ದ್ರೌಪದೀ-ಸತ್ಯಭಾಮೆಯರ ಸಂವಾದ

ಮಹಾತ್ಮ ಮಾರ್ಕಂಡೇಯ, ನಾರದ, ಕೃಷ್ಣ ಮತ್ತು ಪಾಂಡವರು ಮಾತುಕಥೆಗಳನ್ನಾಡುತ್ತ ಕುಳಿತಿರಲು, ದ್ರೌಪದೀ-ಸತ್ಯಭಾಮೆಯರು ಆಶ್ರಮವನ್ನು ಪ್ರವೇಶಿಸಿದರು. ಅಲ್ಲಿ ನಗುತ್ತಾ ಸಂತೋಷದಿಂದ ಕಾಲಕಳೆದರು. ಬಹುಕಾಲದ ನಂತರ ನೋಡಿದ ಅವರು ಅನ್ಯೋನ್ಯರೊಂದಿಗೆ ಪ್ರಿಯವಾಗಿ ಮಾತನಾಡುತ್ತಾ ಕುರು ಮತ್ತು ಯದುಗಳ ಕುರಿತಾದ ವಿಚಿತ್ರ ಕಥೆಗಳನ್ನು ಹೇಳತೊಡಗಿದರು. ಆಗ ಕೃಷ್ಣನ ಪ್ರಿಯ ಮಹಿಷಿ ಸತ್ರಾಜಿತನ ಮಗಳು ಸುಮಧ್ಯಮೆ ಸತ್ಯಭಾಮೆಯು ರಹಸ್ಯದಲ್ಲಿ ಯಾಜ್ಞಸೇನಿ ದ್ರೌಪದಿಯನ್ನು ಕೇಳಿದಳು:

“ದ್ರೌಪದೀ! ಯಾವ ನಡತೆಯಿಂದ ನೀನು ಲೋಕಪಾಲರಂತೆ ವೀರರೂ ಸುಂದರರೂ ಆಗಿರುವ ಪಾಂಡವರನ್ನು ಆಳುತ್ತಿದ್ದೀಯೆ? ಹೇಗೆ ಅವರು ನಿನ್ನ ವಶದಲ್ಲಿಯೇ ನಡೆದುಕೊಳ್ಳುತ್ತಾರೆ? ಹೇಗೆ ಅವರು ನಿನ್ನ ಮೇಲೆ ಸ್ವಲ್ಪವೂ ಕೋಪಿಸಿಕೊಳ್ಳುವುದಿಲ್ಲ? ನೋಡಲು ಸುಂದರರಾಗಿರುವ ಪಾಂಡವರು ಸತತವೂ ನಿನ್ನ ವಶದಲ್ಲಿಯೇ ಹೇಗೆ ಇರುತ್ತಾರೆ? ನನಗೆ ಏನು ಹೇಳುತ್ತಾಳೆ ಎಂದು ಅವರೆಲ್ಲರೂ ನಿನ್ನ ಮುಖವನ್ನೇ ನೋಡುತ್ತಿರುತ್ತಾರೆ. ಹಾಗಾಗಲು ಏನಾದರೂ ವ್ರತಾಚರಣೆ, ತಪಸ್ಸು, ಮಂತ್ರಸ್ನಾನ, ಔಷಧಿ ಅಥವಾ ವಿದ್ಯಾಶಕ್ತಿ ಅಥವಾ ಮೂಲಿಕೆ, ಅಥವಾ ಜಪ-ಹೋಮಗಳಿವೆಯೇ? ಕೃಷ್ಣನನ್ನು ನಿತ್ಯವೂ ನನ್ನ ವಶಾನುಗನಾಗಿರಿಸಬಲ್ಲ ಆ ಸಂಭೋಗದ ಯಶಸ್ಸನ್ನು ನನಗೆ ಹೇಳಿಕೊಡು!” ಹೀಗೆ ಹೇಳಿ ಸತ್ಯಭಾಮೆಯು ಸುಮ್ಮನಾದಳು.

