Image result for Indian motifs

ಹದಿನೈದನೆಯ ದಿನದ ಯುದ್ಧ ಸಮಾಪ್ತಿ

ಅಶ್ವತ್ಥಾಮ ಪರಾಕ್ರಮ

ಆ ಅಸ್ತ್ರದಿಂದ ಹತಗೊಳ್ಳದೇ ವ್ಯವಸ್ಥಿತವಾಗಿ ನಿಂತಿದ್ದ ಆ ಸೇನೆಯನ್ನು ನೋಡಿ ದುರ್ಯೋಧನನು ದ್ರೋಣಪುತ್ರನಿಗೆ ಹೇಳಿದನು: “ಅಶ್ವತ್ಥಾಮ! ಶೀಘ್ರದಲ್ಲಿಯೇ ಪುನಃ ಆ ಅಸ್ತ್ರವನ್ನು ಪ್ರಯೋಗಿಸು! ಜಯೈಷಿ ಪಾಂಚಾಲರು ಪುನಃ ಯುದ್ಧಕ್ಕೆ ಸಿದ್ಧರಾಗಿದ್ದಾರೆ!”

ದುರ್ಯೋಧನನು ಹಾಗೆ ಹೇಳಲು ಅಶ್ವತ್ಥಾಮನು ದೀನನಾಗಿ ನಿಟ್ಟುಸಿರುಬಿಡುತ್ತಾ ರಾಜನಿಗೆ ಈ ಮಾತನ್ನಾಡಿದನು: “ರಾಜನ್! ಈ ಅಸ್ತ್ರವನ್ನು ಮರುಕಳಿಸಲಾಗುವುದಿಲ್ಲ. ಎರಡನೆಯ ಬಾರಿ ಪ್ರಯೋಗಿಸಲಿಕ್ಕಾಗುವುದಿಲ್ಲ. ಪುನಃ ಪ್ರಯೋಗಿಸಿದ್ದಾದರೆ ಪ್ರಯೋಗಿಸಿದವನನ್ನೇ ಅದು ಸಂಹರಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಅಸ್ತ್ರದ ನಿವಾರಣೋಪಾಯವನ್ನು ಕೃಷ್ಣನೇ ತಿಳಿಸಿದನು. ಅನ್ಯಥಾ ಯುದ್ಧದಲ್ಲಿ ಶತ್ರುಗಳ ವಧೆಯು ನಿಶ್ಚಿತವಾಗಿದ್ದಿತು. ಪರಾಜಯ ಮತ್ತು ಮೃತ್ಯುಗಳ ನಡುವೆ ಮೃತ್ಯುವೇ ಶ್ರೇಯಸ್ಕರವಾದುದು. ಸೋಲಲ್ಲ. ಶಸ್ತ್ರಗಳನ್ನು ಕೆಳಗಿಟ್ಟಿರುವ ಇವರೆಲ್ಲರೂ ಮೃತ್ಯುಸಮ ಸೋಲನ್ನೇ ಹೊಂದಿದ್ದಾರೆ.”

ದುರ್ಯೋಧನನು ಹೇಳಿದನು: “ಆಚಾರ್ಯಪುತ್ರ! ಈ ಅಸ್ತ್ರವನ್ನು ಎರಡನೆಯ ಬಾರಿ ಬಳಸಲಿಕ್ಕಾಗುವುದಿಲ್ಲವಾದರೆ ನಿನ್ನಲ್ಲಿರುವ ಅನ್ಯ ಅಸ್ತ್ರಗಳಿಂದ ಈ ಗುರುಘಾತಿಗಳನ್ನು ವಧಿಸು! ತ್ರ್ಯಂಬಕನಲ್ಲಿರುವಂತೆ ನಿನ್ನಲ್ಲಿಯೂ ದಿವಾಸ್ತ್ರಗಳಿವೆ. ನೀನು ಇಚ್ಛಿಸಿದರೆ ಕ್ರುದ್ಧ ಪುರಂದರನೂ ಕೂಡ ನಿನ್ನಿಂದ ಬಿಡಿಸಿಕೊಂಡು ಹೋಗಲಾರ!”

ಧ್ವಜದಲ್ಲಿ ಸಿಂಹದ ಬಾಲದ ಚಿಹ್ನೆಯನ್ನು ಹೊಂದಿದ್ದ ಅಶ್ವತ್ಥಾಮನು ತನ್ನ ಪಿತನ ನಿಧನವನ್ನು ಸ್ಮರಿಸಿಕೊಂಡು ಕ್ರೋಧದೊಂದಿಗೆ ಭಯವನ್ನು ತೊರೆದು ಪಾರ್ಷತನ ಮೇಲೆರಗಿದನು. ನರರ್ಷಭನು ಅವನ ಸಮೀಪಕ್ಕೆ ಹೋಗಿ ಇಪ್ಪತ್ತು ಕ್ಷುದ್ರಕಗಳಿಂದ ಮತ್ತು ಅತಿವೇಗದ ಐದು ಬಾಣಗಳಿಂದ ಆ ಪುರುಷರ್ಷಭನನ್ನು ಹೊಡೆದನು. ಆಗ ಧೃಷ್ಟದ್ಯುಮ್ನನು ಪಾವಕನಂತೆ ಪ್ರಜ್ವಲಿಸುತ್ತಿರುವ ಅರವತ್ಮೂರು ಪತ್ರಿಗಳಿಂದ ದ್ರೋಣಪುತ್ರನನ್ನು ಪ್ರಹರಿಸಿದನು. ಬಂಗಾರದ ರೆಕ್ಕೆಗಳುಳ್ಳ ಮಸೆಗಲ್ಲಿನಿಂದ ಹರಿತಮಾಡಲ್ಪಟ್ಟ ಇಪ್ಪತ್ತು ನಿಶಿತ ಶರಗಳಿಂದ ಅವನ ಸಾರಥಿಯನ್ನೂ ನಾಲ್ಕರಿಂದ ಅವನ ನಾಲ್ಕು ಕುದುರೆಗಳನ್ನೂ ಹೊಡೆದನು. ಹಾಗೆ ಹೊಡೆದವನನ್ನು ಪುನಃ ಹೊಡೆಯುತ್ತಾ ದ್ರೌಣಿಯು ಮೇದಿನಿಯನ್ನು ನಡುಗಿಸುವನೋ ಮತ್ತು ಸರ್ವಲೋಕಗಳ ಪ್ರಾಣಗಳನ್ನು ಹೀರುವನೋ ಎನ್ನುವಂತೆ ಮಹಾರಣದಲ್ಲಿ ಮಹಾನಾದಗೈದನು. ಪಾರ್ಷತನಾದರೋ ದ್ರೌಣಿಯನ್ನೇ ಆಕ್ರಮಣಿಸಿದನು. ಪಾಂಚಾಲ್ಯನು ದ್ರೋಣಪುತ್ರನ ತಲೆಯ ಮೇಲೆ ಬಾಣಮಯ ಮಳೆಯನ್ನೇ ಸುರಿಸಿದನು. ಪಿತೃವಧೆಯನ್ನು ಸ್ಮರಿಸಿಕೊಂಡು ದ್ರೌಣಿಯು ಕ್ರುದ್ಧನಾಗಿ ಅವನನ್ನೂ ಹತ್ತು ಪತ್ರಿಗಳಿಂದ ಹೊಡೆದು ಗಾಯಗೊಳಿಸಿದನು. ಚೆನ್ನಾಗಿ ಸೆಳೆದು ಬಿಟ್ಟಿದ್ದ ಎರಡು ಕ್ಷುರಗಳಿಂದ ಪಾಂಚಾಲರಾಜನ ಧ್ವಜ ಮತ್ತು ಧನುಸ್ಸುಗಳನ್ನು ತುಂಡರಿಸಿ ದ್ರೌಣಿಯು ಅನ್ಯ ಬಾಣಗಳಿಂದ ಅವನನ್ನು ಗಾಯಗೊಳಿಸಿದನು. ಕೂಡಲೇ ದ್ರೌಣಿಯು ಕ್ರುದ್ಧನಾಗಿ ಅವನನ್ನು ಕುದುರೆ, ಸಾರಥಿ ಮತ್ತು ರಥಗಳಿಂದ ವಿಹೀನನನ್ನಾಗಿ ಮಾಡಿ ಅವನ ಅನುಚರರನ್ನು ಶರಗಳಿಂದ ಮುಚ್ಚಿಬಿಟ್ಟನು.

