ಹದಿನಾಲ್ಕನೆಯ ದಿನದ ರಾತ್ರಿಯುದ್ಧ-೧

ಹದಿನಾಲ್ಕನೆಯ ದಿನದ ರಾತ್ರಿಯುದ್ಧದಲ್ಲಿ ಕೌರವರ ಪ್ರಚಂಡ ಗಜಸೇನೆಯು ಪಾಂಡವರ ಸೇನೆಗಳನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ಯುದ್ಧಮಾಡತೊಡಗಿತು. ಪರಲೋಕದ ದೀಕ್ಷೆಯನ್ನು ತೊಟ್ಟಿದ್ದ ಪಾಂಚಾಲ-ಕುರುಗಳು ಯಮರಾಷ್ಟ್ರವನ್ನು ವರ್ಧಿಸಲು ಪರಸ್ಪರರೊಡನೆ ಯುದ್ಧಮಾಡಿದರು. ಸಮರದಲ್ಲಿ ಶೂರರು ಶೂರರನ್ನು ಎದುರಿಸಿ ಶರ-ತೋಮರ-ಶಕ್ತಿಗಳಿಂದ ಹೊಡೆದು ಬೇಗನೇ ಯಮಕ್ಷಯಕ್ಕೆ ಕಳುಹಿಸುತ್ತಿದ್ದರು. ಪರಸ್ಪರರನ್ನು ಸಂಹರಿಸುವುದರಲ್ಲಿ ತೊಡಗಿದ ರಥಿಗಳು ರಥಿಗಳನ್ನು ಎದುರಿಸಿ ರಕ್ತದ ದಾರುಣ ಕೋಡಿಯನ್ನೇ ಹರಿಸುವ ಮಯಾಯುದ್ಧವು ಪ್ರಾರಂಭವಾಯಿತು. ಮದೋತ್ಕಟ ಸಂಕ್ರುದ್ಧ ಆನೆಗಳು ಪರಸ್ಪರರನ್ನು ಎದುರಿಸಿ ಕೋರೆದಾಡೆಗಳಿಂದ ಇರಿಯುತ್ತಿದ್ದವು. ಆ ತುಮುಲ ಯುದ್ಧದಲ್ಲಿ ಯಶಸ್ಸನ್ನು ಅರಸುತ್ತಾ ಅಶ್ವಾರೋಹಿಗಳು ಅಶ್ವಾರೋಹಿಗಳೊಂದಿಗೆ ಪ್ರಾಸ-ಶಕ್ತಿ-ಪರಶಾಯುಧಗಳಿಂದ ಹೊಡೆದಾಡಿದರು. ನೂರಾರು ಶಸ್ತ್ರಪಾಣೀ ಪದಾತಿ ಸೈನಿಕರು ಸತತವಾಗಿ ಪ್ರಯತ್ನಿಸಿ ತಮ್ಮ ಪರಾಕ್ರಮವನ್ನು ತೋರ್ಪಡಿಸುತ್ತಾ ಅನ್ಯೋನ್ಯರನ್ನು ಹೊಡೆಯುತ್ತಿದ್ದರು. ಗೋತ್ರ-ನಾಮಧೇಯ-ಕುಲಗಳನ್ನು ಕೇಳಿಯೇ ಕುರುಗಳೊಡನೆ ಹೋರಾಡುತ್ತಿದ್ದವರು ಪಾಂಚಾಲರು ಎಂದು ತಿಳಿಯುತ್ತಿತ್ತು. ಯೋಧರು ಶರ-ಶಕ್ತಿ-ಪರಶಾಯುಧಗಳಿಂದ ಅನ್ಯೋನ್ಯರನ್ನು ಪರಲೋಕಗಳಿಗೆ ಕಳುಹಿಸುತ್ತಾ ನಿರ್ಭೀತರಾಗಿ ಸಂಚರಿಸುತ್ತಿದ್ದರು. ಅವರು ಬಿಡುತ್ತಿದ್ದ ಸಹಸ್ರಾರು ಬಾಣಗಳಿಂದಾಗಿ ಮತ್ತು ಭಾಸ್ಕರನು ಅಸ್ತಂಗತನಾಗಿದುದಕ್ಕಾಗಿ ಹತ್ತು ದಿಕ್ಕುಗಳೂ ಮೊದಲಿನಂತೆ ಪ್ರಕಾಶಿಸುತ್ತಿರಲಿಲ್ಲ.

ದುರ್ಯೋಧನನ ಯುದ್ಧ

ಹಾಗೆ ಪಾಂಡವರು ಯುದ್ಧಮಾಡುತ್ತಿರುವಾಗ ದುರ್ಯೋಧನನು ನಿರ್ಭಯನಾಗಿ ಅವರ ಸೇನೆಯೊಳಗೆ ನುಗ್ಗಿದನು. ಸೈಂಧವನ ವಧೆಯಿಂದಾಗಿ ಅತೀವ ದುಃಖಸಮನ್ವಿತನಾದ ಅವನು ಸಾಯಬೇಕೆಂದು ಯೋಚಿಸಿ ಶತ್ರುಸೈನ್ಯವನ್ನು ಪ್ರವೇಶಿಸಿದನು. ಮೇದಿನಿಯನ್ನೇ ನಡುಗಿಸುವಂತಹ ರಥಘೋಷದಿಂದ ಅವನು ಪಾಂಡವರ ಸೇನೆಯನ್ನು ಆಕ್ರಮಣಿಸಿ ಗರ್ಜಿಸಿದನು. ಅವನ ಮತ್ತು ಪಾಂಡವರ ನಡುವೆ ನಡೆದ ಆ ಮಹಾ ತುಮುಲ ಯುದ್ಧವು ಸರ್ವಸೇನೆಗಳಿಗೆ ವಿನಾಶಕಾರಿಯಾಗಿ ಪರಿಣಮಿಸಿತು. ತೀಕ್ಷ್ಣ ಕಿರಣಗಳ ಮಧ್ಯಾಹ್ನದ ಸೂರ್ಯನನ್ನು ಹೇಗೆ ನೋಡಲಿಕ್ಕಾಗುವುದಿಲ್ಲವೋ ಹಾಗೆ ಕಿರಣಗಳಂತೆ ಹೊರಬೀಳುತ್ತಿದ್ದ ಬಾಣಗಳ ಮಧ್ಯದಲ್ಲಿದ್ದ ದುರ್ಯೋಧನನನ್ನು ಪಾಂಡವರಿಗೆ ಕಣ್ಣೆತ್ತಿ ನೋಡಲೂ ಆಗುತ್ತಿರಲಿಲ್ಲ. ದುರ್ಯೋಧನನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು ಶತ್ರುವನ್ನು ಗೆಲ್ಲುವುದರಲ್ಲಿ ನಿರುತ್ಸಾಹಿಗಳಾಗಿ ಪಲಾಯನ ಮಾಡುವುದರಲ್ಲಿಯೇ ಉತ್ಸಾಹ ತಳೆದು ಓಡಿ ಹೋಗುತ್ತಿದ್ದರು. ದುರ್ಯೋಧನನ ಮೊನಚಾದ ರುಕ್ಮಪುಂಖ ಶರಗಳಿಂದ ಗಾಯಗೊಂಡು ಬೇಗ ಬೇಗನೇ ಪಾಂಡವ ಸೈನಿಕರು ಬೀಳುತ್ತಿದ್ದರು. ಆಗ ದುರ್ಯೋಧನನು ಮಾಡಿದ ಸಾಹಸ ಕಾರ್ಯವನ್ನು ಅವನ ಕಡೆಯ ಯಾವ ಯೋಧನೂ ಮಾಡಿರಲಿಲ್ಲ. ಅರಳಿದ ಕಮಲಗಳುಳ್ಳ ಸರೋವರವನ್ನು ಹೊಕ್ಕು ಆನೆಯೊಂದು ಎಲ್ಲಕಡೆ ಧ್ವಂಸಮಾಡುವಂತೆ ಅವನು ರಣದಲ್ಲಿ ಪಾಂಡವ ಸೇನೆಯನ್ನು ಮಥಿಸಿದನು. ದುರ್ಯೋಧನನ ತೀಜಸ್ಸಿನಿಂದಾಗಿ ಪಾಂಡವ ಸೇನೆಯು ಕಮಲಗಳ ಸರೋವರವು ಸೂರ್ಯನ ಪ್ರಖರ ಕಿರಣಗಳಿಂದ ಬತ್ತಿಹೋಗಿ ಅಥವಾ ಭಿರುಗಾಳಿಗೆ ಸಿಲುಕಿ ನಾಶವಾಗುವಂತೆ ಹತಾಶಗೊಂಡಿತು. ಪಾಂಡುಸೇನೆಯು ದುರ್ಯೋಧನನಿಂದಾಗಿ ಹತಾಶಗೊಂಡಿದುದನ್ನು ನೋಡಿ ಪಾಂಚಾಲರು ಭೀಮಸೇನನನ್ನು ಮುಂದಿರಿಸಿಕೊಂಡು ಅವನನ್ನು ಆಕ್ರಮಣಿಸಿದರು.

ದುರ್ಯೋಧನನು ಭೀಮಸೇನನನ್ನು ಹತ್ತರಿಂದ, ಮಾದ್ರೀಪುತ್ರರನ್ನು ಮೂರು-ಮೂರು ಬಾಣಗಳಿಂದ, ವಿರಾಟ-ದ್ರುಪದರನ್ನು ಆರರಿಂದ, ನೂರರಿಂದ ಶಿಖಂಡಿಯನ್ನು, ಧೃಷ್ಟದ್ಯುಮ್ನನನ್ನು ಎಪ್ಪತ್ತರಿಂದ, ಧರ್ಮಪುತ್ರನನ್ನು ಏಳರಿಂದ, ಅನೇಕ ನಿಶಿತ ಶರಗಳಿಂದ ಕೇಕಯ-ಚೇದಿಯರನ್ನೂ, ಸಾತ್ಯಕಿಯನ್ನು ಐದರಿಂದ, ದ್ರೌಪದೇಯರನ್ನು ಮೂರು-ಮೂರರಿಂದ ಮತ್ತು ಘಟೋತ್ಕಚನನ್ನು ಹೊಡೆದು ಸಿಂಹದಂತೆ ಗರ್ಜಿಸಿದನು. ಕ್ರುದ್ಧ ಅಂತಕನು ಪ್ರಜೆಗಳನ್ನು ಹೇಗೋ ಹಾಗೆ ದುರ್ಯೋಧನನು ಉಗ್ರ ಶರಗಳಿಂದ ಆನೆ-ಕುದುರೆ-ರಥಗಳೊಂದಿಗೆ ನೂರಾರು ಶತ್ರು ಸೈನಿಕರನ್ನು ಕತ್ತರಿಸಿ ಹಾಕಿದನು. ಹಾಗೆ ಶತ್ರುಗಳನ್ನು ಸಂಹರಿಸುತ್ತಿದ್ದ ಅವನ ಬಂಗಾರದ ಮಹಾಧನುಸ್ಸನ್ನು ಜ್ಯೇಷ್ಠ ಪಾಂಡವನು ಭಲ್ಲಗಳೆರಡರಿಂದ ಮೂರು ಭಾಗಗಳನ್ನಾಗಿ ಕತ್ತರಿಸಿದನು. ಸುಪ್ರಯುಕ್ತ ನಿಶಿತ ಹತ್ತು ಬಾಣಗಳಿಂದ ಅವನನ್ನು ಹೊಡೆಯಲು ಅವೆಲ್ಲವೂ ದುರ್ಯೋಧನನ ಮರ್ಮಸ್ಥಾನಗಳನ್ನು ಪ್ರವೇಶಿಸಿಸ್ ಶರೀರವನ್ನು ಭೇದಿಸಿ ಭೂಮಿಯ ಮೇಲೆ ಬಿದ್ದವು. ಆಗ ವೃತ್ರನನ್ನುಸ್ ಅಂಹರಿಸಿದಾಗ ಪುರಂದರನನ್ನು ದೇವತೆಗಳು ಹೇಗೋ ಹಾಗೆ ಸಂತೋಷಗೊಂಡ ಯೋಧರು ಯುಧಿಷ್ಠಿರನನ್ನು ಸುತ್ತುವರೆದರು.

ಆಗ ಯುಧಿಷ್ಠಿರನು ತಡೆಯಲು ಅಸಾಧ್ಯವಾದ ಪರಮ ಶರವನ್ನು ದುರ್ಯೋಧನನ ಮೇಲೆ ಪ್ರಯೋಗಿಸಲು ಅದರಿಂದ ಅವನು ಬಹಳ ಪ್ರಹೃತನಾಗಿ ತನ್ನ ಉತ್ತಮ ರಥದಲ್ಲಿಯೇ ಕುಸಿದು ಬಿದ್ದನು. ಆಗ “ರಾಜನು ಹತನಾದನು!” ಎಂಬ ಜೋರಾದ ಕೂಗು ಹರ್ಷಗೊಂಡ ಪಾಂಚಾಲಸೇನೆಗಳಲ್ಲಿ ಕೇಳಿಬಂದಿತು. ಅಷ್ಟರಲ್ಲಿಯೇ ದ್ರೋಣನು ಅಲ್ಲಿಗೆ ಬಂದು ಕಾಣಿಸಿಕೊಂಡನು. ದುರ್ಯೋಧನನು ಹರ್ಷಗೊಂಡು ಧೃಢ ಬಿಲ್ಲನ್ನು ಎತ್ತಿಕೊಂಡು “ನಿಲ್ಲು! ನಿಲ್ಲು!” ಎನ್ನುತ್ತಾ ಪಾಂಡವನನ್ನು ಆಕ್ರಮಣಿಸಿದನು. ರಾಜನನ್ನು ಸಂಹರಿಸಲು ಬಯಸಿದ ಪಾಂಚಾಲರು ತ್ವರೆಮಾಡಿ ಅವನನ್ನು ಎದುರಿಸಿ ಯುದ್ಧಮಾಡತೊಡಗಿದರು. ದ್ರೋಣನು ಕುರುಸತ್ತಮನನ್ನು ರಕ್ಷಿಸುತ್ತಾ ಚಂಡಮಾರುತದಿಂದ ಬೀಸಿಬಂದ ಮೋಡಗಳನ್ನು ಸೂರ್ಯನು ತನ್ನ ರಶ್ಮಿಗಳಿಂದ ಕರಗಿಸಿಬಿಡುವಂತೆ ಪಾಂಚಾಲಾರನ್ನು ತಡೆದನು. ಆಗ ಯುದ್ಧೋತ್ಸಾಹದಿಂದ ಸೇರಿದ್ದ ಕೌರವರ ಮತ್ತು ಶತ್ರುಗಳ ನಡುವೆ ಶ್ರೇಯಸ್ಸನ್ನು ಹೆಚ್ಚಿಸುವ ಮಹಾ ಸಂಗ್ರಾಮವು ನಡೆಯಿತು.

ಅರ್ಜುನ-ಸಾತ್ಯಕಿಯರು ದ್ರೋಣನನ್ನು ಆಕ್ರಮಣಿಸಿದರು. ಯುಧಷ್ಠಿರ-ಭೀಮಸೇನರೂ ಕೂಡ ತಮ್ಮ ತಮ್ಮ ಸೇನೆಗಳಿಂದೊಡಗೂಡಿ ದ್ರೋಣನನ್ನೇ ಆಕ್ರಮಣಿಸಿದರು. ನಕುಲ, ಸಹದೇವ, ಧ್ರುಷ್ಟದ್ಯುಮ್ನ, ಶತಾನೀಕ, ವಿರಾಟರು, ಕೇಕಯ, ಮತ್ಸ್ಯ, ಶಾಲ್ವೇಯ ಸೇನೆಗಳು ದ್ರೋಣನನ್ನೇ ಎದುರಿಸಿದರು. ದ್ರುಪದನೂ ಕೂಡ ಪಾಂಚಾಲ್ಯರಿಂದ ರಕ್ಷಿತನಾಗಿ ದ್ರೋಣನನ್ನೇ ಆಕ್ರಮಣಿಸಿದನು. ದ್ರೌಪದೇಯರೂ ಮತ್ತು ರಾಕ್ಷಸ ಘಟೋತ್ಕಚನೂ ಸ್ವ-ಸೈನ್ಯಗಳೊಂದಿಗೆ ದ್ರೋಣನನ್ನೇ ಆಕ್ರಮಣಿಸಿದರು. ಶಿಖಂಡಿಯನ್ನು ಮುಂದಿರಿಸಿಕೊಂಡು ಆರುಸಾವಿರ ಪ್ರಭದ್ರಕ-ಪಾಂಚಾಲ ಪ್ರಹಾರಿಗಳು ದ್ರೋಣನನ್ನೇ ಮುತ್ತಿದರು. ಪಾಂಡವರ ಕಡೆಯ ಇತರ ಮಹಾರಥರೂ ಒಟ್ಟಾಗಿ ದ್ರೋಣನನ್ನೇ ಸುತ್ತುವರೆದು ಯುದ್ಧಮಾಡಿದರು. ಆ ಶೂರರು ಯುದ್ಧಮಾಡುತ್ತಿರುವಾಗ ರಾತ್ರಿಯು ಹೇಡಿಗಳ ಭಯವನ್ನು ಹೆಚ್ಚಿಸಿ ಘೋರವಾಗಿ ಪರಿಣಮಿಸಿತು.

ರಾತ್ರಿಯುದ್ಧದ ವರ್ಣನೆ

ಆ ರೌದ್ರ-ಅಮಂಗಳಕರ ರಾತ್ರಿಯು ಯೋಧರನ್ನು ಅಂತಕನಲ್ಲಿಗೆ ಕರೆದೊಯ್ಯುತ್ತಿತ್ತು. ಆನೆ-ಕುದುರೆ-ಮನುಷ್ಯರ ಪ್ರಾಣಗಳನ್ನು ಕೊನೆಗೊಳಿಸುತ್ತಿತ್ತು. ಆ ಘೋರ ರಾತ್ರಿಯಲ್ಲಿ ಎಲ್ಲಕಡೆ ನರಿಗಳು ಜ್ವಾಲಾಯುಕ್ತ ಬಾಯಿಗಳಿಂದ ಜೋರಾಗಿ ಕೂಗುತ್ತಾ ಮುಂದೆಬರುವ ಮಹಾಭಯವನ್ನು ಸೂಚಿಸುತ್ತಿದ್ದವು. ಮುಂಬರುವ ಅತಿದಾರುಣ ವಿಪುಲ ಭಯವನ್ನು ಸಾರುವ ಗೂಬೆಗಳು ವಿಶೇಷವಾಗಿ ಕೌರವರ ಧ್ವಜಗಳ ಮೇಲೆ ಕಾಣಿಸಿಕೊಂಡವು. ಆಗ ಸೇನೆಗಳಲ್ಲಿ ಅತಿಜೋರಾದ ಭೇರಿಶಬ್ಧಗಳ ಮತ್ತು ಮೃದಂಗನಾದಗಳಿಂದ ಮಹಾ ಶಬ್ಧವುಂಟಾಯಿತು. ಎಲ್ಲಕಡೆ ಆನೆಗಳ ಘೀಂಕಾರ, ಕುದುರೆಗಳ ಹೇಷಾರವ, ಮತ್ತು ಖುರಪುಟಗಳ ತುಮುಲ ಶಬ್ಧವು ತುಂಬಿಕೊಂಡಿತು. ಆ ಸಾಯಂಕಾರ ದ್ರೋಣ-ಸೃಂಜಯರ ನಡುವೆ ಅತಿದಾರುಣ ಯುದ್ಧವು ನಡೆಯಿತು.

ಕತ್ತಲೆಯು ಲೋಕವನ್ನೇ ಅವರಿಸಿರಲು ಮತ್ತು ಸೇನೆಗಳ ತುಳಿತದಿಂದ ಮೇಲೆದ್ದ ಧೂಳಿನಿಂದಾಗಿ ಏನಾಗುತ್ತದೆಯೆಂದೇ ತಿಳಿಯುತ್ತಿರಲಿಲ್ಲ. ಕ್ಷಣದಲ್ಲಿಯೇ ಸೈನಿಕರು, ಕುದುರೆಗಳು ಮತ್ತು ಆನೆಗಳು ಸುರಿಸಿದ ರಕ್ತದಿಂದಾಗಿ ಭೂಮಿಯನ್ನು ಕಲ್ಮಶಗಳಿಂದ ತುಂಬಿದ್ದ ಧೂಳೇ ಕಾಣದಂತಾಯಿತು. ರಾತ್ರಿಯ ವೇಲೆ ಪರ್ವತದ ಮೇಲಿನ ಬಿದಿರಿನ ಅಕಡು ಸುಡುವಾಗ ಕೇಳಿಬರುವ ಘೋರ ಚಟ ಚಟಾ ಶಬ್ಧದಂತೆ ಶಸ್ತ್ರಗಳು ಬೀಳುತ್ತಿರುವುದು ಕೇಳಿಬರುತ್ತಿತ್ತು. ಆ ಕತ್ತಲೆಯಲ್ಲಿ ಸೈನಿಕರಿಗೆ ನಮ್ಮವರ್ಯಾರು ಶತ್ರುಗಳ್ಯಾರು ಎನ್ನುವುದೇ ತಿಳಿಯುತ್ತಿರಲಿಲ್ಲ. ಆ ರಾತ್ರಿ ಅವರೆಲ್ಲರೂ ಅಮಲಿನಲ್ಲಿದ್ದವರಂತೆ ತೋರುತ್ತಿದ್ದರು. ಭೂಮಿಯ ಮೇಲೆ ಬೀಳುತ್ತಿರುವ ರಕ್ತದಿಂದಾಗಿ ಧೂಳು ಸ್ವಲ್ಪ ಉಡುಗಿದಂತಾಯಿತು. ಸುವರ್ಣಮಯ ಕವಚ-ಭೂಷಣಗಳ ಹೊಳೆತದಿಂದಾಗಿ ಕತ್ತಲೆಯೂ ದೂರವಾದಂತಾಯಿತು. ಆಗ ಮಣಿಹೇಮವಿಭೂಷಿತ ಭಾರತೀ ಸೇನೆಯು ನಕ್ಷತ್ರಗಳಿಂದೊಡಗೂಡಿದ ರಾತ್ರಿಯ ಆಕಾಶದಂತೆ ತೋರಿತು. ಶಕ್ತಿ-ಧ್ವಜಗಳಿಂದ ತುಂಬಿದ್ದ ಆ ಸೇನೆಗಳ ಪಕ್ಕದಲ್ಲಿಯೇ ಗುಳ್ಳೆನರಿಗಳ ಸಮೂಹಗಳು ಭಯಂಕರವಾಗಿ ಕಿರುಚಿಕೊಳ್ಳುತ್ತಿದ್ದವು. ಆಗ ಅಲ್ಲಿ ಮಹೇಂದ್ರನ ಸಿಡಿಲಿಗೆ ಸಮಾನ ರೋಮಾಂಚನಗೊಳಿಸುವ ಮಹಾ ಶಬ್ಧವು ಎಲ್ಲ ದಿಕ್ಕುಗಳಲ್ಲಿಯೂ ಪ್ರತಿಧ್ವನಿಸಿತು. ಆ ರಾತ್ರಿ ಭಾರತೀ ಸೇನೆಯು ಅಂಗದಗಳಿಂದ, ಕುಂಡಲಗಳಿಂದ ಮತ್ತು ಥಳಥಳಿಸುವ ಶಸ್ತ್ರಗಳಿಂದ ಪ್ರಕಾಶಮಾನವಾಗಿ ಕಾಣುತ್ತಿತ್ತು. ಅಲ್ಲಿ ಬಂಗಾರದಿಂದ ವಿಭೂಷಿತಗೊಂಡಿದ್ದ ರಥ ಮತ್ತು ಆನೆಗಳು ರಾತ್ರಿಯವೇಳೆ ಮಿಂಚಿನಿಂದೊಡಗೂಡಿದ ಕಪ್ಪು ಮೋಡಗಳಂತೆ ಕಾಣಬರುತ್ತಿದ್ದವು. ಅಲ್ಲಿ ಮೇಲಿಂದ ಬೀಳುತ್ತಿದ್ದ ಋಷ್ಟಿ, ಶಕ್ತಿ, ಗದೆ, ಬಾಣ, ಮುಸಲ, ಪ್ರಾಸ ಮತ್ತು ಪಟ್ಟಿಶಗಳು ಉರಿಯುತ್ತಿರುವ ಅಗ್ನಿಗಳಂತೆ ಹೊಳೆಯುತ್ತಿದ್ದವು. ದುರ್ಯೋಧನನೇ ಮುಂದಾಳಾಗಿದ್ದ, ಆನೆ-ರಥಗಳೇ ಮೋಡಗಳಾಗಿದ್ದ, ರಣವಾದ್ಯಗಳೇ ಗುಡುಗಿನಂತಿದ್ದ, ಧನುಸ್ಸು-ಧ್ವಜಗಳೇ ಮಿಂಚುಗಳಂತಿದ್ದ, ದ್ರೋಣ-ಪಾಂಡವರೇ ಪರ್ಜನ್ಯಗಳಂತಿದ್ದ, ಖಡ್ಗ-ಶಕ್ತಿ-ಗದೆಗಳೇ ಸಿಡುಲಿನಂತಿದ್ದ, ಬಾಣಗಳೇ ಜಲಧಾರೆಗಳಾಗಿದ್ದ, ಅಸ್ತ್ರಗಳೇ ಭಿರುಗಾಳಿಯಂತಿದ್ದ, ಶೀತೋಷ್ಣಸಂಕುಲವಾಗಿದ್ದ, ಘೋರವಾಗಿದ್ದ, ವಿಸ್ಮಯಕಾರಿಯಾಗಿದ್ದ, ಉಗ್ರವಾಗಿದ್ದ, ಜೀವಿತವನ್ನೇ ಅಂತ್ಯಗೊಳಿಸುವಂತಿದ್ದ, ದಾಟಲು ದೋಣಿಗಳೇ ಇಲ್ಲವಾಗಿದ್ದ ಆ ಅತಿ ಭಯಂಕರ ಸೇನೆಯನ್ನು ಯುದ್ಧಮಾದಲು ಬಯಸಿದವರು ಪ್ರವೇಶಿಸಿದರು. ಆ ರಾತ್ರಿವೇಳೆಯ ಘೋರ ಯುದ್ಢದಲ್ಲಿ ಉಂಟಾದ ಮಹಾಶಬ್ಧಗಳು ಹೇಡಿಗಳಲ್ಲಿ ಭಯವನ್ನುಂಟುಮಾಡುತ್ತಿದ್ದವು ಮತ್ತು ಶೂರರ ಸಂತೋಷವನ್ನು ಹೆಚ್ಚಿಸುತ್ತಿದ್ದವು. ಘೋರವಾಗಿ ನಡೆಯುತ್ತಿದ್ದ ಆ ಸುದಾರುಣ ರಾತ್ರಿಯುದ್ಧದಲ್ಲಿ ಕ್ರುದ್ಧ ಪಾಂಡು-ಸೃಂಜಯರು ಒಂದಾಗಿ ದ್ರೋಣನನ್ನು ಆಕ್ರಮಣಿಸಿದರು. ಆ ಮಹಾತ್ಮನಾದರೋ ತನ್ನನ್ನು ಎದುರಿಸಿ ಬಂದವರನ್ನೆಲ್ಲಾ ಪಲಾಯನಗೊಳಿಸುತ್ತಿದ್ದನು. ಯಾರು ವಿಮುಖರಾಗಲಿಲ್ಲವೋ ಅವರನ್ನು ಯಮಕ್ಷಯಕ್ಕೆ ಕಳುಹಿಸುತ್ತಿದ್ದನು.

