ವಿರಾಟ ಪರ್ವ: ವೈರಾಟ ಪರ್ವ
೮
ದ್ರೌಪದಿಯು ಸೈರಂಧ್ರಿಯಾಗಿ ಸುದೇಷ್ಣೆಯಲ್ಲಿ ವಾಸಕ್ಕಿರುವುದು
ವಿರಾಟನ ಪತ್ನಿ ಸುದೇಷ್ಣೆಯು ದ್ರೌಪದಿಯನ್ನು ನೋಡಿ ವಿಚಾರಿಸಿದುದು (೧-೭). ದ್ರೌಪದಿ-ಸುದೇಷ್ಣೆಯರ ಸಂವಾದ (೮-೩೩).
04008001 ವೈಶಂಪಾಯನ ಉವಾಚ|
04008001a ತತಃ ಕೇಶಾನ್ಸಮುತ್ಕ್ಷಿಪ್ಯ ವೇಲ್ಲಿತಾಗ್ರಾನನಿಂದಿತಾನ್|
04008001c ಜುಗೂಹ ದಕ್ಷಿಣೇ ಪಾರ್ಶ್ವೇ ಮೃದೂನಸಿತಲೋಚನಾ||
04008002a ವಾಸಶ್ಚ ಪರಿಧಾಯೈಕಂ ಕೃಷ್ಣಂ ಸುಮಲಿನಂ ಮಹತ್|
04008002c ಕೃತ್ವಾ ವೇಷಂ ಚ ಸೈರಂಧ್ರ್ಯಾಃ ಕೃಷ್ಣಾ ವ್ಯಚರದಾರ್ತವತ್||
ವೈಶಂಪಾಯನನು ಹೇಳಿದನು: “ಅನಂತರ ಅಸಿತಲೋಚನೆ ಕೃಷ್ಣೆ ದ್ರೌಪದಿಯು ತುದಿಯಲ್ಲಿ ಗುಂಗುರಾಗಿದ್ದ ದೋಷರಹಿತ ಮೃದು ಕೂದಲನ್ನು ಮೇಲೆತ್ತಿ ಬಲಗಡೆ ಅಡಗಿಸಿಟ್ಟುಕೊಂಡು, ತುಂಬಾ ಕೊಳಕಾದ ಒಂದೇ ಒಂದು ಕಪ್ಪು ವಸ್ತ್ರವನ್ನು ಧರಿಸಿ, ಸೈರಂಧ್ರಿಯ ವೇಷವನ್ನು ತಳೆದು ಆರ್ತಳಂತೆ ಓಡಾಡುತ್ತಿದ್ದಳು.
04008003a ತಾಂ ನರಾಃ ಪರಿಧಾವಂತೀಂ ಸ್ತ್ರಿಯಶ್ಚ ಸಮುಪಾದ್ರವನ್|
04008003c ಅಪೃಚ್ಛಂಶ್ಚೈವ ತಾಂ ದೃಷ್ಟ್ವಾ ಕಾ ತ್ವಂ ಕಿಂ ಚ ಚಿಕೀರ್ಷಸಿ||
ಅಲೆದಾಡುತ್ತಿದ್ದ ಅವಳನ್ನು ಕಂಡ ಸ್ತ್ರೀ ಪುರುಷರು ಓಡಿ ಬಂದು “ಯಾರು ನೀನು? ಏನು ಮಾಡಬಯಸುತ್ತೀಯೆ?” ಎಂದು ಅವಳನ್ನು ಕೇಳಿದರು.
04008004a ಸಾ ತಾನುವಾಚ ರಾಜೇಂದ್ರ ಸೈರಂಧ್ರ್ಯಹಮುಪಾಗತಾ|
04008004c ಕರ್ಮ ಚೇಚ್ಛಾಮಿ ವೈ ಕರ್ತುಂ ತಸ್ಯ ಯೋ ಮಾಂ ಪುಪುಕ್ಷತಿ||
ರಾಜೇಂದ್ರ! ಅವಳು ಅವರಿಗೆ ನಾನು ಸೈರಂಧ್ರಿ. ನನ್ನನ್ನು ಸಾಕುವವರಿಗೆ ಕೆಲಸಮಾಡುವ ಇಚ್ಛೆಯಿಂದ ಬಂದಿದ್ದೇನೆ ಎಂದು ಹೇಳಿದಳು.
