Related imageಶೌನಕ ಗೀತೆ

ನಕ್ಷತ್ರಗಳಿಂದೊಡಗೂಡಿದ ರಾತ್ರಿ ಕಳೆದು ಪ್ರಭಾತವಾಗಲು ಭಿಕ್ಷವನ್ನೇ ಉಂಡು ಜೀವಿಸುವ ವಿಪ್ರರು ವನಕ್ಕೆ ಹೊರಡಲು ಸಿದ್ಧರಾಗಿ ಪಾಂಡವರ ಎದಿರು ನಿಂತರು. ಆಗ ಕುಂತೀಪುತ್ರ ರಾಜ ಯುಧಿಷ್ಠಿರನು ಅವರನ್ನು ಉದ್ದೇಶಿಸಿ ಇಂತೆಂದನು:

“ರಾಜ್ಯ, ಸಂಪತ್ತು ಮತ್ತು ಎಲ್ಲವನ್ನೂ ಕಳೆದುಕೊಂಡು ದುಃಖಿತರಾದ ನಾವು ವನಕ್ಕೆ ತೆರಳಿ ಫಲ-ಮೂಲಗಳನ್ನು ಸೇವಿಸಿ ಜೀವಿಸುತ್ತೇವೆ. ವನವು ಹಲವು ಆಪತ್ತುಗಳು, ಹಲವಾರು ಕ್ರೂರಪ್ರಾಣಿಗಳು ಮತ್ತು ಸರ್ಪಗಳಿಂದ ತುಂಬಿದೆ. ಅಲ್ಲಿ ನಿಮಗೆ ನಿಜವಾಗಿಯೂ ಅತ್ಯಂತ ಕಷ್ಟಗಳಾಗುತ್ತವೆ ಎನ್ನುವುದು ನನ್ನ ಯೋಚನೆ. ಬ್ರಾಹ್ಮಣರ ಪರಿಕ್ಲೇಶವು ದೇವತೆಗಳನ್ನೂ ಹಿಡಿಯುತ್ತದೆ. ಇನ್ನು ನನ್ನಂಥವನನ್ನೇನು? ವಿಪ್ರರೇ! ನಿಮಗಿಷ್ಟವಾದರೆ ಹಿಂದಿರುಗಿರಿ!”

ಅದಕ್ಕೆ ಪ್ರತ್ಯುತ್ತರವಾಗಿ ಬ್ರಾಹ್ಮಣರು ಹೇಳಿದರು:

“ರಾಜ! ನೀನು ಹೋಗುತ್ತಿರುವಲ್ಲಿಗೇ ನಾವೂ ಹೋಗಲು ಸಿದ್ಧರಾಗಿದ್ದೇವೆ. ನಿನ್ನ ಭಕ್ತರಾದ, ನಿನ್ನಲ್ಲಿ ಧರ್ಮವನ್ನೇ ಕಾಣುವ, ನಮ್ಮನ್ನು ಪರಿತ್ಯಜಿಸಬೇಡ! ವಿಶೇಷವಾಗಿ ಸದಾಚಾರವನ್ನೇ ಅವಲಂಬಿಸಿರುವ ಬ್ರಾಹ್ಮಣ ಭಕ್ತರಿಗೆ ದೇವತೆಗಳೂ ಅನುಕಂಪವನ್ನು ತೋರಿಸುತ್ತಾರೆ.”

ಯುಧಿಷ್ಠಿರನು ಪುನಃ ಹೇಳಿದನು:

“ದ್ವಿಜರೇ! ನನಗೂ ಕೂಡ ಬ್ರಾಹ್ಮಣರಲ್ಲಿ ಪರಮ ಭಕ್ತಿಯಿದೆ. ಆದರೆ ನಮ್ಮ ಒಟ್ಟಿಗೆ ಬರುವ ನಿಮ್ಮ ಕಷ್ಟಗಳನ್ನು ನನಗೆ ಸಹಿಸಲಾಗುತ್ತಿಲ್ಲ. ಫಲ-ಮೂಲ-ಮೃಗ ಮುಂತಾದವುಗಳನ್ನೇ ಸೇವಿಸಲಿರುವ ನನ್ನ ಈ ತಮ್ಮಂದಿರು ದ್ರೌಪದಿಗೆ ಆದ ಅಪಮಾನ ಮತ್ತು ರಾಜ್ಯಾಪಹರಣದ ಶೋಕದಿಂದ ವಿಮೋಹಿತರಾಗಿದ್ದಾರೆ. ಇನ್ನೂ ಹೆಚ್ಚಿನ ಕಷ್ಟಗಳನ್ನು ನಾನು ಅವರಿಗೆ ಕೊಡಲು ಸಾಧ್ಯವಿಲ್ಲ. ಅವರು ಸಾಕಷ್ಟು ದುಃಖಿತರಾಗಿದ್ದಾರೆ.”

