Image result for narayanastra

 

Related imageಹದಿನೈದನೆಯ ದಿನದ ಯುದ್ಧ - ೩: ಅಶ್ವತ್ಥಾಮನಿಂದ ನಾರಾಯಣಾಸ್ತ್ರ ಪ್ರಯೋಗ

ಪಾಪಕರ್ಮಿ ಧೃಷ್ಟದ್ಯುಮ್ನನಿಂದ ತನ್ನ ತಂದೆಯು ಹತನಾದನೆಂದು ಕೇಳಿ ದ್ರೌಣಿ ಅಶ್ವತ್ಥಾಮನ ಕಣ್ಣುಗಳು ರೋಷದ ಕಣ್ಣೀರಿನಿಂದ ತುಂಬಿದವು. ಪ್ರಳಯ ಕಾಲದಲ್ಲಿ ಪ್ರಾಣಿಗಳ ಅಸುವನ್ನು ಹೀರಿಕೊಳ್ಳುವ ಅಂತಕನೋಪಾದಿಯಲ್ಲಿ ಕ್ರುದ್ಧನಾದ ಅವನ ಶರೀರವು ದಿವ್ಯವಾಗಿ ಕಂಡಿತು. ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಳ್ಳುತ್ತಿರಲು ಅವನು ಪುನಃ ಪುನಃ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಕೋಪದಿಂದ ನಿಟ್ಟುಸಿರು ಬಿಡುತ್ತಾ ದುರ್ಯೋಧನನೊಡನೆ ಈ ಮಾತುಗಳನ್ನಾಡಿದನು:

“ಶಸ್ತ್ರಸಂನ್ಯಾಸವನ್ನು ಮಾಡಿದ ನನ್ನ ತಂದೆಯನ್ನು ಕ್ಷುದ್ರಜನರು ಕೊಂದರು. ಧ್ವರ್ಮದ್ವಜನೆನಿಸಿಕೊಂಡವನು ಈ ಪಾಪದ ಕೆಲಸವನ್ನು ಮಾಡಿದನೆಂದು ನನಗೆ ತಿಳಿದಿದೆ. ಧರ್ಮಪುತ್ರನ ಅತ್ಯಂತ ಅನಾರ್ಯ ಕ್ರೂರಕೃತ್ಯದ ಕುರಿತು ನಾನು ಕೇಳಿದೆ. ಯುದ್ಧದಲ್ಲಿ ತೊಡಗಿದವರಿಗೆ ಜಯ-ಅಪಜಗಳೆರಡರಲ್ಲಿ ಒಂದಾಗುವುದು ನಿಶ್ಚಿತವಾದುದು. ಆದರೆ ಅಲ್ಲಿ ವಧೆಗೆ ಹೆಚ್ಚಿನ ಪ್ರಾಶಸ್ತವಿಗೆ. ಸಂಗ್ರಾಮ ಯುದ್ಧದಲ್ಲಿ ನ್ಯಾಯರೀತಿಯಲ್ಲಿ ವಧೆಯಾದರೆ ಅದರಿಂದ ಯಾರಿಗೂ ಯಾವವಿಧದ ದುಃಖವೂ ಆಗುವುದಿಲ್ಲ. ದ್ವಿಜರು ಈ ಧರ್ಮರಹಸ್ಯವನ್ನು ಕಂಡಿದ್ದಾರೆ. ನನ್ನ ತಂದೆಯು ವೀರಲೋಕಗಳಿಗೇ ಹೋಗಿದ್ದಾನೆ. ಅದರಲ್ಲಿ ನನಗೆ ಸಂಶಯವಿಲ್ಲ. ಆದುದರಿಂದ ಅವನು ನಿಧನನಾದನೆಂದು ನಾನು ಶೋಕಿಸುತ್ತಿಲ್ಲ. ಧರ್ಮಪ್ರವೃತ್ತನಾಗಿದ್ದ ಅವನ ಕೂದಲನ್ನು ಸರ್ವಸೈನ್ಯಗಳೂ ನೋಡುತ್ತಿರುವಂತೆ ಧೃಷ್ಟದ್ಯುಮ್ನನು ಹಿಡಿದನು ಎನ್ನುವುದೇ ನನ್ನ ಮರ್ಮಗಳನ್ನು ಛಿದ್ರಗೊಳಿಸುತ್ತಿದೆ. ಲೋಕದಲ್ಲಿ ಜನರು ಕಾಮ-ಕ್ರೋಧ-ಅಜ್ಞಾನ-ದರ್ಪ ಅಥವಾ ಬಾಲ್ಯತನದಿಂದ ಧರ್ಮಕ್ಕೆ ಬಾಹಿರವಾಗಿ ನಡೆದುಕೊಳ್ಳುತ್ತಾರೆ. ಇಂತಹ ಮಹಾ ಅಧರ್ಮಿಕ ಕೆಲಸವನ್ನು ದುರಾತ್ಮ ಕ್ರೂರಿ ಪಾರ್ಷತನು ನನ್ನನ್ನೂ ಅಲ್ಲಗಳೆದು ಮಾಡಿದ್ದಾನೆ. ಅದಕ್ಕೆ ತಕ್ಕುದಾದ ಸುದಾರುಣ ಫಲವನ್ನು ಧೃಷ್ಟದ್ಯುಮ್ನನೂ ಮತ್ತು ಆ ಅನಾರ್ಯ ಕಾರ್ಯವನ್ನು ಮಾಡಿಸಿದ ಪರಮ ಮಿಥ್ಯಾವಾದೀ ಪಾಂಡವರೂ ಕಾಣಲಿದ್ದಾರೆ. ಹೀಗೆ ಶಸ್ತ್ರಸಂನ್ಯಾಸ ಮಾಡಿದ್ದ ಆಚಾರ್ಯನನ್ನು ಮೋಸದಿಂದ ಸಂಹರಿಸಿದ ಧರ್ಮರಾಜನ ರಕ್ತವನ್ನು ಇಂದು ಭೂಮಿಯು ಕುಡಿಯುತ್ತದೆ! ನಾನು ಸರ್ವೋಪಾಯಗಳಿಂದ ಪಾಂಚಾಲನನ್ನು ವಧಿಸಲು ಪ್ರಯತ್ನಿಸುತ್ತೇನೆ. ಮೃದು ಅಥವಾ ದಾರುಣ ಕರ್ಮದಿಂದ ನಾನು ಆ ಪಾಂಚಾಲನ ವಧೆಯನ್ನು ಮಾಡಿಯೇ ಶಾಂತಿಯನ್ನು ಪಡೆಯುತ್ತೇನೆ. ಪರಲೋಕದಲ್ಲಿ ಮತ್ತು ಈ ಲೋಕದಲ್ಲಿ ಬರಬಹುದಾದ ಮಹಾಭಯದ ರಕ್ಷಣೆಗೆಂದೇ ಜನರು ಮಕ್ಕಳನ್ನು ಬಯಸುತ್ತಾರೆ. ಪರ್ವತಸಮಾನ ಪುತ್ರನೂ ಶಿಷ್ಯನೂ ಆದ ನಾನು ಜೀವಂತವಿರುವಾಗಲೇ ಯಾರೂ ಬಂಧುಗಳೇ ಇಲ್ಲದವರಂತೆ ನನ್ನ ತಂದೆಗೆ ಈ ಅವಸ್ಥೆಯು ಪ್ರಾಪ್ತವಾಯಿತು! ನನ್ನಲ್ಲಿರುವ ದಿವ್ಯಾಸ್ತ್ರಗಳಿಗೆ ಧಿಕ್ಕಾರ! ನನ್ನ ಬಾಹುಗಳಿಗೆ ಧಿಕ್ಕಾರ! ಪರಾಕ್ರಮಕ್ಕೆ ಧಿಕ್ಕಾರ! ನನ್ನಂತಹ ಮಗನನ್ನು ಪಡೆದುದರಿಂದಲೇ ದ್ರೋಣನು ತಲೆಗೂದಲನ್ನು ಹಿಡಿಸಿಕೊಂಡವನಾದನು! ನನ್ನ ತಂದೆಯು ಪರಲೋಕಕ್ಕೆ ಹೋಗಿದ್ದರೂ ಕೂಡ ಅವರ ಋಣವು ಮುಗಿಯುವಂತೆ ನಾನು ಮಾಡುತ್ತೇನೆ. ಆರ್ಯನು ಎಂದೂ ಆತ್ಮಸ್ತುತಿಯನ್ನು ಮಾಡಿಕೊಳ್ಳಬಾರದು. ಆದರೆ ಪಿತೃವಧೆಯನ್ನು ಸಹಿಸಿಕೊಳ್ಳಲಾಗದೇ ನಾನು ನನ್ನ ಪೌರುಷದ ಕುರಿತು ಹೇಳುತ್ತೇನೆ.

“ಸರ್ವಸೇನೆಗಳನ್ನೂ ಅರೆದು ಯುಗಾಂತವನ್ನೇ ಉಂಟುಮಾಡುವ ನನ್ನ ಈ ವೀರ್ಯವನ್ನು ಇಂದು ಜನಾರ್ದನನೊಡನೆ ಪಾಂಡವರು ನೋಡಲಿ! ಇಂದು ರಥಸ್ಥನಾದ ನನ್ನನ್ನು ರಣದಲ್ಲಿ ದೇವತೆ-ಗಂಧರ್ವ-ಅಸುರ-ರಾಕ್ಷಸರು ಯಾರೂ ಗೆಲ್ಲಲು ಶಕ್ತರಾಗುವುದಿಲ್ಲ. ಈ ಲೋಕದಲ್ಲಿ ನನ್ನ ಮತ್ತು ಅರ್ಜುನನನ್ನು ಮೀರಿಸಿದ ಅಸ್ತ್ರವಿತ್ತಮನು ಬೇರೆ ಯಾರೂ ಇಲ್ಲ. ಸೂರ್ಯನು ಕಿರಣಗಳನ್ನು ಪಸರಿಸಿ ಹೇಗೆ ಸುಡುವನೋ ಹಾಗೆ ನಾನಿಂದು ಸೇನೆಗಳ ಮಧ್ಯದಲ್ಲಿ ದೇವತೆಗಳು ಸೃಷ್ಟಿಸಿದ ಅಸ್ತ್ರಗಳನ್ನು ಪ್ರಯೋಗಿಸುತ್ತೇನೆ. ಇಂದಿನ ಮಹಾಯುದ್ಧದಲ್ಲಿ ನನ್ನ ಧನುಸ್ಸಿನಿಂದ ಪ್ರಮುಕ್ತ ಬಾಣಗಳು ಪಾಂಡವರನ್ನು ಮಥಿಸಿ ನನ್ನ ವೀರ್ಯವನ್ನು ತೋರಿಸಿಕೊಡುತ್ತವೆ. ಇಂದು ಎಲ್ಲ ದಿಕ್ಕುಗಳೂ ಮಳೆಯ ನೀರಿನಿಂದ ತುಂಬಿಬಿಡುವಂತೆ ನನ್ನ ತೀಕ್ಷ್ಣ ಬಾಣಗಳಿಂದ ಆವೃತವಾಗುವುದನ್ನು ಎಲ್ಲರೂ ನೋಡುವವರಿದ್ದಾರೆ! ಭೈರವಸ್ವರದ ಶರಜಾಲಗಳನ್ನು ಎಲ್ಲೆಡೆ ಎರಚಿ ಚಂಡಮಾರುತವು ವೃಕ್ಷಗಳನ್ನು ಕೆಡಹುವಂತೆ ಶತ್ರುಗಳನ್ನು ಕೆಳಗುರುಳಿಸುತ್ತೇನೆ!

“ಈ ಅಸ್ತ್ರವನ್ನು ಬೀಭತ್ಸುವಾಗಲೀ ಜನಾರ್ದನನಾಗಲೀ ಭೀಮಸೇನನಾಗಲೀ, ನಕುಲ-ಸಹದೇವರಾಗಲೀ, ರಾಜಾ ಯುಧಿಷ್ಠಿರನಾಗಲೀ, ದುರಾತ್ಮರಾದ ಪಾರ್ಷತ-ಶಿಖಂಡಿ-ಸಾತ್ಯಕಿಗಾಗಲೀ ತಿಳಿದಿಲ್ಲ. ಕೌರವ್ಯ! ಇದರ ಪ್ರಯೋಗ-ಸಂಹಾರಗಳೆರಡು ನನ್ನಲ್ಲಿ ಮಾತ್ರ ಪ್ರತಿಷ್ಠಿತವಾಗಿವೆ. ಹಿಂದೆ ನನ್ನ ತಂದೆಯು ವಿಧಿಪೂರ್ವಕವಾಗಿ ನಾರಾಯಣನನ್ನು ನಮಸ್ಕರಿಸಿ ಬ್ರಹ್ಮರೂಪ ಉಪಹಾರವನ್ನು ಸಮರ್ಪಿಸಿದ್ದನು. ಅದನ್ನು ಸ್ವಯಂ ಸ್ವೀಕರಿಸಿದ ಭಗವಾನನು ವರವನ್ನಿತ್ತನು. ಆಗ ನನ್ನ ತಂದೆಯು ಶ್ರೇಷ್ಠವಾದ ನಾರಾಯಣಾಸ್ತ್ರವನ್ನು ವರವನ್ನಾಗಿ ಕೇಳಿದನು. ಆಗ ದೇವಸತ್ತಮ ಭಗವಾನನು ಹೀಗೆ ಹೇಳಿದ್ದನು: “ಇದರ ನಂತರ ಯುದ್ಧದಲ್ಲಿ ನಿನಗೆ ಸರಿಸಾಟಿಯಾದ ಯಾವ ನರನೂ ಇರುವುದಿಲ್ಲ. ಆದರೆ ಬ್ರಹ್ಮನ್! ಇದನ್ನು ವಿಚಾರಮಾಡದೇ ಎಂದೂ ಪ್ರಯೋಗಿಸಕೂಡದು. ಈ ಅಸ್ತ್ರವು ಶತ್ರುವನ್ನು ವಧಿಸದೇ ಹಿಂದಿರುಗುವುದಿಲ್ಲ. ಇದು ಯಾರನ್ನು ವಧಿಸುತ್ತದೆ ಎನ್ನುವುದನ್ನು ತಿಳಿಯಲು ಶಕ್ಯವಿಲ್ಲ. ಅವಧ್ಯರಾದವರನ್ನೂ ವಧಿಸಿಬಿಡಬಹುದು. ಆದುದರಿಂದ ಇದನ್ನು ದುಡುಕಿ ಪ್ರಯೋಗಿಸಬಾರದು. ಯುದ್ಧದಲ್ಲಿ ಪಲಾಯನ ಮಾಡಿದವರನ್ನೂ ಇದು ವಧಿಸುತ್ತದೆ. ಶಸ್ತ್ರಗಳನ್ನು ವಿಸರ್ಜಿಸುವುದು, ಅಭಯವನ್ನು ಯಾಚಿಸುವುದು, ಶತ್ರುಗಳಿಗೆ ಶರಣಾಗತರಾಗುವುದು ಇವುಗಳು ಈ ಮಹಾಸ್ತ್ರವನ್ನು ಶಮನಗೊಳಿಸತಕ್ಕ ಕೆಲವು ಉಪಾಯಗಳು. ಅವಧ್ಯರಾದವರನ್ನು ಇದು ಪೀಡಿಸಿದ್ದೇ ಆದರೆ ಅಸ್ತ್ರವನ್ನು ಪ್ರಯೋಗಿಸಿದವನೇ ಪೀಡೆಗೊಳಗಾಗುತ್ತಾನೆ.” ಆಗ ನನ್ನ ತಂದೆಯು ಅದನ್ನು ಸ್ವೀಕರಿಸಿದನು. ಪ್ರಭುವು ಮತ್ತೆ ಹೇಳಿದನು: “ನೀನು ಅನೇಕ ದಿವ್ಯಾಸ್ತ್ರಗಳ ಮಳೆಗಳನ್ನು ಸುರಿಸುವೆ! ಈ ಅಸ್ತ್ರವನ್ನು ಹೊಂದಿರುವುದರಿಂದ ನೀನು ಸಂಗ್ರಾಮದಲ್ಲಿ ತೇಜಸ್ಸಿನಿಂದ ಪ್ರಜ್ವಲಿಸುತ್ತೀಯೆ!” ಹೀಗೆ ಹೇಳಿ ಆ ಭಗವಾನ್ ಪ್ರಭುವು ದಿವಕ್ಕೆ ತೆರಳಿದನು.

