ದಾವಾಗ್ನಿಯಲ್ಲಿ ಧೃತರಾಷ್ಟ್ರಾದಿಗಳ ದಹನ

ಹಸ್ತಿನಾಪುರಕ್ಕೆ ನಾರದನ ಆಗಮನ

ಪಾಂಡವರು ಹಿಂದಿರುಗಿ ಎರಡು ವರ್ಷಗಳಾದನಂತರ ದೇವರ್ಷಿ ನಾರದನು ರಾಜ ಯುಧಿಷ್ಠಿರನಲ್ಲಿಗೆ ಆಗಮಿಸಿದನು. ಕುರುರಾಜ ಯುಧಿಷ್ಠಿರನು ಅವನನ್ನು ಅರ್ಚಿಸಿದನು. ವಿಶ್ರಮಿಸಿಕೊಂಡು ಆಸನದಲ್ಲಿ ಕುಳಿತಿದ್ದ ನಾರದನಿಗೆ ವಾಗ್ಮಿಶ್ರೇಷ್ಠ ಯುಧಿಷ್ಠಿರನು ಹೇಳಿದನು: “ವಿಪ್ರ! ಬಹುದಿನಗಳ ನಂತರ ನಿಮ್ಮ ಆಗಮನವನ್ನು ನಾನು ಕಾಣುತ್ತಿದ್ದೇನೆ. ನೀವು ಕುಶಲರಾಗಿದ್ದೀರಿ ತಾನೆ? ಎಲ್ಲವೂ ಶುಭವಾಗಿದೆಯಲ್ಲವೇ? ಇಲ್ಲಿ ಬರುವ ಮೊದಲು ಯಾವ ಪ್ರದೇಶಗಳನ್ನು ನೋಡಿದ್ದಿರಿ? ನಿಮಗೆ ನಾನು ಯಾವ ಕಾರ್ಯವನ್ನು ಮಾಡಲಿ? ದ್ವಿಜಮುಖ್ಯ! ಅದನ್ನು ಹೇಳಿ. ಏಕೆಂದರೆ ನೀವು ನಮಗೆ ಅತ್ಯಂತ ಪ್ರಿಯರಾದ ಅತಿಥಿಗಳು!”

ನಾರದನು ಹೇಳಿದನು: “ರಾಜನ್! ನಿನ್ನನ್ನು ನೋಡಿ ಬಹಳ ಸಮಯವಾಯಿತೆಂದೇ ತಪೋವನದಿಂದ ನಾನು ಬಂದೆನು. ಬರುವಾಗ ತೀರ್ಥಗಳನ್ನೂ ಗಂಗೆಯನ್ನೂ ನೋಡಿದೆನು.

ಯುಧಿಷ್ಠಿರನು ಹೇಳಿದನು: "ಗಂಗಾತೀರ ನಿವಾಸಿ ಪುರುಷರು ಮಹಾತ್ಮ ಧೃತರಾಷ್ಟ್ರನು ಅಲ್ಲಿ ಪರಮ ತಪಸ್ಸಿನಲ್ಲಿ ನಿರತನಾಗಿರುವನೆಂದು ಹೇಳುತ್ತಾರೆ. ನೀವೇನಾದರೂ ಅಲ್ಲಿ ಆ ಕುರೂದ್ವಹನನ್ನು ಕಂಡಿರೇ? ಧೃತರಾಷ್ಟ್ರ, ಗಾಂಧಾರೀ, ಪೃಥೆ, ಮತ್ತು ಸೂತಪುತ್ರ ಸಂಜಯರು ಕುಶಲರಾಗಿರುವರೆ? ಭಗವನ್! ಇಂದು ನನ್ನ ತಂದೆ ಆ ಪಾರ್ಥಿವನು ಹೇಗಿದ್ದಾನೆ? ನೀವು ಆ ನೃಪನನ್ನು ಕಂಡಿದ್ದರೆ ಅವನ ಕುರಿತು ಕೇಳಲು ಬಯಸುತ್ತೇನೆ.”

