ಹದಿನಾರನೇ ದಿನದ ಯುದ್ಧ - ೧: ಕರ್ಣ ಸೇನಾಪತ್ಯಾಭಿಷೇಕ
ಆ ದಿನ ಮಹೇಷ್ವಾಸ ದ್ರೋಣನು ಹತನಾಗಲು, ಮಹಾರಥ ದ್ರೋಣಪುತ್ರನು ಮಾಡಿದ ಸಂಕಲ್ಪವು ವ್ಯರ್ಥವಾಗಲು, ಮತ್ತು ಹಾಗೆ ಕೌರವರ ಸೇನೆಯು ಓಡಿಹೋಗುತ್ತಿರಲು ಪಾರ್ಥ ಯುಧಿಷ್ಠಿರನು ಸಹೋದರರೊಂದಿಗೆ ತನ್ನ ಸೇನೆಯ ವ್ಯೂಹವನ್ನು ರಚಿಸಿ ಸಿದ್ಧನಾದನು. ಅವನು ಹಾಗೆ ಸಿದ್ಧನಾಗಿರುವುದನ್ನು ತಿಳಿದು ದುರ್ಯೋಧನನು ಓಡಿಹೋಗುತ್ತಿರುವ ತನ್ನ ಸೇನೆಯನ್ನು ನೋಡಿ ಪೌರುಷದ ಮಾತುಗಳಿಂದ ತಡೆದನು. ತನ್ನ ಸೇನೆಯನ್ನು ಬಾಹುವೀರ್ಯದಿಂದ ವ್ಯವಸ್ಥಿತವಾಗಿಸಿ ಸ್ಥಾಪಿಸಿಕೊಂಡು ಬಹಳ ಹೊತ್ತು ಲಬ್ಧಲಕ್ಷ್ಯರಾಗಿದ್ದ ಹೃಷ್ಟರಾಗಿದ್ದ ಪರಿಶ್ರಮಪಟ್ಟು ಯುದ್ಧಮಾಡುತ್ತಿದ್ದ ಪಾಂಡವರೊಂದಿಗೆ ಯುದ್ಧಮಾಡುತ್ತಿದ್ದು, ಸಂಧ್ಯಾಕಾಲವಾಗುತ್ತಿದ್ದಂತೆ ಸೇನೆಗಳು ಹಿಂದೆಸರಿಯುವಂತೆ ಮಾಡಿದನು. ಸೇನೆಗಳು ಹಿಂದಿರುಗುವಂತೆ ಮಾಡಿ ತಾನೂ ಶಿಬಿರವನ್ನು ಪ್ರವೇಶಿಸಿ, ಆತ್ಮಹಿತಕ್ಕಾಗಿ ಕುರುಗಳೊಂದಿಗೆ ರಹಸ್ಯದಲ್ಲಿ ಮಂತ್ರಾಲೋಚನೆಗೈದನು. ಬಹುಮೂಲ್ಯ ರತ್ನಗಂಬಳಿಗಳಿಂದ ಅಚ್ಛಾದಿತ ಪರ್ಯಂಕಗಳಲ್ಲಿಯೂ ಶ್ರೇಷ್ಠ ಸಿಂಹಾಸನಗಳಲ್ಲಿಯೂ ಕುಳಿತಿದ್ದ ಅವರು ಸುಖ ಸುಪ್ಪತ್ತಿಗೆಯ ಮೇಲೆ ಕುಳಿತಿದ್ದ ಅಮರರರಂತೆ ವಿರಾಜಿಸುತ್ತಿದ್ದರು. ಆಗ ರಾಜಾ ದುರ್ಯೋಧನನು ಸಾಂತ್ವಪೂರಕ ಸುಮಧುರ ಮಾತುಗಳಿಂದ ಅಲ್ಲಿದ್ದ ಮಹೇಷ್ವಾಸರಿಗೆ ಸಮಯೋಚಿತ ಈ ಮಾತುಗಳನ್ನಾಡಿದನು: “ಬುದ್ಧಿವಂತರಲ್ಲಿ ಶ್ರೇಷ್ಠ ನರೋತ್ತಮರೇ! ಪರಿಸ್ಥಿತಿಯು ಹೀಗಿರುವಾಗ ನಾವೇನು ಮಾಡಬೇಕು? ಮಾಡಬೇಕಾದ ಅತಿಮುಖ್ಯ ಕಾರ್ಯವೇನು ಎನ್ನುವುದನ್ನು ಸಮಾಲೋಚಿಸಿ ಈಗಲೇ ಹೇಳಿ!”
