Related imageಹದಿನೈದನೇ ದಿನದ ಯುದ್ಧ - ೨: ದ್ರೋಣವಧೆ

ಸೂರ್ಯೋದಯಕ್ಕೆ ಮೊದಲು ಅಲ್ಲಿ ಯಾರ್ಯಾರು ದ್ವಂದ್ವಯುದ್ಧದಲ್ಲಿ ತೊಡಗಿದ್ದರೋ ಅವರೇ ಸೂರ್ಯೋದಯದ ನಂತರವೂ ದ್ವಂದ್ವಯುದ್ಧವನ್ನು ಮುಂದುವರೆಸಿದರು. ರಥಗಳು ಕುದುರೆಗಳೊಂದಿಗೆ, ಕುದುರೆಗಳು ಆನೆಗಳೊಂದಿಗೆ, ಪಾದಾತಿಗಳು ಆನೆಗಳೊಂದಿಗೆ, ಕುದುರೆಗಳು ಕುದುರೆಗಳೊಂದಿಗೆ ಮತ್ತು ಪದಾತಿಗಳು ಪದಾತಿಗಳೊಂದಿಗೆ ಎದುರಾಗಿ ಯುದ್ಧಮಾಡಿದರು. ಒಬ್ಬರಿಗೊಬ್ಬರು ಅಂಟಿಕೊಂಡು ಮತ್ತು ಬೇರೆ ಬೇರಾಗಿ ಯೋಧರು ರಣದಲ್ಲಿ ಬೀಳುತ್ತಿದ್ದರು. ರಾತ್ರಿಯೆಲ್ಲಾ ಯುದ್ಧಮಾಡುತ್ತಿದ್ದು ಈಗ ಸೂರ್ಯನ ತೇಜಸ್ಸಿನಿಂದ ಬಳಲಿ, ಹಸಿವು-ಬಾಯಾರಿಕೆಗಳಿಂದ ಆಯಾಸಗೊಂಡವರಾಗಿ ಅನೇಕರು ಮೂರ್ಛಿತರಾದರು. ಶಂಖ-ಭೇರಿ-ಮೃದಂಗಗಳ ಮತ್ತು ಆನೆಗಳ ಗರ್ಜನೆ, ಸೆಳೆಯಲ್ಪಡುತ್ತಿದ್ದ ಧನುಸ್ಸುಗಳ ಟೇಂಕಾರಗಳು ಇವೆಲ್ಲವುಗಳ ಶಬ್ಧಗಳು ಮುಗಿಲನ್ನು ಮುಟ್ಟಿದವು. ಓಡಿಹೋಗುತ್ತಿರವರ ಹೆಜ್ಜೆಗಳ ಶಬ್ಧಗಳೂ, ಶಸ್ತ್ರಗಳು ಬೀಳುತ್ತಿರುವ ಶಬ್ಧಗಳೂ, ಕುದುರೆಗಳ ಹೇಂಕಾರಗಳೂ, ರಥಗಳು ನಡೆಯುತ್ತಿರುವ ಶಬ್ಧಗಳೂ, ಮತ್ತು ಕೂಗು-ಗರ್ಜನೆಗಳ ಶಬ್ಧಗಳೂ ಸೇರಿ ಮಹಾ ತುಮುಲವೆದ್ದಿತು. ನಾನಾ ಆಯುಧಗಳಿಂದ ಕತ್ತರಿಸುತ್ತಿರುವವರ, ಆತುರ ಕೂಗುಗಳ ತುಮುಲ ಶಬ್ಧದ ಮಹಾಸ್ವನಗಳು ಆಕಾಶವನ್ನು ಸೇರಿದವು. ಕೆಳಗುರುಳಿಸುತ್ತಿದ್ದ ಮತ್ತು ಕೆಳಗುರುಳುತ್ತಿದ್ದ ಪದಾತಿ-ಅಶ್ವ-ಗಜಗಳ ದೀನತರ ಕೂಗುಗಳು ಇನ್ನೂ ಜೋರಾಗಿ ಕೇಳಿಬರುತ್ತಿತ್ತು. ಆ ಸರ್ವಸೇನೆಗಳಲ್ಲಿ ಅನೇಕಶಃ ಕೌರವರು ಕೌರವರನ್ನೇ ಕೊಲ್ಲುತ್ತಿದ್ದರು; ಶತ್ರುಗಳು ಶತ್ರುಗಳನ್ನೇ ಕೊಲ್ಲುತ್ತಿದ್ದರು. ತೊಳೆಯಲು ಅಗಸನ ಮನೆಯಲ್ಲಿ ಬಟ್ಟೆಗಳು ರಾಶಿ ರಾಶಿಯಾಗಿ ಬಂದು ಬೀಳುವಂತೆ ಯೋಧರ ಮತ್ತು ಆನೆಗಳ ವೀರಬಾಹುಗಳು ತುಂಡಾಗಿ ತೊಪತೊಪನೆ ಬೀಳುತ್ತಿದ್ದವು. ಖಡ್ಗಗಳನ್ನು ಹಿಡಿದ ವೀರಬಾಹುಗಳ ಮೇಲೆ ಬೀಳುವ ಖಡ್ಗಗಳ ಶಬ್ಧವು ಅಗಸನು ಬಂಡೆಯಮೇಲೆ ಬಟ್ಟೆಯನ್ನು ಒಗೆಯುವ ಶಬ್ಧದಂತಿತ್ತು. ಅರ್ಧ ತುಂಡಾದ ಚೂರಿಗಳಿಂದಲೂ, ಖಡ್ಗಗಳಿಂದಲೂ, ತೋಮರಗಳಿಂದಲೂ, ಪರಶಾಯುಧಗಳಿಂದಲೂ ಆ ಮಹಾ ಸುದಾರುಣ ಯುದ್ಧವು ನಡೆಯಿತು. ಆನೆ-ಕುದುರೆಗಳ ಕಾಯದಿಂದ ಹುಟ್ಟಿದ, ನರದೇಹಗಳನ್ನು ಕೊಚ್ಚಿಕೊಂಡು ಹೋಗುತ್ತಿದ್ದ, ಶಸ್ತ್ರಗಳೇ ಮೀನುಗಳಂತೆ ತುಂಬಿಹೋಗಿದ್ದ, ಮಾಂಸಶೋಣಿತಗಳೇ ಕೆಸರಾಗುಳ್ಳ, ಆರ್ತನಾದವೇ ಅಲೆಗಳ ಶಬ್ಧವಾಗಿದ್ದ, ಪತಾಕೆಗಳ ವಸ್ತ್ರಗಳೇ ನೊರೆಗಳಂತೆ ತೇಲುತ್ತಿದ್ದ ಪರಲೋಕಕ್ಕೆ ಹರಿದು ಹೋಗುತ್ತಿದ್ದ ನದಿಯನ್ನೇ ಆ ವೀರರು ಸೃಷ್ಟಿಸಿದರು.

ಶರ-ಶಕ್ತಿಗಳಿಂದ ಗಾಯಗೊಂಡ, ಆಯಾಸಗೊಂಡ, ರಾತ್ರಿ ಬುದ್ಧಿಗೆಟ್ಟ ಎಲ್ಲ ಗಜಾಶ್ವಗಳೂ ಸ್ಥಬ್ದಗೊಂಡು ನಿಂತುಬಿಟ್ಟಿದ್ದವು. ಸುಂದರ ಕುಂಡಲಗಳಿಂದ ಅಲಂಕೃತ ಶಿರಗಳ ವೀರರ ಮುಖಗಳು ಬಾಡಿಹೋಗಿದ್ದವು. ಅನೇಕ ಯುದ್ಧೋಪಕರಣಗಳು ಅಲ್ಲಲ್ಲಿ ಬಿದ್ದು ಪ್ರಕಾಶಿಸುತ್ತಿದ್ದವು. ಕ್ರವ್ಯಾದಸಂಘಗಳಿಂದ, ಮೃತರಾದ ಮತ್ತು ಅರ್ಧಮೃತರಾದವರ ದೇಹಗಳಿಂದ ತುಂಬಿಹೋಗಿದ್ದ ಆ ರಣಭೂಮಿಯಲ್ಲಿ ಯುದ್ಧಕ್ಕೆ ರಥಗಳು ಹೋಗಲಿಕ್ಕೆ ದಾರಿಯೂ ಇಲ್ಲದಂತಾಗಿತ್ತು. ರಕ್ತಮಾಂಸಗಳ ಕೆಸರಿನಲ್ಲಿ ರಥಚಕ್ರಗಳು ಹೂತುಹೋಗುತ್ತಿದ್ದವು. ಕುದುರೆಗಳು ಬಹಳವಾಗಿ ಬಳಲಿದ್ದವು. ಬಾಣಗಳಿಂದ ಬಹಳವಾಗಿ ಗಾಯಗೊಂಡು ನಡುಗುತ್ತಿದ್ದವು. ಆದರೂ ಉತ್ತಮ ಕುಲ-ಸತ್ತ್ವ-ಬಲಗಳುಳ್ಳ ಆ ಕುದುರೆಗಳು ಆನೆಗಳಂತೆ ಕಷ್ಟದಿಂದ ರಥಗಳನ್ನು ಒಯ್ಯುತ್ತಿದ್ದವು.

ದ್ರೋಣ ಮತ್ತು ಅರ್ಜುನರಿಬ್ಬರನ್ನು ಬಿಟ್ಟು ಉಳಿದ ಎಲ್ಲ ಸೇನೆಗಳೂ ವಿಹ್ವಲ, ಭ್ರಾಂತ, ಭಯಾರ್ದಿತ ಆತುರವಾಗಿದ್ದವು. ಅವರಿಬ್ಬರೂ ಅವರ ಆಶ್ರಯದಾತರಾಗಿದ್ದರು. ಆರ್ತರಕ್ಷಕರಾಗಿದ್ದರು. ಅನ್ಯೋನ್ಯರನ್ನು ಎದುರಿಸಿ ಅವರು ವೈವಸ್ವತಕ್ಷಯಕ್ಕೆ ಹೋಗುತ್ತಿದ್ದರು. ಕೌರವರ ಮತ್ತು ಪಾಂಚಾಲರ ಮಹಾಬಲಗಳು ಬೆರೆದು ಮಹಾಕಷ್ಟಕ್ಕೊಳಗಾದವು. ಅವರಿಗೆ ಯಾವುದೂ ತಿಳಿಯುತ್ತಿರಲಿಲ್ಲ. ಅಂತಕನ ಆಟದಂತಿದ್ದ, ಹೇಡಿಗಳ ಭಯವನ್ನು ಹೆಚ್ಚಿಸುತ್ತಿದ್ದ ಆ ಯುದ್ಧದಲ್ಲಿ ಪೃಥ್ವಿಯ ರಾಜವಂಶಗಳ ಮಹಾ ಕ್ಷಯವುಂಟಾಗುತ್ತಿತ್ತು. ಯುದ್ಧದಲ್ಲಿ ತೊಡಗಿ ಧೂಳಿನಿಂದ ತುಂಬಿಹೋಗಿದ್ದ ಆ ಸೇನೆಗಳಲ್ಲಿ ಕರ್ಣನನ್ನಾಗಲೀ, ದ್ರೋಣನನ್ನಾಗಲೀ, ಅರ್ಜುನನನ್ನಾಗಲೀ, ಯುಧಿಷ್ಠಿರನನ್ನಾಗಲೀ, ಭೀಮಸೇನನನ್ನಾಗಲೀ, ಯಮಳರನ್ನಾಗಲೀ, ಪಾಂಚಾಲ್ಯನನ್ನಾಗಲೀ, ಸಾತ್ಯಕಿಯನ್ನಾಗಲೀ, ದುಃಶಾಸನನನ್ನಾಗಲೀ, ದ್ರೌಣಿಯನ್ನಾಗಲೀ, ದುರ್ಯೋಧನ-ಸೌಬಲರನ್ನಾಗಲೀ, ಕೃಪನನ್ನಾಗಲೀ, ಕೃತವರ್ಮನನ್ನಾಗಲೀ, ಇನ್ನು ಇತರರನ್ನಾಗಲೀ, ಆಕಾಶವನ್ನಾಗಲೀ, ದಿಕ್ಕುಗಳನ್ನಾಗಲೀ, ಕಾಣದಂತಾಗಿತ್ತು.

ಆ ತುಮುಲಯುದ್ಧವು ನಡೆಯುತ್ತಿರಲು ಧೂಳಿನ ಘೋರ ಮೋಡವೇ ಮೇಲೆದ್ದಿತು. ಅದನ್ನು ನೋಡಿ ಎರಡನೆಯೇ ರಾತ್ರಿಯೇ ಬಂದುಬಿಟ್ಟಿತೋ ಎಂದು ಜನರು ಸಂಭ್ರಾಂತರಾದರು. ಆ ಧೂಳಿನಲ್ಲಿ ಕೌರವೇಯರು, ಪಾಂಚಾಲರು ಮತ್ತು ಪಾಂಡವರು ಯಾರೆಂದೇ ತಿಳಿಯುತ್ತಿರಲಿಲ್ಲ. ದಿಕ್ಕುಗಳಾಗಲೀ, ಆಕಾಶವಾಗಲೀ, ಹಳ್ಳ-ದಿಣ್ಣೆಗಳಾಗಲೀ ಕಾಣುತ್ತಿರಲಿಲ್ಲ. ಯುದ್ಧದಲ್ಲಿ ವಿಜಯೈಷಿ ನರರು ಕೈಗೆಸಿಕ್ಕಿದವರನ್ನು, ಶತ್ರುಗಳೋ ತಮ್ಮವರೋ ಎನ್ನುವುದನ್ನು ವಿಚಾರಿಸದೇ ಕೆಳಗುರುಳಿಸುತ್ತಿದ್ದರು. ಗಾಳಿಯು ಜೋರಾಗಿ ಬೀಸುತ್ತಿದ್ದುದರಿಂದ ಧೂಳು ಮೇಲೆ ಹಾರಿತು. ರಕ್ತವು ಸುರಿಯುತ್ತಿದ್ದುದರಿಂದ ಧೂಳು ಭೂಮಿಯಲ್ಲಿಯೇ ನಿಂತು ಕಡಿಮೆಯಾಯಿತು. ಅಲ್ಲಿ ರಕ್ತದಿಂದ ತೋಯ್ದುಹೋಗಿದ್ದ ಆನೆಗಳು, ಕುದುರೆಗಳೂ, ರಥವೇರಿದ್ದ ಯೋಧರು ಮತ್ತು ಪದಾತಿಗಳು ಪಾರಿಜಾತವೃಕ್ಷಗಳ ವನಗಳೋಪಾದಿಯಲ್ಲಿ ಗೋಚರಿಸುತ್ತಿದ್ದವು. ಆಗ ದುರ್ಯೋಧನ, ಕರ್ಣ, ದ್ರೋಣ, ಮತ್ತು ದುಃಶಾಸನ ಈ ನಾಲ್ವರು ನಾಲ್ವರು ಪಾಂಡವ ಮಹಾರಥರೊಡನೆ ಯುದ್ಧದಲ್ಲಿ ತೊಡಗಿದರು. ಸಹೋದರನೊಂದಿಗೆ ದುರ್ಯೋಧನನು ಯಮಳರೊಡನೆಯೂ, ರಾಧೇಯನು ವೃಕೋದರನೊಡನೆಯೂ, ಅರ್ಜುನನು ಭಾರದ್ವಾಜನೊಂದಿಗೂ ಯುದ್ಧಮಾಡಿದರು. ಪರಸ್ಪರರ ಮೇಲೆ ಎರಗುತ್ತಿದ್ದ ಆ ರಥರ್ಷಭರ ಉಗ್ರ ಅಮಾನುಷ ಮಹದಾಶ್ಚರ್ಯಕರ ಘೋರ ಯುದ್ಧವನ್ನು ಎಲ್ಲರೂ ಸುತ್ತುವರೆದು ನೋಡಿದರು. ವಿಚಿತ್ರ ರಥಮಾರ್ಗಗಳನ್ನೂ, ವಿಚಿತ್ರ ರಥಸಂಕುಲಗಳನ್ನೂ, ಚಿತ್ರಯೋಧಿಗಳ ಆ ವಿಚಿತ್ರ ಯುದ್ಧವನ್ನು ರಥಿಗಳು ನೋಡಿದರು. ಪರಸ್ಪರರನ್ನು ಗೆಲ್ಲಲು ಬಯಸಿದ್ದ ಆ ಪರಾಕ್ರಾಂತರು ಬೇಸಗೆಯ ಅಂತ್ಯದಲ್ಲಿನ ಮೋಡಗಳಂತೆ ಶರವರ್ಷಗಳನ್ನು ಸುರಿಸಿ ಪ್ರಯತ್ನಿಸುತ್ತಿದ್ದರು. ಸೂರ್ಯಸಂಕಾಶ ರಥಗಳಲ್ಲಿ ಕುಳಿತಿದ್ದ ಆ ಪುರುಷರ್ಷಭರು ಮಿಂಚಿನಿಂದ ಕೂಡಿದ ಶರತ್ಕಾಲದ ಮೋಡಗಳಂತೆ ಶೋಭಿಸುತ್ತಿದ್ದರು. ಆ ಮಹೇಷ್ವಾಸ ಧನುರ್ಧರರು ಪ್ರಯತ್ನಪಟ್ಟು ಸ್ಪರ್ಧಿಸುತ್ತಿದ್ದರು. ಮದಿಸಿದ ಸಲಗಗಳಂತೆ ಅನ್ಯೋನ್ಯರನ್ನು ಆಕ್ರಮಣಿಸುತ್ತಿದ್ದರು. ಕಾಲವು ಸಮೀಪವಾಗುವ ಮೊದಲು ದೇಹವು ನಾಶವಾಗುವುದಿಲ್ಲ. ಅಲ್ಲಿ ಎಲ್ಲ ಮಹಾರಥರೂ ಗಾಯಗೊಂಡಿದ್ದರೇ ಹೊರತು ಎಲ್ಲರೂ ಒಟ್ಟಿಗೇ ಸಾಯಲಿಲ್ಲ.

ದುರ್ಯೋಧನ-ದುಃಶಾಸನರು ನಕುಲ-ಸಹದೇವರೊಂದಿಗೆ ಯುದ್ಧಮಾಡಿದುದು

ಆಗ ಅಸಹನೆಯಿಂದ ಕ್ರುದ್ಧನಾಗಿದ್ದ ದುರ್ಯೋಧನನಿಗೂ ಕ್ರುದ್ಧನಾಗಿ ಅಸಹನೆಗೊಂಡಿದ್ದ ನಕುಲನಿಗೂ ಯುದ್ಧವು ನಡೆಯಿತು. ಮಾದ್ರೀಪುತ್ರನು ದುರ್ಯೋಧನನನ್ನು ಬಲಭಾಗಕ್ಕೆ ಮಾಡಿಕೊಂಡು ಹೃಷ್ಟನಾಗಿ ನೂರಾರು ಶರಗಳನ್ನು ಅವನ ಮೇಲೆ ಚೆಲ್ಲಿ ಮಹಾನಾದಗೈದನು. ಭ್ರಾತೃತ್ವದಿಂದಾಗಿ ತನ್ನನ್ನು ಬಲಭಾಗಕ್ಕೆ ಮಾಡಿಕೊಂಡು ಯುದ್ಧಮಾಡುತ್ತಿದುದು ದುರ್ಯೋಧನನಿಗೆ ಸಹಿಸಿಕೊಳ್ಳಲಾಗಲಿಲ್ಲ. ಬಹಳಬೇಗ ಅವನು ನಕುಲನನ್ನು ತನ್ನ ಬಲಭಾಗಕ್ಕೆ ಮಾಡಿಕೊಂಡನು. ವಿಚಿತ್ರಮಾರ್ಗಗಳನ್ನು ತಿಳಿದಿದ್ದ ತೇಜಸ್ವೀ ನಕುಲನು ದುರ್ಯೋಧನನನ್ನು ಪುನಃ ಬಲಭಾಗಕ್ಕೆ ಮಾಡಿಕೊಂಡು ತಡೆದನು. ನಕುಲನು ಎಲ್ಲ ಕಡೆಗಳಿಂದಲೂ ಅವನನ್ನು ತಡೆಹಿಡಿದು, ಶರಜಾಲಗಳಿಂದ ಪೀಡಿಸಿ ವಿಮುಖನನ್ನಾಗಿ ಮಾಡಿದನು. ಅದನ್ನು ಸೇನೆಗಳು ಶ್ಲಾಘಿಸಿದವು. ದುರ್ಯೋಧನನ ದುರ್ಮಂತ್ರದಿಂದ ನಡೆಯಲ್ಪಟ್ಟ ಎಲ್ಲ ದುಃಖಗಳನ್ನು ಸ್ಮರಿಸಿಕೊಳ್ಳುತ್ತಾ ನಕುಲನು ಅವನಿಗೆ “ನಿಲ್ಲು! ನಿಲ್ಲು!” ಎಂದು ಕೂಗಿ ಹೇಳಿದನು.

