ಅಜಗರನ ರೂಪದಲ್ಲಿದ್ದ ನಹುಷನನ್ನು ಯುಧಿಷ್ಠಿರನು ಶಾಪಮುಕ್ತನನ್ನಾಗಿಸಿದುದು
ಕುಬೇರನ ಪರ್ವತದಿಂದ ಪಾಂಡವರು ನೀಲಾದ್ರಿಗೆ ಬಂದುದು
ಇಂದ್ರಸಮಾನ ಅರ್ಜುನನೊಂದಿಗೆ ಪಾಂಡವರು ಧನೇಶ್ವರ ಕುಬೇರನ ಸುರಮ್ಯ ಶೈಲಪ್ರವರದ ಮೇಲೆ ಕ್ರೀಡಾನುಗತರಾಗಿದ್ದರು. ಅಪ್ರತಿಮ ಕಟ್ಟಡಗಳು ಮತ್ತು ನಾನಾ ವೃಕ್ಷಗಳಿಂದ ಕೂಡಿದ್ದ ಆ ಕ್ರೀಡಾಪ್ರದೇಶವನ್ನು ನೋಡಿ ಸತತವೂ ತನ್ನ ಅಸ್ತ್ರಗಳಲ್ಲಿಯೇ ಮಗ್ನನಾಗಿದ್ದ ಕಿರೀಟಿ ಅರ್ಜುನನು ಅಲಲ್ಲಿ ಬಹಳವಾಗಿ ತಿರುಗಾಡಿದನು. ವೈಶ್ರವಣನ ಕೃಪೆಯಿಂದ ಆ ವಾಸಸ್ಥಳವನ್ನು ಪಡೆದಿದ್ದ ಆ ನರದೇವಪುತ್ರರು ಅಲ್ಲಿ ಪ್ರಾಣಿಗಳು ಬಯಸುವ ಸುಖವನ್ನು ಬಯಸದೇ ಶುಭ ಸಮಯವನ್ನು ಕಳೆದರು. ಪಾರ್ಥ ಅರ್ಜುನನನ್ನು ಸೇರಿದ ಅವರು ಅಲ್ಲಿ ನಾಲ್ಕು ವರ್ಷಗಳನ್ನು ಕಳೆದರು ಮತ್ತು ಅಲ್ಲಿ ಕಳೆದ ವರ್ಷಗಳು ಒಂದು ರಾತ್ರಿಯಂತೆಯೇ ಕಳೆದುಹೋಯಿತು. ಹಿಂದಿನ ಆರು ವರ್ಷಗಳನ್ನೂ ಸೇರಿ ಪಾಂಡವರು ಆ ಮಂಗಳಕರ ವನಗಳಲ್ಲಿ ಹತ್ತು ವರ್ಷಗಳನ್ನು ಕಳೆದರು. ಒಮ್ಮೆ ಅರ್ಜುನ ಮತ್ತು ಯಮಳರು ರಾಜ ಯುಧಿಷ್ಠಿರನೊಂದಿಗೆ ಏಕಾಂತದಲ್ಲಿ ಕುಳಿತುಕೊಂಡಿದ್ದಾಗ ತರಸ್ವೀ ವಾಯುಸುತನು ಹಿತವೂ ಪ್ರಿಯಕರವೂ ಆದ ಈ ಮಾತುಗಳನ್ನಾಡಿದನು:
“ಕುರುರಾಜ! ನಿನ್ನ ಪ್ರತಿಜ್ಞೆಯನ್ನು ಸತ್ಯವಾಗಿಸಲು ಮತ್ತು ನಿನಗೆ ಪ್ರಿಯವಾದುದನ್ನು ಮಾಡಲು ನಿನ್ನನ್ನು ಅನುಸರಿಸಿ ವನಕ್ಕೂ ಬಂದಾಯಿತು. ಮತ್ತು ಸುಯೋಧನನನ್ನು ಅವನ ಅನುಚರರೊಂದಿಗೆ ಸಂಹರಿಸಲೂ ಇಲ್ಲ. ಇದು ನಮ್ಮ ವನವಾಸದ ಹನ್ನೊಂದನೆಯ ವರ್ಷ. ನಮ್ಮದಾಗಿದ್ದ ಉತ್ತಮ ಸುಖವನ್ನು ಸುಯೋಧನನು ಕಸಿದುಕೊಂಡಿದ್ದಾನೆ. ಅತಿ ಕೀಳುಬುದ್ಧಿ-ನಡತೆಗಳ ಅವನನ್ನು ವಂಚಿಸಿ ಅಜ್ಞಾತವಾಸವನ್ನೂ ಕಳೆಯೋಣ. ನಿನ್ನ ಆಜ್ಞೆಯಂತೆ ನಮ್ಮ ಗೌರವವನ್ನು ತೊರೆದು ನಿರ್ವಿಶಂಕರಾಗಿ ವನಗಳಲ್ಲಿ ಸಂಚರಿಸುತ್ತಿದ್ದೇವೆ. ಇದರ ಸಮೀಪದಲ್ಲಿಯೇ ಬೇರೆ ದೇಶಕ್ಕೆ ಹೋಗಿ ವಾಸಿಸಿದರೆ ಅದು ಅವನಿಗೆ ಗೊತ್ತಾಗುವುದಿಲ್ಲ. ಗೂಢವಾಗಿ ವಾಸಿಸಿ ಒಂದು ವರ್ಷವನ್ನು ಕಳೆದನಂತರ ಆ ನರಾಧಮನನ್ನು ಸುಲಭವಾಗಿ ಸೋಲಿಸಬಹುದು. ಆ ಅಧಮ ಪುರುಷನ ವೈರವೆನ್ನುವ ಮರವನ್ನು ಫಲ-ಪುಷ್ಪಗಳೊಂದಿಗೆ ಕಿತ್ತು ಉರುಳಿಸಬಹುದು. ಅನುಚರರಿಂದ ಆವೃತನಾಗಿರುವ ಸುಯೋಧನನ ನಂತರ ನೀನು ಈ ಭೂಮಿಯನ್ನು ಆಳು. ಆಗ ಸ್ವರ್ಗೋಪಮವಾದ ಈ ಶೈಲಗಳಲ್ಲಿ ತಿರುಗಾಡಬಹುದು. ಶೋಕವನ್ನು ತೊರೆ. ಪುಣ್ಯದ ಸುವಾಸನೆಯಿರುವ ನಿನ್ನ ಕೀರ್ತಿಯು ಚರಾಚರ ಲೋಕಗಳಲ್ಲಿ ನಾಶವಾಗುವುದಿಲ್ಲ. ಕುರುಪುಂಗವರ ರಾಜ್ಯವನ್ನು ಪಡೆದು ಮಹತ್ಕಾರ್ಯಗಳನ್ನೆಸಗು. ಕುಬೇರನಿಂದ ಈಗ ನೀನು ಪಡೆದುದೆಲ್ಲವನ್ನೂ ಸತತವಾಗಿ ಪಡೆಯಬಹುದು. ದ್ವೇಷಿಗಳನ್ನು ವಧಿಸಿ ಕೆಟ್ಟದ್ದನ್ನು ಮಾಡಿದವರನ್ನು ನಿಗ್ರಹಿಸುವ ಮನಸ್ಸುಮಾಡು. ನಿನ್ನ ಈ ಉಗ್ರ ತೇಜಸ್ಸನ್ನು ಸಾಕ್ಷಾತ್ ವಜ್ರಪಾಣಿಯೇ ಸಹಿಸಲಾರನು. ನೀನು ಏನು ಮಾಡಬೇಕೆಂದು ಬಯಸಿದ್ದೀಯೋ ಅದನ್ನು ದೇವತೆಗಳೆಲ್ಲ ಒಟ್ಟಾಗಿ ಬಂದರೂ ತಡೆಯಲಾರರು.”
ಭೀಮನ ಅಭಿಪ್ರಾಯಗಳನ್ನು ತಿಳಿದ ಧರ್ಮರಾಜನು ವೈಶ್ರವಣನ ಪೀಠಕ್ಕೆ ಪ್ರದಕ್ಷಿಣೆಮಾಡಿದನು. ತಾನು ಬಂದಿರುವ ದಾರಿಯನ್ನು ನೋಡುತ್ತಾ ಮತ್ತು ಪುನಃ ಆ ಗಿರಿಯನ್ನು ನಿರೀಕ್ಷಿಸುತ್ತಾ ಅವನು ಮನೆ-ನದಿ-ಸರೋವರಗಳು ಮತ್ತು ಸರ್ವ ರಾಕ್ಷಸರಿಗೆ ವಂದಿಸಿದನು. “ಶೈಲೇಂದ್ರ! ಸುಹೃದಯರೊಂದಿಗೆ ಕಾರ್ಯಗಳನ್ನು ಮುಗಿಸಿ ಶತ್ರುಗಳನ್ನು ಜಯಿಸಿ ರಾಜ್ಯವನ್ನು ಹಿಂದೆ ಪಡೆದು ಧೃತಾತ್ಮನಾಗಿ ನಿನ್ನ ಮೇಲೆ ತಪಸ್ಸು ಮಾಡಲು ಬರುತ್ತೇನೆ” ಎಂದು ಮನಸ್ಸುಮಾಡಿ ಬೀಳ್ಕೊಂಡನು. ಪುನಃ ಘಟೋತ್ಕಚನು ಆ ಕುರುನಾಯಕ ಮತ್ತು ಅವನನ್ನು ಸುತ್ತುವರೆದಿದ್ದ ಸರ್ವ ಅನುಜರನ್ನೂ ದ್ವಿಜರನ್ನೂ ಒಟ್ಟಿಗೇ ಪರ್ವತ ಕಂದರಗಳಿಂದ ಕೆಳಗಿಳಿಸಿದನು. ಅವರು ಹೊರಡುವಾಗ ಪ್ರೀತಿಮನಸ್ಕ ಮಹರ್ಷಿ ಲೋಮಶನು ತಂದೆಯು ಪುತ್ರರಿಗೆ ಹೇಗೋ ಹಾಗೆ ಉಪದೇಶಿಸಿ ಸಂತೋಷದಿಂದ ದಿವೌಕಸರ ಪುಣ್ಯತಮ ನಿವಾಸಕ್ಕೆ ತೆರಳಿದನು. ಅವನಿಂದ ಮತ್ತು ಆರ್ಷ್ಠಿಷೇಣನಿಂದ ಉಪದೇಶಗಳನ್ನು ಪಡೆದು ಆ ನರವ್ಯಾಘ್ರ ಪಾರ್ಥರು ತೀರ್ಥ-ತಪೋವನ-ಮಹಾಸರೋವರಗಳಿಗೆ ಭೇಟಿನೀಡುತ್ತಾ ತಮ್ಮ ಪ್ರಯಾಣವನ್ನು ಮುಂದುವರೆಸಿದರು.