ಆಗ ಅವಳಿಗೆ ಪತ್ರಿವ್ರತೆ ದ್ರೌಪದಿಯು ಉತ್ತರಿಸಿದಳು: “ಸತ್ಯೇ! ಕೆಟ್ಟ ಸ್ತ್ರೀಯರ ಸಮಾಚಾರವನ್ನು ನನ್ನಲ್ಲಿ ಕೇಳುತ್ತಿದ್ದೀಯೆ! ಕೆಟ್ಟ ಮಾರ್ಗದಲ್ಲಿ ಹೋಗುವುದರ ಕುರಿತು ನಾನಾದರೂ ಹೇಗೆ ಹೇಳಲಿ? ಈ ಪ್ರಶ್ನೆಯನ್ನು ಮುಂದುವರಿಸುವುದು ಅಥವಾ ನನ್ನನ್ನು ಸಂಶಯಿಸುವುದು ಬುದ್ಧಿವಂತಳಾದ ಮತ್ತು ಕೃಷ್ಣನ ಪ್ರಿಯ ಮಹಿಷಿಯಾದ ನಿನಗೆ ಸರಿಯಾದುದಲ್ಲ. ಸ್ತ್ರೀಯು ಮಂತ್ರ-ಮೂಲಿಕೆಗಳನ್ನು ಬಳಸುತ್ತಾಳೆ ಎಂದು ತಿಳಿದಾಕ್ಷಣವೇ ಪತಿಯು ಮಲಗುವ ಕೋಣೆಯಲ್ಲಿ ವಾಸಿಸುತ್ತಿರುವ ಸರ್ಪವೋ ಎನ್ನುವಂತೆ  ಅವಳಿಗೆ ಹೆದರುತ್ತಾನೆ. ಉದ್ವಿಗ್ನನಾಗಿರುವವನಿಗೆ ಎಲ್ಲಿಂದ ಶಾಂತಿ ಮತ್ತು ಶಾಂತಿಯಿಲ್ಲದವನಿಗೆ ಎಲ್ಲಿಂದ ಸುಖ? ಸ್ತ್ರೀಯು ಮಂತ್ರಗಳನ್ನು ಬಳಸುವುದರಿಂದ ಪತಿಯು ಎಂದೂ ಅವಳ ವಶದಲ್ಲಿ ಬರುವುದಿಲ್ಲ. ಶತ್ರುರೂಪದ ಸ್ತ್ರೀಯರು ಪರಮ ದಾರುಣ ರೋಗಗಳನ್ನು ಹರಡುತ್ತಾರೆ ಎಂದು ಕೇಳಿದ್ದೇವೆ. ಕೊಲ್ಲಲು ಬಯಸಿ ಅವರು ಸಾಂಪ್ರದಾಯಿಕ ಉಡುಗೊರೆಗಳ ಮೂಲಕ ವಿಷವನ್ನು ಕೊಡುತ್ತಾರೆ. ಪುರುಷನು ಆ ಪುಡಿಯನ್ನು ನಾಲಗೆಯಲ್ಲಾಗಲೀ ಚರ್ಮದಲ್ಲಿಯಾಗಲೀ ಸೇವಿಸಿ ತಕ್ಷಣವೇ ಸಾವನ್ನು ಹೊಂದುತ್ತಾನೆ. ಸ್ತ್ರೀಯರು ಕೆಲವೊಮ್ಮೆ ಶಿಷ್ಣದಲ್ಲಿ ಸೋರುವಿಕೆ ಮತ್ತು ಗಾಯಗಳನ್ನು, ಪುರುಷತ್ವದ ನಾಶ, ಜಡತೆ, ಕಿವುಡುತನ ಮತ್ತು ಅಂಧತ್ವವನ್ನು ಉಂಟುಮಾಡುತ್ತಾರೆ. ಪಾಪದ ದಾರಿಯನ್ನು ಅನುಸರಿಸುವ ಈ ಪಾಪಿ ಸ್ತ್ರೀಯರು ಪತಿಗಳಿಗೆ ಗಾಯಗಳನ್ನುಂಟುಮಾಡಿದ್ದೂ ಇದೆ. ಆದರೆ ಸ್ತ್ರೀಯು ಎಂದೂ ತನ್ನ ಪತಿಗೆ ವಿಪ್ರಿಯವನ್ನುಂಟುಮಾಡುವ ಕಾರ್ಯದಲ್ಲಿ ತೊಡಗಬಾರದು. ನಾನು ಮಹಾತ್ಮ ಪಾಂಡವರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದೇನೆ ಎನ್ನುವುದನ್ನು ಸತ್ಯವಾಗಿ ಹೇಳುತ್ತೇನೆ. ಕೇಳು.

“ಸರ್ವದಾ ಅಹಂಕಾರ-ಕಾಮ-ಕ್ರೋಧಗಳನ್ನು ತೊರೆದು ನಾನು ನಿತ್ಯವೂ ಪಾಂಡವರನ್ನು, ಅವರ ಇತರ ಪತ್ನಿಯರೊಂದಿಗೆ, ಉಪಚಾರಮಾಡುತ್ತೇನೆ. ಅಸೂಯೆ ಪಡದೇ, ಆತ್ಮದಲ್ಲಿ ಪ್ರಣಯಭಾವವನ್ನಿಟ್ಟುಕೊಂಡು, ನಾನು ಮಾಡುವ ಶುಶ್ರೂಷೆಗಳಲ್ಲಿ ಯಾವುದೇ ಅಸಹ್ಯಪಟ್ಟುಕೊಳ್ಳದೇ ನನ್ನ ಪತಿಗಳ ಮನಸ್ಸಿನಂತೆ ನಡೆದುಕೊಳ್ಳುತ್ತೇನೆ. ಕೆಟ್ಟದಾಗಿ ನಡೆದುಕೊಳ್ಳುವೆನೋ, ಅಥವಾ ಸರಿಯಾಗಿ ಕುಳಿತುಕೊಳ್ಳಲಿಲ್ಲವೋ, ನಿಂತುಕೊಳ್ಳಲಿಲ್ಲವೋ, ನಡೆಯಲಿಲ್ಲವೋ, ನೋಟದಲ್ಲಿಯೂ ಮನಸ್ಸಿನ ಇಂಗಿತವನ್ನೊ ತೋರಿಸದೇ ಇದ್ದೇನೆಯೋ ಎಂದು ಯಾವಾಗಲೂ ನನ್ನ ಮೇಲೆ ನಾನೇ ಶಂಕಿಸುತ್ತಾ, ಅಗ್ನಿ-ಸೂರ್ಯರಂತೆ ತೇಜಸ್ವಿಗಳಾಗಿರುವ, ಸೋಮನ ಸಮರಾದ, ಮಹಾರಥಿ ಉಗ್ರತೇಜಸ್ವೀ ಪ್ರತಾಪೀ ಪಾರ್ಥರ ಸೇವೆಯನ್ನು