Virata Parva: Chapter 52

ವಿರಾಟ ಪರ್ವ: ಗೋಹರಣ ಪರ್ವ

೫೨

ಕೃಪ-ಅರ್ಜುನರ ಯುದ್ಧ

ಅರ್ಜುನನು ಕೃಪನನ್ನು ತನ್ನ ಸ್ಥಾನದಿಂದ ಉರುಳಿಸಿದುದು (೧-೯). ವಿರಥನಾದ ಕೃಪನು ರಣದಿಂದ ವಿಮುಖನಾದನು (೧೦-೨೮).

04052001 ವೈಶಂಪಾಯನ ಉವಾಚ|

04052001a ಏತಸ್ಮಿನ್ನಂತರೇ ತತ್ರ ಮಹಾವೀರ್ಯಪರಾಕ್ರಮಃ|

04052001c ಆಜಗಾಮ ಮಹಾಸತ್ತ್ವಃ ಕೃಪಃ ಶಸ್ತ್ರಭೃತಾಂ ವರಃ|

04052001e ಅರ್ಜುನಂ ಪ್ರತಿ ಸಂಯೋದ್ಧುಂ ಯುದ್ಧಾರ್ಥೀ ಸ ಮಹಾರಥಃ||

ವೈಶಂಪಾಯನನು ಹೇಳಿದನು: “ಅಷ್ಟರಲ್ಲಿ ಮಹಾವೀರ್ಯ ಪರಾಕ್ರಮಿ, ಮಹಾಸತ್ವಶಾಲಿ, ಶಸ್ತ್ರಧಾರಿಗಳಲ್ಲಿ ಶ್ರೇಷ್ಠ, ಮಹಾರಥಿ ಕೃಪನು ಯುದ್ದಾಪೇಕ್ಷಿಯಾಗಿ ಅರ್ಜುನನೊಡನೆ ಹೋರಾಡಲು ಅಲ್ಲಿಗೆ ಬಂದನು.

04052002a ತೌ ರಥೌ ಸೂರ್ಯಸಂಕಾಶೌ ಯೋತ್ಸ್ಯಮಾನೌ ಮಹಾಬಲೌ|

04052002c ಶಾರದಾವಿವ ಜೀಮೂತೌ ವ್ಯರೋಚೇತಾಂ ವ್ಯವಸ್ಥಿತೌ||

ವ್ಯವಸ್ಥಿತರಾಗಿ ನಿಂತು ಯುದ್ಧಸನ್ನದ್ದರಾಗಿದ್ದ ಆ ಸೂರ್ಯಸಮಾನ ರಥಿಕ ಮಹಾಬಲರು ಶರತ್ಕಾಲದ ಮೋಡಗಳಂತೆ ಹೊಳೆಯುತ್ತಿದ್ದರು.

04052003a ಪಾರ್ಥೋಽಪಿ ವಿಶ್ರುತಂ ಲೋಕೇ ಗಾಂಡೀವಂ ಪರಮಾಯುಧಂ|

04052003c ವಿಕೃಷ್ಯ ಚಿಕ್ಷೇಪ ಬಹೂನ್ನಾರಾಚಾನ್ಮರ್ಮಭೇದಿನಃ||

ಪಾರ್ಥನು ಲೋಕಪ್ರಸಿದ್ದ ಪರಮಾಯುಧ ಗಾಂಡೀವವನ್ನೆಳೆದು ಮರ್ಮಭೇದಕ ಬಹಳ ಬಾಣಗಳನ್ನು ಬಿಟ್ಟನು.

04052004a ತಾನಪ್ರಾಪ್ತಾಂ ಶಿತೈರ್ಬಾಣೈರ್ನಾರಾಚಾನ್ರಕ್ತಭೋಜನಾನ್|

04052004c ಕೃಪಶ್ಚಿಚ್ಛೇದ ಪಾರ್ಥಸ್ಯ ಶತಶೋಽಥ ಸಹಸ್ರಶಃ||

ಪಾರ್ಥನ ಆ ರಕ್ತಕುಡಿಯುವ ಬಾಣಗಳನ್ನು, ಅವು ಬರುವುದಕ್ಕೆ ಮೊದಲೇ ಕೃಪನು ಹರಿತ ಬಾಣಗಳಿಂದ ನೂರಾಗಿ ಸಾವಿರವಾಗಿ ಕಡಿದುಹಾಕಿದನು.