ದ್ರೋಣನಿಂದ ಶಿಬಿಯ ವಧೆ; ಭೀಮನಿಂದ ದುರ್ಮುಖ-ದುಷ್ಕರ್ಣರ ಸಂಹಾರ

ಆ ಸುದಾರುಣ ರಾತ್ರಿಯುದ್ಧವು ನಡೆಯುತ್ತಿರಲು ಸೈನಿಕರೊಂದಿಗೆ ಪಾಂಡವರು ದ್ರೋಣನನ್ನು ಆಕ್ರಮಣಿಸಿದರು. ಆಗ ದ್ರೋಣನು ಕೇಕಯರನ್ನೂ, ಧೃಷ್ಟದ್ಯುಮ್ನನ ಎಲ್ಲ ಮಕ್ಕಳನ್ನೂ ಆಶುಗಗಳಿಂದ ಮೃತ್ಯುಲೋಕಕ್ಕೆ ಕಳುಹಿಸಿದನು. ಅವನ ಎದುರಾದ ಎಲ್ಲ ಮಹಾರಥರನ್ನೂ ಅವನು ಪರಲೋಕಕ್ಕೆ ಕಳುಹಿಸಿದನು. ಆಗ ಸಂಕ್ರುದ್ಧ ಪ್ರತಾಪವಾನ ಶಿಬಿಯು ವೀರ ಮಹಾರಥ ಭಾರದ್ವಾಜನ ಮೇಲೆ ದಾಳಿ ಮಾಡಿದನು. ಪಾಂಡವರ ಮಹಾರಥನು ತನ್ನ ಮೇಲೆ ಆಕ್ರಮಣ ಮಾಡುತ್ತಿರುವನ್ನು ನೋಡಿ ದ್ರೋಣನು ಹತ್ತು ಲೋಹಮಯ ಬಾಣಗಳಿಂದ ಅವನನ್ನು ಹೊಡೆದನು. ಆಗ ಶಿಬಿಯು ನಸುನಗುತ್ತಾ ಮೂವತ್ತು ನಿಶಿತ ಶರಗಳಿಂದ ಅವನನ್ನು ಹೊಡೆದು, ಭಲ್ಲದಿಂದ ಸಾರಥಿಯನ್ನು ರಥದಿಂದ ಉರುಳಿಸಿದನು. ದ್ರೋಣನು ಅವನ ಕುದುರೆಗಳನ್ನೂ ಸಾರಥಿಯನ್ನೂ ಸಂಹರಿಸಿ ಕಿರೀಟದೊಂದಿಗಿನ ಅವನ ಶಿರವನ್ನು ಕಾಯದಿಂದ ಬೇರ್ಪಡಿಸಿದನು.

ಹಿಂದೆ ತಂದೆಯನ್ನು ಸಂಹರಿಸಿದುದರಿಂದ ಭೀಮಸೇನನ ಮೇಲೆ ಕ್ರುದ್ಧನಾಗಿದ್ದ ಕಲಿಂಗನ ಮಗನು ಕಲಿಂಗ ಸೇನೆಯೊಂದಿಗೆ ರಣದಲ್ಲಿ ಭೀಮಸೇನನನ್ನು ಆಕ್ರಮಣಿಸಿದನು. ಅವನು ಭೀಮನನ್ನು ಮೊದಲು ಐದರಿಂದ ಮತ್ತು ಪುನಃ ಏಳರಿಂದ ಹೊಡೆದು ಸಾರಥಿ ವಿಶೋಕನನ್ನು ಮೂರರಿಂದಲೂ ಒಂದು ಪತ್ರಿಯಿಂದ ಧ್ವಜವನ್ನೂ ಹೊಡೆದನು. ಕಲಿಂಗರ ಆ ಕ್ರುದ್ಧ ಶೂರನನ್ನು ಕ್ರುದ್ಧ ವೃಕೋದರನು ಅವನ ರಥಕ್ಕೆ ಹಾರಿ ಮುಷ್ಟಿಯಿಂದಲೇ ಗುದ್ದಿ ಸಂಹರಿಸಿದನು. ಬಲಿಷ್ಟ ಭೀಮಸೇನನ ಮುಷ್ಟಿಯಿಂದ ಹತನಾದ ಅವನ ಎಲ್ಲ ಮೂಳೆಗಳೂ ಚೂರಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಕೆಳಗೆ ಬಿದ್ದವು. ಆ ಕೃತ್ಯವನ್ನು ಮಹಾರಥ ಕರ್ಣನೂ ಕಳಿಂಗನ ಸಹೋದರರೂ ಸಹಿಸಿಕೊಳ್ಳಲಿಲ್ಲ. ಅವರು ಭೀಮಸೇನನನ್ನು ಸರ್ಪಗಳಂತಿದ್ದ ನಾರಾಚಗಳಿಂದ ಪ್ರಹರಿಸಿದರು. ಆಗ ಭೀಮನು ಶತ್ರುವಿನ ರಥವನ್ನು ಬಿಟ್ಟು ಧ್ರುವನ ರಥಕ್ಕೆ ಹಾರಿ ಒಂದೇ ಸಮನೆ ಬಾಣಗಳನ್ನು ಬಿಡುತ್ತಿದ್ದ ಧ್ರುವನನ್ನು ಕೂಡ ಮುಷ್ಟಿಯಿಂದ ಜಜ್ಜಿದನು. ಬಲಶಾಲಿ ಪಾಂಡುಪುತ್ರನ ಪೆಟ್ಟಿಗೆ ಸಿಲುಕಿದ ಅವನು ಕೂಡ ಹತನಾದನು. ಅವನನ್ನು ಸಂಹರಿಸಿ ಮಹಾಬಲ ಭೀಮಸೇನನು ಜಯರಾತನ ರಥಕ್ಕೆ ಹಾರಿ ಸಿಂಹನಾದಗೈದನು.

ಆಗ ಜಯರಾತನ ತಲೆಯನ್ನು ಎಡಗೈಯಿಂದ ಹಿಡಿದುಕೊಂಡು ಬಲಗೈಯಿಂದ ಅವನನ್ನು ಪ್ರಹರಿಸಿ ಕೊಂದು ಕರ್ಣನ ಎದುರೇ ಹೋಗಿ ನಿಂತುಕೊಂಡನು. ಕರ್ಣನಾದರೋ ಸುವರ್ಣಮಯ ಶಕ್ತ್ಯಾಯುಧವನ್ನು ಪಾಂಡವನ ಮೇಲೆ ಪ್ರಯೋಗಿಸಿದನು. ಅದನ್ನು ಕೂಡ ಪಾಂಡುನಂದನನು ನಸುನಗುತ್ತಾ ಹಿಡಿದುಕೊಂಡನು. ಅದನ್ನೇ ವೃಕೋದರನು ಕರ್ಣನ ಮೇಲೆ ಎಸೆಯಲು ಶಕುನಿಯು ಅದನ್ನು ಅಂತರಿಕ್ಷದಲ್ಲಿಯೇ ತುಂಡರಿಸಿದನು. ಆಗ ಧೃತರಾಷ್ಟ್ರನ ಮಕ್ಕಳು ಭೀಮನ ರಥವನ್ನು ಸುತ್ತುವರೆದು ಮಹಾ ಶರವರ್ಷಗಳಿಂದ ವೃಕೋದರನನ್ನು ಮುಚ್ಚಿದರು. ಆಗ ರಣದಲ್ಲಿ ಭೀಮನು ನಗುತ್ತಾ ದುರ್ಮದನ ಸಾರಥಿಯನ್ನೂ ಕುದುರೆಗಳನ್ನೂ ಬಾಣಗಳಿಂದ ಹೊಡೆದು ಯಮಸದನಕ್ಕೆ ಕಳುಹಿಸಿದನು. ಆಗ ದುರ್ಮದನಾದರೋ ಹಾರಿ ದುಷ್ಕರ್ಣನ ರಥವನ್ನೇರಿದನು. ಆ ಇಬ್ಬರು ಪರತಾಪನ ಸಹೋದರರೂ ಒಂದೇ ರಥವನ್ನೇರಿ ಯುದ್ಧಭೂಮಿಯ ಮಧ್ಯದಲ್ಲಿ ಮಿತ್ರಾವರುಣರು ದೈತ್ಯಸತ್ತಮ ತಾರಕನನ್ನು ಎದುರಿಸಿ ಯುದ್ಧಮಾಡಿದಂತೆ ಭೀಮನನ್ನು ಆಕ್ರಮಣಿಸಿದರು. ಧೃತರಾಷ್ಟ್ರನ ಮಕ್ಕಳಾದ ದುರ್ಮದ-ದುಷ್ಕರ್ಣರು ಒಂದೇ ರಥವನ್ನೇರಿ ಬಾಣಗಳಿಂದ ಭೀಮನನ್ನು ಪ್ರಹರಿಸಿದರು. ಆಗ ಕರ್ಣ, ದುರ್ಯೋಧನ, ಕೃಪ, ಸೋಮದತ್ತ ಮತ್ತು ಬಾಹ್ಲೀಕರು ನೋಡುತ್ತಿದ್ದಂತೆಯೇ ಪಾಂಡವನು ವೀರ ದುರ್ಮದ-ದುಷ್ಕರ್ಣರ ಆ ರಥವನ್ನು ಕಾಲಿನಿಂದಲೇ ಒದೆದು ಭೂಮಿಗುರುಳಿಸಿದನು. ಸಂಕ್ರುದ್ಧನಾದ ಅವನು ಆ ಬಲಶಾಲೀ ದುಷ್ಕರ್ಣ-ದುರ್ಮದರನ್ನು ಮುಷ್ಟಿಯಿಂದ ಹೊಡೆದು ಕಾಲಿನಿಂದ ತುಳಿದು ಸಂಹರಿಸಿದನು. ಆಗ ಭೀಮನನ್ನು ಕಂಡು ಸೈನ್ಯದಲ್ಲಿದ್ದ ನೃಪರು “ಭೀಮರೂಪದ ರುದ್ರನೇ ಧಾರ್ತರಾಷ್ಟ್ರರನ್ನು ಸಂಹರಿಸುತ್ತಿದ್ದಾನೆ!” ಎಂದು ಹೇಳಿಕೊಳ್ಳುತ್ತಾ ಹಾಹಾಕಾರಗೈದರು. ಹೀಗೆ ಮಾತನಾಡಿಕೊಳ್ಳುತ್ತ ಎಲ್ಲರೂ ಬುದ್ಧಿಗೆಟ್ಟವರಾಗಿ ಕಂಡ ಕಂಡ ಕಡೆಗೆ ತಮ್ಮ ವಾಹನಗಳನ್ನು ಓಡಿಸಿಕೊಂಡು ಪಲಾಯನಮಾಡಿದರು.

ಆಗ ರಾತ್ರಿಯ ಪ್ರಥಮ ಯಾಮದಲ್ಲಿ ನೃಪರು ವೃಕೋದರನನ್ನು ಗೌರವಿಸಿದರು. ಮಹಾಬಲ, ಕಮಲಲೋಚನ ಬಲಶಾಲೀ ಭೀಮನೂ ಕೂಡ ನೃಪತಿ ಯುಧಿಷ್ಠಿರನನ್ನು ಪೂಜಿಸಿದನು. ಆಗ ಯಮಳರೂ, ದ್ರುಪದ-ವಿರಾಟ-ಕೇಕಯರೂ ಮತ್ತು ಯುಧಿಷ್ಠಿರನೂ ಪರಮ ಸಂತೋಷಗೊಂಡರು. ಅಂಧಕನನ್ನು ಸಂಹರಿಸಿದ ಹರನನ್ನು ಸುರರು ಹೇಗೋ ಹಾಗೆ ಅವರು ವೃಕೋದರನನ್ನು ತುಂಬಾ ಗೌರವಿಸಿದರು. ಆಗ ವರುಣನ ಮಕ್ಕಳ ಪರಾಕ್ರಮವುಳ್ಳ ಧೃತರಾಷ್ಟ್ರನ ಮಕ್ಕಳು ರೋಷಾನ್ವಿತರಾಗಿ ಗುರು ದ್ರೋಣನೊಂದಿಗೆ ರಥ-ಪದಾತಿ-ಕುಂಜರಗಳೊಂದಿಗೆ ಯುದ್ಧವನ್ನು ಮಾಡಲು ಬಯಸಿ ವೃಕೋದರನನ್ನು ಸುತ್ತುವರೆದರು. ಆಗ ದಟ್ಟ ಕತ್ತಲೆಯಿಂದ ಆವೃತ ರಾತ್ರಿವೇಳೆಯಲ್ಲಿ ಮಹಾಭಯಂಕರ, ಭಯದಾಯಕ, ದಾರುಣ, ತೋಳ-ಕಾಗೆ-ರಣಹದ್ದುಗಳಿಗೆ ಆನಂದದಾಯಕ ಮಹಾತ್ಮ ನೃಪವರರ ಅದ್ಭುತ ಯುದ್ಧವು ಪುನಃ ಪ್ರಾರಂಭವಾಯಿತು.

ಸಾತ್ಯಕಿ ಸೋಮದತ್ತರ ಯುದ್ಧ

ಆಗ ಪ್ರಯೋಪವಿಷ್ಟನಾಗಿದ್ದ ತನ್ನ ಮಗನನ್ನು ಸಾತ್ಯಕಿಯು ಕೊಂದುದರಿಂದ ತುಂಬಾ ಕೋಪಾವಿಷ್ಟನಾಗಿದ್ದ ಸೋಮದತ್ತನು ಸಾತ್ಯಕಿಗೆ ಈ ಮಾತನ್ನಾಡಿದನು: “ಸಾತ್ವತ! ಹಿಂದೆ ಮಹಾತ್ಮ ದೇವತೆಗಳು ನಿರ್ಣಯಿಸಲ್ಪಟ್ಟ ಕ್ಷತ್ರಧರ್ಮವನ್ನು ಪರಿತ್ಯಜಿಸಿ ನೀನು ಹೇಗೆ ತಾನೇ ದಸ್ಯುಗಳ ಧರ್ಮದಲ್ಲಿ ನಿರತನಾಗಿರುವೆ? ಯುದ್ಧದಿಂದ ವಿಮುಖನಾದವನನ್ನು, ಅದೀನನನ್ನು, ಶಸ್ತ್ರಗಳನ್ನು ಕೆಳಗಿಟ್ಟವನನ್ನು, ಯಾಚಿಸುವವನನ್ನು ಕ್ಷತ್ರಧರ್ಮನಿರತ ಪ್ರಾಜ್ಞನು ಹೇಗೆ ತಾನೇ ರಣದಲ್ಲಿ ಪ್ರಹರಿಸಬಲ್ಲನು? ವೃಷ್ಣಿವಂಶೀಯರಲ್ಲಿ ಇಬ್ಬರೇ ಮಹಾರಥರೆಂದು ಯುದ್ಧದಲ್ಲಿ ಖ್ಯಾತರಾಗಿದ್ದಾರೆ. ಪ್ರದ್ಯುಮ್ನ ಮತ್ತು ನೀನು. ಅರ್ಜುನನು ಬಾಹುವನ್ನು ಕತ್ತರಿಸಲು ಪ್ರಾಯೋಪವಿಷ್ಟನಾದವನನ್ನು ನಿನ್ನಂಥವನು ಕ್ರೂರನಾಗಿ ಹೇಗೆತಾನೇ ಬೀಳಿಸಿದನು? ವೃಷ್ಣಿಕುಲಕಳಂಕ! ನಾನು ನನ್ನ ಇಬ್ಬರು ಮಕ್ಕಳ ಮೇಲೆ, ನಾನು ಮಾಡಿದ ಯಾಗಗಳ ಮೇಲೆ ಮತ್ತು ನನ್ನ ಸುಕೃತಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ – ಅರ್ಜುನನು ನಿನ್ನನ್ನು ರಕ್ಷಿಸಲು ಬರದೇ ಇದ್ದರೆ – ಲೋಕೈಕವೀರನೆಂದು ಭಾವಿಸಿರುವ ನಿನ್ನನ್ನೂ, ನಿನ್ನ ಮಕ್ಕಳನ್ನೂ, ಅನುಜರನ್ನೂ ಈ ರಾತ್ರಿ ಕಳೆಯುವುದರೊಳಗಾಗಿ ಸಂಹರಿಸದೇ ಇದ್ದರೆ ನಾನು ಅತಿಘೋರ ನರಕದಲ್ಲಿ ಬೀಳುವಂತಾಗಲಿ!”

ಹೀಗೆ ಹೇಳಿ ಸಂಕ್ರುದ್ಧ ಮಹಾಬಲ ಸೋಮದತ್ತನು ತಾರಸ್ವರದಲ್ಲಿ ಶಂಖವನ್ನು ಊದಿ ಸಿಂಹನಾದಗೈದನು. ಆಗ ಸಾತ್ವತನು ತುಂಬಾ ಕುಪಿತನಾಗಿ ಸೋಮದತ್ತನಿಗೆ ಹೀಗೆ ಹೇಳಿದನು: “ನಿನ್ನ ವೀರ ಮಗ ಮಹಾರಥ ಭೂರಿಶ್ರವನು ಹತನಾದನು. ಸಹೋದರನು ಹತನಾದನೆಂಬ ವ್ಯಸನದಿಂದ ದುಃಖಿತನಾಗಿದ್ದ ಶಲನೂ ಕೂಡ ಹತನಾದನು. ಇಂದು ಪುತ್ರ-ಪಶು-ಬಾಂಧವರ ಸಹಿತನಾಗಿ ನಿನ್ನನ್ನೂ ವಧಿಸುತ್ತೇನೆ. ರಣದಲ್ಲಿ ನಿಂತು ವಿಶೇಷವಾಗಿ ಪ್ರಯತ್ನಿಸಿ ನನ್ನೊಡನೆ ಯುದ್ಧಮಾಡು! ಯಾವ ಯುಧಿಷ್ಠಿರನಲ್ಲಿ ದಾನ, ದಮ, ಶೌಚ, ಅಹಿಂಸೆ, ಲಜ್ಜೆ, ಧೃತಿ, ಕ್ಷಮೆ – ಇವೇ ಮೊದಲಾದ ಸರ್ವ ಸದ್ಗುಣಗಳು ನಿತ್ಯವೂ ಇವೆಯೋ ಆ ಮೃದಂಗಕೇತು ರಾಜನ ತೇಜಸ್ಸಿನಿಂದ ಈಗಾಗಲೇ ನೀನು ಹತನಾಗಿರುವೆ! ಈಗ ಯುದ್ಧದಲ್ಲಿ ಕರ್ಣ-ಸೌಬಲರೊಂದಿಗೆ ವಿನಾಶವನ್ನು ಹೊಂದುತ್ತೀಯೆ! ನಾನೂ ಕೂಡ ಶ್ರೀಕೃಷ್ಣನ ಚರಣಗಳ ಮೇಲೆ ಮತ್ತು ನಾನು ಮಾಡಿದ ಇಷ್ಟಾಪೂರ್ತಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ: ನಾನೇನಾದರೂ ಪಾಪಿಷ್ಟ ನಿನ್ನನ್ನು ನಿನ್ನ ಮಗನ ಸಹಿತ ಸಂಹರಿಸದಿದ್ದರೆ ಸದ್ಗತಿಯನ್ನು ಹೊಂದದಿರಲಿ! ಇಷ್ಟು ಆತ್ಮಶ್ಲಾಘನೆ ಮಾಡಿಕೊಳ್ಳುತ್ತಿರುವ ನೀನು ಭಯಪಟ್ಟು ಯುದ್ಧವನ್ನು ಬಿಟ್ಟು ಹೋದರೆ ಮಾತ್ರ ನನ್ನಿಂದ ಬಿಡುಗಡೆಯನ್ನು ಹೊಂದುವೆ!”

ಕೋಪದಿಂದ ಕೆಂಪಾದ ಕಣ್ಣುಗಳಿಂದ ಕೂಡಿದ್ದ ಪುರುಷಶ್ರೇಷ್ಠರಾದ ಅವರಿಬ್ಬರೂ ಹೀಗೆ ಅನ್ಯೋನ್ಯರೊಡನೆ ಮಾತನಾಡುತ್ತಾ ಪರಸ್ಪರರ ಮೇಲೆ ಬಾಣಗಳನ್ನು ಪ್ರಯೋಗಿಸಲು ಪ್ರಾರಂಭಿಸಿದರು. ಆಗ ದುರ್ಯೋಧನನು ಒಂದು ಸಾವಿರ ಆನೆಗಳಿಂದಲೂ ಹತ್ತುಸಾವಿರ ರಥಗಳಿಂದಲೂ ಕೂಡಿದವನಾಗಿ ಸೋಮದತ್ತನನ್ನು ಸುತ್ತುವರೆದು ನಿಂತನು. ಮಹಾಬಾಹು ಶಕುನಿಯೂ ಕೂಡ ಸಂಕ್ರುದ್ಧನಾಗಿ ತನ್ನ ಮಕ್ಕಳು, ಮೊಮ್ಮಕ್ಕಳು ಮತ್ತು ಇಂದ್ರನ ವಿಕ್ರಮಕ್ಕೆ ಸಮಾನ ಸಹೋದರರೊಂದಿಗೆ ಸೋಮದತ್ತನನ್ನು ಸುತ್ತುವರೆದನು. ಆ ಧೀಮತನು ನೂರುಸಾವಿರ ಕುದುರೆಸವಾರರೊಂದಿಗೆ ಸೋಮದತ್ತನನ್ನು ಎಲ್ಲಕಡೆಗಳಿಂದ ಸುತ್ತುವರೆದು ರಕ್ಷಿಸುತ್ತಿದ್ದನು. ಬಲಶಾಲಿಗಳಿಂದ ರಕ್ಷಿತ ಸೋಮದತ್ತನು ಸಾತ್ಯಕಿಯನ್ನು ಬಾಣಗಳಿಂದ ಮುಚ್ಚಿಬಿಟ್ಟನು. ಸಾತ್ಯಕಿಯು ವಿಶಿಖ ಸನ್ನತಪರ್ವಗಳಿಂದ ಮುಚ್ಚಿಹೋದುದನ್ನು ನೋಡಿದ ಧೃಷ್ಟದ್ಯುಮ್ನನು ಕ್ರುದ್ಧನಾಗಿ ಮಹಾ ಸೇನೆಯೊಡನೆ ಅಲ್ಲಿಗೆ ಧಾವಿಸಿದನು. ಅನ್ಯೋನ್ಯರನ್ನು ಪ್ರಹರಿಸುತ್ತಿದ್ದ ಸೈನಿಕರ ಸಮೂಹದಲ್ಲುಂಟಾದ ಕೋಲಾಹಲವು ಚಂಡಮಾರುತಕ್ಕೆ ಸಿಲುಕಿ ಅಲ್ಲೋಲಕಲ್ಲೋಲವಾಗುವ ಸಮುದ್ರದ ಭೋರ್ಗರೆತಕ್ಕೆ ಸಮಾನವಾಗಿ ಕೇಳಿಬರುತ್ತಿತ್ತು. ಸೋಮದತ್ತನಾದರೋ ಸಾತ್ವತನನ್ನು ಒಂಭತ್ತು ಶರಗಳಿಂದ ಹೊಡೆದನು. ಸಾತ್ಯಕಿಯೂ ಕೂಡ ಕುರುಪುಂಗವನನ್ನು ಹತ್ತು ಬಾಣಗಳಿಂದ ಪ್ರಹರಿಸಿದನು. ದೃಢಧನ್ವಿ ಸಾತ್ಯಕಿಯಿಂದ ಬಲವಾಗಿ ಗಾಯಗೊಂಡ ಸೋಮದತ್ತನು ರಥದಮೇಲೆಯೇ ಮೂರ್ಛಿತನಾಗಿ ಒರಗಿದನು. ಅವನು ಪ್ರಜ್ಞಾಹೀನನಾದುದನ್ನು ನೋಡಿದ ಸಾರಥಿಯು ಮಹಾರಥ ವೀರ ಸೋಮದತ್ತನನ್ನು ರಣದಿಂದ ದೂರಕ್ಕೆ ಕೊಂಡೊಯ್ದನು.

ಅಶ್ವತ್ಥಾಮ-ಘಟೋತ್ಕಚರ ಯುದ್ಧ; ಘಟೋತ್ಕಚನ ಮಗ ಅಂಜನಪರ್ವನ ವಧೆ

ಯುಯುಧಾನನ ಶರಗಳಿಂದ ಗಾಯಗೊಂಡು ಸೋಮದತ್ತನು ಮೂರ್ಛಿತನಾದುದನ್ನು ಕಂಡು ಕ್ರುದ್ಧನಾದ ದ್ರೌಣಿ ಅಶ್ವತ್ಥಾಮನು ರಣಮಧ್ಯದಲ್ಲಿ ಸಾತ್ವತನನ್ನು ಆಕ್ರಮಣಿಸಿದನು. ಶೈನೇಯನ ರಥದ ಕಡೆಗೆ ಬರುತ್ತಿದ್ದ ಅವನನ್ನು ನೋಡಿ ಸಂಕ್ರುದ್ಧ ಭೈಮಸೇನಿ ಘಟೋತ್ಕಚನು ಶತ್ರುವನ್ನು ತಡೆದನು. ಆ ಘೋರ ಕತ್ತಲೆಯಲ್ಲಿ ವಿಶಾಲ ಕರಡಿಯ ಚರ್ಮವನ್ನು ಹೊದಿಸಿದ್ದ, ಆನೆಗಳಷ್ಟೆ ದೊಡ್ಡ ಆದರೆ ಆನೆಗಳೂ ಕುದುರೆಗಳೂ ಅಲ್ಲದ ವಾಹನಗಳನ್ನು ಕಟ್ಟಿದ್ದ, ಎಂಟು ಚಕ್ರಗಳಿಂದ ಮತ್ತು ನೊಗಗಳಿಂದ ಕೂಡಿದ, ಅತಿ ಎತ್ತರದ ದಂಡದ ಮೇಲೆ ರಣಹದ್ದುಗಳ ರಾಜನಂತೆ ರಾರಾಜಿಸುವ ಧ್ವಜದಿಂದ ಯುಕ್ತವಾದ, ರಕ್ತದಿಂದ ತೋಯ್ದ ಪತಾಕೆಯುಳ್ಳ, ಕರುಳಿನ ಮಾಲೆಗಳಿಂದ ಅಲಂಕೃತಗೊಂಡಿದ್ದ, ಶೂಲ-ಮುದ್ಗರಗಳನ್ನು ಹಿಡಿದು, ಕೈಗಳಲ್ಲಿ ಮರಗಳನ್ನೂ ಹಿಡಿದು ಬರುತ್ತಿದ್ದ ಒಂದು ಅಕ್ಷೌಹಿಣೀ ರಾಕ್ಷಸ ಸೇನೆಯಿಂದ ಸುತ್ತುವರೆಯಲ್ಪಟ್ಟು ಎಂಟು ಚಕ್ರಗಳ ಮೇಲಿದ್ದ ವಿಶಾಲರಥದಲ್ಲಿ ಯುಗಾಂತಕಾಲಸಮಯದಲ್ಲಿ ದಂಡವನ್ನು ಹಿಡಿದ ಅಂತಕನಂತೆ ಮಹಾಚಾಪವನ್ನು ಟೇಂಕರಿಸಿ ಬರುತ್ತಿದ್ದ ಘಟೋತ್ಕಚನನ್ನು ಕಂಡು ನೃಪರು ವ್ಯಥಿತರಾದರು. ಭಿರುಗಾಳಿಗೆ ಸಿಲುಕಿ ಪ್ರಕ್ಷೋಭೆಗೊಂಡ ಗಂಗಾನದಿಯ ಸುಳಿಯಂತೆ ದುರ್ಯೋಧನನ ಸೇನೆಯು ತಳಮಳಗೊಂಡಿತು. ಘಟೋತ್ಕಚನು ಮಾಡಿದ ಸಿಂಹನಾದದಿಂದಲೇ ಭಯಗೊಂಡ ಆನೆಗಳು ಮೂತ್ರವಿಸರ್ಜನೆ ಮಾಡಿದವು. ಸೈನಿಕರು ಬಹಳ ವ್ಯಥಿತರಾದರು. ಸಂಧ್ಯಾಕಾಲದಲಿ ಅಧಿಕಬಲವನ್ನು ಹೊಂದುವ ರಾಕ್ಷಸರು ಪ್ರಯೋಗಿಸಿದ ಕಲ್ಲುಗಳ ಮಳೆಯು ರಣರಂಗದ ಸುತ್ತಲೂ ಸುರಿಯಿತು. ಲೋಹದ ಚಕ್ರಗಳು, ಭುಶಂಡಗಳು, ಪ್ರಾಸ-ತೋಮರಗಳು ಮೇಲಿಂದ ಬೀಳುತ್ತಿದ್ದ ಆ ಅತಿರೌದ್ರ ಉಗ್ರ ಯುದ್ಧವನ್ನು ನೋಡಿ ಕೌರವನ ಕಡೆಯ ರಾಜರುಗಳು, ಧೃತರಾಷ್ಟ್ರನ ಮಕ್ಕಳೂ ಮತ್ತು ಕರ್ಣನೂ ಕೂಡ ವ್ಯಥಿತರಾಗಿ ದಿಕ್ಕಾಪಾಲಾಗಿ ಓಡಿ ಹೋದರು.