ಬ್ರಾಹ್ಮಣರು ಹೇಳಿದರು:

“ಪಾರ್ಥಿವ! ನಮ್ಮ ಆಹಾರದ ಕುರಿತು ನಿನ್ನ ಹೃದಯಕ್ಕೆ ಚಿಂತೆ ಬೇಡ. ನಮ್ಮ ಆಹಾರವನ್ನು ವನದಿಂದ ನಾವೇ ಹುಡುಕಿ ತಂದುಕೊಳ್ಳುತ್ತೇವೆ. ಅನುಧ್ಯಾನ-ತಪಗಳಿಂದ ನಾವು ನಿನಗೆ ಶುಭವನ್ನು ತರುತ್ತೇವೆ. ಅನುಕೂಲಕರ ಕಥೆ ಮುಂತಾದವುಗಳಿಂದ ವನದಲ್ಲಿ ನಾವು ನಿಮ್ಮನ್ನು ರಮಿಸುತ್ತೇವೆ.”

ಯುಧಿಷ್ಠಿರನು ಹೇಳಿದನು:

“ಹಾಗೆಯೇ ಆಗಲಿ! ನಾನೂ ಕೂಡ ಬ್ರಾಹ್ಮಣರ ಸಂಘದಲ್ಲಿ ರಮಿಸುತ್ತೇನೆ ಎನ್ನುವುದರಲ್ಲಿ ಸಂದೇಹವಿಲ್ಲ. ನಾನು ಈ ಸ್ಥಿತಿಗೆ ಇಳಿದಿದ್ದೇನೆಂದು ನನ್ನಲ್ಲಿ ನ್ಯೂನಭಾವವನ್ನು ಕಾಣುತ್ತಿದ್ದೇನೆ. ನನ್ನ ಮೇಲಿನ ಭಕ್ತಿಯಿಂದ ಕಷ್ಟಗಳಿಗೆ ಅನರ್ಹರಾದ ನೀವೆಲ್ಲರೂ ಸ್ವಯಂ ನೀವೇ ಆಹಾರವನ್ನು ತರುವುದನ್ನು ನಾನು ಹೇಗೆ ನೋಡಲಿ? ಪಾಪಿ ಧಾರ್ತರಾಷ್ಟ್ರರಿಗೆ ಧಿಕ್ಕಾರ!”

ಹೀಗೆ ಹೇಳಿ ನೃಪನು ಚಿಂತಿಸುತ್ತಾ ನೆಲದ ಮೇಲೆಯೇ ಕುಳಿತುಕೊಂಡನು. ಬ್ರಾಹ್ಮಣರ ಮಧ್ಯದಲ್ಲಿದ್ದ ಯೋಗ-ಸಾಂಖ್ಯಗಳಲ್ಲಿ ಕುಶಲ ಶೌನಕ ಎಂಬ ಹೆಸರಿನ ಓರ್ವ ಆತ್ಮರತಿ ವಿದ್ವಾನ್ ದ್ವಿಜನು ರಾಜನಿಗೆ ಇಂತೆಂದನು:

“ಸಾವಿರಗಟ್ಟಲೆ ಶೋಕಗಳು ಮತ್ತು ನೂರಾರು ಭಯಗಳು ದಿನದಿನವೂ ಮೂಢರನ್ನು ಕಾಡುತ್ತವೆ. ಪಂಡಿತರನ್ನಲ್ಲ! ನಿನ್ನಂಥಹ ಬುದ್ಧಿವಂತರು ಜ್ಞಾನಕ್ಕೆ ವಿರುದ್ಧವಾದ, ಅನೇಕ ದೋಷಗಳಿರುವ ಮತ್ತು ಶ್ರೇಯಸ್ಸನ್ನು ನಾಶಗೊಳಿಸುವ ಕರ್ಮಗಳನ್ನೆಸಗುವುದಿಲ್ಲ. ರಾಜ! ನಿನ್ನಲ್ಲಿ ಅಷ್ಟಾಂಗಗಳನ್ನೊಡಗೂಡಿದ ಸರ್ವ ಅಶ್ರೇಯಗಳನ್ನೂ ನಾಶಪಡಿಸುವ ಶೃತಿ-ಸ್ಮೃತಿಸಮಾಯುಕ್ತ ಬುದ್ಧಿಯಿದೆ. ನಿನ್ನಂಥವರು ಕಷ್ಟ-ಕಾರ್ಪಣ್ಯಗಳಿಂದ ಮತ್ತು ಸೃಜನರ ಕಷ್ಟಗಳಿಂದ ದುಃಖಪಟ್ಟು ಶರೀರ-ಮನಸ್ಸುಗಳಲ್ಲಿ ಕುಸಿಯುವುದಿಲ್ಲ. ಹಿಂದೆ ಮಹಾತ್ಮ ಜನಕನು ನೀಡಿದ ಆತ್ಮವನ್ನು ಸ್ಥಿರಗೊಳಿಸುವಂಥಹ ಶ್ಲೋಕಗಳ ಗೀತೆಯನ್ನು ಹೇಳುತ್ತೇನೆ. ಕೇಳು.

