ದುರ್ಯೋಧನನ ವೈಷ್ಣವ ಯಜ್ಞ

ಪಾಂಡುನಂದನರಿಂದ ಮೋಕ್ಷಿತನಾಗಿ ಹಸ್ತಿನಾಪುರಕ್ಕೆ ಮರಳಿದ ದುರ್ಯೋಧನನಿಗೆ ಭೀಷ್ಮನು ಈ ಮಾತುಗಳನ್ನಾಡಿದನು: “ಮಗನೇ! ಆ ತಪೋವನಕ್ಕೆ ಹೋಗುವ ಮೊದಲೇ ಹೋಗುವುದು ನನಗಿಷ್ಟವಿಲ್ಲವೆಂದು ನಿನಗೆ ಹೇಳಿದ್ದೆ. ಆದರೆ ನೀನು ಅದರಂತೆ ಮಾಡಲಿಲ್ಲ. ಶತ್ರುಗಳ ಬಂಧಿಯಾಗಿ ಧರ್ಮಜ್ಞ ಪಾಂಡವರಿಂದ ಬಿಡಿಸಲ್ಪಟ್ಟ ನಿನಗೆ ನಾಚಿಕೆಯಾಗುತ್ತಿಲ್ಲವೇ? ನಿನ್ನ ಮತ್ತು ನಿನ್ನ ಸೈನ್ಯದ ಪ್ರತ್ಯಕ್ಷದಲ್ಲಿಯೇ ಗಂಧರ್ವರ ಭಯದಿಂದ ಸೂತಪುತ್ರನು ರಣದಿಂದ ಓಡಿಹೋಗಲಿಲ್ಲವೇ? ಆ ನಿನ್ನ ಸೇನೆಯು ಕಷ್ಟದಿಂದ ರೋದಿಸುತ್ತಿದ್ದಾಗ ಮಹಾತ್ಮ ಪಾಂಡವರ ವಿಕ್ರಮವನ್ನು ನೋಡಿದುದರ ಜೊತೆಗೆ ನೀನು ಸೂತಪುತ್ರ ಕರ್ಣನನನ್ನೂ ನೋಡಿದೆಯಲ್ಲವೇ? ಧನುರ್ವೇದದಲ್ಲಿಯಾಗಲೀ, ಶೌರ್ಯದಲ್ಲಿಯಾಗಲೀ, ಅಥವಾ ಧರ್ಮದಲ್ಲಿಯಾಗಲೀ ಕರ್ಣನು ಪಾಂಡವರ ಕಾಲುಭಾಗವೂ ಇಲ್ಲ! ಆದುದರಿಂದ ಈ ಕುಲದ ಉದ್ಧಾರಕ್ಕಾಗಿ ಮಹಾತ್ಮ ಪಾಂಡವರೊಡನೆ ಸಂಧಿಮಾಡಿಕೊಂಡು ಈ ಜಗಳವನ್ನು ಕೊನೆಗೊಳಿಸು.” ಭೀಷ್ಮನು ಹೀಗೆ ಹೇಳಲು ದುರ್ಯೋಧನನು ಜೋರಾಗಿ ನಕ್ಕು ಶಕುನಿಯೊಡನೆ ಅಲ್ಲಿಂದ ಹೊರಗೆ ಹೋದನು. ಕರ್ಣ-ದುಃಶಾಸನಾದಿಗಳೂ ಅವನನ್ನು ಹಿಂಬಾಲಿಸಿ ಹೋದರು. ಅವರು ಹಾಗೆ ಹೊರಟು ಹೋದುದನ್ನು ನೋಡಿ ಕುರುಪಿತಾಮಹ ಭೀಷ್ಮನು ನಾಚಿಕೆಯಿಂದ ತಲೆತಗ್ಗಿಸಿ ತನ್ನ ಭವನಕ್ಕೆ ತೆರಳಿದನು.

