ಮಹಾಪ್ರಸ್ಥಾನ
ಪಾಂಡವಪ್ರವ್ರಜನ
ವೃಷ್ಣಿಗಳ ಮಹಾ ಕದನದ ಕುರಿತು ಕೇಳುತ್ತಲೇ ಕೌರವ ರಾಜ ಯುಧಿಷ್ಠಿರನು ಪ್ರಸ್ಥಾನದ ಕುರಿತು ನಿಶ್ಚಯಿಸಿ ಅರ್ಜುನನಿಗೆ ಇಂತೆಂದನು:
“ಮಹಾಮತೇ! ಕಾಲವು ಸರ್ವ ಭೂತಗಳನ್ನೂ ಬೇಯಿಸುತ್ತದೆ. ಕರ್ಮನ್ಯಾಸಮಾಡಬೇಕೆಂದು ನನಗನ್ನಿಸುತ್ತದೆ. ನೀನೂ ಕೂಡ ಇದರ ಕುರಿತು ಯೋಚಿಸಬೇಕಾಗಿದೆ.”
ಇದನ್ನು ಕೇಳಿದ ವೀರ್ಯವಾನ್ ಕೌಂತೇಯನು “ಕಾಲವೇ ಕಾಲ!” ಎಂದು ಹೇಳುತ್ತಾ ಜ್ಯೇಷ್ಠ ಭ್ರಾತರನ ಆ ಮಾತನ್ನು ಒಪ್ಪಿಕೊಂಡನು. ಅರ್ಜುನನ ಮತವನ್ನು ಅರಿತ ಭೀಮಸೇನ ಮತ್ತು ಯಮಳರು ಸವ್ಯಸಾಚಿಯು ಆಡಿದ ಆ ಮಾತನ್ನು ಒಪ್ಪಿಕೊಂಡರು. ಧರ್ಮಕಾಮನೆಯಿಂದ ಹೊರಟ ಯುಧಿಷ್ಠಿರನು ವೈಶ್ಯಾಪುತ್ರ ಯುಯುತ್ಸುವನ್ನು ಕರೆದು ಅವನಿಗೆ ರಾಜ್ಯವೆಲ್ಲವನ್ನೂ ಕೊಟ್ಟನು. ಸ್ವರಾಜ್ಯದಲ್ಲಿ ರಾಜ ಪರಿಕ್ಷಿತನನ್ನು ಅಭಿಷೇಕಿಸಿ, ದುಃಖಾರ್ತನಾದ ಪಾಂಡವಾಗ್ರಜ ರಾಜನು ಸುಭದ್ರೆಗೆ ಹೇಳಿದನು:
“ಈ ನಿನ್ನ ಮಗನ ಮಗನು ಕುರುರಾಜನಾಗುತ್ತಾನೆ. ಯದುಗಳಲ್ಲಿ ಕೊನೆಯವನಾಗಿ ಉಳಿದುಕೊಂಡಿರುವ ಈ ವಜ್ರನನ್ನೂ ರಾಜನನ್ನಾಗಿ ಮಾಡಿಯಾಗಿದೆ. ಪರಿಕ್ಷಿತನು ಹಸ್ತಿನಾಪುರದಲ್ಲಿಯೂ ಯಾದವ ವಜ್ರನು ಇಂದ್ರಪ್ರಸ್ಥದಲ್ಲಿಯೂ ರಾಜ್ಯವಾಳಲಿ. ರಾಜಾ ವಜ್ರನು ನಿನ್ನ ರಕ್ಷಣೆಯಲ್ಲಿರಲಿ. ಅಧರ್ಮವೆಸಗುವ ಯೋಚನೆಯನ್ನೂ ಮಾಡಬೇಡ!”
ಹೀಗೆ ಹೇಳಿ ಧರ್ಮಾತ್ಮ ಧರ್ಮರಾಜನು ತಾಯಿಯೊಂದಿಗೆ ಧೀಮತ ವಾಸುದೇವನ, ವೃದ್ಧ ಸೋದರ ಮಾವನ, ರಾಮಾದಿಗಳೆಲ್ಲರನ್ನೂ ಉದ್ದೇಶಿಸಿ ವಿಧಿವತ್ತಾಗಿ ಶುದ್ಧೋದಕಗಳಿಂದ ಶ್ರಾದ್ಧಗಳನ್ನು ನೆರವೇರಿಸಿದನು. ದ್ವಿಜಮುಖ್ಯರಿಗೆ ರತ್ನಗಳನ್ನೂ, ವಸ್ತ್ರಗಳನ್ನೂ, ಗ್ರಾಮಗಳನ್ನೂ, ಕುದುರೆ-ರಥಗಳನ್ನೂ, ಸ್ತ್ರೀಯರನ್ನೂ, ನೂರು ಸಾವಿರ ಗೋವುಗಳನ್ನೂ ದಾನಮಾಡಿದನು. ಆ ಭರತಸತ್ತಮನು ತನ್ನ ಗುರು ಕೃಪನನ್ನು ಧನ ಮತ್ತು ಮಾನ್ಯತೆಗಳಿಂದ ಪೂಜಿಸಿ ಅವನಿಗೆ ಪರಿಕ್ಷಿತನನ್ನು ಶಿಷ್ಯನನ್ನಾಗಿ ಒಪ್ಪಿಸಿದನು. ಅನಂತರ ಯುಧಿಷ್ಠಿರನು ತನ್ನ ಸರ್ವ ಪ್ರಜೆಗಳನ್ನೂ ಕರೆಯಿಸಿ ತಾನು ಮಾಡಲು ಹೊರಟಿರುವ ಎಲ್ಲದರ ಕುರಿತು ಹೇಳಿದನು. ಅವನ ಮಾತನ್ನು ಕೇಳಿದೊಡನೆಯೇ ಪೌರ ಮತ್ತು ಜಾನಪದ ಜನರು ತುಂಬಾ ಉದ್ವಿಗ್ನರಾಗಿ ಆ ಮಾತನ್ನು ಸ್ವೀಕರಿಸಲಿಲ್ಲ. “ಹೀಗೆ ಮಾಡಬಾರದು! ಕಾಲದ ಪರ್ಯಾಯವನ್ನೂ ಧರ್ಮವನ್ನೂ ತಿಳಿದ ಯಾವ ರಾಜನೂ ಹೀಗೆ ಮಾಡುವುದಿಲ್ಲ!” ಎಂದು ಅವರು ನರಾಧಿಪನಿಗೆ ಹೇಳಿದರು. ಆಗ ಧರ್ಮಾತ್ಮನು ಪೌರ ಜಾನಪದ ಜನರನ್ನು ಒಪ್ಪಿಸಿದನು. ಅನಂತರ ಸಹೋದರರು ಹೊರಡಲು ನಿಶ್ಚಯಿಸಿದರು.