ಝರಿಗಳು, ದಿಗ್ಗಜಗಳು, ಕಿನ್ನರರು ಮತ್ತು ಪಕ್ಷಿಗಳಿಂದ ಕೂಡಿ ಸುಖನಿವಾಸವಾಗಿದ್ದ ಆ ಉತ್ತಮ ಪರ್ವತವನ್ನು ಬಿಟ್ಟುಬರುವಾಗ ಪಾಂಡವರು ಸಂತಸಗೊಳ್ಳಲಿಲ್ಲ. ಆದರೆ ಕುಬೇರನಿಗೆ ಪ್ರಿಯವಾದ ಕಪ್ಪು ಮೋಡಗಳಿಂದ ಪ್ರಕಾಶಮಾನವಾಗಿ ತೋರುತ್ತಿದ್ದ ಕೈಲಾಸಪರ್ವತವನ್ನು ಕಂಡೊಡನೆಯೇ ಅವರ ಮನಸ್ಸು ಆಹ್ಲಾದಿತವಾಯಿತು. ಆ ವೀರರು ಅನೇಕ ಪರ್ವತ ದರಿಗಳನ್ನೂ, ಕಣಿವೆಗಳನ್ನೂ, ಗುಡ್ಡಗಳನ್ನೂ, ಗಿರಿಗಳ ನಡುವಿನ ಸೇತುವೆಗಳನ್ನೂ, ಪ್ರಪಾತಗಳನ್ನೂ ಮತ್ತು ಅಲ್ಲಲ್ಲಿ ತಗ್ಗಿನ ಪ್ರದೇಶಗಳನ್ನೂ ನೋಡಿದರು. ಆ ನರವ್ಯಾಘ್ರರು ಧನುಸ್ಸು-ಖಡ್ಗಗಳನ್ನು ಧರಿಸಿ ಅತಿ ವಿಶ್ವಾಸದಿಂದ ಇತರ ಮಹಾವನಗಳನ್ನೂ, ಮೃಗಗಳನ್ನೂ, ಆನೆಗಳನ್ನೂ ನೋಡುತ್ತಾ ಮುಂದುವರೆದರು. ರಾತ್ರಿಗಳಲ್ಲಿ ಅವರು ವನ-ಸರೋವರ-ನದೀ ತೀರಗಳಲ್ಲಿ, ಗಿರಿ-ಗಿರಿಕಂದರಗಳಲ್ಲಿ ಶಿಬಿರಗಳನ್ನು ನಿರ್ಮಿಸಿ ತಂಗುತ್ತಾ ಮುಂದುವರೆದರು. ಗಿರಿದುರ್ಗಗಳಲ್ಲಿ ಹಲವು ರಾತ್ರಿಗಳನ್ನು ಕಳೆದು ಅಚಿಂತ್ಯ ರೂಪೀ ಕೈಲಾಸವನ್ನು ದಾಟಿ ಅವರು ವೃಷಪರ್ವನ ಸುಂದರ-ಮನೋಹರ ಆಶ್ರಮವನ್ನು ತಲುಪಿದರು.
ರಾಜಾ ವೃಷಪರ್ವನನ್ನು ಭೇಟಿಮಾಡಿ ಅವನಿಂದ ಸತ್ಕಾರಗೊಂಡು ಆಯಾಸವನ್ನು ಕಳೆದುಕೊಂಡು ಅವರು ವೃಷಪರ್ವನಿಗೆ ವಿಸ್ತಾರವಾಗಿ ಮತ್ತು ಯಥಾವತ್ತಾಗಿ ಅವರ ಮಂಗಳ ಪ್ರವಾಸದ ಕುರಿತು ಹೇಳಿಕೊಂಡರು. ದೇವ-ಮಹರ್ಷಿಗಳು ಅರಸುವ ಅವನ ಆ ಪುಣ್ಯಾಶ್ರಮದಲ್ಲಿ ಒಂದು ರಾತ್ರಿಯನ್ನು ಸುಖವಾಗಿ ಕಳೆದು ಆ ವೀರರು ವಿಶಾಲ ಬದರಿಯಲ್ಲಿ ಪುನಃ ವಾಸ್ತವ್ಯವನ್ನು ಮಾಡಿದರು. ಅಲ್ಲಿಂದ ನಾರಾಯಣಸ್ಥಾನಕ್ಕೆ ಹೋಗಿ ಅಲ್ಲಿ ಶೋಕವನ್ನು ನಾಶಪಡಿಸಬಲ್ಲ, ಸುರ-ಸಿದ್ಧರು ಬಯಸುವ ಮತ್ತು ಕುಬೇರನಿಗೆ ಪ್ರಿಯವಾದ ಸರೋವರವನ್ನು ನೋಡಿದರು. ನಂದನವನವನ್ನು ಸೇರಿದ ದ್ವಿಜರ್ಷಿಗಳು ಹೇಗೋ ಹಾಗೆ ಆ ಸರೋವರವನ್ನು ನೋಡಿ ಪಾಂಡವರು ವಿಶೋಕರಾಗಿ ರಮಿಸಿದರು. ಬದರಿಯಲ್ಲಿ ಒಂದು ತಿಂಗಳು ಸುಖವಾಗಿ ತಂಗಿ ನಂತರ ಆ ವೀರರು ಹಿಂದೆ ಬಂದಿದ್ದ ದಾರಿಯನ್ನೇ ಅನುಸರಿಸಿ ಕ್ರಮೇಣವಾಗಿ ರತ್ನಭರಿತ ಚೀನ, ತುಖಾರ, ದರದ, ದಾರ್ವ ಮತ್ತು ಕುಣಿಂದ ದೇಶಗಳನ್ನು ದಾಟಿ, ಹಿಮಾಲಯದ ದುರ್ಗದ ಮೂಲಕ ಕಿರಾತರಾಜ ಸುಬಾಹುವಿನ ರಾಜ್ಯವನ್ನು ಬಂದು ಸೇರಿದರು. ಅವರು ಬಂದಿದುದನ್ನು ಕೇಳಿದ ರಾಜ ಸುಬಾಹುವು ಸಂತೋಷದಿಂದ ಪುರದ ಹೊರಬಂದು ಸ್ವಾಗತಿಸಿದನು. ಕುರುವೃಷಭರು ಅವನನ್ನು ಅಭಿನಂದಿಸಿದರು. ಅಲ್ಲಿ ಅವರು ವಿಶೋಕನ ನಾಯಕತ್ವದಲ್ಲಿದ್ದ ಎಲ್ಲ ಸೂತರನ್ನೂ, ಇಂದ್ರಸೇನನೊಡನೆ ಪರಿಚಾರಕರನ್ನೂ, ಅಡುಗೆಯವರನ್ನೂ, ಮತ್ತು ಅವರ ಮೇಲ್ವಿಚಾರಕರನ್ನೂ ಭೇಟಿಮಾಡಿದರು. ಅಲ್ಲಿ ಅವರು ಸುಖದಿಂದ ಒಂದು ರಾತ್ರಿಯನ್ನು ಕಳೆದರು.
ಅಲ್ಲಿ ಅವರು ಘಟೋತ್ಕಚ ಮತ್ತು ಅವನ ಅನುಚರರನ್ನು ಕಳುಹಿಸಿ ಎಲ್ಲ ರಥಗಳಿಗೂ ಸೂತರನ್ನು ಕೂಡಿಸಿಕೊಂಡು ಯಮುನಾದ್ರಿಯ ಕಡೆ ಹೊರಟರು. ಹಿಮದಿಂದ ಆಚ್ಛಾದಿತಗೊಂಡು ಕೆಂಪು-ಬಿಳೀಬಣ್ಣಗಳ ಉತ್ತರೀಯದಂತೆ ಕಾಣುತ್ತಿದ್ದ ಮತ್ತು ಝರಿಗಳು ಹರಿಯುತ್ತಿದ್ದ ಆ ಗಿರಿಯ ಮೇಲೆ ಪಾಂಡವರು ವಿಶಾಲವೆಂಬ ಯೂಪದಲ್ಲಿ ತಮ್ಮ ನಿವಾಸಸ್ಥಾನವನ್ನು ರಚಿಸಿದರು. ಚೈತ್ರರಥನ ವನದಂತಿದ್ದ ಆ ಮಹಾವನದಲ್ಲಿ ಹಂದಿ ಮತ್ತು ನಾನಾಮೃಗ ಪಕ್ಷಿಗಳ ಸಂಕುಲವಿತ್ತು. ಅಲ್ಲಿ ಅವರು ಏನೂ ಆತಂಕಗಳಿಲ್ಲದೇ ಬೇಟೆಯಾಡುತ್ತಿದ್ದರು. ಹೀಗೆ ಆ ವನದಲ್ಲಿ ಅವರು ಒಂದು ವರ್ಷವನ್ನು ಕಳೆದರು.
ವನದಲ್ಲಿ ಸುತ್ತಾಡುತ್ತಿದ್ದ ಭೀಮನನ್ನು ಅಜಗರವು ಹಿಡಿದುದು
ವೃಷಪರ್ವನ ಆಶ್ರಮದಿಂದ ನೀಲಾದ್ರಿಗೆ ಬಂದು ಆ ಆಶ್ಚರ್ಯದ ವನದಲ್ಲಿ ಪಾಂಡವರು ವಾಸಿಸುತ್ತಿರಲು ವೃಕೋದರನು ಧನುಸ್ಸನ್ನು ಧರಿಸಿ ಖಡ್ಗವನ್ನು ಹಿಡಿದು ದೇವಗಂಧರ್ವ ಸೇವಿತ ಆ ರಮ್ಯ ವನವನ್ನು ನೋಡಲು ಹೊರಟನು. ದೇವತೆ-ಋಷಿ-ಸಿದ್ಧಗಣಗಳು ಸಂಚರಿಸುವ ಮತ್ತು ಅಪ್ಸರಗಣಗಳು ಸೇವಿಸುವ ಹಿಮವತ್ಪರ್ವತದ ಆ ಶುಭ ಪ್ರದೇಶಗಳನ್ನು ಅವನು ನೋಡಿದನು. ನಿತ್ಯವೂ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳಿಂದ ತುಂಬಿದ್ದ ಆ ವನದ ಎಲ್ಲ ಕಡೆಯೂ ಚಕ್ರವಾಕ, ಕಾಡುಕೋಳಿ, ಮತ್ತು ಕೋಗಿಲೆಗಳ ಕೂಗು ಹಾಗೂ ದುಂಬಿಗಳ ಝೇಂಕಾರವು ಜೋರಾಗಿ ಕೇಳಿಬರುತ್ತಿತ್ತು. ಗಿರಿಗಳಿಂದ ಹರಿದು ಬರುತ್ತಿದ್ದ ವೈಡೂರ್ಯಮಣಿಯ ಹೊಳಪಿನ ನದಿಗಳನ್ನು, ಬಾತುಕೋಳಿ-ಕಾರಂಡಗಳಿದ್ದ ಹಿಮಕ್ಕೆ ತಾಗಿದ ಸರೋವರಗಳನ್ನು, ಮೋಡಗಳನ್ನು ತಡೆಹಿಡಿಯುವವೋ ಎಂಬಂತಿದ್ದ ದೇವದಾರು ವೃಕ್ಷಗಳ ವನಗಳನ್ನು, ಮತ್ತು ಕೆಂಪು-ಹಳದೀ ಬಣ್ಣಗಳ ಮಿಶ್ರಣದಂತೆ ತೋರುತ್ತಿದ್ದ ಗಿರಿಶಿಖರಗಳನ್ನು ಅವನು ನೋಡಿದನು. ಜಿಂಕೆಗಳನ್ನು ವಿಷರಹಿತ ಬಾಣಗಳಿಂದ ಹೊಡೆದು ಮೃಗಬೇಟೆಯಾಡುತ್ತಾ ಆ ಸುಮಹಾಬಲನು ತಪ್ಪಲು-ಮರುಭೂಮಿ ಪ್ರದೇಶಗಳಲ್ಲಿ ತಿರುಗಾಡಿದನು.