ರಾಜನು ಹೀಗೆ ಹೇಳಲು ಸಿಂಹಾಸನಾರೂಢರಾಗಿದ್ದ ಆ ಯುದ್ಧೋತ್ಸುಕ ನರಸಿಂಹರು ನಾನಾವಿಧದ ಅಂಗಚೇಷ್ಟೆಗಳನ್ನು ಮಾಡಿದರು. ಯುದ್ಧಮಾಡಿಯೇ ಪ್ರಾಣವನ್ನು ತ್ಯಜಿಸಬೇಕೆಂಬ ಅವರ ಮನೋಗತ ಅಭಿಪ್ರಾಯವನ್ನು ಅಂಗಚೇಷ್ಟೆಗಳ ಮೂಲಕವಾಗಿಯೇ ಅರಿತುಕೊಂಡ ಮೇಧಾವೀ ವಾಕ್ಯಜ್ಞ ಆಚಾರ್ಯಪುತ್ರ ಅಶ್ವತ್ಥಾಮನು ರಾಜನ ಮುಖವನ್ನು ನೋಡಿ ಈ ಮಾತನ್ನು ಮುಂದಿರಿಸಿದನು: “ಅರ್ಥಸಾಧನೆಗೆ ಉಪಾಯಗಳೆಂದು ಪಂಡಿತರು ಹೇಳುವ ರಾಗ (ರಾಜನಲ್ಲಿ ಅನುರಾಗ), ಯೋಗ (ಸಾಧನ ಸಂಪತ್ತಿ), ಧಾಕ್ಷ್ಯ (ದಕ್ಷತೆ-ಸಾಮರ್ಥ್ಯ-ಕುಶಲತೆ), ಮತ್ತು ನಯ (ನೀತಿ, ವಿವೇಕದಿಂದ ಕೂಡಿದ ವ್ಯವಹಾರನೈಪುಣ್ಯತೆ, ರಾಜಕೀಯ ಚತುರತೆ) ಇವೆಲ್ಲವೂ ದೈವವನ್ನೇ ಆಶ್ರಯಿಸಿವೆ. ಹತರಾಗಿ ಹೋದ ನಮ್ಮವರು ಕೂಡ ಲೋಕಪ್ರವೀರರಾಗಿದ್ದರು. ದೇವತೆಗಳಂತೆ ಮಹಾರಥರಾಗಿದ್ದರು. ನೀತಿಮಂತರಾಗಿದ್ದರು, ಯುಕ್ತರೂ ದಕ್ಷರೂ ಆಗಿದ್ದು ನಿನ್ನಲ್ಲೆ ಅನುರಕ್ತರಾಗಿದ್ದರು. ಆದರೂ ಕೂಡ ನಮ್ಮ ವಿಜಯದ ಕುರಿತು ನಿರಾಶೆಗೊಳ್ಳಲು ಕಾರಣವಿಲ್ಲ. ಎಲ್ಲ ಕಾರ್ಯಗಳೂ ಉತ್ತಮ ನೀತಿಗೆ ಅನುಸಾರವಾಗಿ ನಡೆದುದೇ ಆದರೆ ದೈವವೂ ಸಹ ಅನುಕೂಲವಾಗಿಯೇ ಪರಿಣಮಿಸುತ್ತದೆ. ಆದುದರಿಂದ ನಾವು ನರರಲ್ಲಿ ಪ್ರವರನಾಗಿರುವ, ಸರ್ವಗುಣಗಳಿಂದ ಯುಕ್ತನಾಗಿರುವ ಕರ್ಣನನ್ನೇ ಸೇನಾಪತಿಯನ್ನಾಗಿ ಮಾಡಿ ಶತ್ರುಗಳನ್ನು ಸದೆಬಡಿಯಬಲ್ಲೆವು.”
ಆಗ ದುರ್ಯೋಧನನು ಪ್ರೀತಿ ಸಂಸ್ಕಾರಯುಕ್ತವಾದ, ಆತ್ಮಹಿತಕ್ಕೆ ತಕ್ಕುದಾದ, ಶುಭವಾದ ಆ ಪ್ರಿಯ ಮಾತುಗಳನ್ನು ಕೇಳಿ ಪ್ರೀತನಾದನು. ಕರ್ಣನ ಬಾಹುವೀರ್ಯವನ್ನು ಆಶ್ರಯಿಸಿದ ದುರ್ಯೋಧನನು ತನ್ನ ಮನಸ್ಸನ್ನು ಸಮವನ್ನಾಗಿಸಿಕೊಂಡು ರಾಧೇಯನಿಗೆ ಇದನ್ನು ಹೇಳಿದನು: “ಕರ್ಣ! ಮಹಾಬಾಹೋ! ನಿನ್ನ ವೀರ್ಯವನ್ನೂ ನನ್ನ ಮೇಲಿರುವ ಪರಮ ಸೌಹಾರ್ದತೆಯನ್ನೂ ನಾನು ತಿಳಿದಿದ್ದೇನೆ. ಹಾಗಿದ್ದರೂ ಈಗ ನಿನಗೆ ಕೆಲವು ಹಿತವಚನಗಳನ್ನು ಹೇಳುತ್ತೇನೆ. ಇದನ್ನು