"ಮನಸ್ಸು ಮತ್ತು ದೇಹಗಳಲ್ಲಿ ಉದ್ಭವಿಸುವ ಎರಡು ದುಃಖಗಳು ಈ ಜಗತ್ತನ್ನು ಕಾಡುತ್ತವೆ. ಇವುಗಳನ್ನು ಪ್ರತ್ಯೇಕವಾಗಿ ಮತ್ತು ಒಟ್ಟಿಗೇ ಹೇಗೆ ಕಡಿಮೆಮಾಡಿಕೊಳ್ಳಬಹುದೆನ್ನುವುದನ್ನು ಹೇಳುತ್ತೇನೆ. ಕೇಳು. ವ್ಯಾಧಿ, ಶ್ರಮ, ಇಷ್ಟವಿಲ್ಲದುದನ್ನು ಹೊಂದುವುದು, ಮತ್ತು ಇಷ್ಟವಿದ್ದವುಗಳನ್ನು ಕಳೆದುಕೊಳ್ಳುವುದು – ಇವೇ ನಾಲ್ಕು ಶರೀರ ಜನ್ಮ ದುಃಖಕ್ಕೆ ಕಾರಣಗಳು. ಈ ಆದಿವ್ಯಾಧಿಗಳನ್ನು ಎರಡು ಕ್ರಿಯಾಯೋಗಗಳಿಂದ ನಿವಾರಿಸಿಕೊಳ್ಳಬಹುದು: ಅವುಗಳಿಗೆ ಪ್ರತೀಕಾರಗಳನ್ನು ಮಾಡುವುದರಿಂದ ಮತ್ತು ಅವುಗಳ ಕುರಿತು ಯಾವಾಗಲೂ ಚಿಂತಿಸದೇ ಇರುವುದರಿಂದ. ಬುದ್ಧಿವಂತ ವೈದ್ಯರು ಮನುಷ್ಯನ ದುಃಖವನ್ನು ಮೊದಲು ಪ್ರೀತಿಕರ ಮಾತುಗಳನ್ನಾಡುವದರಿಂದಲೂ ಮತ್ತು ಭೋಗವಸ್ತುಗಳನ್ನು ನೀಡುವುದರ ಮೂಲಕವೂ ಉಪಶಮನಗೊಳಿಸಲು ಪ್ರಯತ್ನಿಸುತ್ತಾರೆ. ಕಾದ ಕಬ್ಬಿಣದ ಗುಂಡನ್ನು ನೀರಿನ ಕುಂಡದಲ್ಲಿ ಅದ್ದಿದರೆ ನೀರೂ ಹೇಗೆ ಬಿಸಿಯಾಗಿ ಕುದಿಯುತ್ತದೆಯೋ ಹಾಗೆ ಮಾನಸಿಕ ದುಃಖದಿಂದ ಶರೀರವೂ ಪರಿತಪಿಸುತ್ತದೆ. ನೀರಿನಿಂದ ಅಗ್ನಿಯನ್ನು ಹೇಗೋ ಹಾಗೆ ಜ್ಞಾನದಿಂದ ಮನಸ್ಸನ್ನು ಆರಿಸಬೇಕು. ಮನಸ್ಸು ಪ್ರಶಾಂತವಾದಾಗ ಶರೀರ ದುಃಖವು ಆರಿಹೋಗುತ್ತದೆ.

ಸ್ನೇಹವೇ ಮಾನಸಿಕ ದುಃಖದ ಮೂಲ. ಸ್ನೇಹದಿಂದ ಮೋಹವುಂಟಾಗುತ್ತದೆ ಮತ್ತು ಮೋಹದಿಂದ ಜೀವಿಯು ದುಃಖವನ್ನು ಹೊಂದುತ್ತಾನೆ. ಸ್ನೇಹವೇ ದುಃಖದ ಮೂಲ ಮತ್ತು ಸ್ನೇಹದಿಂದಲೇ ಭಯವೂ ಹುಟ್ಟುತ್ತದೆ. ಶೋಕ, ಹರ್ಷ, ಮತ್ತು ಆಯಾಸ ಸರ್ವವೂ ಸ್ನೇಹದಿಂದಲೇ ಹುಟ್ಟುತ್ತವೆ. ಭಾವ-ಅನುರಾಗಳೆರಡೂ ಸ್ನೇಹದಿಂದಲೇ ಹುಟ್ಟುತ್ತವೆ. ಇವೆರಡರಲ್ಲಿ ಮೊದಲನೆಯದಾದ ಭಾವವೇ ಹೆಚ್ಚು ಅಶ್ರೇಯಸ್ಕರ ಎಂದು ಹೇಳುತ್ತಾರೆ. ಪೊಟರಿನಲ್ಲಿ ಹತ್ತಿದ ಬೆಂಕಿಯು ಹೇಗೆ ಸಮೂಲವಾಗಿ ಮರವನ್ನು ಸುಟ್ಟುಬಿಡುತ್ತದೆಯೋ ಹಾಗೆ ಅಲ್ಪ ರಾಗದೋಷವೂ ಧರ್ಮಾರ್ಥಿಯನ್ನು ನಾಶಗೊಳಿಸುತ್ತದೆ.

