ಯಾದವರ ವಿನಾಶ; ಕೃಷ್ಣಾವತಾರ ಸಮಾಪ್ತಿ
ಯುಧಿಷ್ಠಿರನಿಗೆ ಉತ್ಪಾತದರ್ಶನ
ಮಹಾಭಾರತ ಯುದ್ಧವು ಮುಗಿದು ಮೂವತ್ತಾರನೆಯ ವರ್ಷವು ಬರಲು ಕೌರವನಂದನ ಯುಧಿಷ್ಠಿರನು ವಿಪರೀತ ನಿಮಿತ್ತಗಳನ್ನು ಕಂಡನು. ಕಲ್ಲು ಮರಳುಗಳೊಂದಿಗೆ ಭಿರುಸಾದ ಒಣ ಗಾಳಿಯು ಎಲ್ಲ ಕಡೆಗಳಿಂದ ಬೀಸತೊಡಗಿತು. ಪಕ್ಷಿಗಳು ಅಪ್ರದಕ್ಷಿಣೆಯಾಗಿ ಸುತ್ತತೊಡಗಿದವು. ಮಹಾನದಿಗಳು ವಿರುದ್ಧ ದಿಕ್ಕಿನಲ್ಲಿ ಹರಿಯತೊಡಗಿದವು. ದಿಕ್ಕುಗಳಲ್ಲಿ ಸದಾ ಮುಸುಕು ಕವಿದಿತ್ತು. ಬೆಂಕಿಯ ಉಂಡೆಗಳನ್ನು ಸುರಿಸುತ್ತಾ ಉಲ್ಕೆಗಳು ಗಗನದಿಂದ ಭೂಮಿಯ ಮೇಲೆ ಬಿದ್ದವು. ಸೂರ್ಯಮಂಡಲವು ಯಾವಾಗಲೂ ಧೂಳಿನಿಂದ ಮುಸುಕಿದಂತೆ ತೋರುತ್ತಿತ್ತು. ನಿತ್ಯವೂ ಉದಯಕಾಲದಲ್ಲಿ ಸೂರ್ಯನು ಮಂದರಶ್ಮಿಯಾಗಿಯೂ, ತಲೆಗಳಿಲ್ಲದ ಶರೀರಗಳಿಂದ ಮುಚ್ಚಲ್ಪಟ್ಟಂತೆಯೂ ಕಾಣುತ್ತಿದ್ದನು. ಚಂದ್ರ-ಸೂರ್ಯರ ಸುತ್ತಲೂ ದಾರುಣವಾದ ಮೂರು ಬಣ್ಣದ ಮಂಡಲಗಳು ತೋರುತ್ತಿದ್ದವು – ಹೊರ ಆವರಣವು ಕಪ್ಪುಬಣ್ಣದ ಒರಟು ಮಂಡಲ, ಮತ್ತು ಒಳಗಿನ ಮಂಡಲಗಳು ಭಸ್ಮ ಮತ್ತು ಕೆಂಪುಬಣ್ಣದ್ದಾಗಿದ್ದವು. ಇವುಗಳು ಮತ್ತು ಇನ್ನೂ ಅನೇಕ ಭಯಸೂಚಕ, ಹೃದಯದಲ್ಲಿ ಉದ್ವೇಗವನ್ನುಂಟುಮಾಡುವ ಉತ್ಪಾತಗಳು ದಿನ ದಿನವೂ ಕಾಣುತ್ತಿದ್ದವು.
ಅದೇ ಸಮಯದಲ್ಲಿ ಕುರುರಾಜ ಯುಧಿಷ್ಠಿರನು ವೃಷ್ಣಿಚಕ್ರವು ಮುಸಲಗಳಿಂದ ಕದನವಾಡಿದುದನ್ನು ಕೇಳಿದನು. ವಾಸುದೇವ ಮತ್ತು ರಾಮರೂ ಮುಕ್ತರಾದುದನ್ನು ಕೇಳಿ ಪಾಂಡವನು ತನ್ನ ಸಹೋದರರನ್ನು ಕರೆಯಿಸಿ “ಈಗ ನಾವು ಏನು ಮಾಡಬೇಕು?” ಎಂದು ಕೇಳಿದನು. ಬ್ರಹ್ಮದಂಡದ ಬಲದಿಂದ ಉತ್ಕರ್ಷಿತರಾಗಿ ವೃಷ್ಣಿಗಳು ಪರಸ್ಪರರನ್ನು ಆಕ್ರಮಣಿಸಿ ವಿನಷ್ಟರಾದರು ಎಂದು ಕೇಳಿ ಪಾಂಡವರು ವ್ಯಥಿತರಾದರು. ಶಾಂಙೃಧನ್ವಿ ವಾಸುದೇವನು ನಿಧನನಾಗಿ ವಿನಾಶಹೊಂದಿದನು ಎಂಬ ಸಮಾಚಾರವನ್ನು, ಸಮುದ್ರವೇ ಒಣಗಿಹೋಯಿತೆನ್ನುವುದನ್ನು ಹೇಗೋ ಹಾಗೆ ಆ ವೀರರು ನಂಬಲೇ ಇಲ್ಲ. ಆ ಮೌಸಲ ಯುದ್ಧದ ಕುರಿತು ಕೇಳಿ ವಿಷಣ್ಣರಾಗಿ, ಸಂಕಲ್ಪಗಳನ್ನೇ ಕಳೆದುಕೊಂಡು ಪಾಂಡವರು ಅಲ್ಲಿ ಕುಳಿತುಕೊಂಡರು.
ಮುನಿಶಾಪದಿಂದ ಮುಸಲ ಪ್ರಸವ
ಯುದ್ಧವು ಕಳೆದ ಮೂವತ್ತಾರನೆಯ ವರ್ಷದಲ್ಲಿ ವೃಷ್ಣಿಗಳಿಗೆ ಮಹಾ ಕಂಟಕವುಂಟಾಯಿತು. ದ್ವಾರಕೆಗೆ ಬಂದಿದ್ದ ವಿಶ್ವಾಮಿತ್ರ, ಕಣ್ವ, ಮತ್ತು ತಪೋಧನ ನಾರದರನ್ನು ಸಾರಣ ಪ್ರಮುಖ ವೀರರು ಕಂಡರು. ದೈವದಂಡದಿಂದ ಪೀಡಿತರಾದ ಅವರು ಸಾಂಬನಿಗೆ ಸ್ತ್ರೀಯ ವೇಷಧರಿಸಿ ಆಗಮಿಸಿರುವವರ ಎದಿರು ಕರೆದುಕೊಂಡು ಹೋಗಿ ಹೇಳಿದರು:
“ಇವಳು ಪುತ್ರನನ್ನು ಬಯಸುವ ಅಮಿತತೇಜಸ್ವಿ ಬಭ್ರುವಿನ ಪತ್ನಿ. ಋಷಿಗಳೇ! ಇವಳು ಏನನ್ನು ಹುಟ್ಟಿಸುತ್ತಾಳೆ ಎನ್ನುವುದು ನಿಮಗೆ ತಿಳಿದಿದ್ದರೆ ಸತ್ಯವನ್ನು ಹೇಳಿ!”
ಅವರು ಹೀಗೆ ಹೇಳಲು ಆ ವಂಚನೆಯಿಂದ ಋಷಿಗಳು ಕುಪಿತರಾದರು. ಅವರು ಈ ಉತ್ತರವಿತ್ತರು:
“ವೃಷ್ಣಿ-ಅಂಧಕರ ವಿನಾಶಕ್ಕಾಗಿ ವಾಸುದೇವನ ಮಗ ಈ ಸಾಂಬನು ಲೋಹದ ಘೋರ ಮುಸಲಕ್ಕೆ ಜನ್ಮನೀಡುತ್ತಾನೆ! ಬಲರಾಮ-ಕೃಷ್ಣರನ್ನು ಬಿಟ್ಟು ನೀವು ಇದನ್ನೇ ಬಳಸಿ ಕೆಟ್ಟ ನಡತೆಯ, ದುಷ್ಟ, ಕೋಪಿಷ್ಟ ವೃಷ್ಣಿಕುಲವೆಲ್ಲವನ್ನೂ ಸಂಪೂರ್ಣವಾಗಿ ನಾಶಗೊಳಿಸುತ್ತೀರಿ! ಶ್ರೀಮಾನ್ ಹಲಾಯುಧನು ದೇಹವನ್ನು ತ್ಯಜಿಸಿ ಸಮುದ್ರವನ್ನು ಸೇರುವನು. ಜರಾ ಎನ್ನುವವನು ನೆಲದ ಮೇಲೆ ಮಲಗಿದ್ದ ಮಹಾತ್ಮ ಕೃಷ್ಣನನ್ನು ಹೊಡೆದುರುಳಿಸುತ್ತಾನೆ!”
ಆ ದುರಾತ್ಮರಿಂದ ವಂಚಿತರಾದ ಆ ಮುನಿಗಳು ಹೀಗೆ ಹೇಳಿ ಕ್ರೋಧದಿಂದ ಕೆಂಪಾಗಿದ್ದ ಕಣ್ಣುಗಳಿಂದ ಪರಸ್ಪರರನ್ನು ನೋಡಿದರು. ಹಾಗೆ ಹೇಳಿ ಮುನಿಗಳು ಕೇಶವನಿದ್ದಲ್ಲಿಗೆ ಹೋದರು. ಅವರಿಂದ ಕೇಳಿದುದನ್ನು ಮಧುಸೂದನನು ವೃಷ್ಣಿಗಳಿಗೆ ಹೇಳಿದನು. ಅಂತ್ಯವು ಬಂದಿದೆಯೆಂದು ತಿಳಿದಿದ್ದ ಆ ಮತಿವಂತನು “ಇದು ಹಾಗೆಯೇ ಆಗುತ್ತದೆ!” ಎಂದನು. ಹೀಗೆ ಹೇಳಿ ಜಗತ್ಪ್ರಭು ಹೃಷೀಕೇಶನು ನಡೆಯುವಂಥಹುದನ್ನು ಬದಲಾಯಿಸಲು ಬಯಸದೇ ಪುನಃ ತನ್ನ ಸದನವನ್ನು ಪ್ರವೇಶಿಸಿದನು.
ಮಾರನೆಯ ದಿನ ಸಾಂಬನು ವೃಷ್ಣಿ-ಅಂಧಕರ ವಿನಾಶಕ್ಕೆ ಕಾರಣವಾಗುವ ರಾಕ್ಷಸ ಕಿಂಕರನಂತೆ ದೊಡ್ಡದಾಗಿದ್ದ ಮುಸಲವನ್ನು ಹೆತ್ತನು. ಶಾಪದಿಂದಾಗಿ ಆ ಘೋರ ಮುಸಲವು ಹುಟ್ಟಿದುದನ್ನು ತಿಳಿದ ರಾಜ ಆಹುಕನು ದುಃಖಿತನಾದನು. ಅದನ್ನು ಸೂಕ್ಷ್ಮ ಚೂರ್ಣವನ್ನಾಗಿ ತಳೆಯಿಸಿ ಸಮುದ್ರದಲ್ಲಿ ಹಾಕಿಸಿದನು. ಅನಂತರ ಆಹುಕನ ವಚನದಂತೆ ಈ ಕಠೋರ ರಾಜಶಾಸನವನ್ನು ನಗರದಲ್ಲೆಲ್ಲಾ ಘೋಷಿಸಲಾಯಿತು:
“ಇಂದಿನಿಂದ ಸರ್ವ ನಗರವಾಸಿಗಳಿಗೂ ವೃಷ್ಣಿ-ಅಂಧಕರ ಎಲ್ಲ ಮನೆಗಳಲ್ಲಿಯೂ ಸುರಾಪಾನವನ್ನು ನಿಷೇಧಿಸಲಾಗಿದೆ! ಯಾರಾದರೂ ಇಂತಹ ಮಾದಕ ಪಾನೀಯವನ್ನು ತಯಾರಿಸಿದ್ದುದು ತಿಳಿದುಬಂದರೆ ಅವನನ್ನು ಅವನ ಬಾಂಧವರೊಂದಿಗೆ ಶೂಲಕ್ಕೇರಿಸಲಾಗುವುದು!”
ಅನಂತರ ಆ ಮಹಾತ್ಮ ರಾಜನ ಶಾಸನವನ್ನು ತಿಳಿದ ನರರೆಲ್ಲರೂ ರಾಜನ ಭಯದಿಂದ ಅದೇ ನಿಯಮದಂತೆ ನಡೆದುಕೊಂಡರು.”
