Image result for Indian motifs chariots

Related imageಹದಿನೈದನೆಯ ದಿನದ ಯುದ್ಧ-೧: ವಿರಾಟ-ದ್ರುಪದರ ವಧೆ; ಧೃಷ್ಟದ್ಯುಮ್ನನ ಪ್ರತಿಜ್ಞೆ

ಹದಿನಾಲ್ಕನೆಯ ದಿನದ ರಾತ್ರಿಯುದ್ಧದಲ್ಲಿ ರಣಾಂಗಣದಲ್ಲಿಯೇ ಸೇನೆಗಳು ನಿದ್ರೆಹೋದುದು

ಸೂತಪುತ್ರನಿಂದ ಘಟೋತ್ಕಚನು ಹತನಾದ ರಾತ್ರಿ ಯುಧಿಷ್ಠಿರನು ದುಃಖ-ರೋಷಗಳ ವಶನಾದನು. ಭೀಮನಿಂದ ಕೌರವ ಮಹಾಸೇನೆಯು ತಡೆಹಿಡಿಯಲ್ಪಟ್ಟಿರುವುದನ್ನು ನೋಡಿ ಕುಂಭಯೋನಿ ದ್ರೋಣನನ್ನು ತಡೆಯುವಂತೆ ಧೃಷ್ಟದ್ಯುಮ್ನನಿಗೆ ಹೇಳಿದನು: “ಶತ್ರುತಾಪನ! ದ್ರೋಣನ ವಿನಾಶಕ್ಕಾಗಿಯೇ ನೀನು ಅಗ್ನಿಯಿಂದ ಶರ, ಕವಚ, ಖಡ್ಗ ಮತ್ತು ಧನುಸ್ಸುಗಳೊಡನೆ ಸಮುತ್ಪನ್ನನಾಗಿದ್ದೀಯೆ. ಆದುದರಿಂದ ನೀನು ಸ್ವಲ್ಪವೂ ಭಯಪಡದೇ ಸಂತೋಷದಿಂದ ರಣದಲ್ಲಿ ಅವನನ್ನು ಆಕ್ರಮಣಿಸು! ಜನಮೇಜಯ, ಶಿಖಂಡಿ, ದೌರ್ಮುಖ ಮತ್ತು ಯಶೋಧನರು ಕುಂಭಯೋನಿಯನ್ನು ಎಲ್ಲಕಡೆಗಳಿಂದ ಆಕ್ರಮಣಿಸಲಿ. ನಕುಲ-ಸಹದೇವರು, ದ್ರೌಪದೇಯರು, ಪ್ರಭದ್ರಕರು, ಪುತ್ರ-ಭ್ರಾತೃಗಳೊಡನೆ ದ್ರುಪದ ಮತ್ತು ವಿರಾಟರು, ಸಾತ್ಯಕಿ, ಕೇಕಯರು, ಮತ್ತು ಧನಂಜಯ ಇವರು ಭಾರದ್ವಾಜನ ವಧೆಯನ್ನು ಗುರಿಯಾಗಿಟ್ಟುಕೊಂಡು ವೇಗದಿಂದ ಆಕ್ರಮಣಿಸಲಿ. ಹಾಗೆಯೇ ಸರ್ವ ರಥಿಗಳೂ, ಆನೆ-ಕುದುರೆ ಸವಾರರೂ, ಇತರ ಪಾದಾತಿಗಳೂ ರಣದಲ್ಲಿ ಮಹಾರಥ ದ್ರೋಣನನ್ನು ಉರುಳಿಸಲು ಪ್ರಯತ್ನಿಸಲಿ.”

ಹಾಗೆ ಪಾಂಡವನಿಂದ ಆಜ್ಞಾಪಿತರಾದ ಅವರೆಲ್ಲರೂ ವೇಗದಿಂದ ಮತ್ತು ಯುದ್ಧೋತ್ಸಾಹದಿಂದ ಕುಂಭಯೋನಿಯನ್ನು ಆಕ್ರಮಣಿಸಿದರು. ಸಮರದಲ್ಲಿ ಸರ್ವ ಪ್ರಯತ್ನದಿಂದ ಒಮ್ಮೆಲೇ ತಮ್ಮ ಮೇಲೆ ಬೀಳುತ್ತಿದ್ದ ಆ ಪಾಂಡವ ಸರ್ವರನ್ನೂ ಶಸ್ತ್ರಭೃತರಲ್ಲಿ ಶ್ರೇಷ್ಠನಾದ ದ್ರೋಣನು ಎದುರಿಸಿದನು. ಆಗ ದುರ್ಯೋಧನನು ಬಹಳ ಕ್ರೋಧಿತನಾಗಿ ದ್ರೋಣನನ್ನು ಜೀವಂತವಾಗಿಡಲು ಇಚ್ಛಿಸಿ ಸರ್ವ ಪ್ರಯತ್ನದಿಂದ ಪಾಂಡವರನ್ನು ಆಕ್ರಮಣಿಸಿದನು. ಆಗ ಬಳಲಿದ್ದ ಪಾಂಡವರ ಮತ್ತು ಕುರುಗಳ ವಾಹನ-ಸೈನಿಕರ ನಡುವೆ, ಪರಸ್ಪರರ ಮೇಲೆ ಗರ್ಜಿಸುತ್ತಾ, ಯುದ್ಧವು ಪ್ರಾರಂಭವಾಯಿತು.

ಯುದ್ಧದಲ್ಲಿ ಬಳಲಿದ್ದ ಮತ್ತು ನಿದ್ರೆಯಲ್ಲಿ ಅಂಧರಂತಾಗಿದ್ದ ಆ ಮಹಾರಥರು ಯಾವುದೇ ರೀತಿಯಲ್ಲಿ ರಣದಲ್ಲಿ ಪ್ರಹಾರಮಾಡಲು ಸಾಧ್ಯವಾಗುತ್ತಿರಲಿಲ್ಲ. ಮೂರುಯಾಮಗಳ ಆ ಘೋರರೂಪೀ ಭಯಾನಕ ರಾತ್ರಿಯು ಪ್ರಾಣಹಾರಿಣಿಯಾದ – ವಿಶೇಷವಾಗಿ ವಧಿಸಲ್ಪಡುತ್ತಿರುವವರಿಗೆ ಮತ್ತು ಗಾಯಗೊಂಡಿರುವವರಿಗೆ – ಸಹಸ್ರಯಾಮಗಳಂತೆ ತೋರಿತು. ಹಗಲು ರಾತ್ರಿ ಎಚ್ಚೆತ್ತಿದ್ದ ಅವರು ವಿಶೇಷವಾಗಿ ನಿದ್ರೆಯಿಂದ ಕಣ್ಣು ಕಾಣದಂತಾಗಿದ್ದರು. ಎಲ್ಲ ಕ್ಷತ್ರಿಯರೂ ನಿರುತ್ಸಾಹರಾಗಿ, ದೀನಚೇತಸರಾಗಿದ್ದರು. ಕೌರವರ ಮತ್ತು ಶತ್ರುಗಳ ಕೈಗಳಿಂದ ಅಸ್ತ್ರ ಮತ್ತು ಬಾಣಗಳು ಜಾರಿಬೀಳುತ್ತಿದ್ದವು. ಹಾಗೆ ನಿದ್ದೆ ಬರುತ್ತಿದ್ದರೂ ವಿಶೇಷವಾಗಿ ನಾಚಿಗೊಳ್ಳುತ್ತಿದ್ದ ಅವರು ಸ್ವಧರ್ಮವನ್ನು ನೋಡುತ್ತಾ ತಮ್ಮ ಸೇನೆಗಳನ್ನು ಬಿಟ್ಟೂ ಹೋಗುತ್ತಿರಲಿಲ್ಲ. ಕೆಲವು ಜನರು ನಿದ್ರೆಯಿಂದ ಕುರುಡರಾಗಿ ಅನ್ಯ ಶಸ್ತ್ರಗಳನ್ನು ವಿಸರ್ಜಿಸಿ – ಕೆಲವರು ಆನೆಗಳ ಮೇಲೆ, ಕೆಲವರು ರಥದಲ್ಲಿ ಮತ್ತು ಕೆಲವರು ಕುದುರೆಗಳ ಮೇಲೆ ನಿದ್ದೆಮಾಡುತ್ತಿದ್ದರು. ನಿದ್ರಾಂಧರಾದ ನರಾಧಿಪರಿಗೆ ಎಲ್ಲಿ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಸಮರದಲ್ಲಿ ಆ ಯೋಧರು ಅನ್ಯೋನ್ಯರನ್ನು ಯಮಕ್ಷಯಕ್ಕೆ ಕಳುಹಿಸುತ್ತಿದ್ದರು. ಸ್ವಪ್ನದಲ್ಲಿ ಕೆಲವರು ತಮ್ಮವರು ಮತ್ತು ಶತ್ರುಗಳು ಎಂದು ತಿಳಿಯದೇ ಸಮರದಲ್ಲಿ ಶತ್ರುಗಳನ್ನೂ ಸಂಹರಿಸುತ್ತಿದ್ದರು. ತಾವೂ ಸಾಯುತ್ತಿದ್ದರು. ತಮ್ಮ ಕಡೆಯವರನ್ನೂ ಸಂಹರಿಸುತ್ತಿದ್ದರು. ಮಹಾರಣದಲ್ಲಿ ನಿದ್ರೆಯಿಂದ ವಿವೇಚನರಹಿತರಾದ ಕೆಲವರು ಬಾಯಿಗೆ ಬಂದಂತೆ ಮಾತನಾಡಿಕೊಳ್ಳುತ್ತಿದ್ದರು. ನಿದ್ದೆಯಿಂದ ಕಣ್ಣುಗಳು ಕೆಂಪಾಗಿದ್ದರೂ ನಿದ್ರೆಯಿಂದ ಕುರುಡರಾದ ಕೌರವರು ಯುದ್ಧಮಾಡಬೇಕೆಂದು ನಿಷ್ಠೆಯಿಂದ ನಿಂತಿದ್ದರು. ಆ ದಾರುಣ ಕತ್ತಲೆಯಲ್ಲಿ ಕೂಡ ನಿದ್ರಾಂಧರಾಗಿದ್ದರೂ ಕೆಲವರು ರಣದಲ್ಲಿ ಪರಸ್ಪರರನ್ನು ಸದೆಬಡಿಯುತ್ತಾ ಶೂರರನ್ನು ಸಂಹರಿಸುತ್ತಿದ್ದರು. ಬಹಳ ನಿದ್ರೆಯಿಂದ ತೂಕಡಿಸುತ್ತಿದ್ದ ಅನೇಕರು ಎದುರಾಳಿಗಳು ತಮ್ಮನ್ನು ಸಂಹರಿಸಿದರೂ ಅವರಿಗೆ ಅದು ತಿಳಿಯುತ್ತಲೇ ಇರಲಿಲ್ಲ.

