ವಿರಾಟ ಪರ್ವ: ವೈವಾಹಿಕ ಪರ್ವ
೬೪
ಆಸ್ಥಾನವನ್ನು ಪ್ರವೇಶಿಸಿದ ಉತ್ತರನು ರಕ್ತಸುರಿಸುತ್ತಿದ್ದ ಯುಧಿಷ್ಠಿರನನ್ನು ನೋಡಿ ತಂದೆಯು ಅವನ ಕ್ಷಮೆಕೇಳಿಕೊಳ್ಳುವಂತೆ ಮಾಡಿದುದು (೧-೧೧). ವಿರಾಟನು ಬೃಹನ್ನಡೆಯೂ ಕೇಳಿಸಿಕೊಳ್ಳುವಂತೆ ಉತ್ತರನನ್ನು ಹೊಗಳುವುದು (೧೨-೧೮). ಓರ್ವ ದೇವಪುತ್ರನ ಸಹಾಯದಿಂದ ಕೌರವ ಸೇನೆಯನ್ನು ಗೆದ್ದೆನೆಂದು ಉತ್ತರನು ಹೇಳುವುದು (೧೯-೩೨). ತಂದಿದ್ದ ವಸ್ತ್ರಗಳನ್ನು ಉತ್ತರೆಗೆ ಕೊಟ್ಟು, ಉತ್ತರನೊಂದಿಗೆ ಮುಂದೆ ಮಾಡಬೇಕಾದ ಕಾರ್ಯಗಳನ್ನು ರಹಸ್ಯದಿಂದ ಅರ್ಜುನನು ನೆರವೇರಿಸಿದ್ದುದು (೩೩-೩೭).
04064001 ವೈಶಂಪಾಯನ ಉವಾಚ|
04064001a ತತೋ ರಾಜ್ಞಃ ಸುತೋ ಜ್ಯೇಷ್ಠಃ ಪ್ರಾವಿಶತ್ಪೃಥಿವೀಂಜಯಃ|
04064001c ಸೋಽಭಿವಾದ್ಯ ಪಿತುಃ ಪಾದೌ ಧರ್ಮರಾಜಮಪಶ್ಯತ||
04064002a ಸ ತಂ ರುಧಿರಸಂಸಿಕ್ತಮನೇಕಾಗ್ರಮನಾಗಸಂ|
04064002c ಭೂಮಾವಾಸೀನಮೇಕಾಂತೇ ಸೈರಂಧ್ರ್ಯಾ ಸಮುಪಸ್ಥಿತಂ||
ವೈಶಂಪಾಯನನು ಹೇಳಿದನು: “ಅನಂತರ ರಾಜನ ಹಿರಿಯ ಮಗ ಉತ್ತರನು ಪ್ರವೇಶಿಸಿ ತಂದೆಯ ಪಾದಗಳಿಗೆ ಅಬಿವಂದಿಸಿ, ರಕ್ತದಿಂದ ತೊಯ್ದ, ಉದ್ವಿಗ್ನಚಿತ್ತ, ದೋಷರಹಿತ, ಆಸ್ಥಾನದ ಒಂದು ಕೊನೆಯಲ್ಲಿ ಸೈರಂಧ್ರಿಯೊಡನೆ ನೆಲದ ಮೇಲೆ ಕುಳಿತ ದರ್ಮರಾಜನನ್ನು ನೋಡಿದನು.
04064003a ತತಃ ಪಪ್ರಚ್ಛ ಪಿತರಂ ತ್ವರಮಾಣ ಇವೋತ್ತರಃ|
04064003c ಕೇನಾಯಂ ತಾಡಿತೋ ರಾಜನ್ಕೇನ ಪಾಪಮಿದಂ ಕೃತಂ||
ಆಗ ಉತ್ತರನು ಅವಸರದಿಂದ “ರಾಜನ್! ಇವನನ್ನು ಹೊಡೆದವರು ಯಾರು? ಈ ಪಾಪವನ್ನಾರು ಮಾಡಿದರು?” ಎಂದು ತಂದೆಯನ್ನು ಕೇಳಿದನು.
