ಇಂದ್ರಲೋಕದಿಂದ ಅರ್ಜುನನ ಪುನರಾಗಮನ

ಅರ್ಜುನನನ್ನು ನೋಡುವ ಆಕಾಂಕ್ಷೆಯಿಂದ ಪಾಂಡವರೆಲ್ಲರೂ ಸುಖ-ಸಂತೋಷದಿಂದ ಕುಬೇರನ ಆ ಪರ್ವತದ ಮೇಲೆ ವಾಸಿಸಿದರು. ಅವರನ್ನು ಕಾಣಲು ಅನೇಕ ಗಂಧರ್ವ-ಮಹರ್ಷಿಗಣಗಳು ಅಲ್ಲಿಗೆ ಬಂದವು. ಸ್ವರ್ಗವನ್ನು ಸೇರಿದ ಮರುತ್ಗಣಗಳಂತೆ ಆ ಮಹಾರಥಿ ಪಾಂಡವರು ಹೂಬಿಡುವ ಮರಗಳಿಂದ ಶೋಭಿತವಾದ ಆ ಉತ್ತಮ ಪರ್ವತವನ್ನು ಸೇರಿ ಪರಮ ಪ್ರಶಾಂತ ಮನಸ್ಸನ್ನು ಹೊಂದಿದರು. ನವಿಲು-ಹಂಸಗಳ ಧ್ವನಿಗಳಿಂದ ಕೂಡಿದ್ದ, ಕುಸುಮಗಳು ಹಾಸಿಗೆಯಂತೆ ಹರಡಿದ್ದ ಆ ಮಹಾಗಿರಿಯ ಶಿಖರಗಳನ್ನೂ ಕಣಿವೆಗಳನ್ನೂ ನೋಡಿ ಅವರು ಪರಮ ಹರ್ಷಿತರಾದರು. ಸಾಕ್ಷಾತ್ ಕುಬೇರನ ಆತಿಥ್ಯವನ್ನು ಪಡೆದು ಅವರು ಆ ಉತ್ತಮ ಪರ್ವತದ ಮೇಲೆ ಹರಿಯುವ ನದಿಗಳನ್ನೂ, ಅವಕ್ಕೆ ದಡವಾಗಿ ನಿಂತ ವನಗಳನ್ನೂ, ಕಾಡಂಬ-ಕಾರಂಡ-ಹಂಸಗಳು ಆಡುತ್ತಿದ್ದ ತಾವರೆ ಹೂಗುಚ್ಛಗಳಿಂದ ಕೂಡಿದ ಕೊಳಗಳನ್ನೂ ನೋಡಿದರು. ರಾಜಾ ಕುಬೇರನ ಬಳಿಯಿದ್ದ ಕ್ರೀಡಾಪ್ರದೇಶಗಳನ್ನೂ, ಬಣ್ಣಬಣ್ಣದ ಮಾಲೆಗಳನ್ನೂ, ಶೋಭಿಸುವ ಸುಮನೋಹರ ಮಣಿಗಳನ್ನೂ ಎಲ್ಲವನ್ನೂ ಅವರು ನೋಡಿದರು. ತಪಸ್ಸನ್ನೇ ಪ್ರಧಾನವಾಗಿಟ್ಟುಕೊಂಡಿದ್ದ ಅವರು ಸತತವೂ ತಿರುಗಾಡುತ್ತಾ ಮೋಡಗಳನ್ನು ಮುಟ್ಟುವಂತಿದ್ದ ಮತ್ತು ಪರ್ವತ ಶಿಖರವನ್ನೇ ಮುಚ್ಚಿದ್ದ ಅನೇಕ ಬಣ್ಣ-ಸುಗಂಧಗಳ ಮಹಾವೃಕ್ಷಗಳನ್ನು ನೋಡಿದರು. ಆ ನಗೋತ್ತಮ ಪರ್ವತದ ಸ್ವತೇಸ್ಸಿನಿಂದ ಮತ್ತು ಮಹೌಷಧಗಳ ಪ್ರಭಾವದಿಂದ ಅಲ್ಲಿ ಹಗಲು-ರಾತ್ರಿಗಳನ್ನು ಬೇರಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಅವರು ಅಲ್ಲಿಯೇ ತಂಗಿ ಸ್ಥಾವರ-ಜಂಗಮಗಳಿಗೆ ಆಧಾರನಾದ ಅಮಿತೌಜಸ ವಿಭಾವಸುವಿನ ಉದಯ-ಅಸ್ತಗಳನ್ನು ವೀಕ್ಷಿಸುತ್ತಿದ್ದರು.