ಹದಿನೇಳನೇ ದಿನದ ಯುದ್ಧ - ೧: ಶಲ್ಯನು ಕರ್ಣನ ಸಾರಥಿಯಾದುದು
ಪ್ರಹಾರಗಳಿಂದ ಹತರಾಗಿ, ವಿಧ್ವಸ್ಥರಾಗಿದ್ದ, ಕವಚ-ಆಯುಧ-ವಾಹನಗಳಿಂದ ವಿಹೀನರಾಗಿದ್ದ, ಶತ್ರುಗಳಿಂದ ಸೋತಿದ್ದ ಮಾನಿನಿಗಳಾದ ಕೌರವರು, ಹಲ್ಲುಗಳು ಕಿತ್ತು ವಿಷವನ್ನು ಕಳೆದುಕೊಂಡ ಮತ್ತು ಕಾಲಿನಿಂದ ಮೆಟ್ಟಲ್ಪಟ್ಟ ಸರ್ಪಗಳಂತೆ, ಶಿಬಿರದಲ್ಲಿ ಕುಳಿತು ದೀನಸ್ವರದಲ್ಲಿ ಮಾತನಾಡಿಕೊಳ್ಳುತ್ತಾ ಮಂತ್ರಾಲೋಚನೆ ಮಾಡಿದರು. ಆಗ ಕ್ರುದ್ಧ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಕರ್ಣನು ಕೈಯಿಂದ ಕೈಯನ್ನು ಉಜ್ಜಿಕೊಳ್ಳುತ್ತಾ ದುರ್ಯೋಧನನನ್ನು ನೋಡಿ ಹೇಳಿದನು: “ಅರ್ಜುನನು ಸದಾ ಪ್ರಯತ್ನಶೀಲನು, ದೃಢನು, ದಕ್ಷನು ಮತ್ತು ಧೃತಿಮಾನನು. ಅಧೋಕ್ಷಜನೂ ಕೂಡ ಅವನಿಗೆ ಕಾಲಕ್ಕೆ ತಕ್ಕಂತೆ ಸಲಹೆಗಳನ್ನು ನೀಡುತ್ತಿದ್ದಾನೆ. ಅವನು ಅಸ್ತ್ರಗಳನ್ನು ಬಿಡುತ್ತಿರುವ ವೇಗದಿಂದಾಗಿ ಇಂದು ನಾವು ವಂಚಿತರಾದೆವು. ನಾಳೆ ನಾನು ಅವನ ಸಂಕಲ್ಪವೆಲ್ಲವನ್ನೂ ನಿರರ್ಥಕಗೊಳಿಸುತ್ತೇನೆ!” ಅದಕ್ಕೆ “ಹಾಗೆಯೇ ಆಗಲಿ!” ಎಂದು ಹೇಳಿ ದುರ್ಯೋಧನನು ನೃಪೋತ್ತಮರಿಗೆ ಅನುಮತಿಯನ್ನಿತ್ತನು. ರಾತ್ರಿಯನ್ನು ಸುಖವಾಗಿ ಕಳೆದು ಅವರು ಹೃಷ್ಟರಾಗಿ ಯುದ್ಧಕ್ಕೆ ಮರಳಿದರು. ಬೃಹಸ್ಪತಿ ಮತ್ತು ಉಶನನ ಸಿದ್ಧಾಂತದಂತೆ ಧರ್ಮರಾಜನು ಪ್ರಯತ್ನಪಟ್ಟು ರಚಿಸಿದ್ದ ದುರ್ಜಯ ವ್ಯೂಹವನ್ನು ಅವರು ನೋಡಿದರು. ಕೂಡಲೇ ದುರ್ಯೋಧನನು ಸತತವೂ ತನಗೆ ವಿಜಯವನ್ನು ದೊರಕಿಸುವುದರಲ್ಲಿ ನಿರತನಾದ, ಶತ್ರುಗಳಿಗೆ ವಿರುದ್ಧವಾದುದನ್ನು ಮಾಡಬಲ್ಲ, ವೃಷಭಸ್ಕಂಧ ಕರ್ಣನನ್ನು ಸ್ಮರಿಸಿದನು. ಯುದ್ಧದಲ್ಲಿ ಪುರಂದರನ ಸಮನಾಗಿದ್ದ, ಬಲದಲ್ಲಿ ಮರುದ್ಗಣಗಳ ಸಮನಾಗಿದ್ದ, ವೀರ್ಯದಲ್ಲಿ ಕಾರ್ತವೀರ್ಯನ ಸಮನಾಗಿದ್ದ ಮಹೇಷ್ವಾಸ ಸೂತ್ರಪುತ್ರ ಕರ್ಣನನ್ನು, ಅತ್ಯಂತ ಕಷ್ಟದಲ್ಲಿರುವವನು ಬಂಧವನ್ನು ನೆನಪಿಸಿಕೊಳ್ಳುವಂತೆ, ರಾಜ ದುರ್ಯೋಧನನು ಮನಸ್ಸಿಗೆ ತಂದುಕೊಂಡನು.
ರಾತ್ರಿಕಳೆದು ಬೆಳಗಾಗಲು ಮಹಾಬಾಹು ಕರ್ಣನು ಸಮಾಲೋಚನೆಗೆಂದು ರಾಜ ದುರ್ಯೋಧನನಲ್ಲಿಗೆ ಬಂದು ಹೀಗೆ ಹೇಳಿದನು: “ರಾಜನ್! ಇಂದು ನಾನು ಯಶಸ್ವಿ ಪಾಂಡವನನ್ನು ಎದುರಿಸುತ್ತೇನೆ. ಆ ವೀರನನ್ನು ಸಂಹರಿಸುತ್ತೇನೆ ಅಥವಾ ಅವನು ನನ್ನನ್ನು ಸಂಹರಿಸುತ್ತಾನೆ. ಇದೂವರೆಗೆ ನನಗೆ ಮತ್ತು ಪಾರ್ಥನಿಗೆ ಅನೇಕ ಕಾರ್ಯಗಳಿದ್ದವು. ಆದುದರಿಂದ ನನ್ನ ಮತ್ತು ಅರ್ಜುನನ ಸಮಾಗಮವಾಗಲಿಲ್ಲ. ಪ್ರಜ್ಞೆಗೆ ಬಂದಂತೆ ನಾನು ಹೇಳುವ ಈ ಮಾತನ್ನು ಕೇಳು. ರಣದಲ್ಲಿ ಪಾರ್ಥನನ್ನು ಸಂಹರಿಸದೆಯೇ ನಾನು ಹಿಂದಿರುಗುವುದಿಲ್ಲ! ಸೇನೆಯಲ್ಲಿನ ಪ್ರಮುಖರು ಹತರಾಗಿ ಹೋಗಿರುವುದರಿಂದ ಮತ್ತು ನನ್ನಲ್ಲಿ ಶಕ್ರನಿತ್ತ ಶಕ್ತಿಯು ಈಗ ಇಲ್ಲವಾಗಿರುವುದರಿಂದ ಪಾರ್ಥನು ಇಂದು ನನ್ನನ್ನೇ ಎದುರಿಸಿ ಯುದ್ಧಮಾಡುವವನಿದ್ದಾನೆ. ಆದುದರಿಂದ ಶ್ರೇಯಸ್ಕರವಾದ ಏನನ್ನು ನಾನು ಹೇಳುವವನಿದ್ದೇನೋ ಅದನ್ನು ಕೇಳು. ಆಯುಧ, ವೀರ್ಯ ಮತ್ತು ದ್ರವ್ಯಗಳಲ್ಲಿ ನಾನು ಮತ್ತು ಅರ್ಜುನರು ಸಮನಾಗಿದ್ದೇವೆ. ಆದರೆ ದೊಡ್ಡ ಕಾಯಗಳುಳ್ಳವುಗಳನ್ನು ಹೊಡೆಯುವುದರಲ್ಲಿ, ದೂರ ಬಾಣಪ್ರಯೋಗಮಾಡುವುದರಲ್ಲಿ, ಯುದ್ಧಕೌಶಲದಲ್ಲಿ, ದಿವ್ಯಾಸ್ತ್ರಪ್ರಯೋಗಗಳಲ್ಲಿ ಸವ್ಯಸಾಚಿಯು ನನ್ನ ಸಮನಲ್ಲ. ಸರ್ವ ಆಯುಧಗಳಲ್ಲಿ ಮಹಾಮಾತ್ರವೆಂದೆನಿಸಿರುವ ವಿಜಯ ಎಂಬ ಹೆಸರಿನ ನನ್ನ ಈ ಧನುಸ್ಸನ್ನು ವಿಶ್ವಕರ್ಮನು ಇಂದ್ರನಿಗೆ ಪ್ರಿಯವನ್ನುಂಟುಮಾಡಲು ಬಯಸಿಯೇ ನಿರ್ಮಿಸಿದ್ದನು. ಇದರಿಂದಲೇ ಶತಕ್ರತುವು ದೈತ್ಯಗಣಗಳನ್ನು ಜಯಿಸಿದನು. ಇದರ ಘೋಷದಿಂದ ದೈತ್ಯರಿಗೆ ದಿಕ್ಕುಗಳೇ ತೋಚುತ್ತಿರಲಿಲ್ಲ. ಪರಮಸಮ್ಮತವಾದ ಇದನ್ನು ಶಕ್ರನು ಭಾರ್ಗವನಿಗೆ ನೀಡಿದನು. ಆ ದಿವ್ಯ ಉತ್ತಮ ಧನುಸ್ಸನ್ನು ಭಾರ್ಗವನು ನನಗೆ ನೀಡಿದನು. ಸಮರದಲ್ಲಿ ಕೂಡಿ ಬಂದಿದ್ದ ಸರ್ವ ದೈತ್ಯರನ್ನೂ ಯಾವುದನ್ನು ಹಿಡಿದು ಎದುರಿಸಿದ್ದನೋ ಅದೇ ಧನುಸ್ಸಿನಿಂದ ನಾನು ಅರ್ಜುನನೊಡನೆ ಯುದ್ಧಮಾಡುತ್ತೇನೆ. ಪರಶುರಾಮದತ್ತ ಧನುಸ್ಸು ಘೋರವಾದುದು; ಗಾಂಡೀವಕ್ಕಿಂತಲೂ ವಿಶೇಷವಾದುದು! ಈ ಧನುಸ್ಸಿನಿಂದಲೇ ರಾಮನು ಪೃಥ್ವಿಯನ್ನು ೨೧ ಬಾರಿ ಜಯಿಸಿದ್ದನು. ಯಾವ ಧನುಸ್ಸಿನ ದಿವ್ಯ ಕರ್ಮಗಳನ್ನು ಭಾರ್ಗವನು ಹೇಳಿ ನನಗೆ ದಯಪಾಲಿಸಿದ್ದನೋ ಅದೇ ಧನುಸ್ಸಿನಿಂದಲೇ ನಾನು ಪಾಂಡವ ಅರ್ಜುನನೊಡನೆ ಯುದ್ಧಮಾಡುತ್ತೇನೆ. ದುರ್ಯೋಧನ! ಇಂದು ಸಮರದಲ್ಲಿ ನಾನು ಅರ್ಜುನನನ್ನು ಸಂಹರಿಸಿ ಬಾಂಧವರೊಂದಿಗೆ ನಿನ್ನನ್ನು ಸಂತೋಷಗೊಳಿಸುತ್ತೇನೆ! ಇಂದು ಈ ಭೂಮಿಯು ಪರ್ವತ-ವನ-ದ್ವೀಪಗಳು ಮತ್ತು ಸಾಗರಗಳೊಂದಿಗೆ ನಿನ್ನ ಪುತ್ರ ಪೌತ್ರರಲ್ಲಿ ಪ್ರತಿಷ್ಠಳಾಗಿರುತ್ತಾಳೆ! ಉತ್ತಮ ಧರ್ಮದಲ್ಲಿಯೇ ಅನುರಕ್ತನಾಗಿರುವವನಿಗೆ ಆತ್ಮಸಿದ್ಧಿಯಾಗಿರುವವನು ಹೇಗೋ ಹಾಗೆ ಇಂದು ನಾನು ವಿಶೇಷವಾಗಿ ನಿನ್ನ ಪ್ರೀತಿಗೋಸ್ಕರ ಮಾಡುವವುಗಳಲ್ಲಿ ಅಸಾಧ್ಯವೆನ್ನುವುದೇ ಇಲ್ಲವೆಂದು ತಿಳಿ. ಹುಲ್ಲುಮೆದೆಯು ಅಗ್ನಿಯನ್ನು ಹೇಗೋ ಹಾಗೆ ಸಮರದಲ್ಲಿ ನನ್ನನ್ನು ಅರ್ಜುನನು ಸಹಿಸಿಕೊಳ್ಳಲಾರ. ಫಲ್ಗುನನಿಗಿಂತ ಯಾವುದರಲ್ಲಿ ನಾನು ಕಡಿಮೆ ಎನ್ನುವುದನ್ನು ಕೂಡ ಹೇಳುವುದು ಇಲ್ಲಿ ಅವಶ್ಯಕವಾಗಿದೆ. ಅವನ ಧನುಸ್ಸಿನ ಮೌರ್ವಿ ಮತ್ತು ಅಕ್ಷಯ ಬತ್ತಳಿಕೆಗಳು ದಿವ್ಯವಾದವುಗಳು. ಅವನ ದಿವ್ಯವಾದ ಶ್ರೇಷ್ಠ ಗಾಂಡಿವ ಧನುಸ್ಸು ಯುದ್ಧದಲ್ಲಿ ಅಜರವಾದುದು. ನನ್ನಲ್ಲಿ ಕೂಡ ಮಹಾದಿವ್ಯವಾದ ಉತ್ತಮ ವಿಜಯ ಧನುಸ್ಸಿದೆ. ದನುಸ್ಸಿನ ವಿಷಯದಲ್ಲಿ ನಾನು ಪಾರ್ಥನಿಗಿಂತ ಅಧಿಕನಾಗಿದ್ದೇನೆ. ವೀರ ಪಾಂಡವನು ನನಗಿಂತಲೂ ಯಾವುದರಲ್ಲಿ ಅಧಿಕ ಎನ್ನುವುದನ್ನು ಕೇಳು. ಸರ್ವಲೋಕನಮಸ್ಕೃತ ದಾಶಾರ್ಹನು ಅವನ ರಥದ ಕುದುರೆಗಳ ಕಡಿವಾಣಗಳನ್ನು ಹಿಡಿದಿದ್ದಾನೆ. ಅವನ ಆ ಕಾಂಚನಭೂಷಣ ದಿವ್ಯ ರಥವು ಅಗ್ನಿದತ್ತವಾದುದು. ಅವನ ರಥದ ಯಾವುದೇ ಭಾಗವನ್ನಾಗಲೀ ತುಂಡುಮಾಡಲು ಸಾಧ್ಯವಿಲ್ಲ. ಅವನ ಕುದುರೆಗಳು ಮನಸ್ಸಿನಷ್ಟೇ ವೇಗವುಳ್ಳವುಗಳು. ದಿವ್ಯ ದ್ಯುತಿಮಾನ ವಿಸ್ಮಯಂಕರ ವಾನರನೇ ಅವನ ಧ್ವಜದಲ್ಲಿದ್ದಾನೆ. ಜಗತ್ತಿನ ಸೃಷ್ಟಾ ಕೃಷ್ಣನೇ ಅವನ ರಥವನ್ನು ರಕ್ಷಿಸುತ್ತಿದ್ದಾನೆ. ಇಂತಹ ದ್ರವ್ಯಗಳಿಂದ ನಾನು ಹೀನನಾಗಿದ್ದರೂ ಪಾಂಡವನೊಡನೆ ಯುದ್ಧಮಾಡಲು ಬಯಸುತ್ತೇನೆ. ಈ ಸಮಿತಿಶೋಭನ ವೀರ ಶಲ್ಯನು ಕೃಷ್ಣನ ಸದೃಶನಾಗಿದ್ದಾನೆ. ಒಂದುವೇಳೆ ಅವನು ನನ್ನ ಸಾರಥ್ಯವನ್ನು ಮಾಡಿದರೆ ನನಗೆ ವಿಜಯವಾಗುತ್ತದೆಯೆನ್ನುವುದು ನಿಶ್ಚಯ! ಶತ್ರುಗಳಿಂದ ಜಯಿಸಲು ಸುಲಭಸಾಧ್ಯನಲ್ಲದ ಆ ಶಲ್ಯನು ನನ್ನ ಸಾರಥಿಯಾಗಲಿ. ರಣಹದ್ದಿನ ಗರಿಗಳನ್ನು ಕೂಡಿದ ನಾರಾಚಗಳನ್ನು ತುಂಬಿಸಿದ ಬಂಡಿಗಳು ನನ್ನ ಹಿಂದೆ ಬರಲಿ. ಉತ್ತಮ ಕುದುರೆಗಳನ್ನು ಕಟ್ಟಿದ ರಥಗಳು ನನ್ನ ಹಿಂದೆಯೇ ಸತತವಾಗಿ ಬರುತ್ತಿರಲಿ. ಹೀಗೆ ನಾನು ಗುಣಗಳಲ್ಲಿ ಪಾರ್ಥನಿಗಿಂತ ಅಧಿಕನಾಗುವೆನು. ನಾನು ಅರ್ಜುನನಿಗಿಂತ ಅಧಿಕನಾಗಿರುವುದಕ್ಕಿಂತ ಶಲ್ಯನು ಕೃಷ್ಣನಿಗೆ ಅಧಿಕನಾಗಿರುವನು. ಹೇಗೆ ದಾಶಾರ್ಹನು ಅಶ್ವಹೃದಯವನ್ನು ತಿಳಿದುಕೊಂಡಿರುವನೋ ಹಾಗೆ ಶಲ್ಯನೂ ಕೂಡ ಕುದುರೆಗಳನ್ನು ತಿಳಿದಿದ್ದಾನೆ. ಮದ್ರರಾಜನ ಬಾಹುವೀರ್ಯಕ್ಕೆ ಸಮನಾದವನು ಯಾರೂ ಇಲ್ಲ. ಹಾಗೆಯೇ ಅಸ್ತ್ರಗಳಲ್ಲಿ ನನ್ನ ಸಮನಾದ ಧನುರ್ಧರನು ಎಲ್ಲಿಯೂ ಇಲ್ಲ. ಕುದುರೆಯನ್ನು ಓಡಿಸುವುದರಲ್ಲಿ ಶಲ್ಯನಿಗೆ ಸಮನಾದವನು ಯಾರೂ ಇಲ್ಲ. ಆದುದರಿಂದ ಅವನು ನನ್ನ ರಥವನ್ನು ಓಡಿಸುವವನಾದರೆ ನನ್ನ ರಥವು ಪಾರ್ಥನ ರಥಕ್ಕಿಂತ ಅಧಿಕವಾಗುವುದು. ನನ್ನ ಈ ಒಂದು ಕೆಲಸವನ್ನು ಮಾಡಿಕೊಡಬೇಕೆಂದು ಬಯಸುತ್ತೇನೆ. ಇದೊಂದನ್ನು ಮಾಡಿದರೆ ನನ್ನ ಸರ್ವಕಾಮಗಳನ್ನೂ ಸಫಲಗೊಳಿಸಿದಂತಾಗುತ್ತದೆ. ಆಗ ನಾನು ಸಮರದಲ್ಲಿ ಏನು ಮಾಡಬಲ್ಲೆ ಎನ್ನುವುದನ್ನು ನಿನಗೆ ತೋರಿಸುತ್ತೇನೆ. ಇಂದು ಸರ್ವಥಾ ಸೇರಿರುವ ಪಾಂಡವರೆಲ್ಲರನ್ನೂ ಯುದ್ಧದಲ್ಲಿ ಜಯಿಸುತ್ತೇನೆ.”
ದುರ್ಯೋಧನನು ಹೇಳಿದನು: “ಕರ್ಣ! ನೀನು ಬಯಸಿರುವಂತೆ ಎಲ್ಲವನ್ನೂ ಮಾಡುತ್ತೇನೆ. ಕುದುರೆಗಳೊಂದಿಗೆ ಸಜ್ಜಾಗಿದ್ದ ರಥಗಳು ನಿನ್ನನ್ನು ಅನುಸರಿಸಿ ಬರುತ್ತವೆ. ಗಾರ್ಧ್ರಪಕ್ಷಗಳ ನಾರಾಚಗಳನ್ನು ಹೊತ್ತ ಬಂಡಿಗಳು ಮತ್ತು ನಾವೆಲ್ಲ ಸರ್ವ ಪಾರ್ಥಿವರೂ ನಿನ್ನನ್ನು ಅನುಸರಿಸಿ ಬರುತ್ತೇವೆ!”