ನಾರದನು ಹೇಳಿದನು: "ಮಹಾರಾಜ! ಆ ತಪೋವನದಲ್ಲಿ ನಾನು ನೋಡಿದುದನ್ನು ಮತ್ತು ಕೇಳಿದುದನ್ನು ಎಲ್ಲವನ್ನೂ ಯಥಾವತ್ತಾಗಿ ಸ್ಥಿರಚಿತ್ತನಾಗಿ ಕೇಳು! ನೀವು ವನವಾಸದಿಂದ ಹಿಂದಿರುಗಿದ ನಂತರ ನಿನ್ನ ತಂದೆ ಧೀಮಾನ್ ನೃಪನು ಗಂಧಾರೀ, ತಮ್ಮನ ಪತ್ನಿ ಕುಂತಿ, ಸೂತ ಸಂಜಯ, ಯಾಜಕರು ಮತ್ತು ಅಗ್ನಿಹೋತ್ರಗಳೊಂದಿಗೆ ಕುರುಕ್ಷೇತ್ರದಿಂದ ಗಂಗಾದ್ವಾರಕ್ಕೆ ಹೋದನು. ಅಲ್ಲಿ ತಪೋಧನ ಮುನಿಯಾದ ನಿನ್ನ ತಂದೆಯು ಮರದ ಚೂರುಗಳನ್ನು ಬಾಯಿಯಲ್ಲಿಟ್ಟುಕೊಂಡು ಗಾಳಿಯನ್ನೇ ಆಹಾರವನ್ನಾಗಿ ಸೇವಿಸುತ್ತಾ ತೀವ್ರವಾದ ತಪಸ್ಸನ್ನು ಆಚರಿಸಿದನು. ಚರ್ಮ ಮತ್ತು ಮೂಳೆಗಳು ಮಾತ್ರ ಉಳಿದಿದ್ದ ಆ ಮಹಾತಪಸ್ವಿ ನೃಪನು ವನದಲ್ಲಿ ಸರ್ವ ಮುನಿಗಳಿಂದಲೂ ಗೌರವಿಸಲ್ಪಟ್ಟಿದ್ದನು. ಹಾಗೆ ಆರು ತಿಂಗಳುಗಳು ಕಳೆದವು. ಗಾಂಧಾರಿಯು ನೀರನ್ನು ಮಾತ್ರ ಸೇವಿಸುತ್ತಿದ್ದಳು. ಕುಂತಿಯು ತಿಂಗಳಿಗೊಮ್ಮೆ ಆಹಾರವನ್ನು ತೆಗೆದುಕೊಳ್ಳುತ್ತಿದ್ದಳು. ಸಂಜಯನು ಆರುಹೊತ್ತಿಗೊಮ್ಮೆ (ಪ್ರತಿ ಎರಡನೆಯ ರಾತ್ರಿಗೊಮ್ಮೆ) ಆಹಾರ ಸೇವನೆ ಮಾಡುತ್ತಿದ್ದನು. ಯಾಜಕರು ಅಗ್ನಿಯಲ್ಲಿ ವಿಧಿವತ್ತಾಗಿ ಹೋಮಮಾಡುತ್ತಿದ್ದರು. ನೃಪ ಧೃತರಾಷ್ಟ್ರನು ಆ ವನದಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುತ್ತಿದ್ದನು. ಇನ್ನು ಕೆಲವೊಮ್ಮೆ ಅದೃಶ್ಯನಾಗಿಬಿಡುತ್ತಿದ್ದನು. ಹೀಗೆ ನೆಲೆಯಿಲ್ಲದೇ ಆ ರಾಜನು ವನದಲ್ಲಿ ಸುತ್ತಾಡುತ್ತಿದ್ದನು. ಆ ದೇವಿಯರಿಬ್ಬರೂ ಸಂಜಯನೊಂದಿಗೆ ಅವನನ್ನೇ ಅನುಸರಿಸಿ ಹೋಗುತ್ತಿದ್ದರು. ಹಳ್ಳತಿಟ್ಟುಗಳಲ್ಲಿ ಸಂಜಯನು ನೃಪತಿಯನ್ನು ಕೊಂಡೊಯ್ಯುತ್ತಿದ್ದನು. ಅನಿಂದಿತೆ ಪೃಥೆಯು ಗಾಂಧಾರಿಯ ಕಣ್ಣಾಗಿದ್ದಳು. ಗಂಗಾತೀರದಲ್ಲಿರುವಾಗ ಒಮ್ಮೆ ಆ ಧೀಮಾನ್ ನೃಪಸತ್ತಮನು ಗಂಗೆಯಲ್ಲಿ ಮಿಂದು ಆಶ್ರಮದ ಕಡೆ ಹೋಗುತ್ತಿದ್ದನು. ಆಗ ಭಿರುಗಾಳಿಯು ಬೀಸಿ ಮಹಾ ಕಾಡ್ಗಿಚ್ಚು ಹತ್ತಿಕೊಂಡಿತು. ಅದು ವನದಲ್ಲಿದ್ದ ಎಲ್ಲವನ್ನೂ ಸುಟ್ಟು ಭಸ್ಮಮಾಡಿತು. ಆ ದಾವಾಗ್ನಿಯು ವನದಲ್ಲಿದ್ದ ಮೃಗಸಮೂಹಗಳನ್ನೂ, ಸರ್ಪಗಳನ್ನೂ ಭಸ್ಮಮಾಡಿತು. ಆನೆಗಳ ಹಿಂಡುಗಳು ನೀರಿನಲ್ಲಿ ಆಶ್ರಯವನ್ನು ಪಡೆಯುತ್ತಿದ್ದವು. ವನವು ಹತ್ತಿಕೊಂಡು ಉರಿಯುತ್ತಿರುವ ಆ ಮಹಾ ಸಂಕಟವಾದಾಗ ನಿರಾಹಾರಿಯಾಗಿದ್ದ ರಾಜನ ಪ್ರಾಣಶಕ್ತಿಯು ಕುಂದಿಹೋಗಿದ್ದು ಏನನ್ನೂ ಮಾಡಲಿಕ್ಕಾಗದೇ ಹೋದನು. ತುಂಬಾ ಕೃಶರಾಗಿದ್ದ ನಿನ್ನ ಇಬ್ಬರು ತಾಯಂದಿರು ಕೂಡ ಆ ದಾವಾಗ್ನಿಯಿಂದ ತಪ್ಪಿಸಿಕೊಂಡು ಹೋಗಲು ಅಸಮರ್ಥರಾದರು. ಬೆಂಕಿಯು ತನ್ನ ಹತ್ತಿರ ಬರುತ್ತಿರುವುದನ್ನು ಕಂಡು ನೃಪತಿಯು