ಶತರುದ್ರೀಯ

ಪಾರ್ಷತನಿಂದ ಹಾಗೆ ದ್ರೋಣನು ಹತನಾಗಲು ಮತ್ತು ಕೌರವರು ಭಗ್ನರಾಗಲು ಕುಂತೀಪುತ್ರ ಧನಂಜಯನು ಯುದ್ಧದಲ್ಲಿ ತನಗಾದ ವಿಜಯದ ಕುರಿತು ಮಹಾ ಆಶ್ಚರ್ಯಚಕಿತನಾಗಿ ಅಲ್ಲಿಗೆ ಬಂದಿದ್ದ ವ್ಯಾಸನಲ್ಲಿ ಕೇಳಿದನು:  

“ಸಂಗ್ರಾಮದಲ್ಲಿ ವಿಮಲ ಶರಸಮೂಹಗಳಿಂದ ಶತ್ರುಗಳನ್ನು ಸಂಹರಿಸುತ್ತಿರುವಾಗ ಅಗ್ನಿಯ ಪ್ರಭೆಯುಳ್ಳ ಪುರುಷನೊಬ್ಬನು ಮುಂದೆ ಮುಂದೆ ಹೋಗುತ್ತಿರುವುದನ್ನು ಕಂಡೆನು. ಮಹಾಮುನೇ! ಪ್ರಜ್ವಲಿಸುವ ಶೂಲವನ್ನೆತ್ತಿಕೊಂಡು ಅವನು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದನೋ ಆ ದಿಕ್ಕಿನಲ್ಲಿ ನನ್ನ ಶತ್ರುಗಳು ವಿಧ್ವಂಸಿತರಾಗುತ್ತಿದ್ದರು. ಅವನ ಕಾಲುಗಳು ಭೂಮಿಯನ್ನು ಸ್ಪರ್ಷಿಸುತ್ತಿರಲಿಲ್ಲ. ಶೂಲವನ್ನು ಅವನು ಕೈಯಿಂದ ಬಿಡುತ್ತಿರಲಿಲ್ಲ. ಆದರೆ ಅವನ ತೇಜಸ್ವೀ ಶೂಲದಿಂದ ಸಹಸ್ರಾರು ಶೂಲಗಳು ಹೊರಬಂದು ಶತ್ರುಗಳ ಮೇಲೆ ಬೀಳುತ್ತಿದ್ದವು. ಶತ್ರುಗಳು ಅವನಿಂದಲೇ ನಾಶವಾಗುತ್ತಿದ್ದರು. ಆದರೆ ಜನರು ನನ್ನಿಂದ ನಾಶವಾದರೆಂದು ಭಾವಿಸುತ್ತಿದ್ದರು. ಅವನು ಸೇನೆಗಳನ್ನು ಸುಡುತ್ತಿದ್ದನು. ನಾನು ಅವನ ಹಿಂದೆ ಹಿಂದೆ ಹೋಗುತ್ತಿದ್ದೆ ಮಾತ್ರ. ಭಗವನ್! ಆ ಶೂಲಪಾಣಿ, ಸೂರ್ಯಸನ್ನಿಭ ತೇಜಸ್ಸುಳ್ಳ ಕೃಷ್ಣವರ್ಣದ ಮಹಾನ್ ಪುರುಷೋತ್ತಮನು ಯಾರೆಂದು ನನಗೆ ಹೇಳು.”