ದುರ್ಯೋಧನನು ಶಲ್ಯನಿಗೆ ಕರ್ಣನ ಸಾರಥಿಯಾಗುವಂತೆ ಕೇಳಿದುದು
ದುರ್ಯೋಧನನು ಹೀಗೆ ಹೇಳಿ ಮದ್ರರಾಜನಲ್ಲಿಗೆ ಹೋಗಿ ವಿನಯದಿಂದ ಅವನಿಗೆ ಹೀಗೆ ಹೇಳಿದನು: “ಮದ್ರೇಶ್ವರ! ನೃಪತಿಸಿಂಹರ ಮಧ್ಯದಲ್ಲಿ ನಿನ್ನನ್ನು ಆರಿಸಿಕೊಂಡ ಕರ್ಣನಾಡಿದ ಈ ಮಾತನ್ನು ಕೇಳಿದ್ದೀಯೆ. ಪಾರ್ಥರ ವಿನಾಶಕ್ಕಾಗಿ ಮತ್ತು ನನ್ನ ಹಿತಕ್ಕಾಗಿ ಒಳ್ಳೆಯ ಮನಸ್ಸಿನಿಂದ ನೀನು ಸಾರಥ್ಯವನ್ನು ಮಾಡಬೇಕು. ಕರ್ಣನ ಕುದುರೆಗಳ ಕಡಿವಾಣಗಳನ್ನು ಹಿಡಿಯಬಲ್ಲ, ನಿನಗೆ ಸರಿಸಾಟಿಯಾದ, ಇನ್ನೊಬ್ಬನು ಈ ಲೋಕದಲ್ಲಿಯೇ ಇಲ್ಲ. ಬ್ರಹ್ಮನು ಶಂಕರನನ್ನು ಹೇಗೋ ಹಾಗೆ ನೀನು ಕರ್ಣನನ್ನು ಸರ್ವತಃ ರಕ್ಷಿಸಬೇಕು. ಕಡಿವಾಣಗಳನ್ನು ಹಿಡಿಯುವವರಲ್ಲಿ ಶ್ರೇಷ್ಠ ಕೃಷ್ಣನು ಹೇಗೆ ಪಾರ್ಥನ ಸಚಿವನೋ ಹಾಗೆ ನೀನೂ ಕೂಡ ರಾಧೇಯನನ್ನು ಸರ್ವತಃ ಪರಿಪಾಲಿಸು. ಭೀಷ್ಮ, ದ್ರೋಣ, ಕೃಪ, ಕರ್ಣ, ನೀನು, ನಾನು, ಭೋಜ, ಶಕುನಿ ಮತ್ತು ದ್ರೌಣಿ – ಈ ಒಂಭತ್ತು ಮಂದಿ ನಮ್ಮ ಬಲಶಾಲಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದರಂತೆ ಪಾಂಡವ ಸೇನೆಯನ್ನು ಒಂಭತ್ತು ಪಾಲುಗಳನ್ನಾಗಿ ಮಾಡಿಕೊಂಡಿದ್ದೆವು. ಈಗ ಭೀಷ್ಮನ ಮತ್ತು ಮಹಾತ್ಮ ದ್ರೋಣನ ಭಾಗಗಳು ಉಳಿದಿಲ್ಲ. ಅವರಿಬ್ಬರೂ ತಮ್ಮ ತಮ್ಮ ಪಾಲುಗಳನ್ನೂ ಮೀರಿ ನನ್ನ ಶತ್ರುಗಳನ್ನು ಸಂಹರಿಸಿದ್ದಾರೆ. ವೃದ್ಧರಾಗಿದ್ದ ಆ ಇಬ್ಬರು ನರವ್ಯಾಘ್ರರೂ ಛಲದಿಂದ ಸಂಹರಿಸಿ, ಅಸಾಧ್ಯಕರ್ಮಗಳನ್ನೆಸಗಿ ಸ್ವರ್ಗಕ್ಕೆ ಹೋದರು. ಹಾಗೆಯೇ ಅನ್ಯ ಪುರುಷವ್ಯಾಘ್ರರೂ ಶತ್ರುಗಳಿಂದ ಯುದ್ಧದಲ್ಲಿ ಹತರಾದರು. ನಮ್ಮ ಕಡೆಯ ಅನೇಕರು ಯಥಾಶಕ್ತಿಯಾಗಿ ಅನೇಕ ಕಠಿಣ ಕರ್ಮಗಳನ್ನೆಸಗಿ ರಣದಲ್ಲಿ ಪ್ರಾಣಗಳನ್ನು ತ್ಯಜಿಸಿ ಸ್ವರ್ಗದ ಕಡೆ ಹೊರಟುಹೋಗಿದ್ದಾರೆ. ಮಹಾಬಾಹು ಕರ್ಣನೊಬ್ಬನೇ ಮತ್ತು ಸರ್ವಲೋಕಮಹಾರಥನಾದ ನೀನು ನನ್ನ ಪ್ರಿಯಹಿತಗಳಲ್ಲಿ ನಿರತನಾಗಿದ್ದೀರಿ. ಮದ್ರಜನಾಧಿಪ! ನನ್ನ ಜಯದ ಆಸೆಯು ವಿಪುಲವಾಗಿ ನಿನ್ನನ್ನವಲಂಬಿಸಿದೆ. ಸಮರದಲ್ಲಿ ಕೃಷ್ಣನು ಪಾರ್ಥನ ಕುದುರೆಗಳ ಕಡಿವಾಣಗಳನ್ನು ಹಿಡಿಯುವವನಾಗಿ, ಅವನಿಂದ ರಕ್ಷಿತನಾದ ಪಾರ್ಥನು ರಣದಲ್ಲಿ ಯಾವ ಯಾವ ಮಹಾದ್ಭುತ ಕರ್ಮಗಳನ್ನು ಮಾಡುತ್ತಿದ್ದಾನೆ ಎನ್ನುವುದನ್ನು ಪ್ರತ್ಯಕ್ಷವಾಗಿಯೇ ನೀನು ಕಂಡಿರುವೆ! ಹಿಂದೆ ಅರ್ಜುನನು ಸಮರದಲ್ಲಿ ಈ ರೀತಿ ಶತ್ರುಗಳನ್ನು ಸಂಹರಿಸುತ್ತಿರಲಿಲ್ಲ! ಈಗ ಯುದ್ಧದಲ್ಲಿ ಪ್ರತಿದಿನವೂ ಅವನು ಶತ್ರುಗಳನ್ನು ಓಡಿಸುತ್ತಿರುವುದು ಕಾಣುತ್ತಿದೆ. ನಾವು ಮಾಡಿಕೊಂಡಿದ್ದ ಪಾಲುಗಳಲ್ಲಿ ನಿನ್ನ ಮತ್ತು ಕರ್ಣನ ಪಾಲುಗಳು ಉಳಿದುಕೊಂಡಿವೆ. ಯುದ್ಧದಲ್ಲಿ ಕರ್ಣನೊಂದಿಗೆ ಒಟ್ಟಾಗಿ ನಿನ್ನ ಪಾಲಿನ ಭಾಗವನ್ನೂ ನಾಶಪಡಿಸು. ಸೂರ್ಯಮತ್ತು ಅರುಣರನ್ನು ನೋಡಿ ಕತ್ತಲೆಯು ಹೇಗೆ ನಾಶವಾಗುತ್ತದೆಯೋ ಹಾಗೆ ನಿಮ್ಮಿಬ್ಬರನ್ನು ನೋಡಿ ಪಾಂಚಾಲರು ಮತ್ತು ಸೃಂಜಯರೊಂದಿಗೆ ಕೌಂತೇಯರು ನಾಶವಾಗುತ್ತಾರೆ. ಕರ್ಣನು ರಥಿಗಳಲ್ಲಿ ಶ್ರೇಷ್ಠನು. ನೀನು ಸಾರಥಿಗಳಲ್ಲಿ ಶ್ರೇಷ್ಠನು. ನಿಮ್ಮಿಬ್ಬರ ಜೋಡಿಯಂಥಹುದು ಲೋಕದಲ್ಲಿ ಎಂದೂ ಇರಲಿಲ್ಲ, ಮುಂದೆ ಇರಲಿಕ್ಕಿಲ್ಲ. ಸರ್ವಾವಸ್ಥೆಗಳಲ್ಲಿ ವಾರ್ಷ್ಣೇಯನು ಹೇಗೆ ಪಾಂಡವನನ್ನು ರಕ್ಷಿಸುತ್ತಿರುವನೋ ಹಾಗೆ ರಣದಲ್ಲಿ ನೀನು ವೈಕರ್ತನ ಕರ್ಣನನ್ನು ರಕ್ಷಿಸಬೇಕು. ನಿನ್ನ ಸಾರಥ್ಯದಿಂದ ಇವನು ಅಜೇಯನಾಗುತ್ತಾನೆ. ರಣದಲ್ಲಿ ಇವನು ಶಕ್ರನೊಡನೆ ಬಂದ ದೇವತೆಗಳನ್ನೂ ಎದುರಿಸಬಲ್ಲನು. ಇನ್ನು ಪಾಂಡವೇಯರ ವಿಷಯದಲ್ಲೇನು? ನನ್ನ ಈ ಮಾತಿನಲ್ಲಿ ಶಂಕೆಪಡದಿರು!”
