Virata Parva: Chapter 60

ವಿರಾಟ ಪರ್ವ: ಗೋಹರಣ ಪರ್ವ

೬೦

ಪಾರ್ಥ-ದುರ್ಯೋಧನರ ಯುದ್ಧ

ಅರ್ಜುನನು ದುರ್ಯೋಧನನನ್ನು ಎದುರಿಸಿ ಅವನನ್ನು ಓಡಿಸಿದುದು (೧-೧೫). ಅರ್ಜುನನು ದುರ್ಯೋಧನನನ್ನು ಹೀಯಾಳಿಸಿದುದು (೧೬-೧೯).

04060001 ವೈಶಂಪಾಯನ ಉವಾಚ|

04060001a ಭೀಷ್ಮೇ ತು ಸಂಗ್ರಾಮಶಿರೋ ವಿಹಾಯ|

         ಪಲಾಯಮಾನೇ ಧೃತರಾಷ್ಟ್ರಪುತ್ರಃ|

04060001c ಉಚ್ಛ್ರಿತ್ಯ ಕೇತುಂ ವಿನದನ್ಮಹಾತ್ಮಾ|

         ಸ್ವಯಂ ವಿಗೃಹ್ಯಾರ್ಜುನಮಾಸಸಾದ||

ವೈಶಂಪಾಯನನು ಹೇಳಿದನು: “ಭೀಷ್ಮನು ರಣರಂಗವನ್ನು ಬಿಟ್ಟು ಓಡಿಹೋಗಲು ಮಹಾತ್ಮ ದುರ್ಯೋಧನನು ಬಾವುಟವನ್ನೇರಿಸಿ ಬಿಲ್ಲು ಹಿಡಿದು ಗರ್ಜನೆ ಮಾಡುತ್ತಾ ತಾನೇ ಅರ್ಜುನನನ್ನು ಎದುರಿಸಿದನು.

04060002a ಸ ಭೀಮಧನ್ವಾನಮುದಗ್ರವೀರ್ಯಂ|

         ಧನಂಜಯಂ ಶತ್ರುಗಣೇ ಚರಂತಂ|

04060002c ಆಕರ್ಣಪೂರ್ಣಾಯತಚೋದಿತೇನ|

         ಭಲ್ಲೇನ ವಿವ್ಯಾಧ ಲಲಾಟಮಧ್ಯೇ||

ಅವನು ಭಯಂಕರ ಬಿಲ್ಲನ್ನು ಹಿಡಿದ, ಉತ್ತುಂಗ ಪರಾಕ್ರಮವನ್ನುಳ್ಳ, ಶತ್ರುಸಮೂಹದಲ್ಲಿ ಸಂಚರಿಸುತ್ತಿದ್ದ ಧನಂಜಯನ ನಡುಹಣೆಗೆ ಕಿವಿಯವರೆಗೂ ಸೆಳೆದು ಬಿಟ್ಟ ಭಲ್ಲೆಯಿಂದ ಹೊಡೆದನು.

04060003a ಸ ತೇನ ಬಾಣೇನ ಸಮರ್ಪಿತೇನ|

         ಜಾಂಬೂನದಾಭೇನ ಸುಸಂಶಿತೇನ|

04060003c ರರಾಜ ರಾಜನ್ಮಹನೀಯಕರ್ಮಾ|

         ಯಥೈಕಪರ್ವಾ ರುಚಿರೈಕಶೃಂಗಃ||

ರಾಜನ್! ಮಹಾಕಾರ್ಯಗಳನ್ನು ಮಾಡಿದ ಆ ಅರ್ಜುನನು ಸುವರ್ಣಸದೃಶವೂ ತೀಕ್ಷ್ಣವೂ ಆದ ಆ ಬಾಣವು ನಾಟಲು, ಸುಂದರವಾದ ಒಂದೇ ಶಿಖರದ ಒಂದೇ ಸ್ತರದ ಪರ್ವತದಂತೆ ಶೋಭಿಸಿದನು.

