ದನ್ನು ನೋಡಿ ತಕ್ಷಣವೇ ಶೈನೇಯನು ಅನೇಕ ವಿಶಿಖಗಳನ್ನು ತೆಗೆದುಕೊಂಡು ಅವರಮೇಲೆ ಪ್ರಯೋಗಿಸಿದನು. ಅಲ್ಲಿ ವೀರ ಸಾತ್ಯಕಿಯು ಉಗ್ರ ಸನ್ನತಪರ್ವ ಶರಗಳಿಂದ ಅವರ ಶಿರಗಳನ್ನು ತುಂಡರಿಸಿದನು. ಆ ಮಾಧವನು ಕೌರವರ ಆನೆಗಳ ಸೊಂಡಿಲುಗಳನ್ನೂ, ಕುದುರೆಗಳ ಕುತ್ತಿಗೆಗಳನ್ನೂ, ಆಯುಧಧಾರಿಗಳ ಬಾಹುಗಳನ್ನೂ ಕ್ಷುರಪ್ರಗಳಿಂದ ಬೀಳಿಸಿದನು. ಬೀಳುತ್ತಿರುವ ಚಾಮರಗಳಿಂದ, ಶ್ವೇತಚತ್ರಗಳಿಂದ ಧರಣಿಯು ನಕ್ಷತ್ರಗಳಿಂದ ತುಂಬಿದ ಆಕಾಶದಂತಾಯಿತು. ಯುಯುಧಾನನೊಂದಿಗೆ ಯುದ್ಧಮಾಡುತ್ತಿರುವಾಗ ನಡೆದ ತುಮುಲ ಶಬ್ಧವು ಪ್ರೇತಗಳ ಆಕ್ರಂದನದಂತೆ ಕೇಳಿಬರುತ್ತಿತ್ತು. ಆ ಮಹಾಶಬ್ಧದಿಂದ ವಸುಂಧರೆಯು ತುಂಬಿಹೋಯಿತು. ರಾತ್ರಿಯೂ ಕೂಡ ಭಯವನ್ನುಂಟುಮಾಡುವ ತೀವ್ರರೂಪವನ್ನು ತಾಳಿತು.
ಸಾತ್ಯಕಿ-ದುರ್ಯೋಧನರ ಯುದ್ಧ
ಯುಯುಧಾನನ ಶರಗಳ ಹೊಡೆತಕ್ಕೆ ಸಿಲುಕಿ ತನ್ನ ಬಲವು ಧ್ವಂಸವಾಗುತ್ತಿರುವುದನ್ನು ನೋಡಿ ಮತ್ತು ನಿಶಿಯಲ್ಲಿ ಕೇಳಿಬರುತ್ತಿದ್ದ ರೋಮಹರ್ಷಣ ವಿಪುಲ ನಾದವನ್ನು ಕೇಳಿ ದುರ್ಯೋಧನನು ಸಾರಥಿಗೆ “ಎಲ್ಲಿಂದ ಈ ಶಬ್ಧವು ಕೇಳಿಬರುತ್ತಿದೆಯೋ ಅಲ್ಲಿಗೆ ಕುದುರೆಗಳನ್ನು ಪ್ರಚೋದಿಸು!” ಎಂದು ಪುನಃ ಪುನಃ ಹೇಳಿದನು. ಅವನಿಂದ ಪ್ರಚೋದನೆಗೊಂಡು ಸೂತನು ಆ ಉತ್ತಮ ತುರುಗಗಳನ್ನು ಯುಯುಧಾನನ ರಥದ ಕಡೆ ಪ್ರಚೋದಿಸಿದನು. ಆಗ ದುರ್ಯೋಧನನು ಯುಯುಧಾನನ ಮೇಲೆ ಧಾಳಿಮಾಡಿದನು. ಆಗ ಪೂರ್ಣವಾಗಿ ಸೆಳೆದು ಬಿಟ್ಟ ಮಾಂಸ-ರಕ್ತಗಳೇ ಭೋಜನವಾಗಿರುವ ಹನ್ನೆರಡು ಬಾಣಗಳಿಂದ ಮಾಧವನು ದುರ್ಯೋಧನನನ್ನು ಗಾಯಗೊಳಿಸಿದನು. ತಾನು ಬಾಣಗಳನ್ನು ಬಿಡುವ ಮೊದಲೇ ಗಾಯಗೊಳಿಸಿದ ಶೈನೇಯನನ್ನು ಕೋಪಗೊಂಡ ದುರ್ಯೋಧನನು ಹತ್ತು