ಯಾದವರಲ್ಲಿ ಉತ್ಪಾತದರ್ಶನ
ಹೀಗೆ ವೃಷ್ಣಿ-ಅಂಧಕರು ಒಂದಾಗಿ ಪ್ರಯತ್ನಿಸುತ್ತಿದ್ದರೂ ಕಾಲಪುರುಷನು ನಿತ್ಯವೂ ಅವರೆಲ್ಲರ ಮನೆಗಳಿಗೆ ತಿರುಗುತ್ತಿದ್ದನು. ಕಪ್ಪಾಗಿದ್ದ, ವಿಕಟ, ಬೋಳುಮಂಡೆಯ, ಕಪ್ಪು-ಕಿತ್ತಳೆ ಬಣ್ಣಗಳ ಪುರುಷನು ವೃಷ್ಣಿಗಳ ಮನೆಗಳನ್ನು ಹೊಕ್ಕಿ ನೋಡಿ, ಪುನಃ ಎಲ್ಲಿಯೋ ಅದೃಶ್ಯನಾಗುತ್ತಿದ್ದನು. ಪ್ರತಿದಿನವೂ ವೃಷ್ಣಿ-ಅಂಧಕರ ವಿನಾಶವನ್ನು ಸೂಚಿಸುವ ರೋಮಾಂಚಕ ದಾರುಣ ಭಿರುಗಾಳಿಯು ಬೀಸುತ್ತಿತ್ತು. ಬೀದಿಗಳು ದೊಡ್ಡ ದೊಡ್ಡ ಇಲಿಗಳಿಂದ ತುಂಬಿಹೋಗಿದ್ದವು. ವೃಷ್ಣಿಗಳ ಮನೆಗಳಲ್ಲಿ ಮಡಿಕೆಗಳು ತಾವಾಗಿಯೇ ಒಡೆಯತೊಡಗಿದವು. ಸಾರಂಗ ಪಕ್ಷಿಗಳ ಚೀಚೀ ಕೂಗುಗಳು ಹಗಲಾಗಲೀ ರಾತ್ರಿಯಾಗಲೀ ಕೊನೆಯಿಲ್ಲದೇ ಕೇಳಿಬರುತ್ತಿದ್ದವು. ಸಾರಸ ಪಕ್ಷಿಗಳು ಗೂಬೆಗಳಂತೆ ಕೂಗುತ್ತಿದ್ದವು ಮತ್ತು ಆಡುಗಳು ನರಿಗಳಂತೆ ಕೂಗತೊಡಗಿದವು. ಕಾಲಚೋದಿತ ಕೆಂಪು ಕಾಲುಗಳಿದ್ದ ಬಿಳಿಯ ಪಕ್ಷಿಗಳು ಕಂಡುಬಂದವು ಮತ್ತು ವೃಷ್ಣಿ-ಅಂಧಕರ ಮನೆಗಳ ಮೇಲೆ ಪಾರಿವಾಳಗಳು ಹಾರಾಡುತ್ತಿದ್ದವು. ಗೋವುಗಳು ಕತ್ತೆಗಳಿಗೂ, ಕುದುರೆಗಳು ಆನೆಗಳಿಗೂ, ನಾಯಿಗಳು ಬೆಕ್ಕುಗಳಿಗೂ, ಮತ್ತು ಮುಂಗುಸಿಗಳು ಇಲಿಗಳಿಗೂ ಜನ್ಮವಿತ್ತವು. ವೃಷ್ಣಿಗಳು ಪಾಪಕರ್ಮಗಳನ್ನು ಮಾಡಲು ನಾಚುತ್ತಿರಲಿಲ್ಲ. ಬ್ರಾಹ್ಮಣರನ್ನೂ, ಪಿತೃಗಳನ್ನೂ, ದೇವತೆಗಳನ್ನೂ ದ್ವೇಷಿಸತೊಡಗಿದರು. ಬಲರಾಮ-ಕೃಷ್ಣರನ್ನು ಬಿಟ್ಟು ಉಳಿದ ಹಿರಿಯರನ್ನು ಅವಹೇಳನ ಮಾಡತೊಡಗಿದರು. ಪತ್ನಿಯರು ತಮ್ಮ ಪತಿಗಳಿಗೂ, ಪತಿಗಳು ತಮ್ಮ ಪತ್ನಿಯರಿಗೂ ಮೋಸಮಾಡತೊಡಗಿದರು. ಅಗ್ನಿಯು ಎಡಗಡೆಯೇ ವಾಲಿಕೊಂಡು ಪ್ರಜ್ವಲಿಸುತ್ತಿದ್ದನು ಮತ್ತು ನೀಲಿ-ಕೆಂಪು-ಬಿಳಿಯ ಕಿಡಿಗಳನ್ನು ಮತ್ತೆ ಮತ್ತೆ ಕಾರುತ್ತಿದ್ದನು. ನಿತ್ಯವೂ ಉದಯ-ಅಸ್ತಮಾನಗಳ ಸಮಯದಲ್ಲಿ ನಗರದ ಮೇಲೆ ಸೂರ್ಯನ ಸುತ್ತಲೂ ಶಿರಗಳಿಲ್ಲದ ಕಬಂಧಗಳ ಆಕಾರಗಳು ಕಾಣುತ್ತಿದ್ದವು. ಅತೀವ ಸುಸಂಸ್ಕೃತವಾಗಿ ತಯಾರಿಸಿದ ಆಹಾರಗಳನ್ನು ತಿನ್ನಬೇಕು ಎನ್ನುವಾಗ ಅದರಲ್ಲಿ ಕ್ರಿಮಿಗಳು ಕಂಡುಬರುತ್ತಿದ್ದವು! ಪುಣ್ಯಾಹ ವಾಚನ ಮಾಡುವಾಗ ಮತ್ತು ಮಹಾತ್ಮರು ಜಪಿಸುವಾಗ ಯಾರೋ ಓಡಿಹೋಗುತ್ತಿರುವುದು ಕೇಳಿಬರುತ್ತಿತ್ತು, ಆದರೆ ಯಾರೂ ಓಡಿಹೋಗುತ್ತಿರುವವರು ಕಾಣುತ್ತಿರಲಿಲ್ಲ. ನಕ್ಷತ್ರಗಳು ಮತ್ತು ಗ್ರಹಗಳು ಪುನಃ ಪುನಃ ಪರಸ್ಪರರೊಡನೆ ಸಂಘರ್ಷಿಸುವುದನ್ನು ಎಲ್ಲರೂ ನೋಡುತ್ತಿದ್ದರು. ಆದರೆ ತಮ್ಮದೇ ಜನ್ಮಕುಂಡಲಿಗಳು ಯಾರಿಗೂ ಕಾಣುತ್ತಿರಲಿಲ್ಲ. ಪಾಂಚಜನ್ಯವನ್ನು ಊದಿದಾಗ ವೃಷ್ಣಿ ಮತ್ತು ಅಂಧಕರ ಮನೆಗಳಲ್ಲಿ ಅದರ ಧ್ವನಿಯು ಕತ್ತೆಗಳ ಕಿರುಚಾಟದಂತೆ ಪ್ರತಿಧ್ವನಿಸಿ ಕೇಳುತ್ತಿತ್ತು.
ಇದನ್ನು ನೋಡಿ ಹೃಷೀಕೇಶನು ಕಾಲಪಲ್ಲಟವು ಬಂದೊದಗಿದೆಯೆಂದು ತಿಳಿದನು. ತ್ರಯೋದಶಿಯಂದೇ ಅಮವಾಸ್ಯೆಯು ಬಂದಿರುವುದನ್ನು ನೋಡಿ ಅವನು ಹೀಗೆ ಅಂದುಕೊಂಡನು:
“ಪುನಃ ರಾಹುವು ಚತುರ್ದಶಿಯನ್ನು ಅಮವಾಸ್ಯೆಯನ್ನಾಗಿ ಮಾಡಿದ್ದಾನೆ. ಅಂದು ಈ ರೀತಿಯಾದಾಗ ಭಾರತ ಯುದ್ಧವು ನಡೆಯಿತು. ಇಂದು ನಮ್ಮೆಲ್ಲರ ವಿನಾಶವಾಗಲು ಈ ರೀತಿಯಾಗುತ್ತಿದೆ.”
ಇದನ್ನು ವಿಮರ್ಶಿಸಿ ಮತ್ತು ಕಾಲದ ಕುರಿತು ಚಿಂತಿಸಿ ಜನಾರ್ದನ ಕೇಶಿಸೂದನನು ಯುದ್ಧಮುಗಿದು ಮೂವತ್ತಾರನೆಯ ವರ್ಷವು ಕಾಲಿಡುತ್ತಿದೆ ಮತ್ತು ಬಾಂಧವರನ್ನು ಕಳೆದುಕೊಂಡು ಪುತ್ರ ಶೋಕದಿಂದ ಸಂತಪ್ತಳಾಗಿದ್ದ ಗಾಂಧಾರಿಯು ಯಾವ ಶಾಪವನ್ನು ಶಪಿಸಿದ್ದಳೋ ಅದು ಈಗ ನಿಜವಾಗುತ್ತದೆ ಎಂದು ಅಭಿಪ್ರಾಯಪಟ್ಟನು.
“ಹಿಂದೆ ಸೇನೆಯಗಳ ವ್ಯೂಹವನ್ನು ರಚಿಸುತ್ತಿದ್ದಾಗ ಯುಧಿಷ್ಠಿರನು ಕಂಡ ದಾರುಣ ಉತ್ಪಾತಗಳು ಈಗ ಪುನಃ ತೋರಿಸಿಕೊಳ್ಳುತ್ತಿವೆ!”
ಹೀಗೆ ಹೇಳಿ ಅರಿಂದಮ ವಾಸುದೇವನು ಅದನ್ನು ಸತ್ಯವಾಗಿಸಲು ಬಯಸಿ ತೀರ್ಥಯಾತ್ರೆಗೆ ಆಜ್ಞಾಪಿಸಿದನು.
ಕೇಶವನ ಶಾಸನದಂತೆ ಪುರುಷರು “ಪುರುಷರ್ಷಭರೇ! ಸಮುದ್ರತೀರಕ್ಕೆ ತೀರ್ಥಯಾತ್ರೆಗೆ ನಡೆಯಿರಿ!” ಎಂದು ಘೋಷಿಸಿದರು.
ವೃಷ್ಣಿ-ಅಂಧಕರ ವಿನಾಶ
ದ್ವಾರಕೆಯಲ್ಲಿ ಓಡಾಡಿಕೊಂಡಿದ್ದ ಕಪ್ಪು ಬಣ್ಣದ ಬಿಳಿಯ ಹಲ್ಲುಗಳ ಸ್ತ್ರೀಯೊಬ್ಬಳು ರಾತ್ರಿವೇಳೆಯಲ್ಲಿ ನಗುತ್ತಾ ಸ್ತ್ರೀಯರ ಸ್ವಪ್ನದಲ್ಲಿ ಅವರ ವಸ್ತುಗಳನ್ನು ಕದಿಯುತ್ತಿದ್ದಳು. ಭಯಾನಕ ರಾಕ್ಷಸರು ಅಲಂಕಾರಗಳನ್ನೂ, ಚತ್ರ-ಧ್ವಜ-ಕವಚಗಳನ್ನೂ ಅಪಹರಿಸಿಕೊಂಡು ಹೋಗುವುದು ಕಾಣುತ್ತಿತ್ತು. ಕೃಷ್ಣನಿಗೆ ಅಗ್ನಿಯು ಕೊಟ್ಟಿದ್ದ ಲೋಹದ ವಜ್ರನಾಭ ಚಕ್ರವು ವೃಷ್ಣಿಗಳು ನೋಡುತ್ತಿದ್ದಂತೆಯೇ ಆಕಾಶಕ್ಕೆ ಹಾರಿಹೋಯಿತು. ದಾರುಕನು ನೋಡುತ್ತಿದ್ದಂತೆಯೇ ಸಿದ್ಧಗೊಳಿಸಿದ್ದ ಆದಿತ್ಯ ವರ್ಣದ ದಿವ್ಯ ರಥವನ್ನು ಕುದುರೆಗಳು ಅಪಹರಿಸಿಕೊಂಡು ಹೋದವು. ಮನೋವೇಗದಲ್ಲಿ ಹೋಗಬಲ್ಲ ಆ ನಾಲ್ಕು ಮುಖ್ಯ ಕುದುರೆಗಳು ಸಾಗರದ ಮೇಲೆಯೇ ಓಡಿ ಹೊರಟು ಹೋದವು. ಬಲರಾಮ ಮತ್ತು ಜನಾರ್ದನರು ಪೂಜಿಸುತ್ತಿದ್ದ ಆ ಎರಡು ಮಹಾಧ್ವಜಗಳನ್ನು – ತಾಲ ಮತ್ತು ಗರುಡ ಧ್ವಜಗಳನ್ನು – “ನೀವೂ ತೀರ್ಥಯಾತ್ರೆಗೆ ಹೋಗಬೇಕು” ಎಂದು ಹಗಲೂ ರಾತ್ರಿಯೂ ಜೋರಾಗಿ ಕೂಗಿಕೊಳ್ಳುತ್ತಿದ್ದ ಅಪ್ಸರೆಯರು ಅಪಹರಿಸಿಕೊಂಡು ಹೋದರು.
ಆಗ ವೃಷ್ಣಿ-ಅಂಧಕ ಮಹಾರಥ ನರರ್ಷಭರು ಮತ್ತು ಅವರ ಸ್ತ್ರೀಯರು ತೀರ್ಥಯಾತ್ರೆಗೆ ಹೋಗಲು ನಿಶ್ಚಯಿಸಿದರು. ಅನಂತರ ಅಂಧಕ-ವೃಷ್ಣಿಗಳು ಅನೇಕ ವಿಧದ ಭೋಜನಗಳನ್ನೂ, ಭಕ್ಷ್ಯಗಳನ್ನೂ, ಪಾನೀಯಗಳನ್ನೂ ಮತ್ತು ಅನೇಕ ಮಾಂಸ ಪದಾರ್ಥಗಳನ್ನೂ ತಯಾರಿಸಿದರು. ಅತಿಯಾಗಿ ಕುಡಿಯಬಲ್ಲ ಆ ತಿಗ್ಮತೇಜಸ್ವಿಗಳು ಶ್ರೀಮಂತಿಕೆಯಿಂದ ರಥ-ಕುದುರೆ-ಆನೆಗಳ ಮೇಲೆ ಕುಳಿತು ನಗರದಿಂದ ಹೊರ ಹೊರಟರು. ಪ್ರಭಾಸ ಕ್ಷೇತ್ರಕ್ಕೆ ಬಂದು ಅಲ್ಲಿ ತಮಗಾಗಿಯೇ ನಿರ್ಮಿಸಿಕೊಂಡಿದ್ದ ಮನೆಗಳಲ್ಲಿ ಯಾದವರು ತಮ್ಮ ಭಕ್ಷ್ಯ-ಪಾನೀಯಗಳು ಮತ್ತು ಪತ್ನಿಯರೊಂದಿಗೆ ಬೀಡುಬಿಟ್ಟರು. ಅವರು ಸಮುದ್ರತೀರದಲ್ಲಿ ಬೀಡು ಬಿಟ್ಟಿದ್ದಾರೆಂದು ಕೇಳಿದ ಯೋಗವಿದು ಅರ್ಥವಿಶಾರದ ಉದ್ಧವನು ಅವರನ್ನು ಬೀಳ್ಕೊಡಲು ಅಲ್ಲಿಗೆ ಹೋದನು. ಅಲ್ಲಿಂದ ಕೈಮುಗಿದುಕೊಂಡು ಹೊರಟ ಆ ಮಹಾತ್ಮನನ್ನು ಅಭಿವಂದಿಸಿದ ಹರಿಯು ವೃಷ್ಣಿಗಳ ವಿನಾಶವಾಗುತ್ತದೆಯೆಂದು ತಿಳಿದಿದ್ದರೂ ಅದನ್ನು ತಡೆಯಲಿಲ್ಲ. ಕಾಲವು ಮುಗಿದುಹೋದ ವೃಷ್ಣಿ-ಅಂಧಕ ಮಹಾರಥರು ಭೂಮ್ಯಾಕಾಶಗಳನ್ನು ತನ್ನ ತೇಜಸ್ಸಿನಿಂದ ತುಂಬಿಕೊಳ್ಳುತ್ತಾ ಹೋಗುತ್ತಿದ್ದ ಉದ್ಧವನನ್ನು ನೋಡಿದರು. ಆ ಮಹಾತ್ಮರು ಬ್ರಾಹ್ಮಣರಿಗಾಗಿ ಸಿದ್ಧಪಡಿಸಿದ್ದ ಆಹಾರವನ್ನು ಸುರೆಯೊಂದಿಗೆ ಕಲಸಿ ಅಲ್ಲಿದ್ದ ಮಂಗಗಳಿಗೆ ತಿನ್ನಿಸಿದರು. ಆಗ ಪ್ರಭಾಸದಲ್ಲಿ ಆ ಮಹಾತೇಜಸ್ವಿಗಳ ಅತಿದೊಡ್ಡ ಸುರಾಪಾನ ಕೂಟವು ಪ್ರಾರಂಭವಾಯಿತು. ನೂರಾರು ತೂರ್ಯಗಳು ಮೊಳಗಿದವು, ನಾಟಕ-ನರ್ತನಗಳು ನಡೆಯುತ್ತಿದ್ದವು. ಕೃಷ್ಣನ ಸನ್ನಿಧಿಯಲ್ಲಿ ಬಲರಾಮನು ಕುಡಿಯ ತೊಡಗಿದನು, ಮತ್ತು ಅವನೊಡನೆ ಕೃತವರ್ಮ, ಯುಯುಧಾನ ಸಾತ್ಯಕಿ, ಗದ, ಬಭ್ರುಗಳೂ ಕುಡಿಯ ತೊಡಗಿದರು.