ಸೂತ ಸಂಜಯನಿಗೆ ಇಂತೆಂದನು: "ಸಂಜಯ! ಹೋಗು! ಅಗ್ನಿಯು ನಿನ್ನನ್ನು ಸುಡದಿರುವಲ್ಲಿಗೆ ಎಲ್ಲಿಯಾದರೂ ಹೋಗು! ನಾವು ಇಲ್ಲಿ ಅಗ್ನಿಯಲ್ಲಿ ಸೇರಿ ಪರಮ ಗತಿಯನ್ನು ಸೇರುತ್ತೇವೆ!" ಅತ್ಯಂತ ಉದ್ವಿಗ್ನನಾಗಿದ್ದ ಮಾತುಗಾರರರಲ್ಲಿ ಶ್ರೇಷ್ಠ ಸಂಜಯನು ಅವನಿಗೆ ಉತ್ತರಿಸಿದನು: "ರಾಜನ್! ವೃಥಾ ಅಗ್ನಿಯಲ್ಲಿ ಸುಟ್ಟು ಮೃತ್ಯುವನ್ನು ಪಡೆಯುವುದು ನಿನಗೆ ಅನಿಷ್ಟವಾದುದು. ಆದರೆ ಅಗ್ನಿಯಿಂದ ತಪ್ಪಿಸಿಕೊಳ್ಳುವ ಯಾವ ಉಪಾಯವನ್ನೂ ಕಾಣುತ್ತಿಲ್ಲ. ಮುಂದೆ ಏನನ್ನು ಮಾಡಬೇಕೆಂದು ನೀನು ಹೇಳಬೇಕು!" ಸಂಜಯನು ಹೀಗೆ ಹೇಳಲು ರಾಜನು ಪುನಃ ಹೇಳಿದನು: "ಸ್ವ-ಇಚ್ಛೆಯಿಂದಲೇ ಮನೆಯಿಂದ ಹೊರಹೊರಟ ನಮಗೆ ಈ ಮೃತ್ಯುವು ಅನಿಷ್ಟವೆನಿಸುವುದಿಲ್ಲ. ಜಲ-ಅಗ್ನಿ-ವಾಯು ಅಥವಾ ಉಪವಾಸ ಇವು ತಾಪಸಿಗಳಿಗೆ ಪ್ರಶಸ್ತವಾದವುಗಳು. ಆದುದರಿಂದ ಸಂಜಯ ನೀನು ಹೊರಟುಹೋಗು! ತಡಮಾಡಬೇಡ!" ಸಂಜಯನಿಗೆ ಹೀಗೆ ಹೇಳಿ ರಾಜನು ಮನಸ್ಸನ್ನು ಏಕಾಗ್ರಗೊಳಿಸಿ ಕುಂತಿ ಮತ್ತು ಗಾಂಧಾರಿಯರೊಡನೆ ಪೂರ್ವಾಭಿಮುಖವಾಗಿ ಕುಳಿತುಕೊಂಡನು. ಅದನ್ನು ನೋಡಿ ಮೇಧಾವೀ ಸಂಜಯನು ಅವರಿಗೆ ಪ್ರದಕ್ಷಿಣೆ ಮಾಡಿ "ಪ್ರಭೋ! ಮನಸ್ಸನ್ನು ಆತ್ಮನಲ್ಲಿ ಸಂಯೋಜಿಸು!" ಎಂದು ಹೇಳಿದನು. ಅವನ ಮಾತಿನಂತೆ ಋಷಿಪುತ್ರ ಮನೀಷೀ ರಾಜಾ ಧೃತರಾಷ್ಟ್ರನು ಇಂದ್ರಿಯಗಳನ್ನು ನಿರೋಧಿಸಿ ಮನಸ್ಸನ್ನು ಆತ್ಮನಲ್ಲಿ ಲೀನಗೊಳಿಸಿ ಕಟ್ಟಿಗೆಯಂತೆ ನಿಶ್ಚೇಷ್ಟನಾದನು. ಮಹಾಭಾಗೆ ಗಾಂಧಾರಿ, ನಿನ್ನ ಜನನಿ ಪೃಥೆ ಮತ್ತು ನಿನ್ನ ತಂದೆ ರಾಜನೂ ಕೂಡ ದಾವಾಗ್ನಿಯಲ್ಲಿ ಒಂದಾದರು. ಮಹಾಮಾತ್ರ ಸಂಜಯನಾದರೋ ದಾವಾಗ್ನಿಯಿಂದ ತಪ್ಪಿಸಿಕೊಂಡನು. ತಾಪಸರಿಂದ ಸುತ್ತುವರೆದು ಕುಳಿತಿದ್ದ ಅವನನ್ನು ನಾನು ಗಂಗಾಕೂಲದಲ್ಲಿ ನೋಡಿದೆನು. ತೇಜಸ್ವಿ ಸೂತ ಸಂಜಯನು ಇವೆಲ್ಲವನ್ನೂ ಅವರಿಗೆ ತಿಳಿಸಿ ಹೇಳಿ ಹಿಮವತ್ಪರ್ವತಕ್ಕೆ ಹೊರಟುಹೋದನು. ಹೀಗೆ ಮಹಾಮನಸ್ವಿ ಕುರುರಾಜ, ಗಾಂಧಾರೀ ಮತ್ತು ನಿನ್ನ ಜನನಿ ಪೃಥೆಯರು ನಿಧನಹೊಂದಿದರು. ನಾನು ಅರಣ್ಯದಲ್ಲಿ ಸಂಚರಿಸುತ್ತಿರುವಾಗ ಆಕಸ್ಮಿಕವಾಗಿ ರಾಜನ ಮತ್ತು ಆ ಇಬ್ಬರು ದೇವಿಯರ ಕಳೇಬರಗಳನ್ನು ನೋಡಿದೆನು. ಆಗ ಆ ತಪೋವನದಲ್ಲಿದ್ದ ತಪೋಧನರು ಅಲ್ಲಿಗೆ ಆಗಮಿಸಿದರು. ರಾಜನ ಕುರಿತು ಕೇಳಿದ ಆ ನಿಷ್ಠಾವಂತರು ಅವನ ಮರಣದ ಕುರಿತು ಶೋಕಿಸಲಿಲ್ಲ. ಅಲ್ಲಿಯೇ ನಾನು ರಾಜ ಮತ್ತು ಇಬ್ಬರು ದೇವಿಯರ ಕುರಿತು ಎಲ್ಲವನ್ನೂ ಕೇಳಿದೆನು. ಆ ರಾಜ, ಗಾಂಧಾರೀ ಮತ್ತು ನಿನ್ನ ಜನನಿಯರು ಸ್ವಯಂ ತಾವೇ ಅಗ್ನಿಯಲ್ಲಿ ಸೇರಿಕೊಂಡಿದುದರಿಂದ ಅವರ ಕುರಿತು ನೀನು ಶೋಕಿಸಬಾರದು."

