ವ್ಯಾಸನು ಧೃತರಾಷ್ಟ್ರಾದಿಗಳಿಗೆ ಯುದ್ಧದಲ್ಲಿ ಮಡಿದ ದುರ್ಯೋಧನಾದಿ ಯೋದ್ಧರನ್ನು ತೋರಿಸಿದುದು

ಪಾಂಡವಶೋಕ

ಕೌರವೇಂದ್ರನು ವನಕ್ಕೆ ತೆರಳಿದ ನಂತರ ಪಾಂಡವರು ಮಾತೃಶೋಕದಿಂದ ಪೀಡಿತರಾಗಿ ದುಃಖಶೋಕಗಳಿಂದ ಪರಿತಪಿಸಿದರು. ಹಾಗೆಯೇ ಪೌರಜನರೆಲ್ಲರೂ ಜನಾಧಿಪನ ಕುರಿತು ಶೋಕಿಸುತ್ತಿದ್ದರು. ರಾಜನ ಕುರಿತು ಬ್ರಾಹ್ಮಣರು ಅಲ್ಲಲ್ಲಿ ಈ ರೀತಿ ಮಾತನಾಡಿಕೊಳ್ಳುತ್ತಿದ್ದರು: “ವೃದ್ಧ ರಾಜನು ನಿರ್ಜನ ವನದಲ್ಲಿ ಹೇಗೆ ತಾನೇ ವಾಸಿಸುತ್ತಾನೆ? ಮಹಾಭಾಗೆ ಗಾಂಧಾರಿಯೂ ಪೃಥೆ ಕುಂತಿಯೂ ಹೇಗೆ ಜೀವಿಸುತ್ತಿದ್ದಾರೆ? ಸುಖಾರ್ಹನೂ ಮಕ್ಕಳನ್ನು ಕಳೆದುಕೊಂಡವನೂ ಆದ ಆ ಪ್ರಜ್ಞಾಚಕ್ಷು ರಾಜರ್ಷಿಯು ಆ ಮಹಾವನದಲ್ಲಿ ಸುಖವಿಲ್ಲದೇ ಯಾವ ಅವಸ್ಥೆಯಲ್ಲಿರಬಹುದು? ರಾಜ್ಯಶ್ರಿಯನ್ನು ಪರಿತ್ಯಜಿಸಿ ಕುಂತಿಯು ಪುತ್ರರನ್ನು ನೋಡಲಿಕ್ಕಾಗದ ವನವಾಸವನ್ನು ಬಯಸಿ ದುಷ್ಕರ ಕಾರ್ಯವನ್ನೇ ಎಸಗಿದ್ದಾಳೆ! ಅಣ್ಣನ ಶುಶ್ರೂಷೆ ಮಾಡುತ್ತಿರುವ ಆತ್ಮವಾನ್ ವಿದುರ ಮತ್ತು ಅನ್ನವನ್ನಿತ್ತ ಒಡೆಯನನ್ನೇ ಅನುಸರಿಸುತ್ತಿರುವ ಧೀಮಾನ್ ಗಾವಲ್ಗಣಿ ಸಂಜಯರು ಯಾವ ಅವಸ್ಥೆಯಲ್ಲಿರಬಹುದು?”

ಹೀಗೆ ಬಾಲಕರಿಂದ ಹಿಡಿದು ಮುದುಕರವರೆಗಿನ ಪೌರರು ಚಿಂತೆ ಶೋಕಗಳಿಂದ ಪೀಡಿತರಾಗಿ ಅಲ್ಲಲ್ಲಿ ಪರಸ್ಪರರೊಡನೆ ಮಾತನಾಡಿಕೊಳ್ಳುತ್ತಿದ್ದರು. ಪಾಂಡವರೆಲ್ಲರು ಕೂಡ ಅತ್ಯಂತ ಶೋಕಪರಾಯಣರಾಗಿದ್ದರು. ವೃದ್ಧ ತಾಯಿಯ ಕುರಿತು ಶೋಕಿಸುತ್ತಿದ್ದ ಅವರಿಗೆ ತಾಯಿಯನ್ನು, ಹಾಗೆಯೇ ಪುತ್ರರನ್ನು ಕಳೆದುಕೊಂಡ ವೃದ್ಧ ದೊಡ್ಡಪ್ಪನನ್ನು, ಮಹಾಭಾಗೆ ಗಾಂಧಾರಿಯನ್ನು ಮತ್ತು ಮಹಾಮತಿ ವಿದುರನನ್ನು ಕಾಣದೇ ಹಸ್ತಿನಾಪುರದಲ್ಲಿ ಬಹಳ ಸಮಯ ಇರಲು ಸಾಧ್ಯವಾಗಲಿಲ್ಲ. ಬಹಳ ಚಿಂತೆಗೊಳಗಾಗಿದ್ದ ಅವರು ರಾಜ್ಯದಲ್ಲಿಯಾಗಲೀ, ಸ್ತ್ರೀಯರಲ್ಲಾಗಲೀ ಮತ್ತು ವೇದಾಧ್ಯಯನದಲ್ಲಾಗಲೀ ಸಂತೋಷಪಡುತ್ತಿರಲಿಲ್ಲ. ಘೋರ ಜ್ಞಾತಿವಧೆಯಿಂದಾಗಿ ಪರಮ ವೇದನೆಯನ್ನು ಅನುಭವಿಸುತ್ತಿರುವ ನರಾಧಿಪನನ್ನು ಪುನಃ ಪುನಃ ಸ್ಮರಿಸಿಕೊಳ್ಳುತ್ತಿದ್ದರು. ಹಾಗೆಯೇ ರಣಮಧ್ಯದಲ್ಲಿ ಬಾಲಕ ಅಭಿಮನ್ಯುವಿನ ವಿನಾಶ, ಸಂಗ್ರಾಮದಿಂದ ಪಲಾಯನ ಮಾಡದಿದ್ದ ಮಹಾಬಾಹು ಕರ್ಣನ ವಿನಾಶ, ದ್ರೌಪದೇಯರು ಮತ್ತು ಅನ್ಯ ಸುಹೃದಯರ ವಧೆ ಇವುಗಳನ್ನು ಸ್ಮರಿಸಿಕೊಳ್ಳುತ್ತಿದ್ದ ಆ ವೀರರ ಮನಸ್ಸು ಸಂತೋಷದಿಂದಿರಲಿಲ್ಲ. ಭೂಮಿಯ ಪ್ರವೀರರು ಹತರಾದುದುದರ ಮತ್ತು ಸಂಪತ್ತು ನಾಶವಾದುದರ ಕುರಿತು ಸದೈವ ಚಿಂತಿಸುತ್ತಿದ್ದ ಅವರಿಗೆ ನಿದ್ರೆಯೂ ಬರುತ್ತಿರಲಿಲ್ಲ. ಪುತ್ರರನ್ನು ಕಳೆದುಕೊಂಡಿದ್ದ ದ್ರೌಪದೀ ಮತ್ತು ಸುಭದ್ರಾ ದೇವಿಯರು ಕೂಡ ಅಪ್ರಸನ್ನರಾಗಿ ಹರ್ಷಶೂನ್ಯರಾಗಿದ್ದರು. ಆಗ ನಿನ್ನ ಪೂರ್ವಪಿತಾಮಹರು ವೈರಾಟಿ ಉತ್ತರೆಯನ್ನೂ ಮತ್ತು ನಿನ್ನ ತಂದೆ ಪರಿಕ್ಷಿತನನ್ನೂ ನೋಡಿಕೊಂಡು ತಮ್ಮ ಪ್ರಾಣಗಳನ್ನು ಧಾರಣೆಮಾಡಿಕೊಂಡಿದ್ದರು.

ಹೀಗೆ ಆ ಮಾತೃನಂದನ ಪಾಂಡವರು ತಾಯಿಯನ್ನು ಸ್ಮರಿಸಿಕೊಂಡು ಬಹಳ ದುಃಖಿತರಾದರು. ಹಿಂದೆ ರಾಜಕಾರ್ಯಗಳಲ್ಲಿ ನಿತ್ಯವೂ ಆಸಕ್ತಿಯನ್ನಿಟ್ಟುಕೊಂಡಿದ್ದ ಅವರು ರಾಜ್ಯದ ಎಲ್ಲ ರಾಜಕಾರ್ಯಗಳನ್ನು ಮಾಡುತ್ತಿರಲಿಲ್ಲ. ಶೋಕದಿಂದ ಆವಿಷ್ಟರಾಗಿರವರೋ ಎನ್ನುವಂತೆ ಯಾವುದರಿಂದಲೂ ಅವರು ಸಂತೋಷಗೊಳ್ಳುತ್ತಿರಲಿಲ್ಲ. ಇತರರನ್ನು ಗೌರವಿಸುತ್ತ ಕೂಡ ಅವರು ಸಂಭಾಷಣೆಯಲ್ಲಿ ತೊಡಗುತ್ತಿರಲಿಲ್ಲ. ದುರ್ಧರ್ಷರೂ ಸಾಗರದಂತೆ ಗಂಭೀರರೂ ಆಗಿದ್ದ ಆ ವೀರರು ಶೋಕದಿಂದ ಪೀಡಿತರಾಗಿ ಬುದ್ಧಿಯನ್ನೇ ಕಳೆದುಕೊಂಡಿರುವರೋ ಎನ್ನುವಂತೆ ತೋರುತ್ತಿದ್ದರು. ಜನನಿಯನ್ನು ಸ್ಮರಿಸಿಕೊಳ್ಳುತ್ತಾ ಆ ಕುರುನಂದನರು ಚಿಂತಿಸುತ್ತಿದ್ದರು: “ಕೃಶಳಾದ ಪೃಥೆಯು ಆ ವೃದ್ಧ ದಂಪತಿಗಳ ಸೇವೆಯನ್ನು ಹೇಗೆ ತಾನೇ ಮಾಡಬಲ್ಲಳು? ಪುತ್ರರನ್ನು ಕಳೆದುಕೊಂಡು ನಿರಾಶ್ರಯನಾದ ಆ ಮಹೀಪಾಲನು ಪತ್ನಿಯ ಸಹಿತ ಏಕಾಂಗಿಯಾಗಿ ಆ ಕ್ರೂರ ಮೃಗಗಳಿರುವ ವನದಲ್ಲಿ ಹೇಗೆ ವಾಸಿಸುತ್ತಿದ್ದಾನೆ? ಬಾಂಧವರನ್ನು ಕಳೆದುಕೊಂಡ ಆ ದೇವೀ ಮಹಾಭಾಗೆ ಗಾಂಧಾರಿಯೂ ಕೂಡ ನಿರ್ಜನ ವನದಲ್ಲಿ ಹೇಗೆ ತಾನೇ ಆ ವೃದ್ಧ ಪತಿಯನ್ನು ಅನುಸರಿಸಿ ಹೋಗುತ್ತಿದ್ದಾಳೆ?”

ಪಾಂಡವರು ಧೃತರಾಷ್ಟ್ರನ ಆಶ್ರಮಕ್ಕೆ ಹೋದುದು

ಹೀಗೆ ಅವರ ಕುರಿತು ಮಾತನಾಡಿಕೊಳ್ಳುತ್ತಿರುವಾಗ ಉತ್ಸುಕತೆಯಿಂದ ಧೃತರಾಷ್ಟ್ರನನ್ನು ನೋಡಲು ಹೋಗುವ ಮನಸ್ಸುಮಾಡಿದರು. ಸಹದೇವನಾದರೋ ರಾಜನಿಗೆ ಬಗ್ಗಿ ನಮಸ್ಕರಿಸಿ ಹೇಳಿದನು: “ಅಯ್ಯಾ! ನೀನು ಅರಣ್ಯಕ್ಕೆ ಹೋಗಲು ಬಯಸಿದುದನ್ನು ಕಂಡು ನನಗೆ ಸಂತೋಷವಾಗುತ್ತಿದೆ. ನಿನ್ನ ಮೇಲಿನ ಗೌರವದಿಂದಾಗಿ ನಾನೇ ಇದನ್ನು ಪ್ರಸ್ತಾವಿಸಲು ಶಕ್ಯನಾಗಿರಲಿಲ್ಲ. ಆದರೆ ಅದೃಷ್ಟವಶಾತ್ ವನಕ್ಕೆ ಹೋಗುವ ವಿಚಾರವನ್ನು ನೀನೇ ಪ್ರತಾವಿಸಿರುವೆ! ತಪಸ್ವಿನಿಯಂತೆ ಜೀವಿಸುತ್ತಿರುವ, ಜಟಾಧಾರಿ, ತಾಪಸೀ, ಕುಶ-ಕಾಶಗಳ ಆಸನ-ಹಾಸಿಗೆಗಳಿಂದ ಗಾಯಗೊಂಡಿರುವ ಆ ವೃದ್ಧ ಕುಂತಿಯನ್ನು ನಾನು ನೋಡಬಲ್ಲೆನೆಂದರೆ ಅದೊಂದು ಅದೃಷ್ಟವೇ ಸರಿ! ಪ್ರಾಸಾದ-ಉಪ್ಪರಿಗೆಗಳಲ್ಲಿಯೇ ಅತ್ಯಂತ ಸುಖಭಾಗಿನಿಯಾಗಿ ಬೆಳೆದು ಈಗ ಬಳಲಿರುವ ಮತ್ತು ಅತ್ಯಂತ ದುಃಖಿತಳಾಗಿರುವ ಆ ಜನನಿಯನ್ನು ನಾನು ಯಾವಾಗ ಕಾಣುತ್ತೇನೆ? ರಾಜಸುತೆ ಕುಂತಿಯು ಅಸುಖಿಯಾಗಿ ಜೀವಿಸುತ್ತಿದ್ದಾಳೆ ಎಂದರೆ ಮನುಷ್ಯರ ಸ್ಥಿತಿಗತಿಗಳು ಅನಿತ್ಯವಾದವುಗಳು ಎಂದಲ್ಲವೇ?”

ಸಹದೇವನ ಮಾತನ್ನು ಕೇಳಿ ದ್ರೌಪದಿಯು ರಾಜನಿಗೆ ನಮಸ್ಕರಿಸಿ ಹೇಳಿದಳು: “ನರಾಧಿಪ! ಆ ದೇವೀ ಪೃಥೆಯನ್ನು ಎಂದು ನೋಡುತ್ತೇನೆ? ಅವಳು ಜೀವಿತಳಾಗಿರುವಳಲ್ಲವೇ? ಅವಳು ಜೀವಂತಳಾಗಿದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಿನ್ನ ಬುದ್ಧಿಯು ನಿತ್ಯವೂ ಹೀಗೆಯೇ ಇರಲಿ! ನಿನ್ನ ಮನಸ್ಸು ಧರ್ಮದಲ್ಲಿಯೇ ರಮಿಸಲಿ! ಇಂದು ನೀನು ನಮಗೆ ಶ್ರೇಯಸ್ಸಿಗೆ ಭಾಗಿಗಳನ್ನಾಗಿ ಮಾಡುತ್ತಿರುವೆ! ಕುಂತಿ, ಗಾಂಧಾರಿ ಮತ್ತು ಮಾವನನ್ನು ಕಾಣಲು ಕಾತರರಾಗಿ ಈ ಎಲ್ಲ ಸೊಸೆಯಂದಿರೂ ತುದಿಗಾಲ ಮೇಲೆ ನಿಂತಿದ್ದಾರೆಂದು ತಿಳಿ!”

ಪಾಂಚಾಲಿಯು ಹೀಗೆ ಹೇಳಲು ನೃಪನು ಸೇನಾಧ್ಯಕ್ಷರೆಲ್ಲರನ್ನು ಕರೆದು ಹೀಗೆ ಹೇಳಿದನು: “ರಥ-ಕುಂಜರಗಳಿಂದ ಸಮೃದ್ಧವಾದ ನನ್ನ ಸೇನೆಯನ್ನು ಹೊರಡಿಸಿ! ವನದಲ್ಲಿರುವ ಮಹೀಪತಿ ಧೃತರಾಷ್ಟ್ರನನ್ನು ನೋಡಲು ಬಯಸುತ್ತೇನೆ!” ಸ್ತ್ರೀ-ಅಧ್ಯಕ್ಷರಿಗೆ ರಾಜನು ಹೇಳಿದನು: “ಸಹಸ್ರಾರು ವಿವಿಧ ವಾಹನಗಳನ್ನೂ ಪಲ್ಲಕ್ಕಿಗಳೆಲ್ಲವನ್ನೂ ಸಜ್ಜುಗೊಳಿಸಿರಿ! ಬಂಡಿಗಳು, ಅಂಗಡಿಗಳು, ಶಿಲ್ಪಿಗಳು ಮತ್ತು ಕೋಶಪಾಲರು ಕುರುಕ್ಷೇತ್ರದಲ್ಲಿರುವ ಆಶ್ರಮಕ್ಕೆ ಹೊರಡಲಿ! ಪಾರ್ಥಿವನನ್ನು ನೋಡಲು ಬಯಸುವ ಪೌರಜನರೂ ಕೂಡ ಎಲ್ಲ ಸುವಿಧಗಳೊಂದಿಗೆ ಸುರಕ್ಷಿತರಾಗಿ ಹೊರಡಲಿ! ಅಡಿಗೆಗೆ ಬೇಕಾದ ವಸ್ತುಗಳನ್ನೂ, ಎಲ್ಲ ವಿಧದ ಭಕ್ಷ್ಯ-ಭೋಜ್ಯಗಳೆಲ್ಲವನ್ನೂ ನನ್ನ ಬಂಡಿಗಳಲ್ಲಿ ತುಂಬಿಕೊಂಡು ಅಡುಗೆ ಮಾಡುವವರೂ ಹೊರಡಿರಿ! ತಡೆಮಾಡದೇ ನಾಳೆಯೇ ಬೆಳಿಗ್ಗೆ ಹೊರಡುವಂತೆ ಘೋಷಿಸಿರಿ! ಮಾರ್ಗದಲ್ಲಿ ವಿವಿಧ ಶಿಬಿರಗಳನ್ನೂ ಇಂದೇ ನಿರ್ಮಿಸಿರಿ!” ಹೀಗೆ ಆಜ್ಞಾಪಿಸಿ ರಾಜಾ ಪಾಂಡವನು ಸಹೋದರರೊಂದಿಗೆ ಸ್ತ್ರೀಯರು ಮಕ್ಕಳನ್ನು ಮುಂದಿಟ್ಟುಕೊಂಡು ಮರುದಿನ ಬೆಳಗಾಗುತ್ತಲೇ ಹೊರಟನು. ಪುರದಿಂದ ಹೊರಟು ಐದು ದಿನಗಳು ಅಲ್ಲಿಯೇ ಕಾಯುತ್ತಿದ್ದು ಎಲ್ಲರೂ ಬಂದು ಸೇರಿದನಂತರ ನೃಪತಿಯು ವನದ ಕಡೆ ಪ್ರಯಾಣಬೆಳೆಸಿದನು.