ಕೇವಲ ಪ್ರಾಪಂಚಿಕ ವಿಷಯಗಳನ್ನು ಅನುಭವಿಸುವುದಿಲ್ಲವೆಂದ ಮಾತ್ರಕ್ಕೆ ಅವನು ತ್ಯಾಗಿಯಾಗುವುದಿಲ್ಲ! ಪ್ರಾಪಂಚಿಕ ವಿಷಯಗಳಲ್ಲಿ ಮುಳುಗಿ ಅದರಿಂದಾಗುವ ದೋಷಗಳನ್ನು ಸಂಪೂರ್ಣವಾಗಿ ಅರಿತು ಅದರಿಂದ ನಿವೃತ್ತಿಹೊಂದುವವನು ತ್ಯಾಗಿ ಎನಿಸಿಕೊಳ್ಳುತ್ತಾನೆ. ಅಂಥವನು ವಿರಾಗಿಯೂ, ಎಲ್ಲರ ಪ್ರೀತಿಪಾತ್ರನೂ, ಯಾರೊಂದಿಗೂ ವೈರತ್ವವಿಲ್ಲದವನೂ ಮತ್ತು ಸ್ವತಂತ್ರನೂ ಆಗುತ್ತಾನೆ. ಆದುದರಿಂದ ಸ್ವಶರೀರದಿಂದ ಉದ್ಭವವಾದ ತನ್ನವರು, ಮಿತ್ರರು ಮತ್ತು ಧನಸಂಚಯದ ಮೇಲಿರುವ ಸ್ನೇಹವನ್ನು ಜ್ಞಾನದಿಂದ ಕಡಿಮೆಮಾಡಿಕೊಳ್ಳಬೇಕು. ಪದ್ಮಪತ್ರವು ನೀರಿನಿಂದ ಹೇಗೆ ಒದ್ದೆಯಾಗುವುದಿಲ್ಲವೋ ಹಾಗೆ ಜ್ಞಾನಾನ್ವಿತ ಮುಖ್ಯ ಶಾಸ್ತ್ರಜ್ಞರನ್ನು ಮತ್ತು ಕೃತಾತ್ಮರನ್ನು ಈ ಯಾವ ಸ್ನೇಹಗಳೂ ಹಿಡಿಯುವುದಿಲ್ಲ.

ರಾಗಕ್ಕೆ ಅಧೀನನಾದ ಪುರುಷನನ್ನು ವಿಷಯ ವಸ್ತುಗಳು ಸೆಳೆಯುತ್ತವೆ. ಅವುಗಳ ಮೇಲೆ ಆಸೆಯುಂಟಾಗುತ್ತದೆ. ಆ ಆಸೆಗಳು ಮುಂದೆ ತೃಷ್ಣೆಯಾಗಿ ಪರಿವರ್ತನಗೊಳ್ಳುತ್ತವೆ. ಈ ತೃಷ್ಣೆಯೇ ಸರ್ವ ಪಾಪಿಷ್ಟ. ಇದೇ ನಿತ್ಯವೂ ಮನುಷ್ಯನನ್ನು ಅಧರ್ಮ ಮಾರ್ಗಕ್ಕೆ ಪ್ರಚೋದಿಸುತ್ತಿರುತ್ತದೆ ಮತ್ತು ಘೋರ ಪಾಪಗಳಿಗೆ ಅವನನ್ನು ಬಂಧಿಸುತ್ತದೆ. ಇದನ್ನು ತ್ಯಜಿಸುವುದು ದುರ್ಮತಿಗಳಿಗೆ ಬಹಳ ಕಷ್ಟ. ದೇಹ ಜೀರ್ಣವಾದರೂ ಇದು ಜೀರ್ಣವಾಗುವುದಿಲ್ಲ. ಇದು ಪ್ರಾಣವನ್ನೇ ಅಂತ್ಯಗೊಳಿಸುವ ರೋಗ. ತೃಷ್ಣೆಯನ್ನು ತ್ಯಜಿಸುವುದೇ ಸುಖ. ಈ ತೃಷ್ಣೆಗೆ ಮೊದಲಿಲ್ಲ ಕೊನೆಯಿಲ್ಲ. ಮನುಷ್ಯನ ಒಳದೇಹವನ್ನು ಸೇರಿ ಇದು ಅಯೋನಿಜ ಅಗ್ನಿಯಂತೆ ಹುಟ್ಟಿ ಅದನ್ನು ನಾಶಪಡಿಸುತ್ತದೆ. ಕಟ್ಟಿಗೆಯು ಹೇಗೆ ತನ್ನಿಂದ ಹುಟ್ಟಿದ ಬೆಂಕಿಯಿಂದಲೇ ನಾಶಹೊಂದುತ್ತದೆಯೋ ಹಾಗೆ ತಾನೇ ಹುಟ್ಟಿಸಿಕೊಂಡ ಲೋಭದಿಂದ ಮನುಷ್ಯನು ಸಹಜವಾಗಿ ನಾಶಹೊಂದುತ್ತಾನೆ.

