ಕಾಮ್ಯಕಕ್ಕೆ ಕೃಷ್ಣ, ಮಾರ್ಕಂಡೇಯ ಮತ್ತು ನಾರದರ ಆಗಮನ
ಯುಧಿಷ್ಠಿರನ ನಾಯಕತ್ವದಲ್ಲಿ ಕೌಂತೇಯರು ಕಾಮ್ಯಕವನ್ನು ತಲುಪಿದಾಗ ಮುನಿಗಣಗಳಿಂದ ಸ್ವಾಗತಿಸಲ್ಪಟ್ಟು ಕೃಷ್ಣೆಯೊಂದಿಗೆ ಅಲ್ಲಿ ನೆಲೆಸಿದರು. ಆಲ್ಲಿ ಎಲ್ಲ ಕಡೆಗಳಿಂದಲೂ ಬಂದ ಬಹುಮಂದಿ ಬ್ರಾಹ್ಮಣರು ಆ ಪಾಂಡವರನ್ನು ಸುತ್ತುವರೆದು ಸಲಹೆ-ಪ್ರೋತ್ಸಾಹಗಳನ್ನು ನೀಡುತ್ತಿದ್ದರು. ಒಮ್ಮೆ ಒಬ್ಬ ಬ್ರಾಹ್ಮಣನು ಬಂದು ಹೇಳಿದನು: “ಅರ್ಜುನನ ಪ್ರಿಯ ಸಖ, ಮಹಾಬಾಹು ಉದಾರಧೀ ಶೌರಿಯು ಅರ್ಜುನನು ಮರಳಿ ಬಂದಿದ್ದಾನೆಂದು ತಿಳಿದು ಅವನನ್ನು ಕಾಣಲು ಇಲ್ಲಿಗೆ ಬರುತ್ತಿದ್ದಾನೆ. ಹಾಗೆಯೇ ಅನೇಕ ವರ್ಷಗಳಿಂದ ಜೀವಿಸುತ್ತಿರುವ ಸ್ವಾಧ್ಯಾಯ ಮತ್ತು ತಪೋನಿರತನಾಗಿರುವ ಮಹಾತಪಸ್ವಿ ಮಾರ್ಕಂಡೇಯನೂ ಕೂಡ ಶೀಘ್ರದಲ್ಲಿಯೇ ನಿಮ್ಮನ್ನು ಬಂದು ಸೇರಲಿದ್ದಾನೆ.”
ಅವನು ಹೀಗೆ ಹೇಳುತ್ತಿರುವಾಗಲೇ ಸೈನ್ಯ-ಸುಗ್ರೀವರನ್ನು ಕಟ್ಟಿದ ರಥದಲ್ಲಿ ಕೇಶವನು ಸತ್ಯಭಾಮೆಯ ಸಹಿತ ಅಲ್ಲಿ ಕಾಣಿಸಿಕೊಂಡನು. ರಥದಿಂದ ಕೆಳಗಿಳಿದು ಕೃಷ್ಣನು ಯಥಾವಿಧಿಯಾಗಿ ಧರ್ಮರಾಜ ಮತ್ತು ಬೀಮಸೇನರನ್ನು ಸಂತೋಷದಿಂದ ನಮಸ್ಕರಿಸಿದನು. ಧೌಮ್ಯನನ್ನು ಪೂಜಿಸಿದನು. ಯಮಳರನ್ನು ಅಭಿವಂದಿಸಿದನು. ಅರ್ಜುನನನ್ನು ಬಿಗಿದಪ್ಪಿಕೊಂಡನು ಮತ್ತು ದ್ರೌಪದಿಯನ್ನು ಸಂತವಿಸಿದನು. ಆಗ ತಾನೇ ಇಂದ್ರಲೋಕದಿಂದ ಮರಳಿ ಬಂದಿದ್ದ ಅರ್ಜುನನನ್ನು ಪುನಃ ಪುನಃ ಅಪ್ಪಿಕೊಂಡನು. ಹಾಗೆಯೇ ಕೃಷ್ಣನ ಪ್ರಿಯ ರಾಣಿ ಸತ್ಯಭಾಮೆಯೂ ಕೂಡ ಪಾಂಡವರ ಪ್ರಿಯಭಾರ್ಯೆ ದ್ರೌಪದಿಯನ್ನು ಆಲಂಗಿಸಿದಳು. ಅನಂತರ ಪತ್ನಿ-ಪುರೋಹಿತರೊಂದಿಗೆ ಎಲ್ಲ ಪಾಂಡವರೂ ಆಗಮಿಸಿದ ಪುಂಡರೀಕಾಕ್ಷನನ್ನು ಅರ್ಚಿಸಿದರು ಮತ್ತು ಎಲ್ಲರೂ ಅವನನ್ನು ಸುತ್ತುವರೆದು ಕುಳಿತುಕೊಂಡರು. ಆಗ ಅರ್ಜುನನು ವನದಲ್ಲಿ ನಡೆದುದೆಲ್ಲವನ್ನೂ ಕೃಷ್ಣನಿಗೆ ಹೇಳಿ ಸುಭದ್ರೆ ಮತ್ತು ಅಭಿಮನ್ಯು ಹೇಗಿದ್ದಾರೆಂದು ಕೇಳಿದನು.