04060004a ಅಥಾಸ್ಯ ಬಾಣೇನ ವಿದಾರಿತಸ್ಯ|

         ಪ್ರಾದುರ್ಬಭೂವಾಸೃಗಜಸ್ರಮುಷ್ಣಂ|

04060004c ಸಾ ತಸ್ಯ ಜಾಂಬೂನದಪುಷ್ಪಚಿತ್ರಾ|

         ಮಾಲೇವ ಚಿತ್ರಾಭಿವಿರಾಜತೇ ಸ್ಮ||

ಬಾಣದಿಂದ ಸೀಳಿದ ಅವನ ಹಣೆಯಿಂದ ಬೆಚ್ಚನೆಯ ರಕ್ತವು ಸತತವಾಗಿ ಹೊಮ್ಮಿತು. ಅದು ಚಿನ್ನದ ವಿಚಿತ್ರ ಹೂಮಾಲೆಯಂತೆ ಸುಂದರವಾಗಿ ಶೋಭಿಸಿತು.

04060005a ಸ ತೇನ ಬಾಣಾಭಿಹತಸ್ತರಸ್ವೀ|

         ದುರ್ಯೋಧನೇನೋದ್ಧತಮನ್ಯುವೇಗಃ|

04060005c ಶರಾನುಪಾದಾಯ ವಿಷಾಗ್ನಿಕಲ್ಪಾನ್|

         ವಿವ್ಯಾಧ ರಾಜಾನಮದೀನಸತ್ತ್ವಃ||

ರಾಜನ್! ದುರ್ಯೋಧನನ ಬಾಣತಾಗಿದ, ಕುಗ್ಗದ ಸತ್ವವುಳ್ಳ ಆ ಬಲಶಾಲಿಯು ಅತಿಶಯ ಕೋಪಾವೇಷದಿಂದ ವಿಷಾಗ್ನಿಸಮಾನ ಬಾಣಗಳನ್ನು ತೆಗೆದುಕೊಂಡು ಆ ರಾಜನನ್ನು ಹೊಡೆದನು.

04060006a ದುರ್ಯೋಧನಶ್ಚಾಪಿ ತಮುಗ್ರತೇಜಾಃ|

         ಪಾರ್ಥಶ್ಚ ದುರ್ಯೋಧನಮೇಕವೀರಃ|

04060006c ಅನ್ಯೋನ್ಯಮಾಜೌ ಪುರುಷಪ್ರವೀರೌ|

         ಸಮಂ ಸಮಾಜಘ್ನತುರಾಜಮೀಢೌ||

ಉಗ್ರತೇಜಸ್ವಿ ದುರ್ಯೊಧನನು ಪಾರ್ಥನನ್ನೂ, ಏಕೈಕವೀರನಾದ ಪಾರ್ಥನು ದುರ್ಯೋಧನನ್ನೂ ಯುದ್ಧದಲ್ಲಿ ಎದುರಿಸಿದರು. ಅಜಮೀಢ ವಂಶದ ಆ ವೀರಶ್ರೇಷ್ಠರಿಬ್ಬರೂ ಒಬ್ಬರನ್ನೊಬ್ಬರು ಸಮಾನವಾಗಿ ಘಾತಿಸಿದರು.

04060007a ತತಃ ಪ್ರಭಿನ್ನೇನ ಮಹಾಗಜೇನ|

         ಮಹೀಧರಾಭೇನ ಪುನರ್ವಿಕರ್ಣಃ|

04060007c ರಥೈಶ್ಚತುರ್ಭಿರ್ಗಜಪಾದರಕ್ಷೈಃ|

         ಕುಂತೀಸುತಂ ಜಿಷ್ಣುಮಥಾಭ್ಯಧಾವತ್||

ಅನಂತರ ವಿಕರ್ಣನು ಮದಿಸಿದ ಪರ್ವತಸಮಾನ ಮಹಾಗಜವನ್ನೇರಿ ಆನೆಯ ಕಾಲುಗಳನ್ನು ರಕ್ಷಿಸುವ ನಾಲ್ಕು ರಥಗಳೊಂದಿಗೆ ಕುಂತೀಪುತ್ರ ಅರ್ಜುನನತ್ತ ನುಗ್ಗಿದನು.

04060008a ತಮಾಪತಂತಂ ತ್ವರಿತಂ ಗಜೇಂದ್ರಂ|

         ಧನಂಜಯಃ ಕುಂಭವಿಭಾಗಮಧ್ಯೇ|

04060008c ಆಕರ್ಣಪೂರ್ಣೇನ ದೃಢಾಯಸೇನ|

         ಬಾಣೇನ ವಿವ್ಯಾಧ ಮಹಾಜವೇನ||

ಧನಂಜಯನು ಬಿಲ್ಲನ್ನು ಕಿವಿಯವರೆಗೂ ಎಳೆದು ಬಿಟ್ಟ ಮಹಾವೇಗಶಾಲಿ ಉಕ್ಕಿನ ದೃಢ ಬಾಣದಿಂದ ಶೀಘ್ರವಾಗಿ ಮೇಲೇರಿ ಬರುತ್ತಿದ್ದ ಆ ಗಜೇಂದ್ರನ ಕುಂಭಸ್ಥಳದ ಮಧ್ಯಭಾಗಕ್ಕೆ ಹೊಡೆದನು.