ಬಾಣಗಳಿಂದ ಪ್ರತಿಯಾಗಿ ಗಾಯಗೊಳಿಸಿದನು. ಆಗ ಪಾಂಚಾಲರೆಲ್ಲರ ಮತ್ತು ಭಾರತರ ದಾರುಣ ಸಂಕುಲ ಯುದ್ಧವು ಪ್ರಾರಂಭವಾಯಿತು. ರಣದಲ್ಲಿ ಕ್ರುದ್ಧ ಶೈನೇಯನಾದರೋ ದುರ್ಯೋಧನನ ಎದೆಗೆ ಹರಿತ ಸಾಯಕಗಳಿಂದ ಹೊಡೆದು ಗಾಯಗೊಳಿಸಿದನು. ಅಗ ಅವನು ಸಮರದಲ್ಲಿ ಕುದುರೆಗಳನ್ನು ಶರಗಳಿಂದ ಯಮಕ್ಷಯಕ್ಕೆ ಕಳುಹಿಸಿದನು. ಮತ್ತು ತಕ್ಷಣವೇ ಪತ್ರಿಗಳಿಂದ ಸಾರಥಿಯನ್ನು ರಥದಿಂದ ಕೆಡವಿದನು. ಕುದುರೆಗಳು ಹತರಾದ ರಥದ ಮೇಲೆಯೇ ನಿಂತುಕೊಂಡು ದುರ್ಯೋಧನನು ಶೈನೇಯನ ರಥದ ಕಡೆ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಅವನು ಕಳುಹಿಸಿದ ಆ ಐವತ್ತು ಶರಗಳನ್ನು ಕೃತಹಸ್ತ ಶೈನೇಯನು ಸಮರದಲ್ಲಿ ಕತ್ತರಿಸಿದನು.
ಅಷ್ಟರಲ್ಲಿಯೇ ಇನ್ನೊಂದು ಭಲ್ಲದಿಂದ ರಭಸವಾಗಿ ದುರ್ಯೋಧನನ ಮಹಾಧನುಸ್ಸನ್ನು ಮುಷ್ಟಿದೇಶದಲ್ಲಿ ತುಂಡರಿಸಿದನು. ವಿರಥನಾದ, ಧನುಸ್ಸನ್ನೂ ಕಳೆದುಕೊಂಡ ದುರ್ಯೋಧನನು ತಕ್ಷಣವೇ ಕೃತವರ್ಮನ ರಥವನ್ನು ಏರಿಕೊಂಡನು. ದುರ್ಯೋಧನನು ಪರಾಜಿತನಾಗಲು ಶೈನೇಯನು ಕೌರವ ಸೇನೆಯನ್ನು ಆ ರಾತ್ರಿಮಧ್ಯದಲ್ಲಿ ವಿಶಿಖಗಳಿಂದ ಪಲಾಯನಗೊಳಿಸಿದನು.
ಶಕುನಿ-ಅರ್ಜುನರ ಯುದ್ಧ
ಶಕುನಿಯು ಅರ್ಜುನನನ್ನು ಎಲ್ಲಕಡೆಗಳಿಂದ ಸುತ್ತುವರೆದನು. ಅನೇಕ ಸಹಸ್ರ ರಥಗಳಿಂದ, ಸಹಸ್ರಾರು ಆನೆಗಳಿಂದ ಮತ್ತು ಹಾಗೆಯೇ ಸಹಸ್ರಾರು ಕುದುರೆಗಳಿಂದ ಕೂಡಿದವನಾಗಿ ಎಲ್ಲಕಡೆಗಳಿಂದ ತುಮುಲ ಯುದ್ಧವನ್ನು ನಡೆಸಿದನು. ಕಾಲಚೋದಿತ ಆ ಕ್ಷತ್ರಿಯರು ಅರ್ಜುನನ ಮೇಲೆ ದಿವ್ಯ ಮಹಾಸ್ತ್ರಗಳನ್ನು ಎರಚುತ್ತಾ ಅರ್ಜುನನೊಂದಿಗೆ ಯುದ್ಧಮಾಡುತ್ತಿದ್ದರು. ಬಳಲಿದ್ದರೂ ಅರ್ಜುನನು ವಿಪುಲ ಕ್ಷಯವನ್ನುಂಟುಮಾಡುತ್ತಾ ಆ ಸಹಸ್ರಾರು