ಅನಂತರ ಭರತಸತ್ತಮನು ಲೋಕಪಾಲರ ಸಮನಾದ ಅರ್ಜುಜಪ್ರಮುಖರ ರಕ್ಷಣೆಯಲ್ಲಿದ್ದ ಸೇನೆಯನ್ನು ಆಜ್ಞಾಪಿಸಿದನು. “ರಥಗಳನ್ನು ಹೂಡಿ! ಹೂಡಿ!” ಎಂಬ ಸಂತೋಷದ ಕೂಗುಗಳೂ, ಕುದುರೆ ಸವಾರರ “ಸಿದ್ಧರಾಗಿ! ಸಿದ್ಧರಾಗಿ!” ಎನ್ನುವ ಕೂಗೂ ಜೋರಾಗಿ ಕೇಳಿಬಂದಿತು. ಕೆಲವರು ಪಲ್ಲಕ್ಕಿಗಳಲ್ಲಿ ಹೊರಟರೆ ಕೆಲವರು ಮನೋವೇಗದ ಕುದುರೆಗಳನ್ನೇರಿದರು. ಇನ್ನು ಕೆಲವರು ನಗರಾಕಾರದ, ಅಗ್ನಿಯಂತೆ ಬೆಳಗುತ್ತಿರುವ ರಥಗಳಲ್ಲಿ ಹೊರಟರು. ಅನ್ಯರು ಆನೆಗಳನ್ನು ಸವಾರಿಮಾಡಿದರೆ, ಉಗುರು ಮತ್ತು ಪ್ರಾಸಗಳೊಡನೆ ಯುದ್ಧಮಾಡುವ ಯೋಧರು ಪದಾತಿಗಳಾಗಿ ಹೊರಟರು. ಕುರುರಾಜ ಧೃತರಾಷ್ಟ್ರನನ್ನು ಕಾಣಲು ಬಯಸಿದ ಪುರ-ಗ್ರಾಮೀಣ ಪ್ರಜೆಗಳು ಬಹುವಿಧದ ಯಾನಗಳಲ್ಲಿ ಹೊರಟರು. ರಾಜನ ವಚನದಂತೆ ಆಚಾರ್ಯ ಸೇನಾನೀ ಗೌತಮ ಕೃಪನೂ ಸೇನೆಯನ್ನು ತೆಗೆದುಕೊಂಡು ಧೃತರಾಷ್ಟ್ರನ ಆಶ್ರಮದ ಕಡೆ ಪ್ರಯಾಣಿಸಿದನು. ಆಗ ಕುರುನಂದನ ಶ್ರೀಮಾನ್ ಕುರುರಾಜ ಯುಧಿಷ್ಠಿರನು ದ್ವಿಜರಿಂದ ಆವೃತನಾಗಿ, ಅನೇಕ ಸೂತ-ಮಾಗಧ-ವಂದಿಗಳ ಸ್ತುತಿಗಳೊಡನೆ, ನೆತ್ತಿಯ ಮೇಲೆ ಬೆಳಗುತ್ತಿದ್ದ ಬಿಳಿಯ ಛತ್ರದಡಿಯಲ್ಲಿ, ಮಹಾ ರಥಸೇನೆಯೊಡನೆ ಹೊರಟನು. ಮಾರುತಾತ್ಮಜ ಭೀಮಕರ್ಮಿ ವೃಕೋದರನು ಯಂತ್ರಾಯುಧಗಳಿಂದ ಸಜ್ಜಾಗಿದ್ದ ಪರ್ವತೋಪಮ ಗಜಸೇನೆಯೊಂದಿಗೆ ಹೊರಟನು. ತಾಯಿಗೆ ಪ್ರಿಯರಾಗಿದ್ದ ಮಾದ್ರೀಪುತ್ರರೂ ಕೂಡ ಕವಚ-ಧ್ವಜಗಳಿಂದ ಸನ್ನದ್ಧ ಅಶ್ವಾರೋಹಿಗಳ ಸೇನೆಗಳೊಂದಿಗೆ ಹೊರಟರು. ಮಹಾತೇಜಸ್ವೀ ಅರ್ಜುನನು ಶ್ವೇತವರ್ಣದ ಕುದುರೆಗಳನ್ನು ಕಟ್ಟಿದ್ದ ಆದಿತ್ಯವರ್ಚಸ ರಥದಲ್ಲಿ ಕುಳಿತು ನೃಪ ಯುಧಿಷ್ಠಿರನನ್ನು ಹಿಂಬಾಲಿಸಿದನು. ಪಲ್ಲಕ್ಕಿಗಳಲ್ಲಿ ಕುಳಿತಿದ್ದ ದ್ರೌಪದಿಯೇ ಮೊದಲಾದ ಸ್ತ್ರೀಗಣಗಳೂ, ಸ್ತ್ರೀ ಅಧ್ಯಕ್ಷರ ರಕ್ಷಣೆಯಲ್ಲಿ, ಅಮಿತ ಸಂಪತ್ತನ್ನು ದಾನಮಾಡುತ್ತಾ ಹೊರಟರು. ಮನುಷ್ಯರು, ಆನೆಗಳು ಮತ್ತು ಕುದುರೆಗಳಿಂದ ಸಮೃದ್ಧವಾಗಿದ್ದ ಮತ್ತು ವೇಣುವೀಣಾನಿನಾದಗಳಿಂದ ತುಂಬಿದ್ದ ಆ ಪಾಂಡವ ಸೇನೆಯು ಶೋಭಿಸುತ್ತಿತ್ತು. ರಮ್ಯ ನದೀತೀರಗಳಲ್ಲಿ ಮತ್ತು ಸರೋವರಗಳಲ್ಲಿ ತಂಗುತ್ತಾ ಕ್ರಮೇಣವಾಗಿ ಆ ಕುರುಪುಂಗವರು ಪ್ರಯಾಣಬೆಳೆಸಿದರು. ಯುಧಿಷ್ಠಿರನ ವಚನದಂತೆ ಮಹಾತೇಜಸ್ವೀ ಯುಯುತ್ಸು ಮತ್ತು ಪುರೋಹಿತ ಧೌಮ್ಯರು ರಾಜಧಾನಿಯ ರಕ್ಷಣಿಯಲ್ಲಿದ್ದರು.

ರಾಜ ಯುಧಿಷ್ಠಿರನು ಕ್ರಮೇಣವಾಗಿ ಪರಮಪಾವನೀ ಯಮುನಾ ನದಿಯನ್ನು ದಾಟಿ ಕುರುಕ್ಷೇತ್ರವನ್ನು ತಲುಪಿದನು.  ದೂರದಿಂದಲೇ ಅವನು ರಾಜರ್ಷಿ ಶತಯೂಪನ ಮತ್ತು ಕೌರವ್ಯ ಧೃತರಾಷ್ಟ್ರರ ಆಶ್ರಮವನ್ನು ಕಂಡನು. ಆಗ ಆ ಎಲ್ಲ ಜನರೂ ಸಂತೋಷಗೊಂಡು ಮಹಾನಾದಗೈಯುತ್ತಾ ಆಶ್ರಮಪದವನ್ನು ಪ್ರವೇಶಿಸಿದರು. ಪಾಂಡವರು ದೂರದಲ್ಲಿಯೇ ಇಳಿದು ವಿನಯದಿಂದ ಕಾಲ್ನಡುಗೆಯಲ್ಲಿಯೇ ನರಪತಿಯ ಆಶ್ರಮದ ಕಡೆ ನಡೆದರು. ಸರ್ವ ಪೌರಜನರೂ, ರಾಷ್ಟ್ರ ನಿವಾಸಿಗಳೂ, ಕುರುಮುಖ್ಯ ಸ್ತ್ರೀಯರೂ ಕೂಡ ಪದಾತಿಗಳಾಗಿಯೇ ಆಶ್ರಮವನ್ನು ಪ್ರವೇಶಿಸಿದರು. ಅನಂತರ ಆ ಪಾಂಡವರು ನಿರ್ಜನವಾಗಿದ್ದ, ಮೃಗಗಣಗಳಿಂದ ತುಂಬಿದ್ದ, ಬಾಳೆಯ ತೋಟದಿಂದ ಶೋಭಿಸುತ್ತಿದ್ದ ಧೃತರಾಷ್ಟ್ರನ ಆಶ್ರಮವನ್ನು ತಲುಪಿದರು. ಆಗ ಅಲ್ಲಿಗೆ ಆಗಮಿಸಿದ್ದ ಪಾಂಡವರನ್ನು ನೋಡಲು ಕುತೂಹಲದಿಂದ ಕೂಡಿದ್ದ ವಿವಿಧ ವ್ರತಗಳಲ್ಲಿ ನಿರತರಾಗಿದ್ದ ತಾಪಸರು ಬಂದು ಸೇರಿದರು. ಅವರನ್ನು ಕೌರವವಂಶಧಾರಕನಾದ ರಾಜಾ ಯುಧಿಷ್ಠಿರನು ಕಂಬನಿದುಂಬಿದವನಾಗಿ – “ನಮ್ಮ ಜ್ಯೇಷ್ಠ ಪಿತನು ಎಲ್ಲಿಗೆ ಹೋಗಿದ್ದಾನೆ?” ಎಂದು ಪ್ರಶ್ನಿಸಿದನು. ಹಾಗೆ ಕೇಳಲು ಅವರು “ಪ್ರಭೋ! ಅವನು ಸ್ನಾನಕ್ಕೆಂದು, ಮತ್ತು ಹೂವು-ನೀರನ್ನು ತರಲು ಯಮುನಾ ನದಿಗೆ ಹೋಗಿದ್ದಾನೆ” ಎಂದರು.

ಅವರು ಹೇಳಿದ ಮಾರ್ಗದಲ್ಲಿಯೇ ಮುಂದುವರೆಯಲು ಪಾಂಡವರು ಅನತಿದೂರದಲ್ಲಿಯೇ ಕಾಲ್ನಡುಗೆಯಲ್ಲಿ ಬರುತ್ತಿದ್ದ ಧೃತರಾಷ್ಟ್ರಾದಿ ಎಲ್ಲರನ್ನೂ ಕಂಡರು. ತಂದೆಯನ್ನು ಕಾಣುವ ಬಯಕೆಯಿಂದ ಅವರು ಬಹಳ ಶೀಘ್ರವಾಗಿ ಮುಂದುವರೆದರು. ಸಹದೇವನಾದರೋ ಬಹಳ ವೇಗವಾಗಿ ಓಡಿ ಹೋಗಿ ಪೃಥೆಯ ಕಾಲುಗಳನ್ನು ಹಿಡುದುಕೊಂಡು ಜೋರಾಗಿ ಅಳತೊಡಗಿದನು. ಕುಂತಿಯೂ ಕೂಡ ಕಂಬನಿದುಂಬಿದ ಕಣ್ಣುಗಳಿಂದ ತನ್ನ ಪ್ರಿಯ ಸುತನನ್ನು ನೋಡಿದಳು. ಮಗನನ್ನು ಮೇಲಕ್ಕಿತ್ತಿ ಬಾಹುಗಳಿಂದ ಬಿಗಿದಪ್ಪಿ ಕುಂತಿಯು ಸಹದೇವನು ಬಂದಿರುವುದನ್ನು ಗಾಂಧಾರಿಗೂ ತಿಳಿಸಿದಳು. ಹತ್ತಿರದಲ್ಲಿಯೇ ಇದ್ದ ರಾಜ ಯುಧಿಷ್ಠಿರ, ಭೀಮಸೇನ, ಅರ್ಜುನ ಮತ್ತು ನಕುಲರನ್ನು ನೋಡಿ ಪೃಥೆಯು ತ್ವರೆಮಾಡಿ ಮುಂದೆಬಂದಳು. ಪುತ್ರರನ್ನು ಕಳೆದುಕೊಂಡ ಆ ದಂಪತಿಗಳನ್ನು ಎಳೆದುಕೊಂಡು ಮುಂದೆ ಮುಂದೆ ಬರುತ್ತಿದ್ದ ಅವಳನ್ನು ನೋಡಿ ಪಾಂಡವರು ಭೂಮಿಯ ಮೇಲೆಯೇ ಅಡ್ಡಬಿದ್ದರು. ಮಹಾಮನಸ್ವಿ ಮೇಧಾವೀ ಪ್ರಭು ರಾಜಾ ಧೃತರಾಷ್ಟ್ರನು ಸ್ವರಗಳಿಂದ ಮತ್ತು ಸ್ಪರ್ಶದಿಂದ ಪ್ರತಿಯೊಬ್ಬರನ್ನೂ ಗುರುತಿಸಿ ಸಮಾಧಾನಗೊಳಿಸಿದನು.

ಆಗ ಆ ಮಹಾತ್ಮರು ಕಣ್ಣೀರು ಸುರಿಸುತ್ತಾ ಗಾಂಧಾರೀ ಸಹಿತನಾದ ನೃಪನಿಗೂ ಮತ್ತು ತಾಯಿಗೂ ಯಥಾವಿಧಿಯಾಗಿ ನಮಸ್ಕರಿಸಿದರು. ತಾಯಿಯಿಂದ ಸಮಾಧಾನಗೊಳಿಸಲ್ಪಟ್ಟ ಪಾಂಡವರು ಪುನಃ ಚೇತರಿಸಿಕೊಂಡು ನೀರಿನ ಎಲ್ಲ ಕೊಡಗಳನ್ನೂ ಸ್ವಯಂ ತಾವೇ ಎತ್ತಿಕೊಂಡರು. ಅನಂತರ ನರಸಿಂಹರ ನಾರಿಯರು, ಯೋಧಜನರು, ಪೌರ-ಜಾನಪದ ಜನರು ನರಾಧಿಪ ಧೃತರಾಷ್ಟ್ರನನ್ನು ಸಂದರ್ಶಿಸಿದರು. ಯುಧಿಷ್ಠಿರನು ಅವರೆಲ್ಲರನ್ನೂ ನಾಮ-ಗೋತ್ರಗಳನ್ನು ಹೇಳಿ ಪರಿಚಯ ಮಾಡಿಕೊಟ್ಟ ನಂತರ ನರಪತಿ ಧೃತರಾಷ್ಟ್ರನು ಅವರನ್ನು ಅಭಿನಂದಿಸಿದನು. ಪುರಜನರಿಂದ ಪರಿವೃತನಾದ ರಾಜನು ಆನಂದ ಭಾಷ್ಪಗಳನ್ನು ಸುರಿಸುತ್ತಾ ತಾನು ಹಿಂದಿನಂತೆಯೇ ಹಸ್ತಿನಾಪುರದ ಅರಮನೆಯಲ್ಲಿರುವನೋ ಎಂದು ಭಾವಿಸಿದನು. ಕೃಷ್ಣೆಯೇ ಮೊದಲಾದ ಸೊಸೆಯಂದಿರೂ ಕೂಡ ಕುಂತಿ-ಗಾಂಧಾರಿಯರ ಸಹಿತ ಪಾರ್ಥಿವನನ್ನು ಅಭಿನಂದಿಸಲು ಪ್ರತಿಯಾಗಿ ಅವನೂ ಅವರನ್ನು ಅಭಿನಂದಿಸಿದನು. ಅನಂತರ ಅವನು ಸಿದ್ಧ-ಚಾರಣರಿಂದ ಸಂಸೇವಿತವಾಗಿದ್ದ ತನ್ನ ಆಶ್ರಮಕ್ಕೆ ಹೋದನು. ಪ್ರೇಕ್ಷಕರಿಂದ ತುಂಬಿಹೋಗಿದ್ದ ಆ ಆಶ್ರಮವು ಆಗ ನಕ್ಷತ್ರಗಳಿಂದ ತುಂಬಿದ ಆಕಾಶದಂತೆ ಕಾಣುತ್ತಿತ್ತು.”

ಪಾಂಡವವರ್ಣನ

ಆ ಆಶ್ರಮದಲ್ಲಿ ರಾಜಾ ಧೃತರಾಷ್ಟ್ರನು ಸುಂದರ ಕಮಲಗಳಂತಹ ಕಣ್ಣುಗಳುಳ್ಳ ನರವ್ಯಾಘ್ರ ಸಹೋದರರೊಂದಿಗೆ ಕುಳಿತುಕೊಂಡನು. ಮಹಾಭಾಗ ತಾಪಸರು ಕೂಡ ಪೃಥುವಕ್ಷಸ ಕುರುಪತಿಯ ಪುತ್ರರಾದ ಪಾಂಡವರನ್ನು ನೋಡಲು ನಾನಾದೇಶಗಳಿಂದ ಬಂದು ಸೇರಿದ್ದರು. ಅವರು – “ಇವರಲ್ಲಿ ಯುಧಿಷ್ಠಿರನು ಯಾರು? ಭೀಮಾರ್ಜುನ-ಯಮಳರು ಯಾರು ಮತ್ತು ಯಶಸ್ವಿನೀ ದ್ರೌಪದಿಯು ಯಾರು ಎಂದು ತಿಳಿಯಲು ಬಯಸುತ್ತೇವೆ” – ಎಂದು ಕೇಳಿಕೊಂಡರು.

ಆಗ ಸೂತ ಸಂಜಯನು ಅವರಿಗೆ ದ್ರೌಪದಿ ಮತ್ತು ಸರ್ವ ಕುರುಸ್ತ್ರೀಯರನ್ನೂ ಸೇರಿಸಿ ಎಲ್ಲರ ಹೆಸರುಗಳನ್ನು ಹೇಳುತ್ತಾ ಪರಿಚಯ ಮಾಡಿಕೊಟ್ಟನು. “ಶುದ್ಧ ಚಿನ್ನದಂತೆ ಗೌರಾಂಗನಾಗಿರುವ, ಮಹಾಸಿಂಹದಂತೆ ಬೆಳೆದ ಶರೀರವುಳ್ಳ, ತೀಕ್ಷ್ಣವಾದ ಮೂಗಿರುವ, ವಿಶಾಲವಾಗಿಯೂ, ತೀಕ್ಷ್ಣವಾಗಿಯೂ ಮತ್ತು ಕೆಂಪಾಗಿಯೂ ಇರುವ ಕಣ್ಣುಗಳುಳ್ಳ ಇವನೇ ಕುರುರಾಜ ಯುಧಿಷ್ಠಿರನು! ಮದಿಸಿದ ಗಜರಾಜನ ನಡುಗೆಯುಳ್ಳ, ಪುಟಕ್ಕೆ ಹಾಕಿದ ಚಿನ್ನದಂತೆ ಶುದ್ಧ ಗೌರವರ್ಣದ, ವಿಶಾಲವಾದ ಮತ್ತು ದಷ್ಟಪುಷ್ಟವಾದ ಹೆಗಲುಗಳುಳ್ಳ, ದಪ್ಪವಾಗಿಯೂ ನೀಳವಾಗಿಯೂ ಇರುವ ತೋಳುಗಳುಳ್ಳ ಇವನೇ ವೃಕೋದರನು. ಇವನನ್ನು ಚೆನ್ನಾಗಿ ನೋಡಿರಿ! ಇವನ ಪಕ್ಕದಲ್ಲಿಯೇ ಇರುವ ಶ್ಯಾಮಲ ವರ್ಣದ, ಯುವಕ, ಗಜಗಣಗಳ ಪತಿ ಸಲಗದಂತೆ ಪ್ರಕಾಶಿಸುತ್ತಿರುವ, ಸಿಂಹದ ಹೆಗಲಿನಂತೆ ವಿಸ್ತಾರವಾದ ಹೆಗಲುಳ್ಳ, ಗಜಕ್ರೀಡೆಯಂಥಹ ನಡುಗೆಯುಳ್ಳ, ಕಮಲದಂತೆ ವಿಶಾಲ ಕಣ್ಣುಗಳುಳ್ಳ ಮಹಾಧನುಷ್ಮಂತನಾದ ಇವನೇ ವೀರ ಅರ್ಜುನ! ಕುಂತಿಯ ಸಮೀಪದಲ್ಲಿ ಕುಳಿತಿರುವ, ವಿಷ್ಣು-ಮಹೇಂದ್ರ ಸದೃಶರಾದ, ಪುರುಷೋತ್ತಮರೀರ್ವರು, ಅವಳೀ ಮಕ್ಕಳಾದ ಇವರೇ ನಕುಲ ಸಹದೇವರು. ಮನುಷ್ಯಲೋಕದಲ್ಲಿ ರೂಪದಲ್ಲಾಗಲೀ, ಬಲದಲ್ಲಾಗಲೀ ಅಥವಾ ಶೀಲದಲ್ಲಾಗಲೀ ಇವರಿಗೆ ಸಮನಾದವರು ಬೇರೆ ಯಾರೂ ಇಲ್ಲ! ಮಧ್ಯ ವಯಸ್ಸಿನ ಈ ಪದ್ಮದಳಾಯತಾಕ್ಷೀ, ನೀಲಕಮಲದ ಕಾಂತಿಯಂಥ ಶ್ಯಾಮಲ ವರ್ಣದವಳು, ದೇವತೆಗಳಿಗೂ ದೇವಿಯಂತಿರುವ, ಮೂರ್ತಿಮತ್ತಾಗಿ ಬಂದಿರುವ ಲಕ್ಷ್ಮಿಯಂತೆ ನಿಂತಿರುವ ಇವಳೇ ಕೃಷ್ಣೆ ದ್ರೌಪದೀ. ಅವಳ ಪಕ್ಕದಲ್ಲಿ ಸ್ತ್ರೀಯರ ಮಧ್ಯದಲ್ಲಿ ಕುಳಿತಿರುವ, ಚಿನ್ನಕ್ಕೂ ಹೆಚ್ಚಿನ ಕಾಂತಿಯುಳ್ಳ, ಮೂರ್ತಿಮತ್ತಾಗಿ ಬಂದಿರುವ ಗೌರಿಯಂತೆಯೇ ಇರುವ, ಅವಳೇ ಅಪ್ರತಿಮ ಚಕ್ರಾಯುಧ ಕೃಷ್ಣನ ತಂಗಿ ಸುಭದ್ರೆ. ಬೆಳೆದ ನೀಲಕಮಲದ ಹಾರದ ಬಣ್ಣದಂತೆ ಶ್ಯಾಮಲವರ್ಣವುಳ್ಳ ಇವಳು – ಶ್ರೀ ಕೃಷ್ಣನೊಡನೆ ಸಾರಥ್ಯದ ಕೌಶಲ್ಯದಲ್ಲಿ ಸದಾ ಸ್ಪರ್ಧಿಸುತ್ತಿದ್ದ ಮತ್ತು ದುರ್ಯೋಧನನ ಸೇನಾ ನಾಯಕನಾಗಿದ್ದ ಶಲ್ಯನ ತಂಗಿ ಮತ್ತು ಭೀಮಸೇನನ ಶ್ರೇಷ್ಠ ಭಾರ್ಯೆಯು. ಸಂಪಿಗೆ ಹೂವಿನ ಮಾಲೆಯಂತೆ ಗೌರವರ್ಣವುಳ್ಳ, ಮಗಧಾಧಿಪನೆಂದು ಖ್ಯಾತನಾದ ಜರಾಸಂಧನ ಮಗಳು ಇವಳು ಮಾದ್ರಿಯ ಕಡೆಯ ಮಗ ಸಹದೇವನ ಭಾರ್ಯೆ. ಅವಳ ಸಮೀಪದಲ್ಲಿ ನೆಲದ ಮೇಲೆ ಕುಳಿತುಕೊಂಡಿರುವ, ಇಂದೀವರದಂತೆ ಶ್ಯಾಮಲ ವರ್ಣದ ಶರೀರವುಳ್ಳ, ಕಮಲಾಯತಾಕ್ಷಿಯು ಜ್ಯೇಷ್ಠ ಮಾದ್ರೀ ಸುತ ನಕುಲನ ಭಾರ್ಯೆಯು. ಪುಟಕ್ಕೆ ಹಾಕಿದ ಚಿನ್ನದಂತೆ ಗೌರವರ್ಣವುಳ್ಳ, ಮಗನೊಂದಿಗಿರುವ ಇವಳು ರಾಜ ವಿರಾಟನ ಮಗಳು ಮತ್ತು ವಿರಥನಾಗಿದ್ದಾಗ ರಥಸ್ಥರಾಗಿದ್ದ ದ್ರೋಣಾದಿಗಳು ರಣದಲ್ಲಿ ಸಂಹರಿಸಿದ ಆ ಅಭಿಮನ್ಯುವಿನ ಭಾರ್ಯೆಯು. ಬಿಳಿಯ ಉತ್ತರೀಯವನ್ನು ಹೊದೆದಿರುವ ಮತ್ತು ಬೈತಲೆಗಳಲ್ಲಿ ಕುಂಕುಮಗಳಿಲ್ಲದಿರುವ ಇವರು ನರರಾಜ ದುರ್ಯೋಧನನ ಮತ್ತು ಅವನ ತಮ್ಮಂದಿರ ಪತ್ನಿಯರು. ವೃದ್ಧ ರಾಜನ ನೂರಕ್ಕು ಹೆಚ್ಚಿನ ಸಂಖ್ಯೆಯ ಈ ಸೊಸೆಯಂದಿರು ನರವೀರರಾದ ಪತಿ-ಪುತ್ರರನ್ನು ಕಳೆದುಕೊಂಡಿದ್ದಾರೆ. ಬ್ರಾಹ್ಮಣರೇ! ನೀವುಗಳೆಲ್ಲ ಕೇಳಿದುದಕ್ಕೆ ನಾನು ಮುಖ್ಯರಾದವರ ಪರಿಚಯ ಮಾಡಿಕೊಟ್ಟಿದ್ದೇನೆ. ಈ ಎಲ್ಲ ನರೇಂದ್ರಪತ್ನಿಯರೂ ವಿಶುದ್ಧಸತ್ತ್ವರು.”

