Image result for flowers against white backgroundಯುಧಿಷ್ಠಿರನು ಸೂರ್ಯದೇವನಿಂದ ಅಕ್ಷಯಪಾತ್ರೆಯನ್ನು ಪಡೆದುದು

ಶೌನಕನು ಹೀಗೆ ಹೇಳಲು ಕುಂತೀಪುತ್ರ ಯುಧಿಷ್ಠಿರನು ಸಹೋದರರೊಂದಿಗೆ ಪುರೋಹಿತ ಧೌಮ್ಯನ ಬಳಿಸಾರಿ ಹೇಳಿದನು:

“ಈ ವೇದಪಾರಂಗತ ಬ್ರಾಹ್ಮಣರು ನನ್ನನ್ನು ಅನುಸರಿಸಿ ಬಂದಿದ್ದಾರೆ. ಆದರೆ ನಾನು ಅವರನ್ನು ಪಾಲಿಸಲು ಶಕ್ತನಾಗಿಲ್ಲ ಎಂದು ಅತೀವ ದುಃಖಿತನಾಗಿದ್ದೇನೆ. ಅವರನ್ನು ತ್ಯಜಿಸಲೂ ಶಕ್ತನಿಲ್ಲ ಮತ್ತು ಅವರಿಗೆ ಕೊಡಲೂ ಶಕ್ತನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಏನು ಮಾಡಬೇಕು?”

ಧರ್ಮಭೃತರಲ್ಲಿ ಶ್ರೇಷ್ಠ ಧೌಮ್ಯನು ಧರ್ಮಮಾರ್ಗವನ್ನು ಹುಡುಕುತ್ತಾ ಒಂದು ಕ್ಷಣ ಯೋಚಿಸಿ ಯುಧಿಷ್ಠಿರನಿಗೆ ಹೇಳಿದನು:

“ಹಿಂದೆ ಸೃಷ್ಟಿಯ ಸಮಯದಲ್ಲಿ ಪ್ರಾಣಿಗಳು ಅತ್ಯಂತ ಹಸಿವೆಯಲ್ಲಿದ್ದಾಗ ಅವರ ಮೇಲೆ ಅನುಕಂಪಗೊಂಡು ಸವಿತ ಸೂರ್ಯನು ಅವರನ್ನು ತಂದೆಯಂತೆ ಪಾಲಿಸಿದನು. ಅವನು ಉತ್ತರಾಯಣಕ್ಕೆ ಹೋಗಿ ತನ್ನ ಕಿರಣಗಳಿಂದ ತೇಜೋರಸವನ್ನು ತಂದು ದಕ್ಷಿಣಾಯನಕ್ಕೆ ಹಿಂದಿರುಗಿ ಭೂಮಿಯ ಮೇಲೆ ಬಿತ್ತಿದನು. ಈ ರೀತಿ ಭೂಮಿಯೊಳಗೆ ಸೇರಿದ್ದ ಸೂರ್ಯನ ಕಿರಣಗಳಲ್ಲಿದ್ದ ರಸಗಳನ್ನು ಔಶಧಿಗಳ ಅಧಿಪತಿ ಚಂದ್ರನು ತನ್ನ ಶೀತಲ ಕಿರಣಗಳಿಂದ ಮೋಡಗಳನ್ನಾಗಿ ಪರಿವರ್ತಿಸಿ ಭೂಮಿಯ ಮೇಲೆ ಮಳೆಗರೆದನು. ಚಂದ್ರನ ತೇಜಸ್ಸಿನಿಂದ ಒದ್ದೆಯಾದ ಭೂಗತ ರವಿಯು ಭೂಮಿಯ ಪ್ರಾಣಿಗಳಿಗೆ ಆಹಾರ ಮತ್ತು ಷಡ್ರಸ ಔಷಧಿಗಳಾಗಿ ಬೆಳೆದನು. ಹೀಗೆ ಭೂತಗಳ ಪ್ರಾಣಧಾರಕ ಅನ್ನವು ಭಾನುಮಯವು. ಅವನೇ ಸರ್ವಭೂತಗಳ ಪಿತ. ಆದುದರಿಂದ ಅವನಿಗೇ ಶರಣು ಹೋಗು. ಜನ್ಮ-ಕರ್ಮಗಳಿಂದ ಶುದ್ಧ ಮಹಾತ್ಮ ರಾಜರು ಪುಷ್ಕಲ ತಪಸ್ಸಿನಿಂದಲೇ ಸರ್ವ ಪ್ರಜೆಗಳನ್ನೂ ಉದ್ಧರಿಸುತ್ತಾರೆ. ಭೀಮ, ಕಾರ್ತವೀರ್ಯ, ವೈನ್ಯ ಮತ್ತು ನಹುಷ ಇವರೂ ಕೂಡ ತಪಸ್ಸು-ಯೋಗ-ಸಮಾಧಿಗಳಲ್ಲಿದ್ದುಕೊಂಡು ಪ್ರಜೆಗಳಿಗೊದಗಿದ ಆಪತ್ತುಗಳನ್ನು ನಿವಾರಿಸಿದರು. ಕರ್ಮಗಳಿಂದ ಶುದ್ಧನಾದ ನೀನೂ ಕೂಡ ಅವರಂತೆ ತಪಸ್ಸನ್ನು ಮಾಡಿ ಈ ದ್ವಿಜರನ್ನು ಪರಿಪಾಲಿಸು!”