ಭೀಷ್ಮನು ಹೊರಟು ಹೋದನಂತರ ದುರ್ಯೋಧನನು ಪುನಃ ಬಂದು ತನ್ನ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿದನು. “ನಮಗೆ ಶ್ರೇಯಸ್ಕರವಾದುದು ಯಾವುದು? ಯಾವ ಕೆಲಸವನ್ನು ಮಾಡುವುದಿದೆ? ಹೇಗೆ ನಾವು ಒಳ್ಳೆಯದನ್ನು ಮಾಡಬಹುದು?” ಎಂದು ಅವನು ಮಂತ್ರಾಲೋಚನೆ ನಡೆಸಿದನು. ಆಗ ಕರ್ಣನು ಹೇಳಿದನು: “ದುರ್ಯೋಧನ! ಇಂದು ಪೃಥ್ವಿಯು ಶತ್ರುಗಳಿಲ್ಲದಂತಾಗಿದೆ. ಶತ್ರುಗಳನ್ನು ಕಳೆದುಕೊಂಡ ಶಕ್ರನಂತೆ ನೀನು ಮಹಾಮನನಾಗಿ ಆಳು!”

ಕರ್ಣನಿಗೆ ದುರ್ಯೋಧನನು ತಿರುಗಿ ಹೇಳಿದನು: “ಪುರುಷರ್ಷಭ! ನಿನ್ನ ಸಹಾಯವಿರುವವನಿಗೆ ಯಾವುದೂ ದುರ್ಲಭವಲ್ಲ. ನನ್ನಲ್ಲಿ ನೀನು ಅನುರಕ್ತನಾಗಿದ್ದೀಯೆ ಮತ್ತು ಸದಾ ನನಗೆ ಒಳ್ಳೆಯದನ್ನೇ ಮಾಡಲು ಸಿದ್ಧನಾಗಿದ್ದೀಯೆ. ನನ್ನದೊಂದು ಅಭಿಪ್ರಾಯವಿದೆ. ಅದನ್ನು ಕೇಳು. ಪಾಂಡವರ ಆ ಶ್ರೇಷ್ಠ ಕ್ರತು ರಾಜಸೂಯವನ್ನು ನೋಡಿ ನನಗೂ ಅದನ್ನು ಮಾಡುವ ಬಯಕೆಯು ಹುಟ್ಟಿದೆ. ಅದನ್ನು ನಡೆಸಿಕೊಡು.”

ಇದನ್ನು ಕೇಳಿದ ಕರ್ಣನು ದುರ್ಯೋಧನನಿಗೆ ಹೇಳಿದನು: “ನೃಪೋತ್ತಮ! ಇಂದು ಪೃಥ್ವೀಪಾಲರೆಲ್ಲರೂ ನಿನ್ನ ವಶದಲ್ಲಿದ್ದಾರೆ. ದ್ವಿಜವರರನ್ನು ಆಹ್ವಾನಿಸೋಣ. ಯಥಾವಿಧಿಯಾದ ಪದಾರ್ಥಗಳನ್ನು ಮತ್ತು ಯಜ್ಞೋಪಕರಣಗಳನ್ನು ಒಟ್ಟುಗೂಡಿಸೋಣ. ವೇದಪಾರಂಗತ ಋತ್ವಿಜರು ಯಥೋಕ್ತವಾಗಿ ಯಾಜಿಸಲಿ. ಅವರು ಯಥಾಶಾಸ್ತ್ರವಾಗಿ ಕಾರ್ಯನಿರ್ವಹಿಸಲಿ. ನಿನ್ನ ಮಹಾಯಜ್ಞವೂ ಕೂಡ ಬಹು ಅನ್ನ-ಪಾನಗಳಿಂದ ಕೂಡಿದ್ದು ಸುಸಮೃದ್ಧ ಗುಣಾನ್ವಿತವಾಗಿ ನಡೆಯಲಿ.”