ಶರವರ್ಷಗಳಿಂದ ಮುಚ್ಚಿಹೋಗಿ ಸಂಭ್ರಾಂತರೂ ಆರ್ತರೂ ಆಗಿ ತೋರುತ್ತಿದ್ದ ಪಾಂಚಾಲ ಸೇನೆಯು ಆಗ ಪಲಾಯನಮಾಡಿತು. ಯೋಧರು ವಿಮುಖರಾಗುತ್ತಿರುವುದನ್ನು ಮತ್ತು ಧೃಷ್ಟದ್ಯುಮ್ನನು ಪೀಡಿತನಾಗಿರುವುದನ್ನು ನೋಡಿ ತಕ್ಷಣವೇ ಶೈನೇಯನು ತನ್ನ ರಥವನ್ನು ದ್ರೌಣಿರಥದ ಕಡೆ ಓಡಿಸಿದನು. ಅಶ್ವತ್ಥಾಮನನ್ನು ಎದುರಿಸಿ ಅವನನ್ನು ಎಂಟು ನಿಶಿತ ಬಾಣಗಳಿಂದ ಗಾಯಗೊಳಿಸಿದನು. ಪುನಃ ನಾನಾರೂಪದ ಇಪ್ಪತ್ತು ಬಾಣಗಳಿಂದ ಆ ಅಮರ್ಷಣನನ್ನು ಹೊಡೆದು, ಹಾಗೆಯೇ ಅವನ ಸಾರಥಿಯನ್ನೂ ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನೂ ಹೊಡೆದನು. ಹೀಗೆ ನಾನಾವಿಧದ ಬಾಣಗಳಿಂದ ಅತಿಯಾಗಿ ಗಾಯಗೊಂಡ ದ್ರೌಣಿಯು ನಕ್ಕು ಯುಯುಧಾನನಿಗೆ ಈ ಮಾತನ್ನಾಡಿದನು: “ಶೈನೇಯ! ಆಚಾರ್ಯಘಾತಿನಿಯ ಮೇಲೆ ನಿನಗೆ ಅನುಗ್ರಹಬುದ್ಧಿಯಿದೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಆದರೆ ನನ್ನ ಹಿಡಿತಕ್ಕೆ ಬಂದಿರುವ ಅವನನ್ನು ಅಥವಾ ನಿನ್ನನ್ನೂ ನೀನು ರಕ್ಷಿಸಲಾರೆ!”

ಹೀಗೆ ಹೇಳಿ ದ್ರೌಣಿಯು ಸೂರ್ಯನ ರಶ್ಮಿಗಳ ಕಾಂತಿಯುಳ್ಳ ಸುತೀಕ್ಷ್ಣ ಉತ್ತಮ ಶರವನ್ನು ವೃತ್ರನಮೇಲೆ ಹರಿಯು ಹೇಗೋ ಹಾಗೆ ಸಾತ್ವತನ ಮೇಲೆ ಪ್ರಯೋಗಿಸಿದನು. ಅವನು ಪ್ರಯೋಗಿಸಿದ ಆ ಸಾಯಕವು ಕವಚದೊಂದಿಗೆ ಸಾತ್ಯಕಿಯ ದೇಹವನ್ನು ಭೇದಿಸಿ ಭುಸುಗುಟ್ಟುವ ಸರ್ಪವು ಬಿಲವನ್ನು ಹೊಗುವಂತೆ ಭೂಮಿಯನ್ನು ಹೊಕ್ಕಿತು. ಭಿನ್ನಕವಚನಾಗಿದ್ದ ಶೂರ ಸಾತ್ಯಕಿಯು ಅಂಕುಶದಿಂದ ತಿವಿಯಲ್ಪಟ್ಟ ಆನೆಯಂತೆ ವ್ಯಥಿತನಾದನು. ಗಾಯದಿಂದ ಅತಿಯಾಗಿ ರಕ್ತಸ್ರಾವವಾಗಲು ಅವನು ಧನುಸ್ಸು ಬಾಣಗಳನ್ನು ಕೆಳಗಿಟ್ಟನು. ರಕ್ತಸ್ರಾವದಿಂದ ಮೂರ್ಛೆಹೋಗಿ ರಥದಲ್ಲಿಯೇ ಕುಳಿತು ಒರಗಿದನು. ತಕ್ಷಣವೇ ಅವನ ಸಾರಥಿಯು ಅವನನ್ನು ದ್ರೋಣಪುತ್ರನ ರಥದಿಂದ ದೂರಕ್ಕೆ ಕೊಂಡೊಯ್ದನು.

ಅನಂತರ ಪರಂತಪ ಅಶ್ವತ್ಥಾಮನು ಇನ್ನೊಂದು ಸುಂದರ ಪುಂಖಗಳುಳ್ಳ ನತಪರ್ವ ಶರದಿಂದ ಧೃಷ್ಟದ್ಯುಮ್ನನ ಹುಬ್ಬುಗಳ ಮಧ್ಯೆ ಹೊಡೆದನು. ಮೊದಲೇ ಅತಿಯಾಗಿ ಗಾಯಗೊಂಡಿದ್ದ ಪಾಂಚಾಲ್ಯನು ಇನ್ನೂ ಪೀಡಿತನಾಗಿ ಯುದ್ಧದಲ್ಲಿ ಧ್ವಜವನ್ನು ಹಿಡಿದು ಕುಳಿತುಕೊಂಡನು. ಆನೆಯನ್ನು ಪೀಡಿಸುವ ಮದಿಸಿದ ಸಿಂಹದಂತ್ತಿದ್ದ ಅವನನ್ನು ವೇಗದಿಂದ ಐವರು ಶೂರ ಪಾಂಡವ ರಥರು – ಕಿರೀಟೀ, ಭೀಮಸೇನ, ಪೌರವ ವೃದ್ಧಕ್ಷತ್ರ, ಚೇದಿಗಳ ಯುವರಾಜ ಮತ್ತು ಮಾಲವದ ಸುದರ್ಶನ - ಇವರು ಧಾವಿಸಿಬಂದು ಐವರೂ ಐದೈದು ಬಾಣಗಳಿಂದ ಒಂದೇವೇಳೆಯಲ್ಲಿ ಎಲ್ಲಕಡೆಗಳಿಂದ ಅಶ್ವತ್ಥಾಮನನ್ನು ಹೊಡೆದರು. ಐವರೂ ಬಿಟ್ಟ ಆ ಇಪ್ಪತ್ತೈದು ಸಾಯಕಗಳನ್ನು ದ್ರೌಣಿಯು ಇಪ್ಪತ್ತೈದು ಶರಗಳಿಂದ ಒಟ್ಟಿಗೇ ಕತ್ತರಿಸಿದನು. ಮತ್ತೆ ದ್ರೌಣಿಯು ಏಳು ನಿಶಿತ ಬಾಣಗಳಿಂದ ಪೌರವನನ್ನೂ, ಮೂರರಿಂದ ಮಾಲವನನ್ನೂ, ಒಂದರಿಂದ ಪಾರ್ಥನನ್ನೂ, ಮತ್ತು ಆರರಿಂದ ವೃಕೋದರನನ್ನೂ ಹೊಡೆದನು. ಆಗ ಅವರೆಲ್ಲ ಮಹಾರಥರೂ ದ್ರೌಣಿಯನ್ನು ಒಟ್ಟಾಗಿ ಮತ್ತು ಪ್ರತ್ಯೇಕವಾಗಿ ರುಕ್ಮಪುಂಖ ಶಿಲಾಶಿತಗಳಿಂದ ಹೊಡೆದರು.