04064004 ವಿರಾಟ ಉವಾಚ|
04064004a ಮಯಾಯಂ ತಾಡಿತೋ ಜಿಹ್ಮೋ ನ ಚಾಪ್ಯೇತಾವದರ್ಹತಿ|
04064004c ಪ್ರಶಸ್ಯಮಾನೇ ಯಃ ಶೂರೇ ತ್ವಯಿ ಷಂಢಂ ಪ್ರಶಂಸತಿ||
ವಿರಾಟನು ಹೇಳಿದನು: “ಈ ದುಷ್ಟನನ್ನು ನಾನೇ ಹೊಡೆದೆನು. ಇವನಿಗೆ ಇಷ್ಟೇ ಸಾಲದು. ಶೂರನಾದ ನಿನ್ನನ್ನು ನಾನು ಹೊಗಳುತ್ತಿರುವಾಗ ಇವನು ನಪುಂಸಕನನ್ನು ಹೊಗಳುತ್ತಾನೆ.”
04064005 ಉತ್ತರ ಉವಾಚ|
04064005a ಅಕಾರ್ಯಂ ತೇ ಕೃತಂ ರಾಜನ್ ಕ್ಷಿಪ್ರಮೇವ ಪ್ರಸಾದ್ಯತಾಂ|
04064005c ಮಾ ತ್ವಾ ಬ್ರಹ್ಮವಿಷಂ ಘೋರಂ ಸಮೂಲಮಪಿ ನಿರ್ದಹೇತ್||
ಉತ್ತರನು ಹೇಳಿದನು: “ರಾಜನ್! ನೀನು ಅಕಾರ್ಯವನ್ನು ಮಾಡಿದೆ. ಬೇಗ ಇವನು ಪ್ರಸನ್ನನಾಗುವಂತೆ ಮಾಡು. ಬ್ರಾಹ್ಮಣನ ಘೋರ ವಿಷ ನಿನ್ನನ್ನು ಬುಡಸಹಿತ ಸುಟ್ಟು ಹಾಕದಿರಲಿ!””
04064006 ವೈಶಂಪಾಯನ ಉವಾಚ|
04064006a ಸ ಪುತ್ರಸ್ಯ ವಚಃ ಶ್ರುತ್ವಾ ವಿರಾಟೋ ರಾಷ್ಟ್ರವರ್ಧನಃ|
04064006c ಕ್ಷಮಯಾಮಾಸ ಕೌಂತೇಯಂ ಭಸ್ಮಚ್ಛನ್ನಮಿವಾನಲಂ||
ವೈಶಂಪಾಯನನು ಹೇಳಿದನು: “ರಾಷ್ಟ್ರವರ್ಧನ ವಿರಾಟನು ಮಗನ ಮಾತನ್ನು ಕೇಳಿ ಬೂದಿ ಮುಸುಕಿದ ಬೆಂಕಿಯಂತಿದ್ದ ಯುಧಿಷ್ಠಿರನ ಕ್ಷಮೆಯನ್ನು ಬೇಡಿದನು.
04064007a ಕ್ಷಮಯಂತಂ ತು ರಾಜಾನಂ ಪಾಂಡವಃ ಪ್ರತ್ಯಭಾಷತ|
04064007c ಚಿರಂ ಕ್ಷಾಂತಮಿದಂ ರಾಜನ್ನ ಮನ್ಯುರ್ವಿದ್ಯತೇ ಮಮ||
ಕ್ಷಮೆಕೇಳುತ್ತಿದ್ದ ರಾಜನಿಗೆ ಯುಧಿಷ್ಠಿರನು ಮರುನುಡಿದನು: “ರಾಜನ್! ಈ ಮೊದಲೇ ಇದನ್ನು ಕ್ಷಮಿಸಿಬಿಟ್ಟಿದ್ದೇನೆ. ನನಗೇನೂ ಕೋಪವಿಲ್ಲ.
04064008a ಯದಿ ಹ್ಯೇತತ್ಪತೇದ್ಭೂಮೌ ರುಧಿರಂ ಮಮ ನಸ್ತತಃ|
04064008c ಸರಾಷ್ಟ್ರಸ್ತ್ವಂ ಮಹಾರಾಜ ವಿನಶ್ಯೇಥಾ ನ ಸಂಶಯಃ||
ಮಹಾರಾಜ! ನನ್ನ ಮೂಗಿನಿಂದ ಸುರಿದ ರಕ್ತವು ನೆಲಕ್ಕೆ ಬಿದ್ದಿದ್ದರೆ ನೀನು ದೇಶಸಹಿತ ಖಂಡಿತ ನಾಶವಾಗುತ್ತಿದ್ದೆ.