ಒಂದು ಗಿರಿಕಣಿವೆಗೆ ಬಂದಾಗ ಅಲ್ಲಿ ಅವನು ಕಂದರವನ್ನಿಡೀ ತನ್ನ ದೇಹವನ್ನು ಆವರಿಸಿ ಸುರುಳಿಸುತ್ತಿಕೊಂಡಿದ್ದ ಮಹಾಕಾಯ ಸರ್ಪವೊಂದನ್ನು ಕಂಡನು. ಅದರ ಸುರುಳಿಯು ಪರ್ವತಷ್ಟೇ ಎತ್ತರವಾಗಿತ್ತು. ಅದರ ಅರಿಷಿಣ ಬಣ್ಣದ ದೇಹದಲ್ಲಿ ಬಣ್ಣಬಣ್ಣದ ಸೂರ್ಯ-ಚಂದ್ರಾಕಾರದ ಚುಕ್ಕೆಗಳು ತುಂಬಿಕೊಂಡಿದ್ದವು. ನಾಲ್ಕು ಕೋರೆದಾಡೆಗಳಿದ್ದ ಗುಹಾಕಾರದ ಬಾಯಿಯನ್ನು ನೆಕ್ಕುತ್ತಿದ್ದ ಅದರ ಕಣ್ಣುಗಳು ತಾಮ್ರದ ದಟ್ಟ ಕೆಂಪುಬಣ್ಣದ್ದಾಗಿ ಉರಿಯುತ್ತಿದ್ದವು. ಕಾಲಾಂತಕ ಯಮನಂತಿದ್ದ ಅದು ಸರ್ವಭೂತಗಳಲ್ಲಿಯೂ ಭಯವನ್ನುಂಟುಮಾಡುವಂತಿತ್ತು. ಅದರ ತೇವಯುಕ್ತ ಉಛ್ವಾಸ-ನಿಶ್ವಾಸಗಳು ಭಯಂಕರವಾಗಿದ್ದವು. ಆಡುಗಳನ್ನು ಹಿಡಿದು ತಿನ್ನುವ ಆದರೆ ಆಗ ತುಂಬಾ ಹಸಿದಿದ್ದ ಆ ಹೆಬ್ಬಾವು ತಕ್ಷಣವೇ ಭೀಮಸೇನನ ಮೇಲೆ ಆಕ್ರಮಣ ಮಾಡಿ ಅವನ ಎರಡೂ ಭುಜಗಳನ್ನು ಬಲವಾಗಿ ಹಿಡಿಯಿತು. ಅದಕ್ಕೆ ತಗುಲಿದಾಕ್ಷಣವೇ ಭೀಮಸೇನನು ಸಂಜ್ಞೆಗಳನ್ನು ಕಳೆದುಕೊಂಡನು. ಅದಕ್ಕಿದ್ದ ವರದಾನವೇ ಹಾಗಿತ್ತು. ಬೇರೆಯಾರಲ್ಲಿಯೂ ಇರದ ಹತ್ತು ಸಾವಿರ ಆನೆಗಳ ಬಲವು ಭೀಮಸೇನನ ಬಾಹುಗಳಿಗಿದ್ದರೂ ಆ ಹಾವಿನ ಹಿಡಿತಕ್ಕೆ ಸಿಕ್ಕಿ ಅವನು ನಿಧಾನವಾಗಿ ಅಲುಗಾಡಲಿಕ್ಕೂ ಸಮರ್ಥನಾಗದೇ ವಿಚೇಷ್ಟಿತನಾದನು. ಅದರಿಂದ ಹಿಡಿಯಲ್ಪಟ್ಟ ಆನೆಗಳ ಹಿಂಡಿಗೆ ಸಮನಾಗಿದ್ದ ಆ ಸಿಂಹಸ್ಕಂಧ ಮಹಾಭುಜನು ಅದರ ವರದಾನದಂತೆ ಮೋಹಿತನಾಗಿ ಸತ್ತ್ವವನ್ನು ಕಳೆದುಕೊಂಡನು. ತನ್ನನ್ನು ಬಿಡಿಸಿಕೊಳ್ಳಲು ಬಹಳವಾಗಿ ಪ್ರಯತ್ನಿಸಿದರೂ ಆ ವೀರನು ಹಾವಿನ ಬಲವನ್ನು ಮೀರಿಸದೇ ಹೋದನು.
ತೇಜಸ್ವೀ ಭೀಮನು ಹೀಗೆ ಆ ಸರ್ಪದ ವಶನಾಗಲು ಅದರ ಅದ್ಭುತ ಮಹಾ ವೀರ್ಯದ ಕುರಿತು ಯೋಚಿಸಿ, ಆ ಮಹಾಸರ್ಪಕ್ಕೆ ಹೇಳಿದನು: “ಪನ್ನಗ! ನಿನಗಿಷ್ಟವಾದರೆ ನೀನು ಯಾರೆಂದು ಹೇಳು. ನನ್ನನ್ನು ಏನು ಮಾಡಲಿರುವೆ? ನಾನು ಧರ್ಮರಾಜನ ಅನಂತರದ ಪಾಂಡವ ಭೀಮಸೇನ. ಆನೆಗಳ ಹಿಂಡಿನ ಪ್ರಮಾಣಕ್ಕೆ ಸಮನಾದ ನಾನು ಹೇಗೆತಾನೇ ನಿನ್ನ ವಶನಾದೆ? ಬಹಳಷ್ಟು ಕೇಸರಿ ಸಿಂಹ-ಹುಲಿ-ಕಾಡೆಮ್ಮೆ-ಆನೆಗಳನ್ನು ನಾನು ಯುದ್ಧದಲ್ಲಿ ಎದುರಿಸಿ ಕೊಂದಿದ್ದೇನೆ. ನನ್ನ ಭುಜಗಳ ವೇಗವನ್ನು ಸಹಿಸಲು ದಾನವರೂ, ಪಿಶಾಚಿಗಳೂ, ಮಹಾಬಲ ರಾಕ್ಷಸರೂ ಅಶಕ್ತರಾಗಿದ್ದರು. ಹೇಗೆ ತಾನೇ ನೀನು – ನಿನ್ನ ವಿದ್ಯಾಬಲದಿಂದಲೋ ಅಥವಾ ವರದಾನದಿಂದಲೋ – ಶ್ರಮಿಸುತ್ತಿರುವ ನನ್ನನ್ನು ನಿನ್ನ ವಶದಲ್ಲಿರಿಸಿಕೊಂಡಿರುವೆ? ಆನೆಗಳಷ್ಟು ಮಹಾಬಲವಳ್ಳ ನನ್ನನ್ನು ನೀನು ತಡೆದಿದ್ದೀಯೆ ಎಂದರೆ ನಿಶ್ಚಯವಾಗಿಯೂ ಮನುಷ್ಯರ ವಿಕ್ರಮವು ಸುಳ್ಳು ಎಂದು ನನಗನ್ನಿಸುತ್ತಿದೆ.”
ಈ ರೀತಿ ವೀರ ಭೀಮನು ಮಾತನಾಡುತ್ತಿರಲು ಸರ್ಪವು ಅವನನ್ನು ತನ್ನ ಮಹಾ ಸುರುಳಿಯಿಂದ ಸುತ್ತುವರೆಯಿತು. ಅವನ ದಪ್ಪ ಬಾಹುಗಳನ್ನು ಮಾತ್ರ ಸ್ವತಂತ್ರವಾಗಿರಲು ಬಿಟ್ಟು ಆ ಮಹಾಬಾಹುವನ್ನು ನಿಗ್ರಹಿಸಿ ಸರ್ಪವು ಈ ಮಾತುಗಳನ್ನಾಡಿತು: “ಇಂದು ಹಸಿವೆಯಿಂದ ಬಳಲುತ್ತಿದ್ದ ನನಗೆ ಮಹಾಭುಜನಾದ ನಿನ್ನನ್ನು ಆಹಾರವಾಗಿ ದೇವತೆಗಳು ಕಳುಹಿಸಿದುದು ನನ್ನ ಅದೃಷ್ಟವೇ ಸರಿ. ದೇಹಿಗಳಿಗೆ ಪ್ರಾಣವೇ ಪ್ರಿಯವಾಗಿರಲು ಬಹುಕಾಲದ ನಂತರ ನನಗೆ ಈ ಅದೃಷ್ಟವು ದೊರಕಿದೆ. ನನಗೆ ಹೇಗೆ ಭುಜಂಗತ್ವವು ಪ್ರಾಪ್ತವಾಯಿತೆನ್ನುವುದನ್ನು ಅವಶ್ಯವಾಗಿ ನೀನು ಕೇಳಬೇಕು. ಮನೀಷಿಗಳ ಕೋಪದಿಂದ ನನಗೆ ಈ ಅವಸ್ಥೆಯು ಪ್ರಾಪ್ತವಾಯಿತು. ಆ ಶಾಪವನ್ನು ಕೊನೆಗಾಣಿಸುವ ಆಸೆಯಿಂದ ಈ ಸರ್ಪದ ಕಥೆಯನ್ನು ಹೇಳುತ್ತೇನೆ. ನಿನ್ನ ಪೂರ್ವಜ ಆಯುವಿನ ವಂಶಕರ ಮಗ ನಹುಷನೆಂಬ ರಾಜರ್ಷಿಯ ಕುರಿತು ನೀನು ಕೇಳಿರಬಹುದು. ಅವನೇ ನಾನು. ಅಗಸ್ತ್ಯನ ಶಾಪ ಮತ್ತು ಬ್ರಾಹ್ಮಣರಿಗೆ ನಾನು ಎಸಗಿದ ಅಪಮಾನಗಳಿಂದಾಗಿ ನಾನು ಈ ಅವಸ್ಥೆಯನ್ನು ಪಡೆದಿದ್ದೇನೆ. ನನ್ನ ಈ ದೈವವನ್ನು ನೋಡು! ಅತೀವ ಪ್ರಿಯದರ್ಶನನೂ ಅವಧ್ಯನೂ ಆದ ನಿನ್ನನ್ನು ನಾನು ಇಂದು ನುಂಗುತ್ತೇನೆ ಎಂದಾದರೆ ವಿಧಿಯು ಎನನ್ನು ನಡೆಸುತ್ತದೆ ಎನ್ನುವುದನ್ನಾದರೂ ನೋಡು! ದಿನದ ಈ ಆರನೆಯ ಗಳಿಗೆಯಲ್ಲಿ ನನ್ನ ಹಿಡಿತಕ್ಕೆ ಸಿಕ್ಕಿದ ಎನೂ – ಅದು ಆನೆಯಾಗಿರಲಿ ಅಥವಾ ಎಮ್ಮೆಯಾಗಿರಲಿ – ನನ್ನಿಂದ ಬಿಡುಗಡೆ ಹೊಂದುವುದಿಲ್ಲ. ಕೌರವಶ್ರೇಷ್ಠ! ನೀನು ಎಲ್ಲ ಪ್ರಾಣಿಗಳಂತಿರುವ ಒಂದು ಕೇವಲ ಸರ್ಪದ ಹಿಡಿತಕ್ಕೆ ಸಿಕ್ಕಿಲ್ಲ. ನನಗೆ ವರದಾನವಿದೆ. ಶಕ್ರನು ಕುಳಿತುಕೊಳ್ಳುವ ಆ ಮಹಾ ವಿಮಾನದಿಂದ ವೇಗವಾಗಿ ಕೆಳಕ್ಕೆ ಬೀಳುತ್ತಿರುವಾಗ ಮುನಿಸತ್ತಮ ಅಗಸ್ತ್ಯನಲ್ಲಿ ’ನನ್ನನ್ನು ಶಾಪದಿಂದ ವಿಮುಕ್ತನನ್ನಾಗಿ ಮಾಡು!’ ಎಂದು ಕೇಳಿಕೊಂಡೆ. ಆ ತೇಜಸ್ವಿಯು ಕೃಪೆಯಿಂದ ಆವೇಶಗೊಂಡು ’ರಾಜನ್! ಕೆಲವು ಕಾಲ ಕಳೆದನಂತರ ನೀನು ಬಿಡುಗಡೆಹೊಂದುತ್ತೀಯೆ!’ ಆಗ ನಾನು ಭೂಮಿಯ ಮೇಲೆ ಬಿದ್ದೆ. ಆದರೂ ನನ್ನ ನೆನಪು ಅಳಿಸಿಹೋಗಲಿಲ್ಲ. ಪುರಾತನ ಕಾಲದ ಹಿಂದೆ ನಾನು ತಿಳಿದುಕೊಂಡಿದ್ದುದು ಈಗಲೂ ನನಗೆ ನೆನಪಿದೆ. ’ನೀನು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಯಾರು ಉತ್ತರವನ್ನು ಕೊಡುತ್ತಾನೋ ಅವನೇ ನಿನ್ನನ್ನು ಈ ಶಾಪದಿಂದ ಮುಕ್ತಿಗೊಳಿಸುತ್ತಾನೆ!’ ಎಂದು ನನಗೆ ಆ ಋಷಿಯು ಹೇಳಿದ್ದನು. ’ರಾಜನ್! ನಿನ್ನ ಹಿಡಿತಕ್ಕೆ ಸಿಕ್ಕ ಪ್ರಾಣಿಗಳು – ನಿನಗಿಂತಲೂ ಅಧಿಕ ಬಲಶಾಲಿಯಾಗಿದ್ದರೂ – ತಕ್ಷಣವೇ ಸತ್ತ್ವವನ್ನು ಕಳೆದುಕೊಳ್ಳುತ್ತವೆ.” ಹೀಗೆ ನನಗೆ ಈ ದಯಾವಂತ ಮಾತುಗಳನ್ನು ಕೇಳಿಸಿ ನನಗೆ ಇದು ನೆನಪಿನಲ್ಲಿರುವಂತೆ ಅನುಗ್ರಹಿಸಿ ಆ ದ್ವಿಜನು ಅಂತರ್ಹಿತನಾಗಿದ್ದನು. ಈ ರೀತಿಯಾಗಿ ನಾನು ನನ್ನ ಪರಮದುಷ್ಕರ್ಮಗಳಿಂದಾಗಿ ಅಶೌಚನಾಗಿ ಈ ಸರ್ಪಯೋನಿಯನ್ನು ಹೊಂದಿ ನರಕದಲ್ಲಿ ಬಿದ್ದಿದ್ದೇನೆ. ಮಹಾದ್ಯುತಿ! ನಾನು ಕಾಲಾಕಾಂಕ್ಷಿಯಾಗಿದ್ದೇನೆ!”
ಆಗ ಮಹಾಬಾಹು ಭೀಮನು ಆ ಹೆಬ್ಬಾವಿಗೆ ಹೇಳಿದನು: “ಮಹಾಸರ್ಪವೇ! ನನಗೆ ನಿನ್ನ ಮೇಲಾಗಲೀ ನನ್ನ ಮೇಲಾಗಲೀ ಕೋಪವಿಲ್ಲ. ಬಂದು ಹೋಗುವ ಸುಖ-ದುಃಖಗಳಲ್ಲಿ - ಅವುಗಳನ್ನು ಅನುಭವಿಸಲಿ ಅಥವಾ ಅನುಭವಿಸದೇ ಇರಲಿ – ಮನಸ್ಸನ್ನು ತೊಡಗಿಸಿಕೊಳ್ಳಬೇಕಾಗಿಲ್ಲ. ದೈವವನ್ನು ಪುರುಷಕಾರಣದಿಂದ ಯಾರುತಾನೇ ತಡೆಯಬಲ್ಲರು? ದೈವವೇ ಮೇಲು. ಪುರುಷಾರ್ಥವು ನಿರರ್ಥಕ. ನೋಡು! ಭುಜವೀರ್ಯವನ್ನು ಆಶ್ರಯಿಸಿದ್ದ ನಾನು ದುರ್ದೈವದಿಂದಾಗಿ ನನ್ನ ಏನೂ ಕಾರಣಗಳಿಲ್ಲದೇ ಈ ಅವಸ್ಥೆಯನ್ನು ಹೊಂದಿದ್ದೇನೆ! ಆದರೆ ರಾಜ್ಯವನ್ನು ಕಳೆದುಕೊಂಡು ವಿಪಿನವನ್ನು ಸೇರಿರುವ ನನ್ನ ಭ್ರಾತೃಗಳ ಕುರಿತು ಶೋಕಿಸುವಷ್ಟು ನನ್ನ ವಿನಾಶದ ಕುರಿತು ಶೋಕಿಸುತ್ತಿಲ್ಲ. ಯಕ್ಷ-ರಾಕ್ಷಸರ ಸಂಕುಲವಾದ ಈ ಹಿಮಾಲಯವು ಅತ್ಯಂತ ಅಪಾಯಕಾರಿ. ನನ್ನನ್ನು ಈ ರೀತಿ ನೋಡಿದರೆ ನನ್ನ ಸಹೋದರರು ವಿಹ್ವಲರಾಗಿ ಕೆಳಗುರುಳುತ್ತಾರೆ. ನಾನು ನಾಶಹೊಂದಿದರೆ ಅವರು ತಮ್ಮ ಶ್ರಮವನ್ನು ತೊರೆಯುತ್ತಾರೆ. ಧರ್ಮಶೀಲರಾದ ಅವರೆಲ್ಲರೂ ರಾಜ್ಯದ ಆಸೆಬುರುಕನಾದ ನನ್ನಿಂದಲೇ ಬಾಧಿತರಾಗಿದ್ದಾರೆ. ಸರ್ವ ಅಸ್ತ್ರಗಳನ್ನೂ ತಿಳಿದಿರುವ ಮತ್ತು ದೇವ-ಗಂಧರ್ವ-ರಾಕ್ಷಸರಿಂದಲೂ ಗೆಲ್ಲಲಸಾಧ್ಯನಾಗಿರುವ ಧೀಮಂತ ಅರ್ಜುನನು ವಿಷಾದ ಹೊಂದುತ್ತಾನೆ. ಆ ಮಹಾಬಾಹುವು ಒಬ್ಬನೇ ದೇವರಾಜನನ್ನೂ ಅವನ ಸ್ಥಾನದಿಂದ ಕೆಳಗುರುಳಿಸುವ ಓಜಸ್ಸನ್ನು ಪಡೆದಿದ್ದಾನೆ. ಇನ್ನು ಕೆಟ್ಟ ದ್ಯೂತಕೋರ, ಲೋಕದಲ್ಲಿ ಯಾರಿಗೂ ಇಷ್ಟವಾಗಿರದ, ಲೋಭ-ಮೋಸಗಳಲ್ಲಿ ನಿರತನಾಗಿರುವ ಧೃತರಾಷ್ಟ್ರಪುತ್ರನು ಏನು? ಪುತ್ರರ ಮೇಲೆ ಆಸೆಯನ್ನಿಟ್ಟಿರುವ, ನಾವು ಇತರರಿಗಿಂತಲೂ ಅಧಿಕ ಮಹತ್ವವಳ್ಳವರಾಗಿರಬೇಕೆಂದು ನಿತ್ಯವೂ ಆಶಿಸುತ್ತಿರುವ ನನ್ನ ಬಡ ತಾಯಿ ಕುಂತಿಯ ಕುರಿತೂ ಶೋಕಿಸುತ್ತೇನೆ. ಭುಜಂಗಮ! ನನ್ನ ವಿನಾಶವಾದರೆ ಅನಾಥಳಾದ ಅವಳು ನನ್ನ ಮೇಲೆ ಇಟ್ಟಿದ್ದ ಸರ್ವ ಮನೋರಥಗಳೂ ನಿಷ್ಫಲವಾಗುವುದಿಲ್ಲವೇ? ಹಿರಿಯರಿಗೆ ವಿನೀತರಾಗಿರುವ ಯಮಳ ನಕುಲ-ಸಹದೇವರು ನಿತ್ಯವೂ ನನ್ನ ಬಾಹುಬಲದ ಬೆಂಬಲದಿಂದಾಗಿ ಪುರುಷರೆನಿಸಿಕೊಂಡಿದ್ದರು. ನನ್ನ ವಿನಾಶದಿಂದಾಗಿ ಅವರು ಅನಾಥರಾಗಿ ವೀರ್ಯ-ಪರಾಕ್ರಮಗಳನ್ನು ಕಳೆದುಕೊಂಡು ನಿರುತ್ಸಾಹಿಗಳಾಗುತ್ತಾರೆಂದು ನನಗನ್ನಿಸುತ್ತಿದೆ.”
ಹಾವಿನ ಸುರುಳಿಯಲ್ಲಿ ಸಿಕ್ಕಿಹಾಕಿಕೊಂಡು ಅಲುಗಾಡಲೂ ಅಶಕ್ತನಾದ ವೃಕೋದರನು ಈ ವಿಧದಲ್ಲಿ ಬಹಳಷ್ಟು ವಿಲಪಿಸಿದನು.