04008005a ತಸ್ಯಾ ರೂಪೇಣ ವೇಷೇಣ ಶ್ಲಕ್ಷ್ಣಯಾ ಚ ತಥಾ ಗಿರಾ|
04008005c ನಾಶ್ರದ್ದಧತ ತಾಂ ದಾಸೀಮನ್ನಹೇತೋರುಪಸ್ಥಿತಾಂ||
ಅವಳ ರೂಪ, ವೇಷ ಮತ್ತು ಮಧುರ ಮಾತುಗಳಿಂದಾಗಿ ಅವಳು ಊಟಕ್ಕೋಸ್ಕರ ದಾಸಿಯಾಗಲು ಬಂದಿದ್ದಾಳೆ ಎಂದು ಜನರು ನಂಬಲಿಲ್ಲ.
04008006a ವಿರಾಟಸ್ಯ ತು ಕೈಕೇಯೀ ಭಾರ್ಯಾ ಪರಮಸಮ್ಮತಾ|
04008006c ಅವಲೋಕಯಂತೀ ದದೃಶೇ ಪ್ರಾಸಾದಾದ್ದ್ರುಪದಾತ್ಮಜಾಂ||
ಉಪ್ಪರಿಗೆಯಿಂದ ನೋಡುತ್ತಿದ್ದ ವಿರಾಟನ ಅಚ್ಚುಮೆಚ್ಚಿನ ಪತ್ನಿಯೂ, ಕೇಕಯ ರಾಜಪುತ್ರಿಯೂ ಆದ ಸುದೇಷ್ಣೆಯು ದ್ರುಪದನ ಪುತ್ರಿಯನ್ನು ಕಂಡಳು.
04008007a ಸಾ ಸಮೀಕ್ಷ್ಯ ತಥಾರೂಪಾಮನಾಥಾಮೇಕವಾಸಸಂ|
04008007c ಸಮಾಹೂಯಾಬ್ರವೀದ್ಭದ್ರೇ ಕಾ ತ್ವಂ ಕಿಂ ಚ ಚಿಕೀರ್ಷಸಿ||
ಅವಳು ಅಂಥಹ ರೂಪವತಿಯೂ, ಅನಾಥಳೂ, ಒಂದೇ ವಸ್ತ್ರವನ್ನು ದರಿಸಿದವಳೂ ಆಗಿದ್ದ ಅವಳನ್ನು ನೋಡಿ ಕರೆಯಿಸಿ ಕೇಳಿದಳು: “ಭದ್ರೇ! ನೀನು ಯಾರು? ಮತ್ತು ಏನು ಮಾಡಬಯಸುತ್ತೀಯೆ?”
04008008a ಸಾ ತಾಮುವಾಚ ರಾಜೇಂದ್ರ ಸೈರಂಧ್ರ್ಯಹಮುಪಾಗತಾ|
04008008c ಕರ್ಮ ಚೇಚ್ಛಾಮ್ಯಹಂ ಕರ್ತುಂ ತಸ್ಯ ಯೋ ಮಾಂ ಪುಪುಕ್ಷತಿ||
ರಾಜೇಂದ್ರ! ಅವಳು ಅವಳಿಗೆ ಹೇಳಿದಳು: “ನಾನು ಸೈರಂಧ್ರಿ. ನನ್ನನ್ನು ಸಾಕುವವರಿಗೆ ಕೆಲಸಮಾಡುವ ಇಚ್ಛೆಯಿಂದ ಬಂದಿದ್ದೇನೆ.”
