ಹದಿನೇಳನೇ ದಿನದ ಯುದ್ಧ-೪

ಕರ್ಣ-ಧೃಷ್ಟದ್ಯುಮ್ನರ ಯುದ್ಧ

ರಾಜನ ಹಿತಾಕಾಂಕ್ಷೀ ಮಹಾಬಲ ಕರ್ಣನಾದರೋ ಸಾತ್ಯಕಿಯನ್ನು ಗೆದ್ದು ರಣದಲ್ಲಿ ಉಗ್ರ ದ್ರೋಣಹಂತಾರ ಧೃಷ್ಟದ್ಯುಮ್ನನನ್ನು ಎದುರಿಸಿ ಹೋದನು. ಒಂದು ಆನೆಯು ಇನ್ನೊಂದು ಆನೆಯ ಹಿಂಭಾಗವನ್ನು ದಂತಗಳಿಂದ ತಿವಿಯುವಂತೆ ಶೈನೇಯನು ವೇಗವಾಗಿ ಶರಗಳಿಂದ ಕರ್ಣನನ್ನು ಪೀಡಿಸುತ್ತಾ ಅವನ ಹಿಂದೆಯೇ ಹೋದನು. ಆಗ ಮಹಾರಣದಲ್ಲಿ ಕರ್ಣ-ಪಾರ್ಷತರ ಮಧ್ಯೆ ಮತ್ತು ಕೌರವ ಯೋಧರ ಮಹಾಯುದ್ಧವು ನಡೆಯಿತು. ಆಗ ಕರ್ಣನು ತ್ವರೆಮಾಡಿ ಪಾಂಚಾಲರನ್ನು ಆಕ್ರಮಣಿಸಿದನು. ಮಧ್ಯಾಹ್ನದ ಆ ಸಮಯದಲ್ಲಿ ಎರಡೂ ಪಕ್ಷಗಳಲ್ಲಿ ಆನೆ-ಕುದುರೆ-ಮನುಷ್ಯರ ವಿನಾಶವು ನಡೆಯಿತು. ಜಯವನ್ನು ಬಯಸಿದ ಪಾಂಚಾಲರಾದರೋ ತ್ವರೆಮಾಡಿ ಪಕ್ಷಿಗಳು ವೃಕ್ಷವನ್ನು ಹೇಗೋ ಹಾಗೆ ಕರ್ಣನನ್ನು ಎಲ್ಲಕಡೆಗಳಿಂದ ಆಕ್ರಮಣಿಸಿದರು. ಕ್ರುದ್ಧನಾದ ಆಧಿರಥಿಯು ಆ ಮನಸ್ವಿಗಳನ್ನು ಅಯ್ದಾಯ್ದುಕೊಂಡು ಬಾಣಾಗ್ರಗಳಿಂದ ಸಂಹರಿಸಲು ಉಪಕ್ರಮಿಸಿದನು. ವ್ಯಾಘ್ರಕೇತು, ಸುಶರ್ಮ, ಶಂಕ, ಉಗ್ರ, ಧನಂಜಯ, ಶುಕ್ಲ, ರೋಚಮಾನ, ಸಿಂಹಸೇನ ಮತ್ತು ದುರ್ಜಯ – ಈ ವೀರರು ರಥವೇಗದಿಂದ ಕ್ರುದ್ಧನಾಗಿ ಸಾಯಕಗಳನ್ನು ಪ್ರಯೋಗಿಸುತ್ತಿದ್ದ ಕರ್ಣನನ್ನು ಸುತ್ತುವರೆದರು. ಯುದ್ಧಮಾಡುತ್ತಿದ್ದ ಆ ಎಂಟು ಶೂರರನ್ನು ರಾಧೇಯನು ಎಂಟು ನಿಶಿತ ಶರಗಳಿಂದ ಸಂಹರಿಸಿದನು. ಪ್ರತಾಪವಾನ್ ಸೂತಪುತ್ರನು ಇನ್ನೂ ಅನೇಕ ಸಹಸ್ರಾರು ಯೋಧರನ್ನು ಸಂಹರಿಸಿದನು. ಸಂಕ್ರುದ್ಧನಾಗಿದ್ದ ಅವನು ಸಮರದಲ್ಲಿ ಚೇದಿದೇಶದ ವಿಷ್ಣು, ವಿಷ್ಣುಕರ್ಮ, ದೇವಾಪಿ, ಭದ್ರ, ದಂಡ, ಚಿತ್ರ, ಚಿತ್ರಾಯುಧ, ಹರಿ, ಸಿಂಹಕೇತು, ರೋಚಮಾನ, ಮತ್ತು ಮಹಾರಥ ಶಲಭರನ್ನೂ ಸಂಹರಿಸಿದನು. ಅವರ ಪ್ರಾಣಗಳನ್ನು ಹೀರಿಕೊಳ್ಳುತ್ತಿದ್ದ ಮತ್ತು ಅಂಗಾಂಗಗಳು ರಕ್ತಸಿಕ್ತವಾಗಿದ್ದ ಆ ರಾಧೇಯನ ಶರೀರವು ರುದ್ರನ ವಿಶಾಲ ಶರೀರದಂತೆ ಕಾಣುತ್ತಿತ್ತು. ಅಲ್ಲಿ ಕರ್ಣನ ಶರಗಳಿಂದ ಪ್ರಹರಿಸಲ್ಪಟ್ಟ ಆನೆಗಳು ಭೀತರಾಗಿ ಎಲ್ಲಕಡೆ ಓಡಿಹೋಗುತ್ತಾ ಮಹಾ ವ್ಯಾಕುಲವನ್ನುಂಟುಮಾಡುತ್ತಿದ್ದವು. ಕರ್ಣನ ಸಾಯಕಗಳಿಂದ ಪೀಡಿತ ಆನೆಗಳು ವಿವಿಧ ಕೂಗುಗಳನ್ನು ಕೂಗುತ್ತಾ ವಜ್ರಾಹತ ಪರ್ವತಗಳಂತೆ ಭೂಮಿಯ ಮೇಲೆ ಬೀಳುತ್ತಿದ್ದವು. ಕರ್ಣನು ಹೋಗುತ್ತಿದ್ದ ಮಾರ್ಗಗಳಲ್ಲಿ ಎಲ್ಲಕಡೆಗಳಲ್ಲಿ ಆನೆ-ಕುದುರೆ-ಮನುಷ್ಯರು ಮತ್ತು ರಥಗಳು ರಣಭೂಮಿಯನ್ನು ತುಂಬಿ ಬೀಳುತ್ತಿದ್ದವು.

ಕರ್ಣನು ರಣದಲ್ಲಿ ಮಾಡಿದಂತ ಸಾಹಸಕರ್ಮವನ್ನು ಕೌರವರ ಕಡೆಯ ಯಾರೂ – ಭೀಷ್ಮನಾಗಲೀ, ದ್ರೋಣನಾಗಲೀ ಅಥವಾ ಇನ್ಯಾರೇ ಆಗಲೀ – ಯುದ್ಧದಲ್ಲಿ ಮಾಡಿದುದನ್ನು ನೋಡಿರಲಿಲ್ಲ. ಸೂತಪುತ್ರನು ಆನೆಗಳು, ರಥಗಳು, ಕುದುರೆಗಳು ಮತ್ತು ಮನುಷ್ಯರೊಂದಿಗೆ ಮಹಾಕದನವಾಡಿದನು. ಮೃಗಗಳ ಮಧ್ಯದಲ್ಲಿ ಸಿಂಹವು ನಿರ್ಭಯವಾಗಿ ಸಂಚರಿಸುತ್ತಿರುವುದು ಕಾಣುವಂತೆ ಪಾಂಚಾಲರ ಮಧ್ಯದಲ್ಲಿ ಕರ್ಣನು ಭೀತಿಯಿಲ್ಲದೇ ಸಂಚರಿಸುತ್ತಿದ್ದನು. ಭಯಗೊಂಡ ಮೃಗಗಣಗಳನ್ನು ಸಿಂಹವು ಹೇಗೆ ದಿಕ್ಕಾಪಾಲಾಗಿ ಓಡಿಸುವುದೋ ಹಾಗೆ ಕರ್ಣನು ಪಾಂಚಾಲರ ರಥಸಮೂಹಗಳನ್ನು ಓಡಿಸುತ್ತಿದ್ದನು. ಸಿಂಹನಿಗೆ ಸಿಲುಕಿದ ಮೃಗಗಳು ಹೇಗೆ ಜೀವಂತವಾಗಿರುವುದಿಲ್ಲವೋ ಹಾಗೆ ಕರ್ಣನಿಗೆ ಸಿಲುಕಿದ ಮಹಾರಥರು ಜೀವದಿಂದಿರುತ್ತಿರಲಿಲ್ಲ. ಪ್ರಜ್ವಲಿಸುತ್ತಿರುವ ವೈಶ್ವಾನರನಿಗೆ ಸಿಲುಕಿದ ಜನರು ಹೇಗೆ ಸುಟ್ಟುಹೋಗುವರೋ ಹಾಗೆ ರಣದಲ್ಲಿ ಕರ್ಣಾಗ್ನಿಯಿಂದ ಸೃಂಜಯರು ದಹಿಸಿಹೋಗುತ್ತಿದ್ದರು. ಕರ್ಣನು ತನ್ನ ಹೆಸರನ್ನು ಹೇಳಿಕೊಂಡು ಅನೇಕ ಶೂರಸಮ್ಮತ ಚೇದಿ-ಕೇಕಯ-ಪಾಂಚಾಲರನ್ನು ಸಂಹರಿಸಿದನು. ಕರ್ಣನ ವಿಕ್ರಮವನ್ನು ನೋಡಿ ಒಬ್ಬ ಪಾಂಚಲ್ಯನೂ ಯುದ್ಧದಲ್ಲಿ ಆಧಿರಥಿಯಿಂದ ಜೀವಸಹಿತ ಉಳಿಯಲಾರನು ಎಂದು ತೋರಿತು. ಯುದ್ಧದಲ್ಲಿ ಪಾಂಚಾಲರನ್ನು ಸದೆಬಡಿದು ಸೂತಪುತ್ರನು ಸಂಕ್ರುದ್ಧನಾಗಿ ಯುಧಿಷ್ಠಿರನನ್ನು ಆಕ್ರಮಣಿಸಿದನು. ಆಗ ಧೃಷ್ಟದ್ಯುಮ್ನ, ದ್ರೌಪದೇಯರು ಮತ್ತು ನೂರಾರು ಇತರರು ಯುಧಿಷ್ಠಿರನನ್ನು ಸುತ್ತುವರೆದರು. ಶಿಖಂಡೀ, ಸಹದೇವ, ನಕುಲ, ಶತಾನೀಕ, ಜನಮೇಜಯ, ಸಾತ್ಯಕಿ ಮತ್ತು ಅನೇಕ ಪ್ರಭದ್ರಕರು ಧೃಷ್ಟದ್ಯುಮ್ನನನ್ನು ಮುಂದಿರಿಸಿಕೊಂಡು ಯುದ್ಧದಲ್ಲಿ ಕರ್ಣನನ್ನು ಅಸ್ತ್ರ-ಶಸ್ತ್ರಗಳಿಂದ ಪ್ರಹರಿಸುತ್ತಾ ಸಂಚರಿಸುತ್ತಿದ್ದರು. ಗರುಡನು ಸರ್ಪಗಳ ಮೇಲೆ ಬೀಳುವಂತೆ ಯುದ್ಧದಲ್ಲಿ ಕರ್ಣನು ಒಬ್ಬನೇ ಅನೇಕ ಚೇದಿ-ಪಾಂಚಾಲ-ಪಾಂಡವರ ಮೇಲೆ ಎರಗಿದನು. ಸಂಕ್ರುದ್ಧನಾಗಿದ್ದ ಭೀಮಸೇನನಾದರೋ ಒಂಟಿಯಾಗಿ ಕೇಕಯರೊಂದಿಗೆ ಕುರು-ಮದ್ರರನ್ನು ಯುದ್ಧದಲ್ಲಿ ಎದುರಿಸುತ್ತಾ ಬಹಳವಾಗಿ ಶೋಭಿಸಿದನು.

ಭೀಮನ ನಾರಾಚಗಳಿಂದ ಮರ್ಮಗಳು ಭೇದಿಸಲ್ಪಟ್ಟ ಆನೆಗಳು ಹತರಾದ ಗಜಾರೋಹಿಗಳೊಡನೆ ಮೇದಿನಿಯನ್ನೇ ನಡುಗಿಸುತ್ತಾ ಕೆಳಗೆ ಬೀಳುತ್ತಿದ್ದವು. ಹತಗೊಂಡ ಕುದುರೆಗಳೂ, ಕುದುರೆ ಸವಾರರೂ, ಜೀವತೊರೆದ ಪದಾತಿಗಳು ಯುದ್ಧದಲ್ಲಿ ನಿರ್ಭಿನ್ನರಾಗಿ ಬಹಳ ರಕ್ತವನ್ನು ಕಾರುತ್ತಾ ಮಲಗಿದ್ದರು. ಸಹಸ್ರಾರು ರಥಿಗಳು ಬಿದ್ದಿದ್ದರು. ಅವರ ಆಯುಧಗಳೂ ಬಿದ್ದಿದ್ದವು. ಕ್ಷತ-ವಿಕ್ಷತರಾದ ಅವರು ಭೀಮನ ಭಯದಿಂದಲೇ ಪ್ರಾಣಗಳನ್ನು ತೊರೆದಂತೆ ತೋರುತ್ತಿದ್ದರು. ಭೀಮಸೇನನ ಶರಗಳಿಂದ ನಾಶಗೊಂದ ರಥಿಗಳು, ಕುದುರೆಗಳು, ಸಾರಥಿಗಳು, ಪದಾತಿಗಳು ಮತ್ತು ಆನೆಗಳಿಮ್ದ ಯುದ್ಧಭೂಮಿಯು ತುಂಬಿಹೋಗಿತ್ತು. ಭೀಮಸೇನನ ಬಲದಿಂದ ಪೀಡಿತಗೊಂಡು ಗಾಯಗೊಂಡಿದ್ದ ದುರ್ಯೋಧನನ ಸೇನೆಯು ನಿರುತ್ಸಾಹಗೊಂಡು ಸ್ತಬ್ಧವಾಗಿ ನಿಂತುಬಿಟ್ಟಿತ್ತು. ಭರತವಿಲ್ಲದ ಸಮಯದಲ್ಲಿ ಸಮುದ್ರವು ಪ್ರಶಾಂತವಾಗಿರುವಂತೆ ಆ ತುಮುಲ ಮಹಾರಣವು ದೀನವೂ ನಿಶ್ಚೇಷ್ಟವೂ ಆಗಿದ್ದಿತು.

ಆ ಸಮಯದಲ್ಲಿ ಕೂಡ ದುರ್ಯೋಧನನ ಸೇನೆಯು ಕೋಪ, ವೀರ್ಯ, ಬಲಗಳಿಂದ ಕೂಡಿತ್ತು. ಆದರೆ ಅದರ ದರ್ಪವು ಉಡುಗಿಹೋಗಿತ್ತು. ರಕ್ತವು ಸೋರಿ ಅದೇ ರಕ್ತದಿಂದಲೇ ಸೇನೆಯು ತೋಯ್ದುಹೋಯಿತು. ಕ್ರುದ್ಧ ಸೂತಪುತ್ರನು ಪಾಂಡವ ಸೇನೆಯನ್ನು ಮತ್ತು ಭೀಮಸೇನನು ಕುರುಸೇನೆಯನ್ನು ಪಲಾಯನಗೊಳಿಸುತ್ತಾ ಬಹಳವಾಗಿ ಶೋಭಿಸಿದರು.

ಅರ್ಜುನನ ಯುದ್ಧ

ಹಾಗೆ ನೋಡಲು ಅದ್ಭುತವಾಗಿದ್ದ ಆ ರೌದ್ರ ಸಂಗ್ರಾಮವು ನಡೆಯುತ್ತಿರಲು ಸೇನಾಮಧ್ಯದಲ್ಲಿ ಅನೇಕ ಸಂಶಪ್ತಕಗಣಗಳನ್ನು ಸಂಹರಿಸಿ ಜಯಿಗಳಲ್ಲಿ ಶ್ರೇಷ್ಠ ಅರ್ಜುನನು ವಾಸುದೇವನಿಗೆ ಹೇಳಿದನು:

“ಜನಾರ್ದನ! ಯುದ್ಧಮಾಡುತ್ತಿರುವವರ ಸೇನೆಯು ಭಗ್ನವಾಯಿತೆಂದೇ ತಿಳಿ! ಇಗೋ! ಸಿಂಹಗರ್ಜನೆಯನ್ನು ಜಿಂಕೆಗಳು ಹೇಗೋ ಹಾಗೆ ನನ್ನ ಬಾಣಗಳನ್ನು ಸಹಿಸಲಾರದೇ ಸಂಶಪ್ತಕ ಮಹಾರಥರು ಸೇನೆಗಳೊಡನೆ ಓಡಿ ಹೋಗುತ್ತಿದ್ದಾರೆ! ಕೃಷ್ಣ! ಆನೆಯನ್ನು ಕಟ್ಟುವ ಹಗ್ಗದ ಚಿಹ್ನೆಯುಳ್ಳ ಧೀಮತ ಕರ್ಣನು ಮಹಾರಣದಲ್ಲಿ ಸೃಂಜಯರ ಮಹಾಸೇನೆಯನ್ನು ಸೀಳುತ್ತಾ ರಾಜಸೈನ್ಯದ ಮಧ್ಯೆ ಅತ್ತಿತ್ತ ಸಂಚರಿಸುತ್ತಿರುವುದು ಕಾಣುತ್ತಿದೆ. ರಣದಲ್ಲಿ ಕರ್ಣನನ್ನು ಗೆಲ್ಲಲು ಅನ್ಯ ಮಹಾರಥರು ಶಕ್ತರಿಲ್ಲ. ವೀರ್ಯವಂತ ಕರ್ಣನ ಪರಾಕ್ರಮವನ್ನು ನೀನು ತಿಳಿದುಕೊಂಡಿರುವೆ! ನಮ್ಮ ಸೇನೆಗಳನ್ನು ಎಲ್ಲಿ ಕರ್ಣನು ಓಡಿಸುತ್ತಿರುವನೋ ಅಲ್ಲಿಗೆ ಕೊಂಡೊಯ್ಯಿ! ನಿನಗೆ ಶ್ರಮವಾಗದಿದ್ದರೆ ಅಥವಾ ನಿನಗೆ ಇಷ್ಟವಾದರೆ ಈ ರಣರಂಗವನ್ನು ಬಿಟ್ಟು ಮಹಾರಥ ಸೂತಪುತ್ರನಿರುವಲ್ಲಿಗೆ ಕರೆದೊಯ್ಯಿ!”