ವ್ಯಾಸನು ಹೇಳಿದನು: “ಪಾರ್ಥ! ಪ್ರಜಾಪತಿಗಳೆಲ್ಲರಿಗೂ ಮೊದಲಿಗ, ತೇಜಃಸ್ವರೂಪ, ಆದಿ ಪುರುಷ, ವಿಭು, ಭೂಲೋಕ-ಭುವರ್ಲೋಕ ಸದೃಶ, ಸಕಲ ಲೋಕಗಳಿಗೂ ಪ್ರಭು, ದೇವ, ಈಶಾನ ವರದ ಶಂಕರನನ್ನು ನೀನು ನೋಡಿರುವೆ. ಆ ದೇವ, ಸರ್ವಾದಿ ಭುವನೇಶ್ವರ, ಮಹಾದೇವ, ಮಹಾತ್ಮ, ಈಶಾನ, ಜಟಿಲ, ಶಿವ, ತ್ರ್ಯಕ್ಷ, ಮಹಾಭುಜ, ರುದ್ರ, ಶಿಖಿ, ಚೀರವಾಸಸ, ಭಕ್ತರ ದಾತಾರ, ಪ್ರಸಾದವಾಗಿ ವರಗಳನ್ನು ನೀಡುವವನ ಶರಣು ಹೋಗು. ಆ ವಿಭುವಿನ ದಿವ್ಯ ಪಾರ್ಷದರು ನಾನಾ ವಿಧದ ದಿವ್ಯರೂಪಗಳನ್ನು ಹೊಂದಿರುವರು – ವಾಮನರು, ಜಟಾಧಾರಿಗಳು, ಬೋಳು ತಲೆಯವರು, ಮೋಟಾದ ಕುತ್ತಿಗೆಯುಳ್ಳವರು, ದೊಡ್ಡ ಹೊಟ್ಟೆಯಳ್ಳವರು, ದೊಡ್ಡ ದೇಹವುಳ್ಳವರು, ಮಹೋತ್ಸಾಹಿಗಳು, ಮಹಾಕಿವಿಯುಳ್ಳವರು ಮತ್ತು ಇತರರು ವಿಕಾರವಾದ ಮುಖವುಳ್ಳವರು, ಮತ್ತು ವಿಕಾರವಾದ ವೇಷಭೂಷಣಗಳನ್ನು ಧರಿಸಿರುವವರು. ಇಂಥವರಿಂದ ಪೂಜಿಸಲ್ಪಟ್ಟ ಮಹಾದೇವ ಮಹೇಶ್ವರ ತೇಜಸ್ವೀ ಶಿವನೇ ನಿನ್ನ ಮುಂದೆ ಮುಂದೆ ಹೋಗುತ್ತಿದ್ದಾನೆ. ಆ ಘೋರ ರೋಮಾಂಚಕರ ಸಂಗ್ರಾಮದಲ್ಲಿ ಮಹೇಷ್ವಾಸ ಪ್ರಹಾರಿಗಳಾದ ದ್ರೋಣ-ಕರ್ಣ-ಕೃಪರಿಂದ ರಕ್ಷಿತರಾಗಿರುವ ಆ ಸೇನೆಯನ್ನು ದೇವ ಮಹೇಷ್ವಾಸ ಬಹುರೂಪೀ ಮಹೇಶ್ವರನಲ್ಲದೇ ಬೇರೆ ಯಾರು ತಾನೇ ಮನಸ್ಸಿನಲ್ಲಿಯಾದರೂ ಎದುರಿಸಲು ಸಾಧ್ಯವಾಗುತ್ತಿತ್ತು? ಅವನ ಮುಂದೆ ಬಂದ ಯಾರೂ ಅವನನ್ನು ಎದುರಿಸಲು ಮನಸ್ಸುಮಾಡಲಾರ. ಮೂರು ಲೋಕಗಳಲ್ಲಿಯೂ ಅವನ ಸಮನಾದುದು ಯಾವುದೂ ಇಲ್ಲ. ಕ್ರುದ್ಧನಾಗಿರುವ ಅವನ ವಾಸನೆ ಬಂದರೂ ಸಾಕು ಶತ್ರುಗಳು ಮೂರ್ಛೆಹೋಗುತ್ತಾರೆ. ನಡುಗುತ್ತಾರೆ. ಮತ್ತು ಕೆಳಗೆ ಬೀಳುತ್ತಾರೆ. ಅವನಿಗೆ ನಮಸ್ಕರಿಸುವ ದೇವತೆಗಳು ದಿವದಲ್ಲಿಯೇ ಇರುತ್ತಾರೆ. ಮಾನವ ಲೋಕದಲ್ಲಿ ಕೂಡ ಹಾಗೆ ಮಾಡುವ ನರರು ಸ್ವರ್ಗವನ್ನು ಗೆಲ್ಲುತ್ತಾರೆ. ಯಾವ ಭಕ್ತನು ವರದ ದೇವ ಶಿವ ರುದ್ರ ಉಮಾಪತಿಯನ್ನು ಉಪಾಸಿಸುತ್ತಾನೋ ಅವನು ಈ ಲೋಕದಲ್ಲಿ ಸುಖವನ್ನು ಹೊಂದುತ್ತಾನೆ ಮತ್ತು ಪರಮ ಗತಿಯನ್ನು ಪಡೆಯುತ್ತಾನೆ. ಶಾಂತಸ್ವರೂಪ ಶಿತಿಕಂಠ, ಸೂಕ್ಷ್ಮಾತಿಸೂಕ್ಷ್ಮ, ಉತ್ತಮತೇಜೋವಿಶಿಷ್ಟ, ಜಟಾಜೂಟಧಾರಿ, ವಿಕರಾಲಸ್ವರೂಪ, ಕುಬೇರವರದನಿಗೆ ನೀನು ನಮಸ್ಕರಿಸು.

“ಯಮನಿಗೆ ಅನುಕೂಲನಾದ ಕಾಲಸ್ವರೂಪ, ಅವ್ಯಕ್ತಸ್ವರೂಪದ ಆಕಾಶವೇ ತಲೆಗೂದಲಾಗಿರುವ, ಸಧಾಚಾರಸಂಪನ್ನ, ಶಂಕರ, ಕಮನೀಯವಿಗ್ರಹ, ಪಿಂಗಳನೇತ್ರ, ಸ್ಥಾಣು, ಮಹಾಪುರುಷ, ಕಂದುಬಣ್ಣದ ಕೂದಲುಳ್ಳವ, ಮುಂಡ, ತಪಸ್ಸಿನಿಂದ ಕೃಶನಾಗಿರುವ, ಭವಸಾಗರವನ್ನು ದಾಟಿಸುವ, ಸೂರ್ಯಸ್ವರೂಪ, ಉತ್ತಮತೀರ್ಥ, ದೇವದೇವ, ವೇಗವಂತನಿಗೆ ನಮಸ್ಕರಿಸು.

“ಬಹುರೂಪಿ, ಶರ್ವ, ಪ್ರಿಯ, ಸುಂದರ ಉಡುಗೆಗಳನ್ನು ತೊಟ್ಟ, ಶಿರಸ್ತ್ರಾಣವನ್ನು ಧರಿಸುವ, ಸುಂದರ ಮುಖವುಳ್ಳ, ಸಹಸ್ರಾಕ್ಷನಿಗೆ ಮತ್ತು ಮಳೆಗರೆಯುವವನಿಗೆ ನಮಸ್ಕರಿಸು.

“ಪರ್ವತದಲ್ಲಿ ಮಲಗುವವನಿಗೆ, ಪರಮಶಾಂತನಿಗೆ, ಪತಿಗೆ, ನಾರುಮಡಿಯನ್ನುಟ್ಟವನಿಗೆ, ಹಿರಣ್ಯಬಾಹುವಿಗೆ, ಉಗ್ರನಿಗೆ ಮತ್ತು ದಿಕ್ಕುಗಳ ಅಧಿಪತಿಗೆ ನಮಸ್ಕರಿಸು. ಮೇಘಗಳ ಅಧಿಪತಿಗೆ, ಭೂತಗಳ ಪತಿಗೆ ನಮಸ್ಕಾರ. ವೃಕ್ಷಗಳ ಒಡೆಯನಿಗೆ ಮತ್ತು ನೀರಿನ ಒಡೆಯನಿಗೆ ನಮಸ್ಕಾರ.

