ಘೋಷಯಾತ್ರೆಯಲ್ಲಿ ತನಗಾದ ಅಪಮಾನದಿಂದ ಹತಾಶನಾದ ದುರ್ಯೋಧನನಿಗೆ ದಾನವರು ಆಶ್ವಾಸನೆಯನ್ನಿತ್ತಿದುದು
ದುರ್ಯೋಧನನ ಪ್ರಾಯೋಪವೇಶ
ಧರ್ಮರಾಜನಿಂದ ಕಳುಹಿಸಲ್ಪಟ್ಟ ದುರ್ಯೋಧನನು ಲಜ್ಜೆಯಿಂದ ತಲೆತಗ್ಗಿಸಿಕೊಂಡು ದುಃಖಿತನಾಗಿ ಎಲ್ಲವನ್ನೂ ಕಳೆದುಕೊಂಡವನಂತೆ ನಿಧಾನವಾಗಿ ನಡೆದನು. ಚತುರಂಗಬಲವು ಅವನನ್ನು ಹಿಂಬಾಲಿಸುತ್ತಿರಲು, ಆ ರಾಜನು ಶೋಕದಿಂದ ಸೋತು, ಪರಾಭವದ ಕುರಿತು ಚಿಂತಿಸುತ್ತಾ ತನ್ನ ಪುರಕ್ಕೆ ಪ್ರಯಾಣ ಬೆಳೆಸಿದನು. ಮಾರ್ಗದಲ್ಲಿ ವಿಪುಲ ಹುಲ್ಲು-ನೀರಿರುವ ಪ್ರದೇಶದಲ್ಲಿ ವಾಹನಗಳನ್ನು ವಿಸರ್ಜಿಸಿ, ಬೀಡುಬಿಟ್ಟನು. ಉರಿಯುತ್ತಿರುವ ಬೆಂಕಿಯಂತೆ ಹೊಳೆಯುವ ಪರ್ಯಂಕದಲ್ಲಿ ರಾಹುವಿನ ಗ್ರಹಣಕ್ಕೊಳಗಾದ ಚಂದ್ರನಂತೆ ಕುಂದಿ ಕುಳಿತು ರಾತ್ರಿಯನ್ನು ಕಳೆಯುತ್ತಿರಲು ಕರ್ಣನು ದುರ್ಯೋಧನನ ಬಳಿ ಬಂದು ಹೇಳಿದನು:
“ಗಾಂಧಾರೇ! ನೀನು ಜೀವಿಸಿರುವುದೇ ಅದೃಷ್ಟ! ನಾವಿಬ್ಬರೂ ಪುನಃ ಭೇಟಿಯಾಗುತ್ತಿದ್ದೇವೆ ಎನ್ನುವುದೇ ಅದೃಷ್ಟ! ಕಾಮರೂಪಿ ಗಂಧರ್ವರರನ್ನು ನೀನು ಗೆದ್ದೆ ಎನ್ನುವುದೂ ಅದೃಷ್ಟವೇ ಸರಿ! ಅದೃಷ್ಟವಶಾತ್ ರಣದಲ್ಲಿ ಅರಿಗಳನ್ನು ಗೆದ್ದು ವಿಜಯದಿಂದ ಹಿಂದಿರುಗಿದ ನಿನ್ನ ಮಹಾರಥಿ ಸಹೋದರರೆಲ್ಲರನ್ನೂ ನೋಡುತ್ತಿದ್ದೇನೆ! ನೀನು ನೋಡುತ್ತಿದ್ದಂತೆಯೇ ಆ ಗಂಧರ್ವರೆಲ್ಲರೂ ನನ್ನನ್ನು ಓಡಿಹೋಗುವಂತೆ ಮಾಡಿದರು. ಪಲಾಯನಗೈಯುತ್ತಿದ್ದ ನನ್ನ ಸೇನೆಯನ್ನೂ ಕೂಡ ನಿಲ್ಲಿಸಲು ಅಶಕ್ತನಾಗಿ ಹೋದೆ. ಬಾಣಗಳಿಂದ ಚೆನ್ನಾಗಿ ಗಾಯಗೊಂಡು ಪೀಡಿತನಾಗಿ ನಾನು ಪಲಾಯನಗೈದೆ. ಈಗ ನಿನ್ನನ್ನು ಇಲ್ಲಿ ಕಾಣುತ್ತಿದ್ದೇನೆ ಎನ್ನುವುದೇ ಒಂದು ಅದ್ಭುತವೆಂದು ತಿಳಿಯುತ್ತೇನೆ. ಪೀಡಿತನಾಗದೇ, ಗಾಯಗೊಳ್ಳದೇ, ಪತ್ನಿಯರು-ಸಂಪತ್ತು-ವಾಹನಗಳೊಂದಿಗೆ ಕ್ಷೇಮವಾಗಿ ನೀನು ಆ ಅಮಾನುಷ ಯುದ್ಧದಿಂದ ಹೊರಬಂದಿರುವುದನ್ನು ಕಾಣುತ್ತಿದ್ದೇನೆ! ಸಹೋದರರೊಡನೆ ನೀನು ಆ ಯುದ್ಧದಲ್ಲಿ ಮಾಡಿದ ಕಾರ್ಯವನ್ನು ಈ ಲೋಕದ ಬೇರೆ ಯಾವ ಪುರುಷನೂ ಮಾಡಿದ್ದುದು ತಿಳಿದಿಲ್ಲ!”
