Virata Parva: Chapter 58

ವಿರಾಟ ಪರ್ವ: ಗೋಹರಣ ಪರ್ವ

೫೮

ಅರ್ಜುನನಿಂದ ಇಂದ್ರಾಸ್ತ್ರ ಪ್ರಯೋಗ

ಅರ್ಜುನನು ಐಂದ್ರಾಸ್ತ್ರವನ್ನು ಪ್ರಯೋಗಿಸಿ ಕುರುಸೇನೆಯನ್ನು ಅಲ್ಲೋಲಕಲ್ಲೋಲಗೊಳಿಸಿದುದು (೧-೧೩).

04058001 ವೈಶಂಪಾಯನ ಉವಾಚ|

04058001a ಅಥ ದುರ್ಯೋಧನಃ ಕರ್ಣೋ ದುಃಶಾಸನವಿವಿಂಶತೀ|

04058001c ದ್ರೋಣಶ್ಚ ಸಹ ಪುತ್ರೇಣ ಕೃಪಶ್ಚಾತಿರಥೋ ರಣೇ||

04058002a ಪುನರೀಯುಃ ಸುಸಂರಬ್ಧಾ ಧನಂಜಯಜಿಘಾಂಸಯಾ|

04058002c ವಿಸ್ಫಾರಯಂತಶ್ಚಾಪಾನಿ ಬಲವಂತಿ ದೃಢಾನಿ ಚ||

ವೈಶಂಪಾಯನನು ಹೇಳಿದನು: “ಆಮೇಲೆ ದುರ್ಯೋಧನ, ಕರ್ಣ, ದುಃಶಾಸನ, ವಿವಿಂಶತಿ, ಪುತ್ರಸಹಿತ ದ್ರೋಣ, ಅತಿರಥ ಕೃಪ ಇವರು ಬಲವಾದ ದೃಢ ಬಿಲ್ಲುಗಳನ್ನು ಮಿಡಿಯುತ್ತಾ ಧನಂಜಯನನ್ನು ಕೊಲ್ಲಬೇಕೆಂದು ಕೋಪಾವೇಶದಿಂದ ಮತ್ತೆ ಯುದ್ಧಕ್ಕೆ ಬಂದರು.

04058003a ತಾನ್ಪ್ರಕೀರ್ಣಪತಾಕೇನ ರಥೇನಾದಿತ್ಯವರ್ಚಸಾ|

04058003c ಪ್ರತ್ಯುದ್ಯಯೌ ಮಹಾರಾಜ ಸಮಸ್ತಾನ್ವಾನರಧ್ವಜಃ||

ಮಹಾರಾಜ! ವಾನರಧ್ವಜ ಅರ್ಜುನನು ಹಾರಾಡುವ ಬಾವುಟಗಳನ್ನುಳ್ಳ ಸೂರ್ಯನಂತೆ ಪ್ರಕಾಶಿಸುವ ರಥದಲ್ಲಿ ಕುಳಿತು ಅವರೆಲ್ಲರನ್ನೂ ಎದುರಿಸಿದನು.

04058004a ತತಃ ಕೃಪಶ್ಚ ಕರ್ಣಶ್ಚ ದ್ರೋಣಶ್ಚ ರಥಿನಾಂ ವರಃ|

04058004c ತಂ ಮಹಾಸ್ತ್ರೈರ್ಮಹಾವೀರ್ಯಂ ಪರಿವಾರ್ಯ ಧನಂಜಯಂ||

ಬಳಿಕ ಕೃಪ, ಕರ್ಣ, ಮತ್ತು ರಥಿಗಳಲ್ಲಿ ಶ್ರೇಷ್ಠ ದ್ರೋಣರು ಮಹಾವೀರ್ಯ ಧನಂಜಯನನ್ನು ಮಹಾಸ್ತ್ರಗಳಿಂದ ತಡೆದರು.