ಸೈನಿಕರ ಆ ವಿಧದ ದುರವಸ್ಥೆಯನ್ನು ಕಂಡು ಪುರುಷರ್ಷಭ ಬೀಭತ್ಸುವು ನಾಲ್ಕು ದಿಕ್ಕುಗಳಲ್ಲಿಯೂ ಪ್ರತಿಧ್ವನಿಸುವಂತೆ ಉಚ್ಛಧ್ವನಿಯಲ್ಲಿ ಈ ಮಾತನ್ನಾಡಿದನು: “ವಾಹನಸಹಿತರಾಗಿ ನೀವೆಲ್ಲರೂ ನಿದ್ರೆಯಿಂದ ಕುರುಡಾಗಿದ್ದೀರಿ! ಈ ಸೈನ್ಯವೂ ಕೂಡ ಗಾಢಾಂಧಕಾರದಿಂದ ಮತ್ತು ಬಹಳ ಧೂಳಿನಿಂದ ಆವೃತವಾಗಿಬಿಟ್ಟಿದೆ. ಸೈನಿಕರೇ! ನಿಮಗೆಲ್ಲರಿಗೂ ಸರಿಯೆನ್ನಿಸಿದರೆ ಸ್ವಲ್ಪ ಕಾಲ ಯುದ್ಧ ಮಾಡದಿರಿ! ಈ ರಣಭೂಮಿಯಲ್ಲಿಯೇ ಮುಹೂರ್ತಕಾಲ ಕಣ್ಣುಮುಚ್ಚಿ ನಿದ್ರಿಸಿರಿ! ಕುರುಪಾಂಡವರೇ! ವಿಶ್ರಾಂತಿಯನ್ನು ಪಡೆದು ನಿದ್ರೆಯಿಂದ ಎಚ್ಚರಗೊಂಡ ನೀವು ಚಂದ್ರನು ಉದಯವಾಗಲು ಪುನಃ ಹಿಂದಿನಂತೆಯೇ ಅನ್ಯೋನ್ಯರನ್ನು ಸ್ವರ್ಗಕ್ಕೆ ಕಳುಹಿಸುವಿರಂತೆ!”

ಧಾರ್ಮಿಕ ಆ ಸೈನಿಕರು ಅವನ ಆ ಮಾತನ್ನು ಕೇಳಿ ಸರಿಯೆಂದುಕೊಂಡು ಅನ್ಯೋನ್ಯರಿಗೆ: “ಕರ್ಣ! ಕರ್ಣ! ರಾಜನ್ ದುರ್ಯೋಧನ! ಯುದ್ಧವನ್ನು ಕೂಡಲೇ ನಿಲ್ಲಿಸಿ. ಪಾಂಡವರ ಸೇನೆಯೂ ಕೂಡ ಯುದ್ಧದಿಂದ ವಿರತವಾಗಿದೆ!” ಎಂದು ಕೂಗಿ ಹೇಳಿದರು. ಹಾಗೆಯೇ ಫಲ್ಗುನನು ಅಲ್ಲಲ್ಲಿ ಕೂಗಿ ಹೇಳುತ್ತಿರಲು ಸ್ವಲ್ಪಸಮಯದಲ್ಲಿಯೇ ಪಾಂಡವರ ಸೇನೆ ಮತ್ತು ಕೌರವರು ಯುದ್ಧವನ್ನು ನಿಲ್ಲಸಿದರು. ಅರ್ಜುನನ ಆ ಸಲಹೆಯನ್ನು ದೇವತೆಗಳೂ, ಋಷಿಗಳೂ, ಎಲ್ಲ ಸೈನಿಕರೂ ಪರಮ ಹರ್ಷಿತರಾಗಿ ಶ್ಲಾಘಿಸಿದರು. ದಯಾಭರಿತ ಆ ಮಾತನ್ನು ಗೌರವಿಸಿ ಸರ್ವಸೇನೆಗಳೂ ಮುಹೂರ್ತಕಾಲ ರಣದಲ್ಲಿಯೇ ಮಲಗಿದರು. ಕೌರವ ಧ್ವಜವುಳ್ಳವರು ಕೂಡ ವಿಶ್ರಾಮವನ್ನು ಪಡೆದು ಸುಖವನ್ನು ನೀಡಿದ ವೀರ ಅರ್ಜುನನನ್ನು ಪ್ರಶಂಸಿಸುತ್ತಾ ಹೇಳಿದರು: “ಅನಘ! ನಿನ್ನಲ್ಲಿ ವೇದಗಳು, ಅಸ್ತ್ರಗಳು ಮತ್ತು ಬುದ್ಧಿ-ಪರಾಕ್ರಮಗಳು ಹಾಗೂ ಧರ್ಮ ಮತ್ತು ಭೂತಗಳ ಮೇಲೆ ದಯೆಯು ಮೂರ್ತಿಮತ್ತಾಗಿ ನೆಲೆಸಿವೆ. ಬಳಲಿದ್ದ ನಮಗೆ ನೀನು ಆಶ್ವಾಸನೆಯಿತ್ತು ನಿದ್ರೆಯ ಪರಮಸುಖವನ್ನು ಅನುಭವಿಸುವಂತೆ ಮಾಡಿದೆ. ಬೇಗನೆ ನಿನ್ನ ಮನಸ್ಸಿಗೆ ಪ್ರಿಯವಾದುದನ್ನು ಪಡೆದುಕೊಳ್ಳುವೆ!”

ಈ ರೀತಿ ಮಹಾರಥರು ಆ ನರವ್ಯಾಘ್ರನನ್ನು ಪ್ರಶಂಸಿಸುತ್ತಾ ಸ್ವಲ್ಪ ಹೊತ್ತಿನಲ್ಲಿಯೇ ನಿದ್ರಾಪರವಶರಾಗಿ ಸುಮ್ಮನಾದರು.