ಇದನ್ನು ಕೇಳಿ ಗೋವಿಂದನು ನಸುನಗುತ್ತಾ “ಪಾಂಡವ! ಬೇಗನೇ ಕೌರವರನ್ನು ಸಂಹರಿಸು!” ಎಂದು ಅರ್ಜುನನಿಗೆ ಹೇಳಿದನು. ಅನಂತರ ಗೋವಿಂದಪ್ರೇರಿತ ಹಂಸವರ್ಣದ ಕುದುರೆಗಳು ಕೃಷ್ಣ-ಪಾಂಡವರನ್ನು ಹೊತ್ತು ಕೌರವ ಮಹಾ ಸೇನೆಯನ್ನು ಪ್ರವೇಶಿಸಿದವು. ಕೇಶವನಿಂದ ನಡೆಸಲ್ಪಟ್ಟ ಕಾಂಚನಭೂಷಿತ ಶ್ವೇತಹಯಗಳು ಪ್ರವೇಶಿಸುತ್ತಿದ್ದಂತೆಯೇ ಕೌರವ ಸೇನೆಯು ನಾಲ್ಕು ದಿಕ್ಕುಗಳಿಗೂ ಚದುರಿತು. ಕ್ರುದ್ಧರಾಗಿದ್ದ, ಕೋಪದಿಂದ ಕಣ್ಣುಗಳು ಕೆಂಪಾಗಿದ್ದ ಮಹಾದ್ಯುತೀ ಕೇಶವಾರ್ಜುನರು ಆ ಮಹಾಸೇನೆಯನ್ನು ಸೀಳಿ ಪ್ರವೇಶಿಸಿ ಬಹಳವಾಗಿ ರಾರಾಜಿಸಿದರು. ಋತ್ವಿಜರಿಂದ ವಿಧಿವತ್ತಾಗಿ ಅಹ್ವಾನಿಸಲ್ಪಟ್ಟ ಅಶ್ವಿನೀ ದೇವತೆಗಳಂತೆ ಯುದ್ಧಕ್ಕೆ ಆಹ್ವಾನಿಸಲ್ಪಟ್ಟ ಆ ಇಬ್ಬರು ಯುದ್ಧಶೌಂಡರೂ ರಣಾಧ್ವರವನ್ನು ಪ್ರವೇಶಿಸಿದರು. ಮಹಾಹವದಲ್ಲಿ ಚಪ್ಪಾಳೆ ಶಬ್ಧಗಳನ್ನು ಕೇಳಿ ರೋಷಗೊಂಡ ಮದ್ದಾನೆಗಳಂತೆ ಆ ಇಬ್ಬರು ನರವ್ಯಾಘ್ರರೂ ಕ್ರುದ್ಧರಾಗಿ ವೇಗವಾಗಿ ಕುರುಸೇನೆಯನ್ನು ಪ್ರವೇಶಿಸಿದರು. ಫಲ್ಗುನನು ಆ ರಥಸೇನೆಯನ್ನೂ ಅಶ್ವಸೇನೆಗಳನ್ನು ಭೇದಿಸಿ ಒಳನುಗ್ಗಿ ಪಾಶಹಸ್ತ ಅಂತಕನಂತೆ ಸೇನಾಮಧ್ಯದಲ್ಲಿ ಸಂಚರಿಸುತ್ತಿದ್ದನು. ಕೌರವ ಸೇನೆಗಳ ಮಧ್ಯದಲ್ಲಿ ಅವನ ಯುದ್ಧವಿಕ್ರಮವನ್ನು ಕಂಡು ದುರ್ಯೋಧನನು ಸಂಶಪ್ತಕಗಣಗಳನ್ನು ಪುನಃ ಪ್ರಚೋದಿಸಿದನು.

ಆಗ ಮಹಾಹವದಲ್ಲಿ ಆ ಮಹಾರಥ ಸಂಶಪ್ತಕರು ಸಾವಿರ ರಥಗಳು, ಮೂರು ನೂರು ಆನೆಗಳು, ಹದಿನಾಲ್ಕು ಸಾವಿರ ಕುದುರೆಗಳು ಮತ್ತು ಎರಡು ಲಕ್ಷ ಶೂರ ಧನ್ವಿ ಯುದ್ಧನಿಪುಣ ಪದಾತಿಗಳೊಂದಿಗೆ ಗರ್ಜಿಸುತ್ತಾ ಆ ಇಬ್ಬರು ವೀರರನ್ನು ಮುತ್ತಿಗೆ ಹಾಕಿ ಆಕ್ರಮಣಿಸಿದರು. ಹಾಗೆ ಸಮರದಲ್ಲಿ ಶರಗಳಿಂದ ಆಚ್ಛಾದಿತನಾದ ಪಾರ್ಥನು ಪಾಶಹಸ್ತ ಅಂತಕನಂತೆ ರೌದ್ರರೂಪವನ್ನು ತಾಳಿ ಸಂಶಪ್ತಕರನ್ನು ಸಂಹರಿಸುತ್ತಾ ಪ್ರೇಕ್ಷಣೀಯನಾದನು. ಆಗ ಕಿರೀಟಿಯಿಂದ ನಿರಂತರವಾಗಿ ಪ್ರಯೋಗಿಸಲ್ಪಟ್ಟ ಸುವರ್ಣವಿಭೂಷಿತ ವಿದ್ಯುತ್ ಪ್ರಭೆಯ ಬಾಣಗಳಿಂದ ಸ್ವಲ್ಪವೂ ಸ್ಥಳವಿಲ್ಲದಂತೆ ಆಕಾಶವು ತುಂಬಿಹೋಯಿತು. ಕಿರೀಟಿಯ ಭುಜಗಳಿಂದ ಹೊರಟ ಆ ಮಹಾಶರಗಳಿಂದ ತುಂಬಿಹೋಗಿದ್ದ ಆ ಪ್ರದೇಶವು ಸರ್ಪಗಳಿಂದ ತುಂಬಿರುವೋ ಎನ್ನುವಂತೆ ಕಾಣುತ್ತಿತ್ತು. ಅಮೇಯಾತ್ಮ ಪಾಂಡವನು ರುಕ್ಮಪುಂಖಗಳ ಸನ್ನತಪರ್ವ ಶರಗಳನ್ನು ಎಲ್ಲದಿಕ್ಕುಗಳಲ್ಲಿಯೂ ಸುರಿಸಿದನು. ಹತ್ತು ಸಾವಿರ ಸಂಶಪ್ತಕ ಪಾರ್ಥಿವರನ್ನು ಸಂಹರಿಸಿ ಮಹಾರಥ ಕೌಂತೇಯನು ತ್ವರೆಮಾಡಿ ಶತ್ರುಸೇನೆಯ ಕಡೆ ಧಾವಿಸಿದನು.

ಶತ್ರುಪಕ್ಷವನ್ನು ಹೊಕ್ಕು ಪಾರ್ಥನು ವಾಸವನು ದಾನವ ಸೇನೆಯನ್ನು ಹೇಗೋ ಹಾಗೆ ಬಾಣಗಳಿಂದ ಕಾಂಬೋಜರಕ್ಷಿತ ಸೇನೆಯನ್ನು ಮಥಿಸಿದನು. ಆ ಧ್ವೇಷೀ ಆತತಾಯಿನರ ಶಸ್ತ್ರಗಳನ್ನೂ, ಕೈಗಳನ್ನೂ, ಬಾಹುಗಳನ್ನೂ ಮತ್ತು ಶಿರಗಳನ್ನೂ ಅರ್ಜುನನು ಭಲ್ಲಗಳಿಂದ ತುಂಡರಿಸಿದನು. ಭಿರುಗಾಳಿಗೆ ಸಿಲುಕಿ ಉರುಳಿದ ಬಹುಶಾಖೆಗಳುಳ್ಳ ವೃಕ್ಷಗಳಂತೆ ಶತ್ರು ಯೋಧರು ಅಂಗಾಗಗಳು ತುಂಡಾಗಿ ನಿರಾಯುಧರಾಗಿ ಭೂಮಿಯ ಮೇಲೆ ಬಿದ್ದರು. ಆನೆ-ಕುದುರೆ-ರಥ-ಪದಾತಿಗಳನ್ನು ಭಿರುಗಾಳಿಯಂತೆ ಸಂಹರಿಸುತ್ತಿದ್ದ ಅರ್ಜುನನನ್ನು ಕಾಂಬೋಜರಾಜ ಸುದಕ್ಷಿಣನ ತಮ್ಮನು ಶರವೃಷ್ಟಿಯಿಂದ ಅಭಿಷೇಚಿಸಿದನು. ಅರ್ಜುನನು ಅವನ ಪರಿಘೋಪಮ ಬಾಹುಗಳನ್ನು ಎರಡು ಅರ್ಧಚಂದ್ರಗಳಿಂದ ತುಂಡರಿಸಿ ಕ್ಷುರದಿಂದ ಪೂರ್ಣಚಂದ್ರನಂತಿರುವ ಮುಖವುಳ್ಳ ಅವನ ಶಿರವನ್ನು ಅಪಹರಿಸಿದನು. ಆಗ ವಜ್ರಾಯುಧಪ್ರಹಾರದಿಂದ ಒಡೆದು ಕೆಳಗೆ ಬಿದ್ದ ಗಿರಿಯ ಶಿಖರದಂತೆ ಅವನು ತನ್ನದೇ ರಕ್ತದಲ್ಲಿ ತೋಯ್ದು ರಥದಿಂದ ಕೆಳಕ್ಕೆ ಬಿದ್ದನು. ಕಮಲಪತ್ರಾಕ್ಷ ಪ್ರಿಯದರ್ಷನ ಕಾಂಚನ ಸ್ಥಂಭದಂತೆ ಉನ್ನತನಾಗಿದ್ದ ಕಾಂಬೋಜ ಸುದಕ್ಷಿಣನ ಕಡೆಯ ತಮ್ಮನು ಹತನಾದುದನ್ನು ಎಲ್ಲರೂ ನೋಡಿದರು.

ಆಗ ಪುನಃ ನೋಡಲು ಅದ್ಭುತವಾಗಿದ್ದ ಘೋರ ಯುದ್ಧವು ಪ್ರಾರಂಭವಾಯಿತು. ಅಲ್ಲಿ ಯುದ್ಧಮಾಡುತ್ತಿದ್ದ ಯೋಧರು ನಾನಾವಸ್ಥೆಗಳಿಗೀಡಾದರು. ಒಂದೊಂದೇ ಬಾಣದಿಂದ ಹತರಾಗಿ ರಕ್ತಸಿಕ್ತ ಕಾಂಬೋಜ, ಯವನ ಮತ್ತು ಶಕರಿಂದ ಹಾಗೂ ಕುದುರೆಗಳಿಂದ ಸರ್ವವೂ ರಕ್ತಮಯವಾಯಿತು. ಕುದುರೆ-ಸಾರಥಿಗಳು ಹತರಾದ ರಥಗಳಿಂದಲೂ, ಸವಾರರು ಹತರಾದ ಕುದುರೆಗಳಿಂದಲೂ, ಮಾವುತರು ಹತರಾದ ಆನೆಗಳಿಂದಲೂ ಅನ್ಯೋನ್ಯರಿಂದ ಹತಗೊಂಡ ಮಹಾಕಾಯದ ಆನೆಗಳಿಂದಲೂ ಘೋರ ಜನಕ್ಷಯವು ನಡೆಯಿತು.

ಅರ್ಜುನ-ಅಶ್ವತ್ಥಾಮರ ಯುದ್ಧ

ಸೇನೆಯ ಪಕ್ಷ-ಪ್ರಪಕ್ಷಗಳೆರಡನ್ನೂ ವಧಿಸುತ್ತಿದ್ದ ಅರ್ಜುನನನ್ನು ದ್ರೌಣಿಯು ತ್ವರೆಮಾಡಿ ಆಕ್ರಮಣಿಸಿದನು. ಸುವರ್ಣ ವಿಭೂಷಿತ ಮಹಾಧನುಸ್ಸನ್ನು ಟೇಂಕರಿಸುತ್ತಾ ಅವನು ಭಾಸ್ಕರನು ತನ್ನ ಕಿರಣಗಳನ್ನು ಹೇಗೋ ಹಾಗೆ ಘೋರ ಶರಗಳನ್ನು ಪುಂಖಾನುಪುಂಖವಾಗಿ ಪ್ರಯೋಗಿಸಿದನು. ದ್ರೌಣಿಯಿಂದ ಬಿಡಲ್ಪಟ್ಟ ಆ ಶರಗಳು ರಥದಲ್ಲಿದ್ದ ಕೃಷ್ಣ-ಧನಂಜಯರಿಬ್ಬರನ್ನೂ ಎಲ್ಲಕಡೆಗಳಿಂದ ಮುಚ್ಚಿಬಿಟ್ಟವು. ಆಗ ಪ್ರತಾಪವಾನ್ ಭಾರದ್ವಾಜನು ಯುದ್ಧದಲ್ಲಿ ನೂರು ತೀಕ್ಷ್ಣ ಶರಗಳಿಂದ ಮಾಧವ-ಪಾಂಡವರಿಬ್ಬರನ್ನೂ ನಿಶ್ಚೇಷ್ಟರನ್ನಾಗಿ ಮಾಡಿದನು. ಚರಾಚರಗಳೆಲ್ಲವನ್ನೂ ರಕ್ಷಿಸುವ ಅವರಿಬ್ಬರೂ ಶರಗಳಿಂದ ಮುಚ್ಚಿಹೋದುದನ್ನು ನೋಡಿ ಸ್ಥಾವರ-ಜಂಗಮಗಳಲ್ಲಿ ಹಾಹಾಕಾರವುಂಟಾಯಿತು. “ಇಂದು ಲೋಕಗಳು ಉಳಿಯುವವೇ?” ಎಂದು ಚಿಂತಿಸುತ್ತಾ ಸಿದ್ಧ-ಚಾರಣ ಸಂಘಗಳು ಎಲ್ಲಕಡೆಗಳಿಂದ ಬಂದು ಅಲ್ಲಿ ಸೇರಿದವು. ಯುದ್ಧದಲ್ಲಿ ಕೃಷ್ಣಾರ್ಜುನರನ್ನು ಆ ರೀತಿ ಆಚ್ಛಾದಿಸಿದ ದ್ರೌಣಿಯ ಪರಾಕ್ರಮವನ್ನು ಇದರ ಹಿಂದೆ ಎಂದೂ ಯಾರೂ ನೋಡಿರಲಿಲ್ಲ. ಸಿಂಹದ ಗರ್ಜನೆಯಂತೆ ರಣದಲ್ಲಿ ಶತ್ರುಗಳನ್ನು ಭಯಗೊಳಿಸುತ್ತಿದ್ದ ದ್ರೌಣಿಯ ಧನುಸ್ಸಿನ ಟೇಂಕಾರ ಶಬ್ಧವನ್ನು ಬಹುಷಃ ಯಾರೂ ಕೇಳಿರಲಿಲ್ಲ. ಮೋಡಗಳ ಮಧ್ಯೆ ಪ್ರಕಾಶಿಸುವ ಮಿಂಚಿನಂತೆ ಯುದ್ಧದಲ್ಲಿ ಎಡ-ಬಲಗಳಲ್ಲಿ ಬಾಣಗಳನ್ನು ಹೊರಹಾಕುತ್ತಿದ್ದ ಅವನ ಶಿಂಜನಿಯು ಪ್ರಕಾಶಿಸುತ್ತಿತ್ತು.

ಅಗ ದ್ರೋಣಜನನ್ನು ನೋಡಿ ಅರ್ಜುನನೂ ಕೂಡ ಪರಮ ವಿಮೂಢನಾದನು. ಅಶ್ವತ್ಥಾಮನಿಂದ ತನ್ನ ವಿಕ್ರಮವು ಕುಂದುಗೊಂಡಿತೆಂದೇ ಅವನು ತಿಳಿದುಕೊಂಡನು. ಆಗ ಅಶ್ವತ್ಥಾಮನ ಭಯಂಕರ ಮುಖವನ್ನು ನೋಡಲೂ ಸಾಧ್ಯವಾಗುತ್ತಿರಲಿಲ್ಲ. ಮಹಾರಣದಲ್ಲಿ ದ್ರೌಣಿ ಮತ್ತು ಪಾಂಡವ ಇಬ್ಬರೂ ಈ ರೀತಿ ವರ್ತಿಸುತ್ತಿರುವುದನ್ನು, ದ್ರೋಣಪುತ್ರನು ವರ್ಧಿಸುತ್ತಿರುವುದನ್ನೂ ಮತ್ತು ಕೌಂತೇಯನು ಕ್ಷೀಣನಾಗುತ್ತಿರುವುದನ್ನು ನೋಡಿ ಕೃಷ್ಣನಿಗೆ ಮಹಾರೋಷವುಂಟಾಯಿತು. ರೋಷದಿಂದ ಭುಸುಗುಟ್ಟುತ್ತಾ, ಕಣ್ಣಿನಿಂದಲೇ ಸುಟ್ಟುಬಿಡುವನೋ ಎನ್ನುವಂತೆ ಅವನು ಸಂಗ್ರಾಮದಲ್ಲಿ ದ್ರೌಣಿಯನ್ನು ಮತ್ತು ಫಲ್ಗುನನನ್ನು ಪದೇ ಪದೇ ನೋಡುತ್ತಿದ್ದನು. ಆಗ ಕ್ರುದ್ಧನಾಗಿದ್ದರೂ ಕೃಷ್ಣನು ಪ್ರೀತಿಯಿಂದ ಪಾರ್ಥನಿಗೆ ಹೇಳಿದನು: “ಪಾರ್ಥ! ಈ ಯುದ್ಧದಲ್ಲಿ ನಿನ್ನ ಅತಿ ಅದ್ಭುತವರ್ತನೆಯನ್ನು ನೋಡುತ್ತಿದ್ದೇನೆ! ಇಂದು ದ್ರೋಣಪುತ್ರನು ನಿನ್ನನ್ನು ಮೀರಿ ಯುದ್ಧಮಾಡುತ್ತಿದ್ದಾನೆ! ಗಾಂಡೀವವನ್ನು ಕೈಯಲ್ಲಿ ಹಿಡಿದೇ ರಥದಲ್ಲಿ ನಿಂತಿರುವೆಯಲ್ಲವೇ? ನಿನ್ನ ಬಾಹುಗಳು ಕುಶಲವಾಗಿವೆ ತಾನೇ? ನಿನ್ನ ಶರೀರದಲ್ಲಿ ವೀರ್ಯವಿದೆ ತಾನೇ?”

ಕೃಷ್ಣನು ಹೀಗೆ ಹೇಳಿದೊಡನೆಯೇ ಅರ್ಜುನನು ಹದಿನಾಲ್ಕು ಭಲ್ಲಗಳನ್ನು ಕೈಗೆತ್ತಿಕೊಂಡು ತ್ವರೆಮಾಡಿ ದ್ರೌಣಿಯ ರಥ, ಧ್ವಜ, ಚತ್ರ, ಪತಾಕ, ಶಕ್ತಿ ಮತ್ತು ಗದೆಗಳನ್ನು ಕತ್ತರಿಸಿದನು. ಅವನ ಜತ್ರುದೇಶ – ಕುತ್ತಿಗೆಯ ಎಲುಬುಪ್ರದೇಶ – ವನ್ನು ವತ್ಸದಂತಗಳಿಂದ ಜೋರಾಗಿ ಹೊಡೆಯಲು ಅಶ್ವತ್ಥಾಮನು ಪರಮ ಮೂರ್ಛಿತನಾಗಿ ಧ್ವಜಸ್ತಂಭವನ್ನು ಹಿಡಿದು ಕುಳಿತುಬಿಟ್ಟನು. ಕಿರೀಟಿಯ ಭಯದಿಂದ ಪೀಡಿತನಾಗಿ ಮೂರ್ಛಿತನಾದ ಅವನನ್ನು ರಕ್ಷಿಸಲೋಸುಗ ಅವನ ಸಾರಥಿಯು ಧನಂಜಯನಿರುವ ರಣಭೂಮಿಯಿಂದ ಕರೆದುಕೊಂಡು ಹೋದನು.

