Virata Parva: Chapter 54

ವಿರಾಟ ಪರ್ವ: ಗೋಹರಣ ಪರ್ವ

೫೪

ಅರ್ಜುನ-ಅಶ್ವತ್ಥಾಮರ ಯುದ್ಧ

ಅಶ್ವತ್ಥಾಮನು ಅರ್ಜುನನೊಡನೆ ಯುದ್ಧಮಾಡುತ್ತಿರುವಾಗ ಅವನ ಬಾಣಗಳು ಬರಿದಾದುದು (೧-೧೪). ಪಕ್ಕದಲ್ಲಿದ್ದ ಕರ್ಣನ ಮೇಲೆ ಅರ್ಜುನನು ತನ್ನ ಕೋಪವನ್ನು ಹಾಯಿಸಿದುದು (೧೫-೨೦).

04054001 ವೈಶಂಪಾಯನ ಉವಾಚ|

04054001a ತಂ ಪಾರ್ಥಃ ಪ್ರತಿಜಗ್ರಾಹ ವಾಯುವೇಗಮಿವೋದ್ಧತಂ|

04054001c ಶರಜಾಲೇನ ಮಹತಾ ವರ್ಷಮಾಣಮಿವಾಂಬುದಂ||

ವೈಶಂಪಾಯನನು ಹೇಳಿದನು: “ವಾಯುವೇಗದಂತೆ ಉದ್ಧತ, ಮಳೆಗರೆಯುವ ಮೋಡದಂಥ ಆ ಅಶ್ವತ್ಥಾಮನನ್ನು ಪಾರ್ಥನು ಬಾಣಗಳ ದೊಡ್ಡ ಸಮೂಹದಿಂದ ಎದುರಿಸಿದನು.

04054002a ತಯೋರ್ದೇವಾಸುರಸಮಃ ಸಂನಿಪಾತೋ ಮಹಾನಭೂತ್|

04054002c ಕಿರತೋಃ ಶರಜಾಲಾನಿ ವೃತ್ರವಾಸವಯೋರಿವ||

ಬಾಣಗಳ ಸಮೂಹವನ್ನು ಬೀರುತ್ತಿದ್ದ ಅವರಲ್ಲಿ ವೃತ್ರ-ದೇವೇಂದ್ರರಿಗೆ ನಡೆದಂತೆ ದೇವಾಸುರ ಸಮಾನ ಮಹಾಯುದ್ಧವು ನಡೆಯಿತು.

04054003a ನ ಸ್ಮ ಸೂರ್ಯಸ್ತದಾ ಭಾತಿ ನ ಚ ವಾತಿ ಸಮೀರಣಃ|

04054003c ಶರಗಾಢೇ ಕೃತೇ ವ್ಯೋಮ್ನಿ ಚಾಯಾಭೂತೇ ಸಮಂತತಃ||

ಆಗ ಆಕಾಶವು ಬಾಣಗಳ ದಟ್ಟಣೆಯಿಂದ ಕವಿದುಹೋಗಲು, ಸೂರ್ಯನು ಹೊಳೆಯಲ್ಲಿಲ್ಲ ಮತ್ತು ಗಾಳಿಯು ಬೀಸಲಿಲ್ಲ.

04054004a ಮಹಾಂಶ್ಚಟಚಟಾಶಬ್ದೋ ಯೋಧಯೋರ್ಹನ್ಯಮಾನಯೋಃ|

04054004c ದಹ್ಯತಾಮಿವ ವೇಣೂನಾಮಾಸೀತ್ಪರಪುರಂಜಯ||

ಪರಪುರಂಜಯ! ಪರಸ್ಪರರನ್ನು ಹೊಡೆಯುತ್ತಿದ್ದ ಆ ಯೋಧರಿಂದ, ಉರಿಯುತ್ತಿರುವ ಬಿದಿರಿನಂತೆ, ಜೋರಾದ ಜಟಪಟ ಶಬ್ಧವು ಉಂಟಾಯಿತು.

04054005a ಹಯಾನಸ್ಯಾರ್ಜುನಃ ಸರ್ವಾನ್ಕೃತವಾನಲ್ಪಜೀವಿತಾನ್|

04054005c ಸ ರಾಜನ್ನ ಪ್ರಜಾನಾತಿ ದಿಶಂ ಕಾಂ ಚನ ಮೋಹಿತಃ||

ರಾಜನ್! ಅರ್ಜುನನು ಅವನ ಕುದುರೆಗಳನ್ನೆಲ್ಲ ಕೊಂದುಹಾಕಲು, ಅಶ್ವತ್ಥಾಮನಿಗೆ ದಿಕ್ಕು ತೋರಲಿಲ್ಲ.