ಕೆಲವರು ಕುದುರೆಗಳ ಮೇಲೆಯೇ ಮಲಗಿದರು. ಇನ್ನು ಕೆಲವರು ರಥದ ಆಸನಗಳ ಮೇಲೆ, ಅನ್ಯರು ಆನೆಗಳ ಹೆಗಲಿನಮೇಲೂ ಮತ್ತು ಇನ್ನು ಕೆಲವರು ಭೂಮಿಯಮೇಲೂ ಮಲಗಿದರು. ಮನುಷ್ಯರು ಆಯುಧಗಳೊಂದಿಗೆ, ಗದೆಗಳನ್ನು ಹಿಡಿದುಕೊಂಡು, ಖಡ್ಗ-ಪರಶುಗಳನ್ನು ಹಿಡಿದು, ಕೆಲವರು ಪ್ರಾಸ-ಕವಚಗಳೊಂದಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಮಲಗಿದ್ದರು. ನಿದ್ರೆಯಿಂದ ಕುರುಡಾಗಿದ್ದ ಆನೆಗಳು ಸರ್ಪಕ್ಕೆ ಸಮಾನವಾಗಿದ್ದ ಮತ್ತು ಭೂಮಿಯ ಧೂಳಿನಿಂದ ಅವಲಿಪ್ತವಾಗಿದ್ದ ಸೊಂಡಿಲುಗಳಿಂದ ಸುದೀರ್ಘ ಶ್ವಾಸೋಚ್ಛ್ವಾಸಗಳನ್ನು ಬಿಡುತ್ತಾ ರಣಾಂಗಣವನ್ನೇ ಶೀತಲಗೊಳಿಸಿದವು. ಸುದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಮಲಗಿದ್ದ ಆನೆಗಳು ಆ ರಣಾಂಗಣದಲ್ಲಿ ಭುಸುಗುಟ್ಟುವ ಸರ್ಪಗಳಿಂದ ಕೂಡಿದ ಕಡಿದು ಬಿದ್ದಿರುವ ಪರ್ವತಗಳಂತೆ ಕಾಣುತ್ತಿದ್ದವು. ಕಾಂಚನದ ಕಡಿವಾಣಗಳುಳ್ಳ ಕುದುರೆಗಳು ಕತ್ತಿನ ಕೂದಲುಗಳಮೇಲೆ ಕಟ್ಟಲ್ಪಟ್ಟಿದ್ದ ನೊಗಗಳಿಂದಲೂ ಗೊರಸುಗಳ ತುದಿಯಿಂದಲೂ ಭೂಮಿಯನ್ನು ಕೆರೆಯುತ್ತಾ ಸಮವಾಗಿದ್ದ ರಣಭೂಮಿಯನ್ನು ಹಳ್ಳ-ತಿಟ್ಟುಗಳಾಗುವಂತೆ ಮಾಡಿದವು. ಅಲ್ಲಿ ಎಲ್ಲಕಡೆ ಕುದುರೆಗಳು ರಥಗಳಿಗೆ ಕಟ್ಟಿಕೊಂಡೇ ನಿದ್ದೆಮಾಡುತ್ತಿದ್ದವು.

ಹಾಗೆ ತಮ್ಮ ವಾಹನಗಳೊಡನೆ ಸುಮ್ಮನೇ ಚಲಿಸದೇ ಗಾಢನಿದ್ರೆಯಲ್ಲಿ ಮಲಗಿರುವುದನ್ನು ನೋಡಿದರೆ ಕುಶಲ ಚಿತ್ರಕಾರನು ಚಿತ್ರಪಟದ ಮೇಲೆ ಅದ್ಭುತ ಚಿತ್ರವನ್ನು ಬರೆದಿರುವನೋ ಎಂಬಂತೆ ತೋರುತ್ತಿತ್ತು. ಪರಸ್ಪರರ ಸಾಯಕಗಳಿಂದ ಅಂಗಾಂಗಗಳಲ್ಲಿ ಗಾಯಗೊಂಡು ಆನೆಗಳ ಕುಂಭಸ್ಥಳಗಳ ಮೇಲೆ ಮುಖವನ್ನಿಟ್ಟು ಮಲಗಿರುವ ಕುಂಡಲಗಳನ್ನು ಧರಿಸಿದ್ದ ಆ ಯುವಕರು ಕಾಮಿನಿಯರ ಕುಚಗಳ ನಡುವೆ ಮುಖವನ್ನು ಹುದುಗಿಸಿಕೊಂಡು ಮಲಗಿರುವ ಕಾಮುಕರಂತೆ ಕಾಣುತ್ತಿದ್ದರು. ಆಗ ಕಾಮಿನಿಯರ ಕಪೋಲಗಳಂತೆ ಬಿಳುಪಾಗಿದ್ದ ನಯನಾನಂದಕರ ಕುಮುದನಾಥ ಚಂದ್ರನು ಮಹೇಂದ್ರನ ಪೂರ್ವ ದಿಕ್ಕನ್ನು ಅಲಂಕರಿಸಿದನು.

ಆಗ ಮುಹೂರ್ತಕಾಲದಲ್ಲಿ ಮೊಲದ ಚಿಹ್ನೆಯುಳ್ಳ ಭಗವಾನ್ ಚಂದ್ರನು ನಕ್ಷತ್ರಗಳ ಬೆಳಕನ್ನು ತಾನೇ ಹೀರಿಕೊಳ್ಳುತ್ತಾ ಮೊದಲು ಅರುಣನನ್ನು ತೋರಿಸಿದನು. ಅರುಣನ ಉದಯವನ್ನು ಅನುಸರಿಸಿ ಚಂದ್ರನು ಸುವರ್ಣಪ್ರಭೆಗೆ ಸಮಾನ ಪ್ರಭೆಯ ದೊಡ್ಡ ಕಿರಣಗಳ ಸಮೂಹಗಳನ್ನು ಮಂದ ಮಂದವಾಗಿ ಹೊರಹೊಮ್ಮಿಸಿದನು. ಚಂದ್ರನ ಆ ರಶ್ಮಿಗಳು ಪ್ರಭೆಯಿಂದ ಕತ್ತಲೆಯನ್ನು ಓಡಿಸುತ್ತಾ, ಮೆಲ್ಲ ಮೆಲ್ಲಗೆ ಎಲ್ಲ ದಿಕ್ಕುಗಳನ್ನೂ ಅಂತರಿಕ್ಷ-ಭೂಮಿಗಳನ್ನು ವ್ಯಾಪಿಸಿದವು. ಆಗ ಮುಹೂರ್ತಕಾಲದಲ್ಲಿ ವಿಶ್ವವೇ ಜ್ಯೋತಿರ್ಮಯವಾಗಿ ಬೆಳಗಿತು. ಹೇಳಹೆಸರಿಲ್ಲದಂತೆ ಕತ್ತಲೆಯು ಎಲ್ಲಿಗೋ ಓಡಿಹೋಯಿತು. ನಿಶಾಕರನು

ಪೂರ್ಣಪ್ರಕಾಶದಿಂದ ಬೆಳಗುತ್ತಿರಲಾಗಿ ಹಗಲಿನಂತೆಯೇ ಲೋಕವು ಚಂದ್ರನ ಬೆಳಕಿನಿಂದ ಬೆಳಗತೊಡಗಲು ಕೆಲವು ನಕ್ತಂಚರ ಪ್ರಾಣಿಗಳು ಅಲ್ಲಲ್ಲಿ ಸಂಚರಿಸತೊಡಗಿದವು. ಸೂರ್ಯನ ರಶ್ಮಿಗಳಿಂದ ಕಮಲಪುಷ್ಪಗಳ ವನವು ವಿಕಸಿತವಾಗುವಂತೆ ಚಂದ್ರಕಿರಣಗಳ ಸ್ಪರ್ಶದಿಂದ ಸೈನ್ಯವು ಎಚ್ಚರಗೊಂಡಿತು. ಚಂದ್ರೋದಯದ ಪ್ರಭಾವದಿಂದ ಸಮುದ್ರವು ಅಲ್ಲೋಲ-ಕಲ್ಲೋಲವಾಗುವಂತೆ ಚಂದ್ರೋದಯದಿಂದ ಎಚ್ಚೆತ್ತ ಸೇನಾಸಾಗರವೂ ಕ್ಷೋಭೆಗೊಂಡಿತು. ಅನಂತರ ಪರಮ ಲೋಕಗಳನ್ನು ಬಯಸಿದ್ದ ಅವರ ನಡುವೆ ಲೋಕವಿನಾಶಕಾರಿ ಆ ಯುದ್ಧವು ಪುನಃ ಪ್ರಾರಂಭವಾಯಿತು.