04064009a ನ ದೂಷಯಾಮಿ ತೇ ರಾಜನ್ಯಚ್ಚ ಹನ್ಯಾದದೂಷಕಂ|
04064009c ಬಲವಂತಂ ಮಹಾರಾಜ ಕ್ಷಿಪ್ರಂ ದಾರುಣಮಾಪ್ನುಯಾತ್||
ರಾಜನ್! ದೋಷವಿಲ್ಲದವನನ್ನು ಹೊಡೆದುದಕ್ಕಾಗಿ ನಿನ್ನನ್ನು ನಾನು ನಿಂದಿಸುವುದಿಲ್ಲ. ಬಲಶಾಲಿಗಳಿಗೆ ಬೇಗ ಕ್ರೌರ್ಯವುಂಟಾಗುತ್ತದೆ.”
04064010a ಶೋಣಿತೇ ತು ವ್ಯತಿಕ್ರಾಂತೇ ಪ್ರವಿವೇಶ ಬೃಹನ್ನಡಾ|
04064010c ಅಭಿವಾದ್ಯ ವಿರಾಟಂ ಚ ಕಂಕಂ ಚಾಪ್ಯುಪತಿಷ್ಠತ||
ರಕ್ತ ಸುರಿಯುವುದು ನಿಂತಾಗ ಬೃಹನ್ನಡೆಯು ಪ್ರವೇಶಿಸಿ ವಿರಾಟನಿಗೂ ಕಂಕನಿಗೂ ನಮಸ್ಕರಿಸಿ ನಿಂತುಕೊಂಡಳು.
04064011a ಕ್ಷಮಯಿತ್ವಾ ತು ಕೌರವ್ಯಂ ರಣಾದುತ್ತರಮಾಗತಂ|
04064011c ಪ್ರಶಶಂಸ ತತೋ ಮತ್ಸ್ಯಃ ಶೃಣ್ವತಃ ಸವ್ಯಸಾಚಿನಃ||
ಅರ್ಜುನನು ಕೇಳಿಸಿಕೊಳ್ಳವಂತೆಯೇ ಯುಧಿಷ್ಠಿರನ ಕ್ಷಮೆ ಬೇಡಿದ ಮತ್ಸ್ಯರಾಜನು ಯುದ್ಧರಂಗದಿಂದ ಬಂದ ಉತ್ತರನನ್ನು ಹೊಗಳಿದನು.
04064012a ತ್ವಯಾ ದಾಯಾದವಾನಸ್ಮಿ ಕೈಕೇಯೀನಂದಿವರ್ಧನ|
04064012c ತ್ವಯಾ ಮೇ ಸದೃಶಃ ಪುತ್ರೋ ನ ಭೂತೋ ನ ಭವಿಷ್ಯತಿ||
“ಸುದೇಷ್ಣೆಯ ಆನಂದವನ್ನು ಹೆಚ್ಚಿಸುವವನೇ! ನಿನ್ನಿಂದ ನಾನು ಉತ್ತರಾಧಿಕಾರಿಯುಳ್ಳವನಾದೆ. ನಿನ್ನಂತಹ ಮಗನು ನನಗೆ ಹಿಂದೆ ಇರಲಿಲ್ಲ, ಮುಂದೆ ಇರುವುದಿಲ್ಲ.
04064013a ಪದಂ ಪದಸಹಸ್ರೇಣ ಯಶ್ಚರನ್ನಾಪರಾಧ್ನುಯಾತ್|
04064013c ತೇನ ಕರ್ಣೇನ ತೇ ತಾತ ಕಥಮಾಸೀತ್ಸಮಾಗಮಃ||
ಮಗೂ! ಸಾವಿರ ಹೆಜ್ಜೆ ನಡೆದರೂ ಒಂದು ಹೆಜ್ಜೆಯನ್ನೂ ತಪ್ಪದ ಆ ಕರ್ಣನನ್ನು ನೀನು ಹೇಗೆ ಎದುರಿಸಿದೆ?
