ಹದಿನೇಳನೇ ದಿನದ ಯುದ್ಧ-೩
ಧೃಷ್ಟದ್ಯುಮ್ನನಿಂದ ರಕ್ಷಿತ ಶತ್ರುಸೇನೆಯಿಂದ ಭೇದಿಸಲು ಅಸಾಧ್ಯವಾದ ಪಾರ್ಥರ ಅಪ್ರತಿಮ ವ್ಯೂಹವನ್ನು ನೋಡಿ ಕರ್ಣನು ರಥಘೋಷ-ಸಿಂಹನಾದ-ವಾದ್ಯನಿನಾದಗಳೊಂದಿಗೆ ಮೇದಿನಿಯನ್ನು ನಡುಗಿಸುತ್ತಾ ಮುಂದುವರೆದನು. ಕ್ರೋಧದಿಂದ ನಡುಗುತ್ತಾ ಆ ಮಹಾತೇಜಸ್ವಿಯು ಯಥಾವತ್ತಾಗಿ ಪ್ರತಿವ್ಯೂಹವನ್ನು ರಚಿಸಿ ಅಸುರೀಸೇನೆಯನ್ನು ಮಘವಾನನು ಹೇಗೋ ಹಾಗೆ ಪಾಂಡವೀ ಸೇನೆಯನ್ನು ವಧಿಸುತ್ತಾ ಯುಧಿಷ್ಠಿರನನ್ನೂ ಗಾಯಗೊಳಿಸಿ ಅವನನ್ನು ತನ್ನ ಬಲಕ್ಕೆ ಮಾಡಿಕೊಂಡನು.
ಕೃಪ, ಮಾಗಧ, ಮತ್ತು ಕೃತವರ್ಮರು ಸೇನೆಯ ಎಡಭಾಗದಲ್ಲಿದ್ದರು. ಅವರ ಬಲಭಾಗದಲ್ಲಿ ಶಕುನಿ-ಉಲೂಕರು ಥಳಥಳಿಸುವ ಪ್ರಾಸಗಳನ್ನು ಹಿಡಿದಿದ್ದ ಕುದುರೆ ಸವಾರರೊಂದಿಗೆ ಕೌರವ ಸೇನೆಯನ್ನು ರಕ್ಷಿಸುತ್ತಿದ್ದರು. ಗಾಂಧಾರ ಸೈನಿಕರೂ, ಪರ್ವತದೇಶದವರೂ, ಪಿಶಾಚಿಗಳಂತೆ ದುರ್ದರ್ಶರಾದ ಮೂವತ್ನಾಲ್ಕು ಸಾವಿರ ಸಂಶಪ್ತಕ ರಥಿಗಳು ಕೃಷ್ಣಾರ್ಜುನರನ್ನು ಸಂಹರಿಸಲು ಬಯಸಿ ಕೌರವರೊಂದಿಗೆ ಕೂಡಿಕೊಂಡು ವ್ಯೂಹದ ಎಡಭಾಗವನ್ನು ರಕ್ಷಿಸುತ್ತಿದ್ದರು. ಅವರ ಪ್ರಪಕ್ಷದಲ್ಲಿ ಶಕರು ಮತ್ತು ಯವನರೊಂದಿಗೆ ಕಾಂಬೋಜರು ಸೂತಪುತ್ರನ ನಿರ್ದೇಶನದಂತೆ ರಥ-ಕುದುರೆ-ಪಾದಾತಿಗಳೊಂದಿಗೆ ಅರ್ಜುನ-ಕೇಶವರನ್ನು ಆಹ್ವಾನಿಸುತ್ತಾ ನಿಂತಿದ್ದರು. ಸೇನೆಯ ಮಧ್ಯಭಾಗದಲ್ಲಿ ಚಿತ್ರಿತ ಕವಚವನ್ನೂ ಅಂಗದ-ಮಾಲೆಗಳನ್ನೂ ಧರಿಸಿದ್ದ ಕರ್ಣನು ಸೇನೆಯ ಮುಂಬಾಗವನ್ನು ರಕ್ಷಿಸುತ್ತಾ ನಿಂತಿದ್ದನು. ಕುಪಿತ ಪುತ್ರರಿಂದ ರಕ್ಷಿಸಲ್ಪಟ್ಟಿದ್ದ ಆ ಶಸ್ತ್ರಭೃತರಲ್ಲಿ ಶ್ರೇಷ್ಠ ಸೇನಾಪತಿ ವೀರ ಕರ್ಣನು ಸೇನೆಯನ್ನು ನಡೆಸುತ್ತಾ ಸುಶೋಭಿಸಿದನು. ಉಕ್ಕಿನಂಥಹ ಮಹಾಬಾಹುಗಳುಳ್ಳ ಸೂರ್ಯ-ಅಗ್ನಿಗಳ ತೇಜಸ್ಸುಳ್ಳ, ಕಂದು-ಹಳದೀ ಬಣ್ಣದ ಕಣ್ಣುಗಳುಳ್ಳ ನೋಡಲು ಸುಂದರನಾಗಿದ್ದ ದುಃಶಾಸನನು ಮಹಾಗಜದ ಭುಜದ ಮೇಲೆ ಕುಳಿತು ವ್ಯೂಹದ ಹಿಂಬಾಗವನ್ನು ರಕ್ಷಿಸುತ್ತಿದ್ದನು. ಅವನನ್ನು ಅನುಸರಿಸಿ ಸ್ವಯಂ ದುರ್ಯೋಧನ ನೃಪನು ವಿಚಿತ್ರ ಅಶ್ವಸೇನೆಗಳು ಮತ್ತು ಸಹೋದರರಿಂದ ರಕ್ಷಿತನಾಗಿ ಮದ್ರ್ಕಕ-ಕೇಕಯರಿಂದ ರಕ್ಷಿತನಾಗಿ ದೇವತೆಗಳಿಂದ ಸುತ್ತುವರೆಯಲ್ಪಟ್ಟ ಶತಕ್ರತುವಂತೆ ಶೋಭಿಸುತ್ತಾ ನಡೆದನು. ಅಶ್ವತ್ಥಾಮ ಮತ್ತು ಕುರುಗಳ ಪ್ರಮುಖ ಮಹಾರಥರು ಹಾಗೂ ನಿತ್ಯಮತ್ತ ಆನೆಗಳು, ಶೂರ ಮ್ಲೇಚ್ಛರು ವರ್ಷಾಕಾಲದ ಮೋಡಗಳಂತೆ ಬಾಣಗಳ ಮಳೆಸುರಿಸುತ್ತಾ ರಥಸೇನೆಯನ್ನು ಅನುಸರಿಸಿ ಹೋಗುತ್ತಿದ್ದರು. ಆ ಮದಗಜಗಳು ವೈಜಯಂತಿಯಂತೆ ಹೊಳೆಯುತ್ತಿದ್ದ ಧ್ವಜಗಳಿಂದಲೂ ಪರಮಾಯುಧಗಳಿಂದಲೂ ಕುಳಿತಿದ್ದ ಮಾವುಟಿಗರಿಂದಲೂ ವೃಕ್ಷಗಳಿಂದ ಕೂಡಿದ ಪರ್ವತಗಳಂತೆ ಶೋಭಿಸುತ್ತಿದ್ದವು. ಆ ಆನೆಗಳ ಪಾದರಕ್ಷಕರಾದ ಸಹಸ್ರಾರು ಪಾದತಿಗಳು ಪಟ್ಟಿಷ-ಖಡ್ಗಗಳನ್ನು ಹಿಡಿದು ಶೂರರೂ ಯುದ್ಧದಿಂದ ಹಿಂದಿರುಗದವರೂ ಆಗಿದ್ದರು. ಅಧಿಕವಾಗಿ ಸಮಲಂಕೃತವಾಗಿದ್ದ, ಮಾವುಟಿಗರು ಮತ್ತು ರಥಗಳಿಂದ ಕೂಡಿದ್ದ ಆ ವ್ಯೂಹರಾಜವು ದೇವಾಸುರರ ಸೇನೆಗಳಂತೆ ಕಾಣುತ್ತಿತ್ತು. ಬೃಹಸ್ಪತಿಯ ಹೇಳಿಕೆಯಂತೆಯೇ ನಾಯಕನಿಂದ ರಚಿಸಲ್ಪಟ್ಟ ಆ ಮಹಾವ್ಯೂಹವು ನರ್ತಿಸುತ್ತಿರುವಂತೆ ಕಾಣುತ್ತಿದ್ದು ಶತ್ರುಗಳಲ್ಲಿ ಭಯವನ್ನುಂಟುಮಾಡುತ್ತಿತ್ತು. ಅದರ ಪಕ್ಷ-ಪ್ರಪಕ್ಷಗಳಲ್ಲಿದ್ದ ಯುದ್ಧೋತ್ಸಾಹೀ ಅಶ್ವ-ರಥ-ಆನೆಗಳು ಮಳೆಗಾಲದ ಮೋಡಗಳು ಮಳೆಗರೆಯುವಂತೆ ಶತ್ರುಸೇನೆಗಳ ಮೇಲೆ ಬೀಳುತ್ತಿದ್ದವು.
ಸೇನಾಮುಖದಲ್ಲಿ ಕರ್ಣನನ್ನು ನೋಡಿ ರಾಜಾ ಯುಧಿಷ್ಠಿರನು ಏಕವೀರ ಧನಂಜಯನಿಗೆ ಇಂತೆಂದನು: “ಅರ್ಜುನ! ಕರ್ಣನು ರಚಿಸಿದ ಮಹಾವ್ಯೂಹವನ್ನು ನೋಡು! ಅಮಿತ್ರರ ಈ ಮಹಾಬಲವನ್ನು ಚೆನ್ನಾಗಿ ನೋಡಿ ಅವರಿಗೆ ಪ್ರತಿಯಾಗಿ ಯಾವುದು ಸರಿಯಾದುದೋ ಅದನ್ನು ಆಲೋಚಿಸಿ ಯುದ್ಧ ನೀತಿಯನ್ನು ಬಳಸುವವನ್ನಾಗು!”
ರಾಜನು ಹೀಗೆ ಹೇಳಲು ಅರ್ಜುನನು ಅಂಜಲೀ ಬದ್ಧನಾಗಿ ನೃಪನಿಗೆ ಹೇಳಿದನು: “ನೀನು ಹೇಳಿದುದೆಲ್ಲವೂ ಸರಿಯೇ! ಸುಳ್ಳಲ್ಲ! ಭಾರತ!”
ಯುಧಿಷ್ಠಿರನು ಹೇಳಿದನು: “ನೀನು ರಾಧೇಯನನ್ನು, ಭೀಮಸೇನನು ಸುಯೋಧನನನ್ನು, ನಕುಲನು ವೃಷಸೇನನನ್ನು, ಸಹದೇವನು ಸೌಬಲನನ್ನು, ಶತಾನೀಕನು ದುಃಶಾಸನನನ್ನು, ಸಾತ್ಯಕಿಯು ಕೃತವರ್ಮನನ್ನು, ಹಾಗೆಯೇ ಧೃಷ್ಟದ್ಯುಮ್ನನು ದ್ರೌಣಿಯನ್ನು ಮತ್ತು ಸ್ವಯಂ ನಾನು ಕೃಪನನ್ನು ಹೋರಾಡೋಣ. ದ್ರೌಪದೇಯರು ಶಿಖಂಡಿಯೊಡಗೂಡಿ ಉಳಿದಿರುವ ಧಾರ್ತರಾಷ್ಟ್ರರೊಂದಿಗೆ ಯುದ್ಧಮಾಡಲಿ. ಹೀಗೆ ನಮ್ಮಕಡೆಯವರು ಶತ್ರುಸೇನೆಗಳೊಡನೆ ಯುದ್ಧಮಾಡಿ ಶತ್ರುಗಳನ್ನು ಸಂಹರಿಸಲಿ!” ಧರ್ಮರಾಜನು ಹೀಗೆ ಹೇಳಲು ಧನಂಜಯನು ಹಾಗೆಯೇ ಆಗಲೆಂದು ಹೇಳಿ ತನ್ನ ಸೇನೆಗಳಿಗೆ ಆದೇಶವನ್ನಿತ್ತು ವ್ಯೂಹದ ಅಗ್ರಭಾಗದಲ್ಲಿ ತಾನೇ ಉಪಸ್ಥಿತನಾದನು.
ದುರ್ಯೋಧನನ ದುರ್ನೀತಿಯಿಂದಾಗಿ ರಚಿಸಿದ ವ್ಯೂಹಕ್ಕೆ ಪ್ರತಿಯಾಗಿ ಮಹಾಬಲ ಅರ್ಜುನನು ತನ್ನ ಸೇನೆಯನ್ನೂ ವ್ಯೂಹಕ್ರಮದಲ್ಲಿ ನಿಲ್ಲಿಸಿದನು. ಕುದುರೆಸವಾರರು, ಗಜಸೈನಿಕರು, ಪದಾತಿಗಳು ಮತ್ತು ರಥಸಂಕುಲಗಳಿಂದ ಕೂಡಿದ್ದ ಮತ್ತು ಧ್ರುಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಆ ಮಹಾಸೇನೆಯು ಶೋಭಿಸುತ್ತಿತ್ತು. ಪಾರಿವಾಳಗಳ ಬಣ್ಣದ ಕುದುರೆಗಳನ್ನು ಹೊಂದಿದ್ದ, ಚಂದ್ರಾದಿತ್ಯ ಸಮದ್ಯುತಿ ಧನ್ವೀ ಪಾರ್ಷತ ಧೃಷ್ಟದ್ಯುಮ್ನನು ಮೂರ್ತಿಮತ್ತಾಗಿ ನಿಂತಿರುವ ಕಾಲನಂತೆಯೇ ಪ್ರಕಾಶಿಸುತ್ತಿದ್ದನು. ಭಯಂಕರರಾಗಿ ಕಾಣುತ್ತಿದ್ದ ಯುದ್ಧೋತ್ಸುಕ ದ್ರೌಪದೇಯರು ಸೈನಿಕರೊಂದಿಗೆ ತಾರಾಗಣಗಳು ಚಂದ್ರನನ್ನು ಹೇಗೋ ಹಾಗೆ ಪಾರ್ಷತನನ್ನು ರಕ್ಷಿಸುತ್ತಿದ್ದರು.
ಅದ್ಭುತವಾಗಿ ಕಾಣುತ್ತಿದ್ದ ಅರ್ಜುನನ ರಥವು ಬರುತ್ತಿರುವುದನ್ನು ಕಂಡು ಶಲ್ಯನು ಯುದ್ಧದುರ್ಮದ ಆಧಿರಥಿ ಕರ್ಣನಿಗೆ ಪುನಃ ಹೇಳಿದನು: “ಯಾರನ್ನು ನೀನು ಎಲ್ಲಿದ್ದಾನೆಂದು ಕೇಳುತ್ತಿದ್ದೆಯೋ ಆ ಶ್ವೇತಾಶ್ವ ಕೃಷ್ಣಸಾರಥಿ ಕೌಂತೇಯನು ಶತ್ರುಗಳನ್ನು ಸಂಹರಿಸಿ ಇಗೋ ಇಲ್ಲಿಗೇ ಬರುತ್ತಿದ್ದಾನೆ. ಅವರ ರಥಚಕ್ರಗಳು ಅತಿದೊಡ್ಡ ತುಮುಲ ಶಬ್ಧವನ್ನುಂಟುಮಾಡುತ್ತಿದೆ. ರಥಚಲನದಿಂದ ಮೇಲೆದ್ದ ಧೂಳು ಆಕಾಶವನ್ನೂ ಆವರಿಸಿ ನಿಂತಿದೆ. ರಥಚಕ್ರಗಳ ಸಂಘಟ್ಟನೆಯಿಂದ ಮೇದಿನಿಯೂ ಕಂಪಿಸುತ್ತಿದೆ. ನಿನ್ನ ಸೇನೆಯ ಸುತ್ತಲೂ ಚಂಡಮಾರುತವು ಬೀಸುತ್ತಿದೆ. ಮಾಂಸಾಶೀ ಮೃಗಗಳು ಸುತ್ತಾಡುತ್ತಿವೆ. ಮೃಗಗಳು ಭೈರವ ಕೂಗನ್ನು ಕೂಗುತ್ತಿವೆ. ಮಹಾಘೋರ, ಭಯಂಕರ, ಲೋಮಹರ್ಷಣ, ಮೇಘಸಂಕಾಶ ಕಬಂಧ ಕೇತುಗ್ರಹವು ಸೂರ್ಯನನ್ನು ಆವರಿಸಿ ನಿಂತಿದೆ! ಅಲ್ಲಿ ನೋಡು! ನಾಲ್ಕು ದಿಕ್ಕುಗಳಲ್ಲಿಯೂ ಬಹುವಿಧದ ಮೃಗ ಸಮೂಹಗಳು, ಬಲಶಾಲೀ ಮದಿಸಿದ ಹುಲಿಗಳೂ ಸೂರ್ಯನನ್ನೇ ದಿಟ್ಟಿಸಿ ನೋಡುತ್ತಿವೆ! ಸಹಸ್ರಾರು ಘೋರ ರಣಹದ್ದುಗಳೂ ಹದ್ದುಗಳೂ ಒಂದೇ ಕಡೆ ಸೇರಿ ಪರಸ್ಪರರನ್ನು ವೀಕ್ಷಿಸುತ್ತಾ ಕೂಗುತ್ತಿವೆ! ನಿನ್ನ ಮಹಾರಥದ ಮೇಲೆ ಹಾರಿಸಿರುವ ಬಣ್ಣ-ಬಣ್ಣದ ಶ್ರೇಷ್ಠ ಚಾಮರಗಳು ಇದ್ದಕ್ಕಿದ್ದಂತೆಯೇ ಪ್ರಜ್ವಲಿಸುತ್ತಿವೆ. ಧ್ವಜವೂ ಕಂಪಿಸುತ್ತಿದೆ. ಆಕಾಶದಲ್ಲಿ ಗರುಡನಂತೆ ಹಾರಿಹೋಗುವ ಮಹಾಕಾಯದ ಮಹಾವೇಗದ ನಿನ್ನ ಕುದುರೆಗಳು ಥರಥರನೆ ನಡುಗುತ್ತಿರುವುದನ್ನು ನೋಡು! ಇಂತಹ ನಿಮಿತ್ತಗಳು ಕಾಣುತ್ತಿರಲು ನಿಶ್ಚಯವಾಗಿಯೂ ಇಂದು ನೂರಾರು ಸಹಸ್ರಾರು ಪಾರ್ಥಿವರು ಹತರಾಗಿ ಭೂಮಿಯ ಮೇಲೆ ಮಲಗುತ್ತಾರೆ! ಎಲ್ಲೆಡೆಯಲ್ಲಿಯೂ ಶಂಖ, ಅನಕ ಮತ್ತು ಮೃದಂಗಗಳ ಲೋಮಹರ್ಷಣ ತುಮುಲ ಶಬ್ಧಗಳು ಕೇಳಿಬರುತ್ತಿವೆ! ಬಾಣಗಳ ಶಬ್ಧವನ್ನೂ, ಬಹುವಿಧದ ನರ-ಅಶ್ವ-ರಥಗಳ ಶಬ್ಧಗಳನ್ನೂ, ಮಹಾತ್ಮರ ಧನುಸ್ಸಿನ ಟೇಂಕಾರ ಮತ್ತು ಚಪ್ಪಾಳೆಯ ಶಬ್ಧಗಳನ್ನೂ ಕೇಳು! ಅವನ ರಥದ ಧ್ವಜದಂಡಗಳ ಮೇಲೆ ಸುವರ್ಣ-ರಜತಗಳಿಂದ ಚಿತ್ರಿತವಾದ ಬಟ್ಟೆಗಳಿಂದ ಶಿಲ್ಪಿಗಳು ನಿರ್ಮಿಸಿದ ನಾನಾವರ್ಣಗಳ ಪತಾಕೆಗಳು ಗಾಳಿಯಲ್ಲಿ ಹಾರಾಡಿ ಬಹಳವಾಗಿ ಪ್ರಕಾಶಿಸುತ್ತಿವೆ! ಬಂಗಾರದ ಚಂದ್ರ, ನಕ್ಷತ್ರ ಮತ್ತು ಸೂರ್ಯರಿರುವ ಕಿಂಕಿಣೀಯುಕ್ತ ಅರ್ಜುನನ ಪತಾಕೆಗಳು ಮೋಡಗಳಲ್ಲಿರುವ ಮಿಂಚಿನಂತೆ ರಾರಾಜಿಸುತ್ತಿರುವುದನ್ನು ನೋಡು! ಗಾಳಿಗೆ ಸಿಲುಕಿದ ಅವನ ಧ್ವಜಗಳು ಕಣ-ಕಣ ಶಬ್ಧಮಾಡುತ್ತಿವೆ. ಪತಾಕೆಗಳುಳ್ಳ ಆ ರಥಗಳು ಮಹಾತ್ಮ ಪಾಂಚಾಲರದ್ದು. ನಿನ್ನ ಕಡೆಯ ಆನೆ-ಕುದುರೆ-ರಥ-ಪದಾತಿಗಳ ಗುಂಪುಗಳನ್ನು ಸಂಹರಿಸುತ್ತಿರುವ ಅವನ ಧ್ವಜಾಗ್ರವು ಕಾಣಿಸುತ್ತಿದೆ. ಧನುಸ್ಸಿನ ಟೇಂಕಾರವೂ ಕೇಳಿಸುತ್ತಿದೆ. ನೀನು ಎಲ್ಲಿರುವನೆಂದು ಕೇಳುತ್ತಿದ್ದ ಆ ವೀರ ಶ್ವೇತಾಶ್ವ ಕೃಷ್ಣಸಾರಥಿ, ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸುತ್ತಿರುವ ಅರ್ಜುನನನ್ನೇ ನೀನು ಇಂದು ನೋಡುವೆ! ಇಂದು ಒಂದೇ ರಥದಲ್ಲಿ ಕುಳಿತಿರುವ ಆ ಇಬ್ಬರು ಪುರುಷವ್ಯಾಘ್ರ, ಲೋಹಿತಾಕ್ಷ, ಪರಂತಪ ವಾಸುದೇವ-ಅರ್ಜುನರನ್ನು ನೀನು ನೋಡುವೆ! ಯಾರ ಸಾರಥಿಯು ವಾರ್ಷ್ಣೇಯನೋ ಮತ್ತು ಯಾರ ಧನುಸ್ಸು ಗಾಂಡೀವವೋ ಆ ಅರ್ಜುನನನ್ನು ನೀನು ಸಂಹರಿಸಿದೆಯಾದರೆ ನೀನೇ ನಮಗೆ ರಾಜನಾಗುವೆ! ಸಂಶಪ್ತಕರಿಂದ ಆಹ್ವಾನಿತರಾಗಿ ಅವರನ್ನೇ ಎದುರಿಸಿ ಅವನು ಹೋಗಿದ್ದನು. ಬಲಿಷ್ಟ ಅರ್ಜುನನು ಸಂಗ್ರಾಮದಲ್ಲಿ ಶತ್ರುಗಳೊಡನೆ ಕದನವಾಡುತ್ತಾನೆ!” ಹೀಗೆ ಹೇಳುತ್ತಿರುವ ಮದ್ರೇಶನ ಮೇಳೆ ಕರ್ಣನು ಕೋಪಗೊಂಡು ಇಂತೆಂದನು:
“ನೋಡು! ಕ್ರುದ್ಧ ಸಂಶಪ್ತಕರು ಅವನನ್ನು ಎಲ್ಲಕಡೆಗಳಿಂದ ಮುತ್ತಿಗೆ ಹಾಕಿದ್ದಾರೆ! ಮೋಡಗಳಿಂದ ಮುಸುಕಲ್ಪಟ್ಟ ಸೂರ್ಯನಂತೆ ಪ್ರಾರ್ಥನು ಕಾಣುತ್ತಲೇ ಇಲ್ಲ! ಶಲ್ಯ! ಇದೇ ಅರ್ಜುನನ ಅಂತ್ಯವೆಂದು ಸೇನೆಗಳು ಶೋಕಸಾಗರದಲ್ಲಿ ಮುಳುಗಿವೆ!”
ಶಲ್ಯನು ಹೇಳಿದನು: “ವರುಣನನ್ನು ನೀರಿನಿಂದ ಅಥವಾ ಇಂಧನದಿಂದ ಪಾವಕನನ್ನು ಯಾರುತಾನೇ ನಾಶಗೊಳಿಸಬಲ್ಲರು? ಯಾರುತಾನೇ ವಾಯುವನ್ನು ಬಂಧಿಸಬಲ್ಲರು ಅಥವಾ ಮಹಾರ್ಣವವನ್ನು ಯಾರುತಾನೇ ಕುಡಿದುಬಿಡಬಲ್ಲರು? ಯುದ್ಧದಲ್ಲಿ ಪಾರ್ಥನನ್ನು ನಿಗ್ರಹಿಸುವುದೂ ಇದೇ ರೀತಿಯದೆಂದು ನನಗನ್ನಿಸುತ್ತದೆ. ಇಂದ್ರನ ಸಹಿತರಾಗಿ ಸುರಾಸುರರೆಲ್ಲರಿಗೂ ಅರ್ಜುನನನ್ನು ಗೆಲ್ಲಲು ಶಕ್ಯವಿಲ್ಲ. ಅಥವಾ ಅವನನ್ನು ಗೆಲ್ಲುತ್ತೇನೆ ಎಂದು ಹೇಳುವುದರಿಂದಲೇ ನಿನಗೆ ಸಂತೋಷವಾಗುವುದಾದರೆ ಹಾಗೆ ಹೇಳಿ ಸಂತೋಷಪಡು! ಯುದ್ಧದಲ್ಲಿ ಇವನನ್ನು ಗೆಲ್ಲಲು ಶಕ್ಯವಿಲ್ಲ. ನಿನ್ನ ಮನೋರಥವನ್ನು ಬದಲಾಯಿಸಿಕೋ! ಅರ್ಜುನನನ್ನು ಯಾರು ಸಮರದಲ್ಲಿ ಜಯಿಸಬಲ್ಲನೋ ಅವನು ಎರಡೂ ಬಾಹುಗಳಿಂದಲೇ ಭೂಮಿಯನ್ನು ಎತ್ತಬಲ್ಲನು. ಕ್ರುದ್ಧನಾಗಿ ಇರುವವುಗಳೆಲ್ಲವನ್ನೂ ದಹಿಸಬಲ್ಲನು. ಮತ್ತು ಸ್ವರ್ಗದಿಂದ ದೇವತೆಗಳನ್ನು ಬೀಳಿಸಬಲ್ಲನು. ಭಯಂಕರ, ಅಕ್ಲಿಷ್ಟಕಾರಿ, ಮೇರು ಪರ್ವತದಂತೆ ಅಚಲನಾಗಿ ಪ್ರಕಾಶಿಸುತ್ತಿರುವ ಮಹಾಬಾಹು ಕುಂತೀಸುತ ವೀರನನ್ನು ನೋಡು! ಅಸಹನಶೀಲ, ನಿತ್ಯಕೋಪಿಷ್ಟ, ವಿಜಯೇಚ್ಛು ವೀರ್ಯವಾನ್ ಭೀಮನು ಇಗೋ ಹಿಂದಿನ ವೈರವನ್ನು ನೆನಪಿಸಿಕೊಳ್ಳುತ್ತಾ ಯುದ್ಧಕ್ಕೆ ನಿಂತಿದ್ದಾನೆ! ಇಗೋ! ಶತ್ರುಗಳನ್ನು ನಾಶಗೊಳಿಸುವ ಪರಪುರಂಜಯ ಧರ್ಮಭೃತರಲ್ಲಿ ಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಯುದ್ಧಕ್ಕೆ ಅಣಿಯಾಗಿ ನಿಂತಿದ್ದಾನೆ! ಇಗೋ! ಅಶ್ವಿನಿಗಳಂತಿರುವ ನಕುಲ ಸಹದೇವ ಸೋದರರಿಬ್ಬರು ದುರ್ಜಯ ಪುರುಷವ್ಯಾಘ್ರರೂ ಯುದ್ಧಕ್ಕೆ ನಿಂತಿದ್ದಾರೆ! ಯುದ್ಧದಲ್ಲಿ ಅರ್ಜುನನಿಗೆ ಸಮನಾದ ಕೃಷ್ಣೆಯ ಎಲ್ಲ ಐವರು ಮಕ್ಕಳೂ ಐದು ಪರ್ವತಗಳಂತೆ ಯುದ್ಧಕ್ಕೆ ಅಣಿಯಾಗಿ ನಿಂತಿರುವುದು ಕಾಣುತ್ತಿದೆ! ಇಗೋ! ಧೃಷ್ಟದ್ಯುಮ್ನನ ನೇತೃತ್ವದಲ್ಲಿ ಪರಿಪುಷ್ಟ, ಸತ್ಯಜಿತ, ಪರಮೌಜಸ ವೀರ ದ್ರುಪದ ಪುತ್ರರೂ ನಿಂತಿದ್ದಾರೆ!”