ಕೇಳಿ ನಿನಗಿಷ್ಟವಾದಂತೆ, ನಿನಗೆ ಸೂಕ್ತವೆನಿಸಿದ ಹಾಗೆ ಮಾಡು. ನೀನು ಚೆನ್ನಾಗಿ ತಿಳಿದಿರುವೆ. ನಿತ್ಯವೂ ನನಗೆ ಪರಮ ಆಶ್ರಯನಾಗಿರುವೆ. ನನ್ನ ಸೇನಾಪತಿಗಳಾಗಿದ್ದ ಅತಿರಥರಾಗಿದ್ದ ಭೀಷ್ಮ-ದ್ರೋಣರಿಬ್ಬರೂ ಹತರಾದರು. ಅವರಿಬ್ಬರಿಗಿಂತಲೂ ಹೆಚ್ಚು ಶಕ್ತಿವಂತನಾಗಿರುವ ನೀನು ನನ್ನ ಸೇನಾಪತಿಯಾಗು! ಮಹೇಷ್ವಾಸರಾಗಿದ್ದರೂ ಅವರಿಬ್ಬರು ವೃದ್ಧರಾಗಿದ್ದರು ಮತ್ತು ಧನಂಜಯನನ್ನು ಅಪೇಕ್ಷಿಸುತ್ತಿದ್ದರು. ನಿನ್ನ ವಚನದಂತೆ ನಾನು ಆ ವೀರರನ್ನು ಸೇನಾಪತಿಗಳನ್ನಾಗಿ ಮಾಡಿ ಗೌರವಿಸಿದೆನು. ತಾನು ಪಾಂಡುಪುತ್ರರಿಗೂ ಪಿತಾಮಹನೆಂಬುದನ್ನು ನೆನಪಿಸಿಕೊಂಡು ಭೀಷ್ಮನು ಹತ್ತು ದಿವಸಗಳೂ ಮಹಾರಣದಲ್ಲಿ ಅವರನ್ನು ರಕ್ಷಿಸಿದನು. ನೀನೂ ಶಸ್ತ್ರತ್ಯಾಗಮಾಡಿರಲು ಮಹಾಯುದ್ಧದಲ್ಲಿ ಫಲ್ಗುನನು ಶಿಖಂಡಿಯನ್ನು ಮುಂದಿರಿಸಿಕೊಂಡು ಪಿತಾಮಹ ಭೀಷ್ಮನನ್ನು ಹೊಡೆದುರುಳಿಸಿದನು. ಆ ಮಹಾಭಾಗನು ಶರಶಯ್ಯೆಯ ಮೇಲೆ ಮಲಗಲು ನಿನ್ನ ಮಾತಿನಂತೆ ದ್ರೋಣನು ನಮ್ಮ ನಾಯಕನಾದನು. ಆ ವೃದ್ಧನೂ ಕೂಡ ಶಿಷ್ಯತ್ವದಿಂದಾಗಿ ಪಾರ್ಥರನ್ನು ರಣದಲ್ಲಿ ರಕ್ಷಿಸಿ ಬೇಗನೇ ಧೃಷ್ಟದ್ಯುಮ್ನನಿಂದ ಹತನಾದನು. ಆ ಇಬ್ಬರು ಪ್ರಧಾನರೂ ಹತನಾದನಂತರ ಎಷ್ಟೇ ಯೋಚಿಸಿದರೂ ಸಮರದಲ್ಲಿ ನಿನಗೆ ಸರಿಸಮನಾದ ಯೋಧ ಬೇರೆ ಯಾರನ್ನೂ ನಾನು ಕಾಣಲಾರೆ. ನಮಗೆ ವಿಜಯವನ್ನು ತಂದುಕೊಡಲು ನೀನೇ ಶಕ್ತ ಎನ್ನುವುದರಲ್ಲಿ ಸಂಶಯವಿಲ್ಲ. ಈ ಹಿಂದೆ, ಈಗ ಮತ್ತು ಇದರ ಮುಂದೆ ಕೂಡ ನೀನೇ. ಇದನ್ನು ಅರಿತಿರುವೆ. ಧುರಂಧರನಾದ ನೀನು ರಣದಲ್ಲಿ ಯುದ್ಧದ ಭಾರವನ್ನು ಹೊರಬೇಕಾಗಿದೆ. ನೀನೇ ನಿನ್ನನ್ನು ಸೇನಾನಿಯಾಗಿ ಅಭಿಷೇಕಿಸಿಕೋ! ಅವ್ಯಯ ಸ್ಕಂದನು ಹೇಗೆ ದೇವತೆಗಳ ಸೇನಾನಿಯಾದನೋ ಹಾಗೆ ನೀನೂ ಕೂಡ ಧಾರ್ತರಾಷ್ಟ್ರರ ಈ ಸೇನೆಯನ್ನು ಉದ್ಧರಿಸು. ಮಹೇಂದ್ರನು ದಾನವರನ್ನು ಹೇಗೋ ಹಾಗೆ ಸರ್ವ ಶತ್ರುಗಣಗಳನ್ನೂ ಸಂಹರಿಸು. ವಿಷ್ಣುವನ್ನು