ಯುವರಾಜನಾದರೋ ದ್ರೌಣಿಯನ್ನು ಇಪ್ಪತ್ತು ಪತ್ರಿಗಳಿಂದ ಹೊಡೆದನು. ಪಾರ್ಥನು ಪುನಃ ಎಂಟರಿಂದ ಮತ್ತು ಎಲ್ಲರೂ ಮೂರು ಮೂರರಿಂದ ಅವನನ್ನು ಹೊಡೆದರು. ಅನಂತರ ದ್ರೌಣಾಯನು ಅರ್ಜುನನ್ನು ಆರರಿಂದ, ವಾಸುದೇವನನ್ನು ಹತ್ತರಿಂದ, ಭೀಮನನ್ನು ಹತ್ತರಿಂದ, ಯುವರಾಜನನ್ನು ನಾಲ್ಕರಿಂದ ಹೊಡೆದು ಎರಡರಿಂದ ಅವನ ಧನ್ನುಸ್ಸು-ಧ್ವಜಗಳನ್ನು ಕತ್ತರಿಸಿದನು. ಪುನಃ ಪಾರ್ಥನನ್ನು ಶರವರ್ಷದಿಂದ ಹೊಡೆದು ದ್ರೌಣಿಯು ಘೋರವಾದ ಸಿಂಹನಾದವನ್ನು ಮಾಡಿದನು. ದ್ರೌಣಿಯು ಪ್ರಯೋಗಿಸುತ್ತಿದ್ದ ಆ ನಿಶಿತವಾದ, ಎಣ್ಣೆಯಲ್ಲಿ ಅದ್ದಿ ಹದಗೊಳಿಸಿದ್ದ ಬಾಣಗಳು ಭೂಮಿ, ಆಕಾಶ, ದಿಕ್ಕು-ಉಪದಿಕ್ಕುಗಳನ್ನೂ ಆವರಿಸಿ ಎಲ್ಲವೂ ಬಾಣಮಯವಾಗಿ ಘೋರರೂಪವಾಗಿ ಕಾಣುತ್ತಿದ್ದವು. ವೀರ್ಯದಲ್ಲಿ ಇಂದ್ರನ ಸಮಾನನಾಗಿದ್ದ ಉಗ್ರತೇಜಸ್ವಿ ಅಶ್ವತ್ಥಾಮನು ತನ್ನ ರಥದ ಬಳಿಯಿದ್ದ ಸುದರ್ಶನನ ಇಂದ್ರನ ಧ್ವಜಗಳಂತೆ ಪ್ರಕಾಶಮಾನವಾಗಿದ್ದ ಎರಡು ಭುಜಗಳನ್ನೂ ಶಿರಸ್ಸನ್ನೂ ಏಕಕಾಲದಲ್ಲಿ ಮೂರು ಬಾಣಗಳಿಂದ ಹೊಡೆದು ಕತ್ತರಿಸಿದನು. ಅವನು ರಥಶಕ್ತಿಯಿಂದ ಪೌರವನ ರಥವನ್ನು ಬಾಣಗಳಿಂದ ಎಳ್ಳುಕಾಳುಗಳಷ್ಟು ಸಣ್ಣದಾಗಿ ಪುಡಿಪುಡಿಮಾಡಿ, ಚಂದನಗಳಿಂದ ಲೇಪಿತವಾದ ಅವನ ಬಾಹುಗಳನ್ನು ಕತ್ತರಿಸಿ, ಭಲ್ಲದಿಂದ ಅವನ ಶಿರವನ್ನು ದೇಹದಿಂದ ಬೇರ್ಪಡಿಸಿದನು. ಅನಂತರ ಆ ವೇಗವಾನನು ಪ್ರಜ್ವಲಿಸುವ ಅಗ್ನಿಯಂತಿರುವ ಬಾಣಗಳಿಂದ ಯುವಕನಾಗಿದ್ದ ನೀಲಕಮಲದ ಬಣ್ಣದ ಚೇದಿಪ್ರಿಯ ಯುವರಾಜನನ್ನು ಹೊಡೆದು ಅವನನ್ನು ಕುದುರೆ-ಸಾರಥಿಗಳೊಂದಿಗೆ ಮೃತ್ಯುಲೋಕಕ್ಕೆ ಕಳುಹಿಸಿದನು. ಅವರನ್ನು ರಣದಲ್ಲಿ ಸಂಹರಿಸಿ ವೀರ ಯೋಧರ ನಾಯಕ ಅಪರಾಜಿತ ದ್ರೋಣಪುತ್ರನು ಸಂತೋಷಗೊಂಡು ದೊಡ್ಡ ಶಂಖವನ್ನು ಊದಿದನು.

ಅನಂತರ ಎಲ್ಲ ಪಾಂಚಾಲಯೋಧರೂ ಪಾಂಡವ ಭೀಮಸೇನನೂ ಭಯದಿಂದ ಧೃಷ್ಟದ್ಯುಮ್ನನ ರಥವನ್ನು ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋದರು. ಓಡಿಹೋಗುತ್ತಿರುವವರ ಮೇಲೆ ದ್ರೌಣಿಯು ಶರಗಳನ್ನು ಸುರಿಸಿ, ಕಾಲನಂತೆ ಪಾಂಡವಸೇನೆಯನ್ನು ಹಿಂದಿನಿಂದ ಬೆನ್ನಟ್ಟಿ ಹೋದನು. ದ್ರೋಣಪುತ್ರನಿಂದ ವಧಿಸಲ್ಪಡುತ್ತಿರುವ ಆ ಕ್ಷತ್ರಿಯರು ಸಮರದಲ್ಲಿ ದ್ರೋಣಪುತ್ರನ ಭಯದಿಂದ ಎಲ್ಲ ದಿಕ್ಕುಗಳಿಗೆ ಓಡಿ ಹೋದರು.

ಸೇನೆಯು ಭಗ್ನವಾಗುತ್ತಿದ್ದುದನ್ನು ನೋಡಿ ಧನಂಜಯನು ದ್ರೋಣಪುತ್ರನನ್ನು ವಧಿಸಲು ಇಚ್ಛಿಸಿ ಅವನನ್ನು ತಡೆದನು. ಗೋವಿಂದ ಮತ್ತು ಅರ್ಜುನರು ತಮ್ಮ ಸೈನಿಕರನ್ನು ರಣದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದರೂ ಅವರು ನಿಲ್ಲುತ್ತಿರಲಿಲ್ಲ. ಬೀಭತ್ಸುವು ಒಬ್ಬನೇ ಉಳಿದ ಸೋಮಕರೊಂದಿಗೆ ಮತ್ಸ್ಯರನ್ನು ಮತ್ತು ಇತರರನ್ನು ಒಟ್ಟುಗೂಡಿಸಿಕೊಂಡು ಕೌರವರೊಂದಿಗೆ ಯುದ್ಧಮಾಡಲು ನಿಂತನು. ಅಶ್ವತ್ಥಾಮನನ್ನು ಬೇಗನೇ ಆಕ್ರಮಿಸಿ ಸವ್ಯಸಾಚಿಯು ಹೇಳಿದನು: “ನಿನ್ನಲ್ಲಿ ಯಾವ ಶಕ್ತಿ-ವೀರ್ಯ-ಜ್ಞಾನ-ಪೌರುಷಗಳಿವೆಯೋ, ಧಾರ್ತರಾಷ್ತ್ರರಲ್ಲಿ ಯಾವ ಪ್ರೀತಿಯೂ ನಮ್ಮ ಮೇಲೆ ಯಾವ ದ್ವೇಷವೂ ಇವೆಯೋ, ಮತ್ತು ನಿನ್ನಲ್ಲಿ ಯಾವ ಪರಮ ತೇಜಸ್ಸಿದೆಯೋ ಅದನ್ನು ನನಗೆ ತೋರಿಸು! ದ್ರೋಣನನ್ನು ಸಂಹರಿಸಿದ ಆ ಪಾರ್ಷತನೇ ನಿನ್ನ ದರ್ಪವನ್ನು ಮುರಿಯುತ್ತಾನೆ. ಕಾಲಾಗ್ನಿಗೆ ಸಮನಾಗಿರುವ ಯುದ್ಧದಲ್ಲಿ ಶತ್ರುಗಳಿಗೆ ಅಂತಕನೆಂದು ಪ್ರಖ್ಯಾತನಾಗಿರುವ ಪಾಂಚಾಲ್ಯನನ್ನು ಮತ್ತು ಕೇಶವನೊಡನೆ ನನ್ನನ್ನೂ ಎದುರಿಸಿ ಯುದ್ಧಮಾಡು!”