“ವೃಕ್ಷಗಳಿಂದ ಆವೃತ ಶರೀರವುಳ್ಳವನಿಗೆ, ಸೇನಾನಿಗೆ, ಮಧ್ಯಮನಿಗೆ, ಕೈಯಲ್ಲಿ ಸ್ರುವವನ್ನು ಹಿಡಿದಿರುವವನಿಗೆ, ದೇವನಿಗೆ, ಧನ್ವಿಗೆ, ಭಾರ್ಗವನಿಗೆ, ಬಹೂರೂಪನಿಗೆ, ವಿಶ್ವದ ಪತಿಗೆ, ಚೀರವಾಸಸನಿಗೆ, ಸಹಸ್ರ ಶಿರಸನಿಗೆ, ಸಹಸ್ರನಯನನಿಗೆ, ಸಹಸ್ರಬಾಹುವಿಗೆ ಮತ್ತು ಸಹಸ್ರ ಚರಣನಿಗೆ ನಮಸ್ಕಾರ.

“ವರದನ, ಭುವನೇಶ್ವರನ, ಉಮಾಪತಿಯ, ವಿರೂಪಾಕ್ಷನ, ದಕ್ಷಯಜ್ಞನಿಬರ್ಹಣನ, ಪ್ರಜೆಗಳ ಪತಿ, ಅವ್ಯಗ್ರ, ಭೂತಗಳ ಪತಿ, ಅವ್ಯಯ, ಕಪರ್ದಿ, ವೃಷಾವರ್ತ, ವೃಷನಾಭ, ವೃಷಧ್ವಜ, ವೃಷದರ್ಪ, ವೃಷಪತಿ, ವೃಷಶೃಂಗ, ವೃಷರ್ಷಭ, ವೃಷಾಂಕ, ವೃಷಭೋದಾರ, ವೃಷಭ, ವೃಷಭೇಕ್ಷಣ, ವೃಷಾಯುಧ, ವೃಷಶರ, ವೃಷಭೂತ ಮಹೇಶ್ವರನ ಶರಣು ಹೋಗು.

“ಮಹೋದರ, ಮಹಾಕಾಯ, ದ್ವೀಪಿಚರ್ಮನಿವಾಸಿ, ಲೋಕೇಶ, ವರದ, ಮುಂಡ, ಬ್ರಹ್ಮಣ್ಯ, ಬ್ರಾಹ್ಮಣಪ್ರಿಯ, ತ್ರಿಶೂಲಪಾಣಿ, ವರದ, ಖಡ್ಗಚರ್ಮಧರ, ಪ್ರಭು, ಪಿನಾಕಿ, ಖಂಡಪರಶು, ಲೋಕಪತಿ, ಈಶ್ವರ, ದೇವ, ಶರಣ್ಯ, ಚೀರವಾಸಸನ ಶರಣು ಹೋಗು.

“ಸುರೇಶನಿಗೆ, ವೈಶ್ರವಣನ ಸಖನಿಗೆ, ಉತ್ತಮ ವಸ್ತ್ರವನ್ನು ಧರಿಸಿರುವವನಿಗೆ, ನಿತ್ಯನಿಗೆ, ಸುವ್ರತನಿಗೆ, ಸುಧನ್ವಿಗೆ ನಮಸ್ಕಾರ. ಸ್ರುವವನ್ನು ಹಿಡಿದಿರುವವನಿಗೆ, ದೇವನಿಗೆ, ಸುಖಧನ್ವಿಗೆ, ಧನ್ವಿಗೆ, ಧನ್ವಂತರಿಗೆ, ಧನುಷಿಗೆ, ಧನ್ವಾಚಾರ್ಯನಿಗೆ, ಧನ್ವಿಗೆ ನಮಸ್ಕಾರ.

“ಉಗ್ರಾಯುಧ, ದೇವ, ಸುರವರನಿಗೆ ನಮಸ್ಕಾರ. ಬಹುರೂಪಿಗೆ ನಮಸ್ಕಾರ. ಬಹುಧನ್ವಿಗೆ ನಮಸ್ಕಾರ. ಸ್ಥಾಣುವೇ, ಸುವ್ರತನೇ, ಸುಧನ್ವಿಯೇ, ನಿತ್ಯನೇ, ನಿನಗೆ ನಮಸ್ಕಾರ. ತ್ರಿಪುರಘ್ನನೇ, ಭಗಘ್ನನೇ ನಿನಗೆ ನಮೋನಮ.

“ವನಸ್ಪತಿಗಳ ಒಡೆಯನಿಗೆ ನಮಸ್ಕಾರ. ನರರ ಪತಿಗೆ ನಮಸ್ಕಾರ. ಅಪಾಂಪತಿಗೆ ನಮಸ್ಕಾರ. ನಿತ್ಯನಿಗೆ ಮತ್ತು ಯಜ್ಞಪತಿಗೆ ನಮಸ್ಕಾರ. ಪೂಷನ ಹಲ್ಲುಗಳನ್ನು ಮುರಿದವನಿಗೆ, ಮುಕ್ಕಣ್ಣನಿಗೆ, ವರದನಿಗೆ, ನೀಲಕಂಠನಿಗೆ, ಪಿಂಗಲನಿಗೆ, ಸ್ವರ್ಣಕೇಶನಿಗೆ ನಮಸ್ಕಾರ.