ಆಗ ದುಃಶಾಸನನು ಕ್ರುದ್ಧನಾಗಿ ಮೇದಿನಿಯನ್ನು ನಡುಗಿಸುವಂಥಹ ತೀವ್ರ ರಥವೇಗದಿಂದ ಸಹದೇವನನ್ನು ಆಕ್ರಮಣಿಸಿದನು. ಅವನು ಬಂದೆರಗುವುದರೊಳಗೆ ಮಾದ್ರೀಸುತನು ಭಲ್ಲದಿಂದ ಅವನ ಸಾರಥಿಯ ಶಿರವನ್ನು, ಶಿರಸ್ತ್ರಾಣದೊಂದಿಗೆ, ಕತ್ತರಿಸಿದನು. ಸಹದೇವನು ಆಶುಗಗಳಿಂದ ವೇಗವಾಗಿ ಸಾರಥಿಯ ಶಿರವನ್ನು ಕತ್ತರಿಸಿದುದು ದುಃಶಾಸನನಿಗಾಗಲೀ ಅಥವಾ ಬೇರೆ ಯಾವ ಸೈನಿಕರಿಗಾಗಲೀ ತಿಳಿಯಲೇ ಇಲ್ಲ. ಹಿಡಿಯದೇ ಇದ್ದುದರಿಂದ ಯಥಾಸುಖವಾಗಿ ಕುದುರೆಗಳು ಹೋಗುತ್ತಿದ್ದಾಗಲೇ ಸಾರಥಿಯು ಹತನಾದುದುದನ್ನು ದುಃಶಾಸನನು ತಿಳಿದುಕೊಂಡನು. ಹಯವಿಶಾರದ ದುಃಶಾಸನನು ಸ್ವಯಂ ತಾನೇ ಕುದುರೆಗಳ ಕಡಿವಾಣಗಳನ್ನು ಹಿಡಿದು ನಡೆಸಿ ವಿಚಿತ್ರ, ಲಘು ಮತ್ತು ಖಡಾ-ಖಡಿ ಭಂಗಿಗಳಲ್ಲಿ ಯುದ್ಧಮಾಡಿದನು. ಸೂತನು ಹತನಾಗಿದ್ದ ರಥವನ್ನು ನಡೆಸುತ್ತಾ ಭಯವಿಲ್ಲದೇ ರಣದಲ್ಲಿ ಸಂಚರಿಸುತ್ತಿದ್ದ ಅವನ ಆ ಕರ್ಮವನ್ನು ಕೌರವರೂ ಶತ್ರುಗಳೂ ಪ್ರಶಂಸಿಸಿದರು. ಸಹದೇವನಾದರೋ ಆ ಕುದುರೆಗಳನ್ನು ತೀಕ್ಷ್ಣ ಬಾಣಗಳಿಂದ ಮುಚ್ಚಿದನು. ಬಾಣಗಳಿಂದ ಪೀಡಿತರಾದ ಅವು ಅಲ್ಲಲ್ಲಿ ಓಡತೊಡಗಿದವು. ಆಗ ದುಃಶಾಸನನು ಧನುಸ್ಸನ್ನು ಬಿಟ್ಟು ಕಡಿವಾಣಗಳನ್ನು ಹಿಡಿದು ರಥವನ್ನು ನಿಯಂತ್ರಿಸಿ, ಅದಾದನಂತರ ಕಡಿವಾಣಗಳನ್ನು ಬಿಟ್ಟು ಧನುಸ್ಸಿನಿಂದ ಕೆಲಸಮಾಡುತ್ತಿದ್ದನು. ಅವನ ಆ ದುರ್ಬಲ ಕ್ಷಣಗಳಲ್ಲಿ ಮಾದ್ರೀಪುತ್ರನು ದುಃಶಾಸನನನ್ನು ಬಾಣಗಳಿಂದ ಮುಚ್ಚಿಬಿಡುತ್ತಿದ್ದನು. ಆ ಮಧ್ಯದಲ್ಲಿ ದುಃಶಾಸನನನ್ನು ರಕ್ಷಿಸಲು ಕರ್ಣನು ಮುಂದೆಬಂದನು. ಆಗ ವೃಕೋದರನು ಸಮಾಹಿತನಾಗಿ ಮೂರು ಭಲ್ಲಗಳನ್ನು ಆಕರ್ಣಪೂರ್ಣವಾಗಿ ಸೆಳೆದು ಕರ್ಣನ ಬಾಹುಗಳೆರಡಕ್ಕೂ ಮತ್ತು ಎದೆಗೂ ಹೊಡೆದು ಗರ್ಜಿಸಿದನು. ತುಳಿಯಲ್ಪಟ್ಟ ಸರ್ಪದಂತೆ ಕರ್ಣನು ಅವನನ್ನು ತಡೆಗಟ್ಟಿದನು. ಆಗ ಭೀಮ-ರಾಧೇಯರ ನಡುವೆ ತುಮುಲ ಯುದ್ಧವು ಪ್ರಾರಂಭವಾಯಿತು.

ಕರ್ಣ-ಭೀಮಸೇನರ ಯುದ್ಧ

ಎರಡು ಹೋರಿಗಳಂತೆ ಸಂಕ್ರುದ್ಧರಾಗಿದ್ದ, ತೆರಳಿದ ಕಣ್ಣಿದ್ದ ಅವರಿಬ್ಬರೂ ಮಹಾ ವೇಗದಿಂದ ಸಂರಬ್ಧರಾಗಿ ಅನ್ಯೋನ್ಯರ ಮೇಲೆ ಎರಗಿದರು. ಯುದ್ಧಕೌಶಲರಾದ ಇಬ್ಬರೂ ಅಂಟಿಕೊಂಡು ಯುದ್ಧಮಾಡುತ್ತಿರುವುದರಿಂದ ಬಾಣಗಳ ಸುರಿಮಳೆಗಳನ್ನು ನಿಲ್ಲಿಸಿ ಗದಾಯುದ್ಧವನ್ನು ಪ್ರಾರಂಭಿಸಿದರು. ಭೀಮಸೇನನಾದರೋ ಕರ್ಣನ ರಥದ ಮೂಕಿಯನ್ನು ಗದೆಯಿಂದ ಚೂರುಮಾಡಿದನು. ಅದೊಂದು ಅದ್ಭುತವಾಯಿತು. ಆಗ ವೀರ್ಯವಾನ್ ರಾಧೇಯನು ಗದೆಯನ್ನು ಎತ್ತಿಕೊಂಡು ಭೀಮನ ರಥದ ಮೇಲೆ ಎಸೆಯಲು ಅವನು ಆ ಗದೆಯನ್ನು ಇನ್ನೊಂದು ಗದೆಯಿಂದ ಹೊಡೆದು ಪುಡಿಮಾಡಿದನು. ಭೀಮನು ಪುನಃ ಭಾರವಾದ ಗದೆಯೊಂದನ್ನು ಆಧಿರಥನ ಮೇಲೆ ಎಸೆದನು. ಅದನ್ನು ಕರ್ಣನು ಗುರಿಯಿಟ್ಟು ಪುಂಖಗಳುಳ್ಳ ಹತ್ತು ಶರಗಳಿಂದ ಹೊಡೆದನು. ಬಾಣಗಳಿಂದ ಪ್ರಹರಿಸಲ್ಪಟ್ಟ ಆ ಗದೆಯು ಪುನಃ ಭೀಮನ ಬಳಿ ಹಿಂದಿರುಗಿತು. ಅದರ ಬೀಳುವಿಕೆಯಿಂದ ಭೀಮನ ವಿಶಾಲ ಧ್ವಜವು ಕೆಳಗೆ ಬಿದ್ದಿತು ಮತ್ತು ಗದೆಯಿಂದ ಹೊಡೆಯಲ್ಪಟ್ಟು ಸಾರಥಿಯೂ ಮೂರ್ಛಿತನಾದನು. ಅವನು ಕ್ರೋಧಮೂರ್ಚಿತನಾಗಿ ಕರ್ಣನ ಮೇಲೆ ಅವನ ಧ್ವಜ, ಧನುಸ್ಸು ಮತ್ತು ಬತ್ತಳಿಕೆಗಳಿಗೆ ಗುರಿಯಿಟ್ಟು ಎಂಟು ಸಾಯಕಗಳನ್ನು ಪ್ರಯೋಗಿಸಿದನು. ಆಗ ರಾಧೇಯನು ಪುನಃ ಭೀಮನ ಕರಡೀ ಬಣ್ಣದ ಕುದುರೆಗಳನ್ನೂ, ರಥದ ನೊಗವನ್ನೂ ಮತ್ತು ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ನಾಶಗೊಳಿಸಿದನು. ರಥಹೀನನಾದ ಭೀಮನು ಸಿಂಹವು ಪರ್ವತ ಶಿಖರಕ್ಕೆ ನೆಗಯುವಂತೆ ನಕುಲನ ರಥಕ್ಕೆ ಹಾರಿ ಕುಳಿತನು.

ದ್ರೋಣಾರ್ಜುನರ ಯುದ್ಧ

ಹಾಗೆಯೇ ಮಹಾರಥ, ಆಚಾರ್ಯ-ಶಿಷ್ಯ, ಯುದ್ಧಪ್ರಹರಣಗಳಲ್ಲಿ ಕುಶಲ ದ್ರೋಣ-ಅರ್ಜುನರು ವಿಚಿತ್ರ ಯುದ್ಧದಲ್ಲಿ ತೊಡಗಿದ್ದರು. ಬಾಣಗಳ ಸಂಧಾನ-ಪ್ರಯೋಗಗಳ ಲುಘುತ್ವದಿಂದಲೂ, ದ್ವೈರಥ ಯುದ್ಧದಿಂದಲೂ, ರಣದಲ್ಲಿ ಮನುಷ್ಯರ ಕಣ್ಣು-ಮನಸ್ಸುಗಳನ್ನು ಭ್ರಮೆಗೊಳಿಸುತ್ತಿದ್ದ, ಹಿಂದೆಂದೂ ನೋಡದಿದ್ದ ಆ ಗುರುಶಿಷ್ಯರ ಯುದ್ಧವನ್ನು ನೋಡುತ್ತಾ ಕೌರವರ ಮತ್ತು ಶತ್ರುಗಳ ಎಲ್ಲ ಯೋಧರೂ ಯುದ್ಧದಿಂದ ಸ್ವಲ್ಪ ವಿರಮಿಸಿದರು. ಸೇನೆಗಳ ಮಧ್ಯದಿಂದ ರಥಮಾರ್ಗದಲ್ಲಿ ನುಸುಳಿಕೊಳ್ಳುತ್ತಾ ಅನ್ಯೋನ್ಯರನ್ನು ಬಲಬಾಗದಲ್ಲಿಟ್ಟುಕೊಂಡು ಯುದ್ಧಮಾಡಲು ಆ ವೀರರಿಬ್ಬರೂ ಪ್ರಯತ್ನಿಸುತ್ತಿದ್ದರು. ಅವರ ಆ ಪರಾಕ್ರಮವನ್ನು ಯೋಧರು ವಿಸ್ಮಿತರಾಗಿ ನೋಡುತ್ತಿದ್ದರು. ಮಾಂಸದ ತುಂಡಿಗಾಗಿ ಗಗನದಲ್ಲಿ ಎರಡು ಗಿಡುಗಗಳ ನಡುವೆ ನಡೆಯುವಂತೆ ದ್ರೋಣ-ಪಾಂಡವರೊಡನೆ ಮಹಾ ಯುದ್ಧವು ನಡೆಯಿತು. ಕುಂತೀಪುತ್ರನನ್ನು ಗೆಲ್ಲಲು ದ್ರೋಣನು ಏನನ್ನು ಮಾಡುತ್ತಿದ್ದನೋ ಅದನ್ನು ನಗುತ್ತಾ ಪಾಂಡವನು ಪ್ರತಿಯಾಗಿ ನಾಶಗೊಳಿಸುತ್ತಿದ್ದನು. ದ್ರೋಣನು ಪಾಂಡವನನ್ನು ಮೀರಿಸಲು ಶಕ್ಯನಾಗದಿರಲು ಆ ಅಸ್ತ್ರಮಾರ್ಗವಿಶಾರದನು ಅಸ್ತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದನು. ದ್ರೋಣನ ಧನುಸ್ಸಿನಿಂದ ಹೊರಬೀಳುತ್ತಿದ್ದ ಐಂದ್ರ, ಪಾಶುಪತ, ತ್ವಾಷ್ಟ, ವಾಯವ್ಯ, ಮತ್ತು ವಾರುಣ ಅಸ್ತ್ರಗಳನ್ನು ಧನಂಜಯನು ಅವುಗಳನ್ನೇ ಪ್ರಯೋಗಿಸಿ ನಾಶಗೊಳಿಸಿದನು. ಅವನ ಅಸ್ತ್ರಗಳನ್ನು ಪಾಂಡವನು ಅಸ್ತ್ರಗಳಿಂದ ಪ್ರಶಮನಗೊಳಿಸುತ್ತಿರಲು ದ್ರೋಣನು ಪರಮ ದಿವ್ಯ ಅಸ್ತ್ರಗಳಿಂದ ಪಾರ್ಥನನ್ನು ಮುಚ್ಚಿದನು. ಪಾರ್ಥನನ್ನು ಗೆಲ್ಲಲು ಯಾವ ಅಸ್ತ್ರವನ್ನು ಅವನು ಪ್ರಯೋಗಿಸುತ್ತಿದ್ದನೋ ಅವುಗಳನ್ನು ಅದೇ ಅಸ್ತ್ರಗಳಿಂದ ಅರ್ಜುನನು ಪ್ರಶಮನಗೊಳಿಸುತ್ತಿದ್ದನು. ದಿವ್ಯಅಸ್ತ್ರಗಳನ್ನು ಅಸ್ತ್ರಗಳಿಂದ ಯಥಾವಿಧಿಯಾಗಿ ಅರ್ಜುನನು ನಾಶಗೊಳಿಸುತ್ತಿರಲು ಅರ್ಜುನನನ್ನು ದ್ರೋಣನು ಮನಸ್ಸಿನಲ್ಲಿಯೇ ಪ್ರಶಂಸಿಸಿದನು. ತನ್ನ ಶಿಷ್ಯನಿಂದಾಗಿ ಅವನು ತನ್ನನ್ನು ತಾನೇ ಇಡೀ ಪೃಥ್ವಿಯಲ್ಲಿ ಎಲ್ಲಕಡೆ ಇದ್ದ ಶಸ್ತ್ರವಿದುಗಳಲ್ಲಿ ಶ್ರೇಷ್ಠನೆಂದು ತಿಳಿದುಕೊಂಡನು. ಆ ಮಹಾತ್ಮರ ಮಧ್ಯೆ ಪಾರ್ಥನಿಂದ ಹಾಗೆ ತಡೆಯಲ್ಪಟ್ಟ ದ್ರೋಣನು ಪ್ರೀತಿಯಿಂದ ಅರ್ಜುನನನ್ನು ತಡೆಯಲು ಪ್ರಯತ್ನಿಸಿ ಯುದ್ಧಮಾಡುತ್ತಿದ್ದನು.

ಆಗ ಅಂತರಿಕ್ಷದಲ್ಲಿ ಸಹಸ್ರಾರು ದೇವತೆಗಳೂ, ಗಂಧರ್ವರೂ, ಋಷಿಗಳೂ ಸಿದ್ಧಸಂಘಗಳೂ ಯುದ್ಧವನ್ನು ನೋಡುವ ಇಚ್ಛೆಯಿಂದ ನೆರೆದಿದ್ದರು. ಅಪ್ಸರೆಯರ ಸಂಕೀರ್ಣದಿಂದ ಮತ್ತು ಯಕ್ಷ-ರಾಕ್ಷಸ ಸಂಕುಲಗಳಿಂದ ಕೂಡಿದ್ದ ಶ್ರೀಮದಾಕಾಶವು ಮೇಘಸಂಕುಲಗಳಿಂದ ಕೂಡಿರುವಂತೆ ಶೋಭಿಸುತ್ತಿತ್ತು. ಧನುಸ್ಸುಗಳ ಟೇಂಕಾರ ಮತ್ತು ಮಹಾಸ್ತ್ರಗಳ ಪ್ರಯೋಗದ ಧ್ವನಿ ಹತ್ತು ದಿಕ್ಕುಗಳಲ್ಲಿಯೂ ಮೊಳಗಿ ಕೇಳಿಬರುತ್ತಿತ್ತು. ಅಲ್ಲಿ ಅಂತರ್ಧಾನರು ದ್ರೋಣ ಮತ್ತು ಪಾರ್ಥರನ್ನು ಪುನಃ ಪುನಃ ಸ್ತುತಿಸಿ ಹೀಗೆ ಮಾತನಾಡಿಕೊಳ್ಳುತ್ತಾ ಸಂಚರಿಸುತ್ತಿದ್ದರು: “ಇದು ಮನುಷ್ಯ ಯುದ್ಧವೂ ಅಲ್ಲ. ಅಸುರ ಅಥವಾ ರಾಕ್ಷಸ ಯುದ್ಧವೂ ಅಲ್ಲ. ಇದು ದೇವತೆಗಳ ಅಥವಾ ಗಂಧರ್ವರ ಅಥವಾ ನಿಶ್ಚಯವಾಗಿಯೂ ಪರಮ ಬ್ರಾಹ್ಮೀ ಯುದ್ಧವೂ ಅಲ್ಲ. ಇಂತಹ ವಿಚಿತ್ರ ಆಶ್ಚರ್ಯವನ್ನು ನಾವು ನೋಡಿರಲಿಲ್ಲ ಮತ್ತು ಕೇಳಿರಲಿಲ್ಲ. ಆಚಾರ್ಯನು ಪಾಂಡವನನ್ನು ಮೀರಿಸಲು ನೋಡುತ್ತಿದ್ದರೆ ಪಾಂಡವನು ದ್ರೋಣನನ್ನು ಅತಿಶಯಿಸಲು ನೋಡುತ್ತಿದ್ದಾನೆ. ಇವರಿಬ್ಬರ ಅಸ್ತ್ರಯುದ್ಧದಲ್ಲಿ ಯಾವುದೇ ರೀತಿಯ ವ್ಯತ್ಯಾಸವನ್ನು ಕಾಣಲು ಶಕ್ಯವಿಲ್ಲ. ಒಂದುವೇಳೆ ರುದ್ರನೇ ಎರಡಾಗಿ ತನ್ನೊಡನೆ ತಾನೇ ಯುದ್ಧಮಾಡುತ್ತಿದ್ದಾನೆಂದರೆ ಅದಕ್ಕೆ ಈ ಯುದ್ಧವನ್ನು ತುಲನೆ ಮಾಡಬಹುದಾಗಿದೆ. ಹೊರತಾಗಿ ಇವರ ಯುದ್ಧಕ್ಕೆ ಬೇರೆ ಯಾವ ಉಪಮೆಯೂ ಇಲ್ಲ. ಜ್ಞಾನವು ಆಚಾರ್ಯನಲ್ಲಿ ಏಕತ್ರವಾಗಿದೆಯೆಂದರೆ ಪಾಂಡವನಲ್ಲಿ ಜ್ಞಾನ-ಉಪಾಯಗಳೆರಡೂ ಇವೆ. ಆಚಾರ್ಯನಲ್ಲಿ ಶೌರ್ಯವೊಂದಿದ್ದರೆ ಪಾಂಡವನಲ್ಲಿ ಬಲ-ಶೌರ್ಯಗಳೆರಡೂ ಇವೆ. ಈ ಇಬ್ಬರು ಮಹೇಷ್ವಾಸರನ್ನು ರಣದಲ್ಲಿ ಯಾವ ಶತ್ರುವೂ ಕೆಳಗುರುಳಿಸಲಾರನು! ಆದರೆ ಇಚ್ಛಿಸಿದರೆ ಇವರಿಬ್ಬರೂ ಇಡೀ ಜಗತ್ತನ್ನೇ ನಾಶಗೊಳಿಸಬಲ್ಲರು.” ಅವರಿಬ್ಬರು ಪುರುಷರ್ಷಭರನ್ನೂ ನೋಡಿ ಕಾಣದಿರುವ ಮತ್ತು ಕಾಣುವ ಭೂತಗಳು ಹೀಗೆ ಹೇಳಿಕೊಳ್ಳುತ್ತಿದ್ದವು.

ಆಗ ಮಹಾಮತಿ ದ್ರೋಣನು ಅದೃಶ್ಯ ಭೂತಗಳನ್ನೂ ರಣದಲ್ಲಿರುವ ಪಾರ್ಥನನ್ನು ಸಂತಾಪಗೊಳಿಸುತ್ತಾ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾದನು. ಆಗ ಪರ್ವತ-ವನ-ದ್ರುಮಗಳೊಂದಿಗೆ ಪೃಥ್ವಿಯು ನಡುಗಿತು. ಚಂಡಮಾರುತವು ಬೀಸತೊಡಗಿತು. ಸಾಗರವು ಅಲ್ಲೋಲಕಲ್ಲೋಲಗೊಂಡಿತು. ಮಹಾತ್ಮನು ಬ್ರಹ್ಮಾಸ್ತ್ರವನ್ನು ಎತ್ತಿಕೊಳ್ಳಲು ಕುರುಪಾಂಡವ ಸೇನೆಗಳಲ್ಲಿ ಮತ್ತು ಎಲ್ಲ ಭೂತಗಳಲ್ಲಿ ಮಹಾ ಭಯವುಂಟಾಯಿತು. ಆಗ ಪಾರ್ಥನು ಗಾಬರಿಗೊಳ್ಳದೇ ಆ ಅಸ್ತ್ರವನ್ನು ಬ್ರಹ್ಮಾಸ್ತ್ರದಿಂದಲೇ ನಾಶಗೊಳಿಸಿದನು. ಆಗ ಎಲ್ಲರ ಮನಸ್ಸಿನಲ್ಲಿದ್ದ ಉದ್ವೇಗಗಳು ಪ್ರಶಮನಗೊಂಡವು. ಯಾವಾಗ ಅವರಿಬ್ಬರ ನಡುವಿನ ಯುದ್ಧವು ಕೊನೆಯನ್ನು ಕಾಣಲಿಲ್ಲವೋ, ಯಾವಾಗ ಅನ್ಯೋನ್ಯರನ್ನು ಅವರು ಸೋಲಿಸಲಿಲ್ಲವೋ ಆಗ ಆ ಯುದ್ಧವು ಸಂಕುಲಯುದ್ಧವಾಗಿ ಪರಿಣಮಿಸಿತು.

ರಣದಲ್ಲಿ ದ್ರೋಣ-ಪಾಂಡವರ ಮಧ್ಯೆ ತುಮುಲ ಯುದ್ಧವು ನಡೆಯಲು ಪುನಃ ಅಲ್ಲಿ ಏನು ನಡೆಯುತ್ತಿದೆಯೆನ್ನುವುದೇ ತಿಳಿಯುತ್ತಿರಲಿಲ್ಲ. ಆಕಾಶವು ಮೇಘಗಳ ಸಮೂಹಗಳಿಂದ ವ್ಯಾಪ್ತವಾಗುವಂತೆ ಬಾಣಗಳ ಸಮೂಹದಿಂದ ಆಕಾಶವೇ ವ್ಯಾಪ್ತವಾಗಲು, ಅಂತರಿಕ್ಷದಲ್ಲಿ ಚಲಿಸುತ್ತಿದ್ದ ಯಾವ ಪಕ್ಷಿಯೂ ಮುಂದುವರೆಯಲು ಸಾಧ್ಯವಾಗುತ್ತಿರಲಿಲ್ಲ.

ತುಮುಲ ಯುದ್ಧ

ಹಾಗೆ ನರಾಶ್ವಗಜಸಂಹಾರವು ನಡೆಯುತ್ತಿರಲು ದುಃಶಾಸನನು ಧೃಷ್ಟದ್ಯುಮ್ನನನ್ನು ಎದುರಿಸಿ ಯುದ್ಧಮಾಡಿದನು. ರುಕ್ಮರಥ ದ್ರೋಣನೊಡನೊಡನೆ ಯುದ್ಧಮಾಡಲು ಆಸಕ್ತನಾದ ಅವನನ್ನು ದುಃಶಾಸನನು ಶರಗಳಿಂದ ಗಾಯಗೊಳಿಸಲು ಅಸಹನೆಯಿಂದ ಅವನು ದುಃಶಾಸನನ ಕುದುರೆಗಳನ್ನು ಶರಗಳಿಂದ ಮುಚ್ಚಿದನು. ಪಾರ್ಷತನ ಶರಗಳಿಂದ ಮುಚ್ಚಲ್ಪಟ್ಟ ಆ ರಥವು ಧ್ವಜ-ಸಾರಥಿಗಳೊಂದಿಗೆ ಕಾಣದಂತಾಯಿತು. ಪಾಂಚಾಲನ ಶರಜಾಲಗಳಿಂದ ಚೆನ್ನಾಗಿ ಪೀಡಿತನಾದ ದುಃಶಾಸನನು ಅವನ ಮುಂದೆ ಹೆಚ್ಚುಕಾಲ ನಿಲ್ಲಲು ಶಕ್ಯನಾಗಲಿಲ್ಲ. ಆ ಪಾರ್ಷತನು ದುಃಶಾಸನನನ್ನು ಬಾಣಗಳಿಂದ ವಿಮುಖನನ್ನಾಗಿ ಮಾಡಿ ರಣದಲ್ಲಿ ದ್ರೋಣನನ್ನೇ ಆಕ್ರಮಣಿಸುತ್ತಾ ಸಹಸ್ರ ಬಾಣಗಳನ್ನು ಎರಚಿದನು.