ಆದರೆ ಅಲ್ಲಿ ತನ್ನ ಅಸ್ತ್ರಬಲವನ್ನು ಸದಾ ಹೊಗಳಿಕೊಳ್ಳುತ್ತಿದ್ದ ಸೊಕ್ಕಿನ ದ್ರೌಣಿ ಅಶ್ವತ್ಥಾಮನು ಮಾತ್ರ ವಿವ್ಯಥನಾಗದೆ ಘಟೋತ್ಕಚನು ನಿರ್ಮಿಸಿದ ಆ ಮಾಯೆಯನ್ನು ಬಾಣಗಳಿಂದ ನಾಶಮಾಡಿದನು. ತನ್ನ ಮಾಯೆಯು ಹೀಗೆ ಹತವಾದುದನ್ನು ಸಹಿಸಿಕೊಳ್ಳದೇ ಇದ್ದ ಘಟೋತ್ಕಚನು ಅಶ್ವತ್ಥಾಮನ ಮೇಲೆ ಘೋರ ಶರಗಳನ್ನು ಪ್ರಯೋಗಿಸಿದನು. ಕ್ರೋಧಮೂರ್ಛಿತ ಸರ್ಪಗಳು ವೇಗದಿಂದ ಹುತ್ತವನ್ನು ಹೊಗುವಂತೆ ಶೀಗ್ರವಾಗಿ ಹೋಗುತ್ತಿರುವ ಆ ರುಕ್ಮಪುಂಖಗಳ, ಶಿಲಾಶಿತ ಬಾಣಗಳು ಅಶ್ವತ್ಥಾಮನನ್ನು ಭೇದಿಸಿ ರಕ್ತವನ್ನು ಕುಡಿದು ನೆಲವನ್ನು ಹೊಕ್ಕವು. ಲಘುಹಸ್ತ ಅಶ್ವತ್ಥಾಮನಾದರೋ ಸಂಕ್ರುದ್ಧನಾಗಿ ಇನ್ನೂ ಕುಪಿತನಾಗಿದ್ದ ಘಟೋತ್ಕಚನನ್ನು ಹತ್ತು ಶರಗಳಿಂದ ಹೊಡೆದನು. ದ್ರೋಣಪುತ್ರನಿಂದ ಮರ್ಮಗಳಲ್ಲಿ ಗಾಯಗೊಂಡ ಘಟೋತ್ಕಚನು ಅತ್ಯಂತ ವ್ಯಥಿತನಾಗಿ ನೂರುಸಾವಿರ ಅರೆಕಾಲುಗಳನ್ನು ಹೊಂದಿದ್ದ ಚಕ್ರವನ್ನು ಕೈಗೆತ್ತಿಕೊಂಡನು. ಅಶ್ವತ್ಥಾಮನನ್ನು ಕೊಲ್ಲಲು ಬಯಸಿ ಅವನ ಮೇಲೆ ಭೀಮಸೇನನ ಮಗನು ಬೇಸಗೆಯ ಕೊನೆಯಲ್ಲಿ ಉದಯಿಸುವ ಸೂರ್ಯನಂತಿದ್ದ ಮಣಿವಜ್ರವಿಭೂಷಿತ ಆ ಚಕ್ರವನ್ನು ಎಸೆದನು. ಅತ್ಯಂತ ವೇಗವಾಗಿ ಬಂದ ಆ ಚಕ್ರವು ದ್ರೌಣಿಯ ಶರಗಳಿಂದ ಬಹಳ ದೂರಕ್ಕೆ ಎಸೆಯಲ್ಪಟ್ಟು ನಿರ್ಭಾಗ್ಯನ ಸಂಕಲ್ಪವು ನಿಷ್ಫಲವಾಗುವಂತೆ ನಿಷ್ಫಲವಾಗಿ ಭೂಮಿಯಮೇಲೆ ಬಿದ್ದಿತು. ಚಕ್ರವು ಕೆಳಗುರುಳಿದುದನ್ನು ನೋಡಿ ಘಟೋತ್ಕಚನು ತಕ್ಷಣವೇ ರಾಹುವು ಸೂರ್ಯನನ್ನು ಹೇಗೋ ಹಾಗೆ ದ್ರೌಣಿಯನ್ನು ಬಾಣಗಳಿಂದ ಮುಚ್ಚಿದನು.

ಆಗ ಕಾಡಿಗೆಯ ಭಿನ್ನರಾಶಿಯಂತಿದ್ದ ಘಟೋತ್ಕಚನ ಮಗ ಅಂಜನಪರ್ವನು ಅದ್ರಿರಾಜ ಹಿಮಾಲಯನು ಚಂಡಮಾರುತವನ್ನು ಹೇಗೋ ಹಾಗೆ ದ್ರೌಣಿಯನ್ನು ತಡೆದು ನಿಲ್ಲಿಸಿದನು. ಭೀಮಸೇನನ ಮೊಮ್ಮಗ ಅಂಜನಪರ್ವನ ಬಾಣಗಳು ಚುಚ್ಚಿ ಅಶ್ವತ್ಥಾಮನು ಮೇಘದ ಜಲಧಾರೆಗಳಿಂದ ಆವೃತ ಮೇರುಪರ್ವತದಂತೆ ಕಂಡನು. ವಿಕ್ರಮದಲ್ಲಿ ರುದ್ರ ಮತ್ತು ಇಂದ್ರರ ಸಮನಾಗಿದ್ದ ಅಶ್ವತ್ಥಾಮನಾದರೋ ಸ್ವಲ್ಪವೂ ವಿಭ್ರಾಂತನಾಗದೇ ಒಂದೇ ಬಾಣದಿಂದ ಅಂಜನಪರ್ವನ ಧ್ವಜವನ್ನು ತುಂಡರಿಸಿದನು. ಎರಡರಿಂದ ಸಾರಥಿಯನ್ನು, ಮೂರರಿಂದ ಮೂಕಿಯನ್ನು, ಒಂದರಿಂದ ಧನುಸ್ಸನ್ನೂ ಮತ್ತು ನಾಲ್ಕರಿಂದ ನಾಲ್ಕು ಕುದುರೆಗಳನ್ನೂ ಹೊಡೆದನು. ರಥಹೀನ ಅಂಜನಪರ್ವನು ಕೈಯಿಂದ ಹಿಡಿದೆತ್ತಿದ್ದ ಸುವರ್ಣಬಿಂದುಗಳಿಂದ ಸಮಲಂಕೃತ ಖಡ್ಗವನ್ನೂ ಅಶ್ವತ್ಥಾಮನು ಸುತೀಕ್ಷ್ಣ ವಿಶಿಖದಿಂದ ಎರಡು ಮಾಡಿದನು. ಹೈಡಿಂಬಸೂನು (ಹಿಡಿಂಬಿಯ ಮಗ ಘಟೋತ್ಕಚನ ಮಗ ಅಂಜನಪರ್ವ) ವು ತಕ್ಷಣವೇ ಎಸೆದ ಗದೆಯನ್ನು ಕೂಡ ಅದು ತಿರುಗುತ್ತಾ ಹಾರಿಬಂದು ಬೀಳುವುದರೊಳಗೆ ದ್ರೌಣಿಯು ನಾಶಗೊಳಿಸಿದನು. ಒಡನೆಯೇ ಅಂತರಿಕ್ಷಕ್ಕೆ ಹಾರಿ ಕಾಲಮೇಘದಂತೆ ಕೂಗುತ್ತಾ ಅಂಜನಪರ್ವನು ಅಶ್ವತ್ಥಾಮನ ಮೇಲೆ ನಭಸ್ತಲದಿಂದ ಮರಗಳ ಮಳೆಯನ್ನು ಸುರಿಸಿದನು. ಆಗ ಆಕಾಶದಲ್ಲಿದ್ದ ಮಯಾವಿ ಘಟೋತ್ಕಚನ ಮಗನನ್ನು ದ್ರೌಣಿಯು ಘನಮೋಡಗಳನ್ನು ಸೂರ್ಯನು ತನ್ನ ರಶ್ಮಿಗಳಿಂದ ಭೇದಿಸುವಂತೆ ಮಾರ್ಗಣಗಳಿಂದ ಹೊಡೆದನು. ಬಳಿಕ ಪರ್ವತದಷ್ಟೇ ಎತ್ತರನಾಗಿದ್ದ ಅಂಜನಪರ್ವತನು ಪುನಃ ಕೆಳಗಿಳಿದು ಹೇಮಪರಿಷ್ಕೃತ ರಥದಲ್ಲಿ ಕುಳಿತುಕೊಂಡನು.

ಆಗ ಧರೆಗಿಳಿದ ಕಾಡಿಗೆಯಂತೆ ಹೊಳೆಯುವ ಪರ್ವತವೋ ಎಂಬತ್ತಿದ್ದ ಭೀಮನ ಮೊಮ್ಮಗ ಅಂಜನಪರ್ವನನ್ನು ದ್ರೌಣಿಯು ಅಂಧಕನನ್ನು ಮಹೇಶ್ವರನು ಹೇಗೋ ಹಾಗೆ ಸಂಹರಿಸಿದನು. ತನ್ನ ಮಹಾಬಲ ಮಗನು ಅಶ್ವತ್ಥಾಮನಿಂದ ಹತನಾದುದನ್ನು ಕಂಡು ರೋಷದಿಂದ ಅಂಗಾಂಗಗಳು ಥರಥರಿಸುತ್ತಿದ್ದ ಘಟೋತ್ಕಚನು ಕಾಡಾಗ್ನಿಯು ಸುಡುವಂತೆ ಪಾಂಡವರ ಸೇನೆಯನ್ನು ದಹಿಸುತ್ತಿದ್ದ ದ್ರೌಣಿಯ ಬಳಿಸಾರಿ ಸ್ವಲ್ಪವೂ ಅಳುಕದೇ ಈ ಮಾತನ್ನಾಡಿದನು: “ದ್ರೋಣಪುತ್ರ! ನಿಲ್ಲು! ನಿಲ್ಲು! ನನ್ನಿಂದ ಜೀವಂತನಾಗಿ ನೀನು ಹಿಂದಿರುಗುವುದಿಲ್ಲ. ಅಗ್ನಿಸುತ ಕಾರ್ತಿಕೇಯನು ಕ್ರೌಂಚಪರ್ವತವನ್ನು ಹೇಗೋ ಹಾಗೆ ನಾನು ನಿನ್ನನ್ನು ಇಂದು ಕೊಂದುಬಿಡುತ್ತೇನೆ!”

ಅಶ್ವತ್ಥಾಮನು ಹೇಳಿದನು: “ಅಮರವಿಕ್ರಮಿ! ಮಗೂ! ಹೈಡಿಂಬೇ! ಹೊರಟುಹೋಗು! ಬೇರೆ ಯಾರೊಡನೆಯಾದರೂ ಯುದ್ಧಮಾಡು! ತಂದೆಯು ಮಗನನ್ನು ಬಾಧಿಸುವುದು ನ್ಯಾಯವಲ್ಲ! ನಿನ್ನ ಮೇಲೆ ನನಗೆ ಯಾವರೀತಿಯ ರೋಷವೂ ಇಲ್ಲ. ಆದರೆ ರೋಷಾವಿಷ್ಟನಾದವನು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು!”

ಇದನ್ನು ಕೇಳಿ ಪುತ್ರಶೋಕದಿಂದ ಆವೇಶಗೊಂಡಿದ್ದ ಭೈಮಸೇನಿಯು ಕ್ರೋಧದಿಂದ ಕಣ್ಣುಗಳನ್ನು ಕೆಂಪು ಮಾಡಿಕೊಂಡು ಅಶ್ವತ್ಥಾಮನಿಗೆ ಅಪಮಾನಿಸಿ ಹೀಗೆ ಹೇಳಿದನು: "ದ್ರೌಣೀ! ಹೀಗೇಕೆ ಮಾತನಾಡುತ್ತಿರುವೆ? ಯುದ್ಧದಲ್ಲಿ ನಾನೊಬ್ಬ ಸಾಮಾನ್ಯನವನೆಂದು ಭಾವಿಸಿರುವೆಯಾ? ನಾನು ಸುಪ್ರಸಿದ್ಧ ಕುರುಗಳ ಕುಲದಲ್ಲಿ ಭೀಮಸೇನನಿಂದ ಹುಟ್ಟಿದವನಾಗಿದ್ದೇನೆ. ಸಮರದಿಂದ ಪಲಾಯನ ಮಾಡದ ಪಾಂಡವರ ಮಗನು ನಾನು. ಬಲದಲ್ಲಿ ದಶಗ್ರೀವನ ಸಮನಾಗಿದ್ದು ನಾನು ರಾಕ್ಷಸರ ರಾಜನು. ದ್ರೋಣಪುತ್ರ! ನಿಲ್ಲು! ನಿಲ್ಲು! ನನ್ನಿಂದ ಜೀವಿತನಾಗಿ ಹೋಗುವುದಿಲ್ಲ! ಇಂದಿನ ಯುದ್ಧದಲ್ಲಿ ನಾನು ನಿನ್ನ ಯುದ್ಧಶ್ರದ್ಧೆಯನ್ನೇ ತೊಡೆದುಹಾಕುತ್ತೇನೆ!”

ಹೀಗೆ ಹೇಳಿ, ರೋಷದಿಂದ ತಾಮ್ರಾಕ್ಷನಾಗಿದ್ದ ಸುಮಹಾಬಲಿ ರಾಕ್ಷಸನು ಕ್ರುದ್ಧ ಕೇಸರಿಯು ಗಜೇಂದ್ರನ ಮೇಲೆರಗುವಂತೆ ದ್ರೌಣಿಯನ್ನು ಆಕ್ರಮಣಿಸಿದನು. ಮೋಡವು ಪರ್ವತದ ಮೇಲೆ ಜಲಧಾರೆಯನ್ನು ಸುರಿಸುವಂತೆ ಘಟೋತ್ಕಚನು ರಥಿಗಳಲ್ಲಿ ಶ್ರೇಷ್ಠ ದ್ರೌಣಿಯ ಮೇಲೆ ರಥದ ಅಚ್ಚುಮರದ ಗಾತ್ರದ ಬಾಣಗಳನ್ನು ಸುರಿಸಿದನು. ಆ ಶರವೃಷ್ಟಿಯು ತನ್ನ ಮೇಲೆ ಬೀಳುವುದರೊಳಗೇ ದ್ರೌಣಿಯು ಶರಗಳಿಂದ ತುಂಡುಮಾಡಿದನು. ಆಗ ಅಂತರಿಕ್ಷದಲ್ಲಿ ಬಾಣಗಳ ಸಂಗ್ರಾಮವೋ ಎಂದು ತೋರುವಂತೆ ಅವರಿಬ್ಬರೊಡನೆ ಯುದ್ಧವು ನಡೆಯಿತು. ಅಸ್ತ್ರಗಳ ಸಂಘರ್ಷದಿಂದಾಗಿ ಹೊರಬೀಳುತ್ತಿದ್ದ ಬೆಂಕಿಯ ಕಿಡಿಗಳು ಆಕಾಶವನ್ನೇ ಪ್ರಕಾಶಗೊಳಿಸುತ್ತಿದ್ದವು. ರಾತ್ರಿಯ ಆ ಪ್ರಥಮಯಾನದಲ್ಲಿ ಆಕಾಶವೆಲ್ಲವೂ ಮಿಂಚುಹುಳುಗಳಿಂದ ಚಿತ್ರಿತವಾಗಿರುವಂತೆ ತೋರುತ್ತಿತ್ತು. ಯುದ್ಧಾಭಿಮಾನಿ ದ್ರೌಣಿಯಿಂದ ತನ್ನ ಮಾಯೆಯು ನಾಶವಾದುದನ್ನು ನೋಡಿ ಘಟೋತ್ಕಚನು ಅಂತರ್ಹಿತನಾಗಿ ಪುನಃ ಮಾಯೆಯನ್ನು ಸೃಷ್ಟಿಸಿದನು. ಅವನು ಶಿಖರ-ವೃಕ್ಷಗಳಿಂದ ಕೂಡಿದ ದೊಡ್ಡ ಪರ್ವತವಾಗಿಬಿಟ್ಟನು. ಶೂಲ, ಪ್ರಾಸ, ಖಡ್ಗ, ಮುಸುಲಗಳು ಆ ಪರ್ವತದಿಂದ ಧಾರಾಕಾರವಾಗಿ ಸುರಿಯುತ್ತಿದ್ದವು. ಅಂಜನಪರ್ವತಕ್ಕೆ ಸಮಾನವಾಗಿದ್ದ ಮಾಯಾನಿರ್ಮಿತ ಆ ಪರ್ವತವನ್ನೂ ಅದರಿಂದ ಧಾರಾಕಾರವಾಗಿ ಬೀಳುತ್ತಿದ್ದ ಶಸ್ತ್ರಸಮೂಹಗಳನ್ನೂ ನೋಡಿ ದ್ರೌಣಿಯು ಸ್ವಲ್ಪವೂ ವಿಚಲಿತನಾಗಲಿಲ್ಲ. ಆಗ ನಸುನಗುತ್ತಾ ದ್ರೌಣಿಯು ವಜ್ರಾಸ್ತ್ರವನ್ನು ಪ್ರಕಟಿಸಿದನು. ಅಸ್ತ್ರದಿಂದ ಆ ಪರ್ವತವು ತಕ್ಷಣವೇ ನಾಶವಾಯಿತು. ಆಗ ಘಟೋತ್ಕಚನು ಕಾಮನಬಿಲ್ಲಿನಿಂದ ಕೂಡಿದ ಕಪ್ಪು ಮೋಡದ ರೂಪವನ್ನು ತಾಳಿ ಆಕಾಶದಿಂದ ಕಲ್ಲುಗಳ ಮಳೆಯನ್ನೇ ಸುರಿಸಿ ದ್ರೌಣಿಯನ್ನು ಮುಚ್ಚಿಬಿಟ್ಟನು. ಕೂಡಲೇ ದ್ರೋಣತನಯನು ಮೇಲೆದ್ದ ಆ ಕಪ್ಪುಮೋಡವನ್ನು ವಾಯವ್ಯಾಸ್ತ್ರದಿಂದ ನಾಶಗೊಳಿಸಿದನು. ದ್ರೌಣಿಯು ಮಾರ್ಗಣಗಣಗಳಿಂದ ಎಲ್ಲ ದಿಕ್ಕುಗಳನ್ನೂ ಮುಚ್ಚಿ ನೂರಾರು ಸಹಸ್ರಾರು ರಾಕ್ಷಸ ರಥಗಳನ್ನು ಧ್ವಂಸಗೊಳಿಸಿದನು.

ಅಷ್ಟಾದರೂ ಭ್ರಾಂತನಾಗದೇ ರಥದಲ್ಲಿ ಕುಳಿತು ದೀರ್ಘ ಕಾರ್ಮುಕವನ್ನು ಸೆಳೆಯುತ್ತಾ, ಆನೆಗಳ ಮೇಲೂ ರಥಗಳ ಮೇಲೂ ಮತ್ತು ಕುದುರೆಗಳ ಬೆನ್ನುಗಳ ಮೇಲೆ ಕುಳಿತಿದ್ದ, ಸಿಂಹ-ಶಾರ್ದೂಲಗಳ ಬಲವುಳ್ಳ, ಮದಿಸಿದ ಆನೆಗಳ ವಿಕ್ರಮವುಳ್ಳ, ವಿಕಾರ ಮುಖ-ಶಿರ-ಕುತ್ತಿಗೆಗಳನ್ನು ಹೊಂದಿದ್ದ, ನಾನಾ ಶಸ್ತ್ರಗಳನ್ನು ನಾನಾ ಕವಚ-ಭೂಷಣಗಳನ್ನು  ಧರಿಸಿದ್ದ, ಕೋಪದಿಂದ ಕಣ್ಣುಗುಡ್ಡೆಗಳು ಮುಂದೆ ಬಂದಿದ್ದ, ಭಯಂಕರವಾಗಿ ಆರ್ಭಟಿಸುತ್ತಿದ್ದ ಅನೇಕ ಉಗ್ರವಿಕ್ರಮಿ, ವೀರ, ಮಹಾಬಲ ಪೌಲಸ್ತ್ಯ-ಯಾತುಧಾನ-ತಾಮಸ ಯುದ್ಧದುರ್ಮದ ರಾಕ್ಷಸ ಅನುಚರರಿಂದ ಸುತ್ತುವರೆಯಲ್ಪಟ್ಟು ಯುದ್ಧಕ್ಕೆ ಬರುತ್ತಿದ್ದ ಹೈಡಿಂಬಿಯನ್ನು ನೋಡಿ ವಿಷಣ್ಣನಾದ ದುರ್ಯೋಧನನಿಗೆ ದ್ರೌಣಿಯು ಹೇಳಿದನು: “ದುರ್ಯೋಧನ! ಇಂದ್ರ ಸಮಾನ ವಿಕ್ರಮ ರಾಜರು ಮತ್ತು ವೀರ ಸಹೋದರರೊಡನೆ ಇಂದು ನೀನು ಸುಮ್ಮನೇ ಯುದ್ಧವನ್ನು ನೋಡು! ಗಾಬರಿಗೊಳ್ಳಲು ಕಾರಣವಿಲ್ಲ. ನಿನ್ನ ಶತ್ರುಗಳೆಲ್ಲರನ್ನೂ ಈಗ ಸಂಹರಿಸುತ್ತೇನೆ. ನಿನಗೆ ಪರಾಜಯವೆಂಬುದೇ ಆಗುವುದಿಲ್ಲ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಸೇನೆಯನ್ನು ಸಮಾಧಾನಗೊಳಿಸು!”

ದುರ್ಯೋಧನನು ಹೇಳಿದನು: “ಗೌತಮಿಯ ಮಗನೇ! ನಿನ್ನ ಮನಸ್ಸು ವಿಶಾಲವಾದುದು. ಆದುದರಿಂದ ಈ ಅದ್ಭುತವನ್ನು ನೀನು ಮಾಡುವೆ ಎನ್ನುವುದರಲ್ಲಿ ಸಂದೇಹವಿಲ್ಲ. ನಮ್ಮ ಮೇಲೆ ನಿನಗೆ ಪರಮ ಭಕ್ತಿಯಿದೆ!”

ಅಶ್ವತ್ಥಾಮನು ಹೀಗೆ ಹೇಳಲು ದುರ್ಯೋಧನನು ನೂರುಸಾವಿರ ರಣಶೋಭೀ ರಥಗಳಿಂದ ಆವೃತನಾಗಿದ್ದ ಶಕುನಿಗೆ ಹೇಳಿದನು: “ಮಾತುಲ! ಆರು ಸಾವಿರ ಆನೆಗಳೊಂದಿಗೆ ನೀನು ಧನಂಜಯನನ್ನು ಆಕ್ರಮಣಿಸು! ಕರ್ಣ, ವೃಷಸೇನ, ಕೃಪ, ನೀಲ, ಉತ್ತರ ಸೇನೆ, ಕೃತವರ್ಮ, ಪುರುಮಿತ್ರ, ಶ್ರುತಾರ್ಪಣ, ದುಃಶಾಸನ, ನಿಕುಂಭ, ಕುಂಡಭೇದಿ, ಉರುಕ್ರಮ, ಪುರಂಜಯ, ದೃಢರಥ, ಪತಾಕೀ, ಹೇಮಪಂಕಜ, ಶಲ್ಯ, ಅರುಣೀಂದ್ರನ ಸೇನೆ, ಸಂಜಯ, ವಿಜಯ, ಜಯ, ಕಮಲಾಕ್ಷ, ಪುರು, ಕ್ರಾಥೀ, ಜಯವರ್ಮ, ಸುದರ್ಶನರು ಆರುಸಾವಿರ ಪದಾತಿಗಳೊಂದಿಗೆ ನಿನ್ನನ್ನು ಅನುಸರಿಸಿ ಬರುತ್ತಾರೆ. ದೇವೇಂದ್ರನು ಅಸುರರನ್ನು ಜಯಿಸಿದಂತೆ ನೀವು ಭೀಮ, ಯಮಳರು ಮತ್ತು ಧರ್ಮರಾಜನನ್ನು ಜಯಿಸಿರಿ! ನನ್ನ ವಿಜಯವು ನಿಮ್ಮ ಮೇಲೆ ನಿರ್ಭರಗೊಂಡಿದೆ! ದ್ರೌಣಿಯ ಬಾಣಗಳಿಂದ ತುಂಬಾ ಗಾಯಗೊಂಡಿರುವ ಕೌಂತೇಯರನ್ನು ಪಾವಕಿಯು ಅಸುರರನ್ನು ಹೇಗೋ ಹಾಗೆ ಜಯಿಸು!”

