ಕುಂಡಲಾಹರಣ: ಇಂದ್ರನು ಕರ್ಣನ ಕವಚ-ಕುಂಡಲಗಳನ್ನು ಬೇಡಿ ಪಡೆದುದು

ಹನ್ನೆರಡನೆಯ ವರ್ಷವು ಮುಗಿದು ಹದಿಮೂರನೆಯದು ಕಾಲಿಡುತ್ತಿರುವಾಗ ಪಾಂಡವರಿಗೆ ಹಿತವನ್ನುಂಟುಮಾಡಲೋಸುಗ ಇಂದ್ರನು ಕರ್ಣನಲ್ಲಿ ಭಿಕ್ಷೆಬೇಡಲು ಹೊರಟನು. ಕರ್ಣನ ಕುಂಡಲಗಳ ಕುರಿತು ಇಂದ್ರನು ಮಾಡಿದ ಉಪಾಯವನ್ನು ತಿಳಿದ ಸೂರ್ಯನು ಕರ್ಣನ ಬಳಿ ಬಂದನು. ಕರ್ಣನು ಸುಖಮಯ ಹಾಸಿಗೆಯ ಮೇಲೆ ವಿಶ್ವಾಸದಿಂದ ಮಲಗಿಕೊಂಡಿರುವಾಗ ರಾತ್ರಿಯ ಕೊನೆಯಲ್ಲಿ ಪುತ್ರಸ್ನೇಹ ಮತ್ತು ಕೃಪೆಗಳಿಂದ ಮುಳುಗಿಹೋಗಿದ್ದ ಸೂರ್ಯನು ವೇದವಿದ ರೂಪವಂತ ಬ್ರಾಹ್ಮಣನ ವೇಷದಲ್ಲಿ ಸ್ವಪ್ನದಲ್ಲಿ ಅವನಿಗೆ ಕಾಣಿಸಿಕೊಂಡನು. ಕರ್ಣನ ಹಿತಾರ್ಥವಾಗಿ ಅವನನ್ನು ಸಂತವಿಸುತ್ತಾ ಹೀಗೆ ಹೇಳಿದನು:

“ಕರ್ಣ! ಇಂದು ಸ್ನೇಹಭಾವದಿಂದ ನಾನು ಹೇಳುವ ಈ ಪರಮ ಹಿತದ ಮಾತನ್ನು ಕೇಳು! ಪಾಂಡವರ ಹಿತವನ್ನು ಬಯಸಿ ಶಕ್ರನು ಬ್ರಾಹ್ಮಣನ ವೇಷವನ್ನು ಧರಿಸಿ ಕುಂಡಲಗಳನ್ನು ಅಪಹರಿಸಲೋಸುಗ ನಿನ್ನ ಬಳಿ ಬರುತ್ತಾನೆ. ಭಿಕ್ಷೆಯನ್ನು ಕೇಳಿ ಬಂದವನಿಗೆ ನೀನು ಎಲ್ಲವನ್ನೂ ದಾನಮಾಡುವುದರ ಹೊರತು ನೀನೇ ಕೇಳುವುದಿಲ್ಲ ಎಂಬ ನಿನ್ನ ಈ ಶೀಲವು ಜಗತ್ತಿನ ಎಲ್ಲರಿಗೂ ತಿಳಿದೇ ಇದೆ. ಬ್ರಾಹ್ಮಣರು ಏನು ಕೇಳಿದರೂ ನೀನು ಕೊಡುತ್ತೀಯೆ. ನಿನ್ನಲ್ಲಿರುವ ಏನನ್ನೇ ಆದರೂ ಕೊಡುತ್ತೀಯೆ. ಇಲ್ಲವೆನ್ನುವುದಿಲ್ಲ. ನಿನ್ನ ಈ ಕ್ರಮವನ್ನು ತಿಳಿದ ಇಂದ್ರನು ಸ್ವಯಂ ಇಲ್ಲಿಗೆ ಬಂದು ನಿನ್ನಿಂದ ಕುಂಡಲ-ಕವಚಗಳನ್ನು ಭಿಕ್ಷೆಯಾಗಿ ಕೇಳುತ್ತಾನೆ. ಅವನು ಕೇಳುವಾಗ ನೀನು ಕುಂಡಲಗಳನ್ನು ಕೊಡಬಾರದು. ಬೇರೆ ಯಾವುದಾದರೂ ಪರಮ ಶಕ್ತಿಯನ್ನುಪಯೋಗಿಸಿ ಅವನನ್ನು ತೃಪ್ತಿಗೊಳಿಸು. ಇದರಲ್ಲಿಯೇ ನಿನ್ನ ಶ್ರೇಯಸ್ಸಿದೆ. ಅವನು ಕುಂಡಲಗಳನ್ನು ಕೇಳಿದಾಗ ನೀನು ಬಹುಕಾರಣಗಳಿಂದ – ಅನ್ಯ ಬಹುವಿಧದ ವಿತ್ತಗಳಿಂದ – ಪುನಃ ಪುನಃ ಅವನನ್ನು ತಡೆಯಬೇಕು. ಕುಂಡಲಗಳನ್ನು ಬಯಸುವ ಪುರಂಧರನನ್ನು ರತ್ನ-ಸ್ತ್ರೀ ಮತ್ತು ಬಹುವಿಧದ ಧನ-ಭೋಗಗಳಿಂದ ತೃಪ್ತಿಗೊಳಿಸು. ಆ ಸಹಜ ಶುಭ ಕುಂಡಲಗಳನ್ನು ನೀನು ಕೊಟ್ಟರೆ ನಿನ್ನ ಆಯುಸ್ಸನ್ನು ಕಳೆದುಕೊಂಡು ಮೃತ್ಯುವಿನ ವಶನಾಗುತ್ತೀಯೆ. ಈ ಕವಚ-ಕುಂಡಲಗಳಿಂದ ಸಂಯುಕ್ತನಾದ ನೀನು ರಣದಲ್ಲಿ ಅರಿಗಳಿಂದ ಅವಧ್ಯ ಎಂಬ ನನ್ನ ಈ ಮಾತನ್ನು ತಿಳಿದುಕೋ! ಏಕೆಂದರೆ ಇವೆರಡು ರತ್ನಗಳೂ ಅಮೃತದಿಂದ ಮೇಲಿದ್ದಿವೆ. ಆದುದರಿಂದ ಕರ್ಣ! ಜೀವಿಸಿರುವುದು ನಿನಗೆ ಪ್ರಿಯವಾದರೆ ಇವನ್ನು ರಕ್ಷಿಸಿಕೊಳ್ಳಬೇಕು.”