ಆಗ ದುರ್ಯೋಧನನು ಪುರೋಹಿತನನ್ನು ಕರೆಯಿಸಿ “ಶ್ರೇಷ್ಠಕ್ರತು ಶ್ರೇಷ್ಠ ದಕ್ಷಿಣೆಗಳಿಂದ ಸಮಾಪ್ತಗೊಳ್ಳುವ ರಾಜಸೂಯವನ್ನು ಯಥಾನ್ಯಾಯವಾಗಿ ಯಥಾಕ್ರಮವಾಗಿ ನನ್ನಿಂದ ಮಾಡಿಸಿ!” ಎಂದು ಹೇಳಿದನು. ನೃಪತಿಯು ಹೀಗೆ ಹೇಳಲು ಆ ದ್ವಿಜಪುಂಗವನು ಹೇಳಿದನು: “ಕೌರವಶ್ರೇಷ್ಠ! ಯುಧಿಷ್ಠಿರನು ಬದುಕಿರುವಾಗ ನಿನ್ನ ಕುಲದಲ್ಲಿ ಈ ಶ್ರೇಷ್ಠ ಕ್ರತುವನ್ನು ಮಾಡಲು ಶಕ್ಯವಿಲ್ಲ. ನಿನ್ನ ದೀರ್ಘಾಯು ತಂದೆ ಧೃತರಾಷ್ಟ್ರನು ಜೀವಿಸಿದ್ದಾನೆ. ಇದೂ ಕೂಡ ನೀನು ಆ ಕ್ರತುವನ್ನು ಆಚರಿಸುವುದನ್ನು ವಿರೋಧಿಸುತ್ತದೆ. ಪ್ರಭೋ! ಆದರೆ ರಾಜಸೂಯಕ್ಕೆ ಸಮನಾದ ಇನ್ನೊಂದು ಮಹಾ ಸತ್ರವಿದೆ. ಅದನ್ನು ನೀನು ಯಾಜಿಸು. ಇದರಲ್ಲಿ ನಿನಗೆ ಕರವನ್ನು ಕೊಡುವ ಪೃಥ್ವೀಪಾಲರು ನಿನಗೆ ಚಿನ್ನವನ್ನೇ ಕರವಾಗಿ ಕೊಡುತ್ತಾರೆ. ಆ ಚಿನ್ನದಿಂದ ನೀನು ನೇಗಿಲನ್ನು ಮಾಡಿ ಯಜ್ಞವಾಟಿಕೆಯ ಭೂಮಿಯನ್ನು ಹೂಳಬೇಕು. ಅಲ್ಲಿ ಯಥಾನ್ಯಾಯವಾಗಿ ಸುಸಂಸ್ಕರಿಸಿದ ಹೇರಳ ಅನ್ನದಿಂದ ವಿಘ್ನವಿಲ್ಲದೇ ಯಜ್ಞವು ನಡೆಯಲಿ. ವೈಷ್ಣವ ಎಂಬ ಹೆಸರಿನ ಈ ಯಜ್ಞವು ಸತ್ಪುರುಷರಿಗೆ ಉಚಿತವಾದುದು. ಹಿಂದೆ ವಿಷ್ಣುವಿನ ಹೊರತಾಗಿ ಯಾರೂ ಈ ಯಜ್ಞವನ್ನು ಮಾಡಿಲ್ಲ. ಈ ಮಹಾಕ್ರತುವು ಶ್ರೇಷ್ಠ ಕ್ರತು ರಾಜಸೂಯದೊಂದಿಗೆ ಸ್ಪರ್ಧಿಸುತ್ತದೆ. ನಿನಗೂ ಕೂಡ ಇದು ಶ್ರೇಯಸ್ಕರವಾದುದು ಎಂದು ನನಗನ್ನಿಸುತ್ತದೆ. ಇದು ಅವಿಘ್ನವಾಗಿ ನಡೆದರೆ ನಿನ್ನ ಬಯಕೆಗಳು ಸಫಲಗೊಳ್ಳುತ್ತವೆ.”