ಯುವರಾಜ, ಪೌರವ ವೃದ್ಧಕ್ಷತ್ರ ಮತ್ತು ಇಷ್ವಸ್ತ್ರವಿಧಿಸಂಪನ್ನನಾಗಿದ್ದ ಮಾಲವದ ಸುದರ್ಶನರು ಹತರಾಗಲು, ಮತ್ತು ಧೃಷ್ಟದ್ಯುಮ್ನ, ಸಾತ್ಯಕಿ ಮತ್ತು ಭೀಮನೂ ಕೂಡ ಪರಾಜಿತರಾಗಲು, ಯುಧಿಷ್ಠಿರನಾಡಿದ ಮಾತುಗಳು ಮರ್ಮಗಳನ್ನು ಭೇದಿಸಲು, ಮತ್ತು ತಮ್ಮಲ್ಲಿಯೇ ನಡೆದ ಅಂತರ್ಭೇದ ಇವೆಲ್ಲವುಗಳಿಂದ ಹುಟ್ಟಿದ ದುಃಖವನ್ನು ಅನುಭವಿಸುತ್ತಾ ಬೀಭತ್ಸುವಿಗೆ ಅಭೂತಪೂರ್ವವಾದ ದುಃಖ ಮತ್ತು ಕೋಪಗಳೆರಡೂ ಆಗಿದ್ದವು. ಈ ಕಾರಣದಿಂದಲೇ ಆಚಾರ್ಯತನಯನು ಕ್ರೂರನೋ ಮತ್ತು ಹೇಡಿಯೋ ಎನ್ನುವಂತೆ ಅನರ್ಹರೀತಿಯಲ್ಲಿ ಅಶ್ಲೀಲವಾದ ಮತ್ತು ಅಪ್ರಿಯವಾದ ಮಾತುಗಳನ್ನು ದ್ರೌಣಿಗೆ ಹೇಳಿದನು. ಪಾರ್ಥನ ಕಠೋರ ಮಾತನ್ನು ಸರ್ವಮರ್ಮಗಳನ್ನೂ ಭೇದಿಸುವಂತಹ ದಾಟಿಯಲ್ಲಿ ಹೇಳಿದುದನ್ನು ಕೇಳಿದ ಅಶ್ವತ್ಥಾಮನು ಕ್ರೋಧದಿಂದ ಸುದೀರ್ಘವಾಗಿ ನಿಟ್ಟುಸಿರುಬಿಟ್ಟನು. ಪಾರ್ಥನಮೇಲೆ ಮತ್ತು ವಿಶೇಷವಾಗಿ ಕೃಷ್ಣನ ಮೇಲೆ ದ್ರೌಣಿಯು ಕುಪಿತನಾದನು.

ಆ ವೀರ್ಯವಾನನು ಪ್ರಯತ್ನಿಸಿ ರಥದಲ್ಲಿ ಕುಳಿತು ಆಚಮನ ಮಾಡಿ ದೇವತೆಗಳಿಗೂ ದುರ್ಧರ್ಷ ಆಗ್ನೇಯಾಸ್ತ್ರವನ್ನು ಪ್ರಕಟಿಸಿದನು. ಪರವೀರಹ ಆಚಾರ್ಯನಂದನನು ಕಾಣುತ್ತಿದ್ದ ಮತ್ತು ಕಾಣಿಸದಿದ್ದ ಶತ್ರುಗಣಗಳನ್ನು ಉದ್ದೇಶಿಸಿ, ಹೊಗೆಯಿಲ್ಲದ ಪಾವಕನಂತೆ ಉರಿಯುತ್ತಿದ್ದ ಶರವನ್ನು ಅಭಿಮಂತ್ರಿಸಿ, ಕ್ರೋಧಾವೇಶಗೊಂಡು ಎಲ್ಲೆಡೆಯಲ್ಲಿ ಪ್ರಯೋಗಿಸಿದನು. ಆಗ ಆಕಾಶದಲ್ಲಿ ತುಮುಲದೊಡನೆ ಶರವರ್ಷವುಂಟಾಯಿತು. ತಣ್ಣನೆಯ ಗಾಳಿಯು ಬೀಸತೊಡಗಿತು. ಸೂರ್ಯನೂ ಸುಡಲಿಲ್ಲ. ಎಲ್ಲ ದಿಕ್ಕುಗಳಲ್ಲಿಯೂ ದಾನವರೂ ಕೂಡ ಭೈರವವಾಗಿ ಕೂಗಿಕೊಂಡರು. ಅಂಬರದಲ್ಲಿ ಮೋಡಗಳು ಗುಡುಗಿದವು. ರಕ್ತದ ಮಳೆಯು ಸುರಿಯಿತು. ಪಕ್ಷಿ-ಪಶು-ಗೋವುಗಳು ಮತ್ತು ಸುವ್ರತ ಮುನಿಗಳು ಕೂಡ ಪರಮ ಪ್ರಯತ್ನಮಾಡಿಯೂ ಶಾಂತಿಯನ್ನು ಪಡೆಯಲಾರದಾದರು. ಸರ್ವಮಹಾಭೂತಗಳೂ ಭ್ರಾಂತಗೊಂಡವು. ದಿವಾಕರನೂ ಇರುವಲ್ಲಿಯೇ ಗರಗರನೆ ತಿರುಗುತ್ತಿರುವಂತೆ ತೋರಿದನು. ಮೂರುಲೋಕದವರೂ ಜ್ವರದಿಂದ ಪೀಡಿತರಾದವರಂತೆ ಪರಿತಪಿಸಿದರು. ಆ ಶರದ ತೇಜಸ್ಸಿನಿಂದ ಸಂತಪ್ತರಾಗಿ ಭೂಮಿಯ ಮೇಲೆ ಮಲಗಿದ್ದ ನಾಗಗಳು ಭುಸುಗುಟ್ಟುತ್ತಾ ಘೋರ ತೇಜಸ್ಸಿನಿಂದ ಮುಕ್ತಿಪಡೆಯಲೋಸುಗ ಪುನಃ ಪುನಃ ಮೇಲೆ ಹಾರುತ್ತಿದ್ದವು. ಜಲಚರ ಪ್ರಾಣಿಗಳು ಮತ್ತು ಸಸ್ಯಗಳು ಕುದಿಯುತ್ತಿರುವ ಜಲಾಶಯಗಳಲ್ಲಿ ಬೆಂದು ಚಡಪಡಿಸುತ್ತಿದ್ದವು. ದಿಕ್ಕು-ಉಪದಿಕ್ಕುಗಳಿಂದ, ಆಕಾಶ-ಭುವನಗಳಿಂದ ಗರುಡನ ಮತ್ತು ಚಂಡಮಾರುತದ ವೇಗದಲ್ಲಿ ಶರವೃಷ್ಟಿಗಳು ಬೀಳತೊಡಗಿದವು.

ದ್ರೋಣಪುತ್ರನ ಆ ವಜ್ರವೇಗಸಮಾಹಿತ ಶರಗಳಿಂದ ಸುಟ್ಟ ಶತ್ರುಗಳು ಕಾಡ್ಗಿಚ್ಚಿನಿಂದ ಸುಟ್ಟ ಮರಗಳಂತೆ ಕೆಳಗುರುಳಿದರು. ದಹಿಸುತ್ತಿರುವ ಮಹಾನಾಗಗಳು ಗುಡುಗಿನಂತೆ ಭೈರವವಾಗಿ ಭುಸುಗುಡುತ್ತಾ ಆಕಾಶದ ಎಲ್ಲಕಡೆಗಳಿಂದ ಬೀಳತೊಡಗಿದವು. ಘೋರ ವನದಲ್ಲಿ ದಾವಾಗ್ನಿಯಿಂದ ಸುತ್ತುವರೆಯಲ್ಪಟ್ಟವರಂತೆ ಹತ್ತಿ ಉರಿಯುತ್ತಿದ್ದ ಅನೇಕ ಮಹಾಗಜಗಳು ಎಲ್ಲಕಡೆಗಳಲ್ಲಿ ಓಡತೊಡಗಿದವು. ಅಶ್ವವೃಂದಗಳು ಮತ್ತು ರಥವೃಂದಗಳು ಉರಿಯುತ್ತಿರುವ ಮರಗಳ ಶಿಖರಗಳಂತೆ ಕಾಣುತ್ತಿದ್ದವು. ಅಲ್ಲಲ್ಲಿ ಸಹಸ್ರಾರು ರಥಗಳ ಗುಂಪುಗಳೂ ಸುಟ್ಟು ಬೀಳುತ್ತಿದ್ದವು. ಯುಗಾಂತದಲ್ಲಿ ಸರ್ವಭೂತಗಳನ್ನು ಸಂವರ್ತಕ ಅಗ್ನಿಯು ಸುಡುವಂತೆ ಭಗವಾನ್ ಅಗ್ನಿಯು ಯುದ್ಧದಲ್ಲಿ ಆ ಸೈನ್ಯವನ್ನು ಸುಟ್ಟನು.