“ಧೀಮತ ಮಹಾದೇವನ ದಿವ್ಯಕರ್ಮಗಳ ಕುರಿತು ತಿಳಿದಷ್ಟು ಮತ್ತು ಕೇಳಿದಷ್ಟನ್ನು ವರ್ಣಿಸುತ್ತೇನೆ. ಇವನು ಕುಪಿತನಾದರೆ ಲೋಕದಲ್ಲಿ ಸುರರಾಗಲೀ, ಅಸುರರಾಗಲೀ, ಗಂಧರ್ವರಾಗಲೀ, ರಾಕ್ಷಸರಾಗಲೀ, ಅವರು ಗುಹೆಗಳನ್ನು ಸೇರಿದರೂ, ಸುಖದಿಂದಿರಲಾರರು. ಹಿಂದೆ ಭವನು ನಿರ್ಭಯನಾಗಿ ಕುಪಿತನಾಗಿ ಧನುಸ್ಸಿನಿಂದ ಬಾಣಗಳನ್ನು ಪ್ರಯೋಗಿಸಿ ಜೋರಾಗಿ ಗರ್ಜಿಸುತ್ತಾ ಯಜ್ಞವನ್ನೇ ಧ್ವಂಸಮಾಡಿದ್ದನು. ಮಹೇಶ್ವರನು ಯಜ್ಞದಲ್ಲಿ ಕುಪಿತನಾಗಿರಲು ಸುರರು ಎಲ್ಲಿಯೂ ಶಾಂತಿ ಮತ್ತು ರಕ್ಷಣೆಯನ್ನು ಪಡೆಯದೇ ಒಮ್ಮಿಂದೊಮ್ಮೆಲೇ ಅಲ್ಲಿಂದ ಓಡಿ ಹೋಗಿದ್ದರು. ಅವನ ಧನುಸ್ಸಿನ ಟೇಂಕಾರಘೋಷದಿಂದ ಸರ್ವ ಲೋಕಗಳೂ ವ್ಯಾಕುಲಗೊಂಡವು. ಅದರ ವಶಕ್ಕೆ ಬಂದ ಸುರಾಸುರರು ಕೆಳಗುರುಳಿದರು. ಸರ್ವ ಸಮುದ್ರಗಳೂ ಉಕ್ಕಿಬಂದವು. ಭೂಮಿಯು ನಡುಗಿತು. ಪರ್ವತಗಳು ಸೀಳಿದವು. ಮತ್ತು ದಿಗ್ಗಜಗಳು ಭ್ರಾಂತಗೊಂಡವು. ಅಂಧಕಾರವು ತುಂಬಿ ಲೋಕಗಳು ಕಾಣದಂತಾದವು. ಅವನು ಸೂರ್ಯನೊಂದಿಗೆ ಎಲ್ಲ ನಕ್ಷತ್ರಗಳ ಪ್ರಭೆಯನ್ನೂ ನಷ್ಟಗೊಳಿಸಿದ್ದನು. ಭಯಭೀತ ಋಷಿಗಳು ಸರ್ವಭೂತಗಳ ಮತ್ತು ತಮ್ಮ ಸುಖವನ್ನು ಬಯಸಿ ಶಾಂತಿಮಾಡತೊಡಗಿದರು. ಶಂಕರನು ಪುರೋಡಾಶವನ್ನು ಭಕ್ಷಿಸುತ್ತಿದ್ದ ಪೂಷನನ್ನು ಆಕ್ರಮಿಸಿ ಅಟ್ಟಹಾಸದಿಂದ ನಗುತ್ತಾ ಅವನ ಹಲ್ಲುಗಳೆಲ್ಲವನ್ನೂ ಕಿತ್ತುಬಿಟ್ಟನು. ಆಗ ದೇವತೆಗಳು ನಡುಗುತ್ತಾ ತಲೆತಗ್ಗಿಸಿಕೊಂಡು ಯಜ್ಞಶಾಲೆಯಿಂದ ಹೊರಬಂದಿದ್ದರು. ಪುನಃ ಶಂಕರನು ದೇವತೆಗಳ ಮೇಲೆ ಗುರಿಯಿಟ್ಟು ಉರಿಯುತ್ತಿರುವ ನಿಶಿತ ಶರವನ್ನು ಧನುಸ್ಸಿಗೆ ಹೂಡಿದನು. ತ್ರಿದಶರು ಭಯದಿಂದ ವಿಶಿಷ್ಟ ಯಜ್ಞಭಾಗವನ್ನು ರುದ್ರನಿಗೆ ಕಲ್ಪಿಸಿ ಅವನಿಗೆ ಶರಣು ಹೊಕ್ಕರು. ಶಂಕರನ ಕೋಪವು ಶಾಂತವಾದನಂತರವೇ ಆ ಯಜ್ಞವು ಪೂರ್ಣಗೊಂಡಿತು. ಆಗ ಶಂಕರನ ಕುರಿತು ಹೇಗೆ ಭಯಪಟ್ಟಿದ್ದರೋ ಹಾಗೆ ಈಗಲೂ ಕೂಡ ಅವನ ಕುರಿತು ಸುರರು ಭಯದಿಂದಿದ್ದಾರೆ.

“ಹಿಂದೆ ದಿವಿಯಲ್ಲಿ ವೀರ್ಯವಂತ ಅಸುರರ ಮೂರು ಮಹಾ ಪುರಗಳಿದ್ದವು – ಉಕ್ಕಿನದು, ಬೆಳ್ಳಿಯದು ಮತ್ತು ಇನ್ನೊಂದು ಬಂಗಾರದ್ದು. ಉಕ್ಕಿನದು ತಾರಕಾಕ್ಷನದಾಗಿತ್ತು, ಬೆಳ್ಳಿಯದು ಕಮಲಾಕ್ಷನದು, ಮತ್ತು ಪರಮ ಸುವರ್ಣಮಯವಾದುದು ವಿದ್ಯುನ್ಮಾಲಿನಿಯದಾಗಿತ್ತು. ಸರ್ವಾಯುಧಗಳಿಂದಲೂ ಇಂದ್ರನು ಇದನ್ನು ಭೇದಿಸಲು ಶಕ್ತನಾಗಲಿಲ್ಲ. ಆಗ ಸೋತ ಅಮರರೆಲ್ಲರೂ ರುದ್ರನಿಗೆ ಶರಣು ಹೋದರು. ಎಲ್ಲ ದೇವತೆಗಳೂ ಒಂದಾಗಿ ಆ ಮಹಾತ್ಮನಿಗೆ ಹೇಳಿದರು: “ರುದ್ರ! ಭುವನೇಶ್ವರ! ಈ ಅಸುರರನ್ನು ಸಂಹರಿಸಿದರೆ ಸರ್ವ ಕರ್ಮಗಳಲ್ಲಿ ಕಟ್ಟುವ ಪಶುವು ರುದ್ರನದಾಗುತ್ತದೆ.” ದೇವತೆಗಳ ಹಿತವನ್ನು ಬಯಸಿ ಹಾಗೆಯೇ ಆಗಲೆಂದು ಅವರಿಗೆ ಹೇಳಿ ಅವನು ಒಂದು ಸಾವಿರ ವರ್ಷಗಳು ಅಚಲನಾಗಿ (ಸ್ಥಾಣುವಾಗಿ) ನಿಂತಿದ್ದನು. ಯಾವಾಗ ಆ ಮೂರೂ ಪುರಗಳೂ ಅಂತರಿಕ್ಷದಲ್ಲಿ ಒಟ್ಟಾಗಿ ಸೇರಿದವೋ ಆಗ ಅವನು ಮೂರು ಪರ್ವಗಳಿದ್ದ ಮೂರು ಮೊನೆಗಳಿದ್ದ ಬಾಣದಿಂದ ಅವನ್ನು ಭೇದಿಸಿದನು. ಕಾಲಾಗ್ನಿಸಂಯುಕ್ತ ಮತ್ತು ವಿಷ್ಣು-ಸೋಮ ಸಮಾಯುತ ಶರವನ್ನು ನೋಡಲು ದಾನವರ ಆ ಪುರಗಳು ಶಕ್ತರಾಗಲಿಲ್ಲ.