ನೋಡಿದ ದಾನವರಂತೆ ರಣದಲ್ಲಿ ನಿಂತಿರುವ ಮಹಾರಥ ನಿನ್ನನ್ನು ನೋಡಿ ಪಾಂಡವರು ಪಾಂಚಾಲರೊಂದಿಗೆ ಓಡಿಹೋಗುವರು. ಆದುದರಿಂದ ನೀನು ಈ ಮಹಾಸೇನೆಯ ಸಂಚಾಲಕನಾಗು! ಪ್ರಯತ್ನಶೀಲನಾಗಿ ನೀನು ನಿಂತಿರಲು ಅಮಾತ್ಯರು, ಪಾಂಚಾಲರು ಮತ್ತು ಸೃಂಜಯರೊಂದಿಗೆ ಪಾಂಡವರು ಗತಚೇತನರಾಗುವರು. ಉದಯಿಸುತ್ತಿರುವ ಸೂರ್ಯನು ತನ್ನ ತೀವ್ರ ತೇಜಸ್ಸಿನಿಂದ ಉರಿದು ಹೇಗೆ ಕತ್ತಲೆಯನ್ನು ಅಪಹರಿಸುತ್ತಾನೋ ಹಾಗೆ ನೀನೂ ಕೂಡ ಶತ್ರುಗಳನ್ನು ಇಲ್ಲದಂತೆ ಮಾಡು!”
ಕರ್ಣನು ಹೇಳಿದನು: “ಗಾಂಧಾರೇ! ರಾಜನ್! ಹಿಂದೆಯೇ ನಾನು ನಿನ್ನ ಸನ್ನಿಧಿಯಲ್ಲಿ ಪುತ್ರರು ಮತ್ತು ಜನಾರ್ದನರೊಂದಿಗೆ ಪಾಂಡವರನ್ನು ಜಯಿಸುತ್ತೇನೆ ಎಂದು ನಿನಗೆ ಹೇಳಿದ್ದೆ. ನಿನ್ನ ಸೇನಾಪತಿಯಾಗುತ್ತೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮಹಾರಾಜ! ಪಾಂಡವರನ್ನು ಗೆದ್ದೆವೆಂದೇ ತಿಳಿದು ಸ್ಥಿರನಾಗು!”
ಇದನ್ನು ಕೇಳಿದ ನೃಪ ದುರ್ಯೋಧನನು, ಅಮರರು ಸ್ಕಂದನನ್ನು ಹೇಗೋ ಹಾಗೆ ಕರ್ಣನನ್ನು ಸೇನಾಪತಿತ್ವದಿಂದ ಸತ್ಕರಿಸಲು, ದೇವತೆಗಳೊಡನೆ ಶತಕ್ರತುವಿನಂತೆ ರಾಜರೊಡನೆ ಮೇಲೆದ್ದನು. ಆಗ ತಕ್ಷಣವೇ ವಿಧಿದೃಷ್ಟ ಕರ್ಮಗಳಿಂದ ವಿಜಯೈಷಿಣರಾದ ದುರ್ಯೋಧನಪ್ರಮುಖ ರಾಜರು ಹೇಮಕುಂಭಗಳಲ್ಲಿ ಅಭಿಮಂತ್ರಿಸಿದ ನೀರನ್ನು ಆನೆಯ ದಂತಗಳಲ್ಲಿ, ಘೇಂಡಾಮೃಗ ಮತ್ತು ಎತ್ತಿನ ಕೊಂಬುಗಳಲ್ಲಿ ತುಂಬಿಸಿ, ಮಣಿ-ಮುತ್ತುಗಳು, ಪುಣ್ಯ ಗಂಧಗಳು ಮತ್ತು ಔಷಧಗಳೊಂದಿಗೆ, ರೇಷ್ಮೆಯ ವಸ್ತ್ರವನ್ನು ಹೊದೆಸಿದ್ದ ಔದುಂಬರಾಸನದಲ್ಲಿ ಸುಖಾಸೀನನಾಗಿರಿಸಿ ಶಾಸ್ತ್ರೋಕ್ತವಾಗಿ ವಿಧಿವಿತ್ತಾಗಿ ಸಂಭಾರ ಸಂಭ್ರಮಗಳಿಂದ ಅವನನ್ನು ಅಭಿಷೇಕಿಸಿದರು. “ಗೋವಿಂದನೊಂದಿಗೆ ಮತ್ತು ಅನುಯಾಯಿಗಳೊಂದಿಗೆ ನೀನು ಮಹಾಯುದ್ಧದಲ್ಲಿ ಪಾರ್ಥರನ್ನು ಜಯಿಸು!” ಎಂದು ಬಂದಿಗಳೂ ದ್ವಿಜರೂ ಅವನನ್ನು ಹರಸಿದರು. “ರಾಧೇಯ! ಉದಯಿಸುವ ಸೂರ್ಯನು