ಆ ಇಬ್ಬರು ಪುರುಷಸಿಂಹರೂ ಹೀಗೆ ಮಾತನಾಡಿಕೊಳ್ಳುತ್ತಿರಲು ಆ ಎರಡು ಸೇನೆಗಳೂ ಗಂಗೆ-ಯಮುನೆಯರಂತೆ ವೇಗದಿಂದ ಪರಸ್ಪರರೊಡನೆ ಸಮ್ಮಿಳಿತವಾದವು.
ಅರ್ಜುನ-ಸಂಶಪ್ತಕರ ಯುದ್ಧ
ಹೀಗೆ ಸೇನೆಗಳನ್ನು ವ್ಯೂಹಕ್ರಮದಲ್ಲಿರಿಸಿ ಅರ್ಜುಜನು ರಣದಲ್ಲಿ ಸಂಶಪ್ತಕರನ್ನು ನೋಡಿ ಕ್ರುದ್ಧನಾಗಿ ಗಾಂಡೀವ ಧನುಸ್ಸನ್ನು ಟೇಂಕರಿಸುತ್ತಾ ಅವರನ್ನು ಆಕ್ರಮಣಿಸಿದನು. ಆಗ ಪಾರ್ಥನನ್ನು ವಧಿಸಲು ಬಯಸಿದ್ದ ಸಂಶಪ್ತಕರು ವಿಜಯದ ಸಂಕಲ್ಪದಿಂದ ಅವನನ್ನು ಮುತ್ತಿದರು. ಅನೇಕ ಅಶ್ವಸಂಘಗಳನ್ನೂ, ಮದಿಸಿದ ಆನೆಗಳ ಸಂಕುಲಗಳನ್ನೂ, ಶೂರರಾದ ಪದಾತಿಸೈನಿಕರನ್ನೂ ಹೊಂದಿದ್ದ ಆ ಸೇನೆಯು ಅರ್ಜುನನನ್ನು ಆಕ್ರಮಣಿಸಿತು. ಆಗ ಅರ್ಜುನನು ಶತ್ರುಗಳ ರಥಗಳನ್ನೂ, ಕುದುರೆಗಳನ್ನೂ, ಧ್ವಜಗಳನ್ನೂ, ಆನೆಗಳನ್ನೂ, ಪದಾತಿಗಳನ್ನೂ, ರಥಪತಿಗಳನ್ನೂ, ಬಾಣಗಳನ್ನೂ, ಧನುಸ್ಸುಗಳನ್ನೂ, ಖಡ್ಗಗಳನ್ನೂ, ಚಕ್ರಗಳನ್ನೂ, ಪರಶ್ವಾಯುಧಗಳನ್ನೂ, ಆಯುಧಗಳನ್ನು ಮೇಲಿತ್ತಿದ್ದ ಬಾಹುಗಳನ್ನೂ, ಮೇಲೆತ್ತಿದ್ದ ಆಯುಧಗಳನ್ನೂ, ಶಿರಗಳನ್ನೂ, ಸಹಸ್ರಾರು ಸಂಖ್ಯೆಗಳನ್ನು ತುಂಡರಿಸಿದನು. ಪಾತಾಳದ ಸುಳಿಯಂತಿದ್ದ ಆ ಸೇನೆಯ ಸುಳಿಯೊಳಗೆ ಸಿಲುಕಿದ್ದ ಅವನ ರಥವು ಮುಳುಗಿಹೋಯಿತೆಂದು ತಿಳಿದು ಸಂಶಪ್ತಕರು ಸಂತೋಷದಿಂದ ಸಿಂಹನಾದಗೈದರು. ಕ್ರುದ್ಧ ರುದ್ರನು ಪಶುಗಳನ್ನು ಹೇಗೋ ಹಾಗೆ ಬೀಭತ್ಸುವು ಪೂರ್ವದಿಕ್ಕಿನಲ್ಲಿದ್ದ ಶತ್ರುಗಳನ್ನು ಸಂಹರಿಸಿ, ಉತ್ತರ-ದಕ್ಷಿಣ-ಪಶ್ಚಿಮದಿಕ್ಕುಗಳಲ್ಲಿದ್ದವರನ್ನೂ ಸಂಹರಿಸಿದನು.
ಕರ್ಣ-ಪಾಂಚಾಲರ ಯುದ್ಧ
ಅದೇ ಸಮಯದಲ್ಲಿ ಕೌರವರೊಡನೆ ಪಾಂಚಾಲ-ಚೇದಿ-ಸೃಂಜಯರ ಪರಮದಾರುಣ ಸಂಗ್ರಾಮವು ನಡೆಯಿತು. ಯುದ್ಧದುರ್ಮದ ಕೃಪ-ಕೃತವರ್ಮ-ಶಕುನಿಯರು ರಥಸೇನೆಗಳನ್ನು ಧ್ವಂಸಹೊಳಿಸಬಲ್ಲ ಹೃಷ್ಟರೂ ಕುಪಿತರೂ ಆಗಿದ್ದ ವೀರ ಸೇನೆಗಳೊಂದಿಗೆ ಕೋಸಲ-ಕಾಶಿ=ಮತ್ಸ್ಯ-ಕರೂಷ-ಕೇಕಯ-ಶೂರಸೇನೆಗಳೊಡನೆ ಯುದ್ಧದಲ್ಲಿ ತೊಡಗಿದರು. ಅವರ ಆ ಅಂತ್ಯಕರ ಯುದ್ಧವು ಶೂದ್ರ-ವೈಶ್ಯ-ಕ್ಷತ್ರಿಯ ವೀರರ ದೇಹ-ಪಾಪ-ಪ್ರಾಣಾಪಹಾರಕವೂ ಧರ್ಮಸಮ್ಮತವೂ ಸ್ವರ್ಗಪ್ರಾಪಕವೂ ಯಶಸ್ಕರವೂ ಆಗಿತ್ತು. ಸಹೋದರರಿಂದೊಡಗೂಡಿದ ಕುರುವೀರ ದುರ್ಯೋಧನನು ಕೂಡ ಕುರುಪ್ರವೀರರಿಂದ ಮತ್ತು ಮದ್ರ ಮಹಾರಥರಿಂದ ರಕ್ಷಿತನಾಗಿ, ಪಾಂಚಾಲ-ಚೇದಿಗಳೊಂದಿಗೆ ಮತ್ತು ಸಾತ್ಯಕಿ-ಪಾಂಡವರೊಂದಿಗೆ ರಣದಲ್ಲಿ ಯುದ್ಧಮಾಡುತ್ತಿದ್ದ ಕರ್ಣನನ್ನು ರಕ್ಷಿಸುತ್ತಿದ್ದನು. ಕರ್ಣನಾದರೋ ನಿಶಿತಬಾಣಗಳಿಂದ ಮಹಾಸೇನೆಯನ್ನು ಸಂಹರಿಸಿ ರಥಶ್ರೇಷ್ಠರನ್ನು ಸದೆಬಡಿದು ಯುಧಿಷ್ಠಿರನನ್ನು ಪೀಡಿಸಿದನು. ಕರ್ಣನು ಸಾವಿರಾರು ಶತ್ರುಗಳನ್ನು ಅಸ್ತ್ರ-ಆಯುಧ-ದೇಹ-ಪ್ರಾಣಗಳಿಂದ ವಿಹೀನರನ್ನಾಗಿಸಿ ಅವರಿಗೆ ಸ್ವರ್ಗ-ಯಶಸ್ಸುಗಳು ದೊರಕುವಂತೆ ಮಾಡಿ ತನ್ನವರಿಗೆ ಮಹಾನಂದವನ್ನುಂಟುಮಾಡಿದನು.
ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ವ್ಯವಸ್ಥಿತರಾಗಿದ್ದ ಪಾರ್ಥರನ್ನು ನೋಡಿ ಶತ್ರುಕರ್ಶನ ಕರ್ಣನು ತ್ವರೆಮಾಡಿ ಪಾಂಚಾಲರನ್ನು ಆಕ್ರಮಣಿಸಿದನು. ಪಾಂಚಾಲರು ವೇಗದಿಂದ ಬರುತ್ತಿದ್ದ ಕರ್ಣನನ್ನು ಸಾಗರವನ್ನು ಸೇರುವ ಹಂಸಗಳಂತೆ ರಭಸದಿಂದ ಆಕ್ರಮಣಿಸಿದರು. ಆಗ ಸಹಸ್ರಾರು ಶಂಖಗಳ ಹೃದಯಂಗಮ ಧ್ವನಿಯುಂಟಾಯಿತು. ಎರಡೂ ಕಡೆಗಳಿಂದ ಭೇರಿಗಳ ದಾರುಣ ಶಬ್ಧವು ಕೇಳಿಬಂದಿತು. ಆಗ ನಾನಾ ವಾದ್ಯಗಳ ನಾದಗಳು, ಆನೆ-ಕುದುರೆ-ರಥಗಳ ನಿಸ್ವನಗಳು, ವೀರರ ಸಿಂಹನಾದಗಳು ದಾರುಣವಾಗಿದ್ದವು. ಪರ್ವತ-ವೃಕ್ಷ-ಸಾಗರಗಳಿಂದ ಕೂಡಿದ ಭೂಮಿ, ಗಾಳಿ-ಮೇಘಗಳಿಂದ ಕೂಡಿದ ಆಕಾಶ ಮತ್ತು ಸೂರ್ಯ-ಚಂದ್ರ-ಗ್ರಹ-ನಕ್ಷತ್ರಗಳಿಂದ ಕೂಡಿದ ಆಕಾಶ ಎಲ್ಲವೂ ತಿರುಗುತ್ತಿರುವವೋ ಎನ್ನುವಂತೆ ಕಾಣುತ್ತಿತ್ತು. ಆ ಶಬ್ಧವನ್ನು ಕೇಳಿದ ಸರ್ವಭೂತಗಳೂ ವ್ಯಥೆಗೊಂಡವು. ಅಲ್ಪಸತ್ತ್ವವುಳ್ಳ ಪ್ರಾಣಿಗಳು ಅದನ್ನು ಕೇಳಿ ಪ್ರಾಯಶಃ ಸತ್ತೇ ಹೋದವು.
ಆಗ ಕರ್ಣನು ಅತಿಕುಪಿತನಾಗಿ ಶೀಘ್ರವಾಗಿ ಅಸ್ತ್ರಗಳನ್ನು ಪ್ರಯೋಗಿಸಿ ಪಾಂಡವ ಸೇನೆಯನ್ನು ಇಂದ್ರನು ಅಸುರೀ ಸೇನೆಯನ್ನು ಹೇಗೋ ಹಾಗೆ ಸಂಹರಿಸಿದನು. ಅವನ ವೇಗದಿಂದ ಪಾಂಡವ ರಥಸೇನೆಯನ್ನು ಪ್ರವೇಶಿಸಿ, ಶರಗಳನ್ನು ಪ್ರಯೋಗಿಸುತ್ತಾ ಎಪ್ಪತ್ತೇಳು ಪ್ರಭದ್ರಕ ವೀರರನ್ನು ಸಂಹರಿಸಿದನು. ಅನಂತರ ಆ ರಥಶ್ರೇಷ್ಠನು ಸುಂದರ ಪುಂಖಗಳುಳ್ಳ ಇಪ್ಪತ್ತೈದು ನಿಶಿತ ಬಾಣಗಳಿಂದ ಇಪ್ಪತ್ತೈದು ಪಾಂಚಾಲರನ್ನು ವಧಿಸಿದನು. ಆ ವೀರನು ಸುವರ್ಣಪುಂಖಗಳುಳ್ಳ ಶತ್ರುಗಳ ದೇಹವನ್ನು ಸೀಳಬಲ್ಲ ನಾರಾಚಗಳಿಂದ ನೂರಾರು ಸಹಸ್ರಾರು ಚೇದಿವೀರರನ್ನು ಸಂಹರಿಸಿದನು. ಅತಿಮಾನುಷ ಕರ್ಮಗಳನ್ನೆಸಗುತ್ತಿದ್ದ ಕರ್ಣನನ್ನು ಪಾಂಚಾಲರ ರಥಗುಂಪುಗಳು ಸುತ್ತುವರೆದವು. ಆಗ ವೈಕರ್ತನ ಕರ್ಣನು ಐದು ಸಹಿಸಲಸಾಧ್ಯ ವಿಶಿಖಗಳನ್ನು ಹೂಡಿ ಐವರು ಪಾಂಚಾಲರನ್ನು ವಧಿಸಿದನು. ಭಾನುದೇವ, ಚಿತ್ರಸೇನ, ಸೇನಾಬಿಂದು, ತಪನ ಮತ್ತು ಶೂರಸೇನ – ಈ ಐವರು ಪಾಂಚಾಲರನ್ನು ಅವನು ಸಂಹರಿಸಿದನು. ಸಾಯಕಗಳಿಂದ ಪಾಂಚಾಲ ಶೂರರು ವಧಿಸಲ್ಪಡಲು ಪಾಂಚಾಲರ ಮಹಾ ಹಾಹಾಕಾರವುಂಟಾಯಿತು. ಹಾಹಾಕಾರಮಾಡುತ್ತಾ ದಿಕ್ಕುಗಳಲ್ಲಿ ಸೇರುತ್ತಿದ್ದ ಅವರನ್ನು ಕರ್ಣನು ಪುನಃ ಪತತ್ರಿಭಿಗಳಿಂದ ಸಂಹರಿಸಿದನು. ಕರ್ಣನ ಪುತ್ರರಾದ ಸುಷೇಣ-ಸತ್ಯಸೇನರು ಅವನ ಚಕ್ರರಕ್ಷಕರಾಗಿದ್ದು, ಪ್ರಾಣಗಳನ್ನೂ ಪಣವನ್ನಾಗಿಟ್ಟು ಹೋರಾಡುತ್ತಿದ್ದರು. ಕರ್ಣನ ಹಿಂಬಾಗದ ರಕ್ಷಕನಾಗಿದ್ದ ಅವನ ಜ್ಯೇಷ್ಠ ಪುತ್ರ ಮಹಾರಥ ವೃಷಸೇನನು ಸ್ವಯಂ ಕರ್ಣನನ್ನು ಹಿಂದಿನಿಂದ ರಕ್ಷಿಸುತ್ತಿದ್ದನು.
ಆಗ ಪ್ರಹಾರಿಗಳೂ ಕವಚಧಾರಿಗಳೂ ಆದ ಧೃಷ್ಟದ್ಯುಮ್ನ, ಸಾತ್ಯಕಿ, ದ್ರೌಪದೇಯರು, ವೃಕೋದರ, ಜನಮೇಜಯ, ಶಿಖಂಡೀ ಮತ್ತು ಪ್ರಭದ್ರಕ ಪ್ರವೀರರು, ಚೇದಿ-ಕೇಕಯ-ಪಾಂಚಾಲರು, ನಕುಲ-ಸಹದೇವರು ಮತ್ತು ಮತ್ಸ್ಯರು ರಾಧೇಯನನ್ನು ಕೊಲ್ಲಲು ಬಯಸಿ ಅವನನ್ನು ಸುತ್ತುವರೆದರು. ಮೋಡಗಳು ಗಿರಿಯನ್ನು ಮಳೆಯಿಂದ ಹೇಗೋ ಹಾಗೆ ಅವರು ಕರ್ಣನ ಮೇಲೆ ವಿವಿಧ ಶಸ್ತ್ರಗಳು ಮತ್ತು ಶರಧಾರೆಗಳನ್ನು ಸುರಿಸಿ ಅಭಿಷೇಚಿಸಿದರು. ತಂದೆಯನ್ನು ರಕ್ಷಿಸಲೋಸುಗ ಪ್ರಹಾರಿಗಳಾದ ವೀರ ಕರ್ಣಪುತ್ರ ಸುಷೇಣನು ಕೌರವರ ಕಡೆಯ ಇತರರೊಂದಿಗೆ ವೀರರನ್ನು ತಡೆದನು. ಸುಷೇಣನು ಭಲ್ಲದಿಂದ ಭೀಮಸೇನನ ಧನುಸ್ಸನ್ನು ಕತ್ತರಿಸಿ, ಏಳು ನಾರಾಚಗಳಿಂದ ಭೀಮನ ಎದೆಗೆ ಹೊಡೆದು ಸಿಂಹನಾದಗೈದನು. ಕೂಡಲೇ ವೃಕೋದರನು ಇನ್ನೊಂದು ದೃಢ ಧನುಸ್ಸನ್ನು ಎತ್ತಿಕೊಂಡು ಸಜ್ಜುಗೊಳಿಸಿ ಸುಷೇಣನ ಧನುಸ್ಸನ್ನು ತುಂಡರಿಸಿದನು. ಭೀಮನು ಕ್ರುದ್ಧನಾಗಿ ನರ್ತಿಸುತ್ತಿರುವನೋ ಎನ್ನುವಂತೆ ಕರ್ಣನನ್ನು ಎಪ್ಪತ್ಮೂರು ಬಾಣಗಳಿಂದ ಪ್ರಹರಿಸಿದನು. ಸುಹೃದಯರ ಮಧ್ಯದಲ್ಲಿ ಅವರು ನೋಡುತ್ತಿರುವಂತೆಯೇ ಭೀಮನು ಹತ್ತು ಬಾಣಗಳಿಂದ ಕುದುರೆ-ಸಾರಥಿ-ಧ್ವಜ-ಆಯುಧಗಳೊಡನೆ ಕರ್ಣಪುತ್ರ ಸತ್ಯಸೇನನನ್ನು ಬೀಳಿಸಿದನು. ಕ್ಷುರದಿಂದ ಕತ್ತರಿಸಲ್ಪಟ್ಟ ಅವನ ಚಂದ್ರನಿಭಾನನ ಶಿರವು ನಾಳದಿಂದ ಬೇರ್ಪಡಿಸಲ್ಪಟ್ಟ ಕಮಲದಂತೆ ಸುಂದರವಾಗಿ ಕಾಣುತ್ತಿತ್ತು. ಕರ್ಣಸುತನನ್ನು ಸಂಹರಿಸಿ ಭೀಮನು ಪುನಃ ಕೌರವರನ್ನು ಆಕ್ರಮಣಿಸಿದನು. ಕೃಪ ಮತ್ತು ಹಾರ್ದಿಕ್ಯರ ಬಿಲ್ಲುಗಳನ್ನು ತುಂಡರಿಸಿ ಅವರನ್ನು ಪುನಃ ಪ್ರಹರಿಸಿದನು. ದುಃಶಾಸನನ್ನು ಮೂರು ಬಾಣಗಳಿಂದ ಮತ್ತು ಶಕುನಿಯನ್ನು ಆರು ಆಯಸಗಳಿಂದ ಹೊಡೆದು ಉಲೂಕ ಮತ್ತು ಪತತ್ರಿಯರನ್ನು ವಿರಥರನ್ನಾಗಿಸಿದನು. “ಹೇ ಸುಷೇಣ! ನೀನೀಗ ಹತನಾದೆ!” ಎಂದು ಹೇಳುತ್ತಾ ಭೀಮನು ಸಾಯಕವನ್ನು ಹಿಡಿದು ಪ್ರಯೋಗಿಸಲು ಕರ್ಣನು ಅದನ್ನು ತುಂಡರಿಸಿ ಮೂರು ಬಾಣಗಳಿಂದ ಭೀಮನನ್ನು ಹೊಡೆದನು. ಆಗ ಭೀಮನು ಇನ್ನೊಂದು ಸುಪರ್ವಣ ಸುತೇಜನ ಬಾಣವನ್ನು ತೆಗೆದು ಸುಷೇಣನ ಮೇಲೆ ಪ್ರಯೋಗಿಸಲು ಕರ್ಣನು ಅದನ್ನೂ ಕೂಡ ತುಂಡರಿಸಿದನು. ಪುತ್ರನನ್ನು ರಕ್ಷಿಸಲೋಸುಗ ಮತ್ತು ಕ್ರೂರ ಭೀಮಸೇನನನ್ನು ವಧಿಸಲು ಬಯಸಿದ ಕರ್ಣನು ಪುನಃ ಎಪ್ಪತ್ಮೂರು ಕ್ರೂರ ರಥೇಷುಗಳಿಂದ ಪ್ರಹರಿಸಿದನು. ಸುಷೇಣನಾದರೋ ಭಾರವನ್ನು ಹೊರಬಲ್ಲ ಉತ್ತಮ ಧನುಸ್ಸನ್ನು ಹಿಡಿದು ನಕುಲನ ಎದೆಗೆ ಐದು ಬಾಣಗಳಿಂದ ಪ್ರಹರಿಸಿದನು.
ನಕುಲನು ಅವನನ್ನು ಎಪ್ಪತ್ತು ದೃಢ ಬಾಣಗಳಿಂದ ಹೊಡೆದು ಜೋರಾಗಿ ಗರ್ಜಿಸಿದನು. ಅದು ಕರ್ಣನಿಗೂ ಭಯವನ್ನುಂಟುಮಾಡಿತು. ಮಹಾರಥ ಸುಷೇಣನು ಹತ್ತು ಆಶುಗಗಳಿಂದ ನಕುಲನನ್ನು ಹೊಡೆದು ಶೀಘ್ರವಾಗಿ ಕ್ಷುರಪ್ರದಿಂದ ಅವನ ಧನುಸ್ಸನ್ನು ತುಂಡರಿಸಿದನು. ಕೂಡಲೇ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ನಕುಲನು ಕ್ರೋಧಮೂರ್ಛಿತನಾಗಿ ಸುಷೇಣನನ್ನು ಅನೇಕ ಬಾಣಗಳಿಂದ ತಡೆದನು. ಆ ಪರವೀರಹನು ಬಾಣಗಳಿಂದ ದಿಕ್ಕುಗಳನ್ನು ಆಚ್ಛಾದಿಸಿ, ಮೂರು ಬಾಣಗಳಿಂದ ಸುಷೇಣನನ್ನೂ ಅವನ ಸಾರಥಿಯನ್ನೂ ಪ್ರಹರಿಸಿ, ಸುದೃಢ ಭಲ್ಲದಿಂದ ಅವನ ಧನುಸ್ಸನ್ನು ಮೂರು ಭಾಗಗಳನ್ನಾಗಿ ತುಂಡರಿಸಿದನು. ಆಗ ಕ್ರೋಧಮೂರ್ಛಿತನಾದ ಸುಷೇಣನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಆರು ಬಾಣಗಳಿಂದ ನಕುಲನನ್ನು ಮತ್ತು ಏಳರಿಂದ ಸಹದೇವನನ್ನು ಪ್ರಹರಿಸಿದನು. ದೇವಾಸುರರ ಯುದ್ಧದಂತಿದ್ದ ಆ ಯುದ್ಧವು ಮಹಾ ಘೋರವಾಗಿತ್ತು. ಅನ್ಯೋನ್ಯರನ್ನು ವಧಿಸಲೋಸುಗ ವೇಗವಾಗಿ ಸಾಯಕಗಳನ್ನು ಪ್ರಯೋಗಿಸಲಾಗುತ್ತಿತ್ತು.
ಸಾತ್ಯಕಿಯು ಮೂರು ಶರಗಳಿಂದ ವೃಷಸೇನನ ಸಾರಥಿಯನ್ನು ಸಂಹರಿಸಿ, ಭಲ್ಲದಿಂದ ಅವನ ಧನುಸ್ಸನ್ನು ತುಂಡರಿಸಿದನು ಮತ್ತು ಏಳು ಬಾಣಗಳಿಂದ ಅವನ ಕುದುರೆಗಳನ್ನು ಹೊಡೆದನು. ಒಂದು ಬಾಣದಲ್ಲಿ ಧ್ವಜವನ್ನು ಕಿತ್ತುಹಾರಿಸಿದನು ಮತ್ತು ಮೂರು ಬಾಣಗಳಿಂದ ಅವನ ಎದೆಗೆ ಹೊಡೆದನು. ಆಗ ವೃಷಸೇನನು ತನ್ನ ರಥದಲ್ಲಿಯೇ ಮುಹೂರ್ತಕಾಲ ಕುಸಿದುಬಿದ್ದನು. ಪುನಃ ಎಚ್ಚೆತ್ತು ಶೈನೇಯನನ್ನು ಕೊಲ್ಲಲು ಬಯಸಿ ಕತ್ತಿ-ಗುರಾಣಿಗಳನ್ನು ಹಿಡಿದು ಅವನ ಮೇಲೆ ಎರಗಿದನು. ವೃಷಸೇನನು ಮುಂದೆ ಹಾರಿಬರುತ್ತಿರಲು ಸಾತ್ಯಕಿಯು ಶೀಘ್ರವಾಗಿ ಹತ್ತು ವರಾಹಕರ್ಣ ಶರಗಳಿಂದ ಅವನ ಖಡ್ಗ-ಗುರಾಣಿಗಳನ್ನು ತುಂಡರಿಸಿದನು. ವೃಷಸೇನನು ವಿರಥನೂ ನಿರಾಯುಧನೂ ಆದುದನ್ನು ನೋಡಿದ ದುಃಶಾಸನನು ಶೀಘ್ರವಾಗಿ ಅವನನ್ನು ತನ್ನ ರಥದಲ್ಲಿ ಏರಿಸಿಕೊಂಡು ಅಲ್ಲಿಂದ ಹೊರಟುಹೋದನು.