04008009 ಸುದೇಷ್ಣೋವಾಚ|
04008009a ನೈವಂರೂಪಾ ಭವಂತ್ಯೇವಂ ಯಥಾ ವದಸಿ ಭಾಮಿನಿ|
04008009c ಪ್ರೇಷಯಂತಿ ಚ ವೈ ದಾಸೀರ್ದಾಸಾಂಶ್ಚೈವಂವಿಧಾನ್ಬಹೂನ್|
ಸುದೇಷ್ಣೆಯು ಹೇಳಿದಳು: “ಭಾಮಿನಿ! ನಿನ್ನಂಥೆ ಮಾತನಾಡುವವರು ಹೀಗೆ ರೂಪವತಿಯರಾಗಿರುವುದಿಲ್ಲ. ಬಹುಮಂದಿ ದಾಸ-ದಾಸಿಯರಿಗೆ ಅಪ್ಪಣೆಮಾಡುವವರು ಹೀಗಿರುತ್ತಾರೆ.
04008010a ಗೂಢಗುಲ್ಫಾ ಸಂಹತೋರುಸ್ತ್ರಿಗಂಭೀರಾ ಷಡುನ್ನತಾ|
04008010c ರಕ್ತಾ ಪಂಚಸು ರಕ್ತೇಷು ಹಂಸಗದ್ಗದಭಾಷಿಣೀ||
04008011a ಸುಕೇಶೀ ಸುಸ್ತನೀ ಶ್ಯಾಮಾ ಪೀನಶ್ರೋಣಿಪಯೋಧರಾ|
04008011c ತೇನ ತೇನೈವ ಸಂಪನ್ನಾ ಕಾಶ್ಮೀರೀವ ತುರಂಗಮಾ||
04008012a ಸ್ವರಾಲಪಕ್ಷ್ಮನಯನಾ ಬಿಂಬೋಷ್ಠೀ ತನುಮಧ್ಯಮಾ|
04008012c ಕಂಬುಗ್ರೀವಾ ಗೂಢಸಿರಾ ಪೂರ್ಣಚಂದ್ರನಿಭಾನನಾ||
ನಿನ್ನ ಹಿಮ್ಮಡಿಯು ಅಡಕವಾಗಿದೆ, ತೊಡೆಗಳು ತಾಗುತ್ತಿವೆ, ಮೂರು ಅಂಗಗಳು ಗಂಭೀರವಾಗಿವೆ, ಆರು ಅಂಗಗಳು ಉನ್ನತವಾಗಿವೆ, ಐದು ಅಂಗಗಳು ಕೆಂಪಾಗಿವೆ, ನಿನ್ನ ಮಾತು ಹಂಸದ ಸ್ವರದಂತಿದೆ, ನೀಳ ಕೂದಲನ್ನು ಹೊಂದಿದ್ದೀಯೆ, ಒಳ್ಳೆಯ ಮೊಲೆಗಳನ್ನು ಪಡೆದಿದ್ದೀಯೆ, ಶ್ಯಾಮವರ್ಣದವಳಾಗಿದ್ದೀಯೆ, ಉಬ್ಬಿದ ನಿತಂಬ ಮತ್ತು ಪಯೋಧರೆಯುಳ್ಳವಳಾಗಿದ್ದೀಯೆ. ಕಾಶ್ಮೀರದ ಕುದುರೆಯಂತೆ ಬೇಕು ಬೇಕಾದಲ್ಲಿ ಸುಂದರಳಾಗಿದ್ದೀಯೆ. ನಿನ್ನ ಕಣ್ಣಿನ ರೆಪ್ಪೆಗಳು ಗುಂಗುರಾಗಿವೆ, ಕೆಳದುಟಿ ತೊಂಡೆಯ ಹಣ್ಣಿನಂತಿದೆ, ಸೊಂಟ ಸಣ್ಣದಾಗಿದೆ, ಕೊರಳು ಶಂಖದಂತಿದೆ, ರಕ್ತನಾಳಗಳು ಎದ್ದು ಕಾಣುತ್ತಿಲ್ಲ ಮತ್ತು ನಿನ್ನ ಮುಖವು ಪೂರ್ಣ ಚಂದ್ರನಂತಿದೆ.