ಕರ್ಣನು ಹೇಳಿದನು: “ಭಗವನ್! ನನ್ನ ಮೇಲಿನ ಪರಮ ಸೌಹಾರ್ದದಿಂದ ಬ್ರಾಹ್ಮಣ ವೇಷದಲ್ಲಿ ಕಾಣಿಸಿಕೊಂಡಿರುವ ನೀನು ಯಾರೆಂದು ಹೇಳು!”

ಬ್ರಾಹ್ಮಣನು ಹೇಳಿದನು: “ಮಗೂ! ನಾನು ಸೂರ್ಯ. ನಿನ್ನ ಮೇಲಿನ ಸ್ನೇಹಭಾವದಿಂದ ನಿನಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ನಾನು ಹೇಳಿದಂತೆ ಮಾಡು. ಅದರಲ್ಲಿಯೇ ನಿನ್ನ ಪರಮ ಶ್ರೇಯಸ್ಸಿದೆ.”

ಕರ್ಣನು ಹೇಳಿದನು: “ಪ್ರಭು ಸೂರ್ಯನು ನನಗೆ ಇಂದು ಹೇಳಿದುದು ಅತ್ಯಂತ ಹಿತಕರವಾದುದೇನೋ ಹೌದು. ಆದರೆ ನನ್ನ ಈ ಮಾತುಗಳನ್ನು ಕೇಳು. ನಾನು ನಿನಗೆ ನಮಸ್ಕರಿಸಿ ಪ್ರೀತಿಯಿಂದ ಹೇಳುತ್ತಿದ್ದೇನೆ. ನನ್ನನ್ನು ನಿನ್ನ ಪ್ರಿಯನೆಂದು ತಿಳಿದಿದ್ದೀಯಾದರೆ ನನ್ನ ವ್ರತದಿಂದ ನನ್ನನ್ನು ತಪ್ಪಿಸಬೇಡ. ನನ್ನ ಈ ವ್ರತವನ್ನೇ ಇಡೀ ಲೋಕವು ತಿಳಿದಿದೆ. ನಾನು ಬ್ರಾಹ್ಮಣರಿಗೆ ಪ್ರಾಣವನ್ನೂ ಕೊಡುತ್ತೇನೆ ಎನ್ನುವುದು ಸಿದ್ಧ.  ಪಾಂಡವರ ಹಿತಾರ್ಥವಾಗಿ ಬ್ರಾಹ್ಮಣನ ವೇಷವನ್ನು ತಳೆದು ಶಕ್ರನೇ ನನ್ನಲ್ಲಿಗೆ ಭಿಕ್ಷೆ ಬೇಡಲು ಬಂದರೆ ಮೂರುಲೋಕಗಳಲ್ಲಿಯೂ ವಿಶ್ರುತವಾಗಿರುವ ನನ್ನ ಈ ಕೀರ್ತಿಯು ಕುಂದಬಾರದೆಂದು ನನ್ನ ಈ ಉತ್ತಮ ಕುಂಡಲ-ಕವಚಗಳನ್ನು ಅವನಿಗೆ ಕೊಡುತ್ತೇನೆ. ನನ್ನಂಥವರಿಗೆ ಪ್ರಾಣವನ್ನು ರಕ್ಷಿಸಿಕೊಂಡು ಆಯುಸ್ಸನ್ನು ವೃದ್ಧಿಗೊಳಿಸುವುದು ಯುಕ್ತವಲ್ಲ. ಮರಣವಾದರೂ ಲೋಕಸಮ್ಮತವಾದ ಯಶಸ್ಸನ್ನು ನೀಡುವಂಥಹುದೇ ಯುಕ್ತವಾದುದು. ಒಂದುವೇಳೆ ಇಂದ್ರನು ಪಾಂಡವರ ಹಿತಕ್ಕಾಗಿ ನನ್ನ ಕುಂಡಲಗಳನ್ನು ಭಿಕ್ಷೆಯಾಗಿ ಕೇಳಿಕೊಂಡು ಬಂದರೆ ನಾನು ಕವಚದೊಂದಿಗೆ ಕುಂಡಲಗಳನ್ನು ಅವನಿಗೆ ಕೊಡುತ್ತೇನೆ. ಇದು ಲೋಕದಲ್ಲಿ ನನಗೆ ಕೀರ್ತಿಕರವಾಗಿರುತ್ತದೆ ಮತ್ತು ಅವನಿಗೆ ಅಕೀರ್ತಿಯನ್ನುಂಟುಮಾಡುತ್ತದೆ. ದೇವ! ಲೋಕದಲ್ಲಿ ನಾನು ಜೀವಕ್ಕಿಂತಲೂ ಕೀರ್ತಿಯನ್ನು ಆರಿಸಿಕೊಳ್ಳುತ್ತೇನೆ. ಕೀರ್ತಿವಂತನು ಸ್ವರ್ಗವನ್ನು ಪಡೆಯುತ್ತಾನೆ. ಕೀರ್ತಿಯನ್ನು ಕಳೆದುಕೊಂಡವನು ನಶಿಸುತ್ತಾನೆ. ಏಕೆಂದರೆ ಲೋಕದಲ್ಲಿ ಕೀರ್ತಿಯೇ ತಾಯಿಯಂತೆ ಪುರುಷನನ್ನು ಹುಟ್ಟಿಸುತ್ತದೆ. ಆದರೆ ಅಕೀರ್ತಿಯು ಶರೀರದಲ್ಲಿ ಬದುಕಿದ್ದರೂ ಜೀವನವನ್ನು ಕೊಲ್ಲುತ್ತದೆ. ಕೀರ್ತಿಯೇ ಹೇಗೆ ನರನ ಆಯುಸ್ಸು ಎನ್ನುವುದರ ಕುರಿತು ಹಿಂದೆ ಸ್ವಯಂ ಧಾತೃವೇ ಈ ಶ್ಲೋಕವನ್ನು ಹಾಡಿದ್ದನು: ’ಪರಲೋಕದಲ್ಲಿ ಕೀರ್ತಿಯೇ ಮನುಷ್ಯನ ಪರಾಯಣ. ವಿಶುದ್ಧ ಕೀರ್ತಿಯು ಈ ಲೋಕದಲ್ಲಿಯೂ ಅವನ ಆಯುಸ್ಸನ್ನು ವರ್ಧಿಸುತ್ತದೆ.’ ಆದುದರಿಂದ ಈ ಶರೀರದೊಂದಿಗೆ ಹುಟ್ಟಿದವುಗಳನ್ನು ಕೊಟ್ಟು ಶಾಶ್ವತ ಕೀರ್ತಿಯನ್ನು ನಾನು ಹೊಂದುತ್ತೇನೆ. ಸಂಗ್ರಾಮದಲ್ಲಿ ಅನೇಕ ದುಷ್ಕರ ಕರ್ಮಗಳನ್ನೆಸಗಿ ಶರೀರವನ್ನು ಆಹುತಿಯನ್ನಾಗಿತ್ತು ಅಥವಾ ರಣದಲ್ಲಿ ಶತ್ರುಗಳನ್ನು ಜಯಿಸಿ ಯಶಸ್ಸನ್ನು ಪಡೆಯುತ್ತೇನೆ. ಜೀವವನ್ನು ಕೊಟ್ಟಾದರೂ ನನ್ನ ಕೀರ್ತಿಯನ್ನು ರಕ್ಷಿಸಿಕೊಳ್ಳುವುದು ನನ್ನ ವ್ರತವೆಂದು ತಿಳಿ!”