ದುರ್ಯೋಧನನು ಹೀಗೆ ಹೇಳಲು ಸೌಬಲನು ಧೃತರಾಷ್ಟ್ರನ ಮಕ್ಕಳನ್ನು ಸಂತೋಷಗೊಳಿಸಲು ಮತ್ತು ಪಾಂಡವರನ್ನು ನಾಶಗೊಳಿಸಲು ಹೊರಟನು. ಆಗ ಹಿಂದೆ ಶಕ್ರನಿಗೂ ಪ್ರಹ್ರಾದನಿಗೂ ನಡೆದ ತುಮುಲ ಯುದ್ಧದಂತೆ ದ್ರೌಣಿ-ರಾಕ್ಷಸನ ನಡುವೆ ಯುದ್ಧವು ನಡೆಯಿತು. ಸಂಕ್ರುದ್ಧ ಘಟೋತ್ಕಚನು ವಿಷಾಗ್ನಿಯಂತಿರುವ ಹತ್ತು ಬಾಣಗಳಿಂದ ಗೌತಮೀಸುತನ ಎದೆಗೆ ಹೊಡೆದನು. ಭೀಮಸುತನ ಶರಗಳಿಂದ ಗಾಢವಾಗಿ ಗಾಯಗೊಂಡ ಅಶ್ವತ್ಥಾಮನು ರಥದ ಮಧ್ಯದಲ್ಲಿಯೇ ಭಿರುಗಾಳಿಸಿ ಸಿಲುಕಿದ ಮರದಂತೆ ತತ್ತರಿಸಿದನು. ಪುನಃ ಘಟೋತ್ಕಚನು ಮಹಾಪ್ರಭೆಯುಳ್ಳ ಅಂಜಲೀಕವೆಂಬ ಮಾರ್ಗಣದಿಂದ ದ್ರೌಣಿಯ ಕೈಯಲ್ಲಿದ್ದ ಚಾಪವನ್ನು ತುಂಡರಿಸಿದನು. ಆಗ ದ್ರೌಣಿಯು ಮಹಾ ಭಾರವನ್ನು ಸಹಿಸಿಕೊಳ್ಳಬಲ್ಲ ಅನ್ಯ ಧನುಸ್ಸನ್ನು ತೆಗೆದುಕೊಂಡು ಮೋಡಗಳು ಮಳೆಯನ್ನು ಸುರಿಸುವಂತೆ ತೀಕ್ಷ್ಣ ವಿಶಿಖಗಳ ಮಳೆಯನ್ನು ಸುರಿಸಿದನು. ಆಗ ಶಾರದ್ವತೀಪುತ್ರನು ಆ ಆಕಾಶಗಾಮಿ ರಾಕ್ಷಸ ಶತ್ರುಗಳ ಮೇಲೆ ಸುವರ್ಣಪುಂಖಗಳುಳ್ಳ ಆಕಾಶಗಾಮೀ ಬಾಣಗಳನ್ನು ಪ್ರಯೋಗಿಸಿದನು. ಸಿಂಹದಿಂದ ಪೀಡಿಸಲ್ಪಟ್ಟ ಆನೆಗಳ ಹಿಂಡಿನಂತೆ ಪೀನವಕ್ಷಸರಾದ ರಾಕ್ಷಸರ ಆ ಸೇನೆಯು ಅಶ್ವತ್ಥಾಮನ  ಬಾಣಗಳಿಂದ ಬಹಳವಾಗಿ ಪೀಡಿತಗೊಂಡಿತು. ಯುಗಕ್ಷಯದಲ್ಲಿ ಭಗವಂತ ವಿಭುವು ಇರುವವುಗಳನ್ನು ಹೇಗೆ ಅಗ್ನಿಯಿಂದ ಸುಡುವನೋ ಹಾಗೆ ಅಶ್ವತ್ಥಾಮನು ಕುದುರೆ-ಸೂತ-ರಥಗಳೊಂದಿಗೆ ಆ ರಾಕ್ಷಸರನ್ನು ಬಾಣಗಳಿಂದ ಸುಟ್ಟು ಧ್ವಂಸಗೊಳಿಸಿದನು. ಹಿಂದೆ ದಿವಿಯಲ್ಲಿ ದೇವ ಮಹೇಶ್ವರನು ಹೇಗೆ ತ್ರಿಪುರವನ್ನು ದಹಿಸಿದ್ದನೋ ಹಾಗೆ ಬಾಣಗಳಿಂದ ರಾಕ್ಷಸರ ಅಕ್ಷೌಹಿಣಿಯನ್ನು ದಹಿಸಿ ಅಶ್ವತ್ಥಾಮನು ಬಹಳವಾಗಿ ಪ್ರಕಾಶಿಸಿದನು. ಧೃತರಾಷ್ಟ್ರನ ಹಿತವನ್ನೇ ಮಾಡುವ ವಿಜಯಿಗಳಲ್ಲಿ ಶ್ರೇಷ್ಠ ದ್ರೋಣಪುತ್ರನು ಯುಗಾಂತದಲ್ಲಿ ಸರ್ವಭೂತಗಳನ್ನು ಸುಡುವ ಅಗ್ನಿಯಂತೆ ಪ್ರಕಾಶಿಸಿದನು.

ಮಹಾಬಲೀ ರಾಕ್ಷಸೇಂದ್ರ ಘಟೋತ್ಕಚನ ಹೊರತಾಗಿ ಆಗ ರಣದಲ್ಲಿದ್ದ ಪಾಂಡವರ ಸಹಸ್ರಾರು ರಾಜರಲ್ಲಿ ಯಾರೂ ದ್ರೌಣಿಯನ್ನು ವೀಕ್ಷಿಸಲು ಶಕ್ಯರಾಗಿರಲಿಲ್ಲ. ಅವನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಚಪ್ಪಾಳೆ ತಟ್ಟುತ್ತಾ “ಕ್ರುದ್ಧನಾದ ದ್ರೋಣಪುತ್ರನಲ್ಲಿಗೆ ನನ್ನನ್ನು ಕೊಂಡೊಯ್ಯಿ!” ಎಂದು ಹೇಳಿದನು. ಅನಂತರ ಆ ಘಟೋತ್ಕಚನು ವಿಚಿತ್ರ ಪತಾಕೆಗಳನ್ನುಳ್ಳ ಘೋರರೂಪದ ರಥವನ್ನೇರಿ ದ್ರೋಣಪುತ್ರನೊಂದಿಗೆ ಪುನಃ ದ್ವೈರಥಯುದ್ಧವನ್ನು ನಡೆಸಿದನು. ಆಗ ಕ್ರುದ್ಧ ರಾಕ್ಷಸನು ದ್ರೋಣಪುತ್ರನ ಮೇಲೆ ರುದ್ರನಿರ್ಮಿತ ಮಹಾರೌದ್ರಾಕಾರದ ಉಕ್ಕಿನ ಅಷ್ಟಚಕ್ರವನ್ನು ಪ್ರಯೋಗಿಸಿದನು. ಆಗ ದ್ರೌಣಿಯು ಧನುಸ್ಸನ್ನು ರಥದಲ್ಲಿಯೇ ಇರಿಸಿ, ರಥದಿಂದ ಕೆಳಕ್ಕೆ ಹಾರಿ ಆ ಚಕ್ರವನ್ನು ಹಿಡಿದು ಅದನ್ನೇ ಹಿಂದೆ ಎಸೆದನು. ಮಹಾಪ್ರಭೆಯುಳ್ಳ ಆ ಅತಿ ದಾರುಣ ಅಶನಿಯು ಘಟೋತ್ಕಚನ ವಾಹನವನ್ನು ಕುದುರೆ-ಸೂತ-ಧ್ವಜಗಳೊಂದಿಗೆ ಭಸ್ಮಗೊಳಿಸಿ ಭೂಮಿಯನ್ನು ಸೀಳಿ ಪ್ರವೇಶಿಸಿತು. ಶಂಕರ ನಿರ್ಮಿತ ಆ ಘೋರ ಅಶನಿಯನ್ನು ಹಾರಿ ಹಿಡಿದ ದ್ರೌಣಿಯ ಆ ಕರ್ಮವನ್ನು ನೋಡಿ ಸರ್ವಭೂತಗಳು ಅವನನ್ನು ಹೊಗಳಿದವು. ಭೈಮಸೇನಿಯಾದರೋ ಧೃಷ್ಟದ್ಯುಮ್ನನ ರಥವನ್ನೇರಿ ಅಲ್ಲಿಂದಲೇ ಪುನಃ ದ್ರೌಣಿಯ ಮಹಾವಕ್ಷಸ್ಥಳಕ್ಕೆ ಗುರಿಯಿಟ್ಟು ನಿಶಿತ ಬಾಣಗಳನ್ನು ಪ್ರಯೋಗಿಸಿದನು. ಧೃಷ್ಟದ್ಯುಮ್ನನೂ ಕೂಡ ಗಾಬರಿಗೊಳ್ಳದೇ ಸರ್ಪಗಳ ವಿಷದಂತಿರುವ ಸುವರ್ಣಪುಂಖಗಳ ವಿಶಿಖಗಳನ್ನು ದ್ರೋಣಪುತ್ರನ ಎದೆಗೆ ಗುರಿಯಿಟ್ಟು ಪ್ರಯೋಗಿಸಿದನು. ದ್ರೌಣಿಯೂ ಕೂಡ ಅವರಿಬ್ಬರ ಮೇಲೆ ಸಹಸ್ರಾರು ನಾರಾಚಗಳನ್ನು ಪ್ರಯೋಗಿಸಿದನು. ಅವರೂ ಕೂಡ ಅಗ್ನಿಶಿಖೆಗಳಂತಿದ್ದ ಬಾಣಗಳಿಂದ ಅಶ್ವತ್ಥಾಮನ ಬಾಣಗಳನ್ನು ಆಕಾಶದಲ್ಲಿಯೇ ತುಂಡರಿಸಿದರು.

ಪುರುಷಸಿಂಹರು ಮತ್ತು ದ್ರೌಣಿಯ ನಡುವಿನ ಆ ಯುದ್ಧವು ಅತಿ ತೀವ್ರವೂ ಯೋಧರಿಗೆ ಪ್ರೀತಿವರ್ಧಕವೂ ಆಗಿತ್ತು. ಆಗ ಸಾವಿರ ರಥಗಳಿಂದಲೂ, ಮುನ್ನೂರು ಆನೆಗಳಿಂದಲೂ, ಆರು ಸಾವಿರ ಕುದುರೆಸವಾರರಿಂದಲೂ ಕೂಡಿಕೊಂಡು ಭೀಮನು ಆ ಪ್ರದೇಶಕ್ಕೆ ಆಗಮಿಸಿದನು. ಆ ಸಮಯದಲ್ಲಿ ಸ್ವಲ್ಪವೂ ಆಯಾಸವಿಲ್ಲದಂತೆ ಪರಾಕ್ರಮವನ್ನು ತೋರಿಸುತ್ತಿದ್ದ ದ್ರೌಣಿಯು ಭೀಮನ ರಾಕ್ಷಸ ಮಗನೊಡನೆ ಮತ್ತು ಅವನನ್ನು ಅನುಸರಿಸಿ ಬಂದ ಧೃಷ್ಟದ್ಯುಮ್ನನೊಡನೆ ಯುದ್ಧಮಾಡುತ್ತಿದ್ದನು. ಅಲ್ಲಿ ಅನ್ಯ ಸರ್ವಭೂತಗಳಿಗೂ ಮಾಡಿತೋರಿಸಲು ಅಶಕ್ಯವಾದ ಅತಿ ಅದ್ಭುತ ವಿಕ್ರಮವನ್ನು ದ್ರೌಣಿಯು ಪ್ರದರ್ಶಿಸಿದನು. ಒಂದೇ ನಿಮಿಷಮಾತ್ರದಲ್ಲಿ ಅವನು – ಭೀಮಸೇನ, ಹೈಡಿಂಬಿ, ಪಾರ್ಷತ, ಯಮಳರು, ಧರ್ಮಪುತ್ರ, ವಿಜಯ ಮತ್ತು ಅಚ್ಯುತರು ನೋಡುತ್ತಿದ್ದಂತೆಯೇ - ನಿಶಿತಬಾಣಗಳಿಂದ ಅಶ್ವ-ಸೂತ-ರಥ-ಗಜಗಳೊಂದಿಗೆ ರಾಕ್ಷಸರ ಅಕ್ಷೌಹಿಣೀ ಸೇನೆಯನ್ನು ಧ್ವಂಸಗೊಳಿಸಿದನು. ಅಶ್ವತ್ಥಾಮನ ನಾರಾಚಗಳಿಂದ ಅತಿಗಾಢವಾಗಿ ಗಾಯಗೊಂಡ ಆನೆಗಳು ಎರಡು ಶಿಖರಗಳಿರುವ ಪರ್ವತಗಳಂತೆ ಭೂಮಿಯ ಮೇಲೆ ಉರುಳಿ ಬಿದ್ದವು. ಬಾಣಗಳಿಂದ ಕತ್ತರಿಸಲ್ಪಟ್ಟ ಆನೆಗಳ ಸೊಂಡಿಲುಗಳು ಚಲಿಸುತ್ತಿರುವಾಗ ರಣಭೂಮಿಯು ಹರಿದಾಡುತ್ತಿರುವ ಸರ್ಪಗಳಿಂದ ತುಂಬಿಹೋಗಿರುವಂತೆ ತೋರಿತು. ಅಲ್ಲಲ್ಲಿ ಬಿದ್ದಿದ್ದ ಸುವರ್ಣಮಯ ದಂಡಗಳು ಮತ್ತು ನೃಪರ ಛತ್ರಗಳಿಂದ ತುಂಬಿದ ರಣಭೂಮಿಯು ಯುಗಕ್ಷಯದಲ್ಲಿ ಸೂರ್ಯ-ಚಂದ್ರ ಗ್ರಹಗಳಿಂದ ತುಂಬಿದ ಆಕಾಶದಂತೆ ತೋರುತ್ತಿತ್ತು. ದ್ರೌಣಿಯು ಯಮಕ್ಷಯದ ಸಾಗರದಂತಿರುವ, ಮಹಾವೇಗವಾಗಿ ಹರಿಯುತ್ತಿರುವ ಮಹಾಘೋರ ರಕ್ತದ ನದಿಯನ್ನೇ ನಿರ್ಮಿಸಿದನು.

ರಾಶಿರಾಶಿಯಾಗಿ ಬಿದ್ದಿರುವ ಧ್ವಜಗಳೇ ಆ ನದಿಯ ಕಪ್ಪೆಗಳಂತಿದ್ದವು. ಒಡೆದುಹೋಗಿದ್ದ ಭೇರಿಗಳು ಆಮೆಗಳಂತಿದ್ದವು. ತುಂಡಾಗಿ ಬಿದ್ದಿದ್ದ ಚತ್ರಗಳು ಹಂಸಗಳ ಸಾಲಿನಂತಿದ್ದವು. ಚಾಮರಗಳ ಮಾಲೆಗಳು ನೊರೆಗಳಂತಿದ್ದವು. ಹದ್ದು-ರಣಹದ್ದುಗಳು ಮೊಸಳೆಗಳಂತಿದ್ದವು. ಅನೇಕ ಆಯುಧ-ಶರಗಳು ಮೀನುಗಳಂತಿದ್ದವು. ಪ್ರಾಸ-ಶಕ್ತಿಗಳು ಉಗ್ರ ಡುಂಡುಭಗಳಂತಿದ್ದವು. ಮಜ್ಜೆ-ಮಾಂಸಗಳು ನದಿಯ ಕೆಸರಿನಂತಿದ್ದವು. ತೇಲಿಹೋಗುತ್ತಿದ್ದ ಕಬಂಧಗಳು ದೋಣಿಗಳಂತೆ ತೋರುತ್ತಿದ್ದವು. ತಲೆಗೂದಲುಗಳೇ ಪಾಚಿಯಂತಿದ್ದ ಆ ನದಿಯು ಹೇಡಿಗಳಿಗೆ ಭಯವನ್ನುಂಟುಮಾಡುವಂತಹುದಾಗಿತ್ತು. ಅಪಾರ ಸಂಖ್ಯೆಗಳಲ್ಲಿ ಗಜಾಶ್ವಯೋಧರ ಹನನದಿಂದ ಉದ್ಭವವಾದ ಆ ನದಿಯಲ್ಲಿ ಯೋಧರ ಆರ್ತಸ್ವರಗಳೇ ಕಲಕಲ ಶಬ್ಧದಂತೆ ಕೇಳಿಬರುತ್ತಿದ್ದವು. ಗಾಯಗೊಂಡವರ ಶರೀರಗಳಿಂದ ಸೋರುವ ರಕ್ತವೇ ಆ ನದಿಯ ಅಲೆಗಳಂತಿತ್ತು. ಬಾಣಗಳಿಂದ ರಾಕ್ಷಸರನ್ನು ಸಂಹರಿಸಿ ದ್ರೌಣಿಯು ಹೈಡಿಂಬಿಯನ್ನು ಗಾಯಗೊಳಿಸಿದನು. ಪುನಃ ಅತಿ ಸಂಕ್ರುದ್ಧನಾಗಿ ಮಹಾಬಲ ದ್ರೌಣಿಯು ನಾರಾಚ ಗಣಗಳಿಂದ ವೃಕೋದರ-ಪಾರ್ಷತರೊಂದಿಗೆ ಪಾರ್ಥರನ್ನು ಹೊಡೆದನು.

ಆಗ ಅಶ್ವತ್ಥಾಮನು ಸುರಥನೆಂಬ ಹೆಸರಿನ ದ್ರುಪದನ ಮಗನನ್ನು ಸಂಹರಿಸಿದನು ಮತ್ತು ಪುನಃ ಶ್ರುತಂಜಯನೆಂಬ ಹೆಸರಿನ ಸುರಥನ ಅನುಜನನ್ನೂ ರಣದಲ್ಲಿ ಸಂಹರಿಸಿದನು. ದ್ರೌಣಿಯು ಬಲಾನೀಕ, ಜಯಾನೀಕ, ಜಯ, ಶ್ರುತಾಹ್ವಯರನ್ನು ಸಂಹರಿಸಿ ಯಮಕ್ಷಯಕ್ಕೆ ಕಳುಹಿಸಿದನು. ಪುಂಖಗಳಿರುವ ಅನ್ಯ ಮೂರು ತೀಕ್ಷ್ಣ ಬಾಣಗಳಿಂದ ಅವನು ಬಲಶಾಲಿ ಶತ್ರುಂಜಯನನ್ನೂ ರುಕ್ಮಮಾಲಿನಿಯನ್ನೂ ಶಕ್ರಲೋಕಕ್ಕೆ ಕಳುಹಿಸಿದನು. ಅವನು ಪೃಷಧ್ರ ಮತ್ತು ಮಾನಿನಿ ಚಂದ್ರದೇವರನ್ನು ಕೂಡ ಸಂಹರಿಸಿದನು. ಕುಂತಿಭೋಜನ ಹತ್ತು ಮಕ್ಕಳನ್ನೂ ಹತ್ತು ಬಾಣಗಳಿಂದ ಸಂಹರಿಸಿದನು. ಆಗ ಅಶ್ವತ್ಥಾಮನು ಸಂಕ್ರುದ್ಧನಾಗಿ ಉಗ್ರ ಜಿಹ್ಮಗವೊಂದನ್ನು ಹೂಡಿ ಧನುಸ್ಸನ್ನು ಆಕರ್ಣಪರ್ಯಂತವಾಗಿ ಎಳೆದು ಘೋರ ಯಮದಂಡದಂತಿದ್ದ ಆ ಉತ್ತಮ ಶರವನ್ನು ಘಟೋತ್ಕಚನಿಗೆ ಗುರಿಯಿಟ್ಟು ಪ್ರಯೋಗಿಸಿದನು. ಸುಂದರ ಪುಂಖಗಳುಳ್ಳ ಆ ಮಹಾಶರವು ರಾಕ್ಷಸನ ಹೃದಯವನ್ನು ಭೇದಿಸಿ ಶೀಘ್ರವಾಗಿ ನೆಲವನ್ನು ಹೊಕ್ಕಿತು. ಅದರಿಂದ ಘಟೋತ್ಕಚನು ಹತನಾಗಿ ಬಿದ್ದನೆಂದೇ ತಿಳಿದ ಮಹಾರಥ ಧೃಷ್ಟದ್ಯುಮ್ನನು ತನ್ನ ರಥವನ್ನು ದ್ರೌಣಿಯಿಂದ ದೂರಕ್ಕೆ ಕೊಂಡೊಯ್ದನು.

ಹಾಗೆ ರಣದಲ್ಲಿ ಯುಧಿಷ್ಠಿರನ ಸೇನೆಯ ಮುಖ್ಯರಥರನ್ನು ಪರಾಜಯಗೊಳಿಸಿ ಪರಾಙ್ಮುಖಗೊಳಿಸಿ ವೀರ ದ್ರೋಣಪುತ್ರನು ಸಿಂಹನಾದಗೈದನು. ನಿನ್ನ ಪುತ್ರರಿಂದಲೂ ಸರ್ವಭೂತಗಳಿಂದಲೂ ಗೌರವಿಸಲ್ಪಟ್ಟನು. ಹಾಗೆ ನೂರಾರು ಬಾಣಗಳಿಂದ ಕತ್ತರಿಸಲ್ಪಟ್ಟ ದೇಹಗಳಿಂದ, ಹತರಾಗಿ ಎಲ್ಲೆಡೆಯೂ ಬಿದ್ದಿದ್ದ, ರಾಕ್ಷಸರಿಂದ ನಿಬಿಡವಾಗಿದ್ದ ರಣಭೂಮಿಯು ಪರ್ವತ ಶಿಖರಗಳಿಂದ ವ್ಯಾಪ್ತವಾಗಿರುವಂತೆ ಅತಿದುರ್ಗಮವಾಗಿಯೂ ರೌದ್ರವಾಗಿಯೂ ಕಾಣುತ್ತಿತ್ತು. ಆ ದ್ರೌಣಿಯನ್ನು ಸಿದ್ಧ-ಗಂಧರ್ವ-ಪಿಶಾಚ ಗಣಗಳೂ, ನಾಗ-ಸುಪರ್ಣ-ಪಿತೃದೇವ-ಪಕ್ಷಿಗಣಗಳೂ, ರಾಕ್ಷಸ-ಭೂತಗಣಗಳೂ, ಅಪ್ಸರೆಯರೂ, ಸುರರೂ ಪ್ರಶಂಸಿಸಿದರು.

ಭೀಮನಿಂದ ಬಾಹ್ಲೀಕನ ವಧೆ

ದ್ರುಪದನ ಮಕ್ಕಳು, ಕುಂತಿಭೋಜನ ಮಕ್ಕಳು, ಮತ್ತು ಸಹಸ್ರಾರು ರಾಕ್ಷಸರು ದ್ರೋಣಪುತ್ರನಿಂದ ನಿಹತರಾದುದನ್ನು ಕಂಡು ಯುಧಿಷ್ಠಿರ, ಭೀಮಸೇನ, ಧೃಷ್ಟದ್ಯುಮ್ನ, ಮತ್ತು ಸಾತ್ಯಕಿಯರು ಒಟ್ಟಾಗಿ ಯುದ್ಧಮಾಡುವ ಮನಸ್ಸು ಮಾಡಿದರು. ರಣದಲ್ಲಿ ಪುನಃ ಸಾತ್ಯಕಿಯನ್ನು ನೋಡಿ ಕ್ರುದ್ಧನಾದ ಸೋಮದತ್ತನು ಅವನನ್ನು ಮಹಾ ಶರವರ್ಷದಿಂದ ಎಲ್ಲಕಡೆಗಳಿಂದ ಮುಚ್ಚಿಬಿಟ್ಟನು. ಆಗ ವಿಜಯಾಕಾಂಕ್ಷಿ ಕೌರವರು ಮತ್ತು ಶತ್ರುಗಳ ನಡುವೆ ಭಯವನ್ನು ಹೆಚ್ಚಿಸುವ, ಅತೀವ ಘೋರ ಯುದ್ಧವು ಪ್ರಾರಂಭವಾಯಿತು. ಸಾತ್ವತನಿಗೋಸ್ಕರ ಭೀಮನು ಕೌರವ ಸೋಮದತ್ತನನ್ನು ಹತ್ತು ಬಾಣಗಳಿಂದ ಹೊಡೆಯಲು ಸೋಮದತ್ತನೂ ಕೂಡ ಆ ವೀರನನ್ನು ನೂರರಿಂದ ತಿರುಗಿ ಹೊಡೆದನು. ಅನಂತರ ಪರಮಕ್ರುದ್ಧ ಸಾತ್ವತನು ಪುತ್ರಶೋಕದ ಮನೋರೋಗದಲ್ಲಿ ಮುಳುಗಿಹೋಗಿದ್ದ, ಸರ್ವಗುಣಗಳಲ್ಲಿ ನಹುಷನ ಮಗ ಯಯಾತಿಯಂತಿದ್ದ ವೃದ್ಧ ಸೋಮದತ್ತನನ್ನು ವಜ್ರಾಯುಧದಂತೆ ಬೀಳುವ ಹತ್ತು ತೀಕ್ಷ್ಣ ಬಾಣಗಳಿಂದ ಪ್ರಹರಿಸಿದನು. ಪ್ರತಿಯಾಗಿ ಸೋಮದತ್ತನು ಶಕ್ತ್ಯಾಯುಧದಿಂದ ಸಾತ್ಯಕಿಯನ್ನು ಗಾಯಗೊಳಿಸಿ ಪುನಃ ಏಳು ಬಾಣಗಳಿಂದ ಪ್ರಹರಿಸಿದನು. ಆಗ ಸಾತ್ಯಕಿಗಾಗಿ ಭೀಮಸೇನನು ದೃಢ ನೂತನ ಘೋರ ಪರಿಘವನ್ನು ಸೋಮದತ್ತನ ತಲೆಯ ಮೇಲೆ ಪ್ರಹರಿಸಿದನು. ಸಾತ್ಯಕಿಯು ಕ್ರುದ್ಧನಾಗಿ ಸುಂದರ ಪುಕ್ಕಗಳುಳ್ಳ ನಿಶಿತ ಅಗ್ನಿಸಂಕಾಶ ಉತ್ತಮ ಶರವನ್ನು ಸೋಮದತ್ತನ ಎದೆಗೆ ಗುರಿಯಿಟ್ಟು ಹೊಡೆದನು. ಘೋರವಾದ ಆ ಪರಿಘ-ಮಾರ್ಗಣಗಳೆರಡು ಒಟ್ಟಿಗೇ ಸೋಮದತ್ತನ ಶರೀರವನ್ನು ಹೊಗಲು, ಆ ಮಹಾರಥನು ಬಿದ್ದನು. ತನ್ನ ಮಗನು ಮೂರ್ಛಿತನಾಗಿ ಬಿದ್ದುನನ್ನು ಕಂಡು ಬಾಹ್ಲೀಕನು ಧಾವಿಸಿ ಬಂದು ವರ್ಷಾಕಾಲದಲ್ಲಿಯ ಮೋಡದಂತೆ ಶರವರ್ಷಗಳನ್ನು ಸೃಷ್ಟಿಸಿದನು.

ಆಗ ಭೀಮನು ಸಾತ್ವತನನ್ನು ರಕ್ಷಿಸಲೋಸುಗ ರಣರಂಗದಲ್ಲಿ ಬಾಹ್ಲೀಕನನ್ನು ಪೀಡಿಸುತ್ತಾ ಒಂಭತ್ತು ಶರಗಳಿಂದ ಗಾಯಗೊಳಿಸಿದನು. ಪ್ರತೀಪನ ಮಗ ಮಹಾಬಾಹು ಬಾಹ್ಲೀಕನು ಸಂಕ್ರುದ್ಧನಾಗಿ ಭೀಮನ ಎದೆಗೆ ಪುರಂದರ ವಜ್ರದಂತಿರುವ ಶಕ್ತಿಯನ್ನು ನೆಟ್ಟಿದನು. ಹಾಗೆ ಪ್ರಹೃತನಾದ ಭೀಮನು ಕಂಪಿಸಿದನು ಮತ್ತು ಮೂರ್ಛಿತನಾದನು ಕೂಡ. ಆ ಬಲವಾನನು ಚೇತರಿಸಿಕೊಂಡು ಗದೆಯನ್ನು ಬಾಹ್ಲೀಕನ ಮೇಲೆ ಪ್ರಯೋಗಿಸಿದನು. ಪಾಂಡವನಿಂದ ಪ್ರಯೋಗಿಸಲ್ಪಟ್ಟ ಆ ಗದೆಯು ಬಾಹ್ಲೀಕನ ಶಿರವನ್ನು ತುಂಡರಿಸಿತು. ಅವನು ವಜ್ರದಿಂದ ಹೊಡೆಯಲ್ಪಟ್ಟ ಪರ್ವತರಾಜನಂತೆ ಹತನಾಗಿ ಬಿದ್ದನು.