04008013a ಕಾ ತ್ವಂ ಬ್ರೂಹಿ ಯಥಾ ಭದ್ರೇ ನಾಸಿ ದಾಸೀ ಕಥಂ ಚನ|
04008013c ಯಕ್ಷೀ ವಾ ಯದಿ ವಾ ದೇವೀ ಗಂಧರ್ವೀ ಯದಿ ವಾಪ್ಸರಾಃ||
04008014a ಅಲಂಬುಸಾ ಮಿಶ್ರಕೇಶೀ ಪುಂಡರೀಕಾಥ ಮಾಲಿನೀ|
04008014c ಇಂದ್ರಾಣೀ ವಾರುಣೀ ವಾ ತ್ವಂ ತ್ವಷ್ಟುರ್ಧಾತುಃ ಪ್ರಜಾಪತೇಃ||
04008014e ದೇವ್ಯೋ ದೇವೇಷು ವಿಖ್ಯಾತಾಸ್ತಾಸಾಂ ತ್ವಂ ಕತಮಾ ಶುಭೇ||
ಭದ್ರೇ! ನೀನು ಯಾರೆಂದು ಹೇಳು! ನೀನು ದಾಸಿಯಂತೂ ಅಲ್ಲ! ನೀನು ಯಕ್ಷಿಯಾಗಿರಬಹುದು ಅಥವಾ ದೇವಿಯಾಗಿರಬಹುದು ಅಥವಾ ಗಂಧರ್ವಿಯಾಗಿರಬಹುದು ಅಥವಾ ಅಪ್ಸರೆಯಾಗಿರಬಹುದು. ಶುಭೇ! ನೀನು ಯಾರು? ಅಲಂಬುಸೆಯೋ, ಮಿಶ್ರಕೇಶಿಯೋ, ಪುಂಡರೀಕೆಯೋ, ಅಥವಾ ಮಾಲಿನಿಯೋ? ಇಂದ್ರಾಣಿಯೋ, ವಾರುಣಿಯೋ, ಅಥವಾ ತ್ವಷ್ಟ, ಧಾತು ಅಥವಾ ಪ್ರಜಾಪತಿ ಈ ವಿಖ್ಯಾತ ದೇವತೆಗಳ ದೇವಿಯರಲ್ಲಿ ನೀನು ಯಾರು?”
04008015 ದ್ರೌಪದ್ಯುವಾಚ|
04008015a ನಾಸ್ಮಿ ದೇವೀ ನ ಗಂಧರ್ವೀ ನಾಸುರೀ ನ ಚ ರಾಕ್ಷಸೀ|
04008015c ಸೈರಂಧ್ರೀ ತು ಭುಜಿಷ್ಯಾಸ್ಮಿ ಸತ್ಯಮೇತದ್ಬ್ರವೀಮಿ ತೇ||
ದ್ರೌಪದಿಯು ಹೇಳಿದಳು: “ನಾನು ದೇವಿಯಲ್ಲ, ಗಂಧರ್ವಿಯಲ್ಲ, ಅಸುರಿಯಲ್ಲ ಮತ್ತು ರಾಕ್ಷಸಿಯೂ ಅಲ್ಲ. ಇನ್ನೊಬ್ಬರನ್ನು ಅವಲಂಬಿಸಿರುವ ಸೈರಂಧ್ರಿ ನಾನು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.
04008016a ಕೇಶಾಂ ಜಾನಾಮ್ಯಹಂ ಕರ್ತುಂ ಪಿಂಷೇ ಸಾಧು ವಿಲೇಪನಂ|
04008016c ಗ್ರಥಯಿಷ್ಯೇ ವಿಚಿತ್ರಾಶ್ಚ ಸ್ರಜಃ ಪರಮಶೋಭನಾಃ||
ಕೇಶಾಲಂಕಾರವನ್ನು ಬಲ್ಲೆ. ಒಳ್ಳೆಯ ಲೇಪನವನ್ನು ಅರೆದು ತಯಾರಿಸಬಲ್ಲೆ. ಬಣ್ಣಬಣ್ಣದ ಪರಮ ಸುಂದರವಾದ ಮಾಲೆಗಳನ್ನು ಕಟ್ಟಬಲ್ಲೆ.