ಸರ್ವ ತಾಪಸರು ಹೊರಟುಹೋದ ನಂತರ ಕುರುವೃದ್ಧವರ್ಯ ರಾಜನು ಸೇರಿರುವ ನರದೇವಪುತ್ರರೆಲ್ಲರ ಕುಶಲವನ್ನು ಪ್ರಶ್ನಿಸಿದನು. ಯೋಧರು ಆಶ್ರಮಮಂಡಲದ ಗಡಿಯಲ್ಲಿಯೇ ವಾಹನಗಳನ್ನು ಬಿಚ್ಚಿ ಅಲ್ಲಿಯೇ ಸ್ತ್ರೀ-ವೃದ್ಧ-ಬಾಲಕರಿಗೆ ಉಳಿಯಲು ವ್ಯವಸ್ಥೆಮಾಡಿದರು. ಆಗ ಧೃತರಾಷ್ಟ್ರನು ಯಥಾರ್ಹವಾಗಿ ಕುಶಲ ಪ್ರಶ್ನೆಗಳನ್ನು ಕೇಳಿದನು.

ವಿದುರಸಾಯುಜ್ಯ

ಧೃತರಾಷ್ಟ್ರನು ಹೇಳಿದನು: “ಯುಧಿಷ್ಠಿರ! ಮಗೂ! ಪುರಜನಪದರೊಡನೆಯೂ, ಎಲ್ಲ ತಮ್ಮಂದಿರೊಡನೆಯೂ ನೀನು ಕುಶಲನಾಗಿದ್ದೀಯೆ ತಾನೇ? ನಿನ್ನನ್ನೇ ಆಶ್ರಯಿಸಿರುವ ಸಚಿವರೂ, ಸೇವಕ ವರ್ಗದವರೂ, ಗುರುಗಳೂ ನಿರಾಮಯರಾಗಿರುವರು ತಾನೇ? ರಾಜರ್ಷಿಗಳು ನಡೆದುಕೊಂಡು ಬಂದಿರುವ ಪುರಾತನ ವೃತ್ತಿಯಂತೆಯೇ ನಡೆದುಕೊಳ್ಳುತ್ತಿದ್ದೀಯೆ ತಾನೆ? ನ್ಯಾಯಮಾರ್ಗವನ್ನು ಉಲ್ಲಂಘಿಸದೇ ನಿನ್ನ ಕೋಶವು ತುಂಬುತ್ತಿದೆ ತಾನೇ? ಶತ್ರುಗಳು, ಮಿತ್ರರು ಮತ್ತು ಮಧ್ಯಸ್ಥರೊಡನೆ ಯಥಾಯೋಗ್ಯವಾಗಿ ವ್ಯವಹರಿಸುತ್ತಿರುವೆ ತಾನೇ? ಅಗ್ರಹಾರಾದಿಗಳಿಂದ ಬ್ರಾಹ್ಮಣರನ್ನು ಯಥೋಚಿತವಾಗಿ ನೋಡಿಕೊಳ್ಳುತ್ತಿರುವೆ ತಾನೇ? ನಿನ್ನ ಶೀಲದಿಂದ ಶತ್ರುಗಳು, ಗುರುಗಳು, ಪೌರರು, ಸೇವಕರು ಮತ್ತು ಸ್ವಜನರೂ ತೃಪ್ತಿಯಿಂದಿರುವರು ತಾನೇ? ಶ್ರದ್ಧಾವಂತನಾಗಿ ಪಿತೃದೇವತೆಗಳನ್ನು ಯಾಜಿಸುತ್ತಿದ್ದೀಯೆ ತಾನೇ? ಅತಿಥಿಗಳನ್ನು ಅನ್ನ-ಪಾನಗಳಿಂದ ಅರ್ಚಿಸುತ್ತಿದ್ದೀಯೆ ತಾನೇ? ನಿನ್ನ ರಾಜ್ಯದಲ್ಲಿ ವಿಪ್ರರೂ, ಕ್ಷತ್ರಿಯರೂ, ವೈಶ್ಯವರ್ಗದವರೂ, ಶೂದ್ರರೂ ಮತ್ತು ಕುಟುಂಬಿಗಳೂ ತಮ್ಮ ತಮ್ಮ ಕರ್ಮಗಳಲ್ಲಿ ನಿರತರಾಗಿದ್ದಾರೆ ತಾನೇ? ನಿನ್ನ ರಾಜ್ಯದಲ್ಲಿ ಸ್ತ್ರೀಯರು, ಬಾಲಕರು, ಮತ್ತು ವೃದ್ಧರು ಶೋಕಿಸುತ್ತಿಲ್ಲ ಮತ್ತು ಬೇಡಿ ಜೀವಿಸುತ್ತಿಲ್ಲ ತಾನೇ? ನಿನ್ನ ಮನೆಯಲ್ಲಿ ಸೊಸೆ, ಪತ್ನೀ, ತಂಗಿ, ಮಗಳು – ಇವರೆಲ್ಲರೂ ಪೂಜಿಸಲ್ಪಡುತ್ತಿದ್ದಾರೆ ತಾನೇ? ನಮ್ಮ ಈ ರಾಜರ್ಷಿವಂಶವು ನಿನ್ನನ್ನು ಮಹೀಪತಿಯನ್ನಾಗಿ ಪಡೆದು ಯಥೋಚಿತವಾಗಿ ಯಶಸ್ಸನ್ನು ಕಳೆದುಕೊಳ್ಳುತ್ತಿಲ್ಲ ತಾನೇ?”

ಈ ಕುಶಲಪ್ರಶ್ನೆಸಂಯುಕ್ತವಾದ ಕುಶಲ ವಾಕ್ಯಗಳಿಗೆ ನ್ಯಾಯವಿದು ಯುಧಿಷ್ಠಿರನು ಉತ್ತರಿಸಿದನು: “ರಾಜನ್! ನಿನ್ನ ತಪಸ್ಸು ವೃದ್ಧಿಯಾಗುತ್ತಿದೆಯೇ? ನಿನಗೆ ಬೇಗನೇ ಆಯಾಸವಾಗುತ್ತಿಲ್ಲ ತಾನೇ? ನಮ್ಮ ಜನನಿಯು ಆಯಾಸವಿಲ್ಲದೇ ಶುಶ್ರುಷೆಮಾಡುತ್ತಿದ್ದಾಳೆ ತಾನೇ? ಹಾಗಿದ್ದರೆ ಅವಳ ವನವಾಸವು ಸಫಲವಾದಂತೆ. ಘೋರತಪಸ್ಸಿನಲ್ಲಿ ನಿರತಳಾಗಿರುವ ಈ ನನ್ನ ದೊಡ್ಡಮ್ಮ ದೇವೀ ಗಾಂಧಾರಿಯು ಛಳಿಗಾಳಿಯಿಂದಲೂ, ನಡೆದ ಆಯಾಸದಿಂದಲೂ ಪೀಡಿತಳಾಗಿ ದುಃಖಿಸುತ್ತಿಲ್ಲ ತಾನೇ? ಕ್ಷತ್ರಧರ್ಮಪರಾಯಣರಾಗಿ ಹತರಾದ ಮಹಾವೀರ್ಯ ಪುತ್ರರನ್ನು ಸ್ಮರಿಸಿಕೊಂಡು ಅಪರಾಧಿಗಳಾದ ನಮ್ಮ ವಿಷಯದಲ್ಲಿ ಸದಾ ಅನಿಷ್ಟವನ್ನು ಚಿಂತಿಸುತ್ತಿಲ್ಲ ತಾನೇ? ವಿದುರನು ಎಲ್ಲಿದ್ದಾನೆ? ಅವನನ್ನು ನಾವು ಇಲ್ಲಿ ಕಾಣುತ್ತಿಲ್ಲವಲ್ಲ! ಈ ಸಂಜಯನು ಕುಶಲಿಯಾಗಿ ತಪೋನಿರತನಾಗಿದ್ದಾನೆ ತಾನೇ?”

ಹೀಗೆ ಹೇಳಲು ಧೃತರಾಷ್ಟ್ರನು ಜನಾಧಿಪ ಯುಧಿಷ್ಠಿರನಿಗೆ ಉತ್ತರಿಸಿದನು: “ಪುತ್ರ! ಘೋರ ತಪಸ್ಸಿನಲ್ಲಿ ನಿರತನಾಗಿರುವ ವಿದುರನು ಕುಶಲಿಯಾಗಿದ್ದಾನೆ. ನಿರಾಹಾರನಾಗಿ, ಕೇವಲ ಗಾಳಿಯನ್ನೇ ಸೇವಿಸುತ್ತಾ ಅವನು ಕೃಶನಾಗಿದ್ದಾನೆ. ಅವನ ನರ-ನಾಡಿಗಳು ಕಾಣುತ್ತಿವೆ. ಈ ಶೂನ್ಯ ಕಾನನದಲ್ಲಿ ಅವನು ಯಾವಾಗಲಾದರೊಮ್ಮೆ ಕೆಲವು ವಿಪ್ರರಿಗೆ ಕಾಣಿಸಿಕೊಳ್ಳುತ್ತಾನೆ.”  ಅವನು ಹೀಗೆ ಹೇಳುತ್ತಿರುವಾಗಲೇ ಜಟಾಧಾರಿಯಾಗಿದ್ದ, ಮುಖವು ಸುಕ್ಕಿಹೋಗಿದ್ದ, ಕೃಶನಾಗಿದ್ದ, ದಿಗಂಬರನಾಗಿದ್ದ, ಕೊಳಕಾದ ಅಂಗಾಂಗಗಳಿಂದ ಕೂಡಿದ್ದ ಕ್ಷತ್ತ ವಿದುರನು ದೂರದಲ್ಲಿ ನಿಂತಿರುವುದನ್ನು ಮಹೀಪತಿ ಯುಧಿಷ್ಠಿರನಿಗೆ ತಿಳಿಸಲಾಯಿತು. ಆದರೆ ವಿದುರನು ಆಶ್ರಮದ ಕಡೆ ಒಮ್ಮೆ ತಿರುಗಿ ನೋಡಿ ಒಡನೆಯೇ ಹಿಂದಕ್ಕೆ ಹೊರಟುಬಿಟ್ಟನು.  ಕೂಡಲೇ ನೃಪತಿ ಯುಧಿಷ್ಠಿರನು ಏಕಾಕಿಯಾಗಿ ಅವನನ್ನು ಹಿಂಬಾಲಿಸಿ ಹೋದನು. ಘೋರ ವನವನ್ನು ಹೊಕ್ಕಿದ್ದ ವಿದುರನು ಅವನಿಗೆ ಒಮ್ಮೆ ಕಾಣುತ್ತಿದ್ದರೆ ಇನ್ನೊಮ್ಮೆ ಕಾಣುತ್ತಿರಲಿಲ್ಲ. “ಭೋ ಭೋ ವಿದುರ! ನಾನು ನಿನ್ನ ಪ್ರಿಯ ರಾಜ ಯುಧಿಷ್ಠಿರ!” ಎಂದು ಕೂಗಿಕೊಳ್ಳುತ್ತಾ ಪ್ರಯತ್ನಪಟ್ಟು ಆ ನರಪತಿಯು ವಿದುರನ ಹಿಂದೆ ಓಡಿದನು.

ಹೀಗೆ ಹಿಂಬಾಲಿಸಲ್ಪಟ್ಟ ವಿದುರನು ಕಾಡಿನ ಏಕಾಂತ ಸ್ಥಳವೊಂದರಲ್ಲಿ ಒಂದು ಮರಕ್ಕೆ ಒರಗಿ ನಿಂತುಕೊಂಡನು. ಅತ್ಯಂತ ಕ್ಷೀಣನಾಗಿ ಹೋಗಿದ್ದ, ಆಕೃತಿಯಲ್ಲಿ ಮಾತ್ರ ವಿದುರನಂತಿದ್ದ ಆ ಮಹಾಬುದ್ಧಿಯನ್ನು ಮಹಾಬುದ್ಧಿ ರಾಜಾ ಯುಧಿಷ್ಠಿರನು ಗುರುತಿಸಿದನು. ವಿದುರನಿಗೆ ಕೇಳುವಷ್ಟು ದೂರದಲ್ಲಿ ಅವನ ಎದುರಿಗೇ ನಿಂತು ರಾಜನು ಸಂಜ್ಞೆಮಾಡುತ್ತಾ “ನಾನು ಯುಧಿಷ್ಠಿರ!” ಎಂದು ಹೇಳಿದನು. ಅನಂತರ ವಿದುರನು ಎವೆಯಿಕ್ಕದೇ ರಾಜನನ್ನೇ ನೋಡುತ್ತಾ ಅವನ ದೃಷ್ಟಿಯಲ್ಲಿ ತನ್ನ ದೃಷ್ಟಿಯನ್ನು ಸೇರಿಸಿದನು. ಧೀಮಾನ್ ವಿದುರನು ಯುಧಿಷ್ಠಿರನ ಶರೀರದಲ್ಲಿ ತನ್ನ ಶರೀರವನ್ನು, ಪ್ರಾಣದಲ್ಲಿ ತನ್ನ ಪ್ರಾಣಗಳನ್ನು ಮತ್ತು ಇಂದ್ರಿಯಗಳಲ್ಲಿ ಇಂದ್ರಿಯಗಳನ್ನು ಇರಿಸಿ ಪ್ರವೇಶಿಸಿದನು. ವಿದುರನು ಯೋಗಬಲವನ್ನಾಶ್ರಯಿಸಿ ಧರ್ಮರಾಜನ ತೇಜಸ್ಸಿನಂತೆ ಪ್ರಜ್ವಲಿಸುತ್ತಿರುವನೋ ಎನ್ನುವಂತೆ ನೃಪತಿಯ ದೇಹವನ್ನು ಪ್ರವೇಶಿಸಿದನು. ವಿದುರನ ಶರೀರವು ಮಾತ್ರ ಅಲ್ಲಿಯೇ ಮರವನ್ನು ಎರಗಿ ನಿಂತಿರುವುದನ್ನು, ಕಣ್ಣುಗಳು ಸ್ತಬ್ಧವಾಗಿರುವುದನ್ನು ಆದರೆ ಚೇತನವು ಹೊರಟುಹೋಗಿರುವುದನ್ನು ರಾಜನು ನೋಡಿದನು. ಆಗ ತನ್ನನ್ನು ತಾನೇ ಅಧಿಕ ಬಲವಂತನಾದಂತೆಯೂ ಬಹುಗುಣವಂತನಾದಂತೆಯೂ ಭಾವಿಸಿಕೊಂಡನು. ವಿದ್ಯಾವಾನ್ ಪಾಂಡವ ಧರ್ಮರಾಜನು ತನ್ನ ಪುರಾತನ ಆತ್ಮವನ್ನೂ, ಮಹಾತೇಜಸ್ಸನ್ನೂ, ಯೋಗಧರ್ಮವನ್ನೂ ಮತ್ತು ಮಹಾತೇಜಸ್ವಿ ವ್ಯಾಸನು ಹೇಳಿದುದನ್ನೂ ಸ್ಮರಿಸಿಕೊಂಡನು. ಆಗ ಧರ್ಮರಾಜನಾದರೋ ಅಲ್ಲಿಯೇ ಅವನ ದಹನ ಸಂಸ್ಕಾರವನ್ನು ಮಾಡಲು ವಿಚಾರಿಸುತ್ತಿರುವಾಗ ಅಶರೀರ ವಾಣಿಯೊಂದು ನುಡಿಯಿತು: “ಭೋ ಭೋ ರಾಜನ್! ವಿದುರನ ಶರೀರವನ್ನು ಸುಡಬೇಡ! ಯತಿಧರ್ಮವನ್ನು ಪಾಲಿಸುತ್ತಿದ್ದವನ ಕಲೇವರವನ್ನು ಸುಡದಿರುವುದು ಸನಾತನ ಧರ್ಮವಾಗಿದೆ. ಭವಿಷ್ಯದಲ್ಲಿ ಇವನು ಸಂತಾನಕ ಎಂಬ ಹೆಸರಿನ ಲೋಕಗಳನ್ನು ಪಡೆಯುತ್ತಾನೆ. ಇವನಿಗಾಗಿ ಶೋಕಿಸಲೂ ಕೂಡದು!”

ಇದನ್ನು ಕೇಳಿದ ಧರ್ಮರಾಜನು ಪುನಃ ಹಿಂದಿರುಗಿ ಬಂದು ರಾಜ ವೈಚಿತ್ರವೀರ್ಯನಿಗೆ ನಡೆದುದೆಲ್ಲವನ್ನೂ ನಿವೇದಿಸಿದನು. ಆಗ ರಾಜ ಧೃತರಾಷ್ಟ್ರ, ಸರ್ವ ಜನರೂ, ಭೀಮಸೇನಾದಿಗಳೂ ಪರಮ ವಿಸ್ಮಿತರಾದರು. ಅದನ್ನು ಕೇಳಿ ಪ್ರೀತನಾದ ರಾಜನು ಧರ್ಮಜನಿಗೆ “ಜಲ-ಮೂಲ-ಫಲಗಳನ್ನು ನನ್ನಿಂದ ನೀನು ಸ್ವೀಕರಿಸಬೇಕು! ರಾಜನ್! ತಾನು ಏನನ್ನು ತಿನ್ನುತ್ತಾನೋ ಅದರಿಂದಲೇ ಮನುಷ್ಯನು ಅತಿಥಿಯನ್ನು ಸತ್ಕರಿಸಬೇಕು ಎಂದು ಹೇಳುತ್ತಾರೆ” ಎಂದು ಹೇಳಿದನು. ಇದಕ್ಕೆ ಹಾಗೆಯೇ ಆಗಲೆಂದು ನೃಪನಿಗೆ ಹೇಳಿ ಧರ್ಮಾತ್ಮಜನು ರಾಜನು ಕೊಟ್ಟ ಫಲಮೂಲಗಳನ್ನು ಅನುಜರೊಂದಿಗೆ ಭುಂಜಿಸಿದನು. ಫಲ-ಮೂಲ-ಜಲಗಳನ್ನು ಸೇವಿಸಿ ಅವರು ಎಲ್ಲರೂ ಮರದ ಬುಡದಲ್ಲಿಯೇ ಆ ರಾತ್ರಿಯನ್ನು ಕಳೆದರು.