ದುರ್ಯೋಧನನು ದ್ರೋಣನ ಅವಹೇಳನಮಾಡಿದುದು

ಅನಂತರ ಕ್ರೋಧಾವಿಷ್ಟ ದುರ್ಯೋಧನನು ದ್ರೋಣನ ಬಳಿಬಂದು ಹರ್ಷವನ್ನೂ ತೇಜಸ್ಸನ್ನೂ ಹುಟ್ಟಿಸುತ್ತಾ ಈ ಮಾತನ್ನಾಡಿದನು: “ಸಂಗ್ರಾಮದಲ್ಲಿ ಬಳಲಿ ವಿಶ್ರಮಿಸುತ್ತಿರುವ, ಉತ್ಸಾಹಹೀನರಾಗಿರುವವರ ಮೇಲೆ – ಅದರಲ್ಲೂ ವಿಶೇಷವಾಗಿ ಲಕ್ಷ್ಯವನ್ನು ಭೇದಿಸಬಲ್ಲ ಶತ್ರುಗಳ ಮೇಲೆ - ಕ್ಷಮೆಯನ್ನು ತೋರಿಸಲೇ ಬಾರದು. ನಿಮಗೆ ಪ್ರಿಯವಾದುದನ್ನು ಮಾಡಲೋಸುಗವೇ ನಾವು ಈಗ ತಾಳ್ಮೆಯಿಂದ ಇದ್ದೇವೆ. ನಿಶ್ಚಿಂತರಾಗಿ ವಿಶ್ರಾಂತಿಯನ್ನು ಪಡೆದ ಈ ಪಾಂಡವರು ಈಗ ಇನ್ನೂ ಹೆಚ್ಚಿನ ಬಲವುಳ್ಳವರಾಗಿದ್ದಾರೆ. ನಾವಾದರೋ ತೇಜಸ್ಸು ಬಲಗಳಲ್ಲಿ ಸರ್ವಥಾ ಹೀನರಾಗುತ್ತಿದ್ದೇವೆ. ನಿಮ್ಮಿಂದ ಪರಿಪಾಲಿಸಲ್ಪಟ್ಟಿರುವ ಅವರು ಪುನಃ ಪುನಃ ವರ್ಧಿಸುತ್ತಲೇ ಇದ್ದಾರೆ. ಬ್ರಹ್ಮಾಸ್ತ್ರವೇ ಮೊದಲಾದ ಎಲ್ಲ ದಿವ್ಯಾಸ್ತ್ರಗಳೂ ವಿಶೇಷವಾಗಿ ನಿಮ್ಮಲ್ಲಿಯೇ ಪ್ರತಿಷ್ಠಿತವಾಗಿವೆ. ಪಾಂಡವರಾಗಲೀ, ನಾವಾಗಲೀ ಮತ್ತು ಲೋಕದಲ್ಲಿನ ಅನ್ಯ ಧನುರ್ಧರರಾಗಲೀ ಯುದ್ಧದಲ್ಲಿ ತೊಡಗಿರುವ ನಿಮಗೆ ಸಮಾನರಾಗುವುದಿಲ್ಲ. ನಿಮಗೆ ಈ ಮಾತನ್ನು ನಾನು ಸತ್ಯವಾಗಿ ಹೇಳುತ್ತಿದ್ದೇನೆ. ಸರ್ವಾಸ್ತ್ರಗಳನ್ನು ತಿಳಿದುಕೊಂಡಿರುವ ನೀವು ಸುರಾಸುರಗಂಧರ್ವರಿಂದ ಕೂಡಿದ ಈ ಸರ್ವ ಲೋಕಗಳನ್ನೂ ದಿವ್ಯಾಸ್ತ್ರಗಳಿಂದ ನಾಶಗೊಳಿಸಬಲ್ಲಿರಿ. ಅದರಲ್ಲಿ ಸಂಶಯವೇ ಇಲ್ಲ. ಅವರು ನಿಮಗೆ ಹೆದರಿದ್ದರೂ ಅವರ ಶಿಷ್ಯತ್ವವನ್ನು ಮುಂದಿರಿಸಿಕೊಂಡೋ ಅಥವಾ ನನ್ನ ಮಂದಭಾಗ್ಯದಿಂದಲೋ ನೀವು ಅವರಲ್ಲಿ ವಿಶೇಷ ಸಹನೆಯನ್ನೇ ತೋರಿಸುತ್ತಿರುವಿರಿ!”

ಯುದ್ಧೋತ್ಸಾಹವನ್ನು ತುಂಬಬೇಕೆಂದು ಬಯಸಿ ದುರ್ಯೋಧನನು ಹೇಳಿದ ಈ ಮಾತಿನಿಂದ ಕುಪಿತನಾದ ದ್ರೋಣನು ಕೋಪವಶನಾಗಿ ಅವನಿಗೆ ಹೀಗೆ ಹೇಳಿದನು: “ದುರ್ಯೋಧನ! ವೃದ್ಧನಾಗಿದ್ದರೂ ನಾನು ನನ್ನ ಪರಮ ಶಕ್ತಿಯನ್ನುಪಯೋಗಿಸಿ ಯುದ್ಧದಲ್ಲಿ ಹೋರಾಡುತ್ತಿದ್ದೇನೆ. ವಿಜಯದ ಆಸೆಯಿಂದ ನಾನು ನೀಚಕಾರ್ಯವನ್ನು ಮಾಡಬೇಕೇ? ಇಲ್ಲಿರುವ ಎಲ್ಲರಿಗೂ ಅಸ್ತ್ರಗಳು ತಿಳಿದಿಲ್ಲ ಎಂದು ಅಂದುಕೊಂಡು ಅಸ್ತ್ರವಿದನಾದ ನಾನು ಎಲ್ಲರನ್ನೂ ಸಂಹರಿಸಬೇಕೇ? ಶುಭವೋ ಅಶುಭವೋ ನೀನು ಹೇಳಿದಂತೆಯೇ ನಾನು ಮಾಡುತ್ತೇನೆ. ನಿನ್ನ ಮಾತಿಗೆ ಹೊರತಾಗಿ ನಾನು ಏನನ್ನೂ ಮಾಡುವುದಿಲ್ಲ. ಯುದ್ಧದಲ್ಲಿ ಪರಾಕ್ರಮದಿಂದ ಹೋರಾಡಿ ಸರ್ವ ಪಾಂಚಾಲರನ್ನೂ ಸಂಹರಿಸಿದ ನಂತರವೇ ನಾನು ಈ ಕವಚವನ್ನು ಕಳಚುತ್ತೇನೆ. ಈ ಮಾತನ್ನು ನಾನು ನನ್ನ ಆಯುಧಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ಯುದ್ಧದಲ್ಲಿ ಬಳಲಿರುವ ಅರ್ಜುನನನ್ನು ಸಂಹರಿಸಿಬಿಡಬಹುದೆಂದು ನಿನಗನ್ನಿಸುತ್ತದೆಯಲ್ಲವೇ? ಅವನ ವೀರ್ಯದ ಕುರಿತಾದ ಸತ್ಯವನ್ನು ನಿನಗೆ ಹೇಳುತ್ತೇನೆ. ಕೇಳು!

“ರಣದಲ್ಲಿ ಕುಪಿತ ಸವ್ಯಸಾಚಿಯನ್ನು ದೇವತೆಗಳಾಗಲೀ, ಗಂಧರ್ವರಾಗಲೀ, ಯಕ್ಷರಾಗಲೀ ಮತ್ತು ರಾಕ್ಷಸರಾಗಲೀ ಎದುರಿಸಲು ಉತ್ಸಾಹಿಸುವುದಿಲ್ಲ. ಖಾಂಡವದಲ್ಲಿ ಅದ್ಭುತ ಮಳೆಸುರಿಸುತ್ತಿದ್ದ ಭಗವಾನ್ ಸುರೇಶ್ವರನನ್ನೇ ಮಹಾತ್ಮ ಅರ್ಜುನನು ಸಾಯಕಗಳಿಂದ ನಿಲ್ಲಿಸಿದನು. ಬಲಗರ್ವಿತ ಯಕ್ಷರು, ನಾಗರು, ದೈತ್ಯರು ಮತ್ತು ಅನ್ಯರು ಈ ಪುರುಷೇಂದ್ರನಿಂದ ನಾಶಗೊಂಡಿರುವುದು ನಿನಗೆ ತಿಳಿದೇ ಇದೆ. ಘೋಷಯಾತ್ರೆಯ ಸಮಯದಲ್ಲಿ ಗಂಧರ್ವ ಚಿತ್ರಸೇನನೇ ಮೊದಲಾದವರನ್ನು ಗೆದ್ದು ಈ ದೃಢಧನ್ವಿಯು ನಿನ್ನ ಬಿಡುಗಡೆಗೊಳಿಸಿ ನಾಚಿಕೆಗೀಡುಮಾಡಲಿಲ್ಲವೇ? ಈ ವೀರನು ಸಂಗ್ರಾಮದಲ್ಲಿ ದೇವತೆಗಳ ಶತ್ರುಗಳಾದ ಸುರರಿಗೂ ಅವಧ್ಯ ನಿವಾತಕವಚರನ್ನೂ ಸೋಲಿಸಿದನು. ಸಹಸ್ರಾರು ಹಿರಣ್ಯಪುರವಾಸಿ ದಾನವರನ್ನು ಈ ಪುರುಷವ್ಯಾಘ್ರನು ಗೆದ್ದನು. ಇದು ಮನುಷ್ಯರಿಗೆ ಹೇಗೆ ಸಾಧ್ಯ? ನಾವೆಷ್ಟೇ ಪ್ರಯತ್ನಪಟ್ಟು ಹೋರಾಡುತ್ತಿದ್ದರೂ ನಿನ್ನ ಈ ಸೇನೆಯು ನಿನ್ನ ಕಣ್ಣುಮುಂದೇ ಪಾಂಡುಪುತ್ರನಿಂದ ನಾಶವಾಗುತ್ತಿಲ್ಲವೇ?”