04064014a ಮನುಷ್ಯಲೋಕೇ ಸಕಲೇ ಯಸ್ಯ ತುಲ್ಯೋ ನ ವಿದ್ಯತೇ|
04064014c ಯಃ ಸಮುದ್ರ ಇವಾಕ್ಷೋಭ್ಯಃ ಕಾಲಾಗ್ನಿರಿವ ದುಃಸಹಃ|
04064014e ತೇನ ಭೀಷ್ಮೇಣ ತೇ ತಾತ ಕಥಮಾಸೀತ್ಸಮಾಗಮಃ||
ಮಗೂ! ಇಡೀ ಮಾನವಲೋಕದಲ್ಲಿ ಸಮಾನರಿಲ್ಲದ, ಸಮುದ್ರದಂತೆ ಅಚಲನಾದ, ಕಾಲಾಗ್ನಿಯಂತೆ ಸಹಿಸಲಾಗದ ಆ ಭೀಷ್ಮನನ್ನು ನೀನು ಹೇಗೆ ಎದುರಿಸಿದೆ?
04064015a ಆಚಾರ್ಯೋ ವೃಷ್ಣಿವೀರಾಣಾಂ ಪಾಂಡವಾನಾಂ ಚ ಯೋ ದ್ವಿಜಃ|
04064015c ಸರ್ವಕ್ಷತ್ರಸ್ಯ ಚಾಚಾರ್ಯಃ ಸರ್ವಶಸ್ತ್ರಭೃತಾಂ ವರಃ|
04064015e ತೇನ ದ್ರೋಣೇನ ತೇ ತಾತ ಕಥಮಾಸೀತ್ಸಮಾಗಮಃ||
ಮಗೂ! ವೃಷ್ಣಿವೀರರ, ಪಾಂಡವರ ಮತ್ತು ಎಲ್ಲ ಕ್ಷತ್ರಿಯರ ಆಚಾರ್ಯನೂ ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠನೂ ಆದ ಆ ಬ್ರಾಹ್ಮಣ ದ್ರೋಣನನ್ನು ನೀನು ಹೇಗೆ ಎದುರಿಸಿದೆ?
04064016a ಆಚಾರ್ಯಪುತ್ರೋ ಯಃ ಶೂರಃ ಸರ್ವಶಸ್ತ್ರಭೃತಾಮಪಿ|
04064016c ಅಶ್ವತ್ಥಾಮೇತಿ ವಿಖ್ಯಾತಃ ಕಥಂ ತೇನ ಸಮಾಗಮಃ||
ಆಚಾರ್ಯಪುತ್ರನೂ, ಸರ್ವ ಶಸ್ತ್ರಧಾರಿಗಳಲ್ಲಿ ಶೂರನೂ, ಅಶ್ವತ್ಥಾಮನೆಂದು ಹೆಸರಾಂತವನೂ ಆದ ಅವನನ್ನು ಹೇಗೆ ಎದುರಿಸಿದೆ?
04064017a ರಣೇ ಯಂ ಪ್ರೇಕ್ಷ್ಯ ಸೀದಂತಿ ಹೃತಸ್ವಾ ವಣಿಜೋ ಯಥಾ|
04064017c ಕೃಪೇಣ ತೇನ ತೇ ತಾತ ಕಥಮಾಸೀತ್ಸಮಾಗಮಃ||
ಮಗೂ! ಯುದ್ಧದಲ್ಲಿ ಯಾರನ್ನು ನೋಡಿದರೆ ಎಲ್ಲರೂ ತಮ್ಮದೆಲ್ಲವನ್ನೂ ಕಳೆದುಕೊಂಡ ವರ್ತಕರಂತೆ ಕುಗ್ಗಿಹೋಗುತ್ತಾರೋ ಆ ಕೃಪನನ್ನು ಹೇಗೆ ಎದುರಿಸಿದೆ?