ಪಾಂಡವೀ ಸೇನೆಯು ಆ ಮಹಾರಣದಲ್ಲಿ ಹಾಗೆ ಸುಡುತ್ತಿರುವುದನ್ನು ನೋಡಿ ಪ್ರಹೃಷ್ಟರಾದ ನಿಮ್ಮವರು ಸಿಂಹನಾದಗೈದರು. ಆಗ ಜಯವನ್ನು ಬಯಸಿದ್ದ ಕೌರವರು ಹೃಷ್ಟರಾಗಿ ತಕ್ಷಣವೇ ನಾನಾರೀತಿಯ ಮಂಗಳ ವಾದ್ಯಗಳನ್ನು ಬಾರಿಸತೊಡಗಿದರು. ಲೋಕವೆಲ್ಲವೂ ಕತ್ತಲೆಯಿಂದ ಆವೃತವಾಗಿದ್ದ ಆ ಮಹಾಯುದ್ಧದಲ್ಲಿ ಅಕ್ಷೌಹಿಣಿ ಸೇನೆಯೂ ಪಾಂಡವ ಸವ್ಯಸಾಚಿಯೂ ಕಾಣದಂತಾದರು. ಅಸಹನಶೀಲ ದ್ರೋಣಪುತ್ರನು ಸೃಷ್ಟಿಸಿದ ಅಂತಹ ಅಸ್ತ್ರವನ್ನು ಯಾರೂ ಇದರ ಮೊದಲು ಕಂಡಿರಲಿಲ್ಲ. ಅದರ ಕುರಿತು ಕೇಳಿಯೂ ಇರಲಿಲ್ಲ.

ಅರ್ಜುನನಾದರೋ ಸರ್ವಾಸ್ತ್ರಗಳನ್ನೂ ಶಮನಗೊಳಿಸುವುದಕ್ಕಾಗಿ ಪದ್ಮಯೋನಿಯಿಂದ ವಿಹಿತವಾಗಿದ್ದ ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು. ಕ್ಷಣದಲ್ಲಿಯೇ ಆ ಕತ್ತಲೆಯು ಹೋಗಿ ಶೀತಲ ಗಾಳಿಯು ಬೀಸತೊಡಗಿತು. ದಿಕ್ಕುಗಳು ನಿರ್ಮಲವಾದವು. ಅದೊಂದು ಅದ್ಭುತವಾಗಿತ್ತು, ಅಸ್ತ್ರದ ಮಾಯೆಯಿಂದ ದಗ್ಧರಾಗಿ ಹೋಗಿ ಹತವಾಗಿದ್ದ ಎಲ್ಲ ಅಕ್ಷೌಹಿಣೀ ಸೇನೆಯನ್ನು ಗುರುತಿಸಲೂ ಸಾಧ್ಯವಾಗುತ್ತಿರಲಿಲ್ಲ.

ಆಗ ಕತ್ತಲೆಯನ್ನು ಹೋಗಲಾಡಿಸಲು ಉದಯಿಸುವ ಸೂರ್ಯಚಂದ್ರರಂತೆ ಮಹೇಷ್ವಾಸ ವೀರ ಕೇಶವಾರ್ಜುನರು ಒಟ್ಟಿಗೇ ವಿಮುಕ್ತರಾಗಿ ಕಾಣತೊಡಗಿದರು. ಕೌರವರಿಗೆ ಭಯಂಕರರಾಗಿದ್ದ ಅವರು ಪತಾಕ-ಧ್ವಜ-ಕುದುರೆಗಳಿಂದ ಯುಕ್ತವಾಗಿದ್ದ ರಥದಲ್ಲಿ ಶ್ರೇಷ್ಠ ಆಯುಧಗಳನ್ನು ಸೆಳೆಯುತ್ತಾ, ಅಸ್ತ್ರದಿಂದ ವಿಮುಕ್ತರಾಗಿ ಕಾಣಿಸಿಕೊಂಡರು. ಆಗ ತಕ್ಷಣವೇ ಪ್ರಹೃಷ್ಟ ಪಾಂಡವರ ಕಡೆಯಲ್ಲಿ ಕಿಲಕಿಲ ಶಬ್ಧವೂ ಶಂಖಭೇರಿಗಳ ನಿನಾದವೂ ಕೇಳಿಬಂದಿತು. ಅವರಿಬ್ಬರೂ ಹತರಾದರೆಂದೇ ಎರಡು ಸೇನೆಗಳು ತಿಳಿದುಕೊಂಡಿದ್ದವು. ಆದರೆ ಸ್ವಲ್ಪವೂ ಗಾಯಗೊಳ್ಳದೇ ವಿಮುಕ್ತರಾಗಿ ಪ್ರಮುದಿತರಾಗಿ ಶಂಖಗಳನ್ನು ಊದುತ್ತಾ ಒಮ್ಮೆಲೇ ಕಾಣಿಸಿಕೊಂಡ ಕೇಶವಾರ್ಜುನರಿಬ್ಬರನ್ನೂ ನೋಡಿ ಪಾರ್ಥರು ಮುದಿತರಾದರು ಮತ್ತು ಕೌರವರು ವ್ಯಥಿತರಾದರು.

ವಿಮುಕ್ತರಾದ ಅವರಿಬ್ಬರು ಮಹಾತ್ಮರನ್ನೂ ಕಂಡು ದ್ರೌಣಿಯು ತುಂಬಾ ದುಃಖಿತನಾಗಿ ಇದೇನೆಂದು ಮುಹೂರ್ತಕಾಲ ಚಿಂತಿಸತೊಡಗಿದನು. ಧ್ಯಾನಶೋಕಪರಾಯಣನಾದ ಅವನು ಚಿಂತಿಸುತ್ತಾ ದೀರ್ಘ ಬಿಸಿ ನಿಟ್ಟುಸಿರು ಬಿಡುತ್ತಾ ವಿಮನಸ್ಕನಾದನು. ಆಗ ದ್ರೌಣಿಯು ಧನುಸ್ಸನ್ನು ಕೆಳಗಿಟ್ಟು ರಥದಿಂದ ಕೆಳಕ್ಕೆ ಹಾರಿ “ಇವೆಲ್ಲವೂ ಸುಳ್ಳು! ಧಿಕ್ಕಾರ! ಧಿಕ್ಕಾರ!” ಎಂದು ಹೇಳುತ್ತಾ ರಣದಿಂದ ವೇಗವಾಗಿ ಓಡಿಹೋದನು.