ದುರ್ಯೋಧನನ ಮಾತನ್ನು ಕೇಳಿ ಶಲ್ಯನು ಕ್ರೋಧಸಮನ್ವಿತನಾಗಿ, ಹುಬ್ಬುಗಳನ್ನು ಗಂಟಿಕ್ಕೆ, ಕೈಗಳೆರಡನ್ನು ಪುನಃ ಪುನಃ ಕೊಡವಿದನು. ಕೆಂಪಾದ ಕಣ್ಣುಗಳನ್ನು ತಿರುಗಿಸುತ್ತಾ, ಕುಲ-ಐಶ್ವರ್ಯ-ವಿದ್ಯೆ-ಬಲಗಳಿಂದ ದರ್ಪಿತನಾಗಿದ್ದ ಮಹಾಭುಜ ಶಲ್ಯನು ಈ ಮಾತುಗಳನ್ನಾಡಿದನು: “ಗಾಂಧಾರೇ! ಸ್ವಲ್ಪವೂ ಪರಿಶಂಕಿಸದೇ ವಿಸ್ತಬ್ಧನಾಗಿ ಸಾರಥ್ಯವನ್ನು ಮಾಡು ಎಂದು ನನಗೆ ಹೇಳಿ ನನ್ನನ್ನು ಅಪಮಾನಿಸುತ್ತಿರುವೆ! ಕರ್ಣನು ನನಗಿಂತಲೂ ಅಧಿಕನೆಂದು ತಿಳಿದು ಅವನನ್ನು ಪ್ರಶಂಸಿಸುತ್ತಿದ್ದೀಯೆ! ಆದರೆ ಯುದ್ಧದಲ್ಲಿ ರಾಧೇಯನು ನನ್ನ ಸಮಾನನೆಂದು ನಾನು ಒಪ್ಪಿಕೊಳ್ಳುವುದಿಲ್ಲ! ನನಗೆ ಶತ್ರುಸೇನೆಯ ಹೆಚ್ಚಿನ ಪಾಲನ್ನೇ ವಹಿಸಿಕೊಡು. ಸಮರದಲ್ಲಿ ನಾನು ಆ ಭಾಗವನ್ನು ಸಂಹರಿಸಿ ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೊರಟುಹೋಗುತ್ತೇನೆ. ಅಥವಾ ನಾನೊಬ್ಬನೇ ಯುದ್ಧಮಾಡುತ್ತೇನೆ. ಸಂಗ್ರಾಮದಲ್ಲಿ ಶತ್ರುಗಳನ್ನು ಸುಡುವ ನನ್ನ ವೀರ್ಯವನ್ನು ಇಂದು ನೋಡು! ನನ್ನಂಥಹ ಪುರುಷರು ಹೃದಯದಲ್ಲಿ ಆಸೆಗಳನ್ನಿಟ್ಟುಕೊಂಡು ಯುದ್ಧದಲ್ಲಿ ತೊಡಗುವುದಿಲ್ಲ. ನನ್ನ ಮೇಲೆ ಅಧಿಕ ಶಂಕೆಪಡಬೇಡ! ಯುದ್ಧದಲ್ಲಿ ನನ್ನನ್ನು ಅಪಮಾನಗೊಳಿಸುವ ಕೆಲಸವನ್ನೆಂದೂ ಮಾಡಬೇಡ! ವಜ್ರಸಂಹನದಂತಿರುವ ನನ್ನ ಈ ಭುಜಗಳನ್ನಾದರೂ ನೀನು ನೋಡು! ಚಿತ್ರಿತವಾಗಿರುವ ನನ್ನ ಧನುಸ್ಸನ್ನು ಮತ್ತು ಸರ್ಪವಿಷಗಳಂತಿರುವ ನನ್ನ ಬಾಣಗಳನ್ನೂ ನೋಡು! ಗಾಳಿಯ ವೇಗದಲ್ಲಿ ಹೋಗುವ ಕುದುರೆಗಳುಳ್ಳ ನನ್ನ ಈ ಸುಂದರ ರಥವನ್ನೂ ನೋಡು! ಹೇಮಪಟ್ಟಿಗಳಿಂದ ವಿಭೂಷಿತವಾದ ನನ್ನ ಈ ಗದೆಯನ್ನೂ ನೋಡು! ಕ್ರುದ್ಧನಾದರೆ ಈ ಭೂಮಿಯನ್ನು ಸೀಳಿಯೇನು! ಪರ್ವತಗಳನ್ನು ಪುಡಿಪುಡಿಮಾಡಿಯೇನು! ನನ್ನ ತೇಜಸ್ಸಿನಿಂದ ಸಮುದ್ರಗಳನ್ನೂ ಒಣಗಿಸಬಲ್ಲೆನು! ಅರಿನಿಗ್ರಹದಲ್ಲಿ ಸಮರ್ಥನಾದ ನನ್ನ ಈ ರೀತಿಯ ಪರಾಕ್ರಮವನ್ನು ತಿಳಿದೂ ನೀನು ನೀಚ ಅಧಿರಥನ ಸಾರಥ್ಯಕ್ಕೆ ನನ್ನನ್ನು ಏಕೆ ನಿಯೋಜಿಸುತ್ತಿರುವೆ? ಈ ಕೀಳು ವೃತ್ತಿಯಲ್ಲಿ ನನ್ನನ್ನು ತೊಡಗಿಸುವುದು ನಿನಗೆ ಖಂಡಿತವಾಗಿಯೂ ಯೋಗ್ಯವೆನಿಸುವುದಿಲ್ಲ. ಶ್ರೇಯಾವಂತನಾಗಿದ್ದುಕೊಂಡು ನಾನು ಇಂತಹ ಪಾಪಿ ಪುರುಷನ ಸೇವೆಮಾಡಲು ಇಷ್ಟಪಡುವುದಿಲ್ಲ. ಪ್ರೀತಿಯಿಂದ ಬಂದು ಆಜ್ಞಾಧಾರಕನಾಗಿರುವ ಹಿರಿಯವನ್ನು ಪಾಪಿಯ ವಶದಲ್ಲಿ ಕೊಡುವವನಿಗೆ ಉಚ್ಚನನ್ನು ನೀಚನನ್ನಾಗಿಯೂ ನೀಚನನ್ನು ಉಚ್ಚನನ್ನಾಗಿಯೂ ಮಾಡುವವನಿಗೆ ದೊರೆಯುವ ಮಹಾ ಪಾಪವು ದೊರೆಯುತ್ತದೆ. ಬ್ರಹ್ಮನು ಬ್ರಾಹ್ಮಣರನ್ನು ತನ್ನ ಮುಖದಿಂದಲೂ, ಕ್ಷತ್ರಿಯರನ್ನು ಭುಜಗಳಿಂದಲೂ, ವೈಶ್ಯರನ್ನು ತೊಡೆಗಳಿಂದಲೂ ಮತ್ತು ಶೂದ್ರರನ್ನು ಪಾದಗಳಿಂದಲೂ ಸೃಷ್ಟಿಸಿದನೆಂದು ಶೃತಿಯಿದೆ. ಈ ನಾಲ್ಕು ವರ್ಣಗಳ ಪರಸ್ಪರ ಸಂಕರದಿಂದ ಅನುಲೋಮ-ವಿಲೋಮ ವರ್ಣಗಳ ಉತ್ಪತ್ತಿಯಾಗುತ್ತದೆ. ಕ್ಷತ್ರಿಯರು ರಕ್ಷಕರೆಂದೂ, ಕಪ್ಪು-ಕಾಣಿಕೆಗಳ ಸಂಗ್ರಹೀತಾರರೆಂದೂ, ದಾನ-ಧರ್ಮಗಳನ್ನು ಮಾಡುವವರೆಂದೂ ವಿಹಿತವಾಗಿದೆ. ಯಜ್ಞಮಾಡಿಸುವರು, ಅಧ್ಯಾಪನೆ ಮಾಡುವವರು ಮತ್ತು ವಿಶುದ್ಧ ದಾನಗಳನ್ನು ಸ್ವೀಕರಿಸುವವರು ವಿಪ್ರರು. ಲೋಕಗಳ ಅನುಗ್ರಹಕ್ಕಾಗಿ ಬ್ರಹ್ಮನು ಇದನ್ನು ಭುವಿಯಲ್ಲಿ ಸ್ಥಾಪಿಸಿದನು. ಕೃಷಿ, ಪಶುಪಾಲನೆ ಮತ್ತು ದಾನಗಳು ವೈಶ್ಯರಿಗೆ, ಮತ್ತು ಬ್ರಾಹ್ಮಣ-ಕ್ಷತ್ರಿಯ-ವೈಶ್ಯರೆಲ್ಲರ ಸೇವೆಗಳು ಶೂದ್ರರಿಗೆ ವಿಹಿತವಾಗಿವೆ. ಬ್ರಾಹ್ಮಣ-ಕ್ಷತ್ರಿಯರಿಗೆ ಸೂತರು ಪರಿಚಾರಕರೆಂದು ವಿಹಿತವಾಗಿದೆ. ಇದಕ್ಕೆ ವಿರುದ್ಧವಾದುದು ಎಲ್ಲಿಯೂ ಇಲ್ಲ. ನನ್ನ ಈ ಮಾತನ್ನು ಕೇಳು! ನಾನಾದರೋ ರಾಜರ್ಷಿಕುಲದಲ್ಲಿ ಹುಟ್ಟಿ ಪಟ್ಟಾಭಿಷಿಕ್ತನಾಗಿದ್ದೇನೆ. ಮಹಾರಥನೆಂದು ಪ್ರಸಿದ್ಧನಾಗಿದ್ದೇನೆ. ವಂದಿಮಾಗಧರ ಸೇವೆ-ಸ್ತುತಿಗಳಿಗೆ ಪಾತ್ರನಾಗಿದ್ದೇನೆ. ಇಂತಹ ಅರಿಕುಲಮರ್ಧನನಾಗಿರುವ ನಾನು ಸಂಗ್ರಾಮದಲ್ಲಿ ಸೂತಪುತ್ರನ ಸಾರಥ್ಯವನ್ನು ಮಾಡುವುದಿಲ್ಲ. ಅಪಮಾನಿತನಾಗಿ ನಾನು ಎಂದೂ ಯುದ್ಧಮಾಡುವುದಿಲ್ಲ. ಅಪ್ಪಣೆಕೊಡು. ಇಂದೇ ನಾನು ನನ್ನ ದೇಶಕ್ಕೆ ಹೊರಟುಹೋಗುತ್ತೇನೆ!”
ಹೀಗೆ ಹೇಳಿ ಶಲ್ಯನು ಮೇಲೆದ್ದು ರಾಜಮಧ್ಯದಿಂದ ಬೇಗನೇ ಹೊರಟುಹೋದನು. ದುರ್ಯೋಧನನು ಅವನ ಮೇಲಿನ ಪ್ರೀತಿಯಿಂದಲೂ ಗೌರವದಿಂದಲೂ ಅವನನ್ನು ತಡೆದು ವಿನೀತನಾಗಿ ಸರ್ವಾರ್ಥಸಾಧಕವಾದ ಈ ಮಧುರ ಮತ್ತು ಸೌಮ್ಯ ಮಾತುಗಳನ್ನಾಡಿದನು: “ಶಲ್ಯ! ಜನೇಶ್ವರ! ಇದರ ಕುರಿತು ನೀನು ತಿಳಿದುಕೊಂಡಿರುವುದೇ ಸರಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ನನ್ನ ಈ ಒಂದು ಅಭಿಪ್ರಾಯವನ್ನೂ ಕೇಳು. ಕರ್ಣನು ನಿನಗಿಂತಲೂ ಅಧಿಕನಲ್ಲ ಎನ್ನುವುದರಲ್ಲಿ ಯಾವುದೇ ರೀತಿಯ ಶಂಕೆಯೂ ಇಲ್ಲ. ರಾಜಾ ಮದ್ರೇಶ್ವರನು ಇದನ್ನು ಸುಳ್ಳಾಗಿಸುವ ಕಾರ್ಯವೇನನ್ನೂ ಮಾಡಲಾರನು ಎನ್ನುವುದೂ ನಿಶ್ಚಯವಾದುದೇ. ನಿನ್ನ ಪೂರ್ವಜ ಪುರುಷೋತ್ತಮರೆಲ್ಲರೂ ಸತ್ಯವನ್ನೇ ಹೇಳುತ್ತಿದ್ದರು. ಆದುದರಿಂದಲೇ ನಿನ್ನನ್ನು ಆರ್ತಾಯನಿ ಎಂದು ಕರೆಯುತ್ತಾರೆಂದು ನನ್ನ ಅನಿಸಿಕೆ. ಶತ್ರುಗಳಿಗೆ ನೀನು ಮುಳ್ಳಂತಿರುವೆಯಾದುದರಿಂದ ನಿನ್ನನ್ನು ಭುವಿಯಲ್ಲಿ ಶಲ್ಯ ಎಂದು ಕರೆಯುತ್ತಾರೆ. ನನಗೋಸ್ಕರವಾಗಿ ಹಿಂದೆ ನೀನು ಹೇಳಿದಂತೆ ಮತ್ತು ಈಗ ನೀನು ಹೇಳುವಂತೆಯೇ ಮಾಡು! ನಿನಗೆ ಸಮನಾಗಿ ರಾಧೇಯನೂ ಇಲ್ಲ. ನಾನೂ ಕೂಡ ನಿನ್ನ ಸಮನಿಲ್ಲ. ಆದುದರಿಂದಲೇ ಸಂಗ್ರಾಮದಲ್ಲಿ ಅಶ್ವವಿಧ್ಯೆಯಲ್ಲಿ ಅಗ್ರಗಣ್ಯನಾಗಿರುವ ನಿನ್ನನ್ನೇ ಸಾರಥಿಯನ್ನಾಗಿ ಆರಿಸಿದ್ದೇನೆ. ಕರ್ಣನು ಹೇಗೆ ಗುಣದಲ್ಲಿ ಧನಂಜಯನಿಗಿಂತ ಅಧಿಕನೋ ಹಾಗೆಯೇ ನೀನೂ ಕೂಡ ವಾಸುದೇವನಿಗಿಂತಲೂ ಅಧಿಕನೆಂದು ಲೋಕವು ಮನ್ನಿಸುತ್ತದೆ. ಅಸ್ತ್ರಗಳಲ್ಲಿ ಕರ್ಣನು ಹೇಗೆ ಪಾರ್ಥನಿಗಿಂತಲೂ ಅಧಿಕನೋ ಹಾಗೆ ನೀನೂ ಕೂಡ ಅಶ್ವಯಾನದಲ್ಲಿ ಕೃಷ್ಣನಿಗಿಂತಲೂ ಅಧಿಕ ಬಲಶಾಲಿಯಾಗಿರುವೆ. ಅಶ್ವಹೃದಯವನ್ನು ಎಷ್ಟು ಮಹಾಮನಸ್ವಿ ವಾಸುದೇವನು ತಿಳಿದಿರುವನೋ ಅದಕ್ಕೂ ಎರಡು ಗುಣ ಹೆಚ್ಚು ನಿನಗೆ ತಿಳಿದಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”