ಆಗ ರಾಜಾ ಕೌರವ್ಯ ಧರ್ಮಪುತ್ರ ಯುಧಿಷ್ಠಿರನು ಅಂಗಗಳ ಮೇಲಿದ್ದ ಆಭರಣಗಳನ್ನು ತೆಗೆದಿಟ್ಟು ವಲ್ಕಲವಸ್ತ್ರವನ್ನು ಧರಿಸಿದನು.ಹಾಗೆಯೇ ಭೀಮಾರ್ಜುನರೂ, ಯಮಳರೂ, ಯಶಸ್ವಿನೀ ದ್ರೌಪದಿ ಎಲ್ಲರೂ ವಲ್ಕಲಗಳನ್ನು ಧರಿಸಿದರು. ವಿಧಿವತ್ತಾಗಿ ಅಂತ್ಯೇಷ್ಟಿಯನ್ನು ಮಾಡಿಸಿಕೊಂಡು ಆ ಅಗ್ನಿಗಳನ್ನು ನದಿಯಲ್ಲಿ ವಿಸರ್ಜಿಸಿ ನರಪುಂಗವರೆಲ್ಲರೂ ಹೊರಟರು. ಬಹುಕಾಲದ ಹಿಂದೆ ದ್ಯೂತದಲ್ಲಿ ಸೋತು ಹೋಗುತ್ತಿದ್ದಂತೆ ದ್ರೌಪದಿಯೊಡಗೂಡಿ ಹೊರಹೊರಟಿರುವ ಆ ನರರ್ಷಭರನ್ನು ನೋಡಿ ಸರ್ವ ಸ್ತ್ರೀಯರೂ ರೋದಿಸಿದರು. ಆದರೆ ವೃಷ್ಣಿಗಳ ವಿನಾಶವನ್ನು ಕಂಡು ಮತ್ತು ಯುಧಿಷ್ಠಿರನ ಮತವನ್ನು ಅರಿತು ಆ ಸರ್ವ ಭ್ರಾತೃಗಳು ಹೊರಟಿರುವ ವಿಷಯದಲ್ಲಿ ಅವರು ಹರ್ಷವನ್ನೂ ತಾಳಿದ್ದರು. ಐವರು ಸಹೋದರರು, ಆರನೆಯವಳಾಗಿ ಕೃಷ್ಣೆ, ಮತ್ತು ಏಳನೆಯದಾಗಿ ನಾಯಿಯೊಡನೆ ರಾಜನು ಹಸ್ತಿನಾಪುರದಿಂದ ಹೊರಟನು. ಅಂತಃಪುರದವರೂ ಪೌರರೂ ಎಲ್ಲರೂ ಬಹಳ ದೂರ ಅವರನ್ನು ಅನುಸರಿಸಿದರು. ಅವರನ್ನು ಹಿಂದಿರುಗಿರೆಂದು ಹೇಳಲು ಯಾರೂ ಸಮರ್ಥರಾಗದೇ ನಗರವಾಸಿಗಳೆಲ್ಲರೂ ಹಿಂದಿರುಗಿದರು. ಕೃಪನೇ ಮೊದಲಾದವರು ಹಸ್ತಿನಾಪುರದಲ್ಲಿ ಯುಯುತ್ಸುವಿನ ಬಳಿ ಇದ್ದರು. ಭುಜಗಾತ್ಮಜೆ ಉಲೂಪಿಯು ಗಂಗೆಯನ್ನು ಪ್ರವೇಶಿಸಿದಳು. ಚಿತ್ರಾಂಗದೆಯು ಮಣಿಪೂರಪುರಕ್ಕೆ ಹೋದಳು. ಉಳಿದ ಅನ್ಯ ತಾಯಂದಿರು ಪರಿಕ್ಷಿತನನ್ನು ನೋಡಿಕೊಂಡರು.
ಮಹಾತ್ಮ ಪಾಂಡವರೂ ಯಶಸ್ವಿನೀ ದ್ರೌಪದಿಯೂ ಉಪವಾಸದಲ್ಲಿದ್ದುಕೊಂಡು ಪೂರ್ವಾಭಿಮುಖವಾಗಿ ಹೋದರು. ಯೋಗಯುಕ್ತರಾದ ಆ ಮಹಾತ್ಮರು ತ್ಯಾಗಧರ್ಮವನ್ನನುಸರಿಸಿ ಅನೇಕ ದೇಶ-ನದೀ-ಪರ್ವತಗಳನ್ನು ದಾಟಿದರು. ಎಲ್ಲರಿಗಿಂತ ಮುಂದೆ ಯುಧಿಷ್ಠಿರನು ಹೋಗುತ್ತಿದ್ದನು. ಅವನ ನಂತರ ಭೀಮ, ಅರ್ಜುನನು ಅವನ ನಂತರ ಮತ್ತು ಅವನ ಹಿಂದೆ ಯಥಾಕ್ರಮವಾಗಿ ಯಮಳರು ಹೋಗುತ್ತಿದ್ದರು. ಆರನೆಯವಳಾಗಿ ವರಾರೋಹೆ ಶ್ಯಾಮೆ ಪದ್ಮದಲೇಕ್ಷಣೆ ಸ್ತ್ರೀಶ್ರೇಷ್ಠೆ ದ್ರೌಪದಿಯು ಹೋಗುತ್ತಿದ್ದಳು. ಪಾಂಡವರು ವನಕ್ಕೆ ಹೊರಟಾಗ ಅವರನ್ನು ಹಿಂಬಾಲಿಸಿ ಒಂಟಿ ನಾಯಿಯೂ ಹೊರಟಿತ್ತು. ಕ್ರಮೇಣವಾಗಿ ಆ ವೀರರು ಲೌಹಿತ್ಯವೆಂಬ ಸಮುದ್ರಕ್ಕೆ ಬಂದರು.