“ಉಮೆಯು ಪಂಚಶಿಖೆಗಳಿಂದ ಕೂಡಿದ್ದ ಬಾಲಕನನ್ನು ತನ್ನ ತೊಡೆಯಮೇಲಿರಿಸಿಕೊಂಡು “ಇವನ್ಯಾರೆಂದು ನಿಮಗೆ ತಿಳಿದಿದೆಯೇ?” ಎಂದು ಸುರರನ್ನು ಪ್ರಶ್ನಿಸಿದಳು. ಈ ಪ್ರಭುವು ವಜ್ರವನ್ನು ಹಿಡಿದಿದ್ದ ಶಕ್ರನ ಬಾಹುವನ್ನು ಕ್ರೋಧದಿಂದ ಸ್ತಂಭನಗೊಳಿಸಿದ್ದನು. ಅವನೇ ಈ ಸರ್ವಲೋಕೇಶ್ವರ, ಪ್ರಭು, ದೇವ, ಭಗವಾನನು. ಆ ಪ್ರಜಾಪತಿ, ಬಾಲಾರ್ಕಸದೃಶ ಪ್ರಭು ಭುವನೇಶ್ವರನನ್ನು ದೇವತೆಗಳೆಲ್ಲರೂ ಮೊದಲು ಗುರುತಿಸಲಾರದೇ ಹೋದರು. ಆಗ ಪಿತಾಮಹ ಬ್ರಹ್ಮನು ಅವನನ್ನು ನೋಡಿ ಅವನೇ ಮಹೇಶ್ವರನೆಂದೂ ಶ್ರೇಷ್ಠನೆಂದೂ ತಿಳಿದು ಅವನಿಗೆ ವಂದಿಸಿದನು. ಅನಂತರ ಸುರರು ಉಮೆಯನ್ನೂ ರುದ್ರನನ್ನೂ ಪ್ರಸನ್ನಗೊಳಿಸಿದರು. ವಜ್ರಾಯುಧಸಹಿತವಾಗಿ ಸ್ತಂಭಿತವಾಗಿದ್ದ ಇಂದ್ರನ ಬಾಹುವು ಮೊದಲಿನಂತೆಯೇ ಚಲಿಸತೊಡಗಿತು. ಪತ್ನಿಯೊಂದಿಗೆ ಭಗವಾನ್ ವೃಷಧ್ವಜ ದಕ್ಷಯಜ್ಞವಿನಾಶಕ, ತ್ರಿದಶಶ್ರೇಷ್ಠನು ಆ ದೇವತೆಗಳ ಮೇಲೆ ಪ್ರಸನ್ನನಾದನು.

“ಅವನೇ ರುದ್ರ, ಅವನೇ ಶಿವ, ಅವನೇ ಅಗ್ನಿ, ಶರ್ವ ಮತ್ತು ಎಲ್ಲವನ್ನೂ ತಿಳಿದವನು. ಅವನೇ ಇಂದ್ರ, ವಾಯು, ಅಶ್ವಿನಿಯರು ಮತ್ತು ಮಿಂಚು. ಅವನೇ ಭವ, ಪರ್ಜನ್ಯ, ಮಹಾದೇವ ಮತ್ತು ಅನಘ. ಅವನೇ ಚಂದ್ರಮ, ಈಶಾನ, ಸೂರ್ಯ ಮತ್ತು ವರುಣನೂ ಕೂಡ. ಅವನೇ ಕಾಲ, ಅವನೇ ಅಂತಕ, ಮೃತ್ಯು, ಮತ್ತು ಯಮ. ಅವನೇ ರಾತ್ರಿ-ಹಗಲುಗಳು, ಮಾಸ-ಪಕ್ಷಗಳು, ಋತುಗಳು, ಸಂಧ್ಯಗಳು ಮತ್ತು ಸವತ್ಸರಗಳು ಕೂಡ. ಅವನೇ ಧಾತಾ, ವಿಧಾತಾ, ವಿಶ್ವಾತ್ಮ ಮತ್ತು ವಿಶ್ವಕರ್ಮಕೃತ್. ಎಲ್ಲ ದೇವತೆಗಳ ಶರೀರವನ್ನೂ ಅವನೇ ಧರಿಸುತ್ತಾನೆ. ಎಲ್ಲ ದೇವತೆಗಳೂ ಅವನನ್ನು ಸದಾಕಾಲದಲ್ಲಿಯೂ ಸ್ತುತಿಸುತ್ತಿರುತ್ತಾರೆ. ಅವನು ಏಕರೂಪನೂ, ಬಹುರೂಪನೂ ಆಗಿದ್ದಾನೆ, ನೂರಾರು, ಸಾವಿರಾರು, ಲಕ್ಷೋಪಲಕ್ಷ ರೂಪಗಳಿಂದ ಅವನು ವಿರಾಜಿಸುತ್ತಾನೆ. ಆ ಮಹಾದೇವನು ಈ ತರಹದವನು. ಅವನು ಹುಟ್ಟಿಲ್ಲದ ಭಗವಾನನು. ಆ ಭಗವಂತನ ಎಲ್ಲ ಗುಣಗಳನ್ನೂ ವರ್ಣಿಸಲು ನನಗೆ ಶಕ್ಯವಿಲ್ಲ.