ವ್ಯಾಸಾಗಮನ

ಹೀಗೆ ಆ ಆಶ್ರಮದಲ್ಲಿದ್ದ ಆ ಪುಣ್ಯಕರ್ಮಿಗಳು ನಕ್ಷತ್ರಸಂಪನ್ನವಾದ ಮಂಗಳಕರ ರಾತ್ರಿಯನ್ನು ಸುಖವಾಗಿ ಕಳೆದರು. ಅಲ್ಲಲ್ಲಿ ಅವರ ನಡುವೆ ಧರ್ಮಾರ್ಥಲಕ್ಷಣಯುಕ್ತವಾದ, ವಿಚಿತ್ರ ಪದಸಂಚಾರಗಳುಳ್ಳ, ನಾನಾ ಶೃತಿಗಳಿಂದ ಕೂಡಿದ ಸಂಭಾಷಣೆಗಳು ನಡೆಯುತ್ತಿದ್ದವು. ಪಾಂಡವರಾದರೋ ಬಹುಮೂಲ್ಯ ಹಾಸಿಗೆಗಳನ್ನು ಪರಿತ್ಯಜಿಸಿ ತಾಯಿಯೊಡನೆ ನೆಲದ ಮೇಲೆಯೇ ಮಲಗಿಕೊಂಡರು. ಮಹಾಮನಸ್ವೀ ರಾಜಾ ಧೃತರಾಷ್ಟ್ರನು ಯಾವ ಆಹಾರವನ್ನು ಉಂಡನೋ ಅದನ್ನೇ ಪಾಂಡವರೂ ಸೇವಿಸಿ ರಾತ್ರಿಯನ್ನು ಕಳೆದರು. ರಾತ್ರಿಯನ್ನು ಕಳೆದು, ಪೂರ್ವಾಹ್ನಿಕ ಕ್ರಿಯೆಗಳನ್ನು ಪೂರೈಸಿ ಕೌಂತೇಯ ಯುಧಿಷ್ಠಿರನು, ಧೃತರಾಷ್ಟ್ರನ ಅನುಜ್ಞೆಯನ್ನು ಪಡೆದು, ತಮ್ಮಂದಿರೊಡನೆ, ಅಂತಃಪುರದ ಪರಿವಾರದವರೊಡನೆ, ಸೇವಕರು ಮತ್ತು ಪುರೋಹಿತರೊಂದಿಗೆ ಅನಾಯಾಸವಾಗಿ ಅಲ್ಲಲ್ಲಿದ್ದ ಆಶ್ರಮ ಮಂಡಲಗಳನ್ನು ನೋಡಿದನು. ಅಲ್ಲಿ ಅವರು ಅಗ್ನಿಗಳು ಪ್ರಜ್ವಲಿಸುತ್ತಿದ್ದ ವೇದಿಗಳನ್ನೂ, ಸ್ನಾನಮಾಡಿ ಅಗ್ನಿಯಲ್ಲಿ ಆಹುತಿಗಳನ್ನು ನೀಡಲು ಕುಳಿತುಕೊಂಡಿದ್ದ ಮುನಿಗಳನ್ನೂ, ನೋಡಿದರು. ವನ್ಯಪುಷ್ಪಗಳ ಗೊಂಚಲುಗಳಿಂದಲೂ, ತುಪ್ಪದ ಆಹುತಿಯಿಂದಾಗಿ ಮೇಲೆದ್ದ ಹೋಮಧೂಮಗಳಿಂದಲೂ, ಮುನಿಗಣಗಳಿಂದಲೂ ಕೂಡಿದ್ದ ಅವುಗಳು ಬ್ರಾಹ್ಮೀ ಕಾಂತಿಯಿಂದ ಬೆಳಗುತ್ತಿದ್ದವು. ಅಲ್ಲಲ್ಲಿ ಮೃಗಗಳ ಗುಂಪುಗಳು ಯಾವುದೇ ಉದ್ವಿಗ್ನತೆಯೂ ಇಲ್ಲದೇ ಸೇರಿಕೊಂಡಿದ್ದವು. ಪಕ್ಷಿಗಣಗಳು ಶಂಕೆಗಳಿಲ್ಲದೇ ಕಲಕಲನಿನಾದಗಳನ್ನು ಮಾಡುತ್ತಿದ್ದವು. ನವಿಲುಗಳ ಕೇಕಾರವಗಳಿಂದಲೂ, ಜಾತಕಪಕ್ಷಿಗಳ ಅವ್ಯಕ್ತ ಮಧುರ ಧ್ವನಿಗಳಿಂದಲೂ, ಕೋಗಿಲೆಗಳ ಇಂಪಾದ ಶುಭಕರ ಕೂಗುಗಳಿಂದಲೂ, ಅಲ್ಲಲ್ಲಿ ಕೇಳಿಬರುತ್ತಿದ್ದ ದ್ವಿಜರ ವೇದಘೋಷಗಳಿಂದಲೂ ಆ ಆಶ್ರಮಮಂಡಲವು ಅಲಂಕೃತವಾಗಿತ್ತು. ಫಲಮೂಲಗಳನ್ನೇ ಸೇವಿಸುತ್ತಿದ್ದ ಅನೇಕ ಮಹಾಪುರುಷರಿಂದ ಅದು ಶೋಭಿಸುತ್ತಿತ್ತು. ಅನಂತರ ಮಹೀಪತೀ ರಾಜಾ ಯುಧಿಷ್ಠಿರನು ತಾಪಸರಿಗಾಗಿ ತಂದಿದ್ದ ಕಾಂಚನ ಕಲಶಗಳನ್ನೂ, ತಾಮ್ರದ ಕಲಶಗಳನ್ನೂ, ಮೃಗಚರ್ಮಗಳನ್ನೂ, ಕಂಬಳಿಗಳನ್ನೂ, ಸ್ರುಕ್-ಸ್ರುವಗಳನ್ನೂ, ಕಮಂಡಲುಗಳನ್ನೂ, ಸ್ಥಾಲಿಗಳನ್ನೂ, ಮಣ್ಣಿನ ಪಾತ್ರೆಗಳನ್ನೂ, ಮತ್ತು ಯಾರಿಗೆ ಯಾವುದು ಇಷ್ಟವಾಗಿದೆಯೂ ಅವುಗಳನ್ನೂ ಕೊಟ್ಟನು. ಹೀಗೆ ರಾಜಾ ಧರ್ಮಾತ್ಮ ಮಹೀಪತಿ ಯುಧಿಷ್ಠಿರನು ಆಶ್ರಮಮಂಡಲದಲ್ಲಿ ತಿರುಗಾಡಿ ಆ ಎಲ್ಲ ವಸ್ತುಗಳನ್ನೂ ಧನವನ್ನೂ ಹಂಚಿ, ಧೃತರಾಷ್ಟ್ರನ ಆಶ್ರಮಕ್ಕೆ ಹಿಂದಿರುಗಿದನು. ಅಲ್ಲಿ ಆಹ್ನೀಕಗಳನ್ನು ಪೂರೈಸಿ ಗಾಂಧಾರಿಯೊಡನೆ ಕುಳಿತಿದ್ದ ಅವ್ಯಗ್ರ ರಾಜಾ ಮನೀಷೀ ಧೃತರಾಷ್ಟ್ರನನ್ನು ಕಂಡನು. ಅನತಿದೂರದಲ್ಲಿಯೇ ಶಿಷ್ಯೆಯಂತೆ ಕೈಮುಗಿದು ನಿಂದಿದ್ದ ಆ ಸತತ ಧರ್ಮಚಾರಿಣೀ ತಾಯಿ ಕುಂತಿಯನ್ನೂ ಅವನು ನೋಡಿದನು. ರಾಜನಿಗೆ ತನ್ನ ಹೆಸರನ್ನು ಹೇಳಿ ನಮಸ್ಕರಿಸಿ, ಕುಳಿತುಕೋ ಎಂದು ಆಜ್ಞೆಯಿತ್ತನಂತರ ಯುಧಿಷ್ಠಿರನು ದರ್ಭಾಸನದ ಮೇಲೆ ಕುಳಿತುಕೊಂಡನು. ಭೀಮಸೇನಾದಿ ಪಾಂಡವರೂ ಕೂಡ ಆ ಕೌರವರ್ಷಭನನ್ನು ವಂದಿಸಿ, ಪಾರ್ಥಿವನ ಆಜ್ಞೆಯನ್ನು ಪಡೆದು ಒಟ್ಟಾಗಿ ಕುಳಿತುಕೊಂಡರು. ಕುರುರಾಜ ಧೃತರಾಷ್ಟ್ರನ ಅನುಜ್ಞೆ ಪಡೆದು ಪಾಂಡವರು ವಿವಿಧ ಅನ್ನ-ಪಾನಗಳನ್ನು ಸೇವಿಸುತ್ತಾ ವಿಶ್ರಮಿಸುತ್ತಿದ್ದರು. ಹೀಗೆ ಅವರು ವನದಲ್ಲಿ ಸೈನ್ಯ-ಸ್ತ್ರೀಯರೊಂದಿಗೆ ಒಂದು ತಿಂಗಳು ವಾಸಿಸಿದರು.

ಹೀಗೆ ಅವರಿಂದ ಪರಿವೃತನಾದ ರಾಜ ಕೌರವನು ದೇವತೆಗಳಿಂದ ಸುತ್ತುವರೆಯಲ್ಪಟ್ಟ ಬೃಹಸ್ಪತಿಯಂತೆ ಬೆಳಗುತ್ತಿರುವ ಬ್ರಾಹ್ಮೀ ಕಾಂತಿಯಿಂದ ಕಂಗೊಳಿಸುತ್ತಿದ್ದನು. ಹೀಗೆ ಅವರು ಕುಳಿತುಕೊಂಡಿರಲು ಅಲ್ಲಿಗೆ ಕುರುಕ್ಷೇತ್ರನಿವಾಸಿಗಳಾಗಿದ್ದ ಶತಯೂಪನೇ ಮೊದಲಾದ ಮಹರ್ಷಿಗಳು ಬಂದು ಸೇರಿದರು. ದೇವರ್ಷಿಗಣ ಪೂಜಿತನಾದ ಮಹಾತೇಜಸ್ವಿ ವಿಪ್ರ ಭಗವಾನ್ ವ್ಯಾಸನೂ ಕೂಡ ತನ್ನ ಶಿಷ್ಯರಿಂದೊಡಗೂಡಿ ನೃಪನಿಗೆ ಕಾಣಿಸಿಕೊಂಡನು. ಆಗ ರಾಜಾ ಕೌರವ್ಯ, ವೀರ್ಯವಾನ್ ಕುಂತೀಪುತ್ರ, ಮತ್ತು ಭೀಮಸೇನಾದಿಗಳು ಮೇಲೆದ್ದು ಅವನನ್ನು ಪೂಜಿಸಿದರು. ಶತಯೂಪಾದಿಗಳಿಂದ ಸುತ್ತುವರೆಯಲ್ಪಟ್ಟು ಆಗಮಿಸಿದ ವ್ಯಾಸನು ಮಹೀಪಾಲ ಧೃತರಾಷ್ಟ್ರನಿಗೆ ಕುಳಿತುಕೊಳ್ಳಲು ಹೇಳಿದನು. ಅನಂತರ ದರ್ಭೆಯನ್ನು ಹಾಸಿ ಕೃಷ್ಣಾಜಿನವನ್ನು ಹೊದಿಸಿ, ತನಗಾಗಿಯೇ ಹೊಸದಾಗಿ ಸಿದ್ಧಪಡಿಸಿದ ಶ್ರೇಷ್ಠ ಕುಶಾಸನದಲ್ಲಿ ವ್ಯಾಸನು ಕುಳಿತುಕೊಂಡನು. ವಿಪುಲ ತೇಜಸ್ವಿಗಳಾಗಿದ್ದ ಆ ದ್ವಿಜಶ್ರೇಷ್ಠರೆಲ್ಲರೂ ದ್ವೈಪಾಯನನ ಅನುಮತಿಯನ್ನು ಪಡೆದು ಅವನ ಸುತ್ತಲೂ ಕುಳಿತುಕೊಂಡರು. ನೃಪನ ಸನ್ನಿಧಿಯಲ್ಲಿ ಅವರೆಲ್ಲರೂ ವ್ಯಾಸನನ್ನು ಸುತ್ತುವರೆದು ಮಾತನಾಡುತ್ತಿರಲು ಇತರ ಮಹಾತಪಸ್ವಿ ಮುನಿಗಳಾದ ನಾರದ, ಪರ್ವತ, ದೇವಲರೂ, ವಿಶ್ವಾವಸು, ತುಂಬುರು ಮತ್ತು ಚಿತ್ರಸೇನರೂ ಅಲ್ಲಿಗೆ ಆಗಮಿಸಿದರು. ಧೃತರಾಷ್ಟ್ರನಿಂದ ಅನುಜ್ಞಾತನಾದ ಕುರುರಾಜಾ ಯುಧಿಷ್ಠಿರನು ಮಹಾಮನಸ್ಕರಾದ ಅವರೆಲ್ಲರನ್ನೂ ಯಥಾನ್ಯಾಯವಾಗಿ ಪೂಜಿಸಿದನು. ಯುಧಿಷ್ಠಿರನಿಂದ ಪೂಜೆಗಳನ್ನು ಸ್ವೀಕರಿಸಿ ಅವರೆಲ್ಲರೂ ಶ್ರೇಷ್ಠ ನವಿಲುಗರಿಗಳಿಂದ ಮಾಡಲ್ಪಟ್ಟ ಪುಣ್ಯ ಆಸನಗಳಲ್ಲಿ ಕುಳಿತುಕೊಂಡರು. ಹಾಗೆ ಅವರು ಅಲ್ಲಿ ಕುಳಿತುಕೊಳ್ಳಲು ಮಹಾಮತಿ ರಾಜಾ ಕುರೂದ್ವಹ ಧೃತರಾಷ್ಟ್ರನು ಪಾಂಡುಪುತ್ರರಿಂದ ಪರಿವೃತನಾಗಿ ಕುಳಿತುಕೊಂಡನು. ಗಾಂಧಾರೀ, ಕುಂತೀ, ದ್ರೌಪದೀ, ಸಾತ್ವತೀ ಸುಭದ್ರೆ ಹಾಗೂ ಅನ್ಯ ಸ್ತ್ರೀಯರೂ ಕೂಡ ಒಟ್ಟಿಗೇ ಅಲ್ಲಲ್ಲಿ ಕುಳಿತುಕೊಂಡರು. ಅಲ್ಲಿ ಧರ್ಮಿಷ್ಠರಾದ ಋಷಿಗಳ ಮತ್ತು ದೇವಾಸುರರ ಮಿಶ್ರಿತ ಪುರಾಣಕಥೆಗಳು ನಡೆದವು. ಆಗ ಕಥೆಗಳ ಅಂತ್ಯದಲ್ಲಿ ಮಾತನಾಡುವವರಲ್ಲಿ ಶ್ರೇಷ್ಠ ಮಹಾತೇಜಸ್ವಿ ಸರ್ವವೇದವಿದರಲ್ಲಿ ಶ್ರೇಷ್ಠ ವ್ಯಾಸನು ಪ್ರಜ್ಞಾಚಕ್ಷು ರಾಜಾ ಧೃತರಾಷ್ಟ್ರನಿಗೆ ಪ್ರೀತಿಪೂರ್ವಕವಾದ ಈ ಮಾತುಗಳನ್ನಾಡಿದನು:

“ಮಹಾಬಾಹೋ! ಧೃತರಾಷ್ಟ್ರ! ನಿನ್ನ ತಪಸ್ಸು ವರ್ಧಿಸುತ್ತಿದೆ ತಾನೆ? ವನವಾಸದಲ್ಲಿ ನಿನ್ನ ಮನಸ್ಸು ಸಂತೋಷಗೊಂಡಿದೆ ತಾನೆ? ಪುತ್ರವಿನಾಶದಿಂದ ಉಂಟಾದ ಶೋಕವು ನಿನ್ನ ಹೃದಯದಲ್ಲಿ ಉಳಿದುಕೊಂಡಿಲ್ಲ ತಾನೆ? ನಿನ್ನಲ್ಲಿರುವ ಸರ್ವ ಜ್ಞಾನಗಳೂ ನಿನಗೆ ಪ್ರಸನ್ನತೆಯನ್ನು ನೀಡುತ್ತಿವೆ ತಾನೆ? ಬುದ್ಧಿಯನ್ನು ದೃಢವಾಗಿರಿಸಿಕೊಂಡು ಅರಣ್ಯವಾಸದ ವಿಧಿಯನ್ನು ಪೂರೈಸುತ್ತಿರುವೆ ತಾನೆ? ಸೊಸೆ ಗಾಂಧಾರಿಯು ಶೋಕವನ್ನು ಅನುಭವಿಸುತ್ತಿಲ್ಲ ತಾನೆ? ಮಹಾಪ್ರಾಜ್ಞೆ, ಬುದ್ಧಿಮತೀ, ಧರ್ಮಾರ್ಥದರ್ಶಿನೀ, ಹುಟ್ಟು-ಸಾವುಗಳ ತತ್ತ್ವಗಳನ್ನು ತಿಳಿದುಕೊಂಡಿರುವ ಆ ದೇವಿಯು ಶೋಕಿಸುತ್ತಿಲ್ಲ ತಾನೇ? ಗುರುಶುಶ್ರೂಷಣೆಯಲ್ಲಿಯೇ ನಿರತಳಾಗಿದ್ದ ಮತ್ತು ತನ್ನ ರಾಜ್ಯವನ್ನು ತ್ಯಜಿಸಿರುವ ಕುಂತಿಯು ಅಹಂಕಾರವಿಲ್ಲದೇ ನಿನ್ನ ಶುಶ್ರೂಷೆಗೈಯುತ್ತಿರುವಳು ತಾನೇ? ರಾಜಾ ಧರ್ಮಸುತನನ್ನು ನೀನು ಪ್ರೀತಿಯಿಂದ ಅಭಿನಂದಿಸುತ್ತೀಯೆ ತಾನೆ? ಭೀಮ-ಅರ್ಜುನ-ಯಮಳರನ್ನು ಕೂಡ ನೀನು ಸಾಂತ್ವನಗೊಳಿಸಿದ್ದೀಯೆ ತಾನೆ? ಇವರನ್ನು ನೋಡಿ ನಿನಗೆ ಸಂತೋಷವಾಯಿತು ತಾನೆ? ನಿನ್ನ ಮನಸ್ಸು ನಿರ್ಮಲಗೊಂಡಿದೆ ತಾನೆ? ಜ್ಞಾನವನ್ನು ಪಡೆದು ನೀನು ಶುದ್ಧಭಾವನಾಗಿರುವೆ ತಾನೇ? ನಿರ್ವೈರ್ಯತೆ, ಸತ್ಯ ಮತ್ತು ದ್ರೋಹಬಗೆಯದೇ ಇರುವುದು ಈ ಮೂರು ಸರ್ವಭೂತಗಳಿಗೂ ಶ್ರೇಷ್ಠವೆಂದು ತಿಳಿದುಕೋ! ವನದಲ್ಲಿ ಸಿಗುವ ಆಹಾರವನ್ನು ಸೇವಿಸುವ ಅಥವಾ ಮುನಿಗಳಂತೆ ಜೀವಿಸುವ ಈ ವನವಾಸದಿಂದ ನೀನು ಪರಿತಪಿಸುತ್ತಿಲ್ಲ ತಾನೇ? ಮಹಾತ್ಮ ವಿದುರನು ಯಾವ ಮಹಾ ಧರ್ಮದ ವಿಧಿಯಿಂದ ಹೊರಟುಹೋದನೆನ್ನುವುದು ನನಗೆ ತಿಳಿದಿದೆ. ಮಾಂಡವ್ಯನ ಶಾಪದಿಂದಾಗಿ ಧರ್ಮನೇ ಆ ಮಹಾಬುದ್ಧಿ, ಮಹಾಯೋಗೀ, ಮಹಾತ್ಮ, ಮಹಾಮನ ವಿದುರನಾಗಿದ್ದನೆಂದು ತಿಳಿ. ದೇವತೆಗಳ ಬೃಹಸ್ಪತಿಯಾಗಲೀ ಅಥವಾ ಅಸುರರ ಶುಕ್ರನಾಗಲೀ ಆ ಪುರುಷರ್ಷಭ ವಿದುರನಷ್ಟು ಬುದ್ಧಿಸಂಪನ್ನರಾಗಿಲ್ಲ. ಬಹಳ ಕಾಲದಿಂದ ಸಂಪಾದಿಸಿ ಇಟ್ಟುಕೊಂಡಿದ್ದ ತಪೋಬಲವನ್ನು ವ್ಯಯಿಸಿ ಋಷಿಮಾಂಡವ್ಯನು ಸನಾತನ ಧರ್ಮನಿಗೆ ಶಾಪವನ್ನಿತ್ತು ಪರಾಭವಗೊಳಿಸಿದ್ದನು. ಹಿಂದೆ ಬ್ರಹ್ಮನ ನಿಯೋಗದಿಂದ ಮತ್ತು ತನ್ನದೇ ಬಲದಿಂದ ಆ ಸುಮಹಾಮತಿ ಧರ್ಮನು ವಿಚಿತ್ರವೀರ್ಯನ ಕ್ಷೇತ್ರದಲ್ಲಿ ನನ್ನ ಮಗನಾಗಿ ಜನಿಸಿದನು. ನಿನ್ನ ತಮ್ಮನು ಸನಾತನ ದೇವದೇವ ಧರ್ಮನಾಗಿದ್ದನು. ಧರ್ಮವನ್ನು ಧಾರಣೆಮಾಡಿ ಯಾವಾಗಲೂ ಧರ್ಮದ ವಿಷಯದಲ್ಲಿಯೇ ಯೋಚಿಸುತ್ತಿದ್ದ ಅವನನ್ನು ವಿದ್ವಾಂಸರು ಧರ್ಮನೆಂದೇ ತಿಳಿದಿದ್ದರು. ಆ ಸನಾತನ ಧರ್ಮನು ಸತ್ಯ, ದಮ, ನಿಯಮ, ಅಹಿಂಸೆ, ದಾನ ಮತ್ತು ತಪಸ್ಸುಗಳಿಂದ ವೃದ್ಧಿಸುತ್ತಾನೆ. ಯಾರ ಯೋಗಬಲದಿಂದ ಕುರುರಾಜ ಯುಧಿಷ್ಠಿರನು ಹುಟ್ಟಿದನೋ ಅವನೇ ಆ ಅಮಿತಬುದ್ಧಿ ಧರ್ಮನೆಂದು ತಿಳಿಯಬೇಕು. ಹೇಗೆ ಅಗ್ನಿ-ವಾಯು-ಜಲ-ಪೃಥ್ವೀ-ಆಕಾಶಗಳು ಇಹ-ಪರಗಳೆರಡರಲ್ಲಿಯೂ ಇರುತ್ತವೆಯೋ ಹಾಗೆ ಧರ್ಮನು ಎರಡೂ ಲೋಕಗಳಲ್ಲಿ ವ್ಯಾಪ್ತನಾಗಿದ್ದಾನೆ. ಎಲ್ಲಕಡೆ ಹೋಗಬಲ್ಲ ಮತ್ತು ಚರಾಚರಗಳೆಲ್ಲವನ್ನೂ ವ್ಯಾಪಿಸಿರುವ ಆ ದೇವದೇವ ಧರ್ಮನು ಪಾಪಗಳು ಸುಟ್ಟುಹೋದ ಸಿದ್ಧರಿಗೆ ಕಾಣಿಸುತ್ತಾನೆ. ಧರ್ಮನೇ ವಿದುರನು. ವಿದುರನೇ ಈ ಪಾಂಡವನು. ನಿನ್ನ ಮುಂದೆ ಸೇವಕನಂತೆ ನಿಂತಿರುವ ಈ ಪಾಂಡವನೇ ಅವನು. ಮಹಾಯೋಗಬಲಾನ್ವಿತನಾದ ನಿನ್ನ ಆ ಬುದ್ಧಿಸತ್ತಮ ತಮ್ಮನು ತನ್ನ ಆತ್ಮವನ್ನು ಅದೃಷ್ಟವಶಾತ್ ಈ ಮಹಾತ್ಮ ಕೌಂತೇಯನಲ್ಲಿ ಪ್ರವೇಶಿಸಿದ್ದಾನೆ. ನಿನಗೂ ಕೂಡ ಬೇಗನೇ ಶ್ರೇಯಸ್ಸುಂಟಾಗುವಂತೆ ಮಾಡುತ್ತೇನೆ. ನಿನ್ನ ಸಂಶಯವನ್ನು ದೂರಗೊಳಿಸಲೆಂದೇ ನಾನು ಇಲ್ಲಿಗೆ ಬಂದಿದ್ದೇನೆಂದು ತಿಳಿ. ಲೋಕದ ಯಾವ ಮಹರ್ಷಿಗಳೂ ಈ ಹಿಂದೆ ಮಾಡಿರದಂತಹ ಕರ್ಮವನ್ನು ಮಾಡಲಿದ್ದೇನೆ. ಆಶ್ಚರ್ಯಭೂತವಾದ ನನ್ನ ತಪಸ್ಸಿನ ಫಲವನ್ನು ತೋರಿಸಿಕೊಡುತ್ತೇನೆ. ಅಮಾನುಷವಾದ ಏನನ್ನು ಪಡೆಯಲು ಬಯಸುತ್ತೀಯೆ? ಅಥವಾ ಏನನ್ನು ನೋಡಲು, ಸೃಷ್ಟಿಸಲು ಮತ್ತು ಕೇಳಲು ಬಯಸುತ್ತೀಯೆ? ಹೇಳು. ಅದನ್ನೇ ನಾನು ಮಾಡಿ ತೋರಿಸುತ್ತೇನೆ!