ಭೀಮನನ್ನು ಅರಸಿಕೊಂಡು ಬಂದ ಯುಧಿಷ್ಠಿರನು ಅಜಗರದ ಪ್ರಶ್ನೆಗಳಿಗೆ ಉತ್ತರಿಸಿ ಭೀಮಸೇನನನ್ನೂ ನಹುಷನನ್ನೂ ಬಿಡುಗಡೆಗೊಳಿಸಿದುದು
ಅದೇ ಸಮಯದಲ್ಲಿ ಯುಧಿಷ್ಠಿರನು ಅಸ್ವಸ್ಥಚೇತನನಾದನು. ಘೋರ ಉತ್ಪಾತಗಳನ್ನೂ ಅಪಶಕುನಗಳನ್ನೂ ಕಂಡು ತುಂಬಾ ಚಿಂತಿತನಾದನು. ಆಕಾಶವು ಕೆಂಪಾದ ದಕ್ಷಿಣ ದಿಕ್ಕಿನಿಂದ ಆಶ್ರಮದ ಬಳಿ ಒಂದು ಹೆಣ್ಣು ನರಿಯ ದಾರುಣ ಕೂಗು ಕೇಳಿಬಂದಿತು. ಒಂದೇ ರೆಕ್ಕೆಯ, ಒಂದೇ ಕಣ್ಣಿನ, ಒಂದೇ ಕಾಲಿನ, ಘೋರವಾದ ಬಾತುಕೋಳಿಯು ರಕ್ತವನ್ನು ಕಾರುತ್ತಾ ಸೂರ್ಯನ ದಿಕ್ಕಿನಲ್ಲಿ ಹೋಗುತ್ತಿರುವುದು ಕಂಡುಬಂದಿತು. ಧೂಳುತುಂಬಿದ ಬಿಸಿ ಒರಟು ಗಾಳಿಯು ಬೀಸಿತು. ಎಲ್ಲ ಮೃಗ-ಪಕ್ಷಿಗಳು ಕಪ್ಪು ಕಾಗೆಯನ್ನು ಬೆನ್ನತ್ತಿ ಹೋಗು ಹೋಗು ಎಂದು ಕೂಗುತ್ತಿದ್ದವು. ಅವನ ಬಲತೋಳು ನಡುಗತೊಡಗಿತು. ಅವನ ಎದೆ ತತ್ತರಿಸಿತು. ಅವನ ಎಡಕಾಲು ಮಿಡಿಯಿತು. ಮತ್ತು ಅವನ ಎಡಗಣ್ಣು ಒಂದೇ ಸಮನೆ ಬಡಿಯತೊಡಗಿತು. ಮಹಾಭಯವನ್ನು ಶಂಕಿಸಿ ಮೇಧಾವೀ ಧರ್ಮರಾಜನು “ಭೀಮನೆಲ್ಲಿ?” ಎಂದು ದ್ರೌಪದಿಯನ್ನು ಕೇಳಿದನು.
ಪಾಂಚಾಲಿಯು ಅವನಿಗೆ “ವೃಕೋದರನು ಹೋಗಿ ತುಂಬಾ ಸಮಯವಾಯಿತು” ಎಂದಳು. ಆಗ ಯುಧಿಷ್ಠಿರನು ಧೌಮ್ಯನನ್ನು ಜೊತೆಯಲ್ಲಿ ಕರೆದುಕೊಂಡು ಹೊರಟನು. “ದ್ರೌಪದಿಯ ರಕ್ಷಣಾಕಾರ್ಯವು ನಿನ್ನದು!” ಎಂದು ಧನಂಜಯನಿಗೆ ಹೇಳಿ, ನಕುಲ-ಸಹದೇವರಿಗೆ ದ್ವಿಜರನ್ನು ನೋಡಿಕೊಳ್ಳುವ ಆದೇಶವನ್ನಿತ್ತನು. ಭೀಮಸೇನನ ಹೆಜ್ಜೆಯ ಗುರುತುಗಳನ್ನು ಹಿಡಿದು ಆಶ್ರಮದಿಂದ ಹೊರಟು ಮುಂದುವರೆದನು. ಮಾರ್ಗದಲ್ಲಿ ವೀರ ಭೀಮನು ಬೇಟೆಯಾಡುತ್ತಾ ಓಡುವಾಗ ಅವನ ತೊಡೆಗೆ ತಾಗಿ ಬಾಗಿದ್ದ ಮತ್ತು ಮುರಿದಿದ್ದ ಮರಗಿಡಗಳನ್ನು ಅವನು ಕಂಡನು. ಆ ಗುರುತುಗಳನ್ನೇ ಹಿಡಿದು ಹೋಗಿ ಆ ಗಿರಿಗಹ್ವರದಲ್ಲಿ ಭುಜಗೇಂದ್ರನ ಹಿಡಿತಕ್ಕೆ ಸಿಲುಕಿ ನಿಶ್ಚೇಷ್ಟನಾಗಿದ್ದ ಅನುಜನನ್ನು ನೋಡಿದನು. ಸರ್ಪದ ಸುರುಳಿಯಿಂದ ಸುತ್ತುವರೆಯಲ್ಪಟ್ಟಿದ್ದ ತನ್ನ ಪ್ರೀತಿಯ ತಮ್ಮನ ಸಮೀಪ ಸಾರಿ ಯುಧಿಷ್ಠಿರನು ಈ ಮಾತುಗಳನ್ನಾಡಿದನು: “ಕುಂತಿಯ ಮಗನೇ! ಈ ಆಪತ್ತಿನಲ್ಲಿ ಹೇಗೆ ಸಿಲುಕಿಕೊಂಡೆ? ಮತ್ತು ಪರ್ವತೋಪಾದಿಯಾಗಿ ಕಾಣುತ್ತಿರುವ ಈ ಪನ್ನಗೋತ್ತಮನು ಯಾರು?”
ಹಿರಿಯಣ್ಣ ಧರ್ಮರಾಜನನ್ನು ಕಂಡು ತಮ್ಮ ಭೀಮನು ಹೆಬ್ಬಾವು ಹಿಡಿದುದರ ನಂತರ ನಡೆದುದೆಲ್ಲವನ್ನೂ ಹೇಳಿದನು. ಆಗ ಯುಧಿಷ್ಠಿರನು ಸರ್ಪವನ್ನು ಉದ್ದೇಶಿಸಿ ಹೇಳಿದನು: “ಸರ್ಪವೇ! ನೀನು ದೇವನೋ, ದೈತ್ಯನೋ ಅಥವಾ ಉರಗನೋ ಸತ್ಯವನ್ನು ಹೇಳು. ಯುಧಿಷ್ಠಿರನು ನಿನ್ನನ್ನು ಕೇಳುತ್ತಿದ್ದಾನೆ. ಏನನ್ನು ತರುವುದರಿಂದ ಅಥವಾ ತಿಳಿಸುವುದರಿಂದ ನೀನು ಸಂತೋಷಪಡುತ್ತೀಯೆ? ನಿನಗೆ ಯಾವ ಆಹಾರವನ್ನು ತಂದುಕೊಟ್ಟರೆ ಇವನನ್ನು ಬಿಡುಗಡೆಮಾಡುತ್ತೀಯೆ?”
ಸರ್ಪವು ಹೇಳಿತು: “ಅನಘ! ನಾನು ಹಿಂದೆ ನಿನ್ನ ಪೂರ್ವಜ ನಹುಷ ಎಂಬ ಹೆಸರಿನ ರಾಜನಾಗಿದ್ದೆ. ಚಂದ್ರನಿಂದ ಐದನೆಯವನಾದ ಆಯುವಿನ ಮಗ. ಕ್ರತು, ತಪಸ್ಸು, ಸ್ವಾಧ್ಯಾಯ, ದಮ ಮತ್ತು ವಿಕ್ರಮಗಳಿಂದ ಅವ್ಯಗ್ರ ತ್ರೈಲೋಕ್ಯದ ಅಧಿಪತ್ಯವನ್ನು ಪಡೆದೆನು. ಆ ಐಶ್ವರ್ಯವನ್ನು ಪಡೆದು ನನಗೆ ದರ್ಪವುಂಟಾಯಿತು. ಸಹಸ್ರಾರು ದ್ವಿಜರಿಗೆ ನನ್ನ ಶಿಬಿಕೆಯನ್ನು ಹೊರಲು ಹೇಳಿದೆನು. ಐಶ್ವರ್ಯ-ಮದಮತ್ತನಾದ ನಾನು ದ್ವಿಜರನ್ನು ಈ ರೀತಿ ಅಪಮಾನಿಸಲು ಅಗಸ್ತ್ಯನು ನನಗೆ ಈ ದಶೆಯನ್ನಿತ್ತನು. ಪಾಂಡವ! ಆದರೂ ಅದೇ ಮಹಾತ್ಮ ಅಗಸ್ತ್ಯನ ಅನುಗ್ರಹದಿಂದ ನನ್ನ ಪ್ರಜ್ಞೆಯು ಮೊದಲಿನ ಹಾಗೆಯೇ ಇದೆ. ದಿನದ ಆರನೆಯ ಗಳಿಗೆಯಲ್ಲಿ ನಿನ್ನ ಅನುಜನು ನನ್ನ ಆಹಾರವಾಗಿ ದೊರಕಿದನು. ನಾನು ಇವನನ್ನು ಬಿಡುವುದಿಲ್ಲ. ಮತ್ತು ನನಗೆ ಬೇರೆ ಯಾವ ಆಹಾರದ ಬಯಕೆಯೂ ಇಲ್ಲ. ಆದರೆ ನಾನು ಕೇಳುವ ಪ್ರಶ್ನೆಗಳಿಗೆ ನೀನು ಉತ್ತರಿಸುವೆಯಾದರೆ ಅದರ ನಂತರ ನೀನು ನಿನ್ನ ತಮ್ಮ ವೃಕೋದರನನ್ನು ಬಿಡುಗಡೆಗೊಳಿಸಬಲ್ಲೆ!”
ಯುಧಿಷ್ಠಿರನು ಹೇಳಿದನು: “ಸರ್ಪವೇ! ನಿನಗಿಷ್ಟವಾದ ಪ್ರಶ್ನೆಗಳನ್ನು ಕೇಳು! ನನಗೆ ಸಾಧ್ಯವಾದರೆ ಉತ್ತರಿಸುತ್ತೇನೆ. ಈ ಬ್ರಾಹ್ಮಣ ಧೌಮ್ಯನಿಗೆ ತಿಳಿದಿರುವುದು ನನಗೂ ತಿಳಿದಿದೆ. ನಿನ್ನನ್ನು ಕೇಳಿದ ನಂತರ ಉತ್ತರಿಸುತ್ತೇನೆ.”
ಸರ್ಪವು ಹೇಳಿತು: “ರಾಜನ್! ಬ್ರಾಹ್ಮಣನು ಯಾರು? ಅವನಿಗೆ ಏನು ತಿಳಿದಿರಬಹುದು? ಹೇಳು. ನಿನ್ನ ಮಾತುಗಳಿಂದ ನೀನು ಬುದ್ಧಿವಂತನೆಂದು ನನಗನ್ನಿಸುತ್ತದೆ!”
ಯುಧಿಷ್ಠಿರನು ಹೇಳಿದನು: “ನಾಗೇಂದ್ರ! ಸತ್ಯ, ದಾನ, ಕ್ಷಮೆ, ಶೀಲ, ಅನೃಶ, ದಮ ಮತ್ತು ಘೃಣಗಳು ಯಾರಲ್ಲಿದೆಯೋ ಅವನೇ ಬ್ರಾಹ್ಮಣನೆಂದು ಸ್ಮೃತಿಗಳು ಹೇಳುತ್ತವೆ. ಅವನು ಸುಖ-ದುಃಖಗಳಿಗೂ ಅತೀತವಾದ, ಮತ್ತು ಯಾರನ್ನು ಸೇರಿದರೆ ಶೋಕವಿಲ್ಲವೋ ಆ ಬ್ರಹ್ಮನನ್ನು ತಿಳಿದಿರಬಹುದು. ಇನ್ನು ಏನನ್ನು ಕೇಳಬಯಸುತ್ತೀಯೆ?”