ಹೀಗೆ ಅರ್ಜುನನನ್ನು ಪ್ರಶಂಸಿಸುತ್ತಿದ್ದ ದ್ರೋಣನಿಗೆ ಕುಪಿತನಾದ ದುರ್ಯೋಧನನು ಪುನಃ ಹೀಗೆ ಹೇಳಿದನು: “ಯುದ್ಧದಲ್ಲಿ ಇಂದು ಭಾರತೀಸೇನೆಯನ್ನು ಎರಡು ಭಾಗಗಳನ್ನಾಗಿಸಿಕೊಂಡು ನಾನು, ದುಃಶಾಸನ, ಕರ್ಣ ಮತ್ತು ಸೋದರಮಾವ ಶಕುನಿ – ಅರ್ಜುನನನ್ನು ಸಂಹರಿಸುತ್ತೇವೆ.”

ಅವನ ಆ ಮಾತನ್ನು ಕೇಳಿ ನಸುನಗುತ್ತಾ ಭಾರದ್ವಾಜನು “ನಿನಗೆ ಮಂಗಳವಾಗಲಿ!” ಎಂದು ಹೇಳಿ ರಾಜನನ್ನು ಕಳುಹಿಸಿಕೊಡುತ್ತಾ ಇದನ್ನೂ ಹೇಳಿದನು: “ತೇಜಸ್ಸಿನಿಂದ ಪ್ರಜ್ವಲಿಸುತ್ತಿರುವ ಅಕ್ಷಯ ಕ್ಷತ್ರಿಯರ್ಷಭ ಗಾಂಡೀವಧನ್ವಿಯನ್ನು ಯಾವ ಕ್ಷತ್ರಿಯನು ವಿನಾಶಮಾಡಬಲ್ಲನು? ದಿಕ್ಪಾಲಕ ವಿತ್ತಪತಿ ಕುಬೇರನಾಗಲೀ, ಇಂದ್ರನಾಗಲೀ, ಯಮನಾಗಲೀ, ಜಲೇಶ್ವರ ವರುಣನಾಗಲೀ ಅಥವಾ ಅಸುರ-ಉರಗ-ರಾಕ್ಷಸರೂ ಕೂಡ ಆಯುಧಪಾಣಿ ಅರ್ಜುನನನ್ನು ನಾಶಗೊಳಿಸಲಾರರು. ನೀನಾಡಿದ ಈ ಮಾತುಗಳನ್ನು ಕೇವಲು ಮೂಢರು ಆಡುತ್ತಾರೆ. ಯುದ್ಧದಲ್ಲಿ ಅರ್ಜುನನನ್ನು ಎದುರಿಸಿದ ಯಾರು ತಾನೇ ಕುಶಲಿಗಳಾಗಿ ಮನೆಗೆ ಹಿಂದಿರುಗುತ್ತಾರೆ? ನೀನಾದರೋ ಎಲ್ಲರನ್ನೂ ಅತಿಯಾಗಿ ಶಂಕಿಸುವವನು. ನಿಷ್ಠುರವಾಗಿ ಮಾತನಾಡುತ್ತೀಯೆ. ಪಾಪಭರಿತ ನಿಶ್ಚಯಗಳನ್ನು ಕೈಗೊಳ್ಳುತ್ತೀಯೆ. ನಿನಗೆ ಶ್ರೇಯಸ್ಕರರಾದವರ ಮತ್ತು ನಿನ್ನ ಹಿತದಲ್ಲಿಯೇ ನಿರತರಾದವರ ಮೇಲೆ ಕೂಡ ನೀನು ನಿಷ್ಠುರವಾಗಿ ಮಾತನಾಡಬಯಸುತ್ತೀಯೆ! ಕೌಂತೇಯನ ಸಮೀಪಕ್ಕೆ ನೀನೇ ಹೋಗು! ನಿನಗೋಸ್ಕರವಾಗಿ ಬೇಗನೆ ಅವನನ್ನು ಸಂಹರಿಸು! ಕುಲಜನೂ ಕ್ಷತ್ರಿಯನೂ ಆಗಿರುವ ನೀನು ಯುದ್ಧಮಾಡಲು ಏಕೆ ಶಂಕಿಸುತ್ತಿರುವೆ? ನಿರಪರಾಧಿ ಈ ಪಾರ್ಥಿವಸರ್ವರನ್ನೂ ಏಕೆ ಸುಮ್ಮನೇ ನಾಶಗೊಳಿಸುತ್ತಿರುವೆ? ಈ ವೈರತ್ವಕ್ಕೆ ಮೂಲಕಾರಣನಾದ ನೀನೇ ಅರ್ಜುನನನ್ನು ಎದುರಿಸುವುದು ಸರಿಯಾಗಿದೆ. ತಿಳಿದವನಾದ, ಕ್ಷತ್ರಧರ್ಮವನ್ನು ಅನುಸರಿಸುವ, ಮೋಸದ ದ್ಯೂತದಲ್ಲಿ ನಿಪುಣನಾಗಿರುವ ಗಾಂಧಾರದೇಶದ ಈ ನಿನ್ನ ಸೋದರಮಾವನನ್ನೂ ಅರ್ಜುನನೊಡನೆ ಯುದ್ಧಮಾಡಲು ಕಳುಹಿಸು. ಅಕ್ಷವಿದ್ಯೆಯಲ್ಲಿ ಮಹಾಕುಶಲನಾಗಿರುವ, ವಕ್ರಬುದ್ಧಿಯುಳ್ಳ, ಜೂಜಿನ ಜಾಲವನ್ನು ವ್ಯವಸ್ಥಾಪಿಸುವ, ಶಠ, ಜೂಜುಕೋರ, ಮೋಸದಲ್ಲಿ ಮಹಾಪ್ರಾಜ್ಞನಾದ ಇವನು ಯುದ್ಧದಲ್ಲಿ ಪಾಂಡವರನ್ನು ಜಯಿಸುತ್ತಾನೆ.

“ಕರ್ಣನೊಡನೆ ಸೇರಿಕೊಂಡು ಅತ್ಯಂತ ಸಂತೋಷಗೊಂಡವನಂತೆ ಮೋಹದಿಂದ ನೀನು ಏಕಾಂತದಲ್ಲಿ ಧೃತರಾಷ್ಟ್ರನಿಗೆ ಕೊಚ್ಚಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೇನೆ: “ಅಪ್ಪಾ! ನಾನು, ಕರ್ಣ, ಭ್ರಾತ ದುಃಶಾಸನ ಈ ಮೂವರೇ ಸೇರಿ ಪಾಂಡುಪುತ್ರರನ್ನು ಸಮರದಲ್ಲಿ ಸಂಹರಿಸಬಲ್ಲೆವು!” ಹೀಗೆ ನೀನು ಗಳಹುತ್ತಿರುವುದನ್ನು ಪ್ರತಿ ಸಭೆಯಲ್ಲಿಯೂ ಕೇಳುತ್ತಲೇ ಬಂದಿದ್ದೇವೆ. ಆ ಪ್ರತಿಜ್ಞೆಗಳು ಸತ್ಯವಾಗುವಂತೆ ಅವರೊಂದಿಗೆ ನೀನು ನಡೆದುಕೋ! ಆ ನಿನ್ನ ಶತ್ರು ಅರ್ಜುನನು ಯಾವ ಶಂಕೆಯೂ ಇಲ್ಲದೇ ನಿನ್ನ ಮುಂದೆ ನಿಂತಿದ್ದಾನೆ. ಕ್ಷತ್ರಿಯಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು ಯುದ್ಧಮಾಡು. ವಿಜಯಿಯಾದರೂ ವಧಿಸಲ್ಪಟ್ಟರೂ ನೀನು ಶ್ಲಾಘನೀಯನಾಗುತ್ತೀಯೆ. ದಾನಗಳನ್ನಿತ್ತಿದ್ದೀಯೆ. ಚೆನ್ನಾಗಿ ಭೋಗಿಸಿರುವೆ. ವೇದಾಧ್ಯಯನ ಮಾಡಿರುವೆ. ಬಯಸಿದಷ್ಟು ಐಶ್ವರ್ಯವನ್ನು ಹೊಂದಿರುವೆ. ಋಣಗಳಿಂದ ಮುಕ್ತನಾಗಿರುವೆ. ಪಾಂಡವನೊಡನೆ ಯುದ್ಧಮಾಡು. ಭಯಪಡಬೇಡ!”