"ರಾಜೇಂದ್ರ! ನಿನ್ನ ಪುತ್ರರ ಕರ್ಮಗಳ ಕುರಿತಾದ ಶೋಕಿಸಿ ಸುಡುತ್ತಿರುವ ನಿನ್ನ ಹೃದಯದಲ್ಲಿ ಅಡಗಿಕೊಂಡಿರುವುದನ್ನು ನಾನು ತಿಳಿದುಕೊಂಡಿದ್ದೇನೆ. ಹಾಗೆಯೇ ಗಾಂಧಾರಿಯ ಹೃದಯದಲ್ಲಿ ನೆಲೆಸಿರುವ ದುಃಖವೇನಿದೆಯೋ, ಕುಂತಿ ಮತ್ತು ದ್ರೌಪದಿಯರ ಹೃದಯದಲ್ಲಿರುವ ದುಃಖವನ್ನೂ, ಕೃಷ್ಣನ ತಂಗಿ ಸುಭದ್ರೆಯು ಸಹಿಸಿಕೊಂಡಿರುವ ಪುತ್ರವಿನಾಶದಿಂದುಂಟಾದ ತೀವ್ರ ದುಃಖವನ್ನೂ ನಾನು ತಿಳಿದುಕೊಂಡಿರುವೆನು. ವಾಸ್ತವವಾಗಿ ಎಲ್ಲರೂ ಇಲ್ಲಿ ಬಂದು ಸೇರಿರುವರೆಂದೇ ನಿನ್ನಲ್ಲಿರುವ ಸಂಶಯವನ್ನು ನಿವಾರಿಸುವ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಬಹುಕಾಲದಿಂದ ಸಂಗ್ರಹಿಸಿ ಇಟ್ಟುಕೊಂಡಿರುವ ನನ್ನ ತಪಸ್ಸಿನ ವೀರ್ಯವನ್ನು ಇಂದು ಈ ಎಲ್ಲ ದೇವಗಂಧರ್ವರೂ ಮಹರ್ಷಿಗಳೂ ನೋಡಲಿ! ಹೇಳು! ನಿನ್ನ ಯಾವ ಕಾಮನೆಯನ್ನು ನಡೆಯಿಸಿಕೊಡಲಿ? ನಾನೀಗ ವರವನ್ನು ಕೊಡಲು ಉತ್ಸುಕನಾಗಿದ್ದೇನೆ. ನನ್ನ ತಪಸ್ಸಿನ ಬಲವನ್ನು ನೋಡು!"

ಅಮಿತಬುದ್ಧಿ ವ್ಯಾಸನು ಹೀಗೆ ಹೇಳಲು ರಾಜೇಂದ್ರ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಈ ಮಾತನ್ನಾಡಲು ಪ್ರಾರಂಭಿಸಿದನು: "ನಿಮ್ಮಂಥಹ ಸಾಧುಗಳೊಡನೆ ನನ್ನ ಸಮಾಗಮವಾಯಿತೆಂದರೆ ನನ್ನ ಜೀವಿತವು ಸಫಲವಾಯಿತೆಂದೇ! ಧನ್ಯನಾಗಿದ್ದೇನೆ. ಅನುಗೃಹೀತನಾಗಿದ್ದೇನೆ! ತಪೋಧನರೇ! ಬ್ರಹ್ಮಕಲ್ಪರಾದ ನಿಮ್ಮೊಡನೆ ಸಮಾಗಮವಾಗಿರುವುದರಿಂದಲೇ ನನಗೆ ಇಷ್ಟವಾದ ಈ ಸ್ಥಿತಿಯನ್ನು ಪಡೆದಿದ್ದೇನೆ. ನಿಮ್ಮ ದರ್ಶನಮಾತ್ರದಿಂದಲೇ ನಾನು ಪವಿತ್ರನಾಗಿರುವೆನೆನ್ನುವುದರಲ್ಲಿ ಸಂಶಯವಿಲ್ಲ. ನನಗೆ ಪರಲೋಕದ ಯಾವ ಭಯವೂ ಇಲ್ಲವಾಗಿದೆ. ಆದರೆ ಅತ್ಯಂತ ದುರ್ಬುದ್ಧಿಯಾಗಿದ್ದ, ಮೂಡ ದುರ್ಯೋಧನನ ಅನ್ಯಾಯದಿಂದ ನನ್ನ ಎಲ್ಲ ಮಕ್ಕಳೂ ಹತರಾದರೆನ್ನುವುದನ್ನು ಸ್ಮರಿಸಿಕೊಂಡು ನಿತ್ಯವೂ ನನ್ನ ಮನಸ್ಸು ನೋಯುತ್ತದೆ. ಪಾಪಬುದ್ಧಿಯ ಅವನು ಪಾಪಿಗಳಲ್ಲದ ಪಾಂಡವರನ್ನು ಮೋಸಗೊಳಿಸಿ, ಬಹುಬೇಗ ಸೈನಿಕರು-ವಾಹನಗಳೊಂದಿಗೆ ಇಡೀ ಪೃಥ್ವಿಯನ್ನೇ ನಾಶಗೊಳಿಸಿಬಿಟ್ಟನು. ನಾನಾ ಜನಪದಗಳ ಒಡೆಯರು ಮಹಾತ್ಮ ರಾಜರು ಎಲ್ಲರೂ ನನ್ನ ಮಗನಿಗಾಗಿ ಬಂದು ಎಲ್ಲರೂ ಮೃತ್ಯುವಶರಾದರು. ಆ ಶೂರರು ಪುತ್ರರನ್ನು, ಪತ್ನಿಯರನ್ನು ಮತ್ತು ಮನಸ್ಸಿಗೆ ಅತ್ಯಂತ ಪ್ರಿಯವಾದ ಪ್ರಾಣಗಳನ್ನೂ ತೊರೆದು ಪ್ರೇತರಾಜನ ನಿವೇಶನವನ್ನು ಸೇರಿಬಿಟ್ಟರು. ಮಿತ್ರನಿಗಾಗಿ ಯುದ್ಧದಲ್ಲಿ ಹತರಾದ ಅವರ ಗತಿಯೇನಾಗಿರಬಹುದು? ಹಾಗೆಯೇ ಯುದ್ಧದಲ್ಲಿ ಹತರಾದ ನನ್ನ ಪುತ್ರ-ಪೌತ್ರರ ಗತಿಯೇನಾಗಿರಬಹುದು? ಮಹಾಬಲ ಶಾಂತನವ ಬೀಷ್ಮ ಮತ್ತು ದ್ವಿಜಸತ್ತಮ ವೃದ್ಧ ದ್ರೋಣರನ್ನು ಸಾವಿಗೀಡುಮಾಡಿ ನನ್ನ ಮನಸ್ಸಿಗೆ ಸತತವೂ ನೋವಾಗುತ್ತಿದೆ. ಭೂಮಿ-ರಾಜ್ಯಗಳನ್ನು ಬಯಸಿದ್ದ ನನ್ನ ಮೂಢ ಪುತ್ರನ ಪಾಪದಿಂದಾಗಿ ಸುಹೃದಯರೊಂದಿಗೆ ದ್ವೇಷಕಟ್ಟಿಕೊಂಡು ಬೆಳಗುತ್ತಿದ್ದ ಈ ಕುಲವು ನಾಶವಾಗಿಬಿಟ್ಟಿತು. ಇವೆಲ್ಲವನ್ನೂ ಸ್ಮರಿಸಿಕೊಂಡು ಹಗಲು-ರಾತ್ರಿ ಚಿಂತಾಗ್ನಿಯಿಂದ ಬೆಂದುಹೋಗುತ್ತಿರುವ ದುಃಖಶೋಕಗಳಿಂದ ಪೀಡಿತನಾಗಿರುವ ನನಗೆ ಶಾಂತಿಯೇ ಇಲ್ಲವಾಗಿದೆ. ತಂದೆಯೇ! ಹೀಗೆ ಚಿಂತಿಸುತ್ತಿರುವ ನನಗೆ ನೆಲೆಯೇ ಇಲ್ಲದಂತಾಗಿದೆ!"

ರಾಜರ್ಷಿಯ ವಿಧವಿಧವಾದ ಆ ಪರಿವೇದನೆಯನ್ನು ಕೇಳಿ ಗಾಂಧಾರಿಯ ಶೋಕವೂ ನವೀಕೃತವಾಯಿತು. ಹಾಗೆಯೇ ಕುಂತಿ, ದ್ರುಪದಪುತ್ರಿ, ಸುಭದ್ರೆ, ಮತ್ತು ಕೌರವನ ಸುಂದರ ಸೊಸೆಯಂದಿರ ದುಃಖವೂ ನವೀಕೃತವಾಯಿತು. ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಂಡಿದ್ದ ದೇವೀ ಗಾಂಧಾರಿಯು ಪುತ್ರಶೋಕದ ಆವೇಶದಿಂದ ಎದ್ದು ನಿಂತು ಕೈಮುಗಿದು ತನ್ನ ಮಾವ ವ್ಯಾಸನಿಗೆ ಹೇಳಿದಳು: "ವಿಭೋ! ಮುನಿಪುಂಗವ! ಈ ರಾಜನು ಪುತ್ರರನ್ನು ಕಳೆದುಕೊಂಡು ಶೋಕಿಸುತ್ತಾ ಹದಿನಾರು ವರ್ಷಗಳು ಕಳೆದುಹೋದವು. ಆದರೂ ಅವನಿಗೆ ಶಾಂತಿಯಿಲ್ಲದಾಗಿದೆ. ಪುತ್ರಶೋಕದಿಂದ ಸಮಾವಿಷ್ಟನಾಗಿ ಈ ಭೂಮಿಪ ಧೃತರಾಷ್ಟ್ರನು ಇಡೀ ರಾತ್ರಿ ನಿಟ್ಟುಸಿರು ಬಿಡುತ್ತಲೇ ಇರುತ್ತಾನೆ. ನಿದ್ರೆಯನ್ನೇ ಮಾಡುವುದಿಲ್ಲ. ನಿನ್ನ ತಪೋಬಲದಿಂದ ಅನ್ಯ ಸರ್ವ ಲೋಕಗಳನ್ನೇ ಸೃಷ್ಟಿಸಲು ಸಮರ್ಥನಾಗಿರುವೆ. ಇನ್ನು ಬೇರೆಯೇ ಲೋಕಕ್ಕೆ ಹೋಗಿರುವ ಮಕ್ಕಳನ್ನು ರಾಜನಿಗೆ ತೋರಿಸುವುದು ಯಾವ ಮಹಾ ದೊಡ್ಡ ವಿಷಯ? ಸೊಸೆಯಂದಿರಲ್ಲಿಯೇ ಅತ್ಯಂತ ಪ್ರಿಯಸೊಸೆಯಾಗಿರುವ ಸಾಧ್ವೀ ದ್ರೌಪದೀ ಕೃಷ್ಣೆಯೂ ಇಲ್ಲಿ ಮಕ್ಕಳು-ಬಾಂಧವರನ್ನು ಕಳೆದುಕೊಂಡು ಅತೀವವಾಗಿ ಶೋಕಿಸುತ್ತಿದ್ದಾಳೆ. ಹಾಗೆಯೇ ಕೃಷ್ಣನ ತಂಗಿ, ಭದ್ರಭಾಷಿಣೀ ಭಾಮಿನೀ ಸುಭದ್ರೆಯೂ ಕೂಡ ಸೌಭದ್ರನ ವಧೆಯಿಂದ ಸಂತಪ್ತಳಾಗಿ ತುಂಬಾ ಶೋಕಿಸುತ್ತಿದ್ದಾಳೆ. ಪರಮದುಃಖಿತಳಾಗಿರುವ ಭೂರಿಶ್ರವಸನ ಈ ಭಾರ್ಯೆಯೂ ಕೂಡ ಪತಿಯ ವ್ಯಸನಶೋಕಾರ್ತಳಾಗಿ ನಿದ್ದೆಮಾಡುತ್ತಿಲ್ಲ! ಮಾವ ಧೀಮಾನ್ ಕುರೂದ್ವಹ ಬಾಹ್ಲೀಕನೂ ಮತ್ತು ತಂದೆಯೊಂದಿಗೆ ಸೋಮದತ್ತನೂ ಮಹಾರಣದಲ್ಲಿ ಹತರಾದರು. ರಣಾಂಗಣದಲ್ಲಿ ನಿನ್ನ ಪುತ್ರನ ನೂರು ಮಕ್ಕಳು - ಶ್ರೀಮಂತರೂ, ಮಹಾಬುದ್ಧಿಯುಳ್ಳವರೂ, ಸಂಗ್ರಾಮದಲ್ಲಿ ಪಲಾಯನಮಾಡದಿಲ್ಲದಿದ್ದವರೂ ಆಗಿದ್ದವರು - ಹತರಾದರು. ಶೋಕದಿಂದ ಪೀಡಿತರಾದ, ಆ ನೂರು ಭಾರ್ಯೆಯರೂ ಇಲ್ಲಿದ್ದಾರೆ. ಇವರೆಲ್ಲರೂ ನನ್ನ ಮತ್ತು ರಾಜನ ದುಃಖವನ್ನು ಪುನಃ ಪುನಃ ಹೆಚ್ಚಾಗಿಸುತ್ತಿದ್ದಾರೆ. ಮಹಾ ಉದ್ವೇಗದಿಂದ ಕೂಡಿದ ಅವರು ನನ್ನ ಸುತ್ತಲೂ ಕುಳಿತುಕೊಂಡಿದ್ದಾರೆ. ಶೂರರೂ ಮಹಾತ್ಮರೂ ಆಗಿದ್ದ ಸೋಮದತ್ತನೇ ಮೊದಲಾದ ನನ್ನ ಮಾವಂದಿರು ಯಾವ ಗತಿಯನ್ನು ಪಡೆದುಕೊಂಡಿದ್ದಾರೆ? ನಿನ್ನ ಅನುಗ್ರಹದಿಂದ ಈ ಮಹೀಪತಿಯೂ, ನಾನೂ ಮತ್ತು ನಿನ್ನ ಸೊಸೆಯಾದ ಈ ಕುಂತಿಯೂ ವಿಶೋಕರಾಗುವಂತೆ ಮಾಡಿರಿ!"

ಗಾಂಧಾರಿಯೂ ಈ ರೀತಿ ಮಾತನಾಡುತ್ತಿದ್ದಾಗ ವ್ರತಗಳಿಂದ ಕೃಶಳಾಗಿದ್ದ ಕುಂತಿಯು ಆದಿತ್ಯನಿಂದ ಹುಟ್ಟಿದ್ದ ತನ್ನ ಆ ಮಗನನ್ನು ಸ್ಮರಿಸಿಕೊಂಡು ಮುಖವನ್ನು ಮುಚ್ಚಿಕೊಂಡಳು. ದೂರದಲ್ಲಿರುವುದನ್ನು ಕೇಳಲೂ ಮತ್ತು ನೋಡಲೂ ಸಮರ್ಥನಾಗಿದ್ದ ಆ ವರದ ಋಷಿ ವ್ಯಾಸನು ಸವ್ಯಸಾಚಿಯ ತಾಯಿ ಆ ದೇವಿಯು ದುಃಖಿತಳಾಗಿದ್ದುದ್ದನು ಗಮನಿಸಿದನು. ಆಗ ವ್ಯಾಸನು ಅವಳಿಗೆ ಹೀಗೆ ಹೇಳಿದನು: "ಮಹಾಪ್ರಾಜ್ಞೆ! ನೀನು ನನ್ನಿಂದ ಯಾವ ಕಾರ್ಯವನ್ನು ಬಯಸುತ್ತೀಯೆ ಅದನ್ನು ಹೇಳು. ನಿನ್ನ ಮನಸ್ಸಿನಲ್ಲಿರುವುದನ್ನು ಇದ್ದಹಾಗೆ ಹೇಳು!"