ವ್ಯಾಸನು ಅಶ್ವತ್ಥಾಮನಿಗೆ ಕೃಷ್ಣಾರ್ಜುನರ ಘನತೆಯನ್ನು ವರ್ಣಿಸಿದುದು

ಆಗ ದಟ್ಟ ಕಾಲಮೇಘದಂತೆ ಕಾಣುತ್ತಿದ್ದ ಅಕಲ್ಮಷ ಸರಸ್ವತೀ ತೀರದಲ್ಲಿ ವಾಸಿಸುತ್ತಿದ್ದ ವೇದಗಳನ್ನು ವಿಂಗಡಿಸಿದ ವ್ಯಾಸನನ್ನು ಕಂಡನು. ತನ್ನ ಮುಂದೆ ನಿಂತಿರುವ ಅವನನ್ನು ನೋಡಿ ದ್ರೌಣಿಯು ದೀನನಾಗಿ ನಮಸ್ಕರಿಸಿ ಗದ್ಗದ ಧ್ವನಿಯಲ್ಲಿ ಈ ಮಾತನ್ನಾಡಿದನು: “ಭೋ! ಭೋ! ಇದು ಮಾಯೆಯೋ ದೈವೇಚ್ಛೆಯೋ ಏನೆಂದು ಅರ್ಥವಾಗುತ್ತಿಲ್ಲ. ಈ ಅಸ್ತ್ರವು ಹೇಗೆ ಈ ರೀತಿಯಲ್ಲಿ ಸುಳ್ಳಾಯಿತು? ಇದರಲ್ಲಿ ನನ್ನದೇನಾದರೂ ದೋಷವಿದೆಯೇ? ಇದರ ಪ್ರಭಾವವು ತಲೆಕೆಳಗಾಯಿತೇ? ಲೋಕಗಳ ಪರಾಭವವೆಂದು ಸಿದ್ಧವಾಗಿದೆಯೇ? ಈ ಇಬ್ಬರು ಕೃಷ್ಣರೂ ಜೀವಿಸಿದ್ದಾರೆಂದರೆ ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲವೆನಿಸುತ್ತಿದೆ. ನಾನು ಪ್ರಯೋಗಿಸಿದ ಈ ಅಸ್ತ್ರವನ್ನು ಅಸುರ-ಅಮರ-ಗಂಧರ್ವ-ಪಿಶಾಚ-ರಾಕ್ಷಸರಾಗಲೀ, ಸರ್ಪ-ಯಕ್ಷ-ಪಕ್ಷಿಗಳಾಗಲೀ ಮತ್ತು ಮನುಷ್ಯರಾಗಲೀ ಎಂದೂ ಅಸಫಲಗೊಳಿಸಲು ಸಮರ್ಥರಿಲ್ಲ. ಹಾಗಿರುವಾಗ ಅದು ಒಂದು ಅಕ್ಷೌಹಿಣೀ ಸೇನೆಯನ್ನು ಮಾತ್ರ ದಹಿಸಿ ಉಪಶಮನಗೊಂಡಿತು. ಆದರೂ ಇದು ಮರ್ತ್ಯರ ಧರ್ಮವನ್ನು ಹೊಂದಿರುವ ಕೇಶವಾರ್ಜುನರನ್ನು ಏಕೆ ವಧಿಸಲಿಲ್ಲ? ಭಗವನ್! ನಾನು ಕೇಳುವ ಈ ಪ್ರಶ್ನೆಗೆ ಯಥಾವತ್ತಾಗಿ ಉತ್ತರಿಸಿರಿ!”

ವ್ಯಾಸನು ಹೇಳಿದನು: “ವಿಸ್ಮಯದಿಂದ ನೀನು ಕೇಳುವ ಈ ಮಹಾಅರ್ಥವೆಲ್ಲವನ್ನೂ ನಾನು ನಿನಗೆ ಹೇಳುತ್ತೇನೆ. ಮನಸ್ಸನ್ನು ಸಮಾಧಾನಗೊಳಿಸಿಕೊಂಡು ಕೇಳು! ನಮ್ಮ ಪೂರ್ವಜರಿಗೂ ಪೂರ್ವಜನಾದ, ವಿಶ್ವಕ್ಕೇ ಕಾರಣನಾದ ನಾರಾಯಣನೆಂಬ ಹೆಸರಿನ ಭಗವಂತನು ವಿಶೇಷಕಾರ್ಯಾರ್ಥವಾಗಿ ಒಮ್ಮೆ ಧರ್ಮನ ಪುತ್ರನಾಗಿ ಜನಿಸಿದನು. ಪ್ರಜ್ವಲಿಸುತ್ತಿರುವ ಸೂರ್ಯನ ಕಾಂತಿಯನ್ನು ಹೊಂದಿದ್ದ ಆ ಮಹಾತೇಜಸ್ವಿಯು ಮೈನಾಕ ಪರ್ವತದಲ್ಲಿ ನಿಂತು ಬಾಹುಗಳನ್ನು ಮೇಲೆತ್ತಿ ತೀವ್ರ ತಪಸ್ಸಿನಲ್ಲಿ ತೊಡಗಿದನು. ಆ ಅಂಬುಜಾಕ್ಷನು ಅರವತ್ತು ಸಾವಿರ ವರ್ಷಗಳ ಪರ್ಯಂತ ವಾಯುವನ್ನೇ ಸೇವಿಸುತ್ತಾ ತನ್ನ ಶರೀರವನ್ನು ಕೃಶಗೊಳಿಸಿದನು. ಅದಕ್ಕೂ ದ್ವಿಗುಣಕಾಲ ಪುನಃ ಮಹಾತಪಸ್ಸನ್ನಾಚರಿಸಿ ಅವನು ತನ್ನ ತೇಜಸ್ಸಿನ ಅಗ್ನಿಯಿಂದ ಭೂಮಿ ಆಕಾಶಗಳ ಮಧ್ಯಭಾಗವನ್ನು ತುಂಬಿಸಿದನು. ಅವನು ಹಾಗೆ ತಪಸ್ಸಿನಿಂದ ಬ್ರಹ್ಮಭೂತನಾಗಿರಲು ವಿಶ್ವದ ಯೋನಿ, ಜಗತ್ತಿನ ಒಡೆಯ, ಅತಿ ದುರ್ಧರ್ಶ, ಸರ್ವದೇವತೆಗಳಿಗೂ ಈಶ್ವರ, ಅಣುಗಳಿಗೂ ಅಣು, ದೊಡ್ಡವುಗಳಿಗೂ ದೊಡ್ಡವನಾದ ವಿಶ್ವೇಶ್ವರನ್ನು ಕಂಡನು. ರುದ್ರ, ಈಶಾನ, ಋಷಭ, ಚೇಕಿತಾನ, ಅಜ, ಪರಮ, ಅಲ್ಲಿನಿಂತಿದ್ದರೂ ಸರ್ವಭೂತಗಳ ಹೃದಯಗಳಲ್ಲಿ ಸ್ಥಿತನಾಗಿರುವ, ದುರ್ವಾರಣ, ದುರ್ದೃಶ, ತಿಗ್ಮಮನ್ಯು, ಮಹಾತ್ಮ, ಸರ್ವಹರ, ಪ್ರಚೇತಸ, ದಿವ್ಯ ಚಾಪಬಾಣಗಳನ್ನು ಹಿಡಿದಿರುವ, ಬಂಗಾರದ ಕವಚವನ್ನು ಧರಿಸಿದ್ದ, ಅನಂತವೀರ್ಯ, ಪಿನಾಕ-ವಜ್ರ-ಉರಿಯುತ್ತಿರುವ ಶೂಲ-ಪರಶು-ಗದೆ ಮತ್ತು ಖಡ್ಗಗಳನ್ನು ಧರಿಸಿದ್ದ, ಸುಂದರ ಹುಬ್ಬುಗಳುಳ್ಳ, ಜಟಾಮಂಡಲ, ಚಂದ್ರಮೌಳಿ, ವ್ಯಾಘ್ರಾಜಿನ, ಪರಿಘ-ದಂಡಗಳನ್ನು ಕೈಗಳಲ್ಲಿ ಹಿಡಿದಿದ್ದ, ಶುಭ ಅಂಗದವನ್ನು ಧರಿಸಿದ್ದ, ನಾಗಯಜ್ಞೋಪವೀತ, ವಿಶ್ವೇದೇವರ ಗಣಗಳಿಂದಲೂ ಭೂತಗಣಗಳಿಂದಲೂ ಶೋಭಿತ, ತಪಸ್ವಿಗಳಿಗೆ ಒಬ್ಬನೇ ಸನ್ನಿಧಾನ, ವೃದ್ಧರಿಂದ ಪ್ರಿಯವಾಗಿ ಸ್ತುತಿಸಲ್ಪಡುವ, ನೀರು-ನಾಕ-ಆಕಾಶ-ಭೂಮಿ-ಚಂದ್ರ-ಸೂರ್ಯ ಹಾಗೆಯೇ ಜಗತ್ತು-ವಾಯು-ಅಗ್ನಿಗಳನ್ನೂ ಮೀರಿದ, ಬ್ರಹ್ಮದ್ವೇಷಿಗಳ ವಿನಾಶಕ, ಅಮೃತತ್ವಕ್ಕೆ ಕಾರಣ, ದುರಾಚಾರಿಗಳಿಗೆ ಕಾಣಿಸದ, ಸಾಧುವೃತ್ತರಾದ ಬ್ರಾಹ್ಮಣರು ಪಾಪವನ್ನು ಕಳೆದುಕೊಂಡು ವಿಶೋಕ ಮನಸ್ಸಿನಲ್ಲಿ ಕಾಣಬಲ್ಲ,  ಆ ಧರ್ಮ ಪರಮೇಶ್ವರ ವಿಶ್ವರೂಪನನ್ನು ತನ್ನ ಭಕ್ತಿಯಿಂದ ಅವನು ನೋಡಿದನು. ಆ ದೇವದೇವನನ್ನು ನೋಡಿ ಸಂಹೃಷ್ಟಾತ್ಮನಾದ ಅವನು ತನ್ನ ವಾಕ್-ಮನೋ-ಬುದ್ಧಿ-ದೇಹಗಳಿಂದ ಮುದಿತನಾದನು. ರುದ್ರಾಕ್ಷಮಾಲೆಗಳಿಂದ ವಿಭೂಷಿತ ಬೆಳಕಿನ ಆ ಪರಮನಿಧಿಯನ್ನು ಕಂಡು ನಾರಾಯಣನು ಆ ವಿಶ್ವಸಂಭವನಿಗೆ ನಮಸ್ಕರಿಸಿದನು. ಹೃಷ್ಟಪುಷ್ಟ ಪಾರ್ವತಿಯ ಜೊಗೆತಿದ್ದ ವರದ ಪ್ರಭು ಅಜ ಈಶಾನ ಅವ್ಯಗ್ರ ತನಗೆ ತಾನೇ ಕಾರಣ ಅಚ್ಯುತ ಮತ್ತು ಅಂಧಕನನ್ನು ಸಂಹರಿಸಿದ ರುದ್ರನಿಗೆ ನಮಸ್ಕರಿಸಿ ಪದ್ಮಾಕ್ಷ ವಿರೂಪಾಕ್ಷನನ್ನು ಭಕ್ತಿಯಿಂದ ಸ್ತುತಿಸಿದನು:

““ಆದಿದೇವ! ದೇವ! ಭೂತಕೃತ! ವರೇಣ್ಯ! ಇಂದು ಈ ಭುವನವನ್ನು ರಕ್ಷಿಸುವ ಪೂರ್ವದೇವರು ನಿನ್ನಿಂದಲೇ ಹುಟ್ಟಿದರು. ಈ ಧರಣಿಯನ್ನು ರಕ್ಷಿಸುವ ಪುರಾಣರೂ ಕೂಡ ಹಿಂದೆ ನಿನ್ನಿಂದಲೇ ಸೃಷ್ಟಿಸಲ್ಪಟ್ಟರು. ಸುರ-ಅಸುರ-ನಾಗ-ರಾಕ್ಷಸ-ಪಿಶಾಚರು, ನರರು, ಸುಪರ್ಣರು ಮತ್ತು ಗಂಧರ್ವ-ಯಕ್ಷರು, ವಿಶ್ವದಲ್ಲಿರುವ ಪ್ರತ್ಯೇಕ ಭೂತಸಂಘಗಳು ನಿನ್ನಿಂದಲೇ ಹುಟ್ಟಿರುವವು ಎಂದು ಸರ್ವರಿಗೂ ತಿಳಿದಿದೆ. ಆದುದರಿಂದ ಇಂದ್ರ, ಯಮ, ವರುಣ, ಕುಬೇರ, ಮಿತ್ರ, ತ್ವಷ್ಟ ಮತ್ತು ಚಂದ್ರರ ಕರ್ಮಗಳು ನಿನ್ನವೇ ಆಗಿವೆ. ಶಬ್ಧ-ಸ್ಪರ್ಶ-ರೂಪ-ರಸ-ಗಂಧಗಳೂ, ಆಕಾಶ-ವಾಯು-ನೀರು-ತೇಜಸ್ಸುಗಳೂ, ಭೂಮಿ, ಕಾಮ, ಬ್ರಹ್ಮ, ವೇದ, ಬ್ರಾಹ್ಮಣರೂ ಮತ್ತು ಸ್ಥಾವರ-ಜಂಗಮಗಳೂ ನಿನ್ನಿಂದಲೇ ಹುಟ್ಟಿವೆ. ನೀರು ಪ್ರತ್ಯೇಕ ಪ್ರತ್ಯೇಕ ಆವಿಯ ತುಂತುರಾಗಿ ಹೇಗೆ ಪ್ರಳಯ ಕಾಲದಲ್ಲಿ ಪುನಃ ಒಂದಾಗಿ ನೀರೇ ಆಗುತ್ತದೆಯೋ ಹಾಗೆ ಸಕಲ ಪ್ರಾಣಿಗಳೂ ನಿನ್ನಿಂದಲೇ ಹೊರಟು ನಿನ್ನಲ್ಲಿಯೇ ಸೇರಿಕೊಳ್ಳುತ್ತವೆ. ಇದನ್ನು ತಿಳಿದ ವಿದ್ವಾಂಸನು ಸಾಯುಜ್ಯವನ್ನು ಹೊಂದುತ್ತಾನೆ. ದಿವ್ಯ ಸುಂದರ ರೆಕ್ಕೆಗಳುಳ್ಳ ಎರಡು ಮನಸ್ಸಿನ ಪಕ್ಷಿಗಳನ್ನು ರಕ್ಷಿಸುವ ವೇದಗಳೇ ರೆಂಬೆಗಳಾಗಿರುವ ಆ ಏಳು ಅಶ್ವತ್ಥವೃಕ್ಷಗಳಿಗೆ ಆಧಾರಭೂತಗಳಾದ ಹತ್ತು ಪುರಗಳನ್ನು ನೀನೇ ಸೃಷ್ಟಿಸಿರುವೆ. ಆದರೂ ಇವುಗಳಿಂದ ನೀನು ಬೇರೆಯಾಗಿರುವೆ! ಎದುರಿಸಲಸಾಧ್ಯವಾದ ಭೂತ-ವರ್ತಮಾನ-ಭವಿಷ್ಯಗಳು, ವಿಶ್ವಗಳು ಮತ್ತು ಈ ಭುವನವು ನಿನ್ನಿಂದಲೇ ಹುಟ್ಟಿರುವವು. ನಿನ್ನನ್ನು ಭಜಿಸುತ್ತಿರುವ ಈ ಭಕ್ತ ನನ್ನನ್ನು ಪರಿಪಾಲಿಸು. ಹಿತ-ಅಹಿತ ಇಚ್ಛೆಗಳಿಂದ ನನ್ನನ್ನು ಹಿಂಸಿಸಬೇಡ! ಆತ್ಮಸ್ವರೂಪನಾದ ನಿನ್ನನ್ನು ತನಗಿಂತಲೂ ಬೇರೆಯಲ್ಲವನೆಂದು ತಿಳಿದುಕೊಂಡ ವಿಧ್ವಾಂಸನು ವಿಶುದ್ಧ ಬ್ರಹ್ಮನನ್ನು ಹೊಂದುತ್ತಾನೆ. ನಿನ್ನನ್ನು ಸಮ್ಮಾನಿಸಲಿಚ್ಛಿಸಿ ನಾನು ಸ್ತುತಿಸುತ್ತಿದ್ದೇನೆ. ದೇವವರ್ಯ! ನಿನ್ನನ್ನು ಬಹಳ ಕಾಲದಿಂದ ಅನ್ವೇಷಿಸುತ್ತಿದ್ದೆ. ನನ್ನಿಂದ ಸ್ತುತನಾದ ನೀನು ಮಾಯೆಯನ್ನು ದೂರಗೊಳಿಸಿ ನನಗೆ ಇಷ್ಟವಾದ ಬೇರೆ ಯಾರಿಂದಲೂ ಪಡೆದುಕೊಳ್ಳಲು ಅಸಾಧ್ಯ ವರವನ್ನು ದಯಪಾಲಿಸು!”