ಆ ಪುರುಷರ್ಷಭ ವೀರ ಬಾಹ್ಲೀಕನು ಹತನಾಗಲು ದಾಶರಥಿ ರಾಮನಿಗೆ ಸಮಾನರಾದ ಧೃತರಾಷ್ಟ್ರನ ಹತ್ತು ಮಕ್ಕಳು ಭೀಮನನ್ನು ಆಕ್ರಮಿಸಿದರು. ಆ ಹತ್ತು ಪುತ್ರರನ್ನು ಹತ್ತು ನಾರಾಚಗಳಿಂದ ಸಂಹರಿಸಿದ ಭೀಮನು ಕರ್ಣನ ಪ್ರಿಯ ಪುತ್ರ ವೃಷಸೇನನನ್ನು ಬಾಣಗಳಿಂದ ಮುಸುಕಿದನು. ಆಗ ವೃಷರಥನೆಂಬ ಹೆಸರಿನ ಕರ್ಣನ ಪ್ರಖ್ಯಾತ ಸಹೋದರನು ಭೀಮನನ್ನು ನಾರಾಚಗಳಿಂದ ಪ್ರಹರಿಸಿ ಗಾಯಗೊಳಿಸಿದನು. ಆಗ ವೀರ ಭೀಮನು ಧೃತರಾಷ್ಟ್ರನ ಬಾವಂದಿರಾದ ಏಳು ಮಂದಿ ರಥರನ್ನು ನಾರಾಚಗಳಿಂದ ಸಂಹರಿಸಿ ಶತಚಂದ್ರನನ್ನೂ ಸಂಹರಿಸಿದನು. ಮಹಾರಥ ಶತಚಂದ್ರನು ಹತನಾದುದನ್ನು ಸಹಿಸಿಕೊಳ್ಳಲಾರದೇ ಶಕುನಿಯ ವೀರ ಸಹೋದರರು - ಗಜಾಕ್ಷ, ಶರಭ ಮತ್ತು ವಿಭು - ಧಾವಿಸಿ ಬಂದು ತೀಕ್ಷ್ಣ ಶರಗಳಿಂದ ಭೀಮಸೇನನನ್ನು ಹೊಡೆದರು. ವೃಷ್ಟಿವೇಗದಿಂದ ಪರ್ವತವು ಸ್ವಲ್ಪವೂ ಕಂಪಿಸದಂತೆ ನಾರಾಚಗಳಿಂದ ಹೊಡೆಯಲ್ಪಟ್ಟು ಸ್ವಲ್ಪವೂ ವಿಚಲಿತನಾಗದೇ ಭೀಮಸೇನನು ಐದು ಬಾಣಗಳಿಂದ ಆ ಐವರು ಅತಿಬಲ ರಥರನ್ನು ಸಂಹರಿಸಿದನು. ಆ ವೀರರು ಹತರಾದದನ್ನು ನೋಡಿ ಕೌರವನ ಕಡೆಯ ರಾಜರು ತತ್ತರಿಸಿದರು.

ಯುಧಿಷ್ಠಿರ-ದ್ರೋಣರ ಯುದ್ಧ

ಆಗ ಕ್ರುದ್ಧ ಯುಧಿಷ್ಠಿರನು ದ್ರೋಣ ಮತ್ತು ಧೃತರಾಷ್ಟ್ರನ ಮಕ್ಕಳು ನೋಡುತ್ತಿದ್ದಂತೆಯೇ ಕೌರವ ಸೇನೆಯನ್ನು ನಾಶಗೊಳಿಸಲು ಉಪಕ್ರಮಿಸಿದನು. ಯುಧಿಷ್ಠಿರನು ಯುದ್ಧದಲ್ಲಿ ಅಂಬಷ್ಠರನ್ನು, ಮಾಲವರನ್ನು, ಶೂರ ತ್ರಿಗರ್ತರನ್ನೂ ಶಿಬಿಯರೊಂದಿಗೆ ಗುಂಪು ಗುಂಪಾಗಿ ಮೃತ್ಯುಲೋಕಕ್ಕೆ ಕಳುಹಿಸಿದನು. ಅಭಿಷಾಹಸರನ್ನೂ, ಶೂರಸೇನರನ್ನೂ, ಬಾಹ್ಲೀಕರನ್ನೂ, ಸವಸಾತಿಕಾನರನ್ನೂ ಸಂಹರಿಸಿ ರಾಜನು ಪೃಥಿವಿಯಲ್ಲಿ ರಕ್ತ-ಮಾಂಸಗಳ ಕೆಸರನ್ನುಂಟು ಮಾಡಿದನು. ಯುದ್ಧದಲ್ಲಿ ಯುಧಿಷ್ಠಿರನು ಶೂರ ಯೌಧೇಯರನ್ನೂ ಅಟ್ಟರನ್ನೂ, ಮದ್ರಕ ಗಣಗಳನ್ನೂ ಬಾಣಗಳಿಂದ ಮೃತ್ಯುಲೋಕಕ್ಕೆ ಕಳುಹಿಸಿದನು. “ಕೊಲ್ಲರಿ!”, “ಅಪಹರಿಸಿರಿ!”, “ಹಿಡಿಯಿರಿ!”, “ಗಾಯಗೊಳಿಸಿ!”, “ಚೂರು ಚೂರು ಮಾಡಿ!” ಇವೇ ಮುಂತಾದ ಭಯಂಕರ ಶಬ್ಧಗಳು ಯುಧಿಷ್ಠಿರನ ರಥದ ಬಳಿ ಕೇಳಿಬರುತ್ತಿದ್ದವು.

ಸೇನೆಗಳನ್ನು ಓಡಿಸುತ್ತಿರುವ ಯುಧಿಷ್ಠಿರನನ್ನು ನೋಡಿ ದ್ರೋಣನು ಅವನನ್ನು ಸಾಯಕಗಳಿಂದ ಮುಚ್ಚಿಬಿಟ್ಟನು. ದ್ರೋಣನಾದರೋ ಪರಮಕ್ರುದ್ಧನಾಗಿ ವಾಯವ್ಯಾಸ್ತ್ರದಿಂದ ರಾಜನನ್ನು ಹೊಡೆದನು. ಯುಧಿಷ್ಠಿರನೂ ಕೂಡ ಆ ದಿವ್ಯಾಸ್ತ್ರವನ್ನು ದಿವ್ಯಾಸ್ತ್ರದಿಂದಲೇ ನಿರಸನಗೊಳಿಸಿದನು. ಆ ಅಸ್ತ್ರವು ಹತವಾಗಲು ಪರಮಕ್ರುದ್ಧನಾದ ಭಾರದ್ವಾಜನು ಯುಧಿಷ್ಠಿರನನ್ನು ಕೊಲ್ಲಲು ಬಯಸಿ ವಾರುಣ, ಯಾಮ್ಯ, ಆಗ್ನೇಯ, ತ್ವಾಷ್ಟ, ಸಾವಿತ್ರಗಳೆಂಬ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದನು. ಸ್ವಲ್ಪವೂ ಭಯಗೊಳ್ಳದೇ ಮಹಾಬಾಹು ಧರ್ಮಜನು ಕುಂಭಯೋನಿಯು ಬಿಟ್ಟ ಮತ್ತು ಬಿಡಲಿರುವ ಎಲ್ಲ ಅಸ್ತ್ರಗಳನ್ನೂ ಪ್ರತಿ ಅಸ್ತ್ರಗಳಿಂದ ನಿರಸನಗೊಳಿಸಿದನು. ಧರ್ಮತನಯನನ್ನು ಸಂಹರಿಸುತ್ತೇನೆ ಎನ್ನುವ ತನ್ನ ಪ್ರತಿಜ್ಞೆಯನ್ನು ಸತ್ಯಮಾಡಲೋಸುಗ ಕೌರವರ ಹಿತದಲ್ಲಿಯೇ ನಿರತನಾಗಿದ್ದ ಕುಂಭಸಂಭವನು ಐಂದ್ರ ಮತ್ತು ಪ್ರಾಜಪತ್ಯ ಅಸ್ತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದನು. ಆನೆ-ಸಿಂಹಗಳ ನಡುಗೆಯುಳ್ಳ, ವಿಶಾಲವಕ್ಷ, ವಿಶಾಲ ಕೆಂಪು ಕಣ್ಣುಗಳಿದ್ದ, ಕುರುಗಳ ಪತಿ ಯುಧಿಷ್ಠಿರನು ಮತ್ತೊಂದು ಮಹೇಂದ್ರಾಸ್ತ್ರವನ್ನು ಪ್ರಕಟಿಸಿ ಅವನ ಅಸ್ತ್ರದ ತೇಜಸ್ಸನ್ನು ಕುಂದಿಸಿದನು.

ಪ್ರಯೋಗಿಸಿದ ಅಸ್ತ್ರಗಳೆಲ್ಲವೂ ನಿರಸನಗೊಳ್ಳಲು ಕ್ರೋಧಸಮನ್ವಿತನಾದ ದ್ರೋಣನು ಯುಧಿಷ್ಠಿರನ ವಧೆಗೋಸ್ಕರ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಆಗ ರಣರಂಗವು ಘೋರ ಕತ್ತಲೆಯಿಂದ ಆವೃತವಾಗಿ ಎಲ್ಲಿ ಏನಿದೆಯೆನ್ನುವುದೇ ತಿಳಿಯಲಾಗಲಿಲ್ಲ. ಸರ್ವಭೂತಗಳೂ ಪರಮ ಭಯೋದ್ವಿಗ್ನಗೊಂಡವು. ಬ್ರಹ್ಮಾಸ್ತ್ರವು ಪ್ರಯೋಗಿಸಲ್ಪಟ್ಟುದುದನ್ನು ನೋಡಿ ಯುಧಿಷ್ಠಿರನು ಬ್ರಹ್ಮಾಸ್ತ್ರದಿಂದಲೇ ಆ ಅಸ್ತ್ರವನ್ನು ನಿಷ್ಫಲಗೊಳಿಸಿದನು. ಆಗ ಅಲ್ಲಿದ್ದ ಸೈನಿಕಮುಖ್ಯರು ಆ ಇಬ್ಬರು ನರರ್ಷಭ ಮಹೇಷ್ವಾಸ ಸರ್ವಯುದ್ಧವಿಶಾರದ ದ್ರೋಣ-ಪಾರ್ಥರನ್ನು ಬಹಳವಾಗಿ ಪ್ರಶಂಸಿಸಿದರು.

ಆಗ ರೋಷದಿಂದ ರಕ್ತಾಕ್ಷನಾದ ದ್ರೋಣನು ಕೌಂತೇಯನನ್ನು ಬಿಟ್ಟು ವಾಯವ್ಯಾಸ್ತ್ರದಿಂದ ದ್ರುಪದನ ಸೇನೆಯನ್ನು ಧ್ವಂಸಮಾಡತೊಡಗಿದನು. ದ್ರೋಣನಿಂದ ಸಂಹರಿಸಲ್ಪಡುತ್ತಿದ್ದ ಪಾಂಚಾಲರು ಮಹಾತ್ಮ ಭೀಮಸೇನ ಮತ್ತು ಪಾರ್ಥನು ನೋಡುತ್ತಿದ್ದಂತೆಯೇ ಭಯದಿಂದ ಪಲಾಯನಮಾಡಿದರು. ಆಗ ಕಿರೀಟೀ ಮತ್ತು ಭೀಮರು ಒಮ್ಮೆಲೇ ಮಹಾ ರಥಸೇನೆಗಳ ಮಧ್ಯದಿಂದ ಓಡಿಹೋಗುತ್ತಿದ್ದ ಅವರನ್ನು ತಡೆದು ನಿಲ್ಲಿಸಿ ಕೌರವ ಸೇನೆಯನ್ನು ಮುತ್ತಿಗೆ ಹಾಕಿದರು. ಬೀಭತ್ಸುವು ದಕ್ಷಿಣ ಪಾರ್ಶ್ವದಿಂದಲೂ ವೃಕೋದರನು ಉತ್ತರ ಪಾರ್ಶ್ವದಿಂದಲೂ ಭಾರದ್ವಾಜನ ಮೇಲೆ ಮಹಾ ಶರೌಘಗಳನ್ನು ಸುರಿಸಿದರು. ಆಗ ಸೃಂಜಯರೂ, ಪಾಂಚಾಲರೂ, ಸಾತ್ವತರೊಂದಿಗೆ ಮತ್ಸ್ಯರೂ ಅವರಿಬ್ಬರನ್ನು ಅನುಸರಿಸಿ ಹೋದರು. ಆಗ ಕಿರೀಟಿಯಿಂದ ವಧಿಸಲ್ಪಟ್ಟು ಓಡಿ ಹೋಗುತ್ತಿದ್ದ ಆ ಭಾರತೀ ಸೇನೆಯ ಯೋಧರನ್ನು ದ್ರೋಣನಾಗಲೀ ಸ್ವಯಂ ದುರ್ಯೋಧನನಾಗಲೀ ನಿಲ್ಲಿಸಲು ಶಕ್ಯರಾಗಲಿಲ್ಲ.

ಕೃಪ-ಕರ್ಣರ ವಿವಾದ

ಪಾಂಡವರ ಮಹಾಸೇನೆಯು ಆ ರೀತಿ ತನ್ನ ಸೇನೆಯನ್ನು ಸೀಳುತ್ತಿರುವುದನ್ನು ನೋಡಿ ಅದನ್ನು ಎದುರಿಸಲು ಸಾಧ್ಯವಾಗಲಾರದೆಂದು ಬಗೆದು ದುರ್ಯೋಧನನು ಕರ್ಣನಿಗೆ ಹೇಳಿದನು: “ಮಿತ್ರವತ್ಸಲ! ಕರ್ಣ! ಮಿತ್ರರಾದವರು ತಮ್ಮ ಕರ್ತವ್ಯವನ್ನು ನಿರ್ವಹಿಸುವ ಕಾಲವು ಈಗ ಸಂಪ್ರಾಪ್ತವಾಗಿದೆ. ಸಮರದಲ್ಲಿ ಸಂಕ್ರುದ್ಧ ಮಹಾ ಸರ್ಪಗಳಂತೆ ಭುಸುಗುಟ್ಟುತ್ತಿರುವ ಪಾಂಚಾಲ-ಮತ್ಸ್ಯ-ಕೇಕಯ ಮತ್ತು ಪಾಂಡವ ಮಹಾರಥರಿಂದ ಸುತ್ತುವರೆಯಲ್ಪಟ್ಟಿರುವ ಸರ್ವ ಯೋಧರ ಭಯವನ್ನು ಹೋಗಲಾಡಿಸು. ಜಯವನ್ನು ಗಳಿಸಿರುವ ಶಕ್ರನಿಗೆ ಸಮಾನ ಅನೇಕ ಪಾಂಡವ ಮತ್ತು ಪಾಂಚಾಲ ರಥಸೈನಿಕರು ಸಂಹೃಷ್ಟರಾಗಿ ಸಿಂಹನಾದಗೈಯುತ್ತಿದ್ದಾರೆ.”

ಕರ್ಣನು ಹೇಳಿದನು: “ಒಂದು ವೇಳೆ ಪುರಂದರನೇ ಪಾರ್ಥನನ್ನು ರಕ್ಷಿಸಲು ಇಲ್ಲಿಗೆ ಬಂದರೂ ನಾನು ಆ ಪಾಂಡವನನ್ನು ಸೋಲಿಸಿ ಸಂಹರಿಸುತ್ತೇನೆ. ನಿನಗೆ ಸತ್ಯವನ್ನೇ ತಿಳಿಸುತ್ತಿದ್ದೇನೆ. ಸಮಾಧಾನಹೊಂದು. ಪಾಂಡುತನಯರನ್ನು ಮತ್ತು ಜೊತೆಗೆ ಬಂದಿರುವ ಪಾಂಚಾಲರನ್ನೂ ಸಂಹರಿಸುತ್ತೇನೆ. ಪಾವಕಿ ಷಣ್ಮುಖನು ವಾಸವನಿಗೆ ಜಯವನ್ನು ಒದಗಿಸಿ ಕೊಟ್ಟಂತೆ ನಾನು ನಿನಗೆ ಪ್ರಿಯವಾದುದನ್ನು ಮಾಡುವುದು ನನ್ನ ಕರ್ತವ್ಯವೆಂದು ಭಾವಿಸಿ ಇನ್ನೂ ಜೀವಂತವಿರುವೆನು. ಪಾರ್ಥರೆಲ್ಲರಲ್ಲಿ ಫಲ್ಗುನನೇ ಬಲಶಾಲಿಯು. ಶಕ್ರನಿಂದ ವಿನಿರ್ಮಿತ ಆ ಅಮೋಘ ಶಕ್ತಿಯನ್ನು ಅವನ ಮೇಲೆ ಪ್ರಯೋಗಿಸುತ್ತಿದ್ದೇನೆ. ಆ ಮಹೇಷ್ವಾಸನು ಹತನಾದರೆ ಅವನ ಸಹೋದರರು ನಿನ್ನ ವಶದಲ್ಲಿ ಬರುತ್ತಾರೆ ಮತ್ತು ಪುನಃ ವನಕ್ಕೆ ತೆರಳುತ್ತಾರೆ. ನಾನು ಜೀವಂತವಿರುವವರೆಗೆ ನೀನು ಖಂಡಿತವಾಗಿ ವಿಷಾದಿಸಬೇಕಾಗಿಲ್ಲ. ಸಮರದಲ್ಲಿ ನಾನು ಪಾಂಡವರೆಲ್ಲರನ್ನೂ ಪಾಂಚಾಲ-ಕೇಕಯ-ವೃಷ್ಣಿಗಳೊಂದಿಗೆ ನನ್ನ ಬಾಣ ಸಮೂಹಗಳಿಂದ ತುಂಡು ತುಂಡು ಮಾಡಿ ಈ ಮೇದಿನಿಯನ್ನು ನಿನಗೊಪ್ಪಿಸುತ್ತೇನೆ.”

ಹೀಗೆ ಹೇಳುತ್ತಿದ್ದ ಸೂತಪುತ್ರ ಕರ್ಣನಿಗೆ ಮಹಾಬಾಹು ಶಾರದ್ವತ ಕೃಪನು ನಸುನಗುತ್ತಾ ಇದನ್ನು ಹೇಳಿದನು: “ಕರ್ಣ! ನಿನ್ನ ಮಾತುಗಳು ತುಂಬಾ ಸೊಗಸಾಗಿವೆ! ಮಾತಿನಿಂದಲೇ ಎಲ್ಲವೂ ಸಿದ್ಧವಾಗುತ್ತದೆಯಾದರೆ ನೀನು ರಕ್ಷಿಸುತ್ತಿರುವುದರಿಂದಲೇ ಕುರುಪುಂಗವನು ರಕ್ಷಿತನಾಗಿದ್ದಾನೆ! ಕೌರವನ ಹತ್ತಿರದಲ್ಲಿ ನೀನು ಕೊಚ್ಚಿಕೊಳ್ಳುತ್ತೀಯೇ ಹೊರತು ನಿನ್ನಲ್ಲಿ ಯಾವುದೇ ರೀತಿಯ ಬಲವಾದರೂ ವಿಕ್ರಮವಾದರೂ ಕಾಣುವುದಿಲ್ಲ. ಯುದ್ಧದಲ್ಲಿ ಅನೇಕಬಾರಿ ನೀನು ಪಾಂಡುಸುತರನ್ನು ಎದುರಿಸಿದುದು ಕಂಡುಬಂದರೂ ಎಲ್ಲ ಬಾರಿಯೂ ನೀನು ಪಾಂಡವರಿಂದ ಪರಾಜಿತನಾಗಿಯೇ ಹಿಂದಿರುಗಿರುವೆ. ಧೃತರಾಷ್ಟ್ರಜನು ಗಂಧರ್ವರಿಂದ ಅಪಹರಿಸಲ್ಪಟ್ಟಾಗ ಸೇನೆಗಳು ಯುದ್ಧಮಾಡುತ್ತಿರಲು ನೀನೊಬ್ಬನೇ ಪಲಾಯನಮಾಡಿದ್ದೆ! ವಿರಾಟನಗರದಲ್ಲಿ ಕೂಡ ಕೌರವರೆಲ್ಲರೂ ಒಟ್ಟಾಗಿ ಪಾರ್ಥನಿಂದ ಸೋಲನ್ನನುಭವಿಸಿದಾಗ ನೀನೂ ಕೂಡ ನಿನ್ನ ಸಹೋದರರೊಂದಿಗೆ ಪರಾಜಿತನಾಗಿದ್ದೆಯಲ್ಲವೇ? ರಣಾಂಗಣದಲ್ಲಿ ಫಲ್ಗುನನೊಬ್ಬನನ್ನೂ ಎದುರಿಸಲು ನೀನು ಅಸಮರ್ಥನಾಗಿರುವಾಗ ಕೃಷ್ಣನೊಂದಿಗೆ ಸರ್ವ ಪಾಂಡವರನ್ನೂ ನೀನು ಹೇಗೆ ಗೆಲ್ಲುತ್ತೀಯೆ? ನೀನು ಬಹಳ ಮಾತನಾಡುವವನು! ನಿನ್ನನ್ನು ನೀನೇ ಹೊಗಳಿಕೊಳ್ಳದೇ ಯುದ್ಧಮಾಡು! ತನ್ನ ಪರಾಕ್ರಮದ ವಿಷಯವಾಗಿ ಯಾವುದೊಂದು ಮಾತನ್ನೂ ಆಡದೇ ಪರಾಕ್ರಮವನ್ನು ಕೃತಿಯಲ್ಲಿ ತೋರಿಸುವುದೇ ಸತ್ಪುರುಷರ ಮಾರ್ಗ. ಸೂತಪುತ್ರ! ಶರತ್ಕಾಲದ ಮೋಡವು ಗರ್ಜಿಸುವಂತೆ ಗರ್ಜಿಸಿ ನಿಷ್ಫಲನಾಗುತ್ತಿರುವೆ! ಇದನ್ನು ರಾಜನು ತಿಳಿದಿಲ್ಲ! ಎಲ್ಲಿಯವರೆಗೆ ಪಾರ್ಥನನ್ನು ನೀನು ಕಾಣುವುದಿಲ್ಲವೋ ಅಲ್ಲಿಯವರೆಗೆ ನೀನು ಗರ್ಜಿಸುತ್ತಲೇ ಇರುವೆ. ಏಕೆಂದರೆ ಪಾರ್ಥನನ್ನು ನೋಡಿದ ನಂತರ ನಿನಗೆ ಗರ್ಜಿಸಲಾಗುವುದಿಲ್ಲ! ಎಲ್ಲಿಯವರೆಗೆ ಫಲ್ಗುನನ ಆ ಬಾಣಗಳು ನಿನಗೆ ತಾಗುವುದಿಲ್ಲವೋ ಅಲ್ಲಿಯವರೆಗೆ ನೀನು ಗರ್ಜಿಸುತ್ತಿರುವೆ! ಪಾರ್ಥನ ಸಾಯಕಗಳು ತಾಗಿದನಂತರ ನಿನ್ನ ಗರ್ಜನೆಯು ದುರ್ಲಭವಾಗುವುದು. ಕ್ಷತ್ರಿಯರು ಬಾಹುಬಲದಿಂದ ಶೂರರೆನಿಸಿಕೊಳ್ಳುತ್ತಾರೆ. ಬ್ರಾಹ್ಮಣರು ವಾಕ್ಚಾತುರ್ಯದಿಂದ ಶೂರರೆನಿಸಿಕೊಳ್ಳುತ್ತಾರೆ. ಫಲ್ಗುನನು ಧನುರ್ವಿದ್ಯೆಯಲ್ಲಿ ಶೂರನೆನಿಸಿಕೊಂಡಿದ್ದಾನೆ. ಕರ್ಣನು ತನ್ನ ಮನೋರಥಗಳಿಂದ ಶೂರನೆನಿಸಿಕೊಂಡಿದ್ದಾನೆ!”

ಹೀಗೆ ಚುಚ್ಚುಮಾತುಗಳಿಂದ ಶಾರದ್ವತನು ರೇಗಿಸಲು ಕರ್ಣನು ಕೃಪನಿಗೆ ಹೇಳಿದನು: “ಶೂರರು ಸತತವೂ ಗರ್ಜಿಸುತ್ತಿರುತ್ತಾರೆ ಮತ್ತು ಮೋಡಗಳಂತೆ ಮಳೆಯನ್ನೂ ಸುರಿಸುತ್ತಾರೆ. ಋತುಕಾಲದಲ್ಲಿ ಬಿತ್ತಿದ ಬೀಜವು ಫಲಕೊಡುವಂತೆ ಶೂರರಾದವರು ಫಲವನ್ನು ಕೊಡುತ್ತಾರೆ. ರಣಭೂಮಿಯಲ್ಲಿ ಯುದ್ಧದ ಭಾರವನ್ನು ಹೊತ್ತು ಸಂಹರಿಸುತ್ತಿರುವವರು ತಮ್ಮ ಪರಾಕ್ರಮದ ವಿಷಯವಾಗಿ ಹೇಳಿಕೊಳ್ಳುವ ಶೂರರಲ್ಲಿ ನಾನು ಯಾವುದೇ ರೀತಿಯ ದೋಷವನ್ನು ಕಾಣುವುದಿಲ್ಲ. ಯಾವ ಭಾರವನ್ನು ಹೊರಲು ಮನುಷ್ಯನು ಮನಸತಃ ನಿಶ್ಚಯಿಸುತ್ತಾನೋ ಅದರಲ್ಲಿ ದೈವವು ಅವನಿಗೆ ಸಹಾಯಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಕಾರ್ಯಭಾರವನ್ನು ವಹಿಸಿಕೊಳ್ಳಲು ನಾನು ಮನಸಾರೆ ನಿಶ್ಚಯಿಸಿದ್ದೇನೆ. ಅದರ ಕಾರ್ಯಸಿದ್ಧಿಯು ಎರಡನೆಯ ವಿಷಯ. ಒಂದುವೇಳೇ ನಾನು ಗರ್ಜಿಸಿದರೆ ಅದರಲ್ಲಿ ನಿಮಗೇನು ನಷ್ಟ? ಶೂರರು ಸುಮ್ಮ ಸುಮ್ಮನೇ ಗರ್ಜಿಸುವುದಿಲ್ಲ. ಮಳೆಯಿಂದ ತುಂಬಿರುವ ಮೋಡಗಳಂತೆ ಪಂಡಿತರು ತಮ್ಮ ಸಾಮರ್ಥ್ಯವನ್ನು ತಿಳಿದೇ ಗರ್ಜಸುತ್ತಾರೆ. ರಣಭೂಮಿಯಲ್ಲಿ ಜಯಿಸಲು ಉತ್ಸುಕರಾಗಿ ಒಟ್ಟಾಗಿ ಪ್ರಯತ್ನಿಸುತ್ತಿರುವ ಕೃಷ್ಣ-ಪಾಂಡವರನ್ನು ಜಯಿಸಲು ನಾನು ಮನಸ್ಸಿನಿಂದಲೇ ಉತ್ಸಾಹಿತನಾಗಿ ಗರ್ಜಿಸುತ್ತಿದ್ದೇನೆ. ಈ ಗರ್ಜನೆಯ ಫಲವನ್ನು ನೀನೇ ನೋಡುವಿಯಂತೆ! ಇಂದು ನಾನು ಅನುಗರೊಂದಿಗೆ ಪಾಂಡುಸುತರನ್ನು, ಕೃಷ್ಣನೂ ಸೇರಿಕೊಂಡು ಮತ್ತು ಸಾತ್ವತರನ್ನೂ ಸೇರಿಕೊಂಡು ಸಂಹರಿಸಿ ಕಂಟಕರಹಿತ ಈ ಪೃಥ್ವಿಯನ್ನು ದುರ್ಯೋಧನನಿಗೆ ಕೊಡುತ್ತೇನೆ!”