ಸೂರ್ಯನು ಹೇಳಿದನು: “ಕರ್ಣ! ನಿನಗೆ, ನಿನ್ನ ಸುಹೃದಯರಿಗೆ, ಪುತ್ರರಿಗೆ, ಭಾರ್ಯೆಯರಿಗೆ ಮತ್ತು ತಾಯಿ-ತಂದೆಯರಿಗೆ ಅಹಿತವಾದುದನ್ನು ಮಾಡಬೇಡ. ತಮ್ಮ ಶರೀರವನ್ನು ವಿರೋಧಿಸದೇ ತ್ರಿದಿವದಲ್ಲಿ ಯಶಸ್ಸು ಮತ್ತು ಸ್ಥಿರಕೀರ್ತಿಯನ್ನು ಪಡೆಯಲು ಪ್ರಾಣಿಗಳು ಬಯಸುತ್ತವೆ. ಆದರೆ ನೀನು ಪ್ರಾಣವನ್ನು ವಿರೋಧಿಸಿ ಶಾಶ್ವತ ಕೀರ್ತಿಯನ್ನು ಬಯಸುತ್ತಿರುವೆ! ನೀನು ಪಡೆಯುವ ಅದು ಪ್ರಾಣದೊಂದಿಗೆ ಹೊರಟುಹೋಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಬದುಕಿರುವವನ ಕೀರ್ತಿಯು ಉತ್ತಮ. ಭಸ್ಮೀಭೂತ ದೇಹಿ ಮೃತನ ಕೀರ್ತಿಯಿಂದ ಏನು ಪ್ರಯೋಜನ? ಸತ್ತವನಿಗೆ ಕೀರ್ತಿಯು ತಿಳಿಯದು! ಬದುಕಿರುವವನು ಕೀರ್ತಿಯನ್ನು ಅನುಭವಿಸುತ್ತಾನೆ. ಮೃತನ ಕೀರ್ತಿಯು ಹೆಣಕ್ಕೆ ಹಾಕಿದ ಮಾಲೆಯ ಹಾಗೆ! ನಿನ್ನ ಹಿತಕ್ಕಾಗಿ ನಾನು ಇದನ್ನು ಹೇಳುತ್ತಿದ್ದೇನೆ. ನೀನು ನನ್ನ ಭಕ್ತ. ಭಕ್ತರನ್ನು ನಾನು ರಕ್ಷಿಸಬೇಕು. ನನ್ನ ಮೇಲೆ ಭಕ್ತಿಯಿದ್ದರೆ ನಾನು ಹೇಳಿದ ಹಾಗೆ ಮಾಡು. ನಿನ್ನಲ್ಲಿ ಯಾವುದೋ ಒಂದು ದೇವನಿರ್ಮಿತ ವಿಶೇಷತೆಯಿದೆ. ಆದುದರಿಂದ ನಾನು ನಿನಗೆ ಹೇಳುತ್ತಿದ್ದೇನೆ. ಶಂಕಿಸದೇ ಇದನ್ನು ಮಾಡು! ದೇವತೆಗಳ ಗುಟ್ಟನ್ನು ತಿಳಿಯಲು ನಿನಗೆ ಸಾಧ್ಯವಿಲ್ಲ. ಆದುದರಿಂದ ಆ ಗುಟ್ಟನ್ನು ನಾನು ನಿನಗೆ ಹೇಳುವುದಿಲ್ಲ. ಸಮಯ ಬಂದಾಗ ನೀನು ಇದನ್ನು ತಿಳಿಯುತ್ತೀಯೆ. ಪುನಃ ಹೇಳುತ್ತಿದ್ದೇನೆ. ವಜ್ರಪಾಣಿಗೆ ನಿನ್ನ ಕುಂಡಲಗಳನ್ನು ಕೊಡಬೇಡ. ನಿತ್ಯವೂ ನೀನು ಅರ್ಜುನನೊಡನೆ ಸ್ಪರ್ಧಿಸುತ್ತಿದ್ದೀಯೆ. ಹಾಗೆಯೇ ಅರ್ಜುನನೂ ಕೂಡ ಯುದ್ಧದಲ್ಲಿ ನಿನ್ನೊಡನೆ ಸ್ಪರ್ಧಿಸುತ್ತಾನೆ. ಆದರೆ ಇಂದ್ರನೇ ಶರವಾಗಿ ಬಂದರೂ ಕುಂಡಲಗಳಿಂದ ಕೂಡಿದ ನಿನ್ನನ್ನು ಅರ್ಜುನನು ಜಯಿಸಲು ಶಕ್ಯನಿಲ್ಲ. ಆದುದರಿಂದ ಸಂಗ್ರಾಮದಲ್ಲಿ ಅರ್ಜುನನನ್ನು ಜಯಿಸಲು ಇಚ್ಛಿಸಿದರೆ ನೀನು ಈ ಶುಭ ಕುಂಡಲಗಳನ್ನು ಇಂದ್ರನಿಗೆ ಕೊಡಬಾರದು!”