ರಥ-ಆನೆ-ಕುದುರೆಗಳನ್ನು ತಡೆದು ನಿಲ್ಲಿಸಿದನು. ಆಗ ಶೂರ ಶಕುನಿ ಸೌಬಲನು ನಸುನಗುತ್ತಾ ಅರ್ಜುನನನ್ನು ನಿಶಿತ ಬಾಣಗಳಿಂದ ಗಾಯಗೊಳಿಸಿದನು. ಪುನಃ ನೂರು ಬಾಣಗಳಿಂದ ಆ ಮಹಾರಥನನ್ನು ಮುಂದೆಹೋಗದಂತೆ ತಡೆದನು. ಅರ್ಜುನನಾದರೋ ಅವನನ್ನು ಇಪ್ಪತ್ತು ಬಾಣಗಳಿಂದ ಹೊಡೆದನು. ಇತರ ಮಹೇಷ್ವಾಸರನ್ನೂ ಅವನು ಮೂರು ಮೂರು ಬಾಣಗಳಿಂದ ಹೊಡೆದನು. ಅವರನ್ನು ಬಾಣಗಣಗಳಿಂದ ತಡೆಯುತ್ತಾ ಧನಂಜಯನು ವಜ್ರಪಾಣಿಯು ಅಸುರರನ್ನು ಹೇಗೋ ಹಾಗೆ ಕೌರವ ಯೋಧರನ್ನು ಗಾಯಗೊಳಿಸಿದನು. ಕತ್ತರಿಸಲ್ಪಟ್ಟು ಹರಡಿಹೋಗಿದ್ದ ಸಹಸ್ರಾರು ಭುಜಗಳಿಂದ ಮತ್ತು ಶರೀರಗಳಿಂದ ರಣಭೂಮಿಯು ಪುಷ್ಪಗಳಿಂದ ವ್ಯಾಪ್ತವಾಗಿರುವಂತೆ ತೋರುತ್ತಿತ್ತು. ಶಕುನಿಯನ್ನು ಪುನಃ ಐದು ನತಪರ್ವಗಳಿಂದ ಹೊಡೆದು ಅವನು ಉಲೂಕನನ್ನು ಮೂರು ಮೂರು ಮಹಾಯಸಗಳಿಂದ ಹೊಡೆದನು. ಆಗ ಉಲೂಕನು ವಾಸುದೇವನನನ್ನು ಹೊಡೆದನು ಮತ್ತು ವಸುಧಾತಲವನ್ನು ತುಂಬಿಬಿಡುವಂತೆ ಮಹಾನಾದಗೈದನು. ಅರ್ಜುನನಾದರೋ ಮುಂದುವರೆದು ಶಕುನಿಯ ಧನುಸ್ಸನ್ನು ಕತ್ತರಿಸಿದನು ಮತ್ತು ಅವನ ನಾಲ್ಕು ಕುದುರೆಗಳನ್ನು ಯಮಸದನದ ಕಡೆ ಕಳುಹಿಸಿದನು. ಆಗ ರಥದಿಂದ ಹಾರಿ ಸೌಬಲನು ಬೇಗನೇ ಉಲೂಕನ ರಥವನ್ನೇರಿದನು. ಅವರಿಬ್ಬರು ಪಿತಾ-ಪುತ್ರ ಮಹಾರಥರೂ ಒಂದೇ ರಥವನ್ನೇರಿ ಮೇಲೆದ್ದ ಮೋಡಗಳು ಗಿರಿಯಮೇಲೆ ಹೇಗೋ ಹಾಗೆ ಪಾರ್ಥನ ಮೇಲೆ ಬಾಣಗಳ ಮಳೆಗರೆದರು. ಪಾಂಡವನು ಅವರಿಬ್ಬರನ್ನೂ ನಿಶಿತ ಶರಗಳಿಂದ ಹೊಡೆದು ಕೌರವ ಸೇನೆಯನ್ನು ನೂರಾರು ಶರಗಳಿಂದ ಹೊಡೆದು ಓಡಿಸಿದನು. ಗಾಳಿಯಿಂದ ಮೋಡಗಳು ಹೇಗೆ ಎಲ್ಲ ಕಡೆ ಚದುರಿ ಹೋಗುವವೋ ಹಾಗೆ ಕೌರವ ಸೇನೆಯು ಛಿದ್ರಛಿದ್ರವಾಗಿ ಒಡೆದುಹೋಯಿತು.