ವೃಷಸೇನನು ಇನ್ನೊಂದು ರಥದಲ್ಲಿ ಕುಳಿತು ಪುನಃ ಯುದ್ಧದಲ್ಲಿ ಕರ್ಣನ ಹಿಂಬಾಗವನ್ನು ರಕ್ಷಿಸತೊಡಗಿದನು. ಶೈನೇಯನಾದರೋ ಒಂಭತ್ತು ಆಶುಗಗಳಿಂದ ದುಃಶಾಸನನನ್ನು ಸಾರಥಿಯಿಲ್ಲದಂತೆಯೂ ವಿರಥನನ್ನಾಗಿಯೂ ಮಾಡಿ ಅವನ ಹಣೆಗೆ ಮೂರು ಬಾಣಗಳನ್ನು ಪ್ರಯೋಗಿಸಿದನು. ದುಃಶಾಸನನು ವಿಧಿವತ್ತಾಗಿ ಸಜ್ಜಾಗಿದ್ದ ಇನ್ನೊಂದು ರಥವನ್ನೇರಿ ಪುನಃ ಕರ್ಣನ ಬಲವನ್ನು ವೃದ್ಧಿಸುತ್ತಾ ಪಾಂಡವರೊಂದಿಗೆ ಹೋರಾಡಿದನು.
ಅನಂತರ ಧೃಷ್ಟದ್ಯುಮ್ನನು ಹತ್ತು, ದ್ರೌಪದೇಯರು ಎಪ್ಪತ್ಮೂರು, ಯುಯುಧಾನನು ಏಳು, ಭೀಮಸೇನನು ಅರವತ್ನಾಲ್ಕು, ಸಹದೇವನು ಏಳು, ನಲುಕಲನು ಮೂವತ್ತು, ಶತಾನೀಕನು ಏಳು, ವೀರ ಶಿಖಂಡಿಯು ಹತ್ತು ಮತ್ತು ಧರ್ಮರಾಜನು ನೂರು ಬಾಣಗಳಿಂದ ಕರ್ಣನನ್ನು ಪ್ರಹರಿಸಿದರು. ಜಯಕ್ಕೆ ಆಸೆಪಡುತ್ತಿದ್ದ ಇವರು ಮತ್ತು ಅನ್ಯ ಪ್ರವೀರರು ಅ ಮಹಾಯುದ್ಧದಲ್ಲಿ ಸೂತಪುತ್ರನನ್ನು ಪ್ರಹರಿಸಿದರು. ಅದಕ್ಕೆ ಪ್ರತಿಯಾಗಿ ಅರಿಂದಮ ವೀರ ಸೂತಪುತ್ರನು ಸುಂದರ ರಥದಲ್ಲಿ ಸಂಚರಿಸುತ್ತಾ ಹತ್ತು ಹತ್ತು ನಿಶಿತ ವಿಶಿಖಗಳಿಂದ ಅವರೆಲ್ಲರನ್ನೂ ಹೊಡೆದನು. ಅಲ್ಲಿ ಕರ್ಣನ ಅಸ್ತ್ರವೀರ್ಯವನ್ನೂ ಹಸ್ತಲಾಘವವೂ ಕಂಡುಬರುತ್ತಿತ್ತು. ಅದೊಂದು ಅದ್ಭುತವೇ ಆಗಿದ್ದಿತು. ಆ ಮಹಾರಥನು ಬಾಣಗಳನ್ನು ತೆಗೆದುಕೊಳ್ಳುವುದಾಗಲೀ, ಧನುಸ್ಸಿಗೆ ಹೂಡಿದುದಾಗಲೀ, ಮತ್ತು ಬಾಣಪ್ರಯೋಗಿಸಿದುದಾಗಲೀ ಯಾರಿಗೂ ಕಾಣಿಸುತ್ತಿರಲಿಲ್ಲ. ಆಕಾಶ-ಭೂಮಿ-ದಿಕ್ಕುಗಳೆಲ್ಲವೂ ಅವನ ನಿಶಿತ ಬಾಣಗಳಿಂದ ತುಂಬಿಹೋದವು. ಆ ಪ್ರದೇಶವು ಅರುಣೋದಯಕಾಲದಂತೆ ಕೆಂಪಾಗಿ ಕಾಣುತ್ತಿತ್ತು. ರಾಧೇಯನು ಚಾಪವನ್ನು ಹಿಡಿದು ನರ್ತಿಸುತ್ತಿರುವನೋ ಎನ್ನುವಂತೆ ತೋರುತ್ತಿದ್ದನು. ಅವನನ್ನು ಪ್ರಹರಿಸಿದ ಪ್ರತಿಯೊಬ್ಬನನ್ನೂ ಕರ್ಣನು ಅವರು ಬಿಟ್ಟ ಶರಗಳಿಗಿಂತ ಮೂರುಪಟ್ಟು ಶರಗಳಿಂದ ಪ್ರಹರಿಸುತ್ತಿದ್ದನು. ಪುನಃ ಕರ್ಣನು ಹತ್ತು ಹತ್ತು ಬಾಣಗಳಿಂದ ಅವರ ಕುದುರೆ-ಸಾರಥಿ-ಧ್ವಜ-ಚತ್ರಗಳನ್ನು ಪ್ರಹರಿಸಿ ಜೋರಾಗಿ ಸಿಂಹನಾದಗೈದನು. ಆಗ ಅವರು ಅವನಿಗೆ ಮುಂದೆ ಹೋಗಲು ದಾರಿಕೊಟ್ಟರು. ಶರವೃಷ್ಟಿಗಳಿಂದ ಆ ಮಹೇಷ್ವಾಸರನ್ನು ಸದೆಬಡಿದು ಶತ್ರುಕರ್ಶನ ರಾಧೇಯನು ರಾಜಾ ಯುಧಿಷ್ಠಿರನ ಸೇನೆಯನ್ನು ಪ್ರವೇಶಿಸಿದನು.
ಕರ್ಣ-ಯುಧಿಷ್ಠಿರರ ಯುದ್ಧ; ಯುಧಿಷ್ಠಿರನ ಪಲಾಯನ
ರಾಧೇಯನು ಚೇದಿಗಳ ಮುನ್ನೂರು ರಥಗಳನ್ನು ನಾಶಗೊಳಿಸಿ ನಿಶಿತ ಬಾಣಗಳಿಂದ ಯುಧಿಷ್ಠಿರನನ್ನು ಪ್ರಹರಿಸಿದನು. ಆಗ ರಾಧೇಯನಿಂದ ಯುಧಿಷ್ಠಿರನನ್ನು ರಕ್ಷಿಸಲೋಸುಗ ಸಾತ್ಯಕಿಯೊಡನೆ ಶಿಖಂಡಿಯು ರಾಜನನ್ನು ಸುತ್ತುವರೆದರು. ಹಾಗೆಯೇ ಕೌರವ ಮಹೇಷ್ವಾಸರ ಸೇನೆಗಳೂ ಕರ್ಣನನ್ನು ಎಲ್ಲಕಡೆಗಳಿಂದಲೂ ರಕ್ಷಿಸುತ್ತಿದ್ದರು. ನಾನಾ ವಾದ್ಯಗಳು ಮೊಳಗಿದವು. ಗರ್ಜನೆಗಳು ಕೇಳಿಬಂದವು. ಶೂರರು ಸಿಂಹನಾದಗೈದರು. ನಂತರ ಪುನಃ ಅಭೀತ ಕುರುಪಾಂಡವರ ನಡುವೆ - ಯುಧಿಷ್ಠಿರನ ನಾಯಕತ್ವದಲ್ಲಿದ್ದ ಪಾರ್ಥರು ಮತ್ತು ಸೂತಪುತ್ರನ ನಾಯಕತ್ವದಲ್ಲಿದ್ದ ಕೌರವರ ನಡುವೆ ಯುದ್ಧವು ನಡೆಯಿತು.
ಆ ಸೇನೆಯನ್ನು ಭೇದಿಸಿ ಕರ್ಣನು ಸಹಸ್ರಾರು ರಥ-ಆನೆ-ಕುದುರೆ-ಪದಾತಿ ಸೇನೆಗಳಿಂದ ಪರಿವೃತನಾದ ಧರ್ಮರಾಜನನ್ನು ಆಕ್ರಮಣಿಸಿದನು. ಕರ್ಣನು ಸ್ವಲ್ಪವೂ ಗಾಬರಿಗೊಳ್ಳದೇ ಶತ್ರುಗಳು ಸುರಿಸುತ್ತಿದ್ದ ಸಹಸ್ರಾರು ನಾನಾ ಆಯುಧಗಳನ್ನು ನೂರಾರು ಉಗ್ರ ಬಾಣಗಳಿಂದ ತುಂಡರಿಸಿದನು. ಅವನು ಎಲ್ಲಕಡೆ ಶತ್ರುಗಳ ಶಿರಗಳನ್ನೂ, ಬಾಹುಗಳನ್ನೂ, ತೊಡೆಗಳನ್ನೂ ಕತ್ತರಿಸಿದನು. ಅವರು ಭಗ್ನರಾಗಿ ಭೂಮಿಯ ಮೇಲೆ ಬಿದ್ದರು. ಅನ್ಯರು ಪಲಾಯನಗೈದರು. ಆಗ ಸಾತ್ಯಕಿಯಿಂದ ಪ್ರಚೋದಿತರಾದ ದ್ರವಡ-ಆಂದ್ರ-ನಿಷಾದ ಪದಾತಿಗಳು ಯುದ್ಧದಲ್ಲಿ ಕರ್ಣನನ್ನು ಸಂಹರಿಸಲು ಬಯಸಿ ಅವನನ್ನು ಪುನಃ ಆಕ್ರಮಿಸಿದರು. ಕರ್ಣನ ಸಾಯಕಗಳಿಂದ ಪ್ರಹರಿಸಲ್ಪಟ್ಟ ಅವರು ಬಾಹುಗಳು, ಶಿರಗಳು ಮತ್ತು ಕಿರೀಟಗಳನ್ನು ಕಳೆದುಕೊಂಡು ಕತ್ತರಿಸಲ್ಪಟ್ಟ ಶಾಲವೃಕ್ಷಗಳ ವನದಂತೆ ಭೂಮಿಯ ಮೇಲೆ ಬಿದ್ದರು. ಹೀಗೆ ಹತರಾದ ನೂರಾರು ಸಹಸ್ರಾರು ಲಕ್ಷಗಟ್ಟಲೆ ಯೋಧರು ತಮ್ಮ ದೇಹಗಳಿಂದ ಭೂಮಿಯನ್ನೂ ಯಶಸ್ಸುಗಳಿಂದ ದಿಕ್ಕುಗಳನ್ನೂ ತುಂಬಿಬಿಟ್ಟರು. ಆಗ ರಣರಂಗದಲ್ಲಿ ಕ್ರುದ್ಧನಾದ ಅಂತಕನಂತಿದ್ದ ಕರ್ಣನನ್ನು ಪಾಂಡವ-ಪಾಂಚಾಲರು ವ್ಯಾಧಿಯನ್ನು ಮಂತ್ರೌಷಧಿಗಳಿಂದ ಹೇಗೋ ಹಾಗೆ ತಡೆದರು. ಅತಿಯಾಗಿ ಉಲ್ಬಣಿಸಿದ ವ್ಯಾಧಿಯು ಮಂತ್ರೌಷಧಿಕೂ ನಿಲುಕದಂತೆ ಕರ್ಣನು ಅವರನ್ನು ಸದೆಬಡಿದು ಪುನಃ ಯುಧಿಷ್ಠಿರನನ್ನು ಆಕ್ರಮಣಿಸಿದನು. ಆದರೆ ರಾಜನನ್ನು ರಕ್ಷಿಸುವ ಛಲದಿಂದ ತಡೆಯುತ್ತಿರುವ ಪಾಂಡವ-ಪಾಂಚಾಲ-ಕೇಕಯರನ್ನು ಮೃತ್ಯುವು ಬ್ರಹ್ಮವಿದನನ್ನು ಹೇಗೋ ಹಾಗೆ ಅವರನ್ನು ಅತಿಕ್ರಮಿಸಲು ಶಕ್ತನಾಗಲಿಲ್ಲ. ಆಗ ಅನತಿದೂರದಲ್ಲಿಯೇ ತಡೆಯಲ್ಪಟ್ಟು ನಿಂತಿದ್ದ ಕರ್ಣನಿಗೆ ಕ್ರೋಧಸಂರಕ್ತಲೋಚನ ಪರವೀರಘ್ನ ಯುಧಿಷ್ಠಿರನು ಇಂತೆಂದನು:
“ಕರ್ಣ! ಕರ್ಣ! ಶೂನ್ಯದೃಷ್ಟಿಯವನೇ! ಸೂತಪುತ್ರ! ನನ್ನ ಮಾತನ್ನು ಕೇಳು! ಧಾರ್ತರಾಷ್ಟ್ರನ ಅಭಿಪ್ರಾಯದಂತೆ ನಡೆದುಕೊಳ್ಳುವ ನೀನು ಸದಾ ಸಂಗ್ರಾಮದಲ್ಲಿ ಯಶಸ್ವಿ ಫಲ್ಗುನನೊಂದಿಗೆ ಸ್ಪರ್ಧಿಸುತ್ತೀಯೆ ಮತ್ತು ನಿತ್ಯವೂ ನಮ್ಮನ್ನು ಬಾಧಿಸುತ್ತಿದ್ದೀಯೆ! ನಿನ್ನಲ್ಲಿ ಎಷ್ಟು ಬಲವಿದೆಯೋ, ಎಷ್ಟು ವೀರ್ಯವಿದೆಯೋ, ಪಾಂಡವರ ಮೇಲೆ ಎಷ್ಟು ದ್ವೇಷವಿದೆಯೋ ಅವೆಲ್ಲವನ್ನೂ ಇಂದು ಮಹಾಪೌರುಷವನ್ನಾಶ್ರಯಿಸಿ ತೋರಿಸು!”
ಹೀಗೆ ಹೇಳಿ ಯುಧಿಷ್ಠಿರನು ಹತ್ತು ಸುವರ್ಣಪುಂಖಗಳುಳ್ಳ ಲೋಹಮಯ ಬಾಣಗಳಿಂದ ಕರ್ಣನನ್ನು ಪ್ರಹರಿಸಿದನು. ಅವನನ್ನು ಪ್ರತಿಯಾಗಿ ಸೂತಪುತ್ರನು ನಗುತ್ತಿರುವನೋ ಎನ್ನುವಂತೆ ಒಂಭತ್ತು ವತ್ಸದಂತಗಳಿಂದ ಹೊಡೆದನು. ಅನಂತರ ಆ ಶೂರನು ಯುಧಿಷ್ಠಿರನ ಚಕ್ರರಕ್ಷಕರಾಗಿದ್ದ ಇಬ್ಬರು ಪಾಂಚಾಲರನ್ನು ಸನ್ನತಪರ್ವ ಕ್ಷುರಗಳಿಂದ ಸಂಹರಿಸಿದನು. ಧರ್ಮರಾಜನ ರಥದ ಪಕ್ಕಗಳಲ್ಲಿ ಬಿದ್ದಿದ್ದ ಆ ಇಬ್ಬರು ಪ್ರವೀರರೂ ಚಂದ್ರನ ಬಳಿಯಲ್ಲಿದ್ದ ಪುನರ್ವಸು ನಕ್ಷತ್ರಗಳಂತೆ ಶೋಭಿಸುತ್ತಿದ್ದರು. ಪುನಃ ಯುಧಿಷ್ಠಿರನು ಕರ್ಣನನ್ನು ಮೂವತ್ತು ಬಾಣಗಳಿಂದ ಪ್ರಹರಿಸಿ, ಸುಷೇಣ-ಸತ್ಯಸೇನರನ್ನು ಮೂರು ಮೂರು ಬಾಣಗಳಿಂದ ಹೊಡೆದನು. ಶಲ್ಯನನ್ನು ತೊಂಭತ್ತು ಮತ್ತು ಸೂತಜನನ್ನು ಎಪ್ಪತ್ಮೂರು ಬಾಣಗಳಿಂದ ಹೊಡೆದು ಯುಧಿಷ್ಠಿರನು ಚಕ್ರರಕ್ಷಕರನ್ನು ಮೂರು ಮೂರು ಜಿಹ್ಮಗಗಳಿಂದ ಪ್ರಹರಿಸಿದನು. ಆಗ ಕರ್ಣನು ಗಹಗಹಿಸಿ ನಗುತ್ತಾ ಧನುಸ್ಸನ್ನು ಜಗ್ಗಿಸುತ್ತಾ ಭಲ್ಲದಿಂದ ಯುಧಿಷ್ಠಿರನನ್ನು ಹೊಡೆದು, ಪುನಃ ಅರವತ್ತರಿಂದ ಪ್ರಹರಿಸಿ ಸಿಂಹಗರ್ಜನೆ ಮಾಡಿದನು. ಆಗ ಪಾಂಡವರ ಪ್ರವೀರರು ಸೂತಪುತ್ರನ ಪೀಡೆಗೊಳಗಾಗಿದ್ದ ಯುಧಿಷ್ಠಿರನನ್ನು ಸಮೀಪಿಸಿ ಶರಗಳಿಂದ ಕರ್ಣನನ್ನು ಆಕ್ರಮಣಿಸಿದರು. ಸಾತ್ಯಕಿ, ಚೇಕಿತಾನ, ಯುಯುತ್ಸು, ಪಾಂಡ್ಯ, ಧೃಷ್ಟದ್ಯುಮ್ನ, ಶಿಖಂಡೀ, ದೌಪದೇಯರು, ಪ್ರಭದ್ರಕರು, ಯಮಳರು, ಭೀಮಸೇನ, ಶಿಶುಪಾಲನ ಮಗ, ಕಾರೂಷರು, ಅಳಿದುಳಿದ ಮತ್ಸ್ಯರು, ಕೇಕಯರು, ಕಾಶಿ-ಕೋಸಲರು – ಈ ವೀರರು ತ್ವರೆಮಾಡಿ ಕರ್ಣನನ್ನು ತಡೆದರು. ಪಾಂಚಾಲ್ಯ ಜನಮೇಜಯನು ಕರ್ಣನನ್ನು ಸಾಯಕ, ವರಾಹಕರ್ಣ, ನಾರಾಚ, ನಾಲೀಕ, ವತ್ಸದಂತ, ವಿಪಾಠ, ಕ್ಷುರಪ್ರ, ಮತ್ತು ಚಟಕಾಮುಖಗಳೇ ಮೊದಲಾದ ನಿಶಿತ ಶರಗಳಿಂದ ಪ್ರಹರಿಸಿದನು. ಕರ್ಣನನ್ನು ಸಂಹರಿಸಲು ಬಯಸಿ ನಾನಾ ಉಗ್ರ ಪ್ರಹರಣಗಳಿಂದ, ರಥ-ಆನೆ-ಕುದುರೆ-ಪದಾತಿಗಣಗಳೊಂದಿಗೆ ಅವರು ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದು ಆಕ್ರಮಣಿಸಿದರು. ಪಾಂಡವ ಪ್ರವರರಿಂದ ಸುತ್ತಲೂ ಮುತ್ತಲ್ಪಟ್ಟ ಕರ್ಣನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾ ಸರ್ವದಿಕ್ಕುಗಳನ್ನೂ ಶರಗಳಿಂದ ಮುಚ್ಚಿಬಿಟ್ಟನು.
ಆಗ ಶರಗಳೆಂಬ ಮಹಾಜ್ವಾಲೆಗಳಿಂದಲೂ, ವೀರ್ಯವೆಂಬ ತಾಪದಿಂದಲೂ ಕರ್ಣನೆಂಬ ಪಾವಕನು ಪಾಂಡವವೆಂಬ ವನವನ್ನು ದಹಿಸುತ್ತಾ ರಣದಲ್ಲಿ ಸಂಚರಿಸುತ್ತಿದ್ದನು. ಕರ್ಣನು ಜೋರಾಗಿ ನಕ್ಕು ಮಹಾಸ್ತ್ರಗಳನ್ನು ಸಂಧಾನಮಾಡಿ ಶರಗಳಿಂದ ಯುಧಿಷ್ಠಿರನ ಕಾರ್ಮುಕವನ್ನು ಕತ್ತರಿಸಿದನು. ನಂತರ ಕರ್ಣನು ರಣದಲ್ಲಿ ನಿಮಿಷಮಾತ್ರದಲ್ಲಿ ಹೊಸ ಸನ್ನತಪರ್ವ ಶರಗಳನ್ನು ಹೂಡಿ ಆ ನಿಶಿತ ಶರಗಳಿಂದ ರಾಜನ ಕವಚವನ್ನೂ ಕತ್ತರಿಸಿದನು. ಹೇಮವಿಕೃತ ಆ ಕವಚವು ಬೀಳುವಾವ ಸೂರ್ಯನೊಡನಿದ್ದ ಮೋಡವು ಭಿರುಗಾಳಿಗೆ ಸಿಲುಕಿ ಮಿಂಚಿನೊಂದಿಗೆ ಕೆಳಗೆ ಬೀಳುತ್ತಿರುವಂತೆ ರಾರಾಜಿಸಿತು. ಪುರುಷೇಂದ್ರನ ದೇಹದಿಂದ ಕಳಚಿ ಬಿದ್ದ ರತ್ನಗಳಿಂದ ಅಲಂಕೃತವಾಗಿದ್ದ ಆ ಕವಚವು ನಕ್ಷತ್ರಮಂಡಲಿಂದ ಶೋಭಾಯಮಾನವಾದ ರಾತ್ರಿಯ ಆಕಾಶದಂತೆ ತೋರುತ್ತಿತ್ತು. ಕವಚನ್ನು ಕಳೆದುಕೊಂಡ ಆ ಪಾರ್ಥನು ಶರಪ್ರಹಾರಗಳಿಂದ ರಕ್ತವನ್ನು ಸೋರಿಸುತ್ತಾ ಕ್ರುದ್ಧನಾಗಿ ಸರ್ವವೂ ಲೋಹಮಯವಾಗಿದ್ದ ಶಕ್ತಿಯನ್ನು ಆಧಿರಥಿಯ ಮೇಲೆ ಪ್ರಯೋಗಿಸಿದನು. ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ಆ ಶಕ್ತಿಯನ್ನು ಮಹೇಷ್ವಾಸನು ಏಳು ಸಾಯಕ ಶರಗಳಿಂದ ಕತ್ತರಿಸಿ ಭೂಮಿಯ ಮೇಲೆ ಕೆಡವಿದನು. ಆಗ ಯುಧಿಷ್ಠಿರನು ಕರ್ಣನ ಬಾಹುಗಳು, ಹಣೆ ಮತ್ತು ಎದೆಗಳನ್ನು ನಾಲ್ಕು ತೋಮರಗಳಿಂದ ಹೊಡೆದು ಜೋರಾಗಿ ಗರ್ಜಿಸಿದನು. ಉಕ್ಕಿಬರುತ್ತಿರುವ ರಕ್ತಪ್ರವಾಹದಿಂದ ಕ್ರುದ್ಧನಾದ ಕರ್ಣನು ಸರ್ಪದಂತೆ ಭುಸುಗುಟ್ಟುತ್ತಾ ಭಲ್ಲದಿಂದ ಅವನ ಧ್ವಜವನ್ನು ತುಂಡರಿಸಿದನು ಮತ್ತು ಮೂರರಿಂದ ಯುಧಷ್ಠಿರನನ್ನು ಹೊಡೆದನು. ಬಾಣಗಳಿಂದ ಅವನ ರಥವನ್ನು ಕೂಡ ಎಳ್ಳಿನ ಕಾಳುಗಳಷ್ಟು ಸಣ್ಣ ಸಣ್ಣ ಚೂರುಗಳನ್ನಾಗಿಸಿ ತುಂಡರಿಸಿದನು. ತನ್ನ ಪಾರ್ಷ್ಣಿಸಾರಥಿಗಳನ್ನೂ ಕಳೆದುಕೊಂಡಿದ್ದ ಪಾರ್ಥನು ಕರ್ಣನನ್ನು ಎದುರಿಸಲಾಗದೇ ದುರ್ಮನಸ್ಕನಾಗಿ ಪಲಾಯನಗೈದನು.
ಯುಧಿಷ್ಠಿರನನ್ನು ಹಿಂಬಾಲಿಸಿ ಹೋಗಿ ರಾಧೇಯನು ಕೈಯಿಂದ ಅವನ ಭುಜವನ್ನು ಮುಟ್ಟಿ ಪಾಂಡವನನ್ನು ಹೀಯಾಳಿಸುವಂತೆ ನಗುತ್ತಾ ಹೇಳಿದನು: “ಶ್ರೇಷ್ಠ ಕುಲದಲ್ಲಿ ಹುಟ್ಟಿ ಕ್ಷತ್ರಧರ್ಮದಲ್ಲಿ ವ್ಯವಸ್ಥಿತನಾಗಿದ್ದುಕೊಂಡು ಈ ಮಹಾಸಮರದಲ್ಲಿ ಪ್ರಾಣಗಳನ್ನು ರಕ್ಷಿಸಿಕೊಳ್ಳಲೋಸುಗ ಏಕೆ ಪಲಾಯನಮಾಡುತ್ತಿರುವೆ? ನೀನು ಕ್ಷತ್ರಧರ್ಮದಲ್ಲಿ ಕುಶಲನಲ್ಲವೆಂದು ನನಗನ್ನಿಸುತ್ತಿದೆ. ನೀನು ಸ್ವಾಧ್ಯಾಯ ಮತ್ತು ಯಜ್ಞಕರ್ಮಯುಕ್ತವಾದ ಬ್ರಹ್ಮಬಲದಿಂದ ಕೂಡಿರುವೆ. ಆದುದರಿಂದ ಕೌಂತೇಯ! ಯುದ್ಧಮಾಡಬೇಡ! ವೀರರೊಂದಿಗೆ ಸೆಣೆಸಬೇಡ! ವೀರರೊಂದಿಗೆ ಅಪ್ರಿಯ ಮಾತುಗಳನ್ನಾಡಬೇಡ. ಯುದ್ಧಭೂಮಿಗೆ ಇನ್ನೊಮ್ಮೆ ಕಾಲನ್ನೇ ಇಡಬೇಡ!”