“ಇಗೋ ಇದು ನನ್ನ ಬಂಧುವಿನಿಂದ ಪಡೆದ ಆ ನಾರಾಯಣಾಸ್ತ್ರವು. ಶಚೀಪತಿಯು ಅಸುರರನ್ನು ಹೇಗೋ ಹಾಗೆ ಇದರಿಂದ ರಣದಲ್ಲಿ ನಾನು ಪಾಂಡವರನ್ನೂ, ಪಾಂಚಾಲರನ್ನೂ, ಮತ್ಸ್ಯ-ಕೇಕಯರನ್ನೂ ಓಡಿಸುತ್ತೇನೆ. ನನ್ನ ಶರಗಳು ಹೇಗೆ ಹೋಗಬೇಕೆಂದು ಇಚ್ಛಿಸುವೆನೋ ಹಾಗೆ ಅವು ಪರಾಕ್ರಮಿ ಶತ್ರುಗಳ ಮೇಲೆ ಬೀಳುವವು! ನಾನು ರಣದಲ್ಲಿ ನಿಂತು ಯಥೇಚ್ಛವಾದ ಕಲ್ಲಿನ ಮಳೆಗರೆಯುತ್ತೇನೆ. ಲೋಹದ ಕೊಕ್ಕೊಳ್ಳ ಪಕ್ಷಿಗಳಿಂದ ಮಹಾರಥರನ್ನು ಪಲಾಯನಗೊಳಿಸುತ್ತೇನೆ. ವಿವಿಧ ಪರಶುಗಳನ್ನೂ ಸುರಿಸುತ್ತೇನೆ. ಇದರಲ್ಲಿ ಸಂಶಯವಿಲ್ಲದಿರಲಿ! ಹೀಗೆ ನಾನು ಮಹಾ ನಾರಾಯಣಾಸ್ತ್ರದಿಂದ ಪಾಂಡವರನ್ನು ವ್ಯರ್ಥಗೊಳಿಸಿ ಶತ್ರುಗಳನ್ನು ಧ್ವಂಸಮಾಡುತ್ತೇನೆ. ಮಿತ್ರ, ಬ್ರಾಹ್ಮಣ ಮತ್ತು ಗುರು-ದ್ವೇಷಿಯಾದ ನೀಚ, ಅತಿನಿಂದ್ಯ, ಪಾಂಚಾಲಕುಲಕಳಂಕ ಆ ಧೃಷ್ಟದ್ಯುಮ್ನನನ್ನು ಜೀವದಿಂದ ಮೋಕ್ಷಗೊಳಿಸುತ್ತೇನೆ.”

ದ್ರೋಣಪುತ್ರನ ಆ ಮಾತನ್ನು ಕೇಳಿ ಸೇನೆಯು ಹಿಂದಿರುಗಿತು. ಆಗ ಎಲ್ಲ ಪುರುಷಸತ್ತಮರೂ ಮಹಾಶಂಖಗಳನ್ನೂದಿದರು. ಹೃಷ್ಟರಾಗಿ ಸಹಸ್ರಾರು ಭೇರಿ-ಡಿಂಡಿಮಗಳನ್ನು ಬಾರಿಸಿದರು. ಕುದುರೆಗಳ ಗೊರಸುಗಳಿಂದಲೂ ರಥಚಕ್ರಗಳ ಸಂಚಲನದಿಂದಲೂ ವಸುಧೆಯು ಪೀಡಿತಳಾದಳು. ಆ ತುಮುಲ ಶಬ್ಧವು ಆಕಾಶ, ಸ್ವರ್ಗ ಮತ್ತು ಪೃಥ್ವಿಯಲ್ಲಿ ಮೊಳಗಿತು. ಮೇಘಗರ್ಜನೆಗೆ ಸಮಾನ ಆ ಶಬ್ಧವನ್ನು ಕೇಳಿ ಪಾಂಡವರು ರಥಶ್ರೇಷ್ಠರೊಡನೆ ಕಲೆತು ಒಟ್ಟಿಗೇ ಮಂತ್ರಾಲೋಚನೆಗೆ ತೊಡಗಿದರು. ಹಾಗೆ ಹೇಳಿ ದ್ರೋಣಪುತ್ರನೂ ಕೂಡ ನೀರನ್ನು ಮುಟ್ಟಿ ಆ ದಿವ್ಯ ನಾರಾಯಣಾಸ್ತ್ರವನ್ನು ಪ್ರಕಟಿಸಿದನು.

ನಾರಾಯಣಾಸ್ತ್ರವು ಪ್ರಾದುರ್ಭೂತವಾಗಲು ತುಂತುರುಹನಿಗಳೊಂದಿಗೆ ಗಾಳಿಯು ಬೀಸತೊಡಗಿತು. ಮೋಡಗಳಿಲ್ಲದ ಆಕಾಶವು ಗರ್ಜಿಸಿತು. ಭೂಮಿಯು ನಡುಗಿತು. ಮಹಾಸಾಗರವು ಅಲ್ಲೋಲಕಲ್ಲೋಲಗೊಂಡಿತು. ಸಮುದ್ರಗಾಮಿ ಮುಖ್ಯನದಿಗಳು ಹಿಂದಕ್ಕೆ ಹರಿಯತೊಡಗಿದವು. ಪರ್ವತಗಳಿಂದ ಶಿಖರಗಳು ಬಿರಿಬಿಟ್ಟವು. ಮೃಗಗಳು ಪಾಂಡುಪುತ್ರರನ್ನು ಅಪ್ರದಕ್ಷಿಣವಾಗಿ ಸುತ್ತತೊಡಗಿದವು. ಎಲ್ಲ ಕಡೆಗಳಲ್ಲಿಯೂ ಕತ್ತಲೆಯು ಆವರಿಸಿತು. ಸೂರ್ಯನು ಮಾಲಿನ್ಯಹೊಂದಿದನು. ಮಾಂಸಾಹಾರೀ ಪಕ್ಷಿಗಳು ಸಂತೋಷದಿಂದ ಹಾರಾಡತೊಡಗಿದವು. ದೇವದಾನವಗಂಧರ್ವರು ಅಸ್ವಸ್ತರಾದರು. ಆ ತೀವ್ರತೆಗಳನ್ನು ನೋಡಿ ಇದು ಹೇಗಾಯಿತು? ಮುಂದೆ ಏನಾಗುತ್ತದೆ? ಎಂದು ಪಾಂಡವರು ಮಹಾವ್ಯಾಕುಲಕ್ಕೊಳಗಾದರು. ದ್ರೌಣಿಯ ಆ ಘೋರರೂಪದ ಭಯಾವಹ ಅಸ್ತ್ರವನ್ನು ನೋಡಿ ಸರ್ವರಾಜರೂ ವಿಚೇತಸರಾಗಿ ವ್ಯಥಿತರಾದರು.

ದ್ರೋಣನ ವಧೆಯ ಕುರಿತು ಪಾಂಡವ ಮಹಾರಥರಲ್ಲಿ ವಾಗ್ಯುದ್ಧ

ಯುಧಿಷ್ಠಿರನು ಸ್ವಲ್ಪ ಹೊತ್ತಿನ ಮೊದಲೇ ಧಾರ್ತರಾಷ್ಟ್ರರು ಓಡಿ ಹೋಗುತ್ತಿದ್ದುದನ್ನು ನೋಡಿದ್ದನು. ಆದರೆ ಪುನಃ ತುಮುಲಶಬ್ಧವನ್ನು ಕೇಳಿ ಅರ್ಜುನನನ್ನು ಪ್ರಶ್ನಿಸಿದನು: “ವಜ್ರಹಸ್ತನಿಂದ ಮಹಾಸುರ ವೃತ್ರನು ಹೇಗೆ ಹತನಾದನೋ ಹಾಗೆ ಯುದ್ಧದಲ್ಲಿ ಆಚಾರ್ಯ ದ್ರೋಣನು ಧೃಷ್ಟದ್ಯುಮ್ನನಿಂದ ಹತನಾಗಿದ್ದಾನೆ. ವಿಜಯದ ಆಸೆಯನ್ನೇ ತೊರೆದು ತಮ್ಮನ್ನು ಉಳಿಸಿಕೊಳ್ಳಲು ನಿರ್ಧರಿಸಿ ದೀನಾತ್ಮ ಕುರುಗಳು ಪಲಾಯನಮಾಡಿದ್ದರು. ಪಾರ್ಷ್ಣಿ ಸಾರಥಿಗಳು ಹತರಾಗಲು ಮತ್ತು ಮೂಕಿಗಳು ಸೀಳಿಹೋಗಿರಲು ಕೆಲವು ಪಾರ್ಥಿವರು ಭ್ರಾಂತರಾಗಿ ತಕ್ಷಣವೇ ರಥಗಳಲ್ಲಿ ಪತಾಕ-ಧ್ವಜ-ಚತ್ರಗಳಿಲ್ಲದೇ ರಥಗಳಲ್ಲಿ ಓಡಿ ಹೋಗುತ್ತಿದ್ದರು. ಇನ್ನು ಕೆಲವರು ರಥದ ಆಸನಗಳು ಭಗ್ನವಾಗಿಹೋಗಿದುದರಿಂದ, ಕುದುರೆಗಳು ವ್ಯಾಕುಲಗೊಂಡು ವಿಚೇತನಗೊಂಡಿದ್ದುದರಿಂದ ಭೀತರಾಗಿ ತಾವೇ ಕಾಲುಗಳಿಂದ ಕುದುರೆಗಳನ್ನು ತಿವಿದುಕೊಳ್ಳುತ್ತಾ ಓಡಿಹೋಗುತ್ತಿದ್ದರು. ಇನ್ನು ಕೆಲವರು ನಾರಾಚಗಳಿಂದ ಆಸನಹೀನರಾಗಿ ಆನೆಗಳ ಭುಜಗಳ ಮೇಲಿಂದ ನೇತಾಡುತ್ತಾ ಭಯಾತುರರಾಗಿ ಓಡಿಹೋಗುತ್ತಿದ್ದರು. ಬಾಣಗಳಿಂದ ಗಾಯಗೊಂಡ ಮತ್ತು ಮಾವಟಿಗರಿಲ್ಲದ ಕೆಲವು ಆನೆಗಳು ಯೋಧರನ್ನೆಳೆದುಕೊಂಡು ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದವು. ಮತ್ತೆ ಕೆಲವರು ಕವಚ-ಆಯುಧಗಳನ್ನು ಕಳಚಿಕೊಂಡು ವಾಹನಗಳಿಂದ ಕುಸಿದು ನೆಲದಮೇಲೆ ಬಿದ್ದಿದ್ದವರು ರಥದಗಾಲಿಗಳಿಂದ ಮತ್ತು ಆನೆ-ಕುದುರೆಗಳಿಂದ ತುಳಿಯಲ್ಪಟ್ಟು ಕತ್ತರಿಸಲ್ಪಟ್ಟಿದ್ದರು. ಮತ್ತೆ ಕೆಲವರು ಹಾ ಪುತ್ರಕ! ಹಾ ತಾತ! ಎಂದು ಭಯದಿಂದ ಕೂಗಿಕೊಳ್ಳುತ್ತಾ ಪಲಾಯನಗೈಯುತ್ತಿದ್ದರು. ಸಂಕಟದಿಂದ ನಿರುತ್ಸಾಹಿಗಳಾಗಿದ್ದ ಅವರು ಅನ್ಯೋನ್ಯರನ್ನು ಗುರುತಿಸುತ್ತಿರಲಿಲ್ಲ. ಮತ್ತೆ ಕೆಲವರು ಗಾಢವಾಗಿ ಗಾಯಗೊಂಡಿದ್ದ ಮಕ್ಕಳನ್ನೋ, ತಂದೆಯನ್ನೋ, ಸ್ನೇಹಿತರನ್ನೋ, ಸಹೋದರರನ್ನೋ ತೊಡೆಯಮೇಲಿರಿಸಿಕೊಂಡು ಕವಚಗಳನ್ನು ಕಳಚಿ ನೀರಿನಿಂದ ಉಪಚರಿಸುತ್ತಿದ್ದರು. ದ್ರೋಣನು ಹತನಾದಾಗ ಈ ರೀತಿಯ ಅವಸ್ಥೆಯನ್ನು ಹೊಂದಿ ಓಡಿ ಹೋಗುತ್ತಿದ್ದ ಅವರ ಸೇನೆಯನ್ನು ಪುನಃ ಯಾರು ಕರೆದುಕೊಂಡು ಬಂದಿದ್ದಾರೆ? ಇದರ ಕುರಿತು ನಿನಗೇನಾದರೂ ತಿಳಿದಿದ್ದರೆ ಹೇಳು! ಕುದುರೆಗಳ ಹೇಂಕಾರವೂ, ಆನೆಗಳ ಘೀಂಕಾರವೂ, ರಥಚಕ್ರಗಳ ಧ್ವನಿಯೂ ಮಿಶ್ರಿತವಾಗಿ ಜೋರಾಗಿ ಕೇಳಿಬರುತ್ತಿದೆ! ಕುರುಸೇನೆಯ ಮಹಾಸಾಗರದಲ್ಲಿ ಉತ್ಪನ್ನವಾದ ಈ ಶಬ್ಧವು ಕ್ಷಣ ಕ್ಷಣವೂ ತೀವ್ರವಾಗುತ್ತಿದೆ. ಪುನಃ ಪುನಃ ಕೇಳಿಬರುತ್ತಿರುವ ಈ ಶಬ್ಧವು ನಮ್ಮವರನ್ನು ನಡುಗಿಸುತ್ತಿದೆ. ರೋಮಾಂಚಕಾರಿಯಾಗಿ ಕೇಳಿಬರುತ್ತಿರುವ ಈ ತುಮುಲ ಶಬ್ಧವು ಇಂದ್ರನನ್ನೂ ಕೂಡಿ ಈ ಮೂರು ಲೋಕಗಳನ್ನೂ ನುಂಗಿಬಿಡುತ್ತದೆಯೋ ಎಂದು ನನಗನ್ನಿಸುತ್ತಿದೆ. ಈ ನಿನಾದವು ದ್ರೋಣನು ಹತನಾಗಲು ಕೌರವರ ಸಹಾಯಾರ್ಥವಾಗಿ ಬರುತ್ತಿರುವ ವಜ್ರಧರ ವಾಸವನ ಭೈರವಧ್ವನಿಯಾಗಿರಬಹುದು ಎಂದು ನನಗೆ ಅನ್ನಿಸುತ್ತಿದೆ. ಅಲ್ಲಿಯ ಆ ಸುಭೀಷಣ ಜೋರಾಗಿರುವ ನಾದವನ್ನು ಕೇಳಿ ಸಂವಿಗ್ನರಾದ ನಮ್ಮ ಮಹಾರಥರ ಮತ್ತು ಆನೆಗಳ ರೋಮಗಳು ನಿಮಿರಿನಿಂತಿವೆ! ಚದುರಿಹೋಗಿದ್ದ ಸೇನೆಗಳನ್ನು ಒಂದುಗೂಡಿಸಿ ಯುದ್ಧಕ್ಕಾಗಿ ದೇವೇಶ್ವರನಂತೆ ಬರುತ್ತಿರುವ ಕೌರವರ ಈ ಮಹಾರಥನ್ಯಾರು?”