ರಾತ್ರಿಯಲ್ಲಿ ಹಾಗೆ ವಧಿಸಲ್ಪಡುತ್ತಿದ್ದ ಆ ಸೇನೆಯು ಭಯಾರ್ದಿತಗೊಂಡು ದಿಕ್ಕುಗಳನ್ನು ನೋಡುತ್ತಾ ಓಡಿಹೋಯಿತು. ಆ ದಾರುಣ ಕತ್ತಲೆಯ ಸಮರದಲ್ಲಿ ಕೆಲವರು ಸಂಭ್ರಾಂತರಾಗಿ ವಾಹನಗಳನ್ನೇ ಬಿಟ್ಟು ಓಡಿಹೋಗುತ್ತಿದ್ದರು. ಸಮರದಲ್ಲಿ ನಿನ್ನಕಡೆಯ ಯೋಧರನ್ನು ಸೋಲಿಸಿ ಮುದಿತರಾದ ವಾಸುದೇವ-ಧನಂಜಯರು ಶಂಖಗಳನ್ನು ಮೊಳಗಿಸಿದರು.
ದ್ರೋಣ-ಧೃಷ್ಟದ್ಯುಮ್ನರ ಯುದ್ಧ; ಪಾಂಡವ ಸೇನೆಯ ಪಲಾಯನ
ಧೃಷ್ಟದ್ಯುಮ್ನನು ದ್ರೋಣನನ್ನು ಮೂರು ಶರಗಳಿಂದ ಹೊಡೆದು ತಕ್ಷಣವೇ ನಿಶಿತ ಶರದಿಂದ ಅವನ ಧನುಸ್ಸಿನ ಮೌರ್ವಿಯನ್ನು ಕತ್ತರಿಸಿದನು. ದ್ರೋಣನು ಆ ಧನುಸ್ಸನ್ನು ಕೆಳಗಿಟ್ಟು ಇನ್ನೊಂದು ವೇಗಶಾಲಿ ಭಾರ ಧನುಸ್ಸನ್ನು ಎತ್ತಿಕೊಂಡನು. ಆಗ ದ್ರೋಣನು ಧೃಷ್ಟದ್ಯುಮ್ನನನ್ನು ಏಳು ಆಶುಗಗಳಿಂದ ಹೊಡೆದು ಸಂಯುಗದಲ್ಲಿ ಐದು ಬಾಣಗಳಿಂದ ಅವನ ಸಾರಥಿಯನ್ನೂ ಹೊಡೆದನು. ಅವನನ್ನು ತಡೆಹಿಡಿದು ಧೃಷ್ಟದ್ಯುಮ್ನನು ತಕ್ಷಣವೇ ನೂರಾರು ಸಾವಿರಾರು ಕೌರವೀ ಸೇನೆಯನ್ನು ವಧಿಸಿದನು. ಕೌರವ ಸೇನೆಯು ಹಾಗೆ ವಧಿಸಲ್ಪಡುತ್ತಿರುವಾಗ ಘೋರ ರಕ್ತದ ಅಲೆಗಳುಳ್ಳ ನದಿಯೇ ಹರಿಯತೊಡಗಿತು.
ಯಮರಾಷ್ಟ್ರಪುರದ ಬಳಿ ವೈತರಣಿಯು ಹೇಗೋ ಹಾಗೆ ಎರಡೂ ಸೇನೆಗಳ ಮಧ್ಯೆ ನರ-ಅಶ್ವ-ಗಜಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಆ ನದಿಯು ಹರಿಯುತ್ತಿತ್ತು. ಆ ಸೇನೆಯನ್ನು ಓಡಿಸಿದ ಧೃಷ್ಟದ್ಯುಮ್ನನು ದೇವಗಣಗಳ ಮಧ್ಯೆ ಶಕ್ರನಂತೆ ಅತಿಯಾಗಿ ರಾರಾಜಿಸಿದನು. ಆಗ ಧೃಷ್ಟದ್ಯುಮ್ನ-ಶಿಖಂಡಿಯರು, ಯಮಳರಿಬ್ಬರು, ಯುಯುಧಾನ ಮತ್ತು ವೃಕೋದರರು ಮಹಾಶಂಖಗಳನ್ನೂದಿದರು. ಕೌರವರ ಸಹಸ್ರಾರು ರಥಗಳನ್ನು ಗೆದ್ದು ವಿಜಯೋತ್ಸಾಹದಿಂದ ಮಹಾರಥ ಪಾಂಡವರು ಮಹಾಧ್ವನಿಯ ಸಿಂಹನಾದಗೈದರು. ದುರ್ಯೋಧನ, ಕರ್ಣ, ಹಾಗೆಯೇ ದ್ರೋಣ ಮತ್ತು ಶೂರ ದ್ರೌಣಿಯರು ಆ ಮದೋತ್ಕಟರನ್ನು ನೋಡುತ್ತಲೇ ಇದ್ದರು.