04054006a ತತೋ ದ್ರೌಣಿರ್ಮಹಾವೀರ್ಯಃ ಪಾರ್ಥಸ್ಯ ವಿಚರಿಷ್ಯತಃ|

04054006c ವಿವರಂ ಸೂಕ್ಷ್ಮಮಾಲೋಕ್ಯ ಜ್ಯಾಂ ಚಿಚ್ಛೇದ ಕ್ಷುರೇಣ ಹ|

04054006e ತದಸ್ಯಾಪೂಜಯನ್ದೇವಾಃ ಕರ್ಮ ದೃಷ್ಟ್ವಾತಿಮಾನುಷಂ||

ಅನಂತರ ಮಹಾವೀರ್ಯಶಾಲಿ ದ್ರೋಣಪುತ್ರನು ಚಲಿಸುತ್ತಿದ್ದ ಪಾರ್ಥನ ತುಸು ಅಜಾಕರೂಕತೆಯನ್ನು ಗಮನಿಸಿ ಕಿರುಗತ್ತಿಯಿಂದ ಅವನ ಬಿಲ್ಲಿನ ಹಗ್ಗವನ್ನು ಕತ್ತರಿಸಿದನು. ದೇವತೆಗಳು ಅವನ ಈ ಅತಿಮಾನುಷ ಕಾರ್ಯವನ್ನು ನೋಡಿ ಹೊಗಳಿದರು.

04054007a ತತೋ ದ್ರೌಣಿರ್ಧನೂಂಷ್ಯಷ್ಟೌ ವ್ಯಪಕ್ರಮ್ಯ ನರರ್ಷಭಂ|

04054007c ಪುನರಭ್ಯಾಹನತ್ಪಾರ್ಥಂ ಹೃದಯೇ ಕಂಕಪತ್ರಿಭಿಃ||

ಆಮೇಲೆ ಅಶ್ವತ್ಥಾಮನು ಎಂಟು ಬಿಲ್ಲುಗಳ ಅಳತೆಯಷ್ಟು ಹಿಂದಕ್ಕೆ ಸರಿದು ಕಂಕ ಪಕ್ಷಿಯ ಗರಿಗಳ ಬಾಣಗಳಿಂದ ನರಶ್ರೇಷ್ಠ ಪಾರ್ಥನ ಎದೆಗೆ ಮತ್ತೆ ಹೊಡೆದನು.

04054008a ತತಃ ಪಾರ್ಥೋ ಮಹಾಬಾಹುಃ ಪ್ರಹಸ್ಯ ಸ್ವನವತ್ತದಾ|

04054008c ಯೋಜಯಾಮಾಸ ನವಯಾ ಮೌರ್ವ್ಯಾ ಗಾಂಡೀವಂ ಓಜಸಾ||

ಆಗ ಆ ಮಹಾನುಭಾವ ಪಾರ್ಥನು ಗಟ್ಟಿಯಾಗಿ ನಗುತ್ತಾ ಹೊಸದಾದ ಹಗ್ಗವನ್ನು ಗಾಂಡೀವಕ್ಕೆ ಬಲವಾಗಿ ಬಿಗಿದನು.

04054009a ತತೋಽರ್ಧಚಂದ್ರಮಾವೃತ್ಯ ತೇನ ಪಾರ್ಥಃ ಸಮಾಗಮತ್|

04054009c ವಾರಣೇನೇವ ಮತ್ತೇನ ಮತ್ತೋ ವಾರಣಯೂಥಪಃ||

ಆಮೇಲೆ ಪಾರ್ಥನು ಅರ್ಧಚಂದ್ರಾಕಾರವಾಗಿ ತಿರುಗಿ, ಮದಿಸಿದ ಸಲಗವು ಮದ್ದಾನೆಯನ್ನು ಸಂಧಿಸುವಂತೆ, ಅವನನ್ನು ಸಂಧಿಸಿದನು.

