Related imageಪಾಂಡವರು ವನವಾಸಕ್ಕೆ ಹೊರಟಿದುದು

ದ್ಯೂತದಲ್ಲಿ ಸೋತ ಪಾರ್ಥರು ದುರಾತ್ಮ ಧಾರ್ತರಾಷ್ಟ್ರರು ಮತ್ತು ಅವರ ಅಮಾತ್ಯರ ಮೇಲೆ ಕುಪಿತಗೊಂಡು ಗಜಸಾಹ್ವಯದಿಂದ ನಿರ್ಗಮಿಸಿದರು. ಶಸ್ತ್ರಧಾರಿಗಳಾದ ಅವರು ಕೃಷ್ಣೆಯನ್ನೊಡಗೊಂಡು ವರ್ಧಮಾನ ದ್ವಾರದಿಂದ ಹೊರಬಂದು ಉತ್ತರಾಭಿಮುಖವಾಗಿ ಹೊರಟರು. ಇಂದ್ರಸೇನಾದಿ ಅವರ ಸೇವಕರು – ಒಟ್ಟು ಹದಿನಾಲ್ಕು ಮಂದಿ – ತಮ್ಮ ಪತ್ನಿಯರನ್ನೊಡಗೂಡಿ ಶೀಘ್ರ ರಥಗಳಲ್ಲಿ ಅವರನ್ನು ಹಿಂಬಾಲಿಸಿದರು. ಅವರು ಹೊರಡುತ್ತಿರುವುದನ್ನು ತಿಳಿದ ಪೌರಜನರು ಶೋಕಪೀಡಿತರಾಗಿ ಗುಂಪುಗೂಡಿ ನಿರ್ಭಯರಾಗಿ ಭೀಷ್ಮ-ವಿದುರ-ದ್ರೋಣ ಮತ್ತು ಗೌತಮರನ್ನು ನಿಂದಿಸುತ್ತಾ ಪರಸ್ಪರರಲ್ಲಿ ಮಾತನಾಡತೊಡಗಿದರು.

“ಪಾಪಿ ದುರ್ಯೋಧನನು ಸೌಬಲನ ಪ್ರೋತ್ಸಾಹದಿಂದ ಕರ್ಣ-ದುಃಶಾಸನರೊಡಗೂಡಿ ರಾಜ್ಯವನ್ನು ಕಬಳಿಸಲು ಯೋಚಿಸಿದ್ದಾನೆಂದರೆ ನಾವು ಮತ್ತು ನಮ್ಮ ಮನೆ ಯಾವುವೂ ಸುರಕ್ಷಿತವಲ್ಲ. ಪಾಪಿಗಳ ಸಹಾಯದಿಂದ ಆ ಪಾಪಿಯು ರಾಜ್ಯವನ್ನು ಪಡೆದರೆ ಕುಲವೂ ಇರುವುದಿಲ್ಲ, ಆಚಾರವೂ ಇರುವುದಿಲ್ಲ, ಮತ್ತು ಧರ್ಮವೂ ಇರುವುದಿಲ್ಲ. ಸುಖವಾದರೂ ಹೇಗಿದ್ದೀತು? ದುರ್ಯೋಧನನು ಗುರುದ್ವೇಷಿ. ಆಚಾರ-ಸುಹೃಜ್ಜನರನ್ನು ಬಿಟ್ಟವನು. ಅವನು ಸಂಪತ್ತಿನ ದುರಾಸಿ, ಅಭಿಮಾನಿ, ನೀಚ ಮತ್ತು ಕ್ರೂರ ಸ್ವಭಾವದವನು. ದುರ್ಯೋಧನನು ರಾಜನಾದ ಈ ಭೂಮಿಯು ಶ್ರೇಷ್ಠವಲ್ಲ. ನಾವೆಲ್ಲರೂ ಪಾಂಡವರು ಎಲ್ಲಿಗೆ ಹೋಗುತ್ತಾರೋ ಅಲ್ಲಿಗೇ ಹೋಗುವುದು ಒಳ್ಳೆಯದು. ಪಾಂಡವರು ಅನುಕಂಪಿಗಳು, ಮಹಾತ್ಮರು ಮತ್ತು ಶತ್ರು-ಇಂದ್ರಿಯಗಳನ್ನು ಗೆದ್ದವರು. ವಿನೀತರು, ಕೀರ್ತಿವಂತರು ಮತ್ತು ಧರ್ಮಾಚಾರ ಪರಾಯಣರು.”