ಮಹಾತ್ಮರಿಂದ ವಧಿಸಲ್ಪಡುತ್ತಾ ಓಡಿಹೋಗುತ್ತಿರುವ ತನ್ನ ಸೇನೆಯನ್ನು ಕಂಡು ದುರ್ಯೋಧನನು ಮಹಾ ಕ್ರೋಧದಿಂದ ಆವಿಷ್ಟನಾದನು. ವಾಕ್ಯಜ್ಞನಾದ ಅವನು ಕ್ರೋಧದ ವಶಕ್ಕೆ ಸಿಲುಕಿ ತ್ವರೆಮಾಡಿ ಕರ್ಣ ಮತ್ತು ಜಯಿಗಳಲ್ಲಿ ಶ್ರೇಷ್ಠ ದ್ರೋಣರ ಬಳಿಸಾರಿ ಈ ಮಾತುಗಳನ್ನಾಡಿದನು: “ಸವ್ಯಸಾಚಿಯಿಂದ ಸೈಂಧವನು ಹತನಾದುದನ್ನು ಕಂಡು ಕ್ರೋಧಿತರಾಗಿ ನೀವು ಈ ಯುದ್ಧವನ್ನು ರಾತ್ರಿಯಲ್ಲಿಯೂ ಮುಂದುವರೆಸಿದಿರಿ. ಆದರೆ ಪಾಂಡವರ ಸೇನೆಯು ನನ್ನ ಸೇನೆಯನ್ನು ಸಂಹರಿಸುತ್ತಲೇ ಇದೆ. ಇದರಲ್ಲಿ ವಿಜಯವನ್ನು ಹೊಂದಲು ಶಕ್ತರಾಗಿದ್ದರೂ ನೀವು ಅಶಕ್ತರೆಂದು ತೋರ್ಪಡಿಸಿಕೊಳ್ಳುತ್ತಿದ್ದೀರಿ. ಒಂದುವೇಳೆ ನಿಮ್ಮಿಬ್ಬರಿಗೂ ನಾನು ಬೇಡವೆಂದಾದರೆ ಮಾನದರಾದ ನೀವು ಆಗ “ನಾವು ಪಾಂಡುಸುತರನ್ನು ಯುದ್ಧದಲ್ಲಿ ಜಯಿಸುತ್ತೇವೆ” ಎಂದು ನನಗೆ ಹೇಳಬಾರದಿತ್ತು! ನಿಮಗೆ ಸಮ್ಮತಿಯಿರದಿದ್ದರೆ ನಿಮ್ಮ ಆ ಮಾತನ್ನು ಕೇಳಿ ಈ ಯೋಧರ ವಿನಾಶಕಾರಕ ವೈರವನ್ನು ನಾನು ಪಾಂಡವರೊಡನೆ ಕಟ್ಟಿಕೊಳ್ಳುತ್ತಿರಲಿಲ್ಲ. ಒಂದುವೇಳೆ ನಿಮಗೆ ನಾನು ಪರಿತ್ಯಾಜ್ಯನೆನಿಸದಿದ್ದರೆ ವಿಕ್ರಮದಿಂದ ನಿಮಗೆ ಅನುರೂಪ ಯುದ್ಧವನ್ನು ಮಾಡಿ!”