ನಾನು ಮಾಡುತ್ತೇನೆ. ದೇವತೆಯಾಗಿರಲಿ, ಮನುಷ್ಯನಾಗಿರಲಿ, ಗಂಧರ್ವನಾಗಿರಲಿ, ಅಥವಾ ಸ್ವಲಂಕೃತ ಶ್ರೀಮಂತನಾಗಿರಲಿ, ಸುಂದರನಾಗಿರಲಿ, ಅಥವಾ ಯುವಕನಾಗಿರಲಿ, ನನಗೆ ಅನ್ಯ ಪುರುಷರು ಹಿಡಿಸುವುದಿಲ್ಲ. ನನ್ನ ಪತಿಯಂದಿರು ಮತ್ತು ಅಷ್ಟೇ ಏಕೆ ಸೇವಕರೂ ಕೂಡ ಊಟಮಾಡದೇ, ಸ್ನಾನಮಾಡದೇ, ಮಲಗಿಕೊಳ್ಳದೇ ನಾನು ಉಣ್ಣುವುದಿಲ್ಲ, ಸ್ನಾನಮಾಡುವುದಿಲ್ಲ ಮತ್ತು ಮಲಗಿಕೊಳ್ಳುವುದಿಲ್ಲ. ಪತಿಯಂತಿರು ಹೊರಗಡೆಯಿಂದ ಮನೆಗೆ ಬಂದಾಗ ನಾನು ಮೇಲೆದ್ದು, ಆಸನ-ನೀರುಗಳನ್ನಿತ್ತು, ಅವರನ್ನು ಅಭಿನಂದಿಸುತ್ತೇನೆ. ನನ್ನ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಿರುತ್ತೇನೆ ಮತ್ತು ಸರಿಯಾದ ಕಾಲಕ್ಕೆ ಮೃಷ್ಟಾನ್ನ ಭೋಜನವನ್ನು ನೀಡುತ್ತೇನೆ. ಮನೆಯ ಎಲ್ಲ ವಸ್ತುಗಳನ್ನೂ ಜೋಡಿಸಿ ಸ್ವಚ್ಛವಾಗಿರಿಸಿಕೊಂಡಿರುತ್ತೇನೆ. ಎಂದೂ ನಾನು ಸಿಟ್ಟಿನಿಂದ ಅವಹೇಳನದ ಮಾತುಗಳನ್ನಾಡುವುದಿಲ್ಲ ಮತ್ತು ಕೆಟ್ಟ ಸ್ತ್ರೀಯರನ್ನು ಅನುಸರಿಸುವುದಿಲ್ಲ. ಸೋಮಾರಿತನವನ್ನು ಬದಿಗೊತ್ತಿ ಸದಾ ಏನೋ ಮಾಡಬೇಕೋ ಅವೆಲ್ಲವನ್ನೂ ಮಾಡುತ್ತೇನೆ. ಕಾರಣವಿಲ್ಲದೇ ನಾನು ನಗುವುದಿಲ್ಲ. ಬಾಗಿಲಲ್ಲಿ, ಬಯಲಿನಲ್ಲಿ ಅಥವಾ ಉದ್ಯಾನವನದಲ್ಲಿ ತುಂಬಾ ಹೊತ್ತು ನಿಲ್ಲುವುದಿಲ್ಲ. ನಾನು ಯಾವಾಗಲೂ ಅತಿಯಾಗಿ ನಗಿಸುವ, ಅತಿಯಾದ ಸಿಟ್ಟನ್ನುಂಟುಮಾಡುವ ಮತ್ತು ಅವರಿಗೆ ಕೋಪವುಂಟಾಗುವ ಸ್ಥಳಗಳಿಂದ ದೂರವಿರುತ್ತೇನೆ. ನಾನು ಸದಾ ಪತಿಗಳ ಸೇವೆಯಲ್ಲಿಯೇ ನಿರತಳಾಗಿರುತ್ತೇನೆ. ಪತಿಗಳಿಲ್ಲದೇ ಇರಲು ನನಗೆ ಸರ್ವಥಾ ಇಷ್ಟವಿಲ್ಲ. ಒಂದುವೇಳೆ ಕೌಟುಂಬಿಕ ಕೆಲಸಕ್ಕಾಗಿ ಪತಿಯಂದಿರು ಹೊರಗೆ ಹೋಗಬೇಕಾಗಿ ಬಂದರೆ ಅವರು ಹಿಂದಿರುಗುವವರೆಗೆ ನಾನು ಹೂವು-ಸುಗಂಧಗಳನ್ನು ತೊರೆದು ವ್ರತಚಾರಿಣಿಯಾಗಿರುತ್ತೇನೆ. ನನ್ನ ಪತಿಗಳು ಕುಡಿಯದೇ ಇರುವುದನ್ನು, ತಿನ್ನದೇ ಇರುವುದನ್ನು ಮತ್ತು ಸಂತೋಷಪಡದೇ ಇರುವ ಎಲ್ಲವನ್ನೂ ತ್ಯಜಿಸುತ್ತೇನೆ. ಉಪದೇಶವಿರುವ ಹಾಗೆ ನಡೆದುಕೊಂಡು ಸ್ವಲಂಕೃತಳಾಗಿ ಪತಿಗಳ ಪ್ರೀತಿ-ಹಿತಗಳ ಪ್ರಯತ್ನಗಳಲ್ಲಿಯೇ ನಿರತಳಾಗಿರುತ್ತೇನೆ. ಹಿಂದೆ ನನ್ನ ಅತ್ತೆಯು ಹೇಳಿದ್ದ – ಭಿಕ್ಷೆ, ಬಲಿ, ಶ್ರಾದ್ಧ, ಪರ್ವಗಳಲ್ಲಿ ಚರು, ಮಾನ್ಯರ ಸತ್ಕಾರ ಮತ್ತು ನನಗೆ ತಿಳಿದಿರುವ ಇತರೆ ಎಲ್ಲವುಗಳನ್ನೂ ಹಗಲು-ರಾತ್ರಿ ಆಯಾಸವಿಲ್ಲದೇ ಅನುಸರಿಸುತ್ತೇನೆ. ಸದಾ ವಿನಯ-ನಿಯಮಗಳಲ್ಲಿದ್ದುಕೊಂಡು ಸಾಧು, ಮೃದು, ಸತ್ಯಶೀಲ ಮತ್ತು ಸತ್ಯಧರ್ಮಪಾಲಕರಾದ ನನ್ನ ಪತಿಗಳು ಯಾವಾಗ ವಿಷಪೂರಿತ ಸರ್ಪಗಳಂತೆ ಕ್ರುದ್ಧರಾಗುತ್ತಾರೋ ಎಂದು ಯೋಚಿಸುತ್ತಾ ಅವರ ಸೇವೆಯನ್ನು ಮಾಡುತ್ತಿರುತ್ತೇನೆ.