ಅರ್ಜುನನು ಹೇಳಿದನು: “ರಾಜನ್! ಶಸ್ತ್ರಸಂನ್ಯಾಸಮಾಡಿದ ಗುರುವು ಹತನಾದ ನಂತರ ಧಾರ್ತರಾಷ್ಟ್ರರನ್ನು ಪುನಃ ಒಂದುಗೂಡಿಸಿ ಗರ್ಜಿಸುತ್ತಿರುವವನ್ಯಾರೆಂದು, ಯಾರ ವೀರ್ಯವನ್ನು ಉಪಾಶ್ರಯಿಸಿ ತಮ್ಮನ್ನು ಈ ಉಗ್ರ ಕರ್ಮಕ್ಕೆ ಧೈರ್ಯವನ್ನು ತಳೆದು ಮೇಲೇರಿಸಿಕೊಂಡು ಕೌರವರು ಶಂಖಗಳನ್ನು ಊದುತ್ತಿರುವವರು ಎಂದು ನಿನಗೆ ಸಂಶಯವಾಗುತ್ತಿದೆಯಲ್ಲವೇ? ಮದಿಸಿದ ಅನೆಯ ನಡುಗೆಯುಳ್ಳ, ಕುರುಗಳಿಗೆ ಅಭಯಂಕರನಾದ, ಹ್ರೀಮಂತನಾದ ಆ ಉಗ್ರಕರ್ಮಿ ಮಹಾಬಾಹುವು ಯಾರೆಂದು ನಿನಗೆ ಹೇಳುತ್ತೇನೆ. ಕೇಳು! ಯಾರು ಹುಟ್ಟಿದೊಡನೆಯೇ ದ್ರೋಣನು ಒಂದುಸಾವಿರ ಗೋವುಗಳನ್ನು ಯೋಗ್ಯ ಬ್ರಾಹ್ಮಣರಿಗೆ ದಾನಮಾಡಿದನೋ ಆ ಅಶ್ವತ್ಥಾಮನೇ ಹೀಗೆ ಗರ್ಜಿಸುತ್ತಿದ್ದಾನೆ! ಹುಟ್ಟಿದೊಡನೆಯ ಯಾವ ವೀರನು ಉಚ್ಛೈಃಶ್ರವದಂತೆ ಹೇಷಾರವ ಮಾಡಿ ಭೂಮಿಯನ್ನೂ ಮೂರು ಲೋಕಗಳನ್ನು ಕಂಪಿಸಿದನೋ, ಯಾರ ಹೇಷಾರವವನ್ನು ಕೇಳಿ ಅಂತರ್ಹಿತ ಭೂತಗಳು ಅವನಿಗೆ ಅಶ್ವತ್ಥಾಮ ಎಂಬ ಹೆಸರನ್ನಿಟ್ಟರೋ ಆ ಶೂರನೇ ಇಂದು ಗರ್ಜಿಸುತ್ತಿದ್ದಾನೆ! ಯಾರನ್ನು ಅನಾಥನಂತೆ ಅತ್ಯಂತಕ್ರೂರ ಕರ್ಮದಿಂದ ಪಾರ್ಷತನು ಆಕ್ರಮಣಿಸಿ ಸಂಹರಿಸಿದನೋ ಅವನ ನಾಥನೇ ಈಗ ರಣಾಂಗಣದಲ್ಲಿ ಉಪಸ್ಥಿತನಾಗಿದ್ದಾನೆ. ತನ್ನ ಪೌರುಷವು ಎಷ್ಟಿರುವುದೆಂದು ತಿಳಿದಿರುವ ದ್ರೌಣಿಯು ನನ್ನ ಗುರುವಿನ ಮುಡಿಯನ್ನು ಹಿಡಿದು ಕೊಂದಿರುವವನನ್ನು ಖಂಡಿತವಾಗಿಯೂ ಕ್ಷಮಿಸುವುದಿಲ್ಲ!

“ಧರ್ಮಜ್ಞನಾಗಿದ್ದರೂ ಸತ್ಪುರುಷನಾಗಿದ್ದರೂ ರಾಜ್ಯದ ಕಾರಣದಿಂದ ನೀನು ಗುರುವಿಗೆ ಸುಳ್ಳನ್ನು ಹೇಳಿ ಮೋಸಗೊಳಿಸಿ ಮಹಾ ಅಧರ್ಮವನ್ನು ಮಾಡಿರುವೆ! “ಈ ಪಾಂಡವನು ಸರ್ವಧರ್ಮೋಪಪನ್ನನು. ನನ್ನ ಶಿಷ್ಯನೂ ಕೂಡ. ಇವನು ಸುಳ್ಳು ಹೇಳುವುದಿಲ್ಲ” ಎಂಬ ದೃಢವಿಶ್ವಾಸವನ್ನು ಅವನು ನಿನ್ನಲ್ಲಿಟ್ಟಿದ್ದನು. ಆದರೆ ನೀನು ಸತ್ಯವೆಂಬ ಅಂಗಿಯನ್ನು ತೊಟ್ಟು ಅಶ್ವತ್ಥಾಮನ ಹೆಸರಿನವನು ಹತನಾದನೆಂಬ ಸುಳ್ಳನ್ನು ಆಚಾರ್ಯನಿಗೆ ಹೇಳಿ ಅನಂತರ ಕುಂಜರ ಎಂದು ಹೇಳಿದೆ! ಆಗ ಅವನು ಶಸ್ತ್ರವನ್ನು ಬಿಸುಟು ಮಮಕಾರವನ್ನು ತೊರೆದು ಬುದ್ದಿಗೆಟ್ಟವನಾಗಿ ಅತ್ಯಂತ ವಿಹ್ವಲನಾದುದನ್ನು ನೀನೂ ನೋಡಿದೆ! ಹಾಗೆ ಶೋಕಾವಿಷ್ಟನಾಗಿ ಯುದ್ಧದಿಂದ ವಿಮುಖನಾಗಿದ್ದ ಆ ಪುತ್ರವತ್ಸಲ ಗುರುವು ಶಾಶ್ವತ ಧರ್ಮವನ್ನು ಬಿಸುಟ ಶಿಷ್ಯನಿಂದ ಘಾತಿತನಾದನು! ಶಸ್ತ್ರಗಳನ್ನು ಕೆಳಗಿಟ್ಟ ಗುರುವನ್ನು ಅಧರ್ಮದಿಂದ ಕೊಲ್ಲಿಸಿದ ನೀನು ಶಕ್ಯನಾದರೆ ಅಮಾತ್ಯರೊಂದಿಗೆ ಈ ಪಾರ್ಷತನನ್ನು ರಕ್ಷಿಸು! ತಂದೆಯನ್ನು ಕಳೆದುಕೊಂಡು ಕ್ರುದ್ಧನಾಗಿರುವ ಆಚಾರ್ಯಪುತ್ರನಿಂದ ಗ್ರಸ್ತನಾಗಿರುವ ಪಾರ್ಷತನನ್ನು ಇಂದು ನಾವೆಲ್ಲ ಸೇರಿದರೂ ರಕ್ಷಿಸಲು ಶಕ್ಯರಾಗಿರಲಿಕ್ಕಿಲ್ಲ. ಇರುವ ಎಲ್ಲವುಗಳೊಡನೆ ಸೌಹಾರ್ದತೆಯಿಂದಿರುವ ಅಶ್ವತ್ಥಾಮನು ತನ್ನ ತಂದೆಯ ಮುಡಿಯನ್ನು ಹಿಡಿಯಲಾಯಿತು ಎಂದು ಕೇಳಿ ನಮ್ಮನ್ನು ರಣದಲ್ಲಿ ಇಂದು ಸುಡಲಿದ್ದಾನೆ. ಆಚಾರ್ಯನನ್ನು ಉಳಿಸಬೇಕೆಂಬ ಆಸೆಯಿಂದ ನಾನು ತುಂಬಾ ಕೂಗಿಕೊಳ್ಳುತ್ತಿದ್ದರೂ ನನ್ನ ಗುರುವು ಸ್ವಧರ್ಮವನ್ನು ತೊರೆದ ಶಿಷ್ಯನಿಂದ ಹತನಾಗಿಬಿಟ್ಟನು! ನಮ್ಮ ಆಯುಷ್ಯದಲ್ಲಿ ಬಹುಭಾಗವು ಕಳೆದುಹೋಗಿದೆ. ಸ್ವಲ್ಪವೇ ಉಳಿದುಕೊಂಡಿದೆ. ಈ ಸಮಯದಲ್ಲಿ ನಾವು ಮಹಾ ಅಧರ್ಮವನ್ನು ಮಾಡಿದ್ದೇವೆ, ಮತ್ತು ಉಳಿದ ಆಯುಷ್ಯವನ್ನು ಕಳಂಕಿತಗೊಳಿಸಿದ್ದೇವೆ. ನಿತ್ಯವೂ ತಂದೆಯಂತೆ ಸೌಹಾರ್ದದಿಂದಿದ್ದ, ಧರ್ಮದಲ್ಲಿ ತಂದೆಯಂತಿದ್ದ ಗುರುವನ್ನು ನಾವು ಅಲ್ಪಕಾಲದ ರಾಜ್ಯ ಕಾರಣದಿಂದಾಗಿ ಸಂಹರಿಸಿದೆವು! ತತ್ಪರರಾಗಿದ್ದ ಭೀಷ್ಮ-ದ್ರೋಣರಿಗೆ ಧೃತರಾಷ್ಟ್ರನು ತನ್ನ ಪುತ್ರರೊಂದಿಗೆ ಸರ್ವ ಪೃಥ್ವಿಯನ್ನೂ ಒಪ್ಪಿಸಿಬಿಟ್ಟಿದ್ದನು. ಆ ವೃತ್ತಿಯನ್ನು ಪಡೆದು ಶತ್ರುಗಳಿಂದಲೂ ಸತತವಾಗಿ ಸತ್ಕೃತನಾಗಿದ್ದ ಆ ಗುರುವು ನನ್ನನ್ನು ತನ್ನ ಮಗನಿಗಿಂತಲೂ ಅಧಿಕವಾಗಿ ಸ್ವೀಕರಿಸಿದ್ದನು. ನಿನ್ನ ಮಾತಿನಿಂದ ದುಃಖಿತನಾದ ಅವನು ಯುದ್ಧದಲ್ಲಿ ಅಸ್ತ್ರವನ್ನು ತ್ಯಜಿಸಿ ಹತನಾದನು. ಯುದ್ಧಮಾಡುತ್ತಿರುವ ಅವನನ್ನು ಶತಕ್ರತುವು ಕೂಡ ಸಂಹರಿಸಲಾರನಾಗಿದ್ದನು. ನಿತ್ಯೋಪಕಾರಿಯಾಗಿದ್ದ ವೃದ್ಧ ಆಚಾರ್ಯನಿಗೆ ದ್ರೋಹವೆಸಗಿ ರಾಜ್ಯಕ್ಕಾಗಿ ಸಣ್ಣಬುದ್ಧಿಯವರಾದ ನಾವು ಅನಾರ್ಯರಂತೆ ಸಂಹರಿಸಿದೆವು! ನನ್ನ ಮೇಲಿನ ಪ್ರೇಮದಿಂದ ಗುರುವು “ಈ ವಾಸವಿಯು ಪುತ್ರನು ನನಗಾಗಿ ಸಹೋದರರು, ತಂದೆ, ಮತ್ತು ಜೀವ ಎಲ್ಲವನ್ನೂ ತ್ಯಜಿಸಬಲ್ಲನು” ಎಂದು ತಿಳಿದಿದ್ದನು. ರಾಜ್ಯದ ಆಸೆಯಿಂದ ಸಂಹರಿಸಲ್ಪಡುತ್ತಿದ್ದರೂ ನಾನು ಉಪೇಕ್ಷೆಯಿಂದಿದ್ದುಬಿಟ್ಟೆನು. ಅದರಿಂದಾಗಿ ನಾನು ತಲೆತಗ್ಗಿಸಿ ನರಕವನ್ನು ಅನುಭವಿಸುತ್ತಿದ್ದೇನೆ. ಬ್ರಾಹ್ಮಣನಾದ, ವೃದ್ಧನಾದ, ಆಚಾರ್ಯನಾದ, ಶಸ್ತ್ರವನ್ನು ತ್ಯಜಿಸಿದ್ದ ಮುನಿಯನ್ನು ರಾಜ್ಯಾರ್ಥವಾಗಿ ಸಂಹರಿಸಿದ ನನಗೆ ಸಾವೇ ಶ್ರೇಯಸ್ಸೆನಿಸುತ್ತದೆ. ಜೀವಿತವಾಗಿರುವುದಲ್ಲ!”