ಕರ್ಣನು ಹೇಳಿದನು: “ಭಗವನ್! ನಿನ್ನ ಮೇಲಿದ್ದಷ್ಟು ಭಕ್ತಿಯು ನನಗೆ ಬೇರೆ ಯಾವ ದೇವನ ಮೇಲೂ ಇಲ್ಲ ಎನ್ನುವುದು ನಿನಗೆ ಚೆನ್ನಾಗಿ ತಿಳಿದಿದೆ. ಸದಾ ನಿನ್ನ ಮೇಲಿರುವಷ್ಟು ಭಕ್ತಿ ನನಗೆ ಬೇರೆ ಯಾರಲ್ಲಿಯೂ ಇಲ್ಲ – ನನ್ನ ಪತ್ನಿಯ ಮೇಲಿಲ್ಲ. ಪುತ್ರನ ಮೇಲಿಲ್ಲ. ನನ್ನ ಮೇಲೂ ಇಲ್ಲ. ನನ್ನ ಸುಹೃದಯರ ಮೇಲೂ ಇಲ್ಲ. ಮಹಾತ್ಮರು ಭಕ್ತಿಗೆ ಮೆಚ್ಚಿ ತಮ್ಮ ಭಕ್ತರ ಇಷ್ಟಗಳನ್ನು ಪೂರೈಸುತ್ತಾರೆ ಎಂದು ನನಗೆ ತಿಳಿದಿದೆ. ದಿವಿಯಲ್ಲಿ ಬೇರೆ ಯಾವ ದೇವತೆಯದ್ದೂ ಅಲ್ಲದ ಕರ್ಣನು ನಿನ್ನ ಇಷ್ಟಭಕ್ತ ಎಂದು ಅರಿತ ನೀನು ನನ್ನ ಹಿತದಲ್ಲಿಯೇ ಮಾತನಾಡಿದ್ದೀಯೆ. ಮತ್ತೊಮ್ಮೆ ನಾನು ನಿನಗೆ ಶಿರಸಾವಂದಿಸಿ ಪುನಃ ಪುನಃ ಕೇಳಿಕೊಳ್ಳುತ್ತಿದ್ದೇನೆ. ಸೂರ್ಯದೇವ! ನನ್ನ ಉತ್ತರವು ಒಂದೇ. ನನ್ನನ್ನು ನೀನು ಕ್ಷಮಿಸಬೇಕು! ಸುಳ್ಳಿಗೆ ಹೆದರುವಷ್ಟು ನಾನು ಮೃತ್ಯುವಿಗೆ ಹೆದರುವುದಿಲ್ಲ. ವಿಶೇಷವಾಗಿ ದ್ವಿಜರಿಗೆ ಮತ್ತು ಸರ್ವದಾ ಸತ್ಯವಂತರಿಗೆ ನಾನು ಎಲ್ಲವನ್ನೂ, ನನ್ನ ಜೀವವನ್ನು ಕೂಡ, ಕೊಡಲು ಸಿದ್ಧನಿದ್ದೇನೆ. ಅದರಲ್ಲಿ ವಿಚಾರಿಸುವುದೇನೂ ಇಲ್ಲ. ಇನ್ನು ಪಾಂಡವ ಫಲ್ಗುನನ ಕುರಿತು ನೀನು ಹೇಳಿದ ವಿಷಯ – ಇದರ ಬಗ್ಗೆ ನೀನು ದುಃಖ-ಸಂತಾಪಗಳನ್ನು ಪಡಬೇಕಾಗಿಲ್ಲ. ಅರ್ಜುನನನ್ನು ನಾನು ರಣದಲ್ಲಿ ಗೆಲ್ಲುತ್ತೇನೆ. ಜಾಮದಗ್ನಿ ಪರಶುರಾಮ ಮತ್ತು ದ್ರೋಣರಿಂದ ಪಡೆದ ಮಹಾಸ್ತ್ರಬಲವು ನನ್ನಲ್ಲಿದೆ. ವಜ್ರಿಯು ಬ್ರಾಹ್ಮಣವೇಷದಲ್ಲಿ ಬಂದು ನನ್ನ ಜೀವವನ್ನೂ ಬೇಡಿದರೂ ಅದನ್ನು ಅವನಿಗೆ ಕೊಡುತ್ತೇನೆ. ನನ್ನ ಈ ವ್ರತಕ್ಕೆ ಅನುಮತಿಯನ್ನು ನೀಡು!”