04058005a ಶರೌಘಾನ್ಸಮ್ಯಗಸ್ಯಂತೋ ಜೀಮೂತಾ ಇವ ವಾರ್ಷಿಕಾಃ|

04058005c ವವರ್ಷುಃ ಶರವರ್ಷಾಣಿ ಪ್ರಪತಂತಂ ಕಿರೀಟಿನಂ||

ಮೇಲೆ ಬೀಳುತ್ತಿದ್ದ ಕಿರೀಟಿಯಮೇಲೆ ಮಳೆಸುರಿಸುವ ಮೋಡಗಳಂತೆ ಬಾಣಗಳ ಮಳೆಗರೆದರು.

04058006a ಇಷುಭಿರ್ಬಹುಭಿಸ್ತೂರ್ಣಂ ಸಮರೇ ಲೋಮವಾಹಿಭಿಃ|

04058006c ಅದೂರಾತ್ಪರ್ಯವಸ್ಥಾಯ ಪೂರಯಾಮಾಸುರಾದೃತಾಃ||

ಆ ಮಾನ್ಯರು ಯುದ್ಧದಲ್ಲಿ ಅವನ ಹತ್ತಿರವೇ ನಿಂತು ಗರಿಗಳಿಂದ ಕೂಡಿದ ಬಾಣಗಳಿಂದ ಅವನನ್ನು ಶೀಘ್ರವಾಗಿ ಮುಚ್ಚಿಬಿಟ್ಟರು.

04058007a ತಥಾವಕೀರ್ಣಸ್ಯ ಹಿ ತೈರ್ದಿವ್ಯೈರಸ್ತ್ರೈಃ ಸಮಂತತಃ|

04058007c ನ ತಸ್ಯ ದ್ವ್ಯಂಗುಲಮಪಿ ವಿವೃತಂ ಸಮದೃಶ್ಯತ||

ಹಾಗೆ ಸುತ್ತಲೂ ಆ ದಿವ್ಯಾಸ್ತ್ರಗಳಿಂದ ಮುಚ್ಚಿ ಹೋಗಿದ್ದ ಅವನ ದೇಹದಲ್ಲಿ ಒಂದು ಅಂಗುಲದಷ್ಟು ಕೂಡ ಜಾಗವು ಕಾಣುತ್ತಿರಲಿಲ್ಲ.

04058008a ತತಃ ಪ್ರಹಸ್ಯ ಬೀಭತ್ಸುರ್ದಿವ್ಯಮೈಂದ್ರಂ ಮಹಾರಥಃ|

04058008c ಅಸ್ತ್ರಮಾದಿತ್ಯಸಂಕಾಶಂ ಗಾಂಡೀವೇ ಸಮಯೋಜಯತ್||

ಅನಂತರ ಮಹಾರಥಿ ಬೀಭತ್ಸುವು ನಕ್ಕು ಆದಿತ್ಯಸಂಕಾಶ ಇಂದ್ರಾಸ್ತ್ರವನ್ನು ಗಾಂಡೀವಕ್ಕೆ ಹೂಡಿದನು.

04058009a ಸ ರಶ್ಮಿಭಿರಿವಾದಿತ್ಯಃ ಪ್ರತಪನ್ಸಮರೇ ಬಲೀ|

04058009c ಕಿರೀಟಮಾಲೀ ಕೌಂತೇಯಃ ಸರ್ವಾನ್ಪ್ರಾಚ್ಛಾದಯತ್ಕುರೂನ್||

ಸಮರದಲ್ಲಿ ಬಲಶಾಲಿ, ಕಿರೀಟಮಾಲಿ ಕೌಂತೇಯನು ಸೂರ್ಯನ ಕಿರಣದಂತೆ ಪ್ರಜ್ವಲಿಸುತ್ತಾ ಕುರುಗಳೆಲ್ಲರನ್ನೂ ಮುಚ್ಚಿಬಿಟ್ಟನು.