ಆಗ ಕುಂತಿಯು ತನ್ನ ಮಾವನಿಗೆ ಶಿರಬಾಗಿ ನಮಸ್ಕರಿಸಿ, ನಾಚಿಕೆಯಿಂದ ಮುಖಕುಂದಿದವಳಾಗಿ, ಹಿಂದೆ ನಡೆದುಹೋಗಿದ್ದುದರ ಕುರಿತು ಈ ಮಾತುಗಳನ್ನಾಡಿದಳು: "ಭಗವನ್! ನೀನು ನನ್ನ ಮಾವ! ದೇವತೆಗಳಿಗೂ ದೇವತೆಯಾಗಿದ್ದೀಯೆ. ನನ್ನ ಪಾಲಿಗೆ ದೇವಾತಿದೇವನಾಗಿದ್ದೀಯೆ. ನನ್ನ ಈ ಸತ್ಯದ ಮಾತನ್ನು ಕೇಳು! ತಪಸ್ವಿಯೂ ಕೋಪಿಷ್ಟನೂ ಆಗಿದ್ದ ದುರ್ವಾಸನೆಂಬ ಹೆಸರಿನ ವಿಪ್ರನು ನನ್ನ ತಂದೆಯಲ್ಲಿಗೆ ಭಿಕ್ಷೆಯನ್ನು ಸೇವಿಸಲು ಆಗಮಿಸಿದ್ದಾಗ ನಾನು ಅವನನ್ನು ಸೇವೆಗಳಿಂದ ತೃಪ್ತಿಗೊಳಿಸಿದ್ದೆನು. ಆಗ ನಾನು ಶೌಚಾಚಾರಗಳನ್ನು ಪಾಲಿಸುತ್ತಾ, ಯಾವುದೇ ಅಪರಾಧಗಳನ್ನೂ ಎಸಗದೇ ಶುದ್ಧವಾದ ಮನಸ್ಸಿನಿಂದ, ಅತ್ಯಂತ ಕೋಪಗೊಳ್ಳುವ ಸನ್ನಿವೇಶಗಳು ಬಂದರೂ ಕೋಪಗೊಳ್ಳದೇ ಅವನ ಸೇವೆಗೈದೆನು. ನನ್ನ ಮೇಲೆ ಪ್ರೀತನಾದ ಅವನು ವರವನ್ನು ನೀಡುತ್ತಾ "ನನ್ನಿಂದ ಇದನ್ನು ನೀನು ಅವಶ್ಯವಾಗಿಯೂ ಪಡೆದುಕೊಳ್ಳಬೇಕು!" ಎಂದು ಹೇಳಿದನು. ಆಗ ನಾನು ಶಾಪಭಯದಿಂದ ಆ ವಿಪ್ರನಿಗೆ ಹಾಗೆಯೇ ಆಗಲಿ ಎಂದು ಪುನಃ ಹೇಳಿದೆನು. ಆ ದ್ವಿಜನು ಪುನಃ ನನ್ನಲ್ಲಿ ಹೇಳಿದನು: "ಭದ್ರೇ! ನೀನು ಧರ್ಮನಿಗೆ ಜನನಿಯಾಗುವೆ! ನೀನು ಯಾವ ದೇವತೆಗಳನ್ನು ಆಹ್ವಾನಿಸುವೆಯೋ ಅವರು ನಿನ್ನ ವಶರಾಗಿ ಬರುತ್ತಾರೆ!" ಹೀಗೆ ಹೇಳಿ ಆ ವಿಪ್ರನು ಅಂತರ್ಧಾನನಾದನು. ಆಗ ನಾನು ವಿಸ್ಮಿತಳಾದೆನು. ಎಲ್ಲ ಅವಸ್ಥೆಗಳಲ್ಲಿಯೂ ಅವನ ಆ ಮಾತು ನನ್ನ ನೆನಪಿನಿಂದ ನಾಶವಾಗುತ್ತಿರಲಿಲ್ಲ. ಒಮ್ಮೆ ನಾನು ಮಹಡಿಯ ಮೇಲಿದ್ದಾಗ ಉದಯಿಸುತ್ತಿರುವ ರವಿಯನ್ನೇ ನೋಡುತ್ತಿದ್ದೆನು. ಆಗ ಆ ಋಷಿಯ ಮಾತನ್ನು ಸ್ಮರಿಸಿಕೊಂಡು ದಿವಾಕರನನ್ನು ಬಯಸಿದೆನು. ಆಗ ನಾನು ಇನ್ನೂ ಬಾಲಭಾವದಲ್ಲಿದ್ದೆನು. ದೋಷಗಳನ್ನು ತಿಳಿದುಕೊಳ್ಳುವ ಹಾಗಿರಲಿಲ್ಲ. ಕೂಡ ಸಹಸ್ರಾಂಶು ದೇವನು ನನ್ನ ಸಮೀಪಕ್ಕೆ ಬಂದೇಬಿಟ್ಟನು. ಅವನು ತನ್ನ ದೇಹವನ್ನು ಗಗನದಲ್ಲೊಂದು ಮತ್ತು ಭೂಮಿಯಲ್ಲೊಂದು ಹೀಗೆ ಎರಡನ್ನಾಗಿ ಮಾಡಿಕೊಂಡಿದ್ದನು. ಒಂದರಿಂದ ಲೋಕಗಳನ್ನು ಸುಡುತ್ತಿದ್ದವನು ತನ್ನ ಎರಡನೆಯ ರೂಪದಿಂದ ನನ್ನ ಬಳಿ ಬಂದನು. ತರತರನೆ ನಡುಗುತ್ತಿದ್ದ ನನಗೆ ಅವನು "ವರವನ್ನು ಕೇಳಿಕೋ!" ಎಂದನು. ಆದರೆ ನಾನು ಅವನಿಗೆ ಶಿರಬಾಗಿ ನಮಸ್ಕರಿಸಿ "ಹೋಗಬೇಕು!" ಎಂದು ಕೇಳಿಕೊಂಡೆನು. ಆಗ ತಿಗ್ಮಾಂಶುವು ನನಗೆ ಹೇಳಿದನು: "ವೃಥಾ ಆಹ್ವಾನವನ್ನು ನಾನು ಕ್ಷಮಿಸುವುದಿಲ್ಲ! ನಿನ್ನನ್ನೂ ಮತ್ತು ನಿನಗೆ ಈ ವರವನ್ನಿತ್ತ ಆ ವಿಪ್ರನನ್ನೂ ಸುಟ್ಟುಬಿಡುತ್ತೇನೆ!" ಅನಪರಾಧಿಯಾದ ಆ ವಿಪ್ರನನ್ನು ರಕ್ಷಿಸಲೋಸುಗ ನಾನು ಅವನಿಗೆ "ದೇವ! ನನಗೆ ನಿನ್ನ ಸಮನಾದ ಮಗನಾಗಲಿ!" ಎಂದು ಹೇಳಿದೆನು. ಆಗ ಭಾನುಮಂತನು ನನ್ನನ್ನು ಮೋಹಗೊಳಿಸಿ ತೇಜಸ್ಸಿನಿಂದ ನನ್ನನ್ನು ಪ್ರವೇಶಿಸಿದನು. "ನಿನಗೊಬ್ಬ ಮಗನಾಗುವನು!" ಎಂದು ಹೇಳಿ ಆಕಾಶಕ್ಕೆ ಹೊರಟುಹೋದನು. ಈ ವೃತ್ತಾಂತವನ್ನು ತಂದೆಯಿಂದ ರಕ್ಷಿಸಲೋಸುಗ ನಾನು ಭವನದ ಒಳಗೆಯೇ ಇದ್ದುಬಿಟ್ಟೆನು. ಗುಟ್ಟಿನಲ್ಲಿ ಹುಟ್ಟಿದ ನನ್ನ ಮಗ ಕರ್ಣ ಬಾಲಕನನ್ನು ನೀರಿನಲ್ಲಿ ಬಿಟ್ಟುಬಿಟ್ಟೆನು. ಆ ಋಷಿಯು ನನಗೆ ಹೇಗೆ ಹೇಳಿದ್ದನೋ ಹಾಗೆ ದೇವನ ಪ್ರಸಾದದಿಂದ ಪುನಃ ನಾನು ಕನ್ಯೆಯಾಗಿಯೇ ಉಳಿದುಕೊಂಡೆನು. ಮೂರ್ಖಳಾದ ನಾನು ಕರ್ಣನು ನನ್ನ ಮಗನೆಂದು ತಿಳಿದಿದ್ದರೂ ಅವನನ್ನು ಉಪೇಕ್ಷಿಸಿಬಿಟ್ಟೆನು. ಅದು ನನ್ನನ್ನು ಸುಡುತ್ತಿದೆ. ನಿನಗೆ ಇದೆಲ್ಲವೂ ಚೆನ್ನಾಗಿಯೇ ತಿಳಿದಿದೆ. ನಾನು ಮಾಡಿದ ಕಾರ್ಯವು ಪಾಪಕರವೋ-ಪುಣ್ಯಕರವೋ - ನಡೆದಹಾಗಿ ನಿನಗೆ ಹೇಳಿದ್ದೇನೆ. ಭಗವನ್! ನನ್ನ ಈ ಭಯವನ್ನು ನೀಗಿಸಬೇಕು! ರಾಜನ ಹೃದಯದಲ್ಲಿರುವುದನ್ನೂ ನೀನು ತಿಳಿದುಕೊಂಡಿರುವೆ. ಅದೂ ಕೂಡ ಇಂದೇ ಈಡೇರುವಂತೆ ಮಾಡು!"

ಅವಳು ಹೀಗೆ ಹೇಳಲು ವೇದವಿದರಲ್ಲಿ ಶ್ರೇಷ್ಠ ವ್ಯಾಸನು ಇಂತೆಂದನು: "ಸಾಧು! ಇವೆಲ್ಲವೂ ಸರಿಯಾಗಿಯೇ ಇವೆ. ಇವು ಹಾಗೆಯೇ ಆಗಬೇಕಾಗಿದ್ದಿತ್ತು. ಇದರಲ್ಲಿ ನಿನ್ನ ಅಪರಾಧವೇನೂ ಇಲ್ಲ. ಆಗ ನೀನು ಕನ್ಯಾಭಾವದಲ್ಲಿದ್ದೆ. ದೇವತೆಗಳು ಸಿದ್ಧಿಗಳ ಐಶ್ವರ್ಯವಂತರು. ಇತರರ ಶರೀರಗಳನ್ನು ಪ್ರವೇಶಿಸಬಲ್ಲರು. ಸಂಕಲ್ಪ, ವಚನ, ದೃಷ್ಟಿ, ಸ್ಪರ್ಷ ಮತ್ತು ಸಮಾಗಮ - ಈ ಐದು ವಿಧಗಳಲ್ಲಿ ಮಕ್ಕಳನ್ನು ಹುಟ್ಟಿಸುವ ದೇವಸಂಘಗಳಿವೆ. ಮನುಷ್ಯಧರ್ಮವು ದೇವಧರ್ಮದೊಡನೆ ಸೇರುವುದಿಲ್ಲ. ಕುಂತಿ! ಇದನ್ನು ಅರ್ಥಮಾಡಿಕೊಂಡು ನಿನ್ನ ಮಾನಸಿಕ ಜ್ವರವನ್ನು ಕಳೆದುಕೋ! ಬಲವಂತರ ಎಲ್ಲವೂ ಒಳ್ಳೆಯದೇ! ಬಲವಂತರ ಎಲ್ಲವೂ ಶುಚಿಯಾದುದೇ! ಬಲವಂತರು ಮಾಡಿದ ಎಲ್ಲವೂ ಧರ್ಮ! ಮತ್ತು ಎಲ್ಲವೂ ಬಲವಂತರದ್ದೇ ಆಗಿರುತ್ತದೆ!

"ಭದ್ರೇ ಗಾಂಧಾರೀ! ಇಂದು ರಾತ್ರಿ ನೀನು ನಿನ್ನ ಮಕ್ಕಳನ್ನೂ, ಸಹೋದರರನ್ನೂ, ಮಿತ್ರರನ್ನೂ ನೋಡುತ್ತೀಯೆ! ನಿನ್ನ ಸೊಸೆಯಂದಿರೂ ಕೂಡ ತಮ್ಮ ಪತಿಗಳೊಂದಿಗೆ ಮಲಗಿ ಎದ್ದು ಬಂದವರಂತೆ ಕಾಣುತ್ತಾರೆ. ಕುಂತಿಯು ಕರ್ಣನನ್ನು ನೋಡುತ್ತಾಳೆ. ಯಾದವೀ ಸುಭದ್ರೆಯು ಅಭಿಮನ್ಯುವನ್ನು ನೋಡುತ್ತಾಳೆ. ದ್ರೌಪದಿಯು ಐವರು ಪುತ್ರರನ್ನೂ, ತಂದೆಯನ್ನೂ ಮತ್ತು ಸಹೋದರರನ್ನೂ ನೋಡುತ್ತಾಳೆ. ರಾಜ ಧೃತರಾಷ್ಟ್ರ, ನೀನು ಮತ್ತು ಪೃಥೆಯು ನನ್ನನ್ನು ಕೇಳುವ ಮೊದಲೇ ಇದನ್ನು ಮಾಡಿ ತೋರಿಸಬೇಕೆಂದು ನನ್ನ ಮನಸ್ಸಿನಲ್ಲಿದ್ದಿತ್ತು. ಆ ಮಹಾತ್ಮರ ಕುರಿತಾಗಿ ನೀನು ಶೋಕಿಸಬಾರದು. ಅವರೆಲ್ಲ ನರರ್ಷಭರೂ ಕ್ಷತ್ರಧರ್ಮಪರಾಯಣರಾಗಿದ್ದರು, ಮತ್ತು ಅವರ ಧರ್ಮಕ್ಕನುಸಾರವಾಗಿಯೇ ನಿಧನ ಹೊಂದಿದರು. ಸುರರ ಕಾರ್ಯವಾದ ಅದು ಅವಶ್ಯವಾಗಿಯೂ ಹಾಗೆಯೇ ಆಗಬೇಕಿತ್ತು. ಅವರೆಲ್ಲರೂ ದೇವತೆಗಳ ಅಂಶಗಳಿಂದ ಭೂಮಿಯಮೇಲೆ ಅವತರಿಸಿದ್ದರು. ಕುರುಕ್ಷೇತ್ರದ ರಣಭೂಮಿಯಲ್ಲಿ ನಿಧನ ಹೊಂದಿದ ಇವರು ಗಂಧರ್ವರೂ, ಅಪ್ಸರೆಯರೂ, ಪಿಶಾಚರೂ, ಗುಹ್ಯರೂ, ರಾಕ್ಷಸರೂ, ಹಾಗೆಯೇ ಪುಣ್ಯಜನರಾದ ಸಿದ್ಧರೂ, ದೇವರ್ಷಿಗಳೂ, ದೇವತೆಗಳೂ, ದಾನವರೂ, ಮತ್ತು ಹಾಗೆಯೇ ಅಮಲ ಬ್ರಹ್ಮರ್ಷಿಗಳೂ ಆಗಿದ್ದರು. ಧೃತರಾಷ್ಟ್ರನೆಂದು ಖ್ಯಾತಿಹೊಂದಿದ್ದ ಯಾವ ಧೀಮಾನ್ ಗಂಧರ್ವರಾಜನಿದ್ದನೋ ಅವನೇ ಮನುಷ್ಯಲೋಕದಲ್ಲಿ ನಿನ್ನ ಪತಿ ಧೃತರಾಷ್ಟ್ರನಾಗಿದ್ದಾನೆ. ಪಾಂಡುವು ಅತ್ಯಂತ ವಿಶಿಷ್ಠವಾದ ಚ್ಯುತಿಯಿಲ್ಲದ ಮರುದ್ಗಣವೆಂದು ತಿಳಿ. ಕ್ಷತ್ತ ವಿದುರ ಮತ್ತು ಈ ರಾಜಾ ಯುಧಿಷ್ಠಿರನು ಧರ್ಮನ ಅಂಶಗಳಾಗಿದ್ದಾರೆ. ದುರ್ಯೋಧನನು ಕಲಿಯೆಂದೂ ಶಕುನಿಯು ದ್ವಾಪರನೆಂದೂ ತಿಳಿ. ದುಃಶಾಸನಾದಿಗಳು ರಾಕ್ಷಸರೆಂದು ತಿಳಿ. ಬಲವಂತ ಅರಿಂದಮ ಭೀಮಸೇನನು ಮರುದ್ಗಣಗಳಿಂದ, ಈ ಪಾರ್ಥ ಧನಂಜಯನು ಋಷಿ ನರನೆಂದೂ, ಹೃಷೀಕೇಶನು ನಾರಯಣನೆಂದೂ, ಮತ್ತು ಈ ಇಬ್ಬರು ಅವಳಿಮಕ್ಕಳು ಅಶ್ವಿನಿಯರ ಅಂಶಜರೆಂದೂ ತಿಳಿ. ವೈರವನ್ನು ಹುಟ್ಟಿಸಲು ಮತ್ತು ಸಂಘರ್ಷವನ್ನುಂಟುಮಾಡಲು ಜನಿಸಿದ್ದ ಕರ್ಣನು ತನ್ನ ದೇಹವನ್ನೇ ಎರಡನ್ನಾಗಿಸಿಕೊಂಡ, ಸುಡುವವರಲ್ಲಿ ಶ್ರೇಷ್ಠನಾದ, ಲೋಕಗಳನ್ನು ಸುಡುತ್ತಿರುವ ಆದಿತ್ಯನೆಂದು ತಿಳಿ. ಷಡ್ಮಹಾರಥರಿಂದ ಹತನಾದ ಪಾಂಡವರ ಮಗ ಸೌಭದ್ರನು ಯೋಗದಿಂದ ಎರಡಾಗಿ ಇಲ್ಲಿಗೆ ಬಂದ ಸೋಮನೆಂದು ತಿಳಿ. ದ್ರೌಪದಿಯೊಡನೆ ಅಗ್ನಿಯಿಂದ ಹುಟ್ಟಿದ ಧೃಷ್ಟದ್ಯುಮ್ನನು ಅಗ್ನಿಯ ಶುಭ ಅಂಶದವನು ಮತ್ತು ಶಿಖಂಡಿಯು ರಾಕ್ಷಸನಾಗಿದ್ದನೆಂದು ತಿಳಿ. ದ್ರೋಣನು ಬೃಹಸ್ಪತಿಯ ಅಂಶವೆಂದೂ ದ್ರೌಣಿ ಅಶ್ವತ್ಥಾಮನು ರುದ್ರಜನೆಂದೂ ತಿಳಿ. ಗಾಂಗೇಯ ಭೀಷ್ಮನು ಮಾನುಷತ್ವವನ್ನು ಪಡೆದ ವಸುವೆಂದು ತಿಳಿ. ಹೀಗೆ ಈ ದೇವತೆಗಳು ಮಾನುಷತ್ವವನ್ನು ಪಡೆದು ಕಾರ್ಯಗಳು ಮುಗಿದನಂತರ ಪುನಃ ಸ್ವರ್ಗಕ್ಕೆ ತೆರಳಿದ್ದಾರೆ. ಪರಲೋಕದ ಭಯದಿಂದಾಗಿ ನಿಮ್ಮೆಲ್ಲರ ಹೃದಯದಲ್ಲಿ ಬಹುಕಾಲ ನೆಲೆಸಿರುವ ದುಃಖವನ್ನು ಇಂದು ನಾನು ದೂರೀಕರಿಸುತ್ತೇನೆ. ನೀವೆಲ್ಲರೂ ಭಾಗೀರಥೀ ನದಿಯ ಕಡೆ ಹೊರಡಬೇಕು. ಅಲ್ಲಿ ನಾನು ರಣಾಂಗಣದಲ್ಲಿ ಮಡಿದ ಅವರೆಲ್ಲರನ್ನೂ ಅನ್ಯರನ್ನೂ ತೋರಿಸುತ್ತೇನೆ."

ವ್ಯಾಸನ ಈ ಮಾತನ್ನು ಕೇಳಿ ಸರ್ವ ಜನಸ್ತೋಮವೂ ಮಹಾ ಸಿಂಹನಾದದೊಡನೆ ಗಂಗಾಭಿಮುಖವಾಗಿ ಹೊರಟಿತು. ಪಾಂಡವರೊಂದಿಗೆ ಮತ್ತು ಅಮಾತ್ಯರೊಂದಿಗೆ ಧೃತರಾಷ್ಟ್ರನೂ, ಅಲ್ಲಿ ಸೇರಿದ್ದ ಮುನಿಶಾರ್ದೂಲರೂ ಗಂಧರ್ವರನ್ನೂ ಕೂಡಿಕೊಂಡು ಹೊರಟರು. ಕ್ರಮೇಣ ಆ ಜನಸಾಗರವು ಗಂಗೆಯನ್ನು ಸೇರಿ ಅಲ್ಲಿ ಎಲ್ಲರೂ ಯಥಾಪ್ರೀತಿಯಾಗಿ ಯಥಾಸುಖವಾಗಿ ಬೀಡುಬಿಟ್ಟಿತು. ಧೀಮಂತ ರಾಜಾ ಯುಧಿಷ್ಠಿರನು ಪಾಂಡವರೊಡನೆ, ತನ್ನ ಅನುಯಾಯಿಗಳಿಂದೊಡಗೂಡಿ, ಸ್ತ್ರೀಯರು ಮತ್ತು ವೃದ್ಧರನ್ನು ಮುಂದಿರಿಸಿಕೊಂಡು ಇಷ್ಟ ಪ್ರದೇಶದಲ್ಲಿ ಬೀಡುಬಿಟ್ಟನು. ಮೃತರಾಗಿದ್ದ ನೃಪರನ್ನು ನೋಡಲು ರಾತ್ರಿಯನ್ನೇ ಕಾಯುತ್ತಿದ್ದ ಅವರಿಗೆ ಆ ಒಂದು ಹಗಲೂ ಕೂಡ ನೂರು ವರ್ಷಗಳಂತೆ ಕಳೆದವು. ಬಳಿಕ ರವಿಯು ಪುಣ್ಯಗಿರಿಶ್ರೇಷ್ಠನನ್ನು ಸೇರಿದ ನಂತರ ಅವರೆಲ್ಲರೂ ಸ್ನಾನಮಾಡಿ ಸಂಧ್ಯಾವಂದನಾದಿ ಕರ್ಮಗಳನ್ನೆಸಗಿದರು.