ಅರ್ಜುನನ ಆ ಮಾತನ್ನು ಕೇಳಿ ಮಹಾರಥರು ಯಾರೂ ಧನಂಜಯನಿಗೆ ಅಪ್ರಿಯವಾದ ಅಥವಾ ಪ್ರಿಯವಾದ ಏನನ್ನೂ ಹೇಳಲಿಲ್ಲ. ಆಗ ಕ್ರುದ್ಧ ಮಹಾಬಾಹು ಭೀಮಸೇನನು ಅರ್ಜುನನನ್ನು ಬೈಯುತ್ತಿರುವನೋ ಎನ್ನುವಂತೆ ಹೇಳಿದನು: “ಪಾರ್ಥ! ಅರಣ್ಯವನ್ನು ಸೇರಿರುವ ಧರ್ಮಸಂಹಿತ ಮುನಿಯಂತೆ ಮತ್ತು ದಂಡವನ್ನು ತೊರೆದ ಸಂಶಿತವ್ರತ ಬ್ರಾಹ್ಮಣನಂತೆ ಮಾತನಾಡುತ್ತಿರುವೆ! ಸಂಕಟದಲ್ಲಿರುವ ತನ್ನನ್ನೂ ಸಂಕಟದಲ್ಲಿರುವವರನ್ನೂ ರಕ್ಷಿಸುವ, ಸ್ತ್ರೀಯರು ಮತ್ತು ಸಾಧುಗಳ ವಿಷಯದಲ್ಲಿ ಕ್ಷಮಾಭಾವದಿಂದಿರುವ ಕ್ಷತ್ರಿಯನು ಬೇಗನೆ ಭೂಮಿಯನ್ನೂ, ಧರ್ಮವನ್ನೂ, ಯಶಸ್ಸನ್ನೂ, ಸಂಪತ್ತನ್ನೂ ಪಡೆಯುತ್ತಾನೆ. ನೀನಾದರೋ ಕ್ಷತ್ರಿಯರ ಎಲ್ಲ ಗುಣಗಳಿಂದ ಕೂಡಿರುವೆ. ಕುಲೋದ್ಧಾರಕನಾಗಿರುವೆ. ಆದರೆ ಮೂರ್ಖನಂತೆ ಇಂದು ನೀನಾಡುವ ಈ ಮಾತು ನಿನಗೆ ಶೋಭಿಸುವುದಿಲ್ಲ. ನಿನ್ನ ಪರಾಕ್ರಮವು ಶಚೀಪತಿ ಶಕ್ರನ ಪರಾಕ್ರಮದಂತಿದೆ. ಮಹಾಸಾಗರವು ತೀರವನ್ನು ಅತಿಕ್ರಮಿಸದಂತೆ ನೀನು ಧರ್ಮವನ್ನು ಅತಿಕ್ರಮಿಸುವವನಲ್ಲ. ಹದಿಮೂರುವರ್ಷಗಳ ಕೋಪವನ್ನು ಹಿಂದೆ ಸರಿಸಿ ಧರ್ಮವನ್ನೇ ಬಯಸಿರುವ ನಿನ್ನನ್ನು ಇಂದು ಯಾರು ತಾನೇ ಗೌರವಿಸುವುದಿಲ್ಲ? ಅದೃಷ್ಟವಶಾತ್ ನಿನ್ನ ಮನಸ್ಸು ಇಂದು ಸ್ವಧರ್ಮವನ್ನು ಅನುಸರಿಸಿದೆ. ಅದೃಷ್ಟವಶಾತ್ ನಿನ್ನ ಬುದ್ಧಿಯು ಸತತವೂ ದಯಾಪೂರ್ಣವಾಗಿದೆ. ಆದರೂ ಧರ್ಮಪ್ರವೃತ್ತನಾಗಿದ್ದವನ ರಾಜ್ಯವನ್ನು ಅಧರ್ಮದಿಂದ ಅಪಹರಿಸಲಾಯಿತು. ಶತ್ರುಗಳು ದ್ರೌಪದಿಯನ್ನು ಸಭೆಗೆ ಎಳೆದುತಂದು ಅಪಮಾನಿಸಿದರು. ಅನರ್ಹರಾಗಿದ್ದರೂ ನಮ್ಮನ್ನು ಪರಿವ್ರಾಜಕರಂತೆ ವಲ್ಕಲಜಿನಗಳನ್ನುಟ್ಟು ಹದಿಮೂರು ವರ್ಷ ವನದಲ್ಲಿರುವಂತೆ ಮಾಡಿದರು. ಇವೆಲ್ಲವೂ ಕೋಪಗೊಳ್ಳತಕ್ಕ ಸಂದರ್ಭಗಳಾಗಿದ್ದರೂ ಕೋಪಗೊಳ್ಳದೇ ಕ್ಷತ್ರಧರ್ಮವನ್ನು ಅನುಸರಿಸುತ್ತಿದ್ದ ನೀನು ಎಲ್ಲವನ್ನೂ ಅನುಸರಿಸಿದೆ. ಆ ಅಧರ್ಮಿಗಳನ್ನು ರಾಜ್ಯಕಳ್ಳರನ್ನು ಕ್ಷುದ್ರರನ್ನು ಅನುಯಾಯಿಗಳೊಂದಿಗೆ ಸಂಹರಿಸುತ್ತೇನೆ ಎಂದು ನೀನು ಹೇಳಿದುದರಿಂದ ನಾವು ಯುದ್ಧಕ್ಕಾಗಿ ಬಂದಿದ್ದೇವೆ. ಯಥಾಶಕ್ತಿಯಾಗಿ ನಾವು ಪರಿಶ್ರಮ ಪಡುತ್ತಿರುವಾಗ ಇಂದು ನೀನು ಯುದ್ಧದಿಂದ ಜಿಗುಪ್ಸಿತನಾದಂತಿದೆ! ನೀನು ಸ್ವಧರ್ಮವನ್ನು ತಿಳಿಯಲು ಇಚ್ಛಿಸುತ್ತಿಲ್ಲ. ನಿನ್ನ ಮಾತುಗಳು ಸುಳ್ಳು. ಭಯಾರ್ದಿತರಾದ ನಮ್ಮ ಮರ್ಮಗಳನ್ನು ನಿನ್ನ ಮಾತುಗಳು ಕತ್ತರಿಸುತ್ತಿವೆ. ಗಾಯಗೊಂಡವರ ಗಾಯದಮೇಲೆ ಉಪ್ಪುಚೆಲ್ಲುವಂತೆ ನಿನ್ನ ಮಾತಿನ ಬಾಣಗಳು ನನ್ನ ಹೃದಯವನ್ನು ಸೀಳುತ್ತಿವೆ. ಪ್ರಶಂಸೆಗೆ ಅರ್ಹರಾದ ನಿನ್ನನ್ನು ಮತ್ತು ನಮ್ಮನ್ನು ಪ್ರಶಂಸಿಸದೇ ಇರುವುದು ಅತ್ಯಂತ ಅಧರ್ಮವೆಂದು ಧಾರ್ಮಿಕನಾದ ನಿನಗೂ ತಿಳಿಯುತ್ತಿಲ್ಲವಲ್ಲ! ನಿನ್ನ ಹದಿನಾರರಲ್ಲಿ ಒಂದು ಅಂಶಕ್ಕೂ ಸಮನಾಗಿರದ ಪ್ರಶಂಸೆಗೆ ಅರ್ಹರಲ್ಲದವರನ್ನು ನೀನು ಪ್ರಶಂಸಿಸುತ್ತಿರುವೆ! ಸ್ವಯಂ ತಾನೇ ತನ್ನ ಕುರಿತು ಹೇಳಿಕೊಳ್ಳುವುದು ಮತ್ತು ಗುಣಸ್ತುತಿಮಾಡಿಕೊಳ್ಳುವುದು ಸರಿಯಲ್ಲ. ಆದರೂ ಕ್ರೋಧದಿಂದ ನಾನು ಈ ಭೂಮಿಯನ್ನು ಸೀಳಿಬಿಡಬಲ್ಲೆ. ಪರ್ವತಗಳನ್ನು ಪುಡಿಪುಡಿಮಾಡಬಲ್ಲೆ. ಭಯಂಕರ ಭಾರದ ಈ ಕಾಂಚನಮಾಲಿನೀ ಗದೆಯನ್ನು ಪ್ರಯೋಗಿಸಿ ಚಂಡಮಾರುತದಂತೆ ಪರ್ವತಗಳಂತಿರುವ ವೃಕ್ಷಗಳನ್ನೂ ಕಡಿದುರುಳಿಸಬಲ್ಲೆ! ನಿನ್ನ ಸಹೋದರನಾದ ನಾನು ಹೀಗಿದ್ದೇನೆಂದು ತಿಳಿದೂ ದ್ರೋಣಪುತ್ರನಿಗೋಸ್ಕರವಾಗಿ ನಮ್ಮಲ್ಲಿ ಭಯವನ್ನುಂಟುಮಾಡುವುದು ನಿನಗೆ ಸರಿಯಲ್ಲ! ಎಲ್ಲ ನರರ್ಷಭರೊಡನೆ ನೀನು ಇಲ್ಲಿಯೇ ನಿಲ್ಲು. ಗದಾಪಾಣಿಯಾಗಿ ನಾನೊಬ್ಬನೇ ಈ ಮಹಾಯುದ್ಧವನ್ನು ಜಯಿಸುತ್ತೇನೆ!”

ಆಗ ಪಾಂಚಾಲರಾಜ ಪುತ್ರನು ಸಂಕ್ರುದ್ಧನಾದ ನರಹರಿಯು ಹಿರಣ್ಯಕಶಿಪುವಿಗೆ ಗರ್ಜಿಸಿ ಹೇಳುವಂತೆ ಹೇಳಿದನು: “ಪಾರ್ಥ! ಯಾಜನ, ಅಧ್ಯಾಪನ, ದಾನ, ಯಜ್ಞ, ಪ್ರತಿಗ್ರಹ, ಮತ್ತು ಅಧ್ಯಯನ  - ಈ ಆರು ವಿಪ್ರನ ಕರ್ಮಗಳೆಂದು ತಿಳಿದವರು ಹೇಳುತ್ತಾರೆ. ಇವುಗಳಲ್ಲಿ ಯಾವುದು ಅವನಲ್ಲಿತ್ತೆಂದು ನೀನು ದ್ರೋಣನನ್ನು ಕೊಂದಿದುದಕ್ಕೆ ನನ್ನನ್ನು ನಿಂದಿಸುತ್ತಿರುವೆ? ಸ್ವಧರ್ಮವನ್ನು ಅತಿಕ್ರಮಿಸಿ ಕ್ಷತ್ರಧರ್ಮವನ್ನು ಅನುಸರಿಸಿ ಆ ಕ್ಷುದ್ಧಕರ್ಮಿಯು ಅಮಾನುಷ ಅಸ್ತ್ರಗಳಿಂದ ನಮ್ಮವರನ್ನು ಸಂಹರಿಸುತ್ತಿದ್ದನು. ಬ್ರಾಹ್ಮಣನೆಂದು ಕರೆಯಿಸಿಕೊಂಡು ಅಸಹ್ಯ ಮಾಯೆಯಿಂದ ನಮ್ಮನ್ನು ಸಂಹರಿಸುತ್ತಿದ್ದ ಅವನನ್ನು ಇಂದು ಮಾಯೆಯಿಂದಲೇ ನಾವು ಸಂಹರಿಸಿದರೆ ಅದರಲ್ಲಿ ಸರಿಯಿಲ್ಲದೇ ಇದ್ದುದು ಯಾವುದಿದೆ? ಹಾಗಿದ್ದ ಅವನನ್ನು ಸಂಹರಿಸಲು ದ್ರೌಣಿಯು ರೋಷದಿಂದ ಭೈರವವಾಗಿ ಕೂಗಿಕೊಳ್ಳುತ್ತಿದ್ದರೆ ಅದರಲ್ಲಿ ನನ್ನದೇನು ಕಳೆದು ಹೋಗುತ್ತದೆ? ಯುದ್ಧದ ನೆಪಮಾಡಿಕೊಂಡು ಕೌರವರನ್ನು ರಕ್ಷಿಸಲಾಗದೇ ದ್ರೌಣಿಯು ಒಂದುವೇಳೆ ಅವರನ್ನೇ ಸಂಹರಿಸಿದರೂ ನನಗೆ ಅದ್ಭುತವೆಂದೆನಿಸುವುದಿಲ್ಲ! ಧಾರ್ಮಿಕನಾಗಿದ್ದುಕೊಂಡು ಯಾವ ನನ್ನನ್ನು ಗುರುಘಾತಿನಿಯೆಂದು ನೀನು ಕರೆಯುತ್ತಿರುವೆಯೋ ಆ ನಾನು ಅದನ್ನು ಮಾಡಲೆಂದೇ ಅಗ್ನಿಯಿಂದ ಪಾಂಚಾಲ್ಯನ ಮಗನಾಗಿ ಉತ್ಪನ್ನನಾಗಿರುವೆ! ರಣದಲ್ಲಿ ಯಾರಿಗೆ ಮಾಡುವಂತಹುದು ಮತ್ತು ಮಾಡಬಾರದಂತಹುದು ಒಂದೇ ಸಮನಾಗಿದ್ದವೋ ಅವನು ಬ್ರಾಹ್ಮಣ ಅಥವಾ ಕ್ಷತ್ರಿಯನೆಂದು ನೀನು ಹೇಗೆ ಹೇಳುವೆ? ಅಸ್ತ್ರಗಳನ್ನು ತಿಳಿಯದವರನ್ನು ಯಾವನು ಕ್ರೋಧಮೂರ್ಚಿತನಾಗಿ ಬ್ರಹ್ಮಾಸ್ತ್ರಗಳಿಂದ ಸಂಹರಿಸುತ್ತಿದ್ದನೋ ಅಂಥವನನ್ನು ಸರ್ವೋಪಾಯಗಳಿಂದ ಏಕೆ ವಧಿಸಬಾರದು? ಧರ್ಮವಿದುಗಳು ತಮಗೆ ವಿಷಸಮರೆಂದು ವಿಧರ್ಮಿಗಳು ಹೇಳುತ್ತಾರೆ. ಅದನ್ನು ತಿಳಿದೂ ನೀನೇಕೆ ನನ್ನನ್ನು ನಿಂದಿಸುತ್ತಿರುವೆ? ಆ ಕ್ರೂರಿಯನ್ನು ನಾನು ರಥವನ್ನೇರಿಯೇ ಕೆಳಗುರುಳಿಸಿದೆನು. ಅಭಿನಂದಿಸಬೇಕಾದ ನನ್ನನ್ನು ಏಕೆ ಅಭಿನಂದಿಸುತ್ತಿಲ್ಲ? ಉರಿಯುತ್ತಿರುವ ಸೂರ್ಯನ ವಿಷದಂತೆ ಭಯಂಕರನಾಗಿದ್ದ ದ್ರೋಣನ ಶಿರವನ್ನು ರಣದಲ್ಲಿ ತುಂಡರಿಸಿದುದನ್ನು ಪ್ರಶಂಸೆಗೆ ಯೋಗ್ಯವಾದರೂ ನೀನು ಏಕೆ ಪ್ರಶಂಸಿಸುತ್ತಿಲ್ಲ? ಅವನಾದರೋ ಯುದ್ಧದಲ್ಲಿ ನನ್ನವರನ್ನು ಮಾತ್ರ ಸಂಹರಿಸುತ್ತಿದ್ದನೇ ಹೊರತು ಬೇರೆ ಯಾರ ಬಾಂಧವರನ್ನೂ ಸಂಹರಿಸುತ್ತಿರಲಿಲ್ಲ. ಅವನ ಶಿರವನ್ನು ಕತ್ತರಿಸಿದರೂ ನನ್ನ ಕ್ರೋಧವು ತಣಿಯುತ್ತಿಲ್ಲ. ಜಯದ್ರಥನ ಶಿರವನ್ನು ಹೇಗೋ ಹಾಗೆ ಅವನ ಶಿರಸ್ಸನ್ನು ಕೂಡ ತಕ್ಷಣವೇ ನಿಷಾದರ ಪ್ರದೇಶದಲ್ಲಿ ಬೀಳುವಂತೆ ನಾನು ಮಾಡಲಿಲ್ಲವೆಂದು ನನ್ನ ಮರ್ಮಸ್ಥಾನಗಳು ಚುಚ್ಚುತ್ತಿವೆ! ಶತ್ರುಗಳನ್ನು ವಧಿಸದೇ ಇರುವುದು ಅಧರ್ಮವೆಂದು ಹೇಳುತ್ತಾರೆ. ಏಕೆಂದರೆ ಕ್ಷತ್ರಿಯನ ಧರ್ಮವೇ ಸಂಹರಿಸುವುದು. ಇನ್ನು ಬೇರೆ ಏನಿದೆ? ನಿನ್ನ ತಂದೆಯ ಸಖನಾದ ಶೂರ ಭಗದತ್ತನು ನಿನ್ನಿಂದ ಹೇಗೆ ಹತನಾದನೋ ಹಾಗೆ ಯುದ್ಧದಲ್ಲಿ ಈ ಶತ್ರುವೂ ಕೂಡ ನನ್ನಿಂದ ಧರ್ಮಪೂರ್ವಕವಾಗಿಯೇ ಹತನಾಗಿದ್ದಾನೆ. ರಣದಲ್ಲಿ ಪಿತಾಮಹನನ್ನು ಸಂಹರಿಸಿ ನಿನ್ನನ್ನು ಧರ್ಮಾತ್ಮನೆಂದು ತಿಳಿದುಕೊಂಡಿರುವ ನೀನು ನನ್ನಿಂದ ಶತ್ರುವು ಹತನಾಗಲು ಹೇಗೆ ಪಾಪವೆಂದೂ, ಧರ್ಮವಲ್ಲವೆಂದೂ ಅಭಿಪ್ರಾಯಪಡುವೆ? ಜ್ಯೇಷ್ಠ ಪಾಂಡವನು ಸುಳ್ಳುಗಾರನಾಗಲಿಲ್ಲ. ಅಥವಾ ನಾನು ಅಧಾರ್ಮಿಕನಾಗಲಿಲ್ಲ. ಪಾಪಿಷ್ಟ ಆ ಶಿಷ್ಯದ್ರೋಹಿಯು ಹತನಾಗಿದ್ದಾನೆ. ಯುದ್ಧಮಾಡು. ವಿಜಯವು ನಿನ್ನದಾಗುತ್ತದೆ!”