ಹೀಗೆ ಹೇಳಿ ಪಾರ್ಥನನ್ನು ಅಲ್ಲಿಯೇ ಬಿಟ್ಟು ವಜ್ರಪಾಣಿ ಇಂದ್ರನು ಅಸುರೀ ಸೇನೆಯನ್ನು ಹೇಗೋ ಹಾಗೆ ಪಾಂಡವೀ ಸೇನೆಯನ್ನು ಸಂಹರಿಸಿದನು. ಯುಧಿಷ್ಠಿರನು ನಾಚಿಕೊಂಡವನಂತೆ ಶೀಘ್ರವಾಗಿ ರಣದಿಂದ ಹೊರಟುಹೋದನು. ಆಗ ಹಿಂದಿರುಗುತ್ತಿದ್ದ ಆ ಯುಧಿಷ್ಠಿರನನ್ನು ಅನುಸರಿಸಿ ಚೇದಿ-ಪಾಂಡವ-ಪಾಂಚಾಲರೂ, ಮಹಾರಥ ಸಾತ್ಯಕಿಯೂ, ಶೂರ ದ್ರೌಪದೇಯರೂ, ಪಾಂಡವ ಮಾದ್ರೀಪುತ್ರರಿಬ್ಬರೂ ಹೊರಟುಹೋದರು. ಯುಧಿಷ್ಠಿರನ ಸೇನೆಯು ಪರಾಙ್ಮುಖವಾದುದನ್ನು ನೋಡಿ ಕರ್ಣನು ಕುರುವೀರರನ್ನೊಡಗೂಡಿ ಅವನ ಸೇನೆಯನ್ನು ಹಿಂಬಾಲಿಸಿ ಹೋದನು. ಆಗ ಧಾರ್ತರಾಷ್ಟ್ರರ ಕಡೆಯಲ್ಲಿ ಶಂಖ-ಭೇರಿ ನಿನಾದಗಳೂ, ಬಿಲ್ಲುಗಳ ಟೇಂಕಾರ ಶಬ್ಧವೂ, ಮತ್ತು ಜೋರಾದ ಸಿಂಹಗರ್ಜನೆಗಳೂ ಕೇಳಿಬಂದವು. ಯುಧಿಷ್ಠಿರನಾದರೋ ಬಹುಬೇಗ ಶ್ರುತಕೀರ್ತಿಯ ರಥವನ್ನೇರಿ ಕರ್ಣನ ವಿಕ್ರಮವನ್ನು ನೋಡುತ್ತಿದ್ದನು. ತನ್ನ ಸೇನೆಯು ಕದಡಿಹೋಗುತ್ತಿರುವುದನ್ನು ನೋಡಿ ಯುಧಿಷ್ಠಿರನು ಕ್ರುದ್ಧನಾಗಿ ತನ್ನ ಯೋಧರಿಗೆ “ಸಹಸ್ರಾರು ಸಂಖ್ಯೆಗಳಲ್ಲಿ ಅವರನ್ನು ಕೊಲ್ಲಿರಿ!” ಎಂದು ಹೇಳಿದನು.
ರಾಜನಿಂದ ಆಜ್ಞಾಪಿತರಾದ ಪಾಂಡವ ಮಹಾರಥರೆಲ್ಲರೂ ಭೀಮಸೇನನನ್ನು ಮುಂದಾಗಿಸಿಕೊಂಡು ಕೌರವ ಪುತ್ರರನ್ನು ಎದುರಿಸಿ ಆಕ್ರಮಣಿಸಿದರು. ಆಗ ಅಲ್ಲಲ್ಲಿ ಆನೆ-ಕುದುರೆ-ರಥ-ಪದಾತಿಗಳ ಮತ್ತು ಯೋಧರ ಶಸ್ತ್ರಗಳ ತುಮುಲ ಶಬ್ಧವು ಕೇಳಿ ಬಂದಿತು. “ಮೇಲೇಳಿರಿ! ಪ್ರಹರಿಸಿರಿ! ಮುಂದೆ ಹೋಗಿರಿ! ಶತ್ರುವಿನ ಮೇಲೆ ಬೀಳಿರಿ!” ಹೀಗೆ ಹೇಳುತ್ತಾ ಯೋಧರು ರಣರಂಗದಲ್ಲಿ ಅನ್ಯೋನ್ಯರನ್ನು ಸಂಹರಿಸಿದರು. ಇತರೇತರರನ್ನು ಸಂಹರಿಸುತ್ತಿದ್ದ ನರವರರು ಪ್ರಯೋಗಿಸುತ್ತಿದ್ದ ಶರವೃಷ್ಟಿಗಳು ಆಕಾಶವನ್ನು ತುಂಬಿ ಮೋಡಗಳ ನೆರಳಿನಂತೆಯೇ ತೋರುತ್ತಿದ್ದವು. ರಣದಲ್ಲಿ ಹತರಾದ ಭೂಪಾಲಕರು ಪತಾಕೆ-ಧ್ವಜ-ಚತ್ರ-ಅಶ್ವ-ಸೂತ-ಆಯುಧಗಳನ್ನು ಕಳೆದುಕೊಂಡು ಅಂಗ-ಅವಯವಗಳಿಂದ ವಿಹೀನರಾಗಿ ಭೂಮಿಯ ಮೇಲೆ ಬೀಳುತ್ತಿದ್ದರು. ವಜ್ರದಿಂದ ಒಡೆದು ಹೋದ ಗಿರಿಗಳಂತೆ ಶೈಲಶಿಖರಗಳಂತಿದ್ದ ಉತ್ತಮ ಆನೆಗಳು ಸವಾರರೊಂದಿಗೆ ಹತರಾಗಿ ಕೆಳಗುರುಳುತ್ತಿದ್ದವು. ಛಿನ್ನ-ಭಿನ್ನವಾದ ಮತ್ತು ಅಸ್ತವ್ಯಸ್ಥವಾದ ಅಲಂಕಾರ ಶರೀರಗಳಿಂದ ಕೂಡಿದ ಸಹಸ್ರಾರು ಕುದುರೆಗಳು ವೀರ ಆರೋಹಿಗಳೊಂದಿಗೆ ಹತಗೊಂಡು ಬೀಳುತ್ತಿದ್ದವು. ಆನೆ-ಕುದುರೆ-ರಥಗಳಿಂದ ಹತರಾಗಿ, ಎದುರಿದ್ದ ವೀರರಿಂದ ಸದೆಬಡೆಯಲ್ಪಟ್ಟು ಗಾಯಗೊಂಡ ಮತ್ತು ಕಳೆದುಕೊಂದ ಅಂಗಾಂಗಗಳಿಂದ ಯುಕ್ತವಾಗಿದ್ದ ಸಹಸ್ರಾರು ಪದಾತಿಸಂಘಗಳು ಬೀಳುತ್ತಿದ್ದವು. ವಿಶಾಲವೂ, ಅಗಲವೂ, ಕೆಂಪಾಗಿಯೂ ಇದ್ದ ಕಣ್ಣುಗಳಿಂದ ಮತ್ತು ಪದ್ಮ-ಚಂದ್ರರಂತಿದ್ದ ಮುಖಗಳಿಂದಲೂ ಕೂಡಿದ್ದ ಯುದ್ಧಶೌಂಡರ ಶಿರಗಳಿಂದ ಭೂಮಿಯು ಎಲ್ಲೆಲ್ಲಿಯೂ ತುಂಬಿಹೋಗಿತ್ತು.
ಭೂಮಿಯಲ್ಲಿ ಹೇಗೋ ಹಾಗೆ ಆಕಾಶದಲ್ಲಿಯೂ ವಿಮಾನಗಳಲ್ಲಿದ್ದ ಅಪ್ಸರ ಸಂಘಗಳು ಗೀತ-ವಾದ್ಯಗಳ ಧ್ವನಿಯನ್ನು ಜನರು ಆಕಾಶದಲ್ಲಿಯೂ ಕೇಳುತ್ತಿದ್ದರು. ಯುದ್ಧಾಭಿಮುಖರಾಗಿ ವೀರರಿಂದ ಹತರಾದ ಸಹಸ್ರಾರು ವೀರಾರನ್ನು ಅಪ್ಸರಗಣಗಳು ವಿಮಾನಗಳಲ್ಲಿ ಏರಿಸಿಕೊಂಡು ಹೋಗುತ್ತಿದ್ದವು. ಪ್ರತ್ಯಕ್ಷವಾಗಿ ಆ ಮಹದಾಶ್ಚರ್ಯವನ್ನು ನೋಡಿ ಸ್ವರ್ಗವನ್ನು ಬಯಸಿ ಪ್ರಹೃಷ್ಟಮನಸ್ಕರಾಗಿ ಶೂರರು ಬೇಗಬೇಗನೆ ಪರಸ್ಪರರನ್ನು ಕೊಲ್ಲುತ್ತಿದ್ದರು. ಯುದ್ಧದಲ್ಲಿ ರಥಿಗಳು ರಥಿಗಳೊಂದಿಗೆ, ಪದಾತಿಗಳು ಪದಾತಿಗಳೊಂದಿಗೆ, ಆನೆಗಳು ಆನೆಗಳೊಂದಿಗೆ ಮತ್ತು ಕುದುರೆಗಳು ಕುದುರೆಗಳೊಂದಿಗೆ ವಿಚಿತ್ರವಾಗಿ ಹೋರಾಡಿದರು. ಈ ರೀತಿ ಸಂಗ್ರಾಮದಲ್ಲಿ ಆನೆ-ಕುದುರೆ-ಜನರ ಕ್ಷಯವಾಗುತ್ತಿರಲು ಸೇನೆಯು ಧೂಳಿನಿಂದ ಆವೃತವಾಗಿ ದಿಕ್ಕುಕಾಣದೇ ಕೌರವರು ಕೌರವರನ್ನೇ ಮತ್ತು ಶತ್ರುಗಳು ಶತ್ರುಗಳನ್ನೇ ಕೊಲ್ಲತೊಡಗಿದರು. ದೇಹ-ಪಾಪಗಳನ್ನು ವಿನಾಶಿಸುವ ಆ ಯುದ್ಧದಲ್ಲಿ ಪರಸ್ಪರರ ಕೂದಲನ್ನು ಜಗ್ಗಾಡುತ್ತಿದ್ದರು. ಹಲ್ಲುಗಳಿಂದ ಕಚ್ಚುತ್ತಿದ್ದರು. ಉಗುರುಗಳಿಂದ ಪರೆದಾಡುತ್ತಿದ್ದರು. ಮುಷ್ಟಿಯುದ್ಧ ಮಾಡುತ್ತಿದ್ದರು.
ಆ ರೀತಿ ಆನೆ-ಕುದುರೆ-ಜನ ಕ್ಷಯವು ನಡೆಯುತ್ತಿರಲು ನರರು, ಆನೆಗಳು ಮತ್ತು ಕುದುರೆಗಳ ದೇಹದಿಂದ ಸುರಿಯುತ್ತಿದ್ದ ರಕ್ತವು ಪ್ರವಾಹವಾಗಿ ಹರಿದು ಕೆಳಗೆ ಬಿದ್ದಿದ್ದ ಅನೇಕ ನರರ, ಆನೆಗಳ ಮತ್ತು ಕುದುರೆಗಳ ದೇಹಗಳನ್ನೇ ಕೊಚ್ಚಿಕೊಂಡು ಹೋಗುತ್ತಿತ್ತು. ನರಾಶ್ವಗಜ ಸಂಪನ್ನವಾಗಿದ್ದ ಆ ಮಹಾಘೋರ ನದಿಯಲ್ಲಿ ನರಾಶ್ವಗಜಸವಾರರ ರಕ್ತವೇ ನೀರಾಗಿದ್ದಿತು, ಮಾಂಸವೇ ಕೆಸರಾಗಿದ್ದಿತು. ನರಾಶ್ವಗಜದೇಹಗಳು ತೇಲುತ್ತಿದ್ದ ಆ ರಕ್ತದ ನದಿಯು ಹೇಡಿಗಳಿಗೆ ಭಯವನ್ನುಂಟುಮಾಡುತ್ತಿತ್ತು. ವಿಜಯೈಷಿಣಿಗಳು ಆಳವಿಲ್ಲದ ಸ್ಥಳದಲ್ಲಿ ದಾಟಿಕೊಂಡು ಹೋಗುತ್ತಿದ್ದರು. ಆಳವಿದ್ದಲ್ಲಿ ಹಾರಿಕೊಂಡು ಹೋಗುತ್ತಿದ್ದರು ಮತ್ತು ಇನ್ನು ಕೆಲವರು ಆ ರಕ್ತಕೋಡಿಯಲ್ಲಿ ಮುಳುಗಿಹೋಗುತ್ತಿದ್ದರು. ರಕ್ತದಿಂದ ತೋಯ್ದು ಹೋಗಿದ್ದ ಅವರ ದೇಹಗಳು, ಕವಚಗಳು ಮತ್ತು ವಸ್ತ್ರಗಳು ರಕ್ತದಂತೆ ಕೆಂಪಾಗಿಕಾಣುತ್ತಿದ್ದವು. ಆ ರಕ್ತನದಿಯಲ್ಲಿ ಕೆಲವರು ಗುಟುಕುಹಾಕುತ್ತಿದ್ದರು, ಸ್ನಾನಮಾಡುತ್ತಿದ್ದರು ಮತ್ತು ಮೂರ್ಛೆಹೋಗುತ್ತಿದ್ದರು. ರಥ-ಕುದುರೆ-ಆನೆಗಳು, ಆಯುಧ-ಆಭರಣಗಳು, ವಸ್ತ್ರ-ಕವಚಗಳು, ಕೊಲ್ಲಲ್ಪಡುತ್ತಿದ್ದವರು ಮತ್ತು ಸತ್ತುಹೋದವರು, ಭೂಮಿ, ಆಕಾಶ, ಸ್ವರ್ಗ, ದಿಕ್ಕುಗಳು ಪ್ರಯಶಃ ಇವೆಲ್ಲವೂ ಕೆಂಪಾಗಿಯೇ ತೋರುತ್ತಿದ್ದವು. ಆ ಕೆಂಪುನದಿಯ ವಾಸನೆ, ಸ್ಪರ್ಷ, ರುಚಿ, ರೂಪ, ಜೋರಾಗಿ ಹರಿದುಹೋಗುತ್ತಿದ್ದುದರ ಶಬ್ಧ, ಇವುಗಳಿಂದ ಪ್ರಾಯಶಃ ಸೇನೆಗಳು ಮಹಾ ವಿಷಾದಕ್ಕೊಳಗಾಗಿದ್ದರು.
ನಾಶವಾಗಿಹೋಗಿದ್ದ ಕೌರವ ಸೇನೆಯನ್ನು ಭೀಮಸೇನನ ನಾಯಕತ್ವದಲ್ಲಿ ಸಾತ್ಯಕಿ ಪ್ರಮುಖ ಮಹಾರಥರು ಪುನಃ ಆಕ್ರಮಣಿಸಿದರು. ವೇಗವಾಗಿ ಆಕ್ರಮಣಿಸುತ್ತಿದ್ದ ಆ ಮಹಾತ್ಮರನ್ನು ಸಹಿಸಿಕೊಳ್ಳಲಾಗದೇ ಕೌರವ ಮಹಾಸೇನೆಯು ಪರಾಙ್ಮುಖವಾಯಿತು. ರಥಾಶ್ವಗಜಪದಾತಿಗಣಗಳು ಚೆಲ್ಲಾಪಿಲ್ಲಿಯಾಗಿ ಹೋದವು. ಯೋಧರ ಕವಚ-ಆಭರಣಗಳು ವಿಧ್ವಸ್ತವಾದವು. ಆಯುಧ-ಧನುಸ್ಸುಗಳು ತುಂಡಾಗಿ ಭೂಮಿಯ ಮೇಲೆ ಬಿದ್ದವು. ಮಹಾರಣ್ಯದಲ್ಲಿ ಸಿಂಹದಿಂದ ಆಕ್ರಮಣಿಸಲ್ಪಟ್ಟ ಗಜಸಂಕುಲವು ಹೇಗೋ ಹಾಗೆ ವಧಿಸಲ್ಪಡುತ್ತಿರುವ ಕೌರವ ಸೇನೆಯು ಎಲ್ಲ ಕಡೆಗಳಿಗೆ ಪಲಾಯನಗೈದಿತು.
ಕರ್ಣ-ಭೀಮಸೇನರ ಯುದ್ಧ
ದುರ್ಯೋಧನನು ಎಷ್ಟೇ ಕೂಗಿಕೊಂಡರೂ ನಿನ್ನವರು ಹಿಂದಿರುಗಲಿಲ್ಲ. ಆಗ ಪಕ್ಷ-ಪ್ರಪಕ್ಷಗಳಲ್ಲಿದ್ದ ಕುರುಗಳು ಸಶಸ್ತ್ರರಾಗಿ ರಣದಲ್ಲಿ ಭೀಮನನ್ನು ಆಕ್ರಮಣಿಸಿದರು. ಧಾರ್ತರಾಷ್ಟ್ರರು ಪರಾಙ್ಮುಖರಾಗಿ ಓಡುತ್ತಿರುವುದನ್ನು ನೋಡಿ ಕರ್ಣನೂ ಕೂಡ ಹಸವರ್ಣದ ಕುದುರೆಗಳನ್ನು ವೃಕೋದರನಿದ್ದಲ್ಲಿಗೆ ಹೋಗುವಂತೆ ಹೇಳಿದನು. ಆಹವಶೋಭೀ ಶಲ್ಯನಿಂದ ಪ್ರಚೋದಿತಗೊಂಡ ಆ ಕುದುರೆಗಳು ಭೀಮಸೇನನ ರಥವನ್ನು ತಲುಪಿ ಅವನ ಕುದುರೆಗಳೊಂದಿಗೆ ಮಿಳಿತವಾದವು. ತನ್ನ ಬಳಿ ಬರುತ್ತಿದ್ದ ಕರ್ಣನನ್ನು ನೋಡಿ ಕ್ರೋಧಸಮನ್ವಿತ ಭೀಮನು ಕರ್ಣನ ವಿನಾಶಗೊಳಿಸಬೇಕೆಂದೇ ನಿರ್ಧರಿಸಿದನು. ಅವನು ವೀರ ಸಾತ್ಯಕಿಗೂ ಪಾರ್ಷತ ಧೃಷ್ಟದ್ಯುಮ್ನನಿಗೂ ಹೇಳಿದನು: “ನನ್ನ ಕಣ್ಣೆದುರಿಗೇ ಮಹಾಸಂಕಟದಂತೆ ಮುಕ್ತನಾದಂತೆ ತೋರುತ್ತಿರುವ ಯುಧಿಷ್ಠಿರನನ್ನು ರಕ್ಷಿಸಿ. ನನ್ನ ಎದುರಿಗೇ ದುರಾತ್ಮ ಕರ್ಣನು ದುರ್ಯೋಧನನ ಪ್ರೀತ್ಯರ್ಥವಾಗಿ ಯುಧಿಷ್ಠಿರನನ್ನು ಸಕಲವಿಧಧ ಯುದ್ಧ ಸಾಮಗ್ರಿಗಳಿಂದ ವಿಹೀನನ್ನಾಗಿ ಮಾಡಿದ್ದಾನೆ! ಇಂದು ಯುಧಿಷ್ಠಿರನ ದುಃಖವನ್ನು ಅಂತ್ಯಗೊಳಿಸುತ್ತೇನೆ. ಘೋರ ರಣದಲ್ಲಿ ಕರ್ಣನನ್ನು ನಾನು ಕೊಲ್ಲುತ್ತೇನೆ ಅಥವಾ ಅವನು ನನ್ನನ್ನು ಸಂಹರಿಸುತ್ತಾನೆ. ಸತ್ಯವನ್ನೇ ನಾನು ಹೇಳುತ್ತಿದ್ದೇನೆ! ಇಂದು ರಾಜನನ್ನು ನಿಮ್ಮಲ್ಲಿ ನ್ಯಾಸಭೂತವಾಗಿ ಇಡುತ್ತಿದ್ದೇನೆ. ನೀವು ವಿಗತಜ್ವರರಾಗಿ ಇವನ ಸಂರಕ್ಷಣೆಗೆ ಸರ್ವ ಪ್ರಯತ್ನವನ್ನೂ ಮಾಡಿರಿ!”
ಹೀಗೆ ಹೇಳಿ ಆ ಮಹಾಬಾಹುವು ಮಹಾ ಸಿಂಹನಾದದಿಂದ ದಿಕ್ಕುಗಳೆಲ್ಲವನ್ನೂ ಮೊಳಗಿಸಿ ಆಧಿರಥಿ ಕರ್ಣನ ಬಳಿಸಾರಿದನು. ಭೀಮನು ತ್ವರೆಮಾಡಿ ಬರುತ್ತಿರುವುದನ್ನು ನೋಡಿ ಮದ್ರರಾಜನು ಸೂತಪುತ್ರನಿಗೆ ಹೀಗೆಂದನು: “ಕರ್ಣ! ದೀರ್ಘಕಾಲದಿಂದಲೂ ಕೂಡಿಟ್ಟುಕೊಂಡಿರುವ ಕ್ರೋಧವನ್ನು ನಿನ್ನ ಮೇಲೆ ಸುರಿಸಲು ನಿಶ್ಚಯಿಸಿರುವ ಕ್ರುದ್ಧ ಮಹಾಬಾಹು ಪಾಂಡವನಂದನನ್ನು ನೋಡು! ಹಿಂದೆಂದೂ - ಅಭಿಮನ್ಯು ಅಥವಾ ರಾಕ್ಷಸ ಘಟೋತ್ಕಚರು ಹತರಾದಾಗಲೂ - ಇವನ ಇಂತಹ ರೂಪವನ್ನು ನಾನು ಕಂಡಿರಲಿಲ್ಲ! ಕ್ರುದ್ಧನಾಗಿ ಕಾಲಾಗ್ನಿ ಸದೃಶ ಶುಭ ರೂಪವನ್ನು ತಾಳಿರುವ ಇವನು ತ್ರೈಲೋಕ್ಯದ ಸರ್ವವನ್ನೂ ನಿವಾರಿಸಲು ಶಕ್ತನಾಗಿದ್ದಾನೆ.”
ಮದ್ರರಾಜನು ರಾಧೇಯನಿಗೆ ಹೀಗೆ ಹೇಳುತ್ತಿರಲು ಕ್ರೋಧದೀಪ್ತ ಕರ್ಣನು ವೃಕೋದರನನ್ನು ಎದುರಿಸಿದನು. ಅಲ್ಲಿದ್ದ ಭೀಮನನ್ನು ನೋಡಿ ರಾಧೇಯನು ನಗುತ್ತಿರುವನೋ ಎನ್ನುವಂತೆ ಶಲ್ಯನಿಗೆ ಇಂತೆಂದನು: “ಮದ್ರಜನೇಶ್ವರ! ಇಂದು ಭೀಮಸೇನನ ಕುರಿತು ನೀನು ನನಗೆ ಹೇಳುತ್ತಿರುವುದು ಸತ್ಯವೇ ಎನ್ನುವುದರಲ್ಲಿ ಸಂಶಯವಿಲ್ಲ. ವೃಕೋದರನು ಶೂರ, ವೀರ, ಕೋಪಿಷ್ಟ, ಶರೀರ ಮತ್ತು ಪ್ರಾಣಗಳ ಭಯವನ್ನು ತೊರೆದವನು ಮತ್ತು ಬಲದಲ್ಲಿ ಅತ್ಯಧಿಕನು. ಅಂದು ವಿರಾಟನಗರದಲ್ಲಿ ಅಜ್ಞಾತವಾಸದಲ್ಲಿರುವಾಗ ದ್ರೌಪದಿಯ ಹಿತವನ್ನು ಬಯಸಿ ಇವನು ಕೇವಲ ಬಾಹುಗಳನ್ನು ಬಳಸಿ ಗೂಢಭಾವವನ್ನು ಬಳಸಿ ಗಣಗಳೊಂದಿಗೆ ಕೀಚಕನನ್ನು ಸಂಹರಿಸಿದ್ದನು. ಅವನು ಇಂದು ಕ್ರೋಧಮೂರ್ಛಿತನಾಗಿ ಸನ್ನದ್ಧನಾಗಿ ಸಂಗ್ರಾಮದ ಶಿರೋಭಾಗದಲ್ಲಿ ಬಂದಿದ್ದಾನೆ. ಆದರೆ ರಣದಲ್ಲಿ ದಂಡವನ್ನು ಎತ್ತಿಹಿಡಿದಿರುವ ಮೃತ್ಯುವಿನೊಂದಿಗೆ ಇವನು ಹೋರಾಡಬಲ್ಲನೇ? ಸಮರದಲ್ಲಿ ಅರ್ನುನನನ್ನು ನಾನು ಅಥವಾ ಧನಂಜಯನು ನನ್ನನ್ನು ಸಂಹರಿಸಬೇಕೆಂದು ಬಹುಕಾಲದಿಂದ ನನ್ನ ಅಭಿಲಷೆಯೂ ಮನೋರಥವೂ ಆಗಿತ್ತು. ಬಹುಷಃ ಅದಕ್ಕಾಗಿಯೇ ಭೀಮನೊಡನೆ ನನ್ನ ಸಮಾಗಮವಾಗುತ್ತಿದೆ. ಭೀಮಸೇನನನ್ನು ಸಂಹರಿಸಿದರೆ ಅಥವಾ ವಿರಥನನ್ನಾಗಿ ಮಾಡಿದರೆ ಪಾರ್ಥನು ನನ್ನೊಡನೆ ಯುದ್ಧಮಾಡಲು ಬಂದೇಬರುತ್ತಾನೆ. ಆಗ ಒಳ್ಳೆಯದೇ ಆಗುತ್ತದೆ. ಇದರ ಕುರಿತು ನಿನ್ನ ಅಭಿಪ್ರಾಯವೇನೆಂದು ಬೇಗನೇ ನನಗೆ ಹೇಳು!”
ರಾಧೇಯನ ಆ ಮಾತನ್ನು ಕೇಳಿ ಶಲ್ಯನು ಕಾಲೋಚಿತವಾಗಿ ಸೂತಪುತ್ರನಿಗೆ ಹೀಗೆಂದನು: “ಮಾಹಾಬಾಹೋ! ಮೊದಲು ಮಹಾಬಲ ಭೀಮಸೇನನನ್ನು ಎದುರಿಸು. ಭೀಮಸೇನನನ್ನು ಸೋಲಿಸಿದರೆ ಅರ್ಜುನನು ನಿನಗೆ ದೊರೆಯುತ್ತಾನೆ. ಬಹಳಕಾಲದಿಂದ ಹೃದ್ಗತವಾಗಿದ್ದ ನಿನ್ನ ಅಭೀಷ್ಟವು ಪೂರೈಸುತ್ತದೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ!”
ಇದನ್ನು ಕೇಳಿ ಕರ್ಣನು ಪುನಃ ಶಲ್ಯನಿಗೆ ಹೇಳಿದನು: “ಯುದ್ಧದಲ್ಲಿ ನಾನು ಅರ್ಜುನನನ್ನು ಸಂಹರಿಸುತ್ತೇನೆ ಅಥವಾ ಧನಂಜಯನು ನನ್ನನ್ನು ಸಂಹರಿಸುತ್ತಾನೆ. ಯುದ್ಧದಲ್ಲಿ ಮನಸ್ಸನ್ನಿಟ್ಟು ರಥವನ್ನು ಮುಂದೊಯ್ಯಿ!”