04064018a ಪರ್ವತಂ ಯೋಽಭಿವಿಧ್ಯೇತ ರಾಜಪುತ್ರೋ ಮಹೇಷುಭಿಃ|
04064018c ದುರ್ಯೋಧನೇನ ತೇ ತಾತ ಕಥಮಾಸೀತ್ಸಮಾಗಮಃ||
ಮಗೂ! ತನ್ನ ಮಹಾಬಾಣಗಳಿಂದ ಪರ್ವತವನ್ನು ಭೇದಿಸುವ ರಾಜಪುತ್ರ ಆ ದುರ್ಯೋಧನನನ್ನು ನೀನು ಹೇಗೆ ಎದುರಿಸಿದೆ?”
04064019 ಉತ್ತರ ಉವಾಚ|
04064019a ನ ಮಯಾ ನಿರ್ಜಿತಾ ಗಾವೋ ನ ಮಯಾ ನಿರ್ಜಿತಾಃ ಪರೇ|
04064019c ಕೃತಂ ತು ಕರ್ಮ ತತ್ಸರ್ವಂ ದೇವಪುತ್ರೇಣ ಕೇನ ಚಿತ್||
ಉತ್ತರನು ಹೇಳಿದನು: “ನಾನು ಹಸುಗಳನ್ನು ಗೆಲ್ಲಲಿಲ್ಲ. ಶತ್ರುಗಳನ್ನು ನಾನು ಸೋಲಿಸಲಿಲ್ಲ. ಆ ಕಾರ್ಯವನ್ನೆಲ್ಲ ಯಾವನೋ ಒಬ್ಬ ದೇವಪುತ್ರನು ಮಾಡಿದನು.
04064020a ಸ ಹಿ ಭೀತಂ ದ್ರವಂತಂ ಮಾಂ ದೇವಪುತ್ರೋ ನ್ಯವಾರಯತ್|
04064020c ಸ ಚಾತಿಷ್ಠದ್ರಥೋಪಸ್ಥೇ ವಜ್ರಹಸ್ತನಿಭೋ ಯುವಾ||
ದೇವೇಂದ್ರ ಸಮಾನನಾದ ಆ ತರುಣ ದೇವಪುತ್ರನು ಹೆದರಿ ಓಡಿಹೋಗುತ್ತಿದ್ದ ನನ್ನನ್ನು ತಡೆದು ರಥದಲ್ಲಿ ಕುಳಿತನು.
04064021a ತೇನ ತಾ ನಿರ್ಜಿತಾ ಗಾವಸ್ತೇನ ತೇ ಕುರವೋ ಜಿತಾಃ|
04064021c ತಸ್ಯ ತತ್ಕರ್ಮ ವೀರಸ್ಯ ನ ಮಯಾ ತಾತ ತತ್ಕೃತಂ||
ಅವನು ಆ ಹಸುಗಳನ್ನು ಗೆದ್ದು ಆ ಕೌರವರನ್ನು ಸೋಲಿಸಿದನು. ತಂದೇ! ಅದು ಆ ವೀರನ ಕಾರ್ಯ. ನಾನು ಅದನ್ನು ಮಾಡಲಿಲ್ಲ.
04064022a ಸ ಹಿ ಶಾರದ್ವತಂ ದ್ರೋಣಂ ದ್ರೋಣಪುತ್ರಂ ಚ ವೀರ್ಯವಾನ್|
04064022c ಸೂತಪುತ್ರಂ ಚ ಭೀಷ್ಮಂ ಚ ಚಕಾರ ವಿಮುಖಾಂ ಶರೈಃ||
ಬಾಣಗಳಿಂದ ಕೃಪ, ದ್ರೋಣ, ಪರಾಕ್ರಮಶಾಲಿ ಅಶ್ವತ್ಥಾಮ, ಕರ್ಣ, ಭೀಷ್ಮರನ್ನು ಅವನು ಮುಖ ತಿರುಗಿಸುವಂತೆ ಮಾಡಿದನು.