ಧನಂಜಯನು ತನ್ನ ಆ ದಿವ್ಯ ಧನುಸ್ಸು ಗಾಂಡೀವವನ್ನೂ ಎರಡು ಅಕ್ಷಯ ಭತ್ತಳಿಕೆಗಳನ್ನೂ ಬಿಟ್ಟಿರಲಿಲ್ಲ. ಆಗ ಅವರು ಪರ್ವತದಂತಹ ಪುರುಷಾಕೃತಿಯಲ್ಲಿ ಎದಿರು ಮಾರ್ಗಕ್ಕೆ ಅಡ್ಡಕಟ್ಟಿ ನಿಂತಿರುವ ಅಗ್ನಿಯನ್ನು ನೋಡಿದರು. ಆಗ ದೇವ ಸಪ್ತಾರ್ಚಿಯು ಪಾಂಡವರಿಗೆ ಇದನ್ನು ಹೇಳಿದನು:
“ವೀರ ಪಾಂಡುಸುತರೇ! ನನ್ನನ್ನು ಪಾವಕನೆಂದು ತಿಳಿಯಿರಿ! ಯುಧಿಷ್ಠಿರ ಮಹಾಬಾಹೋ! ಪರಂತಪ ಭೀಮಸೇನ! ಅರ್ಜುನ ಮತ್ತು ವೀರ ಅಶ್ವಿನೀಸುತರೇ! ನನ್ನ ಮಾತನ್ನು ಕೇಳಿ! ನಾನು ಅಗ್ನಿಯು! ಅರ್ಜುನ ಮತ್ತು ನಾರಾಯಣರ ಪ್ರಭಾವದಿಂದ ನಾನು ಖಾಂಡವವನ್ನು ದಹಿಸಿ ಭಸ್ಮಗೊಳಿಸಿದೆನು. ನಿನ್ನ ಈ ಭ್ರಾತಾ ಫಲ್ಗುನನು ಪರಮಾಯುಧ ಗಾಂಡೀವವನ್ನು ಇಲ್ಲಿಯೇ ಬಿಟ್ಟು ವನಕ್ಕೆ ತೆರಳಬೇಕು. ಅವನಿಗೆ ಇನ್ನು ಮುಂದೆ ಇದರ ಅವಶ್ಯಕತೆಯಿರುವುದಿಲ್ಲ. ಮಹಾತ್ಮ ಕೃಷ್ಣನಲ್ಲಿದ್ದ ಚಕ್ರರತ್ನವು ಆಗಲೇ ಹೊರಟು ಹೋಗಿ ಕಾಲಾಂತರದಲ್ಲಿ ಪುನಃ ಅವನ ಹಸ್ತವನ್ನು ಸೇರುತ್ತದೆ. ಹಿಂದೆ ಅರ್ಜುನನಿಗೋಸ್ಕರ ವರುಣನಿಂದ ನಾನು ಪಡೆದಿದ್ದ ಈ ಕಾರ್ಮುಕಶ್ರೇಷ್ಠ ಗಾಂಡೀವವನ್ನು ವರುಣನಿಗೆ ಹಿಂದಿರುಗಿಸಬೇಕಾಗಿದೆ.”
ಆಗ ಅವನ ಸಹೋದರರೆಲ್ಲರೂ ಧನಂಜಯನನ್ನು ಒತ್ತಾಯಿಸಲು ಅವನು ಮಹಾ ಧನುಸ್ಸನ್ನೂ ಹಾಗೆಯೇ ಅಕ್ಷಯ ಭತ್ತಳಿಕೆಗಳನ್ನೂ ನೀರಿನಲ್ಲಿ ಹಾಕಿದನು. ಆಗ ಅಗ್ನಿಯು ಅಲ್ಲಿಯೇ ಅಂತರ್ಧಾನನಾದನು. ಅನಂತರ ವೀರ ಪಾಂಡವರು ಅಲ್ಲಿಂದ ದಕ್ಷಿಣಾಭಿಮುಖರಾಗಿ ನಡೆದರು.
ಆ ಸಮುದ್ರದ ಉತ್ತರ ತೀರದಿಂದ ಹೊರಟು ಅವರು ಅದರ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಹೋದರು. ಅಲ್ಲಿಂದ ಪುನಃ ಪಶ್ಚಿಮ ದಿಕ್ಕಿಗೆ ತಿರುಗಿ ನಡೆದು ಅಲ್ಲಿ ಸಮುದ್ರದಲ್ಲಿ ಮುಳುಗಿಹೋಗಿದ್ದ ದ್ವಾರಕೆಯನ್ನು ನೋಡಿದರು. ಭೂಮಿಯನ್ನು ಪ್ರದಕ್ಷಿಣೆ ಮಾಡುತ್ತಿರುವಂತೆ ಆ ಯೋಗಧರ್ಮಿ ಭರತಸತ್ತಮರು ಪುನಃ ಉತ್ತರ ದಿಕ್ಕಿನಲ್ಲಿ ನಡೆದರು.