ತನ್ನ ಉಗ್ರ ಕಿರಣಗಳಿಂದ ಸದಾ ಕತ್ತಲೆಯನ್ನು ಹೇಗೆ ಹೋಗಲಾಡಿಸುತ್ತಾನೋ ಹಾಗೆ ನೀನು ವಿಜಯಕ್ಕಾಗಿ ಪಾಂಚಾರರೊಂದಿಗೆ ಪಾರ್ಥರನ್ನು ಸಂಹರಿಸು! ಉರಿಯುತ್ತಿರುವ ಸೂರ್ಯನನ್ನು ಗೂಬೆಗಳು ಹೇಗೆ ನೋಡಲಾರವೋ ಹಾಗೆ ನಿನ್ನಿಂದ ಬಿಡಲ್ಪಟ್ಟ ಶರಗಳನ್ನು ಕೇಶವನೊಂದಿಗೆ ಅವರೂ ಕೂಡ ನೋಡಲಾರರು. ಸಮರದಲ್ಲಿ ಶಸ್ತ್ರಗಳನ್ನು ಧರಿಸಿರುವ ಮಹೇಂದ್ರನನ್ನು ದಾನವರು ಹೇಗೆ ಎದುರಿಸಲಾರರೋ ಹಾಗೆ ಪಾಂಚಾಲರೊಂದಿಗೆ ಪಾರ್ಥರು ನಿನ್ನ ಎದುರು ನಿಲ್ಲಲು ಶಕ್ತರಾಗುವುದಿಲ್ಲ.”
ಹೀಗೆ ಅಭಿಷಿಕ್ತನಾದ ರಾಧೇಯನು ಅಮಿತಪ್ರಭೆಯುಳ್ಳವನಾಗಿ ಪ್ರಭೆಯಿಂದ ಇನ್ನೊಬ್ಬ ದಿವಾಕರನೋ ಎನ್ನುವಂತೆ ತೋರುತ್ತಿದ್ದನು. ಕಾಲಚೋದಿತರಾದ ಧೃತರಾಷ್ಟ್ರನ ಮಕ್ಕಳು ರಾಧೇಯನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿ ತಮ್ಮ ಉದ್ದೇಶವು ಸಿದ್ಧಿಯಾಯಿತೆಂದೇ ಭಾವಿಸಿದರು. ಕರ್ಣನೂ ಕೂಡ ಸೇನಾಪತ್ಯವನ್ನು ಪಡೆದು ಸೂರ್ಯೋದಯವಾಗುತ್ತಿರಲು ಸನ್ನದ್ಧರಾಗುವಂತೆ ಸೇನೆಗಳಿಗೆ ಆಜ್ಞಾಪಿಸಿದನು. ಕೌರವ ಪುತ್ರರಿಂದ ಪರಿವೃತನಾಗಿದ್ದ ಕರ್ಣನು ಅಲ್ಲಿ ತಾರಕಾಮಯ ಸಂಗ್ರಾಮದಲ್ಲಿ ದೇವತೆಗಳಿಂದ ಪರಿವೃತನಾದ ಸ್ಕಂದನಂತೆಯೇ ಶೋಭಿಸಿದನು.
ಕರ್ಣನ ಅಭಿಪ್ರಾಯವನ್ನು ತಿಳಿದ ದುರ್ಯೋಧನನು ಆನಂದದಾಯಕ ಮಂಗಳವಾದ್ಯಗಳೊಂದಿಗೆ ಸೇನೆಗಳಿಗೆ ಪ್ರಸ್ಥಾನಗೊಳ್ಳಲು ಆಜ್ಞಾಪಿಸಿದನು. ಒಮ್ಮೆಲೇ, ಇನ್ನೂ ಕತ್ತಲೆಯಾಗಿರುವಾಗಲೇ ಅವನ ಸೇನೆಯಲ್ಲಿ “ಯುದ್ಧಕ್ಕೆ ಸಿದ್ಧರಾಗಿರಿ! ಮುಂದೆ ನಡೆಯಿರಿ!” ಇವೇ ಮುಂತಾದ ಮಹಾ ನಿನಾದವು ಕೇಳತೊಡಗಿತು. ಯುದ್ಧಕ್ಕೆ ಸಜ್ಜಾಗುತ್ತಿದ್ದ ದೊಡ್ಡ ದೊಡ್ಡ ಸಲಗಗಳ, ಆವರಣಯುಕ್ತವಾದ ರಥಗಳ, ಕೆನೆಯುತ್ತಿದ್ದ ಕುದುರೆಗಳ, ಮತ್ತು ಪರಸ್ಪರರನ್ನು ಅವಸರಪಡಿಸುತ್ತಿದ್ದ ಪದಾತಿ ಯೋಧರ ಕೂಗುಗಳ ತುಮುಲ ಶಬ್ಧವು ಜೋರಾಗಿ ಆಕಾಶವನ್ನೂ ವ್ಯಾಪಿಸಿತು. ಆಗ ಶ್ವೇತಪತಾಕೆಯುಳ್ಳ, ಬಾಲಾರ್ಕನ ಬಣ್ಣದ ಕುದುರೆಗಳುಳ್ಳ, ಹೇಮಪೃಷ್ಠದ ಧನುಸ್ಸುಳ್ಳ, ಆನೆಯ ಹಗ್ಗದ ಚಿಹ್ನೆಯ ಕೇತುವುಳ್ಳ, ಬಾಣಗಳಿಂದ ತುಂಬಿಕೊಂಡಿದ್ದ ಭತ್ತಳಿಕೆಗಳು ಮತ್ತು ಅಂಗದಗಳುಳ್ಳ, ಶತಘ್ನೀ, ಕಿಂಕಿಣೀ, ಶೂಲ ಮತ್ತು ತೋರಣಗಳನ್ನು ಹೊರಿಸಿದ್ದ, ವಿಮಲ ಆದಿತ್ಯವರ್ಣದ ಕಾರ್ಮುಕವನ್ನು ಹೊತ್ತಿದ್ದ, ಎತ್ತರದಲ್ಲಿ ಹಾರಾಡುತ್ತಿದ್ದ ಪತಾಕೆಯುಳ್ಳ ರಥದಲ್ಲಿ ಸೂತಪುತ್ರನು ಕಾಣಿಸಿಕೊಂಡನು. ಶಂಖವನ್ನು ಊದುತ್ತಾ ಹೇಮಜಾಲಗಳಿಂದ ವಿಭೂಷಿತ ರಥದಲ್ಲಿ ನಿಂತು, ಬಂಗಾರದಿಂದ ವಿಭೂಷಿತ ಮಹಾ ಚಾಪವನ್ನು ಟೇಂಕರಿಸುತ್ತಿದ್ದ, ಕತ್ತಲೆಯನ್ನು ಕಳೆಯಲು ಉದಯಿಸುತ್ತಿದ್ದ ಸೂರ್ಯನಂತಿದ್ದ ರಥಿಗಳಲ್ಲಿ ಶ್ರೇಷ್ಠ ಮಹೇಷ್ವಾಸ ಕರ್ಣನನ್ನು ನೋಡಿ ಅಲ್ಲಿದ್ದ ಸಹಸ್ರಾರು ಕೌರವರಲ್ಲಿ ಯಾರೂ ಭೀಷ್ಮ ಮತ್ತು ದ್ರೋಣ ಮತ್ತು ಇತರರ ಮರಣದ ಕುರಿತು ದುಃಖಿಸಲಿಲ್ಲ. ಶಂಖದ ಶಬ್ಧದೊಂದಿಗೆ ಯೋಧರನ್ನು ಅವಸಪಡಿಸುತ್ತಾ ಕರ್ಣನು ಕೌರವರ ಸೇನೆಗಳನ್ನು ಹೊರಡಿಸಿದನು. ಆಗ ಪಾಂಡವರನ್ನು ಜಯಿಸಲು ಬಯಸಿದ ಶತ್ರುತಾಪನ ಮಹೇಷ್ವಾಸ ಕರ್ಣನು ಮಕರ ವ್ಯೂಹವನ್ನು ರಚಿಸಿ ಮುಂದುವರೆದನು.ಮಕರದ ಬಾಯಿಯಲ್ಲಿ ಕರ್ಣನಿದ್ದನು. ನೇತ್ರಗಳೆರಡರಲ್ಲಿ ಶಕುನಿ ಮತ್ತು ಉಲೂಕರಿದ್ದರು. ಅದರ ಶಿರಸ್ಸಿನಲ್ಲಿ ದ್ರೋಣಪುತ್ರನೂ, ಕುತ್ತಿಗೆಯಲ್ಲಿ ಎಲ್ಲ ಸೋದರರೂ, ಮಧ್ಯದಲ್ಲಿ ಮಹಾ ಬಲದಿಂದ ಆವೃತನಾದ ರಾಜಾ ದುರ್ಯೋಧನನೂ ಇದ್ದರು. ಅದರ ಎಡಭಾಗದಲ್ಲಿ ನಾರಾಯಣರ ಮತ್ತು ಗೋಪಾಲರ ಸೇನೆಗಳೊಂದಿಗೆ ಕೃತವರ್ಮನು ವ್ಯವಸ್ಥಿತನಾಗಿದ್ದನು. ಅದರ ಬಲಕಾಲಿನಲ್ಲಿ ಗೌತಮನು ತ್ರಿಗರ್ತರು ಮತ್ತು ದಕ್ಷಿಣಾತ್ಯರಿಂದ ಸಂವೃತನಾಗಿ ನಿಂತಿದ್ದನು. ಎಡ ಹಿಮ್ಮಡಿಯ ಭಾಗದಲ್ಲಿ ಮದ್ರದೇಶದ ವಿಶಾಲ ಸೇನೆಯೊಂದಿಗೆ ಶಲ್ಯನು ವ್ಯವಸ್ಥಿತನಾಗಿದ್ದನು. ಬಲಹಿಮ್ಮಡಿಯ ಭಾಗದಲ್ಲಿ ಸುಷೇಣನು ಸಹಸ್ರಾರು ರಥಗಳಿಂದ ಮತ್ತು ನೂರಾರು ಆನೆಗಳಿಂದ ಪರಿವೃತನಾಗಿ ನಿಂತಿದ್ದನು. ಅದರ ಪುಚ್ಚಭಾಗದಲ್ಲಿ ಚಿತ್ರಸೇನ ಮತ್ತು ಚಿತ್ರರು ಮಹಾ ಸೇನೆಗಳಿಂದ ಆವೃತರಾಗಿ ನಿಂತಿದ್ದರು. ಹಾಗೆ ನರವರೋತ್ತಮ ಕರ್ಣನು ಹೊರಡುತ್ತಿರಲು ಧರ್ಮರಾಜನು ಧನಂಜಯನನ್ನು ನೋಡಿ ಹೀಗೆ ಹೇಳಿದನು:
“ಪಾರ್ಥ! ಕರ್ಣನಿಂದ ನಿರ್ಮಿತವಾದ ಮತ್ತು ಮಹಾರಥ ವೀರರಿಂದ ರಕ್ಷಿಸಲ್ಪಟ್ಟಿರುವ ಧಾರ್ತರಾಷ್ಟ್ರರ ಮಹಾಸೇನೆಯನ್ನು ರಣದಲ್ಲಿ ನೋಡು! ಅತಿವೀರರು ಹತರಾಗಿ ಉಳಿದಿರುವ ಧಾರ್ತರಾಷ್ಟ್ರರ ಈ ಮಹಾಸೇನೆಯು ನಿನಗೆ ತೃಣಸಮಾನವೆಂದು ನನಗನ್ನಿಸುತ್ತಿದೆ. ಅವರಲ್ಲಿ ದೇವಾಸುರಗಂಧರ್ವರಿಗೂ, ಕಿನ್ನರಮಹೋರಗಗಳಿಂದಲೂ, ಮೂರುಲೋಕಗಳ ಚರಾಚರಗಳಿಂದಲೂ ಅಜಯ್ಯನಾಗಿರುವ ಮಹೇಷ್ವಾಸ, ರಥಿಗಳಲ್ಲಿ ಶ್ರೇಷ್ಠ, ಸೂತಪುತ್ರನು ವಿರಾಜಿಸುತ್ತಿದ್ದಾನೆ. ಇಂದು ಅವನನ್ನು ಸಂಹರಿಸಿದರೆ ವಿಜಯವು ನಿನ್ನದಾಗುವುದು! ಹನ್ನೆರಡು ವರ್ಷಗಳಿಂದಲೂ ನನ್ನಲ್ಲಿ ನಾಟಿರುವ ಈ ಮುಳ್ಳನ್ನು ನೀನು ಇಂದು ಕೀಳಬೇಕು. ಇದನ್ನು ತಿಳಿದು ನಿನಗಿಷ್ಟವಾದ ರೀತಿಯಲ್ಲಿ ಸೇನೆಗಳ ವ್ಯೂಹವನ್ನು ರಚಿಸು!”
ಅಣ್ಣನ ಆ ಮಾತನ್ನು ಕೇಳಿ ಶ್ವೇತವಾಹನ ಪಾಂಡವನು ತನ್ನ ಸೇನೆಯನ್ನು ಕೌರವರಿಗೆ ಪ್ರತಿವ್ಯೂಹವಾಗಿ ಅರ್ಧಚಂದ್ರಾಕಾರದ ವ್ಯೂಹದಲ್ಲಿ ರಚಿಸಿದನು. ಅದರ ಎಡಭಾಗದಲ್ಲಿ ಭೀಮಸೇನನು ವ್ಯವಸ್ಥಿತನಾಗಿದ್ದನು. ಬಲಭಾಗದಲ್ಲಿ ಧೃಷ್ಟದ್ಯುಮ್ನನಿದ್ದನು. ವ್ಯೂಹದ ಮಧ್ಯದಲ್ಲಿ ಕೃಷ್ಣಸಾರಥಿ ಸಾಕ್ಷಾತ್ ಪಾಂಡವನೂ, ಹಿಂದೆ ನಕುಲ ಸಹದೇವರೂ ಧರ್ಮರಾಜನೂ ಇದ್ದರು. ಅರ್ಜುನನ ಚಕ್ರರಕ್ಷಕರಾಗಿದ್ದ ಪಾಂಚಾಲರಾಜಕುಮಾರ ಯುಧಾಮನ್ಯು ಮತ್ತು ಉತ್ತಮೌಜಸರು ಯುದ್ಧದಲ್ಲಿ ಅಜೇಯರಾಗಿದ್ದರು. ಉಳಿದ ವೀರ ನೃಪತಿಯರು ಕವಚಧಾರಿಗಳಾಗಿ ವ್ಯೂಹದಲ್ಲಿ ತಮಗನಿಸಿದಂತೆ, ಉತ್ಸಾಹವಿದ್ದಂತೆ ಮತ್ತು ಸತ್ತ್ವವಿದ್ದಂತೆ ನಿಂತಿದ್ದರು. ಹೀಗೆ ಮಹಾವ್ಯೂಹವನ್ನು ರಚಿಸಿ ಪಾಂಡವರೂ ಕೌರವರೂ ಯುದ್ಧದಲ್ಲಿಯೇ ಮನಸ್ಸನ್ನಿಟ್ಟರು.