ಇದೇ ಸಮಯದಲ್ಲಿ ಅರ್ಜುನನು ದುರ್ಯೋಧನನು ನೋಡುತ್ತಿದ್ದಂತೆಯೇ ಕೌರವ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದನು. ಅರ್ಜುನನು ಸಂಶಪ್ತಕರನ್ನೂ, ವೃಕೋದರನು ಕುರುಗಳನ್ನೂ, ಪಾಂಚಾಲ್ಯನು ವಸುಷೇಣನನ್ನೂ ರಣದಲ್ಲಿ ಸಂಹರಿಸತೊಡಗಿದರು.

ತ್ವರೆಮಾಡಿ ಹೋಗುತ್ತಿದ್ದ ಕೃಷ್ಣನು ಪುನಃ ಅರ್ಜುನನಿಗೆ ಮೆಲ್ಲನೆ ಹೇಳಿದನು: “ಕೌರವ್ಯ! ಪಲಾಯನ ಮಾಡುತ್ತಿರುವ ಪಾಂಡವ ರಾಜರನ್ನು ನೋಡು!ಮಹಾರಂಗದಲ್ಲಿ ಜ್ವಲಿಸುತ್ತಿರುವ ಪಾವಕನಂತಿರುವ ಕರ್ಣನನ್ನು ನೋಡು! ಇಗೋ ಮಹೇಷ್ವಾಸ ಭೀಮನು ರಣರಂಗಕ್ಕೆ ಹಿಂದಿರುಗಿ ಬರುತ್ತಿದ್ದಾನೆ. ಅವನನ್ನೇ ಅನುಸರಿಸಿ ಧೃಷ್ಟದ್ಯುಮ್ನಪುರೋಗಮರಾದ ಪಾಂಚಾಲರು, ಸೃಂಜಯರು ಮತ್ತು ಪಾಂಡವರು ಹಿಂದಿರುಗುತ್ತಿದ್ದಾರೆ. ಹಾಗೆ ಹಿಂದಿರುಗುವಾಗಲೇ ಪಾರ್ಥ ಬೀಮನು ಶತ್ರುಬಲವನ್ನು ಮಹಾಸಂಖ್ಯೆಗಳಲ್ಲಿ ಧ್ವಂಸಗೊಳಿಸುತ್ತಿದ್ದಾನೆ. ಓಡಿಹೋಗುತ್ತಿರುವ ಕೌರವರನ್ನು ಕರ್ಣನು ಇಲ್ಲಿ ತಡೆಯುತ್ತಿದ್ದಾನೆ! ಇಗೋ ಇಲ್ಲಿ ದ್ರೌಣಿಯು ಹೋಗುತ್ತಿದ್ದಾನೆ ಮತ್ತು ರಣದಲ್ಲಿ ಅವನನ್ನೇ ಅನುಸರಿಸಿ ಧೃಷ್ಟದ್ಯುಮ್ನನು ಹೋಗುತ್ತಿದ್ದಾನೆ!” ಹೀಗೆ ವಾಸುದೇವನು ಕಿರೀಟಿಗೆ ಎಲ್ಲವನ್ನು ತೋರಿಸಿ ಹೇಳಿದನು. ಆಗ ಮಹಾಘೋರ ಮಹಾರಣವು ನಡೆಯಿತು.

ಕರ್ಣ-ಧೃಷ್ಟದ್ಯುಮ್ನರ ಯುದ್ಧ

ಅನಂತರ ಪುನಃ ಕುರು-ಸೃಂಜಯರು ಯುದ್ಧದಲ್ಲಿ ತೊಡಗಿದರು. ಪಾರ್ಥರು ಯುಧಿಷ್ಠಿರನನ್ನು ಮುಂದೆಮಾಡಿಕೊಂಡು ಮತ್ತು ಕೌರವರು ಕರ್ಣನನ್ನು ಮುಂದೆಮಾಡಿಕೊಂಡು ಯುದ್ಧಮಾಡುತ್ತಿದ್ದರು. ಆಗ ಕರ್ಣ ಮತ್ತು ಪಾಂಡವರ ನಡುವೆ ಯಮರಾಷ್ಟ್ರವನ್ನು ವಿವರ್ಧಿಸುವಂತಹ ಭಯಂಕರ ಲೋಮಹರ್ಷಣ ಸಂಗ್ರಾಮವು ಪ್ರಾರಂಭವಾಯಿತು. ಆ ತುಮುಲ ಸಂಗ್ರಾಮದಲ್ಲಿ ರಕ್ತವು ನೀರಿನಂತೆ ಹರಿಯುತ್ತಿತ್ತು. ಶೂರ ಸಂಶಪ್ತಕರು ಸ್ವಲ್ಪಮಾತ್ರವೇ ಉಳಿದುಕೊಂಡಿದ್ದರು. ಆಗ ಪಾಂಡವರು ಮತ್ತು ಧೃಷ್ಟದ್ಯುಮ್ನನು ಸರ್ವರಾಜರೊಂದಿಗೆ ಕರ್ಣನನ್ನೇ ಆಕ್ರಮಣಿಸಿದರು. ಯುದ್ಧದಲ್ಲಿ ಪ್ರಹೃಷ್ಟರಾಗಿ ಬರುತ್ತಿರುವ ಆ ವಿಜಯಾಕಾಂಕ್ಷಿಗಳನ್ನು ರಣದಲ್ಲಿ ಕರ್ಣನೊಬ್ಬನೇ ಮೋಡಗಳನ್ನು ಪರ್ವತವು ಹೇಗೋ ಹಾಗೆ ಸಹಿಸಿಕೊಂಡನು. ಕರ್ಣನನ್ನು ಎದುರಿಸಿ ಆ ಮಹಾರಥರು ಮೋಡಗಳು ಪರ್ವತವನ್ನು ಸಮೀಪಿಸಿ ಮಳೆಸುರಿಸುವಂತೆ ಅವನ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು. ಆವರ ಮಧ್ಯೆ ಅಲ್ಲಿ ಲೋಮಹರ್ಷಣ ಸಂಗ್ರಾಮವು ನಡೆಯಿತು. ಧೃಷ್ಟದ್ಯುಮ್ನನಾದರೋ ರಾಧೇಯನನ್ನು ನತಪರ್ವಣ ಶರಗಳಿಂದ ಹೊಡೆಯುತ್ತಾ ಸಂಕ್ರುದ್ಧನಾಗಿ ನಿಲ್ಲು ನಿಲ್ಲೆಂದು ಹೇಳಿದನು. ಕರ್ಣನಾದರು ವಿಜಯ ಧನುಸ್ಸನ್ನು ಟೇಂಕರಿಸುತ್ತಾ ಪಾರ್ಷತನ ಧನುಸ್ಸನ್ನು ಸರ್ಪವಿಷಗಳಂತಿದ್ದ ಬಾಣಗಳಿಂದ ತುಂಡರಿಸಿ, ಸಂಕ್ರುದ್ಧನಾಗಿ ಪಾರ್ಷತನನ್ನು ಒಂಭತ್ತು ಶರಗಳಿಂದ ಹೊಡೆದನು. ಅವುಗಳು ಆ ಮಹಾತ್ಮನ ಹೇಮಮಯ ಕವಚವನ್ನು ಭೇದಿಸಿ ರಕ್ತದಿಂದ ತೋಯ್ದು ಇಂದ್ರಗೋಪಗಳಂತೆ ಹೊಳೆಯುತ್ತಿದ್ದವು. ತುಂಡಾದ ಧನುಸ್ಸನ್ನೆಸೆದು ಧೃಷ್ಟದ್ಯುಮ್ನನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸರ್ಪವಿಷದಂತಿದ್ದ ಶರಗಳಿಂದ ಮತ್ತು ಎಪ್ಪತ್ತು ಸನ್ನತಪರ್ವ ಶರಗಳಿಂದ ಕರ್ಣನನ್ನು ಹೊಡೆದನು. ಕರ್ಣನೂ ಕೂಡ ಪಾರ್ಷತನನ್ನು ನಿಶಿತ ಶರಗಳಿಂದ ಹೊಡೆದನು. ಅವನ ಮೇಲೆ ಕರ್ಣನು ಸಂಕ್ರುದ್ಧನಾಗಿ ಮೃತ್ಯುದಂಡದಂತಿರುವ ಇನ್ನೊಂದು ಕನಕಭೂಷಣ ಶರವನ್ನು ಪ್ರಯೋಗಿಸಿದನು.

ಕರ್ಣ-ಸಾತ್ಯಕಿಯರ ಯುದ್ಧ

ಅತಿವೇಗದಲ್ಲಿ ಅವನ ಮೇಲೆ ಬೀಳುತ್ತಿದ್ದ ಆ ಘೋರರೂಪದ ಶರವನ್ನು ಶೈನೇಯನು ಕೈಚಳಕದಿಂದ ಏಳು ಭಾಗಗಳನ್ನಾಗಿ ತುಂಡರಿಸಿದನು ತನ್ನ ಬಾಣವನ್ನು ಶರಗಳಿಂದ ನಿರಸನಗೊಳಿಸಿದುದನ್ನು ನೋಡಿ ಕರ್ಣನು ಸಾತ್ಯಕಿಯನ್ನು ಶರವರ್ಷಗಳಿಂದ ಎಲ್ಲಕಡೆಗಳಿಂದಲೂ ತಡೆದನು. ಬಳಿಕ ಸಮರದಲ್ಲಿ ಏಳು ನಾರಾಚಗಳಿಂದ ಅವನನ್ನು ಹೊಡೆಯಲು ಅದಕ್ಕೆ ಪ್ರತಿಯಾಗಿ ಶೈನೇಯನು ಹೇಮಭೂಷಿತ ಶರಗಳಿಂದ ಕರ್ಣನನ್ನು ಪ್ರಹರಿಸಿದನು. ಆಗ ಕಣ್ಣುಗಳಿಂದ ನೋಡಲೂ ಕಿವಿಗಳಿಂದ ಕೇಳಲೂ ಭಯಂಕರವಾದ ಯುದ್ಧವು ಪ್ರಾರಂಭವಾಯಿತು. ಅದು ಘೋರವೂ ವಿಚಿತ್ರವೂ ಎಲ್ಲರೀತಿಗಳಲ್ಲಿ ಪ್ರೇಕ್ಷಣೀಯವೂ ಆಗಿತ್ತು. ಸಮರದಲ್ಲಿ ಕರ್ಣ-ಶೈನೇಯರ ಆ ಕರ್ಮಗಳನ್ನು ನೋಡಿ ಅಲ್ಲಿದ್ದ ಸರ್ವ ಭೂತಗಳಲ್ಲಿಯೂ ಲೋಮಹರ್ಷವುಂಟಾಯಿತು.

ಅಶ್ವತ್ಥಾಮ-ಧೃಷ್ಟದ್ಯುಮ್ನರ ಯುದ್ಧ

ಇದರ ಮಧ್ಯದಲ್ಲಿ ದ್ರೌಣಿಯು ಪಾರ್ಷತನನ್ನು ಆಕ್ರಮಣಿಸಿದನು. ಸಂಕ್ರುದ್ಧನಾದ ದ್ರೌಣಿಯು ಧೃಷ್ಟದ್ಯುಮ್ನನನ್ನು ದೂರದಿಂದಲೇ ಸಂಬೋಧಿಸಿ “ಬ್ರಹ್ಮಘ್ನ! ನಿಲ್ಲು! ನಿಲ್ಲು! ಇಂದು ನೀನು ನನ್ನಿಂದ ಜೀವಸಹಿತವಾಗಿ ಹೋಗುವುದಿಲ್ಲ!” ಎಂದನು. ಹೀಗೆ ಹೇಳಿ ಅಶ್ವತ್ಥಾಮನು ಪಾರ್ಷತನನ್ನು ಘೋರರೂಪದ ತೇಜಸ್ಸುಳ್ಳ ನಿಶಿತ ಶರಗಳಿಂದ ಪರಮ ಶಕ್ತಿಯನ್ನುಪಯೋಗಿಸಿ ಪ್ರಯತ್ನಪಟ್ಟು ಪ್ರಹರಿಸಿದನು. ಸಮರದಲ್ಲಿ ಹೇಗೆ ದ್ರೌಣಿಯು ಪಾರ್ಷತನನ್ನು ನೋಡಿ ಅವನೇ ತನ್ನ ಮೃತ್ಯುವೆಂದು ತಿಳಿದು ಖಿನ್ನಮನಸ್ಕನಾದನೋ ಹಾಗೆ ರಣದಲ್ಲಿ ದ್ರೌಣಿಯನ್ನು ನೋಡಿದ ಪರವೀರಹ ಪಾರ್ಶತನೂ ಖಿನ್ನಮನಸ್ಕನಾದನು. ರಣದಲ್ಲಿ ನಿಂತಿದ್ದ ಧೃಷ್ಟದ್ಯುಮ್ನನನ್ನು ನೋಡಿ ವೀರ ದ್ರೌಣಿಯು ಕ್ರೋಧದಿಂದ ಭುಸುಗುಟ್ಟುತ್ತಾ ಪಾರ್ಷತನನ್ನು ಆಕ್ರಮಣಿಸಿದನು. ಅನ್ಯೋನ್ಯರನ್ನು ಕಂಡೊಡನೆಯೇ ಅವರಿಬ್ಬರೂ ಪರಮ ಕ್ರುದ್ಧರಾದರು. ಆಗ ಪ್ರತಾಪವಾನ್ ದ್ರೋಣಪುತ್ರನು ತ್ವರೆಮಾಡಿ ಸಮೀಪದಲ್ಲಿದ್ದ ಧೃಷ್ಟದ್ಯುಮ್ನನನಿಗೆ ಹೇಳಿದನು: “ಪಾಂಚಾಲಕುಲಕಳಂಕನೇ! ಇಂದು ನಾನು ನಿನ್ನನ್ನು ಮೃತ್ಯುವಿಗೆ ಒಪ್ಪಿಸುತ್ತೇನೆ! ಹಿಂದೆ ನೀನು ಎಸಗಿದ ದ್ರೋಣವಧೆಯು ಪಾಪ ಕರ್ಮವಾಗಿತ್ತು. ಅದೇ ಇಂದು ನಿನ್ನನ್ನು, ಎಷ್ಟು ಪಾಪಿಷ್ಟವಾಗಿತ್ತೋ ಅಷ್ಟು ಸಂತಾಪಗೊಳಿಸುತ್ತದೆ!  ಮೂಢ! ಯುದ್ಧದಲ್ಲಿ ಪಾರ್ಥನು ನಿನ್ನನ್ನು ರಕ್ಷಿಸಲು ನಿಲ್ಲದಿದ್ದರೆ ಅಥವಾ ನೀನು ಪಲಾಯನ ಮಾಡದಿದ್ದರೆ ನಿನ್ನನ್ನು ಸಂಹರಿಸುತ್ತೇನೆ. ಸತ್ಯವನ್ನೇ ಹೇಳುತ್ತಿದ್ದೇನೆ!”

ಇದನ್ನು ಕೇಳಿ ಪ್ರತಾಪವಾನ್ ಧೃಷ್ಟದ್ಯುಮ್ನನು ಉತ್ತರಿಸಿದನು: “ನಿನಗೆ ಸರಿಯಾದ ಉತ್ತರವನ್ನು ನನ್ನ ಈ ಖಡ್ಗವೇ ಕೊಡಲಿದೆ! ಯುದ್ಧದಲ್ಲಿ ಪ್ರಯತ್ನಪಡುತ್ತಿದ್ದ ನಿನ್ನ ತಂದೆಗೂ ಇದೇ ಉತ್ತರವನ್ನು ಕೊಟ್ಟಿತ್ತು! ಕೇವಲ ಬ್ರಾಹ್ಮಣನೆಂದು ಕರೆಯಿಸಿಕೊಳ್ಳುತ್ತಿದ್ದ ನಿನ್ನ ಆ ದ್ರೋಣನನ್ನು ನಾನು ಸಂಹರಿಸಿರುವಾಗ ಈ ಯುದ್ಧದಲ್ಲಿ ನಿನ್ನನ್ನು ನಾನು ವಿಕ್ರಮದಿಂದ ಏಕೆ ಕೊಲ್ಲಬಾರದು?”