ಕೃಪನು ಹೇಳಿದನು: “ಸೂತಜ! ನಿನ್ನ ಈ ಮನೋರಥಪ್ರಲಾಪವು ನನಗೆ ಸ್ವಲ್ಪವೂ ಹಿಡಿಸುವುದಿಲ್ಲ. ನೀನು ಸದಾ ಕೃಷ್ಣಾರ್ಜುನರನ್ನೂ ಪಾಂಡವ ಧರ್ಮರಾಜನನ್ನೂ ನಿಂದಿಸುತ್ತಿರುತ್ತೀಯೆ. ಎಲ್ಲಿ ಯುದ್ಧವಿಶಾರದ ಕೃಷ್ಣ-ಪಾಂಡವರಿರುವರೋ ಅಲ್ಲಿಗೇ ಜಯವು ನಿಶ್ಚಿತವಾದುದು. ಇವರಿಬ್ಬರೂ ರಣದಲ್ಲಿ ಕವಚಧಾರಿಗಳಾದ ದೇವ-ಗಂಧರ್ವ-ಯಕ್ಷ-ಮನುಷ್ಯ-ಉರಗ-ರಾಕ್ಷಸರಿಗೂ ಅಜೇಯರು. ಧರ್ಮಪುತ್ರ ಯುಧಿಷ್ಠಿರನಾದರೋ ಬ್ರಹ್ಮಣ್ಯ, ಸತ್ಯವಾಗ್ಮಿ, ಜಿತೇಂದ್ರಿಯ, ಗುರು-ದೇವತೆಗಳನ್ನು ಪೂಜಿಸುವವನು. ನಿತ್ಯವೂ ಧರ್ಮನಿರತನಾಗಿರುವವನು. ವಿಶೇಷವಾಗಿ ಅಸ್ತ್ರಗಳಲ್ಲಿ ಪರಿಣಿತನೂ ಹೌದು. ಅವನು ಧೃತಿವಂತ ಮತ್ತು ಕೃತಜ್ಞ. ಅವನ ಅನುಜರೂ ಕೂಡ ಬಲಶಾಲಿಗಳು. ಸರ್ವ ಶಸ್ತ್ರಗಳಲ್ಲಿ ಪಳಗಿದವರು. ಗುರುಸೇವೆಯಲ್ಲಿ ನಿರತರಾದವರು. ಪ್ರಾಜ್ಞರು. ಧರ್ಮನಿರತರು ಮತ್ತು ಯಶಸ್ವಿಗಳು ಕೂಡ. ಇವನ ಸಂಬಂಧಿಗಳೂ ವೀರ್ಯದಲ್ಲಿ ಇಂದ್ರನ ಸಮಾನರು. ಇವನಲ್ಲಿ ವಿಶೇಷ ಅನುರಾಗವನ್ನು ಹೊಂದಿದವರು. ಪ್ರಹಾರಿಗಳು. ಧೃಷ್ಟದ್ಯುಮ್ನ, ಶಿಖಂಡೀ, ದೌರ್ಮುಖೀ, ಜನಮೇಜಯ, ಚಂದ್ರಸೇನ, ಭದ್ರಸೇನ, ಕೀರ್ತಿಧರ್ಮ, ಧ್ರುವ, ಧರ, ವಸುಚಂದ್ರ, ದಾಮಚಂದ್ರ, ಸಿಂಹಚಂದ್ರ, ಸುವೇಧನ ಮೊದಲಾದ ದ್ರುಪದನ ಪುತ್ರರು ಮತ್ತು ಮಹಾಸ್ತ್ರವಿದು ದ್ರುಪದ ಇವರೆಲ್ಲರೂ ಮತ್ತು ಅನುಯಾಯಿಗಳೊಂದಿಗೆ ಮತ್ಸ್ಯರಾಜ ಇವರು ಯುಧಿಷ್ಠಿರನಿಗಾಗಿ ಒಂದಾಗಿದ್ದಾರೆ. ಶತಾನೀಕ, ಸುದರ್ಶನ, ಶ್ರುತಾನೀಕ, ಶ್ರುತಧ್ವಜ, ಬಲಾನೀಕ, ಜಯಾನೀಕ, ಜಯಾಶ್ವ, ರಥವಾಹನ, ಚಂದ್ರೋದಯ, ಕಾಮರಥ ಇವರು ವಿರಾಟನ ಶುಭ ಸಹೋದರರು. ಯಮಳರು, ದ್ರೌಪದೇಯರು, ಮತ್ತು ರಾಕ್ಷಸ ಘಟೋತ್ಕಚ ಇವರು ಕೂಡ ಯುಧಿಷ್ಠಿರನ ಸಲುವಾಗಿ ಯುದ್ಧಮಾಡುತ್ತಿದ್ದಾರೆ. ಇವರನ್ನು ಸಂಹರಿಸುವ ರೀತಿಯು ತಿಳಿದಿಲ್ಲ. ಭೀಮ-ಫಲ್ಗುನರು ಬಯಸಿದರೆ ತಮ್ಮ ಅಸ್ತ್ರವೀರ್ಯದಿಂದ ದೇವ-ಅಸುರ-ಮಾನವ-ಯಕ್ಷ-ರಾಕ್ಷಸಗಣಗಳಿಂದ ಕೂಡಿರುವ ಇರುವ ಸರ್ಪಗಳು ಆನೆಗಳೊಂಡಿಗೆ ಇಡೀ ಜಗತ್ತೆಲ್ಲವನ್ನೂ ನಿಃಶೇಷವನ್ನಾಗಿ ಮಾಡಬಲ್ಲರು. ಯುಧಿಷ್ಠಿರನಾದರೋ ತನ್ನ ಘೋರ ದೃಷ್ಟಿಯಿಂದಲೇ ಈ ಭೂಮಿಯನ್ನು ಸುಡಬಲ್ಲನು. ಯಾರ ರಕ್ಷಣೆಗೆಂದು ಅಪ್ರಮೇಯಬಲಶಾಲಿ ಶೌರಿಯೇ ಇರುವನೋ ಅಂಥಹ ಶತ್ರುಗಳನ್ನು ನೀನು ರಣದಲ್ಲಿ ಹೇಗೆ ಗೆಲ್ಲಬಲ್ಲೆ? ಸಮರದಲ್ಲಿ ಶೌರಿಯೊಡನೆ ಯುದ್ಧಮಾಡುತ್ತೇನೆಂದು ನೀನು ನಿತ್ಯವೂ ತೋರಿಸಿಕೊಂಡು ಬಂದಿರುವ ಉತ್ಸಾಹವೇ ನೀನು ಮಾಡುತ್ತಿರುವ ದೊಡ್ಡ ತಪ್ಪು!”

ಇದನ್ನು ಕೇಳೀ ರಾಧೇಯ ಕರ್ಣನು ಜೋರಾಗಿ ನಗುತ್ತಾ ಗುರು ಶಾರದ್ವತ ಕೃಪನಿಗೆ ಹೇಳಿದನು: “ಬ್ರಹ್ಮನ್! ಪಾಂಡವರ ಕುರಿತಾಗಿ ನೀನು ಏನು ಮಾತನಾಡುತ್ತಿರುವೆಯೋ ಅದು ಸತ್ಯವೇ ಆಗಿದೆ. ಇವಲ್ಲದೇ ಇನ್ನೂ ಅನೇಕ ಗುಣಗಳು ಪಾಂಡುಸುತರಲ್ಲಿ ಇವೆ ತಾನೇ? ದೈತ್ಯ-ಯಕ್ಷ-ಗಂಧರ್ವ-ಪಿಶಾಚ-ಉರಗ-ರಾಕ್ಷಸರು ಮತ್ತು ವಾಸವನನ್ನು ಕೂಡಿ ಬಂದ ದೇವತೆಗಳಿಗೂ ಪಾರ್ಥರು ರಣದಲ್ಲಿ ಅಜೇಯರು. ಹಾಗಿದ್ದರೂ ಕೂಡ ನಾನು ವಾಸವನು ನೀಡಿರುವ ಶಕ್ತಿಯಿಂದ ಪಾರ್ಥನನ್ನು ಗೆಲ್ಲುತ್ತೇನೆ. ಶಕ್ರನು ನನಗೆ ಕೊಟ್ಟಿರುವ ಆ ಅಮೋಘ ಶಕ್ತಿಯಿಂದ ನಾನು ರಣದಲ್ಲಿ ಸವ್ಯಸಾಚಿಯನ್ನು ಸಂಹರಿಸುತ್ತೇನೆ. ಪಾಂಡವ ಕೃಷ್ಣನು ಹತನಾದನೆಂದರೆ ಅವನ ಅಣ್ಣಂದಿರು ಮತ್ತು ತಮ್ಮಂದಿರು ಅರ್ಜುನನಿಲ್ಲದೇ ಈ ಭೂಮಿಯನ್ನು ಭೋಗಿಸಲು ಶಕ್ಯರಾಗುವುದಿಲ್ಲ. ಅವರೆಲ್ಲರೂ ನಷ್ಟರಾಗಲು ಸಾಗರದೊಂದಿನ ಈ ಪೃಥ್ವಿಯು ಏನೂ ಪ್ರಯತ್ನಮಾಡದೇ ಕೌರವನ ವಶದಲ್ಲಿ ಬರುತ್ತದೆ. ಉತ್ತಮ ಉಪಾಯವು ಸರ್ವ ಉದ್ದೇಶಗಳನ್ನೂ ಸಿದ್ಧಿಗೊಳಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರ ಅರ್ಥವನ್ನು ತಿಳಿದೇ ನಾನು ಗರ್ಜಿಸುತ್ತಿದ್ದೇನೆ. ನೀನಾದರೋ ಬ್ರಾಹ್ಮಣ! ಅದರಲ್ಲೂ ಮುದಿಬ್ರಾಹ್ಮಣ! ಯುದ್ಧಮಾಡಲು ಅಶಕ್ತನಾಗಿರುವೆ. ಪಾರ್ಥರೊಂದಿಗೆ ವಿಶೇಷವಾದ ಸ್ನೇಹವನ್ನಿಟ್ಟುಕೊಂಡಿರುವ ನೀನು ಮೋಹಗೊಂಡು ನನ್ನನ್ನು ಅಪಮಾನಿಸುತ್ತಿರುವೆ. ದುರ್ಮತಿ ದ್ವಿಜನೇ! ಇನ್ನೊಮ್ಮೆ ನೀನೇನಾದಾರೂ ನನಗೆ ಅಪ್ರಿಯವಾಗಿ ಈ ರೀತಿ ಮಾತನಾಡಿದರೆ ಖಡ್ಗವನ್ನೆತ್ತಿ ನಿನ್ನ ನಾಲಿಗೆಯನ್ನು ಕತ್ತರಿಸುತ್ತೇನೆ. ಸಂಯುಗದಲ್ಲಿ ಕೌರವರ ಸರ್ವ ಸೇನೆಗಳನ್ನೂ ಹೆದರಿಸುತ್ತಾ  ಪಾಂಡವರನ್ನು ಪ್ರಶಂಸಿಸಲು ಬಯಸುತ್ತಿರುವೆ. ಈ ವಿಷಯದಲ್ಲಿ ಕೆಲವೊಂದನ್ನು ಯಥಾವತ್ತಾಗಿ ಹೇಳುತ್ತೇನೆ. ಕೇಳು. ದುರ್ಯೋಧನ, ದ್ರೋಣ, ಶಕುನಿ, ದುರ್ಮುಖ, ಜಯ, ದುಃಶಾಸನ, ವೃಷಸೇನ, ಮದ್ರರಾಜ, ಮತ್ತು ನೀನು, ಸೋಮದತ್ತ, ಭೂರಿ, ದ್ರೌಣಿ, ವಿವಿಂಶತಿ, ಇವರೆಲ್ಲ ಯುದ್ಧವಿಶಾರದರೂ ಕವಚಗಳನ್ನು ಧರಿಸಿ ನಿಂತಿರುವಾಗ ಶಕ್ರನಿಗೂ ಸಮ ಬಲಶಾಲಿ ಯಾವ ಶತ್ರುವು ತಾನೇ ರಣದಲ್ಲಿ ನಮ್ಮನ್ನು ಜಯಿಸಿಯಾನು? ಇವರು ಶೂರರು. ಅಸ್ತ್ರವಿದರು. ಬಲಶಾಲಿಗಳು. ಸ್ವರ್ಗಾಭಿಲಾಷಿಗಳು. ಧರ್ಮಜ್ಞರು. ಯುದ್ಧಕುಶಲರು. ಯುದ್ಧದಲ್ಲಿ ಸುರರನ್ನೂ ಸಂಹರಿಸಬಲ್ಲರು. ಇವರೆಲ್ಲರೂ ಕೌರವೇಯನ ಜಯವನ್ನು ಬಯಸಿ ಪಾಂಡವರನ್ನು ವಧಿಸುವ ಸಲುವಾಗಿ ಕವಚಗಳನ್ನು ಧರಿಸಿ ಸಂಗ್ರಾಮದಲ್ಲಿ ನಿಂತಿದ್ದಾರೆ. ಭೀಷ್ಮನಂತಹ ಮಹಾಬಾಹುವೇ ನೂರಾರು ಬಾಣಗಳಿಂದ ಚುಚ್ಚಲ್ಪಟ್ಟವನಾಗಿ ಮಲಗಿದ್ದಾನೆಂದರೆ ಮಹಾಬಲಶಾಲಿಗಳಿಗೂ ಜಯವೆನ್ನುವುದು ದೈವದತ್ತವಾದುದು ಎಂದು ನನಗನ್ನಿಸುತ್ತದೆ. ವಿಕರ್ಣ, ಚಿತ್ರಸೇನ, ಬಾಹ್ಲೀಕ, ಜಯದ್ರಥ, ಭೂರಿಶ್ರವ, ಜಯ, ಜಲಸಂಧ, ಸುದಕ್ಷಿಣ, ಶಲ, ಭಗದತ್ತ ಇವರು ಮತ್ತು ಅನ್ಯ ರಾಜರುಗಳು ದೇವತೆಗಳಿಗೂ ಗೆಲ್ಲಲಸಾಧ್ಯರಾಗಿದ್ದರು. ಪಾಂಡವರಿಗಿಂತಲೂ ಬಲಶಾಲಿಗಳಾದ ಈ ಶೂರರು ಸಮರದಲ್ಲಿ ಹತರಾದರು. ಇದು ದೈವ ಸಂಯೋಗವಲ್ಲದೇ ಮತ್ತೇನು? ನೀನು ಪ್ರಶಂಸಿಸುತ್ತಿರುವ ದುರ್ಯೋಧನನ ಶತ್ರುಗಳಲ್ಲಿಯೂ ಕೂಡ ನೂರಾರು ಸಹಸ್ರಾರು ಶೂರರು ಹತರಾಗಿದ್ದಾರೆ. ಕುರುಗಳ ಮತ್ತು ಪಾಂಡವರ ಎಲ್ಲ ಸೈನ್ಯಗಳೂ ಒಟ್ಟಿಗೇ ನಶಿಸುತ್ತಿವೆ. ಇದರಲ್ಲಿ ಪಾಂಡವರ ವಿಶೇಷ ಪ್ರಭಾವ ಯಾವುದನ್ನೂ ನಾನು ಕಾಣುತ್ತಿಲ್ಲ. ದ್ವಿಜಾಧಮ! ದುರ್ಯೋಧನನ ಹಿತಕ್ಕಾಗಿ ಯಾರನ್ನು ನೀನು ಎಲ್ಲರಿಗಿಂತಲೂ ಬಲವಂತರೆಂದು ಭಾವಿಸಿರುವೆಯೋ ಅವರೊಡನೆ ಯಥಾಶಕ್ತಿಯಾಗಿ ರಣದಲ್ಲಿ ಯುದ್ಧಮಾಡಲು ಪ್ರಯತ್ನಿಸುತ್ತೇನೆ. ಜಯವು ದೈವಾಧೀನವಾಗಿದೆ!”

ಸೂತಪುತ್ರನು ಹಾಗೆ ಮಾವನೊಡನೆ ಕಟುವಾದ ಮಾತನಾಡಿದುದನ್ನು ನೋಡಿ ದ್ರೌಣಿಯು ಖಡ್ಗವನ್ನು ಎತ್ತಿಕೊಂಡು ವೇಗವಾಗಿ ಅಲ್ಲಿಗೆ ಧಾವಿಸಿಬಂದನು. ಅಶ್ವತ್ಥಾಮನು ಹೇಳಿದನು: “ಸುದುರ್ಬುದ್ಧೇ! ಕರ್ಣ! ಸ್ವಲ್ಪ ನಿಲ್ಲು! ನಿನ್ನ ಶಿರಸ್ಸನ್ನು ಈಗಲೇ ನಾನು ಶರೀರದಿಂದ ಹಾರಿಸಿಬಿಡುತ್ತೇನೆ!” ಹೀಗೆ ವೇಗದಿಂದ ಮೇಲೆ ಬೀಳುತ್ತಿರುವ ಅಶ್ವತ್ಥಾಮನನ್ನು ಸ್ವಯಂ ರಾಜಾ ದುರ್ಯೋಧನ ಮತ್ತು ಕೃಪರು ತಡೆದರು.

ಕರ್ಣನು ಹೇಳಿದನು: “ಕುರುಸತ್ತಮ! ಇವನು ಶೂರ. ಸಮರಶ್ಲಾಘೀ. ದುರ್ಮತಿ ಮತ್ತು ದ್ವಿಜಾಧಮ. ನನ್ನ ವೀರ್ಯವನ್ನು ಎದುರಿಸಲಿ. ಇವನನ್ನು ಬಿಟ್ಟುಬಿಡು!”

ಅಶ್ವತ್ಥಾಮನು ಹೇಳಿದನು: “ಸುದುರ್ಮತೇ! ಸೂತಾತ್ಮಜ! ನಿನ್ನ ಈ ಅಪರಾಧವನ್ನು ಕ್ಷಮಿಸುತ್ತೇನೆ. ಆದರೆ ನಿನ್ನ ದರ್ಪ ಉತ್ಸಾಹವನ್ನು ಫಲ್ಗುನನು ನಾಶಗೊಳಿಸುತ್ತಾನೆ ಎನ್ನುವುದನ್ನು ನೆನಪಿನಲ್ಲಿಟ್ಟುಕೋ!”

ದುರ್ಯೋಧನನು ಹೇಳಿದನು: “ಅಶ್ವತ್ಥಾಮ! ಮಾನದ! ಶಾಂತನಾಗು. ಕ್ಷಮಿಸಬೇಕು. ಸೂತಪುತ್ರನೊಡನೆ ಎಂದೂ ಕೋಪಗೊಳ್ಳಬೇಡ! ನೀನು, ಕರ್ಣ, ಕೃಪ, ದ್ರೋಣ, ಮದ್ರರಾಜ ಮತ್ತು ಸೌಬಲರ ಮೇಲೆ ಮಹಾ ಕಾರ್ಯವನ್ನು ವಹಿಸಿದ್ದೇನೆ. ಪ್ರಯತ್ನಮಾಡಿ! ಸಮಾಧಾನಗೊಳ್ಳು ದ್ವಿಜಸತ್ತಮ! ನಮ್ಮ ಮುಂದಿರುವ ಪಾಂಡವರು ಎಲ್ಲರೂ ರಾಧೇಯನೊಡನೆ ಯುದ್ಧಮಾಡಲೋಸುಗ ಬರುತ್ತಿದ್ದಾರೆ. ಎಲ್ಲ ಕಡೆಗಳಿಂದ ಯುದ್ಧಕ್ಕೆ ಕರೆಯುತ್ತಿದ್ದಾರೆ.”

ರಥಿಗಳಲ್ಲಿ ಶ್ರೇಷ್ಠ ವೀರ್ಯವಾನ್ ಕರ್ಣನೂ ಕೂಡ ದೇವಗಣಗಳಿಂದ ಪರಿವೃತ ಶಕ್ರನಂತೆ ಕೌರವ ಮುಖ್ಯರಿಂದ ಪರಿವೃತನಾಗಿ ತನ್ನ ಬಾಹುಬಲವನ್ನು ಆಶ್ರಯಿಸಿ ತೇಜಸ್ವಿಯಾಗಿ ಯುದ್ಧಕ್ಕೆ ನಿಂತನು. ಆಗ ಪಾಂಡವರೊಡನೆ ಕರ್ಣನ ಸಿಂಹನಾದಗಳಿಂದ ಕೂಡಿದ ಭಯಂಕರ ಯುದ್ಧವು ಪ್ರಾರಂಭವಾಯಿತು.

ಅರ್ಜುನ-ಕರ್ಣರ ಯುದ್ಧ

ಆಗ ಆ ಪಾಂಡವರು ಮತ್ತು ಯಶಸ್ವಿ ಪಾಂಚಾಲರು ಮಹಾಬಾಹು ಕರ್ಣನನ್ನು ನೋಡಿ “ಇವನೇ ಕರ್ಣ!”, “ಕರ್ಣನೆಲ್ಲಿದ್ದಾನೆ?”, “ಕರ್ಣ! ಮಹಾರಣದಲ್ಲಿ ನಿಲ್ಲು! ದುರಾತ್ಮನ್! ಪುರುಷಾಧಮ! ನಮ್ಮಡನೆ ಯುದ್ಧಮಾಡು!“ ಎಂದು ಉಚ್ಛ ಸ್ವರಗಳಲ್ಲಿ ಕೂಗಿದರು. ಮತ್ತೆ ಕೆಲವರು ರಾಧೇಯನನ್ನು ನೋಡಿ ಕ್ರೋಧದಿಂದ ಕೆಂಗಣ್ಣರಾಗಿ ಹೇಳಿದರು: “ದುರಹಂಕಾರದಿಂದ ಮೆರೆಯುತ್ತಿರುವ ಈ ಅಲ್ಪಚೇತನ ಸೂತಪುತ್ರನನ್ನು ಸಂಹರಿಸಿರಿ! ಇವನು ಬದುಕಿರುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲ ಪಾರ್ಥಿವಶಾರ್ದೂಲರಿಗಿಂತ ಈ ಪಾಪಪುರುಷನೇ ಸತತವೂ ಪಾರ್ಥರ ವೈರಿಯಾಗಿರುವವನು. ದುರ್ಯೋಧನನ ಮನಸ್ಸಿನಂತೆ ನಡೆದುಕೊಳ್ಳುತ್ತಿರುವ ಇವನೇ ಎಲ್ಲ ಅನರ್ಥಗಳಿಗೂ ಮೂಲ ಕಾರಣನಾಗಿದ್ದಾನೆ. ಇವನನ್ನು ಕೊಲ್ಲಿರಿ!” ಎಂದು ಮಾತನಾಡಿಕೊಳ್ಳುತ್ತಾ ಕ್ಷತ್ರಿಯರು ಆಕ್ರಮಿಸಿದರು.

ಪಾಂಡವೇಯರಿಂದ ಪ್ರಚೋದಿತರಾಗಿ ಸೂತಪುತ್ರನನ್ನು ವಧಿಸುವ ಸಲುವಾಗಿ ಆ ಮಹಾರಥರು ಅವನನ್ನು ಮಹಾ ಶರವರ್ಷಗಳಿಂದ ಮುಚ್ಚಿಬಿಟ್ಟರು. ತನ್ನ ಕಡೆಗೆ ರಭಸದಿಂದ ಬರುತ್ತಿದ್ದ ಆ ಮಹಾರಥರೆಲ್ಲರನ್ನು ನೋಡಿ ಸೂತಪುತ್ರನು ವ್ಯಥಿತನಾಗಲಿಲ್ಲ, ಭಯಪಡಲೂ ಇಲ್ಲ. ನಗರದಂತೆ ಉಕ್ಕಿಬರುತ್ತಿರುವ ಆ ಸೈನ್ಯಸಾಗರವನ್ನು ನೋಡಿ ಸಂಗ್ರಾಮಗಳಲ್ಲಿ ಅಪರಾಜಿತ ಮಹಾಬಲ ಬಲವಾನ್ ಕ್ಷಿಪ್ರಕಾರೀ ಕರ್ಣನು ಸಾಯಕಗಳ ಗಣಗಳಿಂದ ಆ ಸೇನೆಯನ್ನು ಎಲ್ಲ ಕಡೆಗಳಿಂದಲೂ ತಡೆದು ನಿಲ್ಲಿಸಿದನು.

ಆಗ ಪಾರ್ಥಿವರು ಶರವರ್ಷಗಳಿಂದ ನೂರಾರು ಸಹಸ್ರಾರು ಧನುಸ್ಸುಗಳನ್ನು ಸೆಳೆಯುತ್ತಾ ತಡೆದು ದೈತ್ಯಗಣಗಳು ಶಕ್ರನನ್ನು ಹೇಗೋ ಹಾಗೆ ರಾಧೇಯನೊಡನೆ ಯುದ್ಧಮಾಡಿದರು. ಪಾರ್ಥಿವರು ಸುರಿಸುತ್ತಿದ್ದ ಆ ಶರವರ್ಷಗಳನ್ನು ಕರ್ಣನು ಮಹಾ ಶರವರ್ಷದಿಂದಲೇ ಎಲ್ಲಕಡೆಗಳಲ್ಲಿ ನಿವಾರಿಸಿದನು. ಮಾಡಿದುದಕ್ಕೆ ಪ್ರತಿಯಾಗಿ ಮಾಡುವುದರಲ್ಲಿ ತೊಡಗಿದ ಅವರಿಬ್ಬರ ನಡುವೆ ದೇವಾಸುರರ ಯುದ್ಧದಲ್ಲಿ ದಾನವರೊಂದಿಗೆ ಶಕ್ರನ ಯುದ್ಧದಂತೆ ಯುದ್ಧವು ನಡೆಯಿತು. ಅಲ್ಲಿ ಸೂತಪುತ್ರನ ಹಸ್ತಲಾಘವದ ಅದ್ಭುತವನ್ನು ಕಂಡಿತು. ಸಮರದಲ್ಲಿ ಶತ್ರುಗಳು ಪ್ರಯತ್ನಿಸಿದರೂ ಅವನ ಹತ್ತಿರಹೋಗಲು ಶಕ್ತರಾಗಲಿಲ್ಲ. ಪಾರ್ಥಿವರ ಶರೌಘಗಳನ್ನು ತಡೆಯುತ್ತಾ ಮಹಾರಥ ರಾಧೇಯನು ತನ್ನ ನಾಮಾಂಕಿತ ಬಾಣಗಳನ್ನು ರಥದ ನೊಗಗಳ ಮೇಲೆ, ಚತ್ರಗಳ ಮೇಲೆ, ಧ್ವಜಗಳ ಮೇಲೆ ಮತ್ತು ಕುದುರೆಗಳ ಮೇಲೆ ಪ್ರಯೋಗಿಸಿದನು. ಕರ್ಣನಿಂದ ಪೀಡಿತ ರಾಜರು ವ್ಯಾಕುಲರಾಗಿ ಛಳಿಯಿಂದ ಪೀಡಿತ ಗೋವುಗಳಂತೆ ಅಲ್ಲಿಂದಿಲ್ಲಿಗೆ ಭ್ರಮಿಸತೊಡಗಿದರು. ಕರ್ಣನಿಂದ ವಧೆಗೊಂಡು ಉರುಳಿಸಲ್ಪಟ್ಟ ಕುದುರೆ-ಆನೆ-ರಥಗಳ ಗುಂಪುಗಳು ಅಲ್ಲಲ್ಲಿ ಕಾಣುತ್ತಿದ್ದವು. ಯುದ್ಧದಲ್ಲಿ ಹಿಂದಿರುಗದೇ ಹತರಾಗಿ ಬಿದ್ದಿದ್ದ ಶೂರರ ತಲೆಗಳಿಂದಲೂ ತೋಳುಗಳಿಂದಲೂ ರಣಾಂಗಣವು ವ್ಯಾಪ್ತವಾಗಿತ್ತು. ಸತ್ತವರಿಂದಲೂ ಸಾಯುತ್ತಿರುವವರಿಂದಲೂ ಗಾಯಗೊಂಡು ಸಂಕಟಪಡುತ್ತಿರುವವರಿಂದಲೂ ಕೂಡಿದ್ದ ಆ ರಣಭೂಮಿಯು ಯಮರಾಜನ ಪಟ್ಟಣದಂತೆ ಬಹಳ ಭಯಂಕರವಾಗಿ ಕಾಣುತ್ತಿದ್ದಿತು.