04058010a ಯಥಾ ಬಲಾಹಕೇ ವಿದ್ಯುತ್ಪಾವಕೋ ವಾ ಶಿಲೋಚ್ಚಯೇ|

04058010c ತಥಾ ಗಾಂಡೀವಮಭವದಿಂದ್ರಾಯುಧಮಿವಾತತಂ||

ಕಾಮನಬಿಲ್ಲಿನಂತೆ ಬಗ್ಗಿದ್ದ ಗಾಂಡೀವವು ಮೋಡದಲ್ಲಿನ ಮಿಂಚಿನಂತೆ ಮತ್ತು ಪರ್ವತದ ಮೇಲಿನ ಬೆಂಕಿಯಂತೆ ಪ್ರಜ್ವಲಿಸುತ್ತಿತ್ತು.

04058011a ಯಥಾ ವರ್ಷತಿ ಪರ್ಜನ್ಯೇ ವಿದ್ಯುದ್ವಿಭ್ರಾಜತೇ ದಿವಿ|

04058011c ತಥಾ ದಶ ದಿಶಃ ಸರ್ವಾಃ ಪತದ್ಗಾಂಡೀವಮಾವೃಣೋತ್||

ಮೋಡವು ಮಳೆಗರೆಯುವಾಗ ಆಗಸದಲ್ಲಿ ಮಿಂಚು ಹೊಳೆಯುವಂತೆ ಗಾಂಡೀವವು ಹತ್ತುದಿಕ್ಕುಗಳಲ್ಲಿಯೂ ಬೆಂಕಿಯನ್ನು ಬೀಳಿಸಿತು.

04058012a ತ್ರಸ್ತಾಶ್ಚ ರಥಿನಃ ಸರ್ವೇ ಬಭೂವುಸ್ತತ್ರ ಸರ್ವಶಃ|

04058012c ಸರ್ವೇ ಶಾಂತಿಪರಾ ಭೂತ್ವಾ ಸ್ವಚಿತ್ತಾನಿ ನ ಲೇಭಿರೇ|

04058012e ಸಂಗ್ರಾಮವಿಮುಖಾಃ ಸರ್ವೇ ಯೋಧಾಸ್ತೇ ಹತಚೇತಸಃ||

ಅಲ್ಲಿ ರಥಿಕರೆಲ್ಲರೂ ಎಲ್ಲೆಡೆಯೂ ತಲ್ಲಣಗೊಂಡರು. ಎಲ್ಲರೂ ಮೂಕರಾಗಿ, ಚಿತ್ತದ ಸ್ವಾಸ್ಥ್ಯವನ್ನು ಕಳೆದುಕೊಂಡರು. ಹತಚೇತಸರಾಗಿ ಯೋಧರೆಲ್ಲರೂ ಸಂಗ್ರಾಮವಿಮುಖರಾದರು.

04058013a ಏವಂ ಸರ್ವಾಣಿ ಸೈನ್ಯಾನಿ ಭಗ್ನಾನಿ ಭರತರ್ಷಭ|

04058013c ಪ್ರಾದ್ರವಂತ ದಿಶಃ ಸರ್ವಾ ನಿರಾಶಾನಿ ಸ್ವಜೀವಿತೇ||

ಭರತರ್ಷಭ! ಹೀಗೆ ಸೇನೆಗಳೆಲ್ಲವೂ ಛಿದ್ರ ಛಿದ್ರವಾಗಿ ತಮ್ಮ ಜೀವದ ಆಸೆಯನ್ನು ತೊರೆದು ಎಲ್ಲ ದಿಕ್ಕುಗಳಿಗೂ ಓಡಿಹೋದವು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಸಂಕುಲಯುದ್ಧೇ ಅಷ್ಟಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಸಂಕುಲಯುದ್ಧದಲ್ಲಿ ಐವತ್ತೆಂಟನೆಯ ಅಧ್ಯಾಯವು.

Related image

Comments are closed.