“ಪತಿಯ ಆಶ್ರಯದಲ್ಲಿರುವುದೇ ಸ್ತ್ರೀಯ ಸನಾತನ ಧರ್ಮವೆಂದು ನನ್ನ ಮತ. ಅವಳಿಗೆ ಅವನ ಹೊರತಾದ ದೇವನಿಲ್ಲ, ಗತಿಯಿಲ್ಲ. ಹೀಗಿರುವಾಗ ಅವಳು ಅವನಲ್ಲಿ ಹೇಗೆ ವಿಪ್ರಿಯವಾಗಿ ನಡೆದುಕೊಳ್ಳಬಹುದು? ಮಲಗುವುದರಲ್ಲಾಗಲೀ, ಊಟಮಾಡುವುದರಲ್ಲಾಗಲೀ, ಅಲಂಕಾರ ಮಾಡಿಕೊಳ್ಳುವುದರಲ್ಲಾಗಲೀ ನಾನು ನನ್ನ ಪತಿಗಳನ್ನು ಮೀರುವುದಿಲ್ಲ. ಅತ್ತೆಯನ್ನು ಎಂದೂ ನಿಂದಿಸುವುದಿಲ್ಲ. ನನ್ನ ನಿತ್ಯದ ಅವಧಾನ, ಕುಳಿತುಕೊಳ್ಳುವ ಮತ್ತು ನಿಂತುಕೊಳ್ಳುವ ರೀತಿ ಮತ್ತು ಹಿರಿಯರ ಸೇವೆ ಇವುಗಳಿಂದ ಪತಿಗಳು ನನ್ನ ವಶರಾಗಿದ್ದಾರೆ. ನಿತ್ಯವೂ ನಾನೊಬ್ಬಳೇ ಈ ವೀರರ ತಾಯಿ ಕುಂತಿಯ ಸ್ನಾನ, ಬಟ್ಟೆ, ಭೋಜನಗಳ ಸೇವೆಯನ್ನು ಮಾಡುತ್ತೇನೆ. ವಸ್ತ್ರ-ಭೂಷಣ-ಭೋಜನಗಳಲ್ಲಿ ನಾನು ಅವಳನ್ನು ಮೀರುವುದಿಲ್ಲ. ಅವಳನ್ನು ಎಂದೂ ನಾನು ನೋಯಿಸುವುದಿಲ್ಲ.

“ಮೊದಲು ಯುಧಿಷ್ಠಿರನ ಭವನದಲ್ಲಿ ನಿತ್ಯವೂ ಎಂಟುಸಾವಿರ ಬ್ರಾಹ್ಮಣರು ಬಂಗಾರದ ತಟ್ಟೆಗಳಲ್ಲಿ ಊಟಮಾಡುತ್ತಿದ್ದರು. ಎಂಭತ್ತು ಸಾವಿರ ಗೃಹಸ್ಥ ಸ್ನಾತಕರು ಊಟಮಾಡುತ್ತಿದ್ದರು. ಅವರಲ್ಲಿ ಪ್ರತಿಯೊಬ್ಬರಿಗೂ ಯುಧಿಷ್ಠಿರನು ಮೂವತ್ತು ದಾಸಿಯರನ್ನು ನೀಡಿದ್ದನು. ಇದಲ್ಲದೇ ಹತ್ತುಸಾವಿರ ಊರ್ಧ್ವರೇತಸ ಯತಿಗಳಿಗೆ ಬಂಗಾರದ ಪಾತ್ರೆಗಳಲ್ಲಿ ಶುದ್ಧವಾದ ಊಟವನ್ನು ಕೊಂಡೊಯ್ಯುತ್ತಿದ್ದರು. ಆ ಎಲ್ಲ ಅಗ್ರಹಾರಿ ಬ್ರಹ್ಮವಾದಿ ಬ್ರಾಹ್ಮಣರನ್ನು ನಾನು ಪಾನೀಯ-ವಸ್ತ್ರ-ಭೋಜನಗಳಿಂದ ಯಥಾರ್ಹವಾಗಿ ಪೂಜಿಸುತ್ತಿದ್ದೆ. ಮಹಾತ್ಮ ಕೌಂತೇಯನ – ಕಂಬುಕೇಯೂರ-ಹಾರಗಳನ್ನು ಧರಿಸಿ ಸ್ವಲಂಕೃತರಾಗಿದ್ದ, ಅಮೂಲ್ಯವಾದ ಹಾರ ಆಭರಣಗಳನ್ನು ಧರಿಸಿದ್ದ, ಸುವರ್ಣ-ಚಂದನಗಳನ್ನು ಲೇಪಿಸಿಕೊಂಡು ಮಣಿ-ಹೇಮಗಳಿಂದ ಬೆಳಗುತ್ತಿದ್ದ ಮತ್ತು ನೃತ್ಯವಿಶಾರದರಾಗಿದ್ದ – ನೂರುಸಾವಿರ ದಾಸಿಯರ ಹೆಸರು, ರೂಪ, ಊಟ-ಉಡುಗೆಗಳು, ಏನು ಮಾಡುತ್ತಿದ್ದರು, ಏನು ಮಾಡುತ್ತಿರಲಿಲ್ಲ – ಇವೆಲ್ಲವನ್ನೂ ನಾನು