04052005a ತತಃ ಪಾರ್ಥಶ್ಚ ಸಂಕ್ರುದ್ಧಶ್ಚಿತ್ರಾನ್ಮಾರ್ಗಾನ್ಪ್ರದರ್ಶಯನ್|

04052005c ದಿಶಃ ಸಂಚಾದಯನ್ಬಾಣೈಃ ಪ್ರದಿಶಶ್ಚ ಮಹಾರಥಃ||

ಬಳಿಕ ಕೋಪಗೊಂಡ ಮಹಾರಥಿ ಪಾರ್ಥನು ವಿಚಿತ್ರ ತಂತ್ರಗಳನ್ನು ಪ್ರದರ್ಶಿಸುತ್ತಾ ಬಾಣಗಳಿಂದ ದಿಕ್ಕುದಿಕ್ಕುಗಳನ್ನೂ ಮುಚ್ಚಿದನು.

04052006a ಏಕಚ್ಛಾಯಮಿವಾಕಾಶಂ ಪ್ರಕುರ್ವನ್ಸರ್ವತಃ ಪ್ರಭುಃ|

04052006c ಪ್ರಚ್ಛಾದಯದಮೇಯಾತ್ಮಾ ಪಾರ್ಥಃ ಶರಶತೈಃ ಕೃಪಂ||

ಆ ಅಮಿತಾತ್ಮ ಪ್ರಭು ಪಾರ್ಥನು ಆಕಾಶವನ್ನೆಲ್ಲ ಕವಿದುಕೊಳ್ಳುವಂತೆ ಮಾಡಿ ಕೃಪನನ್ನು ನೂರಾರು ಬಾಣಗಳಿಂದ ಮುಸುಕಿದನು.

04052007a ಸ ಶರೈರರ್ಪಿತಃ ಕ್ರುದ್ಧಃ ಶಿತೈರಗ್ನಿಶಿಖೋಪಮೈಃ|

04052007c ತೂರ್ಣಂ ಶರಸಹಸ್ರೇಣ ಪಾರ್ಥಮಪ್ರತಿಮೌಜಸಂ|

04052007e ಅರ್ಪಯಿತ್ವಾ ಮಹಾತ್ಮಾನಂ ನನಾದ ಸಮರೇ ಕೃಪಃ||

ಅಗ್ನಿಜ್ವಾಲೆಗಳಂತಹ ನಿಶಿತ ಬಾಣಗಳಿಂದ ಪೀಡಿತನಾಗಿ ಕೋಪಗೊಂಡ ಕೃಪನು ಯುದ್ಧದಲ್ಲಿ ಆ ಅಪ್ರತಿಮ ತೇಜಸ್ವಿ, ಮಹಾತ್ಮ ಅರ್ಜುನನ ಮೇಲೆ ಸಾವಿರ ಬಾಣಗಳನ್ನು ಬೇಗ ಬಿಟ್ಟು ಗರ್ಜಿಸಿದನು.

04052008a ತತಃ ಕನಕಪುಂಖಾಗ್ರೈರ್ವೀರಃ ಸಂನತಪರ್ವಭಿಃ|

04052008c ತ್ವರನ್ಗಾಂಡೀವನಿರ್ಮುಕ್ತೈರರ್ಜುನಸ್ತಸ್ಯ ವಾಜಿನಃ|

04052008e ಚತುರ್ಭಿಶ್ಚತುರಸ್ತೀಕ್ಷ್ಣೈರವಿಧ್ಯತ್ಪರಮೇಷುಭಿಃ||

ಆಮೇಲೆ ವೀರ ಅರ್ಜುನನು ಗಾಂಡೀವದಿಂದ ಬಿಡಲಾದ ಚಿನ್ನದ ಗರಿ ಮತ್ತು ನೇರ್ಪಡಿಸಿದ ಗಿಣ್ಣುಗಳಿಂದ ಕೂಡಿದ ತೀಕ್ಷ್ಣ, ಶ್ರೇಷ್ಠ ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನೂ ಬೇಗ ಭೇದಿಸಿದನು.