ಸರ್ಪವು ಹೇಳಿತು: “ನಾಲ್ಕು ವರ್ಣದವರಿಗೂ ಸತ್ಯ ಮತ್ತು ಬ್ರಹ್ಮಗಳು ಪ್ರಮಾಣಗಳು. ಶೂದ್ರರೂ ಕೂಡ ಸತ್ಯವಂತರೂ, ದಾನವಂತರೂ, ಅಕ್ರೋಧರೂ, ಇಂದ್ರಿಯ ನಿಗ್ರಹ ಮಾಡಿಕೊಂಡೂ, ಸಹನಶೀಲರಾಗಿಯೂ, ಮೃದುವಾಗಿಯೂ ಮತ್ತು ಅನುಕಂಪಿತರಾಗಿಯೂ ಇರಬಹುದಲ್ಲವೇ? ಯುಧಿಷ್ಠಿರ! ತಿಳಿದುಕೊಳ್ಳುವಂಥದ್ದು ಸುಖ-ದುಃಖಗಳಿಗೆ ಅತೀತವಾದುದೆಂದು ನೀನು ಹೇಳಿದೆಯಲ್ಲ. ಆದರೆ ಯಾವುದೂ ಅವೆರಡನ್ನು ಬಿಟ್ಟಿಲ್ಲ. ಅಂಥಹದೊಂದು ಇದೆ ಎನ್ನುವುದು ನನಗನ್ನಿಸುವುದಿಲ್ಲ!”
ಯುಧಿಷ್ಠಿರನು ಹೇಳಿದನು: “ಶೂದ್ರನ ಲಕ್ಷಣಗಳು ಬ್ರಾಹ್ಮಣನಲ್ಲಿ ಕಾಣುವುದಿಲ್ಲ. ಆದರೆ ಶೂದ್ರನು ಶೂದ್ರನಾಗಿಯೇ ಇರುತ್ತಾನೆಂದಿಲ್ಲ. ಬ್ರಾಹ್ಮಣನು ಬ್ರಾಹ್ಮಣನಾಗಿಯೇ ಇರುತ್ತಾನೆಂದಿಲ್ಲ. ಯಾರಲ್ಲಿ ಬ್ರಾಹ್ಮಣನ ಲಕ್ಷಣಗಳು ಕಾಣಿಸುತ್ತವೆಯೋ ಅವನೇ ಬ್ರಾಹ್ಮಣ ಎಂದು ಸ್ಮೃತಿಗಳು ಹೇಳುತ್ತವೆ. ಯಾರಲ್ಲಿ ಅವುಗಳು ಕಂಡುಬರುವುದಿಲ್ಲವೋ ಅವರನ್ನು ಶೂದ್ರರೆಂದು ಕರೆಯುತ್ತಾರೆ. ’ಈ ತಿಳಿಯುವ ವಸ್ತುವು ಇಲ್ಲವೇ ಇಲ್ಲ. ಯಾಕೆಂದರೆ ಸುಖ-ದುಃಖಗಳಿಂದ ಮುಕ್ತವಾದ ಯಾವುದೂ ಇಲ್ಲ’ ಎಂದು ನೀನು ಹೇಳಿದೆಯಲ್ಲ. ಇದು ನಿನ್ನ ಅಭಿಪ್ರಾಯ. ಆದರೆ ಶೀತ-ಉಷ್ಣಗಳ ಮಧ್ಯೆ ತಣ್ಣಗಾಗಿರದ ಮತ್ತು ಬಿಸಿಯೂ ಆಗಿರದ ವಸ್ತುಗಳು ಇರುವಂತೆ ಸುಖ-ದುಃಖಗಳ ನಡುವೆಯೂ ಏನೋ ಒಂದಿದೆ ಎನ್ನುವುದು ನನ್ನ ಅಭಿಪ್ರಾಯ. ಇದರ ಕುರಿತು ನಿನ್ನ ಅಭಿಪ್ರಾಯವೇನು?”
ಸರ್ಪವು ಹೇಳಿತು: “ರಾಜನ್! ವರ್ತನೆಯಿಂದ ನೀನು ಬ್ರಾಹ್ಮಣನ್ಯಾರೆಂದು ಗುರುತಿಸುವೆಯಾದರೆ ಜಾತಿಯೆನ್ನುವುದು ವ್ಯರ್ಥ. ಕೇವಲ ವರ್ತನೆಯೇ ಸಾಕ್ಷಿ!”
ಯುಧಿಷ್ಠಿರನು ಹೇಳಿದನು: “ಮಹಾಸರ್ಪವೇ! ಮನುಷ್ಯರಲ್ಲಿ ಜಾತಿಯನ್ನು ನಿರ್ಧರಿಸುವುದು ಬಹಳ ಕಷ್ಟ. ಯಾಕೆಂದರೆ ಸಂಕರದಿಂದ ಮನುಷ್ಯನು ಎಲ್ಲ ವರ್ಣದವರಲ್ಲಿಯೂ ಮಕ್ಕಳನ್ನು ಪಡೆಯುತ್ತಾನೆ ಎಂದು ನನಗನಿಸುತ್ತದೆ. ನರರಲ್ಲಿ ಎಲ್ಲರೂ ಎಲ್ಲರಿಂದ ಮಕ್ಕಳನ್ನು ಪಡೆಯುತ್ತಾರಾದುದರಿಂದ ಮಾತು, ಮೈಥುನ, ಜನ್ಮ ಮತ್ತು ಮರಣಗಳು ಎಲ್ಲರಿಗೂ ಸಮಾನ. ಇದು ’ಯೇ ಯಜಾಮಹೇ” ಎಂಬ ಋಷಿಗಳ ಪ್ರಮಾಣದಲ್ಲಿಯೂ ಇದೆ. ಆದುದರಿಂದ ಶೀಲವೇ ಪ್ರಧಾನವೆಂದು ತತ್ತ್ವದರ್ಶಿಗಳು ತಿಳಿದಿದ್ದಾರೆ. ಹೊಕ್ಕಳುಬಳ್ಳಿ ಕತ್ತರಿಸುವ ಮೊದಲೇ ಜಾತಕರ್ಮವನ್ನು ನಡೆಸುತ್ತಾರೆ. ಅಲ್ಲಿ ತಾಯಿಯೇ ಸಾವಿತ್ರಿ ಮತ್ತು ತಂದೆಯೇ ಆಚಾರ್ಯನೆಂದು ಹೇಳುತ್ತಾರೆ. ಯಾರು ವೇದಗಳಿಂದ ಜನಿಸುವುದಿಲ್ಲವೋ ಅವನು ನಡತೆಯಲ್ಲಿ ಶೂದ್ರನ ಸಮ. ಇದರಲ್ಲಿ ದ್ವಂದ್ವವಾದ ಅಭಿಪ್ರಾಯವಿದ್ದರೆ ಇದನ್ನು ಸ್ವಯಂಭು ಮನುವೇ ಹೇಳಿರುತ್ತಾನೆ. ನಾಗೇಂದ್ರ! ಮಾಡುವ ಕಾರ್ಯಗಳ ಆಧಾರದ ಮೇಲೆ ವರ್ಣಗಳಾಗಿವೆ. ವರ್ತನೆಯೇ ಇಲ್ಲದಿದ್ದರೆ ಅತಿದೊಡ್ಡ ಸಂಕರವಾಗುತ್ತದೆ ಎಂದು ಕಂಡಿದ್ದಾರೆ. ನಾನು ಮೊದಲೇ ಹೇಳಿದ ಹಾಗೆ ಸಂಸ್ಕೃತ ನಡತೆಯುಳ್ಳವನನ್ನು ಬ್ರಾಹ್ಮಣನೆನ್ನುತ್ತಾರೆ.”
ಸರ್ಪವು ಹೇಳಿತು: “ಯುಧಿಷ್ಠಿರ! ತಿಳಿಯಬೇಕಾದುದನ್ನು ತಿಳಿದಿರುವ ನಿನ್ನ ಈ ಮಾತುಗಳನ್ನು ಕೇಳಿದ ನಂತರವೂ ನಾನು ಹೇಗೆ ತಾನೇ ನಿನ್ನ ತಮ್ಮ ವೃಕೋದರನನ್ನು ಭಕ್ಷಿಸಲಿ?”
ಯುಧಿಷ್ಠಿರನು ಹೇಳಿದನು: “ನೀನು ಎಷ್ಟೊಂದು ವೇದ-ವೇದಾಂಗ ಪಾರಂಗತನಾಗಿದ್ದೀಯೆ! ಈ ಲೋಕದಲ್ಲಿ ಯಾವ ಕರ್ಮಗಳನ್ನು ಮಾಡಿ ಅನುತ್ತಮ ಗತಿಯನ್ನು ಪಡೆಯಬಹುದು ಎನ್ನುವುದನ್ನು ಹೇಳು!”
ಸರ್ಪವು ಹೇಳಿತು: “ಭಾರತ! ಸತ್ಪಾತ್ರನಿಗೆ ದಾನವನ್ನು ನೀಡುವುದರಿಂದ, ಪ್ರಿಯವಾದ ಮಾತುಗಳನ್ನಾಡುವುದರಿಂದ, ಮತ್ತು ಅಹಿಂಸೆಯಲ್ಲಿ ನಿರತನಾಗಿರುವುದರಿಂದ ಸ್ವರ್ಗಕ್ಕೆ ಹೋಗಬಹುದು ಎನ್ನುವುದು ನನ್ನ ಅಭಿಪ್ರಾಯ.”
ಯುಧಿಷ್ಠಿರನು ಹೇಳಿದನು: “ಸರ್ಪವೇ! ದಾನ ಮತ್ತು ಸತ್ಯಗಳಲ್ಲಿ ಯಾವುದು ಹಿರಿಯದೆಂದು ನಿನಗನ್ನಿಸುತ್ತದೆ? ಅಹಿಂಸೆ ಮತ್ತು ಪ್ರಿಯಮಾತುಗಳಲ್ಲಿರುವ ಹಿರಿತನ-ಲಘುತ್ವಗಳನ್ನು ಹೇಳು.”