ಕ್ರೂರಕರ್ಮಿ ದ್ರುಪದಪುತ್ರನ ಆ ಮಾತನ್ನು ಕೇಳಿ ಎಲ್ಲ ರಾಜರೂ ಸುಮ್ಮನಾಗಿದ್ದರು. ಅರ್ಜುನನಾದರೋ ಕಡೆಗಣ್ಣಿನಿಂದ ಪಾರ್ಷತನನ್ನು ನೋಡಿ ಕಣ್ಣೀರು ತುಂಬಿ ನಿಟ್ಟುಸಿರು ಬಿಡುತ್ತಾ “ಧಿಕ್ಕಾರ! ಧಿಕ್ಕಾರ! ಧಿಕ್ಕಾರ!” ಎಂದು ನುಡಿದನು. ಯುಧಿಷ್ಠಿರ, ಭೀಮ, ಯಮಳರು ಮತ್ತು ಕೃಷ್ಣನೂ ಕೂಡ ತಲೆ ತಗ್ಗಿಸಿ ಕುಳಿತಿರಲು ಸಾತ್ಯಕಿಯು ಹೇಳಿದನು: “ಅಮಂಗಳಕರವಾಗಿ ಮಾತನಾಡುವ ಈ ಪಾಪಪುರುಷ, ನರಾಧಮನನ್ನು ಶೀಘ್ರವಾಗಿ ಕೊಲ್ಲುವ ಪುರುಷನ್ಯಾರೂ ಇಲ್ಲಿ ಇಲ್ಲವೇ? ಕ್ಷುದ್ರ! ಗುರುವನ್ನು ನಿಂದಿಸುವ ನಿನ್ನ ನಾಲಿಗೆ ಮತ್ತು ತಲೆಯು ಏಕೆ ನೂರು ಚೂರುಗಳಾಗಿ ಸೀಳಿಹೋಗುತ್ತಿಲ್ಲ? ಈ ಅಧರ್ಮದಿಂದ ನಿನ್ನ ಪತನವೇಕೆ ಇನ್ನೂ ಆಗಿಲ್ಲ? ಪಾಪಕರ್ಮವನ್ನೆಸಗಿ ಜನಸಂಸದಿಯಲ್ಲಿ ಆತ್ಮಶ್ಲಾಘನೆ ಮಾಡಿಕೊಳ್ಳುತ್ತಿರುವ ನೀನು ಎಲ್ಲ ಅಂಧಕ-ವೃಷ್ಣಿಯರ ಮತ್ತು ಪಾರ್ಥರ ಅವಹೇಳನೆಗೆ ಪಾತ್ರನಾಗಿರುವೆ! ಆ ರೀತಿ ಮಾಡಬಾರದುದನ್ನು ಮಾಡಿ ಪುನಃ ಗುರುವನ್ನು ನಿಂದಿಸುತ್ತಿರುವ ನೀನು ವಧ್ಯನು. ಮುಹೂರ್ತಕಾಲವೂ ನೀನು ಜೀವಿಸಿರುವುದರಲ್ಲಿ ಅರ್ಥವಿಲ್ಲ! ಪುರುಷಾಧಮ! ನೀನಲ್ಲದೇ ಬೇರೆ ಯಾರು ತಾನೇ ಧರ್ಮಾತ್ಮನೂ ಸಾಧುವೂ ಆದ ಗುರುವಿನ ಶಿಖೆಯನ್ನು ಹಿಡಿದು ವಧಿಸಿಯಾನು? ಕುಲಗೇಡಿಯಾದ ನಿನ್ನನ್ನು ಪಡೆದು ನಿನ್ನ ಹಿಂದಿನ ಏಳು ತಲೆಮಾರಿನ ಬಾಂಧವರೂ ಯಶಸ್ಸಿನಿಂದ ಪರಿತ್ಯಕ್ತರಾಗಿ ನರಕಕ್ಕೆ ಬಿದ್ದಿರಬಹುದು. ಭೀಷ್ಮನ ಕುರಿತು ನರರ್ಷಭ ಪಾರ್ಥನಿಗೆ ಹೇಳುತ್ತಿರುವೆಯಲ್ಲವೇ? ಆ ಮಹಾತ್ಮ ಭೀಷ್ಮನು ಸ್ವಯಂ ತಾನೇ ತನ್ನ ಅಂತ್ಯವು ಹೀಗಾಗಬೇಕೆಂದು ನಿರ್ದೇಶಿಸಿರಲಿಲ್ಲವೇ? ಭೀಷ್ಮನನ್ನು ಕೂಡ ನಿನ್ನ ಪಾಪಕಾರಿ ಸಹೋದರನೇ ಸಂಹರಿಸಿದನು! ನೀವಿಬ್ಬರು ಪಾಂಚಾಲಪುತ್ರರ ಹೊರತಾಗಿ ಪಾಪಿಷ್ಟರಾಗಿರುವವರು ಈ ಭುಮಿಯಲ್ಲಿಯೇ ಬೇರೆ ಯಾರಿಲ್ಲ! ಅವನೂ ಕೂಡ ಭೀಷ್ಮನ ಅಂತಕನಾಗಿ ನಿನ್ನ ತಂದೆಯಿಂದ ಉತ್ಪನ್ನನಾಗಿಲ್ಲವೇ? ಆ ಮಹಾತ್ಮನ ಮೃತ್ಯುವಾದ ಶಿಖಂಡಿಯನ್ನು ನಿನ್ನ ತಂದೆಯೇ ರಕ್ಷಿಸಿದನು. ಸಹೋದರ ಶಿಖಂಡಿಯೊಂದಿಗೆ ನಿನ್ನನ್ನು ಪಡೆದ ಪಾಂಚಾಲರು ಅಧರ್ಮಿಗಳೂ, ಕ್ಷುದ್ರರೂ, ಮಿತ್ರ-ಗುರುದ್ರೋಹಿಗಳೆಂದೆನಿಸಿಕೊಂಡು ಸರ್ವ ಸಾಧುಗಳ ಧಿಕ್ಕಾರಕ್ಕೆ ಪಾತ್ರರಾಗಿದ್ದಾರೆ. ಒಂದುವೇಳೆ ಈ ರೀತಿಯ ಮಾತನ್ನು ಪುನಃ ನನ್ನ ಸಮೀಪದಲ್ಲಿ ನೀನು ಹೇಳಿದ್ದೇ ಆದರೆ ವಜ್ರದಂತಿರುವ ಗದೆಯಿಂದ ನಿನ್ನ ಶಿರವನ್ನು ಕೆಳಗುರುಳಿಸುತ್ತೇನೆ!”

ಈ ರೀತಿ ಕ್ರೂರಶಬ್ಧಗಳಿಂದ ಸಾತ್ವತನು ಪಾರ್ಷತನನ್ನು ಆಕ್ಷೇಪಿಸಲು, ಪರಮಕ್ರುದ್ಧನಾದ ಧೃಷ್ಟದ್ಯುಮ್ನನು ನಗುತ್ತಿರುವನೋ ಎನ್ನುವಂತೆ ಹೇಳಿದನು: “ಮಾಧವ! ನಿನ್ನ ಮಾತನ್ನು ಕೇಳುತ್ತಲೇ ಇದ್ದೇನೆ. ಹೇಳಿಕೊಂಡಿರಲೆಂದು ಕ್ಷಮಿಸುತ್ತಲೂ ಇದ್ದೇನೆ. ಆದರೆ ಶುಭ ಸಾಧುಪುರುಷರನ್ನು ಅವಹೇಳನಮಾಡುವುದು ಅನಾರ್ಯವಾದುದು. ಲೋಕದಲ್ಲಿ ಕ್ಷಮೆಗೆ ಪ್ರಾಶಸ್ತ್ಯವಿದೆ. ಆದರೆ ಪಾಪಿಷ್ಟರು ಕ್ಷಮೆಗೆ ಅರ್ಹರರಲ್ಲ. ಕ್ಷಮಾವಂತನೇ ಸೋತುಹೋದನೆಂದು ಪಾಪಾತ್ಮರು ತಿಳಿದುಕೊಂಡುಬಿಡುತ್ತಾರೆ. ನೀನು ಸ್ವತಃ ಕ್ಷುದ್ರಸಮಾಚಾರದವನು. ಕಾಲುಗುರಿನ ತುದಿಯಿಂದ ಹಿಡಿದು ಶಿಖಾಗ್ರದವರೆಗೂ ನಿನ್ನಲ್ಲಿ ಪಾಪವೇ ತುಂಬಿದೆ. ನೀಚಾತ್ಮನಾದ ನೀನು ಮಾತನಾಡಲು ಬಯಸಿ ಮಾತನಾಡುತ್ತಿರುವೆಯಷ್ಟೆ! ಭುಜವು ತುಂಡಾಗಿ ಪ್ರಾಯಗತನಾಗಿದ್ದ ಭೂರಿಶ್ರವನನ್ನು ಇತರರು ತಡೆಹಿಡಿಯುತ್ತಿದ್ದರೂ ನೀನು ಸಂಹರಿಸಿದೆ. ಅದಕ್ಕಿಂತ ಹೆಚ್ಚಿನ ಪಾಪವು ಯಾವುದಿದೆ? ಯುದ್ಧದಲ್ಲಿ ದ್ರೋಣನನ್ನು ದಿವ್ಯಾಸ್ತ್ರಗಳಿಂದ ಆಕ್ರಮಣಿಸುತ್ತಿದ್ದ ನಾನು ಶಸ್ತ್ರಗಳನ್ನು ಬಿಸುಟ ಅವನನ್ನು ಕೊಂದಿದುರಲ್ಲಿ ಕ್ರೂರ ದುಷ್ಕೃತವೇನಿದೆ? ಸಾತ್ಯಕೇ! ಯುದ್ಧಮಾಡದೇ ಇದ್ದ, ಪ್ರಾಯಗತನಾಗಿದ್ದ, ಬಾಹುವು ತುಂಡಾಗಿರುವ ಮುನಿಯನ್ನು ಕೊಂದು ಇತರರಿಗೆ ಏಕೆ ಉಪದೇಶಿಸುತ್ತಿರುವೆ? ಆ ವೀರ್ಯವಾನನು ನಿನ್ನನ್ನು ನೆಲಕ್ಕೆ ಕೆಡವಿ ಎಳೆದಾಡುತ್ತಿರುವಾಗ ನೀನು ಪುರುಷಸತ್ತಮನಾಗಿಕೊಂಡು ಅವನನ್ನು ಏಕೆ ಆಗ ಕೊಲ್ಲಲಿಲ್ಲ? ಮೊದಲೇ ಪಾರ್ಥನಿಂದ ಸೋತಿದ್ದ ಪ್ರತಾಪವಾನ್ ಶೂರ ಸೌಮದತ್ತಿಯನ್ನು ಪುನಃ ನೀನು ಅನಾರ್ಯನಂತೆ ಸಂಹರಿಸಿದೆ! ಆದರೆ ನಾನು ಮಾತ್ರ ಎಲ್ಲೆಲ್ಲಿ ದ್ರೋಣನು ಸಹಸ್ರಾರು ಬಾಣಗಳನ್ನು ಎರಚಿ ಪಾಂಡವ ಸೇನೆಯನ್ನು ಪಲಾಯನಗೊಳಿಸುತ್ತಿದ್ದನೋ ಅಲ್ಲಲ್ಲಿಗೆ ಹೋಗಿ ಅವನೊಂದಿಗೆ ಹೋರಾಡುತ್ತಿದ್ದೆನು. ಸ್ವಯಂ ನೀನೇ ಈ ರೀತಿಯ ಚಾಂಡಾಲಕೃತ್ಯವನ್ನೆಸಗಿ ಹೇಗೆ ತಾನೆ ನೀನು ನನ್ನ ಕುರಿತು ಕ್ರೂರವಾಗಿ ಹೀಗೆ ಮಾತನಾಡಲು ಬಯಸುವೆ? ಈ ರೀತಿಯ ಉಗ್ರಕರ್ಮವನ್ನು ಮಾಡಿದವನು ನೀನೇ. ನಾನಲ್ಲ! ಪಾಪಕರ್ಮಗಳೆಲ್ಲವೂ ನಿನ್ನಲ್ಲಿಯೇ ನೆಲೆಸಿವೆ. ಪುನಃ ಮಾತನಾಡಬೇಡ! ಸುಮ್ಮನಾಗು! ನನಗೆ ನೀನು ಏನು ಹೇಳಲಿಚ್ಛಿಸಿದ್ದೀಯೋ ಅದಕ್ಕೂ ನೀಚವಾದ ಉತ್ತರವಿದೆ! ಮೂರ್ಖತನದಿಂದ ನನ್ನ ಕುರಿತು ಪುನಃ ಈ ರೀತಿಯ ಕಟುನುಡಿಗಳನ್ನಾಡಿದರೆ ಯುದ್ಧದಲ್ಲಿ ಬಾಣಗಳಿಂದ ನಿನ್ನನ್ನು ವೈವಸ್ವತಕ್ಷಯಕ್ಕೆ ಕಳುಹಿಸುತ್ತೇನೆ! ಮೂರ್ಖ! ಕೇವಲ ಧರ್ಮದಿಂದ ಜಯಗಳಿಸಲು ಶಕ್ಯವಿಲ್ಲ. ಅವರೂ ಕೂಡ ಹೇಗೆ ಅಧರ್ಮದಿಂದ ನಡೆದುಕೊಂಡಿದ್ದರು ಎನ್ನುವುದನ್ನು ಕೇಳು! ಹಿಂದೆ ಅವರು ಪಾಂಡವ ಯುಧಿಷ್ಠಿರನನ್ನು ಅಧರ್ಮದಿಂದಲೇ ವಂಚಿಸಿದರು. ಹಾಗೆಯೇ ಅಧರ್ಮದಿಂದ ದ್ರೌಪದಿಯನ್ನು ಕೂಡ ಕಾಡಿದರು. ಕೃಷ್ಣೆಯೊಡನೆ ಪಾಂಡವರೆಲ್ಲರೂ ವನದಲ್ಲಿ ಪರಿವ್ರಾಜಕರ ಜೀವನ ನಡೆಸಿದರು. ಈ ಎಲ್ಲ ಕಷ್ಟವನ್ನೂ ಅವರಿಗೆ ಅಧರ್ಮದಿಂದಲೇ ನೀಡಲಾಯಿತಲ್ಲವೇ? ಮದ್ರರಾಜನನ್ನು ಶತ್ರುಗಳು ಅಧರ್ಮದಿಂದಲೇ ತಮ್ಮೊಡನೆ ಸೆಳೆದುಕೊಳ್ಳಲಿಲ್ಲವೇ? ನಮ್ಮ ಕಡೆಯ ಅಧರ್ಮದಿಂದ ಕುರುಪಿತಾಮಹ ಭೀಷ್ಮನು ಹತನಾದನು. ನಿನ್ನ ಅಧರ್ಮದಿಂದಾಗಿ ಧರ್ಮವಿದ ಭೂರಿಶ್ರವನು ಹತನಾದನು. ಹೀಗೆ ಯುದ್ಧದಲ್ಲಿ ಜಯವನ್ನು ಪಾಲಿಸಲೋಸುಗ ಪಾಂಡವರು ಮತ್ತು ಅವರ ಶತ್ರುಗಳು ಧರ್ಮಜ್ಞರಾಗಿದ್ದರೂ ಅಧರ್ಮವನ್ನು ಆಚರಿಸಿರುವರು. ಪರಮ ಧರ್ಮವು ಯಾವುದೆನ್ನುವುದೆಂದು ತಿಳಿಯಲು ಕಷ್ಟ. ಹಾಗೆಯೇ ಅಧರ್ಮವೇನೆಂದು ತಿಳಿಯುವುದೂ ಕಷ್ಟವೇ ಸರಿ. ಯುದ್ಧಮಾಡು! ಸುಮ್ಮನೇ ಕೌರವರೊಂದಿಗೆ ಪಿತೃಲೋಕಗಳಿಗೆ ಹೋಗಬೇಡ!”