ಆ ವಿಪ್ರರು ಹೀಗೆ ಹೇಳಲು ದುರ್ಯೋಧನನು ಕರ್ಣ, ಶಕುನಿ ಮತ್ತು ಸಹೋದರರಿಗೆ “ಬ್ರಾಹ್ಮಣರ ಮಾತುಗಳು ಸಂಪೂರ್ಣವಾಗಿ ನನಗೆ ಇಷ್ಟವಾದವು. ಇದು ನಿಮಗೂ ಇಷ್ಟವಾದರೆ ಬೇಗನೇ ಹೇಳಿ” ಎಂದು ಕೇಳಿದನು. ಹಾಗೆಯೇ ಆಗಲೆಂದು ಅವರೆಲ್ಲರೂ ದುರ್ಯೋಧನನಿಗೆ ಹೇಳಿದರು. ಆಗ ಅವನು ಅವರಲ್ಲಿ ಪ್ರತಿಯೊಬ್ಬರಿಗೆ ಒಂದೊಂದು ಕೆಲಸವನ್ನು ವಹಿಸಿಕೊಟ್ಟನು. ನೇಗಿಲ ಮಾಡುವುದಕ್ಕೆ ಶಿಲ್ಪಿಗಳನ್ನು ನೇಮಿಸಿದನು. ಹೇಳಿದಂತೆ ಎಲ್ಲ ಕೆಲಸಗಳೂ ಮುಂದುವರೆದವು.

ಎಲ್ಲ ಶಿಲ್ಪಿಗಳೂ, ಅಮಾತ್ಯ ಪ್ರವರರೂ ಮತ್ತು ವಿದುರನೂ ದುರ್ಯೋಧನನಿಗೆ ಕ್ರತುವಿಗೆ ಎಲ್ಲವೂ ಸಿದ್ಧವಾಗಿದೆ ಮತ್ತು ಕಾಲವು ಪ್ರಾಪ್ತವಾಗಿದೆಯೆಂದು ನಿವೇದಿಸಿದರು. ಇದನ್ನು ಕೇಳಿ ಧಾರ್ತರಾಷ್ಟ್ರ ದುರ್ಯೋಧನನು ಆ ರಾಜಕ್ರತುವನ್ನು ಪ್ರಾರಂಭಿಸಲು ಆಜ್ಞೆಯನ್ನಿತ್ತನು. ಆಗ ಬಹು ಆಹಾರಗಳಿಂದ ಕೂಡಿದ್ದ ಸುಸಂಸ್ಕೃತವಾದ ಯಜ್ಞವು ಪ್ರಾರಂಭವಾಯಿತು. ಗಾಂಧಾರಿಯ ಮಗನು ಯಥಾಶಾಸ್ತ್ರವಾಗಿ ಯಥಾಕ್ರಮವಾಗಿ ದೀಕ್ಷಿತಗೊಂಡನು. ಧೃತರಾಷ್ಟ್ರ, ವಿದುರ, ಮಹಾಯಶಸ್ವೀ ಭೀಷ್ಮ, ದ್ರೋಣ, ಕೃಪ, ಕರ್ಣ ಮತ್ತು ಯಶಸ್ವಿನೀ ಗಾಂಧಾರಿಯರು ಬಹಳ ಸಂತೋಷಗೊಂಡರು. ರಾಜರ ಮತ್ತು ಬ್ರಾಹ್ಮಣರ ನಿಮಂತ್ರಣಕ್ಕೆ ಶೀಘ್ರವಾಗಿ ಹೋಗುವ ದೂತರನ್ನು ಕಳುಹಿಸಲಾಯಿತು. ದೂತರು ತಮಗೆ ಹೇಳಿದ ದಿಕ್ಕುಗಳಿಗೆ ತ್ವರಿತ ವಾಹನಗಳಲ್ಲಿ ಹೊರಟರು. ಹಾಗೆ ಹೊರಡುತ್ತಿರುವ ಓರ್ವ ದೂತನಿಗೆ ದುಃಶಾಸನನು: “ಶೀಘ್ರವಾಗಿ ದ್ವೈತವನಕ್ಕೆ ಹೋಗಿ ಪಾಪಪುರುಷ ಪಾಂಡವರಿಗೂ ಆ ಮಹಾವನದಲ್ಲಿರುವ ವಿಪ್ರರಿಗೂ ಯಥಾನ್ಯಾಯವಾಗಿ ನಿಮಂತ್ರಣವನ್ನು ನೀಡು!” ಎಂದನು.