ಕರ್ಣನು ಹೀಗೆ ಹೇಳಲು ರಾಜಾ ದುರ್ಯೋಧನನು ಕಣ್ಣೀರುತುಂಬಿ ಗಂಟಲು ಕಟ್ಟಿದ ಸ್ವರದಲ್ಲಿ ಈ ಮಾತುಗಳನ್ನಾಡಿದನು: “ರಾಧೇಯ! ನಿನ್ನ ಮಾತಿಗೆ ನಾನು ಅಸೂಯೆಪಡುವುದಿಲ್ಲ. ಯಾಕೆಂದರೆ ಅಲ್ಲಿ ನಡೆದುದು ನಿನಗೆ ಗೊತ್ತಿಲ್ಲ. ನನ್ನದೇ ತೇಜಸ್ಸಿನಿಂದ ನಾನು ಶತ್ರು ಗಂಧರ್ವರನ್ನು ಗೆದ್ದೆ ಎಂದು ನೀನು ತಿಳಿದುಕೊಂಡಿರುವೆ. ನನ್ನೊಂದಿಗೆ ನನ್ನ ಸಹೋದರರು ಗಂಧರ್ವರ ವಿರುದ್ಧ ಬಹಳ ಹೊತ್ತು ಹೋರಾಡಿದರು. ಇಬ್ಬರ ಕಡೆಯಲ್ಲಿಯೂ ನಷ್ಟವಾಯಿತು. ಆದರೆ ತಮ್ಮ ಮಾಯೆಯನ್ನು ಬಳಸಿ ಆ ಶೂರ ಖೇಚರರು ಆಕಾಶವನ್ನೇರಿದಾಗ ನಮ್ಮ ಯುದ್ಧವು ಅಸಮವಾಯಿತು. ರಣದಲ್ಲಿ ನಾವು ಪರಾಜಿತರಾಗಿ ಸೇವಕರು-ಅಮಾತ್ಯರು-ಪತ್ರ್ನಿಯರು-ವಾಹನಗಳೊಂದಿಗೆ ಬಂಧಿತರಾದೆವು. ದುಃಖಿತರಾದ ನಮ್ಮನ್ನು ಮೇಲೆ ಆಕಾಶಮಾರ್ಗದಲ್ಲಿ ಕೊಂಡೊಯ್ಯಲಾಯಿತು. ಆಗ ಕೆಲವು ಸೈನಿಕರು ಮತ್ತು ಅಮಾತ್ಯರು ಮಹಾರಥಿ ಪಾಂಡವರ ಬಳಿ ಶರಣು ಹೋಗಿ ’ರಾಜ ದುರ್ಯೋಧನನನ್ನು ಅವನ ಅನುಜರು ಮತ್ತು ಪತ್ನಿ-ಅಮಾತ್ಯರೊಂದಿಗೆ ಗಂಧರ್ವರು ಆಕಾಶದಲ್ಲಿ ಕೊಂಡೊಯ್ಯುತ್ತಿದ್ದಾರೆ. ಎಲ್ಲ ಕುರುಪತ್ನಿಯರು ಪರಾಮರ್ಶರಾಗುವ ಮೊದಲು ಪತ್ನಿಯರೊಂದಿಗೆ ರಾಜನನ್ನು ಬಿಡುಗಡೆಗೊಳಿಸು!’ ಎಂದು ಕೇಳಿಕೊಂಡರು. ಇದನ್ನು ಕೇಳಿ ಯುಧಿಷ್ಠಿರನು ತನ್ನ ಎಲ್ಲ ಸಹೋದರರನ್ನೂ ಒಪ್ಪಿಸಿ ನಮ್ಮನ್ನು ಬಿಡುಗಡೆಗೊಳಿಸಲು ಆಜ್ಞಾಪಿಸಿದನು. ಆಗ ಪಾಂಡವರು ಅಲ್ಲಿಗೆ ಬಂದು ಶಕ್ತರಾಗಿದ್ದರೂ ಸಾಮದಿಂದ ಗಂಧರ್ವರಲ್ಲಿ ಕೇಳಿಕೊಂಡರು. ಗಂಧರ್ವರು ನಮ್ಮನ್ನು ಬಿಡದಿದ್ದಾಗ ಅರ್ಜುನ, ಭೀಮ ಮತ್ತು ಯಮಳರು ಗಂಧರ್ವರ ಮೇಲೆ ಅನೇಕ ಶರವರ್ಷಗಳನ್ನು ಸುರಿಸಿದರು. ಆಕಾಶಮಾರ್ಗದಲ್ಲಿ ಹೋಗುತ್ತಿದ್ದ ಅವರನ್ನು, ನಮ್ಮೊಂದಿಗೆ, ಅರ್ಜುನನು ಅಮಾನುಷ ಅಸ್ತ್ರಗಳನ್ನು ಪ್ರಯೋಗಿಸಿ, ಎಲ್ಲ ಕಡೆಗಳಿಂದಲೂ ಮುಚ್ಚಿದುದನ್ನು ನಾನು ನೋಡಿದೆ. ಆಗ ಧನಂಜಯ ಸಖನಾಗಿದ್ದ ಚಿತ್ರಸೇನನು ಸ್ವಯಂ ಅವನಿಗೆ ಕಾಣಿಸಿಕೊಂಡು, ಪಾಂಡವರನ್ನು ಆಲಂಗಿಸಲು, ಪರಸ್ಪರರ ಕುಶಲವನ್ನು ಕೇಳಿ, ಗೌರವಿಸಿದರು.
’ಚಿತ್ರಸೇನನನ್ನು ಭೇಟಿಮಾಡಿದ ಅರ್ಜುನನು ಹೇಡಿತನದ್ದಲ್ಲದ ಈ ಮಾತುಗಳನ್ನಾಡಿದನು: “ವೀರ ಗಂಧರ್ವಸತ್ತಮ! ನಮ್ಮ ಸಹೋದರರನ್ನು ನೀನು ಬಿಡಬೇಕು. ಪಾಂಡವರು ಬದುಕಿರುವಾಗ ಇವರು ಪೀಡೆಗೊಳಗಾಗಲು ಅನರ್ಹರು!’ ಆಗ ಗಂಧರ್ವನು ಅರ್ಜುನನಿಗೆ ನಾವು ಯಾವ ಉಪಾಯದಿಂದ ಅಲ್ಲಿಗೆ ಬಂದಿದ್ದೆವು – ಪತ್ನಿಯೊಂದಿಗೆ ಪಾಂಡವರು ದೀನರಾಗಿರುವುದನ್ನು ನೋಡಿ ಸುಖಪಡಲು – ಎಂದು ಎಲ್ಲವನ್ನೂ ಹೇಳಿದನು. ಗಂಧರ್ವನು ಇದನ್ನು ಹೇಳುತ್ತಿದ್ದಾಗ ನಾಚಿಕೆಯಿಂದ ತುಂಬಿದ ನಾನು ಮನದಲ್ಲಿಯೇ ಈ ಭೂಮಿಯು ಸೀಳಿಹೋಗಿ ಅದರೊಳಗೆ ಪ್ರವೇಶಿಸಲು ಇಚ್ಛಿಸಿದೆ! ಆಗ ಗಂಧರ್ವರು ಪಾಂಡವರೊಂದಿಗೆ ಯುಧಿಷ್ಠಿರನಲ್ಲಿಗೆ ಹೋಗಿ ನಮ್ಮ ಕೆಟ್ಟ ಉಪಾಯದ ಕುರಿತು ಹೇಳಿ ಬಂಧನದಲ್ಲಿದ್ದ ನಮ್ಮನ್ನು ಅವನಿಗೆ ಅರ್ಪಿಸಿದರು. ಅಲ್ಲಿ ನಾನು ಸ್ತ್ರೀಯರ ಸಮಕ್ಷಮದಲ್ಲಿ ಬಂಧಿಯಾಗಿ ಶತ್ರುವಶನಾಗಿ ದೀನನಾಗಿ ಯುಧಿಷ್ಠಿರನಿಗೆ ಸಮರ್ಪಣಗೊಂಡಾಗ ನನಗಾದ ದುಃಖಕ್ಕಿಂತಲೂ ಹೆಚ್ಚಿನ ದುಃಖವಾದರೂ ಏನಿದೆ? ಯಾರನ್ನು ನಾನು ನಿತ್ಯವೂ ನಿರಾಕರಿಸಿ ದ್ವೇಷಿಸುತ್ತಿದ್ದೆನೋ ಅವರೇ ದುರ್ಬುದ್ಧಿಯಾದ ನನ್ನನ್ನು ಬಿಡುಗಡೆಗೊಳಿಸಿದರು. ನನ್ನ ಜೀವವು ಅವರ ಋಣದಲ್ಲಿದೆ. ಈ ರೀತಿಯ ಜೀವನವನ್ನು ಜೀವಿಸುವುದಕ್ಕಿಂತ ಮಹಾರಣದಲ್ಲಿ ನನ್ನ ವಧೆಯಾಗಿದ್ದರೇ ಒಳ್ಳೆಯದಾಗುತ್ತಿತ್ತು. ಗಂಧರ್ವನಿಂದ ಹತನಾದೆನೆಂದು ನನ್ನ ಯಶವು ಭೂಮಿಯಲ್ಲಿ ಖ್ಯಾತಿಗೊಳ್ಳುತ್ತಿತ್ತು ಮತ್ತು ಮಹೇಂದ್ರಸದನದಲ್ಲಿ ಅಕ್ಷಯ ಪುಣ್ಯ ಲೋಕಗಳನ್ನು ಪಡೆಯುತ್ತಿದ್ದೆ.