ಮರ್ತ್ಯರು ನಿತ್ಯವೂ ಹೇಗೆ ಮೃತ್ಯುವಿನ ಭಯದಲ್ಲಿರುತ್ತಾರೆಯೋ ಹಾಗೆ ಸಂಪತ್ತುಳ್ಳವನು ಸದಾ ರಾಜ, ನೀರು, ಅಗ್ನಿ, ಕಳ್ಳರು ಮತ್ತು ಸ್ವಜನರ ಭಯದಿಂದ ಇರುತ್ತಾನೆ. ಮಾಂಸದ ತುಂಡನ್ನು ಆಕಾಶದಲ್ಲೆಸದರೆ ಪಕ್ಷಿಗಳು, ಭೂಮಿಯಲ್ಲಿಟ್ಟರೆ ಪಶುಗಳು, ನೀರಿನಲ್ಲಿಟ್ಟರೆ ಮೀನುಗಳು ಹೇಗೆ ತಿಂದುಬಿಡುವವೋ ಹಾಗೆ ಹಣವಿದ್ದವನಿಗೆ ಎಲ್ಲದರಿಂದಲೂ ಭಯ! ಕೆಲವರಿಗೆ ಅರ್ಥವೇ ಅನರ್ಥವಾಗುತ್ತದೆ. ಐಶ್ವರ್ಯ-ಕೀರ್ತಿಗಳಲ್ಲಿಯೇ ಆಸಕ್ತನಾದ ಮನುಷ್ಯನಿಗೆ ಶ್ರೇಯಸ್ಸು ದೊರೆಯಲಾರದು. ಆದುದರಿಂದ ಹಣವು ಬರುತ್ತಿದ್ದಂತೆ ಮನಸ್ಸಿನ ಮೋಹವು ಹೆಚ್ಚಾಗುತ್ತದೆ. ಕೃಪಣತೆ, ದರ್ಪ ಮತ್ತು ಭಯ-ಉದ್ವೇಗಗಳೂ ಹೆಚ್ಚಾಗುತ್ತವೆ. ಅರ್ಥಸಂಚಯದಿಂದ ಮನುಷ್ಯರಿಗೆ ಹುಟ್ಟುವ ದುಃಖಗಳನ್ನು ಪ್ರಾಜ್ಞರು ಅರಿತುಕೊಂಡಿದ್ದಾರೆ. ಹಣವನ್ನು ಗಳಿಸುವಾಗ ದುಃಖ, ಅದನ್ನು ಇಟ್ಟುಕೊಳ್ಳುವುದರಲ್ಲಿ ಮತ್ತು ಖರ್ಚುಮಾಡುವುದರಲ್ಲಿ ಕಷ್ಟ, ನಾಶವಾದರೆ ದುಃಖ, ಮತ್ತು ವ್ಯಯವಾದರೆ ದುಃಖ. ಕೆಲವರು ಹಣಕ್ಕಾಗಿ ಕೊಲೆಯನ್ನೂ ಮಾಡುತ್ತಾರೆ!

ಸಂಪತ್ತನ್ನು ತ್ಯಜಿಸುವುದು ಕಷ್ಟ. ಪಾಲಿಸುವುದು ಅದಕ್ಕಿಂತಲೂ ಕಷ್ಟ. ಗಳಿಸುವುದೇ ಅತಿ ಕಷ್ಟವಾದ ಸಂಪತ್ತು ನಾಶವಾದರೆ ಚಿಂತಿಸಬಾರದು. ಮೂಢರು ಅಸಂತೋಷಪರರು. ಪಂಡಿತರು ಸಂತೋಷಪಡುತ್ತಾರೆ. ಬಾಯಾರಿಕೆಗೆ ಕೊನೆಯೇ ಇಲ್ಲ. ಸಂತೋಷವೇ ಪರಮ ಸುಖ. ಆದುದರಿಂದ ಸಂತೋಷವೇ ಪರಮ ಧನವೆಂದು ಪಂಡಿತರು ಕಂಡುಕೊಂಡಿದ್ದಾರೆ. ಯೌವನ-ರೂಪ-ಬದುಕು-ದ್ರವ್ಯಸಂಚಯ-ಐಶ್ವರ್ಯ-ಪ್ರಿಯರ ಸಹವಾಸ ಎಲ್ಲವೂ ಅನಿತ್ಯ. ಪಂಡಿತರು ಇವುಗಳನ್ನು ಆಸೆಪಡುವುದಿಲ್ಲ. ಕೂಡಿಡುವುದನ್ನು ಬಿಟ್ಟುಬಿಡು! ಅದರಿಂದಾಗುವ ಕಷ್ಟಗಳನ್ನು ಯಾರು ತಾನೇ ಸಹಿಸಿಯಾರು? ಉಪದ್ರವಗಳಿಲ್ಲದೇ ಒಟ್ಟುಗೂಡಿಸುವವನು ಕಾಣಲಿಕ್ಕೂ ಸಿಗುವುದಿಲ್ಲ! ಆದುದರಿಂದಲೇ ಧಾರ್ಮಿಕರು ಸಂಪತ್ತಿನ ಅನಾಸಕ್ತರನ್ನು ಪ್ರಶಂಸಿಸುತ್ತಾರೆ. ಕೆಸರನ್ನು ನಂತರ ಒರೆಸಿಕೊಳ್ಳುವುದಕ್ಕಿಂತ ಅದನ್ನು ಮುಟ್ಟದಿರುವುದೇ ಒಳ್ಳೆಯದು! ಯುಧಿಷ್ಠಿರ! ಸಂಪತ್ತನ್ನು ಬಯಸಬಾರದು. ಧರ್ಮದ ಪ್ರಕಾರ ನಡೆಯಬೇಕಾದರೆ ನೀನು ಸಂಪತ್ತಿನ ಬಯಕೆಯನ್ನು ಬಿಟ್ಟುಬಿಡು!”