ಆಗ ಆ ದೂತನು ಪಾಂಡವರು ವಾಸಿಸುವಲ್ಲಿಗೆ ಹೋಗಿ ಅವರಿಗೆ ನಮಸ್ಕರಿಸಿ ಹೇಳಿದನು: “ಮಹಾರಾಜ! ಕುರುನಂದನ ನೃಪಸತ್ತಮ ದುರ್ಯೋಧನನು ತನ್ನ ವೀರ್ಯದಿಂದ ಅಮೋಘ ಸಂಪತ್ತನ್ನು ಗಳಿಸಿ ಯಜ್ಞವನ್ನು ನಡೆಸಿದ್ದಾನೆ. ಎಲ್ಲೆಡೆಯಿಂದ ರಾಜರು ಮತ್ತು ಬ್ರಾಹ್ಮಣರು ಅಲ್ಲಿಗೇ ಹೋಗುತ್ತಿದ್ದಾರೆ. ನಾನಾದರೋ ಮಹಾತ್ಮ ಕೌರವನಿಂದ ಕಳುಹಿಸಲ್ಪಟ್ಟಿದ್ದೇನೆ. ಆ ಜನೇಶ್ವರ ಧಾರ್ತರಾಷ್ಟ್ರನು ಆಮಂತ್ರಣವನ್ನು ಕಳುಹಿಸಿದ್ದಾನೆ. ಆದುದರಿಂದ ರಾಜನ ಆ ಕ್ರತುವನ್ನು ನೋಡುವ ಮನಸ್ಸುಮಾಡಬೇಕು!”

ದೂತನು ಹೇಳಿದುದನ್ನು ಕೇಳಿ ಯುಧಿಷ್ಠಿರನು ಹೇಳಿದನು: “ರಾಜಾ ಸುಯೋಧನನು ಪೂರ್ವಜರ ಕೀರ್ತಿಯನ್ನು ಹೆಚ್ಚಿಸುವ ಮುಖ್ಯ ಕ್ರತುವನ್ನು ಮಾಡುತ್ತಿರುವುದು ಒಳ್ಳೆಯದೇ! ನಾವು ಖಂಡಿತವಾಗಿಯೂ ಅಲ್ಲಿಗೆ ಬರಬೇಕು. ಆದರೆ ಹದಿಮೂರು ವರ್ಷಗಳು ಮುಗಿಯುವವರೆಗೆ ಒಪ್ಪಂದವನ್ನು ಪಾಲಿಸಬೇಕಾಗಿರುವುದರಿಂದ ನಾವು ಹಾಗೆ ಮಾಡಲಾರೆವು!”

ಧರ್ಮರಾಜನ ಆ ಮಾತನ್ನು ಕೇಳಿ ಭೀಮಸೇನನು ಹೇಳಿದನು: “ಆಗ ನೃಪತಿ ಧರ್ಮರಾಜ ಯುಧಷ್ಠಿರನು ಅಲ್ಲಿಗೆ ಬಂದು ದುರ್ಯೋಧನನನ್ನು ಅಸ್ತ್ರ-ಶಸ್ತ್ರಗಳಿಂದ ಉರಿಸಿದ ಅಗ್ನಿಯಲ್ಲಿ ಕೆಡಹುತ್ತಾನೆ. ಹದಿಮೂರನೆಯ ವರ್ಷವು ಕೊನೆಗೊಳ್ಳಲು ರಣಸತ್ರದಲ್ಲಿ ನರಾಧಿಪ ಪಾಂಡವನು ಕ್ರೋಧದ ಹವಿಸ್ಸಾಗಿ ಧಾರ್ತರಾಷ್ಟ್ರರನ್ನು ಹಾಕುತ್ತಾನೆ. ಆಗ ನಾನು ಬರುತ್ತೇನೆ ಎಂದು ಸುಯೋಧನನಿಗೆ ಹೇಳು.” ಉಳಿದ ಪಾಂಡವರ್ಯಾರೂ ಅಪ್ರಿಯವಾದುದನ್ನು ಹೇಳಲಿಲ್ಲ, ದೂತನು ನಡೆದುದನ್ನು ಹಾಗೆಯೇ ಧಾರ್ತರಾಷ್ಟ್ರನಿಗೆ ನಿವೇದಿಸಿದನು.