ಕೃಷ್ಣನು ಯುಧಿಷ್ಠಿರನನ್ನು ಪ್ರಶಂಸಿಸುತ್ತಾ ಅವನ ಬಳಿ ಕುಳಿತುಕೊಂಡು ಹೀಗೆ ಹೇಳಿದನು: “ಪಾಂಡವ! ರಾಜ್ಯಲಾಭಕ್ಕಿಂತ ಧರ್ಮವು ದೊಡ್ಡದು. ತಪಸ್ಸು ಅದನ್ನು ಪಡೆಯಲು ಸಹಾಯಮಾಡುತ್ತದೆ ಎಂದು ಹೇಳುತ್ತಾರೆ. ಸ್ವಧರ್ಮದಲ್ಲಿ ಸತ್ಯನಾಗಿ ಆರ್ಜವದಿಂದ ನಡೆದುಕೊಂಡಿರುವ ನೀನು ಈ ಲೋಕವನ್ನೂ ಪರಲೋಕವನ್ನೂ ಗೆದ್ದಿದ್ದೀಯೆ. ಮೊದಲು ನೀನು ಅಗ್ರವ್ರತಗಳನ್ನು ಆಚರಿಸಿದೆ. ಅನಂತರ ಧನುರ್ವೇದವೆಲ್ಲವನ್ನೂ ಸಂಪೂರ್ಣವಾಗಿ ಪಡೆದೆ. ಕ್ಷಾತ್ರಧರ್ಮದಿಂದ ಸಂಪತ್ತನ್ನು ಪಡೆದು ಎಲ್ಲ ಪುರಾಣಕ್ರತುಗಳನ್ನು ಮಾಡಿದ್ದೀಯೆ. ನೀನು ಗ್ರಾಮ್ಯಧರ್ಮದಲ್ಲಿ ಸಂತೋಷಪಡಲಿಲ್ಲ ಮತ್ತು ಕಾಮಗಳನ್ನೂ ಅರಸಿ ಹೋಗಲಿಲ್ಲ. ಅರ್ಥಲೋಭದಿಂದ ಧರ್ಮವನ್ನು ಬಿಡಲಿಲ್ಲ. ಆದುದರಿಂದ ನೀನು ನಿಜವಾಗಿಯೂ ಧರ್ಮರಾಜ. ರಾಷ್ಟ್ರ, ಸಂಪತ್ತು ಮತ್ತು ಭೋಗಗಳನ್ನು ಪಡೆಯುವುದಕ್ಕಿಂದ ಹೆಚ್ಚಿನದಾದ ದಾನ, ಸತ್ಯ, ತಪಸ್ಸು, ಶ್ರದ್ಧೆ, ಶಾಂತಿ, ಧೃತಿ, ಕ್ಷಮೆ ಇವುಗಳಲ್ಲಿ ನೀನು ಸದಾ ನಿರತನಾಗಿದ್ದೀಯೆ. ಕುರುಜಾಂಗಲದವರು ಸೇರಿದ್ದಾಗ ಧರ್ಮವನ್ನೂ ವ್ಯವಹಾರ ನಡತೆಯನ್ನು ತೊರೆದು ದ್ರೌಪದಿಯೆ ಭಯವನ್ನೂ ದಾಸತ್ವವನ್ನೂ ನೀಡಿದ ಆ ಪ್ರಕರಣವನ್ನು ನೀನಲ್ಲದೆ ಬೇರೆ ಯಾರು ತಾನೇ ಸಹಿಸಿಯಾರು? ನೀನು ಸರ್ವಕಾಮಗಳನ್ನೂ ಪೂರೈಸಿ ಬೇಗನೇ ಪ್ರಜೆಗಳನ್ನು ಪಾಲಿಸುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನಿನ್ನ ಪ್ರತಿಜ್ಞೆಯು ಸಮಾಪ್ತವಾದ ನಂತರ ನಾವು ಕುರುಗಳನ್ನು ನಿಗ್ರಹಿಸುತ್ತೇವೆ.”