ಆಗ ಹಾರ್ದಿಕ್ಯ ಕೃತವರ್ಮ ಮತ್ತು ನಂತರ ದುಃಶಾಸನನ ಮೂವರು ಸಹೋದರರು ಧೃಷ್ಟದ್ಯುಮ್ನನನ್ನು ಸುತ್ತುವರೆದರು. ಅಗ್ನಿಯಂತೆ ದೇದೀಪ್ಯಮಾನನಾಗಿ ಉರಿಯುತ್ತಿದ್ದ ದ್ರೋಣನ ಎದುರಾಗಿ ರಭಸದಿಂದ ಮುನ್ನುಗ್ಗುತ್ತಿದ್ದ ಧೃಷ್ಟದ್ಯುಮ್ನನನ್ನು ನಕುಲ-ಸಹದೇವರು ರಕ್ಷಕರಾಗಿ ಹಿಂಬಾಲಿಸಿ ಹೋದರು. ಆ ಎಲ್ಲ ಏಳು ಸತ್ವವಂತ ಅಸಹನಶೀಲ ಮಹಾರಥರೂ ಮರಣವನ್ನೇ ಮುಂದಿಟ್ಟುಕೊಂಡು ಪ್ರಹಾರಕಾರ್ಯದಲ್ಲಿ ತೊಡಗಿದ್ದರು. ಶುದ್ಧಾತ್ಮ ಶುದ್ಧನಡತೆಯ ಅವರು ಪರಸ್ಪರನ್ನು ಜಯಿಸುವ ಇಚ್ಛೆಯಿಂದ ಸ್ವರ್ಗವನ್ನೇ ಗುರಿಯನ್ನಾಗಿಟ್ಟುಕೊಂಡು ಯುದ್ಧಮಾಡುತ್ತಿದ್ದರು. ಶುದ್ಧಕರ್ಮಗಳ ಕುಲಗಳಲ್ಲಿ ಜನಿಸಿದ ಮತಿಮಂತರಾದ ಆ ಜನಾಧಿಪರು ಉತ್ತಮ ಗತಿಯನ್ನೇ ಅಭಿಲಾಷಿಸಿ ಧರ್ಮಯುದ್ಧವನ್ನು ಮಾಡುತ್ತಿದ್ದರು.

ಅಲ್ಲಿ ಅಧರ್ಮಪೂರ್ವಕವಾದ ಅಥವಾ ನಿಂದನೀಯವಾದ ಯುದ್ಧವು ನಡೆಯುತ್ತಿರಲಿಲ್ಲ. ಅಲ್ಲಿ ಕರ್ಣಿ[1], ನಾಲೀಕ[2], ವಿಷಲಿಪ್ತ[3], ವಸ್ತಕ[4], ಸೂಚೀ[5], ಪಿಶ[6], ವಾಸ್ತಿಗಜಾಸ್ತಿಜ[7], ಸಂಶ್ಲಿಷ್ಟ[8], ಪೂತಿ[9], ಮತ್ತು ಜಿಹ್ಮಗ[10]ಗಳನ್ನು ಬಳಸುತ್ತಿರಲಿಲ್ಲ.  ಧರ್ಮಯುದ್ಧದಿಂದ ಕೀರ್ತಿಯನ್ನೂ ಉತ್ತಮ ಲೋಕಗಳನ್ನೂ ಪಡೆದುಕೊಳ್ಳಬೇಕೆಂದು ಇಚ್ಛಿಸಿದ್ದ ಎಲ್ಲ ಯೋಧರೂ ನೇರ ವಿಶುದ್ಧ ಶಸ್ತ್ರಗಳನ್ನೇ ಧರಿಸಿದ್ದರು. ಆಗ ಕೌರವರ ನಾಲ್ವರು ಯೋಧರು ಮತ್ತು ಮೂವರು ಪಾಂಡವರ ಕಡೆಯವರ ಮಧ್ಯೆ ಸರ್ವದೋಷವರ್ಜಿತ ತುಮುಲ ಯುದ್ಧವು ನಡೆಯಿತು. ಕೌರವ ರಥರ್ಷಭರನ್ನು ನಕುಲ-ಸಹದೇವರು ತಡೆಯುತ್ತಿದ್ದಿದ್ದುದನ್ನು ನೋಡಿ ಶೀಘ್ರಾಸ್ತ್ರ ಧೃಷ್ಟದ್ಯುಮ್ನನು ನೇರವಾಗಿ ದ್ರೋಣನನ್ನು ಆಕ್ರಮಣಿಸಿದನು.

ಪರ್ವತಗಳಿಂದ ಚಂಡಮಾರುತವು ತಡೆಹಿಡಿಯಲ್ಪಡುವಂತೆ ಆ ಇಬ್ಬರು ಪುರುಷಸಿಂಹ ವೀರ ನಕುಲ-ಸಹದೇವರಿಂದ ತಡೆಯಲ್ಪಟ್ಟ ಕೌರವ ನಾಲ್ವರು ಅವರೊಂದಿಗೆ ಯುದ್ಧದಲ್ಲಿ ತೊಡಗಿದರು. ಇಬ್ಬಿಬ್ಬರು ರಥಪುಂಗವರು ಒಬ್ಬೊಬ್ಬ ಯಮಳೊಡನೆ ರಥಯುದ್ಧದಲ್ಲಿ ಸಮಾಸಕ್ತರಾಗಿರಲು ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದನು. ಪಾಂಚಾಲ್ಯನು ಯುದ್ಧದುರ್ಮದ ದ್ರೋಣನ ಮೇಲೆ ಎರಗುತ್ತಿರುವುದನ್ನು ಮತ್ತು ನಕುಲ-ಸಹದೇವರು ಉಳಿದವರೊಡನೆ ಯುದ್ಧದಲ್ಲಿ ಸಮಾಸಕ್ತರಾಗಿರುವುದನ್ನು ನೋಡಿ ದುರ್ಯೋಧನನು ರಕ್ತವನ್ನು ಕುಡಿಯುವ ಬಾಣಗಳನ್ನು ಸುರಿಸುತ್ತಾ ಮಧ್ಯದಲ್ಲಿ ನುಗ್ಗಿ ಆಕ್ರಮಣಮಾಡಿದನು.

ಸಾತ್ಯಕಿ-ದುರ್ಯೋಧನರ ಯುದ್ಧ

ಆಗ ಅವನನ್ನು ಸಾತ್ಯಕಿಯು ಪುನಃ ಶೀಘ್ರವಾಗಿ ಆಕ್ರಮಣಿಸಿ ತಡೆದನು. ಅವರಿಬ್ಬರು ಕುರು-ಮಾಧವ ನರಶಾರ್ದೂಲರು ಪರಸ್ಪರರ ಸಮೀಪ ಬಂದು ನಿರ್ಭೀತರಾಗಿ ಗಹಗಹಿಸಿ ನಗುತ್ತಾ ಯುದ್ಧದಲ್ಲಿ ತೊಡಗಿದರು. ಅನ್ಯೋನ್ಯರನ್ನು ನೋಡಿ ಬಾಲ್ಯದಲ್ಲಿ ನಡೆದಿದ್ದ ಎಲ್ಲ ಪ್ರಿಯ ಸಂಗತಿಗಳನ್ನೂ ಸ್ಮರಿಸಿಕೊಂಡು ಪುನಃ ಪುನಃ ನಗುತ್ತಿದ್ದರು. ಆಗ ದುರ್ಯೋಧನನು ಪ್ರಿಯ ಸಖ ಸಾತ್ಯಕಿಗೆ ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾ ಹೇಳಿದನು: “ಸಖಾ! ಈ ಕ್ರೋಧಕ್ಕೆ ಧಿಕ್ಕಾರ! ಈ ಲೋಭ, ಮೋಹ, ಅಸಹನೆಗಳಿಗೆ ಧಿಕ್ಕಾರ! ಕ್ಷತ್ರಿಯ ನಡತೆಗೆ ಧಿಕ್ಕಾರ! ಶ್ರೇಷ್ಠ ಎದೆಗಾರಿಕೆಗೂ ಧಿಕ್ಕಾರ! ಶಿನಿಪುಂಗವ! ನಿನ್ನನ್ನು ನಾನು ಮತ್ತು ನನ್ನನ್ನು ನೀನು ಎದುರಿಸಿ ಯುದ್ಧಮಾಡುತ್ತಿದ್ದೇವೆಯಲ್ಲಾ! ಸದಾ ನೀನು ನನಗೆ ಪ್ರಾಣಕ್ಕಿಂತಲೂ ಪ್ರಿಯನಾಗಿದ್ದೆ. ನಾನೂ ಕೂಡ ನಿನಗೆ ಪ್ರಾಣಕ್ಕಿಂತಲೂ ಪ್ರಿಯನಾಗಿದ್ದೆ! ನಾವಿಬ್ಬರೂ ಬಾಲ್ಯದಲ್ಲಿ ಮಾಡಿದುದೆಲ್ಲವನ್ನೂ ನಾನು ಸ್ಮರಿಸಿಕೊಳ್ಳುತ್ತೇನೆ. ಆದರೆ ಈ ರಣಾಂಗಣದಲ್ಲಿ ಅವೆಲ್ಲವೂ ಜೀರ್ಣವಾಗಿ ಮುಗಿದುಹೋದಂತಿವೆ! ಕ್ರೋಧ-ಲೋಭಗಳಲ್ಲದೇ ಬೇರೆ ಯಾವ ಕಾರಣಕ್ಕಾಗಿ ನಾವು ಇಂದು ಯುದ್ಧಮಾಡುತ್ತಿದ್ದೇವೆ ಸಾತ್ವತ?”

ಹಾಗೆ ಮಾತನಾಡುತ್ತಿದ್ದ ಅವನಿಗೆ ಪರಮಾಸ್ತ್ರಗಳನ್ನು ತಿಳಿದಿದ್ದ ಸಾತ್ಯಕಿಯು ತೀಕ್ಷ್ಣ ವಿಶಿಖಗಳನ್ನು ಎತ್ತಿಕೊಂಡು ನಗುತ್ತಾ ಉತ್ತರಿಸಿ ಹೇಳಿದನು: “ರಾಜಪುತ್ರ! ಇದು ಅಂದು ನಾವು ಒಟ್ಟಾಗಿ ಆಟವಾಡುತ್ತಿದ್ದ ಸಭೆಯೂ ಅಲ್ಲ. ಆಚಾರ್ಯನ ಮನೆಯೂ ಅಲ್ಲ.”

ದುರ್ಯೋಧನನು ಹೇಳಿದನು: “ಶಿನಿಪುಂಗವ! ಬಾಲ್ಯದಲ್ಲಿ ಆಡುತ್ತಿದ್ದ ಆ ನಮ್ಮ ಆಟವು ಎಲ್ಲಿ ಹೋಯಿತು? ಪುನಃ ಈ ಯುದ್ಧವು ಏತಕ್ಕೆ? ಕಾಲವನ್ನು ಮೀರಿಹೋಗುವುದು ಅತ್ಯಂತ ಕಷ್ಟಕರವಾದುದು! ಇಲ್ಲಿ ನಾವೆಲ್ಲರೂ ಧನಲೋಭದಿಂದಲೇ ಯುದ್ಧಕ್ಕೆ ಸೇರಿಕೊಂಡಿಲ್ಲವೇ? ಆದರೆ ನಮಗೆ ಧನದಿಂದಾಗಲೀ ಧನದ ಆಸೆಯಿಂದಾಗಲೀ ಮಾಡುವ ಕಾರ್ಯವೇನಿದೆ?”

ಅಲ್ಲಿ ಹಾಗೆ ಮಾತನಾಡುತ್ತಿದ್ದ ದುರ್ಯೋಧನನಿಗೆ ಸಾತ್ಯಕಿಯು ಹೇಳಿದನು: “ಕ್ಷತ್ರಿಯನಾಗಿ ಸದಾ ಹೀಗೆಯೇ ನಡೆದುಕೊಳ್ಳಬೇಕಾಗುತ್ತಾದೆ. ಗುರುವಾದರೂ ಅವನೊಂದಿಗೆ ಯುದ್ಧಮಾಡಬೇಕಾಗುತ್ತದೆ! ಒಂದುವೇಳೆ ನಾನು ನಿನಗೆ ಪ್ರಿಯನಾಗಿದ್ದರೆ ನನ್ನನ್ನು ಜಯಿಸು! ಸಾವಕಾಶಮಾಡಬೇಡ! ನೀನು ಹಾಗೆ ಮಾಡಿದರೆ ನಾನು ಅನೇಕ ಸುಕೃತಲೋಕಗಳಿಗೆ ಹೋಗಬಲ್ಲೆ! ಆದುದರಿಂದ ನಿನ್ನಲ್ಲಿರುವ ಶಕ್ತಿ-ಬಲಗಳನ್ನು ಬೇಗನೇ ನನ್ನಲ್ಲಿ ಪ್ರದರ್ಶಿಸು. ಮಿತ್ರರ ಈ ಮಹಾ ವ್ಯಸನವನ್ನು ಇನ್ನೂ ಹೆಚ್ಚುಕಾಲ ನೋಡಲು ನನಗಿಷ್ಟವಿಲ್ಲ!”

ಹೀಗೆ ಸಾತ್ಯಕಿಯು ಸ್ಪಷ್ಟಮಾತುಗಳನ್ನಾಡಿ ಅವನಿಗೆ ಉತ್ತರಿಸಿ ಬೇಗನೇ ನಿರಪೇಕ್ಷನಾಗಿ ಅವನನ್ನು ಆಕ್ರಮಣಿಸಿದನು. ಅವನು ಆಕ್ರಮಣಿಸುತ್ತಿರುವುದನ್ನು ನೋಡಿ ದುರ್ಯೋಧನನು ಶೈನೇಯನನ್ನು ಶರಗಳಿಂದ ಮುಚ್ಚಿ ತಡೆದನು. ಆಗ ಅನ್ಯೋನ್ಯರಲ್ಲಿ ಕ್ರುದ್ಧರಾಗಿದ್ದ ಕುರು-ಮಾಧವಸಿಂಹರೊಡನೆ ಆನೆ-ಸಿಂಹಗಳ ನಡುವಿನಂತೆ ಘೋರ ಯುದ್ಧವು ನಡೆಯಿತು. ಅನಂತರ ದುರ್ಯೋಧನನು ಸಾತ್ವತನನ್ನು ಪೂರ್ಣಾಯತವಾಗಿ ಸೆಳೆದು ಬಿಡಲ್ಪಟ್ಟ ಹತ್ತು ನಿಶಿತ ಶರಗಳಿಂದ ಹೊಡೆದನು. ಹಾಗೆಯೇ ಸಾತ್ಯಕಿಯೂ ಕೂಡ ಅವನನ್ನು ತಿರುಗಿ ಹತ್ತು ಶರಗಳಿಂದ, ಮತ್ತೆ ಪುನಃ ಐವತ್ತು, ಮೂವತ್ತು ಮತ್ತು ಹತ್ತು ಶರಗಳಿಂದ ಹೊಡೆದನು. ಆಗ ಸಾತ್ಯಕಿಯು ತಕ್ಷಣವೇ ದುರ್ಯೋಧನನು ಸಂಧಾನಮಾಡುತ್ತಿದ್ದ ಬಾಣವನ್ನೂ ಆ ಬಾಣದಿಂದ ಕೂಡಿದ್ದ ಧನುಸ್ಸನೂ ಕತ್ತರಿಸಿ ಅವನನ್ನು ಚೆನ್ನಾಗಿ ಗಾಯಗೊಳಿಸಿದನು. ದಾಶಾರ್ಹನ ಶರ ಪೀಡಿತ ದುರ್ಯೋಧನನು ಗಾಡವಾಗಿ ಗಾಯಗೊಂಡು ವ್ಯಥಿತನಾಗಿ ರಥದಲ್ಲಿಯೇ ನುಸುಳಿಕೊಂಡನು.

ಸ್ವಲ್ಪಹೊತ್ತು ವಿಶ್ರಮಿಸಿ ದುರ್ಯೋಧನನು ಸಾತ್ಯಕಿಯನ್ನು ಪುನಃ ಆಕ್ರಮಣಿಸಿದನು. ಯುಯುಧಾನನ ರಥದ ಮೇಲೆ ಅವನು ಬಾಣಗಳ ಜಾಲಗಳನ್ನು ಸೃಷ್ಟಿಸಿದನು. ಹಾಗೆಯೇ ಸಾತ್ಯಕಿಯು ಕೂಡ ದುರ್ಯೋಧನನ ರಥದ ಮೇಲೆ ಸತತವಾಗಿ ಬಾಣಗಳನ್ನು ಸುರಿಸುತ್ತಿದ್ದನು. ಅನಂತರ ಆ ಯುದ್ಧವು ಸಂಕುಲಯುದ್ಧವಾಗಿ ಪರಿಣಮಿಸಿತು. ಅವರಿಬ್ಬರ ಬಾಣಗಳು ಹಾರಿ ಎಲ್ಲಕಡೆ ಬೀಳುತ್ತಿರುವಾಗ ಮಹಾಪೊದೆಯಮೇಲೆ ಬೆಂಕಿಯು ಬೀಳುತ್ತಿದ್ದರೆ ಹೇಗೆ ಶಬ್ಧವಾಗುತ್ತದೆಯೋ ಹಾಗೆ ಮಹಾ ಶಬ್ಧವು ಉಂಟಾಯಿತು. ರಥಸತ್ತಮ ಮಾಧವನ ಕೈ ಮೇಲಾಗುತ್ತಿದ್ದುದನ್ನು ನೋಡಿದ ಕರ್ಣನು ದುರ್ಯೋಧನನನ್ನು ರಕ್ಷಿಸುವ ಸಲುವಾಗಿ ಬೇಗನೇ ಅಲ್ಲಿಗೆ ಧಾವಿಸಿದನು. ಅದನ್ನು ಭೀಮಸೇನನು ಸಹಿಸಿಕೊಳ್ಳಲಿಲ್ಲ. ಅವನು ತ್ವರೆಮಾಡಿ ಅನೇಕ ಸಾಯಕಗಳನ್ನು ಚೆಲ್ಲುತ್ತಾ ಕರ್ಣನನ್ನು ಆಕ್ರಮಣಿಸಿದನು.

ಕರ್ಣ-ಭೀಮಸೇನರ ಯುದ್ಧ

ಕರ್ಣನು ನಸುನಗುತ್ತಾ ಅವನನ್ನು ನಿಶಿತ ಬಾಣಗಳಿಂದ ತಿರುಗಿ ಹೊಡೆದನು ಮತ್ತು ಶರಗಳಿಂದ ಅವನ ಧನುಸ್ಸು-ಶರಗಳನ್ನು ತುಂಡರಿಸಿ ಸಾರಥಿಯನ್ನು ಸಂಹರಿಸಿದನು. ಪಾಂಡವ ಭೀಮಸೇನನಾದರೋ ಸಂಕ್ರುದ್ಧನಾಗಿ ಗದೆಯನ್ನೆತ್ತಿಕೊಂಡು ಯುದ್ಧದಲ್ಲಿ ರಿಪುವಿನ ಧ್ವಜವನ್ನೂ, ಧನುಸ್ಸನ್ನೂ, ಸಾರಥಿಯನ್ನೂ ಧ್ವಂಸಮಾಡಿದನು. ಅಸಹನಶೀಲ ಕರ್ಣನಾದರೋ ವಿವಿಧ ಶರಜಾಲಗಳಿಂದ ಮತ್ತು ನಾನಾ ಶಸ್ತ್ರಗಳಿಂದ ರಣರಂಗದಲ್ಲಿ ಭೀಮಸೇನನೊಡನೆ ಯುದ್ಧಮಾಡಿದನು. ಈ ರೀತಿ ಸಂಕುಲಯುದ್ಧವು ನಡೆಯುತ್ತಿರಲು ರಾಜಾ ಧರ್ಮಸುತನು ಪಾಂಚಾಲ ನರವ್ಯಾಘ್ರರಿಗೂ ಮತ್ಸ್ಯ ನರರ್ಷಭರಿಗೂ ಹೇಳಿದನು: “ನಮ್ಮ ಪ್ರಾಣಸಮಾನರೂ ಶಿರಾಸಮಾನರೂ ಆಗಿರುವ ಆ ಮಹಾಬಲ ಯೋಧ ಪುರುಷರ್ಷಭರು ಧಾರ್ತರಾಷ್ತ್ರರೊಂದಿಗೆ ಯುದ್ಧಮಾಡುತ್ತಿದ್ದಾರೆ. ಇಲ್ಲಿ ಏಕೆ ನೀವೆಲ್ಲರೂ ಜ್ಞಾನತಪ್ಪಿದವರಂತೆ ಮತ್ತು ಮೂಢರಂತೆ ನಿಂತಿರುವಿರಿ? ಕ್ಷತ್ರಧರ್ಮವನ್ನು ಮುಂದಿಟ್ಟುಕೊಂಡು ನಿಶ್ಚಿಂತರಾಗಿ ನನ್ನವರಾದ ಮಹಾರಥರು ಎಲ್ಲಿ ಯುದ್ಧಮಾಡುತ್ತಿರುವರೋ ಅಲ್ಲಿಗೆ ಹೋಗಿ! ಜಯಗಳಿಸಿಯಾದರೂ ಅಥವಾ ವಧಿಸಲ್ಪಟ್ಟರೂ ನಮಗಿಷ್ಟವಾದ ಗತಿಯನ್ನೇ ಪಡೆಯುತ್ತೇವೆ. ಗೆದ್ದರೆ ಭೂರಿದಕ್ಷಿಣೆಗಳುಳ್ಳ ಅನೇಕ ಯಜ್ಞಗಳನ್ನು ಮಾಡುವಿರಂತೆ. ಅಥವಾ ಮಡಿದರೆ ದೇವರೂಪಿಗಳಾಗಿ ಪುಷ್ಕಲ ಪುಣ್ಯಲೋಕಗಳನ್ನು ಪಡೆಯುವಿರಂತೆ!”