ಆಗ ಆ ಪರಿಷತ್ತಿನಲ್ಲಿ ಅಮಲೇರಿದ್ದ ಯುಯುಧಾನನು ಕೃತವರ್ಮನನ್ನು ಹೀಯಾಳಿಸಿ ನಗುತ್ತಾ ಹೀಗೆ ಹೇಳಿದನು:
“ಮೃತರಂತೆ ಮಲಗಿದ್ದವರನ್ನು ಸಂಹರಿಸಿದ ಯಾರು ತಾನೇ ತನ್ನನ್ನು ಕ್ಷತ್ರಿಯನೆಂದು ಕರೆದುಕೊಳ್ಳುತ್ತಾನೆ? ಹಾರ್ದಿಕ್ಯ! ನಿನ್ನ ಆ ಕೃತ್ಯವನ್ನು ಯಾದವರು ಎಂದೂ ಕ್ಷಮಿಸುವುದಿಲ್ಲ!”
ಯುಯುಧಾನನು ಹೀಗೆ ಹೇಳಲು ರಥಿಗಳಲ್ಲಿ ಶ್ರೇಷ್ಠ ಪ್ರದ್ಯುಮ್ನನು ಅವನ ಮಾತನ್ನು ಗೌರವಿಸಿದನು ಮತ್ತು ಹಾರ್ದಿಕ್ಯನನ್ನು ಅಪಮಾನಿಸಿದನು. ಆಗ ಪರಮ ಸಂಕ್ರುದ್ಧನಾದ ಕೃತವರ್ಮನು ತನ್ನ ಎಡಗೈಯನ್ನು ಚಾಚಿ ತೋರಿಸಿ ಹೀಯಾಳಿಸುತ್ತಾ ಹೇಳಿದನು:
“ವೀರನಾದವನು ಹೇಗೆ ತಾನೇ ಯುದ್ಧದಲ್ಲಿ ಬಾಹುಗಳು ಕತ್ತರಿಸಲ್ಪಟ್ಟು ಪ್ರಾಯೋಪವೇಶಮಾಡಿದ್ದ ಭೂರಿಶ್ರವನನ್ನು ಹಿಂಸಾತ್ಮಕವಾಗಿ ಕೊಂದು ಕೆಳಗುರುಳಿಸಿದನು?”
ಅವನ ಈ ಮಾತನ್ನು ಕೇಳಿ ಪರವೀರಹ ಕೇಶವನು ತೀವ್ರ ರೋಷದಿಂದ ಕೋಪದೃಷ್ಟಿಯಲ್ಲಿ ಅವನನ್ನು ನೋಡಿದನು. ಆಗ ಸಾತ್ಯಕಿಯು ಮಧುಸೂದನನಿಗೆ ಸತ್ರಾಜಿತನ ಸ್ಯಮಂತಕ ಮಣಿಯ ಪ್ರಕರಣದಲ್ಲಿ ಕೃತವರ್ಮನು ನಡೆದುಕೊಂಡ ರೀತಿಯ ಕುರಿತು ನಡೆದುದನ್ನು ನೆನಪಿಸಿಕೊಟ್ಟನು.
ಅದನ್ನು ಕೇಳಿ ಕುಪಿತಳಾದ ಸತ್ಯಭಾಮೆಯು ರೋದಿಸುತ್ತ ಬಂದು ಕೇಶವನ ತೊಡೆಯ ಮೇಲೆ ಕುಳಿತುಕೊಂಡು ಕೃತವರ್ಮನ ಮೇಲೆ ಜನಾರ್ದನನ ಕೋಪವನ್ನು ಇನ್ನೂ ಹೆಚ್ಚಿಸಿದಳು. ಆಗ ಸಾತ್ಯಕಿಯು ಕ್ರೋಧದಿಂದ ಮೇಲೆದ್ದು ಹೀಗೆ ಹೇಳಿದನು:
“ಆ ರಾತ್ರಿ ಪಾಪಿ ದ್ರೋಣಪುತ್ರನ ಸಹಾಯದಿಂದ ಮಲಗಿದ್ದವರನ್ನು ಸಂಹರಿಸಿದ ಈ ದುರಾತ್ಮ ಕೃತವರ್ಮನನ್ನು ಆ ಐವರು ದ್ರೌಪದೇಯರ ಮತ್ತು ಧೃಷ್ಟದ್ಯುಮ್ನ-ಶಿಖಂಡಿಯರ ಪದವಿಗೆ ಕಳುಹಿಸುತ್ತೇನೆಂದು ಸತ್ಯ ಶಪಥಮಾಡುತ್ತೇನೆ! ಸತ್ಯಭಾಮಾ! ಇಂದು ಇವನ ಯಶಸ್ಸು ಮತ್ತು ಆಯಸ್ಸು ಮುಗಿದುಹೋಯಿತು!”
ಹೀಗೆ ಹೇಳಿ ಕ್ರುದ್ಧ ಸಾತ್ಯಕಿಯು ಖಡ್ಗದಿಂದ ಕೇಶವನ ಸಮೀಪದಲ್ಲಿದ್ದ ಕೃತವರ್ಮನನ್ನು ಆಕ್ರಮಣಿಸಿ ಅವನ ಶಿರವನ್ನು ಕತ್ತರಿಸಿದನು.
ಹಾಗೆಯೇ ಸುತ್ತಲಿದ್ದ ಇತರರನ್ನೂ ಸಂಹರಿಸುತ್ತಿದ್ದ ಯುಯುಧಾನನನ್ನು ತಡೆಯಲು ಹೃಷೀಕೇಶನು ಧಾವಿಸಿದನು. ಆಗ ಕಾಲಪಲ್ಲಟದಿಂದ ಪ್ರಚೋದಿತ ಭೋಜ-ಅಂಧಕರೆಲ್ಲರೂ ಒಂದಾಗಿ ಶೈನೇಯ ಸಾತ್ಯಕಿಯನ್ನು ಸುತ್ತುವರೆದರು. ಕ್ರುದ್ಧರಾದ ಅವರು ಸಾತ್ಯಕಿಯ ಮೇಲೆ ಬೀಳುತ್ತಿರುವುದನ್ನು ನೋಡಿಯೂ ಮಹಾತೇಜಸ್ವಿ ಜನಾರ್ದನನು ಕಾಲದ ಬದಲಾವಣೆಯನ್ನು ತಿಳಿದು ಕ್ರೋಧಿತನಾಗಲಿಲ್ಲ. ಪಾನಮದದಿಂದ ಆವಿಷ್ಟರಾಗಿದ್ದ ಅವರು ಕೋಪದಿಂದ ಪ್ರಚೋದಿತರಾಗಿ ಯುಯುಧಾನನನ್ನು ಎಂಜಲು ಆಹಾರಗಳಿದ್ದ ಪಾತ್ರೆಗಳಿಂದಲೇ ಹೊಡೆಯತೊಡಗಿದರು. ಶೈನೇಯನನ್ನು ಹಾಗೆ ಹೊಡೆಯುತ್ತಿರಲು ಕ್ರುದ್ಧನಾದ ರುಕ್ಮಿಣೀನಂದನ ಪ್ರದ್ಯುಮ್ನನು ಓಡಿ ಬಂದು ಶೈನಿಯ ಮಗ ಸಾತ್ಯಕಿಯನ್ನು ಬಿಡಿಸಲು ಪ್ರಯತ್ನಿಸಿದನು. ಸಾತ್ಯಕಿ-ಪ್ರದ್ಯುಮ್ನರಿಬ್ಬರೂ ಒಂದಾಗಿ ಭೋಜ-ಅಂಧಕರೊಂದಿಗೆ ಸೆಣೆಸಾಡಿದರು. ಆದರೆ ಅನೇಕರಿದ್ದ ಭೋಜ-ಅಂಧಕರು ಅವರಿಬ್ಬರನ್ನೂ, ಕೃಷ್ಣನು ನೋಡುತ್ತಿದ್ದಂತೆಯೇ, ಸಂಹರಿಸಿದರು. ಶೈನೇಯನೂ ತನ್ನ ಮಗನೂ ಹತರಾದುದನ್ನು ನೋಡಿದ ಯದುನಂದನ ಕೇಶವನು ಕೋಪದಿಂದ ಒಂದು ಮುಷ್ಟಿ ಎರಕ ಹುಲ್ಲನ್ನು ಹಿಡಿದುಕೊಂಡನು. ಅದು ಲೋಹಮಯವಾದ ವಜ್ರದಂಥಹ ಘೋರ ಮುಸಲವಾಯಿತು. ಅದರಿಂದ ಕೃಷ್ಣನು ತನ್ನ ಎದುರಿದ್ದ ಅನ್ಯರೆಲ್ಲರನ್ನೂ ಸಂಹರಿಸಿದನು. ಅನಂತರ ಅಂಧಕರು, ಭೋಜರು, ಶೈನೇಯರು, ಮತ್ತು ವೃಷ್ಣಿಗಳು ಕಾಲಚೋದಿತರಾಗಿ ಮುಸಲಗಳಿಂದ ಅನ್ಯೋನ್ಯರನ್ನು ಆಕ್ರಮಣಿಸಿ ಸಂಹರಿಸಿದರು.
ಅವರಲ್ಲಿ ರೋಷದಿಂದ ಯಾರು ಆ ಎರಕದ ಹುಲ್ಲನ್ನು ಹಿಡಿದರೋ ಅವರ ಕೈಯಲ್ಲೆಲ್ಲಾ ಆ ಹುಲ್ಲು ವಜ್ರಾಯುಧದಂತೆ ಕಾಣುತ್ತಿತ್ತು. ಹುಲ್ಲೂ ಮುಸಲವಾದುದು ಕಂಡುಬಂದಿತೆಂದರೆ ಅದೆಲ್ಲವೂ ಆ ಋಷಿಗಳ ಶಾಪದಿಂದ ಆಯಿತೆಂದು ತಿಳಿದುಕೋ. ಆ ಹುಲ್ಲನ್ನು ಎಸೆದಾಗಲೆಲ್ಲ ಅದು ವಜ್ರದಂಥಹ ಗಟ್ಟಿಯಾದ ಮುಸಲ ರೂಪವನ್ನು ತಾಳುತ್ತಿತ್ತು. ಮಗನು ತಂದೆಯನ್ನೂ, ತಂದೆಯು ಮಗನನ್ನೂ ಮತ್ತರಾಗಿ ಪರಸ್ಪರರನ್ನು ಹೊಡೆದು ಉರುಳಿಸಿದರು. ಬೆಂಕಿಯಲ್ಲಿ ಬೀಳುವ ಪತಂಗಗಳಂತೆ ಕುಕುರ-ಅಂಧಕರು ಕೆಳಗುರುಳಿದರು. ಅಲ್ಲಿ ವಧಿಸಲ್ಪಡುತ್ತಿದ್ದ ಯಾರೂ ಪಲಾಯನದ ಕುರಿತು ಯೋಚಿಸಲಿಲ್ಲ. ಕಾಲದ ತಿರುವನ್ನು ನೋಡಿ ತಿಳಿದುಕೊಂಡ ಮಹಾಬಾಹು ಮಧುಸೂದನನು ಮುಸಲವನ್ನು ತಿರುಗಿಸುತ್ತಾ ನಿಂತನು. ಸಾಂಬ, ಚಾರುದೇಷ್ಣ, ಪ್ರದ್ಯುಮ್ನ ಮತ್ತು ಅನಿರುದ್ಧರು ಹತರಾದುದನ್ನು ನೋಡಿ ಮಾಧವನು ಕುಪಿತನಾದನು. ಗದನೂ ಮಲಗಿದ್ದುದನ್ನು ನೋಡಿ ತುಂಬಾ ಕೋಪಸಮನ್ವಿತನಾದ ಶಾಂಙೃಚಕ್ರಗದಾಧರನು ಎಲ್ಲರನ್ನೂ ನಿಃಶೇಷರನ್ನಾಗಿ ಮಾಡಿದನು. ಅವರನ್ನು ಸಂಹರಿಸುತ್ತಿದ್ದ ಆ ಮಹಾತೇಜಸ್ವಿ ದಾಶಾರ್ಹನನ್ನು ಪರಪುರಂಜಯ ಬಭ್ರು ಮತ್ತು ದಾರುಕರು ನೋಡಿ ಹೀಗೆಂದರು:
“ಭಗವನ್! ನೀನು ಹೆಚ್ಚಾಗಿ ಎಲ್ಲರನ್ನೂ ಸಂಹರಿಸಿದ್ದೀಯೆ! ಈಗ ಬಲರಾಮನು ಹಿಡಿದ ದಾರಿಯಲ್ಲಿಯೇ ನಡೆದು ಅವನಿದ್ದಲ್ಲಿಗೆ ಹೋಗೋಣ!”
ರಾಮ-ಕೃಷ್ಣಾವತಾರ ಸಮಾಪ್ತಿ
ಅನಂತರ ದಾರುಕ, ಬಭ್ರು ಮತ್ತು ಕೇಶವರು ಬಲರಾಮನ ಹೆಜ್ಜೆಯ ಗುರುತನ್ನೇ ಹಿಡಿದುಕೊಂಡು ಹೊರಟರು. ಅವರು ಅಲ್ಲಿ ಒಂದು ವೃಕ್ಷದಡಿಯಲ್ಲಿ ಚಿಂತಾಮಗ್ನನಾಗಿ ನಿಂತಿರುವ ಅನಂತವೀರ್ಯ ರಾಮನನ್ನು ಕಂಡರು. ಅವನ ಬಳಿಹೋದನಂತರ ಮಹಾನುಭಾವ ಕೃಷ್ಣನು ದಾರುಕನಿಗೆ ಆಜ್ಞಾಪಿಸಿದನು:
“ಶೀಘ್ರವೇ ಕುರುಗಳಲ್ಲಿಗೆ ಹೋಗಿ ಯದುಗಳ ವಧೆಯನ್ನೂ ಈ ಮಹಾ ಅಂತ್ಯವನ್ನೂ ಪಾರ್ಥನಿಗೆ ತಿಳಿಸು. ಬ್ರಾಹ್ಮಣರ ಶಾಪದಿಂದ ಯಾದವರು ಮೃತರಾದುದನ್ನು ಕೇಳಿ ಕೂಡಲೇ ಅರ್ಜುನನು ಇಲ್ಲಿಗೆ ಬರಲಿ!”
ಇದನ್ನು ಕೇಳಿದ ದಾರುಕನು ಚೇತನವನ್ನೇ ಕಳೆದುಕೊಂಡಂಥವನಾಗಿ ರಥದಲ್ಲಿ ಕುರುಗಳ ಕಡೆ ನಡೆದನು. ದಾರುಕನು ಹೊರಟುಹೋಗಲು ಕೇಶವನು ಹತ್ತಿರದಲ್ಲಿದ್ದ ಬಭ್ರುವನ್ನು ನೋಡಿ ಹೇಳಿದನು:
“ನೀನು ಶೀಘ್ರವಾಗಿ ಹೋಗಿ ಸ್ತ್ರೀಯರನ್ನು ರಕ್ಷಿಸು. ವಿತ್ತಲೋಭದಿಂದ ದಸ್ಯುಗಳು ಅವರನ್ನು ಹಿಂಸಿಸದಿರಲಿ!”
