ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ ಮತ್ತು ಸಂಜಯರ ವನಪ್ರಸ್ಥಾನ

ಧೃತರಾಷ್ಟ್ರ ಶುಶ್ರೂಷಾ

ಶತ್ರುಗಳನ್ನು ಸಂಹರಿಸಿ ರಾಜ್ಯವನ್ನು ಪಡೆದುಕೊಂಡ ಮಹಾತ್ಮ ಪಾಂಡವರು ಧೃತರಾಷ್ಟ್ರನನ್ನೇ ಮುಂದೆಮಾಡಿಕೊಂಡು ರಾಜ್ಯಭಾರ ಮಾಡುತ್ತಿದ್ದರು. ವಿದುರ, ಸಂಜಯ ಮತ್ತು ವೈಶ್ಯಾಪುತ್ರ ಯುಯುತ್ಸುವೂ ಕೂಡ ಧೃತರಾಷ್ಟ್ರನ ಸೇವೆಗೈಯುತ್ತಿದ್ದರು. ಪಾಂಡವರು ಸರ್ವಕಾರ್ಯಗಳಲ್ಲಿಯೂ ಆ ನೃಪನ ಸಲಹೆಯನ್ನು ಕೇಳುತ್ತಿದ್ದರು ಮತ್ತು ಅವನ ಅನುಜ್ಞೆಯಂತೆಯೇ ಎಲ್ಲವನ್ನೂ ಮಾಡುತ್ತಿದ್ದರು. ಹೀಗೆ ಅವರು ಹದಿನೈದು ವರ್ಷಗಳನ್ನು ಕಳೆದರು.

ಧರ್ಮರಾಜನ ಅಭಿಪ್ರಾಯದಂತೆ ನಿತ್ಯವೂ ಆ ವೀರರು ಹೋಗಿ ನೃಪನಿಗೆ ಪಾದಾಭಿವಂದನೆಯನ್ನು ಮಾಡಿ ಅವನ ಸೇವೆಗೈಯುತ್ತಿದ್ದರು. ಧೃತರಾಷ್ಟ್ರನೂ ಕೂಡ ಅವರನ್ನು ಹಿಡಿದೆತ್ತಿ ನೆತ್ತಿಯನ್ನು ಆಘ್ರಾಣಿಸುತ್ತಿದ್ದನು. ಹೀಗೆ ಅವರು ಅವನ ಎಲ್ಲ ಕಾರ್ಯಗಳನ್ನೂ ಮಾಡುತ್ತಿದ್ದರು. ಕುಂತಿಭೋಜನ ಮಗಳೂ ಕೂಡ ಗಾಂಧಾರಿಯ ಸೇವೆಯಲ್ಲಿ ನಿರತಳಾಗಿದ್ದಳು. ದ್ರೌಪದೀ, ಸುಭದ್ರಾ ಮತ್ತು ಅನ್ಯ ಪಾಂಡವಸ್ತ್ರೀಯರೂ ಕೂಡ ತಮ್ಮ ಇಬ್ಬರೂ ಅತ್ತೆಯಂದಿರನ್ನೂ ಸಮಾನ ಭಾವದಿಂದ ಕಾಣುತ್ತಾ ಯಥಾವಿಧಿಯಾಗಿ ಅವರ ಸೇವೆ ಗೈಯುತ್ತಿದ್ದರು. ಮಹಾರಾಜ ಯುಧಿಷ್ಠಿರನು ಧೃತರಾಷ್ಟ್ರನಿಗೆ ರಾಜಾರ್ಹವಾದ ಮಹಾಬೆಲೆಯ ಶಯನ-ವಸ್ತ್ರಾಭರಣಗಳನ್ನೂ, ಅನೇಕ ಭಕ್ಷ್ಯ-ಭೋಜ್ಯಗಳನ್ನೂ ನೀಡುತ್ತಿದ್ದನು. ಹಾಗೆಯೇ ಕುಂತಿಯೂ ಗುರುಭಾವದಿಂದ ಗಾಂಧಾರಿಯ ಸೇವೆಗೈಯುತ್ತಿದ್ದಳು. ಪುತ್ರರನ್ನು ಕಳೆದುಕೊಂಡ ವೃದ್ಧ ಜನಾಧಿಪನನ್ನು ವಿದುರ, ಸಂಜಯ ಮತ್ತು ಯುಯುತ್ಸುವು ಸೇವೆಗೈಯುತ್ತಿದ್ದರು. ದ್ರೋಣನ ಓರ್ವನೇ ಬಾವನಾದ, ಮಹಾನ್ ಬ್ರಾಹ್ಮಣ-ಪುತ್ರ ಮಹೇಷ್ವಾಸ ಕೃಪನೂ ಕೂಡ ಅವನೊಡನೆ ಸಮಭಾವದಿಂದಿರುತ್ತಿದ್ದನು. ಭಾಗವಾನ್ ವ್ಯಾಸನೂ ಕೂಡ ನಿತ್ಯವೂ ನೃಪನ ಬಳಿಯೇ ವಾಸವಾಗಿದ್ದುಕೊಂಡು ದೇವರ್ಷಿ-ನೃಪ-ರಾಕ್ಷಸರ ಪುರಾಣ ಕಥೆಗಳನ್ನು ಹೇಳುತ್ತಿದ್ದನು. ವಿದುರನು ಧೃತರಾಷ್ಟ್ರನ ಆಜ್ಞೆಯನ್ನನುಸರಿಸಿ ಧರ್ಮಯುಕ್ತವಾದ ವ್ಯಾವಹಾರಿಕ ಕಾರ್ಯಗಳನ್ನು ಮಾಡಿಸುತ್ತಿದ್ದನು. ವಿದುರನ ಉತ್ತಮ ಗುಣ-ನೀತಿಗಳಿಂದಾಗಿ ಸಾಮಂತರೂ ಕೂಡ ಧೃತರಾಷ್ಟ್ರನಿಗೆ ಪ್ರಿಯವಾದ ಕಾರ್ಯಗಳನ್ನು ಸ್ವಲ್ಪವೇ ವೆಚ್ಚದಲ್ಲಿ ಮಾಡಿಮುಗಿಸುತ್ತಿದ್ದರು. ಧೃತರಾಷ್ಟ್ರನು ಬಂಧನದಲ್ಲಿದ್ದವರನ್ನು ಬಿಡುಗಡೆ ಮಾಡಿಸುತ್ತಿದ್ದನು ಮತ್ತು ಮರಣದಂಡನೆಗೆ ಗುರಿಯಾದವರಿಗೆ ಪ್ರಾಣದಾನಮಾಡುತ್ತಿದ್ದನು. ಆದರೂ ರಾಜಾ ಧರ್ಮಸುತನು ಯಾವಾಗಲೂ ಏನನ್ನೂ ಹೇಳುತ್ತಿರಲಿಲ್ಲ. ಕುರುರಾಜ ಯುಧಿಷ್ಠಿರನು ಧೃತರಾಷ್ಟ್ರನ ವಿಹಾರಕ್ಕಾಗಿ ಅವನು ಅಪೇಕ್ಷಿಸಿದ ಸರ್ವ ಕಾಮನಾವಸ್ತುಗಳನ್ನೂ ಒದಗಿಸಿಕೊಡುತ್ತಿದ್ದನು. ಹಿಂದಿನಂತೆ ಆರಾಲಿಕರು1, ಸೂಪಕಾರರು2 ಮತ್ತು ರಾಗಖಾಂಡವಿಕರು3 ರಾಜ ಧೃತರಾಷ್ಟ್ರನ ಜೊತೆಯಲ್ಲಿಯೇ ಇರುತ್ತಿದ್ದರು. ಪಾಂಡವರು ಯಥಾನ್ಯಾಯವಾಗಿ ಧೃತರಾಷ್ಟ್ರನಿಗೆ ಬಹುಮೂಲ್ಯ ವಸ್ತ್ರಗಳನ್ನೂ, ವಿವಿಧ ಮಾಲೆಗಳನ್ನೂ ತಂದುಕೊಡುತ್ತಿದ್ದರು. ಹಿಂದಿನಂತೆಯೇ ಪಾಂಡವರು ಧೃತರಾಷ್ಟ್ರನಿಗೆ ಮೈರೇಯ4ಗಳನ್ನೂ, ಮಧು-ಮಾಂಸಗಳನ್ನೂ, ಲಘು ಪಾನಕಗಳನ್ನೂ, ವಿಚಿತ್ರ ಭಕ್ಷ್ಯಗಳನ್ನೂ ಒದಗಿಸುತ್ತಿದ್ದರು. ಹಿಂದಿನಂತೆಯೇ ಸುತ್ತಲಿನ ಪೃಥಿವೀಪಾಲರು ಎಲ್ಲರೂ ಬಂದು ಕೌರವೇಂದ್ರ ಧೃತರಾಷ್ಟ್ರನಿಗೆ ಗೌರವವನ್ನು ಸಲ್ಲಿಸುತ್ತಿದ್ದರು. ಕುಂತೀ, ದ್ರೌಪದೀ, ಸಾತ್ವತೀ ಸುಭದ್ರಾ, ನಾಗಕನ್ಯೆ ಉಲೂಪಿ, ದೇವೀ ಚಿತ್ರಾಂಗದಾ, ಧೃಷ್ಟಕೇತುವಿನ ತಂಗಿ5, ಜರಾಸಂಧ ಪುತ್ರಿ6 ಇವರು ಎಲ್ಲರೂ ಸುಬಲನ ಪುತ್ರಿ ಗಾಂಧಾರಿಗೆ ಸೇವಕಿಯರಂತೆಯೇ ಸೇವೆಸಲ್ಲಿಸುತ್ತಿದ್ದರು. “ಪುತ್ರರಿಂದ ವಿಹೀನನಾಗಿರುವ ಇವನಿಗೆ ಸ್ವಲ್ಪವೂ ದುಃಖವನ್ನು ತರಬಾರದು!” ಎಂದು ರಾಜಾ ಯುಧಿಷ್ಠಿರನು ನಿತ್ಯವೂ ತನ್ನ ಸಹೋದರರಿಗೆ ಆಜ್ಞೆಮಾಡುತ್ತಿದ್ದನು. ಅರ್ಥವತ್ತಾದ ಧರ್ಮರಾಜನ ಈ ಮಾತನ್ನು, ಭೀಮನೊಬ್ಬನನ್ನು ಬಿಟ್ಟು, ಎಲ್ಲರೂ ಪಾಲಿಸುತ್ತಿದ್ದರು. ಧೃತರಾಷ್ಟ್ರನ ದುರ್ಬುದ್ಧಿಯಿಂದ ನಡೆದ ದ್ಯೂತವು ಆ ವೀರ ಭೀಮಸೇನನ ಹೃದಯದಿಂದ ಅಳಿದುಹೋಗಿರಲೇ ಇಲ್ಲ.

ಹೀಗೆ ಪಾಂಡವರಿಂದ ಸಂಪೂಜಿತನಾದ ರಾಜಾ ಅಂಬಿಕಾಸುತನು ಮೊದಲಿನಂತೆಯೇ ಋಷಿಗಳ ಮಧ್ಯದಲ್ಲಿ ಕಾಲಕಳೆಯುತ್ತಿದ್ದನು. ಆ ಕುರೂದ್ವಹನು ಬ್ರಾಹ್ಮಣರಿಗೆ ಅಗ್ರಹಾರಗಳನ್ನು ದಾನವನ್ನಾಗಿತ್ತನು. ಅದರಲ್ಲಿಯೂ ಕುಂತೀಸುತ ರಾಜನು ಎಲ್ಲವನ್ನೂ ಅನುಮೋದಿಸುತ್ತಿದ್ದನು. ಅಹಿಂಸಾಪರನಾದ ರಾಜಾ ಯುಧಿಷ್ಠಿರನು ಪ್ರೀತಿಯಿಂದ ಸದಾ ತನ್ನ ಸಹೋದರರು ಮತ್ತು ಅಮಾತ್ಯರಿಗೆ ಹೀಗೆ ಹೇಳುತ್ತಿದ್ದನು: “ಈ ನರಾಧಿಪನು ನನಗೆ ಮತ್ತು ನಿಮಗೆ ಮಾನನೀಯನಾಗಿದ್ದಾನೆ. ಧೃತರಾಷ್ಟ್ರನ ನಿರ್ದೇಶನದಂತೆ ಯಾರಿರುತ್ತಾರೋ ಅವರೇ ನನಗೆ ಮಿತ್ರರು. ಅವನಿಗೆ ವಿಪರೀತನಾಗಿರುವವನು ನನಗೆ ಶತ್ರುವೂ ಹೌದು ಮತ್ತು ಅಂಥಹವನು ಶಿಕ್ಷಾರ್ಹನೂ ಆಗುವನು. ಮಕ್ಕಳ ಶ್ರಾದ್ಧಕರ್ಮಗಳನ್ನು ಮಾಡಲು ಅವನು ಬಯಸಿದಾಗಲೆಲ್ಲಾ ರಾಜನು ಏನನ್ನು ಇಚ್ಛಿಸುವನೋ ಅವೆಲ್ಲವನ್ನೂ ಒದಗಿಸಿಕೊಡಬೇಕು!”

ಆಗ ರಾಜಾ ಧೃತರಾಷ್ಟ್ರನು ಬ್ರಾಹ್ಮಣರಿಗೆ ಮಹಾರ್ಹವಾದ ಬಹಳಷ್ಟು ವಿತ್ತವನ್ನು ದಾನವನ್ನಾಗಿತ್ತನು. ಧರ್ಮರಾಜ, ಭೀಮ, ಸವ್ಯಸಾಚೀ ಮತ್ತು ಯಮಳರು ಅವೆಲ್ಲ ಸಮಯಗಳಲ್ಲಿ ಧೃತರಾಷ್ಟ್ರನಿಗೆ ಸಂತೋಷವನ್ನುಂಟುಮಾಡಲು ಅವನನ್ನು ಅನುಸರಿಸುತ್ತಿದ್ದರು. “ನಾವೇ ತಂದುಕೊಟ್ಟ ಪುತ್ರಶೋಕದಿಂದ ಪೀಡಿತನಾದ ಈ ವೃದ್ಧ ರಾಜನು ಇನ್ನೂ ನಾಶವಾಗದೇ ಹೇಗಿದ್ದಾನೆ? ಅವನ ಪುತ್ರರು ಜೀವಿಸಿರುವಾಗ ಈ ಕುರುಮುಖ್ಯನು ಯಾವ ಸುಖವನ್ನು ಅನುಭವಿಸುತ್ತಿದ್ದನೋ ಅದೇ ಸುಖೋಪಭೊಗಗಳನ್ನು ಈಗಲೂ ಪಡೆದುಕೊಂಡಿರಲಿ!” ಎಂದು ಅವರು ಯೋಚಿಸುತ್ತಿದ್ದರು. ಹಾಗೆ ಶೀಲವಂತರಾದ ಪಂಚ ಪಾಂಡವ ಸಹೋದರರೆಲ್ಲರೂ ಧೃತರಾಷ್ಟ್ರನ ಶಾಸನದಲ್ಲಿಯೇ ನಡೆದುಕೊಂಡಿದ್ದರು. ಧೃತರಾಷ್ಟ್ರನೂ ಕೂಡ ವಿನೀತರಾಗಿ ವಿನಯದಿಂದಿರುತ್ತಿದ್ದ ಅವರನ್ನು, ನಿತ್ಯವೂ ಶಿಷ್ಯರಂತೆ ನಡೆದುಕೊಳ್ಳುತ್ತಿರುವವರನ್ನು ಗುರುವು ಹೇಗೋ ಹಾಗೆ, ಕಾಣುತ್ತಿದ್ದನು. ಗಾಂಧಾರಿಯೂ ಕೂಡ ಪುತ್ರರ ವಿವಿಧ ಶ್ರಾದ್ಧ ಕರ್ಮಗಳಲ್ಲಿ ವಿಪ್ರರು ಬಯಸಿದ ದಾನಗಳನ್ನಿತ್ತು ಪುತ್ರಋಣದಿಂದ ಮುಕ್ತಳಾದಳು. ಈ ರೀತಿಯಲ್ಲಿ ಧರ್ಮಭೃತರಲ್ಲಿ ಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಸಹೋದರರೊಂದಿಗೆ ಆ ನೃಪನನ್ನು ಪೂಜಿಸಿಕೊಂಡಿದ್ದನು.

ಆ ವೃದ್ಧ ರಾಜಾ ಧೃತರಾಷ್ಟ್ರನು ಪಾಂಡುನಂದನ ಯುಧಿಷ್ಠಿರನಲ್ಲಿ ಅಪ್ರಿಯವಾದ ಏನೊಂದನ್ನೂ ಕಾಣಲಿಲ್ಲ. ಮಹಾತ್ಮ ಪಾಂಡವರೊಂದಿಗೆ ಆ ರೀತಿಯ ಸದ್ವೃತ್ತಿಯು ನಡೆಯುತ್ತಿರಲು ಅಂಬಿಕಾಸುತ ಧೃತರಾಷ್ಟ್ರನು ಸಂತೋಷದಿಂದಿದ್ದನು. ಸೌಬಲೇಯೀ ಗಾಂಧಾರಿಯೂ ಕೂಡ ಪುತ್ರಶೋಕವನ್ನು ತೊರೆದು ಪಾಂಡವರನ್ನು ತನ್ನ ಮಕ್ಕಳಂತೆಯೇ ಸದೈವ ಪ್ರೀತಿಸುತ್ತಿದ್ದಳು. ಕೌರವ ಕುರೂದ್ವಹ ಯುಧಿಷ್ಠಿರನೂ ಕೂಡ ವೈಚಿತ್ರವೀರ್ಯ ನೃಪತಿ ಧೃತರಾಷ್ಟ್ರನಿಗೆ ಅಪ್ರಿಯ ಕರ್ಮಗಳನ್ನು ಮಾಡುತ್ತಿರಲಿಲ್ಲ. ನಿತ್ಯವೂ ಅವನಿಗೆ ಸರಿಯಾಗಿಯೇ ನಡೆದುಕೊಂಡಿದ್ದನು. ಧೃತರಾಷ್ಟ್ರ ಮತ್ತು ಗಾಂಧಾರಿಯರು ಚಿಕ್ಕ ಅಥವಾ ದೊಡ್ಡ ಯಾವ ಕಾರ್ಯವನ್ನೇ ಹೇಳಲಿ ಅವುಗಳನ್ನು ಮಹಾರಾಜ ಯುಧಿಷ್ಠಿರನು, ಅವರ ಮಾತನ್ನು ಗೌರವಿಸಿ, ಮಾಡಿಕೊಡುತ್ತಿದ್ದನು. ಅವನ ಆ ನಡತೆಯಿಂದ ಧೃತರಾಷ್ಟ್ರನು ಪ್ರೀತನಾಗಿದ್ದನು. ಆದರೂ ಮಂದಚೇತಸನಾಗಿದ್ದ ತನ್ನ ಮಗನನ್ನು ನೆನಪಿಸಿಕೊಂಡು ಪಶ್ಚಾತ್ತಾಪಪಡುತ್ತಿದ್ದನು. ಸದಾ ಬೆಳಿಗ್ಗೆ ಎದ್ದು ಶುಚಿಯಾಗಿ ಜಪಾದಿಗಳನ್ನು ಮುಗಿಸಿ ನೃಪನು ಪಾಂಡುಪುತ್ರರಿಗೆ ಸಮರದಲ್ಲಿ ಅಪರಾಜಯವನ್ನು ಆಶೀರ್ವದಿಸುತ್ತಿದ್ದನು. ಬ್ರಾಹ್ಮಣರಿಂದ ಸ್ವಸ್ತಿವಾಚನಮಾಡಿಸಿ, ಅಗ್ನಿಯಲ್ಲಿ ಹೋಮಮಾಡಿ ನರಾಧಿಪನು ಪಾಂಡುಪುತ್ರರ ದೀರ್ಘಾಯುಸ್ಸನ್ನು ಪ್ರಾರ್ಥಿಸುತ್ತಿದ್ದನು. ಆಗ ಪಾಂಡುಪುತ್ರರಿಂದ ಯಾವ ಪ್ರೀತಿಯನ್ನು ನೃಪ ಮಹೀಪತಿಯು ಪಡೆದನೋ ಆ ಪ್ರೀತಿಯನ್ನು ತನ್ನ ಪುತ್ರರಿಂದಲೂ ಹಿಂದೆ ಪಡೆದಿರಲಿಲ್ಲ. ಆಗ ಯುಧಿಷ್ಠಿರನು ಬ್ರಾಹ್ಮಣರ, ವೃದ್ಧರ, ಕ್ಷತ್ರಿಯರ, ವೈಶ್ಯರ ಮತ್ತು ಶೂದ್ರಸಂಘಗಳ ಪ್ರೀತಿಪಾತ್ರನಾಗಿದ್ದನು. ಹಿಂದೆ ಧೃತರಾಷ್ಟ್ರನ ಮಕ್ಕಳು ಏನೆಲ್ಲ ಪಾಪಗಳನ್ನೆಸಗಿದ್ದರೋ ಅವೆಲ್ಲವನ್ನೂ ಹೃದಯಕ್ಕೆ ಹಚ್ಚಿಕೊಳ್ಳದೇ ನೃಪ ಧೃತರಾಷ್ಟ್ರನ ಸೇವೆಗೈಯುತ್ತಿದ್ದನು. ಅಂಬಿಕಾಸುತನ ವಿಷಯದಲ್ಲಿ ಯಾರೇ ಏನೇ ಅಪ್ರಿಯವಾದುದನ್ನು ಎಸಗಿದರೂ ಅವನು ಕೌಂತೇಯನ ದ್ವೇಷಕ್ಕೆ ಪಾತ್ರನಾಗುತ್ತಿದ್ದನು. ಯುಧಿಷ್ಠಿರನ ಭಯದಿಂದಾಗಿ ಯಾರೂ ರಾಜ ಧೃತರಾಷ್ಟ್ರನ ಅಥವಾ ದುರ್ಯೋಧನನ ದುಷ್ಕೃತಗಳ ಕುರಿತು ಮಾತನಾಡುತ್ತಿರಲಿಲ್ಲ. ನರೇಂದ್ರ ಅಜಾತಶತ್ರುವಿನ ಧೃತಿ, ಶೌಚಗಳಿಂದ ಗಾಂಧಾರೀ ಮತ್ತು ವಿದುರರು ತುಷ್ಟರಾಗಿದ್ದರು. ಆದರೆ ಭೀಮನ ಕುರಿತು ಅವರಿಗೆ ತೃಪ್ತಿಯಿರಲಿಲ್ಲ. ಭೀಮನೂ ಕೂಡ ಧರ್ಮಜ ನೃಪನನ್ನು ನಿಷ್ಟೆಯಿಂದ ಅನುಸರಿಸುತ್ತಿದ್ದನು. ಆದರೆ ಧೃತರಾಷ್ಟ್ರನನ್ನು ಕಂಡಾಗಲೆಲ್ಲಾ ಕೆಟ್ಟ ಭಾವವನ್ನು ತಾಳುತ್ತಿದ್ದನು. ಆ ಭೀಮನು ಧರ್ಮಪುತ್ರ ರಾಜನನ್ನು ಅನುಸರಿಸಿಕೊಂಡಿದ್ದರೂ, ಹೃದಯದಲ್ಲಿ ಬೇರೆಯೇ ಭಾವವನ್ನಿಟ್ಟುಕೊಂಡಿದ್ದನು.

ಭೀಮಾಪನಯ

ದುರ್ಯೋಧನನ ತಂದೆ ನೃಪತಿಯ ಮೇಲೆ ಇದ್ದ ಯುಧಿಷ್ಠಿರನ ಪ್ರೀತಿಯಲ್ಲಿ ಪುರುಷರು ಯಾವ ಒಡಕನ್ನೂ ಕಾಣಲಿಲ್ಲ. ಯಾವಾಗಲೆಲ್ಲ ರಾಜಾ ಕೌರವನು ತನ್ನ ಪುತ್ರನ ಬಾಲಿಶಬುದ್ಧಿಯನ್ನು ಸ್ಮರಿಸಿಕೊಳ್ಳುತ್ತಿದ್ದನೋ ಆವಾಗಲೆಲ್ಲ ತನ್ನ ಹೃದಯದಲ್ಲಿ ಭೀಮನ ಕುರಿತು ಅನಿಷ್ಟವನ್ನೇ ಚಿಂತಿಸುತ್ತಿದ್ದನು. ಹಾಗೆಯೇ ಭೀಮಸೇನನಿಗೂ ಕೂಡ ಜನಾಧಿಪ ಧೃತರಾಷ್ಟ್ರನ ಕುರಿತು ಸಹನೆಯಿರಲಿಲ್ಲ. ಸದಾ ಅವನಿಗೆ ಅಪ್ರಿಯವಾದುದನ್ನೇ ಮಾಡುತ್ತಿದ್ದನು. ವೃಕೋದರನು ಯಾರಿಗೂ ಕಾಣದಂತೆ ಧೃತರಾಷ್ಟ್ರನಿಗೆ ಅಪ್ರಿಯವಾದುದನ್ನೇ ಮಾಡುತ್ತಿದ್ದನು. ಸದಾ ಕೃತಕ ಪುರುಷರಿಂದ ಧೃತರಾಷ್ಟ್ರನ ಆಜ್ಞೆಗಳನ್ನು ಭಗ್ನಗೊಳಿಸುತ್ತಿದ್ದನು. ಒಮ್ಮೆ ಕಠೋರ ಭೀಮನು ತನ್ನ ಸಹೃದಯರ ಮಧ್ಯದಲ್ಲಿ ಧೃತರಾಷ್ಟ್ರ-ಗಾಂಧಾರಿಯರಿಗೆ ಕೇಳುವಂತೆ ತನ್ನ ಭುಜಗಳನ್ನು ತಟ್ಟಿಕೊಂಡನು. ಶತ್ರು ದುರ್ಯೋಧನ, ಕರ್ಣ ಮತ್ತು ದುಃಶಾಸನರನ್ನು ಸ್ಮರಿಸಿಕೊಂಡು ಕೋಪಿಷ್ಟನಾದ ಭೀಮನು ಈ ಕಠೋರ ಮಾತುಗಳನ್ನಾಡಿದನು: “ಪರಿಘದಂತಿರುವ ನನ್ನ ಈ ಬಾಹುಗಳಿಂದ ನಾನಾ ಶಸ್ತ್ರಗಳೊಡನೆ ಹೋರಾಡುತ್ತಿದ್ದ ಈ ಅಂಧ ನೃಪತಿಯ ಮಕ್ಕಳೆಲ್ಲರನ್ನೂ ಯಮನ ಲೋಕಕ್ಕೆ ಕಳುಹಿಸಿಬಿಟ್ಟೆನು! ಪರಿಘದಂತೆ ದುರಾಸದವಾಗಿರುವ ಈ ನನ್ನ ಎರಡು ಭುಜಗಳ ಮಧ್ಯೆ ಯಾರೆಲ್ಲ ಸಿಲುಕಿದರೋ ಆ ಎಲ್ಲ ಧಾರ್ತರಾಷ್ಟ್ರರೂ ನಾಶಹೊಂದಿದರು! ಸುತ-ಬಾಂಧವರೊಂದಿಗೆ ದುರ್ಯೋಧನನನ್ನು ನಾಶಗೊಳಿಸಿದ ಈ ನನ್ನ ಎರಡು ಭುಜಗಳು ಚಂದನಲೇಪನದ ಗೌರವಕ್ಕೆ ಅರ್ಹವಾಗಿವೆ!”

ವೃಕೋದರನ ಈ ಮತ್ತು ಅನ್ಯ ಮುಳ್ಳಿನಂತಹ ವಿವಿಧ ಮಾತುಗಳನ್ನು ಕೇಳಿ ಜನಾಧಿಪನಿಗೆ ಅತ್ಯಂತ ಖೇದವುಂಟಾಯಿತು. ಕಾಲದ ವೈವರೀತ್ಯಗಳನ್ನು ತಿಳಿದಿದ್ದ ಸರ್ವಧರ್ಮಜ್ಞೆ ಬುದ್ಧಿಮತೀ ದೇವೀ ಗಾಂಧಾರಿಯೂ ಕೂಡ ಮನಸ್ಸಿಗೆ ಯಾತನೆಯನ್ನುಂಟುಮಾಡುವ ಆ ಮಾತುಗಳನ್ನು ಕೇಳಿದಳು. ಹಾಗೆ ಹದಿನೈದು ವರ್ಷಗಳು ಕಳೆದುಹೋದವು. ರಾಜಾ ನರಾಧಿಪ ಧೃತರಾಷ್ಟ್ರನು ಭೀಮನ ವಾಗ್ಬಾಣಗಳಿಂದ ಅತ್ಯಂತ ಪೀಡಿತನಾಗಿದ್ದನು. ರಾಜಾ ಯುಧಿಷ್ಠಿರನಿಗಾಗಲೀ, ಅರ್ಜುನನಿಗಾಗಲೀ, ಕುಂತಿಗಾಗಲೀ, ಅಥವಾ ಯಶಸ್ವಿನೀ ದ್ರೌಪದಿಗಾಗಲೀ ಈ ವಿಷಯದ ಅರಿವೇ ಇರಲಿಲ್ಲ. ಮಾದ್ರೀಪುತ್ರರಿಬ್ಬರೂ ಕೂಡ ಭೀಮನ ಮನಸ್ಸನ್ನು ತಿಳಿಯದೇ ರಾಜ ಧೃತರಾಷ್ಟ್ರನ ಮನಸ್ಸಿಗೆ ಅನುಕೂಲರಾಗಿಯೇ ಇದ್ದರು. ಅವನ ಮನಸ್ಸು ಖೇದಗೊಳ್ಳದಂತೆ ರಕ್ಷಿಸುತ್ತಾ ಅವನಿಗೆ ಅಪ್ರಿಯವಾದ ಏನನ್ನೂ ಮಾಡುತ್ತಿರಲಿಲ್ಲ.

ಧೃತರಾಷ್ಟ್ರನ ವನಗಮನ ಸಂಕಲ್ಪ

ಆಗ ಧೃತರಾಷ್ಟ್ರನು ತನ್ನ ಮಿತ್ರರನ್ನು ಕರೆಯಿಸಿ ಕಂಬನಿದುಂಬಿದ ಕಣ್ಣುಗಳಿಂದ ಕೂಡಿ ಗದ್ಗದ ಧ್ವನಿಯಲ್ಲಿ ಅವರೊಡನೆ ಹೀಗೆ ಹೇಳಿದನು: “ಕುರುಗಳ ವಿನಾಶವು ಹೇಗಾಯಿತೆಂದು ನಿಮಗೆಲ್ಲ ತಿಳಿದೇ ಇದೆ. ನನ್ನ ಅಪರಾಧದಿಂದಲೇ ಎಲ್ಲವೂ ನಡೆಯಿತು ಎನ್ನುವುದನ್ನು ಕೌರವರೆಲ್ಲರೂ ಬಲ್ಲರು! ನಾನೇ ದುಷ್ಟಮತಿಯಾದ ಮೂಢ ಬಾಂಧವರ ಭಯವನ್ನು ವರ್ಧಿಸುತ್ತಿದ್ದ ದುರ್ಯೋಧನನನ್ನು ಕೌರವರ ಅಧಿಪತಿಯನ್ನಾಗಿ ಅಭಿಷೇಕಿಸಿದೆನು! “ಈ ಪಾಪಿ ದುರ್ಮತಿಯನ್ನು ಅಮಾತ್ಯರೊಡನೆ ವಧಿಸು!” ಎಂಬ ವಾಸುದೇವನ ಅರ್ಥವತ್ತಾದ ಮಾತನ್ನು ನಾನೇ ಕೇಳಲಿಲ್ಲ! ಪುತ್ರಸ್ನೇಹದಿಂದಾಗಿ ನಾನು ಹಿತವನ್ನಾಡಿದ ವಿದುರ, ಭೀಷ್ಮ, ದ್ರೋಣ, ಕೃಪ, ಮತ್ತು ಪದೇ ಪದೇ ಹೇಳುತ್ತಿದ್ದ ಮಹಾತ್ಮ ವ್ಯಾಸ, ಸಂಜಯ ಮತ್ತು ಗಾಂಧಾರಿಯರನ್ನು ಕೇಳಲಿಲ್ಲ. ಅದಕ್ಕಾಗಿ ಇಂದು ನಾನು ಪರಿತಪಿಸುತ್ತಿದ್ದೇನೆ! ಗುಣವಂತರೂ ಮಹಾತ್ಮರೂ ಆಗಿರುವ ಪಾಂಡುಪುತ್ರರಿಗೆ ನಾನು ಪಿತೃ-ಪಿತಾಮಹರಿಂದ ಉಜ್ವಲಿಸುತ್ತಿದ್ದ ಈ ಭೂಮಿ-ಸಂಪತ್ತನ್ನು ಕೊಡಲಿಲ್ಲ! ಸರ್ವರಾಜರ ವಿನಾಶವನ್ನು ಕಂಡಿದ್ದ ಜನಾರ್ದನನು ಇದೇ ಪರಮ ಶ್ರೇಯಸ್ಕರವೆಂದು ಭಾವಿಸಿದ್ದನು. ಹೀಗೆ ಆಗ ನಾನು ಮಾಡಿದ ಸಾವಿರಾರು ಅಪರಾಧಗಳು ಮುಳ್ಳುಗಳಂತೆ ಸದಾ ನನ್ನ ಹೃದಯವನ್ನು ಚುಚ್ಚುತ್ತಿವೆ. ವಿಶೇಷವಾಗಿ ನಾನು ಈ ಹದಿನೈದು ವರ್ಷಗಳು ಸುಡುತ್ತಿದ್ದೇನೆ. ದುರ್ಮತಿಯ ಈ ಪಾಪಗಳ ಶುದ್ಧಿಗಾಗಿ ಕೆಲವು ನಿಯಮಗಳನ್ನು ಪಾಲಿಸುತ್ತಿದ್ದೇನೆ. ನಾಲ್ಕನೆಯ ಹೊತ್ತು (ಎರಡು ದಿವಸಗಳಿಗೊಮ್ಮೆ), ಒಮ್ಮೆಮ್ಮೆ ಎಂಟನೆಯ ಹೊತ್ತು (ನಾಲ್ಕು ದಿವಸಗಳಿಗೊಮ್ಮೆ) ಹಸಿವಿನ ಸಂಕಟದಿಂದ ತಪ್ಪಿಸಿಕೊಳ್ಳಲು ಅಲ್ಪಾಹಾರವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದನ್ನು ಗಾಂಧರಿಯೋರ್ವಳೇ ಬಲ್ಲಳು. ನಾನು ಪ್ರತಿನಿತ್ಯವೂ ಆಹಾರವನ್ನು ತೆಗೆದುಕೊಳ್ಳುತ್ತಿರುವೆನೆಂದೇ ಎಲ್ಲ ಪರಿಜನರೂ ತಿಳಿದುಕೊಂಡಿದ್ದಾರೆ. ಪಾಂಡವನು ತುಂಬಾ ಪರಿತಪಿಸುತ್ತಾನೆಂದು ಯುಧಿಷ್ಠಿರನ ಭಯದಿಂದ ಯಾರಿಗೂ ಇದು ತಿಳಿಯದಂತೆ ಗೌಪ್ಯವಾಗಿ ಇರಿಸಿಕೊಂಡಿದ್ದೇನೆ. ದರ್ಭೆ ಮತ್ತು ಮೃಗಚರ್ಮವನ್ನು ಹೊದೆದುಕೊಂಡು ನಾನು ಮತ್ತು ಯಶಸ್ವಿನೀ ಗಾಂಧಾರೀ ಜಪಮಾಡುತ್ತಿರುತ್ತೇವೆ. ನೆಲದ ಮೇಲೆಯೇ ಮಲಗುತ್ತೇವೆ. ಸಂಗ್ರಾಮದಲ್ಲಿ ಹಿಮ್ಮೆಟ್ಟದ ನೂರು ಶೂರ ಮಕ್ಕಳೂ ಹತರಾದರು. ಅವರು ಕ್ಷತ್ರಧರ್ಮವನ್ನು ತಿಳಿದಿದ್ದರೆಂದು ನಾನು ಅದಕ್ಕಾಗಿ ಪರಿತಪಿಸುತ್ತಿಲ್ಲ.”

ಹೀಗೆ ಹೇಳಿ ಕೌರವ ಧೃತರಾಷ್ಟ್ರನು ಧರ್ಮರಾಜನಿಗೆ ಹೇಳಿದನು: “ಪುತ್ರ! ನಿನಗೆ ಮಂಗಳವಾಗಲಿ! ನಾನೀಗ ಹೇಳುವ ಮಾತುಗಳನ್ನು ಕೇಳು! ನಿನ್ನಿಂದ ಪರಿಪಾಲಿತನಾಗಿರುವ ನಾನು ಅತ್ಯಂತ ಸುಖದಿಂದಲೇ ಇದ್ದೇನೆ. ಮಹಾದಾನಗಳನ್ನು ನೀಡಿದ್ದೇನೆ. ಪುನಃ ಪುನಃ ಶ್ರಾದ್ಧಗಳನ್ನು ಮಾಡಿದ್ದೇನೆ. ಬಲವಿದ್ದಷ್ಟು ಕಷ್ಟದ ಪುಣ್ಯ ಕರ್ಮಗಳನ್ನು ಮಾಡಿದ ಮತ್ತು ಪುತ್ರರನ್ನು ಕಳೆದುಕೊಂಡ ಈ ಗಾಂಧಾರಿಯು ಧೈರ್ಯದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾಳೆ! ದ್ರೌಪದಿಗೆ ಅಪಕಾರವನ್ನೆಸಗಿದ ಮತ್ತು ನಿನ್ನ ಐಶ್ವರ್ಯವನ್ನು ಅಪಹರಿಸಿದ ಕ್ರೂರಿಗಳು ಧರ್ಮದಿಂದ ಯುದ್ಧಮಾಡಿ ಹತರಾಗಿದ್ದಾರೆ. ಅವರ ಪಾಪಕ್ಕೆ ಮಾಡಬೇಕಾದ ಪರಿಹಾರಗಳನ್ನೇನೂ ನಾನು ಕಾಣುತ್ತಿಲ್ಲ. ಎಲ್ಲರೂ ಶಸ್ತ್ರಗಳನ್ನು ಹಿಡಿದೇ ನಿನ್ನನ್ನು ಎದುರಿಸಿ ಹತರಾಗಿ ಉತ್ತಮ ಲೋಕಗಳನ್ನು ಗಳಿಸಿಕೊಂಡಿದ್ದಾರೆ. ಈಗ ನನಗಾಗಿ ಮತ್ತು ಗಾಂಧಾರಿಗಾಗಿ ಹಿತವಾದ ಮುಖ್ಯ ಪರಿಹಾರಗಳನ್ನು ಮಾಡಿಕೊಳ್ಳಬೇಕಾಗಿದೆ. ಅದಕ್ಕೆ ನಿನ್ನ ಅನುಮತಿ ಬೇಕು! ನೀನು ಧರ್ಮಭೃತರಲ್ಲಿ ಶ್ರೇಷ್ಠ. ಸತತವೂ ಧರ್ಮವನ್ನು ಪಾಲಿಸಿಕೊಂಡಿರುವವನು. ಪ್ರಾಣವಿರುವವರಲ್ಲಿ ಹಿರಿಯವನು. ಆದುದರಿಂದ ನಿನ್ನಲ್ಲಿ ಹೇಳುತ್ತಿದ್ದೇನೆ. ನಿನ್ನ ಅನುಜ್ಞೆಯನ್ನು ಪಡೆದು ಗಾಂಧಾರಿಯ ಸಹಿತ ನಾನು ಚೀರ-ವಲ್ಕಲಗಳನ್ನು ಧರಿಸಿ ವನದಲ್ಲಿ ವಾಸಿಸುತ್ತೇನೆ. ವನದಲ್ಲಿ ಸಂಚರಿಸುತ್ತಾ ಸದಾ ನಿನಗೆ ಆಶೀರ್ವದಿಸುತ್ತಿರುತ್ತೇನೆ. ನಮ್ಮ ಕುಲದಲ್ಲಿ ಎಲ್ಲರಿಗೂ ಐಶ್ವರ್ಯವನ್ನು ಪುತ್ರರಿಗೊಪ್ಪಿಸಿ ವನವಾಸಮಾಡುವುದು ಉಚಿತವೇ ಆಗಿದೆ. ಅಲ್ಲಿ ನಾನು ಪತ್ನಿಯೊಡನೆ ವಾಯುಭಕ್ಷನಾಗಿಯೋ ನಿರಾಹಾರಿಯಾಗಿಯೋ ಇದ್ದುಕೊಂಡು ಪರಮ ತಪಸ್ಸನ್ನು ನಡೆಸುತ್ತೇನೆ. ರಾಜನಾಗಿರುವುದರಿಂದ ನೀನೂ ಕೂಡ ಆ ತಪಸ್ಸಿನ ಫಲಭಾಗಿಯಾಗುವೆ. ಏಕೆಂದರೆ, ದೇಶದಲ್ಲಿ ಕಲ್ಯಾಣಕರವಾದ ಮತ್ತು ಕೆಟ್ಟದಾದ ಎಲ್ಲ ಕರ್ಮಗಳಿಗೆ ರಾಜನು ಫಲಭಾಗಿಯಾಗುತ್ತಾನೆ!”

ಯುಧಿಷ್ಠಿರನು ಹೇಳಿದನು: “ನೃಪ! ನೀನು ಹೀಗೆ ದುಃಖದಿಂದಿರುವಾಗ ನನಗೆ ಈ ರಾಜ್ಯದಲ್ಲಿ ಯಾವ ಸಂತೋಷವೂ ಇಲ್ಲ. ಅತ್ಯಂತ ದುರ್ಬುದ್ಧಿಯಾದ, ರಾಜ್ಯಾಸಕ್ತಿಯಿಂದ ಪ್ರಮತ್ತನಾಗಿರುವ ನನಗೆ ಧಿಕ್ಕಾರವಿರಲಿ! ನೀನು ದುಃಖಾರ್ತನಾಗಿರುವುದಾಗಲೀ, ಉಪವಾಸದಿಂದ ಕೃಶನಾಗಿರುವುದಾಗಲೀ, ಅಲ್ಪಾಹಾರವನ್ನು ಸೇವಿಸಿ ನೆಲದ ಮೇಲೆ ಮಲಗಿಕೊಳ್ಳುತ್ತಿರುವುದಾಗಲೀ ಸಹೋದರರೊಂದಿಗೆ ನನಗೆ ತಿಳಿದೇ ಇರಲಿಲ್ಲ! ಗೂಢಬುದ್ಧಿಯ ನಿನ್ನಿಂದ ಮೂಢನಾದ ನಾನು ವಂಚಿತನಾಗಿದ್ದೇನೆ. ಮೊದಲು ನನ್ನಲ್ಲಿ ವಿಶ್ವಾಸವನ್ನು ಹುಟ್ಟಿಸಿ ಇಂದು ನನಗೆ ಈ ದುಃಖವನ್ನು ನೀಡಿದ್ದೀಯೆ! ನೀನೇ ಈ ರೀತಿಯ ದುಃಖವನ್ನು ಅನುಭವಿಸುತ್ತಿರುವಾಗ ನನಗೆ ಈ ರಾಜ್ಯಭೋಗದಿಂದ ಅಥವಾ ಯಜ್ಞಗಳಿಂದ ಯಾವ ಸುಖವಿದೆ? ದುಃಖಿತನಾಗಿರುವ ನಿನ್ನ ಈ ಮಾತಿನಿಂದ ನನ್ನ ರಾಜ್ಯವೇ ಪೀಡಿತವಾಗಿದೆಯೆಂದು ಭಾವಿಸುತ್ತೇನೆ. ನೀನೇ ನನ್ನ ಪಿತ. ನೀನೇ ನಮ್ಮ ಮಾತೆ ಮತ್ತು ಪರಮ ಗುರು. ನಿನ್ನನ್ನು ಅಗಲಿದ ನಾವು ಎಲ್ಲಿ ತಾನೇ ನಿಲ್ಲೋಣ? ನಿನ್ನ ಔರಸ ಪುತ್ರ ಯುಯುತ್ಸುವಾಗಲೀ ಅಥವಾ ನೀನು ಅಭಿಪ್ರಾಯಪಟ್ಟ ಬೇರೆ ಯಾರಾದರೂ ರಾಜನಾಗಲಿ! ನಾನು ವನಕ್ಕೆ ಹೋಗುತ್ತೇನೆ. ಈ ರಾಜ್ಯವನ್ನು ನೀನೇ ಆಳು. ಅಯಶಸ್ಸಿನಿಂದ ಸುಟ್ಟುಹೋಗಿರುವ ನನ್ನನ್ನು ಇನ್ನೂ ಸುಡುವುದು ಸರಿಯಲ್ಲ! ನಾನು ರಾಜನಲ್ಲ! ನೀನೇ ರಾಜ! ನಾನು ನಿನ್ನ ಆಜ್ಞಾಧಾರಕನಾಗಿದ್ದೇನೆ. ಧರ್ಮಜ್ಞನೂ ಗುರುವೂ ಆದ ನಿನ್ನನ್ನು ಕಾಡಿಗೆ ಹೋಗಲು ನಾನು ಹೇಗೆ ತಾನೇ ಅನುಮತಿನೀಡಲಿ? ದುರ್ಯೋಧನನ ಕೃತ್ಯಗಳಿಂದಾಗಿ ನಮ್ಮ ಹೃದಯದಲ್ಲಿ ಸ್ವಲ್ಪವೂ ಕೋಪವಿಲ್ಲ. ಅದು ಆಗಾಬೇಕಾದ್ದಿತು ಎಂದು ತಿಳಿದುಕೊಂಡಿದ್ದೇವೆ. ಆಗ ನಾವೂ ಕೂಡ ಮೋಹಿತರಾಗಿದ್ದೆವು. ದುರ್ಯೋಧನಾದಿಗಳು ಹೇಗೋ ಹಾಗೆ ನಾವೂ ಕೂಡ ನಿನ್ನ ಪುತ್ರರೇ ಆಗಿದ್ದೇವೆ. ಗಾಂಧಾರೀ ಮತ್ತು ಕುಂತಿಯರಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂದು ನನಗನ್ನಿಸುತ್ತಿದೆ. ಒಂದು ವೇಳೆ ನೀನು ನನ್ನನ್ನು ಪರಿತ್ಯಜಿಸಿ ಹೋದರೆ ನಾನೂ ಕೂಡ ನಿನ್ನ ಹಿಂದೆಯೇ ಬರುವೆನು. ನನ್ನನ್ನು ಮುಟ್ಟಿಕೊಂಡು ಈ ಸತ್ಯವನ್ನಾಡುತ್ತಿದ್ದೇನೆ! ನಿನ್ನನ್ನು ಅಗಲಿದ ನನಗೆ ಸಾಗರವನ್ನೇ ಮೇಖಲೆಯನ್ನಾಗಿ ಹೊಂದಿರುವ ಸಂಪತ್ತಿನಿಂದ ಕೂಡಿರುವ ಈ ಭೂಮಿಯೂ ನನಗೆ ಪ್ರೀತಿಯನ್ನುಂಟುಮಾಡಲಾರದು! ಶಿರಸಾ ನಿನಗೆ ವಂದಿಸಿ ಹೇಳುತ್ತಿದ್ದೇನೆ. ಈ ಎಲ್ಲವೂ ನಿನ್ನದೇ. ನಾವೆಲ್ಲರೂ ನಿನ್ನ ಅಧೀನರಾಗಿದ್ದೇವೆ. ನಿನ್ನ ಮಾನಸಿಕ ಜ್ವರವು ದೂರವಾಗಲಿ! ನೀನು ಪಡೆಯಬೇಕಾಗಿರುವುದನ್ನು ಪಡೆದಿರುವೆಯೆಂದು ನಾನು ಭಾವಿಸುತ್ತೇನೆ. ಅದೃಷ್ಟದಿಂದ ಪುನಃ ನಿನ್ನ ಶುಶ್ರೂಷೆಯನ್ನು ಮಾಡುವ ಅವಕಾಶವು ಸಿಕ್ಕಿದರೆ ನಿನ್ನ ಈ ಮಾನಸಿಕ ಜ್ವರವನ್ನು ಹೋಗಲಾಡಿಸುತ್ತೇನೆ!”

ಧೃತರಾಷ್ಟ್ರನು ಹೇಳಿದನು: “ಕುರುನಂದನ! ಮಗೂ! ನನ್ನ ಮನಸ್ಸು ತಪಸ್ಸಿನಲ್ಲಿಯೇ ಮಗ್ನವಾಗಿದೆ. ನಾವು ಅರಣ್ಯಕ್ಕೆ ಹೋಗುವುದು ಈ ಕುಲದ ಸಂಪ್ರದಾಯವೂ ಮತ್ತು ಉಚಿತವೂ ಆಗಿದೆ. ಬಹಳ ಕಾಲದಿಂದ ಇಲ್ಲಿಯೇ ವಾಸವಾಗಿದ್ದೇವೆ. ಬಹಳ ಕಾಲದಿಂದ ನೀನು ನಮ್ಮ ಶುಶ್ರೂಷೆಯನ್ನೂ ಮಾಡಿದ್ದೀಯೆ. ವೃದ್ಧನಾದ ನನಗೆ ನೀನು ಅಪ್ಪಣೆಯನ್ನು ನೀಡಬೇಕು!”

ಕೈಮುಗಿದು ನಡುಗುತ್ತಿದ್ದ ಧರ್ಮರಾಜನಿಗೆ ಹೀಗೆ ಹೇಳಿ ಅಂಬಿಕಾಸುತ ರಾಜನು ಸಂಜಯ ಮತ್ತು ಕೃಪನಿಗೆ ಈ ಮಾತನ್ನಾಡಿದನು: “ನೀವಾದರೂ ಈ ಪೃಥಿವೀಪತಿಯನ್ನು ಸಮಾಧಾನಗೊಳಿಸಿರೆಂದು ಇಚ್ಛಿಸುತ್ತೇನೆ. ನನ್ನ ವೃದ್ಧಾಪ್ಯದ ಕಾರಣದಿಂದಲೂ ಮಾತನಾಡಿದ ಆಯಾಸದಿಂದಲೂ ನನ್ನ ಮನಸ್ಸು ದುರ್ಬಲವಾಗುತ್ತಿದೆ. ಬಾಯಿಯು ಒಣಗಿಹೋಗುತ್ತಿದೆ.” ಹೀಗೆ ಹೇಳಿ ವೃದ್ಧ ರಾಜಾ ಕುರೂದ್ವಹನು ಒಮ್ಮೆಲೇ ಪ್ರಾಣಬಿಟ್ಟವನಂತೆ ಗಾಂಧಾರಿಯನ್ನೊರಗಿ ಕುಳಿತುಕೊಂಡನು. ಹಾಗೆ ನಿಶ್ಚೇಷ್ಠನಾಗಿ ಕುಳಿತುಕೊಂಡ ಕುರುಪಾರ್ಥಿವನನ್ನು ನೋಡಿ ಕೌಂತೇಯನಿಗೆ ಅತೀವ ಸಂಕಟವುಂಟಾಯಿತು.

ಯುಧಿಷ್ಠಿರನು ಹೇಳಿದನು: “ಒಂದು ಲಕ್ಷ ಆನೆಗಳ ಬಲವಿರುವ ಈ ರಾಜನು ನಾರಿಯೋರ್ವಳನ್ನು ಆಶ್ರಯಿಸಿ ಮರಣಹೊಂದಿದವನಂತೆ ಕುಳಿತುಕೊಂಡಿದ್ದಾನಲ್ಲ! ಹಿಂದೆ ಭೀಮಸೇನನ ಉಕ್ಕಿನ ಪ್ರತಿಮೆಯನ್ನು ತನ್ನ ಬಲದಿಂದ ಚೂರು ಚೂರುಮಾಡಿದ್ದ ಇವನೇ ಇಂದು ಬಲಾರ್ಥಿಯಾಗಿ ಸ್ತ್ರೀಯನ್ನು ಆಶ್ರಯಿಸಿದ್ದಾನಲ್ಲಾ! ಇಂತಹ ಅವಸ್ಥೆಗೆ ಯೋಗ್ಯನಲ್ಲದ ಪೃಥಿವೀಪಾಲನು ಈ ರೀತಿ ಮಲಗಿರುವಂತೆ ಮಾಡಿರುವ ಅಧರ್ಮಜ್ಞನಾದ ನನಗೆ ಧಿಕ್ಕಾರ! ನನ್ನ ಬುದ್ಧಿಗೆ ಧಿಕ್ಕಾರ! ನನ್ನ ಶಾಸ್ತ್ರಜ್ಞಾನಕ್ಕೆ ಧಿಕ್ಕಾರ! ಗುರುವಾದ ಈ ರಾಜನೂ ಮತ್ತು ಯಶಸ್ವಿನೀ ಗಾಂಧಾರಿಯೂ ಆಹಾರವನ್ನು ಸೇವಿಸದೇ ಇದ್ದರೆ ನಾನೂ ಕೂಡ ಅವರಂತೆಯೇ ಉಪವಾಸದಿಂದಿರುತ್ತೇನೆ!”

ಆಗ ಧರ್ಮವಿದು ಪಾಂಡವ ರಾಜನು ತಣ್ಣೀರಿನಿಂದ ತನ್ನ ಕೈಯನ್ನು ಒದ್ದೆಮಾಡಿಕೊಂಡು ಮೆಲ್ಲನೇ ಧೃತರಾಷ್ಟ್ರನ ಎದೆಯನ್ನೂ ಮುಖವನ್ನೂ ಸವರಿದನು. ರತ್ನೌಷಧಿಗಳಿಂದ ಸಂಪನ್ನನ್ನಾಗಿದ್ದ ರಾಜಾ ಯುಧಿಷ್ಠಿರನು ಪವಿತ್ರ ಸುಗಂಧಯುಕ್ತ ಕೈಯಿಂದ ಮುಟ್ಟಿದೊಡನೆಯೇ ರಾಜ ಧೃತರಾಷ್ಟ್ರನು ಎಚ್ಚರಗೊಂಡನು.

ಧೃತರಾಷ್ಟ್ರನು ಹೇಳಿದನು: “ಪಾಂಡವ! ನಿನ್ನ ಕೈಗಳಿಂದ ಪುನಃ ನನ್ನನ್ನು ಮುಟ್ಟಿ ಸವರು! ಆಲಂಗಿಸು! ನಿನ್ನ ಸಂಸ್ಪರ್ಶದಿಂದ ನಾನು ಪುನಃ ಜೀವಂತನಾಗಿದ್ದೇನೆ! ನಿನ್ನ ನೆತ್ತಿಯನ್ನು ಆಘ್ರಾಣಿಸಲು ಬಯಸುತ್ತೇನೆ. ಕೈಗಳಿಂದ ನಿನ್ನನ್ನು ಮುಟ್ಟಲು ಬಯಸುತ್ತೇನೆ. ಅದರಿಂದ ನನ್ನ ಪ್ರಾಣವನ್ನೇ ಉಳಿಸಿಕೊಳ್ಳುತ್ತೇನೆ! ನಾನು ಆಹಾರವನ್ನು ಸೇವಿಸಿ ಇಂದಿಗೆ ನಾಲ್ಕು ದಿನಗಳಾದವು. ಇದರಿಂದಾಗಿ ಅಲುಗಾಡಲೂ ನನಗೆ ಸಾಧ್ಯವಾಗುತ್ತಿಲ್ಲ! ನಿನ್ನ ಅಪ್ಪಣೆಯನ್ನು ಕೇಳಲೋಸುಗ ಇಷ್ಟೆಲ್ಲ ಮಾತನಾಡಿ ಆಯಾಸಗೊಂಡಿದ್ದೇನೆ. ಮಗೂ! ಮನಸ್ಸಿನ ದುಃಖದಿಂದ ಎಚ್ಚರತಪ್ಪಿದವನಂತಾದೆನು! ಅಮೃತಸ್ಪರ್ಶದಂತಿರುವ ನಿನ್ನ ಈ ಸ್ಪರ್ಶದಿಂದ ನಾನು ನೂತನ ಚೇತನವನ್ನು ಪಡೆದುಕೊಂಡೆನೆಂದು ಭಾವಿಸುತ್ತೇನೆ!”

ತನ್ನ ದೊಡ್ಡಪ್ಪನು ಹೀಗೆ ಹೇಳಲು ಕೌಂತೇಯನು ಸೌಹಾರ್ದತೆಯಿಂದ ಮೆಲ್ಲನೇ ಅವನ ಸರ್ವಾಂಗಗಳನ್ನೂ ಮುಟ್ಟಿ ಸವರಿದನು. ಆಗ ಮಹೀಪತಿ ಧೃತರಾಷ್ಟ್ರನು ಪುನಃ ಪ್ರಾಣಗಳನ್ನೇ ಪಡೆದುಕೊಂಡು, ತನ್ನ ಬಾಹುಗಳೆರಡರಿಂದ ಪಾಂಡವನನ್ನು ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿದನು. ವಿದುರಾದಿಗಳೆಲ್ಲರೂ ಅತ್ಯಂತ ದುಃಖಿತರಾಗಿ ರೋದಿಸಿದರು. ಅತಿದುಃಖದಿಂದ ಪಾಂಡವರೂ ಕೂಡ ರಾಜನಿಗೆ ಏನನ್ನೂ ಹೇಳಲಿಲ್ಲ. ಧರ್ಮಜ್ಞೆ ಗಾಂಧಾರಿಯು ಮನಸ್ಸಿನಲ್ಲಿ ಮಹಾ ದುಃಖವನ್ನೇ ಅನುಭವಿಸುತ್ತಿದ್ದರೂ ದುಃಖಿತರಾತ ಅನ್ಯರಿಗೆ “ಹೀಗೆ ಅಳಬೇಡಿರಿ!” ಎಂದಳು. ಅಂತಃಪುರದ ಇತರ ಸ್ತ್ರೀಯರೆಲ್ಲರೂ ಅತ್ಯಂತ ದುಃಖಿತರಾಗಿ ಕುಂತಿಯೊಡನೆ ಕಣ್ಣೀರಿಡುತ್ತಾ ಗಾಂಧಾರೀ-ಧೃತರಾಷ್ಟ್ರರನ್ನು ಸುತ್ತುವರೆದು ನಿಂತಿದ್ದರು. ಆಗ ಪುನಃ ಧೃತರಾಷ್ಟ್ರನು ಯುಧಿಷ್ಠಿರನಿಗೆ ಹೇಳಿದನು: “ರಾಜನ್! ನನಗೆ ತಪಸ್ಸನ್ನು ಮಾಡಲು ಅನುಮತಿಯನ್ನು ಕೊಡು! ಮಗೂ! ಪುನಃ ಪುನಃ ಹೇಳಿದುದನ್ನೇ ಹೇಳಿ ನನ್ನ ಮನಸ್ಸು ದುರ್ಬಲವಾಗುತ್ತಿದೆ. ಆದುದರಿಂದ ನನ್ನನ್ನು ಇನ್ನೂ ಹೆಚ್ಚು ದುಃಖಕ್ಕೀಡುಮಾಡುವುದು ಸರಿಯಲ್ಲ!”

ಕೌರವೇಂದ್ರನು ಪಾಂಡವನಿಗೆ ಹಾಗೆ ಹೇಳುತ್ತಿರುವಾಗ ಅಲ್ಲಿದ್ದ ಯೋಧರಲ್ಲೆಲ್ಲಾ ಮಹಾ ಆರ್ತನಾದವುಂಟಾಯಿತು. ಯಥೋಚಿತವಲ್ಲದೇ ಉಪವಾಸದಿಂದ ಬಳಲಿ ಚರ್ಮ-ಅಸ್ಥಿಮಾತ್ರ ಉಳಿದುಕೊಂಡು ಕೃಶನೂ ವಿವರ್ಣನೂ ಆಗಿರುವ ರಾಜ ಧೃತರಾಷ್ಟ್ರನನ್ನು ನೋಡಿ ಮಹಾಭುಜ ಧರ್ಮಪುತ್ರನು ತಂದೆಯನ್ನು ಆಲಂಗಿಸಿ, ಶೋಕದಿಂದ ಕಣ್ಣೀರನ್ನು ಸುರಿಸುತ್ತಾ ಪುನಃ ಈ ಮಾತನ್ನಾಡಿದನು: “ರಾಜನ್! ನಿನಗೆ ಪ್ರಿಯವನ್ನುಂಟುಮಾಡಲು ಎಷ್ಟು ಬಯಸುತ್ತೇನೆಯೋ ಅಷ್ಟು ಈ ಜೀವಿತವನ್ನಾಗಲೀ ಪೃಥ್ವಿಯನ್ನಾಗಲೀ ಬಯಸುವುದಿಲ್ಲ! ನಾನು ನಿನ್ನ ಅನುಗ್ರಹಕ್ಕೆ ಯೋಗ್ಯನಾಗಿದ್ದರೆ ಮತ್ತು ನಿನ್ನ ಪ್ರೀತಿಗೆ ಪಾತ್ರನಾಗಿದ್ದರೆ ನೀನು ಅಹಾರಸೇವನೆಯನ್ನು ಮಾಡಬೇಕೆಂದು ನಾನು ನಿನಗೆ ಒತ್ತಾಯಿಸುತ್ತೇನೆ.”