ಯುಧಿಷ್ಠಿರನು ಆಚಾರ್ಯ ದ್ರೋಣನಿಗೆ ಸುಳ್ಳನ್ನಾಡಿದುದು

ರಾಜನಿಂದ ಹೀಗೆ ಪ್ರಚೋದಿತರಾದ ಮಹಾರಥರು ಯುದ್ಯೋದೃತರಾಗಿ ಸೇನೆಯನ್ನು ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ತ್ವರೆಮಾಡಿ ದ್ರೋಣನನ್ನು ಆಕ್ರಮಣಿಸಿದರು. ಪಾಂಚಾಲರ ಒಂದು ತುಂಡು ಅನೇಕ ಶರಗಳಿಂದ ದ್ರೋಣನನ್ನು ಆಕ್ರಮಣಿಸಿತು. ಇನ್ನೊಂದು ಭಾಗವು ಭೀಮಸೇನನನ್ನು ಮುಂದಿಟ್ಟುಕೊಂಡು ದ್ರೋಣನನ್ನು ಆಕ್ರಮಣಿಸಿತು. ಪಾಂಡುಪುತ್ರರಲ್ಲಿ ಕುಟಿಲರಾಗಿದ್ದ ಮೂವರು ಮಹಾರಥರು – ನಕುಲ, ಸಹದೇವ ಮತ್ತು ಭೀಮಸೇನರು – ಧನಂಜಯನನ್ನು ಕೂಗಿ ಕರೆದು ಹೇಳಿದರು: “ಅರ್ಜನ! ಬೇಗನೆ ಬಾ! ಕುರುಯೋಧರನ್ನು ದ್ರೋಣನಿಂದ ಬೇರ್ಪಡಿಸು! ಅನಂತರ ರಕ್ಷಣೆಯನ್ನು ಕಳೆದುಕೊಂಡ ದ್ರೋಣನನ್ನು ಪಾಂಚಾಲರು ಸಂಹರಿಸುತ್ತಾರೆ!”

ಕೂಡಲೇ ಪಾರ್ಥನು ಕೌರವೇಯರನ್ನು ಆಕ್ರಮಣಿಸಿದನು. ದ್ರೋಣನಾದರೋ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಪಾಂಚಾಲರೊಡನೆ ಯುದ್ಧವನ್ನು ಮುಂದುವರೆಸಿದನು. ಕ್ರುದ್ಧ ಇಂದ್ರನು ಹಿಂದೆ ರಣದಲ್ಲಿ ದಾನವರನ್ನು ಹೇಗೆ ನಾಶಗೊಳಿಸಿದನೋ ಹಾಗೆ ದ್ರೋಣನು ಪಾಂಚಾಲರೊಡನೆ ಮಹಾ ಕದನವನ್ನೇ ನಡೆಸಿದನು. ದ್ರೋಣನಿಂದ ಯುದ್ಧದಲ್ಲಿ ಸತತವಾಗಿ ವಧಿಸಲ್ಪಡುತ್ತಿದ್ದರೂ ಸತ್ತ್ವವಂತ ಮಹಾರಥ ಪಾಂಚಾಲರು ರಣದಲ್ಲಿ ದ್ರೋಣನಿಗೆ ಭಯಪಡಲಿಲ್ಲ. ವಧಿಸಲ್ಪಡುತ್ತಿದ್ದ ಪಾಂಚಾಲ-ಸೃಂಜಯರು ಮೋಹಗೊಂಡಿರುವರೋ ಎನ್ನುವಂತೆ ಮುನ್ನುಗ್ಗಿ ಮಹಾರಥ ದ್ರೋಣನನ್ನೇ ಆಕ್ರಮಣಿಸಿ ಯುದ್ಧಮಾಡುತ್ತಿದ್ದರು. ಬಾಣಗಳಿಂದ ಮುಚ್ಚಲ್ಪಟ್ಟ ಮತ್ತು ಶರಶಕ್ತಿಯಿಂದ ವಧಿಸಲ್ಪಡುತ್ತಿದ್ದ ಪಾಂಚಾಲರ ಭೈರವ ನಾದವು ಎಲ್ಲಕಡೆಗಳಿಂದ ಕೇಳಿಬರುತ್ತಿತ್ತು. ಸಂಗ್ರಾಮದಲ್ಲಿ ದ್ರೋಣಾಸ್ತ್ರದಿಂದ ಸೀಳಲ್ಪಟ್ಟು ವಧಿಸಲ್ಪಡುತ್ತಿರುವ ಪಾಂಚಾಲರನ್ನು ನೋಡಿ ಪಾಂಡವರಲ್ಲಿ ಭೀತಿಯು ಆವರಿಸಿತು. ಆಗ ಯುದ್ಧದಲ್ಲಿ ವಿಪುಲವಾಗಿ ನಾಶಗೊಳ್ಳುತ್ತಿರುವ ಅಶ್ವ-ನರ ಸಂಘಗಳನ್ನು ನೋಡಿ ಪಾಂಡವರಿಗೆ ವಿಜಯವು ದೊರಕುತ್ತದೆ ಎನ್ನುವುದರ ಮೇಲೆ ಸಂಶಯವುಂಟಾಯಿತು. ಅವರು “ಗ್ರೀಷ್ಮಋತುವಿನಲ್ಲಿ ಪ್ರಜ್ವಲಿಸುವ ಅಗ್ನಿಯು ಒಣ ಪೊದೆಯನ್ನು ಸುಟ್ಟು ಭಸ್ಮಮಾಡುವಂತೆ ಪರಮಾಸ್ತ್ರವಿದುವಾದ ದ್ರೋಣನು ನಮ್ಮೆಲ್ಲರನ್ನೂ ಸಂಹರಿಸಿಬಿಡುವುದಿಲ್ಲವೇ? ಈ ಯುದ್ಧದಲ್ಲಿ ದ್ರೋಣನನ್ನು ದಿಟ್ಟಸಿ ನೋಡಲು ಸಮರ್ಥರು ಯಾರೂ ಇಲ್ಲ. ಧರ್ಮವಿದು ಅರ್ಜುನನಾದರೋ ದ್ರೋಣನೊಡನೆ ಯುದ್ಧಮಾಡುವವನಲ್ಲ!” ಎಂದು ಅಂದುಕೊಳ್ಳುತ್ತಿದ್ದರು.

ದ್ರೋಣನ ಸಾಯಕಗಳಿಂದ ಪೀಡಿತರಾಗಿ ಭಯಗೊಂಡಿರುವ ಕುಂತೀಸುತರನ್ನು ನೋಡಿ ಅವರ ಶ್ರೇಯಸ್ಸನ್ನೇ ಮತಿಯಲ್ಲಿಟ್ಟುಕೊಂಡಿದ್ದ ಕೇಶವನು ಅರ್ಜುನನಿಗೆ ಹೇಳಿದನು: “ಈ ರಥಯೂಥಪಯೂಥಪನನ್ನು ಸಂಗ್ರಾಮದಲ್ಲಿ ಯುದ್ಧದಿಂದ ಜಯಿಸಲು ವೃತ್ರಹರ ಇಂದ್ರನಿಗೂ ಎಂದೂ ಸಾಧ್ಯವಿಲ್ಲ. ಪಾಂಡವ! ಧರ್ಮವನ್ನು ಬದಿಗೊತ್ತಿ ನಾವು ಜಯವನ್ನು ಪಡೆಯುವುದರಲ್ಲಿ ನಿರತರಾಗಬೇಕು ಅಥವಾ ರುಕ್ಮವಾಹನ ದ್ರೋಣನು ಸಂಯುಗದಲ್ಲಿ ನಮ್ಮೆಲ್ಲರನ್ನೂ ಸಂಹರಿಸುತ್ತಾನೆ. ಅಶ್ವತ್ಥಾಮನು ಹತನಾದರೆ ಇವನು ಯುದ್ಧಮಾಡುವುದಿಲ್ಲ ಎಂದು ನನ್ನ ಅಭಿಪ್ರಾಯ. ಯುದ್ಧದಲ್ಲಿ ಅವನು ಹತನಾದನೆಂದು ಯಾರಾದರೂ ಮನುಷ್ಯನು ಅವನಿಗೆ ಹೇಳಲಿ!”

ಇದು ಧನಂಜಯನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಆದರೆ ಬೇರೆಯವರೆಲ್ಲರು ಮತ್ತು ಕಷ್ಟದಿಂದ ಯುಧಿಷ್ಠಿರನೂ ಇದಕ್ಕೆ ಸಮ್ಮತಿಯಿತ್ತರು. ಆಗ ಭೀಮನು ತನ್ನದೇ ಸೇನೆಯಲ್ಲಿದ್ದ ಅಶ್ವತ್ಥಾಮ ಎಂದು ಕರೆಯಲ್ಪಡುತ್ತಿದ್ದ ಮಹಾಗಜವನ್ನು ಗದೆಯಿಂದ ಸಂಹರಿಸಿದನು. ಭೀಮಸೇನನಾದರೋ ಲಜ್ಜಾಯುಕ್ತನಾಗಿಯೇ ಆಹವದಲ್ಲಿ ದ್ರೋಣರ ಸಮೀಪ ಹೋಗಿ ಅಶ್ವತ್ಥಾಮನು ಹತನಾದನೆಂದು ಗಟ್ಟಿಯಾಗಿ ಕೂಗಿದನು. ಏಕೆಂದರೆ ಅಶ್ವತ್ಥಾಮ ಎಂಬ ಹೆಸರಿನಿಂದ ಖ್ಯಾತ ಆನೆಯೊಂದು ಹತವಾಗಿತ್ತು. ಅದನ್ನೇ ಮನಸ್ಸಿಗೆ ತಂದುಕೊಂಡು ಭೀಮನು ಸುಳ್ಳು ಸುದ್ದಿಯನ್ನು ಪಸರಿಸಿದ್ದನು. ಭೀಮಸೇನನ ಆ ಪರಮ ಅಪ್ರಿಯ ಮಾತನ್ನು ಕೇಳಿ ದ್ರೋಣನ ಶರೀರವು ನೀರಿನಲ್ಲಿ ಮರಳು ಕದಡಿಹೋಗುವಂತೆ ಶಿಥಿಲವಾಗಿ ಹೋಯಿತು. ಆದರೆ ತನ್ನ ಮಗನ ವೀರ್ಯವನ್ನು ತಿಳಿದಿದ್ದ ಅವನು ಅದೊಂದು ಸುಳ್ಳೆಂದು ಶಂಕಿಸಿದನು. ಅವನು ಹತನಾದನೆಂದು ಕೇಳಿದರೂ ಧೈರ್ಯದಿಂದ ವಿಚಲಿತನಾಗಲಿಲ್ಲ. ತನ್ನ ಮಗನನ್ನು ಯುದ್ಧದಲ್ಲಿ ಅಮರರೂ ಎದುರಿಸಲಾರರು ಎಂದು ಯೋಚಿಸಿ ದ್ರೋಣನು ಕ್ಷಣದಲ್ಲಿಯೇ ಆಶ್ವಾಸನೆಹೊಂದಿ ಚೇತರಿಸಿಕೊಂಡನು. ತನಗೆ ಮೃತ್ಯುರೂಪನಾಗಿದ್ದ ಪಾರ್ಷತನನ್ನು ಸಂಹರಿಸುವ ಇಚ್ಛೆಯಿಂದ ಸಹಸ್ರಾರು ತೀಕ್ಷ್ಣ ಕಂಕಪತ್ರಿಗಳಿಂದ ಅವನನ್ನು ಮುಚ್ಚಿದನು.

ಹಾಗೆ ಸಂಗ್ರಾಮದಲ್ಲಿ ಸಂಚರಿಸುತ್ತಿದ್ದ ದ್ರೋಣನನ್ನು ಇಪ್ಪತ್ತು ಸಾವಿರ ಪಾಂಚಾಲ ನರರ್ಷಭರು ಶರಗಳಿಂದ ಎಲ್ಲಕಡೆಗಳಿಂದ ಮುಚ್ಚಿದರು. ಆಗ ಕೋಪಗೊಂಡ ಪರಂತಪ ದ್ರೋಣನು ಆ ಪಾಂಚಾಲಶೂರರ ವಧೆಗೆಂದು ಬ್ರಹ್ಮಾಸ್ತ್ರವನ್ನು ಹೂಡಿದನು. ಆಗ ಸರ್ವ ಸೋಮಕರನ್ನು ಸಂಹರಿಸುತ್ತಾ ದ್ರೋಣನು ವಿರಾಜಿಸಿದನು. ಮಹಾರಣದಲ್ಲಿ ಪಾಂಚಾಲರ ಶಿರಗಳು ಮತ್ತು ಹಾಗೆಯೇ ಕನಭೂಷಣಗಳಿಂದ ಅಲಂಕೃತ ಪರಿಘಾಕಾರದ ಅನೇಕ ಬಾಹುಗಳೂ ಉರುಳಿದವು. ಭಾರದ್ವಾಜನಿಂದ ವಧಿಸಲ್ಪಟ್ಟ ಪಾರ್ಥಿವರು ಚಂಡಮಾರುತಕ್ಕೆ ಸಿಕ್ಕಿ ಬಿದ್ದ ವೃಕ್ಷಗಳಂತೆ ರಣಭೂಮಿಯಲ್ಲಿ ಹರಡಿ ಬೀಳುತ್ತಿದ್ದರು. ಕೆಳಗೆ ಬೀಳುತ್ತಿದ್ದ ಆನೆಗಳ ಮತ್ತು ಕುದುರೆಗಳ ಗುಂಪುಗಳಿಂದ ರಣಭೂಮಿಯು ಮಾಂಸ-ರಕ್ತ-ಮಜ್ಜೆಗಳಿಂದ ಅಗಮ್ಯರೂಪವಾಗಿ ತೋರಿತು. ರಥಾರೂಢರಾಗಿದ್ದ ಇಪ್ಪತ್ತು ಸಾವಿರ ಪಾಂಚಾಲರನ್ನು ಸಂಹರಿಸಿ ದ್ರೋಣನು ಯುದ್ಧಭೂಮಿಯಲ್ಲಿ ಪ್ರಜ್ವಲಿಸುತ್ತಿರುವ ಹೊಗೆಯಿಲ್ಲದ ಅಗ್ನಿಯಂತೆ ಶೋಭಿಸುತ್ತಿದ್ದನು. ಹಾಗೆಯೇ ಕ್ರುದ್ಧ ಪ್ರತಾಪವಾನ ಭಾರದ್ವಾಜನು ಪುನಃ ಭಲ್ಲದಿಂದ ವಸುದಾನನ ಶಿರವನ್ನು ಶರೀರದಿಂದ ಅಪಹರಿಸಿದನು. ಪುನಃ ಅವನು ಐದುನೂರು ಮತ್ಸ್ಯರನ್ನೂ, ಆರುಸಾವಿರ ಸೃಂಜಯರನ್ನೂ, ಹತ್ತು ಸಾವಿರ ಆನೆಗಳನ್ನೂ ಹತ್ತು ಸಾವಿರ ಕುದುರೆಗಳನ್ನೂ ಸಂಹರಿಸಿದನು.

ಕ್ಷತ್ರಿಯರನ್ನು ನಿರ್ಮೂಲನಗೊಳಿಸಲು ವ್ಯವಸ್ಥಿತನಾಗಿದ್ದ ದ್ರೋಣನನ್ನು ನೋಡಿ ತಕ್ಷಣವೇ ಹವ್ಯವಾಹನನ್ನು ಮುಂದಿರಿಸಿಕೊಂಡು ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋಗಲು ಅವನ ಬಳಿ ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ವಸಿಷ್ಠ, ಕಶ್ಯಪ, ಅತ್ರಿ, ಸಿಕತರು, ಪೃಶ್ನರು, ಗರ್ಗರು, ವಾಲಖಿಲ್ಯರು, ಮರೀಚಿಪರು, ಭೃಗುವಂಶಜರು, ಅಂಗಿರಸರು, ಮತ್ತು ಅನ್ಯ ಸೂಕ್ಷ್ಮ ಮಹರ್ಷಿಗಳು ರಣರಂಗಕ್ಕೆ ಆಗಮಿಸಿದರು. ಅವರೆಲ್ಲರೂ ರಣಾಂಗಣದಲ್ಲಿ ಶೋಭಾಯಮಾನ ದ್ರೋಣನಿಗೆ ಹೇಳಿದರು: “ನೀನು ಅಧರ್ಮತಃ ಯುದ್ಧಮಾಡುತ್ತಿರುವೆ. ನಿನ್ನ ನಿಧನದ ಕಾಲವು ಬಂದೊದಗಿದೆ. ದ್ರೋಣ! ಆಯುಧವನ್ನು ಕೆಳಗಿಡು! ಇಲ್ಲಿ ಬಂದು ನಿಂತಿರುವ ನಮ್ಮನ್ನು ಸರಿಯಾಗಿ ನೋಡು! ಈ ಕ್ರೂರತರ ಕರ್ಮವನ್ನು ಮಾಡುವುದು ನಿನಗೆ ಸರಿಯಲ್ಲ! ವೇದ-ವೇದಾಂಗಪಾರಂಗತನಾಗಿರುವೆ. ಸತ್ಯ-ಧರ್ಮಪರಾಯಣನಾಗಿರುವೆ. ಎಲ್ಲಕ್ಕಿಂತಲೂ ಮಿಗಿಲಾಗಿ ಬ್ರಾಹ್ಮಣನಾಗಿರುವೆ! ನಿನ್ನಂತವನಿಗೆ ಈ ವಿನಾಶಕಾರ್ಯವು ಖಂಡಿತವಾಗಿ ಶೋಭಿಸುವುದಿಲ್ಲ. ಅಮೋಘ ಬಾಣಗಳನ್ನು ಹೊಂದಿರುವವನೇ! ಆಯುಧವನ್ನು ತೊರೆ! ಶಾಶ್ವತದಲ್ಲಿ ಬುದ್ಧಿಯನ್ನಿರಿಸು. ಮನುಷ್ಯ ಲೋಕದಲ್ಲಿ ನಿನ್ನ ವಾಸದ ಕಾಲವು ಪರಿಪೂರ್ಣವಾಗಿದೆ.”

ಅವರ ಈ ಮಾತನ್ನೂ ಭೀಮಸೇನನ ಮಾತನ್ನೂ ಕೇಳಿ ಮತ್ತು ಧೃಷ್ಟದ್ಯುಮ್ನನನ್ನೂ ನೋಡಿ ದ್ರೋಣನು ರಣದಿಂದ ವಿಮನಸ್ಕನಾದನು. ವ್ಯಥೆಯಿಂದ ಸುಡುತ್ತಿರುವ ಆ ಸುಮಹಾತ್ಮನು “ಅವನು ಹತನಾದನೇ ಅಥವಾ ಹತನಾಗಲಿಲ್ಲವೇ?” ಎಂದು ಯುಧಿಷ್ಠಿರನನ್ನು ಕೇಳಿದನು. ಏಕೆಂದರೆ ಪಾರ್ಥನು ಮೂರು ಲೋಕಗಳ ಐಶ್ವರ್ಯಕ್ಕಾಗಿಯೇ ಆದರೂ ಅಥವಾ ಬೇರೆ ಯಾವುದೇ ಕಾರಣಕ್ಕಾದರೂ ಸುಳ್ಳುಹೇಳುವುದಿಲ್ಲವೆಂದು ದ್ರೋಣನ ದೃಢ ನಂಬಿಕೆಯಾಗಿತ್ತು. ಆದುದರಿಂದಲೇ ಅವನು ಸತ್ಯವನ್ನು ತಿಳಿಯಬೇಕಾಗಿ ಬೇರೆ ಯಾರನ್ನೂ ಕೇಳದೇ ಬಾಲ್ಯದಿಂದಲೂ ಸತ್ಯವಾದಿಯಾಗಿದ್ದ ಪಾಂಡವನಲ್ಲಿಯೇ ಕೇಳಿದನು. ಆಗ ಸೇನಾಪತಿ ದ್ರೋಣನು ಭೂಮಿಯನ್ನು ನಿಷ್ಪಾಂಡವರನ್ನಾಗಿ ಮಾಡುತ್ತಾನೆಂದು ತಿಳಿದ ಗೋವಿಂದನು ವ್ಯಥಿತನಾಗಿ ಧರ್ಮರಾಜನಿಗೆ ಹೇಳಿದನು: “ಒಂದುವೇಳೆ ಇನ್ನೊಂದು ಅರ್ಧದಿವಸ ದ್ರೋಣನು ಕ್ರೋಧಿತನಾಗಿ ಯುದ್ಧಮಾಡಿದರೆ ಅವನು ನಿನ್ನ ಸೇನೆಯನ್ನು ಸಂಪೂರ್ಣವಾಗಿ ನಾಶಗೊಳಿಸುತ್ತಾನೆ. ನಿನಗೆ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನೀನೀಗ ನಮ್ಮೆಲ್ಲರನ್ನೂ ದ್ರೋಣನಿಂದ ರಕ್ಷಿಸಬೇಕಾಗಿದೆ. ಕೆಲವು ಸಮಯಗಳಲ್ಲಿ ಸತ್ಯವಚನಕ್ಕಿಂತಲೂ ಸುಳ್ಳುಮಾತೇ ಶ್ರೇಷ್ಠವೆನೆಸಿಕೊಳ್ಳುತ್ತದೆ. ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಆಡಿದ ಸುಳ್ಳು ಸುಳ್ಳಾಡಿದವನನ್ನು ಸ್ಪರ್ಷಿಸುವುದಿಲ್ಲ.”

ಅವರಿಬ್ಬರು ಹೀಗೆ ಮಾತನಾಡಿಕೊಳ್ಳುತ್ತಿರುವಾಗ ಭೀಮಸೇನನೂ ಈ ಮಾತನ್ನಾಡಿದನು: “ಮಹಾರಾಜ! ಆ ಮಹಾತ್ಮನ ವಧೋಪಾಯವನ್ನು ನಾನೂ ಕೇಳಿದೆ. ಆಗ ನಿನ್ನ ಸೇನೆಯ ಮಧ್ಯದಲ್ಲಿ ಸಂಚರಿಸುತ್ತಿದ್ದ, ಇಂದ್ರನ ಐರಾವತಕ್ಕೆ ಸಮನಾದ, ಮಾಲವರಾಜ ಇಂದ್ರವರ್ಮನ ಅಶ್ವತ್ಥಾಮ ಎಂದು ವಿಖ್ಯಾತ ಆನೆಯನ್ನು ನಾನು ಯುದ್ಧದಲ್ಲಿ ವಿಕ್ರಮದಿಂದ ಸಂಹರಿಸಿ, ದ್ರೋಣನಿಗೆ “ಅಶ್ವತ್ಥಾಮನು ಹತನಾಗಿದ್ದಾನೆ. ಬ್ರಹ್ಮನ್! ಯುದ್ಧದಿಂದ ವಿಮುಖನಾಗು!” ಎಂದು ಹೇಳಿದೆ. ಆದರೆ ಆ ಪುರುಷರ್ಷಭನು ನನ್ನ ಮಾತಿನ ಮೇಲೆ ವಿಶ್ವಾಸವನ್ನಿಡಲಿಲ್ಲ. ಆದುದರಿಂದ ಜಯವನ್ನು ಬಯಸುವ ನೀನು ಗೋವಿಂದನ ಮಾತನ್ನು ಒಪ್ಪಿಕೋ! ರಾಜನ್! ಶಾರದ್ವತೀ ಸುತನು ಹತನಾದನೆಂದು ದ್ರೋಣನಿಗೆ ಹೇಳು. ಇದನ್ನು ನೀನು ಹೇಳಿದರೆ ನಂತರ ಆ ದ್ವಿಜರ್ಷಭನು ಖಂಡಿತವಾಗಿ ಯುದ್ಧವನ್ನು ಮಾಡುವುದಿಲ್ಲ. ಏಕೆಂದರೆ, ನರಲೋಕದಲ್ಲಿ ನೀನು ಸತ್ಯವಾನನೆಂದು ಖ್ಯಾತನಾಗಿದ್ದೀಯೆ!”