ಆಗ ಯುಧಿಷ್ಠಿರನು ಹೇಳಿದನು:

“ಭೋಗಿಸುವ ಇಚ್ಛೆಯಿಂದ ನಾನು ಸಂಪತ್ತನ್ನು ಬಯಸುತ್ತಿಲ್ಲ. ಬ್ರಹ್ಮನ್! ವಿಪ್ರರನ್ನು ಪೊರೆಯಲು ಬಯಸುತ್ತೇನೆಯೇ ಹೊರತು ಲೋಭದಿಂದಲ್ಲ. ಈಗ ಗೃಹಸ್ಥಾಶ್ರಮದಲ್ಲಿರುವ ನನ್ನಂಥವನು ಅನುಸರಿಸಿ ಬಂದಿರುವವರ ಪಾಲನೆ-ಪೋಷಣೆಗಳನ್ನು ಹೇಗೆ ಮಾಡಬಲ್ಲ? ಎಲ್ಲವನ್ನೂ ಎಲ್ಲರೊಂದಿಗೆ ಹಂಚಿಕೊಳ್ಳಬೇಕು ಎನ್ನುವುದನ್ನು ಕಲಿಸಿಕೊಡುತ್ತಾರೆ. ಅದರಂತೆ ಗೃಹಸ್ಥನಾದವನು ಅಡಿಗೆ ಮಾಡಿಕೊಳ್ಳದವರಿಗೆ ಕೊಡಬೇಕು. ಒಳ್ಳೆಯ ಗೃಹಸ್ಥನ ಮನೆಯಲ್ಲಿ – ಆಹಾರ, ನೆಲ, ನೀರು ಮತ್ತು ಸ್ವಾಗತದ ಮಾತುಗಳು – ಈ ನಾಲ್ಕಕ್ಕೆ ಎಂದೂ ಕೊರತೆಯಿರಬಾರದು. ಆರ್ತನಾದವನಿಗೆ ಹಾಸಿಗೆಯನ್ನು ಕೊಡಬೇಕು. ನಿಂತು ಆಯಾಸಗೊಂಡವನಿಗೆ ಆಸನವನ್ನು ಕೊಡಬೇಕು. ಬಾಯಾರಿದವನಿಗೆ ನೀರನ್ನು ಕೊಡಬೇಕು. ಮತ್ತು ಹಸಿದವನಿಗೆ ಊಟವನ್ನು ನೀಡಬೇಕು. ಒಳ್ಳೆಯ ದೃಷ್ಟಿಯಲ್ಲಿ ನೋಡಬೇಕು. ಒಳ್ಳೆಯ ಮನಸ್ಸನ್ನು ತೋರಿಸಬೇಕು. ಒಳ್ಳೆಯ ಮಾತನ್ನು ಆಡಬೇಕು. ಮತ್ತು ಮೇಲೆದ್ದು ಬಂದವನನ್ನು ಸ್ವಾಗತಿಸಿ ನ್ಯಾಯೋಚಿತವಾಗಿ ಸತ್ಕರಿಸಬೇಕು.

ಸರಿಯಾದ ಗೌರವವನ್ನು ನೀಡದಿದ್ದರೆ ಅದು ಅಗ್ನಿಹೋತ್ರ, ಸಾಕಿದ ಪ್ರಾಣಿಗಳು, ದಾಯಾದಿಗಳು, ಅತಿಥಿ-ಬಾಂಧವರು, ಸೊಸೆಯಂದಿರು, ಸೇವಕರು ಎಲ್ಲವನ್ನೂ ಸುಟ್ಟುಬಿಡುತ್ತದೆ. ಕೇವಲ ತನಗೋಸ್ಕರ ಮಾತ್ರ ಅನ್ನವನ್ನು ಮಾಡಬಾರದು ಮತ್ತು ವೃಥಾ ಪಶುವನ್ನು ಕೊಲ್ಲಬಾರದು. ಹಾಗೆಯೇ ಅಡುಗೆಯನ್ನು ವಿಧಿವತ್ತಾಗಿ ನೈವೇದ್ಯ ಮಾಡದೇ ತಾನೊಬ್ಬನೇ ಊಟಮಾಡಬಾರದು. ನಾಯಿ-ಪಕ್ಷಿಗಳಿಗೆಂದು ನೆಲದ ಮೇಲೆ ಸ್ವಲ್ಪ ಆಹಾರವನ್ನು ಹಾಕಬೇಕು. ಪ್ರತಿದಿನ ಬೆಳಿಗ್ಗೆ-ಸಾಯಂಕಾಲಗಳಲ್ಲಿ ವಿಧಿವತ್ತಾಗಿ ವೈಶ್ವದೇವವನ್ನು ಮಾಡಬೇಕು. ಹೀಗೆ ನಿತ್ಯವೂ ವಿಘಸ-ಅಮೃತಗಳನ್ನು ಊಟಮಾಡಬೇಕು. ತನ್ನನ್ನು ಅವಲಂಬಿಸಿರುವವರು ತಿಂದು ಉಳಿದ ಆಹಾರವು ವಿಘಸ ಮತ್ತು ಯಜ್ಞದಿಂದ ಉಳಿದ ಆಹಾರವು ಅಮೃತ. ಈ ರೀತಿ ವರ್ತಿಸುವ ಗೃಹಸ್ಥಾಶ್ರಮದಲ್ಲಿರುವವರ ಧರ್ಮವೇ ಶ್ರೇಷ್ಠವಾದುದು ಎಂದು ಹೇಳುತ್ತಾರೆ. ವಿಪ್ರ! ನಿನ್ನ ಅಭಿಪ್ರಾಯವೇನು?”