ಆ ವೀರರು ಸೂರ್ಯನ ಉದಯದೊಂದಿಗೆ ರಾತ್ರಿಯು ಕಳೆಯುವುದನ್ನು ಮತ್ತು ಅವನು ಮುಳುಗುವುದರೊಂದಿಗೆ ರಾತ್ರಿಯು ಪುನಃ ಬರುವುದನ್ನು ನೋಡಿದರು. ಅವನ ಕಿರಣಗಳು ಎಲ್ಲ ದಿಕ್ಕುಗಳನ್ನೂ ಜಾಲಗಳಂತೆ ಪಸರಿಸುವುದನ್ನು ನೋಡಿದರು. ಆ ಮಹಾರಥರು ಸ್ವಾಧ್ಯಾಯ ನಿರತರಾಗಿ ನಿತ್ಯಕರ್ಮಗಳನ್ನು ಮಾಡುತ್ತಾ, ಧರ್ಮವನ್ನೇ ಪ್ರಧಾನವನ್ನಾಗಿರಿಸಿಕೊಂಡು, ಶುಚಿವ್ರತರೂ ಸತ್ಯವಂತರೂ ಆಗಿ ಆ ಸತ್ಯವ್ರತ ಅರ್ಜುನನ ಆಗಮನವನ್ನು ಕಾಯುತ್ತಿದ್ದರು. “ಶೀಘ್ರದಲ್ಲಿಯೇ ನಾವು ಇಲ್ಲಿ ಅಸ್ತ್ರಗಳನ್ನು ಕಲಿತುಕೊಂಡು ಬರುವ ಧನಂಜಯನನ್ನು ಸೇರಿ ಹರ್ಷಿತರಾಗುವರಿದ್ದೇವೆ!” ಎಂದು ಹೇಳಿಕೊಳ್ಳುತ್ತಾ ಆ ಪಾರ್ಥರು ಪರಮ ಆಶೀರ್ವಾದಗಳಿಂದ ತಪಸ್ಸು-ಯೋಗಗಳಲ್ಲಿ ನಿರತರಾಗಿದ್ದರು. ಆ ವಿಚಿತ್ರ ಗಿರಿ-ವನಗಳನ್ನು ನೋಡುವಾಗ ಸದಾ ಅವರು ಕಿರೀಟಿಯ ಕುರಿತು ಚಿಂತಿಸುತ್ತಿದ್ದರು. ಅವರ ದಿನ-ರಾತ್ರಿಗಳು ಒಂದೊಂದು ವರುಷಗಳಾಗಿ ತೋರುತ್ತಿದ್ದವು. ಮಹಾತ್ಮ ಧೌಮ್ಯನ ಅನುಮತಿಯಂತೆ ಎಂದು ಜಿಷ್ಣುವು ಜಟೆಯನ್ನು ಧರಿಸಿ ಪರಿವ್ರಾಜಕನಾದನೋ ಅಂದಿನಿಂದ ಅವರು ಸಂತೋಷವನ್ನೇ ಹೊಂದಿರಲಿಲ್ಲ. ಆ ಗಜಗಾಮಿ ಜಿಷ್ಣುವು ಅಣ್ಣ ಯುಧಿಷ್ಠಿರನ ಆದೇಶದಂತೆ ಕಾಮ್ಯಕವನ್ನು ಬಿಟ್ಟುಹೋದಾಗಿನಿಂದ ಅವರು ಶೋಕಹತರಾಗಿದ್ದರು. ಹೀಗೆ ವಾಸವನಲ್ಲಿ ಅಸ್ತ್ರಾರ್ಥಿಯಾಗಿ ಹೋಗಿದ್ದ ಅರ್ಜುನನ ಕುರಿತು ಚಿಂತಿಸುತ್ತಾ ಆ ಪಾಂಡವು ಅಲ್ಲಿ ಕಷ್ಟದಿಂದ ಒಂದು ತಿಂಗಳು ಕಳೆದರು.