ಅವನ ಆ ಮಾತನ್ನು ಕೇಳಿ ಮತ್ತು ಕೃಷ್ಣನ ಮಾತಿನಿಂದ ಪ್ರಚೋದಿತನಾಗಿ ಅವನು ಅದನ್ನು ಹೇಳಲು ಸಿದ್ಧನಾದನು. ಅದರಿಂದಾಗುವ ಪರಿಣಾಮದಿಂದ ಭಯಪಟ್ಟಿದ್ದ ಆದರೆ ವಿಜಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಯುಧಿಷ್ಠಿರನು ಅದನ್ನು ಹೇಳಿ ಅವ್ಯಕ್ತವಾಗಿ “ಹತಃ ಕುಂಜರ” ಎಂದು ಹೇಳಿದನು. ಅದರ ಮೊದಲು ಅವನ ರಥವು ಭೂಮಿಯಿಂದ ನಾಲ್ಕು ಅಂಗುಲ ಮೇಲಿದ್ದಿತು. ಅವನು ಹೀಗೆ ಹೇಳಿದೊಡನೆಯೇ ಅವನ ಕುದುರೆಗಳು ನೆಲವನ್ನು ಮುಟ್ಟಿದವು.

ಧೃಷ್ಟದ್ಯುಮ್ನನಿಂದ ದ್ರೋಣವಧೆ

ಯುಧಿಷ್ಠಿರನ ಆ ಮಾತನ್ನು ಕೇಳಿ ಮಹಾರಥ ದ್ರೋಣನಾದರೋ ಪುತ್ರವ್ಯಸನದಿಂದ ಸಂತಪ್ತನಾಗಿ ಜೀವನದಲ್ಲಿ ನಿರಾಶನಾದನು. ಮಹಾತ್ಮ ಪಾಂಡವರಿಗೆ ತಾನು ಅಪರಾಧವನ್ನೆಸಗಿದ್ದೇನೆಂಬ ಋಷಿವಾಕ್ಯವನ್ನು ಮನ್ನಿಸಿ, ತನ್ನ ಮಗನು ಹತನಾದನೆನ್ನುವುದನ್ನು ಕೇಳಿ ಅರಿಂದಮ ದ್ರೋಣನು ವಿಚೇತನನಾಗಿ, ಪರಮ ಉದ್ವಿಗ್ನನಾಗಿ, ಧೃಷ್ಟದ್ಯುಮ್ನನನ್ನು ನೋಡದೇ, ಹಿಂದಿನಂತೆ ಯುದ್ಧಮಾಡಲು ಅಶಕ್ಯನಾದನು. ಅವನು ಪರಮೋದ್ವಿಗ್ನನಾಗಿರುವುದನ್ನು ಮತ್ತು ಶೋಕದಿಂದ ಚೇತನವನ್ನು ಕಳೆದುಕೊಂಡಿರುವುದನ್ನು ನೋಡಿದ ಪಾಂಚಾಲರಾಜನ ಮಗ ಧೃಷ್ಟದ್ಯುಮ್ನನು ಅವನನ್ನು ಆಕ್ರಮಣಿಸಿದನು. ಯಾರನ್ನು ಮನುಜೇಂದ್ರ ದ್ರುಪದನು ಮಹಾಯಜ್ಞದಲ್ಲಿ ಸಮಿತ್ತನ್ನು ಹಾಕಿ ಹವ್ಯವಾಹನಿಂದ ದ್ರೋಣನ ವಿನಾಶಕ್ಕಾಗಿ ಪಡೆದಿದ್ದನೋ ಆ ಪಾಂಚಾಲ್ಯನು ಘೋರ ಮೋಡದಂತೆ ಗುಡುಗುತ್ತಿರುವ ಬಿಗಿಯಾದ ಧನುಸ್ಸನ್ನು ಹಿಡಿದು, ಸರ್ಪದ ವಿಷಕ್ಕೆ ಸಮಾನ ದಿವ್ಯ ಅಜರ ದೃಢ ಅಗ್ನಿಯಂತೆ ಜ್ವಾಲೆಗಳನ್ನು ಕಾರುತ್ತಿರುವ ಬಾಣವನ್ನು ಆ ಕಾರ್ಮುಕಕ್ಕೆ ಹೂಡಿ, ದ್ರೋಣನನ್ನು ಸಂಹರಿಸಲು ಬಯಸಿದನು. ಮಂಡಲಾಕಾರದ ಶಿಂಜಿನಿಯ ಮಧ್ಯದಲ್ಲಿದ್ದ ಆ ಶರದ ರೂಪವು ಛಳಿಗಾಲದ ಅಂತ್ಯದಲ್ಲಿ ಭಾಸ್ಕರನಂತೆ ಪ್ರಕಾಶಿಸುತ್ತಿತ್ತು. ಪಾರ್ಷತನಿಂದ ಎಳೆಯಲ್ಪಟ್ಟ ಪ್ರಜ್ವಲಿಸುತ್ತಿರುವ ಆ ಧನುಸ್ಸನ್ನು ನೋಡಿ ಸೈನಿಕರು ಅಂತಕಾಲವು ಬಂದೊದಗಿತು ಎಂದು ಅಂದುಕೊಂಡರು. ಆ ಬಾಣವನ್ನು ಹೂಡಿದುದನ್ನು ನೋಡಿ ಪ್ರತಾಪವಾನ್ ಭಾರದ್ವಾಜನು ತನ್ನ ದೇಹದ ಕಾಲಾವಧಿಯು ಮುಗಿಯುತ್ತ ಬಂದಿತೆಂದು ಅಂದುಕೊಂಡನು. ಆಗ ಅವನನ್ನು ತಡೆಯಲು ಆಚಾರ್ಯನು ಅತ್ಯಂತ ಪ್ರಯತ್ನಿಸಿದನು. ಆದರೆ ಮಹಾತ್ಮನಿಗೆ ಯಾವ ಅಸ್ತ್ರಗಳೂ ನೆನಪಿಗೆ ಬರಲಿಲ್ಲ.

ದ್ರೋಣನು ನಾಲ್ಕು ದಿನಗಳು ಮತ್ತು ಒಂದು ರಾತ್ರಿ ಒಂದೇಸಮನೆ ಬಾಣಗಳನ್ನು ಬಿಡುತ್ತಿದ್ದನು. ರಾತ್ರಿಯ ಮೂರು ಭಾಗಗಳು ಮುಗಿದುಹೋದುದರಿಂದ ಅವನ ಬಾಣಗಳೂ ಮುಗಿದುಹೋಗಿದ್ದವು. ಅವನ ಬಾಣಗಳು ಮುಗಿದುಹೋಗಿರಲು, ಪುತ್ರಶೋಕದಿಂದ ಪೀಡಿತನಾಗಿರಲು, ವಿವಿಧ ದಿವ್ಯಾಸ್ತ್ರಗಳೂ ಅವನಿಗೆ ಆ ಸಮಯದಲ್ಲಿ ಗೋಚರಿಸುತ್ತಿರಲಿಲ್ಲ. ಋಷಿಗಳ ಮಾತಿನಿಂದಲೂ ಪ್ರಭಾವಿತನಾಗಿ ಅವನು ಶಸ್ತ್ರಗಳನ್ನು ತ್ಯಜಿಸಲು ಬಯಸಿ ತೇಜಸ್ಸಿನಿಂದ ತುಂಬಿದ್ದರೂ ಅತಿಮಾನುಷ ಯುದ್ಧವನ್ನು ಮಾಡಲಾರದಂತಾದನು. ಹಾಗಿದ್ದರೂ ಅವನು ಅನ್ಯ ದಿವ್ಯ ಆಂಗಿರಸ ಧನುಸ್ಸನ್ನು ಮತ್ತು ಬ್ರಹ್ಮದಂಡದಂತೆ ಹೊಳೆಯುತ್ತಿದ್ದ ಶರಗಳನ್ನು ತೆಗೆದುಕೊಂಡು ಧೃಷ್ಟದ್ಯುಮ್ನನನೊಡನೆ ಯುದ್ಧಮಾಡಿದನು. ಆಗ ಪರಮಕ್ರುದ್ಧನಾದ ಆ ಅಮರ್ಷಣನು ಧೃಷ್ಟದ್ಯುಮ್ನನನ್ನು ಮಹಾ ಶರವರ್ಷದಿಂದ ಮುಚ್ಚಿ ಗಾಯಗೊಳಿಸಿದನು. ದ್ರೋಣನು ಅವನ ಶರವನ್ನು ಸಾಯಕಗಳಿಂದ ನೂರು ಭಾಗಗಳಲ್ಲಿ ತುಂಡರಿಸಿ ನಿಶಿತ ಬಾಣಗಳಿಂದ ಅವನ ಧ್ವಜವನ್ನು, ಧನುಸ್ಸನ್ನೂ, ಸಾರಥಿಯನ್ನೂ ಕೆಳಗುರುಳಿಸಿದನು. ಆಗ ಧೃಷ್ಟದ್ಯುಮ್ನನು ಜೋರಾಗಿ ನಗುತ್ತಾ ಪುನಃ ಇನ್ನೊಂದು ಕಾರ್ಮುಕವನ್ನು ಕೈಗೆತ್ತಿಕೊಂಡು ನಿಶಿತ ಬಾಣದಿಂದ ಅವನ ಎದೆಗೆ ಹೊಡೆದನು. ಅದರಿಂದ ಅತಿಯಾಗಿ ಗಾಯಗೊಂಡರೂ ದ್ರೋಣನು ಗಾಬರಿಗೊಳ್ಳದೇ ಸಂಯುಗದಲ್ಲಿ ಹರಿತ ಭಲ್ಲದಿಂದ ಧೃಷ್ಟದ್ಯುಮ್ನನ ಮಹಾಧನುಸ್ಸನ್ನು ತುಂಡರಿಸಿದನು. ದ್ರೋಣನು ಅವನ ಗದೆ ಮತ್ತು ಖಡ್ಗಗಳನ್ನು ಬಿಟ್ಟು ಬೇರೆ ಎಲ್ಲ ಬಾಣಗಳನ್ನೂ ಧನುಸ್ಸುಗಳನ್ನೂ ಕತ್ತರಿಸಿದನು. ಆಗ ಕ್ರುದ್ಧ ಪರಂತಪನು ಕ್ರುದ್ಧರೂಪ ಧೃಷ್ಟದ್ಯುಮ್ನನ ಜೀವವನ್ನು ಅಂತ್ಯಗೊಳಿಸಲು ಅವನನ್ನು ಒಂಭತ್ತು ನಿಶಿತ ಶರಗಳಿಂದ ಹೊಡೆದನು. ಆಗ ಧೃಷ್ಟದ್ಯುಮ್ನನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾ ತನ್ನ ರಥ-ಕುದುರೆಗಳನ್ನು ದ್ರೋಣನ ರಥ-ಕುದುರೆಗಳೊಡನೆ ತಾಗಿಸಿ ಬೆರೆಸಿದನು.

ವಾಯುವೇಗವುಳ್ಳ ಕಪೋತಬಣ್ಣದ ಅವನ ಕುದುರೆಗಳು ಕೆಂಪುಬಣ್ಣದ ದ್ರೋಣನ ಕುದುರೆಗಳೊಡನೆ ಬೆರೆದು ಬಹಳವಾಗಿ ಶೋಭಿಸಿದವು. ಮಳೆಗಾಲದ ಪ್ರಾರಂಭದಲ್ಲಿ ಹೇಗೆ ಮಿಂಚಿನೊಡನೆ ಮೋಡಗಳು ಗುಡುಗುತ್ತವೆಯೋ ಹಾಗೆ ಆ ಕುದುರೆಗಳು ರಣರಂಗದಲ್ಲಿ ರಾಜಿಸಿದವು. ದ್ವಿಜ ದ್ರೋಣನು ಧೃಷ್ಟದ್ಯುಮ್ನನ ಈಷಾಬಂಧವನ್ನೂ, ಚಕ್ರಬಂಧವನ್ನೂ ಮತ್ತು ರಥಬಂಧವನ್ನೂ ಧ್ವಂಸಮಾಡಿದನು. ಧನುಸ್ಸು ತುಂಡಾಗಲು, ಅಶ್ವ-ಸಾರಥಿಗಳನ್ನು ಕಳೆದುಕೊಂಡು ವಿರಥನಾದ ವೀರ ಧೃಷ್ಟದ್ಯುಮ್ನನು ಪರಮ ಕಂಟಕಕ್ಕೆ ಸಿಲುಕಿ, ಉತ್ತಮ ಗದೆಯನ್ನು ತೆಗೆದುಕೊಂಡನು. ಅದನ್ನೂ ಕೂಡ ಕ್ರುದ್ಧ ದ್ರೋಣನು ತ್ವರೆಮಾಡಿ ತೀಕ್ಷ್ಣ ವಿಶಿಖ ಬಾಣಗಳಿಂದ ನಾಶಗೊಳಿಸಿದನು. ಗದೆಯು ದ್ರೋಣನ ಶರಗಳಿಂದ ನಾಶವಾದುದನ್ನು ನೋಡಿ ಆ ನರವ್ಯಾಘ್ರನು ಹೊಳೆಯುವ ಖಡ್ಗವನ್ನೂ ಕಾಂತಿಯುಕ್ತ ಗುರಾಣಿಯನ್ನೂ ಕೈಗೆತ್ತಿಕೊಂಡನು. ಆಗ ಪಾಂಚಾಲ್ಯನು ಆಚಾರ್ಯಮುಖ್ಯನ ವಧೆಯ ಕಾಲವು ಪ್ರಾಪ್ತವಾಗಿದೆ ಎಂದು ನಿಃಸಂಶಯವಾಗಿ ಭಾವಿಸಿದನು. ಆಗ ತನ್ನ ರಥದ ಈಷಾದಂಡದ ಮೂಲಕವಾಗಿ ತನ್ನ ರಥದ ನೀಡದಲ್ಲಿ ಕುಳಿತಿದ್ದ ದ್ರೋಣನನ್ನು ಹೊಳೆಯುತ್ತಿದ್ದ ಖಡ್ಗ ಮತ್ತು ಗುರಾಣಿಗಳೊಂದಿಗೆ ಆಕ್ರಮಣಿಸತೊಡಗಿದನು. ಮಹಾರಥ ಧೃಷ್ಟದ್ಯುಮ್ನನು ಯುದ್ಧದಲ್ಲಿ ಭಾರದ್ವಾಜನ ಎದೆಯನ್ನು ಸೀಳುವಂತಹ ದುಷ್ಕರ ಕಾರ್ಯವನ್ನು ಮಾಡಲು ಬಯಸಿದನು.

ಆಗ ಧೃಷ್ಟದ್ಯುಮ್ನನು ಒಮ್ಮೆ ನೊಗದ ಮಧ್ಯಭಾಗದಲ್ಲಿ ಕಾಲಿಡುತ್ತಾ,, ಇನ್ನೊಮ್ಮೆ ನೊಗದ ಬಂಧನಸ್ಥಾನದಲ್ಲಿಯೂ, ಪುನಃ ದ್ರೋಣನ ಕುದುರೆಗಳ ಹಿಂಭಾಗದಲ್ಲಿಯೂ ನಿಂತುಕೊಳ್ಳುತ್ತಿದ್ದನು. ಅದನ್ನು ನೋಡಿ ಸೇನೆಗಳು ಅವನನ್ನು ಪ್ರಶಂಸಿಸಿದವು. ನೊಗದ ಮೇಲಿದ್ದಾನೋ ಕುದುರೆಗಳ ಹಿಂದಿದ್ದಾನೋ ಎಂದು ದ್ರೋಣನಿಗೂ ತೋರದಂತಾಯಿತು. ಅದೊಂದು ಅದ್ಭುತವೇ ನಡೆಯಿತು. ಮಾಂಸದ ತುಂಡಿಗಾಗಿ ಗಿಡಗವು ಹೇಗೆ ಶೀಘ್ರಾತಿಶೀಘ್ರವಾಗಿ ಹಾರಾಡುತ್ತದೆಯೋ ಹಾಗೆ ದ್ರೋಣನನ್ನು ಬಯಸುತ್ತಿದ್ದ ಅವನು ರಣದಲ್ಲಿ ವೇಗದಿಂದ ಹಾರಾಡುತ್ತಿದ್ದನು. ಆಗ ಕ್ರುದ್ಧನಾಗಿ ಪರಾಕ್ರಮೀ ದ್ರೋಣನು ರಥಶಕ್ತಿಯಿಂದ ತನ್ನ ಕುದುರೆಗಳನ್ನು ಗಾಯಗೊಳಿಸದೇ ಎಚ್ಚರಿಕೆಯಿಂದ ಧೃಷ್ಟದ್ಯುಮ್ನನ ಕಪೋತವರ್ಣದ ಕುದುರೆಗಳನ್ನು ಸಂಹರಿಸಿದನು. ಅವನಿಂದ ಹತವಾಗಿ ಧೃಷ್ಟದ್ಯುಮ್ನನ ಕುದುರೆಗಳು ಭೂಮಿಗುರುಳಿದವು. ದ್ರೋಣನ ಕೆಂಪು ಕುದುರೆಗಳೂ ರಥಬಂಧನದಿಂದ ಕಳಚಿಕೊಂಡವು. ತನ್ನ ಕುದುರೆಗಳು ದ್ವಿಜಾಗ್ರನಿಂದ ಹಾಗೆ ಹತವಾದುದನ್ನು ನೋಡಿ ಯಾಜ್ಞಸೇನಿಯು ಸಹಿಸಿಕೊಳ್ಳಲಿಲ್ಲ.

ವಿರಥನಾಗಿ ಆ ಖಡ್ಗಧಾರಿಗಳಲ್ಲಿ ಶ್ರೇಷ್ಠ ಧೃಷ್ಟದ್ಯುಮ್ನನು ಸರ್ಪವನ್ನು ವೈನತೇಯ ಗರುಡನು ಹೇಗೋ ಹಾಗೆ ದ್ರೋಣನನ್ನು ಆಕ್ರಮಣಿಸಿದನು. ಭಾರದ್ವಾಜನನ್ನು ಸಂಹರಿಸಲು ಹೊರಟ ಅವನ ರೂಪವು ಹಿರಣ್ಯಕಶಿಪುವಿನ ವಧೆಯಲ್ಲಿ ವಿಷ್ಣುವಿನ ಪರಮ ರೂಪವು ಹೇಗಿತ್ತೋ ಹಾಗೆ ಕಾಣುತ್ತಿತ್ತು. ಆಗ ಪಾರ್ಷತನು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಇಪ್ಪತ್ತು ಪ್ರಕಾರದ ಖಡ್ಗಪ್ರಹಾರಗಳನ್ನು ಪ್ರದರ್ಶಿಸಿದನು: ಭ್ರಾಂತ, ಉಧ್ಭ್ರಾಂತ, ಆವಿದ್ಧ, ಆಪ್ಲುತ, ಪ್ರಸೃತ, ಸೃತ, ಪರಿವೃತ್ತ, ನಿವೃತ್ತ ಸಂಪಾತ, ಸಮುದೀರ್ಣ, ಭಾರತ, ಕೌಶಿಕ, ಸಾತ್ವತ[11]. ಆಗ ದ್ವಿಜನು ಸಹಸ್ರ ಬಾಣಗಳಿಂದ ನೂರುಚಂದ್ರರ ಚಿಹ್ನೆಗಳನ್ನು ಹೊಂದಿದ್ದ ಧೃಷ್ಟದ್ಯುಮ್ನನ ಗುರಾಣಿಯನ್ನೂ ಖಡ್ಗವನ್ನೂ ಚೂರು ಚೂರು ಮಾಡಿ ಕೆಡವಿದನು. ಹತ್ತಿರದಲ್ಲಿದ್ದವರೊಡನೆಯೂ ಯುದ್ಧಮಾಡಬಹುದಾದಂತಹ ವೈತಸ್ತಿಗಳೆಂಬ[12] ಬಾಣಗಳನ್ನು ದ್ರೋಣನು ಬಳಸಿ ಧೃಷ್ಟದ್ಯುಮ್ನನ ಕತ್ತಿ-ಗುರಾಣಿಗಳನ್ನು ಕತ್ತರಿಸಿದನು. ಆ ಬಾಣಗಳು ಅತಿಸಮೀಪದಲ್ಲಿದ್ದವರೊಡನೆಯೂ ಯುದ್ಧಮಾಡಬಲ್ಲಂತಹ ದ್ರೋಣನನ್ನು ಮತ್ತು ಕೃಪ, ಅರ್ಜುನ, ದ್ರೌಣಿ ಅಶ್ವತ್ಥಾಮ, ಕರ್ಣ, ಕೃಷ್ಣನ ಮಗ ಪ್ರದ್ಯುಮ್ನ, ಸಾತ್ಯಕಿ ಮತ್ತು ಅಭಿಮನ್ಯುವನ್ನು ಬಿಟ್ಟರೆ ಬೇರೆ ಯಾರಲ್ಲಿಯೂ ಇರಲಿಲ್ಲ. ಆಗ ಹತ್ತಿರದಲ್ಲಿಯೇ ಇದ್ದ ಪುತ್ರಸಮ್ಮಿತ ಶಿಷ್ಯ ಧೃಷ್ಟದ್ಯುಮ್ನನನ್ನು ಸಂಹರಿಸಲು ಬಯಸಿ ಆಚಾರ್ಯನು ದೃಢ ಉತ್ತಮ ಬಾಣವನ್ನು ಹೂಡಿದನು. ಆ ಶರವನ್ನು ಸಾತ್ಯಕಿಯು ದುರ್ಯೋಧನ-ಕರ್ಣರು ನೋಡುತ್ತಿದ್ದಂತೆಯೇ ಹತ್ತು ತೀಕ್ಷ್ಣ ಶರಗಳಿಂದ ಕತ್ತರಿಸಿ ಆಚಾರ್ಯಮುಖ್ಯನ ಹಿಡಿತದಿಂದ ಧೃಷ್ಟದ್ಯುಮ್ನನನ್ನು ವಿಮೋಚನಗೊಳಿಸಿದನು. ದ್ರೋಣ, ಕರ್ಣ ಮತ್ತು ಕೃಪರ ಮಧ್ಯದಿಂದ ರಥಮಾರ್ಗದಲ್ಲಿ ಸಂಚರಿಸುತ್ತಾ ಬಂದ ಸತ್ಯವಿಕ್ರಮ ಸಾತ್ಯಕಿಯನ್ನು ವಿಷ್ವಕ್ಸೇನ-ಧನಂಜಯರೂ ನೋಡಿದರು. ಯುದ್ಧದಲ್ಲಿ ಎಲ್ಲರ ಮೇಲೂ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿ ಸಂಹರಿಸುತ್ತಿದ್ದ ವಾರ್ಷ್ಣೇಯ ಸಾತ್ಯಕಿಯನ್ನು ವಿಷ್ವಕ್ಸೇನ-ಧನಂಜಯರು “ಸಾಧು! ಸಾಧು!” ಎಂದು ಪ್ರಶಂಸಿಸಿ ಸೇನೆಗಳ ಮೇಲೆ ಧಾಳಿ ನಡೆಸಿದರು.