ಈ ರೀತಿ ಮಾತನಾಡಿಕೊಳ್ಳುತ್ತಾ ಎಲ್ಲರೂ ಒಂದಾಗಿ ಪಾಂಡವರಲ್ಲಿಗೆ ಹೋಗಿ ಅಂಜಲೀಬದ್ಧರಾಗಿ ಕೇಳಿಕೊಂಡರು:

“ನಿಮಗೆ ಮಂಗಳವಾಗಲಿ! ನಿಮ್ಮ ದುಃಖದಲ್ಲಿ ಭಾಗಿಗಳಾದ ನಮ್ಮನ್ನು ತೊರೆದು ಎಲ್ಲಿಗೆ ಹೋಗುತ್ತಿದ್ದೀರಿ? ನೀವು ಎಲ್ಲಿ ಹೋಗುತ್ತೀರೋ ನಾವೂ ಅಲ್ಲಿಗೆ ಬರುತ್ತೇವೆ. ದಯವನ್ನೇ ಬಿಟ್ಟ ಶತ್ರುಗಳು ಅಧರ್ಮದಿಂದ ನಿಮ್ಮನ್ನು ಗೆದ್ದರು ಎಂದು ಕೇಳಿ ನಾವೆಲ್ಲರೂ ತುಂಬಾ ಉದ್ವಿಗ್ನರಾಗಿದ್ದೇವೆ. ಭಕ್ತಾನುರಗ! ನಮ್ಮನ್ನು ಕುರುರಾಜನಾಳುವ ರಾಜ್ಯದಲ್ಲಿ ವಿನಾಶಹೊಂದಲು ಸರ್ವಥಾ ಬಿಡಬೇಡ! ಗುಣ-ದೋಷಗಳ ಸಂಸರ್ಗಗಳಿಂದ ಶುಭಾಶುಭಗಳು ಹೇಗೆ ಆಗುತ್ತವೆ ಎನ್ನುವುದನ್ನು ಕೇಳಿ. ಸುಗಂಧವು ಹೇಗೆ ವಸ್ತ್ರವನ್ನು ಸುಹಾಸನೆಯುಕ್ತವನ್ನಾಗಿ ಮಾಡುತ್ತದೆಯೋ, ಮಳೆ-ತಿಲ-ಪುಷ್ಪಗಳು ಹೇಗೆ ಭೂಮಿಯನ್ನು ಸುಗಂಧಯುಕ್ತವನಾಗಿ ಮಾಡುತ್ತವೆಯೋ ಹಾಗೆ ಸಂಸರ್ಗದಿಂದ ಒಳ್ಳೆಯದಾಗುತ್ತದೆ. ಮೂಢರ ಸಹವಾಸವೇ ಮೋಹಜಾಲದ ಮೂಲ ಮತ್ತು ಸಾಧು-ಸಮಾಗಮವು ಧರ್ಮದ ಮೂಲ. ಆದುದರಿಂದಲೇ ಶಮಪರಾಯಣರು ಪ್ರಾಜ್ಞ-ವೃದ್ದ-ಸುಸ್ವಭಾವಿ-ಉತ್ತಮ ತಪಸ್ವಿಗಳ ಜೊತೆ ಸಂಸರ್ಗಮಾಡಬೇಕು. ಯಾರ ಕುಲ, ವಿದ್ಯೆ ಮತ್ತು ಕರ್ಮಗಳು ಉತ್ತಮವೋ ಅವರನ್ನು ಸೇವಿಸಬೇಕು. ಅವರ ಸಮಾಗಮವು ಶಾಸ್ತ್ರಗಳಿಗಿಂತಲೂ ಶ್ರೇಷ್ಠವಾದುದು. ಪಾಪಿಗಳ ಉಪಸೇವನೆಯಿಂದ ಪಾಪವನ್ನು ಹೇಗೋ ಹಾಗೆ ಪುಣ್ಯಶೀಲ ಸಾಧುಗಳ ಉಪಸೇವನೆಯಿಂದ, ಕ್ರಿಯೆಗಳ್ಯಾವುದನ್ನೂ ಮಾಡದಿದ್ದರೂ, ಪುಣ್ಯವನ್ನು ಹೊಂದುತ್ತೇವೆ. ಅಸತ್ಯರನ್ನು ನೋಡುವುದರಿಂದ, ಮುಟ್ಟುವುದರಿಂದ ಮತ್ತು ಅವರೊಂದಿಗೆ ಒಡನಾಡುವುದರಿಂದ ಧರ್ಮಚಾರೀ ಮಾನವರು ತಮ್ಮನ್ನು ತಾವೇ ಕೀಳುಮಾಡಿಕೊಳ್ಳುತ್ತಾರೆ. ಬುದ್ಧಿಯೂ ಕೂಡ ನೀಚರ ಸಮಾಗಮದಿಂದ ಕೆಳಹೋಗುತ್ತದೆ. ಮಧ್ಯಮರ ಸಹವಾಸದಿಂದ ಮಧ್ಯಮವಾಗಿರುತ್ತದೆ ಮತ್ತು ಶ್ರೇಷ್ಠರ ಸಮಾಗಮದಿಂದ ಉತ್ತಮ ಸ್ಥಿತಿಯನ್ನು ಹೊಂದುತ್ತದೆ. ಶಿಷ್ಟಸಮ್ಮತ ವೇದೋಕ್ತ ಲೋಕಾಚಾರಗಳಿಂದ ಹುಟ್ಟುವ ಯಾವ ಗುಣಧರ್ಮಗಳಿಂದ ಧರ್ಮ-ಅರ್ಥ-ಕಾಮಗಳು ಸಂಭವಿಸುತ್ತದೆಯೆಂದು ಲೋಕದಲ್ಲಿ ಕೀರ್ತಿತವಾಗಿವೆಯೋ ಆ ಎಲ್ಲ ಸದ್ಗುಣಗಳೂ ಸಮನಾಗಿರುವ ಗುಣವಂತ ನಿಮ್ಮೊಡನೆ ವಾಸಿಸಲು ಶ್ರೇಯೋಕಾಂಕ್ಷಿಗಳಾದ ನಾವು ಬಯಸುತ್ತೇವೆ.”