ಆಗ ಒಂದು ದಿನ ಆ ಮಹಾರಥಿಗಳು ಒಮ್ಮೆಲೇ ವಿದ್ಯುತ್ತಿನ ಪ್ರಭೆಯನ್ನು ಹೊಂದಿದ ಇಂದ್ರನ ಕುದುರೆಗಳನ್ನು ಕಟ್ಟಿದ ಯಾನವನ್ನು ನೋಡಿದರು. ಅರ್ಜುನನೇ ಬರುತ್ತಿರಬೇಕೆಂದು ಯೋಚಿಸಿ ಹರ್ಷಿತರಾದರು. ಮಾತಲಿಯು ನಡೆಸುತ್ತಿದ್ದ ಹೊಗೆಯಿಲ್ಲದೇ ಚೆನ್ನಾಗಿ ಉರಿಯುತ್ತಿರುವ ಜ್ವಾಲೆಯಂತೆ ಬೆಳಗುತಿದ್ದ ಆ ರಥವು ಘನ ಆಕಾಶದಲ್ಲಿ ಮಹಾ ಉಲ್ಕೆಯಂತೆ ಅಂತರಿಕ್ಷವನ್ನು ಬೆಳಗಿಸುತ್ತಿತ್ತು. ಅದರಲ್ಲಿ ವಜ್ರಧರನ ಪ್ರಭಾವದಿಂದ ಶ್ರೇಷ್ಠ ಆಭರಣ-ಮಾಲೆಗಳಿಂದ ಕಾಂತಿಯುಕ್ತನಾಗಿ ಬೆಳಗುತ್ತಾ ಕುಳಿತಿದ್ದ ಕಿರೀಟಿ ಧನಂಜಯನನ್ನು ಅವರು ನೋಡುತ್ತಿದ್ದಂತೆಯೇ ಅದು ಪರ್ವತದ ಮೇಲೆ ಬಂದಿಳಿಯಿತು. ಕಿರೀಟಮಾಲೀ ಅರ್ಜುನನು ಮಹೇಂದ್ರನ ರಥದಿಂದಿಳಿದು ಮೊದಲು ಧೌಮ್ಯನ ಪಾದಗಳಿಗೆರಗಿ ವಂದಿಸಿ ಅನಂತರ ಅಜಾತಶತ್ರು ಯುಧಿಷ್ಠಿರನ ಪಾದಗಳಿಗೆ ವಂದಿಸಿದನು. ಅವನು ವೃಕೋದರನ ಪಾದಗಳಿಗೂ ವಂದಿಸಿದನು ಮತ್ತು ಮಾದ್ರೀಸುತರನ್ನು ಅಭಿವಾದಿಸಿದನು. ಕೃಷ್ಣೆಯನ್ನು ಸೇರಿ ಅವಳನ್ನು ಪರಿಸಂಚಿಸಿದನು ಮತ್ತು ತಲೆಬಾಗಿ ತನ್ನ ಅಣ್ಣನ ಕೆಳಗೆ ನಿಂತುಕೊಂಡನು. ಆ ಅಪ್ರಮೇಯನ ಮಿಲನದಿಂದ ಅವರಿಗೆ ಪರಮ ಹರ್ಷವಾಯಿತು. ಅರ್ಜುನನೂ ಕೂಡ ಅವರನ್ನು ಕಂಡು ಆನಂದಿಸಿದನು. ಆಗ ಹೃದಯಗಳು ಸಂತೋಷಭರಿತವಾಗಿದ್ದ ಪಾಂಡವರು ನಮೂಚಿ ಹಂತಕ ಇಂದ್ರನು ಯಾವುದರಲ್ಲಿ ಕುಳಿತು ದಿತಿಯ ಮಕ್ಕಳ ಏಳು ಪಂಗಡಗಳನ್ನು ಸಂಹರಿಸಿದ್ದನೋ ಆ ಇಂದ್ರವಾಹನವನ್ನು ಸಮೀಪಿಸಿ ಪ್ರದಕ್ಷಿಣೆ ಮಾಡಿದರು. ಅತೀವ ಹೃಷ್ಟರಾದ ಕುರುರಾಜಪುತ್ರರಲ್ಲರೂ ಮಾತಲಿಗೆ ಸುರರಾಜ ಸಮಾನ ಸತ್ಕಾರವನ್ನಿತ್ತು ಯಥವತ್ತಾಗಿ ದಿವೌಕಸರ ಕುರಿತು ಕೇಳಿದರು. ಮಾತಲಿಯೂ ಕೂಡ ತಂದೆಯು ಮಕ್ಕಳನ್ನು ಹೇಗೋ ಹಾಗೆ ಅವರನ್ನು ಅಭಿನಂದಿಸಿ ಉಪದೇಶಿಸಿದನು. ಬಳಿಕ ಅವನು ಆ ಅಪ್ರತಿಮ ರಥದಲ್ಲಿ ಮರಳಿ ತ್ರಿದೇವೇಶ್ವರನ ಬಳಿ ಹೋದನು.

ಆ ವರದೇವನ ಯಾನವು ಹೊರಟುಹೋಗಲು ಅರ್ಜುನನು ಮಹಾತ್ಮ ಶಕ್ರನು ನೀಡಿದ್ದ ಮಹಾಧನ-ಉತ್ತಮ ರೂಪಗಳನ್ನೂ, ದಿವಾಕರನಂತೆ ಹೊಳೆಯುತ್ತಿದ್ದ ವಿಭೂಷಣಗಳನ್ನೂ ಪ್ರೀತಿಯಿಂದ ಸುತಸೋಮನ ತಾಯಿ ದ್ರೌಪದಿಗೆ ಕೊಟ್ಟನು. ಅನಂತರ ಅವನು ಕುರುಪುಂಗವರ ಮತ್ತು ವಿಪ್ರರ್ಷಿಭರ ಮಧ್ಯೆ ಕುಳಿತು ನಡೆದುದೆಲ್ಲವನ್ನೂ ಹೇಳಿದನು. ಆ ರಾತ್ರಿಯನ್ನು ಪ್ರತೀತನಾಗಿ ಮಾದ್ರೀಸುತರೊಡನೆ ಮಲಗಿ ನಿದ್ರಿಸಿದನು.