ಕೇಶವನ ನಿರ್ದೇಶನದಂತೆ ಆ ಬಾಂಧವರ ವಧೆಯಿಂದ ಆರ್ದಿತನಾಗಿದ್ದ ಮತ್ತು ಕುಡಿದು ಅಮಲೇರಿದ್ದ ಬಭ್ರುವು ಹೊರಟನು. ಕೇಶವನ ಸನ್ನಿಧಿಯಿಂದ ಅವನು ಹೊರಟಿದ್ದಷ್ಟೇ ಒಮ್ಮೆಲೇ ಆ ಗುಂಪಿನಿಂದ ಯಾರೋ ಎಸೆದ ಮುಸುಲವೊಂದು ಅವನಿಗೆ ಹೊಡೆದು ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿದ್ದ ಬಭೃವೂ ಮರಣಹೊಂದಿದನು. ಬಭ್ರುವು ಹತನಾದುದನ್ನು ನೋಡಿ ಕೃಷ್ಣನು ಅಗ್ರಜ ಅಣ್ಣನಿಗೆ ಹೀಗೆಂದನು:
“ರಾಮ! ಸ್ತ್ರೀಯರನ್ನು ಯಾರಾದರೂ ನಮ್ಮ ಬಾಂಧವರಿಗೆ ಒಪ್ಪಿಸಿ ಬರುವವರೆಗೂ ಇಲ್ಲಿಯೇ ನನ್ನ ಪ್ರತೀಕ್ಷೆಯಿಂದಿರು!”
ಅನಂತರ ದ್ವಾರಕಾಪುರಿಯನ್ನು ಪ್ರವೇಶಿಸಿ ಜನಾರ್ದನನು ತನ್ನ ತಂದೆಗೆ ಹೇಳಿದನು:
“ಧನಂಜಯನ ಆಗಮನವನ್ನು ಪ್ರತೀಕ್ಷಿಸುತ್ತಾ ನೀನು ನಮ್ಮ ಸ್ತ್ರೀಯರನ್ನು ರಕ್ಷಿಸಬೇಕು! ಬಲರಾಮನು ವನದಲ್ಲಿ ನನಗಾಗಿ ಕಾಯುತ್ತಿದ್ದಾನೆ. ನಾನು ಅವನನ್ನು ಸೇರುತ್ತೇನೆ. ನಾನು ಇಲ್ಲಿ ಯದುಗಳ ಈ ನಿಧನವನ್ನೂ ಹಿಂದೆ ಕುರುಪುಂಗವ ರಾಜರ ನಿಧನವನ್ನೂ ನೋಡಿದೆ. ಯಾದವರಿಲ್ಲದ ಈ ಪುರಿಯನ್ನು ನಾನು ಇಂದು ನೋಡಲು ಶಕ್ಯನಿಲ್ಲ. ರಾಮನೊಂದಿಗೆ ವನವನ್ನು ಸೇರಿ ತಪಸ್ಸನ್ನಾಚರಿಸುತ್ತೇನೆ!”
ಹೀಗೆ ಹೇಳಿ ಶಿರಸಾ ಅವನ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿ ಕೃಷ್ಣನು ತ್ವರೆಮಾಡಿ ಹೊರಟುಹೋದನು. ಆಗ ಪುರದಲ್ಲಿದ್ದ ಸ್ತ್ರೀ-ಕುಮಾರರ ಮಹಾ ಕೂಗು ಕೇಳಿಬಂದಿತು. ರೋದಿಸುತ್ತಿರುವ ಸ್ತ್ರೀಯರ ಶಬ್ಧವನ್ನು ಕೇಳಿ ಕೇಶವನು ಅವರನ್ನು ಹಿಂದಿರುಗಲು ಹೇಳಿದನು.
“ಈ ಪುರಕ್ಕೆ ಸವ್ಯಸಾಚಿಯು ಬರುತ್ತಾನೆ ಮತ್ತು ಆ ನರಾಗ್ರ್ಯನು ನಿಮ್ಮನ್ನು ದುಃಖದಿಂದ ಬಿಡುಗಡೆಗೊಳಿಸುತ್ತಾನೆ.”
ಅನಂತರ ಕೇಶವನು ಹೋಗಿ ವನದ ಪಕ್ಕದಲ್ಲಿ ಏಕಾಂಗಿಯಾಗಿ ಯೋಚನಾಮಗ್ನನಾಗಿ ನಿಂತಿದ್ದ ಬಲರಾಮನನ್ನು ನೋಡಿದನು. ಯೋಗಯುಕ್ತನಾಗಿದ್ದ ಅವನ ಮುಖದಿಂದ ಮಹಾನಾಗವೊಂದು ಹೊರಬರುತ್ತಿರುವುದನ್ನು ಅವನು ನೋಡಿದನು. ಅವನು ನೋಡುತ್ತಿದ್ದಂತೆಯೇ ಶ್ವೇತವರ್ಣದ ಆ ಮಹಾ ಸರ್ಪವು ಸಮುದ್ರದ ಕಡೆ ಹರಿದು ಹೋಯಿತು. ಆ ದೇಹವನ್ನು ಬಿಟ್ಟು ಹೊರಬಂದ ಪರ್ವತದಷ್ಟೇ ಎತ್ತರ ಹೆಡೆಯನ್ನು ಎತ್ತಿದ್ದ ಆ ಸಾವಿರ ಹೆಡೆಗಳ, ಕೆಂಪು ಬಾಯಿಯ ನಾಗವನ್ನು ದಿವ್ಯ ಪುಣ್ಯ ನದಿಗಳೊಡನೆ ಸಮುದ್ರವು ಸ್ವಾಗತಿಸಿತು. ಕಾರ್ಕೋಟಕ, ವಾಸುಕಿ, ತಕ್ಷಕ, ಪೃಥುಶ್ರವಾ, ವರುಣ, ಕುಂಜರ, ಮಿಶ್ರೀ, ಶಂಖ, ಕುಮುದ, ಪುಂಡರೀಕ, ಹಾಗೆಯೇ ಮಹಾತ್ಮ ನಾಗ ಧೃತರಾಷ್ಟ್ರ, ಹ್ರಾದ, ಕ್ರಾಥ, ಉಗ್ರತೇಜಸ್ವಿ ಶಿತಿಕಂಠ, ಮತ್ತು ಸ್ವಯಂ ರಾಜಾ ವರುಣನು ಮೇಲೆದ್ದು ಅವನನ್ನು ಅಭಿನಂದಿಸಿ ಸ್ವಾಗತಿಸಿ ಅರ್ಘ್ಯಪಾದ್ಯಗಳಿಂದ ಪೂಜಿಸಿದರು.
ಅಣ್ಣನು ಹೊರಟುಹೋಗಲು ದಿವ್ಯದೃಷ್ಟಿಯೆಲ್ಲವೂ ಹೊರಟುಹೋಯಿತೆಂದು ತಿಳಿದು ವಾಸುದೇವನು ಶೂನ್ಯ ವನದಲ್ಲಿ ಚಿಂತಿಸುತ್ತಾ ತಿರುಗಾಡುತ್ತಿದ್ದನು. ಅನಂತರ, ಆ ಅಗ್ರ್ಯತೇಜಸ್ವಿಯು ಭೂಮಿಯ ಮೇಲೆ ಮಲಗಿಕೊಂಡನು. ಎಲ್ಲವೂ ಹೀಗೆಯೇ ಆಗುತ್ತದೆ ಎಂದು ಅವನಿಗೆ ಮೊದಲೇ ತಿಳಿದಿತ್ತು. ಹಿಂದೆ ಗಾಂಧಾರಿಯು ಹೇಳಿದ ಮಾತುಗಳನ್ನೂ, ದುರ್ವಾಸನು ಎಂಜಲು ಪಾಯಸವನ್ನು ಮೈಗೆ ಹಚ್ಚಿಕೊಳ್ಳಲು ಹೇಳಿದುದನ್ನೂ ಕೃಷ್ಣನು ನೆನಪಿಸಿಕೊಂಡನು. ಅಂಧಕ-ವೃಷ್ಣಿಗಳ ವಿನಾಶ ಮತ್ತು ಕುರುಕ್ಷಯದ ಕುರಿತು ಚಿಂತಿಸುತ್ತಿದ್ದ ಆ ಮಹಾನುಭಾವನು ಸಂಕ್ರಮಣ ಕಾಲವು ಬಂದಿತೆಂದು ತಿಳಿದು ಇಂದ್ರಿಯಗಳನ್ನು ನಿಯಂತ್ರಿಸಿಕೊಂಡನು. ಇಂದ್ರಿಯಗಳು, ಮಾತು, ಮತ್ತು ಮನಸ್ಸುಗಳನ್ನು ನಿಯಂತ್ರಿಸಿಕೊಂಡು ಮಹಾಯೋಗದಲ್ಲಿ ಕೃಷ್ಣನು ಮಲಗಿಕೊಂಡನು. ಆಗ ಉಗ್ರ ಬೇಟೆಗಾರ ಜರನು ಜಿಂಕೆಯನ್ನು ಅರಸುತ್ತಾ ಅಲ್ಲಿಗೆ ಬಂದನು.
ಯೋಗಯುಕ್ತನಾಗಿ ಮಲಗಿದ್ದ ಕೇಶವನನ್ನು ಜಿಂಕೆಯೆಂದು ಶಂಕಿಸಿದ ಆ ಬೇಟೆಗಾರ ಜರನು ತಿಳಿಯದೆ ಸಾಯಕದಿಂದ ಅವನ ಪಾದದ ಹಿಮ್ಮಡಿಗೆ ಹೊಡೆದು, ತಾನು ಹೊಡೆದ ಬೇಟೆಯನ್ನು ಹಿಡಿಯಲು ತ್ವರೆಮಾಡಿ ಮುಂದೆ ಹೋದನು. ಅಲ್ಲಿ ಆ ಲುಬ್ಧಕನು ಪೀತಾಂಬರವನ್ನು ಧರಿಸಿದ್ದ ಅನೇಕ ಬಾಹುಗಳನ್ನು ಹೊಂದಿದ್ದ ಯೋಗಯುಕ್ತ ಪುರುಷನನ್ನು ಕಂಡನು. ಮಹಾ ಅಪರಾಧವನ್ನೆಸಗಿದೆನೆಂದು ತಿಳಿದು ಆರ್ತರೂಪನಾದ ಅವನು ಕೃಷ್ಣನ ಪಾದಗಳನ್ನು ಶಿರಸಾ ಸಮಸ್ಕರಿಸಿ ಹಿಡಿದುಕೊಂಡನು. ಅವನನ್ನು ಸಮಾಧಾನಪಡಿಸಿ ಮಹಾತ್ಮ ಕೃಷ್ಣನು ತನ್ನ ಕಾಂತಿಯಿಂದ ಭೂಮ್ಯಾಕಾಶಗಳನ್ನು ಬೆಳಗಿಸುತ್ತಾ ಮೇಲೇರಿದನು. ಸ್ವರ್ಗವನ್ನು ಸೇರಿದ ಅವನನ್ನು ವಾಸವ ಇಂದ್ರ, ಅಶ್ವಿನೀ ದೇವತೆಗಳು, ರುದ್ರ-ಆದಿತ್ಯರು, ವಸವರು, ವಿಶ್ವೇದೇವರು, ಮುನಿಗಳು, ಸಿದ್ಧರು, ಗಂಧರ್ವಮುಖ್ಯರು ಮತ್ತು ಜೊತೆಗೆ ಅಪ್ಸರೆಯರು ಸ್ವಾಗತಿಸಿದರು. ಅನಂತರ ಆ ಉಗ್ರತೇಜಸ್ವೀ, ಎಲ್ಲವಕ್ಕೂ ಮೂಲನೂ ಅಂತ್ಯನೂ ಆದ, ಯೋಗಾಚಾರ್ಯ ಭಗವಾನ್ ನಾರಾಯಣನು ತನ್ನ ಕಾಂತಿಯಿಂದ ಭೂಮ್ಯಾಕಾಶಗಳನ್ನು ಬೆಳಗಿಸುತ್ತಾ ತನ್ನ ಮಹಾತ್ಮ ಅಪ್ರಮೇಯ ಸ್ಥಾನವನ್ನು ಅಲಂಕರಿಸಿದನು. ಅಲ್ಲಿ ಕೃಷ್ಣನು ದೇವ-ಋಷಿಗಳು ಮತ್ತು ಚಾರಣರೊಂದಿಗೆ ಸೇರಿದನು. ಗಂಧರ್ವಾಗ್ರರೂ, ಶ್ರೇಷ್ಠ ಅಪ್ಸರೆಯರೂ, ಸಿದ್ಧರೂ, ಸಾಧ್ಯರೂ ಅವನಿಗೆ ತಲೆಬಾಗಿ ಪೂಜಿಸಿದರು. ದೇವತೆಗಳು ಆನಂದದಿಂದ ಅವನನ್ನು ಸ್ವಾಗತಿಸಿದರು. ಮುನಿಶ್ರೇಷ್ಠರು ವೇದಮಂತ್ರಗಳಿಂದ ಆ ಈಶನನ್ನು ಅರ್ಚಿಸಿದರು. ಗಂಧರ್ವರು ಅವನನ್ನು ಸ್ತುತಿಸಿ, ಪೂಜಿಸಿದರು. ಇಂದ್ರನೂ ಕೂಡ ಪ್ರೀತಿಯಿಂದ ಅವನನ್ನು ಅಭಿನಂದಿಸಿದನು.
ಅರ್ಜುನಾಗಮನ
ದಾರುಕನೂ ಕೂಡ ಕುರುಗಳಲ್ಲಿಗೆ ಹೋಗಿ ಮಹಾರಥ ಪಾರ್ಥರನ್ನು ಕಂಡು ವೃಷ್ಣಿಗಳು ಮೌಸಲಗಳಿಂದ ಅನ್ಯೋನ್ಯರನ್ನು ಸಂಹರಿಸಿದುದನ್ನು ಹೇಳಿದನು. ಭೋಜ-ಕುಕುರ-ಅಂಧಕರೊಂದಿಗೆ ವಾರ್ಷ್ಣೇಯರ ವಿನಾಶವನ್ನು ಕೇಳಿದ ಪಾಂಡವರು ಶೋಕಸಂತಪ್ತರಾಗಿ ವಿತ್ರಸ್ತ ಮನಸ್ಸುಳ್ಳವರಾದರು. ಅನಂತರ ಕೇಶವನ ಪ್ರಿಯಸಖ ಅರ್ಜುನನು ಅವರಿಂದ ಬೀಳ್ಕೊಂಡು, “ಇದು ಹೀಗಲ್ಲ!” ಎಂದು ಹೇಳುತ್ತಾ ತನ್ನ ಸೋದರಮಾವನನ್ನು ನೋಡಲು ಹೊರಟನು. ಆ ವೀರನು ದಾರುಕನೊಂದಿಗೆ ವೃಷ್ಣಿನಿಲಯಕ್ಕೆ ಹೋಗಿ ಅಲ್ಲಿ ಪತಿಯನ್ನು ಕಳೆದುಕೊಂಡ ಸ್ತ್ರೀಯಂತಿದ್ದ ದ್ವಾರಕೆಯನ್ನು ನೋಡಿದನು. ಹಿಂದೆ ಲೋಕನಾಥನೇ ಯಾರ ನಾಥನಾಗಿದ್ದನೋ ಆ ಅನಾಥರು ನಾಥ ಪಾರ್ಥನನ್ನು ಕಂಡು ಜೋರಾಗಿ ರೋದಿಸಿದರು. ಅರ್ಜುನನು ಬಂದುದನ್ನು ನೋಡಿ ವಾಸುದೇವನ ಕೈಹಿಡಿದಿದ್ದ ಹದಿನಾರು ಸಾವಿರ ಸ್ತ್ರೀಯರು ಜೋರಾಗಿ ಕೂಗಿಕೊಂಡು ರೋದಿಸಿದರು. ಅವರನ್ನು ನೋಡುತ್ತಲೇ ಕೌರವ್ಯ ಅರ್ಜುನನು ಕಣ್ಣೀರು ತುಂಬಿದವನಾಗಿ ಕೃಷ್ಣನಿಂದಲೂ ಪುತ್ರರಿಂದಲೂ ವಿಹೀನರಾದ ಅವರನ್ನು ನೋಡಲೂ ಅಶಕ್ತನಾದನು.