ಶಲ್ಯನು ಹೇಳಿದನು: “ಗಾಂಧಾರೇ! ಸೈನ್ಯದ ಮಧ್ಯದಲ್ಲಿ ನಾನು ದೇವಕೀಪುತ್ರನಿಗಿಂತಲೂ ವಿಶಿಷ್ಟನೆಂದು ಹೇಳಿದುದಕ್ಕೆ ನಾನು ನಿನ್ನ ಮೇಲೆ ಪ್ರೀತನಾಗಿದ್ದೇನೆ. ನೀನು ಇಚ್ಛಿಸಿರುವಂತೆ ಪಾಂಡವಾಗ್ರನೊಡನೆ ಯುದ್ಧಮಾಡುವ ಯಶಸ್ವಿ ರಾಧೇಯನ ಸಾರಥ್ಯವನ್ನು ವಹಿಸಿಕೊಳ್ಳುತ್ತೇನೆ. ಆದರೆ ನನ್ನದೊಂದು ನಿಬಂಧನೆಯಿದೆ. ನಾನು ವೈಕರ್ತನನ ಬಳಿಯಿರುವಾಗ ನಾನು ಅವನೊಡನೆ ನನಗೆ ಇಷ್ಟವಾದಂತೆ ಮಾತನಾಡುತ್ತೇನೆ!”
ದುರ್ಯೋಧನನು ಹೇಳಿದನು: “ಲೋಕಧಾತಾ ಪಿತಾಮಹ ಭಗವಾನ್ ಬ್ರಹ್ಮನು ಹೇಗೋ ಹಾಗೆ ನೀನು ಮಹಾತ್ಮ ರಾಧೇಯನ ಕುದುರೆಗಳನ್ನು ನಡೆಸು. ಏಕೆಂದರೆ ನೀನು ಕೃಷ್ಣನಿಗೂ ಕರ್ಣನಿಗೂ ವಿಶೇಷವಾಗಿ ಫಲ್ಗುನನಿಗೂ ವಿಶಿಷ್ಟನಾದವನು. ಅದರಲ್ಲಿ ವಿಚಾರಮಾಡುವಂಥದೇನೂ ಇಲ್ಲ. ಯುದ್ಧದಲ್ಲಿ ಈ ಕರ್ಣನು ರುದ್ರಕಲ್ಪನು. ನೀನು ಬ್ರಹ್ಮನಿಗೆ ಸಮನಾಗಿರುವೆ. ಅವರಿಬ್ಬರೂ ಹೇಗೆ ಅಸುರರನ್ನು ಗೆದ್ದರೋ ಹಾಗೆ ನೀವಿಬ್ಬರೂ ನನ್ನ ಶತ್ರುಗಳನ್ನು ಗೆಲ್ಲಲು ಶಕ್ಯರಾಗಿರುವಿರಿ. ಶಲ್ಯ! ಇಂದು ಈ ಕರ್ಣನು ಹೇಗೆ ಕೃಷ್ಣನು ಸಾರಥಿಯಾಗಿರುವ ಶ್ವೇತಾಶ್ವ ಕೌಂತೇಯನನ್ನು ಸದೆಬಡಿದು ಕೊಲ್ಲುವನೋ ಹಾಗೆ ನೀನೂ ಕೂಡ ಶೀಘ್ರವಾಗಿ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ರಾಜ್ಯ ಮತ್ತು ನಾವೆಲ್ಲರೂ ನೀನು ಮತ್ತು ಕರ್ಣರನ್ನೇ ಅವಲಂಬಿಸಿದ್ದೇವೆ.
“ಭಾರ್ಗವ ರಾಮನು ಸರ್ವ ಧನುರ್ವೇದವನ್ನು ಮಹಾತ್ಮ ಕರ್ಣನ ಮೇಲೆ ಸುಪ್ರೀತನಾಗಿ ಅಂತರಾತ್ಮದಿಂದ ಅವನಿಗೆ ದಯಪಾಲಿಸಿದನು. ಕರ್ಣನಲ್ಲಿ ಸ್ವಲ್ಪವಾದರೂ ದೋಷಗಳಿದಿದ್ದರೆ ಭೃಗುನಂದನನು ಅವನಿಗೆ ಅ ದಿವ್ಯಾಸ್ತ್ರಗಳನ್ನು ದಯಪಾಲಿಸುತ್ತಿರಲಿಲ್ಲ. ಕರ್ಣನು ಸೂತಕುಲದಲ್ಲಿ ಹುಟ್ಟಿದವನೆಂದು ನಾನು ಎಂದೂ ಭಾವಿಸುವುದಿಲ್ಲ. ಅವನು ಕ್ಷತ್ರಿಯ ಕುಲದಲ್ಲಿ ಜನಿಸಿದ ದೇವಪುತ್ರನೆಂದೇ ತಿಳಿಯುತ್ತೇನೆ. ಕುಂಡಲ, ಕವಚಗಳಿಂದ ಹುಟ್ಟಿದ ಆದಿತ್ಯಸದೃಶನಾದ ಈ ದೀರ್ಘಬಾಹು ಮಹಾರಥ ವ್ಯಾಘ್ರದಂತಿರುವವನು ಜಿಂಕೆಯಲ್ಲಿ ಹೇಗೆ ಹುಟ್ಟಿಯಾನು? ಅವನ ಭುಜಗಳನ್ನು ನೋಡು. ಗಜರಾಜನ ಸೊಂಡಿಲಿನಂತೆ ದಪ್ಪವಾಗಿವೆ! ಸರ್ವಶತ್ರುಗಳನ್ನೂ ಸಂಹರಿಸಬಲ್ಲ ಅವನ ವಿಶಾಲ ವಕ್ಷಃಸ್ಥಳವನ್ನು ನೋಡು!
“ತ್ರಿಪುರ ಸಂಹಾರದ ಸಮಯದಲ್ಲಿ ರುದ್ರನು ರಥಿಯಾಗಿರುವಾಗ ಸರ್ವಲೋಕಪಿತಾಮಹ ದೇವ ಭಗವಾನ್ ಬ್ರಹ್ಮನು ಸಾರಥ್ಯವನ್ನು ಮಾಡಿದನು. ರಥಿಗಿಂತಲೂ ಅಧಿಕ ವೀರನು ರಥಸಾರಥಿಯಾಗುವುದು ಕರ್ತವ್ಯ. ಆದುದರಿಂದ ಪುರುಷವ್ಯಾಘ್ರ! ನೀನು ಯುದ್ಧದಲ್ಲಿ ತುರಗಗಳನ್ನು ನಿಯಂತ್ರಿಸು!””