ಹೀಗೆ ಹೇಳಿ ಸೇನಾಪತಿ ಪಾರ್ಷತನು ನಿಶಿತ ಬಾಣಗಳಿಂದ ದ್ರೌಣಿಯನ್ನು ಪ್ರಹರಿಸಿದನು. ಆಗ ಸಂಕ್ರುದ್ಧನಾದ ದ್ರೌಣಿಯು ಸನ್ನತಪರ್ವ ಶರಗಳಿಂದ ರಣದಲ್ಲಿ ಎಲ್ಲಕಡೆಗಳಿಂದ ಧೃಷ್ಟದ್ಯುಮ್ನನನ್ನು ಮುಚ್ಚಿಬಿಟ್ಟನು. ಸಹಸ್ರಾರು ಶರಗಳಿಂದ ಮುಚ್ಚಿಹೋಗಿದ್ದುದರಿಂದ ಯೋಧರಿಗೆ ಸುತ್ತಲೂ ಅಂತರಿಕ್ಷವಾಗಲೀ ದಿಕ್ಕುಗಳಾಗಲೀ ಕಾಣದಂತಾಯಿತು. ಹಾಗೆ ಪಾರ್ಷತನೂ ಕೂಡ ಸೂತಪುತ್ರನು ನೋಡುತ್ತಿದ್ದಂತೆಯೇ ಯುದ್ಧಶೋಭೀ ದ್ರೌಣಿಯನ್ನು ಶರಗಳಿಂದ ಮುಚ್ಚಿಬಿಟ್ಟನು. ಎಲ್ಲಕಡೆಗಳಿಂದಲೂ ಪ್ರೇಕ್ಷಣೀಯನಾಗಿದ್ದ ರಾಧೇಯನಾದರೋ ಒಬ್ಬನೇ ಪಾಂಡವರೊಂದಿಗೆ ಪಾಂಚಾಲರನ್ನೂ, ದ್ರೌಪದೇಯರನ್ನೂ, ಸಾತ್ಯಕಿಯನ್ನೂ ತಡೆಯುತ್ತಿದ್ದನು. ಧೃಷ್ಟದ್ಯುಮ್ನನಾದರೋ ಸಮರದಲ್ಲಿ ದ್ರೌಣಿಯ ಬಿಲ್ಲನ್ನು ತುಂಡರಿಸಿದನು. ಆಗ ಸಮರದಲ್ಲಿ ವೇಗವಂತ ಅಶ್ವತ್ಥಾಮನು ತುಂಡಾದ ಬಿಲ್ಲನ್ನು ಎಸೆದು ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಸರ್ಪವಿಷಗಳಂತಿದ್ದ ಘೋರ ಬಾಣಗಳನ್ನು ಹೂಡಿದನು. ಅವನು ನಿಮಿಷಮಾತ್ರದಲ್ಲಿ ಆ ಶರಗಳಿಂದ ಪಾರ್ಷತನ ಧನುಸ್ಸು-ಶಕ್ತಿ-ಗದೆ-ಧ್ವಜ-ಕುದುರೆಗಳು-ಸಾರಥಿ ಮತ್ತು ರಥವನ್ನೂ ನಾಶಗೊಳಿಸಿದನು. ಧನುಸ್ಸು ತುಂಡಾಗಿದ್ದ ವಿರಥನೂ, ಹತಾಶ್ವನೂ, ಹತಸಾರಥಿಯೂ ಆಗಿದ್ದ ಧೃಷ್ಟದ್ಯುಮ್ನನು ಶತಚಂದ್ರಗಳಂತೆ ಹೊಳೆಯುತ್ತಿದ್ದ ವಿಪುಲ ಖಡ್ಗವನ್ನು ತೆಗೆದುಕೊಂಡನು. ಅವನು ರಥದಿಂದ ಕೆಳಗಿಳಿಯುವುದರೊಳಗೇ ಮಹಾರಥ ದ್ರೌಣಿಯು ಬೇಗನೇ ಬಲ್ಲಗಳಿಂದ ಖಡ್ಗವನ್ನು ಕತ್ತರಿಸಿದನು. ಅದೊಂದು ಅದ್ಭುತವೇ ಆಗಿತ್ತು! ವಿರಥನಾಗಿದ್ದ, ಅಶ್ವಗಳನ್ನು ಕಳೆದುಕೊಂಡಿದ್ದ, ಧನುಸ್ಸುತುಂಡಾಗಿದ್ದ ಧೃಷ್ಟದ್ಯುಮ್ನನನ್ನು ಅಶ್ವತ್ಥಾಮನು ಅನೇಕ ಶರಸಮೂಹಗಳಿಂದ ಗಾಯಗೊಳಿಸಿದನು. ಆದರೆ ಮಹಾರಥ ದ್ರೌಣಿಯು ಎಷ್ಟು ಪ್ರಯತ್ನಪಟ್ಟರೂ ಬಾಣಗಳಿಂದ ಧೃಷ್ಟದ್ಯುಮ್ನನನ್ನು ಸಂಹರಿಸಲು ಆಗಲಿಲ್ಲ. ಅವನನ್ನು ಬಾಣಗಳಿಂದ ಸಂಹರಿಸಲು ಆಗದಿರಲು ಧನುರ್ವೀರ ದ್ರೌಣಿಯು ಬಿಲ್ಲ-ಬಾಣಗಳನ್ನು ಬಿಸುಟು ತ್ವರೆಮಾಡಿ ಪಾರ್ಷತನ ಕಡೆ ನುಗ್ಗಿದನು. ಓಡಿ ಬರುತ್ತಿದ್ದ ಅವನ ವೇಗವು ಹರಿದಾಡುವ ಸರ್ಪಗಳನ್ನು ಭಕ್ಷಿಸಲು ಅಂತರಿಕ್ಷದಿಂದ ಕೆಳಕ್ಕೆ ಎರಗುವ ಗರುಡಪಕ್ಷಿಯ ವೇಗಕ್ಕೆ ಸಮನಾಗಿತ್ತು.

ಇದೇ ಸಮಯದಲ್ಲಿ ಮಾಧವನು ಅರ್ಜುನನಿಗೆ ಇಂತೆಂದನು: “ಪಾರ್ಥ! ನೋಡು! ದ್ರೌಣಿಯು ಪಾರ್ಷತನ ವಧೆಗೆ ವಿಪುಲ ಪ್ರಯತ್ನಪಡುತ್ತಿರುವುದನ್ನು ನೋಡು. ನಿಸ್ಸಂಶಯವಾಗಿಯೂ ಅವನನ್ನು ಕೊಂದೇಬಿಡುತ್ತಾನೆ! ಸಾವಿನ ದವಡೆಯಂತಿರುವ ದ್ರೌಣಿಯ ಕೈಯಲ್ಲಿ ಸಿಲುಕಿರುವ ಶತ್ರುತಾಪನ ಪಾರ್ಷತನನ್ನು ವಿಮೋಚಿಸು!”

ಹೀಗೆ ಹೇಳಿ ವಾಸುದೇವನು ದ್ರೌಣಿಯಿದ್ದಲ್ಲಿಗೆ ಕುದುರೆಗಳನ್ನು ಓಡಿಸಿದನು. ಚಂದ್ರಸಂಕಾಶ ಆ ಕುದುರೆಗಳು ಕೇಶವನಿಂದ ಪ್ರಚೋದಿತಗೊಂಡು ಆಕಾಶವನ್ನೇ ಕುಡಿದುಬಿಡುವವೋ ಎನ್ನುವಂತೆ ವೇಗವಾಗಿ ದ್ರೌಣಿರಥದ ಬಳಿ ಬಂದವು. ಮಹಾವೀರ್ಯರಾದ ಕೃಷ್ಣ-ಧನಂಜಯರಿಬ್ಬರು ಬಂದಮೇಲೂ ದ್ರೌಣಿಯು ಧೃಷ್ಟದ್ಯುಮ್ನನ ವಧೆಯ ಪ್ರತತ್ನವನ್ನು ಮಾಡುತ್ತಲೇ ಇದ್ದನು. ಧೃಷ್ಟದ್ಯುಮ್ನನನ್ನು ಎಳೆದಾಡುತ್ತಿರುವುದನ್ನು ನೋಡಿ ಪಾರ್ಥನು ದ್ರೌಣಿಯ ಮೇಲೆ ಶರಗಳನ್ನು ಪ್ರಯೋಗಿಸಿದನು. ಗಾಂಡೀವದಿಂದ ಪ್ರಹರಿಸಲ್ಪಟ್ಟ ಆ ಹೇಮವಿಕೃತ ಶರಗಳು – ಹಾವುಗಳು ಬಿಲವನ್ನು ಹೊಗುವಂತೆ – ದ್ರೌಣಿಯ ಶರೀರವನ್ನು ಹೊಕ್ಕವು. ಆ ಘೋರ ಶರಗಳಿಂದ ಗಾಯಗೊಂಡ ದ್ರೋಣಪುತ್ರನು ತನ್ನ ರಥವನ್ನೇರಿದನು. ಧನಂಜಯನ ಶರಗಳಿಂದ ಪೀಡಿತನಾದ ಅವನು ಶ್ರೇಷ್ಠ ಧನುಸ್ಸನ್ನು ಹಿಡಿದು ಪಾರ್ಥನನ್ನು ಸಾಯಕಗಳಿಂದ ಹೊಡೆದನು. ಇದರ ಮಧ್ಯದಲ್ಲಿ ವೀರ ಸಹದೇವನು ಶತ್ರುತಾಪನ ಪಾರ್ಷತನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ದೂರಕರೆದುಕೊಂಡು ಹೋದನು.

ಅರ್ಜುನನೂ ಕೂಡ ದ್ರೌಣಿಯನ್ನು ಪತ್ರಿಗಳಿಂದ ಹೊಡೆದನು. ಅವನನ್ನು ಸಂಕ್ರುದ್ಧನಾದ ದ್ರೋಣಪುತ್ರನು ಬಾಹುಗಳು ಮತ್ತು ಎದೆಗೆ ಹೊಡೆದನು. ರಣದಲ್ಲಿ ಕ್ರೋಧಿತನಾದ ಪಾರ್ಥನು ಇನ್ನೊಂದು ಕಾಲದಂಡದಂತಿರುವ ಕಾಲಸಮ್ಮಿತ ನಾರಾಚವನ್ನು ದ್ರೋಣಪುತ್ರನ ಮೇಲೆ ಪ್ರಯೋಗಿಸಿದನು. ಆ ಮಹಾದ್ಯುತಿ ಬಾಣವು ಬ್ರಾಹ್ಮಣನ ಹೆಗಲಿನ ಮೇಲೆ ಬಿದ್ದಿತು. ಸಂಯುಗದಲ್ಲಿ ಶರವೇಗದಿಂದ ವಿಹ್ವಲನಾದ ಅಶ್ವತ್ಥಾಮನು ಪೀಠಕ್ಕೆ ಒರಗಿ ಮೂರ್ಛಿತನಾದನು. ಆಗ ಪಾರ್ಥನೊಂದಿಗೆ ದ್ವೈರಥ ಯುದ್ಧವನ್ನು ಬಯಸುತ್ತಿದ್ದ ಕರ್ಣನು ಕ್ರುದ್ಧನಾಗಿ ಸಮರದಲ್ಲಿ ವಿಜಯ ಧನುಸ್ಸನ್ನು ಸೆಳೆಯುತ್ತಾ ಅರ್ಜುನನನ್ನು ಬಾರಿ ಬಾರಿಗೂ ನೋಡುತ್ತಿದ್ದನು. ಅಶ್ವತ್ಥಾಮನು ಮೂರ್ಛೆಹೋದುದನ್ನು ನೋಡಿದ ಸಾರಥಿಯು ತ್ವರೆಮಾಡಿ ಆ ಶತ್ರುಕರ್ಶನ ವೀರನನ್ನು ರಣರಂಗದಿಂದ ಕೊಂಡೊಯ್ದನು.  ಪಾರ್ಷತನು ಬಿಡುಗಡೆ ಹೊಂದಿದುದನ್ನೂ ದ್ರೋಣಪುತ್ರನು ಪೀಡಿತನಾದುದನ್ನೂ ನೋಡಿ ವಿಜಯೋತ್ಸಾಹೀ ಪಾಂಚಾಲರು ಜೋರಾಗಿ ಗರ್ಜಿಸಿದರು. ಸಾವಿರಾರು ದಿವ್ಯ ವಾದ್ಯಗಳು ಮೊಳಗಿದವು. ಆ ಘೋರ ಮಹಾದ್ಭುತವನ್ನು ನೋಡಿ ಸಿಂಹನಾದಗಳಾದವು. ಹೀಗೆ ಮಾಡಿ ಪಾರ್ಥ ಧನಂಜಯನು ವಾಸುದೇವನಿಗೆ “ಕೃಷ್ಣ! ಸಂಶಪ್ತಕರಲ್ಲಿಗೆ ಕೊಂಡೊಯ್ಯಿ! ಅದೊಂದು ನನ್ನ ಪರಮ ಕಾರ್ಯವುಳಿದಿದೆ!” ಎಂದನು. ಪಾಂಡವನಾಡಿದ ಮಾತನ್ನು ಕೇಳಿ ದಾಶಾರ್ಹನು ಎತ್ತರ ಪತಾಕೆಯುಳ್ಳ ಮನೋವೇಗ ರಥವನ್ನು ನಡೆಸಿದನು.