ಇವೇ ಮೊದಲಾದ ಕ್ರೂರ ಕಠಿನ ಮಾತುಗಳನ್ನು ಕೇಳಿದ ಸಾತ್ಯಕಿಯ ಮೈ ನಡುಗಿತು. ಅದನ್ನು ಕೇಳಿ ಕ್ರೋಧದಿಂದ ಕಣ್ಣುಗಳು ಕೆಂಪಾಗಲು ಸಾತ್ಯಕಿಯು ಧನುಸ್ಸನ್ನು ರಥದಲ್ಲಿಯೇ ಇರಿಸಿ ಸರ್ಪದಂತೆ ಭುಸುಗುಟ್ಟುತ್ತಾ ಗದೆಯೊಂದನ್ನು ಎತ್ತಿಕೊಂಡನು. ಆಗ ಪಾಂಚಾಲ್ಯನ ಎದುರಾಗಿ ಅತ್ಯಂತ ಕೋಪದಿಂದ “ಇನ್ನು ನಿನ್ನೊಡನೆ ಕಠೋರವಾದ ಮಾತಗಳನ್ನಾಡುವುದಿಲ್ಲ! ವಧಾರ್ಹನಾದ ನಿನ್ನನ್ನು ಈಗಲೇ ಕೊಂದುಬಿಡುತ್ತೇನೆ!” ಎಂದನು. ತಕ್ಷಣವೇ ವಾಸುದೇವನಿಂದ ಚೋದಿತನಾದ ಮಹಾಬಲ ಭೀಮಸೇನನು ರಥದಿಂದ ಹಾರಿ ತನ್ನ ಎರಡೂ ಬಾಹುಗಳಿಂದ ಹೀಗೆ ಸಂಕ್ರುದ್ಧನಾಗಿ ಪಾಂಚಾಲ್ಯನ ಮೇಲೆ ಬೀಳುತ್ತಿದ್ದ ಅಂತಕನಿಗೂ ಅಂತಕನಂತಿದ್ದ ಆ ಮಹಾಬಲ ಅಮರ್ಷಣನನ್ನು ಭದ್ರವಾಗಿ ಹಿಡಿದು ಮುಂದೆಹೋಗದಂತೆ ತಡೆದನು. ಹಾಗೆ ಕ್ರುದ್ಧನಾಗಿ ಓಡಿಹೋಗುತ್ತಿದ್ದ ಸಾತ್ಯಕಿಯನ್ನು ಬಲಶಾಲಿ ಪಾಂಡವನು ಹಿಡಿದು ತಡೆದಿದ್ದರೂ ಸಾತ್ಯಕಿಯು ಬಲಾತ್ಕಾರವಾಗಿ ಅವನನ್ನೇ ಎಳೆದುಕೊಂಡು ಮುಂದೆ ಸಾಗುತ್ತಿದ್ದನು. ಎರಡು ಪಾದಗಳನ್ನೂ ಭದ್ರವಾಗಿ ಊರಿಕೊಂಡು ನಿಂತಿದ್ದ ಭೀಮನು ಬಲಿಷ್ಠರಲ್ಲಿ ಶ್ರೇಷ್ಠನಾಗಿದ್ದ ಶಿನಿಪುಂಗವನನ್ನು ಆರನೆಯ ಹೆಜ್ಜೆಯನ್ನಿಡುವುದರೊಳಗೆ ತಡೆದು ನಿಲ್ಲಿಸಿದನು.

ಅಷ್ಟರಲ್ಲಿ ಸಹದೇವನು ತನ್ನ ರಥದಿಂದಿಳಿದು ಬಲಶಾಲಿ ಭೀಮನಿಂದ ಹಿಡಿಯಲ್ಪಟ್ಟಿದ್ದ ಸಾತ್ಯಕಿಗೆ ಮಧುರವಾದ ಈ ಮಾತುಗಳನ್ನಾಡಿದನು: “ಪುರುಷವ್ಯಾಘ್ರ! ಮಾಧವ! ನಮಗೆ ಅಂಧಕ-ವೃಷ್ಣಿಗಳನ್ನೂ ಪಾಂಚಾಲರನ್ನೂ ಬಿಟ್ಟರೆ ಬೇರೆ ಯಾವ ಮಿತ್ರರೂ ಇಲ್ಲ. ಹಾಗೆಯೇ ಅಂಧಕ-ವೃಷ್ಣಿಗಳಿಗೆ ಅದರಲ್ಲೂ ವಿಶೇಷವಾಗಿ ನಿನಗೆ ಮತ್ತು ಕೃಷ್ಣನಿಗೆ ನಮ್ಮನ್ನು ಬಿಟ್ಟು ಬೇರೆ ಯಾವ ಮಿತ್ರರೂ ಇಲ್ಲ. ಪಾಂಚಾಲರಿಗೆ ಕೂಡ ಅವರು ಸಮುದ್ರಪರ್ಯಂತವಾಗಿ ಹುಡುಕಿದರೂ ಪಾಂಡವ-ವೃಷ್ಣಿಗಳಿಗಿಂತಲೂ ಉತ್ತಮ ಮಿತ್ರರು ಯಾರೂ ಇರುವುದಿಲ್ಲ. ನೀನು ನಮ್ಮನ್ನು ಎಂತಹ ಮಿತ್ರರೆಂದು ಭಾವಿಸುತ್ತಿರುವೆಯೋ ನಾವೂ ಸಹ ನಿನ್ನನ್ನು ಅಂತಹ ಮಿತ್ರನೆಂದೇ ಭಾವಿಸಿರುತ್ತೇವೆ. ನೀವು ನಮಗೆ ಹೇಗೋ ನಾವೂ ಸಹ ನಿಮಗೆ ಹಾಗೆಯೇ ಇದ್ದೇವೆ. ಸರ್ವಧರ್ಮಗಳನ್ನೂ ತಿಳಿದಿರುವವನೇ! ಮಿತ್ರಧರ್ಮವನ್ನು ಸ್ಮರಿಸಿಕೊಂಡು ಪಾಂಚಾಲ್ಯನ ಮೇಲಿರುವ ಸಿಟ್ಟನ್ನು ತಡೆಹಿಡಿದು ಶಾಂತನಾಗು! ಪಾರ್ಷತನನ್ನು ನೀನು ಕ್ಷಮಿಸಿಬಿಡು. ಪಾರ್ಷತನೂ ನಿನ್ನನ್ನು ಕ್ಷಮಿಸಿಬಿಡಲಿ. ನೀವಿಬ್ಬರೂ ಕ್ಷಮಾವಂತರಾಗಿರೆಂದು ನಾವು ಆಶಿಸುತ್ತೇವೆ. ಕ್ಷಮೆಗಿಂತಲೂ ಅಧಿಕವಾದುದು ಬೇರೆ ಏನಿದೆ?”

ಸಹದೇವನು ಹೀಗೆ ಶೈನೇಯನನ್ನು ಶಾಂತಗೊಳಿಸುತ್ತಿರಲು ಪಾಂಚಾಲರಾಜನ ಮಗನು ನಗುತ್ತಾ ಹೇಳಿದನು: “ಭೀಮ! ಯುದ್ಧಮದಾನ್ವಿತ ಈ ಶಿನಿಯ ಮೊಮ್ಮಗನನ್ನು ಬಿಟ್ಟುಬಿಡು! ಚಂಡಮಾರುತವು ಪರ್ವತವನ್ನು ಹೇಗೋ ಹಾಗೆ ಇವನು ನನ್ನನ್ನು ಎದುರಿಸಲಿ! ಈಗಲೇ ನಿಶಿತ ಬಾಣಗಳಿಂದ ಈ ಯಾದವನ ಕೋಪವನ್ನು, ಯುದ್ಧದಲ್ಲಿರುವ ಶ್ರದ್ಧೆಯನ್ನೂ ಮತ್ತು ಜೀವಿತವನ್ನೂ ಅಡಗಿಸುತ್ತೇನೆ! ಕೌರವರು ಮಹಾಸೇನೆಯೊಂದಿಗೆ ಪಾಂಡುಪುತ್ರರೊಡನೆ ಯುದ್ಧಕ್ಕಾಗಿ ಬರುತ್ತಿರುವ ಈ ಸಮಯದಲ್ಲಿ ನಾನಾದರೂ ಏನುತಾನೇ ಮಾಡಬಲ್ಲೆನು? ಅಥವಾ ಫಲ್ಗುನನು ಯುದ್ಧದಲ್ಲಿ ಅವರೆಲ್ಲರನ್ನೂ ತಡೆಯುತ್ತಾನೆ. ನಾನಾದರೋ ಸಾಯಕಗಳಿಂದ ಇವನ ತಲೆಯನ್ನು ನೆಲಕ್ಕೆ ಬೀಳಿಸುತ್ತೇನೆ! ಇವನು ನನ್ನನ್ನೂ ಯುದ್ಧದಲ್ಲಿ ಭುಜವನ್ನು ಕಳೆದುಕೊಂಡ ಭೂರಿಶ್ರವಸನೆಂದೇ ಭಾವಿಸಿದ್ದಾನೆ. ಇವನನ್ನು ಬಿಟ್ಟುಬಿಡು! ಇವನು ನನ್ನನ್ನು ಕೊಲ್ಲುತ್ತಾನೆ ಅಥವಾ ನಾನು ಇವನನ್ನು ಕೊಲ್ಲುತ್ತೇನೆ!”

ಪಾಂಚಾಲ್ಯನ ಮಾತುಗಳನ್ನು ಕೇಳಿ ಸಾತ್ಯಕಿಯು ಸರ್ಪದಂತೆ ದೀರ್ಘವಾಗಿ ನಿಟ್ಟುಸಿರುಬಿಡುತ್ತಾ ಭೀಮನ ಬಾಹುಬಂಧನದಿಂದ ಬಿಡಿಸಿಕೊಳ್ಳಲು ಚಡಪಡಿಸುತ್ತಿದ್ದನು. ಆಗ ವಾಸುದೇವ ಮತ್ತು ಧರ್ಮರಾಜರು ತ್ವರೆಮಾಡಿ ಮಹಾ ಪ್ರಯತ್ನದಿಂದ ಆ ಇಬ್ಬರು ವೀರರನ್ನೂ ತಡೆದರು. ಕ್ರೋಧದಿಂದ ಕಣ್ಣುಗಳು ಕೆಂಪಾಗಿದ್ದ ಆ ಪರಮೇಷ್ವಾಸ ಕ್ಷತ್ರಿಯರ್ಷಭರಿಬ್ಬರೂ ತಮ್ಮ ಜಗಳವನ್ನು ನಿಲ್ಲಿಸಿ ಎದುರಾಗಿ ಬರುತ್ತಿರುವ ಶತ್ರುಸೇನೆಯೊಡನೆ ಯುದ್ಧಮಾಡತೊಡಗಿದರು.

ಅಶ್ವತ್ಥಾಮನಿಂದ ನಾರಾಯಣಾಸ್ತ್ರ ಪ್ರಯೋಗ; ಪಾಂಡವಸೇನೆಯ ಅಸ್ತ್ರತ್ಯಾಗ

ಅನಂತರ ದ್ರೋಣನಂದನನು ಯುಗಾಂತದಲ್ಲಿ ಸರ್ವಭೂತಗಳನ್ನೂ ಕೊನೆಗೊಳಿಸುವ ಅಂತಕನಂತೆ ಶತ್ರುಗಳೊಂದಿಗೆ ಕದನವನ್ನು ನಡೆಸಿದನು. ಅವನು ಭಲ್ಲಗಳಿಂದ ಶತ್ರುಗಳನ್ನು ಸಂಹರಿಸಿ ದೇಹಗಳ ಪರ್ವತವನ್ನೇ ಸೃಷ್ಟಿಸಿದನು. ಧ್ವಜಗಳೇ ಆ ಪರ್ವತದ ವೃಕ್ಷಗಳಾಗಿದ್ದವು, ಶಸ್ತ್ರಗಳೇ ಶಿಖರಗಳಾಗಿದ್ದವು, ಸತ್ತುಹೋಗಿದ್ದ ಆನೆಗಳೇ ಕಲ್ಲುಬಂಡೆಗಳಾಗಿದ್ದವು, ಅಶ್ವಗಳು ಕಿಂಪುರುಷರ ಗುಂಪುಗಳಾಗಿದ್ದವು, ಭತ್ತಳಿಕೆಗಳು ಲತಾವಾಟಿಕೆಗಳಾಗಿದ್ದವು, ಶೂಲಗಳು ಮಾಂಸಾಹಾರಿ ಪಕ್ಷಿಗಳ ಸಂಕುಲಗಳಾಗಿದ್ದವು ಮತ್ತು ಭೂತಯಕ್ಷಗಣಾಕುಲಗಳಾಗಿದ್ದವು. ಆಗ ಮಹಾವೇಗದಿಂದ ಆ ನರರ್ಷಭನು ಗರ್ಜಿಸಿ ತನ್ನ ಪ್ರತಿಜ್ಞೆಯನ್ನು ಪುನಃ ದುರ್ಯೋಧನನಿಗೆ ಕೇಳಿಸಿದನು. “ಯುದ್ಧಮಾಡುತ್ತಿದ್ದ ಆಚಾರ್ಯನನ್ನು ಧರ್ಮದ ಅಂಗಿಯನ್ನು ತೊಟ್ಟು ಯುಧಿಷ್ಠಿರನು ಶಸ್ತ್ರವನ್ನು ಬಿಡು! ಎಂದು ಹೇಳಿದುದಕ್ಕಾಗಿ ಅವನು ನೋಡುತ್ತಿರುವಂತೆಯೆ ಅವನ ಸೇನೆಯನ್ನು ಪಲಾಯನಗೊಳಿಸುತ್ತೇನೆ! ಅವರೆಲ್ಲರನ್ನೂ ಓಡಿಸಿ ನಂತರ ಆ ಪಾಪಿ ಪಾಂಚಾಲ್ಯನನ್ನು ವಧಿಸುತ್ತೇನೆ ಕೂಡ! ನನ್ನೊಡನೆ ರಣದಲ್ಲಿ ಯಾರ್ಯಾರು ಯುದ್ಧಮಾಡುತ್ತಾರೋ ಅವರೆಲ್ಲರನ್ನೂ ಸಂಹರಿಸುತ್ತೇನೆ. ನಿನಗೆ ಸತ್ಯವನ್ನೇ ತಿಳಿಸುತ್ತಿದ್ದೇನೆ. ಸೇನೆಯನ್ನು ಹಿಂದಿರುಗಿಸು!”

ಅದನ್ನು ಕೇಳಿದ ದುರ್ಯೋಧನನಾದರೋ ಮಹಾಭಯವನ್ನು ಕಳೆದುಕೊಂಡು ಮಹಾ ಸಿಂಹನಾದದಿಂದ ಸೇನೆಯನ್ನು ಹಿಂದೆ ಕರೆದನು. ಆಗ ಕುರುಪಾಂಡವ ಸೇನೆಗಳ ನಡುವೆ ತುಂಬಿದ ಎರಡು ಸಮುದ್ರಗಳ ನಡುವೆ ಹೇಗೋ ಹಾಗೆ ಪುನಃ ತೀವ್ರವಾದ ಯುದ್ಧವು ಪ್ರಾರಂಭವಾಯಿತು. ದ್ರೋಣಪುತ್ರನಿಂದಾಗಿ ಕೌರವರು ರೋಷಾವೇಶದಿಂದ ಸುಸ್ಥಿರರಾಗಿ ನಿಂತಿದ್ದರು. ದ್ರೋಣನ ನಿಧನದಿಂದಾಗಿ ಪಾಂಡುಪಾಂಚಾಲರು ಉದ್ಧತರಾಗಿದ್ದರು. ತಮಗೇ ಜಯವನ್ನು ಕಾಣುತ್ತಿದ್ದ ಪರಮಹೃಷ್ಟರಾದ ಅವರಿಬ್ಬರು ಕೋಪಿಷ್ಟರ ನಡುವೆ ಮಹಾವೇಗದ ಯುದ್ಧವು ನಡೆಯಿತು. ಒಂದು ಪರ್ವತವು ಇನ್ನೊಂದು ಪರ್ವತವನ್ನು ಅಥವಾ ಒಂದು ಸಾಗರವು ಇನ್ನೊಂದು ಸಾಗರವನ್ನು ತಾಗುವಂತೆ ಕುರುಪಾಂಡವರ ಮಧ್ಯೆ ಹೊಡೆದಾಟವು ನಡೆಯಿತು. ಆಗ ಸಂಹೃಷ್ಟ ಕುರುಪಾಂಡವ ಸೈನಿಕರು ಸಹಸ್ರಾರು ಶಂಖಗಳನ್ನೂ, ಕೋಟಿಗಟ್ಟಲೆ ಭೇರಿಗಳನ್ನೂ ಬಾರಿಸಿದರು. ಮಂದರಪರ್ವತವನ್ನು ಕಡೆಗೋಲನ್ನಾಗಿಸಿ ಸಾಗರವನ್ನು ಕಡೆದಾಗ ಉಂಟಾದ ಶಬ್ಧದಂತೆ ಆ ಸೇನೆಗಳಿಂದ ಅದ್ಭುತ ಮಹಾನಿನಾದವು ಕೇಳಿಬಂದಿತು. ಆಗ ದ್ರೌಣಿಯು ಪಾಂಡವರ ಮತ್ತು ಪಾಂಚಾಲರ ಸೇನೆಗಳನ್ನು ಗುರಿಯಾಗಿಸಿ ನಾರಾಯಣಾಸ್ತ್ರವನ್ನು ಪ್ರಯೋಗಿಸಿದನು.