ಋಷಿಯಿಂದ ಸಂಸ್ತುತನಾದ ಅಚಿಂತ್ಯಾತ್ಮ, ನೀಲಕಂಠ, ಪಿನಾಕಧಾರಿಯು ದೇವಮುಖ್ಯನಿಗೆ ಅರ್ಹವಾದ ವರವನ್ನಿತ್ತನು. ನೀಲಕಂಠನು ಹೇಳಿದನು: “ನಾರಾಯಣ! ನನ್ನ ಪ್ರಸಾದದಿಂದ ಮನುಷ್ಯರಲ್ಲಿ, ದೇವಗಂಧರ್ವಯೋನಿಗಳಲ್ಲಿ ನೀನು ಅಪ್ರಮೇಯ ಬಲಾನ್ವಿತನಾಗುವೆ! ದೇವಾಸುರರು, ಮಹೋರಗಗಳು, ಪಿಶಾಚರು, ಗಂಧರ್ವರು, ನರರು, ರಾಕ್ಷಸರು, ಪಕ್ಷಿಗಳು, ನಾಗಗಳು ಮತ್ತು ವಿಶ್ವದಲ್ಲಿಯ ಇತರ ಪಶುಪ್ರಾಣಿಗಳೂ ನಿನ್ನ ರಭಸವನ್ನು ತಡೆಯಲಾರರು. ನಿನ್ನನ್ನು ಸಮರದಲ್ಲಿ ಎಂದೂ ದೇವತೆಗಳು – ಶಸ್ತ್ರಗಳಿಂದಾಗಲೀ, ವಜ್ರದಿಂದಾಗಲೀ, ಅಗ್ನಿ-ವಾಯು-ವಾರುಣಾಸ್ತ್ರಗಳಿಂದಾಗಲೀ, ಒಣಗಿರುವುದರಿಂದಾಗಲೀ, ಸ್ಥಾವರ-ಜಂಗಮಗಳಿಂದಲೂ - ಜಯಿಸಲಾರರು. ನೀನು ಸಮರದಲ್ಲಿ ನನ್ನನ್ನೇ ಎದುರಿಸಿದರೂ, ನನ್ನ ಪ್ರಸಾದದಿಂದ, ನನಗಿಂತ ನೀನೇ ಅಧಿಕಬಲಶಾಲಿಯಾಗಿರುವೆ!”

“ಈ ರೀತಿ ಹಿಂದೆ ಶೌರಿಯಿಂದ ಈ ವರವನ್ನು ಪಡೆದ ಇದೇ ದೇವನು ಜಗತ್ತನ್ನು ಮಾಯೆಯಿಂದ ಮೋಹಗೊಳಿಸುತ್ತಿರುವನು. ಅವನದೇ ತಪಸ್ಸಿನಿಂದ ಹುಟ್ಟಿದ ನರನೆಂಬ ಹೆಸರಿನ ಮಹಾಮುನಿಯು, ಸದಾ ಆ ದೇವನಿಗೆ ಸಮನಾಗಿರುವ ಅರ್ಜುನನು. ಇವರಿಬ್ಬರು ಋಷಿಗಳೂ ಪೂರ್ವದೇವರಿಗಿಂತಲೂ ಅಧಿಕರು. ಲೋಕಯಾತ್ರೆಯನ್ನು ಸಾಗಿಸಲು ಇವರು ಯುಗಯುಗದಲ್ಲಿ ಅವತರಿಸುತ್ತಾರೆ. ನೀನೂ ಕೂಡ ಹಾಗೆಯೇ ಎಲ್ಲ ಕರ್ಮಗಳನ್ನೂ ಮಾಡಿ, ಮಹಾ ತಪಸ್ಸನ್ನು ಗೈದು ತೇಜಸ್ಸು ಮತ್ತು ಕೋಪಗಳಲ್ಲಿ ರೌದ್ರನಾಗಿ ಜನಿಸಿರುವೆ. ದೇವತೆಯಂತೆ ನೀನು ಪ್ರಾಜ್ಞನಾಗಿ ಜಗತ್ತು ಭವಮಯವೆಂದು ತಿಳಿದು ಅವನನ್ನು ಪ್ರೀತಿಗೊಳಿಸಲು ನಿಯಮಗಳಿಂದ ನಿನ್ನನ್ನು ಕೃಶಗೊಳಿಸಿದ್ದೆ. ನೀನು ಆ ಮಹಾಪುರುಷನ ಉಜ್ವಲ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೋಮ-ಜಪ-ಉಪಹಾರಗಳಿಂದ ಆರಾಧಿಸುತ್ತಿದ್ದೆ. ಹಾಗೆ ನಿನ್ನ ಹೃದಯದಲ್ಲಿದ್ದುಕೊಂಡು ನಿನ್ನಿಂದ ತಿಳಿಯಲ್ಪಟ್ಟು ಪೂಜಿಸಲ್ಪಟ್ಟ ಆ ಪೂರ್ವದೇವನು ತೃಪ್ತನಾಗಿ ನಿನಗೆ ಪುಷ್ಕಲ ವರಗಳನ್ನು ಇತ್ತಿದ್ದನು. ಹೀಗೆ ನಿನ್ನಲ್ಲಿ ಮತ್ತು ಅವರಲ್ಲಿ ಜನ್ಮಕರ್ಮತಪೋಯೋಗಗಳು ಸಮೃದ್ಧವಾಗಿವೆ. ಯುಗ ಯುಗದಲ್ಲಿ ಅವರು ಲಿಂಗವನ್ನು ಅರ್ಚಿಸಲು ನೀನು ಅವನ ಮೂರ್ತಿಯನ್ನು ಅರ್ಚಿಸಿದೆ. ಸರ್ವವೂ ಭವನ ರೂಪವೆಂದೇ ಭಾವಿಸಿ ಯಾರು ಪ್ರಭುವನ್ನು ಲಿಂಗರೂಪದಲ್ಲಿ ಅರ್ಚಿಸುತ್ತಾರೋ ಅವರಲ್ಲಿ ಆತ್ಮಯೋಗಗಳೂ, ಶಾಸ್ತ್ರಯೋಗಗಳೂ ಶಾಶ್ವತವಾಗಿ ನೆಲೆಸಿರುತ್ತವೆ. ಈ ರೀತಿಯಾಗಿ ದೇವತೆಗಳೂ, ಸಿದ್ಧರೂ, ಪರಮ ಋಷಿಗಳೂ ಶಾಶ್ವತವಾದ ಪರಮ ಲೋಕಗಳಲ್ಲಿ ಸ್ಥಾನಕ್ಕೋಸ್ಕರವಾಗಿ ಅವನನ್ನು ಪ್ರಾರ್ಥಿಸುತ್ತಾರೆ. ಕೇಶವನು ರುದ್ರಭಕ್ತನು ಮತ್ತು ರುದ್ರಸಂಭವನು. ಸನಾತನ ಕೃಷ್ಣನನ್ನೇ ಯಜ್ಞಗಳಲ್ಲಿ ಯಾಜಿಸಬೇಕು. ಸರ್ವಭೂತಗಳೂ ಭವನೆಂದೇ ತಿಳಿದು ಯಾರು ಪ್ರಭುವನ್ನು ಲಿಂಗರೂಪದಲ್ಲಿ ಅರ್ಚಿಸುತ್ತಾರೋ ಅವರನ್ನು ವೃಷಭಧ್ವಜನು ಅಧಿಕವಾಗಿ ಪ್ರೀತಿಸುತ್ತಾನೆ.”

ಅವನ ಆ ಮಾತನ್ನು ಕೇಳಿ ಮಹಾರಥ ದ್ರೋಣಪುತ್ರನು ರುದ್ರನಿಗೆ ನಮಸ್ಕರಿಸಿದನು ಮತ್ತು ಕೇಶವನು ಅಧಿಕನೆಂದು ಒಪ್ಪಿಕೊಂಡನು. ರೋಮಾಂಚಿತನಾಗಿ ಮಹರ್ಷಿಗೆ ನಮಸ್ಕರಿಸಿ ಜಿತೇಂದ್ರಿಯ ಅಶ್ವತ್ಥಾಮನು ಸೇನೆಯನ್ನು ನೋಡಿ ಹಿಂದಿರುಗುವಂತೆ ಸೂಚಿಸಿದನು. ಆಗ ಯುದ್ಧದಲ್ಲಿ ದ್ರೋಣನು ಕೆಳಗುರುಳಲು ಪಾಂಡವರ ಮತ್ತು ದೀನ ಕೌರವರ ಸೇನೆಗಳು ತಮ್ಮ ತಮ್ಮ ಡೇರೆಗಳಿಗೆ ಹಿಂದಿರುಗಿದವು. ವೇದಪಾರಗ ಬ್ರಾಹ್ಮಣ ದ್ರೋಣನು ಐದು ದಿನಗಳು ಯುದ್ಧಮಾಡಿ ಸೇನೆಗಳನ್ನು ಸಂಹರಿಸಿ ಬ್ರಹ್ಮಲೋಕಕ್ಕೆ ಹೋದನು.

Leave a Reply

Your email address will not be published. Required fields are marked *