ತುಳಿಯಲ್ಪಟ್ಟ ಸರ್ಪಗಳಂತೆ ಮತ್ತು ಮಾತಿನ ಚಾವಟಿಯಿಂದ ಹೊಡೆಯಲ್ಪಟ್ಟವರಂತೆ ಆ ವೀರರಿಬ್ಬರೂ ಪುನಃ ಯುದ್ಧವನ್ನು ಪ್ರಾರಂಭಿಸಿದರು. ಆಗ ಅವರಿಬ್ಬರು ರಥಶ್ರೇಷ್ಠರೂ ಸರ್ವಲೋಕಧನುರ್ಧರರೂ ರಣದಲ್ಲಿ ಶೈನೇಯಪ್ರಮುಖ ಪಾರ್ಥರನ್ನು ಆಕ್ರಮಣಿಸಿದರು. ಹಾಗೆಯೇ ಪಾರ್ಥರೂ ಕೂಡ ತಮ್ಮ ತಮ್ಮ ಸೇನೆಗಳಿಂದ ಸುತ್ತುವರೆಯಲ್ಪಟ್ಟು ಪುನಃ ಪುನಃ ಸಿಂಹನಾದಗೈಯುತ್ತಾ ಆ ವೀರರಿಬ್ಬರನ್ನೂ ಎದುರಿಸಿದರು. ಆಗ ದ್ರೋಣನು ಕ್ರುದ್ಧನಾಗಿ ತ್ವರೆಯಿಂದ ಹತ್ತು ಬಾಣಗಳಿಂದ ಶಿನಿಪುಂಗವನನ್ನು ಹೊಡೆದನು. ಹಾಗೆಯೇ ಕರ್ಣನು ಹತ್ತು ಬಾಣಗಳಿಂದ, ದುರ್ಯೋಧನನು ಏಳರಿಂದ, ವೃಷಸೇನನು ಹತ್ತರಿಂದ, ಸೌಬಲನು ಏಳರಿಂದ ಹೊಡೆದು ಹೀಗೆ ಕೌರವರು ಶೈನೇಯನನ್ನು ಸುತ್ತುವರೆದರು.
ಸಮರದಲ್ಲಿ ದ್ರೋಣನು ಪಾಂಡವೀ ಸೇನೆಯನ್ನು ಧ್ವಂಸಗೊಳಿಸುತ್ತಿರುವುದನ್ನು ನೋಡಿ ತಕ್ಷಣವೇ ಸೋಮಕರು ಎಲ್ಲಕಡೆಗಳಿಂದ ಶರವರ್ಷವನ್ನು ಸುರಿಸಿ ಅವನನ್ನು ಗಾಯಗೊಳಿಸಿದರು. ಆಗ ದ್ರೋಣನು ಭಾಸ್ಕರನು ಕತ್ತಲೆಯನ್ನು ತನ್ನ ಕಿರಣಗಳಿಂದ ಹೇಗೋ ಹಾಗೆ ಕ್ಷತ್ರಿಯರ ಪ್ರಾಣಗಳನ್ನು ಅಪಹರಿಸಿದನು. ದ್ರೋಣನಿಂದ ವಧಿಸಲ್ಪಡುತ್ತಿರುವ ಪಾಂಚಾಲರ ಪರಸ್ಪರರ ತುಮುಲ ಶಬ್ಧವು ಒಂದು ಕ್ರೋಶ ದೂರದವರೆಗೂ ಕೇಳಿಬರುತ್ತಿತ್ತು. ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ತ್ವರೆಮಾಡಿ ಪುತ್ರರು ಪಿತೃಗಳನ್ನೂ, ಸಹೋದರರು ಸಹೋದರರನ್ನೂ, ಅಳಿಯಂದಿರು ಮಾವಂದಿರನ್ನೂ, ಸ್ನೇಹಿತರನ್ನೂ, ಸಂಬಂಧಿ-ಬಾಂಧವರನ್ನೂ ಅಲ್ಲಲ್ಲಿಯೇ ಬಿಟ್ಟು ಓಡಿಹೋಗುತ್ತಿದ್ದರು. ಕೆಲವರು ಮೋಹಿತರಾಗಿ ಮೋಹದಿಂದ ದ್ರೋಣನ ಎದುರಾಗಿಯೇ ಹೋಗುತ್ತಿದ್ದರು. ಇನ್ನು ಇತರ ಪಾಂಡವ ಯೋಧರು ರಣದಲ್ಲಿ ಪರಲೋಕವನ್ನು ಸೇರಿದರು.