04052009a ತೇ ಹಯಾ ನಿಶಿತೈರ್ವಿದ್ಧಾ ಜ್ವಲದ್ಭಿರಿವ ಪನ್ನಗೈಃ|

04052009c ಉತ್ಪೇತುಃ ಸಹಸಾ ಸರ್ವೇ ಕೃಪಃ ಸ್ಥಾನಾದಥಾಚ್ಯವತ್||

ಸರ್ಪಗಳಂತೆ ಜ್ವಲಿಸುತ್ತಿದ್ದ ಹರಿತ ಬಾಣಗಳಿಂದ ಭೇದಿಸಲ್ಪಟ್ಟ ಆ ಕುದುರೆಗಳೆಲ್ಲ ಇದ್ದಕ್ಕಿಂದಂತೆ ಚಿಮ್ಮಿದವು. ಆಗ ಕೃಪನು ತನ್ನ ಸ್ಥಾನದಿಂದ ಉರುಳಿದನು.

04052010a ಚ್ಯುತಂ ತು ಗೌತಮಂ ಸ್ಥಾನಾತ್ಸಮೀಕ್ಷ್ಯ ಕುರುನಂದನಃ|

04052010c ನಾವಿಧ್ಯತ್ಪರವೀರಘ್ನೋ ರಕ್ಷಮಾಣೋಽಸ್ಯ ಗೌರವಂ||

ಕೃಪನು ತನ್ನ ಸ್ಥಾನದಿಂದ ಉರುಳಿದುದನ್ನು ನೋಡಿ ಶತ್ರುವೀರರನ್ನು ಕೊಲ್ಲುವ, ಕುರುನಂದನ ಅರ್ಜುನನು ಅವನ ಗೌರವವನ್ನು ಕಾಯುವುದಕ್ಕಾಗಿ ಅವನನ್ನು ಬಾಣಗಳಿಂದ ಭೇದಿಸಲಿಲ್ಲ.

04052011a ಸ ತು ಲಬ್ಧ್ವಾ ಪುನಃ ಸ್ಥಾನಂ ಗೌತಮಃ ಸವ್ಯಸಾಚಿನಂ|

04052011c ವಿವ್ಯಾಧ ದಶಭಿರ್ಬಾಣೈಸ್ತ್ವರಿತಃ ಕಂಕಪತ್ರಿಭಿಃ||

ಕೃಪನಾದರೋ ಮತ್ತೆ ಸ್ವಸ್ಥಾನವನ್ನು ಸೇರಿ, ಕಂಕಪಕ್ಷಿಯ ಗರಿಗಳಿಂದ ಕೂಡಿದ ಹತ್ತು ಬಾಣಗಳಿಂದ ಅರ್ಜುನನನ್ನು ಬೇಗ ಹೊಡೆದನು.

04052012a ತತಃ ಪಾರ್ಥೋ ಧನುಸ್ತಸ್ಯ ಭಲ್ಲೇನ ನಿಶಿತೇನ ಚ|

04052012c ಚಿಚ್ಛೇದೈಕೇನ ಭೂಯಶ್ಚ ಹಸ್ತಾಚ್ಚಾಪಮಥಾಹರತ್||

ಬಳಿಕ ಪಾರ್ಥನು ಅವನ ಬಿಲ್ಲನ್ನು ಹರಿತವಾದ ಒಂದೇ ಬಾಣದಿಂದ ಕತ್ತರಿಸಿದನು ಮತ್ತು ಅವನ ಕೈಯಿಂದ ಬಿಲ್ಲನ್ನು ತೊಲಗಿಸಿದನು.

04052013a ಅಥಾಸ್ಯ ಕವಚಂ ಬಾಣೈರ್ನಿಶಿತೈರ್ಮರ್ಮಭೇದಿಭಿಃ|

04052013c ವ್ಯಧಮನ್ನ ಚ ಪಾರ್ಥೋಽಸ್ಯ ಶರೀರಮವಪೀಡಯತ್||

ಅನಂತರ ಅವನ ಕವಚವನ್ನು ಪಾರ್ಥನು ಮರ್ಮಭೇದಕ ತೀಕ್ಷ್ಣ ಬಾಣಗಳಿಂದ ಕತ್ತರಿಸಿದನು. ಆದರೆ ಅವನ ಶರೀರವನ್ನು ನೋಯಿಸಲಿಲ್ಲ.

04052014a ತಸ್ಯ ನಿರ್ಮುಚ್ಯಮಾನಸ್ಯ ಕವಚಾತ್ಕಾಯ ಆಬಭೌ|

04052014c ಸಮಯೇ ಮುಚ್ಯಮಾನಸ್ಯ ಸರ್ಪಸ್ಯೇವ ತನುರ್ಯಥಾ||

ಕವಚಮುಕ್ತವಾದ ಆ ಕೃಪನ ಶರೀರ ಆ ಸಮಯದಲ್ಲಿ ಪೊರೆಬಿಟ್ಟ ಹಾವಿನ ಶರೀರದಂತೆ ಶೋಭಿಸಿತು.