ಕೃಷ್ಣನು ಅರ್ಜುನನಿಗೆ ನಡೆಯುತ್ತಿರುವ ಯುದ್ಧವನ್ನು ತೋರಿಸಿ ವರ್ಣಿಸಿದುದು

ಈ ಮಧ್ಯದಲ್ಲಿ ಯುಧಿಷ್ಠಿರನನ್ನು ತೋರಿಸುತ್ತಿರುವನೋ ಎನ್ನುವಂತೆ ಕೃಷ್ಣನು ಪಾರ್ಥನಿಗೆ ಈ ಮಾತನ್ನಾಡಿದನು:  “ಪಾಂಡವ! ಇಗೋ ನಿನ್ನ ಭ್ರಾತ ಪಾರ್ಥನನ್ನು ಸಂಹರಿಸಲು ಬಯಸಿ ಧಾರ್ತರಾಷ್ಟ್ರರು ವೇಗದಿಂದ ಬೆನ್ನಟ್ಟಿಕೊಂಡು ವೇಗದಿಂದ ಹೋಗುತ್ತಿದ್ದಾರೆ! ಹಾಗೆಯೇ ಯುಧಿಷ್ಠಿರನನ್ನು ರಕ್ಷಿಸುತ್ತಾ ಮಹಾವೇಗದ ಪಾಂಚಾಲರು ಅವನನ್ನು ಅನುಸರಿಸಿ ಹೋಗುತ್ತಿದ್ದಾರೆ! ಇಗೋ ದುರ್ಯೋಧನನು ಯುದ್ಧವಿಶಾರದ ಸಹೋದರರೆಲ್ಲರನ್ನೊಡಗೂಡಿ ರಥಾನೀಕದೊಂದಿಗೆ ಯುಧಿಷ್ಠಿರನನ್ನು ಸಂಹರಿಸಲು ಬಯಸಿ ಅವನನ್ನೇ ಹಿಂಬಾಲಿಸುತ್ತಿದ್ದಾನೆ! ಇಗೋ! ಯಾಚಕನು ಐಶ್ವರ್ಯವಂತನನ್ನು ಅರಸಿಕೊಂಡು ಹೋಗುವಂತೆ ಧಾರ್ತರಾಷ್ಟ್ರರು ಆನೆ-ಕುದುರೆ-ರಥ-ಪದಾತಿಗಳೊಂದಿಗೆ ಯುಧಿಷ್ಠಿರನನ್ನು ಹಿಡಿಯಲು ಹೋಗುತ್ತಿದ್ದಾರೆ! ಅಮೃತವನ್ನು ಅಪಹರಿಸಲು ಬಯಸಿದ್ದ ದೈತ್ಯರನ್ನು ಶಕ್ರ-ಅಗ್ನಿಯರು ಹೇಗೋ ಹಾಗೆ ಅವರನ್ನು ಸಾತ್ವತ-ಭೀಮ ಇಬ್ಬರೂ ತಡೆಹಿಡಿದು ನಿಲ್ಲಿಸಿದರೂ ಅವರು ಯುಧಿಷ್ಠಿರನನ್ನು ಹಿಂಬಾಲಿಸಿ ಹೋಗುತ್ತಿದ್ದಾರೆ! ವರ್ಷಾಕಾಲದಲ್ಲಿ ತುಂಬಿಹರಿಯುವ ಪ್ರವಾಹಗಳು ತಡೆಯಲ್ಪಟ್ಟರೂ ಸಮುದ್ರವನ್ನು ಸೇರುವಂತೆ ಈ ಮಹಾರಥರು ಬಹಳವಾಗಿ ತಡೆಯಲ್ಪಟ್ಟರೂ ಪುನಃ ಪುನಃ ಪಾಂಡವನಿರುವಲ್ಲಿಗೇ ಹೋಗುತ್ತಿದ್ದಾರೆ. ಈ ಬಲವಂತ ಮಹೇಷ್ವಾಸರು ಸಿಂಹನಾದಗೈಯುತ್ತಿದ್ದಾರೆ. ಶಂಖಗಳನ್ನು ಊದುತ್ತಾ ಧನುಸ್ಸನ್ನು ಟೇಂಕರಿಸುತ್ತಾ ಹೋಗುತ್ತಿದ್ದಾರೆ! ನಿನಗೆ ಮಂಗಳವಾಗಲಿ! ಕುಂತೀಪುತ್ರ ಯುಧಿಷ್ಠಿರನು ಮೃತ್ಯುವಿನ ಬಾಜಿಗೆ ಸಿಲುಕಿದನೋ ಎಂದು ನನಗನ್ನಿಸುತ್ತಿದೆ. ಆಗ್ನಿಯಲ್ಲಿನ ಆಹುತಿಯಂತೆ ದುರ್ಯೋಧನನ ವಶವಾಗಿರಬಹುದು! ಧಾರ್ತರಾಷ್ಟ್ರನ ಸೇನೆಯು ಯಾವರೀತಿಯಲ್ಲಿದೆಯೆಂದರೆ ಬಾಣಗಳಿಗೆ ಸಿಲುಕಿದವನು ಶಕ್ರನೇ ಆದರೂ ಅವನಿಗೆ ಬಿಡುಗಡೆಯಿರಲಿಕ್ಕಿಲ್ಲ. ಶೂರ ದುರ್ಯೋಧನ, ದ್ರೌಣಿ, ಕೃಪ, ಮತ್ತು ಕರ್ಣರ ಬಾಣವೇಗಗಳು ಪರ್ವತಗಳನ್ನೂ ಸೀಳಬಲ್ಲವು! ದುರ್ಯೋಧನನು ಶೀಘ್ರಾತಿಶೀಘ್ರವಾಗಿ ಬಿಡುವ ಶರಸಮೂಹಗಳ ವೇಗವನ್ನು ರಣದಲ್ಲಿ ಯಾರು ತಾನೇ ಸಹಿಸಿಕೊಂಡಾರು? ಯುಧಿಷ್ಠಿರನು ಕರ್ಣನಿಂದ ವಿಮುಖನಾಗಿದ್ದಾನೆ. ಧೃತರಾಷ್ಟ್ರ ಪುತ್ರರೊಂದಿಗೆ ರಾಧೇಯನು ರಣದಲ್ಲಿ ಪಾಂಡವಶ್ರೇಷ್ಠನನ್ನು ಪೀಡಿಸಲು ಸಮರ್ಥನಿದ್ದಾನೆ. ಅವರೊಂದಿಗೆ ಮತ್ತು ಇತರರೊಂದಿಗೆ ಸಂಗ್ರಾಮದಲ್ಲಿ ಆ ಸಂಯತಾತ್ಮ ಪಾರ್ಥನು ಹೋರಾಡುತ್ತಿರಲು ಇಗೋ ಅವನ ಕವಚವನ್ನು ಆ ಮಹಾರಥರು ಕತ್ತರಿಸಿದರು! ಉಪವಾಸಗಳಿಂದ ಕೃಶನಾಗಿರುವ ಯುಧಿಷ್ಠಿರನಲ್ಲಿ ಕೇವಲ ಬ್ರಹ್ಮಬಲವಿದೆಯೇ ಹೊರತು ಕ್ಷತ್ರಿಯನ ಅತಿಬಲವು ಇಲ್ಲವಾಗಿದೆ. ಕೌರವರ ಸಿಂಹನಾದವನ್ನು ಅಮರ್ಷಣ ಭೀಮಸೇನನು ಸಹಿಸಿಕೊಂಡಿದ್ದಾನಾದರೆ ಯುಧಿಷ್ಠಿರನು ಇನ್ನು ಜೀವಿಸಿಲ್ಲ ಎಂದೇ ನನಗನ್ನಿಸುತ್ತದೆ. ಧಾರ್ತರಾಷ್ಟ್ರರು ಪುನಃ ಪುನಃ ಗರ್ಜಿಸುತ್ತಿದ್ದಾರೆ. ಸಂಗ್ರಾಮದಲ್ಲಿ ಜಯವನ್ನು ಬಯಸಿದ ಅವರು ಮಹಾಶಂಖಗಳನ್ನು ಮೊಳಗಿಸುತ್ತಿದ್ದಾರೆ. ಯುಧಿಷ್ಠಿರನನ್ನು ಸಂಹರಿಸಿ ಎಂದು ಕರ್ಣನು ಧಾರ್ತರಾಷ್ಟ್ರ ಮಹಾಬಲರನ್ನು ಪ್ರಚೋದಿಸುತ್ತಲೇ ಇದ್ದಾನೆ! ಸ್ಥೂಣಕರ್ಣ, ಇಂದ್ರಜಾಲ, ಮತ್ತು ಪಾಶುಪತಾಸ್ತ್ರಗಳಿಂದ ರಾಜನನ್ನು ಮುಸುಕುಹಾಕುತ್ತಾ ಮಹಾರಥರು ಹಿಂಬಾಲಿಸುತ್ತಿದ್ದಾರೆ. ಈ ಸಮಯದಲ್ಲಿ ನಾವು ಅವನನ್ನು ರಕ್ಷಿಸಬೇಕು ಎಂದು ನನಗನ್ನಿಸುತ್ತದೆ. ಪಾತಾಲದಲ್ಲಿ ಮುಳುಗುತ್ತಿರುವವನನ್ನು ಮೇಲಕ್ಕೆ ತರುವಂತೆ ತ್ವರೆಮಾಡಬೇಕಾದ ಕಾಲದಲ್ಲಿ ತ್ವರೆಮಾಡುತ್ತಿರುವ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಪಾಂಚಾಲರು ಪಾಂಡವರೊಂದಿಗೆ ಅವನನ್ನು ಅನುಸರಿಸಿ ಹೋಗುತ್ತಿದ್ದಾರೆ. ರಾಜನ ಧ್ವಜವು ಕಾಣುತ್ತಿಲ್ಲ! ನಕುಲ-ಸಹದೇವರು, ಸಾತ್ಯಕಿ, ಶಿಖಂಡಿ, ಧೃಷ್ಟದ್ಯುಮ್ನ, ಭೀಮ, ಶತಾನೀಕ, ಸರ್ವ ಪಾಂಚಾಲರು ಮತ್ತು ಚೇದಿಗಳು ನೋಡುತ್ತಿದ್ದಂತೆಯೇ ಕರ್ಣನು ಶರಗಳಿಂದ ಯುಧಿಷ್ಠಿರನ ಧ್ವಜವನ್ನು ಕತ್ತರಿಸಿದ್ದಾನೆ! ಕಮಲಗಳಿರುವ ಸರೋವರವನ್ನು ಆನೆಯು ಹೇಗೋ ಹಾಗೆ ರಣದಲ್ಲಿ ಕರ್ಣನು ಇಗೋ ಶರಗಳಿಂದ ಪಾಂಡವರ ಸೇನೆಯನ್ನು ಧ್ವಂಸಗೊಳಿಸುತ್ತಿದ್ದಾನೆ! ಇಗೋ ನಿನ್ನಕಡೆಯ ರಥಿಗಳು ಓಡಿಹೋಗುತ್ತಿದ್ದಾರೆ! ಈ ಮಹಾರಥರು ಹೇಗೆ ಓಡಿಹೋಗುತ್ತಿದ್ದಾರೆನ್ನುವುದನ್ನು ನೋಡು! ಕರ್ಣನಿಂದ ಗಾಯಗೊಳಿಸಲ್ಪಟ್ಟ ಈ ಆನೆಗಳು ರಣದಲ್ಲಿ ಆರ್ತನಾದಗೈಯುತ್ತಾ ಹತ್ತೂ ದಿಕ್ಕುಗಳಲ್ಲಿ ಓಡಿ ಹೋಗುತ್ತಿವೆ! ಎಲ್ಲಕಡೆಗಳಲ್ಲಿ ಓಡಿ ಹೋಗುತ್ತಿರುವ ರಥಗಳ ಗುಂಪುಗಳನ್ನು ನೋಡು. ರಣದಲ್ಲಿ ಅಮಿತ್ರಕರ್ಶನ ಕರ್ಣನಿಂದ ಅವು ಪಲಾಯನಗೊಳ್ಳುತ್ತಿವೆ! ರಥಸ್ಥನಾಗಿರುವ ಸೂತಪುತ್ರನ ಆನೆಯ ಹಗ್ಗವನ್ನು ಚಿಹ್ನೆಯಾಗುಳ್ಳ ಧ್ವಜವು ರಣದಲ್ಲಿ ಅಲ್ಲಿಂದಿಲ್ಲಿಗೆ ಸಂಚರಿಸುತ್ತಿರುವುದನ್ನು ನೋಡು! ಈಗ ನಿನ್ನ ಸೇನೆಯನ್ನು ಅಸ್ತವ್ಯಸ್ತಗೊಳಿಸುತ್ತಾ ನೂರಾರು ಶರಗಳನ್ನು ಎರಚುತ್ತಾ ಇಗೋ ರಾಧೇಯನು ಭೀಮಸೇನನ ರಥದ ಬಳಿ ವೇಗದಿಂದ ಹೋಗುತ್ತಿದ್ದಾನೆ! ಶಕ್ರನಿಂದ ವಧಿಸಲ್ಪಡುವ ದೈತ್ಯರಂತೆ ಪಾಂಚಾಲರು ಓಡಿಹೋಗುತ್ತಿರುವುದನ್ನು ನೋಡು! ರಣದಲ್ಲಿ ಕರ್ಣನು ಪಾಂಚಾಲ-ಪಾಂಡು-ಸೃಂಜಯರನ್ನು ಗೆದ್ದು ಎಲ್ಲ ದಿಕ್ಕುಗಳಲ್ಲಿ ನಿನನಾಗಿಯೇ ನೋಡುತ್ತಿದ್ದಾನೆಂದು ನನಗನ್ನಿಸುತ್ತಿದೆ. ಪಾರ್ಥ! ಶತ್ರುಗಳನ್ನು ಗೆದ್ದು ದೇವಸಂಘಗಳಿಂದ ಸುತ್ತುವರೆಯಲ್ಪಟ್ಟ ಶಕ್ರನಂತೆ ಶ್ರೇಷ್ಠ ಧನುಸ್ಸನ್ನು ಸೆಳೆದು ಚೆನ್ನಾಗಿ ಶೋಭಿಸುತ್ತಿರುವ ಕರ್ಣನನ್ನು ನೋಡು! ರಣದಲ್ಲಿ ಸಹಸ್ರಾರು ಪಾರ್ಥರನ್ನೂ ಸೃಂಜಯರನ್ನೂ ಪೀಡಿಸುತ್ತಿರುವ ಕರ್ಣನ ವಿಕ್ರಮವನ್ನು ನೋಡಿ ಇಗೋ ಕೌರವರು ವಿನೋದಿಸುತ್ತಿದ್ದಾರೆ! ಇಗೋ ಮಹಾರಣದಲ್ಲಿ ಪಾಂಡವರನ್ನು ಸರ್ವಾತ್ಮನಾಗಿ ಭಯಗೊಳಿಸಿ ರಾಧೇಯನು ಸರ್ವಸೇನೆಗಳಿಗೆ ಹೇಳುತ್ತಿದ್ದಾನೆ! “ಕೌರವರೇ! ಹೋಗಿ! ಓಡಿ ಹೋಗುತ್ತಿರುವವರ ಬೆನ್ನಟ್ಟಿ ಹೋಗಿ! ಯುದ್ಧದಿಂದ ಇಂದು ಒಬ್ಬನೇ ಒಬ್ಬ ಸೃಂಜಯನೂ ಪ್ರಾಣಸಹಿತ ನಮ್ಮಿಂದ ತಪ್ಪಿಸಿಕೊಂಡು ಹೋಗಬಾರದು! ಹಾಗೆಯೇ ಮಾಡಲು ಪ್ರಯತ್ನಪಡಿ! ನಾವು ನಿಮ್ಮ ಹಿಂದೆಯೇ ಬರುತ್ತೇವೆ!” ಹೀಗೆ ಹೇಳುತ್ತಾ ಶರಗಳನ್ನು ಎರಚುತ್ತಾ ಅವರನ್ನು ಹಿಂಬಾಲಿಸಿ ಹೋಗುತ್ತಿದ್ದಾನೆ! ದಿವಾಕರನಿಂದ ಶೋಭಾಯಮಾನಗೊಂಡಿರುವ ಉದಯಪರ್ವತದಂತೆ ರಣದಲ್ಲಿ ಶ್ವೇತಚ್ಛತ್ರದಿಂದ ವಿರಾಜಿತನಾಗಿರುವ ಕರ್ಣನನ್ನು ನೋಡು! ನೆತ್ತಿಯ ಮೇಲೆ ನೂರು ಶಲಾಕೆಗಳುಳ್ಳ ಪೂರ್ಣಚಂದ್ರನ ಕಾಂತಿಯ ಛತ್ರಿಯು ಹೊಳೆಯುತ್ತಿರುವ ಅವನು ಸಮರದಲ್ಲಿ ಬೆಳಗುತ್ತಿದ್ದಾನೆ. ಇಗೋ ಕರ್ಣನು ನಿನ್ನನ್ನು ಓರೆಗಣ್ಣಿನಿಂದ ನೋಡುತ್ತಿದ್ದಾನೆ! ಉತ್ತಮ ಪ್ರಯತ್ನವನ್ನು ಮಾಡಿ ಅವನು ಯುದ್ಧದಲ್ಲಿ ಇಲ್ಲಿಗೇ ನಿಶ್ಚಯವಾಗಿಯೂ ಬರುತ್ತಿದ್ದಾನೆ! ಮಹಾಧನುಸ್ಸನ್ನು ಟೇಂಕರಿಸುತ್ತಾ ಸರ್ಪವಿಷವನ್ನು ಕಾರುವ ಶರಗಳನ್ನು ಪ್ರಯೋಗಿಸುತ್ತಿರುವ ಈ ಮಹಾಬಲನನ್ನು ನೋಡು! ಪತಂಗವು ಆತ್ಮನಾಶಕ್ಕಾಗಿಯೇ ದೀಪದ ಬಳಿ ಹೋಗುವಂತೆ ಇಗೋ ರಾಧೇಯನು ಇಲ್ಲಿಗೇ ಬರುತ್ತಿರುವಂತೆ ಕಾಣುತ್ತಿದೆ! ಕರ್ಣನು ಒಬ್ಬನೇ ಇರುವುದನ್ನು ನೋಡಿ ಅವನನ್ನು ರಕ್ಷಿಸಲು ಪ್ರಯತ್ನಪಡುತ್ತಿರುವ ಧಾರ್ತರಾಷ್ಟ್ರನೂ ಅವನನ್ನು ಹಿಂಬಾಲಿಸಿ ಬರುತ್ತಿದ್ದಾನೆ! ಯಶಸ್ಸು, ರಾಜ್ಯ, ಮತ್ತು ಉತ್ತಮ ಸುಖವನ್ನು ಇಚ್ಛಿಸುವ ನೀನು ಪ್ರಯತ್ನಪಟ್ಟು ಇವರೆಲ್ಲರೊಡನೆ ಆ ದುಷ್ಟಾತ್ಮ ಕರ್ಣನನ್ನು ವಧಿಸು! ನಿನ್ನನ್ನು ನೀನು ಕೃತಾತ್ಮನೆಂದೂ, ರಾಧೇಯನು ಧರ್ಮಾತ್ಮ ಯುಧಷ್ಠಿರನಿಗೆ ಅಪರಾಧವೆಸಗಿರುವನೆಂದೂ ತಿಳಿದುಕೊಳ್ಳಬೇಕು. ಅನಂತರ ಸರಿಯಾದ ಕಾಲಬಂದಾಗ ರಾಧೇಯನನ್ನು ಎದುರಿಸಿ ಯುದ್ಧಮಾಡು! ಯುದ್ಧದಲ್ಲಿ ಆರ್ಯಬುದ್ಧಿಯನ್ನಿಟ್ಟುಕೊಂಡು ಆ ರಥಯೂಥಪನನ್ನು ಸಂಹರಿಸು!

“ಇಗೋ ಭೀಮತೇಜಸ್ಸಿನ ಬಲಶಾಲೀ ಐದುನೂರು ರಥಮುಖ್ಯರು ವೇಗದಿಂದ ಇಲ್ಲಿಗೆ ಬರುತ್ತಿದ್ದಾರೆ! ಐದುಸಾವಿರ ಆನೆಗಳೂ, ಅದರ ಎರಡುಪಟ್ಟು ಕುದುರೆಗಳೂ, ಹತ್ತು ಲಕ್ಷ ಪದಾತಿಗಳನ್ನೂ ಸಂಘಟಿತಗೊಂಡಿರುವ ಸೇನೆಯು ಅನ್ಯೋನ್ಯರನ್ನು ರಕ್ಷಿಸಿಕೊಳ್ಳುತ್ತಾ ನಿನ್ನ ಕಡೆಯೇ ಬರುತ್ತಿದೆ. ಮಹೇಷ್ವಾಸ ಸೂತಪುತ್ರನು ತನ್ನನ್ನು ತಾನು ಕಾಣಿಸಿಕೊಂಡಾಗ ಉತ್ತಮ ಪ್ರಯತ್ನವನ್ನು ಮಾಡಿ ಅವನೊಡನೆ ಹೋರಾಡು! ಇಗೋ! ಕರ್ಣನು ಸಂರಬ್ಧನಾಗಿ ಪಾಂಚಾಲರನ್ನು ಆಕ್ರಮಣಿಸುತ್ತಿದ್ದಾನೆ. ಅವನ ಧ್ವಜವು ಧೃಷ್ಟದ್ಯುಮ್ನನ ರಥದ ಬಳಿ ನಾನು ಕಾಣುತ್ತಿದ್ದೇನೆ! ಅವನು ಪಾಂಚಾಲರೊಡನೆ ಯುದ್ಧಮಾಡುತ್ತಿದ್ದಾನೆಂದು ನನಗನ್ನಿಸುತ್ತಿದೆ! ನಿನಗೆ ಪ್ರಿಯವಾದುದನ್ನು ಹೇಳುತ್ತಿದ್ದೇನೆ. ರಾಜಾ ಕೌರವ್ಯ ಧರ್ಮಪುತ್ರ ಯುಧಿಷ್ಠಿರನು ಜೀವಿಸಿದ್ದಾನೆ! ಮಹಾಬಾಹು ಬೀಮಸೇನನು ಸೃಂಜಯರು ಮತ್ತು ಸಾತ್ಯಕಿಯರಿಂದ ಪರಿವೃತನಾಗಿ ಸೇನಾಮುಖದಲ್ಲಿ ಹಿಂದಿರುಗಿದ್ದಾನೆ! ಭೀಮಸೇನ ಮತ್ತು ಪಾಂಚಾಲರ ನಿಶಿತ ಶರಗಳಿಂದ ಸಮರದಲ್ಲಿ ಕೌರವರು ವಧಿಸಲ್ಪಡುತ್ತಿದ್ದಾರೆ! ಭೀಮನ ಶರಗಳಿಂದ ಹತರಾದ ಧಾರ್ತರಾಷ್ಟ್ರನ ಸೇನೆಯು ಗಾಯಗೊಂಡು ವೇಗವಾಗಿ ರಣದಿಂದ ಓಡಿ ವಿಮುಖವಾಗುತ್ತಿದೆ! ರಕ್ತದಿಂದ ತೋಯ್ದುಹೋಗಿರುವ ಭಾರತೀ ಸೇನೆಯು ಪೈರುಗಳಿಲ್ಲದ ಗದ್ದೆಯಂತೆ ನಿಸ್ತೇಜವಾಗಿ ಕಾಣುತ್ತಿದೆ. ಸರ್ಪವಿಷದಂತೆ ಕ್ರುದ್ಧನಾಗಿರುವ ಭೀಮಸೇನನು ಯುದ್ಧಕ್ಕೆ ಹಿಂದಿರುಗಿ ಕೌರವ ಸೇನೆಯನ್ನು ಓಡಿಸುತ್ತಿರುವುದನ್ನು ನೋಡು! ಹಳದಿ-ಕೆಂಪು-ಕಪ್ಪು ಮತ್ತು ಬಿಳಿಯಬಣ್ಣದ ನಕ್ಷತ್ರ-ಚಂದ್ರ-ಸೂರ್ಯರ ಚಿತ್ರಗಳುಳ್ಳ ಪತಾಕೆಗಳು ಮತ್ತು ಚತ್ರಗಳು ಬೀಳುತ್ತಿರುವುದನ್ನು ನೋಡು! ಸುವರ್ಣ-ರಜತ-ಲೋಹಮಯವಾದ ನಾನಾವಿಧದ ಧ್ವಜಗಳು ಬೀಳುತ್ತಿವೆ. ಆನೆ-ಕುದುರೆಗಳೂ ದಿಕ್ಕಾಪಾಲಾಗಿ ಓಡಿಹೋಗುತ್ತಿವೆ! ಯುದ್ಧದಿಂದ ಪಲಾಯನ ಮಾಡದಿರುವ ಪಾಂಚಾಲರ ನಾನಾ ವರ್ಣದ ಬಾಣಗಳಿಂದ ಹತರಾಗಿ ರಥಿಗಳು ಅಸುನೀಗಿ ರಥಗಳಿಂದ ಬೀಳುತ್ತಿದ್ದಾರೆ! ತರಸ್ವಿ ಪಾಂಚಾಲರು ಆನೆ-ಕುದುರೆ-ರಥಗಳನ್ನು ನಿರ್ಮನುಷ್ಯರನ್ನಾಗಿ ಮಾಡಿ ಧಾರ್ತರಾಷ್ಟ್ರರನ್ನು ಓಡಿಸುತ್ತಿದ್ದಾರೆ! ಪ್ರಾಣಗಳನ್ನೇ ತೊರೆದು ನರವ್ಯಾಘ್ರ ಪಾಂಚಾಲರು ಭೀಮಸೇನನನ್ನು ಆಶ್ರಯಿಸಿ ದುರ್ಧರ್ಷ ಶತ್ರುಬಲವನ್ನು ಮರ್ದಿಸುತ್ತಿದ್ದಾರೆ! ಇಗೋ! ಪಾಂಚಾಲರು ಶಂಖಗಳನ್ನು ಊದುತ್ತಿದ್ದಾರೆ! ಸಿಂಹನಾದಗೈಯುತ್ತಿದ್ದಾರೆ! ಮತ್ತು ರಣದಲ್ಲಿ ಸಾಯಕಗಳಿಂದ ಶತ್ರುಗಳನ್ನು ಸಂಹರಿಸುತ್ತಾ ಅವರನ್ನು ಓಡಿಸುತ್ತಿದ್ದಾರೆ! ಸ್ವರ್ಗದ ಮಹಾತ್ಮೆಯನ್ನಾದರೂ ನೋಡು! ಪಾಂಚಾಲರೇ ಧಾರ್ತರಾಷ್ಟ್ರರನ್ನು ಕ್ರುದ್ಧ ಸಿಂಹಗಳು ಆನೆಗಳನ್ನು ಹೇಗೋ ಹಾಗೆ ಸಂಹರಿಸುತ್ತಿದ್ದಾರೆ! ಮಾನಸಸರೋವರದಿಂದ ಹೊರಟ ಹಂಸಗಳು ವೇಗವಾಗಿ ಗಂಗೆಯನ್ನು ಸೇರುವಂತೆ ಪಾಂಚಾಲರು ಎಲ್ಲ ಕಡೆಗಳಿಂದಲೂ ಧಾರ್ತರಾಷ್ಟ್ರರ ಮಹಾಸೇನೆಯನ್ನು ಆಕ್ರಮಣಿಸುತ್ತಿದ್ದಾರೆ! ಗೂಳಿಗಳನ್ನು ಗೂಳಿಗಳು ಹೇಗೋ ಹಾಗೆ ಕೃಪ-ಕರ್ಣ ಮೊದಲಾದ ವೀರರು ಪಾಂಚಾಲರನ್ನು ತಡೆಯುವಲ್ಲಿ ತಮ್ಮ ಪರಮ ವಿಕ್ರಮವನ್ನು ತೋರಿಸುತ್ತಿದ್ದಾರೆ! ಭೀಮನ ಅಸ್ತ್ರಗಳಿಂದ ಉತ್ಸಾಹವನ್ನು ಕಳೆದುಕೊಂಡ ಮಹಾರಥ ಧಾರ್ತರಾಷ್ಟ್ರ ಶತ್ರುಗಳನ್ನು ಧೃಷ್ಟದ್ಯುಮ್ನನೇ ಮೊದಲಾದ ವೀರರು ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸುತ್ತಿದ್ದಾರೆ! ಈಗ ಧಾರ್ತರಾಷ್ಟ್ರರ ಮಹಾ ಸೇನೆಯು ವಿಷಣ್ಣವಾಗಿ ಹೋಗಿದೆ! ನೋಡು! ಭೀಮನ ನಾರಾಚಗಳಿಂದ ಕಡಿಯಲ್ಪಟ್ಟ ಆನೆಗಳು ವಜ್ರಿಯ ವಜ್ರದಿಂದ ಹತವಾಗಿ ಭೂಮಿಯ ಮೇಲೆ ಬೀಳುವ ಶಿಖರಗಳಂತೆ ಬೀಳುತ್ತಿವೆ! ಭೀಮಸೇನನ ಸನ್ನತಪರ್ವ ಬಾಣಗಳಿಂದ ಗಾಯಗೊಂಡ ಮಹಾ ಆನೆಗಳು ನಮ್ಮ ಸೈನಿಕರನ್ನೇ ತುಳಿಯುತ್ತಾ ಓಡಿಹೋಗುತ್ತಿವೆ! ಸಂಗ್ರಾಮದಲ್ಲಿ ವಿಜಯೋತ್ಸಾಹದಿಂದ ಕೇಳಿಬರುತ್ತಿರುವ ಸಹಿಸಲಸಾಧ್ಯವಾದ ಈ ಸಿಂಹನಾದವು ಭೀಮನದ್ದು ಎಂದು ತಿಳಿ! ಇಗೋ ಅಲ್ಲಿ ಪಾಂಡವ ಭೀಮನನ್ನು ಸಂಹರಿಸಲೋಸುಗ ಕ್ರುದ್ಧನಾದ ನೈಷಾದನು ಆನೆಯಮೇಲೆ ಕುಳಿತು ದಂಡಪಾಣಿ ಅಂತಕನಂತೆ ತೋಮರವನ್ನು ಹಿಡಿದು ಬರುತ್ತಿದ್ದಾನೆ! ಗರ್ಜಿಸುತ್ತಿರುವ ಭೀಮನು ಅಗ್ನಿಶಿಖೆಗಳಂತಿರುವ ತೀಕ್ಷ್ಣ ನಾರಾಚಗಳಿಂದ ತೋಮರವನ್ನು ಹಿಡಿದಿರುವ ಅವನ ಎರಡೂ ಭುಜಗಳನ್ನು ತುಂಡರಿಸಿ ಹತ್ತರಿಂದ ಅವನನ್ನೂ ಸಂಹರಿಸಿಬಿಟ್ಟನು! ಇವನನ್ನು ಸಂಹರಿಸಿ ಪುನಃ ಬರುತ್ತಿರುವ ನೀಲಮೋಡಗಳಂತೆ ಹೊಳೆಯುತ್ತಿರುವ ಮಹಾಗಾತ್ರದ ಅನ್ಯ ಆನೆಗಳನ್ನು ಶಕ್ತಿತೋಮರ ಸಮೂಹಗಳಿಂದ ಸಂಹರಿಸುತ್ತಿರುವ ಪ್ರಹಾರಿ ವೃಕೋದರನನ್ನು ನೋಡು! ವೈಜಯಂತೀ ಮತ್ತು ಧ್ವಜಗಳೊಡನೆ ನಲವತ್ತೊಂಭತ್ತು ಆನೆಗಳನ್ನು ನಿಶಿತ ಬಾಣಗಳಿಂದ ಭೇದಿಸಿ ಸಂಹರಿಸಿ ನಿನ್ನ ಅಣ್ಣ ಪಾರ್ಥನು ಹತ್ತು ಹತ್ತು ನಾರಾಚಗಳಿಂದ ಒಂದೊಂದು ಆನೆಯನ್ನೂ ಸಂಹರಿಸುತ್ತಿದ್ದಾನೆ! ಭೀಮನು ಯುದ್ಧಕ್ಕೆ ಹಿಂದಿರುಗಿದ ನಂತರ ಧಾರ್ತರಾಷ್ಟ್ರರ ಸಿಂಹನಾದಗಳು ಈಗ ಕೇಳಿಬರುತ್ತಿಲ್ಲ! ಕ್ರುದ್ಧ ನರಸಿಂಹ ಭೀಮಸೇನನು ಧಾರ್ತರಾಷ್ಟ್ರನು ಸಂಗ್ರಹಿಸಿದ್ದ ಮೂರು ಅಕ್ಷೌಹಿಣೀ ಸೇನೆಯನ್ನು ತಡೆದು ಸಂಹರಿಸಿದ್ದಾನೆ!”