ತಿಳಿದುಕೊಂಡಿದ್ದೆನು. ಕುಂತೀಪುತ್ರನ ನೂರುಸಾವಿರ ದಾಸಿಯರು ಹಗಲು ರಾತ್ರಿ ಕೈಗಳಲ್ಲಿ ಪಾತ್ರೆಗಳನ್ನು ಹಿಡಿದು ಅತಿಥಿಗಳಿಗೆ ಭೋಜನವನ್ನು ಬಡಿಸುತ್ತಿದ್ದರು. ಯುಧಿಷ್ಠಿರನು ಇಂದ್ರಪ್ರಸ್ಥದಲ್ಲಿರುವಾಗ ನೂರು ಸಾವಿರ ಕುದುರೆಗಳೂ, ಹತ್ತು ಸಾವಿರ ಆನೆಗಳೂ ಅವನನ್ನು ಹಿಂಬಾಲಿಸಿ ಹೋಗುತ್ತಿದ್ದವು. ಅವನು ಆಳುತ್ತಿರುವಾಗ ಇದ್ದ ಇವೆಲ್ಲವುಗಳ ಸಂಖ್ಯೆಯನ್ನು ನಾನೇ ನಿರ್ಧರಿಸುತ್ತಿದ್ದೆ ಮತ್ತು ಅವರ ತಕರಾರುಗಳನ್ನು ನಾನೇ ಕೇಳುತ್ತಿದ್ದೆ. ಅಂತಃಪುರದ ಎಲ್ಲ ಸೇವಕರು, ಗೋಪಾಲಕರು, ವಿಪಾಲರು ಎಲ್ಲರೂ ಏನು ಮಾಡುತ್ತಿದ್ದರು ಮತ್ತು ಏನು ಮಾಡುತ್ತಿರಲಿಲ್ಲ ಎನ್ನುವುದನ್ನು ನಾನು ತಿಳಿದುಕೊಂಡಿದ್ದೆ. ಯಶಸ್ವೀ ಪಾಂಡವರಲ್ಲಿ ನನಗೊಬ್ಬಳಿಗೇ ರಾಜನ ಆದಾಯ-ವೆಚ್ಚಗಳೇನು, ಒಟ್ಟು ಸಂಪತ್ತೇನು ಎನ್ನುವುದು ತಿಳಿದಿತ್ತು.

“ಕುಟುಂಬದ ಸಮಸ್ಯೆಗಳ ಭಾರವೆಲ್ಲವನ್ನೂ ನನ್ನ ಮೇಲೆ ಹಾಕಿ ಅವರೆಲ್ಲರೂ ನನ್ನನ್ನೇ ಮೆಚ್ಚಿಸುವುದರಲ್ಲಿ ನಿರತರಾಗಿರುತ್ತಾರೆ. ದುರಾತ್ಮರಿಗೆ ಅಸಾಧ್ಯವಾದ ಈ ಭಾರವನ್ನು ನಾನು ಅವರ ಆಸಕ್ತಿಯನ್ನೇ ಇಟ್ಟುಕೊಂಡು ಹಗಲು-ರಾತ್ರಿ ಸುಖವೆಲ್ಲವನ್ನೂ ತೊರೆದು ಹೊರುತ್ತಿದ್ದೇನೆ. ಪತಿಗಳು ಧರ್ಮದಲ್ಲಿ ನಡೆದುಕೊಂಡಿರಲು ನಾನೊಬ್ಬಳೇ ಅವರ ಕೋಶವು ವರುಣನ ಮಹಾಸಾಗರದಂತೆ ತುಂಬಿಕೊಂಡಿರಬೇದೆಂದು ನೋಡಿಕೊಂಡಿರುತ್ತೇನೆ. ಹಸಿವು-ಬಾಯಾರಿಕೆಗಳನ್ನು ತೊರೆದು ಹಗಲು-ರಾತ್ರಿ ಪತಿಗಳನ್ನು ಆರಾಧಿಸುತ್ತಿರುವ ನನಗೆ ಹಗಲು-ರಾತ್ರಿಗಳೆರಡೂ ಒಂದೇ ಸಮನಾಗಿವೆ. ನಾನು ಮೊದಲು ಏಳುತ್ತೇನೆ ಮತ್ತು ಕೊನೆಯಲ್ಲಿ ಮಲಗುತ್ತೇನೆ. ಸತ್ಯೇ! ನಿತ್ಯವೂ ಈ ರೀತಿ ನಡೆದುಕೊಳ್ಳುತ್ತಿರುವುದರಿಂದಲೇ ಅವರು ನನ್ನೆಡೆಗೆ ಸೆಳೆಯಲ್ಪಟ್ಟಿದ್ದಾರೆ. ಪತಿಯಂದಿರನು ನನ್ನೊಡನೆ ಇಟ್ಟುಕೊಂಡಿರುವ ಈ ಮಹಾಕಾರ್ಯವು ನನಗೆ ತಿಳಿದಿದೆ. ಆಸತ್ ಸ್ತ್ರೀಯರ ಸಮಾಚರವು ನನಗೆ ತಿಳಿದಿಲ್ಲ. ತಿಳಿಯಲು ಬಯಸುವುದೂ ಇಲ್ಲ.”