ಆಗ ಶಲ್ಯನು ಭೀಮನು ಎಲ್ಲಿ ಸೇನೆಗಳನ್ನು ಓಡಿಸುತ್ತಿದ್ದನೋ ಅಲ್ಲಿಗೆ ರಥವನ್ನು ಕೊಂಡೊಯ್ದನು. ಆಗ ಕರ್ಣ-ಭೀಮರ ಸಮಾಗಮ ಸಮಯದಲ್ಲಿ ತೂರ್ಯ-ಭೀರಿಗಳ ಮಹಾನಿನಾದವುಂಟಾಯಿತು. ಬಲಶಾಲೀ ಭೀಮಸೇನನು ಸಂಕ್ರುದ್ಧನಾಗಿ ಕೌರವ ಸೇನೆಯನ್ನು ವಿಮಲ ತೀಕ್ಷ್ಣ ನಾರಾಚಗಳಿಂದ ಪಲಾಯನಗೊಳಿಸಿದನು. ಕರ್ಣ-ಪಾಂಡವರ ನಡುವೆ ರೌದ್ರ ಭೀಮರೂಪ ತುಮುಲ ಯುದ್ಧವು ನದೆಯಿತು. ಆಗ ಸ್ವಲ್ಪಹೊತ್ತಿನಲ್ಲಿಯೇ ಪಾಂಡವನು ಕರ್ಣನ ಮೇಲೆ ಎರಗಿದನು. ತನ್ನ ಮೇಲೆ ಆಕ್ರಮಣಿಸುತ್ತಿದ್ದ ಅವನನ್ನು ನೋಡಿ ವೈಕರ್ತನನು ಕ್ರುದ್ಧನಾಗಿ ಅವನ ಸ್ತನಾಂತರದಲ್ಲಿ ಪ್ರಹರಿಸಿದನು. ಪುನಃ ಆ ಅಮೇಯಾತ್ಮನು ಶರವರ್ಷಗಳಿಂದ ಭೀಮಸೇನನನ್ನು ಮುಚ್ಚಿಬಿಟ್ಟನು. ಹೀಗೆ ಪ್ರಹರಿಸಿದ ಸೂತಪುತ್ರನನ್ನು ಭೀಮನು ಪತ್ರಿಗಳಿಂದ ಮುಸುಕಿದನು. ಪುನಃ ಕರ್ಣನನ್ನು ಎಂಭತ್ತು ನಿಶಿತ ನತಪರ್ವಬಾಣಗಳಿಂದ ಹೊಡೆದನು. ಕರ್ಣನು ಪತ್ರಿಯಿಂದ ಅವನ ಧನುಸ್ಸನ್ನು ನಡುವಿನಲ್ಲಿಯೇ ತುಂಡರಿಸಿದನು. ಕೂಡಲೇ ಸರ್ವಾವರಣಭೇದೀ ತೀಕ್ಷ್ಣ ನಾರಾಚದಿಂದ ಧನುಸ್ಸು ತುಂಡಾಗಿದ್ದ ಭೀಮನ ವಕ್ಷಸ್ಥಳಕ್ಕೆ ಹೊಡೆದನು. ಅನಂತರ ವೃಕೋದರನು ಅನ್ಯ ಧನುಸ್ಸನ್ನು ಎತ್ತಿಕೊಂಡು ನಿಶಿತ ಶರಗಳಿಂದ ಸೂತಪುತ್ರನ ಮರ್ಮಗಳನ್ನು ಪ್ರಹರಿಸಿ ಭೂಮ್ಯಾಕಾಶಗಳನ್ನು ನಡುಗಿಸುವಂತೆ ಬಲವತ್ತಾಗಿ ಗರ್ಜಿಸಿದನು. ವನದಲ್ಲಿ ಮದೋತ್ಕಟ ಆನೆಯನ್ನು ಪಂಜುಗಳಿಂದ ಆಕ್ರಮಣಿಸುವಂತೆ ಕರ್ಣನು ಭೀಮಸೇನನನ್ನು ಇಪ್ಪತ್ತೈದು ನಾರಾಚಗಳಿಂದ ಪ್ರಹರಿಸಿದನು. ಸಾಯಕಗಳಿಂದ ಗಾಯಗೊಂಡ ಪಾಂಡವನು ಕ್ರೋಧಮೂರ್ಛಿತನಾಗಿ, ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು, ಸೂತಪುತ್ರನನ್ನು ವಧಿಸಲು ಬಯಸಿ. ಆ ಉತ್ತಮ ಧನುಸ್ಸಿಗೆ ಗಿರಿಗಳನ್ನು ಕೂಡ ಭೇದಿಸಬಲ್ಲ ಸಾಯಕವನ್ನು ಹೂಡಿದನು. ಬಲವನ್ನುಪಯೋಗಿಸಿ ಧನುಸ್ಸನ್ನು ಆಕರ್ಣಾಂತವಾಗಿ ಎಳೆದು ಮಾರುತಿಯು ಕರ್ಣನನ್ನು ವಧಿಸಲು ಬಯಸಿ ಆ ಬಾಣವನ್ನು ಪ್ರಯೋಗಿಸಿದನು.
ಆ ಬಾಣವು ಸಿಡಿಲಿನಂತೆ ಶಬ್ಧಮಾಡುತ್ತಾ ವಜ್ರವು ವೇಗವಾಗಿ ಪರ್ವತವನ್ನು ಹೇಗೋ ಹಾಗೆ ರಣದಲ್ಲಿ ಕರ್ಣನನ್ನು ಸೀಳಿತು. ಭೀಮಸೇನನಿಂದ ಪ್ರಹೃತನಾದ ಸೂತಪುತ್ರನು ಮೂರ್ಛೆಹೋಗಿ ರಥದಲ್ಲಿಯೇ ಒರಗಿದನು. ಆಗ ಮದ್ರಾಧಿಪನು ವಿಸಂಜ್ಞ ಸೂತನಂದನನನ್ನು ನೋಡಿ ಕರ್ಣನ ರಥವನ್ನು ಅಲ್ಲಿಂದ ದೂರ ಕೊಂಡೊಯ್ದನು. ಕರ್ಣನು ಪರಾಜಿತನಾಗಲು ಭೀಮಸೇನನು ಇಂದ್ರನು ದಾನವೀ ಸೇನೆಯನ್ನು ಹೇಗೋ ಹಾಗೆ ಧಾರ್ತರಾಷ್ಟ್ರರ ಮಹಾಸೇನೆಯನ್ನು ಪಲಾಯನಗೊಳಿಸಿದನು.
ಸೂತಪುತ್ರ ರಾಧೇಯನು ವಿಭ್ರಾಂತನಾದುದನ್ನು ನೋಡಿ ದುರ್ಯೋಧನನು ಮಹಾಸೇನೆಗಳೊಂದಿಗಿದ್ದ ಸಹೋದರರಿಗೆ ಹೇಳಿದನು: “ನಿಮಗೆ ಮಂಗಳವಾಗಲಿ! ಭೀಮಸೇನನ ಭಯವೆಂಬ ಅಗಾಧವಾದ ವ್ಯಸನ ಸಾಗರದಲ್ಲಿ ಮುಳುಗುತ್ತಿರುವ ರಾಧೇಯನನ್ನು ರಕ್ಷಿಸಲು ಶೀಘ್ರವಾಗಿ ಹೋಗಿ!”
ರಾಜನಿಂದ ಹಾಗೆ ಆಜ್ಞಾಪಿಸಲ್ಪಟ್ಟ ಅವರು ಸಂಕ್ರುದ್ಧರಾಗಿ ಭೀಮಸೇನನನ್ನು ಸಂಹರಿಸಲು ಪತಂಗಗಳು ಬೆಂಕಿಯನ್ನು ಹೇಗೋ ಹಾಗೆ ಅವನನ್ನು ಆಕ್ರಮಣಿಸಿದರು. ಶ್ರುತಾಯು, ದುರ್ಧರ, ಕ್ರಾಥ, ವಿವಿತ್ಸು, ವಿಕಟ, ಸಮ, ನಿಷಂಗೀ, ಕವಚೀ, ಪಾಶೀ, ನಂದ, ಉಪನಂದ, ದುಷ್ಪ್ರಧರ್ಷ, ಸುಬಾಹು, ವಾತವೇಗ, ಸುವರ್ಚಸ, ಧನುರ್ಗ್ರಾಹ, ಸುಬಾಹು, ವಾತವೇಗ, ಸುವರ್ಚಸ – ಈ ವೀರ್ಯವಂತ ಮಹಾಬಲರು ರಥಗಳಿಂದ ಪರಿವೃತರಾಗಿ ಭೀಮಸೇನನನ್ನು ಸಂಧಿಸಿ ಅವನನ್ನು ಎಲ್ಲಕಡೆಗಳಿಂದ ಮುತ್ತಿದರು. ಅವರು ನಾನಾ ವಿಧದ ಶರವ್ರಾತಗಳನ್ನು ಎಲ್ಲಕಡೆಗಳಿಂದಲೂ ಪ್ರಯೋಗಿಸಿದರು. ಅವರಿಂದ ಪೀಡಿಸಲ್ಪಟ್ಟ ಭೀಮಸೇನನು ತನ್ನ ಮೇಲೆ ಎರಗುತ್ತಿದ್ದ ಧೃತರಾಷ್ಟ್ರ ಪುತ್ರರ ಬೆಂಬಲಿಗರಾಗಿದ್ದ ಐವತ್ತು ರಥಿಗಳನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಿದನು. ಅನಂತರ ಭೀಮನು ಕ್ರುದ್ಧನಾಗಿ ಭಲ್ಲದಿಂದ ಕುಂಡಲ ಕಿರೀಟಗಳೊಂದಿಗೆ ವಿವಿತ್ಸುವಿನ ಚಂದ್ರೋಪಮ ಶಿರವನ್ನು ಅಪಹರಿಸಿದನು. ಭೀಮನಿಂದ ಹತನಾಗಿ ಅವನು ಭೂಮಿಯ ಮೇಲೆ ಬಿದ್ದನು. ಸಮರದಲ್ಲಿ ಶೂರ ಭ್ರಾತರನು ಹತನಾದುದನ್ನು ನೋಡಿ ಅವರು ಭೀಮನನ್ನು ಎಲ್ಲ ಕಡೆಗಳಿಂದ ಆಕ್ರಮಣಿಸಿದರು. ಆಗ ಸಮರದಲ್ಲಿ ಭೀಮನು ಇನ್ನೆರಡು ಭಲ್ಲಗಳಿಂದ ಧೃತರಾಷ್ಟ್ರನ ಇನ್ನಿಬ್ಬರು ಪುತ್ರರ ಪ್ರಾಣಗಳನ್ನು ಅಪಹರಿಸಿದನು. ಆಗ ಭಿರುಗಾಳಿಯಿಂದ ಹೊಡೆಯಲ್ಪಟ್ಟ ಮರಗಳಂತೆ ದೇವಗರ್ಭಸಮಾನ ವಿಕಟ ಮತ್ತು ಸಮರಿಬ್ಬರೂ ಧರೆಯ ಮೇಲೆ ಬಿದ್ದರು. ಅನಂತರ ತ್ವರೆಮಾಡಿ ಭೀಮನು ತೀಕ್ಷ್ಣ ನಾರಾಚದಿಂದ ಕ್ರಾಥನನ್ನು ಸಂಹರಿಸಿ ಭೂಮಿಯ ಮೇಲೆ ಕೆಡವಿ ಯಮಕ್ಷಯಕ್ಕೆ ಕಳುಹಿಸಿದನು. ಧೃತರಾಷ್ಟ್ರನ ಪುತ್ರರು ಹತರಾಗಲು ಅಲ್ಲಿ ತೀವ್ರ ಹಾಹಾಕಾರವುಂಟಾಯಿತು. ಹೀಗೆ ಆ ಸೈನ್ಯವು ಕ್ಷೋಭೆಗೊಳ್ಳಲು ಭೀಮಸೇನನು ನಂದ-ಉಪನಂದರನ್ನು ಯಮಸಾದನಕ್ಕೆ ಕಳುಹಿಸಿದನು. ಕಾಲಾಂತಕ ಯಮನಂತಿರುವ ಭೀಮಸೇನನನ್ನು ರಣದಲ್ಲಿ ನೋಡಿ ಭೀತರೂ ವಿಹ್ವಲರೂ ಆಗಿದ್ದ ಧೃತರಾಷ್ಟ್ರ ಪುತ್ರರು ಪಲಾಯನಗೈದರು. ಅವರು ಹತರಾದುದನ್ನು ನೋಡಿ ಸೂತಪುತ್ರನು ತನ್ನ ಹಂಸವರ್ಣದ ಕುದುರೆಗಳನ್ನು ಪುನಃ ಪಾಂಡವನಿದ್ದಲ್ಲಿಗೆ ಓಡಿಸಿದನು. ಮದ್ರರಾಜನಿಂದ ಪ್ರೇರಿತ ಆ ಕುದುರೆಗಳು ವೇಗವಾಗಿ ಭೀಮಸೇನನ ರಥದ ಬಳಿಸಾರಿ ಸಜ್ಜಾಗಿ ನಿಂತವು.
ಆಗ ಕರ್ಣ-ಪಾಂಡವರ ನಡುವೆ ಘೋರರೂಪವಾದ ರೌದ್ರ ತುಮುಲ ಯುದ್ಧವು ನಡೆಯಿತು. ಆಗ ಮುಹೂರ್ತಮಾತ್ರದಲ್ಲಿ ಕರ್ಣನು ಅತಿಕಷ್ಟಪಡದೇ ನಗುತ್ತಿರುವನೋ ಎನ್ನುವಂತೆ ಭೀಮನನ್ನು ವಿರಥನನ್ನಾಗಿಸಿದನು. ಅನಿಲೋಪಮ ಮಹಾಬಾಹು ಭರತಶ್ರೇಷ್ಠನು ನಗುತ್ತಿರುವನೋ ಎನ್ನುವಂತೆ ಗದೆಯನ್ನು ಹಿಡಿದು ತನ್ನ ಉತ್ತಮ ರಥದಿಂದ ಧುಮುಕಿದನು. ಕೂಡಲೇ ಕ್ರುದ್ಧರೂಪ ಪರಂತಪ ಭೀಮನು ಈಷಾದಂಡ ಸಮಾನ ದಂತಗಳಿಂದ ಪ್ರಹರಿಸುತ್ತಿದ್ದ ಏಳುನೂರು ಆನೆಗಳನ್ನು ವಧಿಸಿದನು. ಆನೆಗಳ ಮರ್ಮಸ್ಥಾನಗಳನ್ನು ತಿಳಿದಿದ್ದ ಭೀಮಸೇನನು ಜೋರಾಗಿ ಗರ್ಜಿಸುತ್ತಾ ಆನೆಗಳ ಮರ್ಮಸ್ಥಳಗಳನ್ನೂ, ತುಟಿಗಳನ್ನೂ, ಕಣ್ಣುಗಳನ್ನೂ, ಕುಂಭಸ್ಥಳಗಳನ್ನೂ, ಕಪೋಲಗಳನ್ನೂ ಪ್ರಹರಿಸಿ ವಧಿಸುತ್ತಿದ್ದನು. ಭಯಗೊಂಡ ಆ ಆನೆಗಳು ಓಡಿಹೋಗಲು ಮಾವುತರು ಅವುಗಳನ್ನು ಪುನಃ ಯುದ್ಧಕ್ಕೆ ಎಳೆತಂದರು. ಆ ಮಹಾಕಾಯದ ಆನೆಗಳು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಭೀಮಸೇನನನ್ನು ಸುತ್ತುವರೆದವು. ಮಾವುತ-ಆಯುಧ-ಕೇತುಗಳಿಂದ ಯುಕ್ತವಾಗಿದ್ದ ಆ ಏಳುನೂರು ಆನೆಗಳನ್ನು ಭೀಮಸೇನನು ಭೂಮಿಯ ಮೇಲೆ ನಿಂತುಕೊಂಡೇ ಗದೆಯಿಂದ – ಭಿರುಗಾಳಿಯು ಶರತ್ಕಾಲದ ಮೋಡಗಳನ್ನು ಹೇಗೋ ಹಾಗೆ – ನಾಶಗೊಳಿಸಿದನು. ಅನಂತರ ಕೌಂತೇಯನು ಯುದ್ಧದಲ್ಲಿ ಪುನಃ ಶಕುನಿಯ ಐವತ್ತೆರಡು ಅತಿಬಲಶಾಲೀ ಆನೆಗಳನ್ನು ಸದೆಬಡಿದನು. ಹಾಗೆಯೇ ಪಾಂಡವ ಭೀಮಸೇನನು ನೂರಕ್ಕೂ ಹೆಚ್ಚು ರಥಗಳನ್ನೂ ಪದಾತಿಗಳನ್ನೂ ಸಂಹರಿಸಿ ಯುದ್ಧದಲ್ಲಿ ಕೌರವ ಸೇನೆಯನ್ನು ಸಂತಾಪಗೊಳಿಸಿದನು. ಪ್ರಜ್ವಲಿಸುತ್ತಿದ್ದ ಸೂರ್ಯನಿಂದ ಮತ್ತು ಭೀಮನಿಂದ ದಹಿಸಲ್ಪಡುತ್ತಿದ್ದ ಕೌರವ ಸೇನೆಯು ಬೆಂಕಿಯಲ್ಲಿ ಹಾಕಿದ ಚರ್ಮದಂತೆ ಕುಗ್ಗಿಹೋಯಿತು. ಭೀಮನ ಭಯದಿಂದ ನಡುಗುತ್ತಿದ್ದ ಕೌರವರು ಭೀಮನೊಡನೆ ಯುದ್ಧಮಾಡುವುದನ್ನು ಬಿಟ್ಟು ಹತ್ತು ದಿಕ್ಕುಗಳಲ್ಲಿಯೂ ಪಲಾಯನಮಾಡತೊಡಗಿದರು. ಒಡನೆಯೇ ಚರ್ಮದ ಕವಚಗಳನ್ನು ಧರಿಸಿದ್ದ ಐದು ನೂರು ಅನ್ಯರು ಗಂಭೀರವಾಗಿ ಶಬ್ಧಮಾಡುತ್ತಿದ್ದ ರಥಗಳಲ್ಲಿ ಕುಳಿತು ಎಲ್ಲಕಡೆಗಳಿಂದ ಶರವೃಷ್ಟಿಗಳನ್ನು ಸುರಿಸುತ್ತಾ ಭೀಮನನ್ನು ಆಕ್ರಮಣಿಸಿದರು. ವಿಷ್ಣುವು ಅಸುರರನ್ನು ಹೇಗೋ ಹಾಗೆ ಭೀಮನು ಗದೆಯಿಂದ ಅವರೆಲ್ಲರನ್ನು ಸಾರಥಿ, ರಥ, ಪತಾಕೆ, ಧ್ವಜ ಮಾತು ಆಯುಧಗಳ ಸಹಿತ ಪುಡಿಪುಡಿಮಾಡಿದನು.
ಅನಂತರ ಶಕುನಿಯಿಂದ ನಿರ್ದೇಶಿಸಲ್ಪಟ್ಟ ಮೂರುಸಾವಿರ ಶೂರಸಮ್ಮತ ಕುದುರೆಸವಾರರು ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದು ಭೀಮನ ಮೇಲೆ ಎರಗಿದರು. ಆ ಅಶ್ವಾರೋಹೀ ಯವನರನ್ನು ಭೀಮನು ಹಾರುತ್ತಾ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಹೊಡೆದು ಸಂಹರಿಸಿದನು. ಖಡ್ಗದಿಂದ ವೃಕ್ಷಗಳನ್ನು ತುಂಡರಿಸುವಾಗ ಹೇಗೆ ಟಪಾ ಟಪಾ ಶಬ್ಧವುಂಟಾಗುವುದೋ ಹಾಗೆ ಗದೆಯ ಪ್ರಹಾರದಿಂದ ಎಲ್ಲಕಡೆ ಜೋರಾಗಿ ಶಬ್ಧವು ಕೇಳತೊಡಗಿತು. ಹೀಗೆ ಸುಬಲಪುತ್ರನ ಮೂರುಸಾವಿರ ಉತ್ತಮ ಕುದುರೆಗಳನ್ನು ಸಂಹರಿಸಿ ಭೀಮಸೇನನು ಕ್ರುದ್ಧನಾಗಿ ಇನ್ನೊಂದು ರಥವನ್ನೇರಿ ರಾಧೇಯನನ್ನು ಆಕ್ರಮಣಿಸಿದನು.
ಕರ್ಣನಾದರೋ ಸಮರದಲ್ಲಿ ಧರ್ಮಪುತ್ರನನ್ನು ಶರಗಳಿಂದ ಮುಸುಕಿ, ಸಾರಥಿಯನ್ನು ಕೆಳಗುರುಳಿಸಿದನು. ಯುದ್ಧದಲ್ಲಿ ಆ ರಥವು ಪಲಾಯನಮಾಡುತ್ತಿರುವುದನ್ನು ನೋಡಿ ಮಹಾರಥ ಕರ್ಣನು ಕಂಕಪತ್ರಿ ಜಿಹ್ಮಗ ಬಾಣಗಳನ್ನು ಸುರಿಸುತ್ತಾ ಅನುಸರಿಸಿ ಹೋದನು. ರಾಜನನ್ನು ಶರಗಳಿಂದ ಮುಚ್ಚಿ ಬೆನ್ನಟ್ಟಿ ಹೋಗುತ್ತಿದ್ದ ಕರ್ಣನನ್ನು ನೋಡಿ ಮಾರುತಿ ಭೀಮನು ಕ್ರುದ್ಧನಾಗಿ ಕರ್ಣನನ್ನು ಶರಜಾಲಗಳಿಂದ ಮುಚ್ಚಿಬಿಟ್ಟನು. ಕೂಡಲೆ ಶತ್ರುಕರ್ಶನ ರಾಧೇಯನು ಹಿಂದಿರುಗಿ ನಿಶಿತ ಶರಗಳಿಂದ ಭೀಮನನ್ನು ಎಲ್ಲಕಡೆಗಳಿಂದ ಮುಚ್ಚಿಬಿಟ್ಟನು.
ಕರ್ಣ-ಸಾತ್ಯಕಿಯರ ಯುದ್ಧ
ಭೀಮಸೇನನ ರಥದ ಕಡೆ ತಿರುಗಿದ ಕರ್ಣನನ್ನು ಸಾತ್ಯಕಿಯು ಭೀಮಸೇನನ ಪಾರ್ಷ್ಣಿಗ್ರಹಣ ಕಾರ್ಯವನ್ನು ಮಾಡುತ್ತಿದ್ದುದರಿಂದ ಆಕ್ರಮಣಿಸಿದನು. ಅವನ ಶರಗಳಿಂದ ಚೆನ್ನಾಗಿ ಪ್ರಹರಿಸಲ್ಪಟ್ಟ ಕರ್ಣನು ಸಾತ್ಯಕಿಯನ್ನೇ ಆಕ್ರಮಣಿಸಿದನು. ಸರ್ವಧನ್ವಿಗಳಲ್ಲಿ ಶ್ರೇಷ್ಠರಾಗಿದ್ದ ಅವರಿಬ್ಬರು ಮನಸ್ವಿಗಳೂ ಅನ್ಯೋನ್ಯರನ್ನು ಎದುರಿಸಿ ವಿಚಿತ್ರ ಶರಗಳನ್ನು ಪ್ರಯೋಗಿಸುತ್ತಾ ಪ್ರಕಾಶಿಸುತ್ತಿದ್ದರು.
ಇಬ್ಬರೂ ಬಿಡುತ್ತಿದ್ದ ಬಾಣಜಾಲಗಳು ಕ್ರೌಂಚಪಕ್ಷಿಯ ಪುಚ್ಚದಂತೆ ಎಣ್ಣೆಗೆಂಪಾಗಿಯೂ, ರೌದ್ರವಾಗಿಯೂ, ಭಯಂಕರವಾಗಿಯೂ ಕಾಣುತ್ತಿದ್ದವು. ಅವರಿಬ್ಬರು ಪ್ರಯೋಗಿಸುತ್ತಿದ್ದ ಸಹಸ್ರಾರು ಶರಗಳಿಂದಾಗಿ ಅಲ್ಲಿದ್ದವರಿಗೆ ಸೂರ್ಯನ ಪ್ರಭೆಯಾಗಲೀ, ಆಕಾಶವಾಗಲೀ, ದಿಕ್ಕು-ಉಪದಿಕ್ಕುಗಳಾಗಲೀ ತಿಳಿಯುತ್ತಿರಲಿಲ್ಲ. ಮಧ್ಯಾಹ್ನದಲ್ಲಿ ಉರಿಯುತ್ತಿದ್ದ ಭಾಸ್ಕರನ ಮಹಾಪ್ರಭೆಯೆಲ್ಲವೂ ಕರ್ಣ-ಮಾಧವರ ಶರೌಘಗಳಿಂದ ಕುಂದಿಹೋಗಿತ್ತು. ಶಕುನಿ, ಕೃತವರ್ಮ, ದ್ರೌಣಿ, ಕರ್ಣ ಮತ್ತು ಕೃಪರು ಪಾಂಡವರೊಂದಿಗೆ ಯುದ್ಧಮಾಡುತ್ತಿರುವುದನ್ನು ನೋಡಿ ಕುರುಸೈನಿಕರು ಪುನಃ ಹಿಂದಿರುಗಿದರು. ಆಕ್ರಮಣ ಮಾಡುತ್ತಿದ್ದ ಅವರ ಶಬ್ಧವು – ಮಳೆಯಿಂದ ಉಕ್ಕಿಬರುತ್ತಿರುವ ಸಾಗರದಂತೆ - ತೀವ್ರವಾಗಿ ಭಯವನ್ನುಂಟುಮಾಡುತ್ತಿತ್ತು. ಮಹಾರಣದಲ್ಲಿ ಅನ್ಯೋನ್ಯರನ್ನು ನೋಡಿ ಹರ್ಷ-ಉತ್ಸಾಹಗಳಿಂದ ಪರಸ್ಪರರನ್ನು ಹಿಡಿದು ಆ ಸೇನೆಗಳು ಯುದ್ಧಮಾಡತೊಡಗಿದವು. ದಿವಾಕರನು ಆಕಾಶಮಧ್ಯದಲ್ಲಿ ಬರಲು ಹಿಂದೆಂದೂ ನೋಡಿರದ ಮತ್ತು ಕೇಳಿರದ ರೀತಿಯ ಯುದ್ಧವು ಪ್ರಾರಂಭವಾಯಿತು.
ಜಲಪ್ರವಾಹವು ವೇಗವಾಗಿ ಹರಿದು ಸಾಗರವನ್ನು ಸೇರುವಂತೆ ರಣದಲ್ಲಿ ಒಂದು ಸೇನಾಸಾಗರವು ಇನ್ನೊಂದು ಸೇನಾಸಾಗರವನ್ನು ಸೇರಿ ಯುದ್ಧದಲ್ಲಿ ತೊಡಗಿತು. ಭೋರ್ಗರೆಯುವ ಮಹಾಸಾಗರಗಳಂತೆ ಪರಸ್ಪರರ ಮೇಲೆ ಪ್ರಯೋಗಿಸುತ್ತಿದ್ದ ಬಲಪ್ರಹಾರಗಳ ಶಬ್ಢವು ಘೋರವಾಗಿ ಕೇಳಿಸುತ್ತಿತ್ತು. ನದಿಗಳ ಸಂಗಮದಲ್ಲಿ ಹೇಗೋ ಹಾಗೆ ವೇಗವತ್ತಾಗಿ ಪರಸ್ಪರರನ್ನು ಸೇರಿದ ಆ ಸೇನೆಗಳು ಒಂದೇ ಸೇನಾಸಮೂಹವೋ ಎನ್ನುವಂತೆ ತೋರುತ್ತಿದ್ದವು. ಮಹಾಯಶಸ್ಸನ್ನು ಬಯಸುತ್ತಿದ್ದ ಆ ಕುರು-ಪಾಂಡವರ ನಡುವೆ ಘೋರರೂಪದ ಯುದ್ಧವು ನಡೆಯಿತು. ಹೆಸರುಗಳನ್ನು ಹೇಳಿಕೊಂಡು ಗರ್ಜಿಸುತ್ತಿದ್ದ ಕುರುಗಳ ವಿವಿಧ ಸ್ವರಗಳು ಅವಿಚ್ಛನ್ನವಾಗಿ ಕೇಳಿಬರುತ್ತಿದ್ದವು. ರಣದಲ್ಲಿ ಯಾರ ತಂದೆ ಅಥವಾ ತಾಯಿಯಲ್ಲಿ ಯಾವುದಾದರೂ ದೋಷವಿದ್ದಿದ್ದರೆ ಅಥವಾ ಕರ್ಮ-ಶೀಲಗಳಲ್ಲಿ ದೋಷವಿದ್ದಿದ್ದರೆ ಯುದ್ಧದಲ್ಲಿ ಅವುಗಳೇ ಕೇಳಿಬರುತ್ತಿದ್ದವು. ಆಗ ಮಹಾರಥ ಪಾಂಡವರು ಮತ್ತು ಕೌರವರು ತೀಕ್ಷ್ಣ ಸಾಯಕಗಳಿಂದ ಪರಸ್ಪರರನ್ನು ಪ್ರಹರಿಸುತ್ತಾ ಕ್ಷತ-ವಿಕ್ಷತಗೊಳಿಸಿದರು.