Related imageಅದರಿಂದ ಸಹಸ್ರಾರು ಉರಿಯುತ್ತಿರುವ ಮುಖಗಳುಳ್ಳ ಬಾಣಗಳು ಆಕಾಶದಲ್ಲಿ ಪಾಂಡವರನ್ನು ಭಕ್ಷಿಸುವವೋ ಎಂಬಂತಿದ್ದ ಉರಿಯುತ್ತಿರುವ ಹೆಡೆಗಳ ಸರ್ಪಗಳಂತೆ ಕಾಣಿಸಿಕೊಂಡವು. ಸೂರ್ಯನ ಕಿರಣಗಳು ಬಹಳ ಬೇಗ ಲೋಕವನ್ನೆಲ್ಲಾ ಹರಡಿಕೊಳ್ಳುವಂತೆ ಆ ಬಾಣಗಳು ಮುಹೂರ್ತಮಾತ್ರದಲ್ಲಿ ಆಕಾಶವನ್ನೂ, ದಿಕ್ಕುಗಳನ್ನೂ, ಸೇನೆಯನ್ನೂ ಆವರಿಸಿದವು. ಅಮಲ ಆಕಾಶದಲ್ಲಿ ಬೆಳಗುವ ನಕ್ಷತ್ರಗಳಂತೆ ಉಕ್ಕಿನ ಚಂಡುಗಳು ಪ್ರಾದುರ್ಭವಿಸಿದವು. ನಾಲ್ಕೂ ದಿಕ್ಕುಗಳಲ್ಲಿ ಉರಿಯುತ್ತಿರುವ ವಿಚಿತ್ರ ಶತಘ್ನಗಳೂ, ಖಡ್ಗಗಳಂತಹ ಅಲಗುಗಳುಳ್ಳ ಚಕ್ರಗಳೂ ಮಂಡಲಾಕಾರದಲ್ಲಿ ಹೊಳೆಯತೊಡಗಿದವು. ಶಸ್ತ್ರಗಳ ಆಕೃತಿಗಳಿಂದ ತುಂಬಿಹೋಗಿದ್ದ ಅಂತರಿಕ್ಷವನ್ನು ನೋಡಿ ಪಾಂಡವ-ಪಾಂಚಾಲ-ಸೃಂಜಯರು ಅತೀವ ಉದ್ವಿಗ್ನರಾದರು. ಹೇಗೆ ಹೇಗೆ ಪಾಂಡವ ಮಹಾರಥರು ಯುದ್ಧಮಾಡುತ್ತಿದ್ದರೋ ಹಾಗೆ ಹಾಗೆ ಆ ಅಸ್ತ್ರವು ವರ್ಧಿಸುತ್ತಿತ್ತು. ಆ ನಾರಾಯಣಾಸ್ತ್ರದಿಂದ ವಧಿಸಲ್ಪಡುತ್ತಿದ್ದ ಸೇನೆಗಳು ರಣದಲ್ಲಿ ಬೆಂಕಿಯಿಂದ ಸುಡಲ್ಪಡುತ್ತಿದ್ದಂತೆ ಸರ್ವಾಂಗಗಳಲ್ಲಿಯೂ ಪೀಡಿತಗೊಂಡವು. ಛಳಿಗಾಲದ ಅಂತ್ಯದಲ್ಲಿ ಅಗ್ನಿಯು ಒಣಹುಲ್ಲನ್ನು ಸುಡುವಂತೆ ಆ ಅಸ್ತ್ರವು ಪಾಂಡವರ ಸೇನೆಯನ್ನು ಸುಡತೊಡಗಿತು. ಸರ್ವತ್ರ ತುಂಬಿಹೋಗಿದ್ದ ಆ ಅಸ್ತ್ರದಿಂದ ಸೈನ್ಯವು ಕ್ಷೀಣಿಸುತ್ತಿರಲು ಧರ್ಮಪುತ್ರ ಯುಧಿಷ್ಠಿರನು ಪರಮ ಭಯಭೀತನಾದನು. ಬುದ್ಧಿಕಳೆದುಕೊಂಡು ಓಡಿಹೋಗುತ್ತಿರುವ ಆ ಸೈನ್ಯವನ್ನೂ ತಟಸ್ಥಭಾವದಿಂದಿದ್ದ ಪಾರ್ಥನನ್ನೂ ನೋಡಿ ಧರ್ಮಪುತ್ರನು ಹೀಗೆಂದನು:

“ಧೃಷ್ಟದ್ಯುಮ್ನ! ನೀನು ಪಾಂಚಾಲಸೇನೆಯೊಂದಿಗೆ ಪಲಾಯನಮಾಡು. ಸಾತ್ಯಕೇ! ನೀನು ವೃಷ್ಣಿ-ಅಂಧಕರಿಂದ ಕೂಡಿ ನಿನ್ನ ನಿವಾಸಕ್ಕೆ ಹೊರಟುಹೋಗು! ಧರ್ಮಾತ್ಮ ವಾಸುದೇವನಾದರೋ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಾನೆ. ಲೋಕಕ್ಕೇ ಉಪದೇಶಮಾಡಲು ಸಮರ್ಥನಾದ ಅವನಿಗೆ ತನ್ನನ್ನು ರಕ್ಷಿಸಿಕೊಳ್ಳುವುದರಲ್ಲಿ ಏನಿದೆ? ಸರ್ವ ಸೇನೆಗಳಿಗೂ ಹೇಳುತ್ತಿದ್ದೇನೆ. ಇನ್ನು ಮುಂದೆ ಯುದ್ಧಮಾಡಬೇಡಿರಿ. ಏಕೆಂದರೆ ನಾನು ನನ್ನ ಸಹೋದರರೊಂದಿಗೆ ಅಗ್ನಿಪ್ರವೇಶಮಾಡುತ್ತೇನೆ! ಹೇಡಿಗಳಿಗೆ ದಾಟಲಸಾಧ್ಯ ಭೀಷ್ಮ-ದ್ರೋಣರ ಸಾಗರವೆಂಬ ರಣವನ್ನು ದಾಟಿದ ನಾವು ಈಗ ಸೇನೆಗಳೊಂದಿಗೆ ದ್ರೌಣಿಯೆಂಬ ಹಸುವಿನ ಗೊರಸಿನ ಹಳ್ಳದ ನೀರಿನಲ್ಲಿ ಮುಳುಗಿಹೋಗುತ್ತಿದ್ದೇವೆ! ಕಲ್ಯಾಣಸಂಪನ್ನ ಆಚಾರ್ಯನನ್ನು ನಾನು ಯುದ್ಧದಲ್ಲಿ ಸಂಹರಿಸಿದುದರ ಪರಿಣಾಮವಾಗಿ ಬೀಭತ್ಸುವು ನನ್ನ ಕುರಿತು ಏನು ಆಶಯಪಟ್ಟಿದ್ದನೋ ಅದು ಈಗಲೇ ಆಗಿಹೋಗಲಿ! ಯುದ್ಧದಲ್ಲಿ ವಿಶಾರದನಾಗಿರದ ಬಾಲಕ ಸೌಭದ್ರನು ಅನೇಕ ಸಮರ್ಥ ಕ್ರೂರರಿಂದ ಕೊಲ್ಲಲ್ಪಡುತ್ತಿದ್ದಾಗಲೂ ರಕ್ಷಣೆಯನ್ನು ನೀಡದೇ ಇದ್ದ, ಸಭೆಗೆ ಬಂದಾಗ ದಾಸಭಾವವನ್ನು ಕಳೆದುಕೊಳ್ಳಲು ದ್ರೌಪದಿಯು ಪ್ರಶ್ನೆಯನ್ನು ಕೇಳಿದಾಗ ಪುತ್ರನೊಡನೆ ಉತ್ತರವನ್ನು ನೀಡದೇ ಇದ್ದ, ಸೈಂಧವನನ್ನು ರಕ್ಷಿಸಲೋಸುಗ ಕುದುರೆಗಳು ಬಳಲಿದ್ದ ಫಲ್ಗುನನನ್ನು ಕೊಲ್ಲಲು ಬಯಸಿದ್ದ ಧಾರ್ತರಾಷ್ಟ್ರನಿಗೆ ಕವಚವನ್ನು ತೊಡಿಸಿದ್ದ, ನನ್ನ ವಿಜಯಕ್ಕಾಗಿ ಸರ್ವಯತ್ನವನ್ನೂ ಮಾಡುತ್ತಿದ್ದ, ಸತ್ಯಜಿತನೇ ಮೊದಲಾದ ಪಾಂಚಾಲರನ್ನು ಬ್ರಹ್ಮಾಸ್ತ್ರಜ್ಞಾನದಿಂದ ನಿಃಶೇಷವಾಗಿ ವಿನಾಶಗೊಳಿಸಿದ್ದ, ಅಧರ್ಮದಿಂದ ನಮ್ಮನ್ನು ರಾಜ್ಯಭ್ರಷ್ಟರನ್ನಾಗಿಸಿದಾಗ ನಮ್ಮವರಿಂದ ತಡೆಯಲ್ಪಟ್ಟರೂ ಅದನ್ನು ಅನುಸರಿಸುವಂತೆ ಕೌರವರಿಗೆ ಉಪದೇಶಿಸದೇ ಇದ್ದ, ಈ ರೀತಿ ನಮಗೆ ಪರಮ ಸೌಹಾರ್ದರಂತೆ ವರ್ತಿಸುತ್ತಿದ್ದ ಆಚಾರ್ಯರನ್ನು ಸಂಹರಿಸಿದುದಕ್ಕಾಗಿ ನಾನು ಬಾಂಧವರೊಡನೆ ಮರಣಹೊಂದುತ್ತೇನೆ!”

ಕೌಂತೇಯನು ಹೀಗೆ ಹೇಳುತ್ತಿರಲು ತ್ವರೆಮಾಡಿ ದಾಶಾರ್ಹನು ಬಾಹುಗಳಿಂದ ಸೇನೆಯನ್ನು ತಡೆದು ಈ ಮಾತನ್ನಾಡಿದನು:  “ಬೇಗನೆ ಶಸ್ತ್ರಗಳನ್ನು ಕೆಳಗಿಡಿರಿ! ವಾಹನಗಳಿಂದ ಕೆಳಗಿಳಿಯಿರಿ! ಇದೇ ಉಪಾಯವನ್ನು ಈ ಅಸ್ತ್ರದ ನಿವಾರಣೆಗೆಂದು ಮಹಾತ್ಮ ನಾರಾಯಣನೇ ವಿಹಿಸಿದ್ದಾನೆ. ಆನೆ, ಕುದುರೆ ಮತ್ತು ರಥಗಳಿಂದ ಎಲ್ಲರೂ ನೆಲದಮೇಲೆ ಕೆಳಗಿಳಿಯಿರಿ! ನೆಲದ ಮೇಲೆ ನಿರಾಯುಧರಾಗಿರುವವರನ್ನು ಈ ಅಸ್ತ್ರವು ಸಂಹರಿಸುವುದಿಲ್ಲ. ಏಕೆಂದರೆ ಈ ಅಸ್ತ್ರಬಲದ ವಿರುದ್ಧವಾಗಿ ಯೋಧರು ಯಾವ ಯಾವ ರೀತಿಯಲ್ಲಿ ಯುದ್ಧಮಾಡುತ್ತಾರೋ ಹಾಗೆಯೇ ಈ ಕೌರವರ ಬಲವೂ ಹೆಚ್ಚಾಗುತ್ತಾ ಹೋಗುತ್ತದೆ. ಯಾರು ವಾಹನಗಳಿಂದ ಕೆಳಗಿಳಿದು ಶಸ್ತ್ರಗಳನ್ನು ಕೆಳಗಿಡುತ್ತಾರೋ ಆ ಮಾನವರನ್ನು ಸಂಗ್ರಾಮದಲ್ಲಿ ಈ ಅಸ್ತ್ರವು ಸಂಹರಿಸುವುದಿಲ್ಲ. ಯಾರು ಇದನ್ನು ಮನಸ್ಸಿನಲ್ಲಿಯಾದರೂ ವಿರೋಧಿಸುತ್ತಾರೋ ಅವರೆಲ್ಲರನ್ನೂ, ಅವರು ರಸಾತಲಕ್ಕೆ ಹೋಗಿ ಅಡಗಿಕೊಂಡರೂ, ಇದು ಸಂಹರಿಸುತ್ತದೆ.”

ವಾಸುದೇವನ ಆ ಮಾತನ್ನು ಕೇಳಿ ಎಲ್ಲರೂ ಮನಸ್ಸು ಮತ್ತು ಕರಣಗಳಿಂದ ಅಸ್ತ್ರವನ್ನು ತ್ಯಜಿಸಲು ಇಚ್ಛಿಸಿದರು. ಶಸ್ತ್ರಾಸ್ತ್ರಗಳನ್ನು ಕೆಳಗಿಡುತ್ತಿದ್ದ ಅವರನ್ನು ನೋಡಿ ಅವರನ್ನು ಹರ್ಷಗೊಳಿಸುತ್ತಾ ಭೀಮಸೇನನು ಹೇಳಿದನು: “ಯಾವುದೇ ಕಾರಣದಿಂದ ಯಾರೂ ಶಸ್ತ್ರಗಳನ್ನು ಕೆಳಗಿಡಬಾರದು! ದ್ರೋಣಪುತ್ರನನ್ನು ನಾನು ಆಶುಗಗಳಿಂದ ತಡೆಯುತ್ತೇನೆ! ಈಗಲೇ ಈ ಸುವರ್ಣಮಯ ಭಾರ ಗದೆಯಿಂದ ದ್ರೌಣಿಯ ಅಸ್ತ್ರವನ್ನು ವಿನಾಶಗೊಳಿಸಿ ಅವನನ್ನು ಕಾಲನಂತೆ ಪ್ರಹರಿಸುತ್ತೇನೆ! ಹೇಗೆ ಸವಿತು ಸೂರ್ಯನಿಗೆ ಸಮನಾದ ಬೇರೆ ನಕ್ಷತ್ರವು ಇನ್ನಿಲ್ಲವೋ ಹಾಗೆ ನನ್ನ ವಿಕ್ರಮಕ್ಕೆ ಸಮನಾಗಿರುವ ಪುರುಷರ್ಯಾರೂ ಇಲ್ಲಿ ಇಲ್ಲ. ಶಿಖರಯುಕ್ತ ಪರ್ವತವನ್ನೂ ಕೆಳಗುರುಳಿಸಿ ಪುಡಿಮಾಡಬಲ್ಲ ಆನೆಯ ಸೊಂಡಿಲಿನಂತಿರುವ ನನ್ನ ದೃಢ ಬಾಹುಗಳ ಸಾಮಾರ್ಥ್ಯವನ್ನು ಇಂದು ನೋಡಿ! ದಿವಿಯ ದೇವತೆಗಳಲ್ಲಿ ಶಕ್ರನು ಹೇಗೆ ಪ್ರತಿದ್ವಂದ್ವಿಯಿಲ್ಲದಿರುವನೆಂದು ಪ್ರಸಿದ್ಧನೋ ಹಾಗೆ ಮನುಷ್ಯರಲ್ಲಿ ಸಾವಿರ ಆನೆಗಳ ಬಲಕ್ಕೆ ಸಮನಾದ ನಾನೊಬ್ಬನೇ ಪ್ರತಿದ್ವಂದ್ವಿಯಿಲ್ಲದಿರುವವನು! ಇಂದು ಯುದ್ಧದಲ್ಲಿ ಹತ್ತಿ ಉರಿಯುತ್ತಿದ್ದ ದ್ರೌಣಿಯ ಅಸ್ತ್ರವನ್ನು ತಡೆಯುವ ನನ್ನ ಈ ಉಬ್ಬಿದ ಬಾಹುಗಳ ವೀರ್ಯವನ್ನು ನೋಡಿ! ಕುರುಪಾಂಡವರಲ್ಲಿ ಇಂದು ಈ ನಾರಾಯಣಾಸ್ತ್ರವನ್ನು ಎದುರಿಸುವವನು ಯಾರೂ ಎಲ್ಲವೆಂದಾದರೆ ನಾನು ಅದನ್ನು ಎದುರಿಸುತ್ತೇನೆ! ನೋಡಿ!”

ಹೀಗೆ ಹೇಳಿ ಭೀಮನು ಮೇಘಘೋಷದ ಆದಿತ್ಯವರ್ಚಸ ರಥದಲ್ಲಿ ಕುಳಿತು ದ್ರೋಣಪುತ್ರನನ್ನು ಸಮೀಪಿಸಿದನು. ಶೀಘ್ರವಾಗಿ ಅವನನ್ನು ಸಮೀಪಿಸಿ ನಿಮಿಷಮಾತ್ರದಲ್ಲಿ ತನ್ನ ಹಸ್ತಲಾಘವದಿಂದ ವಿಕ್ರಮಿ ಕುಂತೀಪುತ್ರನು ಅಶ್ವತ್ಥಾಮನನ್ನು ಬಾಣಗಳ ಜಾಲದಿಂದ ಮುಚ್ಚಿಬಿಟ್ಟನು. ಆಗ ದ್ರೌಣಿಯು ನಗುತ್ತಾ ಉದಾಸೀನತೆಯಿಂದ ಕೆಲವು ಮಾತುಗಳನ್ನಾಡಿ ಅಭಿಮಂತ್ರಿಸಿದ ದೀಪ್ತಾಗ್ರ ಶರಗಳಿಂದ ಭೀಮನನ್ನು ಮುಚ್ಚಿದನು. ಬಂಗಾರದ ಬೆಂಕಿಯ ಕಿಡಿಗಳನ್ನು ಕಾರುವ ಉರಿಯುತ್ತಿರುವ ಮುಖಗಳುಳ್ಳ ಪನ್ನಗಗಳಂತಿದ್ದ ಆ ಬಾಣಗಳು ಭೀಮನನ್ನು ಮುಚ್ಚಿಬಿಟ್ಟವು. ಯುದ್ಧದಲ್ಲಿ ಆಗ ಭೀಮಸೇನನು ಸಾಯಂಕಾಲದಲ್ಲಿ ಮಿಂಚು ಹುಳುಗಳಿಂದ ಆವೃತ ಪರ್ವತದಂತೆ ತೋರುತ್ತಿದ್ದನು. ಅವನು ದ್ರೋಣಪುತ್ರನ ಆ ಅಸ್ತ್ರವನ್ನು ವಿರೋಧಿಸಲು ಅದು ಗಾಳಿಯಿಂದ ಉಲ್ಬಣಿಸುವ ಬೆಂಕಿಯಂತೆ ವೃದ್ಧಿಸಿತು. ಭೀಮವಿಕ್ರಮದಿಂದಿದ್ದ ಆ ಅಸ್ತ್ರವು ಬೆಳೆಯುತ್ತಿದ್ದುದನ್ನು ನೋಡಿ ಪಾಂಡವಸೇನೆಯಲ್ಲಿ, ಭೀಮಸೇನನನ್ನು ಬಿಟ್ಟು ಉಳಿದೆಲ್ಲರನ್ನೂ ಮಹಾ ಭಯವು ಆವರಿಸಿತು. ಆಗ ಎಲ್ಲರೂ ಎಲ್ಲ ಕಡೆಗಳಲ್ಲಿಯೂ ರಥ-ಆನೆ-ಕುದುರೆಗಳಿಂದ ಕೆಳಗಿಳಿದು ಶಸ್ತ್ರಗಳೆಲ್ಲವನ್ನೂ ನೆಲದ ಮೇಲೆ ಇರಿಸಿದರು. ಅವರು ಹಾಗೆ ವಾಹನಗಳಿಂದ ಕೆಳಗಿಳಿದು ಶಸ್ತ್ರಗಳನ್ನು ಕೆಳಗಿಡಲು ಆ ಅಸ್ತ್ರವೀರ್ಯವೆಲ್ಲವೂ ಒಟ್ಟಾಗಿ ಭೀಮನ ಶಿರದ ಮೇಲೆಯೇ ಬಿದ್ದಿತು. ತೇಜಸ್ಸಿನಿಂದ ಆವೃತನಾದ ಭೀಮಸೇನನನ್ನು ಕಾಣದೇ ಅಲ್ಲಿದ್ದ ಎಲ್ಲರೂ, ವಿಶೇಷವಾಗಿ ಪಾಂಡವರು, ಹಾಹಾಕಾರಗೈದರು.

ಆ ಅಸ್ತ್ರದಿಂದ ಭೀಮಸೇನನು ಮುಚ್ಚಿಹೋಗಿರುವುದನ್ನು ನೋಡಿ ಧನಂಜಯನು ತೇಜಸ್ಸನ್ನು ನಾಶಗೊಳಿಸಲು ವಾರುಣಾಸ್ತ್ರದಿಂದ ಅದನ್ನು ಸುತ್ತಲಿನಿಂದ ಮುಚ್ಚಿದನು. ಅರ್ಜುನನ ಹಸ್ತಲಾಘವದಿಂದ ಮತ್ತು ಸುತ್ತುವರೆದಿದ್ದ ಆ ತೇಜಸ್ಸಿನಿಂದಾಗಿ ಭೀಮಸೇನನು ವಾರುಣಾಸ್ತ್ರದಿಂದ ಸುತ್ತುವರೆಯಲ್ಪಟ್ಟಿದ್ದುದನ್ನು ಯಾರೂ ಗಮನಿಸಲಿಲ್ಲ. ರಥ-ಅಶ್ವ-ಸೂತನೊಡನೆ ದ್ರೋಣಪುತ್ರನ ಅಸ್ತ್ರದಿಂದ ಸಂವೃತನಾಗಿದ್ದ ಭೀಮನು ಧಗಧಗಿಸುತ್ತಿರುವ ಅಗ್ನಿಯೊಳಗೆ ಇಟ್ಟಿರುವ ಇನ್ನೊಂದು ಅಗ್ನಿಯಂತೆಯೇ ಪ್ರಕಾಶಿಸಿದನು. ರಾತ್ರಿಯು ಕಳೆಯಲು ನಕ್ಷತ್ರಗಳು ಅಸ್ತಗಿರಿಯ ಕಡೆ ಹೋಗುವಂತೆ ಆ ಬಾಣಗಳು ಭೀಮಸೇನನ ರಥದ ಮೇಲೆಯೇ ಬೀಳುತ್ತಿದ್ದವು. ದ್ರೋಣಪುತ್ರನ ಅಸ್ತ್ರದಿಂದ ಆವೃತರಾದ ಭೀಮ, ಅವನ ರಥ, ಕುದುರೆ ಮತ್ತು ಸಾರಥಿಗಳು, ಬೆಂಕಿಯ ಅಂತರ್ಗತರಾದರು. ಸಮಯದಲ್ಲಿ ಸಚರಾಚರ ಜಗತ್ತೆಲ್ಲವನ್ನೂ ಭಸ್ಮಮಾಡಿ ಅಗ್ನಿಯು ವಿಭುವಿನ ಮುಖವನ್ನು ಪ್ರವೇಶಿಸುವಂತೆ ಆ ಅಸ್ತ್ರವು ಭೀಮನನ್ನು ಆವರಿಸಿತು. ಸೂರ್ಯನು ಅಗ್ನಿಯನ್ನು ಮತ್ತು ಅಗ್ನಿಯು ದಿವಾಕರನನ್ನು ಪ್ರವೇಶಿಸುವಂತೆ ಆ ತೇಜಸ್ಸು ಭೀಮನನ್ನು ಪ್ರವೇಶಿಸಲು ಅವನು ಎಲ್ಲಿರುವನೆಂದೇ ಯಾರಿಗೂ ತಿಳಿಯದಾಯಿತು. ಆ ಅಸ್ತ್ರವು ಭೀಮನ ರಥವನ್ನು ಆವರಿಸಿದುದನ್ನು ನೋಡಿ, ತನಗೆ ಎದುರಾಳಿಗಳ್ಯಾರೂ ಇಲ್ಲವೆಂದು ದ್ರೌಣಿಯ ಬಲವು ಇನ್ನೂ ಉಲ್ಬಣಗೊಂಡಿತು. ಪಾಂಡವರ ಸರ್ವಸೇನೆಗಳೂ ಅಸ್ತ್ರಗಳನ್ನು ಕೆಳಗಿಟ್ಟು ಮೂಢರಂತಾಗಿದ್ದರು. ಯುಧಿಷ್ಠಿರನೇ ಮೊದಲಾದ ಮಹಾರಥರು ಯುದ್ಧದಿಂದ ವಿಮುಖರಾಗಿದ್ದರು. ಆಗ ವೀರ ಅರ್ಜುನ ಮತ್ತು ಮಹಾದ್ಯುತಿ ವಾಸುದೇವರು ತ್ವರೆಮಾಡಿ ರಥದಿಂದ ಕೆಳಕ್ಕೆ ಹಾರಿ ಭೀಮನಿದ್ದಲ್ಲಿಗೆ ಓಡಿದರು.

ಆ ಮಹಾಬಲಿಗಳಿಬ್ಬರೂ ದ್ರೋಣಪುತ್ರನ ಅಸ್ತ್ರಬಲದಿಂದ ಹುಟ್ಟಿದ್ದ ತೇಜಸ್ಸನ್ನು ಮಾಯೆಯಿಂದ ಪ್ರವೇಶಿಸಿ ಭೀಮನ ಬಳಿ ಬಂದರು. ಅಸ್ತ್ರಗಳನ್ನು ಕೆಳಗಿಟ್ಟಿದುದರಿಂದ ಮತ್ತು ವಾರುಣಾಸ್ತ್ರಪ್ರಯೋಗದಿಂದ ಆ ಅಸ್ತ್ರದಿಂದ ಹುಟ್ಟಿದ್ದ ಅಗ್ನಿಯು ಆ ವೀರ್ಯವಂತ ಕೃಷ್ಣರಿಬ್ಬರನ್ನೂ ಪೀಡಿಸಲಿಲ್ಲ. ಆಗ ನಾರಾಯಣಾಸ್ತ್ರವನ್ನು ಶಾಂತಗೊಳಿಸಲೋಸುಗ ಆ ನರನಾರಾಯಣರು ಬಲವನ್ನುಪಯೋಗಿಸಿ ಭೀಮನನ್ನೂ ಅವನ ಸರ್ವ ಆಯುಧಗಳನ್ನೂ ಎಳೆದು ಕೆಳಗಿಳಿಸಿದರು. ಕೆಳಗೆ ಎಳೆಯಲ್ಪಡುತ್ತಿರುವಾಗಲೂ ಕೂಡ ಮಹಾರಥ ಕೌಂತೇಯನು ಗರ್ಜಿಸುತ್ತಿರಲು ದ್ರೌಣಿಯ ಆ ದುರ್ಜಯ ಘೋರ ಅಸ್ತ್ರವು ಹೆಚ್ಚುತ್ತಲೇ ಇತ್ತು.

ಆಗ ವಾಸುದೇವನು ಅವನಿಗೆ ಹೇಳಿದನು: “ಇದೇನಿದು ಪಾಂಡುನಂದನ! ತಡೆಹಿಡಿದರೂ ನೀನು ಯುದ್ಧಮಾಡುವುದನ್ನು ನಿಲ್ಲಿಸುತ್ತಿಲ್ಲ! ಒಂದುವೇಳೆ ಈ ಸಮಯದಲ್ಲಿ ಕೌರವನಂದನರನ್ನು ಜಯಿಸುವಂತಿದ್ದರೆ ನಾವಿಬ್ಬರು ಕೂಡ ಯುದ್ಧಮಾಡುತ್ತಿದ್ದೆವು. ಈ ನರರ್ಷಭರೂ ಕೂಡ ಯುದ್ಧಮಾಡುತ್ತಿದ್ದರು. ನಿನ್ನವರೆಲ್ಲರೂ ರಥದಿಂದ ಕೆಳಗಿಳಿದಿದ್ದಾರೆ. ನೀನೂ ಕೂಡ ಪರಾಕ್ರಮವನ್ನು ತೋರಿಸದೇ ಬೇಗನೇ ರಥದಿಂದ ಕೆಳಗಿಳಿ!”

ಹೀಗೆ ಹೇಳಿ ಕೃಷ್ಣನು ಕ್ರೋಧದಿಂದ ಸಂರಕ್ತಲೋಚನನಾಗಿ ಸರ್ಪದಂತೆ ಭುಸುಗುಟ್ಟುತ್ತಿದ್ದ ಭೀಮನನ್ನು ರಥದಿಂದ ನೆಲಕ್ಕೆ ಕೆಡವಿದನು. ಯಾವಾಗ ಅವನನ್ನು ಕೆಳಕ್ಕೆ ಎಳೆದರೋ ಮತ್ತು ಆಯುಧಗಳನ್ನು ನೆಲದಮೇಲಿಟ್ಟರೋ ಆಗ ಶತ್ರುಗಳನ್ನು ಸುಡುತ್ತಿದ್ದ ಆ ನಾರಾಯಣಾಸ್ತ್ರವು ಪ್ರಶಾಂತಗೊಂಡಿತು. ವಿಧಿವತ್ತಾಗಿ ದುಃಸ್ಸಹವಾಗಿದ್ದ ಆ ತೇಜಸ್ಸು ಪ್ರಶಾಂತಗೊಳ್ಳಲು ಸರ್ವ ದಿಕ್ಕುಗಳೂ ಉಪದಿಕ್ಕುಗಳೂ ಶುಭ್ರವಾದವು. ಸುಮಂಗಲ ಗಾಳಿಯು ಬೀಸತೊಡಗಿತು. ಮೃಗಪಕ್ಷಿಗಳು ಶಾಂತಗೊಂಡವು. ವಾಹನಗಳು ಮತು ಯೋಧರು ಪ್ರಹೃಷ್ಟಗೊಂಡರು. ಆ ಅಸ್ತ್ರದ ಘೋರ ತೇಜಸ್ಸು ಹೊರಟುಹೋಗಲು ಧೀಮಾನ್ ಭೀಮನು ರಾತ್ರಿಯು ಕಳೆದನಂತರ ಉದಿಸುತ್ತಿರುವ ಸೂರ್ಯನಂತೆ ಪ್ರಕಾಶಿಸಿದನು. ಅಸ್ತ್ರವು ಶಾಂತವಾದುದನ್ನು ನೋಡಿ ಅಳಿದುಳಿದ ಪಾಂಡವ ಸೇನೆಯು ಸಂತೋಷಗೊಂಡು ದುರ್ಯೋಧನನನ್ನು ಸಂಹರಿಸಲು ಬಯಸಿ ಪುನಃ ಯುದ್ಧಸನ್ನದ್ಧವಾಯಿತು.

Leave a Reply

Your email address will not be published. Required fields are marked *