“ಇಂದು ನಾನು ಏನು ಮಾಡಬೇಕೆಂದು ನಿರ್ಧರಿಸಿದ್ದೇನೆ ಎನ್ನುವುದನ್ನು ಕೇಳಿ! ನಾನು ಇಲ್ಲಿಯೇ ಕುಳಿತು ಸಾಯುವವರೆಗೆ ಉಪವಾಸಮಾಡುತ್ತೇನೆ. ನೀವು ಮನೆಗೆ ಹೋಗಿ. ಕರ್ಣನೇ ಮೊದಲಾದ ಸುಹೃದಯರೂ ಬಾಂಧವರೂ ದುಃಶಾಸನನ ನಾಯಕತ್ವದಲ್ಲಿ ಪುರದ ಕಡೆ ಪ್ರಯಾಣಿಸಲಿ! ಸುಹೃದರ ಶೋಕವನ್ನು ಮತ್ತು ಶತ್ರುಗಳ ಹರ್ಷವನ್ನು ಹೆಚ್ಚಿಸಿದ ನಾನು ಹಸ್ತಿನಾಪುರಕ್ಕೆ ಬಂದು ರಾಜನಿಗೆ ಏನು ಹೇಳಲಿ? ಭೀಷ್ಮ-ದ್ರೋಣ-ಕೃಪ-ದ್ರೌಣಿ-ವಿದುರ-ಸಂಜಯ-ಬಾಹ್ಲೀಕ-ಸೋಮದತ್ತ ಮತ್ತು ಇತರರು ನನಗೆ ಏನು ಹೇಳಬಹುದು ಮತ್ತು ನಾನು ಅವರಿಗೆ ಏನೆಂದು ಉತ್ತರಿಸಿಯೇನು? ರಿಪುಗಳ ತಲೆಯನ್ನು ತುಳಿದು ಅವರ ಎದೆಯ ಮೇಲೆ ನಡೆದಿದ್ದ ನಾನು ನನ್ನದೇ ತಪ್ಪಿನಿಂದ ಈಗ ಪರಿಭ್ರಷ್ಟನಾದೆನೆಂದು ಅವರಿಗೆ ಹೇಗೆ ಹೇಳಲಿ? ನನ್ನಂಥಹ ಮದಗರ್ವಿತ, ದುರ್ವೀನಿತರು ಸಂಪತ್ತು-ವಿಧ್ಯೆಗಳಿದ್ದರೂ ಬಹುಕಾಲ ಅವುಗಳನ್ನು ಇಟ್ಟುಕೊಳ್ಳುವುದಿಲ್ಲ. ಅಯ್ಯೋ! ಇದೆಂಥಹ ಕಷ್ಟ ದುಃಶ್ಚರಿತವನ್ನು ಮಾಡಿಬಿಟ್ಟೆ! ದುರ್ಬುದ್ಧಿ-ಮೋಹಗಳಿಂದ ಸ್ವಯಂ ನಾನೇ ಇದನ್ನು ಪಡೆದುಕೊಂಡೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ಪ್ರಾಯೋಪವೇಶಮಾಡಿ ಕುಳಿತುಕೊಳ್ಳುತ್ತೇನೆ. ಜೀವಿಸಲು ಶಕ್ತನಾಗಿಲ್ಲ. ಚೇತನವಿರುವ ಯಾರು ತಾನೇ ಕಷ್ಟದಲ್ಲಿ ಶತ್ರುವಿನಿಂದ ಜೀವ ಉಳಿಸಿಕೊಂಡು ಬದುಕಿರುತ್ತಾನೆ? ಮಾನಿಯಾದ ನನ್ನನ್ನು ಶತ್ರುಗಳು ಅಣಕಿಸಿದ್ದಾರೆ. ನನ್ನ ಪುರುಷತ್ವವನ್ನು ಕಿತ್ತೊಗೆದಿದ್ದಾರೆ. ವಿಕ್ರಮಾಢ್ಯ ಪಾಂಡವರು ನನ್ನನ್ನು ಕೀಳಾಗಿ ಕಂಡಿದ್ದಾರೆ.”
ಹೀಗೆ ಚಿಂತಾಪರನಾದ ದುರ್ಯೋಧನನು ದುಃಶಾಸನನಿಗೆ ಹೇಳಿದನು: “ಭಾರತ! ನನ್ನ ಈ ಮಾತನ್ನು ಕೇಳು. ನಾನು ನೀಡುವ ಅಭಿಷೇಕವನ್ನು ಸ್ವೀಕರಿಸು. ನೃಪನಾಗು. ಕರ್ಣ-ಶಕುನಿಯರಿಂದ ರಕ್ಷಿತವಾಗಿರುವ ಈ ಸಮೃದ್ಧ ಭೂಮಿಯನ್ನು ಆಳು! ವೃತ್ರಹನು ಮರುತರನ್ನು ಹೇಗೋ ಹಾಗೆ ತಮ್ಮಂದಿರನ್ನು ಘನತೆಯಿಂದ ಪಾಲಿಸು! ಶತ್ರುಕ್ರತುವಿನಿಂದ ದೇವತೆಗಳು ಹೇಗೋ ಹಾಗೆ ನಿನ್ನಿಂದ ನಮ್ಮ ಬಂಧುಗಳು ಉಪಜೀವನವನ್ನು ಪಡೆಯಲಿ. ಬ್ರಾಹ್ಮಣರಲ್ಲಿ ಸದಾ ಅಪ್ರಮತ್ತತೆಯಿಂದ ನಡೆದುಕೋ! ಸದಾ ಬಂಧು-ಸುಹೃದಯರ ಗತಿಯಾಗಿರು. ವಿಷ್ಣುವು ದೇವಗಣವನ್ನು ನೋಡಿಕೊಳ್ಳುವಂತೆ ನಿನ್ನ ಕುಲದವರನ್ನು ನೋಡಿಕೋ! ಹಿರಿಯರನ್ನು ಪಾಲಿಸು! ಹೋಗು! ಈ ಮೇದಿನಿಯನ್ನು ಪಾಲಿಸು! ಸುಹೃದಯರನ್ನು ಸಂತೋಷಗೊಳಿಸುತ್ತಾ ಶತ್ರುಗಳನ್ನು ಬೆದರಿಸುತ್ತಿರು!” ಅವನ ಕುತ್ತಿಗೆಯನ್ನು ಬಿಗಿದಪ್ಪಿ “ಹೋಗು!” ಎಂದು ಹೇಳಿದನು.