ಹೀಗೆ ಹೇಳಲು ಪಾರ್ಥಿವನು ಮಹಾತೇಜಸ್ವಿ ಧರ್ಮಪುತ್ರನಿಗೆ “ಪುತ್ರ! ನೀನು ಬಯಸಿದರೆ ನಿನ್ನ ಅನುಜ್ಞೆಯಂತೆ ಊಟಮಾಡುತ್ತೇನೆ!” ಎಂದು ಹೇಳಿದನು. ರಾಜೇಂದ್ರ ಧೃತರಾಷ್ಟ್ರನು ಯುಧಿಷ್ಠಿರನಿಗೆ ಹೀಗೆ ಹೇಳುತ್ತಿರಲು ಸತ್ಯವತೀ ಪುತ್ರ ಋಷಿ ವ್ಯಾಸನು ಅಲ್ಲಿಗೆ ಆಗಮಿಸಿ ಈ ಮಾತನ್ನಾಡಿದನು: “ಯುಧಿಷ್ಠಿರ! ಕುರುನಂದನ ಮಹಾತ್ಮ ಧೃತರಾಷ್ಟ್ರನು ನಿನಗೆ ಏನು ಹೇಳಿದನೋ ಅದನ್ನು ವಿಚಾರಿಸದೇ ಮಾಡು! ಪುತ್ರರನ್ನು ಕಳೆದುಕೊಂಡ ಮತ್ತು ವಿಶೇಷವಾಗಿ ವೃದ್ಧನಾಗಿರುವ ಈ ನೃಪತಿಯು ಇನ್ನೂ ಬಹಳ ಕಾಲ ಈ ಕಷ್ಟವನ್ನು ಸಹಿಸಿಕೊಳ್ಳಲಾರ ಎಂದು ನನಗನ್ನಿಸುತ್ತದೆ. ಕಾರುಣ್ಯವನ್ನು ತಿಳಿದಿರುವ ಮಹಾಬಾಗೆ ಪ್ರಾಜ್ಞೆ ಗಾಂಧಾರಿಯೂ ಕೂಡ ಪುತ್ರಶೋಕವನ್ನು ಅತ್ಯಂತ ಧೈರ್ಯದಿಂದ ಸಹಿಸಿಕೊಂಡಿದ್ದಾಳೆ. ನಾನೂ ಕೂಡ ನಿನಗೆ ಇದನ್ನೇ ಹೇಳುತ್ತಿದ್ದೇನೆ. ನನ್ನ ಮಾತಿನಂತೆ ಮಾಡು. ರಾಜನು ವೃಥಾ ಇಲ್ಲಿ ಸಾಯದಂತೆ ಅವನಿಗೆ ಅನುಜ್ಞೆಯನ್ನು ನೀಡು! ಹಿಂದಿನ ರಾಜರ್ಷಿಗಳ ಗತಿಯಂತೆ ಈ ನೃಪನೂ ಕೂಡ ಹೋಗಲಿ! ಎಲ್ಲ ರಾಜರ್ಷಿಗಳಿಗೂ ಅಂತ್ಯದಲ್ಲಿ ವನವೇ ಆಶ್ರಯವು!”

ಅದ್ಭುತಕರ್ಮಿ ವ್ಯಾಸನು ಹೀಗೆ ಹೇಳಲು ರಾಜಾ ಮಹಾತೇಜಸ್ವಿ ಧರ್ಮರಾಜ ಯುಧಿಷ್ಠಿರನು ಅದಕ್ಕೆ ಪ್ರತಿಯಾಗಿ ಇಂತೆಂದನು: “ನೀನೇ ನಮಗೆ ಮಾನ್ಯನು. ನೀನೇ ನಮ್ಮ ಗುರು. ನೀನೇ ಈ ರಾಜ್ಯದ ಮತ್ತು ಕುಲದ ಪರಾಯಣನು. ನಾನಾದರೋ ರಾಜನ ಮಗ. ಅವನು ನನ್ನ ಗುರು. ಧರ್ಮದ ಪ್ರಕಾರ ಪುತ್ರನು ತಂದೆಯ ನಿರ್ದೇಶನದಂತೆ ನಡೆಯಬೇಕಾಗುತ್ತದೆ.”

ಹೀಗೆ ಹೇಳಿದ ಯುಧಿಷ್ಠಿರನಿಗೆ ಮಹಾತೇಜಸ್ವೀ ವ್ಯಾಸನು ಪುನಃ ಹೇಳಿದನು: “ಮಹಾಬಾಹೋ! ನೀನು ಹೇಳಿದುದು ಸರಿಯಾದುದೇ. ಆದರೆ ಈ ರಾಜನು ವೃದ್ಧಾಪ್ಯವನ್ನು ಹೊಂದಿದ್ದಾನೆ. ಅಂತಿಮಾವಸ್ಥೆಯಲ್ಲಿದ್ದಾನೆ. ಇವನು ನನ್ನಿಂದ ಮತ್ತು ನಿನ್ನಿಂದ ಅನುಮತಿಯನ್ನು ಪಡೆದು ಅವನ ಇಷ್ಟದಂತೆಯೇ ಮಾಡಲಿ. ಅವನಿಗೆ ವಿಘ್ನವನ್ನುಂಟುಮಾಡಬೇಡ! ಸಮರದಲ್ಲಿ ಅಥವಾ ವಿಧಿಪೂರ್ವಕವಾಗಿ ವನದಲ್ಲಿ ಮೃತ್ಯುವನ್ನು ಹೊಂದುವುದೇ ರಾಜರ್ಷಿಗಳ ಪರಮ ಧರ್ಮ. ನಿನ್ನ ತಂದೆ ಪಾಂಡುವೂ ಕೂಡ ಈ ರಾಜನನ್ನು ಗುರುವಂತೆ ಶಿಷ್ಯಭಾವದಿಂದ ಸೇವೆಗೈಯುತ್ತಿದ್ದನು. ಅನ್ನದ ರಾಶಿಗಳಿಂದ ಶೋಭಿತವಾದ ದಕ್ಷಿಣಾಯುಕ್ತ ಕ್ರತುಗಳನ್ನು ಮಾಡಿ, ಇಷ್ಟವಾದ ಮಹಾಭೋಗಗಳನ್ನು ಭೋಗಿಸಿ ಪುತ್ರರನ್ನು ಪಾಲಿಸಿದನು. ನೀನು ವನವಾಸಕ್ಕೆ ತೆರಳಿದ್ದಾಗ ಹದಿಮೂರು ವರ್ಷಗಳು ಇವನು ತನ್ನ ಮಗನಲ್ಲಿದ್ದ ವಿಪುಲ ರಾಜ್ಯವನ್ನು ಭೋಗಿಸಿದನು ಮತ್ತು ವಿವಿಧ ಸಂಪತ್ತುಗಳನ್ನು ದಾನವನ್ನಾಗಿತ್ತನು. ನಿನ್ನ ಗುರುಶುಶ್ರೂಷೆಯಿಂದ ಮತ್ತು ತನ್ನ ಸೇವಕರಿಂದ ಇವನು ಮತ್ತು ಯಶಸ್ವಿನೀ ಗಾಂಧಾರಿಯರು ಅರಾಧಿತರಾಗಿದ್ದಾರೆ. ಇದು ಇವನ ತಪಸ್ಸಿಗೆ ಸರಿಯಾದ ಕಾಲವಾಗಿದೆ. ನಿನ್ನ ತಂದೆಗೆ ಅನುಮತಿಯನ್ನು ನೀಡು. ಇವನಿಗೆ ನಿನ್ನಮೇಲೆ ಸ್ವಲ್ಪವೂ ಕೋಪವಿಲ್ಲ.”

ಹೀಗೆ ಹೇಳಿ ಪಾರ್ಥಿವ ಯುಧಿಷ್ಠಿರನನ್ನು ಒಪ್ಪಿಸಿದನು. ಕೌಂತೇಯನು ಹಾಗೆಯೇ ಆಗಲೆಂದು ಹೇಳಲು ವ್ಯಾಸನು ವನಕ್ಕೆ ಹೊರಟುಹೋದನು. ಭಗವಾನ್ ವ್ಯಾಸನು ಹೊರಟುಹೋದ ನಂತರ ರಾಜ ಪಾಂಡುಸುತನು ವೃದ್ಧನಾದ ತನ್ನ ತಂದೆಗೆ ತಲೆಬಾಗಿಸಿ ಮೆಲ್ಲ ಮೆಲ್ಲನೆ ಇಂತೆಂದನು: “ಭಗವಾನ್ ವ್ಯಾಸನು ಏನು ಹೇಳಿದನೋ, ನಿನ್ನ ಅಭಿಪ್ರಾಯವೂ ಏನಿದೆಯೋ, ಕೃಪ ಮತ್ತು ವಿದುರರು, ಯುಯುತ್ಸು-ಸಂಜಯರು ಏನು ಹೇಳುತ್ತಾರೋ ಅದರಂತೆಯೇ ನಾನು ನಡೆದುಕೊಳ್ಳುತ್ತೇನೆ. ಏಕೆಂದರೆ ಇವರೆಲ್ಲರೂ ನನಗೆ ಮಾನ್ಯರು ಮತ್ತು ಈ ಕುಲದ ಹಿತೈಷಿಗಳೂ ಆಗಿದ್ದಾರೆ. ನೃಪತೇ! ಶಿರಸಾ ನಮಸ್ಕರಿಸಿ ನಿನ್ನಲ್ಲಿ ಇದೊಂದನ್ನು ಬೇಡಿಕೊಳ್ಳುತ್ತಿದ್ದೇನೆ. ನೀನು ಮೊದಲು ಊಟಮಾಡು. ಅನಂತರ ಆಶ್ರಮದ ಕಡೆ ಹೋಗುವಿಯಂತೆ!”

ಅನಂತರ ರಾಜ ಯುಧಿಷ್ಠಿರನಿಂದ ಅನುಜ್ಞೆ ಪಡೆದ ಪ್ರತಾಪವಾನ್ ರಾಜಾ ಧೃತರಾಷ್ಟ್ರನು ಸ್ವಭವನಕ್ಕೆ ತೆರಳಿದನು. ಗಾಂಧಾರಿಯೂ ಅವನನ್ನು ಹಿಂಬಾಲಿಸಿದಳು. ಬಹಳವಾಗಿ ಶಕ್ತಿಗುಂದಿದ್ದ ಧೀಮಾನ್ ಮಹೀಪಾಲನು ಮುದಿ ಸಲಗದಂತೆ ಕಷ್ಟಪಟ್ಟು ಹೆಜ್ಜೆಯಿಡುತ್ತಿದ್ದನು. ವಿದ್ವಾನ್ ವಿದುರ, ಸೂತ ಸಂಜಯ, ಮತ್ತು ಹಾಗೆಯೇ ಪರಮೇಷ್ವಾಸ ಕೃಪ ಶಾರದ್ವತರು ಅವನನ್ನು ಹಿಂಬಾಲಿಸಿ ಹೋದರು. ಮನೆಯನ್ನು ಸೇರಿ ರಾಜನು ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ದ್ವಿಜಶ್ರೇಷ್ಠರನ್ನು ತೃಪ್ತಿಗೊಳಿಸಿ, ಭೋಜನ ಮಾಡಿದನು. ಮನಸ್ವಿನೀ ಧರ್ಮಜ್ಞೆ ಗಾಂಧಾರಿಯೂ ಕೂಡ ಕುಂತಿಯೊಡನೆ ಸೊಸೆಯಂದಿರಿಂದ ಉಪಚರಿಸಿ ಪೂಜಿಸಲ್ಪಟ್ಟು ಭೋಜನ ಮಾಡಿದಳು. ಧೃತರಾಷ್ಟ್ರನು ಊಟಮಾಡಿದ ನಂತರ ವಿದುರಾದಿಗಳು ಮತ್ತು ಪಾಂಡವರೂ ಕೂಡ ಊಟಮಾಡಿ ಕುರುಶ್ರೇಷ್ಠ ನೃಪನ ಬಳಿಯಲ್ಲಿ ಕುಳಿತುಕೊಂಡರು.

ಧೃತರಾಷ್ಟ್ರನು ಯುಧಿಷ್ಠಿರನಿಗೆ ರಾಜಧರ್ಮವನ್ನು ಉಪದೇಶಿಸಿದುದು

ಆಗ ಮಹಾರಾಜ ಅಂಬಿಕಾಸುತನು ಸಮೀಪದಲ್ಲಿಯೇ ಕುಳಿತಿದ್ದ ಕುಂತೀಪುತ್ರ ಯುಧಿಷ್ಠಿರನ ಬೆನ್ನನ್ನು ಕೈಯಿಂದ ಸವರುತ್ತಾ ಹೇಳಿದನು: “ಕುರುನಂದನ! ಅಷ್ಟಾಂಗಯುಕ್ತವಾದ7 ಮತ್ತು ಧರ್ಮಪುರಸ್ಕೃತವಾದ ರಾಜ್ಯದಲ್ಲಿ ನೀನೂ ಯಾವಾಗಲೂ ಜಾಗರೂಕನಾಗಿರಬೇಕು. ನೀನು ರಾಜ್ಯಧರ್ಮವನ್ನು ತಿಳಿದಿರುವೆ. ಆದರೂ ರಾಜ್ಯವನ್ನು ಹೇಗೆ ರಕ್ಷಿಸಲು ಶಕ್ಯ ಎನ್ನುವುದನ್ನು ಕೇಳು. ವಿದ್ಯೆಯಿಂದ ವೃದ್ಧರಾದವರನ್ನು ನೀನು ಸದಾ ಉಪಾಸಿಸುತ್ತಿರಬೇಕು. ಅವರು ಹೇಳುವುದನ್ನು ಕೇಳಬೇಕು ಮತ್ತು ವಿಚಾರಮಾಡದೇ ಅವರು ಹೇಳಿದಂತೆ ಮಾಡಬೇಕು. ಪ್ರಾತಃಕಾಲದಲ್ಲಿ ಎದ್ದು, ಯಥಾವಿಧಿಯಾಗಿ ಅವರನ್ನು ಪೂಜಿಸಿ, ರಾಜಕಾರ್ಯದ ಸಮಯದಲ್ಲಿ ನಿನ್ನ ಕಾರ್ಯಗಳ ಕುರಿತು ಅವರನ್ನು ಪ್ರಶ್ನಿಸಬೇಕು. ನಿನ್ನಿಂದ ಸಮ್ಮಾನಿತರಾದ ಆ ರಾಜ್ಯಹಿತಾರ್ಥಿಗಳು ನಿನಗೆ ಹಿತವಾದವುಗಳನ್ನೇ ಹೇಳುತ್ತಾರೆ. ಸಾರಥಿಯು ಕುದುರೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವಂತೆ ಇಂದ್ರಿಯಗಳೆಲ್ಲವನ್ನೂ ಹತೋಟಿಯಲ್ಲಿಕೊಂಡು ರಕ್ಷಿಸು. ರಕ್ಷಿಸಲ್ಪಟ್ಟ ಸಂಪತ್ತಿನಂತೆ ಭವಿಷ್ಯದಲ್ಲಿ ಇಂದ್ರಿಯಗಳೂ ನಿನ್ನ ಹಿತಕ್ಕಾಗಿಯೇ ಬರುತ್ತವೆ. ಎಲ್ಲ ಮುಖ್ಯ ಕರ್ಮಗಳಲ್ಲಿ ವಂಚನೆಯಿಲ್ಲದೇ ಕೆಲಸಮಾಡುವ, ಪಿತೃ-ಪಿತಾಮಹರ ಕಾಲದಿಂದ ವಂಶಪಾರಂಪರ್ಯವಾಗಿ ಕೆಲಸಮಾಡಿಕೊಂಡು ಬಂದಿರುವ, ಶುದ್ಧಾಂತಃಕರಣರಾದ, ಜಿತೇಂದ್ರಿಯರಾದ ಮುಖ್ಯರನ್ನು ತೊಡಗಿಸಿಕೋ! ಬಹುವಿಧವಾಗಿ ಪರೀಕ್ಷಿಸಲ್ಪಟ್ಟ ಚಾರರಿಂದ ಸತತವೂ ನಿನ್ನ ಮತ್ತು ಪರರ ರಾಷ್ಟ್ರಗಳಲ್ಲಿ ನಡೆಯುವ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಾ ಇರು. ಆದರೆ ನಿನ್ನ ವಿಷಯಗಳು ಮಾತ್ರ ಶತ್ರುಗಳಿಗೆ ತಿಳಿಯಬಾರದು. ನಿನ್ನ ನಗರವು ಸುರಕ್ಷಿತವಾಗಿರಬೇಕು. ಪ್ರಾಕಾರಗಳೂ ಮುಖ್ಯದ್ವಾರಗಳೂ ಸುದೃಢವಾಗಿರಬೇಕು. ಆರು ವಿಧದ ದುರ್ಗಗಳು ಎಲ್ಲ ದಿಕ್ಕುಗಳಲ್ಲಿಯೂ ಇರಬೇಕು. ನಗರದ ದ್ವಾರಗಳು ಸಾಕಷ್ಟು ವಿಶಾಲವಾಗಿಯೂ ದೊಡ್ಡದಾಗಿಯೂ ಇರಬೇಕು. ಅವುಗಳನ್ನು ಎಲ್ಲಕಡೆಗಳಲ್ಲಿ ಸರಿಯಾಗಿ ಅಳೆದು ಕಟ್ಟಿರಬೇಕು ಮತ್ತು ಅವುಗಳ ರಕ್ಷಣೆಗಳಿಗೆ ಯಂತ್ರಗಳನ್ನಿರಿಸಿರಬೇಕು. ಭೋಜನಾದಿಗಳ, ವಿಹಾರ-ಆಹಾರಗಳ, ಮಾಲೆಗಳನ್ನು ಧರಿಸುವ ಮತ್ತು ಮಲಗುವ ಸಮಯಗಳಲ್ಲಿ ಸತತವೂ ಕುಲಶೀಲಗಳುಳ್ಳ, ಅರ್ಥಜ್ಞರಾದ, ತಿಳಿದುಕೊಂಡಿರುವ ಪುರುಷರನ್ನು ನಿನ್ನ ರಕ್ಷಣೆಗೆ ಇರಿಸಿಕೊಂಡಿರಬೇಕು. ಕುಲೀನರ, ಶೀಲವಂತರ, ವಿಧ್ವಾಂಸರ, ವಿಶ್ವಾಸಪಾತ್ರರ ಮತ್ತು ವೃದ್ಧರ ಮೇಲ್ವಿಚಾರಣೆಯಲ್ಲಿ ಅಂತಃಪುರದ ಸ್ತ್ರೀಯರನ್ನು ಎಚ್ಚರದಿಂದ ರಕ್ಷಿಸಬೇಕು. ವಿದ್ಯಾವಿಶಾರದರೂ, ವಿನೀತರೂ, ಕುಲೀನರೂ, ಧರ್ಮಾರ್ಥಕುಶಲರೂ, ಸತ್ಯವಂತರೂ ಆದ ದ್ವಿಜರನ್ನು ಮಂತ್ರಿಗಳನ್ನಾಗಿ ಮಾಡಿಕೊಳ್ಳಬೇಕು. ಅವರೊಂದಿಗೆ ಮಂತ್ರಾಲೋಚನೆಯನ್ನು ಮಾಡಬೇಕು. ಆದರೆ ಅನೇಕರೊಂದಿಗೆ ಮತ್ತು ಬಹಳ ಹೊತ್ತಿನವರೆಗೆ ಮಂತ್ರಾಲೋಚನೆ ಮಾಡಕೂಡದು. ಎಲ್ಲ ಕಡೆ ಅವಾರಣವಿರುವ ಮಂತ್ರಗೃಹದಲ್ಲಿಯಾಗಲೀ ಅಥವಾ ಬಯಲಿನಲ್ಲಿಯಾಗಲೀ ಮಂತ್ರಾಲೋಚನೆಮಾಡಬೇಕು. ಹುಲ್ಲು-ಮುಳ್ಳುಗಳಿಲ್ಲದ ಅರಣ್ಯದಲ್ಲಿ ಕೂಡ ಮಂತ್ರಾಲೋಚನೆ ಮಾಡಬಹುದು. ಆದರ ಅಲ್ಲಿ ರಾತ್ರಿ ವೇಳೆ ಮಂತ್ರಾಲೋಚನೆಮಾಡಬಾರದು. ಮನುಷ್ಯರೊಂದಿಗೆ ಕಪಿಗಳನ್ನಾಗಲೀ, ಪಕ್ಷಿಗಳನ್ನಾಗಲೀ, ಮೂರ್ಖರನ್ನಾಗಲೀ, ಮತ್ತು ಹೆಳವರನ್ನಾಗಲೀ ಮಂತ್ರಾಲೋಚನಾ ಸ್ಥಳಕ್ಕೆ ಕರೆತರಬಾರದು. ಒಂದುವೇಳೆ ರಾಜನ ಗುಪ್ತವಿಷಯಗಳು ಇತರರಿಗೆ ತಿಳಿದಂತಾದರೆ ಉಂಟಾಗುವ ದೋಷಗಳನ್ನು ಸರಿಪಡಿಸಲು ಸಾಧ್ಯವೇ ಇಲ್ಲವೆಂದು ನನಗನ್ನಿಸುತ್ತದೆ. ಆದುದರಿಂದ ಮಂತ್ರಭೇದದಿಂದ ಆಗುವ ಅನರ್ಥಗಳನ್ನೂ ಮಂತ್ರಗೋಪನದಿಂದ ಆಗುವ ಲಾಭಗಳನ್ನೂ ಪುನಃ ಪುನಃ ವಿಚಾರಿಸುತ್ತಿರಬೇಕು. ಪೌರ ಮತ್ತು ಗ್ರಾಮೀಣ ಜನರ ಒಳ್ಳೆಯ ಮತ್ತು ಕೆಟ್ಟ ಭಾವನೆಗಳ್ಯಾವುವು ಎಂದು ತಿಳಿದು ಕಾರ್ಯಗಳನ್ನು ಕೈಗೊಳ್ಳಬೇಕು.

“ವ್ಯವಹಾರಗಳನ್ನು ಯಾವಾಗಲೂ ಆಪ್ತರೂ, ಸಂತುಷ್ಟರೂ ಆದ ಹಿತೈಷಿಗಳಿಗೆ ವಹಿಸಿಕೊಡಬೇಕು ಮತ್ತು ಚಾರರ ಮೂಲಕ ಅವರ ವ್ಯವಹಾರಗಳನ್ನು ಪರಿಶೀಲಿಸುತ್ತಿರಬೇಕು. ನೀನು ನಿಯೋಜಿಸಿದ ಪುರುಷರು ಯಥಾನ್ಯಾಯವಾಗಿ ಅಪರಾಧದ ಪರಿಣಾಮವನ್ನು ಚೆನ್ನಾಗಿ ಪರಿಶೀಲಿಸಿ ದಂಡಾರ್ಹರಿಗೆ ಶಿಕ್ಷೆಯನ್ನು ವಿಧಿಸುವವರಾಗಿರಬೇಕು. ಯಾವ ಅಧಿಕಾರಿಗಳು ಲಂಚವನ್ನು ತೆಗೆದುಕೊಳ್ಳುವುದರಲ್ಲಿ ಅಭಿರುಚಿಯುಳ್ಳವರೋ, ಪರಸ್ತ್ರೀಯರೊಡನೆ ಸಂಪರ್ಕವನ್ನಿಟ್ಟುಕೊಂಡಿರುವರೋ, ಉಗ್ರಶಿಕ್ಷೆಯನ್ನು ಕೊಡುವ ಸ್ವಭಾವವುಳ್ಳವರೋ, ಸುಳ್ಳುತೀರ್ಪನ್ನು ಕೊಡುವರೋ, ಸಾಹಸಕಾರ್ಯಗಳಲ್ಲಿ ಅಭಿರುಚಿಯುಳ್ಳವರೋ, ಸಭಾಮಂದಿರಗಳನ್ನೂ ವಿಹಾರಸ್ಥಾನಗಳನ್ನೂ ನಾಶಗೊಳಿಸುವರೋ, ವರ್ಣಾಶ್ರಮ ಧರ್ಮಗಳನ್ನು ದೂಷಿಸುವರೋ ಅಂಥವರನ್ನು ದೇಶ-ಕಾಲಗಳನ್ನನುಸರಿಸಿ ಸುವರ್ಣದಂಡದ ಅಥವಾ ಪ್ರಾಣದಂಡದ ಮೂಲಕ ಶಿಕ್ಷಿಸಬೇಕು. ಬೆಳಿಗ್ಗೆಯೇ ಮೊದಲು ಆದಾಯ-ವೆಚ್ಚಗಳ ಅಧಿಕಾರಿಗಳನ್ನು ನೋಡಬೇಕು. ಅದರ ನಂತರವೇ ಅಲಂಕಾರ ಮತ್ತು ಭೋಜನಗಳ ಕುರಿತು ಗಮನಕೊಡಬೇಕು. ಅನಂತರ ಯೋಧರನ್ನು ಕಾಣಬೇಕು. ಅವರನ್ನು ನೀನು ಸದಾ ಹರ್ಷಗೊಳಿಸುತ್ತಲೇ ಇರಬೇಕು. ದೂತರನ್ನು ಮತ್ತು ಚಾರರನ್ನು ಸದಾ ಸಾಯಂಕಾಲದ ಸಮಯದಲ್ಲಿ ಕಾಣಬೇಕು. ರಾತ್ರಿಯ ಕಡೆಯ ಭಾಗದಲ್ಲಿ ಅಥವಾ ಬೆಳಗಿನ ಜಾವದಲ್ಲಿ ಮರುದಿನದ ಕಾರ್ಯಕ್ರಮಗಳನ್ನು ನಿಶ್ಚಯಿಸಬೇಕು. ಮಧ್ಯರಾತ್ರಿಯಲ್ಲಿ ಅಥವಾ ಮಧ್ಯಾಹ್ನದಲ್ಲಿ ವಿಹರಿಸಬೇಕು. ಕಾರ್ಯಮಾಡಲು ಎಲ್ಲ ಸಮಯಗಳೂ ಉಪಯುಕ್ತವಾಗಿಯೇ ಇರುತ್ತವೆ. ಆದುದರಿಂದ ಆಯಾಯಾ ಕಾಲಗಳಲ್ಲಿ ಅಲಂಕೃತನಾಗಿ ಕಾರ್ಯಗೈಯಲು ಸಿದ್ಧನಾಗಿರಬೇಕು. ಚಕ್ರದೋಪಾದಿಯಲ್ಲಿ ಕಾರ್ಯಗಳು ಒಂದಾದ ಮೇಲೆ ಒಂದರಂತೆ ನಿರಂತರವಾಗಿ ನಡೆಯುತ್ತಲೇ ಇರಬೇಕು. ಸದಾ ನ್ಯಾಯಸಮ್ಮತವಾಗಿ ಕೋಶವನ್ನು ತುಂಬಿಸುವ ಪ್ರಯತ್ನಮಾಡುತ್ತಿರಬೇಕು. ಆದರೆ ದ್ವಿವಿಧಾ ಭಾವವನ್ನೂ ವಿಪರೀತ ಭಾವವನ್ನೂ ಪರಿತ್ಯಜಿಸಬೇಕು. ರಾಜರ ನಡುವೆ ಪರಸ್ಪರ ಭೇದವನ್ನುಂಟುಮಾಡುವವರು ಯಾರೆನ್ನುವುದನ್ನು ಗೂಢಚಾರರಿಂದ ತಿಳಿದು ಅಂಥವರನ್ನು ಆಪ್ತಪುರುಷರ ಮೂಲಕ ದೂರದಿಂದಲೇ ನಿಗ್ರಹಿಸಬೇಕು. ಸೇವಕರ ಕೆಲಸಗಳನ್ನು ಮೊದಲು ನೋಡಿ ನಂತರ ಅವರನ್ನು ನೀನು ಆರಿಸಿಕೊಳ್ಳಬೇಕು. ಒಮ್ಮೆ ಅವರನ್ನು ಸೇವಕರನ್ನಾಗಿ ನಿಯಮಿಸಿಕೊಂಡ ನಂತರ ಅವರು ಯೋಗ್ಯರಾಗಿರಲಿ ಅಯೋಗ್ಯರಾಗಿರಲಿ ಅವರಿಂದ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು. ನಿನ್ನ ಸೇನಾಪತಿಯು ದೃಢವ್ರತನಾಗಿರಬೇಕು, ಶೂರನಾಗಿರಬೇಕು, ಕ್ಲೇಶಗಳನ್ನು ಸಹಿಸಿಕೊಳ್ಳುವವನಾಗಿರಬೇಕು ಮತ್ತು ನಿನಗೆ ಪ್ರಿಯನಾದವನೂ ಆಗಿರಬೇಕು. ಗ್ರಾಮೀಣ, ನಗರದ ಮತ್ತು ಸಭೆಗಳಿಗೆ ಸಂಬಂಧಿಸಿದ ನಿನ್ನ ಕರ್ಮಗಳೆಲ್ಲವನ್ನೂ ವ್ಯವಹಾರಿಗಳಿಂದ ಮಾಡಿಸಬೇಕು. ನಿತ್ಯವೂ ನೀನು ನಿನ್ನಲ್ಲಿರುವ ದೋಷಗಳನ್ನು ಮತ್ತು ಶತ್ರುಗಳಲ್ಲಿರುವ ದೋಷಗಳನ್ನು ನಿನ್ನವರಿಂದ ಮತ್ತು ಶತ್ರುಗಳಿಂದ ತಿಳಿದುಕೊಳ್ಳುತ್ತಾ ಇರಬೇಕು. ನಿನ್ನ ದೇಶದ ತಮ್ಮ ತಮ್ಮ ಕರ್ಮಗಳಲ್ಲಿ ಕುಶಲರಾಗಿರುವ, ನಿನಗೆ ಹಿತರಾಗಿರುವ ಪುರುಷರನ್ನು ಅವರಿಗೆ ಅನುರೂಪ ಜೀವಿಕೆಗಳನ್ನು ಕಲ್ಪಿಸಿಕೊಟ್ಟು ಅನುಗ್ರಹಿಸಬೇಕು. ಗುಣಾರ್ಥಿ ವಿದುಷರಿಗೆ ಗುಣಯುಕ್ತ ಕಾರ್ಯಗಳನ್ನು ವಹಿಸಿಕೊಡಬೇಕು. ಅವರು ಯಾವಾಗಲೂ ಮೇರು ಮಹಾಗಿರಿಯಂತೆ ನಿಶ್ಚಲರಾಗಿರುತ್ತಾರೆ.