ಹಸ್ತಿನಾಪುರಕ್ಕೆ ಆಗ ನರಶ್ರೇಷ್ಠರೂ, ನಾನಾ ಜನಪದೇಶ್ವರರೂ, ಮಹಾಭಾಗ ಬ್ರಾಹ್ಮಣರೂ ಆಗಮಿಸಿದರು. ಅವರು ಯಥಾಶಾಸ್ತ್ರವಾಗಿ, ಯಥಾವರ್ಣವಾಗಿ, ಯಥಾಕ್ರಮವಾಗಿ ಅರ್ಚಿತರಾದರು ಮತ್ತು ಪರಮ ಸಂತೋಷದಿಂದ ಮುದಿತರಾದರು. ಧೃತರಾಷ್ಟ್ರನೂ ಕೂಡ ಎಲ್ಲ ಕೌರವರಿಂದ ಸುತುವರೆಯಲ್ಪಟ್ಟು ಮಹಾ ಹರ್ಷಿತನಾಗಿ ವಿದುರನಿಗೆ “ಕ್ಷತ್ತ! ಬೇಗನೇ ಯಜ್ಞಸದನದಲ್ಲಿರುವ ಎಲ್ಲರೂ ಸುಖಿಗಳಾಗಿ ಆಹಾರ-ಪಾನೀಯಗಳಿಂದ ತೃಪ್ತರಾಗುವಂತೆ ನೋಡಿಕೋ!” ಎಂದು ಹೇಳಿದನು. ಆಜ್ಞೆಯಂತೆ ವಿದುರನು ಎಲ್ಲ ವರ್ಣದವರನ್ನೂ ಧರ್ಮವತ್ತಾಗಿ ಭಕ್ಷ್ಯ, ಭೋಜನ, ಪಾನೀಯ, ಮಾಲೆ-ಸುಗಂಧಗಳಿಂದ ಪೂಜಿಸಿದನು. ಸಂತೋಷದಿಂದ ವಾಸಿಸಲು ವಿವಿಧ ಕಟ್ಟಡಗಳನ್ನು ನಿರ್ಮಿಸಿದರು. ವೀರ ರಾಜೇಂದ್ರನು ಯಥಾಶಾಸ್ತ್ರವಾಗಿ ಯಥಾಕ್ರಮವಾಗಿ ಅವಭೃತವನ್ನು ಮಾಡಿ ವಿವಿಧ ಸಂಪತ್ತನ್ನು ದಾನವನ್ನಾಗಿತ್ತು ಸಂತವಿಸಿ ಸಹಸ್ರಾರು ನೃಪರನ್ನೂ ಬ್ರಾಹ್ಮಣರನ್ನೂ ಕಳುಹಿಸಿಕೊಟ್ಟನು. ನೃಪರನ್ನು ಕಳುಹಿಸಿಕೊಟ್ಟು, ಸಹೋದರರಿಂದ ಪರಿವೃತನಾಗಿ, ಅವನು ಕರ್ಣ-ಶಕುನಿಯರೊಡನೆ ಹಸ್ತಿನಾಪುರವನ್ನು ಪ್ರವೇಶಿಸಿದನು.