ಸೂರ್ಯನು ಹೇಳಿದನು: “ಮಗೂ! ಒಂದು ವೇಳೆ ನೀನು ವಜ್ರಿಗೆ ಶುಭ ಕುಂಡಲಗಳನ್ನು ಕೊಡುತ್ತೀಯಾದರೆ ಅವನಿಂದ ನೀನು ವಿಜಯವನ್ನು ಕೇಳಿಕೋ! ವ್ರತದ ಕಾರಣದಿಂದ ನೀನು ಆ ಕುಂಡಲಗಳನ್ನು ಇಂದ್ರನಿಗೆ ಕೊಡುವುದೇನೋ ಹೌದು. ಆದರೆ ಆ ಕುಂಡಲಗಳಿಂದ ಕೂಡಿದ್ದ ನೀನು ಯಾವುದೇ ಭೂತಗಳಿಗೂ ಅವಧ್ಯ. ಯುದ್ಧದಲ್ಲಿ ಅರ್ಜುನನಿಂದ ನಿನ್ನ ವಿನಾಶವನ್ನು ಬಯಸಿಯೇ ಇಂದ್ರನು ನಿನ್ನ ಕುಂಡಲಗಳನ್ನು ಅಪಹರಿಸಲು ಬರುತ್ತಿದ್ದಾನೆ. ನೀನು ಅವನನ್ನು ಆರಾಧಿಸಿ ಪುನಃ ಪುನಃ ಅವನಲ್ಲಿ ’ನನಗೆ ಅಮಿತ್ರರನ್ನು ನಾಶಪಡಿಸುವ ಅಮೋಘ ಶಕ್ತಿಯನ್ನು ಕೊಡು! ಆಗ ನಿನಗೆ ನನ್ನ ಉತ್ತಮ ಕುಂಡಲ-ಕವಚಗಳನ್ನು ಕೊಡುತ್ತೇನೆ’ ಎಂದು ಹೇಳಿ, ಇದೇ ನಿಯಮದಂತೆ ಅವನಿಗೆ ಕುಂಡಲಗಳನ್ನು ಕೊಡು. ಇದರಿಂದ ನೀನು ಸಂಗ್ರಾಮದಲ್ಲಿ ಶತ್ರುಗಳನ್ನು ಸಂಹರಿಸಬಲ್ಲೆ. ದೇವರಾಜನ ಶಕ್ತಿಯು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಶತ್ರುಗಳನ್ನು ಕೊಂದೇ ನಿನ್ನ ಕೈಸೇರುವುದು!”

ಈ ರೀತಿ ಹೇಳಿದ ಸೂರ್ಯನು ತಕ್ಷಣವೇ ಅಂತರ್ಧಾನನಾದನು. ಮರುದಿನ ಜಪದ ಅಂತ್ಯದಲ್ಲಿ ಕರ್ಣನು ಸೂರ್ಯನಿಗೆ ಸ್ವಪ್ನದಲ್ಲಿ ಕಂಡಿದುದನ್ನು ಕಂಡಂತೆ ಮತ್ತು ತಿಳಿದಂತೆ ಎಲ್ಲವನ್ನೂ ಸಂಪೂರ್ಣವಾಗಿ ನಿವೇದಿಸಿದನು. ಅದನ್ನು ಕೇಳಿದ ಭಗವಾನ್ ಸೂರ್ಯನು ನಗುತ್ತಾ “ಹಾಗೆಯೇ ಆಗಲಿ!” ಎಂದು ಹೇಳಿದನು. ಅದು ಹಾಗೆಯೇ ಆಗುತ್ತದೆ ಎಂದು ತಿಳಿದ ರಾಧೇಯ ಕರ್ಣನು ಶಕ್ತಿಯನ್ನೇ ಬಯಸಿ ಇಂದ್ರನ ಬರವನ್ನು ಕಾಯುತ್ತಿದ್ದನು.

ಪ್ರತಿದಿನ ಮಧ್ಯಾಹ್ನವು ಪ್ರಾಪ್ತವಾಗಲು ಕರ್ಣನು ಕೈಮುಗಿದು ನೀರಿನಲ್ಲಿ ನಿಂತು ಭಾನುಮಂತ ದಿವಾಕರನನ್ನು ಸ್ತುತಿಸುತ್ತಿದ್ದಾಗ ಅಲ್ಲಿ ಬ್ರಾಹ್ಮಣರು ಧನಕ್ಕಾಗಿ ಕಾಯುತ್ತ ನಿಂತಿರುತ್ತಿದ್ದರು. ಆ ಸಮಯದಲ್ಲಿ ದ್ವಿಜರು ಏನನ್ನು ಕೇಳಿದರೂ ಅವನು ಕೊಡದೇ ಇರುತ್ತಿರಲಿಲ್ಲ. ಹೀಗಿರಲು ಒಂದು ದಿನ ಇಂದ್ರನು ಬ್ರಾಹ್ಮಣನಾಗಿ “ಭಿಕ್ಷಾಂದೇಹಿ!” ಎಂದು ನಿಂತುಕೊಳ್ಳಲು “ನಿನಗೆ ಸ್ವಾಗತ!” ಎಂದು ರಾಧೇಯನು ಅವನಿಗೆ ಉತ್ತರಿಸಿದನು. “ಬಂಗಾರದ ಕೊರಳಿನ ಸುಂದರಿಯರನ್ನು ಕೊಡಲೇ ಅಥವಾ ಅನೇಕ ಗೋಕುಲಗಳುಳ್ಳ ಗ್ರಾಮಗಳನ್ನು ಕೊಡಲೇ?” ಎಂದು ಅವನು ಬ್ರಾಹ್ಮಣನಿಗೆ ಕೇಳಿದನು.