ಧೃತರಾಷ್ಟ್ರನ ನಿರ್ಯಾಣದ ಕುರಿತು ಕೇಳಿ ಆ ಎಲ್ಲ ಮಹಾತ್ಮ ಪಾಂಡವರಿಗೂ ಮಹಾಶೋಕವುಂಟಾಯಿತು. ರಾಜನ ಮರಣವಾರ್ತೆಯನ್ನು ಕೇಳಿ ಅಂತಃಪುರದಲ್ಲಿ ಮತ್ತು ಪೌರಜನರಲ್ಲಿ ಮಹಾ ಆರ್ತನಾದವುಂಟಾಯಿತು. ಅತ್ಯಂತ ದುಃಖಿತನಾದ ರಾಜಾ ಯುಧಿಷ್ಠಿರನು ತನ್ನ ತಾಯಿಯನ್ನು ಸ್ಮರಿಸಿಕೊಂಡು ಬಾಹುಗಳೆರಡನ್ನೂ ಮೇಲಕ್ಕೆತ್ತಿ "ಅಯ್ಯೋ! ನನಗೆ ಧಿಕ್ಕಾರವಿರಲಿ!" ಎಂದು ಕೂಗಿಕೊಳ್ಳುತ್ತಾ ರೋದಿಸಿದನು. ಭೀಮಸೇನನೇ ಮೊದಲಾದ ಎಲ್ಲ ಸಹೋದರರೂ ರೋದಿಸಿದರು. ಪೃಥೆಯು ಮರಣಹೊಂದಿದನ್ನು ಕೇಳಿ ಅಂತಃಪುರದಲ್ಲಿಯೂ ಮಹಾ ರೋದನವು ಕೇಳಿಬಂದಿತು. ಪುತ್ರರನ್ನು ಕಳೆದುಕೊಂಡ ವೃದ್ಧ ನರಾಧಿಪ ಮತ್ತು ತಪಸ್ವಿನೀ ಗಾಂಧಾರಿಯ ಕುರಿತು ಎಲ್ಲರೂ ಶೋಕಿಸಿದರು.