ಆಗ ಯುಧಿಷ್ಠಿರನು ಪೌರಜನರಿಗೆ ಇಂತೆಂದನು:

“ಬ್ರಾಹ್ಮಣ ಪ್ರಮುಖ ಪ್ರಜೆಗಳು ನಮ್ಮ ಮೇಲಿನ ಸ್ನೇಹ-ಕರುಣೆಗಳಿಂದ ಭಾವಿತರಾಗಿ ನಮ್ಮಲ್ಲೆ ಇಲ್ಲದೇ ಇರುವ ಗುಣಗಳ ಕುರಿತು ಹೇಳುತ್ತಿದ್ದಾರೆಂದರೆ ನಾವು ಧನ್ಯರಾದೆವು. ನಮ್ಮ ಮೇಲಿನ ಸ್ನೇಹ-ಅನುಕಂಪಗಳಿಂದಾಗಿ ನೀವು ಅನ್ಯಥಾ ಕಾರ್ಯಗಳನ್ನೆಸಗಬೇಡಿ ಎಂದು ಭ್ರಾತೃಸಹಿತನಾಗಿ ನಿಮ್ಮಲ್ಲರಲ್ಲಿ ನಾನು ವಿಜ್ಞಾಪಿಸಿಕೊಳ್ಳುತ್ತಿದ್ದೇನೆ. ಭೀಷ್ಮ ಪಿತಾಮಹ, ರಾಜ, ವಿದುರ, ನಮ್ಮ ಜನನಿ ಮತ್ತು ಇತರ ಸುಹೃಜ್ಜನರು ಈ ನಾಗಸಾಹ್ವಯ ನಗರದಲ್ಲಿದ್ದಾರೆ. ನಿಮ್ಮ ಹಿತಕ್ಕಾಗಿ ನೀವೆಲ್ಲರೂ ಶೇರಿ ಶೋಕಸಂತಾಪವಿಹ್ವಲರಾಗಿರುವ ಅವರನ್ನು ಪಾಲಿಸಬೇಕು. ದೂರ ಬಂದಿದ್ದೀರಿ. ಪುನಃ ಭೇಟಿಯಾಗುತ್ತೇವೆ ಎಂದು ಪ್ರತಿಜ್ಞೆಮಾಡುತ್ತೇನೆ. ನಿಮ್ಮ ಸ್ನೇಹಾನ್ವಿತ ಮನಸ್ಸನ್ನು ನಿಮ್ಮಲ್ಲಿ ಇಟ್ಟುಹೋಗುತ್ತಿರುವ ಸ್ವಜನರ ಕಡೆ ತಿರುಗಿಸಿ. ಇದೊಂದು ಕಾರ್ಯವು ಈಗ ನನ್ನ ಹೃದಯದಲ್ಲಿ ಮುಖ್ಯವಾಗಿ ಉಳಿದುಕೊಂಡಿದೆ. ಈ ಸುಕೃತ್ಯದಿಂದ ನಾನು ಸಂತುಷ್ಟನಾಗುತ್ತೇನೆ ಮತ್ತು ನನಗೆ ಇದು ಸತ್ಕಾರವಾದಂತಾಗುತ್ತದೆ.”