04054010a ತತಃ ಪ್ರವವೃತೇ ಯುದ್ಧಂ ಪೃಥಿವ್ಯಾಮೇಕವೀರಯೋಃ|

04054010c ರಣಮಧ್ಯೇ ದ್ವಯೋರೇವ ಸುಮಹಲ್ಲೋಮಹರ್ಷಣ||

ಆಗ ರಣರಂಗದ ನಡುವೆ ಆ ಲೋಕೈಕವೀರರಿಬ್ಬರಿಗೂ ರೋಮಾಂಚನಕಾರಿ ಮಹಾಯುದ್ಧವು ನಡೆಯಿತು.

04054011a ತೌ ವೀರೌ ಕುರವಃ ಸರ್ವೇ ದದೃಶುರ್ವಿಸ್ಮಯಾನ್ವಿತಾಃ|

04054011c ಯುಧ್ಯಮಾನೌ ಮಹಾತ್ಮಾನೌ ಯೂಥಪಾವಿವ ಸಂಗತೌ||

ಸಲಗಗಳಂತೆ ತೊಡಕಿಕೊಂಡು ಹೋರಾಡುತ್ತಿದ್ದ ಆ ಮಹಾತ್ಮ ವೀರರನ್ನು ಕುರುಯೋಧರೆಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದರು.

04054012a ತೌ ಸಮಾಜಘ್ನತುರ್ವೀರಾವನ್ಯೋನ್ಯಂ ಪುರುಷರ್ಷಭೌ|

04054012c ಶರೈರಾಶೀವಿಷಾಕಾರೈರ್ಜ್ವಲದ್ಭಿರಿವ ಪನ್ನಗೈಃ||

ಆ ಪುರುಷಶ್ರೇಷ್ಠ ವೀರರು ಸರ್ಪಾಕಾರದ, ಉರಗಗಳಂತೆ ಜ್ವಲಿಸುವ ಬಾಣಗಳಿಂದ ಒಬ್ಬರನ್ನೊಬ್ಬರು ಪ್ರಹರಿಸಿದರು.

04054013a ಅಕ್ಷಯ್ಯಾವಿಷುಧೀ ದಿವ್ಯೌ ಪಾಂಡವಸ್ಯ ಮಹಾತ್ಮನಃ|

04054013c ತೇನ ಪಾರ್ಥೋ ರಣೇ ಶೂರಸ್ತಸ್ಥೌ ಗಿರಿರಿವಾಚಲಃ||

ಮಹಾತ್ಮ ಅರ್ಜುನನಲ್ಲಿ ಎರಡು ಅಕ್ಷಯ ದಿವ್ಯ ಬತ್ತಳಿಕೆಗಳಿದ್ದುದರಿಂದ ಶೂರ ಪಾರ್ಥನು ರಣದಲ್ಲಿ ಪರ್ವತದಂತೆ ಅಚಲನಾಗಿದ್ದನು.

04054014a ಅಶ್ವತ್ಥಾಮ್ನಃ ಪುನರ್ಬಾಣಾಃ ಕ್ಷಿಪ್ರಮಭ್ಯಸ್ಯತೋ ರಣೇ|

04054014c ಜಗ್ಮುಃ ಪರಿಕ್ಷಯಂ ಶೀಘ್ರಮಭೂತ್ತೇನಾಧಿಕೋಽರ್ಜುನಃ||

ಅಶ್ವತ್ಥಾಮನಾದರೋ ಯುದ್ಧದಲ್ಲಿ ಬಾಣಗಳನ್ನು ಬೇಗ ಬೇಗ ಬಿಡುತ್ತಿದ್ದುದರಿಂದ ಅವು ಬೇಗ ಬರಿದಾದವು. ಆದ್ದರಿಂದ ಅರ್ಜುನನದೇ ಮೇಲುಗೈಯಾಯಿತು.

04054015a ತತಃ ಕರ್ಣೋ ಮಹಚ್ಚಾಪಂ ವಿಕೃಷ್ಯಾಭ್ಯಧಿಕಂ ರುಷಾ|

04054015c ಅವಾಕ್ಷಿಪತ್ತತಃ ಶಬ್ದೋ ಹಾಹಾಕಾರೋ ಮಹಾನಭೂತ್||

ಆಗ ಕರ್ಣನು ರೋಷದಿಂದ ದೊಡ್ಡ ಬಿಲ್ಲನ್ನೆಳೆದು ಬಲವಾಗಿ ಮಿಡಿದನು. ಆಗ ದೊಡ್ಡ ಹಾಹಾಕಾರ ಶಬ್ಧವುಂಟಾಯಿತು.