04008017a ಆರಾಧಯಂ ಸತ್ಯಭಾಮಾಂ ಕೃಷ್ಣಸ್ಯ ಮಹಿಷೀಂ ಪ್ರಿಯಾಂ|
04008017c ಕೃಷ್ಣಾಂ ಚ ಭಾರ್ಯಾಂ ಪಾಂಡೂನಾಂ ಕುರೂಣಾಮೇಕಸುಂದರೀಂ||
ಕೃಷ್ಣನ ಪ್ರಿಯ ಮಹಿಷಿ ಸತ್ಯಭಾಮೆಯನ್ನು ಮತ್ತು ಕುರುಗಳಲ್ಲಿಯೇ ಏಕೈಕ ಸುಂದರಿಯಾದ ಪಾಂಡವರ ಪತ್ನಿ ಕೃಷ್ಣೆಯನ್ನೂ ನಾನು ಸಿಂಗರಿಸುತ್ತಿದ್ದೆ.
04008018a ತತ್ರ ತತ್ರ ಚರಾಮ್ಯೇವಂ ಲಭಮಾನಾ ಸುಶೋಭನಂ|
04008018c ವಾಸಾಂಸಿ ಯಾವಚ್ಚ ಲಭೇ ತಾವತ್ತಾವದ್ರಮೇ ತಥಾ||
ಹೀಗೆ ಅಲ್ಲಲ್ಲಿ ತಿರುಗಾಡುತ್ತಾ ಉತ್ತಮ ಗಳಿಕೆ ಮಾಡುತ್ತೇನೆ. ಎಲ್ಲಿಯವರೆಗೆ ಉಳಿಯುವುದಕ್ಕೆ ದೊರಕುವುದೋ ಅಲ್ಲಿಯವರೆಗೆ ಅಲ್ಲಿಯೇ ಸಂತೋಷದಿಂದ ಇರುತ್ತೇನೆ.
04008019a ಮಾಲಿನೀತ್ಯೇವ ಮೇ ನಾಮ ಸ್ವಯಂ ದೇವೀ ಚಕಾರ ಸಾ|
04008019c ಸಾಹಮಭ್ಯಾಗತಾ ದೇವಿ ಸುದೇಷ್ಣೇ ತ್ವನ್ನಿವೇಶನಂ||
ಸ್ವಯಂ ಆ ದೇವಿಯೇ ನನಗೆ ಮಾಲಿನಿಯೆಂಬ ಹೆಸರನ್ನಿಟ್ಟಳು. ದೇವಿ ಸುದೇಷ್ಣೆ! ಅಂಥಹ ನಾನು ನಿನ್ನ ಅರಮನೆಗೆ ಬಂದಿದ್ದೇನೆ.”
04008020 ಸುದೇಷ್ಣೋವಾಚ|
04008020a ಮೂರ್ಧ್ನಿ ತ್ವಾಂ ವಾಸಯೇಯಂ ವೈ ಸಂಶಯೋ ಮೇ ನ ವಿದ್ಯತೇ|
04008020c ನೋ ಚೇದಿಹ ತು ರಾಜಾ ತ್ವಾಂ ಗಚ್ಛೇತ್ಸರ್ವೇಣ ಚೇತಸಾ||
ಸುದೇಷ್ಣೆಯು ಹೇಳಿದಳು: “ರಾಜನು ಸಂಪೂರ್ಣ ಮನಸ್ಸಿನಿಂದ ನಿನ್ನಲ್ಲಿಗೇ ಹೋಗುತ್ತಾನೆ ಎಂದು ನನಗೆ ತಿಳಿಯದೇ ಇದ್ದಿದ್ದರೆ ನಾನು ನಿನ್ನನ್ನು ನನಗಿಂತಲೂ ಎತ್ತರದಲ್ಲಿರಿಸಿಕೊಳ್ಳುತ್ತಿದ್ದೆ!