“ನಿನ್ನ ವಿಷಯದಲ್ಲಿ ಮತ್ತು ನಿನ್ನ ಶತ್ರುಗಳ ವಿಷಯದಲ್ಲಿ ಉದಾಸೀನಗುಣವುಳ್ಳ ಮತ್ತು ಮಧ್ಯಸ್ಥರಾಗಿರುವ ರಾಜಮಂಡಲಗಳನ್ನು ಗುರುತಿಸಿಕೊಂಡಿರಬೇಕು. ಶತ್ರುಗಳಿಂದ ಉಂಟಾಗುವ ನಾಲ್ಕು ಮತ್ತು ಆತತಾಯಿಗಳಿಂದ ಉಂಟಾಗುವ ಸರ್ವ ಅಪಾಯಗಳನ್ನೂ ತಿಳಿದುಕೊಂಡಿರಬೇಕು. ನಿನ್ನ ಮಿತ್ರನು ಯಾರು ಮತ್ತು ಶತ್ರುವಿನ ಮಿತ್ರರ್ಯಾರು ಎಂದು ತಿಳಿದುಕೊಂಡಿರಬೇಕು. ಅಮಾತ್ಯರು, ಜನಪದಗಳು, ದುರ್ಗ-ಕಣಿವೆಗಳು ಮತ್ತು ಸೇನೆಗಳ ಮೇಲೆ ಶತ್ರುಗಳ ದೃಷ್ಟಿಯು ಯಥೇಚ್ಛವಾಗಿರುತ್ತದೆ. ಈ ಹನ್ನೆರಡು ಮತ್ತು ಮಂತ್ರಿಪ್ರಧಾನರಾದ ಅರವತ್ತು ಗುಣಗಳು ಸೇರಿ ರಾಜನ ವಿವಿಧ ಆತ್ಮಕಗಳು. ಇವುಗಳನ್ನೇ ನೀತಿಕೋವಿದ ಆಚಾರ್ಯರು ಮಂಡಲವೆಂದು ಕರೆಯುತ್ತಾರೆ. ಯುಧಿಷ್ಠಿರ! ಅದಕ್ಕೆ ಸಂಬಂಧಿಸಿದ ಆರು ಗುಣಗಳ ಕುರಿತು ಕೇಳು. ತನ್ನ ಮತ್ತು ತನ್ನ ಶತ್ರು ಈ ಇಬ್ಬರ ವೃದ್ಧಿ-ಕ್ಷಯಗಳನ್ನೂ ಸ್ಥಾನವನ್ನೂ ಅರಿತುಕೊಂಡಿರಬೇಕು. ಅದು ಷಾಡ್ಗುಣ್ಯಚಾರಣೆ. ಯಾವಾಗ ಸ್ವಪಕ್ಷವು ಬಲವಾಗಿಯೂ ಶತ್ರುಪಕ್ಷವು ದುರ್ಬಲವಾಗಿಯೂ ಇರುವುದೋ ಆಗ ಶತ್ರುವಿನೊಡನೆ ಯುದ್ಧಮಾಡಿ ಕ್ಷಿತಿಪತಿಯೆನಿಸಿಕೊಳ್ಳಬೇಕು. ಯಾವಾಗ ಸ್ವಪಕ್ಷವು ಅಬಲವಾಗಿದೆಯೋ ಆಗ ಸಂಧಿಯನ್ನು ಆಶ್ರಯಿಸಬೇಕು. ದ್ರವ್ಯಗಳನ್ನು ಕೂಡಿಸಿಕೊಳ್ಳುವುದು ಒಂದು ಮಹಾ ಕರ್ತವ್ಯ! ಯಾವಾಗ ಸಮರ್ಥನೋ ಆಗಲೇ ಸಮಯವ್ಯರ್ಥಮಾಡದೇ ಆಕ್ರಮಣ ಮಾಡಬೇಕು. ಆಗ ಎಲ್ಲರೂ ವಿಧೇಯರಾಗಿರುವಂತೆ ನೋಡಿಕೊಳ್ಳಬೇಕು. ಸೇನಾನಾಯಕರ ಸ್ಥಾನಗಳನ್ನು ವಿಭಾಗಿಸಬಾರದು. ಭಾರತ! ಒಂದುವೇಳೆ ಸೋತುಬಿಟ್ಟರೆ ಅಲ್ಪಫಲಗಳನ್ನು ಕೊಡುವ ಭೂಮಿಯನ್ನೂ, ಬೆರಕೆಯ ಚಿನ್ನವನ್ನೂ, ಮತ್ತು ಬಡವ ಮಿತ್ರನನ್ನೂ ಕೊಟ್ಟು ಸಂಧಿಮಾಡಿಕೊಳ್ಳಬೇಕು. ಸೋಲದೇ ತಾನಾಗಿಯೇ ಸಂಧಿಯನ್ನು ಮಾಡಿಕೊಳ್ಳಬಾರದು. ಒಂದುವೇಳೆ ಶತ್ರುವಿಗೇ ವಿಪರೀತವಾಗಿ ಸಂಧಿಯನ್ನು ಬಯಸಿದರೆ ರಾಜಪುತ್ರನನ್ನೇ ಒತ್ತೆಇಡುವಂತೆ ಕೇಳಬೇಕು. ಒಂದುವೇಳೆ ಒಪ್ಪಿಕೊಳ್ಳದೇ ಇದ್ದರೆ ಉಪಾಯಮಂತ್ರಗಳನ್ನು ತಿಳಿದವನು ಅವನನ್ನು ಸೆರೆಹಿಡಿಯಲು ಪ್ರಯತ್ನಿಸಬೇಕು. ಆ ರಾಜನ ಪ್ರಕೃತಿ8ಗಳು ದುರ್ಬಲವಾಗಿವೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಅನಂತರ ಕ್ರಮೇಣವಾಗಿ ಅಥವಾ ಒಂದೇಸಮನೆ ಎಲ್ಲ ಕಾರ್ಯಗಳನ್ನೂ ಪ್ರಾರಂಭಿಸಬೇಕು. ಪೀಡನ, ಸ್ತಂಭನ, ಕೋಶಭಂಗ ಮೊದಲಾದ ಪ್ರಯತ್ನಗಳನ್ನು ಮಾಡಿ ಶತ್ರುಗಳ ನಾಶವನ್ನೂ ತನ್ನ ರಾಷ್ಟ್ರದ ರಕ್ಷಣೆಯನ್ನೂ ಸ್ವಯಂ ಮಾಡಿಕೊಳ್ಳಬೇಕು. ಆದರೆ ತನ್ನ ವೃದ್ಧಿಯನ್ನು ಬಯಸುವ ರಾಜನು ಶರಣಾಗತನಾಗಿ ಬಂದ ಸಾಮಂತರಾಜನನ್ನು ಯಾವುದೇ ಕಾರಣದಿಂದಲೂ ಹಿಂಸಿಸಬಾರದು. ವಿಶ್ವವನ್ನು ಜಯಿಸಲು ಬಯಸಿದ ರಾಜನು ಹಿಂಸಿಸಬಾರದು. ಮಂತ್ರಿಗಳೊಡನೆ ಸಮಾಲೋಚಿಸಿ ಶತ್ರುಗಣಗಳಲ್ಲಿ ಒಡಕನ್ನು ಉಂಟುಮಾಡಲು ಉಪಾಯಮಾಡಬೇಕು. ಸತ್ಪುರುಷರನ್ನು ಸಂಗ್ರಹಿಸಿಕೊಳ್ಳುತ್ತಲೇ ಇರಬೇಕು. ಪಾಪಿಷ್ಟರನ್ನು ನಿಗ್ರಹಿಸುತ್ತಲೇ ಇರಬೇಕು. ಬಲಿಷ್ಟರಾಜನು ದುರ್ಬಲರನ್ನು ಎಂದೂ ಬೆನ್ನೆಟ್ಟಿ ಹೋಗಬಾರದು. ಬಲಿಷ್ಟರಾಜನು ದುರ್ಬಲನನ್ನು ಆಕ್ರಮಿಸಿದರೆ ದುರ್ಬಲನು ವಿನಮ್ರಭಾವವನ್ನು ತೋರಿಸಬೇಕು. ಸಾಮ-ದಾನ ಮೊದಲಾದ ಉಪಾಯಗಳಿಂದ ಅವನನ್ನು ಕ್ರಮೇಣವಾಗಿ ಹಿಂದಿರುವಂತೆ ಮಾಡಬೇಕು. ಸಾಧ್ಯವಾಗದಿದ್ದರೆ ಮಂತ್ರಿಗಳು, ಕೋಶ, ಪೌರರು, ದಂಡ ಮತ್ತು ಅನ್ಯ ಪ್ರಿಯಕಾರಿಣಿಗಳು ಇವರೊಡನೆ ಸೇರಿಕೊಂಡು ಶತ್ರುವಿನೊಡನೆ ಯುದ್ಧಮಾಡಬೇಕು. ಬಲಿಷ್ಟನಾದವನೊಡನೆ ಯುದ್ಧಮಾಡುವಾಗ ಪರಾಜಯವು ಸಂಭವಿಸಿದರೆ ಯುದ್ಧಮಾಡುತ್ತಾ ಶರೀರತ್ಯಾಗಮಾಡುವುದರಿಂದ ಮುಕ್ತಿಯಾದರೂ ಲಭಿಸುತ್ತದೆ.

“ಯುಧಿಷ್ಠಿರ! ಸಂಧಿ ಮತ್ತು ಯುದ್ಧಗಳ ವಿಷಯಗಳಲ್ಲಿ ಎರಡು ಕಾರಣಗಳನ್ನೂ, ಮೂರು ವಿಧದ ಉಪಾಯಗಳನ್ನೂ, ಅನೇಕ ಪ್ರಕಾರಗಳನ್ನೂ ತಿಳಿದುಕೊಂಡಿರಬೇಕು. ನಿನ್ನದೇ ಬಲಾಬಲಗಳನ್ನು ತಿಳಿದುಕೊಂಡು ಶತ್ರುವು ನಿನಗಿಂತಲೂ ಬಲಿಷ್ಟನಾಗಿದ್ದರೆ ಗೌರವಿಸಬೇಕು. ತುಷ್ಟಪುಷ್ಟ ಸೇನೆಯುಳ್ಳವನು ಬಲಶಾಲಿ ಎನ್ನುವುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು. ಸಂಧಿಯ ಕಾಲದಲ್ಲಿ ವಿಪರೀತ ನಿಯಮಗಳನ್ನು ವಿಧಿಸುತ್ತಾರೆ. ಅನಿವಾರ್ಯವಾಗಿ ಬಲಿಷ್ಟನೊಡನೆ ಯುದ್ಧಮಾಡಬೇಕಾಗಿ ಬಂದಾಗ ಪಲಾಯನಮಾಡುವುದೇ ಸೂಕ್ತವಾಗುತ್ತದೆ. ಆಗ ಶತ್ರುಗಳಿಗೆ ವ್ಯಸನಗಳನ್ನುಂಟುಮಾಡಬೇಕು ಮತ್ತು ಅವರಲ್ಲಿ ಬಿರುಕನ್ನುಂಟುಮಾಡಬೇಕು. ಕರ್ಶನ, ಭೀಷಣ ಮತ್ತು ಬಹುವಿನಾಶೀ ಯುದ್ಧ – ಇವುಗಳನ್ನೂ ಬಳಸಬೇಕು. ಶಾಸ್ತ್ರವಿಶಾರದ ನೃಪತಿಯು ಯುದ್ಧಕ್ಕೆ ಹೊರಡುವ ಮೊದಲು ತನ್ನ ಮತ್ತು ಶತ್ರುವಿನ ಮೂರು ಶಕ್ತಿಗಳ ಕುರಿತು ಯೋಚಿಸಬೇಕು. ಉತ್ಸಾಹಶಕ್ತಿ, ಪ್ರಭುಶಕ್ತಿ ಮತ್ತು ಮಂತ್ರಶಕ್ತಿ ಇವುಗಳಿಂದ ಸಂಪನ್ನನಾದ ರಾಜನು ಶತ್ರುವಿನ ಮೇಲೆ ಆಕ್ರಮಣಿಸಬಹುದು. ಈ ಮೂರೂ ಶಕ್ತಿಗಳು ಇಲ್ಲದಿದ್ದರೆ ಆಕ್ರಮಿಸಲು ಹೋಗಬಾರದು. ವಿಜಯವನ್ನು ಅಪೇಕ್ಷಿಸುವ ರಾಜನು ಸೈನ್ಯಬಲ, ಧನಬಲ, ಮಿತ್ರಬಲ, ಅರಣ್ಯದ ಬಲ, ಸೇವಕರ ಬಲ ಮತ್ತು ಶಿಲ್ಪಿಗಳ ಬಲ ಇವುಗಳನ್ನು ಸಂಗ್ರಹಿಸಬೇಕು. ಇವುಗಳಲ್ಲಿ ಮಿತ್ರಬಲ ಮತ್ತು ಧನಬಲಗಳು ವಿಶಿಷ್ಟವಾದವುಗಳು. ಶಿಲ್ಪಿಬಲ ಮತ್ತು ವೇತನವನ್ನು ಕೊಟ್ಟು ಇಟ್ಟುಕೊಂಡಿರುವ ಸೇನೆಗಳು ಸಮಾನ ಎಂದು ನನ್ನ ಅಭಿಪ್ರಾಯ. ಚಾರಬಲ ಮತ್ತು ಭೃತ್ಯಬಲಗಳು ಪರಸ್ಪರ ಸಮನಾಗಿಯೇ ಇರುತ್ತವೆ. ಅನೇಕ ವರ್ಷಗಳಿಗೊಮ್ಮೆ ಯುದ್ಧಕಾಲವು ಸನ್ನಿಹಿತವಾಗುವುದರಿಂದ ರಾಜನು ಈ ಎಲ್ಲ ವಿಷಯಗಳನ್ನೂ ತಿಳಿದುಕೊಂಡಿರಬೇಕು. ಬಹುರೂಪೀ ಆಪತ್ತುಗಳನ್ನು ತಿಳಿದುಕೊಂಡಿರಬೇಕು. ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹೇಳುವೆನು ಕೇಳು. ಆಪತ್ತಿನ ವಿಕಲ್ಪಗಳು ಬಹಳ. ನೃಪನು ಸಾಮ-ದಾನಾದಿ ಉಪಾಯಗಳಿಂದ ಅವುಗಳನ್ನು ಸದಾ ಉಪಶಮನಗೊಳಿಸುತ್ತಿರಬೇಕು. ದೇಶ-ಕಾಲಗಳ ಅನುಕೂಲತೆಗಳನ್ನು ವಿವೇಚಿಸಿ ಆರು ರಾಜಬಲಗಳಿಂದ ಕೂಡಿರುವ, ಆತ್ಮಗುಣಗಳ ಬಲದಿಂದಲೂ ಇರುವ ರಾಜನು ವಿಜಯಯಾತ್ರೆಯನ್ನು ಕೈಗೊಳ್ಳಬಹುದು. ಹೃಷ್ಟ-ಪುಷ್ಟ ಸೇನೆಯನ್ನು ಪಡೆದಿರುವ ರಾಜನು ದುರ್ಬಲನಾಗಿರದಿದ್ದರೆ ಯುದ್ಧಕ್ಕೆ ಯೋಗ್ಯವಲ್ಲದ ಋತುವಿನಲ್ಲಿಯೂ ಶತ್ರುವಿನೊಡನೆ ಯುದ್ಧಮಾಡಬಲ್ಲನು. ರಾಜನಾದವನು ಶತ್ರುವಿನ ವಿನಾಶಕ್ಕಾಗಿ ಬತ್ತಳಿಕೆಗಳೇ ಬಂಡೆಗಳಂತಿರುವ, ಕುದುರೆ-ರಥಗಳೇ ಪ್ರವಾಹರೂಪದಲ್ಲಿರುವ, ಧ್ವಜಗಳೆಂಬ ವೃಕ್ಷಗಳಿಂದ ಕೂಡಿದ ತೀರಪ್ರದೇಶವಾದ, ಪದಾತಿ-ಗಜಸೇನೆಗಳೇ ಕೆಸರಿನ ರೂಪದಲ್ಲಿರುವ ನದಿಯನ್ನು ಹರಿಯ ಬಿಡಬೇಕು. ಆಗ ಯುಕ್ತಿಯನ್ನುಪಯೋಗಿಸಿ ಸೇನೆಯನ್ನು ಶಕಟ, ಪದ್ಮ ಅಥವಾ ವಜ್ರ ವ್ಯೂಹಗಳಲ್ಲಿ ರಚಿಸಬೇಕು. ಶುಕ್ರನ ವೇದ ಶಾಸ್ತ್ರದಲ್ಲಿ ಇದರ ಕುರಿತು ಹೇಳಲ್ಪಟ್ಟಿದೆ. ಗುಪ್ತಚಾರರ ಮೂಲಕ ಶತ್ರುಸೈನ್ಯದ ಬಲಾಬಲಗಳನ್ನು ತಿಳಿದುಕೊಂಡು, ತನ್ನ ಸೈನ್ಯದ ಬಲವನ್ನೂ ಪರೀಕ್ಷಿಸಿಕೊಂಡು, ತನ್ನ ಭೂಮಿಯಲ್ಲಾಗಲೀ ಶತ್ರುವಿನ ಭೂಮಿಯಲ್ಲಾಗಲೀ ಯುದ್ಧವನ್ನು ಆರಂಭಿಸಬೇಕು. ರಾಜನು ಪಾರಿತೋಷಕಗಳ ಮೂಲಕ ಸೈನಿಕರನ್ನು ಸಂತುಷ್ಟಿಗೊಳಿಸಬೇಕು. ಸೈನ್ಯಕ್ಕೆ ಬಲಿಷ್ಠರಾದವರನ್ನು ಸೇರಿಸಿಕೊಳ್ಳಬೇಕು. ತನ್ನ ಬಲಾಬಲಗಳನ್ನು ಚೆನ್ನಾಗಿ ತಿಳಿದುಕೊಂಡ ನಂತರ ಶತ್ರುವಿನೊಡನೆ ಸಾಮ-ದಾನಾದಿ ಉಪಾಯಗಳಿಂದ ಸಂಧಿಯನ್ನಾದರೂ ಮಾಡಿಕೊಳ್ಳಬಹುದು ಅಥವಾ ಯುದ್ಧವನ್ನಾದರೂ ಮಾಡಬಹುದು. ಸರ್ವಥಾ ಈ ಶರೀರವನ್ನು ರಕ್ಷಿಸಿಕೊಳ್ಳಬೇಕು. ಈ ಶರೀರದ ಮೂಲಕವೇ ಇಹಲೋಕ ಪರಲೋಕಗಳೆರಡರಲ್ಲಿಯೂ ತನಗೆ ಶ್ರೇಯಸ್ಸನ್ನು ಸಾಧಿಸಿಕೊಳ್ಳುವುದು ರಾಜನ ಕರ್ತವ್ಯವಾಗಿರುತ್ತದೆ. ಈ ಶುಭ ಮಾತುಗಳಂತೆ ಈ ಲೋಕದಲ್ಲಿ ಯಾರು ಪ್ರಜೆಗಳನ್ನು ಧರ್ಮದಿಂದ ಪಾಲಿಸುತ್ತಾರೋ ಅವರು ಮರಣಾನಂತರ ಸ್ವರ್ಗವನ್ನು ಪಡೆಯುತ್ತಾರೆ. ಇಹ-ಪರಗಳಲ್ಲಿಯೂ ಸುಖವನ್ನು ಹೊಂದಲು ನೀನು ಹೀಗೆ ನಿತ್ಯವೂ ಪ್ರಜಾಹಿತದಲ್ಲಿಯೇ ವರ್ತಿಸಬೇಕು. ಭೀಷ್ಮ, ಕೃಷ್ಣ ಮತ್ತು ವಿದುರರು ನಿನಗೆ ಈ ಮೊದಲೇ ಹೇಳಿದ್ದಾರೆ. ನಿನ್ನ ಮೇಲಿನ ಪ್ರೀತಿಯಿಂದ ನಾನೂ ಕೆಲವು ವಿಷಯಗಳನ್ನು ಹೇಳುವುದು ಅವಶ್ಯವೆಂದು ಭಾವಿಸಿ ಹೇಳಿದ್ದೇನೆ. ಇವೆಲ್ಲವನ್ನೂ ಯಥಾನ್ಯಾಯವಾಗಿ ಮಾಡು. ಇದರಿಂದ ನೀನು ಪ್ರಜೆಗಳಿಗೂ ಪ್ರಿಯನಾಗುವೆ ಮತ್ತು ಸ್ವರ್ಗದ ಸುಖವನ್ನೂ ಪಡೆಯುವೆ. ಸಾವಿರ ಅಶ್ವಮೇಧವನ್ನು ಮಾಡುವ ರಾಜನಿಗೆ ಲಭಿಸುವ ಫಲವೂ ಧರ್ಮದಿಂದ ಪ್ರಜೆಗಳನ್ನು ರಕ್ಷಿಸುವವನಿಗೆ ಲಭಿಸುವ ಫಲವೂ ಒಂದೇ ಆಗಿರುತ್ತದೆ.”

ಯುಧಿಷ್ಠಿರನು ಹೇಳಿದನು: “ಪೃಥಿವೀಪತೇ! ನೀನು ಹೇಳಿದಂತೆಯೇ ಮಾಡುತ್ತೇನೆ. ಪಾರ್ಥಿವರ್ಷಭ! ನಿನ್ನಿಂದ ಇನ್ನೂ ಹೆಚ್ಚಿನ ಉಪದೇಶವನ್ನು ನಾನು ಬಯಸುತ್ತೇನೆ. ಭೀಷ್ಮನು ಸ್ವರ್ಗಕ್ಕೆ ಮತ್ತು ಮಧುಸೂದನನು ದ್ವಾರಕೆಗೆ ತೆರಳಿದ ನಂತರ ಹಾಗೂ ವಿದುರ-ಸಂಜಯರು ನಿನ್ನ ಬಳಿಯಲ್ಲಿಯೇ ಇರುವಾಗ ನೀನಲ್ಲದೆ ಬೇರೆ ಯಾರು ನನಗೆ ಉಪದೇಶಗಳ ಮಾತನಾಡುವವರಿದ್ದಾರೆ? ನನಗೆ ಹಿತಕರನಾಗಿದ್ದುಕೊಂಡು ಇಂದು ನನಗೆ ನೀನು ಏನೆಲ್ಲ ಉಪದೇಶಿಸಿರುವೆಯೋ ಅವನ್ನು ನಾನು ಪರಿಪಾಲಿಸುತ್ತೇನೆ. ಸಮಾಧಾನಗೊಳ್ಳು!”

ಧೀಮಂತ ರಾಜನು ರಾಜರ್ಷಿಗೆ ಹೀಗೆ ಹೇಳಲು ಕೌಂತೇಯನಿಗೆ ಹೊರಡಲು ಸೂಚಿಸಿ ಧೃತರಾಷ್ಟ್ರನು ಹೀಗೆಂದನು: “ಪುತ್ರ! ನೀನಿನ್ನು ಹೊರಡು! ನಾನೂ ಕೂಡ ಬಹಳ ಬಳಲಿದ್ದೇನೆ!” ಹೀಗೆ ಹೇಳಿ ರಾಜನು ಗಾಂಧಾರಿಯ ಭವನವನ್ನು ಪ್ರವೇಶಿಸಿದನು.

ಧೃತರಾಷ್ಟ್ರನು ತನ್ನ ಪುರಜನರನ್ನು ಬೀಳ್ಕೊಂಡಿದುದು

ಅವನು ಆಸನದಲ್ಲಿ ಕುಳಿತುಕೊಂಡ ನಂತರ ದೇವೀ ಧರ್ಮಚಾರಿಣೀ ಕಾಲಜ್ಞೆ ಗಾಂಧಾರಿಯು ಪ್ರಜಾಪತಿಯ ಸಮನಾಗಿದ್ದ ತನ್ನ ಪತಿಗೆ ಹೇಳಿದಳು: “ಸ್ವಯಂ ಮಹರ್ಷಿ ವ್ಯಾಸನಿಂದಲೂ ನಿನಗೆ ಅನುಜ್ಞೆಯಾಗಿದೆ. ಯುಧಿಷ್ಠಿರನೂ ಅನುಮತಿಯನ್ನಿತ್ತಿದ್ದಾನೆ. ಯಾವಾಗ ಅರಣ್ಯಕ್ಕೆ ಹೊರಡುವೆ?”

ಧೃತರಾಷ್ಟ್ರನು ಹೇಳಿದನು: “ಗಾಂಧಾರೀ! ಮಹಾತ್ಮ ಸ್ವಯಂ ಪಿತನಿಂದ ನಾನು ಅನುಜ್ಞಾತನಾಗಿದ್ದೇನೆ. ಯುಧಿಷ್ಠಿರನ ಅನುಮತಿಯೂ ದೊರಕಿದೆ. ಬೇಗನೇ ಅರಣಕ್ಕೆ ಹೊರಡುತ್ತೇನೆ. ಎಲ್ಲ ಪ್ರಜೆಗಳನ್ನೂ ನನ್ನ ಹತ್ತಿರ ಮನೆಗೆ ಕರೆಯಿಸಿಕೊಂಡು ಜೂಜುಕೋರರಾಗಿದ್ದ ನನ್ನ ಮಕ್ಕಳೆಲ್ಲರ ಪರಲೋಕಪ್ರಾಪ್ತಿಗಾಗಿ ಧನವನ್ನು ದಾನಮಾಡಲು ಬಯಸುತ್ತೇನೆ.” ಹೀಗೆ ಹೇಳಿ ಪಾರ್ಥಿವನು ಧರ್ಮರಾಜನಿಗೆ ಹೇಳಿ ಕಳುಹಿಸಿದನು. ಅವನ ವಚನದಂತೆ ಮಹೀಪತಿ ಯುಧಿಷ್ಠಿರನು ಎಲ್ಲರನ್ನೂ ಕರೆಯಿಸಿದನು. ಅನಂತರ ಮಹಾತೇಜಸ್ವೀ ಮಹೀಪತಿ ನೃಪತಿ ಧೃತರಾಷ್ಟ್ರನು ಅಂತಃಪುರದಿಂದ ಹೊರಬಂದು ಅಲ್ಲಿ ಬಂದು ಸೇರಿದ್ದ ಎಲ್ಲ ಪೌರ-ಗ್ರಾಮೀಣ ಜನರನ್ನೂ, ಎಲ್ಲ ಸುಹೃಜ್ಜನರನ್ನೂ, ಎಲ್ಲ ಪ್ರಜೆಗಳನ್ನೂ, ನಾನಾ ದೇಶಗಳಿಂದ ಬಂದು ಸೇರಿದ್ದ ಬ್ರಾಹ್ಮಣ-ಮಹೀಪಾಲರನ್ನೂ ನೋಡಿ ಹೇಳಿದನು:

“ಇಲ್ಲಿ ಬಂದು ಸೇರಿರುವ ಕುರುಜಾಂಗಲದ ಬ್ರಾಹ್ಮಣರೇ, ಕ್ಷತ್ರಿಯರೇ, ವೈಶ್ಯರೇ ಮತ್ತು ಶೂದ್ರರೇ! ಏಕಾಗ್ರಚಿತ್ತದಿಂದ ಕೇಳಿರಿ! ನೀವು ಮತ್ತು ಕುರುಗಳು ಬಹುಕಾಲದಿಂದ ಜೊತೆಯಲ್ಲಿಯೇ ಇರುವಿರಿ. ಪರಸ್ಪರರ ಸುಹೃದಯರೂ ಪರಸ್ಪರರ ಹಿತಾಸಕ್ತಿಯುಳ್ಳವರೂ ಆಗಿರುವಿರಿ. ಈ ಸಮಯದಲ್ಲಿ ನಾನು ನಿಮಗೆ ಏನನ್ನೋ ಹೇಳಬೇಕೆಂದು ಕರೆಯಿಸಿದ್ದೇನೆ. ಆದುದರಿಂದ ವಿಚಾರಮಾಡದೇ ನಾನು ಹೇಳುವಂತೆ ಮಾಡಬೇಕು! ಗಾಂಧಾರಿಯೊಡನೆ ಅರಣ್ಯಕ್ಕೆ ಹೋಗಬೇಕೆಂದು ನಾನು ನಿಶ್ಚಯಿಸಿದ್ದೇನೆ. ವ್ಯಾಸ ಮತ್ತು ರಾಜ ಕುಂತೀಸುತನ ಅನುಮತಿಯಾಗಿದೆ. ನೀವೂ ಕೂಡ ನನಗೆ ಅನುಮತಿಯನ್ನು ನೀಡಬೇಕು. ಈ ವಿಷಯದಲ್ಲಿ ನೀವು ಅನ್ಯಥಾ ವಿಚಾರಿಸಬಾರದು! ನಮ್ಮ ಮತ್ತು ನಿಮ್ಮ ನಡುವೆ ಶಾಶ್ವತ ಪ್ರೀತಿಯಿದೆ. ಅನ್ಯ ದೇಶಗಳ ಜನರಿಗೂ ಅವರ ರಾಜರಿಗೂ ಹೀಗಿಲ್ಲವೆಂದು ನನ್ನ ಅಭಿಪ್ರಾಯ. ಪುತ್ರರಿಂದ ವಿಹೀನನಾಗಿ ಮಾಡಲ್ಪಟ್ಟ ನಾನು ವೃದ್ಧಾಪ್ಯದಿಂದ ಬಳಲಿದ್ದೇನೆ. ಗಾಂಧಾರಿಯ ಸಹಿತ ಉಪವಾಸಗಳನ್ನು ಮಾಡಿ ಕೃಶನೂ ಆಗಿದ್ದೇನೆ. ರಾಜ್ಯವು ಯುಧಿಷ್ಠಿರನಿಗೆ ಸೇರಿದಾಗಲೂ ನಾನು ಮಹಾ ಸುಖವನ್ನು ಅನುಭವಿಸಿದ್ದೇನೆ. ದುರ್ಯೋಧನನು ಐಶ್ವರ್ಯಸಂಪನ್ನನಾಗಿದ್ದಾಗ ನಾನು ಸುಖವಾಗಿದ್ದುದಕ್ಕಿಂತಲೂ ಈಗ ಹೆಚ್ಚು ಸುಖಿಯಾಗಿದ್ದೇನೆಂದು ನನಗನ್ನಿಸುತ್ತದೆ. ಅಂಧನೂ, ವೃದ್ಧನೂ, ಪುತ್ರರನ್ನು ಕಳೆದುಕೊಂಡವನೂ ಆದ ನನ್ನಂಥವನಿಗೆ ವನದ ಹೊರತಾಗಿ ಬೇರೆ ಏನು ಗತಿ? ಮಹಾಭಾಗರೇ! ನನಗೆ ಅನುಮತಿಯನ್ನು ನೀಡಬೇಕು!”