ಅನಂತರ ಅವನು ಧೌಮ್ಯ, ಕೃಷ್ಣೆ, ಯುಧಿಷ್ಠಿರ, ಯಮಳರು ಮತ್ತು ಭೀಮಸೇನರಿಗೆ “ನಿಮ್ಮ ಅದೃಷ್ಟದಿಂದ ಕಿರೀಟಿಯು ಅಸ್ತ್ರಗಳನ್ನು ಪಡೆದು ಸಂತೋಷದಿಂದ ಹಿಂದಿರುಗಿದುದು ಒಳ್ಳೆಯದೇ ಆಯಿತು!” ಎಂದನು. ದ್ರೌಪದಿಗೆ ಅವನು “ಕೃಷ್ಣೇ! ನಿನ್ನ ಮಕ್ಕಳು ಸತ್ಯವ್ರತರಾಗಿ ಸುಶೀಲರಾಗಿ ಧನುರ್ವೇದವನ್ನು ಪಡೆಯುವುದರಲ್ಲಿ ನಿರತರಾಗಿದ್ದಾರೆ. ನಿನ್ನ ಮಕ್ಕಳು ಒಳ್ಳೆಯವರೊಡನೆ ಒಡನಾಡುತ್ತಿದ್ದಾರೆ ಮತ್ತು ಸದಾ ಸಮಾಧಿಯನ್ನು ಆಚರಿಸುತ್ತಿದ್ದಾರೆ. ನಿನ್ನ ತಂದೆ ಮತ್ತು ಸಹೋದರರು ಅವರಿಗೆ ರಾಜ್ಯ ಮತ್ತು ರಾಷ್ಟ್ರಗಳನ್ನಿತ್ತು ನೋಡಿದರು. ಆದರೆ ಬಾಲಕರು ಯಾಜ್ಞಸೇನನ ಮತ್ತು ಮಾವಂದಿರ ಮನೆಯಲ್ಲಿ ಸಂತೋಷವನ್ನು ಹೊಂದಲಿಲ್ಲ. ಆವರು ವಿಶೇಷವಾಗಿ ಧನುರ್ವೇದದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ದ್ವಾರಕೆಗೆ ಬಂದರು. ನೀನು ಅಥವಾ ಆರ್ಯೆ ಕುಂತಿಯು ಅವರಿಗೆ ಹೇಗೆ ಮಾರ್ಗದರ್ಶನಗಳನ್ನು ನೀಡಬಲ್ಲಿರೋ ಹಾಗೆ ಸುಭದ್ರೆಯು ನಿತ್ಯವೂ ಅವರನ್ನು ಅಪ್ರಮಾದದಿಂದ ದೂರವಿಡುತ್ತಿದ್ದಾಳೆ. ಅನಿರುದ್ಧ-ಅಭಿಮನ್ಯು-ಸುನೀಥ-ಭಾನುಗಳಿಗೆ ಹೇಗೋ ಹಾಗೆ ನಿನ್ನ ಮಕ್ಕಳಿಗೂ ಕೂಡ ಪ್ರದ್ಯುಮ್ನನು ಮಾರ್ಗದರ್ಶನವನ್ನು ನೀಡುತ್ತಿದ್ದಾನೆ. ಕುಮಾರ ಅಭಿಮನ್ಯುವು ಅವರಿಗೆ ಗದಾಯುದ್ಧ-ಖಡ್ಗಯುದ್ಧ-ತೋಮರಗಳನ್ನು ಹಿಡಿಯುವುದು-ಅಸ್ತ್ರಗಳ ಪ್ರಯೋಗ-ರಥಾಶ್ವಗಳನ್ನು ಏರುವುದು ಇವೇ ಮೊದಲಾದವುಗಳಲ್ಲಿ ಸತತವೂ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದ್ದಾನೆ. ಗುರುವಿನಂತೆ ಅವರಿಗೆ ಉತ್ತಮ ತರಬೇತಿಯನ್ನು ನೀಡಿ ಈಗ ಪ್ರದ್ಯುಮ್ನನು ಅವರ ಪರಾಕ್ರಮಗಳಿಂದ ತೃಪ್ತನಾಗಿದ್ದಾನೆ. ಆಟ-ವಿಹಾರಗಳಿಗೆ ಹೋದಾಗಲೆಲ್ಲಾ ನಿನ್ನ ಪ್ರತಿಯೊಬ್ಬ ಮಕ್ಕಳ ಒಡನೆಯೂ ಒಂದೊಂದು ರಥ, ಪಲ್ಲಕ್ಕಿ ಮತ್ತು ಸೈನಿಕರು ಅನುಸರಿಸುತ್ತಾರೆ.”