ಸರ್ಪವು ಹೇಳಿತು: “ದಾನ, ಸತ್ಯವಂತನಾಗಿರುವುದು, ಅಹಿಂಸೆ ಮತ್ತು ಪ್ರಿಯಮಾತುಗಳು ಇವುಗಳ ಪರಿಣಾಮಗಳ ಮಹತ್ವತೆಯ ಆಧಾರದ ಮೇಲೆ ಗುರುತ್ವ-ಲಘುತ್ವಗಳನ್ನು ಹೇಳಬಹುದು. ಯಾಕೆಂದರೆ ಕೆಲವೊಮ್ಮೆ ಕೆಲವು ದಾನಗಳಿಗಿಂಥ ಸತ್ಯವೇ ವಿಶೇಷವಾಗುತ್ತದೆ. ಕೆಲವೊಮ್ಮೆ ಸತ್ಯವಾಕ್ಯಕ್ಕಿಂತಲೂ ದಾನವೇ ವಿಶೇಷವಾಗುತ್ತದೆ. ಹಾಗೆಯೇ ಅಹಿಂಸೆಯು ಪ್ರಿಯವಾಕ್ಯಕ್ಕಿಂತ ಹೆಚ್ಚಿನದಾಗಿ ಕಾಣಿಸುತ್ತದೆ. ಮತ್ತೆ ಕೆಲವೊಮ್ಮೆ ಪ್ರಿಯವಾಕ್ಯವೇ ಹೆಚ್ಚಿನದಾಗಿ ತೋರುತ್ತದೆ. ಹೀಗೆ ಇವೆಲ್ಲವೂ ಕಾರ್ಯದ ನಂತರದ ಪರಿಣಾಮದ ಮೇಲೆ ಅವಲಂಬಿತವಾಗಿವೆ. ನಿನ್ನ ಮನಸ್ಸಿನಲ್ಲಿ ಬೇರೆ ಏನನ್ನಾದರೂ ಕೇಳಬೇಕೆಂದಿದ್ದರೆ ಕೇಳು. ಹೇಳುತ್ತೇನೆ.”
ಯುಧಿಷ್ಠಿರನು ಹೇಳಿದನು: “ಸರ್ಪವೇ! ಅಶರೀರಿಯಾದವನು ಸ್ವರ್ಗಕ್ಕೆ ಹೋಗಿರುವುದನ್ನು ಮತ್ತು ಕರ್ಮಗಳ ಫಲವನ್ನು ಹೇಗೆ ಗುರುತಿಸುತ್ತಾನೆ? ಈ ವಿಷಯದ ಕುರಿತು ನನಗೆ ಹೇಳಬೇಕು.”
ಸರ್ಪವು ಹೇಳಿತು: “ರಾಜನ್! ಸ್ವಕರ್ಮದಿಂದ ಈ ಮೂರು ಮಾರ್ಗಗಳಲ್ಲಿ ಹೋಗಬಹುದು – ಮನುಷ್ಯನಾಗಿ ಹುಟ್ಟಬಹುದು, ಸ್ವರ್ಗದಲ್ಲಿ ವಾಸಿಸಬಹುದು ಮತ್ತು ಪ್ರಾಣಿಯಾಗಿ ಜನಿಸಬಹುದು. ದಾನಾದಿಗಳಲ್ಲಿ ತೊಡಗಿಸಿಕೊಳ್ಳುವುದರ ಮತ್ತು ಅಹಿಂಸಾರ್ಥ ಸಮಾಯುಕ್ತರಾಗಿರುವುದರ ಮೂಲಕ ಮನುಷ್ಯಲೋಕದಿಂದ ಸ್ವರ್ಗವನ್ನು ಪಡೆಯಬಹುದು. ಅವುಗಳಿಗೆ ವಿಪರೀತವಾಗಿ ನಡೆದುಕೊಳ್ಳುವುದರ ಮೂಲಕ ಮನುಷ್ಯನು ಪ್ರಾಣಿಯೋನಿಯಲ್ಲಿ ಜನಿಸುತ್ತಾನೆ. ಕಾಮ-ಕ್ರೋಧಗಳಿಂದೊಡಗೂಡಿ ಹಿಂಸೆ ಮತ್ತು ಲೋಭಗಳನ್ನು ಹೊಂದಿದವನು ಮನುಷ್ಯತ್ವದಿಂದ ಪರಿಭ್ರಷ್ಟನಾಗಿ ತಿರ್ಯಗ್ಯೋನಿಯಲ್ಲಿ ಹುಟ್ಟುತ್ತಾನೆ. ಇದೇ ರೀತಿ ತಿರ್ಯಗ್ಯೋನಿಗಳಲ್ಲಿ ಹುಟ್ಟಿದವು ಇವುಗಳಿಂದ ಮನುಷ್ಯತ್ವವನ್ನು ಪಡೆಯುತ್ತವೆ ಎಂದು ಹೇಳುತ್ತಾರೆ. ಗೋವುಗಳು ಮತ್ತು ಅಶ್ವಗಳು ದೇವತ್ವವನ್ನು ಪಡೆದುದೂ ಕಂಡುಬರುತ್ತವೆ. ಕರ್ಮವನ್ನೆಸಗುವ ಸರ್ವ ಜಂತುಗಳೂ ಇದೇ ಗತಿಯಲ್ಲಿ ಚಲಿಸುತ್ತವೆ. ನಿತ್ಯವೂ ಮಹಾ ಆತ್ಮನನ್ನು ಪುನಃಸ್ಥಾಪಿಸುತ್ತಿರುತ್ತಾರೆ. ಜನ್ಮ ಜನ್ಮದಲ್ಲಿಯೂ ಆತ್ಮವು ದೇಹವನ್ನು ಪಡೆದು ಫಲಾರ್ಥಗಳನ್ನು ಅನುಭವಿಸುತ್ತಿರುತ್ತದೆ ಮತ್ತು ಆ ಜೀವಿಯ ವೈಯಕ್ತಿಕ ಸ್ವರೂಪವನ್ನು ಹೊರಸೂಸುತ್ತಿರುತ್ತದೆ.”
ಯುಧಿಷ್ಠಿರನು ಹೇಳಿದನು: “ಸರ್ಪವೇ! ಆತ್ಮವು ಹೇಗೆ ಶಬ್ಧ, ಸ್ಪರ್ಶ, ರೂಪ, ರಸ ಮತ್ತು ಗಂಧಗಳಿಂದ ವಿಕಾರಗೊಳ್ಳದೇ ಇರುತ್ತದೆ ಎನ್ನುವುದನ್ನು ಯಥಾವತ್ತಾಗಿ ಹೇಳು. ವಿಷಯಗಳನ್ನು ಒಟ್ಟಿಗೇ ಏಕೆ ಹಿಡಿದಿಟ್ಟುಕೊಂಡಿರುವುದಿಲ್ಲ?”
ಸರ್ಪವು ಹೇಳಿತು: “ಆಯುಷ್ಮನ್! ಆತ್ಮದ್ರವ್ಯವು ದೇಹವನ್ನು ಆಶ್ರಯಿಸಿ ಕರಣಗಳ ಮೂಲಕ ಯಥಾವಿಧಿಯಾಗಿ ಭೋಗಗಳನ್ನು ಭೋಗಿಸುತ್ತದೆ. ಜ್ಞಾನ, ಬುದ್ಧಿ, ಮನಸ್ಸು ಮತ್ತು ಕರಣಗಳು ಅದರ ಭೋಗಾಧಿಕರಣಗಳೆಂದು ತಿಳಿ. ಯಾವುದೇ ವಿಷಯಗಳ ಮೇಲೆ ಹರಿದಿರುವ ಮನಸ್ಸಿನ ಮೂಲಕ ಭೂತಾತ್ಮನು ತನ್ನ ಕ್ಷೇತ್ರವನ್ನು ಬಿಟ್ಟು ವಿಷಯಗಳನ್ನು ಒಂದೊಂದಾಗಿ ಅನುಭವಿಸುತ್ತಾನೆ. ಜಂತುವಿನ ಮನಸ್ಸು ಒಂದು ಕಾಲದಲ್ಲಿ ಒಂದೇ ಒಂದು ವಿಷಯದ ಕುರಿತು ಯೋಚಿಸಬಲ್ಲದು. ಸಮಗ್ರವಾಗಿ ಎಲ್ಲವನ್ನೂ ಗ್ರಹಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ. ಹುಬ್ಬುಗಳ ಮಧ್ಯದಲ್ಲಿ ನೆಲೆಸಿರುವ ಆತ್ಮನು ಬುದ್ಧಿಯನ್ನು ವಿವಿಧ ದ್ರವ್ಯಗಳ ಮೇಲೆ ಹಾಯಿಸುತ್ತಾನೆ. ಬುದ್ಧಿಯ ನಂತರವೇ ವೇದನೆಯಾಗುತ್ತದೆ ಎಂದು ತಿಳಿದವರು ಕಂಡುಕೊಂಡಿದ್ದಾರೆ. ಇದು ಕ್ಷೇತ್ರಭಾವನನ ವಿಧಿ.”
ಯುಧಿಷ್ಠಿರನು ಹೇಳಿದನು: “ಮನಸ್ಸು ಮತ್ತು ಬುದ್ಧಿಗಳ ಪರಮ ಲಕ್ಷಣಗಳನ್ನು ಹೇಳು. ಇದು ಆಧ್ಯಾತ್ಮ ವಿದುಶರ ಪರಮಕಾರ್ಯವೆಂದು ಹೇಳುತ್ತಾರೆ.”
ಸರ್ಪವು ಹೇಳಿತು: “ಮಗೂ! ಉತ್ಪಾತದ ಕಾರಣದಿಂದ ಬುದ್ಧಿಯು ಆತ್ಮನನ್ನು ಅನುಸರಿಸುತ್ತದೆ ಎಂದು ತಿಳಿಯಲ್ಪಟ್ಟಿದೆ. ಈ ಬುದ್ಧಿ ಸಂಜ್ಞೆಯು ಆತ್ಮನನ್ನು ಆಶ್ರಯಿಸಿದ್ದರೂ ಕರ್ಮಗಳನ್ನು ಹುಡುಕುವಾಗ ಆತ್ಮದ ವಿಧಿಯಾಗುತ್ತದೆ. ಬುದ್ಧಿಯು ಗುಣಗಳ ಅಧೀನದಲ್ಲಿಲ್ಲ. ಆದರೆ ಮನಸ್ಸು ಗುಣಗಳ ಅಧೀನದಲ್ಲಿರುತ್ತದೆ. ಬುದ್ಧಿಯು ಕಾರ್ಯದಲ್ಲಿ ಹುಟ್ಟುತ್ತದೆ. ಮನಸ್ಸು ಗುಣಗಳಲ್ಲಿ ಹುಟ್ಟುತ್ತದೆ. ಮನಸ್ಸು ಮತ್ತು ಬುದ್ಧಿ ಹೇಗೆ ಬೇರೆ ಬೇರೆ ಎನ್ನುವುದನ್ನು ಹೇಳಿದ್ದೇನೆ. ನೀನೂ ಕೂಡ ಈ ವಿಷಯವನ್ನು ಚೆನ್ನಾಗಿ ತಿಳಿದುಕೊಂಡಿರುವೆ. ನಿನ್ನ ಅಭಿಪ್ರಾಯವೇನು?”
ಯುಧಿಷ್ಠಿರನು ಹೇಳಿದನು: “ಬುದ್ಧಿವಂತರಲ್ಲಿ ಶ್ರೇಷ್ಠನೇ! ಈ ವಿಷಯದಲ್ಲಿ ನಿನ್ನ ಬುದ್ಧಿಯು ಸುಂದರವಾಗಿದೆ! ತಿಳಿಯಬೇಕಾದುದನ್ನು ನೀನು ತಿಳಿದಿರುವೆ. ನನ್ನನ್ನು ಏಕೆ ಕೇಳುತ್ತಿದ್ದೀಯೆ? ಸರ್ವಜ್ಞನಾದ ಮತ್ತು ಅದ್ಭುತಕರ್ಮಗಳನ್ನೆಸಗಿದ ನೀನು ಸ್ವರ್ಗದಲ್ಲಿ ವಾಸಿಸುವಾಗ ಮೋಹವು ಹೇಗೆ ನಿನ್ನನ್ನು ಆವರಿಸಿತು? ಇದರಲ್ಲಿ ನನಗೆ ಮಹಾ ಸಂಶಯವಿದೆ!”