ಭೀಮಾದಿಗಳ ಪತನ
ನಿಯತಾತ್ಮರೂ ಯೋಗಯುಕ್ತರೂ ಆಗಿ ಉತ್ತರ ದಿಕ್ಕಿನಲ್ಲಿ ಪ್ರಯಾಣಮಾಡುತ್ತಿದ್ದ ಅವರು ಮಹಾಗಿರಿ ಹಿಮಾಲಯವನ್ನು ಕಂಡರು. ಅದನ್ನೂ ಅತಿಕ್ರಮಿಸಿ ಹೋದ ಅವರು ಮರಳಿನ ಮರುಭೂಮಿಯೊಂದನ್ನು ನೋಡಿದರು. ಅದಕ್ಕಿಂತಲೂ ಆಚೆ ಮಹಾಶೈಲ, ಪರ್ವತಶ್ರೇಷ್ಠ ಮೇರುವನ್ನು ನೋಡಿದರು. ಆ ಎಲ್ಲ ಯೋಗಧರ್ಮಿಗಳೂ ಹಾಗೆ ಶೀಘ್ರವಾಗಿ ಹೋಗುತ್ತಿರಲು, ಯೋಗಭ್ರಷ್ಟಳಾದ ಯಾಜ್ಞಸೇನಿಯು ಕೆಳಕ್ಕೆ ಬಿದ್ದಳು. ಹಾಗೆ ಕೆಳಕ್ಕೆ ಬಿದ್ದ ಯಾಜ್ಞಸೇನಿಯನ್ನು ನೋಡಿ ಮಹಾಬಲ ಭೀಮಸೇನನು ಧರ್ಮರಾಜನಿಗೆ ಇಂತೆಂದನು:
“ಪರಂತಪ! ರಾಜಪುತ್ರಿಯು ಎಂದೂ ಅಧರ್ಮದಿಂದ ನಡೆದುಕೊಂಡಿರಲಿಲ್ಲ. ರಾಜನ್! ಆದರೂ ಕೃಷ್ಣೆಯು ಏಕೆ ಬಿದ್ದಳು?”
“ಧನಂಜಯನಲ್ಲಿ ವಿಶೇಷವಾಗಿ ಇವಳ ಪಕ್ಷಪಾತವಿತ್ತು. ಅದರ ಫಲವನ್ನೇ ಇಂದು ಅವಳು ಅನುಭವಿಸಿದ್ದಾಳೆ.”
ಹೀಗೆ ಹೇಳಿ ಅವಳನ್ನು ನೋಡದೇ ಧರ್ಮಸುತ ನೃಪ ಧೀಮಾನ್ ಧರ್ಮಾತ್ಮ ಪುರುಷರ್ಷಭನು ಮನಸ್ಸನ್ನು ಕೇಂದ್ರೀಕರಿಸಿಟ್ಟುಕೊಂಡು ಮುಂದೆ ಹೋದನು. ಅನಂತರ ಧೀಮಾನ್ ಸಹದೇವನು ಮಹೀತಲದಲ್ಲಿ ಬಿದ್ದನು. ಅವನೂ ಬಿದ್ದುದನ್ನು ಕಂಡ ಭೀಮನು ರಾಜನಿಗೆ ಹೇಳಿದನು:
“ಇವನು ಅಹಂಕಾರವಿಲ್ಲದೇ ನಮ್ಮೆಲ್ಲರ ಶುಶ್ರೂಷೆಮಾಡಿದನು. ಏಕೆ ಈ ಮಾದ್ರವತೀಪುತ್ರನು ಭೂಮಿಯ ಮೇಲೆ ಬಿದ್ದಿದ್ದಾನೆ?”
ಯುಧಿಷ್ಠಿರನು ಹೇಳಿದನು:
“ಇವನು ತನಗೆ ಸಮಾನ ಪ್ರಾಜ್ಞನು ಬೇರೆ ಯಾರೂ ಇಲ್ಲವೆಂದು ಅಭಿಪ್ರಾಯಪಟ್ಟಿದ್ದನು. ಆ ದೋಷದಿಂದಲೇ ಈ ನೃಪತಾತ್ಮಜನು ಬಿದ್ದಿದ್ದಾನೆ.”
ಹೀಗೆ ಹೇಳಿ ಸಹದೇವನನ್ನು ಅಲ್ಲಿಯೇ ಬಿಟ್ಟು ಸಹೋದರರು ಮತ್ತು ನಾಯಿಯೊಂದಿಗೆ ಕೌಂತೇಯ ಯುಧಿಷ್ಠಿರನು ಮುಂದುವರೆದನು. ಕೃಷ್ಣೆ ಮತ್ತು ಪಾಂಡವ ಸಹದೇವರು ಬಿದ್ದುದನ್ನು ನೋಡಿ ಆರ್ತನಾದ ಬಂಧುಪ್ರಿಯ ಶೂರ ನಕುಲನೂ ಬಿದ್ದನು. ಆ ಸುಂದರ ವೀರ ನಕುಲನು ಬೀಳಲು ಭೀಮನು ಪುನಃ ರಾಜನಿಗೆ ಹೇಳಿದನು:
“ಈ ಭ್ರಾತನು ಧರ್ಮಾತ್ಮನಾಗಿದ್ದು ಧರ್ಮದಿಂದ ಸ್ವಲ್ಪವೂ ಚ್ಯುತನಾಗಿರಲಿಲ್ಲ. ಹೇಳಿದ್ದನ್ನು ಮಾಡುತ್ತಿದ್ದನು. ಲೋಕದಲ್ಲಿ ಅಪ್ರತಿಮ ರೂಪವಂತನಾಗಿದ್ದನು. ಅಂಥಹ ನಕುಲನು ಭೂಮಿಯ ಮೇಲೆ ಬಿದ್ದಿದ್ದಾನೆ.”