ಇದೇ ಸಮಯದಲ್ಲಿ ಅಂತರಿಕ್ಷದಲ್ಲಿ ದಿವೌಕಸರ ಸರ್ವವಾದ್ಯಗಳ ನಿನಾದವೂ ಸೇರಿದ ತುಮುಲ ಶಬ್ಧವು ಕೇಳಿಬಂದಿತು. ರಥದ ಗಾಲಿಯ ಶಬ್ಧ, ಘಂಟಾಶಬ್ಧ, ಮತ್ತು ವ್ಯಾಲ-ಮೃಗ-ಪಕ್ಷಿಗಳ ಕೂಗುಗಳು ಎಲ್ಲೆಡೆಯಲ್ಲಿಯೂ ಕೇಳಿ ಬಂದಿತು. ಸೂರ್ಯ ಸಂಕಾಶ ವಿಮಾನಗಳಲ್ಲಿ ಗಂಧರ್ವ-ಅಪ್ಸರೆಯರು ದೇವರಾಜ ಇಂದ್ರನನ್ನು ಸುತ್ತುವರೆದು ಬರುತ್ತಿರುವುದು ಕಾಣಿಸಿತು. ಆಗ ಸುವರ್ಣಾಭರಣಗಳಿಂದ ಅಲಂಕೃತ ಕುದುರೆಗಳು ಎಳೆವ ಮೇಘನಾದದ ರಥವನ್ನೇರಿ ತನ್ನ ಶ್ರೀಯಿಂದ ತೀವ್ರವಾಗಿ ಪ್ರಜ್ವಲಿಸುತ್ತಿದ್ದ ಪುರಂದರ ದೇವರಾಜನು ಪಾರ್ಥರ ಬಳಿಬಂದನು. ಸಹಸ್ರಾಕ್ಷನು ತನ್ನ ರಥದಿಂದ ಇಳಿದನು. ದೇವರಾಜನನ್ನು ಕಂಡೊಡನೆಯೇ ಧರ್ಮರಾಜ ಯುಧಿಷ್ಠಿರನು ಸಹೋದರರ ಸಹಿತ ಅವನ ಬಳಿಬಂದು, ವಿಧಿವತ್ತಾಗಿ ವಿಧಿದೃಷ್ಟ ಕರ್ಮಗಳಿಂದ ಆ ಅಮಿತಾತ್ಮನನ್ನು ಪೂಜಿಸಿದನು. ತೇಜಸ್ವಿ ಧನಂಜಯನು ಪುರಂದರನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಸೇವಕನಂತೆ ದೇವರಾಜನ ಸಮೀಪದಲ್ಲಿ ನಿಂತುಕೊಂಡನು. ಯುಧಿಷ್ಠಿರನು ಹತ್ತಿರದಲ್ಲಿ ವಿನೀತನಾಗಿ ನಿಂತಿದ್ದ ಅರ್ಜುನನನ್ನು ನೋಡಿ ಅವನ ದರ್ಶನದಂದ ಮಹಾ ಹರ್ಷಾವಿಷ್ಟನಾಗಿ ದೇವರಾಜನ ತಪೋಯುಕ್ತ ಅಕಲ್ಮಶ ಜಟಿಲಕ್ಕೆ ಮುತ್ತಿಟ್ಟನು. ಆ ಇಂದ್ರನು ಹರ್ಷದಿಂದ ತೋಯ್ದಿದ್ದ ದೀನ ರಾಜನಿಗೆ ಈ ಮಾತುಗಳನ್ನಾಡಿದನು:

“ರಾಜನ್! ನೀನು ಈ ಪೃಥ್ವಿಯನ್ನು ಆಳುತ್ತೀಯೆ! ನಿನಗೆ ಒಳ್ಳೆಯದಾಗಲಿ. ಪುನಃ ಕಾಮ್ಯಕ ವನಕ್ಕೆ ಹೋಗು. ಅರ್ಜುನನು ಪ್ರಯತ್ನಪಟ್ಟು ನನ್ನಿಂದ ಎಲ್ಲ ಅಸ್ತ್ರಗಳನ್ನೂ ಪಡೆದಿದ್ದಾನೆ. ಅವನು ನನಗೆ ಅತ್ಯಂತ ಸಂತೋಷವನ್ನು ನೀಡಿದ್ದಾನೆ. ಇವನನ್ನು ಲೋಕದಲ್ಲಿ ಗೆಲ್ಲಲು ಯಾರೂ ಶಕ್ಯರಿಲ್ಲ.” ಹೀಗೆ ಯುಧಿಷ್ಠಿರನಿಗೆ ಹೇಳಿ ಇಂದ್ರನು ಸಂತೋಷದಿಂದ ಸ್ತುತಿಸುತ್ತಿರುವ ಮಹರ್ಷಿಗಳೊಂದಿಗೆ ತ್ರಿದಿವಕ್ಕೆ ತೆರಳಿದನು.