ಪರಸ್ಪರರನ್ನು ವಧಿಸಲು ಬಯಸಿದ ಆ ಕ್ಷತ್ರಿಯರು ಸಮರದಲ್ಲಿ ಪರಸ್ಪರರನ್ನು ದ್ವೇಷಿಸುತ್ತಾ ಅನ್ಯೋನ್ಯರನ್ನು ಸಂಹರಿಸತೊಡಗಿದರು. ಎಲ್ಲೆಡೆಯಲ್ಲಿಯೂ ರಥಸಮೂಹಗಳು, ಅಶ್ವಸಮೂಹಗಳು, ಪದಾತಿಸಮೂಹಗಳು ಮತ್ತು ಗಜಸಮೂಹಗಳು ಪರಸ್ಪರರೊಂದಿಗೆ ಕಾದಾಡುತ್ತಿದ್ದವು. ಅತ್ಯಂತ ದಾರುಣವಾಗಿದ್ದ ಆ ಸಂಗ್ರಾಮದಲ್ಲಿ ಗದೆಗಳು, ಪರಿಘಗಳು, ಕಣಪಗಳು, ಪ್ರಾಸ, ಭಿಂಡಿಪಾಲ, ಭುಶುಂಡಿಗಳು ಎಲ್ಲಕಡೆ ಬೀಳುತ್ತಿರುವುದು ಕಾಣುತ್ತಿತ್ತು. ಮಿಡತೆಗಳೋಪಾದಿಯಲ್ಲಿ ಎಲ್ಲಕಡೆ ಶರವೃಷ್ಟಿಗಳಾಗುತ್ತಿದ್ದವು. ಸಮರದಲ್ಲಿ ಆನೆಗಳು ಆನೆಗಳನ್ನು, ಕುದುರೆಗಳು ಕುದುರೆಗಳನ್ನು, ರಥಿಗಳು ರಥಿಗಳನ್ನು, ಪದಾತಿಗಳು ಪದಾತಿಸಂಘಗಳನ್ನು, ಕುದುರೆಗಳು ಕುದುರೆಸಂಘಗಳನ್ನು ಎದುರಿಸಿ ಪರಸ್ಪರರನ್ನು ವಧಿಸುತ್ತಿದ್ದವು. ಪದಾತಿಗಳು ಆನೆ-ರಥಗಳನ್ನೂ, ಶೀಘ್ರವಾಗಿ ಚಲಿಸುತ್ತಿದ್ದ ಆನೆಗಳು ಆನೆ-ರಥ-ಕುದುರೆಗಳನ್ನೂ ಮರ್ದನಮಾಡುತ್ತಿದ್ದವು. ಶೂರರು ಬೀಳುತ್ತಿರುವುದರಿಂದ ಮತ್ತು ಪರಸ್ಪರರನ್ನು ಕೂಗಿ ಕರೆಯುವುದರಿಂದ ಆ ರಣಾಂಗಣವು ಪಶುಗಳ ವಧ್ಯಸ್ಥಾನದಂತೆ ಬಹುಘೋರವಾಗಿ ಕಾಣುತ್ತಿತ್ತು. ರಕ್ತದಿಂದ ವ್ಯಾಪ್ತವಾಗಿದ್ದ ಆ ರಣಭೂಮಿಯು ವರ್ಷಾಕಾಲದ ಕೆಂಪುಬಣ್ಣದ ಶಕ್ರಗೋಪಗಣಗಳಿಂದ ವ್ಯಾಪ್ತವಾದ ಭೂಮಿಯಂತೆ ಹೊಳೆಯುತ್ತಿತ್ತು. ಶ್ಯಾಮಲವರ್ಣದ ಯುವತಿಯೊಬ್ಬಳು ಕುಂಕುಮದ ಹೂವಿನ ಬಣ್ಣದಿಂದ ರಂಜಿತವಾದ ಬಿಳಿಯ ವಸ್ತ್ರವನ್ನುಟ್ಟಿರುವಂತೆ ರಣರಂಗವು ಪ್ರಕಾಶಿಸುತ್ತಿತ್ತು. ಮಾಂಸ-ರಕ್ತಗಳಿಂದ ಚಿತ್ರಿತವಾದ ಸುವರ್ಣಕುಂಬದಂತೆ ತೋರುತ್ತಿತ್ತು. ಆ ರಣಭೂಮಿಯಲ್ಲಿ ಒಡೆದುಹೋಗಿದ್ದ ಶಿರಸ್ಸುಗಳೂ, ತೊಡೆಗಳೂ, ಬಾಹುಗಳೂ, ಕುಂಡಲಗಳೂ, ಅಂಗದ-ಕೇಯೂರಗಳು, ಒಡವೆ-ವಸ್ತ್ರಗಳೂ, ಹಾರಗಳೂ, ಧನ್ವಿಗಳ ಶರೀರಗಳೂ, ಕವಚಗಳೂ, ಪತಾಕೆಗಳೂ ರಾಶಿ ರಾಶಿಯಾಗಿ ಬಿದ್ದಿದ್ದವು. ಆನೆಗಳು ಆನೆಗಳನ್ನು ಆಕ್ರಮಣಿಸಿ ದಂತದ ತುದಿಗಳಿಂದ ಇರಿಯುತ್ತಿದ್ದವು. ದಂತಗಳ ಆಘಾತಕ್ಕೊಳಗಾಗಿ ಆನೆಗಳ ಅಂಗಾಂಗಗಳಿಂದ ರಕ್ತವು ಸೋರಿ ತೋಯಿಸುತ್ತಿರಲು ಅವುಗಳು ಗೈರಿಕಾದ ಧಾತುಗಳಿಂದ ಕೂಡಿದ ಚಿಲುಮೆಗಳನ್ನುಳ್ಳ ಪರ್ವತಗಳಂತೆ ತೋರುತ್ತಿದ್ದವು. ಮಾವುಟಗರಿಂದ ಪ್ರಹರಿಸಲ್ಪಟ್ಟ ತೋಮರಗಳನ್ನು ಅನೇಕ ಆನೆಗಳು ಸೊಂಡಿಲುಗಳಲ್ಲಿ ಹಿಡಿದು ಅತ್ತಿತ್ತ ಸಂಚರಿಸುತ್ತಿದ್ದವು. ಇನ್ನು ಇತರ ಆನೆಗಳು ಅವುಗಳನ್ನು ಮುರಿದುಹಾಕುತ್ತಿದ್ದವು. ನಾರಾಚಗಳಿಂದ ಕವಚಗಳನ್ನು ಕಳೆದುಕೊಂಡಿದ್ದ ಉತ್ತಮ ಆನೆಗಳು ಹೇಮಂತಋತುವಿನಲ್ಲಿ ಮೋಡಗಳಿಲ್ಲದ ಪರ್ವತಗಳಂತೆ ಪ್ರಕಾಶಿಸುತ್ತಿದ್ದವು. ಕನಕಪುಂಖಗಳುಳ್ಳ ಶರಗಳಿಂದ ಚುಚ್ಚಲ್ಪಟ್ಟ ಉತ್ತಮ ಆನೆಗಳು ಕೊಳ್ಳಿಗಳ ಬೆಂಕಿಯಿಂದ ಪ್ರದೀಪ್ತವಾದ ಪರ್ವತಗಳಂತೆ ತೋರುತ್ತಿದ್ದವು. ಇನ್ನು ಕೆಲವು ಆನೆಗಳು ಶತ್ರುಪಕ್ಷದ ಆನೆಗಳಿಂದ ಗಾಯಗೊಂಡು ರೆಕ್ಕೆಗಳುಳ್ಳ ಪರ್ವತಗಳಂತೆ ರಣರಂಗದಲ್ಲಿ ಬಿದ್ದಿದ್ದವು. ಇತರ ಆನೆಗಳು ಶರಪ್ರಹಾರಗಳಿಂದ ಆರ್ತರಾಗಿ, ಗಾಯಗಳಿಂದ ಪೀಡಿತರಾಗಿ ಓಡಿಹೋಗಿ ದಂತಮಧ್ಯವನ್ನೂ ಕುಂಬಸ್ಥಳಗಳನ್ನೂ ಒರೆಗೊಟ್ಟು ಭೂಮಿಯ ಮೇಲೆ ಬೀಳುತ್ತಿದ್ದವು. ಇನ್ನೂ ಇತರ ಆನೆಗಳು ಸಿಂಹಗಳಂತೆ ಗರ್ಜಿಸುತ್ತಾ ಭೈರವವಾಗಿ ಕೂಗನ್ನಿಡುತ್ತಿದ್ದವು. ಅನೇಕ ಆನೆಗಳು ಅಲ್ಲಲ್ಲಿ ಓಡಿ ಸುತ್ತುವರೆಯುತ್ತಿದ್ದರು. ಇತರ ಆನೆಗಳು ನರಳುತ್ತಿದ್ದವು.
ಸ್ವರ್ಣಾಭರಣಗಳಿಂದ ವಿಭೂಷಿತವಾಗಿದ್ದ ಕುದುರೆಗಳು ಬಾಣಗಳಿಂದ ವಧಿಸಲ್ಪಟ್ಟು ಬೀಳುತ್ತಿದ್ದವು. ಕೆಲವು ಹತ್ತು ದಿಕ್ಕುಗಳಲ್ಲಿಯೂ ಮಂಕಾಗಿ ತಿರುಗುತ್ತಿದ್ದವು. ಇತರ ಕುದುರೆಗಳು ನೆಲದಮೇಲೆ ಹೊರಳಾಡುತ್ತಾ ಕುಂದಿಹೋಗುತ್ತಿದ್ದವು. ಕೆಲವು ಶರ-ತೋಮರಗಳಿಂದ ಹೊಡೆಯಲ್ಪಟ್ಟು ಬಹುವಿಧದ ಭಾವಗಳೊಂದಿಗೆ ಸುತ್ತಾಡುತ್ತಿದ್ದವು. ಹತರಾಗಿ ನೆಲದ ಮೇಲೆ ಬಿದ್ದಿದ್ದ ಮನುಷ್ಯರು ಅನ್ಯ ಬಾಂಧವರನ್ನೋ ತಂದೆಯನ್ನೋ ಅಜ್ಜನನ್ನೋ ನೋಡಿ ಕೂಗಿ ಕರೆಯುತ್ತಿದ್ದರು. ಓಡಿಹೋಗುತ್ತಿರುವ ಶತ್ರುಗಳನ್ನೂ ಇತರರನ್ನೂ ನೋಡಿದವರು ಪರಸ್ಪರರ ಗೋತ್ರ-ನಾಮಧೇಯಗಳನ್ನು ಹೇಳಿಕೊಳ್ಳುತ್ತಿದ್ದರು. ಕತ್ತರಿಸಲ್ಪಟ್ಟ ಕನಕಭೂಷಣ ಭುಜಗಳು ಅಲ್ಲಲ್ಲಿಯೇ ಸುತ್ತಿಕೊಳ್ಳುತ್ತಿದ್ದವು, ಕುಣಿಯುತ್ತಿದ್ದವು, ಹಾರುತ್ತಿದ್ದವು ಮತ್ತು ಪುನಃ ಕೆಳಕ್ಕೆ ಬೀಳುತ್ತಿದ್ದವು. ನಡುಗುತ್ತಿದ್ದು ಸಹಸ್ರಾರು ತೋಳುಗಳು ಆ ರಣಾಂಗಣದಲ್ಲಿ ತುಂಬಿಹೋಗಿದ್ದವು. ಕೆಲವು ಭುಜಗಳು ಐದು ಹೆಡೆಗಳ ಸರ್ಪಗಳಂತೆ ಮಹಾವೇಗದಿಂದ ಮುಂದೆ ಹೋಗುತ್ತಿದ್ದವು. ಸರ್ಪ ಶರೀರಗಳಂತಿದ್ದ ಚಂದನ ಚರ್ಚಿತ ರಕ್ತದಿಂದ ನೆನೆದುಹೋಗಿದ್ದ ತೋಳುಗಳು ಸುವರ್ಣಮಯ ಧ್ವಜಗಳಂತೆ ಕಾಣುತ್ತಿದ್ದವು. ಎಲ್ಲ ದಿಕ್ಕುಗಳಲ್ಲಿ ಈ ರೀತಿ ಘೋರ ಸಂಕುಲ ಯುದ್ಧವು ನಡೆಯುತ್ತಿರಲು ಯಾರು ಯಾರೆಂದು ತಿಳಿಯಲಾರದೇ ಕೌರವರು ಪರಸ್ಪರರನ್ನೇ ಕೊಲ್ಲುತ್ತಿದ್ದರು. ಶಸ್ತ್ರಗಳು ಬೀಳುತ್ತಿದ್ದ ಆ ಸಂಕುಲಯುದ್ಧದಿಂದ ರಣಭೂಮಿಯ ಮೇಲೆದ್ದ ಧೂಳಿನಿಂದಾಗಿ ಕತ್ತಲೆಯು ಆವರಿಸಲು ಕೌರವರ್ಯಾರು ಶತ್ರುಗಳ್ಯಾರು ಎನ್ನುವುದು ತಿಳಿಯುತ್ತಲೇ ಇರಲಿಲ್ಲ.
ಘೋರರೂಪೀ ಭಯಾನಕ ಆ ಯುದ್ಧವು ಹಾಗೆ ನಡೆಯುತ್ತಿರಲು ರಕ್ತವೇ ನೀರಾಗಿ ಹರಿಯುತ್ತಿದ್ದ ಮಹಾನದಿಗಳು ಹುಟ್ಟಿ ಹರಿಯತೊಡಗಿದವು. ತಲೆಗಳೇ ಕಲ್ಲುಬಂಡೆಗಳಾಗಿದ್ದವು, ತಲೆಗೂದಲುಗಳೇ ಪಾಚೀ ಹುಲ್ಲುಗಳಾಗಿದ್ದವು, ಎಲುಬುಗಳೇ ಮೀನಿನಂತಿದ್ದವು, ಮತ್ತು ಧನುಸ್ಸು-ಬಾಣಗಳೇ ಅದರ ಉತ್ತಮ ದೋಣಿಗಳಂತಿದ್ದವು. ಯಮರಾಷ್ಟ್ರವನ್ನು ವರ್ಧಿಸುವ ಆ ನದಿಗಳು ಸುದಾರುಣವಾದ ರಕ್ತವೇ ನೀರಾಗಿ ಮಾಂಸ-ಮಜ್ಜೆಗಳೇ ಕೆಸರಾಗಿ ಹರಿಯುತ್ತಿದ್ದವು. ಯಮಸಾದನಕ್ಕೆ ಕೊಂಡೊಯ್ಯುತ್ತಿದ್ದ ಆ ಘೋರರೂಪೀ ನದಿಗಳು ಅದರಲ್ಲಿ ಬಿದ್ದವರನ್ನು ಮುಳುಗಿಸಿಬಿಡುತ್ತಿದ್ದವು ಮತ್ತು ಕ್ಷತ್ರಿಯರಲ್ಲಿ ಭಯವನ್ನುಂಟುಮಾಡುತ್ತಿದ್ದವು. ಅಲ್ಲಲ್ಲಿ ಮಾಂಸಾಶೀ ಪ್ರಾಣಿಗಳ ಕೂಗುವಿಕೆಯಿಂದ ಪ್ರೇತರಾಜನ ಪಟ್ಟಣಕ್ಕೆ ಸಮಾನವಾಗಿದ್ದು ಘೋರವಾಗಿ ಕಾಣುತ್ತಿತ್ತು.
ಸುತ್ತಲೂ ಅಗಣಿತ ಮುಂಡಗಳು ಮೇಲೆದ್ದು ಕುಣಿಯುತ್ತಿದ್ದವು. ಅವುಗಳೊಂದಿಗೆ ಮಾಂಸ-ರಕ್ತಗಳಿಂದ ಸಂತೃಪ್ತರಾದ ಭೂತಗಣಗಳೂ ಕುಣಿಯುತ್ತಿದ್ದವು. ರಕ್ತವನ್ನು ಕುಡಿದು ವಸೆಯನ್ನು ತಿಂದು, ಮೇದ-ಮಜ್ಜೆ-ವಸೆ-ಮಾಂಸಗಳಿಂದ ತ್ರುಪ್ತರಾಗಿದ್ದ ಮದಿಸಿದ ಕಾಗೆ ಹದ್ದುಗಳೂ ಸುತ್ತಲೂ ಹಾರಾಡುತ್ತಿರುವುದು ಕಾಣುತ್ತಿತ್ತು. ಸಮರದಲ್ಲಿ ಶೂರರು ತೊರೆಯಲು ಅಸಾಧ್ಯವನ್ನು ಭಯವನ್ನು ಬಿಟ್ಟು ಯೋಧವ್ರತನಿರತರಾಗಿ ಯುದ್ಧಕರ್ಮವನ್ನು ಭಯವಿಲ್ಲದೇ ನಿರ್ವಹಿಸುತ್ತಿದ್ದರು. ಶರ-ಶಕ್ತಿಗಳ ಸಮಾಕೀರ್ಣವಾಗಿದ್ದ, ಮಾಂಸಾಶಿ ಪ್ರಾಣಿಗಳಿಂದ ತುಂಬಿಹೋಗಿದ್ದ ಆ ರಣಭೂಮಿಯಲ್ಲಿ ಶೂರರು ತಮ್ಮ ಪೌರುಷಗಳನ್ನು ವಿಖ್ಯಾತಗೊಳಿಸುತ್ತಾ ಸಂಚರಿಸುತ್ತಿದ್ದರು. ಅನ್ಯೋನ್ಯರ ನಾಮಗೋತ್ರಗಳನ್ನು ಹೇಳುತ್ತಾ ರಣದಲ್ಲಿ ಪಿತೃಗಳ ಹೆಸರನ್ನೂ ಗೋತ್ರಗಳನ್ನೂ ಹೇಳಿಕೊಳ್ಳುತ್ತಿದ್ದರು. ಹೀಗೆ ಹೇಳಿಕೊಳ್ಳುತ್ತಾ ಅಲ್ಲಿ ಅನೇಕ ಯೋಧರು ಶಕ್ತಿ-ತೋಮರ-ಪಟ್ಟಿಶಗಳಿಂದ ಪರಸ್ಪರರನ್ನು ಸಂಹರಿಸುತ್ತಿದ್ದರು. ಹಾಗೆ ಸುದಾರುಣವಾದ ಘೋರರೂಪೀ ಯುದ್ಧವು ನಡೆಯುತ್ತಿರಲು ಕೌರವೀ ಸೇನೆಯು ಸಾಗರದಲ್ಲಿ ಒಡೆದು ಹೋದ ನೌಕೆಯಂತೆ ವ್ಯಾಕುಲಗೊಂಡಿತು.
ಅರ್ಜುನ-ಸಂಶಪ್ತಕರ ಯುದ್ಧ
ಕ್ಷತ್ರಿಯರು ಮುಳುಗಿಹೋಗಿದ್ದ ಆ ಯುದ್ಧವು ನಡೆಯುತ್ತಿರಲು ಯುದ್ಧದಲ್ಲಿ ಗಾಂಡೀವದ ಮಹಾಘೋಷವು ಕೇಳಿಬಂದಿತು. ಪಾಂಡವ ಅರ್ಜುನನು ಸಂಶಪ್ತಕರು, ಕೋಸಲರು ಮತ್ತು ನಾರಾಯಣ ಸೇನೆಗಳೊಂದಿಗೆ ಕದನವಾಡುತ್ತಿದ್ದನು. ಜಯವನ್ನು ಬಯಸುತ್ತಿದ್ದ ಸಂಶಪ್ತಕರಾದರೋ ಕ್ರುದ್ಧರಾಗಿ ಪಾರ್ಥನ ಮೇಲೆ ಎಲ್ಲಕಡೆಗಳಿಂದ ಶರವೃಷ್ಟಿಯನ್ನು ಸುರಿಸುತ್ತಿದ್ದರು. ಆ ಶರವೃಷ್ಟಿಯನ್ನು ಸಹಿಸಿಕೊಂಡು ಪಾರ್ಥನು ಸಂಹರಿಸುತ್ತಾ ಸೇನೆಗಳ ಒಳಹೊಕ್ಕನು. ಶಿಲಾಶಿತ ಕಂಕಪತ್ರಗಳಿಂದ ರಥಸೇನೆಯನ್ನು ನಿಗ್ರಹಿಸಿ ಪಾರ್ಥನು ರಣದಲ್ಲಿ ಸುಶರ್ಮನ ಬಳಿಸಾರಿದನು. ಸುಶರ್ಮನು ಅರ್ಜುನನ ಮೇಲೆ ಶರವರ್ಷಗಳನ್ನು ಸುರಿಸಿದನು. ಹಾಗೆಯೇ ಸಂಶಪ್ತಕರೂ ಕೂಡ ಪಾರ್ಥನನ್ನು ಸಮರದಲ್ಲಿ ಎದುರಿಸಿದರು. ಸುಶರ್ಮನಾದರೋ ಆಗ ಪಾರ್ಥನನ್ನು ಒಂಭತ್ತು ಆಶುಗಗಳಿಂದ ಹೊಡೆದು ಮುರು ಬಾಣಗಳಿಂದ ಜನಾರ್ದನನ ಬಲಭುಜವನ್ನು ಪ್ರಹರಿಸಿದನು. ಅನಂತರ ಇನ್ನೊಂದು ಭಲ್ಲದಿಂದ ಪಾರ್ಥನ ಧ್ವಜಕ್ಕೆ ಹೊಡೆದನು. ವಿಶ್ವಕರ್ಮನಿಂದಲೇ ಧ್ವಜದಲ್ಲಿ ನಿರ್ಮಿತನಾಗಿದ್ದ ವಾನರವರ ಹನುಮಂತನು ಎಲ್ಲರನ್ನೂ ಭಯಗೊಳಿಸುತ್ತಾ ಜೋರಾಗಿ ಗರ್ಜಿಸಿದನು. ಕಪಿಯ ಆ ಗರ್ಜನೆಯನ್ನು ಕೇಳಿ ಕೌರವ ಸೇನೆಯು ತುಂಬಾ ಭಯಗೊಂದು ತತ್ತರಿಸಿ ಮೂರ್ಛೆಗೊಂದಿತು. ನಿಶ್ಚೇಷ್ಟವಾಗಿ ನಿಂತಿದ್ದ ಕೌರವ ಸೇನೆಯು ನಾನಾಪುಷ್ಪಗಳಿಂದ ಸಮೃದ್ಧವಾಗಿದ್ದ ಚೈತ್ರರಥ ವನದಂತೆಯೇ ಶೋಭಿಸಿತು. ಪುನಃ ಎಚ್ಚೆತ್ತ ಕೌರವ ಯೋಧರು ಮೋಡಗಳು ಪರ್ವತವನ್ನು ಹೇಗೋ ಹಾಗೆ ಅರ್ಜುನನನ್ನು ಬಾಣಗಳಿಂದ ಅಭಿಷೇಚಿಸಿದರು. ಎಲ್ಲರೂ ಪಾಂಡವನನ್ನು ಸುತ್ತುವರೆದರು. ಅವರು ಅರ್ಜುನನ ಕುದುರೆಗಳನ್ನೂ, ರಥಚಕ್ರಗಳನ್ನೂ, ರಥದ ಈಷಾದಂಡವನ್ನೂ ಹಿಡಿದು ಬಲವನ್ನುಪಯೋಗಿಸಿ ತಡೆದರು ಮತ್ತು ಸಿಂಹನಾದಗೈದರು.
ಕೆಲವರು ಕೇಶವನ ಮಹಾಭುಜಗಳೆರದನ್ನೂ ಹಿಡಿದು ಎಳೆದಾಡುತ್ತಿದ್ದರು. ಅನ್ಯರು ರಥದಲ್ಲಿದ್ದ ಪಾರ್ಥನನ್ನು ಸಂತೋಷದಿಂದ ಹಿಡಿದುಕೊಂಡರು. ಆಗ ಕೇಶವನಾದರೋ ದುಷ್ಟ ಆನೆಯು ಮಾವಟಿಗನನ್ನು ಕೆಳಕ್ಕೆ ಹಾಕಿಬಿಡುವಂತೆ ತನ್ನೆರಡು ತೋಳುಗಳನ್ನೂ ಬಲವಾಗಿ ಒದರುತ್ತಾ ಅವರೆಲ್ಲರನ್ನೂ ಕೆಳಕ್ಕೆ ಬೀಳಿಸಿದನು. ಆಗ ರಣದಲ್ಲಿ ಆ ಮಹಾರಥರು ಸುತ್ತುವರೆದು ರಥವನ್ನು ಹಿಡಿದುಕೊಂಡಿದುದನ್ನೂ ಕೇಶವನನ್ನು ಆಕ್ರಮಣಿಸಿದುದನ್ನೂ ನೋಡಿ ಕ್ರುದ್ಧನಾದ ಪಾರ್ಥನು ಅನೇಕ ರಥಾರೂಢರನ್ನೂ ಪದಾತಿಗಳನ್ನೂ ಸಂಹರಿಸಿ ಕೆಳಗುರುಳಿಸಿದನು. ಅನತಿದೂರದಲ್ಲಿಯೇ ಇದ್ದ ಯೋಧರನ್ನು ಹತ್ತಿರದಿಂದಲೇ ಪ್ರಹರಿಸಬಹುದಾದ ಬಾಣಗಳಿಂದ ಅಚ್ಛಾದಿಸುತ್ತಾ ಸಮರದಲ್ಲಿ ಅರ್ಜುನನು ಕೇಶವನಿಗೆ ಇಂತೆಂದನು: “ಕೃಷ್ಣ! ಈ ಸಂಶಪ್ತಕಗಣಗಳನ್ನು ನೋಡು! ನನ್ನಿಂದ ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಲ್ಪಡುತ್ತಿದ್ದರೂ ಇಂತಹ ದಾರುಣ ಕರ್ಮವನ್ನೆಸಗುತ್ತಿದ್ದಾರೆ! ಈ ಘೋರ ರಥಬಂಧವನ್ನು ನಾನಲ್ಲದೇ ಪೃಥ್ವಿಯ ಬೇರಾವ ಪುರುಷನಿಗೂ ಸಹಿಸಿಕೊಳ್ಳಲಾಗುತ್ತಿರಲಿಲ್ಲ.”