ವೃಷ್ಣಿ-ಅಂಧಕರೇ ನೀರಾಗಿದ್ದ, ಕುದುರೆಗಳು ಮೀನಾಗಿದ್ದ, ರಥಗಳು ತೆಪ್ಪದಂತಿದ್ದ, ವಾದ್ಯ-ರಥಘೋಷಗಳೇ ಅಲೆಗಳಂತಿದ್ದ, ಮನೆ-ಉದ್ಯಾನವನಗಳೇ ತೀರ್ಥ-ಮಡುಗಳಂತಿದ್ದ, ರತ್ನ-ಹವಳಗಳೇ ಪಾಚೆಯಂತಿದ್ದ, ವಜ್ರದ ಕೋಟೆಗಳೇ ಮಾಲೆಗಳಂತಿದ್ದ, ರಥಬೀದಿಗಳೇ ಸುಳಿಗಳಂತಿದ್ದ, ಚತ್ವಾರಗಳೇ ಸರೋವರಗಳಂತಿದ್ದ, ರಾಮ-ಕೃಷ್ಣರೇ ಮಹಾ ಮೊಸಳೆಗಳಂತಿದ್ದ ದ್ವಾರಕಾ ಎನ್ನುವ ನದಿಯು ಈಗ ಕಾಲನ ಪಾಶಕ್ಕೆ ಸಿಲುಕಿದ ಘೋರ ವೈತರಣೀ ನದಿಯಂತೆ ತೋರುತ್ತಿತ್ತು. ವೃಷ್ಣಿಪುಂಗವರಿಂದ ವಿಹೀನವಾಗಿ, ಕಾಂತಿಯನ್ನು ಕಳೆದುಕೊಂಡು, ಆನಂದವಿಲ್ಲದೇ ಇದ್ದ ದ್ವಾರಕಾ ಪುರಿಯು ಧೀಮಾನ್ ಅರ್ಜುನನಿಗೆ ಶಿಶಿರ ಋತುವಿನಲ್ಲಿರುವ ಕಮಲದ ಹೂವಿನಂತೆ ತೋರಿತು. ಅಂಥಹ ದ್ವಾರಕೆಯನ್ನೂ ಕೃಷ್ಣನ ಮಡದಿಯರನ್ನೂ ನೋಡಿದ ಪಾರ್ಥನು ಜೋರಾಗಿ ಅಳುತ್ತಾ ಕಣ್ಣೀರು ಸುರಿಸಿ ನೆಲದ ಮೇಲೆ ಬಿದ್ದನು.
ಆಗ ಸತ್ರಾಜಿತನ ಮಗಳು ಸತ್ಯಭಾಮೆ ಮತ್ತು ರುಕ್ಮಿಣಿಯರು ಕೂಡ ಕೆಳಗೆ ಬಿದ್ದು ಧನಂಜಯನನ್ನು ಸುತ್ತುವರೆದು ರೋದಿಸತೊಡಗಿದರು. ಅನಂತರ ಅವನನ್ನು ಎಬ್ಬಿಸಿ ಕಾಂಚನಪೀಠದಲ್ಲಿ ಕುಳ್ಳಿರಿಸಿ, ಆ ಮಹಾತ್ಮನನ್ನು ಸುತ್ತುವರೆದು ಅವನೊಡನೆ ಹೇಳಿಕೊಂಡರು. ಗೋವಿಂದನನ್ನು ಸಂಸ್ತುತಿಸಿ ಅವರೊಂದಿಗೆ ಮಾತನಾಡಿ ಆ ಸ್ತ್ರೀಯರನ್ನು ಸಮಾಧಾನಪಡಿಸಿ ಪಾಂಡವನು ತನ್ನ ಸೋದರಮಾವನನ್ನು ನೋಡಲು ಹೋದನು.
ವಸುದೇವ ವಿಲಾಪ
ಕುರುಪುಂಗವನು ಪುತ್ರಶೋಕದಿಂದ ಸಂತಪ್ತನಾಗಿ ಮಲಗಿದ್ದ ಮಹಾತ್ಮ ವೀರ ಅನಕದುಂದುಭಿ ವಸುದೇವನನ್ನು ಕಂಡನು. ಕಣ್ಣುಗಳು ಕಣ್ಣೀರಿನಿಂದ ತುಂಬಿ ವಸುದೇವನಿಗಿಂತಲೂ ಹೆಚ್ಚು ಆರ್ತನಾಗಿದ್ದ ಆ ವಿಶಾಲ ಎದೆಯ ಮಹಾಭುಜ ಪಾರ್ಥನು ಆರ್ತನಾಗಿದ್ದ ವಸುದೇವನ ಪಾದಗಳನ್ನು ಹಿಡಿದು ನಮಸ್ಕರಿಸಿದನು. ಆ ಮಹಾಭುಜ ವೃದ್ಧನು ಅರ್ಜುನನನ್ನು ಬಾಹುಗಳಿಂದ ಆಲಂಗಿಸಿದನು ಮತ್ತು ಪುತ್ರರು, ಸಹೋದರರು, ಮೊಮ್ಮಕ್ಕಳು, ಹೆಣ್ಣುಮಕ್ಕಳ ಮಕ್ಕಳು, ಮತ್ತು ಸಖರು ಎಲ್ಲರನ್ನೂ ನೆನಪಿಸಿಕೊಂಡು ತುಂಬಾ ವಿಹ್ವಲನಾಗಿ ವಿಲಪಿಸಿದನು.
ವಸುದೇವನು ಹೇಳಿದನು:
“ಅರ್ಜುನ! ನೂರಾರು ಭೂಮಿಪಾಲರನ್ನೂ ದೈತ್ಯರನ್ನೂ ಯಾರು ಜಯಿಸಿದ್ದರೋ ಅವರನ್ನು ನೋಡದೇ ಇನ್ನೂ ಜೀವಿಸಿದ್ದೇನೆ! ನನಗೆ ಮರಣವೇ ಇಲ್ಲವೆನಿಸುತ್ತದೆ! ನಿನ್ನ ಪ್ರಿಯಶಿಷ್ಯರಾಗಿದ್ದ, ನಿನ್ನ ಗೌರವಕ್ಕೆ ಪಾತ್ರರಾಗಿದ್ದ ಆ ಇಬ್ಬರ ದುರ್ವರ್ತನೆಯಿಂದಾಗಿ ವೃಷ್ಣಿಗಳು ನಿಧನರಾದರು! ಅವರಿಬ್ಬರು ವೃಷ್ಣಿಪ್ರವೀರರನ್ನೂ ಅತಿರಥರೆಂದು ಮನ್ನಿಸುತ್ತಿದ್ದೆವು. ಅದರ ಕುರಿತು ಪ್ರದ್ಯುಮ್ನ, ಯುಯುಧಾನ, ನೀನು ಮತ್ತು ನನ್ನ ಪುತ್ರ ಕೃಷ್ಣರು ಯಾವಾಗಲೂ ಹೇಳಿಕೊಂಡು ಕೊಚ್ಚಿಕೊಳ್ಳುತ್ತಿದ್ದಿರಿ! ಅವರಿಬ್ಬರೂ ವೃಷ್ಣಿನಾಶದ ಮುಖಗಳಾದರು. ನಾನು ಶೈನೇಯನನ್ನಾಗಲೀ, ಹಾರ್ದಿಕ್ಯನನ್ನಾಗಲೀ, ಅಕ್ರೂರನನ್ನಾಗಲೀ, ರೌಕ್ಮಿಣೇಯನನ್ನಾಗಲೀ ನಿಂದಿಸುವುದಿಲ್ಲ. ಇದಕ್ಕೆ ಆ ಶಾಪವೇ ಕಾರಣ! ಕೇಶಿನಿ ಮತ್ತು ಕಂಸರನ್ನು ಜಯಿಸಿದ, ಬಲಗರ್ವಿತ ಚೈದ್ಯನನ್ನು ಸಂಹರಿಸಿದ, ನೈಷಾದಿ ಎಕಲವ್ಯ, ಕಾಲಿಂಗ, ಮಾಗಧರು, ಗಾಂಧಾರರು, ಕಾಶಿರಾಜ ಮತ್ತು ಮರುಭೂಮಿಯ ಪಾರ್ಥಿವರನ್ನು, ಪೂರ್ವದಿಕ್ಕಿನ, ದಕ್ಷಿಣದಿಕ್ಕಿನ ಮತ್ತು ಪರ್ವತಗಳಲ್ಲಿನ ನೃಪರನ್ನು ಗೆದ್ದ ಆ ಜಗತ್ಪ್ರಭು ಮಧುಸೂದನನು ಯದುಗಳ ಈ ವಿನಾಶವನ್ನು ಉಪೇಕ್ಷಿಸಿದನು! ಪುತ್ರರು, ಪೌತ್ರರು, ಸಹೋದರರು ಮತ್ತು ಸಖರು ಹತರಾಗಿ ಮಲಗಿದುದನ್ನು ನೋಡಿ ಅವನು ನನಗೆ ಹೀಗೆ ಹೇಳಿದನು:
“ಪುರುಷರ್ಷಭ! ಇಂದು ಕುಲದ ಅಂತ್ಯವಾಯಿತು. ಬೀಭತ್ಸುವು ಈ ದ್ವಾರವತೀ ಪುರಕ್ಕೆ ಬರುತ್ತಾನೆ. ಅವನಿಗೆ ಇಲ್ಲಿ ನಡೆದ ವೃಷ್ಣಿಗಳ ಮಹಾವಿನಾಶದ ಕುರಿತು ಹೇಳು. ಯದುಗಳ ಈ ವಿನಾಶದ ಕುರಿತು ಕೇಳಿದ ಕೂಡಲೇ ಬೇಗನೇ ಆ ಮಹಾತೇಜಸ್ವಿಯು ಬರುತ್ತಾನೆ. ಅದರ ಕುರಿತು ವಿಚಾರಿಸುವ ಅವಶ್ಯಕತೆಯಿಲ್ಲ. ನಾನೇ ಅರ್ಜುನನೆಂದೂ ಅರ್ಜುನನು ನಾನೆಂದೂ ತಿಳಿದುಕೋ! ಅವನು ಏನು ಮಾಡಬೇಕೆಂದು ಹೇಳುತ್ತಾನೋ ಅದನ್ನೇ ನೀನು ಮಾಡಬೇಕು. ಪಾಂಡವನು ಸ್ತ್ರೀಯರನ್ನೂ ಬಾಲಕರನ್ನು ರಕ್ಷಿಸುತ್ತಾನೆ. ಕಾಲಬಂದಾಗ ಬೀಭತ್ಸುವು ನಿನ್ನ ಔರ್ಧ್ವದೇಹಿಕವನ್ನೂ ಮಾಡುತ್ತಾನೆ. ಧನಂಜಯನು ಹೊರಟುಹೋದ ಕೂಡಲೇ ಈ ನಗರಿಯು, ಕೋಟೆ-ಕೊತ್ತಲಗಳೊಂದಿಗೆ ಸಮುದ್ರದಲ್ಲಿ ಮುಳುಗಿಹೋಗುತ್ತದೆ. ನಾನಾದರೋ ಧೀಮಂತ ರಾಮನೊಂದಿಗೆ ಯಾವುದೋ ಪುಣ್ಯ ಪ್ರದೇಶದಲ್ಲಿ ನಿಯಮವನ್ನಾಚರಿಸಿ ಕಾಲವನ್ನು ಕಾಯುತ್ತೇನೆ.”
ಹೀಗೆ ಹೇಳಿ ಅಚಿಂತ್ಯಪರಾಕ್ರಮಿ ಪ್ರಭುವು ಬಾಲಕರೊಂದಿಗೆ ನನ್ನನ್ನು ಬಿಟ್ಟು ಇಷ್ಟಬಂದಲ್ಲಿಗೆ ಹೊರಟುಹೋದನು. ನಾನು ಆ ನಿನ್ನ ಇಬ್ಬರು ಭ್ರಾತೃಗಳ ಮತ್ತು ಘೋರ ಕುಲವಧೆಯ ಕುರಿತು ಚಿಂತಿಸುತ್ತಾ ಶೋಕಕರ್ಶಿತನಾಗಿ ಆಹಾರವನ್ನು ತ್ಯಜಿಸಿದ್ದೇನೆ. ನಾನು ಏನನ್ನೂ ತಿನ್ನುವುದಿಲ್ಲ. ಬದುಕಿಯೂ ಇರುವುದಿಲ್ಲ. ಒಳ್ಳೆಯದಾಯಿತು. ನೀನು ಇಲ್ಲಿಗೆ ಬಂದೆ. ಕೃಷ್ಣನು ಏನೆಲ್ಲ ಹೇಳಿದ್ದನೋ ಅದನ್ನು ಸಂಪೂರ್ಣವಾಗಿ ಮಾಡು! ಈ ರಾಜ್ಯ, ಸ್ತ್ರೀಯರು, ಮತ್ತು ರತ್ನಗಳೆಲ್ಲವೂ ಈಗ ನಿನ್ನದೇ! ನಾನು ಈ ಇಷ್ಟ ಪ್ರಾಣಗಳನ್ನು ತ್ಯಜಿಸುತ್ತೇನೆ!”