ಭೀಮಸೇನನು ಸುದುಷ್ಕರವಾದ ಆ ಕರ್ಮವನ್ನೆಸಗಿದುದನ್ನು ಕಂಡು ಅರ್ಜುನನು ಅಳಿದುಳಿದವರನ್ನು ನಿಶಿತ ಶರಗಳಿಂದ ಸಂಹರಿಸಿದನು. ಸಮರದಲ್ಲಿ ವಧಿಸಲ್ಪಡುತ್ತಿರುವ ಸಂಶಪ್ತಕ ಗಣಗಳು ಶಕ್ರನ ಅತಿಥಿಗಳಾಗಿ ಹೋಗಿ ವಿಶೋಕರಾಗಿ ಮುದಿಸಿದರು. ಪುರುಷವ್ಯಾಘ್ರ ಪಾರ್ಥನಾದರೋ ಸನ್ನತಪರ್ವ ಶರಗಳಿಂದ ಧಾರ್ತರಾಷ್ಟ್ರನ ಚತುರ್ವಿಧ ಸೇನೆಯನ್ನು ಸಂಹರಿಸಿದನು.

ಮಹಾಬಾಹು ಭೀಮಸೇನನನ್ನು ನೋಡಿ ಪ್ರತಾಪವಾನ್ ಸೂತಪುತ್ರನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಭೀಮಸೇನನನ್ನು ಆಕ್ರಮಣಿಸಿದನು. ಕೌರವ ಸೇನೆಯು ಭೀಮಸೇನನಿಂದ ಪರಾಙ್ಮುಖವಾಗುತ್ತಿದ್ದುದನ್ನು ನೋಡಿ ಬಲಶಾಲೀ ಕರ್ಣನು ಮಹಾಪ್ರಯತ್ನದಿಂದ ಅವರನ್ನು ಪುನಃ ಯುದ್ಧಕ್ಕೆ ನಿಲ್ಲಿಸಿದನು. ದುರ್ಯೋಧನನ ಸೇನೆಯನ್ನು ವ್ಯವಸ್ಥೆಗೊಳಿಸಿ ಕರ್ಣನು ಪಾಂಡವರೊಡನೆ ಯುದ್ಧಮಾಡಿದನು. ಪಾಂಡವರ ಮಹಾರಥರು ಕಾರ್ಮುಕಗಳನ್ನು ಸೆಳೆಯುತ್ತಾ ಸಾಯಕಗಳನ್ನು ಎರಚುತ್ತಾ ರಾಧೇಯನನ್ನು ಎದುರಿಸಿ ಯುದ್ಧಮಾಡಿದರು. ಸಮರದಲ್ಲಿ ವಿಜಯೇಚ್ಛಿಗಳಾದ ಭೀಮಸೇನ, ಸಾತ್ಯಕಿ, ಶಿಖಂಡೀ, ಜನಮೇಜಯ, ಧೃಷ್ಟದ್ಯುಮ್ನ, ಎಲ್ಲ ಪ್ರಭದ್ರಕರೂ, ಪಾಂಚಾಲ ನರವ್ಯಾಘ್ರರೂ ಕ್ರುದ್ಧರಾಗಿ ಎಲ್ಲಕಡೆಗಳಿಂದ ಕೌರವ ವಾಹಿನಿಯನ್ನು ಆಕ್ರಮಣಿಸಿದರು. ಹಾಗೆಯೇ ಕೌರವ ಮಹಾರಥರೂ ತ್ವರೆಮಾಡಿ ಪಾಂಡವರ ಸೇನೆಗಳನ್ನು ವಧಿಸಲು ಬಯಸಿ ಅವರನ್ನು ಆಕ್ರಮಣಿಸಿದರು. ರಥ-ಆನೆ-ಕುದುರೆಗಳಿಂದ ಮಿಶ್ರಿತವಾಗಿ ಪದಾತಿ-ಧ್ವಜ ಸಮಾಕುಲಗಳ ಸೇನೆಗಳು ಅದ್ಭುತವಾಗಿ ಕಾಣುತ್ತಿದ್ದವು. ಶಿಖಂಡಿಯು ಕರ್ಣನನ್ನೂ, ಧೃಷ್ತದ್ಯುಮ್ನನು ದುಃಶಾಸನನನ್ನೂ ಮಹಾ ಸೇನೆಯಿಂದ ಸುತ್ತುವರೆದು ಯುದ್ಧಮಾಡಿದರು. ನಕುಲನು ವೃಷಸೇನನನ್ನೂ, ಯುಧಿಷ್ಠಿರನು ಚಿತ್ರಸೇನನನ್ನೂ, ಸಹದೇವನು ಉಲೂಕನನ್ನೂ ಎದುರಿಸಿ ಯುದ್ಧಮಾಡಿದರು. ಸಾತ್ಯಕಿಯು ಶಕುನಿಯನ್ನೂ, ಭೀಮಸೇನು ಕೌರವರನ್ನೂ ಮತ್ತು ಅರ್ಜುನನು ದ್ರೋಣಪುತ್ರನನ್ನೂ ಆಕ್ರಮಣಿಸಿದರು. ಯುಧಾಮನ್ಯುವನ್ನು ಗೌತಮನೂ ಉತ್ತಮೌಜಸನನ್ನು ಬಲವಾನ್ ಕೃತವರ್ಮನೂ ಆಕ್ರಮಣಿಸಿದರು. ಭೀಮಸೇನನು ಒಬ್ಬನೇ ಕುರುಗಳನ್ನೂ, ಧೃತರಾಷ್ಟ್ರನ ಪುತ್ರರೆಲ್ಲರನ್ನೂ ಅವರ ಸೇನೆಗಳೊಂದಿಗೆ ಆಕ್ರಮಣಿಸಿ ಯುದ್ಧಮಾಡಿದನು.

ಕರ್ಣ-ಶಿಖಂಡಿಯರ ಯುದ್ಧ

ಆಗ ಶಿಖಂಡಿಯು ನಿರ್ಭೀತನಾಗಿ ಸಂಚರಿಸುತ್ತಾ ಕರ್ಣನನ್ನು ಪತ್ರಿಗಳಿಂದ ತಡೆದನು. ಆಗ ರೋಷದಿಂದ ಕರ್ಣನು ತುಟಿಗಳನ್ನು ಅದುರಿಸುತ್ತಾ ಶಿಖಂಡಿಯನ್ನು ಮೂರು ಬಾಣಗಳಿಂದ ಅವನ ಹುಬ್ಬುಗಳ ಮಧ್ಯದಲ್ಲಿ ಪ್ರಹರಿಸಿದನು. ಆ ಬಾಣಗಳನ್ನು ಧರಿಸಿದ ಶಿಖಂಡಿಯು ಮೂರು ಶೃಂಗಗಳಿಂದ ಸಮನ್ವಿತವಾದ ರಜತ ಪರ್ವತದಂತೆಯೇ ಬಹಳವಾಗಿ ಶೋಭಿಸಿದನು. ಸೂತಪುತ್ರನಿಂದ ಅತಿಯಾಗಿ ಗಾಯಗೊಂಡ ಶಿಖಂಡಿಯು ಕರ್ಣನನ್ನು ತೊಂಭತ್ತು ನಿಶಿತ ಬಾಣಗಳಿಂದ ಪ್ರಹರಿಸಿದನು. ಕರ್ಣನು ಮೂರು ಶರಗಳಿಂದ ಅವನ ಸಾರಥಿಯನ್ನು ಸಂಹರಿಸಿ ಕ್ಷುರಪ್ರದಿಂದ ಅವನ ಧ್ವಜವನ್ನೂ ಕಿತ್ತು ಹಾಕಿದನು.

ಕುದುರೆಗಳು ಹತಗೊಳ್ಳಲು ಶತ್ರುತಾಪನ ಮಹಾರಥ ಶಿಖಂಡಿಯು ರಥದಿಂದ ಕೆಳಕ್ಕೆ ಹಾರಿ ಸಂಕ್ರುದ್ಧನಾಗಿ ಕರ್ಣನ ಮೇಲೆ ಶಕ್ತಿಯನ್ನು ಎಸೆದನು. ಕರ್ಣನು ಸಾಯಕಗಳಿಂದ ಆ ಶಕ್ತಿಯನ್ನು ಮೂರು ಭಾಗಗಳನ್ನಾಗಿಸಿ ಒಂಭತ್ತು ನಿಶಿತ ಶರಗಳಿಂದ ಶಿಖಂಡಿಯನ್ನು ಹೊಡೆದನು. ಶಿಖಂಡಿಯು ಕರ್ಣನ ಬಾಣಗಳಿಂದ ತಪ್ಪಿಸಿಕೊಳ್ಳಲು ಕೂಡಲೇ ಯುದ್ಧವನ್ನು ಬಿಟ್ಟು ಹೊರಟುಹೋದನು. ಆಗ ಕರ್ಣನು ಮಹಾವೇಗದ ಭಿರುಗಾಳಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಪಾಂಡುಸೇನೆಯನ್ನು ನಾಶಗೊಳಿಸತೊಡಗಿದನು.

ಧೃಷ್ಟದ್ಯುಮ್ನ-ದುಃಶಾಸನರ ಯುದ್ಧ

ದುಃಶಾಸನನಿಂದ ಪೀಡಿತನಾದ ಧೃಷ್ಟದ್ಯುಮ್ನನು ಅವನನ್ನು ಮೂರು ಬಾಣಗಳಿಂದ ವಕ್ಷಸ್ಥಳಕ್ಕೆ ಹೊಡೆದನು. ಆಗ ದುಃಶಾಸನನು ರುಕ್ಮಪುಂಖಗಳುಳ್ಳ ನಿಶಿತ ನತಪರ್ವಣ ಭಲ್ಲದಿಂದ ಧೃಷ್ಟದ್ಯುಮ್ನನ ಎಡತೋಲನ್ನು ಪ್ರಹರಿಸಿದನು. ಶರದಿಂದ ಗಾಯಗೊಂಡ ಧೃಷ್ಟದ್ಯುಮ್ನನಾದರೋ ಕ್ರುದ್ಧನಾಗಿ ದುಃಶಾಸನನ ಮೇಲೆ ಘೋರ ಶರವನ್ನು ಪ್ರಯೋಗಿಸಿದನು. ಮಹಾವೇಗದಲ್ಲಿ ಬಂದು ಬೀಳುತ್ತಿದ್ದ ಆ ಶರವನ್ನು ದುಃಶಾಸನನು ಮೂರು ಭಾಗಗಳನ್ನಾಗಿ ತುಂಡರಿಸಿದನು. ಆಗ ಅನ್ಯ ಕನಕಭೂಷಣ ಹದಿನೇಳು ಭಲ್ಲಗಳಿಂದ ದುಃಶಾಸನನು ಧೃಷ್ಟದ್ಯುಮ್ನನನ್ನು ಸಮೀಪಿಸಿ ಅವನ ಬಾಹುಗಳು ಮತ್ತು ಎದೆಗೆ ಗುರಿಯಿಟ್ಟು ಹೊಡೆದನು. ಆಗ ಕ್ರುದ್ಧನಾದ ಪಾರ್ಷತನು ತೀಕ್ಷ್ಣ ಕ್ಷುರಪ್ರದಿಂದ ಅವನ ಧನುಸ್ಸನ್ನು ತುಂಡರಿಸಿದನು. ಆಗ ಜನರು ಜೋರಾಗಿ ಕೂಗಿಕೊಂಡರು. ಆಗ ದುಃಶಾಸನನು ಅನ್ಯ ಧನುಸ್ಸನ್ನು ಎತ್ತಿಕೊಂಡು ಶರವ್ರಾತಗಳಿಂದ ಧೃಷ್ಟದ್ಯುಮ್ನನನ್ನು ಎಲ್ಲಕಡೆಗಳಿಂದ ಸುತ್ತುವರೆದನು. ಅವನ ಆ ವಿಕ್ರಮವನ್ನು ನೋಡಿ ರಣದಲ್ಲಿದ್ದ ಯೋಧರೂ, ಸಿದ್ಧ-ಅಪ್ಸರ ಗಣಗಳೂ ವಿಸ್ಮಿತರಾದರು. ಆಗ ಕೌರವರ ಮತ್ತು ಶತ್ರುಗಳ ನಡುವೆ ಘೋರವಾದ, ಸಮಸ್ತಪ್ರಾಣಿಗಳಿಗೂ ಘೋರರೂಪೀ ಯುದ್ಧವು ನಡೆಯಿತು.