ಕೃಷ್ಣನು ಯುಧಿಷ್ಠಿರನನ್ನುದ್ದೇಶಿಸಿ ಪುನಃ ಹೇಳಿದನು: “ರಾಜನ್! ದಾಶಾರ್ಹ, ಕುಕುರ ಮತ್ತು ಅಂಧಕ ಸೇನೆಗಳು ನಿನ್ನ ಅಪ್ಪಣೆಯನ್ನು ಪಾಲಿಸಲು ಕಾದು ನಿಂತಿವೆ. ಭಿರುಗಾಳಿಯನ್ನೇ ಚದುರಿಸಬಲ್ಲ ಧನುರ್ಧಾರೀ ಹಲಾಯುಧನ ನಾಯಕತ್ವದಲ್ಲಿರುವ ಮಧುಗಳ ಸೇನೆಯೂ ಕೂಡ ರಥ-ಅಶ್ವ-ಗಜ-ಪದಾತಿಗಳೊಂದಿಗೆ ನಿನಗೋಸ್ಕರ ಸಿದ್ಧವಾಗಿದೆ. ಪಾಪಿಗಳಲ್ಲಿ ಪಾಪಿಷ್ಟನಾಗಿರುವ ಸುಯೋಧನನು ಅವನ ಅನುಯಾಯಿಗಳು ಮತ್ತು ಮಿತ್ರರೊಂದಿಗೆ ಸೌಭಪತಿಯು ಹೋದ ಮಾರ್ಗದಲ್ಲಿ ಹೋಗಲಿ. ಸಭೆಯಲ್ಲಿ ಮಾಡಿಕೊಂಡ ಒಪ್ಪಂದದಂತೆ ಈಗ ನೀನು ನಡೆದುಕೊಳ್ಳಬಹುದು. ಆದರೆ ಹಸ್ತಿನಾಪುರವು ದಾಶಾರ್ಹ ಯೋಧರ ಆಕ್ರಮಣಕ್ಕೆ ಸಿದ್ಧವಾಗಿರಲಿ! ನಿನಗಿಷ್ಟವಿದ್ದಲ್ಲೆಲ್ಲಾ ವಿಹರಿಸಿ, ಪಾಪವನ್ನೂ ಕೋಪವನ್ನೂ ಕಡಿಮೆಮಾಡಿಕೊಂಡ ನಂತರ ವಿಶೋಕನಾದ ನೀನು ನಿನ್ನ ಸಮೃದ್ಧ ರಾಷ್ಟ್ರದ ಪ್ರಥಮ ಹಸ್ತಿನಾಪುರಕ್ಕೆ ಹಿಂದಿರುಗುವೆ!”
ಆ ಪುರುಷೋತ್ತಮನ ಅಭಿಪ್ರಾಯವನ್ನು ಹೇಳಿದಹಾಗೆಯೇ ತಿಳಿದುಕೊಂಡ ಮಹಾತ್ಮ ಧರ್ಮರಾಜನು ಅವನನ್ನು ಒಪ್ಪಿಕೊಂಡು ಅಂಜಲೀಬದ್ಧನಾಅಗಿ ಕೇಶವನಿಗೆ ಹೇಳಿದನು: “ಕೃಷ್ಣ! ನೀನು ಪಾಂಡವರ ಗತಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ನಾವು ನಿನ್ನ ಶರಣು ಬಂದಿದ್ದೇವೆ. ಕಾಲವು ಬಂದಾಗ ನೀನು ನಿನ್ನ ಕರ್ಮದಲ್ಲಿ ಯಶಸ್ವಿಯಾಗುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಪ್ರತಿಜ್ಞೆಮಾಡಿದಂತೆ ಎಲ್ಲ ಹನ್ನೆರಡು ವರ್ಷಗಳನ್ನೂ ನಿರ್ಜನ ಪ್ರದೇಶದಲ್ಲಿ ಕಳೆದು ವಿಧಿವತ್ತಾಗಿ ಅಜ್ಞಾತವನ್ನೂ ಮುಗಿಸಿ ಕಾಲಬಂದಾಗ ನಾವು ನಿನ್ನ ಬಳಿ ಬರುತ್ತೇವೆ.”
ಕೃಷ್ಣನು ಧರ್ಮರಾಜನಿಗೆ ಹೀಗೆ ಹೇಳುತ್ತಿರುವಾಗ ಸಹಸ್ರಾರು ವರ್ಷಗಳನ್ನು ಧರಿಸಿದ್ದ ತಪೋವೃದ್ಧ ಧರ್ಮಾತ್ಮ ಮಹಾತಪಸ್ವಿ ಮಾರ್ಕಂಡೇಯನು ಅಲ್ಲಿ ಕಾಣಿಸಿಕೊಂಡನು. ಎಲ್ಲ ಬ್ರಾಹ್ಮಣರೂ, ಕೃಷ್ಣನೊಂದಿಗೆ ಪಾಂಡವರೂ ಆಗಮಿಸಿದ ಸಹಸ್ರವರ್ಷಗಳ ವೃದ್ಧಋಷಿಯನ್ನು ಸ್ವಾಗತಿಸಿದರು. ಆ ಮುನಿಸತ್ತಮನನ್ನು ಅರ್ಚಿಸಿ ವಿಶ್ರಾಂತಿಯನ್ನಿತ್ತು ಕುಳಿತುಕೊಂಡಿರಲು ಕೃಷ್ಣನು ಅಲ್ಲಿದ್ದ ಬ್ರಾಹ್ಮಣರ ಮತ್ತು ಪಾಂಡವರ ಮತವನ್ನು ಹೇಳಿದನು: “ಪಾಂಡವರು ಮತ್ತು ಇಲ್ಲಿ ಸೇರಿದ ಬ್ರಾಹ್ಮಣರು, ದ್ರೌಪದೀ-ಸತ್ಯಭಾಮೆಯರು ಮತ್ತು ನಾನೂ ಕೂಡ ನಿನ್ನ ಪರಮ ಮಾತುಗಳನ್ನು ಕೇಳಲು ಕಾತುರರಾಗಿದ್ದೇವೆ. ಮಾರ್ಕಂಡೇಯ! ಹಿಂದೆ ನಡೆದುಹೋದ ಪುಣ್ಯಕರ ಸದಾಚಾರ ಸನಾತನ ರಾಜರ, ಸ್ತ್ರೀಯರ ಮತ್ತು ಋಷಿಗಳ ಕಥೆಗಳನ್ನು ಹೇಳು.”