ವಸುದೇವ ನಿಧನ; ವಜ್ರಾಭಿಷೇಕ
ದೀನಮನಸ್ಕನಾದ ಸೋದರಮಾವನು ಹೀಗೆ ಹೇಳಲು ಪರಂತಪ ಬೀಭತ್ಸುವು ದುರ್ಮನಸ್ಸಿನಿಂದ ವಸುದೇವನಿಗೆ ಹೇಳಿದನು:
“ಮಾವ! ವೃಷ್ಣಿಪ್ರವೀರರು ಮತ್ತು ಮಧುಗಳಿಂದ ವಿಹೀನವಾದ ಈ ಭೂಮಿಯನ್ನು ಹೆಚ್ಚು ಕಾಲ ನೋಡಲು ಶಕ್ತನಿಲ್ಲ. ರಾಜಾ ಯುಧಿಷ್ಠಿರ, ಭೀಮಸೇನ, ಪಾಂಡವ ಸಹದೇವ, ನಕುಲ ಮತ್ತು ಯಾಜ್ಞಸೇನೀ ಈ ನಾವು ಆರು ಮಂದಿ ಒಂದೇ ಮನಸ್ಸುಳ್ಳವರು. ರಾಜನೂ ಕಾಲಾವತೀತನಾಗುವ ಸಮಯವು ಬಂದಿದೆಯೆನ್ನುವುದು ನಿಶ್ಚಯವೆನಿಸುತ್ತದೆ. ಕಾಲವನ್ನು ಅರಿತವರಲ್ಲಿ ಶ್ರೇಷ್ಠನಾದ ನಿನಗೆ ಬಂದಿರುವ ಕಾಲದ ಕುರಿತು ತಿಳಿದೇ ಇದೆ. ವೃಷ್ಣಿ ಸ್ತ್ರೀಯರನ್ನೂ, ಬಾಲ-ವೃದ್ಧರನ್ನೂ ನಾನು ಇಂದ್ರಪ್ರಸ್ಥಕ್ಕೆ ಕರೆದುಕೊಂಡು ಹೋಗುತ್ತೇನೆ.”
ಹೀಗೆ ಹೇಳಿ ಧನಂಜಯನು ದಾರುಕನಿಗೆ “ಕೂಡಲೇ ವೃಷ್ಣಿವೀರರ ಅಮಾತ್ಯರನ್ನು ಕಾಣಲು ಬಯಸುತ್ತೇನೆ” ಎಂದನು. ಹೀಗೆ ಹೇಳಿ ಮಹಾರಥರ ಕುರಿತು ಶೋಕಿಸುತ್ತಾ ಆ ಶೂರ ಅರ್ಜುನನು ಯಾದವರ ಸುಧರ್ಮ ಸಭೆಯನ್ನು ಪ್ರವೇಶಿಸಿದನು. ಅವನು ಆಸನ ಗ್ರಹಣ ಮಾಡಲು ಅವನ ಸುತ್ತಲೂ ಪ್ರಜೆಗಳು, ಬ್ರಾಹ್ಮಣರು, ಮಂತ್ರಿಗಳು ಮತ್ತು ವರ್ತಕರು ಕುಳಿತುಕೊಂಡರು. ಒಡೆಯರಿಗಾಗಿ ಚೇತನವನ್ನೇ ಕಳೆದುಕೊಂಡು ದೀನಮನಸ್ಕರಾಗಿದ್ದ ಅವರೆಲ್ಲರಿಗೆ ಸ್ವಯಂ ದೀನನಾಗಿದ್ದ ಪಾರ್ಥನು ಈ ಮಾತನ್ನಾಡಿದನು:
“ಸ್ವಯಂ ನಾನೇ ವೃಷ್ಣಿ-ಅಂಧಕ ಜನರನ್ನು ಇಂದ್ರಪ್ರಸ್ಥಕ್ಕೆ ಕೊಂಡೊಯ್ಯುತ್ತೇನೆ. ಈ ನಗರವೆಲ್ಲವನ್ನೂ ಸಮುದ್ರವು ಮುಳುಗಿಸಲಿಕ್ಕಿದೆ. ರಥಗಳನ್ನೂ, ವಿವಿಧರತ್ನಗಳನ್ನೂ ಸಜ್ಜುಗೊಳಿಸಿ. ಈ ವಜ್ರನು ಇಂದ್ರಪ್ರಸ್ಥದಲ್ಲಿ ನಿಮ್ಮೆಲ್ಲರ ರಾಜನಾಗುತ್ತಾನೆ. ಇಂದಿನಿಂದ ಏಳನೇ ದಿವಸದಂದು ವಿಮಲ ರವಿಯು ಉದಯಿಸುವಾಗ ನಾವೆಲ್ಲರೂ ಇಲ್ಲಿಂದ ಹೊರಡೋಣ! ಸಜ್ಜುಗೊಳಿಸಿ! ತಡಮಾಡಬೇಡಿ!”
ಅಕ್ಲಿಷ್ಟಕರ್ಮಿ ಪಾರ್ಥನು ಹೀಗೆ ಹೇಳಲು ಪೌರರು ತಮ್ಮದೇ ಏಳ್ಗೆಗಾಗಿ ಉತ್ಸಾಹದಿಂದ ತಯಾರಿ ನಡೆಸಿದರು. ಆ ರಾತ್ರಿಯನ್ನು ಪಾರ್ಥನು ಕೇಶವನ ಮನೆಯಲ್ಲಿ ಕಳೆದನು. ಅಲ್ಲಿ ಅವನು ಒಮ್ಮೆಲೇ ಶೋಕಮೋಹಗಳಲ್ಲಿ ಮುಳುಗಿಹೋದನು. ಮರುದಿನ ಬೆಳಿಗ್ಗೆ ಪ್ರತಾಪವಾನ್ ಮಹಾತೇಜಸ್ವಿ ಶೌರಿ ವಸುದೇವನು ತನ್ನನ್ನು ಯೋಗದಲ್ಲಿ ತೊಡಗಿಸಿಕೊಂಡು ಉತ್ತಮ ಗತಿಯನ್ನು ಹೊಂದಿದನು. ಆಗ ವಸುದೇವನ ಮನೆಯಲ್ಲಿ ಸ್ತ್ರೀಯರ ದಾರುಣ ಕೂಗು ಮತ್ತು ರೋದನಗಳ ಮಹಾ ಶಬ್ಧವು ಕೇಳಿಬಂದಿತು. ಆ ಎಲ್ಲ ಸ್ತ್ರೀಯರೂ ತಲೆಗೂದಲನ್ನು ಕೆದರಿಕೊಂಡು, ಆಭರಣ-ಹಾರಗಳನ್ನು ಕಳಚಿಕೊಂಡು, ಕೈಗಳಿಂದ ಎದೆಗಳನ್ನು ಹೊಡೆದುಕೊಳ್ಳುತ್ತಾ ದೀನರಾಗಿ ವಿಲಪಿಸುತ್ತಿದ್ದರು. ಸ್ತ್ರೀಶ್ರೇಷ್ಠರಾದ ದೇವಕೀ, ಭದ್ರಾ, ರೋಹಿಣೀ ಮತ್ತು ಮದಿರೆಯರು ಪತಿಯ ಚಿತೆಯನ್ನು ಏರುವ ಮನಸ್ಸುಮಾಡಿದರು. ಆಗ ಪಾರ್ಥನು ಮನುಷ್ಯರು ಎತ್ತಿಕೊಂಡು ಹೋಗುವ ಮಹುಮಾಲೆಗಳಿಂದ ಅಲಂಕೃತಗೊಂಡ ದೊಡ್ಡ ಯಾನದಲ್ಲಿ ಶೌರಿಯ ಮೃತಶರೀರವನ್ನು ಹೊರತರಿಸಿದನು.
ದುಃಖ ಶೋಕ ಸಮಾಹತರಾದ ದ್ವಾರಕಾವಾಸೀ ಪೌರರೆಲ್ಲರೂ ಅವನನ್ನು ಅನುಸರಿಸಿದರು. ಆ ಯಾನದ ಮುಂದೆ ಅಶ್ವಮೇಧದ ಚತ್ರ, ಉರಿಯುತ್ತಿರುವ ಅಗ್ನಿ, ಮತ್ತು ಯಾಜಕರು ನಡೆದರು. ಸಹಸ್ರಾರು ಸೊಸೆಯರು ಮತ್ತು ಸಹಸ್ರಾರು ಇತರ ಸ್ತ್ರೀಯರಿಂದ ಪರಿವೃತರಾಗಿ ಅಲಂಕೃತರಾದ ದೇವಿಯರು ಆ ವೀರನನ್ನು ಹಿಂಬಾಲಿಸಿ ಹೋದರು. ಜೀವಂತವಾಗಿರುವಾಗ ಆ ಮಹಾತ್ಮನಿಗೆ ಯಾವ ಪ್ರದೇಶವು ಪ್ರಿಯವಾಗಿತ್ತೋ ಅದೇ ಪ್ರದೇಶದಲ್ಲಿ ಸಂಕಲ್ಪಿಸಿ ಪಿತೃಮೇಧವನ್ನು ನೆರವೇರಿಸಿದರು. ಅವನ ನಾಲ್ವರು ವರಾಂಗನೆ ಪತ್ನಿಯರೂ ಚಿತಾಗ್ನಿಗತನಾದ ಆ ವೀರ ಶೂರಪುತ್ರನ ಚಿತೆಯನ್ನು ಏರಿ ಪತಿಯು ಹೋದ ಲೋಕವನ್ನು ಸೇರಿದರು. ಪಾಂಡುನಂದನನು ಹಿಂಬಾಲಿಸಿ ಹೋದ ಆ ನಾಲ್ವರು ಸ್ತ್ರೀಯರನ್ನೂ ಚಂದನ-ಗಂಧಗಳಿಂದ ದಹನಮಾಡಿದನು. ಆಗ ಅಗ್ನಿಯು ಸಮಿತ್ತನ್ನು ಸುಡುತ್ತಿರುವ ಶಬ್ಧ, ಸಾಮಗಾನದ ನಿರ್ಘೋಷ ಮತ್ತು ಮನುಷ್ಯರ ರೋದನಗಳು ಮಾತ್ರ ಕೇಳಿಬರುತ್ತಿದ್ದವು. ಅನಂತರ ವಜ್ರನ ನಾಯಕತ್ವದಲ್ಲಿ ವೃಷ್ಣಿವೀರ ಕುಮಾರರು ಮತ್ತು ಸ್ತ್ರೀಯರು ಎಲ್ಲರೂ ಮಹಾತ್ಮ ವಸುದೇವನಿಗೆ ತರ್ಪಣ ಕ್ರಿಯೆಗಳನ್ನು ನಡೆಸಿದರು.
ಧರ್ಮದಿಂದ ಲುಪ್ತನಾಗದ ಫಲ್ಗುನನು ಆ ಧರ್ಮಕಾರ್ಯವನ್ನು ಎಸಗಿ ವೃಷ್ಣಿಯರು ನಾಶವಾದ ಸ್ಥಳಕ್ಕೆ ಹೋದನು. ಕದನದಲ್ಲಿ ಹತರಾಗಿ ಬಿದ್ದಿದ್ದ ಅವರನ್ನು ನೋಡಿ ಕೌರವ್ಯನು ತುಂಬಾ ದುಃಖಿತನಾದನು. ಸಮಯಕ್ಕೆ ತಕ್ಕ ಕಾರ್ಯವನ್ನೆಸಗಲು ಅನುವಾದನು. ಹಿರಿಯರಿಂದ ಮೊದಲ್ಗೊಂಡು ಆ ಬ್ರಾಹ್ಮಣ ಶಾಪದಿಂದ ಉದ್ಭವಿಸಿದ್ದ ಎರಕಗಳಿಂದ ಹತರಾದ ಅವರೆಲ್ಲರ ಕ್ರಿಯೆಗಳನ್ನೂ ನಡೆಸಿದನು. ಅನಂತರ ರಾಮ ಮತ್ತು ವಾಸುದೇವ ಇಬ್ಬರ ಶರೀರಗಳನ್ನೂ ಹುಡುಕಿಸಿ ಆಪ್ತಜನರಿಂದ ದಹನಸಂಸ್ಕಾರವನ್ನು ಮಾಡಿಸಿದನು. ಅವರ ಪ್ರೇತಕಾರ್ಯಗಳನ್ನು ವಿಧಿವತ್ತಾಗಿ ಪೂರೈಸಿ ಸತ್ವರ ಪಾಂಡವನು ಏಳನೆಯ ದಿವಸ ರಥವನ್ನೇರಿ ಹೊರಟನು. ಕುದುರೆಗಳು, ಎತ್ತುಗಳು, ಮತ್ತು ಕತ್ತೆಗಳನ್ನು ಹೂಡಿದ ರಥಗಳ ಮೇಲೆ ಶೋಕಕರ್ಶಿತ ವೃಷ್ಣಿವೀರರ ಸ್ತ್ರೀಯರು ರೋದಿಸುತ್ತಾ ಪಾಂಡುಪುತ್ರ ಮಹಾತ್ಮ ಧನಂಜಯನನ್ನು ಅನುಸರಿಸಿ ಹೋದರು. ಪಾರ್ಥನ ಆಜ್ಞೆಯಂತೆ ವೀರರನ್ನು ಕಳೆದುಕೊಂಡ ವೃಷ್ಣಿ-ಅಂಧಕರ ಸೇವಕರು, ಅಶ್ವಾರೋಹಿಗಳು, ರಥಾರೂಢರು, ವೃದ್ಧ-ಬಾಲಕ ಪೌರಜನರು ಎಲ್ಲರೂ ಸ್ತ್ರೀಯರನ್ನು ಸುತ್ತುವರೆದು ನಡೆದರು. ಪರ್ವತದಂತಿದ್ದ ಆನೆಗಳನ್ನೇರಿ, ಪಾದರಕ್ಷಕರೊಂದಿಗೆ ಗಜಾರೋಹಿಗಳೂ ಮೀಸಲು ಪಡೆಗಳೂ ನಡೆದವು. ಅಂಧಕ-ವೃಷ್ಣಿಯರ ಮಕ್ಕಳೆಲ್ಲರೂ, ಶ್ರೀಮಂತ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ- ಶೂದ್ರರೂ ಪಾರ್ಥನನ್ನು ಅನುಸರಿಸಿ ಹೋದರು. ವಾಸುದೇವನ ಹದಿನಾರು ಸಾವಿರ ಪತ್ನಿಯರು ಧೀಮತ ಕೃಷ್ಣನ ಮೊಮ್ಮಗ ವಜ್ರನನ್ನು ಮುಂದಿರಿಸಿಕೊಂಡು ಹೋದರು. ನಾಥರನ್ನು ಕಳೆದುಕೊಂಡ ಅನೇಕ ಸಾವಿರ, ಅನೇಕ ಕೋಟಿ, ಅನೇಕ ಅರ್ಬುದ ಭೋಜ-ವೃಷ್ಣಿ-ಅಂಧಕ ಸ್ತ್ರೀಯರು ಹಿಂಬಾಲಿಸಿ ಹೋದರು. ಮಹಾ ಸಾಗರದಂತಿದ್ದ ಆ ವೃಷ್ಣಿಚಕ್ರವನ್ನೂ, ಮಹಾ ಸಂಪತ್ತನ್ನೂ ರಥಿಗಳಲ್ಲಿ ಶ್ರೇಷ್ಠ, ಪರಪುರಂಜಯ ಪಾರ್ಥನು ಕರೆದುಕೊಂಡು ಹೋದನು. ಆ ಜನರು ಹೊರಟುಹೋದ ಕೂಡಲೇ ಮಕರಾಲಯ ಸಾಗರವು ರತ್ನಗಳಿಂದ ತುಂಬಿದ್ದ ದ್ವಾರಕೆಯನ್ನು ತನ್ನ ನೀರಿನಿಂದ ಮುಳುಗಿಸಿತು.