04052015a ಚಿನ್ನೇ ಧನುಷಿ ಪಾರ್ಥೇನ ಸೋಽನ್ಯದಾದಾಯ ಕಾರ್ಮುಕಂ|

04052015c ಚಕಾರ ಗೌತಮಃ ಸಜ್ಯಂ ತದದ್ಭುತಮಿವಾಭವತ್||

ಪಾರ್ಥನಿಂದ ಬಿಲ್ಲು ಕಡಿದುಹೋಗಲು ಕೃಪನು ಮತ್ತೊಂದು ಬಿಲ್ಲನ್ನು ತೆಗೆದುಕೊಂಡು ಅದಕ್ಕೆ ಹೆದೆಯೇರಿಸಿದನು. ಅದು ಅದ್ಭುತವಾಗಿತ್ತು.

04052016a ಸ ತದಪ್ಯಸ್ಯ ಕೌಂತೇಯಶ್ಚಿಚ್ಛೇದ ನತಪರ್ವಣಾ|

04052016c ಏವಮನ್ಯಾನಿ ಚಾಪಾನಿ ಬಹೂನಿ ಕೃತಹಸ್ತವತ್||

04052016e ಶಾರದ್ವತಸ್ಯ ಚಿಚ್ಛೇದ ಪಾಂಡವಃ ಪರವೀರಹಾ||

ಅವನ ಆ ಬಿಲ್ಲನ್ನೂ ಕುಂತೀಪುತ್ರನು ನೇರಗಿಣ್ಣಿನ ಬಾಣದಿಂದ ಕತ್ತರಿಸಿ ಹಾಕಿದನು. ಹಾಗೆಯೇ ಕೃಪನ ಇತರ ಹಲವು ಬಿಲ್ಲುಗಳನ್ನೂ ಶತ್ರುನಾಶಕ ಆ ಪಾಂಡುಪುತ್ರನು ಕೈ ಚಳಕದಿಂದ ಕಡಿದು ಹಾಕಿದನು.

04052017a ಸ ಚಿನ್ನಧನುರಾದಾಯ ಅಥ ಶಕ್ತಿಂ ಪ್ರತಾಪವಾನ್|

04052017c ಪ್ರಾಹಿಣೋತ್ಪಾಂಡುಪುತ್ರಾಯ ಪ್ರದೀಪ್ತಾಮಶನೀಮಿವ||

ಅನಂತರ ಬಿಲ್ಲುಕತ್ತರಿಸಿಹೋಗಲಾಗಿ ಆ ಪ್ರತಾಪಶಾಲಿ ಕೃಪನು ಸಿಡಿಲಿನಂತೆ ಉರಿಯುವ ಶಕ್ತ್ಯಾಯುಧವನ್ನು ಅರ್ಜುನನ ಮೇಲೆ ಪ್ರಯೋಗಿಸಿದನು.

04052018a ತಾಮರ್ಜುನಸ್ತದಾಯಾಂತೀಂ ಶಕ್ತಿಂ ಹೇಮವಿಭೂಷಿತಾಂ|

04052018c ವಿಯದ್ಗತಾಂ ಮಹೋಲ್ಕಾಭಾಂ ಚಿಚ್ಛೇದ ದಶಭಿಃ ಶರೈಃ|

04052018e ಸಾಪತದ್ದಶಧಾ ಚಿನ್ನಾ ಭೂಮೌ ಪಾರ್ಥೇನ ಧೀಮತಾ||

ತನ್ನೆಡೆಗೆ ಬರುತ್ತಿದ್ದ ಚಿನ್ನದಿಂದ ಅಲಂಕೃತ, ಆಕಾಶಗಾಮಿ ದೊಡ್ಡ ಉಲ್ಕೆಯಂತಿದ್ದ ಆ ಶಕ್ತ್ಯಾಯುಧವನ್ನು ಅರ್ಜುನನು ಹತ್ತು ಬಾಣಗಳಿಂದ ಕತ್ತರಿಸಿದನು. ಧೀಮಂತ ಪಾರ್ಥನಿಂದ ಕತ್ತರಿಸಲ್ಪಟ್ಟ ಆ ಶಕ್ತ್ಯಾಯುಧವು ಹತ್ತು ತುಂಡುಗಳಾಗಿ ನೆಲಕ್ಕೆ ಬಿದ್ದಿತು.