ಆ ಮಹಾತ್ಮನಿಂದ ಹಾಗೆ ವಧಿಸಲ್ಪಡುತ್ತಿದ್ದ ಪಾಂಡವೀ ಸೇನೆಯು ಸಹಸ್ರಾರು ಸಂಖ್ಯೆಗಳಲ್ಲಿ ದೀವಟಿಗೆಗಳನ್ನು ಬಿಸುಟು ರಾತ್ರಿಯಲ್ಲಿ ಭೀಮಸೇನ, ವಿಜಯ, ಅಚ್ಯುತ, ನಕುಲ-ಸಹದೇವರು, ಧರ್ಮಪುತ್ರ ಮತ್ತು ಪಾರ್ಷತರು ನೋಡುತ್ತಿದ್ದಂತೆಯೇ ಓಡಿಹೋಗುತ್ತಿದ್ದರು. ಕತ್ತಲೆಯಿಂದ ಲೋಕವೇ ತುಂಬಿಹೋಗಿರಲು ಅಲ್ಲಿ ಏನೊಂದೂ ತಿಳಿಯುತ್ತಿರಲಿಲ್ಲ. ಆದರೆ ಕೌರವರ ದೀವಟಿಗೆಗಳ ಪ್ರಕಾಶದಿಂದ ಶತ್ರುಗಳು ಓಡಿಹೋಗುತ್ತಿರುವುದು ಕಾಣುತ್ತಿತ್ತು. ಓಡಿಹೋಗುತ್ತಿರುವ ಆ ಸೈನ್ಯವನ್ನು ಮಹಾರಥ ದ್ರೋಣ-ಕರ್ಣರು ಹಿಂದಿನಿಂದ ಅನೇಕ ಸಾಯಕಗಳನ್ನು ಎರಚುತ್ತಾ ಸಂಹರಿಸಿದರು. ಪಾಂಚಾಲರು ಎಲ್ಲಕಡೆಗಳಿಂದ ಸೀಳಿಕೊಂಡು ಭಗ್ನರಾಗುತ್ತಿರಲು ದೀನಮನಸ್ಕ ಜನಾರ್ದನನು ಫಲ್ಗುನನಿಗೆ ಹೇಳಿದನು: “ಮಹೇಷ್ವಾಸ ದ್ರೋಣ-ಕರ್ಣರು ಪಾರ್ಷತ-ಸಾತ್ಯಕಿಯರನ್ನೂ ಪಾಂಚಾಲ ಸೇನೆಯೊಡನೆ ಅನೇಕ ಸಾಯಕಗಳಿಂದ ಸಂಹರಿಸುತ್ತಿದ್ದಾರೆ. ಕೌಂತೇಯ! ಇವರ ಈ ಶರವರ್ಷಗಳಿಂದ ಪ್ರಭಗ್ನರಾದ ನಮ್ಮ ಮಹಾರಥರು ತಡೆದರೂ ರಣರಂಗದಲ್ಲಿ ನಿಲ್ಲುತ್ತಿಲ್ಲ. ನಾವಿಬ್ಬರೂ ಸರ್ವಸೇನೆಗಳ ವ್ಯೂಹವನ್ನು ರಚಿಸಿ ಎಲ್ಲ ಆಯುಧಗಳೊಂದಿಗೆ ದ್ರೋಣ ಮತ್ತು ಸೂತಪುತ್ರರನ್ನು ಬಾಧೆಪಡಿಸಲು ಸಂಪೂರ್ಣ ಪ್ರಯತ್ನಿಸಬೇಕು. ಇವರಿಬ್ಬರೂ ಬಲಶಾಲಿಗಳು, ಶೂರರು, ಕೃತಾಸ್ತ್ರರು ಮತ್ತು ವಿಜಯವನ್ನು ಬಯಸುವವರು. ಕ್ರುದ್ಧರಾದ ಇವರು ಬಯಸಿದರೆ ಈ ರಾತ್ರಿಯೇ ನಮ್ಮ ಸೇನೆಯನ್ನು ನಾಶಗೊಳಿಸಬಲ್ಲರು.”
ಹೀಗೆ ಮಾತನಾಡಿಕೊಳ್ಳುತ್ತಿದ್ದಾಗ ಅತಿ ಉಗ್ರ ಭೀಮನು ಸೇನೆಯನ್ನು ಪುನಃ ಕರೆದು ತಂದನು. ಹಾಗೆ ವೃಕೋದರನು ಅಲ್ಲಿಗೆ ಬರುತ್ತಿದ್ದುದನ್ನು ನೋಡಿದ ಜನಾರ್ದನನು ಹರ್ಷಗೊಂಡವನಾಗಿ ಪಾಂಡವನಿಗೆ ಪುನಃ ಹೇಳಿದನು: “ಇಗೋ! ರಣಶ್ಲಾಘೀ ಭೀಮನು ಸೋಮಕ-ಪಾಂಡವರಿಂದ ಸುತ್ತುವರೆಯಲ್ಪಟ್ಟು ರೋಷದಿಂದ ವೇಗವಾಗಿ ಮಹಾಬಲ ದ್ರೋಣ-ಕರ್ಣರು ಇರುವಲ್ಲಿಗೆ ಬರುತ್ತಿದ್ದಾನೆ. ಸೇನೆಗಳೆಲ್ಲವಕ್ಕೆ ಆಶ್ವಾಸನೆ ನೀಡುವ ಸಲುವಾಗಿ ನೀನು ಪಾಂಚಾಲ ಮಹಾರಥರೊಂದಿಗೆ ಸೇರಿಕೊಂಡು ದ್ರೋಣ-ಕರ್ಣರೊಡನೆ ಯುದ್ಧಮಾಡು!”