ಶಲ್ಯನು ಕರ್ಣನ ಸಾರಥ್ಯವನ್ನು ಸ್ವೀಕರಿಸಿದುದು
ಆಗ ಅಮಿತ್ರಘ್ನ ಮದ್ರಾಧಿಪ ಶಲ್ಯನು ಪ್ರೀತನಾಗಿ ದುರ್ಯೋಧನನನ್ನು ಬಿಗಿದಪ್ಪಿ ಹೀಗೆ ಹೇಳಿದನು: “ಪ್ರಿಯದರ್ಶನ! ಗಾಂಧಾರೇ! ನೀನು ಏನನ್ನು ಬಯಸುತ್ತೀಯೋ ನಿನ್ನ ಪ್ರಿಯವಾದುದು ಏನಿದೆಯೋ ಅವೆಲ್ಲವನ್ನೂ ನಾನು ಮಾಡುತ್ತೇನೆ. ನಾನು ಎಲ್ಲಿ ಯಾವ ಕಾರ್ಯಕ್ಕೆ ಯೋಗ್ಯನಾಗಿರುವೆನೋ ಆ ಕಾರ್ಯವನ್ನೇ ನೀನು ನನಗೆ ಯೋಜಿಸಿದ ನಂತರ ಆದನ್ನು ನಾನು ಸಂಪೂರ್ಣಮನಸ್ಸಿನಿಂದ ಮಾಡುತ್ತೇನೆಂದು ಮಾತುಕೊಡುತ್ತೇನೆ. ಹಿತವನ್ನು ಬಯಸಿ ನಾನು ಕರ್ಣನಿಗೆ ಹೇಳುವ ಪ್ರಿಯ ಮತ್ತು ಅಪ್ರಿಯ ಮಾತುಗಳನ್ನು ಎಲ್ಲವನ್ನೂ ನೀನು, ಕರ್ಣ ಮತ್ತು ಎಲ್ಲರೂ ಕ್ಷಮಿಸಬೇಕು!”
ಕರ್ಣನು ಹೇಳಿದನು: “ಮದ್ರರಾಜ! ಈಶಾನನಿಗೆ ಬ್ರಹ್ಮನು ಹೇಗೋ ಮತ್ತು ಪಾರ್ಥನಿಗೆ ಕೇಶವನು ಹೇಗೋ ಹಾಗೆ ನೀನು ನಿತ್ಯವೂ ನನ್ನ ಹಿತದಲ್ಲಿ ಯುಕ್ತನಾಗಿ ಸಂತೋಷಗೊಳಿಸು!”
ಶಲ್ಯನು ಹೇಳಿದನು: “ತನ್ನನ್ನು ತಾನೇ ನಿಂದಿಸಿಕೊಳ್ಳುವುದು, ತನ್ನನ್ನು ತಾನೇ ಹೊಗಳಿಕೊಳ್ಳುವುದು, ಇತರರನ್ನು ನಿಂದಿಸುವುದು ಮತ್ತು ಇತರರನ್ನು ಹೊಗಳುವುದು ಇವು ನಾಲ್ಕು ಆರ್ಯರು ಆಚರಿಸಬಾರದಂತಹ ವ್ಯವಹಾರಗಳು. ಇದನ್ನು ತಿಳಿದಿದ್ದರೂ, ನಿನಗೆ ವಿಶ್ವಾಸವುಂಟಾಗಲೆಂಬ ಕಾರಣದಿಂದ, ಸ್ವಪ್ರಶಂಸಾರೂಪವಾದ ಮಾತುಗಳನ್ನು ಹೇಳುತ್ತೇನೆ. ಕೇಳು. ನಾನು ಅಪ್ರಮಾದತೆ, ಅಶ್ವಸಂಚಾಲಜ್ಞಾನ, ವಿದ್ಯೆ ಮತ್ತು ಚಿಕಿತ್ಸೆ ಇವುಗಳಲ್ಲಿ ಶಕ್ರನ ಸಾರಥಿ ಮಾತಲಿಯಷ್ಟೇ ಯೋಗ್ಯ ಸಾರಥಿಯು. ಸಂಗ್ರಾಮದಲ್ಲಿ ಪಾರ್ಥನೊಡನೆ ನೀನು ಯುದ್ಧಮಾಡುವಾಗ ನಿನ್ನ ಕುದುರೆಗಳನ್ನು ನಾನು ನಡೆಸುತ್ತೇನೆ. ನಿನ್ನ ಆತಂಕವನ್ನು ದೂರಮಾಡು!”
ದುರ್ಯೋಧನನು ಹೇಳಿದನು: “ಕರ್ಣ! ಇಗೋ ಕೃಷ್ಣನಿಗಿಂತಲೂ ಅಧಿಕನಾದ, ದೇವೇಂದ್ರನ ಸಾರಥಿ ಮಾತಲಿಗಿಂತಲೂ ಹೆಚ್ಚಿನವನಾದ ಮದ್ರರಾಜನು ನಿನ್ನ ಸಾರಥ್ಯವನ್ನು ಮಾಡುತ್ತಾನೆ. ಯಾವರೀತಿಯಲ್ಲಿ ಇಂದ್ರನ ಕುದುರೆಗಳ ಕಡಿವಾಣಗಳನ್ನು ಮಾತಲಿಯು ಹಿಡಿಯುತ್ತಾನೋ ಹಾಗೆ ಶಲ್ಯನು ನಿನ್ನ ರಥದ ಕುದುರೆಗಳ ಕಡಿವಾಣಗಳನ್ನು ಹಿಡಿದು ರಥವನ್ನು ನಿಯಂತ್ರಿಸುತ್ತಾನೆ. ಯೋಧನಾದ ನೀನು ಮತ್ತು ಸಾರಥಿಯಾಗಿ ಮದ್ರರಾಜನು ರಥದಲ್ಲಿ ಕುಳಿತಿರಲು ನಿನ್ನ ಶ್ರೇಷ್ಠ ರಥವು ಯುದ್ಧದಲ್ಲಿ ಖಂಡಿತವಾಗಿಯೂ ಪಾರ್ಥನನ್ನು ಇಲ್ಲದಂತಾಗಿಸುತ್ತದೆ.” ಆಗ ಸಂಗ್ರಾಮದಲ್ಲಿ ಉತ್ತಮ ಹಯಗಳನ್ನು ನಡೆಸುತ್ತಿದ್ದ ತರಸ್ವಿಯಾಗಿದ್ದ ಮದ್ರರಾಜನಿಗೆ ದುರ್ಯೋಧನನು ಪುನಃ ಹೇಳಿದನು: “ನಿನ್ನಿಂದ ರಕ್ಷಿತನಾದ ರಾಧೇಯನು ಧನಂಜಯನನ್ನು ಗೆಲ್ಲುತ್ತಾನೆ!” ಹೀಗೆ ಹೇಳಲು ಶಲ್ಯನು ಹಾಗೆಯೇ ಆಗಲೆಂದು ರಥವನ್ನು ಮುಟ್ಟಿ ಹೇಳಿದನು.
ಶಲ್ಯನನ್ನು ಪಡೆದ ಕರ್ಣನು ಸುಮನಸ್ಕನಾಗಿ ತನ್ನ ಸಾರಥಿಗೆ ಹೇಳಿದನು: “ಸೂತ! ನನ್ನ ರಥವನ್ನು ಒಡನೆಯೇ ಸಜ್ಜುಗೊಳಿಸು!”