ಹೀಗೆ ಹೇಳಿ ಬೀಭತ್ಸುವು ದೇವದತ್ತಶಂಖವನ್ನೂದಿದನು. ಅದಕ್ಕೆ ಪೂರಕವಾಗಿ ಕೃಷ್ಣನೂ ಕೂಡ ಪಾಂಚಜನ್ಯವನ್ನು ಮೊಳಗಿಸಿದನು. ಆ ಶಂಖಸ್ವನವನ್ನು ಕೇಳಿ ಸಂಶಪ್ತಕ ವರೂಥಿನಿಯು ಅತ್ಯಂತ ಭಯಗೊಂಡು ಓಡತೊಡಗಿತು. ಆಗ ಪರವೀರಹ ಪಾಂಡವನು ಪುನಃ ನಾಗಾಸ್ತ್ರವನ್ನು ಪ್ರಯೋಗಿಸುತ್ತಾ ಅವರ ಪಾದಗಳನ್ನು ಬಂಧಿಸಿಬಿಟ್ಟನು. ರಣದಲ್ಲಿ ಪಾರ್ಥನು ಶತ್ರುಗಳ ಪದಬಂಧಗೈದನು. ಪಾಂಡವನ ಪದಬಂಧದಿಂದ ಕಟ್ಟಲ್ಪಟ್ಟ ಅವರು ಲೋಹದ ಮೂರ್ತಿಗಳೋಪಾದಿಯಲ್ಲಿ ನಿಶ್ಚೇಷ್ಟರಾಗಿ ನಿಂತುಬಿಟ್ಟರು. ನಿಶ್ಚೇಷ್ಟರಾಗಿರುವ ಯೋಧರನ್ನು ಪಾಂಡುನಂದನನು ಹಿಂದೆ ಇಂದ್ರನು ದೈತ್ಯ ತಾರಕನ ವಧೆಯ ಸಮರದಲ್ಲಿ ಹೇಗೋ ಹಾಗೆ ವಧಿಸಿದನು. ಸಮರದಲ್ಲಿ ವಧಿಸಲ್ಪಡುತ್ತಿರುವ ಅವರು ಆ ಉತ್ತಮ ರಥವನ್ನು ಬಿಟ್ಟು ತಮ್ಮಲ್ಲಿದ್ದ ಸರ್ವ ಆಯುಧಗಳನ್ನು ಅರ್ಜುನನ ಮೇಲೆ ಪ್ರಯೋಗಿಸ ತೊಡಗಿದರು. ಸೇನೆಯು ಬಂಧಿಸಲ್ಪಟ್ಟಿರುವುದನ್ನು ನೋಡಿದ ಸುಶರ್ಮನು ತ್ವರೆಮಾಡಿ ಸೌಪರ್ಣಾಸ್ತ್ರವನ್ನು ಪ್ರಯೋಗಿಸಿದನು. ಆಗ ಗರುಡಗಳು ಮೇಲೆರಗಿ ಭುಜಂಗಗಳನ್ನು ಭಕ್ಷಿಸತೊಡಗಿದವು. ಆ ಗರುಡರನ್ನು ಕಂಡ ನಾಗಗಳು ಪಲಾಯನಗೈದವು. ಮೋಡಗಳಿಂದ ವಿಮುಕ್ತನಾಗಿ ಭಾಸ್ಕರನು ಪ್ರಜೆಗಳನ್ನು ತಾಪಗೊಳಿಸುವಂತೆ ಅವನ ಸೇನೆಯು ಪದಬಂಧದಿಂದ ವಿಮುಕ್ತವಾಯಿತು. ವಿಮುಕ್ತರಾದ ಆ ಯೋಧರು ಫಲ್ಗುನನ ರಥದ ಮೇಲೆ ಬಾಣಸಂಘಗಳನ್ನೂ ಶಸ್ತ್ರಸಂಘಗಳನ್ನೂ ಪ್ರಯೋಗಿಸಿದರು. ಆ ಮಹಾಸ್ತ್ರಮಯೀ ವೃಷ್ಟಿಯನ್ನು ಶರವೃಷ್ಟಿಗಳಿಂದ ನಿರಸನಗೊಳಿಸಿ ಅರ್ಜುನನು ಯೋಧರನ್ನು ಸಂಹರಿಸತೊಡಗಿದನು. ಆಗ ಸುಶರ್ಮನು ಆನತಪರ್ವ ಬಾಣದಿಂದ ಅರ್ಜುನನ ಹೃದಯವನ್ನು ಪ್ರಹರಿಸಿ ಅನ್ಯ ಮೂರು ಶರಗಳಿಂದ ಅವನನ್ನು ಹೊಡೆದನು. ಗಾಢವಾಗಿ ಪಹರಿಸಲ್ಪಟ್ಟ ಅರ್ಜುನನು ವ್ಯಥಿತನಾಗಿ ರಥದಲ್ಲಿಯೇ ಕುಸಿದು ಕುಳಿತುಕೊಂಡನು.
ಅನಂತರ ಪುನಃ ಎಚ್ಚೆತ್ತ ಕೃಷ್ಣಸಾರಥಿ ಶ್ವೇತಾಶ್ವನು ತ್ವರೆಮಾಡಿ ಐಂದ್ರಾಸ್ತ್ರವನ್ನು ಪ್ರಕಟಿಸಿದನು. ಆಗ ಸಹಸ್ರಾರು ಬಾಣಗಳು ಪ್ರಾದುರ್ಭವಿಸಿದವು. ಸರ್ವದಿಕ್ಕುಗಳಲ್ಲಿಯೂ ಪ್ರಕಟವಾದ ಶಸ್ತ್ರಗಳು ನೂರಾರು ಸಹಸ್ರಾರು ಆನೆಗಳನ್ನೂ, ಕುದುರೆಗಳನ್ನೂ ರಥಗಳನ್ನೂ ನಾಶಗೊಳಿಸಿದವು. ಸೈನ್ಯದಲ್ಲಿ ವಿಪುಲ ವಧೆಯು ನಡೆಯುತ್ತಿರಲು ಸಂಶಪ್ತಕಗಣ ಮತ್ತು ಗೋಪಾಲರನ್ನು ಅತ್ಯಂತ ಭಯವು ಸಮಾವೇಶಗೊಂಡಿತು. ಅಲ್ಲಿ ಅರ್ಜುನನೊಡನೆ ಪ್ರತಿಯಾಗಿ ಯುದ್ಧಮಾಡುವ ಯಾವ ಪುರುಷನೂ ಇರಲಿಲ್ಲ. ಅಲ್ಲಿ ವೀರರು ನೋಡುತ್ತಿದ್ದಂತೆಯೇ ಅವನು ಮಹಾಸೇನೆಯನ್ನು ಸಂಹರಿಸಿದನು. ರಣದಲ್ಲಿ ಹತ್ತುಸಾವಿರ ಯೋಧರನ್ನು ಸಂಹರಿಸಿ ಪಾಂಡುಸುತನು ಧೂಮವಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತ ಪ್ರಕಾಶಿಸಿದನು. ಆಗ ಅಲ್ಲಿ ಹದಿನಾಲ್ಕು ಸಾವಿರ ಪದಾತಿಗಳು, ಹತ್ತುಸಾವಿರ ರಥಿಗಳು ಮತ್ತು ಮೂರುಸಾವಿರ ಆನೆಗಳು ಮಾತ್ರ ಅಳಿದುಳಿದಿದ್ದವು. ಅನಂತರ ಸಾಯಬೇಕು ಅಥವ ಜಯಗಳಿಸಿ ಹಿಂದಿರುಗಬೇಕೆಂದು ನಿಶ್ಚಯಿಸಿ ಸಂಶಪ್ತಕರು ಪುನಃ ಧನಂಜಯನ್ನು ಸುತ್ತುವರೆದರು. ಅಲ್ಲಿ ಕೌರವರ ಮತ್ತು ಕಿರೀಟಿಯ ನಡುವೆ ಮಹಾ ಯುದ್ಧವು ನಡೆಯಿತು.
ಕೃಪ-ಶಿಖಂಡಿಯರ ಯುದ್ಧ
ಸಮುದ್ರದಲ್ಲಿ ಒಡೆದುಹೋದ ನೌಕೆಯಂತೆ ಕೌರವ ಸೈನ್ಯವು ಪಾಂಡುಪುತ್ರರ ಭದದಿಂದ ಪೀಡಿತರಾಗಿ ನಾಶಗೊಳ್ಳುತ್ತಿರುವುದನ್ನು ನೋಡಿ ಕೃತವರ್ಮ, ಕೃಪ, ದ್ರೌಣಿ, ಸೂತಪುತ್ರ, ಉಲೂಕ, ಸೌಬಲ, ಸಹೋದರರೊಡನೆ ರಾಜಾ ದುರ್ಯೋಧನ ಇವರು ಶೀಘ್ರವಾಗಿ ಮುಂದೆ ಹೋಗಿ ತಮ್ಮ ಸೈನ್ಯವನ್ನು ಉದ್ಧರಿಸಲು ಪ್ರಯತ್ನಿಸುತ್ತಿದ್ದರು. ಆಗ ಮುಹೂರ್ತಕಾಲ ಹೇಡಿಗಳಿಗೆ ಭಯವನ್ನುಂಟುಮಾಡುವ ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ ಅತೀವ ಯುದ್ಧವು ನಡೆಯಿತು. ಕೃಪನು ಪ್ರಯೋಗಿಸಿದ ಶರ್ವವರ್ಷಗಳು ಮಿಡತೆಗಳ ಗುಂಪುಗಳೋಪಾದಿಯಲ್ಲಿ ಸೃಂಜಯರನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿತು. ಆಗ ಕ್ರುದ್ಧನಾದ ಶಿಖಂಡಿಯು ತ್ವರೆಮಾಡಿ ಬಂದು ಕೃಪನ ಸುತ್ತಲೂ ಶರವರ್ಷಗಳನ್ನು ಸುರಿಸಿದನು. ಕೃಪನು ಆ ಶರವರ್ಷವನ್ನು ನಿರಸನಗೊಳಿಸಿ ಕ್ರುದ್ಧನಾಗಿ ಹತ್ತು ಶರಗಳಿಂದ ಶಿಖಂಡಿಯನ್ನು ಪ್ರಹರಿಸಿದನು. ಆಗ ಕುಪಿತನಾದ ಶಿಖಂಡಿಯು ಯುದ್ಧದಲ್ಲಿ ಕಂಕಪತ್ರಗಳಿದ್ದ ಏಳು ಜಿಹ್ಮಗ ಶರಗಳಿಂದ ಕೃಪನನ್ನು ಹೊಡೆದನು. ತೀಕ್ಷ್ಣ ಶರಗಳಿಂದ ಅತಿಯಾಗಿ ಗಾಯಗೊಂಡ ಕೃಪನು ಶಿಖಂಡಿಯನ್ನು ಅಶ್ವ-ಸೂತ-ರಥಗಳಿಂದ ವಿಹೀನನ್ನಾಗಿ ಮಾಡಿದನು. ಕುದುರೆಗಳು ವಧಿಸಲ್ಪಡಲು ಶಿಖಂಡಿಯು ರಥದಿಂದ ಕೆಳಕ್ಕೆ ಧುಮುಕಿ ಬಲವತ್ತಾದ ಖಡ್ಗ ಗುರಾಣಿಗಳನ್ನು ಹಿಡಿದು ಕೃಪನ ಬಳಿ ನುಗ್ಗಿದನು. ಸಮರದಲ್ಲಿ ಹಾಗೆ ನುಗ್ಗಿಬರುತ್ತಿದ್ದ ಶಿಖಂಡಿಯನ್ನು ಕೂಡಲೇ ಕೃಪನು ಸನ್ನತಪರ್ವ ಶರಗಳಿಂದ ಮುಚ್ಚಿಬಿಟ್ಟನು. ಅದೊಂದು ಅದ್ಭುತವಾಗಿತ್ತು. ಆಗ ರಣದಲ್ಲಿ ಶಿಖಂಡಿಯು ನಿಶ್ಚೇಷ್ಟನಾಗಿ ನಿಂತುಬಿಟ್ಟನು.
ಕೃಪನಿಂದ ಶಿಖಂಡಿಯು ಮುಚ್ಚಿಹೋದುದನ್ನು ನೋಡಿ ಧೃಷ್ಟದ್ಯುಮ್ನನು ಬೇಗನೇ ಕೃಪನಲ್ಲಿಗೆ ಆಗಮಿಸಿದನು. ಶಾರದ್ವತನ ರಥದ ಬಳಿಬರುತ್ತಿದ್ದ ಧೃಷ್ಟದ್ಯುಮ್ನನನ್ನು ಕೃತವರ್ಮನು ವೇಗದಿಂದ ಮುಂದೆಬಂದು ಅವನನ್ನು ತಡೆದನು. ಆಗ ಶಾರದ್ವತನ ರಥದ ಬಳಿಬರುತ್ತಿದ್ದ ಯುಧಿಷ್ಠಿರನನ್ನು ಅವನ ಮಗ ಮತ್ತು ಸೇನೆಗಳೊಂದಿಗೆ ದ್ರೋಣಪುತ್ರನು ತಡೆದನು. ತ್ವರೆಮಾಡಿ ಬರುತ್ತಿದ್ದ ಮಹಾರಥ ನಕುಲ-ಸಹದೇವರನ್ನು ದುರ್ಯೋಧನನು ಶರವರ್ಷಗಳಿಂದ ತಡೆದು ನಿಲ್ಲಿಸಿದನು. ವೈಕರ್ತನ ಕರ್ಣನು ಬೀಮಸೇನನನ್ನು ಕರುಷ-ಕೇಕಯ-ಸೃಂಜಯರೊಂದಿಗೆ ತಡೆದನು.
ಆಗ ಯುದ್ಧದಲ್ಲಿ ಕೃಪನು ಶಿಖಂಡಿಯನ್ನು ದಹಿಸಿಬಿಡುವನೋ ಎನ್ನುವಂತೆ ತ್ವರೆಮಾಡಿ ಬಾಣಗಳನ್ನು ಪ್ರಯೋಗಿಸುತ್ತಿದ್ದನು. ಎಲ್ಲಕಡೆಗಳಿಂದ ಕೃಪನು ಪ್ರಯೋಗಿಸುತ್ತಿದ್ದ ಹೇಮಭೂಷಿತ ಬಾಣಗಳನ್ನು ಶಿಖಂಡಿಯು ಕತ್ತಿಯನ್ನು ಪುನಃ ಪುನಃ ತಿರುಗಿಸುತ್ತಾ ಕತ್ತರಿಸಿ ಹಾಗುತ್ತಿದ್ದನು. ಆಗ ಗೌತಮನು ಪಾರ್ಷತನ ಶತಚಂದ್ರ ಗುರಾಣಿಯನ್ನು ಬೇಗನೇ ಸಾಯಕಗಳಿಂದ ಧ್ವಂಸಗೊಳಿಸಿದನು. ಆಗ ಅಲ್ಲಿದ್ದ ಜನರು ಗಟ್ಟಿಯಾಗಿ ಕೂಗಿಕೊಂಡರು. ರೋಗಿಯು ಮೃತ್ಯುಮುಖನಾಗುವಂತೆ ಕೃಪನ ವಶನಾಗಿದ್ದ ಶಿಖಂಡಿಯು ಖಡ್ಗಹಸ್ತನಾಗಿಯೇ ಅವನ ಕಡೆ ನುಗ್ಗಿ ಹೋದನು.
ಶಾರದ್ವತ ಶರಗಳಿಗೆ ಸಿಲುಕಿ ಸಂಕಟಪಡುತ್ತಿದ್ದ ಶಿಖಂಡಿಯನ್ನು ನೋಡಿ ಚಿತ್ರಕೇತುವಿನ ಮಗ ಸುಕೇತುವು ತ್ವರೆಮಾಡಿ ಅಲ್ಲಿಗೆ ಬಂದನು. ಸುಕೇತುವು ಗೌತಮನ ರಥದ ಬಳಿ ಬಂದು ಅನೇಕ ನಿಶಿತ ಶರಗಳಿಂದ ಬ್ರಾಹ್ಮಣನ ಮೇಲೆ ಎರಗಿದನು. ಕೃಪನು ಸುಕೇತುವಿನೊಡನೆ ಯುದ್ಧದಲ್ಲಿ ನಿರತನಾಗಿರುವುದನ್ನು ನೋಡಿ ಶಿಖಂಡಿಯು ಬೇಗನೇ ಅಲ್ಲಿಂದ ಹೊರಟುಹೋದನು.
ಸುಕೇತುವಾದರೋ ಗೌತಮನನ್ನು ಒಂಭತ್ತು ಶರಗಳಿಂದ ಹೊಡೆದು ಎಪ್ಪತ್ಮೂರು ಬಾಣಗಳಿಂದ ಪುನಃ ಪ್ರಹರಿಸಿದನು ಪುನಃ ಅವನು ಬಾಣಗಳಿಂದ ಯುಕ್ತವಾಗಿದ್ದ ಕೃಪನ ಧನುಸ್ಸನ್ನು ಕತ್ತರಿಸಿ, ಶರದಿಂದ ಸಾರಥಿಯ ಮರ್ಮಸ್ಥಳಗಳನ್ನು ಗಾಢವಾಗಿ ಪ್ರಹರಿಸಿದನು. ಆಗ ಕ್ರುದ್ಧನಾದ ಗೌತಮನಾದರೋ ದೃಢವಾದ ಹೊಸ ಧನುಸ್ಸನ್ನು ಹಿಡಿದು ಮೂವತ್ತು ಬಾಣಗಳಿಂದ ಸುಕೇತುವಿನ ಮರ್ಮಸ್ಥಾನಗಳಲ್ಲಿ ಪ್ರಹರಿಸಿದನು. ಸುಕೇತುವು ಸರ್ವಾಂಗಗಳಲ್ಲಿ ವಿಹ್ವಲಿತನಾಗಿ ಭೂಕಂಪದ ಸಮಯದಲ್ಲಿ ವೃಕ್ಷಗಳು ಅಳ್ಳಾಡುವಂತೆ ತನ್ನ ಉತ್ತಮ ರಥದಲ್ಲಿ ತರತರನೆ ನಡುಗಿದನು. ಹೀಗೆ ನಡುಗುತ್ತಿದ್ದ ಅವನ ಕಾಯದಿಂದ ಪ್ರಜ್ವಲಿತ ಕುಂಡಲಗಳನ್ನುಳ್ಳ ಮತ್ತು ಕಿರೀಟದಿಂದ ಶೋಭಿಸುತ್ತಿದ್ದ ಶಿರವನ್ನು ಕೃಪನು ಕ್ಷುರಪ್ರದಿಂದ ಕೆಡವಿದನು. ಗಿಡುಗವು ಕೊಂಡೊಯ್ಯುತ್ತಿದ್ದ ಮಾಂಸದತುಂಡು ಕೆಳಕ್ಕೆ ಬೀಳುವಂತೆ ಶೀಘ್ರವಾಗಿ ಸುಕೇತುವಿನ ಶಿರವು ಭೂಮಿಯ ಮೇಲೆ ಬೀಳಲು, ಅವನ ಕಾಯವು ಕೆಳಗೆ ಬಿದ್ದಿತು. ಸುಕೇತುವು ಹತನಾಗಲು ಅವನ ಪದಾನುಗರು ಭಯಗೊಂಡು ಗೌತಮನನ್ನು ಸಮರದಲ್ಲಿ ಬಿಟ್ಟು ಹತ್ತು ದಿಕ್ಕುಗಳಲ್ಲಿಯೂ ಓಡಿ ಹೋದರು.
ಕೃತವರ್ಮ-ಧೃಷ್ಟದ್ಯುಮ್ನರ ಯುದ್ಧ
ಮಹಾಬಲ ಕೃತವರ್ಮನಾದರೋ ಸಮರದಲ್ಲಿ ಪಾರ್ಷತ ಧೃಷ್ಟದ್ಯುಮ್ನನನ್ನು ತಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು. ಆಗ ಮಾಂಸದತುಂಡಿಗೆ ಎರಡು ಗಿಡುಗಗಳು ಕಾಳಗವಾಡುವಂತೆ ವೃಷ್ಣಿ-ಪಾರ್ಷತರ ನಡುವೆ ರಣದಲ್ಲಿ ತುಮುಲ ಯುದ್ಧವು ನಡೆಯಿತು. ಧೃಷ್ಟದ್ಯುಮ್ನನಾದರೋ ಹಾರ್ದಿಕ್ಯನನ್ನು ಒಂಭತ್ತು ಶರಗಳಿಂದ ವಕ್ಷಃಸ್ಥಳದಲ್ಲಿ ಪ್ರಹರಿಸಿ ಕ್ರುದ್ಧನಾಗಿ ಹೃದಿಕಾತ್ಮಜನನ್ನು ಪೀಡಿಸಿದನು. ಕೃತವರ್ಮನಾದರೋ ಪಾರ್ಷತನಿಂದ ದೃಢವಾಗಿ ಪ್ರಹರಿಸಲ್ಪಟ್ಟು ಸಾಯಕಗಳಿಂದ ಪಾರ್ಷತನನ್ನು – ಅವನ ರಥ, ಕುದುರೆಗಳೊಂದಿಗೆ – ಮುಚ್ಚಿಬಿಟ್ಟನು. ರಥದೊಡನೆ ಮುಚ್ಚಿಹೋಗಿದ್ದ ಧೃಷ್ಟದ್ಯುಮ್ನನು ಮಳೆಗಾಲದ ಪ್ರಾರಂಭದಲ್ಲಿ ಮೇಘಗಳಿಂದ ಪರಿಚ್ಚನ್ನ ಭಾಸ್ಕರನಂತೆ ಕಾಣದಂತಾದನು. ಗಾಯಗೊಂಡಿದ್ದ ಧೃಷ್ಟದ್ಯುಮ್ನನು ಕನಕಭೂಷಣ ಶರಗಳಿಂದ ಕೃತವರ್ಮನ ಬಾಣಗಣಗಳನ್ನು ನಿರಸನಗೊಳಿಸಿ ಪುನಃ ಕಾಣಿಸಿಕೊಂಡನು. ಆಗ ಸೇನಾನಾಯಕ ಧೃಷ್ಟದ್ಯುಮ್ನನು ಕ್ರುದ್ಧನಾಗಿ ಕೃತವರ್ಮನ ಬಳಿಸಾರಿ ಅವನ ಮೇಲೆ ದಾರುಣ ಶಸ್ತ್ರವೃಷ್ಟಿಯನ್ನು ಸುರಿಸಿದನು. ಯುದ್ಧದಲ್ಲಿ ತನ್ನ ಮೇಲೆ ನಿರಂತರವಾಗಿ ಬೀಳುತ್ತಿದ್ದ ಆ ಶಸ್ತ್ರವೃಷ್ಟಿಯನ್ನು ಹಾರ್ದಿಕ್ಯನು ಅನೇಕ ಸಹಸ್ರ ಶರಗಳಿಂದ ಕೂಡಲೇ ನಾಶಗೊಳಿಸಿದನು. ಯುದ್ಧದಲ್ಲಿ ಎದುರಿಸಲಸಾಧ್ಯ ಶಸ್ತ್ರವೃಷ್ಟಿಯನ್ನು ನಾಶಗೊಳಿಸಿದುದನ್ನು ಕಂಡು ಪಾರ್ಷತನು ಕೃತವರ್ಮನನ್ನು ಪ್ರಹರಿಸಿ ನಿಲ್ಲಿಸಿದನು. ಮತ್ತು ಕೂಡಲೇ ಅವನ ಸಾರಥಿಯನ್ನು ಯಮಸಾದನಕ್ಕೆ ಕಳುಹಿಸಿದನು. ತೀಕ್ಷ್ಣ ಭಲ್ಲದಿಂದ ಅವನು ಹತನಾಗಿ ರಥದಿಂದ ಕೆಳಕ್ಕೆ ಬಿದ್ದನು. ಧೃಷ್ಟದ್ಯುಮ್ನನಾದರೋ ಮಹಾರಥ ಶತ್ರುವನ್ನು ಸಮರದಲ್ಲಿ ಗೆದ್ದು ಕೂಡಲೇ ಸಾಯಕಗಳಿಂದ ಕೌರವರನ್ನು ತಡೆದನು. ಆಗ ಕೌರವ ಕಡೆಯ ಯೋಧರು ಸಿಂಹನಾದಗೈಯುತ್ತಾ ಧೃಷ್ಟದ್ಯುಮ್ನನನ್ನು ಆಕ್ರಮಿಸಿದರು. ಆಗ ಯುದ್ಧವು ಮುಂದುವರೆಯಿತು.
ಯುಧಿಷ್ಠಿರ-ಅಶ್ವತ್ಥಾಮರ ಯುದ್ಧ
ಶೈನೇಯ ಮತ್ತು ಶೂರ ದೌಪದೇಯರಿಂದ ಅಭಿರಕ್ಷಿತ ಯುಧಿಷ್ಠಿರನನ್ನು ನೋಡಿ ದ್ರೌಣಿಯು ಪ್ರಹೃಷ್ಟನಾದನು. ಸ್ವರ್ಣಪುಂಖ ಶಿಲಾಶಿತ ಘೋರ ಶರಗಳನ್ನು ಎರಚುತ್ತಾ ಅಸ್ತ್ರಶಿಕ್ಷಣವನ್ನೂ ಹಸ್ತಾಲಾಘವವನ್ನೂ ವಿವಿಧ ಮಾರ್ಗಗಳನ್ನೂ ಪ್ರದರ್ಶಿಸುತ್ತಾ ದ್ರೌಣಿಯು ದಿವ್ಯಾಸ್ತ್ರಮಂತ್ರಿತ ಶರಗಳಿಂದ ಆಕಾಶವನ್ನೇ ತುಂಬಿಸಿದನು ಮತ್ತು ಆ ಅಸ್ತ್ರವಿದುವು ಯುಧಿಷ್ಠಿರನನ್ನು ಸುತ್ತುವರೆದನು. ದ್ರೌಣಿಯ ಶರಗಳಿಂದ ತುಂಬಿ ಯಾವುದೂ ತಿಳಿಯದಾಯಿತು. ಆ ಯುದ್ಧಭೂಮಿಯು ಎಲ್ಲಕಡೆ ಬಾಣಮಯವಾಯಿತು. ಆ ಬಾಣಜಾಲವು ಆಕಾಶದಲ್ಲಿ ನಿರ್ಮಿಸಿದ ಸ್ವರ್ಣಜಾಲವಿಭೂಷಿತ ಚಪ್ಪರದಂತೆ ಶೋಭಿಸಿತು. ರಣದಲ್ಲಿ ಹೊಳೆಯುತ್ತಿರುವ ಬಾಣಜಾಲಗಳಿಂದ ನೇಯಲ್ಪಟ್ಟ ಅದು ನಭಸ್ತಲದಲ್ಲಿ ಮೇಘಗಳ ಛಾಯೆಯೋ ಎನ್ನುವಂತೆ ಕಾಣುತ್ತಿತ್ತು. ಆರೀತಿ ಬಾಣಗಳು ತುಂಬಿರಲು ಆಕಾಶದಿಂದ ಭೂಮಿಯ ಮೇಲೆ ಏನೂ ಬೀಳುತ್ತಿರಲಿಲ್ಲ. ದ್ರೋಣಪುತ್ರನ ಹಸ್ತಲಾಘವವನ್ನು ನೋಡಿ ಅಲ್ಲಿದ್ದ ಮಹಾರಥರು ವಿಸ್ಮಿತರಾದರು. ಉರಿಯುತ್ತಿರುವ ಭಾಸ್ಕರನಂತಿದ್ದ ಅವನನ್ನು ನೋಡಲು ಎಲ್ಲ ರಾಜರಿಗೂ ಸಾಧ್ಯವಾಗುತ್ತಿರಲಿಲ್ಲ. ಆಗ ಸಾತ್ಯಕಿಯಾಗಲೀ ಧರ್ಮರಾಜನಾಗಲೀ ಇನ್ನೂ ಇತರ ಸೇನೆಗಳಾಗಲೀ ತಮ್ಮ ಪರಾಕ್ರಮವನ್ನು ಅವನ ಮುಂದೆ ತೋರಿಸಲು ಸಾಧ್ಯವಾಗಲಿಲ್ಲ. ಸೇನೆಗಳು ಹಾಗೆ ವಧಿಸಲ್ಪಡುತ್ತಿರುವಾಗ ದ್ರೌಪದೇಯರು, ಸಾತ್ಯಕಿ, ಧರ್ಮರಾಜ ಮತ್ತು ಪಾಂಚಾಲರು ಒಟ್ಟಾಗಿ ಮೃತ್ಯುಭಯವನ್ನು ತೊರೆದು ಘೋರ ದ್ರೌಣಿಯನ್ನು ಆಕ್ರಮಣಿಸಿದರು.