ಯುಧಿಷ್ಠಿರ ಶೋಕ

ಸ್ವಲ್ಪ ಹೊತ್ತು ಕಳೆದನಂತರ ಶೋಕಶಬ್ಧವು ಕಡಿಮೆಯಾಗಲು ಧರ್ಮರಾಜನು ಧೈರ್ಯದಿಂದ ಕಣ್ಣೀರನ್ನು ತಡೆಹಿಡಿದು ಈ ರೀತಿ ಹೇಳಿದನು: "ಬಂಧುಗಳಾದ ನಾವು ಇದ್ದರೂ ಉಗ್ರತಪಸ್ಸಿನಲ್ಲಿ ನಿರತನಾಗಿದ್ದ ಆ ಮಹಾತ್ಮನ ನಿಧನವು ಅನಾಥನ ರೀತಿಯಲ್ಲಿ ಆಗಿಹೋಯಿತು! ವೈಚಿತ್ರವೀರ್ಯನು ಈ ರೀತಿ ಕಾಡ್ಗಿಚ್ಚಿನಲ್ಲಿ ಸುಟ್ಟುಹೋದನೆಂದರೆ ಮನುಷ್ಯನ ಗತಿಯನ್ನು ತಿಳಿದುಕೊಳ್ಳುವುದು ಕಷ್ಟಸಾಧ್ಯ ಎಂದು ನನ್ನ ಮತ. ನೂರು ಮಕ್ಕಳನ್ನು ಹೊಂದಿದ್ದ, ಸ್ವಯಂ ತಾನೇ ಹತ್ತು ಸಾವಿರ ಆನೆಗಳ ಬಲವುಳ್ಳವನಾಗಿದ್ದ ಆ ಶ್ರೀಮಾನ್ ರಾಜನು ಕಾಡ್ಗಿಚ್ಚಿನಿಂದ ಸುಟ್ಟುಹೋದನು! ಹಿಂದೆ ಯಾರಿಗೆ ಸುಂದರ ಸ್ತ್ರೀಯರು ತಾಳೇಗರಿಯ ಬೀಸಣಿಗೆಗಳಿಂದ ಗಾಳಿಯನ್ನು ಬೀಸುತ್ತಿದ್ದರೋ ಅವನು ಈಗ ಕಾಡ್ಗಿಚ್ಚಿಗೆ ಸಿಲುಕಿ ರಣಹದ್ದುಗಳು ರೆಕ್ಕೆಗಳಿಂದ ಗಾಳಿಯನ್ನು ಬೀಸುವಂತೆ ಆಗಿಹೋಯಿತು! ಮಲಗಿದ್ದಾಗ ಯಾವ ಪ್ರಭುವನ್ನು ಸೂತ-ಮಾಗಧ ಗುಂಪುಗಳು ಎಬ್ಬಿಸುತ್ತಿದ್ದವೋ ಆ ನೃಪತಿಯು ನನ್ನ ಪಾಪಕರ್ಮಗಳಿಂದಾಗಿ ನೆಲದಮೇಲೆ ಮಲಗಿಕೊಳ್ಳುವಂತಾಯಿತು! ಪುತ್ರರನ್ನು ಕಳೆದುಕೊಂಡ ಯಶಸ್ವಿನೀ ಗಾಂಧಾರಿಯು ಕುರಿತು ನಾನು ಶೋಕಿಸುತ್ತಿಲ್ಲ. ಪತಿವ್ರತೆಯಾಗಿದ್ದ ಅವಳು ಪತಿಲೋಕವನ್ನು ಪಡೆದುಕೊಂಡಿದ್ದಾಳೆ. ಆದರೆ ಸಮೃದ್ಧವಾದ ಮತ್ತು ಉಜ್ವಲವಾದ ಪುತ್ರೈಶ್ವರವನ್ನು ತ್ಯಜಿಸಿ ವನವಾಸವನ್ನು ಬಯಸಿದ ಪೃಥೆಯ ಕುರಿತು ದುಃಖಿಸುತ್ತಿದ್ದೇನೆ. ನಮ್ಮ ಈ ರಾಜ್ಯಕ್ಕೆ ಧಿಕ್ಕಾರ! ಈ ಬಲಕ್ಕೆ ಧಿಕ್ಕಾರ! ಪರಾಕ್ರಮಕ್ಕೆ ಧಿಕ್ಕಾರ! ಕ್ಷತ್ರಧರ್ಮಕ್ಕೆ ಧಿಕ್ಕಾರ! ಜೀವಿತರಾಗಿರುವ ನಾವೂ ಮೃತರಾದಂತೆಯೇ! ರಾಜ್ಯವನ್ನು ತೊರೆದು ವನವಾಸವನ್ನು