04064023a ದುರ್ಯೋಧನಂ ಚ ಸಮರೇ ಸನಾಗಮಿವ ಯೂಥಪಂ|
04064023c ಪ್ರಭಗ್ನಮಬ್ರವೀದ್ಭೀತಂ ರಾಜಪುತ್ರಂ ಮಹಾಬಲಂ||
ಆನೆಗಳೊಳಗೂಡಿದ ಸಲಗದಂತೆ ಯುದ್ಧದಲ್ಲಿ ಭೀತನೂ ಭಗ್ನನೂ ಆಗಿದ್ದ ಮಹಾಬಲಶಾಲಿ ರಾಜಪುತ್ರ ದುರ್ಯೋಧನನಿಗೆ ಅವನು ಹೇಳಿದನು:
04064024a ನ ಹಾಸ್ತಿನಪುರೇ ತ್ರಾಣಂ ತವ ಪಶ್ಯಾಮಿ ಕಿಂ ಚನ|
04064024c ವ್ಯಾಯಾಮೇನ ಪರೀಪ್ಸಸ್ವ ಜೀವಿತಂ ಕೌರವಾತ್ಮಜ||
“ಕೌರವಾತ್ಮಜ! ನಿನಗೆ ಹಸ್ತಿನಾಪುರದಲ್ಲಿ ಏನೇನೂ ರಕ್ಷಣೆಯಿರುವಂತೆ ನನಗೆ ತೋರುವುದಿಲ್ಲ. ಆದ್ದರಿಂದ ಹೋರಾಟದಿಂದ ಪ್ರಾಣವನ್ನು ರಕ್ಷಿಸಿಕೋ.
04064025a ನ ಮೋಕ್ಷ್ಯಸೇ ಪಲಾಯಂಸ್ತ್ವಂ ರಾಜನ್ಯುದ್ಧೇ ಮನಃ ಕುರು|
04064025c ಪೃಥಿವೀಂ ಭೋಕ್ಷ್ಯಸೇ ಜಿತ್ವಾ ಹತೋ ವಾ ಸ್ವರ್ಗಮಾಪ್ಸ್ಯಸಿ||
ರಾಜನ್! ನೀನು ಪಲಾಯನ ಮಾಡಿ ತಪ್ಪಿಸಿಕೊಳ್ಳಲಾರೆ. ಯುದ್ಧಕ್ಕೆ ಮನಸ್ಸು ಮಾಡು. ಗೆದ್ದರೆ ಭೂಮಿಯನ್ನು ಆಳುತ್ತೀಯೆ. ಸತ್ತರೆ ಸ್ವರ್ಗವನ್ನು ಪಡೆಯುತ್ತೀಯೆ.”
04064026a ಸ ನಿವೃತ್ತೋ ನರವ್ಯಾಘ್ರೋ ಮುಂಚನ್ವಜ್ರನಿಭಾಂ ಶರಾನ್|
04064026c ಸಚಿವೈಃ ಸಂವೃತೋ ರಾಜಾ ರಥೇ ನಾಗ ಇವ ಶ್ವಸನ್||
ನರಶ್ರೇಷ್ಠ ಆ ರಾಜನು ಆಗ ವಜ್ರಸದೃಶ ಬಾಣಗಳನ್ನು ಬಿಡುತ್ತ ಸರ್ಪದಂತೆ ಬುಸುಗುಟ್ಟುತ್ತ ಸಚಿವರೊಡಗೂಡಿ ರಥದಲ್ಲಿ ಹಿಂದಿರುಗಿದನು.
04064027a ತತ್ರ ಮೇ ರೋಮಹರ್ಷೋಽಭೂದೂರುಸ್ತಂಭಶ್ಚ ಮಾರಿಷ|
04064027c ಯದಭ್ರಘನಸಂಕಾಶಮನೀಕಂ ವ್ಯಧಮಚ್ಚರೈಃ||
ಅಪ್ಪಾ! ಆಗ ನನಗೆ ರೋಮಾಂಚನವುಂಟಾಯಿತು. ನನ್ನ ತೊಡೆಗಳು ಮರಗಟ್ಟಿದವು. ಏಕೆಂದರೆ ಆ ದೇವಪುತ್ರನು ಆ ದಟ್ಟ ಸೇನೆಯನ್ನು ಬಾಣಗಳಿಂದ ಭೇದಿಸಿದನು.
04064028a ತತ್ಪ್ರಣುದ್ಯ ರಥಾನೀಕಂ ಸಿಂಹಸಂಹನನೋ ಯುವಾ|
04064028c ಕುರೂಂಸ್ತಾನ್ಪ್ರಹಸನ್ರಾಜನ್ವಾಸಾಂಸ್ಯಪಹರದ್ಬಲೀ||
ರಾಜನ್! ಸಿಂಹದಂತಹ ಶರೀರವುಳ್ಳ ಆ ಬಲಶಾಲಿ ಯುವಕನು ರಥಸಮೂಹವನ್ನು ಚದುರಿಸಿ, ನಗುನಗುತ್ತಲೇ ಕೌರವರ ವಸ್ತ್ರಗಳನ್ನು ತೆಗೆದುಕೊಂಡನು.