ಅವನ ಆ ಮಾತನ್ನು ಕೇಳಿ ಕುರುಜಾಂಗಲದ ಅವರೆಲ್ಲರೂ ಕಣ್ಣೀರುಸುರಿಸುತ್ತಾ ಗಳಗಳನೆ ಅಳತೊಡಗಿದರು. ಏನೊಂದನ್ನೂ ಹೇಳದೇ ಶೋಕಪರಾಯಣರಾಗಿ ದುಃಖಿಸುತ್ತಿದ್ದ ಅವರಿಗೆ ಮಹಾತೇಜಸ್ವಿ ಧೃತರಾಷ್ಟ್ರನು ಪುನಃ ಇಂತೆಂದನು: “ಶಂತನುವು ಈ ಭೂಮಿಯನ್ನು ಯಥಾವತ್ತಾಗಿ ಆಳಿಕೊಂಡಿದ್ದನು. ಹಾಗೆಯೇ ವಿಚಿತ್ರವೀರ್ಯ ಮತ್ತು ಭೀಷ್ಮರು ಪರಿಪಾಲಿಸಿದರು. ನನ್ನ ತಂದೆಯು ತತ್ತ್ವಜ್ಞನಾಗಿಯೇ ರಾಜ್ಯವಾಳಿದನೆನ್ನುವುದರಲ್ಲಿ ಸಂಶಯವಿಲ್ಲ. ಅನಂತರ ನನಗೆ ಅತ್ಯಂತ ಪ್ರಿಯನಾಗಿದ್ದ ಸಹೋದರ ಪಾಂಡುವು ಕೂಡ ಯಥಾವತ್ತಾಗಿ ರಾಜ್ಯವನ್ನು ಪಾಲಿಸಿದನು. ಇದು ನಿಮಗೆ ತಿಳಿದೇ ಇದೆ. ಅನಂತರ ನಾನೂ ಕೂಡ ನಿಮ್ಮ ಸೇವೆಯನ್ನು ಚೆನ್ನಾಗಿಯೇ ಮಾಡಿದ್ದೇನೆ. ನಾನೇನಾದರೂ ಸರಿಯಾಗಿ ನಡೆದುಕೊಳ್ಳದೇ ಇದ್ದಿದ್ದರೆ ಆಲಸ್ಯರಹಿತರಾದ ನೀವು ನನ್ನನ್ನು ಕ್ಷಮಿಸಬೇಕು. ಕಂಟಕರಹಿತವಾದ ಈ ರಾಜ್ಯವನ್ನು ದುರ್ಯೋಧನನು ಆಳುತ್ತಿದ್ದಾಗಲೂ, ಅವನು ಮಂದನೂ ದುರ್ಬುದ್ಧಿಯೂ ಆಗಿದ್ದರೂ ನಿಮ್ಮ ಕುರಿತು ಯಾವ ಅಪರಾಧವನ್ನೂ ಎಸಗಿರಲಿಲ್ಲ. ಅವನ ಅಪರಾಧದಿಂದ, ದುರ್ಬುದ್ಧಿ-ಅಭಿಮಾನಗಳಿಂದ ಮತ್ತು ನನ್ನದೇ ಕೃತ್ಯದಿಂದ ಅಸಂಖ್ಯಾತ ರಾಜರ ಸಂಹಾರವಾಯಿತು! ಆಗ ನಾನು ಒಳ್ಳೆಯದನ್ನೇ ಮಾಡಿರಬಹುದು ಅಥವಾ ಕೆಟ್ಟದ್ದನ್ನೇ ಮಾಡಿರಬಹುದು. ಅವುಗಳನ್ನು ಹೃದಯಕ್ಕೆ ತೆಗೆದುಕೊಳ್ಳದೇ ನನಗೆ ಅನುಜ್ಞೆಯನ್ನು ನೀಡಬೇಕು. ಇವನು ವೃದ್ಧನಾಗಿದ್ದಾನೆ. ಇವನು ಪುತ್ರರನ್ನು ಕಳೆದುಕೊಂಡವನಾಗಿದ್ದಾನೆ. ಇವನು ದುಃಖಿತನಾಗಿದ್ದಾನೆ. ಹಿಂದಿನ ರಾಜರ ಮಗನಾಗಿ ಜನಾಧಿಪನಾಗಿದ್ದಾನೆ ಎಂದು ತಿಳಿದುಕೊಂಡು ನನಗೆ ಅನುಮತಿಯನ್ನು ನೀಡಿ! ಕೃಪಣೆಯೂ, ವೃದ್ಧೆಯೂ ಆಗಿರುವ, ನನ್ನಂತೆಯೇ ಪುತ್ರರನ್ನು ಕಳೆದುಕೊಂಡು ಪುತ್ರಶೋಕಾರ್ತಳಾಗಿರುವ ಈ ತಪಸ್ವಿನೀ ಗಾಂಧಾರಿಯೂ ಕೂಡ ಬೇಡಿಕೊಳ್ಳುತ್ತಿದ್ದಾಳೆ. ಈ ವೃದ್ಧರೀರ್ವರೂ ಪುತ್ರರನ್ನು ಕಳೆದುಕೊಂಡು ದುಃಖಿತರಾಗಿರುವರೆಂದು ತಿಳಿದು ನಮಗೆ ಅನುಮತಿಯನ್ನು ನೀಡಿ. ನಿಮಗೆ ಮಂಗಳವಾಗಲಿ. ನಾವು ನಿಮಗೆ ಶರಣಾಗತರಾಗಿದ್ದೇವೆ. ಈಗ ಈ ಕೌರವ ಕುಂತೀಪುತ್ರ ಯುಧಿಷ್ಠಿರನು ನಿಮಗೆಲ್ಲರಿಗೆ ರಾಜನಾಗಿದ್ದಾನೆ. ಒಳ್ಳೆಯ ಸಮಯದಲ್ಲಿಯಾಗಲೀ ಕಷ್ಟದ ಸಮಯದಲ್ಲಾಗಲೀ ನೀವು ಅವನ ಕುರಿತು ಕೃಪೆಯಿಂದಿರಬೇಕು.  ವಿಪುಲ ತೇಜಸ್ಸಿನ ಲೋಕಪಾಲರಂತಿರುವ ಧರ್ಮಾರ್ಥದರ್ಶಿಗಳಾದ ಅವನ ನಾಲ್ವರು ಸಹೋದರರೂ ಮಂತ್ರಿಗಳಾಗಿರುವ ಇವನು ಎಂದೂ ವಿಷಮ ಸ್ಥಿತಿಯನ್ನು ಹೊಂದುವುದಿಲ್ಲ. ಸರ್ವಪ್ರಾಣಿಗಳಿಗೂ ಜಗತ್ಪತಿಯಾಗಿರುವ ಪೂಜ್ಯ ಬ್ರಹ್ಮನಂತೆ ಮಹಾತೇಜಸ್ವಿಯಾಗಿರುವ ಯುಧಿಷ್ಠಿರನು ನಿಮ್ಮೆಲ್ಲರನ್ನೂ ಪಾಲಿಸುತ್ತಾನೆ. ನಾನು ಇದನ್ನು ಅವಶ್ಯವಾಗಿ ಹೇಳಬೇಕೆಂದು ಹೇಳುತ್ತಿದ್ದೇನೆ. ನಾನು ಯುಧಿಷ್ಠಿರನನ್ನು ನ್ಯಾಸರೂಪದಲ್ಲಿ ನಿಮ್ಮೊಡನೆ ವಹಿಸಿಕೊಡುತ್ತಿದ್ದೇನೆ. ಹಾಗೆಯೇ ನಿಮ್ಮೆಲ್ಲರನ್ನೂ ನ್ಯಾಸರೂಪದಲ್ಲಿ ಆ ವೀರನ ಬಳಿ ಇಡುತ್ತಿದ್ದೇನೆ. ನಿಮಗೆ ನನ್ನ ಮಕ್ಕಳಿಂದಾಗಲೀ ಅಥವಾ ನನ್ನಿಂದಾಗಲೀ ಯಾವುದೇ ಅಪರಾಧವು ನಡೆದಿದ್ದರೂ ಅದನ್ನು ಕ್ಷಮಿಸಿ ಅನುಮತಿಯನ್ನು ನೀಡಬೇಕು. ಹಿಂದೆ ಎಂದೂ ನೀವು ನನ್ನ ಮೇಲೆ ಕೋಪಗೊಂಡಿರಲಿಲ್ಲ. ನೀವೆಲ್ಲರೂ ಅತ್ಯಂತಗುರುಭಕ್ತಿಯುಳ್ಳವರಾಗಿರುವಿರಿ. ನಿಮಗೆ ಕೈಜೋಡಿಸಿ ನಮಸ್ಕರಿಸುತ್ತಿದ್ದೇನೆ. ಅಸ್ಥಿರಬುದ್ಧಿಯ ಲುಬ್ಧರೂ ಕಾಮಚಾರಿಗಳೂ ಆಗಿದ್ದ ನನ್ನ ಮಕ್ಕಳ ಕುರಿತಾಗಿ ಗಾಂಧಾರಿಯ ಸಹಿತ ನಾನು ನಿಮ್ಮೆಲ್ಲರ ಕ್ಷಮೆಯನ್ನು ಯಾಚಿಸುತ್ತಿದ್ದೇನೆ.”

ರಾಜನು ಹೀಗೆ ಹೇಳುತ್ತಿರಲು ಪೌರ-ಗ್ರಾಮೀಣಜನರು ಕಂಬನಿದುಂಬಿದ ಕಣ್ಣುಗಳುಳ್ಳವರಾಗಿ ಏನನ್ನೂ ಹೇಳಲಾರದೇ ಒಬ್ಬರನ್ನೊಬ್ಬರು ನೋಡುತ್ತಿದ್ದರು. ವೃದ್ಧ ರಾಜನು ಹೀಗೆ ಹೇಳಲು ಪೌರ-ಗ್ರಾಮೀಣ ಜನರು ಮೂರ್ಛೆಗೊಂಡವರಂತೆ ಸ್ತಬ್ಧರಾದರು. ಕಣ್ಣೀರಿನಿಂದ ಗಂಟಲು ತುಂಬಿ ಸ್ತಬ್ಧರಾಗಿದ್ದ ಅವರನ್ನು ಕುರಿತು ಮಹೀಪಾಲ ಮಹೀಪತಿ ಧೃತರಾಷ್ಟ್ರನೇ ಪುನಃ ಹೇಳಿದನು: “ಸಜ್ಜನರೇ! ವೃದ್ಧನೂ, ಪುತ್ರರನ್ನು ಕಳೆದುಕೊಂಡಿರುವವನೂ, ಧರ್ಮಪತ್ನಿಯೊಡನೆ ಬಹುವಿಧವಾಗಿ ರೋದಿಸುತ್ತಿರುವವನೂ, ಕೃಪಣನೂ ಆದ ನಾನು ವನವಾಸಕ್ಕೆ ನನ್ನ ತಂದೆ ಸ್ವಯಂ ಕೃಷ್ಣದ್ವೈಪಾಯನನಿಂದ ಮತ್ತು ಧರ್ಮಜ್ಞ ನೃಪನಿಂದ ಅನುಮತಿಯನ್ನು ಪಡೆದಿದ್ದೇನೆ. ಪುನಃ ಪುನಃ ನಿಮ್ಮೆದುರು ಶಿರಸಾ ಬಾಗುತ್ತಿದ್ದೇನೆ. ಗಾಂಧಾರಿಯ ಸಹಿತ ನನಗೆ ಅನುಮತಿಯನ್ನು ನೀಡಬೇಕು!”

ಕುರುರಾಜನ ಈ ಕರುಣಾಜನಕ ಮಾತುಗಳನ್ನು ಕೇಳಿ ಕುರುಜಾಂಗಲದ ಸರ್ವರೂ ಒಟ್ಟಿಗೇ ರೋದಿಸಿದರು. ಉತ್ತರೀಯಗಳಿಂದ ಮತ್ತು ಕೈಗಳಿಂದ ಮುಖಗಳನ್ನು ಮುಚ್ಚಿಕೊಳ್ಳುತ್ತಾ ಶೋಕಸಂತಪ್ತರಾದ ಅವರು ತಾಯಿ-ತಂದೆಯರಂತೆ ಒಂದು ಕ್ಷಣ ರೋದಿಸಿದರು. ಧೃತರಾಷ್ಟ್ರನ ವನಪ್ರವಾಸದ ದುಃಖವನ್ನು ತುಂಬಿಕೊಂಡಿದ್ದ ಅವರು ಹೃದಯಶೂನ್ಯರಾಗಿ ಮೂರ್ಛಿತರಾಗಿರುವರೋ ಎಂಬಂತೆ ಕಾಣುತ್ತಿದ್ದರು. ಅನಂತರ ಕುರುರಾಜನ ವಿಯೋಗದಿಂದುಂಟಾಗುವ ದುಃಖವನ್ನು ದೂರಮಾಡಿಕೊಂಡು ಮೆಲ್ಲನೇ ಅನ್ಯೋನ್ಯರಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳತೊಡಗಿದರು. ಆಗ ಅವರೆಲ್ಲರೂ ಒಂದು ನಿರ್ಧಾರಕ್ಕೆ ಬಂದು ಅದನ್ನು ಓರ್ವ ಬ್ರಾಹ್ಮಣನ ಮೂಲಕ ನರಾಧಿಪನಿಗೆ ತಿಳಿಸಿದರು. ಆಗ ಸದಾಚಾರನೂ, ಅರ್ಥವಿಶಾರದನೂ, ಋಗ್ವೇದಪಾರಂಗತನೂ, ಮಾನನೀಯನೂ ಆದ ಸಾಂಬ ಎಂಬ ಹೆಸರಿನ ವೃದ್ಧನು ಹೇಳಲು ಉಪಕ್ರಮಿಸಿದನು. ಮಹಾರಾಜನನ್ನು ವಿನಯದಿಂದ ಗೌರವಿಸುತ್ತಾ ಸದಸ್ಯರನ್ನು ಸಂತೋಷಗೊಳಿಸುತ್ತಾ ಆ ಮೇಧಾವೀ ವಾಗ್ಮಿ ವಿಪ್ರನು ರಾಜನಿಗೆ ಹೇಳಿದನು: “ರಾಜನ್! ಈ ಜನರೆಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿರುವರು. ಅದನ್ನು ನಾನು ನಿನಗೆ ಹೇಳುತ್ತಿದ್ದೇನೆ. ಕೇಳು! ನೀನು ಹೇಳಿದುದೆಲ್ಲವೂ ಸರಿಯಾಗಿಯೇ ಇದೆ. ಪರಸ್ಪರರಲ್ಲಿ ಸೌಹಾರ್ದತೆಯಿದೆ ಎನ್ನುವುದರಲ್ಲಿ ಸ್ವಲ್ಪವೂ ಸುಳ್ಳಿಲ್ಲ! ಈ ರಾಜರ ವಂಶದಲ್ಲಿ ಎಂದೂ ಪ್ರಜೆಗಳಿಗೆ ಅಪ್ರಿಯನಾದ ಪ್ರಜಾಪಾಲಕ ರಾಜನು ಇರಲಿಲ್ಲ! ನೀವುಗಳು ನಮ್ಮನ್ನು ತಂದೆಯಂತೆ ಮತ್ತು ಸಹೋದರರಂತೆ ಪಾಲಿಸುತ್ತಿದ್ದೀರಿ. ದುರ್ಯೋಧನನು ಕೂಡ ಏನೊಂದೂ ಅಯುಕ್ತ ಕಾರ್ಯವನ್ನು ಮಾಡಿಲ್ಲ. ಧರ್ಮಜ್ಞ ಮುನಿ ಸತ್ಯವತೀಸುತನು ಹೇಗೆ ಹೇಳುತ್ತಾನೋ ಹಾಗೆಯೇ ಮಾಡು! ಅವನೇ ನಮಗೆ ಪರಮ ಗುರುವು! ನಿನ್ನಿಂದ ತ್ಯಕ್ತರಾದ ನಾವು ಬಹುಕಾಲದವರೆಗೆ ದುಃಖಶೋಕಪರಾಯಣರಾಗಿ ನಿನ್ನ ನೂರಾರು ಗುಣಗಳನ್ನು ಸ್ಮರಿಸಿಕೊಳ್ಳುತ್ತಿರುತ್ತೇವೆ. ರಾಜಾ ಶಾಂತನುವು ಹೇಗೆ ನಮ್ಮನ್ನು ರಕ್ಷಿಸಿದನೋ, ಭೀಷ್ಮನ ವೀರ್ಯದಿಂದ ರಕ್ಷಿತನಾದ ಚಿತ್ರಾಂಗದನು ನಮ್ಮನ್ನು ಹೇಗೆ ರಕ್ಷಿಸಿದನೋ ಮತ್ತು ನಿನ್ನ ಮೇಲ್ವಿಚಾರಣೆಯಲ್ಲಿ ಪಾಂಡುವು ನಮ್ಮನ್ನು ಹೇಗೆ ಸಂರಕ್ಷಿಸಿದನೋ ಹಾಗೆ ರಾಜಾ ದುರ್ಯೋಧನನೂ ಕೂಡ ನಮ್ಮನ್ನು ಚೆನ್ನಾಗಿ ಪರಿಪಾಲಿಸುತ್ತಿದ್ದನು. ನಿನ್ನ ಮಗನು ನಮ್ಮ ವಿಷಯದಲ್ಲಿ ಸ್ವಲ್ಪವೂ ಅನ್ಯಾಯವನ್ನು ಮಾಡಲಿಲ್ಲ. ನಾವೂ ಕೂಡ ತಂದೆಯಂತೆ ಆ ನರಾಧಿಪನಲ್ಲಿ ವಿಶ್ವಾಸವನ್ನಿಟ್ಟಿದ್ದೆವು. ಅವನ ರಾಜ್ಯಭಾರದಲ್ಲಿ ನಾವೆಲ್ಲರೂ ಸುಖವಾಗಿಯೇ ಇದ್ದೆವು. ಇವೆಲ್ಲವೂ ನಿನಗೆ ತಿಳಿದೇ ಇದೆ. ಹಾಗೆಯೇ ಧೀಮಂತ ಧೃತಿಮತ ಕುಂತೀಪುತ್ರನ ಆಳ್ವಿಕೆಯಲ್ಲಿ ಸಾವಿರ ವರ್ಷಗಳ ಕಾಲ ಸುಖವಾಗಿರಬೇಕೆಂದು ಬಯಸಿದ್ದೇವೆ. ಈ ಧರ್ಮಾತ್ಮಾ ಭೂರಿದಕ್ಷಿಣ ಯುಧಿಷ್ಠಿರನು ನಿನ್ನ ಪುರಾಣ ವಂಶಧಾರಿಗಳಾದ ರಾಜರ್ಷಿ ಕುರು, ಸಂವರಣ ಮತ್ತು ಧೀಮಂತ ಭರತ ಮೊದಲಾದವರ ಆಚಾರಗಳನ್ನು ಅನುಸರಿಸುತ್ತಿದ್ದಾನೆ. ಅವನಲ್ಲಿ ನಾವು ಹೇಳಬಹುದಾದ ಸೂಕ್ಷ್ಮ ದೋಷವೂ ಇಲ್ಲ. ನೀನು ಆಳುತ್ತಿರುವಾಗ ಕೂಡ ನಾವು ನಿತ್ಯವೂ ಸುಖವಾಗಿಯೇ ಇದ್ದೆವು. ನಿನ್ನ ಪುತ್ರನಲ್ಲಿ ಕೂಡ ಸೂಕ್ಷ್ಮವಾದ ಅನ್ಯಾಯವೇನನ್ನೂ ನಾವು ತಿಳಿದಿಲ್ಲ.  ಜ್ಞಾತಿವಧೆಯ ವಿಷಯದಲ್ಲಿ ದುರ್ಯೋಧನನ ಕುರಿತು ನೀನು ಏನು ಹೇಳಿದೆಯೋ ಅದಕ್ಕೂ ಸಮಾಧಾನಕರವಾದ ಕೆಲವು ಮಾತುಗಳನ್ನು ಹೇಳುತ್ತೇನೆ.

“ಕುರುಗಳ ಕ್ಷಯವು ದುರ್ಯೋಧನ ಕೃತ್ಯವಲ್ಲ. ನೀನೂ ಕೂಡ ಮಾಡಿದುದಲ್ಲ. ಕರ್ಣ-ಸೌಬಲರ್ಯಾರೂ ಮಾಡಿದುದಲ್ಲ. ಅದು ದೈವಕೃತವಾಗಿತ್ತು. ಯಾರಿಂದಲೂ ತಡೆಯಲು ಸಾಧ್ಯವಾಗಿರಲಿಲ್ಲ. ದೈವವನ್ನು ಪುರುಷಪ್ರಯತ್ನದಿಂದ ತಡೆಯಲು ಶಕ್ಯವಿಲ್ಲ. ಹದಿನೆಂಟು ಅಕ್ಷೋಹಿಣೀ ಸೇನೆಗಳು ಒಂದುಗೂಡಿದ್ದವು. ಹದಿನೆಂಟೇ ದಿನಗಳಲ್ಲಿ ಅವು ಹತ್ತು ಯೋಧಪುಂಗವರಿಂದ - ಭೀಷ್ಮ, ದ್ರೋಣ, ಕೃಪ, ಮಹಾತ್ಮ ಕರ್ಣ, ವೀರ ಯುಯುಧಾನ, ಧೃಷ್ಟದ್ಯುಮ್ನ ಮತ್ತು ನಾಲ್ವರು ಪಾಂಡುಪುತ್ರರು – ಭೀಮಾರ್ಜುನರು ಮತ್ತು ಯಮಳರೀರ್ವರು - ನಾಶಗೊಂಡವು. ಈ ಜನಕ್ಷಯವು ದೈವಬಲದಿಂದಲೇ ನಡೆಯಿತು. ಲೋಕದಲ್ಲಿ ವಿಶೇಷವಾಗಿ ಕ್ಷತ್ರಿಯನು ಸಂಗ್ರಾಮದಲ್ಲಿ ಕ್ಷತ್ರಬಂಧುವಿನ ಶಸ್ತ್ರದಿಂದ ನಿಧನಹೊಂದುವುದು ಅವಶ್ಯ ಕರ್ತವ್ಯವೂ ಆಗಿದೆ. ವಿದ್ಯೆ ಮತ್ತು ಬಾಹುಬಲಗಳಿಂದ ಕೂಡಿದ್ದ ಈ ಪುರುಷವ್ಯಾಘ್ರರು ಕುದುರೆ-ರಥ-ಆನೆಗಳ ಸಹಿತ ಭೂಮಿಯನ್ನೇ ನಾಶಪಡಿಸಿದರು. ಇದಕ್ಕೆ ನಿನ್ನ ಮಹಾಮನಸ್ವಿ ಮಗ ರಾಜನಾಗಲೀ, ನೀನಾಗಲೀ, ನಿನ್ನ ಅನುಯಾಯಿಗಳಾಗಲೀ, ಕರ್ಣ-ಸೌಬಲರಾಗಲೀ ಕಾರಣರಲ್ಲ. ಸಹಸ್ರಾರು ರಾಜರ ಈ ನಾಶವೆಲ್ಲವೂ ದೈವಕೃತವಾದುದೇ. ಈ ವಿಷಯದಲ್ಲಿ ಯಾರಾದರೂ ಬೇರೆ ಏನನ್ನು ತಾನೇ ಹೇಳಬಹುದು? ನೀನು ನಮ್ಮ ಗುರುವಾಗಿರುವೆ. ಇಡೀ ಜಗತ್ತಿಗೆ ಪ್ರಭುವಾಗಿರುವೆ. ಧರ್ಮಾತ್ಮನಾದ ನಿನ್ನ ಮಗನ ಕುರಿತು ಈ ಮಾತುಗಳನ್ನು ಹೇಳುತ್ತೇವೆ: ದ್ವಿಜಾಗ್ರರ ಆಶೀರ್ವಾದ ಬಲದಿಂದ ನರಾಧಿಪ ದುರ್ಯೋಧನನು ತನ್ನ ಸಹಾಯಕರೊಂದಿಗೆ ವೀರಲೋಕಗಳನ್ನು ಪಡೆದು ತ್ರಿದಿವದಲ್ಲಿ ಸುಖಿಯಾಗಿ ಮೋದಿಸಲಿ! ನೀನೂ ಕೂಡ ಪುಣ್ಯ ಮತ್ತು ಧರ್ಮದ ಪರಮ ಸ್ಥಿತಿಯನ್ನು ಪಡೆಯುತ್ತೀಯೆ. ವೇದಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಸಕಲ ಪುಣ್ಯಗಳನ್ನೂ ಪಡೆಯುವೆ. ಪುರುಷರ್ಷಭ ಪಾಂಡವರು ಸ್ವರ್ಗವನ್ನೇ ಆಳಲು ಸಮರ್ಥರಾಗಿರುವಾಗ ನಮ್ಮ ಪಾಲನೆಯ ವಿಷಯವಾಗಿ ಇವರಿಗೆ ಹೇಳುವುದೇನಿದೆ? ಶೀಲಭೂಷಣ ಪಾಂಡವರನ್ನು ಪ್ರಜೆಗಳು ಸುಖ-ಕಷ್ಟಗಳೆರಡರಲ್ಲೂ ಅನುಸರಿಸಿಕೊಂಡು ಹೋಗುತ್ತಾರೆ. ಪಾಂಡವನು ಹಿಂದಿನ ರಾಜರು ಬ್ರಾಹ್ಮಣರಿಗೆ ಕೊಟ್ಟಿರುವ ಅಗ್ರಹಾರಗಳನ್ನೂ, ಪರಿಹಾರಗಳನ್ನೂ ಪಾಲಿಸಿಕೊಂಡೇ ಬಂದಿದ್ದಾನೆ. ಮಹಾಮನಸ್ವೀ ಕುಂತೀಪುತ್ರನು ವೈಶ್ರವಣನಂತೆ ಸದಾ ದೀರ್ಘದರ್ಶಿಯೂ ಕೃತಪ್ರಜ್ಞನೂ, ಮೃದುಸ್ವಭಾವದವನೂ ಆಗಿದ್ದಾನೆ. ಅವನ ಸಚಿವರೂ ಕೂಡ ಯೋಗ್ಯರಾಗಿದ್ದಾರೆ. ಇವನು ಶತ್ರುಗಳ ಕುರಿತೂ ದಯಾವಂತನಾಗಿದ್ದಾನೆ. ಶುಚಿಯಾಗಿದ್ದಾನೆ. ಎಲ್ಲರನ್ನೂ ಸರಳತೆಯಿಂದ ಕಾಣುತ್ತಾನೆ. ಈ ಮೇಧಾವಿಯು ಸದಾ ನಮ್ಮನ್ನು ಮಕ್ಕಳಂತೆಯೇ ಪಾಲಿಸುತ್ತಾನೆ. ಧರ್ಮಜನ ಸಂಸರ್ಗದಿಂದಾಗಿ ಭೀಮಾರ್ಜುನರೇ ಮೊದಲಾದ ಯಾರೂ ಜನರಿಗೆ ಅಪ್ರಿಯವಾದುದನ್ನು ಮಾಡುವುದಿಲ್ಲ. ಈ ಐವರು ಕೌರವರೂ ಮೃದುಸ್ವಭಾವದವರೊಂದಿಗೆ ಮೃದುವಾಗಿಯೂ ದ್ವೇಷಿಗಳಿಗೆ ವಿಷಸರ್ಪಗಳಂತೆಯೂ ವ್ಯವಹರಿಸುತ್ತಾರೆ. ಈ ವೀರ್ಯವಂತ ಮಹಾತ್ಮರು ಪ್ರಜೆಗಳ ಹಿತದಲ್ಲಿಯೇ ನಿರತರಾಗಿದ್ದಾರೆ. ಕುಂತಿಯಾಗಲೀ, ಪಾಂಚಾಲಿಯಾಗಲೀ, ಉಲೂಪಿಯಾಗಲೀ, ಸಾತ್ವತೀ ಸುಭದ್ರೆಯಾಗಲೀ ಈ ಜನರೊಂದಿಗೆ ಎಂದೂ ಪ್ರತಿಕೂಲವಾಗಿ ನಡೆದುಕೊಳ್ಳುವವರಲ್ಲ. ನೀನು ಮಾಡಿಟ್ಟ ಈ ಸ್ನೇಹವನ್ನು ಯುಧಿಷ್ಠಿರನು ಬೆಳೆಸಿದ್ದಾನೆ. ನಗರ-ಗ್ರಾಮೀಣ ಪ್ರದೇಶದ ಜನರು ಇದನ್ನು ಎಂದೂ ಅಲ್ಲಗಳೆಯುವುದಿಲ್ಲ. ಮಹಾರಥ ಕುಂತೀಪುತ್ರರು ಧರ್ಮಪರಾಯಣರಾಗಿದ್ದುಕೊಂಡು ಅಧರ್ಮಿಷ್ಠ ಜನರನ್ನೂ ಕೂಡ ಚೆನ್ನಾಗಿ ಪಾಲಿಸುತ್ತಾರೆ. ಯುಧಿಷ್ಠಿರನ ವಿಷಯದಲ್ಲಿ ನಿನ್ನ ಈ ಮಾನಸಿಕ ದುಃಖವನ್ನು ಕಳೆದುಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡು. ನಿನಗೆ ನಮಸ್ಕಾರವು!”

ಅವನ ಆ ಧಾರ್ಮಿಕ ಗುಣಸಂಪನ್ನ ಮಾತನ್ನು ಕೇಳಿ ಎಲ್ಲ ಜನರೂ “ಸಾಧು! ಸಾಧು!” ಎಂದು ಹೇಳಿ ಅನುಮೋದಿಸಿದರು. ಧೃತರಾಷ್ಟ್ರನೂ ಕೂಡ ಆ ಮಾತನ್ನು ಪುನಃ ಪುನಃ ಗೌರವಿಸಿ, ಎಲ್ಲ ಪ್ರಜಾಜನರನ್ನೂ ಮೆಲ್ಲನೇ ಬೀಳ್ಕೊಟ್ಟನು. ಆ ಸಮಯದಲ್ಲಿ ರಾಜನನ್ನು ಅವರು ಪೂಜಿಸಿದರು. ಮಂಗಳ ದೃಷ್ಟಿಯಿಂದ ನೋಡಿದರು. ಅವನೂ ಕೂಡ ಕೈಮುಗಿದು ಆ ಜನರನ್ನು ಗೌರವಿಸಿದನು. ಅನಂತರ ನೃಪನು ಗಾಂಧಾರಿಯ ಸಹಿತ ಭವನವನ್ನು ಪ್ರವೇಶಿಸಿದನು.

ಧೃತರಾಷ್ಟ್ರನು ಶ್ರಾದ್ಧಗಳನ್ನು ಮಾಡಲು ಬಯಸಿದಾಗ ಭೀಮಸೇನನು ವಿರೋಧಿಸಿದುದು

ರಾತ್ರಿಯು ಕಳೆದು ಬೆಳಗಾದೊಡನೆಯೇ ಅಂಬಿಕಾಸುತ ಧೃತರಾಷ್ಟ್ರನು ವಿದುರನನ್ನು ಯುಧಿಷ್ಠಿರನ ಅರಮನೆಗೆ ಕಳುಹಿಸಿದನು. ಸರ್ವಬುದ್ಧಿಮತರಲ್ಲಿ ಶ್ರೇಷ್ಠ ಮಹಾತೇಜಸ್ವಿ ವಿದುರನು ಅಚ್ಯುತ ಈಶ್ವರ ಯುಧಿಷ್ಠಿರನಲ್ಲಿಗೆ ಹೋಗಿ ಅವನಿಗೆ ರಾಜವಚನವನ್ನು ತಿಳಿಸಿದನು. “ಮಹಾರಾಜ! ವನವಾಸದ ದೀಕ್ಷೆಯನ್ನು ತೊಟ್ಟಿರುವ ಧೃತರಾಷ್ಟ್ರನು ಬರುವ ಕಾರ್ತೀಕ ಹುಣ್ಣಿಮೆಯಂದು ವನಕ್ಕೆ ಹೊರಡಲಿದ್ದಾನೆ. ಅವನು ನಿನ್ನಿಂದ ಸ್ವಲ್ಪ ಧನವನ್ನು ಅಪೇಕ್ಷಿಸುತ್ತಿದ್ದಾನೆ. ಮಹಾತ್ಮ ಗಾಂಗೇಯ, ದ್ರೋಣ, ಸೋಮದತ್ತ, ಧೀಮತ ಬಾಹ್ಲೀಕ, ಮತ್ತು ಹತರಾದ ತನ್ನ ಎಲ್ಲ ಪುತ್ರರು ಮತ್ತು ಸುಹೃದಯರಿಗಾಗಿ ಮತ್ತು ನೀನು ಸಮ್ಮತಿಸುವೆಯಾದರೆ ನೀಚ ಸೈಂಧವನಿಗೂ ಅವನು ಶ್ರಾದ್ಧಮಾಡಲು ಇಚ್ಛಿಸಿದ್ದಾನೆ.”