ಭೀಮಸೇನನು ಹೀಗೆ ಹೇಳಲು ಧರ್ಮಾತ್ಮ ಸರ್ವಬುದ್ಧಿವಂತರಲ್ಲಿ ಶ್ರೇಷ್ಠ ಯುಧಿಷ್ಠಿರನು ನಕುಲನ ಕುರಿತು ಹೀಗೆ ಉತ್ತರಿಸಿದನು:
“ರೂಪದಲ್ಲಿ ತನ್ನ ಸಮನಾಗಿರುವವರು ಯಾರೂ ಇಲ್ಲವೆಂದೂ, ರೂಪದಲ್ಲಿ ತಾನೊಬ್ಬನೇ ಅಧಿಕನೆಂದೂ ಇವನ ನಂಬಿಕೆಯಾಗಿತ್ತು. ಆದುದರಿಂದ ನಕುಲನು ಬಿದ್ದಿದ್ದಾನೆ. ಬಾ ವೃಕೋದರ! ಯಾರಿಗೆ ಏನು ವಿಧಿವಿಹಿತವಾಗಿದೆಯೋ ಅದನ್ನು ಅವನು ಅವಶ್ಯವಾಗಿ ಪಡೆಯುತ್ತಾನೆ!”
ಅವರು ಕೆಳಗೆ ಬಿದ್ದುದನ್ನು ನೋಡಿ ಪಾಂಡವ ಶ್ವೇತವಾಹನ ಪರವೀರಹ ಅರ್ಜುನನೂ ಶೋಕಸಂತಪ್ತನಾಗಿ ಕೆಳಗೆ ಬಿದ್ದನು. ಆ ಶಕ್ರತೇಜಸ್ವಿ ದುರಾಧರ್ಷ ಪುರುಷವ್ಯಾಘ್ರನೂ ಸತ್ತು ಬೀಳಲು ಭೀಮನು ರಾಜನಿಗೆ ಹೇಳಿದನು:
“ಈ ಮಹಾತ್ಮನೂ ಅನೃತವಾಡಿದುದು ನನ್ನ ನೆನಪಿಗೆ ಬರುತ್ತಿಲ್ಲ. ಅವನು ಏಕೆ ಈ ರೀತಿಯ ವಿಕಾರನಾಗಿ ಭೂಮಿಯಮೇಲೆ ಬಿದ್ದನು?”
ಯುಧಿಷ್ಠಿರನು ಹೇಳಿದನು:
"“ಒಂದೇ ದಿನದಲ್ಲಿ ನಾನು ಶತ್ರುಗಳನ್ನು ಜಯಿಸುತ್ತೇನೆ!” ಎಂದು ಅರ್ಜುನನು ಹೇಳಿದ್ದನು. ಆ ಶೂರಮಾನಿನಿಯು ಹಾಗೆ ಮಾಡದೇ ಇದ್ದುದರಿಂದ ಈಗ ಬಿದ್ದಿದ್ದಾನೆ. ಫಲ್ಗುನನು ಧನುರ್ಧಾರಿಗಳೆಲ್ಲರನ್ನೂ ಕೀಳಾಗಿ ಕಾಣುತ್ತಿದ್ದನು. ವೃದ್ಧಿಯನ್ನು ಬಯಸಿದವನು ತಾನು ಹೇಳಿದಂತೆ ಮಾಡಬೇಕಾಗುತ್ತದೆ.”
ಹೀಗೆ ಹೇಳಿ ರಾಜನು ಮುಂದುವರೆಯಲು ಭೀಮನೂ ಕೆಳಗೆ ಬಿದ್ದನು. ಕೆಳಗೆ ಬಿದ್ದ ಭೀಮನು ಧರ್ಮರಾಜ ಯುಧಿಷ್ಠಿರನಿಗೆ ಹೇಳಿದನು:
“ರಾಜನ್! ನಿನ್ನ ಪ್ರಿಯನಾದ ನಾನೂ ಬಿದ್ದಿದ್ದೇನೆ. ನಿನಗೆ ತಿಳಿದಿದ್ದರೆ ಯಾವ ಕಾರಣದಿಂದ ನಾನು ಬಿದ್ದೆ ಎನ್ನುವುದನ್ನೂ ಹೇಳು!”
ಯುಧಿಷ್ಠಿರನು ಹೇಳಿದನು:
“ನೀನು ತುಂಬಾ ತಿನ್ನುತ್ತಿದ್ದೆ ಮತ್ತು ನಿನ್ನ ಶಕ್ತಿಯ ಕುರಿತು ಕೊಚ್ಚಿಕೊಳ್ಳುತ್ತಿದ್ದೆ. ಇತರರನ್ನು ಕೀಳಾಗಿ ಕಾಣುತ್ತಿದ್ದೆ. ಇದರಿಂದಾಗಿ ನೀನು ಭೂಮಿಯಲ್ಲಿ ಬಿದ್ದಿದ್ದೀಯೆ!”
ಹೀಗೆ ಹೇಳಿ ಆ ಮಹಾಬಾಹುವು ತಿರುಗಿ ನೋಡದೇ ಮುಂದುವರೆದನು. ನಾನು ಮೊದಲೇ ಬಹಳವಾಗಿ ಹೇಳಿದ್ದಂತೆ ಈಗ ಆ ನಾಯಿಯೊಂದೇ ಅವನನ್ನು ಅನುಸರಿಸಿ ಹೋಗುತ್ತಿತ್ತು.
ಇಂದ್ರ-ಯುಧಿಷ್ಠಿರ ಸಂವಾದ
ಆಗ ತನ್ನ ರಥದಿಂದ ಭೂಮಿ-ಆಕಾಶ ಎಲ್ಲವನ್ನೂ ಮೊಳಗಿಸುತ್ತ ಶಕ್ರನು ಆಗಮಿಸಿ ಪಾರ್ಥನಿಗೆ “ಮೇಲೇರು!” ಎಂದನು. ಸಹೋದರರು ಬಿದ್ದುದನ್ನು ನೋಡಿ ಧರ್ಮರಾಜ ಯುಧಿಷ್ಠಿರನು ಶೋಕಸಂತಪ್ತನಾಗಿ ಸಹಸ್ರಾಕ್ಷನಿಗೆ ಈ ಮಾತನ್ನಾಡಿದನು:
“ನನ್ನ ಸಹೋದರರು ಅಲ್ಲಿ ಬಿದ್ದಿದ್ದಾರೆ. ಅವರೂ ಕೂಡ ನನ್ನೊಡನೆ ಬರಲಿ. ಸುರೇಶ್ವರ! ಭ್ರಾತೃಗಳನ್ನು ಬಿಟ್ಟು ಸ್ವರ್ಗಕ್ಕೆ ಬರಲು ನಾನು ಬಯಸುವುದಿಲ್ಲ! ಸುಕುಮಾರೀ, ಸುಖಕ್ಕೆ ಅರ್ಹಳಾದ ರಾಜಪುತ್ರಿಯೂ ಕೂಡ ನಮ್ಮೊಡನೆ ಬರುವಂತಾಗಲೆಂದು ನೀನು ಅನುಮತಿಯನ್ನು ನೀಡಬೇಕು!”
