ಯುಧಿಷ್ಠಿರನ ಸ್ವರ್ಗಾರೋಹಣ
ಸ್ವರ್ಗದಲ್ಲಿ ನಾರದವಾಕ್ಯ
ಧರ್ಮರಾಜ ಯುಧಿಷ್ಠಿರನು ತ್ರಿವಿಷ್ಟಪ ಸ್ವರ್ಗವನ್ನು ತಲುಪಿ ಅಲ್ಲಿ ದುರ್ಯೋಧನನು ರಾಜಕಳೆಯಿಂದ, ಆದಿತ್ಯನಂತೆ ಪ್ರಕಾಶಿಸುತ್ತಾ ವೀರನ ವಿಜೃಂಭಣೆಯಿಂದ, ಪುಣ್ಯಕರ್ಮಿ ಸಾಧ್ಯರು ಮತ್ತು ದೇವತೆಗಳೊಂದಿಗೆ ಆಸನದಲ್ಲಿ ಕುಳಿತಿರುವುದನ್ನು ನೋಡಿದನು. ಅಲ್ಲಿ ದುರ್ಯೋಧನನನ್ನು ನೋಡಿ ಸಹಿಸಿಕೊಳ್ಳಲಾರದೇ ಯುಧಿಷ್ಠಿರನು ಸುಯೋಧನನು ಕಂಡೊಡನೆಯೇ ತಿರುಗಿ ಜೋರಾದ ಧ್ವನಿಯಲ್ಲಿ ಕೂಗಿ ಹೇಳಿದನು:
“ನಾನು ದುರ್ಯೋಧನನೊಂದಿಗೆ ಈ ಲೋಕಗಳನ್ನು ಅನುಭವಿಸಲು ಬಯಸುವುದಿಲ್ಲ. ಮುಂದಾಲೋಚನೆಯಿಲ್ಲದ ಈ ಲುಬ್ಧನು ಮಾಡಿದ ಕರ್ಮಗಳಿಂದಾಗಿ ಭೂಮಿಯ ಸರ್ವ ಸುಹೃದಯರೂ ಬಾಂಧವರೂ ನಮ್ಮಿಂದ ಹಿಂಸೆಗೊಳಪಟ್ಟು ಹತರಾದರು. ಇವನಿಂದಾಗಿಯೇ ಹಿಂದೆ ನಾವು ಮಹಾವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದೆವು. ಇವನಿಂದಾಗಿ ನಮ್ಮ ಸುಂದರ ಪತ್ನಿ ಧರ್ಮಚಾರಿಣೀ ಪಾಂಚಾಲಿ ದ್ರೌಪದಿಯೂ ಕೂಡ ಸಭಾಮಧ್ಯದಲ್ಲಿ ಗುರುಸನ್ನಿಧಿಯಲ್ಲಿ ಕಷ್ಟಗಳಿಗೀಡಾದಳು. ದೇವತೆಗಳೇ! ನಿಮಗೆ ಮಂಗಳವಾಗಲಿ! ನಾನು ಸುಯೋಧನನನ್ನು ನೋಡಲು ಬಯಸುವುದಿಲ್ಲ. ನನ್ನ ಸಹೋದರರಿರುವಲ್ಲಿಗೆ ಹೋಗಲು ಬಯಸುತ್ತೇನೆ.”
“ಹಾಗೆ ಹೇಳಬೇಡ!” ಎಂದು ನಾರದನು ನಗುತ್ತಾ ಹೇಳಿದನು.
“ರಾಜೇಂದ್ರ! ಈಗ ನಿನ್ನ ನಿವಾಸಸ್ಥಾನವಾದ ಈ ಸ್ವರ್ಗದಲ್ಲಿ ವಿರುದ್ಧವು ನಾಶವಾಗುತ್ತದೆ. ಯುಧಿಷ್ಠಿರ! ನೀನು ದುರ್ಯೋಧನನ ಕುರಿತು ಅಂಥಹ ಮಾತುಗಳನ್ನಾಡಬಾರದು. ನನ್ನ ಮಾತನ್ನು ಕೇಳು. ಇಲ್ಲಿ ರಾಜಾ ದುರ್ಯೋಧನನು ತ್ರಿದಶರೊಂದಿಗೆ ಮತ್ತು ಸ್ವರ್ಗವಾಸೀ ಇತರ ಸಾಧು ರಾಜಪ್ರವರರೊಂದಿಗೆ ಗೌರವಿಸಲ್ಪಡುತ್ತಾನೆ. ಯುದ್ಧದಲ್ಲಿ ತನ್ನ ದೇಹವನ್ನು ಆಹುತಿಯನ್ನಾಗಿತ್ತು ಅವನು ವೀರಲೋಕಗತಿಯನ್ನು ಪಡೆದನು. ಹಾಗೆಯೇ ಯುದ್ಧದಲ್ಲಿ ಸಮಾಹಿತರಾಗಿದ್ದ ಎಲ್ಲರೂ ಸುರಸಮರಾಗಿದ್ದಾರೆ. ಮಹಾಭಯವೊದಗಿದಾಗಲೂ ನಿರ್ಭಯನಾಗಿ ಕ್ಷತ್ರಧರ್ಮವನ್ನು ಪಾಲಿಸಿದ ಆ ಪೃಥಿವೀಪತಿಯು ಈ ಸ್ಥಾನವನ್ನು ಪಡೆದಿದ್ದಾನೆ. ಮಗನೇ! ದ್ಯೂತದಿಂದುಂಟಾದವುಗಳನ್ನು ನಿನ್ನ ಮನಸ್ಸಿಗೆ ತೆಗೆದುಕೊಳ್ಳಬಾರದು. ದ್ರೌಪದಿಗುಂಟಾದ ಪರಿಕ್ಲೇಶಗಳ ಕುರಿತೂ ನೀನು ಚಿಂತಿಸಬಾರದು. ದ್ಯೂತದ ಕಾರಣದಿಂದಾಗಿ ಸಂಗ್ರಾಮದಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಆದ ಪರಿಕ್ಲೇಶಗಳನ್ನು ಇಲ್ಲಿ ನೀನು ಮರೆತುಬಿಡಬೇಕು. ಯಥಾನ್ಯಾಯವಾಗಿ ರಾಜಾ ದುರ್ಯೋಧನನನ್ನು ಭೇಟಿಮಾಡು. ಇದು ಸ್ವರ್ಗ; ಇಲ್ಲಿ ವೈರಿಗಳ್ಯಾರೂ ಇಲ್ಲ.”
ನಾರದನು ಹೀಗೆ ಹೇಳಲು ಮೇಧಾವೀ ಕುರುರಾಜ ಯುಧಿಷ್ಠಿರನು ತನ್ನ ತಮ್ಮಂದಿರ ಕುರಿತು ಪ್ರಶ್ನಿಸುತ್ತಾ ಇಂತೆಂದನು:
“ಯಾರ ಕೃತ್ಯದಿಂದಾಗಿ ಭೂಮಿಯ ರಾಜರೆಲ್ಲರೂ ತಮ್ಮ ಆನೆ-ರಥಗಳೊಂದಿಗೆ ನಷ್ಟರಾಗಿ ಹೋದರೋ ಮತ್ತು ನಾವು ವೈರ-ಸೇಡುಗಳ ಸಿಟ್ಟಿನಿಂದ ಸುಡುತ್ತಿದ್ದೆವೋ ಆ ಅಧರ್ಮಿ, ಪಾಪಿ ಮತ್ತು ತನ್ನ ಸುಹೃದಯರನ್ನು ನೋಯಿಸಿದ ದುರ್ಯೋಧನನೇ ಸನಾತನ ವೀರಲೋಕಗಳಿಗೆ ಬಂದಿದ್ದಾನೆಂದರೆ ವೀರ-ಮಹಾತ್ಮ-ಮಹಾವ್ರತ-ಸತ್ಯಪ್ರತಿಜ್ಞ-ಸತ್ಯವಾದಿ-ಲೋಕಶೂರರಾದ ನನ್ನ ತಮ್ಮಂದಿರು ಎಲ್ಲಿದ್ದಾರೆ? ಈಗ ಅವರಿಗೆ ಯಾವ ಲೋಕಗಳು ದೊರಕಿವೆ? ಅವುಗಳನ್ನು ನೋಡಲು ಬಯಸುತ್ತೇನೆ. ಕ್ಷತ್ರಧರ್ಮದಂತೆ ಶಸ್ತ್ರಗಳಿಂದ ಮೃತ್ಯುವನ್ನು ಪಡೆದ ಮಹಾತ್ಮ ಕೌಂತೇಯ ಸತ್ಯಸಂಗರ ಕರ್ಣ, ಧೃಷ್ಟದ್ಯುಮ್ನ, ಸಾತ್ಯಕಿ ಮತ್ತು ಧೃಷ್ಟದ್ಯುಮ್ನನ ಮಕ್ಕಳನ್ನು ನೋಡಲು ಬಯಸುತ್ತೇನೆ. ಬ್ರಹ್ಮನ್! ನಾರದ! ಅವರು ಎಲ್ಲಿದ್ದಾರೆ? ಇಲ್ಲಿ ಕಾಣುತ್ತಿಲ್ಲವಲ್ಲ! ವಿರಾಟ, ದ್ರುಪದ, ಧೃಷ್ಟಕೇತು, ಪಾಂಚಲ್ಯ ಶಿಖಂಡಿ, ಎಲ್ಲ ದ್ರೌಪದೇಯರು, ಮತ್ತು ದುರ್ಧರ್ಷ ಅಭಿಮನ್ಯು ಇವರನ್ನು ನೋಡಲು ಬಯಸುತ್ತೇನೆ.”
ದೇವದೂತ ವಿಸರ್ಜನ
ಯುಧಿಷ್ಠಿರನು ಹೇಳಿದನು:
“ವಿಬುಧರೇ! ನಾನು ಇಲ್ಲಿ ಅಮಿತೌಜಸ ರಾಧೇಯ ಮತ್ತು ಮಹಾತ್ಮ ಯುಧಾಮನ್ಯು-ಉತ್ತಮೌಜಸ ಸಹೋದರರನ್ನೂ ಕಾಣುತ್ತಿಲ್ಲ! ನನಗೋಸ್ಕರವಾಗಿ ರಣವೆಂಬ ಅಗ್ನಿಯಲ್ಲಿ ತಮ್ಮ ಶರೀರಗಳನ್ನು ಆಹುತಿಯನ್ನಾಗಿತ್ತು ರಣದಲ್ಲಿ ಹತರಾದ, ವಿಕ್ರಮದಲ್ಲಿ ಶಾರ್ದೂಲಸಮರಾಗಿದ್ದ ಆ ಎಲ್ಲ ಮಹಾರಥ ರಾಜರು ಮತ್ತು ರಾಜಪುತ್ರರು ಎಲ್ಲಿದ್ದಾರೆ? ಆ ಪುರುಷಸತ್ತಮರೂ ಈ ಲೋಕವನ್ನು ಗೆದ್ದಿರಬೇಕಲ್ಲವೇ? ದೇವತೆಗಳೇ! ಒಂದುವೇಳೆ ಆ ಎಲ್ಲ ಮಹಾರಥರೂ ಈ ಲೋಕವನ್ನೇ ಪಡೆದಿದ್ದಾರೆ ಎಂದರೆ ಆ ಮಹಾತ್ಮರೊಂದಿಗೆ ನಾನೂ ಕೂಡ ಇಲ್ಲಿಯೇ ಇರುತ್ತೇನೆಂದು ತಿಳಿಯಿರಿ. ಆದರೆ ಆ ನೃಪರು ಈ ಅಕ್ಷಯ ಶುಭ ಲೋಕವನ್ನು ಪಡೆಯಲಿಲ್ಲವೆಂದಾದರೆ ನನ್ನ ಬಂಧು-ಬಾಂಧವರಿಲ್ಲದ ಈ ಲೋಕದಲ್ಲಿ ನಾನು ವಾಸಿಸುವುದಿಲ್ಲ. ತರ್ಪಣವನ್ನು ಕೊಡುವ ಸಮಯದಲ್ಲಿ “ಕರ್ಣನಿಗೂ ತರ್ಪಣವನ್ನು ಕೊಡು!” ಎಂಬ ನನ್ನ ತಾಯಿಯ ಮಾತನ್ನು ಕೇಳಿದಾಗಲಿಂದ ನಾನು ಪರಿತಪಿಸುತ್ತಿದ್ದೇನೆ. ಸುರರೇ! ಆ ಅಮಿತೌಜಸನ ಪಾದಗಳು ಮಾತೆಯ ಪಾದಗಳಂತಿದ್ದುದನ್ನು ನೋಡಿಯೂ ಕೂಡ ನಾನು ಆ ಪರಬಲಾರ್ದನ ಕರ್ಣನನ್ನು ಅನುಸರಿಸಲಿಲ್ಲ ಎಂದು ಪುನಃ ಪುನಃ ಪರಿತಪಿಸುತ್ತಿದ್ದೇನೆ. ಕರ್ಣನು ನಮ್ಮ ಜೊತೆಗಿದ್ದಿದ್ದರೆ ಯುದ್ಧದಲ್ಲಿ ಶಕ್ರನೂ ಕೂಡ ನಮ್ಮನ್ನು ಜಯಿಸಲಾಗುತ್ತಿರಲಿಲ್ಲ! ಯಾರೆಂದು ತಿಳಿಯದೇ ನಾನು ಸವ್ಯಸಾಚಿಯಿಂದ ಕೊಲ್ಲಿಸಿದ ಆ ಸೂರ್ಯಜನು ಎಲ್ಲಿಯೇ ಇರಲಿ ಅವನನ್ನು ನೋಡಲು ಬಯಸುತ್ತೇನೆ. ನನ್ನ ಪ್ರಾಣಕ್ಕಿಂತಲೂ ಪ್ರಿಯನಾದ ಆ ಭೀಮವಿಕ್ರಾಂತ ಭೀಮನನ್ನು, ಇಂದ್ರನಂತಿದ್ದ ಅರ್ಜುನನನ್ನೂ, ಯಮರಂತಿದ್ದ ಯಮಳರನ್ನೂ, ಮತ್ತು ಧರ್ಮಚಾರಿಣೀ ಪಾಂಚಾಲಿಯನ್ನೂ ನೋಡಲು ಬಯಸುತ್ತೇನೆ. ನಾನು ಇಲ್ಲಿ ಉಳಿಯಲು ಇಚ್ಛಿಸುವುದಿಲ್ಲ; ನಾನು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ. ನಾನೇನು ಭ್ರಾತೃವಿಹೀನನಾಗಿದ್ದೇನೆಯೇ? ಅವರಿರುವುದೇ ನನಗೆ ಸ್ವರ್ಗ; ಇದು ನನ್ನ ಸ್ವರ್ಗವೆಂದು ಅನ್ನಿಸುವುದಿಲ್ಲ!”
ದೇವತೆಗಳು ಹೇಳಿದರು:
“ಪುತ್ರ! ಅಲ್ಲಿಗೇ ಹೋಗಲು ನಿನಗೆ ಶ್ರದ್ಧೆಯಿದ್ದರೆ ಹೋಗು! ದೇವರಾಜನ ಶಾಸನದಂತೆ ನಾವು ನಿನಗೆ ಪ್ರಿಯವಾಗುವ ರೀತಿಯಲ್ಲಿಯೇ ವರ್ತಿಸುತ್ತೇವೆ.”
ಹೀಗೆ ಹೇಳಿ ದೇವತೆಗಳು “ಯುಧಿಷ್ಠಿರನಿಗೆ ಅವನ ಸುಹೃದಯರನ್ನು ತೋರಿಸು!” ಎಂದು ದೇವದೂತನಿಗೆ ಆದೇಶವನ್ನಿತ್ತರು. ಅನಂತರ ರಾಜಾ ಕುಂತೀಸುತನು ದೇವದೂತನೊಂದಿಗೆ ಆ ಪುರುಷರ್ಷಭರಿರುವಲ್ಲಿಗೆ ಹೋದನು. ಪಾಪಕರ್ಮಿಗಳು ಹೋಗುವ ಆ ದುರ್ಗಮ ಅಶುಭ ಮಾರ್ಗದಲ್ಲಿ ಮುಂದೆ ದೇವದೂತನೂ ಹಿಂದಿನಿಂದ ರಾಜ ಯುಧಿಷ್ಠಿರನೂ ಹೋದರು. ಪಾಪಕೃತರಿಂದ ತುಂಬಿ ದುರ್ಗಂಧವನ್ನು ಸೂಸುತ್ತಿದ್ದ ಆ ಪ್ರದೇಶವನ್ನು ಘೋರ ಕತ್ತಲೆಯು ಆವರಿಸಿತ್ತು. ಪಾಚಿ-ಕಳೆಗಳಿರುವಲ್ಲಿ ಕೂದಲುಗಳಿದ್ದವು; ಕೆಸರಿರುವಲ್ಲಿ ರಕ್ತ-ಮಾಂಸಗಳಿದ್ದವು. ಝೊಯ್ಯೆಂದು ಕಡಿಯಲು ಬರುತ್ತಿದ್ದ ನೊಣ-ಸೊಳ್ಳೆ ಮತ್ತು ಇತರ ಕೀಟಗಳು ಎಲ್ಲಕಡೆಗಳಿಂದಲೂ ಬಂದು ಮುತ್ತಿಗೆ ಹಾಕುತ್ತಿದ್ದವು. ಎಲುಬು ಮತ್ತು ಕೂದಲುಗಳ ರಾಶಿಗಳ ಮೇಲೆ ಕೃಮಿ-ಕೀಟಗಳು ತುಂಬಿಹೋಗಿದ್ದವು. ಉರಿಯುತ್ತಿರುವ ಬೆಂಕಿಯು ಎಲ್ಲ ಕಡೆಗಳಿಂದ ಬೇಲಿಯ ರೂಪದಂತೆ ಸುತ್ತುವರೆದಿತ್ತು. ಕಾಗೆಗಳು ಮತ್ತು ಹದ್ದುಗಳು ಅಲ್ಲಿ ತುಂಬಿಹೋಗಿದ್ದವು. ಕೆಲವಕ್ಕೆ ಉಕ್ಕಿನಂತಹ ಕೊಕ್ಕುಗಳಿದ್ದವು. ಕೆಲವೊಕ್ಕೆ ಸೂಜಿಯಂತಹ ತೀಕ್ಷ್ಣ ಕೊಕ್ಕುಗಳಿದ್ದವು. ವಿಂದ್ಯಪರ್ವತದಷ್ಟು ದೊಡ್ಡದಾಗಿದ್ದ ಪ್ರೇತಗಳಿದ್ದವು. ಕೊಬ್ಬು ಮತ್ತು ರಕ್ತಗಳಿಂದ ಲೇಪಿತ ತುಂಡಾದ ಬಾಹುಗಳು, ತೊಡೆಗಳು, ಕೈಗಳು, ಕತ್ತರಿಸಲ್ಪಟ್ಟ ಹೊಟ್ಟೆಗಳು ಮತ್ತು ಕಾಲುಗಳು ಅಲ್ಲಲ್ಲಿ ಚೆಲ್ಲಿ ಬಿದ್ದಿದ್ದವು. ರೋಮಗಳನ್ನು ನಿಮಿರುವಂಥಹ ಕೀಟ-ದುರ್ಗಂಧಗಳಿಂದ ಕೂಡಿದ್ದ ಆ ಅಮಂಗಳಕರ ದಾರಿಯ ಮಧ್ಯೆ ಧರ್ಮಾತ್ಮ ರಾಜನು ಯೋಚಿಸುತ್ತಾ ಮುಂದುವರೆದನು. ಅಲ್ಲಿ ಅವನು ಕುದಿಯುತ್ತಿರುವ ನೀರಿನಿಂದ ತುಂಬಿದ ದಾಟಲಸಾಧ್ಯ ನದಿಯನ್ನೂ, ತೀಕ್ಷ್ಣ ಖಡ್ಗಗಳಂತಿರುವ ಎಲೆಗಳುಳ್ಳ ವೃಕ್ಷಗಳ ವನವನ್ನೂ ನೋಡಿದನು. ಎಲ್ಲ ಕಡೆಗಳಲ್ಲಿ ಸುಡುತ್ತಿರುವ ಮರಳುರಾಶಿಯನ್ನೂ, ಕಬ್ಬಿಣದ ಬಂಡೆಗಳನ್ನೂ, ಕುದಿಯುತ್ತಿರುವ ಎಣ್ಣೆಯಿಂದ ತುಂಬಿದ್ದ ಲೋಹದ ಕೊಪ್ಪರಿಗೆಗಳನ್ನೂ, ಮುಟ್ಟಲು ಅಸಾಧ್ಯವಾದ ತೀಕ್ಷ್ಣ ಮುಳ್ಳುಗಳಿದ್ದ ಶಾಲ್ಮಲೀವನವನ್ನೂ, ಪಾಪಕರ್ಮಿಗಳ ಯಾತನೆಯನ್ನೂ ಕೌಂತೇಯನು ನೋಡಿದನು.
ಆ ದುರ್ಗಂಧವನ್ನು ನೋಡಿ ಅವನು ದೇವದೂತನಿಗೆ ಹೇಳಿದನು:
“ಈ ರೀತಿಯ ಮಾರ್ಗದಲ್ಲಿ ನಾವು ಇನ್ನೂ ಎಷ್ಟು ದೂರ ಹೋಗಬೇಕು? ನನ್ನ ಆ ಸಹೋದರರು ಎಲ್ಲಿದ್ದಾರೆ ಎಂದು ನನಗೆ ಹೇಳಬೇಕು. ದೇವತೆಗಳ ಈ ಪ್ರದೇಶವು ಯಾವುದು ಎನ್ನುವುದನ್ನೂ ತಿಳಿಯಲು ಬಯಸುತ್ತೇನೆ!”
ಧರ್ಮರಾಜನಾಡಿದ ಮಾತನ್ನು ಕೇಳಿ ದೇವದೂತನು ಹಿಂದೆ ತಿರುಗಿ ಹೇಳಿದನು:
“ಇಲ್ಲಿಗೇ ನೀನು ಬರಬೇಕಾಗಿದ್ದುದು! ನಾನೀಗ ಹಿಂದಿರುಗಬೇಕು. ದಿವೌಕಸರು ನನಗೆ ಹೀಗೆಂದೇ ಹೇಳಿದ್ದರು. ರಾಜೇಂದ್ರ! ಒಂದು ವೇಳೆ ನೀನು ಬಳಲಿದ್ದರೆ ನನ್ನೊಡನೆ ನೀನೂ ಬರಬಹುದು!”
ವಾಸನೆಯಿಂದ ಮೂರ್ಛಿತನಾಗಿ ನಿರ್ವಿಣ್ಣನಾಗಿದ್ದ ಯುಧಿಷ್ಠಿರನು ಹಿಂದಿರುಗಲು ನಿರ್ಧರಿಸಿ ಹಿಂದಕ್ಕೆ ತಿರುಗಿದನು. ದುಃಖಶೋಕಸಮನ್ವಿತನಾದ ಆ ಧರ್ಮಾತ್ಮನು ಹಿಂದೆ ತಿರುಗುತ್ತಲೇ ಎಲ್ಲ ಕಡೆಗಳಿಂದ ದೀನಧ್ವನಿಯಲ್ಲಿ ತನ್ನನ್ನು ಉದ್ದೇಶಿಸಿ ಕೂಗಿ ಕರೆಯುವುದನ್ನು ಕೇಳಿದನು.
“ಭೋ! ಭೋ! ಧರ್ಮಜ! ರಾಜರ್ಷೇ! ಪುಣ್ಯವಂತ ಪಾಂಡವ! ನಮ್ಮ ಅನುಗ್ರಹಾರ್ಥವಾಗಿ ಒಂದು ಕ್ಷಣಕಾಲ ನಿಲ್ಲು! ನಿನ್ನೊಂದಿಗೆ ಪುಣ್ಯಗಂಧವುಳ್ಳ ಗಾಳಿಯು ಇಲ್ಲಿ ಬೀಸತೊಡಗಿದೆ. ನಿನ್ನ ಆ ಸುವಾಸನೆಯಿಂದ ನಮಗೆ ಸುಖವೆನಿಸುತ್ತಿದೆ! ಇನ್ನೂ ಸ್ವಲ್ಪಸಮಯ ಇಲ್ಲಿ ನಿಲ್ಲು. ಅಷ್ಟು ಸಮಯ ನಿನ್ನನ್ನು ನೋಡಿ ನಾವು ಸುಖವನ್ನು ಅನುಭವಿಸುತ್ತೇವೆ. ಸ್ವಲ್ಪಹೊತ್ತು ಇಲ್ಲಿಯೇ ಇರು. ನೀನಿಲ್ಲಿದ್ದರೆ ಈ ಯಾತನೆಗಳು ನಮ್ಮನ್ನು ಬಾಧಿಸುವುದಿಲ್ಲ!”
ಆ ಸ್ಥಳದ ಎಲ್ಲ ಕಡೆಗಳಿಂದ ಈ ರೀತಿಯ ದೈನ್ಯ-ವೇದನೆಗಳಿಂದ ತುಂಬಿದ ಬಹುವಿಧದ ಮಾತುಗಳನ್ನು ಅವನು ಕೇಳಿದನು. ದೀನರಾಗಿ ಕೂಗುತ್ತಿದ್ದ ಅವರ ಆ ಮಾತುಗಳನ್ನು ಕೇಳಿ ದಯಾವಂತ ಯುಧಿಷ್ಠಿರನು “ಅಯ್ಯೋ ಕಷ್ಟವೇ!” ಎಂದು ಹೇಳಿ ಅಲ್ಲಿಯೇ ನಿಂತಕೊಂಡನು. ಆ ಸ್ವರಗಳನ್ನು ಹಿಂದೆ ಕೂಡ ಪುನಃ ಪುನಃ ಕೇಳಿದ್ದರೂ ದುಃಖದಿಂದ ಬಳಲಿದ್ದವರ ಆ ಧ್ವನಿಗಳು ಯಾರದ್ದೆಂದು ಪಾಂಡವನಿಗೆ ಗುರುತಿಸಲಾಗಲಿಲ್ಲ. ಹಾಗೆ ಯಾರು ಮಾತನಾಡುತ್ತಿದ್ದಾರೆಂದು ತಿಳಿಯದ ಧರ್ಮಪುತ್ರ ಯುಧಿಷ್ಠಿರನು “ನೀವು ಯಾರು ಮತ್ತು ಇಲ್ಲಿ ಏಕೆ ಇದ್ದೀರಿ?” ಎಂದು ಕೇಳಿದನು. ಅನಂತರ ಎಲ್ಲ ಕಡೆಗಳಿಂದ ಎಲ್ಲರೂ “ನಾನು ಕರ್ಣ!” “ನಾನು ಭೀಮಸೇನ!” “ನಾನು ಅರ್ಜುನ!” “ನಾನು ನಕುಲ, ಸಹದೇವ!” “ನಾನು ಧೃಷ್ಟದ್ಯುಮ್ನ, ದ್ರೌಪದೀ, ದ್ರೌಪದೇಯರು!” ಇವೇ ಮುಂತಾಗಿ ಕೂಗುತ್ತಿರುವುದನ್ನು ಅವನು ಕೇಳಿದನು.
ಅಂತಹ ಪ್ರದೇಶದಲ್ಲಿ ಅವರ ಆ ಮಾತುಗಳನ್ನು ಕೇಳಿ ರಾಜನು ತನ್ನಲ್ಲಿಯೇ ವಿಮರ್ಶಿಸಿದನು:
“ದೈವವು ಹೀಗೇಕೆ ಮಾಡಿತು? ಮಹಾತ್ಮರಾದ ಈ ಕರ್ಣನಾಗಲೀ, ಸುಮದ್ಯಮೆ ಪಾಂಚಾಲೀ ದ್ರೌಪದಿಯಾಗಲೀ ಯಾವ ಕಲುಷ ಕರ್ಮಗಳನ್ನು ಮಾಡಿದ್ದಾರೆಂದು ಪಾಪಗಂಧದಿಂದ ಕೂಡಿರುವ ಈ ದಾರುಣ ಸ್ಥಳದಲ್ಲಿದ್ದಾರೆ? ಈ ಎಲ್ಲ ಪುಣ್ಯಕರ್ಮಿಗಳೂ ಮಾಡಿದ ಪಾಪಕರ್ಮಗಳ್ಯಾವುವೂ ನನಗೆ ಗೊತ್ತಿಲ್ಲ! ಧೃತರಾಷ್ಟ್ರ ಪುತ್ರ ಪಾಪಿ ರಾಜಾ ಸುಯೋಧನನು ಏನು ಮಾಡಿದನೆಂದು ತನ್ನ ಅನುಯಾಯಿಗಳೆಲ್ಲರೊಂದಿಗೆ ಸಂಪತ್ತು-ಸಂತೋಷಗಳಿಂದ ಮೆರೆಯುತ್ತಿದ್ದಾನೆ? ಇಂದ್ರನೋ ಎನ್ನುವಂತೆ ಲಕ್ಷ್ಮೀವಂತನಾಗಿ ಅವನು ಅಲ್ಲಿ ಪರಮಪೂಜಿತನಾಗಿದ್ದಾನೆ. ಸರ್ವಧರ್ಮವಿದ, ಶೂರ, ಸತ್ಯ, ಆಗಮಪರಾಯಣ, ಕ್ಷಾತ್ರಧರ್ಮಪರಾಯಣ, ಪ್ರಾಜ್ಞ, ಭೂರಿದಕ್ಷಿಣೆಗಳನ್ನಿತ್ತು ಯಾಗನಡೆಸಿದ ನಾವು ಈ ನರಕದಲ್ಲಿದ್ದೇವೆಂದರೆ ಇದೆಂತಹ ವಿಕಾರ? ನಾನೇನು ಸ್ವಪ್ನವನ್ನು ಕಾಣುತ್ತಿದ್ದೇನೆಯೇ ಅಥವಾ ಎಚ್ಚರವಾಗಿಯೇ ಇದ್ದೇನೆಯೇ? ಎಚ್ಚರದಿಂದಿರುವೆನೆಂದು ಅನಿಸಿದರೂ ಚೇತನವು ಉಡುಗಿಹೋದಂತಾಗಿದೆ. ಇಂದು ನಾನು ಹುಚ್ಚನಾಗಿಬಿಟ್ಟಿದ್ದೇನೆಯೇ? ಅಯ್ಯೋ! ಈ ಚಿತ್ತವಿಕಾರವೇ!”
ದುಃಖಶೋಕಸಮಾವಿಷ್ಟನಾದ, ಚಿಂತೆಯಿಂದ ವ್ಯಾಕುಲಿತನಾಗಿದ್ದ ರಾಜಾ ಯುಧಿಷ್ಠಿರನು ಈ ರೀತಿ ಬಹುವಿಧಗಳಲ್ಲಿ ವಿಮರ್ಶಿಸಿದನು. ಕೂಡಲೇ ತೀವ್ರ ಕ್ರೋಧಿತನಾಗಿ ನೃಪ ಧರ್ಮಸುತ ಯುಧಿಷ್ಠಿರನು ದೇವತೆಗಳನ್ನೂ, ಧರ್ಮನನ್ನೂ ಹಳಿದನು. ತೀವ್ರ ದುರ್ಗಂಧದಿಂದ ಸಂತಪ್ತನಾದ ಅವನು ದೇವದೂತನಿಗೆ ಹೇಳಿದನು:
“ದೂತ! ನಿನ್ನನ್ನು ಕಳುಹಿಸಿದವರ ಬಳಿ ನೀನು ಹೋಗು! ನಾನು ಅಲ್ಲಿಗೆ ಬರುವುದಿಲ್ಲ. ಇಲ್ಲಿಯೇ ಉಳಿದುಕೊಂಡಿದ್ದೇನೆಂದು ಅವರಿಗೆ ಹೇಳು. ನಾನು ಇಲ್ಲಿ ಇರುವುದರಿಂದ ನನ್ನ ಸಹೋದರರು ಸುಖವನ್ನನುಭವಿಸುತ್ತಿದ್ದಾರೆ!”
ಧೀಮಂತ ಪಾಂಡುಪುತ್ರನು ಹೀಗೆ ಹೇಳಲು ದೂತನು ದೇವರಾಜ ಶತ್ರಕ್ರತುವಿರುವಲ್ಲಿಗೆ ಹೋದನು. ಧರ್ಮಪುತ್ರನು ಹೇಳಿದ್ದಂತೆ ಧರ್ಮರಾಜನ ಇಂಗಿತವೆಲ್ಲವನ್ನೂ ಅವನಿಗೆ ನಿವೇದಿಸಿದನು.
ಯುಧಿಷ್ಠಿರ ಸ್ವರ್ಗಾರೋಹಣ
ಪಾರ್ಥ ಧರ್ಮರಾಜ ಯುಧಿಷ್ಠಿರನು ಅಲ್ಲಿ ಒಂದು ಕ್ಷಣಮಾತ್ರ ನಿಂತಿದ್ದಷ್ಟೇ ಶಕ್ರನನ್ನು ಮುಂದಿರಿಸಿಕೊಂಡ ದೇವತೆಗಳು ಅಲ್ಲಿಗೆ ಆಗಮಿಸಿದರು. ಸ್ವಯಂ ಧರ್ಮನು ದೇಹಧಾರಿಯಾಗಿ ರಾಜನನ್ನು ನೋಡಲು ಕುರುರಾಜ ಯುಧಿಷ್ಠಿರನು ಎಲ್ಲಿದ್ದನೋ ಅಲ್ಲಿಗೆ ಆಗಮಿಸಿದನು. ಆ ಪುಣ್ಯ ಜನ್ಮ-ಕರ್ಮಗಳ ದೇವತೆಗಳು ಅಲ್ಲಿಗೆ ಆಗಮಿಸುತ್ತಲೇ ಅವರ ಹೊಳೆಯುತ್ತಿರುವ ದೇಹಗಳಿಂದಾಗಿ ಅಲ್ಲಿದ್ದ ಕತ್ತಲೆಯು ಹೊರಟುಹೋಯಿತು. ಪಾಪಕರ್ಮಿಗಳ ಯಾತನೆಗಳೂ, ವೈತರಣೀ ನದಿಯೂ, ಮುಳ್ಳಿನ ಮರಗಳೂ ಅಲ್ಲಿಂದ ಅದೃಶ್ಯವಾದವು. ಅಲ್ಲಿ ಸುತ್ತಲೂ ಇದ್ದಿದ್ದ ಭಯಾನಕ ಲೋಹದ ಕೊಪ್ಪರಿಗೆಗಳೂ, ಭಯಾನಕ ಶಿಲೆಗಳೂ, ವಿಕೃತ ಶರೀರಗಳೂ ದೃಶ್ಯಗಳೂ ಅದೃಶ್ಯವಾದುದನ್ನು ರಾಜಾ ಕೌಂತೇಯನು ನೋಡಿದನು. ಕೂಡಲೇ ತಂಪಾದ ಮಂಗಳಕರ ಪುಣ್ಯಸುವಾಸನೆಯುಳ್ಳ ಶೀತಲ ಗಾಳಿಯು ಅಲ್ಲಿ ಬಂದ ದೇವತೆಗಳ ಕಡೆಯಿಂದ ಬೀಸತೊಡಗಿತು. ಮಹಾತೇಜಸ್ವಿ ರಾಜಾ ಧರ್ಮಪುತ್ರನು ಎಲ್ಲಿ ನಿಂತಿದ್ದನೋ ಅಲ್ಲಿಗೆ ಶಕ್ರನೊಂದಿಗೆ ವಾಯು, ವಸವರು, ಅಶ್ವಿನರು, ಸಾಧ್ಯರು, ರುದ್ರರು, ಆದಿತ್ಯರು, ಅನ್ಯ ದೇವತೆಗಳು, ಸಿದ್ಧರು, ಮತ್ತು ಪರಮ ಋಷಿಗಳೆಲ್ಲರೂ ಬಂದು ಸೇರಿದರು. ಆಗ ಪರಮ ಕಾಂತಿಯುಕ್ತ ಸುರಪತಿ ಶಕ್ರನು ಯುಧಿಷ್ಠಿರನಿಗೆ ಈ ಸಾಂತ್ವಪೂರ್ವಕ ಮಾತುಗಳನ್ನಾಡಿದನು:
“ಯುಧಿಷ್ಠಿರ! ಮಹಾಬಾಹೋ! ಇಲ್ಲಿ ಬಾ! ಎಲ್ಲವೂ ಮುಗಿಯಿತು! ನಿನಗೆ ಸಿದ್ಧಿಯು ಪ್ರಾಪ್ತವಾಯಿತು. ಅಕ್ಷಯ ಲೋಕಗಳೂ ನಿನ್ನದಾಗಿವೆ! ನೀನು ಸಿಟ್ಟಾಗಬಾರದು! ನನ್ನ ಮಾತನ್ನು ಕೇಳು! ಮಗೂ! ಎಲ್ಲ ರಾಜರೂ ನರಕವನ್ನು ನೋಡುವುದು ಅವಶ್ಯಕವಾಗಿದೆ! ಶುಭ ಮತ್ತು ಅಶುಭ ಕರ್ಮಗಳೆಂಬ ಎರಡು ರಾಶಿಗಳಿರುತ್ತವೆ. ಮೊದಲು ಸುಕೃತಗಳ ಪುಣ್ಯಗಳನ್ನು ಭೋಗಿಸುವವರು ಅನಂತರ ನರಕವನ್ನು ಕಾಣುತ್ತಾರೆ. ಆದರೆ ಮೊದಲೇ ನರಕವನ್ನು ಅನುಭವಿಸಿದವರು ಅನಂತರ ಸ್ವರ್ಗವನ್ನು ಸೇರುತ್ತಾರೆ. ತುಂಬಾ ಪಾಪಕರ್ಮಗಳನ್ನು ಮಾಡಿರುವವನು ಮೊದಲು ಸ್ವರ್ಗವನ್ನು ಅನುಭವಿಸುತ್ತಾನೆ. ನಿನ್ನ ಶ್ರೇಯಸ್ಸನ್ನು ಬಯಸಿದ ನಾನೇ ನೀನು ಇಲ್ಲಿಗೆ ಬರುವಂತೆ ಮಾಡಿದೆ. ಅವನ ಮಗನ ವಿಷಯದಲ್ಲಿ ನೀನು ದ್ರೋಣನೊಂದಿಗೆ ಮೋಸದಲ್ಲಿ ನಡೆದುಕೊಂಡೆ. ಆದುದರಿಂದ ಈ ನರಕವನ್ನು ನೋಡಿ ನೀನೂ ಕೂಡ ಮೋಸಹೋದೆ! ನಿನ್ನಂತೆಯೇ ಭೀಮ, ಪಾರ್ಥ, ಯಮಳರು ಮತ್ತು ದ್ರೌಪದೀ ಕೃಷ್ಣೆ ಇವರುಗಳು ಕೂಡ ಮೋಸದ ನರಕಕ್ಕೆ ಹೋಗಿದ್ದರು. ಬಾ! ರಣದಲ್ಲಿ ಹತರಾದ ನಿನ್ನ ಪಕ್ಷದ ಪಾರ್ಥಿವರೆಲ್ಲರೂ ಪಾಪಗಳಿಂದ ಮುಕ್ತರಾಗಿ ಸ್ವರ್ಗವನ್ನು ಸೇರಿರುವುದನ್ನು ನೋಡು! ಯಾರಿಗಾಗಿ ನೀನು ಪರಿತಪಿಸುತ್ತಿದ್ದೆಯೋ ಆ ಮಹೇಷ್ವಾಸ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಕರ್ಣನು ಪರಮ ಸಿದ್ಧಿಯನ್ನು ಹೊಂದಿದ್ದಾನೆ. ಸ್ವಸ್ಥಾನದಲ್ಲಿ ಕುಳಿತಿರುವ ಆ ಪುರುಷವ್ಯಾಘ್ರ ಆದಿತ್ಯತನಯನನ್ನು ನೋಡಿ ಶೋಕವನ್ನು ತೊರೆ! ನಿನ್ನ ಇತರ ಸಹೋದರರೂ ನಿನ್ನ ಪಕ್ಷದಲ್ಲಿದ್ದ ಪಾರ್ಥಿವರೂ ತಮ್ಮ ತಮ್ಮ ಸ್ಥಾನಗಳನ್ನು ಪಡೆದು ಕುಳಿತಿರುವುದನ್ನು ನೋಡಿ ನಿನ್ನ ಮಾನಸಿಕ ಜ್ವರವನ್ನು ತೊರೆ! ಮೊದಲೇ ನರಕವನ್ನು ಅನುಭವಿಸಿದ ನೀನು ಈ ನಂತರ ಶೋಕವನ್ನು ತೊರೆದು ನಿರಾಮಯನಾಗಿ ನನ್ನೊಡನೆ ವಿಹರಿಸು! ಪಾಂಡವ! ತಪಸ್ಸು, ದಾನ ಮತ್ತು ಪುಣ್ಯ ಕರ್ಮಗಳಿಂದ ಸ್ವಯಂ ನೀನೇ ಜಯಿಸಿರುವ ಫಲವನ್ನು ಭೋಗಿಸು. ಶುಭ್ರವಸ್ತ್ರಗಳನ್ನುಟ್ಟ ದೇವಗಂಧರ್ವರು, ದಿವ್ಯ ಅಪ್ಸರೆಯರು ದಿವಿಯಲ್ಲಿ ಇಂದು ಕಲ್ಯಾಣನಾದ ನಿನ್ನನ್ನು ಸೇವಿಸುತ್ತಾರೆ! ರಾಜಸೂಯ ಯಾಗದಿಂದ ಪಡೆದ ಮತ್ತು ಅಶ್ವಮೇಧದಿಂದ ವೃದ್ಧಿಯಾದ ಮಹಾಲೋಕಗಳನ್ನೂ ತಪಸ್ಸಿನ ಮಹಾಫಲವನ್ನೂ ಭೋಗಿಸು! ನಿನ್ನ ಲೋಕವು ಇತರ ರಾಜರ ಲೋಕಗಳಿಗಿಂತ ಮೇಲಿದೆ. ಹರಿಶ್ಚಂದ್ರನಿಗೆ ಸಮನಾದ ಲೋಕದಲ್ಲಿ ನೀನು ವಿಹರಿಸುತ್ತೀಯೆ! ಎಲ್ಲಿ ರಾಜರ್ಷಿ ಮಾಂಧಾತನಿರುವನೋ, ಎಲ್ಲಿ ರಾಜಾ ಭಗೀರಥನಿರುವನೋ, ಎಲ್ಲಿ ದುಷ್ಯಂತನ ಮಗ ಭರತನಿರುವನೋ ಅಲ್ಲಿ ನೀನು ವಿಹರಿಸುತ್ತೀಯೆ! ಇಗೋ ಮೂರುಲೋಕಗಳನ್ನೂ ಪಾವನಗೊಳಿಸುವ ಪುಣ್ಯ ದೇವನದಿ ಆಕಾಶಗಂಗೆಯಿದು! ಅಲ್ಲಿ ಸ್ನಾನಮಾಡಿ ನಿನ್ನದೇ ಲೋಕಕ್ಕೆ ನೀನು ಹೋಗುವೆ! ಅಲ್ಲಿ ಸ್ನಾನಮಾಡಿದರೆ ನಿನ್ನ ಮನುಷ್ಯ ಭಾವವು ಹೊರಟುಹೋಗುತ್ತದೆ. ಶೋಕವನ್ನು ಕಳೆದುಕೊಂಡು, ನಿರಾಯಾಸನಾಗಿ, ವೈರದಿಂದ ಬಿಡುಗಡೆಯೂ ಆಗುತ್ತದೆ.”
ಕೌರವೇಂದ್ರ ಯುಧಿಷ್ಠಿರನಿಗೆ ದೇವೇಂದ್ರನು ಹೀಗೆ ಹೇಳಲು ಮೂರ್ತಿಮತ್ತಾಗಿದ್ದ ಸಾಕ್ಷಾತ್ ಧರ್ಮನು ತನ್ನ ಮಗನಿಗೆ ಇಂತೆಂದನು:
“ರಾಜನ್! ಮಹಾಪ್ರಾಜ್ಞ! ಮಗನೇ! ನಿನಗೆ ನನ್ನ ಮೇಲಿರುವ ಭಕ್ತಿ, ಸತ್ಯ ವಾಕ್ಯ, ಕ್ಷಮೆ ಮತ್ತು ದಮಗಳಿಂದ ನಾನು ಪ್ರೀತನಾಗಿದ್ದೇನೆ. ಇದು ನಾನು ನಡೆಸಿದ ನಿನ್ನ ಮೂರನೆಯ ಪರೀಕ್ಷೆಯಾಗಿತ್ತು. ಎಷ್ಟೇ ಪ್ರಯತ್ನಪಟ್ಟರೂ ನಿನ್ನ ಸ್ವಭಾವದಿಂದ ವಿಚಲಿತನನ್ನಾಗಿಸಲು ನನಗೆ ಸಾಧ್ಯವಾಗಲಿಲ್ಲ! ಮೊಟ್ಟಮೊದಲನೆಯದಾಗಿ ನೀನು ದ್ವೈತವನದ ಬಳಿಯಲ್ಲಿ ಅರಣಿಯನ್ನು ಹುಡುಕುತ್ತಿದ್ದಾಗ ನಿನ್ನನ್ನು ಪರೀಕ್ಷಿಸಿದ್ದೆ ಮತ್ತು ನೀನು ಅದರಲ್ಲಿ ಉತ್ತೀರ್ಣನಾಗಿದ್ದೆ. ದ್ರೌಪದಿ ಮತ್ತು ನಿನ್ನ ಸೋದರರು ಅಲ್ಲಿ ವಿನಾಶರಾದಾಗ ನಾಯಿಯ ರೂಪವನ್ನು ಧರಿಸಿ ನಾನು ಪುನಃ ನಿನ್ನನ್ನು ಪರೀಕ್ಷಿಸಿದೆ. ಸಹೋದರರಿಗಾಗಿ ಇಲ್ಲಿ ನೀನು ನಿಲ್ಲಲು ಬಯಸಿದ ಇದು ಮೂರನೆಯ ಪರೀಕ್ಷೆಯಾಗಿತ್ತು. ಈಗ ನೀನು ವಿಶುದ್ಧನೂ, ಸುಖಿಯೂ, ಪಾಪಗಳನ್ನು ಕಳೆದುಕೊಂಡವನೂ ಆಗಿರುವೆ! ನಿನ್ನ ಈ ಸಹೋದರರು ನರಕದಲ್ಲಿಲ್ಲ. ಇದೊಂದು ಮಹೇಂದ್ರ ದೇವರಾಜನು ಆಯೋಜಿಸಿದ ಮಾಯೆಯಾಗಿತ್ತು. ಮಗೂ! ಎಲ್ಲ ರಾಜರೂ ಅವಶ್ಯಕವಾಗಿ ನರಕವನ್ನು ನೋಡಲೇಬೇಕು. ಆದುದರಿಂದ ನೀನು ಮುಹೂರ್ತಕಾಲ ಈ ಮಹಾದುಃಖವನ್ನು ಅನುಭವಿಸಬೇಕಾಯಿತು. ಸವ್ಯಸಾಚಿಯಾಗಲೀ, ಭೀಮನಾಗಲೀ, ಪುರುಷರ್ಷಭ ಯಮಳರಾಗಲೀ, ಸತ್ಯವಾಗ್ಮಿ ಶೂರ ಕರ್ಣನಾಗಲೀ ದೀರ್ಘಕಾಲ ನರಕಕ್ಕೆ ಅರ್ಹರಾದವರಲ್ಲ. ರಾಜಪುತ್ರಿ ಕೃಷ್ಣೆಯೂ ಕೂಡ ನರಕಾರ್ಹಳಲ್ಲ. ಭರತಶ್ರೇಷ್ಠ! ಇಲ್ಲಿ ಬಾ! ತ್ರಿಲೋಕಗಳಲ್ಲಿ ಹರಿಯುವ ಗಂಗೆಯನ್ನು ನೋಡು!”
ಅವನು ಹೀಗೆ ಹೇಳಲು ಆ ರಾಜರ್ಷಿಯು ಧರ್ಮ ಮತ್ತು ಸರ್ವ ದೇವತೆಗಳೊಂದಿಗೆ ಋಷಿಗಳು ಸಂಸ್ತುತಿಸುವ ಪಾವನೀ ಪುಣ್ಯೆ ದೇವನದಿ ಗಂಗೆಯಿದ್ದಲ್ಲಿಗೆ ಹೋದನು. ಅಲ್ಲಿ ಮುಳುಗಿ ರಾಜನು ತನ್ನ ಮಾನುಷೀ ಶರೀರವನ್ನು ತ್ಯಜಿಸಿದನು. ಆ ಜಲದಲ್ಲಿ ಮುಳುಗಿ ಧರ್ಮರಾಜ ಯುಧಿಷ್ಠಿರನು ದಿವ್ಯ ಶರೀರನಾಗಿ ವೈರವಿಲ್ಲದವನಾಗಿ, ಸಂತಾಪಗಳನ್ನು ಕಳೆದುಕೊಂಡನು. ಅನಂತರ ಧೀಮಂತ ಕುರುರಾಜ ಯುಧಿಷ್ಠಿರನು ಧರ್ಮನ ಸಹಿತ, ದೇವತೆಗಳಿಂದ ಸುತ್ತುವರೆಯಲ್ಪಟ್ಟು, ಸ್ತುತಿಸುತ್ತಿದ್ದ ಮಹರ್ಷಿಗಳೊಂದಿಗೆ ಹೊರಟನು.
ಅನಂತರ ರಾಜಾ ಯುಧಿಷ್ಠಿರನು ದೇವತೆಗಳು ಮತ್ತು ಋಷಿ-ಮರುದ್ಗಣಗಳಿಂದ ಪೂಜ್ಯನಾಗಿ ಆ ಕುರುಪುಂಗವರು ಇದ್ದಲ್ಲಿಗೆ ಬಂದನು. ಅಲ್ಲಿ ಅವನು ಬ್ರಾಹ್ಮೀ ತೇಜಸ್ಸಿನ ದೇಹವನ್ನು ಧರಿಸಿದ್ದ ಗೋವಿಂದನನ್ನು ನೋಡಿದನು. ಅವನು ಹಿಂದೆ ನೋಡಿದ್ದ ರೂಪದಲ್ಲಿಯೇ ಇದ್ದುದರಿಂದ ಗುರುತಿಸಲ್ಪಟ್ಟನು. ಅವನು ತನ್ನದೇ ದೇಹದ ಕಾಂತಿಯಿಂದ ಬೆಳಗುತ್ತಿದ್ದನು. ಚಕ್ರವೇ ಮೊದಲಾದ ಘೋರ ದಿವ್ಯ ಆಯುಧಗಳು ಪುರುಷಸ್ವರೂಪದಲ್ಲಿ ಅವನ ಸೇವೆಗೈಯುತ್ತಿದ್ದವು. ವೀರ ಸುವರ್ಚಸ ಫಲ್ಗುನನು ಅವನ ಸೇವೆಯಲ್ಲಿ ನಿಂತಿದ್ದನು. ಆ ಪ್ರದೇಶದ ಇನ್ನೊಂದು ಕಡೆಯಲ್ಲಿ ಕುರುನಂದನನು ದ್ವಾದಶ ಆದಿತ್ಯರ ಸಹಿತ ಕುಳಿತಿದ್ದ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಕರ್ಣನನ್ನು ಕಂಡನು. ಆ ಪ್ರದೇಶದ ಇನ್ನೊಂದು ಕಡೆಯಲ್ಲಿ ಮರುದ್ಗಣಗಳಿಂದ ಆವೃತನಾಗಿ ತನ್ನದೇ ಶರೀರವನ್ನು ಧರಿಸಿದ್ದ ಪ್ರಭು ಭೀಮಸೇನನನ್ನು ನೋಡಿದನು. ಹಾಗೆಯೇ ಅಶ್ವಿನಿಯರ ಸ್ಥಾನದಲ್ಲಿ ತಮ್ಮದೇ ತೇಜಸ್ಸಿನಿಂದ ಬೆಳಗುತ್ತಿರುವ ನಕುಲ-ಸಹದೇವರನ್ನೂ ಕುರುನಂದನನು ನೋಡಿದನು. ಹಾಗೆಯೇ ಅವನು ಕಮಲದ ಹೂವುಗಳ ಮಾಲೆಯನ್ನು ಧರಿಸಿ, ತನ್ನ ದೇಹದ ಸೂರ್ಯತೇಜಸ್ಸಿನಿಂದ ಸ್ವರ್ಗವನ್ನೇ ಬೆಳಗಿಸುತ್ತ ನಿಂತಿರುವ ಪಾಂಚಾಲಿಯನ್ನೂ ನೋಡಿದನು.
ಕೂಡಲೇ ಅವಳ ಕುರಿತು ತಿಳಿಯಲು ಬಯಸಿದ ರಾಜಾ ಯುಧಿಷ್ಠಿರನಿಗೆ ದೇವರಾಜ ಭಗವಾನ್ ಇಂದ್ರನು ಹೇಳತೊಡಗಿದನು:
“ಯುಧಿಷ್ಠಿರ! ನಿನಗೋಸ್ಕರವಾಗಿ ಈ ಶ್ರೀಯು ಅಯೋನಿಜೆ, ಲೋಕಕಾಂತೆ, ಪುಣ್ಯಗಂಧೀ ದ್ರೌಪದಿಯ ರೂಪವನ್ನು ತಾಳಿ ಮನುಷ್ಯಲೋಕಕ್ಕೆ ಹೋಗಿದ್ದಳು. ದ್ರುಪದನ ಕುಲದಲ್ಲಿ ಹುಟ್ಟಿ ನಿಮ್ಮೆಲ್ಲರನ್ನು ಅವಲಂಬಿಸಿದ್ದು ನಿಮ್ಮೆಲ್ಲರ ಪ್ರೀತಿಗಾಗಿ ಇದ್ದ ಇವಳನ್ನು ಶೂಲಪಾಣಿಯೇ ನಿರ್ಮಿಸಿದ್ದನು. ಈ ಐವರು ಪಾವಕ ಪ್ರಭೆಗಳುಳ್ಳ ಗಂಧರ್ವರು ಅಮಿತ ತೇಜಸ್ವಿ ನಿಮ್ಮಿಂದ ದ್ರೌಪದಿಯಲ್ಲಿ ಹುಟ್ಟಿದ ಮಕ್ಕಳು. ಈ ಗಂಧರ್ವರಾಜನನ್ನು ನೋಡು! ಇವನು ನಿನ್ನ ತಂದೆಯ ಅಣ್ಣ ಮನೀಷಿ ಧೃತರಾಷ್ಟ್ರನೆಂದು ತಿಳಿ. ಇವನು ನಿನ್ನ ಮೊದಲೇ ಹುಟ್ಟಿದ ಕೌಂತೇಯ, ಅಣ್ಣ. ಪಾವಕನಂತೆ ಬೆಳಗುತ್ತಿದ್ದ ಈ ಅಗ್ರಜ ಶ್ರೇಷ್ಠ ಸೂರ್ಯಪುತ್ರನು ರಾಧೇಯನೆಂದು ವಿಖ್ಯಾತನಾಗಿದ್ದನು. ಆದಿತ್ಯನೊಂದಿಗೆ ಹೋಗುತ್ತಿರುವ ಇವನನ್ನು ನೋಡು! ಈಗ ದೇವತೆಗಳ, ವಸುಗಳ ಮತ್ತು ಮರುತ್ ಗಣಗಳಲ್ಲಿ ಕುಳಿತಿರುವ ಸಾತ್ಯಕಿಯೇ ಮೊದಲಾದ ವೀರರನ್ನೂ, ಮಹಾರಥ ಭೋಜರನ್ನೂ, ವೃಷ್ಣಿ-ಅಂಧಕ ಮಹಾರಥರನ್ನೂ ನೋಡು! ಸೋಮನೊಂದಿಗೆ ನಿಶಾಕರನಂತೆ ಬೆಳಗುತ್ತಿರುವ ಅಪರಾಜಿತ ಸೌಭದ್ರ ಮಹೇಷ್ವಾಸ ಅಭಿಮನ್ಯುವನ್ನು ನೋಡು! ಇಗೋ ಇವನು ಸದಾ ವಿಮಾನದಲ್ಲಿ ಕುಂತೀ ಮಾದ್ರಿಯರೊಡನೆ ನನ್ನಲ್ಲಿಗೆ ಬರುವ ನಿನ್ನ ತಂದೆ ಮಹೇಷ್ವಾಸ ಪಾಂಡು! ವಸುಗಳೊಂದಿಗಿರುವ ಶಾಂತನವ ನೃಪ ಭೀಷ್ಮನನ್ನು ನೋಡು! ಬೃಹಸ್ಪತಿಯ ಪಕ್ಕದಲ್ಲಿರುವವನು ನಿನ್ನ ಗುರು ದ್ರೋಣನೆನ್ನುವುದನ್ನು ತಿಳಿದುಕೋ! ನಿನ್ನ ಪರವಾಗಿ ಯುದ್ಧಮಾಡಿದ ಇನ್ನೂ ಇತರ ಮಹೀಪಾಲರು ಗಂಧರ್ವರು, ಯಕ್ಷರು ಮತ್ತು ಪುಣ್ಯಜನರೊಂದಿಗೆ ಸೇರಿದ್ದಾರೆ. ಇನ್ನೂ ಕೆಲವು ನರಸತ್ತಮರು ದೇಹವನ್ನು ತೊರೆದು ಪುಣ್ಯ ಮಾತು-ಯೋಚನೆ ಮತ್ತು ಕರ್ಮಗಳಿಂದ ದೊರೆಯುವ ಗುಹ್ಯಕರ ಲೋಕವನ್ನು ಸೇರಿದ್ದಾರೆ.”
ಎಲ್ಲರ ಕರ್ಮಗಳೂ ಅಂತ್ಯವಾಗುವವೇ! ದೇವತೆಗಳ ಈ ರಹಸ್ಯದ ಕುರಿತು ದಿವ್ಯಚಕ್ಷುಷಿ, ಅಗಾಧಬುದ್ಧಿ, ಸರ್ವಜ್ಞ, ಸರ್ವಕರ್ಮಗಳ ಮಾರ್ಗವನ್ನು ತಿಳಿದ ಪಾರಶರ್ಯ ವ್ಯಾಸನು ಹೇಳಿದ್ದನು. ಮಹಾದ್ಯುತಿ ಭೀಷ್ಮನು ವಸುವಿನ ಮಹಾತೇಜಸ್ಸನ್ನೇ ಪಡೆದನು. ಆದುದರಿಂದ ಆಗ ಎಂಟು ವಸುಗಳು ಕಾಣಿಸಿಕೊಂಡರು. ದ್ರೋಣನು ಅಂಗಿರಸರಲ್ಲಿ ಶ್ರೇಷ್ಠ ಬೃಹಸ್ಪತಿಯನ್ನು ಪ್ರವೇಶಿಸಿದನು. ಹಾರ್ದಿಕ್ಯ ಕೃತವರ್ಮನು ಮರುದ್ಗಣಗಳನ್ನು ಸೇರಿದನು. ಪ್ರದ್ಯುಮ್ನನು ಎಲ್ಲಿಂದ ಬಂದಿದ್ದನೋ ಆ ಸನತ್ಕುಮಾರನನ್ನು ಪ್ರವೇಶಿಸಿದನು. ಧೃತರಾಷ್ಟ್ರನು ಧನೇಶ ಕುಬೇರನ ದುರಾಸದ ಲೋಕವನ್ನು ಪಡೆದನು. ಧೃತರಾಷ್ಟ್ರನೊಂದಿಗೆ ಯಶಸ್ವಿನೀ ಗಾಂಧಾರಿಯೂ ಹೋದಳು. ಇಬ್ಬರು ಪತ್ನಿಯರೊಂದಿಗೆ ಪಾಂಡುವು ಮಹೇಂದ್ರನ ಸದನಕ್ಕೆ ಹೋದನು. ವಿರಾಟ-ದ್ರುಪದರು, ಪಾರ್ಥಿವ ಧೃಷ್ಟಕೇತು, ನಿಶಠ, ಅಕ್ರೂರ, ಸಾಂಬ, ಭಾನು, ಕಂಪ, ವಿಡೂರಥ, ಭೂರಿಶ್ರವ, ಶಲ, ಪೃಥಿವೀಪತಿ ಭೂರಿ, ಉಗ್ರಸೇನ, ಕಂಸ, ವೀರ್ಯವಾನ್ ವಸುದೇವ, ಉತ್ತರ, ಜೊತೆಗೆ ಅವನ ಸಹೋದರ ನರಪುಂಗವ ಶಂಖ ಈ ನರಸತ್ತಮರು ವಿಶ್ವೇ ದೇವತೆಗಳನ್ನು ಪ್ರವೇಶಿಸಿದರು. ವರ್ಚಾ ಎಂಬ ಹೆಸರಿನ ಮಹಾತೇಜಸ್ವೀ ಪ್ರತಾಪವಾನ್ ಸೋಮಪುತ್ರನು ನರಸಿಂಹ ಫಲ್ಗುನನ ಮಗ ಅಭಿಮನ್ಯುವಾಗಿದ್ದನು. ಬೇರಾವ ಪುರುಷನೂ ಮಾಡಿರದಂಥಹ ಯುದ್ಧವನ್ನು ಕ್ಷತ್ರಧರ್ಮದಂತೆ ಮಾಡಿ ಆ ಧರ್ಮಾತ್ಮ ಮಹಾರಥನು ಕರ್ಮಫಲಗಳು ಅಂತ್ಯವಾಗಲು ಸೋಮನನ್ನು ಪ್ರವೇಶಿಸಿದನು. ಕರ್ಣನು ತಂದೆ ರವಿಯನ್ನು ಪ್ರವೇಶಿಸಿದನು. ಶಕುನಿಯು ದ್ವಾಪರನನ್ನೂ ಧೃಷ್ಟದ್ಯುಮ್ನನು ಅಗ್ನಿಯನ್ನೂ ಪ್ರವೇಶಿಸಿದರು. ಧೃತರಾಷ್ಟ್ರನ ಮಕ್ಕಳೆಲ್ಲರೂ ಬಲೋತ್ಕಟ ದುಷ್ಟ ರಾಕ್ಷಸರಾಗಿದ್ದರು. ಶಸ್ತ್ರಗಳಿಂದ ಪೂತರೂ, ಮಹಾತ್ಮರೂ, ಉತ್ತಮರೂ ಆಗಿ ಅವರು ಸ್ವರ್ಗಕ್ಕೆ ತೆರಳಿದರು. ಭಗವಾನ್ ಅನಂತ ದೇವನು ಪಿತಾಮಹನ ನಿಯೋಗದಂತೆ ತನ್ನ ಯೋಗದಿಂದ ಭೂಮಿಯನ್ನು ಹೊರಲು ರಸಾತಲವನ್ನು ಪ್ರವೇಶಿಸಿದನು. ವಾಸುದೇವನು ಕೈಹಿಡಿದಿದ್ದ ಹದಿನಾರು ಸಾವಿರ ಸ್ತ್ರೀಯರು ಸರಸ್ವತಿಯಲ್ಲಿ ಮುಳುಗಿ ಕಾಲಾಂತರದಲ್ಲಿ ಅಪ್ಸರೆಯರಾಗಿ ವಾಸುದೇವನ ಬಳಿಸೇರಿದರು. ಆ ಮಹಾಯುದ್ಧದಲ್ಲಿ ಹತರಾದ ಘಟೋತ್ಕಚನೇ ಮೊದಲಾದ ಮಹಾರಥ ವೀರರೆಲ್ಲರೂ ದೇವತೆಗಳೂ ಯಕ್ಷರೂ ಆದರು. ದುರ್ಯೋಧನನ ಸಹಾಯಕರಾಗಿದ್ದ ಆ ಪುರುಷರ್ಷಭರು ರಾಕ್ಷಸರಾಗಿದ್ದರೆಂದು ಹೇಳುತ್ತಾರೆ. ಅವರೆಲ್ಲರೂ ಕೂಡ ಕ್ರಮೇಣವಾಗಿ ಉತ್ತಮ ಲೋಕಗಳನ್ನು ಪಡೆದು ಮಹೇಂದ್ರ, ಧೀಮಂತ ಕುಬೇರ ಮತ್ತು ವರುಣನ ಭವನ-ಲೋಕಗಳನ್ನು ಪ್ರವೇಶಿಸಿದರು.
ಮಹಾಭಾರತ ಕಥಾಸಮಾಪ್ತಿ
ಹೀಗೆ ವೈಶಂಪಾಯನನು ಜನಮೇಜಯನಿಗೆ ಕುರು-ಪಾಂಡವರ ಸಮಗ್ರ ಚರಿತ್ರೆಯನ್ನು ವಿಸ್ತಾರವಾಗಿ ಹೇಳಿ ಮುಗಿಸಿದನು.
ಸರ್ಪಯಜ್ಞದ ಕರ್ಮಗಳ ಮಧ್ಯೆ ದ್ವಿಜಶ್ರೇಷ್ಠ ವೈಶಂಪಾಯನನಿಂದ ಇದನ್ನು ಕೇಳಿದ ರಾಜಾ ಜನಮೇಜಯನು ಬಹಳ ವಿಸ್ಮಿತನಾದನು. ಅನಂತರ ಯಾಜಕರು ಅವನ ಆ ಕರ್ಮವನ್ನು ಮಾಡಿ ಪೂರೈಸಿದರು. ಸರ್ಪಗಳನ್ನು ಉಳಿಸಿ ಆಸ್ತೀಕನೂ ಪ್ರೀತನಾದನು. ಆಗ ಅವನು ಅಲ್ಲಿದ್ದ ಸರ್ವ ದ್ವಿಜಾತಿಯವರಿಗೆ ದಕ್ಷಿಣೆಗಳಿಂದ ತೃಪ್ತಿಗೊಳಿಸಿದನು. ರಾಜನಿಂದ ಪೂಜಿತರಾದ ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು. ಆ ವಿಪ್ರರನ್ನು ಬೀಳ್ಕೊಟ್ಟು ರಾಜಾ ಜನಮೇಜಯನೂ ಕೂಡ ತಕ್ಷಶಿಲೆಯಿಂದ ಪುನಃ ಹಸ್ತಿನಾಪುರಕ್ಕೆ ಹಿಂದಿರುಗಿದನು.
ಜನಮೇಜಯನ ಸರ್ಪಸತ್ರದಲ್ಲಿ ವ್ಯಾಸನ ಆಜ್ಞೆಯಂತೆ ವೈಶಂಪಾಯನನು ಹೇಳಿದ್ದ ಎಲ್ಲವನ್ನೂ ನೈಮಿಷಾರಣ್ಯದಲ್ಲಿ ಶೌನಕಾದಿ ಮುನಿಗಳಿಗೆ ಸೂತ ಪುರಾಣಿಕ ಉಗ್ರಶ್ರವನು ಹೇಳಿ ಮುಗಿಸಿದನು.
ಇತಿಹಾಸವೆಂದು ಕರೆಯಲ್ಪಡುವ ಈ ಪುಣ್ಯ ಉತ್ತಮ ಕೃತಿಯನ್ನು ನಿಯತನೂ ಸತ್ಯವಾದಿಯೂ ಆದ ಸರ್ವಜ್ಞ, ವಿಧಿಜ್ಞ, ಧರ್ಮಜ್ಞ, ಸಾಧು, ಅತೀಂದ್ರಿಯ, ಶುಚಿ, ತಪಸ್ವಿ, ಭಾವಿತಾತ್ಮ, ಮುನಿ ಕೃಷ್ಣನು ರಚಿಸಿದನು. ಸಿದ್ಧೈಶ್ವರ್ಯಗಳಿಂದ ಕೂಡಿದ, ಸಾಂಖ್ಯಯೋಗದ ಜ್ಞಾನಿ, ಅನೇಕತಂತ್ರಗಳ ಆ ಜ್ಞಾನಿಯು ಲೋಕದಲ್ಲಿ ಮಹಾತ್ಮ ಪಾಂಡವರ ಮತ್ತು ಭೂರಿದ್ರವಿಣ ತೇಜಸ್ವೀ ಅನ್ಯ ಕ್ಷತ್ರಿಯರ ಕೀರ್ತಿಯನ್ನು ಪ್ರಥಿತಗೊಳಿಸಿದನು. ಇದನ್ನು ಸದಾ ಪರ್ವ-ಪರ್ವಗಳಲ್ಲಿ ಹೇಳುವ ವಿದ್ವಾಂಸನು ಪಾಪಗಳನ್ನು ತೊಳೆದು ಪೂತಾತ್ಮನಾಗಿ ಸ್ವರ್ಗವನ್ನು ಪಡೆದು ನಂತರ ಬ್ರಹ್ಮನನ್ನು ಸೇರುತ್ತಾನೆ. ಶ್ರಾದ್ಧದಲ್ಲಿ ಇದನ್ನು, ಅಥವಾ ಕೊನೆಯದಾಗಿ ಶ್ಲೋಕದ ಕಾಲುಭಾಗವನ್ನಾದರೂ ಬ್ರಾಹ್ಮಣರಿಗೆ ಹೇಳಿ ಕೇಳಿಸಿದರೆ ನೀಡಿದ ಅನ್ನಪಾನಗಳು ಅಕ್ಷಯವಾಗಿ ಪಿತೃಗಳನ್ನು ಸೇರುತ್ತವೆ. ಸಾಯಂಕಾಲ ಈ ಮಹಾಭಾರತವನ್ನು ಹೇಳಿದರೆ ಹಗಲಿನಲ್ಲಿ ಮಾಡಿದ ಮಾನಸಿಕ ಅಥವಾ ಇಂದ್ರಿಯಗಳಿಂದ ಮಾಡಿದ ಪಾಪಗಳಿಂದ ಮುಕ್ತನಾಗುತ್ತಾನೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಕುರಿತು ಇದರಲ್ಲಿರುವವು ಬೇರೆಕಡೆಯೂ ಇವೆ. ಆದರೆ ಇಲ್ಲಿ ಇಲ್ಲದೇ ಇರುವುದು ಬೇರೆಲ್ಲಿಯೂ ಇಲ್ಲ. ವೃದ್ಧಿಯನ್ನು ಬಯಸುವ ರಾಜರೂ, ರಾಜಸುತರೂ, ಗರ್ಭಿಣಿ ಸ್ತ್ರೀಯರೂ ಜಯವೆಂಬ ಹೆಸರಿನ ಈ ಇತಿಹಾಸವನ್ನು ಕೇಳಬೇಕು. ಸ್ವರ್ಗವನ್ನು ಬಯಸಿದವರಿಗೆ ಸ್ವರ್ಗವು ದೊರಕುತ್ತದೆ. ಜಯವನ್ನು ಬಯಸಿದವರಿಗೆ ಜಯವು ಲಭಿಸುತ್ತದೆ. ಗರ್ಭಿಣಿಯರಿಗೆ ಪುತ್ರನಾಗಲೀ ಅಥವಾ ಬಹುಭಾಗ್ಯವಂತ ಕನ್ಯೆಯರಾಗಲೀ ದೊರೆಯುತ್ತಾರೆ. ಧರ್ಮದ ಕಾಮನೆಯಿಂದಾಗಿ ಪ್ರಭು ಕೃಷ್ಣದ್ವೈಪಾಯನನು ಮೊದಲು ಇರದಿದ್ದ ಈ ಭಾರತವನ್ನು ಮೂರು ವರ್ಷಗಳ ಕಾಲ ನಿರಂತರವಾಗಿ ರಚಿಸಿದನು. ಅನಂತರ ನಾರದನು ಇದನ್ನು ದೇವತೆಗಳಿಗೆ, ಅಸಿತ ದೇವಲನು ಪಿತೃಗಳಿಗೆ, ಶುಕನು ಯಕ್ಷ-ರಾಕ್ಷಸರಿಗೆ ಮತ್ತು ವೈಶಂಪಾಯನನು ಮನುಷ್ಯರಿಗೆ ಹೇಳಿದರು.
ಮಹಾ ಅರ್ಥವುಳ್ಳ ವೇದಸಮ್ಮಿತವಾದ ಈ ಪುಣ್ಯ ಇತಿಹಾಸವನ್ನು ಬ್ರಾಹ್ಮಣರೇ ಮೊದಲಾದ ಮೂರು ವರ್ಣದವರಿಗೆ ಹೇಳಬೇಕು. ಅಂಥಹ ಮನುಷ್ಯನು ಪಾಪದಿಂದ ಮುಕ್ತನಾಗಿ ಕೀರ್ತಿಯನ್ನು ಪಡೆಯುತ್ತಾನಲ್ಲದೇ ಪರಮ ಸಿದ್ಧಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಶ್ರದ್ಧಾವಂತನಾಗಿ ಭಾರತದ ಶ್ಲೋಕದ ಕಾಲುಭಾಗವನ್ನಾದರೂ ಅಧ್ಯಯನ ಮಾಡಿ ಅರ್ಥಮಾಡಿಕೊಂಡರೆ ಆ ಪುಣ್ಯವು ಅವನ ಸರ್ವ ಪಾಪಗಳೂ ಉಳಿಯದಂತೆ ತೊಳೆದು ಶುದ್ಧೀಕರಿಸುತ್ತದೆ.
ಹಿಂದೆ ಮಹರ್ಷಿ ಭಗವಾನ್ ವ್ಯಾಸನು ಈ ಕೃತಿಯನ್ನು ಈ ನಾಲ್ಕು ಶ್ಲೋಕಗಳೊಂದಿಗೆ ತನ್ನ ಮಗ ಭಗವಾನ್ ಶುಕನಿಗೆ ಕಲಿಸಿದ್ದನು:
“ಈ ಸಂಸಾರದಲ್ಲಿ ಸಹಸ್ರಾರು ಮಾತಾಪಿತೃಗಳೂ, ನೂರಾರು ಪತ್ನಿ-ಪುತ್ರರೂ ಆಗಿಹೋಗಿದ್ದಾರೆ ಮತ್ತು ಮುಂದೆ ಕೂಡ ಆಗುತ್ತಾರೆ. ಸಹಸ್ರಾರು ಹರ್ಷವನ್ನು ಕೊಡುವ ಮತ್ತು ನೂರಾರು ಭಯವನ್ನು ಕೊಡುವ ಸಂದರ್ಭಗಳು ಪ್ರತಿದಿನ ಮೂಢನನ್ನು ಕಾಡುತ್ತಿರುತ್ತವೆ. ಆದರೆ ಪಂಡಿತನನ್ನಲ್ಲ. ಬಾಹುಗಳನ್ನು ಮೇಲೆತ್ತಿ ಹೀಗೆ ಕೂಗಿಕೊಳ್ಳುತ್ತಿರುವ ನನ್ನನ್ನು ಯಾರೂ ಕೇಳುತ್ತಿಲ್ಲ:
“ಅರ್ಥ-ಕಾಮಗಳು ಧರ್ಮದಿಂದಲೇ ದೊರೆಯುತ್ತವೆ. ಆದರೂ ಧರ್ಮದಿಂದ ಏಕೆ ನಡೆದುಕೊಳ್ಳಬಾರದು? ಕಾಮಕ್ಕಾಗಲೀ, ಭಯದಿಂದಾಗಲೀ, ಲೋಭದಿಂದಾಗಲೀ, ಜೀವವನ್ನು ಉಳಿಸಿಕೊಳ್ಳಲಿಕ್ಕೂ ಕೂಡ ಧರ್ಮವನ್ನು ತ್ಯಜಿಸಬಾರದು. ಧರ್ಮವು ಯಾವಾಗಲೂ ಇರುವಂಥಹುದು; ಸುಖ-ದುಃಖಗಳು ಯಾವಾಗಲೂ ಇರುವಂಥವುಗಳಲ್ಲ. ಜೀವವು ನಿತ್ಯ; ಯಾವುದರ ಮೂಲಕ ಅದು ಜೀವಿಸುತ್ತದೆಯೋ ಆ ದೇಹವು ಅನಿತ್ಯವಾದುದು.”
ಬೆಳಿಗ್ಗೆ ಎದ್ದು ಈ ಭಾರತ ಸಾವಿತ್ರಿಯನ್ನು ಯಾರು ಓದುತ್ತಾರೋ ಅವರು ಸಂಪೂರ್ಣ ಭಾರತವನ್ನು ಓದಿದುರ ಫಲವನ್ನು ಪಡೆದು ಪರಬ್ರಹ್ಮನನ್ನು ಸೇರುತ್ತಾರೆ. ಭಗವಾನ್ ಸಮುದ್ರ ಮತ್ತು ಹಿಮವಾನ್ ಗಿರಿಗಳೆರಡನ್ನೂ ಹೇಗೆ ರತ್ನನಿಧಿಗಳೆಂದು ಹೇಳುತ್ತಾರೆಯೋ ಹಾಗೆ ಭಾರತವನ್ನೂ ರತ್ನನಿಧಿಯೆಂದು ಹೇಳುತ್ತಾರೆ. ಮಹಾಭಾರತವನ್ನು ಸಮಾಹಿತನಾಗಿ ಓದುವವನು ಪರಮ ಸಿದ್ಧಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ದ್ವೈಪಾಯನನ ತುಟಿಗಳಿಂದ ಹೊರಬಂದ ಈ ಅಪ್ರಮೇಯ ಕೃತಿಯು ಪುಣ್ಯ, ಪವಿತ್ರ, ಮಂಗಳಕರ ಮತ್ತು ಪಾಪಗಳನ್ನು ಓಡಿಸುತ್ತದೆ. ಇಂಥಹ ಭಾರತವನ್ನು ಓದುವಾಗ ಕೇಳಿದವನು ಪುಷ್ಕರ ತೀರ್ಥದಲ್ಲಿ ಸ್ನಾನಮಾಡುವ ಅವಶ್ಯಕತೆಯಾದರೂ ಏನಿದೆ?
couldup link kalisi dowenlod agutilla sar
ನಮಸ್ಕಾರ. ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಬಳಸಿ ದೌನ್ಲೋಡ ಮಾಡಿಕೊಳ್ಳಿ…ಆಗುತ್ತದೆ.