ಆಗ ಮಾಧವ-ಪಾಂಡವರು ರಣಮೂರ್ದನಿಯಲ್ಲಿ ದ್ರೋಣ ಮತ್ತು ಕರ್ಣರ ಎದುರಾಗಿ ಯುದ್ಧಸನ್ನದ್ಧರಾಗಿ ನಿಂತರು. ಆಗ ಯುಧಿಷ್ಠಿರನ ಮಹಾಸೇನೆಯು ಹಿಂದಿರುಗಿತು. ಮತ್ತು ದ್ರೋಣ-ಕರ್ಣರು ಯುದ್ಧದಲ್ಲಿ ಆ ಶತ್ರುಬಲವನ್ನು ಧ್ವಂಸಗೊಳಿಸತೊಡಗಿದರು. ಚಂದ್ರೋದಯದಿಂದ ಉಕ್ಕಿಬರುವ ಎರಡು ಮಹಾಸಾಗರಗಳಂತಿದ್ದ ಆ ಎರಡು ಸೇನೆಗಳ ನಡುವೆ ಆ ರಾತ್ರಿ ಪುನಃ ಸಂಪ್ರಹಾರಗಳನ್ನೊಡಗೂಡಿದ ಮಹಾ ತುಮುಲ ಯುದ್ಧವು ಪ್ರಾರಂಭವಾಯಿತು. ಆಗ ಕೌರವ ಸೇನೆಯು ಕೈಗಳಲ್ಲಿದ್ದ ದೀವಟಿಗೆಗಳನ್ನು ಬಿಸುಟು ಪಾಂಡವರೊಡನೆ ಉನ್ಮತ್ತರಾದವರಂತೆ ಯುದ್ಧಮಾಡತೊಡಗಿದರು. ಧೂಳು ಮತ್ತು ಕತ್ತಲಿನಿಂದ ಆವೃತವಾದ ಆ ಅತ್ಯಂತ ದಾರುಣ ರಾತ್ರಿಯಲ್ಲಿ ಎರಡು ಕಡೆಯ ಜಯೈಷಿಗಳು ಕೇವಲ ನಾಮಗೋತ್ರಗಳನ್ನು ಹೇಳಿಕೊಂಡು ಯುದ್ಧಮಾಡುತ್ತಿದ್ದರು. ಸ್ವಯಂವರದಲ್ಲಿ ರಾಜರು ತಮ್ಮ ತಮ್ಮ ಹೆಸರುಗಳನ್ನು ಹೇಳಿಕೊಳ್ಳುವಂತೆ ಯುದ್ಧದಲ್ಲಿ ತಮ್ಮ ತಮ್ಮ ಹೆಸರುಗಳನ್ನು ಕೇಳುವಂತೆ ಹೇಳಿಕೊಳ್ಳುತ್ತಾ ಯುದ್ಧಮಾಡುತ್ತಿದ್ದರು. ಯುದ್ಧಮಾಡಿ ವಿಜಯಿಗಳಾಗುತ್ತಿದ್ದವರ ಮತ್ತು ಪರಾಜಿತರಾಗುತ್ತಿದ್ದವರ ಧ್ವನಿಗಳು ಒಮ್ಮಿಂದೊಮ್ಮೆಲೇ ನಿಃಶಬ್ಧವಾಗುತ್ತಿದ್ದವು. ಪುನಃ ಮಹಾ ಶಬ್ಧವುಂಟಾಗುತ್ತಿತ್ತು. ಎಲ್ಲೆಲ್ಲಿ ದೀವಟಿಗೆಗಳ ಬೆಳಕು ಕಾಣುತ್ತಿತ್ತೋ ಅಲ್ಲಲ್ಲಿ ಪತಂಗದ ಹುಳುಗಳೋಪಾದಿಯಲ್ಲಿ ಶೂರರು ಕೆಳಗೆ ಬೀಳುತ್ತಿದ್ದರು. ಹಾಗೆ ಯುದ್ಧಮಾಡುತ್ತಿದ್ದ ಪಾಂಡವರ ಮತ್ತು ಕೌರವರ ಸುತ್ತಲೂ ದಟ್ಟವಾದ ಮಹಾ ಕತ್ತಲೆಯು ಆವರಿಸಿತು.