04064029a ಏಕೇನ ತೇನ ವೀರೇಣ ಷಡ್ರಥಾಃ ಪರಿವಾರಿತಾಃ|
04064029c ಶಾರ್ದೂಲೇನೇವ ಮತ್ತೇನ ಮೃಗಾಸ್ತೃಣಚರಾ ವನೇ||
ಕಾಡಿನಲ್ಲಿ ಹುಲ್ಲುತಿನ್ನುವ ಜಿಂಕೆಗಳನ್ನು ಮದಿಸಿದ ಒಂದೇ ಹುಲಿಯು ಆಕ್ರಮಿಸುವಂತೆ ಒಂಟಿಯಾಗಿಯೇ ಆ ವೀರನು ಷಡ್ರಥರನ್ನು ಮುತ್ತಿದನು.”
04064030 ವಿರಾಟ ಉವಾಚ|
04064030a ಕ್ವ ಸ ವೀರೋ ಮಹಾಬಾಹುರ್ದೇವಪುತ್ರೋ ಮಹಾಯಶಾಃ|
04064030c ಯೋ ಮೇ ಧನಮವಾಜೈಷೀತ್ಕುರುಭಿರ್ಗ್ರಸ್ತಮಾಹವೇ||
ವಿರಾಟನು ಹೇಳಿದನು: “ಯುದ್ಧದಲ್ಲಿ ಕೌರವರು ಹಿಡಿದಿದ್ದ ನನ್ನ ಗೋಧನವನ್ನು ಗೆದ್ದು ತಂದ ಆ ವೀರ ಮಹಾಬಾಹು ಮಹಾಯಶಸ್ವಿ ದೇವಪುತ್ರನೆಲ್ಲಿ?
04064031a ಇಚ್ಛಾಮಿ ತಮಹಂ ದ್ರಷ್ಟುಮರ್ಚಿತುಂ ಚ ಮಹಾಬಲಂ|
04064031c ಯೇನ ಮೇ ತ್ವಂ ಚ ಗಾವಶ್ಚ ರಕ್ಷಿತಾ ದೇವಸೂನುನಾ||
ಹಸುಗಳನ್ನೂ ನಿನ್ನನ್ನೂ ರಕ್ಷಿಸಿದ ಆ ಮಹಾಬಲಶಾಲಿ ದೇವಪುತ್ರನನ್ನು ನೋಡಲು ಮತ್ತು ಗೌರವಿಸಲು ಬಯಸುತ್ತೇನೆ.”
04064032 ಉತ್ತರ ಉವಾಚ|
04064032a ಅಂತರ್ಧಾನಂ ಗತಸ್ತಾತ ದೇವಪುತ್ರಃ ಪ್ರತಾಪವಾನ್|
04064032c ಸ ತು ಶ್ವೋ ವಾ ಪರಶ್ವೋ ವಾ ಮನ್ಯೇ ಪ್ರಾದುರ್ಭವಿಷ್ಯತಿ||
ಉತ್ತರನು ಹೇಳಿದನು: “ತಂದೇ! ಆ ಪ್ರತಾಪಶಾಲೀ ದೇವಪುತ್ರನು ಅದೃಶ್ಯನಾಗಿಬಿಟ್ಟನು. ಆದರೆ ನಾಳೆಯೋ ಅಥವಾ ನಾಡಿದ್ದೋ ಅವನು ಕಾಣಿಸಿಕೊಳ್ಳುತ್ತಾನೆಂದು ನಾನು ಭಾವಿಸುತ್ತೇನೆ.””