ಈ ರೀತಿ ಧರ್ಮರಾಜನಿಂದ ಕಳುಹಿಸಲ್ಪಟ್ಟ ಪ್ರಜೆಗಳೆಲ್ಲರೂ ದುಃಖಿತರಾಗಿ “ಹಾ ರಾಜಾ!” ಎಂದು ಘೋರ ಆರ್ತಸ್ವರದಲ್ಲಿ ಕೂಗಿದರು. ಪಾಂಡವರನ್ನು ಭೇಟಿಮಾಡಿ, ಅವರ ಗುಣಗಳನ್ನೇ ಸಂಸ್ಮರಿಸುತ್ತಾ, ದುಃಖಾರ್ತರಾಗಿ ಸ್ವಲ್ಪವೂ ಮನಸ್ಸಿಲ್ಲದೇ ಅವರು ಹಿಂದಿರುಗಿದರು.

ಪುರಜನರು ಹಿಂದಿರುಗಿದ ನಂತರ ಪಾಂಡವರು ರಥಗಳನ್ನೇರಿ ಜಾಹ್ನವೀ ತೀರದಲ್ಲಿ ಪ್ರಮಾಣ ಎಂಬ ಹೆಸರಿನ ಆಲದ ಮಹಾ ವೃಕ್ಷವೊಂದನ್ನು ತಲುಪಿದರು. ದಿನವಿಡೀ ಪ್ರಯಾಣಮಾಡಿ ದುಃಖಾಕರ್ಷಿತರಾಗಿದ್ದ ಆ ಪಾಂಡವರು ವಟವನ್ನು ತಲುಪಿ ಶುಚಿಯಾದ ಸಲಿಲ ನೀರನ್ನು ಮಾತ್ರ ಕುಡಿದು ರಾತ್ರಿಯನ್ನು ಕಳೆದರು. ಅವರ ಮೇಲಿನ ಸ್ನೇಹದಿಂದ ಕೆಲವು ದ್ವಿಜರು ಅಗ್ನಿಯೊಂದಿಗೆ ಅಥವಾ ಅಗ್ನಿಯಿಲ್ಲದೇ ಶಿಷ್ಯಗಣ ಬಾಂಧವರೊಡಗೂಡಿ ಅವರನ್ನು ಅಲ್ಲಿಯವರೆಗೂ ಹಿಂಬಾಲಿಸಿ ಬಂದಿದ್ದರು. ಆ ಬ್ರಹ್ಮವಾದಿಗಳಿಂದ ಪರಿವೃತನಾದ ರಾಜನು ಕಂಗೊಳಿಸುತ್ತಿದ್ದನು. ರಮ್ಯವೂ ದಾರುಣವೂ ಆದ ಮುಹೂರ್ತದಲ್ಲಿ ಅವರವರ ಅಗ್ನಿಗಳನ್ನು ಹೊರತಂದರು ಮತ್ತು ಬ್ರಹ್ಮಘೋಷಗಳೊಂದಿಗೆ ಚರ್ಚೆಯು ಪ್ರಾರಂಭವಾಯಿತು. ಹಂಸಗಳಂತೆ ಮಧುರ ಸ್ವರಗಳಲ್ಲಿ ವಿಪ್ರಾಗ್ರರೆಲ್ಲರೂ ಕುರುಶ್ರೇಷ್ಠ ರಾಜನಿಗೆ ಆಶ್ವಾಸನೆ ನೀಡುತ್ತಿರಲು ಎಲ್ಲರೂ ರಾತ್ರಿಯನ್ನು ಅಲ್ಲಿಯೇ ಕಳೆದರು.

Leave a Reply

Your email address will not be published. Required fields are marked *