ಸಾತ್ಯಕಿಯು ದ್ರೌಣಿಯನ್ನು ಇಪ್ಪತ್ತೈದು ಶಿಲಾಮುಖಿಗಳಿಂದ ಹೊಡೆದು ಪುನಃ ಏಳು ಸ್ವರ್ಣಭೂಷಿತ ನಾರಾಚಗಳಿಂದ ಹೊಡೆದನು. ಯುಧಿಷ್ಠಿರನು ಎಪ್ಪತ್ಮೂರು ಬಾಣಗಳಿಂದ, ಪ್ರತಿವಿಂದ್ಯನು ಏಳು, ಶ್ರುತಕರ್ಮನು ಮೂರು, ಶ್ರುತಕೀರ್ತಿಯು ಏಳು, ಸುತಸೋಮನು ಒಂಭತ್ತು ಮತ್ತು ಶತಾನೀಕನು ಏಳು ಬಾಣಗಳಿಂದ ಹಾಗೂ ಅನ್ಯ ಅನೇಕ ಶೂರರು ಎಲ್ಲಕಡೆಗಳಿಂದ ಅವನನ್ನು ಹೊಡೆದರು.
ಆಗ ಅತಿಕ್ರುದ್ಧ ಅಶ್ವತ್ಥಾಮನು ವಿಷಭರಿತ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಸಾತ್ಯಕಿಯನ್ನು ಇಪ್ಪತ್ತೈದು ಶಿಲಾಶಿತಗಳಿಂದ, ಶ್ರುತಕೀರ್ತಿಯನ್ನು ಒಂಭತ್ತು, ಸುತಸೋಮನನ್ನು ಐದು, ಶ್ರುತಕರ್ಮನನ್ನು ಎಂಟು, ಪ್ರತಿವಿಂದ್ಯನನ್ನು ಮೂರು, ಶತಾನೀಕನನ್ನು ಒಂಭತ್ತು ಮತ್ತು ಧರ್ಮಪುತ್ರನನ್ನು ಏಳು ಶರಗಳಿಂದ ಹೊಡೆದನು. ಅನಂತರ ಇತರ ಶೂರರನ್ನು ಎರಡೆರಡು ಬಾಣಗಳಿಂದ ಹೊಡೆದು ನಿಶಿತ ಶರಗಳಿಂದ ಶ್ರುತಕೀರ್ತಿಯ ಧನುಸ್ಸನ್ನು ತುಂಡರಿಸಿದನು. ಕೂಡಲೇ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಶ್ರುತಕೀರ್ತಿಯು ದ್ರೌಣಾಯನಿಯನ್ನು ಮೂರರಿಂದ ಮತ್ತು ಅನ್ಯ ನಿಶಿತ ಶರಗಳಿಂದ ಗಾಯಗೊಳಿಸಿದನು. ಆಗ ದ್ರೌಣಿಯು ಶರವರ್ಷದಿಂದ ಆ ಸೇನೆಯನ್ನು ಮತ್ತು ಶರಗಳಿಂದ ನೃಪರನ್ನು ಎಲ್ಲಕಡೆಗಳಲ್ಲಿ ಮುಚ್ಚಿಬಿಟ್ಟನು. ಅನಂತರ ದ್ರೌಣಿಯು ಪುನಃ ಧರ್ಮರಾಜನ ಧನುಸ್ಸನ್ನು ಕತ್ತರಿಸಿ ನಗುತ್ತಾ ಅವನನ್ನು ಮೂರು ಶರಗಳಿಂದ ಹೊಡೆದನು. ಆಗ ಧರ್ಮಸುತನು ಇನ್ನೊಂದು ಮಹಾಧನುಸ್ಸನ್ನು ಹಿಡಿದು ಏಳು ಬಾಣಗಳಿಂದ ದ್ರೌಣಿಯ ಬಾಹುಗಳು ಮತ್ತು ಎದೆಗೆ ಹೊಡೆದನು. ಆಗ ದ್ರೌಣಿಯ ಪ್ರಹರಗಳಿಂದ ಕ್ರುದ್ಧನಾದ ಸಾತ್ಯಕಿಯು ತೀಕ್ಷ್ಣ ಅರ್ಧಚಂದ್ರದಿಂದ ಅವನ ಧನುಸ್ಸನ್ನು ಕತ್ತರಿಸಿ ತುಂಬಾ ಗಾಯಗೊಳಿಸಿದನು. ಧನುಸ್ಸು ತುಂಡಾದ ದ್ರೌಣಿಯು ಕೂಡಲೇ ಶಕ್ತ್ಯಾಯುಧವನ್ನುಪಯೋಗಿಸಿ ಶೈನೇಯನ ಸಾರಥಿಯನ್ನು ಕೆಳಗುರುಳಿಸಿದನು. ಕೂಡಲೇ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ದ್ರೋಣಪುತ್ರನು ಶರವರ್ಷದಿಂದ ಶೈನೇಯನನ್ನು ಮುಚ್ಚಿಬಿಟ್ಟನು. ರಥಸಾರಥಿಯು ಬೀಳಲು ರಣದಲ್ಲಿ ಸಾತ್ಯಕಿಯ ಕುದುರೆಗಳು ದಿಕ್ಕಾಪಾಲಾಗಿ ಓಡಿ ಹೋದವು.
ಆಗ ಯುಧಿಷ್ಠಿರನ ನಾಯಕತ್ವದಲ್ಲಿದ್ದ ಪಾಂಡವ ಸೇನೆಯು ವೇಗವಾಗಿ ನಿಶಿತ ಬಾಣಗಳನ್ನು ದ್ರೌಣಿಯ ಮೇಲೆ ಸುರಿಸಿತು. ಮಹಾರಣದಲ್ಲಿ ರೌದ್ರರೂಪದ ಅವರು ಆಕ್ರಮಣಿಸುತ್ತಿರುವುದನ್ನು ನೋಡಿ ದ್ರೋಣಪುತ್ರನು ನಗುತ್ತಲೇ ಅವರನ್ನು ಎದುರಿಸಿದನು. ದ್ರೌಣಿಯು ಜ್ವಾಲಾರೂಪದ ನೂರಾರು ಬಾಣಗಳಿಂದ ವನದಲ್ಲಿ ಪೊದೆಯನ್ನು ಅಗ್ನಿಯು ಹೇಗೋ ಹಾಗೆ ಯುಧಿಷ್ಠಿರನ ಸೇನೆಯನ್ನು ಸುಟ್ಟುಹಾಕಿದನು. ದ್ರೋಣಪುತ್ರನಿಂದ ಸಂತಾಪಗೊಳಿಸಲ್ಪಡುತ್ತಿದ್ದು ಪಾಂಡುಪುತ್ರನ ಆ ಸೈನ್ಯವು ಸಾಗರವನ್ನು ಸೇರುವಾಗ ನದಿಯು ತಿಮಿಂಗಿಲದಿಂದ ಹೇಗೋ ಹಾಗೆ ಕ್ಷೋಭೆಗೊಂಡಿತು. ದ್ರೋಣಪುತ್ರನ ಪರಾಕ್ರಮವನ್ನು ನೋಡಿ ದ್ರೋಣಸುತನಿಂದ ಪಾಂಡವರೆಲ್ಲರೂ ಹತರಾದರೆಂದೇ ಭಾವಿಸಿದರು. ರೋಷ-ಕೋಪಸಮನ್ವಿತ ದ್ರೌಣಶಿಷ್ಯ ಯುಧಿಷ್ಠಿರನಾದರೋ ತ್ವರೆಮಾಡಿ ದ್ರೋಣಪುತ್ರನಿಗೆ ಹೇಳಿದನು:
“ಪುರುಷವ್ಯಾಘ್ರ! ಇಂದು ನೀನು ನನ್ನನ್ನು ಸಂಹರಿಸಲು ಇಚ್ಛಿಸಿರುವುದು ನಿನಗೆ ನಮ್ಮ ಮೇಲಿರುವ ಪ್ರೀತಿಯ ದ್ಯೋತಕವೂ ಅಲ್ಲ! ಕೃತಜ್ಞತೆಯ ದ್ಯೋತಕವೂ ಅಲ್ಲ! ತಪಸ್ಸು, ದಾನ, ಮತ್ತು ಅಧ್ಯಯನಗಳು ಬ್ರಾಹ್ಮಣನು ಮಾಡುವ ಕಾರ್ಯಗಳು. ಧನುಸ್ಸನ್ನು ಬಗ್ಗಿಸುವುದು ಕ್ಷತ್ರಿಯನ ಕಾರ್ಯ. ಆದರೆ ನೀನು ಮಾತ್ರ ಕರೆಯಿಸಿಕೊಳ್ಳುವುದಕ್ಕೆ ಬ್ರಾಹ್ಮಣನಾಗಿರುವೆ! ನೀನು ನಿಶ್ಚಯವಾಗಿಯೂ ಧರ್ಮಭ್ರಷ್ಟ ಬ್ರಾಹ್ಮಣನಾಗಿರುವೆ! ಸಮರದಲ್ಲಿ ನಿನ್ನ ಕರ್ಮವನ್ನು ಮಾಡು! ನೀನು ನೋಡುತ್ತಿರುವಂತೆಯೇ ಯುದ್ಧದಲ್ಲಿ ನಾನು ಕೌರವರನ್ನು ಜಯಿಸುತ್ತೇನೆ!”
ಇದನ್ನು ಕೇಳಿ ದ್ರೋಣಪುತ್ರನು ನಸುನಕ್ಕನು. ಹೇಳಿದುದು ತತ್ವಯುಕ್ತವಾಗಿಯೇ ಇದೆ ಎಂದು ಯೋಚಿಸಿ ಅದಕ್ಕೆ ಯಾವ ಉತ್ತರವನ್ನೂ ಕೊಡಲಿಲ್ಲ. ಏನನ್ನೂ ಹೇಳದೇ ಅವನು ಕ್ರುದ್ಧ ಅಂತಕನು ಪ್ರಜೆಗಳನ್ನು ಹೇಗೋ ಹಾಗೆ ಶರವರ್ಷದಿಂದ ಯುಧಿಷ್ಠಿರನನ್ನು ಮುಚ್ಚಿಬಿಟ್ಟನು. ದ್ರೋಣಪುತ್ರನಿಂದ ಮುಚ್ಚಲ್ಪಟ್ಟ ಯುಧಿಷ್ಠಿರನು ಮಹಾ ಸೇನೆಯನ್ನು ಬಿಟ್ಟು ಶೀಘ್ರವಾಗಿ ಹೊರಟುಹೋದನು. ಯುಧಿಷ್ಠಿರನು ಅಲ್ಲಿಂದ ಪಲಾಯನ ಮಾಡಲು ಮಹಾತ್ಮ ದ್ರೋಣಪುತ್ರನು ಇನ್ನೊಂದು ಮಾರ್ಗವನ್ನು ಹಿಡಿದು ಹೊರಟುಹೋದನು. ದ್ರೌಣಿಯನ್ನು ತೊರೆದು ರಾಜಾ ಯುಧಿಷ್ಠಿರನು ಕ್ರೂರಕರ್ಮದಲ್ಲಿಯೇ ನಿರತನಾಗಿ ಕೌರವ ಸೇನೆಯ ಕಡೆ ಧಾವಿಸಿದನು.
ಪಾಂಚಾಲ್ಯ, ಚೇದಿ-ಕೇಕಯರೊಂದಿಗೆ ಸಂವೃತನಾದ ಭೀಮಸೇನನನ್ನು ಸ್ವಯಂ ವೈಕರ್ತನನು ಸಾಯಕಗಳಿಂದ ಹೊಡೆದು ತಡೆದನು. ಭೀಮಸೇನನು ನೋಡುತ್ತಿದ್ದಂತೆಯೇ ಕರ್ಣನು ಸಂಕ್ರುದ್ಧನಾಗಿ ಚೇದಿ-ಕರೂಷರನ್ನೂ ಮಹಾರಥ ಸೃಂಜಯರನ್ನೂ ಸಂಹರಿಸಿದನು. ಆಗ ಭೀಮಸೇನನು ರಥಸತ್ತಮ ಕರ್ಣನನ್ನು ಬಿಟ್ಟು ಪ್ರಜ್ವಲಿಸುತ್ತಿರುವ ಅಗ್ನಿಯು ಹುಲ್ಲುಮೆದೆಯನ್ನು ಹೊಗುವಂತೆ ಕೌರವ ಸೇನೆಯನ್ನು ಹೊಕ್ಕನು. ಸೂತಪುತ್ರನಾದರೋ ಸಮರದಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಮಹೇಷ್ವಾಸ ಪಾಂಚಾಲರನ್ನೂ, ಕೇಕಯರನ್ನೂ, ಸೃಂಜಯರನ್ನೂ ಸಂಹರಿಸಿದನು. ಮಹಾರಥ ಪಾರ್ಥನು ಸಂಶಪ್ತಕರಲ್ಲಿಯೂ, ವೃಕೋದರನು ಕೌರವರಲ್ಲಿಯೂ ಮತ್ತು ಹಾಗೆಯೇ ಮಹಾರಥ ಕರ್ಣನು ಪಾಂಚಾಲರಲ್ಲಿಯೂ ಅತ್ಯಧಿಕ ಕ್ಷಯವನ್ನುಂಟುಮಾಡಿದರು. ಪಾವಕನಂತೆ ಸುಡುತ್ತಿದ್ದ ಆ ಮೂವರಿಂದ ಕ್ಷತ್ರಿಯರು ವಿನಾಶಹೊಂದಿದರು.
ದುರ್ಯೋಧನನೊಂದಿಗೆ ನಕುಲ-ಸಹದೇವರ ಯುದ್ಧ
ಆಗ ಕ್ರುದ್ಧನಾದ ದುರ್ಯೋಧನನು ನಕುಲನನ್ನು ಮತ್ತು ಅವನ ನಾಲ್ಕು ಕುದುರೆಗಳನ್ನು ಒಂಭತ್ತು ಶರಗಳಿಂದ ಹೊಡೆದನು. ಪುನಃ ಅವನು ಕ್ಷುರದಿಂದ ಸಹದೇವನ ಕಾಂಚನ ಧ್ವಜವನ್ನು ಕತ್ತರಿಸಿದನು. ಆಗ ಕ್ರುದ್ಧನಾಗಿ ನಕುಲನು ಮೂರು ಬಾಣಗಳಿಂದ ಮತ್ತು ಸಹದೇವನು ಐದರಿಂದ ದುರ್ಯೋಧನನನ್ನು ಹೊಡೆದರು. ದುರ್ಯೋಧನನು ಸಂಕ್ರುದ್ಧನಾಗಿ ಐದೈದು ಶರಗಳಿಂದ ಆ ಇಬ್ಬರು ಭರತಶ್ರೇಷ್ಠರ ವಕ್ಷಸ್ಥಳಗಳನ್ನು ಪ್ರಹರಿಸಿದನು. ಬೇರೆ ಭಲ್ಲಗಳೆರಡರಿಂದ ಆ ಯಮಳರ ಧನುಸ್ಸುಗಳನ್ನು ಕತ್ತರಿಸಿ ನಕ್ಕು ಏಳು ಬಾಣಗಳಿಂದ ಅವರನ್ನು ಹೊಡೆದನು. ಆಗ ಅವರಿಬ್ಬರು ಶೂರರೂ ಶಕ್ರಚಾಪಗಳಂತೆ ಶೋಭಿಸುತ್ತಿದ್ದ ಬೇರೆ ಶ್ರೇಷ್ಠ ಧನುಸ್ಸುಗಳನ್ನು ತೆಗೆದುಕೊಂಡು ಯುದ್ಧದಲ್ಲಿ ದೇವಪುತ್ರರಂತೆ ಶೋಭಿಸಿದರು.
ಆಗ ಅವರಿಬ್ಬರು ಸಹೋದರರೂ ಘೋರಮಹಾಮೇಘಗಳು ಪರ್ವತವನ್ನು ಹೇಗೋ ಹಾಗೆ ಯುದ್ಧದಲ್ಲಿ ಅಣ್ಣನನ್ನು ಶರವರ್ಷಗಳಿಂದ ಅಭಿಷೇಚಿಸಿದರು. ಆಗ ದುರ್ಯೋಧನನು ಕ್ರುದ್ಧನಾಗಿ ಪತ್ರಿಗಳಿಂದ ಪಾಂಡುಪುತ್ರರನ್ನು ತಡೆದನು. ಆಗ ಯುದ್ಧದಲ್ಲಿ ಅವನ ಧನುಸ್ಸು ಮಂಡಲಾಕಾರವಾಗಿ ಕಾಣುತ್ತಿತ್ತು. ಅದರಿಂದ ಒಂದೇಸಮನೆ ಹೊರಬರುತ್ತಿದ್ದ ಸಾಯಕಗಳು ಮಾತ್ರ ಕಾಣುತ್ತಿದ್ದವು. ಅವನ ಸಾಯಕಗಳ ಗುಂಪುಗಳು ಮೇಘಗಳು ಆಕಾಶವನ್ನು ತುಂಬಿ ಚಂದ್ರ-ಸೂರ್ಯರ ಪ್ರಭೆಗಳನ್ನು ಕುಂದಿಸುವಂತೆ ಆ ಪಾಂಡವರನ್ನು ಕುಂದಿಸಿದವು. ಆ ಹೇಮಪುಂಖ ಶಿಲಾಶಿತ ಬಾಣಗಳು ಸೂರ್ಯನ ಕಿರಣಗಳಂತೆ ಸರ್ವ ದಿಕ್ಕುಗಳನ್ನೂ ಆಚ್ಚಾದಿಸಿದವು. ನಭಸ್ತಲವೂ ಬಾಣಮಯವಾಗಿ ಮುಚ್ಚಿಹೋಗಲು ಯಮಳರಿಗೆ ದುರ್ಯೋಧನನ ರೂಪವು ಕಾಲಾಂತಕ ಯಮನಂತೆಯೇ ತೋರಿತು. ಅವನ ಆ ಪರಾಕ್ರಮವನ್ನು ನೋಡಿ ಮಾದ್ರಿಪುತ್ರರಿಗೆ ಮೃತ್ಯುವು ಸಮೀಪವಾಯಿತೆಂದೇ ಮಹಾರಥರು ಭಾವಿಸಿದರು.
ದುರ್ಯೋಧನ-ಧೃಷ್ಟದ್ಯುಮ್ನರ ಯುದ್ಧ
ಆಗ ಪಾಂಡವರ ಸೇನಾಪತಿ ಧೃಷ್ಟದ್ಯುಮ್ನನು ಸುಯೋಧನನಿದ್ದಲ್ಲಿಗೆ ಆಗಮಿಸಿದನು. ಮಾದ್ರೀಪುತ್ರರೀರ್ವರನ್ನೂ ದಾಟಿ ಮುಂದೆ ಹೋಗಿ ಧೃಷ್ಟದ್ಯುಮ್ನನು ಸಾಯಕಗಳಿಂದ ದುರ್ಯೋಧನನನ್ನು ಪ್ರಹರಿಸಿದನು. ದುರ್ಯೋಧನನು ನಗುತ್ತಲೇ ಪಾಂಚಾಲ್ಯನನ್ನು ಇಪ್ಪತ್ತೈದು ಬಾಣಗಳಿಂದ ಪ್ರಹರಿಸಿದನು. ಪುನಃ ಅವನು ಪಾಂಚಾಲ್ಯನನ್ನು ಅರವತ್ತೈದು ಬಾಣಗಳಿಂದ ಹೊಡೆದು ಗರ್ಜಿಸಿದನು. ದುರ್ಯೋಧನನು ಸುತೀಕ್ಷ್ಣ ಕ್ಷುರಪ್ರದಿಂದ ಶರಯುಕ್ತವಾದ ಅವನ ಧನುಸ್ಸನ್ನೂ ಕೈಚೀಲವನ್ನೂ ಕತ್ತರಿಸಿದನು.
ತುಂಡಾದ ಧನುಸ್ಸನ್ನು ಬಿಸುಟು ಪಾಂಚಾಲ್ಯನು ವೇಗದಿಂದ ಇನ್ನೊಂದು ಧನುಸ್ಸನ್ನು ಕೈಗೆತ್ತಿಕೊಂಡನು. ತುಂಬಾಗಾಯಗೊಂಡಿದ್ದ, ಕೋಪದಿಂದ ಕಣ್ಣುಗಳು ಕೆಂಪಾಗಿದ್ದ ಧೃಷ್ಟದ್ಯುಮ್ನನು ವೇಗದಿಂದ ಪ್ರಜ್ಚಲಿಸುತ್ತಿರುವ ಅಗ್ನಿಯಂತೆಯೇ ಶೋಭಿಸಿದನು. ದುರ್ಯೋಧನನನ್ನು ಸಂಹರಿಸಲೋಸುಗ ಧೃಷ್ಟದ್ಯುಮ್ನನು ಪನ್ನಗಗಳಂತೆ ಭುಸುಗುಡುತ್ತಿರುವ ಹದಿನೈದು ನಾರಾಚಗಳನ್ನು ಪ್ರಯೋಗಿಸಿದನು. ರಣಹದ್ದಿನ ರೆಕ್ಕೆಗಳೇ ವಸ್ತ್ರಗಳಾಗಿದ್ದ ಆ ಶಿಲಾಶಿತ ಬಾಣಗಳು ರಾಜನ ಸುವರ್ಣಮಯ ಕವಚವನ್ನು ಭೇದಿಸಿ ವೇಗವಾಗಿ ನೆಲವನ್ನು ಹೊಕ್ಕವು. ಅತಿಯಾಗಿ ಗಾಯಗೊಂಡ ದುರ್ಯೋಧನನು ವಸಂತದಲ್ಲಿ ಹೂಬಿಟ್ಟ ಮುತ್ತುಗದ ಮರದಂತೆಯೇ ತೋರಿದನು. ನಾರಾಚಗಳ ಪ್ರಹಾರದಿಂದ ಕವಚವು ಛಿದ್ರವಾಗಲು ದುರ್ಯೋಧನನ ಶರೀರವು ಜರ್ಜರಿತವಾಯಿತು. ಆಗ ಅವನು ಕ್ರುದ್ಧನಾಗಿ ಭಲ್ಲದಿಂದ ಧೃಷ್ಟದ್ಯುಮ್ನನ ಕಾರ್ಮುಕವನ್ನು ತುಂಡರಿಸಿದನು. ಕೂಡಲೇ ಆ ಮಹೀಪತಿಯು ತ್ವರೆಮಾಡಿ ಧನುಸ್ಸು ತುಂಡಾಗಿದ್ದ ಧೃಷ್ಟದ್ಯುಮ್ನನ ಹುಬ್ಬುಗಳ ಮಧ್ಯೆ ಹತ್ತು ಸಾಯಕಗಳನ್ನು ಪ್ರಹರಿಸಿದನು. ಮಧುವನ್ನಪೇಕ್ಷಿಸುವ ದುಂಬಿಗಳು ಅರಳಿದ ತಾವರೆಯನ್ನು ಹೇಗೋ ಹಾಗೆ ಕಮ್ಮಾರನಿಂದ ಹದಗೊಳಿಸಿದ್ದ ಆ ಬಾಣಗಳು ಧೃಷ್ಟದ್ಯುಮ್ನನ ಮುಖವನ್ನು ಶೋಭಗೊಳಿಸಿದವು. ಆಗ ಧೃಷ್ಟದ್ಯುಮ್ನನು ತುಂಡಾದ ಧನುಸ್ಸನ್ನು ಬಿಸುಟು ವೇಗದಿಂದ ಇನ್ನೊಂದು ಧನುಸ್ಸನ್ನೂ ಹದಿನಾರು ಬಲ್ಲಗಳನ್ನೂ ಎತ್ತಿಕೊಂಡನು. ಆಗ ಅವನು ಐದು ಭಲ್ಲಗಳಿಂದ ದುರ್ಯೋಧನನ ಕುದುರೆಗಳನ್ನೂ ಸಾರಥಿಯನ್ನು ಸಂಹರಿಸಿ ಆರನೆಯದರಿಂದ ಅವನ ಸುವರ್ಣಪರಿಷ್ಕೃತ ಧನುಸ್ಸನ್ನು ತುಂಡರಿಸಿದನು. ಪಾರ್ಷತನು ಉಳಿದ ಒಂಬತ್ತು ಭಲ್ಲಗಳಿಂದ ಯುದ್ಧಸಾಮಗ್ರಿಗಳಿಂದ ಯುಕ್ತವಾಗಿದ್ದ ದುರ್ಯೋಧನನ ರಥ, ಚತ್ರ, ಶಕ್ತಿ, ಖಡ್ಗ, ಗದೆ ಮತ್ತು ಧ್ವಜಗಳನ್ನು ತುಂಡರಿಸಿದನು. ಚಿನ್ನದ ಅಂಗದಗಳಿಂದ ಶೋಭಿಸುತ್ತಿದ್ದ ಆ ಮಣಿಮಯ, ನಾಗದ ಚಿಹ್ನೆಯುಳ್ಳ ಕುರುಪತಿಯ ಧ್ವಜವು ತುಂಡಾಗಿದ್ದುದನ್ನು ಸರ್ವ ಪಾರ್ಥಿವರೂ ನೋಡಿದರು. ರಣದಲ್ಲಿ ವಿರಥನಾಗಿದ್ದ, ಸರ್ವಾಯುಧಗಳನ್ನೂ ಕಳೆದುಕೊಂಡಿದ್ದ ದುರ್ಯೋಧನನನ್ನು ಸಹೋದರರು ಪರಿರಕ್ಷಿಸುತ್ತಿದ್ದರು. ಧೃಷ್ಟದ್ಯುಮ್ನನು ನೋಡುತ್ತಿದ್ದಂತೆಯೇ ಸಂಭ್ರಾಂತನಾಗಿದ್ದ ಜನಾಧಿಪ ದುರ್ಯೋಧನನನ್ನು ದಂಡಧಾರನು ತನ್ನ ರಥದಲ್ಲಿ ಏರಿಸಿಕೊಂಡನು.