ಮಹಾರಾಜನು ಪ್ರವೇಶಿಸುವಾಗ ಸೂತರು ಮತ್ತು ಜನರು ಆ ರಾಜಸತ್ತಮನನ್ನು ಹೊಗಳಿದರು. ಲಾಜ-ಚಂದನ-ಚೂರ್ಣಗಳನ್ನು ಅವನ ಮೇಲೆ ಎರಚುತ್ತಾ ಜನರು “ನೃಪ! ಅದೃಷ್ಟದಿಂದ ನಿನ್ನ ಕ್ರತುವು ನಿರ್ವಿಘ್ನವಾಗಿ ನಡೆಯಿತು!” ಎಂದರು. ಪರಿಣಾಮದ ಕುರಿತು ಯೋಚಿಸದೇ ಇದ್ದ ಇನ್ನೂ ಇತರ ಮಾತಿನಲ್ಲಿ ಶೂರರು, “ನಿನ್ನ ಕ್ರತುವು ಯುಧಿಷ್ಠಿರನ ಯಜ್ಞಕ್ಕೆ ಸ್ವಲ್ಪವೂ ಹೋಲುವುದಿಲ್ಲ. ನಿನ್ನ ಈ ಕ್ರತುವು ಹದಿನಾರರಲ್ಲಿ ಒಂದಾಣೆಯಷ್ಟೂ ಇಲ್ಲ!” ಎಂದರು. ದುರ್ಯೋಧನನ ಸುಹೃದಯರು “ಇದು ಎಲ್ಲ ಕ್ರತುಗಳನ್ನೂ ಮೀರಿಸುವಂತಿತ್ತು. ಯಯಾತಿ, ನಹುಷ, ಮಾಂಧಾತಾ, ಮತ್ತು ಭರತರು ಇಂತಹ ಕ್ರತುವನ್ನು ಪೂರೈಸಿ ಪುಣ್ಯರಾಗಿ ಎಲ್ಲರೂ ಸ್ವರ್ಗಕ್ಕೆ ಹೋದರು” ಎಂದರು. ಈ ಶುಭಮಾತುಗಳನ್ನು ಕೇಳಿ ನರಾಧಿಪನು ಸಂತೋಷಗೊಂಡು ಪುರವನ್ನು ಮತ್ತು ಸ್ವಗೃಹವನ್ನು ಪ್ರವೇಶಿಸಿದನು. ಅನಂತರ ತಂದೆ-ತಾಯಿಯರ, ಭೀಷ್ಮ-ದ್ರೋಣ-ಕೃಪ-ವಿದುರರ ಪಾದಗಳಿಗೆ ವಂದಿಸಿ, ಕಿರಿಯ ಸಹೋದರರಿಂದ ನಮಸ್ಕರಿಸಲ್ಪಟ್ಟು ದುರ್ಯೋಧನನು ಪ್ರಮುಖ ಆಸನದಲ್ಲಿ ಕುಳಿತುಕೊಂಡನು.

ಆಗ ಮೇಲೆದ್ದು ಸೂತಪುತ್ರನು ಹೇಳಿದನು: “ಭರತಶ್ರೇಷ್ಠ! ನಿನ್ನ ಈ ಮಹಾಕ್ರತುವು ಸಮಾಪ್ತವಾದುದು ಒಳ್ಳೆಯದಾಯಿತು. ಆದರೆ ಯುದ್ಧದಲ್ಲಿ ಪಾರ್ಥರು ಹತರಾಗಿ ನೀನು ರಾಜಸೂಯವನ್ನು ನೆರವೇರಿಸಿದಾಗ ನಾನು ನಿನಗೆ ಸಭೆಯಲ್ಲಿ ಪುನಃ ಈ ಜಯಘೋಷವನ್ನು ಹೇಳುತ್ತೇನೆ.”