ಸರ್ಪವು ಹೇಳಿತು: “ಎಷ್ಟೇ ಸುಪ್ರಜ್ಞನಾಗಿದ್ದರೂ ಮತ್ತು ಶೂರನಾಗಿದ್ದರೂ ಸಂಪತ್ತು ಮನುಷ್ಯನನ್ನು ಮೋಹಿಸುತ್ತದೆ. ನನ್ನ ಪ್ರಕಾರ ವರ್ತಮಾನದಲ್ಲಿ ಸುಖದಿಂದಿರುವ ಎಲ್ಲರೂ ವಿವೇಕದಲ್ಲಿ ಕಡಿಮೆಯಾಗಿರುತ್ತಾರೆ. ಇದರ ಹಾಗೆಯೇ ನಾನು ಐಶ್ವರ್ಯಮೋಹದಿಂದ ಮದಾವಿಷ್ಟನಾಗಿ ಪತಿತನಾದೆ. ಸರಿಯಾಗಿ ತಿಳಿದುಕೊಂಡಿದ್ದ ನಾನು ಈಗ ಸರಿಯಾದ ತಿಳುವಳಿಕೆಯನ್ನು ಕೊಡುತ್ತಿದ್ದೇನೆ. ಮಹಾರಾಜ! ನಿನ್ನಂಥಹ ಸಾಧುವಿನೊಂದಿಗೆ ಸಂಭಾಷಿಸಿ ನನ್ನ ಈ ದಾರುಣ ಶಾಪವು ಕ್ಷೀಣವಾಯಿತು. ಹಿಂದೆ ನಾನು ದಿವಿಯಲ್ಲಿ ದಿವ್ಯ ವಿಮಾನದಲ್ಲಿ ಸಂಚರಿಸುತ್ತಿರುವಾಗ ಅಭಿಮಾನದಿಂದ ಮತ್ತನಾಗಿ ಅನ್ಯರ ಕುರಿತು ಸ್ವಲ್ಪವೂ ಯೋಚಿಸುತ್ತಿರಲಿಲ್ಲ. ಬ್ರಹ್ಮರ್ಷಿ-ದೇವತೆ-ಗಂಧರ್ವ-ಯಕ್ಷ-ರಾಕ್ಷಸ-ಕಿನ್ನರರು ಮತ್ತು ತ್ರೈಲೋಕ್ಯವಾಸಿಗಳೆಲ್ಲರೂ ನನಗೆ ಕರವನ್ನು ಪ್ರದಾನಿಸುತ್ತಿದ್ದರು. ಯಾವ ಪ್ರಾಣಿಯ ಮೇಲೆ ನನ್ನ ದೃಷ್ಟಿಯು ಬೀಳುತ್ತಿತ್ತೋ ಅದರ ತೇಜಸ್ಸನ್ನು ನಾನು ಅಪಹರಿಸುತ್ತಿದ್ದೆ. ನನ್ನ ದೃಷ್ಟಿಬಲವು ಅಂಥದ್ದಾಗಿತ್ತು. ಸಹಸ್ರಾರು ಬ್ರಹ್ಮರ್ಷಿಗಳು ನನ್ನ ಶಿಬಿಕೆಯನ್ನು ಹೊರುತ್ತಿದ್ದರು. ಅವರಿಗೆ ನಾನು ಮಾಡಿದ ಅಪಮಾನವೇ ನನ್ನನ್ನು ಸಂಪತ್ತಿನಿಂದ ಕೆಳಗುರುಳಿಸಿತು. ಅಲ್ಲಿ ಅಗಸ್ತ್ಯಮುನಿಯು ನನ್ನನ್ನು ಹೊತ್ತು ನಡೆಯುತ್ತಿರುವಾಗ ನಾನು ಅವನನ್ನು ಪಾದದಿಂದ ಒದೆದನು. ಆಗ “ಸರ್ಪ! ಧ್ವಂಸನಾಗು!” ಎಂದು ಸಿಟ್ಟಿನಿಂದ ನುಡಿದ ಅದೃಶ್ಯವಾಣಿಯು ಕೇಳಿಬಂದಿತು. ಅದೇ ಕ್ಷಣದಲ್ಲಿ ನನ್ನ ಕುಂದಿಲ್ಲದ ಆಭೂಷಣಗಳು ವಿಮಾನದಿಂದ ಕೆಳಗೆ ಬಿದ್ದವು. ನಾನೂ ಕೂಡ ಹೆಬ್ಬಾವಾಗಿ ಕೆಳಗೆ ಬೀಳುತ್ತಿರುವ ಅರಿವು ನನಗಾಯಿತು. ಆಗ ನಾನು ಆ ವಿಪ್ರನಲ್ಲಿ ’ಈ ಶಾಪಕ್ಕೆ ಕೊನೆಯಿರಲಿ! ಭಗವನ್! ಅಜ್ಞಾನದಿಂದ ನಡೆದುಕೊಂಡಿದ್ದುದನ್ನು ಕ್ಷಮಿಸಬೇಕು!’ ಎಂದು ಯಾಚಿಸಿದೆ. ನಾನು ಬೀಳುತ್ತಿರುವಾಗ ಕೃಪಾನ್ವಿತನಾದ ಅವನು ನನಗೆ ’ಧರ್ಮರಾಜ ಯುಧಿಷ್ಠಿರನು ನಿನ್ನನ್ನು ಶಾಪದಿಂದ ಬಿಡುಗಡೆ ಮಾಡುತ್ತಾನೆ. ನಿನ್ನ ಘೋರ ಅಭಿಮಾನ ಮತ್ತು ಬಲಗಳ ಫಲವು ಕ್ಷೀಣವಾದಾಗ ಪುಣ್ಯಫಲವನ್ನು ಹೊಂದುತ್ತೀಯೆ” ಎಂದು ಹೇಳಿದ್ದನು. ಅವನ ತಪಸ್ಸಿನ ಬಲವನ್ನು ನೋಡಿ ನಾನು ವಿಸ್ಮಿತನಾದೆನು. ಆದುದರಿಂದಲೇ ನಾನು ನಿನ್ನಲ್ಲಿ ಬ್ರಹ್ಮ ಮತ್ತು ಬ್ರಾಹ್ಮಣತ್ವದ ಕುರಿತು ಕೇಳಿದೆನು. ನೃಪ! ಸತ್ಯ, ದಮ, ತಪಸ್ಸು, ಯೋಗ, ಅಹಿಂಸೆ, ನಿತ್ಯ ದಾನ ಇವು ಸದಾ ಪುರುಷನ ಸಾಧಕಗಳು. ಜಾತಿ ಅಥವಾ ಕುಲಗಳಲ್ಲ. ನಿನ್ನ ತಮ್ಮ ಮಹಾಭುಜ ಭೀಮನು ಗಾಯಗಳಿಲ್ಲದೇ ಬಿಡುಗಡೆಹೊಂದಿದ್ದಾನೆ. ಮಹಾರಾಜ! ನಿನಗೆ ಮಂಗಳವಾಗಲಿ! ನಾನು ಪುನಃ ದೇವಲೋಕಕ್ಕೆ ಹೋಗುತ್ತೇನ.”
ಹೀಗೆ ಹೇಳಿ ನೃಪ ನಹುಷನು ಅಜಗರನ ದೇಹವನ್ನು ತ್ಯಜಿಸಿ ದಿವ್ಯದೇಹವನ್ನು ಧರಿಸಿ ತ್ರಿದಿವಕ್ಕೆ ಹೋದನು. ಧರ್ಮಾತ್ಮ ಯುಧಿಷ್ಠಿರನೂ ಕೂಡ ತಮ್ಮ ಭೀಮನನ್ನು ಸೇರಿ ಧೌಮ್ಯನ ಸಹಿತ ಆಶ್ರಮಕ್ಕೆ ಮರಳಿದನು. ಆಗ ಯುಧಿಷ್ಠಿರನು ನಡೆದುದೆಲ್ಲವನ್ನೂ ಯಥಾವತ್ತಾಗಿ ಅಲ್ಲಿ ಸೇರಿದ್ದ ಬ್ರಾಹ್ಮಣರಿಗೆ ವರದಿಮಾಡಿದನು. ಅದನ್ನು ಕೇಳಿದ ದ್ವಿಜರೆಲ್ಲರೂ, ಮೂವರು ತಮ್ಮಂದಿರು ಮತ್ತು ದ್ರೌಪದಿಯೂ ಕೂಡ ಸುವ್ರೀಡರಾದರು. ಪಾಂಡವರಾದರೋ ಭೀಮನು ಭಯದಿಂದ ಮುಕ್ತನಾದುದನ್ನು ನೋಡಿ ತಮ್ಮ ಹರ್ಷವನ್ನು ತೋರಿಕೊಂಡು ಒಟ್ಟಿಗೇ ಸಂತೋಷಪಟ್ಟರು.
ಪಾಂಡವರು ನೀಲಾದ್ರಿಯಿಂದ ದ್ವೈತವನಕ್ಕೆ ಮರಳಿಬಂದುದು
ಹೀಗೆ ನೀರಾದ್ರಿಯ ವನದಲ್ಲಿ ಪಾಂಡವರು ಒಂದು ವರ್ಷವನ್ನು ಕಳೆದು ವನವಾಸದ ಹನ್ನೆರಡನೇ ವರ್ಷವು ಉರುಳಿ ಬರಲು ಆ ವನವನ್ನು ಬಿಟ್ಟು ಅವರು ಮರುಭೂಮಿಯ ಪಕ್ಕದಲ್ಲಿ ಹೋಗಿ, ಅಲ್ಲಿಂದ ಸರಸ್ವತೀ ತೀರಕ್ಕೆ ಬಂದು, ಅಲ್ಲಿಂದ ದ್ವೈತವನದ ಸರೋವರಕ್ಕೆ ಬಂದರು. ದ್ವೈತವನಕ್ಕೆ ಅವರ ಆಗಮನವನ್ನು ಕಂಡು ಅಲ್ಲಿದ್ದ ತಪಸ್ವಿಗಳು ಹುಲ್ಲು, ನೀರು, ಪಾತ್ರೆ, ಆಹಾರಗಳಿಂದ ಅವರನ್ನು ಸ್ವಾಗತಿಸಿದರು. ಅಲ್ಲಿ ಅವರು ಯಕ್ಷ-ಗಂಧರ್ವ-ಮಹರ್ಷಿಗಳ ಪ್ರೀತಿಪಾತ್ರರಾಗಿ ಸರಸ್ವತೀ ತೀರದಲ್ಲಿ ಸಂಚರಿಸುತ್ತಾ ಸುಖವಾಗಿ ಕಾಲಕಳೆದರು.