04060009a ಪಾರ್ಥೇನ ಸೃಷ್ಟಃ ಸ ತು ಗಾರ್ಧ್ರಪತ್ರ|

         ಆ ಪುಂಖದೇಶಾತ್ಪ್ರವಿವೇಶ ನಾಗಂ|

04060009c ವಿದಾರ್ಯ ಶೈಲಪ್ರವರಪ್ರಕಾಶಂ|

         ಯಥಾಶನಿಃ ಪರ್ವತಮಿಂದ್ರಸೃಷ್ಟಃ||

ಇಂದ್ರನು ಪ್ರಯೋಗಿಸಿದ ವಜ್ರಾಯುದವು ಪರ್ವತವನ್ನು ಭೇದಿಸಿ ಹೊಕ್ಕಂತೆ ಪಾರ್ಥನು ಬಿಟ್ಟ ಆ ಹದ್ದಿನ ಗರಿಯುಳ್ಳ ಬಾಣವು ಪರ್ವತಶ್ರೇಷ್ಠ ಸಮಾನ ಆ ಆನೆಯನ್ನು ಭೇದಿಸಿ ಪುಂಖದವರೆಗೂ ಒಳಹೊಕ್ಕಿತು.

04060010a ಶರಪ್ರತಪ್ತಃ ಸ ತು ನಾಗರಾಜಃ|

         ಪ್ರವೇಪಿತಾಂಗೋ ವ್ಯಥಿತಾಂತರಾತ್ಮಾ|

04060010c ಸಂಸೀದಮಾನೋ ನಿಪಪಾತ ಮಃಯಾಂ|

         ವಜ್ರಾಹತಂ ಶೃಂಗಮಿವಾಚಲಸ್ಯ||

ಬಾಣದಿಂದ ಬಾಧಿತವಾಗಿ ಮೈ ನಡುಗಿ ಮನನೊಂದು ಕುಸಿತು ಆ ಶ್ರೇಷ್ಠ ಗಜವು ವಜ್ರಾಯುಧಹತ ಪರ್ವತಶಿಖರದಂತೆ ನೆಲಕ್ಕೆ ಬಿದ್ದಿತು.

04060011a ನಿಪಾತಿತೇ ದಂತಿವರೇ ಪೃಥಿವ್ಯಾಂ|

         ತ್ರಾಸಾದ್ವಿಕರ್ಣಃ ಸಹಸಾವತೀರ್ಯ|

04060011c ತೂರ್ಣಂ ಪದಾನ್ಯಷ್ಟಶತಾನಿ ಗತ್ವಾ|

         ವಿವಿಂಶತೇಃ ಸ್ಯಂದನಮಾರುರೋಹ||

ಆ ಶ್ರೇಷ್ಠಗಜವು ನೆಲಕ್ಕುರುಳಲು ವಿಕರ್ಣನು ಭಯದಿಂದ ಥಟ್ಟನೇ ಕೆಳಗಿಳಿದು ಬೇಗ ನೂರೆಂಟು ಹೆಜ್ಜೆ ನಡೆದು ವಿವಿಂಶತಿಯ ರಥವನ್ನೇರಿದನು.

04060012a ನಿಹತ್ಯ ನಾಗಂ ತು ಶರೇಣ ತೇನ|

         ವಜ್ರೋಪಮೇನಾದ್ರಿವರಾಂಬುದಾಭಂ|

04060012c ತಥಾವಿಧೇನೈವ ಶರೇಣ ಪಾರ್ಥೋ|

         ದುರ್ಯೋಧನಂ ವಕ್ಷಸಿ ನಿರ್ಬಿಭೇದ||

ವಜ್ರಾಯುಧಸಮಾನ ಬಾಣದಿಂದ ಮಹಾಪರ್ವತದಂತೆಯೂ ಮೋಡದಂತೆಯೂ ಇದ್ದ ಆ ಆನೆಯನ್ನು ಕೊಂದ ಪಾರ್ಥನು ಅದೇ ರೀತಿಯ ಬಾಣದಿಂದ ದುರ್ಯೋಧನನ ಎದೆಯನ್ನು ಭೇದಿಸಿದನು.