04052019a ಯುಗಮಧ್ಯೇ ತು ಭಲ್ಲೈಸ್ತು ತತಃ ಸ ಸಧನುಃ ಕೃಪಃ|

04052019c ತಮಾಶು ನಿಶಿತೈಃ ಪಾರ್ಥಂ ಬಿಭೇದ ದಶಭಿಃ ಶರೈಃ||

ಆಮೇಲೆ ಕೃಪನು ಕ್ಷಣಾರ್ಧದಲ್ಲಿಯೇ ಧನುರ್ಧರನಾಗಿ ಹರಿತ ಭಲ್ಲಗಳೆಂಬ ಹತ್ತು ಬಾಣಗಳಿಂದ ಆ ಪಾರ್ಥನನ್ನು ಬೇಗ ಹೊಡೆದನು.

04052020a ತತಃ ಪಾರ್ಥೋ ಮಹಾತೇಜಾ ವಿಶಿಖಾನಗ್ನಿತೇಜಸಃ|

04052020c ಚಿಕ್ಷೇಪ ಸಮರೇ ಕ್ರುದ್ಧಸ್ತ್ರಯೋದಶ ಶಿಲಾಶಿತಾನ್||

ಬಳಿಕ ಮಹಾತೇಜಸ್ವಿ ಪಾರ್ಥನು ಕೋಪಗೊಂಡು ಸಾಣೆಕಲ್ಲಿನಿಂದ ಹರಿತಗೊಳಿಸಿದ ಅಗ್ನಿಯಂತೆ ತೇಜಸ್ಸಿನಿಂದ ಕೂಡಿದ ಹದಿಮೂರು ಬಾಣಗಳನ್ನು ಯುದ್ಧದಲ್ಲಿ ಪ್ರಯೋಗಿಸಿದನು.

04052021a ಅಥಾಸ್ಯ ಯುಗಮೇಕೇನ ಚತುರ್ಭಿಶ್ಚತುರೋ ಹಯಾನ್|

04052021c ಷಷ್ಠೇನ ಚ ಶಿರಃ ಕಾಯಾಚ್ಚರೇಣ ರಥಸಾರಥೇಃ||

ಅನಂತರ ಒಂದು ಬಾಣದಿಂದ ಆ ಕೃಪನ ರಥದ ನೊಗವನ್ನೂ, ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನೂ ಸೀಳಿ, ಆರನೆಯ ಬಾಣವನ್ನು ಬಿಟ್ಟು ರಥದ ಸಾರಥಿಯ ತಲೆಯನ್ನು ಅವನ ದೇಹದಿಂದ ಬೇರ್ಪಡಿಸಿದನು.

04052022a ತ್ರಿಭಿಸ್ತ್ರಿವೇಣುಂ ಸಮರೇ ದ್ವಾಭ್ಯಾಮಕ್ಷೌ ಮಹಾಬಲಃ|

04052022c ದ್ವಾದಶೇನ ತು ಭಲ್ಲೇನ ಚಕರ್ತಾಸ್ಯ ಧ್ವಜಂ ತಥಾ||

ಹಾಗೆಯೇ ಆ ಮಹಾಬಲಶಾಲಿಯು ಮೂರು ಬಾಣಗಳಿಂದ ರಥದ ಮೂರು ಬಿದಿರಿನ ದಂಡಗಳನ್ನೂ, ಎರಡು ಬಾಣಗಳಿಂದ ರಥದ ಅಚ್ಚನ್ನೂ, ಹನ್ನೆರಡನೆಯ ಬಾಣದಿಂದ ಧ್ವಜವನ್ನೂ ಯುದ್ಧದಲ್ಲಿ ಸೀಳಿಹಾಕಿದನು.

04052023a ತತೋ ವಜ್ರನಿಕಾಶೇನ ಫಲ್ಗುನಃ ಪ್ರಹಸನ್ನಿವ|

04052023c ತ್ರಯೋದಶೇನೇಂದ್ರಸಮಃ ಕೃಪಂ ವಕ್ಷಸ್ಯತಾಡಯತ್||

ಅನಂತರ ಇಂದ್ರಸಮಾನ ಅರ್ಜುನನು ನಗುತ್ತ, ವಜ್ರಸಮಾನ ಹದಿಮೂರನೆಯ ಬಾಣದಿಂದ ಕೃಪನ ಎದೆಗೆ ಹೊಡೆದನು.