ಆಗ ಧನಂಜಯನು ಕೃಷ್ಣನಿಗೆ ಹೇಳಿದನು: “ನೋಡು ಕೃಷ್ಣ! ಮಧೂದ್ವಹ ಸತ್ಯವಿಕ್ರಮಿ ಸಾತ್ಯಕಿಯು ಆಚಾರ್ಯಪ್ರಮುಖರ ಮಧ್ಯೆ ಯುದ್ಧದ ಆಟವಾಡಿ ನನ್ನನ್ನೂ ಮತ್ತು ಮಾದ್ರೀಪುತ್ರರನ್ನೂ, ಭೀಮನನ್ನೂ ಮತ್ತು ರಾಜಾ ಯುಧಿಷ್ಠರನನ್ನೂ ಆನಂದಗೊಳಿಸುತ್ತಿದ್ದಾನೆ. ಉತ್ತಮ ಶಿಕ್ಷಣವನ್ನು ಪಡೆದಿದ್ದರೂ ಉದ್ಧಟತನವನ್ನು ತೋರಿಸದೇ ರಣರಂಗದಲ್ಲಿ ವೃಷ್ಣಿಗಳ ಕೀರ್ತಿವರ್ಧನ ಸಾತ್ಯಕಿಯು ಮಹಾರಥರೊಡನೆ ಯುದ್ಧದ ಆಟವಾಡುತ್ತಿದ್ದಾನೆ. ಸಮರದಲ್ಲಿ ಅಜೇಯ ಸಾತ್ವತನನ್ನು ನೋಡಿ ಸಿದ್ಧರೂ, ಎರಡೂ ಕಡೆಯ ಯೋಧರೂ ಸೇನೆಗಳೂ ಎಲ್ಲರೂ ವಿಸ್ಮಿತರಾಗಿ “ಸಾಧು! ಸಾಧು!” ಎಂದು ಆನಂದಿಸುತ್ತಿದ್ದಾರೆ ಮತ್ತು ಪ್ರಶಂಸಿಸುತ್ತಿದ್ದಾರೆ.”

ಕ್ರುದ್ಧ ರುದ್ರನಿಂದ ಪಶುಗಳು ಹೇಗೆ ಸಂಹರಿಸಲ್ಪಡುತ್ತಾರೋ ಹಾಗೆ ಆ ರಾಜಸಮಾಗಮದಲ್ಲಿ ಅತ್ಯಂತ ಕ್ರೂರ ಯುದ್ಧವು ಪ್ರಾರಂಭವಾಯಿತು. ಕತ್ತರಿಸಲ್ಪಟ್ಟ ತೋಳುಗಳು, ಶಿರಸ್ಸುಗಳು, ಧನುಸ್ಸುಗಳು, ಛತ್ರಗಳು, ಚಾಮರಗಳು, ತುಂಡಾದ ಚಕ್ರಗಳು, ರಥಗಳು, ಕೆಳಗೆ ಬಿದ್ದಿದ್ದ ಮಹಾಧ್ವಜಗಳು, ಹತವಾದ ಕುದುರೆಗಳು ಮತ್ತು ಶೂರ ಸೈನಿಕರಿಂದ ರಣಭೂಮಿಯು ತುಂಬಿಹೋಗಿತ್ತು. ಬೀಳುತ್ತಿರುವ ಬಾಣಗಳಿಂದ ಗಾಯಗೊಂಡ ಯೋಧರು ಆ ಮಹಾಯುದ್ಧದಲ್ಲಿ ವಿವಿಧ ಚೇಷ್ಟೆಗಳನ್ನು ಮಾಡುತ್ತಾ ಚಡಪಡಿಸುತ್ತಿರುವುದು ಅಲ್ಲಿ ಕಂಡುಬರುತ್ತಿತ್ತು. ದೇವಾಸುರರ ನಡುವಿನಂತೆ ಆ ಘೋರ ಯುದ್ಧವು ನಡೆಯುತ್ತಿರಲು ಯುಧಿಷ್ಠಿರನು ಕ್ಷತ್ರಿಯರಿಗೆ ಹೇಳಿದನು: “ಮಹಾರಥರೇ! ಚೆನ್ನಾಗಿ ಪ್ರಯತ್ನಪಟ್ಟು ಕುಂಭಯೋನಿಯೊಡನೆ ಯುದ್ಧಮಾಡಿ. ವೀರ ಪಾರ್ಷತನು ಯಥಾಶಕ್ತಿಯಾಗಿ ಭಾರದ್ವಾಜನನ್ನು ಕೆಳಗುರುಳಿಸಲು ಅವನೊಡನೆ ಯುದ್ಧಮಾಡುತ್ತಾನೆ. ಈ ಮಹಾರಣದಲ್ಲಿ ಕಾಣುವ ದೃಶ್ಯಗಳನ್ನು ನೋಡಿದರೆ ಇಂದು ರಣದಲ್ಲಿ ಕ್ರುದ್ಧ ಪಾರ್ಷತನು ದ್ರೋಣನನ್ನು ಕೆಳಗುರುಳಿಸುತ್ತಾನೆ. ಆದುದರಿಂದ ನೀವೆಲ್ಲರೂ ಒಂದಾಗಿ ಕುಂಭಯೋನಿಯೊಡನೆ ಯುದ್ಧಮಾಡಿರಿ!”

ಯುಧಿಷ್ಠಿರನಿಂದ ಆಜ್ಞಪ್ತ ಮಹಾರಥ ಸೃಂಜಯರು ಒಟ್ಟಾಗಿ ಭಾರದ್ವಾಜನನ್ನು ಕೊಲ್ಲಲು ಬಯಸಿ ಅವನನ್ನು ಆಕ್ರಮಣಿಸಿದರು. ಮೃತನಾಗಬೇಕೆಂದು ನಿಶ್ಚಯಿಸಿದ್ದ ಭಾರದ್ವಾಜನು ಮೇಲೆರಗುತ್ತಿದ್ದ ಅವರೆಲ್ಲರನ್ನೂ ವೇಗದಿಂದ ಎದುರಿಸಿದನು. ಆ ಸತ್ಯಸಂಧನು ಮುಂದುವರೆಯುತ್ತಿರಲು ಭೂಮಿಯು ನಡುಗಿತು. ಸೇನೆಗಳನ್ನು ಭಯಪಡಿಸುತ್ತಾ ಸಿಡಿಲುಗಳೊಂದಿಗೆ ಚಂಡಮಾರುತವು ಬೀಸತೊಡಗಿತು. ಮುಂದೆಬರುವ ಮಹಾಭಯವನ್ನು ಸೂಚಿಸಲೋ ಎನ್ನುವಂತೆ ಆದಿತ್ಯಮಂಡಲದಿಂದ ಮಹಾ ಉಲ್ಕೆಯೊಂದು ಬೆಂಕಿಯಂತೆ ಸುಡುತ್ತಾ ಕೆಳಗೆ ಬಿದ್ದಿತು. ಭಾರದ್ವಾಜನ ಶಸ್ತ್ರಗಳು ತಾವೇ ತಾವಾಗಿ ಉರಿಯತೊಡಗಿದವು. ರಥಚಕ್ರಗಳು ಅಸಾಧಾರಣವಾಗಿ ಶಬ್ಧಮಾಡುತ್ತಿದ್ದವು. ಕುದುರೆಗಳು ಕಣ್ಣೀರನ್ನು ಸುರಿಸುತ್ತಿದ್ದವು. ಮಹಾರಥ ಭಾರದ್ವಾಜನ ತೇಜಸ್ಸು ಕುಂದುತ್ತಿದೆಯೋ ಎನ್ನುವಂತಾಯಿತು. ಸ್ವರ್ಗಗಮನದ ಕುರಿತು ಬ್ರಹ್ಮವಾದೀ ಋಷಿಗಳು ಹೇಳಿದುದನ್ನು ಸ್ಮರಿಸುತ್ತಾ ಅವನು ಉತ್ತಮ ಯುದ್ಧದಿಂದ ಪ್ರಾಣಗಳನ್ನು ತೊರೆಯಲು ನಿಶ್ಚಯಿಸಿದನು. ದ್ರುಪದನ ಸೇನೆಗಳಿಂದ ನಾಲ್ಕೂ ಕಡೆಗಳಿಂದ ಪರಿವೃತನಾದ ದ್ರೋಣನು ಕ್ಷತ್ರಿಯ ಗುಂಪುಗಳನ್ನು ದಹಿಸುತ್ತಾ ರಣದಲ್ಲಿ ಸಂಚರಿಸುತ್ತಿದ್ದನು. ಆ ಅರಿಮರ್ದನನು ಇಪ್ಪತ್ತು ಸಾವಿರ ಕ್ಷತ್ರಿಯರನ್ನು ಸಂಹರಿಸಿ ನಿಶಿತ ಶಿಖಗಳಿಂದ ಹತ್ತು ಸಾವಿರ ಆನೆಗಳನ್ನು ಸಂಹರಿಸಿದನು. ಕ್ಷತ್ರಿಯರನ್ನು ನಿರ್ಮೂಲನ ಮಾಡುವ ಸಲುವಾಗಿ ಬ್ರಹ್ಮಾಸ್ತ್ರವನ್ನು ಇಟ್ಟುಕೊಂಡು ಹೊಗೆಯಿಲ್ಲದ ಅಗ್ನಿಯಂತೆ ಯುದ್ಧದಲ್ಲಿ ಪ್ರಯತ್ನಪಟ್ಟು ನಿಂತಿದ್ದನು.

ವಿರಥನಾಗಿದ್ದ, ಎಲ್ಲ ಆಯುಧಗಳನ್ನೂ ಕಳೆದುಕೊಂಡಿದ್ದ, ವಿಷಣ್ಣನಾದ ಧೃಷ್ಟದ್ಯುಮ್ನನನ್ನು ತ್ವರೆಮಾಡಿ ಭೀಮನು ಸಂಧಿಸಿದನು. ಆಗ ತನ್ನ ರಥದಲ್ಲಿ ಪಾಂಚಾಲ್ಯನನ್ನು ಏರಿಸಿಕೊಂಡು ಹತ್ತಿರದಿಂದಲೇ ದ್ರೋಣನನ್ನು ನೋಡುತ್ತಾ ಅರಿಮರ್ದನ ಭೀಮನು ಧೃಷ್ಟದ್ಯುಮ್ನನಿಗೆ ಹೇಳಿದನು: “ನಿನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಈ ಆಚಾರ್ಯನೊಡನೆ ಯುದ್ಧಮಾಡಲು ಉತ್ಸಾಹಿತರಾಗಿಲ್ಲ. ಆದುದರಿಂದ ಅವನ ವಧೆಯ ಭಾರವು ಸಂಪೂರ್ಣವಾಗಿ ನಿನ್ನ ಮೇಲೆಯೇ ಇದೆ. ತ್ವರೆಮಾಡು!”

ಹೀಗೆ ಹೇಳಲು ಮಹಾಬಾಹು ಧೃಷ್ಟದ್ಯುಮ್ನನು ಸರ್ವಭಾರಗಳನ್ನೂ ಹೊರಬಲ್ಲ ಹೊಸತಾದ ದೃಢ ಆಯುಧಪ್ರವರ ಧನುಸ್ಸನ್ನು ಮುಂದಕ್ಕೆ ಬಗ್ಗಿ ಎತ್ತಿಕೊಂಡನು. ಧೃಷ್ಟದ್ಯುಮ್ನನು ಕುಪಿತನಾಗಿ ರಣದಲ್ಲಿ ದ್ರೋಣನನ್ನು ತಡೆಯಲು ಬಯಸಿ ಬಿಲ್ಲನ್ನು ಸೆಳೆದು ಶರವರ್ಷಗಳಿಂದ ಆಚಾರ್ಯನನ್ನು ಮುಚ್ಚಿಬಿಟ್ಟನು. ಅವರಿಬ್ಬರು ರಣಶೋಭೀ ಶ್ರೇಷ್ಠರು ಕ್ರೋಧಿತರಾಗಿ ಬ್ರಹ್ಮಾಸ್ತ್ರವೇ ಮೊದಲಾದ ಅನೇಕ ದಿವ್ಯಾಸ್ತ್ರಗಳನ್ನು ಪ್ರಯೋಗಿಸುತ್ತಾ ಪರಸ್ಪರರನ್ನು ಮುಂದೆ ಬಾರದಂತೆ ತಡೆದರು. ಪಾರ್ಷತನು ರಣದಲ್ಲಿ ಭಾರದ್ವಾಜನ ಸರ್ವ ಅಸ್ತ್ರಗಳನ್ನು ನಾಶಗೊಳಿಸಿ ದ್ರೋಣನನ್ನು ಮಹಾಸ್ತ್ರಗಳಿಂದ ಮುಚ್ಚಿಬಿಟ್ಟನು. ಆ ಅಚ್ಯುತನು ಸಂಗ್ರಾಮದಲ್ಲಿ ದ್ರೋಣನನ್ನು ರಕ್ಷಿಸುತ್ತಿದ್ದ ವಸಾತಿ, ಶಿಬಿ, ಬಾಹ್ಲೀಕ ಮತ್ತು ಕೌರವರನ್ನು ಕೂಡ ವಧಿಸಿದನು. ಆಗ ಧೃಷ್ಟದ್ಯುಮ್ನನು ಕಿರಣಗಳಿಂದ ಸೂರ್ಯನು ಹೇಗೋ ಹಾಗೆ ಶರಜಾಲಗಳಿಂದ ಎಲ್ಲ ದಿಕ್ಕುಗಳನ್ನೂ ಪಸರಿಸುತ್ತಾ ಪ್ರಕಾಶಿಸಿದನು. ದ್ರೋಣನು ಅವನ ಧನುಸ್ಸನ್ನು ಕತ್ತರಿಸಿ ಶಿಲೀಮುಖಗಳಿಂದ ಅವನ ಮರ್ಮಸ್ಥಾನಗಳಿಗೆ ಹೊಡೆದು ಗಾಯಗೊಳಿಸಲು ಧೃಷ್ಟದ್ಯುಮ್ನನು ಬಹಳ ವ್ಯಥಿತನಾದನು. ಆಗ ದೃಢಕ್ರೋಧ ಭೀಮನು ತನ್ನ ರಥವನ್ನು ದ್ರೋಣನ ರಥಕ್ಕೆ ತಾಗಿಸಿಕೊಂಡು ಮೆಲ್ಲ ಮೆಲ್ಲನೆ ದ್ರೋಣನೊಂದಿಗೆ ಈ ಮಾತನ್ನಾಡಿದನು: “ಒಂದುವೇಳೆ ಬ್ರಹ್ಮಬಂಧುಗಳು ತಮ್ಮ ಕರ್ಮಗಳಿಂದ ಅಸಂತುಷ್ಟರಾಗಿ ಪರಧರ್ಮವನ್ನು ಆಶ್ರಯಿಸಿ ಯುದ್ಧವನ್ನು ಮಾಡದೇ ಇದ್ದಿದ್ದರೆ ಈ ಕ್ಷತ್ರಿಯ ಕ್ಷಯವು ನಡೆಯುತ್ತಿರಲಿಲ್ಲ. ಸರ್ವಭೂತಗಳೊಡನೆ ಅಹಿಂಸೆಯಿಂದ ನಡೆದುಕೊಳ್ಳುವುದು ಪರಮ ಧರ್ಮವೆಂದು ತಿಳಿದವರು ಹೇಳುತ್ತಾರೆ. ಅಹಿಂಸೆಗೆ ಬ್ರಾಹ್ಮಣನೇ ಮೂಲ. ನೀವಾದರೂ ಬ್ರಹ್ಮವಿತ್ತಮರಾಗಿದ್ದೀರಿ. ಬ್ರಹ್ಮನ್! ಪುತ್ರ-ಪತ್ನಿ-ಧನವನ್ನು ಬಯಸಿ ಅಜ್ಞಾನದಿಂದ ಮೂಢ ಚಾಂಡಾಲರಂತೆ ನೀವು ಮ್ಲೇಚ್ಛಗಣಗಳನ್ನೂ ಅನ್ಯ ಕ್ಷತ್ರಿಯರನ್ನೂ ಸಂಹರಿಸುತ್ತಿರುವಿರಿ. ವಿಕರ್ಮಸ್ಥ ನೀವು ಒಬ್ಬರೇ ಒಬ್ಬ ಮಗನ ಸಲುವಾಗಿ ಸ್ವಕರ್ಮದಲ್ಲಿ ನಿರತರಾಗಿರುವ ಅನೇಕ ಕ್ಷತ್ರಿಯರನ್ನು ಸಂಹರಿಸುತ್ತಿದ್ದೀರಲ್ಲ! ಇದರಿಂದ ಹೇಗೆ ನಿಮಗೆ ನಾಚಿಕೆಯಾಗುವುದಿಲ್ಲ? ಅವನೇ ಇಂದು ಕೆಳಗುರುಳಿ ಹಿಂದೆ ಮಲಗಿದ್ದಾನೆ. ಇದು ನಿಮಗೆ ತಿಳಿದಿಲ್ಲ. ಧರ್ಮರಾಜನ ಆ ಮಾತನ್ನು ನೀವು ಅತಿಯಾಗಿ ಶಂಕಿಸಬಾರದು!”

ಭೀಮಸೇನನು ಹೀಗೆ ಹೇಳಲು ದ್ರೋಣನು ಆ ಧನುಸ್ಸನ್ನು ಬಿಸುಟನು. ಸರ್ವ ಅಸ್ತ್ರಗಳನ್ನೂ ತೊರೆಯಲು ಬಯಸಿ ಧರ್ಮಾತ್ಮನು ಹೇಳಿದನು: “ಕರ್ಣ! ಮಹೇಷ್ವಾಸ ಕರ್ಣ! ಕೃಪ! ದುರ್ಯೋಧನ! ಪುನಃ ಪುನಃ ಹೇಳುತ್ತಿದ್ದೇನೆ. ಸಂಗ್ರಾಮದಲ್ಲಿ ಪ್ರಯತ್ನವನ್ನು ಮಾಡಿ! ಪಾಂಡವರಿಂದ ನಿಮಗೆ ಮಂಗಳವಾಗಲಿ. ನಾನು ಶಸ್ತ್ರಪರಿತ್ಯಾಗ ಮಾಡುತ್ತಿದ್ದೇನೆ!” ಹೀಗೆ ದ್ರೋಣನು ದ್ರೌಣಿಯನ್ನೇ ಕೂಗಿ ಕರೆಯುತ್ತಾ ರಣದಲ್ಲಿ ಶಸ್ತ್ರವನ್ನು ಬಿಸುಟು ರಥದಲ್ಲಿ ಕುಳಿತುಕೊಂಡನು. ಯೋಗಯುಕ್ತನಾಗಿ ಸರ್ವಭೂತಗಳಿಗೂ ಅಭಯವನ್ನಿತ್ತನು.

ಅವನ ಆ ರೂಪವನ್ನು ಅರ್ಥಮಾಡಿಕೊಂಡು ಧೃಷ್ಟದ್ಯುಮ್ನನು ಮೇಲೆದ್ದು ಖಡ್ಗವನ್ನು ಹಿಡಿದು ರಥದಿಂದ ಹಾರಿ ಒಮ್ಮೆಲೇ ದ್ರೋಣನನ್ನು ಆಕ್ರಮಣಿಸಿದನು. ಆ ಸ್ಥಿತಿಯಲ್ಲಿ ದ್ರೋಣನು ಧೃಷ್ಟದ್ಯುಮ್ನನ ವಶನಾದುದನ್ನು ಕಂಡು ಭೂತಗಳು, ಮನುಷ್ಯರು ಮತ್ತು ಇತರರು ಹಾಹಾಕಾರಗೈದರು. ಜೋರಾಗಿ ಹಾಹಾಕಾರವುಂಟಾಯಿತು. ಧಿಕ್ಕಾರವೆಂದೂ ಕೂಗಿಕೊಂಡರು. ಆದರೆ ದ್ರೋಣನಾದರೋ ಶಸ್ತ್ರಗಳನ್ನು ಬಿಸುಟು ಪರಮ ಸಾಮ್ಯಸ್ಥಿತಿಯನ್ನು ಹೊಂದಿದ್ದನು. ಹಾಗೆ ಹೇಳಿ ಆ ಮಹಾತಪಸ್ವಿ ಆಚಾರ್ಯನು ಯೋಗವನ್ನು ಆಶ್ರಯಿಸಿ ಜ್ಯೋತಿರ್ಭೂತನಾಗಿ ಸತ್ಪುರುಷರಿಗೂ ಅಸಾದ್ಯ ದಿವವನ್ನು ಪ್ರವೇಶಿಸಿದ್ದನು. ಅವನು ಹಾಗೆ ಹೋಗುತ್ತಿರಲು ಎರಡು ಸೂರ್ಯಗಳಿವೆಯೋ ಎನ್ನುವಂತೆ ನೋಡುವವರ ಬುದ್ಧಿಗಳಿಗನ್ನಿಸಿತು. ಭಾರದ್ವಾಜನಿಶಾಕರನು ಉದಯಿಸಲು ಆಕಾಶವೆಲ್ಲವೂ ಪ್ರಕಾಶಮಾನವಾಯಿತು. ಅದು ಸೂರ್ಯನ ಜ್ಯೋತಿಯೊಂದಿಗೆ ಸೇರಿಕೊಂಡು ಒಂದಾಯಿತು. ನಿಮಿಷಮಾತ್ರದಲ್ಲಿ ಆ ಜ್ಯೋತಿಯು ಅಂತರ್ಧಾನವಾಯಿತು. ದ್ರೋಣನು ಬ್ರಹ್ಮಲೋಕಕ್ಕೆ ಹೋಗಲು ಮತ್ತು ಧೃಷ್ಟದ್ಯುಮ್ನನು ಮೋಹಿತನಾಗಲು ಪ್ರಹೃಷ್ಟ ದಿವೌಕಸರಲ್ಲಿ ಕಿಲ ಕಿಲ ಶಬ್ಧವುಂಟಾಯಿತು. ಯೋಗಯುಕ್ತನಾದ ಆ ಮಹಾತ್ಮನು ಪರಮಗತಿಯಲ್ಲಿ ಹೋಗಿದ್ದುದನ್ನು ಮಾನುಷಯೋನಿಗಳಾದ ಅಲ್ಲಿ ಐವರು ಮಾತ್ರ ಕಂಡರು: ಸಂಜಯ, ಪಾರ್ಥ ಧನಂಜಯ, ಕೃಪ, ವಾಸುದೇವ ಮತ್ತು ಧರ್ಮರಾಜ. ಭಾರದ್ವಾಜ ಮಹಿಮಾನನು ಯೋಗಮುಕ್ತನಾಗಿ ಹೋಗಿದುದನ್ನು ಅನ್ಯರ್ಯಾರೂ ನೋಡಲಿಲ್ಲ. ಆಚಾರ್ಯ ಅರಿಂದಮನು ಯೋಗವನ್ನು ಬಳಸಿ ಋಷಿಪುಂಗವರೊಡನೆ ಪರಮ ಗತಿಯನ್ನು ಹೊಂದಿ ಬ್ರಹ್ಮಲೋಕಕ್ಕೆ ಹೋಗುತ್ತಿದ್ದುದನ್ನು ಅಜ್ಞಾನಿ ಮನುಷ್ಯರು ನೋಡಲಿಲ್ಲ.