ಆಕೆಯು ಬಯಸಿದಳೆಂದರೆ ಕಾಲದ ಗತಿಯು ಅತ್ಯಂತ ಸೂಕ್ಷ್ಮವಾದುದಷ್ಟೇ! ಯುಧಿಷ್ಠಿರನ, ಭೀಮನ ಮತ್ತು ವಿಜಯನ ಜನನಿಯು ಅನಾಥೆಯಂತೆ ಹೇಗೆ ಸುಟ್ಟುಹೋದಳು ಎಂದು ಚಿಂತಿಸಿಯೇ ನಾನು ಮೂರ್ಛೆಗೊಳ್ಳುತ್ತಿದ್ದೇನೆ. ಖಾಂಡವದಲ್ಲಿ ಸವ್ಯಸಾಚಿಯು ಅಗ್ನಿಯನ್ನು ತೃಪ್ತಿಗೊಳಿಸಿದುದು ವ್ಯರ್ಥವಾಗಿ ಹೋಯಿತು. ಆ ಉಪಕಾರವನ್ನು ಸ್ಮರಿಸದೆಯೇ ಇದ್ದ ಅಗ್ನಿಯು ಕೃತಘ್ನನೆಂದು ನನಗನ್ನಿಸುತ್ತಿದೆ. ಬ್ರಾಹ್ಮಣನ ವೇಷಧರಿಸಿ ಭಿಕ್ಷಾರ್ಥಿಯಾಗಿ ಸವ್ಯಸಾಚಿಯ ಬಳಿಬಂದಿದ್ದ ಆ ಭಗವಂತನು ತಾಯಿಯನ್ನು ಸುಟ್ಟನೆಂದರೆ ಆ ಅಗ್ನಿಗೆ ಧಿಕ್ಕಾರ! ಪಾರ್ಥನ ವಿಶ್ರುತ ಸತ್ಯಸಂಧತೆಗೂ ಧಿಕ್ಕಾರ! ಪೃಥಿವೀಪತಿಯು ವೃಥಾ ಅಗ್ನಿಯಲ್ಲಿ ಸಮಾವೇಶನಾದನೆಂದರೆ ಇದಕ್ಕಿಂತಲೂ ಕಷ್ಟತರವಾದುದು ಬೇರೆ ಏನೂ ನನಗೆ ತೋಚುತ್ತಿಲ್ಲ. ತಪಸ್ವಿಯೂ ರಾಜರ್ಷಿಯೂ ಆಗಿದ್ದುಕೊಂಡು ಈ ಭೂಮಿಯನ್ನೇ ಆಳಿದ ಆ ಕೌರವನಿಗೆ ಈ ವಿಧದ ಮೃತ್ಯುವು ಹೇಗಾಯಿತು? ಮಂತ್ರಪೂತವಾದ ಅವನ ಮೂರು ಅಗ್ನಿಗಳು ಜೊತೆಯಲ್ಲಿದ್ದಿದ್ದರೂ ನನ್ನ ತಂದೆಯು ವೃಥಾ ಮಹಾವನದ ಕಾಡ್ಗಿಚ್ಚಿಗೆ ಸೇರಿ ನಿಧನ ಹೊಂದಿದನು! ಕೃಶಳಾಗಿ ನರನಾಡಿಗಳನ್ನು ಮಾತ್ರವೇ ಹೊಂದಿದ್ದ ಪೃಥೆಯು ಮಹಾಭಯದಿಂದ "ಹಾ ಮಗೂ! ಹಾ ಧರ್ಮರಾಜ!" ಎಂದು ಕೂಗಿಕೊಂಡಿರಬಹುದೆಂದು ನನಗನ್ನಿಸುತ್ತಿದೆ. "ಭೀಮ! ಕಾಪಾಡು!" ಎಂದು ಭಯದಿಂದ ಕೂಗಿಕೊಳ್ಳುತ್ತಾ ಅರಣ್ಯದಲ್ಲೆಲ್ಲಾ ಎದ್ದು-ಬಿದ್ದು ಒದ್ದಾಡುತ್ತಿದ್ದ ನನ್ನ ತಾಯಿಯನ್ನು ದಾವಾಗ್ನಿಯು ಸುಟ್ಟು ಭಸ್ಮಮಾಡಿರಬಹುದು! ಅವಳಿಗೆ ಪ್ರಿಯನಾಗಿದ್ದ, ಪುತ್ರರಲ್ಲಿಯೇ ಅಧಿಕನಾಗಿದ್ದ ವೀರ ಮಾದ್ರವತೀಸುತ ಸಹದೇವನೂ ಕೂಡ ಅವಳನ್ನು ಆ ಆಪತ್ತಿನಿಂದ ಬಿಡಿಸಲಾಗಲಿಲ್ಲ!"