ಆಗ ಅಲ್ಲಿಗೆ ವಿಶುದ್ಧಾತ್ಮ ದೇವರ್ಷಿ ನಾರದನೂ ಪಾಂಡವರನ್ನು ಕಾಣಲು ಬಂದನು. ಆ ಮಹಾತ್ಮನನ್ನು ಪುರುಷರ್ಷಭರೆಲ್ಲರೂ ಪಾದ್ಯ-ಅರ್ಘ್ಯಗಳಿಂದ ಯಥಾನ್ಯಾಯವಾಗಿ ಸ್ವಾಗತಿಸಿದರು. ಮಾರ್ಕಂಡೇಯನ ಮಾತನ್ನು ಕೇಳಲು ಕಾದಿರುವರೆಂದು ತಿಳಿದ ಕಾಲಘ್ನ ದೇವರ್ಷಿ ನಾರದನು “ಬ್ರಹ್ಮರ್ಷೇ! ಪಾಂಡವರಿಗೆ ಹೇಳಬೇಕೆಂದು ಬಯಸಿದುದನ್ನು ಹೇಳು!” ಎಂದು ಕಥೆಗಳನ್ನು ಅನುಮೋದಿಸಿದನು. ಹೀಗೆ ಹೇಳಲು ಮಹಾತಪಸ್ವೀ ಮಾರ್ಕಂಡೇಯನು “ಸಮಯವನ್ನು ಮಾಡಿಕೋ. ಅವರಿಗೆ ಹೇಳಲು ಬಹಳಷ್ಟಿದೆ!” ಎಂದನು. ಅವನು ಹೀಗೆ ಹೇಳಲು ಅಲ್ಲಿ ದ್ವಿಜರೊಂದಿಗಿದ್ದ ಪಾಂಡವರು ಮಧ್ಯಾಹ್ನದ ಸೂರ್ಯನಂತೆ ಹೊಳೆಯುತ್ತಿದ್ದ ಮಹಾಮುನಿಯನ್ನು ಒಂದು ಕ್ಷಣ ನೋಡಿದರು.
ಮಾರ್ಕಂಡೇಯನು ಹೇಳಲು ಸಿದ್ಧನಾಗಿರುವುದನ್ನು ನೋಡಿ ಯುಧಿಷ್ಠಿರನು ಕಥೆಗಳನ್ನು ಪ್ರಾರಂಭಿಸಲು ಒತ್ತಾಯಿಸಿದನು. “ನೀವು ಸನಾತನ ದೇವ-ದೈತ್ಯ-ಮಹಾತ್ಮ ಋಷಿಗಳ ಮತ್ತು ರಾಜರ್ಷಿಗಳ ಚರಿತ್ರೆಗಳೆಲ್ಲವನ್ನೂ ತಿಳಿದಿದ್ದೀರಿ. ಬಹಳ ಸಮಯದಿಂದ ನಾವು ಸೇವೆ ಮತ್ತು ಪೂಜೆಗಳಿಗೆ ಮಾನ್ಯರಾದ ನಿಮ್ಮ ಬರವನ್ನು ಕಾಯುತ್ತಿದ್ದೆವು. ಈಗ ದೇವಕಿಪುತ್ರನೂ ನಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದಾನೆ.”
ಅನಂತರ ಯುಧಿಷ್ಠಿರನ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಾ ಮಾರ್ಕಂಡೇಯನು ಶುಭಾಶುಭ ಕರ್ಮಗಳ ಫಲ; ತಾರ್ಕ್ಷ್ಯ ಅರಿಷ್ಟನೇಮಿ, ಅತ್ರಿ, ಸರಸ್ವತೀ ಗೀತೆ, ವೈವಸ್ವತ ಮನು ಮತ್ತು ವಿಷ್ಣುವಿನ ಮತ್ಸ್ಯಾವತಾರ, ಯುಗಕ್ಷಯದಲ್ಲಿ ಬಾಲ ಮುಕುಂದನ ದರ್ಶನ, ಕಲಿಯುಗದ ವರ್ಣನೆ, ಮಂಡೂಕ-ವಾಮದೇವರ ಚರಿತ್ರೆ, ಇಂದ್ರದ್ಯುಮ್ನನ ಕಥೆ, ದುಂಧುಮಾರ-ಉತ್ತಂಕರ ಚರಿತ್ರೆ, ಮಧು-ಕೈಟಭ ವಧೆ, ಕೌಶಿಕ-ಪತಿವ್ರತೆಯರ ಸಂವಾದ, ಕೌಶಿಕ-ಧರ್ಮವ್ಯಾಧರ ಸಂವಾದ, ಅಂಗಿರಸ ಮತ್ತು ಅಗ್ನಿವಂಶದ ಕೀರ್ತನೆ. ಕಾರ್ತಿಕೇಯನ ಜನ್ಮ ಮತ್ತು ಅವನಿಂದ ಮಹಿಷಾಸುರನ ವಧೆ ಮೊದಲಾದ ಧರ್ಮಯುಕ್ತವೂ ಅರ್ಥಗರ್ಭಿತವೂ ಆದ ವಿಷಯಗಳನ್ನು ವಿವರಿಸಿ ಹೇಳಿದನು.