ದುರ್ಯೋಧನಾದಿಗಳ ದರ್ಶನ

ರಾತ್ರಿಯಾಗಲು ಅಲ್ಲಿ ಬಂದು ಸೇರಿದ್ದ ಎಲ್ಲರೂ ಆಹ್ನಿಕಕ್ರಿಯೆಗಳನ್ನು ಪೂರೈಸಿ ವ್ಯಾಸನ ಬಳಿ ಹೋದರು. ಧರ್ಮಾತ್ಮಾ ಧೃತರಾಷ್ಟ್ರನಾದರೋ ಪಾಂಡವರೊಡನೆ ಶುದ್ಧ ಏಕಮನಸ್ಸಿನಿಂದ ಋಷಿಯ ಬಳಿ ಕುಳಿತುಕೊಂಡನು. ಗಾಂಧಾರಿಯೂ ಕೂಡ ಎಲ್ಲ ನಾರಿಯರೊಡನೆ ಕುಳಿತುಕೊಂಡಳು. ಪೌರಜನಪದ ಜನರೂ ಕೂಡ ಎಲ್ಲರೂ ವಯಸ್ಸಿಗೆ ತಕ್ಕಂತೆ ಕುಳಿತುಕೊಂಡರು. ಆಗ ಮಹಾತೇಜಸ್ವೀ ಮಹಾಮುನಿ ವ್ಯಾಸನು ಪುಣ್ಯ ಭಾಗೀರಥೀ ಜಲದಲ್ಲಿ ಮಿಂದು ಸರ್ವಲೋಕಗಳಿಂದ ಪಾಂಡವರ ಮತ್ತು ಕೌರವರ ಕಡೆಯ ಎಲ್ಲ ಯೋಧರನ್ನೂ, ನಾನಾದೇಶನಿವಾಸಿಗಳಾಗಿದ್ದ ಮಹಾಭಾಗ ರಾಜರನ್ನೂ ಆಹ್ವಾನಿಸಿದನು.  ಆಗ ನೀರಿನ ಕೆಳಗಿನಿಂದ ಹಿಂದೆ ಕುರುಪಾಂಡವಸೇನೆಗಳಲ್ಲಿ ಹೇಗೋ ಹಾಗೆ ತುಮುಲ ಶಬ್ಧವು ಕೇಳಿಬಂದಿತು. ಆಗ ನೀರಿನಿಂದ ಮೇಲಕ್ಕೆ ಭೀಷ್ಮ-ದ್ರೋಣರನ್ನು ಮುಂದಿಟ್ಟುಕೊಂಡು ಎಲ್ಲ ಪಾರ್ಥಿವರೂ, ಸೇನೆಗಳೊಂದಿಗೆ, ಸಹಸ್ರಾರು ಸಂಖ್ಯೆಗಳಲ್ಲಿ ಮೇಲೆದ್ದರು. ಸೈನಿಕರು ಮತ್ತು ಪುತ್ರರೊಂದಿಗೆ ವಿರಾಟ-ದ್ರುಪದರು, ದ್ರೌಪದೇಯರು, ಸೌಭದ್ರ, ರಾಕ್ಷಸ ಘಟೋತ್ಕಚ, ಕರ್ಣ-ದುರ್ಯೋಧನರು, ಮಹಾರಥ ಶಕುನಿ, ದುಃಶಾಸನನೇ ಮೊದಲಾದ ಧೃತರಾಷ್ಟ್ರನ ಮಹಾರಥ ಪುತ್ರರು, ಜರಾಸಂಧನ ಮಗ, ಭಗದತ್ತ, ಪಾರ್ಥಿವ ಜಲಸಂಧ, ಭೂರಿಶ್ರವ, ಶಲ, ಶಲ್ಯ, ಸಹೋದರರೊಂದಿಗೆ ವೃಷಸೇನ, ರಾಜಪುತ್ರ ಲಕ್ಷ್ಮಣ, ಧೃಷ್ಟದ್ಯುಮ್ನನ ಮಗ, ಶಿಖಂಡಿಯ ಎಲ್ಲ ಮಕ್ಕಳೂ, ಅನುಜನೊಂದಿಗೆ ಧೃಷ್ಟಕೇತು, ಅಚಲ, ವೃಷಕ, ರಾಕ್ಷಸ ಅಲಾಯುಧ, ಬಾಹ್ಲೀಕ, ಸೋಮದತ್ತ, ರಾಜ ಚೇಕಿತಾನ - ಇವರು ಮತ್ತು ಇಲ್ಲಿ ಹೇಳಿರದ ಇನ್ನೂ ಅನೇಕ ಅನ್ಯರು ಎಲ್ಲರೂ ಬೆಳಗುತ್ತಿರುವ ದೇಹಗಳಿಂದ ನೀರಿನ ಒಳಗಿಂದ ಮೇಲೆದ್ದರು. ಯಾವ ವೀರನ ಯಾವ ವೇಷ, ಧ್ವಜ, ವಾಹನವಿದ್ದಿತ್ತೋ ಅದೇ ರೀತಿಯಲ್ಲಿ ಆ ನರಾಧಿಪರು ಕಾಣಿಸಿಕೊಂಡರು. ಎಲ್ಲರೂ ದಿವ್ಯಾಂಬರಗಳನ್ನು ಧರಿಸಿದ್ದರು. ಎಲ್ಲರೂ ಹೊಳೆಯುವ ಕುಂಡಲಗಳನ್ನು ಧರಿಸಿದ್ದರು. ಎಲ್ಲರೂ ವೈರಗಳಿಲ್ಲದೇ, ನಿರಹಂಕಾರರಾಗಿ, ಕ್ರೋಧ-ಅಸೂಯೆಗಳನ್ನು ಕಳೆದುಕೊಂಡಿದ್ದರು. ಗಂಧರ್ವರು ಅವರ ಗುಣಗಾನಮಾಡುತ್ತಿದ್ದರು. ಬಂದಿಗಳು ಅವರನ್ನು ಸ್ತುತಿಸುತ್ತಿದ್ದರು. ದಿವ್ಯಮಾಲೆ-ವಸ್ತ್ರಗಳನ್ನು ಧರಿಸಿದ್ದ ಅಪ್ಸರೆಯರ ಗಣಗಳು ಅವರನ್ನು ಸುತ್ತುವರೆದಿದ್ದರು. ಆಗ ಸತ್ಯವತೀ ಪುತ್ರ ಮುನಿಯು ಪ್ರೀತನಾಗಿ ತನ್ನ ತಪೋಬಲದಿಂದ ಧೃತರಾಷ್ಟ್ರನಿಗೆ ದಿವ್ಯದೃಷ್ಟಿಯನ್ನಿತ್ತನು. ದಿವ್ಯಜ್ಞಾನಬಲವಿದ್ದಿದ್ದ ಯಶಸ್ವಿನೀ ಗಾಂಧಾರಿಯು ರಣದಲ್ಲಿ ಹತರಾಗಿದ್ದ ಆ ಪುತ್ರರನ್ನೂ ಅನ್ಯ ಎಲ್ಲರನ್ನೂ ನೋಡಿದಳು. ಪರಮಾದ್ಬೂತವೂ, ಅಚಿಂತ್ಯವೂ, ರೋಮಾಂಚಕಾರಿಯೂ ಆಗಿದ್ದ ಅದನ್ನು ಸರ್ವಜನರೂ ಕಣ್ಣುರೆಪ್ಪೆಗಳನ್ನೂ ಬಡಿಯದೇ ವಿಸ್ಮಿತರಾಗಿ ನೋಡಿದರು. ಹರ್ಷೋದ್ಗಾರಗೈಯುತ್ತಿದ್ದ ನರನಾರಿಯರಿಂದ ಕೂಡಿದ್ದ ಆ ಉಗ್ರ ಮಹೋತ್ಸವವು ತೆರೆಯ ಮೇಲಿನ ಚಿತ್ರದಂತೆಯೇ ಕಾಣಿಸುತ್ತಿತ್ತು. ಧೃತರಾಷ್ಟ್ರನಾದರೋ ಆ ಮುನಿಯ ಅನುಗ್ರಹದಿಂದ ಪಡೆದ ದಿವ್ಯದೃಷ್ಟಿಯಿಂದ ಅವರೆಲ್ಲರನ್ನೂ ನೋಡಿ ಅತ್ಯಂತ ಮುದಿತನಾದನು.

ಆಗ ಬ್ರಹ್ಮರ್ಷಿಯು ವಿಹಿಸಿದ ಶುಭ ವಿಧಿಯ ಪ್ರಕಾರ ಆ ಭರತಶ್ರೇಷ್ಠರೆಲ್ಲರೂ ದೇವಲೋಕದ ಅವರರಂತೆ ಕ್ರೋಧ-ಮಾತ್ಸರ್ಯಗಳನ್ನು ತೊರೆದು, ದುಃಖಗಳಿಲ್ಲದೇ, ಪರಸ್ಪರರೊಡನೆ ಕಲೆತರು. ಮಗನು ತಂದೆ-ತಾಯಿಯರೊಂದಿಗೂ, ಪತ್ನಿಯು ಪತಿಯೊಂದಿಗೂ, ಸಹೋದರನು ಸಹೋದರನೊಂದಿಗೂ ಮತ್ತು ಮಿತ್ರನು ಮಿತ್ರನೊಡನೆಯೂ ಕಲೆತರು. ಪಾಂಡವರು ಮಹೇಷ್ವಾಸ ಕರ್ಣನನ್ನೂ, ಸೌಭದ್ರನನ್ನು, ದ್ರೌಪದೇಯರೆಲ್ಲರನ್ನೂ ಅತ್ಯಂತ ಹರ್ಷದಿಂದ ಕಲೆತರು. ಕರ್ಣನೊಡನೆ ಪಾಂಡವರೂ ಮತ್ತು ಪೃಥಿವೀಪಾಲರು ಅನ್ಯೋನ್ಯರನ್ನೂ ಭೇಟಿಮಾಡಿ ಸೌಹಾರ್ದತೆಯಿಂದಿದ್ದರು. ಋಷಿಯ ಅನುಗ್ರಹದಿಂದ ಅನ್ಯ ಕ್ಷತ್ರಿಯರೂ ಕೋಪವನ್ನು ಕಳೆದುಕೊಂಡು, ಶತ್ರುಭಾವವನ್ನು ಬಿಟ್ಟು ಸೌಹಾರ್ದತೆಯಿಂದ ವರ್ತಿಸಿದರು. ಹೀಗೆ ಕುರು ಪುರುಷವ್ಯಾಘ್ರ ಪುತ್ರರೂ ಅನ್ಯ ಮಾನವರೂ ಹಿರಿಯರು ಮತ್ತು ಬಂಧವರೊಂದಿಗೆ ಸೇರಿ ಕಲೆತರು. ಆ ನೃಪರು ಇಡೀ ರಾತ್ರಿಯನ್ನು ಒಂದಾಗಿ ಪ್ರೀತಮನಸ್ಕರಾಗಿ ವಿಹರಿಸುತ್ತಾ ತಾವು ಸ್ವರ್ಗದ ಸದಸ್ಯರೋ ಎನ್ನುವಂತೆ ಸಂತೋಷದಿಂದ ಕಳೆದರು. ಆ ಯೋಧರು ಪರಸ್ಪರರನ್ನು ಸೇರಿದಾಗ ಅಲ್ಲಿ ಶೋಕವಾಗಲೀ, ಭಯವಾಗಲೀ, ಕಷ್ಟವಾಗಲೀ, ಅಸಂತೋಷವಾಗಲೀ, ಅಪಯಶಸ್ಸಾಗಲೀ ಉಂಟಾಗಲಿಲ್ಲ. ನಾರಿಯರು ಅಲ್ಲಿ ದುಃಖವನ್ನು ತೊರೆದು ತಂದೆಗಳೊಂದಿಗೂ, ಸಹೋದರರೊಂದಿಗೂ, ಪತಿಗಳೊಂದಿಗೂ, ಮಕ್ಕಳೊಂದಿಗೂ ಕಲೆತು ಅತ್ಯಂತ ಸಂತೋಷವನ್ನು ಅನುಭವಿಸಿದರು. ಈ ರೀತಿ ಆ ವೀರರೂ ಮತ್ತು ಅವರ ಪತ್ನಿಯರೂ ಒಂದು ರಾತ್ರಿ ವಿಹರಿಸಿ, ರಾತ್ರಿಕಳೆದ ಕೂಡಲೇ ಅನ್ಯೋನ್ಯರನ್ನು ಆಲಂಗಿಸಿ, ಬೀಳ್ಕೊಂಡು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು. ಆಗ ಮುನಿಪುಂಗವನು ಆ ಲೋಕಗಳನ್ನು ವಿಸರ್ಜಿಸಿದನು. ಎಲ್ಲರೂ ನೋಡುತ್ತಿದ್ದಂತೆಯೇ ಕ್ಷಣದಲ್ಲಿಯೇ ಅವರು ಅಂತರ್ಧಾನರಾದರು. ಆ ಮಹಾತ್ಮನು ಪುಣ್ಯ ತ್ರಿಪಥಗಾ ನಧಿಯಲ್ಲಿ ರಥ-ಧ್ವಜ-ಅಶ್ವಗಳೊಂದಿಗೆ ಅವರನ್ನು ಅವರವರ ಸ್ಥಾನಗಳಿಗೆ ಕಳುಹಿಸಿಕೊಟ್ಟನು. ಕೆಲವರು ದೇವಲೋಕಕ್ಕೆ ಹೋದರೆ ಇನ್ನು ಕೆಲವರು ಬ್ರಹ್ಮಸದನಕ್ಕೆ ಹೋದರು. ಕೆಲವರು ವರುಣಲೋಕವನ್ನೂ ಇನ್ನು ಕೆಲವರು ಕುಬೇರನ ಲೋಕವನ್ನೂ ಸೇರಿದರು. ಹಾಗೆಯೇ ಕೆಲವು ರಾಜರು ವೈವಸ್ವತ ಲೋಕವನ್ನೂ, ಇನ್ನು ಕೆಲವರು ರಾಕ್ಷಸ, ಪಿಶಾಚ ಮತ್ತು ಉತ್ತರ ಕುರುಲೋಕಕ್ಕೂ ಹೊರಟುಹೋದರು. ಅಮರರೊಂದಿಗೆ ವಾಹನ-ಅನುಯಾಯಿಗಳೊಂದಿಗೆ ಬಂದಿದ್ದ ಆ ಮಹಾತ್ಮರೆಲ್ಲರೂ ಹೀಗೆ ವಿಚಿತ್ರ ಗತಿಗಳನ್ನು ಪಡೆದರು.

ಅವರೆಲ್ಲರೂ ಹೊರಟು ಹೋದನಂತರ ನದಿಯಲ್ಲಿ ನಿಂತಿದ್ದ ಸದಾ ಕುರುಗಳ ಹಿತವನ್ನೇ ಮಾಡುತ್ತಿದ್ದ ಆ ಮಹಾತೇಜಸ್ವಿ ಧರ್ಮಶೀಲ ಮಹಾಮುನಿಯು ಪತಿಗಳನ್ನು ಕಳೆದುಕೊಂಡಿದ್ದ ಕ್ಷತ್ರಿಯ ಸ್ತ್ರೀಯರಿಗೆ ಹೇಳಿದನು: "ಪರಮಸ್ತ್ರೀಯರೇ! ನಿಮ್ಮಲ್ಲಿ ಯಾರು ಯಾರು ನಿಮ್ಮ ನಿಮ್ಮ ಗಂಡಂದಿರು ಹೋಗಿರುವ ಲೋಕಗಳಿಗೆ ಹೋಗಲು ಇಚ್ಛಿಸುವಿರೋ ಅವರು ಆಲಸ್ಯವನ್ನು ತೊರೆದು ಬೇಗನೇ ಗಂಗಾನದಿಯಲ್ಲಿ ಮುಳುಗಿರಿ!"

ಅವನ ಆ ಮಾತನ್ನು ಕೇಳಿ ಶ್ರದ್ಧೆಯನ್ನಿಟ್ಟಿದ್ದ ವರಾಂಗನೆಯರು ಮಾವನ ಅನುಮತಿಯನ್ನು ಪಡೆದು ಜಾಹ್ನವೀ ನದಿಯನ್ನು ಪ್ರವೇಶಿಸಿದರು. ಮಾನುಷ ದೇಹಗಳನ್ನು ತೊರೆದು ಆ ಸಾಧ್ವಿಯರೆಲ್ಲರೂ ತಮ್ಮ ತಮ್ಮ ಪತಿಯರೊಂದಿಗೆ ಹೊರಟುಹೋದರು. ಹೀಗೆ ಕ್ರಮೇಣವಾಗಿ ಆ ಎಲ್ಲ ಶೀಲವಂತ ಕುಲಸ್ತ್ರೀಯರು ನೀರಿನಲ್ಲಿ ಮುಳುಗಿ ಮುಕ್ತರಾಗಿ ತಮ್ಮ ತಮ್ಮ ಪತಿಗಳ ಲೋಕಗಳಿಗೆ ಹೊರಟುಹೋದರು. ಅವರ ಪತಿಗಳಂತೆಯೇ ಆ ಶೀಲಸತ್ಥಸಂಪನ್ನ ಸ್ತ್ರೀಯರು ದಿವ್ಯರೂಪಗಳನ್ನು ಧರಿಸಿ, ದಿವ್ಯಾಭರಣಭೂಷಿತರಾಗಿ, ದಿವ್ಯ ಮಾಲ್ಯಾಂಬರಗಳನ್ನು ಧರಿಸಿ ಸರ್ವಗುಣಗಳಿಂದ ಯುಕ್ತರಾಗಿ, ಆಯಾಸವನ್ನು ಕಳೆದುಕೊಂಡು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು. ವರದ ಧರ್ಮವತ್ಸಲನು ಆ ಸಮಯದಲ್ಲಿ ಯಾರ ಯಾರ ಬಯಕೆಯು ಯಾವುದಿತ್ತೋ ಅವೆಲ್ಲವನ್ನೂ ಪೂರೈಸಿಕೊಟ್ಟು ಬೇಕಾದ ಲೋಕಗಳನ್ನು ಸೃಷ್ಟಿಸಿದನು. ನರದೇವರ ಪುನರಾಗಮನದ ಕುರಿತು ಕೇಳಿದ ಮನುಷ್ಯರೂ ಅನ್ಯ ದೇಹಗಳಲ್ಲಿ ಹೋದವರೂ ಮುದಿತರಾದರು.

ಯುಧಿಷ್ಠಿರನು ಹಸ್ತಿನಾಪುರಕ್ಕೆ ಹಿಂದಿರುಗಿದುದು

ಆ ಮಹದಾಶ್ಚರ್ಯಕರವಾದ ಪುತ್ರರ ಪುನಃ ದರ್ಶನವನ್ನು ಕಂಡ ರಾಜರ್ಷಿ ಧೃತರಾಷ್ಟ್ರನು ಶೋಕವನ್ನು ಕಳೆದುಕೊಂಡು ಪುನಃ ಆಶ್ರಮಕ್ಕೆ ಆಗಮಿಸಿದನು. ಇತರ ಜನರೂ, ಪರಮಋಷಿಗಳೆಲ್ಲರೂ, ಧೃತರಾಷ್ಟ್ರನ ಅಪ್ಪಣೆಯನ್ನು ಪಡೆದು ಇಷ್ಟಬಂದಲ್ಲಿಗೆ ಹೊರಟುಹೋದರು. ಮಹಾತ್ಮ ಪಾಂಡವರು ಪತ್ನಿಯರೊಂದಿಗೆ ಮತ್ತು ಉಳಿದಿದ್ದ ಅಲ್ಪ ಸೈನಿಕರೊಂದಿಗೆ ಮಹೀಪತಿ ಧೃತರಾಷ್ಟ್ರನನ್ನು ಅನುಸರಿಸಿ ಹೋದರು. ಆಶ್ರಮಕ್ಕೆ ಬಂದ ಧೀಮಾನ್ ಬ್ರಹ್ಮರ್ಷಿ ಲೋಕಪೂಜಿತ ಮುನಿ ಸತ್ಯವತೀಪುತ್ರನು ಧೃತರಾಷ್ಟ್ರನಿಗೆ ಇಂತೆಂದನು: "ಧೃತರಾಷ್ಟ್ರ! ಕೇಳು. ಪುಣ್ಯಕರ್ಮಿಗಳೂ ಜ್ಞಾನವೃದ್ಧರೂ ಆದ ಋಷಿಗಳಿಂದ ನೀನು ಕೇಳಿರುವೆ. ಶ್ರದ್ಧಾವಂತ ಕುಲವೃದ್ಧರಿಂದಲೂ ವೇದ-ವೇದಾಂಗಗಳನ್ನು ತಿಳಿದವರಿಂದಲೂ, ವಿವಿಧ ಕಥೆಗಳನ್ನು ಹೇಳುವ ಧರ್ಮಜ್ಞರಿಂದಲೂ ಅನೇಕ ವಿಷಯಗಳನ್ನು ತಿಳಿದುಕೊಂಡಿರುವೆ. ಇನ್ನಾದರೂ ನೀನು ಮನಸ್ಸನ್ನು ಶೋಕದಲ್ಲಿರಿಸಿಕೊಳ್ಳಬೇಡ. ದೈವಿಕವಾದ ಆಗುಹೋಗುಗಳ ವಿಷಯಕ್ಕಾಗಿ ವಿದ್ವಾಂಸನು ದುಃಖಿಸುವುದಿಲ್ಲ. ದೇವದರ್ಶನ ನಾರದನಿಂದ ನೀನು ದೇವರಹಸ್ಯವನ್ನು ಕೇಳಿರುವೆ. ಇವರೆಲ್ಲರೂ ಕ್ಷತ್ರಧರ್ಮದಿಂದ ಶಸ್ತ್ರಪೂತರಾಗಿ ಶುಭಗತಿಗಳನ್ನು ಹೊಂದಿರುತ್ತಾರೆ. ನೀನು ನೋಡಿದಂತೆ ನಿನ್ನ ಪುತ್ರರು ಸ್ವರ್ಗದಲ್ಲಿ ಸ್ವೇಚ್ಛಾವಿಹಾರಿಗಳಾಗಿದ್ದಾರೆ. ಈ ಧೀಮಾನ್ ಯುಧಿಷ್ಠಿರನಾದರೋ ಎಲ್ಲ ಸಹೋದರೂ, ಪತ್ನಿಯರೂ ಮತ್ತು ಸುಹೃದಯರೊಂದಿಗೆ ನಿನ್ನನ್ನೇ ಸೇವಿಸುತ್ತಿದ್ದಾನೆ. ಅವನು ಈ ವನದಲ್ಲಿ ವಾಸಿಸುತ್ತಾ ಒಂದು ತಿಂಗಳಿಗೂ ಹೆಚ್ಚಾಗಿಹೋಯಿತು. ಸ್ವರಾಜ್ಯವನ್ನು ಆಳಲು ಅವನನ್ನು ಕಳುಹಿಸಿಕೊಡು. ರಾಜ್ಯವು ಯಾವಾಗಲೂ ಬಹುಶತ್ರುಗಳಿಂದ ಕೂಡಿರುವುದು, ಆದುದರಿಂದ ಅದನ್ನು ಯಾವಾಗಲೂ ಪ್ರಯತ್ನಪೂರ್ವಕವಾಗಿ ರಕ್ಷಿಸಬೇಕು!"