ವೃಷಸೇನನಾದರೋ ತಂದೆಯ ಸಮೀಪದಲ್ಲಿ ನಿಂತಿದ್ದ ನಕುಲನನ್ನು ಐದು ಆಯಸಗಳಿಂದ ಹೊಡೆದು ಅನ್ಯ ಮೂರು ಶರಗಳಿಂದ ಹೊಡೆದನು. ಆಗ ನಕುಲನಾದರೋ ಕ್ರುದ್ಧನಾಗಿ ನಗುತ್ತಿರುವನೋ ಎನ್ನುವಂತೆ ತೀಕ್ಷ್ಣ ನಾರಾಚದಿಂದ ವೃಷಸೇನನ ಹೃದಯಕ್ಕೆ ದೃಢವಾಗಿ ಹೊಡೆದನು. ಶತ್ರುವಿನಿಂದ ಅತಿ ಬಲವತ್ತಾಗಿ ಪ್ರಹರಿಸಲ್ಪಟ್ಟ ವೃಷಸೇನನು ನಕುಲನನ್ನು ಇಪ್ಪತ್ತು ಬಾಣಗಳಿಂದ ಪ್ರಹರಿಸಲು ನಕುಲನೂ ಅವನನ್ನು ಐದು ಶರಗಳಿಂದ ಪ್ರಹರಿಸಿದನು. ಆಗ ಆ ಇಬ್ಬರು ಪುರುಷರ್ಷಭರೂ ಅನ್ಯೋನ್ಯರನ್ನು ಸಹಸ್ರ ಶರಗಳಿಂದ ಮುಚ್ಚಿಬಿಟ್ಟರು. ಆಗ ಕುರುಸೇನೆಯು ಭಗ್ನವಾಗಿ ಹೋಯಿತು.

ಧಾರ್ತರಾಷ್ಟ್ರರ ಸೇನೆಯು ಓಡಿಹೋಗುತ್ತಿರುವುದನ್ನು ನೋಡಿ ಸೂತಜನು ಬಲವನ್ನುಪಯೋಗಿಸಿ ತಡೆದನು. ಕರ್ಣನು ಹೊರಟುಹೋಗಲು ನಕುಲನು ಕೌರವಸೇನೆಯೆಡೆಗೆ ನುಗ್ಗಿದನು. ಕರ್ಣಪುತ್ರನಾದರೋ ನಕುಲನನ್ನು ಸಮರದಲ್ಲಿ ಬಿಟ್ಟುಬಿಟ್ಟು ತ್ವರೆಮಾಡಿ ರಾಧೇಯನನ್ನು ಹಿಂಬಾಲಿಸಿ ಹೋಗಿ ಅವನ ಚಕ್ರರಕ್ಷಣೆಯಲ್ಲಿ ತೊಡಗಿದನು. ಉಲೂಕನಾದರೋ ರಣದಲ್ಲಿ ಸಹದೇವನಿಂದ ತಡೆಯಲ್ಪಟ್ಟು ಕ್ರುದ್ಧನಾದನು. ಸಹದೇವನು ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಸಾರಥಿಯನ್ನು ಯಮನ ಸದನದ ಕಡೆ ಕಳುಹಿಸಿದನು. ಆಗ ಉಲೂಕನಾದರೋ ರಥದಿಂದ ಕೆಳಕ್ಕೆ ಹಾರಿ ತ್ರಿಗರ್ತರ ಮಹಾಸೇನೆಯೊಳಗೆ ನುಸುಳಿಕೊಂಡನು. ಸಾತ್ಯಕಿಯು ಶಕುನಿಯನ್ನು ಇಪ್ಪತ್ತು ನಿಶಿತ ಶರಗಳಿಂದ ಹೊಡೆದು ನಗುತ್ತಿರುವನ್ನೋ ಎನ್ನುವಂತೆ ಭಲ್ಲದಿಂದ ಸೌಬಲನ ಧ್ವಜವನ್ನು ತುಂಡರಿಸಿದನು. ಸಮರದಲ್ಲಿ ಕ್ರುದ್ಧನಾದ ಸೌಬಲನು ಅವನ ಕವಚವನ್ನು ಸೀಳಿ ಪುನಃ ಅವನ ಕಾಂಚನ ಧ್ವಜವನ್ನು ತುಂಡರಿಸಿದನು.

ಕೂಡಲೇ ಸಾತ್ಯಕಿಯು ನಿಶಿತ ಬಾಣಗಳಿಂದ ಅವನನ್ನು ಹೊಡೆದು ಮೂರು ಬಾಣಗಳಿಂದ ಅವನ ಸಾರಥಿಯನ್ನು ಹೊಡೆದನು. ಕೂಡಲೇ ತ್ವರೆಮಾಡಿ ಶರಗಳಿಂದ ಅವನ ಕುದುರೆಗಳನ್ನು ಸಂಹರಿಸಿದನು. ಅನಂತರ ಬೇಗನೇ ಕೆಳಕ್ಕೆ ಹಾರಿ ಶಕುನಿಯು ಉಲೂಕನ ರಥವನ್ನೇರಿ ಶೈನೇಯನಿಂದ ಬಹುದೂರ ಹೊರಟುಹೋದನು.

ಸಾತ್ಯಕಿಯಾದರೋ ರಣದಲ್ಲಿ ಕೌರವ ಸೇನೆಯನ್ನು ವೇಗದಿಂದ ಆಕ್ರಮಣಿಸಿದನು. ಆಗ ಆ ಸೇನೆಯು ಭಗ್ನವಾಯಿತು. ಶೈನೇಯನ ಶರದಿಂದ ಗಾಯಗೊಂಡ ಸೈನ್ಯವು ಬೇಗನೇ ಹತ್ತುದಿಕ್ಕುಗಳಲ್ಲಿಯೂ ಓಡಿಹೋಯಿತು ಮತ್ತು ಪ್ರಾಣಗಳನ್ನು ಕಳೆದುಕೊಂಡವರಂತೆ ಮುಗ್ಗರಿಸಿ ಬೀಳುತ್ತಿತ್ತು. ದುರ್ಯೋಧನನು ಭೀಮಸೇನನನ್ನು ತಡೆಯುತ್ತಿದ್ದನು. ಮುಹೂರ್ತಮಾತ್ರದಲ್ಲಿ ಭೀಮನು ದುರ್ಯೋಧನನನ್ನು ಅಶ್ವ-ಸೂತ-ರಥಗಳಿಂದ ವಿಹೀನನನ್ನಾಗಿ ಮಾಡಿದನು. ಅದರಿಂದ ಚಾರಣರು ಸಂತುಷ್ಟರಾದರು. ಆಗ ನೃಪನು ಭೀಮಸೇನನ ದೃಷ್ಟಿಯಿಂದ ಪಲಾಯನಗೈದನು. ಭೀಮಸೇನನು ಕುರುಸೈನ್ಯ ಸರ್ವವನ್ನೂ ಆಕ್ರಮಣಿಸಿದನು. ಭೀಮನೊಬ್ಬನಿಂದಲೇ ವಧಿಸಲ್ಪಡುತ್ತಿದ್ದ ಅಲ್ಲಿ ಮಹಾ ಕೂಗು ಕೇಳಿಬಂದಿತು. ಯುಧಾಮನ್ಯುವು ಕೃಪನನ್ನು ಪ್ರಹರಿಸಿ ಅವನ ಧನುಸ್ಸನ್ನೂ ಕತ್ತರಿಸಿದನು. ಕೂಡಲೇ ಕೃಪನು ಅನ್ಯ ಧನುಸ್ಸನ್ನು ಎತ್ತಿಕೊಂಡನು. ಕೃಪನು ಯುಧಾಮನ್ಯುವಿನ ಧ್ವಜವನ್ನೂ ಸೂತನನ್ನೂ ಚತ್ರವನ್ನೂ ಭೂಮಿಯ ಮೇಲೆ ಉರುಳಿಸಿದನು. ಆಗ ಯುಧಾಮನ್ಯುವು ಅದೇ ರಥದಲ್ಲಿಯೇ ಪಲಾಯನಗೈದನು. ಉತ್ತಮೌಜಸನಾದರೋ ಕೂಡಲೇ ಹಾರ್ದಿಕ್ಯನನ್ನು ಶರಗಳಿಂದ ಮೇಘಗಳು ಪರ್ವತವನ್ನು ಮಳೆಯಿಂದ ಮುಚ್ಚುವಂತೆ ಮುಚ್ಚಿಬಿಟ್ಟನು. ಆಗ ಕೃತವರ್ಮನು ಉತ್ತಮೌಜಸನ ಹೃದಯಕ್ಕೆ ಹೊಡೆಯಲು ಅವನು ರಥದಲ್ಲಿಯೇ ಕುಳಿತುಕೊಂಡನು. ಅವನ ಸಾರಥಿಯು ಆ ರಥಿಗಳಲ್ಲಿ ಶ್ರೇಷ್ಠನನ್ನು ಅಲ್ಲಿಂದ ಒಯ್ದುಬಿಟ್ಟನು. ಆಗ ಕೃತವರ್ಮನು ಪಾಂಡುಸೇನೆಯನ್ನು ಆಕ್ರಮಣಿಸಿದನು.

ಅರ್ಜುನ-ಅಶ್ವತ್ಥಾಮರ ಯುದ್ಧ

ದ್ರೌಣಿಯಾದರೋ ಮಹಾ ರಥಸಂಘಗಳಿಂದ ಪರಿವೃತನಾಗಿ ಯುಧಿಷ್ಠಿರನಿದ್ದಲಿಗೆ ಕೂಡಲೇ ಬಂದೆರಗಿದನು. ಒಮ್ಮೆಲೇ ಬಂದು ಎರಗಿದ ಅವನನ್ನು ಶೂರ ಪಾರ್ಥನು ತೀರವು ಸಮುದ್ರವನ್ನು ತಡೆಯುವಂತೆ ತಡೆದು ನಿಲ್ಲಿಸಿದನು. ಆಗ ಕ್ರುದ್ಧನಾದ ದ್ರೋಣಪುತ್ರನು ಅರ್ಜುನ-ವಾಸದೇವರನ್ನು ಪತ್ರಿಗಳಿಂದ ಮುಚ್ಚಿಬಿಟ್ಟನು. ಮಹಾರಥ ಕೃಷ್ಣರಿಬ್ಬರೂ ಆ ರೀತಿ ಮುಚ್ಚಿಹೋಗಿದುದನ್ನು ನೋಡಿ ಅಲ್ಲಿದ್ದು ನೋಡುತ್ತಿದ್ದ ಕುರುಗಳು ಪರಮ ವಿಸ್ಮಿತರಾದರು. ಅರ್ಜುನನಾದರೋ ನಗುತ್ತಿರುವನೋ ಎನ್ನುವಂತೆ ದಿವ್ಯಾಸ್ತ್ರವನ್ನು ಪ್ರಕಟಿಸಿದನು. ಬ್ರಾಹ್ಮಣ ಅಶ್ವತ್ಥಾಮನು ಆ ಅಸ್ತ್ರವನ್ನು ತಡೆದುಬಿಟ್ಟನು. ಯುದ್ಧದಲ್ಲಿ ಅಶ್ವತ್ಥಾಮನನ್ನು ಸಂಹರಿಸಲು ಅರ್ಜುನನು ಯಾವ್ಯಾವ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದನೋ ಅವೆಲ್ಲವನ್ನೂ ದ್ರೋಣಪುತ್ರನು ನಾಶಗೊಳಿಸುತ್ತಿದ್ದನು. ನಡೆಯುತ್ತಿದ್ದ ಆ ಅಸ್ತ್ರಯುದ್ಧದಲ್ಲಿ ದ್ರೌಣಿಯು ಬಾಯಿಕಳೆದ ಅಂತಕನಂತೆ ತೋರುತ್ತಿದ್ದನು. ಅವನು ಜಿಹ್ಮಗಗಳಿಂದ ದಿಕ್ಕು-ಉಪದಿಕ್ಕುಗಳನ್ನು ಮುಚ್ಚಿ, ವಾಸುದೇವನ ಬಲಭುಜವನ್ನು ಮೂರು ಬಾಣಗಳಿಂದ ಪ್ರಹರಿಸಿದನು. ಆಗ ಅರ್ಜುನನು ಅಶ್ವತ್ಥಾಮನ ಎಲ್ಲ ಕುದುರೆಗಳನ್ನೂ ಸಂಹರಿಸಿ ಸಮರಭೂಮಿಯನ್ನು ರಕ್ತಪ್ರವಾಹದ ನದಿಯನ್ನಾಗಿಸಿದನು. ಆಗ ಪಾರ್ಥನ ಧನುಸ್ಸಿನಿಂದ ಹೊರಟ ಶರಗಳಿಂದ ರಥಿಗಳು ಹತರಾಗಿ ಉರುಳಿದರು. ಕಡಿವಾಣಗಳಿಂದ ಮುಕ್ತ ಕುದುರೆಗಳು ಅಲ್ಲಿಂದಿಲ್ಲಿಗೆ ಓಡತೊಡಗಿದವು. ಪಾರ್ಥನ ಆ ಕರ್ಮವನ್ನು ನೋಡಿ ದ್ರೌಣಿಯು ಕೃಷ್ಣನನ್ನು ನಿಶಿತ ಶರಗಳಿಂದ ಮುಚ್ಚಿಬಿಟ್ಟನು. ಅನಂತರ ದ್ರೌಣಿಯು ಪತ್ರಿಗಳನ್ನು ಹೂಡಿ ಅರ್ಜುನನ ಎದೆಗೆ ಗುರಿಯಿಟ್ಟು ಹೊಡೆಯತೊಡಗಿದನು. ಆ ದ್ರೋಣಪುತ್ರನಿಂದ ಅತಿಯಾಗಿ ಪ್ರಹರಿಸಲ್ಪಟ್ಟ ಅರ್ಜುನನು ಘೋರ ಪರಿಘವನ್ನು ತೆಗೆದುಕೊಂಡು ಅದನ್ನು ದ್ರೌಣಿಯ ಮೇಲೆ ಎಸೆದನು. ತನ್ನ ಮೇಲೆ ಬೀಳಲು ಬರುತ್ತಿದ್ದ ಆ ಸುವರ್ಣವಿಭೂಷಿತ ಪರಿಘವನ್ನು ದ್ರೌಣಿಯು ಒಮ್ಮೆಲೇ ತುಂಡರಿಸನು. ಆಗ ಜನರು ಕೂಗಿಕೊಂಡರು. ಭಾರದ್ವಾಜನ ಸಾಯಕಗಳಿಂದ ಅನೇಕ ಚೂರುಗಳಾದ ಆ ಪರಿಘವು ವಜ್ರಾಯುಧದಿಂದ ಕತ್ತರಿಸಲ್ಪಟ್ಟ ಪರ್ವತವು ತುಂಡಾಗಿ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.

ಆಗ ಅರ್ಜುನನು ಹತ್ತು ಶರಗಳಿಂದ ದ್ರೌಣಿಯನ್ನು ಹೊಡೆದು ಭಲ್ಲದಿಂದ ಅವನ ಸಾರಥಿಯನ್ನು ರಥನೀಡದಿಂದ ಅಪಹರಿಸಿದನು. ದ್ರೌಣಿಯಾದರೋ ಸ್ವಯಂ ತಾನೇ ಕುದುರೆಗಳನ್ನು ಹಿಡಿದು ನಡೆಸುತ್ತಾ ಕೃಷ್ಣರಿಬ್ಬರನ್ನೂ ಶರಗಳಿಂದ ಮುಚ್ಚಿದನು. ಅಲ್ಲಿ ದ್ರೌಣಿಯ ಅದ್ಭುತ ಪರಾಕ್ರಮವು ಕಂಡಿತು. ಅಶ್ವತ್ಥಾಮನು ಇತ್ತ ನಾಲ್ಕು ಕುದುರೆಗಳನ್ನೂ ನಿಯಂತ್ರಿಸುತ್ತಿದ್ದನು ಮತ್ತು ಅತ್ತ ಫಲ್ಗುನನ್ನೂ ಆಕ್ರಮಣಿಸುತ್ತಿದ್ದನು. ಅದರಿಂದಾಗಿ ಸಮರದಲ್ಲಿದ್ದ ಸರ್ವ ಯೋಧರೂ ಅವನನ್ನು ಪ್ರಶಂಸಿಸಿದರು. ರಣದಲ್ಲಿ ದ್ರೋಣಪುತ್ರನು ಫಲ್ಗುನನನ್ನು ಮೀರಿಸುವಂತಿರುವಾಗ ಅರ್ಜುನನು ಕ್ಷುರಪ್ರದಿಂದ ರಥದ ಕುದುರೆಗಳ ಕಡಿವಾಣಗಳನ್ನು ಕತ್ತರಿಸಿದನು. ಶರವೇಗದಿಂದ ಬಾಧಿತರಾದ ಆ ಕುದುರೆಗಳು ಓಡಿಹೋದವು. ಆಗ ಕೌರವ ಸೈನ್ಯದಲ್ಲಿ ಪುನಃ ನಿನಾದಗಳಾದವು. ಪಾಂಡವರಾದರೋ ಜಯವನ್ನು ಪಡೆದು ಎಲ್ಲಕಡೆ ನಿಶಿತ ಬಾಣಗಳನ್ನು ಎರಚುತ್ತಾ ಕೌರವ ಸೇನೆಯನ್ನು ಆಕ್ರಮಣಿಸಿದರು. ಧಾರ್ತರಾಷ್ಟ್ರರ ಮಹಾಸೇನೆಯನ್ನು ವಿಜಯೋಲ್ಲಾಸೀ ಪಾಂಡವ ವೀರರು ಪುನಃ ಸದೆಬಡಿಯುತ್ತಿದ್ದರು. ಸಂಗ್ರಾಮದಲ್ಲಿ ಎಲ್ಲ ಕಡೆಗಳಿಂದ ಪ್ರಹರಿಸಲ್ಪಡುತ್ತಿದ್ದ ಮಹಾಸೇನೆಯು ತಡೆದರೂ ನಿಲ್ಲಲಿಲ್ಲ. ಯೋಧರು ಎಲ್ಲಕಡೆ ಪಲಾಯನ ಮಾಡುತ್ತಿರಲು ಕೌರವ ಮಹಾಸೇನೆಯಲ್ಲಿ ಭೀತಿ ವ್ಯಾಕುಲಗಳುಂಟಾದವು. ಮಹಾತ್ಮರಿಂದ ವಧಿಸಲ್ಪಡುತ್ತಿರುವ ಆ ಸೇನೆಯು ಸೂತಪುತ್ರನು ಸತತವೂ “ನಿಲ್ಲಿ! ನಿಲ್ಲಿ!” ಎಂದು ಕೂಗಿಕೊಳ್ಳುತ್ತಿದ್ದರೂ ನಿಲ್ಲಲಿಲ್ಲ. ಧಾರ್ತರಾಷ್ಟ್ರರ ಸೇನೆಯು ಎಲ್ಲಕಡೆ ಓಡಿಹೋಗುತ್ತಿರುವುದನ್ನು ನೋಡಿ ವಿಜಯೋತ್ಸಾಹೀ ಪಾಂಡವರು ಜೋರಾಗಿ ಸಿಂಹನಾದಗೈದರು.