ಕೃಷ್ಣೆಯು ಆಡಿದ ಈ ಧರ್ಮಸಹಿತ ಮಾತುಗಳನ್ನು ಕೇಳಿ ಸತ್ಯೆಯು ಧರ್ಮಚಾರಿಣೀ ಪಾಂಚಾಲಿಯನ್ನು ಗೌರವಿಸಿ “ಪಾಂಚಾಲೀ! ತಪ್ಪುಮಾಡಿದ ನನ್ನನ್ನು ಕ್ಷಮಿಸು! ಸಖಿಯರಲ್ಲಿ ಉದ್ದೇಶಗಳಿಲ್ಲದೇ ಉಪಹಾಸದ ಮಾತುಗಳು ನಡೆಯುತ್ತದೆಯಲ್ಲವೇ?” ಎಂದು ಹೇಳಿದಳು. ಆಗ ದ್ರೌಪದಿಯು ಪುನಃ ಹೇಳಿದಳು: “ಪತಿಯ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ಈ ದೋಷರಹಿತ ಮಾರ್ಗವನ್ನು ನಾನು ನಿನಗೆ ಹೇಳುತ್ತೇನೆ. ಸಖೀ! ಈ ರೀತಿ ಸರಿಯಾಗಿ ನಡೆದುಕೊಳ್ಳುವುದರಿಂದ ನಿನ್ನ ಪತಿಯನ್ನು ಇತರ ಕಾಮಿನಿಯರಿಂದ ದೂರವಿಡಬಹುದು. ಸತ್ಯೇ! ಎಲ್ಲ ಲೋಕಗಳಲ್ಲಿಯೂ ಮತ್ತು ಎಲ್ಲ ದೇವತೆಗಳಲ್ಲಿಯೂ ಪತಿಯ ಸಮನಾದ ದೇವನಿಲ್ಲ! ಅವನು ಒಲಿದರೆ ಸರ್ವಕಾಮಗಳೂ ಪ್ರಾಪ್ತವಾಗುತ್ತವೆ. ಮುನಿದರೆ ಸತ್ತಹಾಗೆಯೇ! ಅವನಿಂದ ಮಕ್ಕಳು, ವಿವಿಧ ಭೋಗಗಳು, ಹಾಸಿಗೆ, ಆಸನ, ಅದ್ಭುತ ನೋಟಗಳು, ವಸ್ತ್ರಗಳು, ಮಾಲೆಗಳು, ಸುಗಂಧಗಳು, ಸ್ವರ್ಗಲೋಕ ಮತ್ತು ವಿಷಮ ಕೀರ್ತಿಗಳು ದೊರೆಯುತ್ತವೆ. ಇಲ್ಲಿ ಸುಖದಿಂದ ಸುಖವು ದೊರೆಯುವುದಿಲ್ಲ. ಸಾಧ್ವಿಯು ದುಃಖದಿಂದ ಸುಖಗಳನ್ನು ಪಡೆಯುತ್ತಾಳೆ. ಆದುದರಿಂದ ಕೃಷ್ಣನನ್ನು ಉತ್ತಮ ಹೃದಯದಿಂದ ಆರಾಧಿಸು! ನಿತ್ಯವೂ ಅವನನ್ನು ಪ್ರೇಮದಿಂದ ಉಪಚರಿಸು! ಅವನಿಗೆ ರುಚಿಯಾದ ಅಡುಗೆ, ಸುಂದರ ಮಾಲೆಗಳು ಮತ್ತು ವಿವಿಧ ಸುಗಂಧಗಳನ್ನು ದಾಕ್ಷಿಣ್ಯ-ಯೋಗಗಳ ಮೂಲಕ ಕೊಡುವುದರಿಂದ ತಾನು ಇವಳಿಗೆ ಪ್ರೀತಿಯವನು ಎಂದು ತಿಳಿದು ಅವನೇ ನಿನ್ನನ್ನು ಸರ್ವಭಾವಗಳಿಂದ ಆಲಂಗಿಸುತ್ತಾನೆ. ಬಾಗಿಲಲ್ಲಿ ನಿನ್ನ ಪತಿಯ ಸ್ವರವನ್ನು ಕೇಳಿದೊಡನೆಯೇ ಮೇಲೆದ್ದು ಮನೆಯ ಮಧ್ಯದಲ್ಲಿ ನಿಲ್ಲು. ಅವನು ಒಳಪ್ರವೇಶಿಸಿದುದನ್ನು ನೋಡಿ ಬೇಗನೆ ಆಸನ-ಪಾದ್ಯಗಳಿಂದ ಅವನನ್ನು ಪೂಜಿಸು. ಅವನಿರುವಾಗ ದಾಸಿಯರನ್ನು ಹೊರಕಳುಹಿಸಿ, ಸ್ವಯಂ ನೀನೇ ಎದ್ದು ಎಲ್ಲವನ್ನೂ ಮಾಡು. ಸತ್ಯೇ! ಆಗ ಕೃಷ್ಣನು ನಿನ್ನ ಭಾವವನ್ನು ತಿಳಿಯುತ್ತಾನೆ. ಇವಳು ಸಂಪೂರ್ಣವಾಗಿ ನನ್ನನ್ನೇ ಪ್ರೀತಿಸುತ್ತಾಳೆ ಎಂದು ಯೋಚಿಸುತ್ತಾನೆ.