ಅವನ ಆ ಮಾತನ್ನು ಕೇಳಿ ದೀನನಾದ ದುಃಶಾಸನನು ಕಂಠದಲ್ಲಿ ಕಣ್ಣೀರನ್ನು ತುಂಬಿಕೊಂಡು, ತುಂಬಾ ದುಃಖಾರ್ತನಾಗಿ, ಕೈಮುಗಿದು, ಹಿರಿಯಣ್ಣನ ಕಾಲಿಗೆ ಬಿದ್ದು, ಗದ್ಗದಭರಿತ ಈ ಮಾತುಗಳನ್ನಾಡಿದನು: “ಪ್ರಸೀದ! ಹೀಗೆ ಎಂದೂ ಆಗುವುದಿಲ್ಲ! ಭೂಮಿಯು ಸೀಳಬಹುದು, ಸ್ವರ್ಗದ ಮಳಿಗೆಯು ಚೂರಾಗಿ ಕೆಳಗೆ ಬೀಳಬಹುದು, ಸೂರ್ಯನು ತನ್ನ ಪ್ರಭೆಯನ್ನು ತೊರೆದಾನು ಮತ್ತು ಚಂದ್ರನು ತನ್ನ ಶೀತಾಂಶುವನ್ನು ತ್ಯಜಿಸಿಯಾನು! ವಾಯುವು ತನ್ನ ವೇಗವನ್ನು ಕಡಿಮೆಮಾಡಿಯಾನು, ಹಿಮಾಲಯವು ತನ್ನ ಸ್ಥಳವನ್ನು ಬದಲಾಯಿಸಬಹುದು, ಸಮುದ್ರಗಳ ನೀರು ಬತ್ತಿಹೋಗಬಹುದು ಮತ್ತು ಅಗ್ನಿಯು ಉಷ್ಣತೆಯನ್ನು ತ್ಯಜಿಸಬಹುದು. ಆದರೆ ನೀನಿಲ್ಲದೇ ನಾನು ಈ ಭೂಮಿಯನ್ನು ಆಳುವುದಿಲ್ಲ! ನಮ್ಮ ಕುಲದಲ್ಲಿ ನೀನೇ ನೂರುವರ್ಷಗಳು ರಾಜನಾಗಿರುತ್ತೀಯೆ!” ಹೀಗೆ ಹೇಳಿ ಅವನು ಅಣ್ಣನ ಪಾದಗಳನ್ನು ಹಿಡಿದು ಜೋರಾಗಿ ಅತ್ತನು.
ದುಃಶಾಸನ-ಸುಯೋಧನರಿಬ್ಬರೂ ದುಃಖಿತರಾಗಿದ್ದುದನ್ನು ನೋಡಿ ವ್ಯಥೆಯಿಂದ ತುಂಬಿದ್ದ ಅವರ ಬಳಿಬಂದು ಕರ್ಣನು ಹೇಳಿದನು: “ಸಾಮಾನ್ಯಜನರಂತೆ ಹೀಗೆ ಏಕೆ ಬಾಲತನದಿಂದ ಶೋಕಿಸುತ್ತಿರುವಿರಿ? ಶೋಕಿಸುವುದರಿಂದ ಶೋಕಿಸುವವನ ಶೋಕವೇನೂ ಕಡಿಮೆಯಾಗುವುದಿಲ್ಲ! ಶೋಕಿಸುವುದರಿಂದ ಶೋಕವು ಕಡಿಮೆಯಾಗದಿರುವಾಗ ಶೋಕಿಸುವವನು ಶೋಕದಿಂದ ಯಾವ ಲಾಭವನ್ನು ಪಡೆದುಕೊಂಡಂತಾಯಿತು? ಧೃತಿಯನ್ನು ತಂದುಕೊಳ್ಳಿ! ಹೀಗೆ ಶೋಕಿಸಿ ಶತ್ರುಗಳನ್ನು ಸಂತೋಷಪಡಿಸಬೇಡಿ. ಪಾಂಡವರು ನಿನ್ನನ್ನು ಬಿಡಿಸಿ ಕೇವಲ ತಮ್ಮ ಕರ್ತವ್ಯವನ್ನು ಪೂರೈಸಿದ್ದಾರೆ. ರಾಜನ ರಾಜ್ಯದೊಳಗಿರುವವರು ನಿತ್ಯವೂ ಅವನಿಗೆ ಪ್ರಿಯವಾದುದನ್ನು ಮಾಡಬೇಕು. ನಿನ್ನಂದ ಪಾಲನೆಗೊಂಡು ತಾನೇ ಅವರು ನಿರ್ಭಯರಾಗಿ ವಾಸಿಸುತ್ತಿದ್ದಾರೆ? ಪ್ರಾಯೋಪೇಶಮಾಡಿರುವ ನಿನ್ನನ್ನು ನೋಡಿ ನಿನ್ನ ಸಹೋದರರು ವಿಷಣ್ಣರಾಗಿದ್ದಾರೆ. ಎದ್ದೇಳು! ಸಹೋದರರಿಗೆ ಆಶ್ವಾಸನೆಯನ್ನು ನೀಡು! ಇಂದಿನ ನಿನ್ನ ಈ ನಡತೆಯು ಸತ್ತ್ವಹೀನವಾದುದು ಎಂದು ನನಗನ್ನಿಸುತ್ತದೆ. ಶತ್ರುಗಳ ವಶಕ್ಕೆ ಸಿಲುಕಿದ್ದ ನಿನ್ನನ್ನು ಪಾಂಡವರು ಬಿಡಿಸಿದರು ಎನ್ನುವುದರಲ್ಲಿ ವಿಶೇಷವಾದರೂ ಏನಿದೆ? ರಾಜ್ಯದಲ್ಲಿ ವಾಸಿಸುವ ಸೇನಾಜೀವನವನ್ನು ನಡೆಸುವವರು – ಅವರು ರಾಜನಿಗೆ ಗೊತ್ತಿದ್ದವರಾಗಿರಲಿ ಅಥವಾ ಗೊತ್ತಿಲದೇ ಇದ್ದವರಿರಲಿ – ರಾಜನಿಗೆ ಪ್ರಿಯವಾದುದನ್ನು ಮಾಡುವುದು ಅವರ ಕರ್ತವ್ಯವಾಗುತ್ತದೆ. ಆದುದರಿಂದ ನಿನ್ನ ರಾಜ್ಯದಲ್ಲಿ ವಾಸಿಸುತ್ತಿರುವ ಪಾಂಡವರು ಇಂದು ನಿನ್ನನ್ನು ಬಿಡಿಸಿದ್ದರೆ ಅದರಲ್ಲಿ ದುಃಖಪಡುವ ವಿಷಯವಾದರೂ ಏನಿದೆ? ನೀನು ನಿನ್ನ ಸೇನೆಯ ಮುಂದೆ ನಿಂತು ಯುದ್ಧಮಾಡುವಾಗಲೇ ಪಾಂಡವರು ನಿನ್ನನ್ನು ಕೂಡಿ ಹೋರಾಡಬೇಕಿತ್ತು. ಈ ಹಿಂದೆ ಪಾಂಡವರು ಸಭೆಯಲ್ಲಿ ದಾಸರಾಗಿ ನಿನ್ನ ಅಧಿಕಾರದಡಿಯಲ್ಲಿ ಬಂದಿದ್ದರು. ಆದುದರಿಂದ ಈಗ ಅವರು ನಿನಗೆ ಸಹಾಯಮಾಡಲೇ ಬೇಕಿತ್ತು. ಪಾಂಡವರ ರತ್ನಗಳನ್ನು ನೀನು ಇಂದು ಭೋಗಿಸುತ್ತಿದ್ದೀಯೆ. ಆದರೆ ಸತ್ತ್ವಸ್ಥರಾದ ಪಾಂಡವರು ಪ್ರಾಯೋಪವೇಶ ಮಾಡಲಿಲ್ಲ! ರಾಜನ ರಾಜ್ಯದಲ್ಲಿ ವಾಸಿಸುವವರು ರಾಜನಿಗೆ ಪ್ರಿಯವಾಗಿ ನಡೆದುಕೊಂಡರೆ ಅದರಲ್ಲಿ ದುಃಖಿಸುವುದೇನಿದೆ? ದುರ್ಯೋಧನ! ನೀನಿಲ್ಲದೇ ಜೀವಿಸಲು ನನಗೆ ಉತ್ಸಾಹವಿಲ್ಲ. ಪ್ರಾಯೋಪವೇಶಮಾಡುವ ರಾಜನು ಹಾಸ್ಯಾಸ್ಪದನಾಗುತ್ತಾನೆ!”