ಅವನ ಆ ಮಾತುಗಳನ್ನು ಕೇಳಿ ಪಂಚ ಪಾಂಡವರೆಲ್ಲರೂ ದುಃಖಾರ್ತರಾಗಿ ಪರಸ್ಪರರನ್ನು ಆಲಂಗಿಸಿಕೊಂಡು ಯುಗಕ್ಷಯದಲ್ಲಿ ಪೀಡೆಗೊಳಗಾಗುವ ಭೂತಗಳಂತೆ ಗೋಳಾಡಿದರು. ಗಟ್ಟಿಯಾಗಿ ರೋದಿಸುತ್ತಿದ್ದ ಆ ಪುರುಷೇಂದ್ರರ ಅಳುವಿನ ಧ್ವನಿಯು ಪ್ರಾಸಾದದ ಆವರಣವೆಲ್ಲವನ್ನೂ ತುಂಬಿಕೊಂಡು ಹೊರಹೋಗಲಾರದೇ ಭೂಮ್ಯಂತರಿಕ್ಷಗಳಲ್ಲಿ ಪ್ರತಿಧ್ವನಿಸಿತು.

ಧೃತರಾಷ್ಟ್ರ ಶಾದ್ಧ ಕರಣ

ನಾರದನು ಹೇಳಿದನು: "ಭಾರತ! ನೃಪತಿ ವೈಚಿತ್ರವೀರ್ಯನು ಅಲ್ಲಿ ವೃಥಾ ಕಾಡ್ಗಿಚ್ಚಿನಲ್ಲಿ ಸುಟ್ಟುಹೋಗಲಿಲ್ಲ. ಅಲ್ಲಿ ನಾನು ಕೇಳಿದುದನ್ನು ಹೇಳುತ್ತೇನೆ. ಕೇಳು. ವಾಯುವನ್ನೇ ಆಹಾರವನ್ನಾಗಿ ಸೇವಿಸುತ್ತಿದ್ದ ಆ ಧೀಮತ ಧೃತರಾಷ್ಟ್ರನು ವನವನ್ನು ಪ್ರವೇಶಿಸುವಾಗ ತನ್ನ ಅಗ್ನಿಯಲ್ಲಿ ಇಷ್ಟಿಯನ್ನು ಮಾಡಿಸಿ ವಿಸರ್ಜಿಸಿದನೆಂದು ನಾನು ಕೇಳಿದ್ದೇನೆ. ಯಾಜಕರು ಆ ಅಗ್ನಿಯನ್ನು ನಿರ್ಜನ ವನದಲ್ಲಿ ವಿಸರ್ಜಿಸಿ, ಇಷ್ಟಬಂದಲ್ಲಿಗೆ ಹೊರಟುಹೋಗಿದ್ದರು. ಅದೇ ಅಗ್ನಿಯು ಆಗ ಗಾಳಿಗೆ ಸಿಲುಕಿ ಕಾಡ್ಗಿಚ್ಚಾಗಿ ಆ ವನದಲ್ಲಿ ಪಸರಿಸಿಕೊಂಡಿತು ಎಂದು ನನಗೆ ತಾಪಸರು ಹೇಳಿದರು. ನಾನು ಈ ಮೊದಲೇ ಹೇಳಿದಂತೆ ಜಾಹ್ನವೀ ತೀರದಲ್ಲಿ ರಾಜಾ ಧೃತರಾಷ್ಟ್ರನು ಸ್ವ-ಇಚ್ಛೆಯಿಂದ ಅದೇ ಅಗ್ನಿಯಲ್ಲಿ ಸಮಾಯುಕ್ತನಾದನು. ಹೀಗೆ ಭಾಗೀರಥೀ ತೀರದಲ್ಲಿ ನಾನು ಕಂಡ ಮುನಿಗಳು ನನ್ನಲ್ಲಿ ಹೇಳಿಕೊಂಡರು. ಹೀಗೆ ರಾಜಾ ಧೃತರಾಷ್ಟ್ರನು ತನ್ನದೇ ಅಗ್ನಿಯಲ್ಲಿ ಸಮಾಯುಕ್ತನಾದನು. ರಾಜನು ಪರಮ ಗತಿಯನ್ನು ಹೊಂದಿದ್ದಾನೆ. ಅದರ ಕುರಿತು ನೀನು ಶೋಕಿಸಬೇಡ! ನಿನ್ನ ಜನನಿಯೂ ಕೂಡ ಗುರುಶುಶ್ರೂಷೆಗಳಿಂದ ಮಹಾ ಸಿದ್ಧಿಯನ್ನೇ ಪಡೆದಿದ್ದಾಳೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಸಹೋದರರೊಡಗೂಡಿ ನೀನು ಅವರೆಲ್ಲರ ಉದಕಕ್ರಿಯೆಗಳನ್ನು ಮಾಡಬೇಕಾಗಿದೆ. ಇದನ್ನು ಈಗಲೇ ಮಾಡುವವನಾಗು!"