“ಸರ್ವಗ್ರಹಗಳ ಬಾಧೆಯಿಂದ ಪೀಡಿತರಾದವರು ಮತ್ತು ಸರ್ವ ಪಾಪಗಳಿಂದ ಕೂಡಿದವರೂ ಸಹ ಶರಣುಹೋದರೆ ಆ ಶರಣ್ಯನು ಸುಪ್ರೀತನಾಗಿ ಅವರನ್ನು ಬಾಧೆಗಳಿಂದ ಮತ್ತು ಪಾಪಗಳಿಂದ ವಿಮೋಚನೆಯನ್ನು ನೀಡುತ್ತಾನೆ. ಮನುಷ್ಯರಿಗೆ ಅವನು ಆಯುರಾರೋಗ್ಯ ಐಶ್ವರ್ಯಗಳನ್ನು, ಪುಷ್ಕಲ ಕಾಮಗಳನ್ನೂ ವಿತ್ತವನ್ನೂ ನೀಡುತ್ತಾನೆ ಮತ್ತು ಪುನಃ ಅವುಗಳನ್ನು ಕಳೆಯುತ್ತಾನೆ. ಇಂದ್ರಾದಿ ದೇವತೆಗಳಲ್ಲಿರುವ ಐಶ್ವರ್ಯವೆಲ್ಲವೂ ಅವನದೇ ಐಶ್ವರ್ಯವೆಂದು ಹೇಳುತ್ತಾರೆ. ಲೋಕದಲ್ಲಿ ಮನುಷ್ಯರ ಶುಭಾಶುಭಗಳನ್ನೂ ಅವನೇ ನಡೆಸುತ್ತಾನೆ. ಐಶ್ವರ್ಯಗಳದ್ದಲ್ಲದೇ ಅವನನ್ನು ಕಾಮಗಳ ಈಶ್ವರನೆಂದೂ ಪುನಃ ಕರೆಯುತ್ತಾರೆ. ಇರುವವುಗಳ ಮಹೇಶ್ವರನಾಗಿರುವ ಅವನು ಮಹತ್ತಿನ ಈಶ್ವರನೂ ಕೂಡ. ಅನೇಕ ವಿವಿಧರೂಪಗಳಲ್ಲಿ ಇವನು ಜಗತ್ತನೇ ವ್ಯಾಪಿಸಿದ್ದಾನೆ. ಆ ದೇವನ ಮುಖವು ಸಮುದ್ರದಲ್ಲಿ ಅಧಿಷ್ಠಾನಗೊಂಡಿದೆ. ಈ ದೇವನೇ ಶ್ಮಶಾನಗಳಲ್ಲಿ ನಿತ್ಯವೂ ವಾಸಿಸುತ್ತಾನೆ. ಅಲ್ಲಿ ಆ ಈಶ್ವರನನ್ನು ಜನರು ವೀರಸ್ಥಾನನೆಂದು ಯಾಜಿಸುತ್ತಾರೆ. ಇವನಿಗೆ ಅನೇಕ ದೇದೀಪ್ಯಮಾನ ಘೋರ ರೂಪಗಳಿವೆ. ಲೋಕದಲ್ಲಿ ಮನುಷ್ಯರು ಇವುಗಳನ್ನು ಪೂಜಿಸುತ್ತಾರೆ ಮತ್ತು ಪ್ರಾರ್ಥಿಸುತ್ತಾರೆ.