ಆ ಅದ್ಭುತವನ್ನು ನೋಡಿದ ದ್ವಾರಕಾಪುರವಾಸೀ ಜನರು ಅಯ್ಯೋ ದೈವವೇ ಎನ್ನುತ್ತಾ ಜೋರುಜೋರಾಗಿ ಮುಂದುವರೆದರು. ಧನಂಜಯನು ಕಾನನಗಳಲ್ಲಿ, ರಮ್ಯ ಪರ್ವತಗಳಲ್ಲಿ ಮತ್ತು ನದೀ ತೀರಗಳಲ್ಲಿ ತಂಗುತ್ತಾ ವೃಷ್ಣಿಸ್ತ್ರೀಯರನ್ನು ಕರೆದುಕೊಂಡು ಹೋದನು. ಐದು ನದಿಗಳ ಪ್ರದೇಶವನ್ನು ತಲುಪಿ ಧೀಮಾನ್ ಪ್ರಭು ಅರ್ಜುನನು ಗೋಪಶುಗಳು ಮತ್ತು ಧನ ಸಮೃದ್ಧವಾಗಿದ್ದ ಆ ಪ್ರದೇಶದಲ್ಲಿ ಬೀಡುಬಿಟ್ಟನು. ಭಾರತ! ಪತಿಗಳನ್ನು ಕಳೆದುಕೊಂಡ ಸ್ತ್ರೀಯರನ್ನು ಪಾರ್ಥನೊಬ್ಬನೇ ಕರೆದುಕೊಂಡು ಹೋಗುತ್ತಿದ್ದಾನೆನ್ನುವುದನ್ನು ನೋಡಿ ದಸ್ಯುಗಳಿಗೆ ಲೋಭವುಂಟಾಯಿತು. ಆಗ ಲೋಭದಿಂದ ಬುದ್ಧಿಯನ್ನೇ ಕಳೆದುಕೊಂಡು ಅಶುಭರಂತೆ ಕಾಣುತ್ತಿದ್ದ ಆ ಪಾಪಕರ್ಮಿ ಅಭೀರರು ಒಂದಾಗಿ ಸಮಾಲೋಚನೆಮಾಡಿದರು:
“ಈ ಯೋಧ ಅರ್ಜುನನೊಬ್ಬನೇ ಗಂಡಸರನ್ನು ಕಳೆದುಕೊಂಡಿರುವ ವೃದ್ಧಬಾಲರನ್ನು ಕರೆದುಕೊಂಡು, ನಮ್ಮ ಈ ಪ್ರದೇಶವನ್ನು ದಾಟಿ, ಹೋಗುತ್ತಿದ್ದಾನೆ! ಅವನಲ್ಲಿದ್ದ ಯೋಧರೂ ಕೂಡ ತಮ್ಮ ತೇಜಸ್ಸನ್ನು ಕಳೆದುಕೊಂಡಿದ್ದಾರೆ!”
ಆಗ ದಂಡಗಳನ್ನು ಹಿಡಿದ ಸಹಸ್ರಾರು ದರೋಡೆಕೋರ ದಸ್ಯುಗಳು ವೃಷ್ಣಿಗಳ ಜನರನ್ನು ಅಕ್ರಮಣಿಸಿದರು. ಕಾಲದ ಬದಲಾವಣೆಯಿಂದ ಪ್ರೇರಿತರಾದ ಅವರು ಮಹಾಸಿಂಹನಾದದೊಂದಿಗೆ ಓಡಿಬಂದು, ದರೋಡೆ ಮಾಡುವ ಸಲುವಾಗಿ, ಸಾಮಾನ್ಯ ಜನರ ಆ ಗುಂಪಿನ ಮೇಲೆ ಎರಗಿದರು. ಕೂಡಲೇ ಮಹಾಬಾಹು ಕೌಂತೇಯ ಅರ್ಜುನನು ತನ್ನ ಅನುಯಾಯಿಗಳೊಂದಿಗೆ ಹಿಂದಿರುಗಿ ನಗುತ್ತಾ ಅವರಿಗೆ ಹೇಳಿದನು:
“ಅಧರ್ಮಜ್ಞರೇ! ಸಾವನ್ನು ಬಯಸದಿದ್ದರೆ ಹಿಂದೆ ಸರಿಯಿರಿ! ನನ್ನ ಈ ಶರಗಳಿಂದ ಗಾಯಗೊಂಡು ಶೋಕದಿಂದ ಹತರಾಗಬೇಡಿ!”
ವೀರ ಅರ್ಜುನನು ಹಾಗೆ ಹೇಳಿದರೂ ಅವನ ಮಾತನ್ನು ಅನಾದರಿಸಿ, ಅವನು ಪುನಃ ಪುನಃ ತಡೆಯುತ್ತಿದ್ದರೂ, ಆ ಮೂಢಜನರು ಆಕ್ರಮಣಿಸಿದರು.
ಆಗ ಅರ್ಜುನನು ಅಜರವಾಗಿದ್ದ ದಿವ್ಯ ಮಹಾಧನುಸ್ಸು ಗಾಂಡೀವಕ್ಕೆ ಶಿಂಜಿನಿಯನ್ನು ಬಿಗಿಯಲು ಪ್ರಯತ್ನಿಸಿದರೂ ಅದು ಅವನಿಗೆ ಸಾಧ್ಯವಾಗಲಿಲ್ಲ. ಆ ತುಮುಲ ಸಂಭ್ರಮದಲ್ಲಿ ಕಷ್ಟಪಟ್ಟು ಶಿಂಜಿನಿಯನ್ನು ಬಿಗಿದು ಅವನು ಅಸ್ತ್ರಗಳ ಕುರಿತು ಯೋಚಿಸಲು, ಅವುಗಳ್ಯಾವುವೂ ಅವನ ಸ್ಮರಣೆಗೆ ಬರಲಿಲ್ಲ. ಯುದ್ಧದ ಸಮಯದಲ್ಲಿದ್ದ ಅವನ ಆ ಮಹಾ ಭುಜವೀರ್ಯವು ಮತ್ತು ದಿವ್ಯ ಮಹಾಸ್ತ್ರಗಳು ಅಸಫಲವಾಗಲು ಅರ್ಜುನನಿಗೆ ನಾಚಿಕೆಯಾಯಿತು. ಆನೆ-ಕುದುರೆ-ರಥಗಳನ್ನೇರಿದ್ದ ವೃಷ್ಣಿಯೋಧರು ಎಲ್ಲರೂ ಬಲಾತ್ಕಾರವಾಗಿ ಅಪಹರಿಸುತ್ತಿದ್ದ ಅವರನ್ನು ತಡೆಯಲು ಶಕ್ಯರಾಗಲಿಲ್ಲ. ರಕ್ಷಿಸಲು ಅಲ್ಲಲ್ಲಿ ಅನೇಕ ಸ್ತ್ರೀಯರಿದ್ದರು ಮತ್ತು ಸಂಪತ್ತುಗಳಿತ್ತು. ಪಾರ್ಥನು ಆ ಜನರನ್ನು ರಕ್ಷಿಸಲು ಪ್ರಯತ್ನಿಸಿದನು. ಸರ್ವ ಯೋಧರು ನೋಡುತ್ತಿದ್ದಂತೆಯೇ ದಸ್ಯುಗಳು ಎಲ್ಲಕಡೆಗಳಿಂದ ಬಂದು ಆ ಉತ್ತಮ ಸ್ತ್ರೀಯರನ್ನು ಎಳೆದುಕೊಂಡು ಹೋದರು ಮತ್ತು ಅನ್ಯರು ಭಯದಿಂದ ಎತ್ತಲೋ ಓಡಿ ಹೋದರು. ವೃಷ್ಣಿಸೇವಕರೊಡನೆ ಉದ್ವೇಗಗೊಂಡ ಪ್ರಭು ಪಾರ್ಥ ಧನಂಜಯನು ಗಾಂಡೀವದಿಂದ ಪ್ರಯೋಗಿಸಿದ ಶರಗಳಿಂದ ಆ ದಸ್ಯುಗಳನ್ನು ಸಂಹರಿಸಿದನು. ಆದರೆ ಕ್ಷಣದಲ್ಲಿಯೇ ಅವನಲ್ಲಿದ್ದ ಜಿಹ್ಮಗಗಳು ಮುಗಿದುಹೋದವು. ಮೊದಲು ಅಕ್ಷಯವಾಗಿದ್ದ ಆ ರಕ್ತವನ್ನು ಕುಡಿಯುವ ಶರಗಳು ಈಗ ಮುಗಿದುಹೋದವು. ಶರಗಳು ಮುಗಿದುಹೋಗಲು ದುಃಖಶೋಕಗಳಿಂದ ಸಮಾಹತನಾಗಿ ಪಾಕಶಾಸನಿಯು ತನ್ನ ಧನುಸ್ಸಿನ ತುದಿಯಿಂದಲೇ ದಸ್ಯುಗಳನ್ನು ವಧಿಸತೊಡಗಿದನು. ಆದರೆ ಪಾರ್ಥನು ನೋಡುತ್ತಿದ್ದಂತೆಯೇ ಮ್ಲೇಚ್ಛರು ವೃಷ್ಣಿ-ಅಂಧಕರ ಶ್ರೇಷ್ಠ ಸ್ತ್ರೀಯರನ್ನು ಎತ್ತಿಕೊಂಡು ಎಲ್ಲ ಕಡೆಗಳಲ್ಲಿ ಓಡಿ ಹೋದರು.
ಪ್ರಭು ಧನಂಜಯನಾದರೋ ಅದು ದೈವವೆಂದು ಮನಸಾ ಯೋಚಿಸಿದನು. ಪರಮ ದುಃಖ ಶೋಕ ಸಮಾವಿಷ್ಟನಾಗಿ ನಿಟ್ಟುಸಿರು ಬಿಟ್ಟನು. ಅಸ್ತ್ರಗಳ ವಿನಾಶ, ಬಾಹುವೀರ್ಯದ ಕುಂಠಿತ, ಧನುಸ್ಸಿನ ಅವಿಧೇಯತೆ ಮತ್ತು ಶರಗಳು ಮುಗಿದುಹೋದುದು ಇವುಗಳಿಂದ ವಿಮನಸ್ಕನಾದ ಪಾರ್ಥನು ಇದು ದೈವವೆಂದೇ ಆಲೋಚಿಸಿದನು. ಅನಂತರ ಅವನು “ಎಲ್ಲವೂ ಹೋಯಿತು!” ಎಂದು ಹೇಳಿ ಹಿಂದಿರುಗಿದನು. ಅನಂತರ ಆ ಮಹಾಮತಿಯು ಉಳಿದಿದ್ದ ಸ್ತ್ರೀಯರನ್ನೂ, ಅಪಹರಿಸಲ್ಪಡದೇ ಇದ್ದ ಸ್ವಲ್ಪ ರತ್ನಗಳನ್ನೂ ಕುರುಕ್ಷೇತ್ರಕ್ಕೆ ಬಂದು ಇಳಿಸಿದನು. ಅಪಹರಿಸಲ್ಪಡದೇ ಉಳಿದಿದ್ದ ವೃಷ್ಣಿ ಸ್ತ್ರೀಯರನ್ನು ಕರೆದುಕೊಂಡು ಬಂದು ಕೌರವ್ಯ ಧನಂಜಯನು ಅಲ್ಲಲ್ಲಿ ನೆಲೆಗೊಳಿಸಿದನು. ನರೋತ್ತಮ ಪಾರ್ಥನು ಅಪಹರಿಸದೆ ಉಳಿದಿದ್ದ ಭೋಜರಾಜನ ಸ್ತ್ರೀಯರನ್ನು ಹಾರ್ದಿಕ್ಯ ಕೃತವರ್ಮನ ಮಗನ ಜೊತೆಗೆ ಮಾರ್ತಿಕಾವತಕ್ಕೆ ಕಳುಹಿಸಿದನು. ಅನಂತರ ವೀರರಿಂದ ವಿಹೀನರಾಗಿದ್ದ ಎಲ್ಲ ವೃದ್ಧರನ್ನೂ, ಬಾಲಕರನ್ನೂ, ಮತ್ತು ಸ್ತ್ರೀಯರನ್ನೂ ಪಾಂಡವನು ಇಂದ್ರಪ್ರಸ್ಥದಲ್ಲಿ ವಾಸಿಸುವಂತೆ ಮಾಡಿದನು. ಸಾತ್ಯಕಿಯ ಪ್ರಿಯಪುತ್ರ ಯೌಯುಧಾನಿಯನ್ನು ವೃದ್ಧ-ಬಾಲಕರೊಂದಿಗೆ ಸರಸ್ವತೀ ತೀರದಲ್ಲಿ ಧರ್ಮಾತ್ಮ ಅರ್ಜುನನು ನೆಲೆಸುವಂತೆ ಮಾಡಿದನು. ಆ ಪರವೀರಹನು ಇಂದ್ರಪ್ರಸ್ಥವನ್ನು ವಜ್ರನಿಗೆ ಕೊಟ್ಟನು. ವಜ್ರನು ತಡೆಯಲು ಪ್ರಯತ್ನಿಸಿದರೂ ಅಕ್ರೂರನ ಪತ್ನಿಯರು ವನವನ್ನು ಸೇರಿದರು.
ರುಕ್ಮಿಣೀ, ಗಾಂಧಾರೀ, ಶೈಬ್ಯೆ, ಹೈಮವತೀ, ಮತ್ತು ದೇವೀ ಜಾಂಬವತಿಯರು ಅಗ್ನಿಪ್ರವೇಶ ಮಾಡಿದರು. ತಪಸ್ಸಿನ ನಿಶ್ಚಯವನ್ನು ಮಾಡಿದ ಸತ್ಯಭಾಮೆ ಮತ್ತು ಕೃಷ್ಣನ ಇತರ ಪತ್ನಿಯರು ವನವನ್ನು ಪ್ರವೇಶಿಸಿದರು. ಪಾರ್ಥನನ್ನು ಅನುಸರಿಸಿ ಬಂದಿದ್ದ ದ್ವಾರಕಾವಾಸಿ ಪುರುಷರನ್ನು ಯಥಾರ್ಹವಾಗಿ ವಿಂಗಡಿಸಿ ಜಯನು ವಜ್ರನಿಗೆ ಒಪ್ಪಿಸಿದನು. ಸಮಯದೊಡನೆ ಬಂದಿದ್ದ ಆ ಎಲ್ಲ ಕಾರ್ಯಗಳನ್ನೂ ಪೂರೈಸಿ ಕಣ್ಣೀರುತುಂಬಿದ ಅರ್ಜುನನು ಆಶ್ರಮದಲ್ಲಿ ಕುಳಿತಿದ್ದ ಕೃಷ್ಣದ್ವೈಪಾಯನನನ್ನು ಕಂಡನು.