ಕರ್ಣನು ಹೀಗೆ ಹೇಳಿದರೂ ದುರ್ಯೋಧನನು ಮೇಲೇಳಲಿಲ್ಲ. ಆಗ ಬೇಸತ್ತು ಪ್ರಾಯೋಪವಿಷ್ಟನಾದ ದುರ್ಯೋಧನನ್ನು ಸಂತವಿಸುತ್ತಾ ಶಕುನಿಯು ಈ ಮಾತುಗಳನ್ನಾಡಿದನು: “ಕೌರವ! ಕರ್ಣನಾಡಿದ ಮಾತುಗಳು ಸರಿಯಾಗಿಯೇ ಇವೆ. ನಾನು ಅಪಹರಿಸಿ ಕೊಟ್ಟ ಸಂಪತ್ತನ್ನು ಮೋಹದಿಂದ ತೊರೆದು ಅಬುದ್ಧಿಯಿಂದ ಪ್ರಾಣವನ್ನೇ ಏಕೆ ತೊರೆಯಲು ಬಯಸಿದ್ದೀಯೆ? ನೀನು ವೃದ್ಧರ ಸೇವೆಯನ್ನೇ ಮಾಡಿರಲಿಕ್ಕಿಲ್ಲ ಎಂದು ಇಂದು ನನಗನ್ನಿಸುತ್ತಿದೆ. ಅಕಸ್ಮಾತ್ತಾಗಿ ಬಂದ ಹರ್ಷ ಅಥವಾ ದುಃಖವನ್ನು ನಿಯಂತ್ರಿಸಿಕೊಳ್ಳಲಾರದವನು ಪೂರ್ಣ ಸುಟ್ಟಿರದ ಮಣ್ಣಿನ ಕೊಡವು ನೀರನ್ನು ಹೇಗೋ ಹಾಗೆ ಸಂಪತ್ತನ್ನು ಕಳೆದುಕೊಳ್ಳುತ್ತಾನೆ. ಅತಿಯಾಗಿ ನಾಚಿಕೊಳ್ಳುವ, ಅತಿಹೇಡಿಯಾಗಿರುವ, ಬಹಳಷ್ಟು ಆಲೋಚಿಸುವ, ಬುದ್ಧಿಯನ್ನು ಉಪಯೋಗಿಸದೇ ಇರುವ ಮತ್ತು ಇಂದ್ರಿಯ ಸುಖಗಳಲ್ಲಿಯೇ ಆಸಕ್ತಿಹೊಂದಿರುವ ರಾಜನನ್ನು ಸಂಪತ್ತು ಅನುಸರಿಸುವುದಿಲ್ಲ. ಎಲ್ಲ ರೀತಿಗಳಲ್ಲಿಯೂ ಸತ್ಕೃತನಾಗಿರುವ ನಿನಗೆ ಈ ವಿಪರೀತ ಶೋಕವು ಹೇಗುಂಟಾಯಿತು? ಈ ರೀತಿ ಶೋಕವನ್ನಾಚರಿಸಿ ಪಾಂಡವರು ಮಾಡಿದ ಈ ಶುಭಕಾರ್ಯವನ್ನು ನಾಶಗೊಳಿಸಬೇಡ. ಎಲ್ಲಿ ನೀನು ಸಂತೋಷದಿಂದ ಪಾಂಡವರನ್ನು ಸತ್ಕರಿಸಬೇಕಾಗಿತ್ತೋ ಅಲ್ಲಿ ನೀನು ಶೋಕಿಸುತ್ತಿರುವೆ. ಇದೇ ನಿನ್ನ ವೈಪರೀತ್ಯ! ಸಂತೋಷದಿಂದಿರು. ನಿನ್ನ ಜೀವವನ್ನು ತೊರೆಯಬೇಡ. ಅವರು ನಿನಗೆ ಮಾಡಿದ ಒಳ್ಳೆಯದನ್ನು ನೆನಪಿಸಿಕೋ. ಪಾರ್ಥರ ರಾಜ್ಯವನ್ನು ಹಿಂದಿರುಗಿಸಿ ಯಶಸ್ಸು-ಧರ್ಮಗಳನ್ನು ಪಡೆ. ಹೀಗೆ ಮಾಡುವುದರಿಂದ ನೀನು ಕೃತಘ್ನನಾಗುವುದಿಲ್ಲ. ಪಾಂಡವರೊಂದಿಗೆ ಸಂಧಿಯನ್ನು ಮಾಡಿಕೊಂಡು ಸೌಭ್ರಾತುತ್ವವನ್ನು ಸ್ಥಾಪಿಸು. ಅವರಿಗೆ ಪಿತೃ ರಾಜ್ಯವನ್ನು ಕೊಟ್ಟು ಸುಖವನ್ನು ಹೊಂದು!”
ಕರ್ಣ-ಸೌಬಲರ ಈ ಮಾತುಗಳನ್ನು ಕೇಳಿ ದುರ್ಯೋಧನನು ಪರಮ ವೇದನೆಯನ್ನು ಅನುಭವಿಸಿದನು. ಪಾದಗಳಲ್ಲಿ ಸಾಷ್ಟಾಂಗ ಬಿದ್ದಿದ್ದ ದುಃಶಾಸನನನ್ನು ನೋಡಿ ತನ್ನ ಸುಂದರ ಬಾಹುಗಳಿಂದ ಅವನನ್ನು ಮೇಲೆತ್ತಿ ಬಿಗಿದಪ್ಪಿ ನೆತ್ತಿಯನ್ನು ಆಘ್ರಾಣಿಸಿದನು. ನಾಚಿಕೆತುಂಬಿದಂತವನಾದ ಅವನಲ್ಲಿ ಪರಮ ನಿರಾಶೆಯು ಕವಿಯಿತು. ಸುಹೃದಯರಿಗೆ ಅತಿ ದುಃಖದಿಂದ ಹೇಳಿದನು: “ಧರ್ಮ-ಧನ-ಸುಖ-ಐಶ್ವರ್ಯ-ಅಧಿಕಾರ-ಭೋಗ ಇವುಗಳ ಕುರಿತು ನಾನು ಮಾಡಬೇಕಾದುದು ಏನೂ ಇಲ್ಲ. ನನ್ನನ್ನು ತಡೆಯಬೇಡಿ. ಹೊರಡಿ. ಪ್ರಾಯೋಪವೇಶದ ಈ ನಿಶ್ಚಯವು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿದೆ. ನೀವೆಲ್ಲರೂ ನಗರಕ್ಕೆ ಹೋಗಿ ನನ್ನ ಹಿರಿಯರನ್ನು ಪೂಜಿಸಿ!” ಹೀಗೆ ಹೇಳಲು ಅವರು “ರಾಜೇಂದ್ರ! ನೀನು ಹೋಗುವ ದಾರಿಯೇ ನಮ್ಮದು. ನೀನಿಲ್ಲದೇ ನಾವು ಹೇಗೆ ಪುರವನ್ನು ಪ್ರವೇಶಿಸಬಲ್ಲೆವು?” ಎಂದು ಹೇಳಿದರು. ಆದರೂ ದುರ್ಯೋಧನನು ತನ್ನ ನಿಶ್ಚಯದಿಂದ ವಿಚಲಿತನಾಗಲಿಲ್ಲ. ದರ್ಭೆಗಳನ್ನು ಹರಡಿ, ನೀರನ್ನು ಮುಟ್ಟಿ, ಕುಶಚೀರ ವಸ್ತ್ರವನ್ನುಟ್ಟು ಪರಮ ನಿಯಮದಲ್ಲಿ ಶುಚಿಯಾಗಿ ನೆಲದ ಮೇಳೆ ಕುಳಿತುಕೊಂಡನು. ಮಾತನ್ನು ನಿಲ್ಲಿಸಿ ಆ ರಾಜಶಾರ್ದೂಲನು ಸ್ವರ್ಗದ ಮಾರ್ಗವನ್ನೇ ಬಯಸಿ ಹೊರಗಿನ ಕ್ರಿಯೆಗಳನ್ನೆಲ್ಲಾ ನಿಲ್ಲಿಸಿ ಮನಸ್ಸಿನಲ್ಲಿಯೇ ಪೂಜಿಸತೊಡಗಿದನು.