“ಅವನ ಮಹತ್ತ್ವತೆಗೆ, ಒಡೆತನಕ್ಕೆ ಮತ್ತು ಕರ್ಮಭಿಗಳಿಗೆ ತಕ್ಕುದಾದ ಅನೇಕ ನಾಮಧೇಯಗಳು ಲೋಕಗಳಲ್ಲಿ ಅವನಿಗಿವೆ. ವೇದಗಳಲ್ಲಿ ಇವನನ್ನು ಉತ್ತಮ ಶತರುದ್ರೀಯದಿಂದಲೂ ಮತ್ತು ಮಹಾತ್ಮರು ಇವನನ್ನು ಅನಂತರುದ್ರ ಎಂಬ ಹೆಸರಿನಿಂದಲೂ ಉಪಸ್ಥಾನ ಮಾಡುತ್ತಾರೆ. ದೇವತೆಗಳ ಮತ್ತು ಮನುಷ್ಯರ ಕಾಮೋಪಭೋಗಗಳಿಗೆ ಮಹೇಶ್ವರನೇ ಪ್ರಭುವಾಗಿದ್ದಾನೆ. ಮಹಾವಿಶ್ವವನ್ನೇ ವ್ಯಾಪಿಸಿರುವ ಅವನೇ ಪ್ರಭೂ, ದೇವ ಮತ್ತು ವಿಭು. ಬ್ರಾಹ್ಮಣರು ಮತ್ತು ಮುನಿಗಳು ಇವನನ್ನು ಜ್ಯೇಷ್ಠಭೂತನೆಂದು ಕರೆಯುತ್ತಾರೆ. ದೇವತೆಗಳೆಲ್ಲರಿಗೂ ಇವನು ಪ್ರಥಮನು. ಇವನ ಮುಖದಿಂದಲೇ ಅಗ್ನಿಯು ಹುಟ್ಟಿದನು. ಎಲ್ಲ ಪ್ರಾಣಿಗಳನ್ನು ಸರ್ವಥಾ ಪರಿಪಾಲಿಸುವುದರಿಂದಲೂ, ಅವುಗಳೊಡನೆ ಕ್ರೀಡಿಸುತ್ತಿರುವುದರಿಂದಲೂ ಮತ್ತು ಅವುಗಳಿಗೆ ಅಧಿಪತಿಯಾಗಿರುವುದರಿಂದಲೂ ಇವನು ಪಶುಪತಿಯೆಂದು ತಿಳಿಯಲ್ಪಟ್ಟಿದ್ದಾನೆ. ಇವನ ದಿವ್ಯಲಿಂಗವು ನಿತ್ಯವೂ ಬ್ರಹ್ಮಚರ್ಯದಲ್ಲಿ ಸ್ಥಿತವಾಗಿರುವುದರಿಂದ ಮತ್ತು ಇವನು ಲೋಕಗಳ ಮಹತ್ವನಾಗಿರುವುದರಿಂದ ಮಹೇಶ್ವರನೆಂದು ಕರೆಯಲ್ಪಟ್ಟಿದ್ದಾನೆ. ಮೇಲ್ಮುಖವಾಗಿ ಪ್ರತಿಷ್ಠಿತವಾಗಿರುವ ಇವನ ಲಿಂಗವನ್ನು ಋಷಿಗಳು, ದೇವತೆಗಳೂ, ಗಂಧರ್ವ-ಅಪ್ಸರೆಯರೂ ಅರ್ಚಿಸುತ್ತಾರೆ. ಹಾಗಿರುವ ಅವನನ್ನು ಪೂಜಿಸಿದರೆ ಮಹೇಶ್ವರ ಶಂಕರನು ಸಂತೋಷಪಡುತ್ತಾನೆ, ಸುಖಿಯಾಗುತ್ತಾನೆ, ಪರಮ ಪ್ರೀತನಾಗುತ್ತಾನೆ ಮತ್ತು ಪ್ರಹೃಷ್ಟನಾಗುತ್ತಾನೆ. ಭೂತ-ಭವ್ಯ-ಭವಿಷ್ಯತ್ತುಗಳಲ್ಲಿರುವ ಸ್ಥಾವರ ಮತ್ತು ಚಲಿಸುತ್ತಿರುವ ಅನೇಕ ರೂಪಗಳಿರುವ ಇವನನ್ನು ಬಹುರೂಪನೆಂದು ಕರೆಯುತ್ತಾರೆ. ಎಲ್ಲಕಡೆಗಳಲ್ಲಿ ಕಣ್ಣುಗಳಿದ್ದರೂ ಇವನ ಒಂದು ಕಣ್ಣು ಜ್ವಾಜಲ್ಯಮಾನವಾಗಿದ್ದು ಕ್ರೋಧಾಗ್ನಿಯು ಎಲ್ಲ ಲೋಕಗಳನ್ನೂ ವ್ಯಾಪಿಸುವುದರಿಂದ ಇವನನ್ನು ಶರ್ವಎಂದೂ ಕರೆಯುತ್ತಾರೆ. ಧೂಮ್ರವರ್ಣದವನಾಗಿರುವುದರಿಂದ ಇವನನ್ನು ಧೂರ್ಜಟಿಯೆಂದು ಕರೆಯುತ್ತಾರೆ. ಇವನಲ್ಲಿ ವಿಶ್ವೇದೇವರು ಸ್ಥಿತರಾಗಿರುವುದರಿಂದ ವಿಶ್ವರೂಪನೆಂದೂ ಕರೆಯಲ್ಪಡುತ್ತಾನೆ. ಈ ಭುವನೇಶ್ವರನು ದ್ಯೌ, ಆಪ ಮತ್ತು ಪೃಥ್ವಿ ಎಂಬ ಮೂರು ದೇವಿಯರನ್ನು ಪ್ರೀತಿಸುತ್ತಾನಾದುದರಿಂದ ತ್ರ್ಯಂಬಕನೆಂದು ಕರೆಯಲ್ಪಟ್ಟಿದ್ದಾನೆ. ಮನುಷ್ಯರ ಸರ್ವಕರ್ಮಗಳಲ್ಲಿ ಸರ್ವಸಾಧನೆಗಳನ್ನು ಮತ್ತು ಫಲಗಳನ್ನು ವೃದ್ಧಿಸುವವನಾದುದರಿಂದ ಇವನು ಶಿವನೆಂದು ಕರೆಯಲ್ಪಟ್ಟಿದ್ದಾನೆ. ಅವನು ಸಹಸ್ರಾಕ್ಷನಾಗಿರಲಿ, ದಶಸಹಸ್ರಾಕ್ಷನಾಗಿರಲಿ, ನಖ-ಶಿಖಾಂತವಾಗಿ ಕಣ್ಣುಗಳಿಂದಲೇ ಕೂಡಿರಲಿ – ಈ ಮಹಾ ವಿಶ್ವವನ್ನೇ ಯಾರು ನೋಡುತ್ತಾ ಪಾಲಿಸುವನೋ ಅವನು ಮಹಾದೇವನಾದನು. ಊರ್ಧ್ವನಾಗಿ ನಿಂತಿರುವುದರಿಂದ, ಪ್ರಾಣೋತ್ಪತ್ತಿಗೆ ನಿಂತಿರುವುದರಿಂದ, ನಿತ್ಯವೂ ಲಿಂಗರೂಪದಲ್ಲಿರುವುದರಿಂದ ಅವನು ಸ್ಥಾಣುವೆನಿಸಿಕೊಂಡನು.