ವಿದುರನ ಈ ಮಾತನ್ನು ಕೇಳಿ ಯುಧಿಷ್ಠಿರ ಮತ್ತು ಗುಡಾಕೇಶರು ಹೃಷ್ಟರಾಗಿ ಗೌರವಿಸಿದರು. ಆದರೆ ದೃಢಕ್ರೋಧನಾದ ಮಹಾತೇಜಸ್ವೀ ಭೀಮನು ಮಾತ್ರ ದುರ್ಯೋಧನನ ಅಪರಾಧಗಳನ್ನು ಸ್ಮರಿಸಿಕೊಳ್ಳುತ್ತಾ ವಿದುರನ ಆ ಮಾತುಗಳನ್ನು ಸ್ವೀಕರಿಸಲಿಲ್ಲ. ಭೀಮಸೇನನ ಅಭಿಪ್ರಾಯವನ್ನು ತಿಳಿದ ಫಲ್ಗುನ ಕಿರೀಟಿಯು ಭೀಮನಿಗೆ ನಮಸ್ಕರಿಸಿ ಈ ಮಾತನ್ನಾಡಿದನು: “ಭೀಮ! ವೃದ್ಧ ಪಿತ ರಾಜನು ವನವಾಸದ ದೀಕ್ಷೆಯನ್ನು ತೊಟ್ಟಿದ್ದಾನೆ. ಸರ್ವ ಸುಹೃದಯರಿಗೆ ಶ್ರಾದ್ಧಸಂಬಂಧವಾಗಿ ದಾನಮಾಡಲು ಬಯಸಿದ್ದಾನೆ. ನೀನು ಗೆದ್ದಿರುವ ವಿತ್ತವನ್ನು ಕೌರವ ಧೃತರಾಷ್ಟ್ರನು ಭೀಷ್ಮಾದಿಗಳ ಪರವಾಗಿ ದಾನಮಾಡಲು ಬಯಸಿದ್ದಾನೆ. ಅದಕ್ಕೆ ನೀನು ಅನುಮತಿಯನ್ನು ನೀಡಬೇಕು. ಹಿಂದೆ ನಾವು ಯಾವ ಧೃತರಾಷ್ಟ್ರನನ್ನು ಯಾಚಿಸಿದ್ದೆವೋ ಅವನೇ ಇಂದು ಸೌಭಾಗ್ಯವಶಾತ್ ನಮ್ಮನ್ನು ಯಾಚಿಸುತ್ತಿದ್ದಾನೆ! ಕಾಲದ ವೈಪರಿತ್ಯವನ್ನು ನೋಡು! ಇಡೀ ಭೂಮಿಯ ಒಡೆಯನಾಗಿದ್ದ ಆ ನರಾಧಿಪನು ಇಂದು ಶತ್ರುಗಳಿಂದ ತನ್ನವರೆಲ್ಲರನ್ನೂ ಕಳೆದುಕೊಂಡು ಅನಾಥನಾಗಿ ಅರಣ್ಯಕ್ಕೆ ಹೋಗಲು ಬಯಸಿದ್ದಾನೆ. ದಾನಮಾಡುತ್ತಿದ್ದೇನೆ ಎನ್ನುವುದು ಮಾತ್ರ ನಿನಗೆ ಕಾಣಲಿ. ಅನ್ಯಥಾ ನಾವು ಅಪಯಶಸ್ಸನ್ನು ಗಳಿಸುತ್ತೇವೆ ಮತ್ತು ಅದೊಂದು ಅಧರ್ಮವೂ ಎನಿಸಿಕೊಳ್ಳುತ್ತದೆ. ನಮ್ಮ ಹಿರಿಯಣ್ಣ ಈ ಈಶ್ವರ ರಾಜನಿಂದ ನೀನು ಕಲಿತುಕೋ! ದಾನಮಾಡುವುದು ನಿನಗೆ ಯೋಗ್ಯವಾಗಿದೆ. ಕೊಡದೇ ಇರುವುದಲ್ಲ!” ಹೀಗೆ ಹೇಳಿದ ಕೌಂತೇಯನನ್ನು ಧರ್ಮರಾಜನು ಪ್ರಶಂಸಿಸಿದನು.

ಭೀಮಸೇನನಾದರೋ ಕ್ರೋಧದಿಂದ ಈ ಮಾತುಗಳನ್ನಾಡಿದನು: “ಫಲ್ಗುನ! ಭೀಷ್ಮ, ಸೋಮದತ್ತ, ನೃಪತಿ ಭೂರಿಶ್ರವ, ರಾಜರ್ಷಿ ಬಾಹ್ಲೀಕ, ಮಹಾತ್ಮ ದ್ರೋಣ ಮತ್ತು ಇತರ ಸುಹೃದಯರ ಪ್ರೇತಕಾರ್ಯಗಳನ್ನು ನಾವೇ ಮಾಡೋಣ! ಕುಂತಿಯು ಕರ್ಣನ ಸಲುವಾಗಿ ಪಿಂಡದಾನ ಮಾಡುತ್ತಾಳೆ. ಇವರಿಗೆ ಕೌರವ ನೃಪನು ಶ್ರಾದ್ಧಗಳನ್ನು ಮಾಡದಿರಲಿ! ನಮ್ಮ ಶತ್ರುಗಳು ಸುಖವನ್ನು ಅನುಭವಿಸಬಾರದೆಂದು ನನ್ನ ಬುದ್ಧಿಯು ಹೇಳುತ್ತಿದೆ. ಭೂಮಿಯಲ್ಲಿರುವ ಸರ್ವವನ್ನೂ ನಾಶಗೊಳಿಸಿದ ಕುಲಘಾತಕ ದುರ್ಯೋಧನಾದಿ ಎಲ್ಲ ಶತ್ರುಗಳೂ ಕಷ್ಟಕ್ಕಿಂತಲೂ ಕಷ್ಟದ ನರಕಗಳನ್ನು ಪಡೆಯಲಿ! ದ್ರೌಪದಿಯ ಶೋಕವನ್ನು ಹೆಚ್ಚಿಸಿದ ಆ ಹನ್ನೆರಡು ವರ್ಷಗಳ ವನವಾಸ ಮತ್ತು ಅಜ್ಞಾತವಾಸದ ವೈರವನ್ನು ಇಂದು ಹೇಗೆ ತಾನೇ ನೀನು ಮರೆತುಬಿಟ್ಟಿರುವೆ? ಆಗ ಧೃತರಾಷ್ಟ್ರನ ಮೇಲಿನ ನಿನ್ನ ಈ ಸ್ನೇಹಭಾವವು ಕಾಣುತ್ತಿರಲಿಲ್ಲವಲ್ಲ? ಅವರು ನಿನ್ನ ಆಭರಣಗಳೆಲ್ಲವನ್ನೂ ಅಪಹರಿಸಿ, ಕೃಷ್ಣಾಜಿನವನ್ನು ಹೊದಿಸಿ ಪಾಂಚಾಲಪುತ್ರಿಯೊಂದಿಗೆ ರಾಜನನ್ನು ಅನುಸರಿಸಿ ಕಾಡಿಗೆ ಹೋಗುವಂತೆ ಮಾಡಿದ್ದರು. ಆಗ ದ್ರೋಣ, ಭೀಷ್ಮ, ಸೋಮದತ್ತರು ಎಲ್ಲಿದ್ದರು? ಹದಿಮೂರು ವರ್ಷಗಳು ವನದಲ್ಲಿ ವನ್ಯಪದಾರ್ಥಗಳನ್ನು ತಿಂದು ಜೀವಿಸುತ್ತಿದ್ದಾಗ ನಿಮ್ಮ ಈ ಜ್ಯೇಷ್ಠ ತಂದೆಯು ನಮ್ಮನ್ನು ತಂದೆಯಂತೆ ಕಂಡಿರಲೇ ಇಲ್ಲ! ಇದೇ ಕುಲಪಾಂಸಕ ದುರ್ನಡತೆಯ ಧೃತರಾಷ್ಟ್ರನು ದ್ಯೂತದಲ್ಲಿ ಯಾರು ಗೆದ್ದರು ಎಂದು ವಿದುರನನ್ನು ಪ್ರಶ್ನಿಸುತ್ತಿದ್ದುದು ನಿನಗೆ ಮರೆತು ಹೋಗಿದೆಯೇ?”

ಹೀಗೆ ಹೇಳುತ್ತಿದ್ದ ತಮ್ಮನನ್ನು ಗದರಿಸುತ್ತಾ ರಾಜಾ ಕುಂತೀಪುತ್ರ ಯುಧಿಷ್ಠಿರನು “ಸಾಕು! ಸುಮ್ಮನಿರು!” ಎಂದು ಹೇಳಿದನು. ಅರ್ಜುನನು ಹೇಳಿದನು: “ಭೀಮ! ನನಗಿಂತಲೂ ಹಿರಿಯವನಾಗಿರುವ ನೀನು ನನಗೆ ಗುರುವು. ನಿನ್ನ ಮುಂದೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ರಾಜರ್ಷಿ ಧೃತರಾಷ್ಟ್ರನು ಸರ್ವಥಾ ಗೌರವಕ್ಕೆ ಯೋಗ್ಯನಾಗಿದ್ದಾನೆ! ಆರ್ಯಮರ್ಯಾದೆಯನ್ನು ಮೀರದಿರುವ ಪುರುಷಶ್ರೇಷ್ಠ ಸತ್ಪುರುಷರು ಇತರರ ಅಪರಾಧಗಳನ್ನು ಎಂದೂ ಸ್ಮರಿಸುವುದಿಲ್ಲ. ಉತ್ತಮ ಕರ್ಮಗಳನ್ನು ಮಾತ್ರ ಸ್ಮರಿಸಿಕೊಳ್ಳುತ್ತಾರೆ. ಕ್ಷತ್ತ! ಕೌರವ ಪಾರ್ಥಿವನಲ್ಲಿ ನನ್ನ ಈ ಮಾತನ್ನು ಹೇಳು! ಅವನು ಪುತ್ರರ ಶ್ರಾದ್ಧಕ್ಕಾಗಿ ಎಷ್ಟು ಧನವನ್ನು ಅಪೇಕ್ಷಿಸುವನೋ ಅಷ್ಟನ್ನೂ ನಾನು ಕೊಡುತ್ತೇನೆ. ಭೀಷ್ಮಾದಿ ಸರ್ವ ಸುಹೃದಯರ ಮತ್ತು ಉಪಕಾರಿಗಳ ಶ್ರಾದ್ಧಕ್ಕಾಗಿ ನನ್ನ ಕೋಶದಿಂದ ಕೊಡುತ್ತೇನೆ. ಇದಕ್ಕಾಗಿ ಭೀಮನ ಮನಸ್ಸನ್ನು ಕೆಡಿಸುವುದು ಬೇಡ!”

ಹೀಗೆ ಹೇಳಲು ಧರ್ಮರಾಜನು ಅರ್ಜುನನನ್ನು ಪ್ರಶಂಸಿಸಿದನು. ಭೀಮಸೇನನು ಕಡೆಗಣ್ಣಿನಿಂದ ಧನಂಜಯನನ್ನು ನೋಡಿದನು. ಅನಂತರ ಯುಧಿಷ್ಠಿರನು ವಿದುರನಿಗೆ ಇಂತೆಂದನು: “ಆ ನೃಪತಿಯು ಭೀಮಸೇನನ ಮೇಲೆ ಕೋಪಿಸಿಕೊಳ್ಳಬಾರದು. ಏಕೆಂದರೆ ಭೀಮಸೇನನು ಅರಣ್ಯದಲ್ಲಿ ಮಂಜು, ಮಳೆ, ಬಿಸಿಲು ಮೊದಲಾದವುಗಳಿಂದ ಬಹುವಿಧದ ಕಷ್ಟ-ದುಃಖಗಳನ್ನು ಅನುಭವಿಸಿದ್ದಾನೆ. ಧೀಮಂತನಾದ ನಿನಗೆ ಇದು ತಿಳಿದೇ ಇದೆ. ಆದರೆ ನೀನು ರಾಜ ಭರತರ್ಷಭನಿಗೆ ನನ್ನ ಈ ಮಾತನ್ನು ಹೇಳು. ಅವನಿಗೆ ಏನು ಬೇಕೋ ಅವೆಲ್ಲವನ್ನೂ ನನ್ನ ಅರಮನೆಯ ಬೊಕ್ಕಸದಿಂದ ತೆಗೆದುಕೊಳ್ಳಲಿ! ತುಂಬಾ ದುಃಖಿತನಾಗಿ ಮಾತ್ಸರ್ಯಭಾವವನ್ನು ತೋರಿಸುತ್ತಿರುವ ಈ ಭೀಮನ ಮಾತುಗಳನ್ನು ಆ ರಾಜನು ಮನಸ್ಸಿಗೆ ತೆಗೆದುಕೊಳ್ಳಬಾರದು. ಇದನ್ನು ನೀನು ರಾಜನಿಗೆ ಹೇಳಬೇಕು. ನನ್ನ ಮತ್ತು ಅರ್ಜುನನ ಅರಮನೆಗಳಲ್ಲಿರುವ ಧನವೆಲ್ಲವಕ್ಕೂ ಆ ಪಾರ್ಥಿವ ಮಹಾರಾಜನೇ ಸ್ವಾಮಿ ಎಂದು ಹೇಳಬೇಕು. ರಾಜನು ವಿಪ್ರರಿಗಾಗಿ ಇಷ್ಟಬಂದಷ್ಟು ಖರ್ಚು ಮಾಡಲಿ, ದಾನನೀಡಲಿ. ಇಂದು ಅವನು ಮಕ್ಕಳ ಮತ್ತು ಸುಹೃದಯರ ಋಣದಿಂದ ಮುಕ್ತನಾಗಲಿ! ನನ್ನ ಈ ಶರೀರ ಮತ್ತು ಧನವು ನಿನಗೋಸ್ಕರವಾಗಿವೆ ಎನ್ನುವುದರಲ್ಲಿ ಸಂಶಯವೇ ಬೇಡ! ಕ್ಷತ್ತ! ಇದನ್ನು ರಾಜನಿಗೆ ತಿಳಿಸು!”

ರಾಜನು ಹೀಗೆ ಹೇಳಲು ಬುದ್ಧಿಸತ್ತಮ ವಿದುರನು ಧೃತರಾಷ್ಟ್ರನ ಬಳಿಸಾರಿ ಮಹಾ ಅರ್ಥವತ್ತಾದ ಈ ಮಾತನ್ನಾಡಿದನು:  “ನಿನ್ನ ಮಾತನ್ನು ಸಂಪೂರ್ಣವಾಗಿ ರಾಜಾ ಯುಧಿಷ್ಠಿರನಿಗೆ ಹೇಳಿದೆನು. ನಿನ್ನ ಮಾತನ್ನು ಕೇಳಿದ ಆ ಮಹಾದ್ಯುತಿಯು ನಿನ್ನನ್ನು ಬಹಳವಾಗಿ ಪ್ರಶಂಸಿಸಿದನು. ಮಹಾತೇಜಸ್ವಿ ಬೀಭತ್ಸುವು ತನ್ನ ಅರಮನೆ ಮತ್ತು ಅರಮನೆಯಲ್ಲಿರುವ ಎಲ್ಲ ಸಂಪತ್ತನ್ನೂ, ತನ್ನ ಪ್ರಾಣವನ್ನು ಕೂಡ ನಿನ್ನ ಸೇವೆಗಾಗಿ ಸಮರ್ಪಿಸಿದ್ದಾನೆ. ನಿನ್ನ ಮಗ ಧರ್ಮರಾಜನೂ ಕೂಡ ರಾಜ್ಯ, ಪ್ರಾಣ, ಧನ ಮತ್ತು ಅವನಲ್ಲಿ ಏನೆಲ್ಲ ಇವೆಯೋ ಎಲ್ಲವನ್ನೂ ನಿನಗೆ ಒಪ್ಪಿಸಿದ್ದಾನೆ. ಮಹಾಬಾಹು ಭೀಮನಾದರೋ ಅಗಣಿತವಾಗಿದ್ದ ಸರ್ವ ದುಃಖಗಳನ್ನೂ ಸ್ಮರಿಸಿಕೊಂಡು ನಿಟ್ಟುಸಿರು ಬಿಡುತ್ತಾ ಬಹಳ ಕಷ್ಟದಿಂದ ರಾಜನ ಈ ನಿರ್ಧಾರವನ್ನು ಅನುಮೋದಿಸಿದನು. ಧರ್ಮಶೀಲ ರಾಜಾ ಯುಧಿಷ್ಠಿರನೂ ಮತ್ತು ಹಾಗೆಯೇ ತಮ್ಮ ಬೀಭತ್ಸುವೂ ಆ ಮಾಹಾಬಾಹುವನ್ನು ಸಮಾಧಾನಪಡಿಸಿ ಅವನಲ್ಲಿ ನಿನ್ನ ಕುರಿತು ಸೌಹಾರ್ದತೆಯನ್ನು ಸ್ಥಾಪಿಸಿದ್ದಾರೆ. ಆ ವೈರವನ್ನು ಸ್ಮರಿಸಿಕೊಳ್ಳುತ್ತಿರುವ ಭೀಮನು ನಿನ್ನೊಡನೆ ಅನ್ಯಾಯವಾಗಿ ವರ್ತಿಸಿದುದಕ್ಕಾಗಿ ನೀನು ಅವನ ಮೇಲೆ ಸಿಟ್ಟಾಗಬಾರದು ಎಂದೂ ಧರ್ಮರಾಜನು ಹೇಳಿ ಕಳುಹಿಸಿದ್ದಾನೆ. ಪ್ರಾಯಶಃ ಕ್ಷತ್ರಿಯರ ಧರ್ಮವೇ ಹೀಗಿದ್ದಿರಬಹುದು. ವೃಕೋದರನು ಯುದ್ಧದಲ್ಲಿ ಸದಾ ಕ್ಷತ್ರಿಯ ಧರ್ಮವನ್ನೇ ಆಚರಿಸಿದವನು. ನಾನು ಮತ್ತು ಅರ್ಜುನರು ಪುನಃ ಪುನಃ ಕೇಳಿಕೊಳ್ಳುತ್ತಿದ್ದೇವೆ. ವೃಕೋದರನು ಮಾಡಿದುದನ್ನು ಕ್ಷಮಿಸಿಬಿಡು. ನೀನೇ ನಮಗೆ ಪ್ರಭುವು. ನಿನಗಿಷ್ಟವಿದ್ದಷ್ಟು ವಿತ್ತವನ್ನು ದಾನಮಾಡು. ನಮ್ಮ ಈ ರಾಜ್ಯ-ಪ್ರಾಣಗಳಿಗೆ ನೀನೇ ಈಶ್ವರನಾಗಿರುವೆ! ಮಕ್ಕಳ ಶ್ರಾದ್ಧದ ಸಲುವಾಗಿ ಬ್ರಾಹ್ಮಣರಿಗೆ ಅಗ್ರಹಾರಗಳನ್ನೂ, ರತ್ನಗಳನ್ನೂ, ಗೋವುಗಳನ್ನೂ, ದಾಸಿ-ದಾಸರನ್ನೂ, ಆಡು-ಕುರಿಗಳನ್ನೂ ದಾನಮಾಡಲಿ! ಕುರುಶ್ರೇಷ್ಠನು ಬ್ರಾಹ್ಮಣರನ್ನು ಕರೆ-ಕರೆದು ದಾನಮಾಡಲಿ. ವಿದುರ! ನೀನು ನೃಪನ ಆಜ್ಞೆಯಂತೆ ದೀನ-ಅಂಧ-ಕೃಪಣರಿಗೆ ಅಲ್ಲಲ್ಲಿ ಅನೇಕ ಅನ್ನ-ರಸ-ಪಾನೀಯಗಳ ಶಿಬಿರಗಳನ್ನು ನಿರ್ಮಿಸು. ಹಸುಗಳಿಗೆ ನೀರು ಕುಡಿಯಲು ನೀರಿನ ತೊಟ್ಟಿಗಳನ್ನು ನಿರ್ಮಿಸು ಮತ್ತು ವಿವಿಧ ಪುಣ್ಯಕರ್ಮಗಳನ್ನು ನಿಯೋಜಿಸು. ಹೀಗೆ ನನಗೆ ರಾಜಾ ಮತ್ತು ಪಾರ್ಥ ಧನಂಜಯರು ಹೇಳಿದರು. ಇದರ ನಂತರದ ಕಾರ್ಯವನ್ನು ನೀನು ನಡೆಸಿಕೊಡಬೇಕು!”

ವಿದುರನು ಹೀಗೆ ಹೇಳಲು ಧೃತರಾಷ್ಟ್ರನು ಪಾಂಡವರನ್ನು ಪ್ರಶಂಸಿಸಿದನು. ಕಾರ್ತೀಕ ಮಾಸದಲ್ಲಿ ಮಹಾದಾನವನ್ನು ಮಾಡಲು ನಿಶ್ಚಯಿಸಿದನು.

ಧೃತರಾಷ್ಟ್ರನು ನಡೆಸಿದ ಶ್ರಾದ್ಧಯಜ್ಞ

ವಿದುರನು ಹೀಗೆ ಹೇಳಲು ಜನಾಧಿಪ ಧೃತರಾಷ್ಟ್ರನು ರಾಜ ಮತ್ತು ಜಿಷ್ಣುವಿನ ಕೃತ್ಯಗಳಿಂದ ಅತ್ಯಂತ ಪ್ರಸನ್ನನಾದನು. ಅನಂತರ ಅವನು ಭೀಷ್ಮನ ಮತ್ತು ತನ್ನ ಮಕ್ಕಳು, ಸುಹೃದಯರ ಶ್ರಾದ್ಧದ ಸಲುವಾಗಿ ಸಹಸ್ರಾರು ಯೋಗ್ಯ ಬ್ರಾಹ್ಮಣರನ್ನೂ ಋಷಿಸತ್ತಮರನ್ನೂ ಆಮಂತ್ರಿಸಿದನು. ಅನ್ನ-ಪಾನಾದಿಗಳು, ಯಾನಗಳು, ಹೊದಿಕೆಗಳು, ಸುವರ್ಣ-ಮಣಿ-ರತ್ನಗಳು, ದಾಸ-ದಾಸಿಯರು, ಕಂಬಳಿ-ಜಿನಗಳ ಹೊದಿಕೆಗಳು, ರತ್ನಗಳು, ಗ್ರಾಮಗಳು, ಕ್ಷೇತ್ರಗಳು, ಆಡು-ಕುರಿಗಳು, ಅಲಂಕರಿಸಲ್ಪಟ್ಟ ಆನೆ-ಕುದುರೆಗಳು, ಸುಂದರ ರಾಜಕನ್ಯೆಯರು ಇವುಗಳೆಲ್ಲವನ್ನೂ ನೃಪಸತ್ತಮನು ದ್ರೋಣ, ಭೀಷ್ಮ, ಸೋಮದತ್ತ, ಬಾಹ್ಲೀಕ, ದುರ್ಯೋಧನ ಮತ್ತು ಅವನ ಅನುಜರು, ಜಯದ್ರಥನೇ ಮೊದಲಾದ ಸುಹೃದಯರು ಇವರನ್ನು ಉದ್ದೇಶಿಸಿ ಪ್ರತ್ಯೇಕ ಪ್ರತ್ಯೇಕವಾಗಿ ಬ್ರಾಹ್ಮಣರಿಗೆ ದಾನಮಾಡಿದನು. ಯುಧಿಷ್ಠಿರನ ಅಭಿಪ್ರಾಯದಂತೆ ಆ ಶ್ರಾದ್ಧಯಜ್ಞವು ಅನೇಕ ಗೋಧನ ದಕ್ಷಿಣೆಗಳಿಂದ ಅನೇಕ ಧನರತ್ನಗಳಿಂದ ಸುಶೋಭಿಸುತ್ತಿತ್ತು. ಯುಧಿಷ್ಠಿರನ ಶಾಸನದಂತೆ ಅನೇಕ ಗಣಕ-ಲೇಖಕ ಪುರುಷರು ನಿರಂತರವಾಗಿ ನೃಪನನ್ನು ಈ ರೀತಿ ಕೇಳುತ್ತಿದ್ದರು: “ಇವರಿಗೆ ಏನನ್ನು ದಾನಮಾಡಬೇಕು ಎಂದು ಆಜ್ಞಾಪಿಸು! ಎಲ್ಲ ವಸ್ತುಗಳೂ ಇಲ್ಲಿ ಸಿದ್ಧವಾಗಿವೆ. ಯಾವುದನ್ನು ಬೇಕಾದರೂ ಕೊಡಬಹುದು!”

ಧೀಮಂತ ಕುಂತೀಪುತ್ರನ ವಚನದಂತೆ ರಾಜನು ಆಗ ನೂರು ನಾಣ್ಯಗಳನ್ನು ಕೊಡಲು ಹೇಳಿದರೆ ಗಣಕರು ಸಾವಿರ ನಾಣ್ಯಗಳನ್ನು ಕೊಡುತ್ತಿದ್ದರು. ಮೋಡವು ಮಳೆಸುರಿಸಿ ಭೂಮಿಯನ್ನು ತೃಪ್ತಿಗೊಳಿಸುವಂತೆ ಮೋಡದ ರೂಪದಲ್ಲಿದ್ದ ಧೃತರಾಷ್ಟ್ರನು ಭೂಮಿಯ ಮೇಲೆ ಧನದ ಮಳೆಯನ್ನೇ ಸುರಿಸಿ ವಿಪ್ರರನ್ನು ತೃಪ್ತಿಗೊಳಿಸಿದನು. ಅನಂತರ ಪಾರ್ಥಿವ ಮಹೀಪತಿಯು ಸರ್ವ ವರ್ಣದವರನ್ನೂ ಅನ್ನ-ಪಾನ-ರಸಗಳ ಪ್ರವಾಹದಲ್ಲಿ ತೇಲಿಸಿಬಿಟ್ಟನು. ವಸ್ತ್ರ-ರತ್ನಗಳ ರಾಶಿಗಳು ಅಲೆಗಳಂತೆಯೂ, ಮೃದಂಗದ ಸ್ವರಗಳು ಭೋರ್ಗರೆಯಂತೆಯೂ, ಗೋವು-ಅಶ್ವಗಳು ಮೊಸಳೆಗಳಂತೆಯೂ, ನಾರಿಯರು ರತ್ನಗಳಂತೆಯೂ, ಗ್ರಾಮ-ಅಗ್ರಹಾರಗಳು ದ್ವೀಪಗಳಂತೆಯೂ, ಮಣಿ-ಚಿನ್ನಗಳು ನೀರಿನಂತೆಯೂ ತುಂಬಿದ್ದ ಆ ಧೃತರಾಷ್ಟ್ರನ ದಯಾಸಾಗರದಲ್ಲಿ ಜಗತ್ತೇ ತೇಲುತ್ತಿತ್ತು. ಹೀಗೆ ಮಹರಾಜನು ತನ್ನ ಪುತ್ರ-ಪೌತ್ರರಿಗೂ, ಪಿತೃಗಳಿಗೂ ಹಾಗೆಯೇ ತನಗೂ ಮತ್ತು ಗಾಂಧಾರಿಗೂ ಔರ್ಧ್ವದೇಹಿಕ ಕರ್ಮಗಳನ್ನು ನೆರವೇರಿಸಿದನು. ಅನೇಕ ದಾನಗಳನ್ನು ಕೊಟ್ಟು ಆಯಾಸಗೊಂಡ ಆ ಕುರೂದ್ವಹನು ದಾನಯಜ್ಞವನ್ನು ಮುಗಿಸಿದನು. ಹೀಗೆ ಆ ರಾಜಾ ಕೌರವ್ಯನು ಬಹಳ ಅನ್ನ-ರಸ-ದಕ್ಷಿಣೆಗಳಿಂದ ಕೂಡಿದ್ದ, ನಟ-ನರ್ತಕರ ಕಲೆಗಳಿಂದ ಕೂಡಿದ್ದ ಆ ದಾನಮಹೋತ್ಸವವನ್ನು ನಡೆಸಿದನು. ರಾಜಾ ಅಂಬಿಕಾಸುತನು ಈ ರೀತಿ ಹತ್ತುದಿನಗಳು ದಾನಗಳನ್ನಿತ್ತು ಪುತ್ರ-ಪೌತ್ರರ ಋಣಗಳಿಂದ ಮುಕ್ತನಾದನು.