ದಾನವರು ದುರ್ಯೋಧನನಿಗೆ ಆಶ್ವಾಸನೆಯನ್ನಿತ್ತು, ಅವನ ಪ್ರಾಯೋಪವೇಶವನ್ನು ನಿಲ್ಲಿಸಿದುದು
ಆಗ ಅವನ ನಿಶ್ಚಯವನ್ನು ತಿಳಿದ, ಹಿಂದೆ ದೇವತೆಗಳಿಂದ ಸೋಲಿಸಲ್ಪಟ್ಟು ಈಗ ಪಾತಾಲದಲ್ಲಿ ವಾಸಿಸುತ್ತಿದ್ದ ರೌದ್ರ ದೈತ್ಯ-ದಾನವರು ಅದರಿಂದ ತಮ್ಮ ಪಕ್ಷವು ಕ್ಷಯವಾಗುವುದೆಂದು ಯೋಚಿಸಿ ದುರ್ಯೋಧನನನ್ನು ತಮ್ಮ ಮುಂದೆ ಆಹ್ವಾನಿಸಲು ಅಗ್ನಿಕಾರ್ಯವನ್ನು ಪ್ರಾರಂಭಿಸಿದರು. ಆ ಮಂತ್ರವಿಶಾರದರು ಬೃಹಸ್ಪತಿ-ಶುಕ್ರರು ಹೇಳಿದ್ದ ಮಂತ್ರಗಳಿಂದ ಮತ್ತು ಅಥರ್ವವೇದ ಉಪನಿಷತ್ತುಗಳಲ್ಲಿ ಹೇಳಿರುವ ಮಂತ್ರಜಪಗಳಿಂದ ಕ್ರಿಯೆಗಳನ್ನು ಪ್ರಾರಂಭಿಸಿದರು. ವೇದವೇದಾಂಗಪಾರಂಗತ ಸುದೃಢವ್ರತ ಬ್ರಾಹ್ಮಣರು ಮಂತ್ರೋಚ್ಛಾರಣೆ ಮಾಡಿ ಅಗ್ನಿಯಲ್ಲಿ ಹಾಲನ್ನು ಹವಿಸ್ಸನ್ನಾಗಿ ಹಾಕಿದರು. ಆ ಅಗ್ನಿಕಾರ್ಯವು ಮುಗಿಯಲು ಅಲ್ಲಿ ಕರ್ಮಸಿದ್ಧಿಯಾಗಿ ವಿಜೃಂಭಿಸುತ್ತಾ ಮಹಾ ಅದ್ಭುತವಾದವಳು ಮೇಲೆದ್ದು “ಏನು ಮಾಡಲಿ?” ಎಂದು ಕೇಳಿದಳು. ಅಂತರಾತ್ಮದಲ್ಲಿ ಸಂತುಷ್ಟರಾದ ದೈತ್ಯರು ಅವಳಿಗೆ “ಪ್ರಾಯೋಪವಿಷ್ಟನಾಗಿರುವ ರಾಜ ದುರ್ಯೋಧನನನ್ನು ಇಲ್ಲಿಗೆ ಕರೆದು ತಾ!” ಎಂದು ಹೇಳಿದರು. ಹಾಗೆಯೇ ಆಗಲೆಂದು ಉತ್ತರಿಸಿ ಅವಳು ನಿಮಿಷಮಾತ್ರದಲ್ಲಿ ಸುಯೋಧನನಿದ್ದಲ್ಲಿಗೆ ಬಂದು, ಅವನನ್ನು ಎತ್ತಿಕೊಂಡು ರಸಾತಳವನ್ನು ಪ್ರವೇಶಿಸಿದಳು. ರಾತ್ರಿಯ ಮಧ್ಯದಲ್ಲಿ ಎತ್ತಿಕೊಂಡು ತಂದ ದುರ್ಯೋಧನನನ್ನು ನೋಡಿದ ದಾನವರೆಲ್ಲರೂ ಸಂತೋಷಮನಸ್ಕರಾಗಿ ಅವನಿಗೆ ಅಭಿಮಾನದ ಈ ಮಾತನ್ನಾಡಿದರು:
“ಭೋ ಸುಯೋಧನ! ಸದಾ ನೀನು ಶೂರರು ಮತ್ತು ಮಹಾತ್ಮರಿಂದ ಸುತ್ತುವರೆದಿರುವಾಗ ಪ್ರಾಯೋಪವೇಶಮಾಡುವಂಥಹ ಈ ಸಾಹಸವನ್ನು ಏಕೆ ಕೈಗೊಂಡಿರುವೆ? ಆತ್ಮತ್ಯಾಗಿಯು ನರಕಕ್ಕೆ ಹೋಗುತ್ತಾನೆ ಮತ್ತು ಅಯಶಸ್ಕರ ಮಾತುಗಳಿಗೊಳಗಾಗುತ್ತಾನೆ. ಬುದ್ಧಿವಂತರು ಮೂಲವನ್ನೇ ನಾಶಗೊಳಿಸುವ ವಿರುದ್ಧ ಕಾರ್ಯಗಳಲ್ಲಿ ತೊಡಗುವುದಿಲ್ಲ. ಧರ್ಮ-ಅರ್ಥ-ಸುಖಗಳನ್ನು ನಾಶಪಡಿಸುವ, ಯಶಸ್ಸನ್ನು ಅಪಹರಿಸುವ, ಧೈರ್ಯವನ್ನು ಕೊಲ್ಲುವ ಮತ್ತು ಶತ್ರುಗಳ ಹರ್ಷವನ್ನು ಹೆಚ್ಚಿಸುವ ಈ ನಿಶ್ಚಯವನ್ನು ಹಿಂದೆತೆಗೆದುಕೋ! ನಿನ್ನ ದಿವ್ಯ ಆತ್ಮ-ಶರೀರಗಳ ನಿರ್ಮಾಣದ ಕುರಿತು ಕೇಳಿದ ನಂತರ ನೀನು ಧೈರ್ಯವನ್ನು ತಳೆಯುವೆ!
“ಹಿಂದೆ ನಮ್ಮೆಲ್ಲರ ತಪಸ್ಸಿನ ಮೂಲಕ ದೇವ ಮಹೇಶ್ವರನಿಂದ ನಿನ್ನನ್ನು ಪಡೆದಿದ್ದೆವು. ನಿನ್ನ ದೇಹದ ಮೇಲಿನ ಭಾಗವನ್ನು ಶಿವನು ವಜ್ರದಿಂದ ನಿರ್ಮಿಸಿದ್ದನು. ನಿನ್ನ ಈ ಅರ್ಧ ದೇಹವು ಅಸ್ತ್ರ-ಶಸ್ತ್ರಗಳಿಂದ ಅಭೇದ್ಯವಾಗಿದೆ. ಸ್ತ್ರೀಮನೋಹರವಾದ ನಿನ್ನ ಈ ಸುಂದರ ದೇಹದ ಕೆಳಗಿನ ಭಾಗವನ್ನು ದೇವಿಯು ಪುಷ್ಪಗಳಿಂದ ಮಾಡಿದ್ದಳು. ಹೀಗೆ ಈಶ್ವರ-ದೇವಿಯರಿಂದ ಮಾಡಲ್ಪಟ್ಟ ನಿನ್ನ ದೇಹವು ದಿವ್ಯವಾದುದು. ಮಾನುಷವಾದುದಲ್ಲ. ನಿನ್ನ ವಿಷಾದ-ಭಯಗಳು ಅರ್ಥವಾಗುತ್ತಿಲ್ಲ!
“ದಿವ್ಯಾಸ್ತ್ರವಿದುಷರೂ ಶೂರರೂ ಆದ ನಿನ್ನ ಶತ್ರುಗಳನ್ನು ಭಗದತ್ತನೇ ಮೊದಲಾದ ಮಹಾವೀರ ಕ್ಷತ್ರಿಯರು ನಾಶಗೊಳಿಸುತ್ತಾರೆ. ನಿನ್ನ ಸಹಾಯಕ್ಕಾಗಿಯೇ ವೀರ ದಾನವರು ಭುವಿಯಲ್ಲಿ ಅವತರಿಸಿದ್ದಾರೆ. ಇತರ ಅಸುರರೂ ಕೂಡ ಭೀಷ್ಮ, ದ್ರೋಣ ಮತ್ತು ಕೃಪರನ್ನು ಪ್ರವೇಶಿಸುವರು. ಇವರಿಂದ ಆವಿಷ್ಟರಾದ ಅವರು ಕರುಣೆಯನ್ನು ತೊರೆದು ನಿನ್ನ ವೈರಿಗಳ ವಿರುದ್ಧ ಹೋರಾಡುತ್ತಾರೆ. ದಾನವರಿಂದ ಆವಿಷ್ಟರಾದ ಇವರು ಅಂತರಾತ್ಮನನ್ನು ಅತಿಕ್ರಮಿಸಿ ಯುದ್ಧದಲ್ಲಿ ಯಾರನ್ನೂ ಬಿಡದೇ – ಮಕ್ಕಳು, ಸಹೋದರರು, ತಂದೆ, ಬಾಂಧವರು, ಶಿಷ್ಯರು, ಕುಲದವರು, ಬಾಲಕರು, ವೃದ್ಧರು – ಎಲ್ಲರನ್ನೂ ಸಂಹರಿಸಿ ಮೋಕ್ಷವನ್ನು ನೀಡುತ್ತಾರೆ. ದೈತ್ಯ-ರಾಕ್ಷಸ ಗಣಗಳು ಕ್ಷತ್ರಿಯ ಯೋನಿಗಳಲ್ಲಿ ಹುಟ್ಟಿ ನಿನ್ನ ಶತ್ರುಗಳೊಡನೆ ಯುದ್ಧದಲ್ಲಿ ವಿಕ್ರಮದಿಂದ ಹೋರಾಡುತ್ತಾರೆ.
“ಆ ಮಹಾತ್ಮ ಪಾಂಡವರೂ ಕೂಡ ಶಕ್ತಿಯನ್ನುಪಯೋಗಿಸಿ ನಿನ್ನ ವಿರುದ್ಧವಾಗಿ ಹೋರಾಡುತ್ತಾರೆ ಮತ್ತು ದೈವದಿಂದೊಡಗೂಡಿ ಅವರ ವಧೆಯನ್ನು ಮಾಡುತ್ತಾರೆ. ವೀರ ಅರ್ಜುನನಿಂದ ನಿನ್ನಲ್ಲಿ ಹುಟ್ಟಿರುವ ಭಯವೇನಿದೆಯೋ ಅದನ್ನು ಹೋಗಲಾಡಿಸಲು ಅರ್ಜುನನ ವಧೆಯ ಕುರಿತೂ ನಾವು ಒಂದು ಉಪಾಯವನ್ನು ಮಾಡಿದ್ದೇವೆ. ಹತನಾದ ನರಕಾಸುರನ ಆತ್ಮವು ಕರ್ಣನ ದೇಹದಲ್ಲಿ ನೆಲೆಸಿದೆ. ಆ ವೀರನು ವೈರವನ್ನು ನೆನಪಿಸಿಕೊಂಡು ಕೇಶವಾರ್ಜುನರೊಡನೆ ಯುದ್ಧಮಾಡುತ್ತಾನೆ. ವಿಕ್ರಮಿ ವೀರ ಮಹಾರಥ ಕರ್ಣನು ಪಾರ್ಥನನ್ನೂ ಸೇರಿ ಎಲ್ಲ ಶತ್ರುಗಳನ್ನೂ ಗೆಲ್ಲುತ್ತಾನೆ. ಇದನ್ನು ತಿಳಿದಿರುವ ಇಂದ್ರನು ಅರ್ಜುನನ ರಕ್ಷಣೆಗಾಗಿ ಕರ್ಣನ ಕವಚ-ಕುಂಡಲಗಳನ್ನು ಅಪಹರಿಸುತ್ತಾನೆ. ಆದುದರಿಂದ ನಾವು ನೂರಾರು ಸಹಸ್ರಾರು ದೈತ್ಯ-ರಾಕ್ಷಸರನ್ನು ಸಂಶಪ್ತಕರನ್ನಾಗಿ ನಿಯೋಗಿಸಿದ್ದೇವೆ. ಅವರು ಅರ್ಜುನನನ್ನು ಕೊಲ್ಲುವರು. ಶೋಕಿಸಬೇಡ! ನೀನೇ ಈ ಭೂಮಿಯನ್ನು ಆಳುತ್ತೀಯೆ. ವಿಷಾದಿಸಬೇಡ. ಈ ರೀತಿಯ ನಡತೆಯು ನಿಮಗೆ ಸರಿಯಲ್ಲ. ನೀನು ಸತ್ತರೆ ನಮ್ಮ ಪಕ್ಷವು ದುರ್ಬಲವಾಗುತ್ತದೆ. ವೀರ! ಹೋಗು! ನಿನ್ನ ಬುದ್ಧಿಯು ಎಂದೂ ಅನ್ಯ ಕಾರ್ಯಗಳತ್ತ ಹೋಗದಿರಲಿ. ಪಾಂಡವರು ದೇವತೆಗಳಿಗೆ ಹೇಗೋ ಹಾಗೆ ನೀನು ನಿತ್ಯವೂ ನಮ್ಮ ಗತಿ!”