ಅರ್ಜುನನಿಂದ ಪುನಃ ವಿಸ್ತಾರವಾಗಿ ಕಿರಾತರೂಪೀ ಶಿವನೊಂದಿಗೆ ಯುದ್ಧಗೈದು ಅವನು ಪಾಶುಪತವನ್ನು ಪಡೆದುದು, ಇಂದ್ರಲೋಕಗಮನ ಮತ್ತು ಅಲ್ಲಿ ಅವನ ವಾಸ ಹಾಗೂ ನಿವಾತಕವಚರೊಡನೆ ಅವನ ಯುದ್ಧ ಇವುಗಳ ಕುರಿತು ಕೇಳಿದ ನಂತರ ಯುಧಿಷ್ಠರನು ಹೇಳಿದನು: “ಧನಂಜಯ! ಅದೃಷ್ಟವಶಾತ್ ನೀನು ದಿವ್ಯಾಸ್ತ್ರಗಳನ್ನು ಪಡೆದೆ! ನೀನು ದೇವತೆಗಳ ಒಡೆಯನನ್ನು ಆರಾಧಿಸಿದುದೂ ಅದೃಷ್ಟವೇ ಸರಿ. ಅದೃಷ್ಟವಶಾತ್ ನೀನು ಸಕ್ಷಾತ್ ಭಗವಾನ್ ಸ್ಥಾಣುವನ್ನು ದೇವಿಯ ಸಹಿತ ಕಂಡೆ ಮತ್ತು ಉತ್ತಮ ಯುದ್ಧದಿಂದ ಅವನನ್ನು ತೃಪ್ತಿಪಡಿಸಿದೆ! ನೀನು ಲೋಕಪಾಲಕರನ್ನು ಭೇಟಿಯಾದುದೂ ಕೂಡ ಅದೃಷ್ಟವೇ ಸರಿ! ಅದೃಷ್ಟವಶಾತ್ ನೀನು ಮರಳಿ ಬಂದಿದ್ದೀಯೆ! ಇಂದು ನಾವು ಇಡೀ ಭೂಮಿದೇವಿಯನ್ನು ಗೆದ್ದಂತಯೇ! ಧೃತರಾಷ್ಟ್ರನ ಮಕ್ಕಳನ್ನು ವಶೀಕರಿಸಿದ್ದೇವೆ ಎಂದು ನನಗನ್ನಿಸುತ್ತಿದೆ. ಆದರೆ ನಾನು ವೀರ್ಯವಂತ ನಿವಾತಕವಚರನ್ನು ಸಂಹರಿಸಲು ಬಳಸಿದ ನಿನ್ನ ಆ ದಿವ್ಯಾಸ್ತ್ರಗಳನ್ನು ನೋಡಲು ಬಯಸುತ್ತೇನೆ.”

ಆಗ ಅರ್ಜುನನು ಅವನಿಗೆ “ನಾಳೆ ಬೆಳಿಗ್ಗೆ ನಿಮಗೆ ಯಾವುದರಿಂದ ಆ ಘೋರ ನಿವಾತಕವಚರನ್ನು ಕೆಳಗುರುಳಿಸಿದೆನೋ ಆ ಎಲ್ಲ ದ್ವಿವ್ಯಾಸ್ತ್ರಗಳನ್ನೂ ತೋರಿಸುತ್ತೇನೆ” ಎಂದನು.

