ಹನ್ನೆರಡನೆಯ ವರ್ಷದ ವನವಾಸದ ಅಂತ್ಯದಲ್ಲಿ ಪಾಂಡವರು ವನವಾಸಿಗಳನ್ನು ಬೀಳ್ಕೊಂಡಿದುದು
ಧರ್ಮದೇವನಿಂದ ಅಪ್ಪಣೆಯನ್ನು ಪಡೆದು ಹದಿಮೂರನೆಯ ವರ್ಷವನ್ನು ಅಜ್ಞಾತವಾಸದಲ್ಲಿ ಕಳೆಯಲು ಸಿದ್ಧರಾದ ಪಾಂಡವರು ವಿನೀತರಾಗಿ ಬ್ರಾಹ್ಮಣರ ಸಹಿತ ಕುಳಿತುಕೊಂಡರು. ಶಿಷ್ಯರಂತಿದ್ದ ಆ ಮಹಾತ್ಮ ಪಾಂಡವರು ಅವರೊಡನೆ ವಾಸಿಸುತ್ತಿದ್ದ ತಪಸ್ವಿಗಳನ್ನು ಆ ವನವಾಸದ ಕೊನೆಯಲ್ಲಿ ಭಕ್ತಿಯಿಂದ ಬೀಳ್ಕೊಂಡರು.
“ಧಾರ್ತರಾಷ್ಟ್ರರಿಂದ ನಾವು ಹೇಗೆ ಬಹುವಿಧಗಳಲ್ಲಿ ರಾಜ್ಯ ಮತ್ತು ನಮ್ಮದೆಲ್ಲವನ್ನೂ ಕಳೆದುಕೊಂಡೆವು ಎಂದು ನಿಮಗೆ ತಿಳಿದೇ ಇದೆ. ತುಂಬಾ ಕಷ್ಟಪಟ್ಟು ನಾವು ಈ ಹನ್ನೆರಡು ವರ್ಷಗಳು ವನದಲ್ಲಿ ವಾಸಿಸಿದೆವು. ಒಪ್ಪಂದದಂತೆ ಉಳಿದ ಹದಿಮೂರನೆಯ ವರ್ಷದ ಅಜ್ಞಾತವಾಸವನ್ನೂ ಕೂಡ ನಾವು ಕಷ್ಟದಿಂದಲೇ ಕಳೆಯುತ್ತೇವೆ. ನಮಗೆ ಅನುಜ್ಞೆಯನ್ನು ನೀಡಿ! ನಮಗೆ ಅತ್ಯಂತ ವೈರಿಯಾಗಿರುವ ದುಷ್ಟಾತ್ಮ ಸುಯೋಧನನು ಕರ್ಣ ಮತ್ತು ಶಕುನಿಯರೊಡಗೂಡಿ ನಮ್ಮನ್ನು ಹುಡುಕುತ್ತಾ ನಮಗೆ ಮತ್ತು ನಮ್ಮ ಪುರಜನರಿಗೆ ತೊಂದರೆಯನ್ನುಂಟುಮಾಡಬಹುದು. ಮುಂದೆ ನಾವು ನಮ್ಮ ರಾಷ್ಟ್ರದಲ್ಲಿ ಬ್ರಾಹ್ಮಣರ ಒಟ್ಟಿಗೇ ಇರಲು ಆಗುತ್ತದೆಯೋ ಇಲ್ಲವೋ!” ಕಣ್ಣೀರು ತುಂಬಿದ ಕಂಠದಲ್ಲಿ ಹೀಗೆ ಮಾತನಾಡಿ ದುಃಖಶೋಕಾರ್ತನಾದ ರಾಜಾ ಯುಧಿಷ್ಠಿರನು ಮೂರ್ಛಿತನಾದನು.