04060013a ತತೋ ಗಜೇ ರಾಜನಿ ಚೈವ ಭಿನ್ನೇ|

         ಭಗ್ನೇ ವಿಕರ್ಣೇ ಚ ಸಪಾದರಕ್ಷೇ|

04060013c ಗಾಂಡೀವಮುಕ್ತೈರ್ವಿಶಿಖೈಃ ಪ್ರಣುನ್ನಾಸ್|

         ತೇ ಯೋಧಮುಖ್ಯಾಃ ಸಹಸಾಪಜಗ್ಮುಃ||

ಆಗ ರಾಜನೂ ಆನೆಯೂ ಗಾಯಗೊಂಡಿರಲು, ಆನೆಯ ಪಾದಗಳನ್ನು ರಕ್ಷಿಸುತ್ತಿದ್ದ ರಥಗಳೊಡನೆ ವಿಕರ್ಣನು ಭಗ್ನನಾಗಲು, ಗಾಂಡೀವದಿಂದ ಬಿಡಲಾದ ಬಾಣಗಳು ತಿವಿಯಲು, ಆ ಯೋಧಮುಖ್ಯರು ಕೂಡಲೇ ಚದುರಿ ಓಡಿಹೋದರು.

04060014a ದೃಷ್ಟ್ವೈವ ಬಾಣೇನ ಹತಂ ತು ನಾಗಂ|

         ಯೋಧಾಂಶ್ಚ ಸರ್ವಾನ್ದ್ರವತೋ ನಿಶಮ್ಯ|

04060014c ರಥಂ ಸಮಾವೃತ್ಯ ಕುರುಪ್ರವೀರೋ|

         ರಣಾತ್ಪ್ರದುದ್ರಾವ ಯತೋ ನ ಪಾರ್ಥಃ||

ಆನೆಯು ಬಾಣದಿಂದ ಹತವಾದುದನ್ನೂ, ಯೋಧರೆಲ್ಲರೂ ಓಡಿಹೋಗುತ್ತಿದ್ದನ್ನೂ ಕಂಡು ಕುರುವೀರ ದುರ್ಯೋಧನನು ರಥವನ್ನು ತಿರುಗಿಸಿ ಪಾರ್ಥನಿಲ್ಲದೆಡೆಗೆ ರಣದಿಂದ ಓಡಿದನು.

04060015a ತಂ ಭೀಮರೂಪಂ ತ್ವರಿತಂ ದ್ರವಂತಂ|

         ದುರ್ಯೋಧನಂ ಶತ್ರುಸಹೋ ನಿಷಂಗೀ|

04060015c ಪ್ರಾಕ್ಷ್ವೇಡಯದ್ಯೋದ್ಧುಮನಾಃ ಕಿರೀಟೀ|

         ಬಾಣೇನ ವಿದ್ಧಂ ರುಧಿರಂ ವಮಂತಂ||

ಭಯಂಕರರೂಪವುಳ್ಳ, ಬೇಗಬೇಗ ಓಡುತ್ತಿದ್ದ, ಬಾಣನಾಟಿ ರಕ್ತಕಾರುತ್ತಿದ್ದ ದುರ್ಯೊಧನನನ್ನು ನೋಡಿ ಶತ್ರುಗಳನ್ನು ಎದುರಿಸಬಲ್ಲ, ಬತ್ತಳಿಕೆಯುಳ್ಳ, ಯುದ್ಧದಲ್ಲಿ ಆಸಕ್ತ ಅರ್ಜುನನು ಗರ್ಜಿಸಿದನು.

04060016 ಅರ್ಜುನ ಉವಾಚ|

04060016a ವಿಹಾಯ ಕೀರ್ತಿಂ ವಿಪುಲಂ ಯಶಶ್ಚ|

         ಯುದ್ಧಾತ್ಪರಾವೃತ್ಯ ಪಲಾಯಸೇ ಕಿಂ|

04060016c ನ ತೇಽದ್ಯ ತೂರ್ಯಾಣಿ ಸಮಾಹತಾನಿ|

         ಯಥಾವದುದ್ಯಾಂತಿ ಗತಸ್ಯ ಯುದ್ಧೇ||

ಅರ್ಜುನನು ಹೇಳಿದನು: “ಅತಿಶಯ  ಕೀರ್ತಿ ಯಶಸ್ಸುಗಳನ್ನು ಬಿಟ್ಟು ಯುದ್ಧಕ್ಕೆ ಬೆನ್ನು ತಿರುಗಿಸಿ ಏತಕ್ಕೆ ಪಲಾಯನಮಾಡುತ್ತಿದ್ದೀಯೆ? ನಿನ್ನ ತೂರ್ಯಗಳು ನೀನು ಯುದ್ಧಕ್ಕೆ ಹೊರಟಾಗ ಮೊಳಗಿದಂತೆ ಇಂದು ಏಕೆ ಮೊಳಗುತ್ತಿಲ್ಲ?