ಇಂದ್ರನು ಹೇಳಿದನು:
“ಮಗನೇ! ಮೊದಲೇ ಸ್ವರ್ಗಕ್ಕೆ ಹೋಗಿರುವ ಕೃಷ್ಣೆಯ ಸಹಿತ ಭ್ರಾತೃಗಳೆಲ್ಲರನ್ನೂ ನೀನು ನೋಡುವೆ. ದುಃಖಿಸಬೇಡ! ಅವರು ಮನುಷ್ಯದೇಹವನ್ನು ಇಲ್ಲಿಯೇ ಇಟ್ಟು ಹೋಗಿದ್ದಾರೆ. ನೀನು ನಿನ್ನ ಈ ಶರೀರದಿಂದಲೇ ಸ್ವರ್ಗಕ್ಕೆ ಹೋಗುತ್ತೀಯೆ. ಅದರಲ್ಲಿ ಸಂಶಯವಿಲ್ಲ!”
ಯುಧಿಷ್ಠಿರನು ಹೇಳಿದನು:
“ಭೂತಭವ್ಯೇಶ! ಈ ನಾಯಿಯು ನಿತ್ಯವೂ ನನ್ನ ಭಕ್ತನಾಗಿದ್ದಿತು. ಅದೂ ಕೂಡ ನನ್ನೊಡನೆ ಬರಲಿ. ಅದರ ಮೇಲೆ ನನಗೆ ದಯಾಭಾವವುಂಟಾಗಿದೆ!”
ಇಂದ್ರನು ಹೇಳಿದನು:
“ರಾಜನ್! ಇಂದು ನೀನು ನನ್ನ ಸಮನಾಗಿ ಅಮರತ್ವವನ್ನೂ, ಶ್ರೀಯನ್ನೂ, ವಿಶಾಲ ಬೃಹತ್ಕೀರ್ತಿಯನ್ನೂ ಸ್ವರ್ಗಸುಖಗಳನ್ನೂ ಪಡೆದಿದ್ದೀಯೆ. ಈ ನಾಯಿಯನ್ನು ತೊರೆ. ಇದರಲ್ಲಿ ಅಹಿಂಸೆಯೇನೂ ಇಲ್ಲ!”
ಯುಧಷ್ಠಿರನು ಹೇಳಿದನು:
“ಸಹಸ್ರನೇತ್ರ! ಆರ್ಯ! ಆರ್ಯನಾದವನಿಗೆ ಅನಾರ್ಯ ಕೃತ್ಯವನ್ನು ಮಾಡುವುದು ದುಷ್ಕರವಾದುದು, ಅಶಕ್ಯವಾದುದು. ಭಕ್ತಜನರನ್ನು ತೊರೆದು ನಾನು ಶ್ರೀಯನ್ನು ಸಂಪಾದಿಸುವಂತಾಗದಿರಲಿ!”
ಇಂದ್ರನು ಹೇಳಿದನು:
“ಧರ್ಮರಾಜ! ನಾಯಿಯ ಒಡೆಯರಿಗೆ ಸ್ವರ್ಗಲೋಕದಲ್ಲಿ ಸ್ಥಾನವಿಲ್ಲ. ಅವರ ಇಷ್ಟಿ-ಯಾಗಗಳ ಪುಣ್ಯಗಳನ್ನು ಕ್ರೋಧವಶ ರಾಕ್ಷಸರು ಅಪಹರಿಸುತ್ತಾರೆ. ಆದುದರಿಂದ ವಿಚಾರಿಸಿ ಕಾರ್ಯಮಾಡು. ನಾಯಿಯನ್ನು ಇಲ್ಲಿಯೇ ಬಿಟ್ಟುಬಿಡು. ಅದರಲ್ಲಿ ಅಹಿಂಸೆಯೇನೂ ಇಲ್ಲ.”
ಯುಧಿಷ್ಠಿರನು ಹೇಳಿದನು:
“ಭಕ್ತರನ್ನು ತ್ಯಜಿಸುವುದು ಅತ್ಯಂತ ಪಾಪವೆಂದು ಹೇಳುತ್ತಾರೆ. ಲೋಕದಲ್ಲಿ ಆ ಪಾಪವು ಬ್ರಹ್ಮವಧೆಯನ್ನು ಮಾಡಿದುದಕ್ಕೆ ಸಮಾನ. ಆದುದರಿಂದ ನನ್ನ ಸುಖಕ್ಕಾಗಿ ಇಂದು ಇದನ್ನು ನಾನು ತ್ಯಜಿಸುವುದಿಲ್ಲ!”