ಧೃತರಾಷ್ಟ್ರನ ವನಗಮನ

ಮರುದಿನ ಬೆಳಿಗ್ಗೆ ಅಂಬಿಕಾಸುತ ಧೃತರಾಷ್ಟ್ರನು ವನವಾಸಕ್ಕೆ ಹೊರಡಲು ಸಿದ್ಧನಾಗಿ ವೀರ ಪಾಂಡವರನ್ನು ಕರೆಯಿಸಿದನು.  ಗಾಂಧಾರಿಯ ಸಹಿತನಾಗಿ ಆ ಧೀಮಂತನು ಯಥಾವಿಧಿಯಾಗಿ ಅವರನ್ನು ಅಭಿನಂದಿಸಿ, ವೇದಪಾರಗ ಬ್ರಾಹ್ಮಣರಿಂದ ಕಾರ್ತೀಕದ ಹುಣ್ಣಿಮೆಯಂದು ಇಷ್ಟಿಯನ್ನು ನೆರವೇರಿಸಿದನು. ಅಗ್ನಿಹೋತ್ರವನ್ನು ಮುಂದೆಮಾಡಿಕೊಂಡು, ವಲ್ಕಲ-ಜಿನವಸ್ತ್ರಗಳನ್ನು ಧರಿಸಿ, ಸೊಸೆಯರಿಂದ ಪರಿವೃತನಾಗಿ ರಾಜನು ತನ್ನ ಭವನದಿಂದ ಹೊರಟನು. ವಿಚಿತ್ರವೀರ್ಯನ ಮಗ ನೃಪತಿಯು ಹೊರಟ ಆ ಸಮಯದಲ್ಲಿ ಕೌರವ-ಪಾಂಡವರ ಸ್ತ್ರೀಯರ ಮತ್ತು ಕೌರವ ರಾಜ ವಂಶಜರ ಆರ್ತನಾದಗಳು ಎಲ್ಲ ಕಡೆಗಳಿಂದಲೂ ಕೇಳಿ ಬರುತ್ತಿದ್ದವು. ಅನಂತರ ನರೇಂದ್ರನು ಸುಮನೋಹರ ಅರಳಿನಿಂದಲೂ ವಿಚಿತ್ರ ಪುಷ್ಪಗಳಿಂದಲೂ ತನ್ನ ಅರಮನೆಯನ್ನು ಪೂಜಿಸಿ, ಸೇವಕವರ್ಗದ ಜನರೆಲ್ಲರನ್ನು ಸತ್ಕರಿಸಿ, ಎಲ್ಲವನ್ನೂ ಬಿಟ್ಟು ಹೊರಟನು. ಆಗ ರಾಜಾ ಯುಧಿಷ್ಠಿರನು ಕೈಮುಗಿದು ನಡುಗುತ್ತಾ ಕಣ್ಣೀರಿನಿಂದ ಗಂಟಲು ಕಟ್ಟಿದವನಾಗಿ “ಮಹಾರಾಜ! ಎಲ್ಲಿಗೆ ಹೋಗುತ್ತಿರುವೆ?” ಎಂದು ಜೋರಾಗಿ ಕೂಗಿಕೊಳ್ಳುತ್ತಾ ಭೂಮಿಯ ಮೇಲೆ ಬಿದ್ದನು. ಆಗ ತೀವ್ರ ದುಃಖದಿಂದ ಪರಿತಪಿಸುತ್ತಿದ್ದ ಭಾರತಾಗ್ರ್ಯ ಅರ್ಜುನನು ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಯುಧಿಷ್ಠಿರನಿಗೆ “ನೀನು ಹೀಗೆ ಅಧೀರನಾಗಬಾರದು!” ಎಂದು ಹೇಳುತ್ತಾ ತಾನೂ ಎದೆಗುಂದಿದನು. ವೃಕೋದರ, ಫಲ್ಗುನ, ವೀರ ಮಾದ್ರೀಪುತ್ರರು, ವಿದುರ, ಸಂಜಯ, ಯುಯುತ್ಸು, ಮತ್ತು ಧೌಮ್ಯನೊಡನೆ ವಿಪ್ರ ಗೌತಮ ಕೃಪರು ಬಾಷ್ಪಗದ್ಗದ ಕಂಠಗಳಿಂದ ಕೂಡಿದವರಾಗಿ ರಾಜನನ್ನು ಅನುಸರಿಸಿ ಹೋದರು. ಕುಂತಿಯು ಕಣ್ಣುಗಳನ್ನು ಕಟ್ಟಿಕೊಂಡಿದ್ದ ಗಾಂಧಾರಿಯ ಎಡತೋಳನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಹೋಗುತ್ತಿದ್ದಳು. ರಾಜಾ ಧೃತರಾಷ್ಟ್ರನು ಗಾಂಧಾರಿಯ ಹೆಗಲಿನ ಮೇಲೆ ಕೈಯನ್ನಿಟ್ಟು ನಿಶ್ಚಿಂತನಾಗಿ ಹೋಗುತ್ತಿದ್ದನು. ಹಾಗೆಯೇ ದ್ರೌಪದೀ ಕೃಷ್ಣೆ, ಯಾದವೀ ಸುಭದ್ರೆ, ಮಗುವನ್ನೆತ್ತಿಕೊಂಡಿದ್ದ ಕೌರವೀ ಉತ್ತರೆ, ಚಿತ್ರಾಂಗದಾ ಮತ್ತು ಇತರ ಸ್ತ್ರೀಯರು ಎಲ್ಲರೂ ಒಟ್ಟಾಗಿ ರಾಜ ಧೃತರಾಷ್ಟ್ರನೊಡನೆ ಹೋಗುತ್ತಿದ್ದರು. ಆಗ ಅವರೆಲ್ಲರ ರೋದನವು ದುಃಖದಲ್ಲಿರುವ ಕಡಲಹದ್ದುಗಳ ಕೂಗಿನಂತೆ ಕೇಳಿಬರುತ್ತಿತ್ತು. ಅದನ್ನು ಕೇಳಿ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ನಾರಿಯರು ಅಲ್ಲಿಗೆ ಎಲ್ಲಕಡೆಗಳಿಂದ ಬಂದು ಸೇರಿದರು. ಹಿಂದೆ ದ್ಯೂತದ ಸಮಯದಲ್ಲಿ ಕೌರವರ ಸಭೆಯಿಂದ ಪಾಂಡವರು ಹೊರಟಿದ್ದಾಗ ಹೇಗೋ ಹಾಗೆ ಧೃತರಾಷ್ಟ್ರನು ಹೊರಡುವಾಗಲೂ ಕೂಡ ಹಸ್ತಿನಾಪುರದ ಪೌರವರ್ಗವು ಅತೀವ ದುಃಖಿತಗೊಂಡಿತ್ತು. ಯಾವ ರಮಣೀಯರು ಸೂರ್ಯ-ಚಂದ್ರರನ್ನು ನೋಡಲೂ ಕೂಡ ಹೊರಗೆ ಬರುತ್ತಿರಲಿಲ್ಲವೋ ಅಂಥವರೆಲ್ಲರೂ ಕೌರವೇಂದ್ರನು ಮಹಾವನಕ್ಕೆ ಹೊರಡುವಾಗ ಶೋಕಾರ್ತರಾಗಿ ರಾಜಬೀದಿಗೆ ಬಂದರು.

ಕುಂತೀವಾಕ್ಯ

ಆಗ ಪ್ರಾಸಾದಗಳಿಂದಲೂ ಉಪ್ಪರಿಗೆಗಳಿಂದಲೂ ಸ್ತ್ರೀ-ಪುರುಷರ ಮಹಾರೋದನವು ಕೇಳಿಬರುತ್ತಿತ್ತು. ಆ ಧೀಮಾನ್ ರಾಜನು ನರ-ನಾರಿಯರ ಗುಂಪಿನ ಮಧ್ಯದಲ್ಲಿ ಕೈಮುಗಿದುಕೊಂಡು ನಡುಗುತ್ತಾ ಕಷ್ಟದಿಂದ ಮುಂದೆ ಸಾಗುತ್ತಿದ್ದನು. ವರ್ಧಮಾನದ್ವಾರದ ಮೂಲಕ ಹಸ್ತಿನಾಪುರದ ಹೊರ ಹೊರಟು ಅವನು ಆ ಜನಸಮೂಹವನ್ನು ತನ್ನ ಹಿಂದೆ ಬರಬಾರದಂತೆ ಮತ್ತೆ ಮತ್ತೆ ತಡೆಯುತ್ತಿದ್ದನು. ವಿದುರನೂ ಗಾವಲ್ಗಣಿ ಮಹಾಮಂತ್ರಿ ಸೂತ ಸಂಜಯನೂ ರಾಜನ ಜೊತೆಯಲ್ಲಿ ಹೋಗಲು ನಿಶ್ಚಯಿಸಿದರು. ಮಹೀಪಾಲ ಧೃತರಾಷ್ಟ್ರನು ಕೃಪ ಮತ್ತು ಮಹಾರಥ ಯುಯುತ್ಸುವನ್ನು ಹಿಂದಿರುಗುವಂತೆ ಮಾಡಿ ಯುಧಿಷ್ಠಿರನಿಗೆ ಒಪ್ಪಿಸಿದನು. ಪುರಜನರು ಹಿಂದಿರುಗಿದ ನಂತರ ರಾಜಾ ಯುಧಿಷ್ಠಿರನು ಅಂತಃಪುರದ ಸ್ತ್ರೀಯರು ಹಿಂದಿರುಗಲು ಧೃತರಾಷ್ಟ್ರನ ಅನುಮತಿಯನ್ನು ಕೇಳಿದನು. ಅವನು ತಾಯಿ ಕುಂತಿಯ ಬಳಿಸಾರಿ “ನಾನು ರಾಜನನ್ನು ಇನ್ನೂ ಸ್ವಲ್ಪ ದೂರ ಅನುಸರಿಸಿ ಹೋಗುತ್ತೇನೆ. ನೀನು ಹಿಂದಿರುಗಬೇಕು. ರಾಣಿಯೇ! ಸೊಸೆಯರೊಂದಿಗೆ ನೀನು ನಗರಕ್ಕೆ ಹಿಂದಿರುಗಬೇಕು. ಧರ್ಮಾತ್ಮ ಧೃತರಾಷ್ಟ್ರನು ತಪಸ್ಸಿನ ನಿಶ್ಚಯವನ್ನು ಮಾಡಿಕೊಂಡು ಹೋಗುತ್ತಿದ್ದಾನೆ.”

ಧರ್ಮರಾಜನು ಹೀಗೆ ಹೇಳಲು ಕಂಬನಿದುಂಬಿದ ಕಣ್ಣುಗಳಿಂದ ವ್ಯಾಕುಲಳಾಗಿ ಕುಂತಿಯು ಗಾಂಧಾರಿಯನ್ನು ಹಿಡಿದುಕೊಂಡು ಮುಂದುವರೆಯುತ್ತಲೇ ಇದ್ದಳು. “ಮಹಾರಾಜ! ಸಹದೇವನ ವಿಷಯದಲ್ಲಿ ನೀನು ಎಂದೂ ಅಪ್ರಸನ್ನನಾಗಬೇಡ! ಇವನು ನನ್ನಲ್ಲಿ ಮತ್ತು ನಿನ್ನಲ್ಲಿ ನಿತ್ಯವೂ ಅನುರಕ್ತನಾಗಿರುವವನು. ಯುದ್ಧದಿಂದ ಎಂದೂ ಪಲಾಯನಮಾಡದೇ ಇದ್ದ ಕರ್ಣನನ್ನು ಸತತವೂ ಸ್ಮರಿಸಿಕೊಳ್ಳುತ್ತಿರು. ನನ್ನ ದುಷ್ಪ್ರಜ್ಞೆಯಿಂದಾಗಿ ಆ ವೀರನು ಯುದ್ಧದಲ್ಲಿ ಮಡಿದನು. ಸೂರ್ಯಪುತ್ರ ಕರ್ಣನನ್ನು ನೋಡದೆಯೂ ನನ್ನ ಹೃದಯವು ನೂರು ಚೂರುಗಳಾಗಿ ಒಡೆಯುತ್ತಿಲ್ಲವೆಂದರೆ ನನ್ನ ಈ ಹೃದಯವು ಉಕ್ಕಿನದೇ ಆಗಿರಬೇಕು! ಎಲ್ಲವೂ ಹೀಗೆಯೇ ಆಗಬೇಕೆಂದಿದ್ದಾಗ ನಾನೇನು ಮಾಡಲು ಶಕ್ಯವಿದೆ? ಸೂರ್ಯಜನನ್ನು ಮೊದಲು ನಿಮಗೆ ಪರಿಚಯಮಾಡಿಸಿಕೊಡದೇ ಇದ್ದುದು ನನ್ನ ದೋಷವೇ ಸರಿ! ನಿನ್ನ ತಮ್ಮಂದಿರೊಡನೆ ನಿನ್ನ ಅಗ್ರಜನಿಗಾಗಿ ಸದಾ ದಾನಗಳನ್ನು ನೀಡುತ್ತಿರು! ದ್ರೌಪದಿಯ ವಿಷಯದಲ್ಲಿಯೂ ನೀನು ನಿತ್ಯವೂ ಪ್ರಿಯವಾದುದನ್ನೇ ಮಾಡುತ್ತಿರಬೇಕು. ಭೀಮಾರ್ಜುನರನ್ನೂ ನಕುಲನನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿರಬೇಕು. ಇಂದಿನಿಂದ ಕುರುವಂಶದ ಪಾಲನೆಯ ಭಾರವು ಸಂಪೂರ್ಣವಾಗಿ ನಿನ್ನ ಮೇಲೆಯೇ ಬಿದ್ದಿದೆ. ನಾನಾದರೋ ವನದಲ್ಲಿ ಅತ್ತೆ-ಮಾವಂದಿರ ಸೇವೆಯನ್ನು ಮಾಡಿಕೊಂಡಿರುತ್ತೇನೆ. ಗಾಂಧಾರಿಯ ಸಹಿತ ಕೊಳಕು-ಧೂಳುಗಳಿಂದ ತುಂಬಿದ ತಾಪಸಿಯಂತೆ ವಾಸಿಸುತ್ತೇನೆ.”

ಅವಳು ಹೀಗೆ ಹೇಳಲು ಯುಧಿಷ್ಠಿರನು ಸಹೋದರರೊಡನೆ ತೀವ್ರ ದುಃಖಿತನಾದನು ಮತ್ತು  ಸ್ವಲ್ಪ ಹೊತ್ತು ಅವನ ಬಾಯಿಂದ ಮಾತುಗಳೇ ಹೊರಬರಲಿಲ್ಲ. ಒಂದು ಮುಹೂರ್ತಕಾಲ ಯೋಚಿಸಿ ಯುಧಿಷ್ಠಿರನು ದೀನ-ಚಿಂತಾ-ಶೋಕಪರಾಯಣನಾಗಿ ತಾಯಿಗೆ ಹೇಳಿದನು: “ನೀನೇಕೆ ಹೀಗೆ ವರ್ತಿಸುತ್ತಿರುವೆ? ಹೀಗೆ ನೀನು ಮಾತನಾಡಬಾರದು. ನಿನಗೆ ನಾನು ಅನುಮತಿಯನ್ನು ಕೊಡುವುದಿಲ್ಲ. ಪ್ರಸನ್ನಳಾಗಬೇಕು. ಹಿಂದೆ ವಿದುಲೆಯ ಮಾತುಗಳನ್ನು ಉದಾಹರಿಸಿ ನಮ್ಮಲ್ಲಿ ಉತ್ಸಾಹವನ್ನು ತುಂಬಿದ್ದೆ. ಇಂದು ನಮ್ಮನ್ನು ತ್ಯಜಿಸುವುದು ಸರಿಯಲ್ಲ! ನರರ್ಷಭ ವಾಸುದೇವನ ಮೂಲಕ ನಮಗೆ ಹೇಳಿ ಕಳುಕಳುಹಿಸಿದ ನಿನ್ನ ಬುದ್ಧಿಯಂತೆಯೇ ನಾನು ಪೃಥಿವೀಪಾಲರನ್ನು ಸಂಹರಿಸಿ ಈ ರಾಜ್ಯವನ್ನು ಪಡೆದುಕೊಂಡೆನು. ಅಂದು ನಿನಗಿದ್ದ ಬುದ್ಧಿಯೂ ಮತ್ತು ನನಗೆ ಹೇಳಿದ ಮಾತುಗಳೂ ಇಂದು ಎಲ್ಲಿಗೆ ಹೋದವು? ಕ್ಷತ್ರಧರ್ಮದಲ್ಲಿಯೇ ಇರುವಂತೆ ನಮಗೆ ಹೇಳಿ ಈಗ ನೀನು ಕ್ಷತ್ರಧರ್ಮದಿಂದ ಜಾರಿಕೊಳ್ಳಲು ಬಯಸುತ್ತಿರುವೆಯಲ್ಲ! ನಮ್ಮನ್ನೂ, ರಾಜ್ಯವನ್ನೂ, ಈ ನಿನ್ನ ಯಶಸ್ವಿನೀ ಸೊಸೆಯನ್ನೂ ತೊರೆದು ಶೂನ್ಯ ವನದಲ್ಲಿ ನೀನು ಹೇಗೆ ತಾನೇ ವಾಸಿಸುವೆ? ಅಮ್ಮಾ! ನಮ್ಮ ಮೇಲೆ ಕರುಣೆ ತೋರು!”

ಹೀಗೆ ಮಗನ ಆ ಬಾಷ್ಪಗದ್ಗದ ಮಾತನ್ನು ಕೇಳುತ್ತಲೂ ಕಣ್ಣೀರುತುಂಬಿದ ಕುಂತಿಯು ಮುಂದೆ ಸಾಗುತ್ತಲೇ ಇದ್ದಳು. ಆಗ ಅವಳಿಗೆ ಭೀಮನು ಹೇಳಿದನು: “ಕುಂತಿ! ಪುತ್ರರು ಜಯಿಸಿದ ಈ ರಾಜ್ಯವನ್ನು ನೀನು ಭೋಗಿಸಬೇಕು. ರಾಜಧರ್ಮವನ್ನು ಪಾಲಿಸುವ ಕಾಲವು ಒದಗಿರುವಾಗ ನಿನಗೆ ಎಲ್ಲಿಂದ ಈ ಬುದ್ಧಿಯು ಬಂದಿತು? ಮೊದಲು ನಮ್ಮಿಂದ ನೀನು ಏಕೆ ಈ ಭೂಮಿಕ್ಷಯವನ್ನು ಮಾಡಿಸಿದೆ? ಯಾವ ಕಾರಣಕ್ಕಾಗಿ ನೀನು ನಮ್ಮನ್ನು ಪರಿತ್ಯಜಿಸಿ ವನಕ್ಕೆ ಹೋಗಲು ಇಚ್ಛಿಸಿರುವೆ? ವನವಾಸವೇ ನಿನಗೆ ಇಷ್ಟವಾಗಿದ್ದಿದ್ದರೆ ಬಾಲಕರಾಗಿದ್ದ ನಮ್ಮನ್ನೂ ಮತ್ತು ದುಃಖಶೋಕಸಮಾವಿಷ್ಟರಾಗಿದ್ದ ಮಾದ್ರೀಪುತ್ರರನ್ನೂ ನೀನು ವನದಿಂದ ನಗರಕ್ಕೆ ಏಕೆ ಕರೆದುಕೊಂಡು ಬಂದೆ? ಪ್ರಸನ್ನಳಾಗು! ನೀನು ಇಂದು ವನಕ್ಕೆ ಹೋಗಬೇಡ! ಯುಧಿಷ್ಠಿರ ಮತ್ತು ಪಾರ್ಥನ ಬಲದಿಂದ ಗೆಲ್ಲಲ್ಪಟ್ಟಿರುವ ಈ ಸಂಪತ್ತನ್ನು ಭೋಗಿಸು!”

ವನವಾಸದ ಕುರಿತು ದೃಢವಾಗಿ ನಿಶ್ಚಯಿಸಿದ್ದ ಅವಳು ಪುತ್ರರು ಬಹುವಿಧದಲ್ಲಿ ವಿಲಪಿಸುತ್ತಿದ್ದರೂ ಅವರ ಮಾತಿನಂತೆ ಮಾಡಲಿಲ್ಲ. ವನವಾಸಕ್ಕೆ ಹೋಗುತ್ತಿರುವ ಅತ್ತೆಯ ಹಿಂದೆ ವಿಷಣ್ಣವದನಳಾದ ದ್ರೌಪದಿಯೂ ಸುಭದ್ರೆಯೊಡನೆ ರೋದಿಸುತ್ತಾ ಹೋಗುತ್ತಲೇ ಇದ್ದಳು. ರೋದಿಸುತ್ತಿದ್ದ ತನ್ನ ಎಲ್ಲ ಮಕ್ಕಳನ್ನೂ ಪುನಃ ಪುನಃ ನೋಡುತ್ತಿದ್ದರೂ ಆ ಮಹಾಪ್ರಾಜ್ಞೆ ಕುಂತಿಯು ವನವಾಸದ ದೃಢನಿಶ್ಚಯವನ್ನು ಮಾಡಿದವಳಾಗಿ ಮುಂದೆ ಮುಂದೆ ಸಾಗುತ್ತಲೇ ಇದ್ದಳು. ಪಾಂಡವರಾದರೋ ಅಂತಃಪುರದ ಸ್ತ್ರೀಯರು ಮತ್ತು ಸೇವಕರೊಂದಿಗೆ ಅವಳನ್ನು ಹಿಂಬಾಲಿಸುತ್ತಲೇ ಇದ್ದರು. ಆಗ ಕುಂತಿಯು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಮಕ್ಕಳಿಗೆ ಈ ಮಾತುಗಳನ್ನಾಡಿದಳು: “ನೃಪ! ಮಹಾಬಾಹೋ! ನೀನು ಹೇಳಿದುದು ಸರಿಯಾಗಿಯೇ ಇದೆ! ಹಿಂದೆ ನೀವು ಎದೆಗುಂದಿದ್ದಾಗ ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದ್ದೆನು. ದ್ಯೂತದಿಂದ ರಾಜ್ಯ-ಸುಖಗಳನ್ನು ಅಪಹರಿಸಲ್ಪಟ್ಟು ನೀವು ಜ್ಞಾತಿಬಾಂಧವರಿಂದಲೂ ತಿರಸ್ಕೃತರಾಗಿದ್ದಾಗ ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದ್ದೆನು. ಪಾಂಡುವಿನ ಸಂತತಿಯು ನಾಶವಾಗದೇ ಇರುವುದು ಮತ್ತು ನಿಮ್ಮ ಯಶಸ್ಸು ಕುಂದದೇ ಇರುವುದು ಹೇಗೆ ಎಂದು ಯೋಚಿಸಿ ನಾವು ನಿಮ್ಮನ್ನು ಪ್ರೋತ್ಸಾಹಿಸಿದೆನು. ನೀವೆಲ್ಲರೂ ಇಂದ್ರನ ಸಮನಾದವರು. ಪರಾಕ್ರಮದಲ್ಲಿ ದೇವತೆಗಳ ಸಮಾನರು. ನೀವು ಜೀವಿಕೆಗಾಗಿ ಇನ್ನೊಬ್ಬರ ಮುಖನೋಡಬಾರದು ಎಂದು ನಾನು ಹಾಗೆ ಮಾಡಿದೆನು. ಧರ್ಮಭೃತರಲ್ಲಿ ಶ್ರೇಷ್ಠನಾದ ಮತ್ತು ಇಂದ್ರನ ಸಮನಾಗಿರುವ ನೀನು ಹೇಗೆ ಪುನಃ ವನದಲ್ಲಿ ದುಃಖಿಯಾಗಿರುವೆ ಎಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು. ಸಾವಿರ ಆನೆಗಳ ಬಲವುಳ್ಳ, ವಿಕ್ರಮ-ಪೌರುಷಗಳಲ್ಲಿ ಖ್ಯಾತನಾದ ಈ ಭೀಮನು ನಾಶನಾಗಬಾರದೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು. ಹಾಗೆಯೇ ಭೀಮಸೇನನ ಅನುಜನಾದ, ವಾಸವನಂತಿರುವ ಈ ವಿಜಯ ಅರ್ಜುನನೂ ಎದೆಗುಂದಬಾರದೆಂದು ನಾನು ಪ್ರೋತ್ಸಾಹಿಸಿದೆನು. ಗುರುಸೇವೆಯನ್ನೇ ಮಾಡಿಕೊಂಡುಬಂದಿರುವ ಈ ನಕುಲ-ಸಹದೇವರೂ ಕೂಡ ಹಸಿವೆಯಿಂದ ಎದೆಗುಂದಬಾರದೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸಿದೆನು. ಎತ್ತರ ದೇಹವುಳ್ಳ ಈ ಶ್ಯಾಮಲವರ್ಣೆ, ಆಯತಲೋಚನೆ ಶ್ರೀಮತಿ ದ್ರೌಪದಿಯು ಪುನಃ ಸಭಾತಲದಲ್ಲಿ ವೃಥಾ ಕಷ್ಟವನ್ನನುಭವಿಸಬಾರದೆಂದು ನಾನು ಹಾಗೆ ಮಾಡಿದೆನು. ನೀವೆಲ್ಲರೂ ನೋಡುತ್ತಿದ್ದಂತೆಯೇ ಬಾಳೆಯ ಮರದಂತೆ ತರತರನೆ ನಡುಗುತ್ತಿದ್ದ ರಜಸ್ವಲೆಯಾಗಿದ್ದ ಶುಭಲಕ್ಷಣಯುಕ್ತಳಾಗಿದ್ದ, ದ್ಯೂತದಲ್ಲಿ ಪಣವಾಗಿಡಲ್ಪಟ್ಟು ಪರಾಜಿತಳಾಗಿದ್ದ ದ್ರೌಪದಿಯನ್ನು ಯಾವಾಗ ದುಃಶಾಸನನು ಮೌಢ್ಯದಿಂದ ದಾಸಿಯಂತೆ ತುಂಬಿದ ಸಭೆಗೆ ಎಳೆದು ತಂದನೋ – ಆಗಲೇ ನನಗೆ ಈ ವಂಶವು ವಿನಾಶವಾಗುವುದೆಂದು ತಿಳಿದಿತ್ತು. ನನ್ನ ಮಾವನೇ ಮೊದಲಾದ ಕುರುಗಳು ಅಲ್ಲಿ ಉಪಸ್ಥಿತರಿದ್ದರು. ಆದರೆ ಅವರ್ಯಾರೂ ಅವಳ ರಕ್ಷಣೆಗೆ ಬರದಿದ್ದಾಗ ಅವಳು ಹೆಣ್ಣು ಕಡಲಹದ್ದಿನಂತೆ ಗೋಳಾಡುತ್ತಿದ್ದಳು. ಬುದ್ಧಿಗೆಟ್ಟಿದ್ದ ಪಾಪಿಷ್ಠ ದುಃಶಾಸನನು ಯಾವಾಗ ಅವಳ ತಲೆಗೂದಲನ್ನು ಹಿಡಿದು ಎಳೆದು ತಂದನೋ ಆಗ ನಾನು ದುಃಖದಿಂದ ಮೂರ್ಛಿತಳಾಗಿದ್ದೆ! ನಿಮ್ಮ ತೇಜಸ್ಸನ್ನು ವೃದ್ಧಿಗೊಳಿಸಲು ನಾನು ವಿದುಲೆಯ ವಾಕ್ಯಗಳ ಮೂಲಕ ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದೆನು. ಮಕ್ಕಳೇ! ಇದನ್ನು ಅರ್ಥಮಾಡಿಕೊಳ್ಳಿ! ನಿಮ್ಮಂಥಹ ಮಕ್ಕಳನ್ನು ಪಡೆದೂ ಪಾಂಡುವಿನ ಈ ರಾಜವಂಶವು ನಾಶವಾಗಬಾರದೆಂದು ನಾನು ನಿಮ್ಮನ್ನು ಯುದ್ಧಕ್ಕೆ ಪ್ರೋತ್ಸಾಹಿಸಿದೆನು. ಯಾರಿಂದ ವಂಶವು ನಾಶವಾಗುವುದೋ ಅವನ ಪುತ್ರ-ಪೌತ್ರರು ಯಾರೂ ಪುಣ್ಯಲೋಕಗಳನ್ನು ಹೊಂದುವುದಿಲ್ಲ. ಹಿಂದೆ ನಾನು ನನ್ನ ಪತಿಯ ರಾಜ್ಯಫಲವನ್ನು ವಿಪುಲವಾಗಿ ಭೋಗಿಸಿದ್ದೇನೆ. ಯಥಾವಿಧಿಯಾಗಿ ಮಹಾದಾನಗಳನ್ನು ನೀಡಿದ್ದೇನೆ ಮತ್ತು ಸೋಮವನ್ನೂ ಕುಡಿದಿದ್ದೇನೆ. ನಾನು ನನ್ನ ಸ್ವಾರ್ಥಫಲಕ್ಕಾಗಿ ವಾಸುದೇವನ ಮೂಲಕ ವಿದುಲೆಯ ಆ ಪ್ರಲಾಪದ ಮಾತುಗಳನ್ನು ಹೇಳಿ ಕಳುಹಿಸಿರಲಿಲ್ಲ. ನಿಮ್ಮನ್ನು ಆ ಕಷ್ಟದಿಂದ ಪಾರುಮಾಡುವುದಕ್ಕಾಗಿಯೇ ಹಾಗೆ ಮಾಡಿದೆನು. ನಾನು ಮಕ್ಕಳು ಗೆದ್ದ ರಾಜ್ಯಫಲವನ್ನು ಬಯಸುವುದಿಲ್ಲ. ತಪಸ್ಸಿನ ಮೂಲಕ ನಾನು ನನ್ನ ಪತಿಯು ಸೇರಿದ ಪುಣ್ಯಲೋಕಗಳನ್ನು ಬಯಸುತ್ತೇನೆ. ವನವಾಸೀ ಅತ್ತೆ-ಮಾವಂದಿರ ಶುಶ್ರೂಷೆಯನ್ನು ಮಾಡುತ್ತಾ ತಪಸ್ಸಿನಿಂದ ನನ್ನ ಈ ಶರೀರವನ್ನು ಶೋಷಿಸುತ್ತೇನೆ. ಭೀಮಸೇನಾದಿಗಳೊಂದಿಗೆ ಹಿಂದಿರುಗು! ನಿನ್ನ ಬುದ್ಧಿಯು ಯಾವಾಗಲೂ ಧರ್ಮದಲ್ಲಿಯೇ ಸ್ಥಿರವಾಗಿರಲಿ ಮತ್ತು ನಿನ್ನ ಮನಸ್ಸೂ ವಿಶಾಲವಾಗಿರಲಿ!”

ಕುಂತಿಯ ಆ ಮಾತನ್ನು ಕೇಳಿ ರಾಜಸತ್ತಮ ಪಾಂಡವನು ನಾಚಿಕೆಗೊಂಡು ಪಾಂಚಾಲೀ ಮತ್ತು ಅನಘ ತಮ್ಮಂದಿರೊಡನೆ ಹಿಂದಿರುಗಿದನು. ಹಾಗೆ ಕುಂತಿಯು ಹೊರಟಾಗ ಅಂತಃಪುರದ ಸ್ತ್ರೀಯರೆಲ್ಲರ ಗಟ್ಟಿ ರೋದನವು ಕೇಳಿಬಂದಿತು. ಆಗ ಪಾಂಡವರು ರಾಜನಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಹಿಂದಿರುಗಿದರು. ಪೃಥೆಯು ಮಾತ್ರ ಹಿಂದಿರುಗಲಿಲ್ಲ. ಆಗ ಮಹಾರಾಜ ಅಂಬಿಕಾಸುತ ಧೃತರಾಷ್ಟ್ರನು ಗಾಂಧಾರೀ ಮತ್ತು ವಿದುರರ ಕೈಹಿಡಿದು ಹೇಳಿದನು: “ಯುಧಿಷ್ಠಿರನ ಜನನಿ ದೇವೀ ಸಾಧ್ವಿಯು ಹಿಂದಿರುಗಲಿ. ಯುಧಿಷ್ಠಿರನು ಹೇಳಿದುದೆಲ್ಲವೂ ಸತ್ಯವೇ ಸರಿ! ಮಹಾಫಲವುಳ್ಳ ಈ ಮಹಾ ಪುತ್ರೈಶ್ವರ್ಯ ಮತ್ತು ಪುತ್ರರನ್ನು ತೊರೆದು ಮೂಢರಂತೆ ಯಾರು ತಾನೇ ದುರ್ಗಮ ವನಕ್ಕೆ ತೆರಳುತ್ತಾರೆ? ರಾಜ್ಯದಲ್ಲಿದ್ದುಕೊಂಡೇ ತಪಸ್ಸನ್ನು ತಪಿಸಬಹುದು, ದಾನಗಳನ್ನು ನೀಡಬಹುದು ಮತ್ತು ವ್ರತಗಳನ್ನು ಆಚರಿಸಲು ಇವಳಿಗೆ ಶಕ್ಯವಾಗುತ್ತದೆ. ನನ್ನ ಮಾತನ್ನು ಕೇಳಿರಿ. ಗಾಂಧಾರೀ! ಸೊಸೆ ಕುಂತಿಯ ಶುಶ್ರೂಷಣೆಯಿಂದ ನಾನು ಪರಿತುಷ್ಟನಾಗಿದ್ದೇನೆ. ಆದುದರಿಂದ ನೀನು ಅವಳಿಗೆ ಹಿಂದಿರುಗಲು ಅನುಮತಿಯನ್ನು ನೀಡಬೇಕು!”