04008021a ಸ್ತ್ರಿಯೋ ರಾಜಕುಲೇ ಪಶ್ಯ ಯಾಶ್ಚೇಮಾ ಮಮ ವೇಶ್ಮನಿ|
04008021c ಪ್ರಸಕ್ತಾಸ್ತ್ವಾಂ ನಿರೀಕ್ಷಂತೇ ಪುಮಾಂಸಂ ಕಂ ನ ಮೋಹಯೇಃ||
ರಾಜಕುಲದ ಮತ್ತು ನನ್ನ ಮನೆಯ ಸ್ತ್ರೀಯರು ನಿನ್ನನ್ನೇ ಆಸಕ್ತಿಯಿಂದ ನೋಡುತ್ತಿರುವುದನ್ನು ನೋಡು! ಇನ್ನು ಯಾವ ಪುರುಷನು ತಾನೇ ಮೋಹಗೊಳ್ಳುವುದಿಲ್ಲ?
04008022a ವೃಕ್ಷಾಂಶ್ಚಾವಸ್ಥಿತಾನ್ಪಶ್ಯ ಯ ಇಮೇ ಮಮ ವೇಶ್ಮನಿ|
04008022c ತೇಽಪಿ ತ್ವಾಂ ಸಂನಮಂತೀವ ಪುಮಾಂಸಂ ಕಂ ನ ಮೋಹಯೇಃ||
ನೋಡು! ನನ್ನ ಮನೆಯಲ್ಲಿರುವ ಮರಗಳೂ ಕೂಡ ನಿನಗೆ ನಮಸ್ಕರಿಸುತ್ತಿವೆಯೋ ಎನ್ನುವಂತೆ ಕೆಳಗೆ ಬಗ್ಗಿವೆ. ಇನ್ನು ಯಾವ ಪುರುಷನು ತಾನೇ ಮೋಹಗೊಳ್ಳುವುದಿಲ್ಲ?
04008023a ರಾಜಾ ವಿರಾಟಃ ಸುಶ್ರೋಣಿ ದೃಷ್ಟ್ವಾ ವಪುರಮಾನುಷಂ|
04008023c ವಿಹಾಯ ಮಾಂ ವರಾರೋಹೇ ತ್ವಾಂ ಗಚ್ಛೇತ್ಸರ್ವಚೇತಸಾ||
ಸುಶ್ರೋಣಿ! ವರಾರೋಹೆ! ನಿನ್ನ ಈ ಅಮಾನುಷ ದೇಹವನ್ನು ಕಂಡು ರಾಜಾ ವಿರಾಟನು ನನ್ನನ್ನು ತೊರೆದು ಸಂಪೂರ್ಣ ಮನಸ್ಸಿನಿಂದ ನಿನ್ನ ಬಳಿಗೆ ಬಂದಾನು!
04008024a ಯಂ ಹಿ ತ್ವಮನವದ್ಯಾಂಗಿ ನರಮಾಯತಲೋಚನೇ|
04008024c ಪ್ರಸಕ್ತಮಭಿವೀಕ್ಷೇಥಾಃ ಸ ಕಾಮವಶಗೋ ಭವೇತ್||
ಅನವದ್ಯಾಂಗೀ! ಆಯತಲೋಚನೇ! ನಿನ್ನನ್ನು ಎಡೆಬಿಡದೇ ನೋಡುವ ಯಾವ ನರನೂ ಕಾಮವಶನಾಗಿ ಬಿಡುತ್ತಾನೆ.
04008025a ಯಶ್ಚ ತ್ವಾಂ ಸತತಂ ಪಶ್ಯೇತ್ಪುರುಷಶ್ಚಾರುಹಾಸಿನಿ|
04008025c ಏವಂ ಸರ್ವಾನವದ್ಯಾಂಗಿ ಸ ಚಾನಂಗವಶೋ ಭವೇತ್||
ಚಾರುಹಾಸಿನೀ! ಈ ರೀತಿ ಸರ್ವಾಂಗಗಳಲ್ಲಿಯೂ ಕುಂದಿರದ ನಿನ್ನನ್ನು ಸತತವಾಗಿ ಯಾರು ನೋಡುತ್ತಾನೋ ಅವನು ಅನಂಗವಶನಾಗಿಬಿಡುತ್ತಾನೆ!