“ಪ್ರಾಣಿಗಳ ಶರೀರಗಳಲ್ಲಿ ವಿಷಮಸ್ಥನಾಗಿದ್ದರೂ ಸಮನಾಗಿರುವ ಇವನು ಪ್ರಾಣಾಪಾನ ವಾಯುವಾಗಿ ಶರೀರಗಳಲ್ಲಿ ವಿಷಮರೂಪದಲ್ಲಿರುತ್ತಾನೆ. ಇವನ ವಿಗ್ರಹವನ್ನಾಗಲೀ ಲಿಂಗವನ್ನಾಗಲೀ ಪೂಜಿಸಬೇಕು. ನಿತ್ಯವೂ ಲಿಂಗವನ್ನು ಪೂಜಿಸಿದವನು ಮಹತ್ತರ ಸಂಪತ್ತನ್ನು ಪಡೆಯುತ್ತಾನೆ. ಅವನ ತೊಡೆಗಳ ಕೆಳಗಿನ ಅರ್ಧಭಾಗವನ್ನು ಆಗ್ನೇಯ ಶರೀರವೆಂದೂ ಮೇಲಿನ ಅರ್ಧಭಾಗವನ್ನು ಸೋಮ ಅಥವಾ ಮಂಗಳ ಶರೀರವೆಂದು ಹೇಳುತ್ತಾರೆ. ಇತರರು ಅವನ ದೇಹದ ಬಲಗಡೆಯ ಅರ್ಧಭಾಗವನ್ನು ಆಗ್ನೇಯ ಶರೀರವೆಂದೂ ಎಡಗಡೆಯ ಅರ್ಧಭಾಗವನ್ನು ಸೋಮಶರೀರವೆಂದೂ ಹೇಳುತ್ತಾರೆ. ಅವನ ಮಂಗಳ ಶರೀರವು ಅತ್ಯಂತಕಾಂತಿಯಿಂದ ಬೆಳಗುತ್ತಿದ್ದು ದೇವತೆಗಳಿಗೆ ಸೇರಿರುತ್ತದೆ. ಹೊಳೆಯುವ ಆಗ್ನೇಯ ಶರೀರವು ಘೋರವಾದುದು ಎಂದು ಮನುಷ್ಯರಲ್ಲಿ ಹೇಳುತ್ತಾರೆ. ಅವನ ಮಂಗಳ ಶರೀರದಿಂದ ಅವನು ಬ್ರಹ್ಮಚರ್ಯವನ್ನು ಪಾಲಿಸುತ್ತಾನೆ. ಅವನ ಘೋರತರ ಶರೀರದಿಂದ ಈಶ್ವರನು ಸರ್ವಗಳನ್ನೂ ನಾಶಗೊಳಿಸುತ್ತಾನೆ. ಆ ಪ್ರತಾಪವಾನನು ಉಗ್ರನಾಗಿ ತೀಕ್ಷ್ಣನಾಗಿ ಸುಟ್ಟ ರಕ್ತ-ಮಾಂಸ-ಮಜ್ಜೆಗಳನ್ನು ಭಕ್ಷಿಸುವುದರಿಂದ ಅವನನ್ನು ರುದ್ರನೆಂದು ಕರೆಯುತ್ತಾರೆ.

“ಪಾರ್ಥ! ಸಂಗ್ರಾಮದಲ್ಲಿ ನಿನ್ನ ಮುಂದಿನಿಂದ ಶತ್ರುಗಳನ್ನು ಸಂಹರಿಸುತ್ತಾ ಹೋಗುತ್ತಿದ್ದವನು ಪಿನಾಕಪಾಣಿ ಈ ಮಹಾದೇವನೇ ಆಗಿದ್ದಾನೆ. ಅವನನ್ನೇ ನೀಡು ನೋಡಿರುವೆ. ಸಂಗ್ರಾಮದಲ್ಲಿ ನಿನ್ನ ಮುಂದೆಮುಂದೆ ಹೋಗುತ್ತಿದ್ದ ನಿನಗೆ ಅಸ್ತ್ರಗಳನ್ನು ದಯಪಾಲಿಸಿದ್ದ ಭಗವಾನ ದೇವನಿಂದಲೇ ಈ ದಾನವರು ಹತರಾದರು. ನಾನು ಈಗ ಹೇಳಿದ ದೇವದೇವನ ಶತರುದ್ರೀಯವು ಧನ್ಯವಾದುದು, ಯಶಸ್ಸನ್ನೂ ಆಯುಸ್ಸನ್ನೂ ನೀಡುವಂತಹುದು, ಪುಣ್ಯಕರವಾದುದು ಮತ್ತು ವೇದಗಳಲ್ಲಿ ಸೂಚಿಸಲ್ಪಟ್ಟಿರುವುದು. ಇದು ಸರ್ವಾರ್ಥಸಾಧಕವಾದುದು. ಸರ್ವ ಕಿಲ್ಬಿಷಗಳನ್ನು ನಾಶಪಡಿಸುವ ಪುಣ್ಯಕಾರಕವು. ಸರ್ವಪಾಪಗಳನ್ನು ಪ್ರಶಮನಗೊಳಿಸುವಂತಹುದು ಮತ್ತು ಸರ್ವ ದುಃಖ ಭಯಗಳನ್ನು ಕಳೆಯುವಂತಹುದು. ಈ ಚತುರ್ವಿಧ ಸ್ತೋತ್ರವನ್ನು ಯಾವ ನರನು ಸದಾ ಕೇಳುತ್ತಾನೋ ಅವನು ಸರ್ವಶತ್ರುಗಳನ್ನೂ ಗೆದ್ದು ರುದ್ರಲೋಕದಲ್ಲಿ ಮೆರೆಯುತ್ತಾನೆ. ಮಹಾತ್ಮ ಶಂಕರನ ಈ ಚರಿತ್ರೆಯು ಸಂಗ್ರಾಮಕಾಲದಲ್ಲಿ ಸದಾ ವಿಜಯವನ್ನು ತರುತ್ತದೆ. ಮನುಷ್ಯರಲ್ಲಿ ಯಾರು ಈ ಶತರುದ್ರೀಯವನ್ನು ಸದಾ ಓದುತ್ತಾರೋ, ಕೇಳುತ್ತಾರೋ ಮತ್ತು ಆ ದೇವ ವಿಶ್ವೇಶ್ವರನನ್ನು ಭಜಿಸುತ್ತಾರೋ ಅವರಿಗೆ ತ್ರ್ಯಂಬಕನು ಪ್ರಸನ್ನನಾಗಿ ಆಸೆಗಳನ್ನು ಒದಗಿಸಿಕೊಡುತ್ತಾನೆ. ಕೌಂತೇಯ! ಹೋಗು! ಯುದ್ಧಮಾಡು! ಯಾರ ಮಂತ್ರಿ, ರಕ್ಷಕ ಮತ್ತು ಜೊತೆಗಾರನು ಜನಾರ್ದನನೋ ಅಂತಹ ನಿನಗೆ ಪರಾಜಯವಾಗಲಾರದು!”

ರಣದಲ್ಲಿ ಅರ್ಜುನನಿಗೆ ಹೀಗೆ ಹೇಳಿ ಪರಾಶರಸುತನು ಎಲ್ಲಿಗೆ ಹೋಗಬೇಕಿತ್ತೋ ಅಲ್ಲಿಗೆ ಹೊರಟುಹೋದನು.

Leave a Reply

Your email address will not be published. Required fields are marked *