04064033 ವೈಶಂಪಾಯನ ಉವಾಚ|
04064033a ಏವಮಾಖ್ಯಾಯಮಾನಂ ತು ಚನ್ನಂ ಸತ್ರೇಣ ಪಾಂಡವಂ|
04064033c ವಸಂತಂ ತತ್ರ ನಾಜ್ಞಾಸೀದ್ವಿರಾಟಃ ಪಾರ್ಥಮರ್ಜುನಂ||
ವೈಶಂಪಾಯನನು ಹೇಳಿದನು: “ಹೀಗೆ ವರ್ಣಿಸುತ್ತಿರಲು ವೇಷಮರೆಸಿಕೊಂಡು ಅಲ್ಲಿ ವಾಸಿಸುತ್ತಿರುವ ಆ ಪಾಂಡುಪುತ್ರ ಕುಂತೀಸುತ ಅರ್ಜುನನನ್ನು ವಿರಾಟನು ಗುರುತಿಸಲೇ ಇಲ್ಲ.
04064034a ತತಃ ಪಾರ್ಥೋಽಭ್ಯನುಜ್ಞಾತೋ ವಿರಾಟೇನ ಮಹಾತ್ಮನಾ|
04064034c ಪ್ರದದೌ ತಾನಿ ವಾಸಾಂಸಿ ವಿರಾಟದುಹಿತುಃ ಸ್ವಯಂ||
ಆಗ ಮಹಾತ್ಮ ವಿರಾಟನ ಅಪ್ಪಣೆ ಪಡೆದ ಪಾರ್ಥನು ಆ ವಸ್ತ್ರಗಳನ್ನು ವಿರಾಟನ ಮಗಳಿಗೆ ಸ್ವತಃ ಕೊಟ್ಟನು.
04064035a ಉತ್ತರಾ ತು ಮಹಾರ್ಹಾಣಿ ವಿವಿಧಾನಿ ತನೂನಿ ಚ|
04064035c ಪ್ರತಿಗೃಹ್ಯಾಭವತ್ಪ್ರೀತಾ ತಾನಿ ವಾಸಾಂಸಿ ಭಾಮಿನೀ||
ಆ ಭಾಮಿನಿ ಉತ್ತರೆಯಾದರೋ ನವಿರಾದ ಆ ಅಮೂಲ್ಯ ವಿವಿಧ ವಸ್ತ್ರಗಳನ್ನು ತೆಗೆದುಕೊಂಡು ಸಂತೋಷಪಟ್ಟಳು.
04064036a ಮಂತ್ರಯಿತ್ವಾ ತು ಕೌಂತೇಯ ಉತ್ತರೇಣ ರಹಸ್ತದಾ|
04064036c ಇತಿಕರ್ತವ್ಯತಾಂ ಸರ್ವಾಂ ರಾಜನ್ಯಥ ಯುಧಿಷ್ಠಿರೇ||
ಆಗ ಅರ್ಜುನನು ಮಹಾರಾಜ ಯುಧಿಷ್ಠಿರನಿಗೆ ಸಂಬಂಧಿಸಿದಂತೆ ಮಾಡಬೇಕಾದ ಎಲ್ಲವನ್ನೂ ಉತ್ತರನೊಡಗೂಡಿ ರಹಸ್ಯವಾಗಿ ಯೋಜಿಸಿದನು.
04064037a ತತಸ್ತಥಾ ತದ್ವ್ಯದಧಾದ್ಯಥಾವತ್ಪುರುಷರ್ಷಭ|
04064037c ಸಹ ಪುತ್ರೇಣ ಮತ್ಸ್ಯಸ್ಯ ಪ್ರಹೃಷ್ಟೋ ಭರತರ್ಷಭಃ||
ಪುರುಷಶ್ರೇಷ್ಠ! ಆಮೇಲೆ ಆ ಭರತಶ್ರೇಷ್ಠನು ಮತ್ಸ್ಯರಾಜನ ಮಗನೊಡನೆ ಹಾಗೆಯೇ ಅದನ್ನು ಸಂತಸದಿಂದ ನೆರವೇರಿಸಿದನು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ವೈವಾಹಿಕ ಪರ್ವಣಿ ವಿರಾಟೋತ್ತರಸಂವಾದೇ ಚತುಃಷಷ್ಟಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ವೈವಾಹಿಕ ಪರ್ವದಲ್ಲಿ ವಿರಾಟೋತ್ತರಸಂವಾದದಲ್ಲಿ ಅರವತ್ನಾಲ್ಕನೆಯ ಅಧ್ಯಾಯವು.