ಸಮರದಲ್ಲಿ ಹೀಗೆ ಹೇಳಿ ದ್ರೋಣನು ಶತ್ರುಗಳಿರುವಲ್ಲಿಗೆ ತೆರಳಿದನು. ಅನಂತರ ಸೇನೆಯು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟು ಯುದ್ಧವು ಪ್ರಾರಂಭವಾಯಿತು.

ಅರ್ಜುನನ ಯುದ್ಧ

ರಾತ್ರಿಯ ಮೂರುಭಾಗಗಳೇ ಉಳಿದಿರಲು[1] ಸಂಹೃಷ್ಟ ಕುರುಗಳು ಮತ್ತು ಪಾಂಡವರು ಯುದ್ಧವನ್ನು ಪ್ರಾರಂಭಿಸಿದರು. ಸ್ವಲ್ಪವೇ ಸಮಯದಲ್ಲಿ ಆದಿತ್ಯನ ಮುಂಭಾಗದಲ್ಲಿರುವ ಅರುಣನು ಚಂದ್ರನ ಪ್ರಭೆಯನ್ನು ಅಪಹರಿಸುತ್ತಾ ಅಂತರಿಕ್ಷವನ್ನೇ ಕೆಂಪಾಗಿ ಮಾಡುತ್ತಾ ಉದಯಿಸಿದನು. ಅನಂತರ ಸೈನ್ಯವನ್ನು ಎರಡುಭಾಗಗಳನ್ನಾಗಿ ಮಾಡಿಕೊಂಡು ದ್ರೋಣನು ದುರ್ಯೋಧನನನ್ನು ಮುಂದೆಮಾಡಿಕೊಂಡು ಪಾಂಚಾಲರೊಂದಿಗೆ ಸೋಮಕ-ಪಾಂಡವರನ್ನು ಆಕ್ರಮಣಿಸಿದನು. ಎರಡು ಭಾಗಗಳಾಗಿದ್ದ ಕುರುಗಳನ್ನು ನೋಡಿ ಮಾಧವನು ಅರ್ಜುನನಿಗೆ ಹೇಳಿದನು: “ಸವ್ಯಸಾಚೀ! ಬಾಂಧವರಾದ ಈ ಕುರುಗಳನ್ನು ನಿನ್ನ ಎಡಭಾಗದಲ್ಲಿರಿಸಿಕೊಂಡು ಹೋಗೋಣ!” ಹಾಗೆಯೇ ಆಗಲೆಂದು ಮಾಧವನಿಗೆ ಅನುಮತಿಯನ್ನಿತ್ತ ನಂತರ ಧನಂಜಯನು ದ್ರೋಣ-ಕರ್ಣರನ್ನು ಅವರ ಎಡಭಾಗದಿಂದ ಪ್ರದಕ್ಷಿಣೆ ಮಾಡಿದನು. ಕೃಷ್ಣನ ಅಭಿಪ್ರಾಯವೇನೆಂದು ತಿಳಿದ ಅರ್ಜುನನು ಸೇನೆಯ ಅಗ್ರಭಾಗದಲ್ಲಿದ್ದ ಭೀಮಸೇನನನ್ನು ನೋಡಿ ಅವನನ್ನು ಸೇರಿಕೊಂಡನು.

ಭೀಮನು ಹೇಳಿದನು: “ಅರ್ಜುನ! ನಾನು ಹೇಳುವುದನ್ನು ಕೇಳು! ಯಾವುದಕ್ಕಾಗಿ ಕ್ಷತ್ರಿಯರಾಗಿ ಹುಟ್ಟಿದೆವೋ ಅದರ ಕಾಲವು ಬಂದೊದಗಿದೆ! ಈ ಸಮಯದಲ್ಲಿ ಕೂಡ ಶ್ರೇಯಸ್ಸನ್ನು ಪಡೆಯದೇ ಇದ್ದರೆ ಅಸಂಭಾವಿತನ ರೂಪವನ್ನು ಪಡೆಯುವೆ. ನಮಗೆ ಅತಿ ಕಠೋರವಾದುದನ್ನು ಮಾಡುವೆ! ನಿನ್ನ ವೀರ್ಯದಿಂದ ಸತ್ಯ, ಸಂಪತ್ತು, ಧರ್ಮ ಮತ್ತು ಯಶಸ್ಸುಗಳ ಋಣವನ್ನು ತೀರಿಸು! ಈ ಸೇನೆಗಳನ್ನು ಭೇದಿಸು!”

ಭೀಮ-ಕೇಶವರಿಂದ ಪ್ರಚೋದಿತನಾದ ಸವ್ಯಸಾಚಿಯು ಕರ್ಣ-ದ್ರೋಣರನ್ನು ನಾಲ್ಕೂ ಕಡೆಗಳಿಂದ ಮುತ್ತಿಗೆಹಾಕಿ ಆಕ್ರಮಣಿಸಿದನು. ರಣಾಂಗಣದ ಅಗ್ರಭಾಗದಿಂದ ಬಂದು ಕ್ಷತ್ರಿಯರ್ಷಭರನ್ನು ಉರಿಯುವ ಅಗ್ನಿಯಂತೆ ದಹಿಸುತ್ತಿದ್ದ ಆ ಪರಾಕ್ರಮಿ ಪರಾಕ್ರಾಂತನನ್ನು ಕ್ಷತ್ರಿಯರ್ಷಭರು ಪ್ರಯತ್ನಪಟ್ಟರೂ ತಡೆಹಿಡಿಯಲ ಶಕ್ಯರಾಗಲಿಲ್ಲ. ಆಗ ದುರ್ಯೋಧನ, ಕರ್ಣ ಮತ್ತು ಶಕುನಿಯರು ಧನಂಜಯನ ಮೇಲೆ ಶರವ್ರಾತಗಳನ್ನು ಸುರಿಸಿದರು. ಅವರ ಎಲ್ಲ ಅಸ್ತ್ರಗಳನ್ನೂ ಲೆಕ್ಕಿಸದೇ ಉತ್ತಮ ಅಸ್ತ್ರವಿದ ಅರ್ಜುನನು ಅವರನ್ನು ಶರಗಳಿಂದ ಮುಚ್ಚಿಬಿಟ್ಟನು. ಲಘುಹಸ್ತ ಧನಂಜಯನು ಅಸ್ತ್ರಗಳಿಂದ ಅಸ್ತ್ರಗಳನ್ನು ನಿರಸನಗೊಳಿಸಿ ಅವರೆಲ್ಲರನ್ನೂ ಹತ್ತು ಹತ್ತು ನಿಶಿತ ಶರಗಳಿಂದ ಹೊಡೆದು ಗಾಯಗೊಳಿಸಿದನು. ಆಗ ಧೂಳಿನ ರಾಶಿಯು ಮೇಲೆದ್ದು ಶರವೃಷ್ಟಿಯೊಂದಿಗೆ ಸುರಿಯತೊಡಗಲು ಘೋರ ಕತ್ತಲೆಯೂ ಮಹಾ ಶಬ್ಧವೂ ಆವರಿಸಿತು. ಆಕಾಶ-ಭೂಮಿ-ದಿಕ್ಕುಗಳು ಎಲ್ಲಿವೆಯೆನ್ನುವುದೇ ತಿಳಿಯುತ್ತಿರಲಿಲ್ಲ. ಸೈನ್ಯಗಳಿಂದ ಮೇಲೆದ್ದ ಧೂಳಿನಿಂದ ಅಚ್ಛಾದಿತವಾಗಿ ಎಲ್ಲವೂ ಅಂಧಕಾರಮಯವಾಗಿಯೇ ಕಾಣಿಸುತ್ತಿತ್ತು. ಕೌರವರಾಗಲೀ ಪಾಂಡವರಾಗಲೀ ಯಾರು ಯಾರೆಂದು ಪರಸ್ಪರರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ವಿರಥ ರಥಿಗಳು ಪರಸ್ಪರರ ಬಳಿಸಾರಿ ಜುಟ್ಟನ್ನೂ, ಕವಚಗಳನ್ನೂ, ಭುಜಗಳನ್ನೂ ಹಿಡಿದು ಯುದ್ಧಮಾಡುತ್ತಿದ್ದರು. ಹತಾಶ್ವ ಹತಸಾರಥಿ ರಥಿಗಳು ಹತರಾಗಿದ್ದರೂ ಭಯಾರ್ದಿತರಾಗಿ ಜೀವಂತವಿರುವಂತೆಯೇ ಕಾಣುತ್ತಿದ್ದರು. ತೀರಿಕೊಂಡ ಕುದುರೆಗಳು ಕುದುರೆಸವಾರರೊಂದಿಗೆ ಸತ್ತುಹೋಗಿರುವ ಪರ್ವತಗಳಂತಿದ್ದ ಆನೆಗಳನ್ನು ಅಪ್ಪಿಕೊಂಡಿರುವವೋ ಎನ್ನುವಂತೆ ತೋರುತ್ತಿದ್ದವು.