ರಾತ್ರಿಯು ಕಳೆದ ನಂತರ ಯುಧಿಷ್ಠಿರನು ತನ್ನ ತಮ್ಮಂದಿರೊಡನೆ ಎದ್ದು ಅವಶ್ಯಕಾರ್ಯಗಳನ್ನು ಪೂರೈಸಿದನು. ನಂತರ ಅವನು ತನ್ನ ಪ್ರೀತಿಯ ತಮ್ಮ ಅರ್ಜುನನಿಗೆ “ಕೌಂತೇಯ! ಯಾವ ಅಸ್ತ್ರಗಳಿಂದ ಆ ದಾನವರನ್ನು ಜಯಿಸಿದೆಯೋ ಆ ಅಸ್ತ್ರಗಳನ್ನು ತೋರಿಸು!” ಎಂದು ಸೂಚಿಸಿದನು. ಆ ಮಹಾತೇಜಸ್ವಿಗಳು ಯಥಾನ್ಯಾಯವಾಗಿ ಶೌಚವನ್ನು ಮುಗಿಸಿ ಉಪಸ್ಥಿತರಿರಲು ಅರ್ಜುನನು ಸುವರ್ಚಕ ಕವಚವನ್ನು ಧರಿಸಿ, ಗಾಂಡೀವ ಧನುಸ್ಸು ಮತ್ತು ಸಾಗರದಲ್ಲಿ ಜನಿಸಿದ್ದ ದೇವದತ್ತವನ್ನು ಹಿಡಿದು ಶೋಭಿಸುತ್ತಾ ಗಿರಿಕೂಬರಗಳೇ ಕಾಲಕಂಭಗಳಾಗಿದ್ದ, ವೃಕ್ಷಗಳೇ ತ್ರಿವೇಣಿಗಳಾಗಿದ್ದ, ಬಿದಿರೇ ಧ್ವಜಕಂಬಗಳಾಗಿದ್ದ ಆ ಭೂಮಿಯ ರಥವನ್ನೇರಿದನು. ಕಿರಣಗಳಿಂದ ತೋಯ್ದ ಮಹಾಭುಜ ಕೌಂತೇಯನು ಒಂದೊಂದಾಗಿ ಆ ದಿವ್ಯಾಸ್ತ್ರಗಳನ್ನು ಪ್ರದರ್ಶಿಸ ತೊಡಗಿದನು.

ಅವನು ದಿವ್ಯಾಸ್ತ್ರಗಳನ್ನು ಪ್ರಯೋಗಿಸ ತೊಡಗಿದಾಗ ಅವನ ಕಾಲ್ಕೆಳಗಿನ ಭೂಮಿಯು ಆಕ್ರಾಂತಗೊಂಡು ಮರಗಳೊಂದಿಗೆ ಕಂಪಿಸತೊಡಗಿತು. ನದಿ-ಸಾಗರಗಳು ಉಕ್ಕೆದ್ದು ಗಿರಿಗಳೂ ಮುಳುಗಿದವು. ಗಾಳಿಯು ಬೀಸಲಿಲ್ಲ. ಸೂರ್ಯನು ಕಾಣಲಿಲ್ಲ. ಅಗ್ನಿಯು ಉರಿಯಲಿಲ್ಲ. ದ್ವಿಜಾತಿಯವರ ಮನಸ್ಸಿಗೆ ವೇದಗಳೇ ಕಾಣಿಸಿಕೊಳ್ಳಲಿಲ್ಲ. ಭೂಮಿಯ ಒಳಗೆ ಜೀವಿಸುತ್ತಿದ್ದ ಪ್ರಾಣಿಗಳು ಪೀಡಿತರಾಗಿ ಮೇಲೆದ್ದು ಪಾಂಡವರನ್ನು ಸುತ್ತುವರೆದವು. ಅಸ್ತ್ರಗಳಿಂದ ಸುಡಲ್ಪಟ್ಟ ಅವೆಲ್ಲವೂ ನಡುಗುತ್ತಾ ಕೈಮುಗಿದು ಧನಂಜಯನಲ್ಲಿ ಬೇಡಿಕೊಂಡವು. ಆಗ ಬ್ರಹ್ಮರ್ಷಿ-ಸಿದ್ಧ-ಸುರಋಷಿ-ರಾಜರ್ಷಿಗಣಗಳು, ಚಲಿಸುವ ಎಲ್ಲವೂ, ದೇವ-ಯಕ್ಷ-ರಾಕ್ಷಸ-ಗಂಧರ್ವ-ಪಕ್ಷಿಗಣಗಳೂ ಕೂಡಿ ಇದ್ದಲ್ಲಿಯೇ ನಿಂತುಕೊಂಡವು. ಅಲ್ಲಿಗೆ ಗಣಗಳೊಂದಿಗೆ ಪಿತಾಮಹ ಬ್ರಹ್ಮನೂ, ಲೋಕಪಾಲಕರೂ, ಭಗವಾನ್ ಮಹಾದೇವನೂ ಆಗಮಿಸಿದರು. ಸುಗಂಧಯುಕ್ತ ದಿವ್ಯಮಾಲೆಗಳನ್ನು ಹಿಡಿದು ವಾಯುವು ಪಾಂಡವರನ್ನು ಎಲ್ಲ ಕಡೆಗಳಿಂದ ಎದಿರುಗೊಂಡನು. ಸುರರಿಂದ ಪ್ರೇರಿತಗೊಂಡ ಗಂಧರ್ವರು ವಿವಿಧ ಗಾಯನಗಳನ್ನು ಹಾಡಿದರು. ಅಪ್ಸರಗಣಗಳೂ ಕೂಡ ಗುಂಪುಗುಂಪಾಗಿ ನರ್ತಿಸಿದವು. ಆ ತುಮುಲಗಳ ಮಧ್ಯೆ ಸುರರು ಕಳುಹಿಸಿದ ನಾರದನು ಅಲ್ಲಿಗೆ ಬಂದು ಪಾರ್ಥನಿಗೆ ಕೇಳುವಂತೆ ಈ ಮಾತುಗಳನ್ನಾಡಿದನು:

“ಅರ್ಜುನ! ಅರ್ಜುನ! ದಿವ್ಯಾಸ್ತ್ರಗಳನ್ನು ಹೂಡಬೇಡ! ಸಾಮರ್ಥ್ಯವಿಲ್ಲದಿರುವವರ ಮೇಲೆ ಎಂದೂ ಇವುಗಳನ್ನು ಪ್ರಯೋಗಿಸಬಾರದು. ಸಂಕಟದಲ್ಲಿರದ ಸಮಯದಲ್ಲಿ ಸಮರ್ಥನ ಮೇಲೂ ಇವುಗಳನ್ನು ಪ್ರಯೋಗಿಸಬಾರದು. ಈ ಅಸ್ತ್ರಗಳ ಪ್ರಯೋಗದಿಂದ ಮಹಾದೋಷವುಂಟಾಗುತ್ತದೆ. ಕಲಿತಂತೆ ಇವುಗಳನ್ನು ನೀನು ರಕ್ಷಿಸಿದರೆ ಈ ಬಲಿಷ್ಟ ಅಸ್ತ್ರಗಳು ನಿನಗೆ ಸುಖವನ್ನು ನೀಡುತ್ತವೆ. ಇವುಗಳನ್ನು ರಕ್ಷಿಸದೇ ಇದ್ದರೆ ಮೂರು ಲೋಕಗಳೂ ನಾಶವಾಗುತ್ತವೆ. ಮುಂದೆಂದೂ ಹೀಗೆ ಮಾಡಬೇಡ! ಯುಧಿಷ್ಠಿರ! ಯುದ್ಧದಲ್ಲಿ ದ್ವೇಷಿಗಳ ವಿನಾಶಕ್ಕಾಗಿ ಪಾರ್ಥನು ಇವುಗಳನ್ನು ಬಳಸುವಾಗ ನೀನು ನೋಡುವಿಯಂತೆ!”

ಈ ರೀತಿ ಅರ್ಜುನನನ್ನು ತಡೆದು ಎಲ್ಲ ದೇವತೆಗಳೂ ಮತ್ತು ಇತರರೂ ಅಲ್ಲಿಗೆ ಹೇಗೆ ಬಂದಿದ್ದರೋ ಹಾಗೆ ಹೊರಟುಹೋದರು. ಅವರೆಲ್ಲರೂ ಹೊರಟುಹೋದ ನಂತರ ಪಾಂಡವರು ಕೃಷ್ಣೆಯೊಡನೆ ಅದೇ ವನದಲ್ಲಿ ಸಂತೋಷದಿಂದ ಕಾಲಕಳೆದರು.

Leave a Reply

Your email address will not be published. Required fields are marked *