ಕರ್ಣನ ಆ ವಿಕ್ರಮವನ್ನು ಕಂಡು ರಾಜಾ ದುರ್ಯೋಧನನು ಅಶ್ವತ್ಥಾಮನ ಬಳಿಸಾರಿ ಇಂತೆಂದನು: “ಇಗೋ ಕರ್ಣನು ಕವಚವನ್ನು ಧರಿಸಿ ಸರ್ವ ರಾಜರೊಂದಿಗೆ ರಣದಲ್ಲಿ ಯುದ್ಧಮಾಡುತ್ತಿದ್ದಾನೆ! ಕಾರ್ತಿಕೇಯನಿಂದ ಧ್ವಂಸಿತ ಅಸುರೀ ಸೇನೆಯು ಪಲಾಯನ ಮಾಡುವಂತೆ ಕರ್ಣನ ಸಾಯಕಗಳಿಂದ ಪೀಡಿತ ಸೇನೆಯು ಓಡಿಹೋಗುತ್ತಿರುವುದನ್ನು ನೋಡು! ಧೀಮತ ಕರ್ಣನಿಂದ ರಣದಲ್ಲಿ ಸೇನೆಯು ಈ ರೀತಿ ಸೋತುಹೋಗುತ್ತಿರುವುದನ್ನು ನೋಡಿ ಸೂತಪುತ್ರನನ್ನು ಕೊಲ್ಲಲು ಬಯಸಿ ಬೀಭತ್ಸುವು ಬರುತ್ತಿರಬಹುದು.  ಯುದ್ಧದಲ್ಲಿ ನಾವು ನೋಡುತ್ತಿರುವಾಗಲೇ ಮಹಾರಥ ಸೂತಪುತ್ರನನ್ನು ಪಾಂಡವನು ಕೊಲ್ಲದ ರೀತಿಯಲ್ಲಿ ಯುದ್ಧ ನೀತಿಯು ರೂಪಿಸಲ್ಪಡಲಿ!”

ಕೂಡಲೇ ದ್ರೌಣಿ, ಕೃಪ, ಶಲ್ಯ, ಮತ್ತು ಹಾರ್ದಿಕ್ಯರು ಸೂತಪುತ್ರನನ್ನು ರಕ್ಷಿಸಲೋಸುಗ ಪಾರ್ಥನೊಡನೆ ಯುದ್ಧಮಾಡತೊಡಗಿದರು. ದೇವಸೇನೆಯಮೇಲೆ ಆಕ್ರಮಣಿಸುತ್ತಿರುವ ವೃತ್ರನನ್ನು ಶಕ್ರನು ಹೇಗೋ ಹಾಗೆ ಪ್ರತಾಪವಾನ್ ಕರ್ಣನೂ ಕೂಡ ಮುಂದೆ ಬರುತ್ತಿರುವ ಕೌಂತೇಯನೊಡನೆ ಯುದ್ಧಮಾಡತೊಡಗಿದನು.

ಒಂದು ಸಲಗವು ಮತ್ತೊಂದು ಸಲಗವನ್ನು ಎದುರಿಸಲು ಹೋಗುವಂತೆ ತನ್ನ ಕಡೆಗೆ ಬರುತ್ತಿದ್ದ ಪಾಂಡವನನ್ನು ಕಂಡು ಕರ್ಣನು ಸ್ವಲ್ಪವೂ ಗಾಬರಿಗೊಳ್ಳದೇ ಧನಂಜಯನ ಮೇಲೆ ಎರಗಿದನು. ತೇಜಸ್ವೀ ಶತ್ರುತಾಪನ ಪಾಂಡವನು ವೇಗದಿಂದ ತನ್ನಮೇಲೆ ಬೀಳುತ್ತಿದ್ದ ವೈಕರ್ತನನನ್ನು ಜಿಹ್ಮಗಗಳಿಂದ ತಡೆದನು. ಕರ್ಣನು ಅವನನ್ನು ಶರಜಾಲಗಳಿಂದ ಮುಚ್ಚಿಬಿಟ್ಟನು ಮತ್ತು ಸಂಕ್ರುದ್ಧನಾಗಿ ಮೂರು ಜಿಹ್ಮಗಗಳಿಂದ ಹೊಡೆದನು. ಅವನ ಆ ಹಸ್ತಲಾಘವವನ್ನು ಮಹಾಬಲ ಪಾರ್ಥನು ಸಹಿಸಿಕೊಳ್ಳಲಿಲ್ಲ. ಆ ಶತ್ರುತಾಪನನು ಸೂತಪುತ್ರನ ಮೇಲೆ ಮೊನಚಾದ ತುದಿಗಳುಳ್ಳ, ಕಲ್ಲಿನಮೇಲೆ ಮಸೆದ ಮುನ್ನೂರು ಜಿಹ್ಮಗ ಬಾಣಗಳನ್ನು ಪ್ರಯೋಗಿಸಿದನು.  ಕುಪಿತನಾಗಿ ವೀರ್ಯವಾನ್ ಅರ್ಜುನನು ನಸುನಗುತ್ತಾ ಒಂದೇ ಬಾಣದಿಂದ ಅವನ ಎಡಭುಜಕ್ಕೆ ಬಲವನ್ನುಪಯೋಗಿಸಿ ಹೊಡೆದನು. ವೇಗವಾಗಿ ಗಾಯಗೊಂಡ ಅವನ ಕೈಯಿಂದ ಧನುಸ್ಸು ಕಳಚಿ ಬಿದ್ದಿತು. ಆ ಚಾಪವನ್ನು ಪುನಃ ತೆಗೆದುಕೊಂಡು ಮಹಾಬಲನು ಸಿದ್ಧಹಸ್ತನಂತೆ ಬಾಣಗಳ ಸಮೂಹಗಳಿಂದ ಫಲ್ಗುನನನ್ನು ಮುಚ್ಚಿದನು. ಧನಂಜಯನು ನಸುನಗುತ್ತಲೇ ಶರವರ್ಷಗಳಿಂದ ಸೂತಪುತ್ರನ ಶರವೃಷ್ಟಿಯನ್ನು ನಿರಸನಗೊಳಿಸಿದನು. ಶರವರ್ಷಗಳಿಂದ ಪರಸ್ಪರರನ್ನು ಮುಚ್ಚುತ್ತಾ ಆ ಮಹೇಷ್ವಾಸರು ಮಾಡಿದುದಕ್ಕೆ ಪ್ರತಿಯಾಗಿ ಮಾಡಲು ತೊಡಗಿದರು. ಕಾವಿಗೆ ಬಂದ ಹೆಣ್ಣಾನೆಯ ಸಲುವಾಗಿ ಎರಡು ಸಲಗಗಳ ನಡುವೆ ಹೇಗೋ ಹಾಗೆ ಕ್ರುದ್ಧ ಕರ್ಣ-ಪಾಂಡವರ ನಡುವೆ ಅತಿ ಅಧ್ಭುತ ಯುದ್ಧವು ನಡೆಯಿತು.

ಆಗ ಮಹೇಷ್ವಾಸ ಅರ್ಜುನನು ಕರ್ಣನ ವಿಕ್ರಮವನ್ನು ಕಂಡು ತ್ವರೆಮಾಡಿ ಅವನ ಧನುಸ್ಸನ್ನು ಮುಷ್ಟಿಪ್ರದೇಶದಲ್ಲಿ ಕತ್ತರಿಸಿದನು. ಆ ಶತ್ರುತಾಪನನು ನಾಲ್ಕು ಕುದುರೆಗಳನ್ನೂ ಭಲ್ಲಗಳಿಂದ ಯಮಸಾದನಕ್ಕೆ ಕಳುಹಿಸಿ ಸಾರಥಿಯ ಶಿರವನ್ನೂ ಅವನ ದೇಹದಿಂದ ಬೇರ್ಪಡಿಸಿದನು. ಮತ್ತೆ ಧನುಸ್ಸನ್ನು ಕಳೆದುಕೊಂಡ, ಕುದುರೆಗಳನ್ನು ಕಳೆದುಕೊಂಡ ಮತ್ತು ಸಾರಥಿಯನ್ನು ಕಳೆದುಕೊಂಡ ಅವನನ್ನು ಪಾಂಡುನಂದನ ಪಾರ್ಥನು ನಾಲ್ಕು ಸಾಯಕಗಳಿಂದ ಗಾಯಗೊಳಿಸಿದನು. ಆಗ ಶರಪೀಡಿತ ನರರ್ಷಭ ಕರ್ಣನು ಕುದುರೆಗಳು ಹತವಾದ ರಥದಿಂದ ಬೇಗನೇ ಹಾರಿ ತಕ್ಷಣವೇ ಕೃಪನ ರಥವನ್ನೇರಿದನು.

ಅಶ್ವತ್ಥಾಮ-ಪಾಂಚಾಲರ ಯುದ್ಧ

ರಾಧೇಯನು ಸೋತಿದುದನ್ನು ಕಂಡ ಕೌರವರು ಧನಂಜಯನ ಶರಗಳಿಗೆ ಹೆದರಿ ದಿಕ್ಕು ದಿಕ್ಕುಗಳಿಗೆ ಓಡಿ ಹೋದರು. ಓಡಿ ಹೋಗುತ್ತಿರುವ ಅವರನ್ನು ನೋಡಿ ದುರ್ಯೋಧನನು ಈ ಮಾತುಗಳಿಂದ ಅವರನ್ನು ಹಿಂದಿರುಗಲು ಪ್ರಚೋದಿಸಿದನು: “ಕ್ಷತ್ರಿಯರ್ಷಭರೇ! ಪಲಾಯನ ಮಾಡುವುದನ್ನು ನಿಲ್ಲಿಸಿ! ಶೂರರಂತೆ ಯುದ್ಧಮಾಡಿ! ಪಾರ್ಥನನ್ನು ವಧಿಸಲು ಸ್ವಯಂ ನಾನೇ ಅವನೊಡನೆ ಯುದ್ಧಕ್ಕೆ ಹೋಗುತ್ತೇನೆ. ನಾನು ಸೋಮಕ-ಪಾಂಚಾಲರೊಂದಿಗೆ ಪಾರ್ಥರನ್ನು ಸಂಹರಿಸುತ್ತೇನೆ. ಯುಗಕ್ಷಯದ ಕಾಲನಂತೆ ಗಾಂಡಿವಧನ್ವಿಯೊಡನೆ ಯುದ್ಧಮಾಡುವ ನನ್ನ ಈ ವಿಕ್ರಮವನ್ನು ಪಾರ್ಥರು ಇಂದು ನೋಡಲಿದ್ದಾರೆ! ಇಂದು ಸಮರದಲ್ಲಿ ಯೋಧರು ನನ್ನಿಂದ ಶಲಭಗಳಂತೆ ಹೊರಹೊಮ್ಮುವ ಸಹಸ್ರಾರು ಬಾಣಗಳ ಜಾಲಗಳನ್ನು ನೋಡುವವರಿದ್ದಾರೆ! ಬೇಸಗೆಯ ಕೊನೆಯಲ್ಲಿ ಮೋಡಗಳು ಮಳೆಸುರಿಸುವಂತೆ ನನ್ನ ಧನುಸ್ಸಿನಿಂದ ಬಾಣಮಯ ಮಳೆಯನ್ನು ಸೃಷ್ಟಿಸುವ ನನ್ನನ್ನು ಇಂದು ಯುದ್ಧದಲ್ಲಿ ಸೈನಿಕರು ನೋಡಲಿದ್ದಾರೆ! ಇಂದು ನತಪರ್ವಗಳಿಂದ ನಾನು ರಣದಲ್ಲಿ ಪಾರ್ಥನನ್ನು ಜಯಿಸುತ್ತೇನೆ. ಶೂರರೇ! ಫಲ್ಗುನನ ಭಯವನ್ನು ತೊರೆದು ಸಮರದಲ್ಲಿ ನಿಲ್ಲಿ! ನನ್ನ ವೀರ್ಯವನ್ನು ಎದುರಿಸಿ ಫಲ್ಗುನನು ತೀರವನ್ನು ಮುಟ್ಟಿದ ಮಕರಾಲಯ ಸಾಗರವು ಹೇಗೋ ಹಾಗೆ ಮುಂದುವರೆಯಲಾರ!”

ಹೀಗೆ ಹೇಳಿ ಮಹಾ ಸೇನೆಯಿಂದ ಪರಿವೃತನಾಗಿ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ದುರ್ಧರ್ಷ ರಾಜನು ಫಲ್ಗುನನಿದ್ದಲ್ಲಿಗೆ ಹೊರಟನು. ಹಾಗೆ ಹೋಗುತ್ತಿದ್ದ ಆ ಮಹಾಬಾಹುವನ್ನು ನೋಡಿ ಶಾರದ್ವತನು ಅಶ್ವತ್ಥಾಮನ ಬಳಿಸಾರಿ ಈ ಮಾತನ್ನಾಡಿದನು: “ಈ ಮಹಾಬಾಹು ಅಸಹನಶೀಲ ರಾಜನು ಕ್ರೋಧದಿಂದ ಮೂರ್ಛಿತನಾಗಿ ಪತಂಗದ ಸ್ವಭಾವವನ್ನನ್ನುಸರಿಸಿ ಫಲ್ಗುನನೊಂದಿಗೆ ಯುದ್ಧಮಾಡಲು ಬಯಸುತ್ತಾನೆ! ನಾವು ನೋಡುತ್ತಿರುವಂತೆಯೇ ಪಾರ್ಥನೊಂದಿಗೆ ಹೋರಾಡಿ ಪ್ರಾಣಗಳನ್ನು ತ್ಯಜಿಸದಂತೆ ಕೌರವನನ್ನು ತಡೆದು ಯುದ್ಧದಿಂದ ನಿಲ್ಲಿಸು! ಸರ್ಪಗಳಂತೆ ಹೊರಬರುವ ಪಾರ್ಥನ ಶರಸಮೂಹಗಳಿಂದ ರಾಜನು ಭಸ್ಮೀಭೂತನಾಗಬಾರದೆಂದು ರಾಜನನ್ನು ನೀನು ತಡೆಯಬೇಕು! ನಾವು ಇಲ್ಲಿಯೇ ಇರುವಾಗ ನಮ್ಮ ಸಹಾಯವನ್ನು ಕೇಳದೇ ಸ್ವಯಂ ತಾನೇ ಪಾರ್ಥನೊಡನೆ ರಾಜನು ಹೋಗಿದ್ದುದು ಸರಿಯಲ್ಲವೆಂದು ನನಗನ್ನಿಸುತ್ತದೆ. ಸಿಂಹದೊಡನೆ ಹೋರಾಡುವ ಆನೆಯಂತೆ ಕಿರೀಟಿಯೊಂದಿಗೆ ಯುದ್ಧಮಾಡುತ್ತಿರುವ ಕೌರವನನ್ನು ಪಾರ್ಥನು ಜೀವಂತವಿಡುವುದು ದುರ್ಲಭವೆಂದು ನನಗನ್ನಿಸುತ್ತದೆ.”

ಸೋದರಮಾವನು ಹೀಗೆ ಹೇಳಲು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೌಣಿಯು ತ್ವರೆಮಾಡಿ ದುರ್ಯೋಧನನಿಗೆ ಈ ಮಾತನ್ನಾಡಿದನು: “ಗಾಂಧಾರೇ! ನಿತ್ಯವೂ ನಿನ್ನ ಹಿತೈಷಿಯಾಗಿರುವ ನನ್ನನ್ನು ಅನಾದರಿಸಿ ನಾನು ಜೀವಿತವಾಗಿರುವಾಗಲೇ ನೀನು ಯುದ್ಧಕ್ಕೆ ಹೋಗುವುದು ಸರಿಯಲ್ಲ! ಪಾರ್ಥನಿಗೆ ವಿಜಯದೊರೆಯುವಂತೆ ಅವಸರದಲ್ಲಿ ಯಾವ ಕಾರ್ಯವನ್ನೂ ಮಾಡಬೇಡ. ಪಾರ್ಥನನ್ನು ನಾನು ತಡೆಯುತ್ತೇನೆ. ನಿಲ್ಲು!”

ದುರ್ಯೋಧನನು ಹೇಳಿದನು: “ದ್ವಿಜೋತ್ತಮ! ಆಚಾರ್ಯನು ಪಾಂಡುಪುತ್ರರನ್ನು ಪುತ್ರರಂತೆ ಪರಿರಕ್ಷಿಸುತ್ತಾರೆ. ನೀನೂ ಕೂಡ ಅವರ ಕುರಿತು ನಿತ್ಯವೂ ಉಪೇಕ್ಷಿಸುತ್ತಿರುವೆ. ನೀನು ಯುದ್ಧದಲ್ಲಿ ನಿನ್ನ ವಿಕ್ರಮವನ್ನು ಕಡಿಮೆ ತೋರಿಸುತ್ತಿದ್ದೀಯೆ. ಇದು ನನ್ನ ದುರ್ಭಾಗ್ಯದಿಂದಲೋ ಅಥವಾ ಧರ್ಮರಾಜ ಅಥವಾ ದ್ರೌಪದಿಯ ಮೇಲಿನ ಪ್ರೀತಿಯಿಂದಲೋ ಅರ್ಥವಾಗುತ್ತಿಲ್ಲ. ಯಾವುದರಿಂದಾಗಿ ಸುಖಾರ್ಹ ನನ್ನ ಸರ್ವ ಬಾಂಧವರೂ ಅಪರಾಜಿತರಾಗಿ ಪರಮ ದುಃಖವನ್ನು ಹೊಂದಿರುವರೋ ಆ ನನ್ನ ಲೋಭಕ್ಕೆ ಧಿಕ್ಕಾರ!  ಶಸ್ತ್ರಭೃತರಲ್ಲಿ ಮುಖ್ಯನಾದ ಗೌತಮೀಸುತ ಅಶ್ವತ್ಥಾಮನ ಹೊರತಾಗಿ ಯುದ್ಧದಲ್ಲಿ ಮಹೇಶ್ವರಸಮನಾದ ಯಾರುತಾನೇ ಶತ್ರುಗಳನ್ನು ನಾಶಗೊಳಿಸಬಲ್ಲನು? ಅಶ್ವತ್ಥಾಮ! ನನ್ನ ಹಿತಕ್ಕಾಗಿ ಇವರನ್ನು ನಾಶಗೊಳಿಸು. ನಿನ್ನ ಅಸ್ತ್ರಗಳ ಮುಂದೆ ದೇವತೆಗಳೂ ನಿಲ್ಲಲು ಶಕ್ತರಿಲ್ಲ. ಅನುಗರೊಂದಿಗೆ ಪಾಂಚಾಲರನ್ನೂ ಸೋಮಕರನ್ನು ಕೊಲ್ಲು! ನಿನ್ನಿಂದಲೇ ರಕ್ಷಿತರಾದ ನಾವು ಉಳಿದವರನ್ನು ಸಂಹರಿಸುತ್ತೇವೆ. ಯಶಸ್ವಿ ಸೋಮಕ ಪಾಂಚಾಲರಿಂದ ಕಾಡ್ಗಿಚ್ಚಿಗೆ ಸಿಲುಕಿದವರಂತೆ ನನ್ನ ಸೈನಿಕರು ಗಾಬರಿಯಿಂದ ಓಡಿ ಹೋಗುತ್ತಿದ್ದಾರೆ. ಕಿರೀಟಿಯ ರಕ್ಷಣೆಯಲ್ಲಿ ಇವರು ಮತ್ತು ಕೇಕಯರು ನಮ್ಮವರು ನಿಃಶೇಷವಾಗುವಂತೆ ಮಾಡುವುದರೊಳಗೆ ಇವರನ್ನು ತಡೆ! ಮೊದಲಾಗಲೀ ಕಡೆಯಲ್ಲಾಗಲೀ ನೀನು ಈ ಕೆಲಸವನ್ನು ಮಾಡು. ಪಾಂಚಾಲರ ವಧೇಗೋಸ್ಕರವೇ ನೀನು ಜನ್ಮತಳೆದಿರುವೆ! ಜಗತ್ತನ್ನು ಸರ್ವ ಪಾಂಚಾಲರಿಂದ ಮುಕ್ತಗೊಳಿಸುತ್ತೀಯೆಲ್ಲವೇ? ಹೀಗೆ ಸಿದ್ಧರು ಹೇಳಿದ್ದರು. ಅದು ಹಾಗೆಯೇ ಆಗುತ್ತದೆ. ನಿನ್ನ ಅಸ್ತ್ರಗಳ ಮಾರ್ಗದಲ್ಲಿ ವಾಸವ ಸಹಿತ ದೇವತೆಗಳೂ ನಿಲ್ಲಲು ಶಕ್ತರಲ್ಲ. ಇನ್ನು ಪಾಂಚಾಲರೊಂದಿಗೆ ಪಾರ್ಥರು ಯಾವ ಲೆಖ್ಕಕ್ಕೆ? ಇದು ನನ್ನ ಸತ್ಯನುಡಿ!”

ದುರ್ಯೋಧನನು ಹೀಗೆ ಹೇಳಲು ಯುದ್ಧದುರ್ಮದ ದ್ರೌಣಿಯು ಉತ್ತರಿಸಿದನು: “ಮಹಾಬಾಹೋ! ನೀನು ಹೇಳಿದುದು ಸತ್ಯ. ನನಗೆ ಮತ್ತು ನನ್ನ ತಂದೆಗೆ ಕೂಡ ನಿತ್ಯವೂ ಪಾಂಡವರು ಪ್ರಿಯರು. ನಾವೂ ಕೂಡ ಅವರಿಗೆ ಪ್ರಿಯರೇ. ಆದರೆ ಯುದ್ಧದಲ್ಲಿ ಅಲ್ಲ. ಪ್ರಾಣವನ್ನೂ ತೊರೆದು ಸ್ವಲ್ಪವೂ ಭಯಪಡದೇ ಎಲ್ಲ ಶಕ್ತಿಯನ್ನುಪಯೋಗಿಸಿ ನಾವು ಯುದ್ಧಮಾಡುತ್ತಿದ್ದೇವೆ. ನಾನು, ಕರ್ಣ, ಶಲ್ಯ, ಕೃಪ ಮತ್ತು ಹಾರ್ದಿಕ್ಯರು ನಿಮಿಷಮಾತ್ರದಲ್ಲಿ ಪಾಂಡವೀ ಸೇನೆಯನ್ನು ನಾಶಗೊಳಿಸಬಲ್ಲೆವು. ಯುದ್ಧ ಸನ್ನದ್ಧರಾಗಿರದಿದ್ದರೆ ಅವರೂ ಕೂಡ ನಮ್ಮ ಈ ಕೌರವೀ ಸೇನೆಯನ್ನು ಅರ್ಧ ನಿಮಿಷದಲ್ಲಿಯೇ ಸಂಹರಿಸಬಲ್ಲರು. ಪರಮ ಶಕ್ತಿಯನ್ನುಪಯೋಗಿಸಿ ಪಾಂಡವರು ನಮ್ಮನ್ನು ಮತ್ತು ನಾವು ಅವರನ್ನು ಎದುರಿಸಿ ಯುದ್ಧಮಾಡುತ್ತಿದ್ದೇವೆ. ತೇಜಸ್ಸು ಇನ್ನೊಂದು ತೇಜಸ್ಸನ್ನು ಎದುರಿಸಿ ಪ್ರಶಮನಗೊಳ್ಳುತ್ತಿದೆ. ಪಾಂಡುಪುತ್ರರು ಜೀವಂತವಿರುವವರೆಗೆ ಪಾಂಡವರ ಸೇನೆಯನ್ನು ಗೆಲ್ಲಲು ನಾವು ಅಶಕ್ತರಾಗಿರುತ್ತೇವೆ. ಇದು ನಾನು ಹೇಳುವ ಸತ್ಯ! ಆ ಸಮರ್ಥ ಪಾಂಡುನಂದನರು ತಮಗಾಗಿ ನಿನ್ನೊಡನೆ ಯುದ್ಧಮಾಡುತ್ತಿದ್ದಾರೆ. ಅವರು ಏಕೆ ನಿನ್ನ ಸೈನ್ಯವನ್ನು ಸಂಹರಿಸುವುದಿಲ್ಲ? ನೀನು ಅತಿ ಆಸೆಬುರುಕನಾಗಿರುವುಧರಿಂದ ಮತ್ತು ಮೋಸದಲ್ಲಿ ಪಳಗಿರುವುದರಿಂದ ಮತ್ತು ಜಂಬದವನಾಗಿರುವುದರಿಂದಲೇ ನಮ್ಮನ್ನು ಅತಿಯಾಗಿ ಶಂಕಿಸುತ್ತಿರುವೆ! ಇಗೋ! ನಾನಾದರೋ ನಿನಗೋಸ್ಕರ ಜೀವವನ್ನೂ ತೊರೆದು ಪ್ರಯತ್ನಪಟ್ಟು ನೀನು ನಡೆಸಿರುವ ಸಂಗ್ರಾಮಕ್ಕೆ ಹೋಗುತ್ತಿದ್ದೇನೆ. ನಿನ್ನ ಒಳಿತಿಗಾಗಿ ನಾನು ಸಂಗ್ರಾಮದಲ್ಲಿ ಶತ್ರುಗಳೊಂದಿಗೆ ಹೋರಾಡಿ ಶ್ರೇಷ್ಠ ಶ್ರೇಷ್ಠರಾದವರನ್ನು ಗೆಲ್ಲುತ್ತೇನೆ. ಪಾಂಚಾಲರೊಂದಿಗೆ, ಸೋಮಕರೊಂದಿಗೆ, ಹಾಗೆಯೇ ಕೇಕಯ ಮತ್ತು ಪಾಂಡವರೊಂದಿಗೆ ಹೋರಾಡುತ್ತೇನೆ. ಇಂದು ನನ್ನ ಬಾಣಗಳಿಂದ ಸುಡಲ್ಪಟ್ಟ ಪಾಂಚಾಲರು ಮತ್ತು ಸೋಮಕರು ಸಿಂಹದಿಂದ ಪೀಡಿತ ಗೋವುಗಳಂತೆ ಎಲ್ಲಕಡೆ ಓಡಿಹೋಗಲಿದ್ದಾರೆ! ಧರ್ಮಸುತನು ಇಂದು ನನ್ನ ಪರಾಕ್ರಮವನ್ನು ನೋಡಿ ಸೋಮಕರೊಂದಿಗೆ ಈ ಲೋಕವು ಅಶ್ವತ್ಥಾಮಮಯವೇನೋ ಎಂದು ಭಾವಿಸುವವನಿದ್ದಾನೆ. ಯುದ್ಧದಲ್ಲಿ ಸೋಮಕರೊಂದಿಗೆ ಪಾಂಚಾಲರು ಸಂಹರಿಸಲ್ಪಟ್ಟಿದುದನ್ನು ನೋಡಿ ಯುಧಿಷ್ಠಿರನು ದುಃಖಹೊಂದುವವನಿದ್ದಾನೆ! ಯಾರು ನನ್ನನ್ನು ಎದುರಿಸುತ್ತಾರೋ ಅವರನ್ನು ನಾನು ಸಂಹರಿಸುತ್ತೇನೆ. ನನ್ನ ಬಾಹುಗಳ ಮಧ್ಯದಲ್ಲಿ ಬರುವವರನ್ನು ಬಿಡುವುದಿಲ್ಲ!”