ವಿರಾಟ-ದ್ರುಪದರ ವಧೆ; ಧೃಷ್ಟದ್ಯುಮ್ನನ ಪ್ರತಿಜ್ಞೆ

ಅನಂತರ ದ್ರೋಣನು ಸಂಗ್ರಾಮದ ಉತ್ತರ ದಿಕ್ಕಿಗೆ ಹೋಗಿ ಅಲ್ಲಿ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಯುದ್ಧಕ್ಕೆ ಅಣಿಯಾಗಿ ನಿಂತನು. ದ್ರೋಣನು ರಣಾಂಗಣದ ಒಂದುಕಡೆ ಬಂದು ನಿಂತಿರುವುದನ್ನು ನೋಡಿ ಪಾಂಡವರ ಸೇನೆಯು ಭಯದಿಂದ ತತ್ತರಿಸಿತು. ತೇಜಸ್ಸಿನಿಂದ ಬೆಳಗುತ್ತಿದ್ದ, ಕಳೆಯಿಂದ ತುಂಬಿಕೊಂಡು ಹೊಳೆಯುತ್ತಿದ್ದ ದ್ರೋಣನನ್ನು ನೋಡಿ ಅವರು ಭಯದಿಂದ ನಡುಗಿದರು, ಪಲಾಯನಗೈದರು ಮತ್ತು ಕಳೆಗುಂದಿದರು. ಮದೋದಕವನ್ನು ಸುರಿಸುವ ಸಲಗದಂತೆ ಶತ್ರುಸೇನೆಯನ್ನು ಅಹ್ವಾನಿಸುತ್ತಿದ್ದ ಅವನನ್ನು ದಾನವರು ವಾಸವನನ್ನು ಹೇಗೋ ಹಾಗೆ ಜಯಿಸಲು ಇಚ್ಛಿಸಲಿಲ್ಲ. ಕೆಲವರು ನಿರುತ್ಸಾಹಿಗಳಾದರು. ಕೆಲವು ಅಭಿಮಾನಿಗಳು ಕ್ರುದ್ಧರಾದರು. ಕೆಲವರು ವಿಸ್ಮಿತರಾದರು. ಇನ್ನು ಕೆಲವರು ಸಹನೆಯನ್ನು ಕಳೆದುಕೊಂಡರು. ಕೆಲವು ನರಾಧಿಪರು ಕೈಗಳನ್ನು ಕೈತುದಿಗಳಿಂದ ಉಜ್ಜಿಕೊಂಡರು. ಇನ್ನು ಕೆಲವರು ಕ್ರೋಧಮೂರ್ಚಿತರಾಗಿ ಹಲ್ಲುಗಳಿಂದ ತುಟಿಗಳನ್ನು ಕಚ್ಚಿಕೊಂಡರು. ಕೆಲವರು ತಮ್ಮ ಆಯುಧಗಳನ್ನು ಗರಗರನೆ ತಿರುಗಿಸಿ ದ್ರೋಣನ ಮೇಲೆ ಎಸೆಯುತ್ತಿದ್ದರು. ಮತ್ತೆ ಕೆಲವರು ತಮ್ಮ ಭುಜಗಳನ್ನು ತಟ್ಟಿಕೊಳ್ಳುತ್ತಿದ್ದರು. ಇನ್ನು ಕೆಲವು ಮಹೌಜಸರು ತಮ್ಮ ಜೀವವನ್ನೇ ತೊರೆದು ದ್ರೋಣನನ್ನು ಆಕ್ರಮಣಿಸಿದರು. ವಿಶೇಷವಾಗಿ ಪಾಂಚಾಲರು ದ್ರೋಣನ ಸಾಯಕಗಳಿಂದ ಪೀಡಿತರಾಗಿದ್ದರೂ ತುಂಬಾ ವೇದನೆಯಿಂದಲೂ ಸಮರದಲ್ಲಿ ಯುದ್ಧಮಾಡುತ್ತಿದ್ದರು.

ಆಗ ರಣದಲ್ಲಿ ಹಾಗೆ ಸುತ್ತುತ್ತಿದ್ದ ಸಮರದುರ್ಜಯ ದ್ರೋಣನನ್ನು ವಿರಾಟ-ದ್ರುಪದರು ಸಂಗ್ರಾಮದಲ್ಲಿ ಎದುರಿಸಿದರು. ಆಗ ದ್ರುಪದನ ಮೂರು ಮೊಮ್ಮಕ್ಕಳೂ, ಚೇದಿಗಳೂ ದ್ರೋಣನನ್ನು ಯುದ್ಧದಲ್ಲಿ ಎದುರಿಸಿದರು. ಮೂರು ನಿಶಿತ ಶರಗಳಿಂದ ದ್ರೋಣನು ದ್ರುಪದನ ಆ ಮೂವರು ಮೊಮ್ಮಕ್ಕಳ ಪ್ರಾಣಗಳನ್ನು ಅಪಹರಿಸಿ ಭೂಮಿಯ ಮೇಲೆ ಕೆಡವಿದನು. ಆಗ ಭಾರದ್ವಾಜ ದ್ರೋಣನು ಚೇದಿ-ಕೇಕಯ-ಸೃಂಜಯರನ್ನು ಗೆದ್ದು ಎಲ್ಲ ಮತ್ಸ್ಯರನ್ನೂ ಜಯಿಸಿದನು. ಆಗ ಕ್ರೋಧದಿಂದ ಯುದ್ಧದಲ್ಲಿ ದ್ರುಪದ ಮತ್ತು ವಿರಾಟರೂ ಕೂಡ ದ್ರೋಣನ ಮೇಲೆ ಶರವರ್ಷವನ್ನು ಸುರಿಸಿದರು. ಆಗ ಅರಿಮರ್ದನ ದ್ರೋಣನು ಚೂಪಾಗಿದ್ದ ಭಲ್ಲಗಳೆರಡರಿಂದ ದ್ರುಪದ-ವಿರಾಟ ಇಬ್ಬರನ್ನೂ ವೈವಸ್ವತಕ್ಷಯಕ್ಕೆ ಕಳುಹಿಸಿದನು. ವಿರಾಟ-ದ್ರುಪದರೂ ಕೇಕಯರೂ, ಚೇದಿ-ಮತ್ಸ್ಯರು ಮತ್ತು ಪಾಂಚಾಲರು ಹತರಾಗಲು, ದ್ರುಪದನ ಮೂವರು ವೀರ ಮೊಮ್ಮಕ್ಕಳು ಹತರಾಗಲು, ದ್ರೋಣನ ಆ ಕರ್ಮವನ್ನು ನೋಡಿ ಕೋಪ-ದುಃಖಸಮನ್ವಿತ ಮಹಾಮನಸ್ವಿ ಧೃಷ್ಟದ್ಯುಮ್ನನು ರಥಿಗಳ ಮಧ್ಯದಲ್ಲಿ ಶಪಥಮಾಡಿದನು: “ಇಂದಿನ ಯುದ್ಧದಲ್ಲಿ ಯಾರಕೈಯಿಂದ ದ್ರೋಣನು ತಪ್ಪಿಸಿಕೊಂಡು ಹೋಗುವನೋ ಅಥವಾ ಯಾರು ದ್ರೋಣನಿಂದ ಪರಾಮ್ಮುಖರಾಗಿ ಹೋಗುವನೋ ಅವನ ಇಷ್ಟಾಪೂರ್ತಗಳು ನಾಶವಾಗಿ ಕ್ಷಾತ್ರಧರ್ಮದಿಂದಲೂ ಬ್ರಾಹ್ಮಣಧರ್ಮದಿಂದ[2]ಲೂ ಭ್ರಷ್ಟನಾಗಿಹೋಗಲಿ!”