ಬ್ರಾಹ್ಮಣನು ಹೇಳಿದನು: “ಹಿರಣ್ಯಕಂಠದ ಸುಂದರಿಯರಾಗಲೀ ಸುಖವನ್ನು ಹೆಚ್ಚಿಸುವ ಇತರ ವಸ್ತುಗಳಾಗಲೀ ನನಗೆ ದಾನವಾಗಿ ಬೇಡ. ಬೇಕೆನಿಸುವವರಿಗೆ ಅವುಗಳನ್ನು ನೀಡು. ನಿನ್ನ ಈ ಸಹಜವಾಗಿರುವ ಕವಚ-ಕುಂಡಲಗಳು ನನಗೆ ಬೇಕು. ನೀನು ಸತ್ಯವ್ರತನಾಗಿರುವೆಯಾದರೆ ಅವುಗಳನ್ನು ಕತ್ತರಿಸಿ ಬೇಗನೆ ನನಗೆ ಕೊಡು. ಅದನ್ನೇ ಎಲ್ಲ ದಾನಕ್ಕಿಂತಲೂ ಮಿಗಿಲಾದುದೆಂದು ತಿಳಿದು ಬಯಸುತ್ತೇನೆ.”

ಕರ್ಣನು ಹೇಳಿದನು: “ಬ್ರಾಹ್ಮಣ! ನಾನು ನಿನಗೆ ಭೂಮಿ, ಸುಂದರಿಯರು, ಗೋವುಗಳು ಮತ್ತು ವರ್ಷಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಕೊಡುತ್ತೇನೆ. ಆದರೆ ಈ ಕವಚ-ಕುಂಡಲಗಳನ್ನಲ್ಲ!”

ಈ ರೀತಿ ಬಹುವಿಧದ ಬಹುವಾಕ್ಯಗಳಲ್ಲಿ ಆ ದ್ವಿಜನನ್ನು ಯಾಚಿಸಿದರೂ ಅವನು ಕರ್ಣನಿಂದ ಬೇರೆ ವರವನ್ನು ಕೇಳಲಿಲ್ಲ. ಯಥಾಶಕ್ತಿಯಾಗಿ ಸಂತವಿಸಿದರೂ ಯಥಾವಿಧಿಯಾಗಿ ಪೂಜಿಸಿದರೂ ಆ ದ್ವಿಜಶ್ರೇಷ್ಠನು ಬೇರೆ ಯಾವ ವರವನ್ನೂ ಬಯಸಲಿಲ್ಲ. ಅವನು ಬೇರೆ ಯಾವ ವರವನ್ನೂ ಕೇಳದಿದ್ದಾಗ ರಾಧೇಯನು ನಕ್ಕು ಪುನಃ ಈ ಮಾತುಗಳನ್ನಾಡಿದನು: “ವಿಪ್ರ! ನಾನು ಲೋಕದಲ್ಲಿ ಅವಧ್ಯನಾಗಿರಲೆಂದು ಅಮೃತದಿಂದ ಉದ್ಭವಿಸಿದ ಈ ಕವಚ-ಕುಂಡಲಗಳನ್ನು ಧರಿಸಿ ಹುಟ್ಟಿದ್ದೇನೆ. ಆದುದರಿಂದ ಇವುಗಳನ್ನು ನಾನು ಕೊಡುವುದಿಲ್ಲ. ಶತ್ರುಗಳಿಲ್ಲದೇ ಕ್ಷೇಮದಿಂದಿರುವ ನನ್ನ ಈ ವಿಶಾಲ ರಾಜ್ಯವನ್ನು ವಿಶ್ವಾಸದಿಂದ ಸ್ವೀಕರಿಸು. ಸಹಜವಾಗಿರುವ ಈ ಕುಂಡಲ-ಕವಚಗಳಿಂದ ವಿಮುಕ್ತನಾದ ನಾನು ಶತ್ರುಗಳಿಗೆ ಗಮನೀಯನಾಗುತ್ತೇನೆ!”

ಇಂದ್ರನು ಬೇರೆ ಯಾವ ವರವನ್ನೂ ಕೇಳದಿದ್ದಾಗ ಕರ್ಣನು ನಗುತ್ತಾ ಪುನಃ ಹೇಳಿದನು: “ಪ್ರಭೋ! ನೀನು ಯಾರೆಂದು ನನಗೆ ಮೊದಲೇ ಗೊತ್ತಿತ್ತು. ಶಕ್ರ! ನಿನ್ನಿಂದ ವರವನ್ನು ಪಡೆಯದೇ ನಾನು ಇವುಗಳನ್ನು ಕೊಡುವುದು ನ್ಯಾಯವಲ್ಲ. ಸಾಕ್ಷಾತ್ ದೇವೇಶ್ವರನಾದ ನೀನೇ ನನಗೆ ವರವನ್ನು ಕೊಡಬೇಕು. ಯಾಕೆಂದರೆ ನೀನು ಅನ್ಯ ಎಲ್ಲ ಭೂತಗಳ ಸೃಷ್ಟಿಕರ್ತ ಮತ್ತು ಈಶ್ವರ! ಒಂದುವೇಳೆ ನಾನು ನಿನಗೆ ಕುಂಡಲ-ಕವಚಗಳನ್ನು ಕೊಟ್ಟರೆ ನಾನು ವಧ್ಯನಾಗುತ್ತೇನೆ ಮತ್ತು ನೀನು ನಗೆಗೊಳಗಾಗುತ್ತೀಯೆ. ಈ ಒಪ್ಪಂದವನ್ನು ಮಾಡಿಕೊಂಡು ನೀನು ಈ ಉತ್ತಮ ಕುಂಡಲ-ಕವಚಗಳನ್ನು ತೆಗೆದುಕೋ. ಅನ್ಯಥಾ ನಾನು ಇವುಗಳನ್ನು ಕೊಡಬಯಸುವುದಿಲ್ಲ.”