04054016a ತತ್ರ ಚಕ್ಷುರ್ದಧೇ ಪಾರ್ಥೋ ಯತ್ರ ವಿಸ್ಫಾರ್ಯತೇ ಧನುಃ|

04054016c ದದರ್ಶ ತತ್ರ ರಾಧೇಯಂ ತಸ್ಯ ಕೋಪೋಽತ್ಯವೀವೃಧತ್||

ಬಿಲ್ಲುಮಿಡಿದ ಕಡೆ ಪಾರ್ಥನು ಕಣ್ಣುಹಾಯಿಸಲು, ಅಲ್ಲಿ ಕರ್ಣನನ್ನು ಕಂಡು ಅವನ ಕೋಪವು ಇನ್ನು ಬಹಳವಾಯಿತು.

04054017a ಸ ರೋಷವಶಮಾಪನ್ನಃ ಕರ್ಣಮೇವ ಜಿಘಾಂಸಯಾ|

04054017c ಅವೈಕ್ಷತ ವಿವೃತ್ತಾಭ್ಯಾಂ ನೇತ್ರಾಭ್ಯಾಂ ಕುರುಪುಂಗವಃ||

ಆ ಕುರುಶ್ರೇಷ್ಠನು ರೋಷವಶನಾಗಿ ಕರ್ಣನನ್ನೇ ಕೊಲ್ಲಬಯಸಿ ಕಣ್ಣುತಿರುಗಿಸಿ ಅವನನ್ನು ದಿಟ್ಟಿಸಿದನು.

04054018a ತಥಾ ತು ವಿಮುಖೇ ಪಾರ್ಥೇ ದ್ರೋಣಪುತ್ರಸ್ಯ ಸಾಯಕಾನ್|

04054018c ತ್ವರಿತಾಃ ಪುರುಷಾ ರಾಜನ್ನುಪಾಜಹ್ರುಃ ಸಹಸ್ರಶಃ||

ರಾಜನ್! ಪಾರ್ಥನು ಹಾಗೆ ಮುಖತಿರುಗಿಸಲು ತೀವ್ರಗಾಮಿ ಯೋಧರು ಸಾವಿರಾರು ಬಾಣಗಳನ್ನು ಅಶ್ವತ್ಥಾಮನಿಗೆ ತಂದುಕೊಟ್ಟರು.

04054019a ಉತ್ಸೃಜ್ಯ ಚ ಮಹಾಬಾಹುರ್ದ್ರೋಣಪುತ್ರಂ ಧನಂಜಯಃ|

04054019c ಅಭಿದುದ್ರಾವ ಸಹಸಾ ಕರ್ಣಮೇವ ಸಪತ್ನಜಿತ್||

ಮಹಾಬಾಹು ಶತ್ರುವಿಜೇತನ ಧನಂಜಯನು ಆಗ ಅಶ್ವತ್ಥಾಮನನ್ನು ಬಿಟ್ಟು ಇದ್ದಕ್ಕಿದ್ದಂತಲೇ ಕರ್ಣನತ್ತಲೇ ನುಗ್ಗಿದನು.

04054020a ತಮಭಿದ್ರುತ್ಯ ಕೌಂತೇಯಃ ಕ್ರೋಧಸಂರಕ್ತಲೋಚನಃ|

04054020c ಕಾಮಯನ್ದ್ವೈರಥೇ ಯುದ್ಧಮಿದಂ ವಚನಮಬ್ರವೀತ್||

ಕೋಪದಿಂದ ಕಣ್ಣು ಕೆಂಪು ಮಾಡಿಕೊಂಡು ಅವನತ್ತ ನುಗ್ಗಿದ ಅರ್ಜುನನು ದ್ವಂದ್ವಯುದ್ಧವನ್ನು ಬಯಸಿ ಈ ಮಾತನ್ನಾಡಿದನು.

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಅರ್ಜುನಾಶ್ವತ್ಥಾಮಯುದ್ಧೇ ಚತುಃಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಅರ್ಜುನಾಶ್ವತ್ಥಾಮಯುದ್ಧದಲ್ಲಿ ಐವತ್ನಾಲ್ಕನೆಯ ಅಧ್ಯಾಯವು.

Image result for flowers against white background

Comments are closed.