ದ್ವೈತವನದ ಮೃಗಗಳು ಯುಧಿಷ್ಠಿರನ ಸ್ಪಪ್ನದಲ್ಲಿ ಕಾಣಿಸಿಕೊಂಡಿದುದು

ದ್ವೈತವನದಲ್ಲಿ ಒಂದುದಿನ ರಾತ್ರಿ ಯುಧಿಷ್ಠಿರನು ಮಲಗಿಕೊಂಡಿರಲು ಸ್ಪಪ್ನದಲ್ಲಿ ಅವನಿಗೆ ಕಣ್ಣೀರಿನಿಂದ ಕಟ್ಟಿದ ಕಂಠಗಳ ಜಿಂಕೆಗಳು ಕಾಣಿಸಿಕೊಂಡವು. ಅಂಜಲೀಬದ್ಧರಾಗಿ ನಡುಗುತ್ತಾ ನಿಂತಿದ್ದ ಅವುಗಳನ್ನುದ್ದೇಶಿಸಿ ಯುಧಿಷ್ಠಿರನು ಕೇಳಿದನು: “ನೀವು ಏನು ಹೇಳಬೇಕೆಂದಿರುವಿರೋ ಅದನ್ನು ಹೇಳಿ. ನೀವು ಯಾರು ಮತ್ತು ನಿಮ್ಮ ಬಯಕೆಯೇನು?”

ಆಗ ಹತಶೇಷ ಜಿಂಕೆಗಳು ಅವನಿಗೆ ಉತ್ತರಿಸಿದವು: “ಭಾರತ! ನಾವು ದ್ವೈತವನದಲ್ಲಿ ಸಾಯದೇ ಉಳಿದಿರುವ ಜಿಂಕೆಗಳು. ನಿನ್ನ ವಾಸಸ್ಥಾನವನ್ನು ಬದಲಾಯಿಸು. ಇಲ್ಲವಾದರೆ ನಾವೂ ಕೂಡ ಇಲ್ಲಿ ಇಲ್ಲವಾಗುತ್ತೇವೆ. ನಿನ್ನ ತಮ್ಮಂದಿರೆಲ್ಲರೂ ಶೂರರು ಮತ್ತು ಅಸ್ತ್ರಕೋವಿದರು. ನೀನು ವನದಲ್ಲಿ ವಾಸಿಸುವವರ ಕೆಲವೇ ಕುಲಗಳನ್ನು ಉಳಿಸಿಸಿರುವೆ. ಬೀಜಭೂತರಾಗಿ ನಾವೇ ಕೆಲವರು ಉಳಿದುಕೊಂಡಿದ್ದೇವೆ. ನಿನ್ನ ಪ್ರಸಾದದಿಂದ ನಮ್ಮ ಸಂಖ್ಯೆಯು ಬೆಳೆಯುವಂತಾಗಲಿ!”

ವಿತ್ರಸ್ತರಾಗಿ ಕಂಪಿಸುತ್ತಿದ್ದ ಬೀಜಮಾತ್ರಗಳಾಗಿ ಉಳಿದುಕೊಂಡಿರುವ ಆ ಜಿಂಕೆಗಳನ್ನು ಕಂಡು ಧರ್ಮರಾಜ ಯುಧಿಷ್ಠಿರನು ದುಃಖಾರ್ತನಾದನು. ಸರ್ವಭೂತಹಿತರತನಾದ ಅವನು “ಹಾಗೆಯೇ ಆಗಲಿ. ನೀವು ಹೇಳಿದಂತೆಯೇ ಮಾಡುತ್ತೇನೆ!” ಎಂದು ಅವರಿಗೆ ಹೇಳಿದನು.

ರಾತ್ರಿಕಳೆಯಲು ಎಚ್ಚೆತ್ತ ಯುಧಿಷ್ಠಿರನು ದಯಾಪನ್ನನಾಗಿ ತನ್ನ ತಮ್ಮಂದಿರಿಗೆ ಜಿಂಕೆಗಳ ಕುರಿತು ಹೇಳಿದನು. “ಸಾಯದೇ ಉಳಿದಿರುವ ಜಿಂಕೆಗಳು ರಾತ್ರಿ ಸ್ವಪ್ನದಲ್ಲಿ ಬಂದು “ನಾವು ಕಡೆಮೆಯಾಗಿದ್ದೇವೆ. ದಯೆತೋರು!” ಎಂದು ಹೇಳಿದವು. ಅವುಗಳು ಸತ್ಯವನ್ನೇ ಆಡುತ್ತಿವೆ. ನಾವು ವನೌಕಸರಿಗೆ ದಯೆಯನ್ನು ತೋರಿಸಬೇಕು. ಅವುಗಳನ್ನು ನಾವು ಅವಲಂಬಿಸಿದ್ದು ಈಗ ಒಂದು ವರ್ಷ ಎಂಟು ತಿಂಗಳಾಯಿತು. ಮರುಭೂಮಿಯ ತುದಿಯಲ್ಲಿ ಉತ್ತಮ ರಮ್ಯ ಕಾಮ್ಯಕ ವನದ ತೃಣಬಿಂದು ಸರೋವರದ ಬಳಿ ಬಹಳಷ್ಟು ಜಿಂಕೆಗಳಿವೆ. ಅಲ್ಲಿಯೇ ಉಳಿದುಕೊಂಡು ಉಳಿದ ಸಮಯವನ್ನು ಸಂತೋಷದಿಂದ ವಿಹರಿಸಿ ಕಳೆಯೋಣ!”

ನಂತರ ಶೀಘ್ರದಲ್ಲಿಯೇ ಆ ಧರ್ಮಕೋವಿದ ಪಾಂಡವರು ತಮ್ಮೊಂದಿಗೆ ವಾಸಿಸುತ್ತಿದ್ದ ಇಂದ್ರಸೇನಾದಿ ಸೇವಕರು ಮತ್ತು ಹಿಂಬಾಲಿಸಿ ಬಂದಿದ್ದ ಬ್ರಾಹ್ಮಣರೊಂದಿಗೆ ಅಲ್ಲಿಂದ ಹೊರಟರು. ಉತ್ತಮ ಆಹಾರ ಮತ್ತು ಶುಚಿಯಾದ ನೀರಿರುವ ಸರಿ ದಾರಿಯಲ್ಲಿ ಪ್ರಯಾಣಿಸಿ ತಾಪಸರಿಂದ ಕೂಡಿದ್ದ ಆ ಪುಣ್ಯ ಕಾಮ್ಯಕ ಆಶ್ರಮವನ್ನು ಕಂಡರು. ವಿಪ್ರರ್ಷಿಗಳಿಂದ ಸುತ್ತುವರೆಯಲ್ಪಟ್ಟ ಪಾಂಡವರು ಸುಕೃತರು ಸ್ವರ್ಗವನ್ನು ಹೇಗೋ ಹಾಗೆ ಆ ವನವನ್ನು ಪ್ರವೇಶಿಸಿದರು.

2 Comments

  1. Sir in this Mahabharat there is no information about karnas Digvijay Yatra . even Arjun as failed to defeat some kings like bhagadatta etc.who are defeated by karn.

    • The details of Karna’s digvijaya is not included in the Critical Edition. It is there in the other recensions. However, in the critical edition, there is a reference to Karna’s digvijaya in the beginning of Shanti Parva, when Narada narrates why Karna became vulnerable towards the end of his life. Karna undertook Digvijaya soon after Ghoshayatra.

      I really appreciate that you noticed this. Thanks.

Leave a Reply

Your email address will not be published. Required fields are marked *