ನೂರಾರು ಶರಗಳಿಂದ ಅವನ ಅಂಗಗಳು ಗಾಯಗೊಂಡಿದ್ದವು. ಆಯುಧವನ್ನು ಕೆಳಗಿಟ್ಟಿದ್ದನು. ದೇಹದಿಂದ ರಕ್ತವು ಸೋರುತ್ತಿತ್ತು. ಅಂತಹ ಸ್ಥಿತಿಯಲ್ಲಿ ಅವನನ್ನು ಹಿಡಿದ ಪಾರ್ಷತನನ್ನು ಸರ್ವಭೂತಗಳೂ ಧಿಕ್ಕರಿಸಿದವು. ಸತ್ವವನ್ನು ಕಳೆದುಕೊಂಡಿದ್ದ ದೇಹದ ತಲೆಗೂದಲನ್ನು ಹಿಡಿದು ಏನನ್ನೂ ಮಾತನಾಡದಂತಿದ್ದ ಅವನ ಶಿರವನ್ನು ಧೃಷ್ಟದ್ಯುಮ್ನನು ಕಾಯದಿಂದ ಕತ್ತರಿಸಿದನು. ಭಾರದ್ವಾಜನು ಕೆಳಗೆ ಬೀಳಲು ಮಹಾಹರ್ಷಯುಕ್ತ ಧೃಷ್ಟದ್ಯುಮ್ನನು ಯುದ್ಧದಲ್ಲಿ ಖಡ್ಗವನ್ನು ತಿರುಗಿಸುತ್ತಾ ಜೋರಾಗಿ ಸಿಂಹನಾದಗೈದನು. ಕಿವಿಯವರೆಗೂ ತಲೆಗೂದಲು ನೆರೆದಿದ್ದ ಕಪ್ಪುವರ್ಣದ ದ್ರೋಣನು ಎಂಭತ್ತೈದು ವರ್ಷದವನಾಗಿದ್ದನು. ಆದರೆ ಧೃತರಾಷ್ಟ್ರನ ಸಲುವಾಗಿ ಹದಿನಾರು ವರ್ಷದವನಂತೆ ರಣದಲ್ಲಿ ಸಂಚರಿಸುತ್ತಿದ್ದನು.

ಆಗ ಮಾಹಾಬಾಹು ಧನಂಜಯನು “ದ್ರುಪದಾತ್ಮಜ! ಆಚಾರ್ಯನನ್ನು ಜೀವಂತವಾಗಿ ಹಿಡಿದುಕೊಂಡು ಬಾ! ಕೊಲ್ಲಬೇಡ!” ಎಂದು ಕೂಗಿ ಹೇಳಿದ್ದನು. “ಕೊಲ್ಲಬಾರದವರನ್ನು ಕೊಲ್ಲಬೇಡ!” ಎಂದು ಸೈನಿಕರು ಕೂಗಿ ಹೇಳುತ್ತಿದ್ದರು. ಅರ್ಜುನನು ಕೂಡ ಅದನ್ನೇ ಕೂಗಿ ಹೇಳುತ್ತಾ ಧೃಷ್ಟದ್ಯುಮ್ನನ ಬಳಿ ಧಾವಿಸಿ ಬಂದಿದ್ದನು. ಅರ್ಜುನನೂ ಮತ್ತು ಸರ್ವ ಪಾರ್ಥಿವರೂ ಕೂಗಿಕೊಳ್ಳುತ್ತಿರುವಾಗಲೇ ಧೃಷ್ಟದ್ಯುಮ್ನನು ರಥದಮೇಲೆ ಕುಳಿತಿದ್ದ ನರರ್ಷಭ ದ್ರೋಣನನ್ನು ವಧಿಸಿದನು.

ರಕ್ತದಿಂದ ತೋಯ್ದ ಆ ಅರಿಂದಮನು ರಥದಿಂದ ನೆಲಕ್ಕೆ ಬೀಳಲು ಲೋಹಿತಾಂಗ ಆ ದುರ್ದರ್ಷನು ಆದಿತ್ಯನಂತೆ ತೋರಿದನು. ರಣದಲ್ಲಿ ಹೀಗೆ ಅವನು ಸಂಹರಿಸಲ್ಪಟ್ಟಿದುದನ್ನು ಸೈನಿಕ ಜನರು ನೋಡಿದರು. ಮಹೇಷ್ವಾಸ ಧೃಷ್ಟದ್ಯುಮ್ನನಾದರೋ ಭಾರದ್ವಾಜನ ಆ ಮಹಾಶಿರವನ್ನು ಕೌರವರ ಪ್ರಮುಖದಲ್ಲಿ ಎಸೆದನು. ಭಾರದ್ವಾಜನ ಆ ಶಿರವನ್ನು ನೋಡಿ ಕೌರವರು ಪಲಾಯನಮಾಡಲು ಉತ್ಸುಕರಾಗಿ ಸರ್ವ ದಿಕ್ಕುಗಳಲ್ಲಿ ಓಡಿ ಹೋದರು. ದ್ರೋಣನಾದರೋ ದಿವವನ್ನು ಸೇರಿ ನಕ್ಷತ್ರಪಥವನ್ನು ಪ್ರವೇಶಿಸಿದನು. ಸತ್ಯವತೀ ಸುತ ಋಷಿ ಕೃಷ್ಣನ ಪ್ರಸಾದದಿಂದ ಸಂಜಯನು ಆ ಮಹಾದ್ಯುತಿಯು ಹೊಗೆಯಿಲ್ಲದ ಅಗ್ನಿಯಂತೆ ಮತ್ತು ಪ್ರಜ್ವಲಿಸುತ್ತಿರುವ ಉಲ್ಕೆಯಂತೆ ದಿವಿಯನ್ನು ಸೇರಿ ಹೋಗುತ್ತಿರುವುದನ್ನು ನೋಡಿದನು.

ದ್ರೋಣನು ಹತನಾಗಲು ನಿರುತ್ಸಾಹಿತರಾಗಿದ್ದ ಕುರುಗಳನ್ನು ಪಾಂಡವ-ಸೃಂಜಯರು ಮಹಾವೇಗದಿಂದ ಆಕ್ರಮಣಿಸಿದರು. ಆಗ ಕೌರವ ಸೈನ್ಯವು ಒಡೆದುಹೋಯಿತು. ಸಂಗ್ರಾಮದಲ್ಲಿ ನಿಶಿತಶರಗಳಿಂದ ಅನೇಕರು ಹತರಾದರು. ದ್ರೋಣನು ಹತನಾಗಲು ಕೌರವರು ಜೀವವನ್ನೇ ಕಳೆದುಕೊಂಡವರಂತೆ ಆಗಿದ್ದರು. ಕೌರವ ಸೇನೆಯು ಇಲ್ಲಿ ಪರಾಜಯವನ್ನು ಹೊಂದಿ ಮರಣಾನಂತರದ ಮಹಾಭಯವನ್ನೂ ಹೊಂದಿದ್ದರು. ಇವೆರಡರಿಂದಲೂ ವಂಚಿತರಾದ ಆವರು ಆತ್ಮಧೃತಿಯನ್ನು ಕಳೆದುಕೊಂಡು ದುಃಖಿತರಾದರು. ಕೌರವರ ಕಡೆಯ ಪಾರ್ಥಿವರು ಭಾರದ್ವಾಜನ ಶರೀರವನ್ನು ಹುಡುಕಿದರೂ ಲಕ್ಷಗಟ್ಟಲೆ ಕಬಂಧಗಳ ರಾಶಿಗಳಲ್ಲಿ ಅವರಿಗೆ ಅದು ಸಿಗಲೇ ಇಲ್ಲ. ಪಾಂಡವರಾದರೋ ಜಯ ಮತ್ತು ಮರಣಾನಂತರದ ಮಹಾಯಶಸ್ಸನ್ನು ಗಳಿಸಿ ಬಾಣಗಳಿಂದ ಶಬ್ಧಮಾಡಿದರು ಮತ್ತು ಪುಷ್ಕಲ ಸಿಂಹನಾದಗೈದರು.

ಆಗ ಭೀಮಸೇನ-ಧೃಷ್ಟದ್ಯುಮ್ನರು ಪರಸ್ಪರರನ್ನು ಬಿಗಿದಪ್ಪಿ ಸೇನೆಗಳ ಮಧ್ಯೆ ಕುಣಿದಾಡಿದರು. ಆಗ ಭೀಮನು ಶತ್ರುತಾಪನ ಪಾರ್ಷತನಿಗೆ ಹೇಳಿದನು: “ಪಾರ್ಷತ! ಸಂಯುಗದಲ್ಲಿ ಸೂತಪುತ್ರ ಮತ್ತು ಪಾಪಿ ಧಾರ್ತರಾಷ್ಟ್ರನು ಹತನಾದನಂತರ ವಿಜಯಿಯಾದ ನಿನ್ನನ್ನು ಪುನಃ ಅಪ್ಪಿಕೊಳ್ಳುತ್ತೇನೆ!”

ಹೀಗೆ ಹೇಳಿ ಪಾಂಡವ ಭೀಮನು ಮಹಾ ಹರ್ಷಗೊಂಡವನಾಗಿ ತೋಳಿನ ಶಬ್ದದಿಂದ ಭೂಮಿಯನ್ನೇ ನಡುಗಿಸತೊಡಗಿದನು. ಅವನ ಆ ಶಬ್ಧದಿಂದ ಭಯಭೀತರಾದ ಕೌರವರು ಕ್ಷತ್ರಧರ್ಮವನ್ನು ತ್ಯಜಿಸಿ ಪಲಾಯನಪರಾಯಣರಾಗಿ ಓಡಿಹೋಗತೊಡಗಿದರು. ಪಾಂಡವರಾದರೋ ಜಯವನ್ನು ಪಡೆದು ಸಂತೋಷವನ್ನು ತಮ್ಮದಾಗಿಸಿಕೊಂಡರು. ಸಂಗ್ರಾಮದಲ್ಲಿ ಶತ್ರುನಾಶದಿಂದ ಸುಖವನ್ನು ಹೊಂದಿದರು. ದ್ರೋಣನು ಹತನಾದ ನಂತರ ಮತ್ತು ಅನೇಕ ವೀರರು ಹತರಾದ ನಂತರ ಶಸ್ತ್ರಪೀಡಿತ ಗಾಯಗೊಂಡ ಕುರುಗಳು ತುಂಬಾ ಶೋಕಪರಾಯಣರಾದರು. ಚೇತನಗಳನ್ನೇ ಕಳೆದುಕೊಂಡ, ಉತ್ಸಾಹಹೀನರಾದ, ದೀನರೂ, ತೇಜಸ್ಸು ಕುಂದಿದವರೂ ಆದ ಅವರು ಮಹಾ ಆರ್ತಸ್ವರದಿಂದ ಅಳುತ್ತಾ ದುರ್ಯೋಧನನನ್ನು ಸುತ್ತುವರೆದರು. ಹಿಂದೆ ಹಿರಣ್ಯಾಕ್ಷನು ಹತನಾದಾಗ ದೈತ್ಯರು ಹೇಗಾಗಿದ್ದರೋ ಹಾಗೆ ಕುರುಸೈನಿಕರು ಧೂಳುತುಂಬಿದವರಾಗಿ ದಿಕ್ಕು ದಿಕ್ಕುಗಳನ್ನು ನೋಡುತ್ತಾ ನಡುಗುತ್ತಿದ್ದರು. ಕ್ಷುದ್ರಮೃಗಗಳಂತೆ ಪರಿವೃತರಾಗಿದ್ದ ಅವರನ್ನು ಸಮಾಧಾನಗೊಳಿಸಲು ಅಸಮರ್ಥನಾಗಿ ದುರ್ಯೋಧನನು ಅಲ್ಲಿಂದ ಹೊರಟು ಹೋದನು. ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ಕುರು ಯೋಧರು ಸೂರ್ಯನ ಬಿಸಿಲಿನಿಂದ ತುಂಬಾ ಸಂತಪ್ತರಾಗಿ ವಿಮನಸ್ಕರಾದರು. ಭಾಸ್ಕರನೇ ಬಿದ್ದುಬಿಟ್ಟನೋ ಅಥವಾ ಸಮುದ್ರವೇ ಒಣಗಿಹೋಯಿತೋ ಅಥವಾ ಮೇರುಪರ್ವತವೇ ತಲೆಕೆಳಗಾಯಿತೋ ಅಥವಾ ಇಂದ್ರನೇ ಸೋತುಹೋದನೋ ಎನ್ನುವಂತಿದ್ದ ಆ ಭಾರದ್ವಾಜನ ಪತನವನ್ನು ನೋಡಿ ಸಹಿಸಿಕೊಳ್ಳಲಾರದೇ ಅತ್ಯಂತ ಭಯಭೀತರಾಗಿ ನಡುಗುತ್ತಾ ಕೌರವರು ಪಲಾಯನಮಾಡತೊಡಗಿದರು. ರುಕ್ಮರಥ ದ್ರೋಣನು ಹತನಾದುದನ್ನು ಕಂಡ ಗಾಂಧಾರರಾಜ ಶಕುನಿಯು ಭಯಗೊಂಡು ತನಗಿಂತಲೂ ಹೆಚ್ಚು ಭಯಗೊಂಡಿದ್ದ ರಥಿಕರೊಡನೆ ಪಲಾಯನಮಾಡಿದನು. ಸೂತಪುತ್ರ ಕರ್ಣನು ಭಯದಿಂದ ವೇಗವಾಗಿ ಓಡಿಹೋಗುತ್ತಿರುವ ಪತಾಕೆಗಳುಳ್ಳ ರಥಗಳ ಮಹಾಸೇನೆಯೊಂದಿಗೆ ಪಲಾಯನಮಾಡಿದನು. ಮದ್ರರ ರಾಜ ಶಲ್ಯನೂ ಕೂಡ ರಥ-ಆನೆ-ಕುದುರೆಗಳಿಂದ ಸಮೃದ್ಧ ತನ್ನ ಸೇನೆಯನ್ನು ಮುಂದೆಮಾಡಿಕೊಂಡು ಭಯದಿಂದ ಹಿಂದೆಮುಂದೆ ನೋಡುತ್ತಾ ಪಲಾಯನಮಾಡಿದನು. ಹತರಾಗಿದ್ದ ಅನೇಕ ವೀರರೂ, ಆನೆಗಳೂ ಮತ್ತು ಅನೇಕ ಪದಾತಿಗಳಿಂದ ಆವೃತರಾಗಿದ್ದ ಶಾರದ್ವತ ಕೃಪನು “ಕಷ್ಟ! ಕಷ್ಟ!” ಎಂದು ಹೇಳಿಕೊಳ್ಳುತ್ತಾ ರಣದಿಂದ ಹೊರಟುಹೋದನು. ಅಳಿದುಳಿದ ಭೋಜರಿಂದ, ಕಳಿಂಗ, ಆರಟ್ಟ ಮತ್ತು ಬಾಹ್ಲೀಕರಿಂದ ಪರಿವೃತನಾಗಿ ಕೃತವರ್ಮನು ವೇಗವಾಗಿ ಹೋಗುತ್ತಿರುವ ಕುದುರೆಗಳಿಂದ ಎಳೆಯಲ್ಪಟ್ಟ ರಥದಲ್ಲಿ ಕುಳಿತು ಪಲಾಯನಮಾಡಿದನು. ದ್ರೋಣನು ಕೆಳಗುರುಳಿದ್ದುದನ್ನು ನೋಡಿ ಉಲೂಕನು ಪದಾತಿಸೇನೆಗಳಿಂದ ಕೂಡಿ ಭಯಾರ್ದಿತನಾಗಿ ನಡುಗುತ್ತಾ ಪಲಾಯನಗೈದನು. ಪರಾಕ್ರಮಿಯ ಶೌರ್ಯದ ಲಕ್ಷಣಗಳುಳ್ಳ, ಯುವಕನೂ ಸುಂದರನೂ ಆದ ದುಃಶಾಸನನು ತುಂಬಾ ಉದ್ವಿಗ್ನನಾಗಿ ಗಜಸೇನೆಯಿಂದ ಸುತ್ತುವರೆಯಲ್ಪಟ್ಟು ಪಲಾಯನಮಾಡಿದನು. ಮಹಾರಥ ದುರ್ಯೋಧನನು ಗಜಾಶ್ವರಥಗಳಿಂದೊಡಗೂಡಿದ ಸೇನೆಯಿಂದ ಮತ್ತು ಪದಾತಿಗಳಿಂದ ಸುತ್ತುವರೆಯಲ್ಪಟ್ಟು ಅಲ್ಲಿಂದ ಪಲಾಯನಮಾಡಿದನು.

ಆನೆ ರಥಗಳನ್ನು ಏರಿಕೊಂಡು, ಇತರ ಜನರು ಕುದುರೆಗಳನ್ನೇರಿಕೊಂಡು ತಲೆಕೂದಲಗಳು ಕೆದರಿಹೋಗಿರಲು ತಡವರಿಸುತ್ತಾ ಮುಗ್ಗರಿಸುತ್ತಾ ಓಡಿ ಹೋಗುತ್ತಿದ್ದರು. ಕೌರವರು “ಇದು ಇನ್ನು ಉಳಿಯುವುದಿಲ್ಲ” ಎಂದು ಹೇಳಿಕೊಳ್ಳುತ್ತಾ, ಉತ್ಸಾಹ ತೇಜಸ್ಸುಗಳನ್ನು ಕಳೆದುಕೊಂಡು, ಇನ್ನು ಕೆಲವರು ಕವಚಗಳನ್ನೇ ಬಿಸುಟು ಓಡಿಹೋಗುತ್ತಿದ್ದರು. ಸೈನಿಕರು “ನಿಲ್ಲು! ನಿಲ್ಲು!” ಎಂದು ಅನ್ಯೋನ್ಯರನ್ನು ಕೂಗಿ ಕರೆಯುತ್ತಾ ಓಡಿಹೋಗುತ್ತಿದ್ದರೂ ಸ್ವಯಂ ತಾವು ಯಾರಿಗೂ ನಿಲ್ಲುತ್ತಿರಲಿಲ್ಲ. ಸಾರಥಿಗಳನ್ನು ಕಳೆದುಕೊಂಡ ಸ್ವಲಂಕೃತ ರಥಗಳಿಂದ ಕುದುರೆಗಳನ್ನು ಬಿಚ್ಚಿ ಏರಿ ಕಾಲುಗಳಿಂದಲೇ ಪ್ರಚೋದಿಸುತ್ತಾ ವೇಗದಿಂದ ಯೋಧರು ಓಡಿಹೋಗುತ್ತಿದ್ದರು.

ಕೃಪನು ಅಶ್ವತ್ಥಾಮನಿಗೆ ದ್ರೋಣವಧೆಯ ಕುರಿತು ಹೇಳಿದುದು; ಅಶ್ವತ್ಥಾಮನ ಕ್ರೋಧ

ಈ ರೀತಿ ತೇಜೋಹೀನರಾಗಿ ಭಯದಿಂದ ಓಡಿಹೋಗುತ್ತಿದ್ದ ಸೇನೆಯನ್ನು ಪ್ರವಾಹಕ್ಕೆ ವಿರುದ್ಧವಾಗಿ ವೇಗದಿಂದ ಮೊಸಳೆಯೋಪಾದಿಯಲ್ಲಿ ಶತ್ರುಸೇನೆಯ ಕಡೆ ಬರುತ್ತಿದ್ದ ದ್ರೋಣಪುತ್ರನು ನೋಡಿದನು. ಮದಿಸಿದ ಸಲಗದ ವಿಕ್ರಮವುಳ್ಳ ಆ ಯುದ್ಧದುರ್ಮದನು ಪಾಂಡವರ ಬಹುವಿಧದ ಸೇನೆಯನ್ನು ಸಂಹರಿಸಿ, ಎಷ್ಟೋ ಸಂಕಟಗಳಿಂದ ಪಾರಾಗಿ ಬರುತ್ತಿದ್ದನು. ಪಲಾಯನಮಾಡುವುದರಲ್ಲಿಯೇ ಹೆಚ್ಚು ಉತ್ಸಾಹವಿಟ್ಟಿದ್ದ ಮತ್ತು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವ ಸೇನೆಯನ್ನು ನೋಡಿ ದ್ರೋಣಪುತ್ರನು ದುರ್ಯೋಧನನ ಬಳಿಸಾರಿ ಹೀಗೆ ಹೇಳಿದನು: “ಭಾರತ! ಬಹಳ ಭಯಗೊಂಡವರಂತೆ ಈ ಸೇನೆಯೇಕೆ ಓಡಿಹೋಗುತ್ತಿದೆ? ರಣದಿಂದ ಓಡಿಹೋಗುತ್ತಿರುವವರನ್ನು ನೀನೇಕೆ ತಡೆಯುತ್ತಿಲ್ಲ? ನೀನೂ ಕೂಡ ಮೊದಲಿನಂತೆ ಕಾಣುತ್ತಿಲ್ಲ! ಕರ್ಣಾದಿ ರಾಜರೂ ಕೂಡ ರಣಾಂಗಣದಲ್ಲಿ ನಿಲ್ಲುತ್ತಿಲ್ಲ! ಬೇರೆ ಯುದ್ಧಗಳಲ್ಲಿ ನಿನ್ನ ಸೇನೆಯು ಹೀಗೆ ಓಡಿಹೋಗುತ್ತಿರಲಿಲ್ಲ. ನಿನ್ನ ಸೇನೆಯಲ್ಲಿ ಎಲ್ಲರೂ ಕ್ಷೇಮವಷ್ಟೇ? ನಿನ್ನ ಸೇನೆಯಲ್ಲಿ ಯಾವ ರಥಸಿಂಹನು ಹತನಾದುದರಿಂದ ನಿನ್ನ ಸೇನೆಗೆ ಈ ಅವಸ್ಥೆಯುಂಟಾಯಿತು ಎನ್ನುವುದನ್ನು ನನಗೆ ಹೇಳು ಕೌರವ!”