04052024a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ|

04052024c ಗದಾಪಾಣಿರವಪ್ಲುತ್ಯ ತೂರ್ಣಂ ಚಿಕ್ಷೇಪ ತಾಂ ಗದಾಂ||

ಬಿಲ್ಲು ಕತ್ತರಿಸಿ ಹೋಗಿ, ಕುದುರೆಗಳೂ ಸಾರಥಿಯೂ ಸತ್ತು, ವಿರಥನಾದ ಕೃಪನು ಗದೆಯನ್ನು ಹಿಡಿದು ಬೇಗ ಕೆಳಕ್ಕೆ ನೆಗೆದು ಆ ಗದೆಯನ್ನು ಅರ್ಜುನನ ಮೇಲೆ ಎಸೆದನು.

04052025a ಸಾ ತು ಮುಕ್ತಾ ಗದಾ ಗುರ್ವೀ ಕೃಪೇಣ ಸುಪರಿಷ್ಕೃತಾ|

04052025c ಅರ್ಜುನೇನ ಶರೈರ್ನುನ್ನಾ ಪ್ರತಿಮಾರ್ಗಮಥಾಗಮತ್||

ಕೃಪನು ಎಸೆದ, ಚೆನ್ನಾಗಿ ಮಾಡಿದ ಆ ಭಾರ ಗದೆಯು, ಅರ್ಜುನನ ಬಾಣಗಳಿಂದ ತಡೆಗೊಂಡು ಬೇರೆ ಮಾರ್ಗದಲ್ಲಿ ಹಿಂದಿರುಗಿತು.

04052026a ತತೋ ಯೋಧಾಃ ಪರೀಪ್ಸಂತಃ ಶಾರದ್ವತಮಮರ್ಷಣಂ|

04052026c ಸರ್ವತಃ ಸಮರೇ ಪಾರ್ಥಂ ಶರವರ್ಷೈರವಾಕಿರನ್||

ಬಳಿಕ ಕೋಪಗೊಂಡ ಕೃಪನನ್ನು ರಕ್ಷಿಸಬಯಸಿದ ಯೋಧರು ಯುದ್ಧದಲ್ಲಿ ಪಾರ್ಥನನ್ನು ಸುತ್ತಲೂ ಬಾಣಗಳ ಮಳೆಯಿಂದ ಮುಸುಕಿದರು.

04052027a ತತೋ ವಿರಾಟಸ್ಯ ಸುತಃ ಸವ್ಯಮಾವೃತ್ಯ ವಾಜಿನಃ|

04052027c ಯಮಕಂ ಮಂಡಲಂ ಕೃತ್ವಾ ತಾನ್ಯೋಧಾನ್ಪ್ರತ್ಯವಾರಯತ್||

ಆಮೇಲೆ ಉತ್ತರನು ಕುದುರೆಗಳನ್ನು ಎಡಕ್ಕೆ ತಿರುಗಿಸಿ ಯಮಕವೆಂಬ ಮಂಡಲವನ್ನು ರಚಿಸಿ ಆ ಯೋಧರನ್ನು ನಿವಾರಿಸಿದನು.

04052028a ತತಃ ಕೃಪಮುಪಾದಾಯ ವಿರಥಂ ತೇ ನರರ್ಷಭಾಃ|

04052028c ಅಪಾಜಹ್ರುರ್ಮಹಾವೇಗಾಃ ಕುಂತೀಪುತ್ರಾದ್ಧನಂಜಯಾತ್||

ಆಮೇಲೆ ಮಹಾವೇಗವುಳ್ಳ ಆ ನರಶ್ರೇಷ್ಠರು ವಿರಥನಾಗಿದ್ದ ಕೃಪನನ್ನು ಎತ್ತಿಕೊಂಡು ಕುಂತೀಪುತ್ರ ಧನಂಜಯನ ಬಳಿಯಿಂದ ಕೊಂಡೊಯ್ದರು.

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಕೃಪಾಪಯಾನೇ ದ್ವಿಪಂಚಾಶತ್ತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಕೃಪಾಪಯಾನದಲ್ಲಿ ಐವತ್ತೆರಡನೆಯ ಅಧ್ಯಾಯವು.

Image result for flowers against white background

Comments are closed.