ಶೌನಕನು ಹೇಳಿದನು:

“ಅಯ್ಯೋ! ಈ ಜಗತ್ತಿನಲ್ಲಿ ವಿಪರೀತ ಅರ್ಥಗಳನ್ನು ಕೊಡುವ ಅನೇಕ ಸಿದ್ಧಾಂತಗಳಿವೆ! ಒಳ್ಳೆಯದೆಂದೆನಿಸಿದವು ಕೆಟ್ಟವೆಂದೂ ಅನಿಸಿಕೊಳ್ಳುತ್ತವೆ. ತಿಳುವಳಿಕೆಯಿಲ್ಲದವನು ಶಿಶ್ನ-ಹೊಟ್ಟೆಗಳಿಗಾಗಿ ಬಹಳಷ್ಟು ಸಂಪಾದನೆಯನ್ನು ಮಾಡುತ್ತಾನೆ. ಮೋಹ-ರಾಗಗಳಿಂದ ಪೀಡಿತನಾಗಿ ಸಂಪತ್ತು-ಇಂದ್ರಿಯಗಳ ವಶದಲ್ಲಿ ಬರುತ್ತಾನೆ. ದುಷ್ಟ ಕುದುರೆಗಳು ಮೂಢಾತ್ಮ ಭ್ರಾಂತ ಸಾರಥಿಯನ್ನು ಕೊಂಡೊಯ್ಯುವಂತೆ ಇಂದ್ರಿಯಗಳೆಂಬ ಕುದುರೆಗಳು, ಮನುಷ್ಯನು ಎಷ್ಟೇ ಬುದ್ಧಿವಂತನಾಗಿದ್ದರೂ, ಅವನನ್ನು ಕೆಟ್ಟ ದಾರಿಗಳಲ್ಲಿ ಕೊಂಡೊಯ್ಯುತ್ತವೆ. ಆರು ಇಂದ್ರಿಯಗಳು ತಮ್ಮ ತಮ್ಮ ವಿಷಯಗಳನ್ನು ಹಿಂಬಾಲಿಸುತ್ತಿರುತ್ತವೆ. ಅವುಗಳನ್ನು ಪಡೆಯಲೇ ಬೇಕೆಂಬ ಸಂಕಲ್ಪವು ಮನಸ್ಸಿನಲ್ಲಿ ಮೂಡುತ್ತದೆ. ಇಂದ್ರಿಯ ಸಂಬಂಧ ವಿಷಯಗಳ ಕುರಿತು ಮನಸ್ಸು ಪ್ರಚೋದಿತಗೊಂಡಾಗ ಆಸೆಯು ಹುಟ್ಟುತ್ತದೆ ಮತ್ತು ಅವುಗಳನ್ನು ಹೊಂದುವ ಅಭ್ಯಾಸವುಂಟಾಗುತ್ತದೆ. ಬೆಳಕೆಂಬ ಭ್ರಾಂತಿಯಿಂದ ಪತಂಗವು ಬೆಂಕಿಯಲ್ಲಿ ಬಿದ್ದು ಭಸ್ಮವಾಗುವಂತೆ ಮಾನವನು ಸಂಕಲ್ಪದಿಂದ ಹುಟ್ಟಿದ ವಿಷಯ-ಕಾಮಗಳೆಂಬ ಬಾಣಗಳಿಗೆ ತುತ್ತಾಗಿ ಲೋಭವೆಂಬ ಮಹಾಗ್ನಿಯಲ್ಲಿ ಬೀಳುತ್ತಾನೆ. ಆಹಾರ-ವಿಹಾರಗಳಲ್ಲಿ ಮೋಹಿತನಾಗಿ ಅದೇ ಮಹಾಮೋಹಕ ಸುಖಗಳಲ್ಲಿ ಮಗ್ನನಾದವನಿಗೆ ತಾನು ಯಾರು ಎನ್ನುವುದರ ಅರಿವೇ ಇರುವುದಿಲ್ಲ. ಹೀಗೆ ಅವನು ಅವಿದ್ಯೆ-ಕರ್ಮ-ತೃಷ್ಣೆಗಳು ತಿರುಗಿಸುವ ಚಕ್ರದಲ್ಲಿ ಸಿಲುಕಿ ಒಂದು ಯೋನಿಯಿಂದ ಇನ್ನೊಂದು ಯೋನಿಗೆ ಸೇರುತ್ತಾ ಸಂಸಾರದಲ್ಲಿ ಬೀಳುತ್ತಾನೆ. ನೀರು-ಭೂಮಿ-ಆಕಾಶಗಳಲ್ಲಿ ನಡೆಯುವ ಬ್ರಹ್ಮನಿಂದ ಹಿಡಿದು ಹುಲ್ಲಿನ ಕಡ್ಡಿಯವರೆಗಿನ ಈ ಸೃಷ್ಟಿ ಚಕ್ರದಲ್ಲಿ ಪುನಃ ಪುನಃ ಹುಟ್ಟುತ್ತಾನೆ. ತಿಳಿಯದೇ ಇರುವವರು ಹೋಗುವ ಮಾರ್ಗವಿದು. ಧರ್ಮ-ಮೋಕ್ಷಗಳನ್ನು ಬಯಸಿ ತಿಳಿದುಕೊಂಡಿದ್ದವರ ಕುರಿತು ಈಗ ಕೇಳು.