“ನಿನ್ನ ಸನ್ನಿಧಿಯಲ್ಲಿ ಪತಿಯು ಏನನ್ನೇ ಹೇಳಿದರೂ, ಗುಟ್ಟಲ್ಲದಿದ್ದರೂ, ಗುಟ್ಟಾಗಿಯೇ ಇಡು. ನಿನ್ನ ಸವತಿಯೋರ್ವಳು ವಾಸುದೇವನಿಗೆ ನಿನ್ನ ಕುರಿತು ಹೇಳಿ ನಿಬ್ಬಿಬ್ಬರೊಡನೆ ವಿರಾಗವನ್ನುಂಟುಮಾಡಬಹುದು. ವಿವಿಧ ಉಪಾಯಗಳನ್ನು ಬಳಸಿ ನಿನ್ನ ಪತಿಯ ಪ್ರೀತಿಪಾತ್ರರು, ವಿಧೇಯರು ಮತ್ತು ಹಿತೈಷಿಗಳನ್ನು ಭೋಜನಕ್ಕೆ ಕರೆ. ಅವನ ದ್ವೇಷಿಗಳು, ವಿರುದ್ಧ ಪಕ್ಷದವರು ಮತ್ತು ಹಿತೈಷಿಗಳಲ್ಲದವರನ್ನು ಮತ್ತು ಹಾಗೆಯೇ ಕುಹುಕರು ಮತ್ತು ಉದ್ಧಟರಾಗಿ ನಡೆದುಕೊಳ್ಳುವವರನ್ನು ನಿತ್ಯವೂ ಹೊರಗಿಡು. ನಿನ್ನ ಪುರುಷನು ಮತ್ತಿನಲ್ಲಿ ಏನಾದರೂ ಪ್ರಮಾದವನ್ನೆಸಗಿದರೆ ನಿನ್ನ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಂಡು ಮೌನವನ್ನು ತಾಳು. ಪ್ರದ್ಯುಮ್ನ-ಸಾಂಬ ಇಬ್ಬರೂ ನಿನ್ನ ಪುತ್ರರೇ. ಎಂದೂ ಅವರನ್ನು ಬೇರೆ ಬೇರೆಯಾಗಿ ನೋಡಬೇಡ. ಉತ್ತಮ ಕುಲದಲ್ಲಿ ಜನಿಸಿದ, ಕೆಟ್ಟವರಲ್ಲದ, ಸತೀ ಸ್ತ್ರೀಯರೊಂದಿಗೆ ಸಖ್ಯವನ್ನು ಮಾಡು. ಚಂಡರೂ, ಶುಂಡರೂ, ತುಂಬಾ ಊಟಮಾಡುವವರೂ, ಕಳ್ಳರೂ, ದುಷ್ಟರೂ, ಚಪಲರೂ ಆದವರನ್ನು ದೂರವಿಡು. ಇದು ಉತ್ತಮವಾದ ಸ್ವರ್ಗಸುಖವನ್ನು ನೀಡುವ ಮತ್ತು ಶತ್ರುಗಳನ್ನು ದೂರವಿಡುವ ದಾಂಪತ್ಯ ಜೀವನದ ಗುಟ್ಟು. ಬೆಲೆಬಾಳುವ ಮಾಲೆ-ಆಭರಣ ಮತ್ತು ಪುಣ್ಯ ಸುಗಂಧಗಳನ್ನು ಧರಿಸಿ ನಿನ್ನ ಪತಿಯನ್ನು ಆರಾಧಿಸು!”

ಆಶ್ರಮದೊಳಗೆ ದ್ರೌಪದಿ-ಸತ್ಯಭಾಮೆಯರು ಈ ರೀತಿ ಮಾತನಾಡಿಕೊಳ್ಳುತ್ತಿರಲು, ಹೊರಗೆ ಜನಾರ್ದನ ಮಧುಸೂದನನು ಮಾರ್ಕಂಡೇಯಾದಿ ವಿಪ್ರರು ಮತ್ತು ಪಾಂಡವರೊಡನೆ ಅನುಕೂಲಕರ ಮಾತುಕಥೆಗಳನ್ನಾಡಿ ಯಥಾವಿಧಿಯಾಗಿ ಅವರಿಂದ ಬೀಳ್ಕೊಂಡನು. ರಥವನ್ನೇರಲು ಸಿದ್ಧನಾದ ಕೇಶವನು ಸತ್ಯಭಾಮೆಯನ್ನು ಕರೆದನು. ಆಗ ಸತ್ಯಭಾಮೆಯು ದೃಪದಾತ್ಮಜೆಯನ್ನು ಬಿಗಿದಪ್ಪಿ ಹೃದಯದಲ್ಲಿ ಭಾವವನ್ನು ತುಂಬಿಸಿಕೊಂಡು ಈ ಮಾತುಗಳನ್ನಾಡಿದಳು:

“ಕೃಷ್ಣೇ! ದುಗುಡಗೊಳ್ಳಬೇಡ! ವ್ಯಥೆಮಾಡಬೇಡ! ನಿದ್ದೆಯನ್ನು ಕಳೆದುಕೊಳ್ಳಬೇಡ! ದೇವಸಂಕಾಶ ಪತಿಗಳು ಗೆಲ್ಲುವ ಈ ಮೇದಿನಿಯು ನಿನ್ನದಾಗುತ್ತದೆ. ನಿನ್ನ ಹಾಗೆ ಪೂಜಿತ ಲಕ್ಷಣಗಳುಳ್ಳ ಶೀಲಸಂಪನ್ನೆಯ ಕ್ಲೇಶವು ತುಂಬಾ ಸಮಯವಿರುವುದಿಲ್ಲ. ಅವಶ್ಯವಾಗಿಯೂ ಕಂಟಕರು ಹತರಾಗಿ ಪತಿಗಳೊಂದಿಗೆ ನೀನು ಈ ಭೂಮಿಯನ್ನು ಪ್ರತಿಸ್ಪರ್ಧಿಗಳಿಲ್ಲದೇ ಭೋಗಿಸುತ್ತೀಯೆ ಎಂದು ಕೇಳಿದ್ದೇನೆ. ಧಾರ್ತರಾಷ್ಟ್ರರ ವಧೆಗೈದು ವೈರಕ್ಕೆ ಪ್ರತೀಕಾರವನ್ನೆಸಗಿ ಪೃಥ್ವಿಯು ಯುಧಿಷ್ಠಿರನಲ್ಲಿ ನೆಲೆಸುವುದನ್ನು ನಾನು ಕಂಡಿದ್ದೇನೆ. ನೀನು ವನದಲ್ಲಿರುವುದನ್ನು ನೋಡಿ ದರ್ಪಮೋಹಿತರಾಗಿ ನಗುವ ಕುರುಸ್ತ್ರೀಯರು ಬೇಗನೆ ಹತಸಂಕಲ್ಪರಾಗುವುದನ್ನು ನೀನು ಕಾಣುತ್ತೀಯೆ. ಕೃಷ್ಣೇ! ನೀನು ದುಃಖದಲ್ಲಿರುವಾಗ ಯಾರು ಕೆಟ್ಟದಾಗಿ ನಡೆದುಕೊಳ್ಳುವರೋ ಅವರೆಲ್ಲರೂ ಯಮಸಾದನಕ್ಕೆ ಹೋಗುತ್ತಾರೆಂದು ತಿಳಿ! ನಿನ್ನ ಮಕ್ಕಳು – ಪ್ರತಿವಿಂಧ್ಯ, ಸುತಸೋಮ, ಅರ್ಜುನನ ಶ್ರುತಕರ್ಮ, ನಕುಲನ ಶತಾನೀಕ ಮತ್ತು ಸಹದೇವನಿಂದ ನಿನಗೆ ಹುಟ್ಟಿದ ಶ್ರುತಸೇನ – ಎಲ್ಲರೂ ಕುಶಲರೂ ಕೃತಾಸ್ತ್ರರೂ ಆಗಿದ್ದಾರೆ. ಅಭಿಮನ್ಯುವಿನಂತೆಯೇ ಅವರೆಲ್ಲರೂ ಸಂತೋಷದಿಂದ ದ್ವಾರಕೆಯನ್ನು ಬಹಳವಾಗಿ ಇಷ್ಟಪಡುತ್ತಾರೆ. ಸುಭದ್ರೆಯು ನಿನ್ನ ಹಾಗೆಯೇ ಅವರನ್ನು ಸಂಪೂರ್ಣವಾಗಿ ಪ್ರೀತಿಸುತ್ತಾಳೆ. ಪ್ರೀತಿಗೆ ಪ್ರತಿಸ್ಪರ್ಧಿಗಳಿಲ್ಲದೇ ಪ್ರೀತಿಸಿ ಅವರ ಕುರಿತು ಸ್ವಲ್ಪವೂ ಚಿಂತಿಸುವುದಿಲ್ಲ. ಪ್ರದ್ಯುಮ್ನನ ತಾಯಿಯೂ ಕೂಡ ಅವರನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾಳೆ. ಕೇಶವನೂ ಕೂಡ ಭಾನು ಮೊದಲಾದವರೊಂದಿಗೆ ಅವರ ಮೇಲ್ವಿಚಾರಣೆ ಮಾಡುತ್ತಿರುತ್ತಾನೆ. ನನ್ನ ಮಾವನು ಯಾವಾಗಲೂ ಅವರ ಊಟ-ಉಪಚಾರಗಳನ್ನು ನೋಡಿಕೊಳ್ಳುತ್ತಿರುತ್ತಾನೆ. ರಾಮನೂ ಸೇರಿ ಎಲ್ಲ ಅಂಧಕ-ವೃಷ್ಣಿಗಳು ಅವರನ್ನು ಇಷ್ಟಪಡುತ್ತಾರೆ. ಭಾಮಿನೀ! ಪ್ರದ್ಯುಮ್ನನಷ್ಟೇ ಅವರನ್ನು ಪ್ರೀತಿಸುತ್ತಾರೆ.”

ಈ ರೀತಿ ಮನಸ್ಸಿಗೆ ಹಿತವಾಗುವ ಹೃದಯದಿಂದ ಹೊರಟ ಪ್ರಿಯ ಮಾತುಗಳನ್ನು ಪ್ರೀತಿಯಿಂದ ಹೇಳಿ ಸತ್ಯಭಾಮೆಯು ಹೊರಡಲು ಮನಸ್ಸುಮಾಡಿ ವಾಸುದೇವನ ರಥದ ಕಡೆ ಹೋದಳು. ಕೃಷ್ಣನ ಮಹಿಷಿ ಭಾಮಿನೀ ಸತ್ಯಭಾಮೆಯು ಕೃಷ್ಣೆಗೆ ಪ್ರದಕ್ಷಿಣೆ ಮಾಡಿ ಶೌರಿಯ ರಥವನ್ನೇರಿದಳು. ಮುಗುಳ್ನಕ್ಕು ದ್ರೌಪದಿಯನ್ನು ಸಂತವಿಸಿ ಪರಂತಪ ಯದುಶ್ರೇಷ್ಠನು ಶೀಘ್ರ ಹಯಗಳೊಡನೆ ಹಿಂದಿರುಗಿ ಹೋದನು.

Leave a Reply

Your email address will not be published. Required fields are marked *