ಶಕ್ರನು ಹೇಳಿದನು: “ನಾನು ಬರುವವನಿದ್ದೇನೆಂದು ರವಿಯು ನಿನಗೆ ಹೇಳಿದ್ದನು. ಅವನು ನಿನಗೆ ಎಲ್ಲವನ್ನೂ ಹೇಳಿರಬಹುದು. ಅದರಲ್ಲಿ ಸಂಶಯವೇ ಇಲ್ಲ. ಕರ್ಣ! ನಿನಗೆ ಬೇಕಾದುದನ್ನು ಬಯಸು. ಈ ವಜ್ರವನ್ನು ಬಿಟ್ಟು ನನ್ನಿಂದ ಏನು ಬೇಕೋ ಅದನ್ನು ಕೇಳಿಕೋ!”

ಆಗ ಕರ್ಣನು ಸಂತೋಷಗೊಂಡು ಇಂದ್ರನ ಬಳಿಸಾರಿ ಸಂಪೂರ್ಣಮಾನಸನಾಗಿ ಅವನ ಅಮೋಘ ಶಕ್ತಿಯನ್ನು ವರಿಸಿ ಹೇಳಿದನು: “ವಾಸವ! ಕವಚ-ಕುಂಡಲಗಳಿಗೆ ಬದಲಾಗಿ ನನಗೆ ರಣರಂಗದಲ್ಲಿ ಶತ್ರುಸಂಘಗಳನ್ನು ಘಾತಿಸುವ ಈ ಅಮೋಘ ಶಕ್ತಿಯನ್ನು ಕೊಡು!”

ಆಗ ಒಂದು ಮುಹೂರ್ತ ಮನಸ್ಸಿನಲ್ಲಿಯೇ ಯೋಚಿಸಿ ಇಂದ್ರನು ಶಕ್ತಿಯನ್ನು ಕೇಳಿದ ಕರ್ಣನಿಗೆ ಹೇಳಿದನು: “ಕರ್ಣ! ನಿನ್ನ ಶರೀರದೊಂದಿಗೆ ಜನಿಸಿದ ಈ ಕುಂಡಲ-ಕವಚಗಳನ್ನು ಕೊಡು. ನಂತರ ಒಪ್ಪಂದದಂತೆ ನನ್ನ ಈ ಶಕ್ತಿಯನ್ನು ಪಡೆ! ದೈತ್ಯರೊಂದಿಗೆ ನಾನು ಹೋರಾಡುವಾಗ ಈ ಅಮೋಘ ಶಕ್ತಿಯನ್ನು ಪ್ರಯೋಗಿಸಿದಾಗಲೆಲ್ಲ ನೂರಾರು ಶತ್ರುಗಳನ್ನು ಸಂಹರಿಸಿ ಇದು ಪುನಃ ನನ್ನ ಕೈಗೆ ಬಂದು ಸೇರುತ್ತದೆ. ನಿನ್ನ ಕೈಯಲ್ಲಿ ಈ ಶಕ್ತಿಯು ಒಬ್ಬನೇ ಶಕ್ತಿಶಾಲೀ ವೈರಿಯನ್ನು ಕೊಂದು ಮರಳಿ ನನ್ನ ಕೈಯನ್ನು ಸೇರುತ್ತದೆ.”

ಕರ್ಣನು ಹೇಳಿದನು: “ಮಹಾಯುದ್ಧದಲ್ಲಿ ನನಗೆ ಭಯವನ್ನುಂಟುಮಾಡುವ ಒಬ್ಬನೇ ರಿಪುವನ್ನು ಕೊಲ್ಲಲು ಬಯಸುತ್ತೇನೆ.”

ಇಂದ್ರನು ಹೇಳಿದನು: “ರಣದಲ್ಲಿ ಗರ್ಜಿಸುವ ಬಲಶಾಲಿ ರಿಪು ಓರ್ವನನ್ನೇ ನೀನು ಕೊಲ್ಲಬಲ್ಲೆ. ನೀನು ಕೊಲ್ಲಲು ಬಯಸುವ ಆ ಓರ್ವ ಪಾರ್ಥನು ಹರಿ ನಾರಾಯಣ ಎಂದು ವಿದ್ವಾಂಸರು ಕರೆಯುವ ಮಹಾತ್ಮ ಕೃಷ್ಣನ ರಕ್ಷಣೆಯಲ್ಲಿದ್ದಾನೆ.”