ದ್ರೋಣಪುತ್ರನಾಡಿದ ಆ ಮಾತನ್ನು ಕೇಳಿ ದುರ್ಯೋಧನನಿಗೆ ಘೋರವೂ ಅಪ್ರಿಯವೂ ಆದ ವಿಷಯವನ್ನು ಅವನಿಗೆ ಹೇಳಲು ಶಕ್ಯನಾಗಲಿಲ್ಲ. ಶೋಕವೆಂಬ ಮಹಾಸಾಗರದಲ್ಲಿ ನೌಕೆಯು ಒಡೆದು ಮುಳುಗಿಹೋಗಿದ್ದ ದುರ್ಯೋಧನನು ರಥದಲ್ಲಿದ್ದ ದ್ರೋಣಪುತ್ರನನ್ನು ನೋಡಿ ಕಣ್ಣುಗಳಲ್ಲಿ ನೀರುತುಂಬಿಸಿಕೊಂಡನು. ಆಗ ರಾಜನು ಲಜ್ಜಿತನಾಗಿ ಶಾರದ್ವತನಿಗೆ “ಈ ಸೇನೆಯು ಏಕೆ ಓಡಿಹೋಗುತ್ತಿದೆ ಎನ್ನುವುದನ್ನು ಸರ್ವಸ್ವವಾಗಿ ಹೇಳಿ! ನಿಮಗೆ ಮಂಗಳವಾಗಲಿ!” ಎಂದನು.

ಆಗ ಶಾರದ್ವತನು ಬಾರಿ ಬಾರಿ ಸಂಕಟಪಡುತ್ತಾ ದ್ರೋಣಪುತ್ರನಿಗೆ ದ್ರೋಣನು ಹೇಗೆ ಕೆಳಗುರುಳಿಸಲ್ಪಟ್ಟನು ಎನ್ನುವುದನ್ನು ಹೇಳಿದನು: “ನಾವು ಪೃಥ್ವಿಯಲ್ಲಿಯೇ ರಥಶ್ರೇಷ್ಠ ದ್ರೋಣನನ್ನೇ ಮುಂದಿರಿಸಿಕೊಂಡು ಕೇವಲ ಪಾಂಚಾಲರೊಡನೆ ಯುದ್ಧವನ್ನು ಪ್ರಾರಂಭಿಸಿದೆವು. ಹಾಗೆ ಸಂಗ್ರಾಮವು ನಡೆಯುತ್ತಿರಲು ಕುರು-ಸೋಮಕರು ಒಟ್ಟಾಗಿ ಅನ್ಯೋನ್ಯರೊಡನೆ ಗರ್ಜಿಸುತ್ತಾ ಶಸ್ತ್ರಗಳಿಂದ ಶತ್ರುಗಳ ಶರೀರಗಳನ್ನು ಕೆಳಗುರುಳಿಸಿದರು. ಆಗ ದ್ರೋಣನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಭಲ್ಲಗಳಿಂದ ನೂರಾರು ಸಹಸ್ರಾರು ಶತ್ರುಸೈನಿಕರನ್ನು ಸಂಹರಿಸಿದನು. ಕಾಲಚೋದಿತ ಪಾಂಡವರು, ಕೇಕಯರು, ಮತ್ಸ್ಯರು ಮತ್ತು ವಿಶೇಷವಾಗಿ ಪಾಂಚಾಲರು ರಣದಲ್ಲಿ ದ್ರೋಣನ ರಥದ ಸಮೀಪಕ್ಕೆ ಬಂದು ನಾಶಹೊಂದಿದರು. ಬ್ರಹ್ಮಾಸ್ತ್ರದ ಪ್ರಯೋಗದಿಂದ ದ್ರೋಣನು ಸಾವಿರ ರಥಸಿಂಹರನ್ನೂ ಎರಡು ಸಾವಿರ ಆನೆಗಳನ್ನೂ ಸುಟ್ಟು ಮೃತ್ಯುಲೋಕಕ್ಕೆ ಕಳುಹಿಸಿದನು. ಕಿವಿಯವರೆಗೂ ಕೂದಲು ನೆರೆತಿದ್ದ, ಎಂಭತ್ತೈದು ವರ್ಷದ ಆ ಶ್ಯಾಮಲವರ್ಣದ ವೃದ್ಧನು ರಣದಲ್ಲಿ ಹದಿನಾರು ವರ್ಷದವನಂತೆ ಸಂಚರಿಸುತ್ತಿದ್ದನು. ಸೈನ್ಯಗಳು ಕಷ್ಟಕ್ಕೊಳಗಾಗಲು, ರಾಜರು ವಧಿಸಲ್ಪಡುತ್ತಿರಲು ಕೋಪಗೊಂಡ ಪಾಂಚಾಲರು ಯುದ್ಧದಿಂದ ವಿಮುಖರಾದರು. ಅವರು ಹೀಗೆ ಪ್ರಭಗ್ನರಾಗಿ ವಿಮುಖರಾಗಲು ಶತ್ರುಗಳನ್ನು ಜಯಿಸುವ ದ್ರೋಣನು ದಿವ್ಯಾಸ್ತ್ರಗಳನ್ನು ಪ್ರಕಟಿಸುತ್ತಾ ಉದಯಿಸಿದ ಸೂರ್ಯನಂತೆ ಪ್ರಕಾಶಿಸಿದನು. ನಿನ್ನ ತಂದೆಯು ಪಾಂಡವಸೇನೆಯ ಮಧ್ಯದಲ್ಲಿ ಬಿಡುತ್ತಿರುವ ಶರಗಳ ಕಿರಣಗಳಿಂದಾಗಿ ಮಧ್ಯಾಹ್ನದ ಸೂರ್ಯನಂತೆ ನೋಡಲೂ ಕಷ್ಟಕರನಾಗಿದ್ದನು. ಸೂರ್ಯನಂತೆ ವಿರಾಜಿಸುತ್ತಿದ್ದ ದ್ರೋಣನಿಂದ ದಹಿಸಲ್ಪಡುತ್ತಿದ್ದ ಅವರು ವೀರ್ಯವೇ ಸುಟ್ಟುಹೋದಂತವರಾಗಿ ನಿರುತ್ಸಾಹರಾಗಿ ಚೇತನವನ್ನೇ ಕಳೆದುಕೊಂಡರು. ದ್ರೋಣನ ಬಾಣಗಳಿಂದ ಪೀಡಿತರಾದ ಅವರನ್ನು ನೋಡಿ ಅವರ ಜಯವನ್ನೇ ಬಯಸುವ ಮಧುಸೂದನನು ಪಾಂಡುಪುತ್ರರಿಗೆ ಹೀಗೆಂದನು: “ಶಸ್ತ್ರಧಾರಿಗಳಲ್ಲಿಯೇ ಶ್ರೇಷ್ಠನಾದ, ರಥಿಗಳ ನಾಯಕರಿಗೂ ನಾಯಕನಾಗಿರುವ ಇವನನ್ನು ಜಯಿಸಲು ರಣದಲ್ಲಿ ಯಾವ ಶತ್ರುವಿಗೂ, ವೃತ್ರಹ ಇಂದ್ರನಿಗೂ, ಸಾಧ್ಯವಿಲ್ಲ. ಪಾಂಡವರೇ! ರುಕ್ಮರಥ ದ್ರೋಣನು ಯುದ್ಧದಲ್ಲಿ ನಮ್ಮೆಲ್ಲರನ್ನೂ ಸಂಹರಿಸಿಬಿಡಬಾರದೆಂದಾದರೆ ನೀವು ಧರ್ಮವನ್ನು ಬದಿಗೊತ್ತಿ ಜಯವನ್ನು ರಕ್ಷಿಸಬೇಕು! ಅಶ್ವತ್ಥಾಮನು ಹತನಾದರೆ ಇವನು ಯುದ್ಧಮಾಡುವುದಿಲ್ಲ ಎಂದು ನನ್ನ ಅಭಿಪ್ರಾಯ. ಆದುದರಿಂದ ಯಾರಾದರೊಬ್ಬನು ಯುದ್ಧದಲ್ಲಿ ಅಶ್ವತ್ಥಾಮನು ಹತನಾದನೆಂಬ ಸುಳ್ಳನ್ನು ಅವನಿಗೆ ಹೇಳಬೇಕು!”

“ಈ ಮಾತು ಧನಂಜಯನಿಗೆ ಹಿಡಿಸಲಿಲ್ಲ. ಅನ್ಯರೆಲ್ಲರೂ, ಬಹಳ ಕಷ್ಟದಿಂದ ಯುಧಿಷ್ಠಿರನೂ, ಅದಕ್ಕೆ ಸಮ್ಮತಿಸಿದರು. ಭೀಮಸೇನನು ನಾಚಿಕೆಗೊಂಡೇ ಅಶ್ವತ್ಥಾಮನು ಹತನಾದನೆಂದು ನಿನ್ನ ತಂದೆಗೆ ಹೇಳಿದನು. ಆದರೆ ನಿನ್ನ ತಂದೆಯು ಅವನ ಮಾತನ್ನು ನಂಬಲಿಲ್ಲ. ಆದರೂ ಪುತ್ರವತ್ಸಲ ನಿನ್ನ ತಂದೆಯು ಅದು ಸುಳ್ಳೆಂದು ಸಂದೇಹಗೊಂಡು ಅಶ್ವತ್ಥಾಮನು ಹತನಾದನೇ ಅಥವಾ ಅಲ್ಲವೇ ಎಂದು ಧರ್ಮರಾಜನನ್ನು ಕೇಳಿದನು. ಆಗ ಸುಳ್ಳುಹೇಳಲು ಭಯಗೊಂಡಿದ್ದ ಆದರೆ ಜಯದಲ್ಲಿ ಆಸಕ್ತನಾಗಿದ್ದ ಯುಧಿಷ್ಠಿರನು ಮಾಲವದ ಇಂದ್ರವರ್ಮನ ಅಶ್ವತ್ಥಾಮ ಎಂಬ ಹೆಸರಿನ ಪರ್ವತಾಕಾರದ ಆನೆಯು ಭೀಮನಿಂದ ಹತವಾಯಿತು ಎಂದು ಹೇಳಿದನು. ದ್ರೋಣನ ಹತ್ತಿರ ಹೋಗಿ ಗಟ್ಟಿಯಾಗಿ ಹೀಗೆ ಹೇಳಿದನು: “ಯಾರಿಗಾಗಿ ಶಸ್ತ್ರಗಳನ್ನು ಹಿಡಿದಿರುವೆಯೋ ಮತ್ತು ಯಾರನ್ನು ನೋಡಿ ಜೀವಂತನಾಗಿರುವೆಯೋ ಆ ನಿನ್ನ ನಿತ್ಯ ಪ್ರಿಯಪುತ್ರ ಅಶ್ವತ್ಥಾಮನು ಕೆಳಗುರುಳಿಸಲ್ಪಟ್ಟಿದ್ದಾನೆ.”

“ಆ ಮಹಾ ಅಪ್ರಿಯವಾದುದನ್ನು ಕೇಳಿ ಆಚಾರ್ಯನು ಅಲ್ಲಿ ವಿಮನಸ್ಕನಾಗಿ, ದಿವ್ಯಾಸ್ತ್ರಗಳನ್ನು ನಿಲ್ಲಿಸಿ ಹಿಂದಿನಂತೆ ಯುದ್ಧಮಾಡಲಿಲ್ಲ. ಪರಮ ಉದ್ವಿಗ್ನನಾಗಿದ್ದ, ಶೋಕದಿಂದ ಹತಚೇತನನಾಗಿದ್ದ ಅವನನ್ನು ಪಾಂಚಾಲರಾಜನ ಕ್ರೂರಕರ್ಮಿ ಮಗನು ಆಕ್ರಮಣಿಸಿದನು. ಮೃತ್ಯುವೆಂದು ವಿಹಿತನಾಗಿದ್ದ ಅವನನ್ನು ನೋಡಿ ಲೋಕತತ್ವಗಳನ್ನು ಕಂಡಿದ್ದ ದ್ರೋಣನು ರಣದಲ್ಲಿ ದಿವ್ಯಾಸ್ತ್ರಗಳನ್ನು ವಿಸರ್ಜಿಸಿ ಪ್ರಾಯೋಪವೇಶಮಾಡಿದನು. ತಕ್ಷಣವೇ ಪಾರ್ಷತನು, ವೀರರು ಬೇಡವೆಂದು ಕೂಗಿಕೊಳ್ಳುತ್ತಿದ್ದರೂ, ಎಡಗೈಯಿಂದ ದ್ರೋಣನ ತಲೆಗೂದಲನ್ನು ಹಿಡಿದುಕೊಂಡನು. “ವಧ್ಯನಲ್ಲದವನನ್ನು ವಧಿಸಬೇಡ!” ಎಂದು ಸುತ್ತಲಿದ್ದ ಎಲ್ಲರೂ ಹೇಳುತ್ತಿದ್ದರು. ಹಾಗೆಯೇ ಅರ್ಜುನನೂ ಕೂಡ ರಥದಿಂದ ಕೆಳಕ್ಕಿಳಿದು ಅವನನ್ನು ತಡೆಯಲು ಓಡಿ ಬಂದನು. ಧರ್ಮವಿದು ಅರ್ಜುನನು “ಜೀವಂತವಾಗಿ ಆಚಾರ್ಯನನ್ನು ಕರೆದುಕೊಂಡು ಬಾ! ಕೊಲ್ಲಬೇಡ!” ಎಂದು ಪುನಃ ಪುನಃ ಹೇಳುತ್ತಾ ಬಾಹುಗಳನ್ನು ಮೇಲೆತ್ತಿ ಓಡಿ ಬರುತ್ತಿದ್ದನು. ಕೌರವರು ಮತ್ತು ಅರ್ಜುನರು ತಡೆಯುತ್ತಿದ್ದರೂ ಆ ನರರ್ಷಭನು ನಿನ್ನ ತಂದೆಯನ್ನು ಕ್ರೂರತನದಿಂದ ಕೊಂದೇಬಿಟ್ಟನು. ಆಗ ಸೈನಿಕರೆಲ್ಲರೂ ಭಯಾರ್ದಿತರಾಗಿ ಓಡತೊಡಗಿದರು. ನಾವೂ ಕೂಡ ನಿನ್ನ ತಂದೆಯ ಮರಣದಿಂದ ನಿರುತ್ಸಾಹಿಗಳಾಗಿದ್ದೇವೆ.”

ಯುದ್ಧದಲ್ಲಿ ತನ್ನ ತಂದೆಯು ಹತನಾದನೆಂದು ಕೇಳಿದ ದ್ರೋಣಪುತ್ರನು ಕಾಲಿನಿಂದ ಮೆಟ್ಟಲ್ಪಟ್ಟ ಸರ್ಪದಂತೆ ಅತಿ ತೀವ್ರ ಕ್ರೋಧವನ್ನು ತಾಳಿದನು.

[1]ಕರ್ಣಿಯು ಹಿಂದು-ಮುಂದಾದ ಎರಡು ಮುಳ್ಳುಗಳಿಂದ ಕೂಡಿರುತ್ತದೆ. ಶರೀರದಿಂದ ಇದನ್ನು ಹೊರತೆಗೆಯಲು ಹೋದರೆ ಕರುಳುಗಳ ಸಮೇತವಾಗಿ ಹೊರಬರುತ್ತದೆ.

[2]ನಾಲೀಕವು ಬಹಳ ಚಿಕ್ಕದಾಗಿರುವುದರಿಂದ ಶರೀರದಲ್ಲಿ ಹೊಕ್ಕರೆ ಇದನ್ನು ಹೊರಕ್ಕೆ ತೆಗೆಯಲು ಸಾಧ್ಯವಾಗುವುದಿಲ್ಲ.

[3] ವಿಷದಿಂದ ಲೇಪಿತವಾದ ಬಾಣಗಳು.

[4]ವಸ್ತಿ ಎಂದರೆ ನಾಭಿಯ ಕೆಳಭಾಗ. ಅಲ್ಲಿಯೇ ಉಳಿದುಕೊಳ್ಳುವುದಕ್ಕೆ ವಸ್ತಿಕ ಎಂದು ಹೆಸರು. ಇದರ ಚೂಪಾದ ತುದಿಗೂ ಮತ್ತು ದಂಡಕ್ಕೂ ಮಧ್ಯದಲ್ಲಿ ಬಹಳ ತೆಳುವಾದ ಭಾಗವಿರುತ್ತದೆ. ಇದು ಹೊಕ್ಕಳ ಕೆಳಭಾಗದಲ್ಲಿ ನಿಟ್ಟೊಡನೆಯೇ ಚೂಪಾದ ತುದಿಯು ವಸ್ತಿಯೊಳಗೆ ಸೇರಿಕೊಂಡು ದಂಡ ಮಾತ್ರವೇ ಹೊರಬರುತ್ತದೆ.

[5]ಇದು ಕರ್ಣಿಯಂತೆಯೇ ಇರುತ್ತದೆ. ಇದರಲ್ಲಿ ಅನೇಕ ಮುಳ್ಳುಗಳಿರುತ್ತವೆ.

[6]ಇದು ಸೂಚಿಗೆ ಅನುರೂಪವಾಗಿಯೇ ಇರುತ್ತದೆ. ಕಪಿಯ ಮೂಳೆಯಿಂದ ಮಾಡಲ್ಪಟ್ಟಿರುತ್ತದೆ. ಈ ಕಪಿಶವು ಕಬ್ಬಿಣದಿಂದ ಮಾಡಿದುದೆಂದು ಬಹಳ ಮೃದುವಾಗಿ ಪ್ರಹರಿಸಿದರೂ ದೇಹದೊಳಗೆ ಬಹಳ ಗಾಢವಾಗಿ ಹೋಗುವುದೆಂದೂ ಕೆಲವರು ಹೇಳುತ್ತಾರೆ.

[7]ಹಸುವಿನ ಮೂಳೆಯಿಂದ ಮತ್ತು ಆನೆಯ ಮೂಳೆಯಿಂದ ಮಾಡಿದ ಕೊಳವೆಯಲ್ಲಿ ಇದನ್ನು ಇಟ್ಟಿರುತ್ತಾರೆ. ಇದಕ್ಕೂ ವಿಷವನ್ನು ಲೇಪಿಸಿರುತ್ತಾರೆ.

[8]ಎರಡು ಬಾಣಗಳು ಜೋಡಿಯಲ್ಲಿರುವುದು. ಒಂದೇ ಬಾರಿಗೆ ಎರಡು ಕಡೆಗಳಲ್ಲಿ ಗಾಯವಾಗುವುದರಿಂದ ಈ ಬಾಣವನ್ನು ಬಿಡುವುದು ಹೇಯವಾದುದು.

[9]ಮಲಿನವಾದ ಬಾಣ.

[10]ಒಂದು ಕಡೆಗೆ ಲಕ್ಷ್ಯವನ್ನು ತೋರಿಸುತ್ತಿದ್ದು ಮತ್ತೊಂದು ಕಡೆ ಹೋಗಿ ಬೀಳತಕ್ಕ ಬಾಣಗಳು.

[11]ಮಂಡಲಾಕಾರವಾಗಿ ಖಡ್ಗವನ್ನು ತಿರುಗಿಸುವುದು ಭ್ರಾಂತ. ಅದನ್ನೇ ಕೈಯನ್ನು ಮೇಲೆತ್ತಿ ಮಾಡಿದರೆ ಅದು ಉಧ್ಭಾಂತವೆನಿಸಿಕೊಳ್ಳುತ್ತದೆ. ತನ್ನ ಸುತ್ತಲೂ ಖಡ್ಗವನ್ನು ತಿರುಗಿಸುತ್ತಿದ್ದರೆ ಅದು ಅವಿದ್ಧ. ಈ ಮೂರು ವರಸೆಗಳೂ ಶತ್ರುವನ್ನು ತಡೆಯಲು ಉಕ್ತವಾಗಿವೆ. ಶತ್ರುವಿನ ಮೇಲೆ ಆಕ್ರಮಣಮಾಡಲು ಹೋಗುವುದಕ್ಕೆ ಆಪ್ಲುತವೆಂದು ಹೆಸರು. ಖಡ್ಗದ ಅಗ್ರಭಾಗದಿಂದ ಶತ್ರುವಿನ ದೇಹಸ್ಪರ್ಷಮಾಡುವುದಕ್ಕೆ ಪ್ರಹೃತವೆಂದು ಹೆಸರು. ವಂಚನೆಯಿಂದ ಶತ್ರುವಿನ ಮೇಲೆ ಖಡ್ಗಪಾತಮಾಡುವುದಕ್ಕೆ ಸೃತವೆಂದು ಹೆಸರು. ಶತ್ರುವಿನ ಎಡಗಡೆಯಿಂದಲೂ ಮತ್ತು ಬಲಗಡೆಯಿಂದಲೂ ಸುತ್ತುವುದಕ್ಕೆ ಪರಿವೃತ್ತವೆಂದು ಹೆಸರು. ಖಡ್ಗವನ್ನು ತೋರಿಸುತ್ತಾ ಹಿಂದಕ್ಕೆ ನಡಿಗೆಗಳನ್ನಿಡುವುದಕ್ಕೆ ನಿವೃತ್ತವೆಂದು ಹೆಸರು. ಪರಸ್ಪರವಾಗಿ ಖಡ್ಗದಿಂದ ಪ್ರಹರಿಸುವುದಕ್ಕೆ ಸಂಪಾತವೆಂದು ಹೆಸರು ಎದುರಾಳಿಯನ್ನು ತಾನು ಅತಿಶಯಿಸಿರುವುದನ್ನು ತೋರಿಸುವುದಕ್ಕೆ ಸಮುದೀರ್ಣವೆಂದು ಹೆಸರು. ಅಂಗ-ಪ್ರತ್ಯಂಗಗಳಲ್ಲಿ ಖಡ್ಗವನ್ನು ತಿರುಗಿಸುವುದಕ್ಕೆ ಭಾರತವೆಂದು ಹೆಸರು. ವಿಚಿತ್ರರೀತಿಯಲ್ಲಿ ಖಡ್ಗವನ್ನು ತಿರುಗಿಸುವುದಕ್ಕೆ ಕೌಶಿಕವೆಂದು ಹೆಸರು. ಗುರಾಣಿಯೊಳಗೆ ತನ್ನನ್ನು ಹುದುಗಿಸಿಕೊಂಡು ಶತ್ರುವನ್ನು ಖಡ್ಗದಿಂದ ಪ್ರಹರಿಸುವುದಕ್ಕೆ ಸಾತ್ವತ ಎಂದು ಹೆಸರು.

[12]ವಿತಸ್ತಿ ಎಂದರೆ ಹನ್ನೆರಡು ಅಂಗುಲ ಉದ್ದದ ಗೇಣು.

Leave a Reply

Your email address will not be published. Required fields are marked *