ಆಗ ಪಾಂಡವರ ಧುರಂಧರ ಪೃಥಿವೀಪಾಲ ಯುಧಿಷ್ಠಿರನು ತನ್ನ ಸಹೋದರರೊಂದಿಗೆ ಹಸ್ತಿನಾಪುರದ ಹೊರ ಹೊರಟನು. ರಾಜಭಕ್ತಿಯಿಂದ ಪ್ರೇರಿತರಾದ ಗ್ರಾಮೀಣ-ಪೌರ ಜನರೂ ಕೂಡ ಒಂದೇ ವಸ್ತ್ರವನ್ನು ಸುತ್ತಿಕೊಂಡು ಗಂಗೆಯ ಮುಖವಾಗಿ ಹೊರಟರು. ಆ ಕುರುಪುಂಗವರೆಲ್ಲರೂ ನದಿಯನ್ನು ಸೇರಿ ಯುಯುತ್ಸುವನ್ನು ಮುಂದೆಮಾಡಿಕೊಂಡು ಮಹಾತ್ಮ ಧೃತರಾಷ್ಟ್ರನಿಗೆ ತರ್ಪಣವನ್ನಿತ್ತರು. ವಿಧಿವತ್ತಾಗಿ ನಾಮ-ಗೋತ್ರಗಳನ್ನು ಹೇಳಿಕೊಂಡು ಗಾಂಧಾರಿಗೂ ಪೃಥೆಗೂ ತರ್ಪಣಗಳನ್ನಿತ್ತರು. ಶೌಚಕಾರ್ಯದಲ್ಲಿ ನಿರತರಾಗಿ ಅವರು ನಗರದ ಹೊರಗಡೆಯೇ ಉಳಿದುಕೊಂಡರು. ಅನಂತರ ನೃಪನು ವಿಧಿವಿಧಾನಗಳನ್ನು ತಿಳಿದಿದ್ದ ಆಪ್ತರನ್ನು ಕುರುಶ್ರೇಷ್ಠ ಧೃತರಾಷ್ಟ್ರನು ಸುಟ್ಟುಹೋಗಿದ್ದ ಗಂಗಾದ್ವಾರದ ಸ್ಥಳಕ್ಕೆ ಕಳುಹಿಸಿಕೊಟ್ಟನು. ಅಲ್ಲಿಯೇ ಗಂಗಾದ್ವಾರದಲ್ಲಿ ಅವರ ಅಪರಕ್ರಿಯೆಗಳನ್ನು ಮಾಡಲು ಶಾಸನವನ್ನಿತ್ತನು. ಮಹೀಪತಿಯು ಆ ಪುರುಷರಿಗೆ ದಾನನೀಡಲು ಪದಾರ್ಥಗಳನ್ನಿತ್ತನು. ಹನ್ನೆರಡನೆಯ ದಿನ ಅವರ ಶೌಚಕರ್ಮಗಳನ್ನೂ ಶ್ರಾದ್ಧಗಳನ್ನೂ ಮುಗಿಸಿ ಪಾಂಡವ ನರಾಧಿಪನು ವಿಧಿವತ್ತಾಗಿ ದಕ್ಷಿಣೆಗಳನ್ನಿತ್ತನು. ತೇಜಸ್ವೀ ರಾಜಾ ಪೃಥಿವೀಪತಿಯು ಧೃತರಾಷ್ಟ್ರ, ಗಾಂಧಾರೀ ಮತ್ತು ಪೃಥೆಯರನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಉದ್ದೇಶಿಸಿ ಅವರವರ ಹೆಸರುಗಳನ್ನು ಹೇಳಿಕೊಳ್ಳುತ್ತಾ ಚಿನ್ನ, ಬೆಳ್ಳಿ, ಹಾಸಿಗೆಗಳು ಮತ್ತು ಅನುತ್ತಮ ಮಹಾಧನವನ್ನು ದಾನವನ್ನಾಗಿತ್ತನು. ಯಾವ ದ್ವಿಜನು ಏನನ್ನು ಬಯಸಿದನೋ ಅವನ್ನು - ಶಯನ, ಭೋಜನ, ವಾಹನ, ಮಣಿ-ರತ್ನ-ಧನ, ಹೊದಿಕೆಗಳು, ಭೋಗಗಳು, ದಾಸೀ-ಪರಿಚಾರಕರು - ಇವನ್ನು ರಾಜ ಮಹೀಪತಿಯು ತನ್ನ ಇಬ್ಬರು ತಾಯಿಯರ ಸಲುವಾಗಿ ದಾನಮಾಡಿದನು. ಧೀಮಾನ್ ಪೃಥಿವೀಪಾಲನು ಅನೇಕ ಶ್ರಾದ್ಧ-ದಾನಗಳನ್ನು ಮಾಡಿ ಪುನಃ ಹಸ್ತಿನಾಪುರ ನಗರವನ್ನು ಪ್ರವೇಶಿಸಿದನು.

ರಾಜನ ವಚನದಂತೆ ಹೋಗಿದ್ದ ಪುರುಷರು ಧೃತರಾಷ್ಟ್ರ-ಗಾಂಧಾರೀ-ಕುಂತಿಯರ ಅಸ್ಥಿಗಳನ್ನು ಸಂಗ್ರಹಿಸಿಕೊಂಡು ಪುನಃ ಅಲ್ಲಿಗೆ ಆಗಮಿಸಿದರು. ವಿವಿಧ ಮಾಲೆ-ಗಂಧಗಳಿಂದ ಯಥಾವಿಧಿಯಾಗಿ ಪೂಜಿಸಿ ಅವರು ಆ ಅಸ್ಥಿಗಳನ್ನು ಗಂಗೆಯಲ್ಲಿ ವಿಸರ್ಜಿಸಿ ಮಹೀಪತಿಗೆ ವರದಿಮಾಡಿದರು. ಧರ್ಮಾತ್ಮ ರಾಜಾ ಯುಧಿಷ್ಠಿರನನ್ನು ಸಮಾಧಾನಗೊಳಿಸಿ ಪರಮ ಋಷಿ ನಾರದನು ಇಷ್ಟಬಂದ ಕಡೆ ಹೊರಟುಹೋದನು.

ಈ ರೀತಿ ಸಂಗ್ರಾಮದಲ್ಲಿ ಪುತ್ರರನ್ನು ಕಳೆದುಕೊಂಡಿದ್ದ ಧೀಮಂತ ಧೃತರಾಷ್ಟ್ರನು ಸದಾ ಮಕ್ಕಳ, ಸಂಬಂಧಿಗಳ, ಮಿತ್ರರ, ಸಹೋದರರ ಮತ್ತು ಸ್ವಜನರ ಸಲುವಾಗಿ ದಾನಗಳನ್ನು ನೀಡುತ್ತಾ ಹಸ್ತಿನಾಪುರದಲ್ಲಿ ಹದಿನೈದು ವರ್ಷಗಳನ್ನೂ ವನವಾಸದಲ್ಲಿ ಮೂರು ವರ್ಷಗಳನ್ನು ಕಳೆದಿದ್ದನು. ನೃಪತಿ ಯುಧಿಷ್ಠಿರನಾದರೋ ಜ್ಞಾತಿ-ಬಾಂಧವರನ್ನು ಕಳಿದುಕೊಂಡು ಅಷ್ಟೊಂದು ಸಂತೋಷದಿಂದಿರದಿದ್ದರೂ ರಾಜ್ಯಾಡಳಿತವನ್ನು ಮಾಡುತ್ತಿದ್ದನು.

Leave a Reply

Your email address will not be published. Required fields are marked *