ಕರ್ಣನು ಹೇಳಿದನು: “ಭಗವನ್! ಯಾವುದರಿಂದ ಪ್ರತಾಪಿಯೋರ್ವನನ್ನು ನಾನು ಕೊಲ್ಲಬಲ್ಲೆನೋ ಆ ಅಮೋಘ ಪ್ರವರ ಶಕ್ತಿಯು ಒಬ್ಬ ವೀರನನ್ನು ವಧಿಸುವವರೆಗೆ ನನ್ನ ಬಳಿಯಿರಲಿ. ನನ್ನ ಕುಂಡಲ-ಕವಚಗಳನ್ನು ಕಿತ್ತು ನಿನಗೆ ಕೊಡುತ್ತೇನೆ. ಗಾಯಗೊಂಡ ನನ್ನ ದೇಹವು ಬೀಭತ್ಸವಾಗದಿರಲಿ!”

ಇಂದ್ರನು ಹೇಳಿದನು: “ಕರ್ಣ! ನೀನು ಎಂದೂ ವಿರೂಪನಾಗಿರುವುದಿಲ್ಲ. ನೀನು ಬಯಸಿದಂತೆ ನಿನ್ನ ದೇಹದ ಮೇಲೆ ಗಾಯಗಳು ಕಾಣಿಸಿಕೊಳ್ಳುವುದಿಲ್ಲ. ನೀನು ಪುನಃ ಬಣ್ಣ-ತೇಜಸ್ಸುಗಳಲ್ಲಿ ನಿನ್ನ ತಂದೆಯಂತೆಯೇ ಆಗುತ್ತೀಯೆ! ಆದರೆ ನಿನ್ನ ಬಳಿ ಇತರ ಆಯುಧಗಳಿದ್ದರೂ ಪ್ರಮತ್ತನಾಗಿ ಈ ಅಮೋಘ ಶಕ್ತಿಯನ್ನು ಪ್ರಯೋಗಿಸಿದರೆ ಅದು ನಿನ್ನ ಮೇಲೆಯೇ ಬಂದು ಬೀಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.”

ಕರ್ಣನು ಹೇಳಿದನು: “ಶಕ್ರ! ನೀನು ಹೇಳಿದಂತೆ ನಿನ್ನ ಈ ಶಕ್ತಿಯನ್ನು ನಾನು ಅತ್ಯಂತ ಅಪಾಯದಲ್ಲಿದ್ದಾಗ ಮಾತ್ರ ಬಳಸುತ್ತೇನೆ. ಇದು ಸತ್ಯ!”

ಆಗ ಕರ್ಣನು ಪ್ರಜ್ವಲಿಸುತ್ತಿರುವ ಆ ಶಕ್ತಿಯನ್ನು ಸ್ವೀಕರಿಸಿದನು. ನಿಶಿತ ಖಡ್ಗದಿಂದ ತನ್ನ ಸಂಪೂರ್ಣ ದೇಹದ ಮೇಲೆ ಗುರುತು ಹಾಕಿದನು. ಆಗ ದೇವತೆಗಳು, ಮಾನವರು, ದಾನವರು ಮತ್ತು ಸಿದ್ಧರು ಕರ್ಣನು ತನ್ನನ್ನು ತಾನೇ ಕತ್ತರಿಸಿಕೊಳ್ಳುತ್ತಿರುವುದನ್ನು ನೋಡಿ ಉದ್ಗರಿಸಿದರು. ನೋಯುತ್ತಿದ್ದರೂ ಅವನ ಒಂದು ಮಾಂಸಖಂಡವೂ ಕಂಪಿಸಲಿಲ್ಲ. ಕರ್ಣನು ಖಡ್ಗದಿಂದ ತನ್ನ ದೇಹವನ್ನು ಕತ್ತರಿಸುವುದನ್ನು ಮತ್ತು ಆ ವೀರನು ಪುನಃ ಪುನಃ ಮುಗುಳ್ನಗುತ್ತಿರುವುದನ್ನು ನೋಡಿ ದಿವ್ಯ ದುಂದುಭಿಗಳು ಮೊಳಗಿದವು. ಮೇಲಿಂದ ದಿವ್ಯ ಪುಷ್ಪಗಳ ಮಳೆ ಸುರಿಯಿತು. ತನ್ನ ದೇಹದಿಂದ ಕವಚವನ್ನು ಕಿತ್ತು ಒದ್ದೆಯಾಗಿರುವಾಗಲೇ ಅದನ್ನು ಅವನು ಇಂದ್ರನಿಗೆ ಕೊಟ್ಟನು. ಕುಂಡಲಗಳನ್ನೂ ಕಿತ್ತು ಅವನಿಗೆ ಕೊಟ್ಟನು. ಈ ಕರ್ಮದಿಂದ ಕರ್ಣನು ವೈಕರ್ತನನೆನಿಸಿಕೊಂಡನು.

ಆಗ ಇಂದ್ರನು ಕರ್ಣನನ್ನು ಲೋಕದಲ್ಲಿ ಯಶಸ್ವಿಯನ್ನಾಗಿ ಮಾಡಿದ ತನ್ನ ಮೋಸಕ್ಕೆ ನಕ್ಕನು. ಪಾಂಡವರ ಹಿತಕಾರ್ಯವನ್ನು ಮಾಡಿದೆನೆಂದು ಸಂತೋಷದಿಂದ ದಿವಕ್ಕೆ ಹಾರಿದನು. ಕರ್ಣನು ಮೋಸಹೋದುದನ್ನು ಕೇಳಿ ಧಾರ್ತರಾಷ್ಟ್ರರೆಲ್ಲರೂ ದೀನರಾಗಿ ದರ್ಪಮುರಿದವರಂತಾದರು. ಸೂತಪುತ್ರನ ಈ ಅವಸ್ಥೆಯನ್ನು ಕೇಳಿ ಕಾನನದಲ್ಲಿದ್ದ ಪಾಂಡವರು ಹರ್ಷವನ್ನಾಚರಿಸಿದರು.

Leave a Reply

Your email address will not be published. Required fields are marked *