04008026a ಯಥಾ ಕರ್ಕಟಕೀ ಗರ್ಭಮಾಧತ್ತೇ ಮೃತ್ಯುಮಾತ್ಮನಃ|
04008026c ತಥಾವಿಧಮಹಂ ಮನ್ಯೇ ವಾಸಂ ತವ ಶುಚಿಸ್ಮಿತೇ||
ಶುಚಿಸ್ಮಿತೇ! ನಿನಗೆ ಆಶ್ರಯವನ್ನು ಕೊಡುವುದು ಹೆಣ್ಣು ಏಡಿಯು ಮೃತ್ಯುವನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿರುವ ಹಾಗೆ ಎಂದು ತಿಳಿಯುತ್ತೇನೆ.”
04008027 ದ್ರೌಪದ್ಯುವಾಚ|
04008027a ನಾಸ್ಮಿ ಲಭ್ಯಾ ವಿರಾಟೇನ ನ ಚಾನ್ಯೇನ ಕಥಂ ಚನ|
04008027c ಗಂಧರ್ವಾಃ ಪತಯೋ ಮಹ್ಯಂ ಯುವಾನಃ ಪಂಚ ಭಾಮಿನಿ||
04008028a ಪುತ್ರಾ ಗಂಧರ್ವರಾಜಸ್ಯ ಮಹಾಸತ್ತ್ವಸ್ಯ ಕಸ್ಯ ಚಿತ್|
04008028c ರಕ್ಷಂತಿ ತೇ ಚ ಮಾಂ ನಿತ್ಯಂ ದುಃಖಾಚಾರಾ ತಥಾ ನ್ವಹಂ||
ದ್ರೌಪದಿಯು ಹೇಳಿದಳು: “ಭಾಮಿನೀ! ವಿರಾಟನಿಗೆ ಮತ್ತು ಇತರರಿಗೆ ನಾನು ಎಂದೂ ಲಭ್ಯಳಾಗುವವಳಲ್ಲ. ಮಹಾಸತ್ವನಾದ ಗಂಧರ್ವರಾಜನೋರ್ವನ ಪುತ್ರರಾದ ಐವರು ಯುವ ಗಂಧರ್ವರು ನನಗೆ ಗಂಡಂದಿರು. ಅವರು ನನ್ನನ್ನು ನಿತ್ಯವೂ ರಕ್ಷಿಸುತ್ತಾರೆ. ಹಾಗಾಗಿ ನಾನು ದುಃಖವನ್ನು ಅನುಭವಿಸುವ ಹಾಗಿಲ್ಲ.
04008029a ಯೋ ಮೇ ನ ದದ್ಯಾದುಚ್ಛಿಷ್ಟಂ ನ ಚ ಪಾದೌ ಪ್ರಧಾವಯೇತ್|
04008029c ಪ್ರೀಯೇಯುಸ್ತೇನ ವಾಸೇನ ಗಂಧರ್ವಾಃ ಪತಯೋ ಮಮ||
ಯಾರು ನನಗೆ ಎಂಜಲನ್ನು ಉಣಲಿಕ್ಕೆ ಕೊಡುವುದಿಲ್ಲವೋ ಮತ್ತು ಕಾಲುಗಳನ್ನು ತೊಳೆಯಿಸಿಕೊಳ್ಳುವುದಿಲ್ಲವೋ ಅಂಥವರ ಮನೆಯಲ್ಲಿ ವಾಸಿಸಿದರೆ ನನ್ನ ಗಂಧರ್ವ ಪತಿಗಳು ಸಂತೋಷಪಡುತ್ತಾರೆ.