ಆಗ ಮಹಾರಾಜ ದುರ್ಯೋಧನನು ಅವನಿಗೆ “ವೀರ! ನೀನು ಸತ್ಯವನ್ನೇ ಹೇಳಿದ್ದೀಯೆ! ದುರಾತ್ಮ ಪಾಂಡವರು ಹತರಾದ ನಂತರ ಆ ಮಹಾಕ್ರತು ರಾಜಸೂಯವನ್ನು ಪೂರೈಸಿದ ನನಗೆ ಪುನಃ ನೀನು ಸತ್ಕರಿಸುತ್ತೀಯೆ!” ಎಂದು ಹೇಳಿ ಕರ್ಣನನ್ನು ಅಪ್ಪಿಕೊಂಡನು. ಆ ಶ್ರೇಷ್ಠ ಕ್ರತು ರಾಜಸೂಯದ ಕುರಿತು ಆಲೋಚಿಸುತ್ತಾ ಪಕ್ಕದಲ್ಲಿದ್ದ ತನ್ನ ಸುಹೃದಯರಿಗೆ “ಪಾಂಡವರನ್ನು ಕೊಂದು ನಂತರ ನಾನು ಆ ಕ್ರತುವರ ಮಹಾಧನದ ರಾಜಸೂಯವನ್ನು ಆಚರಿಸುತ್ತೇನೆ” ಎಂದನು.

ಆಗ ಕರ್ಣನು “ನಾನು ಅರ್ಜುನನನ್ನು ಕೊಲ್ಲುವವರೆಗೆ ನನ್ನ ಪಾದಗಳನ್ನು ಯಾರಿಂದಲೂ ತೊಳೆಸಿಕೊಳ್ಳುವುದಿಲ್ಲ ಮತ್ತು ಮಾಂಸವನ್ನು ತಿನ್ನುವುದಿಲ್ಲ! ಯುದ್ಧದಲ್ಲಿ ಫಲ್ಗುನನನ್ನು ವಧಿಸುತ್ತೇನೆ!” ಎಂದು ಪ್ರತಿಜ್ಞೆಮಾಡಲು ಎಲ್ಲ ಧಾರ್ತರಾಷ್ಟ್ರರೂ ಹರ್ಷೋದ್ಗಾರ ಮಾಡಿದರು. ಪಾಂಡವರನ್ನು ಈಗಾಗಲೇ ಗೆದ್ದುಬಿಟ್ಟರೋ ಎನ್ನುವಂತೆ ತೋರಿದರು. ದುರ್ಯೋಧನನಾದರೋ ನರಪುಂಗವರನ್ನು ಕಳುಹಿಸಿ ತನ್ನ ಶ್ರೀಮಂತ ಅರಮನೆಯನ್ನು ಪ್ರವೇಶಿಸಿದನು. ಅವನು ಧನದ ಫಲವು ಕೊಡುವುದರಲ್ಲಿ ಮತ್ತು ಭೋಗಿಸುವುದರಲ್ಲಿದೆ ಎಂದು ನಿಶ್ಚಯಿಸಿ ಭಾತೃಗಳಿಗೆ ಪ್ರಿಯವಾದುದನ್ನು ಮಾಡಿದನು.

ಅರ್ಜುನನ ವಧೆಯ ಕುರಿತು ಸೂತಪುತ್ರನ ಪ್ರತಿಜ್ಞೆಯ ವಿಷಯವನ್ನು ಚಾರರು ಸಂಗ್ರಹಿಸಿ ಪಾಂಡವರಿಗೆ ವರದಿಮಾಡಿದರು. ದೂತರ ಮಾತುಗಳನ್ನು ಕೇಳಿ ಧರ್ಮಸುತನು ಸಮುದ್ವಿಗ್ನನಾದನು. ಕರ್ಣನ ಕವಚವು ಅಭೇದ್ಯ ಮತ್ತು ಅವನು ಅದ್ಭುತ ವಿಕ್ರಮಿಯೆಂದು ತಿಳಿದು ಕಷ್ಟಗಳನ್ನು ನೆನಪಿಸಿಕೊಳ್ಳುತ್ತಾ ಶಾಂತಿಯನ್ನು ಕಳೆದುಕೊಂಡನು. ಚಿಂತೆಯಿಂದ ಪರಿತಪಿಸುತ್ತಿದ್ದ ಅವನ ಮನಸ್ಸಿನಲ್ಲಿ ದ್ವೈತವನ್ನು ಬಿಟ್ಟುಹೋಗುವ ಯೋಚನೆಯು ಹುಟ್ಟಿತು.

Leave a Reply

Your email address will not be published. Required fields are marked *