ಸೂತಪುತ್ರನು ರಚಿಸಿದ್ದ ಕೌರವ ಸೇನೆಯ ವ್ಯೂಹವನ್ನು ನೋಡಿ ದುರ್ಯೋಧನನು ಅನುಯಾಯಿಗಳೊಂದಿಗೆ ಪಾಂಡವರು ಹತರಾದರೆಂದೇ ಭಾವಿಸಿದನು. ಹಾಗೆಯೇ ಪಾಂಡವೀ ಸೇನೆಯ ವ್ಯೂಹವನ್ನು ನೋಡಿ ಯುಧಿಷ್ಠಿರನು ಕರ್ಣನೊಂದಿಗೆ ಧಾರ್ತರಾಷ್ಟ್ರರು ಹತರಾದರೆಂದೇ ಭಾವಿಸಿದನು. ಆಗ ಒಮ್ಮೆಲೇ ಶಂಖ, ಭೇರಿ, ಪಣವ, ಅನಕ, ಗೋಮುಖಗಳನ್ನು ಜೋರಾಗಿ ಮೊಳಗಿಸಲು ಎಲ್ಲಕಡೆ ಶಬ್ಧವುಂಟಾಯಿತು. ಎರಡೂ ಸೇನೆಗಳಲ್ಲಿ ಜಯವನ್ನು ಬಯಸಿದ್ದ ಶೂರರ ಸಿಂಹನಾದಗಳ ಮಹಾಗರ್ಜನೆಯು ಕೇಳಿಬಂದಿತು. ಕುದುರೆಗಳ ಹೇಂಕಾರಗಳೂ, ಆನೆಗಳ ಘೀಂಕಾರವೂ, ರಥಗಾಲಿಗಳ ಉಗ್ರ ಶಬ್ಧಗಳೂ ಉದ್ಭವಿಸಿದವು. ವ್ಯೂಹದ ಮುಖದಲ್ಲಿ ಕವಚಧಾರಿಯಾಗಿದ್ದ ಮಹೇಷ್ವಾಸ ಕರ್ಣನನ್ನು ನೋಡಿ ದ್ರೋಣನನ್ನು ಕಳೆದುಕೊಂಡಿದುದರ ವ್ಯಸನವು ಯಾರಿಗೂ ಇಲ್ಲದಂತಾಗಿ ತೋರುತ್ತಿತ್ತು. ಎರಡೂ ಸೇನೆಗಳಲ್ಲಿ ಮಹಾಸತ್ತ್ವಯುತ ಪ್ರಹೃಷ್ಟ ಯುದ್ಧಮಾಡಲು ಬಯಸಿದ್ದ ಅನ್ಯೋನ್ಯರನ್ನು ಸಂಹರಿಸುವ ಛಲವುಳ್ಳ ನರ-ಕುಂಜರಗಳಿದ್ದವು. ಹಾಗೆ ಸಂರಬ್ಧರಾಗಿ ಪ್ರಯತ್ನಪಟ್ಟು ಅನ್ಯೋನ್ಯರನ್ನು ನೋಡುತ್ತಾ ಸೇನೆಗಳ ಮಧ್ಯದಲ್ಲಿ ಕರ್ಣ-ಪಾಂಡವರು ರಾರಾಜಿಸುತ್ತಿದ್ದರು. ಯುದ್ಧಮಾಡುವ ಉತ್ಸಾಹದಿಂದ ನೃತ್ಯಮಾಡುತ್ತಿರುವವೋ ಎನ್ನುವಂತೆ ಪರಸ್ಪರರ ಪಕ್ಷ ಪ್ರಪಕ್ಷಗಳಿಗೆ ತಾಗುತ್ತಾ ಆ ಸೇನೆಗಳೆರಡೂ ಮೇಲೆರಗಿದವು. ಆಗ ಅನ್ಯೋನ್ಯರನ್ನು ಸಂಹರಿಸುವುದರಲ್ಲಿ ದೃಢರಾಗಿದ್ದ ನಾರವಾರಣವಾಜಿಗಳ ಮತ್ತು ರಥಿಗಳ ಯುದ್ಧವು ಪುನಃ ಪ್ರಾರಂಭವಾಯಿತು.