ಹೀಗೆ ಸರ್ವಧನುಷ್ಮತರ ಮಧ್ಯೆ ಪ್ರತಿಜ್ಞೆಮಾಡಿ ಪರವೀರಹ ಪಾಂಚಾಲ್ಯನು ಸೇನಾಸಮೇತನಾಗಿ ದ್ರೋಣನನ್ನು ಆಕ್ರಮಣಿಸಿದನು. ಇನ್ನೊಂದು ಕಡೆ ಪಾಂಚಾಲರು ಪಾಂಡವರೊಂದಿಗೆ ಸೇರಿಕೊಂಡು ದ್ರೋಣನನ್ನು ಪ್ರಹರಿಸುತ್ತಿದ್ದರು. ದುರ್ಯೋಧನ, ಕರ್ಣ, ಸೌಬಲ ಶಕುನಿ ಮತ್ತು ಇತರ ಮುಖ್ಯ ಸಹೋದರರು ಯುದ್ಧದಲ್ಲಿ ದ್ರೋಣನನ್ನು ರಕ್ಷಿಸುತ್ತಿದ್ದರು. ಹಾಗೆ ಸಮರದಲ್ಲಿ ಕೌರವ ಮಹಾತ್ಮರಿಂದ ದ್ರೋಣನು ರಕ್ಷಿಸಲ್ಪಡುತ್ತಿರಲು ಪ್ರಯತ್ನಪಡುತ್ತಿದ್ದರೂ ಪಾಂಚಾಲರು ಅವನನ್ನು ನೋಡಲೂ ಕೂಡ ಶಕ್ಯರಾಗುತ್ತಿರಲಿಲ್ಲ. ಆಗ ಧೃಷ್ಟದ್ಯುಮ್ನನ ಮೇಲೆ ಕ್ರುದ್ಧನಾಗಿ ಪುರುಷರ್ಷಭ ಭೀಮಸೇನನು ಈ ಉಗ್ರವಾದ ಮಾತುಗಳಿಂದ ಅವನನ್ನು ಚುಚ್ಚಿದನು: “ದ್ರುಪದನ ಕುಲದಲ್ಲಿ ಹುಟ್ಟಿರುವ ನೀನು ಸರ್ವ ಅಸ್ತ್ರಶಸ್ತ್ರಗಳಲ್ಲಿ ವಿತ್ತಮನಾಗಿರುವೆ. ಆದರೆ ಸ್ವಾಭಿಮಾನಿಯಾದ ಯಾವ ಕ್ಷತ್ರಿಯನು ನಿನ್ನಂತೆ ಶತ್ರುವು ಕಣ್ಣೆದುರಿರುವಾಗಲೇ ನೋಡುತ್ತಾ ನಿಂತಿರುತ್ತಾನೆ? ಅದರಲ್ಲೂ ವಿಶೇಷವಾಗಿ ಕಣ್ಣೆದುರಿನಲ್ಲಿಯೇ ಪಿತ-ಪುತ್ರರವಧೆಯನ್ನು ಕಂಡ ಯಾವ ಮನುಷ್ಯನು, ರಾಜಸಂಸದಿಯಲ್ಲಿ ಶಪಥಮಾಡಿದವನು, ಸುಮ್ಮನಿದ್ದಾನು? ಶರಚಾಪಗಳನ್ನೇ ಇಂಧನವನ್ನಾಗಿಸಿಕೊಂಡು ತನ್ನದೇ ತೇಜಸ್ಸಿನಿಂದ ವೈಶ್ವಾನರನಂತೆ ಪ್ರಜ್ವಲಿಸುತ್ತಿರುವ ದ್ರೋಣನು ತೇಜಸ್ಸಿನಿಂದ ಕ್ಷತ್ರಿಯರನ್ನು ದಹಿಸುತ್ತಿದ್ದಾನೆ. ಪಾಂಡವರ ಸೇನೆಯನ್ನು ಇವನು ನಿಃಶೇಷವನ್ನಾಗಿ ಮಾಡುವ ಮೊದಲೇ ಈ ದ್ರೋಣನನ್ನು ಆಕ್ರಮಿಸುತ್ತೇನೆ. ನಿಂತು ನನ್ನ ಈ ಕರ್ಮವನ್ನು ನೋಡು!”

ಹೀಗೆ ಹೇಳಿ ಕ್ರುದ್ಧ ವೃಕೋದರನು ಪೂರ್ಣವಾಗಿ ಸೆಳೆದು ಬಿಡುತ್ತಿದ್ದ ಬಾಣಗಳಿಂದ ಕೌರವ ಸೇನೆಯನ್ನು ಓಡಿಸುತ್ತಾ ದ್ರೋಣನ ಸೇನೆಯನ್ನು ಪ್ರವೇಶಿಸಿದನು. ಧೃಷ್ಟದ್ಯುಮ್ನನೂ ಕೂಡ ಆ ಮಹಾಸೇನೆಯನ್ನು ಪ್ರವೇಶಿಸಿ ರಣದಲ್ಲಿ ದ್ರೋಣನ ಬಳಿಹೋದನು. ಆಗ ಮಹಾ ತುಮುಲ ಯುದ್ಧವು ನಡೆಯಿತು. ಆ ದಿನದ ಸೂರ್ಯೋದಯದಲ್ಲಿ ಅಂತಹ ದೊಡ್ಡದಾದ, ಹತ್ತಿಕೊಂಡು ನಡೆಯುತ್ತಿದ್ದ ಯುದ್ಧವನ್ನು ಹಿಂದೆ ನೋಡಿರಲಿಲ್ಲ, ಅದರ ಕುರಿತು ಕೇಳಿರಲಿಲ್ಲ. ರಥದ ಗುಂಪುಗಳು ಒಂದಕ್ಕೊಂದು ತಾಗಿಕೊಂಡಿರುವಂತೆ ಕಾಣುತ್ತಿದ್ದವು. ಸತ್ತುಹೋಗಿದ್ದ ಸೈನಿಕರ ಶರೀರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬೇರೆಯೇ ಕಡೆ ಹೋಗುತ್ತಿದ್ದವರನ್ನು ದಾರಿಯಲ್ಲಿಯೇ ತಡೆದು ಕೊಳ್ಳುತ್ತಿದ್ದರು. ವಿಮುಖರಾಗಿ ಓಡಿ ಹೋಗುತ್ತಿದ್ದವರನ್ನೂ ಶತ್ರುಪಕ್ಷದವರು ಹಿಂದಿನಿಂದ ಹೊಡೆದು ಕೊಲ್ಲುತ್ತಿದ್ದರು. ಹೀಗೆ ತುಂಬಾ ಪರಸ್ಪರ ತಾಗಿಕೊಂಡು ದಾರುಣ ಯುದ್ಧವು ನಡೆಯುತ್ತಿರಲು ಸ್ವಲ್ಪವೇ ಸಮಯದಲ್ಲಿ ಸೂರ್ಯನ ಪೂರ್ಣೋದಯವಾಯಿತು. ಹಾಗೆ ರಣಾಂಗಣದಲ್ಲಿ ಕವಚಗಳನ್ನು ಧರಿಸಿ ಬಂದಿದ್ದ ಸೈನಿಕರು ಸಂಧ್ಯಾಸಮಯದಲ್ಲಿ ಉದಯಿಸುತ್ತಿರುವ ಸಹಸ್ರಾಂಶು ಆದಿತ್ಯನನ್ನು ನಮಸ್ಕರಿಸಿ ಪೂಜಿಸಿದರು. ಕುದಿಸಿದ ಕಾಂಚನ ಪ್ರಭೆಯುಳ್ಳ ಸಹಸ್ರಾಂಶನು ಉದಯಿಸಿ ಲೋಕವು ಪ್ರಾಕಾಶಿತವಾಗಲು ಪುನಃ ಯುದ್ಧವು ಪ್ರಾರಂಭವಾಯಿತು.

Image result for indian motifs and patterns

[1] ಒಂದು ದಿನದಲ್ಲಿ ಒಟ್ಟು ಮೂವತ್ತು ಮುಹೂರ್ತಗಳಿವೆ – ೧೫ ಹಗಲಿನಲ್ಲಿ ಮತ್ತು ರಾತ್ರಿಯಲ್ಲಿ ೧೫. ೪೮ ನಿಮಿಷಗಳಿಗೆ ಒಂದು ಮುಹೂರ್ತ. ರಾತ್ರಿಯ ಮೂರುಭಾಗಗಳು ಎಂದರೆ ಮೂರು ಮುಹೂರ್ತಗಳು ಅಥವಾ ೧೪೪ ನಿಮಿಷಗಳು ಅಥವಾ ೨ ಘಂಟೆ ೨೪ ನಿಮಿಷಗಳು ಎಂದರ್ಥ.

[2] ಇಲ್ಲಿ ಧೃಷ್ಟದ್ಯುಮ್ನನು ತಾನು ಕ್ಷತ್ರಿಯ ಮತ್ತು ಬ್ರಾಹ್ಮಣ ಎರಡು ಎಂಬುದನ್ನು ಸೂಚಿಸುತ್ತಾನೆ. ದ್ರುಪದನ ಮಗನಾಗಿ ಕ್ಷತ್ರಿಯ ಮತ್ತು ಯಜ್ಞೇಶ್ವರನಲ್ಲಿ ಹುಟ್ಟಿದುದರಿಂದ ಬ್ರಾಹ್ಮಣ.

Leave a Reply

Your email address will not be published. Required fields are marked *