ಅಮಿತಬುದ್ಧಿ ವ್ಯಾಸನು ಹೀಗೆ ಹೇಳಲು ರಾಜಾ ವಾಗ್ಮೀ ಕೌರವನು ಯುಧಿಷ್ಠಿರನನ್ನು ಕರೆಯಿಸಿ, ಈ ಮಾತುಗಳನ್ನಾಡಿದನು. "ಅಜಾತಶತ್ರೋ! ನಿನಗೆ ಮಂಗಳವಾಗಲಿ! ಸಹೋದರರೊಂದಿಗೆ ನನ್ನ ಈ ಮಾತನ್ನು ಕೇಳು. ನಿನ್ನ ಅನುಗ್ರಹದಿಂದ ಈಗ ಶೋಕವು ನಮ್ಮನ್ನು ಬಾಧಿಸುತ್ತಿಲ್ಲ. ಪುತ್ರ! ಹಿಂದೆ ನಾವು ಹಸ್ತಿನಾಪುರದಲ್ಲಿ ನಿನ್ನೊಡನೆ ಹೇಗೆ ರಮಿಸುತ್ತಿದ್ದೆವೋ ಹಾಗೆಯೇ ಇಲ್ಲಿಯೂ ಕೂಡ ಸಂತೋಷದಿಂದ ಇದ್ದೇವೆ. ನನ್ನೊಡನೆ ಪ್ರೀತಿಯಿಂದ ಇದ್ದುಕೊಂಡು ನನ್ನ ರಕ್ಷಕನಾಗಿದ್ದೀಯೆ. ಪುತ್ರರಿಂದ ಪಡೆಯಬೇಕಾದ ಫಲವನ್ನು ನಾನು ಸಂಪೂರ್ಣವಾಗಿ ನಿನ್ನಿಂದ ಪಡೆದಿರುತ್ತೇನೆ. ಈ ವಿಷಯದಲ್ಲಿ ನನಗೆ ಅತ್ಯಂತ ಪ್ರೀತಿಯುಂಟಾಗಿದೆ. ನಿನ್ನಲ್ಲಿ ನನಗೆ ಸ್ವಲ್ಪವೂ ಕೋಪವಿಲ್ಲ. ಪುತ್ರ! ಆದುದರಿಂದ ನೀನು ತಡಮಾಡದೇ ಹಸ್ತಿನಾಪುರಕ್ಕೆ ಪ್ರಯಾಣಮಾಡು. ನಿನ್ನನ್ನು ನೋಡಿಕೊಂಡೇ ಇದ್ದರೆ ನನ್ನ ತಪಸ್ಸು ಹಾಳಾಗಿಬಿಡುತ್ತದೆ. ತಪೋಯುಕ್ತವಾದ ಈ ಶರೀರವು ನಿನ್ನನ್ನು ನೋಡಿ ಪುನಃ ನನ್ನ ಗಮನವನ್ನು ತನ್ನತ್ತ ಸೆಳೆದಿದೆ. ನಿನ್ನ ತಾಯಿಯರಾದ ಗಾಂಧಾರಿ-ಕುಂತಿಯರೂ ಕೂಡ ನನ್ನಂತೆಯೇ ವ್ರತಾನುಷ್ಟಾನಗಳಲ್ಲಿ ತೊಡಗಿ ಒಣಗಿದ ತರಗೆಲೆಗಳನ್ನು ತಿನ್ನುತ್ತಾ ಜೀವನ್ನು ಧಾರಣೆಮಾಡಿಕೊಂಡಿದ್ದರು. ಅವರು ಇನ್ನು ಬಹುಕಾಲ ಬದುಕಿರಲಾರರು. ನಿನ್ನ ಸಮಾಗಮದಿಂದ ಮತ್ತು ವ್ಯಾಸನ ತಪೋವೀರ್ಯದಿಂದ ಬೇರೆ ಲೋಕಗಳಿಗೆ ಹೋಗಿರುವ ದುರ್ಯೋಧನಾದಿಗಳನ್ನು ನೋಡಿಯಾಯಿತು. ಇದರಿಂದ ನನ್ನ ಜೀವನವು ಸಾರ್ಥಕವಾಯಿತು. ಈಗ ನಾನು ಉಗ್ರ ತಪಸ್ಸಿನಲ್ಲಿ ತೊಡಗುತ್ತೇನೆ. ಇದಕ್ಕೆ ನೀನು ಅನುಮತಿಯನ್ನು ನೀಡಬೇಕು! ಇಂದು ಪಿತೃಗಳಿಗೆ ಪಿಂಡಪ್ರದಾನವೂ ಕುಲದ ಕೀರ್ತಿಯೂ ನಿನ್ನಲ್ಲಿಯೇ ನೆಲೆಸಿವೆ. ಇಂದು ಅಥವಾ ನಾಳೆ ನೀನು ಹಸ್ತಿನಾಪುರಕ್ಕೆ ಪ್ರಯಾಣಬೆಳೆಸು. ತಡಮಾಡಬೇಡ. ನೀನು ಅನೇಕ ಪ್ರಕಾರವಾದ ರಾಜನೀತಿಗಳನ್ನು ಕೇಳಿ ತಿಳಿದುಕೊಂಡಿರುವೆ. ನಿನಗೆ ಉಪದೇಶಮಾಡಲು ನನಗೇನೂ ಕಾಣುತ್ತಿಲ್ಲ. ನೀನು ನನಗೆ ಬಹಳ ಉಪಕಾರವನ್ನೆಸಗಿರುವೆ!"

ಹೀಗೆ ಹೇಳಿದ ರಾಜನಿಗೆ ನೃಪ ಯುಧಿಷ್ಠಿರನು ಹೇಳಿದನು: "ಧರ್ಮಜ್ಞ! ನಿರಪರಾಧಿಯಾದ ನನ್ನನ್ನು ಪರಿತ್ಯಜಿಸುವುದು ಸರಿಯಲ್ಲ! ಬೇಕಾದರೆ ನನ್ನ ಎಲ್ಲ ಸಹೋದರರೂ ಅನುಚರರೊಂದಿಗೆ ಹಸ್ತಿನಾಪುರಕ್ಕೆ ಹೊರಟುಹೋಗಲಿ. ನಾನು ಮಾತ್ರ ವ್ರತನಿಷ್ಠನಾಗಿದ್ದು ನಿನ್ನ ಮತು ತಾಯಂದಿರ ಸೇವೆಯನ್ನು ಮಾಡಿಕೊಂಡಿರುತ್ತೇನೆ."

ಗಾಂಧಾರಿಯು ಅವನಿಗೆ ಹೇಳಿದಳು: "ಪುತ್ರ! ನೀನು ಹೀಗೆ ಹೇಳಬಾರದು. ನನ್ನ ಮಾತನ್ನು ಕೇಳು. ಕುರುಕುಲ ಮತ್ತು ನನ್ನ ಮಾವನ ಪಿಂಡಪ್ರದಾನ ಇವೆಲ್ಲವುಗಳ ಜವಾಬ್ಧಾರಿಯೂ ಈಗ ನಿನ್ನದಾಗಿವೆ. ಇಲ್ಲಿಯವರೆಗೆ ನಮ್ಮನ್ನು ಪೂಜಿಸಿದ್ದು ಪರ್ಯಾಪ್ತವಾಯಿತು. ಈಗ ಹೊರಡು. ರಾಜನು ಹೇಳಿದ ಕಾರ್ಯವನ್ನು ಮಾಡು. ತಂದೆಯ ವಚನವನ್ನು ನೀನು ಪಾಲಿಸಬೇಕು!"

ಗಾಂಧಾರಿಯು ಹೀಗೆ ಹೇಳಲು ಸ್ನೇಹಭಾವದಿಂದ ಕಣ್ಣೀರನ್ನು ಸುರಿಸುತ್ತಾ ರೋದಿಸುವ ಧ್ವನಿಯಲ್ಲಿ ಯುಧಿಷ್ಠಿರನು ಕುಂತಿಗೆ ಹೇಳಿದನು: "ರಾಜನೂ ಯಶಸ್ವಿನೀ ಗಾಂಧಾರಿಯೂ ನನ್ನ ದೂರಮಾಡಿದ್ದಾರೆ. ನನ್ನ ಚಿತ್ತವು ನಿನ್ನಲ್ಲಿಯೇ ಬದ್ಧವಾಗಿದೆ. ದುಃಖಿತನಾಗಿ ನಾನು ಹೇಗೆ ಹೋಗಲಿ? ಧರ್ಮಚಾರಿಣೀ! ನಿನ್ನ ತಪಸ್ಸಿನಲ್ಲಿ ವಿಘ್ನವನ್ನು ತರಲು ಬಯಸುವುದಿಲ್ಲ. ಏಕೆಂದರೆ ತಪಸ್ಸೇ ಹೆಚ್ಚಿನದು. ತಪಸ್ಸಿಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ. ಹಿಂದಿನಂತೆ ನನಗೆ ರಾಜ್ಯದಲ್ಲಿಯೂ ಮನಸ್ಸಿಲ್ಲವಾಗಿದೆ. ನನ್ನ ಮನಸ್ಸು ಸರ್ವಥಾ ತಪಸ್ಸಿನಲ್ಲಿಯೇ ಅನುರಕ್ತವಾಗಿದೆ. ಈ ಭೂಮಿಯಲ್ಲವೂ ನನಗೆ ಶೂನ್ಯವಾಗಿಯೇ ತೋರುತ್ತಿದೆ. ನನಗೆ ಯಾವುದೇ ರೀತಿಯ ಸಂತೋಷವನ್ನೂ ನೀಡುತ್ತಿಲ್ಲ. ಬಾಂಧವರೆಲ್ಲರೂ ನಾಶಹೊಂದಿದರು. ಹಿಂದಿನಂತೆ ನಾವು ಬಲಶಾಲಿಗಳೂ ಆಗಿ ಉಳಿದಿಲ್ಲ. ಪಾಂಚಾಲರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ಅವರ ಕನ್ಯೆಯರು ಮಾತ್ರ ಉಳಿದುಕೊಂಡಿದ್ದಾರೆ. ಅವರ ಕುಲವನ್ನು ಉದ್ಧರಿಸುವ ಒಬ್ಬನನ್ನೂ ನಾನು ಕಾಣುತ್ತಿಲ್ಲ. ಅವರೆಲ್ಲರೂ ಯುದ್ಧದಲ್ಲಿ ದ್ರೋಣನೊಬ್ಬನಿಂದಲೇ ಭಸ್ಮೀಭೂತರಾದರು. ಅಳಿದುಳಿದವರನ್ನು ದ್ರೋಣಪುತ್ರನು ರಾತ್ರಿಯಲ್ಲಿ ಸಂಹರಿಸಿದನು. ನಮ್ಮ ಸಂಬಂಧಿಗಳಾದ ಚೇದಿದೇಶದವರೂ ಮತ್ಸ್ಯದೇಶದವರೂ ಹಿಂದಿನಂತೆ ಈಗ ಇಲ್ಲ. ವಾಸುದೇವನ ಪರಿಗ್ರಹದಿಂದ ಕೇಲ್ವಲ ವೃಷ್ಣಿವಂಶವು ಸುರಕ್ಷಿತವಾಗಿದೆ. ಅವರನ್ನು ನೋಡಿ ಧರ್ಮ-ಅರ್ಥಗಳನ್ನು ಸ್ಥಾಪಿಸಲು ಬಯಸುತ್ತೇನೆ. ಬೇರೆ ಯಾವ ಕಾರಣದಿಂದಲೂ ಅಲ್ಲ. ಅಮ್ಮ! ನೀನು ನಮ್ಮನ್ನು ಮಂಗಳದೃಷ್ಟಿಯಿಂದ ಕಾಣು. ಮುಂದೆ ನಿನ್ನ ದರ್ಶನವು ದುರ್ಲಭವೇ ಸರಿ. ಏಕೆಂದರೆ ರಾಜನು ಈಗ ತೀವ್ರ ತಪಸ್ಸನ್ನು ಆರಂಭಿಸುತ್ತಿದ್ದಾನೆ."

ಇದನ್ನು ಕೇಳಿದ ಯೋಧರ ನಾಯಕ ಮಹಾಬಾಹು ಸಹದೇವನು ವ್ಯಾಕುಲದಿಂದ ಕಣ್ಣೀರುಸುರಿಸುತ್ತಾ ಯುಧಿಷ್ಠಿರನಿಗೆ ಈ ಮಾತನ್ನಾಡಿದನು: "ಪಾರ್ಥಿವರ್ಷಭ! ತಾಯಿಯನ್ನು ಬಿಟ್ಟುಹೋಗಲು ನನಗೆ ಉತ್ಸಾಹವಿಲ್ಲ. ನೀನು ಬೇಗನೆ ಹೊರಟುಹೋಗು. ನಾನು ವನದಲ್ಲಿ ತಪಸ್ಸನ್ನು ತಪಿಸುತ್ತೇನೆ. ನಾನು ಇಲ್ಲಿಯೇ ತಪಸ್ಸನ್ನಾಚರಿಸಿಕೊಂಡು ರಾಜ ಮತ್ತು ತಾಯಂದಿರಿಬ್ಬರ ಪಾದಶುಶ್ರೂಷಣೆಯಲ್ಲಿ ನಿರತನಾಗಿ ನನ್ನ ಶರೀರವನ್ನು ಶೋಷಿಸುತ್ತೇನೆ!"

ಆಗ ಕುಂತಿಯು ಆ ಮಹಾಭುಜನನ್ನು ಆಲಂಗಿಸಿ ಹೇಳಿದಳು: "ಪುತ್ರ! ನೀನು ಹೋಗಬೇಕು. ಹಾಗೆ ಹೇಳಬೇಡ! ನನ್ನ ಮಾತಿನಂತೆ ಮಾಡು! ಪುತ್ರರೇ! ನಿಮ್ಮ ಪ್ರಯಾಣವು ಮಂಗಳಮಯವಾಗಲಿ. ನೀವು ಸ್ವಸ್ಥರಾಗಿರಿ! ನೀವೆಲ್ಲರೂ ಇಲ್ಲಿ ಇದ್ದರೆ ನಮ್ಮ ತಪಸ್ಸಿಗೆ ಭಂಗವಾಗುತ್ತದೆ. ನಿನ್ನ ಸ್ನೇಹಪಾಶದ ಬಂಧನಕ್ಕೆ ಸಿಲುಕಿ ನಾನು ಶ್ರೇಷ್ಠ ತಪಸ್ಸಿನಿಂದ ವಂಚಿತಳಾದೇನು. ಆದುದರಿಂದ ಪುತ್ರಕ! ನೀನೂ ಹೊರಟುಹೋಗು. ವ್ಯರ್ಥ ಕಾಲಕಳೆಯಬೇಡ!"

ಹೀಗೆ ಕುಂತಿಯು ಅನೇಕ ಪ್ರಕಾರವಾಗಿ ಸಮಾಧಾನವನ್ನು ಹೇಳಿ ಸಹದೇವನ, ಅದರಲ್ಲಿಯೂ ವಿಶೇಷವಾಗಿ ಯುಧಿಷ್ಠಿರನ ಮನಸ್ಸನ್ನು, ಹಸ್ತಿನಾವತಿಗೆ ತೆರಳುವಂತೆ ಮಾಡಿದಳು. ತಾಯಿಯಿಂದ ಅನುಜ್ಞಾತರಾದ ಕುರುಪುಂಗವರು ರಾಜಾ ಕುರುಶ್ರೇಷ್ಠನನ್ನು ಅಭಿವಂದಿಸಿ ಅವನಿಂದ ಬೀಳ್ಕೊಂಡರು. "ರಾಜನ್! ನಿನ್ನ ಶುಭ ಆಶೀರ್ವಾದಗಳಿಂದ ಆನಂದಿತರಾಗಿ ನಾವು ಹೋಗುತ್ತಿದ್ದೇವೆ. ನಿನ್ನ ಅಪ್ಪಣೆಯಾದರೆ ಬೇಸರವಿಲ್ಲದೇ ನಾವು ಹೋಗುತ್ತೇವೆ." ಮಹಾತ್ಮ ಧರ್ಮರಾಜನು ಹೀಗೆ ಹೇಳಲು ರಾಜರ್ಷಿ ಧೃತರಾಷ್ಟ್ರನು ಯುಧಿಷ್ಠಿರನಿಗೆ ಜಯ-ಆಶೀರ್ವಚನಗಳನ್ನಿತ್ತು ಹೊರಡಲು ಅನುಮತಿಯನ್ನಿತ್ತನು. ಪಾರ್ಥಿವ ಧೃತರಾಷ್ಟ್ರನು ಬಲಿಗಳಲ್ಲಿ ಶ್ರೇಷ್ಠ ಭೀಮನನ್ನು ಸಂತವಿಸಿದನು. ಉತ್ತಮ ಮೇಧಾವಿಯೂ ವೀರ್ಯವಾನನೂ ಆದ ಭೀಮನೂ ಕೂಡ ಅವನ ಸಾಂತ್ವನವನ್ನು ಸ್ವೀಕರಿಸಿದನು. ಕೌರವ್ಯ ಧೃತರಾಷ್ಟ್ರನು ಅರ್ಜುನ ಮತ್ತು ಪುರುಷರ್ಷಭ ಯಮಳರನ್ನೂ ಬಿಗಿದಪ್ಪಿ ಅಭಿನಂದಿಸಿ ಹೊರಡಲು ಅನುಮತಿಯನ್ನಿತ್ತನು. ಗಾಂಧಾರಿಯ ಪಾದಗಳಿಗೆ ವಂದಿಸಿ ಅವರು ಅವಳ ಅನುಜ್ಞೆಯನ್ನೂ ಪಡೆದುಕೊಂಡರು. ಕುಂತಿಯು ನೃಪ ಯುಧಿಷ್ಠಿರನನ್ನು ಆಲಂಗಿಸಿ ಆಘ್ರಾಣಿಸಿದಳು. ಹಾಲುಕುಡಿಯುವ ಕರುವನ್ನು ಹಿಂದಕ್ಕೆ ಸೆಳೆದಂತೆಲ್ಲಾ ಅದು ಪುನಃ ಪುನಃ ತಾಯಿಯ ಕಡೆ ನೋಡುವಂತೆ ಪಾಂಡವರೆಲ್ಲರೂ ಪುನಃ ಪುನಃ ಅವರನ್ನೇ ನೋಡುತ್ತಾ ಧೃತರಾಷ್ಟ್ರ, ಗಾಂಧಾರೀ ಮತ್ತು ಕುಂತಿಯರಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿದರು. ಹಾಗೆಯೇ ಸಾಧ್ವೀ ದ್ರೌಪದೀ ಮತ್ತು ಕೌರವ ನಾರಿಯರೆಲ್ಲರೂ ನ್ಯಾಯವತ್ತಾಗಿ ಮಾವನಿಗೆ ನಮಸ್ಕರಿಸಿದರು. ಆ ಅನಿಂದಿತೆಯರು ಅತ್ತೆಯರಿಬ್ಬರನ್ನೂ ಆಲಂಗಿಸಿ ಅಭಿನಂದಿಸಿ, ಮಾಡಬೇಕಾದ ಕರ್ತವ್ಯಗಳನ್ನು ಕೇಳಿ ತಿಳಿದುಕೊಂಡು ಅವರ ಅನುಮತಿಯನ್ನು ಪಡೆದು, ಗಂಡಂದಿರೊಡನೆ ಹಸ್ತಿನಾಪುರಕ್ಕೆ ಹೊರಟರು.

ಆಗ ಕುದುರೆಗಳನ್ನು ರಥಗಳಿಗೆ ಕಟ್ಟಿ ಎನ್ನುವ ಸೂತರ ನಿನಾದವೂ, ಒಂಟೆಗಳ ಕೂಗೂ, ಕುದುರೆಗಳ ಹೇಷಾರವವೂ ಕೇಳಿಬಂದಿತು. ಅನಂತರ ರಾಜಾ ಯುಧಿಷ್ಟಿರನು ಪತ್ನಿಯರೊಂದಿಗೆ, ಸೈನಿಕರೊಡನೆ ಮತ್ತು ಬಾಂಧವರನ್ನೊಡಗೂಡಿ ಪುನಃ ಹಸ್ತಿನಾಪುರ ನಗರಕ್ಕೆ ಆಗಮಿಸಿದನು.

Leave a Reply

Your email address will not be published. Required fields are marked *