ವ್ಯಾಸಾರ್ಜುನ ಸಮಾಗಮ
ಸತ್ಯವಾದಿ ಅರ್ಜುನನು ಆಶ್ರಮವನ್ನು ಪ್ರವೇಶಿಸಿ ಏಕಾಂತಲ್ಲಿ ಕುಳಿತಿದ್ದ ಮುನಿ ಸತ್ಯವತೀ ಸುತನನ್ನು ಸಂದರ್ಶಿಸಿದನು. ಕುಳಿತಿದ್ದ ಆ ಮಹಾವ್ರತ ಧರ್ಮಜ್ಞನ ಬಳಿಸಾರಿ “ನಾನು ಅರ್ಜುನ!” ಎಂದು ಹೇಳಿ ವಂದಿಸಿ ನಿಂತುಕೊಂಡನು. “ನಿನಗೆ ಸ್ವಾಗತ!” ಎಂದು ಮುನಿ ಸತ್ಯವತೀ ಸುತನು ಹೇಳಿ, ಪ್ರಸನ್ನಾತ್ಮನಾದ ಆ ಮಹಾಮುನಿಯು “ಕುಳಿತುಕೋ!” ಎಂದನು. ಮನಸ್ಸನ್ನೇ ಕಳೆದುಕೊಂಡಿದ್ದ, ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದ, ನಿರ್ವಿಣ್ಣ ಮನಸ್ಕನಾಗಿದ್ದ ಪಾರ್ಥನನ್ನು ನೋಡಿ ವ್ಯಾಸನು ಇಂತೆಂದನು:
“ವೀರನಲ್ಲದವನಿಂದ ಗಾಯಗೊಂಡಿರುವೆಯೇ? ಅಥವಾ ಬ್ರಾಹ್ಮಣನನ್ನು ಕೊಂದೆಯೇ? ಅಥವಾ ಯುದ್ಧದಲ್ಲಿ ಪರಾಜಿತಗೊಂಡೆಯೇ? ನಿನ್ನ ಕಾಂತಿಯನ್ನು ಕಳೆದುಕೊಂಡಂತಿದೆ! ಭರತರ್ಷಭ! ಇದೇನಿದು! ನಿನ್ನನ್ನು ನಾನು ಗುರುತಿಸಲಾಗುತ್ತಿಲ್ಲ! ಅದನ್ನು ನಾನು ಕೇಳಬಹುದಾದರೆ ಬೇಗನೆ ಏನಾಯಿತೆಂದು ಹೇಳು!”
“ಆ ಮೇಧವಪು, ಬೃಹತ್ ಕಮಲಲೋಚನ ಶ್ರೀಮಾನ್ ಕೃಷ್ಣನು ರಾಮನೊಂದಿಗೆ ದೇಹವನ್ನು ತೊರೆದು ದಿವಂಗತನಾಗಿದ್ದಾನೆ. ಬ್ರಹ್ಮಶಾಪದಿಂದ ಹುಟ್ಟಿದ ಮುಸಲಗಳಿಂದ ಪ್ರಭಾಸದಲ್ಲಿ ವೃಷ್ಣಿವೀರರ ರೋಮಾಂಚಕಾರೀ ವಿನಾಶವಾಯಿತು! ಬ್ರಹ್ಮನ್! ಆ ಶೂರ, ಮಹಾತ್ಮ, ಸಿಂಹದರ್ಪ ಮಹಾಬಲ ಭೋಜ-ವೃಷ್ಣಿ-ಅಂಧಕರು ಅನ್ಯೋನ್ಯರೊಡನೆ ಹೋರಾಡಿ ಹತರಾದರು. ಗದೆ-ಪರಿಘ-ಶಕ್ತಿಗಳನ್ನು ಸಹಿಸಬಲ್ಲ ಪರಿಘದಂತಹ ಬಾಹುಗಳಿದ್ದ ಅವರು ಎರಕ ಹುಲ್ಲುಗಳಿಂದ ಹತರಾದರು. ಕಾಲದ ಪಲ್ಲಟನವನ್ನು ನೋಡು! ಐನೂರು ಸಾವಿರ ಬಾಹುಶಾಲಿಗಳು ಪರಸ್ಪರರೊಡನೆ ಹೋರಾಡಿ ನಿಧನ ಹೊಂದಿದರು. ಅಮಿತೌಜಸ ಯದುಗಳ ಮತ್ತು ಯಶಸ್ವಿ ಕೃಷ್ಣನ ವಿನಾಶವನ್ನು ಪುನಃ ಪುನಃ ಚಿಂತಿಸಿ ತಡೆದುಕೊಳ್ಳದಾಗಿದ್ದೇನೆ. ಸಮುದ್ರವು ಬತ್ತಿಹೋಯಿತೆಂದರೆ ಅಥವಾ ಪರ್ವತವು ಚಲಿಸಿತೆಂದರೆ, ಆಕಾಶವು ಬಿದ್ದಿತೆಂದರೆ ಮತ್ತು ಅಗ್ನಿಯು ಶೀತಲನಾದನೆಂದರೆ ಹೇಗೋ ಹಾಗೆ ಶಾಂಙೃಧನ್ವಿಯು ವಿನಾಶನಾದನೆನ್ನುವುದನ್ನು ನಾನು ನಂಬುವುದಿಲ್ಲ. ಕೃಷ್ಣನಿಲ್ಲದ ಈ ಲೋಕದಲ್ಲಿ ನಾನಿರಲು ಬಯಸುವುದಿಲ್ಲ. ಇದಕ್ಕಿಂತಲೂ ಕಷ್ಟತರವಾದುದಿದೆ. ಅದನ್ನು ಕೇಳು. ಅದನ್ನು ಪುನಃ ಪುನಃ ಯೋಚಿಸಿ ನನ್ನ ಮನಸ್ಸು ಸೀಳಿಹೋಗುತ್ತಿದೆ. ನನ್ನ ಎದುರಿಗೇ ಐದು ನದಿಗಳ ಪ್ರದೇಶದಲ್ಲಿ ಅಭೀರರು ಸಹಸ್ರಾರು ವೃಷ್ಣಿಸ್ತ್ರೀಯರನ್ನು ಅನುಸರಿಸಿ ಬಂದು ಅವರನ್ನು ಅಪಹರಿಸಿಕೊಂಡು ಹೋದರು! ಧನುಸ್ಸನ್ನೆತ್ತಿ ನಾನು ಅವರನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದಿರುವಾಗ ನನ್ನ ಭುಜಗಳಲ್ಲಿ ಹಿಂದೆ ಇದ್ದ ವೀರ್ಯವು ಆಗ ಇಲ್ಲವಾಯಿತು! ಅವರಿಂದ ಸುತ್ತುವರೆಯಲ್ಪಟ್ಟಿದ್ದಾಗ ಕ್ಷಣದಲ್ಲಿಯೇ ನನ್ನ ವಿವಿಧ ಅಸ್ತ್ರಗಳು ಮರೆತು ಹೋದವು ಮತ್ತು ಶರಗಳೂ ಮುಗಿದು ಹೋದವು. ನನ್ನ ರಥದ ಮುಂದೆ ಹೋಗುತ್ತಾ ರಿಪುಸೈನ್ಯಗಳನ್ನು ಸುಡುತ್ತಿದ್ದ ಆ ಪುರುಷ, ಅಪ್ರಮೇಯಾತ್ಮಾ, ಶಂಖಚಕ್ರಗದಾಧರ, ಚತುರ್ಭುಜ, ಪೀತವಾಸ, ಶ್ಯಾಮ, ಪದ್ಮಾಯತೇಕ್ಷಣನನ್ನು ನಾನು ಕಾಣುತ್ತಿಲ್ಲ! ತನ್ನ ತೇಜಸ್ಸಿನಿಂದ ಮೊದಲೇ ಅವನು ಸುಟ್ಟಿದ್ದವರನ್ನು ನಂತರ ನನ್ನ ಶರಗಳನ್ನು ಗಾಂಡೀವದಿಂದ ಪ್ರಯೋಗಿಸಿ ವಿನಾಶಗೊಳಿಸುತ್ತಿದ್ದೆನು. ಅವನನ್ನು ನೋಡದೇ ನಾನು ನಿರಾಶನಾಗಿ ದುಃಖಿತನಾಗಿದ್ದೇನೆ. ನನ್ನ ಚೇತನವೇ ಉಡುಗಿಹೋಗಿ, ಶಾಂತಿಯು ದೊರೆಯದಾಗಿದೆ. ವೀರ ಜನಾರ್ದನನಿಲ್ಲದೇ ನಾನು ಜೀವಿಸಿರಲು ಬಯಸುವುದಿಲ್ಲ. ವಿಷ್ಣುವು ಹೊರಟುಹೋದನೆಂದು ಕೇಳುತ್ತಲೇ ನಾನೂ ಕೂಡ ದಿಕ್ಕುತೋಚದವನಾಗಿದ್ದೇನೆ. ನನ್ನ ಬಂಧುವೀರನನ್ನು ಕಳೆದುಕೊಂಡು ನಾನು ಶೂನ್ಯನಾಗಿ ಸುತ್ತುತ್ತಿದ್ದೇನೆ. ನನಗೆ ಶ್ರೇಯವಾದುದನ್ನು ಉಪದೇಶಿಸು!”
ವ್ಯಾಸನು ಹೇಳಿದನು:
“ಕುರುಶಾರ್ದೂಲ! ವೃಷ್ಣಿ-ಅಂಧಕ ಮಹಾರಥರು ಬ್ರಾಹ್ಮಣರ ಶಾಪದಿಂದ ಸುಟ್ಟು ವಿನಾಶಹೊಂದಿದ್ದಾರೆ. ಅವರ ಕುರಿತು ಶೋಕಿಸಬೇಡ! ಅದು ಹಾಗೆಯೇ ಆಗಬೇಕಾಗಿತ್ತು. ಆ ಮಹಾತ್ಮರಿಗೆ ಹಾಗೆಯೇ ಆಗಬೇಕೆಂದು ವಿಧಿಯು ಕಲ್ಪಿಸಿತ್ತು. ಅದನ್ನು ತಡೆಯಬಲ್ಲವನಾಗಿದ್ದರೂ ಕೃಷ್ಣನು ಅದನ್ನು ಹಾಗೆಯೇ ಆಗಲು ಬಿಟ್ಟನು. ಏಕೆಂದರೆ ಸ್ಥಾವರ-ಜಂಗಮಗಳುಳ್ಳ ಈ ತ್ರೈಲೋಕ್ಯಗಳನ್ನೂ ಕೂಡ ಸಂಪೂರ್ಣವಾಗಿ ಬದಲಾಯಿಸಬಲ್ಲ ಕೃಷ್ಣನಿಗೆ ಮುನಿಗಳ ಶಾಪವು ಯಾವ ಲೆಖ್ಕದ್ದು? ನಿನ್ನ ಮೇಲಿನ ಸ್ನೇಹದಿಂದ ರಥದ ಮುಂದೆ ಹೋಗುತ್ತಿದ್ದ ಅವನು ಪುರಾಣ ಋಷಿ ಚಕ್ರಗದಾಧರ ಚತುರ್ಭುಜ ವಾಸುದೇವನು. ಭೂಮಿಯ ಭಾರವನ್ನು ಕಡಿಮೆ ಮಾಡಿ ಸರ್ವ ಜಗತ್ತನ್ನೂ ಬಿಡುಗಡೆಗೊಳಿಸಿ ಆ ಪೃಥುಲೋಚನನು ತನ್ನ ಉತ್ತಮ ಸ್ಥಾನವನ್ನು ಸೇರಿದ್ದಾನೆ. ನೀನಾದರೋ ಭೀಮ ಮತ್ತು ಯಮಳರ ಸಹಾಯದಿಂದ ದೇವತೆಗಳ ಮಹಾ ಕಾರ್ಯವನ್ನು ಮಾಡಿಕೊಟ್ಟಿದ್ದೀಯೆ. ನೀವು ಎಲ್ಲವನ್ನು ಸಾಧಿಸಿದ್ದೀರಿ ಮತ್ತು ಕೃತಕೃತ್ಯರಾಗಿದ್ದೀರಿ. ನೀವು ಹೊರಡುವ ಕಾಲವು ಬಂದೊದಗಿದೆಯೆಂದೂ ಅದೇ ನಿಮಗೆ ಶ್ರೇಯಸ್ಕರವೆಂದು ನನ್ನ ಅಭಿಪ್ರಾಯ. ಬಲ, ಬುದ್ಧಿ, ತೇಜಸ್ಸು ಮತ್ತು ಸಾಧನೆಗಳು ಏಳಿಗೆಯ ಕಾಲದಲ್ಲಿ ಏಳ್ಗೆ ಹೊಂದುತ್ತವೆ ಮತ್ತು ಕಾಲ ವಿಪರ್ಯಾಸವಾದಾಗ ನಷ್ಟವಾಗುತ್ತವೆ. ಇರುವುದೆಲ್ಲವಕ್ಕೂ ಕಾಲವೇ ಮೂಲ. ಕಾಲವೇ ಸರ್ವಜಗತ್ತಿನ ಬೀಜ. ಕಾಲವೇ, ಬಯಸಿದಾಗ, ಪುನಃ ಎಲ್ಲವನ್ನೂ ಹಿಂದೆ ಸೆಳೆದುಕೊಳ್ಳುತ್ತದೆ. ಬಲವಂತನಾಗಿದ್ದವನು ಪುನಃ ದುರ್ಬಲನಾಗುತ್ತಾನೆ. ಒಡೆಯನಾಗಿದ್ದವನಿಗೆ ಪುನಃ ಇತರರು ಆಜ್ಞಾಪಿಸುತ್ತಾರೆ. ಮಾಡಬೇಕಾದುದನ್ನು ಮಾಡಿ ಮುಗಿಸಿದ ಅಸ್ತ್ರಗಳು ಇಂದು ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಹೊರಟು ಹೋಗಿವೆ. ಮುಂದೆ ಕಾಲವು ಬಂದಾಗ ಪುನಃ ನಿನ್ನ ಕೈಗೆ ಅವು ಬರುತ್ತವೆ. ನೀವೂ ಕೂಡ ಕಾಲದ ಗತಿಯಲ್ಲಿ ಹೋಗುವುದು ಮುಖ್ಯ. ಇದರಲ್ಲಿಯೇ ನಿಮ್ಮ ಪರಮ ಶ್ರೇಯವಿದೆಯೆಂದು ನನಗನ್ನಿಸುತ್ತದೆ.”
ಅಮಿತತೇಜಸ್ವಿ ವ್ಯಾಸನ ಈ ಮಾತನ್ನು ಆಜ್ಞೆಯೆಂದು ಸ್ವೀಕರಿಸಿ ಅವನಿಂದ ಅಪ್ಪಣೆಪಡೆದು ಪಾರ್ಥನು ಹಸ್ತಿನಾಪುರಕ್ಕೆ ಬಂದನು. ಆ ವೀರನು ಪುರವನ್ನು ಪ್ರವೇಶಿಸಿ, ಯುಧಿಷ್ಠಿರನನ್ನು ಸಂದರ್ಶಿಸಿ, ಅವನಿಗೆ ವೃಷ್ಣಿ-ಅಂಧಕ ಜನರಿಗೆ ಆದುದೆಲ್ಲವನ್ನೂ ತಿಳಿಸಿದನು.
Kannada Yakshagana Shri Krishna Parandhama and Pandava Swargarohana: