ಘೋಷಯಾತ್ರೆ: ಪಾಂಡವರನ್ನು ಅಣಕಿಸಲು ಹೋದ ದುರ್ಯೋಧನನು ತಾನೇ ಅಪಮಾನಿತನಾದುದು
ಪಾಂಡವರ ವನವಾಸದ ಕುರಿತು ಕೇಳಿದ ಧೃತರಾಷ್ಟ್ರನ ಸಂತಾಪ
ಪಾಂಡವರು ವನದಲ್ಲಿ ಸ್ವಾಧ್ಯಾಯ-ತಪಸ್ಸುಗಳಲ್ಲಿ ನಿರತರಾಗಿ ವಾಸಿಸುತ್ತಿರುವಾಗ ಒಂದು ದಿನ ಕಥೆಗಳಲ್ಲಿ ಕುಶಲನಾದ ಓರ್ವ ವಿಪ್ರನು ಕೌರವರ ನಾಡಿಗೆ ಬಂದು ರಾಜಾ ಧೃತರಾಷ್ಟ್ರನನ್ನು ಕಂಡನು. ವೃದ್ಧರಾಜನು ಅವನನ್ನು ಕುಳ್ಳಿರಿಸಿ ಸತ್ಕರಿಸಿ ಪಾಂಡವರ ಕುರಿತು ಕೇಳಲು ಆ ವಿಪ್ರನು ಗಾಳಿಬಿಸಿಲುಗಳಿಂದ ಕೃಶಾಂಗರಾಗಿ ತಮ್ಮ ದುಃಖಿತ ಉಗ್ರ ಮುಖಗಳನ್ನು ಮುಚ್ಚಿಕೊಂಡು ವಾಸಿಸುತ್ತಿದ್ದ ಧರ್ಮ, ಅನಿಲ ಮತ್ತು ಇಂದ್ರರಿಂದ ಹುಟ್ಟಿದವರು, ಯಮಳರು ಮತ್ತು ವೀರನಾಥರಿದ್ದೂ ಅನಾಥಳಂತೆ ಪರಿಕ್ಲೇಶಗಳನ್ನು ಅನುಭವಿಸುತ್ತಿದ್ದ ಕೃಷ್ಣೆಯು ಹೇಗಿದ್ದಾಳೆಂದು ವರ್ಣಿಸಿದನು. ವನದಲ್ಲಿ ರಾಜಪುತ್ರರು ದುಃಖದ ನದಿಯಲ್ಲಿ ಮುಳುಗಿದ್ದಾರೆನ್ನುವುದನ್ನು ಕೇಳಿ ಧೃತರಾಷ್ಟ್ರನು ಕರುಣೆಯಿಂದ ತಪಿಸಿದನು. ಅಂತರಾತ್ಮದಲ್ಲಿ ದೀನನಾಗಿ ಪಾರ್ಥರಿಗಾಗಿ ಕಣ್ಣೀರಿಟ್ಟು ನಿಟ್ಟುಸಿರು ಬಿಡುತ್ತಾ ಅವೆಕ್ಕೆಲ್ಲವೂ ತಾನೇ ಮೂಲನೆಂದು ಚಿಂತಿಸಿ ವಿಲಪಿಸಿದನು:
“ನನ್ನ ಮಕ್ಕಳಲ್ಲಿ ಜೇಷ್ಠನಾದ ಧರ್ಮರಾಜ, ಸತ್ಯವಂತ, ಶುಚಿ, ಆರ್ಯನಡತೆಯ ಅಜಾತಶತ್ರುವು ಹಿಂದೆ ರಂಕುವಿನ ಉಣ್ಣೆಯ ಮೇಲೆ ಮಲಗಿಕೊಳ್ಳುತ್ತಿದ್ದವನು ಇಂದು ಏಕೆ ನೆಲದಮೇಲೆ ಮಲಗುತ್ತಿದ್ದಾನೆ? ಮಾಗಧ-ಸೂತರ ಗುಂಪುಗಳು ನಿತ್ಯವೂ ಆ ಸ್ವಯಂ ಇಂದ್ರನಂತಿರುವವನನ್ನು ಸ್ತುತಿಮಾಡಿ ಎಚ್ಚರಿಸುತ್ತಿದ್ದರು. ಈಗ ನೆಲದ ಮೇಲೆ ಮಲಗುವ ಅವನನ್ನು ಪಕ್ಷಿಸಂಕುಲಗಳು ಸೂರ್ಯೋದಯದ ಮೊದಲೇ ಅವನನ್ನು ಎಚ್ಚರಿಸುತ್ತಿವೆ! ಗಾಳಿ-ಬಿಸಿಲುಗಳಿಂದ ಅಂಗಾಂಗಗಳು ಸೋತುಹೋದ ವೃಕೋದರನು ಕೋಪದಿಂದ ಅಂಗಾಂಗಗಳು ಉರಿಯುತ್ತಿರಲು ಕೃಷ್ಣೆಯ ಎದಿರು ಹೇಗೆ ತಾನೇ ಉಚಿತವಲ್ಲದಿದ್ದರೂ ನೆಲದ ಮೇಲೆ ಮಲಗುತ್ತಾನೆ? ಅವನು ನನ್ನ ಮಕ್ಕಳ ವಧೆಯನ್ನು ಬಯಸಿ ನೆಲದಮೇಲೆ ಹೊರಳಾಡುತ್ತಾ ಸಮಯವನ್ನು ಕಾಯುತ್ತಿರಬಹುದು. ಮೋಸದಿಂದ ಯುಧಿಷ್ಠಿರನನ್ನು ಗೆದ್ದಾಗ ದುಃಶಾಸನು ಆಡಿದ ಮೂದಲಿಕೆಯ ಮಾತುಗಳು ವೃಕೋದರನ ದೇಹವನ್ನು ಚುಚ್ಚುತ್ತಿರಬಹುದು, ಮತ್ತು ಬೆಂಕಿಯು ಇಂಧನವನ್ನು ಸುಡುವಂತೆ ಅವನ ಕರುಳುಗಳನ್ನು ಸುಡುತ್ತಿರಬಹುದು! ಹಾಗೆಯೇ ಸುಕುಮಾರ ಅರ್ಜುನನು ಧರ್ಮಸುತನ ವಶದಲ್ಲಿದ್ದುಕೊಂಡು ಅಂಗಾಂಗಗಳೆಲ್ಲವೂ ನೋಯುತ್ತಿರಲು ನಿಶ್ಚಯವಾಗಿಯೂ ಸಿಟ್ಟಿಲ್ಲದೇ ರಾತ್ರಿಗಳನ್ನು ಕಳೆದಿರಲಿಕ್ಕಿಲ್ಲ! ಸುಖಾರ್ಹರಾದ, ದಿವಿಯಲ್ಲಿನ ಅಮರರಿಗಿಂತಲೂ ಸಮೃದ್ಧರೂಪಿಗಳಾದ ಯಮಳರೂ ಅಸುಖಿಗಳಾಗಿದ್ದಾರೆ; ಧರ್ಮ-ಸತ್ಯಗಳಿಂದ ನಿಯಂತ್ರಿಸಲ್ಪಟ್ಟಿರುವ ಅವರೂ ಕೂಡ ನಿಜವಾಗಿಯೂ ನಿದ್ದೆಗೆಟ್ಟಿರಬಹುದು ಮತ್ತು ಅಪ್ರಶಾಂತರಾಗಿರಬಹುದು!
“ಧರ್ಮಪುತ್ರನು ಪಾಪಕೃತ್ಯದ ಕುರಿತು ಯೋಚಿಸುವವನಲ್ಲ. ಧನಂಜಯನಾದರೋ ಅವನಂತೆಯೇ ನಡೆದುಕೊಳ್ಳುವವನು. ಆದರೆ ಭೀಮನ ಕೋಪಾಗ್ನಿಯು ಗಾಳಿಗೆ ಸಿಲುಕಿದ ಅಗ್ನಿಯಂತೆ ಹೆಚ್ಚಾಗುತ್ತಿರಬಹುದು. ಆ ವೀರನು ಕೋಪದಿಂದ ಭುಗಿಲೆದ್ದು ಮುಷ್ಟಿಯನ್ನು ಅಂಗೈಗೆ ಹೊಡೆದುಕೊಳ್ಳುತ್ತಾ ಘೋರ ಬಿಸಿಉಸಿರು ಬಿಡುತ್ತಾ ನನ್ನ ಪುತ್ರ-ಪೌತ್ರರನ್ನು ಮನಸ್ಸಿನಲ್ಲಿಯೇ ಸುಡುತ್ತಿರಬಹುದು! ಅರ್ಜುನ-ಭೀಮಸೇನರು ಕಲ್ಪಾಂತ್ಯದ ಅಗ್ನಿಗಳಂತೆ ಎಲ್ಲವನ್ನೂ ಧ್ವಂಸಮಾಡಬಲ್ಲರು; ಸಿಡುಲುಗಳಂಥಹ ಬಾಣಗಳನ್ನು ಅವರು ತೂರುವಾಗ ಯುದ್ಧದಲ್ಲಿ ಶತ್ರುಸೇನೆಯು ಉಳಿಯುವುದಿಲ್ಲ. ಮಂದಚೇತಸರಾದ ದುರ್ಯೋಧನ, ಶಕುನಿ, ಕರ್ಣ ಮತ್ತು ದುಃಶಾಸನರು ಜೇನನ್ನು ಮಾತ್ರ ನೋಡುತ್ತಿದ್ದಾರೆಯೇ ಹೊರತು ಭೀಮಾರ್ಜುನರಂತಿದ್ದ ಪ್ರಪಾತವನ್ನು ಕಾಣುತ್ತಿಲ್ಲ!
“ಶುಭಾಶುಭ ಕರ್ಮಗಳನ್ನು ಮಾಡಿ ಪುರುಷನು ತಾನು ಮಾಡಿದುದರ ಫಲವನ್ನು ಪ್ರತೀಕ್ಷಿಸುತ್ತಿರುತ್ತಾನೆ. ಅವಶ್ಯವಾಗಿ ಅವನು ಆ ಫಲಕ್ಕೆ ಬದ್ಧನಾಗಿರುವಾಗ ಹೇಗೆ ತಾನೇ ಅದರಿಂದ ತಪ್ಪಿಸಿಕೊಳ್ಳಬಹುದು? ಹೊಲವನ್ನು ಹೂಳಿ ಬೀಜವನ್ನು ಬಿತ್ತಿ ದೇವತೆಗಳು ಸಕಾಲಕ್ಕೆ ಮಳೆಯನ್ನು ಸುರಿಸಿದಾಗ ತಾನೇ ಬೆಳೆಯು ಬೆಳೆಯುವುದು! ಅದನ್ನು ಯಾರುತಾನೇ ನೋಡಿಲ್ಲ? ಬೇರೆ ಏನಾದರೂ ಆದರೆ ಅದು ದೈವವೆಂದು ಯೋಚಿಸುತ್ತೇವೆ. ಸಾಧುಪ್ರವೃತ್ತಿಯ ಪಾಂಡವರೊಡನೆ ಜೂಡಾಡಿದುದು ಸರಿಯಲ್ಲ ಎಂದು ತಿಳಿದೂ ದುಷ್ಟ ಮಕ್ಕಳನ್ನು ಅನುಸರಿಸಿದ ನಾನು ಕುರುಗಳ ಅಂತ್ಯಕಾಲವನ್ನು ತಂದೆನಲ್ಲಾ! ನಿಶ್ಚಯವಾಗಿಯೂ ಗಾಳಿಯು ತಡೆಯಿಲ್ಲದೇ ಬೀಸುತ್ತದೆ. ನಿಶ್ಚಯವಾಗಿಯೂ ಗರ್ಭಿಣಿಯು ಹಡೆಯುತ್ತಾಳೆ. ನಿಶ್ಚಯವಾಗಿಯೂ ಉದಯವು ರಾತ್ರಿಯನ್ನು ನಾಶಪಡಿಸುತ್ತದೆ ಮತ್ತು ಹಾಗೆಯೇ ಸಂಜೆಯು ದಿನವನ್ನು ನಾಶಪಡಿಸುತ್ತದೆ. ಇತರರು ದುಡಿಯದಿರುವಾಗ ಏಕೆ ದುಡಿಯಬೇಕು? ಇತರರು ವಿತ್ತವನ್ನು ದಾನಮಾಡದೇ ಇದ್ದರೆ ನಾವು ಏಕೆ ಮಾಡಬೇಕು? ನಾವು ನಮ್ಮ ಸಂಪತ್ತು ಭಾಗವಾಗಬಾರದು, ಒಡೆದುಹೋಗಬಾರದು ಮತ್ತು ಸೋರಿಹೋಗಬಾರದೆಂದು ಅದನ್ನು ರಕ್ಷಿಸುತ್ತೇವೆ. ಅರಣ್ಯದಿಂದ ಶಕ್ರಲೋಕಕ್ಕೆ ಹೋದ ಧನಂಜಯನ ವೀರ್ಯವನ್ನು ನೋಡು! ಅವನು ಪುನಃ ಈ ಲೋಕಕ್ಕೆ ಹಿಂದಿರುಗಿದಾಗ ಅವನಿಗೆ ನಾಲ್ಕು ವಿಧದ ಅಸ್ತ್ರಗಳು ತಿಳಿದಿದ್ದವು. ಸಶರೀರನಾಗಿಯೇ ಸ್ವರ್ಗಕ್ಕೆ ಹೋಗಿ, ಕುರುಗಳು ಕಾಲನಿಂದ ಹತರಾಗುವುದನ್ನು ಬಯಸದ ಯಾರು ತಾನೇ ಪುನಃ ಈ ಲೋಕಕ್ಕೆ ಬರಲು ಬಯಸುತ್ತಾರೆ? ಆ ಧನುಷ್ಪಾಣೀ ಅರ್ಜುನನನ ದಿವ್ಯಾಸ್ತ್ರಗಳ ತೇಜಸ್ಸನ್ನು ಯಾರುತಾನೇ ಸಹಿಸಿಯಾರು?”
ಪಾಂಡವರಿದ್ದಲ್ಲಿಗೆ ಹೋಗಲು ಕರ್ಣನು ದುರ್ಯೋಧನನಿಗೆ ಸೂಚಿಸಿದುದು
ರಾಜ ಧೃತರಾಷ್ಟ್ರನ ಈ ಮಾತುಗಳನ್ನು ಗುಟ್ಟಿನಲ್ಲಿ ಕೇಳಿದ ದುರ್ಯೋಧನ-ಶಕುನಿಯರು ಎಲ್ಲವನ್ನೂ ಕರ್ಣನಿಗೆ ಹೋಗಿ ಹೇಳಿದರು. ಆಗ ಕರ್ಣನು ಅವರಿಗೆ ಹೇಳಿದನು: “ದುರ್ಯೋಧನ! ಪಾಂಡವರನ್ನು ನಿನ್ನದೇ ವೀರ್ಯದಿಂದ ಹೊರಗಟ್ಟಿದ ನೀನು ಶಂಬರನನ್ನು ಕೊಂದ ಇಂದ್ರನು ತನ್ನ ಸ್ವರ್ಗವನ್ನು ಹೇಗೋ ಹಾಗೇ ಇಡೀ ಭೂಮಿಯನ್ನು ಭೋಗಿಸು. ಪೂರ್ವ-ಪಶ್ಚಿಮ-ದಕ್ಷಿಣ-ಉತ್ತರಗಳ ರಾಜರೆಲ್ಲರೂ ನಿನಗೆ ಕರವನ್ನು ಕೊಡುವಂತೆ ಮಾಡಿಯಾಗಿದೆ. ಹಿಂದೆ ಪಾಂಡವರನ್ನು ಸೇವಿಸುತ್ತಿದ್ದ ಲಕ್ಷ್ಮಿಯನ್ನು ಈಗ ನೀನು ಪಡೆದುಕೊಂಡಿದ್ದೀಯೆ. ಇಂದ್ರಪ್ರಸ್ಥಕ್ಕೆ ಹೋದಾಗ ಯುಧಿಷ್ಠಿರನಲ್ಲಿ ದೀಪ್ಯಮಾನ ಶ್ರೀಯನ್ನು ನೋಡಿ ನಾವು ಶೋಕದಿಂದ ಸಣ್ಣವರಾಗಿದ್ದೆವು. ನಿನ್ನ ಬುದ್ಧಿಬಲವನ್ನುಪಯೋಗಿಸಿ ಯುಧಿಷ್ಠಿರನಿಂದ ಆ ರಾಜ್ಯವನ್ನು ಕಸಿದುಕೊಂಡು ಈಗ ನೀನು ಅದೇ ಶ್ರೀಯಿಂದ ಬೆಳಗುತ್ತಿದ್ದೀಯೆ. ಎಲ್ಲ ರಾಜರೂ ನಿನ್ನ ಶಾಸನದಡಿಯಲ್ಲಿದ್ದಾರೆ ಮತ್ತು ಏನು ಮಾಡಬೇಕೆಂದರೂ ನಿನ್ನನ್ನು ಕೇಳಿಯೇ ಮಾಡುತ್ತಾರೆ. ಇಂದು ಸಾಗರ-ಆಕಾಶ-ಪರ್ವತ-ಗ್ರಾಮ-ನಗರ-ಆಕರಗಳು-ನಾನಾವನೋದ್ದೇಶಗಳಿಂದ ಕೂಡಿದ ಇಡೀ ಪೃಥ್ವಿಯು ನಿನ್ನವಳಾಗಿದ್ದಾಳೆ. ದ್ವಿಜರಿಂದ ವಂದಿಸಲ್ಪಟ್ಟು ರಾಜರಿಂದ ಪೂಜಿಸಲ್ಪಟ್ಟು ನೀನು ಪೌರುಷದಲ್ಲಿ ದೇವತೆಗಳ ಮಧ್ಯೆ ರವಿಯಂತೆ ಬೆಳಗುತ್ತಿದ್ದೀಯೆ. ರುದ್ರರಲ್ಲಿ ಯಮನಂತೆ, ಮರುತ್ತರಲ್ಲಿ ವಾಸವನಂತೆ ಕುರುಗಳಿಂದ ಆವೃತನಾಗಿರುವ ನೀನು ನಕ್ಷತ್ರರಾಜನಂತೆ ಬೆಳಗುತ್ತಿರುವೆ. ನಿನ್ನನ್ನು ಅರ್ಥಮಾಡಿಕೊಳ್ಳದೇ ಯಾವಾಗಲೂ ನಿನ್ನನ್ನು ನಿರ್ಲಕ್ಷಿಸಿದ ಆ ಪಾಂಡವರು ಈಗ ಸಂಪತ್ತನ್ನು ಕಳೆದುಕೊಂಡು ಹೇಗೆ ವನವಾಸಿಗಳಾಗಿದ್ದರೆ ಎನ್ನುವುದನ್ನು ನೋಡುತ್ತಿದ್ದೇವೆ. ಪಾಂಡವರು ವನವಾಸೀ ಬ್ರಾಹ್ಮಣರೊಂದಿಗೆ ದ್ವೈತವನದ ಸರೋವರದ ಬಳಿ ವಾಸಿಸುತ್ತಿದ್ದಾರೆಂದು ಕೇಳಿದ್ದೇವೆ. ಪರಮ ಸಂಪತ್ತಿನಿಂದ ಕೂಡಿ ಅಲ್ಲಿಗೆ ಹೋಗಿ ಸೂರ್ಯನು ತನ್ನ ತೇಜಸ್ಸಿನಿಂದ ಹೇಗೋ ಹಾಗೆ ನೀನು ಆ ಪಾಂಡುಪುತ್ರರನ್ನು ಸುಡು! ರಾಜ್ಯವನ್ನು ಪಡೆದ ನೀನು ರಾಜ್ಯವನ್ನು ಕಳೆದುಕೊಂಡಿರುವ ಪಾಂಡವರನ್ನು, ಶ್ರೀಯಿಂದ ಆವೃತನಾಗಿರುವ ನೀನು ಶ್ರೀಯನ್ನು ಕಳೆದುಕೊಂಡ ಅವರನ್ನು ಮತ್ತು ಸಮೃದ್ಧಸಂಪತ್ತಿನ ನೀನು ಅಸಮೃದ್ಧರಾಗಿರುವ ಅವರನ್ನು ಹೋಗಿ ನೋಡು. ಯಯಾತಿಯೋ ಎಂಬಂತೆ ಮಹಾಭಿಜನಸಂಪನ್ನನಾಗಿ, ಭದ್ರವಾಗಿ ಮತ್ತು ಮಹತ್ತರವಾಗಿ ಸ್ಥಾಪಿತನಾಗಿರುವ ನಿನ್ನನ್ನು ಆ ಪಾಂಡವರು ನೋಡಲಿ! ಸಮಪ್ರದೇಶದಲ್ಲಿ ನಿಂತು ವಿಷಮಸ್ಥಾನದಲ್ಲಿರುವ ಶತ್ರುಗಳನ್ನು ನೋಡುವುದಕ್ಕಿಂತಲೂ ಹೆಚ್ಚಿನ ಸುಖವು ಈ ಜಗತ್ತಿನಲ್ಲಿ ಇನ್ನೇನಿದೆ? ಮಗನು ಹುಟ್ಟಿದನೆನ್ನುವುದಾಗಲೀ, ಧನ ಅಥವಾ ರಾಜ್ಯವು ದೊರಕಿತೆನ್ನುವುದಾಗಲೀ, ಶತ್ರುಗಳು ಕಷ್ಟದಲ್ಲಿರುವುದನ್ನು ನೋಡಿದಷ್ಟು ಸಂತೋಷವನ್ನು ತರುವುದಿಲ್ಲ. ಯಶಸ್ವಿಯಾದ ಯಾರು ತಾನೇ ಆಶ್ರಮದಲ್ಲಿ ವಲ್ಕಲ-ಜಿನಗಳನ್ನುಟ್ಟಿರುವ ಅರ್ಜುನನನ್ನು ನೋಡಿ ಸಂತೋಷಪಡುವುದಿಲ್ಲ? ಸುಂದರ ವಸ್ತ್ರಗಳನ್ನುಟ್ಟಿರುವ ನಿನ್ನ ಭಾರ್ಯೆಯರು ವಲ್ಕಲ-ಜಿನಗಳನ್ನುಟ್ಟಿರುವ ಅಸುಖಿ ಕೃಷ್ಣೆಯನ್ನು ನೋಡಲಿ ಮತ್ತು ಅವಳ ದುಃಖವನ್ನು ಹೆಚ್ಚಿಸಲಿ! ಧನವನ್ನು ಕಳೆದುಕೊಂಡ ತನ್ನ ಜೀವನವನ್ನು ತಾನೇ ನಿಂದನೆಮಾಡುವಂಥಾಗಲಿ. ಸಭಾಮಧ್ಯದಲ್ಲಿ ಅವಳು ಅನುಭವಿಸಿದ ದುಃಖವು ಸ್ವಲಂಕೃತರಾದ ನಿನ್ನ ಭಾರ್ಯೆಯರನ್ನು ನೋಡುವುದಕ್ಕಿಂತ ಹೆಚ್ಚಿನದಾಗಿರಲಾರದು!”
ಕರ್ಣನ ಮಾತನ್ನು ಕೇಳಿ ದುರ್ಯೋಧನನು ಮೊದಲು ಸಂತೋಷಗೊಂಡು ಅನಂತರ ದೀನನಾಗಿ ಈ ಮಾತುಗಳನ್ನಾಡಿದನು: “ಕರ್ಣ! ನೀನು ಹೇಳಿದುದು ನನ್ನ ಮನಸ್ಸಿಗೂ ಬಂದಿತ್ತು. ಆದರೆ ಪಾಂಡವರಿದ್ದಲ್ಲಿಗೆ ಹೋಗಲು ನಮಗೆ ರಾಜನು ಖಂಡಿತವಾಗಿಯೂ ಅನುಜ್ಞೆಯನ್ನು ನೀಡಲಿಕ್ಕಿಲ್ಲ. ರಾಜನು ಆ ವೀರರ ಕುರಿತು ಪರಿತಪಿಸುತ್ತಾನೆ. ಈಗ ಅವರ ತಪೋಯೋಗದಿಂದ ಅವರನ್ನು ಇನ್ನೂ ಹೆಚ್ಚಾಗಿ ಗೌರವಿಸುತ್ತಾನೆ. ನಮ್ಮ ಇಂಗಿತವನ್ನು ಅವನು ತಿಳಿದರೆ, ಭವಿಷ್ಯದಲ್ಲಾಗುವುದರಿಂದ ರಕ್ಷಿಸಿಕೊಳ್ಳಲು ನಮ್ಮನ್ನು ಅವರ ಸಮೀಪ ಹೋಗಲು ಬಿಡುವುದಿಲ್ಲ. ಏಕೆಂದರೆ ವನದಲ್ಲಿ ವಾಸಿಸುವ ಆ ನನ್ನ ದ್ವೇಷಿಗಳನ್ನು ಕಿತ್ತೊಗೆಯುವ ಕಾರಣವನ್ನು ಬಿಟ್ಟು ನಾನು ದ್ವೈತವನಕ್ಕೆ ಹೋಗಲು ಬೇರೆ ಯಾವ ಕಾರಣವೂ ಇಲ್ಲವೆಂದು ಅವನಿಗೆ ತಿಳಿದಿದೆ. ದ್ಯೂತಕಾಲದಲ್ಲಿ ಉಪಸ್ಥಿತನಿದ್ದ ವಿದುರನು ಅವನಿಗೆ ನನ್ನ, ನಿನ್ನ ಮತ್ತು ಶಕುನಿಯ ಕುರಿತು ಮಾಡಿದ ತಕರಾರುಗಳು ನಿನಗೆ ತಿಳಿದೇ ಇದೆ. ಹಿಂದೆ ಪಾಂಡವರಾಡಿದ ಮಾತುಗಳನ್ನು ಮತ್ತು ನಂತರ ವಿದುರನ ಚಾಡಿಗಳನ್ನು ನೆನಪಿಸಿಕೊಂಡರೆ ಅಲ್ಲಿಗೆ ಹೋಗಬೇಕೋ ಬೇಡವೋ ಎಂದು ನನಗೂ ನಿರ್ಧರಿಸಲಾಗುತ್ತಿಲ್ಲ. ಕೃಷ್ಣೆಯ ಸಹಿತ ಅರಣ್ಯದಲ್ಲಿ ಭೀಮ-ಅರ್ಜುನರು ಕಷ್ಟಪಡುತ್ತಿರುವುದನ್ನು ನೋಡಲು ನನಗೂ ಮಹಾ ಹರ್ಷವಾಗುತ್ತದೆ. ವಲ್ಕಲ-ಜಿನಗಳನ್ನುಟ್ಟ ಪಾಂಡವರನ್ನು ನೋಡುವಾಗ ದೊರಕುವ ಸಂತೋಷವು ಈ ವಸುಧೆಯನ್ನು ಪಡೆದಾಗಲೂ ಆಗಿರಲಿಕ್ಕಿಲ್ಲ. ವನದಲ್ಲಿ ಕಾಷಾಯವಸ್ತ್ರಗಳನ್ನುಟ್ಟಿರುವ ದ್ರೌಪದಿಯನ್ನು ನಾನು ನೋಡುತ್ತೇನಾದರೆ ಅದಕ್ಕಿಂತಲೂ ಹೆಚ್ಚಿನ ಸಂತೋಷವು ನನಗೆ ಇನ್ನ್ಯಾವುದಿದೆ? ಯುಧಿಷ್ಠಿರ-ಭೀಮಸೇನರು ಪರಮ ಸಂಪದ್ಭರಿತನಾದ ನನ್ನನ್ನು ನೋಡಿದರೆಂದರೆ ಅದೇ ನನಗೆ ಬದುಕೆನಿಸಿಕೊಳ್ಳುತ್ತದೆ! ಆದರೆ ವನಕ್ಕೆ ಹೋಗಲು ಬೇರೆ ಯಾವ ಕಾರಣವೂ ನನಗೆ ಹೊಳೆಯುತ್ತಿಲ್ಲ. ರಾಜನು ಅವರ ಬಳಿ ಹೋಗಲು ಅನುಮತಿಯನ್ನು ನೀಡುತ್ತಾನೋ ಇಲ್ಲವೋ ಎಂದೂ ತಿಳಿಯುತ್ತಿಲ್ಲ. ನಾವು ಹೇಗೆ ಆ ವನಕ್ಕೆ ಹೋಗಬಹುದು ಎನ್ನುವ ಉಪಾಯವನ್ನು ಶಕುನಿ, ದುಃಶಾಸನರೊಂದಿಗೆ ನೀನೇ ನಿಪುಣತೆಯಿಂದ ಯೋಚಿಸಿ ನಾಳೆ ಬೆಳಿಗ್ಗೆ ಹೇಳಬೇಕು.”
ಹಾಗೆಯೇ ಆಗಲೆಂದು ಅವರೆಲ್ಲರೂ ತಮ್ಮ ತಮ್ಮ ವಸತಿಗಳಿಗೆ ತೆರಳಿದರು. ರಾತ್ರಿ ಕಳೆಯಲು ಕರ್ಣನು ದುರ್ಯೋಧನನಲ್ಲಿಗೆ ಹೋಗಿ ಹೇಳಿದನು: “ದುರ್ಯೋಧನ! ನಾನು ಕಂಡ ಉಪಾಯವನ್ನು ಕೇಳು. ದ್ವೈತವನದಲ್ಲಿರುವ ಗೋಶಾಲೆಗಳೆಲ್ಲವೂ ನಿನ್ನ ಬರವನ್ನೇ ಕಾಯುತ್ತಿವೆ. ಘೋಷಯಾತ್ರೆಯ ನೆಪದಲ್ಲಿ ನಾವು ಅಲ್ಲಿಗೆ ಖಂಡಿತವಾಗಿ ಹೋಗಬಹುದು. ಘೋಷಯಾತ್ರೆಗೆ ಹೋಗುವುದು ಯಾವಾಗಲೂ ಒಳ್ಳೆಯದೇ ಆದುದರಿಂದ ನಿನ್ನ ತಂದೆಯು ನಿನಗೆ ಅನುಮತಿಯನ್ನು ನೀಡಲೇಬೇಕು!”
ಆಗ ಶಕುನಿಯು ನಗುತ್ತಾ ಹೇಳಿದನು: “ದ್ವೈತವನಕ್ಕೆ ಹೋಗಲು ಈ ಉಪಾಯವು ನಿರಾಮಯವೆಂದು ನನಗನ್ನಿಸುತ್ತದೆ. ರಾಜನು ಇದಕ್ಕೆ ಅನುಮತಿಯನ್ನು ಕೊಡುತ್ತಾನಲ್ಲದೇ ಹೋಗಿ ಎಂದು ಒತ್ತಾಯವನ್ನೂ ಮಾಡಬಹುದು!” ಆಗ ಸಂತೋಷದಿಂದ ಆ ಮೂವರೂ ಪರಸ್ಪರರ ಕೈತಟ್ಟಿ ನಕ್ಕರು.
ಅವರೆಲ್ಲರೂ ಧೃತರಾಷ್ಟ್ರನನ್ನು ಕಾಣುವ ಮೊದಲೇ ಸಮಂಗ ಎಂಬ ಹೆಸರಿನ ಗೊಲ್ಲನು ದ್ವೈತವನದಲ್ಲಿರುವ ಗೋವುಗಳ ಕುರಿತು ರಾಜನಿಗೆ ವರದಿಮಾಡುವಂತೆ ಏರ್ಪಡಿಸಿದರು. ಅನಂತರ ಶಕುನಿ-ಕರ್ಣರು ರಾಜನಿಗೆ ಹೇಳಿದರು: “ರಾಜನ್! ಈ ಸಮಯದಲ್ಲಿ ಗೋಶಾಲೆಗಳಿದ್ದ ಆ ಪ್ರದೇಶವು ರಮಣೀಯವಾಗಿದೆ. ಕರುಗಳನ್ನು ಎಣಿಸುವ ಮತ್ತು ಬರೆಹಾಕುವ ಕಾಲವೂ ಬಂದೊದಗಿದೆ. ನಿನ್ನ ಮಗನು ಬೇಟೆಗೆ ಹೋಗುವುದಕ್ಕೂ ಇದು ಸರಿಯಾದ ಸಮಯ. ದುರ್ಯೋಧನನಿಗೆ ಹೋಗಲು ಅನುಮತಿಯನ್ನು ಕೊಡಬೇಕು.”
ಅದಕ್ಕೆ ಧೃತರಾಷ್ಟ್ರನು ಹೇಳಿದನು: “ಬೇಟೆಯಾಡುವುದು ಮತ್ತು ಗೋವುಗಳನ್ನು ನೋಡಿ ಬರುವುದು ಇವೆರಡೂ ಒಳ್ಳೆಯದೇ. ಗೋವಳರನ್ನು ನಂಬಬಾರದು ಎಂದೂ ನನಗನ್ನಿಸುತ್ತದೆ. ಆದರೆ ಪಾಂಡವರೂ ಅಲ್ಲಿಯೇ ಸಮೀಪದಲ್ಲಿದ್ದಾರೆಂದು ಕೇಳಿದ್ದೇನೆ. ಆದುದರಿಂದ ನೀವು ಅಲ್ಲಿಗೆ ಹೋಗುವುದು ಸರಿಯೆನಿಸುವುದಿಲ್ಲ. ಆ ಸಮರ್ಥ ಮಹಾರಥಿಗಳು ಮೋಸದಿಂದ ಸೋಲಿಸಲ್ಪಟ್ಟು ಕಷ್ಟದಿಂದ ಅಲ್ಲಿ ತಪೋನಿರತರಾಗಿದ್ದಾರೆ. ಧರ್ಮರಾಜನು ಸಿಟ್ಟಾಗುವುದಿಲ್ಲ. ಆದರೆ ಭೀಮಸೇನನು ಕುಪಿತನಾಗುತ್ತಾನೆ ಮತ್ತು ದ್ರೌಪದಿಯು ಬೆಂಕಿಯಂತೆಯೇ ಇದ್ದಾಳೆ! ದರ್ಪಮೋಹಸಮನ್ವಿತರಾದ ನೀವು ಅಪರಾಧವನ್ನೆಸಗುವುದು ಖಂಡಿತ. ಆಗ ತಪೋಸಮನ್ವಿತರಾದ ಅವರು ನಿಮ್ಮನ್ನು ಸುಟ್ಟುಬಿಡುತ್ತಾರೆ. ಅಥವಾ ಸಿಟ್ಟಿನಿಂದ ಅವರು ತಮ್ಮ ಆಯುಧ-ಶಸ್ತ್ರಗಳ ತೇಜಸ್ಸಿನಿಂದಲೂ ನಿಮ್ಮನ್ನು ಸುಡುತ್ತಾರೆ. ಒಂದುವೇಳೆ ಬಹುಸಂಖ್ಯೆಯಲ್ಲಿರುವ ನೀವೇ ಅವರನ್ನು ಕೊಂದರೆ, ಅದು ಪರಮ ಅನಾರ್ಯವೆಂದೆನಿಸಿಕೊಳ್ಳುತ್ತದೆ. ಹಾಗೆ ಮಾಡಲು ನೀವು ಅಶಕ್ತರೆಂದು ನನಗನಿಸುತ್ತದೆ. ಏಕೆಂದರೆ ಇಂದ್ರಲೋಕದಿಂದ ಮರಳಿರುವ ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆದಿದ್ದಾನೆ. ಹಿಂದೆ ಈ ಅಸ್ತ್ರಗಳಿಲ್ಲದೆಯೇ ಅವನು ಭೂಮಂಡಲವನ್ನು ಗೆದ್ದಿದ್ದನು. ಕೃತಾಸ್ತ್ರನಾಗಿರುವ ಅವನು ಈಗ ನಿಮ್ಮನ್ನು ಕೊಲ್ಲದೇ ಇರುವನೇ? ಆದುದರಿಂದ ಗೋವುಗಳನ್ನು ಎಣಿಸಲು ಬೇರೆ ಯಾರಾದರೂ ಅಧಿಕಾರಿಗಳು ಹೋಗಲಿ. ಸ್ವಯಂ ನೀವೇ ಅಲ್ಲಿಗೆ ಹೋಗುವುದು ನನಗೆ ಇಷ್ಟವಾಗುವುದಿಲ್ಲ!”
ಆಗ ಶಕುನಿಯು ಹೇಳಿದನು: “ಭಾರತ! ಜೇಷ್ಠ ಪಾಂಡವನು ಧರ್ಮಜ್ಞ ಮತ್ತು ಹನ್ನೆರಡು ವರ್ಷಗಳ ವನವಾಸದ ಪ್ರತಿಜ್ಞೆಯನ್ನು ಅವನು ಮರೆಯುವವನಲ್ಲ. ಉಳಿದ ಎಲ್ಲ ಪಾಂಡವರೂ ಅವನನ್ನೇ ಅನುಸರಿಸುತ್ತಾರೆ. ಯುಧಿಷ್ಠಿರನು ನಮ್ಮಮೇಲೆ ಎಂದೂ ಕುಪಿತನಾಗುವುದಿಲ್ಲ. ಅದೂ ಅಲ್ಲದೇ ಬೇಟೆಯಾಡುವ ಬಯಕೆಯೂ ತುಂಬಾ ಹೆಚ್ಚಾಗಿದೆ. ಗೋವುಗಳನ್ನು ಎಣಿಸಲು ಮಾತ್ರ ಅಲ್ಲಿಗೆ ಹೋಗಲು ಬಯಸುತ್ತೀವೆಯೇ ಹೊರತು ಪಾಂಡವರನ್ನು ಕಾಣಬೇಕೆಂದಲ್ಲ. ಅಲ್ಲಿ ಯಾವುದೇ ರೀತಿಯ ಅನಾರ್ಯ ಸಮಾಚಾರವೂ ನಡೆಯುವುದಿಲ್ಲ. ಅವರೆಲ್ಲಿ ವಾಸಿಸುತ್ತಿರುವರೋ ಅಲ್ಲಿಗೆ ನಾವು ಹೋಗುವುದೇ ಇಲ್ಲ!”
ಶಕುನಿಯ ಈ ಮಾತಿಗೆ ಧೃತರಾಷ್ಟ್ರನು ಇಷ್ಟವಿಲ್ಲದಿದ್ದರೂ ದುರ್ಯೋಧನ ಮತ್ತು ಅವನ ಅಮಾತ್ಯರಿಗೆ ಘೋಷಯಾತ್ರೆಗೆ ಹೊರಡಲು ಅನುಮತಿಯನ್ನಿತ್ತನು.
ಘೋಷಯಾತ್ರೆ
ಧೃತರಾಷ್ಟ್ರನ ಅಪ್ಪಣೆಯನ್ನು ಪಡೆದು ದುರ್ಯೋಧನನು ಕರ್ಣನೊಂದಿಗೆ ಮಹಾಸೇನೆಯಿಂದ ಆವೃತನಾಗಿ, ದುಃಶಾಸನ, ಶಕುನಿ, ಇತರ ಸಹೋದರರು ಮತ್ತು ಸಹಸ್ರಾರು ಸ್ತ್ರೀಯರನ್ನು ಕೂಡಿಕೊಂಡು ಘೋಷಯಾತ್ರೆಗೆ ಹೊರಟನು. ಅವನನ್ನು ಅನುಸರಿಸಿ, ದ್ವೈತವನವನ್ನು ನೋಡಲು, ಎಲ್ಲ ಪೌರರೂ ಪತ್ನಿಯರನ್ನು ಕೂಡಿಕೊಂಡು ಹೊರಟರು. ಎಂಟು ಸಾವಿರ ರಥಗಳು, ಮೂವತ್ತು ಸಾವಿರ ಆನೆಗಳು, ಹಲವಾರು ಸಾವಿರ ಪದಾತಿಗಳು, ಒಂಭೈನೂರು ಕುದುರೆಗಳು, ಚಕ್ಕಡಿಗಳು, ಅಂಗಡಿ-ಬಂಡಿಗಳು, ವೇಶ್ಯೆಯರು, ವರ್ತಕರು, ವಂದಿಗಳು, ಮತ್ತು ನೂರಾರು ಸಹಸ್ರಾರು ಬೇಟೆಗಾರರು ಆ ಗುಂಪಿನಲ್ಲಿ ಸೇರಿದ್ದರು. ದುರ್ಯೋಧನನ ಆ ಪ್ರಯಾಣವು ಮಳೆಗಾಲದ ಭಿರುಗಾಳಿಯಂತೆ ಮಹಾಶಬ್ಧವನ್ನುಂಟುಮಾಡುತ್ತಿತ್ತು. ದ್ವೈತವನ ಸರೋವರದಿಂದ ಎರಡು ಕ್ರೋಶಮಾತ್ರದ ದೂರದಲ್ಲಿ ದುರ್ಯೋಧನನು ತನ್ನ ಜನ-ವಾಹನಗಳೊಂದಿಗೆ ಬೀಡುಬಿಟ್ಟನು. ಸೇವಕರು ಅವನಿಗೆ ಮರಗಿಡಗಳಿರುವ ಮತ್ತು ನೀರಿನ ಸೌಲಭ್ಯವಿರುವ ರಮಣೀಯ ವಿಶಾಲ ಪ್ರದೇಶದಲ್ಲಿ ಅವನ ಎಲ್ಲ ಬಯಕೆಗಳನ್ನೂ ಪೂರೈಸಬಲ್ಲ ಬಿಡದಿಯನ್ನು ನಿರ್ಮಿಸಿದರು. ಅದರ ಹತ್ತಿರದಲ್ಲಿಯೇ ಕರ್ಣ, ಶಕುನಿ ಮತ್ತು ಸಹೋದರರಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ಅನೇಕ ನಿವೇಶನಗಳನ್ನು ನಿರ್ಮಿಸಿದರು.
ಅನಂತರ ದುರ್ಯೋಧನನು ನೂರಾರು ಸಹಸ್ರಾರು ಗೋವುಗಳನ್ನು ನೋಡಿ ಪರೀಕ್ಷಿಸಿ ಅಂಕೆ-ಗುರುತುಗಳನ್ನು ಹಾಕಿಸಿದನು. ಯಾವ ಗೋವುಗಳಿಗೆ ಹೋರಿಗಳನ್ನು ಹಾರಿಸಿಯಾಗಿದೆ ಮತ್ತು ಯಾವುದಕ್ಕೆ ಹಾಲುಕುಡಿಯುವ ಕರುಗಳಿವೆಯೆಂದು ಗುರುತಿಸಿದನು. ಮೂರು ವರ್ಷದ ಕರುಗಳನ್ನು ಎಣಿಸಿ ಗುರುತು ಹಾಕಿಸಿದ ನಂತರ ಆ ಕುರುನಂದನನು ಗೋಪಾಲಕರೊಡನೆ ಸಂತಸದಿಂದ ಆಡಿ ವಿಹರಿಸಿದನು. ಎಲ್ಲ ಪೌರಜನರೂ ಸಹಸ್ರಾರು ಸೈನಿಕರೂ ಅಮರರಂತೆ ತಮಗಿಷ್ಟಬಂದಂತೆ ಆ ವನದಲ್ಲಿ ಆಡಿದರು. ನೃತ್ಯ-ವಾದ್ಯ-ಗಾಯನಗಳಲ್ಲಿ ಕುಶಲ ಗೋಪರು ಮತ್ತು ಸ್ವಲಂಕೃತ ಗೋಪ ಕನ್ಯೆಯರು ಧಾರ್ತರಾಷ್ಟ್ರರ ಸೇವೆಗೈದರು. ಸ್ತ್ರೀಯರ ಗುಂಪುಗಳಿಂದ ಸುತ್ತುವರೆಯಲ್ಪಟ್ಟ ರಾಜಾ ದುರ್ಯೋಧನನು ಸಂತೋಷಗೊಂಡು ಅವರಿಗೆ ತಕ್ಕುದಾದ ವಿವಿಧ ಆಹಾರ-ಪಾನೀಯಗಳನ್ನೂ ಧನವನ್ನೂ ಕೊಟ್ಟನು. ಅನಂತರ ಅವರೆಲ್ಲರೂ ಒಟ್ಟಿಗೇ ಹಯೀನ, ಕಾಡೆಮ್ಮೆ, ಜಿಂಕೆ, ಗಾಯಲ್, ಕರಡಿ ಮತ್ತು ಹಂದಿಗಳನ್ನು ಸುತ್ತುವರೆದು ಬೆನ್ನಟ್ಟಿ ಬೇಟೆಯಾಡಿದರು. ರಮಣೀಯವಾಗಿ ಹೂಬಿಟ್ಟ ವನಗಳನ್ನು, ಮತ್ತೇರಿದ ದುಂಬಿಗಳ ಗುಂಪುಗಳನ್ನು ಮತ್ತು ಕೂಗುತ್ತಿದ್ದ ನವಿಲುಗಳನ್ನು ನೋಡುತ್ತಾ, ಹಸುವಿನ ಹಾಲನ್ನು ಕುಡಿದನು ಮತ್ತು ರುಚಿಕರ ಅಡುಗೆಯನ್ನು ಊಟಮಾಡಿದನು. ಕ್ರಮೇಣವಾಗಿ ಇಂದ್ರನಂತೆ ಪರಮ ವಿಜ್ರಂಭಣೆಯಿಂದ ಪುಣ್ಯ ದ್ವೈತವನ ಸರೋವರದ ಬಳಿ ಬಂದನು.
ಅದೇ ದಿವಸ ಧರ್ಮಪುತ್ರ ಯುಧಿಷ್ಠಿರನು ರಾಜರ್ಷಿಗಳು ಮಾಡುವ ಸದ್ಯಸ್ಯ ಯಜ್ಞವನ್ನು ದಿವ್ಯ ವಿಧಿಗಳೊಂದಿಗೆ ನವ್ಯ ವಸ್ತುಗಳಿಂದ ನೆರವೇರಿಸಿದ್ದನು. ಅದನ್ನು ಪೂರೈಸಿ ಅವನು ಧರ್ಮಪತ್ನಿ ದ್ರೌಪದಿಯೊಡನೆ ಸರೋವರದ ಸಮೀಪದ ತನ್ನ ಕುಟೀರಕ್ಕೆ ಹಿಂದಿರುಗಿದ್ದನು.
ಗಂಧರ್ವರು ದುರ್ಯೋಧನನನ್ನು ಸೆರೆಹಿಡಿದುದು
ಆಗ ಅನುಜರೊಂದಿಗಿದ್ದ ದುರ್ಯೋಧನನು ಕ್ರೀಡಾಭವನಗಳನ್ನು ನಿರ್ಮಿಸಲು ತನ್ನ ಸೇವಕರಿಗೆ ಆದೇಶವನ್ನಿತ್ತನು. ಹಾಗೆಯೇ ಆಗಲೆಂದು ಹೇಳಿ ಆ ವಚನಪಾಲಕರು ಕ್ರೀಡಾಭವನಗಳನ್ನು ನಿರ್ಮಿಸಲು ದ್ವೈತವನ ಸರೋವರಕ್ಕೆ ಹೋದರು. ಅವರು ಸರೋವರವನ್ನು ಪ್ರವೇಶಿಸುವಾಗ ದ್ವಾರದಲ್ಲಿಯೇ ಅವರನ್ನು ಗಂಧರ್ವರು ತಡೆದು ನಿಲ್ಲಿಸಿದರು. ಅದಕ್ಕೆ ಮೊದಲೇ ಕುಬೇರ ಭವನದಿಂದ ಗಂಧರ್ವರಾಜನು ತನ್ನ ಗಣಗಳೊಂದಿಗೆ ಅಲ್ಲಿಗೆ ಆಗಮಿಸಿದ್ದನು. ಅಪ್ಸರಗಣಗಳೊಂದಿಗೆ ಮತ್ತು ದೇವತೆಗಳ ಮಕ್ಕಳೊಂದಿಗೆ ವಿಹರಿಸುತ್ತಿದ್ದ ಅವನು ಕ್ರೀಡೆಗಾಗಿ ಆ ಸರೋವರವನ್ನು ಸುತ್ತುವರೆದಿದ್ದನು. ಅದನ್ನು ನೋಡಿದ ರಾಜ ಪರಿಚಾರಕರು ದುರ್ಯೋಧನನಲ್ಲಿಗೆ ಹಿಂದಿರುಗಿದರು. ಅವರ ವರದಿಯನ್ನು ಕೇಳಿದ ಕೌರವನು ತನ್ನ ಯುದ್ಧದುರ್ಮದ ಸೈನಿಕರಿಗೆ “ಅವರನ್ನು ಹೊಡೆದೋಡಿಸಿ!” ಎಂದು ಆಜ್ಞಾಪಿಸಿ ಕಳುಹಿಸಿದನು. ರಾಜನ ಮಾತನ್ನು ಕೇಳಿದ ಸೇನೆಯು ಶೀಘ್ರದಲ್ಲಿಯೇ ದ್ವೈತವನ ಸರೋವರಕ್ಕೆ ಹೋಯಿತು. ಅಲ್ಲಿ ಗಂಧರ್ವರಿಗೆ ಸೈನಿಕರು ಹೇಳಿದರು: “ದುರ್ಯೋಧನನೆಂಬ ಹೆಸರಿನ ರಾಜಾ ಧೃತರಾಷ್ಟ್ರನ ಬಲಶಾಲೀ ಪುತ್ರನು ತನ್ನ ವಿನೋದಕ್ಕಾಗಿ ಇಲ್ಲಿಗೆ ಬಂದಿದ್ದಾನೆ. ಆದುದರಿಂದ ಈ ಸ್ಥಳವನ್ನು ಬಿಟ್ಟುಕೊಡಿ!”
ಇದನ್ನು ಕೇಳಿದ ಗಂಧರ್ವರು ನಕ್ಕರು ಮತ್ತು ಅವರಿಗೆ ಪೌರುಷದ ಈ ಮಾತುಗಳನ್ನಾಡಿದರು: “ತನ್ನ ವಶದಲ್ಲಿರುವವರೋ ಎನ್ನುವಂತೆ ದಿವೌಕಸರಾದ ನಮ್ಮಂಥವರಿಗೆ ಈ ರೀತಿ ಆಜ್ಞಾಪಿಸುತ್ತಿರುವ ನಿಮ್ಮ ರಾಜನು ಮೂಢನೇ ಸರಿ! ಅವನ ಆಜ್ಞೆಯಂತೆ ನಮ್ಮೊಂದಿಗೆ ಈ ರೀತಿ ಬುದ್ಧಿಯಿಲ್ಲದೇ ಮಾತನಾಡುವ ನೀವು ಸಾಯುವುದು ಖಂಡಿತ. ಯಾರಿಗೂ ಇಷ್ಟವಿಲ್ಲದ ಯಮರಾಜನ ಮನೆಗೆ ಹೋಗುವ ಮೊದಲು ನಿಮ್ಮ ರಾಜನ ಬಳಿ ಈಗಲೇ ಹಿಂದಿರುಗಿ! ತಡಮಾಡಬೇಡಿ!” ಗಂಧರ್ವರು ಹೀಗೆ ಹೇಳಲು ರಾಜನ ಸೇನೆಯು ದುರ್ಯೋಧನನಿದ್ದಲ್ಲಿಗೆ ಪಲಾಯನಮಾಡಿತು.
ಗಂಧರ್ವರು ತನ್ನ ಸೇನೆಯನ್ನು ತಡೆದರು ಎಂದು ಕೇಳಿ ಪ್ರತಾಪಿ ದುರ್ಯೋಧನನು ಸಿಟ್ಟಿನಿಂದ ತನ್ನ ಸೇನೆಗೆ “ಎಲ್ಲ ದೇವತೆಗಳೊಂದಿಗೆ ಶತುಕ್ರತುವೇ ಅಲ್ಲಿ ಆಡುತ್ತಿದ್ದರೂ ಧರ್ಮವನ್ನು ತಿಳಿಯದೇ ನನಗೆ ಅಪ್ರಿಯವಾದುದನ್ನು ಮಾಡುವ ಅವರನ್ನು ಶಿಕ್ಷಿಸಿ!” ಎಂದು ಆಜ್ಞಾಪಿಸಿದನು. ಅವನ ಮಾತನ್ನು ಕೇಳಿ ಎಲ್ಲ ಮಹಾಬಲಶಾಲೀ ಧಾರ್ತರಾಷ್ಟ್ರರೂ ಸಹಸ್ರಾರು ಯೋಧರೂ ಯುದ್ಧಸನ್ನದ್ಧರಾದರು. ಸಿಂಹನಾದದಿಂದ ಹತ್ತುದಿಕ್ಕುಗಳನ್ನು ತುಂಬಿಸುತ್ತಾ ಅವರು ಗಂಧರ್ವರನ್ನು ಸದೆಬಡಿದು ಬಲಾತ್ಕಾರವಾಗಿ ಆ ವನವನ್ನು ಪ್ರವೇಶಿಸಿದರು. ಗಂಧರ್ವರು ಸಾಮದಿಂದ ತಡೆದರೂ ಕುರುಸೇನೆಯು ಅವರನ್ನು ಅನಾದರಿಸಿ ಆ ಮಹಾವನವನ್ನು ಪ್ರವೇಶಿಸಿತು.
ಅವರ ಮಾತಿನಂತೆ ಧಾರ್ತರಾಷ್ಟ್ರರು ನಿಲ್ಲದಿದ್ದಾಗ ಗಂಧರ್ವರು ಆಕಾಶಕ್ಕೇರಿ ತಮ್ಮ ನಾಯಕ ಚಿತ್ರಸೇನನಿಗೆ ನಿವೇದಿಸಿದರು. ಗಂಧರ್ವರಾಜ ಚಿತ್ರಸೇನನು ಕೋಪದಿಂದ “ಆ ಅನಾರ್ಯ ಕೌರವರನ್ನು ಶಿಕ್ಷಿಸಿ!” ಎಂದು ಆದೇಶವನ್ನಿತ್ತನು. ಆಗ ಗಂಧರ್ವರು ಆಯುಧಗಳನ್ನು ಹಿಡಿದು ಧಾರ್ತರಾಷ್ಟ್ರರ ಮೇಲೆ ಧಾಳಿ ಮಾಡಿದರು. ತಮ್ಮ ಮೇಲೆ ಆಯುಧಗಳನ್ನು ಹಿಡಿದು ಆಕ್ರಮಣ ಮಾಡಿದ ಗಂಧರ್ವರನ್ನು ಕಂಡು ಸೇನೆಯಲ್ಲಿ ಎಲ್ಲರೂ, ದುರ್ಯೋಧನನು ನೋಡುತ್ತಿದ್ದಂತೆಯೇ, ಪಲಾಯನಮಾಡಿದರು. ಆದರೂ ವೀರ ಕರ್ಣನು ಪರಾಙ್ಮುಖನಾಗಲಿಲ್ಲ. ಆಕಾಶದಿಂದ ಕೆಳಗಿಳಿಯುತ್ತಿದ್ದ ಗಂಧರ್ವಸೇನೆಯನ್ನು ರಾಧೇಯನು ಮಹಾಶರವರ್ಷದಿಂದ ತಡೆದು ನೂರಾರು ಗಂಧರ್ವರನ್ನು ಗಾಯಗೊಳಿಸಿದನು. ಗಂಧರ್ವರ ಶಿರಗಳನ್ನು ಉರುಳಿಸುತ್ತಾ ಆ ಮಹಾರಥಿಯು ಕ್ಷಣದಲ್ಲಿಯೇ ಚಿತ್ರಸೇನನ ಆ ಸೇನೆಯನ್ನು ಒಡೆದು ಚದುರಿಸಿದನು. ಕರ್ಣನು ಹೀಗೆ ಗಂಧರ್ವರನ್ನು ವಧಿಸುತ್ತಿರಲು ಅವರು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಪುನಃ ಧಾವಿಸಿ ಬಂದರು. ಕ್ಷಣಮಾತ್ರದಲ್ಲಿ ಭೂಮಿಯು ಮಹಾವೇಗದಿಂದ ಧುಮುಕುತ್ತಿದ್ದ ಚಿತ್ರಸೇನನ ಸೈನಿಕರಿಂದ ಗಂಧರ್ವಭೂತವಾಯಿತು. ಗರುಡನಂತೆ ಕಿರುಚುತ್ತಿದ್ದ ಆ ಗಂಧರ್ವ ಸೇನೆಯ ಮೇಲೆ ರಥಗಳಲ್ಲಿದ್ದ ದುರ್ಯೋಧನ, ಶಕುನಿ, ದುಃಶಾಸನ, ವಿಕರ್ಣ ಮತ್ತು ಧೃತರಾಷ್ಟ್ರನ ಇತರ ಮಕ್ಕಳು ಆಕ್ರಮಣ ಮಾಡಿದರು. ಕರ್ಣನನ್ನು ಮುಂದಿರಿಸಿಕೊಂಡು ಹೋರಾಡುತ್ತಿದ್ದ ಆ ಕೌರವರು ಮತ್ತು ಗಂಧರ್ವ ಸೇನೆಯ ನಡುವೆ ಮೈನವಿರೇಳಿಸುವ ತುಮುಲ ಯುದ್ಧವು ನಡೆಯಿತು. ಗಂಧರ್ವರು ಹಿಂಜರಿಯುತ್ತಿದ್ದುದನ್ನು ನೋಡಿ ರೋಷಗೊಂಡ ಚಿತ್ರಸೇನನು ಕೋಪದಿಂದ ಮಾಯಾಸ್ತ್ರವನ್ನು ಬಳಸಿ ಚಿತ್ರಮಾರ್ಗದಲ್ಲಿ ಯುದ್ಧಮಾಡತೊಡಗಿದನು. ಚಿತ್ರಸೇನನ ಮಾಯೆಯು ಕೌರವರನ್ನು ಮೋಸಗೊಳಿಸಿತು. ದುರ್ಯೋಧನನ ಪ್ರತಿಯೊಬ್ಬ ಯೋಧನನ್ನೂ ಹತ್ತು ಹತ್ತು ಗಂಧರ್ವರು ಸುತ್ತುವರೆದು ತಡೆದರು.
ಧಾರ್ತರಾಷ್ಟ್ರರೆಲ್ಲರೂ ಪೀಡಿತರಾಗಿರಲು ಕರ್ಣನು ಗಿರಿಯಂತೆ ಅಚಲನಾಗಿ ಹೋರಾಡುತ್ತಿದ್ದನು. ಆಗ ಅವನನ್ನು ಕೊಲ್ಲುವ ಉದ್ದೇಶದಿಂದ ನೂರಾರು ಸಹಸ್ರಾರು ಗಂಧರ್ವರು ಒಟ್ಟಿಗೇ ಅವನ ಮೇಲೆರಗಿದರು. ಆ ಮಹಾಬಲರು ಎಲ್ಲಕಡೆಗಳಿಂದಲೂ ಸುತ್ತುವರೆದು ಸೂತಪುತ್ರನನ್ನು ಖಡ್ಗ, ಪಟ್ಟಿಶ, ಶೂಲ ಮತ್ತು ಗದೆಗಳಿಂದ ಹೊಡೆದರು. ಕೆಲವರು ನೊಗವನ್ನು ಮುರಿದರು. ಅನ್ಯರು ಧ್ವಜವನ್ನು ಕೆಳಗಿಳಿಸಿದರು. ಇನ್ನು ಕೆಲವರು ಕುದುರೆಗಳನ್ನು ಮತ್ತು ಇತರರು ಸಾರಥಿಯನ್ನು ಕೆಳಗುರುಳಿಸಿದರು. ಹೀಗೆ ಅನೇಕ ಸಹಸ್ರ ಗಂಧರ್ವರು ಕರ್ಣನ ರಥವನ್ನು ಪುಡಿ ಪುಡಿ ಮಾಡಿದರು. ಆಗ ಸೂತಪುತ್ರನು ಖಡ್ಗ-ತೋಮರಗಳನ್ನು ಹಿಡಿದು ಹಾರಿ ವಿಕರ್ಣನ ರಥದ ಮೇಲೆ ಕುಳಿತು, ತಪ್ಪಿಸಿಕೊಳ್ಳಲು, ರಥದ ಕುದುರೆಗಳನ್ನು ಓಡಿಸಿದನು.
ಗಂಧರ್ವರು ಕರ್ಣನ ಮಹಾರಥವನ್ನು ಭಗ್ನಗೊಳಿಸಲು ದುರ್ಯೋಧನನ ಸೇನೆಯೆಲ್ಲವೂ ಅವನು ನೋಡುತ್ತಿದ್ದಂತೆಯೇ ಪಲಾಯನಗೈಯಿತು. ಸಹೋದರರೆಲ್ಲರೂ ಓಡಿ ಹೋಗುತ್ತಿದ್ದುದನ್ನು ನೋಡಿ ದುರ್ಯೋಧನನು ಪರಾಙ್ಮುಖನಾಗದೇ ಅಲ್ಲಿಯೇ ನಿಂತನು. ಗಂಧರ್ವ ಮಹಾಸೇನೆಯು ತನ್ನ ಮೇಲೆರಗುತ್ತಿರುವುದನ್ನು ನೋಡಿದ ಅವನು ಅವರ ಮೇಲೆ ಮಹಾ ಶರವರ್ಷವನ್ನು ಸುರಿಸಿದನು. ಆ ಶರವರ್ಷವನ್ನು ಲೆಕ್ಕಿಸದೇ ಗಂಧರ್ವರು ಅವನ ರಥವನ್ನು ಎಲ್ಲಕಡೆಗಳಿಂದ ಸುತ್ತುವರೆದು, ಅದರ ನೊಗ, ಆವರಣ, ವರೂಥ, ಧ್ವಜ, ಸಾರಥಿ, ಕುದುರೆಗಳು, ತ್ರಿವೇಣು, ಎಲ್ಲವನ್ನೂ ಎಳ್ಳಿನಷ್ಟು ಸಣ್ಣಗೆ ಪುಡಿ ಪುಡಿ ಮಾಡಿದರು. ವಿರಥನಾಗಿ ದುರ್ಯೋಧನನು ಭೂಮಿಯ ಮೇಲೆ ಬೀಳಲು ಚಿತ್ರಸೇನನು ಓಡಿಬಂದು ಅವನನ್ನು ಸೆರೆಹಿಡಿದನು. ಅನಂತರ ಅವರು ರಥದಲ್ಲಿ ನಿಂತಿದ್ದ ದುಃಶಾಸನನನ್ನು ಸುತ್ತುವರೆದು ಸೆರೆಹಿಡಿದರು. ಇತರರು ವಿವಿಂಶತಿ, ವಿಂದ-ಅನುವಿಂದರು ಮತ್ತು ರಾಜಪತ್ನಿಯರ ಮೇಲೆ ಆಕ್ರಮಣ ಮಾಡಿದರು. ಅವರು ದುಃಶಾಸನ, ದುರ್ವಿಷಹ, ದುರ್ಮುಖ, ದುರ್ಜಯ, ಮತ್ತು ರಾಜಪತ್ನಿಯರೆಲ್ಲರನ್ನೂ ಬಂಧಿಗಳನ್ನಾಗಿ ಮಾಡಿದರು.
ಗಂಧರ್ವರಿಂದ ಹೊಡೆದೋಡಿಸಲ್ಪಟ್ಟ ದುರ್ಯೋಧನನ ಸೇನೆಯು ಮೊದಲೇ ಗಾಯಗೊಂಡವರೊಂದಿಗೆ ಪಾಂಡವರ ಬಳಿ ಹೋಯಿತು. ದುರ್ಯೋಧನನ ಎಲ್ಲ ಅಮಾತ್ಯರೂ ದೀನಸ್ವರದಲ್ಲಿ ಕೂಗುತ್ತಾ ಯುಧಿಷ್ಠಿರನಲ್ಲಿಗೆ ಬಂದರು. ಯುಧಿಷ್ಠಿರನನ್ನು ಬೇಡುತ್ತಿದ್ದ ಅವರನ್ನು ನೋಡಿ ಭೀಮಸೇನನು ಹೇಳಿದನು: “ನಾವೇ ಮಾಡಬೇಕಾದುದನ್ನು ಗಂಧರ್ವರು ಮಾಡಿದರೆಂದರೆ ತಪ್ಪು ಮಾಡಿದವರಿಗೆ ಶಿಕ್ಷೆ ದೊರಕಿದಂತಾಯಿತು. ಲೋಕದಲ್ಲಿ ನಮಗೆ ಒಳ್ಳೆಯದನ್ನು ಬಯಸುವವರಿದ್ದಾರೆ ಮತ್ತು ಅವರು ನಮ್ಮ ಹತ್ತಿರವೇ, ನಾವು ನೋಡುತ್ತಿದ್ದಂತೆಯೇ, ನಮ್ಮ ಭಾರವನ್ನು ಕಳೆದು ಸಂತೋಷವನ್ನು ತಂದಿದ್ದಾರೆ ಎನ್ನುವುದು ನಮ್ಮ ಅದೃಷ್ಟವೇ ಸರಿ! ಸುಖದಲ್ಲಿದ್ದ ಈ ದುರ್ಮತಿಯು ಕಷ್ಟದಲ್ಲಿರುವ ನಮ್ಮನ್ನು ನೋಡಲು ಬಂದಿದ್ದನು. ಅವನ ಅಧರ್ಮಕ್ಕಾಗಿ ಅವನೇ ಈ ರೀತಿಯ ಶಿಕ್ಷೆಗೊಳಗಾಗಿದ್ದಾನೆ!”
ಹೀಗೆ ಕೋಪದಿಂದ ಮಾತನಾಡುತ್ತಿದ್ದ ಭೀಮನಿಗೆ ಯುಧಿಷ್ಠಿರನು ಹೇಳಿದನು: “ಇದು ಗಡುಸಾಗಿರುವ ಕಾಲವಲ್ಲ! ಕಷ್ಟದಿಂದಿರುವ, ಭಯಾರ್ತರಾಗಿ ನಮ್ಮ ಶರಣು ಬಂದಿರುವ ಇವರಿಗೆ ನೀನು ಏಕೆ ಹೀಗೆ ಮಾತನಾಡುತ್ತಿರುವೆ? ದಾಯಾದಿಗಳಲ್ಲಿ ಭೇದ-ಕಲಹಗಳು ನಡೆಯುತ್ತವೆ. ವೈರತ್ವವು ಮುಂದುವರೆದರೂ ಕುಟುಂಬ ಧರ್ಮವು ನಶಿಸುವುದಿಲ್ಲ. ಹೊರಗಿನವರು ಯಾರಾದರೂ ಕುಲದವರನ್ನು ಆಕ್ರಮಣಿಸಿದರೆ ಸಂತರು ಆ ಹೊರಗಿನವರ ಉದ್ಧಟತನವನ್ನು ಸಹಿಸುವುದಿಲ್ಲ. ಆ ದುರ್ಬುದ್ಧಿ ಗಂಧರ್ವನು ಬಹುಕಾಲದಿಂದ ನಾವು ಇಲ್ಲಿಯೇ ವಾಸಿಸುತ್ತಿದ್ದೇವೆಂದು ತಿಳಿದೂ, ನಮ್ಮನ್ನು ನಿರ್ಲಕ್ಷಿಸಿ, ನಮಗೆ ಅಪ್ರಿಯವಾದುದನ್ನು ಮಾಡಿದ್ದಾನೆ. ಗಂಧರ್ವರು ರಣದಲ್ಲಿ ಬಲವನ್ನುಪಯೋಗಿಸಿ ದುರ್ಯೋಧನನನ್ನು ಸೆರೆಹಿಡಿದು ಮತ್ತು ಸ್ತ್ರೀಯರನ್ನು ಅತಿಕ್ರಮಿಸಿದುದರಿಂದ ಹೊರಗಿನವರು ನಮ್ಮ ಕುಲಕ್ಕೆ ಪೆಟ್ಟುಕೊಟ್ಟಂತೆ ಆಗಲಿಲ್ಲವೇ? ತಮ್ಮಂದಿರೇ! ಶರಣು ಬಂದಿರುವವರನ್ನು ಮತ್ತು ಕುಲವನ್ನು ಉಳಿಸಲು ಎದ್ದೇಳಿ! ಬೇಗನೇ ಸಿದ್ಧರಾಗಿ! ಅರ್ಜುನ, ಯಮಳರು ಮತ್ತು ಭೀಮಸೇನ! ನೀವೆಲ್ಲರೂ ಸುಯೋಧನನನ್ನು ಸೆರೆಯಿಂದ ಬಿಡುಗಡೆಗೊಳಿಸಿ! ರಥಗಳನ್ನೇರಿ ಗಂಧರ್ವರೊಡನೆ ಯುದ್ಧಮಾಡಿ ಸುಯೋಧನನನ್ನು ಬಿಡುಗಡೆಮಾಡಿ! ಭೀಮಸೇನ! ವರಪ್ರದಾನ, ರಾಜ್ಯ, ಪುತ್ರಜನ್ಮ, ಶತ್ರುವನ್ನು ಕಷ್ಟದಿಂದ ಬಿಡುಗಡೆಗೊಳಿಸುವುದು ಇವುಗಳಲ್ಲಿ ಕೊನೆಯದು ಮೊದಲ ಮೂರಕ್ಕೆ ಸಮನಾದುದು! ಸುಯೋಧನನು ಸಹಾಯವನ್ನು ಕೇಳುತ್ತಿದ್ದಾನೆ ಮತ್ತು ಅವನು ಬದುಕಿರಲು ನಿನ್ನ ಬಾಹುಬಲವನ್ನು ಆಶ್ರಯಿಸಿದ್ದಾನೆ ಎನ್ನುವುದಕ್ಕಿಂತ ಹೆಚ್ಚಿನದು ಬೇರೆ ಏನಿದೆ? ಈ ಯಜ್ಞವು ನಡೆಯದೇ ಇರುತ್ತಿದ್ದರೆ ಸ್ವಯಂ ನಾನೇ ಹೋಗುತ್ತಿದ್ದೆ! ಸಾಮದಿಂದಲೇ ಸುಯೋಧನನನ್ನು ಬಿಡುಗಡೆಗೊಳಿಸಲು ಎಲ್ಲ ಉಪಾಯಗಳನ್ನೂ ಬಳಸಿ. ಆದರೆ ಸಾಮದಿಂದ ಗಂಧರ್ವರಾಜನು ಅವನನ್ನು ಹಿಂದಿರುಗಿಸದೇ ಇದ್ದರೆ ಮೃದುಪರಾಕ್ರಮವನ್ನುಪಯೋಗಿಸಿ ಅವನನ್ನು ಬಿಡುಗಡೆಗೊಳಿಸಿ. ಮೃದು ಯುದ್ಧಕ್ಕೂ ಅವರು ಕೌರವನನ್ನು ಬಿಡುಗಡೆಗೊಳಿಸದೇ ಇದ್ದರೆ ಸರ್ವ ಉಪಾಯಗಳಿಂದ ಶತ್ರುವನ್ನು ನಿಗ್ರಹಿಸಿ ಅವನನ್ನು ಬಿಡುಗಡೆಗೊಳಿಸಿ ಬನ್ನಿ! ನನ್ನ ಈ ಯಜ್ಞಕರ್ಮಗಳು ಮುಗಿಯುವವರೆಗೆ ನಾನು ನಿಮಗೆ ಈ ಆದೇಶವನ್ನು ಕೊಡಬಲ್ಲೆ!”
ಯುಧಿಷ್ಠಿರನ ಆ ಮಾತನ್ನು ಕೇಳಿದ ಅರ್ಜುನನು ಗುರುವಾಕ್ಯದಂತೆ ಕೌರವರನ್ನು ಬಿಡುಗಡೆಗೊಳಿಸುವ ಈ ಪ್ರತಿಜ್ಞೆಯನ್ನು ಮಾಡಿದನು: “ಒಂದುವೇಳೆ ಗಂಧರ್ವನು ಸಾಮದಿಂದ ಧೃತರಾಷ್ಟ್ರನ ಮಕ್ಕಳನ್ನು ಬಿಡುಗಡೆ ಮಾಡದೇ ಇದ್ದರೆ ಇಂದು ಗಂಧರ್ವರಾಜನ ರಕ್ತವು ಭೂಮಿಯ ಮೇಲೆ ಬೀಳುತ್ತದೆ!”
ಅರ್ಜುನನು ದುರ್ಯೋಧನನನ್ನು ಚಿತ್ರಸೇನನ ಸೆರೆಯಿಂದ ಬಿಡಿಸಿದುದು
ಅನಂತರ ಅರ್ಜುನ ಮತ್ತು ನಕುಲ ಸಹದೇವರು, ಭೀಮಸೇನನನ್ನು ಮುಂದಿಟ್ಟುಕೊಂಡು, ಬಂಗಾರದಂತೆ ಹೊಳೆಯುತ್ತಿದ್ದ ಅಭೇದ್ಯ ಕವಚಗಳನ್ನು ಧರಿಸಿದರು. ಧ್ವಜಯುಕ್ತ ರಥವನ್ನೇರಿದ ಆ ಮಹಾರಥ ಪಾಂಡವರು ಬಿಲ್ಲುಬಾಣಗಳನ್ನು ಹಿಡಿದ ಅಗ್ನಿಯಂತೆಯೇ ಪ್ರಜ್ವಲಿಸುತ್ತಿದ್ದರು. ವೇಗವಾಗಿ ಹೋಗಬಲ್ಲ ಕುದುರೆಗಳನ್ನು ಕಟ್ಟಿದ ರಥಗಳಲ್ಲಿ ನಿಂತು ಆ ರಥಶಾರ್ದೂಲರು ಶೀಘ್ರದಲ್ಲಿಯೇ ಅಲ್ಲಿಂದ ಹೊರಟರು. ಮಹಾರಥಿ ಪಾಂಡುಪುತ್ರರು ಒಟ್ಟಿಗೇ ಹೊರಟಿದ್ದುದನ್ನು ಕಂಡ ಕೌರವ ಸೇನೆಯಲ್ಲಿ ಮಹಾ ಘೋಷವುಂಟಾಯಿತು. ಕ್ಷಣದಲ್ಲಿಯೇ ಜಯದಿಂದ ಉಬ್ಬಿದ್ದ ಗಂಧರ್ವರೂ ಮತ್ತು ವೇಗದಿಂದ ಬರುತ್ತಿದ್ದ ಪಾಂಡವ ಮಹಾರಥಿಗಳೂ ನಿರ್ಭೀತರಾಗಿ ಆ ವನದಲ್ಲಿ ಪರಸ್ಪರರ ಎದುರಾದರು. ಲೋಕಪಾಲರಂತೆ ಸಿದ್ಧರಾಗಿ ಬೆಳಗುತ್ತಿದ್ದ ಪಾಂಡವರನ್ನು ನೋಡಿ ಗಂಧರ್ವರು ವ್ಯೂಹವನ್ನು ರಚಿಸಿ ಯುದ್ಧಕ್ಕೆ ನಿಂತರು. ಧರ್ಮರಾಜನ ಮಾತಿನಂತೆ ಪಾಂಡವರು ಮೊದಲು ಮೃದು ಯುದ್ಧದಲ್ಲಿ ತೊಡಗಿದರು. ಆದರೆ ಗಂಧರ್ವರಾಜನ ಮಂದಚೇತನ ಸೈನಿಕರು ಮೃದುತ್ವದಿಂದ ಏನು ಶ್ರೇಯಸ್ಸಾಗಬಹುದು ಎನ್ನುವುದನ್ನು ತಿಳಿಯಲು ಅಶಕ್ಯರಾದರು. ಆಗ ಅರ್ಜುನನು ಸಾಂತ್ವಪೂರ್ವಕವಾದ ಈ ಮಾತನ್ನು ಹೇಳಿದನು: “ಪರದಾರೆಯರನ್ನು ಕಾಡಿಸುವ ಮತ್ತು ಮನುಷ್ಯರೊಂದಿಗೆ ಒಡನಾಡುವ ಈ ಜಿಗುಪ್ಸೆಯ ಕೆಲಸವು ಗಂಧರ್ವರಾಜನಿಗೆ ಸರಿಯಾದುದಲ್ಲ. ಧರ್ಮರಾಜನ ಶಾಸನದಂತೆ ಈ ಧೃತರಾಷ್ಟ್ರಸುತರನ್ನೂ ಅವರ ಪತ್ನಿಯರನ್ನೂ ಬಿಟ್ಟುಬಿಡಿ!”
ಆಗ ಗಂಧರ್ವರು ಮುಗುಳ್ನಕ್ಕು ಪಾರ್ಥನಿಗೆ ಈ ಮಾತನ್ನಾಡಿದರು: “ಭೂಮಿಯಲ್ಲಿ ನಾವು ಒಬ್ಬನದೇ ಮಾತಿನಂತೆ ನಡೆದುಕೊಳ್ಳುತ್ತೇವೆ. ಸುರೇಶ್ವರನ ಹೊರತಾಗಿ ಅನ್ಯರ್ಯಾರೂ ನಮ್ಮನ್ನು ಆಳುವುದಿಲ್ಲ!” ಗಂಧರ್ವರು ಹೀಗೆ ಹೇಳಲು ಧನಂಜಯನು ಗಂಧರ್ವರಿಗೆ ಪುನಃ ಈ ಮಾತುಗಳಿಂದ ಉತ್ತರಿಸಿದನು: “ಗಂಧರ್ವರೇ! ಸಾಮದಿಂದ ಧೃತರಾಷ್ಟ್ರಜರನ್ನು ಬಿಡದಿದ್ದರೆ ವಿಕ್ರಮದಿಂದ ನಾನೇ ಸುಯೋಧನನನ್ನು ಬಿಡುಗಡೆಗೊಳಿಸುತ್ತೇನೆ!” ಹೀಗೆ ಹೇಳಿ ಸವ್ಯಸಾಚೀ ಧನಂಜಯನು ಆಕಾಶದಲ್ಲಿ ಹಾರುವ ಹರಿತ ಬಾಣಗಳನ್ನು ಆಕಾಶದಲ್ಲಿ ಸಂಚರಿಸುವ ಗಂಧರ್ವರ ಮೇಲೆ ಪ್ರಯೋಗಿಸಿದನು. ಹಾಗೆಯೇ ಬಲೋತ್ಕಟ ಗಂಧರ್ವರು ಪಾಂಡವರ ಮೇಲೆ ಶರಗಳ ಮಳೆಯನ್ನು ಸುರಿಸಿದರು. ಆಗ ತರಸ್ವೀ ಗಂಧರ್ವರ ಮತ್ತು ಭೀಮವೇಗೀ ಪಾಂಡವರ ನಡುವೆ ಯುದ್ಧವು ನಡೆಯಿತು.
ದಿವ್ಯಾಸ್ತ್ರಸಂಪನ್ನರಾಗಿದ್ದ ಗಂಧರ್ವರು ಪಾಂಡವರನ್ನು ಎಲ್ಲಕಡೆಗಳಿಂದಲೂ ಸುತ್ತುವರೆದು ಉರಿಯುತ್ತಿರುವ ಬಾಣಗಳನ್ನು ಸುರಿಸಿದರು. ನಾಲ್ವರು ವೀರ ಪಾಂಡವರು ಮತ್ತು ಸಹಸ್ರಾರು ಗಂಧರ್ವರು ಪರಸ್ಪರರ ಮೇಲೆ ಎರಗುತ್ತಿದ್ದ ಆ ಯುದ್ಧವು ಅದ್ಭುತವಾಗಿತ್ತು. ಕರ್ಣ ಹಾಗೂ ದುರ್ಯೋಧನರ ರಥಗಳನ್ನು ಹೇಗೆ ಚೂರು ಚೂರು ಮಾಡಿದ್ದರೋ ಹಾಗೆ ಗಂಧರ್ವರು ಪಾಂಡವರ ರಥಗಳನ್ನೂ ಪುಡಿಮಾಡಲು ತೊಡಗಿದರು. ರಣದಲ್ಲಿ ನೂರಾರು ಗಂಧರ್ವರು ಮೇಲೆ ಬೀಳಲು ಆ ಪಾಂಡವರು ಅನೇಕ ಶರವರ್ಷಗಳಿಂದ ಅವರನ್ನು ತಡೆಹಿಡಿದರು. ಎಲ್ಲಕಡೆಗಳಿಂದಲೂ ಶರವರ್ಷಗಳಿಗೆ ಸಿಲುಕಿದ ಆ ಆಕಾಶಗಾಮೀ ಗಂಧರ್ವರು ಪಾಂಡುಪುತ್ರರ ಸಮೀಪ ಬರಲೂ ಅಶಕ್ಯರಾದರು. ಗಂಧರ್ವರು ಸಿಟ್ಟಿಗೇಳುತ್ತಿದ್ದಾರೆ ಎಂದು ನೋಡಿದ ಅರ್ಜುನನು ದಿವ್ಯ ಮಹಾಸ್ತ್ರಗಳನ್ನು ಪ್ರಯೋಗಿಸಿದನು. ಆಗ್ನೇಯಾಸ್ತ್ರದಿಂದ ಅವನು ಸಹಸ್ರ ಸಹಸ್ರ ಗಂಧರ್ವರನ್ನು ಯಮಸಾದನಕ್ಕೆ ಕಳುಹಿಸಿದನು. ಆಗ ಬಲಿಗಳಲ್ಲಿ ಶ್ರೇಷ್ಠ ಭೀಮಸೇನನು ನಿಶಿತ ಶರಗಳಿಂದ ನುರಾರು ಗಂಧರ್ವರನ್ನು ಸಂಹರಿಸಿದನು. ಬಲೋತ್ಕಟರಾಗಿ ಯುದ್ಧಮಾಡುತ್ತಿದ್ದ ಮಾದ್ರೀಪುತ್ರರೀರ್ವರೂ ಕೂಡ ನೂರಾರು ಶತ್ರುಗಳನ್ನು ಬಂಧಿಸಿ ಸಂಹರಿಸಿದರು. ಆ ಮಹಾತ್ಮರ ದಿವ್ಯಾಸ್ತ್ರಗಳಿಂದ ವಧೆಗೊಳ್ಳುತ್ತಿರಲು ಗಂಧರ್ವರು ಧೃತರಾಷ್ಟ್ರನ ಮಕ್ಕಳೊಂದಿಗೆ ಆಕಾಶವನ್ನೇರಿದರು.
ಆಗ ಧನಂಜಯನು ಮಹಾ ಶರಜಾಲದಿಂದ ಎಲ್ಲ ಕಡೆಗಳಿಂದಲೂ ಅವರನ್ನು ಮುಚ್ಚಿ ತಡೆದನು. ಪಕ್ಷಿಗಳಂತೆ ಪಂಜರದಲ್ಲಿ ಬಂಧಿತರಾದ ಅವರು ಕ್ರೋಧದಿಂದ ಅರ್ಜುನನ ಮೇಲೆ ಗದೆ-ಶಕ್ತಿಗಳ ಮಳೆಗರೆದರು. ಆ ಮಳೆಯನ್ನು ಮಹಾಸ್ತ್ರದಿಂದ ತಡೆದು, ಧನಂಜಯನು ಗಂಧರ್ವರ ಶರೀರಗಳನ್ನು ಭಲ್ಲೆಗಳಿಂದ ಹೊಡೆದನು. ತಲೆ-ಕಾಲು-ಬಾಹುಗಳು ಬೀಳುತ್ತಿರಲು ಕಲ್ಲುಗಳ ಮಳೆಯೋ ಎಂಬಂತೆ ಭಯಂಕರವಾಗಿ ತೋರಿತು. ಮಹಾತ್ಮ ಅರ್ಜುನನಿಂದ ಗಂಧರ್ವರು ಹೀಗೆ ಸಾಯುತ್ತಿರಲು ಅವರು ಆಕಾಶದಲ್ಲಿ ನಿಂತು ಭೂಮಿಯ ಮೇಲಿದ್ದ ಅವನ ಮೇಲೆ ಶರಗಳ ಮಳೆಯನ್ನು ಸುರಿಸಿದರು. ಆದರೆ ಅವರ ಶರವರ್ಷಗಳನ್ನು ಅಸ್ತ್ರಗಳಿಂದ ತಡೆದು ಅರ್ಜುನನು ಗಂಧರ್ವರನ್ನು ತಿರುಗಿ, ಸ್ಥೂಲಕರ್ಣ, ಇಂದ್ರಜಾಲ, ಸೌರ ಮತ್ತು ಸೌಮ್ಯಾಸ್ತ್ರಗಳಿಂದ ಹೊಡೆದನು. ಕುಂತೀಪುತ್ರನ ಶರಗಳಿಂದ ಸುಡುತ್ತಿದ್ದ ಗಂಧರ್ವರು ಶಕ್ರನಿಂದ ದೈತ್ಯರು ಹೇಗೋ ಹಾಗೆ ಪರಮ ದುಃಖವನ್ನನುಭವಿಸಿದರು. ಮೇಲೆ ಹಾರಲು ಪ್ರಯತ್ನಿಸುತ್ತಿದ್ದಾಗ ಅರ್ಜುನನ ಶರಜಾಲವು ಅವರನ್ನು ತಡೆಯುತ್ತಿತ್ತು; ಭೂಮಿಯ ಮೇಲೆ ಹರಿದು ಹೋಗಬೇಕೆಂದರೆ ಅವನ ಭಲ್ಲೆಗಳು ತಡೆಯುತ್ತಿದ್ದವು. ಧೀಮಂತ ಕುಂತೀಪುತ್ರ ಅರ್ಜುನನಿಂದ ಗಂಧರ್ವರು ಪೀಡೆಗೊಳಪಟ್ಟಿದ್ದುದನ್ನು ನೋಡಿ ಚಿತ್ರಸೇನನು ಗದೆಯನ್ನು ಹಿಡಿದು ಅರ್ಜುನನ ಕಡೆ ಧಾವಿಸಿ ಬಂದನು.
ಚಿತ್ರಸೇನನು ಮೇಲೆರಗಲು ಅರ್ಜುನನು ಬಾಣಗಳಿಂದ ಅವನ ಬಲವಾದ ಉಕ್ಕಿನ ಗದೆಯನ್ನು ಏಳು ಭಾಗಗಳಾಗಿ ತುಂಡರಿಸಿದನು. ತನ್ನ ಗದೆಯು ತುಂಡಾದುದನ್ನು ನೋಡಿ ಚಿತ್ರಸೇನನು ಮಾಯೆಯಿಂದ ತನ್ನನ್ನು ಅದೃಷ್ಯನನ್ನಾಗಿಸಿಕೊಂಡು ಆಕಾಶದಲ್ಲಿ ನಿಂತು ದಿವ್ಯಾಸ್ತ್ರಗಳೊಂದಿಗೆ ಪಾಂಡವನೊಡನೆ ಯುದ್ಧಮಾಡತೊಡಗಿದನು. ಆ ಗಂಧರ್ವರಾಜನು ಅಂತರ್ಧಾನನಾದುದನ್ನು ಕಂಡು ಅರ್ಜುನನು ಆಕಾಶಗಾಮೀ ಅಸ್ತ್ರಗಳನ್ನು ಅಭಿಮಂತ್ರಿಸಿ ಪ್ರಯೋಗಿಸಿ ಅವನನ್ನು ಹೊಡೆದನು. ನಂತರ ಶಬ್ಧವೇದಿಯನ್ನುಪಯೋಗಿಸಿ ಅವನ ಅಂತರ್ಧಾನತ್ವವನ್ನು ಕೊನೆಗೊಳಿಸಿದನು. ಅರ್ಜುನನ ಅಸ್ತ್ರಗಳಿಂದ ಪೀಡಿತನಾದ ಚಿತ್ರಸೇನನು ಅರ್ಜುನನಿಗೆ ಕಾಣಿಸಿಕೊಂಡನು. ಯುದ್ಧದಲ್ಲಿ ದುರ್ಬಲನಾಗಿದ್ದ ಸಖ ಚಿತ್ರಸೇನನನ್ನು ನೋಡಿ ಅರ್ಜುನನು ತಾನು ಬಿಟ್ಟಿದ್ದ ಅಸ್ತ್ರಗಳನ್ನು ಹಿಂದೆ ತೆಗೆದುಕೊಂಡನು. ಧನಂಜಯನು ಅಸ್ತ್ರಗಳನ್ನು ಹಿಂತೆಗೆದುಕೊಂಡಿದುದನ್ನು ನೋಡಿ ಇತರ ಪಾಂಡವರೂ ಹಾರುತ್ತಿದ್ದ ಕುದುರೆಗಳನ್ನೂ, ವೇಗವಾಗಿ ಹೋಗುತ್ತಿದ್ದ ಬಾಣಗಳನ್ನೂ, ಬಿಲ್ಲುಗಳನ್ನೂ ತಡೆಹಿಡಿದರು. ಚಿತ್ರಸೇನ, ಭೀಮ, ಅರ್ಜುನ ಮತ್ತು ಯಮಳರು ರಥದಲ್ಲಿ ನಿಂತೇ ಪರಸ್ಪರರ ಕುಶಲವನ್ನು ಕೇಳಿಕೊಂಡರು.
ಆಗ ಅರ್ಜುನನು ಆ ಗಂಧರ್ವಸೇನೆಯ ಮಧ್ಯೆ ನಗುತ್ತಾ ಚಿತ್ರಸೇನನಿಗೆ ಹೇಳಿದನು: “ವೀರ! ಏಕೆ ನೀನು ಕೌರವರನ್ನು ಶಿಕ್ಷಿಸಲು ತೊಡಗಿದೆ? ಏಕೆ ಸುಯೋಧನನನ್ನು ಅವನ ಪತ್ನಿಯರೊಂದಿಗೆ ಸೆರೆಹಿಡಿದೆ?”
ಚಿತ್ರಸೇನನು ಹೇಳಿದನು: “ಧನಂಜಯ! ಅಲ್ಲಿ ಕುಳಿತಿರುವ ಮಹಾತ್ಮ ಇಂದ್ರನಿಗೆ ಈ ಮಹಾಪಾಪಿ ದುರ್ಯೋಧನ ಮತ್ತು ಕರ್ಣರ ಉದ್ದೇಶವು ತಿಳಿದಿತ್ತು. ನೀವು ವನದಲ್ಲಿ ವಾಸಿಸುತ್ತಿದ್ದೀರಿ ಮತ್ತು ಅನರ್ಹರಾದರೂ ಕಷ್ಟಗಳನ್ನು ಅನುಭವಿಸುತ್ತಿದ್ದೀರಿ ಎಂದು ತಿಳಿದು ಇವರು ನಿಮ್ಮನ್ನು ಮತ್ತು ಯಶಸ್ವಿನೀ ದ್ರೌಪದಿಯನ್ನು ಅಣಗಿಸಲು ಇಲ್ಲಿಗೆ ಬಂದಿದ್ದಾರೆ. ಅವರ ಇಂಗಿತವನ್ನು ತಿಳಿದ ಸುರೇಶ್ವರ ಇಂದ್ರನು ನನಗೆ “ಹೋಗು! ಅಮಾತ್ಯರೊಂದಿಗೆ ದುರ್ಯೋಧನನನ್ನು ಬಂಧಿಸಿ ಇಲ್ಲಿಗೆ ಕರೆದುಕೊಂಡು ಬಾ! ಯುದ್ಧದಲ್ಲಿ ಅವನ ಸಹೋದರರೊಂದಿಗೆ ಧನಂಜಯನನ್ನು ರಕ್ಷಿಸು. ಏಕೆಂದರೆ ಆ ಪಾಂಡವನು ನಿನ್ನ ಪ್ರಿಯ ಸಖ ಮತ್ತು ಶಿಷ್ಯ!” ದೇವರಾಜನ ವಚನದಂತೆ ನಾನು ಬೇಗ ಇಲ್ಲಿಗೆ ಬಂದೆ. ಈ ದುರಾತ್ಮನನ್ನು ಬಂಧಿಸಿ ಸುರಾಲಯಕ್ಕೆ ಹೋಗುತ್ತೇನೆ.”
ಅರ್ಜುನನು ಹೇಳಿದನು: “ಚಿತ್ರಸೇನ! ನನಗೆ ಪ್ರಿಯವಾದುದನ್ನು ಮಾಡಬೇಕೆಂದರೆ ಧರ್ಮರಾಜನ ಸಂದೇಶದಂತೆ ನಮ್ಮ ಭ್ರಾತಾ ಸುಯೋಧನನನ್ನು ಬಿಟ್ಟುಬಿಡು!”
ಚಿತ್ರಸೇನನು ಹೇಳಿದನು: “ನಿತ್ಯ ಪಾಪಿಯೂ ಅತಿದುಷ್ಟನೂ ಆಗಿರುವ ಇವನು ಬಿಡುಗಡೆಗೆ ಅರ್ಹನಲ್ಲ! ಧನಂಜಯ! ಇವನು ಧರ್ಮರಾಜನನ್ನೂ ಕೃಷ್ಣೆಯನ್ನೂ ಕಾಡಿಸಿದ್ದಾನೆ. ಮಹಾವ್ರತ ಧರ್ಮರಾಜನಿಗೆ ಇವನ ಉದ್ದೇಶವು ತಿಳಿದಿಲ್ಲ. ಇದನ್ನು ಕೇಳಿ, ಬಯಸಿದುದನ್ನು ಮಾಡು!”
ಆಗ ಅವರೆಲ್ಲರೂ ಯುಧಿಷ್ಠಿರನ ಬಳಿ ಹೋದರು. ಗಂಧರ್ವರಾಜನು ಕೌರವನ ದುಷ್ಕೃತ್ಯಗಳೆಲ್ಲವನ್ನೂ ಅವನಿಗೆ ಹೇಳಿದನು. ಅದನ್ನು ಕೇಳಿದ ಯುಧಿಷ್ಠಿರನು ಕೌರವರೆಲ್ಲರನ್ನೂ ಬಿಡುಗಡೆಮಾಡಿ ಎಂದು ಹೇಳಿ, ಇಂತೆಂದನು: “ನೀವು ಶಕ್ತಿಯಲ್ಲಿ ಬಲಿಷ್ಠರಾಗಿದ್ದರೂ ಅಮಾತ್ಯ ಮತ್ತು ಜ್ಞಾತಿಬಾಂಧವರೊಡನಿದ್ದ ಈ ಸುಯೋಧನನೊಡನೆ ದುರ್ವೃತ್ತಿಯನ್ನೆಸಗಲಿಲ್ಲ ಎನ್ನುವುದು ಒಳ್ಳೆಯದೇ ಆಯಿತು. ಮಹಾಖೇಚರರೇ! ಕುಲವನ್ನು ಅತಿಕ್ರಮಿಸದೇ ಈ ದುರಾತ್ಮನನ್ನು ಬಿಡುಗಡೆ ಮಾಡಿ ನೀವು ನನಗೆ ದೊಡ್ಡ ಉಪಕಾರವನ್ನು ಮಾಡಿದ್ದೀರಿ. ನಿಮ್ಮ ದರ್ಶನದಿಂದ ನಾವು ಸಂತುಷ್ಟರಾಗಿದ್ದೇವೆ. ನಿಮಗಿಷ್ಟವಾದುದನ್ನು ಆಜ್ಞಾಪಿಸಿ! ಬೇಕಾದುದನ್ನು ಪಡೆದು ಬೇಗ ಹೊರಡಿ!” ಧೀಮಂತ ಪಾಂಡುಪುತ್ರನಿಂದ ಬೀಳ್ಕೊಂಡು ಸಂತೋಷಗೊಂಡ ಗಂಧರ್ವರು ಚಿತ್ರಸೇನನನ್ನು ಮುಂದುಟ್ಟುಕೊಂಡು ಅಪ್ಸರೆಯರೊಡನೆ ಹೊರಟು ಹೋದರು. ದೇವರಾಜ ಇಂದ್ರನಾದರೋ ದಿವ್ಯ ಅಮೃತದ ಮಳೆಸುರಿಸಿ ಯುದ್ಧದಲ್ಲಿ ಮೃತರಾಗಿದ್ದ ಗಂಧರ್ವರನ್ನು ಪುನರ್ಜೀವಗೊಳಿಸಿದನು.
ಪಾಂಡವರು ರಾಜಪತ್ನಿಯರೊಂದಿಗೆ ತಮ್ಮ ಕುಲದವರನ್ನು ಬಿಡುಗಡೆ ಗೊಳಿಸಿ ಸಂತೋಷಗೊಂಡರು. ಭ್ರಾತೃಗಳೊಂದಿಗೆ ದುರ್ಯೋಧನನನ್ನು ಬಿಡುಗಡೆ ಮಾಡಿಸಿದ ಯುಧಿಷ್ಠಿರನು ಪ್ರೀತಿಯಿಂದ ಈ ಮಾತುಗಳನ್ನಾಡಿದನು: “ಭಾರತ! ತಮ್ಮ! ಎಂದೂ ಈ ರೀತಿಯ ಸಾಹಸವನ್ನು ಮಾಡಬೇಡ. ಸಾಹಸಿಗಳು ಸುಖವನ್ನು ಹೊಂದುವುದಿಲ್ಲ. ನಿನಗಿಷ್ಟಬಂದಂತೆ ಒಳ್ಳೆಯದಾಗಿ ನಿನ್ನ ತಮ್ಮಂದಿರೊಡನೆ ಮನೆಗೆ ಮರಳು. ಬೇಸರಪಟ್ಟುಕೊಳ್ಳಬೇಡ!”
ಪಾಂಡವರಿಂದ ಬೀಳ್ಕೊಂಡ ರಾಜಾ ದುರ್ಯೋಧನನು ನಾಚಿಕೆಯಿಂದ ಪೀಡಿತನಾಗಿ ತನ್ನ ನಗರದ ಕಡೆ ಹೊರಟನು. ಆ ಕೌರವರು ಹೊರಟು ಹೋಗಲು ವೀರ ಕುಂತೀಪುತ್ರ ಯುಧಿಷ್ಠಿರನು ತಮ್ಮಂದಿರೊಂದಿಗೆ ದ್ವಿಜಾತಿ-ತಪೋಧನರಿಂದ ಪೂಜಿತನಾಗಿ, ಅಮರರಿಂದ ಶಕ್ರನು ಹೇಗೋ ಹಾಗೆ ಎಲ್ಲರಿಂದ ಸುತ್ತುವರೆಯಲ್ಪಟ್ಟು, ಆ ದ್ವೈತವನದಲ್ಲಿ ಸಂತೋಷದಿಂದ ವಿಹರಿಸಿದನು.