ಎಲ್ಲ ಬ್ರಾಹ್ಮಣರೂ, ಸಹೋದರರೂ ಒಂದಾಗಿ ಅವನನ್ನು ಸಮಾಧಾನಗೊಳಿಸಿದರು. ಆಗ ಧೌಮ್ಯನು ಮಹಾರ್ಥವುಳ್ಳ ಈ ಮಾತುಗಳನ್ನಾಡಿದನು:
“ರಾಜನ್! ನೀನು ತಿಳಿದವನು. ನಿನ್ನನ್ನು ನೀನೇ ನಿಯಂತ್ರಿಸಿಕೊಂಡಿರುವವನು. ಸತ್ಯಸಂಧನು ಮತ್ತು ಜಿತೇಂದ್ರಿಯನು. ಇಂಥಹ ನರನು ಯಾವ ಆಪತ್ತಿನಲ್ಲಿಯೂ ಈ ರೀತಿ ಬುದ್ಧಿಯನ್ನು ಕಳೆದುಕೊಳ್ಳುವುದಿಲ್ಲ! ಮಹಾತ್ಮ ದೇವತೆಗಳೂ ಕೂಡ ಅನೇಕ ಬಾರಿ ಆಪತ್ತುಗಳನ್ನು ಪಡೆದಾಗಲೂ ವೈರಿಗಳನ್ನು ನಿಗ್ರಹಿಸಲು ಅಲ್ಲಲ್ಲಿ ವೇಷಮರೆಸಿಕೊಂಡು ಜೀವಿಸುತ್ತಿದ್ದರು.ಇಂದ್ರನು ನಿಷಾದರಲ್ಲಿಗೆ ಹೋಗಿ ಅಲ್ಲಿನ ಗಿರಿತಪ್ಪಲಿನ ಆಶ್ರಮಗಳಲ್ಲಿ ವೇಷಮರೆಸಿಕೊಂಡು ದ್ವೇಷಿಗಳ ಬಲವನ್ನು ನಿಗ್ರಹಿಸಿದನು. ದೈತ್ಯರ ವಧೆಗಾಗಿ ಅದಿತಿಯ ಗರ್ಭದಲ್ಲಿ ವಾಸಿಸುವ ಮೊದಲು ವಿಷ್ಣುವು ಕುದುರೆಯ ಮುಖವನ್ನು ಪಡೆದು ಬಹುಕಾಲದ ವರೆಗೆ ಅಡಗಿದ್ದನು. ಆ ಬ್ರಹ್ಮರೂಪಿಣಿಯು ವೇಷಬದಲಿಸಿಕೊಂಡು ವಾಮನರೂಪವನ್ನು ಪಡೆದು ವಿಕ್ರಮದಿಂದ ಬಲಿಯ ರಾಜ್ಯವನ್ನು ಕಸಿದುಕೊಂಡನು ಎನ್ನುವುದನ್ನು ನೀನು ಕೇಳಿದ್ದೀಯೆ. ಮಗೂ! ಬ್ರಹ್ಮರ್ಷಿ ಔರ್ವನು ತನ್ನ ತಾಯಿಯ ತೊಡೆಯೊಳಗೆ ಅಡಗಿ ಲೋಕದಲ್ಲಿ ಏನೆಲ್ಲ ಸಾಧಿಸಿದನು ಎನ್ನುವುದನ್ನೂ ನೀನು ಕೇಳಿದ್ದೀಯೆ. ಹರಿಯು ಶಕ್ರನ ವಜ್ರವನ್ನು ಪ್ರವೇಶಿಸಿ ವೃತ್ರನನ್ನು ನಿಗ್ರಹಿಸಿದುದನ್ನೂ ನೀನು ಕೇಳಿರುವೆ. ಹುತಾಶನನು ಸಾಗರವನ್ನು ಪ್ರವೇಶಿಸಿ ಅಡಗಿ ಕುಳಿತುಕೊಂಡು ದೇವತೆಗಳಿಗೆ ಏನು ಮಾಡಿದನೆನ್ನುವುದನ್ನೂ ನೀನು ಕೇಳಿರುವೆ. ಹೀಗೆಯೇ ಉತ್ತಮ ತೇಜಸ್ವಿ ವಿವಸ್ವತನು ಭೂಮಿಯಲ್ಲಿ ಅಡಗಿ ವಾಸಿಸಿ ಎಲ್ಲೆಡೆಯಲ್ಲಿದ್ದ ಶತ್ರುಗಳನ್ನು ಸುಟ್ಟುಹಾಕಿದನು. ವೇಷಮರೆಸಿ ದಶರಥನ ಮನೆಯಲ್ಲಿ ವಾಸಿಸುತ್ತಿದ್ದ ವಿಷ್ಣುವು ಯುದ್ಧದಲ್ಲಿ ದಶಗ್ರೀವವನ್ನು ಕೊಲ್ಲುವ ಭಯಂಕರ ಕೃತ್ಯವನ್ನೆಸಗಿದನು. ಈ ಮಹಾತ್ಮರು ಹೇಗೆ ಅಲ್ಲಲ್ಲಿ ವೇಷಮರೆಸಿಕೊಂಡು ಯುದ್ಧದಲ್ಲಿ ಶತ್ರುಗಳನ್ನು ಜಯಿಸಿದರೋ ಹಾಗೆ ನೀನೂ ಕೂಡ ಜಯವನ್ನು ಹೊಂದುತ್ತೀಯೆ.”
ಧರ್ಮಜ್ಞ ಧೌಮ್ಯನ ಮಾತುಗಳಿಂದ ಸಮಾಧಾನಗೊಂಡ ಯುಧಿಷ್ಠಿರನು ಶಾಸ್ತ್ರಬುದ್ಧಿ ಮತ್ತು ಸ್ವಬುದ್ಧಿಗಳಿಂದ ಚಂಚಲಿತನಾಗಲಿಲ್ಲ. ಆಗ ಮಹಾಬಲಿ ಭೀಮಸೇನನು ರಾಜನನ್ನು ಪ್ರೋತ್ಸಾಹಿಸುವ ಈ ಮಾತುಗಳನ್ನಾಡಿದನು: “ಮಹಾರಾಜ! ನಿನ್ನನ್ನು ನೋಡಿ ಧರ್ಮವನ್ನು ಅನುಸರಿಸುವ ಬುದ್ಧಿಯಿಂದ ಈ ಗಾಂಡೀವಧನ್ವಿ ಅರ್ಜುನನು ಇನ್ನೂ ಎನೂ ಸಾಹಸಕಾರ್ಯಗಳನ್ನು ಮಾಡಿಲ್ಲ. ನಾನು ನಿತ್ಯವೂ ನಕುಲ-ಸಹದೇವರನ್ನೂ ತಡೆಯುತ್ತಿದ್ದೇನೆ. ಇವರೀರ್ವರೂ ಶತ್ರುಗಳನ್ನು ಸಂಹರಿಸಲು ಶಕ್ತರಿದ್ದಾರೆ. ನೀನು ನಮಗೆ ಯಾವ ಕೆಲಸವನ್ನು ವಹಿಸುತ್ತೀಯೋ ಅದನ್ನು ನಾವು ಮುಂದೆಹಾಕುವುದಿಲ್ಲ. ನೀನು ನಮಗೆ ಈಗ ವಿಧಿಸಿದರೆ ಶೀಘ್ರದಲ್ಲಿಯೇ ನಾವು ಆ ಎಲ್ಲ ಶತ್ರುಗಳನ್ನೂ ಜಯಿಸುತ್ತೇವೆ!”
ಭೀಮಸೇನನು ಹೀಗೆ ಹೇಳಲು ಬ್ರಾಹ್ಮಣರು ಪರಮ ಆಶೀರ್ವಾದಗಳನ್ನಿತ್ತು ಭಾರತರಿಂದ ಬೀಳ್ಕೊಂಡು ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು. ಆ ವೀರ ಪಂಚಪಾಂಡವರು ದ್ರೌಪದಿ ಮತ್ತು ಧೌಮ್ಯರೊಂದಿಗೆ ಮೇಲೆದ್ದು, ಆ ಪ್ರದೇಶದಿಂದ ಕ್ರೋಶಮಾತ್ರದೂರದವರೆಗೆ ಪ್ರಯಾಣಮಾಡಿದರು. ಮರುದಿನ ಅವರು ಅಜ್ಞಾತವಾಸವನ್ನು ಪ್ರಾರಂಭಿಸಲು ಸಿದ್ಧರಾಗಿ ಎಲ್ಲರೂ ಒಟ್ಟಿಗೇ ಕುಳಿತು ಸಮಾಲೋಚಿಸಿದರು. ಅವರಲ್ಲಿ ಪ್ರತಿಯೊಬ್ಬರಿಗೂ ಅವರವರ ಕಲೆಯು ತಿಳಿದಿತ್ತು. ಪ್ರತಿಯೊಬ್ಬರೂ ಮಂತ್ರವಿಶಾರದರಾಗಿದ್ದರು. ಶಾಂತಿ ಮತ್ತು ಕಲಹಗಳ ಕಾಲವನ್ನು ಚೆನ್ನಾಗಿ ತಿಳಿದುಕೊಂಡಿದ್ದರು.