04060017a ಯುಧಿಷ್ಠಿರಸ್ಯಾಸ್ಮಿ ನಿದೇಶಕಾರೀ|

         ಪಾರ್ಥಸ್ತೃತೀಯೋ ಯುಧಿ ಚ ಸ್ಥಿರೋಽಸ್ಮಿ|

04060017c ತದರ್ಥಮಾವೃತ್ಯ ಮುಖಂ ಪ್ರಯಚ್ಛ|

         ನರೇಂದ್ರವೃತ್ತಂ ಸ್ಮರ ಧಾರ್ತರಾಷ್ಟ್ರ||

ದುರ್ಯೋಧನ! ಯುಧಿಷ್ಠಿರನ ಅಪ್ಪಣೆಗಳನ್ನು ಪಾಲಿಸುವ, ಕುಂತಿಯ ಮೂರನೆಯ ಮಗನಾದ ನಾನು ಯುದ್ಧದಲ್ಲಿ ಸ್ಥಿರವಾಗಿ ನಿಂತಿದ್ದೇನೆ. ಆದ್ದರಿಂದ ತಿರುಗಿ ಮುಖಕೊಟ್ಟು ಮಾತನಾಡು. ರಾಜಶ್ರೇಷ್ಠನ ನಡತೆಯನ್ನು ಸ್ಮರಿಸಿಕೋ.

04060018a ಮೋಘಂ ತವೇದಂ ಭುವಿ ನಾಮಧೇಯಂ|

         ದುರ್ಯೋಧನೇತೀಹ ಕೃತಂ ಪುರಸ್ತಾತ್|

04060018c ನ ಹೀಹ ದುರ್ಯೋಧನತಾ ತವಾಸ್ತಿ|

         ಪಲಾಯಮಾನಸ್ಯ ರಣಂ ವಿಹಾಯ||

ದುರ್ಯೋಧನನೆಂದು ಹಿಂದೆ ನಿನಗಿಟ್ಟ ಈ ಹೆಸರು ಲೋಕದಲ್ಲಿ ವ್ಯರ್ಥವಾಯಿತು. ಯುದ್ಧವನ್ನು ಬಿಟ್ಟು ಪಲಾಯನಮಾಡುತ್ತಿರುವ ನಿನಗೆ ಈಗ ದುರ್ಯೋಧನತ್ವವು ಉಳಿದಿಲ್ಲ.

04060019a ನ ತೇ ಪುರಸ್ತಾದಥ ಪೃಷ್ಠತೋ ವಾ|

         ಪಶ್ಯಾಮಿ ದುರ್ಯೋಧನ ರಕ್ಷಿತಾರಮ್ಯ|

04060019c ಪರೈಹಿ ಯುದ್ಧೇನ ಕುರುಪ್ರವೀರ|

         ಪ್ರಾಣಾನ್ಪ್ರಿಯಾನ್ಪಾಂಡವತೋಽದ್ಯ ರಕ್ಷ||

ದುರ್ಯೋಧನ! ನಿನ್ನ ಹಿಂದಾಗಲೀ ಮುಂದಾಗಲೀ ರಕ್ಷಕರು ನನಗೆ ಕಾಣುತ್ತಿಲ್ಲ. ಕುರುವೀರ! ಯುದ್ಧದಿಂದ ಓಡಿಹೋಗು. ಪ್ರಿಯವಾದ ಪ್ರಾಣವನ್ನು ಪಾಂಡುಪುತ್ರನಿಂದ ಈಗ ಕಾಪಾಡಿಕೋ!””

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ದುರ್ಯೋಧನಾಪಯಾನೇ ಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ದುರ್ಯೋಧನಾಪಯಾನದಲ್ಲಿ ಅರವತ್ತನೆಯ ಅಧ್ಯಾಯವು.

Related image

Comments are closed.