ಇದನ್ನು ಕೇಳಿ ಸೌಬಲೇಯಿಯು ರಾಜನ ಮಾತನ್ನು ಕುಂತಿಗೆ ಹೇಳಿದಳು. ರಾಜನ ಮಾತುಗಳೆಲ್ಲವನ್ನು ಮಾತ್ರವಲ್ಲದೇ ವಿಶೇಷವಾಗಿ ತನ್ನ ಮಾತನ್ನೂ ಅವಳಿಗೆ ತಿಳಿಸಿದಳು. ಆದರೆ ವನವಾಸದ ದೃಢನಿಶ್ಚಯವನ್ನು ಮಾಡಿದ್ದ ಆ ದೇವೀ ಧರ್ಮಪರ ಸತಿ ಕುಂತಿಯನ್ನು ಹಿಂದಿರುಗುವಂತೆ ಮಾಡಲು ಅವಳಿಗೂ ಶಕ್ಯವಾಗಲಿಲ್ಲ. ಅವಳ ನಿಶ್ಚಯವು ಸ್ಥಿರವಾಗಿರುವುದನ್ನು ತಿಳಿದು ಕುರುಶ್ರೇಷ್ಠರು ನಿರಾಶರಾಗಿ ಹಿಂದಿರುಗುತ್ತಿರುವುದನ್ನು ನೋಡಿ ಕುರುಸ್ತ್ರೀಯರು ರೋದಿಸಿದರು. ಸರ್ವ ಪಾರ್ಥರೂ ಮತ್ತು ಅಂತಃಪುರದವರೂ ಹಿಂದಿರುಗಿದ ನಂತರ ಮಹಾಪ್ರಾಜ್ಞ ರಾಜಾ ಧೃತರಾಷ್ಟ್ರನು ವನಕ್ಕೆ ಹೋದನು. ಪಾಂಡವರೂ ಕೂಡ ದುಃಖಶೋಕಪರಾಯಣರಾಗಿ ದೀನರಾಗಿ ಸ್ತ್ರೀಗಳೆಲ್ಲರ ಸಹಿತ ಯಾನಗಳಲ್ಲಿ ಪುರವನ್ನು ಪ್ರವೇಶಿಸಿದರು. ಹಸ್ತಿನಾಪುರ ನಗರದ ಸ್ತ್ರೀ-ವೃದ್ಧ-ಕುಮಾರಕರೆಲ್ಲರಿಗೂ ಹರ್ಷವೇ ಇಲ್ಲದಂತಾಯಿತು. ಉತ್ಸವಾದಿಗಳು ನಡೆಯಲಿಲ್ಲ. ಎಲ್ಲರೂ ನಿರುತ್ಸಾಹರಾಗಿದ್ದರು. ಕುಂತಿಯಿಲ್ಲದೇ ಪಾಂಡವರು ಹಸುವಿಲ್ಲದ ಕರುಗಳಂತೆ ಅತ್ಯಂತ ದುಃಖಾರ್ತರಾಗಿದ್ದರು.

ಧೃತರಾಷ್ಟ್ರನಾದರೋ ಆ ದಿನ ಬಹಳ ದೂರ ನಡೆದು ಭಾಗೀರಥೀತೀರದಲ್ಲಿ ನಿವಾಸವನ್ನು ಮಾಡಿದನು. ಅಲ್ಲಲ್ಲಿ ಇದ್ದ ದ್ವಿಜಶ್ರೇಷ್ಠ ತಪೋಧನರು ಮತ್ತು ವೇದಪಾರಂಗತರು ಪ್ರತಿಷ್ಠಾಪಿಸಿದ್ದ ಅಗ್ನಿಗಳು ಪ್ರಕಾಶಮಾನವಾಗಿ ಕಾಣುತ್ತಿದ್ದವು. ವೃದ್ಧ ನರಾಧಿಪನು ಅಲ್ಲಿಯೇ ಅಗ್ನಿಯನ್ನು ಪ್ರತಿಷ್ಠಾಪಿಸಿದನು. ರಾಜನು ವಿಧಿವತ್ತಾಗಿ ಮೂರು ಅಗ್ನಿಗಳಲ್ಲಿ ಆಹುತಿಗಳನ್ನಿತ್ತು ಉಪಾಸನೆ ಮಾಡಿದನು. ಸಂಧ್ಯಾಗತ ಸಹಸ್ರಾಂಶು ಸೂರ್ಯನನ್ನೂ ಉಪಾಸಿಸಿದನು. ವಿದುರ ಮತ್ತು ಸಂಜಯರು ಕುಶಗಳಿಂದ ರಾಜನ ಹಾಸಿಗೆಯನ್ನೂ, ಕುರುವೀರನ ಹತ್ತಿರದಲ್ಲಿಯೇ ಗಾಂಧಾರಿಯ ಹಾಸಿಗೆಯನ್ನೂ ಮಾಡಿದರು. ಗಾಂಧಾರಿಯ ಪಕ್ಕದಲ್ಲಿಯೇ ಕುಶದ ಹಾಸಿಗೆಯ ಮೇಲೆ ಯುಧಿಷ್ಠಿರನ ಜನನಿ ಸಾಧುವ್ರತೇ ಕುಂತಿಯು ಮಲಗಿದಳು. ಅವರಿಗೆ ಕೇಳಿಸುವಷ್ಟು ದೂರದಲ್ಲಿಯೇ ವಿದುರಾದಿಗಳು, ಯಾಜಕರು, ಮತ್ತು ಅನುಯಾಯಿಗಳಾಗಿ ಬಂದ ದ್ವಿಜರು ಸ್ಥಳವಿದ್ದ ಹಾಗೆ ಮಲಗಿಕೊಂಡರು. ಸ್ವಾಧ್ಯಾಯದಲ್ಲಿ ನಿರತರಾಗಿದ ಬ್ರಾಹ್ಮಣರಿಂದ ಮತ್ತು ಪ್ರಜ್ವಲಿಸುತ್ತಿದ್ದ ಪಾವಕಗಳಿಂದ ಅ ರಜನಿಯು ಅವರಿಗೆ ಬ್ರಾಹ್ಮೀ ರಾತ್ರಿಯಂತೆ ಸಂತೋಷವನ್ನುಂಟು ಮಾಡಿತು.

ರಾತ್ರಿಯು ಕಳೆಯಲು ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ವಿಧಿವತ್ತಾಗಿ ಅಗ್ನಿಗಳಲ್ಲಿ ಹೋಮಮಾಡಿ, ಎಲ್ಲರೂ ಯಥಾಕ್ರಮವಾಗಿ ಪ್ರಯಾಣ ಬೆಳೆಸಿದರು. ಉಪವಾಸವ್ರತನಿಷ್ಠರಾಗಿದ್ದ ಅವರು ಉತ್ತರಾಭಿಮುಖವಾಗಿ ಹೊರಟರು. ಶೋಕ ಪಡುತ್ತಿದ್ದ ನಗರ-ಗ್ರಾಮೀಣ ಜನರನ್ನು ನೋಡಿ ಶೋಕಿಸುತ್ತಿದ್ದ ಅವರಿಗೆ ಆ ಮೊದಲನೆಯ ದಿನವು ಅತಿದುಃಖಕರವಾಗಿತ್ತು.”

ಧೃತರಾಷ್ಟ್ರಾದಿಗಳು ಶತಯೂಪನ ಆಶ್ರಮಕ್ಕೆ ತೆರಳಿದುದು

ಅನಂತರ ವಿದುರನ ಅಭಿಪ್ರಾಯದಂತೆ ರಾಜಾ ಧೃತರಾಷ್ಟ್ರನು ಭಾಗೀರಥೀ ತೀರದಲ್ಲಿ ಪುಣ್ಯಜನರಿಗೆ ಉಚಿತವಾದ ನಿವಾಸವನ್ನು ಮಾಡಿಸಿಕೊಂಡನು. ಅಲ್ಲಿಗೆ ಅನೇಕ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ರಾಷ್ಟ್ರವಾಸೀ ಗಣಗಳು ಬಂದು ಸೇರಿದವು. ಅವರಿಂದ ಪರಿವೃತನಾಗಿದ್ದ ರಾಜನು ಸಮಯೋಚಿತ ಮಾತುಕಥೆಗಳಿಂದ ಅವರನ್ನು ಅಭಿನಂದಿಸಿ, ವಿಧಿವತ್ತಾಗಿ ಪ್ರತಿಪೂಜೆಗೊಳಗೊಂಡು ಶಿಷ್ಯರೊಂದಿಗೆ ಅವರಿಗೆ ಅನುಮತಿಯನ್ನಿತ್ತನು. ಸಾಯಂಕಾಲವಾಗುತ್ತಲೇ ಮಹೀಪಾಲ ಮತ್ತು ಯಶಸ್ವಿನೀ ಗಾಂಧಾರಿಯರು ಗಂಗೆಯಲ್ಲಿ ಇಳಿದು ವಿಧಿವತ್ತಾಗಿ ಸ್ನಾನಾದಿಗಳನ್ನು ಮಾಡಿದರು. ಹಾಗೆಯೇ ವಿದುರಾದಿ ಅನ್ಯ ಪುರುಷರೂ ಪ್ರತ್ಯೇಕ ಪ್ರತ್ಯೇಕ ತೀರ್ಥಗಳಲ್ಲಿ ಮುಳುಗಿ ಸಂಧ್ಯಾಕ್ರಿಯೆಗಳನ್ನು ಪೂರೈಸಿದರು. ಶೌಚಗಳನ್ನು ಪೂರೈಸಿದ ವೃದ್ಧ ಮಾವ ಮತ್ತು ಗಾಂಧಾರಿಯರನ್ನು ಕುಂತಿಭೋಜನ ಮಗಳು ಪೃಥೆಯು ಗಂಗಾತೀರಕ್ಕೆ ಕರೆತಂದಳು. ಅಲ್ಲಿ ಯಾಜಕರು ಮಾಡಿದ್ದ ವೇದಿಯಲ್ಲಿ ರಾಜ ಸತ್ಯಸಂಗರ ನೃಪತಿಯು ಹೋಮಮಾಡಿದನು. ಅನಂತರ ಆ ಸಂಯತೇಂದ್ರಿಯ ನೃಪತಿಯು ನಿಯಮಬದ್ಧನಾಗಿದ್ದುಕೊಂಡು ಭಾಗೀರಥೀ ತೀರದಿಂದ ಕುರುಕ್ಷೇತ್ರಕ್ಕೆ ಹೋದನು. ಅಲ್ಲಿಗೆ ಹೋಗಿ ಧೀಮಾನ್ ಪಾರ್ಥಿವನು ಮನೀಷೀ ರಾಜರ್ಷಿ ಶತಯೂಪನ ಆಶ್ರಮವನ್ನು ತಲುಪಿದನು. ಆ ಪರಂತಪನು ಕೇಕಯರ ಮಹಾರಾಜನಾಗಿದ್ದನು. ಮಗನಿಗೆ ಮನುಜೈಶ್ವರ್ಯಗಳನ್ನು ಒಪ್ಪಿಸಿ ವನವನ್ನು ಪ್ರವೇಶಿಸಿದ್ದನು. ಅವನೊಡನೆ ರಾಜನು ವ್ಯಾಸನ ಆಶ್ರಮಕ್ಕೆ ಹೋದನು.

ಅಲ್ಲಿ ವ್ಯಾಸನು ಕುರೂದ್ವಹನನ್ನು ವಿಧಿವತ್ತಾಗಿ ಸ್ವಾಗತಿಸಿದನು. ರಾಜಾ ಕೌರವನಂದನನು ಅಲ್ಲಿ ದೀಕ್ಷೆಯನ್ನು ಪಡೆದು ಶತಯೂಪನ ಆಶ್ರಮದಲ್ಲಿ ನಿವಾಸ ಮಾಡಿದನು. ಆಗ ವ್ಯಾಸನ ಅನುಮತಿಯಂತೆ ಮಹಾಮತಿ ಶತಯೂಪನು ರಾಜನಿಗೆ ಆರಣ್ಯಕದ ಎಲ್ಲ ವಿಧಿಗಳನ್ನೂ ತಿಳಿಸಿದನು. ಹೀಗೆ ಮಹಾಮನಸ್ವಿ ರಾಜಾ ಧೃತರಾಷ್ಟ್ರನು ಅವುಗಳನ್ನು ಅನುಚರಿಸುತ್ತಾ ತನ್ನನ್ನು ತಾನೇ ತಪಸ್ಸಿನಲ್ಲಿ ತೊಡಗಿಸಿಕೊಂಡನು. ಹಾಗೆಯೇ ವಲ್ಕಲ-ಜಿನವಸ್ತ್ರಗಳನ್ನು ಧರಿಸಿದ್ದ ದೇವೀ ಗಾಂಧಾರಿಯು ಕುಂತಿಯೊಡನೆ ಸಮಾನವ್ರತಗಳನ್ನು ಆಚರಿಸುತ್ತಿದ್ದಳು. ಕರ್ಮ-ಮನಸ್ಸು-ಮಾತು-ಕಣ್ಣುಗಳಿಂದ ಇಂದ್ರಿಯಗ್ರಾಮಗಳನ್ನು ನಿಗ್ರಹಿಸಿಕೊಂಡು ಅವರು ಪರಮ ತಪಸ್ಸಿನಲ್ಲಿ ನಿರತರಾಗಿದ್ದರು.

ಮಾಂಸಗಳು ಒಣಗಿ ಕೇವಲ ಅಸ್ಥಿಭೂತನಾಗಿ, ಜಟಾಧಾರಿಯಾಗಿ ವಲ್ಕಲ-ಜಿನವಸ್ತ್ರಗಳನ್ನು ಉಟ್ಟು ಮಹರ್ಷಿಗಳಂತೆಯೇ ತೀವ್ರ ತಪಸ್ಸನ್ನು ಮಾಡುತ್ತಿದ್ದ ಆ ಪಾರ್ಥಿವನು ದೋಷಗಳೆಲ್ಲವನ್ನೂ ಕಳೆದುಕೊಂಡನು. ಧರ್ಮಾರ್ಥಗಳನ್ನು ತಿಳಿದಿದ್ದ ಮಹಾಮತಿ ಘೋರತಪಸ್ವೀ ಜಿತಾತ್ಮ ವಿದುರನೂ ಕೂಡ ಕೃಶನಾಗಿ, ವಲ್ಕಲ-ಚೀರವಸ್ತ್ರಗಳನ್ನುಟ್ಟು, ಸಂಜಯನೊಡನೆ ನೃಪತಿ ಮತ್ತು ಅವನ ಪತ್ನಿಯ ಸೇವೆಯನ್ನು ಮಾಡುತ್ತಿದ್ದನು.

ಆಗ ಅಲ್ಲಿಗೆ ರಾಜನನ್ನು ಕಾಣಲು ಮುನಿಶ್ರೇಷ್ಠ ನಾರದ-ಪರ್ವತರೂ, ಮಹಾತಪಸ್ವೀ ದೇವಲನೂ, ಶಿಷ್ಯರೊಂದಿಗೆ ದ್ವೈಪಾಯನನೂ, ಅನ್ಯ ಮನೀಷೀ ಸಿದ್ಧರೂ, ಪರಮ ಧಾರ್ಮಿಕ ವೃದ್ಧ ರಾಜರ್ಷಿ ಶತಯೂಪನೂ ಆಗಮಿಸಿದರು. ಕುಂತಿಯು ಅವರನ್ನು ಯಥಾವಿಧಿಯಾಗಿ ಪೂಜಿಸಿದಳು. ಆ ತಾಪಸರೂ ಕೂಡು ಅವಳ ಪರಿಚರ್ಯೆಯಿಂದ ತೃಪ್ತರಾದರು. ಅಲ್ಲಿ ಆ ಪರಮಋಷಿಗಳು ಧಾರ್ಮಿಕ ವಿಷಯಗಳ ಕುರಿತು ಮಾತನಾಡುತ್ತಾ ಮಹಾತ್ಮ ಜನಾಧಿಪ ಧೃತರಾಷ್ಟ್ರನನ್ನು ರಮಿಸುತ್ತಿದ್ದರು. ಆ ಮಾತುಕಥೆಯ ಮಧ್ಯದಲ್ಲಿ ಎಲ್ಲದರ ಪ್ರತ್ಯಕ್ಷದರ್ಶಿಯಾದ ದೇವರ್ಷಿ ನಾರದನು ಈ ಕಥೆಯನ್ನು ಹೇಳಲು ಉಪಕ್ರಮಿಸಿದನು: “ಹಿಂದೆ ಶತಯೂಪನ ಪಿತಾಮಹ ಪ್ರಜಾಪತಿಯಂತಿದ್ದ ಮತ್ತು ಭಯವೇನೆಂಬುದನ್ನೇ ತಿಳಿಯದಿದ್ದ ಸಹಸ್ರಚಿತ್ಯ ಎಂಬ ಹೆಸರಿನ ರಾಜನಿದ್ದನು. ಧರ್ಮಾತ್ಮ ನೃಪ ಸಹಸ್ರಚಿತ್ಯನು ರಾಜ್ಯವನ್ನು ತನ್ನ ಪರಮಧಾರ್ಮಿಕ ಜ್ಯೇಷ್ಠ ಪುತ್ರನಿಗೆ ಒಪ್ಪಿಸಿ ವನವನ್ನು ಪ್ರವೇಶಿಸಿದನು. ಆ ಮಹಾಮನಸ್ವಿ ನರಾಧಿಪನು ದೀಪ್ತ ತಪಸ್ಸನ್ನು ಪೂರೈಸಿ ಪುರಂದರನ ಸಂಸ್ಥಾನವನ್ನು ಪಡೆದನು. ರಾಜನ್! ತಪಸ್ಸಿನಿಂದ ಪಾಪಗಳನ್ನು ಸುಟ್ಟ ಆ ರಾಜನನ್ನು ನಾನು ಈ ಮೊದಲು ಅನೇಕ ಬಾರಿ ಮಹೇಂದ್ರಸದನದಲ್ಲಿ ನೋಡಿದ್ದೇನೆ. ಹಾಗೆಯೇ ಭಗದತ್ತನ ಪಿತಾಮಹ ರಾಜಾ ಶೈಲಾಲಯ ನೃಪನು ತಪೋಬಲದಿಂದಲೇ ಮಹೇಂದ್ರಸದನಕ್ಕೆ ಹೋಗಿದ್ದಾನೆ. ಹಾಗೆಯೇ ವಜ್ರಧರನಿಗೆ ಸಮನಾಗಿದ್ದ ಪೃಷಧ್ರ ಎಂಬ ರಾಜ ನೃಪನೂ ಕೂಡ ತಪಸ್ಸಿನಿಂದ ಸ್ವರ್ಗಲೋಕವನ್ನು ಪಡೆದನು. ಇದೇ ಅರಣ್ಯದಲ್ಲಿ ಮಾಂಧಾತನ ಮಗ ನೃಪ ಪುರುಕುತ್ಸನೂ ಕೂಡ ಮಹಾ ಸಿದ್ಧಿಯನ್ನು ಪಡೆದನು. ನದಿಗಳಲ್ಲಿ ಶ್ರೇಷ್ಠಳಾದ ನರ್ಮದೆಯು ಅವನ ಪತ್ನಿಯಾಗಿದ್ದಳು. ಆ ನೃಪತಿಯು ಇದೇ ಅರಣ್ಯದಲ್ಲಿ ತಪಸ್ಸನ್ನು ತಪಿಸಿ ಸ್ವರ್ಗಕ್ಕೆ ಹೋದನು. ಶಶಲೋಮ ಎಂಬ ಹೆಸರಿನ ಪರಮಧಾರ್ಮಿಕ ರಾಜನಿದ್ದನು. ಅವನೂ ಕೂಡ ಇದೇ ವನದಲ್ಲಿ ತಪಸ್ಸನ್ನು ತಪಿಸಿ ಸ್ವರ್ಗವನ್ನು ಪಡೆದುಕೊಂಡನು. ದ್ವೈಪಾಯನನ ಪ್ರಸಾದದಿಂದ ನೀನೂ ಕೂಡ ಈ ತಪೋವನಕ್ಕೆ ಬಂದಿರುವೆ. ನೀನು ಕಷ್ಟಕರ ಹೆಚ್ಚಿನ ಸಿದ್ಧಿಯನ್ನು ಪಡೆದು ಮೇಲೆ ಹೋಗುತ್ತೀಯೆ! ನೀನೂ ಕೂಡ ತಪಸ್ಸಿನ ಅಂತ್ಯದಲ್ಲಿ ಶ್ರೀಯಿಂದ ಆವೃತನಾಗಿ ಗಾಂಧಾರಿಯ ಸಹಿತ ಆ ಮಹಾತ್ಮರು ಹೋದ ಗತಿಯಲ್ಲಿಯೇ ಹೋಗುತ್ತೀಯೆ. ಬಲಹಂತು ಇಂದ್ರನ ಸಮೀಪದಲ್ಲಿರುವ ಪಾಂಡುವು ನಿತ್ಯವೂ ನಿನ್ನನ್ನು ಸ್ಮರಿಸಿಕೊಳ್ಳುತ್ತಾನೆ. ಮಹೀಪಾಲ! ಅವನು ಸದೈವ ನಿನಗೆ ಶ್ರೇಯಸ್ಸನ್ನುಂಟುಮಾಡಲು ನಿರತನಾಗಿದ್ದಾನೆ. ನಿನ್ನ ಸೊಸೆ ಯಶಸ್ವಿನೀ ಕುಂತಿಯು ನಿನ್ನ ಮತ್ತು ಗಾಂಧಾರಿಯರ ಶುಶ್ರೂಷೆಯಿಂದಾಗಿ ತನ್ನ ಪತಿಯ ಲೋಕಕ್ಕೇ ಹೋಗುತ್ತಾಳೆ. ಯುಧಿಷ್ಠಿರನ ಜನನಿಯು ಅನುಸರಿಸುತ್ತಿರುವುದೇ ಸನಾತನ ಧರ್ಮವಾಗಿದೆ. ದಿವ್ಯದೃಷ್ಟಿಯಿಂದ ನಾನು ಇದನ್ನು ಕಂಡಿದ್ದೇನೆ. ವಿದುರನು ಮಹಾತ್ಮ ಯುಧಿಷ್ಠಿರನನ್ನು ಪ್ರವೇಶಿಸುವನು. ಧ್ಯಾನಮಾಡುತ್ತಿದ್ದಾಗ ಸಂಜಯನು ಪವಿತ್ರ ಸ್ವರ್ಗವನ್ನು ಪಡೆಯುತ್ತಾನೆ.”

ಇದನ್ನು ಕೇಳಿ ಮಹಾತ್ಮಾ ಕೌರವೇಂದ್ರನು ಪತ್ನಿಯೊಡನೆ ಸುಪ್ರೀತನಾದನು. ನಾರದನ ವಾಕ್ಯವನ್ನು ಕೇಳಿ ವಿದ್ವಾನ್ ಧೃತರಾಷ್ಟ್ರನು ನಾರದನಿಗೆ ಅತುಲ ಪೂಜೆಯನ್ನೂ ಮಾಡಿದನು. ಹಾಗೆಯೇ ವಿಪ್ರಸಂಘಗಳೆಲ್ಲವೂ ನಾರದನನ್ನು ಅತೀವವಾಗಿ ಪೂಜಿಸಿದವು. ರಾಜ ಧೃತರಾಷ್ಟ್ರನು ಸಂತೋಷಗೊಂಡಿದ್ದುದನ್ನು ನೋಡಿ ಅವರೂ ಕೂಡ ಪುನಃ ಪುನಃ ನಾರದನನ್ನು ಶ್ಲಾಘಿಸಿದರು.

ಶತಯೂಪಪ್ರಶ್ನ

ನಾರದನ ಆ ಮಾತನ್ನು ದ್ವಿಜೋತ್ತಮರು ಪ್ರಶಂಸಿಸುತ್ತಿರಲು ರಾಜರ್ಷಿ ಶತಯೂಪನಾದರೋ ನಾರದನಿಗೆ ಹೇಳಿದನು: “ಮಹಾದ್ಯುತೇ! ನೀನು ಕುರುರಾಜನ, ನನ್ನ ಮತ್ತು ಸರ್ವ ಜನರ ಶ್ರದ್ಧೆಯನ್ನು ವರ್ಧಿಸಿರುವೆ! ನೃಪ ಧೃತರಾಷ್ಟ್ರನ ಕುರಿತು ನನ್ನ ಒಂದು ಪ್ರಶ್ನೆಯಿದೆ. ಅದನ್ನು ಹೇಳುತ್ತೇನೆ. ಕೇಳು. ನಿನ್ನ ದಿವ್ಯ ದೃಷ್ಟಿಯಿಂದ ಸರ್ವವೃತ್ತಾಂತಗಳ ತತ್ತ್ವಗಳನ್ನೂ ತಿಳಿದಿರುವೆ! ಮನುಷ್ಯರು ಪಡೆಯುವ ವಿವಿಧ ಗತಿಗಳನ್ನು ನೀನು ಕಂಡಿರುವೆ! ಮಹೇಂದ್ರನ ಲೋಕದಲ್ಲಿ ಈ ಲೋಕದ ಯಾವ ಯಾವ ನೃಪತಿಗಳಿರುವರೆನ್ನುವುದನ್ನು ಹೇಳಿದ್ದೀಯೆ! ಈ ಕ್ಷಿತಿಪತಿ ಧೃತರಾಷ್ಟ್ರನಿಗೆ ಯಾವ ಸ್ಥಾನಗಳಿವೆ ಎನ್ನುವುದನ್ನು ಕೇಳಲು ಬಯಸುತ್ತೇನೆ. ಇವನಿಗೆ ಯಾವ ರೀತಿಯ ಲೋಕಗಳು ಯಾವಾಗ ದೊರೆಯುತ್ತವೆ ಎನ್ನುವುದನ್ನು ಕೇಳುವ ನನಗೆ ಹೇಳಬೇಕು.”

ಹೀಗೆ ಕೇಳಲು ದಿವ್ಯದರ್ಶೀ ಮಹಾತಪಸ್ವಿ ನಾರದನು ಆ ಸತ್ಪುರುಷರ ಮಧ್ಯೆ ಸರ್ವರ ಮನಸ್ಸಿಗೂ ಹಿತವಾಗುವ ಈ ಮಾತನ್ನಾಡಿದನು: “ರಾಜರ್ಷೇ! ನನ್ನ ಇಚ್ಛೆಯಂತೆಯೇ ಸಂಚರಿಸುತ್ತಿರುವಾಗ ಶಕ್ರಸದನಕ್ಕೆ ಹೋಗಿ ಅಲ್ಲಿ ಶಚೀಪತಿ ಶಕ್ರನನ್ನೂ ನರಾಧಿಪ ಪಾಂಡುವನ್ನೂ ನಾನು ನೋಡಿದ್ದೇನೆ. ಅಲ್ಲಿಯೇ ಈ ಧೃತರಾಷ್ಟ್ರನ ಕುರಿತು ಮಾತುಕಥೆಗಳು ನಡೆದವು. ಈ ನೃಪನು ತಪಿಸುತ್ತಿರುವ ದುಶ್ಚರ ತಪಸ್ಸಿನ ವಿಷಯವೂ ಅಲ್ಲಿ ಬಂದಿತ್ತು. ಅಲ್ಲಿ ಶಕ್ರನು ಹೇಳಿದ ಈ ಮಾತನ್ನು ನಾನು ಕೇಳಿದೆ. ಈ ರಾಜನ ಪರಮಾಯುಷ್ಯದಲ್ಲಿ ಇನ್ನು ಮೂರು ವರ್ಷಗಳು ಮಾತ್ರವೇ ಉಳಿದಿದೆ. ಅನಂತರ ಈ ರಾಜರಾಜರಿಂದ ಪೂಜಿತನಾದ ನೃಪ ಧೃತರಾಷ್ಟ್ರನು ಗಾಂಧಾರಿಯ ಸಹಿತ ಕುಬೇರಭವನಕ್ಕೆ ಹೋಗುತ್ತಾನೆ. ತಪಸ್ಸಿನಿಂದ ತನ್ನ ಪಾಪಗಳನ್ನು ಸುಟ್ಟು ಈ ಋಷಿಪುತ್ರನು ದಿವ್ಯಾಭರಣಭೂಷಿತನಾಗಿ ಮನಸ್ಸಿಗೆ ಬಂದಲ್ಲಿಗೆ ಚಲಿಸಬಲ್ಲ ವಿಮಾನದಲ್ಲಿ ಹೋಗುತ್ತಾನೆ. ಇವನು ದೇವ-ಗಂಧರ್ವ-ರಾಕ್ಷಸರ ಲೋಕಗಳನ್ನು ಸ್ವಚ್ಚಂದವಾಗಿ ಸಂಚರಿಸುತ್ತಾನೆ. ಇದು ನೀನು ಕೇಳಿದ ಪ್ರಶ್ನೆಗೆ ಉತ್ತರವಾಗಿದೆ. ನೀವು ಶ್ರುತಧನರೂ ತಪಸ್ಸಿನಿಂದ ಪಾಪಗಳನ್ನೂ ಸುಟ್ಟವರೂ ಆಗಿದ್ದೀರಿ. ಆದುದರಿಂದಲೇ ನಿಮಗೆ ನಾನು ಪ್ರೀತಿಯಿಂದ ಈ ಮಹಾ ದೇವಗುಹ್ಯವನ್ನು ಹೇಳಿದ್ದೇನೆ.”

ದೇವರ್ಷಿಯ ಆ ಮಧುರ ವಚನವನ್ನು ಕೇಳಿ ಸರ್ವ ಪಾರ್ಥಿವರೂ ಸುಮನಸ್ಕರಾಗಿ ಸಂತೋಷಗೊಂಡರು. ಹೀಗೆ ಮನೀಷಿ ವಿಪ್ರರು ಮಾತುಗಳಿಂದ ಧೃತರಾಷ್ಟ್ರನನ್ನು ಸಂತೋಷಗೊಳಿಸಿ ಅವನ ಅನುಮತಿಯನ್ನು ಪಡೆದು ಸಿದ್ಧರ ಗತಿಯನ್ನು ಆಶ್ರಯಿಸಿದವರಾಗಿ ಇಚ್ಛೆಬಂದಲ್ಲಿಗೆ ಹೊರಟುಹೋದರು.

  1. ಆರಾಲಿಕಾಃ – ಅಡಿಗೆಯವರು; ಆರಾ ಎಂಬ ಶಬ್ಧದಿಂದ ಕಾಯಿ-ಪಲ್ಯೆಗಳನ್ನು ಕತ್ತರಿಸುವವರು, ತರಕಾರಿಗಳನ್ನು ಹೆಚ್ಚುವವರು ಎಂದರ್ಥ
  2. ಸೂಪಕಾರರು ಎಂದರೆ ಸಾರು-ತೊವ್ವೆ ಮುಂತಾದುವನ್ನು ಮಾಡುವವರು
  3. ರಾಗಖಂಡವಿಕಾಃ – ರಾಗಖಂಡವೆಂಬ ಭಕ್ಷ್ಯ ಅಥವಾ ಭಕ್ಷ್ಯಗಳನ್ನು ತಯಾರಿಸುವವರು
  4. ಕಬ್ಬಿನರಸ, ಪುಷ್ಪರಸ ಇತ್ಯಾದಿಗಳಿಂದ ತಯಾರಿಸಿದ ಮದ್ಯ
  5. ಯುಧಿಷ್ಠಿರನ ಪತ್ನಿ
  6. ಸಹದೇವನ ಪತ್ನಿ
  7. ಅರಸು, ಮಂತ್ರಿ, ಸ್ನೇಹಿತ, ಬೊಕ್ಕಸ, ನಾಡು, ದುರ್ಗ, ಸೇನೆ ಮತ್ತು ಪ್ರಜೆಗಳು ರಾಜ್ಯದ ಅಷ್ಟಾಂಗಗಳು.
  8. ಸ್ವಾಮಿ, ಅಮಾತ್ಯ, ಸುಹೃತ್, ಕೋಶ, ರಾಷ್ಟ್ರ, ದುರ್ಗ, ಸೈನ್ಯ ಮತ್ತು ಪೌರರು ರಾಜನ ಪ್ರಕೃತಿಗಳು.

Leave a Reply

Your email address will not be published. Required fields are marked *