ಹೀಗೆ ಹೇಳಿ ಆ ದಾನವರ್ಷಭ ದೈತ್ಯರು ದುರ್ಯೋಧನನನ್ನು ಆಲಂಗಿಸಿ ಸಮಾಧಾನಗೊಳಿಸಿದರು. ಪ್ರೀತಿಯ ಮಾತುಗಳನ್ನಾಡಿ ಅವನ ಬುದ್ಧಿಯನ್ನು ಸ್ಥಿರಗೊಳಿಸಿ “ಹೋಗು! ಜಯವನ್ನು ಪಡೆ!” ಎಂದು ಹೇಳಿ ಹೋಗಲು ಅನುಜ್ಞೆಯನ್ನಿತ್ತರು. ಅವರಿಂದ ಬೀಳ್ಕೊಂಡ ದುರ್ಯೋಧನನನ್ನು ಆ ದೇವಿಯೇ ಪುನಃ ಎಲ್ಲಿ ಪ್ರಾಯೋಪವಿಷ್ಟನಾಗಿ ಕುಳಿತಿದ್ದನೋ ಅಲ್ಲಿಗೆ ತಂದು ಬಿಟ್ಟಳು. ಅವನಿಂದ ಅಪ್ಪಣೆಪಡೆದು ಅಲ್ಲಿಯೇ ಅಂತರ್ಧಾನಳಾದಳು.
ಅವಳು ಹೊರಟುಹೋದನಂತರ ದುರ್ಯೋಧನನು ಇವೆಲ್ಲವೂ ಸ್ವಪ್ನವೆಂದೂ ತಾನು ರಣದಲ್ಲಿ ಪಾಂಡವರನ್ನು ಜಯಿಸುತ್ತೇನೆ ಎಂದೂ ಆಲೋಚಿಸಿದನು. ಕರ್ಣ ಮತ್ತು ಸಂಶಪ್ತಕರು ಅರ್ಜುನನ ವಧೆಗೆ ಸಮರ್ಥರು ಮತ್ತು ಸರಿಯಾದರವರು ಎಂದು ತಿಳಿದುಕೊಂಡನು. ಆದರೆ ಅಲ್ಲಿ ನಡೆದುದನ್ನು ಸುಯೋಧನನು ಯಾರಿಗೂ ಹೇಳಲಿಲ್ಲ.
ರಾತ್ರಿ ಕಳೆಯಲು ಕರ್ಣನು ಕೈಮುಗಿದು ನಸುನಗುತ್ತ ದುರ್ಯೋಧನನಿಗೆ “ಮೃತನಾದವನು ಶತ್ರುಗಳನ್ನು ಜಯಿಸಲಾರ! ಬದುಕಿರುವವನು ಮಾತ್ರ ಸರಿಯಾಗಿ ನೋಡಬಲ್ಲನು. ಮೃತನಿಗೆ ಎಲ್ಲಿಯ ಒಳ್ಳೆಯದು? ಎಲ್ಲಿಯ ಜಯ? ಆದುದರಿಂದ ವಿಷಾದಕ್ಕಾಗಲೀ, ಭಯಕ್ಕಾಗಲೀ ಅಥವಾ ಮರಣಕ್ಕಾಗಲೀ ಇದು ಸಮಯವಲ್ಲ” ಎಂದನು. ಅವನನ್ನು ಬಿಗಿದಪ್ಪಿ ಪುನಃ “ಏಳು! ಏಕೆ ಕೆಳಗೆ ಕುಳಿತಿದ್ದೀಯೆ? ಏಕೆ ಶೋಕಿಸುತ್ತಿರುವೆ? ನಿನ್ನ ವೀರ್ಯದಿಂದ ಶತ್ರುಗಳನ್ನು ಸುಡು! ಒಂದುವೇಳೆ ಅರ್ಜುನನ ಪರಾಕ್ರಮವನ್ನು ನೋಡಿ ನೀನು ಭಯದಿಂದಿದ್ದರೆ ಸತ್ಯವನ್ನು ಹೇಳುತ್ತಿದ್ದೇನೆ ಕೇಳು. ರಣದಲ್ಲಿ ಅರ್ಜುನನನ್ನು ಸಂಹರಿಸುತ್ತೇನೆ. ನನ್ನ ಆಯುಧಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ಹದಿಮೂರು ವರ್ಷಗಳು ಕಳೆದನಂತರ ನಾನು ಪಾರ್ಥರನ್ನು ನಿನ್ನ ವಶದಲ್ಲಿ ತರುತ್ತೇನೆ” ಎಂದನು.
ಕರ್ಣನ ಮಾತನ್ನು ಕೇಳಿ ದುರ್ಯೋಧನನು ದೈತ್ಯರ ವಚನಗಳನ್ನು ನೆನಪಿಸಿಕೊಂಡನು. ಆಗ ಅವನು ಮೇಲೆದ್ದು ರಥ-ಆನೆ-ಕುದುರೆ-ಪದಾತಿ ಸಂಕುಲದ ತನ್ನ ಸೇನೆಯನ್ನು ಕೂಡಿದನು. ಗಂಗೆಯಂತೆ ಹರಿಯುತ್ತಿದ್ದ ಆ ಮಹಾಸೇನೆಯು ಶ್ವೇತಛತ್ರ, ಬಿಳಿಯ ಪತಾಕೆ-ಚಾಮರಗಳಿಂದ, ರಥ-ಆನೆ-ಕುದುರೆ-ಪದಾತಿಸಂಕುಲಗಳಿಂದ ಕೂಡಿ, ದಟ್ಟ ಕಪ್ಪುಮೋಡಗಳು ಚದುರಿದ ಆಕಾಶದಲ್ಲಿ ಶರದೃತುವಿನ ಮೊದಲ ಚಿಹ್ನೆಗಳಂತೆ ತೋರುತ್ತಿತ್ತು. ವಿಜಯಾಶೀರ್ವಾದಗಳಿಂದ ಸ್ತುತಿಸುತ್ತಿರುವ ಬ್ರಾಹ್ಮಣರಿಂದ ಕೂಡಿ ಸಾಲಾಗಿ ನಿಂತಿರುವವರ ವಂದನೆಗಳನ್ನು ಸ್ವೀಕರಿಸುತ್ತಾ ಜನಾಧಿಪ ಸುಯೋಧನನು ಪರಮ ವಿಜೃಂಭಣೆಯಿಂದ ಬೆಳಗುತ್ತಾ ಕರ್ಣ-ಶಕುನಿಯರೊಂದಿಗೆ ಮುಂದೆಸಾಗಿ ಹೊರಟನು. ಅವನ ಎಲ್ಲ ಸಹೋದರರೂ ಭೂರಿಶ್ರವ, ಸೋಮದತ್ತ, ಬಾಹ್ಲೀಕರು ನಾನಾ ಆಕಾರದ ರಥ, ಕುದುರೆ, ಆನೆಗಳೊಂದಿಗೆ ಆ ನೃಪಸಿಂಹನನ್ನು ಹಿಂಬಾಲಿಸಿ ಹೋದರು. ಅಲ್ಪಕಾಲದಲ್ಲಿಯೇ ಅವರು ಹಸ್ತಿನಾಪುರವನ್ನು ಪ್ರವೇಶಿಸಿದರು.