ಕರ್ಮವನ್ನು ಮಾಡು ಮತ್ತು ತ್ಯಜಿಸು ಎನ್ನುವುದೇ ವೇದವಾಕ್ಯ. ಇದರ ಪ್ರಕಾರ ಅಭಿಮಾನದಿಂದ ಯಾವ ಧರ್ಮವನ್ನೂ ಆಚರಿಸಬಾರದು. ಸ್ಮೃತಿಗಳ ಪ್ರಕಾರ ಎಂಟು ವಿಧದ ಧರ್ಮಮಾರ್ಗಗಳಿವೆ: ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಕ್ಷಮೆ, ದಮ ಮತ್ತು ಅಲೋಭ. ಇವುಗಳಲ್ಲಿ ಮೊದಲ ನಾಲ್ಕು ಪಿತೃಗಳು ಹೋಗುವ ಮಾರ್ಗಗಳೆಂದು ವರ್ಗೀಕೃತಗೊಂಡಿವೆ. ಇವುಗಳನ್ನು ಅಭಿಮಾನದಿಂದ ಮಾಡದೇ, ಕೇವಲ ಕರ್ತವ್ಯವೆಂದು ಮಾಡಬೇಕು. ಇತರ ನಾಲ್ಕು ದೇವತೆಗಳ ಮಾರ್ಗಗಳು. ಈ ಎಂಟು ಮಾರ್ಗಗಳ ಆಚರಣೆಯಿಂದಲೇ ಮನುಷ್ಯನು ವಿಶುದ್ಧಾತ್ಮನಾಗುತ್ತಾನೆ. ಸಂಸಾರವನ್ನು ಗೆಲ್ಲಲು ಬಯಸುವವರು ಉತ್ತಮ ಸಂಕಲ್ಪ-ಸಂಬಂಧಗಳು, ವಿಶೇಷ ವ್ರತಗಳು, ಗುರುಸೇವೆ, ಆಹಾರ-ಯೋಗಗಳು, ಆಗಮ-ಅಧ್ಯಯನಗಳು, ಕರ್ಮ-ಸಂನ್ಯಾಸ ಮತ್ತು ಚಿತ್ತನಿರೋಧಗಳಿಂದ ಕರ್ಮಗಳನ್ನೆಸಗುತ್ತಾರೆ. ರಾಗ-ದ್ವೇಷಗಳಿಂದ ವಿಮುಕ್ತರಾಗಿದುದರಿಂದಲೇ ರುದ್ರ-ಸಾದ್ಯ-ಆದಿತ್ಯ-ವಸು-ಅಶ್ವಿನಿಯರು ದೈವತ್ವ ಐಶ್ವರ್ಯವನ್ನು ಪಡೆದು ಯೋಗೈಶ್ವರ್ಯದಿಂದ ಎಲ್ಲ ಪ್ರಜೆಗಳನ್ನೂ ಪಾಲಿಸುತ್ತಾರೆ.

ಕೌಂತೇಯ! ನೀನೂ ಕೂಡ ಪುಷ್ಕಲ ಶಾಂತತೆಯನ್ನು ಸಾಧಿಸಬೇಕು. ತಪಸ್ಸಿನಿಂದ ಮನೋಸಿದ್ಧಿ-ಯೋಗಸಿದ್ಧಿಗಳನ್ನು ಪಡೆ. ತಂದೆ-ತಾಯಿಗಳಿಂದ ಪಡೆಯಬಹುದಾದ ಸಿದ್ಧಿಯನ್ನು ಪಡೆದ ನೀನು ಕರ್ಮಮಯಿಯಾಗಿದ್ದೀಯೆ. ತಪಸ್ಸು ಮತ್ತು ದ್ವಿಜರನ್ನು ಪಾಲಿಸುವುದರ ಮೂಲಕ ಸಿದ್ಧಿಯನ್ನು ಪಡೆದುಕೋ. ಸಿದ್ಧಿಯನ್ನು ಪಡೆದವರು ಅದರ ಸಹಾಯದಿಂದ ಬಯಸಿದುದೆಲ್ಲವನ್ನೂ ಮಾಡಬಲ್ಲವರಾಗುತ್ತಾರೆ. ಆದುದರಿಂದ ತಪಸ್ಸಿನಲ್ಲಿ ನಿರತನಾಗಿ ನಿನ್ನ ಮನೋರಥವನ್ನು ಈಡೇರಿಸಿಕೋ.”

4 Comments

  1. SHASHIDHARA SASTRY K

    Dear Sir,
    Is it available in book form.If so ,I will purchase

  2. ಇದು ಸಂಗ್ರಹ ಅನುವಾದವೇ ಅಥವಾ ಪೂರ್ಣ ಅನುವಾದವೇ ದಯಮಾಡಿ ತಿಳಿಸಿ? ಸರಳವಾದ ಸೊಗಸಾದ ಅನುವಾದ…… ಧನ್ಯವಾದಗಳು

Leave a Reply

Your email address will not be published. Required fields are marked *