04008030a ಯೋ ಹಿ ಮಾಂ ಪುರುಷೋ ಗೃಧ್ಯೇದ್ಯಥಾನ್ಯಾಃ ಪ್ರಾಕೃತಸ್ತ್ರಿಯಃ|
04008030c ತಾಮೇವ ಸ ತತೋ ರಾತ್ರಿಂ ಪ್ರವಿಶೇದಪರಾಂ ತನುಂ||
ನನ್ನನ್ನು ಓರ್ವ ಸಾಮಾನ್ಯ ಸ್ತ್ರೀಯಂತೆ ಕಾಮಿಸುವ ಪುರುಷನು ಅಲ್ಲಿಯೇ ಅದೇ ರಾತ್ರಿ ಮರಣಹೊಂದುವನು.
04008031a ನ ಚಾಪ್ಯಹಂ ಚಾಲಯಿತುಂ ಶಕ್ಯಾ ಕೇನ ಚಿದಂಗನೇ|
04008031c ದುಃಖಶೀಲಾ ಹಿ ಗಂಧರ್ವಾಸ್ತೇ ಚ ಮೇ ಬಲವತ್ತರಾಃ||
ಅಂಗನೇ! ನನ್ನನ್ನು ವಿಚಲಿತಳನ್ನಾಗಿಸಲೂ ಯಾರಿಗೂ ಶಕ್ಯವಿಲ್ಲ. ನನ್ನ ಗಂಧರ್ವರು ಕಷ್ಟವನ್ನು ಎದುರಿಸಬಲ್ಲ ಮಹಾ ಬಲಶಾಲಿಗಳು.”
04008032 ಸುದೇಷ್ಣೋವಾಚ|
04008032a ಏವಂ ತ್ವಾಂ ವಾಸಯಿಷ್ಯಾಮಿ ಯಥಾ ತ್ವಂ ನಂದಿನೀಚ್ಛಸಿ|
04008032c ನ ಚ ಪಾದೌ ನ ಚೋಚ್ಛಿಷ್ಟಂ ಸ್ಪ್ರಕ್ಷ್ಯಸಿ ತ್ವಂ ಕಥಂ ಚನ||
ಸುದೇಷ್ಣೆಯು ಹೇಳಿದಳು: “ನಂದಿನೀ! ನೀನು ಹೇಗೆ ಬಯಸುತ್ತೀಯೋ ಹಾಗೆ ನಿನ್ನನ್ನು ಇಟ್ಟುಕೊಳ್ಳುತ್ತೇನೆ. ಯಾವ ಸಮಯದಲ್ಲಿಯೂ ನೀನು ಇನ್ನೊಬ್ಬರ ಕಾಲುಗಳನ್ನಾಗಲೀ ಎಂಜಲನ್ನಾಗಲೀ ಮುಟ್ಟಬೇಕಾಗಿಲ್ಲ.””
04008033 ವೈಶಂಪಾಯನ ಉವಾಚ|
04008033a ಏವಂ ಕೃಷ್ಣಾ ವಿರಾಟಸ್ಯ ಭಾರ್ಯಯಾ ಪರಿಸಾಂತ್ವಿತಾ|
04008033c ನ ಚೈನಾಂ ವೇದ ತತ್ರಾನ್ಯಸ್ತತ್ತ್ವೇನ ಜನಮೇಜಯ||
ವೈಶಂಪಾಯನನು ಹೇಳಿದನು: “ಜನಮೇಜಯ! ಈ ರೀತಿ ಕೃಷ್ಣೆಯು ವಿರಾಟನ ಮಡದಿಯಿಂದ ಸಾಂತ್ವನವನ್ನು ಪಡೆದಳು. ಅವಳ ನಿಜಸ್ವರೂಪವು ಏನೆಂದು ಅಲ್ಲಿರುವ ಯಾರಿಗೂ ತಿಳಿಯಲಿಲ್ಲ. ”
ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ದ್ರೌಪದೀಪ್ರವೇಶೋ ನಾಮ ಅಷ್ಟಮೋಽಧ್ಯಾಯಃ||
ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ದ್ರೌಪದೀಪ್ರವೇಶವೆನ್ನುವ ಎಂಟನೆಯ ಅಧ್ಯಾಯವು.