ಇಂದ್ರನು ಹೇಳಿದನು:
“ನಾಯಿಯು ನೋಡಿದ ದಾನ, ಯಜ್ಞ ಮತ್ತು ಆಹುತಿಗಳನ್ನು ಕ್ರೋಧವಶ ರಾಕ್ಷಸರು ಅಪಹರಿಸುತ್ತಾರೆ. ಆದುದರಿಂದ ಈ ನಾಯಿಯನ್ನು ತ್ಯಜಿಸು. ನಾಯಿಯನ್ನು ತ್ಯಜಿಸಿದರೆ ನಿನಗೆ ದೇವಲೋಕವು ದೊರೆಯುತ್ತದೆ. ವೀರ! ಸಹೋದರರನ್ನೂ ಪತ್ನಿ ಕೃಷ್ಣೆಯನ್ನೂ ಇಲ್ಲಿ ಬಿಟ್ಟು ನಿನ್ನದೇ ಕರ್ಮಗಳಿಂದ ಲೋಕಗಳನ್ನು ಪಡೆದಿದ್ದೀಯೆ. ಈ ನಾಯಿಯನ್ನೇಕೆ ನೀನು ತ್ಯಜಿಸುತ್ತಿಲ್ಲ? ಸರ್ವವನ್ನೂ ತ್ಯಾಗಮಾಡಿರುವ ನೀನು ಈ ವಿಷಯದಲ್ಲಿ ಏಕೆ ಮೋಹಗೊಳ್ಳುತ್ತಿದ್ದೀಯೆ?”
ಯುಧಿಷ್ಠಿರನು ಹೇಳಿದನು:
“ಮೃತರಾದ ಮನುಷ್ಯರೊಡನೆ ಸ್ನೇಹವಾಗಲೀ ದ್ವೇಶವಾಗಲೀ ಇರಲಾರದು ಎನ್ನುವುದು ಲೋಕಗಳ ನಿಷ್ಠೆ. ಅವರನ್ನು ಜೀವಗೊಳಿಸಲೂ ನಾನು ಶಕ್ಯನಾಗಿರಲಿಲ್ಲ. ಆದುದರಿಂದ ನಾನು ಅವರನ್ನು ತೊರೆದೆ. ಅವರು ಜೀವಿತವಿರುವಾಗ ಎಂದೂ ನಾನು ಅವರನ್ನು ತೊರೆದಿರಲಿಲ್ಲ! ಶರಣಾಗತನಾದವನನ್ನು ಅವನ ಶತ್ರುವಿಗೆ ಒಪ್ಪಿಸುವುದು, ಸ್ತ್ರೀಯನ್ನು ವಧಿಸುವುದು, ಬ್ರಾಹ್ಮಣನದ್ದನ್ನು ಅಪಹರಿಸುವುದು, ಮತ್ತು ಮಿತ್ರದ್ರೋಹ ಈ ನಾಲ್ಕೂ ಭಕ್ತತ್ಯಾಗಕ್ಕೆ ಸಮವೆಂದು ನನ್ನ ಅಭಿಪ್ರಾಯ!”
ಧರ್ಮರಾಜನ ಆ ಮಾತನ್ನು ಕೇಳಿ ನಾಯಿಯ ರೂಪದಲ್ಲಿದ್ದ ಧರ್ಮ ಭಗವಾನನು ಪ್ರೀತಿಯುಕ್ತನಾಗಿ ಮಧುರವಾಕ್ಯಗಳಿಂದ ಅವನನ್ನು ಪ್ರಶಂಸಿಸುತ್ತಾ ಹೇಳಿದನು:
“ರಾಜೇಂದ್ರ! ತಂದೆಯಂತೆ ಉತ್ತಮ ನಡತೆ, ಬುದ್ಧಿ ಮತ್ತು ಸರ್ವಭೂತಗಳ ಮೇಲೆ ಅನುಕ್ರೋಶದಿಂದ ಕೂಡಿರುವ ನಿನ್ನ ಜನ್ಮವು ಉತ್ತಮವಾದುದು! ಹಿಂದೆ ದ್ವೈತವನದಲ್ಲಿ ನೀರಿಗಾಗಿ ನಿನ್ನ ಪರಾಕ್ರಾಂತ ಸಹೋದರರು ಹತರಾದಾಗ ನಾನು ನಿನ್ನನ್ನು ಪರೀಕ್ಷಿಸಿದ್ದೆ. ಮಾತೆಯರಲ್ಲಿ ಸಾಮ್ಯತೆಯನ್ನು ಬಯಸಿದ ನೀನು ನಿನ್ನ ಇಬ್ಬರು ಸಹೋದರರು ಭೀಮಾರ್ಜುನರನ್ನು ಬಿಟ್ಟು ನಕುಲನು ಜೀವಿತನಾಗಲಿ ಎಂದು ಬಯಸಿದೆ. ಈ ನಾಯಿಯು ಭಕ್ತನೆಂದು ನೀನು ದೇವರಥವನ್ನು ತೊರೆದೆ. ಆದುದರಿಂದ ಸ್ವರ್ಗದಲ್ಲಿ ಯಾರೂ ನಿನ್ನ ತುಲ್ಯರಾದವರು ಇಲ್ಲ! ಆದುದರಿಂದ ನೀನು ನಿನ್ನದೇ ಶರೀರದಲ್ಲಿ ಅಕ್ಷಯ ಲೋಕಗಳನ್ನೂ ದಿವ್ಯ ಅನುತ್ತಮ ಗತಿಯನ್ನೂ ಹೊಂದುತ್ತೀಯೆ.”