ಧೌಮ್ಯನು ಹೀಗೆ ಸಮಯೋಚಿತ ಮಾತುಗಳನ್ನಾಡಲು ವಿಶುದ್ಧಾತ್ಮ ಧರ್ಮರಾಜನು ಉತ್ತಮ ತಪಸ್ಸಿನಲ್ಲಿ ನಿರತನಾದನು. ಆ ಧರ್ಮಾತ್ಮ ಜಿತೇಂದ್ರಿಯನು ಗಾಳಿಯನ್ನು ಮಾತ್ರ ಸೇವಿಸುತ್ತಾ ಯೋಗಸ್ಥನಾಗಿ ಪುಷ್ಪ-ಉಪಹಾರ-ಬಲಿಗಳಿಂದ ದಿವಾಕರನನ್ನು ಅರ್ಚಿಸಿ ಗಂಗಾನದಿಯ ನೀರನ್ನು ಮುಟ್ಟಿ ಪ್ರಾಣಾಯಾಮ ನಿರತನಾದನು. ಆಗ ಅವನು ಶಕ್ರನು ಕೀರ್ತನೆ ಮಾಡಿದ ಸೂರ್ಯನ ಪುಣ್ಯಕರ ನೂರಾಎಂಟು ನಾಮಾವಳಿಗಳಿಂದ ಅರ್ಚಿಸಿದನು. ಶಕ್ರನಿಂದ ಇದನ್ನು ನಾರದನು ಪಡೆದನು ಮತ್ತು ನಂತರ ನಾರದನು ಅದನ್ನು ಧೌಮ್ಯನಿಗೆ ಉಪದೇಶಿಸಿದನು. ಧೌಮ್ಯನಿಂದ ಪಡೆದ ಯುಧಿಷ್ಠಿರನು ಈ ನೂರಾಎಂಟು ನಾಮಾವಳಿಗಳನ್ನು ಜಪಿಸಿ ಸರ್ವಕಾಮಗಳನ್ನೂ ಹೊಂದಿದನು. ಸೂರ್ಯನ ನೂರಾಎಂಟು ನಾಮಾವಳಿಗಳು ಇಂತಿವೆ:

(೧) ಸೂರ್ಯ (೨) ಆರ್ಯಮ (೩) ಭಗ (೪) ತ್ವಷ್ಟ (೫) ಪೂಷ (೬) ಅರ್ಕ (೭) ಸವಿತ (೮) ರವಿ (೯) ಗಭಸ್ತಿಮಾನ್ (೧೦) ಅಜ (೧೧) ಕಾಲ (೧೨) ಮೃತ್ಯು (೧೩) ಧಾತಾ (೧೪) ಪ್ರಭಾಕರ (೧೫) ಪೃಥ್ವಿ (೧೬) ಆಪಃ (೧೭) ತೇಜಸ್ (೧೮) ಖ (೧೯) ವಾಯು (೨೦) ಪರಾಯಣ (೨೧) ಸೋಮ (೨೨) ಬೃಹಸ್ಪತಿ (೨೩) ಶುಕ್ರ (೨೪) ಬುಧ (೨೫) ಅಂಗಾರಕ (೨೬) ಇಂದ್ರ (೨೭) ವಿವಸ್ವಾನ್ (೨೮) ದೀಪ್ತಾಂಶ (೨೯) ಶುಚಿ (೩೦) ಶೌರಿ (೩೧) ಶನೈಶ್ಚರ (೩೨) ಬ್ರಹ್ಮ (೩೩) ವಿಷ್ಣು (೩೪) ರುದ್ರ (೩೫) ಸ್ಕಂದ (೩೬) ವೈಶ್ರವಣ (೩೭) ಯಮ (೩೮) ವೈದ್ಯುತ (೩೯) ಜಠರ (೪೦) ಅಗ್ನಿ (೪೧) ಇಂಧನ (೪೨) ತೇಜಸಾಂಪತಿ (೪೩) ಧರ್ಮಧ್ವಜ (೪೪) ವೇದಕರ್ತ (೪೫) ವೇದಾಂಗ (೪೬) ವೇದವಾಹನ (೪೭) ಕೃತ (೪೮) ತ್ರೇತ (೪೯) ದ್ವಾಪರ (೫೦) ಕಲಿ (೫೧) ಸರ್ವಾಮರಾಶ್ರಯ (೫೨) ಕಲಾ ಕಾಷ್ಠ (೫೩) ಮುಹೂರ್ತ (೫೪) ಪಕ್ಷ (೫೫) ಮಾಸ (೫೬) ಸಂವತ್ಸರಕಾರ (೫೭) ಅಶ್ವತ್ಥ (೫೮) ಕಾಲಚಕ್ರ (೫೯) ವಿಭಾವಸು (೬೦) ಪುರುಷ (೬೧) ಶಾಶ್ವತ (೬೨) ಯೋಗಿ (೬೩) ವ್ಯಕ್ತಾವ್ಯಕ್ತ (೬೪) ಸನಾತನ (೬೫) ಲೋಕಾಧ್ಯಕ್ಷ (೬೬) ಪ್ರಜಾಧ್ಯಕ್ಷ (೬೭) ವಿಶ್ವಕರ್ಮ (೬೮) ತಮೋನುದ (೬೯) ವರುಣ (೭೦) ಸಾಗರ (೭೧) ಅಂಶು (೭೨) ಜೀಮೂತ (೭೩) ಜೀವನ (೭೪) ಅರಿಹ (೭೫) ಭೂತಾಶ್ರಯ (೭೬) ಭೂತಪತಿ (೭೭) ಸರ್ವಭೂತನಿಷೇವಿತ (೭೮) ಮಣಿ (೭೯) ಸುವರ್ಣ (೮೦) ಭೂತಾದಿ (೮೧) ಕಾಮದ (೮೨) ಸರ್ವತೋಮುಖ (೮೩) ಜಯ (೮೪) ವಿಶಾಲ (೮೫) ವರದ (೮೬) ಶೀಘ್ರಗ (೮೭) ಪ್ರಾಣಧಾರಣ (೮೮) ಧನ್ವಂತರಿ (೮೯) ಧೂಮಕೇತು (೯೦) ಆದಿದೇವ (೯೧) ಆದಿತ್ಯ (೯೨) ದ್ವಾದಶಾತ್ಮ (೯೩) ಅರವಿಂದಾಕ್ಷ (೯೪) ಪಿತ (೯೫) ಮಾತಾ (೯೬) ಪಿತಾಮಹ (೯೭) ಸ್ವರ್ಗದ್ವಾರ (೯೮) ಪ್ರಜಾದ್ವಾರ (೯೯) ಮೋಕ್ಷದ್ವಾರ (೧೦೦) ತ್ರಿವಿಷ್ಟಪ (೧೦೧) ದೇಹಕರ್ತಾರ (೧೦೨) ಪ್ರಶಾಂತಾತ್ಮ (೧೦೩) ವಿಶ್ವಾತ್ಮ (೧೦೪) ವಿಶ್ವತೋಮುಖ (೧೦೫) ಚರಾಚರಾತ್ಮ (೧೦೬) ಸೂಕ್ಷ್ಮಾತ್ಮ (೧೦೭) ಮೈತ್ರಿ (೧೦೮) ವಪುಶಾನ್ವಿತ.

Image result for sun vessel to Yudhishthirಆಗ ದಿವಾಕರನು ಪ್ರೀತನಾಗಿ ಹುತಾಶನನಂತೆ ಉರಿದು ಬೆಳಗುತ್ತಿರುವ ತನ್ನ ಸ್ವರೂಪವನ್ನು ಪಾಂಡವನಿಗೆ ತೋರಿಸಿದನು.

“ರಾಜನ್! ನೀನು ಬಯಸಿದುದೆಲ್ಲವನ್ನೂ ಪಡೆಯುತ್ತೀಯೆ. ಹನ್ನೆರಡು ವರ್ಷಗಳು ನಾನು ನಿನಗೆ ಆಹಾರವನ್ನು ನೀಡುತ್ತೇನೆ. ನಿನ್ನ ಅಡುಗೆಮನೆಯಲ್ಲಿ ಫಲ-ಗೆಡ್ಡೆಗೆಣಸುಗಳು-ತರಕಾರಿ-ಪದಾರ್ಥಗಳು ಈ ನಾಲ್ಕೂ ತರಹದ ಅನ್ನಗಳು ಅಕ್ಷಯವಾಗುತ್ತವೆ. ವಿವಿಧ ಸಂಪತ್ತೂ ನಿನ್ನದಾಗುತ್ತದೆ!”

ಎಂದು ಹೇಳಿ ಅಂತರ್ಧಾನನಾದನು. ಆ ವರವನ್ನು ಪಡೆದ ಯುಧಿಷ್ಠಿರನು ನೀರಿನಿಂದ ಮೇಲೆದ್ದು ಧೌಮ್ಯನ ಪಾದಗಳನ್ನು ಹಿಡಿದನು ಮತ್ತು ಸಹೋದರರನ್ನು ಆಲಂಗಿಸಿದನು. ದ್ರೌಪದಿಯೊಡನೆ ಯುಧಿಷ್ಠಿರನು ತನ್ನ ಅಡುಗೆಮನೆಯಲ್ಲಿ ಅಡುಗೆಯನ್ನು ಸಿದ್ಧಗೊಳಿಸಿದನು. ನಾಲ್ಕು ವಿಧದ ವನಪದಾರ್ಥಗಳಿಂದ ತಯಾರಿಸಿದ ಆ ಅಡುಗೆಯು ಅಕ್ಷಯವಾಯಿತು ಮತ್ತು ಯುಧಿಷ್ಠಿರನು ಆ ಆಹಾರದಿಂದ ದ್ವಿಜರಿಗೆಲ್ಲ ಭೋಜನವನ್ನಿತ್ತನು. ವಿಪ್ರರಿಗೆ ಭೋಜನವನ್ನಿತ್ತು, ತನ್ನ ಅನುಜರಿಗೂ ಊಟವಾದ ನಂತರ ಉಳಿದ ವಿಘಸವನ್ನು ಯುಧಿಷ್ಠಿರನು ಸೇವಿಸಿದನು. ಯುಧಿಷ್ಠಿರನಿಗೆ ನೀಡಿ ಉಳಿದುದನ್ನು ದ್ರೌಪದಿಯು ಉಂಡಳು.

ಈ ರೀತಿ ದಿವಾಕರನಂತೆಯೇ ಬೆಳಗುತ್ತಿದ್ದ ಯುಧಿಷ್ಠಿರನು ದಿವಾಕರನಿಂದ ಮನೋಭಿಲಾಷೆ ಕಾಮನೆಗಳನ್ನು ಹೊಂದಿ ಅದನ್ನು ಬ್ರಾಹ್ಮಣರಿಗೆ ನೀಡಿದನು. ಪುರೋಹಿತನ ನೇತೃತ್ವದಲ್ಲಿ ವಿಧಿಮಂತ್ರಪ್ರಮಾಣದಂತೆ ತಿಥಿ-ನಕ್ಷತ್ರ-ಪರ್ವಗಳ ಯಜ್ಞಾರ್ಥಿಗಳಾದರು. ಅನಂತರ ದ್ವಿಜರಿಂದ ಪರಿವೃತರಾಗಿ, ಧೌಮ್ಯನೊಂದಿಗೆ ಆ ಪಾಂಡವರು ಮಂಗಳಕರ ಪ್ರಯಾಣಮಾಡಿ ಕಾಮ್ಯಕವನ್ನು ತಲುಪಿದರು.

Leave a Reply

Your email address will not be published. Required fields are marked *