ದುರ್ಯೋಧನನಿಗೆ ಹೀಗೆ ಹೇಳಿ ಆ ಮಹಾಬಾಹುವು ಕೌರವ ಪುತ್ರರಿಗೆ ಒಳ್ಳೆಯದನ್ನು ಮಾಡಲು ಬಯಸಿ ಸರ್ವ ಧನ್ವಿಗಳನ್ನೂ ಓಡಿಸುತ್ತಾ ಯುದ್ಧದಲ್ಲಿ ಧುಮುಕಿದನು. ಆಗ ಗೌತಮೀಸುತನು ಕೇಕಯರೊಂದಿಗಿದ್ದ ಪಾಂಚಾಲರಿಗೆ ಹೇಳಿದನು: “ಮಹಾರಥರೇ! ಎಲ್ಲರೂ ನನ್ನ ಈ ದೇಹದ ಮೇಲೆ ಬಾಣಗಳನ್ನು ಪ್ರಯೋಗಿಸಿರಿ. ನಿಮ್ಮ ಅಸ್ತ್ರಲಾಘವವನ್ನು ಪ್ರದರ್ಶಿಸುತ್ತಾ ನನ್ನೊಡನೆ ಸ್ಥಿರವಾಗಿ ನಿಂತು ಯುದ್ಧಮಾಡಿರಿ!” ಹೀಗೆ ಹೇಳಲು ಅವರೆಲ್ಲರೂ ದ್ರೌಣಿಯ ಮೇಲೆ ಮೋಡಗಳು ಮಳೆಯನ್ನು ಸುರಿಸುವಂತೆ ಶಸ್ತ್ರಗಳ ಮಳೆಯನ್ನು ಕರೆದರು. ಆ ಶರಗಳನ್ನು ನಿರಸನಗೊಳಿಸಿ ದ್ರೌಣಿಯು ಪಾಂಡುಪುತ್ರರು ಮತ್ತು ಧೃಷ್ಟದ್ಯುಮ್ನನ ಸಮ್ಮುಖದಲ್ಲಿಯೇ ಹತ್ತು ವೀರರನ್ನು ಕೆಳಗುರುಳಿಸಿದನು. ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು ಮತ್ತು ಸೃಂಜಯರು ರಣದಲ್ಲಿ ದ್ರೌಣಿಯನ್ನು ಬಿಟ್ಟು ದಿಕ್ಕು ದಿಕ್ಕುಗಳಿಗೆ ಪಲಾಯನಗೈದರು. ಸೋಮಕರೊಂದಿಗೆ ಪಾಂಚಾಲ ಶೂರರು ಓಡಿಹೋಗುತ್ತಿರುವುದನ್ನು ನೋಡಿ ಧೃಷ್ಟದ್ಯುಮ್ನನು ಯುದ್ಧದಲ್ಲಿ ದ್ರೌಣಿಯನ್ನು ಎದುರಿಸಿದನು.

ಆಗ ಬಂಗಾರದ ಚಿತ್ರಗಳನ್ನುಳ್ಳ, ಮಳೆಗಾಲದ ಮೋಡದಂತೆ ಗರ್ಜಿಸುತ್ತಿದ್ದ, ಯುದ್ಧದಿಂದ ಹಿಂದಿರುಗದಿದ್ದ ನೂರಾರು ಶೂರರ ರಥಗಳಿಂದ ಸುತ್ತುವರೆಯಲ್ಪಟ್ಟ ಪಾಂಚಾಲರಾಜನ ಮಗ ಮಹಾರಥ ಧೃಷ್ಟದ್ಯುಮ್ನನು ಕೆಳಗುರುಳಿಸಲ್ಪಟ್ಟ ಯೋಧರನ್ನು ನೋಡಿ ದ್ರೌಣಿಗೆ ಈ ಮಾತುಗಳನ್ನಾಡಿದನು: “ಆಚಾರ್ಯಪುತ್ರ! ದುರ್ಬುದ್ಧೇ! ಅನ್ಯರನ್ನು ಏಕೆ ಸಂಹರಿಸುತ್ತಿರುವೆ? ಶೂರನಾಗಿದ್ದರೆ ಸಂಯುಗದಲ್ಲಿ ನನ್ನೊಡನೆ ಯುದ್ಧಮಾಡಲು ಬಾ! ನನ್ನ ಎದುರಿನಲ್ಲಿ ನಿಲ್ಲು! ನಾನು ನಿನ್ನನ್ನು ಈಗಲೇ ಸಂಹರಿಸುತ್ತೇನೆ!”

ಆಗ ಪ್ರತಾಪವಾನ್ ಧೃಷ್ಟದ್ಯುಮ್ನನು ಆಚಾರ್ಯಸುತನನ್ನು ಮರ್ಮಭೇದಿ ತೀಕ್ಷ್ಣಶರಗಳಿಂದ ಹೊಡೆದನು. ಚಿನ್ನದ ರೆಕ್ಕೆಗಳುಳ್ಳ, ಚೂಪಾದ ಮೊನೆಗಳುಳ್ಳ, ಶರೀರವನ್ನು ಭೇದಿಸಬಲ್ಲ, ವೇಗವಾಗಿ ಹೋಗುವ ಆ ಬಾಣಗಳು ಸಾಲುಸಾಲಾಗಿ ಜೇನುದುಂಬಿಗಳು ಹೂಬಿಟ್ಟಿರುವ ಮರವನ್ನು ಪ್ರವೇಶಿಸುವಂತೆ ಅಶ್ವತ್ಠಾಮನನ್ನು ಪ್ರವೇಶಿಸಿದವು. ಬಹಳವಾಗಿ ಗಾಯಗೊಂಡು ಕಾಲಿನಿಂದ ತುಳಿಯಲ್ಪಟ್ಟ ಸರ್ಪದಂತೆ ಕುಪಿತನಾದ ಮಾನಿನಿ ದ್ರೌಣಿಯು ಸ್ವಲ್ಪವಾದರೂ ಗಾಬರಿಗೊಳ್ಳದೆ ಬಾಣವನ್ನು ಕೈಯಲ್ಲಿ ಹಿಡಿದು ಹೇಳಿದನು: “ಧೃಷ್ಟದ್ಯುಮ್ನ! ಸ್ಥಿರವಾಗಿ ನಿಂತು ಒಂದು ಕ್ಷಣ ತಾಳಿಕೋ! ಅಷ್ಟರೊಳಗೆ ನಿಸಿತಬಾಣಗಳಿಂದ ನಿನ್ನನ್ನು ಯಮಸದನಕ್ಕೆ ಕಳುಹಿಸುತ್ತೇನೆ!”

ಪರವೀರಹ ದ್ರೌಣಿಯು ಪಾರ್ಷತನಿಗೆ ಹೀಗೆ ಹೇಳಿ ಹಸ್ತಲಾಘವದಿಂದ ಬಾಣಗಳ ಮಳೆಗಳಿಂದ ಎಲ್ಲ ಕಡೆಗಳಿಂದ ಅವನನ್ನು ಮುಚ್ಚಿಬಿಟ್ಟನು. ದ್ರೌಣಿಯಿಂದ ಸಮರದಲ್ಲಿ ಪೀಡಿಸಲ್ಪಟ್ಟ ಪಾಂಚಾಲತನಯನು ದ್ರೌಣಿಯನ್ನು ಮಾತುಗಳಿಂದ ಗದರಿಸಿದನು: “ವಿಪ್ರ! ದುರ್ಬುದ್ಧೇ! ನನ್ನ ಪ್ರತಿಜ್ಞೆಯ ಕುರಿತು ಮತ್ತು ನನ್ನ ಹುಟ್ಟಿನ ಕುರಿತು ನಿನಗೆ ತಿಳಿದಿಲ್ಲವೇ? ದ್ರೋಣನನ್ನು ಸಂಹರಿಸಿದ ನಂತರವೇ ನಾನು ನಿನ್ನನ್ನು ಕೊಲ್ಲುವವನಿದ್ದೆ! ದ್ರೋಣನು ಜೀವಿಸಿರುವಾಗ ನಾನು ನಿನ್ನನ್ನು ಸಂಹರಿಸುವುದಿಲ್ಲ! ಇದೇ ರಾತ್ರಿ ಅಥವಾ ಬೆಳಗಾಗುವುದರೊಳಗೆ ನಿನ್ನ ತಂದೆಯನ್ನು ಸಂಹರಿಸಿ ಅನಂತರ ಯುದ್ಧದಲ್ಲಿ ನಿನ್ನನ್ನೂ ಸಹ ಮೃತ್ಯುಲೋಕಕ್ಕೆ ಕಳುಹಿಸುತ್ತೇನೆ. ಇದು ನನ್ನ ಮನಸ್ಸಿನಲ್ಲಿ ನೆಲೆಸಿಬಿಟ್ಟಿದೆ! ಪಾರ್ಥರ ಮೇಲಿರುವ ನಿನ್ನ ದ್ವೇಷವನ್ನೂ ಕೌರವರ ಮೇಲೆ ನಿನಗಿರುವ ಭಕ್ತಿಯನ್ನೂ ಸ್ಥಿರನಾಗಿ ನಿಂತು ಪ್ರದರ್ಶಿಸು! ಜೀವಸಹಿತನಾಗಿ ನೀನು ನನ್ನಿಂದ ತಪ್ಪಿಸಿಕೊಳ್ಳಲಾರೆ! ಯಾರು ನಿನ್ನಂತೆ ಬ್ರಾಹ್ಮಣಧರ್ಮವನ್ನು ಬಿಟ್ಟು ಕ್ಷತ್ರಧರ್ಮದಲ್ಲಿ ನಿರತನಾಗಿರುವನೋ ಅವನು ಸರ್ವಲೋಕಗಳ ದೃಷ್ಟಿಯಿಂದ ವಧ್ಯನೇ ಆಗುತ್ತಾನೆ!”

ಪಾರ್ಷತನಿಂದ ಈ ರೀತಿ ಕಟುವಾಕ್ಯಗಳನ್ನು ಕೇಳಿದ ದ್ವಿಜೋತ್ತಮನು ತೀವ್ರವಾಗಿ ಕ್ರೋಧಗೊಂಡು ನಿಲ್ಲು ನಿಲ್ಲೆಂದು ಕೂಗಿ ಹೇಳಿದನು. ಕಣ್ಣುಗಳಿಂದಲೇ ದಹಿಸಿಬಿಡುವನೋ ಎನ್ನುವಂತೆ ಪಾರ್ಷತನನ್ನು ನೋಡುತ್ತಾ ಸರ್ಪದಂತೆ ಭುಸುಗುಟ್ಟುತ್ತಾ ಅವನು ಶರಗಳಿಂದ ಮುಚ್ಚಿದನು. ಸಮರದಲ್ಲಿ ಆ ರೀತಿ ದ್ರೌಣಿಯಿಂದ ಮುಚ್ಚಲ್ಪಟ್ಟ ರಥಸತ್ತಮನನ್ನು ಸರ್ವ ಪಾಂಚಾಲಸೇನೆಗಳೂ ಸುತ್ತುವರೆದವು. ಸ್ವಧೈರ್ಯವನ್ನು ಆಶ್ರಯಿಸಿದ ಮಹಾಬಾಹು ಧೃಷ್ಟದ್ಯುಮ್ನನು ವಿಚಲಿತನಾಗದೇ ಅಶ್ವತ್ಥಾಮನ ಮೇಲೆ ವಿವಿಧ ಸಾಯಕಗಳನ್ನು ಪ್ರಯೋಗಿಸಿದನು. ಆ ಇಬ್ಬರು ಅಸಹನಶೀಲ ಮಹೇಷ್ವಾಸರು ಪರಸ್ಪರರನ್ನು ಬಾಣಗಳ ಗುಂಪುಗಳಿಂದ ತಡೆಯುತ್ತಾ ಎಲ್ಲಕಡೆ ಶರವೃಷ್ಟಿಯನ್ನು ಸುರಿಸುತ್ತಾ ಪ್ರಾಣಗಳನ್ನು ಪಣವನ್ನಾಗಿಟ್ಟುಕೊಂಡು ರಣದಲ್ಲಿ ಪುನಃ ಯುದ್ಧಮಾಡತೊಡಗಿದರು. ದ್ರೌಣಿ ಮತ್ತು ಪಾರ್ಷತರ ಆ ಭಯಾನಕ ಘೋರರೂಪೀ ಯುದ್ಧವನ್ನು ನೋಡಿ ಸಿದ್ಧ-ಚಾರಣ-ವಾತಿಕರು ಬಹಳವಾಗಿ ಪ್ರಶಂಸಿಸಿದರು. ಅವರಿಬ್ಬರೂ ಶರೌಘಗಳಿಂದ ಆಕಾಶವನ್ನೂ ದಿಕ್ಕುಗಳನ್ನೂ ತುಂಬುತ್ತಾ ಶರಗಳಿಂದ ಘೋರ ಕತ್ತಲೆಯನ್ನೇ ನಿರ್ಮಿಸಿ ಒಬ್ಬರು ಮತ್ತೊಬ್ಬರಿಗೆ ಅಗೋಚರರಾಗಿಯೇ ಯುದ್ಧಮಾಡುತ್ತಿದ್ದರು. ಪರಸ್ಪರರ ವಧೆಗೆ ಪ್ರಯತ್ನಿಸುತ್ತಿದ್ದ ಪರಸ್ಪರರಿಂದ ಜಯವನ್ನು ಬಯಸುತ್ತಿದ್ದ ಅವರಿಬ್ಬರೂ ಧನುಸ್ಸುಗಳನ್ನು ಮಂಡಲಾಕಾರವಾಗಿ ತಿರುಗಿಸುತ್ತಾ ರಣದಲ್ಲಿ ನೃತ್ಯಮಾಡುತ್ತಿರುವರೋ ಎಂಬಂತೆ ತೋರುತ್ತಿದ್ದರು. ವಿಚಿತ್ರ ಲಘುತ್ವದಿಂದ ಚೆನ್ನಾಗಿ ಯುದ್ಧಮಾಡುತ್ತಿದ್ದ ಅವರಿಬ್ಬರು ಮಹಾಬಾಹುಗಳನ್ನು ಸಮರದಲ್ಲಿ ಸಹಸ್ರಾರು ಯೋಧಪ್ರಮುಖರು ಪ್ರಶಂಸಿಸಿದರು. ವನದಲ್ಲಿ ವನ್ಯ ಗಜಗಳಂತೆ ರಣದಲ್ಲಿ ಯುದ್ಧಮಾಡುತ್ತಿದ್ದ ಅವರನ್ನು ನೋಡಿ ಎರಡೂ ಸೇನೆಗಳಲ್ಲಿ ಹರ್ಷದಿಂದ ತುಮುಲ ಶಬ್ಧಗಳು ಕೇಳಿಬರುತ್ತಿದ್ದವು. ಸಿಂಹನಾದದ ಕೂಗುಗಳು ಕೇಳಿಬಂದವು. ಶಂಖಗಳು ಮೊಳಗಿದವು. ನೂರಾರು ಸಹಸ್ರಾರು ವಾದ್ಯಗಳನ್ನು ಬಾರಿಸಲಾಯಿತು.

ಹೇಡಿಗಳಿಗೆ ಭಯವನ್ನುಂಟು ಮಾಡುತ್ತಿದ್ದ ಆ ತುಮುಲಯುದ್ಧವು ಒಂದು ಮುಹೂರ್ತ ಸಮ-ಸಮವಾಗಿಯೇ ನಡೆಯುತ್ತಿತ್ತು. ಆಗ ರಣದಲ್ಲಿ ದ್ರೌಣಿಯು ಪಾರ್ಷತನ ಧ್ವಜವನ್ನೂ, ಧನುಸ್ಸನ್ನೂ, ಚತ್ರವನ್ನೂ, ಎರಡು ಪಾರ್ಷ್ಣಿಸಾರಥಿಗಳನ್ನೂ, ಸಾರಥಿ ಮತ್ತು ನಾಲ್ಕು ಕುದುರೆಗಳನ್ನೂ ನಾಶಗೊಳಿಸಿದನು. ಆ ಅಮೇಯಾತ್ಮನು ನೂರಾರು ಸಹಸ್ರಾರು ಸನ್ನತಪರ್ವ ಬಾಣಗಳಿಂದ ಆ ಎಲ್ಲ ಪಾಂಚಾಲರನ್ನೂ ಹೊಡೆದು ಓಡಿಸಿದನು. ಆಗ ಸಂಯುಗದಲ್ಲಿ ವಾಸವನಂಥಹ ದ್ರೌಣಿಯ ಆ ಮಹಾಕರ್ಮವನ್ನು ನೋಡಿ ಪಾಂಡವೀ ಸೇನೆಯು ವ್ಯಥೆಗೊಂಡಿತು. ಆ ಮಹಾರಥನು ನೂರುಬಾಣಗಳಿಂದ ನೂರು ಪಾಂಚಾಲ ಮಹಾರಥರನ್ನು ಸಂಹರಿಸಿ, ಪ್ರತ್ಯೇಕ ಮೂರು ನಿಶಿತ ಬಾಣಗಳಿಂದ ಮೂರು ಮಹಾರಥರನ್ನು ಸಂಹರಿಸಿದನು. ದ್ರುಪದ ಪುತ್ರ ಮತ್ತು ಫಲ್ಗುನರು ನೋಡುತ್ತಿದ್ದಂತೆಯೇ ದ್ರೌಣಿಯು ಪುನಃ ವ್ಯವಸ್ಥಿತರಾಗಿದ್ದ ಪಾಂಚಾಲರನ್ನು ನಾಶಗೊಳಿಸಿದನು. ಸಮರದಲ್ಲಿ ಆ ರೀತಿ ಅವನಿಂದ ವಧಿಸಲ್ಪಡುತ್ತಿದ್ದ ಪಾಂಚಾಲರು ಸೃಂಜಯರೊಂದಿಗೆ ರಥ-ಧ್ವಜಗಳು ಹರಡಿ ಬಿದ್ದಿರಲು ದ್ರೌಣಿಯನ್ನು ಬಿಟ್ಟು ಓಡಿ ಹೋದರು. ಸಮರದಲ್ಲಿ ಶತ್ರುಗಳನ್ನು ಜಯಿಸಿ ಮಹಾರಥ ದ್ರೋಣಪುತ್ರನು ಬೇಸಗೆಯ ಕೊನೆಯಲ್ಲಿ ಮೋಡಗಳು ಹೇಗೋ ಹಾಗೆ ಮಹಾನಾದವನ್ನು ಕೂಗಿದನು. ಬಹಳಷ್ಟು ಶೂರರನ್ನು ಸಂಹರಿಸಿ ಅಶ್ವತ್ಥಾಮನು ಯುಗಾಂತದಲ್ಲಿ ಸರ್ವಭೂತಗಳನ್ನು ಭಸ್ಮಗೊಳಿಸಿದ ಪಾವಕನಂತೆ ವಿರಾಜಿಸಿದನು. ಯುದ್ಧದಲ್ಲಿ ಸಹಸ್ರಾರು ಶತ್ರುಸೇನೆಗಳನ್ನು ಗೆದ್ದು ಕೌರವೇಯರಿಂದ ಗೌರವಿಸಲ್ಪಟ್ಟ ದ್ರೋಣಸುತ ಪ್ರತಾಪವಾನನು ಅರಿಗಣಗಳನ್ನು ಸಂಹರಿಸಿದ ಸುರೇಂದ್ರನಂತೆ ಪ್ರಕಾಶಿಸಿದನು.

ಕೌರವ ಸೇನೆಯ ಪಲಾಯನ

ಆಗ ಯುಧಿಷ್ಠಿರನೂ ಪಾಂಡವ ಭೀಮಸೇನನೂ ದ್ರೋಣಪುತ್ರನನ್ನು ಎಲ್ಲಕಡೆಗಳಿಂದ ಮುತ್ತಿಗೆ ಹಾಕಿದರು. ದುರ್ಯೋಧನನು ಭಾರದ್ವಾಜನಿಂದ ಸುತ್ತುವರೆಯಲ್ಪಟ್ಟು ಪಾಂಡವರನ್ನು ಆಕ್ರಮಣಿಸಿದನು. ಆಗ ರಣದಲ್ಲಿ ಹೇಡಿಗಳ ಭಯವನ್ನು ಹೆಚ್ಚಿಸುವ ಘೋರರೂಪದ ಯುದ್ಧವು ನಡೆಯಿತು. ಕ್ರುದ್ಧ ಯುಧಿಷ್ಠಿರನು ಅಂಬಷ್ಠರನ್ನೂ, ಮಾಲವರನ್ನೂ, ವಂಗರನ್ನೂ, ಶಿಬಿಗಳನ್ನೂ, ತೈಗರ್ತರ ಗಣಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು. ಭೀಮನು ಅಭೀಷಾಹರನ್ನೂ, ಶೂರಸೇನರನ್ನೂ, ಯುದ್ಧದುರ್ಮದ ಕ್ಷತ್ರಿಯರನ್ನೂ ಸಂಹರಿಸಿ ಪೃಥ್ವಿಯನ್ನು ರಕ್ತ ಮಾಂಸಗಳಿಂದ ತೋಯಿಸಿದನು. ಕಿರೀಟಿಯು ಯುದ್ಧದಲ್ಲಿ ನಿಶಿತ ಶರಗಳಿಂದ ಯೌಧೇಯರನ್ನೂ, ಅಟ್ಟರಾಜರನ್ನೂ, ಮತ್ತು ಮದ್ರಕ ಗಣಗಳನ್ನೂ ಮೃತ್ಯುಲೋಕಕ್ಕೆ ಕಳುಹಿಸಿದನು. ವೇಗವಾಗಿ ಹೋಗುತ್ತಿರುವ ನಾರಾಚಗಳಿಂದ ಗಾಡವಾಗಿ ಪೀಡಿತ ಆನೆಗಳು ಎರಡು ಶೃಂಗಗಳುಳ್ಳ ಪರ್ವತಗಳಂತೆ ಭೂಮಿಯ ಮೇಲೆ ಬಿದ್ದವು. ಕತ್ತರಿಸಲ್ಪಟ್ಟು ಅಲ್ಲಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ ಆನೆಗಳ ಸೊಂಡಿಲುಗಳಿಂದ ತುಂಬಿದ ರಣಭೂಮಿಯು ಹರಿದುಹೋಗುತ್ತಿದ್ದ ಸರ್ಪಗಳಿಂದ ತುಂಬಿಕೊಂಡಿದೆಯೋ ಎಂಬಂತೆ ಕಾಣುತ್ತಿತ್ತು. ತುಂಡಾಗಿ ಕೆಳಗೆ ಬಿದ್ದಿದ್ದ ಕನಕ ಚಿತ್ರಗಳಿಂದ ಅಲಂಕೃತಗೊಂಡಿದ್ದ ರಾಜರ ಚತ್ರಗಳಿಂದ ಭೂಮಿಯು ಯುಗಾಂತದಲ್ಲಿ ಸೂರ್ಯ ಚಂದ್ರ ಮತ್ತು ಇತರ ಗ್ರಹಗಳು ಚೆಲ್ಲಿದ ಆಕಾಶದಂತೆ ತೋರುತ್ತಿತ್ತು. ಶೋಣಿತಾಶ್ವ ದ್ರೋಣನ ರಥದ ಬಳಿ “ಭಯವಿಲ್ಲದೇ ಸಂಹರಿಸಿ! ಹೊಡೆಯಿರಿ! ಬಾಣಗಳಿಂದ ಕತ್ತರಿಸಿರಿ!” ಎಂಬ ತುಮುಲ ಕೂಗುಗಳು ಕೇಳಿಬಂದವು.

ದ್ರೋಣನಾದರೋ ಸಂಯುಗದಲ್ಲಿ ಪರಮ ಕ್ರುದ್ಧನಾಗಿ ವಾಯವ್ಯಾಸ್ತ್ರದಿಂದ ಅಸಾಧ್ಯ ಚಂಡಮಾರುತವು ಮೇಘಗಳನ್ನು ಚದುರಿಸುವಂತೆ ಶತ್ರುಸೇನೆಯನ್ನು ಧ್ವಂಸಗೊಳಿಸಿದನು. ಭೀಮಸೇನ ಮತ್ತು ಪಾರ್ಥರು ನೋಡುತ್ತಿದ್ದಂತೆಯೇ ದ್ರೋಣನಿಂದ ಸಂಹರಿಸಲ್ಪಡುತ್ತಿದ್ದ ಪಾಂಚಾಲರು ಭಯದಿಂದ ಪಲಾಯನಗೈದರು. ಆಗ ತಕ್ಷಣವೇ ಕಿರೀಟೀ ಮತ್ತು ಭೀಮರು ದೊಡ್ಡ ರಥಸೈನ್ಯದೊಂದಿಗೆ ಕೌರವ ಸೇನೆಯನ್ನು ಆಕ್ರಮಣಿಸಿದರು. ಎಡಗಡೆಯಿಂದ ಬೀಭತ್ಸುವೂ ಬಲಗಡೆಯಿಂದ ವೃಕೋದರನೂ ಮಹಾ ಶರಸಮೂಹಗಳನ್ನು ಭಾರದ್ವಾಜನ ಮೇಲೆ ಸುರಿಸಿದರು. ಆಗ ಅವರಿಬ್ಬರನ್ನೂ ಸೃಂಜಯರು, ಪಾಂಚಾಲರು, ಸೋಮಕರೊಂದಿಗೆ ಮತ್ಸ್ಯರು ಅನುಸರಿಸಿ ಹೋದರು.

ಹಾಗೆಯೇ ಧೃತರಾಷ್ಟ್ರನ ಪುತ್ರರೂ ಕೂಡ ಮಹಾ ಸೇನೆಯೊಂದಿಗೆ ದ್ರೋಣನ ರಥದ ಕಡೆ ಬಂದರು. ಆಗ ಕಿರೀಟಿಯಿಂದ ಸಂಹರಿಸಲ್ಪಡುತ್ತಿದ್ದ ಆ ಭಾರತೀ ಸೇನೆಯು ನಿದ್ರೆ ಮತ್ತು ಕತ್ತಲೆಗಳಿಂದಾಗಿ ಪುನಃ ಭಗ್ನವಾಗಿ ಹೋಯಿತು. ಓಡಿಹೋಗುತ್ತಿದ್ದವರನ್ನು ದ್ರೋಣ ಮತ್ತು ಸ್ವಯಂ ದುರ್ಯೋಧನನು ತಡೆಯಲು ಪ್ರಯತ್ನಿಸಿದರೂ ಆ ಯೋಧರನ್ನು ತಡೆಯಲು ಅವರು ಶಕ್ಯರಾಗಲಿಲ್ಲ. ಪಾಂಡುಪುತ್ರನ ಶರಗಳಿಂದ ಇರಿಯಲ್ಪಡುತ್ತಿದ್ದ ಆ ಮಹಾಸೇನೆಯು ಕತ್ತಲೆಯಿಂದ ಆವರಿಸಲ್ಪಟ್ಟಿದ್ದ ಆ ಲೋಕದಲ್ಲಿ ಸರ್ವತೋಮುಖಿಯಾಗಿ ಓಡಿಹೋಯಿತು. ಕೆಲವು ನರಾಧಿಪರು ನೂರಾರು ವಾಹನಗಳನ್ನು ಅಲ್ಲಿಯೇ ಬಿಟ್ಟು ಭಯಾವಿಷ್ತರಾಗಿ ಎಲ್ಲಕಡೆ ಓಡಿಹೋದರು.

Leave a Reply

Your email address will not be published. Required fields are marked *