ಅನಂತರ ಧರ್ಮ, ಶಕ್ರ, ಮರುತರು, ಅಶ್ವಿನಿಯರು, ದೇವತೆಗಳು, ಮತ್ತು ದೇವರ್ಷಿಗಳು ಪಾಂಡವನನ್ನು ರಥಕ್ಕೇರಿಸಿದರು. ಬೇಕಾದಲ್ಲಿ ಹೋಗ ಬಲ್ಲ ಆ ಸಿದ್ಧರೆಲ್ಲರೂ ತಮ್ಮ ತಮ್ಮ ವಿಮಾನಗಳಲ್ಲಿ ಪ್ರಯಾಣಿಸಿದರು. ಅವರೆಲ್ಲರೂ ಶುದ್ಧರೂ, ಪುಣ್ಯರೂ ಆಗಿದ್ದರು ಮತ್ತು ಪುಣ್ಯ ಮಾತು, ಯೋಚನೆ ಮತ್ತು ಕರ್ಮಗಳುಳ್ಳವರಾಗಿದ್ದರು. ಕುರುಕುಲೋದ್ವಹ ರಾಜನು ಆ ರಥದಲ್ಲಿ ಕುಳಿತು ತನ್ನ ತೇಜಸ್ಸಿನಿಂದ ಆಕಾಶ-ಪೃಥ್ವಿಗಳನ್ನು ಬೆಳಗಿಸುತ್ತಾ ಶೀಘ್ರವಾಗಿ ಮೇಲೆ ಹೋದನು. ಆಗ ದೇವತೆಗಳ ಮಧ್ಯದಲ್ಲಿದ್ದ ಸರ್ವಲೋಕಗಳನ್ನು ತಿಳಿದಿರುವ ಮಹಾವಾದೀ ಮಹಾತಪಸ್ವೀ ನಾರದನು ಉಚ್ಛಸ್ವರದಲ್ಲಿ ಈ ಮಾತನ್ನಾಡಿದನು:
“ಈ ಕುರುರಾಜನು ಈ ಮೊದಲು ಇಲ್ಲಿಗೆ ಆಗಮಿಸಿದ್ದ ಅ ಎಲ್ಲ ರಾಜರ್ಷಿಗಳ ಕೀರ್ತಿಯನ್ನು ಮರೆಸಿದ್ದಾನೆ. ತನ್ನ ನಡತೆಯಿಂದ ಸಂಪಾದಿಸಿದ ತೇಜಸ್ಸು ಮತ್ತು ಯಶಸ್ಸಿನಿಂದ ಇವನು ಲೋಕಗಳನ್ನೇ ತುಂಬಿಸಿಬಿಟ್ಟಿದ್ದಾನೆ. ಪಾಂಡವನಲ್ಲದೇ ಬೇರೆ ಯಾರೂ ಸ್ವಶರೀರದಿಂದ ಇವೆಲ್ಲವನ್ನೂ ಸಂಪಾದಿಸಿದುದನ್ನು ನಾನು ಕೇಳಿಲ್ಲ!”
ನಾರದನ ಮಾತನ್ನು ಕೇಳಿ ಧರ್ಮಾತ್ಮ ರಾಜನು ದೇವತೆಗಳಿಗೂ ಮತ್ತು ತನ್ನ ಪಕ್ಷದಲ್ಲಿದ್ದ ಪಾರ್ಥಿವರಿಗೂ ವಂದಿಸಿ ಹೀಗೆ ಹೇಳಿದನು:
“ಶುಭವಾಗಿರಲಿ ಅಥವಾ ಪಾಪದ್ದಾಗಿರಲಿ ಇಂದು ನಾನು ನನ್ನ ಸಹೋದರರು ಎಲ್ಲಿದ್ದಾರೋ ಅದೇ ಲೋಕವನ್ನು ಪಡೆಯಲು ಇಚ್ಛಿಸುತ್ತೇನೆ. ಬೇರಾವ ಲೋಕವನ್ನೂ ಬಯಸುವುದಿಲ್ಲ!”
ರಾಜನ ಮಾತನ್ನು ಕೇಳಿ ದೇವರಾಜ ಪುರಂದರನು ಈ ದಯಾಯುಕ್ತ ಮಾತುಗಳನ್ನು ಯುಧಿಷ್ಠಿರನಿಗೆ ಹೇಳಿದನು:
“ರಾಜನ್! ನಿನ್ನ ಕರ್ಮಗಳಿಂದ ಗಳಿಸಿರುವ ಈ ಶುಭ ಸ್ಥಾನಗಳಲ್ಲಿ ವಾಸಿಸು. ಈಗಲೂ ಕೂಡ ಮಾನುಷ್ಯಕ ಸ್ನೇಹದಿಂದ ಸೆಳೆಯಲ್ಪಡುತ್ತಿದ್ದೀಯೆ! ಬೇರೆ ಯಾವ ಪುರುಷನೂ ಎಂದೂ ಗಳಿಸಿರದ ಪರಮ ಸಿದ್ಧಿಯನ್ನು ನೀನು ಗಳಿಸಿರುವೆ. ಕುರುನಂದನ! ನಿನ್ನ ಭ್ರಾತರಿಗೆ ಈ ಸ್ಥಾನವು ದೊರಕಿಲ್ಲ! ಈಗಲೂ ಮಾನುಷ ಭಾವವು ನಿನ್ನನ್ನು ಸ್ಪರ್ಶಿಸುತ್ತಿವೆ. ಇದು ಸ್ವರ್ಗ! ದೇವರ್ಷಿಗಳ ಮತ್ತು ಸಿದ್ಧರ ಆಲಯವಾದ ಈ ತ್ರಿದಿವವನ್ನು ನೋಡು!”
ದೇವತೆಗಳ ಈಶ್ವರ ಇಂದ್ರನು ಹೀಗೆ ಹೇಳುತ್ತಿದ್ದರೂ ಯುಧಿಷ್ಠಿರನು ಪುನಃ ಈ ಬುದ್ಧಿಪೂರ್ವಕ ಮಾತನ್ನಾಡಿದನು:
“ದೈತ್ಯಸಂಹಾರೀ! ಅವರಿಲ್ಲದೇ ನನಗೆ ಇಲ್ಲಿ ವಾಸಿಸಲು ಉತ್ಸಾಹವಿಲ್ಲ! ನನ್ನ ಸಹೋದರರು ಎಲ್ಲಿಗೆ ಹೋಗಿದ್ದಾರೋ ಮತ್ತು ಶ್ಯಾಮೆ, ಬುದ್ಧಿಸತ್ತ್ವಗುಣಾನ್ವಿತೆ, ಸ್ತ್ರೀಯರಲ್ಲಿ ಶ್ರೇಷ್ಠೆ, ನನ್ನ ಪ್ರಿಯೆ ದ್ರೌಪದಿಯು ಎಲ್ಲಿದ್ದಾಳೋ ಅಲ್ಲಿಗೆ ಹೋಗಲು ಬಯಸುತ್ತೇನೆ.”