ಆಗ ದುರ್ಯೋಧನನು ಕರ್ಣನಿಗೆ ಪ್ರೀತಿಪೂರ್ವಕವಾಗಿ ಇಂತೆಂದನು: “ಕರ್ಣ! ಪಾಂಡವರಿಂದ ತುಂಬಾ ಪೀಡೆಗೊಳಗಾದ ನಮ್ಮ ಸೇನೆಯನ್ನು ನೋಡು! ನೀನು ಯುದ್ಧದಲ್ಲಿರುವಾಗಲೇ ಅವರು ಭಯಗೊಂಡು ಎಲ್ಲಕಡೆ ಪಲಾಯನಮಾಡುತ್ತಿದ್ದಾರೆ! ಮಹಾಬಾಹೋ! ಇದನ್ನು ತಿಳಿದು ಮಾಡಬೇಕಾದುದನ್ನು ಮಾಡು! ಸಮರದಲ್ಲಿ ಪಾಂಡವರಿಂದ ಓಡಿಸಲ್ಪಡುತ್ತಿರುವ ಆ ಸಹಸ್ರಾರು ಯೋಧರು ನಿನ್ನನ್ನೇ ಕೂಗಿ ಕರೆಯುತ್ತಿದ್ದಾರೆ!”

ದುರ್ಯೋಧನನ ಆ ಮಹಾ ಮಾತನ್ನು ಕೇಳಿದ ಸೂತನಂದನನು ಮದ್ರರಾಜನಿಗೆ ಈ ಮಾತನ್ನಾಡಿದನು: “ಜನೇಶ್ವರ! ನನ್ನ ಈ ಭುಜಗಳ ಮತ್ತು ಅಸ್ತ್ರಗಳ ವೀರ್ಯವನ್ನು ನೋಡು! ಇಂದು ರಣದಲ್ಲಿ ಪಾಂಡವರ ಸಹಿತ ಎಲ್ಲ ಪಾಂಚಾಲರನ್ನು ಸಂಹರಿಸುತ್ತೇನೆ! ಮಂಗಳಮಯ ಮನಸ್ಸಿನಿಂದ ಕುದುರೆಗಳನ್ನು ಓಡಿಸು!”

ಕರ್ಣನ ಯುದ್ಧ

ಹೀಗೆ ಹೇಳಿ ವೀರ ಸೂತಪುತ್ರನು ಪುರಾತನ ಶ್ರೇಷ್ಠ ಧನುಸ್ಸು ವಿಜಯವನ್ನು ಹಿಡಿದುಕೊಂಡನು. ಅದನ್ನು ಹೆದೆಯೇರಿಸಿ ಬಾರಿ ಬಾರಿಗೂ ಶಿಂಜಿನಿಯನ್ನು ತೀಡುತ್ತಾ ಸತ್ಯ ಶಪಥಗಳಿಂದ ತನ್ನಕಡೆಯ ಯೋಧರನ್ನು ತಡೆದನು. ಮಹಾಬಲ ಅಮೇಯಾತ್ಮ ಕರ್ಣನು ಭಾರ್ಗವಾಸ್ತ್ರವನ್ನು ಪ್ರಕಟಿಸಿದನು. ಆಗ ಸಹಸ್ರಾರು ಲಕ್ಷೋಪಲಕ್ಷ, ಕೋಟ್ಯಾನುಕೋಟಿ ತೀಕ್ಷ್ಣ ಶರಗಳು ಹೊರಬಂದವು. ಪ್ರಜ್ವಲಿಸುತ್ತಿದ್ದ ಆ ಮಹಾಘೋರ ಕಂಕಬರ್ಹಿಣವಾಜಿಗಳು ಪಾಂಡವೀ ಸೇನೆಯನ್ನು ಮುಸುಕಿ ಏನೂ ತಿಳಿಯದಂತಾಯಿತು. ಬಲವತ್ತಾದ ಭಾರ್ಗವಾಸ್ತ್ರದಿಂದ ಪೀಡಿತ ಪಾಂಚಾಲರಲ್ಲಿ ಮಹಾ ಹಾಹಾಕಾರವುಂಟಾಯಿತು. ಸಹಸ್ರಾರು ಸಂಖ್ಯೆಗಳಲ್ಲಿ ಆನೆಗಳೂ, ಮನುಷ್ಯರೂ, ರಥಗಳೂ, ಕುದುರೆಗಳೂ ಎಲ್ಲ ಕಡೆ ಬೀಳತೊಡಗಿದವು. ಹತರಾಗಿ ಬೀಳುತ್ತಿದ್ದವರಿಂದ ಭೂಮಿಯೇ ನಡುಗಿತು. ಪಾಂಡವರ ಮಹಾಸೇನೆಯಲ್ಲಿ ಎಲ್ಲರೂ ವ್ಯಾಕುಲಗೊಂಡರು. ಪರಂತಪ ಕರ್ಣನೊಬ್ಬನೇ ಹೊಗೆಯಿಲ್ಲದ ಪಾವಕನಂತೆ ಶತ್ರುಗಳನ್ನು ದಹಿಸುತ್ತಾ ಶೋಭಿಸಿದನು. ಕರ್ಣನಿಂದ ವಧಿಸಲ್ಪಡುತ್ತಿದ್ದ ಚೇದಿಗಳೊಡನೆ ಆ ಪಾಂಚಾಲರು ಕಾಡ್ಗಿಚ್ಚಿನಲ್ಲಿ ಆನೆಗಳು ಮುದುಡಿ ಬೀಳುವಂತೆ ಬೀಳುತ್ತಿದ್ದರು. ಆ ನರೋತ್ತಮರು ವ್ಯಾಘ್ರಗಳಂತೆ ಚೀತ್ಕರಿಸುತ್ತಿದ್ದರು. ರಣಮೂರ್ಧನಿಯಲ್ಲಿ ಭಯಗೊಂಡು ದಿಕ್ಕುದಿಕ್ಕುಗಳಲ್ಲಿ ಓಡುತ್ತಿದ್ದ ಅವರ ಭಯದ ಕೂಗುಗಳು ಪ್ರಳಯಕಾಲದಲ್ಲಿ ಪ್ರಾಣಿಗಳ ಆರ್ತನಾದದಂತೆ ಜೋರಾಗಿ ಕೇಳಿಬರುತ್ತಿತ್ತು. ಸೂತಪುತ್ರನಿಂದ ವಧಿಸಲ್ಪಡುತ್ತಿರುವ ಅವರನ್ನು ನೋಡಿ ಸಮಸ್ತ ಪ್ರಾಣಿಗಳೂ, ಪಶುಪಕ್ಷಿಗಳೂ ಭಯಗೊಂಡವು. ಸೂತಪುತ್ರನಿಂದ ವಧಿಸಲ್ಪಡುತ್ತಿರುವ ಸೃಂಜಯರು ಪ್ರೇತರಾಜನ ಪಟ್ಟಣಕ್ಕೆ ಹೋಗಿ ವಿಚೇತಸರಾಗಿ ಪ್ರೇತರಾಜನನ್ನು ಕೂಗಿಕೊಳ್ಳುವಂತೆ ಅರ್ಜುನ-ವಾಸುದೇವರನ್ನು ಪುನಃ ಪುನಃ ಕೂಗಿ ಕರೆಯುತ್ತಿದ್ದರು.

ಭಯವನ್ನುಂಟುಮಾಡಿದ ಆ ಮಹಾಘೋರ ಭಾರ್ಗವಾಸ್ತ್ರವನ್ನು ನೋಡಿ ಕುಂತೀಪುತ್ರ ಧನಂಜಯನು ವಾಸುದೇವನಿಗೆ ಇಂತೆಂದನು: “ಕೃಷ್ಣ! ಭಾರ್ಗವಾಸ್ತ್ರದ ವಿಕ್ರಮವನ್ನು ನೋಡು! ಸಮರದಲ್ಲಿ ಈ ಮಹಾಸ್ತ್ರವನ್ನು ಉಪಶಮನಗೊಳಿಸಲು ಯಾರಿಗೂ ಸಾಧ್ಯವಿಲ್ಲ! ಮಹಾರಣದಲ್ಲಿ ಸಂರಬ್ಧನಾಗಿ ದಾರುಣ ಕರ್ಮವನ್ನೆಸಗುತ್ತಿರುವ ಅಂತಕಪ್ರತಿಮ ವೀರ ಸೂತಪುತ್ರನನ್ನು ನೋಡು! ಕುದುರೆಗಳನ್ನು ತೀಕ್ಷ್ಣವಾಗಿ ಪ್ರಚೋದಿಸುತ್ತಾ ಅವನು ನನ್ನನ್ನೇ ಪುನಃ ಪುನಃ ನೋಡುತ್ತಿದ್ದಾನೆ. ಸಮರದಲ್ಲಿ ಕರ್ಣನನ್ನು ಪಲಾಯನಗೊಳಿಸುವನನ್ನು ನಾನು ಕಾಣೆ! ಪುರುಷನು ಜೀವಿಸಿದ್ದರೆ ಯುದ್ಧದಲ್ಲಿ ಜಯವನ್ನೋ ಪರಾಜಯವನ್ನೋ ಪಡೆಯುತ್ತಾನೆ. ಆದರೆ ಗೆದ್ದವನ ವಧೆಯಾದರೆ ಜಯವು ಎಲ್ಲಿಂದ?”

ರಣರಂಗದಲ್ಲಿ ಯುಧಿಷ್ಠಿರನನ್ನು ಕಾಣದೇ ಕೃಷ್ಣಾರ್ಜುನರು ಅವನನ್ನು ಕಾಣಲು ಶಿಬಿರಕ್ಕೆ ತೆರಳಿದುದು

ಆಗ ಜನಾರ್ದನನು ಯುಧಿಷ್ಠಿರನನ್ನು ನೋಡಲು ಇಚ್ಛಿಸಿ, ಕರ್ಣನನ್ನು ಇತರರೊಂದಿಗೆ ಯುದ್ಧಮಾಡಲು ಬಿಟ್ಟು ಅಲ್ಲಿಂದ ರಥವನ್ನು ಓಡಿಸಿದನು. ಕೃಷ್ಣನು ಅರ್ಜುನನಿಗೆ ಹೇಳಿದನು: “ರಾಜಾ ಯುಧಿಷ್ಠಿರನು ಕ್ಷತವಿಕ್ಷತನಾಗಿದ್ದಾನೆ. ಅವನನ್ನು ಸಮಾಧಾನಗೊಳಿಸಿದ ನಂತರ ನೀನು ಕರ್ಣನನ್ನು ವಧಿಸುವೆಯಂತೆ!” ಆಗ ಕೇಶವನ ಆಜ್ಞೆಯಂತೆ ಸಂಗ್ರಾಮವನ್ನು ಬಿಟ್ಟು ಬಾಣಪೀಡಿತ ರಾಜ ಯುಧಿಷ್ಠಿರನನ್ನು ಕಾಣಲು ಬೇಗನೆ ರಥದಲ್ಲಿ ಕುಳಿತು ಹೋದನು.

ಧರ್ಮರಾಜನನ್ನು ನೋಡಲು ಹೊರಟ ಅರ್ಜುನನು ಸೈನ್ಯದಲ್ಲಿ ಹುಡುಕಲು ಅಲ್ಲಿ ತನ್ನ ಅಗ್ರಜನನ್ನು ಕಾಣಲಿಲ್ಲ. ದ್ರೌಣಿಯನ್ನು ಪರಾಜಯಗೊಳಿಸುವ ಆ ಮಹಾ ದುಷ್ಕರ ಆರ್ಯಕರ್ಮವನ್ನೆಸಗಿದ ನಂತರ ಧನಂಜಯನು ತನ್ನ ಸೇನೆಯನ್ನು ಅವಲೋಕಿಸಿದನು. ಸವ್ಯಸಾಚಿಯು ಸೇನೆಯ ಅಗ್ರಭಾಗದಲ್ಲಿ ಯುದ್ಧಮಾಡುತ್ತಿದ್ದ ಶೂರರನ್ನು ಪ್ರಶಂಸೆಮಾಡಿ ಹರ್ಷಗೊಳಿಸುತ್ತಾ ಸೇನೆಯ ಹಿಂದಿರುವವರನ್ನೂ ಪ್ರಶಂಸಿಸುತ್ತಾ ಅವರೆಲ್ಲರನ್ನೂ ರಥಾನೀಕದಲ್ಲಿ ಸ್ಥಿರರಾಗಿ ನಿಲ್ಲುವಂತೆ ಪ್ರಚೋದಿಸಿದನು. ಬೀಮನನ್ನು ನೋಡಿ ಅರ್ಜುನನು ಬೇಗನೆ ಅವನ ಬಳಿಸಾರಿ ಯುಧಿಷ್ಠಿರನ ವೃತ್ತಾಂತವನ್ನು ತಿಳಿಯಲು ರಾಜನೆಲ್ಲಿ ಎಂದು ಕೇಳಿದನು. ಆಗ ಭೀಮನು ಹೇಳಿದನು: “ಕರ್ಣನ ಬಾಣಗಳಿಂದ ಗಾಯಗೊಂಡಿರುವ ಯುಧಿಷ್ಠಿರನು ಇಲ್ಲಿಂದ ಹೊರಟುಹೋಗಿದ್ದಾನೆ. ಹೇಗೋ ಅವನಿನ್ನೂ ಜೀವಿಸಿರಬಹುದು!”

ಅರ್ಜುನನು ಹೇಳಿದನು: “ಇಲ್ಲಿಂದ ನೀನು ಶೀಘ್ರವಾಗಿ ಹೋಗಿ ಕುರುಸತ್ತಮ ರಾಜನ ಸಮಾಚಾರವನ್ನು ತಿಳಿದುಕೋ! ಕರ್ಣನ ಬಾಣಗಳಿಂದ ಅತಿಯಾಗಿ ಗಾಯಗೊಂಡಿರುವ ರಾಜನು ಶಿಬಿರಕ್ಕೆ ಹೋಗಿರಬಹುದು! ರಾತ್ರಿಯುದ್ಧದಲ್ಲಿ ಕೂಡ ಆ ತರಸ್ವಿಯು ದ್ರೋಣನ ಪ್ರಹಾರಗಳಿಂದ ಅತಿಯಾಗಿ ಗಾಯಗೊಂಡಿದ್ದನು. ಆದರೆ ಜಯವನ್ನು ಪ್ರತೀಕ್ಷಿಸುತ್ತಿದ್ದ ಅವನು ದ್ರೋಣನು ಹತನಾಗುವವರೆಗೂ ರಣದಲ್ಲಿಯೇ ನಿಂತಿದ್ದನು. ಆದರೆ ಇಂದು ಕರ್ಣನಿಂದ ಪೀಡಿತನಾದ ಪಾಂಡವಾಗ್ರ್ಯನು ಶಿಬಿರಕ್ಕೆ ಹೊರಟುಹೋಗಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಭೀಮ! ಇಂದು ಅವನ ಬಗ್ಗೆ ತಿಳಿಯಲು ನೀನು ಹೊರಟುಹೋಗು. ನಾನು ಶತ್ರುಗಣಗಳನ್ನು ವಿರೋಧಿಸಿ ಇಲ್ಲಿಯೇ ನಿಲ್ಲುತ್ತೇನೆ!”

ಭೀಮನು ಹೇಳಿದನು: “ಮಹಾನುಭಾವ! ನೀನೇ ಹೋಗಿ ಭರತರ್ಷಭ ರಾಜನ ವಿಚಾರವನ್ನು ತಿಳಿದುಕೊಂಡು ಬಾ! ಅರ್ಜುನ! ಒಂದುವೇಳೆ ನಾನೇ ಅಲ್ಲಿಗೆ ಹೋದರೆ ಯುದ್ಧ ಪ್ರವೀರರು ಭಯದಿಂದ ನಾನು ಹೊರಟುಹೋದನೆಂದು ಮಾತನಾಡಿಕೊಳ್ಳುತ್ತಾರೆ!”

ಆಗ ಅರ್ಜುನನು ಭೀಮಸೇನನಿಗೆ ಇಂತೆಂದನು: “ಸಂಶಪ್ತಕರು ನನ್ನ ಎದುರಾಗಿ ನಿಂತಿದ್ದಾರೆ. ಇವರನ್ನು ಸಂಹರಿಸದೇ ಶತ್ರುಸೇನೆಗಳನ್ನು ಬಿಟ್ಟು ಇಲ್ಲಿಂದ ಹೋಗಲು ನನಗೆ ಶಕ್ಯವಾಗುತ್ತಿಲ್ಲ!”

ಆಗ ತನ್ನ ವೀರ್ಯವನ್ನೇ ಆಶ್ರಯಿಸಿದ್ದ ಭೀಮಸೇನನು ಅರ್ಜುನನಿಗೆ ಹೇಳಿದನು: “ಧನಂಜಯ! ಯುದ್ಧದಲ್ಲಿ ಸಂಶಪ್ತಕರೊಡನೆ ನಾನು ಹೋರಾಡುತ್ತೇನೆ. ಸರ್ವರನ್ನೂ ನಾನು ಸಂಹರಿಸುತ್ತೇನೆ. ನೀನು ಹೋಗು!”

ಶತ್ರುಗಳ ಮಧ್ಯದಲ್ಲಿ ಅಣ್ಣ ಭೀಮಸೇನನ ಆ ಸುದುಷ್ಕರ ಮಾತನ್ನು ಆಲಿಸಿ ಅರ್ಜುನನು ಕುರುಶ್ರೇಷ್ಠ ಯುಧಿಷ್ಠಿರನನ್ನು ನೋಡಲು ಮುಂದೆ ಹೋಗುತ್ತಾ ಕೃಷ್ಣನಿಗೆ ಇಂತೆಂದನು: “ಕೇಶವ! ಸಮುದ್ರರೂಪದ ಈ ರಣವನ್ನು ದಾಟಿ ಕುದುರೆಗಳನ್ನು ಓಡಿಸು! ಅಜಾತಶತ್ರು ರಾಜನನ್ನು ನೋಡಲು ಬಯಸುತ್ತೇನೆ!”

ಆಗ ಸರ್ವದಾಶಾರ್ಹರ ಪ್ರಮುಖ ಕೇಶವನು ಕುದುರೆಗಳನ್ನು ಓಡಿಸುತ್ತಾ ಭೀಮನಿಗೆ ಇಂತೆಂದನು: “ಭೀಮ! ನಿನ್ನ ಕರ್ಮದಲ್ಲಿ ಆಶ್ಚರ್ಯವೇನೂ ಇಲ್ಲ. ಅರಿಸಂಘಗಳನ್ನು ನೀನು ಸಂಹರಿಸಲು ಶಕ್ತನಾಗಿರುವೆ!”

ಆಗ ಗರುಡನಂತಿರುವ ಕುದುರೆಗಳ ಮೂಲಕ ಶೀಘ್ರಾತಿಶೀಘ್ರವಾಗಿ ಯುಧಿಷ್ಠಿರನಿರುವಲ್ಲಿಗೆ ಹೃಷೀಕೇಶ ಮತ್ತು ಅರ್ಜುನರು ಬಂದರು. ಅವರು ಶತ್ರುಸೇನೆಗಳನ್ನು ಎದುರಿಸಲು ಭೀಮನನ್ನಿರಿಸಿ ವೃಕೋದರನಿಗೆ ಯುದ್ಧದ ಕುರಿತಾಗಿ ಸಲಹೆಗಳನ್ನೂ ನೀಡಿದ್ದರು.

Leave a Reply

Your email address will not be published. Required fields are marked *